ನನ್ನ ಪುಟಗಳು

09 ಜನವರಿ 2021

ಬಡವ ನಾನು

ಚಿಕ್ಕ ಗಾತ್ರದ ಬಾವಿ ನಾನು
ಸಣ್ಣ ಹರಿವಿನ ಝರಿಯು ಅಲ್ಲಿ
ಎತ್ತಿದಷ್ಟು ನೀರು ಹರಿದು ಬರದು
ನಿರಾಸೆಯ ಬದುಕಿನ ಬಾವಿ ನನ್ನದು

ಜಿಟಿಜಿಟಿ ಮಳೆಯ ಹನಿಯು ನಾನು
ಕೆರೆ ಕುಂಟೆ ಬಾವಿ ತುಂಬಲಾರೆನು ಒಮ್ಮೆಲೆ
ದೊಡ್ಡ ಹನಿಯ ಮಳೆಯಂತೆ, ಆದರೂ
ತಂಪು ಮಾಡುವೆ ಇಳೆಯನು ದೊಡ್ಡ ಮಳೆಯಂತೆ

ಗುಬ್ಬಿ ಗೂಡಿನ ಹುಲ್ಲು ಕಡ್ಡಿ ನಾನು
ಇಟ್ಟಿಗೆಯಂಥ ಶಕ್ತಿ ನನ್ನಲಿಲ್ಲವಾದರೂ
ಚಳಿ ಮಳೆ ಬಿಸಿಲಿನಲ್ಲಿ ಆಸರೆಯಾಗುವೆ
ನನ್ನ ನಂಬಿ ಕುಳಿತ ಒಲವಿನ ಹಕ್ಕಿಗೆ

ಬಡವ ನಾನು, ಸಿರಿಯು ನನ್ನಲಿಲ್ಲ
ಮೆರೆಯುವ ಭಾಗ್ಯವೂ ನನ್ನದಿಲ್ಲ
ಹರಿದು ಬರುವ ಸಿರಿನದಿಯೊಳಗೆ
ದೋಣಿ ಸಾಗಿಸುವ ಕಳ್ಳ ಬಯಕೆಯೂ ನನಗಿಲ್ಲ

  - ಸೂರ‍್ಯಕಾಂತ್ ಮಗದುಮ್
A/P -Mangasuli, tq - Kagawad, dist- belagavi

 

 

ಬಿಸುಲು

(ಕುವೆಂಪು ಅವರ ಹಸುರು ಕವಿತೆಯ ಪ್ರೇರಣೆಯಿಂದ ಈ ರಚನೆ. ಅವರಲ್ಲಿ ಕ್ಷಮೆಯನ್ನು ಕೊರುತ್ತಾ)

ಬೇಸಿಗೆಯ ಸುಡುಬಿಸಿಲಿನ
ಈ ಬಿಸಿಲ! ನಾಡಿನಲಿ
ಬೆಂದುದೋ ಕವಿ ಮೈಯು
ಬೆಂಕಿಯ ಬಿಸಿಲಿನಲಿ

ಕಡುಬಿಸುಲು ಸುಡುಬಿಸುಲು
ಉರಿ ಉರಿವ ಬಿಸಿಲು
ಸುಡುವ ನೆಲ ಸುಡುವ ಗಾಳಿ
ಸುಡುತಿಹವು ಮಡಕೆಯ ನೀರು

ವೈಶಾಖದ ಈ ಶಾಖಕ್ಕೆ
ಮೊಟ್ಟೆಯಾಯಿತು ಆಮ್ಲೇಟ್ಟು
ತಗೋ ತಿನ್ನು ಒರೆಸಿಕೋ ಮುಸುಡಿ
ಮೈಯೆಲ್ಲ ಬೆವರೋ ಬೆವರು

ಅದೋ ನೋಡು ಮರೀಚಿಕೆ
ಬಾಡಿಹೋಯ್ತು ಹುಲ್ಲುಗರೀಕೆ
ಬಿಸಿಲಿನ ಈ ದಹನಕೆ
ಸುಲಿತಾದೋ ಮೈ ಚರ್ಮ

ಹೊಸಹೂವು ಕರುಕಾಯ್ತು
ಗಾಳಿಯೂ ಕಳದೇ ಹೋಯ್ತು!
ಉಸುರುಸಿರಿಗೆ ಹಿಡಿಶಾಪ
ಹಾಕೋದೆ ಸೂರ್ಯನಿಗೆ

ಬಿಸುಲತ್ತಲ್ ಬಿಸುಲಿತ್ತಲ್
ಬಿಸುಲೆತ್ತಲ್ ಈ ಬಯಲಿನಲಿ
ಸಿಡಿದ್ಹೋತು ಉಷ್ಣತಾಮಾಪಕ
ಅಳೆದಳೆದು ಈ ಕ್ರೂರ ಬಿಸಿಲನ್ನು

   - ಲಕ್ಷ್ಮಣ ಬಾದಾಮಿ
    ಸರಕಾರಿ ಪ್ರೌಢಶಾಲೆ ಕುರುಕುಂದ
   ತಾ. ಸಿರವಾರ ಜಿ. ರಾಯಚೂರು

ಎತ್ತ ಸಾಗುತ್ತಿದ್ದೇವೆ.....????

ಎತ್ತ ಸಾಗುತಿರುವುದೋ ಹೆತ್ತವರಾಗಿ ನಮ್ಮ ಚಿತ್ತ,
ಹೆಣೆದಿರುವೆವು ನಮ್ಮ ಜೀವನವನ್ನು ಮಕ್ಕಳ ಸುತ್ತ,
ಅತಿ ಪ್ರೀತಿ ವ್ಯಾಮೋಹ ಕೊಂಡೊಯುತಿದೆ ಅವನತಿಯತ್ತ
ತಳ್ಳುತಿರುವೆವೇನೋ ಮಕ್ಕಳ ಭವಿಷ್ಯ ಅತಂತ್ರದತ್ತ.....

ದೇವರ ನೀಡಿದ ಮಕ್ಕಳವು,ನಮ್ಮ ಮೂಲಕ ಹುಟ್ಟಿವೆ,
ದೈವಾತ್ಮಗಳು ಅವು, ನಮ್ಮ ಮಡಿಲನು ಸೇರಿವೆ,
ಪೋಷಕರಾಗಿ ಆಯ್ಕೆಯಾಗಿರುವೆವು, ಆ ಪುಟ್ಟ ಜೀವಿಗಳಿಗೆ,
ಮಾರ್ಗದರ್ಶರಾಗಬೇಕು, ಮುಂಬರುವ ನಾಗರಕರಿಗೆ....

ನಮ್ಮ ಮೂಲಕ ಬಂದಾಕ್ಷಣ, ನಾವು ಅವರ ಅಧಿಕಾರಿಗಳಲ್ಲ,
ನಮ್ಮ ಆಸೆ ಆಕಾಂಕ್ಷೆ ಹೇರಲು, ಅವರು ನಮ್ಮ ಸೇವಕರಲ್ಲ,
ನಮ್ಮ ಪ್ರೀತಿ ಪ್ರದರ್ಶನಕ್ಕೆ,ಅವರು ಗಾಳದ ಮೀನುಗಳಲ್ಲ,
ನಮ್ಮ ಅತೀ ನಿರೀಕ್ಷೆಗೆ, ಅವರು ಹೊಣೆಗಾರರಲ್ಲ....

ದೇವರು ಆಯ್ಕೆ ಮಾಡಿದ, ಆಪ್ತ ಸಹಾಯಕರು ನಾವು,
ಸನ್ಮಾರ್ಗದಲ್ಲಿ ನಡೆಸಲು, ದಾರಿ ದೀಪಗಳು ನಾವು,
ಸ್ನೇಹ ಸಂಭಂದಗಳ ಅರಿವನ್ನು ತುಂಬುವ, ಪ್ರೀತಿಯ ಪೋಷಕರು ನಾವು,
ಬಲಿವವರೆಗೆ ಬದುಕನು ಕಲಿಸುವ, ದಿವ್ಯ ದರ್ಶಕರು ನಾವು...

ತಪ್ಪು ಮಾಡುತ್ತಿದ್ದೇವೆನೋ, ಹೆತ್ತವರಾಗಿ ನಾವು,
ಕಷ್ಟ ಸುಖಗಳ ಮಿಶ್ರಣ ನೀಡದೆ, ಎಡವುತ್ತಿದ್ದೇವೆ ನಾವು,
ನೋವು ನಲಿವುಗಳ ಅಂತರ ತಿಳಿಸದೇ, ಹಾರುತ್ತಿದ್ದೇವೆ ನಾವು,
ಉಜ್ವಲ ಬದುಕನು ನೀಡುತ್ತಿದ್ದೇವೆಂಬ, ಬ್ರಮೆಯಲಿದ್ದೇವೆ ನಾವು......

ಅತಿಯಾದ ಪ್ರೀತಿ ಪಡೆದವರು, ನೋವು ಸಹಿಸಲಾರರು,
ಅನಾವಶ್ಯಕ ವಸ್ತುಗಳ ಪಡೆದವರು, ಅವಶ್ಯಕತೆ ಅರಿಯಲಾರರು,
ಕಷ್ಟನಷ್ಟಗಳರಿವಿರದವರು, ಜೀವನ ಎದುರಿಸಲಾರರು,
ಕೆರೆಯ ಕಪ್ಪೆಯಂತೆ ಜೀವನದಿಂದ, ಬದುಕಲು ಬವಣೆ ಪಡುವರು...

ಎಚೆತ್ತುಕೊಳ್ಳಬೇಕು ಬೇಗ, ಹೆತ್ತವರಾಗಿ ನಾವು,
ಜಗದ ನಿಯಮದಂತೆ ಬೆಳೆಯಲು ಬಿಟ್ಟು, ಜೊತೆಗಿರಬೇಕು ನಾವು,
ಎಡವಿದಾಗ ಕೈನೀಡಬೇಕು, ಕೊಡವಿ ಎದ್ದಾಗ ಬೆನ್ತಟ್ಟಬೇಕು,
ಸಾರ್ಥಕತೆಯಿಂದ ಬದುಕಲು ಕಳಿಸಿ, ಹೆಮ್ಮೆಯ ಹೆತ್ತವರಾಗಬೇಕು....

- ಡಾ ಜಯಲಕ್ಷ್ಮಿ ನಾಯಿಕ್
ವಿನೋಬನಗರ ವೃತ್ತ ಸಾಗರ

ಗುರು

ಅಕ್ಷರ ಕಲಿಸುವವರೆ ಟೀಚರ್
ಮಕ್ಕಳೆ ಅವರ ಪ್ಯೂಚರ್
ಜ್ಞಾನವ ಬೆಳೆಸುವವರೆ ಲೆಕ್ಚರ್
ಯುವಕರೆ ದೇಶದ ಖದರ್ ,,,,,

ಕೆಡಸದಿರಿ ದುಷ್ಟರೆ ದೇಶದ ವ್ಯವಸ್ಥೆ
ಆಗ ಸರಿಹೊಂದುವದು ಅವ್ಯವಸ್ಥೆ
ಪ್ರಾರಂಭಿಸಿ ನಿಮ್ಮ ಪ್ರಯತ್ನದ ವಿಶಿಷ್ಟತೆ
ಆಗಾಗುವದು ದೇಶದ ಶ್ರೇಷ್ಠತೆ,,,

ಗುರು ನಮ್ಮ ತಂದೆ
ಗುರು ನಮ್ಮ ತಾಯಿ
ಗುರು ನಮ್ಮ ದೇವ
ಗುರು ನಮ್ಮ ಭಾವ,,,,

ರಚನೆ:
ಸಂತೋಷ. ಜಿ.ರೇವಡಿಹಾಳ
ಧಾರವಾಡ (ಇಟಿಗಟ್ಟಿ)
8497846015

 

 

ತಿರುಕರು

ಆ ಊರು, ಈ ಊರು, ಉರೂರು ನಮ್ಮ ವಾಸ
ನಿಲ್ದಾಣ ಮರದಡಿಯ ಬೆಂಚುಗಳೇ ನಮ್ಮ ನಿವಾಸ.
        
ಅಲ್ಲಲ್ಲಿ ಹಾಸಿರುವ ಕಲ್ಮಂಚಗಳು
ಅದುವೆ ನಮ್ಮಯ ತಲೆದಿಂಬು, ತೂಗುಮಂಚ.

ಆಗೊಮ್ಮೆ ಈಗೊಮ್ಮೆ ಬೀಸುವುದು ಗಾಳಿ
ನಮಗದುವೆ ಹವಾನಿಯಂತ್ರಿತ ತಂಗಾಳಿ

ಅವರಿವರು ನೀಡುವ ಬಿಲ್ಲೆಗಳೇ
ನಮ್ಮ ಊಟದ ಬಿಲ್ಲುಗಳು.

ಸುತ್ತ ತಿರುತಿರುಗಿ ಸುಸ್ತಾಗಲು
ಅಲ್ಲಿರುವ  ವನಸಿರಿಯೆ ವಿಶ್ರಾಂತಿಗೃಹವು.

ದಾರಿಯಲಿ ಹಾಸಿರುವ ಹಸಿರು ಉದ್ಯಾನವೇ
ಹೆಮ್ಮೆಯ ನಮ್ಮ ಪ್ರವಾಸಿ ತಾಣಗಳು.

ಹತ್ತಿಳಿವ ಬಸ್ಸುಗಳು, ಅಲೆದಾಟದಿ ಸಿಗುವ
ಅಂಗಡಿ,ಗುಡಿ,ಮಹಡಿಗಳೇ
ನಮ್ಮ ನಿತ್ಯ ಕಾಯಕದ ಮೂಲಗಳು.

ತಿರುಕರೆಂದು ತಲೆತಿರುಗಿಸಿ ಹೋಗದಿರಿ
ನಾವು ನಿಮ್ಮಂತೆ ಮನುಜರೆಂಬುದ ಮರೆಯದಿರಿ.

   - ಭಾರತಿ ಭಂಡಾರಿ, ಬೆಂಗಳೂರು.



ಹನಿಗವನಗಳು

(೧)

ಮಸೀದಿ
ಮಠ
ಮಂದಿರಗಳಿಗೆ ಭೇದಭಾವದ ಸೊಂಕು
ಮನುಜನ ನಾಲ್ಗೆಯಿಂದಲೆ ಅಂಟಿದೆ.ಬರಿ
ಮತಗಳಿಗಾಗಿ
ಮತಿಹೀನ ರಾಗುವ
ಮಂತ್ರಿಗಳು
ಮನುಜಮತದ ಅರಿವಿನ
ಮಾತು
ಮರೆತು
‌ಮಾನಹೀನರಾಗಿ
ಮಾನವೀಯತೆ ಇಲ್ಲದೆ
ಮನಬಂದಂತೆ ಆಳ್ವರು
ಮನುಷ್ಯತ್ವ ಕೊಂದು

 (೨)

ನಿನಗಾಗಿ
ನಾ ನಿಂದು
ಬಾನಿಗೆ ಬೆವರ ಗಂಬಳಿ
ಹೊದ್ದಿಸಿರುವೆ ಆದರು
ತಿಳಿಯಾಗಿಲ್ಲ
ತಿಳಿ ಗೆಳತಿ
ಚಳಿಗಾಳಿಗೆ
ಉಕ್ಕುವ ಹುಚ್ಚು
ಆಸೆಯು
ಹೆಚ್ಚಾಗಿದೆ.
ಒಮ್ಮೆಯಾದರೂ
ತಪ್ಪಿದ್ದರು ತಬ್ಬಿಕೊ
ತುಸು ಬಿಸಿಯಾದರು ಆದಿತು.

ಮೈಗೋರಿಯುವ ಚಳಿಗೆ
ನಿನ್ನ ಬಿಸಿ ಉಸಿರ
ತೋಳಪ್ಪುಗೆಗೆ
ನಿನ್ನ ಬಳಸುವ ಕೈಗಳಿಗೆ ಗರಿ ಬಿಚ್ಚಿ ನಿಂದಿವೆ
 

-ನಾಗರಾಜ ದೊಡನೆ
ಬಿಜಾಪುರ
ತಾ||ಮುದ್ದೇಬಿಹಾಳ 

 

 

ಯಶಸ್ವಿನ ಹೆಜ್ಜೆ

ಓ ನನ್ನ ಮುದ್ದು ಮಕ್ಕಳೆ
ಒಂಬತ್ತು ಮೆಟ್ಟಿಲು ಹತ್ತಿದವರೆ
ಸುಗಮವಾಗಿ ಸಾಗಲಿ
ನೀವು ಇಡುವ ಹೆಜ್ಜೆಗುರುತುಗಳು
ತಂದೆ ತಾಯಿಯರು ಕಾಯುತ್ತಿರುವರು
ನಿಮ್ಮ ಯಶಸ್ವಿನ ಹೆಜ್ಜೆ ಗುರುತಿಗಾಗಿ
ಶಿಕ್ಷಕರು ನೋಡಲು ಹಂಬಲಿಸುವರು
ನೀಮ್ಮ ಹತ್ತರ ಹೆಜ್ಜೆ ಗುರುತನ್ನು
ಕನ್ನಡದ ವಣ೯ಮಾಲೆಗಳನ್ನು ತಿಳಿದುಕೊ
ಸುಂದರವಾದ ಅಂಕಗಳನ್ನು ಗಳಿಸಿಕೊ
ಇಂಗ್ಲಿಷ್ ಒರಟ ಅಂತ ತಿಳಿಯ ಬೇಡಿ ಇಪ್ಪತ್ತಾರು ಅಕ್ಷರಗಳ ಚಂದದ ಮಾಲೆ ಮಾಡು ಅಂಕ ಗಳಿಸಿಕೊ
ವಿಜ್ಞಾನದಲ್ಲಿ ತಂತ್ರಜ್ಞಾನಗಳ ಚಿತ್ರ ಬಿಡಿಸು
ಯಶಸ್ವಿಯಾಗಿ ಭವಿಷ್ಯದ ಅಂಕಗಳನ್ನು ಗಳಿಸಿಕೊ
ಸುಂದರವಾದ ಭಾರತ ನಕ್ಷೆ ಬಿಡಿಸು
ಸಮಾಜದಲ್ಲಿ ವಿಸ್ಮಯಕಾರಿ ಅಂಕ ಗಳಿಸು
ಹಿಂದಿ ಭಾಷೆಯನ್ನು ದಿಟ್ಟಿಸಿ ನೋಡಬೇಡ
ಅಂದದ ಗೆರೆಗಳನ್ನು ಹಾಕು ಅಂಕ ಗಳಿಸು
ಆ ಕಡೆ ಈ ಕಡೆ ಚಂದದ ಚುಕ್ಕಿಗಳನ್ನು ಹಾಕುತ್ತಾ
ಆ ಚುಕ್ಕಿಗೆ ಈ ಚುಕ್ಕಿ ಸೇರಿಸಿ ಗಣಿತ ದಲ್ಲಿ ಅದ್ಬುತ ಅಂಕ ಗಳಿಸು
ಸಮಾಜದಲ್ಲಿ ಕಿರಿಕಿರಿಗೆ ಕಿವಿ ಕೋಡದೆ
ನನ್ನದು ನಿನ್ನದು ಎಂದು ಭಾವ ತೋರದೆ
ಯಶಸ್ವಿನ ಮೆಟ್ಟಿಲುಗಳನ್ನು ಜಾರುತ್ತಿರುವರನ್ನು
ಒಬ್ಬರೊಬ್ಬರಗೆ ಕೈ ಹಿಡಿದು ಯಶಸ್ಸು ಆಗೋಣಾ

-ಶಿವಕುಮಾರ್ ಅಜ್ಜಪ್ಪ ತಳವಾರ್
ಚಿಕ್ಕನರಗುಂದ

ಶ್ರೀಮಂತರ ಸಂಗ್ರಾಮ

ಓಡುವವರು ಓಡುವವರು ಓಡುತ್ತಲೇ ಇರುವವರು
ಜೀವನ ಸಂಗ್ರಾಮ ವೆಂಬ ಓಟದ ಸ್ಪರ್ಧೆಯಲ್ಲಿ
ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸದಲ್ಲಿ ಬಡವರ ಕೈಲಾಗದವರ
 ತುಳಿಯುತ್ತಾ ಹಿಂಸಿ ಸುತ್ತ ಸುತ್ತಮುತ್ತಲಿನ
 ಪರಿಸರ ಹಾಳು ಮಾಡುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸವನ್ನು ಹೆಚ್ಚಿಸುವರು ಓಡುವ ರಭಸದ
 ಜೊತೆಗೆ ಹಿಂದೆ ಬಂದಂತಹ ಹೆಜ್ಜೆಗಳನ್ನು
 ಹಿಂದೆ ಸಹಾಯ ಮಾಡಿದವರ ನೋಡಿಯೂ ನೋಡದೆ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸದಲ್ಲಿ ಈ ಸ್ನೇಹಿತರ ಬಂಧುಗಳನ್ನು
 ಜೊತೆಯಲ್ಲೇ ಕರೆದೊಯ್ಯದೆ ಸಹಾಯ ಮಾಡದೆ
 ತನ್ನಂತೆ ಓಡುವವರ ಸ್ನೇಹ ಬಂಧುತ್ವ ಬೆಳೆಸುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುತ್ತಾ ಓಡುತ್ತಾ ಪಕ್ಕದಲ್ಲಿ ಇರುವಂತಹ ಜನರನ್ನು
 ಸ್ಪರ್ಧೆಗೆ ಇಳಿಸುವವರು ಅವರನ್ನು ಸ್ಪರ್ಧೆಯಲ್ಲಿ
 ಕುಂಟು ವಂತೆ  ತೊಂದರೆ ನೀಡುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಟದಲ್ಲಿ ಕಲ್ಲು ಮುಳ್ಳುಗಳಿಂದ   ಕಷ್ಟಗಳು
 ಬಂದಾಗ ಬಡವರನ್ನು ಕಲ್ಲು ಮುಳ್ಳುಗಳ ಮೇಲಾಗಿ ಅದು
ತಮಗೆ ತಿಳಿಯದೆಂದು ಅವರಾರೂ ತಿಳಿಯಲೆಂದು ಅವರ ಮೇಲೆ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಟದಲ್ಲಿ ಎಲ್ಲಿಯ ತನಕ ಓಡಿ ಯಾರು
 ಬಿಸಿ ರಕ್ತ ತಣ್ಣಗಾಗುವ ತನಕ ಮಿತ್ರರು ಶತ್ರುವಾಗುವ
ತನಕ ಹಣದ ಮಗುವು  ಇಳಿಯುವ ತನಕ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುತ್ತಾ ಓಡುತ್ತಾ ಒಂದೊಮ್ಮೆ ಕುಸಿದು ಬಿದ್ದವರು
 ಮತ್ತೊಮ್ಮೆ ಹೇಳಲಾಗದೆ ಜಗದ ಸಂಬಂಧವನ್ನು
 ಕಡಿದುಕೊಂಡು ಮತ್ತೆ ಬಾರದ ಲೋಕಕ್ಕೆ ಹೋಗುವರು ಎಂದು
 ಆಗ ಜನರು ಎನ್ನುವವರು ಇದುವೇ ಜೀವನ ಸಂಗ್ರಾಮ

ಈ ಸಂಗ್ರಾಮ ಜಗದಲ್ಲಿ ಒಬ್ಬರದಲ್ಲ ಎಲ್ಲಾ ಶ್ರೀಮಂತ ರಾಕ್ಷಸ ರದ್ದುಇವನ
ನಂತರ ಮತ್ತೊಬ್ಬ ಮಗದೊಬ್ಬ ಸ್ಪರ್ಧೆ ಇಳಿಯುತ್ತಾ ಬುದ್ಧಿ ಕಲಿಯದೆ
 ಓಡುವವರು ಓಡುವವರು ಕೊನೆಯಿಲ್ಲದ
 ತನಕ ಮತ್ತೆ ಬಾರದ ಕಡೆಗೆ ಮತ್ತೆ ಬರಲು ಕಡೆಗೆ

-ಮಧು ಎಂ
ತಿಪಟೂರು

ಜಂಗಮವಾಣಿ

ಏನ ಚಂದ ಐಯಿತಿ ಎಪ್ಪಾ ಇದು
ನೋಡಿದರೆ ಯಾರು ಬಿಡುವುದಿಲ್ಲ
ತರುತನ ಇವರಿಗೆ ಸಮಾಧಾನ ಇಲ್ಲಾ
ಊಟ ಬಿಟ್ಟರೆ ಚಿಂತೆ ಇಲ್ಲಾ ತರುವರು
ಚಾಜ೯ ಇಲ್ಲಾ ನನ್ನ ಜಂಗಮವಾಣಿ
ಪದೇ ಪದೇ ಕರೆ ಬರುತಾವು
ಹೇಳಿದರು ಕೆಳವರು ಇಲ್ಲಾ ಎಪ್ಪಾ
ಇದೊಂದು ಮಾಯವಾದ ತಲೆ೯ ಇದು
ದೂರವಿದ್ದ ಸಂಬಂಧವನ್ನು ಕೂಡಿಸುತ್ತೆ
ಕೂಡಿ ಇದ್ದ ಸಂಬಂಧವನ್ನು ದೂರ ಮಾಡುತ್ತೆ
ಏನಪ್ಪಾ ಇದರ ಲೀಲೆ ಬಲ್ಲವರು ಯಾರ
ಒಬ್ಬರೊಬ್ಬರಗೆ ಬಿಟ್ಟು ಇರಲಾರರು
ಬಿಟ್ಟು ಹೋದರು ನೆನಪು ಆಗುವುದು
ಮಾತನಾಡದಿದ್ದರೆ ಕೋಪಗೋಳ್ಳುವುದು
ಏನ ಐಯಿತಿ ಅಂತಹದು ಇದರಲ್ಲಿ
ಬಲ್ಲವರು ಯಾರೊ ಎಪ್ಪಾ ಇದರ ಲೀಲೆ
ಮಕ್ಕಳು ಬಿದ್ದರೂ ಅದರ ಗುಂಗಿನಲ್ಲಿ
ಹುಟ್ಟಿದ ಕೂಸು ಹಲೋ ಎಂದಿತು
ಮಗುವಿಗೆ ಇದು ಆಟದ ಸಾಮಗ್ರಿ ಆಯಿತು
ಫೋನ್ ನೋಡಿ ಅಳುವ ಮಗು
ಸಮಾಧಾನ ವಾಗುವುದಾಯಿತು.
ಬಡತನ ಇದ್ದರು ಬೇಕು
ಸಿರಿತನ ಇದ್ದರು ಬೇಕು
ಹೋಟ್ಟೆಗೆ ಕೂಳು ಇಲ್ಲದಿದ್ದರು ಬೇಕು
ಏನ ಎಪ್ಪಾ ಇದರ ಲೀಲೆ ಬಲ್ಲವರು ಯಾರ.
 

ರಚನೆ : ಸೂರಿ
(ಶಿವರಾಜಕುಮಾರ ಅಜ್ಜಪ್ಪ ತಳವಾರ) 

ಕನ್ನಡ ಕನ್ನಡ ಹಾ ಸವಿಗನ್ನಡ

ಕನ್ನಡ ಕನ್ನಡ ಹಾ ಸವಿಗನ್ನಡ
ಕಿವಿಗದು ಇಂಚರ ಈ ತಿಳಿಗನ್ನಡ//

ಪಂಪ.ರನ್ನ,ಕುಮಾರವ್ಯಾಸರು ಬಳಸಿದ ಹಳಗನ್ನಡ
ವಚನದಿ,ರಗಳೆ,ಕಂದ ವೃತ್ತಗಳಲಿ ಇರುವ ನಡುಗನ್ನಡ
ಪುರಂದರ ಕನಕರು ವ್ಯಾಸತೀರ್ಥರು ಬಳಸಿದ ಕನ್ನಡ
ಕುವೆಂಪು,ಬೆಂದ್ರೆ ಕಾರಂತ ಮಾಸ್ತಿಯವರ ಆಧುನಿಕ ಕನ್ನಡ....!

ಅಕ್ಕರೆ ನುಡಿಯ ಸಕ್ಕರೆ ಸವಿಗನ್ನಡ
ಶ್ರೇಷ್ಠ ಪದಕೋಶ ಪದಗುಚ್ಚಗಳಿರುವ ಸಿರಿಕನ್ನಡ
ಕಾದಂಬರಿ,ನಾಟಕ,ಕಥೆ,ಪುರಾಣಗಳಲ್ಲಿ ಪ್ರಸಿದ್ದಿ ಈ ಕನ್ನಡ
ಪಂಪ.ಜ್ಞಾನಪೀಠ,ಸಾಹಿತ್ಯ ಅಕಾಡೆಮಿ ಪಡೆದ ಹೊಸಗನ್ನಡ.....!

ಸ್ವತಂತ್ರ ಲಿಪಿ ಇರುವ ಭಾಷೆ ಕನ್ನಡ
ಸಾವಿರ ವರ್ಷ ಐತಿಹಾಸಿಕ ಹಿನ್ನೆಲೆಯಿರುವ ಕನ್ನಡ
ಈ ಶ್ರೀಗಂಧದ ನಾಡಿನ ಚೆಲುವ ಸೊಗಸಿನ ಕನ್ನಡ
ಅಕ್ಷರಕೆ ಲಕ್ಷ್ಯವರಹ ಬೆಲೆ ಇರುವ ನಮ್ಮ ಭಾಷೆ ಕನ್ನಡ....!

ರಚನೆ :ಶಂಕರಾನಂದ ಹೆಬ್ಬಾಳ
ಕೆ ಎಚ್ ಡಿ ಸಿ ನೇಕಾರ ಕಾಲೂನಿ ಇಲಕಲ್ಲ ತಾ.ಇಲಕಲ್ಲ ಜಿ.ಬಾಗಲಕೋಟ 

ಬದುಕು ಭರವಸೆಗಳ ತೂಗು ತಕ್ಕಡಿ

 ಬದುಕು ಭರವಸೆಗಳ ತೂಗು ತಕ್ಕಡಿ
ಹತಾಶೆ ನೂರು !
ಸಿಕ್ಕದ್ದು ಎಷ್ಟೋ.. ಸಿಗದಿದ್ದು ಎಷ್ಟೋ...
ಆದರೂ ಜೀವಿಸುವ ಆಸೆ ಎಲ್ಲರಲೂ
ಪಯಣ ನಡೆದಷ್ಟೂ ಅನುಭವ ಸಾವಿರ
ಇರಬಹುದು ಆಲ್ಲವೇ ?
ಹಗಲು ಗನಸಿನ ಹುಚ್ಚುತನ
ಬಹು ವಿಸ್ತಾರ ಮುಗಿಯದ ಆವಿಷ್ಕಾರ
ನನ್ನದೆನ್ನುವ ಅದೆಷ್ಟೋ ಅಭಿಮಾನ
ಸಹಿಸಿದ ನೂರಾರು ಅಪಮಾನ

ನಂಬಿಕೆಗಳು ಹುಸಿಯಾಗಿ ನಂಬಿದವರೇ
ಕೊರಳಿಗೆ ಉರುಳಾಗಬಹುದೇ
ಇಟ್ಟ ಹೆಜ್ಜೆಗೆ ಗುರುತು ಕಾಣದಾದರೆ
ಬದುಕಿನ ದಾರಿ ಕಕ್ಕಾವಿಕ್ಕಿ
ಕಣ್ಣಿದ್ದರೂ ಕುರುಡನಂತೆ ತಡಕಾಡಿ
ಹೆಣ್ಣು ,ಹೊನ್ನು ,ಮಣ್ಣಿನ ಹುಡುಕಾಟ
ಮನುಕುಲವೇ ಮರೆಯಾಗುವವರೆಗೆ
ಏಕಾಂಗಿಯಾಗಿ ಪಯಣ
ಯಾರು ಬರಲಾರರು ಮುಗಿದ ಬದುಕಿನ ಜೊತೆಗೆ
ಬಂದರೂ ಬರಬಹುದೇ ಮಸಣದವರಗೆ
ಮತ್ತೆ ನೆನಪಿನ ಹಾಯಿ ಬದುಕಿನ ಸಾಗರಕೆ
ತೇಲಿ ಬಿಟ್ಟಂತೆ
ಬಣ್ಣ ಮಾಸಿದಮೇಲೆ ಬದುಕು ನೂರಾರು ಪುಟ ಬರೆಯುವವನಾರೊ ಓದುವವನಾರೊ
ದೇವರ ಆಟದಲಿ ನಾನೂ ನೀನೂ ಎಲ್ಲರೂ ಒಂದೇ .....

ರಚನೆ

ಮಂಜುನಾಥ ಟಿ ಜಿ
ತರಿಧಾಳು ಉಪನ್ಯಾಸಕರು

ಧರೆಯು ಸುಡುತಿದೆ

ಧರೆಯು ಸುಡುತಿದೆ
ಜ್ವರವು ಹೆಚ್ಹಿದೆ
ವರುಷ ವರುಷದಿ೦ದೀಚೆಗೆ

ವಿಷವ ಕಾರಲು
ನಭಕೆ ಮನುಜನು
ನದಿಯು ಸಾಗರದೊಡಲಿಗೆ

ಪ್ರಾಣಿ ಪಕ್ಷಿಯ
ಸ೦ಕುಲವಳಿದಿದೆ
ಕಾಡ ಕಡಿಯುವ ಕೃತ್ಯಕೆ

ರವಿಯ ತೀಕ್ಷ್ಣದ
ಕಿರಣ ತಡೆಯಲು
ಬಾನ ಪದರವು ಸೂತಿದೆ

ಭುವಿಯ ಧ್ರುವದೀ
ಮ೦ಜು ಕರಗಿದೆ
ಶಾ೦ತ ಸಾಗರ ಉಕ್ಕಿದೆ

ನೆರೆಯು ಬ೦ದಿದೆ
ನಾಡು ಕೊಚ್ಚಿದೆ
ಧರೆಯ ಸೆರಗದು ಜಾರಿದೆ

ವರುಣ ಕೃಪೆಯದು
ಕಡಿಮೆಯಾಗಿದೆ
ಜಲದ ಕ್ಷಾಮವು ಹೆಚ್ಚಿದೆ

ಜಲದ ಜಗಳವು
ರಾಜ್ಯ ದೇಶದ
ನಿತ್ಯ ರಗಳೆಯು ಆಗಿದೆ

ಹಸಿರು ಧರೆಯನು
ನನ್ನ ಮಗಳಿಗೆ
ಮಾಘ ಮಾಸದಿ ತೊರಿದೆ

ನೊಡಬಹುದೇ
ಬೆ೦ಕಿಯು೦ಡೆಯನೆಲ್ಲ
ಮಾಸದಿ ನಮ್ಮ ಮು೦ದಿನ ಪೀಳಿಗೆ

ಧರೆಯನುಳಿಸುವ
ಪುಣ್ಯ ಕಾರ್ಯದಿ
ಅಳಿಲ ಸೇವೆಯು ಬೇಕಿದೆ

- ಶ್ರೀನಿವಾಸ ಪ್ರಸಾದ್
ವೈಟ್ ಫೀಲ್ಡ್, ಬೆಂಗಳೂರು

ಮನುಜನಾಗೋ ಮನುಜ ನೀನು

ಕಷ್ಟ ನಷ್ಟ ನೀರ ಮೇಲಿನ ಗುಳ್ಳೆ ಕಣಣ್ಣ.
ಹಂಗ್ ಬಂದು ಹಿಂಗ್ ಹೋಗೊ ಅತಿಥಿ ತಿಳಿಯಣ್ಣ.
ಬಾಡ್ಗೆ ಮನೆಯಿಂದ ಒಂದಿನ ಹೋಗೊದೇಯಣ್ಣ.
ನೀನು ತಂದಿರೋದೆನು ಇಲ್ಲಿ ಚಿಂತೆ ಬಿಡಣ್ಣ.

ಸಾವು ನೋವು ಯಾರೀಗಿಲ್ಲ ಹುಡುಕಿ ನೋಡಣ್ಣ.
ಸಾವೇ ಇಲ್ಲದ ಮನೆಯಾ ಸಾಸ್ವೆ ಸೀಕ್ಕೊದಿಲ್ಲಣ್ಣ.
ನಾಕ ನರಕ ಮೇಲೆಲ್ಲಿಲ್ಲ ಇಲ್ಲೆ ನೋಡಣ್ಣ.
ಇದ್ದಷ್ಟದಿನ ಚೆಂದಾಗ್ಬಾಳದ್ರೆ ಹೋಗೊದೆನಣ್ಣ

ಜಾತಿ ಜಾತಿ ಅಂತ  ಜಾತಿ ಜಗಳ ಯಾಕಣ್ಣ
ಎಲ್ಲ ಜಾತಿ ಮೂಲಬೇರು ಒಂದೇ ನೋಡಣ್ಣ
ಅಣ್ಣ ತಮ್ಮನಂತೆ ಕೂಡಿ ಬಾಳಬೇಕಣ್ಣ.
ಆಗ ನಿನ್ನ ಬಾಳು ಅರಳೊ ಹೂವು ಕಣಣ್ಣ.

ಬುದ್ಧ ಹೇಳಿದ ಶಾಂತಿ ಮಾರ್ಗ ಹಿಡಿದು ನೋಡಣ್ಣ.
ಗಾಂಧಿ ತಾತನ ಅಂಹಿಸೆಯ ಅಸ್ತ್ರ ಪಡಿಯಣ್ಣ.
ಕನಕ ಬಸವ ಪುರಂದರ ತತ್ವ ಅರಿಯಣ್ಣ.
ಮಾನವತೆ ಶ್ರೇಷ್ಠವದು ಪಡೆದು ತೀರಣ್ಣ.

 - ಮಾರುತಿ ಬೆಂಡ್ಲಗಟ್ಟಿ    
ಹಳೂರ ಓಣಿ, ಮುಂಡಗೋಡ
ತಾ-ಮುಂಡಗೋಡ.
ಜಿ-ಉತ್ತರ ಕನ್ನಡ.
ಪಿನ್ ಕೋಡ್-581349

ದೀವಿಗೆಯ ಬೆಳಕಲ್ಲಿ ಅರಳಿದ ಪ್ರೀತಿ

 ಭಾರ್ಗವನಿಗೆ ಹೆಣ್ಣು ನಿಶ್ಚವಾಗಿದೆ. ಹೆಣ್ಣು ಪರವೂರಿನವಳು, ಭಾರ್ಗವನ ಊರಿನಿಂದ ಬಹಳ ದೂರವೆನಿಲ್ಲ ಭಾರ್ಗವನಿಗೆ ತಕ್ಕಂತೆ ಲಕ್ಷಣವಾದ ಹುಡುಗಿ.ಹೆಸರು ಸುಮಂಗಲ ಹೆಸರಿಗೆ ತಕ್ಕಂತೆ ಗುಣವಂತೆ, ಶೀಲವಂತೆ ,ಸಧ್ಗುಣ ಸಂಪನ್ನೆ. ನಯನಾಜುಕು ,ತಳಕುಬಳಕು ಎನನ್ನು ಅರಿಯದ ಹುಡುಗಿ ಹಳ್ಳಿಯ ಹುಡುಗಿ ಓದಲು ಬರೆಯಲು ಬಲ್ಲವಳು. ಭಾರ್ಗವ ಸರ್ಕಾರಿ ಕೆಲಸದಲ್ಲಿ ತನ್ನೂರಿನ ತಾಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಹೆಣ್ಣನ್ನು ನೋಡಿದ ತಕ್ಷಣಕ್ಕೆ ಒಪ್ಪಿಕೊಂಡ. ಸ್ವಲ್ಪ ಓದಿಕೊಂಡವಳು, ಲಕ್ಷಣವಾಗಿದ್ದಾಳೆ ,ಅವನು ಅಂದುಕೊಂಡದಕ್ಕಿಂತ  ಸುಂದರವಾಗಿದ್ದಳು, ಮನೆತನದಲ್ಲು ಚೆನ್ನಾಗಿದ್ದರು. ಹೆಣ್ಣು ನಿಶ್ಚಯವಾದ ಒಂದೊ ಎರಡೋ ತಿಂಗಳಿಗೆ ದೀಪಾವಳಿ ಹಬ್ಬ ಬಂದಿತ್ತು. ಹೋಸದಾಗಿ ಮಗಳಿಗೆ ಗಂಡು ನಿಶ್ಚಯವಾದರೆ ದೀಪಾವಳಿಯಂದು ಭಾವಿ ಅಳಿಯನ್ನು ಕರೆದು ಉಪಚರಿಸುವುದು ವಾಡಿಕೆ. "ಭೋರೆಯ ನೀರು " ಎಂಬ ಶಾಸ್ತ್ರವನ್ನು ಮಾಡಲಾಗುತ್ತದೆ. ಅಂದರೆ ಅಳಿಯ ದೀಪಾವಳಿಯ ಹಿಂದಿನ ದಿನ ಮಾಮನ ಮನೆಗೆ ಅಳಿಯ ಹೋಗಿ ಸ್ನಾನ ಮಾಡಿಕೊಂಡು ಮಡಿಬಟ್ಟೆ ಧರಿಸಬೇಕೆಂಬುದು ವಾಡಿಕೆ. ಅದರೊಟ್ಟಿಗೆ ಅವರವರ ಶಕ್ತಿಗೆ ತಕ್ಕಂತೆ ಅಳಿಯನಿಗೆ ಉಡುಗೊರೆಯ ರೂಪದಲ್ಲಿ ಬೆಳ್ಳಿ ಇಲ್ಲವೆ ಬಂಗಾರವನ್ನು ಕೋಡುತ್ತಾರೆ. ಭಾರ್ಗವನಿಗೆ ದೀಪಾವಳಿಯ ಹಬ್ಬಕ್ಕೆ ವಿಶೇಷ ಆಮಂತ್ರಣ ಬಂದಿತ್ತು. ಭಾವಿ ಪತ್ನಿಯ ಮುಖ ದರ್ಶನ ಸರಸ ,ಸಲುಗೆಯ ಆಸೆ ಉಮ್ಮಡಿಸಿ ಬಂದಿತ್ತು ,ಒಬ್ಬೊಬ್ಬನೆ ನಾಚಹತ್ತಿದ. ಈ ಮೊದಲು ಇದಾವ ಶಾಸ್ತ್ರ ,ಬೀಗರ ಮನೆಯ ಅನುಭವ ಇಲ್ಲದವನು ಮುಜುಗರದೊಂದಿಗೆ ಚಿಂತಿಸಲು ಶುರು ಮಾಡಿದ. ಹೇಗಪ್ಪ ಹೋಗೊದು ,ಅಲ್ಲಿ ಹೇಗೆ ನಡೆದುಕೊಳ್ಳಬೇಕು ರೀತಿ ರಿವಾಜು ಒಂದರ ತಳಮೇಲು ಅರಿಯೆನಲ್ಲ ಎಂದು ಚಿಂತಿಸಿದ. ಹೀಗೆ ಮಾಡಿದರೆ ಹೇಗೆ ನನ್ನ ಸ್ನೇಹಿತ ಜನಾರ್ಧನನ್ನು ನನ್ನೊಟ್ಟಿಗೆ ಕರೆದ್ಯೊದರೆ ನನಗೂ ಒಂದು ದೈರ್ಯಯಿರುವುದು ಎಂದು ಯೋಚಿಸಿದ. ಹೇಗೂ ಅವನು ನನ್ನೊಟ್ಟಿಗೆ ನನ್ನ ಕಛೇರಿಯಲ್ಲೆ ಕೆಲಸ ಮಾಡುವವನು ,ನನ್ನ ಪ್ರಾಣ ಸ್ನೇಹಿತ. ಅವನಿಗೆ ನನ್ನೊಟ್ಟಿಗೆ ರಜೆ ಇದೆಯಲ್ಲ ಎಂದು ಅವನನ್ನು ಕರೇದ. ಮೊದ ಮೊದಲು ಜನಾರ್ಧನ ಇಲ್ಲಪ್ಪ ನಿನ್ನ ಮದುವೆ ,ನಿನ್ನ ಬೀಗರು ನಾನು ಹೇಗೆ ಬರಲು ಸಾಧ್ಯ ಎಂದವನು ಇವನ ಒತ್ತಾಯ ಒತ್ತಾಸೆಗೆ ಮಣಿದು ಹೋಗಲು ಸಿದ್ಧನಾದ. ಜನಾರ್ಧನ ಮತ್ತು ಭಾರ್ಗವರಿಬ್ಬರು ಬೈಕ್ ಎರಿ ಬೀಗರ ಮನೆಯನ್ನು ತಲುಪಿದರು. ತಲುಪುವಷ್ಟೊತ್ತಿಗೆ ಸಂಜೆಯಾಗಿತ್ತು. ಬೀಗರ ಮನೆಯವರು ಇವರನ್ನು ಆದರದಿಂದ ಸ್ವಾಗತಿಸಿದರು. ಉಭಯಕುಶಲೋಪರಿ ಎಲ್ಲವು ಆದವು. ಸುಮಂಗಲನನ್ನು ಕಂಡವನೆ  ಭಾರ್ಗವ ಸಂತೋಷದಲ್ಲಿ ಹಿಗ್ಗಿದ.ಅವಳನ್ನು ಕಾಣುವ ತವಕದಲ್ಲಿ ಓಡೊಡಿ ಬಂದಿದ್ದು ಸಾರ್ಥಕವಾಯಿತೆನಿಸಿ ಅವಳನ್ನು ಕಂಡವನೆ ನಾಚಿದ, ಅವಳು ಭಾರ್ಗವನನ್ನು ಕಂಡವಳೆ ಉಪಚರಿಸಿ ಓಡಿ ಹೋಗಿ ಬಾಗಿಲ ಸಂಧಿಯಿಂದ ಇಣುಕಿ ನೋಡಿ ಲಜ್ಜೆಯಿಂದ  ನುಲಿದಳು. ಸುಮಂಗಲಳಿಗೊಬ್ಬಳು ತರಲೆ ತಂಗಿಯಿದ್ದಳು. ತರಲೆ ತಲೆಹರಟೆ ,ಶುಧ್ದ ತಲಹರಟೆ. ಒಂದು ದಿನ ಒಬ್ಬ ಪೂಜಾರಿ ಅವಸರವಸರವಾಗಿ ಸೈಕಲ್ ಏರಿ ದೇವರ ಪೂಜೆಗೆಂದು ತಡಬಡಿಸಿ ಹೋಗುತ್ತಿದ್ದ. ಈ ತರಲೆ ಏನು ಮಾಡಬೇಕು ಗೊತ್ತೆ ಆ ಪೂಜಾರಪ್ಪನ ತಡೆದು ವಿಳಾಸ ಕೇಳುವ ರೀತಿ ಮಾತನಾಡಿಸಿ ಎಲ್ಲ ಸ್ನೇಹಿತೆಯರೊಂದಿಗೆ ಅವನ ಪಂಚೆ ಕಸಿದುಕೊಂಡು ಅವನನ್ನಾ ಪೇಚಿಗಿಡು ಮಾಡಿದ್ದರು. ಸುಮಂಗಲನಿಗೆ ತದ್ವಿರುದ್ಧವಾದ ಗುಣದವಳು. ಕೆಟ್ಟವಳಲ್ಲ ನಯ ನಾಜುಕು ಕಡಿಮೆ, ಗಂಡುಬೀರಿ ಅನ್ನಿ.      ಇವಳ ಈ ಗುಣವೆಲ್ಲ ಮನೆಯವರಿಗೆ ಚೆನ್ನಾಗಿಯೆ ಗೊತ್ತಿತ್ತು ,ಮೊದಲೆ ಅವರಮ್ಮ ಸುಮಾಳಿಗೆ ತಾಕೀತು ಮಾಡಿಬಿಟ್ಟಿದ್ದರು. ಬಂದವರ ಮುಂದೆ ಕಪಿಚೆಷ್ಟೆ ಮಾಡಿ ನಮ್ಮ ಮರ್ಯಾದೆ ಕಳಿಬೇಡ ಅಂದಿದ್ದರು. ಇವಳೊ ಸುದ್ಧ ತರಲೆ ,ಬೇರೆಯವರಿಗೆ ತಮಾಷೆ ಮಾಡಿ ಮಜಾ ತೋಗೊಳೊ ಕಪಿ ಮುಂಡಡೆ. ಭಾರ್ಗವ ಮತ್ತು ಜನಾರ್ದನ ಇಬ್ಬರು ಬೀಗರ ಆಮಂತ್ರಣದಂತೆ ಬಂದು ಸೇರಿದ್ದರು. ಒಳಗಿಂದಲೆ ಅವರಿಬ್ಬರನ್ನು ನೋಡಿದವಳೆ ಇವರಿಗೆ ಹೇಗಾದರು ಗೊಳ್ಯೋಕ್ಕೊಬೇಕು ಅನಿಸಿ, ಅಕ್ಕ ಬಲಿಕಾ ಬಕರಾ ಬಂದಿದಾವೆ ನೋಡು ಇವಾಗ ಎನು ಮಾಡ್ತಿನಿ ಅಂತಾ ಅವಳ ಹತ್ತಿರ ಹೇಳಿದಳು. ಅಕ್ಕ ಇವಳನ್ನು ಕಣ್ಣು ದೊಡ್ಡದು ಮಾಡಿ ನೋಡಿದವಳೆ ಲೆ ಕೋತಿ ಇವರನ್ನಾದರು ಬೀಡೆ ಮಾರಾಯ್ತಿ ಅಂದಳು. ಬೀಡ್ತಿನಿ ಬಿಡ್ತಿನಿ ಸ್ವಲ್ಪ ರುಚಿ ತೋರಿಸಿ ಬಿಡ್ತಿನಿ ಅಂದಳು. ಇವಳ ಸ್ವಭಾವ ಅವಳ ಅಕ್ಕನಿಗೆ ಚೆನ್ನಾಗೆ ತಿಳಿದಿದ್ದರಿಂದ ಇವಳಿಗೆ ಎನೆ ಹೇಳಿದರು ಅಷ್ಟೆ ಅವಳ ಹಠ ಬೀಡುವವಳಲ್ಲ ಎಂದು ಸುಮ್ಮನಾದಳು. ಹೋರಗೆ ಹೋದವಳೆ ಭಾವ ಹೇಗಿದ್ದಿರಿ ಎಂದು ಮಾತನಾಡಿಸಿ.ಜನಾರ್ಧನಿಗೆ ಇವರು ಯಾರು ಭಾವ ಮೊದಲು ನೋಡಿಯೆ ಇಲ್ಲವಲ್ಲ ಎಂದಳು. ಇವನು ನನ್ನ ಸ್ನೇಹಿತ ನನ್ನೊಟ್ಟಿಗೆ ಕೆಲಸ ಮಾಡುತ್ತಾನೆ ಎಂದ. ನೋಡಲು ಚೆನ್ನಾಗಿದ್ದ ಜನಾರ್ಧನ ಓಳ್ಳೆ ಮೈಕಟ್ಟು, ಕಾಂತಿಯ ಮುಖಕ್ಕೆ ಕನ್ನಡ ಹೊಂದುವಂತೆ ಇದ್ದ. ಕನ್ನಡಕದಲ್ಲಿ ಸುಂದರವಾಗಿ ಕಾಣುತ್ತಿದ್ದ. ಸುಮಾ ಭಾವನಿಗೆ ಕಾಡಿಸುವುದು ಬೇಡ. ಈ ಬಲಿಕಾ ಬಕ್ರಾ ನ ಕಾಡಿಸಿದರೆ ಹೇಗಿರುತ್ತೆ ಎಂದು ಯೋಚಿಸಿ ಒಳಗೆ ಹೋದವಳೆ. ತಿಂಡಿ ಎಲ್ಲ ತಂದು ತಗೋಳಿ ಭಾವ ಎಂದಳು. ಭಾರ್ಗವ ಬೇಡ ಎಂದರು ಕೇಳದೆ ತಗೋಳಿ ನಿವು ಇನ್ನು ಮುಂದೆ ಬರುವುದು ಇದ್ದೆ ಇದೆ ,ಆದರೆ ಇವರು ಬರಬೇಕಲ್ಲ ನೀವು ಹೀಗೆ ಹೇಳಿದರೆ ಅವರು ಮುಜುಗರ ಪಡುವುದಿಲ್ಲವೆ ಎಂದು ತಿಂಡಿ ತಂದು ಇಟ್ಟಳು. ತಿಂಡಿ ತಟ್ಟೆ ತೆಗೆದುಕೊಳ್ಳುವಾಗ ಭಾವ ,ಭಾವ ಇದು ಅವರಿಗೆ ಇದು ನಿಮಗೆ ಎಂದು ತಟ್ಟೆ ಬದಲಿಸಿ ಕೊಟ್ಟಳು. ಕಪಿ ಅವಳು ಎನು ಮಾಡಿಯಾಳು ಊಹಿಸಿಕೊಂಡರಾ. ಜನಾರ್ಧನನಿಗೆ ಉಪ್ಪು ಹೆಚ್ಚಿಗೆಯೆ ಹಾಕಿ ಕೊಟ್ಟಿದ್ದಳು. ಪಾಪಾ ಜನ್ನಿ ಭಾರ್ಗವನ ಮುಖ ನೋಡಿ ಸುಮ್ಮನೆ ಹೊಟ್ಟೆಗಿಳಿಸಿದ. ಅವಳು ಇವ ಮುಖ ಕಿವುಚುವುದ ನೋಡಿ ,ನಗುತ್ತಿದ್ದಳು. ಜನ್ನಿ ಕಥೆ ಬೇಡ ಹೇಳಿ. ಎನು ಮಾಡಲಾಗದೆ ಸುಮ್ಮನೆ ತಿಂದ. ಇಷ್ಟಕ್ಕೆ ಬೇಡಬೇಕಲ್ಲ ಇವಳು. ತಿಂಡಿ ತಿಂದ ತಕ್ಷಣ ಓಡಿ ಹೋಗಿ  ಕಾಫಿ ತಂದಳು. ಜನ್ನಿ ಈ ಸಾರಿ ಅವಳು ಕೋಡುದನ್ನು ಕುಡಿಯುವುದು ಬೇಡ. ಭಾರ್ಗವನಿಗು ಇವಳ ಚೆಷ್ಟೆ ತಿಳಿಯಲಿ ಎಂದು ಭಾರ್ಗವನಿಗೆ ಕೊಟ್ಟ ಕಾಫಿ ಲೋಟ ತೆಗೆದುಕೊಂಡ. ತಲೆಹರಟೆಗೆ ಇದು ಚೆನ್ನಾಗಿ ಗೋತ್ತಿದ್ದರಿಂದ ಮೊದಲೆ ಭಾರ್ಗವನಿಗೆ ಖಾರದ ಕಾಫಿ ಕೊಟ್ಟಿದ್ದಳು, ಆದರೆ ಅದನ್ನು ಜನ್ನಿ ಕಿತ್ತುಕೊಂಡು ಕುಡಿದ. ಮತ್ತೆ ಅವನ ಪಾಲಿಗೆ ಖಾರದ ಕಾಫಿ ಸೀಗಬೇಕೆ. ಜನ್ನಿಗೆ ಈಗ ಅರ್ಥವಾಯಿತು ಇವಳು ಬೇಕಂತಲೆ ಇದನ್ನು ಮಾಡುತ್ತೀರುವಳೆಂದು. ಮಾಡುತ್ತೆನೆ ನಿನಗೆ ,ನನಗೆ ಖಾರದ ಕಾಫಿ ಕೋಡುತ್ತಿಯಾ ಎಂದು ಮನಸಿನಲ್ಲೆ ಕೋಪ ತೋರಿಸಿದ. ರಾತ್ರಿ ಊಟದ ಸಮಯವಾಯಿತು. ಸುಮಂಗಲ ಮತ್ತು ಅವರಮ್ಮ ಇಬ್ಬರಿಗು ಉಪಚರಿಸಿದ ಕಾರಣ ಜನಾರ್ಧನ ಕಪಿಯಿಂದ ಉಳಿದ ಇಲ್ಲವಾದರೆ ಇನ್ನೆನನ್ನೊ ಮಾಡುವಳಿದ್ದಳೋ ತಲೆಹರಟೆ. ಇಷ್ಟಕ್ಕೆ ನಿಟ್ಟುಸಿರು ಬಿಟ್ಟು ಸಮಾಧಾನದಿಂದ ಊಟ ಮಾಡಿದ ಜನ್ನಿ. ರಾತ್ರಿ ನಡೇದ ವಿಷಯವನ್ನೆಲ್ಲ ಭಾರ್ಗವನಿಗೆ ತಿಳಿಸಿದ. ಭಾರ್ಗವ ಅವನಿಗೆ ಸ್ವಾರಿ ಕಣೋ ತಪ್ಪುತಿಳಿಬೇಡ್ವೊ ,ಅವಳಿಗೆ ಸ್ವಲ್ಪ ತಿರುವು ಸಡಿಲ ಅಂದರೆ ಲೂಸು ಅಂತ ಮ್ಯಾನೇಜ್ ಮಾಡಿದ. ರಾತ್ರಿ ಕಳೆದು ಬೆಳಗಾಯಿತು ಇಬ್ಬರು ಎದ್ದು ನಿತ್ಯ ಕರ್ಮ ಮುಗಿಸಿದರು. ಭಾವಿ ಮದುಮಗ ಶಾಸ್ತ್ರದ ಪ್ರಕಾರ ಸ್ನಾನ ಮುಗಿಸಿ ಹೋರಬಂದು ಮಡಿಬಟ್ಟೆ ಧರಿಸಿದ. ಇನ್ನು ಜನ್ನಿ ಸರದಿ ಎಲ್ಲಾದರು ಎಡವಟ್ಟು ಇದಾಳಾ ಎಂದು ನೋಡಿ ಸ್ನಾನದ ಮನೆ ಹೊಕ್ಕ. ಅವನು ಹುಡುಕುತ್ತಿರುವುದು ಇವಳು ಕಂಡು ನಗುತ್ತ ,ನಿನಗೆ ರಾತ್ರಿ ಕೊಟ್ಟಿರೊ ಕರೆಂಟ್ ಶಾಕ್ ಕಡಿಮೆಯಾಯಿತು ಮತ್ತೆ ಕೋಡುವೆ ಎಂದು ನಿರ್ಧರಿಸಿದಳು. ಅವನು ಸ್ನಾನದ ಮನೆ ಹೊಕ್ಕಿದ ತಕ್ಷಣ , ಕಾಲ ಗೆಜ್ಜೆ ತೆಗೆದಿಟ್ಟು ಅವನನ್ನು ಹಿಂಬಾಲಿಸಿ ಗಂಡಸಿನ ಧ್ವನಿಯಲ್ಲಿ ಅವಳ ಅಣ್ಣನ ಹಾಗೆ, ಜನಾರ್ಧನರವರೆ ಸೀಗೆ ಕಾಯಿ ತಲೆಗೆ ಓಳ್ಳೆದು ತಗೋಳಿ ಎಂದಳು. ಅವನು ತಿರುಗಿ ಕೂತು ಸ್ನಾನ ಮಾಡುತ್ತಿದ್ದರಿಂದ ಇವಳೆ ಎನ್ನುವುದು ಗೊತ್ತಾಗಲಿಲ್ಲ. ಇಟ್ಟು ಬೀಡಿ ಎಂದ . ಇವಳು ಸರಿ ಸರಿ ಎಂದು ಇಟ್ಟಳು. ಪಾಪದ ಪಾಪಿ ಜನ್ನಿ ಹಳೆ ಕನ್ನಡ ಸಾಂಗ್ ಹೇಳತಾ ಸೀಗೆ ಪುಡಿ ಅಂತಾ ತಿಳಿದು. ಕೆಂಪು ಖಾರದ ಪುಡಿ,ಹಸಿಮೆಣಸಿನ ಚೆಟ್ನಿನಾ ಮೈಗೆ ,ಕಣ್ಣಿಗೆಲ್ಲಾ ಹಚ್ಚಕೊಂಡು ಬೀಡೊದೆ. ಆಮೇಲೆ ನೋಡಿ ಪಜೀತಿ ಹಾಡು ಅಷ್ಟೆ ಅಲ್ಲ ಕುಣಿತಾ ಹಾಕೋಕೆ ಶುರು ಮಾಡದಾ. ಇವಳು ಇವನ ಪಜೀತಿ ಕಂಡು ಜೋರಾಗಿ ನಗುತ್ತ ನಿಂತಳು. ಮುಚ್ಚಿದ ಕಣ್ಣಲ್ಲೆ ,, ರೀ ಪ್ಲಿಸ್ ರೀ ನೀರು ಕೋಡಿ ಅಂದ. ಅವಳು ಇಲ್ಲ ನಿನ್ನ ಅವತಾರ ಚೆನ್ನಾಗಿದೆ ಎಂದು ನಗುತ್ತಾ ನಿಂತಳು. ಕಣ್ಣುರಿ ಸಂಕಟ ನೋಡಿ ,ಇವಳು ನೀರು ಕೊಡುವ ಹಾಗೆ ಕಾಣಿಸಲಿಲ್ಲ. ಕಣ್ಣು ಮುಚ್ಚೆ ಅವಳನ್ನು ಹುಡುಕಿದ. ಇವಳೊ ಘಾಟಿ ಸೀಗಬೇಕಲ್ಲ ,ಸತಾಯಿಸಿದಳು. ನೀರಿನ ಬಕೇಟ್ ಕೈಲಿ ಹಿಡಿದು ಗೋಳಾಡಿಸಿದಳು. ಕಣ್ಣುರಿ ತಾಳದೆ ಅವಳನ್ನು ಹುಡುಕಿದ, ಒಮ್ಮೆಲೆ ಸೊಂಟ ಕೈಗೆ ಸಿಕ್ಕಿತು. ಇವಳಿಗೆ ಒಮ್ಮೆಲೆ ನಾಚಿಕೆ ಲಜ್ಜೆ ಉಂಬಳಿಸಿ ಓಡಿ ಹೋಗಲು ಪ್ರಯತ್ನಿಸಿದಳು. ಬಚ್ಚಲಿನ ಜಾರಿಕೆಗೆ ಜಾರಿ ದೊಪ್ಪೆಂದು ಅವನ ಎದೆಯ ಮೇಲೆ ಬಿದ್ದಳು. ಅವನಿಗು ಇದು ಹಿತವೆನಿಸಿತು. ಸ್ವಲ್ಪ ಹೊತ್ತು ಇಬ್ಬರು ಅದೆ ಭಂಗಿಯಲ್ಲಿದ್ದರು. ಖಾರದ ಉರಿಯಲ್ಲು ಇವಳ ಆಲಿಂಗನ ಮುದನೀಡುತ್ತಿತ್ತು. ಒಮ್ಮೆಲೆ ಎಚ್ಚೆತ್ತ ಜನ್ನಿ ಉರಿ ಉರಿ ಎಂದ. ಅವಳು ಸಹ ಎಚ್ಚೆತ್ತು ನಾಚಿಕೆಯಿಂದ ಸುತ್ತಣ ತಿರುಗಿ ನೋಡಿದವಳೆ ಅವರಿಬ್ಬರು ಇದ್ದ ಪರಿಸ್ಥಿತಿ ನೋಡಿ ಮತ್ತೆ ನಾಚಿ. ತಾನೆ ಕಣ್ಣಿಗೆ ನೀರು ಹಾಕಿದಳು. ಅವನು ಮೆಲ್ಲನೆ ಕಣ್ಣು ಬಿಟ್ಟಾಗ ಎನಾಯಿತೊ ಅವಳಿಗೆ ಅವನನ್ನು ಪದೆ ಪದೆ ತಿರುಗಿ ನೋಡುತ್ತ ನಾಚಿಕೆಯಿಂದ ಮನೆಯೊಳಗೆ ಓಡಿದಳು. ಅವನಿಗು ಅವಳದೆ ಗುಂಗು ಹಿಡಿದಿತ್ತು ,ಅವಳ ಸೊಂಟಕ್ಕೆ ಕೈ ಹಾಕಿದ್ದನ್ನು ನೆನೆದು ನಾಚಿ ಬೇಗ ಬೇಗ ಸ್ನಾನ ಮುಗಿಸಿ ಹೋರಗೆ ನಡೆದ. ನಡೆದ ವಿಷಯ ಯಾವುದನ್ನು ಭಾರ್ಗವನಿಗೆ ತಿಳಿಸದೆ ಸುಮ್ಮನಾದ. ಇಬ್ಬರ ತಿಂಡಿಯು ಮುಗಿಯಿತು, ಹಬ್ಬಕ್ಕೆ ತರ ತಲನಾದ ಖಾದ್ಯಗಳನ್ನು ಮಾಡಿದ್ದರು, ಇಬ್ಬರು ಚೆನ್ನಾಗೆ ಸವಿದರು. ಸುಮಾ ಆ ದಿನ ನಾಚಿಕೆಯಿಂದ ಲೆ ಅಕ್ಕ ಸೀರೆ ಉಡಿಸೆ ಎಂದಳು. ಈ ಗಂಡುಬಿರಿನಾ ಹೀಗೆ ಕೇಳ್ತಿರೊದು ! ಅಂತಾ ಆಶ್ಟರ್ಯದಿಂದ ಹುಬ್ಬೆರಿಸಿದಳು ಸುಮಂಗಲಾ. ಇವಳು ದೀಪಾವಳಿ ಅಲ್ವೆನೆ ಉಡಿಸೆ ಎಂದು ಪಿಡಿಸಿ ಸೀರೆಯುಟ್ಟು ಹೋರಗೆ ಬಂದಳು. ಎಲ್ಲರು ಇವಳ ವೇಷ ನೋಡಿ ಬಾಯ್ಬಿಟ್ಟರು. ಆದರೆ ಜನ್ನಿಗೆ ಇದರ ಒಳರ್ಥ ಚೇನ್ನಾಗೆ ಗೊತ್ತಿತ್ತು. ಅವಳು ಇವನ್ನು ನೋಡಿ ನಾಚೊದು ,ಓಡೊದು ಕೈಗೆ  ಸೀಗದೆ ಪೀಡಿಸೋದು ಮಾಡೋಕೆ ಶುರು ಮಾಡಿದಳು. ಸಂಜೆ ಹೊತ್ತು ಎಲ್ಲರು ದೀಪಾ ಹಚ್ಚಿ ಹಬ್ಬ ಆಚರಿಸ್ತಾ ಇದ್ದರು. ಭಾರ್ಗವ ಭಾವಿ ಹೆಂಡತಿಯಾಗೊಳ ಜೋತೆ ದೀಪಾ ಹಚ್ತಾಯಿದ್ರೆ .ಜನ್ನಿ ಸುಮ್ನೆ ಕೂತಿದ್ದ. ಸುಮಾ ಅವನ ಕರೆದು ಬನ್ನಿ ನಾನು ದೀಪಕ್ಕೆ ಎಣ್ಣೆ ಹಾಕ್ತಿನಿ ನೀವು ಅವನೆಲ್ಲ ಹೊತ್ತಿಸಿ ಎಂದು ಕರೆದಳು. ಇಬ್ಬರು ಒಬ್ಬರಿಗೊಬ್ಬರು ಸೋತೆ ಹೋಗಿದ್ದರು. ಅದು ಪ್ರೀತಿ ಎಂದು ಇಬ್ಬರಿಗು ಅರಿವಾಗಿದ್ದು ದೀಪ ಹಚ್ಚುವಾಗ. ದೀವಿಗೆಗೆ ಎಣ್ಣೆ ಹಾಕುತ್ತಿದ್ಧ ಸುಮಾಳ ಎರಡು ಕೈ ಎಣ್ಣೆ ಮುಳುಗಿದ್ದವು. ಬೇಕಂತಲೆ ಹೋರಗೆ ದೀಪ ಹಚ್ಚದೆ ನಡುಮನೆಯಲ್ಲಿ ದೀಪ ಹಚ್ಚಲು ಬಂದಳು ,ಅವಳ ಉದ್ಧೇಶ ಏಕಾಂತದಲ್ಲಿ ಇಬ್ಬರು ಮಾತನಾಡುವುದಿರಬೇಕು. ದೀಪಕ್ಕೆ ಎಣ್ಣೆ ಹಾಕುತ್ತಿದ್ದವಳ ಸೀರೆಯ ನೇರಿಗೆ ಜಾರಿ ಹೋಯಿತು. ಮೊದಲೆ ಸೀರೆಯುಡಲು ಬರುವುದಿಲ್ಲ, ಎರಡು ಕೈ ಎಣ್ಣೆ ಮುಳುಗಿವೆ ,ಸೀರೆ ಎಣ್ಣೆ ತಾಗಿಸಿದರೆ ಅಕ್ಕನ ಕೈಯಲ್ಲಿ ಸಹಸ್ರನಾಮ ಖಂಡಿತಾ ತಪ್ಪಲ್ಲ. ದೀಪ ಹಚ್ಚುತ್ತಿದ್ದ ಜನ್ನಿಗೆ ಇದರ ಪರಿವೆ ಇರಲಿಲ್ಲ,ಒಂದು ದೀಪವನ್ನು ಕೈಯಲ್ಲಿ ಹೀಡಿದು ಉಳಿದ ದೀಪಗಳನ್ನು ಅಂಟಿಸುತ್ತಿದ್ದ. ಅಷ್ಟರಲ್ಲೆ ಕರೆಂಟ್ ಹೋಗಬೇಕೆ, ದೀಪವನ್ನು ಅವಳ ಮುಂದೆ ಮಾಡಿ ಹಿಡಿದವನೆ ದೀಪದ ಬೆಳಕಿಗೆ ಅವಳ ಮುಖವನ್ನು ಕಂಡ. ಅವಳ ಮುಖದ ಕಳವಳ ಕಂಡ ಎನಾಯಿತೆಂದು ದೀಪದ ಬೆಳಕಿನಲ್ಲಿ ಸನ್ನೆ ಮಾಡಿದ . ಸುಮಾ ಕೆಳಗೆ ನೋಡು ನನ್ನ ಕೈಯೆಲ್ಲ ಎಣ್ಣೆ ಮುಳುಗಿದೆ ಎಂದಳು. ಅವನು ಅಷ್ಟೆತಾನೆ ಎಂದು ಹಿಡಿದ ದೀಪವನ್ನು ಅವಳ ಕೈಗೆ ಕೊಟ್ಟು ಸೀರೆಯ ನೆರಿಗೆಗಳನ್ನು ಮುಡಿಚಿ ಸೊಂಟಕ್ಕೆ ಸಿಕ್ಕಿಸಿದ. ಅವಳು ಒಮ್ಮೆಲೆ ಪುಳಕಗೊಂಡವಳಂತೆ ಅವನನ್ನು ತಬ್ಬಿಹಿಡಿದಳು. ಅವನು ಅವಳ ಬಾಹುಬಂಧನದಲ್ಲಿ ಒಂದಾದ. ಮುಂದೆ ಎಲ್ಲರನ್ನು ಒಪ್ಪಿಸಿ ಭಾರ್ಗವನ ಮದುವೆ ಮಹೂರ್ತದಲ್ಲೆ ಸಮಾ ಮತ್ತು ಜನಾರ್ಧನ. ಸುಮಂಗಲಾ ಮತ್ತು ಭಾರ್ಗವ ಮದ್ವೆಯಾದರು.

ಮಾರುತಿ ಬೆಂಡ್ಲಗಟ್ಟಿ
ಹಳೂರ ಓಣಿ ಮುಂಡಗೋಡ, 
ತಾ-ಮುಂಡಗೋಡ. ಜಿ
-ಉತ್ತರ ಕನ್ನಡ. ಪಿನ್ ಕೊಡ್-581349 

ಬಿಸಿಲ ಧಗೆ

ಅಯ್ಯೋ, ಬೆಂಕಿ ಉಗುಳುತಿದೆ
ತಾಳಲಾರೆ ಉರಿಯ ಧಗೆ |
ಕಾಡಲು ಬಂದೆಯಾ ಹೀಗೆ
ಬೆಂಕಿ ಕೆಂಡದ ಬೇಸಿಗೆ ||

ಪ್ರಖರತೆ ಹೊತ್ತು ಬೆಳಕಾಯ್ತು
ಹಗಲೇ ದುಸ್ತರವಾಯ್ತು |
ಗಾಳಿ ಇಲ್ಲ, ಬಿಸಿಲೇ ಎಲ್ಲ
ಕಾಲ ಕಳೆಯದಾಯ್ತು ||

ಹಗಲ ನೋವೆ ಸಂಜೆ ನೆನಪು
ಬಿಸಿಲ ಧಗೆಗೆ ನೊಂದೆನು |
ವಿದ್ಯುತ್ ಕಡಿತ, ಹುಳುಗಳ ಕಾಟ
ಶಪಿಸಿದೆ ಬೇಸಿಗೆಯನು ನಾನು ||

ಧಾರಾಕಾರ ಬೆವರ ಧಾರೆ
ಹರಿಯುತಿದೆ ಮೈಯಲ್ಲಿ |
ತೋಯ್ದ ಬಟ್ಟೆ ಹಸಿ ಮುದ್ದೆ
ತೆಗೆದು ಹಾಕಬೇಕೆಲ್ಲಿ ||

ಹೊರಗೆ ಹೋಗದಾಗದು
ಒಳಗೆ ತುಂಬಿದೆ ಧಗೆ |
ಎಪ್ರಿಲ್, ಮೇ ಅಯ್ಯೊ, ಅಯ್ಯೋ
ಶಿವನೇ ಕಳಿಸು ಗಂಗೆ ||

ಮ.ಕೃ.ಮೇಗಾಡಿ, ೯೮೪೪೦೮೮೧೩೩

07 ಜನವರಿ 2021

ಪದ್ಯ-3 ಹಲಗಲಿಬೇಡರು - ಪ್ರಶ್ನೋತ್ತರ ಓದಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ

ಹಲಗಲಿ ಬೇಡರು ನೋಟ್ಸ್     Download 


******

************



10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ವ್ಯಾಕರಣಾಂಶಗಳು

ಕನ್ನಡದ ದೇಶ್ಯಪದಗಳು
ಅಂಗಾಂಗಗಳು : ಕೈ, ತಲೆ, ಹೊಟ್ಟೆ, ಕಾಲು, ಬೆನ್ನು ಇತ್ಯಾದಿ.
ಸಂಬಂಧವಾಚಕಗಳು : ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ, ಬಾವ, ಅಣ್ಣ, ತಂಗಿ, ತಮ್ಮ ಇತ್ಯಾದಿ.
ಪ್ರಾಣಿಗಳು : ಇಲಿ, ಹಾವು, ಎತ್ತು, ಎಮ್ಮೆ, ದನ, ಕೋಳಿ ಇತ್ಯಾದಿ.
ಪದಾರ್ಥಗಳು : ಬಾಗಿಲು, ಉಪ್ಪು, ಹಾಲು, ಚಿಲಕ ಇತ್ಯಾದಿ.
ಸರ್ವನಾಮಗಳು : ನಾನು, ಅವನು, ನೀನು, ಅವಳು, ಅದು, ಅವು, ಅವರು ಇತ್ಯಾದಿ.
ಸಂಖ್ಯಾವಾಚಕಗಳು : ಒಂದರಿಂದ ಒಂಬೈನೂರತೊಂಬತ್ತೊಂಬತ್ತರವರೆಗಿನ ಸಂಖ್ಯೆಗಳು.
ಧಾತುಗಳು : ತಿನ್ನು, ಹೋಗು, ಕೇಳು,
ಬಿಡು ಇತ್ಯಾದಿ.
 
ಅನ್ಯದೇಶ್ಯ ಪದಗಳು
ಸಂಸ್ಕೃತವನ್ನು ಹೊರತುಪಡಿಸಿ ಇತರ ಭಾ?ಗಳಿಂದ ಕನ್ನಡ ಭಾ?ಗೆ ಬಂದಿರುವ ಪದಗಳನ್ನು ಅನ್ಯದೇಶ್ಯ ಪದಗಳು ಎಂದು ಕರೆಯಲಾಗಿದೆ. 

ಗ್ರೀಕ್ ಮತ್ತು ರೋಮನ್ ಭಾಷೆಗಳಿಂದ - ದಮ್ಮಡಿ, ದಮಡಿ, ದಮ್ಮು, ದೀನಾರ ಗದ್ಯಾಣ-ಇತ್ಯಾದಿ.
ಫಾರ್ಸಿಯಿಂದ - ಅಬಕಾರಿ, ರಸ್ತೆ, ದವಾಖಾನೆ, ಚೌಕಾಷಿ, ಅಜಮಾಯಿಸಿ, ಆಮದು, ದಲ್ಲಾಳಿ - ಇತ್ಯಾದಿ
ಅರಬ್ಬೀಯಿಂದ - ಅಮಾನತು, ಅಸಲು, ಇನಾಮು, ಕಾಯ್ದೆ, ಗಲೀಜು, ತಕರಾರು, ತರಬೇತು, ನಕಲಿ ಇತ್ಯಾದಿ
ಪೋರ್ಚ್‌ಗೀಸ್‌ನಿಂದ - ಮೇಜು, ತಂಬಾಕು, ಅನಾನಸು, ಸಾಬೂನು, ಚೊಂಬು, ಇಸ್ತ್ರಿ, ರಸೀದಿ - ಇತ್ಯಾದಿ.
ಉರ್ದುವಿನಿಂದ - ಕಿಮ್ಮತ್ತು, ತಾರೀಕು, ತಾಲೂಕು, ಅಹವಾಲು, ಇಲಾಖೆ, ದರ್ಜೆ, ಬಂದೂಕು, ರುಜು, ಶುರು, ಶಾಮೀಲು - ಇತ್ಯಾದಿ.
ಹಿಂದೂಸ್ಥಾನಿ - ಅರ್ಜಿ, ಕಚೇರಿ, ಕಾರ್ಖಾನೆ, ಸಲಾಮು, ದರ್ಬಾರು, ಕುರ್ಚಿ, ಕಾಗದ, ಹುಕುಂ - ಇತ್ಯಾದಿ.
ಇಂಗ್ಲಿಷ್‌ನಿಂದ - ಬಸ್ಸು, ಕಾರು, ಕಾಲೇಜು, ಲೈಟು, ಪೆನ್ನು - ಇತ್ಯಾದಿ.

**********

ತತ್ಸಮ-ತದ್ಭವ

ಸಂಸ್ಕೃತದಿಂದ ಕನ್ನಡಕ್ಕೆ ಸಾಕ? ಪದಗಳು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದ ಪದಗಳಲ್ಲಿ ಕೆಲವು ಅಲ್ಪಸ್ವಲ್ಪ ಬದಲಾವಣೆಗೊಂಡು ಬಂದರೆ ಇನ್ನು ಕೆಲವು ಪೂರ್ತಿ ಬದಲಾವಣೆಗೊಂಡು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದಿರುವ ಪದಗಳನ್ನು ತತ್ಸಮ-ತದ್ಭವಗಳೆಂದು ಕರೆಯುವ ರೂಢಿಯಿದೆ.

ತತ್ಸಮಗಳು : ಸಂಸ್ಕೃತದಿಂದ ಬರುವಾಗ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಪದಗಳನ್ನು ’ತತ್ಸಮ’ಗಳೆಂದು ಕರೆಯುತ್ತಾರೆ. ’ತತ್’ ಎಂದರೆ ’ಅದಕ್ಕೆ’ (ಸಂಸ್ಕೃತಕ್ಕೆ) ’ಸಮ’ ಎಂದರೆ ’ಸಮಾನ’ ಎಂದರ್ಥ. ಅಂದರೆ ಸಂಸ್ಕೃತಕ್ಕೆ ಸಮಾನವಾದದ್ದು ಎಂದರ್ಥ. ತದ್ಭವಗಳ ಸಂಸ್ಕೃತ ರೂಪವನ್ನೂ ತತ್ಸಮ ಎಂದು ಕರೆಯುತ್ತಾರೆ.

ಉದಾ : ರಾಮ, ವಸಂತ, ಸೋಮ, ಚಂದ್ರ, ಗ್ರಹ, ಸ್ತ್ರೀ, ಶ್ರೀ, ಭುವನ, ಶ್ರುತಿ, ಕಾವ್ಯ, ಪಶು – ಇತ್ಯಾದಿ.

ತದ್ಭವಗಳು : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲೀ, ಪೂರ್ಣ ವಿಕಾರವನ್ನಾಗಲೀ ಹೊಂದಿ ಬಂದಿರುವ ಪದಗಳನ್ನು ’ತದ್ಭವ’ ಎಂದು ಕರೆಯುತ್ತಾರೆ. ’ತತ್’ ಎಂದರೆ ಅದರಿಂದ, ಎಂದರೆ ಸಂಸ್ಕೃತದಿಂದ ’ಭವ’ ಎಂದರೆ ಹುಟ್ಟಿದ್ದು ಅಂದರೆ ಸಂಸ್ಕೃತದಿಂದ ಹುಟ್ಟಿದ್ದು ಎಂದರ್ಥ.

ಅಲ್ಪಸ್ವಲ್ಪ ಬದಲಾವಣೆಗೊಂಡ ತದ್ಭವರೂಪಗಳು : ಶಶಿ-ಸಸಿ, ಶಿರ-ಸಿರ, ಕಲಶ-ಕಳಸ, ಅಂಕುಶ- ಅಂಕುಸ, ?-ವರುಸ ಇತ್ಯಾದಿ

ಪೂರ್ಣ ವ್ಯತ್ಯಾಸ ಹೊಂದಿದ ತದ್ಭವರೂಪಗಳು : ದ್ಯೂತ-ಜೂಜು, ವಂಧ್ಯಾ-ಬಂಜೆ, ವಿದ್ಯಾಧರ- ಬಿಜ್ಜೋದರ, ವೈಶಾಖ-ಬೇಸಗೆ, ಕುಠಾರ-ಕೊಡಲಿ, ಪಾದುಕಾ-ಹಾವುಗೆ, ಅರ್ಕ-ಎಕ್ಕ ಇತ್ಯಾದಿ.

*************

ವ್ಯಾಕರಣಾಂಶಗಳ ಹೆಚ್ಚುವರಿ ಪ್ರಶ್ನೆಗಳು

ಪ್ರತಿ ಪ್ರಶ್ನೆಗೂ ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿರಿ.
೧. ’ವಿಲಾತಿ’ ಪದದ ಸಮಾರ್ಥಕ ಪದ :
  ಎ) ಆಯುಧ   ಬಿ) ವಿಹಾರ   ಸಿ) ವಿಲಂತಿ  ಡಿ) ವಿಲಾಯಿತಿ.
೨. ’ ಸಕ್ಕರೆ ’ ಪದದ ತದ್ಭವರೂಪ :  
  ಎ) ಸಂಕರೆ  ಬಿ) ಶರ್ಕರಾ   ಸಿ) ಶಬ್ದ  ಡಿ) ಸಂಬಂಧ
೩. ’ ಚಟೇಕಾರ ’ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ : 
  ಎ) ಕೃದಂತನಾಮ   ಬಿ) ಅವ್ಯಯ  ಸಿ) ನಾಮಪದ   ಡಿ) ತದ್ಧಿತಾಂತನಾಮ.
೪. ’ಮಂಗಳಸೂತ್ರ ’ - ಪದವು ಈ ಸಮಾಸಕ್ಕೆ ಉದಾಹರಣೆ : 
  ಎ) ದ್ವಿಗುಸಮಾಸ  ಬಿ) ಅಂಶಿಸಮಾಸ    ಸಿ) ತತ್ಪುರುಷಸಮಾಸ  ಡಿ) ದ್ವಂದ್ವಸಮಾಸ
೫. ’ ಗುಡದಾಗ ’ ಪದದ ಗ್ರಾಂಥಿಕ ರೂಪ : 
  ಎ) ಗುಡ್ಡದಲ್ಲಿ   ಬಿ) ಗುಡ್ಡದಮೇಲೆ    ಸಿ) ಗುಡ್ಡದೊಳಗೆ   ಡಿ) ಗುಡ್ಡದಕೆಳಗೆ
೬. ’ ನಡುರಾತ್ರಿ ’ ಪದವು ಈ ಸಮಾಸವಾಗಿದೆ :      
  ಎ) ಗಮಕಸಮಾಸ     ಬಿ) ಅಂಶಿಸಮಾಸ  ಸಿ) ತತ್ಪುರುಷಸಮಾಸ   ಡಿ) ಕರ್ಮಧಾರೆಯಸಮಾಸ 
೭. ’ಕಬುಲ’ ಪದದ ಅರ್ಥ : 
   ಎ) ಕಪ್ಪಕಾಣಿಕೆ  ಬಿ) ಅನುಮತಿ  ಸಿ) ಪಿತೂರಿ  ಡಿ) ಸೈನ್ಯ
೮. ’ವಿದ್ಯಾಧರ ’ ಪದದ ತದ್ಭವ ರೂಪ :
   ಎ) ವಿದ್ಯಾವಂತ  ಬಿ) ಬುದ್ಧಿವಂತ  ಸಿ) ಬಿಜ್ಜೋದರ  ಡಿ) ವಿದ್ಯೆಹೀನ
೯. ’ಅಂಕುಶ’ ಪದದ ತತ್ಸಮ ರೂಪವಿದು : 
   ಎ) ಅಂಕುಸ  ಬಿ) ಅಂಕಶ  ಸಿ) ಶೂಲ   ಡಿ) ಬರ್ಜಿ
೧೦. ’ ದಮ್ಮಡಿ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
   ಎ) ಗ್ರೀಕ್ ಮತ್ತು ರೋಮನ್ ಬಿ) ಉರ್ದು ಸಿ) ಹಿಂದೂಸ್ಥಾನಿ  ಡಿ) ಪರ್ಷಿಯನ್ 
೧೧. ’ ಅಬಕಾರಿ ’ ಪದವು ಈ ಭಾಷೆಯ ಪದವಾಗಿದೆ : 
   ಎ) ಹಿಂದೂಸ್ಥಾನಿ  ಬಿ) ಫಾರ್ಸಿ  ಸಿ) ಪೋರ್ಚಗೀಸ್  ಡಿ) ಅರಬ್ಬೀ 
೧೨. ’ ಹುಕುಂ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ : 
   ಎ) ಇಂಗ್ಲೀಷ್  ಬಿ) ಪರ್ಷಿಯನ್   ಸಿ) ಹಿಂದೂಸ್ಥಾನಿ   ಡಿ) ಉರ್ದು
೧೩. ’ ಬಂದೂಕು ’ ಪದವು ಈ ಭಾಷೆಯ ಶಬ್ದವಾಗಿದೆ : 
   ಎ) ಉರ್ದು   ಬಿ) ಪರ್ಷಿಯನ್  ಸಿ) ಅರಬ್ಬೀ    ಡಿ) ಹಿಂದೂಸ್ಥಾನಿ
 
[ಉತ್ತರಗಳು :  ೧. ಡಿ.ವಿಲಾಯಿತಿ  ೨. ಬಿ. ಶರ್ಕರಾ   ೩. ಡಿ. ತದ್ಧಿತಾಂತನಾಮ   ೪. ಸಿ. ತತ್ಪುರುಸಮಾಸ  ೫. ಎ. ಗುಡ್ಡದಲ್ಲಿ  ೬. ಬಿ.ಅಂಶಿಸಮಾಸ  ೭. ಬಿ.ಅನುಮತಿ  ೮. ಸಿ. ಬಿಜ್ಜೋದರ   ೯. ಎ.ಅಂಕುಸ  ೧೦. ಗ್ರೀಕ್ ಮತ್ತು ರೋಮನ್  ೧. ಬಿ. ಫಾರ್ಸಿ  ೧೨. ಸಿ) ಹಿಂದೂಸ್ಥಾನಿ    ೧೩. ಎ. ಉರ್ದು ]

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ : 
೧. ನಾನು, ನೀನು   : ಸರ್ವನಾಮಗಳು : :  ತಿನ್ನು - ಹೋಗು  : ______
೨. ದರ್ಬಾರು       : ಹಿಂದೂಸ್ಥಾನಿ  : :  ಅನಾನಸು    : ______
೩. ದೀನಾರ        : ಗ್ರೀಕ್      : :  ಕಾಲೇಜು    : _______
೪. ಕಲಶ          : ಕಳಸ       : :  ಶಿರ    : ______
೫. ಪಾದುಕಾ       : ಹಾವುಗೆ      : :  ವೈಶಾಖ   : ______
೬. ಕಳುವಾರೆ       : ಕಳುಹಿಸಿದ್ದಾರೆ  : :  ಇಸವಾಸ  : ______
೭. ಹತಾರ         : ದೇಶಿಯ ಪದ  : :  ಸಾಹೇಬ   : ______
೮. ಮುಂಗೈ        : ಅಂಶಿಸಮಾಸ  : :  ಮೋಸಮಾಡು  : ______
೯. ಕಾರಕೂನ       : ಗುಮಸ್ತ      : :  ಅಗಸಿ   : ______
     
  [ಉತ್ತರಗಳು  : ೧. ಧಾತುಗಳು  ೨. ಪೋರ್ಚುಗೀಸ್  ೩. ಇಂಗ್ಲೀಷ್  ೪. ಸಿರ   ೫. ಬೇಸಗೆ  ೬. ವಿಶ್ವಾಸ  ೭. ಅನ್ಯದೇಶಿಯಪದ   ೮. ಕ್ರಿಯಾಸಮಾಸ   ೯. ಹೆಬ್ಬಾಗಿಲು ]

ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ
೧. ಹಿಂಗೆ          - ಹೀಗೆ
೨. ಮ್ಯಾಗ        - ಮೇಲೆ
೩. ಕಳಿವ್ಯಾರೆ     - ಕಳುಹಿಸಿದ್ದಾರೆ.
೪. ಇಲ್ಲದ್ಹಂಗ     - ಇಲ್ಲದ ಹಾಗೆ
೫. ಇಸವಾಸ     - ವಿಶ್ವಾಸ 
೬. ಸಕ್ಕಾರಿ       - ಸಕ್ಕರೆ
೭. ಕುಂಪಣಿ       - ಕಂಪನಿ
೮. ಹೋಯ್ತ      - ಹೋಯಿತು.
೯. ಸಿಡಿದ್ಹಾಂಗ   - ಸಿಡಿದ ಹಾಗೆ.
೧೦. ಮಾಡ್ಯಾರೊ - ಮಾಡಿದರು
೧೧. ಗುಡದಾಗ   - ಗುಡ್ಡದಲ್ಲಿ
೧೨. ಬ್ಯಾಡಿರಿ   - ಬೇಡಿರಿ.
ಸಮಾಸಪದಗಳು :
೧. ಮುಂಗೈ     --  ಕೈಯ  + ಮುಂದು = ಅಂಶಿಸಮಾಸ.
೨. ನಡುರಾತ್ರಿ   --  ರಾತ್ರಿಯ + ನಡು  = ಅಂಶಿಸಮಾಸ.
೩. ಮುಂಗಾರು   --  ಕಾರಿನ + ಮುಂದು = ಅಂಶಿಸಮಾಸ.
೪. ಮಂಗಳಸೂತ್ರ  --  ಮಂಗಳದ + ಸೂತ್ರ = ತತ್ಪರುಷಸಮಾಸ.
೫. ಬುದ್ಧಿಮಾತು  --   ಬುದ್ಧಿಯ + ಮಾತು = ತತ್ಪುರಷಸಮಾಸ
೬. ಮೋಸಮಾಡು  --  ಮೋಸವನ್ನು + ಮಾಡು = ಕ್ರಿಯಾಸಮಾಸ.
೭. ಬೆನ್ಹತ್ತು      --   ಬೆನ್ನನ್ನು + ಹತ್ತು = ಕ್ರಿಯಾಸಮಾಸ. 
೮. ಐನೂರಮಂದಿ  --   ಐದುನೂರು + ಮಂದಿ = ದ್ವಿಗುಸಮಾಸ
೯. ನಾಲ್ಕುಮಂದಿ   --   ನಾಲ್ಕು + ಮಂದಿ = ದ್ವಿಗುಸಮಾಸ 
೧೦. ಹನುಮಭೀಮರಾಮ --  ಹನುಮನೂ + ಭೀಮನೂ + ರಾಮನೂ = ದ್ವಂದ್ವಸಮಾಸ.  

ತತ್ಸಮ - ತದ್ಭವ                                
೧. ದುಃಖ - ದುಗುಡ (ದುಕ್ಕ)
೨. ಸಕ್ಕರೆ  - ಶರ್ಕರಾ
೩. ರಕ್ತ  - ರಕುತ

ತದ್ಧಿತಾಂತ ನಾಮ -- ಚಟೇಕಾರ

******
******

************

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಭಾಷಾಭ್ಯಾಸ

೧. ಪದಗಳನ್ನು ವಿಗ್ರಹಿಸಿ ಸಮಾಸ ಹೆಸರಿಸಿ.
ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡು ರಾತ್ರಿ = ರಾತ್ರಿಯ +ನಡುವೆ = ಅಂಶಿ ಸಮಾಸ
ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ

೨. ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ.
ಹೀಂಗ-ಹೀಗೆ,
ಮ್ಯಾಗ-ಮೇಲೆ,
ಕಳುವ್ಯಾರೆ-ಕಳಿಸಿದರು,
ಇಲ್ಲದಂಗ-ಇಲ್ಲದ ಹಾಗೆ,
ಇಸವಾಸ-ವಿಶ್ವಾಸ,
ಸಕ್ಕಾರಿ-ಸಕ್ಕರೆ.

೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ”ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ”.
    ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು
    ಉಪಮಾನ : ಮುಂಗಾರಿನ ಸಿಡಿಲು
    ಉಪಮಾವಾಚಕ : ಹಾಂಗ (ಹಾಗೆ)
    ಸಮಾನಧರ್ಮ : ಸಿಡಿಯುವುದು
    ಅಲಂಕಾರ : ಉಪಮಾಲಂಕಾರ
    ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಆ) ”ಸಿಡಿಲ ಸಿಡಿದಾಂಗ ಗುಂಡು ಸುರಿದಾವ ”.
    ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)
    ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)
    ಉಪಮಾವಾಚಕ - ಹಾಂಗ (ಹಾಗೆ)
    ಸಮಾನ ಧರ್ಮ - ಸಿಡಿಯುವುದು
    ಅಲಂಕಾರ - ಉಪಮಾಲಂಕಾರ
    ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

೫. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.
ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು
ಅನ್ಯದೇಶ್ಯ - ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ, ಕಬುಲ

*********



**************



10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಸಾರಾಂಶ

 

ಹಲಗಲಿ ಬೇಡರು (10 ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯಪಾಠ) ಲಾವಣಿ ಸಾರಾಂಶ
     ಪ್ರಸ್ತುತ ಲಾವಣಿಯಲ್ಲಿ ಹಲಗಲಿಯ ಬೇಡರು ನಡೆಸಿದ ಬಂಡಾಯದ ಪ್ರಸ್ತಾಪವೇ ಪ್ರಮುಖ ಅಂಶವಾಗಿರುವುದು. ಲಾವಣಿಕಾರ ಬೇಡರನ್ನು ಕತ್ತಿ ಹಿಡಿಯುವ ಜನ ಎಂದು ಕರೆಯಲು ಕಾರಣ ಅವರಲ್ಲಿನ ಶೂರತೆ ಮತ್ತು ಕತ್ತಿ ಹಿಡಿಯುವ ಕಾಯಕ ಅವರಿಗೆ ಅನಿವಾರ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕತ್ತಿ ಶೂರರಾದ ಹಲಗಲಿ ಬೇಡರಿಗೆ ಕತ್ತಿ ಹಿಡಿಯುವ ಸಮಯ ಸನ್ನಿಹಿತವಾಯಿತು. ಆದರೆ ಬೇಡರ ಬಂಡಾಯವು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಯಿತು (ಮುಟ್ಟಲಿಲ್ಲ ದಡಕ). 
        ಬ್ರಿಟಿಷ್ ಸರಕಾರವು ೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯ ನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದಿತು. ಅದರಂತೆ ಎಲ್ಲ ಭಾರತೀಯರನ್ನು ಒಪ್ಪಿಸಿ ಅಥವಾ ಬೆದರಿಸಿಯಾದರೂ ಅವರ ಬಳಿಯಿರುವ ಆಯುಧ (ಹತಾರ)ಗಳನ್ನು ಕಸಿದು ಕೊಳ್ಳಬೇಕೆಂದು ಕಂಪನಿಯ ಸರ್ಕಾರ ಮುಂದಾದಾಗ ಹಲಗಲಿ ಬೇಡರು ಮುಧೋಳದ ಬಳಿ ಸೇರಿದರು. ಪೂಜೇರಿ ಹನುಮ, ಬೇಡರ ಬಾಲ, ಜಡಗರಾಮ ಮೊದಲಾದವರು ಸೇರಿ ನಾವು ನಾಲ್ವರೂ ಜೊತೆಗಿರೋಣ ಯಾವುದೇ ಕಾರಣಕ್ಕೂ ನಮ್ಮ ಬಳಿಯಿರುವ ಆಯುಧಗಳನ್ನು ಕೊಡಬಾರದು ಹತಾರಗಳು (ಆಯುಧಗಳು) ಹೋದರೆ ನಮ್ಮ ಜೀವವೇ ಹೋದಂತೆ ಎಂದು ತೀರ್ಮಾನಿಸಿದರು.
ಬೇಡರೆಲ್ಲರೂ ಕಲೆತು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ನೀವು ಮುಂದಾಗಿ ಯುದ್ಧ ಮಾಡಿರಿ; ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಮ್ಮ ಮುಖಂಡರಿಗೆ ವಚನ ನೀಡಿದರು. ಕಾಯಿದೆಯನ್ನು ಜಾರಿಗೊಳಿಸಲು ಅಂದರೆ ಆಯುಧ ಕೇಳಲು ಬ್ರಿಟಿಷ್ ಅಧಿಕಾರಿ (ಸೆಟನ್ ಕರ್) ಪರವಾಗಿ ಬಂದ ಕಾರಭಾರಿಯ ಕೆನ್ನೆಗೆ ಹೊಡೆದರು. ಇದರಿಂದ ದುಃಖಿತನಾದ ಕಾರಬಾರಿ(ಕಾರಕೂನ) ಈ ವಿಷಯವನ್ನು ತನ್ನ ಸಾಹೇಬನಿಗೆ ತಿಳಿಸಿದನು. ಸಾಹೇಬ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತನ್ನ ಕೆಲವು ಜನರನ್ನು (ಅಶ್ವದಳ) ಹಲಗಲಿಗೆ ಕಳಿಸಿದಾಗ ಮುಂಗಾರಿನ ಸಿಡಿಲು ಸಿಡಿದ ಹಾಗೆ ಊರೊಳಗೆಲ್ಲ ಗುಂಡಿನ ಮಳೆಗರೆಯುತ್ತಾರೆ. (ಬೇಡರು ಆಯುಧ ಕಸಿಯಲು ಬಂದವರ ಮೇಲೆ ಗುಂಡಿನ ಮಳೆ ಸುರಿಸಿದರು) ಬಂದವರು ಬೇಡರ ಧಾಳಿಗೆ ತುತ್ತಾಗಿ ಗಾಯಗೊಂಡು ದಂಗಾಗಿ ಹಿಮ್ಮೆಟ್ಟುತ್ತಾರೆ.
ಸಾಹೇಬ ವಿಧಿಯಿಲ್ಲದೆ ತನ್ನ ಮೇಲಧಿಕಾರಿಗೆ ಕಾಗದ ಬರೆದು ದಂಡನ್ನು ಕಳಿಸುವಂತೆ ಕೋರಿದಾಗ ತರಾತುರಿಯಿಂದ ಹಲಗಲಿಗೆ ದಂಡು ಆಗಮಿಸಿತು. ಬೇಡರನ್ನು ಕಂಡ ಕಂಡಲ್ಲಿ ಹತ್ಯೆಗೈಯ್ಯಲಾಯಿತು. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಸಾಯಿಸಲಾಯಿತು ಚಟೆಕಾರ 'ಜಾಯಿತ ಸಾಹೇಬ' (ಜಿ.ಬಿ.ಸೆಟನ್ ಕರ್ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿ ಲೆಫ್ಟಿನೆಂಟ್ ಕರ್ನಲ್) ಕಾವಲು ಕಾಯುತ್ತ ಬೇಡರ ಬಿಡಾರಗಳಿಗೆ ನುಗ್ಗಿ ಬೇಡರಿಗೆ ತೊಂದರೆ ನೀಡಿದನು. ಊರಿನ ಮುಖ್ಯ ದ್ವಾರಕ್ಕೆ ಬಂದು ಹೆಬಲಕ್ ಸಾಹೇಬ (ವಿಲಿಯಂ ಹೆನ್ರಿ ಹೆವಲಾಕ್) ಬೇಡರಿಗೆ ಅನ್ಯಥಾ ಸಾಯದೇ ಆಯುಧಗಳನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಬೇಡರ ಹನುಮನಿಗೆ ಹೆಬಲಕ್ ಸಾಹೇಬನ ಮಾತಿನಲ್ಲಿ ನಂಬಿಕೆ ಮೂಡುವುದಿಲ್ಲ. ಬ್ರಿಟಿಷರು ಘಾತಕರುವಿಶ್ವಾಸಘಾತ ಮಾಡಿರುವರು ಇವರ ಮೇಲೆ ನಮಗೆ ನಂಬಿಗೆ ಇಲ್ಲ. ಇವರು ಪಿತೂರಿ ಮಾಡಿ ಮೋಸದಿಂದ ನಮ್ಮ ದೇಶ ಗೆಲ್ಲುವವರುಮುಂದೆ ನಮಗೆ ಘೋರ ವಿಪತ್ತು ಇವರಿಂದ ಕಾದಿದೆ ಎಂದು ಬಗೆದ ಜಡಗ ಬುದ್ಧಿವಾದ ಹೇಳಲು ಬಂದ ಅಧಿಕಾರಿ(ಹೆಬಲಕ್) ಯ ಮೇಲೆ ಗುಂಡು ಹಾರಿಸಿ ಕಳುಹಿಸಿದನು. ಇದರಿಂದ ಸಿಟ್ಟಾದ ಬ್ರಿಟಿಷರ ಇನ್ನೊಬ್ಬ ಅಧಿಕಾರಿ ಬೇಡರ ಊರನ್ನೇ ಲೂಟಿ ಮಾಡುವಂತೆ ತನ್ನ ಜನರಿಗೆ ಆದೇಶ ನೀಡಿದನು. ಸಿಟ್ಟಿನಿಂದ ಬ್ರಿಟಿಷರು ಒಂದೇ ಸಮನೆ ಗುಂಡಿನ ಮಳೆ ಸುರಿಸಿದರು. ಹನುಮಬಾಲಜಡಗ, ರಾಮರ ಹೋರಾಟ ವ್ಯರ್ಥವಾಯಿತು. ಎಲ್ಲೆಡೆಯೂ ರಕ್ತದ ಕಾಲುವೆ ಹರಿಯಿತು. ಆದರೆ ಬೇಡರ ಹೋರಾಟ ಫಲಕಾರಿಯಾಗದೆ ನಾಲ್ಕು ಮಂದಿ ಬೇಡರ ಮುಖಂಡರು ವೀರ ಮರಣವನ್ನು ಹೊಂದಿದರು.
ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು. ಕೊನೆಗೆ ಇಡೀ ಊರಿಗೆ ಬೆಂಕಿ ಇಟ್ಟರು. ಹಲಗಲಿ ಊರು ಸುಟ್ಟು ಬೂದಿಯಾಯಿತು. ಗುರುತೇ ಸಿಗದಂತೆ ನಾಶವಾಯಿತು. ಕುರ್ತಕೋಟಿ ಕಲ್ಲೇಶನ ದಯದಿಂದ ಲಾವಣಿಕಾರ ಈ ಎಲ್ಲ ವಿಷಯಗಳನ್ನು ತಾನು ಕಂಡಷ್ಟು ವರ್ಣಿಸಿರುವುದಾಗಿ ಹೇಳಿದ್ದಾನೆ.
(ಈ  ಸಾರಂಶವನ್ನು ಮಮತಾ ಭಾಗ್ವತ ಅವರ  ಪ್ರತೀಕ್ಷಾ ದಿಂದ ತೆಗೆದುಕೊಳ್ಳಲಾಗಿದೆ)
********* 
ಹಲಗಲಿ ಭೂಪಟ (ಕೆಂಪು ಗೆರೆಯಲ್ಲಿ ಗುರುತು ಮಾಡಿದ ಭಾಗ)



ಲಾವಣಿ - ಕಿರು ಪರಿಚಯ : (ಕೃಪೆ - ಡಾ.ಪ್ರಕಾಶ ಗ.ಖಾಡೆ)   Download Here
ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ದಕ್ಷಿಣ ಮಹಾರಾಷ್ಟ್ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆಡೋಲಕದ ತಾಳ ಹಿಡಿದುವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ. ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.

ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ

ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ. ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಭೀರತೆಶೃಂಗಾರಟೀಕೆಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.

ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ

ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.  ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮಲಕ್ಷ್ಮಣಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.

ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ

ಇಲ್ಲಿ ಬಳಸಿರುವ ಕಲ್ಲನಾಗರಬರಿಗಾಲಹುಣಚಿಬೀಜಕಾರಿಕಾಯಿಬಾರಿಕಾಯಿ ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.

ಲಾವಣಿಯ ಚರಿತ್ರೆ
          ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಫ್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾಧಿಕಾರ ವಹಿಸಿಕೊಂಡು ಕನ್ನಡ ಕಲಿತುಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ಕುಂಪಣಿಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಫ್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ.

ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
        ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋಧಿ ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
            ಹುಲಕುಂದ ಲಾವಣಿಕಾರರು
    ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂಧೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
            ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಭೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಭೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ ಹೆಸರಾದರು.
        18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಢಿಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
        ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
[ಈ  ಮೇಲಿನ ಮಾಹಿತಿಯನ್ನು ಡಾ.ಪ್ರಕಾಶ ಗ.ಖಾಡೆ ಯವರ ಖಾಡೆ@ಜಾನಪದ ದಿಂದ ತೆಗೆದುಕೊಳ್ಳಲಾಗಿದೆ.]
******

************