ನನ್ನ ಪುಟಗಳು

05 ಅಕ್ಟೋಬರ್ 2015

೧೩) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಏ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಏ)
೩೮೦. ಏಕನಾದ ಹಿಡಿದುಕೊಳ್ಳು = ತಿರುಪೆ ಎತ್ತು, ಭಿಕ್ಷೆಗೆ ಹೋಗು
(ಏಕ ನಾದ = ವಾದ್ಯ ವಿಶೇಷ, ದಂಡಿಗೆ)
ಪ್ರ : ಇವರ ದೆಸೆಯಿಂದ ನನಗೀಗ ಏಕನಾದ ಹಿಡಿದುಕೊಳ್ಳೋದೊಂದು ಬಾಕಿ ಉಳಿದದೆ.
೩೮೧. ಏಗಲಾಗದಿರು = ಬಾಳ್ವೆ ಮಾಡಲಾಗದಿರು, ನಿಭಾಯಿಸಲಾಗದಿರು
(ಏಗು = ನಿಭಾಯಿಸು, ನಿರ್ವಹಿಸು)
ಪ್ರ : ಕುಡುಕ ಗಂಡನ ಜೊತೆ ನಾನು ಏಗಾಕಾಗಲ್ಲ
೩೮೨. ಏಟು ಹಾಕು = ಗುರಿ ಇಡು, ಹೊಂಚು ಹಾಕು
(ಏಟು = ಗುರಿ, ಲಕ್ಷ್ಯ)
ಪ್ರ : ಇದ್ದೂ ಇದ್ದೂ ನೀನು ಸರಿಯಾದ ಮಾಲಿಗೇ ಏಟು ಹಾಕಿದ್ದೀಯಾ !
೩೮೩. ಏಟು ಕೊಟ್ರೂ ಈಟೆ ಎನ್ನು = ಎಷ್ಟು ಕೊಟ್ರೂ ಇಷ್ಟೇ ಅನ್ನು, ಕಡಿಮೆ ಎನ್ನು
(ಏಟು = ಎಷ್ಟೊಂದು, ಬಹಳ; ಈಟು = ಇಷ್ಟೇ ಇಷ್ಟು, ಕಡಮೆ)
ಪ್ರ :ಏಟು ಕೊಟ್ರೂ ಈಟೇ ಅನ್ನೋ ಅವಳ ಯೋಗ್ತೆ ನನಗೆ ಗೊತ್ತಿಲ್ವ?
೩೮೪. ಏನು ಅನ್ನೋರು ಇರದಿರು = ವಿಚಾರಿಸಿಕೊಳ್ಳುವ ಜನ ಇರದಿರು
ಪ್ರ : ಮದುವೆ ಮನೆಗೆ ಹೋದ್ರೆ ಏನು ಅನ್ನೋರೆ ದಿಕ್ಕಿರಲಿಲ್ಲ.
೩೮೫. ಏನು ಉಡೋದು ಏನು ತೊಡೋದು ಎನ್ನುವಂತಿರು = ಕಣ್ಣಿಗೆ ಬೇಕಾದ ಒಡವೆವಸ್ತ್ರ ಸಮೃದ್ಧವಾಗಿರು
ಪ್ರ : ಅವರ ಮನೇಲಿ ಏನು ಉಡೋದು ಏನು ತೊಡೋದು ಎಂದು ಗಕ್‌ಪಟ್ಲು ಹಿಡಿಯುವಷ್ಟು ಬಿದ್ದದೆ.
೩೮೬. ಏನು ತಿನ್ನೋದು ಏನು ಬಿಡೋದು ಎನ್ನುವಂತಿರು = ಕಣ್ಣೀಗೆ ಬೇಕಾದ, ನಾಲಗೆಗೆ ರುಚಿಯಾದ ಭಕ್ಷ್ಯ ಭೋಜ್ಯಗಳು ಯಥೇಚ್ಛವಾಗಿರು
ಪ್ರ : ಏಣು ತಿನ್ನೋದು ಏನು ಬಿಡೋದು ಎನ್ನುವಷ್ಟು ತರಾವರಿ ಅಡುಗೆ ಮಾಡಿಸಿದ್ದರು.
೩೮೭. ಏನು ಅನ್ನೋಳಿರು = ಹೆಂಡತಿ ಇರು.
ಸಾಮಾನ್ಯವಾಗಿ ಹಳ್ಳಿಗಾಡಿನಲ್ಲಿ ಹೆಂಡತಿ ಗಂಡನನ್ನು, – ಪಟ್ಟಣ ನಗರಗಳಲ್ಲಿ ‘ರೀ’ ಎಂದು ಸಂಬೋಧಿಸಿದಂತೆ, ಸಂಬೋಧಿಸದೆ- “ಏನು, ಕೇಳಿಸ್ತ?” “ಏನೀ, ಕೇಳಿಸ್ತ?” ಎಂದು ಸಂಬೋಧಿಸುವುದು ರೂಢಿ. ಅದರ ಪುಡಿಗಂಟು ಈ ನುಡಿಗಟ್ಟು.
ಪ್ರ : ಏನು ಅನ್ನೋಳಿರದ ಮನೆಯಲ್ಲಿ ಏನಿದ್ದರೇನು?
೩೮೮. ಏರಸಿಂಗಿ ಇಳಿಸಿಂಗಿಯಾಟವಾಡು = ಒಮ್ಮೆ ಅಟ್ಟಕ್ಕೇರಿಸಿ ಮತ್ತೊಮ್ಮೆ ಬುಟ್ಟಿಗೆ ಹಾಕಿ ತುಳಿ
(ಏರಸಿಂಗಿ = ಉದ್ರೇಕ, ಇಳಿಸಿಂಗಿ = ಶಮನ) ಏರಸಿಂಗಿ ಇಳಿಸಿಂಗಿ ಎಂಬುವು ಗಿಡಮೂಲಿಕೆ ಬೇರುಗಳು. ಏರಸಿಂಗಿ ಬೇರಿಗೆ ಉದ್ರೇಕಿಸುವ ಶಕ್ತಿ ಇದೆಯೆಂದೂ, ಇಳಿಸಿಂಗಿ ಬೇರಿಗೆ ಶಮನಗೊಳಿಸುವ ಶಕ್ತಿ ಇದೆಯೆಂದೂ ನಂಬಿಕೆ. ಜನಪದ ವೈದ್ಯ, ಮದ್ದು ಈ ನುಡಿಗಟ್ಟಿಗೆ ಮೂಲ.
ಪ್ರ : ನಿನ್ನ ಏರಸಿಂಗಿ ಇಳಿಸಿಂಗಿಯಾಟ ನನ್ನ ಹತ್ರ ನಡೆಯಲ್ಲ.
೩೮೯. ಏರಿಗೆ ಮೋಳೆ ಹಾಕೋ ಕೆಲಸ ಮಾಡು = ಮನೆ ಹಾಳು ಕೆಲಸ ಮಾಡು
(ಏರಿ = ಕೆರೆಯ ನೀರು ನಿಲ್ಲಲು ಹಾಕಿರುವ ಕಟ್ಟೆ, ಹುದಿ; ಮೋಳೆ = ತೂತು, ರಂದ್ರ) ಆದರೆ ತಮಿಳಿನಲ್ಲಿ ಏರಿಗೆ, ಕೊಳ, ಕೆರೆ ಎಂಬ ಅರ್ಥವೂ ಇದೆ. ಹಿಂದೆ ಕನ್ನಡದಲ್ಲಿ ಆ ಅರ್ಥವೂ ಇತ್ತು ಎಂಬುದಕ್ಕೆ ‘ದೊಡ್ಡೇರಿ’ ‘ಹಾವೇರಿ’ ಎಂಬ ಊರ ಹೆಸರುಗಳು ಸಾಕ್ಷ್ಯ ನೀಡುತ್ತವೆ. ಹುಲಿಕುಂಟೆ, ಕೋಣನಕುಂಟೆ, ಆನೆಗೊಳ ಎಂಬ ಹೆಸರುಗಳು ಆಯಾ ಪ್ರಾಣಿಗಳ ನೀರ್ದಾಣವಾಗಿದ್ದುದನ್ನು ಸೂಚಿಸುತ್ತದೆ. ಹಾಗೆಯೇ ಆವು + ಏರಿ = ಆವೇರಿ ( ಆಕಳಕೆರೆ) ಎಂಬುದು ಜನರ ಬಾಯಲ್ಲಿ ಹಾವೇರಿಯಾಗಿದೆ. ಹಾಗೆಯೇ ದೊಡ್ಡು ಎಂಬ ಕಾಡು ಪ್ರಾಣಿ (ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅದರ ಪ್ರಸ್ತಾಪವಿದೆ)ಯ ನೀರ್ದಾಣ ಎಂಬ ಅರ್ಥದಲ್ಲಿ ದೊಡ್ಡೇರಿ ಎಂಬ ಹೆಸರು ಬಂದಿರಬಹುದೆ ಎಂಬುದು ಚಿಂತನಾರ್ಹ. ಅಥವಾ ದೊಡ್ಡಕೆರೆ ಎಂಬ ಅರ್ಥವೂ ಇರಬಹುದು. ಒಟ್ಟಿನಲ್ಲಿ ಏರಿ ಎಂಬುದಕ್ಕೆ ಕೆರೆ, ಕೊಳ ಎಂಬ ಅರ್ಥ ಕನ್ನಡದಲ್ಲಿತ್ತು ಎಂಬುದಕ್ಕೆ ಇವು ಸಾಕ್ಷಿ. ತಮಿಳಿನಲ್ಲಿ “ಏರಿಯಿಕ್ಕು ಏರಿ ಪಗೈ; ಇಡೆಯನ್‌ಕ್ಕು ಇಡಿಯನ್ ಪಗೈ” ಎಂಬ ಗಾದೆಯೇ ಇದೆ. ಅದರ ಅರ್ಥ ಕೆರೆಗೆ ಕೆರೆ ಶತ್ರು, ಕುರುಬ (ಯಾದವ)ನಿಗೆ ಕುರುಬ ಶತ್ರು ಎಂದು.
ಪ್ರ : ಏರಿಗೆ ಮೋಳೆ ಹಾಕಿದೋನು, ಊರಿಗೆ ಹಾಕದೆ ಬಿಟ್ಟಾನ?
೨೯೦. ಏರು ಬೀಳು = ದರ್ದಿರು, ನೋವಿರು
(ಏರು = ಗಾಯ, ದರ್ದು)
ಪ್ರ : ಏರು ಬಿದ್ದೋನು ಹೋಗ್ತಾನೆ, ನಾನು ಯಾಕೆ ಹೋಗಲಿ?
೩೯೧. ಏಳು ಅಂದ್ರೆ ಏಳು ಕೂಡು ಅಂದ್ರೆ ಕೂಡು = ಆಜ್ಞಾನುವರ್ತಿಯಾಗಿರು, ಓಡಿದರೆ
ಓಡುವ, ನಿಂತರೆ ನಿಲ್ಲುವ, ಕುಂತರೆ ಕೂಡುವ ನೆರಳಿನಂತಿರು.
ಪ್ರ : ಅವನೊಬ್ಬ ಗಂಡಸ ? ಹೆಂಡ್ರು ಏಳು ಅಂದ್ರೆ ಏಳ್ತಾನೆ, ಕೂಡು ಅಂದ್ರೆ ಕೂಡ್ತಾನೆ.
೩೯೨. ಏಳು ಮದ್ದಾನಕೇಳು = ತಡವಾಗಿ ಏಳು, ತೀರ ಹೊತ್ತೇರಿದ ಮೇಲೇಳು.
(ಮದ್ದಾನ < ಮಧ್ಯಾಹ್ನ = ನಡುಹಗಲು. ಏಳು ಮದ್ದಾನ = ಮಟಮಟ ಮಧ್ಯಾಹ್ನ ಆಗಬೇಕಾದರೆ ‘ಗಳಿಗೆ’ ತರದ ಏಳು ಕಾಲಘಟ್ಟಗಳು ಆಗಬೇಕೆಂದು ತೋರುತ್ತದೆ. ಇದು ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಲೆಕ್ಕಾಚಾರ)
ಪ್ರ : ಗಾದೆ – ಏಳು ಮದ್ದಾನಕೆದ್ದೋಳಿಗೆ ಹೇಲೋಕೆ ಜಾಗಿಲ್ಲ.
೩೯೩. ಏಳು ಕೆರೆ ನೀರು ಕುಡಿದಿರು = ಲೋಕಾನುಭವ ಬೇಕಾದಷ್ಟಿರು.
ಏಳು ಸಂಖ್ಯೆಗೆ ಭಾರತೀಯರು ಕೊಟ್ಟಿರುವ ಪ್ರಾಶಸ್ತ್ಯದ ಬಗೆಗೆ ತಳಮಟ್ಟದ ಸಂಶೋಧನೆ ಆಗಬೇಕಾದ ಅಗತ್ಯವಿದೆ. ಸಪ್ತ ವಾರಗಳು, ಸಪ್ತ ಸ್ವರಗಳು, ಸಪ್ತ ವರ್ಣಗಳು, ಸಪ್ತ ಕುಲಪರ್ವತಗಳು, ಸಪ್ತ ಸಮುದ್ರಗಳು, ಸಪ್ತಪದಿ – ಹೀಗೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಪ್ತದ ಹಿಂದಿನ ಗುಪ್ತ ಸಂಗತಿ ಏನು?
ಪ್ರ : ಏಳು ಕೆರೆ ನೀರು ಕುಡಿದಿರೋ ಬಡ್ಡೀಮಗನಿಗೆ ನಿನ್ನ ಹುನ್ನಾರ ಅರ್ಥವಾಗಲ್ವ?
೩೯೪. ಏಳು ಹನ್ನೊಂದಾಗು = ಹಾಳಾಗು, ನಾಶವಾಗು
(ಏಳು ಹನ್ನೊಂದು = ಹದಿನೆಂಟು) ಪಾಂಡವರದು ಏಳು ಅಕ್ಷೋಹಿಣಿ ಸೈನ್ಯ, ಕೌರವರದು ಹನ್ನೊಂದು ಅಕ್ಷೋಹಿಣಿ ಸೈನ್ಯ – ಕುರುಕ್ಷೇತ್ರದಲ್ಲಿ ಭಾಗಿಯಾದದ್ದು ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯ ; ಕದನ ನಡೆದದ್ದು ಹದಿನೆಂಟು ದಿನಗಳವರೆಗೂ. ಕೊನೆಗೆ ಎಲ್ಲವೂ ಸರ್ವನಾಶ. ಆ ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಅವನ ಆಸ್ತಿಯೆಲ್ಲ ಏಳು ಹನ್ನೊಂದಾಯ್ತು.
೩೯೫. ಏಳೂವರೆ ತಿಂಗಳಿಗೆ ಹುಟ್ಟಿದವನಂತಿರು = ಹೆಳವನಂತಿರು, ಶಕ್ತಿಹೀನನಾಗಿರು.
ಪ್ರ : ಏಳೂವರೆ ತಿಂಗಳಿಗೆ ಹುಟ್ಟಿದೋನು, ಆ ಹರಾಮಿ ಹೆಂಡ್ರನ್ನ ಆಳದಂಗೇ ಅದೆ !

೧೨) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಎ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಎ)
೩೦೮. ಎಕ್ಕನಾಗಿರು = ಘಟಿಂಗನಾಗಿರು, ಖದೀಮನಾಗಿರು, ಯಾರೂ ಬಗ್ಗಿಸಲು ಸಾಧ್ಯವಿಲ್ಲದಿರು
(ಎಕ್ಕ < ಏಕ್ (ಹಿಂ) = ಒಂದು) ಈ ನುಡಿಗಟ್ಟಿಗೆ ಇಸ್ಪೀಟ್ ಆಟದ ಹಿನ್ನೆಲೆ ಇದೆ. ಇಸ್ಪೀಟ್ ಆಟದಲ್ಲಿ ಪರೇಲ್, ಇಪ್ಪತ್ತೆಂಟು ಎಂಬ ಬಗೆಗಳಿವೆ. ಅವುಗಳಲ್ಲಿ ಇಸ್ಪೀಟು ಎಲೆ ‘A’ ಗೆ ಮೊದಲನೆಯ ಸ್ಥಾನ. ಪರೇಲ್ ಆಟದಲ್ಲಿ ಯಾರಿಗಾದರೂ ಮೂರು ‘A’ ಗಳು ಬಿದ್ದರೆ ಬೇರೆಯವೆ ಬೇಳೆ ಬೇಯುವುದಿಲ್ಲ. ಹಾಗೆಯೇ ಇಪ್ಪತ್ತೆಂಟರಲ್ಲೂ ಒಂದು ಬಣ್ಣದಲ್ಲಿ ‘A’ ಅನ್ನು ಮೀರಿಸುವ ಬೇರೆ ಎಲೆಗಳಿರುವುದಿಲ್ಲ. ಅದಕ್ಕೆ ಒಂದನೇ ಸ್ಥಾನವಿರುವುದರಿಂದ ಹಿಂದಿಯಲ್ಲಿ ಏಕ್ ಎನ್ನಿಸಿಕೊಂಡು ಕನ್ನಡದಲ್ಲಿ ಎಕ್ಕ ಎನ್ನಿಸಿಕೊಂಡಿದೆ.
ಪ್ರ : ಅವನು ಐನಾತಿ ಎಕ್ಕ, ಹುಷಾರಾಗಿರು.
೩೦೯. ಎಕ್ಕ ಹುಟ್ಟಿ ಹೋಗು = ಹಾಳಾಗು, ನಿರ್ವಂಶವಾಗು
(ಎಕ್ಕ = ಸಸ್ಯ ವಿಶೇಷ, ಎಕ್ಕದ ಗಿಡ) ಮನೆಗೆ ದೀಪ ಹಚ್ಚುವ ವಂಶದ ಕುಡಿ ಒಂದೂ ಇಲ್ಲದೆ, ಮನೆ ಪಾಳು ಬಿದ್ದು, ಅಲ್ಲಿ ಎಕ್ಕದ ಗಿಡ ಬೆಳೆಯುವಂತಾಗಲಿ ಎಂದು ದಾಯಾದಿಗಳೋ ಅಥವಾ ಆಗದವರೋ ಶಾಪ ಹಾಕುತ್ತಾರೆ, ಬಯ್ಯುತ್ತಾರೆ. ಆ ಬಯ್ಗುಳ ಈ ನುಡಿಗಟ್ಟಿಗೆ ಮೂಲ.
ಪ್ರ: ನಿನ್ನ ಮನೆ ಎಕ್ಹುಟ್ಟಿ ಹೋಗದೆ ಇರ್ತದೇನೋ, ಮನೆಹಾಳ ಮುಂಡೇಮಗನೆ.
೩೧೦. ಎಕ್ಕಡ ಕಡಿ = ನಾಯಾಗಿ ಬಿದ್ದಿರು
(ಎಕ್ಕಡ = ಮೆಟ್ಟು, ಜೋಡು) ಚರ್ಮದಿಂದ ಎಕ್ಕಡ ಹೊಲಿದಿರುವುದರಿಂದ ನಾಯಿಗಳು ಎಕ್ಕಡವನ್ನು ಕಡಿಯುತ್ತಾ ತಮ್ಮ ನಾಲಗೆಯ ಚಾಪಕ್ಯವನ್ನೂ, ಹಲ್ಲುಗಳ ನವೆಯನ್ನೂ ತೀರಿಸಿಕೊಳ್ಳುತ್ತವೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಯಾರದಾದರೂ ಮನೇಲಿ ಎಕ್ಕಡ ಕಡಕೊಂಡು ಬಿದ್ದಿರು ಹೋಗು, ನಿನಗ್ಯಾಕೆ ಗೌಡಿಕೆ?
೩೧೧. ಎಕ್ಕಾಸವಾಗು = ದಿಬ್ಬ ಎದುರಾಗು, ಆಯಾಸವಾಗು
(ಎಕ್ಕಾಸ = ದಿಣ್ಣೆ, ದಿಬ್ಬ)
ಪ್ರ : ಗಾಡಿ ಈ ಜಾಡಿನಲ್ಲಿ ಹೋದ್ರೆ ಎಕ್ಕಾಸವಾಗ್ತದೆ, ಆ ಜಾಡೇ ಸಮತಟ್ಟಾಗಿದೆ.
೩೧೨. ಎಜ್ಜ ಹಾಕು = ಬಿರುಕು ಮೂಡಿಸು, ವೈಮನಸ್ಯ ಉಂಟಾಗುವಂತೆ ಮಾಡು
(ಎಜ್ಜ = ರಂದ್ರ, ತೂತು)
ಪ್ರ : ಹೆಪ್ಪಾಗಿದ್ದ ಸಂಸಾರಕ್ಕೆ ಎಜ್ಜ ಹಾಕಿ, ಏನೂ ಗೊತ್ತರದ ಮೆಕ್ಕನಂಗೆ ತಿರುಗಾಡ್ತಾನೆ.
೩೧೩. ಎಟುಕಿಸಿಕೊಳ್ಳು = ಮಧ್ಯೆ ಪ್ರವೇಶಿಸು
ಪ್ರ : ಮುಗ್ಧ ಹೆಣ್ಣನ್ನು ಮಾತ್ನಲ್ಲೇ ಕುಟುಕ್ತಿದ್ದ, ಅಷ್ಟರಲ್ಲಿ ಎಟುಕಿಸಿಕೊಂಡೆ.
೩೧೪. ಎಟ್ಟೆಯಾಗು = ಉಷ್ಟವಾಗು
(ಎಟ್ಟೆ..< ವೆಟ್ಟೈ (ತ) = ಉಷ್ಣ)
ಪ್ರ : ಎಟ್ಟೆಯಾಗಿ ಕಣ್ಣು ಅಂಗಾಲು ಭಗಭಗ ಅಂತವೆ.
೩೧೫. ಎಡಕ್ಕೆ ಹಾಕಿ ಬಲಕ್ಕೆ ತೆಗಿ = ತದ್ರೂಪವಾಗಿರು, ರೂಪಗುಣದಲ್ಲಿ ಸದೃಶವಾಗಿರು
ಪ್ರ : ಇಬ್ಬರದೂ ಒಂದೇ ಜಾಯಮಾನ, ಎಡಕ್ಕೆ ಹಾಕಿ ಬಲಕ್ಕೆ ತೆಗೀಬೇಕು.
೩೧೬. ಎಡಗಣ್ಣದುರು = ಕೆಟ್ಟದ್ದು ಕಾದಿರು, ಅಶುಭ ಎದುರಾಗು
(ಅದುರು = ನಡುಗು, ಕಂಪಿಸು) ಗಂಡಿಗೆ ಎಡಗಣ್ಣು ಅದುರಿದರೆ ಕೆಟ್ಟದ್ದೆಂದೂ, ಬಲಗಣ್ಣು ಅದುರಿದರೆ ಒಳ್ಳೆಯದೆಂದೂ ನಂಬಿಕೆಯಿರುವಂತೆಯೇ ಹೆಣ್ಣಿಗೆ ಎಡಗಣ್ಣು ಅದುರಿದರೆ ಒಳ್ಳೆಯದು ಎಂದೂ, ಬಲಗಣ್ಣು ಅದುರಿದರೆ ಕೆಟ್ಟದ್ದೆಂದೂ ನಂಬಿಕೆ ಇದೆ. ಈ ವೈರುದ್ಧ್ಯವನ್ನು ಮನನ ಮಾಡಿದಾಗ ನಂಬುವುದು ಕಷ್ಟವಾಗುತ್ತದೆ.
ಪ್ರ : ಎಡಗಣ್ಣು ಅದುರ್ತಾ ಅದೆ, ಅಲ್ಲಿಗೆ ಹೋಗೋದು ಬೇಡ, ನಡಿಯಣ್ಣ ಹಿಂದಕ್ಕೆ
೩೧೭. ಎಡಗಾಲು ಕಡಿ = ಯಾರಾದರೂ ಜಗಳಕ್ಕೆ ಬರುವ ಸಂಭವವಿರು
ಎಡಗಾಲು ಕಡಿದರೆ ಯಾರಾದರೂ ಜಗಳಕ್ಕೆ ಬರುತ್ತಾರೆ ಎಂಬುದು ಅನೂಚಾನವಾಗಿ ಬಂದಿರುವ ಜನಪದ ನಂಬಿಕೆ. ವೈಜ್ಞಾನಿಕಾಂಶಕ್ಕಿಂತ ಮೌಢ್ಯಾಂಶಗಳೇ ನಂಬಿಕೆಗಳಲ್ಲಿ ಹೆಚ್ಚಾಗಿವೆ ಎನ್ನಬಹುದು. ದೇಹದ ಮಾಂಸ ನರಗಳ ಅಲುಗಾಟ ಮಿಸುಕಾಟಕ್ಕೆಲ್ಲ ಹೀಗೆ ಅರ್ಥ ಕಲ್ಪಿಸಿದರೆ ಕಷ್ಟ. ಎಡಗಾಲು ಕಡಿದಾಗ ಯಾರೋ ಜಗಳಕ್ಕೆ ಬಂದಿರಬಹುದು. ಅದರ ಆಧಾರದ ಮೇಲೆ ಎಡಗಾಲು ಕಡಿದಾಗಲೆಲ್ಲ ಬರುತ್ತಾರೆ ಎಂದು ನಂಬುವುದು ಸರಿಯಲ್ಲವೆನಿಸುತ್ತದೆ.
ಪ್ರ : ಏಳ್ತಲೇ, ಯಾಕೋ ಎಡಗಾಲು ಕಡೀತಾ ಇದೆ, ಯಾರು ಜಗಳಕ್ಕೆ ಬರ್ತಾರೋ ಕಾಣೆ
೩೧೮. ಎಡಬಲ ಸುಳಿಯದಿರು = ಹತ್ತಿರ ಹೋಗುವುದಿರಲಿ, ಅಕ್ಕಪಕ್ಕ ಕೂಡ ಅಡ್ಡಾಡದಿರು
ಪ್ರ : ಆ ಸಣ್ಣನ ಸಂಗ ಯಾಕೆ ಅಂತ ಎಡ ಬಲ ಸುಳಿಯಲ್ಲ.
೩೧೯. ಎಡ ಮಗ್ಗುಲಲ್ಲಿ ಏಳು = ಕೆಟ್ಟದ್ದು ಕಾದಿರು, ಅಶುಭ ಎದುರಾಗು.
ನಿದ್ದೆ ಮಾಡಿ ಬೆಳಿಗ್ಗೆ ಏಳಬೇಕಾದರೆ ಎಡಮಗ್ಗುಲಲ್ಲಿ ಏಳಬಾರದೆಂದೂ ಬಲಮಗ್ಗುಲಿಂದ ಏಳಬೇಕೆಂದೂ ನಂಬಿಕೆ. ಎಡ ಕೆಟ್ಟದ್ದೆಂದೂ ಬಲ ಒಳ್ಳೆಯದೆಂದೂ ಅವರ ಭಾವನೆ. ಆದ್ದರಿಂದ ಮದುವೆಯಾದ ಹೆಣ್ಣು ಅತ್ತೆ ಮಾವನ ಮನೆಗೆ ಮೊಟ್ಟಮೊದಲು ಹೆಜ್ಜೆ ಇಡುವ ಸಂದರ್ಭದಲ್ಲಿ ‘ಬರಗಾಲು ಮೊದಲಿಡು’ ಎನ್ನುತ್ತಾರೆ.
ಪ್ರ : ಎಡಮಗ್ಗುಲಲ್ಲಿ ಎದ್ದಿದ್ದೆನೇನೋ, ಇವತ್ತು ಆಗಬಾರದ್ದೆಲ್ಲ ಆಗ್ತಾ ಇದೆ.
೩೨೦. ಎಡವಿದೆ ಬೆಳ್ಳಿಗೆ ಏಟು ಬೀಳು = ಕಷ್ಟದ ಮೇಲೆ ಕಷ್ಟ ಬರು, ನೊಂದವರಿಗೇ ನೋವು ಬರುತ್ತಿರು.
ಪ್ರ : ಎಡವಿದ ಬೆಳ್ಳಿಗೇ ಏಟು ಬೀಳ್ತಾ ಇದ್ದರೆ, ಸಹಿಸೋದಾದ್ರೂ ಹೇಗೆ?
೩೨೧. ಎಡ ಹೊತ್ನಲ್ಲಿ ಬರು = ಹೊತ್ತಲ್ಲದ ಹೊತ್ತಲ್ಲಿ ಬಂದು ಒತ್ತಾಯಿಸು, ಸಂಜೆ ಬರು
(ಎಡ ಹೊತ್ತು = ಎಡ ಹಗಲು, ಅಪರಾಹ್ನ, ಸಂಜೆ) ಸಂಸ್ಕೃತದ ಪ್ರಾತಃ ಕಾಲ, ಮಧ್ಯಾಹ್ನ, ಸಾಯಂಕಾಲಗಳಿಗೆ ಕ್ರಮವಾಗಿ ಜನಪದರು ಏರುಹೊತ್ತು, ನೆತ್ತಿಹೊತ್ತು, ಇಳಿಹೊತ್ತು ಎಂಬ ಶಬ್ದಗಳನ್ನು ಬಳಸಿದಂತೆಯೇ ಬಲಹಗಲು, ನಡುಹಗಲು, ಎಡಹಗಲು ಎಂಬ ಶಬ್ದಗಳನ್ನೋ ಅಥವಾ ಬಲಹೊತ್ತು, ನಡುಹೊತ್ತು, ಎಡಹೊತ್ತು ಎಂಬ ಶಬ್ದಗಳನ್ನೋ ಬಳಸುತ್ತಾರೆ.
ಪ್ರ : ಗಾದೆ – ಎಡಹೊತ್ತಿನಲ್ಲಿ ಬಂದ ಎದೆ ತೆರೆಯಾಕೆ
೩೨೨. ಎಡಾಗಲು ಆಗು = ಅಪರಾಹ್ನವಾಗು, ಸಾಯಂಕಾಲ ಸಮೀಪಿಸು
(ಎಡಾಗಲು < ಎಡ + ಹಗಲು = ಇಳಿಹೊತ್ತು)
ಪ್ರ : ಎಡಾಗಲು ಆಗಿ ಹೋಯ್ತು, ಇನ್ನೂ ದನಗಳಿಗೆ ನೀರು ಕುಡಿಸದೆ ಇದ್ದೀರಲ್ಲ
೩೨೩. ಎಡೆ ಓದಿಸು = ನೈವೇದ್ಯ ಅರ್ಪಿಸು, ಸಲ್ಲಿಸು
(ಎಡೆ = ನೈವೇದ್ಯ, ಓದಿಸು = ಸಲ್ಲಿಸು) ಅರ್ಪಿಸು, ಸಲ್ಲಿಸು ಎಂಬ ಅರ್ಥದಲ್ಲಿ ‘ಓದಿಸು’ ಎಂಬ ಶಬ್ದ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ ಎಂಬುದಕ್ಕೆ ಈ ನುಡಿಗಟ್ಟು ಸಾಕ್ಷಿ. ಹೆಣ್ಣು ಗಂಡುಗಳಿಗೆ ನೆಂಟರಿಷ್ಟರು ಕೊಡುವ ಕೊಡುಗೆಯನ್ನು (presentation) ಕೂಡ ‘ಮುಯ್ಯಿ ಓದಿಸು’ ಎಂದೇ ಹೇಳುತ್ತಾರೆ.
ಪ್ರ : ಹಿರೇರಿಗೆ ಎಡೆ ಓದಿಸಿದ ಕೂಡಲೇ ಪಂತಿ ಜನ ಕೈಬಿಡಲಿ
೩೨೪. ಎಣೆ ಬೀಳು = ತೆಕ್ಕೆ ಮುರಿ ಬೀಳು, ಒಂದಕ್ಕೊಂದು ಹೆಣೆದುಕೊಳ್ಳು
ಹಾವುಗಳು ರತಿಕ್ರೀಡೆಯಲ್ಲಿ ಪರಸ್ಪರ ನುಲಿಯಂತೆ ನುಲಿದುಕೊಳ್ಳುವುದಕ್ಕೆ ಎಣೆ ಬೀಳು ಅಥವಾ ಎಣೆಯಾಡು ಎನ್ನುತ್ತಾರೆ. ಅದನ್ನು ಕಣ್ಣಿಂದ ನೋಡಿದವರಿಗೆ ಕೇಡಾಗುತ್ತದೆಂದು ಅಂಥವರಿಗೆ ಸ್ನಾನಮಾಡಿಸಿ ದೇವರಿಗೆ ತುಪ್ಪದ ದೀಪ ಹಚ್ಚಿಸುವ ಪದ್ಧತಿ ಇದೆ.
ಪ್ರ : ಎಣೆ ಬಿದ್ದಿರುವ ಇವರಿಂದ, ಹಾವುಗಳು ಕಲಿಯೋದು ಇದೆಯೇನೋ!
೩೨೫. ಎಣ್ಣೆ ಬತ್ತಿಗೆ ನೇರವಾಗಿರು = ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲದಿರು
ಪ್ರ : ಏನು ಚೆನ್ನ ಅಂತ ಹೇಳೋಣ, ಎಣ್ಣೆ ಬತ್ತಿಗೆ ನೇರವಾಗಿದ್ದೀವಿ ಅಷ್ಟೆ
೩೨೬. ಎಣ್ಣೆ ಹಚ್ಚು = ಶುಶ್ರೂಷೆ ಮಾಡು, ಕೆಲಸ ಗಿಟ್ಟಿಸಿಕೊಳ್ಳಲು ತಾಜಾ ಮಾಡು
ಪ್ರ : ಕೆಲಸ ಆಗೋವರೆಗೂ ಎಣ್ಣೆ ಹಚ್ತಾನೆ, ಆಮೇಲೆ ತುಣ್ಣೆ ತೋರಿಸ್ತಾನೆ
೩೨೭. ಎಣ್ಣೆ ಹಾಕು = ಮದ್ಯ ಸೇವಿಸು
ಪ್ರ : ಎಣ್ಣೆ ಹಾಕಿ ವಾಹನ ಓಡಿಸಿದರೆ ಅಪಘಾತವಾಗದೆ ಇರ್ತದ?
೩೨೮. ಎಣ್ಣೇಲಿ ತಿಕ ತೊಳೆದಂತೆ ಮಾಡು = ಸಮಸ್ಯೆಯನ್ನು ಉಲ್ಬಣಗೊಳಿಸು, ನಿರ್ಮಲಗೊಳಿಸುವುದಕ್ಕೆ ಬದಲಾಗಿ ಮಲದ ಮುಲಾಮು ಹಚ್ಚಿ ಗಬ್ಬೆಬ್ಬಿಸು, ರಬ್ಬಳಿಸಿಕೊಳ್ಳುವಂತೆ ಮಾಡು.
ಪ್ರ : ನಾನೆಲ್ಲ ಸರಿ ಮಾಡ್ತೀನಿ ಅಂತ ಬಂದು, ಎಣ್ಣೇಲಿ ತಿಕ ತೊಳೆದಂಗೆ ಎಲ್ಲ ರಬ್ಬಳಿಸಿ ಹೋಗಿಬಿಟ್ಟ ಮನೆಹಾಳು ಮುಂಡೇಮಗ
೩೨೯. ಎತ್ತಂಗಡಿಯಾಗು = ಸ್ಥಳಾಂತರವಾಗು, ವರ್ಗವಾಗು
ಪ್ರ : ಅವನಿಗೆ ಬೆಂಗಳೂರಿನಿಂದ ಬಿಜಾಪುರಕ್ಕೆ ಎತ್ತಂಗಡಿಯಾಯ್ತು
೩೩೦. ಎತ್ತಿ ಆಡು = ಹೀಗಳೆ, ಹಂಗಿಸು, ಹಿಂದಿನದನ್ನು ಎತ್ತಿ ಕುಕ್ಕು
ಪ್ರ : ಎತ್ತಿ ಆಡೋರ ಮನೇಲಿ ಹೊಕ್ಕು ನೀರು ಕುಡೀಬಾರ್ದು
೩೩೧. ಎತ್ತಿದ ಕೈಯಾಗಿರು = ಎಲ್ಲಕ್ಕೂ ಮುಂದಾಗಿರು, ಮೊದಲಿಗನಾಗಿರು
ಪ್ರ : ಕಂಡೋರ ಗಂಟನ್ನು ಎತ್ತಿ ಹಾಕಿ ಕೊಳ್ಳೋದ್ರಲ್ಲಿ ಅವನು ಎತ್ತಿದ ಕೈ
೩೩೨. ಎತ್ತಿ ಹಾಕಿಕೊಳ್ಳು = ಬಾಚಿಕೊಳ್ಳು, ದೋಚು
ಪ್ರ : ಬಡಬಗ್ಗರ ಆಸ್ತೀನೆಲ್ಲ ಎತ್ತಿ ಹಾಕಿಕೊಂಡರೂ ಇವತ್ತು ತುತ್ತಿಗೆ ಗತಿ ಇಲ್ಲ.
೩೩೩. ಎತ್ತಿ ಹಾಕಿದಂತಿರು = ಪುಟ ಹಾರುವಂತಿರು, ಕುವತ್ತಿನಿಂದ ಕುಣಿಯುತ್ತಿರು.
ಪ್ರ : ಗಾದೆ – ಹಿತ್ತಾಳೆ ಪತ್ತಾಳೆ ಇಕ್ಕೊಂಡ ಬಡವನ ಹೆಂಡ್ರು ಎತ್ತಿ ಹಾಕಿದಂಗವಳೆಸಿನ್ನ ಪನ್ನ ಇಕ್ಕೊಂಡ ಬಲಗಾರ್ನ ಹೆಂಡ್ರು ಸೋಸಿ ಹಾಕಿದಂಗವಳೆ
೩೩೪. ಎತ್ತು ಉಚ್ಚೆ ಹುಯ್ದಂತೆ ಮಾತಾಡು = ಒಂದೇ ಸಮನೆ ಮಾತಾಡು, ಔಚಿತ್ಯವಿಲ್ಲದೆ ಮಾತಾಡು,
ಎತ್ತುಗಳು ಉಚ್ಚೆ ಹುಯ್ಯಲು ಷುರು ಮಾಡಿದರೆ ಜೊಳಜೊಳ ಎಂದು ದೀರ್ಘಕಾಲ ಹುಯ್ಯುತ್ತಲೇ ಇರುತ್ತದೆ. ಈ ಮೂಲಕ ಔಚಿತ್ಯವಿಲ್ಲದೆ ಹೆಚ್ಚುಕಾಲ ಬಡಬಡಿಸುವ ವ್ಯಕ್ತಿಗಳ ವಾಚಾಳಿತನವನ್ನು ಗೇಲಿ ಮಾಡಲಾಗಿದೆ.
ಪ್ರ : ಎತ್ತು ಉಚ್ಚೆ ಹುಯ್ದಂತೆ ಮಾತಾಡೋದಲ್ಲ, ಮಾತಿಗೊಂದು ತೂಕ ಇರಬೇಕು
೩೩೫. ಎತ್ತುಡಿ ಹಾಕಿ ದೇವು = ಬಲೆ ಹಾಕಿ ಮೀನು ಹಿಡಿ.
(ಎತ್ತುಡಿ = ವೃತ್ತಾಕಾರದ ಕಟ್ಟಿಗೆಗೆ ಕೊಳವೆಯಾಕಾರದ ಬಲೆ ಕಟ್ಟಿ ನೀರಲ್ಲಿ ಮುಳುಗಿಸಿ ಮೇಲೆತ್ತುವ ಬಲೆ; ಉಡಿ = ಬಲೆ ; ದೇವು = ಸಾರಿನ ಕಾಯಿ ಪಲ್ಯೆಗಳು ಸೌಟಿಗೆ ಬರುವಂತೆ ಸೌಟಾಡಿಸುವುದಕ್ಕೆ ದೇವು ಎನ್ನುತ್ತಾರೆ, ಅಂದರೆ ಬಾಚಿಕೊಳ್ಳುವುದು)
ಪ್ರ : ಮೀನಿಲ್ಲದ ಕೆರೆಯಲ್ಲಿ ಎತ್ತುಡಿ ಹಾಕಿ ದೇವಿದ್ರೇನು ಫಲ ? ಬಾ, ಹೋಗಾನ
೩೩೬. ಎದಾರು ಇಲ್ಲದಿರು = ಭಯವಿಲ್ಲದಿರು
(ಎದಾರು < ಎದೆ + ಹಾರು = ಎದೆನಡುಕ)
ಪ್ರ : ಮಾಡಿದ ಬದುಕು ಏನಾಯ್ತೋ ಎತ್ತಾಯ್ತೋ ಎಂಬ ಎದಾರು ಇಲ್ಲದೋರಿಗೆ ಉಂಡು ಮಲಗೋದೆ ಕೆಲಸ
೩೩೭. ಎದ್ದಿರಾ ಎನ್ನು = ಸುಪ್ರಭಾತ ಸೂಚಿಸು
ಪ್ರ : ಪಟೇಲರು ‘ಎದ್ದಿರಾ?’ ಎಂದಾಗ ಶ್ಯಾನುಭೋಗರು ‘ಎದ್ದೆ, ನೀವೆದ್ದಿರಾ?’ ಎಂದರು
೩೩೮. ಎದುರುಗೊಳ್ಳು = ಸ್ವಾಗತಿಸು
ಪ್ರ : ಹೆಣ್ಣಿನೋರು ಗಂಡಿನೋರ್ನ ಎದುರುಗೊಂಡು ಕರೆತಂದರು.
೩೩೯. ಎದುರು ನೋಡು = ನಿರೀಕ್ಷಿಸು, ಕಾಯು
ಪ್ರ : ನಿನ್ನನ್ನೇ ಎದುರು ನೋಡ್ತಿದ್ದೆ, ಸದ್ಯ ಬಂದೆಯಲ್ಲ
೩೪೦. ಎದುರು ಬೀಳು = ಸೆಣಸಿ ನಿಲ್ಲು, ವಿರುದ್ಧ ನಿಲ್ಲು
ಪ್ರ : ಮಗನೇ ಅಪ್ಪನಿಗೆ ಎದುರು ಬಿದ್ದ, ಏನ್ ಮಾಡೋಕಾಗ್ತದೆ?
೩೪೧. ಎದುರು ಹಾಕಿಕೊಳ್ಳು = ವಿರೋಧ ಕಟ್ಟಿಕೊಳ್ಳು
ಪ್ರ : ಇವನ ದೆಸೆಯಿಂದ ನಾನು ಅವರ್ನ ಎದುರು ಹಾಕಿಕೊಳ್ಳಬೇಕಾಯ್ತು
೩೪೨. ಎದ್ದು ಕಾಣು = ಎಲ್ಲಕ್ಕಿಂತ ಚೆನ್ನಾಗಿ ಕಾಣು, ಕಣ್ಣು ಕೋರೈಸುವಂತಿರು
ಪ್ರ : ಕೂಡಿದ ಜನರಲ್ಲಿ ಎದ್ದು ಕಾಣುತ್ತಿದ್ದವಳು ನೀನೇನೇ.
೩೪೩. ಎದ್ದು ಬಿಡು = ತಪ್ಪಿಸಿ ಕೊಳ್ಳು, ಓಡಿ ಹೋಗು
ಪ್ರ : ಕೆಲಸಕ್ಕೆ ಬರದೆ ಇಬ್ಬರೂ ಎಲ್ಲೋ ಎದ್ದುಬಿಟ್ಟವರೆ
೩೪೪. ಎದೆಗೆಡು = ಧೈರ್ಯಗೆಡು
(ಎದೆ = ಗುಂಡಿಗೆ, ಧೈರ್ಯ)
ಪ್ರ : ಎದೆಗೆಟ್ಟು ಕೂತರೆ ಎಲ್ಲ ಹದಗೆಟ್ಟು ಹೋಗ್ತದೆ
೩೪೫. ಎದೆ ಝಲ್ ಎನ್ನು = ಭಯವಾಗು, ನಡುಕವುಂಟಾಗು
ಗಾಳಿ ಬೀಸದರೆ ತೆಂಗಿನ ಗರಿ ಝಲ್ ಎನ್ನುತ್ತದೆ. ಅದರೆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಸಿಡಿಲು ನೆತ್ತಿ ಮೇಲೆ ಹೊಡೆದಂಗೆ ಬಡೇರ್ ಅಂದಾಗ ಎದೆ ಝಲ್ ಅಂತು.
೩೪೬. ಎದೆ ತಿದಿಯಾಗು = ಏದುಸಿರು ಬಿಡು, ಉದ್ವೇಗದಿಂದ ಏರಿಳಿಯತೊಡಗು
(ತಿದಿ = ಕುಲುಮೆ ಮನೆಯಲ್ಲಿ ಕುಲುಮೆ ಒಲೆ ಧಗಧಗನೆ ಉರಿಯಲೆಂದು ಗಾಳಿ ಒತ್ತಲು ಬಳಸುವ ಚರ್ಮದ ಚೀಲ) ಕಮ್ಮಾರ ವೃತ್ತಿ ಅಥವಾ ಅಕ್ಕಸಾಲಿಗ ವೃತ್ತಿ ಈ ನುಡಿಗಟ್ಟಿಗೆ ಮೂಲ
ಪ್ರ : ಬೆದೆ ಹತ್ತಿದೋನಿಗೆ ಎದೆ ತಿದಿಯಾಗ್ತದೆ
೩೪೭. ಎದೆ ಬಾಯಿ ಗುದ್ದಿಕೊಳ್ಳು = ಲಬೊಲಬೋ ಅನ್ನು, ದುಃಖದಿಂದ ಉದ್ವಿಗ್ನಗೊಳ್ಳು
ಪ್ರ : ಮಗ ಸತ್ತ ಸುದ್ದಿ ಕೇಳಿ ಎದೆ ಬಾಯಿ ಗುದ್ದಿಕೊಂಡ್ಲು ಅಂದ್ರೆ, ಯಾಕೆ ಹೇಳ್ತಿ?
೩೪೮. ಎದೆ ಮೇಲೆ ಕುಕ್ಕು = ದಂಡವಾಗಿ ತೆರು, ಬರಿಗೈಯಾಗು
(ಕುಕ್ಕು < ಕುಟುಕು = ಒಡಿ) ಗಂಡ ಸತ್ತ ಮೇಲೆ ಮುತ್ತೈದೆತನದ ಲಕ್ಷಣ ಎಂದು ನಂಬಿರುವ ಕುಂಕುಮವನ್ನು ಅಳಿಸುತ್ತಾರೆ. ಗಂಡನ ಎದೆಯ ಮೇಲೆ ಕೈಬಳೆಗಳನ್ನು ಕುಕ್ಕಿ ಒಡೆಸುತ್ತಾರೆ. ಆದರೆ ಇತ್ತೀಚೆಗೆ ಹಾಗೆ ಮಾಡದೆ ಬಳೆ ಕುಂಕುಮ ಉಳಿಸಿಕೊಂಡು ಬದುಕುವಂಥ ದಿಟ್ಟ ಹೆಣ್ಣುಗಳಿದ್ದಾರೆ. ಜನರೂ ಕುಮ್ಮಕ್ಕು ಕೊಡುವ ಮನೋಧರ್ಮ ಬೆಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸತ್ತ ಗಂಡನ ಎದೆಯ ಮೇಲೆ ಬಳೆ ಕುಕ್ಕಿ ಒಡೆಯುವ ಆಚರಣೆಯ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಸರ್ಕಾರದಿಂದ ಸಾಗುವಳಿ ಜಮೀನು ಮಾಡಿಸಿಕೊಡ್ತೀನಿ ಅಂತ ಅವನು ಭರವಸೆ ಕೊಟ್ಟಿದ್ದಕ್ಕೆ, ನಾವು ಕೂಡಿಟ್ಟಿದ್ದನ್ನೆಲ್ಲ ಅವನ ಎದೆ ಮೇಲೆ ತಗೊಂಡು ಹೋಗಿ ಕುಕ್ಕಿದೆವಲ್ಲ.
೩೪೯. ಎದೆ ಮೇಲೆ ಕುಂತುಕೊಳ್ಳು = ತಗಾದೆ ನೋಡು, ಪೀಡಿಸು
ಪ್ರ : ಸಾಲದ ಬಾಕಿ ಕೊಡೋವರೆಗೂ ನಾನು ಹೆಜ್ಜೆ ಎತ್ತಲ್ಲ ಅಂತ ಎದೆ ಮೇಲೆ ಕುಂತುಬಿಟ್ಟ
೩೫೦. ಎದೆ ಮೇಲೆ ಚಪ್ಪಡಿ ಎಳಿ = ಹಾಳು ಮಾಡು, ವಪನ ಹೊಂದಿಸು
ಪ್ರ : ಕೊನೆಗೂ ನಮ್ಮ ಎದೆ ಮೇಲೆ ಚಪ್ಪಡಿ ಎಳೆದುಬಿಟ್ಟನಲ್ಲಪ್ಪ, ಚಂಡಾಲ
೩೫೧. ಎದೆ ಮೇಲೆ ಚಾಚು = ದಂಡವಾಗಿ ತೆರು, ಬೋಳುಗೈಯಾಗು
(ಚಾಚು < ಚಚ್ಚು = ಒಡಿ) ಗಂಡ ಸತ್ತಾಗ ಹೆಂಡತಿಯ ಕೈಬಳೆಗಳನ್ನು ಗಂಡನ ಎದೆಯ ಮೇಲೆ ಚಚ್ಚಿ ಒಡೆದು ಹಾಕಿ ಬರಿಗೈಯಾಗುವ ಆಚರಣೆ ಈ ನುಡಿಗಟ್ಟಿಗೆ ಮೂಲ
ಪ್ರ : ನನ್ನ ಹತ್ರ ಕಾಸೆಲ್ಲಿದೆಯಪ್ಪ, ಇದ್ದಬದ್ದದ್ದನೆಲ್ಲ ಅವನ ಎದೆ ಮೇಲೆ ಚಾಚಿದೆನಲ್ಲ?
೩೫೨. ಎದೆಯಲ್ಲಿ ಮಂತಾಡಿದಂತಾಗು = ತೊಳಸಿದಂತಾಗು, ಸಂಕಟವಾಗು
(ಮಂತು = ಮೊಸರನ್ನು ಕಡೆಯುವ ಕಡೆಗೋಲು)
ಪ್ರ : ನಿನ್ನೆಯಿಂದ ಎದೆಯಲ್ಲಿ ಮುಂತಾಡಿದಂತಾಗ್ತಾ ಇತ್ತು. ಇವತ್ತು ಬಂದ ಸಾವಿನ ಸುದ್ದಿಗೆ ಮೊದಲೇ ಕಳ್ಳು ಸಂಬಂಧಕ್ಕೆ ತಂತೀ ಸಂದೇಶ ಇದ್ದಂತಿತ್ತು ಎದೆಯಲ್ಲಿ ಮಂತಾಡಿದ್ದು.
೩೫೩. ಎದೆಯ ರಕ್ತವನ್ನು ಭೂಮಿತಾಯಿಗೆ ಬಸಿ = ಕಷ್ಟಪಟ್ಟು ದುಡಿ, ಬೆವರು ಸುರಿಸಿ ಬೇಸಾಯ ಮಾಡು
(ಬಸಿ = ಸುರಿ)
ಪ್ರ : ನನ್ನ ಎದೆಯ ರಕ್ತಾನೇ ಭೂಮಿತಾಯಿಗೆ ಬಸಿದಿದ್ದೀನಿ ಅನ್ನೋದು ನೆನ್ನೆ ಮೊನ್ನೆ ಕಣ್ಣುಬಿಟ್ಟೋರಿಗೆ ಏನು ಗೊತ್ತು ?
೩೫೪. ಎಪ್ಪೇಸ್ ಹೊಡಿ = ಗೈರು ಹಾಜರಾಗು, ಮರೆ ಮಾಜು
(ಎಪ್ಪೇಸ್..< Efface = ಮರೆ ಮಾಜು)
ಪ್ರ : ನನಗೇ ಎಪ್ಪೇಸ್ ಹೊಡದನಲ್ಲ, ಬಡ್ಡೀಮಗ
೩೫೫. ಎಬ್ಬಿಕೊಂಡು ಹೋಗು = ಸುಲಿದುಕೊಂಡು ಹೋಗು
(ಎಬ್ಬು = ಕೀಳು, ಸುಲಿ)
ಪ್ರ : ನಿನ್ನ ಮಗನ್ನ ಪೋಲಿಸ್ ಠಾಣೆಯಿಂದ ಬಿಡಿಸಿಕೊಂಡು ಬಂದೇ ಬರ್ತ್ತೀನಿ ಅಂತ ಹೇಳಿ ಅವಳ ಮೈಯಾಗೆ ಕೈಯಾಗೆ ಇದ್ದದ್ದನ್ನೆಲ್ಲ ಎಬ್ಬಿಕೊಂಡು ಹೋದ.
೩೫೬. ಎಬ್ಬಿಸಿ ಉಬ್ಬಸ ಪಡು = ಏಳಿಸಿದವರೇ ಏದುಸಿರು ಬಿಡು
ಗಂಡನ್ನು ಪ್ರಚೋದಿಸಿದ ಹೆಣ್ಣು ಆಮೇಲೆ ಸುಸ್ತಾಗಿ ಏದುಸಿರು ಬಿಡುವ ಸಂಭೋಗ ಕ್ರಿಯೆ ಈ ನುಡಿಗಟ್ಟಿಗೆ ಮೂಲ
ಪ್ರ : ಎಬ್ಬಿಸೋಳು ನೀನೇ, ಉಬ್ಬಸಪಡೋಳು ನೀನೇ.
೩೫೭. ಎಬ್ಬುಬ್ಬ ಹೇಳು = ಬಡಿವಾರ ಕೊಚ್ಚು, ಬೂಟಾಟಿಕೆ ತೋರಿಸು
(ಎಬ್ಬುಬ್ಬ..< ಹೆಬ್ಬುಬ್ಬ = ಅತಿಶಯತೆ)
ಪ್ರ : ಅಬ್ಬಬ್ಬ ಎಂದು ಪರಾಕು ಹೇಳೋ ಜನ ಇರುವಾಗ ಎಬ್ಬುಬ್ಬ ಹೇಳದೆ ಇರ್ತಾನ?
೩೫೮. ಎಮ್ಕೆ ಮುರಿ = ಮೂಳೆ ಮುರಿ, ಚೆನ್ನಾಗಿ ಚಚ್ಚು
(ಎಮ್ಕೆ.< ಎಮಕೆ < ಎಮುಕೆ (ತೆ) = ಮೂಳೆ)
ಪ್ರ : ಅವನ ಎಮ್ಕೆ ಮುರೀದೆ ಸುಮ್ಕೆ ಇರ್ತೀನಿ ಅಂದ್ಕೊಂಡಿದ್ದೀಯ?
೩೫೯. ಎಮ್ಮೆ ಮೇಲೆ ಮಳೆ ಹುಯ್ದಂತೆ ಹೋಗು = ನಿಧಾನವಾಗಿ ಹೋಗು
(ಎಮ್ಮೆ.< ಎರುಮೈ (ತ) ಎರುಮೆ (ಮ) = ಮಹಿಷ) ದನಗಳ ಮೈಮೇಲೆ ನಾಲ್ಕು ಹನಿ ಮಳೆ ಬಿದ್ದರೆ ಸಾಕು, ಕಿವಿ ನೆಟ್ಟಗೆ ಮಾಡಿ, ಮುಗೂ ಅರಳಿಸಿ ಮಣ್ಣಿನ ವಾಸನೆ ಹಿಡಿದು, ಮಳೆ ಬರುತ್ತದೆ ನೆನೆಯುತ್ತೇವೆ ಎಂದು, ಬಾಲವನ್ನು ಮೇಲಕ್ಕೆತ್ತಿ ಮನೆಯತ್ತ ದೌಡಾಯಿಸುತ್ತವೆ. ಆದರೆ ಎಮ್ಮೆಗೆ ಮಳೆ ಹುಯ್ದಷ್ಟೂ ಸಂತೋಷ. ಆದ್ದರಿಂದ ಅದು ಓಡದೆ, ಇನ್ನೂ ನಿಧಾನವಾಗಿ ಆನಂದತುಂದಿಲವಾಗಿ ತೆವಳುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಎಮ್ಮೆ ಮೇಲೆ ಮಳೆ ಹುಯ್ದಂತೆ ಹೋಗೋನ್ನ ತುರ್ತು ಕೆಲಸಕ್ಕೆ ಕಳಿಸ್ತಾರ?
೩೬೦. ಎರಡಕ್ಕೆ ಹೋಗು = ಮಲವಿಸರ್ಜನೆಗೆ ಹೋಗು
ಮಠಗಳು ಅಥವಾ ಇಸ್ಕೂಲುಗಳು ಬಂದ ಮೇಲೆ ಮೇಷ್ಟ್ರುಗಳು ಮಕ್ಕಳಿಗೆ ಮೂತ್ರಕ್ಕೆ ಹೋಗಬೇಕಾದರೆ ಒಂದು ಬೆರಳನ್ನು ತೋರಿಸಬೇಕೆಂದೂ. ಮಲವಿಸರ್ಜನೆಗೆ ಹೋಗಬೇಕಾದರೆ ಎರಡು ಬೆರಳುಗಳನ್ನು ತೋರಿಸಬೇಕೆಂದೂ ಸಂಕೇತ ಭಾಷೆಯನ್ನು ಹೇಳಿ ಕೊಟ್ಟ ಪ್ರಯುಕ್ತ ಮೂತ್ರ ವಿಸರ್ಜನೆಗೆ ‘ಒಂದಕ್ಕೆ ಹೋಗು’ ಎಂಬ ನುಡಿಗಟ್ಟೂ ಮಲವಿಸರ್ಜನೆಗೆ ‘ಎರಡಕ್ಕೆ ಹೋಗು’ ಎಂಬ ನುಡಿಗಟ್ಟೂ ಚಾಲ್ತಿಗೆ ಬಂದವು.
ಪ್ರ : ಯಾಕೆ ಬಡ್ಕೊಂತೀಯೋ, ಅವನು ಎರಡಕ್ಕೆ ಹೋಗಿದ್ದಾನೆ, ಕೊಂಚ ತಡಿ.
೩೬೧. ಎರಡನ್ನು ಒಂದು ಮಾಡಲು ಹೋಗು = ಹೆಣವನ್ನು ಮಣ್ಣು ಮಾಡಲು ಹೋಗು
ದೇಹ ಪಂಚಭೂತಗಳಿಂದಾದದ್ದು ಎಂಬುದು ಸರ್ವಜನ ಸಂವೇದ್ಯ. ಪಂಚಭೂತಗಳಲ್ಲಿ ಮಣ್ಣು (ಭೂಮಿ) ಕೂಡ ಒಂದು. ಮಣ್ಣಿನ ಅಂಶವಿರುವ ಈ ದೇಹವನ್ನು ಮಣ್ಣಿನೊಂದಿಗೆ ಒಂದು ಮಾಡಲು ಹೋಗುವುದು ಎಂದರೆ ಸಮಾಧಿ ಮಾಡಲು ಎಂಬುದು ವ್ಯಕ್ತವಾಗುತ್ತದೆ. ಆದರೆ ಗ್ರಾಮೀಣರ ಈ ಬೆಡಗಿನ ಅಭಿವ್ಯಕ್ತಿಯ ಬಗೆಗೆ ಆಶ್ಚರ್ಯ ಪಡಬೇಕಾಗಿಲ್ಲ. ಅದು ಅವರಿಗೆ ಉಸಿರಾಟದಷ್ಟು ಸಹಜ, ಸುಲಭ
ಪ್ರ : ನಿಮ್ಮಪ್ಪ ಎಲ್ಲಿ ಹೋಗಿದ್ದಾನೆ ಅಂದರೆ, ಮಗಳು ‘ಪಕ್ಕದೂರಾಗೆ ಎರಡನ್ನು ಒಂದು ಮಾಡೋಕೆ ಹೋಗ್ಯವನೆ’ ಅಂದ್ಲು.
೩೬೨. ಎರಡು ಕಾಲು ಒಂದ್ಕಡೆ ಇಡದಿರು = ಪುರಸೊತ್ತು ಸಿಗದಿರು, ಒಂದು ಕಡೆ ಕುಳಿತು ವಿಶ್ರಮಿಸಿಕೊಳ್ಳದಿರು
ಪ್ರ : ಹೊತ್ತು ಹುಟ್ಟಿದಾಗಳಿಂದ ಹೊತ್ತು ಮುಳುಗೋತನಕ ಎರಡು ಕಾಲು ಒಂದ್ಕಡೆ ಇಟ್ಟಿಲ್ಲ, ನೋಡಪ್ಪ
೩೬೩. ಎರಡು ಕೈಲೂ ಉಣ್ಣು = ತಿನ್ನಲು ಏನೂ ಇಲ್ಲದಂತಾಗು, ಅಳುವೆ ಅನ್ನವಾಗು
ಸಾಮಾನ್ಯವಾಗಿ ಊಟ ಮಾಡುವುದು ಒಂದು ಕೈಯಲ್ಲಿ. ಆದರೆ ಎರಡು ಕೈಯಲ್ಲಿ ಉಣ್ಣುವುದು ಏನನ್ನು ? ನಮ್ಮ ಜನಪದರ ಧ್ವನಿಪ್ರಚುರ ಅಭಿವ್ಯಕ್ತಿಗೆ ಇದು ಸಾಕ್ಷಿಯಾಗಿದೆ. ದುಃಖ ಬಂದಾಗ ಎರಡು ಕೈಗಳಿಂದಲೂ ಕಣ್ಣು ಮುಖ ಮುಚ್ಚಿಕೊಳ್ಳುವುದರಿಂದ ಕಣ್ಣೀರು ಬಾಯೊಳಕ್ಕೂ ಹೋಗಬಹುದು. ಆದ್ದರಿಂದ ಎರಡು ಕೈಗಳಿಂದಲೂ ಉಣ್ಣುವುದು ಕಣ್ಣೀರು !
ಪ್ರಶ್ನೆ : ಅಪಾಪೋಲಿಗೆ ಮದುವೆ ಮಾಡಿದ್ರೆ. ಮಗಳು ಎರಡುಕೈಲೂ ಉಣ್ತಾಳೆ.
೩೬೪. ಎರಡು ತಲೆ ಹಾವಿನಂತಿರು = ಅಪಾಯಕಾರಿ ವ್ಯಕ್ತಿಯಾಗಿರು
ಒಂದೆ ತಲೆಯ ಹಾವನ್ನು ಅದರ ಗಂಟಲ ಹತ್ತಿರ ಕೈ ಹಾಕಿ ಗಟ್ಟಿಗೆ ಹಿಡಿದರೆ ಅದು ಕಚ್ಚುವ ಭಯವಿರುವುದಿಲ್ಲ. ಆದರೆ ಎರಡು ತಲೆಯ ಹಾವಿಗೆ ಹಾಗೆ ಒಂದು ಕಡೆಯ ಗಂಟಲನ್ನು ಹಿಡಿದರೆ, ಇನ್ನೊಂದು ಕಡೆಯ ತಲೆಯಿಂದ ಕಚ್ಚುವ ಅಪಾಯ ಇದ್ದೇ ಇರುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಎರಡು ತಲೆ ಹಾವಿನಂಥೋನ್ನ ಎಂದಾದ್ರೂ ನಂಬಿಗಿಂಬೀಯ, ಜೋಕೆ
೩೬೫. ಎರಡು ತುಟಿ ಒಂದ್ಮಾಡು = ಮೌನದಿಂದಿರು, ಬಾಯಿಬಿಡದಿರು
ಪ್ರ : ಅವರ ಕೌಟುಂಬಿಕ ವಿಷಯದಲ್ಲಿ ನಾನು ತಲೆ ಹಾಕೋದು ಸರಿಯಲ್ಲ ಅಂತ ಎರಡು ತುಟಿ ಒಂದ್ಮಾಡಿ ಕೂತುಬಿಟ್ಟೆ
೩೬೬. ಎರಡು ನೀರು ಕೊಡು = ಕೊಂಚ ನೀರು ಕೊಡು
(ಎರಡು < ಇರಂಡು (ತ) ರೆಂಡು (ತೆ) = ಸ್ವಲ್ಪ, ದ್ವಯ)
ಪ್ರ : ಕುಡಿಯೋಕೆ ಎರಡು ನೀರು ಕೊಡು ಅಂದ್ರೆ ಕೇಳಿಸದಂಗೆ ಕೋಣೆಗೆ ಹೋದ್ಲು.
೩೬೭. ಎರಡು ರೆಪ್ಪೆ ಒಂದು ಮಾಡದಿರು = ನಿದ್ದೆ ಮಾಡದಿರು
ನಮ್ಮ ಗ್ರಾಮೀಣರ ಸೃಜನಶೀಲ ಪ್ರತಿಭೆ ಹೇಗೆ ಸವಕಲು ಅಭಿವ್ಯಕ್ತಿಗೆ ಗಂಟು ಬೀಳದೆ ಚಿತ್ರಕ ಶಕ್ತಿಯುಳ್ಳ ತಾಜಾ ಅಭಿವ್ಯಕ್ತಿಯನ್ನು ನೀಡಬಲ್ಲುದು ಎಂಬುದಕ್ಕೆ ಈ ನುಡಿಗಟ್ಟು ನಿದರ್ಶನ.
ಪ್ರ : ಇಡೀ ರಾತ್ರಿ ಎರಡು ರೆಪ್ಪೆ ಒಂದು ಮಾಡಿದ್ರೆ, ಕೇಳು
೩೬೮. ಎರವಾಗು = ಬೇರೆಯಾಗು, ಹೊರತಾಗು, ದೂರವಾಗು
(ಎರವು = ಅನ್ಯ)
ಪ್ರ : ಗಾದೆ – ಸಮಯಕಿಲ್ಲದ ನೆರವು ಸಾವಿರ ಇದ್ದರೂ ಎರವು
೩೬೯. ಎರವು ತರು = ಸಾಲ ತರು, ಕಡ ತರು
(ಎರವು = ಕಡ, ಸಾಲ)
ಪ್ರ : ಗಾದೆ – ಹಣ ಎರವಲು ತಂದು ಮಣ ಉರುವಲು ಕೊಂಡ
೩೭೦. ಎಲ್ಲರ ನಾಲಗೆ ಮೇಲೆ ನಲಿ = ಹೆಸರುವಾಸಿಯಾಗು, ಕೀರ್ತಿಶಾಲಿಯಾಗು
ಪ್ರ : ಅವನ ನಡೆನುಡಿ ಸಾಧನೆಸಿದ್ಧಿಗಳಿಂದ ಎಲ್ಲರ ನಾಲಗೆಯ ಮೇಲೆ ನಲಿಯುವಂತಾದ.
೩೭೧. ಎಲ್ಲರ ಹಲ್ಲೊಳಗೆ ನುರಿ = ನಿಂದೆಗೊಳಗಾಗು, ಟೀಕೆಟಿಪ್ಪಣೆಗಳಿಗೆ ಗುರಿಯಾಗು.
ಪ್ರ : ಗಾದೆ – ಎಲ್ಲರ ಹಲ್ಲೊಳಗೆ ನುರಿದು ಹೋಗೋದ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
೩೭೨. ಎಲ್ಲ ಸೊಂಪಲು ಗುಜುಗುಜುಗುಂಪಲು ಆಗು = ಸಂದಿಗೊಂದಿಗಳಲ್ಲೆಲ್ಲ ಸಂಶಯದ ಪುಕಾರು ಹಬ್ಬು
(ಸೊಂಪಲು = ಓಣಿ, ಸಂದಿ, ಗೊಂದಿ)
ಪ್ರ : ಆ ವಿಷಯದ ಬಗ್ಗೆ ಎಲ್ಲ ಸೊಂಪಲು ಗುಜುಗುಜು ಗುಂಪಲು ಆಗಿ ಕೂತಿದೆ.
೩೭೩. ಎಲೆಗೆ ಸುನ್ಣ ಹಚ್ಚೋದ್ರಲ್ಲಿ ಬರು = ಬೇಗ ಬರು, ಕ್ಷಣಾರ್ಧದಲಿ ಬರು
ತಾಂಬೂಲ ಸೇವನೆ ನಮ್ಮ ಗ್ರಾಮೀಣರ ಬಹುಮುಖ್ಯ ತೆವಲು. ದೇವರ ತಲೆ ಮೇಲೆ ಹುವ್ವ ತಪ್ಪಿದರೂ ನಮ್ಮ ಗ್ರಾಮೀಣರ ಬಾಯಿ ‘ಅಡಕೆಲೆ’ ಯಿಂದ ವಂಚಿತವಾಗುವುದಿಲ್ಲ. ಕೆಲವರು ಅದರ ಜೊತೆಗೆ ಹೊಗೆಸೊಪ್ಪು, ಕಡ್ಡಿ ಪುಡಿಯನ್ನು ಬಳಸುತ್ತಾರೆ. ತಾಂಬೂಲ ಸೇವನೆಯಲ್ಲಿ ಎಲೆಗೆ ಸುಣ್ಣ ಹಚ್ಚುವುದು ಕ್ಷಣಾರ್ಧದ ಕೆಲಸ.
ಪ್ರ : ನೀನು ಕೂತ್ಕೊಂಡಿರು, ಎಲೆಗೆ ಸುಣ್ಣ ಹಚ್ಚೋದ್ರಲ್ಲಿ ಬಂದು ಬಿಡ್ತೇನೆ.
೩೭೪. ಎಲೆ ಮಿಸುಕದಿರು = ಗಾಳಿ ಬೀಸದಿರು
(ಮಿಸುಕು = ಅಲುಗಾಡು, ಕಂಪಿಸು)
ಪ್ರ : ಮಧ್ಯಾಹ್ನದಿಂದ ಎಲೆ ಮಿಸುಕ್ತಾ ಇಲ್ಲ. ವಾಯುದೇವರು ಕುಂಭಕಾಭ್ಯಾಸದಲ್ಲಿ ನಿರತನಾಗಿರಬೇಕು.
೩೭೫. ಎಳ್ಳುಕಾಳು ಮುಳ್ಳುಮೊನೆಯಷ್ಟೂ ಇರದಿರು = ಕೊಂಚವೂ ಇರದಿರು.
ಪ್ರ : ಅವನಲ್ಲಿ ಎಳ್ಳು ಕಾಳು ಮುಳ್ಳು ಮೊನೆಯಷ್ಟೂ ಮೋಸ ಇಲ್ಲ.
೩೭೬. ಎಳ್ಳು ನೀರು ಬಿಡು = ತರ್ಪಣ ಬಿಡು, ಆಸೆಬಿಡು
ಪ್ರ : ಅದ್ಕೆ ಎಳ್ಳು ನೀರು ಬಿಟ್ಟುಬಿಡು, ಗೀಳಿಟ್ಕೊಂಡು ಒದ್ದಾಡಿದರೆ ಸುಖವಿಲ್ಲ.
೩೭೭. ಎಳೆ ಹಾಕು = ಸಂಬಂಧ ಕಲ್ಪಿಸು, ಜೋಡಿ ಹಾಡು
(ಎಳೆ = ಅಂಗುದಾರ = ಅರಿಶಿಣ ಹಚ್ಚಿದ ದಾರ)
ಪ್ರ : ಈ ಗಂಡಿಗೆ ಅದೇ ಹೆಣ್ಣು ಅಂತ ಮಗುವಾಗಿದ್ದಾಗಲೇ ಎಳೆ ಹಾಕಿಬಿಟ್ಟಿದ್ದೀನಿ
೩೭೮. ಎಂಜಲು ಎತ್ತೋಕೆ ಹೋಗು = ಮನೆ ಬಿಟ್ಟು ಹೋಗು, ಪೋಲಿ ತಿರುಗಲು ಹೋಗು, ಅಡುಗೂಲಜ್ಜಿಯ ಆಳಾಗು
ಪ್ರ : ಎಂಜಲು ಎತ್ತೋಕೆ ಹೋದೋನು, ಈಗ್ಯಾಕೆ ಗುಂಜು ತರಿಯೋಕೆ ಬಂದ್ನ?
೩೭೯. ಎಂಜಲುಗೈಲಿ ಕಾಗೆ ಅಟ್ಟದಿರು = ಮಹಾಲೋಭಿಯಾಗಿರು
ಎಂಜಲುಗೈಯಲ್ಲಿರುವ ಒಂದೆರಡು ಅನ್ನದ ಅಗುಳು ಕೆಳಗೆ ಬಿದ್ದು ಕಾಗೆ ಪಾಲಾದೀತು ಎಂದು ಕೈ ಬೀಸದಷ್ಟು ಜಿಪುಣತನದ ಪರಾಕಾಷ್ಠೆಯ ಕಂಡರಣೆ ಈ ನುಡಿಗಟ್ಟಿನಲ್ಲಿದೆ.
ಪ್ರ : ಎಂಜಲುಗೈಲಿ ಕಾಗೆ ಅಟ್ಟದೋಳು, ಹೊಸಬನಿಗೆ ಹೊಸದಾಗಿ ಅಟ್ಟು ಊಟಕ್ಕಿಟ್ಟಾಳ ?

೧೧) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಊ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಊ)
೨೯೬. ಊಕೆ ಕಟ್ಟಿ ಕೂರು = ಬೇರೆಯ ಕೆಲಸಕ್ಕೆ ಅದಿಯದಿರು, ಪೂರ್ವಾಭಿಪ್ರಾಯಕ್ಕ ಕಟ್ಟು ಬೀಳು
(ಊಕೆ < ಊಂಕೆ < ಉಂಕೆ < ಉಂಕಿ < ಊಡೈ (ತ) = ನೆಯ್ಗೆಗೆ ಮೊದಲು ಹಾಸುನೂಲು ಕಟ್ಟಿ ಗಂಜಿ ಬಳಿದು ಗಟ್ಟಿಗೊಳಿಸುವ ಕ್ರಿಯೆ) ಕಂಬಳಿ ನೇಯುವ ವೃತ್ತಿ ಈ ನುಡಿಗಟ್ಟಿಗೆ ಮೂಲ. ಈ ಕಸುಬಿನವರಿಗೆ ಅಂಡೆ ಕುರುಬರು ಅಥವಾ ಲಾಳಿ ಕುರುಬರು ಎಂದು ಕರೆಯುವುದುಂಟು. ಕನಕದಾಸರು ಈ ಬೆಡಗಿನವರು. ಹೊಕ್ಕುನೂಲನ್ನು ಒಂದು ಬಿದಿರ ಅಂಡೆಗೆ ತುಂಬಾ ಹಾಸುನೂಲಿನ ಮಧ್ಯೆ ಅಡ್ಡಡ್ಡಲಾಗಿ ಹೋಗುವಂತೆ ತೂರಿಸಿ, ಆ ಬಳಿಕ ಸಣ್ಣ ಹಲಗೆಯಿಂದ ಹೊಕ್ಕುನೂಲು ಬಿಗಿಯಾಗಿ ಕೂರುವಂತೆ ತಾಡಿಸುತ್ತಾರೆ. ಅದರಿಂದಲೇ ಅಂಡೆ ಕುರುಬರು, ಲಾಳಿ ಕುರುಬರು ಎಂಬ ಬೆಡಗುಗಳ ಚಾಲ್ತಿಗೆ ಬಂದಿರುವುದು. ನೇಯ್ಗೆಗೆ ಮೊದಲು ಹಾಸುನೂಲಿಗೆ ಗಂಜಿಯನ್ನು ಬಳಿದು ಗಟ್ಟಿಗೊಳಿಸುವುದಕ್ಕೆ ಊಕೆ ಕಟ್ಟುವುದು ಎಂದು ಹೇಳುತ್ತಾರೆ. ಅದು ಮುಗಿಯುವ ತನಕ ಅವರು ಅದರಲ್ಲೇ ಮುಳುಗಿರುತ್ತಾರೆ. ಯಾರೂ ಕರೆದರೂ ಕೆಲಸ ಬಿಟ್ಟು ಮೇಲೇಳುವುದಿಲ್ಲ. ಅನ್ಯರ ಮಾತಿಗೆ ಕಿವಿಗೊಡದೆ ತನ್ನ ನಿಲುವಿಗೆ ಜೋತುಬೀಳದೆ ಮನುಷ್ಯ ಪ್ರವೃತ್ತಿಯನ್ನು ಈ ನುಡಿಗಟ್ಟಿನ ಮೂಲಕ ಅನಾವರಣ ಮಾಡಲಾಗುತ್ತದೆ.
ಪ್ರ : ಅವನು ಊಕೆ ಕಟ್ಟಿ ಕೂತವ್ನೆ, ಯಾಕೆ ಬಾಯಿ ನೋಯಿಸಿಕೊಳ್ತಿ?
೨೯೭. ಊಟ ಹಾಕಿಸು = ಮದುವೆಯಾಗು
ಪ್ರ : ಯಾವಾಗ ಊಟ ಹಾಕಿಸೋದು?
೨೯೮. ಊದರ ಇಕ್ಕು = ವಿರಸ ಮೂಡಿಸು
(ಊದರ = ಹೊಗೆ)
ಪ್ರ : ಊದರ ಇಕ್ಕೋ ಗರತಿ, ಬಂದ ನಂಟರಿಗೆ ಆದರ ತೋರಿಸ್ತಾಳ?
೨೯೯. ಊದಿಬಾದಾಳಾಗು = ಉಬ್ಬರಿಸಿಕೊಳ್ಳು, ಮುಖದಪ್ಪಗೆ ಮಾಡಿಕೊಳ್ಳು
(ಬಾದಾಳು < ಬಾದಳ < ಬಾದಣ = ಊದಿಕೊಂಡು ತೂತು ಬೀಳುವುದು)
ಪ್ರ : ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ಊದಿಬಾದಾಳಾಗಿ ಕುಂತವಳೆ
೩೦೦. ಊಬು ಚುಚ್ಚಿಕೊಳ್ಳು = ಹುಲ್ಲಿನ ಮುಳ್ಳು ಬಟ್ಟೆಗೆ ದಳೆದುಕೊಳ್ಳು
(ಊಬು = ಹುಲ್ಲಿನ ಮುಳ್ಳು ; ಹಂಚಿ, ಕರಡ ಎಂಬ ಹುಲ್ಲುಗಳು ಊಬಿರುವಂಥವು)
ಪ್ರ : ಪಂಚೆ ಉಟ್ಕೊಂಡು ಕರಡದ ಹುಲ್ಲೊಳಗೆ ನಡೆದು ಬಂದ್ರೆ ಊಬು ದಳೆದುಕೊಳ್ಳದೆ ಇರ್ತದ?
೩೦೧. ಊರಿಗೆ ಊರನ್ನೇ ಕಟ್ಟಿಕೊಳ್ಳು = ಎಲ್ಲರನ್ನೂ ತನ್ನತ್ತ ಒಲಿಸಿಕೊಳ್ಳು, ತನ್ನ ಪರ ಮಾಡಿಕೊಳ್ಳು
ಪ್ರ : ಊರಿಗೆ ಊರನ್ನೇ ಕಟ್ಟಿಕೊಂಡಿರುವಾಗ, ಅವನ ಕೂದಲನ್ನು ಕೊಂಕಿಸೋರು ಯಾರು?
೩೦೨. ಊರಿಗೆ ಊರೇ ಬರು = ಊರಿನ ಜನವೆಲ್ಲ ಘೇರಾಯಿಸು
ಪ್ರ : ತೇರು ನೋಡೋಕೆ ಊರಿಗೆ ಊರೇ ಬಂದು ಬಿಡ್ತು.
೩೦೩. ಊರು ಹೊಲಗೇರಿ ಒಂದು ಮಾಡು = ಗೊಂದಲ ಗಲಭೆ ಮಾಡು, ರಾದ್ಧಾಂತ ಮಾಡು
ಊರಿನಿಂದ ಹೊರಗೆ ಅಥವಾ ಹೊರಚ್ಚಿಗೆ ಇರುವಂಥದು ಹೊಲಗೇರಿ, ಊರಿನೊಳಗೆ ಇರುವಂಥದಲ್ಲ ಎಂಬ ಸತ್ಯ ಈ ನುಡಿಗಟ್ಟಿನಲ್ಲೇ ಅಡಗಿದೆ. ಅಂದರೆ ಅಮಾನುಷ ಜಾತಿ ವ್ಯವಸ್ಥೆ, ಸ್ಪೃಶ್ಯ ಅಸ್ಪೃಶ್ಯ ಎಂಬ ಗೋಡೆ ಕಟ್ಟಿ ಮಾನವ ಕುಟುಂಬವನ್ನು ಛಿದ್ರ ಛಿದ್ರಗೊಳಿಸಿದ್ದರೆ ದ್ಯೋತಕ ಈ ವಿಂಗಡಣೆ. ಹೊಲಗೇರಿಯ ಜನ ಕುಡಿದು ಗಲಾಟೆ ಮಾಡಿ ರಂಪ ಎಬ್ಬಿಸುತ್ತಾರೆ, ಅಸಹ್ಯ ಹುಟ್ಟಿಸುತ್ತಾರೆ ಎಂಬ ನಂಬಿಕೆ ಇದ್ದಿರಬೇಕು. ಆ ನಂಬಿಕೆಗೆ ವ್ಯತಿರಿಕ್ತವಾಗಿ ಊರೊಳಗಿನ ಸಭ್ಯರೇ ಹೊರಗೇರಿಯವರಿಗಿಂತ ಅಸಭ್ಯವಾಗಿ ವರ್ತಿಸಿದ ಸತ್ಯವನ್ನು ಈ ನುಡಿಗಟ್ಟು ಬಿತ್ತರಿಸುತ್ತದೆ – ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಎಂಬ ಸತ್ಯದಂತೆ.
ಪ್ರ : ಅಣ್ಣ ತಮ್ಮದಿರು ಹೊಡೆದಾಡಿ ಬಡಿದಾಡಿ ಊರು ಹೊಲಗೇರಿ ಒಂದು ಮಾಡಿಬಿಟ್ರು
೩೦೪. ಊರು ಹೋಗು ಅನ್ನು ಕಾಡು ಬಾ ಅನ್ನು = ಹೆಚ್ಚು ವಯಸ್ಸಾಗು, ಸಾವು ಸಮೀಪಿಸು
ಪ್ರ : ನಮ್ಮ ಕಾಲ ಮುಗೀತಪ್ಪ, ಊರು ಹೋಗು ಅಂತದೆ, ಕಾಡು ಬಾ ಅಂತದೆ
೩೦೫. ಊರುಗದಲ್ಲಿ ಹುಟ್ಟು = ಅಪವಾದ ಕಟ್ಟಿಟ್ಟ ಬುತ್ತಿಯಾಗು
(ಊರುಗ = ಅಮಾವಾಸ್ಯೆ ಅಥವಾ ಅದರ ಹಿಂದು ಮುಂದಿನ ದಿನ.)
ಅಮಾವಾಸ್ಯೆಯಲ್ಲಿ ಹುಟ್ಟಿದವರಿಗೆ ಒಂದಲ್ಲ ಒಂದು ಅಪವಾದ ಇದ್ದೇ ಇರುತ್ತದೆ. ಅಪವಾದಗಳ ಸರಮಾಲೆ ಅವರ ಕೊರಳಿಗೆ ಜೋತು ಬೀಳುತ್ತದೆ ಎಂಬ ನಂಬಿಕೆ ಜನಪದರದ್ದು. ಆದ್ದರಿಂದ ಇದು ನಂಬಿಕೆ ಮೂಲ ನುಡಿಗಟ್ಟು.
ಪ್ರ : ಗಾದೆ – ಊರುಗದಲ್ಲಿ ಹುಟ್ಟಿದೋನಿಗೆ ದೂರು ಘನ (ಕಣಾ)
೩೦೬. ಊಸರವಳ್ಳಿ ಯಾಸ ಎತ್ತು = ಬಣ್ಣ ಬದಲಾಯಿಸು.
(ಊಸರವಳ್ಳಿ = ಗೋಸುಂಬೆ ; ಯಾಸ = ವೇಷ)
ಪ್ರ : ಕಣ್ಣುಮುಚ್ಚಿ ಕಣ್ಣು ತೆರೆಯೋದರೊಳಗೆ ಊಸರವಳ್ಳಿ ಯಾಸ ಎತ್ತಿ ಬಿಟ್ಟ ನೋಡು
೩೦೭. ಊಂ ಅಂದ್ರೂ ಕಷ್ಟವಾಗು ಉಹೂಂ ಅಂದ್ರೂ ಕಷ್ಟವಾಗು = ಇಕ್ಕಟ್ಟಿನ ಇಕ್ಕುಳದಲ್ಲಿ ಸಿಕ್ಕು
ಪ್ರ : ಗಾದೆ – ಹ್ಞೂಂ ಅಂದ್ರೆ ಉಗಿತ, ಉಹ್ಞುಂ ಅಂದ್ರೆ ಬಿಗಿತ

೧೦) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಉ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಉ)
೨೪೪. ಉಗುಳು ಆರುವಾಗ್ಗೆ ಬರು = ಬೇಗ ಬರು, ಜಾಗೃತೆ ಬರು
(ಆರು = ಒಣಗು, ಉಗುಳು = ಎಂಜಲು)
ಪ್ರ : ಉಗುಳು ಆರುವಾಗ್ಗೆ ಅಲ್ಲಿಗೆ ಹೋಗಿ ಬಂದುಬಿಟ್ಟ.
೨೪೫. ಉಗುಳು ದಾಟದಿರು = ಮಾತು ಮೀರದಿರು
ಪ್ರ : ನನ್ನ ಮಗ ನಾನು ಉಗಿದ ಉಗುಳನ್ನು ದಾಟುವುದಿಲ್ಲ.
೨೪೬. ಉಗಿದು ಉಪ್ಪು ಹಾಕು = ಛೀಗುಟ್ಟು, ಬಯ್ಯು
ಪ್ರ : ಇವತ್ತು ಇವನಿಗೆ ಚೆನ್ನಾಗಿ ಉಗಿದು ಉಪ್ಪು ಹಾಕಿದ್ದೀನಿ.
೨೪೭. ಉಗುರು ಕಣ್ಣಷ್ಟಿರು = ಕೊಂಚವಿರು
ಪ್ರ : ಸುಣ್ಣ ಕೇಳಿದ್ರೆ ಒಂದು ಉಗುರುಕಣ್ಣಷ್ಟು ಕೊಟ್ಲು, ಜೀನಿ.
೨೪೮. ಉಚಾಯಿಸಿ ಮಾತಾಡು = ಹದ್ದು ಮೀರಿ ಮಾತಾಡು, ನಾಲಗೆ ಸಡಿಲ ಬಿಡು
ಪ್ರ : ನನಗೆ ಯಾರೂ ಎದುರೇ ಇಲ್ಲ ಅನ್ನೋಂಗೆ ಉಚಾಯಿಸಿ ಮಾತಾಡಿದ.
೨೪೯. ಉಚ್ಚೇಲಿ ಕರಿಮೀನು ಹಿಡಿ = ವ್ಯರ್ಥ ಪ್ರಯತ್ನ ಮಾಡು, ಲೋಭ ದುರಾಸೆಗಳನ್ನು ತೋರು.
(ಉಚ್ಚೆ = ಮೂತ್ರ, ಕರಿಮೀನು = ಒಣಗಿದ ಮೀನು) ಮೀನು ಹಿಡಿಯುವ ವೃತ್ತಿ ನುಡಿಗಟ್ಟಿಗೆ ಮೂಲ. ಬಲೆ, ಎತ್ತುಡಿ, ಕೂಳಿ ಇತ್ಯಾದಿ ಸಾಧನಗಳಿಂದ ಮೀನು ಹಿಡಿಯುವುದು ನೀರಿನಲ್ಲಿ. ಜೀವಂತ ಹಸಿಮೀನು ನೀರಿನಲ್ಲಿರುತ್ತವೆಯೇ ವಿನಾ ಒಣಗಿದ ಕರಿಮೀನು ನೀರಿನಲ್ಲಿರುವುದಿಲ್ಲ. ಉಚ್ಚೆನೀರಲ್ಲಂತೂ ಇರಲು ಸಾಧ್ಯವೇ ಇಲ್ಲ. ಅಂಥ ಉಚ್ಚೆಯಲ್ಲಿ ಕರಿಮೀನು ಹಿಡಿಯುತ್ತೇನೆಂದು ಒದ್ದಾಡುವುದು ವ್ಯಕ್ತಿಯ ಲೋಭ ದುರಾಸೆಯನ್ನು, ವ್ಯರ್ಥ ಪ್ರಯತ್ನವನ್ನು ಸೂಚಿಸುತ್ತದೆ.
ಪ್ರ : ಉಚ್ಚೇಲಿ ಕರಿಮೀನು ಹಿಡಯೋನು, ಕೈಯಿಂದ ಕಾಸು ಬಿಚ್ತಾನ?
೨೫೦. ಉಜ್ಜುಗೊರಡು ಹೊಡಿ = ನಯಗೊಳಿಸು, ನುಣ್ಣಗೆ ಮಾಡು
(ಉಜ್ಜುಗೊರಡು = ತೋಬಡ) ಇದು ಬಡಗಿ ವೃತ್ತಿಯಿಂದ ಬಂದದ್ದು. ಮರವನ್ನು (ಹಲಗೆ, ವಾಸಕಾಲು ಇತ್ಯಾದಿ) ನಯಗೊಳಿಸಲು ಈ ಸಾಧನವನ್ನು ಬಳಸುತ್ತಾರೆ. ಮೈಸೂರು ಕಡೆ ಹತ್ತರಿ ಎನ್ನುತ್ತಾರೆ. ಬೆಂಗಳೂರು ತುಮಕೂರು ಸುತ್ತಮುತ್ತ ತೋಬಡ ಎನ್ನುತ್ತಾರೆ. ಮಲೆನಾಡಿನ ಕಡೆ ಕೀಸುಳಿ (< ಕೀಸು + ಉಳಿ ) ಎನ್ನುತ್ತಾರೆ. ತಮಿಳಿನಲ್ಲೂ ತೋಬಡ ಎಂಬ ಶಬ್ದವಿದೆ ಎಂದು ತಿಳಿದು ಬರುತ್ತದೆ.
ಪ್ರ : ಪಾಪ, ಬಡಪಾಯಿಗೆ ಚೆನ್ನಾಗಿ ಉಜ್ಜುಗೊರಡು ಹೊಡೆದು ಕಳಿಸಿದ.
೨೫೧. ಉಟ್‌ಬೈಸ್ ಹೊಡಿ =ಹೇಳಿದಂತೆ ಕೇಳು, ಸೇವೆ ಮಾಡು
(ಉಟ್‌ಬೈಸ್ < ಉಟಣೇಂ ಬೈಸಣೇಂ (ಮರಾಠಿ) = ಏಳು, ಕೂಡು.)
ಪ್ರ : ಅವನು ಹೇಳಿದಂಗೆ ಉಟ್‌ಬೈಸ್ ಹೊಡಯೋಕೆ ನಾನು ತಯಾರಿಲ್ಲ.
೨೫೨. ಉಡುಗೂರಿ ಹೋಗು = ಒಣಗಿ ಹೋಗು, ಬಾಡಿ ಹೋಗು
(ಉಡುಗೂರಿ < ಉಡುಗಿ + ಊರಿ = ಬಾಡಿ ನೆಲ ಕಚ್ಚು)
ಪ್ರ : ಮಳೆಯಿಲ್ಲದೆ ಎಳೆಯ ಪೈರು ಬಿಸಿಲ ಝಳಕ್ಕೆ ಉಡುಗೂರಿ ಹೋದವು.
೨೫೩. ಉಡದ ನಾಲಗೆಯಿರು = ಎರಡು ನಾಲಗೆಯಿರು, ಆಡಿದ್ದನ್ನು ಇಲ್ಲ ಎನ್ನುವ ವಂಚಕತನವಿರು
ಪ್ರ : ಉಡದ ನಾಲಗೆ ಇರೋವಾಗ, ಹೇಳಿದ್ದನ್ನು ನಾನು ಹೇಳಿದ್ದೆ ಅಂತ ಒಪ್ಕೋತಾನ?
೨೫೪. ಉಡದ ಪಟ್ಟು ಹಾಕು = ಭದ್ರವಾಡಿ ಹಿಡಿ, ಜಗ್ಗದಂತೆ ಅಂಟಿಕೊಳ್ಳು.
(ಉಡ < ಉಡುಂಬು (ತ,ಮ) = ಪ್ರಾಣಿ ವಿಶೇಷ; ಪಟ್ಟು = ಹಿಡಿತ ) ಉಡ ನೆಲಕ್ಕೊ ಬಂಡೆಗೋ ಕಚ್ಚಿಕೊಂಡರೆ ಭರ್ಜಿ ಹಾಕಿ ತಿವಿದು ಎಳೆದರೂ ಮಾಂಸಖಂಡ ಕಿತ್ತುಕೊಂಡು ಬರಬಹುದೇ ವಿನಾ ಅದು ಅಲುಗಾಡುವುದಿಲ್ಲವಂತೆ. ಅಷ್ಟು ಬಲವಾಗಿ ಬಿಗಿಯಾಗಿ ಇರುತ್ತದೆ ಅದರ ಹಿಡಿತ, ಹಿಂದೆ ಶತ್ರು ಸೈನಿಕರು ಎತ್ತರವಾದ ಕೋಟೆಯ ಗೋಡೆಯನ್ನು ಹತ್ತ ಬೇಕಾದರೆ ಉಡದ ಸೊಂಟಕ್ಕೆ ಎತ್ತರವಾದ ಕೋಟೆಯ ಗೋಡೆಯನ್ನು ಹತ್ತ ಬೇಕಾದರೆ ಉಡದ ಸೊಂಟಕ್ಕೆ ಹಗ್ಗ ಕಟ್ಟಿ ಕೋಟೆ ಗೋಡೆಯ ಮೇಲಕ್ಕೆ ಎಸೆದರೆ ಅದು ಅಲ್ಲಿ ಭದ್ರವಾಗಿ ಕಚ್ಚಿಕೊಳ್ಳುತ್ತಿತ್ತಂತೆ. ಇವರು ಹಗ್ಗ ಹಿಡಿದುಕೊಂಡು ಮೇಲೆ ಹತ್ತಿ ಕೋಟೆಯೊಳಕ್ಕೆ ಇಳಿದು ಕದನ ಮಾಡುತ್ತಿದ್ದರಂತೆ, ಭದ್ರವಾದ ಹಿಡಿತಕ್ಕೆ ಉಡ ಹೆಸರುವಾಸಿ.
ಪ್ರ : ಅವಂದು ಉಡದ ಪಟ್ಟು, ಬಡಪೆಟ್ಟಿಗೆ ಬಗ್ಗೋನಲ್ಲ.
೨೫೫. ಉಡಿಕೆ ಮಾಡಿಕೊಳ್ಳು = ಮರು ಮದುವೆಯಾಗು
ಹೆಂಡತಿ ಸತ್ತವರು ಮರು ಮದುವೆ ಮಾಡಿಕೊಳ್ಳುವ ಪರಿಪಾಠ ಎಲ್ಲ ಜಾತಿಗಳಲ್ಲೂ ಇದ್ದಂಥದು, ಇರುವಂಥದು. ಆದರೆ ಗಂಡ ಸತ್ತವರಿಗೆ ಮರು ಮದುವೆ ಮಾಡಿಕೊಳ್ಳುವ ಮುಕ್ತ ಪರವಾನಿಗೆಯನ್ನು ಮೇಲ್ವರ್ಗ ಮೇಲ್ವರ್ಣದವರು ಕೊಟ್ಟಿರಲಿಲ್ಲ. ಅದರಲ್ಲೂ ಮೇಲ್ವರ್ಣದವರು ಗಂಡ ಸತ್ತ ಹೆಣ್ಣಿನ ತಲೆ ಬೋಳಿಸಿ ಕುರೂಪಗೊಳಿಸುವ ಭಯಾನಕ ಆಚರಣೆಯನ್ನು ಧರ್ಮಾಚರಣೆ ಎಂಬಂತೆ ಮಾಡಿಕೊಂಡು ಬರುತ್ತಿದ್ದರು ಎಂಬುದಕ್ಕೆ ‘ ಗಂಡ ಸತ್ತ ದುಃಖ ತಾಳಲೋ? ಮೊಂಡುಗತ್ತಿ ಉರಿ ತಾಳಲೊ?’ ಎಂಬ ಗಾದೆ ಸಾಕ್ಷಿಯಾಗಿದೆ. ಹೆಣ್ಣಿನ ರೂಪವನ್ನು ಕುರೂಪಗೊಳಿಸಿದರೂ ಕಾಮ ಕುರೂಪಗೊಳ್ಳುವುದಿಲ್ಲ ಎಂಬ ಸತ್ಯ ವೇದಪಠನ ಮಾಡುವ ಕರ್ಮಠರಿಗೆ ಅರ್ಥವಾಗದಿದ್ದದ್ದು ಆಶ್ಚರ್ಯ. (ಇತ್ತೀಚೆಗೆ ಅವರಲ್ಲೂದ ಆ ಆಚರಣೆ ನಿಂತಿರುವುದು ಸಂತೋಷದ ಸಂಗತಿ) ವೇದವನ್ನು ಓದದ ನಮ್ಮ ಗ್ರಾಮೀಣ ಶೂದ್ರಜನ ಹೆಣ್ಣಿಗೆ ಮರು ಮದುವೆಯಾಗುವ ಪರವಾನಿಗೆಯನ್ನು ಕೊಟ್ಟಿದ್ದರು ಎಂಬುದಕ್ಕೆ ಉಡಿಕೆ, ಸೀರುಡಿಕೆ, ಕೂಡಿಕೆ ಎಂಬ ಆಚರಣೆಗಳು ಸಾಕ್ಷಿಯಾಗಿವೆ. ಹಿಂದೂ ಸಂಸ್ಕೃತಿಯ ಕುರುಡು ಕಟ್ಟುಪಾಡುಗಳ ನಡ ಮುರಿದು, ಮಾನವೀಯತೆಯ ನಡೆಮಡಿ ಹಾಸಿದ ಜನಪದ ಸಂಸ್ಕೃತಿಯ ಹೆಚ್ಚುಗಾರಿಕೆಯ ಸಂಕೇತವಾಗಿದೆ ಈ ಉಡಿಕೆ ಪದ್ಧತಿ.
ಪ್ರ : ಗಾದೆ-ಉಡಿಕೆ ಗಂಡ ತಡಿಕೆ ಹಂಗೆ.
೨೫೬. ಉಡಿದುಂಬು = ಮಡಿಲುದುಂಬು
(ಉಡಿ = ಮಡಿಲು)
ಪ್ರ : ಹೆಣ್ಣನ್ನು ಗಂಡನ ಮನೆಗೆ ಕಳಿಸುವಾಗ ಉಡಿದುಂಬಿ ಕಳಿಸಬೇಕು.
೨೫೭. ಉಡ್ರು ಗಾಳೀಲಿ ನಡುಗು = ಊಳಿಡುವ ಗಾಳಿಯಲ್ಲಿ ಗಡಗಡನೆ ನಡುಗು
(ಉಡ್ರು < ಉಡರು = ಊಳಿಡು, ಗುಟುರು ಹಾಕು)
ಪ್ರ : ಬಟಾಬಯಲಿನಲ್ಲಿ ಉಡ್ರು ಗಾಳಿಗೆ ಸಿಕ್ಕಿ ಗಡಗಡನೆ ನಡುಗಿಬಿಟ್ಟೆವು.
೨೫೮. ಉತಂತ್ರ ಹೇಳು = ಉಪಾಯ ಹೇಳು, ನಿದರ್ಶನ ನೀಡು
(ಉತಂತ್ರ < ಉದಂತ (ಸಂ) = ನಿರ್ದಶನ, ಬುದ್ಧಿ ಸೂಕ್ಷ್ಮತೆಯ ಸುದ್ಧಿ)
ಪ್ರ : ಅರ್ಥವಾಗಲಿಲ್ಲ ಅಂದ್ರೆ, ಅದಕ್ಕೆ ಒಂದು ಉತಂತ್ರ ಹೇಳ್ತೀನಿ ಕೇಳು.
೨೫೯. ಉತ್ತರಿಸಿ ಹಾಕು = ಕತ್ತರಿಸಿ ಹಾಕು, ಚೂರು ಮಾಡು
ಪ್ರ : ಬೇಗಬೇಗನೆ ಸಾರಿಗೆ ಈರುಳ್ಳಿ ಉತ್ತರಿಸಿ ಹಾಕು
೨೬೦. ಉತ್ತಾರ ಹಾಕಿಕೊಳ್ಳು = ಮುರಿದುಕೊಳ್ಳು, ಸಂದಾಯ ಮಾಡಿಕೊಳ್ಳು
ಪ್ರ : ನಿಮಗೆ ಕೊಡಬೇಕಾದ ನೂರು ರೂಪಾಯಿಗಳನ್ನು ಉತ್ತಾರ ಹಾಕ್ಕೊಂಡು ಉಳಿದಿದ್ದನ್ನು ನನಗೆ ಕೊಡಿ.
೨೬೧. ಉದುರುರುದಾಗಿರು = ಬಿಡಿಬಿಡಿಯಾಗಿರು
(ಉದುರುದುರು < ಉದುರು + ಉದುರು = ಬಿಡಿಬಿಡಿ)
ಪ್ರ : ಅನ್ನ ಮಲ್ಲಿಗೆ ಹುವ್ವಿನಂತೆ ಉದುರುದುದಾಗಿದೆ, ಸದ್ಯ ಬೆಂದು ಮುದ್ದೆಯಾಗಿಲ್ಲ.
೨೬೨. ಉದ್ದುರುಳೋ ಹೊತ್ನಲ್ಲಿ ಬರು = ಬೇಗ ಬರು, ಕ್ಷಣದಲ್ಲಿ ಬರು
(ಉದ್ದು < ಉಳುಂದು (ತ) = ಧಾನ್ಯವಿಶೇಷ)
ಪ್ರ : ಉದ್ದುರುಳೋ ಹೊತ್ನಲ್ಲಿ ಬಂದುಬಿಡ್ತೀನಿ, ಇಲ್ಲೇ ನಿಂತಿರು
೨೬೩. ಉದೊಸಲು ತುಳಿಯದಿರು = ಮನೆಬಾಗಿಲಿಗೆ ಹೋಗದಿರು
(ಉದೊಸಲು < ಉತ್ + ಹೊಸಲು ; ಉತ್ = ಮೇಲೆದ್ದ ; ಹೊಸಲು < ಹೊಸ್ತಿಲು < ಹೊಸಂತಿಲ್ < ಪೊಸಂತಿಲ್ = ಬಾಗಿಲ ಕೆಳಭಾಗದ ಅಡ್ಡಪಟ್ಟಿ) ಬಾಗಿಲ ಮೇಲ್ಭಾಗದ ಅಡ್ಡಪಟ್ಟಿಗೆ ‘ಉತ್ರಾಸ’ ಎಂದೂ, ಬಾಗಿಲ ಕೆಳಭಾಗದ ಮರದ ಅಥವಾ ಕಲ್ಲಿನ ಅಡ್ಡ ಪಟ್ಟಿಗೆ ‘ಹೊಸ್ತಿಲು’ ಎಂದೂ ಹೆಸರು. ಬಾಗಿಲಿಗೆ ಉತ್ರಾಸ ಹಣೆ ಇದ್ದಂತೆ. “ಉತ್ರಾಸದ ಮೇಲೆ ಒಂದು ಉತ್ರಾಣಿಕೆ ಗಿಡ ಹುಟ್ಟಿ ಉತ್ತರೂ ಬರದು ಕಿತ್ತರೂ ಬರದು” ಎಂಬ ಜನಪದ ಒಗಟಿಗೆ ಉತ್ತರ “ಹಣೆಯ ಮೇಲಿನ ಹಚ್ಚೆ”. ಅಂದರೆ ಒಮ್ಮೆ ಹುಯ್ಯಿಸಿಕೊಂಡ ಹಚ್ಚೆ ಸಾಯುವವರೆಗೂ ಇರುತ್ತದೆ. ಅಳಿಸಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ‘ಉತ್ರಾಸ’ ಬಾಗಿಲಿಗೆ ಹಣೆಯೋಪಾದಿ ಇದ್ದರೆ, ‘ಹೊಸ್ತಿಲು’ ಕಾಲಿನೋಪಾದಿ ಇದೆ. ‘ಉದೊಸಲು’ ಎಂದರೆ ನೆಲದ ಮಟ್ಟದಿಂದ ಸ್ವಲ್ಪ ಮೇಲಿದ್ದ ಹೊಸ್ತಿಲು ಎಂದರ್ಥ.
ಪ್ರ : ಈ ಘಟ ಇರೋವರೆಗೂ ಅವನ ಮನೆ ಉದೊಸಲು ತುಳಿಯಲ್ಲ
೨೬೪. ಉಪ್ಪಿಕ್ಕು = ಅನ್ನ ಹಾಕು, ಸಹಾಯ ಮಾಡು
ಲವಣ ಎಂಬ ಅರ್ಥದಲ್ಲಿ ಉಪ್ಪು ಈಗ ಬಳಕೆಯಾಗುತ್ತಿದ್ದರೂ ಹಿಂದೆ ಅನ್ನ ಎಂಬ ಅರ್ಥವೂ ಇತ್ತೆಂದು ತೋರುತ್ತದೆ.
ಪ್ರ : ಗಾದೆ – ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ತೆನೆ
೨೬೫. ಉಪ್ಪಿನ ಕೊಣವಾಗು = ಉಪ್ಪುಮಯವಾಗು, ಒಗಚಾಗು
(ಕೊಣ < ಕೊಳ = ಮಡು).
ಪ್ರ : ಇದೇನು ಎಸರೋ ? ಉಪ್ಪಿನ ಕೊಣವೋ?
೨೬೬. ಉಪ್ಪು ರೊಡ್ಡಾಗು = ಉಪ್ಪಿನ ಕೊಣವಾಗು
(ರೊಡ್ಡು < ರೊಂಡು = ಕೆಸರು, ರಾಡಿ)
ಪ್ರ : ಉಪ್ಪು ರೊಡ್ಡಿನಲ್ಲಿ ಉಣ್ಣೋದು ಹೆಂಗೆ ? ಎಮ್ಮೆ ರೊಡ್ಡೂ ಮುಸುಡಿ ಇಕ್ಕಲ್ಲ.
೨೬೭. ಉಪ್ಪಿಲ್ಲದಿರು ಹುಳಿಯಿಲ್ಲದಿರು = ನೀರಸವಾಗಿರು, ತೀರ ಸಪ್ಪೆಯಾಗಿರು.
ಷಡ್ರಸಗಳಲ್ಲಿ ಯಾವುದೊಂದು ಸ್ವಲ್ಪ ಕಡಮೆಯಾದರೂ ರುಚಿಗೆ ಅಷ್ಟು ಬಾಧಕವಾಗುವುದಿಲ್ಲ. ಆದರೆ ಉಪ್ಪಿಲ್ಲದೆ ಹೋದರೆ ರುಚಿಯೇ ಇರುವುದಿಲ್ಲ. ಆದ್ದರಿಂದಲೇ ‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ’ ಎಂಬ ಗಾದೆ ಮೂಡಿರುವುದು.
ಪ್ರ : ಉಪ್ಪು ಹುಳಿಯಿಲ್ಲದ ನಾಟಕ ನೋಡ್ತಾ ನಿದ್ದೆಗೆಡೋ ಬದಲು ಮನೆಗೆ ಹೋಗಿ ಮಲಗೋಣ ಬಾ.
೨೬೮. ಉಪ್ಪುಕಾರ ಹಚ್ಚಿ ಹೇಳು = ಬಣ್ಣ ಕಟ್ಟಿ ಹೇಳು, ಉತ್ಪ್ರೇಕ್ಷಿಸಿ ಹೇಳು.
ಪ್ರ : ಉಪ್ಪುಕಾರ ಹಚ್ಚಿ ಹೇಳೋದ್ರಲ್ಲಿ ಇವನ್ನ ಬಿಟ್ರೆ ಇನ್ನಿಲ್ಲ.
೨೬೯. ಉಪ್ಪು ಮೆಣಸಿನಕಾಯಿ ನೀವಳಿಸು = ದೃಷ್ಟಿ ತೆಗೆ, ಇಳಿದೆಗೆ.
ಸುಂದರವಾಗಿರುವ ಯುವಕ ಯುವತಿಯರನ್ನು ಜನ ಒಂದೇ ಸಮನೆ ತಿನ್ನುವಂತೆ ನೋಡಿದರೆ ದೃಷ್ಟಿಯಾಗುತ್ತದೆಂದೂ, ಅದರಿಂದ ಜ್ವರ ತಲೆನೋವು ಬರುವುದೆಂದೂ ಜನರ ನಂಬಿಕೆ. ‘ಮನ್ಸನ ಕಣ್ಣಿಗೆ ಮರ ಸಿಡೀತು’ ಎಂಬ ಗಾದೆ ಬಂದಿರುವುದೂ ಇದೇ ನಂಬಿಕೆಯಿಂದ. ಆ ಕೆಟ್ಟ ಕಣ್ಣುಗಳ ದೋಷ ಪರಿಹಾರಕ್ಕಾಗಿ ಉಪ್ಪು ಮೆಣಸಿನಕಾಯಿಯನ್ನು ಮುಖದಿಂದ ಕೆಳಕ್ಕೆ ಇಳಿದೆಗೆದು, ಥೂ ಥೂ ಎಂದು ಉಗಿದು, ಒಲೆಯ ಕೆಂಡದೊಳಕ್ಕೆ ಹಾಕುತ್ತಾರೆ. ಕೆಂಡದೊಳಕ್ಕೆ ಬಿದ್ದ ಉಪ್ಪು ಸಿಡಿಯುತ್ತದೆ. ಎಷ್ಟೊಂದು ದೃಷ್ಟಿಯಾಗಿದೆ ನೋಡು ಎನ್ನುತ್ತಾರೆ. ಮೆಣಸಿನಕಾಯಿ ಒಲೆಗೆ ಬಿದ್ದರೆ ಘಾಟು ಆಗುತ್ತದೆ, ಆದರೆ ದೃಷ್ಟಿಯಾಗಿದ್ದಾಗ ಘಾಟು ಆಗುವುದಿಲ್ಲ ಎಂದು ಗ್ರಾಮೀಣರ ನಂಬಿಕೆ. ವೈಚಾರಿಕ ನೆಲಗಟ್ಟಿಲ್ಲದ ಈ ಆಚರಣೆಯ ಗುರಿ ಮಾನಸಿಕ ಶಮನವನ್ನು ಮೂಡಿಸುವಂಥದು ಎಂದು ಕಾಣುತ್ತದೆ.
ಪ್ರ : ಮಗೀಗೆ ಎಷ್ಟು ದೃಷ್ಟಿ ಆಗಿದೆಯೋ, ಉಪ್ಪು ಮೆಣಸಿನಕಾಯಿ ನೀವಳಿಸಿ ಒಲೆಗೆ ಹಾಕು ಮೊದಲು.
೨೭೦. ಉಬ್ಬರ ಬಂದಿರು = ಮುನಿಸುಂಟಾಗು, ಅಸಮಾಧಾನದಿಂದ ಮುಖ ಊದಿಸಿಕೊಳ್ಳು.
(ಉಬ್ಬರ < ಉರ್ವರ = ಉಬ್ಬುವಿಕೆ, ಊದಿಕೊಳ್ಳುವಿಕೆ)
ಪ್ರ : ಉಪ್ಪುರಗುಲದ ಹೆಣ್ಣು ಉಬ್ಬರ ಬಂದು ಕುಂತವಳೆ, ಇವಳ ಅಬ್ಬರ ಅಡಗ್ಹೋಗ.
೨೭೧. ಉಬ್ಬಿ ಹೋಗು = ಅಹಂಕಾರದಿಂದ ಬೀಗು, ಮೇರೆಮೀರಿ ಮೆರೆ
ಪ್ರ : ಅವನು ಎಷ್ಟು ಉಬ್ಬಿ ಹೋಗ್ಯವನೆ ಅಂದ್ರೆ, ಯಾರೂ ಮೈಯಂಟೇ ಇಲ್ಲ
೨೭೨. ಉಬ್ಬೆಗೆ ಹಾಕು = ಹಿಂಸಿಸು, ಉಸಿರು ಕಟ್ಟಿಸು, ಯಮಬಾಧೆ ನೀಡು
ಪ್ರ : ಸೊಸೇನ ಉಬ್ಬೆಗೆ ಹಾಕಿ ದೆಬ್ಬೇಲಿ ತೆಗೀತಾರೆ
೨೭೩. ಉರಲಾಗು = ನೇಣಾಗು, ಕುಣಿಕೆಯಾಗು
(ಉರಲು = ಹಗ್ಗ, ನೇಣು)
ಪ್ರ : ಅವನು ಮಾಡಿದ್ದು ಅವನಿಗೇ ಉರಲಾಯ್ತು
೨೭೪. ಉರಿದ ಉಪ್ಪಾಗು = ಕೋಪಗೊಳ್ಳು, ಸಿಡಿಮಿಡಿಗೊಳ್ಳು
ಉಪ್ಪನ್ನು ಓಡಿನಲ್ಲಿ ಉರಿದರೆ ಅದು ಚಟಪಟ ಸಿಡಿಯತೊಡಗುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಇವನು ಯಾಕೆ ಹಿಂಗೆ, ಯಾರು ಮಾತಾಡಿಸಿದ್ರೂ, ಉರಿದ ಉಪ್ಪಾಗ್ತಾನೆ?
೨೭೫. ಉರಿದು ರವಾಲಾಗು = ಕಿಡಿಕಿಡಿಯಾಗು, ಕೋಪಗೊಳ್ಳು
(ರವಾಲಾಗು < ರವೆ + ಅವಲು + ಆಗು ; ರವೆ = ಚರೆ, ಬಂದೂಕಿಗೆ ತುಂಬುವ ಮದ್ದು; ಅವಲು = ಹುರಿದಾಗ ಬಾಯಿ ಬಿಟ್ಟುಕೊಂಡು ಸಿಡಿಯುವ ಕಾಳು)
ಪ್ರ : ಅಪ್ಪ ಉರಿದು ರವಾಲಾಗಿದ್ದಾನೆ, ಈಗ ದುಡ್ಡು ಕೇಳಿದ್ರೆ ಮುಗೀತು ಕತೆ
೨೭೬. ಉರಿಯೋದಕ್ಕೆ ಪುಳ್ಳೆ ಇಕ್ಕು = ಪ್ರಚೋದಿಸು,
(ಪುಳ್ಳೆ < ಪುರಲೆ = ಸಣ್ಣ ಸಿಬರಿನಂಥ ಕಡ್ಡಿ)
ಪ್ರ : ನೀನು ಉರಿಯೋದಕ್ಕೆ ಪುಳ್ಳೆ ಇಕ್ಕಬೇಡ, ಬಾಯ್ಮುಚ್ಕೊಂಡು ಕೂತುಕೋ
೨೭೭. ಉರಿಯೋದರ ಮೇಲೆ ಉಪ್ಪು ಹಾಕು = ಕೆರಳಿಸು, ಉಲ್ಬಣಿಸು
ಪ್ರ : ತೆಪ್ಪಗಿರದೆ ಇವನೊಬ್ಬ ಉರಿಯೋದರ ಮೇಲೆ ಉಪ್ಪು ಹಾಕಿದ.
೨೭೮. ಉರಿಸಿಂಗಿಯಂತಾಡು = ಸಿಟ್ಟಿನಿಂದ ಎಗರಾಡು, ನೆಗೆದಾಡು
(ಉರಿಸಿಂಗಿ = ನೆಗೆಯುವ ಹಾವು, ಮಿಡಿನಾಗರ)
ಪ್ರ : ಇವನು ಯಾಕೆ ಹಿಂಗೆ ಉರಿಸಿಂಗಿಯಂಗಾಡ್ತಾನೆ?
೨೭೯. ಉರಿ ಹತ್ತಿಕೊಳ್ಳು = ಅಸಹನೆ ಉಂಟಾಗು, ಬೇನೆ ಬರು
(ಉರಿ = ಹೊಟ್ಟೆಕಿಚ್ಚು, ಬೇನೆ)
ಪ್ರ : ಅವಳ ಗಂಡನ ಜೊತೆ ಅವಳಿದ್ರೆ, ಇವಳಿಗ್ಯಾಕೆ ಉರಿ ಹತ್ತಿಕೊಳ್ತು?
೨೮೦. ಉರುಳಿಕೊಳ್ಳು = ಮಲಗಿಕೊಳ್ಳು, ಯಾರೂ ಗಲಾಟೆ ಮಾಡಬೇಡಿ
ಪ್ರ : ಒಂದು ಗಳಿಗೆ ಉರುಳಿಕೊಳ್ತೀನಿ, ಯಾರೂ ಗಲಾಟೆ ಮಾಡಬೇಡಿ
೨೮೧. ಉಲ್ಟಿಕೊಂಡು ಹೋಗು = ಉರುಳಿಕೊಂಡು ಹೋಗು
(ಉಲ್ಟು < ಉರಂಟು < ಉರುಟ್ಟು (ತ) = ಉರುಳು)
ಪ್ರ : ಲಕ್ಷ್ಮಿ ಚಂಚಲೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಲ್ಟಿಕೊಂಡು ಹೋಗೋದೋ ಕೆಲಸ.
೨೮೨. ಉಷ್ಣ ಹತ್ತು = ಸಿಟ್ಟು ಹತ್ತು
ಪ್ರ : ಅಲ್ಲಿಗೆ ನಾನೂ ಬಂದಿದ್ಕೆ ನಿನಗೆ ಉಷ್ಣ ಹತ್ತಿ ಬಿಡ್ತ ?
೨೮೩. ಉಸಾರುದಪ್ಪು = ಅಸ್ವಸ್ಥವಾಗು, ಆರೋಗ್ಯ ಕೆಡು
(ಉಸಾರು < ಹುಷಾರು = ಆರೋಗ್ಯ, ಸ್ವಾಸ್ಥ್ಯ)
ಪ್ರ : ಎಂಟು ದಿವಸಗಳಿಂದ ಉಸಾರು ತಪ್ಪಿ ಹಾಸಿಗೆ ಹಿಡಿದವ್ನೆ
೨೮೪. ಉಸ್ವಾಸ ಇಲ್ಲದಿರು = ವಿರಾಮವಿಲ್ಲದಿರು, ಉಸಿರುಕಟ್ಟಿ ದುಡಿ
(ಉಸ್ವಾಸ < ಉಚ್ಛ್ವಾಸ = ಹೊರಕ್ಕೆ ಬಿಡುವ ಉಸಿರು ; ನಿಶ್ವಾಸ = ಒಳಕ್ಕೆಳೆದುಕೊಳ್ಳುವ ಉಸಿರು)
ಪ್ರ : ಈ ಮನೇಲಿ ಉಸ್ವಾಸ ಇಲ್ಲದಂಗೆ ದುಡಿದರೂ ಇಸ್ವಾಸದಿಂದ ಕಾಣೋರು ಒಬ್ಬರೂ ಇಲ್ಲ.
೨೮೫. ಉಸಿರಡಗು = ಸಾಯು, ಮರಣ ಹೊಂದು
(ಉಸಿರು < ಉಯಿರ್ (ತ) = ಪ್ರಾಣವಾಯು)
ಪ್ರ : ಬಸುರಿಗೊದ್ನಲ್ಲೆ, ಇವನ ಉಸಿರಡಗಿ ಹೋಗ
೨೮೬. ಉಸಿರಾಡೋಕೆ ಬಿಡು = ಪುರಸೊತ್ತು ಕೊಡು, ವಿರಮಿಸಲು ಬಿಡು
ಪ್ರ : ಉಸಿರಾಡೋಕೂ ಬಿಡಲ್ಲ, ಈ ಚಂಡಾಲ ಗಂಡ ಅನ್ನಿಸಿಕೊಂಡೋನು
೨೮೭. ಉಸಿರುಳಿಸಿಕೊಂಡಿರು = ಜೀವದಿಂದಿರು, ಕಷ್ಟಕಾರ್ಪಣ್ಯಗಳ ನಡುವೆ ಜೀವ ಹಿಡಿದುಕೊಂಡಿರು
ಪ್ರ : ನಗೋರ ಮುಂದೆ ಚೆನ್ನಾಗಿ ಬದುಕಲೂ ಇಲ್ಲ, ಸಾಯಲೂ ಇಲ್ಲ. ಹೀಗೆ ಉಸಿರುಳಿಸಿಕೊಂಡಿದ್ದೇನೆ, ನೋಡಪ್ಪ
೨೮೮. ಉಸಿರು ಬಿಡದಿರು = ಮಾತಾಡದಿರು
ಪ್ರ : ಅಪ್ಪನ ನರಸಿಂಹಾವತಾರ ನೋಡಿ, ನಾನು ಉಸಿರೇ ಬಿಡಲಿಲ್ಲ.
೨೮೯. ಉಸೂರ್ ಅನ್ನಿಸು = ನೋಯಿಸು, ನಿಟ್ಟುಸಿರು ಬಿಡಿಸು
ಪ್ರ :ಹೆಣ್ಣನ್ನು ಉಸೂರ್ ಅನ್ನಿಸಿದೋರು ಎಂದೂ ನಿಸೂರಾಗಿರಲ್ಲ
೨೯೦. ಉಳ್ಳಂಗು ಮಾಡು = ಉಪಾಯ ಮಾಡು, ಯುಕ್ತಿ ಮಾಡು
(ಉಳ್ಳಂಗು < ಉಳುಂಗು = ಪ್ರೀತಿ, ಒಲುಮೆ)
ಪ್ರ : ಏನೇನೋ ಉಳ್ಳಂಗು ಮಾಡಿ, ಅವಳ ಆಸ್ತೀನ ಹೊಡೆದುಬಿಟ್ಟ.
೨೯೧. ಉಂಗುರವಿಡು = ಮದುವೆ ನಿಶ್ಚಿತಾರ್ಥ ಮಾಡು.
ಬಹುಶಃ ರಾಜ ಮಹಾರಾಜರಲ್ಲಿ ಶ್ರೀಮಂತ ವರ್ಗದಲ್ಲಿ ಉಂಗುರವಿನಿಮಯದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರುತ್ತಿದ್ದಿರಬೇಕು. ಪಂಪ ಭಾರತದ ಪ್ರಸಂಗವೊಂದು ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಆದರೆ ಬಡವರಲ್ಲಿ “ಅರಿಶಿನ ಕುಂಕುಮ ಬಿಡು” ವುದರ ಮೂಲಕ ನಿಶ್ಚಿತಾರ್ಥವಾಗುತ್ತಿತ್ತು. ಅವರ ದೃಷ್ಟಿಯಲ್ಲಿ ಅವುಗಳು ಮುತ್ತೈದೆಯ ಒಡವೆಗಳೆಂದೇ ನಂಬಿಕೆ. ಉದಾಹರಣೆಗೆ “ಒಡೊಡವೆಗೆಲ್ಲ ತೂತಿಲ್ಲದ ಒಡವೆ ಯಾವುದು?” ಎಂಬ ಜನಪದ ಒಗಟಿಗೆ ಉತ್ತರ ಕುಂಕುಮ ಎಂದು. ಗ್ರಾಮಗಳಲ್ಲಿ ಕೈಯುಂಗರ ಕಾಲುಂಗುರ ಚಿರಪರಿಚಿತವಾದರೂ ಅವು ಚಿನ್ನದವುಗಳಲ್ಲ, ಬೆಳ್ಳಿಯವು.
ಪ್ರ : ತನಗೆ ಕಿರಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇಳ್ಕುಮೆಂದಡೆ (ಪಂಪಭಾರತ)
೨೯೨.ಉಂಡದ್ದು ಊಟ ಕೊಂಡದ್ದು ಕೂಟ ಆಗದಿರು = ಮೈ ಹತ್ತದಿರು, ವ್ಯರ್ಥವಾಗು, ಹಿಂಸೆಯಾಗು
(ಕೂಟ = ಸಂಭೋಗ)
ಪ್ರ : ಈ ಹೈರಾಣದಲ್ಲಿ ನಾನು ಉಂಡದ್ದು ಊಟ ಅಲ್ಲ ಕೊಂಡದ್ದು ಕೂಟ ಅಲ್ಲ.
೨೯೩. ಉಂಡ ಮನೆ ಜಂತೆ ಎಣಿಸು = ಎರಡು ಬಗೆ, ಉಪಕಾರ ಹೊಂದಿ ಅಪಕಾರವೆಸಗು
(ಜಂತೆ = ಮಾಳಿಗೆ ಮನೆಯ ಎರಡು ತೊಲೆಗಳ ಮೇಲೆ ಅಡ್ಡಡ್ಡಲಾಗೆ ಹರಡಿರುವ ಸಣ್ಣ ಗಳುಗಳು.)
ಪ್ರ : ಉಂಡ ಮನೆ ಜಂತೆ ಎಣಿಸೋರ್ನ ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರಬೇಕು.
೨೯೪. ಉಂಡ ಮನೆಗೆ ಕನ್ನ ಹಾಕು = ಕೆಟ್ಟದ್ದನ್ನೇಣಿಸು, ಎರಡು ಬಗೆ
(ಕನ್ನ = ಮನೆಯ ಗೋಡೆಗೆ ತೂತು ಕೊರೆದು ಒಳನುಗ್ಗಿ ಕಳ್ಳತನ ಮಾಡುವುದು)
ಪ್ರ : ಉಂಡ ಮನೆಗೆ ಕನ್ನ ಹಾಕೋ ಹೀನ ಬುದ್ಧಿ ಬಿಡು
೨೯೫. ಉಂಡಿಗೆ ಹಾಕಿ ನೋಡು = ಪರೀಕ್ಷಿಸು
(ಉಂಡಿಗೆ = ಹುಗಲು, ರಂದ್ರ)
ಹಲಸಿನ ಹಣ್ಣು ಕಾಯೋ ಹಣ್ಣೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕುಡಲು (< ಕುಡುಗೊಲು) ಅಥವಾ ಚಾಕುವಿನಿಂದ ಒಂದು ಕಡೆ ರಂಧ್ರ ಮಾಡಿ ತೊಳೆದು ಚೂರೊಂದನ್ನು ಹೊರದೆಗೆದು ನೋಡುವ ರೂಢಿಯುಂಟು. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಸುತ್ತು ಬಳಸಿನ ಮಾತಿನ ಮೂಲಕ ನನ್ನ ಎದೆಗೆ ಉಂಡಿಗೆ ಹಾಕಿ ನೋಡಲು ಯತ್ನ ಮಾಡ್ತಾ ಇದ್ದೀ ಅಲ್ವಾ?

೯) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಈ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಈ)
೨೨೫. ಈ ಕಿವೀಲಿ ಕೇಳಿ ಆ ಕಿವೀಲಿ ಬಿಡು = ಗಂಭೀರವಾಗಿ ಪರಿಗಣಿಸದಿರು, ಅಲಕ್ಷಿಸು
ಪ್ರ : ಅವನು ಏನೇನೊ ಒಂದು ಮಣ ಹೇಳಿದ, ನಾನು ಈ ಕಿವೀಲಿ ಕೇಳಿ ಆ ಕಿವೀಲಿ ಬಿಟ್ಟೆ
೨೨೬. ಈಚಲು ಏಳು = ಮಳೆ ಬರುವ ಸಂಭವವಿರು
(ಈಚಲು = ತೂಗುದೊಟ್ಟಿಲು. ದೀಪದ ಬೆಳಕಿಗೆ ಮುತ್ತಿ, ರೆಕ್ಕೆ ಸುಟ್ಟುಕೊಂಡು ನೆಲದಲ್ಲಿ ಬುಳುಬುಳು ಹರಿದಾಡುವ ಒಂದು ಬಗೆಯ ಹುಳು. ಅವು ಮೇಲೆದ್ದರೆ ಮಳೆ ಬರುತ್ತದೆ ಎಂಬ ಜನಪದ ನಂಬಿಕೆ ಈ ನುಡಿಗಟ್ಟಿಗೆ ಮೂಲ)
ಪ್ರ : ಈಚಲು ಎದ್ದವೆ, ಇವತ್ತು ಮಳೆ ಕುರ್ತೇಟು.
೨೨೭. ಈಟಿರು = ಚಿಕ್ಕದಾಗಿರು, ಕುಳ್ಳಾಗಿರು
(ಈಟು < ಈಸು < ಇಷ್ಟು = ಸ್ವಲ್ಪ)
ಪ್ರ : ಈಟಿರೋ ಹುಡುಗನಿಗೆ ಏಟು ಜೋರು ನೋಡು !
೨೨೮. ಈಡಾಗು = ಗುರಿಯಾಗು
(ಈಡು = ಗುರಿ)
ಪ್ರ : ಅಪ್ರಾಮಾಣಿಕರು ಕಷ್ಟಕ್ಕೀಡಾಗುವುದಿಲ್ಲ.
೨೨೯. ಈಡಾಡು = ಚೆಲ್ಲಾಡು, ಇಟ್ಟಾಡು
ಪ್ರ : ಮನೆ ನೇರುಪ್ಪಾಗಿಟ್ಕೋಬಾರ್ದ, ಸಾಮಾನು ಸರಂಜಾಮು ಹಿಂಗೆ ಈಡಾಡಿದ್ದೀರಲ್ಲ?
೨೩೦. ಈಡಿಲ್ಲದಿರು = ಸಾಮ್ಯ ಇಲ್ಲದಿರು, ಸರಿಸಾಟಿ ಇಲ್ಲದಿರು
(ಈಡು = ಸಮಾನ, ಸರಿಸಾಟಿ, ಓರಿಗೆ)
ಪ್ರ : ಗಂಡಿಗೂ ಹೆಣ್ಣಿಗೂ ಈಡಿಲ್ಲ
೨೩೧. ಈಡು ತೆಗೆ = ಪರಿಹಾರ ತೆಗೆ, ಪಾಲು ತೆಗೆ
(ಈಡು = ಸಮಾನ ಮೊತ್ತ, ಅಂದಾಜು ಹಣ)
ಪ್ರ : ಪಾಲು ಮಾಡೋದಕ್ಕೆ ಮುಂಚೆ ಮದುವೆಯಾಗದಿರುವ ಕಿರಿಯವನಿಗೆ ಮದುವೆ ಈಡು ತೆಗೀರಿ
೨೩೨. ಈಡು ಹಾಕು = ಹುದಿ ಹಾಕು, ಜಗುಲಿ ಹಾಕು
(ಈಡು = ಹುದಿ, ಏರಿ); ಇಡುವು (ಪಂಪ ಭಾರತ), ‘ಅಡಗಿನಿಡುವುಗಳಂ ದಾಂಟಿಯುಂ’
ಪ್ರ : ದನಕರ ನುಗ್ಗದ ಹಂಗೆ ತೋಟದ ಸುತ್ತ ಈಡು ಹಾಕಬೇಕು.
೨೩೩. ಈಡು ಹಾರಿಸು = ಗುಂಡು ಹಾರಿಸು
(ಈಡು = ಬಂದೂಕು, ಬಂದೂಕಿಗೆ ಹಾಕುವ ಮದ್ದುಗುಂಡು)
ಪ್ರ : ಈಡು ಹಾರಿಸಿ ಗೋಡೆ ಹಾರಿ ಓಡಿ ಹೋದ.
೨೩೪. ಈಡೇರು = ನೆರವೇರು, ಕೆಲಸವಾಗು
(ಈಡೇರು < ಈಡು + ಏರು = ಗುರಿಮುಟ್ಟು; ಈಡು = ಗುರಿ, ಏರು = ಮುಟ್ಟು)
ಪ್ರ : ಹಿಡಿದ ಕೆಲಸ ಈಡೇರಿತಲ್ಲ ಅಷ್ಟೆ ಸಾಕು
೨೩೫. ಈ ತರಕ್ಕೀತರ ಅಂತ ಹೇಳು = ವಿವರವಾಗಿ ಬಿಡಿಸಿ ಹೇಳು, ಅರ್ಥವಾಗುವಂತೆ ವಿವರಿಸು
(ತರ < ಥರ = ಬಗೆ, ರೀತಿ)
ಪ್ರ : ಈ ತರಕ್ಕೀತರ ಅಂತ ಹೇಳದೆ ಇದ್ರೆ ನಮಗರ್ಥ ಆಗೋ ಬಗೆ ಹೇಗೆ>
೨೩೬. ಈದ ನಾಯಂತೆ ಮೇಲೆ ಬೀಳು = ರೋಷದಿಂದ ಮೇಲೆರಗು
(ಈದ = ಮರಿ ಹಾಕಿದ ; ಈಯು = ಜನ್ಮ ನೀಡು ([ಮಗುವಿಗೆ, ಕರುವಿಗೆ, ಮರಿಗೆ])
ಪ್ರ : ನಾನು ಹೀಗಲ್ಲ ಅಂಥ ಹೇಳೋಕೆ ಹೋದ್ರೆ, ಅವಳು ಈದ ನಾಯಂತೆ ಮೇಲೆ ಬಿದ್ದಳು.
೨೩೭. ಈದ ಹುಲಿಯಂತೆ ನುಗ್ಗು = ಮಹಾರೋಷದಿಂದ ಶರವೇಗದಲ್ಲಿ ಎಗರಿ ಬರು;
ಪ್ರಾಣಿಗಳ ಶಿಶುಪ್ರೇಮ ಈ ವರ್ತನೆಗೆ ಕಾರಣ.
ಪ್ರ : ನನ್ನ ದನಿ ಕೇಳಿದ ತಕ್ಷಣ ಈದ ಹುಲಿಯಂತೆ ನುಗ್ಗಿ ಬಂದುಬಿಟ್ಟ.
೨೩೮. ಈರಂಗಿರು = ಮೊಕದ್ದಮೆಯ ಚರ್ಚೆಯಿರು, ವಾದ ಪ್ರತಿವಾದವಿರು
(ಈರಂಗು < Hearing) ಅನ್ಯ ಭಾಷಾ ಶಬ್ದಗಳನ್ನು ಯಾವ ಮಡಿಮೈಲಿಗೆ ಭಾವನೆಯಿಂದ ನೋಡದೆ ತಮ್ಮದನ್ನಾಗಿಸಿಕೊಂಡು ಬಳಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ
ಪ್ರ : ಇವತ್ತು ಬೆಂಗಳೂರಿಗೆ ಹೋಗಬೇಕು, ಈರಂಗು ಇದೆ.
೨೩೯. ಈರಿ ಒಡೆ ಹಾಕು = ಒದಿ, ರಕ್ತ ಕಕ್ಕಿಸು, ಹೆಚ್ಚು ಶ್ರಮ ನೀಡು
(ಈರಿ = ಈಲಿ = Liver)
ಪ್ರ : ಗರ್‌ಮಿರ್ ಅಂದ್ರೆ ಈಡಿ ಒಡೆ ಹಾಕಿಬಿಡ್ತೀನಿ, ಹುಷಾರ್
೨೪೦. ಈರಿಕೆ ಹಾಕ್ಕೊಂಡು ಕೂರು = ಮಂಡಿ ಹಾಕ್ಕೊಂಡು ಕೂಡಿ, ಪಟ್ಟು ಹಾಕಿ ಕುಳಿತುಕೊಳ್ಳು
‘ಮಸಾಣಸಿದ್ದರು’ ಎಂಬ ಬುಡಕಟ್ಟು ಜನಾಂಗ ತಲೆಬುರುಡೆ, ಕೈಕಾಲು ಮೂಳೆಗಳನ್ನು ಕೈಯಲ್ಲಿ ಹಿಡಿದು ತಿರಿಯಲು ಬರುತ್ತಾರೆ. ಜನ ಕೊಡದಿದ್ದಾಗ ಕತ್ತಿಯಿಂದ ಮೈಗೆ, ಕೈಗೆ ಹೊಡೆದುಕೊಳ್ಳುವುದು, ಚುಚ್ಚಿಕೊಳ್ಳುವುದು ಮುಂತಾದ ಭಯಾನಕ ಕ್ರಿಯೆಗಳ ಮೂಲಕ ಹೆದರಿಸಿ ದುಡ್ಡು ಕಸಿಯುತ್ತಾರೆ. ಧಾನ್ಯ ಕೀಳುತ್ತಾರೆ. ವೀರಬಾಹುಕನ ಕುಲಸ್ಥರು ಎಂದು ಅವರ ವಾದ. “ಮಸಾಣಸಿದ್ಧರು ನಾವಯ್ಯ, ಮಸಾಣ ಕಾವಲು ನಮ್ಮದಯ್ಯ” ಎಂದು ಹಾಡುತ್ತಾ ಬರುತ್ತಾರೆ. ವೀರಬಾಹುಕ ಎಂಬುದೇ ಈರಿಕೆ ಆಗಿರಬಹುದೆ? ಅಥವಾ ಕೈಗೆ ಮೈಗೆ ಇರಿದುಕೊಳ್ಳುವುದರಿಂದ ‘ಇರಿಕೆ’ ಎಂಬುದೇ ‘ಈರಿಕೆ’ ಆಗಿರಬಹುದೆ?
ಪ್ರ : ಈರಿಕೆ ಹಾಕ್ಕೊಂಡು ಕೂತರು ಅಂದ್ರೆ ಕೊಡೋದವರೆಗೂ ಮೇಲೇಳಲ್ಲ.
೨೪೧. ಈರೆ ಹಕ್ಕಿಯಾಗಿಸು = ತಲೆ ಕೆಳಗಾಗಿ ನೇತು ಹಾಕು
(ಈರೆ ಹಕ್ಕಿ = ಕೀಚುಬಾಲದ ಹಕ್ಕಿ, ಮರದ ಕೊಂಬೆಗೆ ತಲೆಕೆಳಗಾಗಿ ನೇತು ಬೀಳುವಂಥ ಪಕ್ಷಿ ವಿಶೇಷ
ಪ್ರ : ಮರಿ ಮಾಡಿದ ಮೇಲೂ ಮನೆ ಬಿಟ್ಟು ಆಚೆಗೆ ಹೋಗದ ಕಾವೆ ಕೋಳಿಯನ್ನು ಗೋಡೆಯ ಗೂಟಕ್ಕೆ ನೇತು ಹಾಕಿ, ಈರ ಹಕ್ಕಿಯಾಗಿಸಿದರು.
೨೪೨. ಈಳ್ಳೇವು ಕೊಡು = ಒಪ್ಪಂದಕ್ಕೆ ಬರು, ವಿರಸ ಬಿಟ್ಟು ರಾಜಿಗೆ ಬರು
(ಈಳ್ಯೇವು < ವೀಳ್ಯ = ತಾಂಬೂಲ, ಎಲೆಅಡಿಕೆ) ವೀಳ್ಯ ಕೊಡುವುದು ಶುಭದ ಸಾಮರಸ್ಯದ ಸಂಕೇತ. ಮದುವೆ ಮುಂಜಿಗಳಲ್ಲಿ ಹಬ್ಬ ಹುಣ್ಣಿಮೆಗಳಲ್ಲಿ ಇದನ್ನು ತಪ್ಪದಂತೆ ಕೊಡುತ್ತಾರೆ. ಕೊಡದಿದ್ದಾಗ ಅವಮಾನ ಎಂದು ಪರಿಗಣಿಸಲಾಗುತ್ತದೆ. ಅದೂ ಮದುವೆಗಳಲ್ಲಿ ದೇವರವೀಳ್ಯ, ಗಡಿವೀಳ್ಯ, ಕಟ್ಟೆಮನೆ ವೀಳ್ಯ- ಹೀಗೆ ಕೊಡುವುದರಲ್ಲಿ ಅಪ್ಪಿ ತಪ್ಪಿ ಲೋಪದೋಷವಾದರೆ ದೊಡ್ಡ ನ್ಯಾಯವೇ ಬೀಳುತ್ತದೆ.
ಪ್ರ : ಸಮಸ್ಯೆ ಬಗೆ ಹರಿದು ಪರಸ್ಪರ ವೀಳ್ಯ ಹಂಚಿಕೊಂಡರು.
೨೪೩. ಈಳ್ಯೇವು ಹಿಡಿ = ಸವಾಲು ಸ್ವೀಕರಿಸು.
ಪ್ರ : ಅವನು ಈಳ್ಯೇವು ಹಿಡಿದು ಹೇಳಿದ – ‘ನಾನು ಅದನ್ನು ಮಾಡೇ ಮಾಡ್ತೀನಿ’

೮) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಇ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಇ)
೧೮೨. ಇಕ್ಕಟ್ಟಾಗು = ಕಿಷ್ಕಿಂಧವಾಗು, ತೊಂದರೆಯಾಗು
(ಇಕ್ಕಟ್ಟು < ಇರ್ಕಟ್ಟು < ಎರಡು ಕಟ್ಟು = ಇರುಕಲು, ಕಿರಿದು ಜಾಗವಾಗಿರು)
ಪ್ರ : ಗಾದೆ – ಇಕ್ಕಟ್ಟಿನ ಜಾಗಕ್ಕೆ ಇರುಕುಚ್ಚೆ ನಂಟ ಬಂದ
೧೮೩. ಇಕ್ಕಟ್ಟಿಗೆ ಸಿಕ್ಕಿಸಿಕೊಂಡು ಇರುಕಿಸು = ತೊಂದರೆಗೆ ಸಿಕ್ಕಿಸಿ ಕಣ್ಣುಬಾಯಿ ಬಿಡಿಸು, ಹಿಂಸಿಸು.
(ಇಕ್ಕಟ್ಟು = ಇರುಕಲು, ಸಿರುಕಲು, ಇರುಕಿಸು = ಒತ್ತು, ಉಸಿರು ಕಟ್ಟಿಸು)
ಪ್ರ : ದೀನ ದಲಿತರನ್ನು ಇಕ್ಕಟ್ಟಿಗೆ ಸಿಕ್ಕಿಸಿಕೊಂಡು ಇರುಕಿಸೋದು ಅಂದ್ರೆ ಶೋಷಕರಿಗೆ ಪರಮಾನಂದ
೧೮೪. ಇಕ್ಕುಳದಲ್ಲಿ ಸಿಕ್ಕು = ಕಷ್ಟಕ್ಕೊಳಗಾಗು, ಇಕ್ಕಟ್ಟಿಗೆ ಸಿಕ್ಕಿ ವಿಲಿವಿಲಿ ಒದ್ದಾಡು.
(ಇಕ್ಕುಳ < ಇರ್ಕುಳ < ಎರಡು + ಕುಳ = ಹಿಸುಕುವ ಲೋಹದ ಚಿಮ್ಮಟ)
ಪ್ರ : ಇಕ್ಕುಳದಲ್ಲಿ ಸಿಕ್ಕೊಂಡು ವಿಲಿ ವಿಲಿ ಒದ್ದಾಡ್ತಾ ಇದ್ದೀನಿ.
೧೮೫. ಇಜ ಕೊಡು = ಹಿಂಸಿಸು, ಘಾಸಿಪಡಿಸು
(ಇಜ < ಇಜಾ (ಹಿಂ) = ಹಿಂಸೆ)
ಪ್ರ : ಕಾರ್ಕೋಟಕ ಗಂಡ ಕೊಡೋ ಇಜಾನ ಸಹಸಿಕೊಂಡು ಹೆಂಡ್ರು ಹೆಂಗೆ ಜೀವಂತ ಇದ್ದಾಳೋ !
೧೮೬. ಇಜ್ಜಲಾಗು = ಕಪ್ಪಾಗು, ಕರಿಯಾಗು
(ಇಜ್ಜಲು < ಇದ್ದಲು < ಇರುಂದು (ತ) = ಆರಿದ ಕೆಂಡ, ಕರಿ)
ಪ್ರ : ಬಿಸಿಲಲ್ಲಿ ಒಣಗಿ ಒಣಗಿ ಇಜ್ಜಲಾದಂಗಾಗವಳೆ.
೧೮೭. ಇಜ್ಜಲು ಮೂತಿಗೆ ಗೆಜ್ಜಲು ಹತ್ತು = ಸಾಯು
(ಇಜ್ಜಲು < ಇದ್ದಲು ; ಗೆಜ್ಜಲು < ಗೆದ್ದಲು)
ಪ್ರ : ಕೆಚ್ಚಲಿಗೆ ಕೈ ಹಾಕ್ತಾನಲ್ಲೆ, ಅವನ ಇಜ್ಜಲು ಮೂತಿಗೆ ಗೆಜ್ಜಲು ಹತ್ತ !
೧೮೮. ಇಟ್ಟಾಡು = ಚೆಲ್ಲಾಡು, ಎರಚಾಡು
ಪ್ರ : ನೀನು ಹಿಂಗೆ ಆಡಿದರೆ, ಪರಸಾದ ಇಟ್ಟಾಡಬೇಕು, ಹಂಗೆ ಕೊಡ್ತೀನಿ.
೧೮೯. ಇಟ್ಟು ಕೊಳ್ಳು = ಮೆಡಗಿಕೊಳ್ಳು, ಹೆಂಡತಿ ಇದ್ದೂ ಬೇರೊಬ್ಬಳನ್ನು ಅಲಾಯದೆ ಆಳು.
ಜಮೀನುದಾರರು, ಶ್ರೀಮಂತರು ಅಧಿಕೃತ ಹೆಂಡತಿ ಮನೆಯಲ್ಲಿದ್ದರೂ ಅನೇಕ ಅನಧಿಕೃತ ಹೆಂಡತಿಯರನ್ನು ಆಳುವುದು ತಮ್ಮ ದೊಡ್ಡಸ್ತಿಕೆಯ ಲಕ್ಷಣ ಎಂದು ಭಾವಿಸುತ್ತಿದ್ದರು – ದೊಡ್ಡತಿಕ ಅಡ್ಡಗಲ ಎಂದು. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು
ಪ್ರ : ಗಾದೆ – ಇಟ್ಕೊಂಡೋಳು ಇರೋತನಕ ಕಡ್ಕೊಂಡೋಳು ಕಡೇತನಕ
೧೯೦. ಇಡರಿಸಿ-ಹಿಟ್ಟಿಕ್ಕಿ ಮೇಲೊಂದು ಕೋಲಿಕ್ಕು = ಊಟಕ್ಕೆ ಬಡಿಸಿ ಘಾಸಿ ಪಡಿಸು
(ಇಡರು < ಇಡರ್ (ತ) = ತೊಂದರೆ, ತಡೆ; ಇಕ್ಕು = ಹೊಡೆ)
ಪ್ರ : ಅವಳು ಇಡರಿಸಿ ಹಿಟ್ಟಿಕ್ಕಿ ಮೇಲೊಂದು ಕೋಲಿಕ್ಕೋದು ನನಗೆ ಗೊತ್ತಿಲ್ವೇನು?
೧೯೧. ಇಡುಗಲ್ಲು ಹಿಡಿದು ನಿಂತಿರು = ಕೆಕ್ಕರಿಸುತ್ತಿದ್ದರು, ದ್ವೇಷ ಸಾಧಿಸುತ್ತಿದ್ದರು
(ಇಡು = ಇಕ್ಕು, ಹೊಡಿ; ಇಡುಗಲ್ಲು = ತಲೆ ಮೇಲೆ ಹಾಕುವ ಕಲ್ಲು)
ಪ್ರ : ದಾಯಾದಿಗಳು ನಮ್ಮ ಮೇಲೆ ಇಡುಗಲ್ಲು ಹಿಡಿದು ನಿಂತವರೆ.
೧೯೨. ಇತ್ತತ್ತ ಬರು = ಹತ್ತಿರ ಬರು, ಈ ಕಡೆಗೆ ಬರು
(ಇತ್ತತ್ತ < ಇತ್ತ+ಇತ್ತ = ಈ ಕಡೆಗೆ, ಈ ಕೊನೆಗೆ)
ಪ್ರ : ಇತ್ತತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ಕೊಂಡ್ರು
೧೯೩. ಇದ್ದ ಕಡೆ ಇರದಿರು ಬಿದ್ದಗೋಡೆ ಹಾಕದಿರು = ಪೋಲಿ ತಿರುಗು, ಅಲೆಮಾರಿಯಾಗಿ ಅಲೆ
ಪ್ರ : ಗಾದೆ – ಇದ್ದೂರಿನಾಗಿರಲಿಲ್ಲ, ಬಿದ್ದ ಗೋಡೆ ಹಾಕಲಿಲ್ಲ.
೧೯೪. ಇದ್ದೂ ಸತ್ತಂತೆ ಮಾಡು = ಅವಮಾನ ಮಾಡು, ತಲೆ ಎತ್ತಿ ತಿಗುಗದಂತೆ ಮಾಡು
ಪ್ರ : ಅಪಾಪೋಲಿ ಮಗ ಹುಟ್ಟಿ ಅಪ್ಪನ್ನ ಇದ್ದೂ ಸತ್ತಂತೆ ಮಾಡಿಬಿಟ್ಟ.
೧೯೫. ಇನ್‌ಕಿಲ್ಲದಂಗೆ ಹೇಳು = ‘ನಭೂತೋ’ ಎನ್ನುವಂತೆ ಹೇಳು
(ಇನ್‌ಕಿಲ್ಲದಂಗೆ < ಹಿಂದಕ್ಕಿಲ್ಲದ ಹಂಗೆ)
ಪ್ರ : ಇನ್‌ಕಿಲ್ಲದಂಗೆ ಹೇಳಿದರೂ, ಯಾರ ಮಾತೂ ಕೇಳದೆ ಹೊಸಲು ದಾಟಿ ಹೊರಟು ಹೋದ್ಲು
೧೯೬. ಇನ್ನೊಬ್ಬ ತಾಯಿ ಹೊಟ್ಟೇಲಿ ಹುಟ್ಟಿದಂತಾಗು = ದೊಡ್ಡ ಗಂಡಾಂತರದಿಂದ ಪಾರಾಗು, ಪುನರ್ಜನ್ಮ ಪಡೆದಂತಾಗು.
ಪ್ರ : ಇವತ್ತು ನಾನು ಬದುಕಿ ಬಂದದ್ದು, ಇನ್ನೊಬ್ಬ ತಾಯಿ ಹೊಟ್ಟೇಲಿ ಹುಟ್ಟಿ ಬಂದ್ಹಂಗಾಯ್ತು.
೧೯೭. ಇಪಟ್ಟು ಸಾಕುಮಾಡು = ಇನ್ನು ನಿಲ್ಲಿಸು, ಮುಂದುವರಿಸದಿರು.
(ಇಪಟ್ಟು < ಈ ಪಟ್ಟು = ಈ ಸಲ ? ಅಥವಾ < ಇರ್‌+ ಪಟ್ಟು < ಇಪ್ಪಟ್ಟು = ಎರಡುಪಟ್ಟು?)
ಪ್ರ : ನಿನ್ನ ಕಗ್ಗಾನ ಇಪ್ಪಟ್ಟು ಸಾಕುಮಾಡು
೧೯೮. ಇಪ್ಪಾಲು ಮಾಡು = ಎರಡು ಭಾಗ ಮಾಡು
(ಇಪ್ಪಾಲು < ಇರ್ಪಾಲು < ಎರಡು + ಪಾಲು = ಎರಡು ಭಾಗ)
ಪ್ರ : ನಾನಿರುವಾಗಲೇ ಮನೇನ ಇಪ್ಪಾಲು ಮಾಡಿದರೆ ನಾನು ಖಂಡಿತ ಮಣ್ ಪಾಲಾಗ್ತೀನಿ ಅಂತ ತಾಯಿ ಗೋಗರೆದರೂ ಕೇಳಲಿಲ್ಲ ಮಕ್ಕಳು.
೧೯೯. ಇಬ್ಬಳ ಕೊಟ್ಟು ಇಕ್ಕಳ ಪೀಕಿಸು = ಒಂದಕ್ಕೆ ಎರಡು ಗಿಟ್ಟಿಸು, ಸೂಜಿ ಹಾಕಿ ದಬ್ಬಳ ತೆಗೆ
(ಇಬ್ಬಳ < ಇರ್ಬಳ್ಳ < ಎರಡು + ಬಳ್ಳ; ಬಳ್ಳ = ನಾಲ್ಕು ಸೇರು, ಇಬ್ಬಞಲ = ಎಂಟು ಸೇರು. ಇಕ್ಕಳ < ಇಕ್ಕೊಳಗ < ಇರ್ಕೊಳಗ < ಎರಡು + ಕೊಳಗ ; ಎರಡು ಇಬ್ಬಳ = ಒಂದು ಕೊಳಗ ; ಕೊಳಗ = ೧೬ ಸೇರು, ಇಕ್ಕಳ = ೩೨ ಸೇರು)
ಪ್ರ : ತಿಬ್ಬಳಗೆಟ್ಟೋರ ಹತ್ರ ಇಬ್ಬಳ ಕೊಟ್ಟು ಇಕ್ಕಳ ಪೀಕಿಸಬಹುದಷ್ಟೆ. ನನ್ನ ಹತ್ರ ನಡೆಯಲ್ಲ.
೨೦೦. ಇಮರಿ ಹೋಗು = ಇಂಗಿ ಹೋಗು, ಬತ್ತಿ ಹೋಗು
(ಇಮರು < ಇಗರು (ತ) = ಒಣಗು)
ಪ್ರ : ಜೀವದೊಳಗೇನೂ ಇಲ್ಲ, ಇಮರಿ ಇಪ್ಪೆಯಾಗಿದ್ದಾನೆ.
೨೦೧. ಇಮ್ಮಡಿಸಿಕೊಂಡು ಸೆಣಿ = ಮಡಿಕೆ ಮಾಡಿ ಹೊಡಿ
(ಇಮ್ಮಡಿಸು < ಎರಡು + ಮಡಿಸು = ಎರಡು ಮಡಿಕೆ ಮಾಡು; ಸೆಣಿ = ಹೊಡಿ)
ಪ್ರ : ಹಗ್ಗ ಇಮ್ಮಡಿಸಿಕೊಂಡು ಸೆಣೆದ ನೋಡು , ಥಕಥೈ ಅಂತ ಕುಣಿದಾಡೋ ಹಂಗೆ.
೨೦೨. ಇರವಾರ ಕೆಡು = ಇದ್ದದ್ದೂ ಕೆಡು, ಹೆಚ್ಚು ಕೆಡು
(ಇರವಾರ < ಇರ್ + ಪಾರ = ಎರಡು ದಡ, ಎರಡು ಪಟ್ಟು)
ಪ್ರ : ಅಣ್ಣ ಕೆಟ್ಟಿರೋದು ಇರ್ಲಿ, ತಮ್ಮ ಇರವಾರ ಕಟ್ಟು ಹೋಗ್ಯವನೆ.
೨೦೩. ಇರಸಾಲು ಕಟ್ಟೋಕೆ ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು.
(ಇರಸಾಲು = ಕಂದಾಯವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡುವುದು) ಆಡಳಿತಾತ್ಮಕ ಪರಿಭಾಷೆಯನ್ನು ಇಲ್ಲಿ ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸರ್ಕಾರಿ ಖಜಾನೆ ದೂರದ ತಾಲ್ಲೂಕು ಕೇಂದ್ರದಲ್ಲಿದ್ದರೂ ಶ್ಯಾನುಭೋಗ ಬಸ್ಸಿನಲ್ಲೋ, ಇಲ್ಲ, ಕಾಲು ನಡಿಗೆಯಲ್ಲೋ ಹೋಗಿ ಕಂದಾಯವನ್ನು ಅಲ್ಲಿ ಸಂದಾಯ ಮಾಡಲೇಬೇಕು. ಹಾಗೆಯೇ ಹಳ್ಳಿಗಾಡಿನಲ್ಲಿ ರೈತರು ದೈನಂದಿನ ಕಂದಾಯ ಕಟ್ಟಲು ತಮ್ಮ ತಿಪ್ಪೆ ಇರುವಲ್ಲಿಗೆ, ತಪ್ಪಿದರೆ, ತಮ್ಮ ಜಮೀನಿರುವಲ್ಲಿಗೆ ಹೋಗಿಯೇ ಕಟ್ಟುವುದು. ಖಜಾನೆ ಬಿಟ್ಟು ಇರಸಾಲು ಅನ್ಯತ್ರ ಹೇಗೆ ಸಂದಾಯವಾಗಬಾರದೋ ಹಾಗೆ ಕೆಲವರಾದರೂ ಜಿಪುಣ ರೈತರು ದೈನಂದಿನ ಇರಸಾಲು ಅನ್ಯತ್ರ ಸಂದಾಯವಾಗಬಾರದು ಎಂದು ಲಂಗೋಟಿ ಓರೆ ಮಾಡಿಕೊಂಡು ದಾಪುಗಾಲದಲ್ಲಿ ತಮ್ಮ ತಿಪ್ಪೆ ಅಥವಾ ಜಮೀನು ಖಜಾನೆಯತ್ತ ಸಾಗುವುದರಿಂದ ಈ ನುಡಿಗಟ್ಟು ಮೂಡಿದೆ.
ಪ್ರ : ಈ ಅಂಟನಿಗೆ ನಿತ್ಯ ಇರಸಾಲು ಕಟ್ಟೋಕೆ ತನ್ನ ಜಮೀನೇ ಆಗಬೇಕು.
೨೦೪. ಇರ್ಚಿ ಮುರಿ = ಆಧಾರಸ್ತಂಭ ಮುರಿದು ಹೋಗು
(ಇರ್ಚಿ < ಇರಸು < ಇರಂಬು (ತ) = ಕಬ್ಬಿಣ) ಗಾಡಿಯ ಎರಡು ಚಕ್ರಗಳನ್ನು ಬಂಧಿಸುವ, ಆಧಾರವಾಗಿ ಅಡ್ಡವಿರುವ ಕಬ್ಬಿಣದ ಅಚ್ಚಿಗೆ ಇರ್ಚಿ ಎಂದೂ, ಅದಕ್ಕೆ ಲಗತ್ತಿಸಿರುವ ಮರಕ್ಕೆ ಇರ್ಚಿಮರ ಎಂದೂ ಹೆಸರು.
ಪ್ರ : ಇವರಪ್ಪ ಗಾಡಿಗೆ ಇರ್ಚಿ ಇದ್‌ಹಂಗೆ, ಈ ಮನೆಯ ಸಕಲಿಷ್ಟನ್ನೂ ಹೊತ್ತು ನಿಭಾಯಿಸಿದ್ದ. ಮಗ ಹೊಸ ಇರ್ಚಿಯಾಗ್ತಾನೋ ಅಥವಾ ಎಲ್ಲ ಖರ್ಚು ಮಾಡ್ತಾನೋ ಕಾದು ನೋಡಬೇಕು.
೨೦೫. ಇರ್ಲು ಆಗು = ಹಸಿರು ಬಣ್ಣಕ್ಕೆ ಭೇದಿಯಾಗು
(ಇರ್ಲು < ಈರಲು = ಮುಟ್ಟು ಅಥವಾ ಮೈಲಿಗೆಯ ಸೋಂಕಿನಿಂದ ಮಕ್ಕಳಿಗೆ ಆಗುವ ಭೇದಿ)
ಪ್ರ : ಮಗೀಗೆ ಇರ್ಲಾಗಿ ಸೊರಗಿ ಹೋಗ್ಯದೆ.
ಪ್ರ : ಇರ್ಲಿ ಇರ್ಲಿ ಅಂತ ಏನು ಸೆಣಸ್ತಿ ಹೋಗೋ, ನೀನೇನು ನನ್ನ ಹಿರೇ ಮಗೀಗೆ ಇರ್ಲು ತೆಗೀಬೇಡ.
೨೦೬. ಇರುಚಲು ಹೊಡಿ = ಅನ್ಯರ ಆಪಾದನೆಗೆ ಗುರಿಯಾಗು
(ಇರುಚಲು < ಇರುಸಲು = ಗಾಳಿಯಿಂದ ಮನೆಯೊಳಕ್ಕೆ ಬೀಳುವ ಮಳೆಯ ಹನಿಗಳು; ಇರ್ < ಈರ್ = ನೀರು; ಈರುಳ್ಳಿ (ಈರ್ ಉಳ್ಳದ್ದು), ಇಬ್ಬನಿ (ಇರ್ + ಪನಿ = ನೀರ ಹನಿ) ಎಂಬ ಶಬ್ದಗಳು ಇರುಚಲು ಶಬ್ದವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತವೆ)
ಪ್ರ : ಇರುಚಲು ಹೊಡೀವಾಗ ಕದ ಮುಚ್ಕೊಂಡು ಒಳಗಿರೋದು ವಿವೇಕ
೨೦೭. ಇಲಾಜು ಮಾಡು = ವಾಸಿ ಮಾಡು, ಗುಣಪಡಿಸು
(ಇಲಾಜು < ಇಲಾಜ್ (ಹಿಂ, ಉ) = ವಾಸಿ, ಗುಣ)
ಪ್ರ : ದಾಕ್ಟ್ರು ನನ್ನ ಕಾಯಿಲೆ ಇಲಾಜು ಮಾಡಿದರು.
೨೦೮. ಇಲಿ ಮೋಣಿನಷ್ಟಿರು = ಕೊಂಚವಿರು, ಉಗುರುಕಣ್ಣಿನಷ್ಟಿರು
(ಮೋಣು = ಯೋನಿ)
ಪ್ರ : ಇಲಿ ಮೋಣಿನಷ್ಟು ತಂದುಕೊಟ್ಟು ಎಲ್ಲರಿಗೂ ಹಂಚು ಅಂದ್ರೆ ಹೆಂಗೆ ಹಂಚಲಿ ?
೨೦೯. ಇಲ್ಲಿದ್ದಂಗೆ ಬರು = ಬೇಗ ಬರು, ಜಾಗ್ರತೆ ಬರು.
(ಇಲ್ಲಿದ್ದಂಗೆ < ಇಲ್ಲಿ + ಇದ್ದ + ಹಂಗೆ = ಇಲ್ಲಿಯೇ ಇದ್ದ, ಬೇರೆಲ್ಲೂ ಹೋಗಿರಲಿಲ್ಲ ಎಂಬ ಭಾವನೆ ಬರುವಂತೆ ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹೋಗಿ ವಾಪಸ್ಸು ಬರುವುದು)
ಪ್ರ : ತಡಗಿಡ ಮಾಡೀಯಾ, ಇಲ್ಲಿದ್ದೋನಂಗೆ ಬರಬೇಕು.
೨೧೦. ಇಲ್ಲಿ ಕೋತಿ ಕುಣಿಯದಿರು = ಗುಂಪು ಸೇರುವಂಥ ಮನರಂಜನೆ ಕಾರ್ಯಕ್ರಮ ಇಲ್ಲದಿರು.
ಕೌಟುಂಬಿಕ ಕಿತ್ತಾಟ ನಡೆಯುತ್ತಿರುವಾಗ ಅಕ್ಕಪಕ್ಕದವರು ಬಂದು ಗುಂಪು ಕೂಡಿ ಇಣಿಕಿ ನೋಡುವುದನ್ನು ಕಂಡ ಮನೆಯ ಹಿರಿಯರು, ಅಂಥವರಿಗೆ ಮುಖದ ಮೇಲೆ ಹೊಡೆದಂತೆ ‘ನಿಮಗೇನು ಕೆಲಸ ಇಲ್ಲಿ?’ ಎಂದು ಹೇಳದೆ, ಬೇರೊಂದು ರೀತಿಯಲ್ಲಿ ಹೇಳುವ ವಿಧಾನ ಈ ನುಡಿಗಟ್ಟಿನಲ್ಲಿ ಇದೆ. ಹೊಟ್ಟೆಪಾಡಿಗಾಗಿ ಕೋತಿಯ ಕೈಯಲ್ಲಿ ಹಲವಾರು ಕಸರತ್ತುಗಳನ್ನು ಮಾಡಿಸುವ ಭಿಕ್ಷಾವೃತ್ತಿಯ ಜನರಿರುತ್ತಾರೆ. ಹಳ್ಳಿಗಾಡಿನಲ್ಲಿ ಅದೂ ಒಂದು ಮನರಂಜನೆಯ ವಿಶೇಷ ಎಂಬಂತೆ ಜನ ಘೇರಾಯಿಸುತ್ತಿದ್ದರು. ಇಂದು ಹಳ್ಳಿಹಳ್ಳಿಗೂ ಟೆಂಟ್ ಸಿನಿಮಾಗಳು ಬಂದು ಉದರಪೋಷಣೆಯ ಮಾರ್ಗವಾದ ‘ಕೋತಿ ಕುಣಿಸುವ ವೃತ್ತಿ’ ಇಲ್ಲವಾಗುತ್ತಿದೆ. ಹಳ್ಳಿಯ ಮನರಂಜನಾವಿಶೇಷವೊಂದು ಹೆತ್ತ ಕೂಸು ಈ ನುಡಿಗಟ್ಟು.
ಪ್ರ : ಯಾಕೆ ಬಂದು ನಿಂತಿದ್ದೀರಿ? ಇಲ್ಲೇನು ಕೋತಿ ಕುಣೀತಿಲ್ವಲ್ಲ !
೨೧೧. ಇಸಾಮಿತ್ರನ ಯಾಸ ಹಾಕು = ಘುಡುಘುಡಿಸು, ಆರ್ಭಟಿಸು.
(ಇಸಾಮಿತ್ರ < ವಿಶ್ವಾಮಿತ್ರ; ಯಾಸ < ವೇಷ)
ಪ್ರ : ನೀನು ಇಸಾಮಿತ್ರನ ಯಾಸ ಹಾಕಿಬಿಟ್ರೆ, ಇಲ್ಲಿ ಯಾರ್ಗೂ ತೊಳ್ಳೆ ನಡುಗಲ್ಲ.
೨೧೨. ಇಸ್ತಿಹಾರು ಹಾಕು = ತಿಳಿವಳಿಕೆ ಪತ್ರ ಅಂಟಿಸು, ಪ್ರಸಿದ್ಧ ಪತ್ರಿಕೆ ಹಚ್ಚು
(ಇಸ್ತಿ ಹಾರು = ನೋಟೀಸ್)
ಪ್ರ : ಠಕ್ಕರು ಊರ ಮುಂದೆ ಇಸ್ತಿಹಾರು ಅಂಟಿಸಿದ್ದರು.
೨೧೩. ಇಸ್ತ್ರೆ ಎಲೆ ಹಾಕು = ಪಂಕ್ತಿಗೆ ಊಟದ ಎಲೆ ಹಾಕು, ಪತ್ರಾವಳಿ ಹಾಕು.
(ಇಸ್ತ್ರೆ = ಊಟದ ಎಲೆ, ಪತ್ರಾವಳಿ) ಸಾಮಾನ್ಯವಾಗಿ ಮುತ್ತುಗದ ಎಲೆ ಅಥವಾ ಆಲದ ಎಲೆಯಿಂದ ಕಟ್ಟಿ ಒಣಗಿದ ಊಟದ ಎಲೆಗೆ ಇಸ್ತ್ರೆ ಎನ್ನುತ್ತಾರೆ. ಬಾಳೆ ಎಲೆಗೆ ಹಾಗೆ ಹೇಳುವುದಿಲ್ಲ. ಎಲೆ ಕೊಡಿ ಎನ್ನುತ್ತಾರೆ.
ಪ್ರ : ಪಂಕ್ತಿಗೆ ಇಸ್ತ್ರೆ ಕೊಟ್ಕೊಂಡು ಬನ್ನಿ, ಜನ ಹಸಗೊಂಡಿದ್ದಾರೆ.
೨೧೪. ಇಳಕೊಳ್ಳು = ಕಾಲೂರು
(ಇಳಕೊಳ್ಳು < ಇಳಿದುಕೊಳ್ಳು = ಹೆಜ್ಜೆಯೂರು)
ಪ್ರ : ಇಳಕೊಂಡ ಮಳೇನ ಗಾಳಿ ಎಳಕೊಂಡು ಹೋಯ್ತು.
೨೧೫. ಇಳವಿ ಬಿಡು = ಹೊಡಿ
(ಇಳವು < ಇಳುಹು < ಇಳುಪು = ಇಕ್ಕು, ಕುಕ್ಕು)
ಪ್ರ : ದೊಣ್ಣೆ ತಗೊಂಡು ಇಳವಿಬಿಟ್ರೆ ನಿಗುರು ತನ್ನಷ್ಟಕ್ಕೇ ತಾನು ನಿಲ್ತದೆ.
೨೧೬. ಇಳಿದೆಗೆ = ದೃಷ್ಟಿ ತೆಗೆ, ನೀವಳಿಸು, ನಿವಾಳಿಸು
ಇಳಿದೆಗೆಯುವುದು ಅಥವಾ ದೃಷ್ಟಿ ತೆಗೆಯುವುದು ಅನೂಚಾನವಾಗಿ ಹರಿದು ಬಂದ ಒಂದು ಪದ್ಧತಿ. ತುಂಬ ಸುಂದರವಾಗಿರುವ ಹೆಣ್ಣನ್ನಾಗಲೀ ಗಂಡನ್ನಾಗಲೀ ಹೆಚ್ಚು ಜನ ಒಂದೇ ಸಮನೆ ನೋಡಿ ಬಾಯಿ ನೀರು ಕುಡಿದರೆ, ಸುಂದರ ಸ್ತ್ರೀ ಪುರುಷರಿಗೆ ತಲೆನೋವು ಜ್ವರ ಬಂದು ಅಸ್ವಸ್ಥರಾಗುವರೆಂದು ಜನಪದರ ನಂಬಿಕೆ. ಅಂಥ ಕೆಟ್ಟ ಕಣ್ಣಿನ ದೋಷ ಪರಿಹಾರಕ್ಕಾಗಿ ಉಪ್ಪು ಮೆಣಸಿನಕಾಯಿಯನ್ನು ಮುಖದಿಂದ ಕೆಳಕ್ಕೆ ಇಳಿದೆಗೆದು ಒಲೆಗೆ ಹಾಕುತ್ತಾರೆ. ಅಥವಾ ಹಂಚಿಕಡ್ಡಿ ಹಚ್ಚಿ ಮುಖದಿಂದ ಕೆಳಕ್ಕೆ ನಿವಾಳಿಸಿ ಮೂಲೆಯಲ್ಲಿ ನಿಲೆ ಹಾಕುತ್ತಾರೆ; ಅವು ಚಟಪಟಗುಟ್ಟಿದಾಗ ದೃಷ್ಟಿಯಾಗಿದೆ ಎಂದು ಭಾವಿಸಲಾಗುತ್ತದೆ. ಒಂದು ಬಗೆಯ ಮಾನಸಿಕ ಶಮನ ಇದರ ಆಶಯವಾಗಿದೆ.
ಪ್ರ : ದೃಷ್ಟಿಯಾಗಿದ್ರೆ, ಉಪ್ಪು ಮೆಣಸಿನಕಾಯಿ ಇಳೆ ತೆಗೆದು ಒಲೆಗೆ ಹಾಕಿದರೂ ಒಂದು ಚೂರು ಘಾಟಾಗುವುದಿಲ್ಲ.
೨೧೭. ಇಳಿದು ಹೋಗು = ಬಡವಾಗು, ಕೃಶವಾಗು.
ತೂಬೆತ್ತಿ ನೀರನ್ನು ಬಿಟ್ಟಂತೆಲ್ಲ, ಕೆರೆಯ ನೀರಿನ ಮಟ್ಟ ಕೆಳಕ್ಕೆ ಇಳಿಯುತ್ತಾ ಬರುತ್ತದೆ. ಅದೇ ರೀತಿ ದೇಹವೂ ಕೂಡ ಮುಪ್ಪಿನಿಂದಲೋ ಅಥವಾ ತಪ್ಪಿನಿಂದಲೋ ಕೃಶವಾಗುತ್ತಾ ಬರುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಹರೇದ ಹುಡುಗ ತುಂಬ ಇಳಿದು ಹೋಗಿದ್ದಾನೆ, ಅವನ ಚಲನವಲನದ ಬಗ್ಗೆ ನಿಗಾ ಹಿಡಿ.
೨೧೮. ಇಳಿ ಹೊತ್ತಲ್ಲಿ ಬರು = ಸಂಜೆಯಲ್ಲಿ ಬರು
(ಏರು ಹೊತ್ತು = ಪ್ರಾತಃ ಕಾಲ, ನೆತ್ತಿಹೊತ್ತು = ಮಧ್ಯಾಹ್ನ, ಇಳಿಹೊತ್ತು = ಸಾಯಂಕಾಲ. ದಿನದ ಕಾಲತ್ರಯಗಳಿಗೆ ಏರು ಹೊತ್ತು, ನೆತ್ತಿ ಹೊತ್ತು, ಇಳಿಹೊತ್ತು ಎಂಬ ಅಚ್ಚಗನ್ನಡ ಶಬ್ದಗಳನ್ನು ಬಳಸಿದಂತೆಯೇ ಬಲ ಹಗಲು, ನಡುಹಗಲು, ಎಡಾಗಲು (< ಎಡ + ಹಗಲು) ಎಂಬ ಶಬ್ದಗಳನ್ನು ಬಳಸುತ್ತಾರೆ.
ಪ್ರ : ಇಳಿ ಹೊತ್ತಲ್ಲಿ ಬಂದು ಬಟ್ಟೆ ಕಳಚಿ ಹಾಕು ಅಂತ ಕುಂತವನೆ ಗ್ಯಾನಗೆಟ್ಟೋನು
೨೧೯. ಇಳೇಲಿಕ್ಕು = ಸುರಿ, ತೊಟ್ಟಿಕ್ಕು
(ಇಳೇಲಿಕ್ಕು < ಇಳಿಯಲು + ಇಕ್ಕು )
ಪ್ರ : ರಕ್ತ ಒಂದೇ ಸಮನೆ ಇಳೇಲಿಕ್ತಾ ಇದೆ.
೨೨೦. ಇಳೇ ಹಾಕು = ಹೇರು, ಜೋಲುವಂತೆ ಹಾಕು
(ಇಳೇ ಹಾಕು = ಕೆಳಕ್ಕೆ ಇಳಿಯ ಬೀಳುವಂತೆ ಹಾಕು)
ಪ್ರ : ಲಂಬಾಣಿ ಹೆಂಗಸಿನಂತೆ ಒಡವೆ ವಸ್ತು ಮೈತುಂಬ ಇಳೇ ಹಾಕ್ಕೊಂಡಿದ್ದಾಳೆ.
೨೨೧. ಇಂಕ್ರ ಕೊಡು = ಕೊಂಚ ಕೊಡು
(ಇಂಕ್ರ < ಇಡಕರ < ಇಡುಕ್ಕು (ತ) = ಸ್ವಲ್ಪ)
ಪ್ರ : ಶಂಕ್ರ, ಇಂಕ್ರ ಸುಣ್ಣ ಕೊಡು ಬಾಯಿಗೆ ಅಡಿಕೆ ಹಾಕೊಂಡಿದ್ದೀನಿ
೨೨೨. ಇಂಗಡ ಮಾಡು = ಭೇದ ಮಾಡು, ಬೇರೆ ಮಾಡು
(ಇಂಗಡ < ವಿಂಗಡಣೆ)
ಪ್ರ : ಕೂಡಿದ ಕುಟುಂಬದಲ್ಲಿ ಇಂಗಡ ಮಾಡಬೇಡವೋ, ಹೇ ಲಂಗಡ
೨೨೩. ಇಂಗಿ ಹೋಗು = ಬತ್ತಿ ಹೋಗು
(ಇಂಗು < ಇಂಕು (ತೆ) = ಒಣಗು, ಬತ್ತು)
ಪ್ರ : ಒಂದೇ ಸಮ ದುರದುರ ನೋಡ್ತಾನೆ ನೋಡು, ಇವನ ಕಣ್ಣು ಇಂಗಿ ಹೋಗ
೨೨೪. ಇಂಬಾಗಿರು = ವಿಶಾಲವಾಗಿರು, ಅಗಲವಾಗಿರು
(ಇಂಬು = ಅಗಲ, ವೈಶಾಲ್ಯ)
ಪ್ರ : ಗಾದೆ – ಹಾರುವಯ್ಯ ನೆಲೆ ಇಂಬ ಒಕ್ಕಲಿಗನ ಮನೆ ಇಂಬ

೭) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಆ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಆ)
೧೫೪. ಆಕಾಶಕ್ಕೆ ಇಚ್ಚಣಿಗೆ ಹಾಕು = ಅಸಾಧ್ಯ ಕೆಲಸಕ್ಕೆ ಕೈಹಾಕು, ವ್ಯರ್ಥ ಪ್ರಯತ್ನದಲ್ಲಿ ತೊಡಗು,
(ಇಚ್ಚಣಿಗೆ < ನಿಚ್ಚಣಿಗೆ = ಏಣಿ)
ಪ್ರ : ಬುದ್ಧಿವಂತರಾರೂ ಆಕಾಶಕ್ಕೆ ಇಚ್ಚಣಿಗೆ ಹಾಕುವಂಥ ಕೆಲಸಕ್ಕೆ ಕೈ ಹಾಕಲ್ಲ.
೧೫೫. ಆಕಾಶ ತಲೆ ಮೇಲೆ ಬಿದ್ದಂತಾಡು = ಸಣ್ಣಪುಟ್ಟದಕ್ಕೆಲ್ಲ ತಲೆ ಕೆಡಿಸಿಕೊಳ್ಳು, ಗಾಬರಿಗೊಳ್ಳು
ಪ್ರ : ಭಾವುಕರು ಮಾತ್ರ ಸಣ್ಣ ಸಮಸ್ಯೆ ಬಂದರೂ ಆಕಾಶ ತಲೆ ಮೇಲೆ ಬಿದ್ದಂತಾಡುತ್ತಾರೆ.
೧೫೬. ಆಚೆ ಆಗು = ಮುಟ್ಟಾಗು, ಹೊರಗಾಗು.
(ಆಚೆ = ಮನೆಯಿಂದ ಹೊರಗೆ) ಹಿಂದೆ ಹಳ್ಳಿಗಾಡಿನಲ್ಲಿ ತಿಂಗಳು ತಿಂಗಳು ಮುಟ್ಟಾಗುವ ಹೆಂಗಸರು ಮನೆಯೊಳಗೆ ಬರುವಂತಿರಲಿಲ್ಲ; ಅಡುಗೆ ಮಾಡುವಂತಿರಲಿಲ್ಲ. ಮೂರುದಿನಗಳ ಕಾಲ ಬಾಗಿಲ ಆಚೆಯೇ ಇರಬೇಕಾಗಿತ್ತು. ಹೊರಗೇ ಸ್ನಾನ ಮಾಡಿ ಬಿಚ್ಛಿ ಹಾಕಿದ ಸ್ಯಾಲೆ ಕುಬುಸವನ್ನು ಪ್ರತ್ಯೇಕವಾಗಿಡುತ್ತಿದ್ದರು. ಅದನ್ನು ‘ಹೊಲೆ ಸ್ಯಾಲೆ’ ಎನ್ನುತ್ತಿದ್ದರು. ಅದನ್ನು ಮನೆಯವರು ಒಗೆಯುತ್ತಿರಲಿಲ್ಲ. ಅಗಸರು ಕೊಂಡು ಹೋಗಿ ಒಗೆದು ಮಡಿ ಮಾಡಿ ತಂದುಕೊಡುವವರೆಗೂ ಅದನ್ನು ಮುಟ್ಟಬಾರದ ಮೈಲಿಗೆ ವಸ್ತು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದಲೇ ತಮಗೆ ದ್ವೇಷವಿರುವ ಗಂಡಸರನ್ನು ಕುರಿತು ಹೆಂಗಸರು “ಅವ್ವ ನನ್ನ ಹೊಲೆಸೆಲೆ (<ಹೊಲೆಸ್ಯಾಲೆ)” ಎಂದು ಬಯ್ಯುವ ರೂಢಿ ಈಗಲೂ ಹಳ್ಳಿಗಾಡಿನಲ್ಲಿ ಉಂಟು. ಆದರೆ ವಿದ್ಯೆ ಹಾಗೂ ನಾಗರಿಕತೆ ಹರಡಿದಂತೆಲ್ಲ ಇಂದು ಮುಟ್ಟಾದವರು ಮೂರು ದಿನ ಮನೆಯಿಂದಾಚೆ ಇರುವುದನ್ನು ಬಿಟ್ಟು, ಸ್ನಾನ ಮಾಡಿ ಮನೆಯೊಳಗೇ ಇದ್ದುಕೊಂಡು ಅಡಿಗೆಯನ್ನೂ ಮಾಡುತ್ತಾರೆ.
ಪ್ರ : ಆಚೆ ಆದಾಗ ಮಾತ್ರ ಹಾಯವಾಗಿರಬಹುದು, ಇತ್ತ ಗಂಡನ ಕಾಟವೂ ಇಲ್ಲ, ಅತ್ತ ಅತ್ತೆ ಕಾಟವೂ ಇಲ್ಲ.
೧೫೭. ಆ ಚೋರಿಗಿರು = ಆ ಕಡೆಗಿರು, ಆ ಪಕ್ಕಕ್ಕಿರು
(ಚೋರಿ = ಪಕ್ಕ, ಕಡೆ)
ಪ್ರ : ಆ ಊರು ಈ ಚೋರಿಗಿಲ್ಲ, ಆ ಚೋರಿಗಿದೆ.
೧೫೮. ಆಟ ಆಡು = ನಾಟಕ ಆಡು
(ಆಟ = ನಾಟಕ)ಇವತ್ತಿಗೂ ಹಳ್ಳಿಗಳಲ್ಲಿ ‘ನಾಟಕ ಆಡ್ತಾರೆ’ ಅನ್ನುವುದಿಲ್ಲ ‘ಆಟ ಆಡ್ತಾರೆ’ ಎನ್ನುತ್ತಾರೆ. ಬಯಲಾಟ, ದೊಡ್ಡಾಟ, ಸಣ್ಣಾಟ ಎಂಬ ಕಲಾಪ್ರಕಾರಗಳಲ್ಲಿ ಬರುವ ಆಟ ಶಬ್ದಕ್ಕೆ ನಾಟಕವೆಂದೇ ಅರ್ಥ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂಬ ಸಂಸ್ಕೃತ ಶಬ್ದಗಳ ಬಳಕೆಯಿಂದಾಗಿ ಅಚ್ಚಕನ್ನಡ ಶಬ್ದಗಳಾದ ಮೂಡಲು, ಪಡುವಲು, ಬಡಗಲು, ತೆಂಕಲು ಮೂಲೆಗುಂಪಾದಂತೆ ಸಂಸ್ಕೃತದ ‘ನಾಟಕ’ ಶಬ್ದದ ಮೋಹದಿಂದಾಗಿ ಅಚ್ಚಗನ್ನಡದ ‘ಆಟ’ ಶಬ್ದ ಮೂಲೆಗುಂಪಾಗುತ್ತಾ ಬಂದದೆ.
ಪ್ರ : ಇವತ್ತು ಪಕ್ಕದೂರಿನಲ್ಲಿ ‘ಶನಿಮಹಾತ್ಮೆ’ ಆಟವಂತೆ, ಹೋಗೋಣವ?
೧೫೯. ಆಟ ಮುಗಿ = ಹಾರಾಟ ನಿಲ್ಲು, ತಣ್ಣಗಾಗು, ಸಾವು ಸಂಭವಿಸು
ಜೀವನವೂ ಒಂದು ನಾಟಕ, ಪ್ರಾರಂಭದಲ್ಲಿ ತೆರೆ ಏಳುತ್ತದೆ, ಮುಕ್ತಾಯದಲ್ಲಿ ತೆರೆ ಬೀಳುತ್ತದೆ ಎಂಬ ಆಶಯ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ಆ ದುಸ್ಮಾನನ ಆಟ ಮುಗಿದದ್ದೇ ತಡ, ಬಡಬಗ್ಗರು ಹಿಗ್ಗಿ ಹೀರೇಕಾಯಾದ್ರು
೧೬೦. ಆಟೊಂದು ಎಗರಾಡು = ಅಷ್ಟೊಂದು ನೆಗೆದಾಡು, ಹಾರಾಡು
ಪ್ರ : ಆಟೊಂದು ಎಗರಾಡೋನು ಇನ್ನು ಏಟೊಂದು ಚೆನ್ನಾಗಿ ನೋಡಿಕೊಂಡಾನು?
೧೬೧. ಆಣೆ ಇಡು = ಪ್ರಮಾಣ ಮಾಡು
ಆಪಾದನೆಗೊಳಗಾದವರು ಸಾಮಾನ್ಯವಾಗಿ ದೇವರ ಮೇಲೆ, ತಾಯಿಯ ಮೇಲೆ, ತಂದೆಯ ಮೇಲೆ, ಮಗುವಿನ ಮೇಲೆ ಆಣೆ ಇಟ್ಟು ಆಪಾದನೆಯನ್ನು ಅಲ್ಲಗಳೆಯುತ್ತಾರೆ. ದೇವರು ಮತ್ತು ಮಾನವರನ್ನು ಬಿಟ್ಟು ಆಣೆ ಮಾಡಲು ನಮ್ಮ ಜನಪದರು ಬಳಸಿಕೊಳ್ಳುವ ವಸ್ತುವೆಂದರೆ ಸಾಮಾನ್ಯವಾಗಿ ನಾಗವಳಿ (< ನಾಗವಲ್ಲಿ = ವೀಳ್ಯದೆಲೆ)
ಪ್ರ : ಈ ನಾಗವಳಿ ಆಣೆಗೂ ನಾನು ಕದ್ದಿಲ್ಲ.
೧೬೨. ಆತುಕೊಳ್ಳು = ಹಿಡಿದುಕೊಳ್ಳು
(ಆತುಕೊಳ್ಳು < ಆಂತುಕೊಳ್ಳು; ಆನ್ = ಧರಿಸು, ಹೊಂದು)
ಪ್ರ : ಅವನು ಚೆಂಡನ್ನು ಆತುಕೊಂಡ.
೧೬೩. ಆತುಕೊಳ್ಳು = ಕೈಹಿಡಿ, ಆಶ್ರಯ ನೀಡು.
ಪ್ರ : ಕಷ್ಟ ಕಾಲದಲ್ಲಿ ಆ ನಮ್ಮಪ್ಪ ಆತುಗೊಂಡ, ಇಲ್ಲದಿದ್ರೆ ನನಗೆ ಕೆರೆಬಾವೀನೇ ಗತಿಯಾಗ್ತಿತ್ತು.
೧೬೪. ಆಧೀಕ ತಿನ್ನು = ಫಾಯಿದೆ ಪಡೆ, ಆದಾಯ ಅನುಭವಿಸು
(ಆಧೀಕ = ಆದಾಯ, ಲಾಭ)
ಪ್ರ : ಗಾದೆ – ಅರಸು ಆಧೀಕ ತಿಂದ, ಪರದಾನಿ ಹೂಸು ಕುಡಿದ
೧೬೫. ಆ ದಿಕ್ಕಿಗೇ ತಲೆ ಹಾಕಿ ಮಲಗದಿರು = ಛಲ ಸಾಧಿಸು
ತನಗೆ ಆಗದವರ ಮುಖದರ್ಶನ ಮಾಡುವುದಾಗಲೀ, ಅವರ ಮನೆಗೆ ಹೋಗುವುದಾಗಲೀ ಮಾಡುವುದಿಲ್ಲ ಎಂಬುದು ಮನುಷ್ಯನ ಛಲವನ್ನು ಸೂಚಿಸುತ್ತದೆ. ಆದರೆ ಆ ದಿಕ್ಕಿಗೇ ತಲೆ ಹಾಕಿ ಮಲಗುವುದಿಲ್ಲ ಎಂಬುದು ಛಲದ ನಿಶ್ಶಿಖರವೆಂದೇ ಹೇಳಬೇಕಾಗು‌ತ್ತದೆ. ವಿರುದ್ಧ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ತನ್ನ ಕಾಲುಗಳು ಶತ್ರುವಿನ ಕಡೆಗಿರುತ್ತವೆ ಎಂಬಲ್ಲಿನ ಧ್ವನಿವಿಶೇಷ ನಮ್ಮ ಜನಪದರ ಅಭಿವ್ಯಕ್ತಿ ಶಕ್ತಿಯನ್ನು ಮೆಲಕು ಹಾಕುವಂತೆ ಮಾಡುತ್ತವೆ.
ಪ್ರ : ನನ್ನ ದಾಯಾದಿ ಇರುವ ದಿಕ್ಕಿಗೆ ಎಂದೂ ನಾನು ತಲೆ ಹಾಕಿ ಮಲಗಿಲ್ಲ ಇದುವರೆಗೂ
೧೬೬. ಆನಿಸಿಕೊಂಡು ಬರು = ಚಾಚಿಕೊಂಡು ಬರು, ಒತ್ತರಿಸಿಕೊಂಡು ಬರು
(ಆನು = ಚಾಚು, ಅಡರಿಸು)
ಪ್ರ : ಆನೆ ಅಂಥೋಳು ಆನಿಸಿಕೊಂಡು ಬಂದುಬಿಟ್ಟಳು ಹರೇದ ಹುಡುಗನ ಹತ್ರಕೆ.
೧೬೭. ಆಪು ಕೊಡು = ಬಿರಿ ಕೊಡು, ಬೆಣೆ ಹೊಡೆದು ಬಿಗಿಗೊಳಿಸು
(ಆಪು < ಆರ್ಪು = ಶಕ್ತಿ, ಬೆಣೆ)
ನೇಗಿಲ ಎಜ್ಜಕ್ಕೆ ಈಚವನ್ನು ಸೇರಿಸಿದಾಗ ಅದು ಲೊಡಬಡೆಯಾಗಿ ಅಲ್ಲಾಡತೊಡಗಿದರೆ ಅಥವಾ ಗುದ್ದಲಿಗೆ ಕಾವನ್ನು ಹಾಕಿದಾಗ ಸಡಿಲವಾಗಿ ಅಲುಗಾಡುತ್ತಿದ್ದರೆ ಬೆಣೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಅದಕ್ಕೆ ಆಪು ಎನ್ನಲಾಗುತ್ತದೆ.
ಪ್ರ : ಗುದ್ದಲಿ ಕಾವು ಅಲ್ಲಾಡದ ಹಂಗೆ ಒಂದು ಆಪು ಹೊಡಿ.
೧೬೮. ಆಯ ತಪ್ಪು = ತೂಕ ತಪ್ಪು, ಸಮತೋಲನ ತಪ್ಪು.
(ಆಯ = ಸಮತೂಕ)
ಪ್ರ : ಆಯ ತಪ್ಪಿ ಬಿದ್ದೆ, ಗಾಯ ಆಯ್ತು, ಏನ್ಮಾಡೋಕಾಗ್ತದೆ
೧೬೯. ಆರಕ್ಕೇರದಿರು ಮೂರಕ್ಕಿಳಿಯದಿರು = ಹಾಳತವಾಗಿರು, ಉಬ್ಬದಿರು ತಗ್ಗದಿರು
ಪ್ರ : ಈ ಮಾರಾಯ ಮಾತ್ರ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಹೆಂಗಿದ್ದನೋ ಹಂಗಿದ್ದಾನೆ.
೧೭೦. ಆರಭಾರ ಹೊರು = ಜವಾಬ್ದಾರಿ ಹೊರು, ಉಸ್ತುವಾರಿ ನೋಡಿಕೊಳ್ಳು.
(ಆರ < ಆಹಾರ, ಭಾರ = ಹೊರೆ, ಹೊಣೆ)
ಪ್ರ : ಆಡಿದ ಮಾತ್ನಂತೆ ನನ್ನ ಆರಭಾರ ಎಲ್ಲ ಹೊತ್ಕೊಂಡ.
೧೭೧. ಆರಿ ಅತ್ತೀಕಾಯಾಗು = ತೀರ ತಣ್ಣಗಾಗು, ತಂಗುಳಾಗು
(ಅತ್ತಿ = ವೃಕ್ಷವಿಶೇಷ)
ಪ್ರ : ಜಗಳ ಬಗೆ ಹರೀವಾಗ್ಗೆ, ಮಾಡಿದ ಅಡುಗೆ ಆರಿ ಅತ್ತಿಕಾಯಾಯ್ತು.
೧೭೨. ಆರಿಗೆ ಹೋರಿ ತಿದ್ದು = ನೇಗಿಲಿಗೆ ಹೂಡಲು ಹೋರಿಯನ್ನು ಪಳಗಿಸು.
(ಆರು = ನೇಗಿಲು; ತಿದ್ದು = ಪಳಗಿಸು, ಒಗ್ಗಿಸು)
ಪ್ರ : ಆರಿಗೆ ಹೋರಿ ತಿದ್ದು ಅಂದ್ರೆ, ಅದು ಬಿಟ್ಟು ನನ್ನ ಬುಡಕ್ಕೇ ನೀರು ತಿದ್ದೋಕೆ ಹೊರಟೆಯಲ್ಲ.
೧೭೩. ಆಲ್ಯ ನಗು = ಪ್ರತ್ಯಕ್ಷನಾಗು, ಶಾಪ ವಿಮೋಚನೆಯಾಗು
(ಆಲ್ಯ < ಅಹಲ್ಯ = ಕಲ್ಲಾಗಿದ್ದ ಅಹಲ್ಯೆ ರಾಮನ ಪಾದಸ್ಪರ್ಶದಿಂದ ಜೀವಂತ ಹೆಣ್ಣಾಗಿ ಪ್ರತ್ಯಕ್ಷಗೊಂಡ ಪೌರಾಣಿಕೆ ಘಟನೆ ಈ ನುಡಿಗಟ್ಟಿನ ತಾಯಿ)
ಪ್ರ : ಆ ನನ್ನಪ್ಪ ನನ್ನ ಬಾಲ್ಯದಲ್ಲಿ ಆಲ್ಯ ಆಗಿ ಮರುಜೀವ ಕೊಟ್ಟ
೧೭೪. ಆಲಾಪಿಸು = ಕೊರಗು, ಸಂಕಟಪಡು, ಗೋಳಾಡು
(ಆಲಾಪ = ಯಾವುದೇ ರಾಗದ ಪ್ರಾರಂಭದ ಪರಿಚಯಾತ್ಮಕ ಸ್ವರವಿನ್ಯಾಸ)
ಪ್ರ : ನಾನು ಆಲಾಪಿಸಿದಂಗೆ ಅವರೂ ಆಲಾಪಿಸುವಂತಾಗಲಿ, ದೇವರೇ.
೧೭೫. ಆಲೆಗಿಟ್ಟ ಕಬ್ಬಾಗು = ಹಿಂಡಿ ಹಿಪ್ಪೆಯಾಗು, ನಿಸ್ಸಾರ ಸಿಪ್ಪೆಯಾಗು
(ಆಲೆ = ಕಬ್ಬು ಅರೆಯುವ ಗಾಣ)
ಹಿಂದೆ ಜಲಾಶಯಗಳಾಗಲೀ ಅಣೆಕಟ್ಟುಗಳಾಗಲೀ ಇಲ್ಲದಿದ್ದಾಗ ಕೆರೆಯ ಹಿಂದೆ ಜಮೀನು ಇದ್ದವರು ಕಬ್ಬು ಬೆಳೆದು ಬೆಲ್ಲ ತಯಾರಿಸುತ್ತಿದ್ದರು. ಕಬ್ಬು ಅರೆಯಲು ಮೊದಲು ಮರದ ಗಾಣ ಇತ್ತು. ಕ್ರಮೇಣ ಲೋಹದ ಗಾಣ ಬಂತು. ಗಾಣ ಅಥವಾ ಆಲೆಗಿಟ್ಟ ಕಬ್ಬು ರಸ ಸುರಿಸಿ ಹಿಪ್ಪೆಯಾಗಿ ಹೊರಬರುತ್ತದೆ. ಆಲೆಮನೆಯ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ: ಸೂಳೆಗಾರಿಕೆ ಮಾಡಿ ಮಾಡಿ ಒಳ್ಳೆ ಆಲೆಗಿಟ್ಟ ಕಬ್ಬಾದಂತಾಗಿದ್ದಾನೆ.
೧೭೬. ಆವುಗೆಯಲ್ಲಿ ಬೇಯು = ಉಸಿರು ಕಟ್ಟುವ ವಾತಾವರಣದಲ್ಲಿ ಬದುಕು, ಸಂಕಟಪಡು.
(ಆವುಗೆ = ಕುಂಬಾರ ಮಡಕೆಗಳನ್ನು ಬೇಯಿಸು ಒಲೆ) ಕುಂಬಾರ ವೃತ್ತಿ ಈ ನುಡಿಗಟ್ಟಿಗೆ ಮೂಲ.
ಪ್ರ : ನಾನು ಈ ಆವುಗೇಲಿ ಬೇಯಲಾರೆ, ನಮ್ಮ ಪಾಲು ನಾವು ತಗೊಂಡು ಬೇರೆ ಹೋಗೋಣ.
೧೭೭. ಆಸಾದಿಯಂತಾಡು = ಹಾಡಿ, ಕುಣಿದು ಕುಪ್ಪಳಿಸು, ಮಾರಿಯನ್ನು ಬೈದು ಭಂಗಿಸು
(ಆಸಾದಿ = ಚೌಡಿಕೆಯವನು, ಎಡಗೈ ಜಾತಿಯವನು)
ಮಾರಿ ಪರಿಷೆ, ಗ್ರಾಮದೇವತೆ ಪರಿಷೆಗಳಲ್ಲಿ ಆಸಾದಿಗಳು (ಚೌಡಿಕೆಯವರು) ಚೌಡಿಕೆಯನ್ನು ನುಡಿಸುತ್ತಾ ಮಾರಿಯನ್ನು “ತೋತ್ರಣೆ” (< ಸ್ತೋತ್ರ) ಮಾಡುತ್ತಾ ಅವಾಚ್ಯ ಶಬ್ದಗಳಲ್ಲಿ ಬೈಯುತ್ತಾರೆ. ಅದಕ್ಕೆ ಕಾರಣ ಹಾರುವ ಜಾತಿಗೆ ಸೇರಿದ ಮಾರಿ ತನ್ನ ಗಂಡ ಅಸ್ಪೃಶ್ಯ ಜಾತಿಯವನೆಂದು ತಿಳಿದು ಕೋಣನನ್ನಾಗಿ ಮಾಡಿ ಬಲಿ ತೆಗೆದುಕೊಳ್ಳುತ್ತಾಳೆ ಎಂಬ ಐತಿಹ್ಯ. ಹಾಡು ಕಥೆಗಳ ಅಕ್ಷಯ ಭಂಡಾರ ಆಸಾದಿಗಳ ಅಮೂಲ್ಯ ಆಸ್ತಿ ಎನ್ನಬೇಕು.
ಪ್ರ : ರವಷ್ಟು ಘನತೆ ಗಾಂಭೀರ್ಯದಿಂದಿರು; ಆಸಾದಿಯಂತಾಡ ಬೇಡ.
೧೭೮. ಆಸೊಂದು ಕೊಡು = ಅಷ್ಟೊಂದು ಕೊಡು, ಬಹಳ ಕೊಡು (ಆಸು < ಅಷ್ಟು)
ಪ್ರ : ಒಂದು ಹಿಡಿ ಕೊಡು ಅಂದ್ರೆ ಆಸೊಂದು ಕೊಡೋದ?
೧೭೯. ಆಳ ಮೇಲೆ ಆಳು ಬೀಳು = ಜನಸಂದಣಿ ಜಾಸ್ತಿಯಾಗು, ಕೆಲಸ ಹಾಳಾಗು
ಪ್ರ : ಗಾದೆ – ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು.
೧೮೦. ಆಳು ಮಟ್ಟಕ್ಕೆ ಹಾಕಿ ಗೇಣು ಮಟ್ಟಕ್ಕೆ ತೆಗಿ = ಹಿಂಸಿಸು, ಮಾನಕಳಿ
(ಮಟ್ಟ=ಕಂದಕ, ಆಳುಮಟ್ಟ = ಐದಾರು ಅಡಿ ಆಳದ ಕಂದಕ ; ಗೇಣುಮಟ್ಟ = ಗೇಣುದ್ದ, ಮುಕ್ಕಾಲಡಿ) ಗೇಣುದ್ದದ ತಲೆ ಕಾಣುವಂತೆ ಆಳುದ್ದದ ಕಂದಕದಲ್ಲಿ ವ್ಯಕ್ತಿಗಳನ್ನು ಹೂತು ಶಿಕ್ಷಿಸುತ್ತಿದ್ದ ರಾಕ್ಷಸ ಕೃತ್ಯ ಈ ನುಡಿಗಟ್ಟಿನ ಉಗಮಕ್ಕೆ ಮೂಲವೆನ್ನಿಸುತ್ತದೆ.
ಪ್ರ : ಅತ್ತೆ ಮಾವದಿರು ಸೊಸೆಯನ್ನು ಆಳುಮಟ್ಟಕ್ಕೆ ಹಾಕಿ ಗೇಣು ಮಟ್ಟಕ್ಕೆ ತೆಗೆದರು.
೧೮೧. ಆಂ ಅನ್ನದಿರು = ಓಗೊಡದಿರು, ಉಸಿರು ಬಿಡದಿರು.
ಪ್ರ : ಗಾದೆ-ಗೌಡ ಅಂದಿದ್ಕೆ ಆಂ ಎಂದ ಒಂದಾಳಿಗೂಟ ಅಂದಿದ್ಕೆ ಉಸಿರೇ ಇಲ್ಲ.

೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೨)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೨)
೮೧. ಅಪ್ಪುಗೈಯಾಗಿ ನಿಲ್ಲು = ಕೈಕಟ್ಟಿಕೊಂಡು ದೈನ್ಯದಿಂದ ನಿಲ್ಲು
ಪ್ರ : ದಣಿ ಅಂದಿದ್ದು ಆಡಿದ್ದನ್ನೆಲ್ಲ ತುಟಿಪಿಟಿಕ್ ಎನ್ನದೆ ಅಪ್ಪುಗೈಯಾಗಿ ನಿಂತು ಕೇಳಿದ.
೮೨. ಅಬೋ ಅನ್ನು = ಬಿಕೋ ಎನ್ನು
ಪ್ರ : ದಣಿ ಇಲ್ಲದ ಮನೆ ಅಬೋ ಅಂತದೆ.
೮೩. ಅಬ್ಬಬ್ಬ ಎನ್ನು = ಸೋಜಿಗ ಪಡು
ಪ್ರ : ಚೋಟುದ್ದ ಹುಡುಗ ಆಡೋ ಆಟ ನೋಡಿ ಅಬ್ಬಬ್ಬ ಅಂದ್ಕೊಂಡೆ
೮೪. ಅಬ್ಬರ ಅಡಗು = ಆರ್ಭಟ ನಿಲ್ಲು, ಸೊಲ್ಲಡಗು, ಮರಣ ಹೊಂದು.
ಪ್ರ : ಅವನ ಅಬ್ಬರ ಅಡಗೋದನ್ನ ನನ್ನ ಕಣ್ಣಿಂದ ಎಂದು ನೋಡ್ತೀನೋ
೮೫. ಅಬ್ಬಳಿಸು = ತಿಂದ ಅನ್ನ ಹೊರಬರುವಂತಾಗು, ವಾಕರಿಸು
ಪ್ರ : ಮಗು ಅನ್ನ ತಿನ್ನೋಕೆ ಅಬ್ಬಳಿಸ್ತದೆ, ಸಾಕು ಇನ್ನು ತಿನ್ನಿಸಬೇಡ
೮೬. ಅಭ ಅನ್ನದಿರು ಶುಭ ಅನ್ನದಿರು = ಮೂಕವಾಗಿರು, ತುಟಿ ಎರಡು ಮಾಡದಿರು
ಪ್ರ : ಮಕ್ಕಳು ಬಾಯಿಗೆ ಬಂದಂಗೆ ಬಯ್ದರೂ ಅಪ್ಪ ಅಭ ಅನ್ನಲಿಲ್ಲ ಶುಭ ಅನ್ನಲಿಲ್ಲ.
೮೭. ಅಭಾವದಲ್ಲಿ ಅಧಿಕ ಮಾಸ ಬಂದಂತಾಗು = ಕಷ್ಟದೊಳಗೆ ಕಷ್ಟ ಬರು, ಗಾಯದ ಮೇಲೆ ಬರೆ ಬೀಳು
(ಅಭಾವ = ದುರ್ಭಿಕ್ಷ, ಕ್ಷಾಮ)
ಪ್ರ : ಗಂಡ ಸತ್ತ ದುಃಖದಲ್ಲಿ ಮೂಲೆ ಹಿಡಿದು ಕೂತ ಆವಮ್ಮನ ಮಗನಿಗೆ ಹಿಂಗೆ ಆಗಬೇಕ, ಅಭಾವದಲ್ಲಿ ಅಧಿಕ ಮಾಸ ಅಂತ ?
೮೮. ಅಮಟೇ ಕಾಯಿ ಮಾಡು = ಏನೂ ಮಾಡಲಾಗದಿರು, ಏನೂ ಸಾಧ್ಯವಾಗದಿರು
(ಅಮಟೆ < ಅಂಬಷ್ಟೆ = ಉಪ್ಪಿನಕಾಯಿಗೆ ಬಳಸುವ ಒಂದು ಬಗೆಯ ಕಾಯಿ)
ಪ್ರ : ಏನು ಅಮಟೇಕಾಯಿ ಮಾಡೋದು ನೀನು, ಹೋಗೋ ಕಂಡಿದ್ದೀನಿ.
೮೯. ಅಮರಿಸು = ತಗುಲಿ ಬೀಳು, ತರಾಟೆಗೆ ತೆಗೆದುಕೊಳ್ಳು
(ಅಮರಿಸು < ಅಮರ್ಚು = ಬಯ್ಯಿ, ಹೊಡೆ)
ಪ್ರ: ಅವನು ಎದುರಿಗೆ ಸಿಕ್ಕಿದ, ಚೆನ್ನಾಗಿ ಅಮರಿಸಿ ಬಂದಿದ್ದೀನಿ.
೯೦. ಅಮಲಿಳಿಸು = ಅಹಂಕಾರ ತಗ್ಗಿಸು
(ಅಮಲು = ಮತ್ತು, ನಿಶೆ)
ಪ್ರ : ಅವನ ನೆತ್ತಿಗೇರಿದ್ದ ಅಮಲಿಳಿಸಿದ್ದೀನಿ, ಇವತ್ತು.
೯೧. ಅಮ್ಮಣ್ಣಿ ಕುಡಿಸು = ಹಾಲು ಕುಡಿಸು
(ಅಮ್ಮಣ್ಣಿ = ಮೊಲೆ, ಮೊಲೆ ತೊಟ್ಟು)
ಪ್ರ : ಅಳಬೇಡ ಬಾ ಪುಟ್ಟ, ಅಮ್ಮಣ್ಣಿ ಕುಡಿಸ್ತಿನಿ.
೯೨. ಅಮಾಸೆಗೊಮ್ಮೆ ಹುಣ್ಣಿವೆಗೊಮ್ಮೆ ಬರು = ಅಪರೂಪಕ್ಕೆ ಬರು
(ಅಮಾಸೆ < ಅಮಾವಾಸ್ಯೆ; ಹುಣ್ಣಿವೆ < ಹುಣ್ಣಿಮೆ < ಪೂರ್ಣಿಮಾ)
ಪ್ರ : ಅಮಾಸೆಗೋ ಹುಣ್ಣಿವೆಗೋ ಒಂದು ಸಾರಿ ತಲೆ ತೋರಿಸ್ತಿಯಪ್ಪ
೯೩. ಅಯ್ಯೋ ಅನ್ನು = ಮರುಗು, ಕರುಣೆ ತೋರು.
ಪ್ರ : ಗಾದೆ = ಅಯ್ಯೋ ಅಂದೋರಿಗೆ ಆರು ತಿಂಗಳು ಆಯಸ್ಸು ಕಮ್ಮಿ
೯೪. ಅರಗಳ್ಳು ಹಂಚು = ಬಿಟ್ಟಿ ಹೆಂಡ ಹಂಚು, ವಿತರಿಸು
(ಅರಗಳ್ಳು < ಅರ = ಧರ್ಮ + ಕಳ್ಳು = ಹೆಂಡ)
ಪ್ರ : ಚುನಾವಣೆಯಲ್ಲಿ ‘ಬರಿಗಳ್ಳಿನ’ ಮತದಾರರಿಗೆ ‘ಅರಗಳ್ಳು’ ಹಂಚುವ ನಮ್ಮ ರಾಜಕಾರಣಿಗಳಿಗೆ ‘ಅರಗಲಿ’ ಪ್ರಶಸ್ತಿಗಳನ್ನು ಹಂಚದಿರುವುದು ಅನ್ಯಾಯ !
೯೫. ಅರಗೀಸಾಗದಿರು = ಬಿಲ್‌ಕುಲ್ ಆಗದಿರು, ಖಂಡಿತ ಸಾಧ್ಯವಾಗದಿರು
(ಅರಗೀಸ < ಹರ್ ಗಿಜ್ (ಉ) (ಹಿಂ) = ಬಿಲ್‌ಕುಲ್, ಖಂಡಿತ)
ಪ್ರ : ನೀನು ಇದಕ್ಕೆ ಕುಮ್ಮಕ್ಕು ಕೊಡು ಅಂದಿದ್ಕೆ ಅರಗೀಸಾಗಲ್ಲ ಅಂತ ತಲೆ ಒಗೆದು ಬಿಟ್ಟ
೯೬. ಅರಗುಲಿಯಾಟವಾಡು = ಭಂಡಾಟವಾಡು, ಅಧರ್ಮದ ಹಾದಿಯಲ್ಲಿ ಸಾಗು
(ಅರಗುಲಿ < ಅರ = ಧರ್ಮ + ಕುಲಿ = ಕೊಲ್ಲುವವನು = ಧರ್ಮದ ಕೊಲೆಗಾರ, ಧರ್ಮಘಾತಕ)
ಪ್ರ : ಅರಗುಲಿ ಆಟ ಆಡೋನ ಜೊತೆ ಆಟ ಆಡೋಕೆ ಹೋಗಬಾರ್ದು
೯೭. ಅರಗಲಿಯಾಗಿ ಬದುಕು = ಧರ್ಮಶೂರನಾಗಿ ಬಾಳು, ಧರ್ಮಪಾಲಕನಾಗಿ ಜೀವಿಸು
(ಅರಗಲಿ < ಅರ = ಧರ್ಮ + ಕಲಿ = ಶೂರ = ಧರ್ಮಶೂರ, ಧರ್ಮಪಾಲಕ)
ಪ್ರ : ಅರಗಲಿಯಾಗಿ ಬಾಳಿ ಅರಗಿಳಿ ಎನ್ನಿಸಿಕೊಳ್ಳಬೇಕು ಎಲ್ಲರ ಕೈಯಲ್ಲೂ
೯೮. ಅರಣೆ ಹೊರು = ಮದುವೆಯಲ್ಲಿ ಶಾಸ್ತ್ರದ ನೀರಿನ ಗಡಿಗೆಯನ್ನು ಹೊರು
(ಅರಣೆ < ಐರಾಣೆ = ಗಡಿಗೆ)
ಪ್ರ : ಅರಣೆ ಹೊತ್ತರೋಳು ಹೆಣ್ಣಿನೋರ ಚಿಕ್ಕಪ್ಪನ ಮಗಳು.
೯೯. ಅರ್ಧ ಜೀವ ಮಾಡು = ಹೆಣಗಿಸು, ಹಿಂಸಿಸು, ಸೊರಗಿಸು
ಪ್ರ : ಎದ್ದಾಗಳಿಂದ ಹೆಣಗಿಸಿ ಹೆಣಗಿಸಿ ಅರ್ಧ ಜೀವ ಮಾಡಿಬಿಟ್ಟಿದ್ದಾನೆ.
೧೦೦. ಅರನಾಲಗೆ ಕಚ್ಚು = ಸಿಟ್ಟುದೋರು, ಹೆದರಿಸು
(ಅರನಾಲಗೆ < ಅರ್ಧ ನಾಲಗೆ ; ಅರ < ಅರೆ = ಅರ್ಧ)
ಪ್ರ : ಅರನಾಲಗೆ ಕಚ್ಚಿದೇಟಿಗೇ ಅವನಲ್ಲಿದ್ರೆ ಕೇಳು
೧೦೧. ಅರಲಿ ಬಿಡು = ಅರಚಿಕೊಳ್ಳು, ಗೋಗರೆ, ಯಾಚಿಸು
(ಅರಲು < ಒರಲು = ಅರಚು, ಕಣ್ಣೀರುಗರೆ)
ಪ್ರ : ಒಂದೇ ಸಮ ಅರಲಿಬಿಟ್ಟೆ, ಅವನ ಮನಸ್ಸು ಕರಗಿದ್ರೆ ಕೇಳು
೧೦೨. ಅರಾಸು ಇರದಿರು = ಎಚ್ಚರವಿರದಿರು, ಪ್ರಜ್ಞೆ ಇರದಿರು
(ಅರಾಸು < ಹಿರಾಸ್ (ಹಿಂ) = ಪ್ರಜ್ಞೆ, ಭಯ)
ಪ್ರ : ಅರಾಸು ಇಲ್ಲದೋರ ಹತ್ರ ಅವಸರದ ಕೆಲಸ ಹೇಳೋರು ದಡ್ಡರು.
೧೦೩. ಅರಿಶಿಣ ಇಕ್ಕು = ಮದುವೆ ಮಾಡು.
ಮದುವೆಯಲ್ಲಿ ಹೆಣ್ಣುಗಂಡಿಗೆ ಅರಿಶಿಣ ಹಚ್ಚುವ ಶಾಸ್ತ್ರ ಉಂಟು. ಅರಿಶಿಣದ ಮೈಯವರು ಹುಣಿಸೆಮರದ ಕೆಳಗೆ ಹೋಗಬಾರದು ಎಂಬ ಜನಪದ ನಂಬಿಕೆಯುಂಟು. ಅರಿಶಿಣದ ಕೂಳಿಗೆ ಹೋಗಿ ವರುಷದ ಕೂಳು ಕಳ್ಕೊಂಡು ಎಂಬ ಗಾದೆ ಮದುವೆ ಊಟಕ್ಕೆ ಹೋದದ್ದನ್ನು ಸೂಚಿಸುತ್ತದೆ.
ಪ್ರ : ಗಾದೆ – ಹಸಗೆಟ್ಟೋಳ್ಗೆ ಅರಿಶಿಣ ಇಕ್ಕಿದ್ದೆ ಹೊಸಲ ಮೇಲೆ ಹೋಗಿ ತೊಸಕ್ ಅಂದ್ಲಂತೆ.
೧೦೪. ಅರಿಶಿಣದ ಕೂಳಿಗೆ ಹೋಗು = ಮದುವೆ ಊಟಕ್ಕೆ ಹೋಗು
(ಅರಿಶಿಣದ = ಮದುವೆಯ, ಕೂಳು = ಅನ್ನ)
ಪ್ರ : ಗಾದೆ – ಅರಿಶಿಣದ ಕೂಳಿಗೆ ಹೋಗಿ ವರುಷದ ಕೂಳು ಕಳ್ಕೊಂಡ.
೧೦೫. ಅರುಗಾಗು = ಪಕ್ಕಕ್ಕೆ ಸರಿ, ಹೊರಚ್ಚಿಗೆ ಹೋಗು
(ಅರುಗು = ಅಂಚು, ಕೊನೆ)
ಪ್ರ : ಅರುಗಾಗು ಅಂದ್ರೆ ಒರಗ್ಹೋಗು ಅಂತೀಯ ಎಂದು ಜಗಳಕ್ಕೆ ಬಂದ.
೧೦೬. ಅಲಗು ಹಾಕು = ಬೊಗಳು
(ಅಲಗು < ಅಲಕ < ಅಲರ್ಕ = ಹುಚ್ಚುನಾಯಿ, ಕೆರಳಿದ ನಾಯಿ)
ಪ್ರ : ಎಷ್ಟು ಹೇಳಿದರೂ ಕೇಳದೆ ಒಂದೇ ಸಮ ಅಲಗು ಹಾಕ್ತಾ ಅವಳೆ
೧೦೭. ಅಲಲಾ ಅನ್ನು = ಅಬ್ಬರ ಮಾಡು, ಕಿರುಚಾಡು
ಪ್ರ : ಗಾದೆ – ಅಲಲಾ ಅನ್ನೋ ಅಳ್ಳಿಮರ ನಂಬಹುದು, ಮಳ್ಳಿ ಹಂಗಿರೋ ಕಳ್ಳಿ ನಂಬಾರ್ದು
೧೦೮. ಅಲಾಕ್ ಆಗದಿರು = ಕಳೆದು ಹೋಗದಿರು, ಸ್ಥಳಾಂತರವಾಗದಿರು
(ಅಲಾಕ್ < ಅಲಗ್ (ಹಿಂ) = ಬೇರೆ, ಪ್ರತ್ಯೇಕ)
ಪ್ರ : ನಂಬಿಕಸ್ಥ ಆಳು, ಅವನಿದ್ರೆ ಒಂದು ಹುಲ್ಲುಕಡ್ಡಿ ಅಲಾಕ್ ಆಗಲ್ಲ.
೧೦೯. ಅಲಾಬಿ ಕಟ್ಟು = ದೊಡ್ಡ ಗದ್ದಲ ಮಾಡು, ಕುಣಿದು ಕುಪ್ಪಳಿಸು ಕೂಗಾಡು
(ಅಲಾಬಿ < ಹಲಾಬಿ (ಉ) = ಮೊಹರಂ ಹಬ್ಬದ ಆಚರಣೆ)
ಪ್ರ : ಅವರ ಮನೆ ಮಕ್ಕಳು ಬಂದೋ ಅಂದ್ರೆ, ಅಲಾಬಿ ಕಟ್ಟಿಬಿಡ್ತವೆ
೧೧೦. ಅಲಾಯದ ಕರೆದು ಹೇಳು = ಹೊರಚ್ಚಿಗೆ ಕರೆದು ಹೇಳು, ಗುಂಪಿನಿಂದ ಹೊರಕರೆದು ಹೇಳು
(ಅಲಾಯದ (ಹಿಂ) = ಪ್ರತ್ಯೇಕ)
ಪ್ರ : ಎಲ್ಲರ ಮುಂದೆ ಹೇಳಬೇಡ, ಅವನೊಬ್ಬನ್ನೇ ಅಲಾಯದ ಕರೆದು ಹೇಳು
೧೧೧. ಅವತಾರ ನೋಡಲಾಗದಿರು = ವೇಷ ಜಿಗುಪ್ಸೆ ಹುಟ್ಟಿಸು, ರೂಪ ಅಸಹ್ಯ ಹುಟ್ಟಿಸು.
(ಅವತಾರ = ಹುಟ್ಟು, ರೂಪ)
ಪ್ರ : ನಿನ್ನ ಈ ಅವತಾರಾನ ಕಣ್ಣಿಂದ ನೋಡಕ್ಕಾಗಲ್ಲ.
೧೧೨. ಅವತಾರ ಮುಗಿ = ಹಾರಾಟ ನಿಲ್ಲು, ಶಕ್ತಿ ಮತ್ತು ಪ್ರಭಾವ ತಣ್ಣಗಾಗು.
(ಅವತಾರ = ವಿಷ್ಣು ಒಂದಾದ ಮೇಲೆ ಒಂದು ಅವತಾರ ಎತ್ತಿ ಬಂದುದರ ಹಿನ್ನೆಲೆ ಇದೆ)
ಪ್ರ : ಭ್ರಷ್ಟಾಚಾರದ ಆಪಾದನೆಯಿಂದ ಮಂತ್ರಿಪದವಿ ಕಳಕೊಂಡ ತಕ್ಷಣ, ಅವನ ಅವತಾರ ಮುಗೀತು.
೧೧೩. ಅವಾಂತರ ಮಾಡು = ಗಡಿಬಿಡಿ ಗೊಂದಲ ಮಾಡು, ದುಡುಕಿನಿಂದ ಅನಾಹುತ ಮಾಡು
ಪ್ರ : ಗಾದೆ – ಹೆಂಡ್ರ ಅವಾಂತರ ತಡೀಲಾರದೆ ಗಂಡ ದೇಶಾಂತರ ಹೋದ
೧೧೪. ಅವುಡುಗಚ್ಚು = ಸಿಟ್ಟುಗೊಳ್ಳು, ಅಸಮಾಧಾನಗೊಳ್ಳು
(ಅವುಡು < ಅವುಂಡು = ಕೆಳತುಟಿ)
ಪ್ರ : ತನ್ನ ಮಾತಿಗೆ ಕಿವುಡಾಗಿ ಕೂತ ಹೆಂಡ್ರ ಮೇಲೆ ಗಂಡ ಅವುಡುಗಚ್ಚಿದ
೧೧೫. ಅವುಸಿಕೊಳ್ಳು = ಬಚ್ಚಿಟ್ಟುಕೊಳ್ಳು
(ಅವುಸು < ಅವಿಸು = ಬಚ್ಚಿಡು)
ಪ್ರ : ಕಣ್ಣು ಮುಚ್ಚಾಲೆ ಆಡದಲ್ಲಿ ಕದದ ಹಿಂದೆ ಅವುಸಿಕೊಂಡ್ಲು
೧೧೬. ಅಸಡ್ಡಾಳವಾಗಿ ಕಾಣು = ಅಲಕ್ಷ್ಯದಿಂದ ಕಾಣು, ಕ್ರೂರವಾಗಿ ನಡೆಸಿಕೊಳ್ಳು
(ಅಸಡ್ಡಾಳ < ಅಷಡ್ಡಾಲ (ತೆ) = ಕ್ರೂರ)
ಪ್ರ : ಈಚೀಚೆಗಂತೂ ನನ್ನನ್ನು ಅವರೆಲ್ಲ ಅಸಡ್ಡಾಳವಾಗಿ ಕಾಣ್ತಾರೆ.
೧೧೭. ಅಸಡ್ಡೆ ಮಾಡು = ಅಲಕ್ಷ್ಯ ಮಾಡು, ಔದಾಸೀನ್ಯ ಮಾಡು
(ಅಸಡ್ಡೆ < ಅಶ್ರದ್ಧೆ = ಅನಾಸಕ್ತಿ, ಅಲಕ್ಷ್ಯ)
ಪ್ರ: ತಿಳಿದೋರು ಯಾರೂ, ಯಾರನ್ನೂ ಅಸಡ್ಢೆ ಮಾಡಲ್ಲ
೧೧೮. ಅಸ್ಸಿಸ್ಸಿ ಎನ್ನು = ಹೇಸಿಗೆ ಪಡು, ಅಸಹ್ಯ ಪಡು
(ಅಸ್ಸಿಸ್ಸಿ = ಹೇಸಿಗೆ, ಅಸಹ್ಯ)
ಪ್ರ : ಅಲ್ಲಿ ಮಗು ಅಸ್ಸಿಸ್ಸಿ ಮಾಡಿದೆ, ತುಳಿದುಗಿಳಿದು ಬಿಟ್ಟೀಯ ಎಂದು ಅಪ್ಪ ಹೇಳಿದಾಗ ಮಗ ಈ ಜನಕ್ಕೆ ಅಚ್ಚುಕಟ್ಟು ಅನ್ನೋದೆ ಇಲ್ಲ ಎಂದು ಅಸ್ಸಿಸ್ಸಿ ಪಟ್ಟುಕೊಂಡ
೧೧೯. ಅಳಿದು ಹಾಕು = ಬಿಚ್ಚಿ ಹಾಕು, ಕಳಚಿ ಹಾಕು
ಪ್ರ : ರೇಶ್ಮೆ ಸೀರೆ ಅಳಿದು ಹಾಕಿ, ನೂಲು ಸೀರೆ ಉಟ್ಕೊಂಡು ಬರ್ತೀನಿ ಇರು.
೧೨೦. ಅಳುಚ್ಚಗಾಗು = ಬೆಳಕು ಹರಿ
(ಅಳುಚ್ಚಗೆ < ಅಳುರ್ಚು = ಬೆಳಕು ವ್ಯಾಪಿಸು, ಹೊಳಪು ಹರಡು)
ಪ್ರ : ಆಗಲೇ ಅಳುಚ್ಚಗೆ ಆಯ್ತು, ಎದ್ದು ಆರು ಕಟ್ಟು ಏಳು
೧೨೧. ಅಳುಚ್ಚಗೆ ಬೆಳಗು = ಹೊಳೆಯುವಂತೆ ಉಜ್ಜು, ಚೊಕ್ಕಟವಾಗಿ ಬೆಳಗು
(ಅಳುಚ್ಚಗೆ = ನಿರ್ಮಲವಾಗಿ, ಥಳಥಳ ಎನ್ನುವಂತೆ)
ಪ್ರ : ಪಾತ್ರೆಗಳನ್ನು ಅಳುಚ್ಚಗೆ ಬೆಳಗಬೇಕು, ಕಸವನ್ನು ಅಳುಚ್ಚಗೆ ಗುಡಿಸಬೇಕು, ಗೊತ್ತಾಯ್ತಾ?
೧೨೨. ಅಳ್ನೆತ್ತಿ ಕೂಡದಿರು = ಎಳೆಯ ಬೊಮ್ಮಟೆಯಾಗಿರು, ಹಸುಗಂದನಾಗಿರು
(ಅಳ್ನೆತ್ತಿ = ನೆತ್ತಿಬಾಯಿ)
ಪ್ರ : ಅಳ್ನೆ ತ್ತಿ ಕೂಡದೋರ ಮೇಲೆ ದಂಡೆತ್ತಿ ಹೋಗಬೇಕ?
೧೨೩. ಅಳೆದು ಕೊಡು = ಅಳತೆ ಮಾಡಿ ಕೊಡು, ಲೆಕ್ಕ ಹಾಕಿ ಕೊಡು
ಪ್ರ : ಗಾದೆ – ಹೊಳೆಗೆ ಸುರಿದರೂ ಅಳೆದು ಸುರಿ
೧೨೪. ಅಳ್ಳೆ ಬಿರಿಯುವಂತೆ ನಗು = ಜೋರಾಗಿ ನಗು, ಹೊಟ್ಟೆ ಹಿಡಿದುಕೊಳ್ಳುವಂತೆ ನಗು
(ಅಳ್ಳೆ = ಪಕ್ಕೆ)
ಪ್ರ : ಅಳ್ಳೆ ಬಿರಿಯುವಂತೆ ಬಿದ್ದು ಬಿದ್ದು ನಕ್ಕರು
೧೨೫. ಅಂಗಡಿ ಇಡು = ಹರಡು, ಪ್ರದರ್ಶಿಸು
ಪ್ರ : ನೀನಿಲ್ಲಿ ಒಡವೇನೆಲ್ಲ ಅಂಗಡಿ ಇಡಬೇಡ, ಮೊದಲೆತ್ತಿಡು.
೧೨೬. ಅಂಗಡಿ ಎತ್ತು = ಜಾಗ ಖಾಲಿ ಮಾಡು, ಸ್ಥಳಬಿಡು
ಪ್ರ : ಮೊದಲು ನೀನಿಲ್ಲಿಂದ ಅಂಗಡಿ ಎತ್ತು, ನನ್ನ ನಿನ್ನ ಸಂಬಂಧ ಇವತ್ತಿಗೆ ಮುಗೀತು
೧೨೭. ಅಂಗಾತ ಮಲಗಿಸು = ಸಾಯಿಸು, ಮರಣ ಹೊಂದಿಸು
(ಅಂಗಾತ = ಹೊಟ್ಟೆ ಮುಖ ಮೇಲಾಗಿ)
ಸತ್ತಾಗ ಹೆಣವನ್ನು ಅಂಗಾತ ಮಲಗಿಸಿ ಮೇಲೆ ಮಣ್ಣನ್ನೆಳೆದು ಸಮಾಧಿ ಮಾಡುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದ್ದು.
ಪ್ರ : ಬಿರ್ರ‍ನೆ ದೇವರು ನನ್ನ ಅಂಗಾತ ಮಲಗಿಸಿಬಿಟ್ರೆ, ಅಷ್ಟೇ ಸಾಕು.
೧೨೮. ಅಂಗಾತ ಮಾಡು = ಸೋಲಿಸು
ಈ ನುಡಿಗಟ್ಟು ಕುಸ್ತಿ ಮೂಲದ್ದು. ಕುಸ್ತಿಯಲ್ಲಿ ಎದುರಾಳಿಯನ್ನು ಅಂಗಾತ ಮಾಡಿದರೆ ಅವನು ಸೋತಂತೆ ಲೆಕ್ಕ.
ಪ್ರ : ಈ ಪ್ಯಾತಲನಂಥ ಪೈಲ್ವಾನ್, ಅಂಥ ಆನೆಯಂಥ ಪೈಲ್ವಾನ್‌ಗೆ ಅಂಗಾತ ಮಾಡಿಬಿಟ್ಟನಲ್ಲ !
೧೨೯. ಅಂಗಾಲಲ್ಲಿ ಚಕ್ರವಿರು = ನಿಂತಕಡೆ ನಿಲ್ಲದಿರು, ಸದಾ ಸಂಚಾರಿಯಾಗಿರು.
ಈ ನುಡಿಗಟ್ಟು ಹಸ್ತಸಾಮುದ್ರಿಕ ಮೂಲದ್ದು. ಅಂಗಾಲಲ್ಲಿ ಚಕ್ರವಿದ್ದರೆ ಇದ್ದಕಡೆ ಇರದೆ ಸದಾ ಸಂಚಾರಿಯಾಗಿರುತ್ತಾರೆ ಎಂಬ ನಂಬಿಕೆ ಮೂಲದ್ದು.
ಪ್ರ : ಈ ಊರಾಗೆ ಊಟ ಮಾಡಿದರೆ ಮುಂದ್ಲೂರಾಗೆ ನೀರು ಕುಡೀತೀಯ, ನಿಜವಾಗಲೂ ನಿನ್ನ ಕಾಲಲ್ಲಿ ಚಕ್ರವಿರಬೇಕು.
೧೩೦. ಅಂಗಾಲು ಹಪ್ಪಳ ಹೊಡಿ = ಅಂಗಾಲು ಬೊಬ್ಬೆ ಏಳು, ಬಿರುಬಿಸಿಲಿನಿಂದ ನೆಲ ಕಾದ ಕಾವಲಿಯಂತಿರು
(ಹಪ್ಪಳ < ಹೆಪ್ಪಳೆ = ಬೊ‌ಬ್ಬೆ)
ಪ್ರ : ಎಂಥ ರಣಬಿಸಿಲು ಅಂದ್ರೆ, ನನ್ನ ಅಂಗಾಲು ಹಪ್ಪಳ ಹೊಡೆದವು, ಬಾಯ್ದಂಬುಲ ಹುಡಿಯಾಯ್ತು
೧೩೧. ಅಂಗಲಾಚು = ಬೇಡಿಕೊಳ್ಳು, ದಮ್ಮಯ್ಯಗುಡ್ಡ ಸಾಕು.
(ಅಂಗಲಾಚು < ಅಂಗಾಲು + ಅರ್ಚಿಸು = ಕಾಲಿಡಿದು ಬೇಡು)
ಪ್ರ : ಬಾಬಾ ಅಂತ ಅಂಗಲಾಚಿಬಿಟ್ಟೆ, ಬಂದಿದ್ರೆ ಕೇಳು
೧೩೨. ಅಂಗುದಾರಕೊಂದು ಪಿಂಗದಾಳಿ ಹಾಕು = ಮದುವೆ ಮಾಡಿಕೊಳ್ಳು, ಬಡತನದ ಕಾಟಾಚಾರದ ಮದುವೆ ಮಾಡಿಕೊಳ್ಳು.
(ಅಂಗುದಾರ = ಅರಿಶಿಣ ಹಚ್ಚಿದ ದಾರ, ಪಿಂಗದಾಳಿ < ಪಿಂಗು + ತಾಳಿ = ಹುಳ್ಳಿ ಸಿಬರಿನಂಥ ತಾಳಿ)
ಪ್ರ : ಅಂಗುದಾರಕೊಂದು ಪಿಂಗುದಾಳಿ ಹಾಕಿ ಮದುವೆ ಮಾಡಿಕೊಂಡ್ರು, ಬಂದೋರ ಮುಂದೆ ಹಿಡಿಗರ ಹೇಳೋದು ನೋಡಿದರೆ ಈ ಊರಿಗಾಗಿ ಮಿಗ್ತದೆ.
೧೩೩. ಅಂಗೈ ಮುಂಗೈ ಮಾಡು, ಮುಂಗೈ ಅಂಗೈ ಮಾಡು = ಥಳುಕ ತಟವಟ ಮಾಡು, ವಂಚನೆ ಮಾಡು
ಪ್ರ : ಅವನ್ನ ನಂಬಿದೋರುಂಟು, ಅಂಗೈ ಮುಂಗೈ ಮಾಡ್ತಾನೆ, ಮುಂಗೈ ಅಂಗೈ ಮಾಡ್ತಾನೆ.
೧೩೪. ಅಂಗೈಲಿ ಜೀವ ಹಿಡಕೊಂಡಿರು = ತುಂಬ ಭಯ ಕಾತರಗಳಿಂದ ಕಾದಿರು, ಸಾವಿನೊಡನೆ ಸೆಣೆಸಾಡು
ಜೀವ (ಉಸಿರು) ದೇಹದಿಂದ ಹಾರಿ ಹೋಗುವಾಗ, ಅದನ್ನು ಕೈಯಲ್ಲಿ ಹಿಡಿದು, ಸಾವಿನೊಡನೆ ಸೆಣಸುತ್ತಿದ್ದ ಎಂಬ ಈ ಅಭಿವ್ಯಕ್ತಿ ನಮ್ಮ ಜನಪದರ ಕಾವ್ಯ ಶಕ್ತಿಗೆ ಕೈಗನ್ನಡಿ ಇದ್ದಂತಿದೆ.
ಪ್ರ : ಮಗನ ಮುಖ ನೋಡಬೇಕೂಂತ ಅಂಗೈಲಿ ಜೀವ ಹಿಡ್ಕೊಂಡು ಕಾದಿದ್ದ, ಮಾರಾಯ.
೧೩೫. ಅಂಚುಗಟ್ಟು = ಕರೆ ಕಟ್ಟು
ಕಂಬಳಿ, ಶಾಲುಗಳ ಅಂಚಿನಲ್ಲಿ ಎಳೆಗಳು ಬಿಟ್ಟುಕೊಳ್ಳದ ಹಾಗೆ ಕಲಾತ್ಮಕವಾಗಿ ಕರೆಕಟ್ಟುವ ಕುಶಲಕಲೆಯನ್ನು ಈ ನುಡಿಗಟ್ಟು ಸೂಚಿಸುತ್ತದೆ. ಹಾಲುಮತ ಕುರುಬರಲ್ಲಿ ಕಂಬಳಿಗೆ ಕರೆ ಕಟ್ಟುವ ವೃತ್ತಿಯ ಮನೆತನಕ್ಕೆ ‘ಕರೆಗಾರರು’ ಎಂಬ ಹೆಸರಿದೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಕರೆಗಾರ ಎಂಬ ಹೆಸರುಳ್ಳವರು ಸಿಕ್ಕುತ್ತಾರೆ.
ಪ್ರ : ಗಾದೆ – ಕಂಬಳಿಗೆ ಅಂಚುಗಟ್ಟಬೇಕು ಬಾಣಂತಿಗೆ ನಡುಗಟ್ಟಬೇಕು
೧೩೬. ಅಂಟ ಅಂಟಿಗೆ ಗಂಟ ಬೀಳು = ಜಿಪುಣ ಜಿಪುಣಿಯರಿಗೆ ಮದುವೆಯಾಗು.
(ಅಂಟು = ಗೋಂದು ; ಅಂಟ = ಗೋಂದಿನಂಥ ಪ್ರವೃತ್ತಿಯ ಜಿಪುಣ ; ಅಂಟಿ = ಜಿಪುಣಿ ; ಗಂಟು = ಬ್ರಹ್ಮಗಂಟು)
ಪ್ರ : ಗಾದೆ – ಅಂಟ ಅಂಟಿಗೆ ಗಂಟು ಬೀಳ್ತು ಹೊಟ್ಟೆ ಬೆನ್ನಿಗೆ ಅಂಟಿಕೊಳ್ತು
೧೩೭. ಅಂಟಿಸು = ಹಚ್ಚು, ಹೊತ್ತಿಸು
ಪ್ರ : ಸಂಜೆಯಾಯ್ತು, ದೀಪ ಅಂಟಿಸು
೧೩೮. ಅಂಟುಪುರಲೆ ನಂಟಾಗು = ಬೆನ್ನು ಹತ್ತುವವರ ಸಂಗವಾಗು
(ಅಂಟುಪುರಲೆ = ಮುಳ್ಳುಳ್ಳ ಕಾಯಿಗಳು ಬಟ್ಟೆಗಳಿಗೆ ಅಂಟಿಕೊಳ್ಳುವ ಸಸ್ಯಜಾತಿ)
ಪ್ರ : ಇದ್ದೂ ಇದ್ದೂ ಇಂಥ ಅಂಟುಪುರಲೆ ನಂಟು ನನಗೆ ಗಂಟು ಬಿತ್ತಲ್ಲ
೧೩೯. ಅಂಟು ಮುಂಟಾಗು = ಮೈಲಿಗೆಯಾಗು, ವ್ರತಕ್ಕೆ ಭಂಗವುಂಟಾಗು
ಪ್ರ : ಹಾರುವತಿ ಅಂಟು ಮುಂಟಾಗಿಬಿಡ್ತು ಅಂತ ಹಾರಾಡ್ತಾಳೆ.
೧೪೦. ಅಂಟು ಹಾಕು = ಗಂಟು ಹಾಕು, ಇನ್ನೊಬ್ಬರ ಜವಾಬ್ದಾರಿ ವಹಿಸು
ಪ್ರ : ನೆಂಟಸ್ತನ ಹೇಳ್ಕೊಂಡು ಈ ತಂಟೇನ ನನಗೆ ಅಂಟು ಹಾಕಿದ್ರಲ್ಲ.
೧೪೧. ಅಂಟು ಹಾಕು = ಸಸಿ ನೆಡು, ಬಳ್ಳಿ ನೆಡು
(ಅಂಟು = ಸಸಿ, ಬಳ್ಳಿ)
ಪ್ರ : ಮಲ್ಲಿಗೆ ಅಂಟು ಹಾಕಿದರೆ ಮನೆಗೆಲ್ಲ ಹೂವಿನ ಕಂಪು.
೧೪೨. ಅಂಡೂರು = ಕೂತುಕೊಳ್ಳು, ವಿಶ್ರಮಿಸಿಕೊಳ್ಳು.
(ಅಂಡೂರು < ಅಂಡು + ಊರು = ಕುಂಡಿಯೂರು)
ಪ್ರ : ಎದ್ದಾಗಲಿಂದ ಅರಗಳಿಗೆ ಅಂಡೂರದೆ ದುಡೀತಿದ್ರೂ ಈ ಮನೇಲಿ ಎಲ್ರೂ ಒಂದಲ್ಲ ಒಂದು ಅನ್ನೋರೆ, ಆಡೋರೆ.
೧೪೩. ಅಂಡೆತ್ತು = ಹೊರಡು, ಜಾಗಬಿಡು.
(ಅಂಡು = ಕುಂಡಿ, ಮುಕುಳಿ)
ಪ್ರ : ಮೊದಲು ನೀನಿಲ್ಲಿಂದ ಅಂಡೆತ್ತು.
೧೪೪. ಅಂತರಪಿಶಾಚಿಯಾಗು = ಯಾವ ದಡವೂ ಇಲ್ಲದಂತಾಗು, ಎರಡೂ ಕಡೆ ವಂಚಿತವಾಗು.
(ಅಂತರ = ಒಳಗೆ, ಆಕಾಶ) ಶವಸಂಸ್ಕಾರ ಮಾಡದಿದ್ದರೆ ಆತ್ಮ ತನ್ನ ನೆಲೆಯನ್ನು ಸೇರದೆ ಮಧ್ಯಂತರದಲ್ಲಿ ಪರದಾಡುತ್ತದೆ ಎಂಬ ನಂಬಿಕೆ ಈ ನುಡಿಗಟ್ಟಿಗೆ ಮೂಲ.
ಪ್ರ : ಆ ಹೆಣ್ಣು ಅತ್ತ ತೌರು ಮನೆಯ ಆಸರೆಯೂ ಇಲ್ಲದೆ, ಇತ್ತ ಗಂಡನ ಮನೆಯ ಆಸರೆಯೂ ಇಲ್ಲದೆ ಅಂತರಪಿಶಾಚಿಯಾಗಿದ್ದಾಳೆ.
೧೪೫. ಅಂತರಾಟವಾಗು = ಆಧಾರತಪ್ಪು, ಗಾಳಿಯಲ್ಲಿ ತೇಲು, ಅಭದ್ರ ಸ್ಥಿತಿ ಉಂಟಾಗು (ಅಂತರ = ಆಕಾಶ, space)
ಪ್ರ : ಗಾದೆ-ಎಂಥೆಂಥ ದೇವರಿಗೋ ಅಂತರಾಟವಾಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವ?
೧೪೬. ಅಂತರ್ಲಾಗ ಹಾಕು = ಬಗೆಬಗೆಯಾಗಿ ಪ್ರಯತ್ನಿಸು, ತರಾವರಿ ಕಸರತ್ತು ಮಾಡು
(ಅಂತರ್ಲಾಗ = ನೆಲಬಿಟ್ಟು ಮಧ್ಯೆ ಒಂದಾದ ಮೇಲೊಂದು ಪಲ್ಟಿ ಹೊಡಿ ; ಲಾಗ = ಪಲ್ಟಿ)
ಪ್ರ : ಇವನೇನೇ ಅಂತರ್ಲಾಗ ಹಾಕಿದರೂ, ಅವನು ಹರಿಶಿವಾ ಅನ್ನಲಿಲ್ಲ.
೧೪೭. ಅಂದಗೆಟ್ಟ ಮಾತಾಡು = ಕೆಟ್ಟ ಮಾತಾಡು, ಅನುಚಿತ ಮಾತಾಡು
(ಅಂದಗೆಟ್ಟ.. < ಅಂದ + ಕೆಟ್ಟ = ಚೆಂದಗೆಟ್ಟ, ಚೆಂದವಿರದ)
ಪ್ರ : ಅಂದಗೆಟ್ಟ ಮಾತಿಗೆ ನೊಂದು ಕಣ್ಣೀರು ಸುರಿಸಿದ್ಲೇ ಹೊರ್ತು ತುಟಿ ಎರಡು ಮಾಡಲಿಲ್ಲ.
೧೪೮. ಅಂದಗೆಟ್ಟು ಹೋಗು = ಹಾಳಾಗು, ಕೆಟ್ಟನಡತೆಗೆ ಬೀಳು
(ಅಂದಗೆಡು = ಚೆಂದಗೆಡು)
ಪ್ರ : ಇತ್ತೀಚೆಗಂತೂ ಇದ್ದೊಬ್ಬ ಮಗನೂ ಅಂದಗೆಟ್ಟು ಹೋದ.
೧೪೯. ಅಂದನ್ನಿಸಿಕೊಳ್ಳು = ಬೇರೆಯವರನ್ನು ಬೈದು ಅವರಿಂದ ಬೈಸಿಕೊಳ್ಳು.
(ಅಂದು = ದೂಷಿಸಿ, ಬೈದು, ಅನ್ನಿಸಿಕೊಳ್ಳು = ದೂಷಿಸಿಕೊಳ್ಳು, ಬೈಸಿಕೊಳ್ಳು)
ಪ್ರ : ಒಬ್ಬರನ್ನು ಅಂದು ಅನ್ನಿಸಿಕೊಳ್ಳೋ ಬದಲು ಬಾಯ್ಮುಚ್ಕೊಂಡು ಸುಮ್ನಿದ್ದರಾಗದ?
೧೫೦. ಅಂದರೆ ಅನ್ನಲಿ ಬಿಡು = ಬೈದರೆ ಬಯ್ಯಲಿ ಬಿಡು, ಹೇಳಿದರೆ ಹೇಳಲಿ ಬಿಡು
(ಅಂದರೆ = ಬೈದರೆ, ಅನ್ನಲಿ = ಬೈಯಲಿ)
ಪ್ರ : ಅಂದರೆ ಅನ್ನಲಿ ಬಿಡು, ಅಂದು ಅವರು ದೊಡ್ಡೋರಾಗಲಿ
೧೫೧. ಅಂದವರಿಯದಿರು = ಸ್ಪಷ್ಟವಾಗದಿರು, ಏನು ಮಾಡಬೇಕೆಂದು ತೋಚದಿರು.
(ಅಂದ = ರೀತಿ, ಮಾರ್ಗ)
ಪ್ರ : ಸಮಸ್ಯೆ ಅಂದವರಿಯದಿರುವಾಗ ನಾವು ಮುಂದುವರಿಯೋದು ತರವಲ್ಲ.
೧೫೨. ಅಂಬಲಿಯೋ ತುಂಬೆಸೊಪ್ಪೋ ತಿನ್ನು = ಬಡತನದ ಬಾಳುವೆ ನಡೆಸು, ಕಷ್ಟಪಡು.
ಪ್ರ :ಅಂಬಲಿಯೊ ತುಂಬೆಸೊಪ್ಪೋ, ಕಾರೆಕಾಯಿ ನೀರು ಮಜ್ಜಿಗೆಯೋ ತಿಂದುಕುಡಿದು ಹಾಲು ಹಾಕಿದೆವೇ ಹೊರ್ತು ಒಬ್ಬರ ಮನೆ ಬಾಗಿಲಿಗೆ ನಾವು ಹೋಗಲಿಲ್ಲ.
೧೫೩. ಅಂಬೆಗಾಲಿಕ್ಕುತ್ತಿರು = ಕಲಿಯುತ್ತಿರು, ಕಲಿಕೆ ಹೊಸದಾಗಿರು.
(ಅಂಬೆಗಾಲಿಕ್ಕು = ಮಂಡಿ ಮತ್ತು ಅಂಗೈಗಳನ್ನೂರಿ ತೆವಳು. ಮಕ್ಕಳು ಕಾಲ ಮೇಲೆ ನಿಂತು ನಡೆಯುವುದಕ್ಕಿಂತ ಮುಂಚಿನ ಹಂತ)
ಪ್ರ : ನಾನು ಈ ಕೆಲಸದಲ್ಲಿ ಇನ್ನೂ ನುರಿತಿಲ್ಲ, ಈಗ ತಾನೇ ಅಂಬೆಗಾಲಿಕ್ತಾ ಇದ್ದೀನಿ.

೫) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೧)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೧)

೧. ಅಕ್ಕಲಾಯವಾಗಿ ಸಿಕ್ಕು = ಪುಗಸಟ್ಟೆ ಸಿಕ್ಕು, ಬಿಟ್ಟಿ ಸಿಕ್ಕು
(ಅಕ್ಕಲಾಯವಾಗಿ < ಹಕ್ಕಲು + ಆಯುವಾಗ ) ಹಕ್ಕಲು ಎಂದರೆ ಕೆಳಕ್ಕೆ ಬಿದ್ದ ತೆನೆ, ಕಾಳು, ಕಾಯಿ ಇತ್ಯಾದಿ. ಬೆಳೆಯ ಕೊಯ್ಲು ಆದ ಮೇಲೆ ಕೆಳಗೆ ಬಿದ್ದಿರುವ ತೆನೆ, ಕಾಳು, ಕಾಯಿಗಳನ್ನು ಬಡಬಗ್ಗರು ಆದುಕೊಳ್ಳುತ್ತಾರೆ. ಅದಕ್ಕೆ ಯಾರದೇ ಅಡ್ಡಿ ಆತಂಕಗಳಿಲ್ಲ ; ದುಡ್ಡು ಕಾಸುಗಳಿಲ್ಲ. ಹಾಗೆ ಸುಲಭವಾಗಿ ದೊರಕಿದ್ದು ಎಂಬ ಭಾವ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ಅಕ್ಕಲಾಯವಾಗಿ ಸಿಕ್ಕಿದ್ರೆ ಅಕ್ಕನಿಗೆ ಸಡಗರವೋ ಸಡಗರ
೨. ಅಕ್ಕತಂಗಿಯೋರ ಹಣ್ಣಿನಂತಿರು = ಕೆಂಪಗಿರು
(ಅಕ್ಕತಂಗಿಯೋರ ಹಣ್ಣು = ಪರಂಗಿ ಹಣ್ಣು)
ಪ್ರ : ಗಂಡು ನೇರಳೆ ಹಣ್ಣಿದ್ದಂಗಿದ್ರೆ, ಹೆಣ್ಣು ಅಕ್ಕತಂಗಿಯೋರ ಹಣ್ಣಿದ್ದಂಗವಳೆ.
೩. ಅಕ್ಕಲಿಲ್ಲದೆ ಒಕ್ಕಲು ಹೋಗು = ಬುದ್ಧಿ ಇಲ್ಲದೆ ವಲಸೆ ಹೋಗು
(ಅಕ್ಕಲು < ಅಕಲ್ (ಉ) = ಬುದ್ಧಿ)
ಪ್ರ : ಅಕ್ಕಲಿಲ್ಲದೆ ಒಕ್ಕಲು ಹೋಗಿ ಪಡಬಾರದ ಕಷ್ಟ ಪಟ್ಟರು.
೪. ಅಕ್ಕಳಿಸು ಬರು = ಸಂಭೋಗಿಸು ಬರು.
(ಅಕ್ಕಳಿಸು < ಅಕ್ಕುಳಿಸಿ = ಹೊಟ್ಟೆ ಕುಗ್ಗು ಹಿಡಿಯುವಂತೆಸಗಿ)
ಪ್ರ: ದುಕ್ಕಳಿಸಿದರೂ ಬಿಡಲಿಲ್ಲ, ಬಿಕ್ಕಳಿಸಿದರೂ ಬಿಡಲಿಲ್ಲ, ಅಕ್ಕಳಿಸಿ ಬಂದ ಅಡ್ನಾಡಿ
೫. ಅಖಾಡಕ್ಕಿಳಿ = ವಾದಕ್ಕಿಳಿ, ಹೊಡೆದಾಟಕ್ಕಿಳಿ.
(ಅಖಾಡ = ಕುಸ್ತಿ ಮಾಡುವ ಕೆಮ್ಮಣ್ಣಿನ ಮಟ್ಟಿ)
ಪ್ರ: ಅಖಾಡಕ್ಕಿಳಿಯೋಕೆ ಮುಖವಾಡ ಏಕೆ?
೬. ಅಗಣಿಗೂಟ ಜಡಿ = ಅಡ್ಡಿ ಮಾಡು, ದ್ರೋಹವೆಸಗು
(ಅಗಣಿ < ಅಗಳಿ < ಅಗುಳಿ < ಅರ್ಗುಳಿ < ಅರ್ಗಲ = Bolt)
ಪ್ರ: ಅಯ್ಯೋ ಪಾಪ ಅಂತ ಸಹಾಯ ಮಾಡಿದ ನನಗೇ ಅಗುಣಿಗೂಟ ಜಡಿದ.
೭. ಅಗಲಿಸಿದಾಗ ತಗುಲಿಸು = ಅಗಲಿಗಿಟ್ಟಾಗ ಉಣ್ಣು, ಸಮ್ಮತಿಸಿದಾಗ ಸಂಭೋಗಿಸು
(ತಗುಲಿಸು < ತಗುಳ್ಚು = ಮಾಡು;ಮುಟ್ಟಿಸು. ಅಗಲು = ಊಟದ ತಟ್ಟೆ, , ಅಗಲಿಸಿದಾಗ = ಊಟಕ್ಕಿಟ್ಟಾಗ.)
೮. ಅಗಳೊಂದ್ಕಡೆ ಗಂಜಿಯೊಂದ್ಕಡೆ ಆಗು = ಸಲೀಸಾಗಿ ಹೆರಿಗೆಯಾಗು, ಮಗು ಬಾಣಂತಿ ಬೇರೆಯಾಗು.
ಪ್ರ : ದೇವರು ಸಲೀಸಾಗಿ ಅಗುಳೊಂದ್ಕಡೆ ಗಂಜಿ ಒಂದ್ಕಡೆ ಮಾಡಿಬಿಟ್ರೆ ಅಷ್ಟೇ ಸಾಕು.
೯. ಅಗ್ಗಾರು ಹತ್ತು = ಬಾಯೊಣಗು, ಎದಯೊಣಗು
(ಅಗ್ಗಾರು < ಅಕ್ಕಾರು < ಅಕ್ಕ + ಆರು; ಅಕ್ಕ = ವಕ್ಷ, ಆರು = ಒಣಗು)
ಪ್ರ : ದನ ಅಗ್ಗಾರು ಹತ್ತಿ ಬೆಳೋ ಅಂತವೆ, ನೀರು ಕುಡಿಸಬಾರ್ದ?
೧೦. ಅಗಿದರೆ ಸವೆಯದಿರು ನುಂಗಿದರೆ ಇಳಿಯದಿರು = ಯಾವುದಕ್ಕೂ ಬಗ್ಗದಿರು, ಲೋಭಿಯಾಗಿರು.
ಪ್ರ: ಅವನ್ನ ಬಿಡಪ್ಪ, ಆಗಿದರೆ ಸವೆಯ, ನುಂಗಿದರೆ ಇಳಿಯ.
೧೧. ಅಜ್ಜನ ಕಾಲದ್ದು ಹೇಳದಿರು = ಪುರಾಣ ಹೇಳದಿರು, ಅಪ್ರಸ್ತುತವಾದದ್ದನ್ನು ಹೇಳದಿರು
ಪ್ರ : ಅಜ್ಜನ ಕಾಲದ್ದು ಹೇಳಿದರೆ ಇಲ್ಲಿ ಯಾರೂ ಕೇಳೋರಿಲ್ಲ.
೧೨. ಅಜ್ಜಿಗೆ ಕೆಮ್ಮು ಕಲಿಸು = ಅನುಭವಿಗೆ ತಿಳಿ ಹೇಳುವ ಅವಿವೇಕ ಮಾಡು
ಪ್ರ : ಗಾದೆ – ಮೊಮ್ಮಗಳು ಅಜ್ಜಿಗೆ ಕೆಮ್ಮು ಕಲಿಸಬೇಕ?
೧೩. ಅಜ್ಜಿ ಮಂಚ ತಲೆಕೆಳಗಾಗು = ಬೆಳಗಿನ ಜಾವವಾಗು
(ಅಜ್ಜಿ ಮಂಚ = ಸಪ್ತರ್ಷಿ ಮಂಡಲ)
ಪ್ರ : ಅಜ್ಜಿ ಮಂಚ ತಲೆಕೆಳಗಾದರೂ ಇನ್ನು ಮಲಗೇ ಇದ್ದೀಯಲ್ಲ, ನಾವು ಅಲ್ಲಿಗೆ ಹೋಗಿ ಸೇರೋದು ಯಾವಾಗ ?
೧೪. ಅಟಕಾವು ಮಾಡು = ಅಡ್ಡಿಪಡಿಸು, ತಡೆಗಟ್ಟು
(ಅಟಕಾವು < ಹಟಾವೊ (ಹಿಂ) ?)
ಪ್ರ: ಹೊಲ ಉಳಬೇಡ ಅಂತ ಬಂದು ಅಟಕಾವು ಮಾಡಿದರು.
೧೫. ಅಟ್ಟಕ್ಕೇರಿಸು = ಉಬ್ಬಿಸು, ತಲೆ ಮೇಲೆ ಹೊತ್ಕೊಂಡು ಮೆರೆಸು.
ಪ್ರ : ಒಬ್ಬ ಮಗ ಅಂತ ಅಟ್ಟಕ್ಕೇರಿಸಿ ಕೂಡಿಸ್ಯವರೆ.
೧೬. ಅಟ್ಟಕ್ಕೊಂದು ಕಾಲು ಬೆಟ್ಟಕ್ಕೊಂದು ಕಾಲು ಹಾಕು = ಆತುರಾತುರವಾಗಿ ವರ್ತಿಸು, ತರಾತುರಿಯಲ್ಲಿರು.
ಪ್ರ : ಹಿಂಗೆ ಅಟ್ಟಕ್ಕೊಂದು ಕಾಲು ಬೆಟ್ಟಕ್ಕೊಂದು ಕಾಲು ಹಾಕಿದರೆ ನೀನು ಯಾವುದನ್ನೂ ಪೂರ್ಣ ಮಾಡುವುದಿಲ್ಲ.
೧೭. ಅಟ್ಟಾಡಿಸು = ಓಡಾಡಿಸು, ಸಂಭೋಗಿಸಲು ಪ್ರಯತ್ನಿಸು
(ಪಶು ಪಕ್ಷಿಗಳು ಸಂಭೋಗಿಸಲು ಓಡಾಡಿಸುತ್ತವೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ)
ಪ್ರ : ಮಧ್ಯಾಹ್ನ ಹೋರಿ ಕಡಸನ್ನು ಅಟ್ಟಾಡಿಸುತ್ತಿತ್ತು.
೧೮. ಅಟ್ಟಿಕ್ಕಿದೋರಿಗಿಂತ ಬೊಟ್ಟಿಕ್ಕಿದೋರು ಹೆಚ್ಚಾಗು = ನಡುಮುರಿದು ದುಡಿಯೋರಿಗಿಂತ ನಾಟಕ ಆಡೋರು ಪ್ರಿಯವಾಗು.
(ಅಟ್ಟಿಕ್ಕು = ಅಡಿಗೆ ಮಾಡು ಬಡಿಸು ; ಬೊಟ್ಟಿಕ್ಕು = ಹಣೆಗೆ ಸಾದು (ತಿಲಕ) ಇಡು)
ಪ್ರ : ಕಟ್ಕೊಂಡೋಳಿಗಿಂತ ಇಟ್ಕೊಂಡೋಳೆ ಹೆಚ್ಚು, ಮೊದಲೇ ಗಾದೆ ಇಲ್ವ ‘ಅಟ್ಟಿಕ್ಕಿದೋಳಿಗಿಂತ ಬೊಟ್ಟಿಕ್ಕಿದೋಳು ಹೆಚ್ಚು’ ಅಂತ ?
೧೯. ಅಟ್ಲು ಮಾಡು = ಕೆಸರು ಮಾಡು
(ಅಟ್ಲು < ಹಡಲು = ಕೆಸರು, ರಾಡಿ)
ಪ್ರ : ಎತ್ತು ಗಂಜಳ ಹುಯ್ದು ನೆಲವನ್ನೆಲ್ಲ ಅಟ್ಲು ಮಾಡಿವೆ.
೨೦. ಅಡಕವಾಗಿರು = ಮಿತಿಯಲ್ಲಿರು, ಗಂಭೀರವಾಗಿರು
ಪ್ರ : ಅಡಕವಾಗಿದ್ರೆ ನಡುಕಪಡುವ ಸನ್ನಿವೇಶ ಬರಲ್ಲ.
೨೧. ಅಡಕೆಗೆ ಮಾನ ಹೋಗು = ಚಿಕ್ಕಾಸಿಗೆ ಗೌರವ ಹಾಳಾಗು
ಈಗಿನ ನಾಣ್ಯದಂತೆ ಹಿಂದೆ ಅಡಕೆ ವಿನಿಮಯ ಮಾಧ್ಯಮವಾಗಿರಬೇಕು. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು.
ಪ್ರ : ಗಾದೆ-ಅಡಕೆಗೆ ಹೋದ ಮಾನ ಆನೆ ಕೊಟ್ರೆ ತಾನೆ ಬತ್ತದ?
೨೨. ಅಡಕೆಗೆ ಕಡೆಯಾಗಿ ಕಾಣು = ಚಿಕ್ಕಾಸಿಗಿಂತ ಕೀಳಾಗಿ ಕಾಣು.
ಪ್ರ : ಕೆಟ್ಟು ಒಬ್ಬರ ಮನೆ ಬಾಗಿಲಿಗೆ ಹೋದರೆ ಅಡಕೆಗಿಂತ ಕಡೆಯಾಗಿ ಕಾಣ್ತಾರೆ.
೨೩. ಅಡಕೆಲೆ ಹಾಕ್ಕೊಂಡು ಉಗಿ = ಅವಮಾನ ಮಾಡು, ಬಯ್ಯಿ
(ಅಡಕೆಲೆ < ಅಡಕೆ + ಎಲೆ = ತಾಂಬೂಲ )
ಪ್ರ : ಅವನ ಮಕ್ಕೆ ಹಂಗೆ ಉಗಿದರೆ ಸಾಲದು, ಅಡಕೆಲೆ ಹಾಕ್ಕೊಂಡು ಉಗೀಬೇಕು.
೨೪. ಅಡಪಡ ಎನ್ನು = ಆವುಟ ಮಾಡು, ಸಿಟ್ಟುದೋರು, ಕೊಂಗ ಮಾತಾಡು
ಪ್ರ : ಅವನು ಅಡಪಡ ಅಂದು ಬಿಟ್ರೆ, ನಾವು ಗಡಗಡ ನಡುಗ್ತೀವಿ ಅಂದ್ಕೊಂಡಿದ್ದನೇನೋ ?
೨೫. ಅಡಗಲ್ಲಿನಂತಿರು = ಗಟ್ಟಿಮುಟ್ಟಾಗಿರು, ಕಟ್ಟುಮಸ್ತಾಗಿರು
(ಅಡಗಲ್ಲು < ಅಡಿಗಲ್ಲು = ಕಮ್ಮಾರ ಕಾದ ಕಬ್ಬಿಣವನ್ನು ಸುತ್ತಿಗೆಯಿಂದ ಚಚ್ಚಿ ಸಾಗು ಹುಯ್ಯಲು ಕೆಳಗೆ ಆಧಾರವಾಗಿ ಇಟ್ಟುಕೊಂಡಿರುವ ಕಬ್ಬಿಣದ ಅಚ್ಚು)
ಪ್ರ : ಅವನ ಹೆಂಡ್ರು ಒಳ್ಳೆ ಅಡಗಲ್ಲು ಇದ್ದಂಗವಳೆ, ಅವನು ಹಳ್ಳಕಡ್ಡಿ ಇದ್ದಂಗವನೆ.
೨೬. ಅಡವಾಗಿ ಸಿಕ್ಕು = ಕೈತುಂಬ ಸಿಕ್ಕು, ಸಮೃದ್ಧವಾಗಿ ಸಿಕ್ಕು
ಪ್ರ : ಅಡವಾಗಿ ಸಿಕ್ಕಿದ್ಲು ಅಂತ ಬಿಡುವು ಕೊಡದೆ ಹಟ್ಟು ಬಡಕಲ ನಾಯಾದ.
೨೭. ಅಡವು ಸಿಕ್ಕದಿರು = ಸಂದು ಸಿಕ್ಕದಿರು, ಅವಕಾಶ ಸಿಕ್ಕದಿರು.
ಪ್ರ : ಅಡವು ಸಿಕ್ಕಿದ್ರೆ ಅವನೆಲ್ಲಿರೋನು, ಒಡವೆ ಬಾಚ್ಕೊಂಡು ಪರಾರಿಯಾಗಿರೋನು.
೨೮. ಅಡ್ಡಗಟ್ಟೆ ಹಾಕು = ಅಡ್ಡಿಯುಂಟು ಮಾಡು, ತಡೆ ಮಾಡು
ಪ್ರ : ಸಮಸ್ಯೆ ಬಗೆಹರಿಸೋಣ ಅಂದ್ರೆ, ಸೋದರ ಮಾವ ಬರೋವರೆಗೂ ಸಾಧ್ಯವಿಲ್ಲ ಅಂತ ಅಡ್ಡಗಟ್ಟೆ ಹಾಕ್ಕೊಂಡು ಕೂತವ್ನೆ.
೨೯. ಅಡ್ಡಗೋಡೆ ಮೇಲೆ ದೀಪ ಇಡು = ಅನಿಶ್ಚಯದ ಮಾತಾಡು, ಈಕಡೆಯೋ ಆಕಡೆಯೋ ಎಂಬುದರ ಖಚಿತ ಸುಳಿವು ಕೊಡದಿರು
(ಅಡ್ಡಗೋಡೆ = ಅಡುಗೆ ಮನೆಗೂ ನಡುಮನೆಗೂ ಮಧ್ಯೆ ಇರುವ ಮೋಟುಗೋಡೆ. ಅದರ ಮೇಲೆ ದೀಪ ಇಟ್ಟರೆ ಬೆಳಕು ಎಡರೂ ಕಡೆಗೆ ಬೀಳುತ್ತದೆ. ಅದನ್ನು ಅಡುಗೆ ಮನೆ ದೀಪ ಎಂದೂ ಹೇಳುವಂತಿಲ್ಲ. ನಡುಮನೆಯ ದೀಪ ಎಂದು ಹೇಳುವಂತಿಲ್ಲ. ಎರಡೂ ಕಡೆಯವರು ನಮಗಾಗಿ ಈ ದೀಪ ಎಂದುಕೊಳ್ಳಬಹುದು. ಎರಡೂ ಕಡೆಗೂ ನಂಟು, ಕಂಟಿಗೆ ಆಸ್ಪದವಿಲ್ಲ)
ಪ್ರ : ಅಡ್ಡಗೋಡೆ ಮೇಲೆ ದೀಪ ಇಡೋರ್ನ ನಂಬಿ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ.
೩೦. ಅಡ್ಡದಾರಿಗಿಳಿ = ಕೆಟ್ಟನಡತೆಗಿಳಿ
ಪ್ರ : ಅಡ್ಡದಾಗಿರಿಳಿದೋರ್ನ ಹೆದ್ದಾರಿಗೆ ತರೋದೆ ತುಂಬ ಕಷ್ಟ.
೩೧. ಅಡ್ಡನಾಡಿ ಬುದ್ಧಿ ತೋರಿಸು = ಬೆರಕೆ ಬುದ್ಧಿಕ ತೋರಿಸು, ಹಾದರಕ್ಕೆ ಹುಟ್ಟಿದ ಬುದ್ಧಿ ತೋರಿಸು
(ಅಡ್ಡನಾಡಿ = ಬೆರಕೆ ತಳಿ (Cross breed) ನಾಡಿ = ರಕ್ತನಾಳ )
ಪ್ರ : ಕೊನೆಗೂ ಅಡ್ಡನಾಡಿ ಬುದ್ಧಿ ತೋರಿಸೇ ಬಿಟ್ಟ
೩೨. ಅಡ್ಡ ಬೀಳು = ದೀರ್ಘದಂಡ ನಮಸ್ಕಾರ ಮಾಡು.
ಪ್ರ : ಧೂಳಿನಲ್ಲೆ ಸ್ವಾಮಿಗಳಿಗೆ ಅಡ್ಡಬೀಳೋರ್ನ ಕಂಡ್ರೆ, ಮೈಯೆಲ್ಲ ಉರಿದು ಹೋಗ್ತದೆ.
೩೩. ಅಡ್ಡ ಮಾತು ತೆಗೆ = ವಿಷಯಾನಂತರ ಮಾಡು, ಮುಖ್ಯ ವಿಷಯವನ್ನು ಮರೆಮಾಜಲು ಯತ್ನಿಸು.
ಪ್ರ : ಇನ್ನು ನಿಜ ಹೇಳಬೇಕಾಗ್ತದೆ ಅಂತ ಅಡ್ಡ ಮಾತು ತೆಗೆದ.
೩೪. ಅಡ್ಡವಾಗು = ಮಲಗು, ವಿಶ್ರಾಂತಿ ಪಡೆ.
ಪ್ರ : ಆ ಕಡೆ ಸರಕೋ, ಕೊಂಚ ಹೊತ್ತು ಅಡ್ಡವಾಗ್ತೀನಿ
೩೫. ಅಡ್ಡ ಹಿಡಿ = ತಲೆ ಹಿಡುಕ ಕೆಲಸ ಮಾಡು
ಪ್ರ : ನಿನ್ನ ಹೆಂಡ್ರನ್ನ ಅಡ್ಡ ಹಿಡಿದು ದುಡ್ಡು ತಂದುಕೊಡೋ, ಇಲ್ಲಿ ಯಾರಿಗೆ ಹೇಳಿ?
೩೬. ಅಡಾಯದಿರು = ಹೊಂದಿಕೆಯಾಗದಿರು
(ಅಡ್ಡ + ಹಾಯು = ಪರಸ್ಪರ ಎದುರಾಗು )
ಪ್ರ : ಅತ್ತೆಗೂ ಸೊಸೆಗೂ ಅಡಾಯದೆ ನಿತ್ಯ ಲಡಾಯಿ ಇದ್ದೇ ಇರ್ತದೆ.
೩೭. ಅಡಾವುಡಿ ಮಾಡು = ಆವುಟ ಮಾಡು, ಗದ್ದಲ ಮಾಡು.
ಪ್ರ : ಅಡಾವುಡಿ ಮಾಡೋದರಿಂದಲೇ ಯಾರೂ ದೊಡ್ಡ ಮನುಷ್ಯರಾಗೋಕೆ ಆಗಲ್ಲ.
೩೮. ಅಡ್ಡಾಡಿಕೊಂಡು ಬರು = ತಿರುಗಾಡಿಕೊಂಡು ಬರು
ಪ್ರ : ಒಳಗೆ ಸುಮ್ಮನೆ ಕುಂತಿರೋದಕ್ಕೆ ಬದಲು ಹೊರಗೆ ಅಡ್ಡಾಡಿಕೊಂಡು ಬರ್ತೀನಿ.
೩೯. ಅಡ್ಡಾದಿಡ್ಡಿಗೆ ಹಾಕು = ತಾರುಬಾರು ಹಾಕು, ಅಸ್ತವ್ಯಸ್ತವಾಗಿ ಎಸೆ
(ಅಡ್ಡಾದಿಡ್ಡಿ < ಅಡ್ಡದಿಡ್ಡಿ < ಅಡ್ಡತಿಡ್ಡಿ = ಅಸ್ತವ್ಯಸ್ತ, ತಾರುಬಾರು)
ಪ್ರ : ಅಡ್ಡಾದಿಡ್ಡಿಗೆ ಸಾಮಾನು ಹಾಕಿದರೆ, ಮನೆ ಅಚ್ಚುಕಟ್ಟಾಗಿ ಕಾಣ್ತದ?
೪೦. ಅಡ್ಡಾದುಡ್ಡಿಗೆ ಮಾರು = ಕಡಮೆ ಬೆಲೆಗೆ ಮಾರು, ಅಗ್ಗದ ಬೆಲೆಗೆ ವಿಕ್ರಯಿಸು.
(ಅಡ್ಡ = ಎರಡು ಕಾಸು + ದುಡ್ಡು = ನಾಲ್ಕು ಕಾಸು; ನಾಲ್ಕು ಕಾಸು ಬಾಳುವುದನ್ನು ಅದರ ಅರ್ಧಕ್ಕೆ ಮಾರು ಎಂಬುದು ಇಂಗಿತಾರ್ಥ)
ಪ್ರ : ದರ್ದಿದ್ದದ್ದರಿಂದ ಅಡ್ಡಾದುಡ್ಡಿಗೆ ಮಾರಿಬಿಟ್ಟೆ.
೪೧. ಅಡ್ಡಾದುಡ್ಡಿಗೆ ಸೀಯು = ಅಗ್ಗವಾಗಿ ಮಾರು
(ಅಡ್ಡಾದುಡ್ಡು < ಅರ್ಧ ದುಡ್ಡು = ಎರಡು ಕಾಸು; ಸೀಯು = ಮಾರು, ಸುಡು)
ಪ್ರ : ಬೆಲೆ ಇಳಿದು ಹೋದದ್ದರಿಂದ ಅಡ್ಡಾದುಡ್ಡಿಗೆ ಸೀದು ಬಂದೆ.
೪೨. ಅಡ್ರಿಸಿಕೊಂಡು ಬರು = ಒತ್ತರಿಸಿಕೊಂಡು ಬರು, ಚಾಚಿಕೊಂಡು ಬರು
(ಅಡ್ರಿಸಿ < ಅಡರಿಸಿ = ಚಾಚಿ)
ಪ್ರ : ಇಡರಿಸಿ ಹಿಟ್ಟಿಕ್ಕಲಿ ಅಂತ ಅಡರಿಸಿಕೊಂಡು ಬಂದುಬಿಟ್ಲು.
೪೩. ಅಡುಟ್ಟನಂಗಾಡು = ಅಸಂಸ್ಕೃತನಾಗಿ ವರ್ತಿಸು
(ಅಡುಟ್ಟ < ಅಡಿ + ಹುಟ್ಟ = ಕೀಳು ಹುಟ್ಟಿನವನು)
ಪ್ರ : ಗಾದೆ – ಅಡುಟ್ಟನಿಗೆ ಪಾರುಪತ್ಯ ಕೊಟ್ಟಿದ್ಕೆ ಹೊಡೆಗದ್ದೆ ಕುಯ್ಸಿ ಮೆದೆ ಹಾಕಿಸಿದನಂತೆ
೪೪. ಅಡು ಬಾಡು ಸುಡು ಬಾಡು ತಿನ್ನು = ಮಾಂಸಲೋಭ ಅತಿಯಾಗಿರು.
(ಅಡು ಬಾಡು = ಬೇಯಿಸಿದ ಮಾಂಸ, ಸುಡುಬಾಡು = ಸುಟ್ಟ ಮಾಂಸ. ಬೇಯುವುದು ತಡವಾಗುತ್ತದೆಂದು ಒಂದೆರಡು ತುಂಡುಗಳನ್ನು ಕೆಂಡದ ಮೇಲೆ ಹಾಕಿ ಸುಟ್ಟು ತಿನ್ನುವ ಜಿಹ್ವಾಚಾಪಲ್ಯ)
ಪ್ರ : ಅಡು ಬಾಡು ಸುಡು ಬಾಡು ತಿಂದು ಒಳ್ಳೆ ಸೀದ ಹಂದಿ ಹಂಗವನೆ.
೪೫. ಅಡೂಳಿ ಕೊಡು = ಬಳುವಳಿ ಕೊಡು.
(ಅಡೂಳಿ < ಅಟ್ಟುಳಿ < ಅಟ್ಟುಂಬಳಿ = ಸೋಹು ಮೃಗ) ಮದುವೆ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತಂದೆ ತಾಯಿಗಳು ಒಂದು ಹಸುವನ್ನೋ ಎಮ್ಮೆಯನ್ನೋ ಬಳುವಳಿಯಾಗಿ ಹೊಡೆದು ಕಳಿಸುವ ಪದ್ಧತಿ ಹಿಂದೆ ಹಳ್ಳಿಗಾಡಿನಲ್ಲಿತ್ತು. ಅದರ ಉದ್ದೇಶ ಮಗಳಿಗೆ ಮಕ್ಕಳಾದರೆ ಹಾಲುತುಪ್ಪಕ್ಕೆ ಅನಾನುಕೂಲವಾಗದಿರಲಿ ಎಂಬುದೇ ಆಗಿತ್ತು.
ಪ್ರ : ಅಡೂಳಿ ಹಸ ಕೊಟ್ಟಿಗೆಗೆ ಬಂದಿಲ್ಲ, ಹೊರಗೆ ಹೋಗಿ ನೋಡ್ಕೊಂಡು ಬನ್ನಿ.
೪೬. ಅಡೂಳಿ ಐರ್ದಾಳಿ ಮುಟ್ಟದಿರು=ಅವುಗಳನ್ನು ಮಾರದಿರು, ತಿಂದು ತೇಗದಿರು.
(ಅಡೂಳಿ = ಬಳುವಳಿ ಕೊಟ್ಟ ಹಸು ಅಥವಾ ಎಮ್ಮೆ ; ಐರ್ದಾಳಿ = ಐದೆ ತಾಳಿ) ಅಡೂಳಿ ಐರ್ದಾಳಿಯಷ್ಟೆ ಪವಿತ್ರ, ಎಷ್ಟೇ ಕಷ್ಟ ಬಂದರೂ ಐರ್ದಾಳಿಯನ್ನು ಹೇಗೆ ಮಾರುವುದಿಲ್ಲವೋ ಹಾಗೆಯೇ ಅಡೂಳಿಯನ್ನೂ ಮಾರಬಾರದು ಎಂಬುದು ಮುಖ್ಯ ಆಶಯ.
ಪ್ರ : ತಾಪತ್ರಯ ನಿವಾರಣೆಗೆಂದು ಅಡೂಳಿ ಐರ್ದಾಳಿ ಮುಟ್ಟೋಕೆ ಹೋಗಬಾರ್ದು.
೪೭. ಅಡೆ ಹತ್ತದಿರು ಮೇಲೆ ಸೀಯದಿರು = ತಲೆ ತಾಕದಿರು, ಕಷ್ಟ ಅರಿವಾಗದಿರು (ಅಡೆ < ಅಡಿ = ಕೆಳಗೆ, ಹತ್ತದಿರು = ಶಾಖ ತಟ್ಟದಿರು; ಸೀಯದಿರು = ಸುಡದಿರು)
ಪ್ರ : ಅಡೆ ಹತ್ತಿ ಮೇಲೆ ಸೀದಿದ್ರೆ ಅಣ್ಣನಿಗೆ ಗೊತ್ತಾಗೋದು ಸಂಸಾರದ ಕಷ್ಟ.
೪೮. ಅಡೆ ಹಾಕು = ಒತ್ತೆ ಹಾಕು, ಹಣ್ಣು ಮಾಡು.
ದೋರೆಗಾಯಿಗಳನ್ನು ಕಿತ್ತು ಶಾಖ ಬರುವಂತೆ ಹುಲ್ಲೊಳಗೆ ಮುಚ್ಚಿ ಹಣ್ಣು ಮಾಡುವ ವಿಧಾನ. ಉದಾಹರಣೆಗೆ ಮಾವಿನ ಹಣ್ಣು, ಬಾಳೆ ಹಣ್ಣು ಇತ್ಯಾದಿ.
ಪ್ರ : ಬಾಳೆಗೊನೆ ಕಿತ್ತು ಅಡೆ ಹಾಕಬೇಕಿತ್ತು, ಹಬ್ಬದ ಹೊತ್ತಿಗೆ ಹಣ್ಣಾಗುತ್ತಿದ್ದವು
೪೯. ಅಡ್ಡೆ ಹಾಕಿ ಹೊರು = ಸಮೃದ್ಧವಾಗಿರು, ಹೊರಲಾರದಂತಿರು
(ಅಡ್ಡೆ = ಭಾರ ಹೊರುವ ಸಾಧನ, ಬಿದಿರ ಬೊಂಬು)
ಪ್ರ : ಕೋಣನಂಥ ಹಂದೀನ ಹಿಂದಿಬ್ಬರು ಮುಂದಿಬ್ಬರು ಅಡ್ಡೆ ಹಾಕಿ ಹೊತ್ಕೊಂಡು ಬಂದೆವು.
೫೦. ಅಡ್ಡೇಟಿಗೊಂದು ಗುಡ್ಡೇಟು ಹಾಕು = ಬಂಜೆ ಹೊಡೆತವನ್ನು ಹೊಡಿ
(ಅಡ್ಡೇಟು=ಅರ್ಧ ಏಟು; ಗುಡ್ಡೇಟು < ಗೊಡ್ಡು+ಏಟು = ಬಂಜೆ ಹೊಡೆತ, ಹುಸಿ ಹೊಡೆತ)
ಪ್ರ : ಎದ್ದು ಹೋಗೋ ಮಾತು ಬಿದ್ದು ಹೋಗಲಿ ಅಂತ ಇವನೂ ಅಡ್ಡೇಟಿಗೊಂದು ಗುಡ್ಡೇಟು ಹಾಕಿದ.
೫೧. ಅಣಿ ಮಾಡು = ಸಿದ್ಧ ಮಾಡು, ಸಜ್ಜುಗೊಳಿಸು
ಪ್ರ: ಒಬ್ಬಳು ಅಡಿಗೇನೆಲ್ಲ ಅಣಿ ಮಾಡಿ ಬರೋಕೆ ತಡವಾಗಲ್ವ?
೫೨. ಅಣಿ ಹಾಕು = ಮಾತಿಗೆ ಮಾತು ಕೊಕ್ಕೆ ಹಾಕು, ಮಾತಿಗೆ ಮಾತು ಜೋಡಿಸು
(ಅಣಿ = ನೇಯ್ಗೆಯಲ್ಲಿ ಹಾಸು ಹೊಕ್ಕುಗಳ ಪರಸ್ಪರ ಜೋಡಣೆ)
ಪ್ರ : ಮಾತಿಗೆ ಮಾತು ಅಣಿ ಹಾಕೋದ್ರಲ್ಲಿ ಅವನ್ನ ಬಿಟ್ರೆ ಇನ್ನಿಲ್ಲ.
೫೩. ಅತ್ತಂಡವಾಗು = ಪರಸ್ಪರ ಡಿಕ್ಕಿ ಹೊಡಿ
(ಅತ್ತಂಡ < ಇತ್ತಂಡ < ಇರ್ತಂಡ < ಎರಡು + ತಂಡ)
ಪ್ರ : ಈ ಕಡೆಯಿಂದ ಇದು ಆ ಕಡೆಯಿಂದ ಅದು ಬಂದು ಅತ್ತಂಡವಾದವು.
೫೪. ಅತ್ತಲ ಕಡ್ಡಿ ತೆಗೆದು ಇತ್ತಿಕ್ಕದಿರು = ಏನೊಂದು ಕೆಲಸವನ್ನೂ ಮಾಡದಿರು.
(ಅತ್ತಲ = ಆ ಕಡೆಯ, ಇತ್ತ = ಈ ಕಡೆ)
ಪ್ರ : ಈ ಮನೇಲಿ ಯಾರೂ ಅತ್ತಲ ಕಡ್ಡಿ ತೆಗೆದು ಇತ್ತಿಕ್ಕಲ್ಲ, ನಾನೊಬ್ಬಳೇ ಎಷ್ಟು ಅಂತ ಮಾಡಲಿ?
೫೫. ಅತ್ತೊಂದು ಮುಖ ಇತ್ತೊಂದು ಮುಖವಾಗು = ವಿರಸವುಂಟಾಗು, ಒಡಕುಂಟಾಗು
ಪ್ರ : ಅವರು ಗಂಡ ಹೆಂಡ್ರು ಹುಟ್ಟ ? ಗಂಟು ಹಾಕ್ಕೊಂಡ ನಾಯಿಗಳ ಹಂಗೆ ಗಂಡನ ಮುಖ ಅತ್ತ, ಹೆಂಡ್ರು ಮುಖ ಇತ್ತ.
೫೬. ಅದರಾಟವಾಡು = ಹಾದರಗಿತ್ತಿಯಾಟವಾಡು
(ಅದರಾಟ < ಹದರ + ಆಟ < ಹಾದರ + ಆಟ)
ಪ್ರ : ಅವಳು ಅದರಾಟ ಆಡಿದರೂ ನನ್ನ ಹತ್ರ ಅವಳ ಬೇಳೆಕಾಳು ಬೇಯಲ್ಲ
೫೭. ಅದರಿ ಹತ್ತಿ = ಮೇಲೆ ಹತ್ತು, ಸಂಭೋಗಿಸು
(ಅದರಿ < ಹಾದರಿ < ಪಾದರಿ)
ಪ್ರ : ಹೋರಿ ಹಸುವಿನ ಮೇಲೆ ಅದರಿ ಹತ್ತಿತು.
೫೮. ಅದುರುಗುಂಡಿಗೆಯಿರು = ಪುಕ್ಕಲುತನವಿರು, ಭಯವಿರು, ಎದೆಗಾರನಲ್ಲದಿರು
(ಅದುರು = ನಡುಗು, ಗುಂಡಿಗೆ = ಎದೆ)
ಪ್ರ : ಅದುರುಗುಂಡಿಗೆ ಇದ್ದೋರು ಎದುರು ತಾಕಿ ಹೊಡೆದಾಟಕ್ಕಿಳಿದಾರ?
೫೯. ಅದುಮಿಕೊಂಡಿರು = ಬಾಯ್ಮುಚ್ಚಿಕೊಂಡಿರು, ಮೇಲೆ ಕೆಳಗೆ ಮುಚ್ಚಿಕೊಂಡಿರು
ಪ್ರ : ಅದುಮಿಕೊಂಡು ಸುಮ್ಮನೆ ಕುಂತಿದ್ರೆ ಗೆದ್ದೆ, ಇಲ್ಲದಿದ್ದರೆ ತದಕಬಿಡ್ತೀನಿ.
೬೦. ಅದ್ದುಕೊಳ್ಳು = ತೊಡಗು, ಮುಳುಗು
(ಅದ್ದು < ಅಳ್ದು = ಮುಳುಗು, ಮುಳುಗಿಸು)
ಪ್ರ : ಎದ್ದಾಗಲೇ ಅಡಿಗೆ ಕೆಲಸಕ್ಕೆ ಅದ್ದುಕೊಂಡರೂ ಮಧ್ಯಾಹ್ನವಾದರೂ ಮುಗೀಲಿಲ್ಲ.
೬೧. ಅಧ್ವಾನವಾಗು = ಹಾಳಾಗು, ಕೆಟ್ಟು ಹೋಗು
(ಧ್ವಾನ = ಸ್ವರ, ಅಧ್ವಾನ = ಅಪಸ್ವರ)
ಪ್ರ : ಕಷ್ಟ ಪಟ್ಟು ಕೂಡಿ ಹಾಕಿದ ಬದುಕು ಕೊನೆಗೆ ಅಧ್ವಾನವಾಗಿಬಿಡ್ತು
೬೨. ಅನ್ನ ಅನ್ನ ನೀರು ಅನ್ನಿಸಿಬಿಡು = ಯಮ ಹಿಂಸೆ ಕೊಡು, ಅನ್ನ ನೀರು ಕೊಡದೆ ಹಿಂಸಿಸು
ಪ್ರ: ಅನ್ನ ಅನ್ನ ನೀರು ನೀರು ಅನ್ನಿಸಿದಾಗಲೇ ಈ ಜನ ಮಾತು ಕೇಳೋದು.
೬೩. ಅನ್ನ ತಿನ್ನೋ ಬಾಯಲ್ಲಿ ಹೇಲು ತಿನ್ನು = ಸುಳ್ಳು ಹೇಳು, ತಪ್ಪು ಮಾತಾಡು
ಪ್ರ : ಅನ್ನ ತಿನ್ನೋ ಬಾಯಲ್ಲಿ ಹೇಲು ತಿಂದ್ರೆ ದೇವರು ಮೆಚ್ತಾನಾ?
೬೪. ಅನ್ನದ ಬಾಯಿಗೆ ಮಣ್ಣು ಹಾಕು = ಕೆಡಕು ಮಾಡು, ಜೀವನ ಮಾರ್ಗ ತಪ್ಪಿಸು
ಪ್ರ : ಕೊನೆಗೂ ನನ್ನ ಅನ್ನದ ಬಾಯಿಗೆ ಮಣ್ಣು ಹಾಕಿ ಬಿಟ್ಟ, ಮನೆಹಾಳ.
೬೫. ಅನಾದ್ರಿಯಾಗು = ಆಶ್ರಯವಿಹೀನವಾಗು, ಅನಾಥವಾಗು
(ಅನಾದ್ರಿ < ಅನ್ಯಾಧಾರಿ? = ಅನಾಥ, ನಿರ್ಗತಿಕ)
ಪ್ರ: ಅನಾದ್ರಿಯಾದ ಮೇಲೆ ಅನ್ನಕ್ಕೆ ಅಲೆಯೋದು ತಪ್ತದ?
೬೬. ಅನಾಯಕವಾಗು = ಹೇಳೋರು ಕೇಳೋರು ಇಲ್ಲದಂತಾಗು
ಪ್ರ : ಆ ಊರು ಅನಾಯಕವಾಗಿ ಅನಾಮತ್ತು ಹಾಳಾಯ್ತು
೬೭. ಅನ್ನಾನ್ನಗತಿಕನಾಗು = ನಿರ್ಗತಿಕನಾಗು, ಅನ್ಯರ ಅನ್ನಕ್ಕೆ ಕೈಯೊಡ್ಡುವಂತಾಗು
(ಅನ್ನಾನ್ನಗತಿಕ < ಅನ್ಯಾನ್ನಗತಿಕ = ಬೇರೆಯವರು ಹಾಕುವ ಅನ್ನವೇ ಗತಿಯಾದವನು)
ಪ್ರ : ಎಲ್ಲ ಕಳಕೊಂಡು ಅನ್ನಾನ್ನಗತಿಕನಾಗಿ ಊರೂರು ಅಲೆದೆ
೬೮. ಅನ್ನಾಯ ಅಪರದಂಡವಾಗು = ವ್ಯರ್ಥ ಖರ್ಚಾಗು
(ಅನ್ನಾಯ < ಅನ್ಯಾಯ ; ಅಪರದಂಡ = ಉತ್ತರಕ್ರಿಯೆಯ ಖರ್ಚು)
ಪ್ರ : ಅಪ್ಪ ದುಡಿದದ್ನೆಲ್ಲ ಮಗ ಅನ್ನಾಯ ಅಪರದಂಡ ಮಾಡಿದ.
೬೯. ಅನ್ರಾಸ ಕಾಣದವರಂಗೆ ಮುಕ್ಕು = ಅನ್ನದ ಮುಖ ಕಾಣದವರಂತೆ ಗಬಗಬನೆ ತಿನ್ನು
(ಅನ್ರಾಸ < ಅನ್ನರಸ ; ಮುಕ್ಕು < ಭುಕ್ = ತಿನ್ನು)
ಪ್ರ: ಆ ಜನ ಅನ್ರಾಸ ಕಾಣದವರಂಗೆ ಒಂದೇ ಸಮ ಮುಕ್ಕಿ ಹಾಕಿಬಿಟ್ರು.
೭೦. ಅನ್ನ ಹಾಕಿದ ಮನೆಗೆ ಕನ್ನ ಹಾಕು = ಉಪಕಾರ ಮಾಡಿದವರಿಗೆ ಅಪಕಾರ ಮಾಡು
(ಕನ್ನ ಹಾಕು = ಮನೆಗೆ ರಂದ್ರ ಕೊರೆದು ದೋಚು)
ಪ್ರ : ಅನ್ನ ಹಾಕಿದ ಮನೆಗೆ ಕನ್ನಹಾಕೋ ಜನಾನ ನಂಬಿದೋರುಂಟ ?
೭೧. ಅನುಗೆಡಿಸು = ಹದಗೆಡಿಸು, ಹಾಳು ಮಾಡು.
(ಅನುಗೆಡಿಸು < ಅನುವು + ಕೆಡಿಸು; ಅನುವು = ಹದ, ಸಾಮರಸ್ಯ)
ಪ್ರ: ಮನೆಯೋರು ಸುಮ್ನಿದ್ದರೂ ಮಧ್ಯದೋರು ಅನುಗೆಡಿಸಿಕ್ಕಿಬಿಟ್ರು
೭೨. ಅನುಮನಸು ಮಾಡು = ಸಂದೇಹಿಸು, ಡೋಲಾಯಮಾನ ಮನಸ್ಸು ಮಾಡು
(ಅನುಮನಸ್ಸು < ಅನ್ಯಮನಸ್ಸು = ಹಿಂದೇಟು ಹಾಕುವ ಮನಸ್ಸು)
ಪ್ರ : ಅವನ ಮುಖ ನೋಡಿದೇಟಿಗೇ ಅನುಮನಸು ಮಾಡಿದೆ, ನಂಬಕ್ಕಾಗಲ್ಲ ಅಂತ.
೭೩. ಅನುವು ಅನ್ನದಿರು ಆಪತ್ತು ಅನ್ನದಿರು = ಬೇಜವಾಬ್ದಾರಿಯಿಂದಿರು, ಕಷ್ಟ ಸುಖ ವಿಚಾರಿಸದಿರು
(ಅನುವು = ಸುಖ ಸಾಮರಸ್ಯ; ಆಪತ್ತು = ತೊಂದರೆ, ಗಂಡಾಂತರ)
ಪ್ರ : ಅನುವು ಅನ್ನಂಗಿಲ್ಲ ಆಪತ್ತು ಅನ್ನಂಗಿಲ್ಲ, ಖರ್ಚಿಗೆ ದುಡ್ಡು ಹಿರಿದಿರಿದು ಕೊಡಬೇಕು.
೭೪. ಅನ್ನು ಆಡು = ಹೀಯಾಳಿಸು, ಕೆಟ್ಟ ಮಾತಾಡು
(ಅನ್ನು ಆಡು = ಬಯ್ಯು)
ಪ್ರ : ಅವರು ನನ್ನನ್ನ ಒಂದಂದು ಒಂದಾಡಿ ಬಿಟ್ಟಿಲ್ಲ, ಅದನ್ನೆಲ್ಲ ನೆನಸಿಕೋಬಾರ್ದು
೭೫. ಅಪ್ಪಚ್ಚಿ ಮಾಡು = ದುಂಡಗಿದ್ದುದನ್ನು ಅರೆದಂತೆ ಚಪ್ಪಟೆ ಮಾಡು
(ಅಪ್ಪಚ್ಚಿ = ರೊಟ್ಟಿ)
ಪ್ರ : ಆ ದೊಂಬಿ ಜನ ಮುದಕನ್ನ ತುಳಿದು ಅಪ್ಪಚ್ಚಿ ಮಾಡಿಬಿಟ್ಟವರೆ
೭೬. ಅಪ್ಪನಿಗೆ ಹುಟ್ಟಿದ ಮಾತಾಡು = ಒಳ್ಳೆಯ ಮಾತಾಡು, ಅಡ್ನಾಡಿ ಮಾತಾಡದಿರು
ಪ್ರ: ಅಪ್ಪನಿಗೆ ಹುಟ್ಟಿದ ಮಾತಾಡಿದರೆ ಒಪ್ಕೋಬಹುದು.
೭೭. ಅಪ್ಪಂತೋನಾಗು = ಸಭ್ಯನಾಗು, ಕುಲೀನನಾಗು, ಸಂಭಾವಿತನಾಗು
ಪ್ರ : ಗಾದೆ – ಅಪ್ಪಂಥೋನಿಗೆ ಇಪ್ಪತ್ತೊಂದು ಕಾಯಿಲೆ
೭೮. ಅಪ್ಪಾರ ನೀಡು = ಹೆಚ್ಚಿಗೆ ಕೊಡು
(ಅಪ್ಪಾರ < ಅಪಾರ = ತೀರವಿಲ್ಲದಷ್ಟು; ಪಾರ = ತೀರ)
ಪ್ರ : ತನ್ನ ಮಕ್ಕಳಿಗೆ ಅಪ್ಪಾರ ಕೊಟ್ಟು ಸವತಿ ಮಕ್ಕಳಿಗೆ ಕಮ್ಮಿ ಕೊಟ್ರೆ ದೇವರು ಒಪ್ತಾನ?
೭೯. ಅಪ್ಪಾರ ತಿಂದು ಒಪ್ಪಾರ ಹಾಕು = ಅನ್ಯಾಯವಾಗಿ ತಿಂದದ್ದು ಮೈ ಹತ್ತದಿರು
(ಒಪ್ಪಾರ < ಒರ್‌+ಪಾರ = ಇಳಿಜಾರಾದ ಚಾವಣಿ, ಗುಡಿಸಲು)
ಪ್ರ : ಅಪ್ಪಾರ ತಿಂದು ತೇಗಿದೋನು ಒಪ್ಪಾರ ಹಾಕ್ಕೊಂಡು ಕಾಲ ಕಳೀತಾ ಅವನೆ.
೮೦. ಅಪ್ಪಾಳೆ ತಿಪ್ಪಾಳೆ ಆಡಿಸು = ಗರಗರನೆ ತಿರುಗಿಸು, ಚಿಟುಕುಮುಳ್ಳಾಡಿಸು, ಹಿಂಸಿಸು
(ಅಪ್ಪಾಳೆ ತಿಪ್ಪಾಳೆ = ಒಂದು ಜನಪದ ಕ್ರೀಡೆ) ಮಕ್ಕಳು ಎದುರು ಬದುರು ನಿಂತು, ಒಬ್ಬರ ಅಂಗೈ ಬೆರಳುಗಳಿಗೆ ಮತ್ತೊಬ್ಬರ ಅಂಗೈಬೆರಳುಗಳನ್ನು ಮಲಕು ಹಾಕಿಕೊಂಡು, ದೇಹವನ್ನು ಹಿಂದಕ್ಕೆ ತೋತು, ಇಬ್ಬರೂ ಗರಗರನೆ ತಿರುಗುವ ಆಟ. ಅಥವಾ ದೊಡ್ಡವರು ಸಣ್ಣ ಮಕ್ಕಳ ರೆಟ್ಟೆ ಹಿಡಿದು ಸುತ್ತಲೂ ಗರಗರನೆ ತಿರುಗಿಸುವ ಆಟ.
ಪ್ರ : ಅವನು ಇವತ್ತು ಸಿಕ್ಕಿದ, ಚೆನ್ನಾಗಿ ಚಪ್ಪಾಳೆ ಅಪ್ಪಾಳೆ ತಿಪ್ಪಾಳೆ ಆಡಿಸಿ, ಸಾಕಪ್ಪ ಇವನ ಸಾವಾಸ ಅನ್ನೋಂಗೆ ಮಾಡಿ ಬಂದಿದ್ದೀನಿ.

೪) ಜನಪದ ನುಡಿಗಟ್ಟುಗಳ ಕೋಶ: ಪ್ರಸ್ತಾವನೆ (೨)

‘ಹುಗ್ಯೋ ಎನ್ನು’ (= ಉಘೇ ಎಂದು ಕೂಗುತ್ತಾ ಓಡಾಡು) ಎಂಬ ನುಡಿಗಟ್ಟು ಬೆಳೆಗೆ ಬಲಿ ಚೆಲ್ಲುವ ಆಚರಣೆಯನ್ನು ಒಳಗೊಂಡಿರುವಂಥದ್ದು. ಮಹಾನವಮಿ ಕಾಲದಲ್ಲಿ ಸುತ್ತುಮುತ್ತ ತಲೆದೂಗುವ ಬೆಳೆಯಲ್ಲಿ ಹಸುರು ಮಡುಗಟ್ಟಿರುತ್ತದೆ. ‘ಮಾರ್ನಾಮಿ ಅಷ್ಟೊತ್ತಿಗೆ ಮಾನೆಲ್ಲ ಹೊಡೆ’ ಎಂಬ ಜನಪದ ಗಾದೆ, ತೆನೆಯಾಗುವ ಹಂತಕ್ಕೆ ಬೆಳೆ ಬೆಳೆದಿರುವುದನ್ನು ಸೂಚಿಸುತ್ತದೆ. ಹಸಿರು ಬೆಳೆಗೆ ದೃಷ್ಟಿ ತಾಕುವುದೆಂದೋ ಅಥವಾ ‘ಹೊಲದಮ್ಮ’ನಿಗೆ ಬಲಿ ಚೆಲ್ಲಬೇಕೆಂದೋ ‘ಬಲಿ ಚೆಲ್ಲುವ’ ಆಚರಣೆ ಹಳ್ಳಿಗಾಡಿನಲ್ಲಿ ಉಂಟು. ಇದರಲ್ಲಿ ಹಸಿರು ಬಲಿ, ರಕ್ತ ಬಲಿ ಎಂದು ಎರಡು ವಿಧ. ಹಸಿರು ಬಲಿ ಎಂದರೆ ಕರಿಮೀನು ಸಾರಿನಲ್ಲಿ ಸ್ಯಾವೆ ಅಕ್ಕಿ ಅನ್ನವನ್ನು ಕಲಸಿ, ಕಬ್ಬಿಣದ ಕಡ್ಡಿಯಿಂದ ಎಲೆಗುದ್ದಲಿಯ ತಗಡನ್ನು ಬಡಿಯುತ್ತಾ, ಹುಗ್ಯೋ ಹುಗ್ಯೋ ಎಂದು ಕೂಗುತ್ತಾ, ಊರಸುತ್ತಿನ ಬೆಳೆಗೆಲ್ಲ ಅನ್ನದುಂಡೆಯನ್ನು ಎಸೆಯುತ್ತಾ ತೋಟಿ ಪೈಗೋಲಿನಂತೆ ಓಡುತ್ತಾನೆ. ರಕ್ತ ಬಲಿ ಎಂದರೆ ಮರಿ ಅಥವಾ ಹಂದಿಯನ್ನು ಕುಯ್ದು, ಅದರ ರಕ್ತದಲ್ಲಿ ನೆಲ್ಲಕ್ಕಿ ಅನ್ನವನ್ನು ಕಲಸಿ, ಆ ಉಂಡೆಯನ್ನು ಬೆಳೆಗೆಲ್ಲ ಎಸೆದುಕೊಂಡು ಬರುತ್ತಾನೆ. ಗ್ರಹಣವಾದಾಗಲೂ ರೋಗ ಬಡಿಯುತ್ತದೆಂದು ಹೀಗೆ ಮಾಡುವುದುಂಟು. ತೋಟಿ ಬಲಿ ಚೆಲ್ಲುತ್ತಾ, ಹುಗ್ಯೋ ಹುಗ್ಯೋ ಎಂದು ಕೂಗುತ್ತಾ, ಊರಸುತ್ತಿನ ಜಮೀನುಗಳನ್ನೆಲ್ಲ ಬಾರಾಡುವುದರಿಂದಲೇ “ಊರೆಲ್ಲ ಹುಗ್ಯೋ ಅಂತಾಳೆ, ಗಾಣಿಗರ ಮನೆ ಕಾಣೆ ಅಂತಾಳೆ” ಎಂಬ ಜನಪದ ಗಾದೆ ಹುಟ್ಟಿರುವುದು; ಮಾಯಾಂಗನೆಯ ಮರ್ಮಕ್ಕೆ ತಾಕುವಂತೆ ಅವಳ ಬಾರಾಡುವ ಸ್ವಭಾವವನ್ನು ಹರಾಜು ಎತ್ತಿರುವುದು.
‘ಸಿಡಿದಲೆ ಎತ್ತು’ ಎಂಬ ನುಡಿಗಟ್ಟು ಭಯಾನಕ ಆಚರಣೆಯ ಕೂಸು; ಅಮಾನವೀಯ ರಾಕ್ಷಸ ಕೃತ್ಯ. ತಪ್ಪು ಮಾಡಿದ ವ್ಯಕ್ತಿಯನ್ನು ಮೂಡು ಮುಂತಾಗಿ ಕೂಡಿಸಿ, ಅವನಿಂದ ಸ್ವಲ್ಪ ದೂರದ ಅಂತರದಲ್ಲಿ ನೆಟ್ಟಿರುವ ಸಣ್ಣಗಳುವಿನ ತುದಿಯನ್ನು ಅವನ ತಲೆಯ ಬಳಿಗೆ ಬರುವಂತೆ ಬಗ್ಗಿಸಿ, ಅವನ ತಲೆಗೂದಲನ್ನು ಅದರ ತುದಿಗೆ ಗಂಟು ಹಾಕುತ್ತಾರೆ. ಕೊಲೆಗಡುಕನೊಬ್ಬ ಆ ವ್ಯಕ್ತಿಯ ಕುತ್ತಿಗೆಯನ್ನು ಮರಿ ಕಡಿದಂತೆ ಕಡಿದಾಗ, ಬಗ್ಗಿಸಿದ್ದಗಳು ತಲೆಯ ಸಮೇತ ನೆಟ್ಟಗೆ ನಿಂತುಕೊಳ್ಳುತ್ತದೆ; ವ್ಯಕ್ತಿಯ ತಲೆ ಗಳುವಿನಲ್ಲಿ ಬಾವುಟದಂತೆ ಅಲುಗಾಡುತ್ತದೆ. ಇಂಥ ಕರಾಳ ರಾಕ್ಷಸ ಆಚರಣೆ ಇತ್ತು ಎಂಬುದಕ್ಕೆ ‘ಸಿಡಿದೆಲೆಯೆತ್ತು’ ಎಂಬ ನುಡಿಗಟ್ಟು ಸಾಕ್ಷ್ಯವನ್ನು ಒದಗಿಸುತ್ತದೆ. ಹೀಗೆಯೇ ಗಾವಿನ ಮರಿ ಸಿಗಿದಂತೆ ಸಿಗಿ, ಸಿಡಿಯಾಡಿಸು, ನಾಲಗೆ ಇರಿದುಕೊಳ್ಳು ಮುಂತಾದ ಆಚರಣೆಗಳು, ಇರುವುದನ್ನು ಕಾಣುತ್ತೇವೆ.
ಬೈಗುಳ ಮೂಲದ ನುಡಿಗಟ್ಟುಗಳನ್ನೀಗ ವಂದರಿಯಾಡಬಹುದು.
ಮರಣ ಹೊಂದು ಎಂಬ ಅರ್ಥದ ‘ಮಕ ಮಕಾಡೆ ಹಾಕು’ ಎಂಬ ನುಡಿಗಟ್ಟು ಮೇಲೆ ಕಾಣುವುದಕ್ಕಿಂತ ವಿಶೇಷವಾದ ಅರ್ಥವನ್ನು ಒಳಗೊಂಡಿದೆ. ಮಕಾಡೆ ಎಂದರೆ ಮುಖ + ಅಡಿಯಾಗಿ ಎಂದರ್ಥ. ಸತ್ತವರನ್ನು ಅಂಗಾತ ಮಲಗಿಸಿ ಮೇಲೆ ಮಣ್ಣೆಳೆಯುವುದರಿಂದಲೇ ‘ನಿನ್ನ ಬಾಯಿಗೆ ಮಣ್ಣು ಹಾಕ’ ಎಂಬ ಬೈಗುಳದ ನುಡಿಗಟ್ಟು ಚಾಲ್ತಿಗೆ ಬಂದಿರುವುದು. ಆದರೆ ಪ್ರಸ್ತುತ ನುಡಿಗಟ್ಟು ಸಂಸ್ಕಾರದ ರೀತಿ ರಿವಾಜವನ್ನು ತಿರುಗಾಮುರುಗಾ ಮಾಡಿರುವುದನ್ನು ಕಾಣಬಹುದು. ಲೇಸಿಗನಿಗೆ ಸದ್ಗತಿ ದೊರೆಯಲೆಂದು ಊರ್ಧ್ವಮುಖಿಯಾಗಿ ಮಲಗಿಸಿ ಮಣ್ಣೆಳೆದರೆ, ಕೇಡಿಗನಿಗೆ ದುರ್ಗತಿ ದೊರೆಯಲೆಂದು ಅಧೋಮುಖಿಯಾಗಿ ಮಲಗಿಸಿ ಮಣ್ಣೆಳೆಯುವ ಆಶಯ ಈ ಬೈಗುಳದ ನುಡಿಗಟ್ಟಿನಲ್ಲಿದೆ. ಕೇಡಿಗ ಎಂದು ಹೆಸರಿಸದೆ, ಕೇಡಿಗತನವನ್ನು ತುಂಬ ಮಾರ್ಮಿಕವಾಗಿ ವ್ಯಕ್ತಪಡಿಸುವುದು ನಮ್ಮ ಜನಪದರ ಜಾಣತನಕ್ಕೆ, ಅಭಿವ್ಯಕ್ತಿ ವೈಚಿತ್ರಕ್ಕೆ ಸಾಕ್ಷಿಯಾಗಿದೆ.
ಮರಣ ಹೊಂದು ಎಂಬ ಅರ್ಥದ ‘ನಾಲೋರ ಹೆಗಲ ಮೇಲೆ ನಗನಗ್ತಾ ಹೋಗು’ ಎಂಬ ನುಡಿಗಟ್ಟು ಪರಿಹಾಸ್ಯ ಲೇವಡಿಯ ಕಟುವ್ಯಂಗ್ಯದಿಂದ ಕೂಡಿದೆ. ಒಳ್ಳೆಯವರು ಸತ್ತರೆ ಚಟ್ಟದ ಮುಂಭಾಗದಲ್ಲಿ ವಾಲಗ ಊದುವ ಮೇಳದವರಿದ್ದರೆ, ಹಿಂಭಾಗದಲ್ಲಿ ‘ಹೋದೆಯಲ್ಲೋ ಯಪ್ಪ, ನಮಗಿನ್ಯಾರೋ ದಿಕ್ಕು’ ಎಂದು ಅತ್ತು ಕರೆಯುವ ಹೆಂಗಸರ ಮಕ್ಕಳ ಹಿಮ್ಮೇಳವಿರುತ್ತದೆ. ಆದರೆ ಕೆಟ್ಟವರು ಸತ್ತರೆ “ಕೇಡಿಗ ನನ್ಮಗ ಹೋದ” ಎಂದು ಎಲ್ಲರ ಮುಖದ ಮೇಲೂ ಸಮಾಧಾನದ ನಸುನಗು ಮಿನುಗುತ್ತಿರುತ್ತದೆ. ಈ ಬೈಗುಳದ ನುಡಿಗಟ್ಟಿನಲ್ಲಿ ನೀನು ಸತ್ತರೆ ಒಂದು ನರಪಿಳ್ಳೆ ಅಳಲ್ಲ, ಎಲ್ಲರೂ ನಗ್ತಾರೆ ಎಂಬ ಛೇಡಿಕೆ ಇರುವುದನ್ನು ಕಾಣಬಹುದು.
ಮರಣ ಹೊಂದು ಎಂಬ ಅರ್ಥದ “ಆಪತ್ತು ಬಂದು ಚಾಪೇಲಿ ಸುತ್ಕೊಂಡು ಹೋಗು’ ಎಂಬ ನುಡಿಗಟ್ಟು ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. ಇಲ್ಲಿ ‘ನಿನ್ನ ಗಂಡ ಸಾಯ, ಹೆಂಡ್ರು ಸಾಯ’ ಎಂದು ಬಯ್ಯುತ್ತಿಲ್ಲ; ‘ನಿನ್ನ ಮಕ್ಕಳು ಸಾಯ ಎಂದು ಬಯ್ಯುವುದು ಇದರ ಆಶಯವಾಗಿದೆ. ಮಕ್ಕಳು ಎಂದು ನೇರವಾಗಿ ಹೆಸರಿಸದೆ ಸಂಸ್ಕಾರದ ರೀತಿ ರಿವಾಜಿನ ಮೂಲಕ ಅದನ್ನು ಧ್ವನಿಸಿರುವ ಜನಪದರ ಜಾಣ್ಮೆ ಮೆಲುಕು ಹಾಕುವಂಥದು. ಮದುವೆಯಾದವರನ್ನು ಚಟ್ಟದ ಮೇಲೆ ಸಾಗಿಸದೆ, ಚಾಪೆಯಲ್ಲಿ ಸುತ್ತಿಕೊಂಡು ಗುಂಡಿಯ ಬಳಿಗೆ ತೆಗೆದುಕೊಂಡು ಹೋಗಿ ಮಣ್ಣು ಮಾಡಬೇಕೆಂದೂ ಕಟ್ಟುಕಟ್ಟಳೆ ಇದ್ದುದರ ಪರಿಣಾಮವೇ ಈ ನುಡಿಗಟ್ಟು. ಒಟ್ಟಿನಲ್ಲಿ ಈ ಬೈಗುಳದ ನುಡಿಗಟ್ಟುಗಳಲ್ಲಿ ಸಂಸ್ಕಾರಕ್ರಿಯೆಯ ರೀತಿರಿವಾಜುಗಳು ಅಡಕವಾಗಿವೆ.
‘ಕಂದನ್ನ ಕಾಲು ದೆಸೆ ಹಾಕು’ ಎಂಬ ಬೈಗುಳದ ನುಡಿಗಟ್ಟು ‘ನೀನು ಸತ್ತ ಮಗು ಹೆರುವಂತಾಗಲಿ’ ಎಂದು ನೇರವಾಗಿ ಶಾಪ ಹಾಕದೆ, ರೀತಿ ರಿವಾಜಿನ ಮೂಲಕವೇ ಅದನ್ನು ಧ್ವನಿಸಿರುವ ಪರಿ ನಿಜಕ್ಕೂ ಅಚ್ಚರಿ ! ಸಾಮಾನ್ಯವಾಗಿ ಮಕ್ಕಳು ಹುಟ್ಟಿದಾಗ ಹೊಕ್ಕುಳ ಬಳ್ಳಿ ಕುಯ್ದು, ಮಗುವನ್ನು ಮೊರಕ್ಕೆ ಹಾಕುವ ಪದ್ಧತಿ ಇದೆ. ಆದರೆ ಸತ್ತ ಮಕ್ಕಳನ್ನು ಹೆತ್ತರೆ ಮೊರಕ್ಕೆ ಹಾಕದೆ, ಬಾಣಂತಿಯ ಕಾಲುದೆಸೆ ಹಾಕುವ ಪರಿಪಾಠವಿತ್ತು. ಆ ಪದ್ಧತಿಯ ಪದಾರ್ಥವೇ ಈ ನುಡಿಗಟ್ಟು. ಒಟ್ಟಿನಲ್ಲಿ ಬೈಗುಳದ ನುಡಿಗಟ್ಟುಗಳು ಆಚಾರವಿಚಾರಗಳ ಮೇಲೆ ಬೆಳಕು ಚೆಲ್ಲುವ ಬೆಳಕಿಂಡಿಗಳಾಗಿವೆ ಎನ್ನಬಹುದು.
ಈಗ ಬೇಸಾಯ ವೃತ್ತಿ ಮೂಲದ ನುಡಿಗಟ್ಟುಗಳ ಸೀಳುಕ್ಕೆ ಅಡ್ಡುಕ್ಕೆ ಹೊಡೆಯಬಹುದು.
ಅತಿರೇಕ ಅನಾನುಕೂಲವಾಗು ಎಂಬ ಅರ್ಥದ ‘ಕಡಿದಾದರೂ ಕಷ್ಟವಾಗು ಬಳಿದಾದರೂ ಕಷ್ಟವಾಗು’ ಎಂಬ ನುಡಿಗಟ್ಟು ಬೇಸಾಯದ ಓನಾಮ ಸ್ವರೂಪಿಯಾದುದು. ಹೊಲ ಉಳಲು ನೇಗಿಲು ಕಟ್ಟುವ ರೈತ, ನೇಗಿಲಿನ ಈಚವನ್ನು ಎತ್ತುಗಳ ಹೆಗಲ ಮೇಲಿರುವ ನೊಗಕ್ಕೆ ಉಳೋ ಹಗ್ಗದಲ್ಲಿರುವ ಕೊರಡಿಗೆಯ ಸಹಾಯದಿಂದ ಜರುಗಾಡದಂತೆ ಬಿಗಿಯಾಗಿ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಈಚದ ತುದಿಗೆ ಕಟ್ಟಿದರೆ, ನೇಗಿಲಿನ ಗುಳದ ಭಾಗ ನೆಲಕ್ಕೆ ಮುಖ ಮಾಡಿ, ಹಿಂದಿನ ನೇಗಿಲಿನ ಅಂಡು ಮತ್ತು ಮೇಣಿಯ ಭಾಗ ಮೇಲಕ್ಕೇಳುವುದರಿಂದ ಉಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಡಿದಾಯ್ತು ಎನ್ನುತ್ತಾರೆ. ಆಗ ರೈತ ಈಚವನ್ನು ನೊಗದ ಮೇಲಕ್ಕೆ ಹೆಚ್ಚು ಏರು ಹಾಕಿ ಕಟ್ಟಿದರೆ ನೇಗಿಲನ ಹಿಂದಿನ ಭಾಗ ಭಾಗ ನೆಲಕ್ಕೆ ಕೂತು, ಗುಳದ ಭಾಗ ನೆಲಕ್ಕೆ ತಾಕದೆ ಮೇಲೇಳುವುದರಿಂದ ಉಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬಳಿದಾಯ್ತು ಎನ್ನುತ್ತಾರೆ. ಆದ್ದರಿಂದ ಕಡಿದು ಮತ್ತು ಬಳಿದು ಎಂಬ ಶಬ್ದಗಳು ವ್ಯವಸಾಯ ಹೆತ್ತ ಕೂಸುಗಳು. ಯಾವುದೇ ಅತಿರೇಕ ಅನಾನುಕೂಲ, ಸಮತೂಕ ಅನುಕೂಲ ಅನುಕೂಲ ಎಂಬುದನ್ನು ಈ ನುಡಿಗಟ್ಟು ಚಿತ್ರವತ್ತಾಗಿ ಬಿಡಿಸಿಟ್ಟಿದೆ.
ಸಹಕರಿಸದಿರು, ಕಳಚಿಕೊಳ್ಳು ಎಂಬ ಅರ್ಥದ ‘ಕಣ್ಣಿ ಹಾಕು’ ಎಂಬ ನುಡಿಗಟ್ಟು ಒಂದು ರೀತಿಯಲ್ಲಿ ಮೂಗೆತ್ತುಗಳ ಪರೋಕ್ಷ ಪ್ರತಿಭಟನೆ ಎನ್ನಬಹುದು. ನೇಗಿಲಿಗೋ ಅಥವಾ ಗಾಡಿಗೋ ಕಟ್ಟುವ ಎತ್ತುಗಳ ಹೆಗಲ ಮೇಲೆ ನೊಗವನ್ನು ಇಟ್ಟು, ಕಣ್ಣಿ ಅಗಡಿನಿಂದ ಕೊರಳನ್ನು ಸುತ್ತು ಹಾಕಿ ನೊಗದ ಒಳ್ಳಂಗೂಟಕ್ಕೆ ಅದನ್ನು ಚಿಮರ (ಮಲುಕು)ಹಾಕಿ ಕಟ್ಟುತ್ತಾರೆ. ಇನ್ನು ಎಳೆಯಲಾರೆ ಎನ್ನಿಸಿದಾಗ, ಎತ್ತುಗಳು ಕಷ್ಟಪಟ್ಟು ಹೆಗಲ ಮೇಲಿಂದ ನೊಗ ಕೆಳಕ್ಕೆ ಬೀಳುವಂತೆ ಮಾಡಿ ನಿಂತು ಬಿಡುತ್ತವೆ. ಇದಕ್ಕೆ ಕಣ್ಣಿ ಹಾಕಿದವು ಎನ್ನುತ್ತಾರೆ. ಅಶಕ್ತಿ ಅಸಹಾಯಕತೆಯ ಹಂತದಲ್ಲಿ ಅಸಹನೆ ಅಸಹಕಾರ ಕುಡಿಯೊಡೆದಿರುವುದನ್ನು ಇಲ್ಲಿ ಕಾಣಬಹುದು.
‘ರಜವನ್ನು ರಾಶಿ ಮಾಡು’ ಎಂಬ ನುಡಿಗಟ್ಟು ಜನಪದರು ಅನ್ನದೇವರಿಗೆ ಸಲ್ಲಿಸುವ ಭಕ್ತಿ ಪೂಜೆಗಳ ಪ್ರತೀಕವಾಗಿದೆ. ಕಡೆಗಣದಲ್ಲಿ ಒಕ್ಕ ಧಾನ್ಯವನ್ನೆಲ್ಲ ಮೇಟಿಯ ಸುತ್ತ ರಾಶಿ ಮಾಡಿ, ರಾಶಿ ಪೂಜೆಯನ್ನು ಮಾಡಿದ ನಂತರವೇ ಧಾನ್ಯವನ್ನು ಮನೆಗೆ ಸಾಗಿಸುವುದು. ರಾಶಿ ಪೂಮೆ ಮಾಡದೆ ಸಾಗಿಸುವುದಿಲ್ಲ. ಧಾನ್ಯ ಒಕ್ಕಣೆಯ ಕಣದಲ್ಲಿ ಎಲ್ಲ ವಸ್ತುಗಳ ದಿನನಿತ್ಯದ ಹೆಸರಲ್ಲಿ ಕರೆಯದೆ, ಬೇರೊಂದು ಹೆಸರಲ್ಲಿ ಕರೆಯುವ ಪದ್ಧತಿಯಲ್ಲಿ ಒಂದು ಬಗೆಯ ಕಲ್ಯಾಣ ದೃಷ್ಟಿಯನ್ನು ಕಾಣುತ್ತೇವೆ. ಉದಾಹರಣೆಗೆ ರಾಗಿಯನ್ನು ‘ರಜ’ ಎಂದು, ಮೊರವನ್ನು ‘ಕೊಂಗು’ ಎಂದು, ಗುಡಿಸುವ ಬರಲನ್ನು ‘ಹಿಡಿಗಲು’ ಎಂದು, ಧಾನ್ಯ ತೂರಲು ಬಳಸುವ ಎತ್ತರವಾದ ಉದ್ದಿಗೆಯನ್ನು ‘ಕುದುರೆ’ ಎಂದು, ಜರಡಿಯನ್ನು ‘ವಂದರಿ’ ಎಂದು, ಎತ್ತನ್ನು ‘ಬಸವ’ ಎಂದು, ಸಗಣಿಯನ್ನು ‘ಬೂದ’ ಎಂದು, ರಾಗಿಹುಲ್ಲಿನ ಕಡ್ಡಿಯನ್ನು ‘ನಾಮ’ ಎಂದು, ರಾಗಿ ಹುಲ್ಲಿನ ಗರಿಯನ್ನು ‘ಪತ್ರೆ’ ಎಂದು, ಗಾಳಿಗೆ ವಾಸುದೇವರು < ‘ವಾಯುದೇವರು’ ಎಂದು – ಹೀಗೆ ಪ್ರತಿಯೊಂದನ್ನು ಮೀಸಲು ಹೆಸರಿನಿಂದ ಕರೆಯಲಾಗುತ್ತದೆ. ಅನ್ನ ದೇವರ ಆವಾಸಸ್ಥಾನವಾದ ಕಣದಲ್ಲಿ ‘ಮಡಿನುಡಿ’ ಯನ್ನು ಬಳಸಬೇಕೆಂಬ ಭಕ್ತಿ ಭಾವನೆ ಇದಕ್ಕೆ ಕಾರಣವಾಗಿರಬೇಕು ಎನ್ನಿಸುತ್ತದೆ. ‘ರಾಶಿಪೂಜೆ’ ಜನಪದ ಸಂಸ್ಕೃತಿಯ ದ್ಯೋತಕವಾಗಿದೆ.
ಈಗ ವೇಶ್ಯಾವೃತ್ತಿ ಮೂಲದ ನುಡಿಗಟ್ಟುಗಳ ನಾಡಿ ಹಿಡಿದು ನೋಡೋಣ.
ವೇಶ್ಯಾವಾಟಿಕೆ ಸೇರು ಎಂಬ ಅರ್ಥದ ‘ಗೊಟ್ಟಿಗೆರೆ ಸೇರು’ ಎಂಬ ನುಡಿಗಟ್ಟು ಸ್ಥಳನಾಮ ಸಂಶೋಧಕರಿಗೆ, ಭಾಷಾತಜ್ಞರಿಗೆ ಸನ್ನೆಗೋಲಿನಂತಿದೆ. ಗೋಷ್ಠಿಕೇರಿ > ಗೊಟ್ಟಿಗೇರಿ > ಗೊಟ್ಟಿಗೆರೆ ಆಗಿದೆ. ಈ ಊರು ನನ್ನ ಜನ್ಮಸ್ಥಳಕ್ಕೆ ಐದು ಮೈಲಿ ಫಾಸಲೆಯಲ್ಲಿರುವ ಶಿವಗಂಗೆ ಬೆಟ್ಟದ ಪೂರ್ವ ತಪ್ಪಲಿನಲ್ಲಿರುವಂಥದು. ಹಿಂದೆ ಕರ್ನಾಟಕವನ್ನು ಆಳಿದ ಅನೇಕ ಅರಸು ಮನೆತನಗಳ ರಾಜಾಧಿರಾಜರು ಕದನ ತರಾಟೆಯಲ್ಲಿ ಮಗ್ನರಾದಂತೆಯೇ ಮದನ ಭರಾಟೆಯಲ್ಲೂ ಮುಳುಗಿದ್ದರು ಎಂಬುದಕ್ಕೆ ಇಂಥ ‘ಜಂಗಮ ಲತಾ ಲಲಿತಾಂಗಿಯರ’ ಸಂಗೀತ ನೃತ್ಯ ಸರಸಸಲ್ಲಾಪದ ರತಿಕೇಳಿಯಾಟ ಕೂಟಗಳಿಗೂ ಕುಮ್ಮಕ್ಕು ಕೊಡುತ್ತಿದ್ದರೆಂದು ಕಾಣುತ್ತದೆ. ಅದರ ಪಡಿಯಚ್ಚು ಈ ಗೊಟ್ಟಿಗೆರೆ. “ಕೆಟ್ಟು ಬಿಟ್ಟವರಿಗೆಲ್ಲ ಗೊಟ್ಟಿಗೆರೆ ತವರ್ಮನೆ” ಎಂಬ ಜನಪದ ಗಾದೆ, ಯಾವುದೋ ಕಾರಣಕ್ಕೆ ಹರೆಯದಲ್ಲಿ ಕಾಲು ಜಾರಿ ಕೆಟ್ಟವರು, ಗಂಡ ಬಿಟ್ಟವರು – ಇವರಿಗೆಲ್ಲ ಗೊಜಟ್ಟಿಗೆರೆ ಆಶ್ರಯ ತಾಣವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಪೂರಕಾಂಶವೆಂಬಂತೆ ಗೊಟ್ಟಿಗೆರೆ ಪಕ್ಕದಲ್ಲೇ ಅವ್ವೇರಹಳ್ಳಿ ಎಂಬ ಊರಿದೆ. ಅವ್ವೆಯರು ಎಂದರೆ ಅಂತಃಪುರ ಸ್ತ್ರೀಯರು, ಬಂಗಾರದವರು ಎಂದರ್ಥ. ಅವ್ವೇರಹಳ್ಳಿಗೂ ಗೊಟ್ಟಿಗೆರೆಗೂ ಕಿತ್ತರೂ ಬರದಂಥ ಸಂಬಂಧ ಬೆಸೆದುಕೊಂಡಿರುತ್ತದೆ. ಶಿವಗಂಗೆ ಬೆಟ್ಟಕ್ಕೆ ಪೂರ್ವ ಭಾಗದಲ್ಲಿ ಗೊಟ್ಟಿಗೆರೆ ಇದ್ದರೆ, ಶಿವಗಂಗೆ ಬೆಟ್ಟದ ನೈರುತ್ಯ ಭಾಗದಲ್ಲಿ ಹದರಂಗಿ ಎಂಬ ಊರಿರುವುದು ಅರ್ಥಪೂರ್ಣವಾಗಿದೆ. ಹದರೆ (< ಹಾದರ < ಪಾದರ) ಎಂದರೆ ಸೂಳಿಗಾರಿಕೆ. ‘ನಿನ್ನ ಹದರಾಟ ನನ್ನ ಹತ್ರ ನಡೆಯಲ್ಲ’ ಎಂದರೆ ‘ನಿನ್ನ ಹಾದರಗಿತ್ತಿಯಾಟ ನನ್ನ ಹತ್ರ ನಡೆಯಲ್ಲ’ ಎಂದು ಮಂಗಳಾಂಗಿ ಇದ್ದಂತೆ ಹದರಾಂಗಿ (> ಹದರಂಗಿ) ಇರಬೇಡವೆ? ಶೂನ್ಯಸಂಪಾದನೆಯ ಎರಡನೆಯ ಸಂಕಲನಕಾರನಾದ ಹಲಗೆಯ ದೇವ ಅಥವಾ ಹಲಗೆಯಾರ್ಯ ಈ ಹದರಂಗಿಯವನೇ ಎಂದು ಪ್ರತೀತಿ. ಒಟ್ಟಿನಲ್ಲಿ ಹದರಂಗಿ, ಅವ್ವೇರಳ್ಳಿ, ಗೊ‌ಟ್ಟಿಗೆರೆ ಎಂಬ ಊರುಗಳು ಗತ ಇತಿಹಾಸದ ಗಡಿರೇಖೆಯ ಬಾಂದುಗಲ್ಲುಗಳು ಎನ್ನಬಹುದು.
‘ಹೊರಕೇರಿಗೆ ಹೋಗದಿರು’ ಎಂಬ ನುಡಿಗಟ್ಟು ಮತ್ತೆ ಭಾಷಾ ಶಾಸ್ತ್ರಜ್ಞರಿಗೆ ಮೆಲುಕು ಹಾಕಲು ಮೇವು ಒದಗಿಸುತ್ತದೆ. ವಾರಾಂಗನೆಯ ಕೇರಿ > ವಾರಕೇರಿ > ವರಕೇರಿ > ಹೊರಕೇರಿ ಆಗಿದೆ. “ಹರೆ ಬಡಿದರೆ ನಿಂತಾಳ ಹೊರಕೇರಿ ಲಕ್ಕಿ?” ಎಂಬ ಜನಪದ ಗಾದೆ, ಪ್ರದರ್ಶನ ಪ್ರಿಯ ವಾರಾಂಗನೆ ಗ್ರಾಮದೇವತೆ ಜಾತ್ರೆಯಲ್ಲಿ ಥಳುಕು ಬಳುಕಿನಿಂದ ಎಲ್ಲರೆದುರು ಸುಳಿದಾಡದೆ ಮನೆಯಲ್ಲಿ ಮುದುಡಿ ಕುಳಿತುಕೊಳ್ಳುವಳೆ ? ಎಂಬುದನ್ನು ಧ್ವನಿಸುತ್ತದೆ. ಹಾಗೆಯೇ “ಊರಾಚೆ ಹೊಲಗೇರಿ, ಊರೊಳಗೆ ಹೊರಕೇರಿ” ಎಂಬ ಗಾದೆ ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಎಂಬುದನ್ನು ರುಜುವಾತು ಪಡಿಸುತ್ತದೆ. ಏಕೆಂದರೆ ಹೊಲಗೇರಿಯನ್ನು ಊರಾಚೆ ಇರಿಸಿ, ಹೊರಕೇರಿಯನ್ನು ಊರೊಳಗೆ ಇರಿಸಿಕೊಂಡ ಸಮಾಜ ಕಾಯಿಲೆ ಕಸಾಲೆಯ ಕೊಳೆತು ನಾರುವ ತಿಪ್ಪೆಗುಂಡಿಗಿಂತ ಭಿನ್ನವಲ್ಲ.
ಚೆಲ್ಲು ಬಿದ್ದು ಬರು ಎಂಬ ಅರ್ಥದ ‘ತ್ಯಾಪೆ ಹತ್ತಿ ಬರು’ ಎಂಬ ನುಡಿಗಟ್ಟು ಸಹ ವೇಶ್ಯಾವೃತ್ತಿಗೇ ಸಂಬಂಧಿಸಿದ್ದು. ತ್ಯಾಪೆ (< ತೇಪೆ < ತಾಪು) ಎಂದರೆ ತಲೆಹಿಡುಕಿಯ ಸಂಗೀತ ನರ್ತನ ರತಿಕೇಳಿಯಾಟದ ವಠಾರ ಎಂದರ್ಥ. ಅಂಥ ತ್ಯಾಪೆಯ ಮೆಟ್ಟಿಲು ಹತ್ತಿ ಬಂದವಳು ಎಂದರೆ ಶೀಲಗೆಟ್ಟವಳು ಎಂದಾಗುತ್ತದೆ. ಒಟ್ಟಿನಲ್ಲಿ ತ್ಯಾಪೆ (<ತಾಪು) ಹೊರಕೇರಿ (< ವಾರಕೇರಿ) ಗೊಟ್ಟಿಗೆರೆ (< ಗೋಷ್ಠಿಕೇರಿ) ಎಂಬ ಹೆಸರುಗಳು ವೇಶ್ಯಾವೃತ್ತಿಯ ತಂಗುದಾಣಗಳು ಎಂದರ್ಥವಾಗುತ್ತದೆ.
ಇತರ ವೃತ್ತಿಮೂಲದ ನುಡಿಗಟ್ಟುಗಳ ಮೇಲೆ ಈಗ ಕಣ್ಣಾಡಿಸೋಣ.
ಹಿಂಸಿಸು ಅಥವಾ ಶ್ರಮಕೊಡು ಎಂಬ ಅರ್ಥದ ‘ಕಂಬಚ್ಚಿಗೆ ಹಾಕಿ ಈಚು’ ಎಂಬ ನುಡಿಗಟ್ಟು ಅಕ್ಕಸಾಲಿಗ ವೃತ್ತಿಮೂಲವಾದದ್ದು. ಸರಿಗೆ (ಕಂಬಿ) ತೆಗೆಯಬೇಕಾದರೆ ಕಂಬಚ್ಚಿನ (ಕಂಬಿ + ಅಚ್ಚು) ಬೇರೆ ಬೇರೆ ಗಾತ್ರದ ರಂದ್ರಗಳಲ್ಲಿ ತಮಗೆ ಬೇಕಾದ ಗಾತ್ರಕ್ಕನುಗುಣವಾದ ರಂದ್ರದಲ್ಲಿ ತೂರಿಸಿ, ಇಕ್ಕುಳದಿಂದ ಈಚೆಗೆ ಎಳೆಯುತ್ತಾರೆ. ಆ ರಂದ್ರಕ್ಕಿಂತಲೂ ದಪ್ಪನಾದ ಭಾಗ ಈಚಿಕೊಂಡು ಕೆಳಗೆ ಬೀಳುತ್ತದೆ. ಸಣ್ಣ ಎಳೆ, ಸರಿಗೆ ತಯಾರಾಗುತ್ತದೆ. ಹಾಗೆ ವ್ಯಕ್ತಿಗಳಿಗೆ ಶ್ರಮ ಕೊಟ್ಟು, ಹಿಂಸಿಸಿ, ಬತ್ತಿ ಹೋಗುವಂತೆ ಮಾಡುವುದನ್ನು ಈ ನುಡಿಗಟ್ಟು ಚಿತ್ರಿಸುತ್ತದೆ.
ತನ್ನ ನಿಲುವಿಗೆ ಅಂಟಿಕೊಳ್ಳು ಅಥವಾ ಬೇರೆ ಕೆಲಸಕ್ಕೆ ಗಮನ ಕೊಡದಿರು ಎಂಬ ಅರ್ಥದ ‘ಊಕೆ ಕಟ್ಟಿ ಕೂಡು’ ಎಂಬ ನುಡಿಗಟ್ಟು ಕಂಬಳಿ ನೇಯ್ಗೆಯ ವೃತ್ತಿ ಮೂಲದ್ದು. ಈ ವೃತ್ತಿಯವರಿಗೆ ಅಂಡೆಕುರುಬರು ಅಥವಾ ಲಾಳಿ ಕುರುಬರು ಎಂದು ಕರೆಯುವುದುಂಟು. ಕನಕದಾಸರು ಈ ಬೆಡಗಿನವರು. ಹೊಕ್ಕು ನೂಲನ್ನು ಒಂದು ಬಿದಿರ ಅಂಡೆಗೆ (ಗೊಟ್ಟದಾಕಾರದ ಬಿದರ ಕೊಳವೆ) ತುಂಬಿ, ಹಾಸು ನೂಲಿನ ಮಧ್ಯೆ ಅಡ್ಡಡ್ಡವಾಗಿ ಹೋಗುವಂತೆ ತೂರಿಸಿ, ಆ ಬಳಿಕ ಸಣ್ಣ ಹಲಗೆಯಿಂದ ಹೊಕ್ಕುನೂಲು ಬಿಗಿಯಾಗಿ ಕೂಡುವಂತೆ ತಾಡಿಸುತ್ತಾರೆ. ಅದರಿಂದಲೇ ಅಂಡೆಕುರುಬರು, ಲಾಳಿ ಕುರುಬರು ಎಂಬ ಬೆಡಗುಗಳು ಮೂಡಿಸಲು ಸಾಧ್ಯ. ಮೊದಲು ಹಾಸು ನೂಲನ್ನು ಕಟ್ಟಿ ಬಿಗಿಗೊಳಿಸುವುದಕ್ಕೆ ಊಕೆ ಕಟ್ಟುವುದು ಎನ್ನುತ್ತಾರೆ. ಆ ಕೆಲಸ ಮುಗಿಯುವ ತನಕ ‘ಪಲಾತನ ಮಗ’ (< ಫಾಲಾಕ್ಷನ ಮಗ ವೀರಭದ್ರ ಅರ್ಥಾತ್ ಬೀರೇಶ್ವರ) ಬಂದರೂ ಅವನು ಅತ್ತಿತ್ತ ಅಲುಗುವುದಿಲ್ಲ. ಅನ್ಯರ ಮಾತಿಗೆ ಕಿವಿಗೊಡದೆ ತನ್ನ ನಿಲುವಿಗೆ ಕಟ್ಟು ಬೀಳುವ ಮನುಷ್ಯನ ಪ್ರವೃತ್ತಿಯನ್ನು ಹೇಳುವಾಗ ಈ ನುಡಿಗಟ್ಟನ್ನು ಬಳಸಲಾಗುತ್ತದೆ.
ಈಗ ಪುರೋಹಿತಶಾಹೀ ವೃತ್ತಿ ಟೀಕಾ ಮೂಲದ ನುಡಿಗಟ್ಟುಗಳನ್ನು ಸಮೀಕ್ಷಿಸಬಹುದು. ಉದಾಹರಣೆಗೆ ಹೋಮ ಮಾಡು ಎಂಬ ನುಡಿಗಟ್ಟನ್ನು ಹಾಳು ಮಾಡು ಎಂಬ ಅರ್ಥದಲ್ಲಿ ಜನಪದರು ಬಳಸುತ್ತಾರೆ. ಪುರೋಹಿತಶಾಹಿ ವೃತ್ತಿಯವರು ದೇಶಕ್ಕೆ ಒಳ್ಳೆಯದಾಗಲೆಂದು ಹಾಲು ತುಪ್ಪ ಮೊದಲಾದ ಬೆಲೆಯುಳ್ಳ ವಸ್ತುಗಳನ್ನು ಬೆಂಕಿಗೆ ಸುರಿದು ಹೋಮ ಮಾಡುತ್ತಾರೆ. ಆದರೆ ಜನಪದರು ಅದು ಹಾಳು ಮಾಡುವ ಮೂಢ ಆಚರಣೆ ಎಂಬ ಅರ್ಥದಲ್ಲಿ “ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಹೋಮ ಮಾಡಿಬಿಟ್ಟ” ಎಂದು ಬಳಸಿ, ಹೋಮ ಮಾಡು ಎಂಬ ನುಡಿಗಟ್ಟಿಗೆ ಹಾಳು ಮಾಡು ಎಂಬ ಅರ್ಥ ಆವಾಹನೆಗೊಳ್ಳುವಂತೆ ಮಾಡಿರುವುದನ್ನು ಕಾಣಬಹುದು.
ಬಿದಿಗೆ ತದಿಗೆ ಲೆಕ್ಕಾಚಾರವನ್ನು ಪಕ್ಕಕ್ಕಿಡು ಎಂಬ ಅರ್ಥದ ‘ಬಿಂದಿಗೆ ತಂಬಿಗೆ ಅತ್ತಿಕ್ಕು’ ಎಂಬ ನುಡಿಗಟ್ಟು ದ್ವಿತೀಯ ತೃತೀಯೆ ಎಂದು ತಿಥಿ ವಾರ ನಕ್ಷತ್ರಗಳ ಲೆಕ್ಕ ಹಾಕುವ ಪುರೋಹಿತಶಾಹಿ ಪ್ರವೃತ್ತಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವುದನ್ನು ಬಿದಿಗೆ ತದಿಗೆಯನ್ನು ಬಿಂದಿಗೆ ತಂಬಿಗೆ ಎಂದು ಲೇವಡಿ ಮಾಡಿರುವುದರಿಂದಲೇ ಸೂಚಿತವಾಗುತ್ತದೆ.
ಮಾತಾಡದಿರು ಅಥವಾ ಅಭುಶುಭ ಎನ್ನದಿರು ಎಂಬ ಅರ್ಥದ ‘ಹರಿಶಿವಾ ಎನ್ನದಿರು’ ಎಂಬ ನುಡಿಗಟ್ಟು, ಹರಿ ಹೆಚ್ಚು ಹರ ಹೆಚ್ಚು ಎಂಬ ಹರಿಹರ ಹಗರಣವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಹರಿಯ ಪಕ್ಷವೂ ಬೇಡ ಹರನ ಪಕ್ಷವೂ ಬೇಡ ಎಂದು ಸುಮ್ಮನಿದ್ದು ಬಿಡುವ ತಾಟಸ್ಥ್ಯ ನೀತಿ ಆ ನುಡಿಗಟ್ಟಿನಲ್ಲಿ ಹರಳುಗೊಂಡಿದೆ. ಕರ್ನಾಟಕದಲ್ಲಿ ರಾಮಾನುಜಾಚಾರ್ಯ ಪ್ರಣೀತಿ ಶ್ರೀವೈಷ್ಣವ ಮತ ಹೆಚ್ಚು ಪ್ರಚಾರಗೊಂಡು, ಶೂದ್ರರಿಗೂ ಪಂಗನಾಮ ಹಾಕಿ, ಶ್ರಾವಣ ಶನಿವಾರ ಹತ್ತಾರು ಮನೆಗಳಿಗೆ ಹೋಗಿ ‘ಶ್ರೀ ನಾರಾಯಣ ಗೋವಿಂದ, ಗೋವಿಂದ’ ಎಂದು ನಾಮಸ್ಮರಣೆ ಮಾಡುತ್ತಾ ಭಿಕ್ಷೆ ಬೇಡಬೇಕೆಂದು ಕಟ್ಟು ಮಾಡಿದ ಪ್ರಯುಕ್ತ, ಹಳ್ಳಿಯ ಶೂದ್ರ ಜನಾಂಗ ಶ್ರಾವಣ ಶನಿವಾರದಂದು ಚೊಂಬಿಗೆ ಪಂಗನಾಮ ಬಳಿದು, ಬೊಗಸೆಯೊಳಗೆ ಇಟ್ಟುಕೊಂಡು, ಹತ್ತಾರು ಮನೆಗಳ ಎದುರು ನಿಂತುಕೊಂಡು, ಉಚ್ಚರಿಸಲು ಬಾರದೆಯೋ ಅಥವಾ ತಮ್ಮ ಅಂತರಂಗದ ಅದ್ವೆತ ಭಾವನೆಯ ಪ್ರತೀಕವೊ “ಶಿವನಾರಾಯಣ ಗೋವಿಂದ, ಗೋವಿಂದ” ಎಂದು ಹೇಳುತ್ತಾ ಹೋಗುವುದನ್ನು ಇಂದಿಗೂ ನಾವು ಕಾಣುತ್ತೇವೆ. ಒಟ್ಟಿನಲ್ಲಿ ‘ಹರಿಶಿವಾ ಎನ್ನದಿರು’ ಎಂಬ ನುಡಿಗಟ್ಟು ಹರಿಹರ ಹಗರಣರ ಭಯಭೀತ ವಾತಾವರಣದ ಕೂಸು ಎಂಬುದು ದಿಟ.
ತಾರಾತಿಗಡಿ ಲೆಕ್ಕಾಚಾರ ಮುಚ್ಚಿಡು ಎಂಬ ಅರ್ಥದ ‘ಸರಿಬೆಸ ಗರಗಸ ಕಟ್ಟಿಡು’ ಎಂಬ ನುಡಿಗಟ್ಟು ಜೋತಿಷ್ಯ ಶಾಸ್ತ್ರವನ್ನು ಅಲ್ಲಗಳೆಯುವಂಥದಾಗಿದೆ. ಜ್ಯೋತಿಷ್ಯ ಹೇಳುವವರು ಕವಡೆ ಉರುಳಿಸಿ, ಸಮಸಂಖ್ಯೆ ಬಂತು ನಿನ್ನ ಕೆಲಸ ಆಯಿತು, ಬೆಸ ಸಂಖ್ಯೆ ಬಂತು ನಿನ್ನ ಕೆಲಸ ಆಗುವುದಿಲ್ಲ ಎಂದು ಹೇಳಿ ಜನಸಾಮಾನ್ಯರ ಸುಲಿಗೆ ಮಾಡುವುದನ್ನು ಇದು ಲೇವಡಿ ಮಾಡುತ್ತದೆ. ಗರಗತಿ (<ಗ್ರಹಗತಿ) ಎಂಬುದನ್ನು ಗರಗಸ (< ಕ್ರಕಚ, ರೊಂಪ) ಮಾಡಿರುವುದರಲ್ಲಿಯೇ ಅಸಹನೆಯ ಹೊಗೆಯಾಡುವುದನ್ನು ಕಾಣುತ್ತೇವೆ. ಹಿಂದಿನ ಸರಿಬೆಸ ಶಬ್ದದ ಸಾದೃಶ್ಯದ ಮೇಲೆ ಗರಗತಿ ಶಬ್ದ ಗರಗಸ ಆಗಿದೆ ಎಂಬುದನ್ನು ಮರೆಯುವಂತಿಲ್ಲ.
ಈಗ ಶೋಷಣಾ ಮೂಲದ ನುಡಿಗಟ್ಟುಗಳನ್ನೀಗ ಉಂಡಿಗೆ ಹಾಕಿ ನೋಡೋಣ. ಜೀತದಾಳಾಗಿ ದುಡಿ ಎಂಬ ಅರ್ಥದ ‘ಮೂಗಿಗೆ ಕವಡೆ ಕಟ್ಕೊಂಡು ದುಡಿ’ ಎಂಬ ನುಡಿಗಟ್ಟು ಹಿಂದೆ ಅಸ್ತಿತ್ವದಲ್ಲಿದ್ದ ಕರಾಳ ಶೋಷಣಾ ಪದ್ಧತಿಯ ಪ್ರತೀಕವಾಗಿದೆ. ಅಟ್ಟುಗೌಡಿ (ಅಡುಗೆಯಾಳು) ಮುಟ್ಟುಗೌಡಿ (ಪಾತ್ರೆ ಉಜ್ಜುವ ಆಳು) ಕಸಗೌಡಿ (ಕಸ ಗುಡಿಸುವ ಆಳು) ನೀರುಗೌಡಿ (ನೀರು ಹೊತ್ತು ತರುವ ಆಳು) ಮುಂತಾದ ಹೆಸರುಗಳು ಜೀತಪದ್ಧತಿಯ ಪಳೆಯುಳಿಕೆಗಳಾಗಿವೆ. ನೀರು ಹೊತ್ತು ತರುವವರಿಗೆ ಮಾತ್ರ ಮೂಗಿಗೆ ಕವಡೆ ಕಟ್ಟಲಾಗುತ್ತಿತ್ತು. ಉಳಿದ ಕಾಯಕದವರಿಗೆ ಕಟ್ಟುತ್ತಿರಲಿಲ್ಲ, ಏಕಿರಬಹುದು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಉಳಿದವರು ಮನೆಯಲ್ಲೇ ಇರುತ್ತಾರೆ, ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಹೊರಗೆ ದೂರವಿರುವ ಭಾವಿಯಂದಲೊ ಹೊಳೆಯಿಂದಲೋ ನೀರು ಹೊತ್ತು ತರಬೇಕಾಗಿರುವುದರಿಂದ ತಪ್ಪಿಸಿಕೊಂಡು ಹೋದಾರು, ಬೇರೆಯೂರಿನ ಬೇರೊಂದು ಮನೆ ಸೇರಿಕೊಂಡಾರು ಎಂಬ ಕಾರಣದಿಂದಲೇ ಮೂಗಿಗೆ ಕವಡೆ ಕಟ್ಟುತ್ತಿದ್ದಿರಬೇಕು. ಮೂಗಿನಲ್ಲಿರುವ ಕವಡೆಯನ್ನು ನೋಡಿ, ಇವನು ಬೇರೆಯವರ ಜೀತದಾಳು ಎಂಬುದು ಗೊತ್ತಾಗಿ, ಬೇರೆಯವರು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಊಹಿಸಬಹುದು. ಈ ಪದ್ಧತಿ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಕನಕದಾಸರ ಮೋಹನ ತರಂಗಿಣಿಯ ಪದ್ಯವೊಂದರ ವರ್ಣನೆ ಬೆಳಕು ಚೆಲ್ಲುತ್ತದೆ – “ವೀರರ ಮೂಗಿಗೆ ಕವಡೆಯ ಕಟ್ಟಿ ನೀರ್ತರಿಸಿ”
ಹಿಂಸಿಸಿ ಹೀಯಾಳಿಸು ಎಂಬ ಅರ್ಥದ ‘ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗಿ’ ಎಂಬ ನುಡಿಗಟ್ಟು ಜನಪದರ ಚಿತ್ರಕಶಕ್ತಿಯ ಅಭಿವ್ಯಕ್ತಿಗೆ ಪ್ರತೀಕವಾಗಿದೆ. ಹಲ್ಲಾಗೆ ಹಾಕಿ ಎಂದರೆ ಹಲ್ಲೊಳಗೆ ಅಗಿದು ಜಗಿದು ಹಿಂಸಿಸಿದ್ದೇ ಅಲ್ಲದೆ, ಸೊಲ್ಲಾಗೆ ತೆಗಿ ಎಂದರೆ ಥರಾವರಿ ಬೈಗುಳದ ಮಾತಿನಲ್ಲಿ ಒಳಗನ್ನು ಇರಿದು ಮಾನವನ್ನು ಜಾಲಾಡುವ ಕ್ರಿಯೆಯನ್ನು ಕಣ್ಮುಂದೆ ತರುತ್ತದೆ. ಇದರ ಕಾವ್ಯಾತ್ಮಕ ಅಭಿವ್ಯಕ್ತಿ ಕವಿರಾಜಮಾರ್ಗಕಾರ ಹೇಳುವ “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್” ಎಂಬ ಮಾತನ್ನು ನೆನಪಿಗೆ ತರುತ್ತದೆ.
ದರ್ಪಿಷ್ಟರ ಮುಂದೆ ದೈನ್ಯವಾಗಿ ನಿಲ್ಲು ಎಂಬ ಅರ್ಥದ ‘ಹಲ್ಲು ಕಚ್ಚೋರ ಮುಂದೆ ಹುಲ್ಲು ಕಚ್ಚಿ ನಿಲ್ಲು’ ಎಂಬ ನುಡಿಗಟ್ಟು ಹೊಟ್ಟೆ ತುಂಬಿದ ದಣಿಗಳ ದರ್ಪ ಸಿಟ್ಟುಗಳ ಎದುರು ಹೊಟ್ಟೆಗಿಲ್ಲದವರ ದೈನ್ಯತೆ ಶರಣಾಗತಿಯನ್ನು ತುಂಬ ಕಾವ್ಯಾತ್ಮಕವಾಗಿ ಧ್ವನಿಸುತ್ತದೆ. ಹಲ್ಲು ಕಚ್ಚು ಎಂಬುದಕ್ಕೆ ವೈದೃಶ್ಯವಾಗಿ ಬಂದಿರುವ ಹುಲ್ಲುಕಚ್ಚು ಎಂಬುದು ಜನಪದರು ಹುಟ್ಟು ಕವಿಗಳು ಎಂಬುದನ್ನು ರುಜುವಾತಗೊಳಿಸುತ್ತದೆ. ಹೀಗೆಯೇ ಕಿವಿಗೆ ಕಲ್ಲು ಹಾಕಿ ಹಿಂಡು, ಅನ್ನದ ಬಾಯಿಗೆ ಮಣ್ಣು ಹಾಕು, ಉಂಡದ್ದು ಊಡ ಕೊಂಡದ್ದು ಕೂಟವಾಗದಿರು ಮುಂತಾದ ನುಡಿಗಟ್ಟುಗಳು ಶೋಷಣೆಯ ವಿವಿಧ ಮುಖಗಳನ್ನು ಪರಿಚಯಿಸುತ್ತವೆ.
ಈಗ ಸಿರಿತನ ಮೂಲದ ನುಡಿಗಟ್ಟುಗಳನ್ನು ಕೊಂಚ ನುರಿಸೋಣ
‘ತುಪ್ಪದಲ್ಲೇ ಕೈ ತೊಳೆ’ ಎಂಬ ನುಡಿಗಟ್ಟು, ಕೈ ತೊಳೆಯಲು ನೀರು ಬಳಸದೆ ತುಪ್ಪವನ್ನೇ ಬಳಸುತ್ತಿದ್ದರು ಎಂಬ ಮೂಲಕ ಶ್ರೀಮಂತಿಕೆಯ ಸಮೃದ್ಧಿಯನ್ನು ಧ್ವನಿಸುತ್ತದೆ (ತುಪ್ಪದಲ್ಲಿ ಕೈ ತೊಳೆದರೆ, ಕೈ ಶುಚಿಯಾಗದೆ ಜಿಡ್ಡುಮಯವಾಗುತ್ತದೆ ಎಂಬ ವಾಸ್ತವ ಸತ್ಯ ಇಲ್ಲಿ ಅಮುಖ್ಯ) ‘ಏನು ಉಡೋದು ಏನು ಬಿಡೋದು ಎನ್ನುವಂತಿರು’ ಎಂಬ ನುಡಿಗಟ್ಟು, ಕಣ್ಣಿಗೆ ಬೇಕಾದುದನ್ನು ಉಟ್ಟುಕೊಳ್ಳುವುದಕ್ಕೆ ತೊಟ್ಟುಕೊಳ್ಳುವುದಕ್ಕೆ ಉಡಿಗೆ ತೊಡಿಗೆ ರಾಶಿ ಬಿದ್ದಿರುವುದನ್ನು ಕಣ್ಮುಂದಕ್ಕೆ ಎಳೆದು ತರುತ್ತದೆ. ಹಾಗೆಯೇ ‘ಏನು ಉಣ್ಣೋದು ಏನು ಬಿಡೋದು ಎನ್ನುವಂತಿರು’ ಎಂಬ ನುಡಿಗಟ್ಟು ಶ್ರೀಮಂತಿಕೆಯ ಕುರುಹಾದ ಬಗೆಬಗೆತ ಭಕ್ಷ್ಯ ಭೋಜ್ಯಗಳ ಬಾಹುಳ್ಯವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ‘ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರು’ ‘ತೆಕ್ಕೆ ಹುಯ್ಕೊಂಡು ಮಲಗಿರು’ ಮುಂತಾದ ನುಡಿಗಟ್ಟುಗಳು ಶ್ರೀಮಂತಿಕೆಯನ್ನು ಅನಾವರಣ ಮಾಡುವ ಸಶಕ್ತ ಅಭಿವ್ಯಕ್ತಿಗಳಾಗಿವೆ.
ಈಗ ಬಡತನ ಮೂಲದ ನುಡಿಗಟ್ಟುಗಳನ್ನು ಬಡಿದು ಕಾಳುಕಡಿ ಸೊಪ್ಪುಸೆದೆ ಬೇರೆ ಮಾಡೋಣ. ಮಲಗು ಎಂಬ ಅರ್ಥದ ‘ತಲೆಗೆ ಕೈ ಕೊಡು’ ಎಂಬ ನುಡಿಗಟ್ಟು ಹಳ್ಳಿಗಾಡಿನ ಜನಸಾಮಾನ್ಯರ ಬಡತನದ ಸ್ಥಿತಿಯನ್ನು ಬಯಲು ಮಾಡುತ್ತದೆ. ತಲೆಯ ದಿಂಬು ಗತಿ ಇಲ್ಲದ್ದರಿಂದ ತಮ್ಮ ಕೈಯನ್ನೇ ತಲೆಗೆ ದಿಂಬಾಗಿಸಿಕೊಂಡು ಮಲಗುತ್ತಿದ್ದರೆಂಬುದನ್ನು ಧ್ವನಿಸುತ್ತದೆ. ‘ಅವರವರ ತಲೆಗೆ ಅವರವರದೇ ಕೈ’ ಎಂಬ ಜನಪದ ಗಾದೆ ಇದನ್ನೇ ಸೂಚಿಸುತ್ತದೆ.
‘ರೊಟ್ಟಿ ತೊಳೆದ ನೀರು ಕುಡಿದು ಕಾಲ ಹಾಕು’ ಎಂಬ ನುಡಿಗಟ್ಟು ಭಂಗ ಬಡತನದ ಬರ ಪರಿಸ್ಥಿತಿಯನ್ನೇ ಕರುವಿಟ್ಟಂತಿದೆ. ಇರುವ ಒಂದು ರೊಟ್ಟಿಯನ್ನು ಮುರಿದು ತಿಂದು ಬಿಟ್ಟರೆ, ನಾಳೆಗೆ ಏನು ಗತಿ, ನಾಡಿದ್ದರ ಗತಿ ಏನು ಎಂದು ಅದನ್ನು ತಿನ್ನದೆ, ನೀರಲ್ಲಿ ಅದನ್ನು ತೊಳೆದು, ಆ ನೀರು ಕುಡಿದು ಕಾಲ ಹಾಕುವ ದಾರುಣಸ್ಥಿತಿಯನ್ನು ಹೃದಯ ವಿದ್ರಾವಕವಾಗಿ ಕಣ್ಮುಂದೆ ತರುತ್ತದೆ. ಹೀಗೆಯೇ ಹೊಟ್ಟೆ ಹೋಗಿ ಬೆನ್ನು ಸೇರು, ಹೊಟ್ಟೆ ಕಟ್ಟು, ಅಂಬಲಿಯೋ ತುಂಬೆ ಸೊಪ್ಪೋ ಕಾರೆಕಾಯಿ ನೀರು ಮಜ್ಜಿಗೆಯೋ ತಿಂದು ಕುಡಿದು ಕಾಲ ತಳ್ಳು ಮುಂತಾದ ನುಡಿಗಟ್ಟುಗಳು ಭಂಗಬಡತನದ ಸೀಕುಪಾಕುಗಳಂತೆ ತಾಕು ತಾಕಿಗೆ (ಜಮೀನನ ಪಟ್ಟೆ, ತುಂಡ) ಸಿಕ್ಕುತ್ತವೆ.
ಇನ್ನೂ ಶರೀರದ ಅಂಗಾಂಗ ಮೂಲವಾದ ನುಡಿಗಟ್ಟುಗಳು ಉಳಿದೆಲ್ಲ ನುಡಿಗಟ್ಟುಗಳಿಗಿಂತ ಹೇರಳವಾಗಿವೆ. ಅವುಗಳ ವಿಶ್ಲೇಷಣೆಯ ಅಗತ್ಯವಿಲ್ಲ.
ನುಡಿಗಟ್ಟುಗಳಲ್ಲಿ ಲೈಂಗಿಕವಾದಂಥವೂ ಇವೆ. ಅವುಗಳ ಬಗ್ಗೆ ನಾಲ್ಕು ಮಾತಾಡುವುದು ಅಗತ್ಯ. ಸಾಮಾನ್ಯವಾಗಿ ಜನಪದರು ಮುಕ್ತಮನಸ್ಸಿನವರು. ಕಾಮ ಪ್ರೇಮಗಳ ಬಗ್ಗೆಯೂ ಯಾವ ಮುಚ್ಚುಮರೆಯಿಲ್ಲದೆ ಬಿಚ್ಚುಮನಸ್ಸಿನಿಂದ ಮಾತಾಡವವರು. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಕಾಮಸಂಬಂಧಿ ವಿಷಯಗಳನ್ನು ಮಾತಾಡುವಾಗ ಶಿಷ್ಟ ಮನಸ್ಸು ‘ಮುಟ್ಟಿದರೆ ಮುಸುಗ’ದಂತೆ ಮುಚ್ಚಿಕೊಂಡರೆ, ಜನಪದ ಮನಸ್ಸು ಅರಳುಮಲ್ಲಿಗೆಯಂತೆ ಬಿಚ್ಚಿಕೊಳ್ಳುತ್ತದೆ. ದೇಹವೇ ದೇವಾಲಯವಾಗಿರುವಾಗ ಅದರ ಒಂದು ಭಾಗ ಮಡಿ ಇನ್ನೊಂದು ಭಾಗ ಮೈಲಿಗೆ ಎಂಬುದನ್ನು ಜನಪದ ಮನಸ್ಸು ಒಪ್ಪುವುದಿಲ್ಲ. ಆ ಮೈಲಿಗೆ ಭಾವನೆ ಶಿಷ್ಟರಲ್ಲಿಯೇ ಗುಡಿಗಟ್ಟಿದೆ. ಆದರೆ ಜನಪದರಲ್ಲಿ ಎಲ್ಲ ಅಂಗಾಂಗಳ ಬಗ್ಗೆಯೂ ಮಡಿಭಾವನೆ ಮಡುಗಟ್ಟಿದೆ. ಉದಾಹರಣೆಗೆ
ಆಳು ಬಂದ್ರೆ ನಿಂತಾನು
ಅರಸು ಬಂದ್ರೆ ನಿಂತಾನು
ಹೇಲು ಉಚ್ಚೆ ಬಂದ್ರೆ ನಿಂತಾವ ಹೆಡ್ಡದೊರೆ ?
ಎಂಬ ಗಾದೆಯಲ್ಲಿ ನಿಸರ್ಗ ಸಹಜ ಕ್ರಿಯೆಗಳಾದ ಮಲ ಮೂತ್ರ ವಿಸರ್ಜನೆಯನ್ನು ತಡೆಯಲು ಸಾಧ್ಯವಿಲ್ಲ. ದೇಹ ಮನಸ್ಸುಗಳ ಸ್ವಾಸ್ಥ್ಯಕ್ಕೆ ಅದು ಅನಿವಾರ್ಯ ಎಂಬ ಧೋರಣೆ ಕಂಡರಣೆಗೊಂಡಿರುವ ಹಾಗೆಯೇ ಪ್ರೇಮ ಕಾಮಗಳು ಮಲ ಮೂತ್ರ ಬಾಧೆಯಂತೆ ನಿಸರ್ಗ ಸಹಜವಾದಂಥವು, ಅವುಗಳನ್ನು ತಡೆಯಲು ಸಾಧ್ಯವಿಲ್ಲ, ತಡೆದರೆ ದೇಹ ಮನಸ್ಸುಗಳ ಸ್ವಾಸ್ಥ್ಯಕ್ಕೆ ಧಕ್ಕೆ ಎಂಬ ಧೋರಣೆಯೂ ಇದೆ. ಆದ್ದರಿಂದಲೇ ಆ ತರದ ಮಾತುಗಳನ್ನಾಡಲು ಅವರು ಮುಜುಗರ ಪಡುವುದಿಲ್ಲ. ಬೇಸಿಗೆ ಕಾಲದಲ್ಲಿ ಕಿಟಕಿಗಳಿಲ್ಲದ ಮಾಳಿಗೆ ಮನೆಯಲ್ಲಿ ಮಲಗಲು ಸೆಕೆಯೆಂದು ಹಟ್ಟಿಯ ಮುಂದೆ ರಾಗಿ ಹುಲ್ಲು ಹರಡಿ ಅದರ ಮೇಲೆ ಕಂಬಳಿ ಹಾಸಿ ಮಲಗುತ್ತಾರೆ. ಮಲಗುವ ಮುಂಚೆ ಎಲೆ ಅಡಿಕೆ ಜಗಿಯುತ್ತ ಅಕ್ಕಪಕ್ಕದ ಮನೆಯ ಮುದುಕರು-ಮುದುಕಿಯರು, ಮದುವೆಯಾದ ಕಟ್ಟರೆಯದ ಗಂಡ-ಹೆಂಡಿರು, ತರುಣ-ತರುಣಿಯರು, ಪಡ್ಡೆ ಹುಡುಗ-ಹುಡುಗಿಯರು ಎಲ್ಲ ಕುಳಿತು ಬೆಳುದಿಂಗಳ ಬೆಳಕಿನಲ್ಲಿ ಉಳಿದ ಒಗಟುಗಳಂತೆ ಲೈಂಗಿಕ ಛಾಯೆಯುಳ್ಳ ಅಥವಾ ಅಪ್ಪಟವಾದ ಲೈಂಗಿಕ ಒಗಟುಗಳನ್ನು ಒಡ್ಡುತ್ತಾರೆ ಒಡಚುತ್ತಾರೆ. ಆಗ ಎಲ್ಲರೂ ಮುಜುಗರ ಪಡುವುದಕ್ಕಿಂತ ಮುಸಿ ಮುಸಿ ನಗುವುದೇ ಹೆಚ್ಚು. ಉದಾಹರಣೆಗೆ ಒಂದು ಒಗಟು : ‘ಅಮ್ಮಂದು ಅಗಲ, ಅಪ್ಪಂದು ಉದ್ದ’ ಉತ್ತರ : ಅಮ್ಮನ ಹಣೆಯ ಮೇಲಿರುವ ಕುಂಕುಮ ಹಾಗೂ ಅಪ್ಪನ ಹಣೆಯ ಮೇಲಿರುವ ನಾಮ. ಜನಪದರಿಗೆ ಮನೆದೇವರೊಂದಿದೆ, ಮೊರೆ ಬಿದ್ದ ದೇವರೊಂದಿಗೆ. ಮನೆದೇವರ ಸತ್ಯವನ್ನು ಹೇಳಿದ್ದರೂ, ಪಡ್ಡೆ ಹುಡುಗ ಹುಡುಗಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ಮೊರೆ ಬಿದ್ದ ದೇವರಿಗೆ ಮೊರೆ ಹೋಗಿ, ಅದಕ್ಕೆ ಲೈಂಗಿಕಾರ್ಥವಿದ್ದರೂ, ಅದೇ ಸತ್ಯ ಎಂದು ಎಲ್ಲರಿಗೂ ಹೃದ್ಗತವಾಗಿದ್ದರೂ, ನೂರಕ್ಕೆ ನೂರು ಪಾಲು ಹೊಂದಿಕೆಯಾಗುವ ಅಲೈಂಗಿಕಾರ್ಥವನ್ನು ಹೇಳುತ್ತಾರೆ, ಎಲ್ಲರೂ ಹುಸಿನಗುತ್ತ ಸ್ವೀಕರಿಸುತ್ತಾರೆ. ಬಸವಣ್ಣನವರು ವೀರಶೈವ ಧರ್ಮದ ಲಾಂಛನವಾಗಿ ಸ್ಥಾಪಿಸಿದ ಲಿಂಗ ಮತ್ತು ಪಾಣಿಬಟ್ಟಲು, ಶಿಷ್ನ ಮತ್ತು ಯೋನಿಯ ಸಂಕೇತ ಎಂಬುದನ್ನು ಸಾರಾಸಗಟಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ದರಿಂದ ಲೈಂಗಿಕ ವಿಷಯಗಳ ಬಗ್ಗೆ ಅಸ್ಪೃಶ್ಯ ಭಾವನೆ ಸಲ್ಲದು. ನಮ್ಮ ಮನಸ್ಸು ಶುದ್ಧವಾಗಿದ್ದರೆ, ವಸ್ತುವೂ ಶುದ್ಧವಾಗಿ ಕಾಣುತ್ತದೆ. ಮೈಲಿಗೆ ಮನಸ್ಸಿಗೆ ಮಡಿ ವಸ್ತುವೂ ಮೈಲಿಗೆಯಾಗಿ ಕಾಣುತ್ತದೆ ಎಂಬುದನ್ನು ಮರೆಯಬಾರದು.
ನುಡಿಗಟ್ಟುಗಳ ಸಂಗ್ರಹ ಕಾರ್ಯದ ಬಗ್ಗೆ ನಾಲ್ಕು ಮಾತಾಡುವ ಮೊದಲು ನನ್ನ ಬಾಲ್ಯದ ವೈಯಕ್ತಿಕ ವಿಷಯದ ಬಗ್ಗೆ ಎರಡು ಮಾತು ಹೇಳಬೇಕಾದದ್ದು ಅನಿವಾರ್ಯ. ನಾನು ಬಾಲ್ಯದಿಂದಲೂ ನುಡಿಗಟ್ಟುಗಳ ಹಕ್ಕಲು ಆಯುವ ಕಾಯಕದ ಗೀಳನ್ನು ಜನ್ಮದತ್ತವಾಗಿ ರೂಢಿಸಿಕೊಂಡಿದ್ದೆನೋ ಅಥವಾ ಹಳ್ಳಿಗಾಡಿನ ಬದುಕು, ಜನರಾಡುವ ನುಡಿಗಟ್ಟುಗಳ ಮೋಡಿ ಪ್ರೇರೇಪಣೆ ನೀಡಿತೋ ಅಥವಾ ಮಣ್ಣನ್ನು ಸೀಳಿಕೊಂಡು ಮೇಲೇಳುವ ಅಕ್ಕಡಿಯಂತೆ ನನ್ನಲ್ಲಿ ಈ ಗೀಳು ಎದೆ ಸೀಳಿಕೊಂಡು ಅಕ್ಕಡಿಯೊಡೆಯಲು ಕಾಣದ ಕೈ ನೆರವು ನೀಡಿತೋ ಎಂದು ಯೋಚಿಸಿದಾಗ ಪ್ರಾತಃಸ್ಮರಣೀಯರಾದ ಮೂರು ನಾಲ್ಕು ಜನರ ನೆನಪಾಗುತ್ತದೆ.
ಮೊದಲಿನಿಂದಲೂ ನಾನು ಉಪಾಧ್ಯಾಯರು ಹೇಳುವುದನ್ನು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದುದರಿಂದ ರೊಟ್ಟಿ ಮಗುಚಿ ಹಾಕಿದಂತೆ ಉಪಾಧ್ಯಾಯರು ಕೇಳಿದ ಪ್ರಶ್ನೆಗೆ ಉತ್ತರ ಹೇಳಿಬಿಡುತ್ತಿದ್ದೆ. ಪ್ರಾಥಮಿಕ ಶಾಲೆಗೆ ಪಠ್ಯವಾಗಿಟ್ಟದ್ದ ಗೋವಿನ ಹಾಡನ್ನು ಅದರ ಭಾವಕ್ಕನುಗುಣವಾಗಿ ಏರಿಳಿತದ ದನಿಯಲ್ಲಿ ನಾನು ಓದುತ್ತಿದ್ದ ರೀತಿ, ಸ್ಪಷ್ಟ ಉಚ್ಚಾರಣೆ ವಿದ್ಯಾನಿಷ್ಠೆಯನ್ನು ಕಂಡ ಪ್ರಾಥಮಿಕ ಶಾಲೆಯ ಪಚ್ಚೇಗೌಡರು ಎಂಬ ಮೇಷ್ಟರು ‘ಅಮರ ಕೋಶವನ್ನು ಈಗಲೇ ಬಾಯಿಪಾಠ ಮಾಡಿಕೋ, ಮುಂದೆ ನಿನಗೆ ಅನುಕೂಲವಾಗುತ್ತದೆ’ ಎಂದರು. ಪಕ್ಕದಲ್ಲೇ ಇದ್ದ ನನ್ನ ಸಹಪಾಠಿ ಕೃಷ್ಣಮೂರ್ತಿ ‘ನಮ್ಮ ಮನೇಲಿ ಇದೆ, ತಂದು ಕೊಡ್ತೀನಿ’ ಎಂದ. ಆದರೆ ಬೆಳಿಗ್ಗೆ ತಂದಿರಲಿಲ್ಲ. ಕೇಳಿದ್ದಕ್ಕೆ ‘ನಮ್ಮ ತಂದೆ, ಅದು ಶೂದ್ರರು ಓದೋದಲ್ಲ ಅಂತ ಹೇಳಿ ಕೊಡಲಿಲ್ಲ’ ಎಂದ. ನನ್ನ ಮನಸ್ಸಿನ ಮೇಲಾದ ಮೊದಲ ಬರೆ ಅದು. ಅದರಿಂದಾಗಿ ನನ್ನ ಸಹಪಾಠಿಯ ತಂದೆಯನ್ನು ಕಂಡರೆ ನನ್ನ ಮೈಮೇಲೆ ತುರುಚನ ಸೊಪ್ಪು ಆಡಿಸಿದಂತಾಗುತ್ತಿತ್ತು. ಇಡೀ ಬ್ರಾಹ್ಮಣ ಸಮೂಹದ ಬಗೆಗೆ ನನ್ನಲ್ಲಿ ಆ ಭಾವನೆ ಬೆಳೆಯದಂತೆ ನೋಡಿಕೊಂಡವರು ನಮ್ಮ ಊರಿನ ಪುಟ್ಟುಭಟ್ಟರು ಎಂಬ ಬ್ರಾಹ್ಮಣರು. ಅವರು ಮದುವೆಯಾಗಿರಲಿಲ್ಲ, ಒಂಟಿಪಿಂಟರು ಸುಂಟರ್‌ಗಾಳಿ. ಆದರೆ ಮಾದಿಗರ ಪೂಜಮ್ಮನಿಗೂ ಅವರಿಗೂ ಅನೈತಿಕ ಸಂಬಂಧವಿದೆ ಎಂದು ಜನ ಗುಸುಗುಸು ಪಿಸಪಿಸ ಎನ್ನುತ್ತಿದ್ದರು. ನಮ್ಮ ಊರಿನ ಊಳಿದ ಬ್ರಾಹ್ಮಣರು ಅವರನ್ನು ಕ್ಯಾರೆ ಎನ್ನುತ್ತಿರಲಿಲ್ಲ. ಪ್ರತಿಯಾಗಿ ಇವರೂ ಅವರನ್ನು ಕ್ಯಾರೆ ಎನ್ನುತ್ತಿರಲಿಲ್ಲ. ಪುಟ್ಟುಭಟ್ಟರ ಒಡನಾಟವೆಲ್ಲ ಶೂದ್ರರೊಂದಿಗೆ. ಇಡೀ ಜೈಮಿನಿ ಭಾರತವನ್ನು ಬಾಯಲ್ಲಿ ಹೇಳುತ್ತಿದ್ದರು. ಇಷ್ಟನೇ ಸಂಧಿಯ ಇಷ್ಟನೇ ಪದ್ಯ ಹೇಳಿ ಎಂದರೆ ಕರಾರು ವಾಕ್ಕಾಗಿ ಅದನ್ನೇ ಹೇಳುತ್ತಿದ್ದರು. ನಮ್ಮ ಊರಿನ ಗೌಡ ಲಿಂಗಾಯಿತರಾದ ಹೊನ್ನೇಗೌಡರ ಮನೆಯಲ್ಲಿ ‘ಜೈಮಿನಿ ಭಾರತ ಟೀಕು’ ಎಂಬ ಗ್ರಂಥವಿತ್ತು. ಅದನ್ನು ಓದು ಎಂದು ಅವರೇ ನನಗೆ ಈಸಿ ಕೊಟ್ಟರು. ಅದರಲ್ಲಿ ಪ್ರತಿ ಪದಾರ್ಥ, ಭಾವಾರ್ಥ ಎಲ್ಲವೂ ಇತ್ತು. ನನಗೆ ಒಂದು ರೀತಿಯ ಹುಚ್ಚು ನೆತ್ತಿಗೇರಿ ಬಿಟ್ಟಿತು. ನಾನು ಪುಟ್ಟು ಭಟ್ಟರ ನೆರಳಾಗತೊಡಗಿದೆ. ಕಾರಣ ಅಂಥ ಮಹಾ ಮೇಧಾವಿಯಾದರೂ ನಿಗರ್ವಿ. ನಾನು ಕೇಳದಿದ್ದರೂ ಅನೇಕ ಶಬ್ದಗಳ ಅರ್ಥ ಹೇಳುತ್ತಿದ್ದರು. ದ್ವಿಜ ಎಂದರೆ ಬ್ರಾಹ್ಮಣ ಎಂದಷ್ಟೇ ಅಲ್ಲ, ಹಾವು, ಕೋಳಿ, ಹಕ್ಕಿ, ಹಲ್ಲು – ಎಲ್ಲ ದ್ವಿಜರೇ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಅವರ ನೆರಳಾದೆ.
ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಘಟನೆ ಜರುಗಿತು. ಎಂದೂ ಬಯ್ಯದ ನಮ್ಮ ತಂದೆ ಯಾವುದಕ್ಕೋ (ಕಾರಣ ಮರೆತಿದ್ದೇನೆ) ಸಿಟ್ಟುಗೊಂಡು ‘ಕತ್ತೆಬಡವ’ ಎಂದು ಬಯ್ದುಬಿಟ್ಟರು. ತಾಯಿಯ ಮುಖವನ್ನೇ ನೋಡಿದ ನೆನಪಿರದ ಚಿಕ್ಕಂದಿನಲ್ಲಿ ತಬ್ಬಲಿಯಾದ ನನ್ನನ್ನು ಪ್ರೀತಿಯಿಂದ ಸಾಕಿದ ತಂದೆ ಹಾಗೆ ಬೈದಾಗ ಅಳು ಬಂದು, ಸೀದ ಪುಟ್ಟುಭಟ್ಟರ ಮನೆಗೆ ಹೋದೆ. ನನ್ನ ಸಪ್ಪೆ ಮುಖವನ್ನು ಕಂಡು “ಯಾಕೋ ಸಪ್ಪಗಿದ್ದೀಯ?” ಎಂದರು. ಆಗ ನಮ್ಮ ತಂದೆ ‘ಕತ್ತೆ ಬಡವ’ ಎಂದು ಬೈದದ್ದನ್ನು ಹೇಳಿದೆ. ಅವರು ನಕ್ಕು “ಸಪ್ಪೆ ಮುಖ ಮಾಡಿಕೊಳ್ಳಬೇಕಾದವನು ನಾನು, ನೀನು ಯಾಕೆ ಮಾಡಿಕೊಳ್ತೀಯ?” ಎಂದರು. ಅವರ ಮಾತು ಅರ್ಥವಾಗದೆ ಪ್ರಶ್ನಾತ್ಮಕವಾಗಿ ಅವರ ಮುಖವನ್ನೇ ನೋಡಿದೆ. ಆಗ ಅವರು “ಬಾಡವ ಎಂದರೆ ಹಾರುವ. ಕತ್ತೆ ಬಾಡವ ಎಂಬುದು ಜನರ ಬಾಯಲ್ಲಿ ಕತ್ತೆ ಬಡವ ಆಗಿದೆ. ಈ ಮಡಿಜನ ಹೊಲೆಮಾದಿಗರನ್ನು ಶೂದ್ರರನ್ನು ಹೊಲೆಮಾದಿಗ ಮುಂಡೇದೆ, ಶೂದ್ರ ಮುಂಡೇದೆ ಎಂದು ಹೀಯಾಳಿಸುತ್ತಿದ್ದುದರಿಂದ ಆ ಕೆಳವರ್ಗದ ಜನರಲ್ಲಿ ಯಾರೋ ಘಟಿಂಗ ಆ ಮಡಿವಂತನಿಗೆ ‘ಕತ್ತೆ ಬಾಡವ’ ಎಂದು ಬೈದಿರಬೇಕು. ಆದ್ದರಿಂದ ಆ ಬೈಗುಳಿಗೆ ಬ್ರಾಹ್ಮಣ ನೊಂದುಕೊಳ್ಳಬೇಕೇ ಹೊರ್ತು ಶೂದ್ರನಾದ ನೀನು ನೊಂದುಕೊಳ್ಳಬೇಕಾಗಿಲ್ಲ” ಎಂದು ಸಮಾಧಾನ ಮಾಡಿದರು. ನನಗೆ ಎದೆ ಭಾರ ಇಳಿದಂತಾಯ್ತು. ಲವಲವಿಕೆಯಿಂದ ಮನೆಗೆ ಬಂದೆ. ಅಜ್ಜಿಯ ಹತ್ತಿರ ‘ಕತ್ತೆ ಬಡವ’ ಅನ್ನೋಕೆ ನಾನೇನು ಬ್ರಾಹ್ಮಣನ? ಎಂದೆ. ಅದನ್ನು ಕೇಳಿಸಿಕೊಂಡ ಅಪ್ಪ ‘ನಿನ್ನ ನಾನೆಲ್ಲಿ ಬಿರಾಮಣ ಅಂದೆನೋ?’ ಎಂದಾಗ, ಪುಟ್ಟಭಟ್ಟರು ಹೇಳಿದ ಆಧಾರದ ಮೇಲೆ ‘ಬಾಡವ ಎಂದರೆ ಬ್ರಾಹ್ಮಣ ಅಂತ್ಲೇ ಅರ್ಥ’ ಎಂದೆ. ಆಗ ನನ್ನ ಅಜ್ಜಿಗೆ ಎಷ್ಟು ಸಂತೋಷವಾಯಿತೋ! “ಅಯ್ಯೋ ಅಯ್ಯೋ ಏನು ಕಲಿ ಕಲಿತಿದ್ದೀಯೋ, ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರೀತಿದ್ದೀಯಲ್ಲೋ” ಎಂದು ತಬ್ಬಿಕೊಂಡು ಮುದ್ದಾಡಿದರು.
ಕಣ ಮಾಡುವಾಗ ನಾನು ರಾತ್ರಿ ಹೊತ್ತು ನಮ್ಮ ತಂದೆಯವರ ಜೊತೆ ಕಣದ ಹತ್ತಿರವೇ-ರಾಗಿ ಹುಲ್ಲೇ ಹಾಸಿಗೆ, ರಾಗಿ ಹುಲ್ಲೇ ಹೊದಿಕೆಯಾಗಿ-ಮಲಗಿಕೊಂಡಾಗ ನಿದ್ದೆ ಬರುವವರೆಗೂ ಆಕಾಶದ ಚುಕ್ಕೆಗಳನ್ನು ತೋರಿಸಿ “ನೋಡು, ಅದು ಬೆಳ್ಳಿ (ಶುಕ್ರ) ನೋಡು, ಅದು ಬೇಡತಿ ಮೂಗುತಿ (ಧ್ರುವನಕ್ಷತ್ರ), ನೋಡು, ಅವು ಕೂರಿಗೆದಾಳು (ಮಹಾವ್ಯಾಧ ನಡುಪಟ್ಟಿ), ನೋಡು, ಅದು ಅಜ್ಜಿ ಮಂಚ (ಸಪ್ತರ್ಷಿ ಮಂಡಲ), ನೋಡು, ಅವು ಕೋಳಿ ಮತ್ತು ಕೋಳಿ ಮರಿ” (ಕೃತ್ತಿಕಾ ನಕ್ಷತ್ರ) ಎಂದೆಲ್ಲ ಹೇಳುತ್ತಿದ್ದರು. ಪ್ರಪಂಚವನ್ನು ತಿಳಿದುಕೊಳ್ಳಬೇಕೆಂಬ ಆಸೆ ಹಸಿವು ಎಲ್ಲ ಹುಡುಗರಲ್ಲೂ ಊರಗಲ ಬಾಯಿ ತೆರೆದುಕೊಂಡಿರುವುದರಿಂದ, ನಮ್ಮ ತಂದೆ ಸುಮ್ಮನಾದರೆ ಸಾಕು “ನಿದ್ದೆ ಬರಲ್ಲ, ಹೇಳು” ಎಂದು ಪೀಡಿಸುತ್ತಿದ್ದೆ. ಆಗ ನಮ್ಮ ತಂದೆ “ಆಗಲೆ ಅಜ್ಜಿ ಮಂಚ ತಲೆಕೆಳಗಾದೊ, ಬೆಳಗಿನ ಜಾವ ಆಯ್ತು ಮಲಕ್ಕೊ” ಎಂದು ಹೇಳಹೇಳುತ್ತಲೇ, ಬೆಳಗ್ಗೆಯಿಂದ ಸಂಜೆತನಕ ಒಂದೇ ಸಮನೆ ದುಡಿದು ದಣಿದಿದ್ದ ಆ ಜೀವ ಹೇಳಹೇಳುತ್ತಲೇ ಗೊರಕೆ ಹೊಡೆಯಲಾರಂಭಿಸಿದಾಗ, ನಾನು ಬೇರೆ ದಾರಿಯಿಲ್ಲದೆ ಅದೇ ದಾರಿ ಹಿಡಿಯುತ್ತಿದ್ದೆ.
ನಾನು ಎಂ.ಎಗೆ ಸೇರಿ ಪಂಪಭಾರತ ಓದುವ ಭಾಗ್ಯ ದೊರೆತಾಗ ಅಲ್ಲಿ ಬರುವ “ಪಾಂಡವರ್ ಸುರಂಗದಿಂ ಪೊರಮಟ್ಟು ತಾರಾಗಣಂಗಳ್ ನಿಂದ ನೆಲೆಯಿಂ ದೆಸೆಯಂ ಪೊಳ್ತುಮನರಿದು ತೆಂಕಮೊಗದೆ ಪಯಣಂಬೋಗಿ” ಎಂಬ ವರ್ಣನೆ ಓದಿ, ಎಲ್ಲಿದ್ದ ನಕ್ಷತ್ರಗಳು ಎಲ್ಲಿಗೆ ಕ್ರಮಿಸಿವೆ ಎಂಬ ಆಧಾರದ ಮೇಲೆ ಹೊತ್ತನ್ನು ಪತ್ತೆ ಹಚ್ಚುವ ಪದ್ಧತಿ ಹತ್ತನೆಯ ಶತಮಾನದಲ್ಲೂ ಇತ್ತು ಎಂಬುದನ್ನು ಮಾರ್ಗ-ದೇಸಿ, ಶಿಷ್ಟ-ಜಾನಪದಗಳೆರಡನ್ನೂ ಕಾವ್ಯದಲ್ಲಿ ಕಸಿ ಮಾಡಿ ಬಳಸಿದಂಥ ಮಹಾಕವಿ ಪಂಪ ದಾಖಲಿಸಿರುವುದನ್ನು ಕಂಡು ಪುಳಕಗೊಳ್ಳುತ್ತಾ, ಬಾಲ್ಯದಲ್ಲಿ ಅಪ್ಪ ಹೇಳುತ್ತಿದ್ದ “ಆಗಲೇ ಅಜ್ಜಿ ಮಂಚ ತಲೆಕೆಳಗಾದರೂ, ಬೆಳಗಿನ ಜಾವ ಆಯ್ತು, ಮಲಕ್ಕೊ” ಎಂದು ಹೇಳುತ್ತಿದ್ದ ಮಾತುಗಳನ್ನು ಮೆಲಕು ಹಾಕಿದ್ದುಂಟು.
ನನ್ನ ಅಜ್ಜಿ ಹೇಳಿದ “ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರೀತಾನೆ ನೋಡವ್ವ” ಎಂಬ ಮಾತು ನಾನು ದೊಡ್ಡವನಾದ ಮೇಲೆ ನುಡಿಗಟ್ಟುಗಳ ಹಕ್ಕಲು ಆಯುವ ಕಾಯಕಕ್ಕೆ ಸನ್ನೆಗೋಲಾಯಿತು. ಸಾವಧಾನದ ಈ ನುಡಿಗಟ್ಟುಗಳ ವಿಶ್ವಕೋಶದ ಉಸಿರಾಟಕ್ಕೆ ಶ್ವಾಸಕೋಶವಾಗಿ ಪರಿಣಮಿಸಿತು ಎನ್ನಬಹುದು. ಏಕೆಂದರೆ ಅವರೇಕಾಯಿ ತಳ್ಳಾದ ಮೇಲೆ ಅವರೆ ಗಿಡದ ಸಾಲುಗಳನ್ನು ಹಿಡಿದು ಒಂದೂ ಉಳಿಯದಂತೆ ಬಿಡಿಸಿ ತಂದು ಕಣಕ್ಕೆ ಹಾಕುತ್ತಿದ್ದದ್ದು. ದೊಣ್ಣೆಯಿಂದ ಬಡಿದು ಕಾಲು ಬೇರೆ ಸಿಪ್ಪೆ ಬೇರೆ ಮಾಡುತ್ತಿದ್ದದ್ದು, ತೂರಿ ಕೇರಿ ಚೀಲದಲ್ಲಿ ತುಂಬಿ ಮನೆಗೆ ತರುತ್ತಿದ್ದದ್ದು, ಬೇಕೆಂದಾಗ ಬೇಕಾದಷ್ಟನ್ನು ಓಡಿನಲ್ಲಿ ಹುರಿಯುತ್ತಿದ್ದದ್ದು, ಹುರಿದಾಗ ಅವು ಚಟಪಟನೆ ಅವಲಾಗಿ ಸಿಡಿಯುತ್ತಿದ್ದದ್ದು ಎಲ್ಲ ನನ್ನ ಕಣ್ಣ ಮುಂದೆ ಹಾದು ಹೋಯಿತು. ಆಗ ನಾಡೊಳಗೆ ತುಂಬಿರುವ ನುಡಿಗಟ್ಟುಗಳನ್ನು ಸಾಲು ಹಿಡಿದು ಬಿಡಿಸಬೇಕು. ಒಪ್ಪಓರಣ ಮಾಡಿ ಮನೆ ತುಂಬಿಕೊಳ್ಳಬೇಕು. ಬೇಕೆಂದಾಗ ನಾಲಗೆ ಓಡಿನಲ್ಲಿ ಹುರಿದರೆ ಚಟಪಟನೆ ಅವಲಾಗಿ ಸಿಡಿಯುತ್ತದೆ ಎಂದು ಧ್ಯಾನಸ್ಥನಾಗಿ ಚಿಂತಿಸಿದೆ. ಅಂದಿನಿಂದ ನನ್ನ ಮನಸ್ಸು ಕಿವಿಗೆ ಬಿದ್ದ ನುಡಿಗಟ್ಟುಗಳನ್ನು ಸೂಜಿಗಲ್ಲಂತೆ ಸೆಳೆದುಕೊಳ್ಳತೊಡಗಿತು, ಎದೆಯ ಉಗ್ರಾಣದಲ್ಲಿ ಹಿಟ್ಟಿನ ಮಂಕರಿಗೆ ಹಿಟ್ಟನ್ನು ಅಡಕಲಿಟ್ಟಂತೆ ಪೇರಿಸಿಟ್ಟುಕೊಳ್ಳ ತೊಡಗಿತು. ಆದ್ದರಿಂದ ಪ್ರಾಥಮಿಕ ಶಾಲೆಯ ಮೇಸ್ಟ್ರು ಪಚ್ಚೇಗೌಡರು, ಮಾನವೀಯತೆಯ ಹಾಗೂ ನಮ್ರತೆಯ ಸಾಕಾರ ಮೂರ್ತಿಯಾದ ಪುಟ್ಟುಭಟ್ಟರು, ನನ್ನ ಅಜ್ಜಿ ಹಾಗೂ ನನ್ನ ತಂದೆ ಹಾಗೂ ಜಾನಪದವನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಧ್ಯಯನ ವಿಷಯವನ್ನಾಗಿ ಮಾಡಿದ, ಆ ಕ್ಷೇತ್ರದ ಆಮೂಲಾಗ್ರ ಸಂಶೋಧನೆಗೆ ಹೊನ್ನಾರು ಹೂಡಿದ ಪ್ರೊ.ದೇಜಗೌ – ಈ ಐದು ಜನ ಈ ನುಡುಗಟ್ಟುಗಳ ವಿಶ್ವಕೋಶದ ‘ವಿಶಾಲ ಕಾಸಾರಕ್ಕೆ ಪರೋಕ್ಷವಾಗಿ ಜಲದ ಕಣ್ಣಾಗಿದ್ದಾರೆ ಎಂಬುದನ್ನು ಸ್ಮರಿಸಿಕೊಳ್ಳದೆ ಇರಲಾರೆ.
ಗಾದೆಗಳ ಸಂಗ್ರಹದ ಬಗೆಗೆ ನಾನು ‘ನಮ್ಮ ಸುತ್ತಿನ ಗಾದೆಗಳು’ ಸಂಗ್ರಹದ ಪ್ರಸ್ತಾವನೆಯಲ್ಲಿ ಏನು ಹೇಳಿದ್ದೇನೋ ಅದೇ ನುಡಿಗಟ್ಟುಗಳ ಸಂಗ್ರಹಕ್ಕೂ ಅನ್ವಯಿಸುತ್ತದೆ: “ಯಾವುದೇ ಸಂಗ್ರಹಕಾರ್ಯ ಅಷ್ಟು ಸುಲಭವಾದದ್ದಲ್ಲ. ಅದರಲ್ಲೂ ಜನಪದ ಸಾಹಿತ್ಯದ ಮಿಕ್ಕ ಪ್ರಕಾರಗಳ ಸಂಗ್ರಹಕ್ಕಿಂತ ಗಾದೆಗಳ ಸಂಗ್ರಹಕಾರ್ಯ ಕ್ಲಿಷ್ಟಕರವಾದದ್ದು. ಏಕೆಂದರೆ ಯಾವುದಾದರೂ ಹಳ್ಳಿಗೆ ಹೋಗಿ, ಯಾರನ್ನಾದರೂ ಹಿಡಿದು, ಅವರ ಮನವೋಲಿಸಿ, ಪುಸಲಾಯಿಸಿ. ನಿಮಗೆ ಬರುವ ಯಾವುದಾದರೂ ಗೀತೆಯನ್ನು ಹಾಡಿ ಎಂದರೆ ಕೂಡಲೇ ಹಾಡುತ್ತಾರೆ. ಬರುವ ಕತೆಯನ್ನು ಹೇಳಿ ಎಂದರೆ ಕೂಡಲೇ ಹೇಳುತ್ತಾರೆ. ಆದರೆ ಯಾರನ್ನಾದರೂ ಹಿಡಿದು, ಮನವೋಲಿಸಿ, ಪುಸಲಾಯಿಸಿ, ನಿಮಗೆ ಬರುವ ಗಾದೆಗಳನ್ನು ಹೇಳಿ ಎಂದರೆ ಕಣ್ಣುಕಣ್ಣು ಬಿಡುತ್ತಾರೆ. ತಲೆ ಕೆರೆದುಕೊಳ್ಳುತ್ತಾರೆ, ಯಾವುದೂ ಬರುವುದಿಲ್ಲ ಎಂದು ತಲೆ ಅಲ್ಲಾಡಿಸುತ್ತಾರೆ…….. ಸೂಕ್ತ ಸಂದರ್ಭ ಸನ್ನಿವೇಶ ಒದಗದೆ ಎದೆಬತ್ತಳಿಕೆಯಲ್ಲಿರುವ ಗಾದೆಬಾಣಗಳು ನಾಲಗೆಯ ಬಿಲ್ಲಿಗೇರುವುದಿಲಲ, ಹೊರ ಚಿಮ್ಮುವುದಿಲ್ಲ. ಆದ್ದರಿಂದ ಸಂದರ್ಭಜನ್ಯ ಗಾದೆಗಳನ್ನು ಕಲೆ ಹಾಕುವುದು ಅಷ್ಟು ಸುಲಭದ ಹಾಗೂ ಬೇಗ ಪೂರೈಸುವ ಕೆಲಸವಲ್ಲ; ಆಮೆಯ ಓಟದಂತೆ ಸಾವಧಾನದ್ದು; ಸಹನೆ ಸಹಷ್ಣುತೆ ಅವಶ್ಯಕವಾದದ್ದು, ಸಂಗ್ರಹಕನಿಗೆ ಜನಪದ ಜೀವನದ ಪ್ರತ್ಯಕ್ಷಾನುಭವ ಎಷ್ಟಿತ್ತು ಎಂಬುದಕ್ಕೆ ಅವನು ಸಂಗ್ರಹಿಸಿದ ಗಾದೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.” ಆದ್ದರಿಂದ ನುಡಿಗಟ್ಟುಗಳ ಸಂಗ್ರಹಕಾರ್ಯಕ್ಕೆ ದೀರ್ಘ ಕಾಲದ ತಪಸ್ಸು ಅಗತ್ಯ. ಮೈಯೆಲ್ಲ ಕಣ್ಣಾಗಿ ಜೀವನವನ್ನು ಸಂಗ್ರಹಕಾರ್ಯಕ್ಕೆ ದೀರ್ಘ ಕಾಲದ ತಪಸ್ಸು ಅಗತ್ಯ. ಮೈಯೆಲ್ಲ ಕಣ್ಣಾಗಿ ಜೀವನವನ್ನು ನೋಡಬೇಕು; ಮೈಯೆಲ್ಲ ಕಿವಿಯಾಗಿ ಎಲ್ಲರಾಡುವ – ಬಲ್ಲಿದರು – ಬಡವರು, ಮುದುಕರು – ಮಕ್ಕಳು, ಹೆಂಗಸರು – ಗಂಡಸರು, ಹದಿಬದೆಯರು – ಹಾದರಗಿತ್ತಿಯರು, ಕಚ್ಚೆ ಭದ್ರವಿರುವವರು – ಕಚ್ಚೆ ಹರುಕರು, ಕೂಲಿನಾಲಿ ಮಾಡುವವರು – ತಿರುಪೆ ಬೇಡುವವರು – ಮಾತುಗಳನ್ನು ಕೇಳಬೇಕು. ಕೇಳಿದ್ದನ್ನು ಎದಗಣಜದಲ್ಲಿ ತುಂಬಿಕೊಳ್ಳಬೇಕು. ನೋಡಿದ್ದನ್ನು ಮನಸ್ಸಿಗೆ ಮೈಮೇಲೆ ಹಚ್ಚೆಹುಯ್ದುಕೊಳ್ಳಬೇಕು; ಅವುಗಳ ಮೇಲೆ ಆಗಾಗ್ಗೆ ಕಾವು ಕೂರಬೇಕು; ದನಗಳ ಹಾಗೆ ತಿಂದ ಮೇವನ್ನು ಮತ್ತೆ ಬಾಯಿಗೆ ತೆಗೆದುಕೊಂಡು ಮೆಲುಕು ಹಾಕುತ್ತಾ ಅರಗಿಸಿಕೊಳ್ಳಬೇಕು. ನಾನು ಕಾಲೇಜಿನಲ್ಲಿ ಉಪನ್ಯಾಸಕನಾದ ಮೇಲೆ ಆದ ಒಂದು ಅನುಭವವನ್ನು ಇಲ್ಲಿ ಉದಾಹರಿಸಬಯಸುತ್ತೇನೆ. ಮಹಾರಾಷ್ಟ್ರ ಮೂಲದ ಪೈಲ್ವಾನರು ಎಂಬ ಅಲೆಮಾರಿ ಜನಾಂಗ ಅಂಗಸಾಧನೆಯ ಪ್ರದರ್ಶನದ ಮೂಲಕ ಹಳ್ಳಿಗಳಲ್ಲಿ ದುಡ್ಡು ಧಾನ್ಯ ಸಂಪಾದಿಸಿದರೆ, ಅವರ ಹೆಂಗಸರು ಊರೂರು ಮೇಲೆ ಭಿಕ್ಷೆ ಎತ್ತಿ ದವಸಧಾನ್ಯ ಸಂಪಾದಿಸುತ್ತಿದ್ದರು. ಆ ಅಲೆಮಾರಿ ಜನಾಂಗದ ಹೆಂಗಸೊಬ್ಬಳು ನಮ್ಮ ಮನೆಗೆ ಭಿಕ್ಷೆಗೆ ಬಂದವಳು “ಇಷ್ಟರಲ್ಲೇ ಬಿಲ್ಲನಕೋಟೆಯವರು ತಮ್ಮ ಕಳ್ಳನ್ನು ತಂದು ನಿಮ್ಮ ಕಾಲಿಗೆ ಸುತ್ತುತ್ತಾರಂತಲ್ಲ?” ಎಂದಳು. ಅಷ್ಟು ಹೊತ್ತಿಗಾಗಲೇ ನಾನು ಮಂಡ್ಯ ಸರ್ಕಾರೀ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದರೂ ಆ ತಿರುಪೆ ಹೆಣ್ಣಿನ ಮಾತು ನನಗೆ ಕೂಡಲೇ ಅರ್ಥವಾಗಲಿಲ್ಲ. ಪ್ರಶ್ನಾತ್ಮಕವಾಗಿ ನೋಡಿದಾಗ ಆ ಹೆಂಗಸು ಹೇಳಿದಳು : “ನಿನ್ನೆ ಅಜ್ಜೇಗೌಡರ ಮನೆಗೆ ಭಿಕ್ಷೆಗೆ ಹೋಗಿದ್ದೆ. ಅವರು ಹೇಳಿದರು, ತಮ್ಮ ಮಗಳನ್ನು ನಿಮಗೆ ಕೊಟ್ಟು ಇಷ್ಟರಲ್ಲೇ ಮದುವೆ ಮಾಡ್ತೀವಿ ಅಂತ”. ಆಗ ‘ಕಳ್ಳು ತಂದು ಕಾಲಿಗೆ ಸುತ್ತು’ ಎಂಬ ನುಡಿಗಟ್ಟನ್ನು ನನ್ನ ಮನಸ್ಸಿಗೆ ನೋಟುಬುಕ್ಕಿನಲ್ಲಿ ಬರೆದುಕೊಂಡೆ. ಹೀಗೆ ಕೂಲಿನಾಲಿ ಮಾಡುವವರ, ತಿರುಪೆ ಬೇಡುವವರ ಮಾತುಗಳನ್ನು ಸಹ ತಗ್ಗಿ ಬಗ್ಗಿ ಕೇಳಿದಾಗ, ತಗ್ಗಿನ ಕಡೆಗೆ ನೀರು ಹರಿದು ನೆಲ ತನುವಾಗುತ್ತದೆ.
ನಾನು ಬಾಲ್ಯದಿಂದ ಇಲ್ಲಿಯವರೆಗೆ ಕಲೆ ಹಾಕಿದ ನಾಲ್ಕು ಸಾವಿರ ಚಿಲ್ಲರೆ ನುಡಿಗಟ್ಟುಗಳು ಈ ಸಂಕಲನದಲ್ಲಿವೆ. ನನ್ನ ಹುಟ್ಟೂರಾದ ಮಾಗಡಿ ತಾಲ್ಲೂಕಿನ ಎಣ್ಣೆಗೆರೆ ಹಾಗೂ ಸುತ್ತಮುತ್ತ ಬಳಕೆಯಲ್ಲಿದ್ದ ನುಡಿಗಟ್ಟುಗಳನ್ನು ನನ್ನ ಬಾಲ್ಯ ತಾರುಣ್ಯದ ಮನಸ್ಸು ಹೀರಿಕೊಂಡರೆ ನಾನು ದೊಡ್ಡವನಾದ ಮೇಲೆ ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಕೆಲವು ನುಡಿಗಟ್ಟುಗಳನ್ನು ನನ್ನ ಪ್ರೌಢ ಮನಸ್ಸು ಹೀಡಿಕೊಂಡಿದೆ. ಅವುಗಳೆಲ್ಲ ಇಲ್ಲಿವೆ.
ಪ್ರತಿಯೊಂದು ತಾಲ್ಲೂಕಿನ ಅಥವಾ ಜಿಲ್ಲೆಯ ನುಡಿಗಟ್ಟುಗಳನ್ನು ಕಲೆ ಹಾಕಿದರೆ ಕನ್ನಡ ಭಾಷೆಯ ಭಂಡಾರ ಸಮೃದ್ಧವಾಗುತ್ತದೆ. ಆಯಾ ಪ್ರದೇಶಗಳ ಮರಗಿಡ, ಪ್ರಾಣಿ ಪಕ್ಷಿ, ಆಚಾರವಿಚಾರ, ಗಡಿನಾಡಿನ ಭಾಗದಲ್ಲಿ ಚಾಲ್ತಿಯಲ್ಲಿರುವ ಅನ್ಯಭಾಷಾ ಶಬ್ದಗಳು, ನುಡಿಗಟ್ಟುಗಳು ಎಲ್ಲವೂ ಸಂಕಲನಗೊಂಡು ಸಂಕೀರ್ಣ ಭಾಷೆ ಸಂಸ್ಕೃತಿ ಕಣ್ಣೆದುರು ನಿಲ್ಲುತ್ತದೆ. ಉದಾಹರಣೆಗೆ ಬೆಂಗಳೂರು ತುಮಕೂರು ಜಿಲ್ಲೆಗಳಲ್ಲಿ ಮರವನ್ನು ನಯಗೊಳಿಸುವ ಉಪಕರಣಕ್ಕೆ ತೋಬಡ ಎಂಬ ಹೆಸರಿದ್ದರೆ, ಮೈಸೂರಿನ ಕಡೆ ಅದೇ ಉಪಕರಣಕ್ಕೆ ಹತ್ತರಿ ಎಂಬ ಹೆಸರಿದೆ, ಮಲೆನಾಡಿನ ಕಡೆ ಕೀಸುಳಿ ಎಂಬ ಹೆಸರಿದೆ, ಬೇರೆ ಕಡೆ ಉಜ್ಜುಗೊರಡು ಎಂಬ ಹೆಸರಿದೆ, ಮಲೆನಾಡಿನ ಕಡೆ ಕೀಸುಳಿ ಎಂಬ ಹೆಸರಿದೆ, ಬೇರೆ ಕಡೆ ಉಜ್ಜುಗೊರಡು ಎಂಬ ಹೆಸರಿದೆ. ಎಲ್ಲ ಜಿಲ್ಲೆಗಳ ಸಂಗ್ರಹ ಕಾರ್ಯ ನಡೆದರೆ ಅವುಗಳಲ್ಲಿ ಇದೇ ಉಪಕರಣ ಯಾವ ಯಾವ ಹೆಸರಿನಲ್ಲಿ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ ಬೆಂಗಳೂರು ಜಿಲ್ಲೆಯಲ್ಲಿ ಜಾಲಿ ಮರ ಎಂದರೆ ಮಂಡ್ಯ ಜಿಲ್ಲೆಯಲ್ಲಿ ಗೊಬ್ಬಳಿ ಮರ ಎನ್ನುತ್ತಾರೆ. ಆದ್ದರಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ಮರಕ್ಕೆ ಏನೇನು ಹೆಸರಿವೆ, ಒಂದೇ ಪ್ರಾಣಿಗೆ ಏನೇನು ಹೆಸರಿವೆ ಎಂಬುದು ನುಡಿಗಟ್ಟುಗಳ ಮೂಲಕ ಗೊತ್ತಾಗುತ್ತದೆ.
ಅಷ್ಟೇ ಅಲ್ಲ ಪ್ರಾದೇಶಿಕ ಅಥವಾ ಭೌಗೋಳಿಕ ಮಳೆಬೆಳೆಯ ವ್ಯತ್ಯಾಸವೂ ನುಡಿಗಟ್ಟುಗಳಿಂದ ತಿಳಿದು ಬರುತ್ತದೆ. ಉದಾಹರಣೆಗೆ ಹಳೆಯ ಮೈಸೂರಿನ ಕಡೆ “ಮೈಗೆ ಎಣ್ಣೆ ಹಚ್ಚೊಂಡು ಬಾ” ಎಂಬ ನುಡಿಗಟ್ಟಿದ್ದರೆ, ಮಲೆನಾಡು ಸಾಗರದ ಕಡೆ “ಬೆನ್ನಿಗೆ ಹಾಲೆ ಕಟ್ಕೊಂಡು ಬಾ” ಎಂಬ ನುಡಿಗಟ್ಟಿದೆ. ಎರಡರ ಆಶಯವೂ ಗಲೀತ ಬೀಳುತ್ತವೆ, ಮುನ್ನೆಚ್ಚರಿಕೆಯ ಸಿದ್ಧತೆ ಮಾಡಿಕೊಂಡು ಬಾ ಎಂಬುದೇ ಆಗಿದೆ. ಆದರೆ ಹರಳೆಣ್ಣೆ ಮತ್ತು ಹಾಳೆಯ ಬಳಕೆ, ಮಳೆಬೆಳೆಯ ಅಭಾವ ಹಾಗೂ ಮಳೆಬೆಳೆಯ ಸಮೃದ್ಧಿಯನ್ನು ಸೂಚಿಸುತ್ತದೆ. ಬಯಲುನಾಡಿನಲ್ಲಿ ನೀರಾವರಿ ಸೌಕರ್ಯವಿಲ್ಲದೆ, ಸಾಕಷ್ಟು ಮಳೆಯಿಲ್ಲದೆ ತೋಟ ತುಡಿಕೆ ಮಾಡುವುದಿಲ್ಲ. ಆದರೆ ಮಲೆನಾಡಿನಲ್ಲಿ ನೀರಿನ ಸಮೃದ್ಧಿ ಇರುವುದರಿಂದ ಅಡಿಕೆ ತೋಟಗಳು ಅಧಿಕ. ಹಾಳೆ ಎಂದರೆ ಹೊಂಬಾಳೆಯ ಮುಸುಕಾದ ಒಡಾಳೆ ಪಟ್ಟಿ ಅಥವಾ ಸುಲಿಪಟ್ಟೆ. ಅವರು ತಲೆಯ ಟೋಪಿಗೂ, ಕೊಡೆಗೂ, ಬೆನ್ನಿಗೂ ಬಳಸುತ್ತಾರೆ. ಬಯಲುನಾಡಿನವರಿಗೆ ಹಾಳೆ ದುರ್ಲಭ, ಆದರೆ ಕೊಂಚ ಮಳೆಗೂ ಬೆಳೆಯುವ ಹರಳು ಸರ್ವೇ ಸಾಮಾನ್ಯ. ಆದ್ದರಿಂದ ಬಳಸಿದ ಹರಳೆಣ್ಣೆ ಮತ್ತು ಹಾಳೆಗಳ ಮುಖೇನ ಪ್ರಾದೇಶಿಕ ವ್ಯತ್ಯಾಸವನ್ನು ಅರಿಯಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಪ್ರತಿಯೊಂದು ಜಿಲ್ಲೆಯ ನುಡಿಗಟ್ಟುಗಳನ್ನು ಸಂಗ್ರಹಿಸಿದರೆ ಜನಪದ ಸಂಸ್ಕೃತಿಯ ರಾಶಿಪೂಜೆ ಮಾಡಲು ಅನುಕೂಲವಾಗುತ್ತದೆ. ಇಂಥ ಯೋಜನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಮ್ಮಿಕೊಂಡು, ಇಪ್ಪತ್ತೇಳು ಜಿಲ್ಲೆಗಳ ಸ್ಥಳೀಕರಿಗೇ ಆಯಾಯ ಜಿಲ್ಲೆಯ ಕ್ಷೇತ್ರಕಾರ್ಯವನ್ನು ವಹಿಸಿ ಕಲೆ ಹಾಕಿದರೆ ದೊಡ್ಡ ನಿಧಿ ಕನ್ನಡಮ್ಮನ ಕಾಲ ಸನ್ನಿಧಿಗೆ ಬಂದಂತಾಗುತ್ತದೆ. ಆ ಕಾಲ ಬರಲಿ ಎಂದು ಆಶಿಸುತ್ತೇನೆ.
- ಸುಧಾಕರ