ನನ್ನ ಪುಟಗಳು

27 ಅಕ್ಟೋಬರ್ 2015

೧೫.ತೆರಕಣಾಂಬಿ ಬೊಮ್ಮರಸ

ತೆರಕಣಾಂಬಿ ಬೊಮ್ಮರಸ
ಈತನ ಕಾಲ: ಕ್ರಿ.ಶ.ಸು.೧೪೮೫. ಈತ ಜೈನ ಕವಿ.
ಈತನ ಕೃತಿಗಳು: ಸನತ್ಕುಮಾರ ಚರಿತೆ ಮತ್ತು ಜೀವಂಧರ ಸಾಂಗತ್ಯ

ಸನತ್ಕುಮಾರ ಚರಿತೆಯು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ವಡ್ಡಾರಾಧನೆಯಲ್ಲಿ ಬರುವ ಸನತ್ಕುಮಾರ ಎಂಬ ಚಕ್ರವರ್ತಿಯ ನೋಂಪಿಯ ಕಥೆಯಾಗಿದೆ. 
ಜೀವಂಧರ ಸಾಂಗತ್ಯ ವು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಇದು ಭಾಸ್ಕರ ಕವಿ ಭಾಮಿನೀಷಟ್ಪದಿಯಲ್ಲಿ ರಚಿಸಿರುವ ಜೀವಂಧರ ಚರಿತೆ ಕೃತಿಯ ಆಧಾರದಿಂದ ರಚಿತವಾಗಿದೆ. ಇದು ಜೀವಂಧರ ಎಂಬ ರಾಜನ ಕಥೆ.
*************************

ಜೀವಂಧರನ ಕಥೆಯನ್ನೊಳಗೊಂಡ, ಈ ವರೆಗೆ ದೊರೆತ ಗ್ರಂಥಗಳು ಕೆಳಗಿ ನಂತಿವೆ:
(೧) ಜೀವಂಧರನ ಚರಿತೆ : ಮೇಲೆ ಉಲ್ಲೇಖಿತವಾದ ಗುಣಭಧ್ರಾಚಾರ್ಯರ ಉತ್ತರ ಪುರಾಣದಲ್ಲಿ ಬಂದಿರುವ ಕಥೆ. ಇದು ಸಂಸ್ಕೃತದಲ್ಲಿದೆ.
(೨) ಜೀವಂಧರ ಚರಿತೆ : ಕ್ರಿ. ಶ. ೯೬೫ ರಲ್ಲಿ ಪುಷ್ಪದಂತನಿಂದ ಅಪಭ್ರಂಶದಲ್ಲಿ ರಚಿತವಾದ ಮಹಾಪುರಾಣದಲ್ಲಿ ಬಂದಿರುವ ಜೀವಂಧರನ ಚರಿತ್ರೆ.
(೩) ಗದ್ಯ ಚಿಂತಾಮಣಿ : ಇದು ಅಲಂಕಾರಯುಕ್ತ ಸಂಸ್ಕೃತದಲ್ಲಿ ಒಡೆಯದೇವ ವಾದೀಭಸಿಂಹನಿಂದ ರಚಿತವಾದ ಗದ್ಯಗ್ರಂಥ (೧೧ನೆಯ ಶತಮಾನ).
(೪) ಕ್ಷತ್ರ ಚೂಡಾಮಣಿ : ಇದೂ ಸಹ ವಾದೀಭಸಿಂಹನಿಂದ ಸಂಸ್ಕೃತದಲ್ಲಿ ಅನುಷ್ಟುಬ್ ಪದ್ಯಗಳಲ್ಲಿ ರಚಿತವಾದ ಗ್ರಂಥ. (೧೧ನೆಯ ಶತಮಾನ).
(೫) ಜೀವಂಧರ ಚಂಪೂ : ಇದು ಚಂಪೂರೂಪದಲ್ಲಿ ಬರೆದ ಸಂಸ್ಕೃತ ಗ್ರಂಥ, ಇದನ್ನು ಹರಿಚಂದ್ರ ಎಂಬ ಮಹಾಕವಿ ರಚಿಸಿದ್ದಾನೆ. (೧೧ನೆಯ ಶತಮಾನ).
(೬) ಜೀವಂಧರ ಚರಿತ್ರ : ಶುಭಚಂದ್ರ ಎಂಬ ಕವಿಯಿಂದ ಸಂಸ್ಕೃತದಲ್ಲಿ ರಚಿತವಾದ ಗ್ರಂಥ.
(೭) ಜೀವಕ ಚಿಂತಾಮಣಿ : ತಮಿಳು ಸಾಹಿತ್ಯದ ಐದು ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ಈ ಗ್ರಂಥವು ತಮಿಳು ಭಾಷೆಯಲ್ಲಿ ತಿರುತಕ್ಕ ದೇವರ್ ಎಂಬವನಿಂದ ರಚಿತವಾದ ಗ್ರಂಥ. ಇದಕ್ಕೆ ನಚ್ಚಿನಾರ್ ಕಿನಿಯಾರ್ ಎಂಬವನಿಂದ ಉತ್ತಮ ಟೀಕೆಯೂ ಇದೆ. (೧೦ – ೧೧ನೆಯ ಶತಮಾನ)
(೮) ಜೀವಂಧರ ಚರಿತೆ : ಬಹುಶಃ ಅಪಭ್ರಂಶದಲ್ಲಿರುವ ಜೀವಂಧರ ಕಥೆಯನ್ನೊಳಗೊಂಡಿರುವ ಗ್ರಂಥ. ಇದನ್ನು ರಯಿಧು ಎಂಬ ಕವಿ ಕ್ರಿ.ಶ. ೧೪೩೯ ರ ಸುಮಾರಿಗೆ ಬರೆದಿದ್ದಾನೆ.
(೯) ಜೀವಂಧರ ಚರಿತೆ : ಭಾಸ್ಕರ ಕವಿಯಿಂದ ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಪ್ರಸ್ತುತ ಗ್ರಂಥ.
(೧೦) ಜೀವಂಧರ ಸಾಂಗತ್ಯ : ಕನ್ನಡದಲ್ಲಿ ಕವಿ ತೆರಕಣಾಂಬಿ ಬೊಮ್ಮರಸನಿಂದ ಸಾಂಗತ್ಯದಲ್ಲಿ ರಚಿತವಾದ ಗ್ರಂಥ. (ಸು. ಕ್ರಿ. ಶ. ೧೪೮೫, ಭಾಸ್ಕರ ಕವಿಯಿಂದ ಈ ಕವಿ ಪ್ರಭಾವಿತನಾಗಿರಬಹುದೆಂದು ಅನ್ನಿಸುತ್ತದೆ. ಆದರೂ ಆತನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ.)
(೧೧) ಜೀವಂಧರ ಷಟ್ಪದಿ : ಕೋಟೇಶ್ವರನೆಂಬ ಕವಿಯಿಂದ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕನ್ನಡ ಗ್ರಂಥ. ಇದು ಅಪೂರ್ಣವಿದೆ. (ಸು. ಕ್ರಿ.ಶ. ೧೫೦೦).
(೧೨) ಜೀವಂಧರ ಚರಿತೆ : ಬ್ರಹ್ಮಕವಿ ಎಂಬವನಿಂದ ಸಾಂಗತ್ಯದಲ್ಲಿ ರಚಿತವಾದ ಕನ್ನಡ ಗ್ರಂಥ. ಇದರ ವಿವರ ತಿಳಿಯುವದಿಲ್ಲ.
(೧೩) ಜೀವಂಧರ ರಾಸ : ಬ್ರಹ್ಮಜಿನದಾಸ ಎಂಬ ಕವಿಯಿಂದ ಗುಜರಾತಿಯಲ್ಲಿ ರಚಿತವಾದ ಗ್ರಂಥ (೧೫ನೆಯ ಶತಮಾನ)
(೧೪) ಜೀವಂಧರ ಪುರಾಣ : ಜಿನಸಾಗರ ಎಂಬವರಿಂದ ಮರಾಠಿಯಲ್ಲಿ ರಚಿತವಾದ ಗ್ರಂಥ. (ಗುಜರಾತಿ ಗ್ರಂಥದ ಆಧಾರದ ಮೇಲೆ ರಚಿತವಾದ ಈ ಗ್ರಂಥ ೧೮ನೇ ಶತಮಾನದ್ದು.)
(೧೫) ‘ಜೀವಂಧರ ನಾಟಕ’ ಎನ್ನುವ ಗ್ರಂಥವೂ ಇದೆಯೆಂದು ಪ್ರತೀತಿ. ಆದರೆ ಗ್ರಂಥ ಸಿಕ್ಕಿಲ್ಲ.[2]
(೧೬) ಜೀವಂಧರ ಚರಿತೆ : ಕೂಡಲಗಿರಿಯಾಚಾರ್ಯ ಎಂಬ ಕವಿಯಿಂದ ಕನ್ನಡದಲ್ಲಿ ರಚಿತವಾದ ಗ್ರಂಥ. (೧೯ನೆಯ ಶತಮಾನ).[3]
ಮೇಲಿನ ಗ್ರಂಥಗಳಲ್ಲಿ ಕನ್ನಡ ಗ್ರಂಥಗಳೇ ಐದು ಇವೆಯೆಂಬುದನ್ನು ಲಕ್ಷಿಸಿದರೆ, ಕನ್ನಡ ನಾಡಿನಲ್ಲಿ ಜೀವಂಧರನ ಚರಿತ್ರೆಯು ಎಷ್ಟು ಜನಪ್ರಿಯವಾಗಿರಬೇಕೆಂಬುದರ ಕಲ್ಪನೆ ಬರುವಂತಿದೆ. ಇಂತಹ ಒಂದು ಪುಣ್ಯ ಚರಿತ್ರೆಯನ್ನು ಕನ್ನಡ ಜನತೆಗೆ ಮೊಟ್ಟ ಮೊದಲಿಗೆ ಒದಗಿಸಿದ ಶ್ರೇಯಸ್ಸು ಕವಿ ಭಾಸ್ಕರನಿಗೆ ಸಲ್ಲುತ್ತದೆ.

*****ಕೃತಿಗಳ ಮಾಹಿತಿ ಕೃಪೆ: ಕಣಜ******

೧೪.ಸ್ವತಂತ್ರ ಸಿದ್ಧಲಿಂಗೇಶ್ವರ

ಸ್ವತಂತ್ರ ಸಿದ್ಧಲಿಂಗೇಶ್ವರ
ಅಂಕಿತ: ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ
ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ ವಚನಕಾರ. 

ಕಾಲ:  ೧೬ನೇಯ ಶತಮಾತದ ಉತ್ತರಾರ್ಧ. 
ಸ್ಥಳ: ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಕಾಪನಹಳ್ಳಿ. 
ಅಚರ ಸಮೀಪದ 'ಗಜರಾಜಗಿರಿ' ಈತನ ಶಿವಯೋಗ ಸಾಧನೆಯ ಸ್ಥಾನ. ಅಲ್ಲಿಯೇ ಐಕ್ಯ. 
ಸದ್ಯ ಈತನ ೪೩೦ ವಚನಗಳು ದೊರೆತಿವೆ. 'ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರ' ಎಂಬುದು ಅಂಕಿತ. 
ಜಂಗಮರಗಳೆ, ಮುಕ್ತ್ಯಾಂಗನಾ ಕಂಠಮಾಲೆ ಎಂಬ ಕೃತಿಗಳನ್ನು ರಚಿಸಿದ್ದಾನೆ. 
ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಮುಖ್ಯ ವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾನೆ.

ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು,
ಹಾವನಾಡಿಸುವಂತೆ,
ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು.
ಅದೆಂತೆಂದಡೆ,
ತನ್ನ ವಚನವೆ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತ್ತೆನ್ನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ. ||


 ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ.
ದೇವರುದೇವರೆಂದರೇನು? ಒಮ್ಮರ ದೇವರೇ?
ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ,
ಉಳಿದವರೆಲ್ಲ ದೇವರೆ?
ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ.
ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ.
ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ
ನಿಂದೆಗೊಳಗಾದ.
ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ.
ಸೂರ್ಯ ದೇವರೆಂಬಿರೇ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ.
ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ.
'ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ'
ಎಂದುದಾಗಿ,
ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ
ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.||


ಮಹಾದೇವಿಯಕ್ಕ ಬಸವಣ್ಣ ಮೊದಲಾದ ವಚನಕಾರರಿಂದ ಪ್ರಭಾವಿತನಾಗಿದ್ದಾನೆ. ಬಸವಣ್ಣ, ಮಡಿವಾಳ ಮಾಚಿದೇವ, ಚನ್ನ ಬಸವಣ್ಣ, ಪ್ರಭುದೇವ, ಅಜಗಣ್ಣ ಇವರೆಲ್ಲ ತನಗೆ ಷಡುಸ್ಥಲವನ್ನಿತ್ತರೆಂದು ಹೇಳಿರುವನು. ನಿರೂಪಣೆಗೆ ಒಳ್ಳೆಯ ದೃಷ್ಟಾಂತಗಳನ್ನು ಬಳಸಿಕೊಳ್ಳುವುದರಿಂದ ವಚನಗಳು ಕಾವ್ಯಕಮನೀಯತೆಯಿಂದ ಕಂಗೊಳಿಸುತ್ತವೆ.

**********ಕೃಪೆ:lingayatreligion.com************