ನನ್ನ ಪುಟಗಳು

19 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ಎದೆಗೆ ಬಿದ್ದ ಅಕ್ಷರ-ಟಿಪ್ಪಣಿಗಳು

ಎದೆಗೆ ಬಿದ್ದ ಅಕ್ಷರ ಗದ್ಯಕ್ಕೆ ಪೂರಕವಾದ ಟಿಪ್ಪಣಿಗಳು

೧)    ಭೂಮಿಗೆ ಬಿದ್ದ ಬೀಜ 
        ಎದೆಗೆ ಬಿದ್ದ ಅಕ್ಷರ 
        ಇಂದಲ್ಲ ನಾಳೆ ಫಲ ಕೊಡುವುದು 
    ಭೂಮಿಗೆ ಬಿದ್ದ ಬೀಜ ಹೇಗಾದರೂ ಎಂದಾದರೂ ಮೊಳಕೆಯೊಡೆದು ಗಿಡವಾಗಿ ಮರವಾಗಿ ಫಲ ನೀಡುತ್ತದೆ. ಹಾಗೆಯೇ ನಮ್ಮ ಎದೆಗೆ ಬಿದ್ದ ಅಕ್ಷರ ಅಂದರೆ ನಾವು ಕಲಿತ ವಿದ್ಯೆ / ಶಿಕ್ಷಣ ಇಂದಲ್ಲ ನಾಳೆ ಯಾವ ರೀತಿಯಲ್ಲಾದರೂ ಫಲ ಕೊಟ್ಟೇ ಕೊಡುತ್ತದೆ. ಏಕೆಂದರೆ ಶಿಕ್ಷಣವೇ ಉತ್ತಮ ಜೀವನದ ಸಂಜೀವಿನಿ.
******
೨) ಕವಿ ಸಿದ್ಧಲಿಂಗಯ್ಯ 
      

        ಕವಿ ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
        ಶ್ರೀಯುತರು ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದಕವಿತೆಗಳು, ಅಲ್ಲೆಕುಂತವರೆ ನನ್ನ ಜನಗಳು ಮತ್ತು ಇತರ ಕವಿತೆಗಳು ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಊರು-ಕೇರಿ ಎಂಬುದು ಇವರ ಆತ್ಮಕಥೆ.
        ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಇವರು ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
******
೩) ಗುಡಿಮನೆ : ದೇವರ ಗುಡಿ, ಚಿಕ್ಕದಾದ ದೇವಸ್ಥಾನ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಣ್ಣ ದೇವಾಲಯಗಳನ್ನು ಗುಡಿ ಎಂದು ಕರೆಯುವುದು ವಾಡಿಕೆ.
******
೪) ಕಾರುಣ್ಯ ಸಮತೆಯ ಬುದ್ಧ : 
ಗೌತಮ ಬುದ್ಧ
    ಗೌತಮ ಬುದ್ಧನು ಕರುಣೆಯ ಪ್ರತೀಕವಾಗಿದ್ದನು. ಎಲ್ಲರನ್ನೂ ಯಾವುದೇ ಭೇದವಿಲ್ಲದೆ ಪ್ರೀತಿಯಿಂದ ಕಾಣಬೇಕೆಂದು ಬೋಧಿಸಿದ ಬುದ್ಧನು ಸ್ವತಃ ಅದೇ ರೀತಿ ಬದುಕಿದನು. ಎಲ್ಲರಲ್ಲಿ ಕರುಣೆ ಮತ್ತು ಸಮಾನತೆಯನ್ನು ತೋರಬೇಕು ಎಂಬುದು ಆತನ ಬೋಧನೆಯ ಪ್ರಮುಖ ಅಂಶಗಳಲ್ಲಿ ಒಂದು. ಆದ್ದರಿಂದ ಆತನ್ನು "ಕಾರುಣ್ಯ ಸಮತೆಯ ಬುದ್ಧ" ಎನ್ನಲಾಗಿದೆ.
******
೫) ಶಿವಾನುಭವ ಶಬ್ದಕೋಶ : ಇದು 'ವಚನ ಪಿತಾಮಹ' ಎಂದು ಹೆಸರಾದ ಫ.ಗು.ಹಳಕಟ್ಟಿಯವರ ಕೃತಿ. ಇದರಲ್ಲಿ ವೀರಶೈವ ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಅರ್ಥವಿವರಣೆ ಮಾಡಲಾಗಿದೆ. 
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ
    ಪ್ರಮುಖವಾಗಿ ಶರಣರ ವಿಚಾರಧಾರೆಗಳು, ಅವರ ವಚನಗಳ ಆಶಯ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ವೀರಶೈವ ಧರ್ಮ ಹಾಗೂ ವಚನ ಸಾಹಿತ್ಯದಲ್ಲಿ ಕಂಡುಬರುವ ಹಲವಾರು ಪದಗಳಿಗೆ ಅರ್ಥ ಹಾಗೂ ವಿವರಣೆಯನ್ನು ಈ ಕೃತಿಯಲ್ಲಿ ಕಾಣಬಹುದು.
***********
೬) ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು:  "ನುಡಿದಂತೆ ನಡೆಯಬೇಕು" ಎಂಬುದು ಶರಣರ ವಾಣಿ, ಅಂತೆಯೇ ನಡವಳಿಕೆಯಿಂದ ಒಳ್ಳೆಯ ನುಡಿ ಅಂದರೆ ಉತ್ತಮ ಮಾತು / ವಿಚಾರ ಹುಟ್ಟಬೇಕು. ಆಗ ಮಾತ್ರ ಅದನ್ನು ನಿಜವಾದ ಅರಿವು ಅಥವಾ ತಿಳಿವಳಿಕೆ ಎನ್ನಬಹುದು. ಎಂಬುದು ದೇವನೂರರ ಅಭಿಪ್ರಾಯ.
***********
೭) ಇಷ್ಟದೈವ : ಪ್ರತಿಯೊಬ್ಬರೂ ತಮ್ಮದೇ ಆದ ದೇವರನ್ನು ಆರಾಧಿಸುತ್ತಾರೆ. ಕುಲದೇವತೆ, ಮನೆದೇವತೆ, ಗ್ರಾಮದೇವತೆ ಎನ್ನುವಂತೆ ವ್ಯಕ್ತಿಗೆ ವೈಯಕ್ತಿಕವಾಗಿ ಇಷ್ಟವಾದ ದೇವರು ಅಥವಾ ಆರಾಧ್ಯ ದೇವರನ್ನು ಇಷ್ಟದೈವ ಎನ್ನಲಾಗಿದೆ.
    ಬಸವಣ್ಣನವರ ಇಷ್ಟದೈವ ' ಕೂಡಲ ಸಂಗಮ ದೇವ', ಅಕ್ಕಮಹಾದೇವಿಯ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ' ಕನಕದಾಸರ ಆರಾಧ್ಯದೇವರು ಕಾಗಿನೆಲೆ ಆದಿಕೇಶವ, ಪುರಂದರ ದಾಸರ ಆರಾಧ್ಯದೇವರು 'ಪುರಂದರ ವಿಠಲ'.... ಹೀಗೆ ಅವರವರದೇ ಆದ ಇಷ್ಟದೈವ ಹೊಂದಿದ್ದುದನ್ನು ಕಾಣಬಹುದು. ಸಾಮಾನ್ಯವಾಗಿ ಅವರ ಇಷ್ಟದೈವವೇ ಅವರ ವಚನಗಳ / ಕೀರ್ತನೆಗಳ ಅಂಕಿತನಾಮವಾಗಿರುತ್ತಿತ್ತು.
*********
೮) ಮನೋವೈದ್ಯರು : ಮಾನಸಿಕ ರೋಗಿಗಳಿಗೆ ಸಂಬಂಧಿಸಿದ ತಜ್ಞವೈದ್ಯರನ್ನು ಮನೋವೈದ್ಯರು ಎನ್ನುವರು. ಇವರು ವ್ಯಕ್ತಿಯ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುತ್ತಾರೆ. ಇವರನ್ನು "ಮಾನಸಿಕ ತಜ್ಞ" ಎಂದೂ ಕರೆಯುವರು. ಆಂಗ್ಲ ಭಾಷೆಯಲ್ಲಿ "Psychiatrist" (ಸೈಕಿಯಾಟ್ರಿಸ್ಟ್) ಎಂದು ಕರೆಯುವರು.
*********
೯) ಸಮಷ್ಟಿ ಮನಸ್ಸು : ಸಮಷ್ಟಿ ಎಂದರೆ ಸಮಗ್ರ, ವಿಶಾಲ ಎಂಬ ಅರ್ಥವಿದೆ. ಇಲ್ಲಿ ಸಮಷ್ಟಿ ಮನಸ್ಸು ಎಂದರೆ ಇಡೀ ಸಮಾಜದ / ಸಮುದಾಯದ / ಇಡೀ ವಿಶ್ವದ ಜನರ ಮನಸ್ಸು ಎಂದರ್ಥ.
*********
೧೦) ಮೂರ್ಛಾವಸ್ಥೆ : ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಪ್ರಮುಖವಾಗಿ ಮೂರು ಅವಸ್ಥೆಗಳನ್ನು ಕಾಣಬಹುದು. ೧. ಜಾಗೃತಾವಸ್ಥೆ (ಸಂಪೂರ್ಣ ಎಚ್ಚರದ ಸ್ಥಿತಿ), ೨. ಅರೆ ಸುಪ್ತಾವಸ್ಥೆ (ಅರೆಬರೆ ಎಚ್ಚರದ ಅವಸ್ಥೆ) 
    ಮತ್ತು ೩. ಮೂರ್ಛಾವಸ್ಥೆ (ನಾವು ಎಚ್ಚರವಾಗಿದ್ಧಾಗಲೂ ನಮ್ಮ ಅರಿವಿಗೆ ಬಾರದೆ ನಮ್ಮೊಳಗೆ ಅಡಗಿರುವ ತಿಳಿವಳಿಕೆ ಅಥವಾ ಜ್ಞಾನ)
*********




10ನೇ ತರಗತಿ-ಕನ್ನಡ-ಗದ್ಯ-06-ಎದೆಗೆ ಬಿದ್ದ ಅಕ್ಷರ-ಚಿತ್ರಗಳ ಸಂಗ್ರಹ

 ಪಠ್ಯಕ್ಕೆ ಪೂರಕವಾದ ಚಿತ್ರಗಳ ಸಂಗ್ರಹ

'ಎದೆಗೆ ಬಿದ್ದ ಅಕ್ಷರ' ಪುಸ್ತಕದ ಮುಖಪುಟ



 
ಗೌತಮ ಬುದ್ಧ

 
ಬಸವಣ್ಣ

ಡಾ॥ ಬಿ ಆರ್ ಅಂಬೇಡ್ಕರ್

ಕವಿ ಸಿದ್ಧಲಿಂಗಯ್ಯ

ದ ರಾ ಬೇಂದ್ರೆ

 

ರಾಮಕೃಷ್ಣ ಪರಮಹಂಸರು



ಕುಮಾರವ್ಯಾಸ

 

ಐನ್ ಸ್ಟೀನ್
ಟಾಲ್ಸ್ ಟಾಯ್

ವಿಲಿಯಂ ಶೇಕ್ಸ್ ಪಿಯರ್

************


10ನೇ ತರಗತಿ-ಕನ್ನಡ-ಗದ್ಯ-06-ಎದೆಗೆ ಬಿದ್ದ ಅಕ್ಷರ-ಲೇಖಕರ ಪರಿಚಯ

ದೇವನೂರು ಮಹಾದೇವ ಅವರ ಪರಿಚಯ

ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ
       ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇವನೂರು ಎಂಬ ಗ್ರಾಮದಲ್ಲಿ ಕ್ರಿ.ಶ.೧೯೪೮ ರಲ್ಲಿ ಜನಿಸಿದರು. 
       ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.  
       ಶ್ರೀಯುತರ ಪ್ರಮುಖ ಕೃತಿಗಳು: ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೆ, ನಂಬಿಕೆಯನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಇತ್ಯಾದಿ.
        ಇವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. 
*************
ದೇವನೂರ ಮಹಾದೇವ ಅವರ ಬಗ್ಗೆ ಹೆಚ್ಚಿನ ಮಾಹಿತಿ
*************

        ದೇವನೂರು ಮಹಾದೇವ ಇವರು ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರು.ಹೊಸಗನ್ನಡದ ಇಲ್ಲಿಯವರೆಗಿನ ಸಣ್ಣ ಕತೆಗಳ ಚರಿತ್ರೆಯನ್ನು (೧) ಮಾಸ್ತಿ ಯುಗ (೨) ಲಂಕೇಶ ಯುಗ ಹಾಗು (೩)ದೇವನೂರು ಯುಗ ಎಂದು ವಿಂಗಡಿಸಬಹುದು. ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. 

ಬಾಲ್ಯ, ವಿದ್ಯಾಭ್ಯಾಸ 
        ದೇವನೂರು ಮಹಾದೇವ ಇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೮ರಲ್ಲಿ. ತಂದೆ ಸಿ.ನಂಜಯ್ಯ(ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ.ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಫ಼ೆಲೋಶಿಪ್ ಅನ್ನು ನಿರಾಕರಿಸಿದ ಹಿರಿಮೆ ಇವರದು. 

ಪ್ರಮುಖ ಸಾಹಿತ್ಯ ಕೃತಿಗಳು 
  • ಕಥಾಸಂಕಲನಗಳು : "ದ್ಯಾವನೂರು"
  • ಕಿರು ಕಾದಂಬರಿ : "ಒಡಲಾಳ"'
  • ಕಾದಂಬರಿ : 'ಕುಸುಮಬಾಲೆ'
  • ಬಿಡಿ ಬರಹಗಳು : 'ಎದೆಗೆ ಬಿದ್ದ ಅಕ್ಷರ'
  • ವಯಸ್ಕರ ಶಿಕ್ಷಣ : 'ನೋಡು ಮತ್ತು ಕೂಡು'
  • ಅನುವಾದ : 'ಗಾಂಧಿ ಮತ್ತು ಮಾವೋ'
        "ಕುಸುಮಬಾಲೆ" ಇವರು ಬರೆದ ಕಾದಂಬರಿ. ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” , ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು. 

ದೇವನೂರು ಮಹಾದೇವರ ಸಾಹಿತ್ಯ ಕುರಿತ ಇತರೆ ಕೃತಿಗಳು 
    ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗು ಅನಿಸಿಕೆಗಳನ್ನೊಳಗೊಂಡ "ಯಾರ ಜಪ್ತಿಗೂ ಸಿಗದ ನವಿಲು" ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ.
ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು - ಉದಯಕುಮಾರ ಹುಬ್ಬು
ದೇವನೂರು ಮಹಾದೇವ - ಎನ್,ಪಿ.ಶಂಕರನಾರಾಯಣರಾವ್ 

ಪತ್ರಿಕೋದ್ಯಮ ಮತ್ತು ನಿರ್ವಹಿಸಿರುವ ಜವಾಬ್ದಾರಿಗಳು 

    ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು. ಸುದ್ದಿ ಸಂಗಾತಿ ಪತ್ರಿಕೆಯ ಬೆನ್ನೆಲುಬಾಗಿದ್ದರು.
ಅಧ್ಯಕ್ಷರು -ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ
ಸಂಚಾಲಕರು - ದಲಿತ ಸಂಘರ್ಷ ಸಮಿತಿ
ಸದಸ್ಯರು - ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ
ಅಧ್ಯಾಪಕರು- ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ
ಸಂದರ್ಶನ ಪ್ರಾಧ್ಯಪಕರು- ಹಂಪಿ ವಿಶ್ವವಿದ್ಯಾನಿಲಯ 


ಸಾಮಾಜಿಕ 

ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ. 

ಗೌರವ, ಪುರಸ್ಕಾರ 
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಲ್ಲಮಪ್ರಭು ಪ್ರಶಸ್ತಿ-೨೦೧೩
ಬೋಧಿವೃಕ್ಷಪ್ತಶಸ್ತಿ -೨೦೧೩
ವಿ,ಎಂ.ಇನಾಂದಾರ್ಪ್ರಶಸ್ತಿ-ಎದೆಗೆ ಬಿದ್ದ ಅಕ್ಷರ ಕೃತಿಗೆ
ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ,
ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯ-೨೦೧೪
ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಮ' ನಲ್ಲಿ ಭಾಗವಹಿಸಿದ್ದಾರೆ. 

ಖಾಯಂ ವಿಳಾಸ 

ನಂ.೫೩, ೧೧ನೇ ಬೀದಿ, ನವಿಲು ರಸ್ತೆ,
ಕುವೆಂಪು ನಗರ, ಮೈಸೂರು-೨೩
ದೂರವಾಣಿ : ೦೮೨೧-೨೫೪೩೫೭೬

***************