ನನ್ನ ಪುಟಗಳು

27 ನವೆಂಬರ್ 2013

ಬಲಿಯನಿತ್ತೊಡೆ ಮುನಿವೆಂ (ಪದ್ಯ-1)


ಕೆಳಗಿನ ಪರಿವಿಡಿಯಲ್ಲಿ ಆರಿಸಿ
ಕವಿ ಪರಿಚಯ
ಯಶೋಧರ ಚರಿತೆ ಕುರಿತ ವಿಮರ್ಶಾತ್ಮಕ ಲೇಖನ
ಅನಂತನಾಥ ಪುರಾಣ ಕುರಿತು
ಪದ್ಯದ ಸಾರಾಂಶ

   ********************************************************************************
[ಬಲಿಯನಿತ್ತೊಡೆ ಮುನಿವೆಂ ಪದ್ಯಭಾಗವನ್ನು ಜನ್ನ ಕವಿ ರಚಿಸಿರುವ ‘ಯಶೋಧರಚರಿತೆ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ]
‘ಕವಿಚಕ್ರವರ್ತಿ’ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ. (ಕಾಲ :ಕ್ರಿ.ಶ.೧೧೮೦-೧೨೬೦)

ತಂದೆ ತಾಯಿಗಳು ಮತ್ತು ಪರಿವಾರ :
      ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು. ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ). ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ, ಸೈನ್ಯಾಧಿಪತಿಯೂ, ಆಸ್ಥಾನಕವಿಯೂ ಆಗಿದ್ದನು. ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು.
ಜೈನಮತೀಯನಾದರೂ ಅವನ ಸಾಹಿತ್ಯ ಕೃಷಿ ಸರ್ವಪ್ರಕಾರಗಳನ್ನು ವ್ಯಾಪಿಸಿತ್ತು:
ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ, ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ, ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.
ಜನ್ನನ ಕೃತಿಗಳು :  
  • ಜನ್ನನು ಕ್ರಿ.ಶ.೧೨೦೯ರಲ್ಲಿ ‘ಯಶೋಧರ ಚರಿತ್ರೆ’ಯನ್ನು ರಚಿಸಿದನು.  
  • ಜನ್ನನ ಎರಡನೆಯ ರಚನೆ ೧೨೩೦ ರಲ್ಲಿ ‘ಅನಂತನಾಥಪುರಾಣ’ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.
  • ಅಲ್ಲದೆ ‘ಅನುಭವ ಮುಕುರ’ ಎಂಬ ಒಂದು ಚಿಕ್ಕ ಕೃತಿಯೂ ಈತನಿಂದ ರಚಿತವಾಗಿದೆ. 

ಯಶೋಧರ ಚರಿತೆ : ಇದು ನಾಲ್ಕು ಅವತಾರಗಳನ್ನುಳ್ಳ ಚಿಕ್ಕದಾದರೂ ಚೊಕ್ಕವಾಗಿರುವ ಉತ್ಕೃಷ್ಟ ಕಾವ್ಯ. ಇದರಲ್ಲಿ ಮಾರಿದತ್ತನೆಂಬ `ಹಿಂಸಾರಭಸಮತಿ'ಯಾದ ದೊರೆಯನ್ನು ಧರ್ಮಕ್ಕೆ ತಿರುಗಿಸಿದ ಶುಭ ಕಥೆ ಬಂದಿದೆ.
ಸಂಕಲ್ಪಹಿಂಸೆಯೊಂದರಿಂದ ಹಲವು ಹೀನಯೋನಿಗಳಲ್ಲಿ ಹುಟ್ಟಿ ಹಲವು ಕಷ್ಟಸಂಕಟಗಳನ್ನು ಅನುಭವಿಸಿದ ಚಂದ್ರಮತಿ ಯಶೋಧರರೆಂಬ ತಾಯಿ ಮಕ್ಕಳು ಕೋಳಿಗಳಾಗಿದ್ದಾಗ ಜೀನದೀಕ್ಷೆ ವಹಿಸಿದ ನಿಮಿತ್ತದಿಂದ ತಮಗೆ ಮತ್ತೆ ಮಾನುಷಜನ್ಮ ಬಂದು ಅಭಯರುಚಿ ಅಭಯಮತಿಗಳೆಂಬ ಅಣ್ಣತಂಗಿಯರಾಗಿ ಹುಟ್ಟಿದರು.
ಚಂದಮಾರಿ ದೇವತೆಗೆ ಬಲಿ ಕೊಡುವ ಸಲುವಾಗಿ ಅವರನ್ನು ತಳವಾರನು ಹಿಡಿತರಲು ಅಕಸ್ಮಾತ್ ಮಾರಿದತ್ತನಿಗೆ ಅವರ ವಿಷಯದಲ್ಲಿ ಅನುಕಂಪ ಹುಟ್ಟಿ ಅವರ ಚರಿತ್ರೆಯನ್ನು ವಿಚಾರಿಸಲು ಅವರು ತಮ್ಮ ಜನ್ಮಾಂತರ ಕಥೆಯನ್ನೆಲ್ಲಾ ಹೇಳಿದರು. ಅದನ್ನು ಕೇಳಿ ಮಾರಿದತ್ತನಿಗೆ, ಆ ಚಂಡಮಾರಿದೇವತೆಗೂ ಹಿಂಸಾಕರ್ಮದಲ್ಲಿ ಅಸಹ್ಯ ಮೂಡಿತು. ಅವರಿಬ್ಬರೂ ಅಭಯರುಚಿ ಕುಮಾರನಲ್ಲಿ ಅಹಿಂಸೆಯ ದೀಕ್ಷೆ ಕೈಗೊಂಡರು. ಇದಿಷ್ಟು ಕಥೆಯನ್ನು ಅಚ್ಚುಕಟ್ಟಾಗಿ ಕಂದಪದ್ಯಗಳಲ್ಲಿ ಜನ್ನ ನಾಲ್ಕು ಚಿಕ್ಕ ಸಂಧಿಗಳಲ್ಲಿ ಹೇಳಿ ಮುಗಿಸಿದ್ದಾನೆ.
ಆ ಸಂಧಿಗಳಿಗೆ ಅವತಾರಗಳೆಂದೇ ಹೆಸರು. ಸನ್ನಿವೇಶಚಿತ್ರಣ, ಪಾತ್ರಪೋಷಣ, ಮನಸ್ಸಿನ ಧರ್ಮಸಂಕಟಗಳನ್ನು ಹೃದಯಂಗಮವಾಗಿ ಚಿತ್ರಿಸುವಿಕೆ, ಎಲ್ಲದರಲ್ಲಿಯೂ ಜನ್ನ ಈ ಕಾವ್ಯದಲ್ಲಿ ಬಹಳ ಯಶಸ್ವಿಯಾಗಿದ್ದಾನೆ. ಇದನ ಮಧ್ಯೆ ಧರ್ಮಜಿಜ್ಞಾಸೆ, ಭವಾವಳಿಯ ನಿರೂಪಣೆಗಳು ಬಂದಿವೆ. ಈತನ ಕಂದಪದ್ಯಗಳ ಓಟ ಬಹಳ ರಮಣೀಯವಾಗಿದೆ.
ಅನಂತನಾಥ ಪುರಾಣ : ಇದು ಹದಿನಾಲ್ಕನೆಯ ತೀರ್ಥಂಕರನ ಚರಿತ್ರೆ.
ಇದರಲ್ಲಿ ಹದಿನಾಲ್ಕು ಆಶ್ವಾಸನೆಗಳಿವೆ. ಇದರಲ್ಲಿ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ , ಜನ್ನ.
ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಈ ಕಥೆಯಿಂದ ಈ ತೀರ್ಥಂಕರ ಪುರಾಣಕ್ಕೆ ಒಂದು ಹೆಚ್ಚಿನ ಮೆರುಗು ಬಂದಿದೆಯೆಂದು ಹೇಳಬಹುದು. ಜನ್ನನ ಲೋಕಾನುಭವ, ಮನುಷ್ಯ ಸ್ವಭಾವ ಪರಿಜ್ಞಾನ, ಇವು `ಅನಂತನಾಥ ಪುರಾಣ'ದ ಹಲವು ಪಾತ್ರಗಳ ಚಿತ್ರದಲ್ಲಿ ಚೆನ್ನಾಗಿ ಪ್ರಕಾಶಕ್ಕೆ ಬಂದಿದೆ.
ಜನ್ನ ತುಂಬುಜೀವನವನ್ನು ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಜೀವನರಸಿಕ. `ಯಶೋಧರ ಚರಿತೆ'ಯಲ್ಲಿಯೂ `ಅನಂತನಾಥ ಪುರಾಣ'ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ.
ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು.
ಕ್ರಿ.ಶ. ೧೨೦೯ರಲ್ಲಿ `ಯಶೋಧರ ಚರಿತೆ'ಯನ್ನು, ಕ್ರಿ.ಶ. ೧೨೩೦ರಲ್ಲಿ `ಅನಂತನಾಥ ಪುರಾಣ'ವನ್ನೂ ರಚಿಸಿದನು.
ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು.
ಜನ್ನ `ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು' ಎಂದು ಹೇಳಿಕೊಂಡಿರುವುದರಿಂದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು.
ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು.
ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ `ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್' ಎಂದು ಕೊಂಡಾಡಿದ್ದಾನೆ.

ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :
   ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ. ೧೧೯೧ ರಲ್ಲಿ ಚೆನ್ನರಾಯಪಟ್ಟಣದಲ್ಲಿಯೂ ೧೧೯೭ ರಲ್ಲಿ ತರೀಕೆರೆಯಲ್ಲಿಯೂ ಶಾಸನಗಳ ರಚನೆಯಾಗಿದ್ದಿತು. ಇನ್ನೂ ಕೆಲವು ಶಾಸನಗಳನ್ನು ಈತ ರಚಿಸಿರಬಹುದು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

(ಕೃಪೆ: ಕಣಜ, ಲೇಖಕರು: ಕಮಲಾ ಹಂಪನಾ

ಇಬ್ಬರು ಎಳೆಯರು-ಅಣ್ಣ, ತಂಗಿ. ಭಿಕ್ಷೆಗೆಂದು ಊರಿನಲ್ಲಿ ಹೊರಟಿದ್ದಾರೆ. ಆ ಊರಿಗೆ ಒಬ್ಬ ರಾಜ. ಅವನು, “ಬಲಿ ಕೊಡುವುದಕ್ಕಾಗಿ ಇಬ್ಬರು ಎಳೆಯ ಹುಡುಗರನ್ನು ಎಳೆತನ್ನಿ” ಎಂದು ದೂತರನ್ನು ಕಳುಹಿಸಿದ. ಅವರು ಈ ಅಣ್ಣ-ತಂಗಿಯರನ್ನು ಗುಡಿಗೆ ಎಳೆದುಕೊಂಡು ಹೋದರು. ಬಲಿ ಕೊಡುವ ಆ ಗುಡಿಯೊ ನೋಡಿದರೇ ದೊಡ್ಡವರ ಎದೆಯನ್ನೂ ಒಡೆಯುವಂತಿತ್ತು. ಆದರೆ ಅಣ್ಣ-ತಂಗಿ ಹೆದರಲಿಲ್ಲ. ಒಬ್ಬರನ್ನೊಬ್ಬರು ಸಮಾಧಾನ ಮಾಡಿದರು. “ನೀವು ಸಾಯುವ ಮೊದಲು ರಾಜನನ್ನು ಹರಸಬೇಕು” ಎಂದು ಅಲ್ಲಿದ್ದ ಜನರು ಹೇಳಿದರು. “ರಾಜ, ನಿರ್ಮಲ ಧರ್ಮದಿಂದ ರಾಜ್ಯವಾಳು” ಎಂದು ಅವರು ಹರಸಿದರು. ಕೋಪವಿಲ್ಲ, ದ್ವೇಷವಿಲ್ಲ, ಅಳುವಿಲ್ಲ. ಅವುಗಳ ಬದಲು ಆಶೀರ್ವಾದ!
ಯಾರಿವರು ಎಂದು ಬೆರಗಾಗಿ ರಾಜ ಕೇಳಿದ. ಅವರು ತಮ್ಮ ಕಥೆಯನ್ನು ಹೇಳಿದರು.
ರಾಜನಂತೆ ನಾವೂ ಬೆರಗಾಗುತ್ತೇವೆ, ಅಲ್ಲವೆ?
ಈ ಎಳೆಯರ ಕಥೆಯನ್ನೂ ಈ ಕಥೆ ಬರುವ ಕಥೆಯನ್ನೂ ಜನ್ನ ಕನ್ನಡದಲ್ಲಿ ಹೇಳಿದ್ದಾನೆ.

ಪುಣ್ಯಪುರುಷ ಜನ್ನ
        ಜನ್ನ ಹುಟ್ಟಿ ಬೆಳೆದ ಊರು ಅಂದಿನ ದೋರಸಮುದ್ರವಿರಬಹುದು. ಆ ಊರನ್ನು ಈಗ ಹಳೆಯಬೀಡು ಎಂದು ಕರೆಯುತ್ತಾರೆ. ಜನ್ನ ಕಮ್ಮೆ ವಂಶದ ಕಾಶ್ಯಪ ಗೋತ್ರದವನು. ಈತನ ತಂದೆ ಶಂಕರ. ಶಂಕರನಿಗೆ ‘ಕವಿಸುಮನೋಬಾಣ’ ಎಂಬ ಬಿರುದು ಇದ್ದಿತು. ಶಂಕರ ದೊಡ್ಡ ವಿದ್ವಾಂಸನೂ ಕವಿಯೂ ಆಗಿದ್ದು. ಜೊತೆಗೆ ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾಧ್ಯಾಯನಾಗಿದ್ದನು. ತಾಯಿ ಸಾಕ್ಷಾತ್ ಶಂಕರನ ಹೆಂಡತಿಯಂತೆ ವಿಖ್ಯಾತಳಾಗಿದ್ದ ಗಂಗಾದೇವಿ. ‘ಸೂಕ್ತಸುಧಾರ್ಣವ’ ಎಂಬ ಪ್ರಸಿದ್ಧ ಕನ್ನಡ ಕಾವ್ಯವನ್ನು ಬರೆದಿರುವ ಮಲ್ಲಿಕಾರ್ಜುನ ಈತನ ಭಾವಮೈದುನ.
          ಮಲ್ಲಿಕಾರ್ಜುನನಿಗೆ ತಂಗಿಯನ್ನು ಕೊಟ್ಟು ವಿವಾಹವಾಗಿತ್ತು. ‘ಶಬ್ದಮಣಿದರ್ಪಣ’ ಎಂಬುದು ಕನ್ನಡದಲ್ಲಿ ಪ್ರಸಿದ್ಧವಾದ ವ್ಯಾಕರಣ ಗ್ರಂಥ; ಅದನ್ನು ಬರೆದ ಕೇಶಿರಾಜ ಮಲ್ಲಿಕಾರ್ಜುನನ ಮಗ, ಜನ್ನನ ಸೋದರಳಿಯ. ಹೀಗೆ ಜನ್ನನ ಮನೆತನದವರು ಮಾತ್ರವಲ್ಲದೆ ಅವರ ಬೀಗಬಳಗದವರು ಕೂಡ ದೊಡ್ಡ ಪದವಿಯವರೂ ಪಂಡಿತರೂ ಕವಿಗಳೂ ಆಗಿದ್ದರು.
     ಕಟಕೋಪಾಧ್ಯಾಯನಾದ ‘ಅಭಿನವಶರ್ವವರ್ಮ’ ನಾಗವರ್ಮನು ಜನ್ನನ ವಿದ್ಯಾಗುರು. ಆಧ್ಯಾತ್ಮಗುರು ರಾಮಚಂದ್ರಮುನೀಂದ್ರ. ಈ ಮಹಾಚೇತನಗಳ ಮಧ್ಯೆ ಬೆಳೆದ ಜನ್ನನಿಗೆ ಮೊದಮೊದಲು ದಂಡನಾಯಕರ ಆಶ್ರಯ ದೊರೆಯಿತು. ಅನಂತ ನರಸಿಂಹ ಬಲ್ಲಾಳ ಎಂಬ ಚಕ್ರವರ್ತಿಯ ಸ್ನೇಹಾಭಿಮಾನಗಳು ದೊರೆತವು. ಜನ್ನನು ಪುಣ್ಯಪುರುಷ. ಸರಸ್ವತಿ ಹಾಗೂ ಲಕ್ಷ್ಮಿಯರಿಬ್ಬರ ಕೃಪಾ ಕಟಾಕ್ಷವೂ ಆತನಿಗಿದ್ದಿತು. ಈ ವಿದ್ಯೆ, ಐಶ್ವರ್ಯದ ಜೊತೆಗೆ ವಿನಯವೂ, ಅದರ ಜೊತೆಗೆ ಉದಾರ ಗುಣವೂ ಇದ್ದವು. ಗುರುಭಕ್ತಿ, ದೈವಭಕ್ತಿಗಳು ಜನ್ನನ ಈ ಗುಣಗಳನ್ನು ಇನ್ನೂ ಮೆರೆಸಿದ್ದವು.
     ಜನ್ನನ ಕುಟುಂಬವೂ ಆದರ್ಶಮಯವಾಗಿತ್ತು. ತನ್ನ ಜೀವನದ ಗೆಳತಿ, ಧರ್ಮಪತ್ನಿ ಲಕ್ಷ್ಮೀದೇವಿಯನ್ನು ಕುರಿತು ಜನ್ನ ಹೆಮ್ಮೆಯ ಮಾತುಗಳನ್ನು ಆಡಿದ್ದಾನೆ. ಈಕೆ ಜನ್ನನ ಮನೆಯ ನಂದಾದೀವಿಗೆಯಾಗಿದ್ದಳು. ಐಶ್ವರ್ಯ, ಒಳ್ಳೆಯ ಗುಣ, ಇತರರಿಗೆ ಸಹಾಯ, ಸಂತೋಷ ಎಲ್ಲ ತುಂಬಿ ತುಳುಕಾಡುತ್ತಿದ್ದ ಜನ್ನನ ಸಂಸಾರವು ರಸಮಯವಾಗಿದ್ದಿತು.
ಉದಾರಿ
        ಜನ್ನ ತನ್ನ ಕೃತಿಗಳಲ್ಲಿ ತನಗೆ ಪ್ರಿಯವಾದಂತೆ ತನ್ನನ್ನು ಜನ್ನ, ಜನ್ನಿಗ, ಜನ್ನಯ್ಯ, ಜನ್ನಮಯ್ಯ, ಜಾನಕಿ, ಜನ್ನಮರಸ, ಜನಾರ್ದನದೇವ ಎಂಬ ಹೆಸರುಗಳಿಂದ ಕರೆದುಕೊಂಡಿದ್ದಾನೆ. ಜನ್ನನು ಗಂಡರಾದಿತ್ಯನ ಪಟ್ಟಣದಲ್ಲಿ ಅನಂತನಾಥ ಬಸದಿಯನ್ನು ಕಟ್ಟಿಸಿದ್ದನು. ದೋರ ಸಮುದ್ರದಲ್ಲಿ ವಿಜಯ ಪಾರ್ಶ್ವಜಿನೇಶ್ವರ ಬಸದಿಯ ದ್ವಾರದ ಮುಂದೆ ಮಾಡಿಸಿದ ಶಾಂತಿ ಜಿನಾಲಯದಲ್ಲಿ ತಾನ ಬರೆದ ಅನಂತನಾಥ ಪುರಾಣವನ್ನು ಪ್ರತಿಷ್ಠಿಸಿ ಪ್ರಕಟಿಸಿದನು. ಆ ಸಂದರ್ಭದಲ್ಲಿ ಆ ಪುರಾಣದ ಸಾವಿರ ಓಲೆಗರಿಯ ಪ್ರತಿಗಳನ್ನು ಬರೆಸಿ, ವಿಶೇಷ ಉಡುಗೊರೆಗಳೊಂದಿಗೆ ಪಂಡಿತರುಗಳಿಗೆ ಪ್ರತಿಗಳನ್ನು ದಾನ ಮಾಡಿದನು. ಇದರಿಂದ ಜನ್ನನ ಉದಾರ ಗುಣವೂ ಸುಪ್ರತಿಷ್ಠೆ ಗೌರವವೂ ದೈವಭಕ್ತಿಯೂ ಅರ್ಥವಾಗುತ್ತದೆ.
ಕವಿ-ಕಲಿ-ವಿದ್ವಾಂಸ
      ಜನ್ನನು ತನ್ನನ್ನು ‘ಜನ್ನಮರಸ’ ಎಂದು ಕರೆದುಕೊಂಡಿರುವುದರಿಂದಲೂ, ಜನ್ನನಿಗೆ ‘ನಾಳ್ಪ್ರಭು’ ಎಂಬ ಬಿರುದು ಇದ್ದುದರಿಂದಲೂ ಈತನು ಒಂದು ಸಣ್ಣ ರಾಜ್ಯಕ್ಕೆ ಅರಸನಾಗಿದ್ದಿರಬಹುದು. ಜನ್ನ, ‘ಜಗದೊಳ್ ತಾನು ಇತ್ತ ಕೈಯಲ್ಲದೆ, ಒಡ್ಡಿದ ಕೈಯಲ್ಲ’ (ನಾನು ಇತರರಿಗೆ ದಾನ ಮಾಡಿದೆ, ನನಗೆ ಕೊಡಿ ಎಂದು ಕೈ ಹಿಡಿಯಲ್ಲಿಲ್ಲ) ಎಂದು ಹೇಳಿಕೊಂಡಿದ್ದಾನೆ. ಅದು ನಿಜ ಎನ್ನುವುದು ಅವನ ದಾನಗುಣದಿಂದ ಖಚಿತವಾಗುತ್ತದೆ. ಜನ್ನ ಕವಿಯಾಗಿದ್ದಂತೆ ಕಲಿಯೂ ಆಗಿದ್ದ. ಜೊತೆಗೆ ಚೆನ್ನ ಚೆಲುವ. ‘ಸೊಬಗಿನ ಜಂಗಮ ಶಾಸನನ್’, ‘ಸೊಬಗಿನ ಅಭಿನವ ಮದನನ್’ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಜನ್ನನಿಗೆ ತನ್ನ ಕವಿತಾಶಕ್ತಿಯ ವಿಷಯದಲ್ಲಿ ಒಂದು ಬಗೆಯ ಗೌರವ, ಪೂಜ್ಯತೆ, ಒಂದು ರೀತಿಯ ಹೆಮ್ಮೆ, ಕೆಚ್ಚು. ಜನ್ನನಿಗೆ ಕವಿತಾಪ್ರತಿಭೆಯನ್ನು ದೇವರು ಕರುಣಿಸಿದ್ದ, ನಿಜ. ಆದರೆ ಆತ ಅಷ್ಟಕ್ಕೇ ತೃಪ್ತಿಪಟ್ಟು ಕುಳಿತವನಲ್ಲ. ದೇವರು ಒಬ್ಬ ಮನುಷ್ಯನಿಗೆ ಎಷ್ಟೇ ಸಾಮರ್ಥ್ಯ ಕೊಟ್ಟಿರಲಿ, ಅವನೂ ಕಷ್ಟಪಟ್ಟು ಓದಿ ಯೋಚಿಸಿ ತಿಳುವಳಿಕೆ ಬೆಳೆಸಿಕೊಳ್ಳಬೇಕು. ಇದು ಭೂಮಿಯಲ್ಲಿರುವ ಬೀಜಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿದಂತೆ ಎಂದು ಅವನಿಗೆ ತಿಳಿದಿತ್ತು. ಆತ ಅನೇಕ ಶಾಸ್ತ್ರಗಳನ್ನು ಓದಿ ಕರಗತ ಮಾಡಿಕೊಂಡಿದ್ದ. ತನ್ನ ಹಿಂದಿನ ಕವಿಗಳ ಕೃತಿಗಳನ್ನು ಓದಿ ಹೃದ್ಗತ ಮಾಡಿಕೊಂಡಿದ್ದ. ಕವಿಯ ಈ ವಿದ್ಯಾವ್ಯವಸಾಯ ಆತನಿಗೆ ಹೆಚ್ಚು ಪ್ರತಿಫಲವನ್ನು ತಂದುಕೊಟ್ಟಿತು.

ಸರ್ವಜ್ಞಭೂಪನ ಆಸ್ಥಾನದಲ್ಲಿ
      ಕನ್ನಡ ಸಾಹಿತ್ಯದಲ್ಲಿ ‘ಕವಿಚಕ್ರವರ್ತಿ’ ಬಿರುದನ್ನು ಪಡೆದ ಮೂವರೇ ಕವಿಗಳಲ್ಲಿ ಜನ್ನನೂ ಒಬ್ಬ. ರಾಷ್ಟ್ರಕೂಟ ಚಕ್ರವರ್ತಿಯಾದ ಕನ್ನರನಿಂದ ಪೊನ್ನಕವಿಯೂ, ಚಾಳುಕ್ಯ ಚಕ್ರವರ್ತಿಯಾದ ತೈಲಪನಿಂದ ರನ್ನನೂ, ಹೊಯ್ಸಳ ಚಕ್ರವರ್ತಿಯಾದ ವೀರ ಬಲ್ಲಾಲನಿಂದ ಕವಿ ಜನ್ನನೂ ಕವಿಚಕ್ರವರ್ತಿ ಬಿರುದನ್ನು ಪಡೆದರು. ಕನ್ನಡ ಸಾಹಿತ್ಯದಲ್ಲಿ ಕಾವ್ಯಗಳ ಜೊತೆಗೆ ಶಾಸನಗಳನ್ನೂ ಬರೆದವರಲ್ಲಿ ರನ್ನ, ಶಾಂತಿನಾಥ ಕವಿಗಳ ಪಂಕ್ತಿಗೆ ಜನ್ನನೂ ಸೇರುತ್ತಾನೆ.
       ವೀರಬಲ್ಲಾಳನ ಆಸ್ಥಾನದಲ್ಲಿ ಕವಿ ಜನ್ನ ಚತುರ್ವಿಧ ಪಂಡಿತನೂ ಕವಿರಾಜಶೇಖರನೂ ಆಗಿದ್ದನು. ಬಲ್ಲಾಳನ ಮಗ ನರಸಿಂಹನು ಪಟ್ಟಕ್ಕೆ ಬರುವ ವೇಳೆಗೆ ಜನ್ನನ ಮಹಿಮೆ, ಪ್ರತಾಪಗಳು ಹೆಚ್ಚಾದವು. ಆಗ ಜನ್ನ ಆಸ್ಥಾನಕವಿ ಮಾತ್ರವಾಗಿರದೆ ಮಂತ್ರಿಯೂ ದಂಡಾಧೀಶವೂ ಆದನು.
       ಜನ್ನನ ಆಶ್ರಯದಾತನಾಗಿದ್ದ ನರಸಿಂಹ ಬಲ್ಲಾಳನೂ ಸಹ ‘ಸರ್ವಜ್ಞಭೂಪ’ನಾಗಿದ್ದನು. ವಿದ್ಯಾಪಾರಂಗತನಾಗಿದ್ದನು. ಜನ್ನ ಕವಿಯ ಕಾವ್ಯವನ್ನು ಅರ್ಥಮಾಡಿ ಕೊಂಡು ಅನುಭವಿಸುವ ರಸಿಕ ಅವನಾಗಿದ್ದನು. ಮಾಲೆಗಾರ ಬಹು ಕಷ್ಟಪಟ್ಟು ಶ್ರದ್ಧೆಯಿಂದ ಹೊಸ ಮಾಲೆಯನ್ನು ಕಟ್ಟಬಹುದು; ಅದು ಚೆನ್ನಾಗಿದೆ ಎಂದು ಮೆಚ್ಚಿ ಮುಡಿವ ಭೋಗಿಗಳಿಲ್ಲದಿದ್ದರೆ ಮಾಲೆ ಕಟ್ಟಿದ ಹೂವಾಡಿಗನ ಶ್ರಮ ವ್ಯರ್ಥವಾಗುತ್ತದೆ. ಹಾಗೆಯೇ, ಕವಿ ರಚಿಸಿದ ಕೃತಿಗಳನ್ನು ಓದಿ,  ಕೇಳಿ, ಆನಂದಿಸುವ ಸಹೃದಯರು (ಎಂದರೆ ಕವಿಯ ಸಮಾನ ಹೃದಯರು, ಕವಿಯಂತೆಯೇ ಸಂತೋಷ, ದುಃಖ, ಮೆಚ್ಚಿಗೆ ಎಲ್ಲ ಅನುಭವಿಸುವವರು) ಇಲ್ಲದಿದ್ದರೆ ಕವಿಯ ಶ್ರಮ ವ್ಯರ್ಥ ವಾಗುತ್ತದೆ. ಆದರೆ ಜನ್ನನ ಸಹೃದಯ ಸಂಘ ದೊಡ್ಡದಾಗಿತ್ತು. ಅವನ ಕಾವ್ಯಗಳನ್ನು ಓದಿ, ಮೆಚ್ಚಿ, ಆನಂದಿಸುವವರು ಅನೇಕರಿದ್ದರು.
       ಜನ್ನನಿಗೆ ವೀರ ಬಲ್ಲಾಳನು ಕೊಟ್ಟ ‘ಕವಿಚಕ್ರವರ್ತಿ’ ಎಂಬ ಬಿರುದಿನ ಜೊತೆಗೆ ಇನ್ನೂ ಅನೇಕ ಬಿರುದುಗಳಿದ್ದವು. ನಾಳ್ಪ್ರಭು, ಸಾಹಿತ್ಯರತ್ನಾಕರ, ಕವಿವೃಂದಾರಕ ವಾಸವ, ಕವಿಕಲ್ಪಲತಾಮಂದಾರ, ರಾಜವಿದ್ವತ್ ಸಭಾಕಳಹಂಸ, ಕವಿಭಾಳ ಲೋಚನ, ಕವಿಭಾಳೇಕ್ಷಣ, ಉದ್ದಂಡಕವಿಭಾಳನೇತ್ರ, ಸುಕವಿ ಜನಮಿತ್ರ, ವಿನೇಯಜನ ಮುಖತಿಲಕ- ಇವು ಈತನ ಇತರ ಬಿರುದುಗಳು.
         ಜನ್ನ ಬರೆದ ಮೊತ್ತಮೊದಲನೆಯ ಶಾಸನ, ಚೆನ್ನರಾಯಪಟ್ಟಣದ, ದಂಡಿಗನಹಳ್ಳಿ ಹೋಬಳಿ, ಆನೆಗೆರೆ ಗ್ರಾಮದಲ್ಲಿ ಸಿಕ್ಕಿದ ತಾಮ್ರಶಾಸನ. ಇದು ಹೊಯ್ಸಳ  ವೀರ ಬಲ್ಲಾಳನ ಮಂತ್ರಿ ಮಾಂಡಲಿಕ ದಂಡಾಧೀಶನಾಗಿದ್ದ ಹೆಗ್ಗಡೆ ಮಾಚಣನು ಆನೆಗೆರೆಯನ್ನು ಅಗ್ರಹಾರವಾಗಿ ದಾನ ಬಿಟ್ಟಿದ್ದನ್ನು ಹೇಳುವ ಶಾಸನ.
       ಜನ್ನನ ಎರಡನೆಯ ಶಾಸನ, ತರೀಕೆರೆಯ ಅಮೃತಾಪುರದ ಶಾಸನ. ಇದರಲ್ಲಿ ವೀರ ಬಲ್ಲಾಳನ ದಂಡನಾಯಕನಾದ ಅಮಿತನು ತಾನೇ ಪ್ರತಿಷ್ಠೆ ಮಾಡಿಸಿದ ಅಮೃತೇಶ್ವರ ದೇವರಿಗೆ ದತ್ತಿಬಿಟ್ಟ ವಿಷಯವನ್ನು ಹೇಳಿದೆ.

ಯಶೋಧರ ಚರಿತೆ
   ಕವಿಯ ಮೊದಲ ಕಾವ್ಯ ‘ಯಶೋಧರ ಚರಿತೆ’. ಈ ಕೃತಿಯನ್ನು ಕವಿ ಬರೆಯುವ ವೇಳೆಗೆ ಈತನು ಬಲ್ಲಾಳನ ಆಸ್ಥಾನಕವಿಯಾಗಿದ್ದನು. ಆದರೆ ಇನ್ನೂ ಕವಿಚಕ್ರವರ್ತಿಯಾಗಿರಲಿಲ್ಲ. ಯಶೋಧರ ಚರಿತೆ ಅಹಿಂಸಾಧರ್ಮವನ್ನು ಸಾರುತ್ತದೆ. ಇದನ್ನು ಕವಿ ಬರೆದಾದ ಮೇಲೆ, ಬಲ್ಲಾಳನು ಓದಿಸಿ ಕೇಳಿದ; ಅದರ ಸೊಗಸಿಗೆ ಮನಸೋತು, ಕವಿ ಜನ್ನನಿಗೆ ‘ಕವಿಚಕ್ರವರ್ತಿ’ ಬಿರುದನ್ನು ದಯಪಾಲಿಸಿದ.
       ಯಶೋಧರ ಚರಿತೆಯ ಕಥೆ ಬಹು ಪುರಾತನವಾದುದು. ಭರತಖಂಡನ ಅನೇಕ ಭಾಷೆಗಳಲ್ಲಿ ಈ ಕಥೆಯನ್ನು ಕುರಿತ ಅನೇಕ ಕಾವ್ಯಗಳಿವೆ. ಒಬ್ಬ ರಾಜ. ಅವನಿಗೆ ಒಬ್ಬ ಹೆಂಡತಿ. ಅವಳಲ್ಲಿ ಅವನಿಗೆ ತುಂಬ ಪ್ರೀತಿ. ಅವಳಿಗೂ ಅವನಲ್ಲಿ ಪ್ರೀತಿ. ಆದರೆ ಆ ಪ್ರೀತಿ ತಪ್ಪಿಹೋಯಿತು. ರಾಜನಿಗೆ ದುಃಖವಾಯಿತು. ರಾಜ, ಅವನ ಹೆಂಡತಿ, ಅವನ ತಾಯಿ ಇವರ ಕಥೆಯೇ ಯಶೋಧರ ಚರಿತೆ. ಈ ಕಥೆ ಬಹು ಸ್ವಾರಸ್ಯವಾಗಿದೆ.

ಮಾರಿಯ ಗುಡಿಯಲ್ಲಿ ಎಳೆಯರು
        ಸಂಪದ್ಭರಿತವಾದ ಭರತಖಂಡ. ಅದರಲ್ಲಿ ಪ್ರಸಿದ್ಧವಾದ ಅಯೋಧ್ಯಾದೇಶ. ಅದರ ರಾಜಧಾನಿ ರಾಜಪುರ. ಅದನ್ನು ಆಳುತ್ತಿದ್ದ ದೊರೆ ಮಾರಿದತ್ತ. ಆ ಊರಿನ ದೇವತೆ ಚಂಡಮಾರಿ. ಆಕೆಗೆ ಪ್ರತಿ ಚೈತ್ರ, ಆಶ್ವಯುಜಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಆಗ ಆಕೆಗೆ ಮನುಷ್ಯರನ್ನೂ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದರು.
        ಒಮ್ಮೆ ಚೈತ್ರ ಜಾತ್ರೆ ನಡೆಯಬೇಕಾಗಿತ್ತು. ಜಾತ್ರೆಯ ಪೂಜೆಯಲ್ಲಿ ದೊರೆ ಮಾರಿದತ್ತನಿಗೆ ಬಹಳ ಆಸಕ್ತಿ. ಅವನು ಚಂಡಕರ್ಮ ಎನ್ನುವ ತಳವಾರನನ್ನು ಕರೆದು, ‘ದೇವಿಗೆ ಬಲಿ ಕೊಡಬೇಕು, ಇಬ್ಬರು ಮನುಷ್ಯರನ್ನು ಹಿಡಿದು ಕೊಂಡು ಬಾ’ ಎಂದು ಹೇಳುತ್ತಾನೆ. ತಳವಾರನು ಹುಡುಕಿ ಹುಡುಕಿ, ದಾರಿಯಲ್ಲಿ ಹೋಗುತ್ತಿದ್ದ ಕಿರು ವಯಸ್ಸಿನ, ಶುಭಲಕ್ಷಣದ ಅಣ್ಣ-ತಂಗಿಯರಿಬ್ಬರನ್ನು ಹಿಡಿದು ತರುತ್ತಾನೆ. ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ.
     ಆ ಗುಡಿಯಾದರೋ ಯಮಧರ್ಮನ ಅಡಿಗೆಮನೆಯಂತಿತ್ತು. ಬಲಿಕೊಟ್ಟಿದ್ದ ಅನೇಕ ಪ್ರಾಣಿಗಳ ರುಂಡ, ಮುಂಡಗಳು ಚೆಲ್ಲಾಡಿವೆ. ಸಾಯುತ್ತಿರುವ ಪ್ರಾಣಿಗಳು ಅರಚುತ್ತಿವೆ. ನೋಡಿದವರಿಗೆ ಹೆದರಿಕೆಯಿಂದ ಪ್ರಜ್ಞೆ ತಪ್ಪುವಂತಿದೆ. ಆ ಧೀರ ಮಕ್ಕಳು ಅದನ್ನು ನೋಡಿಯೂ ಅಧೀರರಾಗದೆ ಮಾರಿದತ್ತನ ಮುಂದೆ ಹೋಗಿ ನಿಲ್ಲುತ್ತಾರೆ

ಎಂತಹ ಮಕ್ಕಳು! ಯಾರಿವರು?
       ಆ ಮಕ್ಕಳ ಲಲಿತಾಕಾರಕ್ಕೂ ಧೈರ್ಯಕ್ಕೂ ಮಾರಿದತ್ತ ಆಶ್ಚರ್ಯಗೊಳ್ಳುತ್ತಾನೆ. ತಲೆ ಕತ್ತರಿಸಿಕೊಳ್ಳುವುದಕ್ಕೆ ಮೊದಲು ದೊರೆಯನ್ನು ಹರಸಬೇಕೆಂದು ಅಲ್ಲಿಯ ಜನರು ಅಭಯರುಚಿ, ಅಭಯಮತಿಯರಿಗೆ ಹೇಳುತ್ತಾರೆ. ಆಗ ಅಭಯರುಚಿ ಮಾರಿದತ್ತನಿಗೆ ‘ನಿರ್ಮಲ ಧರ್ಮದಿಂದ ಭೂಮಿಯನ್ನು ಪಾಲಿಸ” ಎಂದು ಆಶೀರ್ವದಿಸುತ್ತಾನೆ.
      ಮೊದಲೇ ಆ ಮಕ್ಕಳ ರೂಪು, ಧೈರ್ಯಕ್ಕೆ ಆಶ್ಚರ್ಯಗೊಂಡಿದ್ದ ಮಾರಿದತ್ತನ ಮನಸ್ಸು ಈ ಮಂಗಳದ ಮಾತುಗಳನ್ನು ಕೇಳುತ್ತಿದ್ದಂತೆಯೇ ಸೋತುಹೋಗುತ್ತದೆ. ಅವನಿಗೆ ಆಶ್ಚರ್ಯ. ’ಇಷ್ಟು ಚಿಕ್ಕ ವಯಸ್ಸಿನವರಿಗೆ ಇಂತಹ ಧೈರ್ಯ ಹೇಗೆ ಬಂದಿತು? ಇಂತಹ ಮನಸ್ಸಿನ ಶಾಂತಿ ಹೇಗೆ ಬಂದಿತು? ಎಂದು ಅವನು ಬೆರಗಾಗುತ್ತಾನೆ. ಆ ಮಕ್ಕಳ ಕೊರಳನ್ನು ಕಡಿಯಲು ಎತ್ತಿದ್ದ ಅವನ ಖಡ್ಗದ ಕೈ ಹಾಗೇ ಕೆಳಕ್ಕೆ ಇಳಿಯುತ್ತದೆ. ಅವರ ವಿಷಯವನ್ನು ತಿಳಿಯಲು ಮನಸ್ಸು ಹಾತೊರೆಯುತ್ತದೆ. ಆಗ ಅವರು ಆ ಮಕ್ಕಳನ್ನು, “ನಿಮ್ಮದು ಯಾವ ಕುಲ? ನೀವು ಯಾರ ಮಕ್ಕಳು? ನೀವು ಎಲ್ಲಿಂದ ಬಂದಿರಿ? ಈ ಚಿಕ್ಕ ವಯಸ್ಸಿನಲ್ಲಿ ಈ ಭಿಕ್ಞಾ ವೃತಿ ಏಕೆ?” ಎಂದು ಒಮ್ಮೆಲೇ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ಆಗ, “ನಮ್ಮ ನಿರ್ಮಲ ಚರಿತ್ರೆ, ಧರ್ಮವಾಗಿ ಬದುಕುವವರಿಗೆ ಮಾತ್ರ ರುಚಿಸುತ್ತದೆ, ಇತರರಿಗೆ ರುಚಿಸದು” ಎಂದು ಅಭಯರುಚಿ ಹೇಳುತ್ತಾನೆ. ಆದರೆ ದೊರೆ ಮತ್ತೊಮ್ಮೆ ಕೈಮುಗಿದು ಆ ಮಕ್ಕಳನ್ನು ಪ್ರಾರ್ಥಿಸುತ್ತಾನೆ. ದಯೆಯಿಂದ ತುಂಬಿದ ಮಾರಿದತ್ತನ ಮನಸ್ಸನ್ನು ಕಂಡು, ಅಭಯರುಚಿ ತಮ್ಮ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ.

ಆದರ್ಶ ಗಂಡಹೆಂಡಿರು
        ಆವಂತೀ ದೇಶ. ಅದರ ರಾಜಧಾನಿ ಉಜ್ಜಯನೀಪುರ. ಅದರ ದೊರೆ ಯಶೌಘ. ಅವನ ಹೆಂಡತಿ ಚಂದ್ರಮತಿ. ಅವರ ಮಗ ಯಶೋಧರ. ಅವನ ಹೆಂಡತಿ ಅಮೃತಮತಿ. ಯಶೌಘ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖ ನೋಡಿ ಕೊಂಡ. ಆಗ ಅವನ ತಲೆಯಲ್ಲಿ ನರೆಕುದಲು ಹುಟ್ಟಿರುವುದನ್ನು ಕಂಡನು. ಒಡನೆಯೇ ಯಶೌಘ ‘ಈ ಸಂಸಾರ ನಶ್ವರ’ ಎಂದು, ವಿರಾಗಿಯಾಗಿ, ಮಗ ಯಶೋಧರನಿಗೆ ಪಟ್ಟಕಟ್ಟಿ ಕಾಡಿಗೆ ಹೊರಟುಹೋಗುತ್ತಾನೆ.
     ಯಶೋಧರ, ಅಮೃತಮತಿಯರು ದೇವೇಂದ್ರಶಚೀದೇವಿಯರಂತೆ ಸಂತೋಷದಿಂದ, ವೈಭವದಿಂದ ಶೋಭಿಸುತ್ತಿರುತ್ತಾರೆ. ಬದುಕು ಅವರಿಗೆ ಉಲ್ಲಾಸಮಯವಾಗಿರುತ್ತದೆ. ಯಶೋಧರ ರೂಪು ನೋಡುವವರ ಕಣ್ಣುಗಳಿಗೆ ಸಿರಿ, ಮಾತಾಡುವ ಬಾಯಿಗಳಿಗೆ ರಸಾಯನ. ಗಂಡ-ಹೆಂಡತಿಯರಲ್ಲಿ ಬಹಳ ಪ್ರೀತಿ. ಹೀಗೆ ಅವರು ಆನಂದದಿಂದ ಕಾಲ ಕಳೆಯುತ್ತಿರುತ್ತಾರೆ.

ಸಂಗೀತ ತಂದ ವಿಪತ್ತು
        ಒಂದು ರಾತ್ರಿ. ಎಲ್ಲರೂ ಮಲಗಿರುತ್ತಾರೆ. ಮಧ್ಯ ರಾತ್ರಿಯ ಸಮಯ. ಎಲ್ಲೆಲ್ಲಿಯೂ ನಿಶ್ಯಬ್ದ ವಾತಾವರಣ. ಆ ಸಮಯದಲ್ಲಿ ಅಮೃತಮತಿಯನ್ನು ಯಾವುದೋ ಒಂದು ಇಂಪಾದ ದನಿ ಎಚ್ಚರಿಸಿದಂತೆ ಆಗುತ್ತದೆ. ಎದ್ದು ಕುಳಿತುಕೊಳ್ಳುತ್ತಾಳೆ. ಇನಿದನಿಯೊಂದು ಆಕೆಯ ಮನಸ್ಸನ್ನು ಸೂರೆಗೊಳ್ಳುತ್ತದೆ. ಆ ಹಾಡು ಅರಮನೆಯ ಪಕ್ಕದ ಗಜಶಾಲೆಯಿಂದ ಬರುತ್ತಿರುತ್ತದೆ. ಹಾಡುತ್ತಿದ್ದವನು ಅರಮನೆಯ ಗಜಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನು. ಅವನ ಹೆಸರು ಅಷ್ಟಾವಂಕ. ನೋಡುವುದಕ್ಕೆ ಅವಲಕ್ಷಣವಾಗಿದ್ದ. ಆದರೆ ಅವನ ಧ್ವನಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲದಷ್ಟು ಇಂಪು. ಅವನು ಬಹು ಕ್ರೂರ ಸ್ವಭಾವದವನು. ಆದರೂ ಅವನ ಸಂಗೀತದಿಂದ ರಾಣಿ ಅಮೃತಮತಿಗೆ ಅವನಲ್ಲಿ ಪ್ರೀತಿ ಬಂದಿತು. ಗಂಡನಲ್ಲಿ ಪ್ರೀತಿ ಇದ್ದದ್ದು ಮಾಯವಾಯಿತು. ಯಶೋಧರನಿಗೂ ಇದು ತಿಳಿಯಿತು. ಅವನಿಗೆ ತುಂಬ ಸಂಕಟವಾಯಿತು. ಅವನ ಮಾತುಗಳಿಂದ, ತಾನು ಅಷ್ಟಾವಂಕನನ್ನು ಪ್ರೀತಿಸುವುದು ರಾಜನಿಗೆ ತಿಳಿದಿದೆ ಎಂದು ಅಮೃತಮತಿಗೂ ಅರ್ಥವಾಯಿತು.
         ರಾಜನಿಗೆ ತುಂಬ ಬೇಸರ. ತಾಯಿಯ ಬಳಿ ಹೋದ. ಮಗನಿಗೆ ಏಕೋ ಬೇಸರ ಎಂದು ತಾಯಿಗೆ ಅರ್ಥವಾಯಿತು. “ಏಕೆ ಇಷ್ಟು ಮುಖ ಬಾಡಿದೆ?” ಎಂದು ಕೇಳಿದಳು. ಯಶೋಧರ ತನಗೆ ಒಂದು ಕೆಟ್ಟಕನಸು ಬಿದ್ದಿತು ಎಂದು ಹೇಳಿದ. ಮಗನೊಂದು ನೆನೆದರೆ ತಾಯಿಯೊಂದು ನೆನೆಯುತ್ತಾಳೆ. ದುಃಸ್ವಪ್ನದ ಶಾಂತಿಗಾಗಿ ದೇವಿಗೆ ಒಂದು ಪ್ರಾಣಿಬಲಿ ಕೊಡುವಂತೆ ಹೇಳುತ್ತಾಳೆ. ಮಗ ಕಿವಿ ಕೊಳ್ಳುತ್ತಾನೆ. “ವಧೆ ಹಿತವಲ್ಲ, ಜೀವದಯೆ ಜೈನಧರ್ಮ” ಎಂದು ಎಷ್ಟು ಹೇಳಿದರೂ ತಾಯಿ ಕೇಳುವುದಿಲ್ಲ. ಕಡೆಗೆ ಮಗನ ಹಿತಕ್ಕೆ ತಾನೇ ದೇವಿಗೆ ಬಲಿಯಾಗುವುದಾಗಿ ಆಕೆ ಹಟಮಾಡುತ್ತಾಳೆ.
     ‘ನಿಜವಾದ ಪ್ರಾಣಿಯನ್ನು ಬಲಿಕೊಡದಿದ್ದರೆ ಬೇಡ, ಒಂದು ಹಿಟ್ಟಿನ ಕೋಳಿಯನ್ನಾದರೂ ಬಲಿಕೊಡು’ ಎಂದಳು. ಪಾಪ, ಅವಳಿಗೆ ಹೆದರಿಕೆ, ಮಗನಿಗೆ ಏನು ಕೇಡಾಗುತ್ತದೆಯೋ ಎಂದು. ತಾಯಿಯ ಹಟವೇ ಗೆಲ್ಲುತ್ತದೆ. ಯಶೋಧರ ಒಂದು ಹಿಟ್ಟಿನ ಕೋಳಿಯನ್ನು ಮಾಡಿಸುತ್ತಾನೆ. ಹಿಟ್ಟಿನ ಕೋಳಿ ನೋಡಲು ಬಹು ಸುಂದರವಾಗಿತ್ತು. ಅದನ್ನು ನೋಡಿ ಒಂದು ಚೈತನ್ಯ ಆ ಹಿಟ್ಟಿನ ಕೋಳಿಯಲ್ಲಿ ಸೇರಿಕೊಂಡಿತು. ಇದು ಪಾಪ, ಯಶೋಧರನಿಗೆ, ಅವನ ತಾಯಿಗೆ ತಿಳಿಯದು. ತಾಯಿ ಹರಸಿದಳು, ಮಗ ಹಿಟ್ಟಿನ ಕೋಳಿಯನ್ನು ಕಡಿದ.

ಆಶ್ಚರ್ಯ, ದುರದೃಷ್ಟ!
ಹಿಟ್ಟಿನ ಕೋಳಿ ಕೊಕ್ಕೊಕ್ಕೋ ಎಂದು ವಿಕಾರವಾಗಿ ಕೂಗಿತು, ಕೆಳಕ್ಕೆ ಬಿದ್ದಿತು.
ಹಿಟ್ಟಿನ ಕೋಳಿ ಕೊಕ್ಕೊಕ್ಕೋ ಎಂದು ವಿಕಾರವಾಗಿ ಕೂಗಿತು
ಆ ವಿಕಾರ ಕೂಗನ್ನು ತಾಯಿ ಮತ್ತು ಮಗ ಕೇಳಿದರು. ಬೆಚ್ಚಿದರು, ದಿಗ್ಭ್ರಮೆಗೊಂಡರು. ಯಶೋಧರ ಮನೆಗೆ ಬಂದ. ತಾನಿನ್ನು ರಾಜನಾಗಿರಬಾರದು ಎಂದು ತೀರ್ಮಾನಿಸಿದ. ತನ್ನ ಮಗ ಯಶೋಮತಿಗೆ ಪಟಕಟ್ಟಿ, ತಾನು ಕಾಡಿಗೆ ಹೋಗಲು ಅನುವಾದ. ಇದು ರಾಣಿ ಅಮೃತಮತಿಗೆ ತಿಳಿಯಿತು. ಗಂಡ ಹೀಗೆ ಹೋಗುವುದು ಅವಳಿಗೆ ಬೇಕಿರಲಿಲ್ಲ. ಅವನನ್ನು ಕಂಡರೇ ಅವಳಿಗೆ ದ್ವೇಷ. ಆದರೆ ಅದನ್ನು ತೋರಿಸಿಕೊಳ್ಳಲಿಲ್ಲ. ಹೂವಿನ ಜೊತೆಯಲ್ಲಿಯೇ ಸುಗಂಧವೂ ಹೋಗುವಂತೆ, ತಾನೂ ತನ್ನ ಗಂಡನ ಜೊತೆಯಲ್ಲಿ ಅರಣ್ಯಕ್ಕೆ ಹೋಗುವುದಾಗಿ ಹೇಳುತ್ತಾಳೆ. ಆದರೆ ಹಾಗೆ ಹೋಗುವುದಕ್ಕೆ ಮೊದಲು ತನ್ನ ಅರಮನೆಯಲ್ಲಿ ಔತಣ ಉಂಡು ಹೋಗಬೇಕೆಂದು ಗಂಡನನ್ನೂ ಅತ್ತೆಯನ್ನೂ ಒಪ್ಪಿಸುತ್ತಾಳೆ. ಔತಣದ ಅಡಿಗೆಯಲ್ಲಿ ವಿಷಹಾಕಿ ಆ ಪಾತಕಿ ಅರಮನೆಯಲ್ಲಿಯೇ ಅವರಿಬ್ಬರನ್ನೂ ಕೊಂದುಬಿಡುತ್ತಾಳೆ. ಅನಂತರ ನಿರಾತಂಕವಾಗಿ ಅಷ್ಟಾವಂಕನ ಜೊತೆಯಲ್ಲಿ ಇದ್ದುಬಿಡುತ್ತಾಳೆ.

ಅಭಯರುಚಿ-ಅಭಯಮತಿ
       ಹೀಗೆ ದುರ್ಮರಣದಿಂದ ಸತ್ತ ತಾಯಿ-ಮಗ ಮುಂದೆ ನಾನಾ ಪಶು-ಪಕ್ಷಿಗಳಾಗಿ ಜನ್ಮತಳೆದು ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಹೊಂದುತ್ತಾರೆ. ಮಾಡಿದ ಒಂದು ಚಿಕ್ಕ ತಪ್ಪಿಗೆ ಒಂದು ಜನ್ಮವಲ್ಲ, ಏಳು ಜನ್ಮಗಳಲ್ಲಿ ಆ ಆತ್ಮಗಳು ತೊಳಲಾಡಬೇಕಾಗುತ್ತದೆ. ಕಡೆಗೆ ಏಳನೆಯ ಜನ್ಮದಲ್ಲಿ ಯಶೋಧರ, ಅಮೃತಮತಿಯರ ಮಗನಾದ ಯಶೋಮತಿಗೆ ಕುಸುಮಾವಳಿ ಎಂಬ ಪತ್ನಿಯಲ್ಲಿ ಅಭಯರುಚಿ – ಅಭಯಮತಿ ಎಂಬ ಮಕ್ಕಳಾಗಿ ಹುಟ್ಟುತ್ತಾರೆ. ಆ ಅವಳೀ ಮಕ್ಕಳು ಎಳೆ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದು ಸುದತ್ತಾಚಾರ್ಯರಲ್ಲಿ ಶಿಷ್ಯರಾಗಿರುತ್ತಾರೆ. ಅಭಯರುಚಿ ಮಾರಿದತ್ತನಿಗೆ ಹೀಗೆ ತಮ್ಮ ಹಿಂದಿನ ಕಥೆಯನ್ನು ಹೇಳುತ್ತಾನೆ. ಅನಂತರ, “ಗುರುವಿನ ಅಪ್ಪಣೆಯಂತೆ ಭಿಕ್ಷಕ್ಕೆ ಹೊರಟ ಅಭಯರುಚಿ – ಅಭಯಮತಿಗಳೇ ನಾವು, ಕೇವಲ ಒಂದು ಹಿಟ್ಟಿನ ಕೋಳಿಯನ್ನು ಬಲಿಕೊಟ್ಟ ಪಾಪಕ್ಕೆ, ನಾವು ಪಟ್ಟಿ ಪಾಡಿನ ಕಥೆ ಇದು. ಇನ್ನು ಜೀವದಿಂದಿರುವ ಇಷ್ಟೊಂದು ಪ್ರಾಣಿಗಳನ್ನೂ ನರಮಾನವರನ್ನೂ ನೀನು ಬಲಿಕೊಡುತ್ತಿದ್ದೀಯೆ! ಎಂತಹ ಪಾಪ ಮಾಡುತ್ತಿದ್ದೀಯೆ! ನಿನಗೆ ಇನ್ನೆಷ್ಟು ಶಿಕ್ಷೆಯಾಗಬಹುದು! ಇದಕ್ಕಾಗಿ ನಾವು ಮರುಗುತ್ತೇವೆ. ನಮ್ಮ ಜೀವ ನಿನಗಾಗಿ ತಲ್ಲಣಿಸುತ್ತಿದೆ.” ಎಂದು ತಮ್ಮ ಕಥೆಯನ್ನು ಮುಗಿಸುತ್ತಾನೆ.

ಎಳೆಯರಿಂದ ಉದ್ಧಾರ
      ಮಾರಿದತ್ತ ದೊರೆಗೆ ಅವರ ಕಥೆ ಕೇಳಿ ಜ್ಞಾನೋಧಯವಾಯಿತು. ಅವನ ಮನಸ್ಸು ‘ಈ ಮಕ್ಕಳು ನಿನ್ನವರು. ನಿನ್ನ ಉದ್ಧಾರಕ್ಕಾಗಿ ಬಂದಿರುವರು’ ಎಂದು ನುಡಿಯಿತು.
ನಿರ್ಮಲ ಧರ್ಮದಿಂದ ಭೂಮಿಯನ್ನಾಳು.’
ಅವರ ಕಥೆ ಕೇಳಿ ಮಾರಿದೇವಿಯ ಮನಸ್ಸೂ ಬದಲಾಯಿತು. ಆಕೆ ಪ್ರತ್ಯಕ್ಷಳಾಗಿ, “ಇನ್ನು ಮುಂದೆ ನನಗೆ ಹಿಂಸಾಪೂಜೆ ಬೇಡ, ಹೂವು ಅಕ್ಷತೆಗಳಿಂದ ಮಾಡುವ ಪೂಜೆಯಿಂದಲೇ ನನಗೆ ತೃಪ್ತಿ” ಎಂದು ಹೇಳಿದಳು. ಕಟ್ಟಳೆಮಾಡಿ ಮಾಯವಾದಳು.
ಮಾರಿದತ್ತನು ತನ್ನ ಮಗನಿಗೆ ಪಟ್ಟಕಟ್ಟಿ, ತಾನು ಜೈನದೀಕ್ಷೆ ವಹಿಸಿ, ಸಮಾಧಿ ಮರಣದಿಂದ ಸತ್ತು ಮೂರನೆಯ ಸ್ವರ್ಗದಲ್ಲಿ ದೇವನಾಗಿ ಹುಟ್ಟಿದ. ಅಭಯರುಚಿ ಅಭಯಮತಿ ಯರಿಬ್ಬರೂ ತಪಸ್ಸುಮಾಡಿ ಸತ್ತು ದೇವಲೋಕದಲ್ಲಿ ಹುಟ್ಟಿದರು.
ಇತ್ತ ಪಾತಕಿ ಅಮೃತಮತಿಗೆ ಅಷ್ಟಾವಂಕನ ದೆಸೆಯಿಂದ ತೊನ್ನು ರೋಗ ಬಂದಿತು. ಮೈಯೆಲ್ಲಾ ಹುಳತು, ಗಾಯವಾಗಿ ಕೀವು, ರಕ್ತ ಸೋರಲಾರಂಭವಾಯಿತು, ಅವಳ ಕೆಟ್ಟ ಕೆಲಸಕ್ಕೆ ತಕ್ಕ ನೋವನ್ನು ಅವಳು ಅದೇ ಜನ್ಮದಲ್ಲಿಯೆ ಅನುಭವಿಸಿದಳು. ನೋಡಿದ ಜನರು, “ಈ ಕೀಳು ಹೆಂಗಸನ್ನು ಯಮನೂ ತನ್ನ ಲೋಕಕ್ಕೆ ಕರೆದುಕೊಂಡು ಹೋಗಲು ಹೇಸಿದ್ದಾನೆ” ಎಂದು ಮಾತನಾಡಿಕೊಳ್ಳುತ್ತಿದ್ದರು. ಕಡೆಗೆ ಹೀಗೆ ನರಳಿನರಳಿ ಧೂಮಪ್ರಭೆ ಎಂಬ ನರಕದಲ್ಲಿ ಅವಳು ಬಿದ್ದಳು.
ಇದು ಯಶೋಧರ ಚರಿತೆಯ ಕಥೆ. ಜನ್ನಕವಿ ಈ ಕೃತಿಯ ಕಡೆಯಲ್ಲಿ ‘ಹಿಂಸಾರಭಸಮತಿಯಾದ ಮಾರಿ ದತ್ತನಿಗೆ ಅಭಯರುಚಿ ಕುಮಾರನು ಪುಣ್ಯಕಥೆಯನ್ನು ಹೇಳಿ, ಧರ್ಮಕ್ಕೆ ತಂದ ಈ ಕಥೆಯನ್ನು ಅತ್ಯಾನಂದದಿಂದ ಕೇಳಿದವರಿಗೆ ಮಂಗಳವೂ ಸಂಪತ್ತೂ ವೈಭವಗಳೂ ಉಂಟಾಗುತ್ತವೆ’ ಎಂದು ಹೇಳಿದ್ದಾನೆ.

ಸುಂದರವಾದ ಕಾವ್ಯ
        ಜನ್ನ ಕಥೆಯನ್ನು ಬಹು ಸ್ವಾರಸ್ಯಕರವಾಗಿ ಹೇಳಿಕೊಂಡು ಹೋಗಿದ್ದಾನೆ. ಅವನ ಭಾಷೆ ಸುಲಭವಾದದ್ದು. ಅವನು ಏನನ್ನು ವರ್ಣಿಸಿದರೂ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾನೆ. ಯಶೋಧರ ಎತ್ತಿದ ಹಲವು ಜನ್ಮಗಳಲ್ಲಿ ನವಿಲಿನ ಜನ್ಮ ಒಂದು. ಆ ನವಿಲನ್ನು ಕವಿ ಹೀಗೆ ವರ್ಣಿಸುತ್ತಾನೆ.
ನವರತ್ನದ ಪಂಜರದೊಳ್
ದಿವಿಜಶರಾಸನದ ಮರಿಯನಿರಿಸಿದವೋಲೆ
ತ್ತುವ ಸೋಗೆಯ ಸುತ್ತಿನೊಳಾ
ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗುಂ.
     ನವಿಲು ತನ್ನ ಮನಮೋಹಕವಾದ ಪುಕ್ಕಗಳನ್ನು ಎತ್ತಿ ಕುಣಿಯುತ್ತಿದೆ. ನವರತ್ನದ ಪಂಜರದಲ್ಲಿ ಕಾಮಬಿಲ್ಲಿನ ಮರಿಯನ್ನು ಇಟ್ಟಂತೆ ಕುಣಿಯುತ್ತಿರುವು ನವಿಲ ಭಂಗಿ ಲೋಕವನ್ನು ಸೋಲಿಸುತ್ತಿತ್ತಂತೆ, ಎಂದರೆ ಪ್ರಪಂಚವೆಲ್ಲ ಮೆಚ್ಚಿಕೊಳ್ಳುವಂತೆ ಇದ್ದಿತಂತೆ.
      ನೂರಾರು ಪ್ರಾಣಿಗಳು ಬಲಿಯಾಗುತ್ತಿರುವ ಮಾರಿಯ ಗುಡಿಯನ್ನು ಜನ್ನ ವರ್ಣಿಸುತ್ತಾನೆ. ಆ ವರ್ಣನೆಯನ್ನು ಓದಿದರೇ ದೊಡ್ಡವರಿಗೂ ಎದೆ ಭಯದಿಂದ ಹೊಡೆದುಕೊಳ್ಳುತ್ತದೆ. ಕಥೆಯ ಪ್ರಾರಂಭವೇ ಆಸಕ್ತಿಯನ್ನು ಸೆಳೆಯುವಂತಿದೆ. ಪ್ರಾರಂಭದಲ್ಲಿ ಕವಿ ಮಾರಿದತ್ತನ ರಾಜ್ಯದಲ್ಲಿ ವಸಂತ ಋತು ಹೇಗೆ ಬಂದಿತು ಎಂದು ವರ್ಣಿಸುತ್ತಾನೆ. ಯಾವಾಗಲೂ ವಸಂತ ಋತು ಎಂದರೆ ಸೌಂದರ್ಯ ಸಂತೋಷಗಳ ಕಾಲ, ಅಲ್ಲವೆ? ಎಲ್ಲೆಲ್ಲೂ ಹೊಸ ಚಿಗುರು, ಬಣ್ಣಬಣ್ಣದ ಹೂವುಗಳು, ಕೋಗಿಲೆಯ ಹಾಡು ಎಲ್ಲ ಸೇರಿ ಚೆಲುವು ಕಣ್ಣಿಗೆ ಹಬ್ಬವಾಗಿ ಮೆರೆಯುತ್ತದೆ. ಆದರೆ ಮಾರಿದತ್ತನ ರಾಜ್ಯದಲ್ಲಿ ಎಲ್ಲ ವಿಪರೀತ. ಚಿಗುರಿದ ಅಶೋಕವೃಕ್ಷ ಉರಿಯ ಉಯ್ಯಾಲೆಯಂತೆ ಕಾಣುತ್ತದೆ. ಅರ್ಧಚಂದ್ರನು ಪ್ರಾಣಿಗಳ ನೆತ್ತಿಗೆ ಚುಚ್ಚಿದ ಗಾಳದ ಹಾಗೆ ಕಾಣುತ್ತಾನೆ. ಕೋಗಿಲೆಯ ಧ್ವನಿ ಬಲಿಕೊಡುವ ಪ್ರಾಣಿಗಳನ್ನು ತಿರಸ್ಕಾರದಿಂದ ಮಾತನಾಡಿಸುವಂತೆ ಕೇಳುತ್ತದೆ. ಎಲ್ಲ ಕಡೆ ಕೋಪ, ದ್ವೇಷ, ನಾಶ ಇವೇ ಕಾಣುತ್ತದೆ. ಈ ವರ್ಣನೆಯನ್ನು ಓದಿ ನಮಗೆ ಆಶ್ಚರ್ಯವಾಗುತ್ತದೆ. ಇದಕ್ಕೆ ಕಾರಣವೂ ವ್ಯಕ್ತವಾಗುತ್ತದೆ. ವಸಂತ ಋತುವಿನಲ್ಲಿ ಸೌಂದರ್ಯದ ಬದಲು ಹೆದರಿಕೆಯಾಗುವಂತಹ ದೃಶ್ಯಗಳೇ ಕಾಣುತ್ತವೆ – ಕಾರಣ, ಮನುಷ್ಯನ ಕ್ರೌರ್ಯ, ವಸಂತ ಋತುವಿನಲ್ಲಿ ಇಲ್ಲಿ ರಾಜನೂ ಪ್ರಜೆಗಳೂ ಮಾಡುತ್ತಿರುವ ಕೆಲಸ ಎಂದರೆ ನೂರಾರು ಪ್ರಾಣಿಗಳನ್ನು ಬಲಿಕೊಡುವುದು! ಜೊತೆಗೆ ಎಳೆಯ ಹುಡುಗರನ್ನೂ ಬಲಿಕೊಡಲು ಸಿದ್ಧರಾಗಿದ್ದಾರೆ. ಅಭಯರುಚಿ, ಅಭಯಮತಿಗಳ ರೂಪು, ಮಾತು, ನಡೆ ಎಲ್ಲ ಬಹು ಸ್ಪಷ್ಟವಾಗಿ ಮನಸ್ಸಿಗೆ ಸಂತೋಷವಾಗುವಂತೆ ಇವೆ. ಕಥೆ ಪ್ರಾರಂಭವಾಗುವ ಈ ಪ್ರಸಂಗವೇ -ಎದೆ ನಡುಗುವ ಭಯಂಕರ ದೇವಾಲಯದಲ್ಲಿ ಬಲಿಕೊಡಲು ಸಿದ್ಧನಾದ ರಾಜನ ಮುಂದೆ ಧೈರ್ಯದಿಂದ, ಸ್ವಲ್ಪವೂ ತಳಮಳವಿಲ್ಲದೆ ಸಾಯಲು ಸಿದ್ಧರಾದ ಎಳೆಯರ ಪ್ರಸಂಗವೇ – ಮನಸ್ಸನ್ನು ಸೆರೆಹಿಡಿದುಬಿಡುತ್ತದೆ.

ಜೀವಕ್ಕೆ ಪಾಠ
         ಕಾವ್ಯ ಅಹಿಂಸೆಯ ಪಾಠವನ್ನು ಕಲಿಸುತ್ತದೆ. ಹಿಟ್ಟಿನ ಕೋಳಿಯನ್ನು ಬಲಿಕೊಡುವೆನೆಂದು ಹೊರಟ ರಾಜ, ಅದರಲ್ಲಿ ಚೈತನ್ಯವೊಂದು ಹೊಕ್ಕಿದ್ದರಿಂದ ಏಳು ಜನ್ಮಗಳನ್ನು ಎತ್ತಬೇಕಾಯಿತು. ಈ ಕಥೆಯನ್ನು ಕೇಳಿ ಮಾರಿದತ್ತನ ಎದೆಯೂ ನಡುಗುತ್ತದೆ – ತಾನು ಮಾಡುತ್ತಿರುವ ಪಾಪ, ಅದರಿಂದ ತನಗಾಗಬಹುದಾದ ಶಿಕ್ಷೆ ನೆನೆದು, ಅವನೂ ಪ್ರಾಣಿ ಹಿಂಸೆಯನ್ನು ನಿಲ್ಲಿಸಿ ಧರ್ಮದಿಂದ ನಡೆದುಕೊಳ್ಳುತ್ತಾನೆ.
       ಹಾಗೆಯೇ ಕಾವ್ಯ, ಜೀವನದಲ್ಲಿ ನಾವು ಎಷ್ಟು ಎಚ್ಚರದಿಂದ ಇರಬೇಕು ಎನ್ನುವುದನ್ನೂ ಮನ್ಸಸ್ಸಿಗೆ ತಂದುಕೊಡುತ್ತದೆ. ಅಮೃತಮತಿ ಗಂಡನೊಡನೆ ಬಹು ಸುಖದಿಂದ ಇದ್ದಳು. ಗಂಡ, ಹೆಂಡತಿ, ಯಶೋಧರನ ತಾಯಿ ಎಲ್ಲರ ಬಾಳೂ ಸಂತೋಷದಿಂದ ತುಂಬಿ ತುಳುಕುತ್ತಿತ್ತು. ಆದರೆ ಅಮೃತಮತಿ ಅಷ್ಟಾವಂಕನನ್ನು ಪ್ರೀತಿಸಿದ್ದರಿಂದ ಆ ಸಂಸಾರವೆ ದುಃಖ ಮತ್ತು ಕಷ್ಟಗಳಲ್ಲಿ ಮುಳುಗಿಹೋಯಿತು. ಯಶೋಧರ ಮತ್ತು ಅವನ ತಾಯಿಯ ಕೊಲೆಯಾಯಿತು. ಅವರು ಏಳು ಜನ್ಮಗಳನ್ನೆತ್ತ ಬೇಕಾಯಿತು. ಅಮೃತಮತಿಯೂ ಬಹು ಯಾತನೆಯ ಕಾಯಿಲೆಗಳನ್ನು ಅನುಭವಿಸಬೇಕಾಯಿತು. ‘ಯಶೋಧರ ಚರಿತೆ’ಯಲ್ಲಿ ಸೊಗಸಾಗಿ, ಆಸಕ್ತಿ ಉಳಿಸಿಕೊಂಡು ಹೋಗುವಂತಹ ಕಥೆ, ನಾವು ಆಳವಾಗಿ ಯೋಚಿಸಬೇಕಾದ ಸಂಗತಿಗಳು, ಮಾತುಗಳು ಎಲ್ಲ ಇವೆ.

<<ಪರಿವಿಡಿಗೆ ಹಿಂದಿರುಗಿ
        ಜನ್ನನ ಎರಡನೆಯ ಕೃತಿ ’ಅನಂತನಾಥ ಪುರಾಣ’. ಇದು ಒಂದು ಚಂಪೂ ಗ್ರಂಥ. ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನ ಚರಿತ್ರೆಯು ಈ ಪುರಾಣದ ಕಥಾವಸ್ತು. ತೀರ್ಥಂಕರನ ಜೀವನದ ಐದು ಹಂತಗಳನ್ನು ಇಲ್ಲಿ ಕವಿ ಜನ್ನ ವಿವರಿಸಿದ್ದಾನೆ.
       ಅದರಲ್ಲಿ ಒಂದನೆಯದು ಗರ್ಭಾವತರಣ ಕಲ್ಯಾಣ. ತೀರ್ಥಂಕರನಾಗುವ ಆತ್ಮ ತಾಯಿಯ ಗರ್ಭವನ್ನು ಪ್ರವೇಶಿಸುವುದು. ಎರಡನೆಯದು ಜನ್ಮಾಭಿಷೇಕ ಕಲ್ಯಾಣ. ಮಗುವಿನ ಜನನವಾದ ಮೇಲೆ ದೇವೇಂದ್ರ-ಶಚಿದೇವಿಯರು ತಮ್ಮ ಪರಿವಾರ ಸಮೇತ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಅಭಿಷೇಕ ಸ್ನಾನ ಮಾಡಿಸುವುದು. ಮೂರನೆಯದು ಪರಿನಿಷ್ಕ್ರಮಣ ಕಲ್ಯಾಣ, ತೀರ್ಥಂಕರನಾಗುವ ವ್ಯಕ್ತಿ ಸಂಸಾರದಲ್ಲಿ ವಿರಕ್ತಿಹೊಂದಿ ತಪಸ್ಸಿಗೆ ಹೊರಡುವುದು. ನಾಲ್ಕನೆಯದು ಕೇವಲ ಜ್ಞಾನ ಕಲ್ಯಾಣ, ತಪಸ್ಸಿಗೆ ನಿಂತ ವ್ಯಕ್ತಿಗೆ ಕೇವಲ ಜ್ಞಾನೋತ್ಪತ್ತಿಯಾಗಿ ತೀರ್ಥಂಕರನಾಗುವುದು. ಐದನೆಯ ಹಾಗೂ ಕಡೆಯದು ಪರಿನಿರ್ವಾಣ ಕಲ್ಯಾಣ. ತೀರ್ಥಂಕರನು ಮೋಕ್ಷವನ್ನು ಪಡೆಯುವುದು. ಈ ಐದು ಕಲ್ಯಾಣಗಳನ್ನು ಕವಿ ತನ್ನ ಈ ಕಾವ್ಯದಲ್ಲಿ ವಿವರಿಸಿ, ಮಾನವನು ದೇವನಾಗಲು ಕೈಗೊಳ್ಳಬೇಕಾದ ಜೀವನಕ್ರಮವನ್ನು ವಿವರಿಸಿದ್ದಾನೆ. ಇಷ್ಟಲ್ಲದೆ ಜನ್ನನು ಈ ಪುರಾಣದಲ್ಲಿ ’ಅನಂತನ ವ್ರತ’ದ ವಿಷಯವನ್ನು ತಿಳಿಸಿದ್ದಾನೆ. ಈ ವ್ರತ ಹೇಗೆ ಪ್ರಾರಂಭವಾಯಿತು. ಇದರ ಮಹಿಮೆ ಏನು ಎಂದು ವಿವರಿಸಿದ್ದಾನೆ.
     ಇದು ಹದಿನಾಲ್ಕನೆಯ ತೀರ್ಥಂಕರನನ್ನು ಕುರಿತ ವ್ರತ. ಒಬ್ಬ ತೀರ್ಥಂಕರನ ಚರಿತ್ರೆ ಹೇಳುವಾಗ ಅವನ ಕಾಲದಲ್ಲಿರಬಹುದಾದ ಚಕ್ರವರ್ತಿಯ ಕಥೆಯನ್ನೂ ಬಲದೇವ, ವಾಸುದೇವ, ಪ್ರತಿವಾಸುದೇವರ ಕಥೆಯನ್ನೂ ಹೇಳುವುದು ಜೈನಪುರಾಣಗಳ ವಾಡಿಕೆ. ಜನ್ನನೂ ಇದೇ ಮಾರ್ಗವನ್ನು ಅನುಸರಿಸಿದ್ದಾನೆ.
        ಅನಂತಜಿನನ ಸಮವಸರಣ ಮಂಟಪಕ್ಕೆ ಸುಪ್ರಭನೆಂಬ ನಾಲ್ಕನೆಯ ಬಲದೇವನು ಬಂದು ದೇವರದೇವನಾದ ಅನಂತ ನಾಥನನ್ನು ಪೂಜಿಸಿ, ನಮಿಸುತ್ತಾನೆ. ಅನಮತರ ತನ್ನ ಪೂರ್ವ ವೃತ್ತಾಂತವನ್ನೂ ತನ್ನ ತಮ್ಮನ ಮಗನಾದ ನಾಲ್ಕನೆಯ ವಾಸುದೇವ ಎನ್ನಿಸಿಕೊಂಡ ಪುರುಷೋತ್ತಮನ ವೃತ್ತಾಮತವನ್ನೂ ತಿಳಿಸಬೇಕೆಂದು ಪ್ರಾರ್ಥಿಸುತ್ತಾನೆ. ಈ ಪ್ರಶ್ನೆಗೆ ಗಣಧರರು ಉತ್ತರ ಹೇಳುತ್ತಾರೆ. ಆಗ ಉಪಕಥೆಯಾಗಿ ಬಂದ ಈ ಕಥೆಯನ್ನೇ ಜನ್ನ ದೊಡ್ಡ ಕಥೆಯನ್ನಾಗಿ ಬೆಳಸಿಕೊಂಡಿದ್ದಾನೆ. ಅದು ಒಳ್ಳೆಯ ಕಾವ್ಯ ಕಥೆಯಾಗಿ ಬೆಳೆದಿದೆ. ‘ಯಶೋಧರ ಚರಿತೆ’ಯಲ್ಲಿ ಒಂದು ರೀತಿಯ ಪ್ರಣಯ ಕಥೆಯನ್ನು ಚಿತ್ರಿಸಿದ ಜನ್ನನಿಗೆ, ಇಲ್ಲಿ ಮತ್ತೊಂದು ಬಗೆಯದನ್ನು ಚಿತ್ರಿಸಲು ಅವಕಾಶ ಸಿಕ್ಕಿದೆ.

ಇವರೂ ಆದರ್ಶ ಗಂಡಹೆಂಡಿರು
    ಭರತಖಂಡದ ಪೌದನಪುರದ ಅರಸ ವಸುಷೇಣ. ಅವನ ಹೆಂಡತಿ ಸುನಂದೆ. ಗಂಡಹೆಂಡತಿ ಬಹು ಪ್ರೀತಿಯಿಂದ, ಸಂತೋಷದಿಂದ ಇದ್ದಾರೆ. ದೊರೆ ವಸುಷೇನ ಒಂದು ದಿವಸ ಗಜಾರೋಹಣ ಕ್ರೀಡೆಯಲ್ಲಿ ಇರುತ್ತಾನೆ. ಆಗ ಸೇವಕನೊಬ್ಬನು ಬಂದು ಮಕರಗ್ರಾಹ ಪುರದ ಮಹಾರಾಜನೂ ವಸುಷೇಣನ ಬಾಲ್ಯಸ್ನೇಹಿತನೂ ಆದ ಚಂಡಶಾಸನದೇವನು ವಸುಷೇಣನನ್ನು ಕಾಣಲು ಬರುತ್ತಿರುವನೆಂದು ತಿಳಿಸುವನು.
     ಇದನ್ನು ಕೇಳಿ ವಸುಷೇಣನಿಗೆ ಬಹಳ ಸಂತೋಷವಾಗುತ್ತದೆ. ಮಹೋತ್ಸಾಹದಿಂದ ಸ್ನೇಹಿತನನ್ನು ಬರಮಾಡಿಕೊಳ್ಳುತ್ತಾನೆ. ತನ್ನ ಪಟ್ಟದಾನೆಯ ಮೇಲೆ ಕೂಡಿಸಿಕೊಂಡು ರಾಜಬೀದಿಯಲ್ಲಿ ಮೆರವಣಿಗೆಯಿಂದ ಅರಮನೆಗೆ ಕರೆತರುತ್ತಾನೆ. ಗೆಳೆಯನ ಮನಸ್ಸಿನ ಉಲ್ಲಾಸಕ್ಕಾಗಿ ಕಾವ್ಯ ಗೋಷ್ಠಿಗಳನ್ನೂ ಗೀತವಾದ್ಯಗಳನ್ನೂ ನಾಟನೃತ್ಯಗಳನ್ನೂ ಜಟ್ಟಿಕಾಳಗಗಳನ್ನೂ ವಸುಷೇಣನು ಏರ್ಪಡಿಸುತ್ತಾನೆ. ಹೀಗೆ ಹಲವು ದಿವಸಗಳು ಆನಂದದಲ್ಲಿಯೇ ಕಳೆದು ಹೋಗುತ್ತವೆ. ಗೆಳೆಯರಿಬ್ಬರೂ ಒಂದು ಕ್ಷಣವೂ ಅಗಲದೆ ಇರುತ್ತಾರೆ.

ಅಮೃತದಲ್ಲಿ ವಿಷ
    ಇಂತಹ ಗೆಳೆತನದ ಅಮೃತದಲ್ಲಿ ಚಂಡಶಾಸನನ ಕೆಟ್ಟ ಯೋಚನೆಯ ವಿಷ ಬೀಳುತ್ತದೆ. ವಸಿಷೇಣನ ಪತ್ನಿ ಸುನಂದಾದೇವಿಯನ್ನು ಚಂಡಶಾಸನ ಒಮ್ಮೆ ನೋಡುತ್ತಾನೆ. ಅವಳಲ್ಲಿ ಪ್ರೀತಿ ಉಂಟಾಗುತ್ತದೆ. ತನ್ನ ಆತ್ಮೀಯ ಗೆಳೆಯನ ಪತ್ನಿ ಆಕೆ ಎನ್ನುವುದನ್ನು ಚಂಡಶಾಸನ ಮರೆಯುತ್ತಾನೆ. ವಸುಷೇಣ ತನ್ನನ್ನು ಎಷ್ಟು ಸ್ನೇಹದಿಂದ, ಅಂತಃಕರಣದಿಂದ ಕಾಣುತ್ತಾನೆ, ಆದರಾತಿಥ್ಯದಿಂದ ಕಾಣುತ್ತಿದ್ದ ತನ್ನ ಸ್ನೇಹಿತನಿಗೆ ತಾನು ದ್ರೋಹ ಬಗೆಯುತ್ತಿದ್ದೇನೆ ಎನ್ನುವ ವಿವೇಚನೆಯೂ ಅವನಿಂದ ದೂರ ಸರಿಯುತ್ತದೆ. ಹೇಗಾದರೂ ಸುನಂದೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಚಂಡಶಾಸನನ ಕೆಟ್ಟ ಯೋಚನೆ. ಹೇಗೆ ಇದನ್ನು ಸಾಧಿಸುವುದು ಎಂದು ಅವನಿಗೆ ಹೊಳೆಯುವುದಿಲ. ಅವನಿಗೊಬ್ಬ ಸ್ನೇಹಿತ, ಸುದರ್ಶನ ಎನ್ನುವವನು. ಚಂಡಶಾಸನ ಸುದರ್ಶನನಿಗೆ ಎಲ್ಲವನ್ನೂ ವಿವರಿಸಿ, ಆಕೆಯನ್ನು ಪಡೆಯುವ ಉಪಾಯ ತಿಳಿಸುವಂತೆ ಕೇಳಿಕೊಳ್ಳುತ್ತಾನೆ. ಗೆಳೆಯ ಸುದರ್ಶನನೂ ಚಂಡಶಾಸನನೂ ಕೂಡಿ ಒಂದು ಉಪಾಯ ಹೂಡುತ್ತಾರೆ.

ಚಂಡಶಾಸನನ ಪಾಪ ಕೆಲಸ
      ಆ ಕಾಲದಲ್ಲಿ ಬೇಟೆಯಾಡುವುದು ರಾಜರಿಗೆ ಸಾಮಾನ್ಯವಾದ ಮನರಂಜನೆ. ಒಂದು ದಿವಸ ವಸುಷೇಣ ಹಾಗೂ ಚಂಡಶಾಸನ ಇಬ್ಬರೂ ಬೇಟೆಗೆ ಹೊರಡುತ್ತಾರೆ. ಬೇಟೆಯಲ್ಲಿ ಗೆಳೆಯರಿಬ್ಬರೂ ಬೇರೆಬೇರೆಯಾಗುತ್ತಾರೆ. ಇತ್ತ ವಸುಷೇಣನ ಅಪ್ಪಣೆಯಂತೆ ತಯಾರಿಸಿದ ಭಕ್ಷ್ಯಭೋಜ್ಯಗಳನ್ನು, ಸುನಂದೆ ತನ್ನ ಗೆಳತಿಯರಿಂದ ತೆಗೆಸಿಕೊಂಡು ಪಲ್ಲಕ್ಕಿಯಲ್ಲಿ ಬರುತ್ತಿರುತ್ತಾಳೆ. ಹೊಂಚು ಹಾಕುತ್ತಿದ್ದ ಚಂಡಶಾಸನನಿಗೆ ಒಳ್ಳೆಯ ಸಮಯ ಸಿಕ್ಕುತ್ತದೆ. ಒಡನೆಯೆ ಪಲ್ಲಕ್ಕಿಯ ಮೇಲೆ ಹಾರಿ ಭರದಿಂದ ಸುನಂದೆಯನ್ನು ರಥದಲ್ಲಿ ಹಾಕಿಕೊಂಡು ವೇಗವಾಗಿ ಹೊರಟುಹೋಗುತ್ತಾನೆ. ಇದಾವುದರ ಕಲ್ಪನೆಯೂ ಇಲ್ಲದೆ ಉಲ್ಲಾಸದಿಂದ ಬರುತ್ತಿದ್ದ ಸುನಂದೆಗೆ, ಚಂಡಶಾಸನ ಮೇಲೆ ಬೀಳುತ್ತಿದ್ದಂತೆಯೇ, ಸಿಡಿಲುಬಡಿದಂತಾಗಿ ಮೂರ್ಛೆ ಹೋಗುತ್ತಾಳೆ.
       ಸ್ವಲ್ಪ ಸಮಯದನಂತರ ನಿಧಾನವಾಗಿ ಅವಳು ಮೂರ್ಛೆ ತಿಳಿದು ಎಚ್ಚರಗೊಂಡಳು. ಪಾಪ, ಅವಳು ವಸುಷೇಣದಲ್ಲಿ ನಂಬಿಕೆ ಇಟ್ಟುಕೊಂಡಿದ್ದಳು. ಗಂಡನ ಸ್ನೇಹಿತ, ಇಬ್ಬರೂ ಹುಡುಗರಾಗಿ ಒಟ್ಟಿಗೆ ಆಡಿ ಬೆಳೆದವರು ಎಂದು ಅವನನ್ನು ವಿಶ್ವಾಸದಿಂದ ಕಾಣುತ್ತಿದ್ದಳು. ಅವನು ಇಂತಹ ವಿಶ್ವಾಸದ್ರೋಹ ಮಾಡುತ್ತಾನೆ ಎಂಬ ಅನುಮಾನವೇ ಅವಳಿಗಿರಲಿಲ್ಲ. ವಿಶ್ವಾಸಘಾತಕನಾದ ಚಂಡಶಾಸನ ತನ್ನನ್ನು ಹೊತ್ತುಕೊಂಡು ಹೋಗುತ್ತಿರುವುದು ತಿಳಿದು ಅಳುತ್ತಾಳೆ, ಮೊರೆಯಿಡುತ್ತಾಳೆ. ’ಹಾಳು ಮನೆಯಲ್ಲಿ ನಾಯಿ ತುಪ್ಪದ ಪಾತ್ರೆಯನ್ನು ಕದ್ದು ತರುವಂತೆ, ಗಂಡನಿಲ್ಲದಾಗ ಹೆಣ್ಣನ್ನು ಕದ್ದು ತರುವುದು ವೀರನ ರೀತಿಯೇ?’ ಎಂದು ಮುದಲಿಸುತ್ತಾಳೆ. ಆದರೆ ಫಲವಾಗುವುದಿಲ್ಲ.
      ಆ ವೇಳೆಗೆ ಚಂಡಶಾಸನನ ರಥ ಗಡಿಪ್ರದೇಶಕ್ಕೆ ಬರುತ್ತದೆ. ಅಲ್ಲಿ ವಸುಷೇಣನ ಸಾಮಂತನೊಬ್ಬ ಸಿಂಹಚೂಡ ಎಂಬುವನು ಕಾವಲಿದ್ದ. ಅವನು ಶೂರ. ಸುನಂದೆಯ ಗೋಳಿನ ಧ್ವನಿ ಕೇಳಿ, ಆತ ಕೈಯ ಕತ್ತಿ ಗುರಾಣಿಯನ್ನು ಎತ್ತಿ, ಚಂಡಶಾಸನನನ್ನು ತಡೆಯಲು ಪ್ರಯತ್ನಿಸುತ್ತಾನೆ. “ಆನೆಯ ಹತ್ತಿರ ಇರುವ ಕಬ್ಬನ್ನು ಕೋತಿ ಕಿತ್ತುಕೊಳ್ಳಬಲ್ಲುದೆ? ಅತ್ತ ಸರಿ” ಎಂದು ಚಂಡಶಾಸನ ಅವನ ಮೇಲೆ ಎರಗುತ್ತಾನೆ. ’ತಲೆಗಾಯಿ ಈ ಭಟನನ್ನು, ಹೊಡೆದಿಕ್ಕು ಈ ದ್ರೋಹಿಯನ್ನು’ ಎಂದು ದೇವದೇವತೆಯರಿಗೆಲ್ಲಾ ಸುನಂದೆ ಮೊರೆಯಿಡುತ್ತಾಳೆ. ಆದರೆ ಚಂಡಶಾಸನ ಕ್ಷಣಾರ್ಧದಲ್ಲಿ ಸಿಂಹಚೂಡನ ತಲೆ ಕತ್ತರಿಸಿ, ಸುನಂದೆಯನ್ನು ತನ್ನ ದುರ್ಗಕ್ಕೆ ಕೊಂಡೊಯ್ದು ಸೆರೆಯಲ್ಲಿಡುತ್ತಾನೆ.

ಯುದ್ಧ
      ಇತ್ತ ವಸುಷೇಣನು ಬೇಟೆಯಿಂದ ಹಿಂತಿರುಗಿ ಬರುತ್ತಾನೆ. “ದೇವಿ ಬಂದಳೇ? ಭೋಜನಕ್ಕೆ ಸಿದ್ಧ ಮಾಡಿರುವಳೇ? ಚಂಡಶಾಸನ ಎಲ್ಲಿ?” ಎಂದು ಕೇಳುತ್ತಾನೆ. ಸುನಂದೆಯ ಸಖೀ ಜನರು ಅಳುತ್ತಾ ನಡೆದ ಸಂಗತಿಯನ್ನು ವಿವರಿಸುತ್ತಾರೆ. ಅದನ್ನು ಕೇಳಿ ವಸುಷೇಣನು ದುಃಖದಿಂದ ಒಂದು ಕ್ಷಣ ಮೂರ್ಛೆಹೋಗುತ್ತಾನೆ. ಆಮೇಲೆ ಎಚ್ಚೆತ್ತು, ತನ್ನ ಹೆಂಡತಿಯಿಲ್ಲದೆ ಪಟ್ಟಣವನ್ನು ಪ್ರವೇಶಿಸುವುದಿಲ್ಲ, ಮೊದಲು ತನ್ನ ಕತ್ತಿಗೆ ಚಂಡಶಾಸನನ ಶಿರವನ್ನು ಊಟ ಮಾಡಿಸಿ, ಅನಂತರ ತಾನು ಊಟ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿ, ಚಂಡಶಾಸನನ ಮೇಲೆ ದಂಡೆತ್ತಿ ನಡೆಯುತ್ತಾನೆ.
      ಇತ್ತ ಮಕರಗ್ರಾಹಪುರದಲ್ಲಿ ಚಂಡಶಾಸನನ ಪ್ರಜೆಗಳಿಗೆ ತಮ್ಮ ರಾಜ ಮಾಡಿದ ಕೆಲಸ ಸರಿ ಎಂದು ತೋರುವುದಿಲ್ಲ. ಅವನು ತಪ್ಪು ಮಾಡಿದ, ಇದರಿಂದ ಅವನಿಗೂ ಕೇಡು, ರಾಜ್ಯಕ್ಕೂ ಕೇಡು ಎಂದು ಅವರಿಗೆ ಎನ್ನಿಸುತ್ತದೆ. ’ತಮ್ಮ ಊರಿಗೆ ಅರಸ ಹೆರಹೆಣ್ಣನ್ನು ತಂದನೊ ಅಥವಾ ಹೆಮ್ಮಾರಿಯನ್ನು ತಂದನೊ’ ಎಂದು ಮಾತನಾಡಿಕೊಳ್ಳುತ್ತಾ ಹೆದರಿರುತ್ತಾರೆ. ವಸುಷೇಣನ ಸೈನ್ಯ ಬಂದು ಕೋಟೆಯನ್ನು ಲಗ್ಗೆ ಹತ್ತುತ್ತದೆ. ಹಗಲು ಹೊತ್ತಿನಲ್ಲಿ ಎರಡು ಕಡೆಯ ಸೈನ್ಯಕ್ಕೂ ಹೋರಾಟ ನಡೆಯುತ್ತದೆ.

ನಾಳೆ ನಿನ್ನ ತಲೆಯನ್ನು...’
     ಚಂಡಶಾಸನ ಹಗಲಿನಲ್ಲಿ ಯುದ್ಧರಂಗದಲ್ಲಿದ್ದು, ರಾತ್ರಿ ಯುದ್ಧ ನಿಂತ ನಂತರ ವೀರಶೃಮಗಾರ ಮಾಡಿಕೊಂಡು ಬಂದು, ನಯವಾಗಿ ಅನೇಕ ವಿಧಗಳಿಮದ ಸುನಂದೆಯ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಆದರೆ ತುಪ್ಪ ಸುರಿದ ಬೆಂಕಿ ಜ್ವಾಲೆಯಂತೆ ಸುನಂದೆಯ ಕೋಪ, ರೋಷ ಹೆಚ್ಚುತ್ತದೆ. ಸುನಂದೆಯ ನಿರ್ಧಾರದ ಮುಂದೆ ಅವನ ಪ್ರಯತ್ನಗಳೆಲ್ಲ ವಿಫಲವಾಗುತ್ತದೆ. “ನೀನು ಮಾಡಿದುದು ಕೆಟ್ಟ ಕೆಲಸ. ಅದಕ್ಕಾಗಿ ನಿನಗೆ ಶಿಕ್ಷೆ ಕಟ್ಟಿಟ್ಟಿದೆ. ನಾಳೆ ಬೆಳಿಗ್ಗೆ ನಿನ್ನ ತಲೆಯನ್ನು ಕಾರಾಗೃಹದ ಬಾಗಿಲಲ್ಲಿ ಕಟ್ಟುತ್ತಾರೆ” ಎಂದು ಕೋಪದಿಂದ ಹೇಳುತ್ತಾಳೆ. ಆದರೂ ಚಂಡಶಾಸನನಿಗೆ ಅವಳಲ್ಲಿದ್ದ ಅನುರಾಗ ಹೆಚ್ಚಾಗುತ್ತಲೇ ಹೋಗುತ್ತದೆ. ಅವನು ಸುನಂದೆಗೆ, “ನಾನು ನಿನ್ನನ್ನು ಬಿಡುವುದಿಲ್ಲ. ನೀನು ಸತ್ತರೆ ನಾನೂ ಸಾಯುತ್ತೇನೆ, ಉಳಿಯುವವನಲ್ಲ, ರಣರಂಗದಲ್ಲಿ ಆಗುವುದು ಆಗಲಿ” ಎಂದು ತನ್ನ ನಿರ್ಧಾರವನ್ನು ತಿಳಿಸಿ ಹೋಗುವನು.
ತೆಗೆದುಕೋ ನಿನ್ನ ಗಂಡನ ತಲೆಯನ್ನು!’
ಅಯ್ಯೋ, ಹೀಗಾಯಿತೆ?
        ಸುನಂದೆಯ ಗಂಡ ಬದುಕಿರುವವರೆಗೂ ಆಕೆ ತನ್ನನ್ನು ವರಿಸುವುದಿಲ್ಲ ಎಂದು ಚಂಡಶಾಸನ ತೀರ್ಮಾನಿಸುತ್ತಾನೆ. ಅವಳ ಗಂಡ ಸತ್ತ ಎಂದು ಅವಳಿಗೆ ಎನ್ನಿಸಬೇಕು. ಆಗ ತನಗೆ ಬೇರೆ ಯಾರೂ ದಿಕ್ಕಿಲ್ಲ ಎಂದು ತನ್ನನ್ನೆ ವರಿಸುತ್ತಾಳೆ. ಆದರೆ ಗಂಡ ವಸುಷೇಣ ಸತ್ತ ಎಂದು ಅವಳಿಗೆ ಅನ್ನಿಸುವಂತೆ ಮಾಡುವುದು ಹೇಗೆ? ಅದಕ್ಕಾಗಿ ಒಂದು ಉಪಾಯ ಹೂಡುವನು. ಇಂದ್ರಜಾಲಿಗನಿಂದ ರಕ್ತ ಸೋರುತ್ತಿರುವ ವಸುಷೇಣನ ಮಾಯಾತಲೆಯನ್ನು ಮಾಡಿಸಿ ತರುತ್ತಾನೆ. ಅದನ್ನು ಸುನಂದೆಯ ಮುಂದೆ ಎಸೆಯುತ್ತಾನೆ. “ತೆಗೆದುಕೋ ನಿನ್ನ ಗಂಡನ ತಲೆಯನ್ನು!” ಎನ್ನುತ್ತಾನೆ.
       ಅದನ್ನು ಸುನಂದೆ  ನಿಜವೆಂದೇ ನಂಬುತ್ತಾಳೆ. ಪಾಪ, ಸುನಂದೆಗೆ ದಿಗ್ಭ್ರಮೆ. ಆಕಾಶವೇ ಕಳಚಿಬಿದ್ದಂತೆ ಆಗುತ್ತದೆ. ದುಃಖವನ್ನು ಅವಳು ತಡೆಯಲಾರಳು. ಒಡನೆಯೇ ಅವಳ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಪ್ರಾನ ಹೋಗಿಬಿಡುತ್ತದೆ. ಇದನ್ನು ಕಂಡು ಚಂಡಶಾಸನಿಗೆ ದಿಗ್ಭ್ರಮೆ. ಹೀಗೆ ಆಗುತ್ತದೆ, ಗಂಡನ ತಲೆ ಎಂದು ಕಾಣುವ ಸುಳ್ಳು ತಲೆಯನ್ನು ನೋಡಿಯೇ ಸುನಂದೆ ಸಾಯುತ್ತಾಲೆ ಎಂದು ಅವನು ಯೋಚಿಸಿಯೇ ಇರಲಿಲ್ಲ. ಉಪಾಯದಿಂದ ಅವಳ ಮನಸ್ಸನ್ನು ಗೆಲ್ಲುತ್ತೇನೆ ಎಂದು ಮಾಡಿದ ಕೆಲಸ ಅವಳ ಪ್ರಾಣಕ್ಕೆ ಸಂಚಕಾರ ತಂದಿತು. ಅದರಿಂದ ಎದೆಬೆಂದು ಮೂರ್ಛೆಹೋಗುತ್ತಾನೆ.
        ಚಂಡಶಾಸನನಿಗೆ ಸುನಂದೆಯಲ್ಲಿ ಪ್ರೀತಿ ಬಹಳವಾಗಿತ್ತು. ಆದ್ದರಿಂದ ಆಕೆಯನ್ನು ಮುಂದಿನ ಜನ್ಮದಲ್ಲಾದರೂ ಪಡೆಯುವೆ ಎಂದು ಹೇಳಿ ಅವಳ ಶವದ ಜೊತೆಯಲ್ಲಿ ಸಹಗಮನ ಮಾಡುತ್ತಾನೆ. ಆತನ ಇತರ ಪತ್ನಿಯರೂ ಗಂಡ ಚಂಡಶಾಸನನ ದಾರಿಯನ್ನೇ ಅನುಸರಿಸುತ್ತಾರೆ. ಹೀಗೆ ಚಂಡಶಾಸನನೂ ಅವನ ಎಲ್ಲ ಹೆಂಡತಿಯರೂ ಸಾಯುತ್ತಾರೆ.
       ಇತ್ತ ವಸುಷೇಣನು ಕೋಟೆಗೆ ಲಗ್ಗೆ ಹತ್ತಿದಾಗ ಹೆಂಗಸರ ಗೋಳಿನ ಧ್ವನಿ ಕೇಳುತ್ತದೆ. ಅದೇನೆಂದು ವಿಚಾರಿಸುತ್ತಾನೆ. ಆಗ ಅವನಿಗೆ ಸುನಂದೆಯ ಸಾವಿನ ಸುದ್ಧಿ ತಿಳಿಯುತ್ತದೆ. ’ನಾನು ಸತ್ತೆನೆಂದು ತಿಳಿದ ಒಡನೇ ಅವಳು ಸತ್ತಳು. ಅವಳು ಸತ್ತಮೇಲೆ ನಾನು ಉಳಿಯುವುದು ತರವಲ್ಲ, ಸುನಂದೆಯನ್ನು ಕಳೆದುಕೊಂಡು ನಾನು ಬದುಕಲಾರೆ’ ಎಂದು ವಸುಷೇಣ ನಿಶ್ಚಯಿಸಿಕೊಳ್ಳುತ್ತಾನೆ. ದುಃಖದಿಂದ ತನ್ನ ರಾಜಧಾನಿಗೆ ಹಿಂತಿರುಗುತ್ತಾನೆ ಮಗನಿಗೆ ಪಟ್ಟಕಟ್ಟುತ್ತಾನೆ. ಎಲ್ಲ ಭೋಗಗಳನ್ನು ತ್ಯಜಿಸಿ ತಪಸ್ಸಿಗೆ ಹೋಗುತ್ತಾನೆ.

ಮತ್ತೆ ಬಾಳಿಗೆ ಪಾಠ
     ‘ಯಶೋಧರ ಚರಿತೆ’ಯಂತೆ ಈ ಕಾವ್ಯದಲ್ಲಿಯೂ ಪ್ರಣಯದ ಕಥೆಯನ್ನೆ ಜನ್ನ ಹೇಳಿದ್ದಾನೆ. ಇಲ್ಲಿಯೂ ಮತ್ತೆ ಎಚ್ಚರಿಕೆ ಇದೆ. ಮನುಷ್ಯ ಮನಸ್ಸನ್ನು ಸದಾ ಅಂಕೆಯಲ್ಲಿಟ್ಟುಕೊಂಡಿರಬೇಕು, ಸುಖದ ಆಸೆ ಬಂದಾಗಲಂತೂ ಬಹಳ ಎಚ್ಚರಿಕೆಯಿಂದ ಇರಬೇಕು. ವಸುಷೇಣ – ಸುನಂದೆ ಬಹು ಸಂತೋಷದಿಂದ ಇದ್ದರು. ಚಂಡಶಾಸನನಾದರೂ ಸಂತೋಷದಿಂದಲೇ ಬಾಳುತ್ತಿದ್ದ. ಅವನು ಒಂದು ರಾಜ್ಯಕ್ಕೆ ರಾಜ, ಪ್ರೀತಿಯಿಂದ ನಡೆದುಕೊಳ್ಳುವ ಹೆಂಡತಿಯರು. ಸುನಂದೆ ತನ್ನನ್ನು ಮದುವೆಯಾಗಬೇಕು ಎಂದು ಅವನಿಗೆ ಆಸೆಯಾಯಿತು. ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಈ ಕೆಟ್ಟ ಯೋಚನೆಯಿಂದ ಅವನಿಗೂ ಕಷ್ಟವಾಯಿತು, ವಸುಷೇಣ – ಸುನಂದೆ – ಚಂಡಶಾಸನ – ಅವನ ಹೆಂಡತಿಯರು ಎಲ್ಲರೂ ಸತ್ತರು. ಇಷ್ಟು ಚಂಡಶಾಸನ ತನ್ನ ಆಸೆಗೆ ಲಗಾಮು ಹಾಕದಿದ್ದರಿಂದಲೇ.

ಹಿರಿಯ ಕವಿ
      ಹೀಗೆ ಜನ್ನಕವಿ ತನ್ನ ಎರಡು ಕಾವ್ಯಗಳಲ್ಲಿ ಪ್ರಮುಖವಾಗಿ ಧರ್ಮವನ್ನು ಉಪದೇಶಿಸಿದರೂ ಅದಕ್ಕೆ ಕಳೆ ಕೊಡುವಂತೆ ಎರಡೂ ಕಾವ್ಯಗಳಲ್ಲೂ ಸ್ವಾರಸ್ಯವಾದ ಕಥೆಗಳನ್ನು ಹೇಳಿದ್ದಾನೆ, ಇದರಿಂದ ಕಾವ್ಯಗಳನ್ನು ಆಸಕ್ತಿಯಿಂದ ಓದಬಹುದು. ಜನ್ನ ಒಳ್ಳೆಯ ಕಾವ್ಯ ಬರೆದಿದ್ದಾನೆ. ಸುಮಾರು ಏಳು ನೂರು ವರ್ಷಗಳ ಹಿಂದೆ ಕನ್ನಡದಲ್ಲಿ ಕಾವ್ಯರಚನೆ ಮಾಡಿದ ಜನ್ನ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಬ್ಬ ಶ್ರೇಷ್ಠ ಕವಿ.

‘ಬಲಿಯನಿತ್ತೊಡೆ ಮುನಿವೆಂ’ ಪದ್ಯದ ಸಾರಾಂಶ


ಆನಭಯರುಚಿಕುಮಾರನೆ
ಈ ನೆಗೞ್ದಿರ್ದಭಯಮತಿಯುಮೀ ಅಕ್ಕನೆ ದಲ್
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ವೆ ಮಾರಿದತ್ತ ನೃಪೇಂದ್ರಾ || ೧ ||

(ಅಭಯರುಚಿಯು ಮಾರಿದತ್ತನನ್ನು ಕುರಿತು) ನಾನು ಅಭಯರುಚಿ ಕುಮಾರ, ಇವಳೇ ನನ್ನ ನೆಚ್ಚಿನ ಸಹೋದರಿ ಅಭಯಮತಿ. ನಾನಾ ರೀತಿಯ ಕರ್ಮಗಳಿಂದ ನೀನು ಇನ್ನೇನನ್ನು ಕೇಳುವೆ ಮಾರಿದತ್ತ ಮಹಾರಾಜ?ಎಂದನು.

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ
ಪುರುಳಿಲ್ಲ ನಿನ್ನ ಕೇಡಂ
ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ || ೨ ||

(ಅಭಯರುಚಿಯು ಮುಂದುವರಿದು ಮಾತನಾಡುತ್ತಾ) ನಮ್ಮ ಗುರುಗಳು ಭಿಕ್ಷೆಮಾಡಿಕೊಂಡುಬರಲು ಅಪ್ಪಣೆಮಾಡಿದ್ದರು. ಆದ್ದರಿಂದ ನಾವಿಬ್ಬರೂ ಭೇಕ್ಷೆಗೆ ಬರುತ್ತಿರುವಾಗ (ನಿಮ್ಮಕಡೆಯವರು) ನಮ್ಮನ್ನು ಹಿಡಿದು ತಂದರು. ನಮ್ಮನ್ನು ಹಿಡಿದು ತಂದ ಕಾರಣಕ್ಕಾಗಿ ನಮಗೆ ಸ್ವಲ್ಪವೂ ಭಯವಿಲ್ಲ. ಆದರೆ ನಿನಗೆ ಮುಂದೆ ಉಂಟಾಗಬಹುದಾದ ಕೇಡನ್ನು ಆಲೋಚಿಸಿ ನಿನ್ನ ಮೇಲಿನ ಕರುಣೆಯಿಂದ ನಾನು ತಳಮಳಗೊಂಡಿದ್ದೇನೆ. ಎಂದನು

ಸಂಕಲ್ಪ ಹಿಂಸೆಯೊಂದಱೊ
ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ
ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್ || ೩ ||

(ಅಭಯರುಚಿಯು ಮುಂದುವರಿದು ಮಾತನಾಡುತ್ತಾ) ಕೇವಲ ಸಂಕಲ್ಪ ಹಿಂಸೆಯೊಂದನ್ನು ಮಾಡಿದ್ದರಿಂದಾಗಿ ನಾವು ಹಲವು ಜನ್ಮಾಂತರಗಳನ್ನೆತ್ತಿ ದುಃಖವನ್ನನುಭವಿಸಿದೆವು. ನೀನು ಇಷ್ಟೊಂದು ಜೀವಿಗಳನ್ನು ಕೊಂದಿರುವೆ. ಇದಕ್ಕೆ ಶಿಕ್ಷೆಯನ್ನು ನೀನು ನರಕದಲ್ಲಿ ಪಡೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.

ಎಂದ ನುಡಿ ನೆರೆದ ಜೀವಕ
ದಂಬಂಗಳ್ಗಭಯಮೆಂಬ ಡಂಗುರದವೊಲೊ
ಪ್ಪಂಬಡೆಯೆ ಮಾರಿದತ್ತನೃ
ಪಂ ಬಿಲ್ಲುಂ ಬೆಱಗುಮಾದನುದ್ವೇಗಪರಂ || ೪ ||

ಎಂದು ಹೇಳಿದ ಮಾತು ಅಲ್ಲಿ ನೆರೆದಿದ್ದ ಜೀವಸಮೂಹಕ್ಕೆ ಅಭಯವೆಂಬ ಡಂಗುರ ಬಾರಿಸಿದಂತೆ ಕೇಳಲು, ಮಾರಿದತ್ತ ಮಹಾರಾಜನು ಅದನ್ನು ಕೇಳಿ ಬಹಳ ವಿಸ್ಮಯಭರಿತನಾಗಿ, ಉದ್ವೇಗಗೊಂಡನು.

ಆ ಚಂಡಮಾರಿ ಲೋಚನ
ಗೋಚರತನುವಾಗಿ ಕುವರನಂ ಬಂದಿಸಿ ನೀ
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆಱೆ ಕೇಳ್ವಿನೆಗಂ || ೫ ||

ಆ ಚಂಡಮಾರಿ ದೇವತೆಯು ಪ್ರತ್ಯಕ್ಷವಾಗಿ ಮಾರಿದತ್ತ ರಾಜನನ್ನು ಕುರಿತು “ಚಿಕ್ಕ ಮಕ್ಕಳನ್ನು ಹಿಡಿದು ತಂದಿರುವ ನೀನು ಆಚಾರ್ಯನೆ? ಎಂದಳು ಅಲ್ಲದೆ ಜಾತ್ರೆಯಲ್ಲಿ ನೆರೆದಿದ್ದವರೆಲ್ಲಾ ಕೇಳುವಂತೆ ಹೀಗೆ ಸೂಚಿದಳು...

ಪ್ರಜೆಯೆಲ್ಲಂ ಜಲಗಂಧ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ವ್ರಜದಿಂದೆ ಪೂಜಿಸುವುದು ಜೀವ
ಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ || ೬ ||

(ಚಂಡಮಾರಿಯು ಅಲ್ಲಿ ನೆರೆದಿದ್ದವರೆಲ್ಲಾ ಕೇಳುವಂತೆ) ಪ್ರಜೆಗಳೆಲ್ಲಾ ಜಲ, ಗಂಧ, ಧೂಪ, ಧೀಪ, ಹವಿಸ್ಸು, ತಾಂಬೂಲಗಳಿಂದ ಪೂಜಿಸುವುದು. ಅದನ್ನು ಬಿಟ್ಟು ಜೀವಿಗಳನ್ನು ಬಲಿಕೊಟ್ಟರೆ ನಾನು ಮುನಿಯುತ್ತೇನೆ ಎಂದಳು

ಎಂದು ತಿರೋಹಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತವಿಭು ಲಾಲಿಸಿದಂ || ೭ ||

ಎಂದು ಹೇಳಿ ಮಾರಿಯು ಮಾಯವಾದಳು. ಆಗ ಮಾರಿದತ್ತ ರಾಜನು ಅಲ್ಲಿ ಬಲಿಗಾಗಿ ತಂದಿರಿಸಿದ್ದ ಎಲ್ಲಾ ಜೀವರಾಶಿಗಳನ್ನು ಬಿಡಿಸಿ ಪ್ರಜೆಗಳ ಮಕ್ಕಳನ್ನು ತನ್ನ ಸಹೋದರಿಯ ಮಕ್ಕಳನ್ನು ಮುದ್ದಾಡಿದನು.

ಗುಡುಗುಡನೆ ಸುರಿವ ಕಂಬನಿ
ಯೊಡೆವಂದಶುಭಕ್ಕೆ ಮಂಗಲಸ್ನಾನಮನಂ
ದೊಡರಿಸೆ ಸೋದರ ಶಿಶುಗಳ
ನೊಡಲೊಳ್ ಮಡಗುವಿನಪ್ಪಿ ಬೆಚ್ಚನೆ ಸುಯ್ದಂ || ೮ ||

ಮಾರಿದತ್ತ ಮಹಾರಾಜನು ದುಃಖಿತನಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರಿನಿಂದ ’ಅಶುಭಕ್ಕೆ ಮಂಗಲ ಸ್ನಾನವನ್ನು ಮಾಡಿಸಿದಂತೆ’ ತನ್ನ ಸೋದರಿಯ ಮಕ್ಕಳಾದ ಅಭಯರುಚಿ-ಅಭಯಮತಿಯನ್ನು ತನ್ನ ಒಡಲೊಳಗೆ ಅಪ್ಪಿಕೊಂಡು ಬೆಚ್ಚನೆಯ ಕಣ್ಣೀರನ್ನು ಸುರಿಸುತ್ತಾ ದುಃಖಿಸಿದನು.

ತಾನಂದುವರೆಗಮೊದವಿಸಿ
ದೇನಂಗಳ್ಗಳ್ಕಿ ಕುಸುಮದತ್ತಂಗೆ ಧರಿ
ತ್ರೀನಾಥಪದವಿಯಂ ಕೊ
ಟ್ಟಾ ನರಪತಿ ಬೞಿಕ ಧೀಕ್ಷೆಯಂ ಕೈಕೊಂಡಂ || ೯ ||

ಮಾರಿದತ್ತ ರಾಜನು – ತಾನು ಅದುವರೆಗೂ ಮಾಡಿದ್ದ ಹೀನ ಕೃತ್ಯಗಳಿಗೆ ನಾಚಿ ತನ್ನ ಮಗನಾದ ಕುಸುಮದತ್ತನಿಗೆ ರಾಜ್ಯಪದವಿಯನ್ನು ಕೊಟ್ಟು ಆನಂತರ ಸನ್ಯಾಸ ಧೀಕ್ಷೆಯನ್ನು ಪಡೆದನು.

ಕೆಲಕಾಲಮುಗ್ರತಪಮಂ
ಸಲಿಸಿ ಸಮಾಧಿಯೊಳೆ ಮುಡುಪಿ ಮೂರನೆಯ ದಿವಂ
ನೆಲೆಯಾಗೆ ಮಾರಿದತ್ತಂ
ಕಲಿಯಂ ಮೂದಲಿಸಿದಂತೆ ದೇವನೆ ಆದಂ || ೧೦ ||

ಕೆಲವು ಕಾಲದವರೆಗೆ ಉಗ್ರವಾದ ತಪಸ್ಸನ್ನು ಆಚರಿಸಿ ಸಮಾಧಿ ಸ್ಥಿತಿಗೇರಿ ಪ್ರಾಣವನ್ನು ತ್ಯಜಿಸಿ ಮೂರನೆಯ ಸ್ವರ್ಗದಲ್ಲಿ ನೆಲೆಗೊಂಡು ಕಲಿಯನ್ನೇ ಮೂದಲಿಸುವಂತೆ ದೇವರೇ ಆದನು.

<<ಪರಿವಿಡಿಗೆ ಹಿಂದಿರುಗಿ


*********************************

ರಮ್ಯಸೃಷ್ಟಿ (ಪದ್ಯ-2)

ಮಧುರ ಚೆನ್ನ ಅವರ ಪರಿಚಯ
         ಮಧುರಚೆನ್ನರೆಂದು ಖ್ಯಾತಿಪಡೆದ ಕವಿ ಹಲಸಂಗಿ ಚೆನ್ನಮಲ್ಲಪ್ಪನವರು.ಇವರ ಪೂರ್ಣ ಹೆಸರು ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ. ಇವರು ಜನಿಸಿದ್ದು ಹಲಸಂಗಿಯಿಂದ ಪಶ್ಚಿಮಕ್ಕೆ ೬ ಮೈಲು ದೂರದಲ್ಲಿರುವ ಲೋಣಿ ಎನ್ನುವ ಊರಿನಲ್ಲಿ. ಜನನ ದಿನಾಂಕ ೧೯೦೩ ಜುಲೈ ೩೦. ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ ಹಿರೇಲೋಣಿಯಾದರೂ ಅವರು ಬದುಕೆಲ್ಲ ಕಳೆದದ್ದು ಹಲಸಂಗಿಯಲ್ಲಿಯೇ. ಅವರು ೧೯೨೧ ರಲ್ಲಿ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದರಾದರೂ ಅವರ ಶಾಲೆಯ ಓದು ಅಲ್ಲಿಗೇ ಮುಕ್ತಾಯಗೊಂಡಿತು. ಬಳಿಕ ಬಿಜಾಪುರಕ್ಕೆ ಹೋಗಿ ಅಲ್ಲಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಸಾಧ್ಯವಾದಷ್ಟು ಇಂಗ್ಲಿಷ್,ಸಂಸ್ಕೃತ ಹಾಗು ಹಳಗನ್ನಡಗಳನ್ನು ಕಲಿತರು. ಅವರ ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಮುಂತಾದವುಗಳೆಲ್ಲ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳಾಗಿವೆ.

            ಮಧುರಚನ್ನರ ವಿವಾಹ ಅವರ ೧೬ನೆಯ ವರ್ಷಕ್ಕೆ ಬಸಮ್ಮ ಎನ್ನುವ ೧೨ ವರ್ಷದ ಕನ್ಯೆಯ ಜೊತೆಗೆ ಆಯಿತು. ಅವರಿಗೆ ೬ ಹುಡುಗರು ಹಾಗೂ ಇಬ್ಬ್ಬರು ಹುಡುಗಿಯರು. ಮಧುರಚೆನ್ನರು ತಮ್ಮ ೧೪ನೆಯ ವಯಸ್ಸಿನಲ್ಲಿಯೆ ಸಾಹಿತ್ಯಸೃಷ್ಟಿಗೆ ತೊಡಗಿದರು. ೧೯ನೆಯ ವಯಸ್ಸಿಗೆ ಶಿಲಾಶಾಸನಗಳ ಹಾಗು ಜನಪದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆದರೆ ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ ಒಲೆದ ಮನಸ್ಸು ಕೆಲಕಾಲ ನಾಸ್ತಿಕರಾಗಿದ್ದರೂ ಸಹ, ಕೊನೆಗೊಮ್ಮೆ ಶ್ರೀ ಅರವಿಂದರನ್ನು ತನ್ನ ಗುರುಗಳೆಂದು ಭಾವಿಸಿದರು. ತೀವ್ರ ಆಧ್ಯಾತ್ಮಸಾಧನೆಯ ನಂತರ ಮಧುರಚೆನ್ನರು ೧೯೫೩ರ ಆಗಸ್ಟ ೧೫ರಂದು ದೇಹವಿಟ್ಟರು.

ಹೊಸಹಾಡು (ಪದ್ಯ-3)

ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಪರಿಚಯ:

 ಜನನ: ಜೂನ್ ೮, ೧೯೧೫         ನಿಧನ:  ಆಗಸ್ಟ್ ೯, ೨೦೧೫
        ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದವರು ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.
          ಕಯ್ಯಾರ ಕಿಞ್ಞಣ್ಣ ರೈ ಅವರು ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ನಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸಿದರು.
       ಶ್ರೀಯುತರು ಬದುಕಿ ಬಾಳಿದ್ದು ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದಲ್ಲಿ. ಹಾಗಾಗಿ ಕಯ್ಯಾರ ಇವರ ಹೆಸರಿನೊಂದಿಗೆ ಬೆಸೆದುಕೊಂಡಿತು.
           ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾ
              ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. 'ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್' 'ಸಾರೊ ಎಸಳ್ದ ತಾಮರೆ' 'ಲೆಪ್ಪುನ್ಯೇರ್?' 'ಬತ್ತನೊ ಈ ಬರ್ಪನೊ' - ಇವು ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ.
              ಪತ್ರಕರ್ತರಾಗಿ: ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯಕೃಷಿ

  • 'ಕಯ್ಯಾರ ಕಿಞ್ಞಣ್ಣ ರೈ' ಅವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.
  • ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ.
  • ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.
  • ಪಂಚಮಿ ಮತ್ತು ಆಶಾನ್‍ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ.
  • ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ.
  • ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ' ಕೃತಿಯನ್ನು ಬರೆದುಕೊಟ್ಟಿದ್ದಾರೆ.
  • ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ.
  • 'ವಿರಾಗಿಣಿ' ಎನ್ನುವುದು ಇವರು ಬರೆದ ನಾಟಕ.
  • 'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಆತ್ಮಕಥನ.
  • ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೇ ಐದು ಸಾವಿರದಷ್ಟಾಗುತ್ತದೆ.
ಗೌರವಪ್ರಶಸ್ತಿ/ಪುರಸ್ಕಾರಗಳು
  • ಸನ್.೧೯೬೯ ರಲ್ಲಿ ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ' ಲಭಿಸಿತು.
  • ಸನ್.೧೯೬೯ ರಲ್ಲಿ 'ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ' ಲಭಿಸಿತು.
  • ಸನ್.೧೯೮೫ ರಲ್ಲಿ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ದೊರೆಯಿತು.
  • ಕಯ್ಯಾರ ಕಿಞ್ಞಣ್ಣ ರೈಯವರು ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ' ೬೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು'.
  • ಸನ್.೨೦೦೫ ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆಯಿತು.
  • ಸನ್.೨೦೦೬ ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ,
  • ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಲಭಿಸಿವೆ.
  • ಪಂಪ ಪ್ರಶಸ್ತಿ.
ಕಯ್ಯಾರರ ಒಂದು ಜನಪ್ರಿಯ ಕವನ 
ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ
ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು
ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡ ಸಿರಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ



**************************************************************************
      ಹೊಸಹಾಡು ಪದ್ಯಬಾಗವನ್ನು ಕಯ್ಯಾರ ಕಿಞ್ಞಣ್ಣರೈ ಅವರ 'ಶತಮಾನದ ಗಾನ' ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಸಿರಿಯನಿನ್ನೇನ ಬಣ್ಣಿಪೆನು (ಪದ್ಯ-4)


 ರತ್ನಾಕರವರ್ಣಿ ಪರಿಚಯ
ರತ್ನಾಕರ ವರ್ಣಿಯ ಕಾಲ್ಪನಿಕ ಚಿತ್ರ (ಕೃಪೆ: www.icarelive.com)
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿ ಕಾಲ ಸುಮಾರು ಕ್ರಿ.. ೧೫೫೭. (೯ನೇ ತರಗತಿ ಪಠ್ಯಪುಸ್ತಕದಲ್ಲಿ ಈತನ ಕಾಲ ಸು.ಕ್ರಿ..೧೫೬೦ ಎಂದಿದೆ)
  • ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ
  • ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.
  • ರತ್ನಾಕರವರ್ಣಿ ರಚಿಸಿದ ಕೃತಿಗಳು:
  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಘಟನೆ
ಕಾಲ
ಜನನ
೧೫೩೨
ತ್ರಿಲೋಕಶತಕದ ರಚನೆ
೧೫೫೭
ಭರತೇಶವೈಭವದ ರಚನೆ
೧೫೬೭
ವೀರಶೈವನಾದುದು
೧೫೭೨
ಮತ್ತೆ ಜೈನನಾದುದು
೧೫೭೫
ರತ್ನಾಕರಶತಕದ ರಚನೆ
೧೫೭೭
ಅಪರಾಜಿತಶತಕದ ರಚನೆ
೧೫೮೨
ಅಧ್ಯಾತ್ಮಗೀತದ ರಚನೆ
೧೫೮೭
ಮರಣ
೧೬೦೦ರ ಮೇಲೆ
              ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
 ************************

ಸಿರಿಯನಿನ್ನೇನ ಬಣ್ಣಿಪೆನು (ಸಾರಾಂಶ ಸಹಿತ)


ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ ನನ್ನೊಡೆಯಾ || ||
       ಗುರುವೇ ವಿಜ್ಞಾಪನೆ(ನಮಸ್ಕಾರ). ಧ್ಯಾನಮಾಡುವುದಕ್ಕೆ ನನಗೆ ಬೇಸರವಾದಾಗ ನಾನು ನಿನ್ನನ್ನು ಮೊದಲು ಮಾಡಿಕೊಂಡು ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ. ನನ್ನೊಡೆಯನೇ ಅದು ನಿನ್ನಾಜ್ಞೆ.

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯುಬ್ಬಿ ಕೇಳಬೇಕಣ್ಣ   || ||
         ನಾನು ಬರೆಯುವ ಕಥೆಯನ್ನುಆಹಾ ಬಹಳ ಚೆನ್ನಾಗಿದೆಎಂದು ಕನ್ನಡಿಗರು, ’ರಯ್ಯಾ ಮಂಚಿದಿ’(ಬಹಳ ಚೆನ್ನಾಗಿದೆ) ಎಂದು ತೆಲುಗರು, ’ಎಂಚ ಪೊರ್ಲಾಂಡ್’(ಬಹಳ ಚೆನ್ನಾಗಿದೆ) ಎಂದು ತುಳುವರು ಅತ್ಯಾಸಕ್ತಿಯಿಂದ ಕೇಳಬೇಕು. ( ರೀತಿಯಲ್ಲಿ ಕಾವ್ಯ ರಚಿಸುತ್ತೇನೆ)

ಭರತಭೂತಳಕೆ ಸಿಂಗಾರವಾದಯೋಧ್ಯಾ
ಪುರದೊಳು ಮೂಲೋಕ ಪೊಗಳೆ
ಭರತಚಕ್ರೇಶ್ವರ ಸುಖಬಾಳುತಿರ್ದನಾ
ಸಿರಿಯನಿನ್ನೇನ ಬಣ್ಣಿಪೆನು || ||
       ಭರತ ಭೂಮಿಗೆ ಅಲಂಕರಿಸಿದಂತಿರುವ ಅಯೋಧ್ಯೆ ಪಟ್ಟಣದಲ್ಲಿ ಭರತ ಚಕ್ರವರ್ತಿಯು ಮೂರು ಲೋಕಗಳು ಹೊಗಳುವಂತೆ ಸುಖವಾಗಿ ಬಾಳುತ್ತಿದ್ದ ಬಗೆಯನ್ನು ಇನ್ನೇನು ವರ್ಣಿಸಲಿ.

ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ       || ||
       ಪುರುಪರಮೇಶನೆನಿಸಿದ ಆದಿ ತೀರ್ಥಂಕರ ವೃಷಭನಾಥನ ಇಬ್ಬರು ಮಕ್ಕಳಲ್ಲಿ ಹಿರಿಯವನೇ ಭರತ ಚಕ್ರವರ್ತಿ.  ಅವನು ಇಡೀ ಭೂಲೋಕಕ್ಕೆ ಒಬ್ಬನೇ ರಾಜ ಎಂಬಂತಿದ್ದನು. ಅವನು

  ವಿಭುವೊಂದಿನದುದಯದೊಳೆದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೈದಿ ತಾನೋಲಗವಾದೊಂದು
ಶ್ರೀವಿಲಾಸವನೇನನೆಂಬೆ  || ||
        ಭರತ ಚಕ್ರವರ್ತಿಯು ಒಂದು ದಿನ ಸೂರ್ಯೋದಯದ ಸಮಯದಲ್ಲಿ ಎದ್ದು ದೇವರ ಪೂಜೆಯನ್ನು ಮಾಡಿ, ಆಸ್ಥಾನಕ್ಕೆ ಬಂದು ಒಡ್ಡೋಲಗ ನಡೆಸಿದ ಒಂದು ವೈಭವದ ಬಗ್ಗೆ ಏನೆಂದು ಹೇಳಲಿ.

ನವರತ್ನ ಹೇಮನಿರ್ಮಿತವೆನಿಪಾಸ್ಥಾನ
ಭವನದೊಳಾ ರಾಜರತ್ನ
ಛವಿವಡೆದೆಸೆದನು ರತ್ನಪುಷ್ಪಕದೊಳು
ದಿವಿಜೇಂದ್ರನೊಪ್ಪುವಂದದೊಳು    || ||
       ಭರತಚಕ್ರವರ್ತಿಯ ಆಸ್ಥಾನ ಭವನವು ನವರತ್ನ ಹಾಗೂ ಚಿನ್ನದಿಂದ ನಿರ್ಮಿತವಾಗಿತ್ತು. ಸ್ವರ್ಗ ಲೋಕದ ದೇವೇಂದ್ರನು ರತ್ನಪುಷ್ಪಕ ಸಿಂಹಾಸನದಲ್ಲಿ ಶೋಭಿಸುವಂತೆ ಆಸ್ಥಾನದಲ್ಲಿ ಭರತ ಚಕ್ರವರ್ತಿಯು ಕಾಂತಿಯಿಂದ ಕಂಗೊಳಿಸಿದನು.

ತರತರವಿಡಿದು ಢಾಳಿಸುತಿಹ ದೀರ್ಘ ಚಾ
ಮರಗಳ ಸಾಲೊಳೆಸೆದನು
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ
ದಿರನೋ ಭಾಸ್ಕರನೋಯೆಂಬಂತೆ || ||
        ವಿಧವಿಧವಾಗಿ ಪ್ರಕಾಶಿಸುತ್ತಿರುವ ಉದ್ದವಾದ ಚಾಮರಗಳ ಸಾಲಿನಲ್ಲಿ ಭರತ ಚಕ್ರವರ್ತಿಯು ಆಗಸದಲ್ಲಿ ತೇಲುವ ಬಿಳಿ ಮೋಡಗಳ ಹಿಂದೆ ಆಗಾಗ ತೋರಿ ಮರೆಯಾಗುವ ಚಂದ್ರನೋ ಸೂರ್ಯನೋ ಎಂಬಂತೆ ಸಭಿಕರಿಗೆ ಕಾಣುತ್ತಿದ್ದನು.

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ    || ||
          ಆಸ್ಥಾನದಲ್ಲಿ ನೆರೆದಿದ್ದ ಸಭಿಕರೆಲ್ಲರುತಾವರೆಯು ಸೂರ್ಯನನ್ನು ನೋಡುವಂತೆ, ನೀಲಿ ತಾವರೆ(ನೈದಿಲೆ)ಯು ಚಂದ್ರನನ್ನು ನೋಡುವಂತೆ ಭರತ ಚಕ್ರವರ್ತಿಯನ್ನೇ ಕಾತರದಿಂದ ನೋಡುತ್ತಿದ್ದರು.
 
**************************



ರತ್ನಾಕರವರ್ಣಿ ಕೃತ ಭರತೇಶ ವೈಭವ : ಆಸ್ಥಾನ ಸಂಧಿ -

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ | ಕಿರಣ ಸುಜ್ಞಾನ ಪ್ರಕಾಶ |
ಸುರರ ಮಕುಟಮಣಿ ರಂಜಿತ ಚರಣಾಬ್ಜ | ಶರಣಾಗು ಪ್ರಥಮ ಜಿನೇಶ || ||

ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ | ನಿನ್ನನಾದಿಯ ಮಾಡಿಕೊಂಡು |
ಕನ್ನಡದೊಳಗೊಂದು ಕಥೆಯ ಪೇಳುವೆನದು | ನಿನ್ನಾಜ್ಞೆ ಕಂಡ ನನ್ನೊಡೆಯಾ || ||

ಕಬ್ಬಿಗರೋಗುಗಬ್ಬನ ಹಾಡುಗಬ್ಬವ | ಕಬ್ಬದೊಳೊರೆವರಿವೆರಡು |
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ | ಕಬ್ಬೆ ಹೇಳೆಲೆ ಸರಸ್ವತಿಯೆ || ||

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು | ರೆಯ್ಯಾ ಮಂಚಿದಿಯೆನೆ ತೆಲುಗಾ |
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು | ಮೈಯ್ಯುಬ್ಬಿ ಕೇಳಬೇಕಣ್ಣಾ || ||

ರಳ ಕುಳ ಶಿಥಿಲ ಸಮಾಸ ಮುಂತಾದವ | ರೊಳಗಿಲ್ಲಿ ಕೆಲವುಳ್ಳರುಂಟು |
ಕೆಲವಿಲ್ಲಾದರುವಿಲ್ಲವೇಕೆಂದರವರ ಕೋ | ಟಲೆಯೇಕೆ ಹಾಡುಗಬ್ಬದೊಳು || ||
 
ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು | ವಿಕಳವಾದರು ದೋಷವಿಲ್ಲ |
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು | ಸ್ತಕದ ಬದನೆಕಾಯಹುದು || ||

ಚಂದಿರನೊಳಗೆ ಕಪ್ಪುಂಟು ಬೆಳ್ದಿಂಗಳು | ಕಂದಿ ಕುಂದಿಹುದೋ ನಿರ್ಮಲವೊ |
ಸಂಧಿಸಿ ಶಬ್ದದೋಷಗಳೊಮ್ಮೆ ಸುಕಥೆಗೆ | ಬಂದರೆ ಧರ್ಮ ಮಾಸುವುದೇ || ||

ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾ | ರಿಣಿ ಮೆಚ್ಚಿ ಜಿನಯೋಗಿಯಾಗಿ |
ಕ್ಷಣಕೆ ಕರ್ಮವ ಸುಟ್ಟು ಜಿನನಾದ ಭೂಭುಜಾ | ಗ್ರಣಿಯ ವೈಭವವ ಲಾಲಿಸಿರೊ || ||

ಆಗಮವಧ್ಯಾತ್ಮವಳವಟ್ಟು ಶೃಂಗಾರ | ತ್ಯಾಗ ಭೋಗದ ಮೋಡಿ ಮೆರೆಯೆ |
ಭೋಗಿ ಯೋಗಿಗಳೆದೆ ಜುಮ್ಮು ಜುಮ್ಮೆನೆ ನೇಮ | ದಾಗಿ ಸೊಲ್ಲಿಸುವೆನಾಲಿಸಿರೊ || ||

ಪ್ರಚುರದಿ ಪದಿನೆಂಟು ರಚನೆಯ ವಾಕ್ಯಕೆ | ರಚಿಸುವರಾನಂತು ಪೇಳೆ |
ಉಚಿತಕೆ ತಕ್ಕಷ್ಟು ಪೇಳ್ವೆನಧ್ಯಾತ್ಮವೆ | ನಿಚಿತ ಪ್ರಯೋಜನವೆನಗೆ || ೧೦ ||

ಭರತಭೂತಳಕೆ ಸಿಂಗಾರವಾದಯೋಧ್ಯಾ | ಪುರದೊಳು ಮೂಲೋಕ ಪೊಗಳೆ |
ಭರತ ಚಕ್ರೇಶ್ವರ ಸುಖಬಾಳುತಿರ್ದನಾ | ಸಿರಿಯನಿನ್ನೇನ ಬಣ್ಣಿಪೆನು || ೧೧ ||

ಪುರು ಪರಮೇಶನ ಹಿರಿಯ ಕುಮಾರನು | ನರಲೋಕಕೊಬ್ಬನೆ ರಾಯ |
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ | ಭರತ ಚಕ್ರಿಯ ಹೇಳಲಳವೇ || ೧೨ ||

ಹದಿನಾರನೆಯ ಮನು ಪ್ರಥಮಚಕ್ರೇಶ್ವರ | ಸುದತಿ ಜನಕೆ ರಾಜಮದನ |
ಚದುರರ ತಲೆವಣಿ ತದ್ಭವಮೋಕ್ಷ ಸಂ | ಪದನ ಬಣ್ಣಿಸಲೆನ್ನ ಹವಣೆ || ೧೩ ||

ಧರೆಯೊಳೆಲ್ಲವ ಸುಟ್ಟರುಂಟಲ್ಲಿ ಭಸ್ಮ | ರ್ಪುರವ ಸುಟ್ಟರೆ ಭಸ್ಮವುಂಟೆ |
ನರತತಿಗಾಹಾರ ನಿಹಾರವುಂಟೆಮ್ಮ | ಭರತೇಶಗಿಲ್ಲ ನಿಹಾರಾ || ೧೪ ||

ಕೋಮಲಾಂಗನು ಹೇಮವರ್ಣನು ಜಗವೆಲ್ಲ | ಕಾಮಿಸತಕ್ಕ ಚೆನ್ನಿಗನು |
ಆಮೋದವುಕ್ಕುವ ಜವ್ವನಿಗನು ಸರ್ವ | ಭೂಮೀಶರೊಡೆಯನಾ ಚಕ್ರಿ || ೧೫ ||

ವಿಭುವೊಂದಿನದುದಯದೊಳೆದ್ದು | ದೇವತಾರ್ಚನೆಯನು ಮಾಡಿ |
ಚಾವಡಿಗೈದಿ ತಾನೋಲಗವಾದೊಂದು | ಶ್ರೀ ವಿಲಾಸವನೇನನೆಂಬೆ || ೧೬ ||

ನವರತ್ನ ಹೇಮನಿರ್ಮಿತವೆನಿಪಾಸ್ಥಾನ | ಭವನದೊಳಾ ರಾಜರತ್ನ |
ಛವಿವಡೆದೆಸೆದನು ರತ್ನಪುಷ್ಪಕದೊಳು | ದಿವಿಜೇಂದ್ರನೊಪ್ಪುವಂದದೊಳು || ೧೭ ||

ತನುಕಾಂತಿ ತುಂಬಿದ ಸಭೆಯೆಂಬ ಕೊಳದಲ್ಲಿ | ಕನಕಸಿಂಹಾಸನವೆಂಬ |
ಕನಕಾಂಬುಜದ ಮೇಲಾ ರಾಜ ನಿ | ದ್ದನು ರಾಜ ಹಂಸನೆಂಬಂತೆ || ೧೮ ||

ಉದಯಗಿರಿಯ ಮೇಲೆ ಮೆರೆವ ಭಾನುವಿಗೆ | ತ್ತಿದಿರಾದ ಪ್ರತಿಸೂರ್ಯನಂತೆ |
ಪದುಳದುತ್ತುಂಗ ಸಿಂಹಾಸನವೇರಿ ದೇ | ಹದ ಕಾಂತಿ ಮೆರೆಯೆ ಮೆರೆದನು || ೧೯ ||

ಆವ ಬಿಂಕವೊ ಎಡಗಾಲ ಗದ್ದುಗೆಯ ಮೇ | ಲೋವಿ ಮಡಿದು ಮತ್ತೆ ಕೆಳಗೆ |
ಹಾವುಗೆಯೊಳು ಪೆಂಡೆಯದ ಬಲಗಾಲೂರಿ | ಠೀವಿಯೊಳೆಸೆದನಾ ರಾಯ || ೨೦ ||

ಬಲಗೈಯೊಳಾಂತ ಹೊನ್ನೊರೆಯ ಕಠಾರಿಯ | ಕೆಲಕೂರಿ ಮತ್ತೆಡಗೈಯಾ |
ಮಲಗಿನ ಮೇಲೂರಿ ಬೀರಸಿರಿಯನಾಳ್ದ | ಕಲಿಗಳ ದೇವನೊಪ್ಪಿದನು || ೨೧ ||

ನರುಸುಯ್ಯಗಾಳಿಗೆ ತೇಲ್ವ ದುಕೂಲದ | ಸೆರಗು ಸೇರುವೆ ದೊರೆ ಹೊದೆದು |
ತರಪಿನೆದೆಯ ಹೊನ್ನ ಜನ್ನಿವಾರದ ರೇಖೆ | ಮೆರೆಯೆ ರಾಜೇಂದ್ರ ಮೆರೆದನು || ೨೨ ||

ಮಿರುಪ ಕಿರೀಟವುಂಟದನಂದು ಧರಿಸಿತಿ | ಲ್ಲುರೆ ಮನದೊಂದು ಲೀಲೆಯೊಳು |
ತುರುಬು ಚುಂಗೆಸೆಯೆ ಚಿಮ್ಮುರಿಸುತ್ತಿ ಸೊಬಗನೆ | ಕರೆವುತಿದ್ದನು ನೋಡುವರಿಗೆ || ೨೩ ||

ಜೋಕೆವಿಡಿದು ನೀಡುವೆಳೆಯ ಘಳಿಗೆಯ | ರಾಕಿನೊಳಗೆ ಕೈಕೊಳುತ |
ಏಕೆ ನುಡಿಯನೊ ಇನ್ನೊಮ್ಮೆಯೆಂಬಂತೊಂದು | ತೂಕದೊಳೆಸೆದನಾ ರಾಯಾ || ೨೪ ||

ಉಬ್ಬಿ ಬೆಳೆದು ಬಾಗಿತಿಲ್ಲ ರೇಖೆಗೆ ಬಂದು | ಹುಬ್ಬಿನಂತೆಸೆವೆಳೆ ಮೀಸೆ |
ಹುಬ್ಬು ಮೀಸೆಯ ನೋಡಿ ನಲಿವ ಬವರಿಕಣ್ಣ | ಹಬ್ಬವ ಮಾಳ್ಪನೆಲ್ಲರಿಗೆ || ೨೫ ||

ಕುಂಡಲಗಳ ಕಾಂತಿ, ಕಂಗಳ ಪ್ರಭೆ, ಗಂಡ | ಮಂಡಲದೊಳಗಾಡಲವನಾ |
ಮಂಡೆಯೊಲೆದರೆ ಹೆಂಗಳಿಗೆ ಮನ್ಮಥನದೊ | ಖಂಡೆಯವಲುಗಿದಂತಿಹುದು || ೨೬ ||

ಪದಕ ಕಡಗ ಕಂಠಮಾಲೆಯ ನವರತ್ನ | ದುದಿತಾಂಶು ದೇಹಕಾಂತಿಯೊಳು |
ಪುದಿದು ಪೊಳೆಯೆ ಕಣ್ಗೆ ತೋರಿದನಿಂದ್ರ ಚಾ | ಪದೊಳು ಮಾಡಿದ ನೃಪನಂತೆ || ೨೭ ||

ಶಾಲಿಯ ತೆರೆಯ ತಟ್ಟುಚ್ಚಿ ದೀಪದ ಕಾಂತಿ | ಢಾಳಿಸುವಂತೆ ಲೋಕದೊಳು |
ಲಲಿತಾಂಗನ ತನುಕಾಂತೆ ಪೊದೆದ ದು | ಕೂಲದ ಹೊರಗೆ ರಂಜಿಸಿತು || ೨೮ ||

ಬಳಸಿನ ನುಡಿಗಳೇನೋಲಗದೆಳೆವೆಂಗ | ಳೊಲಿದುಟ್ಟ ಬಿಳಿಯ ಶೀರೆಗಳೊ |
ಚೆಲುವನ ತನುಕಾಂತಿ ಸೋಂಕಿದ ರಂಗು ಮಾ | ದಲವಣ್ನವೆನಲೆಸೆದಿಹುದು || ೨೯ ||

ಹೆಂಗಳ ರೂಪು ಗಂಡರಿಗೆ ಗಂಡರ ರೂಪು | ಹೆಂಗಳ ಸೋಲಿಪುದೆಂಬ |
ಪಾಂಗಲ್ಲವವನ ಚೆಲ್ವಿಕೆ ಗಂಡು ಪೆಣ್ಗಳ | ಕಂಗಳ ಸೆರೆವಿಡಿದಿಹುದು || ೩೦ ||

ತರತರವಿಡಿದು ಢಾಳಿಸುತಿಹ ದೀರ್ಘ ಚಾ | ಮರಗಳ ಸಾಲೊಳೆಸೆದನು |
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ | ದಿರನೋ ಭಾಸ್ಕರನೋಯೆಂಬಂತೆ || ೩೧ ||

ಬಲದೊಳು ಭೂಭುಜರೆಡದಲ್ಲಿ ಗಣಿಕೆಯ | ರೊಲುಮೆಯ ಕವಿಗಳು ಮುಂದೆ |
ನಿಲೆ ಹಿಂದೆ ಹಿತವರು ಬಳಸಿದೆಕ್ಕಡಿಗರ | ಬಲು ಬಜಾವಣೆಯೊಳೊಪ್ಪಿದನು || ೩೨ ||

ವಾರನಾರಿಯರು ತಾವಾರನಾರಿಯರೊ ಶೃಂ | ಗಾರಕೆ ಸೋತು ಭೂವರನಾ |
ಹಾರುತ್ತಿದ್ದರು ಸುರಪಶುವ ಗೋದಾನಕ್ಕೆ | ಹಾರುವ ಹಾರುವನಂತೆ || ೩೩ ||

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ | ಲಾಂಬುಜ ನೋಳ್ಪಂತೆ ಶಶಿಯಾ |
ತುಂಬಿದ ಸಭೆಯೆಲ್ಲ ನೃಪನ ನೋಡುತ ಮಿಕ್ಕ | ಹಂಬಲ ಮೆರೆದುದಲ್ಲಲ್ಲಿ || ೩೪ ||

ರೋಮಾಂಚನಸಿದ್ಧ ಜುಂಜುಂಮಾಲಪ, ಗಾ | ನಾಮೋದ ಚುಂಚುಮಾಲಾದ್ಯ |
ಶ್ರೀಮಂತ್ರಗಾಂಧಾರ ರಾಗವರ್ತಕರೆಂಬ | ರಾ ಮಹೀಪತಿಯ ಗಾಯಕರು || ೩೫ ||

ಬಳ್ಳಬಾಯ್ದೆರೆಯದೆ ಭ್ರಾಂತುಗೊಂಡಂತೆ ಮೈ | ಯೆಲ್ಲ ತೂಗಾಡದೊಂದಿನಿಸು |
ಅಲ್ಲಾಟವುಂಟೋಜೆವಿಡಿದು ಬಾಯ್ದೆರೆಯುಂಟು | ಸಲ್ಲಲಿತದೊಳು ಹಾಡಿದರು || ೩೬ ||

ಜೋಡು ಜೋಡಾಗಿ ತಾವರೆಯಿದಿರೊಳು ಸ್ವರ | ಮಾಡುವ ತುಂಬಿಗಳಂತೆ |
ನೋಡುತ ಭರತರಾಜನ ಮುಖಪದ್ಮವ | ಮಾಡಿದರಾಳಾಪಗಳನು || ೩೭ ||

 ಭರತರಾಜನ ಮುಖಚಂದ್ರನ ಕಂಡ ಜಾ | ಣರಿಗೆ ಮಹಾಳಾಪವುಕ್ಕಿ |
ಬರುತಿದ್ದುವಿಂದುವ ಕಂಡ ಸಮುದ್ರದ | ಭರತದಂತೇನ ಬಣ್ಣಿಪೆನು || ೩೮ ||

ವೀಣೆಯ ದನಿಯಾವುದದರೊಳು ಪಾಡುವ | ಗಾನದ ಧ್ವನಿಯಾವುದೆಂದು |
ಕಾಣಿಸಿಕೊಳ್ಳದೆ ಜಿನಸಿದ್ಧ ಮಹಿಮೆಯ | ಕಾಣಿಸಿ ಪಾಡಿದರೊಲ್ದು || ೩೯ ||

ರನ್ನ ಮೂರರ ಗುಣವನು ಮುಖವೀಣೆಯ | ಸನ್ನಾಹದಿಂದ ಹಾಡಿದರು |
ಚೆನ್ನಾಯ್ತು ಸೊಬಗಾಯ್ತು ಸೊಗಸಾಯ್ತು ಲೇಸು ಲೇ | ಸಿನ್ನೊಮ್ಮೆಯೆಂದು ಕೇಳ್ವಂತೆ || ೪೦ ||

ದನಿ ಲೇಸು ಮೇಳದ ಜೋಕೆ ಲೇಸಾಳಾಪ | ವನುಭವ ಲೇಸು ಮತ್ತಲ್ಲಿ |
ಜಿನನಾಮ ಕೂಡಿತು ಲೇಸು ಲೇಸೆಂದು ರಾ | ಯನ ಮುಂದೆ ನುಡಿದರಿಚ್ಛೆಗರು || ೪೧ ||

ತುಂಬಿಯ ಗಾನವಂತಿರಲಿ ಕೋಕಿಲನಾದ | ವೆಂಬರ ಮಾತದಂತಿರಲಿ |
ತುಂಬುರ ನಾರದರಿನ್ನೇಕೆ ಹೋಪುರೆ | ಯೆಂಬಂತೆ ಸೊಗಸಿ ಹಾಡಿದರು || ೪೨ ||

ಸಮವಸರಣದೊಳು ವಿಮಲಕಿರಣದೊಳ | ಗಮಲ ಮುನಿಗಳ ವೃಂದದೊಳು |
ಕಮಲಕರ್ಣಿಕೆಗೆ ಸೋಂಕದೆ ನಿಂದ ದೇವನ | ಗಮಕವನೊಲ್ದು ಪಾಡಿದರು || ೪೩ ||

ಜಿನನ ಪೊಗಳಿ ಕೂಡೆ ಸಿದ್ಧರ ಕೀರ್ತಿಸಿ | ಮುನಿಗಳ ವಂದಿಸಿ ಮತ್ತೆ |
ತನುವಿನೊಳಿದ್ದಾತ್ಮ ತತ್ವ ವಿಚಾರವ | ಜನಪತಿ ಮೆಚ್ಚೆ ಹಾಡಿದರು || ೪೪ ||

ನರುಗಬ್ಬಿನೊಳಗಣ ರಸವ ಕಾಣದೆ ಪಶು | ಹೊರಗಣೆಲೆಯ ಸವಿವಂತೆ |
ಅರಿದೊಳಗಾತ್ಮಸುಖವನುಣಲರಿಯದೆ | ಹೊರಗೆಳಸುವರಂಗಸುಖಕೆ || ೪೫ ||

ತಿಳಿವೆ ಶರೀರ ತಿಳಿವೆ ರೂಪು ಬೆಳಗೆ ಮೈ | ಬೆಳಗೆ ತಾನಾಗಿರುತಿಹುದು |
ತಿಳಿವು ಬೆಳಗುಗಳೆ ಹಂಸನ ಕುರುಹೆಂದು | ತಿಳಿದು ನೋಳ್ಪವನೀಗ ಧನ್ಯ || ೪೬ ||

ನಾಲಗೆ ಕುಡುಹು ಶರೀರವೆ ವಾದ್ಯ ನಿ | ರಾಳಾತ್ಮನೇ ವಾದ್ಯಕಾರ |
ತಾಳಿನುಡಿಸುತಿರ್ದು ಬಿಟ್ಟು ಹೋದರೆ ದೇಹ | ಡೋಳಿನಂದದೊಳು ಬಿದ್ದಿಹುದು || ೪೭ ||

ವಾದ್ಯಗಳಾರಾರು ಪಿಡಿದು ಬಾಜಿಸಿದರೆ | ವೇದ್ಯವೆನಿಸಿ ದನಿಯಹವು |
ಚೋದ್ಯವೀ ತನುವಾದ್ಯ ತಾಳ್ದೋರ್ವಗಲ್ಲದೆ | ಭೇದ್ಯವಾಗದು ಧ್ವನಿಗೊಡದು || ೪೮ ||

ಲೋಹವ ಹೊಕ್ಕಗ್ನಿ ಹೊಯ್ಲಿಗಿಡುವುದಾ | ಲೋಹವನಗಲೆ ಹೊಯ್ಲುಂಟೆ |
ದೇಹವ ಹೊಕ್ಕಿದ್ದರಾತ್ಮಗೆ ಬಾಧೆಯು | ದೇಹವಳಿಯೆ ಬಾಧೆಯುಂಟೆ || ೪೯ ||

ಹೊತ್ತ ದೇಹವ ಬರುಮರಣದೊಳ್ಬಿಟ್ಟರೆ | ಮತ್ತೊಂದು ದೇಹ ಮುಂದಹುದು |
ಹೊತ್ತದೇಹವ ಬಿಟ್ಟು ಮತ್ತೊಂದು ದೇಹವ | ಪತ್ತದೆ ನಿಲ್ವುದು ಮುಕ್ತಿ || ೫೦ ||

ಹಿಡಿದ ದೇಹವ ಬಿಟ್ಟು ಮತ್ತೊಂದು ದೇಹವ | ಪಿಡಿಯದೆ ನಿಲ್ವುದೆಂತೆನಲು |
ಬಿಡದೆ ಸುಜ್ಞಾನಾಗ್ನಿಯಿಂದ ಕರ್ಮದ ಬೇರ | ಸುಡುವುದೊಂದೆಂದು ಪಾಡಿದರು || ೫೧ ||

ಹುಟ್ಟತಾಗಳೆ ನಸುನಗೆ ಮೊಗದೊಳು ಮನ | ದಟ್ಟತಾ ನುಡಿಯದೆ ಚಕ್ರಿ |
ಇಟ್ಟ ನವರ ಮೇಲೆ ತನ್ನ ಕೋಮಲಹಸ್ತ | ಮುಟ್ಟ ದೇವಾಂಗ ವಸ್ತ್ರವನು || ೫೨ ||

ಗಾನ ನಿಂದುದು ಗಾಯಕರ ಮೆಚ್ಚುಮಿಗೆ ಬಂದು | ದಾನಂದ ಸಂದುದು ಸಭೆಗೆ |
ಭೂನಾಥನಾಸ್ಥಾನದೊಳಗಿದ್ದನಿಲ್ಲಿಗಾ | ಸ್ಥಾನದ ಸಂಧಿ ಸುಗಂಧಿ || ೫೩ ||

*****************