ನನ್ನ ಪುಟಗಳು

09 ಡಿಸೆಂಬರ್ 2017

8ನೇ ತರಗತಿ ಜೀವನ ದರ್ಶನ:- ದಾಸರ ಪರಿಚಯ ಮತ್ತು ಪದ್ಯದ ಸಾರಾಂಶ


*ಜೀವನ ದರ್ಶನ*

ಜೀವನ ದರ್ಶನ ಪದ್ಯಭಾಗದಲ್ಲಿ ಶ್ರೀಪಾದರಾಜರು, ಗೋಪಾಲದಾಸರು ಮತ್ತು ವಿಜಯದಾಸರ ಕೀರ್ತನೆಗಳಿವೆ.
ಶ್ರೀಪಾದರಾಜರ ಪರಿಚಯ
 ಪ್ರಕೃತ "ಭಕ್ತಿಬೇಕು ವಿರಕ್ತಿಬೇಕು....." ಎಂಬ ಕೀರ್ತನೆಯನ್ನು ಡಾ.ಜಿ.ವರದರಾಜರಾವ್ ಅವರು ಸಂಪಾದಿಸಿರುವ ’ಶ್ರೀಪಾದರಾಜರ ಕೃತಿಗಳು’ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಶ್ರೀಪಾದರಾಜರು (ಚಿತ್ರ ಕೃಪೆ: ಕನ್ನಡ ಒನ್ ಇಂಡಿಯಾ)

ಕಾಲ: ೧೪೦೪ ರಿಂದ ೧೫೦೨
ಶ್ರೀಪಾದರಾಜರ ಜನ್ಮ ಸ್ಥಳ : ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು.
ಮೂಲ ಹೆಸರು : ಲಕ್ಷ್ಮೀನಾರಾಯಣ.
ತಂದೆಯ :  ಶೇಷಗಿರಿಯಪ್ಪ. ತಾಯಿ : ಗಿರಿಯಮ್ಮ.

ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ.
ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
*******
ಗೋಪಾಲದಾಸರು
https://guroraghavendra.files.wordpress.com/2011/06/gopaladasaru-e1310738234872.jpg
ಇವರ ಕಾಲ ಕ್ರಿ.ಶ. ೧೭೨೧. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ  ಮೊಸರುಕಲ್ಲಿನಲ್ಲಿ ಜನಿಸಿದರು.
ತಂದೆ ಮುರಾರಿ, ತಾಯಿ ವೆಂಕಮ್ಮ, ಗುರುಗಳು ವಿಜಯದಾಸರು.
ಇವರದು ಸಾಮಾನ್ಯವಾದ ರೈತ ಕುಟುಂಬ.
ಇವರ ಮೊದಲ ಹೆಸರು ಬಾಗಣ್ಣ. 
ತುಂಬಾ ಬಡತನದಲ್ಲಿದ್ದ ಇವರು ಜೋತಿಷ್ಯವನ್ನು ಹೇಳುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು.
ಇವರ ಅಂಕಿತನಾಮ  'ಗೋಪಾಲವಿಠಲ'. ಇವರ ೯೬ ಕೀರ್ತನೆಗಳು, ೭೦ ಸುಳಾದಿಗಳು, ೨೧ ಉಗಾಭೋಗಗಳು ಉಪಲಬ್ದವಾಗಿವೆ.ಮತ್ತಷ್ಟು ಪರಿಚಯ:
            ಹರಿದಾಸ ಸಾಹಿತ್ಯ ಶ್ರೀ ಪಾದರಾಜರಿಂದ ಮೊದಲಾಗಿ ವ್ಯಾಸರಾಯರು ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲಕಾಲ ಅಜ್ಞಾತವಾಸವನನುಭವಿಸಿತು. ಮುಂದೆ ನೂರಾರು ವರ್ಷಗಳ ನಂತರ ಶ್ರೀ ರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃ ದಾಸಕೂಟವೂ ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸ ಸಾಹಿತ್ಯದ ಮರುಹುಟ್ಟು, ಬೆಳವಣಿಗೆಗೆ ಕಾರಣರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ರಚನೆಗಳು ವಿಜಯದಾಸರಿಂದ ಪ್ರಾರಂಭವಾಯಿತು ಎನ್ನಲಾಗಿದೆ.
           ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ. ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು . ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು. ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತಪದವೊಂದನ್ನು ರಚಿಸುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ. ಗೋಪಾಲದಾಸರಿಗೆ ಸಂಬಂಧಪಟ್ಟ ವಿಜಯದಾಸರು ರಚಿಸಿದ ಅಂಕಿತ ಪದ ಹೀಗಿದೆ
.
ಗೋಪಾಲವಿಠಲ ನಿನ್ನ ಪೂಜೆಮಾಡುವೆನು
ಕಾಪಾಡೊ ಈ ಮಾತನು ||ಪ||


ಅಪಾರ ಜನುಮದಲಿಡಿವನಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿಡು ||ಅ.ಪ||


ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮಜನುಮದಲಿದ್ದ
ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿ ದಾರಿಗೆ ವೆಂಕಟಕೃಷ್ಣನು ನೀನೆ
ವಿಜಯವಿಠಲ ಎಂದು
ಅಂಕುರವ ಪಲ್ಲೈಸಿ ಫಲಪ್ರಾಪ್ತಿಯಾಗಲೋ||


ಅಂಕಿತ ಪಡೆದಬಳಿಕ ಗೋಪಾಲದಾಸರು ‘ಗೋಪಾಲವಿಠಲ’ ಅಂಕಿತದಿಂದ ಕೃತಿರಚನೆ ತೊಡಗಿದರು. ನಂತರ ಇವರು ತಾವೇ ತಮ್ಮ ತಮ್ಮಂದಿರಿಗೆ ವರದಗೋಪಾಲವಿಠಲ (ಸೀನಪ್ಪದಾಸರು), ಗುರುಗೋಪಾಲವಿಠಲ (ದಾಸಪ್ಪದಾಸರು), ತಂದೆಗೋಪಾಲವಿಠಲ (ರಂಗಪ್ಪದಾಸರು) – ಎಂಬ ಅಂಕಿತನಾಮಗಳನ್ನು ಕೊಟ್ಟರು.

ಒಮ್ಮೆ ಉತ್ತರಾಧಿಮಠದ ಮಠಾಧಿಪತಿಗಳಾದ ಶ್ರೀ ಸತ್ಯಬೋಧರು ಈ ಅಣ್ಣ ತಮ್ಮಂದಿರನ್ನು ಪರೀಕ್ಷಿಸಲು ಮೂವರು ಸೋದರರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಮೂವರೂ ಕೂಡಿ ಒಂದೇ ಪದವನ್ನು ರಚಿಸುವಂತೆ ಆಜ್ಞಾಪಿಸಿದರು. ಆಗ ‘ಮಾರ ಮದಘನ ಸಮೀರ‘ ಎಂಬ ಕೃತಿಯ ಪಲ್ಲವಿ, ಅನುಪಲ್ಲವಿ ಹಾಗೂ ಮೂರನೆಯ ಚರಣವನ್ನು ಗೋಪಾಲದಾಸರು, ಒಂದು ಮತ್ತು ಎರಡನೆಯೆ ಚರಣಗಳನ್ನು ಸೀನಪ್ಪದಾಸರು ಹಾಗೂ ದಾಸಪ್ಪದಾಸರೂ ರಚಿಸಿದರು. ಈ ಸೋದರರ ಅಪರೋಕ್ಷ ಜ್ಞಾನವನ್ನು ಕಂಡ ಮಠಾಧಿಪತಿಗಳು, “ನೀವು ಮೂವರೂ ನಮ್ಮ ಮಠಕ್ಕೆ ಕಾಮದೇನು, ಕಲ್ಪವೃಕ್ಷ, ಚಿಂತಾಮಣಿಗಳಂತೆ ಇರುವಿರಿ” ಎಂದು ಕೊಂಡಾಡಿದರು.

ಅನಂತರ ಉಡುಪಿಯ ಕೃಷ್ಣನ ದರ್ಶನಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮಂಡಗದ್ದೆಯ ಭೀಮ ಎಂಬ ದರೋಡೆಕೋರನನ್ನು ಸನ್ಮಾರ್ಗಕ್ಕೆ ತಂದು ಉದ್ಧರಿಸಿದರೆಂಬ ಖ್ಯಾತಿ ಅವರಿಗೆ ಇದೆ. ಉತ್ತನೂರಿನಲ್ಲಿ ಶ್ರೀನಿವಾಸಾಚಾರ್ಯರೆಂಬುವರ (ಭಾವಿ ಜಗನ್ನಾಥ ದಾಸರು) ಬಳಿ ಬಂದರು. ಅವರು ಹೊಟ್ಟೆನೋವಿನಿಂದ ನರಳುತ್ತಿದ್ದುದನ್ನು ನೋಡಿ ಅವರಿಗೆ ಎರಡು ಜೋಳದ ರೊಟ್ಟಿಗಳನ್ನು ಪ್ರಸಾದವೆಂದು ಕೊಟ್ಟರು. ಅದನ್ನು ತಿಂದ ಶ್ರೀನಿವಾಸಾಚಾರ್ಯರಿಗೆ ಹೊಟ್ಟೆನೋವು ತಕ್ಷಣ ಮಾಯವಾಯಿತಂತೆ.

ಪ್ರತಿವರ್ಷದಂತೆ ಗೋಪಾಲದಾಸರು ತಿರುಪತಿಯ ಬ್ರಹ್ಮೋತ್ಸವಕ್ಕೆ ಹೊರಟಾಗ ಶ್ರೀನಿವಾಸಾಚಾರ್ಯರೂ ಅವರ ಜೊತೆಯಲ್ಲಿ ಹೊರಟರು. ಕಾಲುನಡಿಗೆಯಲ್ಲೇ ಬೆಟ್ಟ ಹತ್ತಿದ ಪರಿಣಾಮವಾಗಿ ಶ್ರೀನಿವಾಸಾಚಾರ್ಯರು ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಗೋಪಾಲದಾಸರು ಗುರುಗಳಾದ ವಿಜಯದಾಸರನ್ನು ನೆನೆದು ಅವರ ಆದೇಶದ ಮೇರೆಗೆ ಧನ್ವಂತ್ರಿಯ ಸ್ತೋತ್ರ ಮಾಡಿ ತಮ್ಮ ಆಯಸ್ಸಿನಲ್ಲಿ ನಲವತ್ತು ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ದಾನ ಮಾಡಿದರೆಂದು ಪ್ರತೀತಿ. ಈ ಪ್ರಸಂಗವನ್ನು ರಂಗಪ್ಪ ದಾಸರು ಹೀಗೆ ವರ್ಣಿಸಿದ್ದಾರೆ,

“ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯದಾಸರ ದಂಡ ನಮನವ ಮಾಡಿ
ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ಹರುಷದಿಂದುತ್ತುನೂರು ಸೇರಲುಪರಿ
ಹರಾಗುವದೆಂದನು ಬರಲು ಭಕ್ರಯವೊಳಗೆ ನಾಲ್ವತ್ತೋರುಷ ಆಯುವನಿತ್ತನು.”


ಜಗನ್ನಾಥದಾಸರು ತಮ್ಮ ರೋಗ ವಾಸಿಯಾದದ್ದು, ಅಪಮೃತ್ಯು ಪರಿಹಾರವಾದದ್ದು ಗೋಪಾಲದಾಸರ ಅನುಗ್ರಹದಿಂದಲೇ ಎಂಬ ಅಚಲ ವಿಶ್ವಾಸವನ್ನು ತಮ್ಮ ಕೀರ್ತನೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನು ನಿಶ್ಚಯ ||ಪ||
ಘೋರವ್ಯಾಧಿಗಳ ನೋಡಿ
ಭೂರಿಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದದಿ
ನಾರಭ್ಯ ತವಪಾದ ಸೇರಿದೆ ಸಲಹೆಂದು ||೧||
ಅಪಮೃತ್ಯುವನು ಪರಿದೆ ಎನ್ನೊಳಗಿದ್ದ
ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದ ||೨||


ಕೇವಲ ನಲವತ್ತು ವರುಷಗಳ ಜೀವಿಸಿದ ಗೋಪಾಲದಾಸರು ತಮ್ಮ ಅಲ್ಪ ಜೀವಿತಾವಧಿಯಲ್ಲೇ ಅನೇಕ ರಚನೆಗಳನ್ನು ರಚಿಸಿದರು. ಅವರು ದೈವಾದೀನರಾದಾಗ ಅವರ ತಮ್ಮ ವರದಗೋಪಾಲವಿಠಲರು ತಮ್ಮ ಅಣ್ಣನ ಬಗ್ಗೆ “ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿ ಪುಣ್ಯಲೋಕವ ಸೇರಿದೆಯಾ” ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಹಾಗೂ “ಲೇಸಾಗಿ ಭಜಿಸುವೆ ಗೋಪಾಲದಾಸರ” ಎನ್ನುವ ತಮ್ಮ ಇನ್ನೊಂದು ಕೃತಿಯಲ್ಲಿ ಗೋಪಾಲದಾಸರ ಜನನ, ವಿಜಯದಾಸರಲ್ಲಿ ಅವರ ಶಿಷ್ಯತ್ವ, ತೀರ್ಥಯಾತ್ರೆಯ ವೈಭವ, ಪದಗಳ ರಚನೆ ಮುಂತಾದವುಗಳನ್ನು ವಿವರಿಸಿದ್ದಾರೆ.

[ಆಧಾರ:- ಡಾ. ಟಿ.ಎನ್. ನಾಗರತ್ನ ಅವರು ಸಂಪಾದಿಸಿರುವ ಶ್ರೀ ಗೋಪಾಲದಾಸರ ಕೃತಿಗಳು ]
*******

ವಿಜಯ ದಾಸರ ಪರಿಚಯ
 
ಇವರ ಕಾಲ ಕ್ರಿ.ಶ. ಸುಮಾರು (೧೬೮೨ - ೧೭೫೫)
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೇಕನಪರಿವಿಯಲ್ಲಿ ಜನಿಸಿದರು.
ಮೊದಲಿನ ಹೆಸರು ದಾಸಪ್ಪ.
ತಂದೆ ಶ್ರೀನಿವಾಸ ತಾಯಿ ಕೂಸಮ್ಮ ದಂಪತಿಗಳ ಮಗನೇ ವಿಜಯದಾಸರು.
ತುಂಬಾ ಬಡತನವನ್ನು ಅನುಭವಿಸುತ್ತಿದ್ದ ಕುಟುಂಬ ಇವರದು.
ಕಾಶಿಯಲ್ಲಿ ನಾಲ್ಕುವರ್ಷಗಳು ಸಂಸ್ಕೃತ ಅಧ್ಯಯನ ಮಾಡುತ್ತಾರೆ.
ಪುರಂದರದಾಸರು ಇವರಿಗೆ ದೀಕ್ಷೆಯಿತ್ತ ಗುರುಗಳು.
ಇವರ ಅಂಕಿತನಾಮ ವಿಜಯವಿಠಲ.

ಮತ್ತಷ್ಟು ಮಾಹಿತಿ:-
         ವಿಜಯದಾಸರು ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು 'ಕೂಸಿ ಮಗ ದಾಸ' ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು. ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಾಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,

ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| |ಅಂತರಂಗದ|
ಸ್ವಮೂರ್ತಿಗಳ ಮಧ್ಯೆ ಸಚ್ಚಿದಾನಂದೈಕ ರವಿಧರೆಯರಿಂದಲಾಗಿಂಗಿತ್ವತಿ
ಕಮಲಾ ಜಾಜಿಗಳಿಂದ ಸ್ತುತಿಸಿಕೊಳ್ಳುತ ಹೃದಯ
ಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||

ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು , ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯ ವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲ ತಮ್ಮ ರಚನೆಗಳಲ್ಲಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.

ಕೃಷ್ಣಾ... ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು|| ||ಕೃಷ್ಣ||
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ|
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ|| ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
 
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ
ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿಯೆಲ್ಲ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಳ್ಳಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಜರುಗಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು. ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.

ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ಧಕ್ಷ ಕಮಲಾಕ್ಷ ರಾಕ್ಷಸಕುಲಚಿತ್ತ
ಲಕ್ಷ್ಮಣಾಗ್ರಜ ಲಕ್ಷ್ಮಿ ವಾಸ್ನಾ
ಪಕ್ಷಿ ವಾಹನಾ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವಪರ ಅಕ್ಷಯವಂತ
ಶುಕ್ಲಾಂಬರಧರ ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೆರ ತಕ್ಷಣದಲಿ ತಂದ
ಅಕ್ಕರ ಪುರುಷ ಗೋವಿಂದ||ಬಾಬಾ||
ಬಂಗಾರ ರಥದೊಳು ಶೃಂಗಾರ ಪಾದ ಶ್ರೀ
ಮಂಗಳಾಂಗ ಕಾಳಿಂಗ ರಂಗ ನರಸಿಂಗ
ಅಂಗಾ ಸಜ್ಜನಕ ಸಾರಂಗ ರಥಾಂಗಪಾಣಿ
ಸಂಗನಿಸಂಗಮ ತಂದ ವಿಹಂಗ
ಪ್ರಬಂಧ ನಾಯಕ ಪರಿಪಾಲ,
ಸಂಗೀತ ಲೋಲ, ಗೋಪಾಂಗನೆಯರ
ಅಂತರಂಗ ಸಂತಾಪವಿದೂರ||ಬಾಬಾ||
ಭಕ್ತಾವತಾರದ ದೊರೆಯೇ ಹರಿಯೇ
ಧನ ಸಿರಿಯೇ ನಾನು ಮತ್ತೊಬ್ಬರನು ಹೀಗೆ ಕಾಣೆ
ನೃತ್ತರ ಸಂಗಡ ಓಡಾಡುವ ದೊರೆಯೇ
ಬೆನ್ನ ಹತ್ತಿ ಆಡುವ ಮರಿಯೇ
ಚಿತ್ತದೊಲ್ಲಭನಮ್ಮ ವಿಜಯ ವಿಠಲರೇ
ಯತ್ನ ನೋಡಲು ನಿನಗೆ ಸರಿಯೇ
ಅತ್ತಿತ್ತ ಹೋಗದೇ ಇತ್ತ ಬಾರಯ್ಯಾ
ಬೆನ್ಹತ್ತಿ ವೆಂಕಟ ದೊರೆಯೇ||ಬಾಬಾ||

 
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.
ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹಾ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.

ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.

ಪದ್ಯಭಾಗದ ಸಾರಾಂಶ
ಶ್ರೀಪಾದರಾಜರ ಕೀರ್ತನೆ
ಈ ಕೀರ್ತನೆಯಲ್ಲಿ ಶ್ರೀಪಾದರಾಜರು ಮುಕ್ತಿಯನ್ನು ಬಯಸುವವರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂದು ತಿಳಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ, ಭಗವಂತನ ಆರಾಧನೆ, ದ್ವೆ ತತತ್ತ್ವ ಪ್ರತಿಪಾದನೆ ಮತ್ತು ಲೋಕನೀತಿ, ನೀತಿಬೋಧನೆಗಳು ಅಡಕವಾಗಿವೆ.

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ
ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ       // ಪ //
ಮುಕ್ತಿಯನ್ನು ಬಯಸುವವನಿಗೆ ಭಕ್ತಿ, ವಿರಕ್ತಿ ಮತ್ತು ಭೌತಿಕ, ಬೌದ್ಧಿಕ, ಆಧ್ಯಾತ್ಮಿಕ ಮುಂತಾದ ಸರ್ವಶಕ್ತಿಗಳೂ ಬೇಕು.
ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕು
ಮತಿವಂತನಾಗಬೇಕು ಮತ ಒಂದಾಗಬೇಕು   // ೧ //
ಅರ್ಥಮಾಡಿಕೊಂಡು ನಡೆಯುವ, ಒಮ್ಮತದ ಅಭಿಪ್ರಾಯವಿರುವ ಅನುಕೂಲವಾದ ಹೆಂಡತಿ, ಬುದ್ಧಿವಂತನೂ
ಗುಣವಂತನೂ ಆದ ಮಗ ಇರಬೇಕು. ||||
ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸ ವ್ರತ ಬೇಕು ಉಪಶಾಂತವಿರಬೇಕು            // ೨ //
ನಿಷ್ಠೆಯಿಂದ ಕೂಡಿದ ಜಪ-ತಪ-ನೇಮಗಳನ್ನು ಮಾಡಬೇಕು. ಉಪವಾಸ ವ್ರತ ಮಾಡುವ ಮತ್ತು ನೆಮ್ಮದಿ-ಸಮಾಧಾನಗಳನ್ನು ಹೊಂದಿರಬೇಕು.

ಸುಸಂಗ ಹಿಡಿಯಲೆಬೇಕು ದುಸ್ಸಂಗ ಬಿಡಬೇಕು
ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು         // ೩ //  
ಸಜ್ಜನರ ಸಂಗ ಮಾಡಬೇಕು. ದುರ್ಜನರ ಸಂಗವನ್ನು ಬಿಡಬೇಕು. ದೇವರನ್ನು ಭಕ್ತಿ-ನಂಬಿಕೆಗಳಿಂದ ನೆನೆಯಬೇಕು.
      
ಗೋಪಾಲದಾಸರ ಕೀರ್ತನೆ
ಗೋಪಾಲದಾಸರು ಈ ಕೀರ್ತನೆಯಲ್ಲಿ- ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು        ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಆದುದರಿಂದ ಆ ಭಗವಂತನ್ನು ಹೃದಯಕಮಲದಲ್ಲ್ಲಿಟ್ಟು ಆರಾಧಿಸಬೇಕು. ನಂಬಿಕೆಟ್ಟವರಿಲ್ಲ. ನಂಬಿಕೆ, ಪ್ರೀತಿ, ದೃಢಸಂಕಲ್ಪಗಳು ಸದಾ ಅಚಲವಾಗಿರಬೇಕು ಎಂದು ಹೇಳಿದ್ದಾರೆ.

ಈತನೀಗ ನಮ್ಮ ದೇವನು                                                        ಪ.
ಪ್ರೀತಿಯಿಂದಲಿ ಸ್ಮರಿಸುವವರ | ಪಾತಕಗಳ ಪರಿಹರಿಪ                        ಅ.ಪ
ನಮ್ಮ ಈ ದೇವರು ಯಾರು ಪ್ರಿತಿಯಿಂದ ತನ್ನನ್ನು ಸ್ಮರಿಸುವರೋ ಅವರ ಪಾಪಗಳನ್ನು ಪರಿಹರಿಸಿ ಕಾಪಾಡುತ್ತಾನೆ.

ಅಕ್ರೂರನ ಪ್ರೀತನೀತ | ಶಂಖಚಕ್ರ ಧರಿಸಿದಾತ
ನಕ್ರಬಾಧೆಯ ತರಿದು ತನ್ನ | ಭಕ್ತರನ್ನು ಕಾಯಿದಾತ     // ೧ //
ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬನಾದ ಅಕ್ರೂರ ಕೃಷ್ಣನ ಪ್ರೀತಿಯ ಗೆಳೆಯ. ಶಂಖ-ಚಕ್ರಗಳನ್ನು ಧರಿಸಿದವನು. ಮೊಸಳೆಯನ್ನು ಕೊಂದು ಅದರಿಂದ ಭಾದಿತರಾದ ತನ್ನ ಭಕ್ತರನ್ನು ಕಾಪಾಡಿದನು.

ಅಜಮಿಳನ ಸಲಹಿದಾತ | ವ್ರಜದಗೋವು ಕಾಯಿದಾತ
ಭಜಿಸುವವರ ಬಿಡನು ಪ್ರೀತ | ತ್ರಿಜಗದೊಳಗೆ ಮೆರವದಾತ      // ೨ //
ಅಜಮಿಳ ಎಂಬ ಪಾಪಿ ಕೊನೆಗಾಲದಲ್ಲಿ ನಾರಾಯಣ ಎಂದು ಕೂಗಿದಾಗ ಅವನ ಪಾಪಗಳನ್ನೆಲ್ಲ ಪರಿಹರಿಸಿದನು. ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳನ್ನೂ ಯದುಕುಲವನ್ನೂ ಸಂರಕ್ಷಿಸಿದನು. ಮೂರು ಲೋಕಗಳಲ್ಲೂ ಮೆರೆಯುತ್ತಾ ತನ್ನನ್ನು ಜಪಿಸುವ(ಭಜಿಸುವ) ಭಕ್ತರನ್ನು ಬಿಡದೆ ಕಾಪಾಡುವವನು.

ಸಕಲ ಗುಣ ಪೂರ್ಣನೀತ | ಸಕಲ ದೋಷ ದೂರನೀತ
ಸಕಲಾನಂದ ಪೂರ್ಣನೀತ | ಭಕುತಿ ಮಂತ್ರಕೊಲಿವದಾತ       // ೩ //
ಸಕಲ ಗುಣಗಳಿಂದ ಪರಿಪೂರ್ಣನೂ ಸಕಲ ದೋಷಗಳಿಂದ ದೂರ ಇರುವವನೂ ಸಕಲ ಆನಂದವನ್ನು ಹೊಂದಿರುವವನೂ ಭಕ್ತರ ಮಂತ್ರಕ್ಕೆ (ಸ್ತುತಿಗೆ) ಒಲಿಯುವವನೂ ಆಗಿದ್ದಾನೆ.

ಅನಾಥ ಬಾಂಧವನೀತ | ಅನಾದಿ ಕಾಲದವನಾತ
ಅನಾದಿ ಮೊರೆಯ ಕೇಳಿ | ಆ ನಿಮಿಷದೊಳು ಒದಗಿದಾತ          // ೪ //
ದಿಕ್ಕಿಲ್ಲದ ಅನಾಥರ ಬಂಧುವಾಗಿದ್ದಾನೆ. ಹುಟ್ಟು-ಸಾವುಗಳಿಲ್ಲದ, ಆದಿ-ಅಂತ್ಯಗಳಿಲ್ಲದವನು. ಕಷ್ಟದಲ್ಲಿದ್ದ ಭಕ್ತರ ಮೊರೆಯನ್ನು ಕೇಳಿದ ಕೂಡಲೆ ಬಂದು ಕಾಪಾಡಿದವನು.

ಕಮಲಮುಖಿಯ ರಮಣನೀತ | ಕಮಲಾಸನಜನಕನೀತ
ಕಮಲಾಕ್ಷ ಗೋಪಾಲವಿಠಲ ಹೃತ್ | ಕಮಲದೊಳು ನಿಲುವದಾತ. // ೫ //
ಇವನು ಕಮಲದಂತೆ ಸುಂದರವಾದ ಮುಖ ಹೊಂದಿರುವ ಲಕ್ಷ್ಮೀಯ ಒಡೆಯನಾದವನು. ಕಮಲಾಸನನಾದ ಬ್ರಹ್ಮನ ತಂದೆಯಾಗಿದ್ದಾನೆ. ಕಮಲದಂತ ಕಣ್ಣುಗಳನ್ನು ಹೊಂದಿರುವ ಈತ ಭಕ್ತರ ಹೃದಯ ಕಮಲದಲ್ಲಿ ನೆಲೆಸುತ್ತಾನೆ.

ವಿಜಯದಾಸರ ಕೀರ್ತನೆ
ಮುಕ್ತಿಗಳಿಸುವಲ್ಲಿ ಮಾನವನ ಜನ್ಮದ ಸಾರ್ಥಕತೆ ಇದೆ. ಈ ಭೂಲೋಕದ ಜನ್ಮಾಂತರಗಳಿಂದ ಮುಕ್ತನಾಗಲು ಸದಾ ಹರಿ ನಾಮಸ್ಮರಣೆ ಮಾಡಬೇಕು. ಅಚಲವಾದ ದೃಢ ಭಕ್ತಿಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ. ಭಕ್ತಿ-ಭಕ್ತ ಒಂದಾದಾಗ ಮಾತ್ರ ಮುಕ್ತಿ ಸಾಧ್ಯವೆಂಬುದನ್ನು ವಿಜಯದಾಸರು ಈ ಕೀರ್ತನೆಯ ಮೂಲಕ ದೇವರಲ್ಲಿ ನಿವೇದಿಸಿಕೊಂಡಿದ್ದಾರೆ.

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ         ಪ.
ನಾದಮೂರ್ತಿ ಮೋದದಿಂದ ನಿನ್ನ ಪಾದ ಭಜಿಸುವೆ       ಅ.ಪ
ಶ್ರೀಹರಿಯೇ, ನಾದ ಮೂರ್ತಿಯೇ, ನೀನು ಸದಾ ನನ್ನ ಹೃದಯದಲ್ಲಿ ವಾಸಮಾಡು. ನಿನ್ನ ಪಾದವನ್ನು ಬಹಳ (ಮೋದದಿಂದ) ಆನಂದದಿಂದ ಭಜಿಸುತ್ತಾ ಪೂಜಿಸುತ್ತೇನೆ.

ಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ | ಧ್ಯಾನದಿಂದ ಭಜಿಸುವೆ        // ೧ //
ಶ್ರೀಹರಿಯೇ, ನನ್ನ ಜ್ಞಾನ ಎಂಬ ನವರತ್ನ ಮಂಟಪದ ಮಧ್ಯದಲ್ಲಿ ನಾದಲೋಲನಾದ ನಿನ್ನನ್ನು ಕುಳ್ಳಿರಿಸಿ, ಧ್ಯಾನ-ಭಕ್ತಿಗಳಿಂದ ಭಜಿಸುತ್ತಾ ಪೂಜಿಸುತ್ತೇನೆ.

ಭಕ್ತಿರಸವೆಂಬ ಮುತ್ತು ಮಾ | ಣಿಕ್ಯದ ಹರಿವಾಣದಿ
ಮುಕ್ತನಾಗಬೇಕುಯೆಂದು ಮುತ್ತಿನಾರತಿ ಎತ್ತುವೆ          // ೨ //
ಶ್ರೀಹರಿಯೇ, ಭಕ್ತಿರಸ ಎಂಬ ಮುತ್ತು, ಮಾಣಿಕ್ಯಗಳು ತುಂಬಿದ ಹರಿವಾಣದಲ್ಲಿ(ತಟ್ಟೆಯಲ್ಲಿ) ಮುಕ್ತಿಪಡೆದು ಮುಕ್ತನಾಗಬೇಕೆಂದು ಮುತ್ತಿನ ಆರತಿಯನ್ನು ನಿನಗೆ ಎತ್ತುತ್ತೇನೆ.

ನಿನ್ನ ನಾಮ ಬಿಡುವನಲ್ಲ | ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯವಿಠಲ ಕೇಳೊ ನಿನ್ನ ಭಕ್ತರ ಸೊಲ್ಲ            // ೩ //
ಶ್ರೀಹರಿಯೇ, ನಾನು ನಿನ್ನ ನಾಮವನ್ನು ಬಿಡುವವನಲ್ಲ. ಆದ್ದರಿಂದ ನನ್ನನ್ನು ನೀನು ಬಿಡುವುದು ಸರಿಯಲ್ಲ. ಘನ ಮಹಿಮಾನ್ವಿತನಾದ ವಿಜಯ ವಿಠಲನೇ ಈ ನಿನ್ನ ಭಕ್ತರ ಮೊರೆಯನ್ನು ಕೇಳು.


******* 
9ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ-7-ಊರುಭಂಗ