ನನ್ನ ಪುಟಗಳು

12 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಪ್ರಶ್ನೋತ್ತರ (Notes) ವೀಕ್ಷಣೆ & ಡೌನ್‌ಲೋಡ್

ಲಂಡನ್ ನಗರ- ಪ್ರಶ್ನೋತ್ತರ (Notes)   >>Download






********




10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ವ್ಯಾಕರಣ: ಕಾಲ

ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ. 

ಒಮ್ಮೊಮ್ಮೆ = ಒಮ್ಮೆ + ಒಮ್ಮೆ - ಲೋಪಸಂಧಿ

ಜಾಗವನ್ನು = ಜಾಗ + ಅನ್ನು - ಆಗಮಸಂಧಿ

ಅತ್ಯಾದರ = ಅತಿ + ಆದರ - ಯಣ್‌ಸಂಧಿ

ವಾಚನಾಲಯ = ವಾಚನ + ಆಲಯ - ಸವರ್ಣದೀರ್ಘಸಂಧಿ

ಸಂಗ್ರಹಾಲಯ = ಸಂಗ್ರಹ + ಆಲಯ - ಸವರ್ಣದೀರ್ಘಸಂಧಿ 

ಓಣಿಯಲ್ಲಿ = ಓಣಿ + ಅಲ್ಲಿ - ಆಗಮಸಂಧಿ


ಕಾಲ

ಕನ್ನಡದಲ್ಲಿ ಪ್ರಮುಖವಾಗಿ ಮೂರು ಕಾಲಗಳಿವೆ.

೧) ಭೂತಕಾಲ 

೨) ವರ್ತಮಾನಕಾಲ : ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.


೧) ಭೂತಕಾಲ : ಇದು ನಡೆದು ಹೋದ ಕ್ರಿಯೆಯನ್ನು ಸೂಚಿಸುತ್ತದೆ.

    ಉದಾ: "ಮರದಿಂದ ಎಲೆಗಳು ಉದುರಿದವು." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿರುವುದನ್ನು ಕಾಣಬಹುದು.

    ಧಾತುಗಳಿಗೆ "ದ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಭೂತಕಾಲವಾಗುತ್ತದೆ. 

[ಕೆಲವೊಮ್ಮೆ ಪ್ರಥಮ ಪುರುಷ-ನಪುಂಸಕ ಲಿಂಗದಲ್ಲಿ ಕಾಲಸೂಚಕ ಪ್ರತ್ಯಯ ಲೋಪವಾಗಿರುತ್ತದೆ. ಅದನ್ನು ಅರ್ಥದ ಮೂಲಕ ಗ್ರಹಿಸಿ ಅದು ಯಾವಕಾಲವೆಂಬುದನ್ನು ತಿಳಿಯಬೇಕು. ಉದಾ: ಕೋತಿ ಮರವನ್ನು ಏರಿತು. ಇಲ್ಲಿ ಏರಿತು ಎಂಬ ಪದದಲ್ಲಿ "ದ" ಪ್ರತ್ಯಯ ಇಲ್ಲದಿದ್ದರೂ ಅದು ಭೂತಕಾಲವಾಗುತ್ತದೆ]

೨) ವರ್ತಮಾನಕಾಲ : ಇದು ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

    ಉದಾ: "ಮರದಿಂದ ಎಲೆಗಳು ಉದುರುತ್ತವೆ ಅಥವಾ ಉದುರುತ್ತಿವೆ." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿಲ್ಲದಿರುವುದನ್ನು ಕಾಣಬಹುದು.

    ಧಾತುಗಳಿಗೆ "ಉತ್ತ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ವರ್ತಮಾನಕಾಲವಾಗುತ್ತದೆ. 

೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.

ಉದಾ: "ಮರದಿಂದ ಎಲೆಗಳು ಉದುವವು." ಈ ವಾಕ್ಯದಲ್ಲಿ ಕ್ರಿಯೆ ಮುಂದೆಂದೋ ನಡೆಯುತ್ತದೆ ಎಂಬ ಅರ್ಥವನ್ನು ಕಾಣಬಹುದು.

    ಧಾತುಗಳಿಗೆ "ವ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ  ಭವಿಷ್ಯತ್‌ಕಾಲವಾಗುತ್ತದೆ. 

ಧಾತುಗಳಿಗೆ ಕಾಲಸೂಚಕದ ಜೊತೆಗೆ ಆಖ್ಯಾತ ಪ್ರತ್ಯಯಗಳು ಸೇರಿದಾಗ ಪುರುಷವಾಚಕಗಳಿಗೆ ಅನುಗುಣವಾಗಿ ಬೇರೆಬೇರೆ ರೂಪಗಳನ್ನು ಹೊಂದುತ್ತವೆ. 


ಕ್ರಿಯಾಪದ, ಧಾತು, ಆಖ್ಯಾತ ಪ್ರತ್ಯಯ, ಕ್ರಿಯಾರೂಪಗಳು ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ

>>>ಇಲ್ಲಿ ಕ್ಲಿಕ್ ಮಾಡಿ<<<


****************************







10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಭಾಷಾ ಚಟುವಟಿಕೆ

1. ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ. 
    ೧. ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬಂದೆವು. (ಭವಿಷ್ಯತ್‌ಕಾಲಕ್ಕೆ ಪರಿವರ್ತಿಸಿ) 
    ಉತ್ತರ: ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬರುವೆವು.
   
 ೨. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು. (ವರ್ತಮಾನಕಾಲಕ್ಕೆ ಪರಿವರ್ತಿಸಿ) 
    ಉತ್ತರ: ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ.
    
೩. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ. (ಭೂತಕಾಲಕ್ಕೆ ಪರಿವರ್ತಿಸಿ)
    ಉತ್ತರ: ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.
 
2. ಈ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. 
    ೧. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / ಕೈ ಕೆಸರಾದರೆ ಬಾಯಿ ಮೊಸರು / ದುಡಿಮೆಯೇ ದುಡ್ಡಿನ ತಾಯಿ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

* ಹನ್ನೆರಡನೆಯ ಶತಮಾನದಲ್ಲೇ ಶಿವಶರಣರು ’ಕಾಯಕವೇ ಕೈಲಾಸ’, ಎಂದು ದುಡಿಮೆಯ ಮಹತ್ವವನ್ನು ಸಾರಿದರು. ಕಾಯಕ ಎಂದರೆ ’ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯವಾಗಿದೆ.

’ದುಡಿಮೆಯೇ ದುಡ್ಡಿನ ತಾಯಿ’, ’ಕಾಯಕವೇ ಕೈಲಾಸ’, ’ಆಳಾಗಬಲ್ಲವನು ಆಳುವನು ಅರಸಾಗಿ’ ಮುಂತಾದವು ಇದೇ ಅರ್ಥ ಕೊಡುವ ಗಾದೆ ಮಾತುಗಳಾಗಿವೆ.

    ೨. ಕಟ್ಟುವುದು ಕಠಿಣ; ಕೆಡಹುವುದು ಸುಲಭ / ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ. 

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು. 

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

(ಹೆಚ್ಚಿನ ಗಾದೆ ವಿಸ್ತರಣೆಗಳನ್ನು ಓದಲು "ಇಲ್ಲಿ ಕ್ಲಿಕ್‌ಮಾಡಿ")

 
3. ಈ ವಿಷಯಗಳಿಗೆ ಪ್ರಬಂಧ ಬರೆಯಿರಿ.
೧. ಸ್ವಚ್ಛಭಾರತ ಅಭಿಯಾನ
೨. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
೩. ರಾಷ್ಟ್ರೀಯ ಭಾವೈಕ್ಯ
(ಶೀಘ್ರದಲ್ಲೇ ಪ್ರಕಟಿಸಲಾಗುವುದು)

*************
***********








ಜನಪ್ರಿಯ ಗಾದೆಗಳ ವಿಸ್ತರಣೆ

ಗಾದೆಗಳ ವಿಸ್ತರಣೆ

೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.

* ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ. ’ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ. ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ’ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.

೨. ಹಾಸಿಗೆ ಇದ್ದಷ್ಟು ಕಾಲು ಚಾಚು / ಅತಿ ಆಸೆ ಗತಿ ಕೆಡಿಸಿತು

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.

* ’ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ್ದಾನೆ. ಜೀವನದಲ್ಲಿ ಆಸೆಯೇ ಇರಬಾರದೆಂದಲ್ಲ ಆದರೆ ಅದು ಅತಿಯಾಗದೆ ಮಿತವಾಗಿರಬೇಕು. ಅರಮನೆಯ ಸುಖಕ್ಕಿಂತ ನಮ್ಮಲ್ಲಿ ಲಭ್ಯವಿರುವಷ್ಟರಲ್ಲಿ ಬದುಕುವುದರಲ್ಲಿ ನೆಮ್ಮದಿ ಇದೆ. ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲುಚಾಚಬೇಕು. ಉಚಿತವಾಗಿ ಸಿಗುತ್ತದೆಂದು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಲು ಪ್ರಯತ್ನಿಸಬಾರದು. ಹಾಗೆ ಮಾಡಿದರೆ ’ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಹಾಕಿದ ಮೂರ್ಖನ ಕಥೆಯಂತೆ’ ಅತಿಯಾಸೆಯಿಂದಾಗಿ ಇದ್ದದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ. 

೩. ಮಾತೇ ಮುತ್ತು ; ಮಾತೇ ಮೃತ್ಯು / ಮಾತು ಆಡಿದರೆ ಹೋಯಿತು ; ಮುತ್ತು ಒಡೆದರೆ ಹೋಯಿತು

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಮಾತು ಹೇಗಿರಬೇಕು ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

* ಮಾನವನು ಮಾತನಾಡುವ ಮತ್ತು ಆಲೋಚನಾ ಶಕ್ತಿಯಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅಂತಹ ಅಮೂಲ್ಯವಾದ ಮಾತನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಹಾಗಲ್ಲದೆ ನಾಲಿಗೆ ಹರಿದ ಕಡೆಗೆಲ್ಲಾ ಬಿಟ್ಟರೆ ’ಬಾಯಿ ಬಿಟ್ಟರೆ ಬಣ್ಣಗೇಡು’ ಎಂಬಂತಾಗುತ್ತದೆ. ಆಡಿದ ಮಾತು, ಒಡೆದ ಮುತ್ತು ಎಂದೂ ಹಿಂದಿರುಗಿ ಬರುವುದಿಲ್ಲ. ನಾವಾಡುವ ಮಾತು ಇತರರ ಮನಸ್ಸನ್ನು ಹಾಳುಮಾಡುವುದಲ್ಲದೆ ಒಮ್ಮೊಮ್ಮೆ ಕುಟುಂಬ-ಊರು-ದೇಶಗಳ ನಡುವಿನ ಹೋರಾಟಕ್ಕೆ ಕಾರಣವಾಗುತ್ತದೆ.

* ಬಸವಣ್ಣನವರು ಹೇಳಿರುವಂತೆ ’ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಶಲಾಕೆಯಂತೆ’ ಇರಬೇಕು. ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತ-ಮೃದುವಾಗಿರಬೇಕು. ಇಲ್ಲದಿದ್ದರೆ ಅದು ಅನಾಹುತಕ್ಕೂ ಕಾರಣವಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ.

೪. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / ಕೈ ಕೆಸರಾದರೆ ಬಾಯಿ ಮೊಸರು / ದುಡಿಮೆಯೇ ದುಡ್ಡಿನ ತಾಯಿ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

* ಹನ್ನೆರಡನೆಯ ಶತಮಾನದಲ್ಲೇ ಶಿವಶರಣರು ’ಕಾಯಕವೇ ಕೈಲಾಸ’, ಎಂದು ದುಡಿಮೆಯ ಮಹತ್ವವನ್ನು ಸಾರಿದರು. ಕಾಯಕ ಎಂದರೆ ’ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯವಾಗಿದೆ.

’ದುಡಿಮೆಯೇ ದುಡ್ಡಿನ ತಾಯಿ’, ’ಕಾಯಕವೇ ಕೈಲಾಸ’, ’ಆಳಾಗಬಲ್ಲವನು ಆಳುವನು ಅರಸಾಗಿ’ ಮುಂತಾದವು ಇದೇ ಅರ್ಥ ಕೊಡುವ ಗಾದೆ ಮಾತುಗಳಾಗಿವೆ.

೫. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಮಕ್ಕಳ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ತಿಳಿಸುತ್ತದೆ.

* ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಭವಿಷ್ಯದಲ್ಲಿ ಸದೃಢ ಸಮಾಜ ನಿರ್ಮಿಸುವ ವ್ಯಕ್ತಿಗಳನ್ನು ನಿರ್ಮಿಸುವುದು ತಂದೆ-ತಾಯಿ-ಹಿರಿಯರು-ನೆರೆಹೊರೆ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಆದ್ದರಿಂದ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಆದರ್ಶ ಗುಣಗಳನ್ನು, ಸೇವಾ ಮನೋಭಾವವನ್ನು, ದೇಶಪ್ರೇಮವನ್ನು ಬೆಳೆಸಬೇಕು. ಹಾಗೆ ಎಳೆ ವಯಸ್ಸಿನಿಂದಲೇ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡದಿದ್ದಲ್ಲಿ ಆ ಮಕ್ಕಳು ಸಮಾಜಕ್ಕೆ ಕಂಟಕಪ್ರಾಯರಾಗುತ್ತಾರೆ. ಬೆಳೆದು ದೊಡ್ಡವರಾದ ಮೇಲೆ ಅಂತಹವರನ್ನು ತಿದ್ದುವುದು ಕಷ್ಟವಾಗುತ್ತದೆ. ಚಿಕ್ಕವರಾಗಿದ್ದಾಗಲೇ ಕೆಲವು ಮಕ್ಕಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಗಿಡವಾಗಿರುವಾಗ ಬಗ್ಗಿಸಲು ಸಾಧ್ಯವಾಗದೆ ದೊಡ್ಡಮರವಾದ ಮೇಲೆ ಬಗ್ಗಿಸಿ ನೇರಮಾಡಲು ಸಾಧ್ಯವಿಲ್ಲವೋ ಹಾಗೇ ಅವರನ್ನು ತಿದ್ದವುದು ಕಷ್ಟ.

ಎಳೆವೆಯಲ್ಲಿಯೇ ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಪ್ರಯತ್ನಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂಬುದು ಈ ಗಾದೆಯ ಆಶಯವಾಗಿದೆ.

೬. ಮಾಡಿದ್ದುಣ್ಣೋ ಮಹಾರಾಯ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಾವು ಮಾಡಿದ ಕೆಲಸದ ಪ್ರತಿಫಲ ಒಳಿತಾಗಲಿ ಕೆಡುಕಾಗಲಿ ನಾವೇ ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ.

* ವ್ಯಕ್ತಿ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರರು ಎಂಬುದನ್ನು ಹೇಳುತ್ತದೆ. ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಕೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ನಾವು ಯಾವುದೇ ಕೆಲಸ ಮಾಡಬೇಕಾದರೂ ಅದರಿಂದಾಗುವ ಪರಿಣಾಮವೇನೆಂದು ಯೋಚನೆ ಮಾಡಬೇಕು. ಕೃತ್ಯ ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು. ಬೆಳೆಯ ಕಾಳನ್ನು ಬಿತ್ತಿದರೆ ಬೆಳೆ ಬೆಳೆಯುವುದಲ್ಲದೆ ಕಳೆ ಬೀಜ ಬಿತ್ತಿದರೆ ಬೆಳೆ ಬೆಳೆಯುವುದೇ?

* ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಾರ್ಥವನ್ನು ಮರೆತು ಸಮಾಜಮುಖಿಯಾಗಿ; ಎಲ್ಲರಿಗೂ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು. ಅದನ್ನು ಬಿಟ್ಟು ತನ್ನ ಸ್ವಾರ್ಥಕ್ಕಾಗಿ ಕೆಟ್ಟ ಮಾರ್ಗವನ್ನು ಅನುಸರಿಸಿದರೆ ಅದರ ಪರಿಣಾಮವೂ ಕೆಟ್ಟದ್ದೇ ಆಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ.

೭. ಉಪ್ಪಿಗಿಂತ ರುಚಿಯಿಲ್ಲ: ತಾಯಿಗಿಂತ ಬಂಧುವಿಲ್ಲ:

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ತಾಯಿಯ ಮಹತ್ವವನ್ನು ತಿಳಿಸುತ್ತದೆ.

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲಾ ಪಾಕ ವೈವಿದ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯು ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ, ಅದೇ ರೀತಿ ತಾಯಿ ಬಿಟ್ಟರೆ ಅವಳು ನೀಡುವ ಪ್ರೀತಿ-ವಾತ್ಸಲ್ಯವನ್ನು ಯಾರೂ ನೀಡಲಾರರು. ತಾಯಿ ನಮ್ಮನ್ನು ತಿದ್ದಿ ತೀಡಿ, ನಮ್ಮ ದುಃಖವನ್ನು ತನ್ನ ದುಃಖವೆಂದು ಭಾವಿಸಿ, ನಮ್ಮ ಸುಖದಲ್ಲಿ ತನ್ನ ಸುಖವನನ್ನು ಕಾಣುವಳು. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ,  ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ. ಆದ್ದರಿಂದಲೇ ಜನಪದರು ಯಾರೇ ಆದರು ಹೆತ್ತ ತಾಯಂತೆ ಆದಾರೊ ಸಾವಿರ ಸೌದೆ ಒಲೆಯಲ್ಲಿ ಉರಿದಾರೂ ದೀವಿಗೆಯಂತ ಬೆಳಕುಂಟೆ ಎಂದು ತಾಯಿ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ. 

’ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು’ ಎಂಬ ಮಾತು ಅಕ್ಷರಶಃ ಸತ್ಯ. ಹಾಗೆಯೇ ಹೆತ್ತತಾಯಿ ಕಣ್ಣಿಗೆ ಕಾಣುವ ದೇವರು. ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂಥಹ ಕಷ್ಟ ಬಂದರೂ ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ "ತಾಯಿಗಿಂತ ಬಂಧುವಿಲ್ಲ". ಎಂಬ ಮಾತು ಅಕ್ಷರಶಃ ಆರ್ಥವತ್ತಾಗಿದೆ.

೮. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

* ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಇದು ಒಂದು ಜನಪ್ರಿಯ ಗಾದೆಮಾತಾಗಿದೆ.

*ಸತ್ಯ ಸದಾ ಜೀವಂತವಾದುದು; ಸುಳ್ಳು ಕ್ಷಣಿಕ ಹಾಗೂ ಅದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. 

ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ‘ಸತ್ಯಮೇವ ಜಯತೇ’ ಎಂಬ ಬರೆಹವನ್ನು ಕಾಣಬಹುದು. ಸತ್ಯ ಮತ್ತು ಸತ್ಯವಂತರಿಗೆ ಎಂದಿದ್ದರೂ ಜಯವಿದ್ದೇ ಇದೆ ಎಂಬುದು ಎಲ್ಲಾ ಧರ್ಮಗಳಿಂದ ತಿಳಿದು ಬಂದಿದೆ. ಪುರಾಣ ಪುರುಷನಾದ ಸತ್ಯ ಹರಿಶ್ಚಂದ್ರನು ತನ್ನ ಇಡೀ ಜೀವನವೆಲ್ಲ ಸತ್ಯಕ್ಕಾಗಿ ಹೋರಾಡಿ ಶಾಶ್ವತವಾದ ಕೀರ್ತಿಯನ್ನು ಪಡೆದನು. ಅಂತೆಯೆ ಗಾಂಧೀಜಿ, ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯಮಾರ್ಗದಲ್ಲಿ ಜೀವನವನ್ನು ನಡೆಸಿದರು ಜಗತ್ತಿಗೆ ಮಾದರಿಯಾದರು. 

’ಸತ್ಯಂ ಶಿವಂ ಸುಂದರಂ’ ಎಂಬ ಮಾತು ಸತ್ಯದ ಮಹತ್ವವನ್ನು ತಿಳಿಸುತ್ತದೆ. ’ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು) ಎಂಬ ಮಾತಂತು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ವೇದವಾಕ್ಯವಾಗಿದೆ.

ಆದರೆ ಸುಳ್ಳಿನ ಒಡನಾಟ ಕೆಸರೊಳಗೆ ಮುಳ್ಳು ತುಳಿದಂತೆ. ಸುಳ್ಳು ಹೇಳುವುದು ಅದನ್ನು ಸಮರ್ಥಿಸಲು ಮತ್ತೊಂದು ಸುಳ್ಳು ಹೀಗೆ ಸುನ ಸರಮಾಲೆಯೇ ಸೃಷ್ಟಿಯಾಗುತ್ತದೆ. ಆ ಸುಳ್ಳು ಬಯಲಾದಾಗ ಮನುಷ್ಯ ತನ್ನ ಗೌರವ, ನಂಬಿಕೆ, ವಿಶ್ವಾಸ ಕಳೆದು ಕೊಳ್ಳುವುದರ ಜೊತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಹಾಳುಮಾಡಿಕೊಳಬೇಕಾಗುತ್ತದೆ. ಸುಳ್ಳು ಒಂದು ಬಲೆ ಇದ್ದಹಾಗೆ ಅದರಲಿ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ. ಆದ್ದರಿಂದ ಸುಳ್ಳಿನ ದಾಸರಾಗಿ ಜೀವನವನ್ನು ಹಾಳುಮಾಡಿಕೊಳ್ಳುವ ಬದಲು ಸತ್ಯವೆಂಬ ಬೆಳಕಿನ ಹಾದಿಯಲ್ಲಿ ನಡೆದು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಎಂದಿಗೂ ಯಾರೂ ಮರೆಯಬಾರದು.

೯. ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

* ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಇದು ಒಂದು ಜನಪ್ರಿಯ ಗಾದೆಮಾತಾಗಿದೆ.

* ’ನಮಗೆ ಉಪಕಾರ ಮಾಡಿದವರಿಗೆ ಹಾಗೂ ಆಶ್ರಯ ನೀಡಿ ಸಲಹಿದವರಿಗೆ ಮೋಸಮಾಡಬಾರದು’ ಎನ್ನುವುದು ಈ ಗಾದೆಯ ಅರ್ಥವಾಗಿದೆ.

* ಮಾನವ ಸಂಘ ಜೀವಿ. ಆತನ ಒಬ್ಬಂಟಿಯಾಗಿ ಜೀವಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರಗತಿಯ ಮಾರ್ಗದಲ್ಲಿ ಯಾವುದೇ ರೂಪದಲ್ಲಿ ಒಮ್ಮೆಯಾದರೂ ಇತರರ ಸಹಾಯ ಪಡೆಯಲೇಬೇಕು. ಹಾಗೆಯೇ ದಾಸವರೇಣ್ಯರು, ಕವಿಪುಂಗವರು ’ಪರಹಿತಾರ್ಥದಿಂದ ಮಾತ್ರ ಮಾನವನ ಜೀವನ ಸಾರ್ಥಕತೆ ಹೊಂದಲು ಸಾಧ್ಯ’ ಎಂದಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಜನ ನಿಸ್ವಾರ್ಥದಿಂದ ಪರೋಪಕಾರವನ್ನು ಮಾಡುತ್ತಾರೆ. ಇಂತಹವರಿಂದ ಉಪಕಾರವನ್ನು ಪಡೆದವರು ಉಪಕಾರಮಾಡಿದವರನ್ನು ಸ್ಮರಿಸುವುದು ಧರ್ಮ.

ಕೆಲವರು ಉಪಕಾರ ಮಾಡಿಸಿಕೊಂಡು ನಂತರ ಉಪಕಾರ ಮಾಡಿದವರನ್ನು ಸ್ಮರಿಸದೆ ’ಅವರಿಂದ ನನಗೇನು?’ ಎಂದು ತಾತ್ಸಾರ ಹಾಗೂ ಅಹಂಕಾರದಿಂದ ನುಡಿಯುವುದುಂಟು. ಅಲ್ಲದೆ ಉಪಕಾರ ಮಾಡಿದವರಿಗೇ ಮೋಸಮಾಡುವವರನ್ನು ಸಮಾಜದಲ್ಲಿ ಕಾಣಬಹುದು. ಅಂತಹವರನ್ನು ’ಕೃತಘ್ನರು’ ಎಂದು ಕರೆಯಲಾಗುತ್ತದೆ. ’ಉಪ್ಪಿನ ಋಣ ಮುಪ್ಪಿನ ತನಕ’ ಎಂಬ ಗಾದೆ ಮಾತಿನಂತೆ ಉಪ್ಪುಂಡ ಮನಗೆ ಮೋಸಮಾಡಬಾರದು. ’ಮೇಲೇರಲು ಸಹಾಯ ಮಾಡಿದ ಏಣಿಯನ್ನು ಮೇಲೇರಿದ ನಂತರ ಒದೆಯುವುದು ಸರಿಯೇ’ ಮೇಲೇರಿದವರು ಕೆಳಗಿಳಿಯಲೇ ಬೇಕಲ್ಲವೇ? 

ಆದ್ದರಿಂದ ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡದಿದ್ದರೂ ಅವರ ಸಹಾಯವನ್ನು ಸ್ಮರಿಸುವುದು ಮಾನವೀಯ ಧರ್ಮ. ಅವರಿಗೆ ಅಪಕಾರ ಮಾಡುವುದು ಮಹಾ ಪಾಪಕಾರ್ಯವೆಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಮಹಾಭಾರತದ ಮಹಾನುಭಾವ ಕರ್ಣನು ದುರ್ಯೋಧನನ ಮೇಲಿಟ್ಟಿದ್ದ ಸ್ವಾಮಿಭಕ್ತಿ, ಉಪಕಾರ ಸ್ಮರಣೆಯನ್ನು ಸ್ಮರಿಸಬಹುದು.

೧೦. ಅರಮನೆಗಿಂತ ನೆರಮನೆ ಲೇಸು.

* ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಇದು ಒಂದು ಜನಪ್ರಿಯ ಗಾದೆಮಾತಾಗಿದೆ.

* ’ಅತಿಯಾಸೆ ಪಡದೆ, ಇದ್ದುದರಲ್ಲಿ ಸಂತೋಷ ಪಡಬೇಕು. ಅಂತಸ್ತು ಐಶ್ವರ್ಯಗಳಿಗೆ ಮರುಳಾಗಿ ಅವಮಾನಕ್ಕೀಡಾಗಬಾರದು.’ ಎನ್ನುವುದು ಈ ಗಾದೆಯ ಆಶಯವಾಗಿದೆ.

* ಇಲ್ಲಿ ಅರಮನೆ ಎಂದಿರುವುದು ಹಣ ಅಂತಸ್ತು, ಅಧಿಕಾರ ಎಂದು ಮೆರೆದಾಡುವ ಶ್ರೀಮಂತ ಜನರ ಮನೆ ಎಂದರ್ಥ. ಇಂತಹ ಶ್ರೀಮಂತರ ಮನೆಯವರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ಬಡವರನ್ನು ಇವರು ತಮ್ಮ ನೆರಮನೆಯವರಾಗಿ ನೋಡಲು ಇಷ್ಟಪಡುವುದಿಲ್ಲ. ಬಡವರಿಗೆ ಕಷ್ಟ, ಚಿಂತೆ, ನೋವುಗಳ ಅನುಭವವಿರುವುದರಿಂದ ಕಷ್ಟದಲ್ಲಿರುವ ನೆರೆಮನೆಯವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಸರ್ವಜ್ಞ ಕವಿ “ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು" ಎಂದಿದ್ದಾನೆ. ಶ್ರೀಮಂತರು ಹಂಗಿಸಿ ಬಡವರನ್ನು ತಮ್ಮ ದಾಸ್ಯದಲ್ಲಿರಿಸಿಕೊಳ್ಳತ್ತಾರೆ. ಅವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಆದರೆ ನೆರೆಮನೆಯು ಸ್ನೇಹ ಸೌಹಾರ್ದದ ಸಂಕೇತವಾಗಿದೆ. ಸಿರಿವಂತರಲ್ಲಿ ನೋಟ-ಬಡವರಲ್ಲಿ ಊಟ ಎನ್ನುವ ಮಾತು ಇದೇ ಅರ್ಥವನ್ನು ನೀಡುತ್ತದೆ.

೧೧. ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣಸಂಕಟ.

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಾವು ಮಾಡುವ ಹಾಸ್ಯ ಬೇರೊಬ್ಬರಿಗೆ ನೋವನ್ನುಂಟುಮಾಡಬಾರದು ಎಂಬುದನ್ನು ತಿಳಿಸುತ್ತದೆ.

* ಅಲ್ಲದೆ ಬಲಶಾಲಿಗಳು ಹಾಗೂ ಶ್ರೀಮಂತರ ಹುಡುಗಾಟ ದುರ್ಬಲರಿಗೆ, ಕೆಳವರ್ಗದವರಿಗೆ ಹಾಗೂ ಬಡವರಿಗೆ ಸಂಕಟವನ್ನು ಉಂಟುಮಾಡುತ್ತದೆ ಎಂಬ ಅರ್ಥವನ್ನು ಈ ಗಾದೆಯಲ್ಲಿ ಕಾಣಬಹುದಾಗಿದೆ. ಇಲ್ಲಿ ಬೆಕ್ಕು ಹಾಗೂ ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರೂ, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ. ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ. 

ಕೆಲವರು ಬೇರೆಯವರ ಮನಸ್ಸಿಗೆ ನೋವುಂಟಾಗುವಂತೆ ಮಾಡಿ ಅದನ್ನು ನೋಡುವ ಇತರರಿಗೆ ನಗೆ ತರಿಸಲು ಪ್ರಯತ್ನಿಸುತ್ತಾರೆ. ಹಾಸ್ಯಕ್ಕೆ ಒಳಗಾದವರ ಮನಸ್ಸಿಗೆ ಆಗುವ ಕಿರಿಕಿರಿ ಅವರಿಗೆ ಅರ್ಥವಾಗುವುದಿಲ್ಲ. ಕೆಲವೊಮ್ಮೆ ನಗೆ ಹೋಗಿ ಹೊಗೆಯಾಗುವುದೂ ಉಂಟು. ಅದೇರೀತಿ ಮತ್ತೆ ಕೆಲವರು ಇತರರು ಕಷ್ಟಪಡುವುದನ್ನು ನೋಡಿ ಸಂತೋಷಪಡುತ್ತಾರೆ. ತಮಗೆ ಆಗದವರಿಗೆ ಏನಾದರೂ ಆಪತ್ತು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಂತೋಷಪಡುತ್ತಾರೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ.

ನಮ್ಮಲ್ಲಿ ಹಾಸ್ಯ ಪ್ರಜ್ಞೆ ಇರಬೇಕು ಆದರೆ ಅದು ಸದಭಿರುಚಿಯ ನವಿರಾದ ಹಾಸ್ಯವಾಗಿರಬೇಕು. ’ತನ್ನಂತೆ ಪರರೆಂದು ಬಗೆದರೆ ಕೈಲಾಸ ಬಿನ್ನಾಣವಕ್ಕು’ ಎಂದು ಸರ್ವಜ್ಞ ಹೇಳಿರುವ ಮಾತಿನಂತೆ ಇತರರ ನೋವುಗಳನ್ನು ಅರ್ಥ ಮಾಡಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ.

೧೨. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಮಗೆ ಜನ್ಮ ನೀಡಿದ ತಾಯಿ ಮತ್ತು ನಮ್ಮ ಜನ್ಮ ಭೂಮಿ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ.

‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಒಂದು ಮಾತು. ಇದರ ಅರ್ಥವೇ ’ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು’ ಎಂಬುದಾಗಿದೆ. ಇದರಲ್ಲಿ ತಾಯಿ ಮತ್ತು ನಾಡಿನ ಮಹತ್ವ ಅಡಗಿದೆ. ನಮ್ಮನ್ನು ಹೆತ್ತು ಹೊತು ಸಾಕಿ ಸಲುಹಿದ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲಾದ ಸುಖವನ್ನು ನೀಡುತ್ತದೆ ಎನ್ನುವುದು ಅನುಭವಿಗಳ ಹೇಳಿಕೆ. ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪೋಷಣೆಗಳಲ್ಲಿಯೇ ಸುಖವನ್ನು ಕಾಣುತ್ತಾಳೆ. ’ಯಾರೇ ಆದಾರೂ ಹೆತ್ತ ತಾಯಂತೆ ಆದಾರೆ? ಸಾವಿರ ಸೌದೆ ಒಲೆಯಲ್ಲಿ ಉರಿದರು ದೀವಿಗೆಯಂತ ಬೆಳಕುಂಟೆ?’ ಎಂದು ಜನಪದರು ತಾಯಿಯ ಮಹತ್ವವನ್ನು ಸಾರಿದ್ದಾರೆ. 

ಅಂತೆಯೇ ಹೊತ್ತನಾಡು ನಮ್ಮನ್ನು ಜೀವನ ಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ. ನಮ್ಮ ಜೀವನಕ್ಕೆ ಅಗತ್ಯವಾದಂತಹ ಅನ್ನ, ನೀರು, ಬಟ್ಟೆ, ವಸತಿ, ಹಾಗೂ ಇನ್ನಿತರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಜನ್ಮ ಭೂಮಿಯನ್ನು ತಾಯಿಗೆ ಹೋಲಿಸಿರುವುದು ಶ್ರೇಷ್ಠವಾಗಿದೆ. ತಾಯಿಯಂತೆಯೇ ನಾವು ಹುಟ್ಟಿದ ನಾಡು ಕೂಡ ಆ ನೆಲದಲ್ಲಿ ಆಡುತ್ತೇವೆ, ಅಗೆಯುತ್ತೇವೆ. ಬೆಳೆಯನ್ನು ಬೆಳೆಯುತ್ತೇವೆ, ಬೆಳೆದುದನ್ನು ತಿಂದು ಬದುಕುತ್ತೇವೆ. ತಾಯಿಯಂತೆ ನಾಡು ನಮ್ಮನ್ನು ಪೋಷಿಸುತ್ತದೆ. ಅದ್ದರಿಂದ ಜನ್ಮಭೂಮಿಯನ್ನು ಮರೆತವರು ತಾಯಿಯನ್ನು ಮರೆತಂತೆಯೇ ಸರಿ. ಆದುದರಿಂದ ಹೆತ್ತತಾಯಿ ಹೊತ್ತನಾಡಿನ ಋಣವನ್ನು ಮರೆಯದೇ ಅವರ ಹಿರಿಮೆಯನ್ನು ಎತ್ತಿಹಿಡಿಯಬೇಕಾದದ್ದು ಪ್ರತಿಯೊಬ್ಬನ ಆದ್ಯಕರ್ತವ್ಯವಾಗಿದೆ.

೧೩. ಊಟಬಲ್ಲವನಿಗೆ ರೋಗವಿಲ್ಲ: ಮಾತು ಬಲ್ಲವನಿಗೆ ಜಗಳವಿಲ್ಲ. 

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಊಟ ಮತ್ತು ಮಾತು ಹೇಗಿರಬೇಕು ಹಾಗೂ ಅವುಗಳ ಇತಿ-ಮಿತಿಯನ್ನು ತಿಳಿಸುತ್ತದೆ.

ಬಹುತೇಕ ರೋಗಗಳಿಗೆ ನಾವು ಸೇವಿಸುವ ಆಹಾರವೇ ಕಾರಣ. ಈ ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಅನುಕರಣೆಯಿಂದಾಗಿ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಕಾಣೆಯಾಗುತ್ತಿರುವುದಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಿತ-ಮಿತ-ಶುಚಿಯಾದ ಆಹಾರ ಸದಾ ಆರೋಗ್ಯದಾಯಕ. ಯಾರು ಇದನ್ನು ಅರಿತಿರುವರೋ ಅವರಿಗೆ ರೋಗವಿರುವುದಿಲ್ಲ ಎಂಬುದು ಈ ಗಾದೆಯ ಆಶಯವಾಗಿದೆ. ಹಾಗೆಯೇ..

ಮಾನವನು ಮಾತನಾಡುವ ಮತ್ತು ಆಲೋಚನಾ ಶಕ್ತಿಯಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಅಂತಹ ಅಮೂಲ್ಯವಾದ ಮಾತನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಹಾಗಲ್ಲದೆ ನಾಲಿಗೆ ಹರಿದ ಕಡೆಗೆಲ್ಲಾ ಬಿಟ್ಟರೆ ’ಬಾಯಿ ಬಿಟ್ಟರೆ ಬಣ್ಣಗೇಡು’ ಎಂಬಂತಾಗುತ್ತದೆ. ಬಸವಣ್ಣನವರು ಹೇಳಿರುವಂತೆ ’ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಶಲಾಕೆಯಂತೆ’ ಇರಬೇಕು. ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತ-ಮೃದುವಾಗಿರಬೇಕು. ಇಲ್ಲದಿದ್ದರೆ ಅದು ಜಗಳ, ವೈಮನಸ್ಯಗಳಿಗೆ ಕಾರಣವಾಗುತ್ತದೆ ಎಂಬುದು ಈ ಗಾದೆಯ ಆಶಯವಾಗಿದೆ.

೧೪. ಶಕ್ತಿಗಿಂತ ಯುಕ್ತಿ ಮೇಲು.

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಎಷ್ಟೇ ಶಕ್ತಿಹೊಂದಿದ್ದರೂ ಅದಕ್ಕಿಂತ ಮುಖ್ಯವಾಗಿ ಯುಕ್ತಿ/ ಬುದ್ಧಿವಂತಿಕೆಯೂ ಬೇಕು ಎಂಬುದನ್ನು ತಿಳಿಸುತ್ತದೆ.

ಶಕ್ತಿ ಎಂದರೆ ಇಲ್ಲಿ ದೈಹಿಕ ಸಾಮರ್ಥ್ಯ ಎಂದರ್ಥ. ಮಾನವನು ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಶಕ್ತಿ ಬೇಕೇ ಬೇಕು. ಆದರೆ ಅದೊಂದನ್ನೆ ನಂಬಿ ಬದುಕಲು ಸಾಧ್ಯವಿಲ್ಲ. ಒಂದು ದೊಡ್ಡ ಬಂಡೆಯನ್ನು ಶಕ್ತಿವಂತನಾದವನು ಕೈಯಿಂದ ಅಲುಗಿಸಲು ಸಾಧ್ಯವಾಗದೇ ಇರಬಹುದು. ಆದರೆ ಒಂದು ಸಲಾಕೆಯನ್ನು ಸನ್ನೆಯಾಗಿ ಬಳಸಿ, ಅದರ ಕೆಳಗೊಂದು ಸಣ್ಣ ಕಲ್ಲನ್ನೋ ಮರವನ್ನು ಇಟ್ಟುಕೊಂಡು ಬಂಡೆಯನ್ನೇ ಉರುಳಿಸಬಹುದು. ಇಲ್ಲಿ ಬಲದ ಜೊತೆಗೆ ಸನ್ನೆಯನ್ನು ಬಳಸುವ ಯುಕ್ತಿಯೂ ಮುಖ್ಯ.

ಪಂಚತಂತ್ರದಲ್ಲಿ ದೀರ್ಘಕರ್ಣ ಎಂಬ ಮೊಲವು ಕಾಡಿನ ರಾಜನಾದ ಸಿಂಹವನ್ನು ತನ್ನ ಉಪಾಯದ ಮಾತುಗಳಿಂದ ಬಾವಿಯ ಬಳಿಗೆ ಕರೆದು ತಂದು ಪ್ರತಿಬಿಂಬವನ್ನೇ ಇನ್ನೊಂದು ಸಿಂಹವೆಂದು ನಂಬಿಸಿ ಬಾವಿಗೆ ಹಾರುವಂತೆ ಮಾಡಿ ಕಾಡಿನ ಪ್ರಾಣಿಗಳನ್ನೆಲ್ಲ ರಕ್ಷಿಸಿದ ಕಥೆಯು ’ಶಕ್ತಿಗಿಂತ ಯುಕ್ತಿ ಮೇಲು’ ಎಂಬ ಗಾದೆಯ ಆಶಯವನ್ನು ಹೊಂದಿದೆ.

೧೫. ಕಟ್ಟುವುದು ಕಠಿಣ; ಕೆಡಹುವುದು ಸುಲಭ / ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ 

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ. 

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು. 

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

೧೬. ಗುಣ ನೋಡಿ ಗೆಳೆತನ ಮಾಡು

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ನಾವು ಯಾವಾಗಲೂ ಸಜ್ಜನರ ಸಂಗ ಮಾಡಬೇಕು’ ಎಂಬುದನ್ನು ತಿಳಿಸುತ್ತದೆ.

ಚನ್ನವೀರ ಕಣವಿಯವರು ’ಗೆಳೆತನವೆ ಇಹಲೋಕಕಿರುವ ಅಮೃತ, ಅದನುಳಿದರೇನಿಹುದು-ಜೀವನ್ಮೃತ’ ಎಂದು ಗೆಳೆತನದ ಮಹತ್ವವನ್ನು ತಿಳಿಸಿದ್ದಾರೆ. ಆದರೆ ಎಂತಹವರ ಗೆಳೆತನ ಮಾಡಬೇಕೆಂಬುದನ್ನು ಆಲೋಚಿಸಿ ನಿರ್ಧರಿಸಬೇಕು. ಸರ್ವಜ್ಞ ಕವಿ ನಾವು ಎಂತಹವರ ಗೆಳೆತನ ಮಾಡಬೇಕು ಎಂಬುದನ್ನು ಕುರಿತು ’ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಕೂಡ ಒಡನಾಟ ಕೆಸರೊಳಗೆ ಮುಳ್ಳುತುಳಿದಂತೆ’ ಎಂದು ಹೇಳಿದ್ದಾನೆ.

ಜೀವನದ ಎಲ್ಲಾ ಸುಖ-ದುಃಖಗಳನ್ನು ಹಂಚಿಕೊಳ್ಳಲು ನಮಗೆ ಒಳ್ಳೆಯ ಗೆಳೆಯರು ಬೇಕು. ನಾವು ಸಂತೋಷವಾಗಿದ್ದಾಗ ಮಾತ್ರ ನಮ್ಮ ಜೊತೆ ಇದ್ದು, ನಮಗೆ ಕಷ್ಟ ಬಂದಾಗ ಹತ್ತಿರ ಸುಳಿಯದ ಗೆಳೆಯರು ನಿಜವಾದ ಗೆಳೆಯರಲ್ಲ. ಪ್ರಾಣ ಕೊಡಲೂ ಸಿದ್ಧರಾದ ಗೆಳೆಯರಾಗಬೇಕು. ನಮ್ಮ ತಪ್ಪುಗಳನ್ನು ತಿದ್ದಿ ನಡೆಸುವುದರ ಜೊತೆಗೆ, ಯಾವುದೇ ಕಷ್ಟ ಬಂದರೂ ಜೊತೆಯಲ್ಲಿದ್ದು ಧೈರ್ಯ ತುಂಬಬೇಕು. ಆದ್ದರಿಂದ ಗೆಳೆತನ ಮಾಡುವ ಮೊದಲು ಆ ವ್ಯಕ್ತಿಯ ಗುಣವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ’ಅಲ್ಪರ ಸಂಗ; ಅಭಿಮಾನ ಭಂಗ’ ಎಂಬಂತಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ.

೧೭. ಚಿಂತೆಯೇ ಮುಪ್ಪು; ಸಂತೋಷವೇ ಯೌವನ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಚಿಂತೆ ಮಾಡದೆ, ಸದಾ ಸಂತೋಷದಿಂದ ಜೀವಿಸಬೇಕು ಎಂಬುದನ್ನು ತಿಳಿಸುತ್ತದೆ. 

ಸುಖ ಬಂದಾಗ ಸಂತೋಷದಿಂದ ಹಿಗ್ಗುವುದು; ಕಷ್ಟ ಎದುರಾದಾಗ ದುಃಖ ಮತ್ತು ಚಿಂತೆಗೆ ಒಳಗಾಗುವುದು ಮಾನವನ ಸ್ವಾಭಾವಿಕ ಗುಣ. ಸುಖ-ಸಂತೋಷ-ನಗು ನಮ್ಮ ಆರೋಗ್ಯ ವೃದ್ಧಿಗೆ ಕಾರಣವಾದರೆ ಚಿಂತೆಯು ನಮ್ಮನ್ನು ಕುಗ್ಗಿಸಿ ಅನಾರೋಗ್ಯಕ್ಕೆ ದೂಡುತ್ತದೆ. ’ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ’ ಎನ್ನುವ ಮಾತಿನಂತೆ, ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ. ಮಾನವನ ಬಹುಪಾಲು ರೋಗಗಳಿಗೆ ಮಾನಸಿಕ ವ್ಯಥೆ-ಚಿಂತೆಗಳೇ ಕಾರಣವೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. 

ಚಿಂತೆಗೂ ಚಿತೆಗೂ ಒಂದೇ ಒಂದು ಸೊನ್ನೆಯಷ್ಟೇ ವ್ಯತ್ಯಾಸ. ಚಿತೆ ಸತ್ತ ನಂತರ ಸುಡುತ್ತದೆ ಆದರೆ ಚಿಂತೆ ಬದುಕಿದ್ದಾಗಲೇ ಸುಡುತ್ತದೆ. ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ. ನಮ್ಮನ್ನು ನಿರುತ್ಸಾಹಿಯಾಗಿ ಮಾಡಿ, ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ. ಚಿಂತೆ ನಿರಂತರವಾಗಿ ಬೆಳೆಯುತ್ತಾ ಹೋದಂತೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ದಾಪ್ಯವನ್ನುಂಟುಮಾಡಿ ಬದುಕನ್ನು ನಾಶಪಡಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಟು ಕಾಲ ಸುಖ-ಸಂತೋಷದಿಂದ ಜೀವನವನ್ನು ಕಳೆಯಬೇಕು. ಮಾನಸಿಕ ಸಂತೋಷ ನಮ್ಮಲ್ಲಿ ನವ ಚೈತನ್ಯವನ್ನು ತುಂಬಿ, ಯೌವನವನ್ನು ವೃದ್ಧಿಸುತ್ತದೆ. ನಮ್ಮಲ್ಲಿ ಅಪಾರ ಶಕ್ತಿಯನ್ನು ತುಂಬುತ್ತದೆ. ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ. 

ಆದ್ದರಿಂದ ನಾವು ನಗುನಗುತಾ ಸಂತೋಷದಿಂದ ಬಾಳಬೇಕು. ಚಿಂತೆಯಿಂದ ದೂರ ಇರಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

೧೮. ಕೂಡಿ ಬಾಳಿದರೆ ಸ್ವರ್ಗ ಸುಖ.

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ನಾವು ಯಾವಾಗಲೂ ಅನ್ಯೂನ್ಯತೆಯಿಂದ ಹಾಗೂ ಒಗ್ಗಟ್ಟಿನಿಂದ ಬದುಕಬೇಕು’ ಎಂಬುದನ್ನು ತಿಳಿಸುತ್ತದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ಹಿರಿಯರು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ. ಸುಖಿ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯವಾದ ಬಾಂಧವ್ಯವನ್ನು ಹೊಂದಿರುತ್ತವೆ. ಜೊತೆಗೆ ಇದು ತಲೆಮಾರುಗಳ ಕಾಲ ತಪ್ಪದೆ ಮುಂದೆ ಸಾಗುತ್ತವೆ. ಕುಟುಂಬದ ಹಿರಿಯರು ಅಂದರೆ ನಮ್ಮ ಪೋಷಕರು ತಮ್ಮ ಕುಟುಂಬದ ಬಾಂಧವ್ಯವನ್ನು ಕಾಪಾಡುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ.

ಇಡೀ ಕುಟುಂಬವು ಒಟ್ಟಿಗೆ ಕುಳಿತು ಹಬ್ಬ ಹರಿದಿನಗಳನ್ನು ಆಚರಿಸುವುದು; ಒಟ್ಟಿಗೆ ಊಟ ಮಾಡುವುದು; ಜವಾಬ್ದಾರಿಗಳನ್ನು ಒಟ್ಟಿಗೆ ಎಲ್ಲರೂ ಹಂಚಿಕೊಳ್ಳುವುದು; ಕುಟುಂಬದ ಸದಸ್ಯರಲ್ಲಿ ಭಾಂದವ್ಯವನ್ನು ಬೆಸೆಯುವುದಲ್ಲದೆ; ಎಲ್ಲರಲ್ಲೂ ಸುರಕ್ಷಿತ ಭಾವನೆಯನ್ನುಂಟುಮಾಡುತ್ತದೆ. ಸಂಬಂಧಗಳು ಸಣ್ಣಕುಟುಂಬಗಳಾಗಿ ಒಡೆದು ಮಾನವೀಯ ಸಂಬಂಧಗಳು ಬೆಲೆಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಕುಟುಂಬಗಳನ್ನು ಬೆಸೆದು ಅವಿಭಕ್ತವಾಗಿಸುವುದು ಅತ್ಯಾವಶ್ಯಕವಾಗಿದೆ. 

ವಿಶಾಲಾರ್ಥದಲ್ಲಿ ಹೇಳುವುದಾದರೆ; ಸಮಾಜದಲ್ಲಿ ಯಾವ ಭೇದಭಾವವಿಲ್ಲದೆ ಸರ್ವರೂ ಸಹಕಾರ ಭಾವನೆಯಿಂದ ಒಂದಾಗಿ ಬಾಳಬೇಕು. ಅದೇ ಗಾಂಧಿಜಿಯವರು ಕಂಡ ರಾಮರಾಜ್ಯದ ಕನಸು.


*******ಕನ್ನಡ ದೀವಿಗೆ******

ಮತ್ತಷ್ಟು ಗಾದೆಗಳ ವಿಸ್ತರಿಸಿದ ಮಾಹಿತಿ ನಿಮ್ಮಲ್ಲಿದ್ದಲ್ಲಿ  ಈ ಕೆಳಗಿನ ವಿಳಾಸಕ್ಕೆ Email ಕಳುಹಿಸಿ. ಇಲ್ಲಿ ಪ್ರಕಟಿಸಲಾಗುವುದು.

*******ಕನ್ನಡ ದೀವಿಗೆ******


10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಚಿತ್ರಗಳ ಸಂಗ್ರಹ

ಲಂಡನ್ ನಗರ ಪಾಠಕ್ಕೆ ಸಂಬಂಧಿಸಿದ ಚಿತ್ರಗಳು

ಟ್ರಾಮ್

Escalators, ಸ್ವಯಂಚಾಲಿತ ಮೆಟ್ಟಿಲುಗಳು

ಸ್ಟೇಷನರಿ ಅಂಗಡಿ

Fifty Shilling Tailors


ಲಂಡನ್ ನಲ್ಲಿರುವ ಇಂಡಿಯಾ ಆಫೀಸ್

ಚೇರಿಂಗ್‌ ಕ್ರಾಸ್

‘Trafalgar Square’ (ಟ್ರಾಫಲ್ಗಾರ್ ಸ್ಕ್ವೇರ್)



ಗರಿಗಳಿಂದ ಅಲಂಕರಿಸಿದ ಟೊಪ್ಪಿಗೆಗಳು



ವೆಲ್ಲಿಂಗ್‌ಟನ್ ನ ಪ್ರತಿಮೆ

ವೆಸ್ಟ್‌ ಮಿನ್‌ಸ್ಟರ್ ಅಬೆ

ಅರ್ಲ್ ಆಫ್ ಚ್ಯಾಟ್ಹಾಂ


ಪೊಯೆಟ್ಸ್ ಕಾರ್ನರ್


ರಾಯಲ್ ಚಾಪೆಲ್ (ರಾಜ ವಿಭಾಗ)


ಸ್ಟೋನ್ ಆಫ್ ಸ್ಕೋನ್ 





*************














10ನೇ ತರಗತಿ ಕನ್ನಡ ಗದ್ಯ-2- ಲಂಡನ್ ನಗರ (10th-kannada-Lesson-3-Londan-nagara)

ಗದ್ಯ-2 ಲಂಡನ್ ನಗರ (ಪ್ರವಾಸ ಕಥನ)
(ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ)
************************


*************



******** ಕನ್ನಡ ದೀವಿಗೆ *******