ನನ್ನ ಪುಟಗಳು

02 ಅಕ್ಟೋಬರ್ 2015

ಜಗದ್ದಳ ಸೋಮನಾಥಜಗದ್ದಳ ಸೋಮನಾಥ 
ಈತನ ಕಾಲಕ್ರಿ.. ೧೧೫೦.

ಈತನು `ಕರ್ನಾಟಕ ಕಲ್ಯಾಣಕಾರಕ' ಎಂಬ ಒಂದು ವೈದ್ಯಗ್ರಂಥವನ್ನು ರಚಿಸಿದ್ದಾನೆ. ಇದು ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ.

ಇವನಿಗೆ `ವಿಚಿತ್ರ ಕವಿ' ಎಂಬ ಬಿರುದು ಇದೆ.
ಇವನು ಶಾಸ್ತ್ರಕಾರನಾದರೂ ಒಳ್ಳೆಯ ಪದವಿನ್ಯಾಸ ಕೌಶಲವನ್ನು ಪಡೆದಿದ್ದ ಸಮರ್ಥಕವಿ.

ಪೂಜ್ಯಪಾದರು ವಿರಚಿಸಿದ ಸಂಸ್ಕೃತ ಗ್ರಂಥಕ್ಕೆ ಕನ್ನಡ ಭಾಷಾಂತರವಾದ `ಕರ್ಣಾಟಕ ಕಲ್ಯಾಣಕಾರಕ'ವು ವೃತ್ತಕಂದಗಳಲ್ಲಿ ರಚಿತವಾಗಿದೆ.

`ಕರ್ಣಾಟಕ ಕಲ್ಯಾಣಕಾರಕ' ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ನಾನಾ ರೋಗಗಳ ಸ್ವರೂಪ, ನಿಧಾನ ಕ್ರಮ ಮತ್ತು ಚಿಕಿತ್ಸಾ ವಿಧಾನಗಳನ್ನು ಕವಿ ಇದರಲ್ಲಿ ಹೇಳಿದ್ದಾನೆ.

ಕವಿ ಜೈನನಾದ್ದರಿಂದ ಕೃತಿಯಲ್ಲಿ ಮದ್ಯ, ಮಧು, ಮಾಂಸ ವರ್ಜಿತವಾದ ಔಷಧಿಗಳನ್ನು ಮಾತ್ರ ಹೇಳಿದ್ದಾನೆ. ಅತಿಸಾರ, ಗುಲ್ಮ ರೋಗ ಮೊದಲಾದ ಹಲವು ವ್ಯಾಧಿಗಳ ವಿಷಯವನ್ನು ಸೋಮನಾಥ ವಿಸ್ತಾರವಾಗಿ ನಿರೂಪಿಸಿದ್ದಾನೆ.

ಜೊತೆಗೆ ಚರಕ,ವಾಗ್ಬಟ, ಸಿದ್ಧಸಾರ ಮೊದಲಾದ ಗ್ರಂಥಗಳಿಂದ ವಿಷಯಗಳನ್ನು ಆರಿಸಿ ಸೇರಿಸಲಾಗಿದೆ ಎಂದೂ, ಅಭಯಚಂದ್ರ ಸಿದ್ಧಾಂತಿ ಹಾಗೂ ಸುಮನೋಬಾಣರು ತನ್ನ ಗ್ರಂಥವನ್ನು ಪರಿಷ್ಕರಿಸಿದರೆಂದೂ, ಇದರಲ್ಲಿ ಹೇಳಲ್ಪಟ್ಟಿರುವ ಚಿಕತ್ಸೆಗಳು ಮದ್ಯ, ಮಾಂಸ, ಮಧು ವರ್ಜಿತವಾದವುಗಳೆಂದೂ ಪ್ರಶಂಶಿಸಿಕೊಂಡಿದ್ದಾನೆ. 
ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಈ ಗ್ರಂಥದ ತಾಳಪತ್ರದ ಪ್ರತಿಯೊಂದಿದೆ. ಇದು ೩೩ ಅಧ್ಯಾಯವುಳ್ಳ ಮಧ್ಯಮ ಪ್ರಮಾಣದ ಗ್ರಂಥ. ಕೆಲವು ಕಡೆ ಗ್ರಂಥಾಪಾತವಿದ್ದು ವಾಕ್ಯ ದೋಷಗಳೂ ಸಾಕಷ್ಟಿವೆ. ಪದ್ಯರೂಪವಾಗಿರುವ ಈ ಗ್ರಂಥ ಕನ್ನಡದ ವೈದ್ಯಗ್ರಂಥಗಳ ಪೈಕಿ ಮೊದಲನೆಯದು ಎಂದು ಪ್ರಮುಖ ಸ್ಥಾನವನ್ನು ಹೊಂದಿದೆ.

ಎರಡನೆಯ ನಾಗವರ್ಮ

 ಎರಡನೆಯ ನಾಗವರ್ಮ
ಈತನ ಕಾಲ : ಕ್ರಿ.ಶ.ಸು.೧೧೪೫
ಈತನ ಆಶ್ರಯದಾತ: ಚಾಲುಕ್ಯ ಜಗದೇಕಮಲ್ಲ
ಈತನ ಪ್ರಮುಖ ಕೃತಿಗಳು:
೧. ವರ್ಧಮಾನಪುರಾಣ
೨. ಛಂದೋವಿಚಿತಿ(ಉಪಲಬ್ಧವಾಗಿಲ್ಲ)
೩. ಅಭಿದಾನ ವಸ್ತುಕೋಶ
೪. ಕಾವ್ಯಾವಲೋಕನ
೫. ಕರ್ಣಾಟಕ ಭಾಷಾಭೂಷಣ
೬. ಅಭಿದಾನ ರತ್ನಮಾಲಾ

  • ಕಂದ ಮತ್ತು ವೃತ್ತಗಳಲ್ಲಿ ‘ಅಭಿದಾನ ವಸ್ತುಕೋಶ’ ವನ್ನು ರಚಿಸಿದ್ದಾನೆ. ಕನ್ನಡ ಕಾವ್ಯಗಳಲ್ಲಿರುವ ಸಂಸ್ಕೃತ ಶಬ್ದಗಳಿಗೆ ಅರ್ಥ ಗಳನ್ನು ಈ ನಿಘಂಟಿನಲ್ಲಿ ನಿರೂಪಿಸಿದೆ.
  • ‘ಅಭಿದಾನ ರತ್ನಮಾಲಾ’ ಕರ್ನಾಟಕ ಟೀಕೆ ಎಂಬ ನಿಘಂಟುವಾಗಿದೆ. ಇದು ಭಟ್ಟಹಲಾಯುಧನ ‘ಅಭಿಧಾನ ರತ್ನಮಾಲೆ’ ಎಂಬ ಸಂಸ್ಕೃತ ನಿಘಂಟಿಗೆ ಬರೆದಿರುವ ಮೊಟ್ಟಮೊದಲನೆಯ ಟೀಕು. ಇದರಲ್ಲಿ ಸಂಸ್ಕೃತ, ಸಮಸಂಸ್ಕೃತ ಶಬ್ದಗಳಿಗೆ ಅರ್ಥ ನೀಡಲಾಗಿದೆ. 
  • ಕನ್ನಡ ವ್ಯಾಕರಣಗ್ರಂಥಗಳ ಪೈಕಿ, ಸದ್ಯದ ಮಟ್ಟಿಗೆ ಲಭ್ಯವಿರುವ ಮೊದಲ ಗ್ರಂಥವೆಂದರೆ ಎರಡನೆಯ ನಾಗವರ್ಮನ ‘ಶಬ್ದಸ್ಮೃತಿ’ಯೇ. ಆದರೆ ಇದು ಪೂರ್ಣಗ್ರಂಥವಲ್ಲ, ಅವನ ‘ಕಾವ್ಯಾವ ಲೋಕನ’ವೆಂಬ ಗ್ರಂಥದ ಮೊದಲ ಅಧಿಕರಣ (ಅಧ್ಯಾಯ) ಮಾತ್ರ. 
  • ‘ಕವಿರಾಜಮಾರ್ಗ’ದಂತೆಯೇ ‘ಕಾವ್ಯಾವಲೋಕನ’ವೂ ಒಂದು ಅಲಂಕಾರ ಗ್ರಂಥ. ಆದರೆ ಅಲ್ಲಿಯಂತೆ, ದೋಷನಿರೂಪಣೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಮಾತ್ರ ಕೆಲವು ವ್ಯಾಕರಣ ವಿಚಾರಗಳನ್ನು ನಿರೂಪಿಸುವಷ್ಟಕ್ಕೆ ಅದು ಸೀಮಿತವಾಗಿಲ್ಲ. ಸಂಗ್ರಹವಾಗಿ ಯಾದರೂ ಇಡಿಯಾಗಿ ಕನ್ನಡ ವ್ಯಾಕರಣವನ್ನು ನಿರೂಪಿಸುತ್ತದೆ. ಈ ದೃಷ್ಟಿ ಯಿಂದ, ಗ್ರಂಥವೊಂದರ ಭಾಗವೇ ಆದರೂ ‘ಶಬ್ದಸ್ಮೃತಿ’ಯು ಒಂದು ಸ್ವತಂತ್ರ ಗ್ರಂಥವೆಂದು ಕರೆಯಿಸಿಕೊಳ್ಳಬಹುದಾದ ಯೋಗ್ಯತೆಯನ್ನು ಪಡೆದಿದೆ.  ಇದು ಕನ್ನಡದಲ್ಲೆ ರಚಿತವಾಗಿರುವುದರಿಂದ, ಕನ್ನಡದಲ್ಲೇ ರಚಿತವಾದ ಕನ್ನಡದ ಮೊಟ್ಟಮೊದಲ ವ್ಯಾಕರಣವೆಂಬ ಹೆಗ್ಗಳಿಕೆ ಕೂಡ ಇದಕ್ಕೆ ದಕ್ಕಿದೆ. 
*************

ಕರ್ಣಪಾರ್ಯ

ಕರ್ಣಪಾರ್ಯ
ಈತ ಸು.೧೧೬೦-೭೦. ಕೊಲ್ಲಾಪುರ ಶಾಖೆಯ ಶಿಲಾಹಾರ ರಾಜರಲ್ಲಿ ಒಬ್ಬನಾದ ವಿಜಯಾದಿತ್ಯನೆಂಬವನ ಕಾಲದಲ್ಲಿದ್ದ ಒಬ್ಬ ಜೈನಕವಿ. ರುದ್ರ ಭಟ್ಟ, ಆಂಡಯ್ಯ, ಮಂಗರಸ ಮೊದಲಾದ ಕವಿಗಳು ಈತನನ್ನು ಹೆಸರಿಸಿದ್ದಾರೆ. ಈ ಕವಿ ನೇಮಿನಾಥಪುರಾಣ ಮತ್ತು ವೀರೇಶಚರಿತ ಎಂಬ ಎರಡು ಕೃತಿಗಳನ್ನು ಬರೆದಿರುವಂತೆ ತಿಳಿದುಬಂದಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಲಭ್ಯವಾಗಿ ಪ್ರಕಟವಾಗಿದೆ.
ನೇಮಿನಾಥಪುರಾಣದಿಂದ ತಿಳಿಯುವ ಕವಿಯ ವಿಷಯದ ವಿವರಗಳು ಹೀಗಿವೆ: ಸಮಂತಭದ್ರ, ಗುಣಭದ್ರ, ಪುಜ್ಯವಾದ, ಗೃದ್ಧ್ರಪಿಂಛ, ವೀರಸೇನ ಕೊಂಡಕುಂದಾಚಾರ್ಯ, ಮಲಧಾರಿದೇವ, ಕಲ್ಯಾಣಕೀರ್ತಿ, ಶುಭಚಂದ್ರ, ಬೆಟ್ಟದ ವ್ರತಿ, ಭುವನಬ್ಬೆ, ನೇಮಿಚಂದ್ರ, ಅಕಳಂಕಚಂದ್ರ-ಇವರು ಕವಿಯಿಂದ ಸ್ತುತಿಸಲಾಗಿರುವ ಯತಿಗಳು. ಪಂಪ, ಪೊನ್ನ, ರನ್ನ ಮತ್ತು ನಾಗಚಂದ್ರ-ಇವರ ಉಲ್ಲೇಖವಾಗಿರುವ ಪೂರ್ವಕವಿಗಳು. ಜೀಮೂತವಾಹನ ವಿದ್ಯಾಧರ ಚಕ್ರಿವಂಶತಿಳಕನೆನ್ನಿಸಿದ ಗಂಡರಾದಿತ್ಯನ ಪುತ್ರ ವಿಜಯಾದಿತ್ಯನಲ್ಲಿ ಕರಣಾಗ್ರಣಿಯೂ ಮಂತ್ರಿಯೂ ಆಗಿದ್ದ ಲಕ್ಷ್ಮನೆಂಬವನು (ಲಕ್ಷ್ಮಣ, ಲಕ್ಷ್ಮೀಧರ ಎಂದೂ ಈತನ ಹೆಸರನ್ನು ಹೇಳಿದೆ) ಕವಿಯ ಆಶ್ರಯದಾತೃ; ಕವಿಯ ಕೃತಿರಚನೆಗೆ ಸಹಾಯಕ. ಲಕ್ಷ್ಮನ ತಂದೆ ಶ್ರೀಭೂಷಣಾರ್ಯ ಮೊದಲಾದವರು ಪ್ರೋತ್ಸಾಹಿಸಲಾಗಿ ಕರ್ಣಪಾರ್ಯ ನೇಮಿನಾಥ ಪುರಾಣದ ರಚನೆಗೆ ಸಂಕಲ್ಪಿಸಿದ.
ಕವಿ ಕರ್ಣಪಾರ್ಯನ ತಾಯಿತಂದೆಗಳು ಯಾರೆಂಬುದು ತಿಳಿಯದು. ಗುರು ಕಲ್ಯಾಣಕೀರ್ತಿ; ಈತ ಕೃತಿಯ ನಾಂದೀಮುಖದ ಪೂರ್ವಾಚಾರ್ಯಶ್ರೇಣೀಯಲ್ಲಿ ಸ್ತುತನಾಗಿರುವ ಮಲಧಾರಿ ದೇವರ ಶಿಷ್ಯನೇ ಹೇಗೆ ಎಂಬುದು ನಿಶ್ಚಯವಿಲ್ಲ. ನೇಮಿನಾಥ ಪುರಾಣದ ಆಶ್ವಾಸಾದಿ ಪದ್ಯಗಳಲ್ಲಿ ಕಾಣಿಸಿಕೊಳ್ಳುವ ಭವ್ಯವನಜವನ ಮಾರ್ತಂಡಂ ಎಂಬುದೂ ಆಶ್ವಾಸಾಂತ್ಯಪದ್ಯಗಳಲ್ಲಿ ಕಾಣಿಸಿಕೊಳ್ಳುವ ಪರಮ ಜಿನಮತ ಕ್ಷೀರವಾರಾಶಿಚಂದ್ರಂ ಎಂಬುದೂ ಅಲ್ಲಿಯೇ ಗದ್ಯಭಾಗದಲ್ಲಿ ಕಾಣಿಸಿಕೊಳ್ಳುವ ಸಹಜ ಕವಿತಾರಸೋದಯಂ ಎಂಬುದೂ ಕರ್ಣಪಾರ್ಯನಿಗೆ ಮೆಚ್ಚಿಕೆಯಾಗಿರುವ ಬಿರುದುಗಳಾಗಿರುವಂತೆ ತೋರುತ್ತದೆ. ಇವುಗಳಲ್ಲಿ ಮೊದಲಿನವೆರಡೂ ಕವಿಯ ಆಶ್ರಯದಾತೃವಿಗೆ ಹಾಗೂ ಕಾವ್ಯಶರೀರದಲ್ಲಿಯ ಇಷ್ಟವ್ಯಕ್ತಿಗೆ ಅನ್ವಯವಾಗಿರುವುದುಂಟು. ನೇಮಿನಾಥಪುರಾಣದಲ್ಲಿ ಕರ್ಣಪಾರ್ಯನ ಕಾಲದ ವಿಷಯವಾಗಿ ನೇರವಾದ ಉಲ್ಲೇಖವಿಲ್ಲ. ಪಂಪರಾಮಾಯಣದ ಕವಿ ನಾಗಚಂದ್ರನ ಕಾಲ, ಕರ್ಣಪಾರ್ಯನ ಗುರು ಕಲ್ಯಾಣಕೀರ್ತಿಯ ಕಾಲ ಮತ್ತು ಪೋಷಕವ್ಯಕ್ತಿ ಲಕ್ಷ್ಮಣ ಹಾಗೂ ಆತನ ಅರಸನಾದ ವಿಜಯಾದಿತ್ಯನ ಸಂಬಂಧವಾದ ಕೆಲವು ಚಾರಿತ್ರಿಕ ವಿವರಗಳನ್ನು ಅವಲಂಬಿಸಿ ಈ ಕವಿಯ ಕಾಲವನ್ನು ಗೊತ್ತುಮಾಡುವ ಪ್ರಯತ್ನ ನಡೆದಿದೆ.
ವಿದ್ವಾಂಸರು ಸೂಚಿಸಿರುವ ಕಾಲಗಳು ಈ ರೀತಿಯಾಗಿವೆ; ಆರ್. ನರಸಿಂಹ ಚಾರ್ಯರು: ಪ್ರ.ಶ.ಸು. ೧೧೪೦; ಡಾ. ಎ. ವೆಂಕಟಸುಬ್ಬಯ್ಯನವರು: ಮೊದಲು ಊಹಿಸಿದ್ದು ಪ್ರ.ಶ.ಸು. ೧೧೭೩-೭೪, ಆಮೇಲೆ ಸ್ಥೂಲವಾಗಿ ನಿರ್ಧರಿಸಿದ್ದು ಪ್ರ. ಶ. ೧೧೩೫-೯೦; ಎಚ್. ಶೇಷ ಅಯ್ಯಂಗಾರ್ಯರು: ಪ್ರ.ಶ.ಸು. ೧೧೩೦-೩೫: ಪ್ರೊ. ಡಿ.ಎಲ್. ನರಸಿಂಹಾಚಾರ್ಯರು: ಪ್ರ.ಶ.ಸು. ೧೧೪೦-೮೦, ಎಂ. ಗೋವಿಂದಪೈಯವರು: ಪ್ರ.ಶ.ಸು. ೧೧೭೦.
ಕರ್ಣಪಾರ್ಯನ ಕಾಲನಿರ್ಧಾರದಲ್ಲಿ ಎಲ್ಲ ವಿದ್ವಾಂಸರೂ ನಾಗಚಂದ್ರನ ಕಾಲವನ್ನು ಒಂದು ಮುಖ್ಯ ಆಧಾರವನ್ನಾಗಿ ಗ್ರಹಿಸಿದ್ದಾರೆ. ಆದರೆ ನಾಗಚಂದ್ರನ ಕಾಲ ವಿಷಯದಲ್ಲೆ ಅವರಲ್ಲಿ ಭಿನ್ನಮತವಿದೆ. ಈಚೆಗೆ ನಾಗಚಂದ್ರನ ಪ್ರಸಿದ್ಧಿಯ ಕಾಲ ೧೨ನೆಯ ಶತಮಾನದ ಪುರ್ವಾರ್ಧವೆಂದೂ ಆತನ ಕೃತಿ ಪಂಪರಾಮಾಯಣ ಪ್ರ.ಶ.ಸು. ೧೧೪೦ರಲ್ಲಿ ಬಲುಮಟ್ಟಿಗೆ ರಚಿತವಾಗಿರಬೇಕೆಂದೂ ತಿಳಿಯಲಾಗಿದೆ. ಈ ಕವಿಯನ್ನು ಕರ್ಣಪಾರ್ಯ ಅದ್ಯತನನೆಂದು ಹೇಳಿರುವುದರಿಂದ ನಾಗಚಂದ್ರನ ಸಮಕಾಲೀನನೋ ಸಮೀಪವರ್ತಿಯೋ ಆಗಿರುವಂತೆ ತಿಳಿಯುವುದಕ್ಕೆ ಆಸ್ಪದವಿದೆ. ನಾಗಚಂದ್ರನನ್ನು ಪ್ರತ್ಯೇಕವಾದೊಂದು ಪದ್ಯದಲ್ಲಿ ಉಲ್ಲೇಖಿಸಿ ಮನ್ನಿಸಿರುವುದನ್ನು ನೋಡಿದರೆ ಆತನ ಖ್ಯಾತಿಯ ಪ್ರಭಾವ ವಿದ್ವದ್ವಲಯದಲ್ಲಿ ಇನ್ನೂ ಮುನ್ನೆಲೆಯಲ್ಲಿದ್ದಿ ತೆಂದು ಹೇಳಬಹುದು. ಅಲ್ಲದೆ ಆತನ ಶೈಲಿಯ ಪ್ರಭಾವವೂ ಅಲ್ಲಲ್ಲಿ ಪಂಪ ರಾಮಾಯಣದ ಅನುಕರಣವೂ ಕರ್ಣಪಾರ್ಯನ ನೇಮಿನಾಥಪುರಾಣದಲ್ಲಿ ಕಾಣುತ್ತದೆ. ಈ ಕಾರಣಗಳಿಂದ ಕರ್ಣಪಾರ್ಯ ಪ್ರ.ಶ.ಸು. ೧೧೪೦ಕ್ಕಿಂತ ಹತ್ತಿಪ್ಪತ್ತು ವರ್ಷಗಳಷ್ಟಾದರೂ ಈಚೆಗೆ ಇದ್ದಿರಬಹುದು. ಅಲ್ಲದೆ ಕರ್ಣಪಾರ್ಯನಿಗೆ ಆಶ್ರಯದಾತನಾಗಿದ್ದ ಶಿಲಾಹಾರರ ವಿಜಯಾದಿತ್ಯರಾಜ ಪ್ರ.ಶ.ಸು. ೧೧೪೦ರಲ್ಲಿ ಪಟ್ಟವೇರಿ ಪ್ರಾಯಶಃ ಪ್ರ.ಶ.ಸು. ೧೧೧೫ರ ವರೆಗೆ ಆಳಿದನೆಂತಲೂ ಪ್ರ. ಶ. ಸು. ೧೧೪೦ರ ಮೊದಲು ಆತ ಸಿಂಹಾಸನವೇರಲಿಲ್ಲವೆಂತಲೂ ಚರಿತ್ರಕಾರರು ಸಾಧಾರವಾಗಿ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಕರ್ಣಪಾರ್ಯನ ಅಸ್ತಿತ್ವದ ಕಾಲ ಪ್ರ.ಶ.ಸು. ೧೧೪೦-75 ಎಂದಾಗುತ್ತದೆ. ಇಮ್ಮಡಿ ನಾಗವರ್ಮನ (ಪ್ರ.ಶ.ಸು. ೧೧೪೫) ಭಾಷಾಭೂಷಣದಲ್ಲಾಗಲಿ ಕಾವ್ಯಾವಲೋಕನದಲ್ಲಾಗಲಿ ಕರ್ಣಪಾರ್ಯನ ನೇಮಿನಾಥ ಪುರಾಣದ ಪದ್ಯಗಳು ಉದಾಹೃತವಾಗಿರುವುದರಿಂದ ಪ್ರ.ಶ.ಸು.೧೧೪೫ ರಿಂದೀಚೆಗೆ, ಪ್ರ.ಶ.ಸು. ೧೧೪೦ರಲ್ಲಿ ರಚಿತವಾಗಿರಬಹುದಾದ ಪಂಪ ರಾಮಾಯಣಕ್ಕೆ ಕನಿಷ್ಠ ಹತ್ತಿಪ್ಪತ್ತು ವರ್ಷಗಳಷ್ಟು ಈಚೆಗೆ ಎಂದರೆ ಪ್ರ.ಶ.ಸು. ೧೧೫೦ರ ಅನಂತರದಲ್ಲಿ, ಅಲ್ಲಲ್ಲಿ ಅರ್ವಾಚೀನ ಭಾಷಾ ಪ್ರಯೋಗಗಳು ಪ್ರಾಚುರ್ಯವಿರುವುದರಿಂದ ೧೨ನೆಯ ಶತಮಾನದ ಉತ್ತರಾರ್ಧದಲ್ಲಿ, ಪ್ರಾಯಃ ೧೧೬೦-೭೦ರ ಅವಧಿಯಲ್ಲಿ ಕರ್ಣಪಾರ್ಯನ ಕೃತಿ ನೇಮಿನಾಥಪುರಾಣ ರಚಿತವಾಗಿರಬಹುದು. ಕರ್ಣಪಾರ್ಯ ಯಾವ ಸ್ಥಳದವನೆಂದು ತಿಳಿಯಲು ಗ್ರಂಥಾಧಾರವಿಲ್ಲ. ದೊರೆತಿರುವ ವಿಜಯಾದಿತ್ಯನ ಶಾಸನಗಳೆಲ್ಲವೂ ಆತ ವಳವಾಡವನ್ನು ಸ್ಥಿರ ಶಿಬಿರವಾಗಿಸಿಕೊಂಡು ರಾಜ್ಯವಾಳುತ್ತಿದ್ದನೆಂದು ಉಲ್ಲೇಖಿಸಿವೆ. ಈ ವಳವಾಡ ಕೊಲ್ಲಾಪುರದ ನೈಋತ್ಯಕ್ಕೆ ೨೫.6 ಕಿ.ಮೀ. ಅಂತರದಲ್ಲಿರುವ, ಅದೇ ಪ್ರಾಂತಕ್ಕೆ ಸೇರಿದ ಇಂದಿನ ವಳವಾಡ ಎಂಬ ಸ್ಥಳವಾಗಿರಬಹುದು ಎಂಬ ಗ್ರಹಿಕೆಯಿದೆ. ಈ ವಿಜಯಾದಿತ್ಯನ ಕರಣಾಗ್ರಣಿಯಾದ ಲಕ್ಷ್ಮನೂ ಇಲ್ಲಿಯೇ ಇದ್ದಿರುವುದು ಸಹಜವಾದರಿಂದ ಈತನ ಪೋಷಣೆಯ ಕವಿಗೂ ಇದೇ ವಾಸಸ್ಥಳವಾಗಿದ್ದು ನೇಮಿನಾಥಪುರಾಣದ ರಚನೆಯೂ ಇಲ್ಲಿಯೇ ನಡೆದಿರಬಹುದು. ಆದರೆ ಇದು ಬರಿಯ ಊಹೆ. ಕರ್ಣಪಾರ್ಯಕೃತವಾದ ನೇಮಿನಾಥಪುರಾಣ ಪ್ರತ್ಯೇಕವಾಗಿಯೂ ಸಮಗ್ರವಾಗಿಯೂ ರಚಿತವಾಗಿದ್ದು ಈಗ ದೊರೆಯುತ್ತಿರುವ ನೇಮಿಚರಿತ್ರೆಗಳಲ್ಲಿ ಮೊತ್ತಮೊದಲನೆಯದಾಗಿದೆ. ಕರ್ಣಪಾರ್ಯ ತನ್ನ ಕೃತಿರಚನೆಗೆ ತನಗೆ ಮೊದಲಿದ್ದ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಜೈನಕವಿಗಳ ನೇಮಿಕಥಾಮೂಲಗಳಲ್ಲಿ ಕೆಲವನ್ನು ಉಪಯೋಗಿಸಿಕೊಂಡಿರುವಂತೆ ತೋರಿದರೂ ಅವುಗಳಲ್ಲಿ ಎಲ್ಲವನ್ನೂ ಗುರುತಿಸುವುದು ಸಾಧ್ಯವಾಗಿಲ್ಲ. ಪುನ್ನಾಟಸಂಘದ ಜಿನಸೇನಾಚಾರ್ಯರ ಹರಿವಂಶಪುರಾಣ ಮತ್ತು ಚಾವುಂಡರಾಯ ಕೃತವಾದ ಚಾವುಂಡರಾಯಪುರಾಣ ಇವನ್ನು ನೋಡಿರುವುದಕ್ಕೆ ಆಧಾರಗಳು ತೋರುತ್ತವೆ. ಕರ್ಣಪಾರ್ಯನ ಈ ಕೃತಿ ಜಿನಸೇನರ ಹರಿವಂಶಪುರಾಣವನ್ನೂ ಚಾವುಂಡರಾಯಪುರಾಣದ ಮೂಲಕವಾಗಿ ಗುಣಭದ್ರಾಚಾರ್ಯರ ಮಹಾಪುರಾಣ ಮಾರ್ಗವನ್ನೂ ಯಥೋಚಿತವಾಗಿ ಸಮ್ಮಿಳಮಾಡಿಕೊಂಡಿರುವ ಕೃತಿ. ಹೀಗಿದ್ದೂ ಈ ಆಚಾರ್ಯದ್ವಯರ ಕಥಾಮಾರ್ಗಗಳಲ್ಲಾಗಲಿ ಪೂರ್ವಕಾಲೀನ ಅನ್ಯ ನೇಮಿಚರಿತ್ರೆಗಳಲ್ಲಾಗಲಿ ಕಂಡುಬರದಿರುವ ಕೆಲವು ಪ್ರಮುಖ ಕಥಾಸಂದರ್ಭಗಳೂ ಅದರಲ್ಲಿ ಕಂಡುಬಂದಿವೆ. ಜೈನೇತರವಾದ ಎಂದರೆ ವೈದಿಕ ಸಂಪ್ರದಾಯದ ಭಾರತ ಕಥೆಯನ್ನು ಒಳಕೊಂಡಿರುವುದೂ ಈ ಕೃತಿಯ ಒಂದು ವಿಶೇಷ. ಪಂಪಭಾರತ ಮತ್ತು ಗದಾಯುದ್ಧಗಳ ಮೂಲಕವಾಗಿ ಅದು ಇಲ್ಲಿ ಅನುಸರಿಸಲ್ಪಟ್ಟಿದೆ. ಆದರೆ ಪುರ್ತಿಯಾಗಿ ವೈದಿಕ ಸಂಪ್ರದಾಯದ ಭಾರತಕಥೆಯನ್ನೇ ಅನುಸರಿಸಿದ ಪ್ರಮುಖ ಘಟ್ಟಗಳಲ್ಲಿ ಜೈನ ಭಾರತ ಕಥಾಂಶಗಳನ್ನೂ ಹಾಸುಹೊಕ್ಕಾಗಿ ಕೂಡಿಸಿದೆ. ಕೆಲಮಟ್ಟಿಗೆ ಕ್ರಾಂತಿಕಾರಕವೆನ್ನಬಹುದಾದ ಈ ಬದಲಾವಣೆಗಳಿಂದ ಕರ್ಣಪಾರ್ಯ ಸಂಪ್ರದಾಯ ಶರಣನಲ್ಲ, ಸ್ವಾತಂತ್ರ್ಯಪ್ರಿಯನೂ ಕಾವ್ಯಕಲಾದೃಷ್ಟಿಯಲ್ಲಿ ಆಸಕ್ತಿಯುಳ್ಳವನೂ ಆಗಿದ್ದಾನೆಂಬ ಸಂಗತಿ ತಿಳಿಯುತ್ತದೆ. ಈಗ ತಿಳಿದಿರುವಂತೆ ಸಮ್ಮಿಶ್ರಕಥಾ ಸಂಪ್ರದಾಯದ ವಿಭಿನ್ನ ಕಥಾವಾಹಿನಿಗಳ ಒಂದು ಸುಂದರವಾದ ಮಾದರಿಯನ್ನಾಗಿ ಆತ ತನ್ನ ಕೃತಿಯನ್ನು ಕಟ್ಟಿ, ಈಚಿನ ಕನ್ನಡ ನೇಮಿಚರಿತ್ರಕಾರರಿಗೆ ಮಾರ್ಗದರ್ಶಕನಾದಂತೆ ತೋರುತ್ತದೆ. ಕರ್ಣಪಾರ್ಯ ವಿವಿಧ ಕಥಾಮೂಲಗಳನ್ನು ಬಳಸಿಕೊಂಡಿರುವ ದೃಷ್ಟಿ ಶ್ಲಾಘ್ಯವಾಗಿದೆ. ಇಲ್ಲಿಯ ವಿಸ್ತಾರವಾದ ಕಥಾಭಿತ್ತಿಯಲ್ಲಿ ಹರಿವಂಶ ಕುರುವಂಶಗಳ ಚರಿತ್ರಪುರುಷರ ಕಥೆಯೂ ಸೇರಿಕೊಂಡು ಬರುತ್ತವೆ. ಈ ಕಥಾವಸ್ತುವಿನ ಅಂಗೋಪಾಂಗಗಳಿಗೆ ಕೊರತೆಯಾಗದಂತೆ ರಸದೃಷ್ಟಿ, ಪಾತ್ರಪರಿಪುಷ್ಟಿ, ಸನ್ನಿವೇಶ ಸೃಷ್ಟಿಗಳನ್ನು ಆತನ ಕೃತಿಯಲ್ಲಿ ಕಾಣಬಹುದಾಗಿದೆ. ಯುದ್ಧವರ್ಣನೆ ಕಾವ್ಯಾಂಗಗಳಾದ ಇತರ ವರ್ಣನೆಗಳಿಗೆ ಯಾವ ಪ್ರಾಶಸ್ತ್ಯವೂ ಇಲ್ಲದೆ ಇಲ್ಲಿ ಕಥೆ ಮುನ್ನಡೆದಿದೆ. ಮೂಲದ ಕಥಾಭಾಗಗಳು ಪರಿಷ್ಕಾರಗೊಂಡು ಹೊಸ ತೇಜಸ್ಸಿನಿಂದ ಕಳೆಗೊಂಡಿರುವುದಕ್ಕೆ ಸರಳ ಸುಂದರವಾದ ಕವಿಯ ಶೈಲಿಯೂ ಒಂದು ಕಾರಣ. ಕರ್ಣಪಾರ್ಯ ಪ್ರತಿಭಾ ಸಂಪನ್ನನಾದ ಕವಿಯಲ್ಲಿವಾದರೂ ಹೃದ್ಯವೂ ಸರಸವೂ ಆದ ಕಥನಕಲೆ, ಸರಳವೂ ಸ್ವಷ್ಟವೂ ಆದ ರೀತಿಯ ಅಭಿವ್ಯಕ್ತಿಕೌಶಲ, ಹೃದಯಂಗಮವಾದ ಮಾನವೀಯ ದೃಷ್ಟಿ, ಆಕರ್ಷಕವಾದ ನಾಟಕೀಯತೆ, ವಸ್ತುವಿನ್ಯಾಸದಲ್ಲಿಯೂ ಶೈಲಿಯಲ್ಲಿಯೂ ಪ್ರತಿಬಿಂಬಿಸಿರುವ ದೇಶ್ಯ-ಇವು ಕಾರಣವಾಗಿ ಕನ್ನಡಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠ ಕವಿಯಾಗಿದ್ದಾನೆ. (ಟಿ.ವಿ.ಪಿ.)

ಬ್ರಹ್ಮಶಿವ

ಬ್ರಹ್ಮಶಿವ
ಸುಮಾರು ಹನ್ನೆರಡನೆಯ ಶತಮಾನದಲ್ಲಿ ಜೀವಿಸಿದ್ದ ಬ್ರಹ್ಮಶಿವನ ಪೂರ್ವಿಕರು ಮುಂಚೆ ಶೈವಬ್ರಾಹ್ಮಣರಾಗಿದ್ದರು ಎಂದು ಅವನ ಕೃತಿಯಿಂದ ತಿಳಿದುಬರುತ್ತದೆ.
ಇವನ ಹೆಸರು ಗ್ರಂಥದ(ಸಮಯ ಪರೀಕ್ಷೆ) ಶರೀರದಲ್ಲಿ ಬ್ರಹ್ಮ/ಬೊಮ್ಮ ಎಂದೂ, ಪ್ರತಿ ಅಧ್ಯಾಯದ ಕೊನೆಯಲ್ಲಿ ಬ್ರಹ್ಮದೇವನೆಂದೂ ಇರುವುದರಿಂದ ಇವನ ಹೆಸರಿನ ಬಗೆಗೆ ಗೊಂದಲವಿದ್ದರೂ, ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವನುಬ್ರಹ್ಮಶಿವನೆಂದೇ ಪರಿಚಿತನಾಗಿದ್ದಾನೆ. ಈತ ಜೀವಿಸಿದ್ದ ಕಾಲವನ್ನು ಕೃತಿಯ ಒಳಗಿನ ವಿವರಗಳಿಂದಲೂ, ಇತರ ಮೂಲಗಳ ಆಧಾರದಿಂದಲೂ ಸುಮಾರು ೧೧೬೦ ಇರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.
ಪೊಟ್ಟಳಗೆರೆಯ ಪ್ರಸಿದ್ಧನಾದ ಸಿಂಗರಾಜ ಖ್ಯಾತ ಕವಿ ನಾಗಚಂದ್ರನ(ಅಭಿನವ ಪಂಪ) ಮಗ. ಸಿಂಗರಾಜನ ಮಗನೇ ಬ್ರಹ್ಮಶಿವ. ಹುಟ್ಟಿನಿಂದ ಇವನು ವತ್ಸಗೋತ್ರದ ಜೈನಬ್ರಾಹ್ಮಣನಾಗಿದ್ದವನು. ಹೀಗಿರುವಾಗ, ಇವನು ಮನೆ-ಜೈನಬಸದಿಗಳ ನಡುವೆ ಓಡಾಡುತ್ತಲೇ ನಡೆಯುವುದನ್ನೂ, ಸದಾ ಜೈನಾಗಮಗಳನ್ನು ಓದುತ್ತಲೇ ನುಡಿಯುವುದನ್ನೂ ಕಲಿತು ಬೆಳೆದದ್ದು ಸ್ವಾಭಾವಿಕವೇ ಆಗಿದೆ.
ಆದರೂ, ಕಾಲದಲ್ಲಿ ಒಂದು ಧಾರ್ಮಿಕ ಚಳುವಳಿಯಾಗಿ ರೂಪುಗೊಂಡ ವೀರಶೈವ ಧರ್ಮವು ಮುಂದೆ ಬ್ರಹ್ಮಶಿವನನ್ನು ಆಕರ್ಷಿಸಿದಂತೆ ಕಾಣುತ್ತದೆ. ಧರ್ಮವನ್ನೊಪ್ಪಿ, ಸ್ವಲ್ಪಕಾಲ ಅದರಂತೆ ನಡೆದುಕೊಂಡು, ಅದು ಹಿತವೆನ್ನಿಸದೆ, ಮತ್ತೆ ತನ್ನ ಹುಟ್ಟಿನ (ಜೈನ)ಧರ್ಮಕ್ಕೆ ಹಿಂತಿರುಗಿದ್ದಾಗಿ ಅವನೇ ಹೇಳಿಕೊಂಡಿದ್ದಾನೆ (ಸಮಯಪರೀಕ್ಷೆ -೫೯).
ಜೈನಧರ್ಮದ ಬಗೆಗೆ ಬ್ರಹ್ಮಶಿವನಿಗಿದ್ದ ಶ್ರದ್ಧೆ ಅಪಾರವಾದದ್ದು. ಅದು ಇವನ ಕೃತಿಯ ವ್ಯಾಪ್ತಿಯುದ್ದಕ್ಕೂ ಕಂಡುಬರುತ್ತದೆ. ಆದರೂ, ಎಲ್ಲೋ ಒಂದು ಕಡೆ 'ತನ್ನ ಧರ್ಮದ ಬಗ್ಗೆ ಅವನಿಗಿದ್ದ (ಕುರುಡು)ಶ್ರದ್ಧೆಯೇ ಅವನು ಅನ್ಯಧರ್ಮಗಳ ಬಗೆಗೆ ಕಟುವಾಗಿ ನುಡಿಯುವುದಕ್ಕೆ ಕಾರಣವಾಯಿತೋ!' ಎನಿಸದೆ ಇರದು.
"ಸಮಯಪರೀಕ್ಷೆ" ಹಾಗೂ "ತ್ರೈಲೋಕ್ಯಚೂಡಾಮಣಿ ಸ್ತೋತ್ರ" - ಇವೆರೆಡೂ ಬ್ರಹ್ಮಶಿವನಿಂದ ರಚಿತವಾದ ಕೃತಿಗಳು. ’ತ್ರೈಲೋಕ್ಯಚೂಡಾಮಣಿ ಸ್ತೋತ್ರವು ೩೮* ಸ್ತೋತ್ರರೂಪದ ಪದ್ಯಗಳನ್ನೂ, ವೈದಿಕ ಬೌದ್ಧ ಮೊದಲಾದ ಇತರ ಧರ್ಮಗಳ ವಿಡಂಬನೆಯ ಪದ್ಯಗಳನ್ನೂ ಒಳಗೊಂಡ ಒಂದು ಪುಟ್ಟ ಕೃತಿ. ಆದರೆ ಬ್ರಹ್ಮಶಿವನು ಸಾಹಿತ್ಯ ಚರಿತ್ರೆಯಲ್ಲಿ ವಿಶೇಷವಾಗಿ ಉಲ್ಲೇಖನಾರ್ಹನಾಗುವುದು ಅವನ "ಸಮಯ ಪರೀಕ್ಷೆ" ಎಂಬ ಕೃತಿಯಿಂದಲೇ.
(*ಲಭ್ಯವಿರುವ ಪ್ರತಿಗಳಲ್ಲಿ ಪದ್ಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ)
ಸಮಯಪರೀಕ್ಷೆ:
ಬ್ರಹ್ಮಶಿವನ ಸಮಯಪರೀಕ್ಷೆಯು ಒಂದು ಅಪರೂಪದ ಕೃತಿ. ಮೂಲತಃ ಇದೊಂದು ವಾದಗ್ರಂಥ. ಆಪ್ತಸ್ವರೂಪನಿರೂಪಣಂ, ಆಪ್ತಾಗಮ ವರ್ಣನಂ ಮುಂತಾದ ಹದಿನೈದು ಅಧಿಕಾರ(ಅಧ್ಯಾಯ)ಗಳು ಕೃತಿಯಲ್ಲಿವೆ. ಜಿನಧರ್ಮದ ಮಾರ್ಗದಲ್ಲಿ ನಿಶ್ಚಲವಾಗಿ ನಿಂತು, ಅದರ ತಾತ್ವಿಕ ಹಾಗೂ ಬೌದ್ಧಿಕ ನೆಲೆಗಳನ್ನು ಪೋಷಿಸುವ, ಅವುಗಳ ಮೌಲ್ಯವನ್ನು ಪ್ರತಿಪಾದಿಸಿ ಉಪದೇಶಿಸುವ ಸಂಕಲ್ಪ ಕವಿಯದು. ಜೈನಧರ್ಮದ ಪಾರಮ್ಯವನ್ನು ಸಾರುತ್ತ, ಅನ್ಯಧರ್ಮಗಳಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು ಬೊಟ್ಟು ಮಾಡಿ ತೋರಿಸುವುದೇ ಕೃತಿಯ ಮೂಲ ಉದ್ದೇಶ ಎನ್ನಬಹುದು. ತನ್ನ ಕೃತಿ ಒಂದುರತ್ನ ಕರಂಡಕವೆಂದೂ, ಪರಧರ್ಮೀಯರನ್ನು ದಾರಿಗೆ ತರುವ ಕಾವ್ಯವೆಂದೂ ಅವನು ಹೇಳಿಕೊಂಡಿರುವುದರಿಂದ ಇದು ವಿದಿತವಾಗುತ್ತದೆ.
ಸಮಯಪರೀಕ್ಷೆಗೆ ನಿರ್ದಿಷ್ಟವಾದ ಕಥಾವಸ್ತು ಎಂಬುದಿಲ್ಲ, ಕಾವ್ಯಪರಂಪರೆಯ ಇತರ ಕಾವ್ಯಗಳ ಹಾಗೆ ಇದರಲ್ಲಿ ಅಷ್ಟಾದಶ ವರ್ಣನೆಗಳಿಲ್ಲ. ಯಾವುದೇ ಪ್ರಧಾನ ಪಾತ್ರ, ಸನ್ನಿವೇಶಗಳಿಲ್ಲ. ವಿವಿಧ ಧರ್ಮಗಳ ಸಾರಾಸಾರ ವಿಮರ್ಶೆಯೇ ಇಲ್ಲಿನ ವಸ್ತು. ವಿವಿಧ ರೀತಿಯ ಆಚಾರ-ವಿಚಾರಗಳ ಕಥನವೇ ಇಲ್ಲಿನ ವರ್ಣನೆ. ಆಯಾ ಮತಾನುಯಾಯಿಗಳ ಶೀಲ ಸ್ವಭಾವಗಳ ಪರಿಶೀಲನೆಯೇ ಇದರಲ್ಲಿನ ಪಾತ್ರಚಿತ್ರಣ. ಇನ್ನು, ಪಾತ್ರಗಳ ನಡೆನುಡಿ ಕುರಿತಾದ ಸಂದರ್ಭ ವಿಶೇಷಗಳೇ ಇಲ್ಲಿಯ ಸನ್ನಿವೇಶಗಳು.
ಮುಖ್ಯವಾಗಿ, ಸಮಯಪರೀಕ್ಷೆ ರಚನೆಗೊಂಡ ಕಾಲವನ್ನು ಪರಿಗಣಿಸಿ ಹೇಳುವುದಾದರೆ - ಕಾಲಕ್ಕೆ, ಅಂದರೆ ಸುಮಾರು ೧೨ನೇ ಶತಮಾನದ ವೇಳೆಗೆ ವೀರಶೈವ ಧರ್ಮವು ಒಂದು ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿಯಾಗಿ ರೂಪುಗೊಂಡು, ಜನರನ್ನು ಹೆಚ್ಚುಹೆಚ್ಚಾಗಿ ತನ್ನತ್ತ ಸೆಳೆಯತೊಡಗಿತ್ತು. ಹಿಂದೆ ಜೈನಧರ್ಮಕ್ಕೆ ಇದ್ದ ರಾಜಾಶ್ರಯವೂ, ಜನರಲ್ಲಿ ಜಿನಧರ್ಮದ ಬಗೆಗೆ ಇದ್ದ ಒಲವೂ ಕ್ರಮೇಣ ಕ್ಷೀಣಿಸತೊಡಗಿತ್ತು (ವೀರಶೈವದಲ್ಲಿನ ಸರಳ ಸೂತ್ರಗಳೂ, ಜಿನಧರ್ಮದಲ್ಲಿನ ಕಠಿಣ ವ್ರತಾನುಷ್ಠಾನವೂ ಅದಕ್ಕೆ ಕಾರಣವಾಗಿದ್ದಿರಬಹುದು). ಹೀಗೆ, ತನ್ನ ಧರ್ಮವು ವಿಷಮಸ್ಥಿತಿಯೊಂದನ್ನು ಎದುರಿಸುತ್ತಿರುವುದನ್ನು ಕಂಡು, ಅದರ ಅಗ್ಗಳಿಕೆಯನ್ನು ಎತ್ತಿಹಿಡಿದು, ಅನ್ಯಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನು ಆವೇಶದಿಂದ ಹೊರಗೆಡಹುವುದಕ್ಕಾಗಿ ಬ್ರಹ್ಮಶಿವನು ಮೂಲಕ ಪ್ರಯತ್ನಿಸಿದ್ದಾನೆ. ಶೈವ, ವೈಷ್ಣವ, ಬೌದ್ಧವೂ ಸೇರಿದಂತೆ ಇತರ ಮತ-ಧರ್ಮಗಳನ್ನು ಜೈನಧರ್ಮದೊಡನೆ ತುಲನೆ ಮಾಡಿ ಅವುಗಳಲ್ಲಿ ಜೈನಧರ್ಮವೇ ಹೆಚ್ಚು ಎಂದು ಕೃತಿಯ ಉದ್ದಕ್ಕೂ ಪ್ರತಿಪಾದಿಸುತ್ತಾನೆ - ಬ್ರಹ್ಮಶಿವ.
ಹಿಂದೆಯೇ ತಿಳಿಸಿದಂತೆ, ಇದೊಂದು ವಿಡಂಬನೆಯ ಮಾಧ್ಯಮದಲ್ಲಿರುವ ವಾದಗ್ರಂಥ. ಬ್ರಹ್ಮಶಿವನ ಬಹುಶ್ರುತತೆ ಅವನು ಹೀಗೆ ಸ್ವಮತಪ್ರಶಂಸೆಯ ಜೊತೆಗೆ ಅನ್ಯಮತಗರ್ಹಣೆಗೆ ತೊಡಗುವುದಕ್ಕೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿದೆ ಎಂದೇ ಹೇಳಬಹುದು. ಶೈವಮತಕ್ಕೆ ಮತಾಂತರಗೊಂಡಿದ್ದ ಬ್ರಹ್ಮಶಿವನು ಮತದ ತತ್ತ್ವಗಳನ್ನೂ, ಸಾಹಿತ್ಯವನ್ನೂ ಆಸ್ಥೆಯಿಂದ ಅಭ್ಯಾಸ ಮಾಡಿದ್ದಿರಬಹುದು. ಹಾಗೆಯೇ, ಸ್ವಂತ ಕುತೂಹಲದಿಂದ ಇತರ ಪಂಥಗಳ ಪರಿಚಯವನ್ನೂ ಇವನು ತಕ್ಕಮಟ್ಟಿಗೆ ಹೊಂದಿದ್ದಿರಬೇಕು. ಕೃತಿಯ ಹಲವು ಭಾಗಗಳಲ್ಲಿ ಅವನು ಒಡ್ಡುವ ವಾದಗಳ ಹಿನ್ನೆಲೆಯಿಂದ ಅದು ನಮಗೆ ತಿಳಿದುಬರುತ್ತದೆ. ಆದರೂ, ಬ್ರಹ್ಮಶಿವನ ವಾದಗಳ ಸರಣಿ ಯಾವ ತರ್ಕಶುದ್ಧವಾದ ನೆಲೆಗಟ್ಟಿನ ಮೇಲೂ ನಿಂತದ್ದಲ್ಲ. ಅನ್ಯಧರ್ಮದ ತತ್ತ್ವಗಳ ಬಗೆಗೆ ಗಹನವಾಗಿ ವಿಚಾರ ಮಾಡದೆ, ಹಾಸ್ಯ - ಅಣಕ - ವಿಡಂಬನೆಗಳ ಮೂಲಕ ಅವನು ಹೂಡುವ ವಾದ ಒಮ್ಮೊಮ್ಮೆ ತರ್ಕಹೀನವಾಗಿ, ಒಮ್ಮೊಮ್ಮೆ ತೀರ ಬಾಲಿಶವಾಗಿ ಕಾಣುತ್ತದೆ. ಅವನ ವಾದವು ಕೆಲವೊಮ್ಮೆ ಅಸಹನೆಯಿಂದ ಕೂಡಿದ್ದರೆ, ಒಮ್ಮೊಮ್ಮೆ ಅಸಭ್ಯತೆಯಿಂದ ಕೂಡಿದ್ದು, ತೀರ ಕಟುವಾದದ್ದು ಎನಿಸುತ್ತದೆ.
ಬ್ರಹ್ಮಶಿವನ ತೀವ್ರವಾದ ಆಕ್ರೋಶ, ಆಕ್ಷೇಪಣೆಗಳಿಗೆ ವಿಶೇಷವಾಗಿ ಗುರಿಯಾಗಿರುವುದು ವೈದಿಕ ಶೈವ ಪಂಥಗಳು ಹಾಗೂ ನಾಡ ಜಂಗುಳಿ ದೈವಗಳು. ವೈಷ್ಣವ ಹಾಗೂ ಬೌದ್ಧ ಪಂಥಗಳ ವಿಷಯದಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ. ಅವನ ವಾದಗಳಲ್ಲಿ ಮುಖ್ಯವಾಗಿ ಕಾಣಬಹುದಾದ ಅಂಶವೆಂದರೆ - ಇತರ ಧರ್ಮಗಳನ್ನು ಕುರಿತು ಟೀಕಿಸುವಾಗ ಸಾವಧಾನ ಚಿತ್ತದಿಂದ, ನಿರ್ಲಿಪ್ತತೆಯಿಂದ ಅವುಗಳ ತತ್ತ್ವಗಳನ್ನು ಪರಿಭಾವಿಸಿ ನೋಡಿ, ನಂತರ ಅವುಗಳ ವಿಮರ್ಶೆಗೆ ತೊಡಗದೆ, ನೇರವಾಗಿ ವಿನಾಕಾರಣವೆಂಬಂತೆ ಅವುಗಳ ಬಗೆಗೆ ಕಟುವಾದ ಟೀಕೆಯಲ್ಲಿ ತೊಡಗಿಕೊಂಡಿದ್ದಾನೆ ಕವಿ. ಎಷ್ಟೋ ಸಾರಿ ಕಾಲಕ್ಕೆ ರೂಢಿಯಲ್ಲಿ ಇಲ್ಲದಿದ್ದ ಪದ್ಧತಿಗಳನ್ನೂ ನ್ನೂ ಇವೆ ಎಂದೇ ಭಾವಿಸಿ ಅವನ್ನು ಖಂಡಿಸಿದ್ದಾನೆ. ಒಮ್ಮೊಮ್ಮೆ ಎಲ್ಲೋ ಕೇಳಿದ ಕಥೆಗಳನ್ನೇ ನಿಜವೆಂದು ಭಾವಿಸಿ ಅನ್ಯಧರ್ಮಗಳ ದೂಷಣೆಯಲ್ಲಿ ತೊಡಗುತ್ತಾನೆ.
ಒಡಲೊಳಿರ್ಭಾಗಮನಿತ್ತಂ
ಗಡ ಕಾಂತೆಗೆ ಶಂಭು ಶಂಭುಗಂ ಕೊಟ್ಟಳ್
ನ್ನೊಡಲೊರ್ಭಾಗಮನಗಸುತೆ
ಗಡ ಮಿಕ್ಕೆರಡರೆಯನಾರ್ಗೆ ಕೊಟ್ಟರೊ ಪೇಳಿಂ    ೧೦.೭೩

ಹರನ ಗಿರಿಸುತೆಯ ತನುಗಳೊ
ಳೆರಡರೆಯಂ ಕಾಣಲಾಗದುಳಿದೆರಡರೆಯಂ
ನರಿ ತಿಂದವೊ ನಾಯ್ ತಿಂದವೊ
ಪರೆದಿರ್ದುವೊ ಪೇಳಿಮರ್ಧನಾರೀಶ್ವರರಾ                     ೧೦.೭೪
     ಇಲ್ಲಿಯವರೆಗೂ ಕೃತಿಯಲ್ಲಿನ ಋಣಾತ್ಮಕ ಅಂಶಗಳ ಬಗೆಗೇ ಹೇಳಿದ್ದಾಯಿತು. ಅದರಲ್ಲಿನ ಧನಾತ್ಮಕ ವಿಷಯಗಳ ಬಗೆಗೂ ಒಮ್ಮೆ ಗಮನ ಹರಿಸಬೇಕಿದೆ. ತನಗೆ ತಿಳಿದೋ ತಿಳಿಯದೆಯೋ, ಬ್ರಹ್ಮಶಿವನು ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳ ವಿವರವಾದ ಚಿತ್ರಣವೊಂದನ್ನು ನಮ್ಮ ಮುಂದಿಟ್ಟಿದ್ದಾನೆ - ಕೃತಿಯಲ್ಲಿ. ಆಗ ಪ್ರಚಲಿತವಿದ್ದ ಅನೇಕ ಮತ-ಧರ್ಮಗಳ, ಅವುಗಳ ಆಚಾರ-ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿ ಕೃತಿಯ ಮೂಲಕ ನಮಗೆ ದೊರೆಯುತ್ತದೆ. ಕಾಲಕ್ಕೆ ಇದ್ದಿರಬಹುದಾದ ಹಲವಾರು ಮೂಢಾಚರಣೆಗಳನ್ನು ಬ್ರಹ್ಮಶಿವನು ಖಂಡಿಸಿ ನುಡಿದಿರುವುದನ್ನು ನೋಡಿದರೆ ಇದು ನಮಗೆ ತಿಳಿಯುತ್ತದೆ.
ಕಾಲಕ್ಕೆ ಪ್ರವರ್ಧಮಾನದಲ್ಲಿದ್ದ ಶೈವ ವೈಷ್ಣವ ಧರ್ಮಗಳ ಪ್ರಭಾವಲಯದ ನಡುವೆಯೇ ಇದ್ದೂ, ಆಯಾ ಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನೂ, ಅವುಗಳ ಆಚರಣೆಗಳಲ್ಲಿದ್ದ ಹಲವು ಭ್ರಮೆ ಮೌಢ್ಯಗಳನ್ನೂ ಅಷ್ಟು ದಿಟ್ಟವಾಗಿ ಹೊರಹಾಕಲು ಪ್ರಯತ್ನಿಸಿರುವ ಅವನ ಧೈರ್ಯವನ್ನು ಮೆಚ್ಚಬೇಕಾದ್ದೇ.
ಧಾರ್ಮಿಕ ಹಿನ್ನೆಲೆಯಿಂದಲ್ಲದೆ ಇನ್ನೊಂದು ಆಯಾಮದಿಂದ ನೋಡಿದ್ದಾದರೆ ಬ್ರಹ್ಮಶಿವನಲ್ಲಿ ಒಬ್ಬ ವಿಚಾರವಾದಿಯನ್ನೂ, ಸಮಾಜ ಸುಧಾರಕನನನ್ನೂ ಮನಗಾಣಬಹುದು.
ಅನ್ಯಧರ್ಮಗಳ ಬಗೆಗೆ ಅವನ ಮಾತುಗಳು ಕಟುವಾಗಿದ್ದರೂ ಕೂಡ, ಅವನು ವಿರೋಧಿಸಿದ ಹಲವಾರು ವಿಷಯಗಳು ಸಮಾಜದಲ್ಲಿ ಆಗ ಪ್ರಚಲಿತವಿದ್ದ ಕೆಲವು ಅನಿಷ್ಟ ಪದ್ಧತಿಗಳೇ ಆಗಿವೆ. ಮೇಲು-ಕೀಳು, ಮಡಿ-ಮೈಲಿಗೆ, ನಾಡ ಜಂಗುಳಿ ದೈವಗಳಿಗೆ ಕೊಡುತ್ತಿದ್ದ ಪಶುಬಲಿ - ಹೀಗೆ ಮುಂತಾದವು ಬ್ರಹ್ಮಶಿವನಿಂದ ತೀವ್ರ ಖಂಡನೆಗೆ ಒಳಗಾದ ವಿಷಯಗಳು. ಅಹಿಂಸೆಯೇ ಪರಮಧರ್ಮವೆಂಬ ಜಿನಧರ್ಮ ಸಾರವನ್ನು ಪ್ರತಿಪಾದಿಸಲು ಬ್ರಹ್ಮಶಿವನು ಎಲ್ಲವನ್ನೂ ವಿರೋಧಿಸಿದ್ದಾನೆ.
ಇನ್ನು, ಕೃತಿಯಲ್ಲಿ ಹಲವಾರು ಚಾರಿತ್ರಿಕ ಅಂಶಗಳೂ ದಾಖಲಾಗಿವೆ. ನೆಲೆಯಿಂದ ಚರಿತ್ರೆಯನ್ನರಿಯಲೂ ಕೃತಿಯು ಉಪಕಾರಿ ಎಂದೇ ಹೇಳಬಹುದು.
ಭಾವಿಸುವನಾವನೆಲ್ಲಾ
ಜೀವಮುಮಂ ತನ್ನ ಮಕ್ಕಳಂತಂತವನಂ
ಭಾವಿಸುಗುಂ ಭೂವಳಯಂ
ದೇವನಿವಂ ಮನುಜನಲ್ಲನೆಂದಾಪೊಳ್ತುಂ                       .೨೩
(ಯಾವೊಬ್ಬ ವ್ಯಕ್ತಿಯು ಎಲ್ಲ ಜೀವ/ಜೀವಿಗಳನ್ನೂ ತನ್ನ ಮಕ್ಕಳಂತೆ ಎಂದು ಭಾವಿಸಿ ನಡೆದುಕೊಳ್ಳುತ್ತಾನೋ, ಅಂತಹ ವ್ಯಕ್ತಿಯನ್ನು ಕುರಿತು ಭೂಲೋಕವು "ಇವನು ಮನುಜನಲ್ಲ, ದೇವತೆ" ಎಂದು ಭಾವಿಸುತ್ತದೆ.)
ಇಂತಹ ಉದಾರವಾದ ವಿಚಾರವನ್ನುಳ್ಳ ಹಲವಾರು ಪದ್ಯಗಳು ಕೃತಿಯಲ್ಲಿವೆ.
ಅದಾವ ಕಾರಣಕ್ಕೋ, ಅವನ ಮುಂದಿನ ಕವಿಗಳಾರೂ ಇವನನ್ನು ತಮ್ಮ ಕೃತಿಗಳಲ್ಲಿ ನೆನೆದಿಲ್ಲವಾದರೂ, ಬ್ರಹ್ಮಶಿವನು ನಿಶ್ಚಿತವಾಗಿಯೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಮಹತ್ವದ ಸ್ಥಾನಕ್ಕೆ ಅರ್ಹನಾಗಿದ್ದಾನೆ.
--ಕೃಪೆ: ಲೋಕೇಶ್ ಆಚಾರ್ಯ