ನನ್ನ ಪುಟಗಳು

ಭಾಷಾಭ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾಷಾಭ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

18 ಮೇ 2021

ಪದ್ಯ-೪ ಕೌರವೇಂದ್ರನ ಕೊಂದೆ ನೀನು (ಭಾಷಾ ಚಟುವಟಿಕೆ, ವ್ಯಾಕರಣಾಂಶಗಳು)

 ಭಾಷಾ ಚಟುವಟಿಕೆ

೧.  ಅಲಂಕಾರವನ್ನು ಹೆಸರಿಸಿ, ಸಮನ್ವಯಗೊಳಿಸಿ.

ಮಾರಿಗೌತನವಾಯ್ತು ನಾಳಿನ ಭಾರತವು

ಅಲಂಕಾರ: ರೂಪಕಾಲಂಕಾರ ಲಕ್ಷಣ: ಉಪಮೇಯ ಮತ್ತು ಉಪಮಾನಗಳ ನಡುವೆ ಅಭೇದ ಕಲ್ಪಿಸುವುದನ್ನು ರೂಪಕಾಲಂಕಾರ ಎನ್ನುವರು.

ಉಪಮೇಯ: ಭಾರತ ಯುದ್ಧ, ಉಪಮಾನ: ಮಾರಿಯ ಔತಣ

ಸಮನ್ವಯ: ಇಲ್ಲಿ ಉಪಮೇಯವಾಗಿರುವ ಭಾರತ ಯುದ್ಧಕ್ಕೂ ಉಪಮಾನವಾರಿರುವ ಮಾರಿಯ ಔತಣಕ್ಕೂ ಅಭೇದ

  ಕಲ್ಪಿಸಲಾಗಿದೆ. ಆದ್ದರಿಂದ ಇದು ರೂಪಕಾಲಂಕಾರವಾಗಿದೆ.

 

೨. ವಿಗ್ರಹಿಸಿ, ಸಮಾಸದ ಹೆಸರನ್ನು ತಿಳಿಸಿ.

೧) ಇನತನೂಜ = ಇನನ ತನೂಜನು ಯಾರೋ ಅವನೇ (ಸೂರ್ಯ) - ಬಹುವ್ರೀಹಿಸಮಾಸ

೨) ದನುಜರಿಪು = ದನುಜರಿಗೆ ರಿಪು(ವೈರಿ) ಆಗಿರುವವನು ಯಾರೋ ಅವನೇ (ವಿಷ್ಣು ಅಥವಾ ಕೃಷ್ಣ) - ಬಹುವ್ರೀಹಿಸಮಾಸ

೩) ಮುರಾರಿ = ಮುರನಿಗೆ ಅರಿ (ಶತ್ರು) ಆದವನು ಯಾರೋ ಅವನೇ (ವಿಷ್ಣು ಅಥವಾ ಕೃಷ್ಣ) - ಬಹುವ್ರೀಹಿ ಸಮಾಸ

೪) ಮೇದಿನೀಪತಿ = ಮೇದಿನಿಗೆ (ಭೂಮಿಗೆ) ಪತಿಯಾದವನು (ಒಡೆಯನಾದವನು) ಯಾರೋ ಅವನೇ - ಬಹುವ್ರೀಹಿಸಮಾಸ

೫) ಕೈಯಾನು = ಕೈಯನ್ನು + ಆನು - ಕ್ರಿಯಾಸಮಾಸ.

೬) ಮಾದ್ರಮಾಗಧಯಾದವರು = ಮಾದ್ರರೂ + ಮಾಗಧರೂ + ಯಾದವರೂ - ದ್ವಂದ್ವಸಮಾಸ

೭) ಹೊಗೆದೋರು = ಹೊಗೆಯನ್ನು + ತೋರು - ಕ್ರಿಯಾಸಮಾಸ

೮) ರಾಜೀವಸಖ = ರಾಜೀವನಿಗೆ (ತಾವರೆಗೆ) ಸಖನಾದವನು ಯಾರೋ ಅವನೇ (ಸೂರ್ಯ) - ಬಹುವ್ರೀಹಿಸಮಾಸ

 

೩. ಪ್ರಸ್ತಾರ ಹಾಕಿ, ಗಣವಿಂಗಡಿಸಿ, ಛಂದಸ್ಸಿನ ಹೆಸರು ತಿಳಿಸಿ.
 

  3         4           3        4
_  U   _   _    _  U    _ _ 
ಏ ನು | ಹೇ ಳೈ | ಕ ರ್ಣ | ಚಿ ತ್ತ |

    3            4           3         4
_    U  _    U  U   U U U    _   _

ಗ್ಲಾ ನಿ | ಯಾ ವು ದು | ಮ ನ ಕೆ | ಕುಂ ತೀ |
 
     3            4           3         4
_    U   U U U U  _  U    _    U   U   _  U   _  U U  _
ಸೂ ನು | ಗ ಳ ಬೆ ಸ | ಕೈ ಸಿ | ಕೊಂ ಬು ದು | ಸೇ ರ | ದೇ ನಿ ನ | ಗೆ

                                                    ಛಂದಸ್ಸು :- ಭಾಮಿನಿಷಟ್ಪದಿ

೪. ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗುರುತಿಸಿ ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದ ಬರೆಯಿರಿ.

೧. ತನುಜ       : ಮಗ            :: ಸಖ                : ಸ್ನೇಹಿತ(ಗೆಳೆಯ)

೨. ಯುದ್ಧ        : ಜುದ್ದ            :: ಪ್ರಸಾದ            : ಹಸಾದ

೩. ಭೇದವಿಲ್ಲ    : ಆಗಮ ಸಂಧಿ   :: ನಿಮ್ಮಡಿಗಳಲಿ     : ಲೋಪಸಂಧಿ

೪. ಕಂದ         : ನಾಲ್ಕು ಸಾಲು  :: ಷಟ್ಪದಿ            : ಆರು ಸಾಲು

ಹೆಚ್ಚುವರಿ ಪ್ರಶ್ನೆಗಳು

ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರನ್ನು ಆರಿಸಿ ಬರೆಯಿರಿ.
೧. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ಹೀಗೆ ಕರೆಯುತ್ತೇವೆ :
ಎ) ಪ್ಲುತ ಬಿ) ಗುರು ಸಿ) ಲಘು ಡಿ) ಗಣ

೨. ಕೈಯಾನು - ಪದವು ಈ ಸಮಾಸವಾಗಿದೆ :
ಎ) ಕ್ರಿಯಾಸಮಾಸ ಬಿ) ದ್ವಂದ್ವಸಮಾಸ ಸಿ) ಬಹುವ್ರೀಹಿಸಮಾಸ ಡಿ) ತತ್ಪುರುಷಸಮಾಸ

೩. ಮಾದ್ರಮಾಗಧಯಾದವರು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಅಂಶಿಸಮಾಸ ಬಿ) ತತ್ಪರುಷಸಮಾಸ ಸಿ) ದ್ವಿಗುಸಮಾಸ ಡಿ) ದ್ವಂದ್ವಸಮಾಸ.

೪. ಹಸಾದ - ಪದದ ತತ್ಸಮ ರೂಪ :
ಎ) ವಿಷಾದ ಬಿ) ಹಸನಾದ ಸಿ) ಪಸಾದ ಡಿ) ಪ್ರಸಾದ.

೫. ದೃಗುಜಲ - ಪದದ ಅರ್ಥ ಇದಾಗಿದೆ :
ಎ) ಕಣ್ಣನೀರು ಬಿ) ತಿಳಿನೀರು ಸಿ) ಮೃಗಗಳನೀರು ಡಿ) ಬಿಸಿನೀರು.

೬. ಬಹುವ್ರೀಹಿ ಸಮಾಸಕ್ಕೆ ಈ ಪದವು ಉದಾಹರಣೆಯಾಗಿದೆ :
ಎ) ಹೊಗೆದೋರು ಬಿ) ಕೈಯಾನು ಸಿ) ರಾಜೀವಸಖ ಡಿ) ಬಾಯ್ದಂಬುಲ

೭. ಭಾಮಿನಿ ಷಟ್ಪದಿಯಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ :
ಎ) ೧೦೮ ಬಿ) ೧೦೨ ಸಿ) ೬೪ ಡಿ) ೧೪೪

೮. ದನುಜರಿಪು - ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ಕ್ರಿಯಾಸಮಾಸ ಬಿ)ಬಹುವ್ರೀಹಿಸಮಾಸ ಸಿ) ದ್ವಂದ್ವಸಮಾಸ ಡಿ) ತತ್ಪುರುಷಸಮಾಸ

೯. ಉಪಮಾನ ಉಪಮೇಯಗಳ ನಡುವೆ ಅಭೇದ ಸಂಬಂಧ ಕಲ್ಪಿಸುವ ಅಲಂಕಾರ :
ಎ) ಉಪಮಾಲಂಕಾರ ಬಿ) ರೂಪಕಾಲಂಕಾರ ಸಿ) ದೃಷ್ಟಾಂತಾಲಂಕಾರ ಡಿ) ಉತ್ಪ್ರೇಕ್ಷಲಾಂಕಾರ

೧೦. ಗುರು-ಲಘು ಮೂರಿರಲು ಈ ಗಣವಾಗುತ್ತದೆ :
ಎ) ’ಭ-ಯ’ಗಣ ಬಿ) ’ಜ-ರ’ಗಣ ಸಿ) ’ಮ-ನ’ಗಣ ಡಿ) ’ಸ-ತ’ಗಣ

೧೧. ಷಟ್ಪದಿಯಲ್ಲಿರುವ ವಿಧಗಳು :
ಎ) ಆರು ಬಿ) ಎಂಟು ಸಿ) ನಾಲ್ಕು ಡಿ) ಮೂರು

೧೨. ’ಕೌಂತೇಯ’ - ಪದವು ಈ ಅಕ್ಷರಗಣಕ್ಕೆ ಉದಾಹರಣೆಯಾಗಿದೆ :
ಎ) ’ಯ’ಗಣ ಬಿ) ’ಸ’ಗಣ ಸಿ) ’ತ’ಗಣ ಡಿ) ’ಭ’ಗಣ
 

೧೩. ಒಂದು ಅಕ್ಷರವನ್ನು ಉಚ್ಛರಿಸುವ ಅವಧಿಗೆ ಹೀಗೆನ್ನುತ್ತಾರೆ :
ಎ) ಗಣ ಬಿ) ಮಾತ್ರೆ ಸಿ) ಯತಿ ಡಿ) ಪ್ರಾಸ

೧೪. ಮೂರು-ನಾಲ್ಕು ಮಾತ್ರೆಗಳಿಂದ ಗಣವಿಭಜನೆಯನ್ನು ಮಾಡುವ ಷಟ್ಪದಿ :
ಎ) ವಾರ್ಧಕ ಬಿ) ಕುಸುಮ ಸಿ) ಭೋಗ ಡಿ) ಭಾಮಿನಿ

೧೫. ಉರವಣಿಸು - ಈ ಪದದ ಅರ್ಥ :
ಎ) ಹೆಚ್ಚಾಗು ಬಿ) ಅವಸರ ಸಿ) ಮನಸ್ಸು ಡಿ) ಕಡಿಮೆಯಾಗು.

[ ಉತ್ತರಗಳು : ೧. ಬಿ. ಗುರು ೨. ಎ. ಕ್ರಿಯಾಸಮಾಸ ೩. ಡಿ. ದ್ವಂದ್ವಸಮಾಸ ೪.ಡಿ. ಪ್ರಸಾದ ೫. ಎ. ಕಣ್ಣೀರು ೬. ಸಿ. ರಾಜೀವಸಖ ೭. ಬಿ. ೧೦೨ ೮. ಬಿ. ಬಹುವ್ರೀಹಿಸಮಾಸ ೯. ಬಿ. ರೂಪಕಾಲಂಕಾರ ೧೦. ಸಿ. ಮ-ನ ಗಣ ೧೧. ಎ. ಆರು
೧೨. ಸಿ. `ತ’ಗಣ ೧೩. ಬಿ. ಮಾತ್ರೆ ೧೪. ಖ. ಭಾಮಿನಿ ೧೫. ಎ. ಹೆಚ್ಚಾಗು ]

ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :

೧. ಕಂದಪದ್ಯ : ನಾಲ್ಕುಸಾಲು : : ಷಟ್ಪ್ಟದಿ : ___________
೨. ಋಣ : ಹಂಗು : : ರಣ : ___________
೩. ಲಕ್ಷ್ಮೀಶ : ವಾರ್ಧಕಷಟ್ಪದಿ : : ಕುಮಾರವ್ಯಾಸ : ___________
೪. ಷಟ್ಪದಿ : ಮಾತ್ರಾಗಣ : : ಚಂಪಕಮಾಲಾವೃತ್ತ : ___________
೫. ಇನತನೂಜ : ಬಹುವ್ರೀಹಿಸಮಾಸ : : ಮಾದ್ರಮಾಗಧಯಾದವರು : ___________
೬. ಲಕ್ಷ್ಮೀಶ : ಉಪಮಾಲೋಲ : : ಕುಮಾರವ್ಯಾಸ : ____________
೭. ಉರ್ವಿಯೊಳ್ : ಸಪ್ತಮಿವಿಭಕ್ತಿ : : ಸುವಾಜಿಯಂ : _____________
೮. ಲಘು : ಒಂದುಮಾತ್ರೆ : : ಗುರು : _____________
೯. ಮುರಾರಿ : ಕೃಷ್ಣ : : ರವಿಸುತ : _____________
೧೦. ಹಸಾದ : ಪ್ರಸಾದ : : ದಾತಾರ : ______________

[ ಉತ್ತರಗಳು : ೧. ಆರುಸಾಲು ೨. ಯುದ್ಧ ೩. ಭಾಮಿನಿಷಟ್ಪದಿ ೪. ಅಕ್ಷರಗಣ ೫. ದ್ವಂದ್ವಸಮಾಸ ೬.ರೂಪಕಸಾಮ್ರಾಜ್ಯಚಕ್ರವರ್ತಿ ೭. ದ್ವಿತೀಯ ೮. ಎರಡು ಮಾತ್ರೆ ೯. ಕರ್ಣ ೧೦. ದಾತೃ ] 

 

************

*************

07 ಜನವರಿ 2021

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಭಾಷಾಭ್ಯಾಸ

೧. ಪದಗಳನ್ನು ವಿಗ್ರಹಿಸಿ ಸಮಾಸ ಹೆಸರಿಸಿ.
ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡು ರಾತ್ರಿ = ರಾತ್ರಿಯ +ನಡುವೆ = ಅಂಶಿ ಸಮಾಸ
ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ

೨. ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ.
ಹೀಂಗ-ಹೀಗೆ,
ಮ್ಯಾಗ-ಮೇಲೆ,
ಕಳುವ್ಯಾರೆ-ಕಳಿಸಿದರು,
ಇಲ್ಲದಂಗ-ಇಲ್ಲದ ಹಾಗೆ,
ಇಸವಾಸ-ವಿಶ್ವಾಸ,
ಸಕ್ಕಾರಿ-ಸಕ್ಕರೆ.

೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ”ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ”.
    ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು
    ಉಪಮಾನ : ಮುಂಗಾರಿನ ಸಿಡಿಲು
    ಉಪಮಾವಾಚಕ : ಹಾಂಗ (ಹಾಗೆ)
    ಸಮಾನಧರ್ಮ : ಸಿಡಿಯುವುದು
    ಅಲಂಕಾರ : ಉಪಮಾಲಂಕಾರ
    ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಆ) ”ಸಿಡಿಲ ಸಿಡಿದಾಂಗ ಗುಂಡು ಸುರಿದಾವ ”.
    ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)
    ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)
    ಉಪಮಾವಾಚಕ - ಹಾಂಗ (ಹಾಗೆ)
    ಸಮಾನ ಧರ್ಮ - ಸಿಡಿಯುವುದು
    ಅಲಂಕಾರ - ಉಪಮಾಲಂಕಾರ
    ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

೫. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.
ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು
ಅನ್ಯದೇಶ್ಯ - ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ, ಕಬುಲ

*********



**************



02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಭಾಷಾ ಚಟುವಟಿಕೆ

ಭಾಷಾಚಟುವಟಿಕೆ

೧) ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು-ನಿಲ್ಲು; ನಡೆಸು-ನಡೆ;  ಹಚ್ಚುವುದು-ಹಚ್ಚು; ಮುಟ್ಟೋಣ-ಮುಟ್ಟು; ಕಟ್ಟುವುದು-ಕಟ್ಟು; ಆಗೋಣ-ಆಗು


೨) ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ - ಪ್ರೀತಿ + ಅ

ಬಿರುಗಾಳಿಗೆ - ಬಿರುಗಾಳಿ + ಗೆ

ಜಲಕ್ಕೆ - ಜಲ _ ಕ್ಕೆ

ಬಿದ್ದುದನ್ನು - ಬಿದ್ದುದು + ಅನ್ನು


೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

ಸಂಶಯದೊಳ್ - ಒಳ್ - ಸಪ್ತಮೀ ವಿಭಕ್ತಿ ಪ್ರತ್ಯಯ,  

ಜಲದಿಂ - ಇಂ - ತೃತೀಯ ವಿಭಕ್ತಿ ಪ್ರತ್ಯಯ

ಮರದತ್ತಣಿಂ - ಅತ್ತಣಿಂ - ಪಂಚಮೀ ವಿಭಕ್ತಿ ಪ್ರತ್ಯಯ

ರಾಯಂಗೆ - ಗೆ - ಚತುರ್ಥಿ ವಿಭಕ್ತಿ ಪ್ರತ್ಯಯ


೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.

ಧಾತು

ವಿಧ್ಯರ್ಥಕ

ನಿಷೇಧಾರ್ಥಕ

ಸಂಭಾವನಾರ್ಥಕ

ಹಾಡು

ಹಾಡಲಿ

ಹಾಡನು

ಹಾಡಿಯಾನು

ನೋಡು

ನೋಡಲಿ

ನೋಡಳು

ನೋಡಿಯಾಳು

ಕಟ್ಟು

ಕಟ್ಟಲಿ

ಕಟ್ಟರು

ಕಟ್ಟಿಯಾರು

ಕೇಳು

ಕೇಳಲಿ

ಕೇಳಿಯಾನು

ಕೇಳನು

ಓಡು

ಓಡಲಿ

ಓಡಳು

ಓಡಿಯಾಳು

ಓದು

ಓದಲಿ

ಓದರು

ಓದಿಯಾರು

ಬರೆ

ಬರೆಯಲಿ

ಬರೆಯನು

ಬರೆದಾನು



*********

12 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಭಾಷಾ ಚಟುವಟಿಕೆ

1. ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ. 
    ೧. ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬಂದೆವು. (ಭವಿಷ್ಯತ್‌ಕಾಲಕ್ಕೆ ಪರಿವರ್ತಿಸಿ) 
    ಉತ್ತರ: ವೆಸ್ಟ್‌ಮಿನ್‌ಸ್ಟರ್ ಅಬೆ ನೋಡಿಕೊಂಡು ಬರುವೆವು.
   
 ೨. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು. (ವರ್ತಮಾನಕಾಲಕ್ಕೆ ಪರಿವರ್ತಿಸಿ) 
    ಉತ್ತರ: ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ.
    
೩. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ. (ಭೂತಕಾಲಕ್ಕೆ ಪರಿವರ್ತಿಸಿ)
    ಉತ್ತರ: ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.
 
2. ಈ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. 
    ೧. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು / ಕೈ ಕೆಸರಾದರೆ ಬಾಯಿ ಮೊಸರು / ದುಡಿಮೆಯೇ ದುಡ್ಡಿನ ತಾಯಿ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ದುಡಿಮೆ ಅಥವಾ ದೈಹಿಕ ಶ್ರಮ ಹಾಗೂ ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತದೆ.

* ಹನ್ನೆರಡನೆಯ ಶತಮಾನದಲ್ಲೇ ಶಿವಶರಣರು ’ಕಾಯಕವೇ ಕೈಲಾಸ’, ಎಂದು ದುಡಿಮೆಯ ಮಹತ್ವವನ್ನು ಸಾರಿದರು. ಕಾಯಕ ಎಂದರೆ ’ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟರೆ ಸುಖವಿದೆ ಎಂಬುದು ಈ ಗಾದೆಯ ಆಶಯವಾಗಿದೆ.

’ದುಡಿಮೆಯೇ ದುಡ್ಡಿನ ತಾಯಿ’, ’ಕಾಯಕವೇ ಕೈಲಾಸ’, ’ಆಳಾಗಬಲ್ಲವನು ಆಳುವನು ಅರಸಾಗಿ’ ಮುಂತಾದವು ಇದೇ ಅರ್ಥ ಕೊಡುವ ಗಾದೆ ಮಾತುಗಳಾಗಿವೆ.

    ೨. ಕಟ್ಟುವುದು ಕಠಿಣ; ಕೆಡಹುವುದು ಸುಲಭ / ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ. 

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು. 

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

(ಹೆಚ್ಚಿನ ಗಾದೆ ವಿಸ್ತರಣೆಗಳನ್ನು ಓದಲು "ಇಲ್ಲಿ ಕ್ಲಿಕ್‌ಮಾಡಿ")

 
3. ಈ ವಿಷಯಗಳಿಗೆ ಪ್ರಬಂಧ ಬರೆಯಿರಿ.
೧. ಸ್ವಚ್ಛಭಾರತ ಅಭಿಯಾನ
೨. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ
೩. ರಾಷ್ಟ್ರೀಯ ಭಾವೈಕ್ಯ
(ಶೀಘ್ರದಲ್ಲೇ ಪ್ರಕಟಿಸಲಾಗುವುದು)

*************
***********








11 ನವೆಂಬರ್ 2020

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಭಾಷಾಭ್ಯಾಸ

 ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
   ಕನ್ನಡ ಸಂಧಿಗಳು:  ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ
ಉದಾಹರಣೆಗಳು: -
   ಲೋಪ - ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ. 
   ಆಗಮ - ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ. 
   ಆದೇಶ - ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು. 

೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ. 
    ಸಂಸ್ಕೃತ ಸ್ವರ ಸಂಧಿಗಳು : ಸವರ್ಣದೀರ್ಘ ಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್‌ಸಂಧಿ
    ಸಂಸ್ಕೃತ ವ್ಯಂಜನ ಸಂಧಿಗಳು : ಜಶ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿ

೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ. 
ಸುರಾಸುರ = ಸುರ + ಅಸುರ - ಸವರ್ಣಧೀರ್ಘಸಂಧಿ
ಬಲ್ಲೆನೆಂದು = ಬಲ್ಲೆನು + ಎಂದು - ಲೋಪಸಂಧಿ 
ಸೂರ್ಯೋದಯ = ಸೂರ್ಯ + ಉದಯ - ಗುಣಸಂಧಿ
ಮಳೆಗಾಲ = ಮಳೆ + ಕಾಲ - ಆದೇಶಸಂಧಿ
ಅಷ್ಟೈಶ್ವರ್ಯ = ಅಷ್ಟ + ಐಶ್ವರ್ಯ = ವೃದ್ಧಿಸಂಧಿ
ವೇದಿಯಲ್ಲಿ = ವೇದಿ + ಅಲ್ಲಿ - ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ. 
೧. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ 
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ದ್ವಿರುಕ್ತಿ 
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ತ್ವಸಂಧಿ
 
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. 
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
* ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ. ’ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ. ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ’ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
 
೨. ಮನಸಿದ್ದರೆ ಮಾರ್ಗ. 
    ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅ೦ಶಗಳು ಮುಖ್ಯ - ಒ೦ದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ, ಸಾಮರ್ಥ್ಯ-ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ. ಸಾಮರ್ಥ್ಯಕ್ಷಮತೆಗಳಿದ್ದರೂ ಮನಸ್ಸು-ಪ್ರಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯ ವಾದೀತು? ಒ೦ದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ, ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವ೦ತರಾಗಿದ್ದರೂ, ಮಸಸ್ಸಿಟ್ಟು ಪ್ರಯತ್ನಿಸದೇ ಇರುವುದರಿ೦ದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊ೦ಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಅನುತ್ತೀರ್ಣಪಾಗುವವರೂ ಇದ್ದಾರೆ. 

    ಒ೦ದು ಸೂಕ್ತಿ ಇದೆ - 'ಹೊರಟರೆ ಇರುವೆಯೂ ನೂರು ಯೋಜನೆ ಹೋಗುತ್ತದೆ, ಹೊರಡದಿದ್ದರೆ ಗರುಡನೂ ಒ೦ದು ಹೆಜ್ಜೆ ಮು೦ದೆ ಹೋಗುವುದಿಲ್ಲ, ಇದ್ದಲ್ಲಿಯೇ ಇರುತ್ತಾನೆ. ಈ ಸೂಕ್ತಿಯು ಕಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎ೦ಬುದನ್ನು ಹೇಳುತ್ತದೆ. 'ಮನಸ್ಸಿದ್ದರೆ ಮಹಾದೇವ' ಎನ್ನುವ ಗಾದೆಯೂ, ಇಂಗ್ಲಿಷಿನಲ್ಲಿ "Where there is a will there is a way" ಎಂಬ ಮಾತೂ ಇದೇ ಅರ್ಥವನ್ನು ನೀಡುತ್ತವೆ.
**********