ನನ್ನ ಪುಟಗಳು

24 ಜೂನ್ 2018

ಮಲೆಗಳಲ್ಲಿ ಮದುಮಗಳು-10

          ಗುತ್ತಿ ತನ್ನ ಕುಳ್ಳುಗಾಲುಗಳನ್ನೆ ಬೀಸಿ ಬೀಸಿ ಹಾಕುತ್ತಾ ಹೆದ್ದಾರಿಯಲ್ಲಿ ತುಸು ದೂರ ಹೋಗಿ ಪಕ್ಕನೆ ನಿಂತನು. ನೋಡುತ್ತಾನೆ ಕೋಣೂರಿಗೆ ಅಗಚುವ ಕಾಲುದಾರಿಯಿಂದ ಮುಂದೆ ನಡೆದು ಬಂದುಬಿಟ್ಟಿದ್ದಾನೆ! ‘ಹಾಳು ದಾರೀನಾ ಬಿಸಾಕ! ಇವತ್ತೇನಾಗದೆ ನನ್ನ ಕಾಲಿಗೆ?’ ಎಂದು ದಾರಿಯನ್ನೂ ತನ್ನ ಕಾಲ್ಗಳನ್ನೂ ಶಪಿಸುತ್ತಾ ಮತ್ತೆ ಹಿಂತಿರುಗಿ ನಡೆದು ಕೋಣೂರಿಗೆ ಹೋಗುವ ಕಾಲುದಾರಿ ಸೇರಿದನು. ಅವನ ನಾಯಿ ಅವನ ಹಿಂದೆ ಮುಂದೆ ಅತ್ತ ಇತ್ತ ಸುತ್ತಲೂ ಹಳುವಿನಲ್ಲಿ ನೆಲ ಮೂಸುತ್ತಾ, ಅಡ್ಡಾಡುತ್ತಾ, ಕಂಡ ಕಂಡ ಗಿಡದ ಬುಡದಲ್ಲಿ, ಹುತ್ತದ ಮೇಲೆ, ಎದ್ದುಕಾಣುವ ಕಲ್ಲುಗುಂಡುಗಳ ಮೇಲೆ ಆಗಾಗ್ಗೆ ನಿಂತು ಕಾಲೆತ್ತಿ ಪ್ರೋಕ್ಷಣೆ ಮಾಡುತ್ತಾ ಒಡೆಯನನ್ನು ಹಿಂಬಾಲಿಸುತ್ತಿತ್ತು.

ಗುತ್ತಿ ಮತ್ತೆ ಅಂತರ್ಮುಖಿಯಾಗಿ ತನ್ನ ಆಲೋಚನೆಗಳಲ್ಲಿಯೆ ಮಗ್ನನಾಗಿ ಅಭ್ಯಾಸ ಬಲದಿಂದಲೆಂಬಂತೆ ನೋಡುತ್ತಿದ್ದರೂ ಯಾವುದನ್ನೂ ಗಮನಿಸದೆ ಕಾಲುಹಾಕುತ್ತಿದ್ದನು. ಅವನು ನಡೆಯುತ್ತಿದ್ದ ದಾರಿಯ ಕಾಡು ಮೊದಮೊದಲು ತುಸು ಹೆದ್ದಳಕಲಾಗಿ ಅಷ್ಟೇನೂ ನಿಬಿಡವಾಗಿರಲಿಲ್ಲ. ಹಿಂದಿನ ರಾತ್ರಿ ಹೊಡೆದ ಮಳೆಯಲ್ಲಿ ಮಿಂದು ತೊಳೆದಂತಿದ್ದ ಪೊದೆ ಮರಗಳ ಹಸುರು, ದನಬಿಡುವ ಆ ಹೊತ್ತಿನಲ್ಲಿ ಬಿಸಿಲಿನಲ್ಲಿ, ತಂಪಾಗಿ ಮಿರುಗುತ್ತಿದ್ದುವು. ಆದರೆ ಗುತ್ತಿ ಎಂದಿನಂತೆ ಕಾಡಿನ, ಹಕ್ಕಿಯ, ಮಿಗದ ಸೊಬಗನ್ನಾಗಲಿ ವ್ಯಾಪಾರವನ್ನಾಗಲಿ ಲಕ್ಷಿಸುವ ಮನಃಸ್ಥಿತಿಯಲ್ಲಿರಲಿಲ್ಲ. ಪಿಕಳಾರಗಳ ಸಿಳ್ಳುಲಿಯಾಗಲಿ ಹೊರಸಲು ಹಕ್ಕಿಗಳ ಗುಬ್ಬಳಿಕೆಗಳಾಗಲಿ ಮರಕುಟಿಕನ ಕೊಟಾ ಕೊಟಾ ಸದ್ದಾಗಲಿ ಕಡೆಗೆ ಕಾಡುಕೋಳಿ ಹುಂಜನ ನಿಡುನೀಳ್ದ ಕೇಕೆಯಾಗಲಿ ಅವನ ಕಿವಿಗೆ ಬೀಳುತ್ತಿದ್ದರೂ ಅವನಿಗೆ ಕೇಳಿಸುತ್ತಿರಲಿಲ್ಲ; ಕಣ್ಣಿಗೆ ಬಿದ್ದರೂ ಕಾಣಿಸುತ್ತಿರಲಿಲ್ಲ.
ಬರಬರುತ್ತಾ ಮೇಲೆ  ಏರತೊಡಗಿತು. ಕಾಡು ದಟ್ಟವಾಯಿತು. ಹಕ್ಕಿಪಕ್ಷಿಗಳ ಹಾರಾಟವೂ ಉಲಿಹವೂ ವಿರಳವಾಗಿ ಕಡೆ ಕಡೆಗೆ ನಿಂತೆ ಹೋಯಿತು. ಆ ಅರಣ್ಯನಿಬಿಡತೆಯಲ್ಲಿ ಬಿಸಿಲೂ ಅಡಗಿದಂತಾಗಿ ಮರಗತ್ತಲು ಹೆಚ್ಚಾಯಿತು. ಅವನು ಕಾಡು ಭಯಂಕರವಾಗಿದ್ದ ಆ ಹುಲಿಕಲ್ಲು ಗುಡ್ಡವನ್ನೇರಿ ಇಳಿದರೆ ಆ ಕಡೆಯ ಕಣಿವೆಯಲ್ಲಿ ಕೋಣೂರ ರಂಗಪ್ಪಗೌಡರ ಮನೆ ಗದ್ದೆ ತೋಟ ಸಿಗುತ್ತಿತ್ತು.
ಆ ‘ಹುಲಿಕಲ್ಲು’ ಗುಡ್ಡದ ಕಾಡು ಆ ಕಡೆಯಲ್ಲೆಲ್ಲ ಅತ್ಯಂತ ದಡ್ಡವಾದುದೆಂದೂ ಜೀವಾದಿಗಳಿಗೆ ನೆಲೆಬೀಡೆಂದೂ ಹೆಸರುವಾಸಿಯಾಗಿತ್ತು. ಅದರ ಕಡಿಪೂ ನಿಬಿಡತೆಯೂ ಎಷ್ಟರಮಟ್ಟಿನದಾಗಿತ್ತೆಂದರೆ ‘ದೊಡ್ಡಬೇಟೆ’ಗೆ ಹೋಗುವವರು ಆ ಕಾಡಿಗೆ ಹೋಗಲು ಹಿಂಜರಿಯುತ್ತಿದ್ದರು. ಕಡಿದಾದ ದರಿಕಂದರಗಳಿಂದ ದುರ್ಗಮವಾಗಿದ್ದ ಅದನ್ನು  ಸೋವಲು ಹಳುನುಗ್ಗಲಿಕ್ಕೇ ಕನಿಷ್ಠ ಪಕ್ಷ ನೂರು ನೂರೈವತ್ತು ಜನರಾದರೂ ಬೇಕಾಗುತ್ತಿತ್ತು. ಇನ್ನಿ ಬಿಲ್ಲಿಗೆ ಕೂರಲು ಕಡಮೆ ಎಂದರೆ ಐವತ್ತು ಅರವತ್ತು ಕೋವಿಗಾರರಾದರೂ ಬೇಕಿತ್ತು. ಎಲ್ಲಿಂದ ತರುವುದು ಅಷ್ಟು ಕೋವಿಗಳನ್ನು? ಆ ನಾಡಿನಲ್ಲೆಲ್ಲ ಕೇಪಿನ ಕೋವಿ ಇಟ್ಟುಕೊಂಡವರ ಸಂಖ್ಯೆಯೆ ಬೆರಳೆಣಿಸುವಷ್ಟಿತ್ತು. ಇನ್ನುಳಿದ ಕಂಡಿಗಳಿಗೆ ಹಂದಿಬಲೆ ಮಿಗದ ಬಲೆ ಮೊಲದ ಬಲೆಗಳೆ ಗತಿ! ಅದಕ್ಕಾಗಿಯೆ ವರುಷಕ್ಕೊಮ್ಮೆಯೊ ಎರಡು ವರುಷಕ್ಕೊಮ್ಮೆಯೊ ಹುಲಿಕಲ್ಲು ಕಾಡಿಗೆ ‘ದೊಡ್ಡಬೇಟೆ’ಗೆ ಬಂದರೆ ಅದೇ ಹೆಚ್ಚು. ಬೆಟ್ಟಳ್ಳಿ ಸೇರೆಗಾರರು ಹಳೆಮನೆ ಸೇರೆಗಾರರು ತಮ್ಮ ಕಡೆಯ ಆಳುಗಳಿಗೆಲ್ಲ ಒಂದು ದಿನ ಉಳಿ ಕೊಟ್ಟು, ಅವರಿಗೆಲ್ಲ ಧೈರ್ಯ ಹೇಳಿ, ಹಳು ಹೊಡೆಯಲು ಕಳಿಸುತ್ತಿದ್ದರು. ಕೋಣೂರಿನ ಗಟ್ಟದ ತಗ್ಗಿನವರ ಬಿಡಾರಗಳಿಂದಲೂ ಸ್ವಲ್ಪ ಹಳುವಿನವರು ಒದಗುತ್ತಿದ್ದರು. ಇನ್ನು ಬೇಲರು, ಹೊಲೆಯರು, ಮಾದಿಗರು, ಕರಾದಿಯವರೂ ಆ ಸಾಹಸದಲ್ಲಿ ಭಾಗಿಯಾಗುತ್ತಿದ್ದರು. ಅಂತಹ ಸಮಯಗಳಲ್ಲಿ ಅನೇಕರಲ್ಲಿ ಜೀವದಾಸೆಯನ್ನು ಗೆಲ್ಲುತ್ತಿತ್ತು ಬಾಡಿನಾಸೆ; ಕೆಲವರು ಬೇಟೆಯ ಸಾಹಸದ ಹುಚ್ಚಿನಿಂದಲೂ ಬಂದು ಸೇರುತ್ತಿದ್ದರು. ಬತ್ತಿಕೋವಿ, ಭರ್ಜಿ, ಈಟಿ, ಉದ್ದಗತ್ತಿ, ಬಿಲ್ಲುಬಾಣಗಳ ಸಾಹಸಿಗಳೂ ಅಲ್ಪಸ್ವಲ್ಪ ಇರುತ್ತಿದ್ದರು. ಕನ್ನಡ ಜಿಲ್ಲೆಯಿಂದ ದುಡಿಮೆಗಾಗಿ ಬಂದ ಗಟ್ಟದ ತಗ್ಗಿನವರಂತೂ ತಮ್ಮ ಮಕ್ಕಳನ್ನು ಹೆದರಿಸಿ ಸುಮ್ಮನಿರುವುಸುದಕ್ಕೂ ಆ ‘ಹುಲಿಮಲೆ’ಯ ಹೆಸರನ್ನೆ ಹೆಚ್ಚಾಗಿ ಬಳಸುತ್ತಿದ್ದರು!
ಗುತ್ತಿ ‘ಬೆತ್ತದ ಸರ’ದ ಹತ್ತಿರಕ್ಕೆ ಬಂದಿದ್ದನು. ಅವನು ಹೋಗುತ್ತಿದ್ದ ಕಾಲುದಾರಿಯ ಬಲಪಕ್ಕದ ಇಳಿಜಾರಿನ ತುದಿಯೆ ‘ಬೆತ್ತದ ಸರ.’ ಬೆತ್ತದ ಹಿಂಡಿಲು, ವಾಟೆಯ ಹಿಂಡಿಲು, ಬಿದಿರ ಹಿಂಡಿಲು, ಗುರಗಿ ಹಳು ಎಲ್ಲ ಕಿಕ್ಕಿರಿದು ಬೆಳೆದಿದ್ದು, ಯಾವಾಗಲೂ ಸರಲು ನೀರು ಹರಿಯುತ್ತಿದ್ದ ತಾಣ. ಒಂದೊಂದು ಕಡೆ ಹಳುವಿನ ಸಾಂದ್ರತೆ ಪರಮಾವಧಿ ಮುಟ್ಟಿದಂತಿತ್ತು.
ಇದ್ದಕ್ಕಿದ್ದ ಹಾಗೆ ಗುತ್ತಿಯ ಅಂತರ್ಮುಖತೆಯನ್ನು ಹರಿದು ಸೀಳುವಂತೆ ಹುಲಿಯ ಬೊಗಳತೊಡಗಿತು. ಗುತ್ತಿ ತಟಕ್ಕನೆ ಎಚ್ಚತ್ತು ಸೆಟೆದು ನಿಂತು ಆಲಿಸಿದನು; ಸುತ್ತಲೂ ಕಣ್ಣಟ್ಟಿ ನೋಡಿದನು. ಆದರೆ ನಾಯಿ ಕಾಣಲಿಲ್ಲ. ಅದರ ಕರ್ಕಶವಾದ ತೀವ್ರವಾದ ಬೊಗಳು ಮಾತ್ರ ಹೊಡೆದೆಬ್ಬಿಸುವಂತೆ ಕೇಳುತ್ತಿತ್ತು. ಹುಲಿ ಕಾಡುಹಂದಿಯಂತಹ ದೊಡ್ಡ ಪ್ರಾಣಿಗಳನ್ನು ತಡೆದು ನಿಲ್ಲಿಸಿದಾಗ ಮಾತ್ರ ನಾಯಿಗಳು ಹಾಗೆ ಬೊಗಳುವುದು. ಹೆದರಿ ಓಡಿಹೋಗುವ ಮಿಗ ಬರ್ಕ ಮೊಲ ಇಂತಹ ಪ್ರಾಣಿಗಳನ್ನು ಕಂಡಾಗ ಕಂಯ್‌ ಕಂಯ್ ಕಂಯ್ ಎಂದು ಕೂಗುತ್ತಾ ಅಟ್ಟುತ್ತವೆ; ಸದ್ದೂ ಬರಬರುತ್ತಾ ದೂರವಾಗುತ್ತದೆ. ಆದರೆ ದೊಡ್ಡ ‘ಜೀವಾದಿ’ಗಳು ಹಾಗಲ್ಲ. ಒಡನೆಯೆ ಹೆದರಿ ಓಡುವುದಿಲ್ಲ ಮಲೆತೂ ನಿಲ್ಲುತ್ತವೆ. ಆಗ ಹುಲಿಯನಂತಹ ದೊಡ್ಡ ಬೇಟೆನಾಯಿಗಳು ಬೊವ್ ಬೊವ್ ವವ್ವವೌ ಎಂದು ಹೆದ್ದನಿಯಲ್ಲಿ ಕೂಗುತ್ತವೆ, ಒಂದೇ ಕಡೆ ನಿಂತು.
ಈ ಸೂಕ್ಷ್ಮವನ್ನೆಲ್ಲ ಅನುಭವದಿಂದ ಚೆನ್ನಾಗಿ ಅರಿತಿದ್ದ ಗುತ್ತಿ, ಹುಲಿಯ ಒಂಟಿಗ ಹಂದಿಯನ್ನೊ ಹುಲಿಯನ್ನೊ ಕಂಡೇ ಬೊಗಳುತ್ತಿದೆ ಎಂದು ನಿಶ್ಚಯಿಸಿದ. ಆದರೆ ಆ ದಟ್ಟವಾದ ಹಳುವಿನಲ್ಲಿ ಸದ್ದು ಯಾವ ದಿಕ್ಕಿನಿಂದ ಬರುತ್ತದೆ ಎಂದು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಅಂತೂ ದಾರಿಯಿಂದ ಕೆಳಗಡೆಯ ಬೊಗಳುತ್ತಿದೆ ಎಂದು ಅಂದಾಜು ಮಾಡಿ ಆ ಕಡೆಗೆ ಹಳುವಿನಲ್ಲಿ ನುಗ್ಗಿದ. ಅವನು ಹಾಗೆ ನುಗ್ಗಿದುದರ ಉದ್ದೇಶ ನಾಯಿಯ ರಕ್ಷಣೆಯಾಗಿತ್ತೆ ಹೊರತು ಪ್ರಾಣಿಯ ಬೇಟೆಯಾಗಿರಲಿಲ್ಲ. ಬೇಟೆಯಾಡುವುದಕ್ಕೆ ಗುತ್ತಿಯ ಕೈಲಿ ಕೋವಿಯಿತ್ತೇ? ಕತ್ತಿಯಿತ್ತೇ? ಭರ್ಜಿಯಿತ್ತೇ? ಕಡೆಗೊಂದು ಹಕ್ಕಿ ಹೊಡೆಯುವ ಚಿಟ್ಟು ಬಿಲ್ಲಾದರೂ ಇತ್ತೇ? ಕೆಚ್ಚೆದೆಯ ಹುಲಿಯ ಎಲ್ಲಿಯಾದರೂ ಒಂಟಿಗ ಹಂದಿಯ ಮೇಲೆಯೊ ಬೀಳಲು ಹೋಗಿ ತನ್ನ ಪ್ರಾಣಕ್ಕೆ ಹಾನಿ ತಂದುಕೊಂಡೀತು ಎಂದು ಹೆದರಿ ಅದನ್ನು ಅಪಾಯದಿಂದ ತಪ್ಪಿಸುವ ಸಲುವಾಗಿ ಹಿಂದಕ್ಕೆ ಕರೆಯಲೆಂದೇ ಅವನು ‘ಹುಲಿಯಾ! ಹುಲಿಯಾ! ಬಾ ಹುಲಿಯಾ! ಕ್ರೂ! ಕ್ರೂ!’ ಎಂದು ಕೂಗುತ್ತಾ ನುಗ್ಗಿ ಬೊಗಳು ಸದ್ದಿನ ಕಡೆಗೆ ಓಡಿದನು.
ಹೋಗಿ ನೋಡುತ್ತಾನೆ: ನಾಯಿಯೇನೊ ಒಂದೇ ದಿಕ್ಕಿಗೆ ನೋಡಿ ನೋಡಿ ಬೊಗಳುತ್ತಿದೆ. ಆದರೆ ಆ ದಿಕ್ಕಿನಲ್ಲಿ ಯಾವ ಜಂತುವೂ ಗುತ್ತಿಗೆ ಕಾಣಿಸುತ್ತಿಲ್ಲ. ಹಂದಿ ಹುಲಿ ಯಾವುದಾಗಿದ್ದರೂ ಗುತ್ತಿ ಹಾಗೆ ಬೊಬ್ಬೆಯಿಡುತ್ತಾ ಹತ್ತಿರಕ್ಕೆ ಬಂದಾಗ ಅಲ್ಲಿ ಎಂದಿಗೂ ನಿಲ್ಲುತ್ತಿರಲಿಲ್ಲ. ಒಂದು ವೇಳೆ ನಿಂತಿದ್ದ ಪ್ರಾಣಿ ಓಡಿಹೋಗಿದ್ದರೆ ನಾಯಿ ಅಟ್ಟದೆ ಬಿಡುತ್ತಲೂ ಇರಲಿಲ್ಲ. ಕಾಡು, ಬೇಟೆ, ಪ್ರಾಣಿಗಳ ವಿಚಾರದಲ್ಲಿ ಅನುಭವಶಾಲಿಯಾಗಿದ್ದ ಗುತ್ತಿ ನೆಲದ ಕಡೆ ನೋಡುವುದನ್ನು ಬಿಟ್ಟು, ತಲೆಯೆತ್ತಿ ದಟ್ಟೈಸಿದ್ದ ಮರಗಳ ಮೇಲೆ ನೋಡತೊಡಗಿದನು, ಕಬ್ಬೆಕ್ಕು ಎಲ್ಲಿಯಾದರೂ ಮೇಲೆ ಹತ್ತಿ ಕುಳಿತಿದೆಯೋ, ಅಥವಾ ಮುಸಿಯ ಮರದೆಲೆಗಳ ನಡುವೆ ಅಡಗಿದೆಯೋ ಎಂದು. ಹಾಗೆ ಕತ್ತೆತ್ತಿ  ಮೇಲೆ ನೋಡುತ್ತಲೆ ಮುಂದುವರಿಯುತ್ತಿರುವುದನ್ನು ನೋಡಿ ಹುಲಿಯ ಇನ್ನೂ ರಭಸದಿಂದ ಬೊಗಳತೊಡಗಿತು. ಮತ್ತು, ಅವನನ್ನೇ ತಡೆಯುವಂತೆ ಅಡ್ಡಬರತೊಡಗಿತು. ಗುತ್ತಿ ನೋಡುತ್ತಾನೆ, ನಾಯಿ ತುಸುದೂರವೆ ಹಳುವಿನಲ್ಲಿ ಬಿದ್ದಿರುವ ಒಂದು ಮರದ ದಿಮ್ಮಿಯ ಕಡೆ ನೋಡಿ ಬೊಗಳುತ್ತಿದೆ! ಹಾಗಾದರೆ ಆ ದಿಮ್ಮಿಯ ಹತ್ತಿರ ಯವುದಾದರೂ ಕಾಳಿಂಗನ ಹಾವೊ ಸರ್ಪನ ಹಾವೊ ಇರಬಹುದುದೆಂದು ಗುತ್ತಿ ನೆಲವನ್ನು ಪರೀಕ್ಷಿಸುತ್ತಾ ಮುಂದುವರಿಯುವಷ್ಟರಲ್ಲಿ ನಾಯಿ ಬೊಗಳಿ ಬೊಗಳಿ ಹಾರಿ ನೆಗೆದು ಆ ದಿಮ್ಮಿಯನ್ನು ಕಚ್ಚಿಬಿಟ್ಟಿತು! ಅಯ್ಯಯ್ಯೊ! ನೋಡುತ್ತಾನೆ: ಆ ದಿಮ್ಮಿಯೆ ಜೀವಂತ ಹೆಬ್ಬಾವು! ಚಲಿಸುತ್ತಿಲ್ಲ. ಮ ಲವೊ ಬರ್ಕವೊ ಅಥವಾ ಇನ್ನಾವ ಪ್ರಾಣಿಯನ್ನೊ ಇಡೀಯೆ ನುಂಗಿ ನಿಶ್ಚಲವಾಗಿ ಬಿದ್ದಿದೆ! ಅದರ ತಲೆ ಎಲ್ಲಿದೆಯೋ ಬಾಲವೆತ್ತಕಡೆಯೋ ಅದೂ ಗೊತ್ತಾಗುತ್ತಿರಲಿಲ್ಲ ಆ ಹಳುವಿನಲ್ಲಿ!
ಕೈಯಲ್ಲಿ ಬಗನಿದೊಣ್ಣೆ ವಿನಾ ಬೇರೆಯೇನೂ ಆಯುಧವಿಲ್ಲದ ಗುತ್ತಿ, ಇನ್ನೇನು ಒಂದು ಹೆಜ್ಜೆ ಮುಂದಿಟ್ಟಿದ್ದರೆ ಹೆಬ್ಬಾವಿನ ಮೈಮೇಲೆಯೆ ಕಾಲಿಡುತ್ತಿದ್ದವನು, ಸತ್ತೆನೊ ಕೆಟ್ಟೆನೊ ಎಂದು ಚಂಗನೆ ಹಿಂದಕ್ಕೆ ನೆಗೆದು, ದೂರ ಓಡಿ ನಿಂತು, ದೀರ್ಘವಾಗಿ ಉಸಿರುಬಿಡತೊಡಗಿದನು. ಹುಲಿಯನನ್ನು ತನ್ನ ಹತ್ತಿರಕ್ಕೆ ಹೆದರಿಸಿ ಕರೆಯತೊಡಗಿದನು. ತನ್ನ ಹತ್ತಿರವಿದ್ದ ಬಹನಿದೊಣ್ಣೆಯಿಂದ ಆ ಹೆಬ್ಬಾವಿಗೆ ತಾನು ಏನನ್ನೂ ಮಾಡಲಾರೆನೆಂದು ಗುತ್ತಿಗೆ ಗೊತ್ತಿತ್ತು. ಕೋವಿ ಇದ್ದಿದ್ದರೂ ಒಂದೆರಡು ಗುಂಡುಗಳಿಂದ ಏನೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಿರುವಾಗ ನಾಯಿಯನ್ನು ಹೇಗಾದರೂ ತನ್ನ ಹತ್ತಿರಕ್ಕೆ ಕರೆದು, ಹಿಡಿದು, ಸುರಕ್ಷತೆಗೆ ಕೊಂಡೊಯ್ಯುವುದೊಂದೆ ದಾರಿಯಾಗಿತ್ತು ಅವನಿಗೆ.
ಬೇಗಬೇಗನೆ ಒಂದು ಬಳ್ಳಿಯನ್ನು ಉಗಿದು, ಅದರ ಎರಡು ಮೂರು ಎಳೆಯನ್ನು ಉಡಿದು ಹಗ್ಗಮಾಡಿದನು. ಅವನು ಕರೆದಂತೆಲ್ಲ ಹತ್ತಿರಕ್ಕೆ ಬಂದೂ ಮತ್ತೆ ಮತ್ತೆ ಹಾವಿನ ಬಳಿಗೆ ನುಗ್ಗುತ್ತಿದ್ದ ಹುಲಿಯನನ್ನು ಒಮ್ಮೆ ಹತ್ತಿರ ಬಂದಾಗ ಎರಡು ಕೈಯಿಂದಲೂ ಅಮರಿಹಿಡಿದು, ಕೊರಳಿಗೆ ಬಳ್ಳಿಹಗ್ಗವನ್ನು ಬಿಗಿದು, ಬರಲೊಲ್ಲದೆ ಜಗ್ಗಿ ಜಗ್ಗಿ, ಎಳೆದು ಬೊಗಳುತ್ತಿದ್ದ ಅದನ್ನು ಜಗ್ಗಿಸಿ ಎಳೆಯುತ್ತಾ ಅಲ್ಲಿಂದ ಆದಷ್ಟು ಬೇಗನೆ ಕಾಲುಕಿತ್ತು ದಾರಿಗೆ ಸೇರಿಕೊಂಡನು. ಮೈ ಬೆವರುತ್ತಿತ್ತು, ತಕ್ಕಮಟ್ಟಿಗೆ!
ಗುತ್ತಿ ಸ್ವಲ್ಪ ದೂರ ಮುಂದುವರಿದಿದ್ದನು. ಬಳ್ಳಿಹಗ್ಗದಲ್ಲಿ ಕಟ್ಟಿ ಹಿಡಿದುಕೊಂಡಿದ್ದ ಹುಲಿಯ ಅವನ ಮಗ್ಗುಲಲ್ಲಿಯೆ ಅತ್ತಿತ್ತ ನೋಡುತ್ತಾ, ಕಿವಿನಿಮಿರಿ ಆಲಿಸುತ್ತಾ, ನೆಲವನ್ನು ಮೂಸುತ್ತಾ, ಒಮ್ಮೆ ಹಿಂದೆ ಬಿದ್ದು ಒಮ್ಮೆ ಮುಂದೆ ಹೋಗಿ, ಜೋಲುನಾಲಗೆಯಿಂದ ಜೊಲ್ಲು ಸುರಿಸುತ್ತ ನಡೆಯುತ್ತಿತ್ತು. ಇದ್ದಕ್ಕಿದ್ದ ಹಾಗೆ ನಾಯಿ ಮುಂದಕ್ಕೆ ದೃಷ್ಟಿಯಟ್ಟಿ ಸಣ್ಣಗೆ ಬೊಗಳಿತು. ದಟ್ಟಕಾಡಿನ ಅಂಕುಡೊಂಕು ಕಾಲುದಾರಿಯಲ್ಲಿ ಬಹುದೂರ ನೋಡಲೂ ಸಾಧ್ಯವಿರಲಿಲ್ಲ. ಕಾಣುತ್ತಿತ್ತ ದಾರಿಯಷ್ಟರಲ್ಲಿ ಗುತ್ತಿಗೆ ಏನೂ ಕಾಣಿಸಲಿಲ್ಲ. ಆದರೆ ನಾಯಿಗೆ ವಾಸನೆಯೊ ಸದ್ದೊ ಯಾವುದೊ ಗೊತ್ತಾದಂತೆ ತೋರಿತು. ಗುತ್ತಿ ಬಿರುಬಿರನೆ ಕಾಲು ಹಾಕಿದ. ಸ್ವಲ್ಪ ದೂರ ಮುಂಬರಿಯುವುದರಲ್ಲಿ ಯಾರೊ ಇಬ್ಬರು ಹೆಂಗಸರು ಹೋಗುತ್ತಿದ್ದುದು ಕಾಣಿಸಿತು. ಹಳುವಿನ ನಡುವೆ ಇಕ್ಕಟ್ಟಾದ ಕಾಲುದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದುದರಿಂದ ಗುತ್ತಿಗೆ ಸರಿಯಾಗಿ ಕಾಣಿಸಿದ್ದು ಹಿಂದೆ ಹೋಗುತ್ತಿದ್ದವರು ಮಾತ್ರ.
ಕೊರಳಿಗೆ ಕಟ್ಟಿದ ವಲ್ಲಿ ಬೆನ್ನಿನ ಮೇಲೆ ಸೊಂಟದವರೆಗೂ ಬಿದ್ದಿದ್ದುದನ್ನೂ ಸ್ವಲ್ಪ ಗಿಡ್ಡಾಗಿಯೆ ಉಟ್ಟಿದ ಗೊಬ್ಬೆಸೀರೆ ಹರಡಿನ ಮೇಲಿದ್ದುದನ್ನೂ ಗಮನಿಸಿ ‘ಯಾರೊ ಹೆಗ್ಗಡಿತಮ್ಮನವರು!’ ಎಂದುಕೊಂಡನು. ಗುತ್ತಿ ಮನಸ್ಸಿನಲ್ಲಿಯೆ, ‘ಇಷ್ಟು ಹೊತಾರೆ ನೆಂಟರಮನೆಗೆ ಹೊರಟಾರಲ್ಲಪ್ಪಾ! ಇಬ್ರೆ ಹೆಂಗಸ್ರು! ಗಟ್ಟಿ ಗುಂಡಿಗೇರಿರಬೇಕು! ಈ ಹುಲಿಕಲ್ಲು ಗುಡ್ಡದ ಕಾಡಿನಗೆ!’
ನಾಯಿ ಬೊಗಳಿದ ಸದ್ದುಕೇಳಿ ಹಿಂದೆ ಹೋಗುತ್ತಿದ್ದ ಸ್ತ್ರೀ ವ್ಯಕ್ತಿ ನಿಂತು ತಿರುಗಿ ನೋಡಿದಳು. ಮುಂದೆ ಹೋಗುತ್ತಿದ್ದಾಕೆ ಯಾವುದನ್ನೂ ಗಮನಿಸದವಂತೆ ಮುಂಬರಿಯುತ್ತಲೆ ಇದ್ದಳು.
ಹಿಂದೆ ಹೋಗುತ್ತಿದ್ದ ಸ್ತ್ರಿವ್ಯಕ್ತಿ ನಿಂತು ತನ್ನ ಕಡೆಗೆ ತಿರುಗಿದೊಡನೆಯೆ, ಗುತ್ತಿಗೆ ಗುರುತುಹತ್ತಿ, ತನ್ನೊಳಗೆ ತಾನೆ ‘ಓಹೊ ಈ ಬಾವಿಕೊಪ್ಪದ ಸೀರುಡಿಕೆ ಜೋಡಿಯೊ? ನಾಗತ್ತೆ! ನಾಗಕ್ಕ! ಎಂದುಕೊಂಡು, ತನ್ನಲ್ಲಿ ಮೂಡಿಬಂದ ಲಘುತ್ವಭಾವನೆಯನ್ನು ಕೊಂಕುನಗೆಯಿಂದ ಪ್ರಕಟಿಸದೆ ಇರಲಾರದವನಾದನು. ಹೊಲೆಯನ ಹಾಸ್ಯಕ್ಕೂ ಪಕ್ಕಾಗುವಷ್ಟರಮಟ್ಟಿಗೆ ಹಬ್ಬಿತ್ತು ಅವರಿಬ್ಬರ ಕೀರ್ತಿ!
ನಾಗಣ್ಣ, ನಾಗಕ್ಕ ಮತ್ತು ನಾಗತ್ತೆಯರ ಸುದ್ದಿ ಆ ನಾಡಿನವರ ಮಾತುಕತೆಗೆ ಸ್ವಾರಸ್ಯವೀಯುವ ಉಪ್ಪಿನಕಾಯಿಯಾಗಿತ್ತು. ನಾಗಣ್ಣ ಗತಿಸಿ ನಾಲ್ಕಾರು ವರುಷಗಳಾಗಿದ್ದರೂ, ನಾಗಣ್ಣನ ಬದುಕು ನಗೆಗಿಂತಲೂ ಹೆಚ್ಚಾಗಿ ಕಣ್ಣೀರಿಗೆ ಕಾರಣವಾಗುವಂತಹುದಾಗಿದ್ದರೂ, ಜನರು ನಗೆಗೆ ನಿಜವಾಗಿ ಕಾರಣವಾಗುವಂತಹ ವರ್ತನೆ ನಾಗತ್ತೆಯದೆ ಮಾತ್ರ ಆಗಿದ್ದರೂ ನಾಗಣ್ಣ, ನಾಗಕ್ಕ, ನಾಗತ್ತೆಯರ ಮೂರು ಹೆಸರುಗಳೂ ಒಂದರೊಡನೊಂದು ಹೆಣೆದುಕೊಂಡು ಸಿಕ್ಕಾಗಿಬಿಟ್ಟಿದ್ದುವು.
ಬಾವಿಕೊಪ್ಪದ ನಾಗಣ್ಣ ‘ನಾಗತ್ತೆಯ ಎರಡನೆಯ ಗಂಡನಿಗೆ ಹುಟ್ಟಿದವನು. ನಾಗಣ್ಣನ ತಂದೆ ಬಾವಿಕೊಪ್ಪದಲ್ಲಿ ಸಿಂಬಾವಿ ಭರಮೈ ಹೆಗ್ಗಡೇರ ಗದ್ದೆತೋಟ ಮಾಡಿಕೊಂಡು ಒಕ್ಕಲಾಗಿ ತಕ್ಕಮಟ್ಟಿಗೆ ನೆಮ್ಮದಿಯಾಗಿಯೆ ಇದ್ದನು.’ ಒಂದಾದ ಮೇಲೊಂದು ಮದುವೆಯಾಗಿ ಮೂರನೆ ಹೆಂಡತಿಯ ಇತರರಂತೆಯೆ ಹೆರಿಗೆ ಸಮಯದಲ್ಲಿ, ಹಳೆಪೈಕದವಳ ಹುಳದೌಷಧವೂ ಸೂಲಗಿತ್ತಿತನವೂ ವಿಫಲವಾಗಿ, ತೀರಿಕೊಂಡ ಮೇಲೆ, ನಾಲ್ಕನೆಯ ಮದುವೆಗೆ ಸಿಂಬಾವಿ ಹೆಗ್ಗಡೆಯವರು ಸಾಲಕೊಡಲು ಒಪ್ಪದೆ ಹೋದರು. ಒಂಟಿ ಬಾಳಿಗೆ ಬೇಸತ್ತು ಅವನು ತಪಿಸುತ್ತಿದ್ದಾಗ ಈ ‘ನಾಗತ್ತೆ’ ಎಲ್ಲಿಂದಲೋ ಪ್ರತ್ಯಕ್ಷವಾದಳು! ಅವಳಿಗೂ ತನ್ನ ಗಂಡ ಸತ್ತು, ಒಂಟಿ ಬಾಳು ಬೇಸರವಾಗಿ, ಜಂಟಿಬಾಳಿಗಾಗಿ ಊರಿಂದೂರಿಗೆ ಅಲೆಯುತ್ತಿದ್ದಳಂತೆ. ಆದರೆ ಅವಳನ್ನು ಚೆನ್ನಾಗಿ ತಿಳಿದಿದ್ದ ಯಾವ ಊರಿನಲ್ಲಿಯೂ ಅವಳಿಗೆ ಜಂಟಿಬಾಳು ಗಿಟ್ಟದೆ, ಬಾವಿಕೊಪ್ಪದ ನಾಗಣ್ಣನ ತಂದೆಯ ಒಂಟಿಬಾಳಿನ ಬೇಸರಿನ ವಿಚಾರವಾಗಿ ಮಾರ್ತೆಗೇಳಿ, ಅದನ್ನು ಪರಿಹರಿಸಲು ಬಾವಿಕೊಪ್ಪಕ್ಕೆ ಬಂದಳಂತೆ. ಒಂಟಿಬಾಳು ಸಾಕಾಗಿದ್ದ ಇಬ್ಬರೂ ಜಂಟಿಬಾಳಿಗೆ ಒಪ್ಪಿ ‘ಸೀರುಡಿಕೆ’ ಮಾಡಿಕೊಂಡರು. ಆದರೆ ಎಂತಹ ಕ್ಷೇಮವನ್ನು ತೆತ್ತು ಆ ‘ಕೂಡಿಕೆ’ಯ ಸುಖದ ಬಾಳನ್ನು ಕೊಂಡುಕೊಂಡೆನೆಂಬುದು ನಾಗಣ್ಣನ ತಂದೆಗೆ ಆಮೇಲೆ ಚೆನ್ನಾಗಿ ಅನುಭವಕ್ಕೆ ಬಂತಂತೆ! ‘ನಾಗತ್ತೆ’ಯನ್ನು ಕೂಡಿಕೆ ಮಾಡಿಕೊಂಡ ಆರೇಳು ವರುಷದಲ್ಲಿಯೆ ನಾಗಣ್ಣನ ತಂದೆ ತೀರಿಕೊಂಡನು. ಆಗ ನಾಗಣ್ಣ ಸಣ್ಣ ಹುಡುಗ. ನಾಗಣ್ಣ ಹದಿನೈದು ಹದಿನಾರು ವರುಷದವನಾಗುತ್ತಿದ್ದಂತೆಯೆ ಅವನ ತಾಯಿ ಅವನಿಗೆ ಬಡ ಒಕ್ಕಲೊಬ್ಬನ ಮಗಳಾಗಿದ್ದ ನಾಗಕ್ಕನನ್ನು ತಂದುಕೊಂಡು ಸೊಸೆಯನ್ನಾಗಿ ಮಾಡಿಕೊಂಡಳು. ಅಂದಿನಿಂದ ಅವಳು ‘ನಾಗತ್ತೆ’ಯಾಗಿ ಮಗ ಮತ್ತು ಸೊಸೆ ಇಬ್ಬರನ್ನೂ ತನ್ನ ಅಧಿಕಾರದ ಮುಷ್ಟಿಯಲ್ಲಿ ಭದ್ರವಾಗಿಟ್ಟುಕೊಂಡಳು. ತಾಯಿಯ ಬಡಿತ ಮತ್ತು ದುಡಿತದ ಪರಿಣಾಮವಾಗಿಯೊ ಅಥವಾ ತನ್ನ ತಾಯಿಯಿಂದ ತನ್ನ ತಂದೆಗೆ ಅಂಟಿದ್ದ ರೋಗಕ್ಕೆ ತಾನು ಹಕ್ಕುದಾರನಾಗಿದ್ದರಿಂದಲೋ ಏನೋ ನಾಗಣ್ಣನಿಗೆ ಆರೋಗ್ಯ ಕೆಟ್ಟು, ಹೊಟ್ಟೆಯಲ್ಲಿ ಹುಣ್ಣಾಗಿ, ಗದ್ದೆ ತೋಟದ ಕೆಲಸ ಮಾಡಲಾರದೆ, ಅದನ್ನೆಲ್ಲ ಬಿಟ್ಟು, ಹೆಗ್ಗಡೇರ ಸಾಲ ತೀರಿಸಲು ಸಿಂಬಾವಿ ಮನೆಯಲ್ಲಿ ನಾಗಣ್ಣ ನಾಗಕ್ಕ ನಾಗತ್ತೆ ಮೂವರೂ ದುಡಿಮೆಯಾಳುಗಳಾಗಿ ನಿಂತರು. ಅನಾರೋಗ್ಯದ ನಿಮಿತ್ತ ಹೆಗ್ಗಡೆಯವರು ನಾಗಣ್ಣನಿಗೆ ಕಷ್ಟದ ಕೆಲಸ ಕೊಡದೆ, ಕೂತೇ ಮಾಡುವ ಕೆಲಸಗಳಿಗೆ ನೇಮಿಸಿದರು. ಬುಟ್ಟಿ ಮಾಡುವುದು, ವಾಟೆ ಬಿದಿರು ಬೆತ್ತ ಇವುಗಳ ಸಲಕು ಕೆತ್ತುವುದು, ಪುಂಡಿನಾರಿನ ಹಗ್ಗ ಹೊಸೆಯುವುದು, ಎತ್ತು ದನ ಕಟ್ಟುವ ದಾವಣಿ ತಿರುಪುವುದು ಇತ್ಯಾದಿ. ಆದರೆ ನಾಗಣ್ಣನ ಹೊಟ್ಟೆ ಹುಣ್ಣು ಯಾವ ಗಿಡಮೂಲಿಕೆಗಳಿಗೂ ಬಗ್ಗಲಿಲ್ಲ. ನಾಗಕ್ಕ ತನ್ನ ಗಂಡನನ್ನು ಬದುಕಿಸಿಕೊಳ್ಳುವ ಸಲುವಾಗ ಯಾವ ಪತಿವ್ರತೆಗೂ ಕಡಿಮೆಯಿಲ್ಲದಂತೆ ಶುಶ್ರೂಷೆ ಮಾಡಿದಳು; ಭೂತ ಜಕ್ಕಿಣಿ ಪಂಜ್ರೊಳ್ಳಿಗಳಿಗೆ ಹರಕೆ ಕೊಟ್ಟಳು; ತನ್ನ ಹತ್ತಿರ ಇದ್ದಬದ್ದ ಚೂರುಪಾರು ಬಂಗಾರವನ್ನೂ ತಿರುಪತಿ ಧರ್ಮಸ್ಥಳ ಮೊದಲಾದ ದೇವತೆಗಳಿಗೆ ಸುಳಿದಿಟ್ಟಳು. ಯಾರಿಗೂ ಕಾಣದಂತೆ ಏಕಾಂತದಲ್ಲಿ ಬಲ್ಲಂತೆ ಪ್ರಾರ್ಥಿಸಿ ಕಣ್ಣೀರಿಟ್ಟಳು. ಅಲಂಕಾರ ಬಿಟ್ಟಳು. ಊಟ ಬಿಟ್ಟಳು. ಆದರೆ ನಾಗಣ್ಣ ಹುಣ್ಣಿನ ಯಾತನೆಯಲ್ಲಿ ಒದ್ದಾಡಿಕೊಂಡು ಸಿಂಬಾವಿಗೆ  ಬಂದ ಎರಡು ವರ್ಷಗಳಲ್ಲಿಯೆ ತೀರಿಕೊಂಡನು.
ಗಂಡ ತೀರಿಕೊಂಡಂದಿನಿಂದಲೆ ಷುರುವಾಯ್ತು ನಾಗಕ್ಕಗೆ ನಾಗತ್ತೆಯ ಪೀಡೆ! ಪ್ರಾಯದ ಹುಡುಗಿ ನಾಗಕ್ಕಗೆ ತಕ್ಕಮಟ್ಟಿನ ರೂಪವೂ ಇತ್ತು. ಕಳ್ಳು ಕುಡಿದು ಕಳ್ಳಿನಲ್ಲಿಯೆ ಕೈ ತೊಳೆಯುತ್ತಿದ್ದ ಸಿಂಬಾವಿ ಭರಮೈ ಹೆಗ್ಗಡೆಯವರು ಯಾವುದೋ ಗುಟ್ಟಾದ ಕಾಯಿಲೆಯಿಂದ ನರಳುತ್ತಿದ್ದರೂ ಗಂಡನಿಲ್ಲದ ಹರೆಯದ ಹೆಣ್ಣಿನ ರೂಪವನ್ನು ತಿರಸ್ಕರಿಸುವಂತಿರಲಿಲ್ಲ. ಅಲ್ಲದೆ ತಮಗೆ ಮಕ್ಕಳಾಗಿರಲಿಲ್ಲ ಎಂಬ ನೆವದಿಂದ ಮತ್ತೊಂದು ಮದುವೆಗೆ ಬೇರೆ ಹವಣಿಸುತ್ತಿದ್ದರು. ಇದನ್ನೆಲ್ಲ ಅರಿತಿದ್ದ ನಾಗತ್ತೆ ತನ್ನ ಸೊಸೆಗೆ ಒದಗಿರುವ ಸದವಕಾಶವನ್ನು ಉಪಯೋಗಿಸಿಕೊಳ್ಳದೆ ಬಿಡಬಾರದೆಂದು ಸೂಚನೆ ಕೊಡತೊಡಗಿದಳು. ಆ ಸೂಚನೆ ಕೆಲವೊಮ್ಮೆ ಒರಟಾಗಿಯೂ ಇರುತ್ತಿತ್ತು.
ಹೇಗಾದರೂ ಸಿಂಬಾವಿ ಹೆಗ್ಗಡೇರಿಗೆ ತನ್ನ ಸೊಸೆಯನ್ನು ಕೂಡಿಕೆ ಮಾಡಿಸಿದರೆ ತನ್ನ ಸಾಲಸೂಲಗಳೆಲ್ಲ ತೀರಿಹೋಗುತ್ತವೆ ಎಂಬುದು ‘ನಾಗತ್ತೆ’ಯ ಹುನಾರು. ಒಂದು ವೇಳೆ, ಶ್ರೀಮಂತರೂ ದೊಡ್ಡ ಮನೆತನದವರೂ ಆದ ಹೆಗ್ಗಡೆಯವರಿಗೆ ಹೆಣ್ಣು ಕೊಡುವ ಸರಿಸಮಾನರು ಅನೇಕರಿದ್ದು, ತನ್ನ ಸೊಸೆಯೊಡನೆ ಸೀರುಡಿಕೆಯಂತಹ ಕೀಳು ಸಂಬಂಧಕ್ಕೆ ಅವನು ಒಪ್ಪದಿದ್ದರೂ ತನ್ನ ಸೊಸೆ ಅವದ ದೇಹಾಸಕ್ತಿಗೆ ಒಳಗಾದರೂ ಸಾಕು ತಾನು ತನ್ನ ಇಷ್ಟಾರ್ಥಗಳನ್ನೆಲ್ಲ ನೆರವೇರಿಸಿಕೊಳ್ಳುತ್ತೇನೆ ಎಂಬುದೂ ಅವಳ ಧೈರ್ಯ. ತನ್ನ ಗತಿಸಿದ ಗಂಡನನ್ನು ನೆನೆನೆನೆದು ಕೊರಗುತ್ತಿದ್ದ ನಾಗಕ್ಕಗೆ ಯಾರೊಡನೆಯೂ ಯಾವ ವಿಧವಾದ ಸಂಬಂಧದ ಆಸಕ್ತಿಯೂ ಲೇಶವೂ ಇರಲಿಲ್ಲ. ನಾಗತ್ತೆ ಅವಳ ಆ ಪತಿವ್ರತಾ ನಿಷ್ಠೆಯನ್ನು ಅಸಹ್ಯವಾದ ಮಾತುಗಳಿಂದ ಪರಿಹಾಸ್ಯಮಾಡಿ ಪ್ರಚೋದಿಸತೊಡಗಿದಳು. ಅದು ಎಷ್ಟರಮಟ್ಟಿಗೆ ಮುಂದುವರಿದು ಬಹಿರಂಗವಾಯಿತೆಂದರೆ, ನಾಗಕ್ಕನ ನಡತೆ ಸ್ವಭಾವ ವಿಧೇಯತೆ ವಿನಯ ಸಂಕೋಚ ಇವುಗಳನ್ನೆಲ್ಲ ಕಂಡು ಅವಳನ್ನು ತುಂಬ ಮೆಚ್ಚಿಕೊಂಡಿದ್ದ ಭರಮೈ ಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ನಾಗತ್ತೆಯೊಡನೆ ನಾಗಕ್ಕನನ್ನೂ ಮನೆಬಿಟ್ಟು ಹೊರಡುವಂತೆ ಮಾಡಬೇಕಾಯಿತು.
ಸಿಂಬಾವಿ ಮನೆ ತಪ್ಪಿ ಹೊರಹೊರಟ ನಾಗತ್ತೆಯ ಕೈಯಲ್ಲಿ ನಾಗಕ್ಕ ‘ಪಂಜ್ರೊಳ್ಳಿ ಕೈಲಿ ಸಿಕ್ಕ ಜಕಣಿ’ಯಂತಾದಳು. ನಾಗಕ್ಕ ತನ್ನ ತವರನ್ನೂ ಸೇರದಂತೆ ತರತರದ ಅಶ್ಲೀಲ ದೂರುಗಳನ್ನೂ ಹಬ್ಬಿಸಿ, ನಾಗತ್ತೆ ಅವಳನ್ನು ವಿಕ್ರಯಿಸುವ ದನವನ್ನು ಗಿರಾಕಿಗಾಗಿ ಊರಿಂದೂರಿಗೆ ಸಾಗಿಸುವಂತೆ ಮನೆಯಿಂದ ಮನೆಗೆ ಕೊಂಡೊಯ್ದಳು. ನಾಗಕ್ಕನ ತವರು ಬಡ ಜಕ್ಕಲಾದುದರಿಂದಲೂ, ನಾಗಕ್ಕನ ತಂದೆ ತೀರಿಕೊಂಡು ಅಣ್ಣ ಅತ್ತಿಗೆಯರು ತಮ್ಮ ಹೊಟ್ಟಬಟ್ಟೆಗೇ ಸಾಲದೆ ಸಾಲಗಾರರಾಗಿ ಕಷ್ಟಪಡುತ್ತಲಿದ್ದುದರಿಂದಲೂ ಅವರು ಯಾರೂ ನಾಗತ್ತೆಗೆ ಎದುರಾಗಿ ನಾಗಕ್ಕನನ್ನು ರಕ್ಷಿಸುವ ಅಪಾಯವನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
ಕೆಲವು ಕಡೆಗಳಲ್ಲಿ ನಾಗಕ್ಕನ್ನು ಸೀರುಡಿಕೆ ಮಾಡಿಕೊಳ್ಳಲು ಹೆಂಡಿರನ್ನು ಹೆರಿಗೆಗೆ ಬಲಿಕೊಟ್ಟಿದ್ದ ಗಂಡುಗಳು ಸಂತೋಷದಿಂದ ಮುಂದೆ ಬಂದಿದ್ದರು. ಆದರೆ ನಾಗಕ್ಕ ಮನೆ ಬಿಟ್ಟು ಕಾಡಿಗೆ ಓಡಿ ಅವಿತುಕೊಳ್ಳುವುದರಿಂದ ಹಿಡಿದು ಕೆರೆ ಬಾವಿ ನೇಣುಗಳವರೆಗೂ ಹೋಗಿ ಪ್ರತಿಭಟಿಸಿ ಬಲಾತ್ಕಾರದ ಮರುಮದುವೆಯಿಂದ ಪಾರಾಗಿದ್ದಳು. ಆದರೆ ನಾಗತ್ತೆ ‘ಇನ್ನೆಷ್ಟು ದಿನ ಹಾರಾಡ್ತಾಳೆ ಪರಾಯಕ್ಕೆ ಬಂದ ಹುಡುಗಿ? ನಾ ನೋಡ್ತೀನಿ’ ಎಂದು ಪ್ರಶಾಂತತೆಯಿಂದ ತನ್ನ ದೃಢಪ್ರಯತ್ನವನ್ನು ಮುಂದುವರಿಸುತ್ತಲೆ ಇದ್ದಳು.
ಈ ಕಥೆಯೆಲ್ಲ ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಬಿದ್ದು, ಒಂದಕ್ಕೆ ಎರಡಾಗಿ ಎರಡಕ್ಕೆ ಮೂರಾಗಿ ಉಪ್ಪುಕಾರ ಹಚ್ಚಿದಂತಾಗಿ ಒಗ್ಗರಣೆ ಹಾಕಿದಂತಾಗಿ ರುಚಿ ರುಚಿಯಾಗಿ ಸ್ವಾರಸ್ಯವಾಗಿ ಹಬ್ಬಿದುದರಿಂದಲೆ ಗುತ್ತಿ, ತಿರುಗಿನಿಂತ ನಾಗಕ್ಕನನ್ನು ಗುರುತಿಸಿದಾಗ, ಅವಳ ವಿಚಾರದಲ್ಲಿ ಅವನಿಗೆ ಒಂದು ತರಹದ ಕರುಣೆಗೂಡಿದ ಗೌರವಭಾವನೆಯೇ ಇದ್ದಿತಾದರೂ, ಮುಂದೆ ಹೋಗುತ್ತಿದ್ದ ನಾಗತ್ತೆಯನ್ನು ಒಳಕೊಂಡ ಅವನ ಮನಸ್ಸು ಲಘುತ್ವವನ್ನನುಭವಿಸಿ ಕೊಂಕುನಗೆ ನಕ್ಕದ್ದು!
ತುಸುದೂರ ಮುಂದೆ ಹೋಗಿದ್ದ ನಾಗತ್ತೆ ತನ್ನ ಹಿಂದೆ ನಾಗಕ್ಕನ ಹೆಜ್ಜೆ ಸಪ್ಪಳ ಕೇಳದಿದ್ದುದನ್ನು ಗಮನಿಸಿ ತಿರುಗಿನೋಡಿ “ಯಾಕೇ? ನಿಂತು ಬಿಟ್ಟೇ? ನಿಂಬಳ ಹತ್‌ತ್ತವೆ, ಬಿರಬಿರನೆ ಬಾರೆ. ಹೆಂಗಾದ್ರೂ ಬ್ಯಾಗ ಗುಡ್ಡ ಹತ್ತಿ ಕಾಡು ದಾಟಿದರೆ ಸಾಕಾಗದೆ” ಎಂದು ಸೊಂಟಗೈಯಾಗಿ ನಿಂತಳು.
“ನಾಯಿ ಬೊಗಳ್ತು. ಅದಕ್ಕೆ ನೋಡ್ತಾ ನಿಂತೆ” ಎನ್ನುತ್ತಾ ನಾಗಕ್ಕ ಬಳಿಸಾರಿ “ಆ ನಾಯಿಗುತ್ತಿ ಅಂತಾ ಕಾಣ್ತದೆ, ಬರ್ತಾ ಇದಾನೆ” ಎಂದಳು.
ಅಷ್ಟರಲ್ಲಿ ಗುತ್ತಿಯೂ ಹತ್ತಿರ ಬಂದು “ದೂರ ಹೊರಟ್ಹಂಗೆ ಕಾಣ್ತದೆ ಹೆಗ್ಗಡ್ತಮ್ಮೋರು?” ಎಂದನು. ಹುಲಿಯ ಅಪರಿಚಿತರನ್ನು ಕಂಡು ಬೊಗಳುವಂತೆ ವರ್ತಿಸದೆ ಬಾಲವಲ್ಲಾಡಿಸಿ ಸಂತೋಷ ಪ್ರದರ್ಶನ ಮಾಡುತ್ತಿತ್ತು.
“ಹುಲಿಯಗೆ ಗುರುತು ಮರೆತಿಲ್ಲ!” ಎಂದಳು ನಾಗಕ್ಕ.
“ನಾಯಿ ಆದ್ರೇನಂತೆ ಅದ್ಕೂ ಬಿದ್ದಿ ಇಲ್ಲೇನು?” ಎಂದನು ಗುತ್ತಿ.
“ಹುಲಿಕಲ್‌ನೆತ್ತಿಕಾಡು ದಾಟೋದು ಹ್ಯಾಂಗಪ್ಪಾ ಅಂತಿದ್ದೆ. ನಮ್ಮನ್ನೊಂದಿಷ್ಟು ಕೋಣೂರುವರೆಗೆ ಮುಟ್ಟಿಸಿ ಹೋಗ್ತಿಯೇನೋ, ಗುತ್ತಿ?” ನಾಗತ್ತೆ ಕೇಳಿದಳು.
“ನಾನೂ ಹಳೆಮನೀಗೆ ಹೊರಟೀನಿ, ನಿಮ್ಮ ಜತೆ ಅಲ್ಲೀವರೆಗೆ ಬಂದೇ ಹೋಗ್ತೀನಿ” ಎಂದು ತೊಯ್ದ  ನೆಲದ ಕಡೆ ನೋಡಿ ಗುತ್ತಿ “ಅಯ್ಯಯ್ಯೋ! ಇಂಬಳ ಹತ್‌ತಾವೆ ಕಣೊ. ಬ್ಯಾಗ ಬ್ಯಾಗ ನಡೀರಿ. ಈ ನುಸಿ ಕಾಟ ಬ್ಯಾರೆ” ಎಂದ.  ಹೊಲೆಯನಾದವನಿಗೆ ಹಿಂದೆ ಸ್ವಲ್ಪ ದೂರದಲ್ಲಿಯೇ ಇದ್ದುಕೊಂಡು ಅನುಸರಿಸುವುದು ಮೇಲಿಜಾತಿಯವರಿಗೆ ಅವನು ತೋರಿಸಬೇಕಾದ ಮರ್ಯಾದೆಯಲ್ಲವೆ?
“ನೀನೆ ಮುಂದೆ ಹೋಗಪ್ಪ! ಹುಲಿ ಕೂತಿರ್ತದಂತೆ ಆ ಹುಲಿಕಲ್‌ ಅರೇಲಿ!” ಎಂದಳು ನಾಗತ್ತೆ.
ಗುತ್ತಿ ನಾಯಿ ಸಹಿತವಾಗಿ ದಾರಿಯಿಂದ ಅಡ್ಡಕ್ಕೆ ಹಳುವಿನಲ್ಲಿ ನುಗ್ಗಿ ಹೋಗಿ ಸ್ವಲ್ಪ ದೂರ ಮುಂದೆ ಮತ್ತೆ ಕಾಲುದಾರಿಗೆ ಸೇರಿಕೊಂಡು ನಡೆಯತೊಡಗಿದನು. ಮಡಿಲು ತುಂಬ ಏನೇನನ್ನೊ ತುಂಬಿದ್ದುದರಿಂದ ಹೊಟ್ಟೆ ಉಬ್ಬಿದಂತೆ ಕಾಣುತ್ತಿದ್ದ ನಾಗತ್ತೆ ಮೆಲ್ಲಮೆಲ್ಲಗೆ ಹೆಜ್ಜೆ ಹಾಕತೊಡಗಿ “ಸ್ವಲ್ಪ ಮೆಲ್ಲಗೆ ಕಾಲು ಹಾಕೋ” ಎಂದು ಕೂಗಿ ಹೇಳಿದಳು ಗುತ್ತಿಗೆ.
ಹುಲಿಕಲ್ಲರೆ ಹತ್ತಿರವಾದಂತೆಲ್ಲ ಮಲೆ ಕಡಿದಾಗುತ್ತಾ ಬಂದಿತು. ಹೆಮ್ಮರಗಳ ಸಾಂದ್ರತೆ ಗಾತ್ರ ಔನ್ನತ್ಯಗಳು ಹೆಚ್ಚಾಗುತ್ತಿದ್ದುವಾದರೂ ಬುಡದ ಹಳುವಿನ ಕಿಕ್ಕಿರಿಕೆ ಕಡಿಮೆಯಾಗುತ್ತಿತ್ತು. ತುರಿಚೆ ಹಳುವಿನಿಂದಲಾಗಲಿ ಎತ್ತು ಬೀಳಿನಿಂದಲಾಗಲಿ ಬಾಡು ಬೆಕ್ಕಿನ ಮುಳ್ಳುಪೊದೆಯಿಂದಾಗಲಿ ತಪ್ಪಿಸಿಕೊಳ್ಳಲು ಹೆಚ್ಚೇನೂ ಪ್ರಯತ್ನಪಡಬೇಕಾಗಿರಲಿಲ್ಲ. ಅಪರ ವಯಸ್ಸಿನ ನಾಗತ್ತೆ ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಹಾಕುತ್ತಾ ಮಧ್ಯೆ ಮಧ್ಯೆ ನಿಂತು ಉಸ್ಸೆಂದು ನಿಡುಸುಯ್ದು ದಣಿವಾರಿಸಿಕೊಳ್ಳುತ್ತಾ ಹತ್ತುತ್ತಿದ್ದಳು. ಮೈ ಬಂದು, ಕಾಲುಗಳೂ ತೋಳುಗಳೂ ಅಸ್ವಾಭಾವಿಕವೆಂಬಷ್ಟು ದಪ್ಪದಪ್ಪವಾಗಿ ಬೆಳೆದಿದ್ದ ಆ ಹೆಂಗಸು ಒಂದೆರಡು ಕಡೆ ಜಾರಿ ಬೀಳುತ್ತಿದ್ದವಳನ್ನು ನಾಗಕ್ಕನೆ ಆತು ಹಿಡಿದಿದ್ದಳು. ಕಟ್ಟಿದ ವಲ್ಲಿಯಿಂದ ಕೊರಳ ಬೆವರನ್ನು ಒರೆಸಿಕೊಳ್ಳುತ್ತಾ “ನಾಗೂ, ಆ ಕಲ್ಲರೆವರೆಗೆ ಸೊಲ್ಪ ಕೈ ಹಿಡಿದುಕೊಳ್ತಿಯೇನೇ?” ಎಂದು ಅಂಗಲಾಚುವಂತೆ ಕೇಳಿಕೊಂಡ ಅತ್ತೆಯ ಕೈಯನ್ನು ತನ್ನ ಜುಗುಪ್ಸೆ ತೋರಗೊಡದ ರೀತಿಯಲ್ಲಿ ಆತುಕೊಂಡ ನಾಗಕ್ಕ ಮೆಲ್ಲಮೆಲ್ಲನೆ ಹತ್ತಿ ಏರಿ ಮುಂಬರಿದಳು.
“ಉಸ್‌ಸ್ಸಪ್ಪಾ! ಅಂತು ಕಲ್ಲರೆ ಬಂತಲ್ಲಾ. ಸೊಲ್ಪ ದಣಿವಾರಿಸಿಕೊಂಡು ಹೋಗಾನೇ! ಕರೆದು ಹೇಳೆ ಗುತ್ತೀಗೆ. ಮುಂದೆ ಹೋಗಿಬಿಟ್ಟಾನು!” ಎಂದು ನಾಗತ್ತೆ ವಿಸ್ತಾರವಾಗಿ ಹಾಸಿದಂತಿದ್ದ ಅರಯಮೇಲೆ ಕೂತುಬಿಟ್ಟಳು.
ನಾಗಕ್ಕ ಗುತ್ತಿಯನ್ನು ಕರೆದು ಹೇಳಬೇಕಾಗಲಿಲ್ಲ. ಅವನು ತಾನಾಗಿಯೆ, ನಾಗತ್ತೆ ಕುಳಿತುದನ್ನು ನೋಡಿ, ಹಿಂತಿರುಗಿ ಬಂದು, ಅವರಿಗೆ ಸ್ವಲ್ಪ ದೂರದಲ್ಲಿ, ತನ್ನ ಕಂಬಳಿ ಕೊಪ್ಪೆಯನ್ನು ಮಡಿಸಿ ಹಾಕಿಕೊಂಡು, ಬಗನಿ ದೊಣ್ಣೆಯನ್ನು ಟಣಕ್ಕನೆ ಅರೆಕಲ್ಲಿನ ಮೇಲೆ ಹಾಕಿ, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಕೈಯಿಂದೆಳೆದು ಬಿಸಾಡುತ್ತಾ ಕುಳಿತನು.
ನಾಗತ್ತೆ ತನ್ನ ಮಡಿಲಿನಿಂದ ಒಂದು ಚೂರು ಹೊಗೆ ಸೊಪ್ಪನ್ನು ತೆಗೆದು ಅದರಿಂದ ತನ್ನ ಕಾಲಿಗೆ ಮೊಳಕಾಲಿನವರೆಗೂ ಹತ್ತಿದ್ದ ಇಂಬಳಗಳನ್ನು ಸುಲಭವಾಗಿ ಒರಸಿ ಒರಸಿ ಹಾಕಿದಳು. ಆಮೇಲೆ ಆ ಹೊಗೆಸೊಪ್ಪಿನ ತುಂಡನ್ನು, ತನ್ನ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಒಂದು ಕಡ್ಡಿಯಿಂದ ತೆಗೆಯುವ ವಿಫಲ ಪ್ರಯತ್ನದಲ್ಲಿದ್ದ, ನಾಗಕ್ಕನಿಗೂ ಕೊಟ್ಟಳು. ಅವಳೂ ಬೆನ್ನು ತಿರುಗಿಸಿ ಕೂತು, ಕಚ್ಚಿದ್ದ ಇಂಬಳಗಳನ್ನೆಲ್ಲ ಸರಸರನೆ ಒರಸಿ ಹಾಕಿದಳು. ಆಮೇಲೆ ದೂರದಲ್ಲಿ ಕೂತು ಬಹುವಾಗಿ ಪ್ರಯತ್ನಿಸುತ್ತಿದ್ದ ಗುತ್ತಿಯ ಕಡೆಗೂ ನಾಗತ್ತೆಯ ಅಪ್ಪಣೆಯಂತೆ ಅದನ್ನು ಎಸೆದಳು.
ಗುತ್ತಿ ಅದನ್ನು ಹೆರಕಿಕೊಂಡು “ಹೌದು ಕಣ್ರೋ, ಇದೊಂದು ಒಳ್ಳೆ ಉಪಾಯ” ಎಂದು ಕೆಲಸಕ್ಕೆ ತೊಡಗಿದನು. ಆದರೆ ಗುತ್ತಿ ಇಂಬಳಗಳನ್ನೆಲ್ಲ ತೆಗೆದು ಹಾಕಿದ ಮೇಲೆ ಆ ಹೊಗೆ ಸೊಪ್ಪಿನ ತುಂಡನ್ನು ಬಿಸಾಡಲಿಲ್ಲ. ಅತ್ತ ಇತ್ತ ಕಳ್ಳಕಣ್ಣು ಹಾಯಿಸಿ ಮೆಲ್ಲಗೆ ಸೊಂಟಕ್ಕೆ ಸಿಕ್ಕಿಸಿಕೊಂಡನು! ಮುಂದೆ ಇಂಬಳ ಹತ್ತಿದಾಗ ಉಪಯೋಗಕ್ಕೆ ಬರಲಿ ಎಂದೊ? ಇಲ್ಲವೆ ಅವಶ್ಯಬಿದ್ದಾಗ ಎಲಡಕೆಗೇ ಬೇಕಾಗಬಹುದೆಂದೊ! ನಾಗಕ್ಕ ಅದನ್ನು ಗಮನಿಸಿ ಮುಖ ತಿರುಗಿಸಿಕೊಂಡು ನಕ್ಕದ್ದು ಅವನಿಗೆ ಗೊತ್ತಾಗಲಿಲ್ಲ.
ಅವರು ಕುಳಿತಿದ್ದ ಆ ಎತ್ತರದ ಸ್ಥಾನ ಹೆಸರುವಾಸಿಯಾಗಿತ್ತು. ಹುಲಿಕಲ್ಲು, ಹುಲಿಕಲ್ಲರೆ, ಹುಲಿಕಲ್ ನೆತ್ತಿ ಎಂದು ಮೊದಲಾಗಿ ಆ ಸ್ಥಳವನ್ನು ನಿರ್ದೇಶಿಸುತ್ತಿದ್ದರೂ ಹುಲಿಕಲ್ಲು ಗುಡ್ಡದ ನೆತ್ತಿ ಆ ಹುಲಿಕಲ್ಲರೆಗಿಂತಲೂ ಮೇಲೇರಿ ಇನ್ನ ಬಹಳ ಎತ್ತರದಲ್ಲಿ ಕೊನೆಗೊಂಡಿತ್ತು. ಇವರು ಕುಳಿತಿದ್ದ ಹುಲಿಕಲ್ಲರೆ ಆ ಮಲೆಯ ಓರೆಯ ಹೆಗಲಿನಂತಿತ್ತು. ಅಗಲವಾಗಿದ್ದ ಆ ಹಾಸುಬಂಡೆ ಸುತ್ತಲೂ ದಟ್ಟವಾದ ಅರಣ್ಯದಿಂದ ಪರಿವೃತವಾಗಿದ್ದೂ ಅದರ ಮೇಲೆ ಕುಳಿತವರಿಗೆ ಬಹುದೂರ ಕೆಳಗೆ ಕಣಿವೆಯಲ್ಲಿ ಕೋಣೂರು ಹೂವಳ್ಳಿಗಳ ಗದ್ದೆ ತೋಟಗಳೂ ಅಡವಿಯ ಅಂಚಿಗೆ ಸೇರಿಕೊಂಡಂತಿದ್ದ ಅಡಿಕೆ ಬಾಳೆ ತೋಟಗಳೂ ಸಣ್ಣಗೆ ಚಿತ್ರದಲ್ಲಿ ಬರೆದಂತೆ ಕಾಣುತ್ತಿದ್ದವು. ಹುಲಿ ಅಲ್ಲಿ ಯಾವಾಗಲೂ ಕುಳಿತು ಕಣಿವೆಯಲ್ಲಿ ದನಕರು ಮೇಯುವುದನ್ನು ಗೊತ್ತುಹಚ್ಚುತ್ತಿತ್ತೆಂದೂ, ಇಲ್ಲವೆ ಕಾಡಿನಲ್ಲಿ ತಿರುಗುವ ಮಿಗ, ಹಂದಿ, ಕಡ, ಕಾಡುಕುರಿ ಮೊದಲಾದ ಪ್ರಾಣಿಗಳಿಗಾಗಿ ಕಂಡಿ ಕಾಯುತ್ತಿತ್ತೆಂದೂ ಪ್ರತೀತಿ. ಅಲ್ಲಿ ತಿರುಗಾಡುವವರಿಗೆ ಎಷ್ಟೋಸಾರಿ ಹುಲಿ ಕಾಣಿಸಿದ್ದೂ ಉಂಟು. ಆದರೆ ಮನುಷ್ಯರ ತಂಟೆ ಬರುತ್ತಿರಲಿಲ್ಲ. ದೂರದಿಂದಲೆ ಸ್ವಲ್ಪ ಗಟ್ಟಿಯಾಗಿ ಕೆಮ್ಮುತ್ತಲೋ ಮಾತಾಡುತ್ತಲೋ ಹೋದರೆ ಹುಲಿ ಅಲ್ಲಿಂದ ಕಣ್ಮರೆಯಾಗಿಬಿಡುತ್ತದೆ. ಎಂದು ಬಲ್ಲವರು ಹೇಳುತ್ತಿದ್ದರು. ಅದಕ್ಕಾಗಿಯೆ ಆ ಹುಲಿಕಲ್ಲನ್ನು ದಾಟುವಾಗ ಒಬ್ಬನೆ ಹೋಗುತ್ತಿದ್ದರೂ ಅನೇಕರಿದ್ದಾರೆ ಎಂಬ ಭ್ರಾಂತಿಯನ್ನು ಹುಲಿಗೆ ತಂದು ಕೊಡಲೋಸುಗ ಎಂಬಂತೆ ಗಟ್ಟಿಯಾಗಿ ಮಾತಾಡುತ್ತಲೋ ಬಾಯಿ ಮಾಡುತ್ತಲೋ ದೂರದಲ್ಲಿರುವವರನ್ನು ಕರೆಯುವಂತೆ ಕಾಕು ಹಾಕುತ್ತಲೋ ಇಲ್ಲವೆ ಗಟ್ಟಿಯಾಗಿ ಪದ ಹೇಳುತ್ತಲೋ ಹೋಗುತ್ತಿದ್ದುದು ವಾಡಿಕೆ.
ಮಳೆಗಾಲದ ಮೊದಲ ಪಾದದ ಪೂರ್ವಾಹ್ನದ ಆಕಾಶದಲ್ಲಿ ಮೋಡ ವಿರಳವಾಗಿದ್ದು ಬಟ್ಟ ಬಯಲಾಗಿದ್ದ ಕಲ್ಲರೆಯ ಮೇಲೆ ಬಿಸಿಲು ಚೆನ್ನಾಗಿಯೆ ಬೀಳುತ್ತಿತ್ತು. ಆದರೆ ಕಾಡಿನ ಕಟ್ಟನೆರಳಿನ ಶೀತದಲ್ಲಿ ಅದುವರೆಗೂ ನಡೆದು ಬಂದಿದ್ದ ಅವರಿಗೆ ಅದು ಮೊದಮೊದಲು ಹಿತಕರವಾಗಿಯೆ ಇತ್ತು. ಗುತ್ತಿ ತನಗೊಂಡು ‘ಬಾಯಿಗೆ’ ಸಿಗುತ್ತದೇನೋ ಎಂದು ನಾಗತ್ತೆಯ ಮಡಿಲಿನ ಕಡೆಗೆ ನೋಡುವುದರ ಮೂಲಕ ಸೂಚನೆ ಕೊಟ್ಟರೂ ಸಫಲವಾಗದೆ ನಾಗತ್ತೆ ಸ್ವಲ್ಪಹೊತ್ತಿನಲ್ಲಿಯೆ “ಬಿಸಿಲೇರ್ತಾ ಅದೆ, ಹೋಗಾನ” ಎಂದು ಎದ್ದು ನಿಂತಳು.
ಎದ್ದುನಿಂತ ಗುತ್ತಿಗೆ ಹುಲಿಯ ಕಣ್ಮರೆಯಾದದ್ದು ಗಮನಕ್ಕೆ ಬಂದು ಸಿಳ್ಳು ಹಾಕಿ ಕರೆದನು. ಆದರೆ ಎಲ್ಲಿಯೂ ನಾಯಿಯ ಸದ್ದಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಗುತ್ತಿ ಹುಲಿಕಲ್ಲನ್ನು ಸಮೀಪಿಸುತ್ತಿದ್ದಾಗಲೆ ನಾಯಿಯ ಕೊರಳ ಬಳ್ಳಿಹಗ್ಗವನ್ನು ಬಿಚ್ಚಿಬಿಟ್ಟಿದ್ದನು: ಒಂದು ವೇಳೆ ಹುಲಿ ಏನಾದರೂ ಅರೆಯ ಮೇಲೆ ಕುಳಿತಿದ್ದರೆ ಮುಂದೆ ಹೋಗುವ ನಾಯಿಯನ್ನು ಕಂಡೇ ಮನುಷ್ಯರ ಆಗಮನವನ್ನು ಊಹಿಸಿ ಓಡಿಹೋಗಿ ಬಿಡಲಿ ಎಂದು! ಗುತ್ತಿಯ ಧೈರ್ಯದ ಅಂತರಾಳದಲ್ಲಿ ಎಚ್ಚರಿಕೆಯ ಪುಕ್ಕಲು ಯಾವಾಗಲೂ ಮನೆಮಾಡಿಯೆ ಇರುತ್ತಿತ್ತು!
ಕ್ರೂ ಕ್ರೂ ಕ್ರೂ ಎಂದು ಕಾಡು ಮರುದನಿ ಕೊಡುವಂತೆ ಕರೆದನು.
“ಹಡ್ಬೇಗೆ ಹುಟ್ಟಿದ್ದು ಯತ್ತಮಕ ಸತ್ತದೊ? ಎಂದು  ತನ್ನ ಸಿಟ್ಟನ್ನು ಶಪಿಸುತ್ತಾ ಕಂಬಳಿಕೊಪ್ಪೆಯನ್ನೊ ಬಗನಿದೊಣ್ಣೆನ್ನೊ ಎತ್ತಿಕೊಂಡು ಹೊರಟನು.
“ಮೂಗಾಳಿ ಹಿಡುಕೊಂಡು ಬರ್ತದೆ, ಎಲ್ಲಿಗೆ ಹೋತದೆ?” ಎಂದ ನಾಗತ್ತೆಗೆ.
ಗುತ್ತಿ ಕಾಲು ಹಾಕುತ್ತಲೆ ಹೇಳಿದ: “ಬರ್ಕನ್ನೊ ಕಣ್ಹಂದೀನೊ ಗುದ್ದಿಗೆ ಕೂಡಿಕೊಂಡು ಕಾಯ್ತಾ ಕೂತು ಬಿಡ್ತದೆ ಕಣ್ರೋ. ಅವತ್ತೊಂದು ಸಲ ಎಲ್ಡುದಿನ ಮನೆಗೆ ಬರದೆ ಹೋಯ್ತು. ನನಗೆ ಅನ್ನಾನೆ ಸೇರದೆ ಹೋಯ್ತು. ಆಮ್ಯಾಲೆ ನಾನೂ ಸಣ್ಣತಿಮ್ಮ ಹುಡುಕ್ಕೊಂಡು ಹೋಗಿ ನೋಡ್ತೀವಿ, ಒಂದು ಮರದ ಬುಡದಾಗೆ ಮೇಲೆ ನೋಡ್ತಾ ಕೂತುಬಿಟ್ಟಾದೆ. ಏಟು ಕರೆದ್ರೂ ಬರ ಒಬ್ಬದು. ಕಡೆಗೆ ನೋಡಿದ್ರೆ, ಬರ್ಕನ್ನ ಬೆರಸಿಕೊಂಡು ಹೋಗಿ ಆ ಮರದ ಒಟ್ಟೆಗೆ ಹತ್ತಿಸಿಬಿಟ್ಟದೆ! ಬಳಿಕೋಲು ಹಾಕಿ ನೋಡಿದಾಗ ಒಣೇಲಿ ಗೊತ್ತಾತು! ಹೊಗೆಹಾಲಿ, ದಸಿಗೇಲಿ ಇರ್ದು, ತೆಗೆದ್ವು. ದಿಂಡೆ ಬರ್ಕ! ಸಣ್ಣ ಸಿಮ್ಮನ ಕೈಮೇಲೆ ಇಳಿದುಬಿಟ್ಟಿತ್ತು ಅದರ ಹೊಟ್ಟೆಕಳ್ಳಿನ ರಸ ರಕ್ತ ಎಲ್ಲ! ಹಿಹ್ಹಿಹ್ಹಿ!”
ದಾರಿ ಗುಡ್ಡವಿಳಿದು ಹೋಗುತ್ತಿದ್ದುದರಿಂದ ನಾಗತ್ತೆಗೂ ಅಷ್ಟೇನು ಆಯಾಸಕರವಾಗಿರಲಿಲ್ಲ. ಕಗ್ಗಾಡಿನ ದಟ್ಟಹಳುವಿನಲ್ಲಿ ಹೋಗುತ್ತಿದ್ದಾಗ ಒಂದೆಡೆ ತುಸುದೂರದಲ್ಲಿ ಹಳುವಿನೊಳಗೆ ಏನೋ ಸದ್ದಾಯಿತು. ಮೂವರೂ ಬೆಚ್ಚಿ ನಿಂತರು.
ತಗ್ಗಿದ ದನಿಯಲ್ಲಿ ಗುತ್ತಿ “ಆ ಹೆಬ್ಬಲಸಿನ ಬುಡದಾಗೆ ಅರುಗಾಗಿ!” ಎಂದು ತಾನೂ ಒಂದು ಹೆಮ್ಮರದ ಹಿಂದೆ ಮರೆಯಾಗಿ ನಿಂತ.
ದೊಡ್ಡೋ? ಕಡವೊ? ಹಂದಿಯೊ? ಮಿಗವೊ? ಹುಲಿ ಅಟ್ಟುತ್ತಿದೆಯೋ ಅಥವಾ ಸಿಳ್ಳುನಾಯಿಗಳೋ? ಏನೇನನ್ನೊ ಊಹಿಸುತ್ತಾ ಗುತ್ತಿ ಬಿಡುಗಣ್ಣಾಗಿ ನೋಡುತ್ತಿದ್ದಂತೆಯೆ ಒಂದು ಹೋರಿ ಮಿಗ ಮರಗಳ ಸಂದಿ ಹಳುವಿನಲ್ಲಿ ಕವಣೆ ಕಲ್ಲೆಸೆದಂತೆ ಹಾದಿಬಂದು, ಇಪ್ಪತ್ತು ಮೂವತ್ತು ಮಾರುಗಳಿಗೊಂದು ನೆಗೆತ ಚಿಮ್ಮಿ, ಗುಡ್ಡದ ಉಬ್ಬಿನ ಕಡೆಗೆ ಮಿಂಚಿ ಏರಿ ಕಣ್ಮರೆಯಾಯಿತು. ಆ ಸದ್ದು ಅಡಗುವಷ್ಟರಲ್ಲಿಯೇ ನೋಡುತ್ತಾನೆ: ತನ್ನ ನಾಯಿ, ಹುಲಿಯ, ಅದನ್ನು ಬೆಂಬತ್ತಿ ಸಮವೇಗದಲ್ಲಿ ಎಂಬಂತೆ ಧಾವಿಸುತ್ತಿದೆ! ಗುತ್ತಿ ಅದನ್ನು ಕೂಗಿ ಕರೆಯಬೇಕು ಎನ್ನುವಷ್ಟರಲ್ಲಿಯೇ ನಾಯಿ ಓಡುವ ಸದ್ದು ಅಡಗಿ, ಕಾಡು ನಿಃಶಬ್ದವಾಗಿತ್ತು!
“ಆ ದೊಡ್ಡ ಜಾತಿ ನಾಯೀ ಹಣೇಬರಾನೆ ಹೀಂಗೆ. ಓಡೋ ಪರಾಣಿ ಕಂಡರೆ ಕೂಗೋದಿಲ್ಲ ಏನಿಲ್ಲ, ಅಟ್ಟಿಕೊಂಡು ಹೋಗೋದೊಂದೆ!” ಎಂದು ಗುತ್ತಿ ತನ್ನ ಮೃಗಯಾ ವಿಜ್ಞಾನದ ವಿಷಯಕವಾದ ಚಿಂತನೆಯನ್ನು ತನಗೇ ಗಟ್ಟಿಯಾಗಿ ಕೇಳಿಕೊಳ್ಳುತ್ತಾ ಮುನ್ನಡೆಯತೊಡಗಿದನು.
ಕೋಣೂರು ಸಮೀಪಿಸಿದಂತೆ ಕಾಡು ವಿರಳವಾಗತೊಡಗಿತು. ಗಿಳಿ ಹಿಂಡು, ಕಾಮಳ್ಳಿ ಹಿಂಡು, ಬಾಣವೇಗದಿಂದ ಇಂಚರದ ತನಿಮಳೆಯನ್ನೆ ಚಿಮುಕಿಸುತ್ತಾ ಹಾರಿಹೋಗಲಾರಂಭವಾಯಿತು. ಬರಬರುತ್ತಾ ಕಾಡಿನಂಚು ಹಕ್ಕಲಾಯಿತು. ಅಲ್ಲಲ್ಲಿ ಪೊದೆಗಳಲ್ಲಿ ವಿರಳ ವೃಕ್ಷಗಳಲ್ಲಿ ಪಿಕಳಾರ ಹೊರಸಲಕ್ಕಿ ಮೊದಲಾದ ದಟ್ಟ ಕಾಡಿನವಲ್ಲದ ಹಕ್ಕಿಗಳ ಸದ್ದು ಕೇಳಿಸತೊಡಗಿತು. ತುಸು ದೂರದಲ್ಲಿ ಕೋಣೂರಿನ ಅಡಕೆತೋಟ ಗದ್ದೆಬಯಲುಗಳೂ ಇಣುಕಿ ತೋರಿದುವು.
ಕಾಲು ದಾರಿ ಕವಲಿದೆಡೆ ಗುತ್ತಿ ನಿಂತನು: “ನಾನಿಲ್ಲೆ ಅಗಚ್ತೀನ್ರೋ ಹಳೆಮನೆಗೆ.”
ನಾಗತ್ತೆ ತನ್ನ ಮಡಿಲಿಗೆ ಕೈಹಾಕಿ ಒಂದು ಎಲೆ, ಒಂದು ಅಡಕೆ, ಒಂದು ತುಂಡು ಹೊಗೆಸೊಪ್ಪು ಹೊರತೆಗೆದು ‘ಕೊಳ್ಳೊ’ ಎಂದು ಒಂದು ‘ಬಾಯಿಗೆ’ ಕೊಟ್ಟಳು.
ಗುತ್ತಿ ಅಂಜಲಿಯೊಟ್ಟಿ, ಮೇಲಿಂದ ಬೀಳುವ ಆ ಇಷ್ಟವಸ್ತುವನ್ನು ಆತು ಹಿಡಿದು, ‘ಬತ್ತೀನ್ರೋ’ ಎಂದು ಬೀಳ್ಕೊಂಡು, ಹಿಂದಿರುಗಿ, ಅದುವರೆಗೆ ಹೆಂಗಸರಿಗಾಗಿ ಮೆಲ್ಲನೆ ನಡೆದ ಹೊತ್ತನ್ನು ಮತ್ತೆ ಗೆದ್ದು ಸಂಪಾದಿಸುವ ಉದ್ದೇಶದಿಂದಲೋ ಎಂಬಂತೆ, ಸರಸರನೆ ಕಾಲು ಹಾಕಿದನು.
*******


ಮಲೆಗಳಲ್ಲಿ ಮದುಮಗಳು-9

            ಸ್ವಲ್ಪ ಹೊತ್ತಾದಮೇಲೆ ಕಣ್ಣಾಪಂಡಿತರು ಹೊರಗೆ ಬಂದು ಕರೆದರು; “ಏ ಕುತ್ತೀ!” ಗುತ್ತಿ ಎಲೆಯಡಿಕೆಯನ್ನು ಯಾಂತ್ರಿಕವಾಗಿ ಎಂಬಂತೆ ಜಿಗಿಯುತ್ತಾ ನೆಲದ ಕಡೆ ನೋಡುತ್ತಾ ಕುಳಿತವನು ತಲೆ ಎತ್ತಲಿಲ್ಲ. ಮರದಳಕಲಿನ ಎಳಬಿಸಿಲು ಅವನ ಸುತ್ತಲೂ ಬಲೆಬಲೆ ನೆಯ್ದಿತ್ತು

ಅಲ್ಲಾಡುತ್ತಿದ್ದ ದವಡೆಯೊಂದು ವಿನಾ ವಿಗ್ರಹದೋಪಾದಿಯಲ್ಲಿ ಕುಳಿತಿದ್ದ ಹೊಲೆಯನನ್ನು ನೋಡಿ ಮಲೆಯಾಳಿ ಪಂಡಿತನಿಗೆ ಸೋಜಿಗವಾಯಿತು. ಅರೆನಗೆಗೂಡಿ ಮತ್ತೊಮ್ಮೆ ತುಸು ಗಟ್ಟಿಯಾಗಿಯೆ ಕೂಗಿದರು: “ಏ ನಾಯೀ ಕುತ್ತೀ!” ಆದರೂ ಗುತ್ತಿ ಮೊದಲಿನಂತೆಯೆ ಕುಳಿತಿದ್ದುದನ್ನು ಕಂಡು ಪಂಡಿತರು ವಕ್ರವಕ್ರವಾಗಿ ದರಿಸಿಹೋಗಿದ್ದ ಕಲ್ಲು ಕಟ್ಟಣೆಯ ಮೆಟ್ಟಲುಗಳನ್ನು ಕಾಲು ಜಾರೀತೆಂದು ನಿಧಾನವಾಗಿ ಎಚ್ಚರಿಕೆಯಿಂದ ಇಳಿಯತೊಡಗಿದರು.
ಗುತ್ತಿ ನೆಲದ ಕಡೆ ನೋಡುತ್ತಿದ್ದುದೇನೋ ಹೌದು. ಹೋದ ರಾತ್ರಿಯ ಮಾರಿ ಮಳೆಯಲ್ಲಿ ತೇಲಿಬಂದು ಕುತ್ತುರೆಯಾದಂತಿದ್ದ ಹಲಸಿನ ತರಗಿನ ನಡುವೆ ಬಿದ್ದಿದ್ದ ಒಂದುಸ ಗಣಿ ಮುದ್ದೆಯಿಂದ ಒಂದು ಓಡುಹುಳು ಸಣ್ಣದೊಂದು ಉಂಡೆಯನ್ನು ಅದನ್ನು ಹಿಂದುಮುಂದಾಗಿ ತನ್ನ ಹಿಂಗಾಲುಗಳಿಂದ ನೂಕಿಕೊಂಡು ಹೋಗುತ್ತಿತ್ತು. ಅತ್ಯಮೂಲ್ಯವಾದ ಪದಾರ್ಥವನ್ನು ಅತಿಪ್ರಯಾಸದಿಂದ ಸಾಗಿಸುವ ಸಾಹಸದಲ್ಲಿ ತೊಡಗಿದಂತಿತ್ತು ಅದರ ದೃಢಪ್ರಯತ್ನ. ಆ ಉಂಡೆ ಒಂದು ಸಣ್ಣ ದಿಬ್ಬವನ್ನು ಹತ್ತಿ ಅದರ ನೆತ್ತಿಗೆ ಬಂದೊಡನೆ ಮತ್ತೆ ಕೆಳಕ್ಕುರುಳಿತು. ಓಡುಹುಳು ಮತ್ತೆ ಅದನ್ನು ಬಳಿಸಾರಿ ತನ್ನ ಹಿಂಗಾಲುಗಳಿಂದ ತಬ್ಬಿಹಿಡಿದು ದಬ್ಬತೊಡಗಿತು. ಹೀಗೆ ಒಂದೆರಡು ಗೇಣು ಹೋಗುವುದರೊಳಗಾಗಿ ನಾನಾ ಅಡಚಣೆಗಳಿಗೆ ಒಳಗಾದರೂ ಧೃತಿಗೆಡದೆ ನಿರಾಶವಾಗದೆ ಕಿನಿಸಿಕೊಳ್ಳದೆ ಪ್ರಶಾಂತವಾಗಿಯೆ ತನ್ನ ಕೆಲಸವನ್ನು ಸಾಗಿಸುತ್ತಿತ್ತು. ಗುತ್ತಿಯ ಕಣ್ಣೇನೋ ಅದನ್ನೆ ಕುತೂಹಲದಿಂದ ನೋಡುತ್ತಿತ್ತು. ಅವನ ಮನಸ್ಸಿನ ಹೊರ ಅಂಚು ಅದರ ದೃಢತೆಯ ವಿಚಾರವಾಗಿ ಚಿಂತಿಸಿ ಶ್ಲಾಘಿಸುತ್ತಲೂ ಇತ್ತು. ಆದರೆ ಅಷ್ಟರಿಂದಲೆ ಅವನು ಆ ಪರಿ ತಲ್ಲೀನನಾಗಿ ಕುಳಿತಿರಲು ಸಾಧ್ಯವಾಗುತ್ತಿರಲಿಲ್ಲ. ಕಣ್ಣಾಪಂಡಿತರು ಎರಡು ಸಾರಿ ಕರೆದೂ ಓಕೊಳ್ಳದಿರುವಷ್ಟು. ಅವನ ಮನಸ್ಸಿನ ಕೇಂದ್ರವನ್ನೆಲ್ಲಾ ವ್ಯಾಪಿಸಿದ್ದ ವಿಚಾರ ಬೇರೆಯಾಗಿತ್ತು. ಓಡುಹುಳುವಿನ ಸೆಗಣಿ ಉಂಡೆಯ ಸಾಹಸ ಒಳಗಿನ ಏಕಾಗ್ರತೆಗೆ ಆಲಂಬನರೂಪವಾದ ಬಹಿರಿಂದ್ರಿಯ ಘಟನೆ ಮಾತ್ರವಾಗಿತ್ತು. ಅವನ ಅಂತಃಕರಣವನ್ನೆಲ್ಲ ಆಕ್ರಮಿಸಿದ್ದ ವಿಚಾರವೆಂದರೆ ತಿಮ್ಮಿಯ ಅಪಹರಣ! ಅದರ ಸಾಧ್ಯಸಾಧ್ಯತೆ, ಅದರ ಅಪಾಯ, ಅದರಿಂದ ತಪ್ಪಿಸಿಕೊಳ್ಳುವ ಉಪಾಯ, ತಿಮ್ಮಿಯ ಅವ್ವ ಸೇಸಿಯಿಂದ ಒದಗಬಹುದಾದ ಸಹಾಯ, ತಿಮ್ಮಿಯ ಅಪ್ಪ ದೊಡ್ಡ ಬೀರನಿಂದ ಸಂಭವಿಸಬಹುದಾದ ಅಡಚಣೆ, ಎಲ್ಲಿಯಾದರೂ ಸಿಕ್ಕಿ ಬಿದ್ದರೆ ಗೌಡರಿಂದ ತನಗೆ….
“ಏನೋ, ಕುತ್ತಿ, ಹೀಗೆ ಕೂತುಬಿಟ್ಟಿದ್ದೀಯಲ್ಲಾ?”
ಗುತ್ತಿ ದಿಗಿಲುಬಿದ್ದವನಂತೆ ಎದ್ದುನಿಂತು ಅಚ್ಚರಿಯಿಂದ “ಅಯ್ಯೊ ಯಾವ ಮಾಯಕದಾಗೆ ಬಂದುಬಿಟ್ರಿ ಈಟು ಹತ್ರ?” ಎಂದು ಹಲ್ಲುಬಿಟ್ಟನು.
“ಏನು ನೋಡುತ್ತಾ ಇದ್ದೆಯಲ್ಲಾ? ನಾನು ಎರಡು ಸಲ ಕೂಗಿದೆ; ನಿನಗೆ ಇತ್ತ ಧ್ಯಾಸವೇ ಇರಲಿಲ್ಲಾ?”
ಪಂಡಿತರು ಕೇಳಿದ ಪ್ರಶ್ನೆಯನ್ನೇ ಗಮನಿಸದೆ ಗುತ್ತಿ ಅವರ ಕೈಯಲ್ಲಿದ್ದ ಅಂತ್ರವನ್ನೆ ಬಯಸಿ ನೋಡುತ್ತಾ ತನ್ನ ಎರಡು ಕೈಗಳನ್ನೂ ಅಂಜಲಿಬದ್ದವನ್ನಾಗಿ ಮಾಡಿ ಯಾಚಿಸುವಂತೆ ನೀಡಿದನು. ಹಾಗೆ ಮಾಡುವಾಗ ಅವನ ಕೈಯಲ್ಲಿದ್ದ ಬಗನಿ ದೊಣ್ಣೆ ಕಂಕುಳು ಸೇರಿತ್ತು.
“ಕೈಯಲ್ಲಿ ಶರಣಾರ್ತಿ ಬಗಲಲ್ಲಿ ದೊಣ್ಣೆ”  ಎಂಬ ಗಾದೆ ನಿನ್ನದು…. ಮತ್ತೆ ನಾನು ಹೇಳಿದ್ದು ಮರೆಯಬೇಡ. ತಿಳಿಯಿತೇ?” ಎನ್ನುತ್ತಾ ಕಣ್ಣಾ ಪಂಡಿತರು ಅವನ ಕೈಗೆ ಅಂತ್ರ ಹಾಕಿದರು, ಕೈ ಸೋಕೀತೆಂದು ಹೆದರಿ ತುಸು ಎತ್ತರದಿಂದಲೆ!
ತುಂಬ ಗೌರವದಿಂದಲೂ ಆ ಪವಿತ್ರ ವಸ್ತುವನ್ನು ಬೊಗಸೆ ಕೈಯಲ್ಲಿ ಅಪ್ಪಿಹಿಡಿದು, ಆ ಜೋಡಿಸಿದ್ದ ಕೈಯಿಂದಲೆ ಸೊಂಟಬಗ್ಗಿ ನಮಸ್ಕಾರ ಮಾಡಿ, ಹೊರಟೇಬಿಟ್ಟನು ಗುತ್ತಿ. ಪಂಡಿತರು “ಏನೋ ಅಮಸರ? ಓಡುತ್ತಿದ್ದೀಯಲ್ಲಾ?” ಎಂದು ಕೇಳಿದರೂ ನಿಲ್ಲದೆ “ಹೊತ್ತಾಯ್ತು ಕಣ್ರಾ; ಬತ್ತೀನಿ” ಎನ್ನುತ್ತಾ ಬಿರುಬಿರನೆ ಕುಳ್ಳುಗಾಲು ಹಾಕಿದನು.
ತುಸು ವಯಸ್ಸಾಗಿದ್ದ ಕಣ್ಣಾಪಂಡಿತರು ಕುಳ್ಳಗೆ ಗಟ್ಟಿಮುಟ್ಟಾಗಿದ್ದ ತರುಣ ಗುತ್ತಿಯನ್ನೆ ನೋಡುತ್ತಾ ನಗುತ್ತಾ ‘ಲವಡೀ ಮಗನಿಗೆ ಹೆಣ್ಣಿನ ಹುಚ್ಚು ಅಮರಿತ್ತಲ್ದಾ?” ಎಂದುಕೊಂಡು ಮನೆಗೆ ಹಿಂತಿರುಗಿದರು.
ಗುತ್ತಿ ‘ಹೊತ್ತಾಯ್ತು ಕಣ್ರಾ’ ಎಂದು ಒಡೋಡುತ್ತಲೆ ಅವಸರವಸರವಾಗಿ ಅಂತ್ರ ದಾನಮಾಡಿದ ಕಣ್ಣಾಪಂಡಿತರನ್ನು ಬೀಳುಕೊಂಡಿದ್ದರೂ ಹತ್ತುಮಾರು ಹೋಗುವುದರೊಳಗೆ ಅವನ ವೇಗ ಕಡಿಮೆಯಾಗುತ್ತಾ ಬಂದು ಅಂತಕ್ಕಸೆಟ್ತಿಯ ಮನೆಯ ಸಮೀಪದಲ್ಲಿ ನಿಂತೇ ಹೋಯಿತು. ಅಷ್ಟು ಹಿತಕರವಾಗಿ ಅವನ ಮೂಗನ್ನು ಆಹ್ವಾನಿಸುತ್ತಿತ್ತು ದೋಸೆಯ ವಾಸನೆ!” ಬೆಳಗಿನಿಂದ ಏನನ್ನೂ ತಿಂದು ಕುಡಿದು ಮಾಡದೆ ಇದ್ದ ಅವನಿಗೆ ಆ ದೋಸೆಯ ಕಂಪಿನ ಪ್ರಲೋಭನೆಯನ್ನು ಮೀರಿ ಮುಂದೆ ಅಡಿಯಿಡಲು ಆಗಲಿಲ್ಲ. ಇನ್ನೊಂದು ನಾಲ್ಕುಮಾಡು ಮುಂದುವರಿದಿದ್ದರೆ ಕೋಣೂರಿಗೆ ಹೆದ್ದಾರಿಯಿಂದ ಅಗಚುವ ಕಾಲುದಾರಿ ಸಿಕ್ಕುತ್ತಿತ್ತು. ಕಾಲುನಡಿಗೆಯಲ್ಲಿ ಹೋಗುವವರೆಲ್ಲ ಕೋಣೂರಿನ ಮೇಲೆಯೆ ಹಾದು ಹೋಗಬೇಕಾಗಿತ್ತು ಹಳೆಮನೆಗೆ. ಆದರೆ ಗುತ್ತಿಯ ಮನಸ್ಸು ಅಥವಾ ಹೊಟ್ಟೆ ಅಥವಾ ಬಾಯಿ-ಅವನ ಮಟ್ಟಿಗೆ ಅವುಗಳಲ್ಲಿ ಅಂತಹ ಭೇದವೇನಿರಲಿಲ್ಲ!- ‘ಉಂದು ಚೂರು ಬಾಯಿ ಹುಳ್ಳಗೆ ಮಾಡಿಕೊಂಡೇ ಹೋಗಾನ’ ಎಂದು ವಾದಿಸಿತು. ಮನೆಯ ಎದುರು ಹೆದ್ದಾರಿಯ ಅಂಚಿಗೆ ಹಾಕಿದ್ದ ಬಿದಿರಡ್ಡೆಯ ಬೇಲಿಯನ್ನು ಉಣುಗೋಲಿನ ಬದಿಯೆ ಇದ್ದ ತಡಬೆಯ ಮೇಲೆ ಹತ್ತಿ ದಾಟಿ ಮುಂಚೆಕಡೆಯ ಅಂಗಳಕ್ಕೆ ಹೋದನು.
ಅಂತಕ್ಕಸೆಟ್ತಿಯ ಮನೆ ಒಂದು ರೀತಿಯಲ್ಲಿ  ಅರವಟ್ಟಿಗೆ, ಅನ್ನಸತ್ರ, ಭೋಜನಗೃಹ, ಕಳ್ಳಂಗಡಿ, ಜೂಜಿನ ಕಟ್ಟೆ, ಆಟದಮನೆ, ಇತ್ಯಾದಿ ಇತ್ಯಾದಿ ಸಂಸ್ಥೆಗಳ ಸಂಸ್ಕಾರಗಳನ್ನೆಲ್ಲ ಒಳಗೊಂಡ ಸಾಮೂಹಿಕ ಕ್ಷೇತ್ರವಾಗಿತ್ತು. ಆಗದವರು ಕೆಲವರು ಇನ್ನೂ ಏನೇನೋ ಆಗಿದೆ ಎಂದು ಕಿವಿ ಮಾತು ಹೇಳುತ್ತಿದ್ದರು. ಆದರೆ ಗುತ್ತಿಯ ಮಟ್ಟಿಗೆ ಅದು ‘ಮೇಗ್ರೊಳ್ಳಿ ಹಲಸಿನ ಮರದ ಮನೆ’, ಆ ಮನೆಯ ಎದುರಿಗಿದ್ದ ಹೆಬ್ಬಲಸಿನ ಮರವನ್ನು ಎಂದೋ ಕಡಿದುಹಾಕಿದ್ದರೂ ಅದು ಕೀರ್ತಿಶೇಷವಾಗಿ ಆ ರೀತಿ ಹೆಸರುಳಿಸಿಕೊಂಡಿತ್ತು.
ಅವನು ಸಿಂಬಾವಿಯಿಂದ ಕೋಣೂರು, ಹಳೆಮನೆ, ಹೂವಳ್ಳಿ, ಬೆಟ್ಟಳ್ಳಿ ಮೊದಲಾದೆಡೆಗಳಿಗೆ ಹೋಗಿ ಬರುವಾಗಲೆಲ್ಲ ‘ಹಲಸಿನಮರದ ಮನೆಯಲ್ಲಿ’ ತುಸುಕಾಲವಾದರೂ ತಂಗಿ ಬಾಯಾರಿಕೆಯನ್ನೊ ಹಸಿವೆಯನ್ನೊ ಆಯಾಸವನ್ನೊ ಪರಿಹರಿಸಿಕೊಂಡು ಹೋಗುತ್ತಿದ್ದುದು ವಾಡಿಕೆ. ಬೆಲ್ಲ ನೀರುಗಳನ್ನೊ, ಹೆಂಡ ಕರಿಮೀನು, ಚಟ್ನಿಯನ್ನೊ, ಕಳ್ಳು ಸ್ವಾರ್ಲು ಮೀನನ್ನೊ, ಕಡೆಗೆ ಮಜ್ಜಿಗೆ ಉಪ್ಪಿನಕಾಯಿಯನ್ನೊ ಸವಿದೆ ಮುಂದುವರಿಯುತ್ತಿದ್ದನು. ಅದಕ್ಕೆ ಬದಲಾಗಿ ಅವನು ಇತರ ಪ್ರಯಾಣಿಕರಂತೆ ದುಡ್ಡು ಕಾಸು ಕೊಡುತ್ತಿರಲಿಲ್ಲ. ಅವನ ಹತ್ತಿರ ಆ ಪದಾರ್ಥ ಇರುತ್ತಿದ್ದುದೂ ಅಷ್ಟಕ್ಕಷ್ಟೇ! ಜಾತ್ರೆಗೊ ತೇರಿಗೊ ಹೋಗುವಾಗ ಹೆಗ್ಗಡೇರ ಹತ್ತಿರ ಗೋಗರೆದು ಒಂದೆರಡಾಣೆ ದಕ್ಕಿಸಿಕೊಂಡರೆ ಅದೇ ಯಥೇಚ್ಛ. ಆದರೆ ಕಾಡಿನಲ್ಲಿ ಬರುವಾಗ, ಅದು ಸಮಯವಾಗಿದ್ದರೆ, ಒಳ್ಳೆಯ ಎಲೆ ಕಳಲೆ ಮುರಿದು ತಂದುಕೊಡುತ್ತಿದ್ದನು. ಪಯಣ ಕೈಕೊಳ್ಳುವ ಸಮಯದಲ್ಲಿ ತಾನು ಒಡ್ಡಿದ ಶೆಬೆಗೆ ಕಾಡುಕೋಳಿಯೊ ಚಿಟ್ಟಿಕೋಳಿಯೊ ಸಿಕ್ಕಿಬಿದ್ದರೆ ಅದನ್ನೂ ಎಷ್ಟೋ ಸಾರಿ ತಂದುಕೊಟ್ಟಿದ್ದನು. ಅಣಬೆಯ ಕಾಲದಲ್ಲಿ ಅಕ್ಕಿಅಳಿಬಿ, ಹೆಗ್ಗಾಲಳಿಬಿ, ಚುಳ್ಳಳಿಬಿ, ಕಾಸರ್ಕನಳಿಬಿ ಇವುಗಳನ್ನೂ ತಂದುಕೊಡುತ್ತಿದ್ದನು. ಒಮ್ಮೊಮ್ಮೆ ಇತರರ ಅಡಕೆ ಬಾಳೆ ತೋಟಗಳಲ್ಲಿ ಹಾದು ಬೇಲಿಯ ತಡಬೆ ದಾಟಿ ಬರುವ ಪ್ರಮೇಯ ಒದಗಿದಾಗ ಬಾಳೆಯ ಗೊನೆಗಳನ್ನೂ ತಂದುಕೊಡುತ್ತಿದ್ದುದೂ ಉಂಟು! ಅಲ್ಲದೆ ತಾನು ಅಲ್ಲಿಗೆ ಬಂದಾಗ ಅಂತಕ್ಕಸೆಟ್ತಿಯವರಿಗೆ ಏನಾದರೂ ತುರುತ್ತಾಗಿ ಆಗಬೇಕಾದ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿಕೊಡುತ್ತಿದ್ದನು.
ಅಂಗಳಕ್ಕೆ ಹೋದವನು ಮುಂದುಗಡೆ ನೇತುಹಾಕಿದ್ದ ಮಂತ್ರದ ತೆಂಗಿನಕಾಯಿಯನ್ನು ನೋಡಿ ದೂರದಲ್ಲಿಯೆ ನಿಂತನು. ಹುಲ್ಲಿನ ಮಾಡು ಕುಸಿಯಾಗಿದ್ದುದರಿಂದ ಜಗಲಿ ಕಿರುಜಲಿಗಳಲ್ಲಿ ಕವಿದಿದ್ದ ಅರೆ ಗತ್ತಲೆಯಲ್ಲಿ ಯಾರು ಯಾರೊ ಮೇಲುಜಾತಿಯವರು ಚಾಪೆಯ ಮೇಲೆ ಮಲಗಿಯೊ ಕಂಬಳಿಯ ಮೇಲೆ ಕುಳಿತೋ ಮೂಲೆಯಲ್ಲಿ ಕರಿಹಿಡಿದು ಕೊಳೆಯಾಗಿದ್ದ ಬೆಂಚಿನ ಮೇಲೆ ಒರಗಿಯೊ ಇದ್ದುದರಿಂದ ಅಲ್ಲಿ ತನಗೆ ಸ್ವಾಗತವಾಗಲಿ ಪ್ರವೇಶವಾಗಲಿ ಎಂದೆಂದೂ ದೊರೆಯದೆಂದು ಹುಟ್ಟಿನಿಂದಲೆ ಅರಿತಿದ್ದ ಗುತ್ತಿ ಮಾಡು ಸಂದಿಯ ಕಡೆಯಿಂದ ಮೂಗುಮುಚ್ಚಿ ಹಿಡಿದುಕೊಂಡು ಹಿತ್ತಲುಕಡೆಯ ಅಂಗಳಕ್ಕೆ ಬೇಗಬೇಗನೆ ಜಾರಿದನು. ಅಷ್ಟೊಂದು ಮಲಮೂತ್ರಾದಿ ಸಂಮಿಶ್ರಣದ ದುರ್ಗಂಧವಿತ್ತು ಅಲ್ಲಿ.
ಹಿತ್ತಲುಕಡೆಯಿದ್ದ ಒಂದು ಹುಲ್ಲು ಜೋಪಡಿ ದನದ ಕೊಟ್ಟಿಗೆಯಾಗಿತ್ತು. ಅದಕ್ಕೆ ಗೋಡೆಯಿರಲಿಲ್ಲ. ಕಂಬದಿಂದ ಕಂಬಕ್ಕೆ ಬಿದಿರಡ್ಡೆಗಳನ್ನು ಕಟ್ಟಿ ಬೇಲಿಯ ತರಹದ ಒಡ್ಡು ಹಾಕಿದ್ದರು. ಬಡಕಲು ಬಡಕಲು ಆದ ಒಂದೆರಡು ದನಗಳೂ ಒಂದು ಸುಪುಷ್ಟವೆನ್ನಬಹುದಾದ ಎಮ್ಮೆಯೂ ಇದ್ದುವು.
ಗುತ್ತಿಯ ಕಣ್ಣಿಗೆ ತಟಕ್ಕನೆ ಗೋಚರವಾದುದೆಂದರೆ ಕೊಟ್ಟಿಗೆಯ ತುಂಬಾ ತುಂಬಿದ್ದ ಬೆಳಕು. ನೋಡುತ್ತಾನೆ: ಅದರ ಹುಲ್ಲು ಮಾಡೆಲ್ಲ ಹಾರಿಹೋಗಿದೆ! ಹಾರಿದ ಹುಲ್ಲು ಅಲ್ಲಿಯೆ ಅಲ್ಲಲ್ಲಿ ಕೆದರಿ ಬಿದ್ದಿದೆ. ಕಳೆದ ರಾತ್ರಿಯ ಮಳೆಗಾಳಿಯ ಪ್ರಭಾವ ಸಿಂಬಾವಿ, ಸೀತೂರುಗುಡ್ಡ, ಲಕ್ಕುಂದಗಳಲ್ಲಿ ಮಾತ್ರವಲ್ಲದೆ ಮೇಗರವಳ್ಳಿಯಲ್ಲಿಯೂ ಪೂರಾ ಕೆಲಸ ಮಾಡಿದೆ ಎಂದುಕೊಂಡು, ತನ್ನ ಆಗಮನದ ಸೂಚನಾರ್ಥವಾಗಿ ಒಂದೆರಡು ಬಾರಿ ಕೆಮ್ಮಿದನು.
ಪರಿಣಾಮವಾಗಿ ಹಿತ್ತಲುಕಡೆ ಅಂಗಳಕ್ಕೆ ತೆರೆಯುವ ಬಾಗಿಲು ಸಶಬ್ದವಾಗಿ ಅಲ್ಲಾಡಲು ಪ್ರಾರಂಭವಾಯಿತು. ಕಿರ್ರೊ ದಡಾರ್ ಬಡಾರ್ ಎಂದು ಹಿಂದಕ್ಕೂ ಚಲಿಸಿತು. ಬಳೆ ತೊಟ್ಟಿದ್ದ ಬಿಳಿಯ ಕೈಯೊಂದು ಬಾಗಿಲನ್ನು ಸಶ್ರಮವಾಗಿ ಎತ್ತಿ, ನೂಕಿ, ಅಲುಗಿಸಿ, ದಬ್ಬುತ್ತಿದ್ದುದು ಕಾಣಿಸಿತು. ಗುತ್ತಿ ನೋಡುತ್ತಿದ್ದಂತೆ ಅಂತಕ್ಕನ ಮಗಳು ಕಾವೇರಿ ಹೊರಗೆ ತಲೆ ಹಾಕಿ ನೋಡಿದಳು.
ನೋಡಿ, ಗುರುತಿಸಿ, ನಗುಮೊಗಳಾಗಿ “ಇದೇನೋ, ಗುತ್ತೀ, ಇಷ್ಟು ಹೊತ್ತಾರೆ? ಎಲ್ಲಿಂದ ಬಂದೆಯೋ? ಹಳೆಮನೆಯಿಂದಲೋ ಬೆಟ್ಟಳ್ಳಿಯಿಂದಲೋ?” ಎಂದು ಪ್ರಾಯದ ಹೆಣ್ಣಿನ ಇನಿದನಿಯಿಂದ ಮುದ್ದಾಗಿ ಕೇಳಿದಳು. ಮತ್ತು, ತನಗಿಂತಲೂ ಕುಳ್ಳಾಗಿದ್ದರೂ ಬೆಳ್ಳಗೆ, ಜಟ್ಟಿಯಂತೆ ದೃಢಕಾಯನಾಗಿ, ಲಕ್ಷಣವಾಗಿದ್ದ ಹೊಲೆಯನನ್ನು ಪ್ರಶಂಸನೀಯ ದೃಷ್ಟಿಯಿಂದ ಈಕ್ಷಿಸಿದಳು.
ಹೊಲೆಯನಾಗಿದ್ದುದರಿಂದಲೆ ಹಾಗೆ ಈಕ್ಷಿಸುವುದರಲ್ಲಿ ಕಾವೇರಿಗೆ ಅಭ್ಯಂತರವೇನೂ ಕಾಣಲಿಲ್ಲ. ತನ್ನ ವರ್ಗಕ್ಕೆ ಸೇರದಿರುವ ಮತ್ತೊಂದು ಸ್ಫುರದ್ರೂಪಿ ಗಂಡುಪ್ರಾಣಿಯನ್ನು, ಒಂದು ಮನೋಹರವಾದ ಪಕ್ಷಿಯನ್ನೊ ಒಂದು ಸುಲಕ್ಷಣವಾದ ಅಂಕದ ಕೋಳಿ ಹುಂಜನನ್ನೊ ಒಂದು ಸುಪುಷ್ಟವಾದ ಸುಂದರ ಗೂಳಿಯನ್ನೊ ನೋಡುವುದರಲ್ಲಿ ತಪ್ಪೇನು? ಅಸ್ಪೃಶ್ಯನಾದ ಹೊಲೆಯ ಮನುಷ್ಯಜಾತಿಯವನಾಗಿದ್ದರೂ ತನ್ನ ಜಾತಿಯೂ ಅಲ್ಲದೆ, ತನಗೆ ಸರಿಸಮಾನ ಜಾತಿಯೂ ಅಲ್ಲದೆ, ಅತ್ಯಂತ ಕೊನೆಯ ಕೀಳುಜಾತಿಯವನಾಗಿದ್ದುದರಿಂದ ಹರೆಯರೆಯ ಕೊಂಬಿನ ಚೆಲುವಿನ ಹೋರಿಮಿಗವನ್ನು ಮೆಚ್ಚಿ ನೋಡುವಂತೆ ನೋಡಿದಳು. ತನಗೂ ಅವನಿಗೂ ಮಾನವೀಯವಾದ ಗಂಡು-ಹೆಣ್ಣಿನ ಸಂಬಂಧ ಭಾವನೆಯ ಸುಳಿವೂ ಸರ್ವಥಾ ಅಸಂಭವ, ನಿಸರ್ಗ ವಿರುದ್ಧ, ಅಸ್ವಾಭಾವಿಕ, ಅಸಾಧ್ಯ ಎಂಬ ಪ್ರಚ್ಛನ್ನ ಧೈರ್ಯ ಅವಳ ನೋಟಕ್ಕೆ ನಿಸ್ಸಂಕೋಚತೆಯೀಯುವ ಧರ್ಮರಕ್ಷೆಯಾಗಿತ್ತು.
ಅದೇ ಕೆಚ್ಚಿನಿಂದಲೆ ಹೊಲೆಯನೂ ಸೆಟ್ಟರ ಹೆಣ್ಣಿನ ಚೆಲುವನ್ನು ನೋಡುತ್ತಾ ಪ್ರಸನ್ನಮುಖಿಯಾಗಿ “ಸಿಂಬಾವಿಯಿಂದ್ಲೆ ಬಂದೆ ಕಣೊ; ರಾತ್ರಿ ಮಳೆ ಜಪ್ಪಿ, ಲಕ್ಕುಂದದಾಗೆ ಉಳಿದಿದ್ದೆ. ಹಳೆಮನೆ ಹೆಗ್ಗಡೇರಿಗೆ ಕಾಗದ ಕೊಟ್ಟಾರೆ ನಮ್ಮ ಹೆಗ್ಗಡೇರು. ಅದಕ್ಕೆ ಬರ್ದಂಡು ದ್ವಾಗ್ತಿದ್ದೀನಿ.”
“ಯಾರ ಹತ್ರಾನೆ ಪಟ್ಟಂಗ ಹೊಡಿತಿದ್ದೀಯಾ?” ಹೆಣ್ಣು ದನಿಯೊಂದು ಒಳಗಿನಿಂದ ನೀಳವಾಗಿ ಕೇಳಿಸಿತು, ತುಳುಭಾಷೆಯಲ್ಲಿ.
ಕಾವೇರಿ ಕನ್ನಡದಲ್ಲಿಯೆ ರಾಗವಾಗಿ ಕೂಗಿದಳು: “ಆ ನಾಯಿಗುತ್ತಿ ಬಂದಿದಾನೆ, ಅಬ್ಬೇ, ಸಿಂಬಾವಿ ನಾಯಿಗುತ್ತಿ” ಎಂದವಳೆ ಗುತ್ತಿಯ ಕಡೆ ತಿರುಗಿ “ಹೌದಾ? ಎಲ್ಲಿ ಹೋಯಿತೋ ನಿನ್ನ ಹುಲಿಯ?” ಎಂದು ಪ್ರಶ್ನಿಸಿ ಗಟ್ಟಿಯಾಗಿ ನಕ್ಕುಬಿಟ್ಟಳು.
“ಅದರದ್ದು ಇದೆಯಲ್ಲಾ ಹೋದಲ್ಲಿ ತನಕಾ ಬಾಲ ಮೂಸೋದು. ಲಕ್ಕುಂದದಾಗೆ ಸಣುಬಿನ ನಾಯಿ ಇತ್ತು ಅಂತ ಕಾಣ್ತದೆ. ಅಲ್ಲೇ ಕೂತು ಬಿಡ್ತು.”
ಗುತ್ತಿ ಇನ್ನೂ ಮಾತು ಮುಂದುವರಿಸುತ್ತಿದ್ದನೊ ಏನೊ ಅಷ್ಟರಲ್ಲಿ ಅಂಗಳದ ಮೂಲೆಯಲ್ಲಿ, ಕೊಟ್ಟಿಗೆಯ ಹತ್ತಿರ ಇದ್ದ ನುಗ್ಗಿಮರದ ಬುಡದಲ್ಲಿ ಬಿದ್ದಿದ್ದ ದೊಡ್ಡ ಬೂದಿಯ ರಾಸಿಯಲ್ಲಿ, ಬೂದಿಬುಕ್ಕನಾಗಿ ಬೂದಿಯೊಡನೆ ಅಭೇದವೆಂಬಂತೆ ಮಲಗಿದ್ದ, ಬಿಳಿಗೆಂಪು ಬಣ್ಣಗೆಟ್ಟ ಮೂಳು ನಾಯಿಯೊಂದು ಕಂಯ್ಯಂಯ್ಯೊ ಕಂಯ್ಯಂಯ್ಯೊ ಎಂದು ಒರಲುತ್ತಾ ಅಂಗಳವನ್ನೆಲ್ಲ ಒದ್ದೆ ಮಾಡುತ್ತಾ ತೆಣಿಯ ಮೇಲೆ ಸೌದೆ ಕೂಡಿದ್ದರ ಮೇಲೆ ಹಾಕಿದ್ದ ಜಿಗ್ಗಿನಲ್ಲಿ ಹುದುಗಿತು. ಗುತ್ತಿ ನೋಡುತ್ತಾನೆ: ಹುಲಿಯ!
ನಿಡಿದಾಗ ಉಸಿರೆಳೆದು ಕೆನ್ನಾಲಗೆಯನ್ನು ಚಾಚಿ ಏದುತ್ತಿದ್ದುದರಿಂದ ತನ್ನನ್ನು ಹುಡುಕಿಕೊಂಡು ಮೂಗಾಳಿಹಿಡಿದು ಲಕ್ಕುಂದದಿಂದ ಓಡುತ್ತಲೇ ಬಂದಿರಬೇಕು ಎಂದು ಗೊತ್ತಾಗಿ ಗುತ್ತಿ: “ಅಕ್ಕಳ್ರೋ! ನೀವು ನೆನೀತಿದ್ದಹಾಂಗೆ ಹಾಜರು, ಹಡಬೇಗೆ ಹುಟ್ಟಿದ್ದು!” ಎಂದನು.
“ಹಿಡ್ಕೊಳ್ಳೋ! ಹಿಡುಕೊಳ್ಳೋ! ನಮ್ಮ ನಾಯೀನ ಮುರಿದು ಹಾಕೀತು?” ಎಂದು ಎಚ್ಚರಿಸಿದ ಕಾವೇರಿಗೆ
“ಇಲ್ಲ ಕಣ್ರೋ. ಹೆಣ್ಣುನಾಯೀನ ಹಾಂಗೆಲ್ಲಾ ಮುರಿಯಾದಿಲ್ಲ!” ಎಂದು ಗುತ್ತಿ ಹುಲಿಯನನ್ನು ಹತ್ತಿರಕ್ಕೆ ಕರೆದು ತಲೆ ಸವರತೊಡಗಿದನು.
“ಏನೆ ಅದು ಗಲಾಟೆ?” ಎನ್ನುತ್ತಾ ಹೊರಗೆ ಬಂದ ಅಂತಕ್ಕ ಮಗಳನ್ನು ತುಳುವಿನಲ್ಲಿ ಗದರಿಸಿದಳು, ಸಂಗಡ ಯಾರೂ ಇರದಿರುವಾಗ ಹೊಲೆಯನೊಡನೆ ಅಷ್ಷು ದೀರ್ಘಕಾಲ ಮಾತಿನಲ್ಲಿ ತೊಡಗುವುದು ಪ್ರಾಯಕ್ಕೆ ಬಂದ ಹೆಣ್ಣಿಗೆ ತರವಲ್ಲ ಎಂಬಂರ್ಥದಲ್ಲಿ. ಕಾವೇರಿಗೆ ಮುಖಭಂಗವಾದಂತಾಗಿ ಮುನಿದ ಮೋರೆಯಲ್ಲಿ ಸರಕ್ಕನೆ ಒಳಗೆ ಹೋದಳು, ಬಾಯಲ್ಲಿ ಏನನ್ನೊ ಮಿಟಿಮಿಟಿಗುತ್ತಾ.
ಅಂತಕ್ಕ ಬಂದವಳೆ ಕ್ಷಣಮಾತ್ರವೆಂಬಂತೆ ಸಮೀಕ್ಷಿಸಿ ನೋಡಿದಳು ಗುತ್ತಿಯ ಕೈಯಲ್ಲಿ ಏನಾದರೂ ಕಾಣಿಕೆಯಿದೆಯೇ ಎಂದು. ನಿರಾಶಳಾದರೂ ಅದನ್ನು ತೋರಗೊಡದೆ ಹುಸಿನಗೆ ಬೀರಿ, ಸಿಂಬಾವಿ ಹೆಗ್ಗಡಿತಮ್ಮನವರ ಯೋಗಕ್ಷೇಮ ವಿಚಾರಿಸಿದಳು. ಆ ಮಾತು ಈ ಮಾತು ಆಡಿ, ಕೊಟ್ಟಿಗೆಯ ಕಡೆ ನೋಡುತ್ತಾ ಅರ್ಥಪೂರ್ಣವಾಗಿ ಕಿರುನಗೆದೋರಿ “ಒಳ್ಳೆ ಸಮಯಕ್ಕೆ ಕರೆಸಿದಂತೆ ಬಂದೆ, ಮಾರಾಯ. ಅಷ್ಟೊಂದು ಉಪಕಾರ ಆಗುತ್ತದೆ, ನಮ್ಮ ಕೊಟ್ಟಿಗೆಯ….” ಎನ್ನುತ್ತಿರುವಷ್ಟರಲ್ಲಿಯೆ
ಗುತ್ತಿಗೆ ಸರ್ವವೂ ವಿದಿತವಾಗಿ “ನೀವು ಹೇಳಬೇಕೆ? ಒಂದು ಒಪ್ಪೊತ್ತಿನಲ್ಲೆ ಹೊಚ್ಚಿ ಕೊಡ್ತಿದ್ದೆ. ಆದರೆ ನಾನೀಗ ಹಳೆಮನೆ ಹೆಗ್ಗಡೇರಿಗೆ ಬೇಗ ಕಾಗ್ದ ಕೊಟ್ಟು, ಅಲ್ಲಿಂದ ಬೆಟ್ಟಳ್ಳಿಗೆ ಹೋಗಬೇಕಾಗದೆ” ಎಂದು, ನಂಟರ ಮನೆಗೆ ಹೋಗುವಾಗ ತಾನು ಹಾಕಿಕೊಂಡಿರುವ ವಿಶೇಷ ಉಡುಪಿನ ಕಡೆಗೆ ಅಂತಕ್ಕನ ಗಮನ ಸೆಳೆಯುವ ಸಲುವಾಗಿ ತಾನೆ ತನ್ನನ್ನು ಕೊರಳು ಬಾಗಿಸಿ ನೋಡಿಕೊಂಡನು. ಹಾಗೆ ‘ದರೋಬಸ್ತಾ’ಗಿ ಇರುವಾಗ ಹುಲ್ಲು ಹೊದಿಸುವ ಕೈಕೆಲಸ ಮಾಡುವುದಾದರೂ ಹೇಗೆ?
“ನಿನ್ನೆ ಬೆಟ್ಟಳ್ಳಿ ದೊಡ್ಡಬೀರ ಬಂದಿದ್ದ ಕಣ್ರೋ. ನಿನ್ನ ಮೇಲೆ ಬಹಳ ಸಿಟ್ಟಾಗಿದ್ದ.”
ಗುತ್ತಿಗೆ ಮೈಮೇಲೆ ಬಿಸಿನೀರು ಹೊಯ್ದಂತಾಯ್ತು. ತಟಸ್ಥವಾಗಿ ಬೇಸರಿನ ಮಟ್ಟಕ್ಕೂ ಇಳಿದಿದ್ದ ಆ ಮನೆ, ಅಂಗಳ, ಕೊಟ್ಟಿಗೆ, ನಾಯಿ, ಕೋಳಿ ಎಲ್ಲ ಇದ್ದಕ್ಕಿದ್ದ ಹಾಗೆ ಉಜ್ವಲ ಕುತೂಹಲ ವಸ್ತುಗಳಾಗಿ ಪರಿಣಮಿಸಿಬಿಟ್ಟವು.
ಸ್ವಲ್ಪ ಜೋರಾಗಿ ಉಸಿರುಬಿಡುತ್ತಲೇ ಕೇಳಿದ “ಯಾಕೆ ಬಂದಿದ್ದ? ಏನು ಹೇಳಿದ?”
“ಅವನ ಮಗಳನ್ನು ನೀನು ಕೇಳುತ್ತಿದ್ದೀಯಂತೆ. ನಿಮ್ಮ ಹೆಗ್ಗಡೇರೂ ನಿನ್ನ ಹಿಂದುಗಡೆ ನಿಂತುಕೊಂಡು ಹುನಾರು ಮಾಡುತ್ತಿದ್ದಾರಂತೆ. ‘ಅವರಿಗೇನು? ದುಡಿಯುವುದಕ್ಕೆ ಒಂದು ಹೆಣ್ಣಾಳು ಸಿಗುತ್ತದೆಯಲ್ಲಾ? ಅಷ್ಟೆ!’ ಅಂದ. ಬೆಟ್ಟಳ್ಳಿ ಗೌಡರು ಮಾತ್ರ ಬಿಲ್‌ಕುಲ್ ಆಗದು ಅಂತಾರಂತೆ. ‘ನಮ್ಮ ಕೇರಿ ಹೆಣ್ಣುಗಳನ್ನು ಹೊರಗಡೆ ಕೊಡುವುದೆಂದರೇನು? ನಾನು ಅಪ್ಪಗೆ ಹುಟ್ಟಿದ ಮಗಾ ಆದರೆ ಎಂದಿಗಾದ್ರೂ ಬಿಟ್ಟೇನೆ? ನೀನು ನಿನ್ನ ಅಪ್ಪ ನಿನ್ನ ಅಜ್ಜ ಎಲ್ಲ ಮಾಡಿರುವ ಸಾಲ ಬಿದ್ದಿದೆಯಲ್ಲಾ ಅದನ್ಯಾರೋ ತೀರಿಸೋರು?’ ಎಂದು ಉರಿದು ಬಿದ್ದರಂತೆ. ಅದಕ್ಕೇ ದೊಡ್ಡಬೀರ ಗಂಡುಗಳು ಇವೆಯಂತೆ. ಕರಿಮೀನು ಸಾಬರ ಮಳಿಗೇಲಿ ಏನೇನೊ ಯಾಪಾರ ಮಾಡಕ್ಕೆ ಬಂದಿದ್ದನಂತೆ, ಅವರ ಗೌಡ್ರಿಂದ ಸಾಬರಿಗೆ ಕಾಗ್ದ ತಗೊಂಡು.”
ಆಲೈಸುತ್ತಾ ನಿಂತಿದ್ದ ಗುತ್ತಿ ಬಹಳ ದಣಿದವನಂತೆ ಸುಯ್ದು ನೆಲ ನೋಡುತ್ತಾ ನಿಂತನು. ಮತ್ತೆ ತಟಕ್ಕನೆ ತಲೆಯೆತ್ತಿ ‘ಹಂಗಾದ್ರೆ ನಾ ಹೋಗಿ ಬರ್ತೀನಿ’ ಎಂದವನೆ ಬಗನಿದೊಣ್ಣೆಯನ್ನು ಬಗಲಿಗೆ ಹಾಕಿಕೊಂಡು ತಿರುಗಿದನು.
“ನಿಲ್ಲೊ! ನಿಲ್ಲೊ! ಹೊತಾರೆ ಬಂದವನ್ನ ಬರೀ ಹೊಟ್ಟೇಲಿ ಕಳಿಸಬಾರದು. ಪಾಪ ಬರ್ತದೆ” ಎಂದು ಅಂತಕ್ಕ ಒಳಗೆ ನಡೆದು, ಬಾಳೆಯ ಕೀತಿನಲ್ಲಿ ಸ್ವಲ್ಪ ತಂಗಳನ್ನೂ ಕರಿಮೀನು ಚಟ್ನಿಯನ್ನೂ ಹಾಳೆಕೊಟ್ಟೆ ದೊನ್ನೆಯಲ್ಲಿ ಹೆಂಡವನ್ನೂ ತಂದುಕೊಟ್ಟಳು. ನಡೆದು ದಣಿದು ಹಸಿದಿದ್ದ ಹೊಲೆಯ ಅದನ್ನೆಲ್ಲ ಬೇಗಬೇಗನೆ ಪೂರೈಸಿ, ಅಲ್ಲಿಂದ ಹೊರಟನು. ಅವನು ತಿಂದು ಕುಡಿಯುವುದನ್ನೆ ನೋಡುತ್ತಿದ್ದ ಹಲಿಯ ಅವನು ಎಸೆದ ಬಾಳೆಯ ಕೀತನ್ನು ನೆಕ್ಕಿಯೆ ನೆಕ್ಕಿತು, ಅಲ್ಲಿ ಏನೂ ಇರದಿದ್ದರೂ, ಬರಿಯ ಕಂಪಿನ ರುಚಿಗಾಗಿ! ದೋಸೆಯ ವಾಸನೆಯಿಂದಲೆ ಆಕೃಷ್ಟನಾಗಿ ಅಂತಕ್ಕನ ಮನೆಗೆ ನುಗ್ಗಿದ್ದ ಗುತ್ತಿಗೂ ಆವೂತ್ತು ದೊರತಿದ್ದುದೆಲ್ಲಾ ದೋಸೆಯ ವಾಸನೆ ಮಾತ್ರವೆ ತಾನೆ?
*******


ಮಲೆಗಳಲ್ಲಿ ಮದುಮಗಳು-8

           ಹಸುಳೆಬಿಸಿಲಿನ ಬಾಲ್ಯದ ಬೆಚ್ಚನೆಯ ಸೋಂಕಿಗೆಳಸಿ ಸುಬ್ಬಣ್ಣ ಹೆಗ್ಗಡೆಯವರು ಮುಪ್ಪಿನ ಮೆಯ್ಗೆ ಸುತ್ತಿದ್ದ ಕರಿಕಂಬಳಿಯನ್ನು ಬಿಚ್ಚಿ ಹಂದಿಯೊಡ್ಡಿಯ ಮೇಲಿಟ್ಟರು. ಸುಕ್ಕಿನ ಕಿರುದೆರೆ ನಿರಿನಿರಿಯಾಗಿದ್ದ ಅವರ ಎಣ್ಣೆಗಪ್ಪಿನ ಒಡಲಿಗೆ ಬೆಚ್ಚನೆಯ ಬಿಸಿಲು ಮುತ್ತಿಟ್ಟೊಡನೆ ಸುಪ್ತಚಿತ್ತದ ಆಳದಲ್ಲಿ ಗುಪ್ತವಾಗಿದ್ದ ನೂರಾರು ಹೋದಕಾಲದ ಮುದ್ದಾಟಗಳ ನೆನಹಿನ ಸೊಗಸು ಜಾಗ್ರಚ್ಚಿತ್ತದ ಸರೋವರದಲ್ಲಿ ಪುಲಕಿಸಿತು. ಏಕೊ ಏನೊ ಅವರಿಗೆ ಗೊತ್ತಾಗಲಿಲ್ಲ; ಅಂತೂ ಮೈಗೆ ಬಹಳ ಹಿತವಾಯಿತು; ಮನಸ್ಸಿಗೂ ಸಂತೋಷವಾಯಿತು. ತಿಮ್ಮಪ್ಪ ಹೆಗ್ಗಡೆಯಿಂದ ಉಂಟಾಗಿದ್ದ ನಿರಾಶೆಯ ಕತ್ತಲೆ ಮಂಜಮ್ಮನ ಆಗಮನದ ಉಷಃಕಾಂತಿಯಿಂದ ಹರಿದು ಹೋಗಿತ್ತು. ಈಗ ಆ ಮುಂಬೆಳಗೆ ಹೊಂಬೆಳಗಾಗಿ ಮನಸ್ಸು ಪ್ರಸನ್ನವಾಯಿತು.

ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೆ ಅವನ ಅತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೋಶವು ಬಹು ಜನ್ಮಗಳ ಸಂಸ್ಕರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಕೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರಯ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಅಹೇತುಕ ಆನಂದವೊ ಅಕಾರಣ ಸಂಕಟವೊ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರ ದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ, ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೊ ಪೆಡಂಭೂತದ ಕಣ್ಣನ್ನೊ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟು ಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಕೃತಿ’ ಆವಿರ್ಭಾವ ವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ.
ಮಳೆ ತೊಯ್ದ ಮಲೆನಾಡಿನ ಮೇಲೆ ಮೂಡಿದೆಳಬಿಸಿಲಿಗೆ ಮೈಯ್ಯೊಡ್ಡಿದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಭವಿಸಿದ ಸಂತೋಷಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು ಆ ‘ಅಸ್ಮೃತಿ’. ಯಾವ ಯಾವ ಕಾಲದಲ್ಲಿ, ಯಾವ ಯಾವ ದೇಶದಲ್ಲಿ, ಯಾವ ಯಾವ ರೂಪದಲ್ಲಿ, ಯಾವ ಯಾವ ಸನ್ನಿವೇಶದಲ್ಲಿ, ಯಾವ ಸಾಗರತೀರದಲ್ಲಿ, ಯಾವ ಪರ್ವತ ಶಿಖರದಲ್ಲಿ, ಯಾವ ಅರಣ್ಯಕುಂಜಸೀಮೆಯಲ್ಲಿ ಅಂತಹ ಸೂರ್ಯೋದಯದ ಸೊಂಪನ್ನು ಹಿಂದೆ ಎನಿತು ಸಾರಿ ಅನುಭವಿಸಿದ್ದರೋ ಏನೋ? ಆ ಸಂಸ್ಕಾರ ಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು, ಆವೊತ್ತಿನ ಸೂರ್ಯೋದಯ! ಹಳೆಮನೆಯಾದರೇನಂತೆ? ಹಂದಿಯೊಡ್ಡಿಯ ಬಳಿಯಾದರೇನಂತೆ? ಅಕ್ಷರಹೀನ ಅಸಂಸ್ಕೃತ ಒಕ್ಕಲಿಗನಾದರೇನಂತೆ? ಮುಪ್ಪಡಸಿದ್ದರೇನಂತೆ? ಸುಬ್ಬಣ್ಣ ಹೆಗ್ಗಡೆಯೂ ವಿಶ್ವಪ್ರಜೆ!.
ಬೆನ್ನಿಗೆ ಬಿದ್ದ ಬಿಸಿಲು ನಾಲಗೆಗೆ ಬೀಳುವ ಜೇನಾಗಿತ್ತು. ಹೆಗ್ಗಡೆಯವರು ‘ಸ ಸ್‌ ಸ್ ಆಯ್’ ಎನ್ನುತ್ತಾ ಮುಂಡಾಡುವ ರೀತಿಯಲ್ಲಿ ಬೆನ್ನು ನೀವಿಕೊಂಡರು. ಲೋಕವೆಲ್ಲಾ ಅಶೋಕವಾಗಿ ಸುಖಮಯವಾಯಿತು. ಮನದಲ್ಲಿ ವಿಶ್ವಮೈತ್ರಿ ಮೂಡಿತು. ಹಂದಿ, ಕೋಳಿ, ಕುರಿ, ಮರ, ಕಾಡು, ಆಕಾಶ, ಹಾಡುತ್ತಿದ್ದ ಕಾಡು ಹಕ್ಕಿಗಳ ಹಿಂಡು, ನೆರೆ ಹೊರೆ-ಎಲ್ಲದರ ಮೇಲೆಯೂ ಅಕ್ಕರೆವುಕ್ಕಿತು. ಹೆಗ್ಗಡೆಯವರ ಜೀವಮಾನ ಕಟ್ಟಡದಲ್ಲಿ ಆ ಒಂದು ಕ್ಷಣದ ಬಾಳು ಗೋಪುರದ ತುದಿಯ ಕಳಶದ ಚಿನ್ನದ ಡೆಂಕಣಿಯಾಗಿ ಸ್ವಗರಗದೊಡನೆ ಸರಸವಾಡಿತು.
ಸರಸರನೆ ಮುಂಬರಿದು ಕೋಳಿಯ ಒಡ್ಡಿಯ ಬಾಗಿಲು ತೆರೆದರು. ಹುಂಜಗಳು ಹೇಟೆಗಳು ಮರಿಗಳು ಸಳಗಗಳು, ಕೆಂಪು, ಬಿಳುಪು, ಕಪ್ಪು, ಹಂಡಹಂಡ, ಕಡ್ಲೆಕಡ್ಲೆ, ಚ್ಞಿಯ್ಞೊ, ಪ್ಞಿಯ್ಞೊ, ಕೊಕ್ ಕೊಕ್, ಕೊಕ್ಕೋ! ಕೋಳಿಗಳೆಲ್ಲಾ ಒಂದರಮೇಲೊಂದು ನುಗ್ಗಿ ಹೊರಬಿದ್ದುವು. ರೆಕ್ಕೆಯ ಗಾಳಿ ಬೀಸಿದ ಪೊಲ್ಗಂಪು ಹೆಗ್ಗಡೆಯವರಿಗೆ ಸ್ವಾಭಾವಿಕವಾಗಿಯೆ ಇತ್ತು. ಅವಸರ ಅವಸರವಾಗಿ ಹೊರನುಗ್ಗಿ, ಕೆಲವು ಕೆಸರು ಕೆದರಿದುವು; ಕೆಲವು ಕಸದ ರಾಶಿಯಲ್ಲಿ ಕೊಕ್ಕಾಡಿದುವು; ಕೆಲವು ಗೊಬ್ಬರದ ಗುಂಡಿಯ ಕಡೆಗೆ ಓಡಿದುವು, ಎಲ್ಲವನ್ನೂ ಯಜಮಾನ್ಯದ ಪ್ರಶಂಸನೀಯ ದೃಷ್ಟಿಯಿಂದ ನೋಡುತ್ತಾ ನಿಂತಿದ್ದ ಸುಬ್ಬಣ್ಣ ಹೆಗ್ಗಡೆಯವರು ನಗೆಮೊಗದಿಂದ “ಗೊಬ್ರಾ ಕಿದ್ರಾಕೆ ಹೋಗಾಕೆ ಇಷ್ಟೊಂದು ಅವಸರ ಇವಕ್ಕೆ!” ಎಂದು ಹಂದಿಯ ಒಡ್ಡಿಯ ಮೇಲಿಟ್ಟಿದ್ದ ಕಂಬಳಿಯನ್ನು ತೆಗೆದು, ಇದ್ದುದರಲ್ಲಿ ಸ್ವಲ್ಪ ಅಚ್ಚುಕಟ್ಟಾಗಿ ಸ್ಥಳದಲ್ಲಿ ಹಾಕಿ, ಅದರ ಮೇಲೆ ಮೂಡಲಿಗೆ ಬೆನ್ನಾಗಿ ಕುಳಿತು, ಕುಂಟಿ ಕುಂಟಿ ಬಳಿ ಸಾರುತ್ತಾ ದಿಬ್ಬವೇರಿ ಬರುತ್ತಿದ್ದ ಹೂವಳ್ಳಿ ವೆಂಕಟಣ್ಣನನ್ನು ನೋಡುತ್ತಿದ್ದರು.
ಅವನಿನ್ನೂ ಹತ್ತಿರ ಬಂದಿರಲಿಲ್ಲ. ಬಹಳ ಹೊತ್ತಿನಿಂದ ತಡೆದುಕೊಂಡಿದ್ದ ಮಾತು ಹೆಗ್ಗಡೆಯವರ ಗಂಟಲಿನಿಂದ ತುಟಿ ಮೀರಿ ಹೊರಟಿತು.
“ನೀ ಒಳ್ಳೆ ಗಿರಾಸ್ತ ಕಣ್ರೋ! ಅಲ್ಲಾ…. ನಿನ್ನೆ ಬತ್ತೀನಿ ಅಂದಾಂವ….!”
ಹೇಳಬೇಕೆಂದಿದ್ದ ಉತ್ತರವನ್ನು ಹಾದಿಯಲ್ಲಿಯೆ ಕಡೆದು ಅಣಿ ಮಾಡಿಕೊಂಡು ಬಂದಿದ್ದ ವೆಂಕಟಣ್ಣನೂ ಹೆಗ್ಗಡೆಯವರ ಮಾತು ಮುಗಿಯುವುದರೊಳಗಾಗಿ ಹೇಳಿಯೆ ಬಿಟ್ಟನು:
“ನಾ ಏನ್ ಮಾಡಾದ್ರಾ? ಹಾಂಗ್ಯಾರೆ, ಆ ಸನಿ ಮುಂಡೇ ಮಕ್ಳು ಬತ್ತೀನಿ ಅಂದೋರು ಬರ್ಲೆ ಇಲ್ಲ. ಕಾದೆ, ಕಾದೆ…. ಹೊತ್ತಾಗಿಹೋತು. ನಿನ್ನೇನ್ ಮಾಡಾದು…. ನಾಳೆ ಬೆಳಗ್ಗೆ ಹೋಗಾನ ಅಂತ ಹೇಳಿ ನಿಂತುಬಿಟ್ಟೆ.”
“ಯಾರಿಗೆ ಹೇಳಿದ್ಯೋ?”
“ನಿಮ್ಮ ಹೊಲೇರಿಗೆ ಹೇಳಿದ್ದೆ.”
“ನೀ ಒಳ್ಳೆ ಗಿರಾಸ್ತ. ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕುಂಡು ನಿನ್ನ ಹಂದಿ ಹೊರಾಕೆ ಬತ್ತಾರೆ? ನೀ ಬೇಕಾರೆ ಒಳ್ಳೆ ಗಿರಾಸ್ತ!”
“ಹಾಂಗ್ಯಾರೆ ಏನ್ ಮಾಡ್ಲಿ ಹೇಳಿ? ನಿನ್ ನಾನೆ ಹೊತ್ಕುಂಡು ಹೋ’ಬೇಕು…. ಅದಕೂ ಸೈ ಅಂತಿದ್ದೆ. ಕಾಲುಂದ್ ಹೀಂಗಾತಲ್ಲ ಹೇಳಿ….” ಎಂದು ಬಟ್ಟೆ ಸುತ್ತಿದ ಮೊಳಕಾಲನ್ನು ತೋರಿಸುವಂತೆ ಅದರ ಕಡೆ ನೋಡಿದನು.
ಹೆಗ್ಗಡೆಯವರೂ ಸಹಾನುಭೂತಿಯಿಂದ ಅದನ್ನು ನೋಡುತ್ತಾ “ಏನಾತೋ?” ಎಂದು ಹೇಳಿದರು.
ವೆಂಕಟಣ್ಣನು ಊರಿಕೊಂಡಿದ್ದ ದೊಣ್ಣೆಯನ್ನು ಮೆಲ್ಲಗೆ ಕೆಳಗಿಟ್ಟು, ನಿಧಾನವಾಗಿ ಕೂತು, ಕಾಲಿಗೆ ಸುತ್ತಿದ್ದ ಕಂಬಳಿಯ ಕರೆಯನ್ನೂ ಹಾಕಿಕೊಂಡಿದ್ದ ಸರಿಗೆ ಬಳೆಯನ್ನೂ ಸಾವಧಾನವಾಗಿ ಜಾರಿಸುತ್ತಾ “ಹಾಂಗ್ಯಾರೆ, ಅವತ್ತು ಮರಸಿಗೆ ಕೂತಿದ್ದೆ; ಹೋದ ತಿಂಗಳು ಬೆಳಕಿನಾಗೆ. ಒಂದು ಮಲ ಬಂತು. ಹೊಡೆದೆ. ಇಳಿದು ಹೆರಕಿಕೊಳ್ಳಾಕೆ ಹೋಗಾಕೂ ತೆವಳಿಕೂತ ತೆವಳಿಕೂತ ಹೋಗಾಕೆ ಸುರುಮಾಡ್ತು. ಓಟು ಓಡ್ಸಾಡಿದ್ರೂ ಸಿಕ್ಕ್ಒಲ್ಲ್‌ದು. ಬಯ್‌ಲು ತುಂಬಾ ಓಡ್ಸ್ಯಾಡಿ ಸಾಕಾಗಿ ಹೋತು ಅಂತೀನಿ. ಹ್ಯಾಂಗ್ಯಾರೆ, ಹಾಳು ಮುಂದೇದಕ್ಕೆ ದೊಣ್ಣೇನೆ ಸೈ ಅಂತಾ, ಒಂದು ಬಡಿಕೆ  ತಗೊಂಡು ಜಪ್ಪ್‌ದೆ. ಅದರ ಕೊಡರ್ಲು ಹೊಡ್ದುಬಿಡ್ತು ನೋಡಿ. ಹಾಂಗ್ಯಂತ, ಹೆಚ್ಚಿನ ನೆತ್ರೂ ಬರ್ಲೂ ಇಲ್ಲ… ಅದೇ ಗಾಯ ದೊಡ್ಡಾಯ್ತು, ದೊಡ್ಡಾಯ್ತು, ಕಡೀಗೆ ಕುಂಟನ ಹುಣ್ಣಿಗೆ ತಿರಿಗ್ತು…. ಆ ಮೇಗ್ರೊಳ್ಳಿ ಕಣ್ಣಾ ಪಂಡಿತರು ಏನೋ ಔಸ್ತಿ ಮಾಡಿಕೊಟ್ಟಾರ… ಹಾಕಿ ಕಟ್ಟೀನಿ…. ನೋಡ್ಬೇಕು, ಹಾಂಗ್ಯಾರೆ, ಏನಾಗ್ತದೆ ಅಂತಾ….”
“ಹಂದಿ ತಗೊಂಡು ಹೋಗ್ತಿಯೋ ಬಿಡ್ತೀಯೋ, ಬಿಸಿಲು ಏರಿಹೋತು. ಅವನ್ಯಾಕೆ ಸುಮ್ಮನೆ ಒಡ್ಡಿ ಒಳಗೆ ಕೂಡಿ ಹಾಕ್‌ಬೇಕು? ಬಿಟ್ಟಾರು ಬಿಡ್ತೀನಿ,” ಎಂದು ಹೆಗ್ಗಡೆಯವರು ತಟಕ್ಕನೆ ಯೋಗಕ್ಷೇಮದ ಮಾತಿನಿಂದ ವ್ಯಾಪಾರಧ್ವನಿಗೆ ದುಮುಕಿ ಬಿಟ್ಟರು.
ವೆಂಕಟಣ್ಣ ಅದನ್ನು ಗಮನಿಸುವ ಗೋಜಿಗೆ ಹೋಗಲಿಲ್ಲ. ತಟಕ್ಕನೆ ತಲೆಯೆತ್ತಿ “ಅದ್ಯಾಕೆ ಹಾಂಗಂತೀರಿ, ಮಾರಾಯ್ರ. ನಿಮ್ಮ ಹೊಲೇರ ಕೈಲೇ ಹೊರ್ಸಿ ಕಳ್ಸಿ. ನಾ ಹ್ಯಾಂಗೆ ಹೊತ್ಕುಂಡು ಹೋಗ್ಲಿ?” ಎಂದು ಮೆಲ್ಲನೆ ಎದ್ದು ಹಂದಿಯೊಡ್ಡಿಯ ಕಡೆಗೆ ಮೆಲ್ಲಗೆ ಸರಿದನು.
ಹೆಗ್ಗಡೆಯವರೂ ಎದ್ದು ಅತ್ತ ಕಡೆ ಸರಿಯುತ್ತಾ “ನೀ ಒಳ್ಳೆ ಗಿರಾಸ್ತ. ಮಳೇ ಬಂದ್ ಹದಾ ಆಗ್ಯಾದೆ. ಇವತ್ತು ಆರು ಕಟ್ಟಾಕೆ ಹೇಳಿ ಕಳ್ಸೀನಿ. ಇವತ್ತೆಲ್ಲಿ ಸಿಗ್ತಾರೆ ನಮ್ಮ ಹೊಲೇರು?”
“ಅಯ್ಯಯ್ಯೊ, ಅಷ್ಟುಂದು ಉಪಕಾರ ಮಾಡಿ. ನಿಮ್ಮ ದಮ್ಮಯ್ಯ ಅಂತೀನಿ.”
“ಸಿಗಾದಾದ್ರೂ ಮಜ್ಜಾನದ ಮ್ಯಾಲೆ ಸೈ.”
“ಹಾಂಗಾದ್ರೆ ಹಂಗೇನೆ”.
ಹೆಗ್ಗಡೆಯವರು ಸ್ವಲ್ಪ ಉದಾಸೀನದ ಧ್ವನಿಯಿಂದ: “ಮಾರಾಯ, ನಮ್ಮ ಮನೆ ಕಷ್ಟ ಹೇಳಿದ್ರೆ ತೀರದು. ಹುಡುಗಿ ಒಂದೇ ನೀರು ಹೊತ್ತು ಅಡಿಗೆ ಮಾಡಬೇಕಾಗ್ಯದೆ.”
“ಯಾಕೆ? ಮಂಜಮ್ಮನ ಅತ್ತಿಗೆ ಇಲ್ಲೇನು?”
“ಅದೆ. ಹೊರಗೆ ಕೂತದೆ.”
“ಸಣ್ಣಮನೆ ಶಂಕರಪ್ಪ ಹೇಳಿ ಕಳ್ಸಿದ್ದ, ಹೋಗಿ ಬರ್ತೀನಿ” ಎಂದು ವೆಂಕಟಣ್ಣ ಅತ್ತ ಕಡೆ ನೋಡಿದಾಗ, ಮಿಂದು ಬಂದ ಶಂಕರಪ್ಪ ಹೆಗ್ಗಡೆ ಅಂಗಳದಲ್ಲಿದ್ದ ತುಳಸಿಗೆ ನೀರು ಹಾಕಿ ಪ್ರದಕ್ಷಿಣೆ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು.
ಅದನ್ನು ನೋಡಿದ ದೊಡ್ಡ ಹೆಗ್ಗಡೆಯವರು ವ್ಯಂಗ್ಯಹಾಸ್ಯದಿಂದಲೆಂಬಂತೆ “ಓಹೋ ನಮ್ಮ ಬಿರಾಂಬರ ಮಡಿಪೂಜೆ ಆಗ್ತಾ ಇದೆ!” ಎಂದರು.
“ಹಾಂಗ್ಯಾರೆ ಮಜ್ಜಾನ ಕಳ್ಸಿಕೊಡ್ತೀರಷ್ಟೆ?”
“ಹೋಗ್ಲಿ. ಈಗ್ಲೆ ತಗೊಂಡು ಹೋಗಿಬಿಡಪ್ಪಾ.”
“ಹಾಂಗಾದ್ರೆ ಹಂಗೆ. ನಂಗೇನಂತೆ.”
“ದುಡ್ಡು ತಂದೀಯೇನು?”
“ಈಗ ಕೈಲಿಲ್ಲ. ಲೆಕ್ಕಕ್ಕೆ ಬರ್ಕೊಂಡುಬಿಡಿ.”
“ಅದು ಮಾತ್ರ ಆಗಾದಿಲ್ಲ…. ನೀನು ಕೊಡಾದೇ ಇನ್ನೂ ಕೊಟ್ಟಿಲ್ಲ. ಸುಮಾರು ಹಣ ಬಾಕಿ ಇದೆ… ಮತ್ತೂ ಲೆಕ್ಕಕ್ಕೆ ಬರ್ಕೊಳ್ಳಿ ಅಂದ್ರೆ?” ಸುಬ್ಬಣ್ಣ ಹೆಗ್ಗಡೆಯವರ  ಮಾತು ಬಿರುಸಾಗತೊಡಗಿತು.
“ಈಗ ಎಲ್ಲಿಂದ ತರ್‌ಲಿ, ನೀವೇ ಹೇಳಿ.”
“ಎಲ್ಲಿಂದ? ಶಂಕರಪ್ಪನ್ನೇ ಕೇಳು.”
“ಅವನಿಗೇ ಬೆಟ್ಟಳ್ಳಿ ಗೌಡ್ರ ಹತ್ರ ಸಾಲ ಆಗ್ಯಾದೆ. ನನಗೆಲ್ಲಿಂದ ಕೊಟ್ಟಾನು?”
“ಮನೆಗೆ ಹೆಂಚು ಹಾಕಿಸ್ತಾ ಕೂತ್ರೆ ಸಾಲ ಆಗ್ದೆ ಬಿಡ್ತದೇನು?…. ಹೊಗ್ಲಿ ನಂಗ್ಯಾಕೆ ಆ ಇಚಾರ….”
“ನೀವೇನು ಕೆಟ್ಟದ್ದಕ್ಕೆ ಹೇಳ್ತೀರೇನು? ಎಷ್ಟಂದರೂ ಅವನಿಗೆ ಚಿಕ್ಕಪ್ಪ. ನೀವಲ್ಲದೆ ಇನ್ಯಾರು ಹೇಳ್ಬೇಕು?”
“ಹೇಳ್ತೀನಿ ನೋಡೂ, ಎಂಕ್ಟಣ್ಣ; ನೀನೂ ಹಳಬ ನಾನೂ ಹಳಬ….”
“ಸೈ ಸೈ ನಾನೆಂಥ ಹಳಬ?…. ನಿಮ್ಮ ವಯಸ್ಸಿನವರು ಈ ಪರಾಂತದಾಗೆ ಯಾರೂ ಇಲ್ಲ…. ನಮ್ಮ ಕಲ್ಲೂರು ದೋಯಿಸಲು ಒಬ್ಬರನ್ನ ಬಿಟ್ರೆ ನಿಮ್ಮಷ್ಟು ಹಳಬರು ಮತ್ಯಾರೂ ಇಲ್ಲ.”
“ಹೂವೀ! ಏ ಹೂವೀ!”
“ಹೆಗ್ಗಡೆಯವರು ಇದ್ದಕ್ಕಿದ್ದಹಾಗೆ ಕೂಗಿ ಕರೆಯತೊಡಗಿದರು. ಕೊಟ್ಟಿಗೆ ಕೆಲಸದಲ್ಲಿದ್ದ  ಹೂವಿ ಕೈಕಾಲ್ ಸೆಗಣಿಯಾಗಿ ಬೇಗ ಬೇಗ ಬಂದಳು.”
“ನಿನ್ನ ಗಂಟಲು ಕಟ್ಟಿ ಹೋಗಾ! ಓಕೊಳ್ಳಬಾರದೇನೆ?” ಎಂದು ಭರ್ತ್ಸನೆಮಾಡಿ, ಹೆಗ್ಗಡೆಯವರು “ಅಲ್ಲಿ ಓಡಿ ಹೋಗು; ನಮ್ಮ ತಿಮ್ಮೂಗೆ ಹೇಳು ಯಾರಾದ್ರೂ ಇಬ್ರು ಹೊಲೇರನ್ನ ಕಳ್ಸಬೇಕಂತೆ ಅಂತಾ.”
“ಹಾಂಗಾರೆ, ನಾನೀಗ ಬಂದು ಬಿಡ್ತೀನಿ” ಎಂದು ಹೇಳಿ ಹೂವಳ್ಳಿ ವೆಂಕಟಣ್ಣ ತೇಪೆ ಹಾಕಿದ ತನ್ನ ದಗಲೆಯನ್ನು ಸರಿಮಾಡಿಕೊಂಡು, ದೊಣ್ಣೆಯೂರಿ, ಕುಂಟುತ್ತಾ ಆಚೆ ಮನೆಗೆ ಹೋದನು.
ಕಣ್ಣಾಪಂಡಿತರ ಕಷಾಯ ಕುಡಿಯುವುದಕ್ಕಾಗಿ ಸುಬ್ಬಣ್ಣ ಹೆಗ್ಗಡೆಯವರು ‘ಬುಚ್ಚಿ’ಯಿದ್ದ ಅಡಿಗೆಮನೆಗೆ ಹೋದರು. ಕಾಲಿಗೆ ಹಿಡಿದಿದ್ದ ಕೆಸರು ಒಣಗಿ ಹೋಗಿತ್ತಾದ್ದರಿಂದ ಮುದುಕನಿಗೆ ಅದನ್ನು ತೊಳೆದುಕೊಳ್ಳುವುದಕ್ಕೆ ನೆನಪೂ ಆಗಲಿಲ್ಲ.
*******

ಮಲೆಗಳಲ್ಲಿ ಮದುಮಗಳು-7

           ಮಗನ ಕಣ್ಣಿನಲ್ಲಿ ನೀರು ತುಂಬಿದ್ದು ಕಂಡು ಸುಬ್ಬಣ್ಣ ಹೆಗ್ಗಡೆಯವರ ಮನಸ್ಸು ಸ್ವಲ್ಪ ಮೃದುವಾಗಿತ್ತು. ಆದರೆ ಅವನು ತಟಕ್ಕನೆ ಬೆನ್‌ದಿರುಗಿದ ಪ್ರತಿಭಟನಾ ಭಂಗಿಯನ್ನೂ ಹೊಲೆಗೇರಿಯ ಕಡೆಗೆ ರೋಷ ರಭಸದಿಂದ ಹೋದುದನ್ನೂ ಕಂಡು, ಸಿಗ್ಗುರಿದು, ಮುದುಕನ ಕುಳ್ಳು ಮೈ ಕಂಪಿಸಿತು. ಕೃತನವಾಗಿ ಗಟ್ಟಿಯಾಗಿ, ಕೆಮ್ಮ, ಅವನು ಹೋದ ಕಡೆಗೆ ನೋಡುತ್ತಾ ಕ್ಯಾಕರಿಸಿ ತುಪ್ಪಿದರು. ಯೌವನದಲ್ಲಿ ದರ್ಪದಿಂದ ಬಾಳು ಸಾಗಿಸಿದ್ದ ಆ ಮುದುಕನಿಗೆ ಮುಪ್ಪಿನಲ್ಲಿ ಲೋಕವೆಲ್ಲ ಅವಿಧೇಯವಾಗಿರುವಂತೆ ತೋರಿತು.

“ಕೆಡ್ತಪ್ಪಾ ಕಾಲ, ಕೆಡ್ತು! ಇನ್ ನಮ್ಮಂತೋರ್ ಕಾಲ್ ಕೀಳಾದೆ ಮೇಲು! ಇನ್ ಹೇಳ್ಸಿದ್ದಲ್ಲ ಈ ಜಲ್ಮ!” ಎಂದು ಗೊಣಗುತ್ತಾ ಮತ್ತೆ ಗದ್ದೆಯ ಕಡೆಗೆ ನಡೆದರು. ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಅಂಗಗಳೆಲ್ಲಾ ತಕ್ಕಮಟ್ಟಿಗೆ ಸ್ಪಷ್ಟವಾಗುವಷ್ಟರ ಮಟ್ಟಿಗೆ ಸಮೀಪಿಸಿದ್ದನಾದರೂ ಆಗತಾನೆ ಮೂಡಿಬರುತ್ತಿದ್ದ ಎಳೆಬಿಸಲಿನ ರಶ್ಮಿ ಚಾಮರದ ದೆಸೆಯಿಂದ ಹೆಗ್ಗಡೆಯವರಿಗೆ ಅದು ಯಾರು ಎಂದು ಗೊತ್ತಾಗಲಿಲ್ಲ.
ಕೈಯೆತ್ತಿ ಹಣೆಗಿಟ್ಟು ಬಿಸಿಲಿಗೆ ಕೊಡೆ ಮಾಡಿ ನೋಡಿ “ಹಾಳ್ ಕಣ್ಣು! ಅವಕ್ಕೂ ಬ್ಯಾಡಾದೆ ನಾನು!” ಎನ್ನುತ್ತಾ ಮನೆಯ ಕಡೆಗೆ ತಿರುಗಿದಾಗ, ತೋಟದ ಬಾವಿಯಿಂದ ನೀರು ತುಂಬಿದ ಕೊಡಪಾನವನ್ನು ಸೊಂಟದ ಮೇಲಿಟ್ಟು, ಬೆಳ್ಳಿಯ ಕಡಗ ಮತ್ತು ಕಣ್ಣು ಕೊರಿಸಿದ ಗಾಜಿನ ಬಳೆಗಳನ್ನು ತೊಟ್ಟಿದ್ದ ತನ್ನ ಕೈಯಿಂದ ಆ ತಾಮ್ರದ ಕೊಡದ ಕೊರಳನ್ನು ಅವುಕಿ ಹಿಡಿದು ನಿಧಾನವಾಗಿ ಮೆಟ್ಟಲು ಹತ್ತುತ್ತಿದ್ದ ತಮ್ಮ ಮಗಳನ್ನು ಕಂಡರು. ಎತ್ತರದಲ್ಲಿ, ಬಣ್ಣದಲ್ಲಿ, ಮೈಕಟ್ಟಿನಲ್ಲಿ, ರೂಪಿನಲ್ಲಿ ಸರ್ವಾಂಶದಲ್ಲಿಯೂ ತಮ್ಮ ಗತಿಸಿದ ಸತಿಯನ್ನೇ ಹೋಲುತ್ತಿದ್ದ ಆಕೆಯನ್ನು ಕಂಡೊಡನೆ ಹೆಗ್ಗಡೆಯವರು ಮರಳಿ ಮೃದುವಾದರು. ಅವರ ಮನಸ್ಸಿಗೆ ತಂಗಾಳಿ ಬೀಸಿದಂತಾಯಿತು. ಆಗತಾನೆ ಮರುಭೂಮಿಯಾಗಿ ಕಾಣುತ್ತಿದ್ದ ಜಗತ್ತಿನಲ್ಲಿ ಫಕ್ಕನೆ ಮರುವನ ಗೋಚರಿಸಿದಂತಾಯಿತು. ಕಡಲ ನಡುವೆ ಹಡಗೊಡೆದು ತೆರೆಗಳ ತಾಡನಕ್ಕೆ ಸಿಕ್ಕಿ ತೇಲುತ್ತಾ ಬರುವಾತನು ದ್ವೀಪದ ದಡಕ್ಕೇರುವಂತೆ ಹೃದಯದ ಮೃದುತ್ವವನ್ನೂ ಮೈತ್ರಿಯನ್ನೂ ಅಕ್ಕರೆಯನ್ನೂ ಸೂಚಿಸುವ ದೀರ್ಘಸ್ವರದಿಂದ ಕರೆದರು.
“ಬುಚ್ಚೀ!”
ಮಂಜಮ್ಮ ಏರುತ್ತಿದ್ದವಳು ಹಾಗೇ ಮೆಟ್ಟಲ ಮೇಲೆ ನಿಂತು “ಏನಪ್ಪಯ್ಯಾ?” ಎಂದಳು. ಸ್ವರದಲ್ಲಿ ಆಯಾಸವಿದ್ದರೂ ಇಂಪಾಗಿತ್ತು.
“ಇಲ್ಲಿ ಬಾರಕ್ಕಾ ಸ್ವಲ್ಪ.”
“ಬರ್ತೀನಿ….”
“ಕೊಡಪಾನ ಅಲ್ಲೇ ಇಟ್ಟು ಬಾ.”
ಮಂಜಮ್ಮ ಹಾಗೆಯೇ ಮಾಡಿ, ಮೂಡು ಬಿಸಿಲಿಗೆ ಮನೆಯ ಪಕ್ಕದಲ್ಲಿದ್ದ ತೋಟದ ಅಡಕೆಯ ಮರಗಳ ನೀಳವಾದ ನೆಳಲುಗಳು ಪಟ್ಟೆಪಟ್ಟೆಯಾಗಿ ಬಿದ್ದಿದ್ದ ಅಂಗಳದಲ್ಲಿ ನಡೆದು ಬಂದಳು.
ನೆರೆಹೊರೆಯವರು ಮಗಳಿಗೆ ಮದುವೆಯ ವಯಸ್ಸು ಮೀರಿ ಹೋಯಿತೆಂದು ಹೇಳುತ್ತಿದ್ದರೂ ಸುಬ್ಬಣ್ಣ ಹೆಗ್ಗಡೆಯವರಿಗೆ ಹಾಗೇನೂ ತೋರುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿ ಹೊಟ್ಟೆ ತುಂಬಾ ತಿನ್ನುವ ಹಳ್ಳಿಯ ಹೆಣ್ಣು ಬೆಳೆಯುವಂತೆ ಮಂಜಮ್ಮ ಸುಪುಷ್ಟವಾಗಿ ಬೆಳೆದಿದ್ದ ಮಾತ್ರಕ್ಕೆ ಮದುವೆಯ ವಯಸ್ಸು ಮೀರಿತೆಂದು ಹೇಳುವುದು ಯಾವ ನ್ಯಾಯ? ಮದುವೆಗೆ ವಯಸ್ಸು ಮೀರುವುದೆಂದರೆ ಅರ್ಥವಾದರೂ ಏನು? ಅವಳೇನು ಹಾರುವರ ಮನೆಯ ಹೆಣ್ಣೇ? ಮದುವೆಯಾಗುವುದಕ್ಕೆ ಮೊದಲೆ ದೊಡ್ಡವಳಾಗಿಬಿಟ್ಟರೆ ಕಾಡಿಗಟ್ಟಬೇಕೆಂಬ ಹೆದರಿಕೆಯೇನು ತಮಗೆ? ಒಂದು ವರ್ಷ ಹೆಚ್ಚು ಕಡಿಮೆ, ಸರಿಯಾದ ಮನೆಗೆ ಕೊಟ್ಟರಾಯಿತು. ಅಲ್ಲದೆ ತಾಯ ಸತ್ತ ಹುಡುಗಿ. ಸ್ವಲ್ಪ ತಿಳುವಳಿಕೆ ಬಂದ ಮೇಲೆಯೇ ಗಂಡನ ಮನೆಗೆ ಹೋದರೆ ನೆಮ್ಮದಿ. ಒಂಟಿಬಾಳು ಬಾಳುತ್ತಿರುವ ತಮಗೂ ಮಗಳನ್ನು ತಟಕ್ಕನೆ ಅಗಲಿರಬೇಕೆಂದರೆ ಸಂಕಟ: ಮಗನೇನೋ ಇದ್ದಾನೆ. ಆದರೆ ತಿಮ್ಮಪ್ಪ ಹೆಗ್ಗಡೆ ಕಂತ್ರಿ, ಸ್ವತಂತ್ರಿ. ಯಾವಾಗಲೂ ಇತರರಿಗೆ ಆಶ್ರಯಕೊಡುತ್ತಾ ಬಾಳಿದವರಿಗೆ ಆಶ್ರಿತರು ದೂರವಾದರೆ ಆಶ್ರವೆ ತಪ್ಪಿದಂತಾಗುತ್ತದೆ. ಮುಪ್ಪು ಎಳೆತನಕ್ಕೆ ಆಶ್ರಯ ಮಾತ್ರವಲ್ಲ, ಆಶ್ರಿತವೂ ಹೌದು. ಹಳೆಯ ಚಪ್ಪರಕ್ಕೆ ಹೊಸ ತೊಂಡೆಯ ಬಳ್ಳಿ ಹಬ್ಬಿದ್ದರೆ ತೊಂಡೆಯ ಕಾಯಿಯ ಆಸೆಗಾದರೂ ಚಪ್ಪರ ಬೀಳದಂತೆ, ಹಾಳಾಗದಂತೆ, ಒರಲೆ ಹಿಡಿಯದಂತೆ ನೋಡಿ ಕೊಳ್ಳುತ್ತಾರೆ. ಕೆಲಸ ಮಾಡದ ಕತ್ತಿಗೆ ತುಕ್ಕು ಹಿಡಿಯುತ್ತದೆ. ಉಪಯೋಗಿಸದೆ ಪಿಟಾರಿಯಲ್ಲಿಟ್ಟರೆ ಪೀತಾಂಬರಕ್ಕಾದರೂ ಬೂಷಲು ಬರುತ್ತದೆ. ಪ್ರವೃತ್ತಿಪ್ರೇರಕವಾದ ಆಧಾರಸ್ತಂಭಗಳೆಲ್ಲಾ ಉರುಳಿದರೆ ಮುಪ್ಪು ಬೇಸತ್ತೇ ಸತ್ತು ಹೋಗುತ್ತದೆ. ಸುಬ್ಬಣ್ಣ ಹೆಗ್ಗಡೆಯವರ ಆಲೋಚನೆಗೆ ಇಷ್ಟೆಲ್ಲಾ ಮೀರಿದ್ದರೂ ಆತ್ಮಕ್ಕೆ ಅದು ವೇದ್ಯವಾಗಿದ್ದುದರಿಂದಲೆ ಮಗಳ ಮದುವೆಗೆ ಮಗನ ಮದುವೆಯ ಅಡಚಣೆಯನ್ನೊಡ್ಡಿ ಕಾಲವಂಚನೆ ಮಾಡುತ್ತಿದ್ದುದ್ದು.
ಬಿರಾಂಬರುಡುಗೆಯ ಸಡಿಲ ಚೆಲುವು ಹಳೆಮನೆಯಂತಹ ಹಳೆತನದ ಮನೆತನಗಳಿಗೆ ಆಗಿನ್ನೂ ಸೋಂಕಿರಲಿಲ್ಲ. ಮಂಜಮ್ಮ ಗೊಬ್ಬೆ ಸೆರಗು ಬಿಗಿದು ಕಟ್ಟಿ, ಸೀರೆಯ ಬಹುಭಾಗದ ವಿಸ್ತೀರ್ಣವನ್ನೆಲ್ಲಾ ಸೊಂಡಕ್ಕೆ ಸುತ್ತಿ, ಉಳಿದಿದ್ದನ್ನು ಆದಷ್ಟು ಕೃಪಣತೆಯಿಂದ ನಿರಿಮಾಡಿ ಹರಡಿಗೆ ಮೇಲೆ ಮೊಳಕಾಲಿನ ನಡುವರೆಗೆ ನೀಡಿ ಉಟ್ಟಿದ್ದಳು. ಮೀಯುವುದರಲ್ಲಿಯೂ ಒಗೆಯುವುದರಲ್ಲಿಯೂ ಹೊತ್ತು ಕಳೆಯ ಬಾರದೆಂದು ಅಪ್ಪಯ್ಯ ಹೇಳುತ್ತಿದ್ದುದರಿಂದ ಆಕೆಯ ಸೀರೆ ಕೊಳಕಾಗಿತ್ತು. ಆ ಕೊಳಕನ್ನು ಯಾರೂ ಲೆಕ್ಕಿಸುತ್ತಿರಲಿಲ್ಲವಾದ್ದರಿಂದ ಅವಳೂ ಲೆಕ್ಕಿಸುತ್ತಿರಲಿಲ್ಲ. ತನ್ನ ಮೈಯ ಬಿಳಿಯ ಬಣ್ಣದಲ್ಲಿ ಮಾತ್ರ ಆಕೆಗೆ ಅಪಾರ ಅಭಿಮಾನವಿತ್ತು. ಆ ಅಭಿಮಾನ ಒಮ್ಮೊಮ್ಮೆ ಗರ್ವದ ಮಟ್ಟಕ್ಕೂ ಏರಿ, ಆಕೆ, ಮೇಲೆ ಹೇಗೇ ಇರಲಿ, ಅಂತರಂಗದಲ್ಲಿ ತಿಮ್ಮಪ್ಪ ಹೆಗ್ಗಡೆಯ ತಂಗಿ  ಎಂಬುದನ್ನು ನೆನಪಿಗೆ ತಂದುಕೊಡುತ್ತಿತ್ತು. ಆ ಮೈಯ್ಯ ಬಣ್ಣದ ಅಭಿಮಾನವನ್ನು ಒಡವೆಯ ಸಿಂಹಾಸನದ ಮೇಲೆ ಕೂರಿಸಿ, ಆಗಾಗ, ಸಮಯ ಸಿಕ್ಕಾಗ, ಮೆರವಣಿಗೆ ಮಾಡುತ್ತಿದ್ದಳು. ಆಂತರ್ಯದ ಅಹಂಕಾರ ಬಲಿತಷ್ಟೂ ಅನಿವಾರ್ಯವಾಗಿ ಬಲಿಯುತ್ತದೆ, ಪರದಲ್ಲಿ ತಿರಸ್ಕಾರ. ತಿರಸ್ಕಾರಕ್ಕೆ ತಿರಸ್ಕಾರ ಪ್ರತೀಕಾರವಾಗುತ್ತದೆ. ಅಸೂಯೆ, ಆತ್ಮಪ್ರಶಂಸೆ, ಪರನಿಂದೆಗಳು ಇಕ್ಕೆಲಗಳಲ್ಲಿಯೂ ಮಲೆಯುತ್ತವೆ. ಹಾಗಾಗಿಯೆ ಮಂಜಮ್ಮನ ವಿಚಾರವಾಗಿ ನಂಟರಿಷ್ಟರಲ್ಲಿ ಸದಭಿಪ್ರಾಯವಿರಲಿಲ್ಲ. ಮಗಳ ಮೇಲೆ ಹೆರರ ಮಾತಿನ ಚುಚ್ಚು ಹೆಚ್ಚಾದ ಹಾಗೆಲ್ಲಾ ಅವಳ ಮೇಲೆ ಅಪ್ಪಯ್ಯನ ಮೆಚ್ಚು ಅಷ್ಟಷ್ಟೂ ಅತಿಯಾಗುತ್ತಿತ್ತು. ಹೀಗೆ ತಂದೆ ಮಗಳಿಬ್ಬರೂ ಒಬ್ಬರಿನ್ನೊಬ್ಬರಿಗೆ ರಕ್ಷೆಯಾಗಿ ಪರಸ್ಪರ ನೆಮ್ಮದಿಗಳಾಗಿದ್ದರು.
ಮಗಳು ತೊಟ್ಟಿದ್ದ ಮೂಗುತಿ, ಬುಗುಡಿ ಎಸಳ ಸರಪಣಿ ಮೊದಲಾದ ಆಗಿನ ಕಾಲದ ಮೆಚ್ಚಿನ ಸ್ಥೂಲಾಭಿರುಚಿಯ ಭಾರಾಲಂಕಾರಗಳನ್ನು ನೋಡುತ್ತಾ ಮುದವುಕ್ಕಿ ಸುಬ್ಬಣ್ಣ ಹೆಗ್ಗಡೆಯವರು “ಬುಚ್ಚಿ, ಲಚ್ಚಾಚಾರಿ ಬಂದಿದ್ದನೇನೆ?” ಎಂದು ಕೊಟ್ಟಿದ್ದ ಅಡ್ಡಿಕೆಯ ನೆನಪಾಗಿ ಕೇಳಿದರು.
ಮಂಜಮ್ಮ “ಅವನ ಮನೆ ಹಾಳಾಗಾಕೆ ಎತ್ತ ಸತ್ತನೋ” ಎಂದು ಮೂತಿ ಮಾಡಿ, ಗದ್ದೆಯ ಕಡೆ ನೋಡಿ, “ಅದ್ಯಾರು ಅಲ್ಲಿ ಬರೋರು? ಹೂವಳ್ಳಿ ಎಂಕ್ಟಣ್ಣಬಾವನ್ನು ಕಂಡ್ಹಾಗೆ ಕಾಣ್ತದೆ?” ಎಂದಳು.
“ಹೌದು ಅಂತೀನಿ. ಮರ್ತೇಹೋಗಿತ್ತು. ಅದಕ್ಕೆ ನಿನ್ನ ಕರ್ದಿದ್ದು. ನನ್ನ ಕಣ್ಣೇ ಈಗ್ಯಾಕೋ ಸರಿಯಾಗಿ ಕಾಣ್ರೋದಿಲ್ಲಾಪ್ಪಾ.” ಹೆಗ್ಗಡೆಯವರು ಸುಯ್ದು ಮುಂದೆ ಹೇಳಿದರು: “ನೀನೊಬ್ಬಳು ಮನೇಲಿ ಇರಾಹೊತ್ತಿಗೆ ನಾನೂ ಒಬ್ಬ ಮನಿಸ್ಯ ಅನಿಸಿಕೊಂಡಿದ್ದೀನವ್ವಾ. ಇನ್ನು….”
ಅಪ್ಪನ ಮಾತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನರಿತು ಮಂಜಮ್ಮ “ಹೌದು ಎಂಕ್ಟಣ್ಣ ಬಾವನೇ!” ಎಂದಳು.
ಹೆಗ್ಗಡೆಯವರು ಅತ್ತ ನೋಡಿ “ನಿನ್ನೇನೆ ಬತ್ತೀನಿ ಅಂದಿದ್ದ. ಒಂದ ಹಂದೀಮರಿ ಬೇಕು ಅಂತಾ ಹೇಳಿದ್ದಾ. ಬಾ ಕೊಡ್ತೀನಿ ಅಂದಿದ್ದೆ.”
“ಯಾವುದನ್ನ ಕೊಡ್ತೀಯಾ, ಅಪ್ಪಯ್ಯಾ?”
“ಯಾವುದ್ನಾದ್ರೂ ಕೊಡಾದಪ್ಪ. ಸುಮ್ಮನೆ ಒಡ್ಡೀಲಿಟ್ಟುಕೊಂಡು ಮಾಡಾದೇನು. ಮದೇಮನೆ ಕರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಕೋಂಡು ಇಳಿದ್ನೆಲ್ಲಾ ಕೊಟ್ಟು ಬಿಡ್ತೀನಿ. ನನಗೂ ವಯಸ್ಸಾತು. ನೋಡಿಕೊಳ್ಳೋರು ಯಾರೂ ಇಲ್ಲಾ. ನಿನ್ನ ಅಣ್ಣ ಒಬ್ಬ ಇದಾನೆ ಕೂಳು ಖರ್ಚಿಗೆ. ನೀನಾದ್ರೂ ಇನ್ನೆಷ್ಟು ದಿನ ಅಂತ ಇರ್ತೀಯಾ ಇಲ್ಲಿ….?”
“ಆ ದಡ್ಡೆ ಮರಿ ನನಗಿರಲಪ್ಪಯ್ಯಾ. ಸರಿಪಾಲಿಗೆ ಸಾಕಾಕೆ ಕೊಡ್ತೀನಿ. ಹೊಲೇರ ಗುತ್ತಿ ಸಾಕ್ತೀನಿ ಅಂದಾನೆ.” ಮಂಜಮ್ಮ ಗೊಬ್ಬೆಸರಗು ಸರಿಮಾಡಿಕೊಳ್ಳುತ್ತಾ ನಾಚಿಕೆಯಿಂದಲೆಂಬಂತೆ ಮಾತಾಡಿದಳು.
“ಯಾವ ಗುತ್ತೀನೆ?”
“ಆ ಜಟ್ಟಕ್ಕನ ಜತಿ ಬಂದಿದ್ದನ್ಲಲಾ….”
“ಸಿಂಬಾವಿಯವನೇನೇ?”
ಮಂಜಮ್ಮ ಮಾತಾಡಲಿಲ್ಲ. ನಸುನಾಚಿ, ಗದ್ದೆಕಡೆ ನೋಡುವವಳಂತೆ ನಟಿಸಿದಳು.
“ಯಾರು? ಆ ನಾಯಿ ಗುತ್ತೀನೇನೆ?”
“ಹ್ಞೂ ಹ್ಞೂ! ಅವನೆ, ಅವನೇ!”
“ಆ ಹೊಲಿಯ ಲೌಡಿಮಗ ಹಂದಿ ಸಾಕ್ತಾನೇನೇ? ತಿಂದು ಹಾಕ್ತಾನೆ! ತಿಂದೇ ಹಾಕ್ತಾನೆ; ನೋಡ್ತಿರು ಬೇಕಾದ್ರೆ!” ಎಂದು ಮುದಿ ದೇಹ ಕುಣಿಯುವಂತೆ ನಗತೊಡಗಿದರು ಸುಬ್ಬಣ್ಣ ಹೆಗ್ಗಡೆಯವರು.
ಅನತಿ ದೂರದಲ್ಲಿಯೆ ಕುಂಟುತ್ತಾ ಬಳಿಸಾರುತ್ತಿದ್ದ ಹೂವಳ್ಳಿ ವೆಂಕಟಣ್ಣನನ್ನು ಕಂಡು ಮಂಜಮ್ಮ “ಅಪ್ಪಯ್ಯಾ, ನಿನ್ನ ಕಸಾಯ ಮಾಡಿಟ್ಟೀನಿ, ಕುಟಕೊಂಡು ಹೋಗು ಬಾ” ಎನ್ನುತ್ತಾ ಹಿಂದಿರುಗಿ ಕೊಡಪಾನದ ಬಳಿಗೆ ಹೋದಳು.
*******


ಮಲೆಗಳಲ್ಲಿ ಮದುಮಗಳು-6

           ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಈತಿಬಾಧೆ. ಸಾವಿನ ಅನಂತ ನಿದ್ರೆ ಬಳಿಸಾರುವುದರಿಂದಲೋ ಏನೋ ಬಾಳೆಲ್ಲ ಸ್ವಪ್ನವೆಂಬಂತೆ ಆಯಾಸಕರವಾಗಿ ಪರಿಣಮಿಸುತ್ತದೆ. ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಲೇ ಬೇಕಾಗುತ್ತದೆ ಎಂಬ ಅರಿವಿನಿಂದ ಮೈದೋರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಾಂಸಾರಿಕವಾದ ನೂರಾರು ಕೋಟಲೆಗಳ ಆಕಾರ ತಾಳಿ ನಿದ್ದೆಯನ್ನೆಲ್ಲಾ ಕದಡಿಬಿಡುತ್ತದೆ. ಅದರಲ್ಲಿಯೂ ದೇವರು, ಧರ್ಮ, ಕಲೆ, ಸಂಸ್ಕೃತಿ ಇತ್ಯಾದಿಗಳಿಂದ ದೂರವಾಗಿ, ಹಗಲೂ ಬೈಗೂ ಐಹಿಕ ಸಂಪತ್ತಿನ ಸಂಪಾದನೆ ಮತ್ತು ಸಂರಕ್ಷಣೆಗಳಲ್ಲಿಯೇ ಮನಸ್ಸು ಮುಳುಗಿ, ಕ್ರಿಯಾಪೂರ್ಣ ನಾಸ್ತಿಕತೆಯ ಸಜೀವ ಸಾಹಸಕ್ಕಿಂತಲೂ ಸಾವಿರ ಪಾಲು ನಿರ್ಜೀವವಾದ ಸಂಪ್ರದಾಯದ ಆಸ್ತಿಕತೆಯ ಮಂದ ಔದಾಸೀನ್ಯದ ಮೃತ್ಯುವಿಗೆ ತುತ್ತಾದ ಮುದುಕನಿಗಂತೂ ಇರುಳೆಂದರೆ ನರಕಶಿಕ್ಷೆ. ಸಹಧರ್ಮಿಣಿಯ ಸೇವೆಯೂ ಆಕೆಯ ಮರಣದಿಂದ ನಷ್ಟವಾಗಿದ್ದರಂತೂ ಮನಸ್ಸಿನ ಖಾಲಿ ಪಿಶಾಚಿಯ ಕಾರ್ಖಾನೆಯಾಗುತ್ತದೆ.

ಅಂತಹ ಪಿಶಾಚಿಯ ಕಾರ್ಖಾನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಬೆಳಗಾಗುವುದಕ್ಕೆ ಬಹಳ ಮುಂಚೆಯೆ ಏಳುತ್ತಿದ್ದರು. ಆವೊತ್ತೂ ಕಡೆಯ ಜಾವದ ಮೊದಲ ಪಾದದಲ್ಲಿಯೆ ಎದ್ದಿದ್ದರು. ಹಿಂದಿನ ದಿನ ಬೈಗಿನಲ್ಲಿ ಬಹಳ ಜೋರಾಗಿ ಮುಂಗಾರು ಮಳೆ ಬಿದ್ದಿದ್ದರಿಂದ ಬೆಳಗಿನ ಜಾವದ ಹವಾ ಬಹಳ ತಂಪಾಗಿತ್ತು. ಮುಪ್ಪಿನ ಮೈಗೆ ಅದು ಚಳಿಚಳಿಯಾಗಿ ಕಂಡದ್ದರಿಂದ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಕಗ್ಗವಿ ಕೋಣೆಯಿಂದ ಜಗಲಿಗೆ ಬಂದವರು, ಅಲ್ಲಿಯೆ ಕೆಸರಲಿಗೆಯ ಮೇಲೆ, ವಾಡಿಕೆಯ ಜಾಗದಲ್ಲಿ ವಾಡಿಕೆಯಂತೆ ಮುಂಡಿಗೆಗೆ ಒಡಗಿಕೊಂಡು, ಹೊದೆದಿದ್ದ ಕಂಬಳಿಯನ್ನು ಇನ್ನೂ ಸ್ವಲ್ಪ ಬಲವಾಗಿ ಸುತ್ತಿ ಹೊದೆದು, ಕತ್ತಲೆಯಲ್ಲಿಯೆ ಕೈತಡವಿ ಕುಟ್ಟೊರಳನ್ನೂ ಎಲೆಯಡಿಕೆಯ ಚೀಲವನ್ನೂ ಹತ್ತಿರಕ್ಕೆ ಎಳೆದು, ಚೀಲದಿಂದ ಕೈಯಂದಾಜಿನ ಮೇಲೆ ಗಂಡಡಿಕೆಯೊಂದನ್ನು ಆಯ್ದು ತೆಗೆದು, ಉಫ್ ಎಂದು ಊದಿ, ಲೋಹದ ಕುಟ್ಟೊರಳಿಗೆ ಟಣಕ್ಕನೆ ಹಾಕಿ, ಕುಟ್ಟತೊಡಗಿದರು. ಬಹಿರ್ಮುಖ ಜೀವದ ಮುಪ್ಪಿನ ಭಾಗಕ್ಕೆ ಮೌನವು ಮಹಾಪಿಶಾಚಿ. ಕುಟ್ಟವ ಸದ್ದಿಗೆ ಆ ಪಿಶಾಚಿ ತೊಲಗಿದಂತಾಗಿ ಹೆಗ್ಗಡೆಯವರಿಗೆ ಎದೆ ಭಾರ ಕಡಿಮೆಯಾಗಿ ಮನಸ್ಸಿಗೆ ಧೈರ್ಯವಾಯಿತು; ನೆಮ್ಮದಿಯೂ ಆಯಿತು.
ಬೇರೆ ಇನ್ನಾವ ಸದ್ದೂ ಇರದೆ ನಿಃಶಬ್ದವಾಗಿದ್ದ ಹಳೆಮನೆಯ ಆ ವಟಾರದಲ್ಲಿ ಸುಬ್ಬಣ್ಣ ಹೆಗ್ಗಡೆಯವರ ಕುಟ್ಟೊರಳಿನ ಸದ್ದೊಂದೇ ಸಾಮ್ರಾಟವಾಗಿತ್ತು.
ತುಸುಹೊತ್ತಿನಲ್ಲಿಯೆ ಜಗಲಿಗೆ ಎದುರಾಗಿ ಅಂಗಳದಲ್ಲಿದ್ದ ಒಡ್ಡಿಗಳಲ್ಲಿಯೂ, ಒಡ್ಡಿಗಳ ಹಿಂದಿದ್ದ ಕೊಟ್ಟಿಗೆಯಲ್ಲಿಯೂ ಗೊರಸಿನ ಸದ್ದು, ಕೊಂಬಿನ ಸದ್ದು, ದೊಂಟೆಯ ಸದ್ದು, ಹೋತದ ಸೀನಿನ ಸದ್ದು, ಸಲಗನ ಗುರುಗುರು ಸದ್ದು, ಒಂದಾದ ಮೇಲೊಂದು ಕೇಳಿಸತೊಡಗಿತು. ಹಾಗೆಯೆ ತೋಟದ ಬೇಲಿಯಲ್ಲಿಯೂ ಅಥವಾ ಅಮಟೆಯ ಮರದಲ್ಲಿಯೊ ಹಂಡಹಕ್ಕಿಗಳೆರಡು ಸಿಳ್ಳು ಪಡಿಸಿಳ್ಳುಗಳಿಂದ ಪ್ರಣಯ ಸಂಭಾಷಣೆಗೆ ಮೊದಲು ಮಾಡಿದುವು. ಅದಾದ ಸ್ವಲ್ಪ ಹೊತ್ತಿನಲ್ಲಿಯೆ, ಎಲೆಯುದುರಿ ಬರಲಾಗಿ ಕೆಂಪು ಹೂ ಮಾತ್ರ ತುಂಬಿ ಹೋಗಿದ್ದ ಹಾಲಿವಾಣದ ಮರದಲ್ಲಿ ಎಂದು ತೋರುತ್ತದೆ, ಕಾಜಾಣವೊಂದು ಆಲಾಪನೆಗೆ ತೊಡಗಿತು.
ಸುಬ್ಬಣ್ಣ ಹೆಗ್ಗಡೆಯವರ ಗಮನ ಹಂಡಹಕ್ಕಿಯ ಸಿಳ್ಳಿನ ಕಡೆಗಾಗಲಿ, ಕಾಜಾಣದ ಆಲಾಪನೆಯ ಕಡೆಗಾಗಲಿ ಒಂದಿನಿತೂ ಹೊರಳಿರಲಿಲ್ಲ. ಕುಟ್ಟುವುದನ್ನು ಸ್ವಲ್ಪ ಸಿಲ್ಲಿಸಿ, ಕತ್ತೆತ್ತಿ, ಕಿರುದಿಟ್ಟಿಯಿಂದ ಅಂಗಳದ ಕಡೆಗೆ ನೋಡಿದರು. ಮನೆಯ ಕತ್ತಲೆಯಲ್ಲಿದ್ದ ಅವರಿಗೆ ಬಯಲಿನ ಕತ್ತಲೆಯಲ್ಲಿದ್ದ ಒಡ್ಡಿಗಳ ಆಕೃತಿ ಆಹ್ವಾನಕರವಾಗಿ ಗೋಚರಿಸಿತು. ಒಡ್ಡಿಗಳೊಳಗೆ ಆಗುತ್ತಿದ್ದ ಸದ್ದುಗಳೆಂದರೆ ಹೆಗ್ಗಡೆಯವರಿಗೆ ಬಹುಕಾಲದ ಸಾಧನದಿಂದ ಸಾಕ್ಷತ್ಕಾರವಾಗಿದ್ದು ಅವರಿಗೆ ಮಾತ್ರವೇ ಸಂವೇದ್ಯವಾಗುತ್ತಿದ್ದ ಯಾವುದೋ ಗುಪ್ತ ಲಿಪಿಯ ಸಂಕೇತ ಸ್ವರ ವಿಜ್ಞಾನವಾಗಿತ್ತು. ಊರು ಹಂದಿಯ ದಡ್ಡೆಯ ಸದ್ದೊ, ಸಲಗನ ಸದ್ದೊ, ಮರಿಗಳ ಸದ್ದೊ, ಹೋತನ ಸೀನೊ, ಆಡಿನ ಸೀನೊ, ಕೆಂಪು ಹುಂಜದ ಕೂಗೊ, ತಿಮ್ಮಪ್ಪ ಹೆಗ್ಗಡೆ ಕೋಳಿ ಅಂಕದಲ್ಲಿ ಗೆದ್ದು ತಂದಿದ್ದ ಬಿಳಿ ಸಳಗದ ಕೂಗೊ, ಹೆಗ್ಗಡೆಯವರಿಗೆ ಒಂದೊಂದೂ ಅರ್ಥವಾಗುತ್ತಿತ್ತು; ಭಾವವಾಗುತ್ತಿತ್ತು. ಮಹಾಕವಿ ಮಹಾಛಂದಸ್ಸಿನ ನಾದವಿನ್ಯಾಸವನ್ನು ಸವಿಯುವಂತೆ ಸವಿದು ಸುಖಿಸುತ್ತಲೂ ಇದ್ದರು. ಅಷ್ಟರಮಟ್ಟಿಗೆ ಆ ಒಂದೊಂದು ಸದ್ದಿಗೂ ಅವರ ಭಾವಕೋಶ ಬೆಳೆದುಹೋಗಿತ್ತು.
ಬೆಳಕುಬೆಳಕಾಗಿ ಕತ್ತಲೆ ಹರಿಯತೊಡಗಿತು. ಹೆಗ್ಗಡೆಯವರು ಎಲೆಯಡಿಕೆಯನ್ನು ಜಗಿಯುತ್ತಾ ಗಂಟಲಿನೊಳಗೆ ಯಜಮಾನ ಸದ್ದು ಮಾಡುತ್ತಾ ಕೆಸರಲಿಗೆ ಬಿಟ್ಟೆದ್ದರು. ಗಂಡಲಿನೊಳಗೇ ಕೆಮ್ಮಿನ ವೇಷದಿಂದ ಅವರು ಮಾಡುತ್ತಿದ್ದ ಆ ಯಜಮಾನನ ಸದ್ದೆಂದರೆ ಹಳೆಮನೆಗೆ ‘ಅಲಾರಾಂ’ ಇದ್ದಂತೆ.
ಸೋಗೆ ಮನೆಯಲ್ಲಿಯೂ ಹೆಂಚಿನ ಮನೆಯಲ್ಲಿಯೂ ಮಲಗಿದ್ದವರು ಎಚ್ಚತ್ತು ಗೃಹ ಕಾರ್ಯಗಳಲ್ಲಿ ತೊಡಗುತ್ತಿದ್ದ ಸದ್ದು ಪ್ರಾರಂಭವಾದುವು. ಮುರುವಿನ ಒಲೆಯ ಬೂದಿ ಗುಡ್ಡೆಯಲ್ಲಿ ಮಲಗಿದ್ದ ಕಂತ್ರಿನಾಯಿಗಳಿಗೂ ನಿದ್ರಾಭಂಗವಾಯಿತು. ಕರೆಯುವ ಕೊಟ್ಟಿಗೆಗೆ ಮುರುಹಾಕುವ ಕರ್ತವ್ಯಕ್ಕೆ ಮರದ ಮರಿಗೆ ಹಿಡಿದು ಬಂದ ಹಳೆಪೈಕದ ಹೂವಿ ದಿನವೂ ಒದರುತ್ತಿದ್ದಂತೆ “ಹಛಾ! ಹಛಾ! ಇವಕ್ಕೇನು ಜ್ಞವನಿದ್ದೆ ಬಂದವಪ್ಪಾ?” ಎಂದು ಗದರಿದಳು. ಪಾಪ. ಒಂದು ಕಂತ್ರಿ ನಾಯಿ ಇನ್ನೂ ಆಕಳಿಸಿ, ಬೆನ್ನು ನೀಳಿ, ಮೈನುರಿದಿರಲಿಲ್ಲ! ಬಿತ್ತು ಒಂದೇಟು, ಮರದ ಮರಿಗೆಯಿಂದಲೆ! ನಾಯಿ ಬೆಚ್ಚಿತೆ ವಿನಾ ಕೂಗಲಿಲ್ಲ! ಇನ್ನೂ ಸರಿಯಾಗಿ ಎಚ್ಚರವಾಗಿರಲಿಲ್ಲ ಅದಕ್ಕೆ, ನೋವನ್ನು ಅನುಭವಿಸಿ ಕೂಗುವುದಕ್ಕೆ! ಬೆಳಗೇನೊ ಆಗಿತ್ತು.
ಸುಬ್ಬಣ್ಣ ಹೆಗ್ಗಡೆಯವರು, ತಮ್ಮ ಕುಳ್ಳಾದ ಗುಜ್ಜು ದೇಹವನ್ನು ಮೊಣಕಾಲಿನವರೆಗೂ ಕರಿಕಂಬಳಿಯಿಂದ ಸುತ್ತಿ, ಭದ್ರವಾಗಿ ಹೊದೆದುಕೊಂಡು ಅಂಗಳಕ್ಕಿಳಿದರು. ಹಿಂದಿನ ದಿನ ಚೌರಮಾಡಿಸಿದ್ದರಿಂದ ಲಾಳದಾಕಾರದಲ್ಲಿ ನುಣ್ಣಗಿದ್ದ ತಲೆಯ ಮುಂಭಾಗಕ್ಕೆ ಶೀತ ತಗುಲಿದಂತಾಗಲು ಮತ್ತೆ ಹಿಂದಕ್ಕೆ ಹೋಗಿ ಒಂದು ಪುರಾತನವಾದ ದಗಲೆತೋಪಿಯನ್ನು ಸಿಕ್ಕಿಸಿಕೊಂಡು ಬಂದರು. ಮಳೆಗೆ ಕೆಸರೇಳುವ ಅಂಗಳದಲ್ಲಿ ಕೆಸರು ತುಳಿಯದೆ ನಡೆಯಲೆಂದು ಸಾಲಾಗಿ ಹಾಕಿದ್ದ ಕಲ್ಲುಗಳ ಮೇಲೆ ನಡೆದು ಒಡ್ಡಿಗಳ ಸಮೀಪ್ಕಕೆ ಹೋದರು.
ಆ ಪ್ರಾಣಿಗಳಿಗೂ ಆ ಪ್ರಾಣಿಯನ್ನು ಕಂಡರೆ ವಿಶ್ವಾಸವೋ ಏನೊ?
ಒಡ್ಡಿಯ ಕಂಡಿಕಂಡಿಗಳಲ್ಲಿ ಗಲಿಬಿಲಿ ಮಾಡುತ್ತಾ ಕೋಳಿ ಕುಣಿದಾಡಿದುವು. ಬಾಗಿಲು ತೆಗೆಯುತ್ತಾರೆಂಬ ಸಂತಸಕ್ಕಾಗಿ ಒಂದರಮೇಲೊಂದು ನಾಮುಂದೆ ತಾಮುಂದೆ ಎಂದು ಒಡ್ಡಿಯ ಕದವಿದ್ದೆಡೆಗೆ ಕುರಿ ನುಗ್ಗತೊಡಗಿದುವು. ಹಂದಿಗಳೂ, ಸಲಗ ದಡ್ಡೆ ಮರಿ ಎಲ್ಲಾ, ಗುರುಗುರು ಗುಟ್ಟುತ್ತಾ ಓಡಾಡಲಾರಂಭಿಸಿದುವು.
ಸುಬ್ಬಣ್ಣ ಹೆಗ್ಗಡೆಯವರು ಹಿಗ್ಗಿನಿಂದಲೆಂಬಂತೆ ತಮ್ಮ ಮೂಕ ಕುಟುಂಬದ ಕಡೆಗೆ ಸ್ವಲ್ಪ ಹೊತ್ತು ನೋಡಿ, ಯಾವ ಒಡ್ಡಿಯ ಬಳಿಗೆ ಮೊದಲು ಹೋಗುವುದೆಂದು ಮನಸ್ಸು ತುಯ್ಯುತ್ತಾ ನಿಂತು, ಕೊನೆಗೆ ಮೊನ್ನೆ ಮೊನ್ನೆ ಮರಿಹಾಕಿದ್ದ ದಡ್ಡೆಯ ಬಾಣಂತಿತನದ ಯೋಗಕ್ಷೇಮವನ್ನೆ ಪ್ರಧಾನವನ್ನಾಗಿ ಭಾವಿಸಿ ಹಂದಿಒಡ್ಡಿಯ ಕಡೆಗೆ ಸರಿದರು.
ಕೆಸರು ತುಳಿಯದಿರುವುದಕ್ಕಾಗಿ ಹಾಕಿದ್ದ ಕಲ್ಲುಗಳಿಂದ ಕೆಳಗಿಳಿಯುತ್ತಲೆ ಕೋಳಿಯ, ಕುರಿಯ, ಹಂದಿಯ ಹೇಸಿಗೆಯೊಡನೆ ಕಲಬೆರಕೆಯಾಗಿದ್ದ ಕೆಸರುಮಣ್ಣು ಕಾಲ್‌ಬೆರಳು ಸಂಧಿಗಳಲ್ಲಿ ಪಿಚಕ್ಕನೆ ನುಗ್ಗತೊಡಗಿದರೂ ಅತ್ತ ಕಡೆಗೆ ಸ್ವಲ್ಪವೂ ಗಮನಕೊಡದೆ ಹೆಗ್ಗಡೆಯವರು ಹಂದಿಯೊಡ್ಡಿಯ ಬಾಗಿಲಿಗೆ ಹೋದರು. ನಿತ್ಯಪರಿಚಯದಿಂದ ಮನಸ್ಸಿನಲ್ಲಿ ಮೈತ್ರಿಯನ್ನೇ ಪ್ರಚೋದಿಸುತ್ತಿದ್ದ ಆ ಮಿಶ್ರವಾಸನೆ ಸ್ನೇಹಿತನ ಆಗಮನದಂತೆ ಸಂತೋಷಕರವಾಯಿತು. ಹೆಗ್ಗಡೆಯವರು ಒಡ್ಡಿಯ ಸುತ್ತಲೂ ಪ್ರದಕ್ಷಿಣೆಮಾಡುತ್ತಾ ಕಂಡಿಗಳಲ್ಲಿ ಕಣ್ಣಿಟ್ಟು ನೋಡತೊಡಗಿದರು. ಮೃಗಶಾಲೆಯಲ್ಲಿ ಪ್ರಾಣಿಗಳ ಗುಂಪನ್ನು ಒಟ್ಟುನೋಡುವ ಪ್ರೇಕ್ಷಕರಂತಲ್ಲ; ತನ್ನ ‘ನರಮಂದೆ’ಯಲ್ಲಿ ಒಂದೊಂದು ಕುರಿಯ ಆತ್ಮಕಲ್ಯಾಣವನ್ನೂ ಗಮನಿಸುವ ‘ಪಾದ್ರಿ’ಯಂತೆ! ಆಸ್ಪತ್ರೆಯಲ್ಲಿ ಒಬ್ಬೊಬ್ಬ ರೋಗಿಯನ್ನೂ ಕಣ್ಣಿಟ್ಟು ಕಾಣುವ ‘ಡಾಕುದಾರ’ನಂತೆ! ಒಂದರ ಕಿವಿಚಟ್ಟೆಯ ಬುಡದ ಗಾಯ; ಇನ್ನೊಂದರ ಕಾಲ್‌ಕೊಳಗಿನ ಬಿರಕು; ಮತ್ತೊಂದರ ಬಾಯಿ ಹುಣ್ಣು; ಒಂದೊಂದನ್ನೂ ಮನಸ್ಸಿಟ್ಟು ನೋಡಿದರು. ಸಮೀಪದಲ್ಲಿ ಮನುಷ್ಯರಾರೂ ಇರದಿದ್ದರೂ ಮುಂದೆ ಆಳುಗಳಿಗೆ ಹೇಳುವುದನ್ನೆಲ್ಲಾ ಅಭ್ಯಾಸಮಾಡಿಕೊಳ್ಳುವಂತೆ ಆಗಾಗ ಬಾಯಲ್ಲಿ ಏನೇನನ್ನೊ ಹೇಳಿಕೊಳ್ಳುತ್ತಿದ್ದರು.
ಒಂದು ನಡು ವಯಸ್ಸಿನ ಮರಿಸಲಗದ ಕಾಮಚೇಷ್ಟೆಯಿಂದ ಇದ್ದಕ್ಕಿದ್ದ ಹಾಗೆ ಒಡ್ಡಿಯೊಳಗೆ ಗಡಬಿಡಿ ಮೊದಲಾಗಲು ಹೆಗ್ಗಡೆಯವರು ‘ಎಲಾ ನಿನ್ನ ಸೊಕ್ಕೆ! ಅಲ್ಲಾ, ಆ ಹೂವಳ್ಳಿ ಎಂಕಟಣ್ಣ ನಿನ್ನೆ ಬತ್ತೀನಿ ಅಂದಿದ್ದ. ಬರ್ಲೇ ಇಲ್ಲಾ ಗಿರಾಸ್ತಾ. ಇದ್‌ನೊಂದು ಕೊಟ್ಟ ಹೊರ್ತೂ ಒಡ್ಡೀಗೆ ಸುಖಾ ಇಲ್ಲ” ಎಂದುಕೊಂಡು, ಮಲೆಗಾಡುಗಳ ನಡುವೆ ಕಣಿವೆಯಲ್ಲಿ ಬಹು  ದೀರ್ಘವಾಗಿ ಹಬ್ಬಿದ್ದ, ಹಸುರಿನಿತೂ ಇಲ್ಲದ, ಗದ್ದೆಯ ಕೋಗಿನ ಕಡೆಗೆ ದಿಟ್ಟಿನಟ್ಟು ನೋಡತೊಡಗಿದರು.
ಬೆಳ್ಳಗೆ ಬೆಳಗಾಗಿತ್ತು. ಹಿಂದಿನ ದಿನದ ಮಳೆಯಲ್ಲಿ ತೊಯ್ದು ಅಂಚಿನ ಗೆರೆ ಬರೆ ಬರೆಯಾಗಿದ್ದ ಗದ್ದೆಯ ಕೋಗಿನ ಕಂದುಬಣ್ಣವು ಬೂದಿಗಪ್ಪಿಗೆ ತಿರುಗಿತ್ತು. ಆದರೂ ಹಾವು ಹರಿಯುವಂತೆ ಡೊಂಕುಡೊಂಕಾಗಿ ಹರಿದು, ಒಮ್ಮೆ ಅಂಚಿನ ಮೇಲೆ, ಒಮ್ಮೆ ಗದ್ದೆಯ ಮಧ್ಯೆ ಏರಿ ಇಳಿದು ಮುಂಬರಿದು ಬಹುದೂರದಲ್ಲಿ ಗಡಿಬೇಲಿಯ ಮುಂಡುಗದ ಹಿಂಡಲಿನಲ್ಲಿ ಕಣ್ಮರೆಯಾಗಿದ್ದ ಕಾಲುದಾರಿಯ ಸಮೆದ ನುಣ್ಪಿನ ಬೂದುಬಣ್ಣದ ರೇಖೆ, ಅತ್ತ ಕಣ್ಣಾದವನ ದೃಷ್ಟಿಯನ್ನು ತಟಕ್ಕನೆ ಸೆಳೆಯುವಂತೆ, ಪ್ರಧಾನವಾಗಿತ್ತು.
ಹೆಗ್ಗಡೆಯವರು ನೋಡುತ್ತಿದ್ದುದು ಅದನ್ನೆ. ಮಲೆಯ ಹಸುರನ್ನೇ ಸದಾ ನೋಡುತ್ತಿದ್ದ ಆ ಕಣ್ಣಿಗೆ ಮುಪ್ಪಾಗಿದ್ದರೂ ದೃಷ್ಟಿ ಮಂದವಾಗಿರಲಿಲ್ಲ. ಅಥವಾ ದೃಷ್ಟಿ ಸ್ವಲ್ಪ ಮಂದವಾಗಿದ್ದರೂ ಅದಕ್ಕೆ ಕಾರಣದ ಮೂಲ ಕಣ್ಣಿನ ನಿಃಶಕ್ತಿಯಾಗಿರಲಿಲ್ಲ, ಮನಸ್ಸಿನ ಮಾಂದ್ಯವಾಗಿತ್ತು. ಆ ಕಾಲುದಾರಿಯ ದೂರದ ಕೊನೆಯಲ್ಲಿ ಯಾರೋ ನಡೆದು ಬರುವಂತಿತ್ತು. ಹೆಗ್ಗಡೆಯವರು ಹುಬ್ಬು ಸುಕ್ಕಿಸಿ ಕಿರುಗಣ್ಣು ಮಾಡಿ ನೋಡಿದರೂ ಪ್ರಯೋಜನವಾಗಲಿಲ್ಲ. ಹೂವಿಯ ವಕ್ರ ಬೈತಲೆಯ ಗೆರೆಯಲ್ಲಿ ಹರಿದಾಡುವ ಹೇನು ಕೂಡ ಅಷ್ಟು ಅಸ್ಪಷ್ಟವಾಗಿರುತ್ತದೆಯೋ ಇಲ್ಲವೋ! ನೋಡಿ ನೋಡಿ, ಸಾಕಾಗಿ, ಮತ್ತೆ ಗೊಣಗುತ್ತಾ ಒಡ್ಡಿಯ ಕಡೆಗೆ ತಿರುಗಿದರು: “ಅವನೇ ಇರಬೈದು! ದುಡ್ಡಿಟ್ಟು ತಗೊಂಡು ಹೋಗು ಅಂತೀನಿ.”
ಆದರೂ ಮನಸ್ಸು ತಡೆಯದೆ ಮತ್ತೆ ಅತ್ತಕಡೆ ತಿರುಗು ನೋಡಿದರು. ಬರುವವರು ಯಾರೆಂದು ಗೊತ್ತಾಗದೆ ಕಣ್ಣಿನ ಮೇಲೆ ಸಿಟ್ಟಿನಿಂದ ಎಂಬಂತೆ “ತಿಮ್ಮೂ! ಏ ತಿಮ್ಮೂ!” ಎಂದು ಕೂಗಿ ಕರೆದರು.
ಆ ಕೂಗಿಗೆ ಒಡ್ಡಿಗಳಲ್ಲಾಗುತ್ತಿದ್ದ ಸದ್ದು ಕ್ಷಣಮಾತ್ರ ನಿಂತು ಮತ್ತೆ ಮುಂಬರಿಯಿತು.
“ತಿಮ್ಮೂ! ಏ ತಿಮ್ಮೂ!” ಇನ್ನೂ ರಭಸದಿಂದ ಕೂಗಿದರು. ಈ ಸಾರಿ ಒಡ್ಡಿಗಳ ಸದ್ದು ನಿಲ್ಲುವುದಕ್ಕೆ ಬದಲಾಗಿ ಮತ್ತೂ ಹೆಚ್ಚಾಯಿತು. ಪಂಜರ ಮೋಕ್ಷಕ್ಕಾಗಿ ಪ್ರಾಣಿಗಳೆಲ್ಲಾ ಒಂದೇ ತಡವೆ ಮುಮುಕ್ಷುಗಳಾಗಿ ನುಗ್ಗತೊಡಗಿದುದರಿಂದ ಗಲಾಟೆ ನೆರೆಯೇರಿತು.
ತಿಮ್ಮಪ್ಪ ಹೆಗ್ಗಡೆ ಓಡೋಡಿ ಬಂದನು. ಮೈಗೆ ಕೆಸರು ಹಾರುತ್ತದೆಂದು ಹೆದರಿ ನೀರು ಚೆನ್ನಾಗಿ ಆರಿದ್ದ ಸ್ಥಳಗಳಲ್ಲಿಯೇ ಜಾಗರೂಕತೆಯಿಂದ ಕಾಲಿಡುತ್ತಿದ್ದುದನ್ನು ನೋಡಿ ಅವನ ತಂದೆ “ಎಲಲಲಲಾ ನಿನ್ನ ಜಂಭಾನೆ! ಹಾರುವರು ಹಾರ್ದಾಂಗೆ ತುದೀ ಬೆಳ್ಳಾಗೆ ಹಾರ್ಕೋಂಡು ಬತ್ತೀಯಲ್ಲೋ! ಬಿಳೀ ಬಟ್ಟೆ ಕೆಸರಾಗ್ತದಲ್ಲೇನೋ ನಿಂಗೆ?” ಎಂದರು
ಅಪ್ಪ ಈ ರೀತಿ ಮಾತಾಡುವುದು ಮಗನಿಗೇನೂ ಹೊಸದಾಗಿರಲಿಲ್ಲ. ಆದ್ದರಿಂದ ಯಾವುದನ್ನೂ ಗಮನಿಸದಂತೆ ಬಳಿಗೆ ಬಂದು ನಿಂತನು.
“ಏನೋ ನಿನ್ನ ನೆರೆಮನೆ ಅಣ್ಣನಹಾಗೆ ಮಳೆಹಾಳ್  ಚಾಳೀನೆಲ್ಲಾ ಕಲೀತಾ ಬರ್ತೀಯಲ್ಲೊ? ನಿನ್ನ ಈ ಕರೀ ಬೂಲಕ್ಕೆ ಯಾಕೋ ಈ ಬಿಳೀ ಬಟ್ಟೆ?”
ತಿಮ್ಮಪ್ಪ ಹೆಗ್ಗಡೆ ಹುಲ್ಲು ಕಚ್ಚಿಕೊಂಡು ಹೇಳಿದ: “ಕರೆದದ್ದು ಯಾಕೆ?”
ದೂರದಲ್ಲಿ ಗದ್ದೆ ಕೋಗಿನ ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಹೂವಳ್ಳಿ ವೆಂಕಟಣ್ಣನೋ ಯಾರೆಂದು ನೋಡಿ ಹೇಳುವುದಕ್ಕಾಗಿಯೇ ಹೆಗ್ಗಡೆಯವರು ಮಗನನ್ನು ಕರೆದಿದ್ದು. ಆದರೆ ಮಗನ ಬಟ್ಟೆಬರೆಗಳನ್ನು ಕಂಡು ಸಿಟ್ಟಿಗೇರಿದ ತಂದೆ “ಹೋಗಿ ನೋಡು, ಆರು ಕಟ್ಟಾಕೆ ಸತ್ತರೋ ಇಲ್ಲೋ ಹೊಲೆ ಮಕ್ಕಳು! ಮಳೆ ಬಂದ ಮರುದಿನಾನೂ ಬಿಸಿಲು ಬರೋ ತನಕ ಮಲಗಿಕೊಳ್ಳೋ ನೀವು ಮನೆ ಇಟ್ಟುಕೊಂಡ್ಹಾಂಗೆ ಅಂತಾ ಕಾಣ್ತದೆ! ಏನಾದ್ರೂ ಆಗ್ಲಿ! ಅತ್ತ ಮಖಾ ಹೋಗಾ ತನಕ ಗೆಯ್ತೀನಿ! ಆಮೇಲೆ ಮನೆ ಇಟ್ಟುಕೊಂಡ್ರೆ ಇಟ್ಟುಕೋ ಬಿಟ್ರೆ ಬಿದು! ನಂಗೇನು!!”
ತಿಮ್ಮಪ್ಪ ಹೆಗ್ಗಡೆ ತಂದೆ ಕರೆದಾಗ ಬಚ್ಚಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದನು. ಹಾಗೆಯೇ ಓಡಿಬಂದಿದ್ದ ಅವನ ತುಟಿಯೆಲ್ಲ ಮಸಿಯೆಂಜಲಿಂದ ಅಸಹ್ಯವಾಗಿತ್ತು. ಅವನು ಬಾಯಿ ತೆರೆಯದಿದ್ದುದಕ್ಕೆ ಬಹುಶಃ ಅದೂ ಒಂದು ಕಾರಣವಾಗಿತ್ತೊ ಏನೋ? ಸುಬ್ಬಣ್ಣ ಹೆಗ್ಗಡೆಯವರ ರೇಗಿಗೆ ಮಗನ ಬಿಳಿ ಬಟ್ಟೆ ಎಷ್ಟರಮಟ್ಟಿಗೆ ಕಾರಣವಾಗಿತ್ತೊ ಅವನ ಮಸೀಮಯವಾದ ಕರೀತುಟಿಯೂ ಅಷ್ಟಮಟ್ಟಿಗೇ ಕಾರಣವಾಗಿತ್ತು. ಎಂದರೆ ಅರ್ಥ: ಎರಡೂ ಕಾರಣವಾಗಿರಲಿಲ್ಲ. ನಿಜವಾದ ಕಾರಣ ಒಂದಲ್ಲ, ಎರಡಲ್ಲ: ತಂದೆಯಾದವನು ಮಗನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಯಾವಾಗಲೂ ಬಿಗಿಯಾಗಿ ವರ್ತಿಸಬೇಕು ಎಂಬುದೊಂದು. ಮಗನ ವಿರೂಪದ ದೆಸೆಯಿಂದಲೆ ಜನ ತಮ್ಮ ಮನೆಗೆ ಹೆಣ್ಣು ಕೊಡಲು ಹಿಂಜರಿಯುತ್ತದೆ ಎಂಬ ನಂಬುಗೆ ಮತ್ತೊಂದು ಆ ವಿರೂಪಕ್ಕೆ ಆಗುತ್ತಿರುವ ಅವಮಾನ ಅದರ ಸೃಷ್ಟಿಗೆ ಕಾರಣನಾದ ತನಗೂ ಸಲ್ಲುತ್ತಿದೆಯಲ್ಲಾ ಎಂಬ ಒಳಗುಟ್ಟು ಇನ್ನೊಂದು. ಮಗನು ಸುರೂಪಿಯಾಗಬೇಕೆಂದು ಮಾಡುತ್ತಿರುವ ಪ್ರಯತ್ನದಿಂದ ಮನೆ ಹಾಳಾಗುವುದೆಂಬ ಭೀತಿ ಮಗುದೊಂದು. ಹೆಂಡತಿಯಿಲ್ಲದ ಮುದುಕನ ಅತೃಪ್ತಿ ಇನ್ನೊಂದು. ಇತ್ಯಾದಿಯಾಗಿ ಅಸಂಬದ್ಧವೂ ಪರಸ್ಪರ ವಿರುದ್ದವೂ ಆದ ಅನೇಕ ನೆವಗಳೆಲ್ಲ ಒಟ್ಟುಗೂಡಿ ಹೆಗ್ಗಡೆಯವರನ್ನು ಕುದಿಸುತ್ತಿದ್ದುವು.
ಆದ್ದರಿಂದಲೆ ತಂದೆಯ ಅಪ್ಪಣೆಯಂತೆ ತಿಮ್ಮಪ್ಪ ಹೆಗ್ಗಡೆ ಮರುಮಾತಾಡದೆ ಹೊಲಗೇರಿಯ ಕಡೆಗೆ ಬಿರುಬಿರನೆ ನಡೆಯತೊಡಗಿದಾಗ, ಅವರು ಮತ್ತೂ ರೇಗಿ “ಇಲ್ಲಿ ಬಾರೊ! ಬಾರೋ!! ನಿನ್ನ  ಮುಖಾ ನೋಡಿದ್ರೆ ನಿನ್ನ ಮಾತು ಕೇಳ್ತಾರೇನೋ ಹೊಲೇರು? ಥೂ! ನಿನ್ನ ಬೂಲಕ್ಕೆ ಬೆಂಕಿ ಹಾಕಾ! ಹೋಗಿ ಬಾಯಾದ್ರೂ ಸರಿಯಾಗಿ  ತೊಳಕೊಂಡು ಹೋಗೋ!!” ಎಂದು ಕೂಗಿದ್ದು.
ತಿಮ್ಮಪ್ಪ ಹೆಗ್ಗಡೆಗೆ ತುಟಿ ನಡುಗಿತು; ಸಿಟ್ಟಿನಿಂದ, ದುಃಖದಿಂದ. ಬೇರೆ ಇನ್ನಾರಾದರೂ ಆಗಿದ್ದರೆ ಒರಟಾಗಿ ಹಲ್ಲು ಮುರಿಯುವಂತೆ ವರ್ತಿಸಿಬಿಡಬಹುದಾಗಿತ್ತಲ್ಲಾ, ಈಗ ಇಲ್ಲಿ ಸಾಧ್ಯವಾಗಲಿಲ್ಲವಲ್ಲಾ ಎಂಬೊಂದು ಸಂಕಟದಿಂದ ಹಲ್ಲು ಕಚ್ಚಿ, ಹುಬ್ಬು ಗಂಟಿಕ್ಕಿ, ಮುಖವೆಲ್ಲಾ ಸುಕ್ಕಾಗಿ ತಡೆದು ಕೊಂಡನು. ಆದರೆ ಕಣ್ಣು ಹನಿ ತುಂಬಿತು. ಅದು ತೊಟ್ಟಿಕ್ಕುವುದರೊಳಗೆ ಅಲ್ಲಿಂದ ಮೊಗದಿರುಹಿ ಹೊರಟನು: ಮುಖ ತೊಳೆಯುವುದಕ್ಕಾಗಿ ಬಚ್ಚಲಿಗಲ್ಲ; ಆರು ಕಟ್ಟಲು ಹೇಳುವುದಕ್ಕಾಗಿ ಹೊಲೆಗೇರಿಗೆ.
*******


ಮಲೆಗಳಲ್ಲಿ ಮದುಮಗಳು-5

         ಹಳೆಮನೆಗೆ ಮೇಗರವಳ್ಳಿಯಿಂದ ಸುಮಾರು ಒಂದು ಹರಿದಾರಿ. ಆಗುಂಬೆಗೆ ಹೋಗುವ ರಸ್ತೆಯ ಎಡಪಕ್ಕಕ್ಕೆ ಒಂದು ಗುಡ್ಡ ಹತ್ತಿ ಇಳಿದರೆ ಸರಿ, ಹಳೆಮನೆಯ ಗದ್ದೆಯ ಕೋಗೂ ಅಡಿಕೆ ತೋಟವೂ ಕಾಣಿಸುತ್ತವೆ. ಕಾಡು ದಟ್ಟವಾಗಿ ಬೆಳೆದ ಒಂದು ಗುಡ್ಡಕ್ಕೂ ಅಡಿಕೆ ತೋಟಕ್ಕೂ ನಡುವೆ ಹಳೆಮನೆಯ ದೊಡ್ಡದಾದ ಚೌಕಿಮನೆ. ಸಂಸ್ಕೃತಿಯ ದೃಷ್ಟಿಯಿಂದಲ್ಲ ಆಕೃತಿಯ ದೃಷ್ಟಿಯಿಂದ ನಿಜವಾಗಿಯೂ ದೊಡ್ಡ ಮನೆ.

ಮನೆ ಒಂದಾದರೂ ಅದರ ಕಾಲುಭಾಗಕ್ಕೆ ಊರು ಹೆಂಚು ಹೊದಿಸಿತ್ತು. ಉಳಿದುದಕ್ಕೆ ಅಡಿಕೆ ಸೋಗೆ, ಹೆಂಚಿನ ಮೇಲೆ ಅಲ್ಲಲ್ಲಿ ಪಾಚಿ ಬೆಳೆದು ಒಣಗಿ ಕರಿಮಚ್ಚೆಗಳು ತೋರುತ್ತಿದ್ದರೂ ಒಟ್ಟಿನಲ್ಲಿ ಅವುಗಳ ಹೊಸತನ ಸಂಪೂರ್ಣವಾಗಿ ಮಾಸಿರಲಿಲ್ಲ.
ಆ ಒಂದು ಮನೆಯಲ್ಲಿ ಎರಡು ಸಂಸಾರಗಳಿದ್ದುವು. ಅಥವಾ ಸರಿಯಾಗಿ ಹೇಳುವುದಾದರೆ, ಎರಡು ವರ್ಷದ ಹಿಂದೆ ಆ ಮನೆಯಲ್ಲಿ ಒಂದಾಗಿದ್ದ ಸಂಸಾರ ಒಡೆದು ಪಾಲಾಗಿ ಎರಡಾಗಿತ್ತು. ತರುವಾಯ ಅವರವರ ಮನಸ್ಸಿನಂತೆ ಅವರವರ ಪಾಲಿಗೆ ಬಂದ ಮನೆಯಲ್ಲಿ ಒಳಗೂ ಹೊರಗೂ ಮಾರ್ಪಾಡಾಗಿತ್ತು. ಜನರೂ ಕೂಡ ಬದಲಾಗಿ ‘ಹೆಂಚಿನ ಮನೆಯವರು’ ಸೋಗೆ ಮನೆಯವರು’ ಎಂದು ಕರೆಯುವುದಕ್ಕೆ ತೊಡಗಿದ್ದರು. ಆದರೆ ಮನೆಯವರ ಮುಂದೆ ಹಾಗೆ ಮಾತಾಡಿಕೊಳ್ಳುತ್ತಿರಲಿಲ್ಲ. ಅದರಲ್ಲಿಯೂ ಸೋಗೆ ಮನೆಯವರ ಮುಂದೆ.
ಏಕೆಂದರೆ ದೊಡ್ಡ ಜಮೀನು ಆಳುಕಾಳು ಎಲ್ಲದರಲ್ಲಿಯೂ ಪ್ರಬಲವಾಗಿದ್ದದ್ದು ಕಾಲು ಪಾಲಿನ ಹೆಂಚಿನ ಮನೆಯಲ್ಲ, ಮುಕ್ಕಾಲು ಪಾಲಿನ ಸೋಗೆಮನೆ. ಹಿರಿಯವರೂ, ಯಜಮಾನರೂ, ಸಂಪಾದನೆಯ ಮತ್ತು ಕೂಡಿಡುವ ವಿಚಾರದಲ್ಲಿ ಅದ್ಭುತ ಕರ್ತೃತ್ವಶಾಲಿಗಳೂ ಆಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಆಸ್ತಿಯಲ್ಲಿ ಬಂದಿದ್ದಂತೆ ಮನೆಯಲ್ಲಿಯೂ ಮುಕ್ಕಾಲು ಪಾಲು ಬಂದಿತ್ತು. ಬಹುಕಾಲದ ಹಿಂದೆಯೆ ಗತಿಸಿಹೋಗಿದ್ದ ಅವರ ಅಣ್ಣನ ಮಗ ಶಂಕರ ಹೆಗ್ಗಡೆಯವರಿಗೆ ಕಾಲು ಪಾಲು ಸಿಕ್ಕುವುದೂ ಶ್ರಮಸಾಧ್ಯವಾಯಿತೆಂದ ಮೇಲೆ ಸುಬ್ಬಣ್ಣ ಹೆಗ್ಗಡೆಯವರ ಇದಿರಾಗಲಿ ಅಥವಾ ಅವರ ಮಗ ತಿಮ್ಮಪ್ಪ ಹೆಗ್ಗಡೆಯವರ ಇದಿರಾಗಲಿ ‘ಹೆಂಚಿನ ಮನೆ’ ‘ಸೋಗೆಮನೆ’ ಎಂದು ಯಾರೂ ಮಾತಾಡುತ್ತಿರಲಿಲ್ಲ. ಅಂತಹ ಸನ್ನಿವೇಶಗಳಲ್ಲಿ ಅವರು ಉಪಯೋಗಿಸುತ್ತಿದ್ದ ಹೆಸರು ‘ದೊಡ್ಡ ಮನೆ’ ‘ಸಣ್ಣ ಮನೆ’.
ಒಟ್ಟಾಗಿದ್ದ ಮನೆ ಒಡೆದುಹೋಗುವುದಕ್ಕೆ ಮುಖ್ಯ ಕಾರಣವಾಗಿದ್ದುದು ತಿಮ್ಮಪ್ಪ ಹೆಗ್ಗಡೆ. ಆತನು ಶಂಕರ ಹೆಗ್ಗಡೆಯವರಿಗಿಂತಲೂ ಬಹಳ ಕಿರಿಯವನು. ಇನ್ನೂ ಮದುವೆಯಾಗಿರಲಿಲ್ಲ. ಶಂಕರ ಹೆಗ್ಗಡೆಯವರಿಗೆ ಮದುವೆಯೂ ಆಗಿ ಮಕ್ಕಳೂ ಆಗಿತ್ತು. ಅಷ್ಟೊಂದು ಅಸಮಾನ ವಯಸ್ಕರಾಗಿದ್ದರೂ ಅವನಿಗೆ ಶಂಕರ ಹೆಗ್ಗಡೆಯವರ ಮೇಲೆ ಸಹಿಸಲಾರದ ಹೊಟ್ಟೆಕಿಚ್ಚು. ಅಚ್ಚ ಕರ್ರಗಿದ್ದ ಅವನಿಗೆ ಶಂಕರಣ್ಣಯ್ಯನ ಬಿಳಿ ಮೈ ಕಂಡರಾಗುತ್ತಿರಲಿಲ್ಲ. ತನ್ನ ತಂದೆಯಂತೆಯ ಕುಳ್ಳಾಗಿದ್ದ ಆತನಿಗೆ ದೊಡ್ಡಪ್ಪನ ಮಗನ ಎತ್ತರವನ್ನು ಕಂಡರೆ ಸಹಿಸುತ್ತಿರಲಿಲ್ಲ. ತನ್ನ ಹಲ್ಲು ಯದ್ವಾತದ್ವಾ ಹುಟ್ಟಿ ಹುಳು ಹಿಡಿದಿರುವಾಗ ಶಂಕರಣ್ಣಯ್ಯನ ಹಲ್ಲು ಬೆಳ್ಳಗೆ ಶುಚಿಯಾಗಿ ಸಾಲಾಗಿ ಏಕಿರಬೇಕು? ಸೌಮ್ಯವಾಗಿದ್ದ ಶಂಕರ ಹೆಗ್ಗಡೆಯವರ ಚೆಲುವಾದ ಕಣ್ಣುಗಳನ್ನು ನೋಡಿದಾಗಲೆಲ್ಲಾ ತಿಮ್ಮಪ್ಪ ಹೆಗ್ಗಡೆಗೆ ಭಯಂಕರವಾಗಿ ಡೊಳ್ಳುಬ್ಬಿದಂತಿರುವ ತನ್ನ ಮೆಣ್ಣೆಗಣ್ಣಿನ ವಿಕಾರದ ನೆನಪಾಗಿ ಎದೆ ಕುದಿಯುತ್ತಿತ್ತು. ಯಾವ ತರ್ಕದಿಂದಲೊ ಏನೊ ತನಗೆ ಎಲ್ಲ ರೀತಿಯಿಂದಲೂ ಶಂಕರ ಹೆಗ್ಗಡೆಯವರಿಂದ ಅನ್ಯಾಯವಾಗಿದೆ ಎಂಬುದು ಅವನ ತಲೆಗೆ ಹೊಕ್ಕು ಹೋಗಿತ್ತು. ಶಂಕರ ಹೆಗ್ಗಡೆ ತನಗಿಂತಲೂ ಮೊದಲೆ ಹುಟ್ಟಿ ತನಗೆ ಬರಬೇಕಾಗಿದ್ದ ಸಲ್ಲಕ್ಷಣಗಳನ್ನೆಲ್ಲಾ ಸುಲಿದುಕೊಂಡುಬಿಟ್ಟಿದ್ದಾನೆ ಎನ್ನುವಷ್ಟರಮಟ್ಟಿಗೆ ಅವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ.
ತಿಮ್ಮಪ್ಪ ಹೆಗ್ಗಡೆಯ ಕರುಬಿಗೂ ದ್ವೇಷಕ್ಕೂ ಒಳಗಾಗಿದ್ದರೂ ಶಂಕರ ಹೆಗ್ಗಡೆ ವಾಸ್ತವವಾಗಿ ಬಹಳ ಸಾಮಾನ್ಯ ವ್ಯಕ್ತಿ. ಜೋಯಿಸರಾಗಿದ್ದ ಕಲ್ಲೂರು ಮಂಜಯ್ಯನವರ ಪ್ರಭಾವದಿಂದ ಆತನಿಗೆ ಒಂದು ವಿಧವಾದ ಅನುಕರಣದ ಸಂಸ್ಕೃತಿ ಲಭಿಸಿತ್ತು. ಉಳಿದವರು ಶನಿವಾರದ ದಿನ ಮಾತ್ರ ಮಿಂದರೆ ಅವನು ದಿನವೂ ಮೀಯುತ್ತಿದ್ದನು. ಉಳಿದವರ ಬಟ್ಟೆ ಕೊಳೆಯಿಂದ ರಟ್ಟಾಗಿದ್ದರೆ ಅವನದು ಬೆಳ್ಳಗಿರದಿದ್ದರೂ ಹಳ್ಳಿಯ ಹಾರುವರ ಪಾಣಿಪಂಚೆಯಷ್ಟರಮಟ್ಟಿಗಾದರೂ ಶುಚಿಯಾಗಿರುತ್ತಿತ್ತು. ಜೋಯಿಸರು ಹಳೆಮನೆಗೆ ಬಂದಾಗ ಅವರೊಡನೆ ಇತರರಿಂತಲೂ ಸ್ವಲ್ಪ ಹೆಚ್ಚು ಕಾಲ ಮಾತಾಡುತ್ತಿದ್ದದ್ದಲ್ಲದೆ ಅವರನ್ನು ಕಳುಹಿಸುತ್ತಾ ಸ್ವಲ್ಪ ದೂರ ಹೋಗಿ ಹಳ್ಳ ದಾಟಿಸಿ ಬರುತ್ತಿದ್ದನು. ಈ ಎಲ್ಲ ಕಾರಣಕ್ಕಾಗಿ ಜೋಯಿಸರಿಗೂ ಅವನನ್ನು ಕಂಡರೆ ವಿಶ್ವಾಸ. ‘ಏನಪ್ಪಾ ಶಂಕರಪ್ಪಾ, ಹೇಗಿದ್ದೀಯಾ?’ ಎಂದು ನಗೆಮೊಗದಿಂದ ಕುಶಲಪ್ರಶ್ನೆ ಮಾಡುತ್ತಿದ್ದರು.
ಇದನ್ನೆಲ್ಲಾ ಕಂಡು ಹುಡುಗನಾಗಿದ್ದ ತಿಮ್ಮಪ್ಪ ಹೆಗ್ಗಡೆಗೆ ಕರುಬು ಹೆಚ್ಚಾಯಿತು. ಜೋಯಿಸರ ವಿಶ್ವಾಸ ಸಂಪಾದನೆಗಾಗಿ ಶಂಕರ ಹೆಗ್ಗಡೆಯೊಡನೆ ಪೈಪೋಟಿ ಮಾಡಿದನು. ಅದರ ಪರಿಣಾಮ ವಿಪರೀತವಾಯಿತು. ಅವನ ಕೊಳಕು ಬಟ್ಟೆ, ಹುಳುಕು ಹಲ್ಲು, ಡೊಳ್ಳೇರಿದ ಮೆಳ್ಳೆಗಣ್ಣು, ಯಾವಾಗಲೂ ಅಸಹ್ಯವಾಗಿ ತೆರೆದಿರುತ್ತಿದ್ದ ದಪ್ಪ ತುಟಿ, ತುಟಿಯ ಮೇಲೆ ತೊನ್ನಿನಂತಿದ್ದ ಬಿಳಿಯ ಮಚ್ಚೆ, ಬೆವರಿನ ದುರ್ಗಂಧ, ಮಾತಾಡಿದರೆ ಹಲ್ಲಿನ ಸಂಧಿಗಳಿಂದ ಚಿಮ್ಮುತ್ತಿದ್ದ ಎಂಜಲು ಹನಿ- ಇವುಗಳನ್ನೆಲ್ಲಾ ಸಹಿಸಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಮಂಜಯ್ಯ ಜೋಯಿಸರು ಒಂದು ದಿನ ಬಹಳ ಸಂಕೋಚದಿಂದ, ಆದರೂ ಅನಿವಾರ್ಯವಾಗಿ, “ತಿಮ್ಮಪ್ಪ, ನೀನು ಸ್ವಲ್ಪ ದೂರ ನಿಂತುಕೊಂಡು ಮಾತಾಡಪ್ಪಾ” ಎಂದುಬಿಟ್ಟರು. ನಾಲ್ಕು ಮಂದಿಯ ಮುಂದೆ ತನಗಾಗಿದ್ದ ಅವಮಾನಕ್ಕಾಗಿ ಅಂದಿನಿಂದ ಅವನಿಗೆ ಜೋಯಿಸರನ್ನು ಕಂಡರೆ ಆಗುತ್ತಿರಲಿಲ್ಲ. ಜೋಯಿಸರಿಗೆ ನೇರವಾಗಿ ತಾನೇನನ್ನೂ ಮಾಡಲಾರದೆ ಅವರವನಾಗಿದ್ದ ಶಂಕರ ಹೆಗ್ಗಡೆಯ ಮೇಲೆ ಮುಯ್ಯಿ ತೀರಿಸಿಕೊಳ್ಳುತ್ತಿದ್ದನು.
ಮನೆ ಪಾಲಾಗಿ ಶಂಕರ ಹೆಗ್ಗಡೆ ಬೇರೆ ಸಂಸಾರ ಹೂಡಿದ ಮೇಲೆ ತಿಮ್ಮಪ್ಪ ಹೆಗ್ಗಡೆಯ ಮನಸ್ಸಿಗೆ ಸ್ವಲ್ಪ ತೃಪ್ತಿಯಾಯಿತು. ತಮ್ಮ ಪಾಲಿಗೆ ಬಂದಿದ್ದ ಮುಕ್ಕಾಲು ಪಾಲು ಜಮೀನು ಮನೆ ಇತ್ಯಾದಿಗಳಿಂದ ತಾವು ಶ್ರೀಮಂತರೆಂದೂ ದಾಯಾದಿಗಳು ದರಿದ್ರರೆಂದೂ ಹೆಮ್ಮೆ ಹುಟ್ಟಿ ಸಂತೋಷವಾಗಿತ್ತು. ಆದರೆ ಒಂದೇ ವರ್ಷದ ಒಳಗಾಗಿ ಆ ತೃಪ್ತಿಗೂ ದಕ್ಕೆ ತಗುಲಿತು. ಕಾರಣ: ಶಂಕರ ಹೆಗ್ಗಡೆಯ ಏಳಿಗೆ.
ಶಂಕರ ಹೆಗ್ಗಡೆಯ ಹಿಸ್ಸೆಗೆ ಬಂದಿದ್ದ ಕಾಲು ಪಾಲು ಆ ಮನೆಯ ನೀಚಾಂಶವಾಗಿದ್ದರೂ ಕೊಂಚ ಬದಲಾವಣೆಗಳಿಂದ ಅದನ್ನು ಉತ್ತಮಾಂಶವಾಗಿ ಕಾಣುವಂತೆ ಮಾಡಿಕೊಂಡಿದ್ದನು. ಆಗಲೂ ತಂಟೆ ತಕರಾರು ತಂದೊಡ್ಡಲು ಹವಣಿಸಿದ್ದನು ತಿಮ್ಮಪ್ಪ ಹೆಗ್ಗಡೆ. ತಮ್ಮ ಮನೆಗೂ ಅಪಾಯವಾಗುತ್ತದೆಂದು ಅದನ್ನು ಬಲಾತ್ಕಾರವಾಗಿ ನಿಲ್ಲಿಸಲು ಮುಂದುವರಿದಿದ್ದನು. ಸುಬ್ಬಣ್ಣ ಹೆಗ್ಗಡೆಯವರು ಅವನನ್ನು ತಡೆದು ಒಳಗೆ ಕರೆದುಕೊಂಡು ಹೋಗಿ “ನೀ ಸುಮ್ಮನಿರೊ, ಅವ ಏನಾರೂ ಸಾಯಲಿ; ಗ್ವಾಡೆಗೆ ಕಿಡಕೀನಾದ್ರೂ ಇಡಿಸ್ಲಿ; ಮನೇಗೆ ಕಳಾಸಾನಾದ್ರೂ ಹಾಕಸ್ಲಿ; ಇನ್ನೊಂದು ವರ್ಸದೊಳಗೇ ಸಾಲಮಾಡಿ ದಿವಾಳಿ ತೆಗೆದ್ರೆ ಸೈಯಲ್ಲಾ. ಹಾರ್ರು ಮಾಡಿದ್ಹಾಂಗೇ ಬಿಳೀ ಬಟ್ಟೆ ಹಾಕ್ಕೊಂಡು ಜಗಲಿಗೆ ಗಾಳಿ ಬೆಳಕು ಬಿಟ್ಟಕೊಂಡ್ರೆ ಮನೆ ಬಯಲಾಗದೆ ಏಟು ದಿನ ಇದ್ದಾತು!” ಎಂದು ಏಕಾಂತ ಹೇಳಿದ ಮೇಲೆ ಪಾಲುದಾರರ ವಿನಾಶಕ್ಕೆ ತಾನೇಕೆ ತಡೆಯಾಗಬೇಕೆಂದು ತಟಸ್ಥನಾಗಿದ್ದನು. ಆದರೆ ಶಂಕರ ಹೆಗ್ಗಡೆ ತನ್ನ ಪಾಲಿನ ಮನೆಗೆ ಸೋಗೆಗೆ ಬದಲಾಗಿ ಊರು ಹೆಂಚು ಹಾಕಿಸುತ್ತಾನೆಂದು ವಾರ್ತೆ ಹಬ್ಬಿದಮೇಲೆ ತಿಮ್ಮಪ್ಪ ಹೆಗ್ಗಡೆಗೆ ಸಹಿಸಲಾರದಷ್ಟು ಹೊಟ್ಟೆಯುರಿಯಾಯ್ತು. ಅಪ್ಪಯ್ಯನ ಹತ್ತಿರ ಹೋಗಿ “ನಾವೇನು ಕಡಿಮೆ ಅವನಿಗೆ” ಅವ ಮನೀಗೆ ಹೆಂಚು ಹಾಕಿಸೋವಾಗ ನಾವು ಸೋಂಗೆ ಹಾಕಿಸಿಕೊಂಡು ಕಾಲಮಾಡೋದು ಹ್ಯಾಂಗೆ?” ಎಂದು ತಮ್ಮ ಗೌರವಕ್ಕಾಗಿಯಾದರೂ ತಾವೂ ಹೆಂಚು ಹಾಕಿಸಬೇಕೆಂದು ಕೇಳಿಕೊಂಡನು. ಸುಬ್ಬಣ್ಣ ಹೆಗ್ಗಡೆಯವರ ಹುಟ್ಟು ಜಿಪುಣತೆಗೆ ಒದೆ ಬಿದ್ದಂತಾಗಿ, ಹಣೆ ಬಡಿದುಕೊಳ್ಳುತ್ತಾ, “ಅಯ್ಯಯ್ಯಯ್ಯಯ್ಯೊ ನೀ ಎಲ್ ಕಲಿತಪ್ಪಾ ಈ ಮನೆಹಾಳ್ ಬುದ್ದೀನಾ? ನಮ್ಮ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲಾ ಸೋಂಗೆ ಮನೇಲೆ ಕಾಲ ಹಾಕಲಿಲ್ಲೇನೋ? ಅವರಿಗಿಲ್ದೇ ಇದ್ದ ಬಹುಮಾನಾ ನಿಮಗೆಲ್ಲ ಈಗ ಬಂದುಬಿಡ್ತಲ್ಲೇ? ಅಯ್ಯೋ, ಮನೆಹಾಳ್ ಮುಂಡೆ ಮಕ್ಕಳ್ರಾ, ನೀವು ಬಾಳಿರೇನೋ? ಬೂದಿ ಹುಯ್ಕೊಂಡು ಹೋಗ್ತೀರೋ!” ಎಂದು ಮೊದಲಾಗಿ ಆಶೀರ್ವಾದ ಮಾಡಿ ಕಳುಹಿಸಿದ್ದರು. ತಿಮ್ಮಪ್ಪ ಹೆಗ್ಗಡೆಗೆ ತಂದೆಯ ಮೇಲೆಯೂ ಬಹಳ ಬೇಜಾರಾಗಿ “ನೀನಿನ್ನೆಷ್ಟು ದಿವ್ಸ ಇದ್ದೀಯೊ? ನೀ ಹೋದ ಮೇಲಾದ್ರೂ ನಾ ಹೆಂಚು ಹಾಕ್ಸೋಕೆ ಆಗ್ತದೋ ಇಲ್ಲೋ ನೋಡ್ತೀನಿ” ಎಂದು ಮನದಲ್ಲಿಯೆ ಬುಸುಗುಟ್ಟಿದ್ದನು.
ಹೀಗಿರುತ್ತಿರುವಾಗಲೆ ಶಂಕರ ಹೆಗ್ಗಡೆಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಒಂದು ಅವಕಾಶ ಸಿಕ್ಕಿತು. ಸುಬ್ಬಣ್ಣ ಹೆಗ್ಗಡೆಯವರಿಗೆ ಬೇಕಾದಷ್ಟು ಆಸ್ತಿಪಾಸ್ತಿ ನಗನಟ್ಟುಗಳಿದ್ದರೂ ತಿಮ್ಮಪ್ಪ ಹೆಗ್ಗಡೆಗೆ ಹೆಣ್ಣು ಕೊಡುವುದಕ್ಕೆ ಹೆದರುತ್ತಿದ್ದರು. ಹಡೆದ ತಂದೆ ತಾಯಿಗಳು. ಅದಕ್ಕೆ ಕಾರಣ ತಿಮ್ಮಪ್ಪ ಹೆಗ್ಗಡೆಯ ಬಣ್ಣ, ರೂಪ ಮತ್ತು ವಿಕಾರಗಳು ಮಾತ್ರವೇ ಆಗಿರಲಿಲ್ಲ. ಅವನ ಹಿಂಸಾ ಸ್ವಭಾವ, ಕ್ರೂರಬುದ್ಧಿ, ದುಷ್ಟ ಪ್ರಾಣಿಗೆ ಸಹಜವಾದ ಕಾಡುತನ ಇವುಗಳ ಪ್ರಸಿದ್ಧಿ ಅನೇಕರ ಕಿವಿಗೆ ಬಿದ್ದಿತ್ತು. ಅದೂ ಅಲ್ಲದೆ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮನೆಯ ಹೆಂಗಸರಿಗೆ ಸೋಮಾರಿತನದಿಂದಿರುವುದಕ್ಕೆ ಸ್ವಲ್ಪವೂ ಅವಕಾಶ ಕೊಡುತ್ತಿರಲಿಲ್ಲ. ಎಂದರೆ ಅಡುಗೆ ಮಾಡುವುದೇ ಮೊದಲಾದ ಮನೆಯೊಳಗಿನ ಕೆಲಸಗಳ ಜೊತೆಗೆ ಅವರ ಕೈಲಿ ಮನೆಗೆ ಕಟ್ಟಿಗೆ ಹೊರಿಸುತ್ತಿದ್ದರು; ಕೊಟ್ಟಿಗೆಗೆ ಸೊಪ್ಪು ತರಗು ಹೊರಿಸುತ್ತಿದ್ದರು; ಗದ್ದೆಗೆ ಗೊಬ್ಬರ ಹಾಕಿಸುತ್ತಿದ್ದರು; ಸಸಿ ನಡಿಸುತ್ತಿದ್ದರು; ಕಳೆ ಕೀಳಿಸುತ್ತಿದ್ದರು. ಅದೂ ಇದೂ ಏನು? ಗೃಹಿಣಿಯರಿಂದ ಗೃಹಕಾರ್ಯಗಳೆಲ್ಲವನ್ನೂ ಚಾಚೂ ತಪ್ಪದೆ ಮಾಡಿಸುತ್ತಿದ್ದರು! ಎಂಟು ದಿನಕ್ಕೊಮ್ಮೆಯಲ್ಲದೆ ಮೀಯಗೊಡುತ್ತಿರಲಿಲ್ಲ. ಕೊಡುತ್ತಿದ್ದುದು ಜಡ್ಡು ಸೀರೆ. ಅದನ್ನೂ ಹರಡು ಮುಚ್ಚುವಂತೆ ಉಟ್ಟುಕೊಂಡರೆ ಗ್ರಹಚಾರ ಬಿಡಿಸುತ್ತಿದ್ದರು. ‘ಒಕ್ಕಲು ಮಕ್ಕಳಿಗೆ ಮೊಳಕಾಲು ಮುಚ್ಚಿದರೆ ಸಾಕು. ಬಿರಾಂಬರು ಉಟ್ಟ ಹಾಂಗೆ ಉಟ್ಟರೋ ಮನೆ ತೊಳೆದು ಹೋಗ್ತದೆ’ ಎಂದು ಮುಖದ ಮೇಲೆ ನೀರಿಳಿಯುವಂತೆ ಬಯ್ಯುತ್ತಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಹಳೆಮನೆಗೆ ಹೆಣ್ಣು ಕೊಡಲು ಜನ ಹೆದರುತ್ತಿದ್ದರು.
ಒಮ್ಮೆ ಸಿಂಬಾವಿ ಭರಮೈ ಹೆಗ್ಗಡೆಯವರು ತಮ್ಮ ನೆಂಟಬಾವ ಶಂಕರ ಹೆಗ್ಗಡೆಯವರ ಮನೆಗೆ ಬಂದಿದ್ದಾಗ ಸುಬ್ಬಣ್ಣ ಹೆಗ್ಗಡೆಯವರು ಅವರನ್ನು ಕಳ್ಳಿನ ಉಪಚಾರಕ್ಕೆ ಕರೆದಿದ್ದರು. ಸುಬ್ಬಣ್ಣ ಹೆಗ್ಗಡೆಯವರು ಇಳಿವಯಸ್ಸಿನವರಾಗಿದ್ದರೂ ನಡುವಯಸ್ಸಿನವಾಗಿದ್ದ ಭರಮೈ ಹೆಗ್ಗಡೆಯವರಲ್ಲಿ ಬಹಳ ಸಲಿಗೆ. ಬಹು ವಿಷಯಗಳಲ್ಲಿ ಅವರಿಬ್ಬರೂ ಸಮಪ್ರಕೃತಿಯವರಾಗಿದ್ದುದೇ ಅವರ ಸ್ನೇಹಕ್ಕೆ ಮೂಲಕಾರಣ. ಆ ಸ್ನೇಹಕ್ಕೆ ಶಾಶ್ವತ ಬಾಂಧವ್ಯದ ಮುದ್ರೆಯನ್ನೊತ್ತುವ ಸಲುವಾಗಿಯೇ ಶಂಕರ ಹೆಗ್ಗಡೆಯ ತಂಗಿ ಜಟ್ಟಮ್ಮನನ್ನು, ಹಳೆ ಮನೆ ಪಾಲಾಗುವುದಕ್ಕೆ ಮೂರು ನಾಲ್ಕು ವರ್ಷಗಳ ಮುಂಚೆ, ಭರಮೈ ಹೆಗ್ಗಡೆಯವರಿಗೆ ಧಾರೆಯೆರೆದುಕೊಟ್ಟಿದ್ದರು.
ಕಳ್ಳು ಕುಡಿಯುತ್ತಾ ಕುಡಿಯುತ್ತಾ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮಗನ ಮದುವೆಯ ಪ್ರಸ್ತಾಪವೆತ್ತಿ ಭರಮೈ ಹೆಗ್ಗಡೆಯವರ ತಂಗಿ ಲಕ್ಕಮ್ಮನನ್ನು ತಂದುಕೊಳ್ಳುವ ಇಚ್ಛೆಯನ್ನು ಸೂಚಿಸಿದರು. ಸಿಂಬಾವಿ ಹೆಗ್ಗಡೆಯವರಿಗೂ ಬಹುದಿನಗಳಿಂದ ಮನಸ್ಸಿನಲ್ಲಿ ಒಂದು ಕೊರತೆ ಕೊರೆಯುತ್ತಿತ್ತು. ಜಟ್ಟಮ್ಮಗೆ ಇದುವರಿಗೂ ಮಕ್ಕಳಾಗಿರಲಿಲ್ಲವಾದ್ದರಿಂದ ಮತ್ತೊಂದು ಮದುವೆಯಾಗುವ ಆಸೆ ಅವರಲ್ಲಿ ಆಗತಾನೆ ಕಣ್ದೆರೆಯುತ್ತಿತ್ತು. ಹಳೆಮನೆ ಹೆಗ್ಗಡೆಯವರ ಸೂಚನೆ ಅವರಿಗೆ ದೈವೇಚ್ಛೆಯಂತೆಯೇ ತೋರಿ, ತಮ್ಮ ಮನಸ್ಸನ್ನು ಬಿಚ್ಚಿ ಹೇಳಿದರು; ಸುಬ್ಬಣ್ಣ ಹೆಗ್ಗಡೆಯವರ ಕಿರಿಯ ಮಗಳೂ ತಿಮ್ಮಪ್ಪ ಹೆಗ್ಗಡೆಯ ತಂಗಿಯೂ ಆದ ಮಂಜಮ್ಮನನ್ನು ತಮಗೆ ತಂದುಕೊಂಡು ತಮ್ಮ ತಂಗಿ ಲಕ್ಕಮ್ಮನನ್ನು ತಿಮ್ಮಪ್ಪ ಹೆಗ್ಗಡೆಗೆ ಕೊಡಲು ಅಡ್ಡಿಯಿಲ್ಲ ಎಂದು. ಸುಬ್ಬಣ್ಣ ಹೆಗ್ಗಡೆಯವರು ಯಾವುದನ್ನೂ ಹಿಂದಿನಿಂದ ತಿಳಿಸುತ್ತೇನೆ ಎಂದಿದ್ದರು. ಮಗಳ ಮೇಲಿನ ಕನಿಕರದಿಂದ ಭರಮೈ ಹೆಗ್ಗಡೆಯವರಿಗೆ ಆಕೆಯನ್ನು ಬಲಿಕೊಡಲು ಅವರು ತಟಕ್ಕನೆ ಒಪ್ಪಿಕೊಳ್ಳದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು.
ಆದರೆ ಅಂತಹ ವಿಷಯಗಳಲ್ಲೆಲ್ಲ ವಾಡಿಕೆಯಾಗಿ ನಡೆಯುವಂತೆ ಆ ರಹಸ್ಯ ಬಹಳ ಕಾಲ ರಹಸ್ಯವಾಗಿರಲಿಲ್ಲ. ಪಿಸುಮಾತಾಗಿ ಕಿವಿಗೆ ಬಿದ್ದು ಗುಸು ಗುಸು ಹರಡುತ್ತಿತ್ತು. ಹಾಗೆ ಹರಡುವುದಕ್ಕೆ ಇತ್ತ ಕಡೆಯಿಂದ ತಿಮ್ಮಪ್ಪ ಹೆಗ್ಗಡೆಯೂ ಅತ್ತ ಕಡೆಯಿಂದ ಭರಮೈ ಹೆಗ್ಗಡೆಯವರೂ ಕಾರಣರಾಗಿದ್ದರು. ಸುದ್ದಿ ಕಿವಿಗೆ ಬಿದ್ದೊಡನೆಯೆ ಎದೆಗೆ ಸಿಡಿಲು ಬಿದ್ದಂತಾಗಿ ಜಟ್ಟಮ್ಮ ಹಳೆಮನೆಗೆ ಬಂದು ತನ್ನಣ್ಣನನ್ನು “ಏನೋ ಸುದ್ದಿ ಹಬ್ಬಿದೆಯಲ್ಲಾ ಹೌದೆ?” ಎಂದು ವಿಚಾರಿಸಿದಳು. ಶಂಕರ ಹೆಗ್ಗಡೆಯವರು “ಸುದ್ದಿಯೇನೋ ಹಬ್ಬಿದೆ. ಆದರೆ ನನಗೊಂದೂ ಗೊತ್ತಿಲ್ಲ. ಚಿಕ್ಕಪ್ಪಯ್ಯನನ್ನೇ ಹೋಗಿ ಕೇಳು” ಎಂದರು.
“ನನಗೇನು ಅಂಜಿಕೆ? ಹೋಗಿ ಕೇಳ್ತೀನಿ” ಎಂದು ಜಟ್ಟಮ್ಮ ಆಚೆಮನೆಗೆ ಹೋದಳು.
ಮನೆ ಪಾಲಾಗುವುದಕ್ಕೆ ಮೊದಲೆ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಜಟ್ಟಮ್ಮನಿಗೆ ಮನೆ ಪಾಲಾದ ಮೇಲೆಯೂ ಸುಬ್ಬಣ್ಣ ಹೆಗ್ಗಡೆಯವರಲ್ಲಿ ಮೊದಲಿನಿಂದಲೂ ತನಗಿದ್ದ ಸಲಿಗೆಗೆ ಊನ ಬಂದಿರಲಿಲ್ಲ.
ಸುಬ್ಬಣ್ಣ ಹೆಗ್ಗಡೆಯವರು ಜಟ್ಟಮ್ಮನನ್ನು ಆದರದಿಂದ ಬರಮಾಡಿಕೊಂಡರು. ಅಕ್ಕರೆಯಿಂದ ಮಾತಾಡಿಸಿದರು. ಆ ಸುದ್ದಿಯ ವಿಚಾರ ಮಾತು ಬಂದಾಗ “ಅಯ್ಯೋ ಜಟ್ಟೂ, ನಿನಗೇನು ಬಿರಾಂತೇನೆ? ಏನೋ ಮಾತಿಗೆ ಮಾತು ಬಂತು. ಅತ್ತ ಹೋಗೊ ಮಾತು ಇತ್ತ ಹೋಯ್ತು!” ಎಂದು ನಗುತ್ತಾ ಕುಟ್ಟೊರಳಲ್ಲಿ ಅಡಕೆ ಕುಟ್ಟತೊಡಗಿದ್ದರು. ಜಟ್ಟಮ್ಮನಿಗೆ ಮನಸ್ಸು ಸಮಾಧಾನವಾಗಿ ಗಂಡನ ಮನೆಗೆ ಹಿಂತಿರುಗಿದ್ದಳು.
ಹಿಂತಿರುಗಿದ ಮೇಲೆ ಬಹಳ ಆಲೋಚಿಸಿದಳು: ಇವರು ಎರಡನೆ ಮದುವೆ ಆಗುವುದೇತಕ್ಕೆ? ನನಗೆ ಮಕ್ಕಳಾಗಲಿಲ್ಲ ಎಂದಲ್ಲವೇ? ನಾನು ಸತ್ತಮೇಲಾದರೂ ರಗಳೆಯಿರಲಿಲ್ಲ. ಈಗ ನಾನೇ ಹೋಗಿ, ನಮ್ಮ ದಾಯಾದಿಗಳ ಮನೆ ಹೆಣ್ಣು ಕೇಳಿ ಇವರಿಗೆ ಮತ್ತೊಂದು ಮದುವೆ ಮಾಡಿಸಿ, ಸವತಿಯನ್ನು ಮನೆದುಂಬಿಸಿಕೊಳ್ಳಬೇಕೆಂದರೆ ಅದಕ್ಕಿಂತಲೂ ಕೆರೆ ಬಾವಿ ತಳ ನೋಡುವುದು ಲೇಸು.
ಆಮೇಲೆ ತನಗೆ ಬೇಗನೆ ಮಕ್ಕಳಾಗುವುದಕ್ಕೆ ಧಾರ್ಮಿಕ ಕಾರ್ಮಿಕ ಉಪಾಯಗಳನ್ನೆಲ್ಲಾ ಕೈಕೊಂಡಳು. ದೇವರು ದಿಂಡರಿಗೆ ಹೇಳಿಕೊಂಡಳು. ಮತ್ತು ಮೇಗರವಳ್ಳಿಯಲ್ಲಿ ಮಲೆಯಾಳದ ಪಂಡಿತರೆಂದು ಪ್ರಸಿದ್ಧಿ ಪಡೆದಿದ್ದ ಕಣ್ಣಾ ಪಂಡಿತರಿಂದ ಔಷಧ ತರಿಸಿಕೊಂಡಳು. ಅಲ್ಲದೆ ಗಂಡನ ತಂಗಿ ಲಕ್ಕಮ್ಮನೊಡನೆ ಜಗಳವನ್ನೂ ಹೆಚ್ಚಿಸಿದಳು.
“ಹಂದೀ ಒಡ್ಡೀಗೆ ಹಾಕ್ತಾರಂತಲ್ಲೇ ನಿನ್ನಾ” ಎಂದು ಜಟ್ಟಮ್ಮ ಹೀನೈಸಿದರೆ, ಲಕ್ಕಮ್ಮ “ಹಂದೀ ಒಡ್ಡಿನಿಂದಲೇ ಬರ್ತದಂತಲ್ಲಾ ನಿನ್ನ ತವತಿ!” ಎಂದು ಅತ್ತಿಗೆಯ ಕುತಿಗೆ ಹಿಸುಕುವಂತೆ ಮಾತಾಡುತ್ತಿದ್ದಳು.
ಅವರಿಬ್ಬರ ಮಾತಿನ ತೋರುಬೆರಳೂ ಹಳೆಮನೆಯಲ್ಲಿ ಸೋಗೆ ಪಾಲಿನವರು ಸಾಕುತ್ತಿದ್ದ ಹಂದಿಗಳನ್ನು ಕುರಿತದ್ದಾಗಿತ್ತು. ಸುಬ್ಬಣ್ಣ ಹೆಗ್ಗಡೆಯವರ ಮನೆಯ ಮುಂದೆಯೇ ಹಂದಿಗಳಿಗೆ ಒಡ್ಡಿಗಳನ್ನು ಮಾಡಿದ್ದರಿಂದ ಎಲ್ಲಿ ನೋಡಿದರೂ ಗಲೀಜಾಗಿ ಗಬ್ಬುವಾಸನೆ ಸದಾ ಹಬ್ಬಿರುತ್ತಿತ್ತು. ಜನಿವಾರದವರಂತೂ ಅವರಲ್ಲಿಗೆ ಸಾಲಕ್ಕಾಗಿಯಾಗಲಿ ಇತರ ಕಾರ್ಯಗಳಿಗಾಗಲಿ ಹೋದಾಗ ಮೂಗು ಮುಚ್ಚಿಕೊಂಡು ತುದಿಗಾಲಲ್ಲಿ ನಡೆಯುತ್ತಾ ಉಗುಳುತ್ತಾ ಜಗಲಿಗೆ ಓಡುತ್ತಿದ್ದರು.
ಸುಬ್ಬಣ್ಣ ಹೆಗ್ಗಡೆಯವರಿಗೆ ಮಾತ್ರ ಸ್ವಲ್ಪವೂ ಅಸಹ್ಯವಾಗುತ್ತಿರಲಿಲ್ಲ. ಅವರಿಗೆ ಕೋಳಿ ಒಡ್ಡಿ, ಕುರಿಒಡ್ಡಿ, ಹಂದಿಒಡ್ಡಿಗಳೆಂದರೆ ಗದ್ದೆ ತೋಟಗಳಷ್ಟೆ ಮುಖ್ಯವಾಗಿದ್ದುವು; ಅಮೂಲ್ಯವಾಗಿದ್ದುವು. ಸಹಸ್ರಾರು ರೂಪಾಯಿಗಳಿಗೆ ಸ್ವಾಮಿಯಾಗಿದ್ದರೂ ಕಂಬಳಿ ಹೊದೆದುಕೊಂಡು, ಕೊಳಕಲು ಪಂಚೆಯೊಂದನ್ನು ಮೊಳಕಾಲಿನವರೆಗೆ ಸುತ್ತಿಕೊಂಡು, ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುವುದಕ್ಕಿಂತಲೂ ಸಾವಿರ ಪಾಲು ಹೆಚ್ಚಿನ ಮಮತೆಯಿಂದಲೂ ಕುತೂಹಲದಿಂದಲೂ ಆ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾ ಸೇವೆ ಮಾಡುತ್ತಿದ್ದರು. ಅವುಗಳಿರುವ ಒಡ್ಡಿಗಳು ಕಣ್ಣಿನಿಂದ ಮರೆಯಾಗಿದ್ದರೆ ಮನಸ್ಸಿನಿಂದಲೂ ಎಲ್ಲಿಯಾದರೂ ಮರೆಯಾಗಿ ಬಿಟ್ಟಾವು ಎಂಬ ಅಳುಕಿನಿಂದಲೇ ಜಗಲಿಯ ಎದುರುಗಡೆ, ನೇರವಾಗಿ ಕಾಣುವಂತೆ, ಒಡ್ಡಿಗಳನ್ನೆಲ್ಲಾ ಕಟ್ಟಿಸಿದ್ದರು.
ಜನರು ತಮ್ಮನ್ನು ನೋಡಿ ಒಳಗೊಳಗೆ ಇಸ್ಸಿ ಎಂದುಕೊಂಡರೆ, ಮುದುಕರಾಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಅದು ಲಕ್ಷಕ್ಕೇ ಬರುತ್ತಿರಲಿಲ್ಲ. ಬಂದರೂ ಅಂಥವರನ್ನು ಕಂಡು ಕನಿಕರಪಡುತ್ತಿದ್ದರೇ ಹೊರತು ತಾವೇ ನಾಚಿಕೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಸೂಕ್ಷ್ಮ ರುಚಿಗಳಾಗಿರಲಿಲ್ಲ ಅವರು.
******


ಮಲೆಗಳಲ್ಲಿ ಮದುಮಗಳು-4

              ಗುತ್ತಿ ತಾನೂ ಉಂಡು, ತನ್ನ ನಾಯಿಗೂ ಸಾಕಷ್ಟನ್ನು ಹಾಕಿ, ಮುಂಚೆಕಡೆಯ ಮುರುವಿನ ಒಲೆಯ ಬಳಿಗೆ ಬರುವಷ್ಟರಲ್ಲಿಯೆ ಸೀತೂರ ತಿಮ್ಮನಾಯ್ಕನು ಜಗಲಿಯ ಮೇಲೆ ಮಲಗಿಬಿಟ್ಟಿದ್ದನು. ಸೇಸನಾಯ್ಕನೂ ಒಳಗೆ ಕಾಡಿಯೊಡನೆ ಗೊಣಗೊಣನೆ ಮಾತಾಡುತ್ತಿದ್ದುದು ಕೇಳಿಬರುತ್ತಿತ್ತು. ಬಾಯಿಗೆ ಹಾಕಿಕೊಂಡಾದ ಮೇಲೆ, ಆರಲು ಹರಡಿದ್ದ ತನ್ನ ಕಂಬಳಿಯನ್ನೆ ಸುತ್ತಿಕೊಂಡು. ಒಲೆಗೆ ತುಸು ದೂರದಲ್ಲಿ ಬೆಂಕಿಯ ಶಾಖ ಅಪ್ಯಾಯಮಾನವಾಗುವಷ್ಟು ಹತ್ತಿರದಲ್ಲಿ ಮಲಗಿಕೊಂಡನು.

ಹಗಲೆಲ್ಲ ಗದ್ದೆಯುತ್ತು ಸಂಜೆಯಲ್ಲಿ ಬೆಟ್ಟ ದಾಟಿ ಬಂದು ದಣಿದಿದ್ದ ಅವನಿಗೆ ಚೆನ್ನಾಗಿ ನಿದ್ದೆ ಬರಬೇಕಾಗಿತ್ತು. ನಿದ್ದೆ ಬರುತ್ತಲೂ ಇತ್ತು. ಆದರೆ ಜಗಲಿಯ ಮೇಲೆ ಮಲಗಿದ್ದ ತಿಮ್ಮನಾಯ್ಕ ಮಾರಾಯನು ಕೊರೆಯಲು ಪ್ರಾರಂಭಿಸಿದನು. ಅವನು ಗೊರಕೆ ಹೊಡೆದರೆ ಇವನಿಗೆ ನಿದ್ದೆ ಮಾಡುವುದಕ್ಕೇನಾಗುತ್ತಿತ್ತು ಎನ್ನುವಂತಿರಲಿಲ್ಲ ಆ ಗೊರಕೆ! ಇತರ ಎಲ್ಲದರಲ್ಲಿಯೂ ಇರುವಂತೆ ಗೊರಕೆಯಲ್ಲಿಯೂ ಸಾತ್ವಿಕ ರಾಜಸ ತಾಮಸಗಳೆಂದು ಮೂರು ವಿಧವಿವೆಯಲ್ಲವೆ? ತಿಮ್ಮನಾಯ್ಕನ ಗೊರಕೆ ರಭಸದಲ್ಲಿ ರಾಜಸವಾಗಿಯೂ ರಸದಲ್ಲಿ ತಾಮಸವಾಗಿಯೂ ಇದ್ದು ಭೀಕರವಾಗಿತ್ತು. ಶ್ವಾಸೋಚ್ಛ್ವಾಸದ ಗರಗಸದಿಂದ ನಿಃಶಬ್ದತೆಯ ಗೋನಾಳಿಯನ್ನು ಘರಿಲ್ ಘರಿಲ್ ಗರಾಗರಾ ಗೊರ್ ಗೊರ್ ಎಂದು ಮೊದಲಾಗಿ ನಾನಾ ನಾದವಿನ್ಯಾಸಗಳಿಂದ ಕೊಯ್ಯುತ್ತಿತ್ತು. ಬಡ ಗುತ್ತಿಯ ನಿದ್ದೆಯ ಕುತ್ತಿಗೆಯನ್ನೇನೊ ಕೊಯ್ದೇ ಬಿಟ್ಟಿತ್ತು! ಅವನು ಎಷ್ಟು ಪ್ರಯತ್ನಪಟ್ಟರೂ ನಿದ್ದೆ ಮಾಡಲಾಗಲಿಲ್ಲ. ನಿದ್ದೆ ಹಾಳಾದದ್ದಲ್ಲದೆ ಯಾವುದೋ ಒಂದು ತೆರನಾದ ಅರ್ಥವಿಲ್ಲದ ಹೆದರಿಕೆಯೂ ಉಂಟಾಯಿತು.
ಎದ್ದು ಕೂತು “ಅಯ್ಯಾ! ಅಯ್ಯಾ! ಅಯ್ಯಾ!” ಎಂದು ಕರೆದನು. ವ್ಯರ್ಥ! ತಿಮ್ಮನಾಯ್ಕನು ಎಷ್ಟು ತಿಂದು ಕುಡಿದಿದ್ದನೆಂದರೆ, ಕಡುಬು, ತುಂಡು, ಕಳ್ಳು ಹೆಂಡ ತುಂಬಿದ ಸರಗೋಲಾಗಿ ಹೋಗಿದ್ದನು!
ಇದ್ದಕ್ಕಿದ್ದ ಹಾಗೆ ತಿಮ್ಮನಾಯ್ಕನು ಭಯಂಕರವಾಗಿ ಹೂಂಕಾರ ಮಾಡತೊಡಗಿದನು. ಗುತ್ತಿ ದಿಗಿಲುಬಿದ್ದನು. ನಾಯಿಗಳೆಲ್ಲ ಬೆಚ್ಚಿಬಿದ್ದು ಕೂಗಾಡಿದುವು. ದೀಪ ಹಿಡಿದು ಹೊರಗೆ ಓದಿ ಬಂದ ಸೇಸನಾಯ್ಕನು ಮಾತ್ರ ನಿರುದ್ವಿಗ್ನವಾಗಿ, ಹೆದರುಗಣ್ಣಾಗಿದ್ದ ಗುತ್ತಿಗೆ “ಏನೂ ಇಲ್ಲ ಕಣ್ರೋ! ಅವರಿಗೆ ಆಗಾಗ್ಗೆ ಹೀಂಗೆ ಆಗ್ತದೆ! ಮಲರೋಗ!” ಎಂದು ನೀರೆರಚುವುದೇ ಮೊದಲಾದ ಕಾರ್ಯಗಳಲ್ಲಿ ಆಸಕ್ತನಾದನು.
ಸುಮಾರು ಕಾಲು ಗಂಟೆ ಹೊಡೆಯಿತು. ತಿಮ್ಮನಾಯ್ಕನು ಸರಿಯಾದ ಸ್ಥಿತಿಗೆ ಬರಬೇಕಾದರೆ! ಹೊಟ್ಟೆಯೊಳಗಿದ್ದ ತುಂಡು ಕಡುಬು ಹೆಂಡ ಕಳ್ಳು ಎಲ್ಲ ಒಟ್ಟಿಗೆ  ವಾಂತಿಯಾಯಿತು! ಆ ದುರ್ವಾಸನೆ ಹೊಲೆಯನ ಮೂಗಿಗೂ ಹೇಸಿಗೆ ಹುಟ್ಟಿಸುವಂತಿತ್ತು. ಅಂತೂ ಆಮೇಲೆ ತಿಮ್ಮನಾಯ್ಕನು ಸದ್ದು ಮಾಡಲಿಲ್ಲ. ಗುತ್ತಿ ಚೆನ್ನಾಗಿ ನಿದ್ದೆ ಮಾಡಿದನು. ಸುಮಾರು ನಡು ರಾತ್ರಿಯ ಹೊತ್ತಿಗೆ ಹತ್ತು ಮೀನು ಕಡಿಯಲು ಹೋಗಿದ್ದ ರಂಗ, ಪುಟ್ಟ, ಹಮೀರ ಮೊದಲಾದವರು ಹಿಂತಿರುಗಿ ಬಂದಾಗಲೂ ಅವನಿಗೆ ಎಚ್ಚರವಾಗಲಿಲ್ಲ.
ಸೇಸನಾಯ್ಕನ ಮಗ ಹಮೀರನಾಯ್ಕನು ಗುತ್ತಿ ಮಲಗಿದ್ದನ್ನು ಕಂಡು “ಮಲಗಿದ್ರೆ ಮಲಗ್ಬೇಕು ಹೀಂಗೆ; ಒನಕೆ ತುಂಡು ಬಿದ್ದ್ಹಾಂಗೆ!” ಎಂದನು.
ಎರಡನೆಯ ಸಲ ಕೋಳಿ ಕೂಗುವ ಹೊತ್ತಿಗೆ ಗುತ್ತಿಗೆ ಎಚ್ಚರವಾಯಿತು. ಸ್ವಲ್ಪ ಚಳಿಯೂ ಆಯಿತು. ಕಂಬಳಿಯನ್ನು ಮತ್ತಷ್ಟು ಬಲವಾಗಿ ಮೈಗೆ ಸುತ್ತಿ ಹೊದೆದು, ಮುದುರಿ, ಕಣ್ಣು ಬಿಟ್ಟುಕೊಂಡೇ ಮಲಗಿದನು. ತುಸು ಹೊತ್ತಿನಲ್ಲಿ ಮನೆಯ ಮುಂದೆ ಬೇಲಿಯ ಸಾಲಿನಲ್ಲಿ ಹಂಡಹಕ್ಕಿ ಸಿಳ್ಳು ಹಾಕತೊಡಗಿತು. ಗುತ್ತಿ ಮೇಲೆದ್ದು ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಅಂಗಳಕ್ಕಿಳಿದನು. ಬೆಳಿಗ್ಗೆ ಇನ್ನೂ ನಸುಕು ನಸುಕಾಗಿತ್ತು. ಮನೆಯಲ್ಲಿ ಯಾರೂ ಎದ್ದಿದ್ದಂತೆ ಕಾಣಲಿಲ್ಲ. ತಾನು ಅವೊತ್ತು ಮಾಡಲೇಬೇಕಾಗಿದ್ದ ಕೆಲಸಗಳನ್ನೆಲ್ಲಾ ನೆನೆದು ಗುತ್ತಿ ಬೇಗ ಬೇಗನೆ ಮುಂದುವರಿದನು.
ತಡಬೆಯನ್ನು ದಾಟಿ ಮೇಗರವಳ್ಳಿಗೆ ಹೋಗುವ ಕೊರಕಲು ಗಾಡಿದಾರಿಗೆ ಬಂದಾಗ ಹುಲಿಯನ ನೆನಪಾಯಿತು. ಮೆಲ್ಲಗೆ ಸಿಳ್ಳು ಹಾಕಿದನು. ನಾಯಿಗಳೆಲ್ಲವೂ ಹಿಂಡಾಗಿ ನುಗ್ಗಿಬಂದವು. ಹೊಲೆಯನ ನಾಯಿ ಹಳೇಪೈಕದವರ ನಾಯಿಗಳೊಡನೆ ಆಗಲೆ ಸ್ನೇಹ ಸಂಬಂಧಗಳನ್ನು ಚೆನ್ನಾಗಿ ಸಂಪಾದಿಸಿತ್ತು.
“ಬಾ ಹುಲಿಯ!” ಎಂದು ಒಂದು ಸಾರಿ ಕರೆದು ಗುತ್ತಿ ಮುಂದೆ ಮುಂದೆ ನಡೆಗೊಂಡನು. ಸುಮಾರು ಅರ್ಧ ಫರ್ಲಾಂಗು ಹೋಗಿ ನೋಡುತ್ತಾನೆ: ಹುಲಿಯನ ಸವಾರಿ ಪತ್ತೆ ಇಲ್ಲ!
ಮತ್ತೆ ಗಟ್ಟಿಯಾಗಿ ಸಿಳ್ಳುಹಾಕಿ ಕರೆದನು. ಹುಲಿಯ ದೂರದಿಂದ ಓಡಿಬಂತು. ಬೇರೆ ಯಾವ ನಾಯಿಯೂ ಜೊತೆ ಬರಲಿಲ್ಲ. ಹುಲಿಯ ಮರಳಿ ಮರಳಿ ಹಿಂದಕ್ಕೆ ತಿರುಗಿ ನೋಡುತ್ತಿತ್ತು.
ಅದನ್ನು ಕಂಡು ಗುತ್ತಿ “ಏ ನಿನ್ನ ಹುಲಿ ಹಿಡಿಯಾ! ಹೆಡಬೇಗ್ಹುಟ್ಟಿದ್ದಕ್ಕೆ ಹೋದಲ್ಲಿ ತನಕಾ ಬಾಲಾ ಮೂಸಾದೆ!” ಎಂದು “ಥ್ಫೂ! ನಿನ್ನ!” ಎಂದು ಉಗುಳಿದನು.
ಹುಲಿಯನಿಗೆ ಎಲ್ಲಿಯಾದರೂ ತನ್ನ ಯಜಮಾನನ ಮನಸ್ಸು ಗೊತ್ತಾಗಿದ್ದರೆ ಎಂತಹ ಪ್ರತ್ಯುತ್ತರ ಕೊಡಬಹುದಾಗಿತ್ತು! ಯಾಕೆಂದರೆ ಗುತ್ತಿ ಯಾವ ಉದ್ದೇಶ ಸಾಧನೆಗಾಗಿ ಸಿಂಬಾವಿಯಿಂದ ಹೊರಟ್ಟಿದ್ದನೊ ಆ ಉದ್ದೇಶವೂ ಬೇಟವೆ ಆಗಿತ್ತು! ಬೆಟ್ಟಳ್ಳಿ ಕಲ್ಲಯ್ಯ ಗೌಡರ ಜೀತದಾಳು ಹೊಲೆಯರ ದೊಡ್ಡ ಬೀರನ ಮಗಳು ತಿಮ್ಮಿಯನ್ನು ಹೇಗಾದರೂ ಮಾಡಿ ಹಾರಿಸಿಕೊಂಡು ಬರುವುದಕ್ಕಾಗಿ ಹೊರಟಿದ್ದ ಗುತ್ತಿ ಬೇಗ ಬೇಗ ನಡೆಯತೊಡಗಿದನು. ಮುಂದಿನ ಸಾಹಸದ ಆಲೋಚನೆಯಲ್ಲಿ ನಟ್ಟಮನಸ್ಸಾಗಿ ಸಾಗಿದ್ದನು ಅವನು ಹುಲಿಯ ಹಿಂತಿರುಗಿ ಪರಾರಿಯಾದುದನ್ನು ಗಮನಿಸಲಿಲ್ಲ.
ಹೋದ ರಾತ್ರಿ ಹೊಯ್ದ ಮಳೆಯಿಂದ ತಣ್ಣಗಾಗಿದ್ದ ಕಾಡಿನ ತಂಪು ಗಾಳಿಯಲ್ಲಿ ಗುತ್ತಿ ಚಟುವಟಿಕೆಯಾಗಿ ಸಾಗಿದನು. ಹಾದಿಯಲ್ಲಿ ಒಂದು ಕಡೆ ಹಂದಿಯ ಹಿಂಡು ಉತ್ತಿದ್ದುದನ್ನು ಕಂಡಾಗಲೆ ಅವನಿಗೆ ಹುಲಿಯನ ನೆನಪಾಗಿ ಕೂಗಿದನು. ನಿಃಶಬ್ದವಾದ ಕಾಡಿನಲ್ಲಿ ಆ ಕೂಗು ಮೊಳಗಿತು. ನಾಯಿ ಎಲ್ಲಿಯೂ ಕಾಣಿಸಲಿಲ್ಲ.
ಲಕ್ಕುಂದದಿಂದ ಸುಮಾರು ಎರಡು ಮೈಲಿ ದೂರದಲ್ಲಿದ್ದ  ಮೇಗರವಳ್ಳಿಗೆ ಅವನು ಮುಟ್ಟಿದಾಗ ಆಗ ತಾನೆ ಬೆಳ್ಳಗೆ ಬೆಳಗಾಗಿತ್ತು. ಮರಗಳ ನೆತ್ತಿಯಲ್ಲಿ ಎಳಬಿಸಿಲು ಆಡತೊಡಗಿತ್ತು.
ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ಹೆದ್ದಾರಿಯಲ್ಲಿದ್ದ ಮೇಗರವಳ್ಳಿ ಗುತ್ತಿಯಂಥಾ ಹಳ್ಳಿಗರಿಗೆ ಪೇಟೆಯಾಗಿದ್ದರೂ ನಿಜವಾಗಿಯೂ ಬರಿಯ ಕೊಂಪೆಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿದ್ದ ನಾಲ್ಕಾರು ಹುಲ್ಲಿನ ಮನೆಗಳೂ ಎರಡು ಮೂರು ಹೆಂಚಿನ ಮನೆಗಳೂ ಆ ಪೇಟೆಗೆ ಪರಮಾವಧಿ. ಜನಸಂಖ್ಯೆ ಈರೈದುಮೂರೈದುಗಳಲ್ಲಿಯೆ ಮುಗಿಯುತ್ತಿತ್ತು. ಎತ್ತಿನ ಗಾಡಿಯೂ ದುರ್ಲಭವಾಗಿದ್ದ ಆಗಿನ ಸ್ಥಿತಿಯಲ್ಲಿ ಎಂಟೊಂಬತ್ತು ಮೈಲಿ ದೂರದಲ್ಲಿದ್ದ ತೀರ್ಥಹಳ್ಳಿಯನ್ನು ಖ್ಯಾತಿಯಿಂದ ಮಾತ್ರ ಅರಿತಿದ್ದ ಸುತ್ತಮುತ್ತಣ ಹಳ್ಳಿಗರಿಗೆ ಮೇಗರವಳ್ಳಿಯೆ ಪಟ್ಟಣವಾಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ.
ಆಗಿನ ಮೇಗರವಳ್ಳಿಯಲ್ಲಿ ಆಸ್ಪತ್ರೆ, ಸ್ಕೂಲು, ಷಾಪು, ಹೋಟಲು, ಮಿಲ್ಲು ಯಾವುವೂ ಇರಲಿಲ್ಲ. ಆದರೆ ಮಲೆಯಾಳಿಯ ವೈದ್ಯರಾದ ಕಣ್ಣಾ ಪಂಡಿತರಿದ್ದರು. ಮಾಪಿಳ್ಳೆಯವರಾಗಿದ್ದ ಕರಿಮೀನು ಸಾಬರು ಅಂಗಡಿಯಿಟ್ಟಿದ್ದರು. ಒಂದು ಕಳ್ಳಿನ ಅಂಗಡಿಯೂ ಇದ್ದ ಆಟ ಊಟ ಕೂಟಗಳಿಗೆ ಒಂದು ತೆರನಾದ ಕ್ಲಬ್ಬೂ ಆಗಿತ್ತು. ಸೆಟ್ಟಿಗಿತ್ತಿ ಅಂತಕ್ಕನ ಮನೆ ತಕ್ಕಮಟ್ಟಿಗೆ ಹೋಟಲೂ ಆಗಿತ್ತು. ತೀರ್ಥಹಳ್ಳಿ ಆಗುಂಬೆಯ ಮುಖಾಂತರವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುತ್ತಿದ್ದ ವ್ಯಾಪಾರಿಗಳೂ, ಸೇರೆಗಾರರೂ, ಕೂಲಿಯಾಳುಗಳೂ, ಗಂಧದ ಮರಗಳನ್ನು ಸಾಗಿಸುತ್ತಿದ್ದ ಗುಪ್ತ ದಳ್ಳಾಲಿಗಳೂ, ಮುಂತಾದವರೂ ಆಗಾಗ ತಂಗುತ್ತಿದ್ದುದರಿಂದ ಆ ಸ್ಥಳಕ್ಕೊಂದು ಪ್ರಮುಖತೆ ಬಂದಿತ್ತು.
ಗುತ್ತಿ ಅಲ್ಲಿಗೆ ಬಂದಾಗ ಸ್ವಲ್ಪ ಪ್ರತ್ಯೇಕವಾಗಿದ್ದ ಅಂತಕ್ಕ ಸೆಟ್ತಿಯ ಹುಲ್ಲುಮನೆಯಿಂದ ಅಡುಗೆಹೊಗೆ ಏಳುತ್ತಿತ್ತು. ಅದು ವಿನಾ ಮೇಗರವಳ್ಳಿಯಲ್ಲಿ ಮತ್ತಾವ ಎಚ್ಚರದ ಸೂಚನೆಯೂ ಕಂಡುಬರಲಿಲ್ಲ. ಆದರೂ ನೇರವಾಗಿ ಕಣ್ಣಾ ಪಂಡಿತರ ಮನೆಯ ಮುಂಭಾಗಕ್ಕೆ ಹೋಗಿ, ಸ್ವಲ್ಪ ಹೊತ್ತು ನಿಂತು ಆಲೋಚನೆ ಮಾಡಿ ಕರೆದನು:
“ಕಣ್ಣಪ್ಪಯ್ಯಾ! ಕಣ್ಣಪ್ಪಯ್ಯಾ!”
ಯಾವ ಪ್ರತ್ಯತ್ತರವೂ ಬರಲಿಲ್ಲ, ಮತ್ತೆ ಕೂಗಿ ಕರೆದನು.
ಬಾಗಿಲು ತೆರೆಯದಿದ್ದರೂ ಒಳಗಡೆಯಿಂದ ಒಂದು ದನಿ ವಿದೇಶಿಯವಾದ ಕಾಕು ಸ್ವರದಿಂದ “ಅದು ಯಾರು? ಹೊತ್ತಾರೆ ಬಂದು ಕೂಗುವವರು?” ಎಂದಿತು.
“ನಾನು ಕಣ್ರೋ, ಸಿಂಬಾವಿ ಗುತ್ತಿ. ಹೆಗ್ಗಡೇರ ಕಡೆ ಆಳು”
“ಸ್ವಲ್ಪ ಕೂತುಕೊಳ್ಳೊ ಅಲ್ಲಿ; ಬರುತ್ತೇನೆ.”
ಕೂತುಕೊಳ್ಳುವುದಕ್ಕೆ ಯಾವ ಅನುಕೂಲವೂ ಇರಲಿಲ್ಲ. ಗುತ್ತಿ ತನ್ನ ಕಂಬಳಿಯನ್ನು ಹಾಸಿ, ಕೂತು, ಎಲೆಯಡಿಕೆ ಹಾಕಿಕೊಳ್ಳಲಾರಂಭಿಸಿದನು.
ಗುತ್ತಿ ಕೂತ ಜಾಗಕ್ಕೆ ಎದುರಾಗಿ, ರಸ್ತೆಯ ಆಚೆಕಡೆ ಇದ್ದ ಮನೆ ಊರು ಹೆಂಚಿನದಾಗಿತ್ತು. ವರ್ಷ ವರ್ಷವೂ ಹಳು ಹುಟ್ಟಿ ಬೆಳೆದು ಒಣಗಿ ಹೊದಿಸಿದ್ದ ಹೆಂಚುಗಳಲ್ಲಿ ಅರೆಪಾಲು ಮುಚ್ಚಿಹೋಗಿದ್ದವು. ಮನೆಯ ಮುಂಭಾಗದಲ್ಲಿ ಹಲಗೆಗಳನ್ನು ಜೋಡಿಸಿ ಮಳಿಗೆ ಮಾಡಿದ್ದರು.
ಗುತ್ತಿ ನೋಡುತ್ತಿದ್ದ ಹಾಗೆಯೇ ಮಳಿಗೆಯ ಒಣಗಣಿಂದ ಯಾರೋ ಹಲಗೆಯ ಬಾಗಿಲೊಂದನ್ನು ಎತ್ತಿ ತೆರೆಯಲು ಪ್ರಯತ್ನಿಸುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಹಾಗೆ ಎತ್ತಿ ತೆರೆಯುವುದಕ್ಕಾಗಿಯೆ ಮಾಡಿದ್ದ ಆ ಹಲಗೆಯ ಬಾಗಿಲಿನ ನಡುವಣ ಅರ್ಧಚಂದ್ರಾಕೃತಿಯ ರಂಧ್ರದಲ್ಲಿ ಮಡಿಸಿ ಹಿಡಿದಿದ್ದ ನಾಲ್ಕು  ಕೈಬೆರಳುಗಳನ್ನು ನೋಡಿದೊಡನೆಯೆ ಗುತ್ತಿ ಸ್ವಲ್ಪ ಅಪ್ರತಿಭನಾದನು.
“ಕರಿಮೀನು ಸಾಬರ ಕೈ ಬೆಳ್ಳು! ಮತ್ತೇ? ಆ ಊರಾಗೆ ಅಷ್ಟು ಕರ್ರಗೆ ಯಾರಿದ್ದಾರೆ? ಸೈ, ಇನ್ನು ಕಂಡ ಕೂಡಲೆ ಹಳೆ ಸಾಲಕ್ಕೆ ತಗಾದೆ ಮಾಡುತ್ತಾರೆ! ಬೆಳಿಗ್ಗೆ ಎದ್ದು ಸನಿ ಮುಖಾ ನೋಡ್ತೀನಲ್ಲಾ!” ಎಂದು ಮೋರೆಯನ್ನು ಬೇರೆಯ ಕಡೆಗೆ ತಿರುಗಿಸಿದರೂ ಗುತ್ತಿಯ ಕಣ್ಣು ಆ ಕೈಬೆರಳಿನ ಮೇಲೆಯೇ ನೆಟ್ಟಿತ್ತು.
ಬಾಗಿಲು ತೆರೆಯಿತು. ಕರೀಂ ಸಾಬಿಯ ದೇಹ ತೂರಿ ಹೊರಗೆ ಬಂದಿತು. ಸೊಂಟದ ಕೆಳಗೆ ಕಣ್ಣು ಕಣ್ಣಿನ ಕೆಂಪು ದುಪ್ಪಟಿಯನ್ನು ಸುತ್ತಿದ್ದು, ಮೈ ಬತ್ತಲೆಯಾಗಿದ್ದ ಅವನ ಎಡಗೈಯಲ್ಲಿ ನೀರು ತುಂಬಿದ್ದ ಒಂದು ಕರಿಯ ಮಣ್ಣಿನ ಪಾತ್ರೆಯಿತ್ತು. ಬಲಗೈಯಲ್ಲಿದ್ದ ಇದ್ದಲಿನ ಚೂರನ್ನು ಹಲ್ಲಿಗೆ ತಿಕ್ಕುತ್ತಾ ಅಂಗಡಿಯ ಮುಂದೆಯೇ ಮೆಟ್ಟಲ ಮೇಲೆ ಕೂತುಕೊಂಡು ಮುಖ ತೊಳೆಯಲಾರಂಭಿಸಿದನು. ಮಸಿಯಾದ ಕಲ್ಲು ಗಡಿಗೆಯ ಬೆನ್ನಿನಂತೆ ಕರ್ರಗೆ ನುಣ್ಣಗಿದ್ದ ಮುಂಡೆಯನ್ನೂ ಕರಿಬಲೆಯಂತೆ ನೇತಾಡುತ್ತಿದ್ದ ಹೊದೆ ಗಡ್ಡವನ್ನೂ ಒಟ್ಟಿಗೆ ತೊಳೆದು, ಉಟ್ಟಿದ್ದ ದುಪ್ಪಟಿಯಿಂದಲೆ ಎರಡನ್ನೂ ಉಜ್ಜಿಕೊಂಡ ಮೇಲೆ, ಗುತ್ತಿಯನ್ನು ನೋಡುತ್ತಾ “ಏಯ್, ಕಂಬಳೀ, ಇಲ್ಲಿ ಬಾ!” ಎಂದು ಕೂಗಿದನು.
ಕರೀಂ ಸಾಬಿ ಗಟ್ಟದ ಮೇಲಕ್ಕೆ ಬಂದು ಬಹಳ ವರ್ಷಗಳಾಗಿತ್ತು. ಮೊದಲು ಬಂದಾಗ ಅವನು ಕರಿಮೀನು ಹೊತ್ತುಕೊಂಡು ಮನೆ ಮನೆಗೂ ತಿರುಗಿ ಅಕ್ಕಿಗೋ ಬತ್ತಕ್ಕೋ ಅಡಕೆಯೋ ವಿನಿಮಯ ವ್ಯಾಪಾರ ಮಾಡುತ್ತಿದ್ದನಾದ್ದರಿಂದಲೂ, ಹಳ್ಳಿಗರ ಕಿವಿಗೆ ಕರೀಂ ಮತ್ತು ಕರಿಮೀನು ಎಂಬ ಪದಗಳು ಸಮಪದಗಳಾಗಿ ತೋರಿದುದರಿಂದಲೂ ಅಂಕಿತನಾಮವನ್ನು ಅನ್ವರ್ಥನಾಮವನ್ನಾಗಿ ಮಾಡಿದ್ದರು. ತರುವಾಯ ಕರೀಂ ಸಾಬಿ ಇತರ ಪದಾರ್ಥಗಳನ್ನು ಮಾರತೊಡಗಿದ್ದರೂ ಅವನು ಮೊದಲಿನ ಹೆಸರು ಬದಲಾಯಿಸಲಿಲ್ಲ. ಹಾಗೆಯೇ ಮಂಗಳೂರು ನಶ್ಯಪುಡಿಯನ್ನು ತಯಾರುಮಾಡಿ ಮಾರುತ್ತಿದ್ದ ಅವನ ತಮ್ಮನಿಗೆ “ಪುಡೀ ಸಾಬಿ” ಎಂದು ಹೆಸರು ಬಂದಿತ್ತು. ಅಂತೂ ಕರಿಮೀನು ಸಾಬರು ಮತ್ತು ಪುಡಿ ಸಾಬರು ಎಂದರೆ ಗುತ್ತಿಯಂತಹ ಜನಗಳಿಗೆ ತಕ್ಕಮಟ್ಟಿಗೆ ಗೌರವ ವ್ಯಕ್ತಿಗಳೆ ಆಗಿದ್ದರು. ಅವನು ಚಿಲ್ಲರೆ ಸಾಲವನ್ನು ಕೊಡುತ್ತಿದ್ದುದರಿಂದ ಆ ಹಂಗಿಗೆ ಒಳಗಾದವರೆಲ್ಲರಿಗೂ ಅವರಲ್ಲಿ ದ್ವೇಷಮಿಶ್ರವಾದ ಭಯಭಕ್ತಿಯೂ ಇತ್ತು.
ಕರೀಂ ಸಾಬಿ ಕರೆದೊಡನೆಯೆ ಗುತ್ತಿ ನಿರುತ್ಸಾಹದಿಂದ ನಿಧಾನವಾಗಿ ಎದ್ದು ಬಂದನು. ಮುಖಸ್ತುತಿ ಮಾಡುವುದಕ್ಕಾಗಿಯೊ ಎಂಬಂತೆ ಸಾಬರಿಗೆ ಸೊಂಟ ಬಗ್ಗಿಸಿ ಸಲಾಂ ಮಾಡಿನು.
ಸಾಬಿ ಒಂದಿನಿತೂ ಪ್ರಸನ್ನನಾಗದೆ ಗಡ್ಡ ನೀವುತ್ತಾ “ಸಲಾಮು ಇರಲಿ! ನನ್ನ ಹಣ ಎಲ್ಲಿಯೋ?” ಎಂದು ವಿದೇಶೀಯ ವಿರಳಶೈಲಿಯಲ್ಲಿ ಪ್ರಾರಂಭಿಸಿದನು.
“ಇನ್ನೆಂಟು ದಿನಾ ತಡೀರಿ. ನನ್ನ ಮದೇಗೆ ಹೆಗ್ಗಡೇರ ಕೈಲಿ ದುಡ್ಡು ಕೇಳೀನಿ. ಅದರಾಗೆ ನಿಮ್ಮ ಚಿಳ್ರೇನೂ ತೀರ್ಸಿಬಿಡ್ತೀನಿ” ಎಂದು ಕುಳ್ಳಗುತ್ತಿ ತನಗಿಂತಲೂ ಬಹುಪಾಲು ಕರ್ರಗಿದ್ದ ಉದ್ದನೆಯ ಮಾಪಿಳ್ಳೆಯನ್ನು ನೋಡುತ್ತಾ ಹಲ್ಲು ಬಿಟ್ಟು ಸಪ್ಪೆಯಾಗಿ ನಕ್ಕನು.
“ಎಷ್ಟು ದಿನಾ ನೀನು ನನ್ನ ಸತಾಯಿಸುವುದು? ನಿಮ್ಮದು ಹೆಗ್ಗಡೇರು ಕೊಟ್ಟರೆ ಕೊಡಲಿ. ಬಿಟ್ಟರೆ ಬಿಡಲಿ, ಒಟ್ಟಾರೆ ನಮಗೆ ನಮ್ಮ ದುಡ್ಡು ಕಾಸು ಬಂದರೆ ಸೈ! ಆಗಲಿ ನೀನು ಹೇಳಿದ ಹಾಗೆ ಇನ್ನು ಎಂಟು ದಿನ ನೋಡುವಾ; ದುಡ್ಡು ಬಡ್ಡಿ ಬರದೇ ಹೋದರೆ ನಾನು ಹೆಗ್ಗಡೆಯರ ಬಳಿಗೆ ಬರುತ್ತೇ! ನನಗೂ ಕೆಲಸವುಂಟು ಅವರಲ್ಲಿಗೆ! ಗೊತ್ತಾಯಿತೋ?”
ಅಷ್ಟು ಹೊತ್ತಿಗೆ ಕಣ್ಣಾಪಂಡಿತರು ಎದುರು ಮನೆಯಿಂದ ಬಾಗಿಲು ತೆರೆದು ಹೊರಬಂದುದನ್ನು ನೋಡಿ ಗುತ್ತಿ ಸಾಬರಿಗೆ ಸಲಾಂ ಮಾಡಿ, ಅಲ್ಲಿಂದ ಅವಸರ ಅವಸರವಾಗಿ ಜಾರಿದನು.
ಕರೀಂ ಸಾಬಿ “ಲೌಡೀ ಮಗನಿಗೆ ಏನು ದೌಲತ್ತು? ಅವನು ಎಷ್ಟು ರೂಪಾಯಿ ಕೊಡಬೇಕಾಗಿದೆ; ಅದನ್ನು ಚಿಲ್ಲರೆ ಅನ್ನುತ್ತಾನೆ! ಹೆಗ್ಗಡೇರ ಜವಾನ ಅಂತ ಮುಲಾಜು ನೋಡದೆ ಮಾತಾಡುತ್ತಾನಲ್ಲಾ!” ಎಂದುಕೊಂಡು ಕ್ಯಾಕರಿಸಿ ಉಗಿದು ಒಳಗೆ ಹೋದನು.
ಬೆಳ್ಳಗಿದ್ದ ತೆಳು ಪಂಚೆಯನ್ನುಟ್ಟು, ಅದೇ ತೆರನಾದ ಬಟ್ಟೆಯ ಒಂದು ಗೀರು ಗೀರಿನ ಷರ್ಟನ್ನೂ ಹಾಕಿ, ಮಲೆಯಾಳಿಗಳ ರೀತಿಯಲ್ಲಿ ತಲೆಯ ಹಿಂಭಾಗವನ್ನು ಬೋಳಿಸಿ, ಮುಂಭಾಗದಲ್ಲಿ ಉದ್ದವಾದ ಬೆಳೆದಿದ್ದ ಕೂದಲನ್ನೆಲ್ಲಾ ಸೇರಿಸಿ ಮುಡಿ ಕಟ್ಟಿ, ಸ್ವಲ್ಪ ಕರ್ರಗಿದ್ದರೂ, ಆಪಾದಮಸ್ತಕವಾಗಿ ಚೊಕ್ಕಟವಾಗಿದ್ದ ಕಣ್ಣಾಪಂಡಿತರು ಮನೆಮೊಗದಿಂದ ಬೆಳ್ಳಗೆ ಹಲ್ಲು ಬಿಟ್ಟು ಗುತ್ತಿಯನ್ನು ನೋಡಿ ಅರ್ಥಪೂರ್ವಕವಾಗಿ ನಕ್ಕರು. ಅವನು ಹತ್ತಿರಕ್ಕೆ ಬರಲು ಅಭ್ಯಾಸದಂತೆ ಹುಬ್ಬನ್ನು ನಿಮಿರಿ ಮೇಲಕ್ಕೆ ಹಾರಿಸುತ್ತಾ “ಏನೋ, ಕುತ್ತಿ, ಮತುವೆಮಕನ ಹಾಂಗೆ ಬಟ್ಟೆಯುಟ್ಟು ಹೊರಟಿದ್ದೀಯಲ್ಲವೊ!” ಎಂದರು.
ಅವರ ಹೆಣ್ಗೊರಳಿನ ಕೀಚುದನಿಯನ್ನೂ ವಿಲಕ್ಷಣವಾಗಿದ್ದ ದಕಾರ ತಕಾರಗಳ ಗಲಿಬಿಲಿಯ ಕನ್ನಡದ ಉಚ್ಛಾರಣೆಯನ್ನೂ ಹಿಂದೆ ಎಷ್ಟೋ ಸಲ ಕೇಳಿದ್ದರೂ ಗುತ್ತಿಗೆ ಸಲಸಲವೂ ಅದು ವಿನೋದಕರವಾಗಿಯೆ ತೋರುತ್ತಿತ್ತು. ಅದಕ್ಕಾಗಿಯೆ ನಗುತ್ತಿದ್ದರೂ ಪ್ರಶ್ನೆಗಾಗಿ ನಗುವನಂತೆ ನಟಿಸುತ್ತಾ “ತಮ್ಮಂಥಾ ಒಡೇರು ಕೊಟ್ಟರೆ ನಮ್ಮಂಥಾ ಬಡೋರಿಗೆ ಉಂಟು” ಎಂದನು.
“ಹೆಣ್ಣು ಕೇಳುತ್ತಿದ್ದೆಯಲ್ಲವೆ? ಬೆಟ್ಟಳ್ಳಿ ದೊಡ್ಡಬೀರನ ಮಗಳು ತಿಮ್ಮಿಯನ್ನು? ಒಪ್ಪಿಗೆಯಾಯಿತೋ?”
ಗುತ್ತಿ ಇದ್ದಕ್ಕಿದ್ದಹಾಗೆ ಗಂಭೀರವಾದನು. ಅವನ ಮುಖದಲ್ಲಿ ಏನೋ ಒಂದು ದೃಢನಿಶ್ಚಯದ ಕರಾಳ ಛಾಯೆ ಸುಳಿಯಿತು. ಹಣೆ ಸುಕ್ಕಾಯಿತು. ತುಟಿ ಸ್ವಲ್ಪ ಕೊಂಕಿತು. “ಅಯ್ಯಾ, ನೀವು ದೇವರಿಗೆ ಸಮ; ನನ್ನ ಮನಸ್ಸಿನಲ್ಲಿರೋದನ್ನ, ನಾ ಹೇಳಬೇಕಾರೆ ಮೊದಲೆ, ನೀವೆ ಕೇಳಿಬಿಟ್ಟಿರಿ. ನಿಜವಾಗಿಯೂ ನೀವು ದೇವರಂತಾ ಮನುಷ್ಯರು” ಎಂದನು.
“ಆ ಬಚ್ಚ ಏನೊ ತಂಟೆಮಾಡುತ್ತಿದ್ದ ಎಂದು ಹೇಳಿದ್ದೀಯಲ್ಲಾ ನೀನು, ತಿಮ್ಮಿಯನ್ನು ತಾನು ಮತುವೆಯಾಗಬೇಕೆಂದು”.
ಗುತ್ತಿಯ ಮುಖದಲ್ಲಿ ಒಂದಿನಿತು ರೋಷ ಸಂಚಾರವಾಯಿತು. “ಬಚ್ಚನ ಹೆಣಾ, ಅವನೇನು ಮಾಡ್ತಾನೆ? ನನ್ನ ಮಾವ ದೊಡ್ಡ ಬೀರನ ಮನಸ್ಸೇ ಅತ್ತಾ ಇತ್ತಾ ಆಗ್ತಾ ಇದೆ. ಬೆಟ್ಟಳ್ಳಿ ಗೌಡ್ರೂ ಅಡ್ಡಾ ಹಾಕ್ತಾ ಇದ್ದಾರೆ. ತಿಮ್ಮಿ ಮನಸ್ಸೇನೋ ಈ ಕಡೇನೆ ಇದೆ. ಆದ್ರೇನ್ಮಾಡೋದು-ಈವತ್ತು ನಮ್ಮ ಹೆಗ್ಗಡೇರು ಒಂದು ಕಾಗ್ದ-” ಎಂದವನು ನಾಲಿಗೆ ಕಚ್ಚಿಕೊಂಡು ಅದನ್ನು ಅರ್ಧಕ್ಕೆ ನಿಲ್ಲಿಸಿ, “ನಮ್ಮ ಹೆಗ್ಗಡೇರಿಗೆ ಏನೋ ಔಸ್ತಿ ಕೊಟ್ಟಿದ್ರಂತೆ ನೀವು. ಸೊಲ್ಪಾ ಗುಣಾ ಅದೆಯಂತೆ. ಮತ್ತೀಟು ಔಸ್ತಿ ಇಸುಕೊಂಡು ಬಾ ಅಂತ ಅಂದ್ರು” ಎಂದನು.
“ಹಿಂದಕ್ಕೆ ಹೋಗುವಾಗ ಮತ್ತೆ ಬಾ ಕೊಡುತ್ತೇನೆ”
ಗುತ್ತಿ ತಟಕ್ಕನೆ ಆಲೋಚನಾಪರನಾಗಿ “ಹಿಂದಕ್ಕೆ ಹೋಗಾಗ ಬರಾಕೆ ಹೆಂಗೆ ಆತದ್ರೋ?” ಎಂದವನು ಕಣ್ಣಾ ಪಂಡಿತರ ಹಾರು ಹುಬ್ಬಿನ ಪ್ರಶ್ನೆಚಿಹ್ನೆಗೆ ಸರಿಯಾದ ಉತ್ತರ ಹೇಳಲು ಸಾಧ್ಯವಿಲ್ಲದ್ದರಿಂದ “ಹ್ಞೂ ಆಗ್ಲಿ, ಬಂದು ತಗೊಂಡು ಹೋಗ್ತಿನಿ” ಎಂದನು.
“ಮತ್ತೆ ನೀನು ಹೊರಡಬಹುದು.”
ಕಣ್ಣಾಪಂಡಿತರು ಹೊರಡಬಹುದು ಎಂದು ಹೇಳಿದರೂ ಗುತ್ತಿ ಹೊರಡಲಿಲ್ಲ. ಇನ್ನೂ ಏನೋ ಹೇಳುವವನಂತೆ ನಿಂತನು.
ಕಣ್ಣಾಪಂಡಿತರು “ಮತ್ತೆ ಏನು ನಿಂತದ್ದು?” ಎಂದನು.
ಗುತ್ತಿ ಎಂಜಲು ನುಂಗುತ್ತಾ ಗಂಟಲು ಸರಿಮಾಡಿಕೊಳ್ಳುತ್ತಾ ತಡಬಡಿಸುತ್ತಿದ್ದುದನ್ನು ನೋಡಿ ಪಂಡಿತರು ಸ್ವಲ್ಪ ರಹಸ್ಯ ಧ್ವನಿಯಿಂದಲೆಂಬಂತೆ “ಮತ್ತೆ ಜಟ್ಟಮ್ಮ  ಹೆಗ್ಗಡತಿಯವರು ಏನಾದರೂ ಹೇಳಿದ್ದರೇನೋ?” ಎಂದು ಕೇಳಿದರು.
“ಹೌದೇ ಸೈ, ಮರತೇ ಬಿಟ್ಟಿದ್ದೆ.”
“ಅದನ್ನೂ ಕೊಡ್ತೀನೊ, ಆ ಮೇಲೆ ಬಾ”
“ಮಕ್ಕಳಾಗಾಕೆ ಔಸ್ತಿ ಕೊಡ್ತೀರಂತೆ ಹೌದೇನ್ರೋ?” ಎಂದು ಗುತ್ತಿ ಬೆಪ್ಪು ನಗು ನಕ್ಕನು.
“ಆಗುವುದಕ್ಕೊ, ಹೋಗುವುದಕ್ಕೊ ನಿನಗ್ಯಾತಕ್ಕೆ?”
“ಅಲ್ಲ, ಪಾಪ, ಅವರು ಮಕ್ಕಳಿಲ್ಲದೆ ನಕ್ಕಬಡೀತಿದಾರೆ. ಹೆಗ್ಗಡೇರು ಬ್ಯಾರೆ ಮತ್ತೊಂದು ಮದೇಗೆ ಗಾಣ ಹಾಕ್ತಿದಾರೆ. ಬೇಗ ಮಕ್ಕಳಾದ್ರೂ ಆದ್ರೆ-” ಎಂದು ಒಡೆನೆಯೆ ಕನಿಕರದ ದನಿಯನ್ನು ಉದಾಸೀನಕ್ಕೆ ಬದಲಾಯಿಸಿ “ಅಲ್ಲಾ ಹೋಗ್ಲಿ ಬಿಡೀ. ಗರೀಬನಿಗೆ ಯಾಕೆ ಆ ಇಚಾರ-” ಎಂದು ಮತ್ತೆ ಧ್ವನಿ ಬದಲಾಯಿಸಿ. “ನನಗೊಂದು ಅಂತ್ರ ಬೇಕಿತ್ತಲ್ರೋ” ಎಂದನು.
“ಯಾವುದಕ್ಕೊ?”
“ಅದೇ ನೀವು ಹೇಳಿದ್ರಲ್ಲಾ ಅದಕ್ಕೆ”
“ಅಂದರೆ?”
“ಈಗ ನೋಡಿ ತಿಮ್ಮಿನ ನಾ ಮದುವ್ಯಾಗಬೇಕು ಅಂತಾ ಸುಮಾರು ಕಾಲದಿಂದ ಕೇಳ್ತಿದ್ದೀನಿ. ಆ ಬಚ್ಚ ಮನ್ನೆ ಮನ್ನೆ ಸುರು ಮಾಡ್ಯಾನೆ. ತಿಮ್ಮಿಮನ್ಸು ನನ್ನ ಕಡೆ ಆಗಿ, ನಾ ಹೇಳ್ದ ಹಂಗೆ ಕೇಳಾಕೆ ಒಂದು ಅಂತ್ರ ಕೊಟ್ರೆ ನನ್ನ ಪರಾಣ ಇರೋ ತನಕ ನಿಮ್ಮ  ಗುಲಾಮನಾಗಿರ್ತೀನಿ”.
ಗುತ್ತಿಯ ದೈನ್ಯ ಸ್ಥಿತಿಯನ್ನು ಕಂಡು ಪಂಡಿತನಿಗೆ ನಗು ಬಂದರೂ ಅದನ್ನು ತೋರಗೊಡಲಿಲ್ಲ. ಅದಕ್ಕೆ ಬದಲಾಗಿ ಮುಖಮುದ್ರೆಯನ್ನು ಅತ್ಯಂತ ಗಂಭೀರ ಮಾಡಿಕೊಂಡು ನಿಧಾನವಾಗಿ ಮಂಡೆ ಅಲ್ಲಾಡಿಸಿದನು.
ಗುತ್ತಿ ಅತಿ ದೈನ್ಯತೆಯಿಂದ “ದಮ್ಮಯ್ಯಾ ಅಂತೀನಿ. ಒಷ್ಟು ಉಪಕಾರ ಮಾಡಿ. ನಿಮ್ಮ ಕಾಲಿಗೆ ಬೀಳ್ತೀನಿ” ಎಂದು ತನ್ನ ಕುಳ್ಳನ್ನು ಮತ್ತಷ್ಟು ಕುಗ್ಗಿಸಿಕೊಂಡನು.
ಆ ಹೊಲೆಯನಿಂದ ಹಣ ವಸೂಲು ಮಾಡಿಕೊಳ್ಳುವುದೂ, ಹಸುವಿನ ಕೊಂಬಿನಿಂದ ಹಾಲು ಕರೆಯುವುದೂ ಒಂದೇ ಎಂದು ಚೆನ್ನಾಗಿ ಅರಿತಿದ್ದ ಕಣ್ಣಾಪಂಡಿತರು “ನನಗೆ ನಿನ್ನಿಂದ ದುಡ್ಡು ಕಾಸೂ ಏನೂ ಬೇಡ.”
“ಮತ್ತೇನು ಬೇಕು ಹೇಳಿ?”
“ಸ್ವಲ್ಪ ಸುಮ್ಮನೆ ನಿಲ್ಲೋ– ನಿನ್ನ ದುಡ್ಡು ಕಾಸು ನನಗೆ ಬೇಡ. ನಿನ್ನ ಹೊಟ್ಟೆಯ ಮೇಲೆ ನಾನು ಹೊಡೆಯುವುದಿಲ್ಲ….ನನಗೆ ಬೇಕಾದಾಗ ಒಂದೊಂದು ಕೋಳಿ ಕೊಟ್ಟರೆ ಸಾಕು- “
“ಬದಕಿದೆ, ನನ್ನೊಡ್ಯಾ”
“ಹೋಗಿ ಬಾ, ಆಮೇಲೆ ಕೊಡ್ತೀನಿ.”
ಗುತ್ತಿ ತಟಕ್ಕನೆ ಹತಾಶನಾದಂತೆ “ಈಗಲೆ ಕೊಟ್ಟಿದ್ರೆ….” ಎಂದನು.
“ಈಗ ಹ್ಯಾಂಗೆ ಕೊಡುವುದೊ? ಅದನ್ನು ಬರೆಯಬೇಕೋ ಬೇಡವೊ? ಸಾಬರ ಅಂಗಡಿಯ ದಿನಸಿ ಅಲ್ಲ!”
“ಇಲ್ಲೆ ಕೂತ್ಕೊತೀನಿ-ಬರ್ಕೊಡಿ” ಎಂದು ಹಲ್ಲು ಹಲ್ಲು ಬಿಟ್ಟು ಅಂಗಲಾಚ ತೊಡಗಿದ. ಗುತ್ತಿಯನ್ನು ಅಂಗಳದಲ್ಲಿಯೆ ಬಿಟ್ಟು ಕಣ್ಣಾಪಂಡಿತರು ಮನೆ ಒಳಗೆ ನುಸುಳಿದರು. ಅವನು, ಎಳಬಿಸಿಲಿನಲ್ಲಿ ಕಂಬಳಿ ಹಾಕಿಕೊಂಡು, ಅದರ ಮೇಲೆ ಕೂತು, ಎಲೆಯಡಿಕೆ ಜಗಿಯುತ್ತಾ ಅಂತ್ರದ ಆಗಮನವನ್ನೆ ನಿರೀಕ್ಷಿಸುತ್ತಾ ಕುಳಿತನು.
*****

ಮಲೆಗಳಲ್ಲಿ ಮದುಮಗಳು-3

ಗುತ್ತಿ ಬಹಳ ಹೊತ್ತು ಬೆನ್ನು ಕಾಯಿಸಿರಲಿಲ್ಲ. ಪಕ್ಕದಲ್ಲಿ ಮಲಗಿದ್ದ ಹುಲಿಯ ಸೀನತೊಡಗಿತು. ಸೀನು ಒಂದರಮೇಲೊಂದು ಬರತೊಡಗಿ ಮಲಗಿದ್ದ ನಾಯಿ ಎದ್ದು ನಿಂತಿತು. ಮುಂದಿನ ಕಾಲುಗಳಿಂದ ಮೂಗಿನೆಡೆಯ ಮೋರೆಯನ್ನು ಕೆರೆದುಕೊಳ್ಳುತ್ತಾ ಮತ್ತೆ ಮತ್ತೆ ಸೀನುತ್ತಾ ಕುಣಿದಾಡತೊಡಗಿತು.
ಹುಲಿಯ ಮೊದಲು ಸೀನಿದಾಗ “ಹಚಾ ನಿನ್ನ ಹುಲಿ ಹಿಡಿಯಾ!” ಎಂದು  ಉದಾಸೀನತೆಯಿಂದ ಗದರಿಸಿದ್ದ ಗುತ್ತಿ ನಾಯಿ ಕುಣಿದಾಡತೊಡಗಲು ಸ್ವಲ್ಪ ಗಾಬರಿಗೊಂಡವನಾಗಿ ಅದರ ಕಡೆಗೆ ತಿರುಗಿ “ಇದ್ಕೆನಾಗಿದೆರೋ ಹಿಂಗೆ ಕುಣಿಯಾಕೆ?” ಎಂದು ಅದನ್ನು ಹತ್ತಿರಕ್ಕೆ ಕರೆಯುತ್ತಾ ಕೈಚಾಚಿದನು.
“ಬಾ, ಇಲ್ಲಿ! ಬಾ ಇಲ್ಲಿ!”
ನಾಯಿ ಬರಲಿಲ್ಲ. ಮತ್ತೂ ಜೋರಾಗಿ ಮೂಗು ಕೆರೆದುಕೊಂಡು ಸೀನಿ ಕುಣಿದಾಡಿಕೊಳ್ಳುತ್ತಿತ್ತು.
“ಏನೋ? ದಾರೀಲಿ ಬಳ್ಳಿಗಿಳ್ಳಿ ಮುಟ್ಟಿತೇನೋ?” ಎಂದು ಗುತ್ತಿಯನ್ನು ಕುರಿತು ಪ್ರಶ್ನಿಸಿದ ತಿಮ್ಮಾನಾಯ್ಕನಿಗೆ ಸೇಸನಾಯ್ಕನು,
“ನಿಮಗೆ ಕಸಬಿಲ್ಲ, ತೆಗೀರಿ! ಬಳ್ಳಿ ಮುಟ್ಟಿದರೆ ಇಲ್ಲಿ ತನಕಾ ಬರಬೇಕಾ ಅದು?” ಎಂದು ಹಣತೆ ಎತ್ತಿಕೊಂಡ ಮುರುವಿನ ಒಲೆಯ ಬಳಿಗೆ ಹೋದನು.
ತಿಮ್ಮನಾಯ್ಕನು ತಾನು ಕೂತಲ್ಲಿಂದಲೆ ಪ್ರಶ್ನೆಗಳನ್ನು ಕೇಳುತ್ತಾ, ಸಲಹೆಗಳನ್ನು ಕೊಡುತ್ತಾ, ನಡುನಡುವೆ ತನ್ನ ಅಪ್ಪಣೆಯಂತೆ ನಡೆಯದಿದ್ದಾಗ ಭರ್ತ್ಸನೆ ಮಾಡುತ್ತಾ, ಎಲೆಯಡಿಕೆ ಹಾಕಿಕೊಳ್ಳುತ್ತಾ ವ್ಯವಹಾರ ಮಾಡುತ್ತಿದ್ದನು.
ಸೇಸನಾಯ್ಕನು ದೀಪ ತರುವಷ್ಟರಲ್ಲಿಯೆ ಗುತ್ತಿ ನಾಯಿಯ ಒದ್ದಾಟಕ್ಕೆ ಕಾರಣವನ್ನು ಅಂದಾಜಿನಿಂದಲೆ ಪತ್ತೆ ಹಚ್ಚಿದ್ದನು.
ದೀಪ ತಂದ ಸೇಸನಾಯ್ಕನನ್ನು ಉದ್ದೇಶಿಸಿ, ಅವನ ಕಡೆಗೆ ತಿರುಗದೆ, ತನ್ನ ಕೆಲಸದಲ್ಲಿಯೆ ಮಗ್ನನಾಗಿ “ಹಡಬೇಗೆ ಹುಟ್ಟಿದ್ದಕ್ಕೆ ಮೂಗಿನ ಸೊಳ್ಳೆ ಒಳೂಗೆ ಕಚ್ಚಿಬಿಟ್ಟಾದೆ ಕಣ್ರೋ ಇಂಬಳಾ! ಹಛಾ! ನಿನ್ನ ಕುರ್ಕ ಹೊತ್ತುಕೊಂಡು ಹೋಗಾ!” ಎಂದು ಒದ್ದಾಡುತ್ತಿದ್ದ ನಾಯಿಯನ್ನು ಗದರಿಸಿ ಗುದ್ದಿದನು.
ಸೇಸನಾಯ್ಕನು ಗುತ್ತಿ ಹಿಡಿದುಕೊಂಡಿದ್ದ ನಾಯಿಯ ಮೋರೆಯ ಹತ್ತಿರಕ್ಕೆ ದೀಪ ಹಿಡಿದು “ಅಯ್ಯೋ.. ಅಯ್ಯೋ.. ಎಷ್ಟು ದೊಡ್ಡ ಇಂಬಳಾನೊ? ನೆತ್ತರಾ ಕುಡ್ದು ಹಣ್ಣಾಗದಲ್ಲೋ! ಎಳದ್ದು ತೆಗೆಯೋ! ಎಂದನು.
“ತೆಗೆಯಾಕೆ ಅದು ಸಿಗಬೇಕಲ್ಲಾ ಕೈಗೆ? ಬೆಳ್ಳು ಹಾಕಾದೇ ತಡಾ ಒಳಗೆ ಹೋತದೆ!” ಎಂದು ಮತ್ತೆ ಪ್ರಯತ್ನಿಸುತ್ತಿದ್ದಾಗಲೆ ನಾಯಿ ಒದ್ದಾಡಿ ಕೊಂಡುದರಿಂದ ಆ ಕರೀ ಕೆಂಬಣ್ಣದ ಲೋಳಿಲೋಳಿಯಾದ ಇಂಬಳ ನುಣುಚಿಕೊಂಡು ಮತ್ತೆ ಮೂಗಿನೊಳಗೆ ಮಾಯವಾಯಿತು.
“ಕಾಲಾಗೆ ಒತ್ತಿ ಹಿಡುಕೊಳ್ಳೊ” ಎಂದನು ಸೇಸನಾಯ್ಕ. ಗುತ್ತಿ ಎದ್ದುನಿಂತು, ಕೆಸರು ಹಿಡಿದು ಇನ್ನೂ ಒದ್ದೆಯೊದ್ದೆಯಾಗಿದ್ದ ಆ ದೊಡ್ಡ ನಾಯಿಯ ಮೇಲೆ ಬಲಕ್ಕೊಂದು ಎಡಕ್ಕೊಂದು ಕಾಲು ಹಾಕಿ, ತೊಡೆಯ ಸಂದಿಯಲ್ಲಿ ಒತ್ತಿ ಹಿಡಿದುಕೊಂಡು, ಇಂಬಳ ತೆಗೆಯಲು ಪ್ರಯತ್ನಿಸಿದನು. ನಾಯಿ ಅವನನ್ನು ಹೊತ್ತುಕೊಂಡು ಚಲಿಸಲು ಪ್ರಯತ್ನಿಸಿದುದರಿಂದ ಹತಾಶನಾದ ಗುತ್ತಿ “ಏನಾದರೂ ಸಾಯಿ!” ಎಂದು ಶಪಿಸುತ್ತಾ ದೂರ ನಿಂತನು.
“ನೆತ್ತರಾ ಕುಡಿದ ಮೇಲೆ ಅದ್ಹಾಂಗೆ ಬಿದ್ದು ಹೋಗ್ತದೋ” ಎಂದಿತು, ದೂರದಲ್ಲಿ ಕುಳಿತು ನೋಡಿ ನಗುತ್ತಿದ್ದ ತಿಮ್ಮನಾಯ್ಕನ ಸವಾರಿ.
ಪ್ರತಿಭೆ ತಟ್ಕಕನೆ ಮಿಂಚಿದವನಂತೆ ಸೇಸನಾಯ್ಕನು “ಅಲ್ಲಿ ಹೋಗೋ ಸೀತೂರು ಬಾವನ ಹತ್ತಿರ ಒಂದೀಟು ಹೊಗೆಸೊಪ್ಪು ಈಸಿಕೊಂಡು ಬಾರೋ. ನಾ ಮಾಡ್ತೀನಿ ಮದ್ದ” ಎಂದನು.
“ಹೌದು ಕಣ್ರೋ! ಹಾಂಗಂತಾ ಉಪಾಯ ಸುಲೂಬದಾಗದೆ” ಎಂದು ಗುತ್ತಿ ಎಲೆಯಡಿಕೆ ಹಾಕುತ್ತಿದ್ದ ತಿಮ್ಮನಾಯ್ಕನಿಂದ ಹೊಗೆಸೊಪ್ಪಿನ ಚೂರೊಂದನ್ನು ತೆಗೆದುಕೊಂಡು ಬಂದು, ಅಂಗೈ ಮೇಲೆ ಮಡ್ಡೀ ನಶ್ಯ  ತಿಕ್ಕುವಂತೆ ತೀಡಿ, ಹುಡಿ ಹುಡಿ ಮಾಡಿ, ನಾಯಿಯ ಸೊಳ್ಳೆಗೆ ಪುಸುಕ್ಕನೆ ಹಾಕಿದನು.
ಹಾಕಿದನೊ ಇಲ್ಲವೊ, ಹುಲಿಯ ಹಾರಿ ಹಾರಿ ಕುಣಿದು ಮನೆ ಮರುದನಿ ಗುಡುವಂತೆ ಸೀನುತ್ತಾ ಮೂಲೆಯಿಂದ ಮೂಲೆಗೆ ಓಡತೊಡಗಿತು. ಮೂವರೂ ಗಟ್ಟಿಯಾಗಿ ನಗತೊಡಗಿದರು. ಇತರ ನಾಯಿಗಳೂ ಬೆಚ್ಚಿ ಕೂಗತೊಡಗಿದುವು. ಪುಟ್ಟನ ಅತ್ತೆ ಕಾಡಿ, ರಂಗನ ತಾಯಿ ಮತ್ತು ರಂಗನ ಹೆಂಡತಿ ಚೌಡಿ ಎಲ್ಲರೂ ಅಲ್ಲಿಗೆ ಬಂದು ಇಣಿಕಿ ನೋಡಿ ಹೋದರು.
ನಾಯಿಯ ಮೂಗಿನಿಂದ ಇಂಬಳವೇನೊ ನೆಲಕ್ಕೆ ಬಿತ್ತು. ಜೊತೆಗೆ ನೆತ್ತರು ಜೊಲ್ಲು ಸಿಂಬಳಗಳಿಂದಲೂ ನೆಲ ಗಲೀಜಾಯಿತು.
“ಇಂಬಳಾನ ಹಾಂಗೇ ಬಿಡಬಾರದ್ರೋ, ಸುಟ್ಟು ಹಾಕ್ಬೇಕು” ಎಂದು ತಿಮ್ಮನಾಯ್ಕನು ಸಲಹೆ ಕೂಗಿ ಹೇಳಿದಂತೆ ದೀಪದ ಬೆಳಕನ್ನೊಡ್ಡಿಯೊಡ್ಡಿ ಹುಡುಕತೊಡಗಿದರು. ಕಡೆಗೂ ಆ ಇಂಬಳ ಸಿಕ್ಕಿತು. ಗುತ್ತಿ ಅದನ್ನು ಮುರುವಿನ ಒಲೆಯ ಕೆಂಡಕ್ಕೆ ಹಾಕುತ್ತಿದ್ದಾಗಲೆ ಸೇಸನಾಯ್ಕನು ಅವನ ಹಿಮ್ಮಡಿಯನ್ನು ನೋಡಿ “ಅಯ್ಯೋ! ನಿನ್ನ ಮನೆಹಾಳಾಯ್ತಲ್ಲೊ!” ಎಂದನು.
“ಏನಾಯ್ತಿರೋ?”
“ಏನಾಯ್ತೆ ಸೈ! ನೀನು ಬಿಡೂ ನಿನ್ನ ನಾಯಿಗಿಂತ ದೊಡ್ಡ ಕತ್ತೆ! ಅಯ್ಯೊ! ಅಯ್ಯೊ! ಇಲ್ಲಿ ನೋಡೋ ಇಲ್ಲಿ! ಇಲ್ಲೀ!” ಎಂದು ಹಿಮ್ಮಡಿಯ ಬುಡಕ್ಕೆ ದೀಪ ಹಿಡಿದನು.
ಗುತ್ತಿ ನೋಡುತ್ತಾನೆ, ಇಂಬಳಗಳ ಪಿಂಡಿ! ಮೂರು ನಾಲ್ಕು ಇಂಬಳಗಳು ಸಿಡಿದೊಡೆಯುವಷ್ಟರ ಮಟ್ಟಿಗೆ ರಕ್ತ ಕುಡಿದು ಕೆಂಪೇರಿ ಕಚ್ಚಿಕೊಂಡು ಬಿದ್ದಿವೆ! ಒಂದು ಕಡೆ ನೆತ್ತರು ಕುಡಿದು ಇಂಬಳ ತನಗೆ ತಾನೆ ಬಿದ್ದುಹೋದ ತಾವಿನಿಂದ ರಕ್ತ ಹರಿಯುತ್ತಿದೆ. ಮತ್ತೂ ನೋಡುತ್ತಾನೆ; ಒಂದೆಡೆಯಲ್ಲ; ಎರಡೆಡೆಯಲ್ಲ; ಹತ್ತಾರು ಕಡೆ. ಅದೂ ಎಂತೆಂತಹ ಸ್ಥಾನಗಳಲ್ಲಿ! ಮರ್ಮ, ಗೋಪ್ಯ ಒಂದನ್ನೂ ಲೆಕ್ಕಿಸದೆ!
“ನಿನ್ನ ಮನೆ ಮಂಟೇನಾಗಲೋ! ದೀಪ ಇಲ್ಲೇ ಇಟ್ಟು ಹೋಗ್ತೀನಿ, ಬಟ್ಟೆ ಗಿಟ್ಟೇ ಬಿಚ್ಚಿ ಸರಿಯಾಗಿ ನೋಡ್ಕೋ!” ಎಂದು ವ್ಯಂಗ್ಯವಾಗಿ ನಗುತ್ತಾ ಸೇಸನಾಯ್ಕನು “ಇನ್ನೊಂದು ಗಂಟೇನೆ ಬೇಕು ಅಂತ ಕಾಣ್ತದೆ ಎಲ್ಲಾ ತೆಗೆದು ಪೂರೈಸಾಕೆ! ಹ್ಹ ಹ್ಹ! ಹೊಲೆ ಮುಂಡೇಗಂಡ!” ಎಂದು ಕಂಬಳಿ ಹೊದೆದು ಕುಳಿತನು.
ಗುತ್ತಿ ತನ್ನ ದೇಹದ  ನಾನಾ ಸ್ಥಾನಗಳಿಂದಲೂ ನೆತ್ತರು ಕುಡಿದು ಕೆಂಪಾಗಿದ್ದ ಇಂಬಳಗಳನ್ನು ಹುಡುಕಿ ತೆಗೆದು ಮುರುವಿನೊಲೆಯ ಕೆಂಡದ ರಾಶಿಯ ಮೇಲೆ ಹಾಕತೊಡಗಿದನು. ಅವು ಚಟ್ಟಪಟ್ಟೆಂದು ಸೀದು, ಹೊಗೆದೋರಿ, ಸಿನಗು ವಾಸನೆ ಹಬ್ಬಿತು.
ಅವನು ಕೆಲಸವನ್ನೆಲ್ಲಾ ಪೂರೈಸಿ ಜಗಲಿಯ ಕಡೆಗೆ ಗಮನವಿಟ್ಟಾಗ ಸೇಸನಾಯ್ಕ ತಿಮ್ಮನಾಯ್ಕರಿಬ್ಬರೂ ಮಾಯವಾಗಿದ್ದರು. ಮೂಗನ್ನು ಸೊಗಸುಗೊಳಿಸಿ ಸೊಂಪಾಗಿ ತೀಡುತ್ತಿದ್ದ ತುಂಡು ಕಡುಬು ಕಳ್ಳು ಹೆಂಡಗಳ ಗುಂಪುಗಂಪಿನಿಂದ ಅವರು ಊಟಕ್ಕೆ ಹೋಗಿದ್ದಾರೆ ಎಂಬುದನ್ನು ಅರಿತು, ಹಣತೆಯ ದೀಪವನ್ನು ತಾನೆ ತೆಗೆದುಕೊಂಡು ಹೋಗಿ ಅಂಗಳದಲ್ಲಿ ನಿಕ್ಕುಳಿಸಿ ನಿಂತು, ತೋಳು ನೀಡಿ, ಜಗಲಿಯಂಚಿನ ಕೆಸರುಹಲಗೆಯ ಮೇಲೆ ಇಟ್ಟು, ಹಿಂತಿದುಗಿ ಬಂದು ಬೆಂಕಿಯ ಕಾಲಿನಲ್ಲಿ ಬೆನ್ನು ಕಾಯಿಸುತ್ತಾ ಎಲೆಯಡಿಕೆ ಹಾಕಿಕೊಳ್ಳುತ್ತಾ ಕುಳಿತನು.
ಬಹಳ ಹೊತ್ತಾದ ಮೇಲೆ ತೇಗುಗಳ ಸದ್ದು ಕೇಳಿಬಂತು. ಅದನ್ನು ಹಿಂಬಾಲಿಸಿ, ಬಹಳ ಹುಮ್ಮಸ್ಸಿನಿಂದಲೆಂಬಂತೆ ಮಾತನಾಡುತ್ತಾ ನಾಯ್ಕರಿಬ್ಬರೂ ಜಗಲಿಗೆ ಬಂದರು.
“ನಾಯಿಗುತ್ತೀ” ಸೇಸನಾಯ್ಕ ಕರೆದನು.
“ಹ್ಞಾ!” ಗುತ್ತಿ ನಿಡುವಾಗಿ ಓಕೊಂಡನು.
“ಎಲ್ಲಾ ಪೂರೈಸ್ತೇನೋ?”
ಗುತ್ತಿ ಉತ್ತರವಾಗಿ ನಕ್ಕನು.
“ಅಲ್ಲಾ ಇನ್ನೂ ಬಾಕಿಯಿದೆಯೊ?” ಎಂದು ತಿಮ್ಮನಾಯ್ಕ ನಗುತ್ತಾ ಕೇಳಿದನು.
“ಇಲ್ಲಾ ಏನೂ ಬಾಕಿಯಿಲ್ಲ!”
“ಹಿತ್ತಲ ಕಡೆಗೆ ಹೋಗೋ, ಅನ್ನ ಹಾಕಿ ಕೊಡ್ತಾರೆ” ಎಂದ ಸೇಸನಾಯ್ಕ.
“ತೆಣೇ ಮ್ಯಾಲೆ ಹೋಗುವಾಗ ಜಾರಿಗೀರಿ ಬಿದ್ದೀಯ?” ಎಂದು ಮತ್ತೆ ಎಚ್ಚರಿಕೆ ಹೇಳಿದನು, ಮಳೆ ಹೊಯ್ದಿದ್ದು ನೆನಪಾಗಿ.
ಆದರೆ ಅದನ್ನು ಕೇಳಲು ಗುತ್ತಿ ಅಲ್ಲಿರಲಿಲ್ಲ. ಅವನಾಗಲೆ ಹಿತ್ತಲ ಕಡೆಗೆ ಹಾಕಿದ್ದನು.
ದನದ ಹಟ್ಟಿಯ, ಕೋಳಿಯೊಡ್ಡಿಯ ಮತ್ತು  ಕುರಿಯೊಡ್ಡಿಯ ನಾತವಾವುದೂ  ಹೊಲೆಯನ ಮೂಗಿಗೆ ಅರಿವಾಗಲಿಲ್ಲ. ಹಣತೆಯ ಸೊಡರಿನ ಮಬ್ಬು ಬೆಳಕಿನಲ್ಲಿ, ಇರಿಚಲು ಬೀಸಿ ನಸುವೊದ್ದೆಯಾದಂತಿದ್ದ. ಕರಿಬೆರಸಿ ಸಗಣಿ ಬಳಿದು ಕರ್ರಗಿದ್ದ ನೆಲದ ಮೇಲೆ ಕೂತು, ತಾನು ಬಂದಿದ್ದೇನೆ ಎಂಬುದನ್ನು ಸೂಚಿಸುವ ಸಲುವಾಗಿ, ಕೃತಕವಾಗಿ, ಗಟ್ಟಿಯಾಗಿ ಕೆಮ್ಮಿ, ಗಂಟಲು ಸರಿಮಾಡಿಕೊಂಡು, ತನಗೆ ಒಂದು ಮಾರು ದೂರದಲ್ಲಿ ಕುಳಿತು, ತನ್ನ ಕಡೆಗೇ ನೋಡುತ್ತಿದ್ದ ಹುಲಿಯನ ಹೆಗ್ಗಣ್ಣುಗಳನ್ನು ನೋಡತೊಡಗಿದನು.
ಐದು ನಿಮಿಷ ಕಳೆದಿರಲಿಲ್ಲ. ಕಾಡಿ ಮೊರವೊಂದನ್ನು ಎರಡು ಕೈಯಲ್ಲಿಯೂ ಎತ್ತಿಕೊಂಡು ಬಂದಳು. ಬಾಳೆ ಎಲೆಯ ಮೇಲೆ ಹಾಕಿಟ್ಟಿದ್ದ ಎಡೆಯನ್ನು ಮೊರದಿಂದ ಜಾರಿಸಿ, ಗುತ್ತಿಯ ಮುಂದೆ ನೆಲದ ಮೇಲಿಡುತ್ತಲೇ ಮಾತಾಡತೊಡಗಿದಳು. ದನಿ ಪಿಸು ಮಾತಾಗಿರದಿದ್ದರೂ ಗಟ್ಟಿಯಾಗಿರಲಿಲ್ಲ.
“ಜಟ್ಟಮ್ಮ ಹ್ಯಾಂಗಿದಾರೋ, ಗುತ್ತಿ?”
“ಹ್ಯಾಂಗಿರಾದೇನೂ? ಹಾಂಗಿದಾರೆ!” ಎಂದ ಗುತ್ತಿಯ ಕಣ್ಣು ಬಾಳೆಯೆಲೆಯನ್ನು ಬಕಾಸುರನಂತೆ ನೋಡುತ್ತಿತ್ತು. ಮೂಗಿನ ಸೊಳ್ಳೆಗಳು ಅರಳಿ ಅರಳಿ ಗಾಳಿ ಹಿಡಿದು ಸೊಗಸುತ್ತಿದ್ದವು. ತುಂಡೂ (ಮಾಂಸದ ಪಲ್ಯ) ಕಡುಬೂ ಕಾಡಿಯ ಕಣ್ಣಿಗೆ ಯಥೇಚ್ಛವಾಗಿ ಕಾಣುತ್ತಿದ್ದರೂ ಗುತ್ತಿಗೆ ಬಹಳ ಸ್ವಲ್ಪವಿದ್ದಂತೆ ಭಾಸವಾಗಿ ಅವನಿಗೆ ಸ್ವಲ್ಪ ಅಸಮಾಧಾನವಾಗಿತ್ತು.
“ಅಲ್ಲಾ, ಅವರಿಗೆ ಯಾವಾಗಲೂ ಏನೋ ಜಡಾ ಅಂತಾ ಹೇಳ್ತಿದ್ರು, ಹೌದೇನೂ ಅಂತೆ ಕೇಳ್ದೆ.” ಕಾಡಿ ಎಡೆತಂದಿದ್ದ ಮೊರವನ್ನು ಬಲಗೈಯಲ್ಲಿ ಹಿಡಿದು ನಿಂತಿದ್ದಳು.
“ಜಡಾನೂ ಇಲ್ಲ ಗಿಡಾನೂ ಇಲ್ಲ. ತುಂಡು ದೊಣ್ಣೆ ಇದ್ದ್ಹಾಂಗ ಇದಾರೆ” ಎಂದ ಗುತ್ತಿ ಮೊಗವೆತ್ತಿ ನೋಡದೆ, ಸಿಟ್ಟಿನಿಂದ ಯಾರನ್ನೊ ಕತ್ತು ನುಲಿಯುವಂತೆ ಕಡುಬು ನುರಿಯತೊಡಗಿದನು.
“ಗಸಿ ಸಾಲದು ಅಂತ ಕಾಣ್ತದೊ, ತಡಿ, ಬಂದೆ” ಎನ್ನುತ್ತಾ ಕಾಡಿ ಒಳಗೆ ಹೋದಳು. ಅವಳಿಗೂ ಗುತ್ತಿಯ ಅತೃಪ್ತಿ ಅವನ ಧ್ವನಿಯಿಂದ ಗೊತ್ತಾಗಿತ್ತು.
ಒಳಗೆ ಹೋದವಳು ಮರದ ಕೈಬಟ್ಟಲಲ್ಲಿ ರಾಶಿ ಕಡುಬನ್ನೂ ದೊಡ್ಡದೊಂದು ಮಣ್ಣಿನ ಗುಂಡಾಲದಲ್ಲಿ ತುಂಬಿ ತುಳುಕುವಷ್ಟಿದ್ದ ಮಾಂಸದ ಪಲ್ಯವನ್ನೂ ತಂದಳು. ನೋಡಿದ ಗುತ್ತಿ ಹಲ್ಲುಬಿಟ್ಟು, ಮುಖ ಅಗಲಿಸಿ “ಒಂದು ಚೂರು ಗಸಿ ಸಾಕ್ರೋ; ಹಮಾ ಬ್ಯಾಡ” ಎಂದನು.
ಕಾಡಿ ತಂದದ್ದನ್ನೆಲ್ಲಾ ಇಕ್ಕಿದಳು.
“ಸಾಕ್ರಾ! ಸಾಕ್ರಾ! ನೆಲಕ್ಕೆ ಬೀಳ್ತದೆ! ಹಾಳು ಬಳ್ಳೆ!” ಎಂದು ಗುತ್ತಿ ಗಸಿಯನ್ನು ತಡೆಗಟ್ಟಲು ಎಡಗೈಯ ಸಹಾಯವನ್ನೂ ನಿರ್ವಾಹವಿಲ್ಲದೆ ತೆಗೆದುಕೊಳ್ಳುತ್ತಾ “ಈವತ್ತೇನ್ರೋ ಹೆಚ್ಚುಗಟ್ಲೆ?” ಎಂದು ಕೇಳಿದನು.
“ನೆಂಟರು ಬಂದಿದ್ರೊ!” ಎಂದು ಉದಾಸೀನತೆಯನ್ನು ನಟಿಸಿ ಉತ್ತರವಿತ್ತ ಕಾಡಿ ಬೇಗ ಬೇಗನೆ ಎಂದಳು, “ನಿಮ್ಮ ಹೆಗ್ಗಡೇರಿಗೆ ಮತ್ತೊಂದು ಮದುವೆಯಂತೆ ಹೌದೇನೊ?”
“ನಂಗೇನ್ರೋ ಗೊತ್ತು?” ಎನ್ನುತ್ತಾ ಗುತ್ತಿ ಮಾಂಸದ ಗಡಿಯಲ್ಲಿ ಒದ್ದೆಯಾಗಿದ್ದ ನುರಿದ ಕಡುಬಿನ ದೊಡ್ಡ ಮುದ್ದೆಯೊಂದನ್ನು ತೆಗೆದು, ಬಾಯನ್ನು ಸಾಧ್ಯವಾದಷ್ಟೂ ತೆರೆದು, ಒಳಗೆ ನುಗ್ಗಿಸಿದನು.
“ನನ್ನ ಹತ್ರ ಸುಳ್ಳು ಹೇಳ್ತಿಯಲ್ಲಾ!ಸುಳ್ಳೋ ಬದ್ದೋ? ಹೇಳು!”
ಗುತ್ತಿ ಉತ್ತರವಾಗಿ ತಲೆಯಲ್ಲಾಡಿಸುತ್ತಾ, ಕೆನ್ನೆಗಳನ್ನುಬ್ಬಿಸಿ ಮೀಸೆ ಮೇಲಕ್ಕೂ ಕೆಳಕ್ಕೂ ಸರ್ಕಸ್ಸು ಮಾಡುವಂತೆ ಮುಕ್ಕುತ್ತಿದ್ದುದನ್ನು ಕಂಡು “ಪೂರ ಹುಡಿಯಾಯ್ತೇನೊ? ಸ್ವಲ್ಪ ಗಸಿ ಹಾಕ್ತೀನಿ. ಕಲಸಿಕೊ” ಎಂದು ಕಾಡಿ ಗಸಿ ಹನಿಸಿದಳು. ಹಲೆಯನೂ ಬೇಡ ಎಂದು ಸನ್ನೆ ಮಾಡುತ್ತಲೇ ಕಲಸಿಕೊಳ್ಳತೊಡಗಿದನು.
ಹಸಿದಿದ್ದ ಹುಲಿಯನೂ ಬಾಲವಲ್ಲಾಡಿಸುತ್ತಾ ಒಮ್ಮೆ ಕೂರುತ್ತಾ, ಒಮ್ಮೆ ನಿಲ್ಲುತ್ತಾ, ಒಮ್ಮೆ ಒಡೆಯನ ಕಡೆಗೂ, ಒಮ್ಮೆ ಕಾಡಿಯ ಕಡೆಗೂ ಕಣ್ಣು ಕಣ್ಣು ಬಿಡುತ್ತಾ ಅಸ್ಥಿರವಾಗಿದ್ದುದನ್ನು ಗಮನಿಸಿ ಗುತ್ತಿ “ಹಛೀ ನಿನ್ನ ಹೊಟ್ಟೆ ಕಡಿಯಾ! ಏನು ಬೇಗ್ತದೋ ಹಡಬೇಗ್ಹುಟ್ಟಿದ್ದು!” ಎಂದು ಹೆದರಿಸಿದನು. ನಾಯಿ ಸುಮ್ಮನೆ ಕುಳಿತು ಒಡೆಯನಿಗಿಂತಲೂ ಹೆಚ್ಚು ಸಂಯಮಿಯಾಯಿತು.
ಕಾಡಿಯ ಔದಾರ್ಯಕ್ಕೆ ಗುತ್ತಿಯ ಮನಸ್ಸು ಸಮಾಧಾನವಾಗಿತ್ತು. ತೃಪ್ತಿಸೂಚಕವಾದ ಧ್ವನಿಯಿಂದ “ನಿಮಗೆ ಹ್ಯಾಂಗೆ ಗೊತ್ತಾಯ್ತೂ ಆ ಇಚಾರ?” ಎಂದು, ಮಾಂಸವನ್ನೆಲ್ಲ ಸಿಗಿದು ತಿಂದು ಉಳಿದಿದ್ದ ಎಲುಬಿನ ತುಂಡೊಂದನ್ನು ನಾಯಿಯ ಕಡೆಗೆ ಎಸೆದನು. ಹುಲಿಯನು ಹಾರಿ ಅದನ್ನು ತುಡುಕಿ ಹಿಡಿದು ಕಟಕಟಕಟನೆ ಅಗಿಯತೊಡಗಿತು.
“ಹೌದೇನು ಹೇಳು!” ಎಂದಳು ಕಾಡಿ.
“ಯಾರಿಗೂ ಹೇಬ್ಬ್ಯಾಡಿ ಮತ್ತೆ” ಎಂದು ಗುತ್ತಿ ವಿಷಯದ ಗಾಂಭೀರ್ಯವನ್ನು ಮುಖದಲ್ಲಿ ತೋರಿಸಲು ಯತ್ನಿಸಿದನು.
“ನಾನ್ಯಾರಿಗೆ ಹೇಳೋಕೆ ಹೋಗ್ತೀನೋ?”
“ಅಲ್ಲಾ ಮಾರಾಯ್ರ, ನಮಗ್ಯಾಕೆ ದೊಡ್ಡೋರ ಇಚಾರ ಬಡವರಿಗೆ?- ಹಾಂಗೇನೋ ವರ್ತಮಾನ ಇತ್ತಪ್ಪಾ.”
ಹೊಲೆಯನ ಬಾಯಿಂದ “ವರ್ತಮಾನ” ಎಂಬ ಮಾತನ್ನು ಕೇಳಿದ ಕಾಡಿಗೆ ಅವನು ಹೆಗ್ಗಡೆಯವರ ನೆಚ್ಚಿನ ತಳವಾರ ಎಂಬುದು ಮನಸ್ಸಿಗೆ ಬಂದಿತು.
“ಹೆಣ್ಣು ಎಲ್ಲೀದಂತೆ? ನಿಂಗೆ ಗೊತ್ತೇನು?”
“ಕುಡೀಬೇಕು ಕಣ್ರೋ. ಕಡುಬು ಗಂಟಲಾಗೆ ಇಳಿಯಾದಿಲ್ಲ!”
“ಅಯ್ಯಯ್ಯೊ! ಮರ್ತಿದ್ದೆ ಕಣೊ!” ಎಂದು ಕಾಡಿ ಒಳಗೆ ಹೋಗಿ ಒಂದು ಬಳ್ಳೆ ಕೀತನ್ನೂ, ಒಂದು ದೊಡ್ಡ ತಾಲಿಯಲ್ಲಿ ಹೆಂಡವನ್ನೂ ತಂದಳು. ಬಾಳೆಯೆಲೆಯ ಕೀತನ್ನು ದೊನ್ನೆಯಾಗಿ ಮಾಡಿ, ಮುಂದಿಟ್ಟು, ಹೆಂಡ ಬೊಗ್ಗಿಸಿದಳು. ಗುತ್ತಿ ಎರಡೂ ಕೈಗಳಿಂದಲೂ ಎತ್ತಿ ಗೊಟಗೊಟನೆ ಕುಡಿದು ಕೆಳಗಿಟ್ಟನು. ಕಾಡಿ ಮತ್ತೆ ಬೊಗ್ಗಿಸಿದಳು. ಮತ್ತೆ ಕುಡಿದಿಟ್ಟನು. ಮತ್ತೆ ತಟಕ್ಕನೆ ಬೊಗ್ಗಿಸಲಿಲ್ಲ.
“ಹೆಣ್ಣು ಗೊತ್ತಾಗಿದೆಯೇನೊ?” ಎಂದಳು.
ಗುತ್ತಿ ಎಲೆಯ ಮೂಲೆಯಲ್ಲಿ ರಾಶಿ ಹಾಕಿದ್ದ ಎಲುಬನ್ನೆಲ್ಲಾ ಒಟ್ಟಿಗೆ ಒತ್ತಿ ಹುಲಿಯನ ಮುಂದೆ ಹಾಕುತ್ತಾ “ಹಳೇಮನೇ ದೊಡ್ಡ ಹೆಗ್ಗಡೇರ ಮಗಳೂ ಅಂತಾ ಕಾಣ್ತದಪ್ಪಾ!” ಎಂದನು.
“ಯಾರು? ಸಣ್ಣ ಹೆಗ್ಗಡೇರ ತಂಗೀನೇನೋ?”
“ತಿಮ್ಮಪ್ಪ ಹೆಗ್ಗಡೇರ ತಂಗಿ”
“ಮಂಜಮ್ಮೋರೇನೊ?”
“ಅವರನ್ನೇ ಅಂತಾ ಮಾತಾಡ್ತಿದ್ರು!” ಎಂದ ಗುತ್ತಿ ಕಾಡಿಯ ಮುಖದ ಕಡೆಗೆ ನೋಡುತ್ತಾ, ಆಗತಾನೆ ಹೊಸದಾಗಿ ಕಂಡುಹಿಡಿದವನಂತೆ ಬೆರಗಾಗಿ ಕೇಳಿದನು: “ನಿಮಗೇನು ಜಡಾಗಿಡಾ ಆಗಿತ್ತೇನ್ರೊ? ಬಾಳ ಬಡಕಟ್ಟೆ ಆಗಿ ಕಾಣ್ತೀರಿ!”
“ಹೌದು, ಪುಣ್ಯಾತ್ಮಾ, ಹೋದ ಗದ್ದೆ ಕೊಯಿಲಿನಿಂದ ಒಡಲಜರ, ಮೂರಕ್ಕೆ ನಾಕಕ್ಕೆ ಬರ್ತಾನೇ ಅದೆ!”
ಅವಳ ಮೋರೆಯನ್ನೇ ನೋಡುತ್ತಿದ್ದ ಗುತ್ತಿಗೆ ಇದ್ದಕ್ಕಿದ್ದಹಾಗೆ ಏನೋ ಜ್ಞಾಪಕಕ್ಕೆ ಬಂದಂತಾಗಿ, ಜುಗುಪ್ಸೆಯಿಂದ ಮುಖ ಅಸಹ್ಯ ವಿಕಾರವಾಯಿತು. ಅದನ್ನು ಕಂಡ ಕಾಡಿ “ಏನೋ? ಕಲ್ಲು ಗಿಲ್ಲು ಸಿಗ್ತೇನೋ?” ಎಂದಳು.
“ಇಲ್ಲ! ಇಲುಗಿನ ಚೂರು ಅಂತಾ ಕಾಣ್ತದೆ!” ಎಂದು ಗುತ್ತಿ ಹುಸಿನುಡಿದು ತನ್ನ ಬಾಯಿಗೆ ಬೆರಳು ಹಾಕಿಕೊಂಡು ಎಲುಬಿನ ಚೂರನ್ನು ತೆಗೆದು ಬಿಸಾಡುವವನಂತೆ ನಟಿಸಿದನು.
ಕಾಡಿ ತಾಲಿಯಲ್ಲಿ ಉಳಿದಿದ್ದ ಹೆಂಡವನ್ನೆಲ್ಲಾ ದೊನ್ನೆಗೆ  ಬಗ್ಗಿಸಿ “ಏನಾರೂ ಬೇಕಾರೆ ಕರೀ” ಎಂದು ಹೇಳಿ ಬಿರುಬಿರನೆ ಹೊರಟು ಹೋದಳು.
******