ನನ್ನ ಪುಟಗಳು

13 ಸೆಪ್ಟೆಂಬರ್ 2019

ಮನದ ಗುಡಿಯೊಳಗಿಹನು....


ಮನದ ಗುಡಿಯೊಳಗಿಹನು ಪರಮಾತ್ಮನು
ದಿನ ನಿತ್ಯ ನಂಬಿ ಅವನ ಪೂಜಿಸು ನೀನು,
ನಿನ್ನ ಇಚ್ಛಾಶಕ್ತಿ ಗುಡಿ ಬೆಳಗೋ ಮಂಗಳ ಜ್ಯೋತಿ,
ಆತ್ಮವಿಶ್ವಾಸವೆ ಅಲಂಕೃತ ಹೂಗಳ ಮಾಲೆ
ನಿನ್ನ ಆಲೋಚನೆ ಪಠಿಸುವ ಮಂತ್ರ ಪ್ರಾರ್ಥನೆ,
ನಿನ್ನೆದೆಯ ಬಡಿತಗಳೇ ಘಂಟೆ ಜಾಗಟೆಯ ಸದ್ದಾಗಿರಲು
ನಿನ್ನಿಂದ ಹೊಮ್ಮುವ ನಿರ್ಧಾರ, ಕಾರ್ಯಗಳೆ ಪಡೆಯುವ ವರಗಳು.

-ದರ್ಶನ್ ಕೆ 
ಚಿಕ್ಕಮರಡಿ,  
ಹೊಸುಡಿ (ಅಂಚೆ),  
ಶಿವಮೊಗ್ಗ (ತಾ, ಜಿ) ೫೭೭೨೨೨

ಮರೆತ ಮಾತನು ಮರಳಿ ನುಡಿಯದಿರು


ಮರೆತ ಮಾತನು ಮರಳಿ ನುಡಿಯದಿರು
ಅಂತರಂಗದ ದುಃಖವ ಅರಳಿಸಿ ನಗಿಸಿ ನೋಯಿಸಿದಿರು
ಸುಳಿಯೊಳಗೆ  ಸಿಲುಕಿರುವ ಮನವಿದು
ಮನದಿ ಮರೆತ ರಸರಹಿತ ಕ್ಷಣಗಳ
ಕೆದಕಿ ಮನ ನೋಯಿಸದಿರು

ಹಾದಿ ಬದಿಯ ‌ಅಂಗಳವು ಅಣಕಿಸುತಿವೆ
ನೊಂದ ಕ್ಷಣವ  ಮರೆತು ನಗುತಿವೆ
ನೆನಪಿನ ಬೆಂಕಿ ಮಳೆ‌ ‌ಸುರಿಸಿ ಮನ‌ ನೊಯಿಸದಿರು

ನಿನಗಾಗಿ ಕಿತ್ತ ಮುಳ್ಳಿನ ಗುಲಾಬಿ ಗಿಡದಲಿ
ಹೊಸ ಹೂ ಚಿಗುರಿದೆ ‌ಹೊಸ ಬದುಕು ಕಟ್ಟಿ
ಹಸಿರ ವನದೊಳಗೆ  ಮೆರೆಯುವಾಗ
ಹಳೆಯ ಕೆಸರ ನೆನಪಿಸಿ ಮನ ನೊಯಿಸದಿರು

ನಿನಗಾಗಿ ಬರೆದ ಓಲೆಗಳೆಲ್ಲಮೂಲೆಯ ಗೆದ್ದಲುಗಳ
ಹಸಿವಿನ‌ ದಾಹ ತಣಿಸುವಾಗ ‌ಮತ್ತದೆ ಹುಸಿ ನೆಪದಲಿ
ಹೊಸ ನೆನಪುಗಳ ಕೆದಕಿ ಮನ ನೊಯಿಸದಿರು

ನಿನಗಾಗಿ ಕಂಡಿದ್ದ  ಬಿರು ಕನಸುಗಳೆಲ್ಲ‌
ಬಸಿರಿನಲಿ ನಂಜಾಗಿವೆ ನಿನ್ನ ನೆನಪುಗಳ
ಮರೆತು  ಹೊಸ ಭರವಸೆಗಳು
ಮೊಳೆಯುವಾಗ ‌ಬರದಿಂದ ಬತ್ತಿರುವ
ಬಿರು ಬಯಕೆಗಳ ಕರೆದು ಮನ ನೊಯಿಸದಿರು...
- DIVAKARA. D
  Kothanahalli, 
  Maddur Taluk, 
  Mandya District 571419

ನಾನಿನ್ನೂ ಬದುಕೇ ಇದ್ದೇನೆ..!


ನೀವು ನನ್ನನ್ನು ಬಿಟ್ಟುಹೋದ
ಆಸ್ಪತ್ರೆಯ ಕಾರ್ಪೋಷನ್
ಕಸದ ತೊಟ್ಟಿಯ ಬಳಿ
ಅವರಿವರು ಬಿಸಾಡಿದ
ಅಳಸಿದ ಅನ್ನವನ್ನುಂಡು
ಊರಿನ ಕಲ್ಮಶವನ್ನೆಲ್ಲಾ ಹೊತ್ತು
ತರುವ ಮೋರಿಯ ನೀರುಕುಡಿದು
ಬದುಕಿದ್ದೇನೆ, ಬದುಕುತ್ತಲೇ ಇದ್ದೇನೆ

ನನ್ನೆಡೆಗೆ ತಿರುಗಿ ನೋಡುವ
ಮೊಗಗಳಲ್ಲಿ ಅಪ್ಪ-ಅಮ್ಮನ
ನೋಟಗಳಿಗೆ ಪರಿತಪಿಸುತ್ತಿದ್ದೇನೆ.
ತುಂಡು ಬ್ರೆಡ್ಡು ಕೊಡುವ ಕೈಗಳನ್ನು
ಕನಿಕರದಿ ಕಾಸು ಕೊಡುವ ಕೈಗಳನ್ನು
ಮುಟ್ಟಿ ಮುಟ್ಟಿ ನೋಡುತ್ತಿದ್ದೇನೆ
ಕಳೆದುಕೊಂಡ ನನ್ನವರ ಗುರುತು ಹಿಡಿಯಲು.

ಈ ಉಸಿರು ನಿಂತು
ದೇಹ ಹುಳು ತಿಂದು
ಮಣ್ಣಾಗುವವರೆಗೂ ಈ ಸಣ್ಣ
ಜೀವವನ್ನು ಬಿಗಿಹಿಡಿದು
ಇಲ್ಲಿಯೇ ಕಾಯುತ್ತಿರುವೆನು
ಅಷ್ಟರಲ್ಲಿ ಒಮ್ಮೆಯಾದರೂ
ನನ್ನ ನೆನಪಾದರೆ ಬಂದು ಬಿಡಿ
          -- ಡಾ. ಮಂಜಣ್ಣ ಮಾರಮ್ಮನಹಳ್ಳಿ

                   ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ (ಪೋ),  
                   ಮೊಳಕಾಲ್ಮೂರು (ತಾ), ಚಿತ್ರದುರ್ಗ (ಜಿ)





ಗೋವಿನ ಅಂತರಾಳದ ಮಾತು....


ಸವೆದೆ ನಾ ನನ್ನ ಜೀವನವ ನಿಮಗಾಗಿ
ಅಲೆದೆ ಮನೆ ಮನೆಗಳನು ಬದುಕಿಗಾಗಿ
ನೀ ಎನ್ನ ಕೊರಳಿಗೆ  ಉರುಳು ಬಿಗಿವಾಗ
ನಾ ನಿನ್ನ ಪಾದವ ನೆಕ್ಕಿ ಪ್ರೀತಿ ತೋರಿಸಿದೆ
ನೀನಿತ್ತ ತಂಗಳ ಜೊತೆ ಕಸಕಡ್ಡಿ ತಿನ್ನುತಲಿ
ನನ್ನ ಕಂದನಿಗಿರಿಸಿದ ಅಮೃತವ ನೀನು ಕಸಿದು
ನಿನ್ನ ಮಕ್ಕಳ ಒಡಲ ತುಂಬಿಸುತ ಹಿಗ್ಗಿನಲಿದೆ
ನನ್ನಿಂದ ಸಿಗುವ ಪ್ರತಿಯೊಂದನ್ನು ಬಳಸುತಲಿ
ನಿನ್ನ ಸಹನೆಯನು ಕಳೆದಾಗ ನನಗೆ ಬರೆ ಎಳೆದೆ
ಲಾಭವದು ನನ್ನಿಂದ ಕಡಿಮೆಯಾಗಲು ತೊಡಗೆ
ಕರೆದುಕಟುಕನಿಗೆ ನನ್ನ ಮಾರಲು ಮುಂದಾದೆ
ಹಗ್ಗದಲ್ಲಿ ಬಿಗಿದವನು  ನನ್ನನೆಳೆವಾಗ
ಹಣ ಎಣಿಸುವುದರಲಿ ಮಗ್ನನಾದೆ
ಕೊನೆಯಲ್ಲಿ ನಿನ್ನ ಮನೆ-ಮನ ಬಿಟ್ಟು ಹೋಗಲು ಮನವಿರದೆ ನಡೆದಾಗ 
ಎಲೆ ಧಣಿಯೆ ನನ್ನ ಕಣ್ಣ ನೀರನು ನೀನು ಗುರುತಿಸದಾದೆ!!!

-'ಕಣಿಪುರೇಶ ಪ್ರಿಯ

ಕೃಷ್ಣಪ್ರದೀಪ (ಕಾವ್ಯನಾಮ 'ಕಣಿಪುರೇಶ ಪ್ರಿಯ)
ಶೇಡಿಗುಮ್ಮೆ ಮನೆ,  
ಅಂಚೆ :- ಕುಂಬಳೆ,  
ಕಾಸರಗೋಡು ಜಿಲ್ಲೆ,  
ಕೇರಳ ರಾಜ್ಯ, ಪಿನ್ ಕೋಡು :-671321
         

********************************