ನನ್ನ ಪುಟಗಳು

01 ಅಕ್ಟೋಬರ್ 2015

ಪ್ರಾಚೀನ ಕವಿಗಳು

   ಕವಿಗಳ ಹೆಸರಿನ ಮೇಲೆ ಕ್ಲಿಕ್ ಮಾಡಿ ಆರಿಸಿ

ಕವಿ-ಸಾಹಿತಿಗಳ ಪರಿಚಯ
ಪ್ರಾಚೀನ ಕವಿಗಳು
ಕ್ರ. ಸಂ.
ಹೆಸರು
 

ಶಿವಕೋಟ್ಯಾಚಾರ್ಯ

ಶಿವಕೋಟ್ಯಾಚಾರ್ಯ
                 ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 
‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ. (.Pdf ನಂತೆ download ಮಾಡಲು ಕಥೆಯ ಮೇಲೆ ಕ್ಲಿಕ್ ಮಾಡಿ)
 1. ಸುಕುಮಾರಸ್ವಾಮಿಯ ಕಥೆ
 2. ಸುಕೌಶಳಸ್ವಾಮಿಯ ಕಥೆ
 3. ಗಜಕುಮಾರನ ಕಥೆ
 4. ಸನತ್ಕುಮಾರ ಚಕ್ರಚರ್ತಿಯ ಕಥೆ
 5. ಅಣ್ಣಿಕಾಪುತ್ರನ ಕಥೆ
 6. ಭದ್ರಬಾಹು ಭಟ್ಟಾರರ ಕಥೆ
 7. ಲಲಿತಘಟೆಯ ಕಥೆ
 8. ಧರ್ಮಘೋಷ ಭಟ್ಟಾರರ ಕಥೆ
 9. ಸಿರಿದಣ್ಣ ಭಟ್ಟಾರರ ಕಥೆ
 10. ವೃಷಭಸೇನ ಭಟ್ಟಾರರ ಕಥೆ
 11. ಕಾರ್ತಿಕ ಋಷಿಯ ಕಥೆ
 12. ಅಭಯಘೋಷ ಮುನಿಯ ಕಥೆ
 13. ವಿದ್ಯುಚ್ಚೋರನ ಕಥೆ
 14. ಗುರುದತ್ತ ಭಟ್ಟಾರರ ಕಥೆ
 15. ಚಿಲಾತಪುತ್ರನ ಕಥೆ
 16. ದಂಡಕನೆಂಬ ರಿಸಿಯ ಕಥೆ
 17. ಮಹೇಂದ್ರದತ್ತಾಚಾರ್ಯನ ಕಥೆ
 18. ಚಾಣಾಕ್ಯ ರಿಸಿಯ ಕಥೆ
 19. ವೃಷಭಸೇನ ರಿಸಿಯ ಕಥೆ
 -ಕೃಪೆ: siri-kannada.in
  
**************** ಗುಣವರ್ಮ

ಗುಣವರ್ಮ
          ‘ಪುಷ್ಪದಂತ ಪುರಾಣ’ ಮತ್ತು ‘ಚಂದ್ರನಾಥಾಷ್ಪಕ’ಗಳ ಕರ್ತೃ. ಕವಿ ತನ್ನ ಕೃತಿರಚನೆಯ ಕಾಲದ ಬಗೆಗೆ ತನ್ನ ಬರೆಹಗಳಲ್ಲೆಲ್ಲೂ ನೇರವಾದ ನಿರ್ದೇಶವನ್ನು ಮಾಡಿಲ್ಲ. ಆದರೆ ಈತ 13ನೆಯ ಶತಮಾನದ ಪುರ್ವಭಾಗದಲ್ಲಿ ಜೀವಿಸಿದ್ದನೆಂಬುದಕ್ಕೆ ಆಧಾರಗಳುಂಟು. 13ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿದ್ದ ಜನ್ನನನ್ನು ಈತ ಸ್ಮರಿಸಿರುವುದರಿಂದಲೂ 13ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಮಲ್ಲಿಕಾರ್ಜುನ ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಪದ್ಯಗಳನ್ನು ಉದ್ಧರಿಸಿರುವುದರಿಂದಲೂ ಈತನ ಕಾಲ 13ನೆಯ ಶತಮಾನದ ಪುರ್ವಭಾಗವೆಂದು ನಿಸ್ಸಂದೇಹವಾಗಿ ಹೇಳಬಹುದು. ಈತ ತನ್ನ ಪುಷ್ಪದಂತ ಪುರಾಣದಲ್ಲಿ ಆದರಪುರ್ವಕವಾಗಿ ಹೆಸರಿಸಿದ ಗುರು ಮುನಿಚಂದ್ರ ಹಾಗೂ ಪೋಷಕ ಶಾಂತಿವರ್ಮನ ಹೆಸರುಗಳು ಪ್ರ.ಶ. 1229ರಲ್ಲಿ ರಚಿತವಾದ ಸೌಂದತ್ತಿಯ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಈ ಸಂಗತಿಯೂ ಮೇಲೆ ಸೂಚಿಸಿದ ಕಾಲನಿರ್ಣಯಕ್ಕೆ ಪುಷ್ಟಿ ಕೊಡುತ್ತದೆ.

       ಪುಷ್ಪದಂತ ಪುರಾಣ ಜೈನ ಸಂಪ್ರದಾಯದಂತೆ ರಚಿತವಾದ ಪುರಾಣಕಾವ್ಯ; ಚಂಪುಕೃತಿ. ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಒಂಬತ್ತನೆಯವನಾದ ಪುಷ್ಪದಂತನ ಚರಿತ್ರೆ ಈ ಪುರಾಣಕಾವ್ಯದ ಕಥಾವಸ್ತು. ಈ ಕಥಾವಸ್ತು ಗಾತ್ರದಲ್ಲಿ ಕಿರಿದು. ಆದರೆ ಕಥಾನಾಯಕ ಉನ್ನತನೆಂಬ ಕಾರಣದಿಂದ ಕವಿ ಅದನ್ನು ವಿಸ್ತರಿಸಿ 14 ಆಶ್ವಾಸಗಳಾಗಿ ವಿಸ್ತರಿಸಿದ್ದಾನೆ; ಪೋಷಕನೂ ನಾಡಪ್ರಭುವೂ ಆಗಿದ್ದ ಶಾಂತಿವರ್ಮನಿಗೆ ಅದನ್ನು ವಿನಯಪುರ್ವಕ ಸಮರ್ಪಿಸಿದ್ದಾನೆ. ಗ್ರಂಥದ ಆರಂಭದಲ್ಲಿ ಕೊಂಡ ಕುಂದಾಚಾರ್ಯ ನಿಂದ ಹಿಡಿದು ಸ್ವಗುರುವಾದ ಮುನಿಚಂದ್ರನವರೆಗಿನ ತನ್ನ ಗುರುಪರಂಪರೆಯನ್ನು ಅರುಹಿದ್ದಾನೆ. ಪುರ್ವದಲ್ಲಿ ಕೃತಿರಚನೆ ಮಾಡಿದಂತೆ ತಿಳಿದುಬಂದ ಸಮಂತಭದ್ರ, ಪುಜ್ಯಪಾದ, ಕವಿಪರಮೇಷ್ಠಿಗಳ ಹೆಸರುಗಳು ಈ ಗುರುಪರಂಪರೆಯಲ್ಲಿ ಸಮಾವೇಶ ವಾಗಿರುವುದು ಗಮನಾರ್ಹವಾಗಿದೆ. ಪುರ್ವದ ಕವಿಗಳಲ್ಲಿ ಪಂಪ, ಪೊನ್ನ, ರನ್ನ, ನಾಗಮರ್ಮ, ನಾಗಚಂದ್ರ, ನೇಮಿಚಂದ್ರರನ್ನು ಮಾತ್ರವಲ್ಲದೆ ಹೆಚ್ಚು ಕಡಿಮೆ ಸಮಕಾಲೀನನಾಗಿರಬಹುದಾದ ಜನ್ನ ಕವಿಯನ್ನೂ ಸ್ಮರಿಸಿದ್ದಾನೆ.

         ಗುಣವರ್ಮನ ಕಾವ್ಯಬಂಧ ಪ್ರೌಢವಾಗಿದೆ; ಪ್ರಾಸಬದ್ಧವಾಗಿದೆ. ಭಾಷಾಸರಣಿ ತಿಳಿಗನ್ನಡವನ್ನು ಹಿತವಾಗಿ ಒಳಗೊಂಡಿದೆ. ಮೃದುಪದಗತಿಯಲ್ಲಿ ಸುರುಚಿರ ಅರ್ಥವೂ ಅಲ್ಲಲ್ಲಿ ಸೂಸಿದೆ. ಪ್ರಕೃತಿವರ್ಣನೆ ಋತುವರ್ಣನೆಗಳು ಮನೋಹರವಾಗಿವೆ. 13ನೆಯ ಶತಮಾನದ ಹೊತ್ತಿಗಾಗಲೆ ಇಳಿಮುಖವಾಗಿದ್ದ ಚಂಪು ಶೈಲಿಯನ್ನು ಮತ್ತೆ ಸಮರ್ಥವಾಗಿ ಕೈಗೆತ್ತಿಕೊಂಡ ಕೀರ್ತಿ ಗುಣವರ್ಮನಿಗೆ ಸಲ್ಲುತ್ತದೆ.

           ಚಂದ್ರನಾಥಾಷ್ಪಕದಲ್ಲಿ ಮಹಾಸ್ರಗ್ಧರಾವೃತ್ತದಲ್ಲಿ ರಚಿತವಾದ ಸ್ತುತಿಪದ್ಯಗಳಿವೆ. ಕೊಲ್ಹಾಪುರದ ತ್ರಿಭುವನತಿಲಕ ಜಿನಾಲಯದ ಚಂದ್ರನಾಥನಲ್ಲಿ ಕವಿ ತಳೆದ ಭಕ್ತಿ ಅವುಗಳಲ್ಲಿ ಅಭಿವ್ಯಕ್ತವಾಗಿದೆ. ಚಂದ್ರನಾಥಾಷ್ಟಕದ ಪ್ರತಿ ಪದ್ಯದ ಕೊನೆಯಲ್ಲೂ ಚಂದ್ರನಾಥನ ಹೆಸರು ಬಂದಿದೆಯಲ್ಲದೆ ಎಂಟು ಪದ್ಯಗಳ ಕೊನೆಯಲ್ಲಿ ಬರುವ ಒಂಬತ್ತನೆಯ ಪದ್ಯ ‘...ಮಾಱ್ಕಿ ಭವ್ಯರ್ಗೆ ಸೌಖ್ಯಾವಹಮಂ ಕೊಲ್ಹಾಪುರಶ್ರೀ ತ್ರಿಭುವನಾಲಂಕೃತಂ ಚಂದ್ರನಾಥಂ’ ಎಂದು ಕೊನೆಗೊಳ್ಳುತ್ತದೆ.

ಗುಣನಂದಿ

ಗುಣನಂದಿ

             ಪ್ರಾಚೀನ ಕನ್ನಡ ಕವಿಗಳಲ್ಲಿ ಗುಣನಂದಿಯೆಂಬ ಹೆಸರಿನ ಕವಿಯೊಬ್ಬನಿದ್ದನೆಂಬುದು ಮುಖ್ಯವಾಗಿ ಮಲ್ಲಿಕಾರ್ಜುನನ (ಸು. 1245) ಸೂಕ್ತಿ ಸುಧಾರ್ಣವ ಮತ್ತು ಕೇಶಿರಾಜನ (ಸು.1260) ಶಬ್ದಮಣಿದರ್ಪಣ ಎಂಬ ಗ್ರಂಥಗಳಲ್ಲಿ ದೊರೆಯುವ ಎರಡು ಸ್ಪಷ್ಟವಾದ ಉಲ್ಲೇಖಗಳಿಂದ ತಿಳಿದು ಬಂದಿದೆ. ‘ಸೂಕ್ತಿಸುಧಾರ್ಣವ’ದ ಪೀಠಿಕಾ ಪ್ರಕರಣದಲ್ಲಿ ‘ಜನ್ನನ ದೇಸೆ ಪಂಪನ ಗುಣಂ ಗುಣನಂದಿಯ ತೊಂಡು.. ಸಮಾನುರುಕ್ತಿಯಿಂ | ದನ್ನೆಲಸಿರ್ಪುವೀ ಸುಕವಿಮಲ್ಲನ ಕಾವ್ಯವಿಳಾಸಗೇಹದೊಳ್’ ಎಂದೂ ಶಬ್ದಮಣಿದರ್ಪಣದಲ್ಲಿ ‘ಗಜಗನಗುಣನಂದಿಯ ಮನ | ಸಿಜನಸಗನ.. ಸುಮಾರ್ಗಮಿದಱೋಳೆ ಲಕ್ಷ್ಯಂ’ ಎಂದೂ ಉಕ್ತವಾಗಿದೆ. ಇಷ್ಟಲ್ಲದೆ, ಶಬ್ದಮಣಿದರ್ಪಣದಲ್ಲಿಯೇ ಸಂಧಿ ಪ್ರಕರಣದಲ್ಲಿ ಸೂತ್ರವೊಂದಕ್ಕೆ ಪ್ರಯೋಗವಾಗಿ ‘ಚುರ್ಚಿದವೊಲ್ ಬಿಸಿಲಳುರೆ ಕಿ | ಮುಱ್ಚಿದ ಲತೆಯಂತೆ ನೊಂದು ಗುಣನಂದಿ...’ ಎಂಬ ಕಂದಪದ್ಯದ ಭಾಗವೊಂದುಂಟು.

ಗುಣನಂದಿಯ ಪ್ರಾಚೀನತೆ

 • ಇಲ್ಲಿ ಬಂದಿರುವ ಗುಣನಂದಿಯೆಂಬ ಹೆಸರಿನ ಮೇಲೆ, ಈ ಕಂದಭಾಗ ಗುಣನಂದಿ ಕೃತವಾದ ಗ್ರಂಥದಿಂದ ತೆಗೆದುದೋ ಇಲ್ಲವೇ ಅವನ ವಿಷಯವಾಗಿ ಹುಟ್ಟಿರುವ ಬೇರೆ ಗ್ರಂಥದಿಂದ ತೆಗೆದುದೋ ತಿಳಿಯದು- ಎಂಬುದಾಗಿ ಕರ್ಣಾಟಕ ಕವಿಚರಿತೆಕಾರರು ತಮ್ಮ ಊಹೆಯನ್ನು ಮಂಡಿಸಿ ದ್ದಾರೆ. ಸ್ವಲ್ಪ ಈಚಿನ ನಂಜುಂಡಕವಿ (ಸು.1525) ರಾಮನಾಥಚರಿತವೆಂಬ ತನ್ನ ಸಾಂಗತ್ಯಗ್ರಂಥದಲ್ಲಿ ಗುಣನಂದಿಯೆಂಬವನನ್ನು ಸ್ತುತಿಸಿರುವುದು ಕಾಣುತ್ತದೆ. ಈ ಗುಣನಂದಿಯೂ ಮೊದಲಿನೆರಡು ಉಲ್ಲೇಖಗಳ ಗುಣನಂದಿಯೂ ಒಬ್ಬ ವ್ಯಕ್ತಿಯೋ ಬೇರೆಬೇರೆಯೋ ಹೇಳುವುದು ಕಷ್ಟ.
 • ಶಬ್ದಮಣಿದರ್ಪಣದ ಪ್ರಯೋಗಭಾಗದ ಆಶಯವೂ ಸಂದಿಗ್ಧವಾದ್ದು. ಇದಕ್ಕೆ ಮೊದಲಿನ ಎರಡು ಉಲ್ಲೇಖಗಳೇ ಗುಣನಂದಿಯೆಂಬ ಕನ್ನಡ ಕವಿಯೊಬ್ಬನ ಅಸ್ತಿತ್ವವನ್ನು ಸ್ಥಾಪಿಸಲು ಸಮರ್ಥವಾದವು. ಮಲ್ಲಿಕಾರ್ಜುನನೂ ಆತನ ಮಗ ಕೇಶಿರಾಜನೂ ತಂತಮ್ಮ ಗ್ರಂಥಗಳಿಗೆ ಗುಣನಂದಿಯೆಂಬ ಪೂರ್ವಕವಿಯೊಬ್ಬನ ಒಂದೋ ಹಲವೋ ಗ್ರಂಥಗಳಿಂದ ಪದ್ಯಗಳನ್ನೂ ಪ್ರಯೋಗಗಳನ್ನೂ ಕ್ರಮವಾಗಿ ಆಯ್ದುಕೊಂಡಿರುವ ಸಾಧ್ಯತೆಯನ್ನು ಒಪ್ಪಬಹುದು. ಆ ಗ್ರಂಥ ಅಥವಾ ಗ್ರಂಥಗಳು ಯಾವುದೆಂಬುದು ಮಾತ್ರ ತಿಳಿಯುವಂತಿಲ್ಲ.
 • ಕವಿಚರಿತೆಕಾರರು,ಪೂಜ್ಯಪಾದಕೃತವಾದ ಜೈನೇಂದ್ರ ವ್ಯಾಕರಣಕ್ಕೆ ಈ ಗುಣನಂದಿ ಪ್ರಕ್ರಿಯಾವತಾರ ಎಂಬ ವ್ಯಾಖ್ಯಾನ ಗ್ರಂಥವೊಂದನ್ನು ಬರೆದಿದ್ದಾನೆಂದು ತಿಳಿಸಿದ್ದಾರೆ. ಈ ವ್ಯಾಖ್ಯಾನಕರ್ತೃ ಗುಣನಂದಿಯೂ ಮಲ್ಲಿಕಾರ್ಜುನಕೇಶಿರಾಜೋಕ್ತ ಕನ್ನಡಕವಿ ಗುಣನಂದಿಯೂ ಒಬ್ಬನೇ ವ್ಯಕ್ತಿ ಯೆಂದು ತಿಳಿಯುವುದಕ್ಕೆ ತಕ್ಕ ಪ್ರಮಾಣಗಳಿಲ್ಲ. ಕನ್ನಡ ಕವಿ ಗುಣನಂದಿ ಬರೆದ ಕೃತಿ ಲಭ್ಯವಾಗದೆ ಇದರ ವಿಮರ್ಶೆ ಸಾಧ್ಯವಾಗಲಾರದು.
 • ಗುಣನಂದಿ ಕವಿಯ ಕಾಲವನ್ನು ಕರ್ಣಾಟಕ ಕವಿಚರಿತಕಾರರು ಸು.900 ಎಂದು ಹೇಳಿದ್ದಾರೆ. ಶ್ರವಣಬೆಳ್ಗೊಳದ 66,117, 127ನೆಯ ಶಾಸನಗಳಲ್ಲಿ ಕೀರ್ತಿತನಾಗಿರುವ ಗುಣನಂದಿಪಂಡಿತಯತಿಯೇ ಮೇಲೆ ಉಲ್ಲೇಖಿಸಿರುವ ಗುಣನಂದಿಕವಿಯೆಂಬುದು ಅವರ ಗ್ರಹಿಕೆ. ಈ ಗ್ರಹಿಕೆಗೆ ಕಾಲನಿರ್ಣಯಕ್ಕೆ ಮುಖ್ಯ ಕಾರಣವೆಂದರೆ ಆ ಯತಿಗೆ ಹೇಳಿರುವ ವಿಶೇಷಣಗಳು ಮತ್ತು ಶಾಸನೋಕ್ತ ಗುರುಪರಂಪರೆ. ಪೂರ್ವೋಕ್ತ ಶಾಸನಗಳಲ್ಲಿ ಈತನನ್ನು ಚಾರಿತ್ರಚಕ್ರೇಶ್ವರ, ತರ್ಕವ್ಯಾಕರಣಾದಿ ಶಾಸ್ತ್ರನಿಪುಣ, ಸಾಹಿತ್ಯವಿದ್ಯಾಪತಿ ಮುಂತಾಗಿ ಕರೆದಿದೆ.
 • ಅಲ್ಲದೆ ಈತನಿಗೆ 300 ಜನ ಶಿಷ್ಯರಿದ್ದರೆಂದೂ ಇವರಲ್ಲಿ ದೇವೇಂದ್ರಸೈದ್ಧಂತಿಕನೆಂಬುವನು ಉತ್ಕೃಷ್ಟತಮನೆಂದೂ ಹೇಳಿದೆ. 1115ರಲ್ಲಿ ಹುಟ್ಟಿದ 127ನೆಯ ಶಾಸನದ ಗುರುಪರಂಪರೆಯನ್ನು ಗಮನಿಸಿ. ಈ ದೇವೇಂದ್ರ ಸೈದ್ಧಾಂತಿಕನೇ ಪಂಪನ(941) ಗುರುವಾದ ದೇವೇಂದ್ರಮುನಿಯಾಗಿರಬೇಕೆಂದೂ ಆದಕಾರಣ, ಪಂಪನ ಗುರುವಿನ ಗುರು ಗುಣನಂದಿ ಸು. 900 ರಲ್ಲಿದ್ದಿರಬಹುದೆಂದೂ ಕವಿಚರಿತಕಾರರು ಊಹೆ ಮಾಡಿದ್ದಾರೆ.
 • ಈ ಊಹೆಯನ್ನು ಎ. ವೆಂಕಟಸುಬ್ಬಯ್ಯನವರು ಅಲ್ಲಗಳೆದಿದ್ದಾರೆ. ಶ್ರವಣಬೆಳ್ಗೊಳದ 127ನೆಯ ಶಾಸನದ ಗುರುಪರಂಪರೆಯನ್ನು ಕುರಿತು ಕವಿಚರಿತಕಾರರು ಅಭಿಪ್ರಾಯ ಸಾಧುವಾಗಿಲ್ಲವೆಂದು ಹೇಳಿ ಅದನ್ನು ವಿಮರ್ಶಿಸಿ, ಶಾಸನೋಕ್ತ ಗುಣನಂದಿಯೂ ಆತನ ಶಿಷ್ಯ ದೇವೇಂದ್ರಮುನಿಯೂ ಪ್ರ.ಶ. 700ಕ್ಕಿಂತ ಹಿಂದೆ ಇದ್ದವರು, ಪ್ರ.ಶ.ಸು. 900 ರಲ್ಲಿದ್ದವರಲ್ಲ ಎಂದು ವಾದಿಸಿದ್ದಾರೆ. ಹಾಗಾದರೆ ಶ್ರವಣಬೆಳ್ಗೊಳದ ಶಾಸನದಲ್ಲಿ ಈತನನ್ನು ಸಾಹಿತ್ಯ ವಿದ್ಯಾಪತಿ ಮುಂತಾಗಿ ಸ್ತುತಿಸಿದೆಯಲ್ಲ.
 • ಕನ್ನಡದಲ್ಲಿ ಅಷ್ಟು ಹಿಂದೆಯೇ ಈತ ಏನಾದರೂ ಬರೆದಿದ್ದಿರಬಹುದೇ ಎಂಬ ಪ್ರಶ್ನೆಗೆ ಏನು ಉತ್ತರ? ಈತನಿಗೆ ಹೇಳಿರುವ ವಿಶೇಷಣಗಳಿಂದ ಈತನನ್ನು ಪಂಡಿತನೆಂದು ತಿಳಿಯಬಹುದಲ್ಲದೆ ಕವಿಯೆಂದೇನೂ ತಿಳಿಯಬೇಕಾಗಿಲ್ಲ. ಒಂದು ಪಕ್ಷ ಈತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದಿದ್ದರೆ ಕವಿರಾಜಮಾರ್ಗ, ಕಾವ್ಯಾವಲೋಕನಗಳಲ್ಲಿ ಈತನ ಹೆಸರಿನ ಪ್ರಸ್ತಾಪವಿರುತ್ತಿದ್ದಿತು-ಎಂದು ವೆಂಕಟಸುಬ್ಬಯ್ಯನವರು ಹೇಳಿ, ಅಂಥ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅವರ ನಿರ್ಣಯ ಎಂದರೆ- ಶಾಸನೋಕ್ತ ಗುಣನಂದಿ ಪ್ರ.ಶ.ಸು. 700ಕ್ಕೆ ಪುರ್ವದಲ್ಲಿದ್ದ ಒಬ್ಬ ಬೇರೆಯೇ ವ್ಯಕ್ತಿ.
 • ಸೂಕ್ತಿ ಸುಧಾರ್ಣವ, ಶಬ್ದಮಣಿದರ್ಪಣಗಳಲ್ಲಿ ಉಕ್ತನಾಗಿರುವ ಗುಣನಂದಿ ಇನ್ನೊಬ್ಬ ಬೇರೆಯೇ ವ್ಯಕ್ತಿ. ಈ ಎರಡನೆಯಾತ ಆಚಣ್ಣ, ಜನ್ನ, ಪಾಶರ್ಚ್‌ಪಂಡಿತ, ಗುಣವರ್ಮ ಮುಂತಾದ 13ನೆಯ ಶತಮಾನದ ಕವಿಗಳಿಂದ ಉಲ್ಲೇಖಿಸಲ್ಪಡದಿರುವ ಕಾರಣ ಅವರಿಂದ ಈಚೆಗೆ ಸೂಕ್ತಿ ಸುಧಾ ರ್ಣವ, ಶಬ್ದಮಣಿದರ್ಪಣಗಳ ಕಾಲಕ್ಕಿಂತ ಮುಂಚೆ, ಸು.1250ರಲ್ಲಿದ್ದು ಕನ್ನಡದಲ್ಲಿ ಕಾವ್ಯರಚನೆ ಮಾಡಿದ.
 • ಹೀಗೆ ಗುಣನಂದಿಕವಿಯ ಚರಿತ್ರೆಯಲ್ಲಿ ಕೆಲವು ತೊಡಕುಗಳಿರುವುದು ದಿಟವಾದರೂ ಮಲ್ಲಿಕಾರ್ಜುನ ಕೇಶಿರಾಜರಿಗೆ ಮೊದಲು ಗುಣನಂದಿಯೆಂಬ ಒಬ್ಬ ಕವಿಯಿದ್ದುದೂ ಆತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದುದೂ ಸ್ಪಷ್ಟವಾದ ವಿಷಯ. ಆಯಿಬ್ಬರೂ ಉಲ್ಲೇಖಿಸಿರುವ ಗುಣನಂದಿ ಹಾಗೂ ಶಾಸನಗಳಲ್ಲಿ ಉಕ್ತನಾಗಿರುವ ಗುಣನಂದಿ ಇಬ್ಬರೂ ಅಭಿನ್ನರೋ ಅನ್ಯಾನ್ಯರೋ ಎನ್ನುವ ಅಂಶ ಮಾತ್ರ ಇನ್ನೂ ನಿಷ್ಕೃಷ್ಟವಾಗಿ ತಿಳಿದಿಲ್ಲ. ಪ್ರಸ್ತುತ ಗುಣನಂದಿಕವಿಯ ಪ್ರಸ್ತಾಪ ಬಂದಾಗ, ವಿದ್ವಾಂಸರು ಕರ್ಣಾಟಕ ಕವಿಚರಿತೆಕಾರರ ಅಭಿಪ್ರಾಯವನ್ನೇ ಉದ್ಧರಿಸುವುದು ಕಾಣುತ್ತೇವೆ.
-ಕೃಪೆ: ವಿಕಿಪೀಡಿಯಾ
******************

ಅಸಗ

ಅಸಗ
ಕಾಲ: ಕ್ರಿ.ಶ.ಸು. ೮೫೩                                                                                    - ಕೃಪೆ: ವಿಕಿಪೀಡಿಯಾ
ಜೈನಧರ್ಮಿಯ
ಕೃತಿ:  ‘ಕರ್ಣಾಟಕುಮಾರಸಂಭವ ಕಾವ್ಯಂ
         ಪೂರ್ವಸೂರಿ ಕವಿ. ಇವನನ್ನು ಪೊನ್ನನಿಂದ ಆರಂಭಿಸಿ ಮುಂದಿನ ಹಲವಾರು ಕನ್ನಡಕವಿಗಳು ಮುಕ್ತಕಂಠದಿಂದ ಹೊಗಳಿದ್ದಾರೆ. ಕೇಶಿರಾಜನಂಥ ಲಾಕ್ಷಣಿಕ ಇವನ ಪದ್ಯಗಳನ್ನು ಲಕ್ಷ್ಯಗಳಾಗಿ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಕನ್ನಡದಲ್ಲಿ ಕರ್ಣಾಟ ಕುಮಾರಸಂಭವ ಎಂಬ ಕೃತಿಯನ್ನು ರಚಿಸಿರುವುದಾಗಿ ಜಯಕೀರ್ತಿ ಹೇಳುತ್ತಾನೆ. ಆದರೂ ಇವನ ಈ ಕೃತಿಯಾಗಲಿ ಅಥವಾ ಕನ್ನಡದಲ್ಲಿ ಬರೆದಿದ್ದರೆ, ಆ ಇತರ ಕೃತಿಗಳಾಗಲಿ ಲಭ್ಯವಾಗಿಲ್ಲ.
       ವರ್ಧಮಾನ ಮಹಾವೀರ ತೀರ್ಥಂಕರನ ಜೀವನವನ್ನು ವಸ್ತುವಾಗಿ ಉಳ್ಳ ವರ್ಧಮಾನ ಚರಿತ ಮತ್ತು ಶಾಂತಿನಾಥ ತೀರ್ಥಂಕರನ ಜೀವನವನ್ನು ನಿರೂಪಿಸುವ ಶಾಂತಿಪುರಾಣ ಎಂಬ ಅವನ ಸಂಸ್ಕೃತಕೃತಿಗಳು ದೊರಕಿವೆ. ಈ ಸಂಸ್ಕೃತಕವಿ ಅಸಗನೂ ಕನ್ನಡಕವಿ ಅಸಗನೂ ಅಭಿನ್ನರು ಎಂದು ಹೆಸರಿನ ಹೋಲಿಕೆಯಿಂದ ನಂಬಬಹುದಾಗಿದೆ.
       ವರ್ಧಮಾನಚರಿತವನ್ನು ಸಂವತ್ಸರ 910ರಲ್ಲಿ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಕೃತಿಯನ್ನು ಬರೆದಮೇಲೆ ಶಾಂತಿಪುರಾಣವನ್ನು ಬರೆದಿರುವುದರಿಂದಲೂ ಈ ಶಾಂತಿ ಪುರಾಣವನ್ನೂ ಇತರ ಕೃತಿಗಳನ್ನೂ ನೋಡಿರಬಹುದಾದ ಪೊನ್ನ ತನ್ನ ಕನ್ನಡ ಶಾಂತಿಪುರಾಣವನ್ನು ಸು. 950ರಲ್ಲಿ ರಚಿಸಿರುವುದರಿಂದಲೂ ಈ ತೇದಿಗಿಂತ ಹಿಂದೆಯೇ ಅಸಗ ಸಾಕಷ್ಟು ಪ್ರಸಿದ್ಧನಾಗಿರಬೇಕು. ಆದ್ದರಿಂದ ಸಂವತ್ಸರ 910 ಎಂಬುದು ಶಾಲಿವಾಹನವಲ್ಲ, ವಿಕ್ರಮ ಸಂವತ್ಸರ ಎಂದು ಆ.ನೇ.ಉಪಾಧ್ಯೆ ಅವರು ಸಕಾರಣವಾಗಿ ಊಹಿಸಿ, ವರ್ಧಮಾನ ಚರಿತದ ರಚನೆಯ ಕಾಲ ಪ್ರ.ಶ. 853 ಎಂದು ತೀರ್ಮಾನಿಸಿದ್ದಾರೆ.
       ವರ್ಧಮಾನಚರಿತ ಮತ್ತು ಶಾಂತಿಪುರಾಣಗಳಲ್ಲಿ ಕವಿ ತನ್ನ ಸ್ವಂತ ವಿಷಯಗಳನ್ನು ಹೇಳಿಕೊಂಡಿದ್ದಾನೆ. ಪಟುಮತಿ ಅವನ ತಂದೆ. ವೈರೆತಿ ಅವನ ತಾಯಿ. ಇಬ್ಬರೂ ನಿಷ್ಠಾವಂತ ಜೈನರು. ಶಬ್ದ ಸಮಯಾರ್ಣವಪಾರಂಗತನಾಗಿದ್ದ ನಾಗನಂದ್ಯಾಚಾರ್ಯ ಅಸಗನ ಗುರು. ಪ್ರ.ಶ. 853ರಲ್ಲಿ ಭಾವಕೀರ್ತಿಮುನಿಯ ಸಾನ್ನಿಧ್ಯದಲ್ಲಿ ವರ್ಧಮಾನಚರಿತವನ್ನು ಕವಿ ಬರೆದು ಮುಗಿಸಿದ. ಈ ಕೃತಿರಚನೆಗೆ ಕಾರಣಕರ್ತಳಾದವಳು ಮೌದ್ಗಲ್ಯ (ಮಾಂದ್ಗಲ್ಯ) ಪರ್ವತದ ತುದಿಯಲ್ಲಿ ವಾಸವಾಗಿದ್ದ ಸಂಪತ್ ಎಂಬ ಶ್ರಾವಕಿ (ಈ ಪರ್ವತ ಯಾವುದು ಎಂಬುದಿನ್ನೂ ನಿರ್ಧಾರವಾಗಬೇಕಾಗಿದೆ). ಬಳಿಕ ಆತ ಚೋಡಳ ದೇಶಕ್ಕೆ ಬಂದು ಅಲ್ಲಿ ಶ್ರೀನಾಥನ ಸಾಮ್ರಾಜ್ಯದಲ್ಲಿ ವಿರಲಾ ಎಂಬ ಪಟ್ಟಣದಲ್ಲಿ ಜೈನಧರ್ಮಸಂಬಂಧಿಯಾದ ಎಂಟು ಕೃತಿಗಳನ್ನು ರಚಿಸಿದ. ಅಸಗನಿಗೆ ಜಿನಾಪ ಎಂಬ ಹೆಸರಿನ ಮಿತ್ರನಿದ್ದ. ಈತ ಬ್ರಾಹ್ಮಣನಾದರೂ ಜೈನಧರ್ಮದಲ್ಲಿ ಆಸಕ್ತನಾಗಿದ್ದ (ಬಹುಶಃ ಆತ ಜೈನಬ್ರಾಹ್ಮಣ). ತನಗೆ ದೀರ್ಘ ಕೃತಿಯೊಂದನ್ನು ರಚಿಸಲು ಆತ್ಮವಿಶ್ವಾಸ ಸಾಲದೆ ಹೋಗಿದ್ದರೂ ತನ್ನ ಗೆಳೆಯನಿಗೆ ಪುರಾಣಗಳ ವಿಷಯದಲ್ಲಿ ಇದ್ದ ಶ್ರದ್ಧೆಯ ಫಲವಾಗಿ ಅಸಗ ಶಾಂತಿಪುರಾಣವನ್ನು ರಚಿಸಿದ. ಇವನ ವರ್ಧಮಾನಚರಿತವನ್ನು ಧವಲನೆಂಬ ಅಪಭ್ರಂಶ ಕವಿ ತನ್ನ ಹರಿವಂಶ ಪುರಾಣದಲ್ಲಿ ಪ್ರಶಂಸಿಸಿದ್ದಾನೆ. ವರ್ಧಮಾನಚರಿತಕ್ಕೆ ಸುಮಾರು 17ನೆಯ ಶತಮಾನಕ್ಕೆ ಸೇರಿದ ಒಂದು ಟೀಕೆಯಿದೆ.

ಮೇಲೆ ಹೇಳಿದಂತೆ ಅಸಗ ಆ ಎರಡು ಸಂಸ್ಕೃತ ಕಾವ್ಯಗಳನ್ನಲ್ಲದೆ ಇನ್ನೂ ಎಂಟು ಕೃತಿಗಳನ್ನು ರಚಿಸಿದ್ದಾನೆ. ಅವು ಯಾವ ಭಾಷೆಯಲ್ಲಿವೆಯೋ ತಿಳಿಯದು.
      ಪೊನ್ನ ತನ್ನ ಶಾಂತಿಪುರಾಣದಲ್ಲಿ ತಾನು ಕನ್ನಡಗವಿತೆಯಲ್ಲಿ ‘ಕನ್ನಡ ಕವಿತೆಯೊಳ್ ಅಸಗಂಗಂ ನೂರ್ಮಡಿ’ ಎಂದು ಹೇಳಿಕೊಂಡಿದ್ದಾನೆ. ದುರ್ಗಸಿಂಹ ಮತ್ತು ನಯಸೇನರು ಅಸಗನ ದೇಸಿಯನ್ನು ಕೊಂಡಾಡಿದ್ದಾರೆ. ವರ್ಧಮಾನಪುರಾಣದ ಕರ್ತೃ ಆಚಣ್ಣ (ಸು. 1195) ಇವನನ್ನು ಸ್ಮರಿಸಿದ್ದಾನೆ. ಬ್ರಹ್ಮಶಿವ (ಸು. 1180) ಪೊನ್ನ ಪಂಪರ ಸಾಲಲ್ಲಿ ಹೇಳಿರುವ ರಜಕ ಯಾರೂ ಅಲ್ಲ, ಅಸಗನೇ. ಕೇಶಿರಾಜ (ಸು. 1260) ತನ್ನ ಶಬ್ದಮಣಿದರ್ಪಣದಲ್ಲಿ ಅಸಗನಿಂದಲೂ ಭಾಷಾಪ್ರಯೋಗಗಳನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.
      ಇಷ್ಟಾದರೂ ಅಸಗ ಕನ್ನಡದಲ್ಲಿ ಬರೆದದ್ದೇನು ಎಂಬುದು ಮಾತ್ರ ತಿಳಿದುಬಂದಿಲ್ಲ. ಜಯಕೀರ್ತಿ ತನ್ನ ಛಂದೋನುಶಾಸನದ ಏಳನೆಯ ಅಧಿಕಾರದಲ್ಲಿ ಸಮಾನಾಕ್ಷರ (ದೊರೆಯಕ್ಕರ) ಎಂಬ ಅಂಶವೃತ್ತ ಅಸಗನ ಕರ್ಣಾಟ ಕುಮಾರಸಂಭವದಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾನೆ. (ಅಸಗಾಖ್ಯ ಕವಿನಾ ಪ್ರತಿಪಾದಿತಂ ನನು ಕರ್ಣಾಟ ಕುಮಾರಸಂಭವ ಕಾವ್ಯೇ). ಹಾಗೆಯೇ ಛಂದೋವತಂಸ ಎಂಬ ಇನ್ನೊಂದು ಅಂಶವೃತ್ತ ಕುಮಾರಸಂಭವ ಮುಂತಾದ ಕಾವ್ಯಗಳಲ್ಲಿದೆ ಎನ್ನುತ್ತಾನೆ (ಛಂದೋವತಂಸ ನಾಮೇತಿ ಚತುಷ್ಪದಿಕಾ ಸಂದೃಷ್ಟಾಸೌ ಕುಮಾರಸಂಭವಾದೌ). ಇದರಿಂದ ಕೊನೆಗೂ ಅಸಗನ ಕನ್ನಡ ಕೃತಿಯೊಂದರ ಹೆಸರು ದೊರೆತಂತಾಯಿತು.
        ಆದರೆ ಆ ಕಾವ್ಯದ ಸ್ವರೂಪವೇನೋ ತಿಳಿಯದು. ಹೆಸರನ್ನು ನೋಡಿದರೆ ನಮಗೆ ಸಹಜವಾಗಿ ಸಂಸ್ಕೃತಕವಿ ಕಾಳಿದಾಸನ ಕುಮಾರಸಂಭವ ಜ್ಞಾಪಕಕ್ಕೆ ಬರುತ್ತದೆ. ಇದು ಅದರ ಅನುವಾದವಿರಬಹುದೇ? ನಮಗೆ ತಿಳಿದಮಟ್ಟಿಗೆ ಯಾವ ಪ್ರಾಚೀನ ಕನ್ನಡ ಕವಿಯೂ ಸಂಸ್ಕೃತ ಕೃತಿಯೊಂದನ್ನು ಅದು ಇರುವಂತೆಯೇ ಅನುವಾದಿಸಿಲ್ಲ. ಹಾಗಾದರೆ ಇದು ಅದರ ರೂಪಾಂತರವೇ ಇರಬಹುದು. ಆದರೆ ಎಂಥ ರೂಪಾಂತರ? ತಿಳಿಯದು. ಅದರ ವಸ್ತು ಶಿವಪಾರ್ವತಿಯರ ವಿವಾಹಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲು ಅಭ್ಯಂತರವಿಲ್ಲ.
          ಎರಡನೆಯ ನಾಗವರ್ಮನ (ಸು. 1145) ಕಾವ್ಯಾವಲೋಕನದಲ್ಲಿ ಶಿವ ಪಾರ್ವತಿಯರಿಗೆ ಸಂಬಂಧಿಸಿದ ಸುಮಾರು ಹದಿಮೂರು ಪದ್ಯಗಳಿವೆ. ಮಲ್ಲಿಕಾರ್ಜುನನ (ಸು. 1245) ಸೂಕ್ತಿ ಸುಧಾರ್ಣವದಲ್ಲಿ ಶಿವಶಿವೆಯರನ್ನು ಕುರಿತ ಕೆಲವು ಪದ್ಯಗಳಿವೆ. ಕೇಶಿರಾಜನ ಶಬ್ದಮಣಿ ದರ್ಪಣದಲ್ಲೂ ಅವರನ್ನು ಕುರಿತ ಪದ್ಯಗಳು ಪದ್ಯಖಂಡಗಳು ಇವೆ. ಇವೆಲ್ಲವೂ ಅಲ್ಲದಿದ್ದರೂ ಕೆಲವಾದರೂ ಅಸಗನ ಕರ್ಣಾಟ ಕುಮಾರಸಂಭವ ಕಾವ್ಯಕ್ಕೆ ಸೇರಿದ ಪದ್ಯಗಳಿರಬಹುದು ಎಂದು ವಿದ್ವಾಂಸರು ಊಹೆ ಮಾಡಿದ್ದಾರೆ. ಆದರೆ ಅಲ್ಲಿ ಒಂದು ಮಾತನ್ನು ಹೇಳುವುದು ಆವಶ್ಯಕ. ಆ ಪದ್ಯಗಳನ್ನು ಬರೆದ ಕವಿ ಒಬ್ಬನೇ ಆಗಿದ್ದರೆ ಅವನಿಗೆ ಶಿವನಲ್ಲಿ ಅಪಾರವಾದ ಗೌರವ, ಭಕ್ತಿಭಾವನೆಗಳಿವೆ. ಕಾವ್ಯಾವಲೋಕನದಲ್ಲಿ ಶಿವ ಮತ್ತು ಪಾರ್ವತಿಯರಿಗೆ ಇಂದ್ರ ನಮಸ್ಕಾರ ಮಾಡಿದುದರ ವರ್ಣನೆಯನ್ನಾಗಲಿ, ಶಿವ ನಮ್ಮನ್ನು ಕರುಣಿಸಲಿ ಎಂಬ ಪ್ರಾರ್ಥನಾ ಪದ್ಯವನ್ನಾಗಲಿ ನೋಡಬಹುದು. ಅರ್ಧನಾರೀಶ್ವರನ ವರ್ಣನೆಯಲ್ಲಿ ವ್ಯಂಗ್ಯ ಕುಚೋದ್ಯಗಳ ಸುಳಿವೂ ಇಲ್ಲ. ಮತ್ತು ಎಲ್ಲಿಯೂ ಜೈನಧರ್ಮದ ಛಾಯೆಯೂ ಕಂಡುಬರುವುದಿಲ್ಲ. ಅಲ್ಲಿ ಧ್ವನಿತವಾಗಿರುವ ಕಥೆ ಎಲ್ಲರಿಗೂ ಪರಿಚಿತವಾದ ಶಿವಪಾರ್ವತಿಯರ ವಿವಾಹ. ಜೈನನಾದ ಅಸಗ ಹೀಗೆ, ಇಷ್ಟು ಅಪಾರ ಭಕ್ತಿಯಿಂದ ಅನ್ಯದೈವವೊಂದರ ಕತೆಯನ್ನು ರಚಿಸಲು ಸಾಧ್ಯವೇ ಎಂಬ ಸಂದೇಹವೂ ಮೂಡದಿರದು. ಏಕೆ ಸಾಧ್ಯವಿಲ್ಲ ಎಂದು ಉತ್ತರವನ್ನು ಕೊಡಲೂ ಸಾಧ್ಯ. ಆ ಪದ್ಯಗಳು ಅಸಗನವು ಇರಬಹುದೇ ಎಂದು ಊಹಿಸುವಾಗ ಮೇಲಿನ ಸಂಗತಿ ಮನಸ್ಸಿನಲ್ಲಿದ್ದರೆ ಒಳ್ಳೆಯದು. ಒಟ್ಟಿನಲ್ಲಿ ಈತನ ಕನ್ನಡ ಕೃತಿಗಳು ದೊರೆಯುವವರೆಗೂ ಇವನ ವಿಷಯವಾಗಿ ಹೆಚ್ಚೇನನ್ನೂ ಹೇಳಲಾಗುವುದಿಲ್ಲ.

ದುರ್ವಿನೀತ

 ದುರ್ವಿನೀತ
  * ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ.
  * ಈತನ ಕಾಲ -ಕ್ರಿ.ಶ.ಸು.೬೦೦
   * ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ.
  * ಈತ ವೈಷ್ಣವ ಮತಾವಲಂಬಿಯಾಗಿದ್ದನು.
  * ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು.
  * ಈತ ಗುಣಾಡ್ಯನ “ವಡ್ಡ ಕಥಾವನ್ನು” ಪೈಶಾಚಿ ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದನು.
  * ಈತನ ಇನ್ನಿತರ ಕೃತಿಗಳೆಂದರೆ: ’ಕಿರಾತಾರ್ಜುನೀಯ ಟೀಕ’, ಸಂಸ್ಕೃತದಲ್ಲಿ ’ಶಬ್ದಾವತಾರ’(?), ಕನ್ನಡದಲ್ಲಿ ’ವಡ್ಡಕಥೆ’(?)
  * ತನ ಗುರು - ಪುಷ್ಯಪಾದ ಅಥವಾ ದೇವಾನಂದಿ.
  * ತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ. ಅಹೀತ, ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ, ನೀತಿಶಾಸ್ತ್ರ ವಕ್ತ, ಪ್ರಯೋಕ್ಷ ಕುಶಲ
  * ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ.