ನನ್ನ ಪುಟಗಳು

10 ಅಕ್ಟೋಬರ್ 2017

ಮರ ...ಮತ್ತು ಜೀರ್ಣೋದ್ಧಾರ

ಹಸಿದ ಹಕ್ಕಿಯ ಒಡಲು ತುಂಬಿದ ಹಣ್ಣು.
ಜೀರ್ಣವಾಗದೇ..
ಹಿಕ್ಕೆಯಿಂದ ಹೊರಬಿದ್ದ ಬೀಜ
ಗಿಡವಾಗಿ ಹೆಮ್ಮರವಾಗಿ ರಸ್ತೆಯ ಪಕ್ಕ
ಅರಳಿನಿಂತಿದೆ !
ನೆರಳ ಬಯಸಿ ಮೈಯೊಡ್ಡುವವರಿಗೆ,
ಆಡಿ ಹಾಡುವ ಹಕ್ಕಿಗಳಿಗೆ, ಹೀಗೆ..ಹೀಗೆ
ಮರಕ್ಕೀಗ ಧನ್ಯತೆಯ ಭಾವ !
 ಆದರೆ…
ಮರದ ಬುಡದಲ್ಲೀಗ ಗಂಟೆಯ ಸದ್ದು
ಎಂದೋ ಬಿದ್ದೇ ಇದ್ದ ಕಲ್ಲು
ಮೈ ಕೆಂಪಾಗಿಸಿ ಧಡಕ್ಕನೆ ಎದ್ದು ನಿಂತಿದೆ !
ಇನ್ನು ಮರ ಹಾಗೆಯೇ…ಜೀರ್ಣವಾಗಲಿದೆ
ಏಕೆಂದರೆ…
ಎದ್ದು ನಿಂತ ದೇವರ ಜೀರ್ಣೋದ್ಧಾರವಾಗಲಿದೆ !!
ಮುಂದೊಂದು ದಿನ ಗುಡಿಯ ಮೇಲೆ
ಹಕ್ಕಿಯ ಹಿಕ್ಕೆಗಳು ಬಿದ್ದರೆ ?
ಚರ್ಚೆಯಾಗುತ್ತಿರುವಾಗಲೇ…
ಪತ್ರಿಕೆಯಲ್ಲಿ ಸುದ್ದಿ-“ರಸ್ತೆ ಅಗಲವಾಗುತ್ತಿದೆ “
                          
ರಚನೆ:
ನಾರಾಯಣ.ಪಿ.ಭಾಗ್ವತ
ಸರಕಾರಿ.ಪ.ಪೂ.ವಿ.ಪ್ರೌಢ ಶಾಲಾ ವಿಭಾಗ, ಮಳಗಿ.

 9481861862
bhagwatmalagi@gmail.com


****************

ಬದಲಾವಣೆ

                ಬದಲಾವಣೆ
                  ಜೀವನ ಉಲ್ಲಾಸ ಪಯಣ
                   ಚಿರನೂತನ ರೋಮಾಂಚನ
                     ಚಿರಯೌವ್ವನ ಚಿರಸೌಖ್ಯವು
                       ನಗುತಿರಲಿ ಅನುದಿನವು ಈ ಯಾತ್ರೆಯಲಿ|| ಜೀವನ||

                ಹೊಸಬರಲಿ ಹಳಬರಲಿ
                  ಎಳೆಯರಲಿ ಗೆಳೆಯರಲಿ
                     ದ್ವೇಷ ತೊರೆದು ಸ್ನೇಹ ಮೆರೆದು
                         ನಯ-ವಿನಯವ ತುಂಬುವ || ಜೀವನ್ ||

                ಪರಿಚಿತರಲಿ ಸ್ನೇಹಿತರಲಿ
                  ಹಿತೈಷಿಗಳಲಿ ಒಡನಾಡಿಗಳಲಿ
                    ಮೇರೆಯ ಮೀರುತ ಸಜ್ಜನಿಕೇಯ
                       ಬೆಳೆ-ಬೆಳೆಸುತ್ತಾ ಮುಂದೋಡುವ || ಜೀವನ ||

ರಚನೆ:
ಗಾಯತ್ರಿ
RICEMMS 

ಚಿನ್ನ (ಚೆನ್ನ)

ಮುಂಜಾನೆ ಮಂಜಲ್ಲಿ
ಕೊರೆಯುವ ಚಳಿಯಲ್ಲಿ
ನಿನಗಾಗಿ ಸುಪ್ರಭಾತ ಗೀತೆಯನ್ನು
ನಾ ಹಾಕುತ್ತಿರುವೆ ಗೆಳತಿ.                                        
ನನ್ನ ಮನಸ್ಸಿನ, ಮುಗ್ಧ ಕನಸನ್ನು
ನೋಡು ಬಾ ಗೆಳತಿ, ನನ್ನಲ್ಲಿ ನಿನಾಗಿ.             
ತಪ್ಪು ತಿಳಿಯದು ಎನ್ನ,
ನೀನೇ ನನ್ನ ಪ್ರೀತಿ ಚಿನ್ನ,
ಮುಗಿಯದಿಲಿ ನಮ್ಮ ಪ್ರೀತಿಯ ಪಯಣ,
ಕೊನೆಯವರೆಗೂ ನಾವು ಜೊತೆಯಾಗಿದ್ದರೆ ಎಷ್ಟು ಚೆನ್ನ (ಚಿನ್ನ)

ರಚನೆ:
  ನಾಗರಾಜ ಎಸ್ ವಿ
  ದಾವಣಗೆರೆ


**************

ಕನ್ನಡ - ಕನ್ನಡಿಗ

           ಈಗೊಂದು ತಿಂಗಳ ಕೆಳಗೆ ನಮಗೆ ರಜೆ ಇದ್ದ ಸಂದರ್ಭ ಎಂದೆಣಿಸುತ್ತೇನೆ. ಮನೆಯಲ್ಲಿದ್ದ ನನ್ನನ್ನು ದೊಡ್ಡಪ್ಪ ಕರೆದರು. ನಾನು ಅವರೊಂದಿಗೆ ಪಕ್ಕದೂರಿಗೆ ಬ್ಯಾಂಕಿಗೆ ಹೋಗಬೇಕಾಗಿ ಬಂತು, ಸರಿ ಹೊರಟೆ. ತಕ್ಕ ಮಟ್ಟಿಗೆ ಓದಿದವರೇ, ಆಗಿನ ಕಾಲಕ್ಕೆ ಐದು-ಆರನೇ ತರಗತಿ ಹೆಚ್ಚಲ್ಲವೇ?! ಆದರೆ ಸಮಸ್ಯೆ ಅದಲ್ಲ ಬ್ಯಾಂಕಿನ ಚೀಟಿಗಳಲ್ಲಿರುವ ಭಾಷೆ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ. ಓಕೆ ಆ ಸಂದರ್ಭದಲ್ಲಿ ನಾನವರಿಗೆ ನೆರವಾದೆ. ವಾಪಾಸು ಬರಲು ಅಣಿಯಾಗುವಾಗ "ತಮ್ಮಾ, ಇದೊಂಚೂರು ಏನು ನೋಡ್ತೀಯಾ?!" ಶಬ್ದ, ತಿರುಗಿ ನೋಡಿದೆ. ೫೦-೫೫ ವರ್ಷದವ ಮಗನಿಗೆ ಹಣ ತುಂಬಲು ಚಲನ್ ಬರೆಯಬೇಕಿತ್ತು, ಆಯ್ತು ಬರೆದುಕೊಟ್ಟೆ. ಸುತ್ತಲೂ ನೋಡಿದೆ ಅಲ್ಲಲ್ಲಿ ಅದೇ ವಾತಾವರಣ. ಇನ್ನೇನು ಮನೆ ಕಡೆಗೆ ಹೊರಟೆ, ಮಿರ್ಚಿ-ಮಂಡಕ್ಕಿ ತಿಂದು.
           ಸುಮ್ನೆ ಉದಾಹರಣೆಗೆ ಇರ್ಲಿ ಅಂತ ಹೇಳ್ದೆ ಅಷ್ಟೇ.  ಇದೇ ಪರಿಸ್ಥಿತಿ ರೈಲ್ವೇ, ಅಂಚೆ ಕಛೇರಿ, ಗ್ಯಾಸ್ ಸಿಲಿಂಡರ್, ಪಾಸ್ ಪೋರ್ಟ್, ಇತ್ಯಾದಿ ಎಲ್ಲೆಡೆ ಸರ್ವೇ ಸಾಮಾನ್ಯ. ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬಲ್ಲಿ, ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ.
          ನಾನು ಗಮನಿಸಿದಂತೆ ನಮ್ಮ ಹಿರಿಕರು ಕನ್ನಡವನ್ನು ಚೆನ್ನಾಗಿ ಬಲ್ಲವರು. ಇದೇ ಪ್ರದೇಶದಲ್ಲಿ ಭಾರತ ಸ್ವತಂತ್ರವಾಗುವ ಮುನ್ನವೇ,  ಬ್ರಿಟಿಷರು-ಪೋರ್ಚುಗೀಸರು-ಡಚ್ಚರು ಬರುವ ಮುನ್ನವೇ, ಸಹಸ್ರ ವರ್ಷಗಳ ಹಿಂದಿನಿಂದಲೂ ಪ್ರಾಮುಖ್ಯತೆ ಹೊಂದಿದ್ದ ಒಂದು ಭಾಷೆಗೆ ಈಗ ಬೆಲೆ ಇಲ್ಲದಂತಾಗುತ್ತಿದೆ. ಅದು ಬಿಡಿ, ನಮ್ಮ ತಂದೆ-ತಾಯಿಯರು ಕರ್ನಾಟಕದಲ್ಲಿ ಕನ್ನಡ ತಿಳಿದೂ ಅನಕ್ಷರಸ್ಥರಾಗಿದ್ದಾರೆ. ಗುಲಾಮರಂತೆ ಇನ್ನೊಬ್ಬರ ಸಹಾಯ ಕೇಳುವ ಸ್ಥಿತಿ ಅವರದ್ದಾಗಿದೆ. ಹಾಗಂತ ಬೇರೆ ಯಾವ ಭಾಷೆಯೂ ಬೇಡವೆಂಬ ತರ್ಕ ನನ್ನದಲ್ಲ.
         ಇದನ್ನು ನನ್ನ ಭಾಷೆಯೊಂದರ ಪರಿಸ್ಥಿತಿ ಎಂದೂ ಹೇಳುತ್ತಿಲ್ಲ.  ಸುತ್ತಲಿನ ಮರಾಠಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷಿಕರಲ್ಲೂ ಇದೇ ಸಮಸ್ಯೆ ಇದ್ದಿರಬಹುದು. ಇದರ ಬಗ್ಗೆ ನಮ್ಮ ಘನ ಭಾರತ ಮತ್ತು ರಾಜ್ಯ ಸರ್ಕಾರಗಳು ಯೋಚಿಸಿ, ಒತ್ತು ನೀಡಿ, ಭಾಷೆಗಳು ಕತ್ತಲ ಕೌದಿಗೆಗೆ ಸರಿಯುವ ಮುನ್ನ ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕಾಗಿದೆ.

ಲೇಖಕರು:
  ಚೇತನ್ ಎಂ ಬಿ.
  ಅರೇಹಳ್ಳಿ,  ಚನ್ನಗಿರಿ ತಾ.
  ದಾವಣಗೆರೆ.

*********

ಹೊಗಳಿಕೆ (ಹನಿಗವನ)

ನಿನ್ನ ಹೊಗಳಿ ಅಟ್ಟಕ್ಕೇರಿಸಿ,
ಕೊನೆಗೆ ಉಗುಳಿ ಚಟ್ಟಕ್ಕೇರಿಸುವ
ಹುಡುಗಿ ನಾನಲ್ಲ,
ಎನ್ನ ಕಣ್ಣ ಬಾನಿನ ಹೊಳೆವ ಚಂದಿರ ನೀನು,
ಹೊಳೆವ ಮುಗ್ದ ಮನದ ಚೆಲುವ ನೀನು,
ನಿನ್ನ ಗುಣವ ಮೆಚ್ಚಿ ಬಂದವಳು ,
ಆಸೆಯಿಂದ ಕೈಚಾಚಿದರೆ ತಪ್ಪೇನು ನಾನು?

ರಚನೆ:
   ಸೌಮ್ಯ ಜಿ ಜೆ
   ನಂದಿ ಗ್ರಾಮ, ನಂದಿ ಹೋಬಳಿ, 
   ಚಿಕ್ಕಬಳ್ಳಾಪುರ. 


*********

ರವಿಯ ಹಾರೈಕೆ ಮನುಜನಿಗೆ

ರವಿ ತಾನ್ ಮೂಡಿತು
ಮೂಡಣದೊಳಗೆ,
ಪ್ರಕಾಶಿಸಿತು ತಾನ್ ಪ್ರಜ್ವಲಿಸಿತು
ತನ್ನೊಳಗಿನ ಕಿರಣಗಳಿಂದೆಮಗೆ,
ಆಸ್ಪಂದಿಸಿತು ತಾನ್ ಆಸ್ವಾದಿಸಿತು
ವಸುಂಧರೆಯೊಡನೆ,
ಬಡಿದೆಬ್ಬಿಸಿತು ತಾನ್ ಸ್ಪರ್ಶಿಸಿತು ನಿಸರ್ಗದ ಮಡಿಲೊಳಗಿರುವ
ಸಕಲಜೀವರಾಶಿಗಳೊಡನೆ,
               ನಿನ್ನ ವೈಖರಿಯ ಸೊಬಗನು ಬಣ್ಣಿಸಲು ನಾನ್
               ಸರಿಸಾಟಿಯಲ್ಲ,
               ನಿನ್ನ ಋಣದ ಭಾರವನು ತೀರಿಸಲು ಜನ್ಮ ಜನ್ಮಾಂತರಗಳನ್
               ಎತ್ತಿ ಬಂದರು ತೀರಿಸಲಾಗುವುದಿಲ್ಲ,
               ಪೇಳ್ ರವಿಯೇ ಪೇಳ್
               ನಿನ್ನ ಋಣ ಭಾರವ ತಿರಿಸುವುದಾದರು ಹೇಗೆ?
               ಪೇಳ್ವೆನು ನಾನು ಆಲೈಸು ಹೀಗೆ,
ನನ್ನ ಉದರದೊಳು ಅಗಾಧ ಉಷ್ಣಕಿರಣಗಳಿಟ್ಟು ಕೊಂಡು
ಪರರ ಅಭ್ಯುದಯಕ್ಕಾಗಿ ಉರ್ಮಿಗೆ ನೀಡುತ,
ಸಕಲರ ರಕ್ಷಕನಾಗಿದ್ದುಕೊಂಡು
ಸರ್ವರನು ಸಲಹುತ,
ಸರ್ವಾಂತರ್ಯಾಮಿಯಾಗಿ ಬಾಳುತ್ತಿದ್ದೇನೆ
ಅದೇ ನನ್ನ ಜೀವಿತದ ಸಾರ್ಥಕತೆ
                 ಮಾನಸನಾದ ನೀನು ನಿನ್ನೊಳಗಿನ ಸ್ವಾರ್ಥ ಅಹಮಿಕೆಯ ಕೂಪದಿಂದ
                 ಮನದ ಮಲಿನವನು ಮಸಣಕ್ಕೆ ಸಾಗಿಸುತ ನೀನು,
                 ನಿನ್ನ ತನು ಮನವು ಈ ಮನ್ವಂತರದ, ಮಾನಧನ, ಮಾನವೀಯ ಮೌಲ್ಯಗಳಿಂದ
                 ಮಹಾಹರನ ಮೃಢ ಭಕ್ತಿಯ ಶರಣನಾಗು ನೀನು,
                 ಪರರ ಬದುಕಿಗೆ, ಪರ ಜೀವಿಗೆ ಸಹಾಯಿಸುವ ಸರದಾರನಾಗು
                 ಅದೇ ನಿನ್ನ ಬದುಕಿನ ಸಾರ್ಥಕತೆ
                 ಇದೇ ನಿನಗೆ ನನ್ನ ಹಾರೃಕೆ..

ಮಬ್ಬು ಗತ್ತಲು
ಮನುಕುಲದ ಮಂಕಾದ ಮೈಮನವು
ಮುಲುಕು ಮರುಕವನು ಆಲೈಸಿತು ನಸುಗತ್ತಲು
ತಂಪಾದ ಮಾರುತ ಇಂಪಾದ ಮಂಜುಳವ
ಮೊರಹು ಮೋಹಿಸಿತು ಮಾನಿಷನ ತನುಮನವಲು
ಕೃತ್ಯಗಳಿಂದ ಮಲ್ಮಶಗೊಂಡಿರುವ
ಮನಃಪೂರ್ವಕಂ ಮಂಕರಿಸಲು
ಮೇಳೈಸಿ ಗಾಢ ನಿದ್ರಾದೇವಿಗೆ ವರಿಸುವ
ಮೊದಲು ಸೊಂಪಾಗಿ ಚೈತನ್ಯಕರಿಸಲು
ಸಹಾಯಿಸಿತು ಮಬ್ಬುಗತ್ತಲಿನ ಈ ವಾಯು ವಿಹಾರವ
ನಿನಗೆ ಮನಂಗಳ್ ಮೌನದಿಂ
ಅನುದಿನವು ಅನುಕ್ಷಣವು ಕಾತರದಿಂದ ಕಾಯುತಿಹಲು
ನಿವೇದಿಸುತ ನಿನಗೆ ನನ್ನ ಸಫಲತೆಯ ನಮನಂ....

ಶಬ್ದಗಳ ಅರ್ಥ:-
ಮುಲುಕು-ನರಳಾಟ, ಮರುಕ- ಬೇಗುದಿ, ನೋವು, ಮಾರುತ- ಗಾಳಿ, ಮಂಜುಳ- ಮಧುರವಾದ, ಮೊರಹು- ದುಂಬಿಯ ಝೆಂಕಾರ, ಮೋಹಿಸುತ- ಮೈಮರೆ, ಕೃತ್ಯ-ಕೆಲಸ, ಮಲ್ಮಷ- ಮನಸ್ಸಿನೊಳಗೆ ಕಲ್ಮಶಗೊಂಡಿರುವ ಗುಣಗಳು,
ಮಬ್ಬು- ನಸುಗತ್ತಲು, ಮನಃಪೂರ್ವಕಂ-ಮನಸ್ಸಪೂರ್ತಿಯಾಗಿ, ಮಂಕರಿಸು- ಆವರಿಸು, ಮರುಳುಗೊಳ್ಳು, ಮೇಳೈಸು- ಜೊತೆಗೂಡಿಸು, ವರಿಸು- ಒಪ್ಪಿಸು, ಮನಂಗಳ್- ಮನಸ್ಸನ್ನು ಆಕರ್ಷಿಸು, ಸಫಲತೆ- ಸಾರ್ಥಕತೆ.

ರಚನೆ:
    ಸುಮಲತಾ ಟಿ ಎಸ್
    ಕನ್ನಡ ಶಿಕ್ಷಕರು,
    ಕುಮದ್ವತಿ ರೆಸಿಡೆನ್ಸಿಯಲ್ ಸೆಂಟ್ರಲ್ ಸ್ಕೂಲ್,
    ಶಿಕಾರಿಪುರ


*********

ಶಾಲೆ ಬಿಟ್ಟ ಮಕ್ಕಳ ಗೀತೆ

ಯೋಗರಾಜ್ ಭಟ್ಟ ರು ಬರೆದ " ಪರಪಂಚ" ಚಿತ್ರದ ಹಾಡನ್ನು ಶಾಲೆಗೆ ಸಂಬಂಧಿಸಿ ಬದಲಾಯಿಸಿ ಬರೆದ
                                            ಶಾಲೆ ಬಿಟ್ಟ ಮಕ್ಕಳ ಗೀತೆ
 ( ಯೋಗರಾಜ ಭಟ್ಟರ ಕ್ಷಮೆ ಕೋರಿ -ಶಾಲೆ ಬಿಟ್ಟ ಮಗುವಿಗಾಗಿ ಈ ಪದ್ಯ ಸಮರ್ಪಣೆ)

ವಿದ್ಯೆಯ ಕಲಿಯದೆ ಅರ್ಧಕ್ಕೆ ಶಾಲೆಬಿಟ್ರೆ
ಇನ್ನೇನು ಬಿಡುವುದು ಬಾಕಿ ಇದೆ
ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ
ಎಲ್ಲಾರ್ದು ಎಸ್.ಎಸ್.ಎಲ್.ಸಿ ಪಾಸಾಗಿದೆ

ಊರ ಗೆಳೆಯರ ಖುಷಿಯ ನೋಡದ ಎಂದು ಕೇಳದ ನಗುವನ್ನು
ಶಾಲೆಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು
ನಿಂಗಿದು ಬೇಕಿತ್ತ ಮಗನೇ,
ವಾಪಸ್ಸು ಶಾಲೆಗೋಗು ಸಿವನೆ
ಬ್ಯಾಗು ಹಿಡಿ ಸೀದಾ ನಡಿ ವಿದ್ಯೆ ಬೇಕು ಶಾಲ್ಚೆ ನಡಿ

ಬ್ಯಾರೆಲ್ಲೆ ಇದ್ದರೂ ಇದ್ದು ಸತ್ತಂತೆ ವಿದ್ಯೆಲಿ ನಿನ್ನ ಉಸಿರಿದೆ
ನಿನ್ನೂರ ಶಾಲೆಯ ದಾಖಲೆಯಲ್ಲಿ ನಿನ್ನಪ್ಪ ಬರೆಸಿಟ್ಟ ಹೆಸರಿದೆ
ಅಪ್ಪನ ಮಾತಿಗೆ ಗುರುಗಳ ಕೋಪಕೆ ಶಾಲೆಯ ಬಿಟ್ಟು ನೀ ಬಂದೆ
ಪಟ್ಟಣಕೆ ಬಂದು ಹೋಟ್ಲಲ್ಲಿ ಸೇರ್ಕೊಂಡು ಎಂಜಲು ತೆಗೆಯುವ ಕೂಸಾದೆ

ಶಾಲೆಲಿ ಸೈಕಲ್ಲೀಗ ಕೊಡ್ತಾರೊ
ಕೆನೆಹಾಲು ಎಲ್ರೂ ಕುಡಿತಾರೊ
ಮಧ್ಯಾಹ್ನ ಬಿಸಿಊಟ ಇದೆಯಂತೆ
ಶೂಗಳ  ಭಾಗ್ಯತಂದರಂತೆ
ಪ್ರತಿಭಾ ಕಾರಂಜಿಯು ಐತಂತೆ
ಸ್ಕಾಲರ್‍ಶಿಪ್ ಹಣ ಜಮಾ ಆಯ್ತಂತೆ

ಗೆಳೆಯರೆಲ್ಲರು ಹೊಂಟಾರೋ ಸಂತಸದಿಂದ ಕೂಡಿ ಕುಣಿತಾರೊ
ನಿನಗೂ ಡಿಮ್ಯಾಂಡಿದೆ ಮಗನೆ ವಾಪಸ್ಸು ಶಾಲೆಗೋಗು ಸಿವನೆ

ಬ್ಯಾಗು ಹಿಡಿ ಸೀದಾ ನಡಿ ವಿದ್ಯೆ ಬೇಕು ಶಾಲ್ಗೆ ನಡಿ .............. ( ವಿದ್ಯೆಯ ಕಲಿಯದೆ ಚರಣ)

 ಇದ್ದಕ್ಕಿದ್ದಂತೆ ಏನೇನೊ ಅನಿಸಿ ಕಣ್ಣು ತುಂಬಿಕೊಳ್ಳೋದ್ಯಾಕೆ
ಅಪ್ಪಆಮ್ಮ ಇಬ್ರು ಹತ್ರಕೂತ್ಕೊಂಡು ಅಳಬ್ಯಾಡ  ಅಂದಂಗಾಗೋದ್ಯಾಕೆ
ದಿಕ್ಕು ಗೆಟ್ಟವನು ಕಾಲಿದ್ದು ಹೆಳವ  ಎತ್ಲಾಗೆ ಹೋದರು ಒಂದೆ ನೀನು
ಶಾಲೆಗೆ ಬಂದು ವಿದ್ಯೆಯ ಕಲ್ತ್ಕೊಂಡು ಗೆಳೆಯರಂತೆ ಜಾಣ ಆಗು ನೀನು

ಚಡ್ಡಿದೋಸ್ತ್ರೆಲ್ಲ ನಿನ್ನ ಬೈತಾರೆ
ಶಾಲೆ ಬಿಟ್ಟಾ ಅಂತ ನಗ್ತಾರೆ
ಕಲಿಸಿದ ಮೇಷ್ಟ್ರು ಕರಿತವ್ರೆ
ಶಾಲೆಗೆ ಬರ್ತಿನಂತ ಕಾಯ್ತವ್ರೆ
ಅಪ್ಪಅಮ್ಮಂಗೆ ನಾಚಿಕೆಯಾಗಿ
 ಊರಾಗೆ ತಿರುಗೋದು ಕಷ್ಟಾಗಿದೆ

ಅಪ್ಪಂಗೆ ಉಸಿರೆ ಸಾಕಾಗಿದೆಅವ್ವಂಗೆ ನೆನಪೇ ನಿಂತೋಗಿದೆ
ಕಂಡೀಸನ್ ಹೀಂಗಿದೆ ಮಗನೆ ವಾಪಸ್ಸು ಶಾಲ್ಗೆ ಬಾರೋ ಸಿವನೆ

ಬ್ಯಾಗು ಹಿಡಿ ಸೀದಾ ನಡಿ ಕಣ್ಣೊರೆಸಿ ಶಾಲ್ಗೆ ನಡಿ...........( ವಿದ್ಯೆಯ ಕಲಿಯದೆ ಚರಣ)



ರಚನೆ:
ನಾರಾಯಣ.ಪಿ.ಭಾಗ್ವತ
ಸರಕಾರಿ.ಪ.ಪೂ.ವಿ.ಪ್ರೌಢ ಶಾಲಾ ವಿಭಾಗ, ಮಳಗಿ.
bhagwatmalagi@gmail.com


 
 
*******************

ಹಣತೆ : ಒಂದು ಸಣ್ಣ ಕಥೆ!

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.
"ನಾನು ನನ್ನಿಂದ" ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
÷÷÷÷÷÷÷÷÷÷÷÷÷÷÷÷÷÷÷÷÷
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ. ನಾನು ಜೀವಮಾನದಲ್ಲಿ ಯಾರನ್ನೂ ನೋಯಿಸಿಲ್ಲ ಎನ್ನುವವನೂ ಸಹ ತನ್ನ ತಾಯಿಯನ್ನು ನೋಯಿಸಿಯೇ ಈ ಭೂಮಿಗೆ ಬಂದಿರುತ್ತಾನೆ ....!!!
"Respect everyone."

( ಸಂಗ್ರಹ )
ನಾರಾಯಣ.ಪಿ.ಭಾಗ್ವತ
ಸರಕಾರಿ.ಪ.ಪೂ.ವಿ.ಪ್ರೌಢ ಶಾಲಾ ವಿಭಾಗ, ಮಳಗಿ.
bhagwatmalagi@gmail.com


 *******

ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕರ ಆದರ್ಶದ ಬದುಕು

                             ಸಾಧನೆಯ ಕ್ಷೇತ್ರ ಇಂತಹುದೆ ಆಗಿರಬೇಕು ಎಂದೇನೂ ಇಲ್ಲ, ಅದು ಯಾವುದೇ ಇರಲಿ ಉನ್ನತವಾದ ಗುರಿಯನ್ನು ಹೊಂದಿ ಅಸಾಧ್ಯವಾದುದನ್ನು ಸಾಧಿಸಲೇಬೇಕೆಂಬ ಛಲವೊಂದಿದ್ದರೇ ಎಂತಹುದೆ ಗುರಿಯನ್ನಾದರೂ ಸಾಧಿಸಬಹುದೆಂಬ ನಿದರ್ಶನ ವ್ಯಕ್ತಿತ್ವವುಳ್ಳ ಮಹಾನ್ ವ್ಯಕ್ತಿಗಳು ಈ ನಾಡಿನಲ್ಲಿ ಹುಟ್ಟಿ ಸಾರ್ಥಕ ಬದುಕಿನ ಸಾಧಕರಾಗಿದ್ದಾರೆ. ಅಂತಹ ಸಾಧಕರಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಡಾ. ಬಿ.ಎಫ್.ದಂಡಿನರವರು ಕಾಣಸಿಗುತ್ತಾರೆ. ಶಿಕ್ಷಣದ ಮೇಲೆ ಅಪಾರ ಪ್ರೇಮ, ಸಾಮಾಜಿಕ ಹಿತ ಚಿಂತನೆ ಹಾಗೂ ಬಡವ-ದೀನ-ದಲಿತರ ಮೇಲಿನ ಕಾಳಜಿ ಇವು ಇವರಲ್ಲಿನ ಆದರ್ಶಗಳು.
           ಡಾ.ದಂಡಿನರವರು ರೋಣ ತಾಲೂಕಿನ ದ್ಯಾಮುಣಸಿ ಗ್ರಾಮದ ಬಡಕುಟುಂಬದಲ್ಲಿ ೧೯೩೫ ಅಗಷ್ಟ ೫ ರಂದು ಜನಿಸಿದರು. ಇವರ ತಂದೆ ಫಕ್ಕಿರಪ್ಪ, ತಾಯಿ ದ್ಯಾಮವ್ವ. ಡಾ.ದಂಡಿನರವರು ಬಡತನದ ಬೇಗೆಯ ಬುತ್ತಿಯನ್ನೇ ಉಣ್ಣುತ್ತ ತಮ್ಮ ಪ್ರತಿಭೆಯ ಬಲದಿಂದ ಸಂಖ್ಯಾಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಡತನದ ನೋವನ್ನು ಅರಿತ ಇವರು ಗ್ರಾಮೀಣ ಹಾಗೂ ಬಡ ಮಕ್ಕಳ ಶಿಕ್ಷಣದ ಸಲುವಾಗಿ ಸದಾ ಚಿಂತಿಸುತ್ತಲೇ ಇದ್ದರು. ೧೯೬೩ರಲ್ಲಿ ಹಿರೇಕುಂಬಿ ಗ್ರಾಮದ ಬೆಳವಡಿ ಮನೆತನದ ಶಿವಪ್ಪ ಮತ್ತು ಲಕ್ಷ್ಮವ್ವ ದಂಪತಿಗಳ ಮಗಳಾದ ಶಕುಂತಲಾದೇವಿಯವರನ್ನು ವಿವಾಹವಾದರೂ ಮುಂದೆ ಶ್ರೀಮತಿ ಶಕುಂತಲಾದೇವಿಯವರು ತಮ್ಮ ಪತಿಯ ಸಾಧನೆಗೆ ಸ್ಪೂರ್ತಿಯ ಸೆಲೆಯಾಗಿ ನಿಂತರು.
                   ೧೯೬೫ರಲ್ಲಿ ಗದುಗಿನಲ್ಲಿ ಕನಕದಾಸ ಗಂಡು ಮಕ್ಕಳ ಪ್ರಸಾದ ನಿಲಯ ಆರಂಭಿಸುವ ಮೂಲಕ ಕನಕದಾಸ ಶಿಕ್ಷಣ ಸಮಿತಿಯನ್ನು ಸಂಸ್ಥಾಪಿಸಿದರು. ತಾವು ವಿದ್ಯಾರ್ಥಿ ಜೀವನದಲ್ಲಿ ಉಚಿತ ಪ್ರಸಾದ ನಿಲಯದಲ್ಲಿಯೇ ಆಶ್ರಯ ಪಡೆದು ಆಡಂಬರ ಜೀವನದ ಮೋಹ ಬೆಳೆಸಿಕೊಳ್ಳದೇ ಸರಳ ಶಿಸ್ತು ಬದ್ದ ಆದರ್ಶ ವಿದ್ಯಾರ್ಥಿಯಾಗಿ ಬೆಳೆದರು ಇದೇ ಕಾರಣ ಇರಬಹುದೇನೋ ಅವರು ಶಿಕ್ಷಣ ಕೊಡುವುದರೊಟ್ಟಿಗೆ ಉಚಿತ ಅನ್ನದಾನದ ಪ್ರಸಾದ ನಿಲಯದ ಮೂಲಕ ಕನಕದಾಸ ಶಿಕ್ಷಣ ಸಮಿತಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಉಚಿತ ಪ್ರಸಾದ ಹಾಗೂ ವಸತಿ ನಿಲಯ ನಡೆಸಲು ತುಂಬಾ ತೊಂದರೆಯಿತು ಆದರೂ ಹೇಗೋ ನಿಭಾಯಿಸಿಕೊಂಡು ತಮ್ಮ ಟ್ಯೂಶನ್ನಿನಿಂದ ಬಂದ ವರಮಾನವನ್ನು ವಿದ್ಯಾರ್ಥಿಗಳ ಊಟೋಪಚಾರಕ್ಕೆ ಹಾಕಿ ನಡೆಸಿಕೊಂಡು ಬಂದರು. ಪ್ರಸಾದ ನಿಲಯದಲ್ಲಿ ಕೆಲವು ಬಾರಿ ಅಡುಗೆಯವರು ಬರದ ಸಂದರ್ಭದಲ್ಲಿ ತಮ್ಮ ಮನೆಯಿಂದಲೇ ಅಡುಗೆ ಮಾಡಿಸಿ ವಿದ್ಯಾರ್ಥಿಗಳಿಗೆ ಊಟ ಬಡಿಸಿರೋ ನಿದರ್ಶನಗಳು ಇವೆ. ಹಾಗೂ ಆದರ್ಶಗಳು ಕೇವಲ ಮಾತುಗಳಲ್ಲಿ ಇಲ್ಲ, ಕೃತಿಯಲ್ಲಿವೆ ಎಂಬುದಕ್ಕೆ ಉತ್ತಮ ನಿದರ್ಶನವೆಂದರೆ ೧೯೭೫-೭೬ ರ ಸಂದರ್ಭದಲ್ಲಿ ಡಾ. ದಂಡಿನ ದಂಪತಿಗಳಿಬ್ಬರು ತಮ್ಮ ನೂತನ ಗೃಹ ಪ್ರವೇಶವನ್ನು ಹರಿಜನ ವಿದ್ಯಾರ್ಥಿಗಳಿಂದ ನೇರವೇರಿಸಿದ್ದು, ಇಂತಹ ಉದಾತ್ತ ಹಾಗೂ ಆದರ್ಶ ಗುಣಗಳು ಈ ದಂಪತಿಗಳಲ್ಲಿ ಇದೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರೊ. ದಂಡಿನರವರ ಸಾಧನೆಯನ್ನು ಗುರುತಿಸಿ ೨೦೧೧ರಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
                  ಡಾ.ದಂಡಿನರವರು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ನೆರಳಾಗಿದೆ ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯು ಸುವರ್ಣ ಮಹೋತ್ಸವವನ್ನು ಪೂರೈಸಿ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಪ್ರಾಥಮಿಕ ಮತ್ತು ಪ್ರೌಢ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳನ್ನು, ಪದವಿ ಪೂರ್ವ ಕಾಲೇಜುಗಳನ್ನು, ಪದವಿ ಮಹಾವಿದ್ಯಾಲಯಗಳನ್ನು, ಸ್ನಾತಕೋತ್ತರ ಮಹಾವಿದ್ಯಾಲಯಗಳನ್ನು ಹೀಗೆ ೬೫ ಅಂಗ ಸಂಸ್ಥೆಗಳನ್ನು ಹೊಂದಿ ಸಾಧನೆಯ ದಾಪುಗಾಲು ಹಾಕುತ್ತಿದೆ.
ಲೇಖಕರು:
ರವಿಚಂದ್ರ ಕೊಣ್ಣೂರ
ಶ್ರೀ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ,
ಅರವಿಂದ ನಗರ, ಹಳೆ ಹುಬ್ಬಳ್ಳಿ ,
ಹುಬ್ಬಳ್ಳಿ.