ನನ್ನ ಪುಟಗಳು

ಸಾರಾಂಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಾರಾಂಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

02 ಸೆಪ್ಟೆಂಬರ್ 2021

10ನೇ ತರಗತಿ ಹಸುರು ಪದ್ಯದ ಸಾರಾಂಶ

 `ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ಕವಿಶೈಲ’ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ.  

           ಹಸುರು ಪದ್ಯಭಾಗದ ಸಾರಾಂಶ 
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ!
   
ಹಸುರಾಗಸ; ಹಸುರು ಮುಗಿಲು;
ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ; ಹಸುರು ಕಣಿವೆ;
ಹಸುರು ಸಂಜೆಯೀ ಬಿಸಿಲೂ!


ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ವಿಶಾಲವಾದ ಶಾಮಲ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು. ಆಗಸದಲ್ಲಿ; ಮುಗಿಲಿನಲ್ಲಿ; ಗದ್ದೆಯ ಬಯಲಿನಲ್ಲಿ; ಬೆಟ್ಟಗುಡ್ಡಗಳಲ್ಲಿ; ಕಣಿವೆಯಲ್ಲಿ; ಸಂಜೆಯ ಬಿಸಿಲಿನಲ್ಲಿ ಎಲ್ಲೆಲ್ಲೂ ಹಸುರು ಹರಡಿತ್ತು.

ಅಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ!

ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ!


ಅಶ್ವೀಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು.

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ!

ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!


ಹೊಸ ಹೂವಿನ ಕಂಪು; ತಂಗಾಳಿಯ ತಂಪು; ಹಕ್ಕಿಯ ಇಂಪಾದ ಗಾನ; ಕಡಲು; ಅತ್ತ-ಇತ್ತ-ಎತ್ತ ನೋಡಿದರೂ ಹಸುರು.. ಹಸುರು.. ಹಸರು.. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು. ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು. ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾರೆ.








*********

07 ಜನವರಿ 2021

10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಸಾರಾಂಶ

 

ಹಲಗಲಿ ಬೇಡರು (10 ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯಪಾಠ) ಲಾವಣಿ ಸಾರಾಂಶ
     ಪ್ರಸ್ತುತ ಲಾವಣಿಯಲ್ಲಿ ಹಲಗಲಿಯ ಬೇಡರು ನಡೆಸಿದ ಬಂಡಾಯದ ಪ್ರಸ್ತಾಪವೇ ಪ್ರಮುಖ ಅಂಶವಾಗಿರುವುದು. ಲಾವಣಿಕಾರ ಬೇಡರನ್ನು ಕತ್ತಿ ಹಿಡಿಯುವ ಜನ ಎಂದು ಕರೆಯಲು ಕಾರಣ ಅವರಲ್ಲಿನ ಶೂರತೆ ಮತ್ತು ಕತ್ತಿ ಹಿಡಿಯುವ ಕಾಯಕ ಅವರಿಗೆ ಅನಿವಾರ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕತ್ತಿ ಶೂರರಾದ ಹಲಗಲಿ ಬೇಡರಿಗೆ ಕತ್ತಿ ಹಿಡಿಯುವ ಸಮಯ ಸನ್ನಿಹಿತವಾಯಿತು. ಆದರೆ ಬೇಡರ ಬಂಡಾಯವು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಯಿತು (ಮುಟ್ಟಲಿಲ್ಲ ದಡಕ). 
        ಬ್ರಿಟಿಷ್ ಸರಕಾರವು ೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯ ನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದಿತು. ಅದರಂತೆ ಎಲ್ಲ ಭಾರತೀಯರನ್ನು ಒಪ್ಪಿಸಿ ಅಥವಾ ಬೆದರಿಸಿಯಾದರೂ ಅವರ ಬಳಿಯಿರುವ ಆಯುಧ (ಹತಾರ)ಗಳನ್ನು ಕಸಿದು ಕೊಳ್ಳಬೇಕೆಂದು ಕಂಪನಿಯ ಸರ್ಕಾರ ಮುಂದಾದಾಗ ಹಲಗಲಿ ಬೇಡರು ಮುಧೋಳದ ಬಳಿ ಸೇರಿದರು. ಪೂಜೇರಿ ಹನುಮ, ಬೇಡರ ಬಾಲ, ಜಡಗ, ರಾಮ ಮೊದಲಾದವರು ಸೇರಿ ನಾವು ನಾಲ್ವರೂ ಜೊತೆಗಿರೋಣ ಯಾವುದೇ ಕಾರಣಕ್ಕೂ ನಮ್ಮ ಬಳಿಯಿರುವ ಆಯುಧಗಳನ್ನು ಕೊಡಬಾರದು ಹತಾರಗಳು (ಆಯುಧಗಳು) ಹೋದರೆ ನಮ್ಮ ಜೀವವೇ ಹೋದಂತೆ ಎಂದು ತೀರ್ಮಾನಿಸಿದರು.
ಬೇಡರೆಲ್ಲರೂ ಕಲೆತು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ನೀವು ಮುಂದಾಗಿ ಯುದ್ಧ ಮಾಡಿರಿ; ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಮ್ಮ ಮುಖಂಡರಿಗೆ ವಚನ ನೀಡಿದರು. ಕಾಯಿದೆಯನ್ನು ಜಾರಿಗೊಳಿಸಲು ಅಂದರೆ ಆಯುಧ ಕೇಳಲು ಬ್ರಿಟಿಷ್ ಅಧಿಕಾರಿ (ಸೆಟನ್ ಕರ್) ಪರವಾಗಿ ಬಂದ ಕಾರಭಾರಿಯ ಕೆನ್ನೆಗೆ ಹೊಡೆದರು. ಇದರಿಂದ ದುಃಖಿತನಾದ ಕಾರಬಾರಿ(ಕಾರಕೂನ) ಈ ವಿಷಯವನ್ನು ತನ್ನ ಸಾಹೇಬನಿಗೆ ತಿಳಿಸಿದನು. ಸಾಹೇಬ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತನ್ನ ಕೆಲವು ಜನರನ್ನು (ಅಶ್ವದಳ) ಹಲಗಲಿಗೆ ಕಳಿಸಿದಾಗ ಮುಂಗಾರಿನ ಸಿಡಿಲು ಸಿಡಿದ ಹಾಗೆ ಊರೊಳಗೆಲ್ಲ ಗುಂಡಿನ ಮಳೆಗರೆಯುತ್ತಾರೆ. (ಬೇಡರು ಆಯುಧ ಕಸಿಯಲು ಬಂದವರ ಮೇಲೆ ಗುಂಡಿನ ಮಳೆ ಸುರಿಸಿದರು) ಬಂದವರು ಬೇಡರ ಧಾಳಿಗೆ ತುತ್ತಾಗಿ ಗಾಯಗೊಂಡು ದಂಗಾಗಿ ಹಿಮ್ಮೆಟ್ಟುತ್ತಾರೆ.
ಸಾಹೇಬ ವಿಧಿಯಿಲ್ಲದೆ ತನ್ನ ಮೇಲಧಿಕಾರಿಗೆ ಕಾಗದ ಬರೆದು ದಂಡನ್ನು ಕಳಿಸುವಂತೆ ಕೋರಿದಾಗ ತರಾತುರಿಯಿಂದ ಹಲಗಲಿಗೆ ದಂಡು ಆಗಮಿಸಿತು. ಬೇಡರನ್ನು ಕಂಡ ಕಂಡಲ್ಲಿ ಹತ್ಯೆಗೈಯ್ಯಲಾಯಿತು. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಸಾಯಿಸಲಾಯಿತು ಚಟೆಕಾರ 'ಜಾಯಿತ ಸಾಹೇಬ' (ಜಿ.ಬಿ.ಸೆಟನ್ ಕರ್, ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿ ಲೆಫ್ಟಿನೆಂಟ್ ಕರ್ನಲ್) ಕಾವಲು ಕಾಯುತ್ತ ಬೇಡರ ಬಿಡಾರಗಳಿಗೆ ನುಗ್ಗಿ ಬೇಡರಿಗೆ ತೊಂದರೆ ನೀಡಿದನು. ಊರಿನ ಮುಖ್ಯ ದ್ವಾರಕ್ಕೆ ಬಂದು ಹೆಬಲಕ್ ಸಾಹೇಬ (ವಿಲಿಯಂ ಹೆನ್ರಿ ಹೆವಲಾಕ್) ಬೇಡರಿಗೆ ಅನ್ಯಥಾ ಸಾಯದೇ ಆಯುಧಗಳನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಬೇಡರ ಹನುಮನಿಗೆ ಹೆಬಲಕ್ ಸಾಹೇಬನ ಮಾತಿನಲ್ಲಿ ನಂಬಿಕೆ ಮೂಡುವುದಿಲ್ಲ. ಬ್ರಿಟಿಷರು ಘಾತಕರು, ವಿಶ್ವಾಸಘಾತ ಮಾಡಿರುವರು ಇವರ ಮೇಲೆ ನಮಗೆ ನಂಬಿಗೆ ಇಲ್ಲ. ಇವರು ಪಿತೂರಿ ಮಾಡಿ ಮೋಸದಿಂದ ನಮ್ಮ ದೇಶ ಗೆಲ್ಲುವವರು, ಮುಂದೆ ನಮಗೆ ಘೋರ ವಿಪತ್ತು ಇವರಿಂದ ಕಾದಿದೆ ಎಂದು ಬಗೆದ ಜಡಗ ಬುದ್ಧಿವಾದ ಹೇಳಲು ಬಂದ ಅಧಿಕಾರಿ(ಹೆಬಲಕ್) ಯ ಮೇಲೆ ಗುಂಡು ಹಾರಿಸಿ ಕಳುಹಿಸಿದನು. ಇದರಿಂದ ಸಿಟ್ಟಾದ ಬ್ರಿಟಿಷರ ಇನ್ನೊಬ್ಬ ಅಧಿಕಾರಿ ಬೇಡರ ಊರನ್ನೇ ಲೂಟಿ ಮಾಡುವಂತೆ ತನ್ನ ಜನರಿಗೆ ಆದೇಶ ನೀಡಿದನು. ಸಿಟ್ಟಿನಿಂದ ಬ್ರಿಟಿಷರು ಒಂದೇ ಸಮನೆ ಗುಂಡಿನ ಮಳೆ ಸುರಿಸಿದರು. ಹನುಮ, ಬಾಲ, ಜಡಗ, ರಾಮರ ಹೋರಾಟ ವ್ಯರ್ಥವಾಯಿತು. ಎಲ್ಲೆಡೆಯೂ ರಕ್ತದ ಕಾಲುವೆ ಹರಿಯಿತು. ಆದರೆ ಬೇಡರ ಹೋರಾಟ ಫಲಕಾರಿಯಾಗದೆ ನಾಲ್ಕು ಮಂದಿ ಬೇಡರ ಮುಖಂಡರು ವೀರ ಮರಣವನ್ನು ಹೊಂದಿದರು.
ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರ, ಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು. ಕೊನೆಗೆ ಇಡೀ ಊರಿಗೆ ಬೆಂಕಿ ಇಟ್ಟರು. ಹಲಗಲಿ ಊರು ಸುಟ್ಟು ಬೂದಿಯಾಯಿತು. ಗುರುತೇ ಸಿಗದಂತೆ ನಾಶವಾಯಿತು. ಕುರ್ತಕೋಟಿ ಕಲ್ಲೇಶನ ದಯದಿಂದ ಲಾವಣಿಕಾರ ಈ ಎಲ್ಲ ವಿಷಯಗಳನ್ನು ತಾನು ಕಂಡಷ್ಟು ವರ್ಣಿಸಿರುವುದಾಗಿ ಹೇಳಿದ್ದಾನೆ.
(ಈ  ಸಾರಂಶವನ್ನು ಮಮತಾ ಭಾಗ್ವತ ಅವರ  ಪ್ರತೀಕ್ಷಾ ದಿಂದ ತೆಗೆದುಕೊಳ್ಳಲಾಗಿದೆ)
********* 
ಹಲಗಲಿ ಭೂಪಟ (ಕೆಂಪು ಗೆರೆಯಲ್ಲಿ ಗುರುತು ಮಾಡಿದ ಭಾಗ)



ಲಾವಣಿ - ಕಿರು ಪರಿಚಯ : (ಕೃಪೆ - ಡಾ.ಪ್ರಕಾಶ ಗ.ಖಾಡೆ)   Download Here
ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ‘ದಕ್ಷಿಣ ಮಹಾರಾಷ್ಟ್’ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕ, ಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆ, ಡೋಲಕದ ತಾಳ ಹಿಡಿದು, ವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯ, ಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ. ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ, ವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.

ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ

ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ. ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಭೀರತೆ, ಶೃಂಗಾರ, ಟೀಕೆ, ಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.

ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ

ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯ, ತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.  ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲ, ಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮ, ಲಕ್ಷ್ಮಣ, ಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.

ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ

ಇಲ್ಲಿ ಬಳಸಿರುವ ಕಲ್ಲನಾಗರ, ಬರಿಗಾಲ, ಹುಣಚಿಬೀಜ, ಕಾರಿಕಾಯಿ, ಬಾರಿಕಾಯಿ ‘ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.

ಲಾವಣಿಯ ಚರಿತ್ರೆ
          ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಫ್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾಧಿಕಾರ ವಹಿಸಿಕೊಂಡು ಕನ್ನಡ ಕಲಿತು, ಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆ, ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆ, ಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ‘ಕುಂಪಣಿ’ಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಫ್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ.

ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
        ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋಧಿ ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
            ಹುಲಕುಂದ ಲಾವಣಿಕಾರರು
    ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂಧೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
            ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಭೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಭೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ ಹೆಸರಾದರು.
        18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಢಿಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
        ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
[ಈ  ಮೇಲಿನ ಮಾಹಿತಿಯನ್ನು ಡಾ.ಪ್ರಕಾಶ ಗ.ಖಾಡೆ ಯವರ ಖಾಡೆ@ಜಾನಪದ ದಿಂದ ತೆಗೆದುಕೊಳ್ಳಲಾಗಿದೆ.]
******

************

06 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ಸಾರಾಂಶ

ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಭಾವಾರ್ಥ
   'ಹಕ್ಕಿಹಾರುತಿದೆ ನೋಡಿದಿರಾ' ಕವನ ಬೇಂದ್ರೆಯವರ 'ಗರಿ' ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಜಗತ್ತನ್ನು, ಜೀವ-ಜೀವನಗಳನ್ನು, ಮಾತ್ರವಲ್ಲ, ಅಖಿಲ ಬ್ರಹ್ಮಾಂಡವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ’ಕಾಲ’ವನ್ನು ಹಕ್ಕಿಗೆ ಹೋಲಿಸಿ ವರಕವಿ ರಚಿಸಿರುವ ರೂಪಕ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿತೆಗಳಲ್ಲೊಂದು. ಕಾಲದ ಗತಿಯನ್ನು ಮತ್ತು ಆಯಾಮವನ್ನು ಹಕ್ಕಿಯ ಹಾರಾಟಕ್ಕೆ ಹೋಲಿಸಿ ಕವಿಯಿಲ್ಲಿ ಹಕ್ಕಿಯ ರೂಪ(ಕ)ದಲ್ಲಿ ಕಾಲಕೋಶದಲ್ಲಿ ಪಯಣಿಸಿದ್ದಾರೆ. ಅಮೂರ್ತ ಸ್ವರೂಪದ ಕಾಲವನ್ನು ಮೂರ್ತ ರೂಪದ ಹಕ್ಕಿಗೆ ಸಮೀಕರಿಸಿ ದೃಶ್ಯ ರೂಪ ನೀಡಿದ್ದಾರೆ.
***********

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? |೧|


    ಭಾವಾರ್ಥ: ಈ ಚರಣದಲ್ಲಿ ಕವಿ ಕಾಲದ ಗತಿಯನ್ನು ವೇಗವನ್ನು ಚಿತ್ರಿಸಿದ್ದಾರೆ. ಕಾಲದ ಹಕ್ಕಿಯು ಅಗಣಿತ ಇರುಳುಗಳನ್ನು ಕಳೆದು, ಅಪರಿಮಿತ ದಿನಗಳನ್ನು ಬೆಳಗುತ್ತಾ ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿ (ಗಾವುದ ಗಾವುದ) ಮುಂದೆ ಮುಂದೆ ಸಾಗುತ್ತಿರುತ್ತದೆ. ಯಾರ, ಯಾವ ನಿಯಂತ್ರಣಕ್ಕೂ ಸಿಕ್ಕದೆ ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಕಾಲ ಸಾಗಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಕಾಲದ ಹಕ್ಕಿ ನಿರಂತರವಾಗಿ ಹಾರುತ್ತಿರುತ್ತದೆ.


ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? |೨|


    ಭಾವಾರ್ಥ: ಈ ಚರಣದಲ್ಲಿ ಕವಿ ಹಕ್ಕಿಯ ಕತ್ತಲು (ಕರಿ) ಬೆಳಕು(ನೆರೆ) ಎಂಬ ಪುಚ್ಚ(ಹಕ್ಕಿಯ ಹಿಂಬದಿಯಲ್ಲಿರುವ ಬಾಲದಂತ ಗರಿಗಳ ಗುಚ್ಚ)ವನ್ನು ಹೊಂದಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆ ‘ಹೊಳೆ’ವ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕೆನ್ನನಬಣ್ಣದ ಸೂರ್ಯಾಸ್ತ ಮತ್ತು ಹೊನ್ನಿನ ಬಣ್ಣದ ಸೂರ್ಯೋದಯ ಅದರ ಎರಡು ರೆಕ್ಕೆಗಳಾಗಿವೆ. ಇಲ್ಲಿ ಕಾಲದ ಹಕ್ಕಿಯ ಅನಂತ-ವಿಶಾಲ ರೂಪದ ಭವ್ಯತೆ ವ್ಯಕ್ತವಾಗಿದೆ.


ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? |೩|

    ಭಾವಾರ್ಥ: ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶವಾದುದು. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ‘ಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.


ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? |೪|

    ಭಾವಾರ್ಥ:
ಇಲ್ಲಿ ಕಾಲದ ಶಕ್ತಿ ಸಾಮರ್ಥ್ಯಗಳು, ಅದರ ಮುಂದೆ ಎಲ್ಲವೂ ನಶ್ವರ-ನಗಣ್ಯ ಎಂಬ ಭಾವ ವ್ಯಕ್ತವಾಗಿದೆ. ರಾಜ್ಯ-ಸಾಮ್ರಾಜ್ಯಗಳ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ-ಬಡಿದು-ಗಾಳಿಗೆ ತೂರಿತ್ತಾ, ಚಿಕ್ಕಪುಟ್ಟ ಮಂಡಲ-ಗಿಂಡಲಗಳ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ ಮುಗಿಸುತ್ತಾ, ಖಂಡ-ಖಂಡಗಳನ್ನೇ (ಒಂದೆಡೆ ಪ್ರಾಕೃತಿಕ ಬದಲಾವಣೆ-ಪ್ರಗತಿ-ವಿಜ್ಞಾನ; ಇನ್ನೊಂದೆಡೆ ಯುದ್ಧ-ಪ್ರಕೃತಿವಿಕೋಪ-ವಿನಾಶ ಈ ರೀತಿ) ತೇಲಿಸಿ-ಮುಳುಗಿಸಿ, ‘ಸಾರ್ವಭೌಮ’ರೆಲ್ಲರ ನೆತ್ತಿಯ ಕುಕ್ಕಿ ಅಂದರೆ ಮಹಾನ್ ಮಹಾನ್ ಸಾರ್ವಭೌಮ-ಸಾಮ್ರಾಟ-ಚಕ್ರವರ್ತಿ ಎಂದು ಮೆರೆದವರೂ ಇದರ ಮುಂದೆ ಸೋಲಲೇ ಬೇಕಾಯಿತು. ಅಂಥವರನ್ನೆಲ್ಲಾ ಕಾಲದ ಹಕ್ಕಿ ಹೊಸಕಿಹಾಕುತ್ತಾ ಇತಿಹಾಸ ಮಾಡಿ ನಿರಂತರ ಬದಲಾವಣೆಗಳನ್ನು ಮಾಡುತ್ತಾ ಇಲ್ಲಿ ಯಾವುದೂ ಯಾರೂ ಶಾಶ್ವತವಲ್ಲ ಎಂಬುದನ್ನು ಸಾರುತ್ತಾ ಹಾರುತ್ತಿದೆ.


ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? |೫|

    ಭಾವಾರ್ಥ:
ಇಲ್ಲಿ ಕಾಲದ ಪರಿವರ್ತನಾಶಿಲತೆ, ನವೀನಶಿಲತೆಯನ್ನು ಚಿತ್ರಿಸಲಾಗಿದೆ. ಕಾಲದ ಹಕ್ಕಿಯು: ಯುಗಯುಗಗಳ ಆಗುಹೋಗುಗಳನ್ನು ತಿಕ್ಕಿ-ತೀಡಿ, ಚರಿತ್ರೆಯನ್ನು ಹಿಂದೆಬಿಟ್ಟು (ಅಳಿಸಿ-ಒರಸಿ), ಮನ್ವಂತರಗಳ (ಅಂದರೆ ದೀರ್ಘ ಕಾಲಾವಧಿಯ) ಭಾಗ್ಯಕ್ಕೆ (ಅಂದರೆ ಪ್ರಗತಿಗೆ) ಹೇತುವಾಗಿ-ಸಾಕ್ಷಿಯಾಗಿ, ಮನ್ವಂತರಗಳ (ಅಂದರೆ ಪರಿವರ್ತನೆಯ ಸಮಯದ) ಭಾಗ್ಯಕ್ಕೆ (ಅಂದರೆ ಇತ್ಯಾತ್ಮಕ ಬದಲಾವಣೆಗಳಿಗೆ) ಹೇತುವಾಗಿ-ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ (ಅಂದರೆ ಕಾಲಕ್ರಮದಲ್ಲಿ) ಚೇತನಗೊಳಿಸಿ (ಅಂದರೆ ಪ್ರಗತಿಯ ಕಸುವು ನೀಡಿ), ಹೊಸಗಾಲದ ಹಸುಮಕ್ಕಳ ಹರಸಿ (ಅಂದರೆ ಬದಲಾದ ಲೋಕಕ್ಕೆ ಕಣ್ಣುತೆರೆದ ಅಂದಂದಿನ ಜನರನ್ನು-ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣುತೆರೆದಿರುವವರನ್ನು ಮುನ್ನಡೆಸುತ್ತ) ಕಾಲದ ಹಕ್ಕಿಯು ಹಾರುತ್ತಿದೆ (ಕಾಲ ಸಾಗುತ್ತಿದೆ).


ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? | ೬ |


    ಭಾವಾರ್ಥ: ಕಾಲಗತಿಯಲ್ಲಿ ಮಾನವನು ವೈಜ್ಞಾನಿಕವಾಗಿ ಆಕಾಶದೆತ್ತರಕ್ಕೆ ಬೆಳೆದಿದ್ದಾನೆ. ಅವನ ಅನ್ವೇಷಣೆ ಕೇವಲ ಭೂಮಂಡಲಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಳ್ಳಿಯ ಅಂದರೆ ಶುಕ್ರಗ್ರಹದ ವಾಯುಮಂಡಲವನ್ನು ಪ್ರವೇಶಿಸಿದ ಮಾನವ ತಿಂಗಳಿನೂರಿನ ಅಂದರೆ ತಿಂಗಳಬೆಳಕಿನ ಚಂದ್ರನ ‘ತಂಪು’ನೆಲ ತುಳಿದು ಇದೀಗ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದಾನೆ. ಕಾಲಾಂತರದಲ್ಲಿ ವೈಜ್ಞಾನಿಕವಾಗಿ ಮಾನವನ ಸಾಧನೆಯನ್ನು ಕವಿ ಸಾಂಕೇತಿಕವಾಗಿ ಇಲ್ಲಿ ವರ್ಣಿಸಿದ್ದಾರೆ.

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? | ೭ |

        ಭಾವಾರ್ಥ: ಕಾಲಗತಿಯಲ್ಲಿ ಮಾನವನು ತನ್ನ ಪ್ರಗತಿಶೀಲತೆಯನ್ನು ದಿಕ್ಕುದಿಕ್ಕುಗಳೆಡೆ ಹರಿಸಿದ್ದಾನೆ. ಗತಿಶೀಲನಾಗಿದ್ದಾನೆ. ನಾವು ವಿಶ್ವ(ದ)ರೂಪವನ್ನರಿಯಲೆತ್ನಿಸುತ್ತಿದ್ದೇವೆ. ಬ್ರಹ್ಮಾಂಡದಾಚೆಗೂ ನಮ್ಮ ಗಮನವನ್ನು ಹರಿಯಬಿಟ್ಟಿದ್ದೇವೆ. ಈ ನಮ್ಮ ಗತಿಯು ಕಾಲಕ್ರಮದಲ್ಲಿ ಬ್ರಹ್ಮಾಂಡದ ರಹಸ್ಯವನ್ನು ಒಡೆಯುತ್ತದೆಯೇ ಅಥವಾ ಈ ವಿಶ್ವವನ್ನೇ ಹೋಳುಮಾಡುತ್ತದೆಯೇ ಬಲ್ಲವರು ಯಾರು? ಇಂಥ ಯಾವುದೋ ಘಟನೆಗೆ ಆ ಸೃಷ್ಟಿಕರ್ತ ಹಾಕಿರುವ ಹೊಂಚೇ ಇದೆಲ್ಲ? ಸೃಷ್ಟಿಕರ್ತನೋ, ಈ ವಿಶ್ವದ ಇನ್ನಾವುದೋ ಶಕ್ತಿಯೋ? ಇದೆಲ್ಲ ಉದ್ದೇಶಿತವೋ ಅನುದ್ದೇಶಿತವೋ? ಯಾರು ಬಲ್ಲರು? ಈ ನಿಗೂಢಗಳನ್ನೊಳಗೊಂಡಿರುವ ’ಕಾಲ’ವೆಂಬ ಹಕ್ಕಿಯು ಹಾರುತ್ತಿದೆ. ನಿರಂತರವಾಗಿ ಮುಂದೆ ಮುಂದೆ ಸಾಗುತ್ತಿದೆ. ಎಂದು ಕವಿ ವರ್ಣಿಸಿದ್ದಾರೆ.

*****
*****




02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಸಾರಾಂಶ

ಸಂಕಲ್ಪಗೀತೆ ಪದ್ಯದ ಸಾರಾಂಶ

    ಸಂಕಲ್ಪಗೀತೆ ಪದ್ಯವನ್ನು ಜಿ.ಎಸ್.ಶಿವರುದ್ರಪ್ಪನವರ 'ಎದೆತುಂಬಿ ಹಾಡಿದೆನು’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
           ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ ದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂಬುದನ್ನು ಭಾವಗೀತೆಯ ಮೂಲಕ ವ್ಯಕ್ತಗೊಳಿಸುವುದೇ ಈ ಕವನದ ಆಶಯವಾಗಿದೆ.
*******

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.    || ೧ ||

ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು - ಎಂಬುದು ಕವಿಯ ಆಶಯವಾಗಿದೆ.

ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ.    || ೨ ||


ಮಾನವನ ದುರಾಸೆಗೆ ಸಿಲುಕಿ ಕಲುಷಿತವಾಗಿರುವ ನದೀಜಲಗಳನ್ನು ಶುದ್ಧೀಕರಿಸಲು ನಾವು ಮುಂಗಾರಿನ ಮಳೆಯಾಗಬೇಕು. ಅಂದರೆ ಪರಿಸರ ರಕ್ಷಿಸುವ ಪರಿಸರ ಪ್ರೇಮಿಯಾಗಬೇಕು. ಕಾಡುಮೇಡುಗಳು ಬರಡಾಗಿದ್ದು ಅವುಗಳನ್ನು ಉಳಿಸಿ ಬಳೆಸಬೇಕು. ಅದಕ್ಕಾಗಿ ನಾವು ಹಚ್ಚಹಸಿರಿನಿಂದ ಕಂಗೊಳಿಸುವ, ಸಮೃದ್ಧವಾದ ವಸಂತಕಾಲವಾಗಬೇಕು. ಒಟ್ಟಾರೆ ನಾವೆಲ್ಲಾ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕು. ಎಂಬುದು ಕವಿಯ ಆಶಯವಾಗಿದೆ. 

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.    || ೩ ||


ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತಬೇಕು. ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಷ್ಯರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗಬೇಕು. ಒಟ್ಟಾರೆ ಸಮಾಜವನ್ನು ಉದ್ಧರಿಸುತ್ತಾ ಭಾವೈಕ್ಯತೆಯನ್ನು ಬೆಳೆಸಬೇಕೆಂಬುದು ಕವಿಯ ಆಶಯವಾಗಿದೆ.

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.    || ೪ ||


ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮಸುಕಾದವರ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಭರವಸೆಯನ್ನು ತುಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು. ಎಂದು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸುತ್ತಾರೆ.


*********

24 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-05-ಸುಕುಮಾರಸ್ವಾಮಿಯ ಕಥೆ - ಹೊಸಗನ್ನಡ ರೂಪ / ಸಾರಾಂಶ

ಸುಕುಮಾರಸ್ವಾಮಿಯ ಕಥೆಯ ಸಾರಾಂಶ 
ಮೂಲಗದ್ಯ: ಈ ಜಂಬೂದ್ವೀಪದ ದಕ್ಷಿಣ ಭರತಕ್ಷೇತ್ರದೊಳವಂತಿಯೆಂಬುದು ನಾಡುಜ್ಜೇನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿರ್ವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವ- ಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರ ಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಂಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ. 

     ಸಾರಾಂಶ: ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜಯಿನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ ಸೆಟ್ಟಯಿದ್ದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸಿನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು.

      ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿ ಮಾಡಂಗಳತ್ಯಂತರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತೆರಡು ಕೋಟಿ ಕಸವರಮಂ ಪಂಚರತ್ನಂ- ಗಳೆಂಬಿನಿತರೊಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ.
 ಸಾರಾಂಶ: ಸುಕುಮಾರಸ್ವಾಮಿಯು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿರಲು…

ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನವರಂ ಕಲ್ಪಿಸಿದೊಳಂತು ಕಾಲಂ ಸಲೆ
      
ಸಾರಾಂಶ: ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. “ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು” ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು.

       ಮತ್ತೊಂದು ದಿವಸಂ ರತ್ನದ್ವೀಪದಿಂದೊರ್ವ ಪರದಂ ಸರ್ವ ರತ್ನ ಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪವನುಜ್ಜೇನಿಗೆ ಮಾಱಲ್ಕೊಂಡು ಬಂದೊನಾ ಪೊೞಲ ನಾಳ್ವೊಂ ವೃಷಭಾಂಕನೆಂಬೊಂನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾರಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇೞ್ದನ್
         
ಸಾರಾಂಶ: ವಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು.

ಅಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಂ ಕಂಬಳಗಳಂ ಕೊಂಡುಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂಕೊಟ್ಟು ರತ್ನಕಂಬಳಂಗಳ್ ಕೊಂಡೋರೊಂದಱೊಳಂನಾಲ್ಕು ಖಂಡ ಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞನೆಂದು ಮನೆಗೆ ವರ್ಪುದಂ
       
ಸಾರಾಂಶ: ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿಕೊಂಡರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುವುದನ್ನು…

     ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಿಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರ ಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯ ಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾ ವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು ಬೆಸಗೊಂಡೊಡೆ ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ವೊರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು
      
ಸಾರಾಂಶ: ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು. ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದ ತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, “ಸುಕುಮಾರನು ಎಲ್ಲಿದ್ದಾನೆ?” ಎಂದು ಕೇಳಿದನು. ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ” ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು?” ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು” ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ!” ಎನ್ನುತ್ತ ಆಶ್ಚರ್ಯಪಟ್ಟು……..

ತಾಯ ವಚನಮಂ ಮಾರ್ಕ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಬೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮ ದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ಧಾರ್ಥಂಗಳ್ ಸುಕುಮಾರಸ್ವಾಮಿ ಯಾಸನಮನೊತ್ತೆ ಕಟಿಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡಂತೆ ಗೆಯ್ವೆಮೆಂದು ಮಜ್ಜನಂಗೊಂಡಮರ ಸನ್ನಿಭಮಣಿಕುಟ್ಟಿಮಮಪ್ಪಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪತನ್ನಬೆರ ಲಮಾಣಿಕದುಂಗುರಂ ಬಿೞ್ದುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂತೆರಱೆದಂತಪ್ಪ ಲೇಸಪ್ಪ ನಾನಾ ಮಣಿಯ ವಿಚಿತ್ರಭೂ?ಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಂ
     
ಸಾರಾಂಶ: ತಾಯಿಯ ಮಾತನ್ನು ವಿರೋಧಿಸಲಾರದೆ ಬಂದನು. ಅವನನ್ನು ರಾಜನು ಕಂಡು ‘ನಾನು ಕಣ್ಣನ್ನು ಪಡೆದದ್ದು ಇಂದು ಸಾರ್ಥಕವಾಯಿತು’ ಎಂದುಕೊಂಡು ಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಕಣ್ಣೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯೆಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಬಾವಿಗೆ(ಕೆರೆಗೆ) ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತಿರುವಷ್ಟರಲ್ಲಿ……

ಆರೋಗಿಸಲೆೞ್ತನ್ನಿಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರಂ ಬೆರಸು ನಾನಾ ಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಅರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗುಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗ ರುಚಿಯೆಂದು ಬಗೆದುಣಿಸು ಸಮೆದಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾ ವಿನೋದದಿಂದಿರ್ದೊಡೆ
      
ಸಾರಾಂಶ: ರಾಜನನ್ನೂ ಸುಕುಮಾರನನ್ನೂ ‘ಊಟಕ್ಕೆ ಬನ್ನಿರಿ’ ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಊಟಮಾಡುತ್ತಿರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು” ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳನ್ನಾಡುತ್ತಾ ವಿನೋದದಿಂದ ಇದ್ದಾಗ……..

       ಯಶೋಭದ್ರೆಯನರಸ-ನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶಭಾಗಕ್ಕಂ ಕಣ್ಣನೀರ್ ಬರ್ಪುದಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಆವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದಂ ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಪೆಱವಕ್ಕಿಯಂ ನೀವುಂ ಬಂದೊಡೆ ಬೆರಸಿಯಟ್ಟುದು ಕೂೞುಮಪ್ಪುದಱಂ ವಾಸಿಸಿದಕ್ಕಿಯ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ
      
ಸಾರಾಂಶ: ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ?” ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು, ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ” ಎಂದು ಹೇಳಿದಳು.


     ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೋಗಂಗಳ್ ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ. 
ಸಾರಾಂಶ: ಅದನ್ನು ಕೇಳಿ ಅರಸನು ಆಶ್ಚರ್ಯಪಟ್ಟನು. “ಈತನ ಒಂದು ಕ್ಷಣದ ಸುಖ-ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ – ಉಪಭೋಗಗಳು ಸಮಾನವಾಗುವುದಿಲ್ಲ. ಆದುದರಿಂದ “ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ” ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು.
*******************


ಸುಕುಮಾರಸ್ವಾಮಿಯ ಕಥೆಯ ಪೂರ್ಣಪಾಠ ಮತ್ತು ಗದ್ಯಾನುವಾದ

(ಸುಕುಮಾರ ಸ್ವಾಮಿಯ ಕಥೆ : ಸಂಹಿತೆ ೨. ಅರಣ್ಯಕ)
      ಬ್ರಾಹ್ಮಣ ಅರಣ ಸೂತ್ರಂ ಮೊದಲಾಗೊಡೆಯವನೋದಿ ಋಗ್ಯಜುಸ್ಸಾಮಾಥರ್ವಣ ವೇದಂಗಳಂ ಸ್ವರವರ್ಣಭೇದದಿಂದಂ ಮಂತ್ರಸಹಿತ ಪಾಳಿ ಪದಕ್ರಮ ಜಟೆ ಭೇದದಿಂದಂ ಶತಸೂತ್ರಂ ಮೊದಲಾಗೆಲ್ಲಮಂ ಯಥಾಕ್ರಮದಿಂದುಚ್ಚರಿಸಿ ಪದಿನೆಂಟು ಪುರಾಣಂಗಳುಂ ಪದಿನೆಂಟು ಧರ್ಮಸಂಹತಿಗಳುಂ ಮೀಮಾಂಸಾ ನ್ಯಾಯಸೂತ್ರಮಿವೆಲ್ಲಮನೋದಿ ಕ್ರಿಯಾಕಾರಕ ಸಂಬಂಧದಿಂದೆಲ್ಲಮಂ ವಕ್ಖಾನಿಸಿ ತೋಱದೊಡರಸಂ ಮೊದಲಾಗಿ ನೆರೆದ ನೆರವಿಯುಂ ಪಂಡಿತರ್ಕ್ಕಳೆಲ್ಲಂ ವಿಸ್ಮಯಂಬಟ್ಟು ಪೊಗೞ್ದು ಮತ್ತಮರಸನಿಂತೆಂದನೀ ಕೂಸಿನಿತು ಶಾಸ್ತ್ರಂಗಳನೆಂತು ಕಲ್ತಳೆಂತು ಭಟಾರಾ ಇದನಱಯೆ ಬೆಸಸಿಮೆನೆ ಸೂರ್ಯಮಿತ್ರ ಭಟ್ಟಾರರಿಂತೆಂದರ್ ಈಯಿರ್ದ್ದ ರಿಸಿಯರ ಸಹೋದರಂ ವಾಯುಭೂತಿಯೆಂಬೊನಾಮೋದಿಸಿದೆಮೆಮ್ಮೊಳಪ್ಪ ಮಾನಕಷಾಯಂ ಕಾರಣಮಾಗಿ ಸತ್ತು ಬೆಳ್ಗತ್ತೆಯುಂ ಪೇಪಂದಿಯುಂ ನಾಯುಂ ಪೊಲೆಯರ ಕೂಸುಮಾಗಿ ರಿಸಿಯರ ಪ್ರಬೋಧನೆಯಿಂದಂ ಬ್ರತಂಗಳಂ ಕೈಕೊಂಡೀಗಳ್ ನಾಗಶ್ರೀಯಾದಳೆಂದು ಮುನ್ನಿನ ಭವದ ಸಂಬಂಧಮೆಲ್ಲಮಂ ಸವಿಸ್ತರಂ ಪೇೞ್ದು ಮತ್ತಮಿಂತೆಂದರ್ ಮಿಥ್ಯಾತ್ವ ಸಂಯಮ ಕಷಾಯ ಯೋಗಂ ಕಾರಣಮಾಗಿ ಜೀವಂಗಳ್ ಸಂಸಾರಸಮುದ್ರದೊಳ್ ತೊೞಲ್ಗುಮೆಂದು ಸವಿಸ್ತರಂ ಧರ್ಮಮಂ ಪೇೞೆ ಕೇಳ್ದು ಚಂದ್ರವಾಹನನೆಂಬರಸಂಗೆ ವೈರಾಗ್ಯಂ ಪುಟ್ಟಿ ಮಗಂಗರಸುಗೊಟ್ಟು ಪಲಂಬರರಸು ಮಕ್ಕಳ್ವೆರಸುಭಟ್ಟಾರರ ಪಕ್ಕದೆ ತಪಂಬಟ್ಟಂ ಕೆಲರ್ ಶ್ರಾವಕವ್ರತಂಗಳಂ ಕೆಲಂಬರ್ ಸಮ್ಯಕ್ಷಮಂ ಕೈಕೊಂಡರಾಗಳಾ
           ಸಾರಾಂಶ: ಸೂತ್ರ ಮುಂತಾಗಿರುವವನ್ನೂ ಹೇಳಿದಳು, ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದಗಳನ್ನೂ ಸ್ವರಗಳ ಮತ್ತು ವರ್ಣಗಳ ಭೇದದಿಂದ ಮಂತ್ರ ಸಮೇತವಾಗಿ ಪಾಳಿ – ಪದಕ್ರಮ – ಜಟೆ ಮುಂತಾದ ವೇದಪಠನದ ರೀತಿಯಲ್ಲಿ ಶತಸೂತ್ರ ಮುಂತಾಗಿ ಎಲ್ಲವನ್ನೂ ಸರಿಯಾದ ಕ್ರಮದಿಂದ ಉಚ್ಚಾರಣೆ ಮಾಡಿದಳು. ಹದಿನೆಂಟು ಪುರಾಣಗಳು, ಹದಿನೆಂಟು ಧರ್ಮಶಾಸ್ತ್ರಸಂಗ್ರಹಗಳು, ಮೀಮಾಂಸೆ, ನ್ಯಾಯಸೂತ್ರ ಇವೆಲ್ಲವನ್ನೂ ಹೇಳಿ, ಕ್ರಿಯಾಪದ ಕಾರಕಪದಗಳ ಸಂಬಂಧ ಸರಿಯಾಗಿರುವಂತೆ ಎಲ್ಲವನ್ನೂ ವ್ಯಾಖ್ಯಾನಮಾಡಿ ತೋರಿಸಿದಳು. ಆಗ ರಾಜನೂ, ನೆರೆದ ಜನರೂ, ವಿದ್ವಾಂಸರೂ ಎಲ್ಲರೂ ಆಶ್ಚರ್ಯಪಟ್ಟು ಹೊಗಳಿದರು. ಆ ಮೇಲೆ ರಾಜನು ಹೀಗೆಂದನು. “ಈ ಕನ್ಯೆ ಇಷ್ಟೊಂದು ಶಾಸ್ತ್ರಗಳನ್ನು ಹೇಗೆ ಕಲಿತುಕೊಂಡಳು? ಋಷಿಗಳೇ, ಇದನ್ನು ನನಗೆ ತಿಳಿಯುವಂತೆ ಅಪ್ಪಣೆಮಾಡಿ* ಎನ್ನಲು, ಸೂರ್ಯಮಿತ್ರ ಋಷಿಗಳು ಹೀಗೆಂದರು “ಇದೇ ಇಲ್ಲಿರುವ ಅಗ್ನಿಭೂತಿ ಋಷಿಗಳ ಸಹೋದರ ವಾಯುಭೂತಿಯೆಂಬವನಿಗೆ ನಾವಿ ವಿದ್ಯೆ ಕಲಿಸಿದ್ದೆವು. ನಮ್ಮ ಮೇಲೆ ಅವನು ತಾಳಿದ ಗರ್ವ ಕೋಪಗಳ ಕಾರಣದಿಂದ ಸತ್ತು ಬಿಳಿಕತ್ತೆ, ಹೇಲುಹಂದಿ, ನಾಯಿ, ಹೊಲೆಯರ ಕನ್ಯೆಯಾಗಿ ಹುಟ್ಟಿಬಂದು, ಋಷಿಗಳ ಉಪದೇಶದಿಂದ ವ್ರತಗಳನ್ನು ಸ್ವೀಕರಿಸಿ, ಈಗ ನಾಗಶ್ರೀಯಾದಳು* ಹೀಗೆ ಹಿಂದಿನ ಜನ್ಮದ ಸಂಬಂಧವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮತ್ತೆ ಹೀಗೆಂದನು “ಜೀವಗಳು ಮಿಥ್ಯಾತ್ವ, ಸಂಯಮವಿಲ್ಲದಿರುವುದು, ಗರ್ವಕೋಪಾದಿಗಳ ಕಾರಣದಿಂದ ಸಂಸಾರವೆಂಬ ಸಮುದ್ರದಲ್ಲಿ ಸುತ್ತಾಡುವವು. *ಹೀಗೆಂದು ವಿಸ್ತಾರವಾಗಿ ಧರ್ಮದ ರಹಸ್ಯವನ್ನು ಹೇಳಲು ಕೇಳಿದ ಚಂದ್ರವಾಹನ ರಾಜನಿಗೆ ವೈರಾಗ್ಯವುಂಟಾಯಿತು. ಅವನು ತನ್ನ ಮಗನಿಗೆ ಅರಸುತನವನ್ನು ಕೊಟ್ಟು ಹಲವು ಮಂದಿ ರಾಜಕುಮಾರರೊಂದಿಗೆ ಋಷಿಗಳ ಸಮೀಪದಲ್ಲಿದ್ದು ತಪವನ್ನೆಸಗಿದನು. ಕೆಲವರು ಶ್ರಾವಕವ್ರತಗಳನ್ನೂ ಕೆಲವರು ಸಮ್ಯಗ್ದರ್ಶನ ಸಮ್ಯಗ್ಜ್ಞಾನ ಸಮ್ಯಕ್ಚಾರಿತ್ರಗಳನ್ನುಪಡೆದುಕೊಂಡರು.

      ಸೋಮಶರ್ಮಭಟ್ಟಂ ರಿಸಿಯರೊಳಾದ ಮಾನಗರ್ವದ ದೋಷದಿಂದೆಯ್ದಿದ ದುಃಖಂಗಳಂ ಕೇಳ್ದಱದಾ ಭಟ್ಟಾರರ ಪಕ್ಕದೆ ತಪಂಬಟ್ಟಂ ನಾಗಶ್ರೀಯುಂ ನಾಗಶ್ರೀಯ ತಾಯ್ ತ್ರಿವೇದಿಯುಂ ಬ್ರಹ್ಮಿಲೆಯೆಂಬ ಕಂತಿಯರ ಪಕ್ಕದೆ ತಪಂಬಟ್ಟರ್ ಮತ್ತೆ ಸೂರ್ಯಮಿತ್ರ ಭಟ್ಟಾರರಗ್ನಿಭೂತಿ ಭಟ್ಟಾರರುಮಿರ್ವರುಂ ಪಲಕಾಲಂ ತಪಂಗೆಯ್ದು ಅಗ್ರಮಂದಿರವೆಂಬ ಪರ್ವತದೊಳ್ ಮೋಕ್ಷವನೆಯ್ದಿದರ್ ಮತ್ತಂ ಸೋಮಶರ್ಮರಿಸಿಯರುಮುಗ್ರೋಗ್ರ ತಪಶ್ಚರಣಂಗೆಯ್ದು ಸನ್ಯಸನವಿಯಿಂದಂ ಮುಡಿಪಿ ಅಚ್ಚುತಕಲ್ಪದೊಳಿರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕದೇವನಾಗಿ ಪುಟ್ಟಿದೊಂ ಮತ್ತೆ ನಾಗಶ್ರೀಯುಂ ಭುಕ್ತ ಪ್ರತ್ಯಾಖ್ಯಾನವಿಯಂ ರತ್ನತ್ರಯಮಂ ಸಾಸಿ ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದೊಳ್ ಮತ್ತಾ ಸ್ವರ್ಗದೊಳ್ ತ್ರಿವೇದಿಯಂ ನಾಗಶ್ರೀ ಎನಗೆ ಜನ್ಮಾಂತಕರದೊಳಪ್ಪೊಡಂ ಮಗನಕ್ಕೆಂದು ನಿದಾನಂಗೆಯ್ದು ಮುಡಿಪಿ ದೇವನಾದೊಳಿಂತಾ ಯಿರ್ವರುಂ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊರಾಗಿ ದೇವರಾಗಿ ಪುಟ್ಟಿದರ್ ಮತ್ತಂ ಸೋಮಶರ್ಮನಪ್ಪ ದೇವಂ ಪಲಕಾಲಂ ದೇವಲೋಕದ ಭೋಗಮನನುಭವಿಸಿ ಬಂದಿಲ್ಲ ಈ ಜಂಬೂದ್ವೀಪದ ದಕ್ಷಿಣ ಭರತದೊಳವಂತಿಯೆಂಬುದು ನಾಡುಜ್ಜೇಶನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ 

 ಸಾರಾಂಶ:  ಆ ಸಂದರ್ಭದಲ್ಲಿ ಸೋಮಶರ್ಮಭಟ್ಟನು ಋಷಿಗಳ ಮೇಲೆ ಉಂಟಾದ ಗರ್ವಕ್ರೋಧಗಳ ತಪ್ಪಿನಿಂದ ಉಂಟಾಗತಕ್ಕ ದುಃಖಗಳನ್ನು ಕೇಳಿ ತಿಳಿದು ಆ ಋಷಿಗಳ ಪಕ್ಕದಲ್ಲಿ ತಪ್ಪಸ್ಸನ್ನು ಮಾಡಿದನು. ನಾಗಶ್ರೀಯೂ ಅವಳ ತಾಯಿಯಾದ ತ್ರಿವೇದಿಯೂ ಬ್ರಹ್ಮಿಲೆ ಎಂಬ ಜೈನ ಸಂನ್ಯಾಸಿನಿಯ ಬಳಿಯಲ್ಲಿ ತಪಸ್ಸನ್ನು ಮಾಡಿದರು. ಸೂರ್ಯಮಿತ್ರ ಋಷಿಗಳು ಅಗ್ನಿಭೂತಿ ಋಷಿಗಳು ಇವರಿಬ್ಬರೂ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಗ್ರಮಂದಿರವೆಂಬ ಬೆಟ್ಟದಲ್ಲಿ ಮೋಕ್ಷಕ್ಕೆ ಹೋದರು. ಆ ಮೇಲೆ ಸೋಮಶರ್ಮ ಋಷಿಯು ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸನ್ಯಸನ ವಿಯಿಂದ ಸತ್ತು ಅಚ್ಯುತ ಎಂಬ ಹೆಸರಿನ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಸಾಮಾನಿಕದೇವನಾಗಿ ಹುಟ್ಟಿದನು. ಮತ್ತೆ ನಾಗಶ್ರೀಯು ಕ್ರಮದಿಂದ ಆಹಾರ ಪಾನೀಯಗಳನ್ನು ತ್ಯಾಗಮಾಡುವ ‘ಭುಕ್ತ ಪ್ರತ್ಯಾಖ್ಯಾನ’ ಎಂಬ ವ್ರತನಿಯಮದಿಂದ ಸಮ್ಯಗ್ದರ್ಶನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಅಚ್ಚುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿದಳು. ಮತ್ತು ಆ ಸ್ವರ್ಗದಲ್ಲಿ ತ್ರಿವೇದಿಯು ನನಗೆ ಬೇರೆ ಜನ್ಮದಲ್ಲಿಯಾದರೂ ನಾಗಶ್ರೀಯು ಮಗನಾಗಿ ಜನಿಸಲಿ ಎಂದು ಸಂಕಲ್ಪಿಸಿ ಸತ್ತು ದೇವಳಾದಳು. ಹೀಗೆ ಆ ಇಬ್ಬರೂ ಇಪ್ಪತ್ತೆರಡು ಸಾಗರಕ್ಕೆ ಸಮಾನವಾಗುವ ಆಯುಷ್ಯವುಳ್ಳವರಾಗಿ ದೇವರುಗಳಾಗಿ ಜನಿಸಿದರು. ಅನಂತರ ಸೋಮಶರ್ಮನಾಗಿದ್ದ ದೆವನು ಹಲವು ಕಾಲದವರೆಗೆ ದೇವಲೋಕದ ಸುಖವನ್ನು ಅನುಭವಿಸಿದ ನಂತರ ಭೂಲೋಕದಲ್ಲಿ ಜನಿಸಿದನು. ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜೇನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ ಸೆಟ್ಟಯಿದ್ದನು.

    ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದನಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿಮಾಡಂಗಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತರಡು ಕೋಟಿ ಕಸವರಮುಂ ಪಂಚರತ್ನಂಗಳೆಂಬಿನಿತಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನ ಕಲ್ಪಿಸಿದೊಳಂತು ಕಾಲಂ ಸಲೆ ದಿವಸಂ ರತ್ನದ್ವೀಪದಿಂದೊರ್ವ
 
         ಸಾರಾಂಶ:  ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯಾತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯೆಂಬ ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮುವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳಿಂದ ಕೂಡಿ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. ‘ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು’ ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು. ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ 

        ಪರದಂ ಸರ್ವರತ್ನಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪುವನುಜ್ಜೇನಿಗೆ ಮಾಱಲ್ ಕೊಂಡುಬಂದೊನಾ ಪೊೞಲನಾಳ್ವೊಂ ವೃಷಭಾಂಕನೆಂಬೊನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾಗಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇನಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಕಂಬಳಂಗಳಂ ಕೊಂಡು ಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂ ಕೊಟ್ಟು ರತ್ನಕಂಬಳಂಗಳಂ ಕೊಂಡೊರೊಂದರಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞ್ಪೆನೆಂದು ಮನೆಗೆವರ್ಪುದಂ ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮ ಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು ಬೆಸಗೊಂಡೊಡೆ 

     ಸಾರಾಂಶ: ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು. ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿದರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುತ್ತಿದ್ದನು. ರಾಜರು ಬರುವುದನ್ನು ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು.ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, ‘ಸುಕುಮಾರನು ಎಲ್ಲಿದ್ದಾನೆ ? ’ ಎಂದು ಕೇಳಿದನು. 

        ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ರ್ವೆರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ತಾಯ ವಚನಮಂ ಮಾರ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಣೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯ ಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ದಾರ್ಥಂಗಳ್ ಸುಕುಮಾರಸ್ವಾಮಿಯಾಸನಮನೊತ್ತೆ ಕಟಿವಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡತೆಗೆಯ್ವೆಮೆಂದು ಮಜ್ಜನಂಗೊಂಡಮರಸನ್ನಿಭ ಮಣಿಕುಟ್ಟಿಮಮಪ್ಪ ಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪ ತನ್ನ ಬೆರಲ ಮಾಣಿಕದುಂಗುರಂ ಬಿೞ್ಪುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂ ತೆಱೆದಂತಪ್ಪ ಲೇಸಪ್ಪ ನಾನಾಮಣಿಯ ವಿಚಿತ್ರ ಭೂಷಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಮಾರೋಗಿಸಲೆೞ್ತನ್ನಿ 

    ಸಾರಾಂಶ: ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ* ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು ? * ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು* ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ ? * ಎನ್ನುತ್ತ ಆಶ್ಚರ್ಯಪಟ್ಟನು. ತಾಯಿಯ ಮಾತನ್ನು ವಿರೋಸಲಾರದೆ ಬಂದನು. ಅವನನ್ನು ರಾಜನು ಕಂಡು “ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು* ಎಂದುಕೊಂಡುಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ ಕಣ್ನೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತದ್ದನು. ಅಷ್ಷರಲ್ಲಿ ರಾಜನನ್ನು ಸುಕುಮಾರನನ್ನೂ ‘ಊಟಕ್ಕೆ ಬನ್ನಿರಿ’

    ಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರುಂ ಬರೆಸು ನಾನಾಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಆರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗು ಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗರುಚಿಯೆಂದು ಬಗದುಣಿಸು ಸಮೆದ ಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾವಿನೋದದಿಂದಿರ್ದೊಡೆ ಯಶೋಭದ್ರೆಯನರಸನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶದ ರೋಗಕ್ಕಂ ಕಣ್ಣನೀರ್ ಬರ್ಪುದರ್ಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಅವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದು ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳ ನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೊಗಂಗಳ್ 

    ಸಾರಾಂಶ: ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅ ರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು* ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳ ವಿನೋದದಿಂದ ಇದ್ದರು. ಆಗ ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? * ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ* ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟನು. “ಈತನು ಒಂದು ಕ್ಷಣದ ಭೋಗಕ್ಕೂ ಸುಖಕ್ಕೂ ನನ್ನ ಎಲ್ಲಾ ಕಾಲವೂ ಅರಸುತನ ನಡೆಸಿದಾಗ ಉಂಟಾದ ಭೋಗ – ಉಪಭೋಗಗಳು ಸಮಾನವಾಗವು. ಆದುದರಿಂದ ಲೋಕದಲ್ಲಿ 

    ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂ ಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ ಯಶೋಭದ್ರೆಯುಮರಸಮನನನೇಕ ವಸ್ತುವಾಹನಂಗಳಿಂದಂ ಪೂಜಿಸಿ ಕೞಪಿದೊಳಿಂತು ಸುಕುಮಾರಸ್ವಾಮಿಗೆ ಸುಖದಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಯಶೋಭದ್ರೆಯ ಭ್ರಾತರರಪ್ಪ ದಯಾಭದ್ರರೆಂಬ ರಿಸಿಯರ್ ಮುನ್ನಮವರ ಪಕ್ಕದೆ ಸೂರದತ್ತಂ ಧರ್ಮಂ ಕೇಳ್ದು ವೈರಾಗ್ಯಮಾಗಿ ಪುತ್ರಮುಖಂಗಂಡು ತಪಂಬಟ್ಟೊನಾತನ ಮಗನುಂ ರಿಸಿಯರಂ ಕಂಡಾಗಳೆ ತಪಂಬಡುಗುಮೆಂಬುದಂ ಮುನ್ನೆ ನೈಮಿತ್ತಿಕರಾದೇಶಂಗೆಯ್ದಿರ್ದರ್ ಮತ್ತಂ ದಯಾಭದ್ರರೆಂಬ ರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪ ದಿವ್ಯಜ್ಞಾನಿಗಳ್ ಸುಕುಮಾರಸ್ವಾಮಿಗೆ ನಾಲ್ಕುತಿಂಗಳುಮೈದುದಿವಸಮಾಯುಷ್ಯಪ್ರಮಾಣ ಮನಱದುಪಕಾರಾರ್ಥಮುಜ್ಜೇನಿಗೆ ವಂದು ಸುಕುಮಾರಸ್ವಾಮಿಯ ಮಾಡದ ಪೆಱಗಣ ನಂದನ ವನದೊಳಗಣ ಜಿನಾಲಯದೊಳಾಷಾಢ ಮಾಸದ ಚತುರ್ದಶಿಯ ದಿವಸದಂದು ಪಱವೊೞ್ತು ಬಂದು ಜೋಗುಗೊಂಡಿರ್ದರನ್ನೆಗಂ ವನಪಾಲಕರ್ ಪೋಗಿ ಯಶೋಭದ್ರೆಗೆ ರಿಸಿಯರ ಬರವಂ ಪೇೞ್ದೊಡಾಕೆಯುಂ ಬಂದು ದೇವರುಮಂ ರಿಸಿಯರುಮಂ ಬಂದಿಸಿ ಭಟ್ಟಾರಾ ನೀಮಿಲ್ಲಿಗೇಕೆ ಬಂದಿರಿಲ್ಲಿಂದಂ ಪೊಱವೊೞಲೊಳ್ ಪೆಱವುೞ ಬಸದಿಯಿಲ್ಲಾ ಎಂದೊಡೆ ಭಟ್ಟಾರರೆಂದರಬ್ಬಾ ನಿಡುವಯಣಂ ಬಂದು ಸೇದಗೆಟ್ಟೆಂತಾನುಮಿಲ್ಲಿಗೆಯಾಸತ್ತು ಜೋಗಿನ ಪೊೞ್ತಱೊಳೆಯ್ದಿ ಬಂದು ಜೋಗುಗೊಂಡಿರ್ದೆಮೆತ್ತಲುಂ ಪೋಗಲಾಗದೆನೆ  

    ಸಾರಾಂಶ: ನಿಜವಾಗಿಯೂ ಈತನೇ ಸುಖಿ* ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು. ಯಶೋಭದ್ರೆ ರಾಜನನ್ನು ಹಲವಾರು ವಿಧದ ವಸ್ತುಗಳಿಂದಲೂ ವಾಹನಗಳಿಂದಲೂ ಸತ್ಕರಿಸಿ ಕಳುಹಿಸಿದಳು. ಹೀಗೆ ಸುಕುಮಾರಸ್ವಾಮಿಗೆ ಕಾಲವು ಸುಖಮಯವಾಗಿ ಸಾಗುತ್ತಿತ್ತು. ಅನಂತರ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದರು. ಹಿಂದೆ ಅವರ ಬಳಿಯಲ್ಲಿದ್ದು ಸೂರದತ್ತನು (ಸುಕುಮಾರನ ತಂದೆ) ಧರ್ಮಶ್ರವಣ ಮಾಡಿ, ವೈರಾಗ್ಯ ತಾಳಿ, ಮಗನು ಹುಟ್ಟಿದೊಡನೆ ತಪಸ್ಸಿಗೆ ತೆರಳಿದ್ದನು. ಆತನ ಮಗನಾದ ಸುಕುಮಾರನೂ ಋಷಿಗಳನ್ನು ಕಂಡ ಕೂಡಲೇ ತಪಸ್ಸಿಗೆ ತೆರಳುವನೆಂಬುದನ್ನು ಹಿಂದೆಯೇ, ಜ್ಯೋತಿಷ್ಯ ತಿಳಿದವರು ತಿಳಿಸಿದರು. ಆಮೇಲೆ ದಯಾಭದ್ರರೆಂಬ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ, ದಿವ್ಯಜ್ಞಾನಿಗಳಾದ ಅವರು ಸುಕುಮಾರಸ್ವಾಮಿಗೆ ನಾಲ್ಕು ತಿಂಗಳು ಐದು ದಿವಸ ಮಾತ್ರ ಆಯುಷ್ಯವಿರುವುದನ್ನು ತಿಳಿದು ಉಪಕಾರ ಮಾಡುವುದಕ್ಕಾಗಿಯೇ ಉಜ್ಜಯಿನಿಗೆ ಬಂದರು. ಹಾಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಅಷಾಢಮಾಸದ ಚತುದರ್ಶಿಯ ದಿವಸ ಸಂಜೆ (ಹರೆ ಬಾರಿಸುವ ಹೊತ್ತು) ಬಂದು ಯೋಗಸ್ಥರಾಗಿದ್ದರು. ಅಷ್ಟರಲ್ಲಿ ಉದ್ಯಾನಪಾಲಕರು ಹೋಗಿ, ಋಷಿಗಳು ಬಂದ ಸಂಗತಿಯನ್ನು ಯಶೋಭದ್ರೆಗೆ ತಿಳಿಸಿದರು. ಆಕೆ ಬಂದು ಜಿನೇಂದ್ರರನ್ನೂ ಋಷಿಗಳನ್ನೂ ವಂದಿಸಿ ಋಷಿಗಳೊಡನೆ – “ಸ್ವಾಮೀ, ನೀವು ಈ ಸ್ಥಳಕ್ಕೆ ಯಾಕೆ ಬಂದಿರಿ? ಇಲ್ಲಿಗಿಂತ ಈ ಪಟ್ಟಣದ ಹೊರಗೆ ಬೇರೆ ಕಡೆ ಜಿನದೇವಾಲಯವಿರಲಿಲ್ಲವೆ? * ಎಂದು ಕೇಳಿದಳು. ಆಗ ಋಷಿಗಳು “ಅವ್ವಾ, ನಾವು ಬಹಳ ದೂರದಿಂದ ಪ್ರಯಾಣ ಮಾಡಿಕೊಂಡು ಬಂದುದರಿಂದ ಬಹಳ ಬಳಲಿದ್ದೇವೆ. 

    ಅಂತಪ್ಪೊಡೆ ಭಟಾರಾ ನಿಮ್ಮನೊಂದಂ ಬೇಡಿಕಪ್ಪೆಂ ನಾಲ್ಕುತಿಂಗಳುಮೇನುಮನೋದದೆ ಮೋನಂಗೊಂಡು ಬಸದಿಯಂಗಳದೊಳ್ ನಡಪಾಡ ದೊಳಗಣಡಂಗಿರ್ದು ಜೋಗು ನೆಱೆದಂದು ಬಿಜಯಂಗೆಯ್ಯಿಮೆಂದೊಡಂತೆಗೆಯ್ವೆಮೆಂದು ಭಟಾರರಿರ್ದರ್ ಮತ್ತಿತ್ತಲ್ ಸುಕುಮಾರಸ್ವಾಮಿಯುಂ ಸರ್ವತೋಭದ್ರಮೆಂಬುತ್ತುಂಗ ವಿಚಿತ್ರಮಾಗಿರ್ದ ಪ್ರಾಸಾದದ ಮೇಗೇೞನೆಯ ನೆಲೆಯೊಳೆ ಕಾರ್ತಿಕಮಾಸದ ಪುಣ್ಣಮಿಯಂದು ಸುಖದಿಂದೆ ಲುಂದಿರ್ದನನ್ನೆಗಮಿತ್ತ ದುಯಾಭದ್ರ ಭಟಾರರ್ಗ್ಗೆ ಜೋಗು ನೆಱೆದು ಯಶೋಭದ್ರೆಯ ಬೇಡಿದ ಮೋನದ ದಿವಸದ ಪ್ರಮಾಣಾವಸಾನದೊಳ್ ಬೈಗಿರುಳಿನ ಪಂಚಮಹಾಶಬ್ದದ ಪೊೞ್ತಱೊಳ್ ತ್ರಿಲೋಕಪ್ರಜ್ಞಪ್ರಿಯೆಂಬುದಂ ಮೃದು ಮಧುರ ಗಂಭೀರ ಸ್ವರದಿಂ ಭಟಾರರ್ ಪರಿವಿಡಿಗೆಯ್ದಾಗಳ್ ಆಧೋಲೋಕ ತಿರ್ಯಗ್ಲೋಕಂಗಳಿರ್ದ ಸ್ವರೂಪಮಂ ಪ್ರಮಾಣಮುಮನೋದಿ ಊರ್ಧ್ವಲೋಕವ್ಯಾವರ್ಣನೆಯಂ ಪೇೞ್ದೂಗಳಚ್ಯುತಕಲ್ಪದ ಪದ್ಮಗುಲ್ಮ ವಿಮಾನಮಂ ವ್ಯಾವರ್ಣಿಸುವುದಂ ಸುಕುಮಾರಸ್ವಾಮಿ ಕೇಳ್ದು ಜಾತಿಸ್ಮರನಾಗಿಯಾನಿಲ್ಲಿ ಪುಟ್ಟಿದ್ದೇನೆಂಬುದನಱದು ಅಹೋ ಸುರಲೋಕಮೆಂಬಮೃತಸಮುದ್ರದ ನೀರೆಲ್ಲಮಂ ಕುಡಿದು ತಣಿಯದನೀ ಮನುಷ್ಯಭವದ ಸುಖಮೆಂಬ 

    ಸಾರಾಂಶ: ಹೇಗಾದರೂ ಈ ಸ್ಥಳಕ್ಕೆ ಆಯಾಸಗೊಂಡು ಯೋಗಾಭ್ಯಾಸದ ಹೊತ್ತಿಗೆ ಬಂದು ತಲುಪಿ ಯೋಗಮಗ್ನರಾಗಿದ್ದೇವೆ. ಇಲ್ಲಿಂದ ಎಲ್ಲಿಗೂ ಹೋಗಲಾಗದು* ಎಂದು ಹೇಳಿದಳು. ಆಗ ಆಕೆ – “ಹಾಗಿದ್ದರೆ ಪೂಜ್ಯರೇ, ನಿಮ್ಮಲ್ಲಿ ಒಂದನ್ನು ನಾನು ಬೇಡಿಕೊಳ್ಳುತ್ತೇನೆ. ನೀವು ನಾಲ್ಕು ತಿಂಗಳು ಏನನ್ನೂ ಪಠಿಸದೆ, ಮೌನವ್ರತ ತಾಳಿ, ಜಿನಾಲಯದ ಅಂಗಳದಲ್ಲಿ ಅಡ್ಡಾಡದೆ ಒಳಗೆಯೇ ಅಡಗಿದ್ದು ತಪಸ್ಸು ಕೊನೆಗೊಂಡಾಗ ನಿಮ್ಮ ಪ್ರಯಾಣ ಬೆಳೆಸಿರಿ* ಎಂದಳು. “ಹಾಗೆಯೇ ಮಾಡುವೆವು* ಎಂದು ನುಡಿದು ಋಷಿಗಳಿದ್ದರು. ಆಮೇಲೆ ಇತ್ತ ಸುಕುಮಾರಸ್ವಾಮಿ ಸರ್ವತೋಭದ್ರವೆಂಬ ಅತ್ಯಂತ ಎತ್ತರವಾದ ಮತ್ತು ವಿಶೇಷ ಆಶ್ಚರ್ಯಕರವಾದ ಉಪ್ಪರಿಗೆಯ ಮನೆಯ ಮೇಲೆ ಏಳನೆಯ ಅಂತಸ್ತಿನಲ್ಲಿ ಕಾರ್ತಿಕಮಾಸದ ಹುಣ್ಣಿಮೆಯಂದು ಸುಖವಾಗಿ ಮಲಗಿದ್ದನು. ಅದೇ ಸಮಯಕ್ಕೆ ಈ ಕಡೆಯಲ್ಲಿ ದಯಾಭದ್ರಮುನಿಗಳ ತಪಸ್ಸು ಪೂರ್ಣವಾಯಿತು. ಯಶೋಭದ್ರೆ ಪ್ರಾರ್ಥಿಸಿಕೊಂಡ ಮೌನ ದಿವಸದ ಅವ ಕೊನೆಗೊಂಡಿತು. ಅಂದಿನ ರಾತ್ರಿಯೆ ಕೊನೆಯ ವೇಳೆ (ಮುಂಜಾವದಲ್ಲಿ) ಶೃಂಗ, ತಮಟೆ, ಶಂಖ, ಭೇರಿ, ಜಯಘಂಟೆ – ಎಂಬ ಐದು ಬಗೆಯ ವಾದ್ಯಗಳ ಬಾಜನೆಯ ಸಮಯದಲ್ಲಿ ಋಷಿಗಳು ಮೂರುಲೋಕಗಳ ಆಕಾರಾದಿಗಳನ್ನು ನಿರೂಪಿಸುವ ಶಾಸ್ತ್ರವನ್ನು ಮೆಲ್ಪು ಇಂಪು ಗುಣ್ಪುಳ್ಳ ಸ್ವರದಿಂದ ಅನುಕ್ರಮವಾಗಿ ಪಠನ ಮಾಡಿದರು. ಕೆಳಗಿನ ಲೋಕ, ಮೃಗಪಕ್ಷಿ(ತಿರ್ಯಕ್) ಲೋಕಗಳು ಇರುವ ಸ್ವರೂಪವನ್ನೂ ಅವುಗಳ ಪ್ರಮಾಣವನ್ನೂ ಪಠಸಿದರು. ಅನಂತರ ಮೇಲಿನ ಲೋಕದ ವರ್ಣನೆಯನ್ನು ಹೇಳಿ, ಮತ್ತೆ ಅಚ್ಯುತಕಲ್ಪದ ‘ಪದ್ಮ ಗುಲ್ಮ’ ಎಂಬ ಮಹಾಭವವನ್ನು ವರ್ಣನೆ ಮಾಡಿದರು. ಇದೆಲ್ಲವನ್ನೂ ಸುಕುಮಾರಸ್ವಾಮಿ ಕೇಳಿದನು. ಆಗ ಅವನಿಗೆ ಪೂರ್ವ ಜನ್ಮಸ್ಮರಣೆಯುಂಟಾಯಿತು. ತಾನೀಗ ಇಲ್ಲಿ ಹುಟ್ಟಿದ್ದೇನೆ – ಎಂಬುದನ್ನು ಅವನು ತಿಳಿದುಕೊಂಡನು. “ಆಹಾ, ನಾನು ದೇವಲೋಕವೆಂಬ ಸುಧಾಸಮುದ್ರದ ನೀರನ್ನೆಲ್ಲ ಕುಡಿದೂ ತೃಪ್ತಿಗೊಳ್ಳದೆ ಈ ಮನುಷ್ಯಜನ್ಮದ ಸುಖವೆಂಬ 

    ಪುಲ್ವನಿಯೊಳ್ ಸಿಲ್ಕಿ ಶಿವಸುಖಮನೆಯ್ದಿಸುವ ಸಚ್ಚಾರಿತ್ರದಿಂ ಬೞದೆನೆಂದು ತನ್ನಂ ತಾಂ ನಿಂದಿಸುತ್ತಂ ಮಂಚದಿಂದಿಳಿದು ಮಾಡದೊಳಗಿರ್ದ ವಸ್ತ್ರಂಗಳಂ ತೆಗೆದುಕೊಂಡು ಪ್ರಾಸಾದದ ಪೆಱಗಣ ಗವಾಕ್ಷಜಾಳದೊಳ್ ಕಟ್ಟಿಕೊಂಡೊಂದೊಂದಱ ತುದಿಯೊಳೊಂದೊಂದು ವಸ್ತ್ರಮಂ ತಗುೞ ಪಿಡಿದಿೞದು ಜಿನಾಲಯಮನೆಯ್ದಿ ದೇವರ್ಗೆ ನಮಸ್ಕಾರಂಗೆಯ್ದು ದಯಾಭದ್ರಭಟಾರರ್ಗೆಱಗಿ ಪೊಡೆವಟ್ಟು ದೀಕ್ಷೆಯಂ ಪ್ರಸಾದಂಗೆಯ್ದೆನ್ನಂ ಸಂಸಾರಾರ್ಣವದತ್ತಣಿಂದೆತ್ತಿಮೆಂದೊಂಗೆ ಭಟಾರರ್ ಮೂಱು ದಿವಸಂ ನಿನಗಾಯಷ್ಯಮೆಂದೊಡೀಗಳೀ ನಿಸ್ಸಾರಮಪ್ಪ ದೇಹದಿಂ ಸಾರಮಪ್ಪ ತಪಮಂ ಕೈಕೊಂಡು ಪಲಕಾಲಂ ನೆಗೞಲ್ ಪೆತ್ತೆನಿಲ್ಲ ನಿಸ್ಸಾರಮಪ್ಪ ಭೋಗದೊಳ್ ಸಿಲ್ಕಿ ಅಮೇಧ್ಯದೊಳ್ ಕ್ರೀಡಿಸುವ ಬಾಳಕಂಬೊಲ್ ಕಾಲಮಂ ಬಱದೆ ಕಳೆದೆನೆಂದು ತನ್ನನಾದಮಾನುಂ ನಿಂದಿಸಿ ತತ್ಪಾದಮೂಲದೊಳ್ ತಪ್ಪಂಬಟ್ಟು ಪಂಚಮಹಾಬ್ರತಂಗಳನೇಱೆಸಿಕೊಂಡು ಪಡಿದಮಣಂಗೇಳ್ದ ತದನಂತರಂ ನಿಶ್ಚಯ ಸಮ್ಯ್ವಕ್ರಮಂ ಕೈಕೊಂಡಿಂ ಬೞಕ್ಕೆ ಮಹಾಕಾಳಮೆಂಬ ಶ್ಮಶಾನಕ್ಕೆ ಪೋಗಿ ಯಾವಜ್ಜೀವಮಾಹಾರಕ್ಕೆ ನಿವೃತ್ತಿಗೆಯ್ದು ಪ್ರಾಯೋಪಗಮನ ವಿಧಾನದಿಂ ಪ್ರಚ್ಛನ್ನಮಪ್ಪೆಡೆಯೊಳ್ ಮೃತಕ ಸೆಜ್ಜೆಯೊಳಿರ್ದು ಸನ್ಯಸನಂಗೆಯ್ದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಧ್ಯಾನಿಸುತ್ತಿರ್ಪನ್ನೆಗಂ ಇತ್ತ ವಾಯುಭೂತಿಯಪ್ಪ ಭವದಂದಿನತ್ತಿಗೆಯಪ್ಪ ಸೋಮದತ್ತೆಯೆಂಬೊಳ್ ನಿದಾನಂಗೆಯ್ದು ತನ್ನ ನಾಲ್ವರ್ ಮಕ್ಕಳುಂ ತಾನುಂ ಸಂಸಾರಸಮುದ್ರದೊಳ್ 

    ಸಾರಾಂಶ: ಹುಲ್ಲಿನ ಹನಿಗೆ ಸಿಕ್ಕಿ ಮಂಗಳಕರಸುಖಗಳನ್ನು ಒದಗಿಸುವ ಒಳ್ನಡತೆಯಿಂದ ಕೆಳಕ್ಕೆ ಜಾರಿಹೋಗಿದ್ದೇನೆ* – ಎಂದು ತನ್ನನ್ನು ತಾನೇ ನಿಂದಿಸಿಕೊಂಡನು. ಮಂಚದಿಂದ ಇಳಿದು, ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಉಪ್ಪರಿಗೆ ಮನೆಯ ಹಿಂಗಡೆಯ ಕಿಟಕಿಗೆ ಕಟ್ಟಿಕೊಂಡು ಒಂದೊಂದರ ತುದಿಗೆ ಒಂದೊಂದು ಬಟ್ಟೆಯನ್ನು ಕಟ್ಟಿ, ಅದನ್ನು ಹಿಡಿದು ಕೆಳಗಿಳಿದು ಜಿನಾಲಯಕ್ಕೆ ಬಂದು ಜಿನೇಶನನ್ನು ವಂದಿಸಿದನು. ದಯಾಭದ್ರಮುನಿಗಳಿಗೆ ಸಾಷ್ಟಾಂಗ ವಂದಿಸಿ “ನನಗೆ ದೀಕ್ಷೆಯನ್ನು ಅನುಗ್ರಹಿಸಿ ನನ್ನನ್ನು ಸಂಸಾರಸಮುದ್ರದಿಂದ ಎತ್ತಿರಿ* ಎಂದು ಹೇಳಿದನು. ಆಗ ನಿನಗೆ ಮೂರು ದಿವಸದ ಆಯುಷ್ಯ ಮಾತ್ರವಿರುವುದು* ಎಂದರು. ಆಗ ಸುಕುಮಾರಸ್ವಾಮಿ – “ಈಗ ಈ ನಿಸ್ಸಾರವಾದ ಶರೀರದಿಂದ ಸಾರವತ್ತಾದ ತಪಸ್ಸನ್ನು ಕೈಕೊಂಡು ನಾನು ಬಹಳಕಾಲ ಆಚರಿಸಲಿಲ್ಲ. ನಿಸ್ಸಾರವಾದ ಸುಖಾನುಭವದಲ್ಲಿ ಸಿಕ್ಕಿಕೊಂಡು ಹೇಲಿನಲ್ಲಿ ಆಟವಾಡುವ ಬಾಲಕನ ಹಾಗೆ ವ್ಯರ್ಥವಾಗಿ ಕಾಲವನ್ನು ಕಳೆದೆನು* ಎಂದು ತನ್ನನ್ನು ಅತಿಶಯವಾಗಿ ಹಳಿದುಕೊಂಡನು. ಆ ಮುನಿಗಳ ಪಾದದ ಬುಡದಲ್ಲಿ ತಪಸ್ಸಿನ ಆಚರಣೆಯನ್ನು ಸ್ವೀಕರಿಸಿ, ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು (ಪಡಿಕಮಣ) ಕೇಳಿದ ನಂತರ ಜೈನತತ್ವವನ್ನು ಸ್ವೀಕರಿಸಿ ಮಹಾಕಾಳವೆಂಬ ಶ್ಮಶಾನಕ್ಕೆ ಹೋಗಿ ಜೀವವಿರುವವರೆಗೂ ಆಹಾರವನ್ನು ಸೇವಿಸದೆ, ಆಮರಣ ಉಪವಾಸ ವಿಧಾನದಿಂದ ಗುಪ್ತವಾದ ಸ್ಥಳದಲ್ಲಿ ಶವಾಸನದಲ್ಲಿದ್ದು, ಸಂನ್ಯಾಸವನ್ನು ಮಾಡುತ್ತ ಧರ್ಮಧ್ಯಾನ ಶುಕ್ಲಧ್ಯಾನ ಎಂಬ ಧ್ಯಾನಗಳಲ್ಲಿ ಮಗ್ನನಾಗಿದ್ದನು. ಆ ಕಡೆಯಲ್ಲಿ ವಾಯುಭೂತಿಯಾಗಿದ್ದ ಜನ್ಮದದಿಂನ ಅತ್ತಿಗೆಯಾಗಿದ್ದ ಸೋಮದತ್ತೆ ಎಂಬುವಳು (ಜನ್ಮಾಂತರದಲ್ಲಿ ನರಿಯಾಗಿ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವವಳಾಗುವೆನೆಂದು) ಪ್ರತಿಜ್ಞೆಮಾಡಿ ತನ್ನ ನಾಲ್ಕು ಮಂದಿ ಮಕ್ಕಳೂ ತಾನೂ 

    ನೀಡುಂ ತಿಱ್ರನೆ ತಿರಿದು ಬಂದು ಪೆಣ್ಣರಿಯಾಗಿ ಪುಟ್ಟಿ ತನ್ನ ನಾಲ್ಕು ಮಱಗಳ್ವೆರಸಾಹಾರಮನಱಸಿ ತೊೞಲುತ್ತಂ ಬರ್ಪುದನ್ನೆಗಂ ಸುಕುಮಾರಸ್ವಾಮಿಯುಂ ಮಹಾಕಾಳಕ್ಕೆ ಪೋಪನೆಲ್ಲಾ ಕಾಲಮುಂ ಮಣಿಕುಟ್ಟಿಮಭೂಮಿಯೊಳ್ ಪಾಸಿದ ನೇತ್ರಪೞಯ ಮೇಗೆ ನಡೆದ ಮೃದು ಲಲಿತಮಪ್ಪ ಚರಣದ್ವಯದೊಳ್ ಮುನ್ನೆಂದಂ ನೆಲನಂ ಕಿಟ್ಟಿಯಱಯದೊಂ ಕಠಿನಭೂಮಿಯೊಳ್ ನಡೆದೊಡೆ ಕಿಱುಗಲ್ಗಳುಂ ಪೆಟ್ಟಿಗಳುಮಗುೞ್ದು ಪುಗೊಳೊಡೆದು ಪೊಱಮಟ್ಟು ಕರಗದ ದಾರೆವೊಲೆಡೆವಱಯದೆ ಮಹಾಕಾಳಶ್ಮಶಾನಂಬರಗಮೊಕ್ಕ ನೆತ್ತರ ದಾರೆಯ ಗಂದದಿಂದಂ ನರಿಗಳ್ ಬಂದು ಕಂಡು ರಾಗಿಸಿ ಮಱಗಳ್ವೆರಸಡಿಯಿಂದಂ ತೊಟ್ಟೆರಡುಂ ಕಾಲ್ಗಳಂ ಮೊೞಕಾಲ್ವರೆಗಮೊಂದುದಿವಸಂ ತಿಂದತ್ತೆರಡನೆಯ ದಿವಸಂ ಮೊೞಕಾಲಿಂ ತೊಟ್ಟು ಕಟಿವರೆಗಂ ತಿಂದತ್ತು ಮೂರನೆಯ ದಿವಸಂ ಬಸಿಱಂ ಪೋೞ್ದು ಕರುಳಂ ತೋಡಿ ತಿನೆ ಪೃಥಕ್ರ್ವವಿತರ್ಕವೀಚಾರಮೆಂಬ ಪ್ರಥಮ ಶುಕ್ಲಧ್ಯಾನದೊಳ್ ಕೂಡಿಯುಪಶಾಂತ ಗುಣಸ್ಥಾನದೊಳಿರ್ದು ರತ್ನತ್ರಯಮಂ ಸಾದಿಸಿ ಸಯಸತ್ತಮ ದೇವನಾಗಿ ಪುಟ್ಟಿದೊಂ ಮತ್ತಿತ್ತ ತಾಯುಂ ಪೆಂಡಿರುಂ ಪರಿವಾರಮುಮೆಲ್ಲಾ ದೆಸೆಗಳೊಳಂ ಪರಿವರಿದು ಪೋಗಿ ಸುಕುಮಾರಸ್ವಾಮಿಯನಹೊ ಸೂರಾ ಆಹೋ ಮಹಾಪುರುಷ ಅಹೊ ಧೈರ್ಯವಂತ ಅಹೊ 

    ಸಾರಾಂಶ: ಸಂಸಾರವೆಂಬ ಸಮುದ್ರದಲ್ಲಿ ವಿಶೇಷವಾಗಿ ತಿರ್ರನೆ ಸುತ್ತುತ್ತ ಬಂದು, ಹೆನ್ಣು ನರಿಯಾಗಿ ಹುಟ್ಟಿ ತನ್ನ ನಾಲ್ಕು ಮರಿಗಳೊಂದಿಗೆ ಅದು ಆಹಾರವನ್ನು ಹುಡುಕುತ್ತ ಸುತ್ತಾಡುತ್ತಾ ಬರುತ್ತಿತ್ತು. ಸುಕುಮಾರಸ್ವಾಮಿ ಮಹಾಕಾಳವೆಂಬ ಶ್ಮಶಾನದ ಕಡೆಗೆ ಹೋಗುತ್ತಿದ್ದವನು. ಅವನು ಯಾವ ಕಾಲದಲ್ಲಿ ನೋಡಿದರೂ ರತ್ನಮಯವಾದ ಜಗಲಿಯ ಮೇಲೆ ಹಾಸಿದ ರೇಷ್ಮೆ ವಸ್ತ್ರದ ಮೇಲೆ ನಡೆದ ತನ್ನ ಮೆತ್ತಗಾದ ಮತ್ತು ಚೆಲುವಾದ ಎರಡು ಪಾದಗಳಲ್ಲಿ ಹಿಂದೆ ಎಂದೂ ನೆಲವನ್ನು ಮುಟ್ಟಿಯೂ ಅರಿಯದವನು, ಅವನು ಈಗ ಕಠಿನವಾದ ನೆಲದಲ್ಲಿ ನಡೆಯಲು, ಹರಳುಕಲ್ಲುಗಳೂ ಹೆಂಟೆ (ಗಟ್ಟಿ)ಗಳೂ ನಾಟಿಕೊಂಡು ಗುಳ್ಳೆಯೆದ್ದು ಒಡೆದು ಅದರಿಂದ ಹೊರಟ ರಕ್ತವು ಕರಗದಿಂದ ಇಳಿಯುವ ನೀರಿನ ಧಾರೆಯಂತೆ ನಿರಂತರವಾಗಿ ಸುರಿದಿತ್ತು. ಮಹಾಕಾಳ ಶ್ಮಶಾನದವರೆಗೂ ಸುರಿದ ರಕ್ರದ ಧಾರೆಯ ವಾಸನೆಯಿಂದ ನರಿಗಳು ಬಂದು ನೋಡಿದವು. ಆ ಹೆಣ್ಣುನರಿ ಸಂತೊಷಗೊಂಡು ತನ್ನ ಮರಿಗಳ ಸಮೇತವಾಗಿ ಮೊದಲನೆಯ ದಿನ ಸುಕುಮಾರ ಸ್ವಾಮಿಯ ಎರಡು ಕಾಲುಗಳನ್ನು ಪಾದದಿಂದ ಪ್ರಾರಂಭಿಸಿ ಮೊಣಕಾಲುಗಳವರೆಗೆ ತಿಂದಿತು. ಎರಡನೆಯ ದಿವಸ ಮೊಣಕಾಲುಗಳಿಂದ ಪ್ರಾರಂಭಿಸಿ ಸೊಂಟದವರೆಗೆ ತಿಂದಿತು. . ಮೂರನೆಯ ದಿವಸ ಹೊಟ್ಟೆಯನ್ನು ಸೀಳಿ ಕರುಳನ್ನು ತೋಡಿ ತಿನ್ನುತ್ತಿತ್ತು. ಆಗ ಸುಕುಮಾಸ್ವಾಮಿಯು ಪೃಥಕ್ತ್ವ, ವಿತರ್ಕ, ವೀಚಾರ – ಎಂಬ ಮೊದಲನೆಯ ಶ್ಲೋಕಧ್ಯಾನದಲ್ಲಿ ಸೇರಿಕೊಂಡು ಉಪಶಾಂತಿ ಎಂಬ ಗುಣಸ್ಥಾನದಲ್ಲಿದ್ದು ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ಚಾರಿತ್ರ – ಎಂಬ ರತ್ನತ್ರಯವನ್ನು ಸಾಧನೆ ಮಾಡಿ ಅತ್ಯಂತ ಶ್ರೇಷ್ಠ ದೇವತೆಯಾಗಿ ಜನಿಸಿದನು. ಆ ಮೇಲೆ ಇತ್ತಲಾಗಿ ಸುಕುಮಾರಸ್ವಾಮಿಯ ತಾಯಿಯೂ ಹೆಂಡಿರೂ ಪರಿವಾರವೂ ಎಲ್ಲಾ ದಿಕ್ಕುಗಳಲ್ಲಿಯೂ ಸಂಚರಿಸಿಕೊಂಡು ಹೋಗಿ ಸುಕುಮಾರಸ್ವಾಮಿಯನ್ನು ಎರಡು ದಿವಸ ಇರುಳು ಹಗಲೂ ಹುಡುಕಿದರು. ಆದರೆ ಕಾಣಲಿಲ್ಲ ಮೂರನೆಯ ದಿವಸದಂದು ಸಂಜೆ ಹೊತ್ತಿನಲ್ಲಿ ದೇವತೆಗಳು ಬಂದು ಸುಕುಮಾರಸ್ವಾಮಿಯನ್ನು “ಆಹಾ ಶೂರನೇ, ಆಹಾ 

ಸಂಸಾರಭೀರು ನಿನ್ನಂತುಪಸರ್ಗಮನಾರಪ್ಪೊಡು ಸೈರಿಸಿ ರತ್ನತ್ರಯಮಂ ಸಾಸಿದೊರಿಲ್ಲೆಂದು ದೇವತೆಗಳ್ ಪೊಗಳ್ವ ಕಳಕಳಧ್ವನಿಯುಮಂ ದೇವದುಂದುಭಿಯ ರವಮುಮಂ ಯಶೋಭದ್ರೆ ನೋಡಿ ದೆವಸಂಘಾತಮಂ ಕಂಡು ಮಗನ ಸಾವನಱದು ಬಯ್ಗಿರುಳಾದಾಗಳ್ ಮೂವತ್ತಿರ್ವರ್ ಸೊಸೆವಿರ್ಕಳ್ಗಂ ಪೇೞ್ದಟ್ಟಿ ಸುಕುಮಾರಸ್ವಾಮಿ ನಿಮಗೆಲ್ಲರ್ಗೆ ಮುಳಿದು ಪೋಗಿಯಡಂಗಿರ್ದೊನನಾನಱವೆಂ ನೀವೆಲ್ಲಂ ನೆಱೆಯೆ ತೊಟ್ಟುಟ್ಟು ಪಸದನಂಗೊಂಡು ಚೆಲ್ವೆಯರಾಗಿ ಬನ್ನಿಂ ಪೋಪಂ ತಿಳಿಪಿಕೊಂಡು ಬರ್ಪಂ ನಿಮ್ಮ ಸ್ವಾಮಿಯನೆಂದೊಡವರ್ಗಳನಿಬರುಂ ರಾಗಿಸಿ ಕೈಗೆಯ್ದತ್ತೆಯೊಡನೆ ಪರಿವಾರಸಹಿತಂ ಮಹಾಕಾಳಕ್ಕೆ ಪೋಗಿ ನೋೞ್ಪರನ್ನೆಗಂ ನಮೇರು ಮಂದಾರ ಸಂತಾನಕ ಪಾರಿಯಾತ್ರಮೆಂಬ ದೇವರ್ಕಳ್ ಸುರಿದ ಪುಷ್ಪವೃಷ್ಟಿಯಿಂದಂ ಮುಚ್ಚೆಪಟ್ಟನಾಗಿ ಕಂಪಿಮಗೆಱಗಿದ ತುಂಬಿಯ ಸಮೂಹಮಂ ಮೇಗೆ ಸುೞವುದಂ ಕಂಡಿಲ್ಲಿರ್ದ್ದನೆಂದು ಯಶೋಭದ್ರೆ ತೋಱದೊಡೆ ಪೋಗಿ ತೆಱೆದು ನೋೞ್ಪರನ್ನೆಗಂ ಮೃತಕಮಂ ಕಂಡನಿಬರುಂ ಮೂರ್ಛೆವೋಗಿ ನೀಡಱಂದೆೞ್ಚರ್ತು ತಮ್ಮ ಬಸಿಱುಮಂ ತಲೆಯುಮಂಬಡಿದುಕೊಂಡು ಸುಕುಮಾರಸ್ವಾಮಿಯ ರೂಪಮಂ ತೇಜಮುಮಂ ಯೌವನಮಂ ಲಾವಣ್ಯಮಂ ಸೌಭಾಗ್ಯಮಂ ಯಶಮಂ ಮೆಲ್ಪಂ ನುಡಿಯ ಬಲ್ಮೆಯಂ ಶುಚಿತ್ವಮಂ ಶೌಚಮಂ ಶ್ರೀಯಂ ಸಂಪತ್ತಂ ಸೊಬಗಂ ಒಲ್ಮೆಯಂ ಧೈರ್ಯಮಂ ಎಂದಿವು ಮೊದಲಾಗೊಡೆಯವಾತನೊಳ್ ನೆಲಸಿರ್ದ ಗುಣಂಗಳಂ 

    ಸಾರಾಂಶ: ವಧೈರ್ಯಶಾಲಿಯೇ, ಆಹಾ ಸಂಸಾರಕ್ಕೆ ಹೆದರಿದವನೇ, ನಿನ್ನ ಹಾಗೆ ಉಪಸರ್ಗಗಳನ್ನು ಸಹಿಸಿಕೊಂಡು ರತ್ನತ್ರಯವನ್ನು ಸಾಸಿದವರು ಯಾರೂ ಇಲ್ಲ* ಎಂದು ಹೊಗಳುತ್ತಿದ್ದರು. ಹಾಗೆ ಹೊಗಳುವ ಗದ್ದಲದ ಧ್ವನಿಯನ್ನೂ ದೇವಲೋಕದ ದುಂದುಭಿವಾದ್ಯದ ಶಬ್ದವನ್ನೂ ಯಶೋಭದ್ರೆ ಕೇಳಿ, ದೇವತಾಸಮೂಹವನ್ನು ಕಂಡು ತನ್ನ ಮಗನು ಸತ್ತುದು ನಿಜವೆಂದು ತಿಳಿದುಕೊಂಡಳು. ಅಂದು ರಾತ್ರಿ ಮೂವತ್ತೆರಡು ಮಂದಿ ಸೊಸೆಯಂದಿರಿಗೂ ಅವಳು ಹೇಳಿಕಳುಹಿಸಿದಳು. ಅವರೊಡನೆ ಹೀಗೆಂದಳು – “ಸುಕುಮಾರಸ್ವಾಮಿ ನಿಮ್ಮೆಲ್ಲರ ಮೇಲೆಯೂ ಕೋಪಿಸಿಕೊಂಡು ಹೋಗಿ ಅಡಗಿರುತ್ತಾನೆ. ಅವನು ಎಲ್ಲಿರುವನೆಂದು ನಾನು ಬಲ್ಲೆ. ನೀವೆಲ್ಲರೂ ವಿಶೇಷವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಶೃಂಗಾರಮಾಡಿಕೊಂಡು ಚೆಲುವೆಯರಾಗಿ ಬನ್ನಿ, ಹೋಗೋಣ. ನಿಮ್ಮ ಒಡೆಯನಾದ ಸುಕುಮಾರನನ್ನು ಸಂತಯಿಸಿಕೊಂಡು ಬರೋಣ* ಹೀಗೆನ್ನಲು ಅವರೆಲ್ಲರೂ ಸಂತೋಷಗೊಂಡು ಸಿಂಗರಿಸಿಕೊಂಡು ಅತ್ತೆ (ಯಶೋಭದ್ರೆ)ಯೊಂದಿಗೆ ಮಹಾಕಾಳ ಶ್ಮಶಾನಕ್ಕೆ ಹೋಗಿ ನೋಡಿದರು. ಆಗ ಸುರಪುನ್ನಾಗ, ಮಂದಾರ, ಕಲ್ಪವೃಕ್ಷ, ಪಾರಿಯಾತ್ರಗಳ ಹೂಮಳೆಯನ್ನು ದೇವತೆಗಳು ಸುರಿಸಲು ಅದರಿಂದ ಮುಚ್ಚಲ್ಪಟ್ಟವನಾಗಿ, ಹೂಗಂಪಿಗೆ ಬಂದೆರಗಿದ ತುಂಬಿಗಳ ಹಿಂಡು ಮೇಲುಗಡೆ ಸುಳಿಯುವುದನ್ನು ಕಂಡು ಸುಕುಮಾರನು ಇಲ್ಲಿದ್ದಾನೆ ಎಂದು ಯಶೋಭದ್ರೆ ತೋರಿಸಿದಳು. ಆಗ ಇವರು ಹೋಗಿ, ಮುಚ್ಚಿದ್ದನ್ನು ತೆರೆದು ನೋಡಿದರು. ಹೆಣವನ್ನು ಕಂಡು ಅವರೆಲ್ಲರೂ ಮೂರ್ಛೆ ಹೋದರು. ಬಹಳ ಹೊತ್ತಾದನಂತರ ಎಚ್ಚರಗೊಂಡು ತಮ್ಮ ಹೊಟ್ಟೆಯನ್ನೂ ತಲೆಯನ್ನೂ ಬಡಿದುಕೊಂಡು ಸುಕುಮಾರಸ್ವಾಮಿಯ ರೂಪ, ಕಾಂತಿ, ಯಾವನ, ಲಾವಣ್ಯ, ಸೌಭಾಗ್ಯ, ಕೀರ್ತಿಗಳನ್ನೂ ಮೃದುಸ್ವಭಾವವನ್ನೂ ಮಾತಿನ ಪ್ರೌಢಿಮೆಯನ್ನೂ ಶುಚಿತ್ವವನ್ನೂ ಶುದ್ಧಗುಣವನ್ನೂ, ಶೋಭೆಯನ್ನೂ, ಸಂಪತ್ತನ್ನೂ, ಸೊಬಗನ್ನೂ, ಪ್ರೀತಿಯನ್ನೂ ಧೈರ್ಯ ಮುಂತಾಗಿರುವ 

ನೆನೆನೆನೆದನಿಬರುಂ ಪ್ರಲಾಪಂಗೆಯ್ಯುತ್ತಂ ಸೈರಿಸಲಾಱದೆ ನಿರಂತರಂ ಮೂರ್ಛೆವೋಗುತ್ತಂ ನೀಡುಂ ಬೇಗಂ ದುಃಖಂಗೆಯ್ದಳ್ತು ನೀರಿೞದೆಣ್ಬರ್ ಬಸಿಱ ಪೆಂಡಿರುೞಯೆ ಇರ್ಪತ್ತು ನಾಲ್ವರ್ ಪೆಂಡಿರುಂ ಮತ್ತಂ ಪೆಱರ್ ನಂಟರ್ಕಳುಂ ಪರಿವಾರಮುಂ ಯಶೊಭದ್ರೆಯೊಡನೆ ದಯಾಭದ್ರರ್ ಗುರುಗಳಾಗೆ ಕಮಳಶ್ರೀ ಕಂತಿಯರ್ ಕಂತಿಯರಾಗೆ ತಪಂಬಟ್ಟುಗ್ರೋಗ್ರತಪಂಗೆಯ್ದನಿಬರುಂ ಸೌಧರ್ಮಕಲ್ಪಂ ಮೊದಲಾಗೊಡೆಯ ಕಲ್ಪಂಗಳೊಳ್ ಪುಟ್ಟಿದರ್ ಮುತ್ತಿಂತಪ್ಪುದಂ ಚಿಂತಿಸಲುಂ ಸೈರಿಸಲುಮಾಗದ ತಿರಿಕೋಪಸರ್ಗಮನವಂತಿ ಸುಕುಮಾರಸ್ವಾಮಿ ಮೂಱು ದಿವಸಮಿರುಳುಂ ಪಗಲುಂ ಸೈರಿಸಿ ರತ್ನತ್ರಯಮನೆಂತು ಸಾದಿಸಿದನಂತೆ ಸನ್ಯಸನಂಗೆಯ್ದಿರ್ದಾರಾಧಕರಪ್ಪ ಮಹಾಪುರುಷರುಮವಂತಿ ಸುಕುಮಾರಸ್ವಾಮಿಯ ಪರಮಸುಖಿಯಪ್ಪುಪಸರ್ಗಮಂ ವಿಜಯವಿಧಾನಮಂ ಮನದೊಳನವರತಂ ಚಿಂತಿಸುತ್ತಾಪ್ತಾಗಮ ಪದಾರ್ಥರ್ದಿಗಳೊಳತೀವಸ್ಥಿರರಾಗಿ ಪರಮ ಸಹಜ ನಿಜ ರತ್ನತ್ರಯದೊಳ್ ಕೂಡಿ ಆಭೇದವಾಗೆಯ್ದೆ ಕೂಡಿ ಶರೀರಂ ಮೊದಲಾಗೊಡೆಯ ಸಮಸ್ತ ಬಾಹ್ಯಾಭ್ಯಂತರ ಪರಿಗ್ರಹಂಗಳಂ ನೆಱೆ ತೊಱೆದು ಅಪೂರ್ವಪವರ್ಗಸುಖಂಗಳನೆಯ್ದುಗೆ ಮತ್ತುಜ್ಜೇನಿಯ ತೆಂಕಣ ದೆಸೆಯೊಳವಂತಿ ಸುಕುಮಾರಸ್ವಾಮಿಯ ಕಾಲಂಗೆಯ್ದೆಡೆ ಈಗಳುಂ ಪುಣ್ಯಮುಂ ಪವಿತ್ರಮುಮಾದುದು ಮತ್ತಂ 

        ಸಾರಾಂಶ: ಆತನಲ್ಲಿ ನೆಲಸಿಕೊಂಡಿದ್ದ ಗುಣಗಳನ್ನೂ ಮತ್ತು ಮತ್ತೂ ನೆನಸಿಕೊಳ್ಳುತ್ತ, ಅವರೆಲ್ಲರೂ ಗೋಳಾಡುತ್ತ ಸಹಿಸಲಾರದೆ ಎಡೆಬಿಡದೆ ಆಗಾಗ ಮೂರ್ಛೆಗೊಳ್ಳುತ್ತ, ಬಹಳ ಹೊತ್ತಿನ ತನಕ ದುಃಖಪಡುತ್ತ ಅತ್ತು, ಸ್ನಾನ ಮಾಡಿದರು. ಅವರಲ್ಲಿ ಎಂಟು ಮಂದಿ ಗರ್ಭಿಣಿ ಸ್ತ್ರೀಯರನ್ನು ಬಿಟ್ಟು ಉಳಿದ ಇಪ್ಪತ್ತನಾಲ್ಕು ಮಂದಿ ಹೆಂಡಿರೂ ಮತ್ತಿತರ ನೆಂಟರೂ ಪರಿವಾರದವರೂ ಯಶೋಭದ್ರೆಯೊಂದಿಗೆ ತಪಸ್ಸನ್ನು ಕೈಗೊಂಡರು. ಅವರಿಗೆ ದಯಾಭದ್ರರು ಗುರುಗಳಾದರು. ಕಮಲಶ್ರೀ ಕಂತಿಯರು ಮಾರ್ಗದರ್ಶಿಗಳಾದ ಸನ್ಯಾಸಿನಿಯರಾದರು, ಹೀಗೆ ಯಶೋಭದ್ರೆಯೊಂದಿಗೆ ಅತ್ತಂತ ಘೋರವಾದ ತಪಸ್ಸನ್ನು ಮಾಡಿ ಅವರೆಲ್ಲರೂ ಸೌಧರ್ಮಕಲ್ಪವೇ ಮೊದಲಾಗಿರುವ ಸ್ವರ್ಗಗಳಲ್ಲಿ ಹುಟ್ಟಿದರು. ಆಮೇಲೆ ಈರೀತಿಯಾಗಿರುವುದನ್ನು ಯೋಚಿಸಲೂ ಸಹಿಸಲೂ ಸಾಧ್ಯವಾಗದಂತಹ ಪ್ರಾಣ್ಯುಪದ್ರವ (ತಿರಿಕೋಪಸರ್ಗ)ವನ್ನು ಅವಂತಿ ಸುಕುಮಾರನು ಮೂರುದಿವಸ ಇರುಳೂ ಹಗಲೂ ಸಹಿಸಿಕೊಂಡು ರತ್ನತ್ರಯ (ಸಮ್ಯಗ್ದರ್ಶನ – ಜ್ಞಾನ – ಚಾರಿತ್ರ)ವನ್ನು ಹೇಗೆ ಸಾಸಿದನೋ ಹಾಗೆಯೇ ಸಂನ್ಯಾಸನ ಕೈಗೊಂಡು ಆರಾಧನೆ ಮಾಡತಕ್ಕ ಇದರ ಮಹಾಪುರುಷರೂ ಸುಕುಮಾರಸ್ವಾಮಿಗೆ ಪರಮ ಸುಖವನ್ನೊದಗಿಸಿದ ಉಪಸರ್ಗವನ್ನೂ ಅದನ್ನು ಗೆಲ್ಲುವ ಕ್ರಮವನ್ನೂ ಮನಸ್ಸಿನಲ್ಲಿ ಯಾವಾಗಲೂ ಯೋಚಿಸುತ್ತ ಆತ್ಮೀಯವಾದ ಆಗಮ (ಶಾಸ್ತ್ರ)ಗಳಲ್ಲಿಯೂ ನವಪದಾರ್ಥಗಳಲ್ಲಿಯೂ ಋದ್ಧಿ (ಸಿದ್ಧಿ)ಗಳಲ್ಲಿಯೂ ಅತ್ಯಂತ ಸ್ಥಿರರಾಗಿದ್ದುಕೊಂಡು ಸಹಜವಾದ ಮತ್ತು ನಿಜವಾದ ರತ್ನತ್ರಯದಲ್ಲಿ ಒಂದಾಗಿ, ಭೇದವಿಲ್ಲದಂತೆ ಕೂಡಿ ದೇಹವೇ ಮೊದಲಾದ ಎಲ್ಲಾ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನು ವಿಶೇಷವಾಗಿ ಬಿಟ್ಟು ಅಪೂರ್ವವೆನಿಸುವ ಮುಕ್ತಿ ಸುಖಗಳನ್ನು ಪಡೆಯಲಿ! ಆಮೇಲೆ, ಉಜ್ಜಯಿನಿಯ ದಕ್ಷಿಣ ದಿಶಾಭಾಗದಲ್ಲಿ ಅವಂತಿ ಸುಕುಮಾರಸ್ವಾಮಿ ದೇಹತ್ಯಾಗ ಮಾಡಿದ ಸ್ಥಳ ಇಂದಿಗೂ ಪುಣ್ಯಕರವೂ ಪವಿತ್ರವೂ ಆಯಿತು. ಅದಲ್ಲದೆ, ಆ 

ಮಹಾಪುರುಷನ ಶರೀರಮಂ ಚತುರ್ನಿಕಾಯಾಮರತತಿಗಳ್ ಭಕ್ತಿಯಿಂದಗರು ಕಾಲಾಗರು ಗೋಶೀರ್ಷ ಚಂದನಂ ಮೊದಲಗೊಡೆಯ ಅನೇಕ ಸುಗಂಧ ದ್ರವ್ಯಂಗಳಿಂದಂ ಪೂಜಿಸಿದ ವಸ್ತುಗಳ್ ಕಾಲಾಂತರದಿಂ ಕರಗಿ ಬಿೞ್ದುದಾ ಸ್ಥಾನಮೆಂಬುದು ಗಂಧವತಿಯೆಂಬ ತೊಱೆಯಾದುದು ದೇವರ್ಕಳ್ ಪೊಗೞ್ದ ಕಳಕಳಧ್ವನಿಯಿಂ ಪೆಂಡಿರ್ಕಳ ಪ್ರಳಾಪಂಗೆಯ್ದೞ್ತ ಕಳಕಳಧ್ವನಿಯಿಂದಂ ಕಳಕಳಾಯತಮೆಂದು ಸಿದ್ಧಾಯತಮಾದುದು. 
          ಸಾರಾಂಶ: ಮಹಾಪುರುಷನ ದೇಹವನ್ನು ಭವನಪತಿ, ವ್ಯಂತರಿಕ, ಜ್ಯೋತಿಷ್ಕ ಮತ್ತು ವಿಮಾನವಾಸಿಗಳೆಂಬ ನಾಲ್ಕು ಬಗೆಯ ದೇವತೆಗಳು ಭಕ್ತಿಯಿಂದ ಅಗರು, ಕಾಳಾಗರು, ಗೋರೋಚನ, ಗಂಧ, ಶ್ರೀಗಂಧ – ಮುಂತಾಗಿರುವ ಹಲವಾರು ಸುವಾಸನೆಯ ದ್ರವ್ಯಗಳಿಂದ ಪೂಜಿಸಿದ ವಸ್ತುಗಳು ಕೆಲವು ಕಾಲಾನಂತರ ಕರಗಿ ಬಿದ್ದುವು. ಹಾಗೆ ಬಿದ್ದ ಸ್ಥಳವು ‘ಗಂಧವತಿ’ ಎಂಬ ಹೆಸರಿನ ಹೊಳೆಯಾಗಿ ಪರಿಣಮಿಸಿತು. ದೇವತೆಗಳು ಕೊಂಡಾಡಿದ ಕಳಕಳ ಧ್ವನಿಯಿಂದಲೂ ಸುಕುಮಾರಸ್ವಾಮಿಯ ಹೆಂಡಿರು ದುಃಖಿಸಿ ಅತ್ತ ಕಳಕಳ ಶಬ್ದದಿಂದಲೂ ‘ಕಳಕಳಾಯತ’ ಎಂಬ ಹೆಸರುಳ್ಳ ಸಿದ್ಧಕ್ಷೇತ್ರವೂ ಆಯಿತು. 

(ಮಾಹಿತಿ ಕೃಪೆ: siri-kannada.in, ಕಣಜ)
***********