ನನ್ನ ಪುಟಗಳು

02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ವ್ಯಾಕರಣಾಂಶಗಳು : ಕ್ರಿಯಾಪದ ಮತ್ತು ವಿಭಕ್ತಿ ಪ್ರತ್ಯಯಗಳು

ನಿಮಗೆ ಬೇಕಾದ ವ್ಯಾಕರಣದ ಮೇಲೆ ಕ್ಲಿಕ್ ಮಾಡಿ 

*******************
*******************

ಕೆಳಗೆ ಕೊಟ್ಟಿರುವ ಹೇಳಿಕೆಗಳಿಗೆ ನಾಲ್ಕು ಉತ್ತರಗಳನ್ನು ಕೊಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆ:
೧. ಸಕರ್ಮಕ ಧಾತುಗಳು ಮೇಲೆ ‘ಅಲ್ಪಡು’ ಪ್ರತ್ಯಯ ಸೇರಿ ಆಗುವ ಕ್ರಿಯಾಪದದ ಪ್ರಯೋಗ  :    
ಎ) ಕರ್ತರಿ
ಬಿ) ಕರ್ಮಣಿ
ಸಿ) ವಿದ್ಯರ್ಥಕ
ಡಿ) ನಿಷೇಧಾರ್ಥಕ

೨. ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ಎ) ಮಾಡನು
ಬಿ) ಓದರು
ಸಿ) ಮಾಡಿಯಾನು
ಡಿ) ಮಾಡಲಿ

೩. ಇಲ್ಲಿರುವ ಕ್ರಿಯಾರೂಪಗಳಲ್ಲಿ ಸಂಭವನಾರ್ಥಕ ಕ್ರಿಯಾಪದ :
ಎ) ತಿಂದಾರು
ಬಿ) ಓದನು
ಸಿ) ಮಾಡನು
ಡಿ) ಕೇಳಲಿ

೪. ‘ ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರಲಿ ಮುನ್ನಡೆಸೋಣ’ ಇಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :                  ಎ) ಪ್ರಥಮಾ
ಬಿ) ದ್ವಿತೀಯಾ
ಸಿ) ತೃತೀಯಾ
ಡಿ) ಚತುರ್ಥಿ

೫. ‘ಕಲುಷಿತವಾದೀ ನದೀಜಲಗಳಿಗೆ ಮುಂಗಾರಿನ ಮಳೆಯಾಗೋಣ’ ಈ ವಾಕ್ಯದಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ಹೊಂದಿರುವ ಪದ :
ಎ) ಕಲುಷಿತವಾದೀ
ಬಿ) ನದೀಜಲಗಳಿಗೆ  
ಸಿ) ಮುಂಗಾರಿನ  
ಡಿ) ಮಳೆಯಾಗೋಣ

೬. ‘ಹೊಸ ಎಚ್ಚರದೊಳು ಬದುಕೋಣ’ ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :                    
ಎ) ಪಂಚಮೀ
ಬಿ) ಷಷ್ಠಿ
ಸಿ) ಸಪ್ತಮಿ
ಡಿ) ತೃತೀಯ

೭. ಒಂದು ವಿಭಕ್ತಿ ಪ್ರತ್ಯಯಕ್ಕೆ ಬದಲಾಗಿ ಬೇರೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವುದನ್ನು ಹೀಗೆನ್ನುತ್ತಾರೆ:                           
ಎ) ವಚನ ಪಲ್ಲಟ
ಬಿ) ವಿಭಕ್ತಿ ಪಲ್ಲಟ
ಸಿ) ವಿಭಕ್ತಿ ಪ್ರಸಾರ   
ಡಿ) ಅಧ್ಯಾಹಾರ

೮. ದ್ವಿತೀಯಾ ವಿಭಕ್ತಿ ಪ್ರತ್ಯಯದಲ್ಲಿರುವ ಕಾರಕಾರ್ಥ :
ಎ) ಕರ್ತ್ರರ್ಥ
ಬಿ) ಕರಣಾರ್ಥ
ಸಿ) ಕರ್ಮಾರ್ಥ  
ಡಿ) ಸಂಪ್ರದಾನ

೯. ದೆಸೆಯಿಂದ, ಅತ್ತಣಿಂ-  ಈ ಪ್ರತ್ಯಯಗಳನ್ನು ಹೊಂದಿರುವ ವಿಭಕ್ತಿ :                            
ಎ) ಪಂಚಮೀ
ಬಿ) ಷಷ್ಠಿ
ಸಿ) ಸಪ್ತಮಿ
ಡಿ) ತೃತೀಯ

೧೦. ‘ನಿಲ್ಲಿಸು’ ಪದದಲ್ಲಿರುವ ಧಾತು :    
ಎ) ನಿಲ್ಲಿ
ಬಿ) ಇಸು
ಸಿ) ನಿಲ್   
ಡಿ) ನಿಲ್ಲು

೧೧. ‘ಕಲುಷಿತ’ ಪದದ ಸಮಾನಾರ್ಥಕ ಪದ :                                          
ಎ) ಮಲಿನ
ಬಿ) ಕಲಕಿದ
ಸಿ) ಕಲಸಿದ
ಡಿ) ಸ್ವಚ್ಚವಾದ

೧೨. ‘ಕಾಡುಮೇಡು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.                                   
ಎ) ದ್ವಿರುಕ್ತಿ
ಬಿ) ಜೋಡುನುಡಿ  
ಸಿ) ಅನುಕರಣಾವ್ಯಯ    
ಡಿ) ನುಡಿಗಟ್ಟು

೧೩. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ- ಇಲ್ಲಿ ಗೆರೆ ಎಳೆದ ಪದವು ಈ ವ್ಯಾಕರಣಾಂಶವಾಗಿದೆ :
ಎ) ದ್ವಿರುಕ್ತಿ
ಬಿ) ಜೋಡುನುಡಿ  
ಸಿ) ಅನುಕರಣಾವ್ಯಯ      
ಡಿ) ನುಡಿಗಟ್ಟು

೧೪. ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಈ ವಾಕ್ಯದಲ್ಲಿರುವ ಅಲಂಕಾರ :                       ಎ) ಉಪಮಾ
ಬಿ) ರೂಪಕ
ಸಿ) ಉತ್ಪ್ರೇಕ್ಷೆ
ಡಿ) ದೃಷ್ಟಾಂತ

೧೫. ಅಡ್ಡಗೋಡೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.                                      
ಎ) ಅಂಶಿ
ಬಿ) ಕರ್ಮಧಾರಯ
ಸಿ) ಕ್ರಿಯಾ
ಡಿ) ತತ್ಪುರುಷ

೧೬. ‘ಮುಂಗಾರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಅಂಶಿ
ಬಿ) ಕರ್ಮಧಾರಯ
ಸಿ) ಕ್ರಿಯಾ
ಡಿ) ತತ್ಪುರುಷ

[ಉತ್ತರಗಳು :   ೧. ಬಿ) ಕರ್ಮಣಿ  ೨. ಡಿ) ಮಾಡಲಿ  ೩. ಎ) ತಿಂದಾರು. ೪.  ಡಿ) ಚತುರ್ಥಿ   ೫. ಸಿ) ಮುಂಗಾರಿನ 
           ೬. ಸಿ) ಸಪ್ತಮಿ  ೭. ಬಿ) ವಿಭಕ್ತಿ ಪಲ್ಲಟ  ೮.  ಸಿ) ಕರ್ಮಾರ್ಥ  ೯. ಎ) ಪಂಚಮೀ   ೧೦. ಡಿ) ನಿಲ್ಲು
          ೧೧. ಎ) ಮಲಿನ   ೧೨. ಬಿ) ಜೋಡುನುಡಿ   ೧೩. ಡಿ) ನುಡಿಗಟ್ಟು   ೧೪. ಬಿ) ರೂಪಕ   ೧೫. ಎ)ಕರ್ಮಧಾರಯಸಮಾಸ  ೧೬.  ಅಂಶಿಸಮಾಸ ]


ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ :

೧. ಮಾಡಲಿ         : ವಿದ್ಯರ್ಥಕ          : :  ಮಾಡನು           : __________  
೨. ಓದರು            : ನಿಷೇಧಾರ್ಥಕ      : :  ಓದಿಯಾರು        : __________  
೩. ಹಡಗನು         : ಪ್ರಥಮಾ ವಿಭಕ್ತಿ    : :  ಮನುಜರ          : __________
೪. ಭಯದಿಂದ        : ತೃತೀಯಾ ವಿಭಕ್ತಿ : :  ಎಚ್ಚರದೊಳು        : __________
೫. ಷಷ್ಠಿ ವಿಭಕ್ತಿ  : ಸಂಬಂಧಕಾರಕ  : :  ಚತುರ್ಥಿ ವಿಭಕ್ತಿ    : __________
೬. ಪ್ರಥಮಾ ವಿಭಕ್ತಿ : ಕರ್ತೃಕಾರಕ      : :  ಸಪ್ತಮಿ ವಿಭಕ್ತಿ      : __________
೭. ಅವನು ಮಲಗಿದನು : ಅಕರ್ಮಕ     : :  ಮನೆಯನ್ನು ಕಟ್ಟು : __________  

[ಉತ್ತರಗಳು :   ೧.ನಿಷೇಧಾರ್ಥಕ  ೨.ಸಂಭವನಾರ್ಥಕ  ೩.ಷಷ್ಠಿ ವಿಭಕ್ತಿ   ೪.ಸಪ್ತಮಿ ವಿಭಕ್ತಿ   ೫.ಸಂಪ್ರದಾನ  
೬.ಅಧಿಕರಣ  ೭.ಸಕರ್ಮಕ ]

********

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಭಾಷಾ ಚಟುವಟಿಕೆ

ಭಾಷಾಚಟುವಟಿಕೆ

೧) ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.

ನಿಲ್ಲಿಸು-ನಿಲ್ಲು; ನಡೆಸು-ನಡೆ;  ಹಚ್ಚುವುದು-ಹಚ್ಚು; ಮುಟ್ಟೋಣ-ಮುಟ್ಟು; ಕಟ್ಟುವುದು-ಕಟ್ಟು; ಆಗೋಣ-ಆಗು


೨) ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.

ಪ್ರೀತಿಯ - ಪ್ರೀತಿ + ಅ

ಬಿರುಗಾಳಿಗೆ - ಬಿರುಗಾಳಿ + ಗೆ

ಜಲಕ್ಕೆ - ಜಲ _ ಕ್ಕೆ

ಬಿದ್ದುದನ್ನು - ಬಿದ್ದುದು + ಅನ್ನು


೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.

ಸಂಶಯದೊಳ್ - ಒಳ್ - ಸಪ್ತಮೀ ವಿಭಕ್ತಿ ಪ್ರತ್ಯಯ,  

ಜಲದಿಂ - ಇಂ - ತೃತೀಯ ವಿಭಕ್ತಿ ಪ್ರತ್ಯಯ

ಮರದತ್ತಣಿಂ - ಅತ್ತಣಿಂ - ಪಂಚಮೀ ವಿಭಕ್ತಿ ಪ್ರತ್ಯಯ

ರಾಯಂಗೆ - ಗೆ - ಚತುರ್ಥಿ ವಿಭಕ್ತಿ ಪ್ರತ್ಯಯ


೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.

ಧಾತು

ವಿಧ್ಯರ್ಥಕ

ನಿಷೇಧಾರ್ಥಕ

ಸಂಭಾವನಾರ್ಥಕ

ಹಾಡು

ಹಾಡಲಿ

ಹಾಡನು

ಹಾಡಿಯಾನು

ನೋಡು

ನೋಡಲಿ

ನೋಡಳು

ನೋಡಿಯಾಳು

ಕಟ್ಟು

ಕಟ್ಟಲಿ

ಕಟ್ಟರು

ಕಟ್ಟಿಯಾರು

ಕೇಳು

ಕೇಳಲಿ

ಕೇಳಿಯಾನು

ಕೇಳನು

ಓಡು

ಓಡಲಿ

ಓಡಳು

ಓಡಿಯಾಳು

ಓದು

ಓದಲಿ

ಓದರು

ಓದಿಯಾರು

ಬರೆ

ಬರೆಯಲಿ

ಬರೆಯನು

ಬರೆದಾನು



*********

10ನೆಯ ತರಗತಿ ಪದ್ಯ-1-ಸಂಕಲ್ಪಗೀತೆ(10th-Poem-1-Sankalpageethe)

ಪದ್ಯ-1  ಸಂಕಲ್ಪಗೀತೆ (ಭಾವಗೀತೆ)
ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ
************************







******** ಕನ್ನಡ ದೀವಿಗೆ ******







ಪದ್ಯ-1 ಸಂಕಲ್ಪಗೀತೆ-ಪ್ರಶ್ನೋತ್ತರ (Notes) ಓದಿರಿ & ಡೌನ್‌ಲೋಡ್ ಮಾಡಿರಿ

 >>> Download      .



*********

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಟಿಪ್ಪಣಿಗಳು

ಹಣತೆ = ದೀಪ, ಮಣ್ಣಿನ ದೀಪ

ಪ್ರೀತಿಯ ಹಣತೆ = ಪ್ರೀತಿ ಎಂಬ ದೀಪ (ದ್ವೇಷ ಎಂಬ ಕತ್ತಲೆಯನ್ನು ಹೋಗಲಾಡಿಸುವ ಪ್ರೀತಿ ಎಂಬ ದೀಪ)

ಬಿರುಗಾಳಿಗೆ ಹೊಯ್ದಾಡುವ ಹಡಗು = ಇಡೀ ಪ್ರಪಂಚವೇ ಒಂದು ದೊಡ್ಡ ಸಮುದ್ರ; ಅದರಲ್ಲಿ ನಮ್ಮ ಜೀವನವೇ ಹಡಗು. ಜೀವನದಲ್ಲಿ ಎದುರಾಗುವ ನೋವು-ಕಷ್ಟ-ಕಾರ್ಪಣ್ಯಗಳೇ ಬಿರುಗಾಳಿ; ಆದ್ದರಿಂದ ಹಲವಾರು ಕಷ್ಟ-ನಷ್ಟಗಳಿಂದ ನಲುಗುವ ಜೀವನವೆಂಬ ಹಡಗು ಎಂದು ಅರ್ಥೈಸಿಕೊಳ್ಳಬೇಕು.

ಮುಂಗಾರಿನ ಮಳೆ = ಚೈತ್ರ ಮಾಸದ ಆರಂಭದಲ್ಲಿ ಮೇ/ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ, 

ಬರಡಾದ ಕಾಡುಮೇಡುಗಳು = ಮಾನವನ ದುರಾಸೆಗೆ ಒಳಗಾಗಿ ನಾಶವಾದ ಹಾಗೂ ಮಳೆ ಇಲ್ಲದೆ ಒಣಗಿ ಖಾಲಿಖಾಲಿ ಕಾಣುವ ಕಾಡುಮೇಡುಗಳು

ವಸಂತ = ಋತುಗಳು ಆರು, ಅವುಗಳಲ್ಲಿ ವಸಂತ ಋತುವೂ ಒಂದಾಗಿದೆ. ಈ ಕೆಳಗಿನ ಕೋಷ್ಟಕದಲ್ಲಿ ನೋಡಿ.

ಋತು

ಮಾಸಗಳು

ಗ್ರೆಗೊರಿಯನ್ ತಿಂಗಳುಗಳ ಅವಧಿ

ವಸಂತ

ಚೈತ್ರ, ವೈಶಾಖ

ಮಾರ್ಚ್-ಮೇ

ಗ್ರೀಷ್ಮ

ಜ್ಯೇಷ್ಠ, ಆಷಾಢ

ಮೇ-ಜುಲೈ

ವರ್ಷ

ಶ್ರಾವಣ, ಭಾದ್ರಪದ

ಜುಲೈ-ಸೆಪ್ಟೆಂಬರ್

ಶರತ್

ಆಶ್ವಯುಜ, ಕಾರ್ತಿಕ

ಸೆಪ್ಟೆಂಬರ್-ನವಂಬರ್

ಹೇಮಂತ

ಮಾರ್ಗಶಿರ, ಪುಷ್ಯ

ನವಂಬರ್-ಜನವರಿ

ಶಿಶಿರ

ಮಾಘ, ಫಾಲ್ಗುಣ

ಜನವರಿ-ಮಾರ್ಚ್

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದು = ಬೀಳುವುದು ಎಂದರೆ ಅವನತಿ, ಹಿನ್ನಡೆ, ಸೋಲು ಎಂದರ್ಥ. ಆದ್ದರಿಂದ ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದೆಂದರೆ ಸೋಲು, ಹಿನ್ನಡೆಗಳಿಂದ ಕಂಗಾಲಾದವರಿಗೆ ಹೊಸ ಆಶಾಭಾವನೆಯನ್ನು ತುಂಬಿ ಚೈತನ್ಯಗೊಳಿಸುವುದು. ನಿರಾಶೆಯನ್ನು ದೂರಮಾಡಿ ಆಶಾಭಾವನೆಯನ್ನು ಮೂಡಿಸುವುದು ಎಂದರ್ಥ

ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ = ಮಾನವನ ನಡುವೆ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ, ಸುಂದರ-ಕುರೂಪ ಹೀಗೆ ಇನ್ನೂ ಹಲವಾರು ರೀತಿಯ ಭೇದ-ಭಾವಗಳಿವೆ ಇವೆಲ್ಲ ವ್ಯಕ್ತಿ ಹಾಗೂ ಸಮುದಾಯಗಳ ನಡುವೆ ಅಡ್ಡಗೋಡೆಗಳಾಗಿವೆ. ಇವುಗಳನ್ನು ದೂರಮಾಡಿ ಮನುಜ ಮನುಜರ ನಡುವೆ ಸಂಬಂಧ, ಸೌಹಾರ್ದತೆ, ಸಹಕಾರ ಮನೋಭಾವನೆಯನ್ನು ಬೆಳೆಸುವುದು ಎಂದರ್ಥ.

ಮತಗಳೆಲ್ಲವೂ ಪಥಗಳು = ಇಲ್ಲಿ ಮತ ಎಂದರೆ ವಿಶಾಲ ಅರ್ಥದಲ್ಲಿ ಧರ್ಮ ಹಾಗೂ ಸಿದ್ಧಾಂತಗಳೆನ್ನಬಹುದು. ವಿಚಾರ ಮಾಡಿ ನೋಡಿದರೆ ಎಲ್ಲಾ ಧರ್ಮಗಳು ಹೇಳುವುದು ಒಂದೇ ಅದು ಮಾನವೀಯತೆಯನ್ನು ಬೆಳೆಸಿಕೋ ಎಂದು. ಅಂದರೆ ಮನುಷ್ಯ ತನ್ನ ದ್ವೇಷ-ಅಸೂಯೆ-ದುರಾಸೆ-ಪಕ್ಷಪಾತಗಳನ್ನು ತೊರೆದು ಎಲ್ಲರೊಡನೊಂದಾಗಿ ಮಾನವೀಯತೆಯಿಂದ ಬಾಳುವುದು. ಇದನ್ನೇ ಬಸವಣ್ಣನವರು "ದಯವಿಲ್ಲದ ಧರ್ಮವದಾವುದಯ್ಯಾ?" ಎಂದಿದ್ದಾರೆ. ಎಲ್ಲ ಮತಗಳ ಪ್ರಮುಖ ಉದ್ದೇಶ ಮಾನವನ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವುದು ಹಾಗು ಅಹಿಂಸೆಯನ್ನು ತೊರೆದು ಶಾಂತಿ-ಪ್ರೀತಿಯನ್ನು ಪಸರಿಸುವುದೇ ಆಗಿದೆ. ಆದ್ದರಿಂದ ಎಲ್ಲ ಮತಗಳು ಮಾನವನ ಸನ್ನಡತೆಗೆ ಸತ್ಪಥ (ಒಳ್ಳೆಯ ಮಾರ್ಗ)  ಆಗಿದೆ.

ಭಯ-ಸಂಶಯದೊಳು ಕಂದಿದ ಕಣ್ಣೊಳು ನಾಳಿನ ಕನಸನ್ನು ಬಿತ್ತುವುದು = ಸಮಾಜದಲ್ಲಿ ಕೊಲೆ-ಸುಲಿಗೆ-ದರೋಡೆಯಂತಹ ಅಮಾನವೀಯ ಕೃತ್ಯಗಳು ದಿನೇದಿನೇ ಹೆಚ್ಚಾಗುತ್ತಿವೆ. ಹಲವರು ಜನ ಶೋಷಣೆಗೆ ಒಳಗಾಗಿ ಭಯದಿಂದ ಬದುಕುತ್ತಿದ್ದಾರೆ. ಹಾಗೆಯೇ ವರ್ತಮಾನದಲ್ಲಿ ಜನರ ನಡೆವಳಿಗೆಗಳ ಬಗ್ಗೆ ಹಾಗೂ ತಮ್ಮ ಉತ್ತಮ ಭವಿಷ್ಯದ ಬಗ್ಗೆ ಅನುಮಾನ ಹೊಂದಿದ್ದಾರೆ. ಅಂತಹವರ ಭಯಭೀತ ಹಾಗೂ ಸಂಶಯದಿಂದ ಕೂಡಿದ ಕಣ್ಣುಗಳಲ್ಲಿ ನಾಳಿನ ಉತ್ತಮ ಭವಿಷ್ಯದ ಬಗ್ಗೆ ಮತ್ತು ಮುಂದೆ ಆಗಲಿರುವ ಒಳ್ಳೆಯದರ ಬಗ್ಗೆ ಆಶಾವಾದವನ್ನು ಬೆಳೆಸಿ ಧೈರ್ಯ ತುಂಬುವುದಾಗಿದೆ.


**************



10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಸಾರಾಂಶ

ಸಂಕಲ್ಪಗೀತೆ ಪದ್ಯದ ಸಾರಾಂಶ

    ಸಂಕಲ್ಪಗೀತೆ ಪದ್ಯವನ್ನು ಜಿ.ಎಸ್.ಶಿವರುದ್ರಪ್ಪನವರ 'ಎದೆತುಂಬಿ ಹಾಡಿದೆನು’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
           ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ ದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂಬುದನ್ನು ಭಾವಗೀತೆಯ ಮೂಲಕ ವ್ಯಕ್ತಗೊಳಿಸುವುದೇ ಈ ಕವನದ ಆಶಯವಾಗಿದೆ.
*******

ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.    || ೧ ||

ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು - ಎಂಬುದು ಕವಿಯ ಆಶಯವಾಗಿದೆ.

ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ.    || ೨ ||


ಮಾನವನ ದುರಾಸೆಗೆ ಸಿಲುಕಿ ಕಲುಷಿತವಾಗಿರುವ ನದೀಜಲಗಳನ್ನು ಶುದ್ಧೀಕರಿಸಲು ನಾವು ಮುಂಗಾರಿನ ಮಳೆಯಾಗಬೇಕು. ಅಂದರೆ ಪರಿಸರ ರಕ್ಷಿಸುವ ಪರಿಸರ ಪ್ರೇಮಿಯಾಗಬೇಕು. ಕಾಡುಮೇಡುಗಳು ಬರಡಾಗಿದ್ದು ಅವುಗಳನ್ನು ಉಳಿಸಿ ಬಳೆಸಬೇಕು. ಅದಕ್ಕಾಗಿ ನಾವು ಹಚ್ಚಹಸಿರಿನಿಂದ ಕಂಗೊಳಿಸುವ, ಸಮೃದ್ಧವಾದ ವಸಂತಕಾಲವಾಗಬೇಕು. ಒಟ್ಟಾರೆ ನಾವೆಲ್ಲಾ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕು. ಎಂಬುದು ಕವಿಯ ಆಶಯವಾಗಿದೆ. 

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.    || ೩ ||


ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತಬೇಕು. ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಷ್ಯರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗಬೇಕು. ಒಟ್ಟಾರೆ ಸಮಾಜವನ್ನು ಉದ್ಧರಿಸುತ್ತಾ ಭಾವೈಕ್ಯತೆಯನ್ನು ಬೆಳೆಸಬೇಕೆಂಬುದು ಕವಿಯ ಆಶಯವಾಗಿದೆ.

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.    || ೪ ||


ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮಸುಕಾದವರ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಭರವಸೆಯನ್ನು ತುಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು. ಎಂದು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸುತ್ತಾರೆ.


*********

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ -ಕವಿ ಪರಿಚಯ

 ಜಿ.ಎಸ್.ಶಿವರುದ್ರಪ್ಪನವರ ಪರಿಚಯ

ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ  

ಜಿ.ಎಸ್.ಶಿವರುದ್ರಪ್ಪ ಅವರು ಕ್ರಿ.ಶ.೧೯೨೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.
* ಇವರ ಪೂರ್ಣ ಹೆಸರು: ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ.
* ಇವರ ಪ್ರಮುಖ ಕೃತಿಗಳೆಂದರೆ; ’ಸಾಮಗಾನ’, ’ಚೆಲುವು-ಒಲವು’, ’ದೇವಶಿಲ್ಪಿ’, ’ದೀಪದ ಹೆಜ್ಜೆ’, ’ಅನಾವರಣ’, ’ವಿಮರ್ಶೆಯ ಪೂರ್ವ ಪಶ್ಚಿಮ’, ’ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು’, ’ಸೌಂದರ್ಯ ಸಮೀಕ್ಷೆ’.
* ಇವರಿಗೆ ದೊರೆತಿರುವ ಪ್ರಮುಖ ಪ್ರಶಸ್ತಿ-ಪುರಸ್ಕಾರಗಳೆಂದರೆ; 
೧) ’ಕಾವ್ಯಾರ್ಥ ಚಿಂತನ’ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೨) ಕನ್ನಡ ವಿಶ್ವವಿದ್ಯಾನಿಲಯದ ’ನಾಡೋಜ’ ಪ್ರಶಸ್ತಿ.
೩) ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ’ಗೌರವ ಡಿ.ಲಿಟ್’ ಪ್ರಶಸ್ತಿ.
೪) ’ರಾಷ್ಟ್ರಕವಿ’ ಪ್ರಶಸ್ತಿ.
೫) ೧೯೯೨ ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
***********



*********
ಜಿ.ಎಸ್.ಎಸ್. ಅವರ ಬಗ್ಗೆ ಹೆಚ್ಚಿನ ಮಾಹಿತಿ
             ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.ಎ. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
        ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ(೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ(೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ(೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ(೧೯೮೭), ಪಂಪ ಪ್ರಶಸ್ತಿ(೧೯೯೮), ೨000ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨00೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್(೨00೩) ದೊರೆಯಿತು.
         ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು :
ಸಂಪಾದನೆ : 
೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, 
ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), 
ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೬ ಸಂಪುಟಗಳು, 
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧೦ ಸಂಪುಟಗಳು, 
ಕೆ.ಎಸ್.ನ ಸಂಭಾವನಾ ಗ್ರಂಥ ಚಂದನ.

ವಿಮರ್ಶಾ ಕೃತಿಗಳು : 
ವಿಮರ್ಶೆಯ ಪೂರ್ವಪಶ್ಚಿಮ(೧೯೬೧), 
ಸೌಂದರ್ಯ ಪ್ರತಿಬಿಂಬ(೧೯೬೯), 
ಕನ್ನಡ ಕವಿಗಳ ಕಾವ್ಯ ಕಲ್ಪನೆ(೧೯೮೯) ಇತ್ಯಾದಿ.

ಪ್ರವಾಸ ಗ್ರಂಥಗಳು: 
ಮಾಸ್ಕೊದಲ್ಲಿ ೨೨ ದಿನ(೧೯೭೩), 
ಗಂಗೆಯ ಶಿಖರಗಳಲ್ಲಿ, 
ಅಮೇರಿಕದಲ್ಲಿ ಕನ್ನಡಿಗ, 
ಇಂಗ್ಲೆಂಡಿನಲ್ಲಿ ಚತುರ್ಮಾಸ.

ಕವನ ಸಂಗ್ರಹಗಳು : 
ಸಾಮಗಾನ(೧೯೫೧), 
ಚೆಲುವು-ಒಲವು(೧೯೫೩), 
ದೇವಶಿಲ್ಪ(೧೯೫೬), 
ದೀಪದ ಹೆಜ್ಜೆ(೧೯೫೯), 
ಕಾರ್ತೀಕ(೧೯೬೧), 
ತೀರ್ಥವಾಣಿ(೧೯೬0), 
ಅನಾವರಣ(೧೯೬೩), 
ನನ್ನ ನಿನ್ನ ನಡುವೆ(೧೯೭೩), 
ವ್ಯಕ್ತ-ಮಧ್ಯ(೧೯೯೯) ಇತ್ಯಾದಿ.

[ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨೦೧೩ರಲ್ಲಿ ದೈವಾಧೀನರಾದರು.]