ಗಾಹೆ || ದಂಡೋ ಯಮುಣಾವಂಕೇಣ ತಿಕ್ಖ ಕಂಡೇಣ ಪೂರಿದಂಗೋ ವಿ
ತಂ ವೇದಣಮಗಣಿತ್ತಾ ಪಡಿವಣ್ಣೋ ಉತ್ತಮಂ ಅಟ್ಠಂ ||

'ದಂಡೋ – ದಂಡಕನೆಂಬ ರಿಸಿ, ಯಮುಣಾವಂಕೇಣ – ಯಮುನಾವಂಕನೆಂಬರಸಿನಿಂದಂ, ತಿಕ್ಖ ಕಂಡೇಣ – ಕೂರಿದವಪ್ಪಂಬುಗಳಿಂದಂ, ಪೂರಿದಂಗೋ ವಿ – ತೀವೆ ಪಟ್ಟ ಮೆಯ್ಯನೊಡೆಯನಾಗಿಯುಂ, ತಂ ವೇದಣಂ – ಆ ವೇದನೆಯಂ, ಅಗಣಿತ್ತಾ – ಬಗೆಯದೆ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ'

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಅಮಳಕಂಠಮೆಂಬುದು ಪೊೞಲದನಾಳ್ವೊಂ ಅವಿಷ್ಟಸೇನನೆಂಬೊನರಸನಾತನ ಮಹಾದೇವಿ ನಂದಿನಿಯೆಂಬೊಳಾಯಿರ್ವರ್ಗಂ ಮಗಂ ದಂಡಕನೆಂಬೊಂ ಪುಟ್ಟಿದನಾತಂ ಗರ್ಭದೊಳಿರ್ದಂದು ನಂದಿನಿ ಮಹಾದೇವಿಗಿಂತುಟೊಂದು ಬಯಕೆಯಾದುದೆಲ್ಲಾ ಜನಂಗಳುಮಂ ದಂಡಿಸುವಂತಿರೆಯದಱಂದಾತಂಗೆ ತಾಯುಂ ತಂದೆಯುಂ ದಂಡಕನೆಂದು ಪೆಸರನಿಟ್ಟೊರಾತನಿಂ ಕಿಱಯೊಳ್ ನಂದವತಿಯೆಂಬೊಳ್ ಕೂಸಾಕೆಯನರ್ಧಚಕ್ರವರ್ತಿಯಪ್ಪ ವಿಷ್ಣುವಿಂಗೆ ಕೊಟ್ಟು ದಂಡಕನುಂ ವಿಷ್ಣುವಿಂಗಾದಮಾನುಂ ಪ್ರಿಯನಪ್ಪ ಸೇನಾಪತಿಯಾದನಂತನಿಬರುಮಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ವಿಷ್ಣು ಅರಿಷ್ಟನೇಮಿ ಭಟಾರರಂ ಬಂದಿಸಲ್ಕೆಂದು ಬಲದೇವಂ ಬೆರಸು ಪುತ್ರ ಕಳತ್ರ ಮಿತ್ರ ಸಪರಿವಾರಂ ಪೋಗಿ

    ದಂಡಕನೆಂಬ ಋಷಿಯ ಕಥೆಯನ್ನು ಹೇಳುವೆನು – 'ದಂಡಕನೆಂಬ ಋಷಿ ಯಮುನಾ ವಂಕನೆಂಬ ಅರಸನಿಂದ ಹರಿತವಾದ ಬಾಣಗಳಿಂದ ತುಂಬಿದ ಅಂಗಗಳುಳ್ಳವನಾಗಿ ಆ ವೇದನೆಯನ್ನು ಬಗೆಯದೆ ಶ್ರೇಷ್ಠವಾದ ದರ್ಶನ ಜ್ಞಾನ ಚಾರಿತ್ರಗಳ ಆರಾಧನೆಯನ್ನು ಮಾಡಿದನು' ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಅಮಳಕಂಡವೆಂಬ ಪಟ್ಟಣವನ್ನು ಅವಿಷ್ಟಸೇನನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ನಂದಿನಿಯೆಂಬವಳು. ಆ ಇಬ್ಬರಿಗೂ ದಂಡಕನೆಂಬ ಮಗನು ಹುಟ್ಟಿದನು. ಆತನು ಗರ್ಭದಲ್ಲಿದ್ದಾಗ ನಂದಿನಿ ಮಹಾದೇವಿಗೆ ಎಲ್ಲಾ ಜನರನ್ನೂ ದಂಡಿಸಬೇಕೆಂಬ ಒಂದು ಬಯಕೆಯುಂಟಾಯಿತು. ಆದುದರಿಂದ ಆತನಿಗೆ ತಾಯಿಯೂ ತಂದೆಯೂ ದಂಡಕನೆಂದು ಹೆಸರನ್ನಿಟ್ಟರು. ಅವನಿಗಿಂತ ಕಿರಿಯವಳು ನಂದವತಿಯೆಂಬ ಹುಡುಗಿ. ಆಕೆಯನ್ನು ಅರ್ಧಚಕ್ರವರ್ತಿಯಾದ ವಿಷ್ಣುವಿಗೆ ಕೊಟ್ಟು ದಂಡಕನು ವಿಷ್ಣುವಿಗೆ ಅತ್ಯಂತ ಪ್ರೀತಿಯವನಾದ ಸೇನಾಪತಿಯಾದನು. ಅಂತು ಅವರೆಲ್ಲರೂ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಿತು. ಹೀಗಿರುವಾಗ ಮತ್ತೊಂದು ದಿವಸ ವಿಷ್ಣುವು ಅರಿಷ್ಟನೇಮಿ ತೀರ್ಥಂಕರರನ್ನು ವಂದಿಸುವುದಕ್ಕಾಗಿ ಬಲದೇವನ ಸಮೇತವಾಗಿ ಪುತ್ರಪತ್ನಿ ಪರಿವಾರ ಸಹಿತ ಹೋದನು. ತೀರ್ಥಂಕರರ ಧರ್ಮಸಭೆಗೆ ಹೋಗಿ, 

    ಸಮವಸರಣಮನೆಯ್ದಿ ಸಟಿಕಮಯಮಪ್ಪ ಸೋಪಾನಪಂಕ್ತಿಗಳಿಮದೊಪ್ಪುವುದನೇಱ ಗಂಧಕುಟಿ ಪ್ರಾಸಾದಮಂ ತ್ರಿಃಪ್ರದಕ್ಷಿಣಂಗೆಯ್ದು ಬಂದಭಿಮುಖನಾಗಿರ್ದು ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ಗಂಧಪುಷ್ಪ ದೀಪ ಧೂಪಾಕ್ಷತಂಗಳಿಂದರ್ಚಿಸಿ ಗಣಧರದೇವರ್ ಮೊದಲಾಗೊಡೆಯ ಋಷಿ ಸಮುದಾಯಮಂ ಗುರುಷರಿವಿಡಿಯಿಂದಂ ವಂದಿಸಿ ತಮ್ಮಿರ್ಪೋವರಿಯೊಳಿರ್ದು ಧರ್ಮಮಂ ಕೇಳ್ದು ತದನಂತರಂ ವಿಷ್ಣುವಿಂತೆಂದು ಬೆಸಗೊಂಡಂ ಭಟಾರಾ ಈ ಅತಿ ರೌದ್ರನಪ್ಪ ದಂಡಕಂ ನರಕಂ ಬುಗುವಂತಿರೆ ಪಿರಿದುಂ ಪಾಪಮಂ ನೆರಪಿದನೀತನ ಪಾಪಕರ್ಮದುಪಶಮಮೆನಿತು ಕಾಲದಿಂದಕ್ಕುಂ ಮತ್ತಮೀತನ ಮುನ್ನಿನ ಭವಮೇನೆಂದು ಬೆಸಗೊಂಡೊಡೆ ಸಕಲ ವಿಮಲ ಕೇವಲಜ್ಞಾನವಿರಾಜಿತರಪ್ಪ ಅರಿಷ್ಟನೇಮಿಭಟಾರರಿಂತೆಂದು ಪೇೞ್ದರ್ ಈ ಜಂಬೂದ್ವೀಪದ ಪೂರ್ವವಿದೇಹದೊಳ್ ವೀತಶೋಕಮೆಂಬುದು ಪೊೞಲುಂಟು ಅದನಾಳ್ವೊನ್ ಅಶೋಕನೆಂಬೊನರಸನಾತನ ಮಹಾಸಾಮಂತಂ ಸುಧಾಮಕನೆಂಬೊಂ ತೀವ್ರಲೋಭದೊನತಿ ರೌದ್ರಮಪ್ಪಾರಂಭ ಕರ್ಮದೊಳ್ ಕೂಡಿದೊಂ ತನ್ನಾರಂಭದ ಕೆಯ್ಗಳನೊಕ್ಕುವೆೞ್ತುಗಳ ಬಾಯಂ ಕಟ್ಟಿಯೊಕ್ಕಿಸುಗುಂ ಮತ್ತಡುವ ಬಡ್ಡಿಸುವ ಬೆಸಕೆಯ್ವ ಪೆಂಡಿರ ಮೊಲೆಗಳಂ ಸೀರೆಯಿಂ ಕಟ್ಟಿಸಿ ಕೂಸುಗಳಂ ಮೊಲೆಯುಣಲೀಯದೆ ಬೆಸಕೆಯ್ಸುಗುಂ ಮತ್ತಂ ಕೊಲೆಯುಂ ಪಿರಿದಾರಂಭಮುಂ ಪೆರ್ವರದುಮೆಂಬಿವು ಕಾರಣಮಾಗಿ ನರಕಾಯುಷ್ಯಂ ಕಟ್ಟಿ ಕಾಲಂ ಸಲೆ ಆತಂಗೆ ಶಿರೋರೋಗಮುಂ ಮುಖರೋಗಮುಮಾಗಿ ವೇದನಾಭಿಭೂತನಾಗಿರ್ಪನ್ನೆಗಂ ವೈದ್ಯರಂ

    ಬಿಳಿಯ ಶಿಲೆಯ ಮೆಟ್ಟಿಲುಗಳ ಸಾಲುಗಳಿಂದ ಒಪ್ಪುವುದನ್ನು ಹತ್ತಿ ಗಂಧಕುಟಿಯ ಮಹಾಸೌಧವನ್ನು ಮೂರು ಸುತ್ತು ಬಲಬಂದು ಎದುರಾಗಿದ್ದುಕೊಂಡು ನೂರು ಸಾವಿರ ಸ್ತುತಿಗಳಿಂದ ಸ್ತುತಿಸಿ ಗಂಧ ಪುಷ್ಪ ದೀಪ ಧೂಪ ಅಕ್ಷತೆಗಳಿಂದ ಪೂಜಿಸಿ ಗಣಧರ ದೇವರು ಮೊದಲಾಗುಳ್ಳ ಋಷಿಗಳ ಸಮೂಹವನ್ನು ಗೌರವಾನುಕ್ರಮದಿಂದ ನಮಸ್ಕರಿಸಿ ತಾನಿರತಕ್ಕ ಕೊಠಡಿಯಲ್ಲಿದ್ದು ಧರ್ಮಶ್ರವಣವನ್ನು ಮಾಡಿದನಂತರ ವಿಷ್ಣು ಈ ರೀತಿಯಾಗಿ ಪ್ರಶ್ನಿಸಿದನು – “ಪೂಜ್ಯರೆ ಈ ಅತ್ಯಂತ ಉಗ್ರರೂಪನಾಗಿರುವ ದಂಡಕನು ನರಕವನ್ನು ಪ್ರವೇಶಿಸುವ ಹಾಗೆ ಹೆಚ್ಚು ಪಾಪವನ್ನು ಕೂಡಿಸಿಕೊಂಡಿದ್ದಾನೆ. ಇವನ ಪಾಪದ ಪರಿಹಾರ ಎಷ್ಟು ಕಾಲದಿಂದ ಆದೀತು ? ಮತ್ತು ಇವನ ಹಿಂದಿನ ಜನ್ಮ ಏನಾಗಿದ್ದಿತು?* ಎಂದು ಕೇಳಿದನು. ಆಗ ಪರಿಪೂರ್ಣವೂ ಶುದ್ದವೂ ಆದ ಕೇವಲಜ್ಞಾನದಿಂದ ಶೋಭಿಸತಕ್ಕ ಅರಿಷ್ಟನೇಮಿ ಭಟಾರರು ಈ ರೀತಿಯಾಗಿ ಹೇಳಿದರು – ಈ ಜಂಬೂದ್ವೀಪದ ಪೂರ್ವವಿದೇಹದಲ್ಲಿ ವೀತಶೋಕವೆಂಬ ಪಟ್ಟಣವಿದೆ. ಅದನ್ನು ಅಶೋಕನೆಂಬ ರಾಜನ ಆಳುತ್ತಿದ್ದನು. ಅವನ ಮಹಾಸಾಮಾಂತನಾದ ಸುಧಾಮಕನೆಂಬವನು ಅತ್ಯಂತ ದುರಾಶೆಯವನು. ಬಹಳ ಘೋರವಾದ ವ್ಯವಸಾಯಗಾರನು. ತನ್ನ ವ್ಯವಸಾಯದ ಹೊಲ ಗದ್ದೆಗಳನ್ನು ಒಕ್ಕಲು ಮಾಡುವ ಎತ್ತುಗಳ ಬಾಯನ್ನು ಕಟ್ಟಿ ಒಕ್ಕಿಸುತ್ತಿದ್ದನು ಮತ್ತು ಅಡಿಗೆ ಮಾಡುವ, ಬಡಿಸುವ, ಸೇವೆಮಾಡುವ ಹೆಂಡಿರ ಮೊಲೆಗಳನ್ನು ವಸ್ತ್ರದಿಂದ ಕಟ್ಟಿಸಿ ಶಿಶುಗಳನ್ನು ಮೊಲೆಯುಣ್ಣಲು ಬಿಡದೆ ಸೇವೆ ಮಾಡಿಸುತ್ತಿದ್ದನು. ಆಮೇಲೆ, ಕೊಲೆಯೂ ದೊಡ್ಡ ವ್ಯವಸಾಯವೂ ದೊಡ್ಡ ವ್ಯಾಪರವೂ ಕಾರಣವಾಗಿ ನರಕಕ್ಕೆ ಆಯುಷ್ಯವನ್ನು ಕಟ್ಟಿ (ಪಾಪಮಾಡಿ) ಕಾಲಕಳೆಯಲು ಅವನಿಗೆ ತಲೆಯ ರೋಗವೂ ಮುಖದ ರೋಗವೂ ಉಂಟಾಗಿ ನೋವಿನಿಂದ ಪೀಡಿತನಾಗಿದ್ದನು. ವೈದ್ಯರನ್ನು ಕೇಳಿದಾಗ ಅವರು ಹೇಳಿದಂತೆ

    ಬೆಸಗೊಂಡೊಡದರ್ಕೆ ಪ್ರತೀಕಾರಮೊಂದು ದಿವಸಂ ತನಗೆ ಮರ್ದುವೆರಸಿಯಟ್ಟ ಕೂೞನುಣಲೆಂದಿರ್ಪನ್ನೆಗಂ ಸಮಾಗುಪ್ತರೆಂಬ ಭಟಾರರ್ ಚರಿಗೆವೊಕ್ಕರವರನತಿಭಕ್ತಿಯಿಂದಂ ನಿಱಸಿ ತನಗುಳ್ಳ ವ್ಯಾಯವರ್ಗುಂಟೆಂಬುದನಱದು ತನಗೆಂದು ಮಾಡಿದ ಮರ್ದಿನ ಕೂೞನವರ್ಗೆ ಬಡ್ಡಿಸಿದೊಡವರ್ ಚರಿಗೆ ಮಾಡಿ ಪರಸಿ ಪೋದರ್ ಪನ್ನೆರಡು ವರುಷದ ಶಿರೋರೋಗಮುಂ ಮುಖರೋಗಮುಮಾ ರಿಸಿಯರ್ಗ್ಗೆ ಕೆಟ್ಟತ್ತಾ ಸುಧಾಮಕನುಂ ದಾನದ ಫಲದಿಂದಂ ಕಿಱದು ಪುಣ್ಯಮಂ ನೆರಪಿಕೊಂಡಂ ಮತ್ತಂ ಬದ್ಧಾಯುಷ್ಯನಪ್ಪುದಱಂ ಮೂರನೆಯ ನರಕದೊಳೇೞು ಸಾಗರೋಪಮಾಯುಷ್ಯಮನೊಡೆಯೊಂ ನಾರಕನಾಗಿ ಪುಟ್ಟಿ

ಗಾಹೆ || ಅಚ್ಛಣಿಮೀಳಣ ಮೇತ್ತಂ ಣಸ್ಥಿಸುಹಂ ದುಖ್ಖಮೇವ ಅಣುಬದ್ದಂ
ಣಿರಯೇ ಣಿರಯೀ ಯಾಣಂ ಅಹಣ್ಣಿಸಂ ಪಚ್ಯಮಾಣಾಣಂ ||

    ಇಂತು ನರಕಲೋಕದೊಳ್ ಕಣ್ಣೆಮೆಯಿಕ್ಕುವನಿತು ಪೊೞ್ತಪ್ಪೊಡಂ ಸುಖಮಿಲ್ಲದೆ ಪಲಕಾಲಂ ದುಃಖಮನನುಭವಿಸಿ ಬಂದಿಲ್ಲಿ ದಂಡಕನಾದಂ ಮುನ್ನಿನ ಭವದೊಳ್ ಪ್ರಾಣಿಗಳಂ ದಂಡಿಸಿದ ತನ್ನ ಪೂರ್ವದಭ್ಯಾಸಮನೆ ನಂದಿನಿ ಮಹಾದೇವಿಯ ಗರ್ಭದೊಳಿರ್ದು ತೋಱದನಪ್ಪುದಱಂ ದಂಡಕನೆಂಬ ಪೆಸರಾಯ್ತಿಂತಪ್ಪ ಸ್ವಾನುಭೂತಮಪ್ಪ ನರಕಲೋಕದ ಮಹಾದುಃಖಮಂ ಸರ್ವಜ್ಞರ್ ಪೇೞ ನಂಬಿ ನರಕದ ಮಹಾದುಃಖಕ್ಕಂಜಿ ದಂಡಕಂ ಪತಂಬಟ್ಟೋದುಗಳೆಲ್ಲಮಂ ಕಲ್ತು ರಿಸಿಯರ್ಕಳೊಡನೆ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ

    ಪರಿಹಾರಕ್ಕಾಗಿ ಒಂದು ದಿವಸ ತನಗಾಗಿ ಔಷಯನ್ನು ಬೆರಸಿ ಬೇಯಿಸಿದ ಅನ್ನವನ್ನು ಉಣ್ಣುವುದಕ್ಕೆಂದು ಸಿದ್ಧನಾದಾಗ ಸಮಾಗುಪ್ತರೆಂಬ ಋಷಿಗಳು ಭಿಕ್ಷಕ್ಕಾಗಿ ಬಂದರು. ಅವರನ್ನು ಭಕ್ತಿಯಿಂದ ನಿಲ್ಲಿಸಿ ತನಗೆ ಇರತಕ್ಕ ರೋಗವು ಅವರಿಗೆ ಉಂಟೆಂಬುದಾಗಿ ತಿಳಿದು ತನಗಾಗಿ ಮಾಡಿದ ಮದ್ದಿನ ಅನ್ನವನ್ನು ಅವರಿಗೆ ಬಡಿಸಿದನು. ಅವರು ಭಿಕ್ಷೆಯನ್ನು ಸ್ವೀಕರಿಸಿ ಆಶೀರ್ವದಿಸಿ ತೆರಳಿದರು, ಋಷಿಗಳಿಗೆ ಹನ್ನೆರಡು ವರುಷದಿಂದ ಇದ್ದ ತಲೆಯ ರೋಗವೂ ಮುಖದ ರೋಗವೂ ನಾಶವಾದವು. ಆ ಸುಧಾಮಕನೂ ದಾನದ ಫಲದಿಂದ ಸ್ವಲ್ಪ ಪುಣ್ಯವನ್ನು ಕೂಡಿಸಿಕೊಂಡು ಬದ್ಧಾಯುಷ್ಯನಾದುದರಿಂದ ಮೂರನೆಯ ನರಕದಲ್ಲಿ ಏಳು ಸಾಗರ ಸಮಾನವಾದ ಆಯುಷ್ಯವನ್ನುಳ್ಳ ನರಕಜೀವಿಯಾಗಿ ಹುಟ್ಟಿದನು. *ನರಕದಲ್ಲಿ ಅಹರ್ನಿಶವೂ ಬೇಯಿಸಲ್ಪಡುತ್ತಿರುವ ನರಕಜೀವಿಗಳಿಗೆ ಕಣ್ಣರೆಪ್ಪೆ ಹೊಡೆಯುವಷ್ಟು ಕಾಲ ಕೂಡ, ಸುಖವಿಲ್ಲ. ಕಟ್ಟಿಟ್ಟಿರುವುದು ದುಃಖವೊಂದೇ* ಹೀಗೆ ನರಕಲೋಕದಲ್ಲಿ ಕಣ್ಣೆವೆಯಿಕ್ಕುವಷ್ಟು ಹೊತ್ತಾದರೂ ಸುಖವಿಲ್ಲದೆ ಹಲವು ಕಾಲ ದುಃಖವನ್ನು ಅನುಭವಿಸಿ ಬಂದು ಇಲ್ಲಿ ದಂಡಕನಾಗಿದ್ದಾನೆ. ಹಿಂದಿನ ಜನ್ಮದಲ್ಲಿ ಪ್ರಾಣಿಗಳನ್ನು ದಂಡಿಸಿದ ತನ್ನ ಹಿಂದಿನ ಅಭ್ಯಾಸವನ್ನೇ ನಂದಿನಿ ಮಹಾದೇವಿಯ ಬಸಿರಲ್ಲಿದ್ದಾಗ ತೋರಿಸಿದನಾದುದರಿಂದ ದಂಡಕನೆಂಬ ಹೆಸರು ಇವನಿಗಾಯಿತು. ಇಂತಹ ಸ್ವಾನುಭವವುಳ್ಳ ನರಕಲೋಕದ ಮಹಾದುಃಖವನ್ನು ಸರ್ವಜ್ಞರಾದ ಅರಿಷ್ಟನೇಮಿ ಭಟಾರರು ಹೇಳಿದರು. ದಂಡಕನು ಅದನ್ನು ನಂಬಿ, ನರಕದ ಮಹಾದುಃಖಕ್ಕೆ ಹೆದರಿ, ತಪಸ್ಸನ್ನು ಕೈಗೊಂಡು ಎಲ್ಲಾ ಶಾಸ್ತ್ರಗಳನ್ನೂ ಕಲಿತು ಋಷಿಗಳೊಡನೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಭಿಕ್ಷೆಗೆ ಹೋದಾಗ ಯಾರೂ ನಿಲ್ಲಿಸುವವರಿಲ್ಲ,

    ಚರಿಗೆವೊಕ್ಕೊಡಾರುಂ ನಿಱಸುವೊರಿಲ್ಲಮೂಱತ್ತು ನಿಱಸಿದೊಡಂ ಛರ್ದಿಯಕ್ಕುಂ ರಿಸಿಯರ್ಕಳೊಡನೆ ಚರಿಗೆವೊಕ್ಕೊಡನಿಬರ್ಗಮಲಾಭಮಕ್ಕು ಮತ್ತಂ ವಾತ ಪಿತ್ತ ಶ್ಲೇಷ್ಮ ಖಾಸ ಶ್ವಾಸ ಜ್ವರಾರುಚಿ ಭರ್ದಿ ಅತಿಸಾರಾಕ್ಷಿ ಕುಕ್ಷಿ ವೇದನಾ ಸೋಟಕ ಪಿಟಕ ಶೂಲ ಭಗಂದರ ಕುಷ್ಠ ಕ್ಷಯ ಗಂಡ ಶಿರೋವೇದನಾದಿ ವ್ಯಾಗಳಾಗಿ ರೂಪಱೆಯಲಾಗದಂತಿರೆ ವ್ಯಾಗಳಿಂದ ಮೊಟ್ಟಯಿಸೆ ಪಟ್ಟನಾಗಿ ಮಗುೞ್ದು ವಿಹಾರಿಸುತ್ತಂ ರಿಸಿಯರ್ಕಳೊಡನೆ ದ್ವಾರಾವತಿಗೆ ಬಂದಿರ್ದೊರ್ ಅನ್ನೆಗಮೊಂದು ದಿವಸಂ ವಿಷ್ಣು ಬಂದು ರಿಸಿಯರ್ಕಳಂ ವಂದಿಸಿಯವರೊಳಗೆ ದಂಡಕರಿಸಿಯಾರೆಂದೊಡೆ ಕೆಲದ ರಿಸಿಯರ್ ತೋಱದೊಡವರಂ ವಂದಿಸಿ ನೋಡಿ ವ್ಯಾಯ ಪ್ರಬಲತ್ವಮಂ ಕಂಡು ವೈಯಾಪೃತ್ಯಂ ಗೆಯ್ವುದರ್ಕಾದಮಾನುಮೞಯೊಡೆಯನಾಗಿ ಪೊಡೆವಟ್ಟಿಂತೆಂದಂ ಭಟಾರಾ ನಿಮ್ಮನೊಂದಂ ಬೇಡಿದಪ್ಪೆಂ ದಂಡಕರಿಸಿಯೀ ವರ್ಷಾಕಾಲಮನೆನ್ನ ದೇಹಾರದೊಳಿರ್ದಂತಃಪುರದ ಮನೆಗಳೊಳ್ ಚರ್ಯಾ ಮಾರ್ಗಂಬುಗುವುದನೆನಗೆ ದಯೆಗೆಯ್ಯಲ್ವೇೞ್ಕುಮೆಂದೊಡವರುಮಂತೆಗೆಯ್ವೆಮೆಂದು ವಿಷ್ಣುವ ದೇಹಾರದೊಳ್ ಜೇಗುಗೊಂಡಿರ್ದೊಡೆ ವಿಷ್ಣು ತನ್ನ ಪ್ರಧಾನನಪ್ಪ ಜಯನೆಂಬ ವೈದ್ಯನಂ ಕರೆದಿಂತೆಂದಂ ನಮ್ಮ ದಂಡಕರಿಸಿಯ ಕುತ್ತಮನೆಂತು ಬಲ್ಲೆಯಂತೆ ತೀರ್ಚೆಂದು ಪೇೞ್ದೊಡಾತನುಮಂತೆಗೆಯ್ವೆನೆಂದು ದಿವ್ಯೌಷಗಳಿಂದಂ ಪಿಟ್ಟಿನೊಳ್ ಮಾಡಿದುಂಡೆಗಳಂ

ಸಾಸಿರ್ವರರಸಿಯರ್ಕಳ ಮನೆಗಳೊಳ್ ಪ್ರಯೋಗಿಸಿಯಾ ರುಷಿಯರಂ ಮರ್ದನೂಡಿದಂ ಮತ್ತಂ ಪೊೞಲೊಳಗೆಲ್ಲಂ ಉಂಡೆಯ ಪರ್ವಮಂ

    ಒತ್ತಾಯದಿಂದ ನಿಲ್ಲಿಸಿದರೆ ಉಂಡುದು ವಾಂತಿಯಾಗುತ್ತದೆ. ಋಷಿಗಳೊಡನೆ ಭಿಕ್ಷೆಗೆ ಹೋದರೆ ಯಾರೊಬ್ಬರಿಗೂ ಭಿಕ್ಷೆ ಸಿಗುವುದಿಲ್ಲ. ಅದಲ್ಲದೆ, ವಾತ, ಪಿತ್ತ, ಕಫ, ಖಾಸ, ಉಬ್ಬಸ, ಜ್ವರ, ಅರುಚಿ, ವಾಂತಿ, ಭೇದಿ, ಕಣ್ಣುನೋವು, ಹೊಟ್ಟೆನೋವು, ಒಡೆಯುವಿಕೆ, ಬೊಕ್ಕೆ, ಸಿಡಿತ, ಭಗಂದರ, ಕುಷ್ಠ, ಕ್ಷಯ, ಗಂಡ, ತಲೆನೋವು – ಮುಂತಾದ ರೋಗಗಳಾಗಿ ರೂಪವೇ ತಿಳಿಯದ ಹಾಗೆ ರೋಗಗಳಿಂದ ಪೀಡಿತನಾಗಿ ಮರಳಿ ಸಂಚಾರ ಮಾಡುತ್ತ ಋಷಿಗಳೊಡನೆ ದ್ವಾರಾವತಿಗೆ ಬಂದಿದ್ದರು. ಹೀಗಿರಲು ಒಂದು ದಿವಸ ವಿಷ್ಣು ಬಂದು ಋಷಿಗಳಿಗೆ ನಮಸ್ಕರಿಸಿ, ಅವರಲ್ಲಿ ದಂಡಕ ಋಷಿ ಯಾರೆಂದು ಕೇಳಿದನು. ಬಳಿಯಲ್ಲಿದ್ದ ಋಷಿಗಳು ತೋರಿಸಲು, ಅವರನ್ನು ನಮಸ್ಕರಿಸಿ ನೋಡಿ, ರೋಗವು ಪ್ರಬಲವಾದುದನ್ನು ಕಂಡು ಉಪಚಾರಾದಿ ಚಿಕಿತ್ಸೆಯನ್ನು ಮಾಡುವುದಕ್ಕೆ ಅತ್ಯಂತ ಆಸಕ್ತಿಯುಳ್ಳವನಾಗಿ ಸಾಷ್ಟಾಂಗ ವಂದನೆ ಮಾಡಿ ಹೀಗೆಂದನು – “ಪೂಜ್ಯರೇ, ನಿಮ್ಮಲ್ಲಿ ಒಂದನ್ನು ಬೇಡುತ್ತಿದ್ದೇನೆ. ದಂಡಕಋಷಿಯು ಈ ಮಳೆಗಾಲದಲ್ಲಿ ನನ್ನ ಮನೆಯ ದೇವರ ಕೋಣೆಯಲ್ಲಿದ್ದು ನನ್ನ ರಾಣೀವಾಸದ ಮನೆಗಳಲ್ಲಿ ಭಿಕ್ಷಾದಿಗಳನ್ನು ಮಾಡಿಕೊಂಡು ಇರುವುದನ್ನು ಕರುಣಿಸಬೇಕು* – ಎಂದು ಹೇಳಲು ಅವರು ‘ಹಾಗೆಯೇ ಮಾಡುವೆವು’ ಎಂದು ವಿಷ್ಣುವಿನ ದೇಗುಲದಲ್ಲಿ ಯೋಗಸ್ಥರಾಗಿ ಇದ್ದರು. ವಿಷ್ಣು ತನ್ನ ಪ್ರಧಾನ ವೈದ್ಯನಾದ ಜಯನನ್ನು ಕರೆದು “ನಮ್ಮ ದಂಡಋಷಿಯ ರೋಗವನ್ನು ನಿನಗೆ ಹೇಗೆ ಸಾಧ್ಯವೋ ಹಾಗೆ ಪರಿಹಾರಮಾಡು* ಎಂದು ಹೇಳಿದನು. ಅವನು ‘ಹಾಗೆಯೇ ಮಾಡುವೆನು’ ಎಂದು ದಿವ್ಯವಾದ ಔಷಗಳಿಂದ ಹಿಟ್ಟಿನಲ್ಲಿ ಮಾಡಿ ಉಂಡೆಗಳನ್ನು ಸಾವಿರ ಮಂದಿ ರಾಣಿಯರ ಮನೆಗಳಲ್ಲಿ ಪ್ರಯೋಗ ಮಾಡಿದ ದಂಡಕ ಋಷಿಗೆ ಔಷ ಕೊಡಿಸಿದನು. ಅದಲ್ಲದೆ, ಪಟ್ಟಣದಲ್ಲೆಲ್ಲ ಉಂಡೆಯ ಹಬ್ಬವನ್ನು ಮಾಡಿಸಿದನು. ಹೀಗೆ ಮಳೆಗಾಲದ

    ಮಾಡಿಸಿದನಿಂತು ವರ್ಷಾಕಾಲದ ನಾಲ್ಕುತಿಂಗಳೊಳಂ ಮರ್ದನೂಡಿ ಕುತ್ತಮನಿಂಬುಮಾಡಿದೊಡೆ ವೈಯಾಪೃತ್ಯಂ ಗೆಯ್ವುದಱೊಳಾದಮಾನುಂ ಉದ್ಯೋಗಪರನಪ್ಪುದಱಂ ವಿಷ್ಣುವಿಂಗೆ ತೀರ್ಥಂಕರನಾಮಂ ಕಟ್ಟಿತ್ತು ಮತ್ತಂ ದಂಡಕರಿಸಿಯರ ಮೆಯ್ಯ ತೊಗಲ್ ಪಾವಿನ ಪರೆ ಸುಲಿವಂತೆ ಸುಲಿದು ಪೋಗಿ ನಿರ್ವ್ಯಾತದೇಹರಾಗಿ ಮೆಯ್ಯ ತೇಜಂ ತೊಳಗುತ್ತಿರ್ದುದಂ ವಿಷ್ಣು ಕಂಡು ವ್ಯಾ ಕೆಟ್ಟುದೆಂದಱದು ಆದಮಾನುಂ ಹರ್ಷಚಿತ್ತನಾಗಿ ಆ ರುಷಿಯರ ಪಕ್ಕದೆ ವೈದ್ಯಜಯನಂ ಪೊಗೞ್ದೊಡವರ್ ಕೆಮ್ಮಗಿರ್ದೊಡೆ ವೈದ್ಯನಿವರೆನ್ನಂ ಪೊಗೞ್ದರಿಲ್ಲೆಂದು ಮನದೊಳಾ ರಿಸಿಯರೊಳಪ್ಪ ಮುಳಿಸಂ ತಳೆಡು ಆರ್ತಧ್ಯಾನದಿಂ ಕೆಲಕಾಲದಿಂ ಕಾಲಂಗೆಯ್ದು ವಿಂಧ್ಯಾಟವೀ ಮಧ್ಯಸ್ಥಮಪ್ಪ ನರ್ಮದಾ ನದೀ ತೀರದೊಳ್ ಕೋಡಗಮಾಗಿ ಪುಟ್ಟಿದೊಂ ಮತ್ತಿತ್ತ ದಂಡಕರಿಸಿಯರ್ ತಮ್ಮ ಪಕ್ಕದೆ ವಿಷ್ಣು ಜಯನಂ ಪೊಗೞ್ದುದಱಂಚಿದಮರಸನ ಬೆಸದಿಂ ವೈದ್ಯನನವರತಂ ತಮ್ಮನೋಲಗಿಸುವುದಱಂ ತಮಗೆಂದುಂ ಮಾಡಿದ ವೈಯಾಪೃತ್ಯಮನಱದು ನಿಂದಣ ಗರುಹಣಂಗೆಯ್ದು ಅದರ್ಕೆ ತಕ್ಕ ಪ್ರಾಯಶ್ಚಿತ್ತಮಂ ಕೊಂಡು ಸಿಂಹನಿಷ್ಕಿ ಡಿತಮೆಂಬ ನೋಂಪಿಯಂ ನೋಂತು ವಿಹಾರಿಸುತ್ತಂ ಪೋಗಿ ನರ್ಮದೆಯ ತಡಿಯೊಳ್ ಮಾಮರದ ಕೆೞಗೆ ಸ್ವಾಧ್ಯಾಯಂಗೆಯ್ಯುತ್ತಿರ್ದರನ್ನೆಗಂ ಆ ಕೋಡಗನವರಂ ಕಂಡು ಜಾತಿಸ್ಮರನಾಗಿ ಪೂರ್ವಭವ ವೈರಸಂಬಂಧಮನಱದು ಮುಳಿಸಿನಿಂ ಶಕ್ತಿಯೆಂಬಾಯುಧದೊಳೋರಂತಾಗುತ್ತಿರ್ದ ಮಾವಿನ ಕೊಂಬಂ ಮುನಿವರನ ತೊಡೆಯನುರ್ಚಿ ಪೋಗೆ ನೂಂಕಿತ್ತಾಗಳಾ ಮುನಿಯುಂ ತ್ಯಕ್ತಶರೀರನಾಗಿ 

    ನಾಲ್ಕು ತಿಂಗಳಲ್ಲಿಯೂ ಔಷ ಕೊಟ್ಟು ರೋಗವನ್ನು ವಾಸಿ ಮಾಡಲು ಋಷಿಗೆ ಚಿಕಿತ್ಸೆ ಮಾಡುವುದರಲ್ಲಿ ಅತ್ಯಂತವಾಗಿ ಉದ್ಯುಕ್ತನಾದುದರಿಂದ ವಿಷ್ಣುವಿಗೆ ತೀರ್ಥಂಕರ ಎಂಬ ಹೆಸರು ಕಟ್ಟಿಕೊಂಡಿತು (ಬಂತು). ಅನಂತರ, ದಂಡಕಋಷಿಗಳ ಶರೀರದ ಚರ್ಮವು ಹಾವಿನ ಪೊರೆ ಸುಲಿದುಹೋಗುವಂತೆ ಸುಲಿದು ಹೋಗಿ ರೋಗವಿಲ್ಲದ ಶರೀರದವರಾಗಿ ದೇಹಕಾಂತಿ ಹೊಳೆಯುತ್ತಿತ್ತು. ಇದನ್ನು ವಿಷ್ಣು ನೋಡಿ ರೋಗ ಪರಿಹಾರವಾಯಿತೆಂದು ತಿಳಿದು ಬಹಳ ಸಂತೋಷಗೊಂಡ ಮನಸ್ಸಿನವನಾಗಿ ಆ ಋಸಿಗಳ ಬಳಿಯಲ್ಲಿ ಜಯ ವೈದ್ಯನನ್ನು ಹೊಗಳಿದನು. ಆಗ ಋಷಿಗಳು ಸುಮ್ಮನಿರಲು, ವೈದ್ಯನು ‘ಈ ಋಷಿಗಳು ನನ್ನನ್ನು ಹೊಗಳಲಿಲ್ಲ’ ಎಂದು ಮನಸ್ಸನಲ್ಲಿ ಕೋಪಗೊಂಡು ಆರ್ತಧ್ಯಾನದಿಂದ ಕೆಲವು ಕಾಲದಲ್ಲೇ ಸತ್ತು ವಿಂಧ್ಯೆಯ ಕಾಡಿನ ನಡುವೆ ಇರುವ ನರ್ಮದಾನದಿಯ ತೀರದಲ್ಲಿ ಕೋತಿಯಾಗಿ ಹುಟ್ಟಿದನು. ಆಮೇಲೆ ಇತ್ತ ದಂಡಕಋಷಿಗಳು ತಮ್ಮ ಬಳಿಯಲ್ಲಿ ವಿಷ್ಣುವು ಜಯನನ್ನು ಹೊಗಳಿದ್ದರಿಂದಲೂ ಅರಸನ ಅಪ್ಪಣೆಯಂತೆ ವೈದ್ಯನು ಯಾವಾಗಲೂ ತಮ್ಮ ಸೇವೆ ಮಾಡುತ್ತಿದ್ದುದರಿಂದಲೂ ತಮಗೆ ಯಾವಾಗಲೂ ಮಾಡಿದ ಚಿಕಿತ್ಸೆಯ ಸಂಗತಿಯನ್ನು ತಿಳಿದು ತಮ್ಮನ್ನು ತಾವೇ ನಿಂದಿಸಿಕೊಂಡರು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಸ್ವೀಕರಿಸಿ ಸಿಂಗ ನಿಷ್ಕ್ರೀಡಿತ ಎಂಬ ವ್ರತವನ್ನು ಆಚರಿಸಿ, ಸಂಚಾರಮಾಡುತ್ತ ಹೋಗಿ ನರ್ಮದಾ ನದಿಯ ತೀರದಲ್ಲಿ ಮಾವಿನ ಮರದ ಕೆಳಗೆ ಶಾಸ್ತ್ರಪಠನವನ್ನು ಮಾಡುತ್ತಿದ್ದರು. ಆ ವೇಳೆಗೆ ಆ ಕೋತಿ ಅವರನ್ನು ಕಂಡು ಜನ್ಮಸಂಗತಿಯನ್ನು ತಿಳಿದು, ಹಿಂದಿನ ಜನ್ಮದ ದ್ವೇಷಸಂಬಂಧವನ್ನು ತಿಳಿದು ಕೋಪದಿಂದ ಶಕ್ತಾ ಯುಧಕ್ಕೆ ಸಮಾನವಾಗುತ್ತಿದ್ದ ಮಾವಿನ ಕೊಂಬೆಯನ್ನು ದಂಡಕಋಷಿಯ ತೊಡೆ ಸೀಳಿಹೋಗುವಂತೆ ಬೀಳಿಸಿತು. ಆಗ ಮುನಿಯು ದೇಹಾಭಿಮಾನವನ್ನು ತ್ಯಜಿಸಿದವನಾಗಿ ಸಮತ್ಪದ ಭಾವನೆಯಲ್ಲಿ ಕೂಡಿದ್ದನು. ಹಾಗೆ ಇರುವುದನ್ನು ಕಂಡು ಕೋಡಗನು – “ಈ ಋಷಿಗೆ ತನ್ನ ಶರೀರವೂ ಪ್ರಯೋಜನವಿಲ್ಲ

    ಸಮತ್ವೀ ಭಾವನೆಯೊಳ್ ಕೂಡಿರ್ದೊನಂ ಕಂಡು ತನ್ನ ಮೆಯ್ಯುಮೀತಂಗೆ ಬಾೞ್ತೆಯಲ್ತೆನ್ನದೇವನೆಂದು ಸಲೆ ನಂಬಿ ಪಶ್ಚಾತ್ತಾಪಮಾಗಿ ಮರ್ಕಟವೃಂದಮಂ ನೆರಪಿಕೊಂಡು ಬಂದದಂ ಕಿೞ್ತು ಮರ್ದಂ ತಂದು ಪೊಯ್ದು ಯತಿವರನ ಕಾಲ್ಗೆಱಗಿರ್ದುದುಮಂ ಕಂಡು ಮುನಿಯುಮೀ ಪ್ರಾಣಿ ಭವ್ಯನೆಂದಱದು ಧರ್ಮಮಂ ಪೇೞ್ದು ಸಮ್ಯಕ್ತ್ವಪೂರ್ವಕಂ ಬ್ರತಂಗಳಂ ಕೊಟ್ಟರ್ ಅದುವುಂ ಕೈಕೊಂಡು ಧರ್ಮದೊಳ್ ಕೂಡಿ ತನ್ನಂ ನಿಂದಿಸುತಂ ಬ್ರತೋಪವಾಸಂಗಳಿಂ ಮೆಯ್ಯಂ ದಂಡಿಸುತಂ ಸಲ್ವುದೊಂದು ದಿವಸಂ ಪರ್ವತಶಿಖರದಿಂ ಪಾಯ್ದು ಬಂದು ಬರ್ದುಂಕಿ ಮುನಿವರರ ಪಕ್ಕದೆ ಬಿರ್ದತ್ತಾಗಳವರುಂ ಸಂನ್ಯಸನಪೂರ್ವಕಂ ಪಂಚನಮಸ್ಕಾರಮಂ ಕೊಟ್ಟರ್ ಅದುವುಂ ಸತ್ತುಪೋಗಿ ಸನತ್ಕುಮಾರಮೆಂಬ ಕಲ್ಪದೊಳ್ ಎರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕ ದೇವನಾಗಿ ಪುಟ್ಟಿದೊಂ ತನ್ನವಜ್ಞಾನದಿಂದಮಱದು ಮಹಾವಿಭೂತಿಯಿಂದಂ ಬಂದು ಧ್ವಜ ಮಕುಟ ಸಿತಾತಪತ್ರಾದಿಗಳೊಳ್ ಮಣಿಮಯಮಪ್ಪ ಮರ್ಕಟ ಚಿಹ್ನದೊಳ್ ಮುನಿವರನಂ ಪೂಜಿಸಿ ಪೊಡೆವಟ್ಟಿಂತೆಂದನೀ ದೇವತ್ವಮುಂ ವಿಭೂತಿಯುಮಂ ಪಶುಜಾತಿಯಪ್ಪೆನಗೆ ನೀಮಿತ್ತಿರ್ ಭಟಾರಾ ಎಂದು ತನ್ನ ಪೂರ್ವಭವ ಸಂಬಂಧಮೆಲ್ಲಮಂ ಪೇೞ್ದು ತನ್ನೊಡಲುಮಂ ಪೂಜಿಸಿ ಪೋದನಾಯೆಡೆ ಲೋಕದೊಳಮರೇಶ್ವರಮೆಂಬ ತೀರ್ಥಮಾಯ್ತು ಮತ್ತಿತ್ತ ದಂಡಕರಿಸಿಯುಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ

    (ಇವನು ದೇಹಾಭಿಮಾನವಿಲ್ಲದವನು). ನನ್ನ ದೇಹವನ್ನು ಏನು ಮಾಡಲಿ !* ಎಂದು ವಿಶೇಷವಾಗಿ ಯೋಚಿಸಿ ಪಶ್ಚಾತ್ತಾಪವುಂಟಾಗಿ ಕಪಿಗಳ ಸಮೂಹವನ್ನು ಕೂಡಿಕೊಂಡು ಬಂದು ಆ ಕೊಂಬೆಯನ್ನು ಕಿತ್ತು ಮದ್ದನ್ನು ತಂದು ಹೊಯಿದು ಯತೀಶ್ವರನ ಪಾದಕ್ಕೆ ವಂದಿಸಿತು. ಇದನ್ನು ಕಂಡು ದಂಡಕ ಮುನಿಯು “ಇದು ಭವ್ಯಜೀವಿ ಎಂದು ತಿಳಿದು ಧರ್ಮವನ್ನು ತಿಳಿಸಿ ಜೈನತತ್ವದಲ್ಲಿ ವಿಶ್ವಾಸಪೂರ್ವಕವಾಗಿ ವ್ರತಗಳನ್ನು ಕೊಟ್ಟರು. ಅದು ಅವನ್ನು ಸ್ವೀಕರಿಸಿ ಧರ್ಮದಲ್ಲಿ ಸೇರಿ ತನ್ನನ್ನು ನಿಂದಿಸಿಕೊಳ್ಳುತ್ತ ವ್ರತ ಉಪವಾಸಗಳಿಂದ ದೇಹವನ್ನು ದಂಡಿಸುತ್ತ ಕಾಲಕಳೆಯುತ್ತ ಒಂದು ದಿವಸ ಬೆಟ್ಟದ ತುದಿಯಿಂದ ಹಾರಿ ಬಿದ್ದಿತು. ಅದು ತಪ್ಪಿ ದಂಡಕ ಋಷಿಯ ಬಳಿಯಲ್ಲಿ ಬಿದ್ದಿತು. ಋಷಿಗಳು ಆ ಕೋತಿಗೆ ಸಂನ್ಯಾಸದೊಂದಿಗೆ ಪಂಚನಮಸ್ಕಾರಗಳನ್ನು ಉಪದೇಶಿಸಿದರು. ಅದು ಸತ್ತುಹೋಗಿ ಆ ಜೀವನು ಸನತ್ಕುಮಾರ ಎಂಬ ಸ್ವರ್ಗದಲ್ಲಿ ಎರಡು ಸಾಗರವನ್ನು ಹೋಲುವ ಆಯುಷ್ಯವಿರತಕ್ಕ ಸಾಮಾನಿಕದೇವನಾಗಿ ಹುಟ್ಟಿದನು. ಆ ಸಾಮಾನಿಕದೇವನು ತನ್ನ ಅವಜ್ಞಾನದಿಂದ ತಿಳಿದುಕೊಂಡು ದೊಡ್ಡ ವೈಭವದಿಂದ ಬಂದು ಪತಾಕೆ, ಕೀರೀಟ, ಶ್ವೇತಚ್ಛತ್ರಾದಿಗಳಿಂದ ರತ್ನಮಯವಾದ ವಾನರ ಚಿಹ್ನೆಯಲ್ಲಿ ಮುನಿಶ್ರೇಷ್ಠನನ್ನು ಪೂಜಿಸಿ ಸಾಷ್ಟಾಂಗ ನಮಸ್ಕಾರಮಾಡಿ ವಂದಿಸಿ ಹೀಗೆಂದನು – “ಋಷಿವರ್ಯರೇ, ಈ ದೇವತ್ವವೂ ವೈಭವವೂ ಪ್ರಾಣಿಜಾತಿಯವನಾದ ನನಗೆ ನೀವು ಕೊಟ್ಟಿರಿ* – ಎಂದು ತನ್ನ ಹಿಂದಿನ ಜನ್ಮದ ಸಂಬಂಧವನ್ನೆಲ್ಲ ಹೇಳಿ ತನ್ನ ಶರೀರವನ್ನು ಪೂಜಿಸಿ ತೆರಳಿದನು. ಆ ಸ್ಥಳವು ಲೋಕದಲ್ಲಿ ಅಮರೇಶ್ವರವೆಂಬ ತೀರ್ಥವಾಯಿತು. ಅನಂತರ ಇತ್ತ ದಂಡಕಋಷಿ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಕ್ರಮವಾಗಿ ಉತ್ತರಮಧುರೆಗೆ ಹೋಗಿ ಅಲ್ಲಿ ಸೂರ್ಯನ ಬಿಸಿಲಿನಲ್ಲಿ ಪ್ರತಿಮಾಯೋಗದಿಂದ ನಿಂತರು. 

    ದ್ರೋಣಾಮುಖಂಗಳಂ ವಿಹಾರಿಸುತ್ತಂ ಕ್ರಮದಿಂದುತ್ತರ ಮಧುರೆಯನೆಯ್ದಿಯಲ್ಲಿ ಸೂರ್ಯಪ್ರತಿಮೆ ನಿಂದರನ್ನೆಗಂ ಆ ಪೊೞಲನಾಳ್ವೊಂ ಯಮುನಾವಂಕನೆಂಬೊನರಸನಾತಂ ದಂಡಕನಿಂದಂ ಪಲವು ಸೂೞು ದಂಡಣೆಗಳನೆಯ್ದಿದನಪ್ಪುರಱಂದಂ ದಂಡಕಂ ಬಂದನೆಂಬ ವಾರ್ತೆಯಂ ಕೇಳಲೊಡಂ ಜಾತ್ಯಶ್ವಮನೇಱ ಓಡುವವನ ಬೞಯಂ ಮಂತ್ರಿ ತಗುಳ್ದೋಡಲೀಯದೆ ಮಾಣಿಸಿಯಿಂತೆಂದಂ ದಂಡಕಂ ತಪಂಬಟ್ಟು ಬಂದನೆಂದಱಯೆ ಪೇೞ್ದೂಗಳ್ ಮಗುಳ್ದು ಬಂದತಿಕ್ರೋಧದಿಂದಂ ಕಾಸಿದ ಮೊನೆಯಂಬುಳ್ಳವನವಱ ಮೆಯ್ಯನನೇಕ ಶರಸಂಘಾತಂಗಳಿಂದಮೆಚ್ಚೊಡವರುಮಾ ವೇದನೆಯುಂ ಸೈರಿಸಿ ಸಮತ್ವೀಭಾವನೆಯಂ ಭಾವಿಸಿ ಚತುರ್ವಿಧಮಪಾಹಾರಕ್ಕಂ ಶರೀರಕ್ಕಂ ಯವಜ್ಜೀವಂ ನಿವೃತ್ತಿಗೆಯ್ದು ಶುಕ್ಮಧ್ಯಾನಂಗಳಂ ಧ್ಯಾನಿಸಿ ಕರ್ಮಕ್ಷಯಂಗೆಯ್ದು ಮೋಕ್ಷಕ್ಕೆ ವೋದರ್ ಅನ್ನೆಗಂ ಇತ್ತ ಚತುರ್ವಿಧ ದೇವನಿಕಾಯಂ ತಂತಮ್ಮ ಜ್ಞಾನಂಗಳಿಂದಱದು ಚಿತ್ರಪಟಮಂ ಕೆದಱದಂತೆಯಾಕಾಶಮೆಲ್ಲಮಂ ವ್ಯಾಪಿಸಿ ನಾನಾ ವಿಧ ವಾಹನಾರೂಢರ್ಕಳ್ ಜ್ವಲನ್ಮಣಿಮಯಮಕುಟಾಗ್ರವಿನ್ಯಸ್ತಹಸ್ತರ್ಕಳಾಗಿ ಇಂದ್ರಾದಿ ದೇವರ್ಕಳುಂ ಜಯಜಯಶಬ್ದಂಗಳಿಂದಂ ಮುನಿವರೇಣ್ಯನ ಗುಣಂಗಳಂ ನೆಗೞ್ತೆಯಂ ಪೊಗೞುತಂ ಬರ್ಪೊರಂ ಕಂಡು ಭಯಂ ಕಾರಣಮಾಗಿಯುಂ ಕರ್ಮಂಗಳುಪಶಮಂ ಕಾರಣಮಾಗಿಯುಂ ಯಮುನಾವಂಕಂ ತಪಂಬಟ್ಟಂ ತಪಂಬಟ್ಟೊಡಮಾ ರಿಸಿಯಂ ಕೊಂದ ಪಾಪದ ಫಲದಿಂದನೇಕ

    ಆಗ ಆ ಪಟ್ಟಣವನ್ನಾಳುವ ಯಮುನಾವಂಕನೆಂಬ ರಾಜನು ದಂಡಕನು ಬಂದುದನ್ನು ತಿಳಿದನು. ಯಮುನಾವಂಕನು ದಂಡಕನಿಂದ ಹಲವು ಬಾರಿ ದಂಡನೆಗೆ ಗುರಿಯಾಗಿದ್ದನು. ಅವನು ಈಗ ಜಾತಿಯ ಕುದುರೆಯನ್ನೇರಿ ಹೆದರಿ ಓಡತೊಡಗಿದನು. ಮಂತ್ರಿ ಅವನ ಬೆನ್ನ ಹಿಂದೆಯೇ ಬಂದು ಓಡಲು ಬಿಡದೆ, ತಡೆದು ಹೀಗೆಂದನು – “ದಂಡಕನು ಈಗ ತಪಸ್ವಿಯಾಗಿ ಬಂದಿದ್ದಾನೆ* – ಎಂದು ತಿಳಿಯುವಂತೆ ಹೇಳಿದಾಗ ಯಮುನಾವಂಕನು ಹಿಂದೆ ಬಂದು, ಬಹಳ ಕೋಪದಿಂದ ಕಾಯಿಸಿ ಹರಿತಮಾಡಿದ ಚೂಪಾದ ಬಾಣಗಳುಳ್ಳವನಾಗಿ ಅವುಗಳಿಂದ (ಅನೇಕ ಬಾಣಗಳ ಸಮೂಹದಿಂದ) ಮುನಿಗೆ ಹೊಡೆದನು. ಅವರು ಆ ನೋವನ್ನು ಸಹಿಸಿ ಸಮತ್ವದ ಭಾವನೆಯನ್ನು ಭಾವಿಸಿ ನಾಲ್ಕು ವಿಧವಾದ ಆಹಾರಕ್ಕೂ ಶರೀರಕ್ಕೂ ಜೀವವಿರುವವರೆಗೂ ನಿವೃತ್ತಿಮಾಡಿ ಶುಕ್ಲಧ್ಯಾನಗಳನ್ನು ಧ್ಯಾನಿಸಿ ಕರ್ಮವನ್ನು ನಾಶಮಾಡಿ ಮೋಕ್ಷಕ್ಕೆ ಹೋದರು. ಅಷ್ಟರಲ್ಲಿ ಇತ್ತ ಭವನವಾಸಿ, ವ್ಯಂತರ, ಜ್ಯೋತಿಷ್ಕ, ವೈಮಾನಿಕ – ಎಂಬ ನಾಲ್ಕು ವಿಧದ ದೇವತೆಗಳ ಸಮೂಹಕ್ಕೆ ಸೇರಿದವರೆಲ್ಲ ತಂತಮ್ಮ ಜ್ಞಾನಗಳಿಂದ ಸಂಗತಿಯನ್ನು ತಿಳಿದ ಚಿತ್ರಪಟಗಳನ್ನು ಕೆದರಿದ ಹಾಗೆ ಆಕಾಶವನ್ನೆಲ್ಲ ವ್ಯಾಪಿಸಿಕೊಂಡು ಹಲವಾರು ರೀತಿಯ ವಾಹನಗಳ ಮೇಲೆ ಕುಳಿತವರಾಗಿ ಹೊಳೆಯುವ ರತ್ನಮಯವಾದ ಕಿರೀಟಗಳ ಮೇಲೆ ಇಟ್ಟ ಕೈಯುಳ್ಳವರಾಗಿ (ನಮಸ್ಕರಿಸುತ್ತ) – ಇಂದ್ರನೇ ಮುಂತಾದ ದೇವತೆಗಳೂ ಜಯಜಯ ಎಂಬ ಶಬ್ದಗಳಿಂದ ಮುನಿಶ್ರೇಷ್ಠನ ಗುಣಗಳನ್ನು ಆಚರಣೆಗಳನ್ನೂ ಹೊಗಳುತ್ತ ಬರುತ್ತಿದ್ದರು. ಅವರನ್ನು ಯಮುನಾವಂಕನು ನೋಡಿ ಹೆದರಿಕೆಯ ಕಾರಣದಿಂದಲೂ ಕರ್ಮಗಳು ನಾಶವಾದ ಕಾರಣದಿಂದಲೂ ತಪಸ್ಸನ್ನು ಸ್ವೀಕರಿಸಿಕೊಂಡನು. ತಪಃಸ್ವೀಕಾರ ಮಾಡಿದರೂ ಆ ಋಷಿಯನ್ನು ಕೊಂದ ಪಾಪದ ಫಲದಿಂದ ಅವನಿಗೆ ಅನೇಕ ಮಹಾವ್ಯಾಗಳಾದವು.

    ಮಹಾವ್ಯಾಗಳುಮಾದವು ಮತ್ತಮಾ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತಮಂ ನೆಗೞ್ದು ಪಲಕಾಲಮುಗ್ರೋಗ್ರ ಘೋರ ವೀರ ತಪಶ್ಚರಣಂಗೆಯ್ಯುತಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತಂ ಬರ್ಪೊರ್ ಸಜ್ಜಾತಗಿರಿಯನೆಯ್ದಿಯಲ್ಲಿಯೆ ರಾತ್ರಿ ಪ್ರತಿಮೆನಿಂದೊರನ್ನೆಗಂ ಕಾೞಚ್ಚು ಮೂವಳಸು ಬಳಸಿಯುಂ ತಗುಳ್ದು ತಮ್ಮಂ ಸುಡೆ ಚತುರ್ವಿಧಮಪ್ಪಾ ಹಾರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಶುಭಮಪ್ಪ ಶುಕ್ಮಧ್ಯಾನಂಗಳಂ ಜಾನಿಸಿ ಘಾತಿಕರ್ಮಂಗಳಂ ಕಿಡಿಸಿಯಂತರ್ಗತ ಕೇವಲಿಯಾಗಿ ಯೆಂಟು ಕರ್ಮಂಗಳಂ ಕಿಡಿಸಿ ತಪೋಗ್ನಿಯಂ ಸುಟ್ಟು ಮೋಕ್ಷಕ್ಕೆ ವೋದರ್ ಮತ್ತೆ ಪೆಱರುಂ ಸಂನ್ಯಸನಂಗೆಯ್ದಿರ್ದ ಕ್ಷಪಣಕರುಂ ದಂಡಕರಿಸಿಯರಂ ಕಾಸಿದ ಮೊನೆಯಂಬುಗಳಿಂದೆಚ್ಚು ಮಾಡಿದುಪಸರ್ಗಮುಮಂ ಯಮುನಾವಂಕರಿಸಿಯರ್ ಕಿಚ್ಚಿನಿಂ ಬೆಂದುಪಸರ್ಗಮುಮಂ ಮನದೊಳ್ ಬಗೆದು ಪಸಿವುಂ ನೀರೞ್ಕೆ ಮೊದಲಗೊಡೆಯವಿರ್ಪತ್ತೆರಡು ಷರೀಷಹಂಗಳುಮಂ ವ್ಯಾಗಳೊಳಪ್ಪ ವೇದನೆಗಳುಮಂ ಸೈರಿಸಿ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

    ಮತ್ತೆ ಆ ಪಾಪಕ್ಕೆ ತಕ್ಕುದಾದ ಪ್ರಾಯಶ್ಚಿತ್ತವನ್ನು ಮಾಡಿ ಹಲವು ಕಾಲದವರೆಗೆ ಅತ್ಯಂತ ಕಠಿಣವೂ ಶ್ರೇಷ್ಠವೂ ಆದ ತಪಸ್ಸನ್ನು ಆಚರಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ, ಬರುತ್ತಿದ್ದವರು ಸಜ್ಜಾತವೆಂಬ ಬೆಟ್ಟವನ್ನು ಸೇರಿ ಅಲ್ಲಿಯೇ ರಾತ್ರಿ ಪ್ರತಿಮಾಯೋಗದಲ್ಲಿ ನಿಂತರು. ಆ ವೇಳೆಗೆ ಕಾಡುಗಿಚ್ಚು ಮೂರು ಸುತ್ತಾಗಿ ಆವರಿಸಿ ಹತ್ತಿರ ಬಂದು ಅವರನ್ನು ಸುಡತೊಡಗಿತು. ಆಗ ಅವರು ಜೀವವಿರುವರೆಗೂ ನಾಲ್ಕು ವಿಧವಾದ ಆಹಾರದಲ್ಲಿ (ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ ಇವುಗಳಲ್ಲಿ) ಯಾವುದೊಂದನ್ನೂ ಸೇವಿಸದೆ ಶುಭವಾದ ಶುಕ್ಲಧ್ಯಾನಗಳನ್ನು ಧ್ಯಾನಿಸಿ ಘಾತಿಕರ್ಮಗಳನ್ನು ನಾಶಪಡಿಸಿ ಅಂತರ್ಗತ ಕೇವಲಿಯಾಗಿ ಎಂಟು ಕರ್ಮಗಳನ್ನು ನಾಶಪಡಿಸಿ ತಪಸ್ಸೆಂಬ ಅಗ್ನಿಯಿಂದ ದಹಿಸಿಕೊಂಡು ಮೋಕ್ಷಕ್ಕೆ ಹೋದರು. ಆಮೇಲೆ ಸಂನ್ಯಾಸಮಾಡಿದ ಇತರ ಸವಣರೂ ದಂಡಕ ಋಷಿಗಳನ್ನು ಕಾಸಿದ ಮೊನೆಯ ಬಾಣಗಳಿಂದ ಹೊಡೆದು ಮಾಡಿದ ಉಪಸರ್ಗವನ್ನೂ ಯಮುನಾವಂಕ ಋಷಿಗಳು ಬೆಂಕಿಯಿಂದ ಸುಟ್ಟುಹೋದ ಉಪಸರ್ಗವನ್ನೂ ಮನಸ್ಸಿನಲ್ಲಿ ಭಾವಿಸಿಕೊಂಡು, ಹಸಿವು ಬಾಯಾರಿಕೆ ಮುಂತಾಗಿ ಉಳ್ಳ ಇಪ್ಪತ್ತೆರಡು ಪರೀಷಹಗಳನ್ನೂ ರೋಗಗಳಿಂದಾಗುವ ನೋವುಗಳನ್ನೂ ಸಹಿಸಿ, ಶ್ರೇಷ್ಠವೂ ನಿರ್ಮಲವೂ ಸಹಜವೂ ಆದ ದರ್ಶನ ಜ್ಞಾನ ಚಾರಿತ್ರಗಳನ್ನು ಸಾಸಿ ಸ್ವರ್ಗ ಮೋಕ್ಷಗಳ ಸುಖಗಳಿಗೆ ಭಾಗಿಗಳಾಗಲಿ !

*****ಕೃಪೆ: ಕಣಜ****