ನನ್ನ ಪುಟಗಳು

22 ಡಿಸೆಂಬರ್ 2021

ಲಲಿತಘಟೆಯ ಕಥೆ (Lalitaghateya kathe)

 ಲಲಿತಘಟೆಯ ಕಥೆಯಂ ಪೇೞ್ವೆಂ :

ಗಾಹೆ || ಕೊಸಂಬೀ ಲಲಿತಘಟಾ ಓಢಾ ಣದೀಎ ಪೂರೇಣ ತಿವ್ವೇಣ

ಆರಾಧಣಂ ಪವಣ್ಣಾ ಪಾಓವಗಯಾ ಅಮೂಡಮದೀ ||

        *ಕೊಸಂಬೀ – ಕೌಶಾಬಿಯೆಂಬ ಪೊೞಲೊಳ್, ಲಲಿತಘಟಾ – ಲಲಿತಘಟೆ, ಓಢಾ – ಎೞೆಯೆ ಪಟ್ಟತ್ತು. ಣದೀವಿಪೂರೇಣ – ತೊಱೆಯ ಪೂರದಿಂದಂ, ತಿವ್ವೇಣ – ಆದಮಾನುಂ ಕಡಿದಪ್ಪುದಱಂದಂ, ಆರಾಧಣಂ – ನಿಜಾತ್ಮಾರಾಧನೆಯಂ, ಪವಣ್ಣಾ – ಪೊರ್ದಿತ್ತು. ಪಾಓವಗಯಾ – ಪ್ರಾಯೋಪಗಮನಕ್ಕೆ ಸಂದುದಾಗಿ, ಅಮೂಡಮದೀ – ಮೋಹಿಸದ ಬುದ್ಧಿಯನೊಡೆಯದು*

       ಅದೆಂತೆಂದೊಡೆ : ಈ ಜಂಬೂದ್ವೀಪದ ಭರಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಶಂಬಿಯೆಂಬುದು ಪೊೞಲದನಾಳ್ರ್ವೆಂ ಹರಿಧ್ವಜನೆಂಬೊನರಸನಾತನ ಮಹಾದೇವಿ ವಾರುಣಿಯೆಂಬೊಳಾಯಿರ್ವರ್ಗ್ಗಂ ಮಕ್ಕಳ್ ಶ್ರೀವರ್ಧನಂ ವಿಜಯಂಧರಂ ವೀರಾಬಾಹು ಮೊದಲಾಗಿ ಮೂವತ್ತಿರ್ವರ್ ಕುಮಾರರುಂ ಸಾಮಂತ ಮಹಾಸಾಮಂತರ ಮಕ್ಕಳುಮಂತೆಲ್ಲಮಯ್ನೂರ್ವರುಂ ರೂಪಿನೊಳಂ ತೇಜದೊಳಂ ಯೌವನದೊಳಂ ಶ್ರೀಯೊಳಂ ತಮ್ಮೊಳೋರನ್ನರಪ್ಪರದಱಂ ಲಲಿತಘಟೆಯೆಂಬೊರನಿಬರುಂ ಮಿಥ್ಯಾದೃಷ್ಟಿಗಳ್ ಪಂಡಿತರುಮೊಂದು ದಿವಸಂ ಶ್ರೀಕಾಂತಮೆಂಬ ಪರ್ವತದಡವಿಗನಿಬರುಂ ಬೇಂಟೆಯಾಡಲ್ ಪೋದಲ್ಲಿ ಇರ್ದೊರಭಯಘೋಷರೆಂಬ ಭಟಾರರವರ್ಗ್ಗಭಯಘೋಷರೆಂಬ ಪೆಸರೆಂತಾದುದೆಂದೊಡವರ್ ಗರ್ಭದೊಳಿರ್ದಂತೆ ಅವರ ತಾಯ್ಗೆ ಜೀವಂಗಳಂ ಕೊಲ್ಲದಂತಪ್ಪ ಬಯಕೆಯಾಗಿ ಅಭಯಘೋಷಣೆಯಂ ಪೊೞಲೊಳಂ ನಾಡೊಳಂ ಪೊಯ್ಸಿ ಜೀವಂಗಳ್ಗಭಯದಾನಂಗೊಟ್ಟು ಪುಟ್ಟಿದರಪ್ಪುದಱಂದವರ್ಗ್ಗಭಯಘೋಷರೆಂಬ ಪೆಸರಾದುದಂತಪ್ಪ 

        ಲಲಿತಘಟೆಯ ಕಥೆಯನ್ನು ಹೇಳುವೆನು. (ಕೌಶಾಂಬಿ ಎಂಬ ಪಟ್ಟಣದಲ್ಲಿ ಲಲಿತ ಘಟೆ ಹೊಳೆಯ ಪ್ರವಾಹದಿಂದ ತೊಳೆಯಲ್ಪಟ್ಟಿತು. ಮೋಹಗೊಳ್ಳದ ಬುದ್ಧಿಯುಳ್ಳುದಾಗಿ ಅತ್ಯಂತ ಕಠಿಣವಾದ ತನ್ನ ಆತ್ಮಾರಾಧನೆಯನ್ನು ಆಚರಿಸಿತು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವತ್ಸೆ ಎಂಬ ನಾಡು ಇದೆ. ಆ ನಾಡಿನಲ್ಲಿ ಕೌಶಂಬಿ ಎಂಬ ಪಟ್ಟಣವಿದೆ. ಅದನ್ನು ಹರಿಧ್ವಜನೆಂಬ ರಾಜನು ಆಳುತ್ತಿದ್ದನು. ಅವನ ರಾಣಿ ವಾರುಣಿ ಎಂಬವಳು. ಆ ದಂಪತಿಗಳಿಗೆ ಶ್ರೀವರ್ಧನ, ವಿಜಯಂಧರ, ವೀರಬಾಹು ಮುಂತಾದ ಮೂವತ್ತೆರಡು ಮಂದಿ ಮಕ್ಕಳಿದ್ದರು. ಆ ಮಕ್ಕಳೂ ಸಾಮಂತರ ಮತ್ತು ಮಹಾಸಾಮಂತರ ಮಕ್ಕಳೂ ಅಂತೂ ಎಲ್ಲ ಒಟ್ಟಿಗೆ ಐನೂರು ಮಂದಿಯಿದ್ದರು. ಅವರು ರೂಪದಲ್ಲಿಯೂ ತೇಜಸ್ಸಿನಲ್ಲಿಯೂ ತಾರುಣ್ಯದಲ್ಲಿಯೂ ಐಶ್ವರ್ಯದಲ್ಲಿಯೂ ತಮ್ಮಲ್ಲಿ ಸಮಾನರಾಗಿದ್ದರು. ಆದುದರಿಂದ ಲಲಿತಘಟೆ ಎಂದು ಅವರ ಗುಂಪಿಗೆ ಹೆಸರಾಗಿತ್ತು. ಅವರೆಲ್ಲರೂ ಜೈನಧರ್ಮದಲ್ಲಿ ವಿಶ್ವಾಸವಿಲ್ಲದ ಕುದೃಷ್ಟಿಗಳೂ ವಿದ್ವಾಂಸರೂ ಆಗಿದ್ದರು. ಅವರೆಲ್ಲರೂ ಒಂದು ದಿವಸ ಶ್ರೀಕಾಂತವೆಂಬ ಬೆಟ್ಟದ ಕಾಡಿಗೆ ಬೇಟೆಯಾಡಲು ಹೋದರು. ಅಲ್ಲಿ ಅಭಯಘೋಷರೆಂಬ ಋಷಿಗಳಿದ್ದರು. ಅವರಿಗೆ ಅಭಯಘೋಷರೆಂಬ ಹೆಸರು ಹೇಗಾಯಿತೆಂದರೆ : – ಅವರು ತಾಯಿಯ ಗರ್ಭದಲ್ಲಿದ್ದಾಗ ಆಕೆಗೆ ಪ್ರಾಣಿಗಳನ್ನು ಕೊಲ್ಲದಂತಹ (ಅಹಿಂಸೆಯ) ಬಯಕೆಯಾಗಿ ಪಟ್ಟಣದಲ್ಲಿಯೂ ನಾಡಿನಲ್ಲಿಯೂ ಅಭಯದ ಡಂಗುರವನ್ನು ಹೊಡೆಸಿ, ಜೀವಿಗಳಿಗೆಲ್ಲ ಅಭಯದಾನವನ್ನು ಕೊಟ್ಟು ಹುಟ್ಟಿದುದರಿಂದ ಅವರಿಗೆ ಅಭಯಘೋಷರೆಂಬ ಹೆಸರಾಯಿತು. ಅಂತಹ

        ಭಟಾರರಡವಿಯೊಳಿರೆ ಅವರ ತಪೋಮಾಹಾತ್ಮಾದಿಂ ಲಲಿತಘಟೆಗೊಂದು ಮಿಗಮಪ್ರ್ಪೊಡಂ ಬೇಂಟೆ ಸಮನಿಸದೆ ಪೊೞಲ್ಗೆವೋದೊರಿಂತೇೞುಂ ದಿವಸಮುಂ ಬಿಡದಡವಿಗೆ ಬೇಂಟೆಯಾಡಲ್ ಪೋಗಿ ಒಂದು ಮೃಗಮಪ್ರ್ಪೊಡಂ ಸಮನಿಸದೆ ಬೇಸತ್ತೞಲ್ದು ಪೊೞಲ್ಗೆವೋಗಿ ಎಂಟನೆಯ ದಿವಸದಂದು ಶ್ರೀಕಾಂತಮೆಂಬ ಪರ್ವತದಡವಿಗೆ ಲಲಿತಘಟೆ ಪೋಗಿ ಅಡವಿಯೊಳ್ ಮೃಗಂಗಳನಱಸುತ್ತಂ ತೊೞಲ್ವರನ್ನೆಗಮಭಯಘೋಷ ಭಟಾರರಾಯತಿಯಿಂ ತೊಟ್ಟನೆ ಸರ್ವಾಂಗಮಲಧಾರಿಗಳೊಂದು ಶಿಲಾತಳದ ಮೇಗಿರ್ದಾಗಮಮಂ ಪರಿವಿಡಿಗೆಯ್ಯುತ್ತುಮರ್ಥಮಂ ಭಾವಿಸುತ್ತಂ ಸ್ವಾಧ್ಯಾಯದೊಳ್ ತಗುಳ್ದಿರ್ದೊರಂ ಸಂಛನ್ನಮಪ್ಪಡವಿಯ ಮಱೆಯೊಳ್ ಗೆಂಟಱಂದಂ ಲಲಿತಘಟೆ ಕಂಡಪೂರ್ವಮಿದೊಂದು ಕರಿಯಮೃಗಮಿರ್ದುದೆಂದು ಬಗೆದು ಶ್ರೀವರ್ಧನ ಕುಮಾರಂ ಮೊದಲಾಗನಿಬರುಂ ಬಿಲ್ಗಳನೇಱಸಿ ತಿರುವಾಯೊಳಂಬನಿಟ್ಟಿಸಲೆಂದು ತೆಗೆದಿಸುವನ್ನೆಗಮನಿಬರ ಬಿಲ್ಗಳುಂ ಮುಱದುದವರ್ಗ್ಗಳನಿಬರುಂ ಪೆಱಗಣ್ಗುರುಳ್ದು ಬಿೞ್ದೊಡಿದು ಮಹಾಚೋದ್ಯಂ ಸಾರೆ ಪೋಗಿ ನೋೞ್ಪಮೆಂದು ಪೋಪರನ್ನೆಗಂ ಋಷಿಯರ ರೂಪಂ ಕಂಡಿವರ್ ಋಷಿಯರ್ ಮೃಗಮಲ್ತೆಂದು  ಸಾರೆಪೋಗಿ 

        ಋಷಿಗಳೂ ಕಾಡಿನಲ್ಲಿ ಇದ್ದುದರಿಂದ ಅವರ ತಪಸ್ಸಿನ ಮಹಿಮೆಯಿಂದ ಲಲಿತಘಟೆಗೆ ಒಂದೇ ಒಂದು ಮೃಗವಾದರೂ ಬೇಟೆ ದೊರಕಲಿಲ್ಲ. ಅವರು ಪಟ್ಟಣಕ್ಕೆ ತೆರಳಿದರು. ಹೀಗೆ ಏಳು ದಿವಸವೂ ಬಿಡದೆ ಕಾಡಿಗೆ ಬೇಟೆಯಾಡಲು ಹೋಗಿ ಒಂದು ಮೃಗವಾದರೂ ಸಿಕ್ಕದೆ ಬೇಸರಪಟ್ಟು ದುಃಖಪಟ್ಟು ಪಟ್ಟಣಕ್ಕೆ ಹೋದರು. ಎಂಟನೆಯ ದಿವಸದಂದು ಲಲಿತಘಟೆ ಬೇಟೆಯಾಡುವುದಕ್ಕಾಗಿ ಶ್ರೀಕಾಂತವೆಂಬ ಪರ್ವತದ ಕಾಡಿಗೆ ಹೋಗಿ ಕಾಡಿನಲ್ಲಿ ಮೃಗಗಳನ್ನು ಹುಡುಕುತ್ತ ಅವರು ಸುತ್ತಾಡುತ್ತಿದ್ದರು. ಆಗ ಅಭಯಘೋಷ ಮಹರ್ಷಿಗಳು ಇಡೀ ಶರೀರದಲ್ಲಿ ಮಲಧಾರಿಗಳಾಗಿ (ಸ್ನಾನ ಶೌಚ ಮುಂತಾದವನ್ನು ಮಾಡದಿರುವ ತಪಸ್ವಿಗಳಾಗಿ) ಮನಸ್ಸಿನ ಏಕಾಗ್ರತೆಯಿಂದ ಇದ್ದುಕೊಂಡು ಒಂದು ಕಲ್ಲಿನ ಮೇಲೆ ಕುಳಿತು ಶಾಸ್ತ್ರವನ್ನು ಅನುಕ್ರಮವಾಗಿ ಹೇಳುತ್ತ, ಅದರ ಅರ್ಥವನ್ನು ಭಾವಿಸುತ್ತ, ಓದಿನಲ್ಲಿ ತತ್ಪರರಾಗಿದ್ದರು. ಅವರನ್ನು ದಟ್ಟವಾದ ಕಾಡಿನಲ್ಲಿ ಫಕ್ಕನೆ ದೂರದಿಂದ ಕಂಡ ಲಲಿತಘಟೆಯವರು ಅದೊಂದು ಅಪೂರ್ವವಾದ ಕಪ್ಪು ಮೃಗವಿರಬೇಕೆಂದು ಭಾವಿಸಿದರು. ಶ್ರೀವರ್ಧನಕುಮಾರ ಮೊದಲಾದ ಅವರೆಲ್ಲರೂ ಬಿಲ್ಲುಗಳನ್ನು ಏರಿಸಿ ಬಿಲ್ಲಿನ ಹಗ್ಗಕ್ಕೆ ಬಾಣವನ್ನು ಇಟ್ಟು ಹೊಡೆಯಲೆಂದು ಪ್ರಯೋಗಿಸುವಾಗ ಅವರೆಲ್ಲ ಬಿಲ್ಲುಗಳೂ ಮುರಿದುಹೋದವು – ಅವರೆಲ್ಲರೂ ಹಿಂಗಡೆಗೆ ಉರುಳಿಬಿದ್ದರು. ಇದು ಹತ್ತಿರಕ್ಕೆ ಹೋದರು. ಆಗ ಋಷಿಯ ರೂಪವನ್ನು ಕಂಡು “ಇವರು ಋಷಿಗಳು, ಮೃಗವಲ್ಲ” – ಎಂದು ಬಳಿಗೆ ಹೋಗಿ 

    ಅವರುಪಶಮಮುಮಂ ತಪಮುಮಂ ಕಂಡನಿಬರ್ಗ್ಗುಪಶಮಮಾಗಿ ಕುಳ್ಳಿರ್ದು ಧರ್ಮಮಂ ಪೇೞಂ ಭಟ್ಟಾರಾ ಎಂದು ಬೆಸಗೊಂಡೊಡೆ ಭಟ್ಟಾರರಿಂತೆಂದು ಪೇೞಲ್ ತೊಡಗಿದರ್ :

        ಗಾಹೆ || ಸೋ ದಮ್ಮೋ ಜತ್ಥದಯಾ ಸೋ ವಿ ತಓ ವಿಸಯಣಿಗ್ಗಹೋ ಜತ್ಥ
                    ದಸ ಅಟ್ಠ ದೋಸ ರಹಿಓ ಸೋ ದೇವೋ ಣತ್ಥಿ ಸಂದೇಹೋ

    ಎಂದಿಂತು ಜೀವಂಗಳಂ ಕೊಲ್ಲದುದೆ ಧರ್ವ್ಮಂ ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದಯ್ದುಮಿಂದ್ರಿಯಂಗಳಂ ಗೆಲ್ದು ಇರ್ಪ್ಪತ್ತೆರಡು ಪರೀಷಹಂಗಳು ಸೈರಿಸಿ ಯಮನಿಯಮ ಸ್ವಾಧ್ಯಾಯ ಧ್ಯಾನಾನುಷ್ಠಾನ ಪರಾಯಣರಾಗಿ ತಪಂಗೆಯ್ವ ರಿಸಿಯರ್ಕಳೆ ತಪಸ್ವಿಯರ್ ಪಸಿವು ನೀರೞ್ಕೆ ಮೊದಲಾಗೊಡೆಯ ಪದಿನೆಂಟು ದೋಷಂಗಳನಿಲ್ಲದೊಂ ಪರಮಾತ್ಮನೆಂದಿಂತು ಪೇೞ್ದು ಮತ್ತಮಿಂತೆಂದರ್ :

            ಗಾಹೆ ||  ಪಾವೇಣ ಣಿರಯತಿರಿಯಂ ಗುಮ್ಮ ಇ ಧಮ್ಮೇಣ ದೇವಲೋಗಂ ತು
                        ಮಿಸ್ಸೇಣ ಮಾಣುಸತ್ತಂ ದೊಣ್ಹಂ ಪಿ ಖಯೇಣ ಣಿವ್ವಾಣಂ

      ಎಂಬುದಂ ಪಾಪಂಗೆಯ್ದವರುಂ ಬೇಂಟೆಯಾಡುವರುಂ ಮಧುಮದ್ಯಮಾಂಸಂಗಳಂ ಸೇವಿಸುವರುಂ ಬಾಲವಧೆ ಸ್ತ್ರೀ ಗೋವಧೆ ಬ್ರಾಹ್ಮಣವಧೆ ಋಷಿವಧೆಯೆಂದೀ ಪಂಚಮಹಾಪಾತಕಂಗಳಂಗೆಯ್ದವರುಮಗಮ್ಯಾಗ – ಮನಮಪೇಯಾಪೇಯಮಭಕ್ಷಾಭಕ್ಷ್ಯಂ ಮೊದಲಾಗೊಡೆಯ ಪೊಲ್ಲಮೆಗಳೊಳ್

        ಅವರ ಸಮಾಧಾನಚಿತ್ತತೆಯನ್ನೂ (ಶಾಂತಸ್ವಭಾವವನ್ನೂ) ತಪಸ್ಸನ್ನೂ ಕಂಡು ಅವರೆಲ್ಲರಿಗೂ ಮನಸ್ಸಿಗೆ ಶಾಂತಿ ಲಭಿಸಿತು. ಅವರೆಲ್ಲರೂ ಕುಳಿತು – “ಪೂಜ್ಯರೇ ನಮಗೆ ಧರ್ಮೋಪದೇಶ ಮಾಡಿ” ಎಂದು ಕೇಳಿದರು. ಆಗ ಋಷಿಗಳು ಈ ರೀತಿಯಾಗಿ ಹೇಳ ತೊಡಗಿದರು. (ಎಲ್ಲಿ ದಯೆ ಇದೆಯೋ ಅದು ಧರ್ಮ. ಮತ್ತು ಎಲ್ಲಿ ಇಂದ್ರಿಯನಿಗ್ರಹವಿದೆ ಅದು ಕೂಡ ಧರ್ಮ. ಹದಿನೆಂಟು ದೋಷಗಳಿಲ್ಲದವನು ದೇವತೆ – ಸಂಶಯವಿಲ್ಲ) ಎಂದು ಈ ರೀತಿಯಾಗಿ ಜೀವಗಳನ್ನು ಕೊಲ್ಲದಿರುವುದೇ (ಅಹಿಂಸೆಯೇ) ಧರ್ಮ. ಹನ್ನೆರಡು ವಿಧದ ತಪಗಳನ್ನು ಸ್ವೀಕರಿಸಿ, ಪಂಚೇಂದ್ರಿಯಗಳನ್ನು ಗೆದ್ದು ಹಸಿವು – ಬಾಯಾರಿಕೆ – ಚಳಿ ಮುಂತಾದ ಇಪ್ಪತ್ತೆರಡು ವಿಧದ ಪರೀಷಹಗಳನ್ನು (ತೊಂದರೆಗಳನ್ನು) ಸಹಿಸಿಕೊಂಡು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಅನುಷ್ಠಾನಗಳಲ್ಲಿ ತತ್ಪರರಾಗಿ ತಪಸ್ಸನ್ನು ಆಚರಿಸುವ ಋಷಿಗಳೇ ತಪಸ್ವಿಗಳು. ಹಸಿವು, ಬಾಯಾರಿಕೆ, ಭಯ, ದ್ವೇಷ – ಮುಂತಾದ ಹದಿನೆಂಟು ದೋಷಗಳಿಲ್ಲದ ಅರ್ಹಂತನೇ ಪರಮಾತ್ಮನು. ಹೀಗೆ ಹೇಳಿದನಂತರ, ಇಂತೆಂದರು : ಜೀವನು ಪಾಪದಿಂದ ನರಕವನ್ನೂ ಪ್ರಾಣಿಜನ್ಮಗಳನ್ನೂ ಪಡೆಯುತ್ತಾನೆ. ಧರ್ಮದಿಂದ ದೇವಲೋಕವನ್ನು ಪಡೆಯುತ್ತಾನೆ. ಪಾಪಪುಣ್ಯಮಿಶ್ರದಿಂದ ಮನುಷ್ಯತ್ವವನ್ನು ಪಡೆಯುತ್ತಾನೆ, ಮತ್ತು ಅವೆರಡರ ನಾಶದಿಂದ ಮೋಕ್ಷವನ್ನು ಹೊಂದುತ್ತಾನೆ. ಎಂಬುದನ್ನು ತಿಳಿಸಿದರು. ಅಲ್ಲದೆ, ಮದ್ಯಮಾಂಸಗಳನ್ನು ಸೇವಿಸುವವರು, ಬಾಲವಧೆ – ಸ್ತ್ರೀವಧೆ – ಗೋವಧೇ – ಬ್ರಾಹ್ಮಣ ವಧೆ – ಋಷಿವಧೆ ಎಂಬ ಈ ಐದು ಬಗೆಯ ಮಹಾಪಾಪಗಳನ್ನು ಮಾಡಿದವರು, ಪರಸ್ತ್ರೀಗಮನ – ಕುಡಿಯಬಾರದುದನ್ನು ಕುಡಿಯುವುದು – ತಿನ್ನಬಾರದುದನ್ನು ತಿನ್ನುವುದು ಮುಂತಾಗಿ ಇರುವ ಕೆಟ್ಟ ಕೆಲಸಗಳನ್ನು 

    ನೆಗೞ್ದು ಘೋರಮಂ ಪಿರಿಯವುಮಪ್ಪ ಪಾಪಂಗಳಂ ಗೆಯ್ದೇೞನೆಯ ನರಕದೊಳ್ ಮೂವತ್ತುಮೂಱು ಸಾಗರೋಪಮಾಯುಷ್ಯಮನೊಡೆಯರ್ ನಾರಕರಾಗಿ ಪುಟ್ಟಿ ಛೇದನ ಭೇದನ ಪೂರಣ ಚೂರಣ ಪೀಡನ ಬಂಧಂಗಳುಮಂ ಮುಟ್ಟಿಗೆಯೊಳಿಟ್ಟು ತೆಗಪುವುದುಂ ಕೊಂತಂಗಳಿಂದಮಿಟ್ಟಿಗಳಿಂದಂ ಕರುಳ್ಗಳಂ ಸೋರೆಕುತ್ತುವುದುಂ ಚಕ್ರಗಳಿಂದಂ ತೆಗಲೆಯಂ ಮೊಕ್ಕನೆವೋಗಿಡುವುದುಂ ಮರಂಗಳಂ ಪೋೞ್ವಂತೆ ಕರಗಸಂಗಳಿಂದಮುದ್ದಂ ಪಿಡಿದು ಪೋೞ್ವದುಮೆಂದಿವು ಮೊದಲಾಗೊಡೆಯ ದುಃಖಂಗಳಂ ಕಣ್ಣೆಮೆಯಿಕ್ಕುವನಿತು ಪೊೞ್ತಪ್ಪೊಡಮುಸಿರ್ ಪೊತ್ತಿಲ್ಲದೆ ದುಃಖಂಗಳನನುಭವಿಸುವರ್ ಮತ್ತೊಯ್ಯನೆ ಪಾಪಂಗಳಂ ಗೆಯ್ದವರಾನೆಯುಂ ಸಿಂಹಮುಂ ಪುಲಿಯುಂ ಕರಡಿಯುಂ ಪುಲ್ಲೆಯುಂ ಮೊಲನುಂ ಪಂದಿಯುಂ ತೋಳನುಂ ಸೀರ್ನಾಯುಂ ಮತ್ತಮೆೞ್ತುಕೞ್ತೆಯುಂ ಪಶುವುಮೆರ್ಮೆಯುಂ ಕುದುರೆನಾಯೊಟ್ಟೆಯುಮುಡುವುಂ ಪಾವುಮಿಲಿಯುಂ ಬೆರ್ಕುಮೊಂತಿಯುಂ ಕಪ್ಪೆಯುಂ ಮುಂಗುರಿಯುಂ ಮೊದಲಾಗೊಡೆಯ ಸ್ಥಲಚರಂಗಳುಂ ಮೀನುಂ ಮೊಸಳೆಯುಂ ನೆಗೞುಮಾಮೆಯುಂ ಮಕರಮುಂ ತಿಮಿತಿಮಿಂಗಿಳಂ ಮೊದಲಾಗೊಡೆಯ ಜಲಚರಂಗಳುಂ ಕಾಗೆ ಗೂಗೆ ಪರ್ದು ಚಕೋರಂ ಹಂಸೆ ಕುರ್ಕು ಗಿಳಿ ಪುರುಳಿ ಪೆಂಗುರು ಕಾರಂಡಮಾಂದೆ ಮೊದಲಾಗೊಡೆಯ ಗಗನಚರಂ 

       ಆಚರಿಸಿ ಉಗ್ರವೂ ದೊಡ್ಡವೂ ಆದ ಪಾಪಗಳನ್ನು ಮಾಡಿದವರು ಏಳನೆಯ ನರಕದಲ್ಲಿ ಮೂವತ್ತಮೂರು ಸಾಗರದಷ್ಟು ಆಯುಷ್ಯವುಳ್ಳವರಾಗಿ ನರಕಜೀವಿಗಳಾಗಿ ಹುಟ್ಟುವರು. ಅವರು ಅಲ್ಲಿ ಕತ್ತರಿಸುವುದು, ಸೀಳುವುದು, ಮುಳುಗಿಸುವುದು, ಚೂರುಮಾಡುವುದು, ಹಿಂಸಿಸುವುದು, ಬಿಗಿದುಕಟ್ಟುವುದು – ಎಂಬೀ ಹಿಂಸೆಗಳನ್ನು ಅನುಭವಿಸುವರು. ಅಲ್ಲದೆ, ಕೊಡತಿಯಿಂದ ಹೊಡೆದು ಚಿಮ್ಮಟಿಗಳಿಂದ ಎಳೆಯುವುದು, ಈಟಿಗಳಿಂದಲೂ ಬರ್ಚಿಗಳಿಂದಲೂ ಕರುಳು ಹೊರಕ್ಕೆ ಜಾರಿಬರುವಹಾಗೆ ಕುತ್ತುವುದು, ಎದೆ ಮೊಕ್ಕನೆ ಸೀಳಿಹೋಗುವಂತೆ ಚಕ್ರಾಯುಧಗಳಿಂದ ಹೊಡೆಯುವುದು, ಮರಗಳನ್ನು ಸೀಳುವ ಹಾಗೆ ಗರಗಸಗಳಿಂದ ಮೇಲಿನಿಂದ ಕೆಳಗಿನವರೆಗೆ ದೇಹವನ್ನು ಹಿಡಿದು ಸೀಳುವುದು – ಎಂದು ಇವೇ ಮೊದಲಾಗಿ ಉಳ್ಳ ದುಃಖಗಳನ್ನು ಕಣ್ಣಿನ ರೆಪ್ಪೆ ಬಡಿಯುವಷ್ಟು ಹೊತ್ತುಕೂಡ ಅವಕಾಶ ಕೊಡದೆ ಮಾತಾಡಲು ಕೂಡ ಸಮಯ ಕೊಡದೆ ಸಂಕಟಗಳನ್ನು ಅನುಭವಿಸುವರು. ಮೆಲ್ಲನೆಯ ಅಥವಾ ಹಗುರವಾದ ಪಾಪಗಳನ್ನು ಮಾಡಿದವರು ಆನೆ, ಸಿಂಹ, ಹುಲಿ, ಕರಡಿ, ಜಿಂಕೆ, ಮೊಲ, ಹಂದಿ, ತೋಳ, ಕಾಡುನಾಯಿ ಅಥವಾ ನೀರುನಾಯಿಯಾಗಿಯೂ ಎತ್ತು, ಕತ್ತೆ, ಹಸು, ಎಮ್ಮೆ, ಕುದುರೆ, ನಾಯಿ, ಒಂಟೆ, ಉಡು, ಹಾವು, ಇಲಿ, ಬೆಕ್ಕು, ಓತಿ, ಕಪ್ಪೆ, ಮುಂಗುಸಿ ಮೊದಲಾದ ಸ್ಥಲಚರ (ನೆಲದ ಮೇಲೆ ಸಂಚರಿಸುವ) ಪ್ರಾಣಿಗಳಾಗಿಯೂ ಹುಟ್ಟುವರು. ಅದಲ್ಲವಾದರೆ, ಮೀನು, ಮೊಸಳೆ, ನೆಗಳು, ಆಮೆ, ಮಕರ, ತಿಮಿ ಎಂಬ ದೊಡ್ಡಮೀನು, ತಿಮಿಯನ್ನು ನುಂಗತಕ್ಕ ತಿಮಿಂಗಿಳವೆಂಬ ಮೀನು ಮೊದಲಾದ ಜನಚರ (ನೀರಿನಲ್ಲಿ ಸಂಚರಿಸುವ) ಪ್ರಾಣಿಗಳಾಗಿ ಹುಟ್ಟುವರು. ಅದಲ್ಲವಾದರೆ – ಕಾಗೆ, ಗೂಗೆ, ಹದ್ದು, ಚಕೋರ (ಬೆಳದಿಂಗುಳಹಕ್ಕಿ), ಹಂಸೆ, ನೀರುಹಕ್ಕಿ (ಭಾರದ್ವಾಜ ಹಕ್ಕಿ), ಗಿಳಿ, ಹೆಣ್ಣುಗಿಳಿ (ಸಾರಿಕೆ), ಕೊಕ್ಕರೆ, ನೀರುಕೋಳಿ, ಗೂಬೆ ಮುಂತಾಗಿರುವ ಹಕ್ಕಿಗಳಾಗಿ (ಆಕಾಶದಲ್ಲಿ ಸಂಚರಿಸುವವಾಗಿ) 

        ಪಂಚೇಂದ್ರಿಯಂಗಳುಮಾಗಿ ಮತ್ತಮೇಕೆಂದ್ರಿಯ ದ್ವೀಂದ್ರಿಯ ತ್ರೀಂದ್ರಿಯ ಚತುರಿಂದ್ರಿಯಂಗಳಾಗಿ ತಿರಿಕಗತಿಯೊಳ್ ಪುಟ್ಟಿ ಜೀವಂಗಳಿಂತು ಮಾಡಿದ ಪಾಪದ ಫಲಂಗಳಿಂದಂ ದುಃಖಂಗಳನೆಯ್ದುಗುಂ ವಾಕ್ಯ || ಮಿಸ್ಸೇಣ ಮಾಣುಸತ್ತಮೆಂಬುದು ಪುಣ್ಯಪಾಪಂಗಳೆರಡುಮಂ ನೆಗೞ್ವರ್ ಮನುಷ್ಯಗತಿಯೊಳ್ ಪುಟ್ಟಿ ಮುಂಗೆಯ್ದು ಪಾಪಕರ್ಮದುದಯದಿಂದಂ ಶಾರೀರ ಮಾನಸಾಗಂತುಕ ಸಹಜಮಪ್ಪ ದುಃಖಂಗಳುಮನಿಷ್ಟಸಂಯೋಗಮಿಷ್ಟಮಿಯೋಗಮುಂ ರಾಗಶೋಕಂಗಳುಂ ದಾರಿದ್ರ್ಯಮೆಂದಿವು ಮೊದಲಾಗೊಡೆಯುವಱಂದಮಪ್ಪ ದುಃಖಳನೆಯ್ದಿ ಮತ್ತಮಾ ಜೀವಂಗಳ್ ಶುಭಕರ್ಮದುದಯದಿಂದಂ ಶ್ರೀಯುಂ ಸಂಪತ್ತು ವಿಭಮಮುಂ ಐಶ್ವರ್ಯಮುಮಾರೋಗ್ಯಶರೀರಂಗಳುಮಾಗಿ ಪುತ್ರ ಮಿತ್ರ ಕಳತ್ರ ಸ್ವಜನ ಬಂಧುವರ್ಗದೊಳ್ ಕೂಡಿ ಸುಖಂ ಬಾೞ್ವುದುಮಕ್ಕುಮಿಂತು

                ಶ್ಲೋಕ ||     ಸುಖಸ್ಥಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ
                                ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||

    ಇಂತು ಮನುಷ್ಯಗತಿಯೊಳ್ ಪುಟ್ಟಿ ಸೂೞ್ಸೂೞೊಳೆ ಸುಖದುಃಖಂಗಳಂ ಜೀವಂಗಳನುಭವಿಸುವಂತೆ ಗಮ್ಮಞ ಧಮ್ಮೇಣ ದೇವಳೋಯಮ್ಹಿ ಎಂಬುದುಂ ಕೇವಳಮೆ ಧರ್ಮಂಗೆಯ್ದವರ್ ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆತನ ಪ್ರಾಣತಾರಣಾಚ್ಯುತಮೆಂಬ 

        ಕಣ್ಣು ಕಿವಿ ಮೂಗು ನಾಲಗೆ ಚರ್ಮ – ಎಂಬ ಐದು ಇಂದ್ರಿಯಗಳುಳ್ಳವಾಗಿ ಹುಟ್ಟುವರು. ಅದಲ್ಲದೆ, ಒಂದು ಇಂದ್ರಿಯ ಮಾತ್ರವುಳ್ಳವಾಗಿ ಅಥವಾ ಎರಡು ಇಂದ್ರಿಯ, ಮೂರು ಇಂದ್ರಿಯ, ನಾಲ್ಕು ಇಂದ್ರಿಯಗಳುಳ್ಳ ಪ್ರಾಣಿಗಳ ಗತಿಯಲ್ಲಿ ಹುಟ್ಟುವರು. ಜೀವಿಗಳು ಈ ರೀತಿಯಾಗಿ ಮಾಡಿದ ಪಾಪದ ಪರಿಣಾಮವಾಗಿ ದುಃಖಗಳನ್ನು ಪಡೆಯುವುವು. ‘ಮಿಶ್ರೇಣ ಮನುಷ್ಯತ್ವಂ’ ಎಂಬ ವಾಕ್ಯದಂತೆ ಪುಣ್ಯ ಪಾಪ ಎಂಬ ಎರಡನ್ನೂ ಮಾಡುವವರು ಮನುಷ್ಯಜನ್ಮದಲ್ಲಿ ಬಂದು, ಹಿಂದೆಮಾಡಿದ ಪಾಪಕೃತ್ಯದ ಫಲದಿಂದ ಶಾರೀರಿಕ ಮಾನಸಿಕವಾಗಿ ಬರತಕ್ಕ ಸಹಜವಾದ ದುಃಖಗಳನ್ನೂ ಪ್ರಿಯವಾದುದು ಕೂಡಿಬರುವುದು ಅಥವಾ ಅಗಲುವುದು, ಹರ್ಷವಿಷಾದಗಳು, ಬಡತನ – ಎಂಬವು ಮೊದಲಾಗಿ ಉಳ್ಳವುಗಳಿಂದಾಗುವ ದುಃಖಗಳನ್ನೂ ಹೊಂದುವರು. ಆ ಜೀವಗಳು ಮಂಗಳಕರವಾದ ಕಾರ್ಯಗಳಿಂದ ಕಾಂತಿ, ಸಂಪತ್ತು, ವೈಭವ, ಐಶ್ವರ್ಯಗಳನ್ನು ಪಡೆದು, ರೋಗವಿಲ್ಲದ ದೇಹವುಳ್ಳವಾಗಿ ಮಕ್ಕಳು, ಗೆಳೆಯರು, ಹೆಂಡತಿ, ಸ್ವಜನರು, ಬಂಧುವರ್ಗಗಳಿಂದ ಕೂಡಿ ಸುಖವಾಗಿ ಬಾಳುವಂತಾಗುವುದು. (ಸುಖವುಂಟಾದ ನಂತರ ದುಃಖ, ದುಃಖವುಂಟಾದನಂತರ ಸುಖ – ಹೀಗೆ ದುಃಖಗಳೂ ಸುಃಖಗಳೂ ಚಕ್ರದಂತೆ ತಿರುಗಿ ಬರುತ್ತ ಇರುತ್ತವೆ.) ಜೀವಗಳು ಈ ರೀತಿಯಾಗಿ ಮನುಷ್ಯಜನ್ಮದಲ್ಲಿ ಬಂದು ಬಾರಿಬಾರಿಗೂ ಸುಖಗಳನ್ನೂ ದುಃಖಗಳನ್ನೂ ಅನುಭವಿಸುವುವು. “ಗಚ್ಛತಿ ಧರ್ಮೇಣ ದೇವಲೋಕಂ ಹಿ” ಎಂಬ’ವಾಕ್ಯದಂತೆ ಕೇವಲ (ಜೈನ) ಧರ್ಮವನ್ನು ಆಚರಿಸಿದವರು ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಬ್ರಹ್ಮೋತ್ತರ, ಲಾಂತವ, ಕಾಪಿಷ್ಠ, ಶುಕ್ರ, ಮಹಾಶುಕ್ರ, ಶತಾರ, ಸಹಸ್ರಾರ, ಆನತ, ಪ್ರಾಣ, ತಾರಣ, ಅಚ್ಚುತ – ಎಂಬ 

        ಪದಿನಾಱುಂ ಕಲ್ಪಂಗಳೊಳಮಲ್ಲಿಂ ಮೇಗಣ ಸುದರ್ಶನಾಮೋಘ ಸುಪ್ರಬುದ್ಧ ಯಶೋಧರ ಸುಭದ್ರ ಸುವಿಶಾಳ ಸುಮನಸ ಸೌಮನಸ ಪ್ರೀತಿಂಕರಮೆಂಬ ನವಗ್ರೈಮೇಯಕಂಗಳೊಳಮಲ್ಲಿಂ ಮೇಗಣ ಲಚ್ಚಿ ಮಹಾಲಚ್ಚಿ ಮಾಳಿನಿ ಮೈರ ವೈರೋಚನೆ ಸೋಮೆ ಸೋಮರೂಪೆ ಅಂಕೆ ಪಳಿದೆ ಅಯಿಚ್ಛೆಯೆಂಬ ನವಾನುದ್ದಿಸೆಗಳೊಳಮಲ್ಲಿಂ ಮೇಗಣ ವಿಜಯವೈಜಯಂತ ಜಯಂತಾಪರಾಜಿತ ಸರ್ವಾರ್ಥಸಿದ್ಧಿಯೆಂದಿಂತು ಪಂಚಾಣುತ್ತರೆಗಳೊಳಮೆರಡು ಘಳಿಗೆಯಿಂದೊಳಗೆ ಪಾಸಿನ ಪೊರೆಯೊಳ್ ಪುಟ್ಟಿ ಇಂದ್ರಪ್ರತೀಂದ್ರ ಸಾಮಾನಿಕ ತ್ರಯಸ್ತ್ರಿಂಶ ಪಾರಿಷದಾತ್ಮರಕ್ಷ ಲೋಕಪಾಲಾಹಮಿಂದ್ರತ್ವಮೆಂದೀ ಮರ್ಹಕದೇವರಾಗಿ ಅಣಿಮಾ ಮಹಿಮಾ ಲಘಿಮಾ ಪ್ರಾಪ್ತಿ ಪ್ರಾಗಲ್ಭಮೀಶಿಶ್ವ ವಶಿತ್ವ ಕಾಮರೂಪಿತ್ವಮೆಂದೀ ಅಷ್ಟಗುಣೈಶ್ವರ್ಯಂಗಳೊಳ್ ಕೂಡಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವಮುಂ ಸುಗಂಧ ಮಪ್ಪ ಶ್ವಾಸನಿಶ್ವಾಸಂಗಳುಮನೊಡೆಯರಾಗಿ ಆಯುಷ್ಯಾಂತಂ ಬರೆಗಂ ನವಯೌವನರಾಗಿ ಮುಪ್ಪುಮಪಮೃತ್ಯು ಮೂತ್ರಪುರೀಷಂಗಳುಂ ಗಂಡ ಕಕ್ಷಾ ಕುಕ್ಷಿಪ್ರದೇಶಂಗಳ ರೋಮಂಗಳುಂ ರೋಗ ಶೋಕ ದುಃಖಂಗಳುಂ ರಸರುರ ಮಾಂಸ ಮೆದೋಸ್ಥಿ ಮಜ್ಜ ಶುಕ್ಲಮೆಂದಿಂತು ಸಪ್ತಧಾತುಗಳುಮೆಂದಿವು ಮೊದಲಾಗೊಡೆಯವಿಲ್ಲದೊರ್ ಸಹಜಮಪ್ಪ ಕಟಕ ಕಟಿಕಸೂತ್ರ ಕುಂಡಲಾಭರಣಂ ಮೊದಲಾಗೊಡೆಯ ಪದಿನಾಱುಮಾಭರಣಂಗಳಂ ತೊಟ್ಟು ದಿವ್ಯವಸ್ತ್ರಗಳನುಟ್ಟಾದಿತ್ಯನ ತೇಜದಿಂದಗ್ಗಳಮಪ್ಪ ತೇಜದೊರಾಗಿ ಕಣ್ಣೆಮೆಯಿಕ್ಕುವನಿತು ಪೊೞ್ತಪ್ಪೊಡಂ ದುಃಖಮಿಲ್ಲದೊರೆರಡು ಸಾಗರೋಪಮಂ ಮೊದಲಾಗಿ 

        ಹದಿನಾರು ಕಲ್ಪ (ಸ್ವರ್ಗ)ಗಳಲ್ಲಿಯೂ ಅಲ್ಲಿಂದ ಮೇಲೆ ಇರತಕ್ಕ ಸುದರ್ಶನ, ಅಮೋಘ, ಸುಪ್ರಬುದ್ಧ, ಯಶೋಧರ, ಸುಭದ್ರ, ಸುವಿಶಾಳ, ಸುಮನಸ, ಸೌಮನಸ, ಪ್ರೀತಿಂಕರವೆಂಬ ಗ್ರೈವೇಯಕಗಳಲ್ಲಿಯೂ ಅಲ್ಲಿಂದಲೂ ಮೇಲೆ ಇರತಕ್ಕ ಸ್ವರ್ಗಗಳಾದ ಲಚ್ಛಿ, ಮಹಾಲಚ್ಚಿ, ಮಾಳಿನಿ, ವೈರೆ, ವೈರೋಚನೆ, ಸೋಮೆ, ಸೋಮರೂಪೆ, ಅಂಕೆಪಳಿತೆ, ಅಯಿಚ್ಚೆ – ಎಂಬ ಒಂಬತ್ತು ವಿಧದ ಅನುದ್ದಿಸೆಗಳಲ್ಲಿಯೂ ಅಲ್ಲಿಂದಲೂ ಮೇಗಣ ಸ್ವರ್ಗಗಳಾದ ವಿಜಯ, ವೈಜಯಂತ, ಜಯಂತ, ಅಪರಾಜಿತ, ಸರ್ವಾರ್ಥಸಿದ್ಧಿ – ಎಂಬೀ ಐದು ಅಣುತ್ತರೆಗಳಲ್ಲಿಯೂ ದೇಹಾತ್ಯಾಗ ಮಾಡಿದ ಎರಡು ಗಳಿಗೆಗಳೊಳಗೆ ಹಾಸಿಗೆಯ ಸಮೀಪವೇ ಹುಟ್ಟಿ ಇಂದ್ರ, ಪ್ರತೀಂದ್ರ, ಸಾಮಾನಿಕ, ತ್ರಯಸ್ತ್ರಿಂಶ, ಪಾರಿಷದ, ಆತ್ಮರಕ್ಷ, ಲೋಕಪಾಲ, ಅಹಮಿಂದ್ರ, ಎಂಬ ಮರ್ಹಕ ದೇವರಾಗುವರು. ಅಣಿಮಾ, ಮಹಿಮಾ, ಲಘಿಮಾ, ಪ್ರಾಪ್ತಿ, ಪ್ರಾಗಲ್ಭ್ಯ, ಈಶಿತ್ವ, ವಶಿತ್ವ, ಕಾಮರೂಪಿತ್ವ – ಎಂಬ ಎಂಟುಗುಣಗಳುಳ್ಳ ಐಶ್ವರ್ಯಗಳಿಂದ ಕೂಡಿ ಅತಿಶಯವಾದ ರೂಪ ಸೌಂದರ್ಯ ಸೌಭಾಗ್ಯ ತೇಜಸ್ಸನ್ನೂ ಸುವಾಸನೆಯುಳ್ಳ ಉಚ್ಛ್ವಾಸ ನಿಶ್ವಾಸಗಳನ್ನೂ ಉಳ್ಳವರಾಗಿ ಆಯುಷ್ಯದ ಕೊನೆಯವರೆಗೂ ತಾರುಣ್ಯವುಳ್ಳವರಾಗಿ ವೃದ್ಧಾಪ್ಯ ಅಪಮೃತ್ಯುಗಳಿಲ್ಲದವರೂ ಮೂತ್ರ, ಮಲಗಳೂ, ಕೆನ್ನೆ ಕಂಕುಳು ಹೊಟ್ಟೆಗಳಲ್ಲಿ ರೋಮಗಳೂ ರೋಗ ಶೋಕ ದುಃಖಗಳೂ ರಸ, ರಕ್ತ, ಮಾಂಸ, ಮೇಧಸ್ಸು, ಎಲುಬು, ಕೊಬ್ಬು, ವೀರ್ಯ ಎಂಬ ಏಳು ಬಗೆಯ ಧಾತುಗಳು ಮುಂತಾದವು ಇಲ್ಲದವರೂ ಆಗಿ ಜನಿಸುವರು. ಹುಟ್ಟುವಾಗಲೇ ಅವರು ಉಡಿನೂಲು, ಕುಂಡಲ, ಆಭರಣ ಮುಂತಾಗಿರುವ ಹದಿನಾರು ಬಗೆಯ ಆಭರಣಗಳನ್ನು ಧರಿಸಿ ದಿವ್ಯವಾದ ಉಡಿಗೆಗಳನ್ನು ಉಟ್ಟುಕೊಂಡಿರುವರು. ಸೂರ್ಯನ ತೇಜಕ್ಕಿಂತಲೂ ಹೆಚ್ಚಿನ ತೇಜಸ್ಸು ಉಳ್ಳವರಾಗಿ ಕಣ್ಣಿನ ರೆಪ್ಪೆ ಬಡಿಯುವಷ್ಟು ಹೊತ್ತು ಕೂಡ ದುಃಖವೆಂಬುದೇ ಇಲ್ಲದವರಾಗುವರು. ಎರಡು ಸಾಗರದಷ್ಟು ಆಯುಷ್ಯದಿಂದ ತೊಡಗಿ

     ಮೂವತ್ತಮೂಱು ಸಾಗರೋಪಮಂ ಬರೆಗಮಾಯುಷ್ಯಮನೊಡೆಯರಾಗಿ ಆಟಪಾಟ ವಿನೋದಂಗಳಿಂದಂ ದೇವಿಯರಪ್ಸರಸಿಯರ್ಕಳೊಡನೆ ಪಲಕಾಲಂ ದಿವ್ಯಸುಖಮನನುಭವಿಸಿ ಆಯುಷ್ಯಾಂತದೊಳಿಂತಿಲ್ಲಿ ಮನುಷ್ಯಗತಿಯೊಳ್ ಕುರುವಂಶ ಭೋಜವಂಶಮಿಕ್ಷ್ವಾಕುವಂಶ ನಾಥವಂಶ ಹರಿವಂಶಮುಗ್ರವಂಶ ಸೂರ್ಯವಂಶ ಸೋಮವಂಶ ಮಯೂರವಂಶ ನಂದವಂಶಮೆಂದಿವು ಮೊದಲಾಗೊಡೆಯ ಉತ್ತಮ ಕುಲದೊಳ್ ಶ್ರಾವಕರ ಬಸಿಱೊಳ್ ಪುಟ್ಟಿ ಪೂರ್ವಕೋಟಿ ಪರಮಾಯುಷ್ಯಮನೊಡೆಯರಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯಕಾಂತಿತ್ವದೊಳ್ ಕೂಡಿ ಏಕಚ್ಛತ್ರಚ್ಛಾಯೆಯಿಂದಂ ಪೃಥ್ವಿಯೆಲ್ಲಮನಾಳ್ದು ಪಶ್ಚಾತ್ಕಾಲದೊಳೇನಾನುಮೊಂದು ವೈರಾಗ್ಯಕಾರಣಮಾಗಿ ಮಗಂಗೆ ರಾಜ್ಯ ಪಟ್ಟಂಗಟ್ಟಿ ಬಾಹ್ಯಭ್ಯಂತರ ಪರಿಗ್ರಹಂಗಳೆಲ್ಲಮಂ ತೊಱೆದೆಲ್ಲರೊಳ್ ನಿಶ್ಯಲ್ಯಂಗೆಯ್ದು ತಪಂಬಟ್ಟು ಘೋರ ವೀರತಪಶ್ಚರಣಂಗೆಯ್ದು ಉತ್ಕೃಷ್ಟದಿಂದಂ ಮೂಱು ಭವಂಗಳೊಳ್ ಮಧ್ಯಮದಿಂದಮಯ್ದು ಭವಂಗಳೊಳ್ ಕನಿಷ್ಠದಿಂದೇೞು ಭವಂಗಳೊಳಗೆ ಅಷ್ಟವಿಧ ಕರ್ಮಂಗಳಂ ಕಿಡಿಸಿ ಮೋಕ್ಷಮನೆಯ್ದುವರ್ ದೊಣ್ಹಂಪಿ ಖಯೇಣ ಣಿವ್ವಾಣಂ ಎಂದು ತಪದಿಂದಂ ಶುಭಾಶುಭ ಕರ್ಮಮೆಂದಿರ್ತೆಱದ ಕರ್ಮದ ಕೇಡಿನಿಂದಂ ಮೋಕ್ಷಮನೆಯ್ದುವರಂತಪ್ಪ ಮೋಕ್ಷಮೆಂತೆಂದೊಡೆ ಜಾತಿ ಜರಾ ಮರಣಂಗಳುಂ ಭಯಮುಮನಿಷ್ಟಸಂಯೋಗಮುಮಿಷ್ಟ ವಿಯೋಗಮುಂ ಶಾರೀರ ಮಾನಸಾಗಂತುಕ ಸಹಜಮಪ್ಪ

       ಮುವತ್ತಮೂರು ಸಾಗರದಷ್ಟರವರೆಗೆ ಆಯುಷ್ಯವುಳ್ಳವರಾಗುವರು. ಆಟ, ಪಾಟ, ವಿನೋದಗಳಿಂದ ದೇವತಾಸ್ತ್ರೀಯರೊಡನೆ ಹಲವು ಕಾಲ ದಿವ್ಯಸುಖವನ್ನು ಅನುಭವಿಸಿ, ಆಯುಷ್ಯವು ಮುಗಿದ ಮೇಲೆ, ಈ ಲೋಕದಲ್ಲಿ ಮನುಷ್ಯ ಜೀವನದಲ್ಲಿ ಬರುವರು. ಕುರುವಂಶ, ಭೋಜವಂಶ, ಇಕ್ಷ್ವಾಕುವಂಶ, ನಾಥವಂಶ, ಹರಿವಂಶ, ಉಗ್ರವಂಶ, ಸೋಮವಂಶ, ಮಯೂರವಂಶ, ನಂದವಂಶ – ಎಂದು ಇವೇ ಮೊದಲಾದ ಇರತಕ್ಕ ಒಳ್ಳೆಯ ಕುಲದಲ್ಲಿ ಜಿನಭಕ್ತರಾದ ಗೃಹಸ್ಥ ದಂಪತಿಗಳ ಗರ್ಭದಲ್ಲಿ ಜನಿಸುವರು. ಪೂರ್ವಕಾಲದ ಕೋಟಿ ಸಂಖ್ಯೆಯ ಪರಮಾಯುಷ್ಯವುಳ್ಳವರಾಗಿ ಅತಿಶಯವಾದ ರೂಪ ಸೌಂದರ್ಯ ಸೌಭಾಗ್ಯ ಕಾಂತಿಗಳಿಂದ ಕೂಡಿ ಏಕಚ್ಛತ್ರಾಪತಿಗಳಾಗಿ ಭೂಮಂಡಲವನ್ನು ಆಳುವರು. ಆಮೇಲಿನ ಕಾಲದಲ್ಲಿ ಏನಾದರೂ ಒಂದು ಕಾರಣದಿಂದ ವೈರಾಗ್ಯವನ್ನು ತಾಳಿ, ಮಗನಿಗೆ ರಾಜ್ಯದ ಪಟ್ಟಾಭೀಷೆಕವನ್ನು ಮಾಡಿ ಬಾಹ್ಯ ಮತ್ತು ಅಭ್ಯಂತರ ಎಂಬ ಎರಡೂ ಬಗೆಯ ಪರಿಗ್ರಹಗಳೆಲ್ಲವನ್ನೂ ಬಿಟ್ಟು ಎಲ್ಲರ ಮನೋವ್ಯಥೆಗಳನ್ನೂ ಇಲ್ಲದಂತೆ ಮಾಡಿಕೊಂಡು ತಪಸ್ಸನ್ನು ಸ್ವೀಕರಿಸಿ, ಉಗ್ರವೂ ಶ್ರೇಷ್ಠವೂ ಆದ ತಪಸ್ಸನ್ನು ಆಚರಿಸಿ ಅತಿ ಶ್ರೇಷ್ಠ ರೀತಿಯದಾಗಿ ಮೂರು ಜನ್ಮಗಳಲ್ಲಿ ಮಧ್ಯಮ ರೀತಿಯದಾಗಿ ಐದು ಜನ್ಮಗಳಲ್ಲಿ ಕನಿಷ್ಠವಾದ ರೀತಿಯಲ್ಲಿ ಏಳು ಜನ್ಮಗಳಲ್ಲಿ ಬಂದು, ಘಾತಿಕರ್ಮಗಳು ನಾಲ್ಕು ಅಘಾತಿಕರ್ಮಗಳು ನಾಲ್ಕು ಹೀಗೆ ಎಂಟು ಬಗೆಯವಾದ ಕರ್ಮಗಳನ್ನು ನಾಶಪಡಿಸಿ ಮೋಕ್ಷವನ್ನು ಹೊಂದುವರು. ತಪಸ್ಸಿನ ಮೂಲಕ ಶುಭ ಅಶುಭವೆಂಬ ಎರಡು ಬಗೆಯ ಕರ್ಮವನ್ನು ಕೆಡಿಸಿ ಮೋಕ್ಷವನ್ನು ಸೇರುವರು. ಅಂತಹ ಮೋಕ್ಷದ ಸ್ವರೂಪವೇನೆಂದರೆ : – ಹುಟ್ಟು ಮುಪ್ಪು ಸಾವುಗಳೂ ಹೆದರಿಕೆಯೂ ಪ್ರೀತಿಯವರ ಒಡನಾಟ ಅಗಲಿಕೆಗಳೂ ಶರೀರಕ್ಕೂ ಮನಸ್ಸಿಗೂ ಬರತಕ್ಕ ಸಹಜವಾಗಿರುವ 

        ದುಃಖಂಗಳುಂ ಆಹಾರ ಭಯ ಮೈಥುನ ಪರಿಗ್ರಹಂಗಳುಂ ವಾತ ಪಿತ್ತ ಶ್ಲೇಷ್ಮ ಖಾಸ ಶ್ವಾಸ ಜ್ವರಾರುಚಿ ಛರ್ದ್ಯತಿಸಾರಕ್ಷಿಕುಕ್ಷಿವೇದನಾ ಸೋಟಕ ಶೂಲ ಭಗಂದರ ಕುಷ್ಠ ಕ್ಷಯ ಗಂಡ ಶಿರೋವೇದನೆಯುಮೆಂದಿವು ಮೊದಲಾಗೊಡೆಯ ಆಯ್ದುಕೋಟಿಯುಮಱುವತ್ತೆಂಟು ಲಕ್ಕೆಯುಂ ತೊಂಬತ್ತೊಂಬಯ್ ಸಾಸಿರದ ಇನ್ನೂರೆಣ್ಣತ್ತುನಾಲ್ಕು ವ್ಯಾಗಳುಂ ಕ್ರೋಧ ಮಾನ ಮಾಯಾ ಲೋಭಂಗಳುಂ ರಾಗ ದ್ವೇಷ ಮೋಹಂಗಳ ಮಗುಱ್ದು ವಗು’ ಬರವುಂ ಶೋಕಮೆಂದಿವು ಮೊದಲಾಗೊಡೆಯ ದುಃಖಂಗಳವಿಲ್ಲದುದರುಪಮಾರಹಿತಮಪ್ಪುದನಳವಿಯಿಲ್ಲದುದನಾವಕಾಲಮುಂ ಕಿಡದುದಂ ಪಾಪದಿಂ ಪೊರೆಯದುದಂ ಸುಖಮನೊಡೆತಪ್ಪುದಂ ತನ್ನಿಂ ತಾನಾದುದನಂತಪ್ಪ ಮೋಕ್ಷಸುಖ ಮನೆಯ್ದಿ ಅನಂತಜ್ಞಾನ ಅನಂತದರ್ಶನ ಅನಂತವೀರ್ಯ ಅನಂತಸುಖಮೆಂಬ ಅನಂತಚತುಷ್ಟಯದೊಳ್ ಕೂಡಿ ಲೋಕಾಲೋಕಮನೆಲ್ಲಮನೊರ್ಮೊದಲೆ ಕಾಣುತ್ತಮಱಯುತ್ತುಮನಂತಕಾಲಂ ಮೋಕ್ಷದೊಳಿರ್ಪರೆಂಬುದುಮಂ ಅಭಯಘೋಷ ಭಟಾರರ್ ಲಲಿತಘಟೆಗೆ ಧರ್ಮಶ್ರವಣಂ ಗೆಯ್ಯೆ ಕೇಳ್ದು ಶ್ರೀವರ್ಧನಂ ಮೊದಲಾಗಿ ಅನಿಬರುಂ ಪಶ್ಚಾತ್ತಾಪಮಾಗೆ ಪಂಚಮಹಾಪಾತಕರೆಮುಂ ಪೊಲ್ಲಕೆಯ್ದೆಮುಂ ಭಟ್ಟಾರರಂ ಕೊಂದೆಮುಮವರ್ ತಪದ ಮಹಾಯ್ಮ್ಯದಿಂದಂ ಬರ್ದುಂಕಿದರೆಂದನಿಬರುಂ ಮನದೆ ಬಗೆದೀಗೆಯ್ದ ಪಾಪಮಿಂತಲ್ಲದೆ ಪಿಂಗದಿವರ ಕಾಲಡಿಗಳನೆಮ್ಮ ತಲೆಗಳೆಂಬ ತಾಮರೆಯ ಪೂಗಳಿಂದಂಸಿದೊಡಲ್ಲದೆ ಪಾಪಂ ಪಿಂಗದೆಂದು ಬಗೆದು ಕೈದುಗಳತ್ತ ಕೈಯಂ ನೀಡಲ್  

            ದುಃಖಗಳೂ ಆಹಾರ, ಭಯ, ಮೈಥುನ, ಪರಿಗ್ರಹಗಳೂ ವಾತ, ಪಿತ್ತ, ಕಫ, ಕೆಮ್ಮು, ಉಬ್ಬಸ, ಜ್ವರ, ಅಜೀರ್ಣ, ವಾಂತಿ, ಭೇದಿ, ಕಣ್ಣುನೋವು, ಹೊಟ್ಟೆನೋವು, ಒಡೆಯುವಿಕೆ, ಸೆಳತ, ಭಗಂದರ, ಕುಷ್ಠ, ಕ್ಷಯ, ಗಂಡ, ತಲೆನೋವು – ಎಂದು ಇವೇ ಮುಂತಾಗಿರುವ ಐದುಕೋಟಿ ಅರುವತ್ತೆಂಟು ಲಕ್ಷದ ತೊಂಬತೊಂಬತ್ತು ಸಾವಿರದ ಇನ್ನೊರೆಂಬತ್ತು ನಾಲ್ಕು (೫,೬೮,೯೯,೨೮೪) ಬಗೆಯ ರೋಗಗಳೂ ಕೋಟ, ಅಭಿಮಾನ, ಕಪಟ, ಲೋಭಗಳೂ ಪ್ರೀತಿ ವೈರ ಮೋಹಗಳು ಮರಳಿ ಮರಳಿ ಬರುವಿಕೆ ಮತ್ತು ದುಃಖ – ಎಂದು ಇವೇ ಮುಂತಾಗಿರುವ ದುಃಖಗಳು ಇಲ್ಲದುದೇ ಮೋಕ್ಷ. ಅದು ಉಪಮೆಯಿಲ್ಲದುದು, ಅಳತೆಯಿಲ್ಲದುದು, ಯಾವ ಕಾಲದಲ್ಲಿಯೂ ಕೆಟ್ಟುಹೋಗದೆ ಇರುವಂತದು, ಪಾಪದಿಂದ ತುಂಬದಿರುವಂಥದು, ಸುಃವನ್ನು ಒಟ್ಟಿಗೆ ತರುವಂಥದು, ತನ್ನಿಂದ ತಾನಗಿಯೇ ಆದಂಥದು, ಪುಣ್ಯಜೀವರು ಅಂತಹ ಮೋಕ್ಷದ ಸುಖವನ್ನು ಸೇರಿ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖ – ಎಂಬ ನಾಲ್ಕು ಬಗೆಯ ಅನಂತ (ಕೊನೆಯಿಲ್ಲದವು)ಗಳಲ್ಲಿ ಸೇರಿ, ಲೋಕವನ್ನೂ ಲೋಕವಲ್ಲದವುಗಳನ್ನೂ ಒಟ್ಟಿಗೇ ಕಾಣುತ್ತಲೂ ತಿಳಿಯುತ್ತಲೂ ಅನಂತಕಾಲದ ತನಕ ಮೋಕ್ಷದಲ್ಲಿಯೇ ಇರುತ್ತಾರೆ – ಎಂಬ ಸಂಗತಿಯನ್ನು ಅಭಯಘೋಷ ಋಷಿಗಳು ಲಲಿತಘಟೆಗೆ ಧರ್ಮೋಪದೇಶಮಾಡುತ್ತ ತಿಳಿಸಿದರು. ಇದನ್ನೆಲ್ಲ ಲಲಿತಘಟೆಯ ರಾಜಕುಮಾರರು ಕೇಳಿದರು. ಶ್ರೀವರ್ಧನ ಮೊದಲಾದ ಅವರೆಲ್ಲರೂ ಪಶ್ಚಾತ್ತಾಪಗೊಂಡರು. “ನಾವು ಪಂಚಮಹಾಪಾಪ ಮಾಡಿದವರಾಗಿದ್ದೇವೆ. ಕೆಟ್ಟದನ್ನು ಮಾಡಿದವರೂ ಋಷಿಗಳನ್ನು ಕೊಂದವರೂ ಆಗಿದ್ದೇವೆ. ಅವರು ತಮ್ಮ ತಪಸ್ಸಿನ ಮಹತ್ತ್ವದಿಂದ ಬದುಕಿದರು” – ಎಂದು ಅವರೆಲ್ಲರೂ ಮನಸ್ಸಿನಲ್ಲಿ ಭಾವಿಸಿಕೊಂಡರು. “ನಾವು ಮಾಡಿದ ಈ ಪಾಪ ಪರಿಹಾರವಾಗಬೇಕಾದರೆ, ಇವರ ಪಾದಗಳನ್ನು ನಮ್ಮ ತಲೆಗಳೆಂಬ ತಾವರೆ ಹೂಗಳಿಂದ ಅರ್ಚಿಸಬೇಕು. ಅದಲ್ಲದೆ, ಪಾಪ ಹಿಂಗಲಾರದು” ಎಂದು ಭಾವಿಸಿ ತಮ್ಮ ತಲೆಗಳನ್ನು ಕಡಿದುಕೊಳ್ಳಲಿಕ್ಕಾಗಿ ಆಯುಧಗಳ ಕಡೆಗೆ ಕೈಗಳನ್ನು ನೀಡಲು ಯೋಚಿಸಿದರು.

        ಬಗೆವನ್ನೆಗಂ ಭಟ್ಟಾರರ್ ವಾರಿಸಿದರಂತು ಬಗೆಯಲ್ವೇಡೆಂದೊಡೆ ಶ್ರೀವರ್ಧನ ಕುಮಾರನಾಮೇನಂ ಬಗೆದೊಮೆಂದೊಡೆ ನೀಮುಂ ನಿಮ್ಮ ತಲೆಗಳನರಿದೆಮ್ಮ ಕಾಲಡಿ ಗಳನರ್ಚಿಸುವಮೆಂದು ಬಗೆದಿರೆಂದೊಡಿಂತು ಮನದೆ ಬಗೆದುದನಾರಾನುಮಱವರೊಳರೆ ಎಂದ ನಿಬರುಂ ಚೋದ್ಯಂಬಟ್ಟು ಭಟ್ಟಾರರ್ಗ್ಗೆಱಗಿ ಪೊಡೆವಟ್ಟು ಶ್ರೀವರ್ಧನ ಕುಮಾರನೆಂದಂ ಭಟ್ಟಾರಾ ನಿಮ್ಮಡಿಯನೆಮ್ಮ ತಲೆಗಳಿಂದರ್ಚಿಸದಾಗಳೆಮ್ಮಗೆಯ್ದ ಪಾಪಮೆಂತು ಕಿಡುಗುಮೆಂದೊಡಾ ಪಾಂಗಿನಿಂ ಕಿಡದೆನೆಯಂತಪ್ಪೊಡೆ ದೀಕ್ಷೆಯಂ ದಯೆಗೆಯ್ಯಿಮೆಂದೊಡೆ ಭಟಾರರೆಂದರೊಳ್ಳಿತ್ತಂ ಬಗೆದಿರ್ ನಿಮಗೆಲ್ಲರ್ಗಂ ಕಿಱದಯಾಯುಷ್ಯಮೆಂದೊಡೆ ಶ್ರೀವರ್ಧನ ಕುಮಾರನ ತಮ್ಮಂ ಮೂವರ್ತಿರ್ವರಿಂ ಕಿಱಯೊಂ ನಂದಿಮಿತ್ರನೆಂಬೊಂ ಭಟಾರರ ಮಾತಂ ಕೇಳ್ದು ನಕ್ಕಿಂತೆಂದನಾಮೆಲ್ಲಂ ಕೂಸುಗಳೆಮುಂ ನವಯೌವನರೆಮುಂ ತೇಜದೊಳಂ ಸತ್ವದೊಳಂ ಬಲಪರಾಕ್ರಮದೊಳಂ ಕುಡಿದೆಮೆಮಗೆಲ್ಲೊರ್ಗ್ಗಂ ಕಿಱದೆಯಾಯುಷ್ಯಮೆಂಬುದನೆಂತು ನಂಬಲಕ್ಕುಮೆಂದೊಡೆ ಭಟಾರರೆಂದರ್ ನೀನೇಕೆ ನಕ್ಕಪ್ಪೆಯಮ್ಮಾ ನಿಮಗೆಲ್ಲರ್ಗ್ಗಮಿರ್ಪತ್ತೊಂದು ದಿವಸಮಾಯುಷ್ಯಂ ನೀರದೆಸೆಯಿಂದಂ ನಿಮಗೆ ಸಾವಕ್ಕುಮೆಂದೊಡೆ ಶ್ರೀವರ್ಧನ ಕುಮಾರನೆಂದಂ

             ಆಗ ಋಷಿಗಳು “ಹಾಗೆ ಯೋಚಿಸುವುದು ಬೇಡ” ಎಂದು ತಡೆದರು. ಶ್ರೀವರ್ಧನ ಕುಮಾರನು “ನಾವು ಏನು ಯೋಚಿಸಿದ್ದೇವೆ? ” ಎಂದು ಕೇಳಲು, ಋಷಿಗಳು – “ನೀವು ನಿಮ್ಮ ತಲೆಗಳನ್ನು ಕತ್ತರಿಸಿ ನಮ್ಮ ಪಾದಗಳನ್ನು ಅರ್ಚಿಸೋಣವೆಂದು ಯೊಚಿಸಿದ್ದೀರಿ” ಎಂದು ಹೇಳಿದರು ಆಗ ಅವರೆಲ್ಲರೂ – “ಹೀಗೆ ಮನಸ್ಸಿನೊಳಗೆ ಯೋಚಿಸಿದುದನ್ನು ತಿಳಿಯುವವರು ಯಾರಾದರೂ ಇರುವರೆ ! ” ಎಂದು ಆಶ್ಚರ್ಯಪಟ್ಟರು. ಋಷಿಗಳಿಗೆ ಸಾಷ್ಟಾಂಗ ವಂದನೆ ಮಾಡಿ, ಶ್ರೀವರ್ಧನಕುಮಾರನು – “ಪೂಜ್ಯರೇ, ನಿಮ್ಮಪಾದವನ್ನು ನಮ್ಮ ತಲೆಗಳಿಂದ ಪೂಜಿಸದಿದ್ದಲ್ಲಿ ನಾವು ಮಾಡಿದ ಪಾಪ ಹೇಗೆ ಪರಿಹಾರವಾದೀತು? ” ಎಂದು ಕೇಳಿದನು. “ ಆ ರೀತಿಯಿಂದ ಪರಿಹಾರವಾಗದು” ಎಂದು ಅವರು ಹೇಳಲು, “ಹಾಗಾದರೆ ದೀಕ್ಷೆಯನ್ನು ದಯೆಪಾಲಿಸಿರಿ” ಎಂದನು. ಋಷಿಗಳು – “ನೀವು ಒಳ್ಳೆಯದನ್ನೇ ಯೋಚಿಸಿದಿರಿ; ನಿಮಗೆಲ್ಲ ಆಯುಷ್ಯವಿರುವುದು ಸ್ವಲ್ಪವೇ” ಎಂದು ಹೇಳಿದರು. ಶ್ರೀವರ್ಧನ ಕುಮಾರನ ತಮ್ಮನೂ ಮೂವತ್ತೆರಡು ಮಂದಿ ಸೋದರರಲ್ಲಿ ಕಿರಿಯವನೂ ಆದ ನಂದಿಮಿತ್ರನೆಂಬವನು ಅಭಯಘೋಷ ಋಷಿಗಳ ಮಾತನ್ನು ಕೇಳಿ ನಕ್ಕು ಹೀಗೆ ಹೇಳಿದನು – “ನಾವೆಲ್ಲರೂ ಚಿಕ್ಕವರಾಗಿದ್ದೇವೆ. ಹೊಸ ತರುಣರೂ ಆಗಿದ್ದೇವೆ. ತೇಜಸ್ಸು, ಸತ್ವ, ಶಕ್ತಿ, ಸಾವ್ಮರ್ಥ್ಯಗಳಿಂದ ಕೂಡಿದವರಾಗಿದ್ದೇವೆ. ನಮಗೆಲ್ಲರಿಗೂ ಆಯುಷ್ಯ ಸ್ವಲ್ಪವೇ ಇರುವುದೆಂಬುದನ್ನು ಹೇಗೆ ನಂಬಬಹುದು ? ” ಈ ರೀತಿ ಕೇಳಿದಾಗ ಋಷಿಗಳು – “ನೀನು ಯಾಕೆ ನಗುತ್ತಿದ್ದಿಯಪ್ಪಾ! ನಿಮಗೆಲ್ಲರಿಗೂ ಇನ್ನು ಇಪ್ಪತ್ತೊಂದು ದಿವಸ ಆಯುಷ್ಯವಿರುವುದು. ನೀರಿನಿಂದ ನಿಮಗೆ ಮರಣವುಂಟಾಗುವುದು” ಎಂದು ಹೇಳಿದರು. ಆಗ ಶ್ರೀವರ್ಧನ ಕುಮಾರನು ಹೀಗೆ ಹೇಳಿದನು 

        ಭಟಾರಾ ಎಮಗಿರ್ಪ್ಪತ್ತೊಂದು ದಿವಸಮಾಯುಷ್ಯಮೆಂಬುದರ್ಕೆ ಸಾಭಿಜ್ಞಾನಮೇನೆಂದು ಬೆಸಗೊಂಡೊಡೆ ಭಟಾರರೆಂದರ್ ನೀಮೀಗಳ್ ಪೊೞಲ್ಗೆ ಪೋಪಾಗಳ್ ನಿಮಗೆರೞ್ಕಾಳಿಂಗ ನಾಗಂಗಳ್ ಪೆಡೆಗಳನೆತ್ತಿ ನಾಲಗೆಗಳಂ ಪೊಳೆಯಿಸುತ್ತಂ ಬಂದೊಡೆ ನೀಮೊದಱಯಮಂ ಬಗ್ಗಿಸಿದೊಡದೃಶ್ಯಂಗಳಾಗಿ ಪೋಕುಮಿದೊಂದು ಸಾಭಿಜ್ಞಾನಂ ಮತ್ತಂತೆ ಪೋಪಾಗಳೊಂದು ಕಿಱುಗೂಸು ಕೋಲಂ ಪಿಡಿದು ನಿಮ್ಮಂ ಬಡಿಯಲ್ಕೆಂದು ಬಂದೊಡದಱ ಕೆಯ್ತಮಂ ಕಂಡು ನೀಮುಂ ನಕ್ಕೊಡೆ ನಿಮ್ಮ ನೋಡೆ ನೋಡೆ ಭಯಂಕರಮಪ್ಪ ಪಿರಿದೊಂದು ಬೇತಾಳರೂಪಂ ಕೈಕೊಂಡಾಕಾಶಂ ಬರೆಗಂ ಬಳೆದದೃಶ್ಯಮಕ್ಕುಮಿದೊಂದು ಸಾಭಿಜ್ಞಾನಂ ಮತ್ತಂತೆ ಪೋಪನ್ನೆಗಂ ತೊಱೆತೀವುಗುಮಿದೊಂದು ಸಾಭಿಜ್ಞಾನಂ ಮತ್ತಮಿಂದಿನಿರುಳ್ ನಿಮ್ಮ ತಾಯ್ ನಿಮ್ಮ ಮೂವತ್ತಿರ್ವರುಮಂ ರಾಕ್ಷಸಂ ನುಂಗಿತಿಂಬುದಂ ಕನಸುಗಂಡು ಪೇಱ್ಗುಮಿದೊಂದು ಸಾಭಿಜ್ಞಾನಮೆಂದು ಪೇಱ್ದೊಡೆ ಅನಿಬರುಂ ಭಟಾರರಂ ವಂದಿಸಿ ತಮ್ಮ ಪೊೞಲ್ಗೆ ವೋಪಗಳ್ ಭಟಾರರ್ ಪೇೞ್ದುದೆಲ್ಲಮಂ ಪೇೞ್ದ ಪಾಂಗಿನೊಳೆ ಬಟ್ಟೆಯೊಳ್ ಪೋಗುತ್ತುಂ ಕಂಡು ಪ್ರತ್ಯಕ್ಷಮಾಗಿ ಮತ್ತಿರುಳ್ ತಮ್ಮ ಮೂವತ್ತಿರ್ವರುಮಂ ರಾಕ್ಷಸಂ ನುಂಗಿದುದಂ ತಾಯ್ ಕನಸುಗಂಡುದಂ ತಮಗೆ ನೇಸರ್ಮೂಡೆ ಪೇೞ್ದೊಡೆ ನಂಬುಗೆಯಾಗಿ ಉಬ್ಬೆಗಂಬಟ್ಟಂತಿರ್ಪನ್ನೆಗಂ ವರ್ಧಮಾನ ಭಟ್ಟಾರರ ತೀರ್ಥಂ ವಿಹಾರಿಸುತ್ತಂ ಕೌಶಂಬಿಗೆ ವಂದೊಡೆ 

        – “ಪೂಜ್ಯರೇ, ನಮಗೆ ಇಪ್ಪತ್ತೊಂದು ದಿವಸ ಮಾತ್ರ ಆಯುಷ್ಯವೆಂಬುದಕ್ಕೆ ಕುರುಹೇನು? ಎಂದು ಕೇಳಿದನು. ಋಷಿಗಳು ಹೇಳಿದರು – “ನೀವೀಗ ಪಟ್ಟಣಕ್ಕೆ ಹೋಗುವಾಗ ನಿಮ್ಮೆದುರಿಗೆ ಎರಡು ಕಾಳಿಂಗಸರ್ಪಗಳು ಹೆಡೆಗಳನ್ನೆತ್ತಿ ನಾಲಗೆಗಳನ್ನು ಹೊರಳಿಸುತ್ತ ಬರುವುವು. ಆಗ ನೀವು ಬೊಬ್ಬಿಟ್ಟು ಅವನ್ನು ಬೈದರೆ ಮಾಯವಾಗಿ ಹೋಗುವುವು. ಇದು ಒಂದು ಕುರುಹು. ಮತ್ತೆ ಹಾಗೆಯೇ ಹೋಗುತ್ತಿರುವಾಗ ಒಂದು ಚಿಕ್ಕ ಮಗು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ನಿಮ್ಮನ್ನು ಹೊಡೆಯುವುದಕ್ಕೆ ಬರುವುದು. ಅದರ ಕೆಲಸವನ್ನು ಕಂಡು ನಕ್ಕರೆ, ನೀವು ನೋಡು ನೋಡುತ್ತಿದ್ದಂತೆಯೇ ಹೆದರಿಕೆಯನ್ನು ಉಂಟುಮಾಡುವ ದೊಡ್ಡದಾದ ಒಂದು ಬೇತಾಳದ ರೂಪವನ್ನು ತಾಳಿ ಆಕಾಶದವರೆಗೂ ಬೆಳೆದು ದೊಡ್ಡದಾಗಿ ಮಾಯವಾಗುವುದು – ಇದೂ ಒಂದು ಕುರುಹು. ಮತ್ತೆ ಹಾಗೆಯೇ ನೀವು ಹೋಗುತ್ತಿರುವಾಗ ನದಿಯು ನೆರೆಯಿಂದ ತುಂಬಿ ಹರಿಯುವುದು – ಇದು ಇನ್ರ್ನೊಂದು ಕುರುಹು. ಆಮೇಲೆ ಇಂದಿನ ರಾತ್ರಿ ನಿಮ್ಮ ತಾಯಿ ನಿಮ್ಮನ್ನು ಮೂವತ್ತೆರಡು ಮಂದಿಯನ್ನೂ ರಾಕ್ಷಸನು ನುಂಗಿ ತಿನ್ನುವುದನ್ನು ಕನಸಿನಲ್ಲಿ ಕಂಡು, ತಿಳಿಸುವಳು – ಇದು ಒಂದು ಕುರುಹು” ಎಂದು ಹೇಳಿದರು. ಆಗ ಅವರೆಲ್ಲರೂ ಋಷಿಗಳಿಗೆ ನಮಸ್ಕರಿಸಿ ತಮ್ಮ ಪಟ್ಟಣದ ಕಡೆಗೆ ಹೊರಟರು. ಹೋಗುವಾಗ, ಋಷಿಗಳು ಹೇಳಿದುದೆಲ್ಲವನ್ನೂ ಹೇಳಿದ ರೀತಿಯಲ್ಲಿಯೇ ತಮ್ಮ ದಾರಿಯಲ್ಲಿ ಹೋಗುತ್ತ ಕಣ್ಣೆದುರಿನಲ್ಲಿಯೇ ಕಂಡರು. ಆಮೇಲೆ ರಾತ್ರಿಯಲ್ಲಿ ತಾವು ಮೂವತ್ತೆರಡು ಮಂದಿಯನ್ನೂ ರಾಕ್ಷಸನು ನುಂಗಿದುದನ್ನು ತಾಯಿ ಕನಸಿನಲ್ಲಿ ಕಂಡುದನ್ನು ತಮಗೆ ಸೂರ್ಯೋದಯದ ವೇಳೆಯಲ್ಲಿ ಹೇಳಿದುದರಿಂದ ಅವರಿಗೆ ನಂಬುಗೆಯುಂಟಾಯಿತು. ಅವರು ಉದ್ವೇಗಗೊಂಡವರಾಗಿ ಹೀಗೆಯೇ ಇರುತ್ತಿರಲು, ವರ್ಧಮಾನ ತೀರ್ಥಂಕರರ ಧರ್ಮಸಭೆ ಸಂಚಾರ ಮಾಡುತ್ತ ಕೌಶಂಬಿಗೆ ಬಂದಿತು.

        ಲಲಿತಘಟೆ ಪಿರಿದರ್ಚನೆಯಂ ಕೊಂಡು ಪೋಗಿ ಭಟಾರರನರ್ಚಿಸಿ ಬಂದಿಸಿ ಧರ್ಮಶ್ರವಣಾನಂತರಮಿಂತೆಂದು ವರ್ಧಮಾನ ಭಟ್ಟಾರರಂ ಬೆಸಗೊಂಡರ್ ಭಟಾರಾ ಎಮಗಾಯುಷ್ಯಮೆನಿತುಂಟೆಂದು ಬೆಸಗೊಂಡೊಡೆ ಭಟಾರರೆಂದರ ನಿಮಗನಿಬರ್ಗ್ಪಂ ಕಿಱದೆ ಆಯುಷ್ಯಮೆಂದು ಪೆಳೞ್ದೊಡಾಮೇನೊ ಭವ್ಯರೆಮೊ ಅಭವ್ಯರೆಮೊ ಎಂದು ಬೆಸಗೊಂಡೊಡೆ ನೀಮೆಲ್ಲಂ ಭವ್ಯರಿರ್ ಭವ್ಯರಿರಾದೊಡಂ ಪರಮ ಶುದ್ಧದ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಕೈಕೊಂಡು ನೆಗೞ್ದೊಡಲ್ಲದೆ ಮೋಕ್ಷಮಾಗದೆಂತು ಸ್ವರ್ಣಪಾಷಣದೊಳ್ ಸುವರ್ಣಮುಂಟಾಗಿಯುಂ ದಹನ ತಾಪನ ಪಿಂಡಿಬದ್ಧನಾದಿ ಕ್ರಿಯೆವೆಱದನ್ನೆಗಂ ಪೊನ್ನಾಗದಂತೆ ತಪದಿಂದಲ್ಲದೆ ಮೋಕ್ಷಮಾಗದೆಂದು ಪೇೞ್ದೊಡನಿಬರುಂ ವರ್ಧಮಾನ ಭಟ್ಟಾರರ್ಗ್ಗೆ ಶಿಷ್ಯರಾಗಿ ತಪಂಬಟ್ಟು ಪಂಚಮಹಾವ್ರತಂಗಳನೆಱಸಿ ಕೊಂಡು ಪ್ರಾಯೋಪಗಮನದ ಮರಣದ ವಿಧಾನಮಂ ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ :
        ಶ್ಲೋಕ || ಸ್ಥಿತಿಸ್ಯ ವಾ ನಿಷಣ್ಣಸ್ಯ ಯಾವತ್ ಸುಪ್ತಸ್ಯ ವಾ ಪುನಃ
                    ಸರ್ವಾಭೀಷ್ಟ ಪರಿತ್ಯಾಗಃ ಪ್ರಾಯೋಪಗಮನಂ ಸ್ಮೃತಂ ||

        ಇಂತುಟಾ ಪ್ರಾಯೋಪಗಮನದ ಲಕ್ಷಣಮೆಂದು ಭಟಾರರ್ ವಕ್ಖಾಣಿಸಿ ಪೇೞೆ ಕೇಳ್ದಱದು 

        ಲಲಿತಘಟೆ ಹೆಚ್ಚಾದ ಪೂಜಾವಸ್ತುಗಳನ್ನು ತೆಗೆದುಕೊಂಡು ಹೋಗಿ ಋಷಿಗಳನ್ನು ಪೂಜಿಸಿ ಧರ್ಮೋಪದೇಶವನ್ನು ಕೇಳಿದನಂತರ ಅವರನ್ನು ಹೀಗೆ ಕೇಳಿದರು – “ಪೂಜ್ಯರೇ, ನಮಗೆ ಆಯುಷ್ಯವೆಷ್ಟಿದೆ?” ಆಗ ವರ್ಧಮಾನ ಭಟಾರರು – “ನಿಮಗೆ ಅಷ್ಟು ಮಂದಿಗೂ ಆಯುಷ್ಯವಿರುವುದು ಸ್ವಲ್ಪವೆ” ಎಂದು ಹೇಳಿದರು. ಅದಕ್ಕೆ ಅವರು – “ನಾವು ಭವ್ಯರೊ (ಮೋಕ್ಷಕ್ಕೆ ಅರ್ಹರೊ) ಅಭವ್ಯರೋ? ” ಎಂದು ಕೇಳಿದರು. ಭಟಾರರು – ನೀವೆಲ್ಲರೂ ಭವ್ಯರಾಗಿದ್ದೀರಿ. ಭವ್ಯರೇ ಅಗಿದ್ದರೂ ಶ್ರೇಷ್ಠವೂ ಪರಿಶುದ್ಧವೂ ಸಹಜವೂ ಆಗಿರುವ ದರ್ಶನ – ಜ್ಞಾನ – ಚಾರಿತ್ರಗಳನ್ನು ಸ್ವೀಕರಿಸಿಕೊಂಡು ಆಚರಿಸಿದಲ್ಲದೆ ಮೋಕ್ಷ ಲಭಿಸಲಾರದು. ಚಿನ್ನದ ಕಲ್ಲಿನಲ್ಲಿ (ಅದುರಿನಲ್ಲಿ) ಚಿನ್ನವಿದ್ದರೂ ಸುಡುವುದು, ಕಾಯಿಸುವುದು, ಮುದ್ದೆಗಟ್ಟುವುದು – ಮುಂತಾದ ಕ್ರಿಯೆಗಳನ್ನು ಅದು ಪಡೆಯುವವರೆಗೂ ಚಿನ್ನವಾಗುವುದಿಲ್ಲ. ಹಾಗೆಯೇ ತಪಸ್ಸನ್ನು ಆಚರಿಸದೆ ಮೋಕ್ಷ ಪ್ರಾಪ್ತಿಯಾಗದು” ಎಂದು ಹೇಳಿದರು ಆಗ ಅವರೆಲ್ಲರೂ ವರ್ಧಮಾನ ತೀರ್ಥಂಕರರಿಗೆ ಶಿಷ್ಯರಾಗಿ ತಪಸ್ಸನ್ನು ಸ್ವೀಕರಿಸಿದರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ಪ್ರಾಯೋಪಗಮನದ ಪದ್ಧತಿಯಲ್ಲಿ ಮರಣದ ವಿಧಾನ ಹೇಗೆಂದು ಕೇಳಲು ಭಟಾರರು ಹೀಗೆಂದರು – (ನಿಂತಿರುವವನದಾಗಲಿ ಕುಳಿತುರುವವನದಾಗಲಿ ಮತ್ತು ಮಲಗಿರುವವನದಾಗಲಿ ಯಾವಾಗ ಇಲ್ಲ ಆಕಾಂಕ್ಷೆಗಳನ್ನು ಬಿಟ್ಟುಬಿಡುವುದು ಆಗುತ್ತದೋ ಅದು ಪ್ರಾಯೋಪಗಮನವೆಂದು ತಿಳಿಯಬಹುದು). ಆ ಪ್ರಾಯೋಪಗಮನದ ಲಕ್ಷಣ ಈ ರೀತಿಯೆಂದು ಭಟಾರರು ವ್ಯಾಖ್ಯಾನಿಸಿ ಹೇಳಲು, ಅವರೆಲ್ಲರೂ ಕೇಳಿ ತಿಳಿದುಕೊಂಡರು. 

    ಲಲಿತಘಟೆಯನಿಬರುಂ ಭಟಾರರ ಪಕ್ಕದೆ ಚತುರ್ವಿಧಮಪ್ಪಾಹಾರಮುಂ ಶರೀರಮುಮಂ ಯಾವಜ್ಜೀವಂ ತೊಱೆದು ಭಟಾರರಂ ಬಂದಿಸಿ ಪೋಗಿ ವಿಶಾಳೆಯೆಂಬ ತೊಱೆಯ ತಡಿಯೊಳನಿ ಬರುಮೇಕಪಾರ್ಶ್ವದೊಳ್ ಪಟ್ಟಿರ್ದು ಕೈಯುಂ ಕಾಲುಮನಾಡಿಸದೊಂದು ಕೆಲದಿಂದೊಂದು ಕೆಲಕ್ಕೆ ಮಗುೞದೆ ಕುಳ್ಳಿರದೆ ನಿಂದಿರದೆ ನಿಡಿಯದೆ ಕೆಲಂಗಳಂ ನೋಡದಿಂತು ಪ್ರಾಯೋಪಗಮಣಮಗೆಯ್ದು ಪದಿನಯ್ದು ದಿವಸಂ ಮೆಯ್ಯಂ ತೊಱೆದಿರ್ದೊರನ್ನೆಗಂ ಮೇಗೆ ಪಿರಿದೊಂದು ಮೞೆಕೊಂಡು ಪ್ರರಂ ಬಂದವರನೆೞೆದುಕೊಂಡು ಪೋಗಿ ಪಿರಿದೊಂದು ಮಡುವಿನೊಳಿಕ್ಕಿದೊಡೆ ನೀರೋಳಗಿರ್ದು ಮೋಹಿಸದ ಬುದ್ದಿಯನೊಡೆಯರಾಗಿ ದೇವರಂ ಜಾನಿಸುತ್ತಂ ಪಂಚನಮಸ್ಕಾರಮಂ ಮನದೊಳುಚ್ಚಾರಿಸುತ್ತಂ ಶುಭಧ್ಯಾನದೊಳ್ ಪರಿಣತರಾಗಿ ದರ್ಶನ ಜ್ಞಾನ ಚಾರಿತ್ರಂಗಳನಾರಾಸಿ ಮುಡಿಪಿ ಅಯ್ನೂರ್ವರುಂ ವೈಜಯಂತಮೆಂಬ ಪಂಚಾಣುತ್ತರೆಯೊಳುತ್ಕೃಷ್ಟಮಪ್ಪ ಮೂವತ್ತುಮೂಱು ಸಾಗರೋಪಮಾಯುಷ್ಯಮನೊಡೆಯೊರೇಕಹಸ್ತಪ್ರಮಾಣ ಶ್ವೇತವರ್ಣದೊಳಹಮಿಂದ್ರ ದೇವರಾಗಿ ಪುಟ್ಟಿದರ್ ಮತ್ತೆ ಪೆಱರುಂ ರತ್ನತ್ರಯಂಗಳನಾರಾಸುವಾರಾಧಕರ್ಕಳುಂ ಲಲಿತಘಟೆಯಂ ಮನದೊಳ್ ಬಗೆದು ಚತುರ್ವಿಧಮಪ್ಪುಪಸರ್ಗಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ಶುಭ ಪರಿಣಾಮದಿಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳನಾರಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ.

            ಲಲಿತಘಟೆಯವರೆಲ್ಲರೂ ಋಷಿಗಳ ಬಳಿಯಲ್ಲಿ ನಾಲ್ಕು ವಿಧದ ಆಹಾರವನ್ನೂ ಶರೀರವನ್ನೂ ಜೀವವಿರುವವರೆಗೂ ಬಿಟ್ಟು ಋಷಿಗಳಿಗೆ ವಂದಿಸಿ ಹೋಗಿ ವಿಶಾಳೆ ಎಂಬ ಹೊಳೆಯದಡದಲ್ಲಿ ಅವರೆಲ್ಲರೂ ಒಂದು ಮಗ್ಗುಲಲ್ಲಿ ಮಲಗಿದರು. ಕೈಕಾಲುಗಳನ್ನು ಆಡಿಸದೆ, ಒಂದು ಮಗ್ಗುಲಿಂದ ಮತ್ತೊಂದು ಮಗ್ಗುಲಿಗೆ ಹೊರಳದೆ, ಕುಳಿತಿರದೆ, ನಿಂತಿರದೆ, ಮಾತಾಡದೆ ಅತ್ತಿತ್ತ ನೋಡದೆ – ಹೀಗೆ ಪ್ರಾಯೋಪಗಮನವನ್ನು ಮಾಡಿ ಹದಿನೈದು ದಿನ ಶರೀರದ ಗೊಡವೆಯನ್ನೇ ಬಿಟ್ಟಿದ್ದರು. ಹೀಗಿರಲು ಮೇಲೆ ದೊಡ್ಡದೊಂದು ಮಳೆಸುರಿದು. ಮಹಾಪ್ರವಾಹ ಬಂದು, ಅವರನ್ನು ಎಳೆದುಕೊಂಡು ಹೋಗಿ ದೊಡ್ಡದೊಂದು ಮಡುವಿಗೆ ಹಾಕಿತು. ಅವರು ಅಲ್ಲಿ ನೀರಿನೊಳಗೆ ಇದ್ದುಕೊಂಡು ಅಸೆಪಡದ ಬುದ್ಧಿಯುಳ್ಳರಾಗಿ ದೇವರನ್ನು ಧ್ಯಾನ ಮಾಡುತ್ತ ಪಂಚನಮಸ್ಕಾರ ಮಂತ್ರಗಳನ್ನು ಮನಸ್ಸಿನಲ್ಲಿಯೇ ಉಚ್ಚಾರಣೆ ಮಾಡುತ್ತ ಶುಭವಾದ ಧ್ಯಾನದಲ್ಲಿ ಕುಶಲರಾಗಿ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ನೆರವೇರಿಸಿ ಸತ್ತರು. ಅಯ್ನೂರುಮಂದಿಯೂ ಸತ್ತು ವೈಜಯಂತ ಎಂಬ ಐದು ಅಣುತ್ತರೆಗಳಲ್ಲಿ ಶ್ರೇಷ್ಠವಾದ ಸ್ವರ್ಗದಲ್ಲಿ ಮೂವತ್ತಮೂರು ಸಾಗರದಷ್ಟು ಆಯುಷ್ಯವುಳ್ಳವರಾಗಿ ಒಂದು ಮೊಳ ಅಳತೆಯುಳ್ಳ ಬಿಳಿ ಬಣ್ಣವುಳ್ಳ ಅಹಮಿಂದ್ರ ಎಂಬ ದೇವರಾಗಿ ಹುಟ್ಟಿದರು. ರತ್ನತ್ರಯವನ್ನು ಆರಾಸತಕ್ಕ ಇನ್ನಿತರರೂ ಲಲಿತಘಟೆಯನ್ನು ಮನಸ್ಸಿನಲ್ಲಿ ಭಾವಿಸಿ ನಾಲ್ಕು ಬಗೆಯ (ದೇವ, ನಾರಕ, ತಿರ್ಯಕ್, ಮಾನುಷ ಎಂಬ) ಉಪಸರ್ಗಗಳನ್ನೂ (ತೊಂದರೆಗಳನ್ನೂ) ಹಸಿವು ಬಾಯಾರಿಕೆ ಮುಂತಾಗಿ ಇರುವ ಇಪ್ಪತ್ತೆರಡು ಬಗೆಯ ಪರೀಷಹಗಳನ್ನೂ ಸಹಿಸಿಕೊಂಡು ಶುಭಫಲದಿಂದ ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಸಮ್ಮಕ್ ಚಾರಿತ್ರಗಳನ್ನು ಆರಾಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****