ನನ್ನ ಪುಟಗಳು

26 ನವೆಂಬರ್ 2013

8ನೇ ತರಗತಿ ಪದ್ಯಗಳಿಗೆ ವಿಷಯ ಸಂಪನ್ಮೂಲ

ಕನ್ನಡಿಗರ ತಾಯಿ (ಪದ್ಯ-1)

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಬರೆದಿರುವ ಪ್ರಸ್ತುತ ಕವಿತೆಯನ್ನು ‘ಶತಮಾನದ ಮಕ್ಕಳ ಸಾಹಿತ್ಯ’ (ಸಂಪಾದಕರು: ಎನ್.ಎಸ್.ರಘುನಾಥ್) ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ರಾಷ್ಟ್ರಕವಿ ಎಂ. ಗೋವಿಂದ ಪೈ
ಎಂ.ಗೋವಿಂದಪೈ (ಚಿತ್ರ ಕೃಪೆ: ಕನ್ನಡಪ್ರಭ)
ಗೋವಿಂದ ಪೈ ಅವರ ಕೈಬರಹ (ಕೃಪೆ: ವಿಕಿಪೀಡಿಯಾ)

           ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಜನ್ಮತಾಳಿದ ದಿನ ಮಾರ್ಚ್ 23, 1883. ಅವರು ಜನಿಸಿದ್ದು ಮಂಜೇಶ್ವರದಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. ಬಿ. ಎ ಪರೀಕ್ಷೆ ಕಟ್ಟಿದ್ದಾಗ ಅವರ ತಂದೆ (ಮಂಗಳೂರಿನ ಸಾಹುಕಾರ ತಿಮ್ಮ ಪೈ) ಅವರ ಮರಣದ ದೆಸೆಯಿಂದಾಗಿ ಪರೀಕ್ಷೆಯ ಮಧ್ಯದಲ್ಲಿಯೇ ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿ ಮನೆಯ ಹೊಣೆಯನ್ನು ಹೊರಬೇಕಾಯಿತು. ಆದ್ದರಿಂದ ಅವರು ಬಿ.ಎ ಪದವಿಯನ್ನು ಪಡೆಯಲಾಗಲಿಲ್ಲ. ಆದರೂ ಅವರು ಇಂಗ್ಲಿಷ್ ವಿಭಾಗದಲ್ಲಿ ಉನ್ನತ ಶ್ರೇಣಿ ಗಳಿಕೆಗಾಗಿ ಚಿನ್ನದ ಪದಕ ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೇ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದ್ದು ಮಾತ್ರವಲ್ಲದೆ, ಆಕೆಯ ಮೂಲಕ ತಮಗೆ ದತ್ತವಾದ ಆಸ್ತಿಯನ್ನೂ ನೋಡಿಕೊಂಡು ಅಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರದ ಗೋವಿಂದ ಪೈ ಎಂದು ಕರೆಯುವುದೇ ರೂಢಿಯಾಯಿತು.
        ಗೋವಿಂದ ಪೈ ಅವರ ಪತ್ನಿ ಕೃಷ್ಣಾಬಾಯಿ ಅವರು ತಮ್ಮ 45ನೆಯ ವಯಸ್ಸಿನಲ್ಲಿ ಕಣ್ಮುಚ್ಚಿದರು. ಆಕೆಯ ನೆನಪಿನಲ್ಲಿ ‘ಗೊಮ್ಮಟ ಜಿನಸ್ತುತಿ’ ಎಂಬ ಒಂದು ಕವಿತೆಯನ್ನು ರಚಿಸಿ ಆಕೆಗೆ ಕಾಣಿಕೆಯಾಗಿತ್ತರು. ಜೊತೆಗೆ ಸಹಧರ್ಮಿಣಿಯ ನೆನಪಿಗೆ ಬಾಷ್ಪಾಂಜಲಿಯಾಗಿ ತಮ್ಮನ್ನು ಅಗಲಿಸಿದ ವಿಧಾತನಿಗೆ ಶ್ರದ್ಧಾಂಜಲಿಯಾಗಿ 87 ಕವಿತೆಗಳನ್ನು ಬರೆದು ‘ನಂದಾದೀಪ’ವೆಂಬ ಕವನ ಸಂಕಲನವೊಂದನ್ನು ಅಣಿಗೊಳಿಸಿದ್ದರು. ಅವರ ಕ್ರಮಬದ್ಧವಾದ ವ್ಯಾಸಂಗ ಅರ್ಧಕ್ಕೇ ನಿಂತಂತೆ, ಅವರ ದಾಂಪತ್ಯ ಜೀವನದ ಎಳೆಯೂ ಅರ್ಧದಲ್ಲಿಯೇ ಕಡಿದು ಬಿದ್ದಿತು. ಈ ಎರಡೂ ಅನಿರೀಕ್ಷಿತಗಳಿಂದ ಅವರು ಕುಗ್ಗಿ ಕುಸಿಯದೇ ತಮ್ಮ ದೀರ್ಘಾಯುಷ್ಯವನ್ನು ಧೀಮಂತರಾಗಿಯೇ ನಿರ್ವಹಿಸಿದರು. ಸುತ್ತ ಮುತ್ತಲೂ ಸರ್ವದಾ ಸ್ಮಿತವನ್ನು ಸೂಸುತ್ತಿದ್ದ ಸುಂದರವಾದ ಸೃಷ್ಟಿ ಸೌಂದರ್ಯ, ಕುಟೀರದ ಸನಿಹದಲ್ಲಿಯೇ ಇದ್ದ ಕರಾವಳಿಯ ಕಡಲಿನ ಗೆಳೆತನ, ಮನೆಗೆ ಬಂದು ಹೋಗುವ ಬಂಧು ಬಳಗದವರ ಅಭಿಮಾನ, ಸಾಹಿತ್ಯ ಬಾಂಧವರ ಸಂವಾದದ ಸವಿ ಮತ್ತು ಸಹೋದರನ ಕುಟುಂಬದ ಸಹವಾಸಗಳಲ್ಲಿ ಅವರ ಜೀವನ ಸುಗಮವಾಗಿಯೇ ಸಾಗಿತು. ತಮ್ಮ ವ್ಯಾಸಂಗದ ಕೋಣೆಯಲ್ಲಿ ಗೋಡೆಗೆ ತೂಗು ಹಾಕಿದ್ದ ಪತ್ನಿಯ ಭಾವಚಿತ್ರಕ್ಕೆ ಪ್ರತಿನಿತ್ಯವೂ ಒಂದು ಪುಷ್ಪವನ್ನು ಸಮರ್ಪಿಸದೆ ದಿನದ ಕೆಲಸ ಮೊದಲಾಗುತ್ತಿರಲಿಲ್ಲವೆಂದು, ಮಾಸ್ತಿಯವರು ಹೇಳಿರುವ ಮಾತಿನಿಂದ ತಿಳಿದು ಬರುತ್ತದೆ. ಮುಪ್ಪಿನಲ್ಲಿಯೂ ಮುಗ್ಧರಂತೆ ಕಂಡುಬಂದ ವಾಙ್ಮಯ ವಿಶಾರದರನ್ನು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಕವಿತೆಯಲ್ಲಿ ‘ಬೆಳ್ಳಿ ಮೀಸೆಯ ಮಗು’ ಎಂದು ಕರೆದಿರುವುದು ಇಂದಿಗೂ ಒಂದು ಅಚ್ಚುಕಟ್ಟಾದ ನುಡಿಗಟ್ಟಿನಂತಿದೆ.
        ಗೋವಿಂದ ಪೈ ಅವರ ಹೆಸರನ್ನು ಕೇಳಿದ ಕೂಡಲೇ ಅವರೊಬ್ಬ ಸುಪ್ರಸಿದ್ಧ ಸಂಶೋಧಕರೆಂದು ಎಲ್ಲರಿಗೂ ಕೂಡಲೇ ಸ್ಫುರಿಸುವುದು. ಗೋವಿಂದ ಪೈ ಅವರ ಸಾಹಿತ್ಯ ವ್ಯವಸಾಯ, ಕಾವ್ಯಸೃಷ್ಟಿಯಿಂದ ಅರಳಿರುವುದನ್ನು ಕೂಡಾ ಮರೆಯುವಂತಿಲ್ಲ. ಹಲವು ನಾಟಕಗಳನ್ನೂ ಅವರು ರಚಿಸಿದ್ದಾರೆ. 1900ರಲ್ಲಿ ‘ಸುವಾಸಿನಿ’ ಎಂಬ ಮಂಗಳೂರಿನ ಪತ್ರಿಕೆಗೆ ‘ಸುವಾಸಿನಿ’ ಎಂಬ ಹೆಸರಿನಲ್ಲಿಯೇ ಮೂರು ಕಂದ ಪದ್ಯಗಳನ್ನು ಬರೆದು ಕಳುಹಿಸಿದರು. ಅದು ಆ ಪತ್ರಿಕೆಯಲ್ಲಿ ಪ್ರಕಟವಾದುದಲ್ಲದೆ ಅದಕ್ಕಾಗಿ ಇಟ್ಟಿದ್ದ ಬಹುಮಾನವೂ ಬಂದಿತು. ಆಗ ಪೈ ಅವರು 8ನೆಯ ತರಗತಿಯಲ್ಲಿ ಓದುತ್ತಿದ್ದರು. 1911ರ ಸುಮಾರಿನಲ್ಲಿ ಅವರು ರವೀಂದ್ರರ ಎರಡು ಕವನಗಳನ್ನೂ, ಮಹಮ್ಮದ್ ಇಕ್ಬಾಲ್ ಅವರ ಒಂದು ಪದ್ಯವನ್ನೂ ಅನುವಾದಿಸಿದರು. ಅಂದಿನ ‘ಸ್ವದೇಶಾಭಿಮಾನಿ’ ಪತ್ರಿಕೆಯಲ್ಲಿ ಅವುಗಳು ಪ್ರಕಟವಾದಾಗ ದೊಡ್ಡ ಹುಯಿಲೇ ಎದ್ದಿತೆಂದು ತಿಳಿದು ಬರುತ್ತದೆ. ಅನಂತರ ಅವರ ಗಮನ ಇಂಗ್ಲಿಷ್ ಕವಿತೆಗಳಲ್ಲಿ ಪ್ರಯೋಗವಾಗುತ್ತಿದ್ದ ಅಂತ್ಯಾಕ್ಷರ ಪ್ರಾಸಕ್ಕೆ ಹೆಚ್ಚಾಗಿ ಮನವೊಲಿದಂತೆ ಕಾಣುತ್ತದೆ. ಆಧುನಿಕ ಕನ್ನಡ ಕವಿತೆಗಳು ಬಳಕೆಗೆ ಬಂದಂತೆಲ್ಲಾ ಪೈ ಅವರ ಕಾವ್ಯ ಸಾಮ್ರಾಜ್ಯ ವಿಸ್ತರಿಸಲಾರಂಭಿಸಿತು. ಅವರ ಮೊದಲ ಕವನ ಸಂಕಲನವಾದ ‘ಗಿಳಿವಿಂಡು’ವನ್ನು ಅವರ ಗುರುಗಳಾದ ಪಂಜೆ ಮಂಗೇಶರಾಯರು ‘ಬಾಲ ಸಾಹಿತ್ಯ ಮಂಡಲ’ದ ಮೂಲಕ ಬೆಳಕಿಗೆ ತಂದರು.
        ಅವರ ಎರಡನೆಯ ಕವನ ಸಂಕಲನವಾದ ‘ನಂದಾದೀಪ’ದ ಸಂಕಲನದ ರೂಪುರೇಷೆಗಳನ್ನೆಲ್ಲಾ ಅಣಿಗೊಳಿಸಿದ್ದರು. ಆದರೆ ಈ ಅಪೂರ್ವ ಸಂಕಲನ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ. ಪ್ರಕಾಶಕರು ಎಚ್ಚರಿಕೆ ವಹಿಸಿ ಪೈ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಇದನ್ನು ಬೆಳಕಿಗೆ ತಂದರು. ಮುಂದೆ ಅಲ್ಲಿ ಇಲ್ಲಿ ಚೆಲ್ಲಿ ಹೋಗಿದ್ದ ಅವರ ಕವನಗಳನ್ನು ಹುಡುಕಿ ‘ಹೃದಯರಂಗ’ ಎಂಬ ಮೂರನೆಯ ಕವನ ಸಂಕಲನವನ್ನೂ ಕಾವ್ಯಾಲಯದವರು ಪ್ರಕಟಿಸಿದ್ದಾರೆ. ಅದೇ ತೆರನಾಗಿ ‘ಇಟಂಕ’, ‘ಇಂಗಡಲು’ ಮುಂತಾದ ಕವನ ಸಂಕಲನಗಳು ಕೂಡಾ ಮುಂದೆ ಮುದ್ರಣಗೊಂಡವು. ಅಷ್ಟೇ ಅಲ್ಲದೆ ಗೋವಿಂದ ಪೈ ಅವರ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಎಂಬ ಅವರ ಪ್ರಸಿದ್ಧವಾದ ಎರಡು ನೀಳ್ಗವಿತೆಗಳು ಮೊದಲು ಬಿಡಿ ಬಿಡಿಯಾಗಿ ಅನಂತರ ಒಟ್ಟುಗೂಡಿ ಪ್ರಕಟಗೊಂಡಿವೆ.
         ಗೋವಿಂದ ಪೈ ಅವರ ಕವನಗಳಲ್ಲಿ ಚಂಪೂ ಕವಿಗಳಲ್ಲಿ ಕಂಡುಬರುವಂತೆ ಪ್ರತಿಭೆ ಮತ್ತು ಪಾಂಡಿತ್ಯಗಳೆರಡೂ ಹದವಾಗಿ ಕೂಡಿಕೊಂಡು ಬರುತ್ತವೆ. ಅವರು ತಾವು ಬರೆಯುವ ಅಪೂರ್ವ ಶಬ್ದಗಳಿಗೆ, ಇಲ್ಲ ತಾವೇ ಸೃಷ್ಟಿಸುವ ಪದಗಳಿಗೆ ಅಡಿಟಿಪ್ಪಣಿಯನ್ನು ಕೊಡುವುದನ್ನು ಕಂಡು ಕೆಲವರಿಗೆ ಬೆರಗಾಗಬಹುದು. ಅವರ ಪಾಲಿಗೆ ಈ ಕವನ ಕ್ರಿಯೆ ಒಂದು ಚಪಲವಲ್ಲ. ಅದು ಒಂದು ಅಪೂರ್ವವಾದ ಕಲಾ ಕೌಶಲ, ಕಲ್ಪನೆ ಮತ್ತು ಕಲೆಗಳ ಮಧುರ ಸಮನ್ವಯ. ಅವರಿಗೆ ಕವಿ-ಕಾವ್ಯಗಳಲ್ಲಿರುವ ಶ್ರದ್ಧೆ, ಗೌರವಗಳು ಅಪಾರವಾದುದು. ಪೈ ಅವರು ‘ಕವಿತಾವತಾರ’ವೆಂಬ ಕವನದಲ್ಲಿ ವಾಲ್ಮೀಕಿಯನ್ನು ನೆನೆದು, “ಸುಯ್ಯೊಂದು, ನರುಕಂಬನಿಯೊಂದು, ಬಿಕ್ಕೊಂದು – ಕವಿತೆ ಗಡ ಮರುಕಂ” ಎಂದು ಹೇಳಿರುವ ಮಾತು ಔಪಚಾರಿಕವಲ್ಲ. ಅದು ಅವರ ಅಂತಃಕಾರಣದ ಅನುಭವವೂ ಹೌದು. ಕವಿತೆಯ ಕರ್ಮವನ್ನು ಮರ್ಮವನ್ನು ಚೆನ್ನಾಗಿ ಚಿಂತನೆ ಮಾಡಿರುವ ಅವರು “ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತನಿಗೂಡಿ, ಕವಿತೆ ನವರಸ ರಂಗವದು, ತ್ರಿವೇಣಿಯ ಸಂಗಮಿದೊ ನೆನಸು ಕನಸು ಮನಸ್ಸಿನ ತ್ರಿತಯಮೊಡಗೂಡಿ” ಎಂದು ವರ್ಣಿಸುವ ಅವರು ಕವಿತೆಗೆ ಶೋಭಾವಹವಾದ ಪ್ರಾಸ, ಛಂದಸ್ಸು, ಶೈಲಿ, ಅರ್ಥಲಾಲಿತ್ಯಗಳನ್ನು ಪುರಸ್ಕರಿಸುವ ರೀತಿ ವಿಶಿಷ್ಟವಾದದ್ದು.
          ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಕುಡಿಯೊಡೆದು, ಕನ್ನಡನಾಡಿನ ಸುತ್ತಲೂ ಬಳ್ಳಿವರಿದು ಕಡೆಗೆ ಭಾರತಾಂಬೆಯ ಮುಡಿಯಲ್ಲಿ ಹೂವಾಗಿ ಅರಳಿ ಪರಿಣಮಿಸುತ್ತದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲಸಾಲುಗಳು. “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂದು ಅಂದು ಅವರು ಕೊರಳೆತ್ತಿ ಹಾಡಿದ ಹಾಡು ಎಂದೆಂದಿಗೂ ತನುಮನಗಳಲ್ಲಿ ಮಾರ್ದನಿಸುತ್ತಿರುವುದು. “ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮೆವು” ಎಂಬ ಮಾತುಗಳು, ಅವರ ಬಾಯಿಂದ ಹೊರಹೊಮ್ಮಿದ ಮಂತ್ರಗಳೇ ಸರಿ! ಮುಂದೆ “ಭಾರತದಲಿ ಸರ್ವಧರ್ಮಮೊಂದಲಿ ಸದನಂ, ಮಾಣಿಸಲೀಕೆಯ ಸ್ವಸ್ತಿಧ್ವಜಮಧರ್ಮದೊಳಕದನಂ” ಎಂದು ಶುಭವನ್ನು ಕೋರುವರು. ಕಡೆಗೆ ‘ಭಾರತಾಂಬೆಯ ಮಹಿಮೆಯನ್ನು’ ಮತ್ತೆ ಮತ್ತೆ ಮೆಚ್ಚಿಕೊಂಡು ‘ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ತಮ್ಮ ಭಕ್ತಿಯ ಸುಮಮಾಲೆಯನ್ನು ಆಕೆಯ ಮುಡಿಗೆ ತೊಡಿಸಿ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ಹಿಗ್ಗುವರು.
          ಸ್ವಾತಂತ್ರ್ಯದ ನಂತರದಲ್ಲಿ ಸ್ವಾತಂತ್ರ್ಯದಾತನನ್ನು ನೆನೆದು “ಏನು ತೋರಿಸಿದೆಮಗೆ? ಮೇಣೇಮನಿತ್ತೆ: ಕಳಕೊಂಡ ಬಿಡುಗಡೆಯನೆಮಗಿತ್ತೆ ತಂದೆ! ಆದರೀಗಣ ಕಥೆಯ ಬಲ್ಲೆಯಾ ಮತ್ತೆ? ರಾಹುವನು ತೊಲಗಿಸಿದೆ, ಕೇತುವನು ತಂದೆ” ಎಂದು ಮರುಗುತ್ತಾರೆ. ಗಾಂಧೀಜಿಯನ್ನು ಸ್ಮರಿಸಿ “ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು!” ಎಂದು ಯಾತನೆ ಪಡುತ್ತಾರೆ. ಸ್ವತಂತ್ರ ಭಾರತದ ಅತಂತ್ರವನ್ನು ಕಂಡು ವರ್ಷವರ್ಷವೂ ಬರೆದಿರುವ ಚತುರ್ದಶಪದಿಗಳನ್ನು ನೋಡಿದರೆ, ಕವಿಯ ಕಂಬನಿಯ ಕುಯ್ಲನ್ನು ಕಾಣಬಹುದು. ಗೋವಿಂದ ಪೈ ಅವರ ಈ ದೇಶ ಪ್ರೇಮ ಸ್ವದೇಶಕ್ಕೆ ಮಾತ್ರ ಸೀಮಿತವಾಗದೆ, ದೂರದ ತುರ್ಕಿಯನ್ನು ಕಬಳಿಸಲು ಇಟಲಿಯು ಮಾಡಿದ ಸನ್ನಾಹವನ್ನು ಖಂಡಿಸುವವರೆಗೂ ವ್ಯಾಪಿಸಿರುವುದು.
          ಗೋವಿಂದಪೈ ಅವರ ಅಧ್ಯಾತ್ಮಿಕ ದೃಷ್ಟಿ ಹೇಗೆ ಸರ್ವಜನಾದರಣೀಯವಾಗಿದೆ ಎನ್ನುವುದನ್ನು ಅವರ ಕೆಲವು ಕವನಗಳಿಂದ ಗ್ರಹಿಸಬಹುದು. ಪಂಡರಾಪುರದ ವಿಠೋಬನನ್ನು ಮೊದಲ್ಗೊಂಡು, ಜೆರುಸಲೇಮಿನ ಯೇಸು ಕ್ರಿಸ್ತನ ವರೆಗೆ ಅವರ ಆಧ್ಯಾತ್ಮಿಕ ಧಾರೆ ಪ್ರವಹಿಸಿದೆ. ಅವತಾರ ಪುರುಷರಾದ ಶ್ರೀಕೃಷ್ಣ ಮತ್ತು ಬುದ್ಧರಲ್ಲಿ ಅವರಿಗೆ ಸಮಾನ ಗೌರವ ಭಾವನೆ.
           ಎಲ್ಲಿಯ ಕೃಷ್ಣ – ಎಲ್ಲಿಯ ಕ್ರಿಸ್ತ? ಆದರೆ ಗೋವಿಂದ ಪೈ ಅವರ ಆದ್ಯಾತ್ಮಿಕ ಪ್ರಜ್ಞೆಗೆ ಆ ಇಬ್ಬರೂ ಒಂದೇ ಶಕ್ತಿಯ ಎರಡು ಅವತಾರಗಳೆಂಬ ಪೂಜ್ಯಭಾವನೆ! ಸಂಪ್ರದಾಯಬದ್ಧವಾದ ಧಾರ್ಮಿಕ ಪ್ರಪಂಚದಲ್ಲಿ ಇದಕ್ಕಿಂತಲೂ ಕ್ರಾಂತಿಕಾರಕವಾದ ತರ್ಕವನ್ನು ಹೂಡಲು ಸಾಧ್ಯವೇ? ಪೈ ಅವರ ‘ಯೇಸುಕೃಷ್ಣ’ ಎಂಬ ಕವಿತೆಯಲ್ಲಿ ಈ ಅಸದೃಶ ಸಾಮ್ಯವನ್ನು ಎತ್ತಿ ತೋರಿಸಿದ್ದಾರೆ. ಕೃಷ್ಣನು ಸೆರೆಮನೆಯಲ್ಲಿ ಹುಟ್ಟಿದರೆ, ಯೇಸುವು ದನದ ಕೊಟ್ಟಿಗೆಯಲ್ಲಿ ಹುಟ್ಟಿದವನು. ಒಬ್ಬ ಕೊಳಲೂದಿ ದನಗಾಹಿ ಎನಿಸಿದರೆ, ಇನ್ನೊಬ್ಬ ಬಡಗಿಯ ಕೆಲಸವನ್ನು ಅವಲಂಬಿಸಿದವನು. ಒಬ್ಬ ರಾಧೆಯ ಪ್ರೇಮಪಾಶದಲ್ಲಿ ಬಂಧಿತನಾದರೆ, ಇನ್ನೊಬ್ಬ ಮಗ್ದಲದ ಮರಿಯಳ ಅನುರಾಗಕ್ಕೆ ಪಾತ್ರನಾಗುತ್ತಾನೆ. ಒಬ್ಬ ಕೌರವನಿಂದ ಬಂಧಿತನಾದರೆ, ಇನ್ನೊಬ್ಬನು ತನ್ನವರ ಮೂಲಕವೇ ತಲೆಗೆ ಮುಳ್ಳಿನ ಕಿರೀಟವನ್ನು ತೊಡಬೇಕಾಗುತ್ತದೆ. ಈ ತೆರನಾದ ಸಾದೃಶ್ಯ ಪರಂಪರೆಯನ್ನು ಪಟ್ಟಿ ಮಾಡಿ, ಕಡೆಗೆ ಪೈ ಅವರು “ಯದುನಾಥನೆ ಯೂದನಾಥನಲ್ಲವೇ?” ಎಂದು ವಿಸ್ಮಯಚಕಿತರಾಗುವರು.
          ಉಡುಪಿಯ ಕೃಷ್ಣನಲ್ಲಿ ಅವರ ಮೊರೆ ವಿಶಿಷ್ಟವಾಗಿದೆ. ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಸೂತ್ರಧಾರನಂತಿದ್ದು ಧರ್ಮವನ್ನು ಉದ್ಧರಿಸಿದಂತೆ ಇಂದಿನ ಭಾರತದ ಗೋಳನ್ನು ಪರಿಹರಿಸಬೇಕೆಂದು ಆತನಲ್ಲಿ ಕವಿ ಮೊರೆಯಿಡುವರು. “ಬಡಗೋಳ ಕೇಳೆಮ್ಮ ಕಡಗೋಲ ಕನ್ನ! ಸಡಗರಿಸೋ ಬಿಡುಗಡಿಸೆ ಭಾರತದ ನಿನ್ನ!” ಎಂಬ ನುಡಿ ಪೈ ಅವರ ಹೃದಯವೈಶಾಲ್ಯಕ್ಕೆ ಸಾಕ್ಷಿಯಂತಿದೆ. ‘ಶ್ರೀ ಗೊಮ್ಮಟಜಿನಸ್ತುತಿ’ಯಲ್ಲಿ ಅವರ ಪಾರಮಾರ್ಥಿಕ ದೃಷ್ಟಿ ಆ ವಿಗ್ರಹದಷ್ಟೇ ಎತ್ತರವೂ ಬಿತ್ತರವೂ ಆದುದು.
          ತನ್ನ ದುರ್ದೈವದಿಂದ ಮೂರು ಮಕ್ಕಳನ್ನು ಒಟ್ಟಿಗೆ ಕಳೆದುಕೊಂಡ ಹತಭಾಗಿನಿಯೊಬ್ಬಳ ಕುರಿತು ಬರೆದ ಮಾತಿನಲ್ಲಿ ‘ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ’ ಎಂಬ ಪಂಕ್ತಿ ಪೂರ್ಣಪ್ರಮಾಣದ ಪಶ್ಚಾತ್ತಾಪ ಪ್ರತಿಸ್ಪಂದಿಸುತ್ತದೆ. ‘ಮಾತಂಗಿ’ ಎಂಬ ಕಥನ ಕವನದಲ್ಲಿ ಅಸ್ಪೃಶ್ಯ ಜನರ ಕುರಿತ ಅನುಕಂಪೆ, ‘ಭಿಕ್ಷುವೂ ಪಕ್ಷಿಯೂ’ ಎಂಬಲ್ಲಿ ಗೋಚರವಾಗುವ ಭಿಕ್ಷುವಿನ ಸಹನೆ, ‘ವಾಸವದತ್ತೆ’ ಎಂಬಲ್ಲಿ ಪರಿತ್ಯಕ್ತ ವೇಶ್ಯೆಯ ಬಗ್ಗೆ ಪ್ರಕಾಶಿತವಾಗುವ ಉಪಗುಪ್ತನ ಉದಾರದೃಷ್ಟಿ ಮೊದಲಾದುವು ಕವಿಯ ಮಾನವೀಯತೆಯನ್ನು ಪ್ರತಿಬಿಂಬಿಸುವ ಉತ್ತಮ ಉದಾಹರಣೆಗಳು.
          ಗೋವಿಂದ ಪೈ ಅವರು ವಿಭೂತಿ ಮಹತ್ವವನ್ನು ಕಂಡಲ್ಲಿ ಕೈಮುಗಿದು ತಲೆಬಾಗುವ ತಲೆಮಾರಿನವರು. ಈ ಕ್ಷೇತ್ರದಲ್ಲಿ ಅವರಿಗೆ ಕಾಲ ದೇಶಗಳ ಅಂತರವಾಗಲಿ; ಜಾತಿ, ಮತ, ಪಂಥಗಳ ತಾರತಮ್ಯವಾಗಲಿ ಇಲ್ಲ. ಅವರ ಈ ಪೂಜ್ಯ ಭಾವನೆ ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ವಿಶ್ವರೂಪವನ್ನೇ ತಾಳಿರುವುದನ್ನು ಕಾಣಬಹುದು. ಈ ಎರಡೂ ಕೃತಿಗಳೂ ಧಾರ್ಮಿಕ ಪುರುಷರನ್ನು ಕುರಿತಾದುದರಿಂದ ವಿಷಯವನ್ನು ಪ್ರತಿಪಾದಿಸುವಲ್ಲಿ ಕವಿಯ ಹೊಣೆ ಬಹಳ ದೊಡ್ಡದಾದುದು. ಆ ಸಲುವಾಗಿಯೇ ಗೋವಿಂದ ಪೈ ಅವರು ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆಯಿಂದ ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು. ಅವರು ಕೈಕೊಂಡಿರುವ ಕೆಲಸವಾದರೋ ಆಯಾ ಧರ್ಮದ ಪ್ರಚಾರವಲ್ಲ. ಆಯಾ ಮಹಾಪುರುಷರ ಮರಣದ ಮಹಾತ್ಮೆ ಮಾತ್ರ!
          ಗೊಲ್ಗೊಥಾದಲ್ಲಿ ಯೇಸುವಿನ ಮೇಲಿನ ಅಂತಃಕರಣವೆಲ್ಲ ತನಗೆ ತಾನೇ ರೂಪುವೆತ್ತು ಕಡೆದು ನಿಲ್ಲಿಸಿದ ಜೀವಂತ ಕೃತಿಯೆನ್ನಿಸಿ ಕನ್ನಡದಲ್ಲಿ ಅಮರವಾಗಿದೆ. ಆ ಬಳಿಕ ಕೆಲವು ವರ್ಷಗಳ ತರುವಾಯ ರಚಿಸಿದ ‘ವೈಶಾಖಿ’ ಯಲ್ಲಿ ವೈಶಾಖ ಶುಕ್ಲ ಪೂರ್ಣಿಮೆಯಂದು ರಾಜಕುಮಾರನಾಗಿ ಹುಟ್ಟಿದ ಸಿದ್ಧಾರ್ಥನು, ಸರ್ವವನ್ನೂ ತ್ಯಾಗ ಮಾಡಿ ಸಂನ್ಯಾಸವನ್ನು ಕೈಗೊಂಡು, ವೈಶಾಖ ಶುಕ್ಲ ಪೂರ್ಣಮಿಯಂದೇ ಜ್ಞಾನೋದಯವನ್ನು ಪಡೆದು ಬುದ್ಧನೆಂಬ ಹೆಸರಿನಿಂದ ಜಗತ್ಪ್ರಸಿದ್ಧನಾಗಿ, ವೈಶಾಖ ಶುಕ್ಲ ಪೂರ್ಣಮಿಯಂದೇ ಪರಿನಿರ್ವಾಣವನ್ನು ಪಡೆದುದರಿಂದ ಕವಿಗಳು ಈ ಹೆಸರನ್ನು ಇಟ್ಟಿರುವುದು ಅರ್ಥಪೂರ್ಣವಾಗಿದೆ.
            ಕವಿ ಮತ್ತು ಸಂಶೋಧಕನ ಪ್ರಜ್ಞೆಗಳೆರಡನ್ನೂ ಒಳಗೊಂಡಿರುವ ಗೋವಿಂದ ಪೈ ಅವರ ವಿಶಿಷ್ಟ ವ್ಯಕ್ತಿತ್ವ ಡಾ. ಎ. ಎನ್. ಉಪಾಧ್ಯೆ ಅಂತಹ ಮಹಾನ್ ಸಂಶೋಧಕರನ್ನೂ ವಿಸ್ಮಿತಗೊಳಿಸಿದೆ. ಗೋವಿಂದ ಪೈ ಅವರ ಸಂಶೋಧನ ಪ್ರಬಂಧಗಳನ್ನು ಸಾವಧಾನವಾಗಿ ಪರಿಶೀಲಿಸಿದಲ್ಲಿ ಅವರ ಪ್ರತಿಯೊಂದು ಲೇಖನವೂ ಅಪೂರ್ವವಾದ ಗಣಿ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು. ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ ಪ್ರಕಟವಾಗಿದೆ.
          ಗೋವಿಂದ ಪೈ ಅವರು ‘ಚಿತ್ರಭಾನು’, ‘ಹೆಬ್ಬೆರಳು’, ‘ತಾಯಿ’, ‘ಕಾಯಾಯ್ ಕೊಮಾಜಿ’ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮ ಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧಗಳಲ್ಲಿ ‘ಆತ್ಮಕಥನ’ ಅವರ ಸಾಹಿತ್ಯ ಕೃಷಿಯ ಮಥನದ ನವನೀತವೆನಿಸಿದೆ. ‘ಬರಹಗಾರನ ಹಣೆಬರಹ’ ಲೇಖಕನ ಕಷ್ಟನಿಷ್ಟುರಗಳ ಕೈಗನ್ನಡಿಯಂತಿದೆ. ‘ಕನಸಾದ ನನಸು’ ಪೈ ಅವರಿಗೆ ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿದೆ. ಅವರ ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ. ಶ್ರೀನಿವಾಸ ಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವೆಲ್ಲಾ ಮನನೀಯವೆನಿಸಿವೆ.
         ಇಂಥ ಮಹಾಚೇತನರಾದ ಗೋವಿಂದ ಪೈ ಅವರು ಸೆಪ್ಟಂಬರ್ 6, 1963ರಲ್ಲಿ ತಮ್ಮ ಎಂಭತ್ತನೆಯ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಅವರು ಬಿಟ್ಟು ಹೋಗಿರುವ ಸಾರಸ್ವತ ಸಂಪತ್ತು ಅಪಾರವಾಗಿರುವುದರಿಂದ, ಅವರ ಆ ಉಪಕಾರ ಸ್ಮರಣೆಗಾಗಿ ಕನ್ನಡಿಗರು ಅವರಿಗೆ ಚಿರಋಣಿಗಳಾಗಿದ್ದಾರೆ.

(ಕೃಪೆ: ಜಿ.ವರದರಾಜರಾವ್ ಅವರ ಎಂ. ಗೋವಿಂದ ಪೈ ಅವರ ಕುರಿತ ಬರಹ)


**********

ಭಾರತೀಯತೆ (ಪದ್ಯ-2)

ಪ್ರಸ್ತುತ ಪದ್ಯಭಾಗವನ್ನು ಕೆ.ಎಸ್.ನರಸಿಂಹಸ್ವಾಮಿಯವರ ‘ನವಪಲ್ಲವ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಕೆ.ಎಸ್.ನರಸಿಂಹಸ್ವಾಮಿಯವರ ಪರಿಚಯ
ಕೆಎಸ್‌ನರಸಿಂಹಸ್ವಾಮಿಯವರ ಪೂರ್ಣಹೆಸರು: ‘ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ’,
ಇವರ ಕಾಲ: ಜನನ: ಜನವರಿ ೨೬, ೧೯೧೫            ನಿಧನ: ಡಿಸೆಂಬರ್ ೨೭, ೨೦೦೩
ಸ್ಥಳ: ಇವರು ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. 
ವಿದ್ಯಾಭ್ಯಾಸ: ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು. ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. 
      ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.
        ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. 
ಅನುವಾದಿತ ಕೃತಿಗಳು: ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು 
ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು
೧೯೩೩ - ಕಬ್ಬಿಗನ ಕೂಗು ಮೊದಲ ಕವನ.
೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
೧೯೯೬- ಮಾಸ್ತಿ ಪ್ರಶಸ್ತಿ .
೧೯೯೭- ಪಂಪ ಪ್ರಶಸ್ತಿ .
೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
೨೦೦೦- ಗೊರೂರು ಪ್ರಶಸ್ತಿ .
ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಮುಖ ಕೃತಿಗಳು
ಕವನ ಸಂಕಲನಗಳು
೧೯೪೫- ಐರಾವತ
೧೯೪೭- ದೀಪದ ಮಲ್ಲಿ
೧೯೪೯- ಉಂಗುರ
೧೯೫೪- ಇರುವಂತಿಗೆ
೧೯೫೮- ಶಿಲಾಲತೆ
೧೯೬೦- ಮನೆಯಿಂದ ಮನೆಗೆ
೧೯೭೯- ತೆರೆದ ಬಾಗಿಲು
೧೯೮೯- ನವ ಪಲ್ಲವ
೧೯೯೩- ದುಂಡುಮಲ್ಲಿಗೆ
೧೯೯೯- ನವಿಲದನಿ
೨೦೦೦- ಸಂಜೆ ಹಾಡು
೨೦೦೧- ಕೈಮರದ ನೆಳಲಲ್ಲಿ
೨೦೦೨- ಎದೆ ತುಂಬ ನಕ್ಷತ್ರ
೨೦೦೩- ಮೌನದಲಿ ಮಾತ ಹುಡುಕುತ್ತ
೨೦೦೩- ದೀಪ ಸಾಲಿನ ನಡುವೆ
೨೦೦೩- ಮಲ್ಲಿಗೆಯ ಮಾಲೆ
೨೦೦೩- ಹಾಡು-ಹಸೆ

ಗದ್ಯ
ಮಾರಿಯ ಕಲ್ಲು
ದಮಯಂತಿ
ಉಪವನ
ಅನುವಾದ
ಮೋಹನಮಾಲೆ
ನನ್ನ ಕನಸಿನ ಭಾರತ
ಸುಬ್ರಹ್ಮಣ್ಯ ಭಾ
ರತಿ
ಪುಷ್ಕಿನ್ ಕವಿತೆಗಳು
ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು

ಶ್ರೀಯುತರ ಕವನಗಳನ್ನು ಓದಲು http://kannadadeevige.blogspot.in/p/blog-page_87.html ಇಲ್ಲಿ ಕ್ಲಿಕ್ ಮಾಡಿ
***************

ಗೆಳೆತನ (ಪದ್ಯ-3)

ಪ್ರಸ್ತುತ ಕವನವನ್ನು ಚೆನ್ನವೀರ ಕಣವಿಯವರ ‘ಆಕಾಶಬುಟ್ಟಿ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಚೆನ್ನವೀರ ಕಣವಿಯವರ ಪರಿಚಯ
http://4.bp.blogspot.com/-fDxPLmFNKIQ/TtGyJ02qjKI/AAAAAAAAADo/52HSzx_XR94/s1600/kanavi.jpg

https://upload.wikimedia.org/wikipedia/kn/thumb/2/27/Kanavi1.jpg/220px-Kanavi1.jpg
 • ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. 
 • ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
 • ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು.
 • ೧೯೫೬ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
            ಕಣವಿಯವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದ ವೇಳೆಗಾಗಲೇ ನವೋದಯ ಮಧ್ಯಂತರ ಸ್ಥಿತಿ ತಲುಪಿತ್ತು. ಬೇಂದ್ರೆ, ಕುವೆಂಪು, ಪು.ತಿ.ನ, ಮತ್ತು ಮಧುರಚನ್ನರಂತಹ ನವೋದಯ ಕವಿಗಳ ಕಾವ್ಯ ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಡವಾಗಿ ಪ್ರಭಾವಿಸುತ್ತಿದ್ದ ಕಾಲವದು. ಇದಕ್ಕೆ ಕಣವಿಯವರು ಹೊರತಾಗಿರಲಿಲ್ಲ. ಅವರ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿದವು.
           ಕಣವಿಯವರ ಭಾವಜೀವಿ ಎಂಬ ಆತ್ಮಕಥನಾತ್ಮಕವಾದ ದೀರ್ಘಕವಿತೆಯ ಮೇಲೆ ಮಧುರಚನ್ನರ ನನ್ನ ನಲ್ಲ, ಕವಿತೆಯ ಪ್ರಭಾವವಿರುವುದು ಕಂಡುಬರುತ್ತದೆ. ಹಾಗೆಯೇ ಕಣವಿಯವರ ಪ್ರಕೃತಿಗೀತೆಗಳಲ್ಲಿ ವಿಶೇಷವಾಗಿ ಬೇಂದ್ರೆ, ಕುವೆಂಪುರವರ ಪ್ರಭಾವವನ್ನು ಗುರುತಿಸಬಹುದು. ಇದು ಬೆಳೆಯುವ ಯುವ ಕವಿಯೊಬ್ಬನಿಗೆ ಸಹಜವೂ ಹೌದು, ನಂತರ ಕಣವಿಯವರು ಇದರಿಂದ ಮೇಲೇರಿ ಸಾಹಿತ್ಯ ಸೃಷ್ಟಿಮಾಡಿದರು. ಕಣವಿಯವರು ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಣವಿಯವರು ತಮ್ಮ ವೈಯಕ್ತಿಕ ಕಾವ್ಯ ಮತ್ತು ಬದುಕಿನ ನಿಲುವನ್ನು ಹೀಗೆ ಕವಿ ವ್ಯಕ್ತಪಡಿಸಿದ್ದಾರೆ.

ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದಶಕ್ತಿಯಲ್ಲಿ ತುಸು ದೂರ ನಡೆದಿದ್ದೇವೆ
ರೂಡಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದ್ದು ಜೀವನ ಗತಿ, ಹೊಸ ನೆತ್ತರಿನ ಕೊಡುಗೆ
(ಕವಿತೆ:-‘ಕಾಲನಿಲ್ಲುವುದಿಲ್ಲ’) 

*ಪ್ರಮುಖ ಕೃತಿಗಳು*
ಕವನ ಸಂಕಲನಗಳು
 1. ನಗರದಲ್ಲಿ ನೆರಳು
 2. ಕಾವ್ಯಾಗ್ನಿ
 3. ಭಾವಜೀವಿ
 4. ಆಕಾಶಬುಟ್ಟಿ
 5. ಮಧುಚಂದ್ರ
 6. ಮಣ್ಣಿನ ಮೆರವಣಿಗೆ
 7. ದೀಪಧಾರಿ
 8. ನೆಲ ಮುಗಿಲು
 9. ಎರಡು ದಡ
 10. ಜೀವಧ್ವನಿ
 11. ಕಾರ್ತೀಕದ ಮೋಡ
 12. ಜೀನಿಯಾ
 13. ಹೊಂಬೆಳಕು
 14. ಶಿಶಿರದಲ್ಲಿ ಬಂದ ಸ್ನೇಹಿತ
 15. ಚಿರಂತನ ದಾಹ(ಆಯ್ದ ಕವನಗಳು)
 16. ಹೂವು ಹೊರಳುವವು ಸೂರ್ಯನ ಕಡೆಗೆ

ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು
 1. ಸಾಹಿತ್ಯಚಿಂತನ
 2. ಕಾವ್ಯಾನುಸಂಧಾನ
 3. ಸಮಾಹಿತ
 4. ಮಧುರಚೆನ್ನ
 5. ಸಮತೋಲನ
ಮಕ್ಕಳ ಕವಿತೆ
 1. ಹಕ್ಕಿ ಪುಕ್ಕ
 2. ಚಿಣ್ಣರ ಲೋಕವ ತೆರೆಯೋಣ
ಸಂಪಾದನೆ
 1. ಕನ್ನಡದ ಕಾಲು ಶತಮಾನ
 2. ಸಿದ್ಧಿ ವಿನಾಯಕ ಮೋದಕ
 3. ಕವಿತೆಗಳು
ಸಂಪಾದನೆ (ಇತರರೊಂದಿಗೆ)
 1. ನವಿಲೂರು ಮನೆಯಿಂದ
 2. ನವ್ಯಧ್ವನಿ
 3. ನೈವೇದ್ಯ
 4. ನಮ್ಮೆಲ್ಲರ ನೆಹರೂ
 5. ಜೀವನ ಸಿದ್ಧಿ
 6. ಆಧುನಿಕ ಕನ್ನಡ ಕಾವ್ಯ
 7. Modern Kannada Poetry
 8. ಸುವರ್ಣ ಸಂಪುಟ
 9. ರತ್ನ ಸಂಪುಟ
 10. ಬಾಬಾ ಫರೀದ
ಪ್ರಶಸ್ತಿ ಪುರಸ್ಕಾರಗಳು
 • ಇವರ "ಜೀವಧ್ವನಿ" ಎಂಬ ಕೃತಿಗೆ ೧೯೮೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೭] ದೊರಕಿದೆ.
 • ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
 • ಆಳ್ವಾಸ್ -ನುಡಿಸಿರಿ 2008 "ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
 • ರಾಜ್ಯೋತ್ಸವ ಪ್ರಶಸ್ತಿ,
 • ಪಂಪ ಪ್ರಶಸ್ತಿ,
 • ಬಸವ ಗುರು ಕಾರುಣ್ಯ ಪ್ರಶಸ್ತಿ,
 • ನಾಡೋಜ ಪ್ರಶಸ್ತಿ,
 • ಕರ್ನಾಟಕ ಕವಿರತ್ನ ಪ್ರಶಸ್ತಿ,
 • ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
 • 'ನಾಡೋಜ ಮತ್ತು ಪಂಪ ಪ್ರಶಸ್ತಿ ವಿಜೇತರು'. ಸೆಪ್ಟೆಂಬರ್, ೧, ೨೦೦೩.

ಭರವಸೆ (ಪದ್ಯ-4)

ಪ್ರಸ್ತುತ ಕವನವನ್ನು ಬಿ.ಟಿ.ಲಲಿತಾನಾಯಕ್ ಅವರ ‘ಬಿದಿರು ಮೆಳೆ ಕಂಟಿಯಲಿ’ ಎಂಬ ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಬಿ.ಟಿ.ಲಲಿತಾನಾಯಕ್ ಅವರ ಪರಿಚಯ
 
ಜನನ : ೪-೪-೧೯೪೫
ಹುಟ್ಟಿದೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿತಾಂಡ.
ತಂದೆ:  ಬಾಲಾಜಿನಾಯಕ್, ತಾಯಿ:  ಗಂಗಾಬಾಯಿ.
ವಿದ್ಯಾಭ್ಯಾಸ: ಏಕೋಪಾಧ್ಯಾಯ ಶಾಲೆ ತಾಂಡ್ಯದಲ್ಲಿ ೪ನೇ ತರಗತಿಯವರೆಗೆ ಓದು. ನಂತರ ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ. ವಿದ್ಯಾಭ್ಯಾಸ ಅವಕಾಶಗಳು ಇಲ್ಲದ ಕಾಲ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ. ಕಲಿತದ್ದು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ ೩೦. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ ಬಂದು ತಂಗಿಗೆ ಕಲಿಸಿದ ವಿದ್ಯೆ. ಹಿಂದಿ ಪರೀಕ್ಷೆಯಲ್ಲಿ ವಿಶಾರದ.
ಇವರು ರಚಿಸಿದ ನಾಟಕಗಳು ಧಾರವಾಡದ ಆಕಾಶವಾಣಿ ಕೇಂದ್ರದಿಂದ ಪ್ರಸಾರ. ಕಥೆ, ಕಾದಂಬರಿ, ನಾಟಕ ಎಲ್ಲದರ ಮೂಲದ್ರವ್ಯ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯ ಸಾಹಿತ್ಯ, ದಲಿತರ ನೋವು ಇವುಗಳನ್ನು ಕುರಿತದ್ದೆ. ೧೯೮೨ರಲ್ಲಿ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಆರು ವರ್ಷ ಗಳಿಸಿದ ಅನುಭವ.
೧೯೮೬ರಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದಿಂದಾಗಿ ರಾಜಕೀಯ ಪ್ರವೇಶ. ೧೯೮೬-೯೨ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ. ೧೯೯೪ರಿಂದ ೯೯ರವರೆಗೆ ವಿಧಾನಸಭೆ ಸದಸ್ಯರಾಗಿ, ಸಚಿವೆಯಾಗಿ ಕಾರ‍್ಯನಿರ್ವಹಣೆ.

ಪ್ರಕಟಿತ ಕೃತಿಗಳು:
 • ಚಂದ್ರಪರಾಭವ (ನಾಟಕ ಸಂಕಲನ)
 • ಭಟ್ಟನ ಕನಸು (ಮಕ್ಕಳ ಕಥಾ ಸಂಕಲನ)
 • ನೆಲೆ ಬೆಲೆ
 • ಗತಿ (ಕಾದಂಬರಿ)
 • ಹಬ್ಬ ಮತ್ತು ಬಲಿ (ಕಥಾಸಂಕಲನ) 
 • ನಂ ರೂಪ್ಲಿ
 • ಇದೇ ಕೂಗು ಮತ್ತೆ ಮತ್ತೆ
 • ಒಡಲ ಬೇಗೆ
 • ಬಿದಿರು ಮೆಳೆ ಕಂಟಿಯಲ್ಲಿ
 • ಸವಾಸೇರು (ಕವನ ಸಂಕಲನ)
 • ಚುಟುಕುಗಳ ಸಂಕಲನ
 • ಗತಿ (ಕಾದಂಬರಿ ಕರ್ನಾಟಕ ವಿಶ್ವವಿದ್ಯಾಲಯದ ೩ನೇ ವರ್ಷದ ಬಿ.ಎ. ತರಗತಿಗೆ)
 • ಹಬ್ಬ ಮತ್ತು ಬಲಿ (ಕಥಾಸಂಕಲನ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ. ತರಗತಿಗೆ)
 • ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಥಮ ಕಲಾ ತರಗತಿ ಪಠ್ಯಪುಸ್ತಕ ಕಾವ್ಯ ಸಂಗಮಕ್ಕೆ ೮ ಕವನಗಳು ಸೇರ‍್ಪಡೆಯಾಗಿ ಪಠ್ಯಪುಸ್ತಕಗಳಾಗಿವೆ.

ಸಂದ ಪ್ರಶಸ್ತಿ ಗೌರವಗಳು :
 • ಉತ್ತಮ ಶಾಸಕಿ ಪ್ರಶಸ್ತಿ
 • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ರಾಜೀವಗಾಂ ಏಕತಾ ಪ್ರಶಸ್ತಿ
 • ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ
 • ನಾಡಚೇತನ ಪ್ರಶಸ್ತಿ
 • ಮಹಿಳಾ ರತ್ನ ಪ್ರಶಸ್ತಿ
 • ಕಿರಣ ಪ್ರಭಾ ಪ್ರಶಸ್ತಿ
 • ಕಾಯಕ ಸಮ್ಮಾನ ಪ್ರಶಸ್ತಿ
 • ಸಮಾಜ ಸೇವಾರತ್ನ ಪ್ರಶಸ್ತಿ ಮೊದಲುಗೊಂಡು ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದುವುಗಳು.
 
 
 
************

ವಚನಾಮೃತ (ಪದ್ಯ-5)

ಶರಣೆಯರ ವಚನಾಮೃತ ಪದ್ಯಭಾಗದಲ್ಲಿ ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ ಮತ್ತು ಆಯ್ದಕ್ಕಿಮಾರಯ್ಯ ಇವರ ಆಯ್ದ ವಚನಗಳಿವೆ.
೧) ಅಕ್ಕಮಹಾದೇವಿಯ ಪರಿಚಯ
ಅಕ್ಕಮಹಾದೇವಿ (ಚಿತ್ರಕೃಪೆ:ಶರಣು.ಕಾಂ)


ಅಕ್ಕನ ಜೀವನ
 • ಕಾಲ: ೧೨ನೇ ಶತಮಾನ
 • ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ.
 • ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತನ್ನನ್ನು ತಾವೂ ತೊಡಗಿಸಿಕೊಂಡಳಲ್ಲದೇ, 
 • "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತನ್ನದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾಳೆ.
 • "ಯೋಗಾಂಗತ್ರಿವಿಧಿ" ಅಕ್ಕಮಹಾದೇವಿಯ ಪ್ರಮುಖ ಕೃತಿ.  ಅಲ್ಲದೆ ‘ಸೃಷ್ಟಿ ವಚನ’ ಮತ್ತು ‘ಮಂತ್ರ ಗೋಪ್ಯ’ ಎಂಬ ಲಘು ಕೃತಿಗಳನ್ನೂ ರಚಿಸಿದ್ದಾಳೆ.
 • ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವಳೀಕೆ. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವಳು.
ಅಕ್ಕನ ಅನುಭಾವ ಜೀವನ
        ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವಳ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವಳ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ 'ಮಹಾದೇವಿಯಕ್ಕಗಳ ರಗಳೆ' ಮತ್ತು ಸ್ವತಃ ಅಕ್ಕಮಹಾದೇವಿಯೇ ರಚಿಸುವ ವಚನಗಳೂ, ಅವಳ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನುಡಿ, ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ . ವಚನ ಚಳುವಳಿಯ ಸಮಯದಲ್ಲಿ, ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮ ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವಳ ಬರಹಗಳು ಗಮನಾರ್ಹವಾಗಿವೆ.
 • ಉದಾ: 'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ',
 • 'ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ' ,
 • 'ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು'- ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .
ಅಕ್ಕನ ಹಿರಿಮೆ
ಶೂನ್ಯ ಸಂಪಾದನೆಕಾರರು 'ಮಹಾದೇವಿಯಕ್ಕಗಳ ಸಂಪಾದನೆ' ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವಳಿಗೆ ಗೌರವ ತೋರಿದ್ದಾರೆ. ಹರಿಹರ ಮಹಾಕವಿಯ ಮಹಾದೇವಿಯಕ್ಕನ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ 'ಕದಳಿಯ ಕರ್ಪುರ' ಅಕ್ಕನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು . ಅಕ್ಕಮಹಾದೇವಿಯ ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ, ಪ್ರಮುಖವಾದವುಗಳು ಈ ಎರಡು,
 • ಒಂದನೆಯದು: ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು.
 • ಎರಡನೆಯದು : ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದುದು. ಅಕ್ಕನ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು. ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನ ನಡುವೆ ನಡೆಯಿತೆನ್ನಲಾದ ಸಂಭಾಷಣೆ ; ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.   
ಅಕ್ಕಮಹಾದೇವಿಯ ಆಯ್ದ ವಚನಗಳು
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿ ನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವ ನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವ ನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿ ಕೊಂಡಿದ್ದರೇನು? ತನ್ನ ಪರಿ ಬೇರೆ!

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.

ನರ-ಜನ್ಮವ ತೊಡೆದು
ಹರ-ಜನ್ಮವ ಮಾಡಿದ ಗುರುವೆ
ಭವ ಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ
ಕೊಟ್ಟ ಗುರುವೆ ನಮೋ ನಮೋ

ಅಕ್ಕ-ಅನುಭವ ಮಂಟಪದಲ್ಲಿ

             ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ.
ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ,
ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ.
ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ.
ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು.
ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು.
ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ?
ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ?
ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ.
ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ.
ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ?
ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ.
ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ.
ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ.
ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ?
ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ.
ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು)
ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು)
ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು.
ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.
ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ.
ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
ಬಸವಣ್ಣ : ಶರಣು ತಾಯೇ ಶರಣು ಶರಣು.
ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
          ಚನ್ನಬಸವಣ್ಣ : ಶರಣು ತಾಯೇ ಶರಣು.
ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
ಸಿದ್ಧರಾಮ : ಶರಣು ತಾಯೇ ಶರಣು.
ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ.
ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು
ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು. ಆಗ ಅಕ್ಕನು ಶರಣ ಶರಣೆಯರ ನಡುವೆ ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು.

ಲಿಂಗೈಕ್ಯ

ಕೊನೆಗೆ ಅಕ್ಕಮಹಾದೇವಿ ತನ್ನ ಇಷ್ಟದೈವ ಮಲ್ಲಿಕಾರ್ಜುನನಲ್ಲಿ ಶ್ರಿಶೈಲಕದಳಿವನದಲ್ಲಿ ಐಕ್ಯಳಾದಳು.


***********
೨) ಅಮುಗೆರಾಯಮ್ಮನ ಪರಿಚಯ
ಇವಳ ಕಾಲ: ಕ್ರಿ.ಶ. ಸು. ೧೧೬೦ (೧೨ನೆಯ ಶತಮಾನ)
ಸ್ಥಳ: ಸೊನ್ನಲಿಗೆ (ಈಗಿನ ಸೊಲ್ಲಾಪುರ)
ಇವಳ ಮೊದಲ ಹೆಸರು : ವರದಾನಿಯಮ್ಮ.
ಇವಳ ಪತಿ: ಅಮುಗೆ ದೇವಯ್ಯ
ಇವಳ ಕಾಯಕ : ನೇಯ್ಗೆ 
ಇವಳ ಅಂಕಿತ ನಾಮ: ಅಮುಗೇಶ್ವರ ಲಿಂಗ, ಅಮುಗೇಶ್ವರಾ
ಇವಳ ಸಮಕಾಲೀನ ವಚನಕಾರ್ತಿಯರೆಂದರೆ: ಅಕ್ಕಮಹಾದೇವಿ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಅಕ್ಕನಾಗಮ್ಮ, ದುಗ್ಗಳೆ ಮುಂತಾದವರು.
ದೊರಕಿರುವ ವಚನಗಳ ಸಂಖ್ಯೆ: 115
ಅಮುಗೆಯ ದೇವಯ್ಯ ಮತ್ತು ಅಮುಗೆರಾಯಮ್ಮ (ಚಿತ್ರ ಕೃಪೆ::lingayatreligion.com)
           ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. 
ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು'. 
        - ಇದು ರಾಯಮ್ಮನ ಅನಿಸಿಕೆ.
*************
೩) ಆಯ್ದಕ್ಕಿ ಮಾರಯ್ಯನ ಪರಿಚಯ
ಕಾಲ: ೧೧೬೦ (೧೨ನೆಯ ಶ.) ದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಒಬ್ಬ ಶರಣ.
ಸ್ಥಳ: ರಾಯಚೂರು ಜಿಲ್ಲೆಯ ಅಮರೇಶ್ವರ
ಪತ್ನಿಯ ಹೆಸರು: ಆಯ್ದಕ್ಕಿ ಲಕ್ಕಮ್ಮ
ದೊರೆತಿರುವ ವಚನಗಳ ಸಂಖ್ಯೆ: ೩೨
ಅಂಕಿತ: ಅಮರೇಶ್ವರ ಲಿಂಗ
           ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬನಾದ ಈ ಶರಣನು ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವ ಕಾಯಕ ಮಾಡುತ್ತಿದ್ದರಿಂದಲೇ ಆಯ್ದಕ್ಕಿ ಮಾರಯ್ಯನೆಂದು ಪ್ರಸಿದ್ಧನಾಗಿದ್ದಾನೆ. 
          ಒಮ್ಮೆ ಅನುಭವ ಮಂಟಪದಲ್ಲಿ ಕಾಯಕವನ್ನು ಕುರಿತು ಆತ ಎತ್ತಿದ ಸಂದೇಹವನ್ನೂ ಅದಕ್ಕೆ ಅಲ್ಲಮಪ್ರಭು ಕೊಟ್ಟ ಉತ್ತರವನ್ನೂ ಶೂನ್ಯ ಸಂಪಾದನೆ ಬಹಳ ಅರ್ಥವತ್ತಾಗಿ ಚಿತ್ರಿಸಿದೆ: 
ಕಾಯಕದಲ್ಲಿ ನಿರತನಾದರೆ,
ಗುರುದರ್ಶನವಾದಡೂ ಮರೆಯಬೇಕು;
ಲಿಂಗಪುಜೆಯಾದಡೂ ಮರೆಯಬೇಕು;
ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
        ಅವನ ಈ ಮಾತು ಕಾಯಕನಿಷ್ಠೆಯನ್ನು ತೋರಿಸುತ್ತದೆ. ನಿಜ ಆದರೆ ಅಲ್ಲಿ ಇನ್ನೊಂದು ಧ್ವನಿಯಿದೆ. ಕಾಯಕವೇ ಕೈಲಾಸವಾದುದರಿಂದ ಗುರು ಲಿಂಗ ಜಂಗಮ ಈ ತ್ರಿವಿಧದಾಸೋಹದ ಹಂಗಾದರೂ ಏತಕ್ಕೆ ಎಂಬ ಪ್ರಶ್ನೆಗೆ ಅಲ್ಲಮ ಸರಿಯಾದ ಉತ್ತರ ಕೊಡುತ್ತಾನೆ. ಹೊಟ್ಟೆಪಾಡಿನ ಉದ್ಯೋಗ ಕಾಯಕವಾಗಬೇಕಾದರೆ ತ್ರಿವಿಧದಾಸೋಹ ದಿಂದ ಮಾತ್ರ ಸಾಧ್ಯ. ಮಾಡುವ ಮಾಟದಿಂದವೆ ಬೇರೊಂದನರಿಯಬೇಕು; ಅರಿವಿಂಗೆ ನೆಮ್ಮುಗೆ ಒಡಗೂಡಬೇಕು. ಇದಕ್ಕೆ ತ್ರಿವಿಧದಾಸೋಹವೇ ಸಾಧನವೆಂದು ಅಲ್ಲಮಪ್ರಭು ಕಾಯಕದ ರಹಸ್ಯವನ್ನು ಬಿತ್ತರಿಸುವುದಕ್ಕೆ ಈತನೆತ್ತಿದ ಸಂದೇಹ ನೆಪಮಾತ್ರವಾಗುತ್ತದೆ. ವಾಸ್ತವವಾಗಿ ಕಾಯಕದ ಪುರ್ಣಸ್ವರೂಪವನ್ನು ನಿತ್ಯಜೀವನದ ಆಚರಣೆಯಲ್ಲಿ ಸಾಧಿಸಿ ತೋರಿಸುತ್ತಿದ್ದವ ಮಾರಯ್ಯ. ಆತನ ಪತ್ನಿ ಲಕ್ಕಮ್ಮನಂತೂ ಕಾಯಕನಿಷ್ಠೆಯೇ ಮೈವೆತ್ತ ಮೂರ್ತಿ.
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ (ಚಿತ್ರಕೃಪೆ:lingayatreligion.com)
ಮ್ಮೆ ಮಾರಯ್ಯ ಅಗತ್ಯವಾದುದಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದಾಗ ಈಸಕ್ಕಿಯ ಆಶೆ ನಿಮಗೇಕೆ, ಈಶ್ವರನೊಪ್ಪ ಎಂದು ಹೆಚ್ಚಾದ ಅಕ್ಕಿಯನ್ನು ಮತ್ತೆ ಹಿಂದಕ್ಕೆ ಸುರಿಸಿದ ದಿಟ್ಟತನ ಆಕೆಯದು. ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧರಾಗಬೇಕು ಎಂಬ ನಿಸ್ಪೃಹ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಈ ದಂಪತಿಗಳು ವಚನಕಾರರೂ ಹೌದು. ಅಮರೇಶ್ವರ ಲಿಂಗ ಎಂಬ ಅಂಕಿತದಿಂದ ಮಾರಯ್ಯ ವಚನಗಳನ್ನು ಬರೆದು ಶರಣರಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ.
 ************
ವಚನಗಳ ಭಾವಾರ್ಥ

 ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ದ್ವಾಪರಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ
ನಾ ಬೆರಗಾದೆನು.                                             -ಅಲ್ಲಮಪ್ರಭು


ಸಾರಾಂಶ: ಅಲ್ಲಮ ಪ್ರಭುವು ಈ ವಚನದಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ಗುರು-ಶಿಷ್ಯರ ಶೈಕ್ಷಣಿಕ ಸಂಬಂಧ ಹಾಗೂ ಗುರುಗಳ ಮೇಲೆ ಶಿಷ್ಯರಿಗಿದ್ದ ಗೌರವಭಾವನೆಯನ್ನು ವರ್ಣಿಸಿದ್ದಾನೆ. ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು ಶಿಕ್ಷಿಸಿ ಬುದ್ದಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ತ್ರೇತಾಯುಗದಲ್ಲಿ ಗುರುವು ಬೈದು ಬುದ್ಧಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ದ್ವಾಪರ ಯುಗದಲ್ಲಿ ಗುರುವು ಗದರಿಸಿ ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ.
ಈ ವಚನದಲ್ಲಿ, ಕಾಲದಿಂದ ಕಾಲಕ್ಕೆ ಗುರುವಿನ ಬಗ್ಗೆ ಶಿಷ್ಯರಿಗಿರುವ ಗೌರವಭಾವನೆ ಕ್ಷೀಣಿಸುತ್ತಿರುವುದು ಮತ್ತು ಅವರ ನೈತಿಕ ಮಟ್ಟ ಕುಸಿದಿರುವುದನ್ನು ಮಾರ್ಮಿಕವಾಗಿ ತಿಳಿಸಲಾಗಿದೆ.

ಕಾಯಕದಲ್ಲಿ ನಿರತನಾಡೆ
ಗುರುದರ್ಶನವಾದಡೂ ಮರೆಯಬೇಕು;
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು         - ಆಯ್ದಕ್ಕಿ ಮಾರಯ್ಯ

ಸಾರಾಂಶ: ಆಯ್ದಕ್ಕಿ ಮಾರಯ್ಯನು ಈ ವಚನದಲ್ಲಿ, ಕಾಯಕದ ಮಹತ್ವವನ್ನು ತಿಳಿಸಿದ್ದಾನೆ. ಕಾಯಕವೆಂದರೆ ಯಾವುದಾದರೊಂದು ದೈಹಿಕ ಶ್ರಮ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿನಿತ್ಯ ಏನಾದರೊಂದು ದೈಹಿಕ ಶ್ರಮ ಮಾಡಿಯೇ ಜೀವಿಸಬೇಕು ಮತ್ತು ಕಾಯಕದಲ್ಲಿ ನಿಷ್ಠೆ ಇರಬೇಕು.
ಕಾಯಕ ನಿಷ್ಠೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವನ್ನಾದರೂ ಲಿಂಗಪೂಜೆಯನ್ನಾದರೂ ಮರೆಯಬೇಕು. ವಚನಕಾರರು ಜಂಗಮರಿಗೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದ್ದು ಅಂತಹ ಜಂಗಮರು ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು. ಏಕೆಂದರೆ ಕಾಯಕವು ಗುರು, ಲಿಂಗ, ಜಂಗಮಗಳನ್ನು ಮೀರಿದ್ದು. ’ಕಾಯಕವೇ ಕೈಲಾಸ’ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬುದು ಆಯ್ದಕ್ಕಿ ಮಾರಯ್ಯನ ವಚನದ ಆಶಯವಾಗಿದೆ. ’ಕಾಯಕವೇ ಕೈಲಾಸ’ ಎಂಬುದು ಈತನು ಜಗತ್ತಿಗೆ ನೀಡಿದ ಧ್ಯೇಯವಾಕ್ಯವಾಗಿದೆ.

ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲದೆ ?
ಸೀಳ (ಳು) ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ.            - ಅಮುಗೆರಾಯಮ್ಮ

  
ಸಾರಾಂಶ: ಅಮುಗೆ ರಾಯಮ್ಮ ಈ ವಚನದಲ್ಲಿ ಡಾಂಭಿಕ ಆಚರಣೆ ಮತ್ತು ಹುಟ್ಟುಗುಣವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕಾಗೆಯ ಮರಿ ಎಂದಿಗೂ ಕೋಗಿಲೆ ಆಗಲು ಸಾಧ್ಯವಿಲ್ಲ. ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಕಾಡುನಾಯಿ (ಸೀಳು ನಾಯಿ) ಸಿಂಹದ ಮರಿಯಾಗಲು ಸಾಧ್ಯವಿಲ್ಲ. ಅರಿವು, ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು. ಅಂತಹವರ ಮುಖ ನೋಡಲೂ ಅಸಹ್ಯವೆನಿಸುತ್ತದೆ ಎಂದು ಅಮುಗೆ ರಾಯಮ್ಮ ಜ್ಞಾನವಿಲ್ಲದ ಅಜ್ಞಾನಿಗಳ ಡಾಂಭಿಕ ಆಚರಣೆಗೆ ಮರುಳಾಗಬಾರದು ಎಂದು ಸಂದೇಶ ನೀಡಿದ್ದಾರೆ.

ಮನವ ಗೆದ್ದೆಹನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಿಹೀನರಿರಾ ನೀವು ಕೇಳಿರೋ
ನಮ್ಮ ಶರಣರು ಮನವನೆಂತು ಗೆದ್ದಿಹರೆಂದಡೆ
ಕಾಮ ಕ್ರೋಧವ ನೀಗಿ, ಲೋಭ ಮೋಹ ಮದಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,
ಆ ಮರುಗಿಸುವ ಕಾಯಕವನೆ ಪ್ರಸಾದ ಕಾಯಕವ ಮಾಡಿ ಸಲಹಿದರು
ಕೆಡಿಸುವ ನಿದ್ರೆಯೆನೆ ಯೋಗ ಸಮಾಧಿಯ ಮಾಡಿ,
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?                                                  - ಶಿವಶರಣೆ ಲಿಂಗಮ್ಮ


ಸಾರಾಂಶ: ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ಈ ವಚನದಲ್ಲಿ ತಿಳಿಸಿದ್ದಾರೆ.
ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ, ಮನವನ್ನು ಶುದ್ಧಮಾಡಿಕೊಳ್ಳದೆ; ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಜಯಿಸಿ; ಆಸೆ, ರೋಷ, ಜಗದ ಮೋಹವನ್ನು ಬಿಟ್ಟು; ಕಾಯಕವನ್ನೆ ಪ್ರಸಾದವೆಂದು ತಿಳಿದು; ನಿದ್ರೆಯನ್ನೆ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು; ಸುಖವನ್ನು ತೊರೆದು ಜಗತ್ತನ್ನೆ ಗೆದ್ದವರೆಂದರೆ ಶರಣರು. ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರು ಅಭಿಪ್ರಾಯಪಟ್ಟಿದ್ದಾರೆ.
  


***********

ಒಳ್ನುಡಿ (ಪದ್ಯ-6)

೮ನೇ ತರಗತಿಯಲ್ಲಿ ಅಳವಡಿಸಿರುವ ಸರ್ವಜ್ಷನ ೬ ತ್ರಿಪದಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು(ಬೆಂಗಳೂರು) ಪ್ರಕಟಿಸಿರುವ ‘ಸರ್ವಜ್ಞನ ವಚನಗಳು’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸರ್ವಜ್ಞನ ಪರಿಚಯ
ಸರ್ವಜ್ಞ  (ಚಿತ್ರ ಕೃಪೆ: ಗೂಗಲ್ ಚಿತ್ರಗಳು)

 • ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎಂಬ ಅರ್ಥವಿದೆ. 
 • ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬ.
 • ಈತನ ಕಾಲ ಮತ್ತು ಜೀವನಗಳ ಬಗ್ಗೆ ನಿಖರವಾಗಿ ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. 
 • ಪ್ರಾಯಶಃ ಪುಷ್ಪದತ್ತ  ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.
ಸರ್ವಜ್ಞ  (ಚಿತ್ರ ಕೃಪೆ: ಗೂಗಲ್ ಚಿತ್ರಗಳು)

ಜನನ ಮತ್ತು ಬಾಲ್ಯ

 • ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.
 • ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು.
 • ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.
 • ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.
 • ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಖ್ಖವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ತ್ರಿಪದಿಗಳು

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.
ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ. 

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು 
ಗೋರ್ಕಲ್ಲಮೇಲೆ ಮಳೆಗರೆದರೆ ಆಕಲ್ಲು
ನೀರುಕುಡಿವುದೆ ಸರ್ವಜ್ಞ?

ಸಾಲವನು ಕೊಂಬಾಗ ಹಾಲೋಗರುಂಡಂತೆ 
ಸಾಲಿಗರು ಕೊಂಡು ಎಳೆವಾಗಕಿಬ್ಬಡಿಯ
ಕೀಲು ಮುರಿದಂತೆ ಸರ್ವಜ್ಞ.

ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ 
ಏಳು ಸಾವಿರದ ಎಪ್ಪತ್ತು ವಚನಗಳ
ಹೇಳಿದನು ಕೇಳ ಸರ್ವಜ್ಞ.


 
 
************

ವಾತ್ಸಲ್ಯ (ಪದ್ಯ-8)

ಪ್ರಕೃತ ಪದ್ಯಭಾಗವನ್ನು ಎನ್ ಬಸವಾರಾಧ್ಯರು ಸಂಪಾದಿಸಿರುವ ಕುಮಾರವಾಲ್ಮೀಕಿ ರಚಿಸಿರುವ ‘ತೊರವೆ ರಾಮಾಯಣ’ ಕೃತಿಯ ಒಂದನೆಯ ಸಂಪುಟದ ಅಯೋಧ್ಯಾಕಾಂಡದ ಐದನೆಯ ಸಂಧಿಯಿಂದ ಆರಿಸಿಕೊಳ್ಳಲಾಗಿದೆ.
ಕುಮಾರ ವಾಲ್ಮೀಕಿಯ ಪರಿಚಯ
ಈತನ ನಿಜವಾದ ಹೆಸರು: ನರಹರಿ
ಈತನ ಕಾಲ: ಕ್ರಿ.ಶ.ಸು. ೧೫೦೦
ಈತನ ಕೃತಿ: ‘ತೊರವೆ ರಾಮಾಯಣ’
ಈತನ ಸ್ಥಳ: ವಿಜಾಪುರ ಜಿಲ್ಲೆಯ ತೊರವೆ ಗ್ರಾಮ. ಅಲ್ಲಿನ ದೇವರಾದ ನರಸಿಂಹನ ಅಂಕಿತದಲ್ಲಿ ಕಾವ್ಯರಚನೆ ಮಾಡಿದ್ದಾನೆ.
ಈತನಿಗಿದ್ದ ಬಿರುದು: ಕವಿರಾಜ ಹಂಸ
ಈತ ಬರೆದ “ತೊರವೆ ರಾಮಾಯಣ”ವು ಜನಪ್ರಿಯವಾದ ನಡುಗನ್ನಡ ಕಾವ್ಯವಾಗಿದೆ.  ಕುಮಾರವ್ಯಾಸ ನಂತೆ ಈತ ಸಹ ಭಾಮಿನಿ ಷಟ್ಪದಿಯಲ್ಲಿ ರಚಿಸಿರುತ್ತಾನೆ. ಇದು ಎರಡು ಸಂಪುಟಗಳ ಬೃಹತ್ಕಾವ್ಯ.

ವಾಲ್ಮೀಕಿ ರಾಮಾಯಣದ ಕಥೆಯನ್ನು ಅಂದಗೆಡದಂತೆ ಮೊತ್ತ ಮೊದಲಬಾರಿಗೆ ಕನ್ನಡಕ್ಕೆ ಕೊಟ್ಟ ಕೀರ್ತಿ ತೊರವೆಯ ನರಹರಿಗೆ ಅರ್ಥಾತ್ ಕುಮಾರವಾಲ್ಮೀಕಿಗೆ ಸೇರಿದ್ದು. ನಿರೂಪಣೆ ಮತ್ತು ದೃಷ್ಟಿಗಳಲ್ಲಿ ನಾರಣಪ್ಪನ ಸಂಪ್ರದಾಯಕ್ಕೆ ಸೇರಿದವನು ನರಹರಿ. ರಾಮಾವತಾರದ ಮಹತ್ವವನ್ನು ಸಾರಿ ರಾಮಭಕ್ತಿಯ ತರಂಗಿಣಿಯಲ್ಲಿ ಆಸ್ತಿಕರನ್ನು ಮೀಯಿಸುವುದೇ ಅವನ ಪರಮ ಗುರಿ. ನಾರಣಪ್ಪನ ಭಾಷಾ ಸಾಮರ್ಥ್ಯವಾಗಲೀ ರೂಪಕ ವೈಭವವಾಗಲೀ ಕಲ್ಪನೋಜ್ವಲತೆಯಾಗಲೀ ಅವನಿಗಿಲ್ಲ. ಜನಮನಸ್ಸಿಗೆ ತಾಕುವಂತೆ ಸರಳವಾಗಿ ನಿರರ್ಗಳವಾಗಿ ಕಥೆ ಹೇಳುವುದೇ ಅವನ ಉದ್ದೇಶ. ರಾಮವ್ಯಕ್ತಿತ್ವಕ್ಕೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಕಾವ್ಯದಲ್ಲಿ ತಲೆ ದೋರುವ ರಾಮಚಾರಿತ್ರ್ಯದ ಕೆಲವು ವಿರೋಧಾಭಾಸಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ದೇವರಾದುದರಿಂದ ಆತನ ಕಾರ್ಯಗಳೆಲ್ಲ ದೋಷರಹಿತವೆಂದೇ ಅವನ ಭಾವನೆ. ಆದ್ದರಿಂದ ಬುದ್ದಿಜನ್ಯವಾದ ಜಿಜ್ಞಾಸೆಗಳಿಗೆ ಇಲ್ಲಿ ಎಡೆಯೇ ಇಲ್ಲ. ಮೂಲಕಥೆಯನ್ನು ಅಗತ್ಯವಾದೆಡೆ ಹಿಗ್ಗಿಸಿ, ಅನಗತ್ಯವಾದೆಡೆ ಸಂಕ್ಷಿಪ್ತಗೊಳಿಸುವುದು ಶ್ರೇಷ್ಠ ಕವಿಯ ಸಲ್ಲಕ್ಷಣಗಳಲ್ಲಿ ಒಂದು. ಆದರೆ ಕುಮಾರವಾಲ್ಮೀಕಿ ವಾಲ್ಮೀಕಿಯ ಕಥಾಸಂವಿಧಾನವನ್ನು ಅತ್ಯಂತ ಅಗತ್ಯವೂ ರೋಚಕವೂ ಆದ ಎಡೆಗಳಲ್ಲೇ ಕುಗ್ಗಿಸಿ, ಅನಗತ್ಯವೂ ಅನಾಕರ್ಷಕವೂ ಆದೆಡೆಗಳಲ್ಲೆ ಹಿಗ್ಗಿಸಿ ಕಾವ್ಯಕ್ಕೆ ಬೊಜ್ಜು ಹೆಚ್ಚಿಸಿದ್ದಾನೆ. ವಾಲ್ಮೀಕಿಯಲ್ಲಿ ಬಾಲಕಾಂಡ ಅತ್ಯಂತ ಚಿಕ್ಕದು. ಆದರೆ ನರಹರಿ ಅದನ್ನು ಸುಮಾರು ಎರಡರಷ್ಟು ಗಾತ್ರಕ್ಕೆ ಉಬ್ಬಿಸಿ ನೀರಸಗೊಳಿಸಿದ್ದಾನೆ. ಹಾಗೆಯೇ ಅತ್ಯಂತ ಪ್ರಭಾವಕಾರಿಯೂ ಮಾನವೀಯತೆಯ ಅಂತ ರಾಳದ ಪ್ರಬಲ ಅನಿಕೆಗಳ ಕ್ರಿಯೆಗಳ ಜ್ವಲಂತ ಸಮರ್ಥ ಚಿತ್ರಣವಿರುವ ಅಯೋಧ್ಯಾ ಕಾಂಡವನ್ನು ಅನುಚಿತವಾಗಿ ಹ್ರಸ್ವಗೊಳಿಸಿಬಿಟ್ಟಿದ್ದಾನೆ. ಯುದ್ಧಕಾಂಡವಂತೂ ಸಹನಾತೀತ ವಾಗಿ ಅಕ್ಷಮ್ಯವಾಗಿ ಲಂಬಿತವಾಗಿದೆ, ನಿಸ್ಸಾರವಾಗಿದೆ. ಸಂವಾದಗಳ ಮೂಲಕ ವಾಲ್ಮೀಕಿಯ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ಜೀವನ ಸಂಘರ್ಷ ಇಲ್ಲಿ ತೀರಾ ಸಪ್ಪೆಯಾಗಿದೆ. ಇಡೀ ಕೃತಿ ರಾಮಮಹಿಮಾಮಯವಾಗಿದ್ದು, ಸರಳ ನಿರೂಪಣೆಯಿಂದಾಗಿ ಸಾಮಾನ್ಯ ಜನಪ್ರಿಯತೆಯನ್ನು ಪಡೆಯಿತೆಂಬುದನ್ನು ಬಿಟ್ಟರೆ, ಇದರ ಕೊರತೆಗಳ ಪಟ್ಟಿಯನ್ನು ಹೀಗೇ ಬೆಳೆಸುತ್ತ ಹೋಗ ಬಹುದು.
ತೊರವೆ ರಾಮಾಯಣದ ಗದ್ಯಾನುವಾದವನ್ನು ಕೆ.ಎಸ್.ಕೃಷ್ಣಮೂರ್ತಿಯವರು ಮಾಡಿದ್ದಾರೆ
********ವಿಮರ್ಶೆ ಕೃಪೆ: ಕಣಜ*********
ವಾತ್ಸಲ್ಯ ಪದ್ಯಭಾಗದ ಪೂರ್ವಕಥೆ 
       ಇಕ್ಷ್ವಾಕುವಂಶದ ಮಹಾರಾಜ ದಶರಥ. ಆತನ ರಾಜ್ಯ ಸರಯೂ ನದಿತೀರದಲ್ಲಿರುವ ಅಯೋಧ್ಯೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)
     ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ-ವಾಮದೇವರಂಥ ತಪಸ್ವಿಗಳಾದ ಗುರುಗಳು, ಪುರೋಹಿತರು. ಮನಮೆಚ್ಚಿದ ಮೂವರು ಮಡದಿಯರು. ಕೌಸಲ್ಯಾ, ಸುಮಿತ್ರಾ, ಕೈಕೇಯಿ. ಇಷ್ಟೆಲ್ಲ ಇದ್ದರೂ ರಾಜನಿಗೆ ಮಕ್ಕಳಿಲ್ಲ ಎಂಬ ಚಿಂತೆ ಸದಾ ಕಾಡುತ್ತಿತ್ತು. ಅದರ ಪರಿಹಾರಕ್ಕಾಗಿ ಗುರುಗಳನ್ನು ಪ್ರಾರ್ಥಿಸಿದ. ಗುರುಗಳು ಸೂಚಿಸಿದ ಉಪಾಯದಂತೆ ಪುತ್ರಕಾಮೇಷ್ಠಿಯಾಗ ಮಾಡಿದ. ಅದರ ಫಲದಿಂದ ಮಕ್ಕಳಾದರು ಅವರೇ ರಾಮ. ಲಕ್ಷಣ. ಭರತ. ಶತ್ರುಘ್ನ. ರಾಜ ರಾಣಿಯರು ಪರಮಾನಂದ ಭರಿತರಾದರು. ಮಕ್ಕಳು ದೊಡ್ಡವರಾದರು. ಅವರ ವಿವಾಹವಾಯಿತು. ಎಲ್ಲರು ಸಂತೋಷದಿಂದ ಇದ್ದರು. 
     ಹೀಗಿರುವಾಗ ಬಾನಿನಲ್ಲಿ ಕಂಡ ಧೂಮಕೇತುವು ತನ್ನ ಅಂತ್ಯಕಾಲದ ಸೂಚನೆ ಎಂದು ತಿಳಿದ ದಶರಥನು ತನ್ನ ಹಿರಿಯ ಮಗನಾದ ರಾಮನಿಗೆ ಯುವರಾಜನ ಪಟ್ಟಕಟ್ಟಲು ಸಂಕಲ್ಪಿಸಿದ. ಆದರೆ ಮಂಥರೆಯ ದುರ್ಬೋಧನೆಯಿಂದ ಮತಿಗೆಟ್ಟ ಕಿರಿಯ ಹೆಂಡತಿ ಕೈಕೆಯು ದಶರಥನು ತನಗೆ ಹಿಂದೊಮ್ಮೆ ಕೊಟ್ಟಿದ್ದ ವಚನವನ್ನು ನಡೆಸಿಕೊಡಲು ಕೇಳಿದಳು. ಅವಳ ಕೋರಿಕೆ: ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸುವುದು ಮತ್ತು ತನ್ನ ಮಗನಾದ ಭರತನಿಗೆ ರಾಜ್ಯ ಪಟ್ಟಾಭಿಷೇಕ ಮಾಡುವುದು. ಹೆಂಡತಿಯ ಮಾತನ್ನು ನಡೆಸಿದರೆ ರಾಜ್ಯದ ವಿರೋಧ, ನಡೆಸದಿದ್ದರೆ ಮಾತಿಗೆ ತಪ್ಪಿದಂತಾಗುತ್ತದೆ. ಆದರೆ ಅವನ ರಾಜ್ಯದಲ್ಲಿ ಇರುವ ಯಾರೂ ಕೂಡ ಅಸತ್ಯವನ್ನು ಮಾತನಾಡುತ್ತಿರಲಿಲ್ಲ. ಕ್ರೋಧಾತ್‌ ಕಾಮಾರ್ಥಹೇತೋರ್ವಾ ನ ಬ್ರೂಯಿರನೃತಂ ವಚಃ (ಕಾಮ-ಕ್ರೋಧಾದಿ ಅರಿಷಡ್ವರ್ಗಗಳ ಕಾರಣಕ್ಕಾಗಿ ಯಾರೂ ಸುಳ್ಳು ಹೇಳುತ್ತಿರಲಿಲ್ಲ) ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವುದು ಹೇಗೆ ಸಾಧ್ಯ? ಹೀಗೆ ಅನೇಕ ಕಾರಣಗಳಿ೦ದ ರಾಮನಿಗೆ ಪಟ್ಟಾಭಿಷೇಕ ಮಾಡುವುದು ಸಾಧ್ಯವಾಗಲಿಲ್ಲ. ತಂದೆಯ ವಚನ ಪರಿಪಾಲನೆ ಈಡೇರಿಸಲು ಶ್ರೀರಾಮ ಕಾಡಿಗೆ ಹೋದ. ಇದರಿಂದ ಬಹು ನೊಂದ ದಶರಥ ಪುತ್ರಶೋಕದಿಂದ ತತ್ತರಿಸಿಹೋದನು. ಇದಕ್ಕೆ ತಂಡುಮುನಿಯ ಶಾಪವೇ ಕಾರಣವೆಂದು ಊಹಿಸಿದನು. ತನ್ನನ್ನು ಸಮಾಧಾನ ಪಡಿಸುತ್ತ ಸಮೀಪದಲ್ಲಿದ್ದ  ಹಿರಿಯ ರಾಣಿ ಕೌಸಲ್ಯೆಗೆ ಹಲವು ವರ್ಷಗಳ ಹಿಂದೆ ತನ್ನಿಂದ ನಡೆದ ಅಚಾತುರ್ಯದ ಘಟನೆಯನ್ನು ಹೇಳುವ ಸಂದರ್ಭವೇ ಈ ಕಥಾಭಾಗ.

ವಾತ್ಸಲ್ಯ ಪದ್ಯಭಾಗದ ಭಾವಾರ್ಥ


[ತಾಂಡವ ಅಥವಾ ಶ್ರವಣಕುಮಾರನ ತಂದೆಯ ಹೆಸರು-ವೈಶ್ಯ , ತಾಯಿ - ಶೂದ್ರಣತಿ]

ಅಂಬುಜಾನನೆ ಕೇಳು ತಾಂಡವ
ನೆಂಬಮುನಿ ಪಿತೃಮಾತೃಸೇವಾ
ಲಂಬಕನು ತೊಳಲಿದನು ನಾನಾ ತೀರ್ಥಯಾತ್ರೆಯಲಿ ||
ಅಂಬುವನು ತರಲೆಂದು ಪಿತೃಗಳ
ಕಂಬಿಯನು ನೇರಿರಿಸಿ ಚರ್ಮದ
ತಂಬುಗೆಯನು ಕೊಂಡಱಸುತಿರುಳೈದಿದನು ಜೀವನವ ||೧||

ಭಾವಾರ್ಥ: ತಾವರೆಯಂತಹ ಕಣ್ಣುಗಳನ್ನು ಹೊಂದಿರುವವಳೆ(ಕೌಸಲ್ಯೆ) ಕೇಳು, ತಂದೆ-ತಾಯಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ತಾಂಡವ ಎಂಬ ಮುನಿಯು ತನ್ನ ತಂದೆ ತಾಯಿಯನ್ನು ಹೊತ್ತುಕೊಂಡು ಹಲವಾರು ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡುತ್ತಿದ್ದನು. ಆತನ ತಂದೆ-ತಾಯಿಗೆ ಬಾಯಾರಿಕೆಯಾದಾಗ ಅವರನ್ನು ಹೊತ್ತಿದ್ದ ಕಂಬಿಯನ್ನು(ಸಲಾಕೆ/ಅಡ್ಡೆ) ಮರದ ಕೊಂಬೆಗೆ ನೇತುಹಾಕಿ, ಚರ್ಮದ ತಂಬುಗೆಯನ್ನು ತೆಗೆದುಕೊಂಡು ನೀರನ್ನು ಹುಡುಕುತ್ತಾ ಹೋದನು.

ತೋಹಿನಲಿ ತಾನಿರುಳು ಶರಸ
ನ್ನಾಹನಾಗಿರೆ ತಾಂಡವನು ತ
ದ್ವಾಹಿನಿಯೊಳದ್ದಿದನು ಕರವತಿಗೆಯನು ಕೈ ನೀಡಿ ||
ಮೋಹಿಸಿತು ಘುಳುಘುಳು ನಿನಾದ ವ
ರಾಹನಿಸ್ವನದಂತೆ ಮುನಿಯೆಂ
ಬೂಹೆಕೊಳ್ಳದೆ ಕೊಂಡು ಹರಿದುದು ಚಿತ್ತವಘಪಥಕೆ ||೨||

ಭಾವಾರ್ಥ: ನಾನು ಆ ರಾತ್ರಿ ನದಿಯ ಪಕ್ಕದಲ್ಲಿ ಮರದ ತೋಪಿನಲ್ಲಿ ನಿಂತು ಬೇಟೆಯಾಡಲು ಬಾಣಹೂಡಿಕೊಂಡು ಸಿದ್ಧನಾಗಿ ನಿಂತಿರುವಾಗ ತಾಂಡವನು ಅದೇ ನದಿಯಲ್ಲಿ ನೀರು ತುಂಬಿಕೊಳ್ಳಲು ತಂಬುಗೆಯನ್ನು ಅದ್ದಿದನು. ಆತನು ನೀರು ತುಂಬಿಸಿಕೊಳ್ಳಲು  ತಂಬುಗೆಯನ್ನು ಅದ್ದಿದಾಗ ಕೇಳಿಸಿದ ಘುಳುಘುಳು ಧ್ವನಿಯು ಕಾಡು ಹಂದಿಯು ಮಾಡುತ್ತಿರುವ ಶಬ್ದವೆಂಬಂತೆ ನನ್ನನ್ನು ಮೋಹಗೊಳಿಸಿ, ಮುನಿ ಎಂದು ಊಹೆ ಮಾಡಲಾಗದೆ ನನ್ನ ಮನಸ್ಸು ಪಾಪಮಾರ್ಗದ ಕಡೆಗೆ ಹರಿಯಿತು.

ಆ ರವ ಧ್ವನಿಗೊಡುವುದನು ಭೂ
ದಾರವೆಂದೇ ಬಗೆದು ಹೂಡಿದ
ಕೂರಲಗು ಬಿಡೆ ಬಿದ್ದುದುರದಲಿ ವೈಶ್ಯಮುನಿವರನ ||
ಭೂರಿಬಾಣ ವ್ಯಥೆಯನಾ ಮುನಿ
ಸೈರಿಸದೆ ಶಂಕರ ಸದಾಶಿವ
ಮಾರಹರ ಹರಯೆನುತ ಹಮ್ಮೈಸಿದನು ಮೂರ್ಚೆಯಲಿ ||೩||

ಭಾವಾರ್ಥ: ಆ ಶಬ್ದವನ್ನು ಕಾಡುಹಂದಿ ಎಂದೇ ಭಾವಿಸಿ ನಾನು ಹೂಡಿದ್ದ ಹರಿತವಾದ ಬಾಣವನ್ನು ಬಿಟ್ಟೆನು. ಆ ಬಾಣವು ವೈಶ್ಯಮುನಿಪುತ್ರನ ಎದೆಯಲ್ಲಿ ನಾಟಿತು. ಆ ಮಹಾ ಬಾಣದ ನೋವನ್ನು ಆತನು ಸಹಿಸಿಕ್ಕೊಳ್ಳಲಾಗದೆ “ಶಂಕರಾ.. ಸದಾಶಿವಾ.. ಮಾರಹರಾ.. ಹರಾ..” ಎಂದು ಕೂಗುತ್ತಾ ಮೂರ್ಚೆಹೋದನು.

ನರರರು ರಜನೀಮುಖದ ಸೀಮಾ
ಚರಿತರುತ್ತರಭಾಗ ರಾತ್ರೀ
ಚರರಿಗಾಗಿಹುದಿದುವೆ ನೀ ನರನೋ ನಿಶಾಚರನೊ ||
ನಿರುತವಾವುದು ಹೇಳೆನಲು ನಾವ್
ನರರು ವಿಟತಾಪಸರು ತೀರ್ಥಾ
ಚರಿತರಿನ್ನಾರಾದಡೇನೆಮಗಾಯ್ತು ಹರಿವೆಂದ ||೪||
ಭಾವಾರ್ಥ: ಈ ಸೂರ್ಯಾಸ್ತದ ಸಮಯವು(ರಜನೀಮುಖ) ರಾತ್ರಿವೇಳೇಯಲ್ಲಿ ಅಲೆದಾಡುವ ರಾಕ್ಷಸರು ಸಂಚರಿಸುವವರ ಸಮಯವಾಗಿದೆ. ನೀನು ನರನೋ?(ಮನುಷ್ಯನೋ) ಅಥವಾ ನಿಶಾಚರನೋ? ನಿಜವನ್ನು ಹೇಳು ಎಂದಾಗ ತಾಂಡವ ಮುನಿಯು “ನಾವು ಮನುಷ್ಯರು. ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವ ತಪಸ್ವಿಗಳು (ವಿಟತಾಪಸರು). ಯಾರಾದರೇನು! ನಮಗೆ (ತಂದೆ-ತಾಯಿ-ಮಗ) ಅಗಲಿಕೆಯುಂಟಾಯಿತು” ಎಂದನು

ಹಳೆದಿನದ ತಾಯ್ತಂದೆಗಳ ಬಿಡ
ದಲಸದವರನು ಹೊತ್ತು ತೊಳಲಿದೆ
ನಿಳೆಯೊಳುಳ್ಳ ಸಮಸ್ತತೀರ್ಥಕ್ಷೇತ್ರಗಿರಿವನವ ||
ಉಳಿದುದೊಂದೇ ಕಾಶಿ ಕಾಶಿಯೊ
ಳಿಳುಹುವದೆ ಸಂಕಲ್ಪವದು ತಾ
ನಿಲುಕದಾದುದು ದೈವಗತಿ ಬೇಱಿದ್ದುದೆನಗೆಂದ  || ೫ ||

ಭಾವಾರ್ಥ: ಬಹಳ ವಯಸ್ಸಾದ ನನ್ನ ತಾಯಿ-ತಂದೆಗಳನ್ನು ನಾನು ಎಂದೂ ಬಿಡದೆ ಆಯಾಸಪಡದೆ ಬೇಸರಗೊಳ್ಳದೆ ಹೊತ್ತುಕೊಂಡು ಈ ಭೂಮಿಯಲ್ಲಿರುವ ಸಮಸ್ತ ತೀರ್ಥಕ್ಷೇತ್ರ-ಗಿರಿ-ವನಗಳನ್ನು ಸಂದರ್ಶಿಸಿದೆ. ಕಾಶಿ ಸಂದರ್ಶೀಸುವುದು ಮಾತ್ರ ಉಳಿದಿತ್ತು. ಆ ಕಾಶಿಯಲ್ಲಿ ತಂದೆತಾಯಿಗಳನ್ನು ಇಳಿಸುವುದು ನನ್ನ ಸಂಕಲ್ಪವಾಗಿತ್ತು. ಆದರೆ ಅದು ಕೈಗೂಡಲಿಲ್ಲ. ನನ್ನ ಮೇಲೆ ದೇವರ ಇಚ್ಛೆಯೇ ಬೇರೆಯಾಗಿತ್ತು. ಎಂದನು ತಾಂಡವನು.

ನೀರನೆಱೆಕೊಂಡೊಯ್ದು ಮೇಲುಪ
ಚಾರವೇನದ ಮಾಡು ಗಂಗಾ
ತೀರವನು ಸಾರುವೆಡೆ ಕೊಂಡೊಯ್ದಿಳುಹು ಕಾಶಿಯಲಿ ||
ಭಾರವಿದು ನಿನಗಿದುವೆ ಮೃತಸಂ
ಸ್ಕಾರಪರಿಯಂತರಸ ಕೇಳೆಂ
ದೂರುಜವ್ರತಿ ಸರಳ ಕೀಲಿಸಿ ಮುಗಿದನಕ್ಷಿಗಳ || ೬ ||

ಭಾವಾರ್ಥ: “ನೀನು ನನ್ನ ತಂದೆ-ತಾಯಿಗೆ ಈ ನೀರನ್ನು ತೆಗೆದುಕೊಂಡು ಹೋಗಿ ಅವರಿಗೆ ಏನಾದರೂ ಮೇಲುಪಚಾರವನ್ನು ಮಾಡು. ಗಂಗಾ ತೀರಕ್ಕೆ ಹೋವಾಗ ಅವರನ್ನು ತೆಗೆದುಕೊಂಡುಹೋಗಿ ಕಾಶಿಯಲ್ಲಿ ಇಳಿಸಿಬಿಡು. ಅರಸನೇ ಕೇಳು ಸತ್ತವರಿಗೆ ಮಾಡುವ ಉತ್ತರ ಕ್ರಿಯಾದಿ ಸಂಸ್ಕಾರದಂತೆ ಇದು ನಿನಗೆ ಭಾರವಾಗಬಹುದು” ಎಂದು ವೈಶ್ಯನಾದ ತಾಂಡವಮುನಿಯು ಎದೆಗೆನಾಟಿದ್ದ ಬಾಳವನ್ನು ಕಿತ್ತುಹಾಕಿಸಿ ಕಣ್ಣುಮುಚ್ಚಿದನು.

ನೀರೊಳಗೆ ಜಾಱಿದನೊ ಮೇಣು
ಗ್ರೋರಗನೊಳಳಿವಾಯ್ತೊ ದುಷ್ಟಚ
ಮೂರ ಚಪ್ಪರಿಸಿದುದೊ ಕೆಡೆದನೊ ಹಳ್ಳಕೊಳ್ಳದಲಿ ||
ಕ್ರೂರಲುಬ್ಧಕರಸ್ತ್ರಹತಿಯಲಿ
ತೀರಿದನೊ ಹಾ ಕಂದ ಹಾ ಎಂ
ಬೂರುಜವ್ರತಿಗಳನು ಕಂಡತಿಮರುಕವಾಯ್ತೆಂದ ||೭||

ಭಾವಾರ್ಥ: ಅವನು ನೀರಿನೊಳಗೆ ಜಾರಿದನೋ ಉಗ್ರವಾದ ಸರ್ಪವೊಂದರಿಂದ ಹತನಾದನೋ ಉಗ್ರವಾದ ಹುಲಿ(ಚಮೂರ) ಚಪ್ಪರಿಸಿತೋ ಹಳ್ಳಕೊಳ್ಳದಲ್ಲಿ ಕೆಡೆದನೋ ಅಥವಾ ಬೇಟೆಗಾರರ ಬಾಣದ ಹೊಡೆತಕ್ಕೆ ತೀರಿಹೋದನೋ? “ಹಾ ಕಂದ.. ಹಾ...” ಎನ್ನುತ್ತಾ ಆರ್ತನಾದ ಮಾಡುತ್ತಿದ್ದ ವೈಶ್ಯ ವ್ರತಿಗಳನ್ನು (ತಾಂಡವನ ತಂದೆತಾಯಿಗಳನ್ನು) ನೋಡಿ ನನಗೆ ಬಹಳ ಮರುಕ ಉಂಟಾಯಿತು” ಎಂದನು.ನೊಂದೆನಾ ನುಡಿಗೇಳುತವೆ ಪೂ
ರ್ಣೇಂದುಮುಖಿ ಕೇಳ್ ತಾಂಡವನ ತಾಯ್
ತಂದೆಗಳ ದನಿದೋಱದಿಳುಹಿದೆನಿಳೆಗೆ ಮರದಿಂದ ||
ಇಂದಿದೇನೈ ತಡೆದೆ ನೀರನು
ತಂದಡೆಱೆ ತಮಗೆನಲು ವಿಗತಾ
ನಂದಮಾನಸನಾಗಿ ಬಳಿಕೆಱೆದೆನು ಹಿಮೋದಕವ || ೮ ||

ಭಾವಾರ್ಥ: ನಾನು ಅವರ ಕೂಗಾಟದ ಮಾತನ್ನು ಕೇಳಿ ನೊಂದೆನು. ಪೂರ್ಣಚಂದ್ರನಂತ ಮುಖವುಳ್ಳವಳೆ ಕೇಳು, ನಾನು ಮಾತನಾಡದೆ ಮೌನವಾಗಿ ತಾಂಡವನ ತಾಯಿ-ತಂದೆಯನ್ನು ಮರದಿಂದ ನೆಲದಮೇಲಕ್ಕೆ ಇಳಿಸಿದೆನು. ಆಗ ಅವರು “ಇಂದು ಇದೇನೈ ತಡಮಾಡಿ ಬಂದೆ? ನೀರನ್ನು ತಂದಿದ್ದರೆ ನಮಗೆ ಕುಡಿಸು” ಎಂದಾಗ ನಾನು ದುಖಃದ ಮನಸ್ಸಿನಿಂದ (ವಿಗತಾನಂದಮಾನಸ=ಆನಂದ ಕಳೆದುಕೊಂಡ ಮನಸ್ಸಿನಿಂದ) ಅವರಿಗೆ ತಣ್ಣನೆಯ ನೀರನ್ನು ಎರೆದೆನು.

ಹೊಲಸುದೋಱಿದೆ ಮಗನೆ ಜಲವೆಮ
ಗಲಸಿದೆಯಲಾ ಸೇವೆಯಲಿ ವಿಧಿ
ಮುಳಿಯದಕಟಾ ಪಾಪಿಗಳಿಗೆನುತೊಕ್ಕರಾ ಜಲವ ||
ಬಳಿಕ ತನ್ನಿಂದಾದ ಹದನನು
ತಿಳಿಯ ಹೇಳಿದು ಶಾಪವನು ಕೈ
ಗೊಳಿಸಿ ತನಗೆಂದವರ್ಗೆ ಕೈಗಳ ಮುಗಿದೆ ನಾನೆಂದ || ೯ ||

ಭಾವಾರ್ಥ: ನಾನು ಅವರಿಗೆ ನೀರು ಕುಡಿಸಿದ ಕೂಡಲೇ ಅವರು, “ಮಗನೇ ನೀನು ಕುಡಿಸಿದ ನೀರು ಹೊಲಸಾಗಿದೆ(ಅಶುದ್ಧವಾಗಿದೆ). ನಮಗೆ ಸೇವೆ ಮಾಡುವುದರಲ್ಲಿ ಆಲಸಿಕೆ ತೋರಿದೆಯಲ್ಲವೇ? ವಿಧಿ ನಿನ್ನಂತಹ ಪಾಪಿಗಳ ಮೇಲೆ ಮುನಿಯದೇ?” ಎಂದು ಕುಪಿತರಾಗಿ ನೀರನ್ನು ಉಗಿದುಬಿಟ್ಟರು. ಆನಂತರ ನಾನು ನನ್ನಿಂದ ಸಂಭವಿಸಿದ ಘಟನೆಯನ್ನು ತಿಳಿಯುವಂತೆ ಹೇಳಿ, “ನನ್ನಿಂದ ತಪ್ಪಾಯಿತು ನನಗೆ ಏನು ಶಾಪ ಬೇಕಾದರೂ ನೀಡಿ” ಎಂದು ನಾನು ಅವರಿಗೆ ಕೈಮುಗಿದೆನು ಎಂದನು.

ಅಳಿದ ಮಗನೋಪಾದಿ ನಿಮ್ಮನು
ಸಲಹುವೆನು ನಂಬುವುದು ನೀವೆನ
ಲಲಸಿ ಬಳಿಕಸುವಿಡಿಯಲೊಲ್ಲದೆ ಸುತವಿಯೋಗದಲಿ ||
ಅಳಿವು ಸಮನಿಸಲೆನುತ ನಳಿನಜ
ನಿಳಯಕಭಿಮುಖರಾದರನಿಬರು
ಜಳನ ಸಂಸ್ಕೃತಿಯಿಂದ ಮಾಡಿದೆನೂರ್ಧ್ವದೇಹಿಕವ || ೧೦ ||

ಭಾವಾರ್ಥ: ನಾನು ಅವರನ್ನು ಸಂತೈಸುತ್ತಾ “ಅಳಿದು ಹೋದ ನಿಮ್ಮ ಮಗನಂತೆಯೇ ನಿಮ್ಮನ್ನು ಸಲಹುತ್ತೇನೆ. ನೀವು ನನ್ನನ್ನು ನಂಬಿ” ಎಂದು ಬೇಡಿದೆನಾದರೂ ಅವರು ಬೇಸರಿಸಿ ಇನ್ನು ಬದುಕಿರಲು ಇಚ್ಛಿಸದೆ, “ಮಗನ ಅಗಲಿಕೆಯಿಂದ ನಿನಗೆ ಸಾವು ಸಂಭವಿಸಲಿ” ಎಂದು ನನಗೆ ಶಾಪ ನೀಡಿ ಬ್ರಹ್ಮಲೋಕದ ಕಡೆಗೆ ಮುಖಮಾಡಿದರು(ಪ್ರಾಣಬಿಟ್ಟರು). ಇಬ್ಬರ ದೇಹಗಳನ್ನು ಜಲನಸಂಸ್ಕೃತಿಯಿಂದ(ಉತ್ತರಕ್ರಿಯೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಮಾಡಿದನಂತರ ದೇಹವನ್ನು ನೀರಿನಲ್ಲಿ ತೇಲಿಬಿಡುವುದು) ಸಂಸ್ಕಾರಮಾಡಿದೆನು.
**********
 ವಾತ್ಸಲ್ಯ ಪದ್ಯಪಾಠಕ್ಕೆ ಪೂರಕವಾದ ವೀಡಿಯೋ ವೀಕ್ಷಿಸಿ
********
ವಾತ್ಸಲ್ಯ ಪದ್ಯಪಾಠಕ್ಕೆ ಪೂರಕವಾದ ಚಿತ್ರಗಳು


 
ಆಧುನಿಕ ಶ್ರವಣಕುಮಾರ
********************