ನನ್ನ ಪುಟಗಳು

31 ಡಿಸೆಂಬರ್ 2021

ವಡ್ಡಾರಾಧನೆ - ಸಿರಿದಿಣ್ಣ ಭಟ್ಟಾರರ ಕಥೆ | Vaddaradhane-Siridinna bhatarara kathe

 ಸಿರಿದಿಣ್ಣ ಭಟ್ಟಾರರ ಕಥೆಯಂ ಪೇೞ್ವೆಂ :

        ಗಾಹೆ || ಸೀದೇಣ ಪುವ್ವವೇರಿಯ ದೇವೇಣ ವಿಗುವ್ವಿದೇಣ ಘೋರೇಣ
                    ಸಂಸಿತ್ತೋ ಸಿರಿದಿಣ್ಣೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಸೀದೇಣ – ಅಯ್ಕಿಲಿಂದಂ, ಪುವ್ವವೇರಿಯ ದೇವೇಣ – ಮುನ್ನಿನ ಭವದ ಪಗೆವನಪ್ಪ ದೇವನಿಂದಂ, ವಿಗುವ್ವಿದೇಣ – ವಿಗುರ್ವಿಸೆಪಟ್ಟುದಱಂದಂ, ಘೋರೇಣ – ಆದಮಾನುಂ ಕಡಿದಪ್ಪುದಱಂದಂ, ಸಂಸಿತ್ತೋ – ತಿಳಿಯಪಟ್ಟೊನಾಗಿ, ಸಿರಿದಿಣ್ಣೋ – ಸಿರಿದಿಣ್ಣನೆಂಬ ಭಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನಚಾರಿತ್ರಾರಾಧನೆಯಂ*

    ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ದೃಷ್ಟಿಶ್ರಾವಕಂ ಸಿಂಹರಥನೆಂಬೊನರಸಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಸಾಕೇತವೆಂಬುದದನಾಳ್ವೊಂ ಶ್ರಾವಕಂ ಸುಮಂತನೆಂಬೊನರಸಂ ಮತ್ತಿತ್ತ ಮಂಗಳಾವತಿಯೆಂಬುದು ನಾಡಲ್ಲಿ ಇಳಾಪಟ್ಟಣಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ ದೃಷ್ಟಿ ಶ್ರಾವಕಂ ಜಿತಶತ್ರುವೆಂಬೊನರಸನಾತನರಸಿ ಇಳಾ ಮಹಾದೇವಿಯೆಂಬೊಳಾ ಅರಸನ ದಾದಿ ವಿನಯಮತಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಕಾಲಂ ಸಲೆ ಘಾಲ್ಗುನ ನಂದೀಶ್ವರಂ ಬಂದೊಡೆ ಮೂವರುಂ ಮಂಡಲಿಕರುಂ ತಂತಮ್ಮ ಪೊೞಲ್ಗಳೊಳೆಂಟು ದಿವಸಮರ್ಹದ್ಭಟ್ಟಾರಕರ್ಗೆ ಮಹಾಮಹಿಮೆಗಳಂ ಮಾಡಲ್ ತೊಡಗಿದರಿತ್ತ ಜಿತಶತ್ರುವುಂ ತನ್ನ ಪೊೞಲೊಳೆಂಟು ದಿವಸಂ ಜಿನಮಹಾಮಹಿಮೆಯಂ ಮಾಡಲ್ ತೊಡಗಿದನ್

        ಸಿರಿದಿಣ್ಣ ಭಟಾರರ ಕಥೆಯನ್ನು ಹೇಳುವೆನು – (ಸಿರಿದಿಣ್ಣನೆಂಬ ಋಷಿಯು ಹಿಂದಿನ ಜನ್ಮದ ಶತ್ರುವಾದ ವ್ಯಂತರದೇವನಿಂದ ಮಾಯೆಯ ಸೃಷ್ಟಿಯಾದ ಕಠಿನವಾದ ಶೀತದಿಂದ ಕೂಡಿದ ಗಾಳಿ ಮಳೆಗಳಿಂದ ಸೇಚಿಸಲ್ಪಟ್ಟವನಾದರೂ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರಗಳ ಆರಾಧನೆಯನ್ನು ಮಾಡಿ ಮೋಕ್ಷ ಹೊಂದಿದನು.) ಅದು ಹೇಗೆಂದರೆ : – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಅಂಗ ಎಂಬ ನಾಡಿದೆ. ಅಲ್ಲಿ ಚಂಪಾನಗರವೆಂಬ ಪಟ್ಟಣವನ್ನು ಸಮ್ಯಕ್ ದೃಷ್ಟಿಯನ್ನು ಪಡೆದ ಜೈನಗೃಹಸ್ಥನಾದ ಸಿಂಹರಥನೆಂಬ ರಾಜನು ಆಳುತ್ತಿದ್ದನು. ಇನ್ನೊಂದೆಡೆ ಮಗಧೆಯೆಂಬ ನಾಡಿನಲ್ಲಿ ಸಾಕೇತವೆಂಬ ಪಟ್ಟಣವಿದೆ. ಅದನ್ನು ಶ್ರಾವಕನಾದ ಸುಮಂತನೆಂಬ ರಾಜನು ಆಳುತ್ತಿದ್ದನು. ಇತ್ತ ಇನ್ನೊಂದೆಡೆ ಮಂಗಳಾವತಿ ಎಂಬ ನಾಡಿನಲ್ಲಿ ಇಳಾ ಎಂಬ ಪಟ್ಟಣವಿದೆ. ಅದನ್ನು ಸಮ್ಯಗ್ ದೃಷ್ಟಿಯನ್ನು ಸಂಪಾದಿಸಿರತಕ್ಕ ಶ್ರಾವಕನಾದ ಜಿತಶತ್ರು ಎಂಬ ರಾಜನು ಆಳುತ್ತಿದ್ದನು. ಜಿತಶತ್ರುವಿನ ಹೆಂಡತಿ ಇಳಾ ಮಹಾದೇವಿ ಎಂಬವಳು. ಆ ಅರಸನಿಗೆ ವಿನಯಮತಿ ಎಂಬ ಒಬ್ಬಳು ದಾದಿ ಇದ್ದಳು. ಅಂತು ಅವರೆಲ್ಲರೂ ತಮ್ಮ ಇಷ್ಟ ವಿಷಯದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗೆಯೇ ಕಾಲ ಕಳೆಯಿತು. ಒಮ್ಮೆ ಫಾಲ್ಗುಣ ಮಾಸದ ನಂದೀಶ್ವರ ಹಬ್ಬ ಬಂತು. ಆಗ ಮೂವರು ಮಾಂಡಲಿಕ ರಾಜರೂ ತಮ್ಮ ತಮ್ಮ ಪಟ್ಟಣಗಳಲ್ಲಿ ಎಂಟು ದಿವಸವೂ ಜೈನ ತೀರ್ಥಂಕರರಿಗೆ ಮಹತ್ತಾದ ಉತ್ಸವಗಳನ್ನು ಮಾಡತೊಡಗಿದರು. ಇತ್ತ ಜಿತಶತ್ರುವೂ ತನ್ನ ಪಟ್ಟಣದಲ್ಲಿ ಎಂಟು ದಿವಸವೂ ಜಿನ ಮಹೋತ್ಸವಗಳನ್ನು ಮಾಡಲು ಉಪಕ್ರಮಿಸಿದನು. 

        ತನ ದಾದಿ ವಿನಯಮತಿಯೆಂಬೊಳ್ ಗುಜ್ಜಿ ವಿರಳದಂತೆ ಆದಮಾನುಂ ವಿರೂಪೆ ಪೇಸೆಪಡುವಳ್ ನೋಡಿದ ಜನಕ್ಕೆ ಭಯಮಂ ಪಡೆವೊಳ್ ನಾಣಿಸೆಪಡುವೊಳಂತಪ್ಪಾಕೆ ಅರಸನೊಡೆನೆ ಜಿನಮಹಾಮಹಿಮೆಯಂ ನೋಡಲ್ ಪೋಪಾಗಳರಸನೆಂದೊನಬ್ಬಾ ನೀಮುಂ ಮಹಿಮೆಗೆ ಬರಲ್ವೇಡ ನಿಮ್ಮಂ ಕಂಡು ಮಹಿಮೆಗೆ ವಂದ ನೆರವಿಯಂಜುಗುಂ ಪೇಸುಗುಮಮಂಗಳಮೆಂಗುಮದಱಂ ನೀಮುಂ ಮನೆಯೊಳಿರಿಮೆಂದಿರಿಸಿ ತಾನುಂ ಸಹಸ್ರಕೂಟಮೆಂಬ ಚೈತ್ಯಾಲಯಕ್ಕೆ ಮಹಾಮಹಿಮೆಯಂ ಮಾಡಲ್ ಪೋದನ್ ಇತ್ತ ದಾದಿಯುಂ ಮಗನ ಮಾಡುವ ಮಹಾಮಹಿಮೆಯಂ ನೋಡಲ್ ಪೆತ್ತೆನಿಲ್ಲೆಂದುಬ್ಬೆಗಂ ಬಟ್ಟು ತನ್ನಂ ತಾಂ ಪೞದು ನಂದೀಶ್ವರದೆಂಟು ದಿವಸಮಭಿಷೇಕಮುಮರ್ಚನೆಯುಮಷ್ಟೋಪ ವಾಸಮುಮಂ ಮಾಡಿ ದೇವರಂ ಬಂದಿಸುತ್ತಂ ಪೂಜಿಸುತ್ತಿರ್ದಳಿತ್ತರಸನುಮೆಂಟು ದಿವಸಂ ಮಹಾಮಹಿಮೆಯಭಿಷೇಕ ಮುಮಂ ಮಾಡಿ ಸವೆಯಿಸಿದ ಬೞಕ್ಕ ದಾದಿಗೆ ಬೞಯಟ್ಟಿವರಿಸಿ ಇಂತೆಂದನಬ್ಬಾ ನೀಮಿಂತೇಕೆ ಕರಂ ಬಡಪಟ್ಟಿರ್ದ್ದಿರೆಂದೊಡೆ ದಾದಿಯಿಂತೆಂದಳ್ ಮಗನೆ ಎಂಟು ದಿವಸಸಮುಪವಾಸಂ ಗೆಯ್ದು ಮನೆಯೊಳ್ ದೇವರ್ಗ್ಗಭಿಷೇಕಮುಂ ಪೂಜೆಯುಮಂ ಮಾಡಿಸುತ್ತಿರ್ದೆನೆಂದೊಡೆ ಅದಂ ಕೇಳ್ದಾದಮಾನುಮರಸನೊಸೆದು ಬಡವಾದುದುಮಂ ಕಂಡು ಕರುಣಿಸಿ ಅಬ್ಬಾ ನಿಮಗೊಸೆದೆಂ ವರಮಂ ಬೇಡಿಕೊಳ್ಳಿಮೆಂದೊಡಾಕೆಯಿಂತೆಂದಳ್ ಮಗನೆ ನೀನೆನಗೊಸೆದೆಯಪ್ಪೊಡೆನಗೆಂದು ಮತ್ತಮೆಂಟುದಿವಸಂ ದೇವರ್ಗ್ಗೆ ಮಹಾಮಹಿಮೆಯಂ ಮಾಡೆಂದು ಪೇೞ್ದೊಡಂತೆಗೆಯ್ವೆನೆಂದರಸಂ

    ಅವನ ದಾದಿಯಾದ ವಿನಯಮತಿಯೆಂಬವಳು, ಕುಬ್ಜೆಯೂ ವಿರಳವಾದ ಹಲ್ಲುಗಳುಳ್ಳವಳೂ ಅತಿಶಯವಾಗಿ ಕೆಟ್ಟರೂಪಿನವಳೂ ಆಗಿ ಇತರರಿಂದ ಹೇಸಲ್ಪಡುವವಳಾಗಿದ್ದಳು. ನೋಡಿದ ಜನರಿಗೆ ಹೆದರಿಕೆಯುಂಟುಮಾಡುವವಳಾಗಿದ್ದಳು, ನಾಚಿಕೆಯುಂಟು ಮಾಡುವವಳಾಗಿದ್ದಳು. ಅಂತಹ ಆಕೆ ಅರಸನೊಡನೆ ಜಿನೇಂದ್ರನ ಮಹೋತ್ಸವವನ್ನು ನೋಡಲು ಹೋಗುತ್ತಿರುವಾಗ ಅರಸನು ಅವಳೊಡನೆ ಹೀಗೆಂದನು – “ಅಮ್ಮಾ ನೀವು ಉತ್ಸವಕ್ಕೆ ಬರುವುದು ಬೇಡ. ಉತ್ಸವಕ್ಕೆ ಬಂದ ಜನಸಂದಣಿ ನಿಮ್ಮನ್ನು ಕಂಡು ಹೆದರೀತು, ಹೇಸಿಗೆ ಪಟ್ಟೀತು, ಅಶುಭವೆಂದು ಹೇಳೀತು. ಆದುದರಿಂದ ನೀವು ಮನೆಯೊಳಗೆ ಇದ್ದು ಬಿಡಿ.“ ಹೀಗೆ ಹೇಳಿ ಅವಳನ್ನು ಮನೆಯಲ್ಲೇ ನಿಲ್ಲಿಸಿ ರಾಜನು ಮಹಾಉತ್ಸವವನ್ನು ನೆರವೇರಿಸುವುದಕ್ಕಾಗಿ ಸಹಸ್ರಕೂಟವೆಂಬ ಚೈತ್ಯಾಲಯಕ್ಕೆ (ಜಿನಾಲಯಕ್ಕೆ) ತೆರಳಿದನು. ಇತ್ತದಾದಿಯು ತನ್ನ ಮಗನು ಮಾಡುವ ಮಹೋತ್ಸವವನ್ನು ನೋಡಲಾರದೆ ಹೋದೆನೆಂದು ತನ್ನನ್ನು ತಾನೇ ನಿಂದಿಸಿದಳು. ನಂದೀಶ್ವರ ಹಬ್ಬದ ಎಂಟು ದಿವಸವೂ ಅಭಿಷೇಕ, ಅರ್ಚನೆ, ಎಂಟು ದಿನಗಳ ಉಪವಾಸ – ಇವನ್ನೆಲ್ಲ ಮಾಡಿ, ದೇವರಿಗೆ ವಂದನೆ ಸಲ್ಲಿಸುತ, ಪೂಜಿಸುತ್ತ ಇದ್ದಳು. ಇತ್ತ ರಾಜನು ಎಂಟು ದಿವಸವೂ ಮಹಾಉತ್ಸವದ ಅಭಿಷೇಕವನ್ನು ಮಾಡಿ ಮುಗಿಸಿದ ಮೇಲೆ ದಾದಿಗೆ ಹೇಳಿ ಕಳುಹಿಸಿ, ಆಕೆಯನ್ನು ಬರಮಾಡಿ ಹೀಗೆಂದನು – “ನೀವು ಹೀಗೆ ಏಕೆ ಬಹಳ ಬಡವಾಗಿದ್ದೀರಿ?“ ಆಗ ಅದಕ್ಕೆ ದಾದಿಯು ರಾಜನೊಡನೆ – “ಮಗನೇ, ನಾನು ಎಂಟು ದಿವಸ ಉಪವಾಸ ಮಾಡಿ, ಮನೆಯಲ್ಲಿಯೇ ದೇವರಿಗೆ ಅಭಿಷೇಕವನ್ನೂ ಪೂಜೆಯನ್ನೂ ಮಾಡಿಸುತ್ತ ಇದ್ದೆನು“ ಎಂದಳು. ರಾಜನು ಅದನ್ನು ಕೇಳಿ ಅತಿಶಯವಾಗಿ ಪ್ರೀತಿ ತಾಳಿದನು. ಆಕೆ ಬಡಕಲಾದುದನ್ನು ಕಂಡು ಕರುಣೆಗೊಂಡು – “ಅಮ್ಮಾ ನಾನು ನಿಮಗೆ ಪ್ರೀತಿಗೊಂಡೆನು ( ಮೆಚ್ಚಿದೆನು). ಇಷ್ಟಾರ್ಥವನ್ನು ಬೇಡಿಕೊಳ್ಳಿ“ ಎಂದನು. ಆಗ ಆಕೆ ರಾಜನೊಡನೆ – “ಮಗನೆ, ನೀನು ನನಗೆ ಮೆಚ್ಚಿದೆಯಾದರೆ, ನನಗಾಗಿಯೇ ಇನ್ನು ಎಂಟು ದಿವಸ ದೇವರಿಗೆ ಮಹೋತ್ಸವವನ್ನು ಮಾಡು“ ಎಂದು ಹೇಳಿದಳು. “ ಹಾಗೆಯೇ ಮಾಡುವೆನು“ ಎಂದು ರಾಜನು 

  ದಾದಿಕಾರಣಮಾಗಿ ಮತ್ತಮೆಂಟು ದಿವಸಂ ಮಹಾಮಹಿಮೆಯಂ ಮಾಡಲ್ ತೊಡಂಗಿದೊಡೆನ್ನ ಮಹಾಮಹಿಮೆಯೊಳೆಂತುಣ್ಬೆನೆಂದು ಪಾರಿಸದೆ ಮತ್ತಮಷ್ಟೋಪ ವಾಸಂಗೆಯ್ದು ಪಾರಣೆಯ ದಿವಸದಿಂದಾಕೆಯ ಶ್ರಮಮುಂ ಸೇದೆಯುಮಂ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ವಸಿಯಿಸಿರ್ಪ ಶ್ರೀಯಾದೇವತೆ ಕಂಡಱದು ತನ್ನ ಪರಿವಾರ ಸಹಿತಂ ವಿಮಾನಂಗಳನೇಱ ಮಹಾವಿಭೂತಿಯಿಂ ಬಂದು ಸ್ವರ್ಣಪೀಠದೊಳ್ ದಾದಿಯನಿರಿಸಿ ಸುಗಂಧೋದಕಗಳಿಂ ತೀವದ ಸುವರ್ಣಕಲಶಗಳಿಂದಮಭಿಷೇಕಂಗೆಯ್ದು ನಮೇರು ಮಂದಾರ ಸಂತಾನಕ ಪಾರಿಯಾತ್ರಕಮೆಂಬ ಪೂಗಳಂ ಸುರಿದು ಕಮ್ಮಿತಪ್ಪ ತಂಬೆಲರ್ ವೀಸಿ ದೇವದುಂದುಭಿಗಳಂ ಬಾಜಿಸಿ ಶ್ರೀಯಾದೇವತೆ ತನ್ನಾವಾಸಕ್ಕೆ ವೋದಳ್ ಇತ್ತ ದಾದಿಯುಂ ಶ್ರೀಯಾದೇವತೆಯ ವಿಭೂತಿಯಂ ಕಂಡು ನಿದಾನಂಗೆಯ್ದು ಕೆಲವು ದಿವಸದಿಂ ಕಾಲಂಗೆಯ್ದೀ ಜಂಬೂದ್ವೀಪದ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ಶ್ರೀಯಾದೇವತೆಯಾಗಿ ಪುಟ್ಟಿ ಇಳಾಪಟ್ಟಣಕ್ಕೆ ಬಂದಾ ಪೊೞಲ ಜನಂಗಳ್ಗೆಲ್ಲಮಿರುಳ್ ಕನಸಿನೊಳಾಂ ಶ್ರೀಯಾದೇವತೆಯೆಂ ನಿಮ್ಮ ಪೊೞಲ್ಗೆವಂದೆನೆನಗೆ ಶ್ರೀ ವಿಹಾರಮಂ ಮಾಡಿ ಎನ್ನ ಪ್ರತಿಮೆಯನಿಟ್ಟು ಪೂಜಿಸುತ್ತುಮೋಲಗಿಸುತ್ತುಮಿರಿಮಾನುಂ ನಿಮಗೆ ಬೇಡಿದ ವರವನೀವೆನೆಂದು ಕನಸಿನೊಳ್ ತೋಱಿದೊಡೆ 

        ಹೇಳಿ ಆ ದಾದಿಯ ಕಾರಣದಿಂದಲೇ ಮತ್ತೆ ಎಂಟು ದಿವಸ ಮಹೋತ್ಸವವನ್ನು ಆಚರಿಸಲು ತೊಡಗಿದನು. ವಿನಯಮತಿ ದಾದಿಯು ನನ್ನ ಪರವಾಗಿರುವ ಮಹೋತ್ಸವದಲ್ಲಿ ನಾನು ಹೇಗೆ ಊಟ ಮಾಡುವೆನು? ಎಂದು ಉಪವಾಸಾಂತ್ಯದ ಪಾರಣೆಯನ್ನು ಆಚರಿಸಲಿಲ್ಲ; ಮತ್ತೂ ಎಂಟು ದಿವಸ ಉಪವಾಸ ಮಾಡಿದಳು. ಪಾರಣೆಯ ದಿವಸ ಅವಳ ಶ್ರಮವನ್ನೂ ಆಯಾಸವನ್ನೂ ಹಿಮಾಲಯ ಪರ್ವತದ ಪದ್ಮ ಎಂಬ ಕೊಳದಲ್ಲಿ ವಾಸಿಸತಕ್ಕ ಶ್ರೀಯಾದೇವತೆ ಕಂಡು, ತಿಳಿದುಕೊಂಡಳು. ಆಕೆ ತನ್ನ ಪರಿವಾರದವರನ್ನು ಕೂಡಿಕೊಂಡು ವಿಮಾನಗಳನ್ನು ಹತ್ತಿ ಬಹಳ ವೈಭವದಿಂದ ಬಂದು ದಾದಿಯನ್ನು ಚಿನ್ನದ ಆಸನದಲ್ಲಿ ಕುಳ್ಳರಿಸಿ ಸುವಾಸನೆಯುಳ್ಳ ನೀರಿನಿಂದ ತುಂಬಿದ ಚಿನ್ನದ ಕಲಶಗಳಿಂದ ಅಭಿಷೇಕ ಮಾಡಿ ಸುರಪುನ್ನಾಗ, ಮಂದಾರ, ಸಂತಾನಕ, ಪಾರಿಯಾತ್ರಕ ಎಂಬ ದಿವ್ಯ ಪುಷ್ಪಗಳನ್ನು ಮಳೆಗರೆದಳು. ಪರಿಮಳಯುಕ್ತವಾದ ತಂಗಾಳಿಯನ್ನು ಬೀಸಿದಳು. ದೇವಲೋಕದ ಭೇರಿಗಳನ್ನು ಬಾಜಿಸಿ (ಬಜಾವಣೆ ಮಾಡಿ) ಶ್ರೀಯಾದೇವತೆ ತನ್ನ ವಾಸಸ್ಥಾನಕ್ಕೆ ತೆರಳಿದಳು. ಇತ್ತ ದಾದಿ (ವಿನಯಮತಿ) ಶ್ರೀಯಾದೇವತೆಯ ವೈಭವವನ್ನು ಕಂಡು ನಿಶ್ಚಯವನ್ನು ಮಾಡಿ ಕೆಲವು ದಿವಸಗಳಲ್ಲಿ ಕಾಲವಾದಳು. ಆಕೆ ಈ ಜಂಬೂದ್ವೀಪದ ಹಿಮಾಲಯ ಪರ್ವತದ ಪದ್ಮೆ ಎಂಬ ಕೊಳದಲ್ಲಿ ಶ್ರೀಯಾದೇವತೆಯಾಗಿ ಹುಟ್ಟಿ, ಇಳಾ ಪಟ್ಟಣಕ್ಕೆ ಬಂದು ಆ ಪಟ್ಟಣದ ಜನರಿಗೆಲ್ಲ ರಾತ್ರಿಯಲ್ಲಿ ಕನಸಿನಲ್ಲಿ ಕಾಣಿಸಿಕೊಂಡು ಹೀಗೆಂದಳು – “ನಾನು ಶ್ರೀಯಾದೇವತೆಯಾಗಿರುವೆನು ನಿಮ್ಮ ಪಟ್ಟಣಕ್ಕೆ ಬಂದಿರುವೆನು. ನನಗೆ ಶ್ರೀವಿಹಾರ ಎಂಬ ದೇವಾಲಯವನ್ನು ಮಾಡಿ, ನನ್ನ ಪ್ರತಿಮೆಯನ್ನು ಇಟ್ಟುಕೊಂಡು ಪೂಜಿಸುತ್ತ ಸೇವೆ ಮಾಡುತ್ತ ನೀವಿರಬೇಕು. ನಾನು ನಿಮಗೆ ಬೇಡಿದ ಇಷ್ಟಾರ್ಥವನ್ನು ಕೊಡುವೆನು ” ಈ ರೀತಿಯಾಗಿ ಅವಳು ಕನಸಿನಲ್ಲಿ ಕಾಣಿಸಿದಳು.

            ಪೊೞಲ ಜನಮೆಲ್ಲಂ ನೆರೆದು ಶ್ರೀವಿಹಾರಮಂ ಮಾಡಿ ಶ್ರೀಮಾದೇವತೆಯ ಪ್ರತಿಮೆಯಂ ಸ್ಥಾಪಿಸಿ ಮಹಿಮೆಯಂ ಮಾಡುತ್ತಂ ಪೂಜಿಸುತ್ತಮೋಲಗಿಸುತ್ತ ಮಿರ್ಪುದುಂ ಕಂಡಿಳಾಮಹಾದೇವಿ ಅಪುತ್ರಿಕೆ ಮಕ್ಕಳಂ ಬೇಡಿ ಪನ್ನೆರಡು ವರುಷಂ ಬರೆಗಂ ನಿಚ್ಚಲುಂ ಶ್ರೀವಿಹಾರಕ್ಕೆ ವೋಗಿ ಶ್ರೀಯಾದೇವತೆಯನರ್ಚಿಸುತ್ತಂ ಪೂಜಿಸುತ್ತಂ ಮಹಾಮಹಿಮೆಯಂ ಮಾಡುತ್ತಂ ಆಡುತ್ತಂ ಪಾಡುತ್ತಮೋಲಗಿಸುತ್ತಮಿರೆಯದಂ ಕಂಡಱದು ಶ್ರೀಯಾದೇವತೆ ಪೂರ್ವವಿದೇಹಕ್ಕೆ ಪೋಗಿ ಸ್ವಯಂಪ್ರಭರೆಂಬ ತೀರ್ಥಂಕರ ಪರಮದೇವರಂ ಕಂಡೆಱಗಿ ಪೊಡೆಮಟ್ಟಿಂತೆಂದು ಬೆಸಗೊಂಡಳ್ ಭಟಾರಾ ಎನ್ನ ಪೊೞಲೊಳಿರ್ಪ ಇಳಾಮಹಾದೇವಿಗೆ ಮಕ್ಕಳೇನಕ್ಕುಮೊ ಎಂದು ಬೆಸಗೊಂಡೊಡೆ ಭಟಾರರಿಂತೆಂದರ್ ಸ್ವರ್ಗದಿಂದೆ ಬೞಬಂದಿಲ್ಲಿ ಓರ್ವ ದೇವಂ ಇಳಾಮಹಾದೇವಿಗೆ ಮಗನಾಗಿ ಪುಟ್ಟಿಗುಮೆಂದೊಡದಂ ಕೇಳ್ದು ಭಟ್ಟಾರರ್ಗ್ಗೆಱಗಿ ಪೊಡೆವಟ್ಟು ಇಳಾಪಟ್ಟಣಕ್ಕೆ ಪೋಗಿ ಇಳಾಮಹಾದೇವಿಗೆ ಕನಸಿನೊಳಿಂತೆಂದು ಪೇೞ್ದಳಿಳಾಮಹಾದೇವಿ ನಿನಗೆನ್ನ ಪ್ರಸಾದದೆ ಸೌಧರ್ಮಕಲ್ಪದೊಳ್ ಮೇಘಮಾಲಮೆಂಬ ವಿಮಾನದಿಂ ಬೞ ವರ್ಧಮಾನನೆಂಬ ದೇವಂ ಬಂದು ನಿನಗೆ ಮಗನಾಗಿ ಪುಟ್ಟುಗುಮೆಂದು ಶ್ರೀಯಾದೇವತೆ ಪೇೞ್ದೊಡಿಳಾ ಮಹಾದೇವಿಯಾದಮಾನುಂ ಸಂತಸಂಬಟ್ಟಿರ್ದು ಕೆಲವು ದಿವಸದಿಂ ಗರ್ಭಮಾಗಿ ನವಮಾಸಂ ನೆಱೆದು ಮಗನಂ ಪೆತ್ತೊಡೆ 

         ಇದರಿಂದ ಪಟ್ಟಣದ ಜನರೆಲ್ಲರೂ ಒಟ್ಟಾಗಿ ಶ್ರೀವಿಹಾರವೆಂಬ ದೇವಾಲಯವನ್ನು ನಿರ್ಮಿಸಿದರು. ಅಲ್ಲಿ ಶ್ರೀಯಾದೇವತೆಯ ಪ್ರತಿಮೆಯನ್ನು ಪ್ರತಿಷ್ಠೆಮಾಡಿ, ಉತ್ಸವವನ್ನು ಮಾಡುತ್ತ ಪೂಜಿಸುತ್ತ ಸೇವೆಗಳನ್ನು ಜರುಗಿಸುತ್ತ ಇದ್ದರು. ಮಕ್ಕಳಿಲ್ಲದವಳಾದ ಇಳಾ ಮಹಾದೇವಿ ಇದನ್ನು ಕಂಡು ತನಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತ, ಹನ್ನೆರಡು ವರ್ಷಗಳವರೆಗೆ ನಿತ್ಯವೂ ಶ್ರೀವಿಹಾರಕ್ಕೆ ಹೋಗಿ ಶ್ರೀಯಾದೇವತೆಯನ್ನು ಅರ್ಚನೆ ಮಾಡುತ್ತ ಪೂಜಿಸುತ್ತ ದೊಡ್ಡ ಉತ್ಸವವನ್ನು ಮಾಡುತ್ತ ಆಡುತ್ತ ಹಾಡುತ್ತ ಸೇವೆಸಲ್ಲಿಸುತ್ತಿದ್ದಳು. ಶ್ರೀಯಾದೇವತೆ ಅದನ್ನು ನೋಡಿ ತಿಳಿದು ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸ್ವಯಂಪ್ರಭರೆಂಬ ತೀರ್ಥಂಕರ ದೇವರನ್ನು ಕಂಡು ವಂದಿಸಿ ಸಾಷ್ಟಾಂಗ ಪ್ರಣಾಮ ಮಾಡಿ ಹೀಗೆ ಕೇಳಿದಳು – “ಪೂಜ್ಯರೇ, ನನ್ನ ಪಟ್ಟಣದಲ್ಲಿರುವ ಇಳಾ ಮಹಾದೇವಿಗೆ ಮಕ್ಕಳಾಗುವರೇ ಏನು? ” ಹೀಗೆ ಕೇಳಿದಾಗ ಋಷಿಗಳು – “ಒಬ್ಬ ದೇವನು ಸ್ವರ್ಗದಿಂದ ಜಾರಿ ಬಂದು ಇಲ್ಲಿ ಇಳಾಮಹಾದೇವಿಗೆ ಮಗನಾಗಿ ಜನಿಸುವನು” ಎಂದು ಹೇಳಿದರು. ಅದನ್ನು ಕೇಳಿ ಋಷಿಗಳಿಗೆ ನಮಿಸಿ ಅಡ್ಡಬಿದ್ದು ಶ್ರೀಯಾದೇವತೆ ಇಳಾ ಪಟ್ಟಣಕ್ಕೆ ಹೋದಳು. ಇಳಾಮಹಾದೇವಿಗೆ ಕನಸಿನಲ್ಲಿ ಕಾಣಿಸಿ ಹೀಗೆಂದಳು – “ ಎಲೈ ಇಳಾ ಮಹಾದೇವಿ, ನನ್ನ ಅನುಗ್ರಹದಿಂದ ವರ್ಧಮಾನನೆಂಬ ದೇವನು ಸೌಧರ್ಮ ಎಂಬ ಸ್ವರ್ಗದಲ್ಲಿ ಮೇಘಮಾಲ ಎಂಬ ವಿಮಾನದಿಂದಿಳಿದು ಬಂದು ನಿನಗೆ ಮಗನಾಗಿ ಜನಿಸುವನು ” – ಹೀಗೆಂದು ಶ್ರೀಯಾದೇವತೆ ಹೇಳಿದಾಗ ಇಳಾಮಹಾದೇವಿ ಅತಿಶಯವಾದ ಸಂತೋಷವನ್ನು ತಾಳಿದಳು. ಹೀಗೆಯೇ ಇದ್ದು ಕೆಲವು ದಿನಗಳನಂತರ ಅವಳಿಗೆ ಗರ್ಭವುಂಟಾಯಿತು. ಒಂಬತ್ತು ತಿಂಗಳು ತುಂಬಿ ಗಂಡುಮಗುವನ್ನು ಹೆತ್ತಳು. 

            ಶ್ರೀಯಾದೇವತೆ ಮಗನಂ ಕೊಟ್ಟಳೆಂದು ಕೂಸಿಂಗೆ ತಾಯುಂ ತಂದೆಯುಂ ನಂಟರುಮೆಲ್ಲಂ ನೆರೆದು ಸಿರಿದಿಣ್ಣನೆಂದು ಪೆಸರನಿಟ್ಟರ್ ಆತನುಂ ಶುಕ್ಲಪಕ್ಷದ ಚಂದ್ರನಂತೆ ಕ್ರಮಕ್ರಮದಿಂ ಬಳೆದು ನವಯೌವನನುಂ ಸರ್ವಕಳಾ ಕುಶಳನುಮಾಗಿರ್ಪನ್ನೆಗಮಿತ್ತ ಸಾಕೇತ ಪುರಾಪತಿಯಪ್ಪ ಸುಮಂತನೆಂಬರಸನ ಮಗಳ್ ಸುಮತಿಯೆಂಬೊಳಾಕೆಯ ಸ್ವಯಂವರಕ್ಕರಸುಮಕ್ಕಳೆಲ್ಲಂ ನೆರೆದಿರ್ದಲ್ಲಿಗೆ ಸಿರಿದಿಣ್ಣಂಗಂ ಬೞಯಟ್ಟಿ ಬರಿಸಿದೊಡೆ ಸ್ವಯಂಭರದೊಳ್ ಸುಮತಿಯೆಲ್ಲರಂ ನೋಡಿಯಾರುಮಂ ಮೆಚ್ಚದೆ ಸಿರಿದಿಣ್ಣಂಗೆ ಮಾಲೆಸೂಡಿದೊಡೆ ಮದುವೆಯಾಗಿ ಕೆಲವು ದಿವಸಮಲ್ಲಿರ್ದು ಮಾವನವರಂ ಬೆಸಗೊಂಡಿಳಾ ಪಟ್ಟಣಕ್ಕೆ ವೋಪೆಮೆಂದೊಡಾತಂ ತನ್ನ ಮಗಳಪ್ಪ ಸುಮತಿಗೆ ಬೞವೞಗೊಟ್ಟು ಮಗಳೊಡನೆ ವಾಚಾಳನಪ್ಪ ಗಿಳಿಯುಮನಟ್ಟಿದೊಡವರ್ಗಳುಂ ಕತಿಪಯ ದಿವಸಂಗಳಿಂದಿಳಾಪಟ್ಟಣಕ್ಕೆ ಪೋಗಿ ಸುಖದಿಂದಿರೆ ಮತ್ತೊಂದು ದಿವಸಂ ಗಿಳಿಯಂ ಸಾಕ್ಷಿಮಾಡಿ ಇರ್ವರುಂ ಚದುರಂಗಮಾಡುತ್ತಿರೆ ಅರಸಿಯರಸನಂ ಗೆಲ್ದೊಡೆ ಗಿಳಿ ನೆಲದೊಳೆರಡು ಬರೆಯಂ ಬರೆಗುಮರಸನರಸಿಯಂ ಗೆಲ್ದೊಡೆ ಒಂದು ಬರೆಯಂ ಬರೆಗುಮಿಂತು ಪಿರಿದುಂ ಬೇಗಮಾಡಿ ಅರಸನರಸಿಯಂ ಗೆಲ್ದೊಡೆರಡು ಬರೆಯಂ ತೆಗೆದುಕನರಸಂ ಕಂಡು ಕಡುಮುಳಿದದಱ ಗೋಣಂ ಮುಱದೊಡಾ ಗಿಳಿಯುಂ ಸತ್ತಾ ಪೋೞಲ ಬಹಿರುದ್ಯಾನವನದೊಳ್ ವ್ಯಂತರದೇವನಾಗಿ ಪುಟ್ಟುತಿಂತಿರ್ವರುಂ ಪಲಕಾಲಮಿಷ್ಟವಿಷಯ

            ಶ್ರೀಯಾದೇವತೆ ಮಗನನ್ನು ಕೊಟ್ಟಳೆಂದು ಆ ಮಗುವಿಗೆ ತಾಯಿ, ತಂದೆ, ನಂಟರು ಎಲ್ಲರೂ ಸೇರಿಕೊಂಡು ಸಿರಿದಿಣ್ಣ ಎಂದು ಹೆಸರಿಟ್ಟರು. ಸಿರಿದಿಣ್ಣನು ಶುಕ್ಲಪಕ್ಷದ ಚಂದ್ರನ ಹಾಗೆ ಅನುಕ್ರಮವಾಗಿ ಬೆಳೆದು ಹೊಸ ಜವ್ವನಿಗನೂ ಎಲ್ಲಾ ಕಲೆಗಳಲ್ಲಿ ಪರಿಣತನೂ ಆಗಿದ್ದನು. ಹೀಗಿರಲು ಇತ್ತ ಸಾಕೇತವೆಂಬ ಪಟ್ಟಣದ ಒಡೆಯನಾದ ಸುಮಂತನೆಂಬ ರಾಜನಿಗೆ ಸುಮತಿ ಎಂಬ ಮಗಳಿದ್ದಳು. ಆಕೆಯ ಸ್ವಯಂವರಕ್ಕೆ ರಾಜಕುಮಾರರೆಲ್ಲ ಬಂದು ಸೇರಿದ್ದರು. ಅಲ್ಲಿಗೆ ಸಿರಿದಿಣ್ಣನನ್ನೂ ಕರೆಕಳುಹಿಸಿ ಬರಮಾಡಿದ್ದರು. ಸ್ವಯಂವರದಲ್ಲಿ ಸುಮತಿ ಎಲ್ಲರನ್ನೂ ನೋಡಿ ಯಾರೊಬ್ಬರನ್ನೂ ಮೆಚ್ಚದೆ ಸಿರಿದಿಣ್ಣನಿಗೆ ವರಣಮಾಲಿಕೆಯನ್ನು ತೊಡಿಸಿದಳು. ಸಿರಿದಿಣ್ಣನು ಅವಳನ್ನು ವರಿಸಿ ಕೆಲವು ದಿನ ಅಲ್ಲೆ ಇದ್ದು, ಮಾವನವರನ್ನು ಕೇಳಿ, ತಾನು ಇಳಾಪಟ್ಟಣಕ್ಕೆ ಹೋಗುವೆನು – ಎಂದನು. ಸುಮಂತನು ತನ್ನ ಮಗಳಾದ ಸುಮತಿಗೆ ಬಳುವಳಿಕೊಟ್ಟು, ಮಗಳೊಡನೆ ಒಳ್ಳೆ ಮಾತುಗಾರಿಕೆ ಬಲ್ಲ ಒಂದು ಗಿಳಿಯನ್ನೂ ಕಳುಹಿಸಿದನು. ಅವರು ಕೆಲವು ದಿವಸಗಳಲ್ಲಿ ಇಳಾಪಟ್ಟಣಕ್ಕೆ ಹೋಗಿ ಅಲ್ಲಿ ಸುಖವಾಗಿದ್ದರು. ಹೀಗಿರುತ್ತ ಆ ಮೇಲೆ ಒಂದು ದಿನ ಇಬ್ಬರೂ ಗಿಳಿಯನ್ನು ಸಾಕ್ಷಿಯಾಗಿ ಮಾಡಿಕೊಂಡು ಚದುರಂಗವನ್ನು ಆಡುತ್ತಿದ್ದರು. ಆಗ ರಾಣಿಯು ರಾಜನನ್ನು ಗೆದ್ದರೆ, ಗಿಳಿ ನೆಲದಲ್ಲಿ ಎರಡು ಗೆರೆಯನ್ನು ಎಳೆಯುತ್ತಿತ್ತು. ರಾಜನು ರಾಣಿಯನ್ನು ಗೆದ್ದರೆ, ಒಂದೇ ಗೆರೆಯನ್ನು ಬರೆಯುತ್ತಿತ್ತು. ಹೀಗೆ ಬಹಳ ಹೊತ್ತಿನವರೆಗೆ ಆಡಿ ರಾಜನು ರಾಣಿಯನ್ನು ಗೆದ್ದಾಗ ಗಿಳಿ ಎರಡು ಗೆರೆಯನ್ನು ಬರೆದುಬಿಟ್ಟಿದ್ದಿತು. ಇದನ್ನು ಸಿರಿದಿಣ್ಣರಾಜನು ಕಂಡು ಅತ್ಯಂತ ಕೋಪಾವಿಷ್ಟನಾಗಿ ಅದರ ಕತ್ತನ್ನು ಮುರಿದನು. ಆ ಗಿಳಿ ಸತ್ತು ಆ ಪಟ್ಟಣದ ಹೊರಗಿನ ಉದ್ಯಾನದಲ್ಲಿ ವ್ಯಂತರ ದೇವನಾಗಿ ಹುಟ್ಟಿತು. ಹೀಗೆ ಇಬ್ಬರೂ ಹಲವು ಕಾಲ ತಮ್ಮ ಇಷ್ಟ ವಿಷಯದ

        ಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಸಪ್ತತಳಪ್ರಾಸಾದದ ಮೇಗಿರ್ವರುಂ ದಿಶಾವಳೋಕನಂ ಗೆಯ್ಯುತ್ತಿರ್ಪನ್ನೆಗಂ ಸಹಸ್ರಕೂಟಾಕಾರಮಪ್ಪುದೊಂದು ಮುಗಿಲಂ ಕಂಡಿಂತುಟೊಂದು ಚೈತ್ಯಾಲಯಮಂ ಮಾಡಿಸುವೆನೆಂದು ಪಲಗೆಯೊಳ್ ರೇಖೆಗೊಂಡು ಮತ್ತೆ ನೋೞ್ಪನ್ನೆಗಂ ಕರಗಿದುದಂ ಕಂಡದುವೆ ನಿರ್ವೇಗಕ್ಕೆ ಕಾರಣಮಾಗಿ ತಾಯುಂ ತಂದೆಯುಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ವರಧರ್ಮ ಭಟ್ಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರುಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚರ್ತುದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಬೞಕ್ಕೆ ಗುರುಗಳಂ ಬೆಸಗೊಂಡವರನುಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಮಾಘಮಾಸದಂದಿಳಾಪಟ್ಟಣಕ್ಕೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದು ರಾತ್ರಿ ಪ್ರತಿಮಾಯೋಗದೊಳ್ ನಿಂದರ್ ಅನ್ನೆಗಂ ಮುನ್ನವರ ಕೈಯೊಳ್ ಸತ್ತ ಗಿಳಿ ವ್ಯಂತರದೇವನಾಗಿ ಅಲ್ಲಿ ಪುಟ್ಟಿರ್ದುದು ಕಂಡೇನುಂ ಕಾರಣಮಿಲ್ಲೆನ್ನಂ ಕೊಂದನೆಂದು ಮುಳಿದಾದಮಾನುಂ ಘೋರಮಪ್ಪ ವಾತಮುಂ ಶೀತಮುಮಂ ವಿಗುರ್ವಿಸಿ ನೀರ್ಗಳಂ ಮೇಗೆ ಸುರಿದು ಬೀಸುತ್ತಮಿಂತು ನಾಲ್ಕು ಜಾವಮುಂ ಘೋರಾಕಾರಮಾಗಿಯುಪಸರ್ಗಮಂ ಮಾಡೆ ಭಟಾರರುಂ ದೇವೋಪಸರ್ಗಮೆಂಬುದನಱದು 

            ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಆಮೇಲೆ ಒಂದು ದಿವಸ ಅವರಿಬ್ಬರೂ ಏಳು ಉಪ್ಪರಿಗೆಗಳುಳ್ಳ ಕಟ್ಟಡದ ಮೇಲೆ ಇದ್ದು ದಿಕ್ಕುಗಳನ್ನು ನೋಡುತ್ತಿರುವಾಗ ಸಾವಿರ ಶಿಖರದ ಆಕಾರವುಳ್ಳ ಒಂದು ಮೋಡವನ್ನು ಕಂಡು, ಸಿರಿದಿಣ್ಣನು “ ಈ ರೀತಿಯಿರುವ ಒಂದು ಜಿನಾಲಯವನ್ನು ಮಾಡಿಸುವೆನು” ಎಂದು ಹೇಳಿಕೊಂಡು, ಚಿತ್ರದ ಹಲಗೆಯ ಮೇಲೆ ರೇಖಾಚಿತ್ರವನ್ನು ಬರೆದು, ಮತ್ತೆ ನೋಡುವ ಹೊತ್ತಿಗೆ ಅದು ಕರಗಿಹೋದುದನ್ನು ಕಂಡನು. ಅದುವೇ ಅವನಿಗೆ ವೈರಾಗ್ಯಕ್ಕೆ ಕಾರಣವಾಯಿತು. ತಾಯಿ, ತಂದೆ, ನಂಟರನ್ನು ಅಗಲಿ, ಮಾಯಾಶಲ್ಯ, ಮಿಥ್ಯಾಶಲ್ಯ, ನಿದಾನಶಲ್ಯ, ಎಂಬ ಮೂರುಬಗೆಯ ಶಲ್ಯಗಳನ್ನು ಬಿಟ್ಟು, ಬಾಹ್ಯ ಪರಿಗ್ರಹಗಳನ್ನೂ (ಭೂಮಿ, ಮನೆ, ಧನ, ಧಾನ್ಯ, ದ್ವಿಪದ, ಚತುಷ್ಪದಗಳು, ವಾಹನ, ಶಯ್ಯೆ, ಆಸನ, ಕ್ಷುದ್ರಲೋಹಪಾತ್ರೆ, ಮಡಕೆ – ಎಂಬ ಹತ್ತು) ಮಿಥ್ಯಾತ್ವ, ಕಾಮಾಭಿಲಾಷೆ, ದ್ವೇಷ, ಅಪಹಾಸ್ಯ ಮುಂತಾದ ಅಂತರಂಗ ಪರಿಗ್ರಹಗಳನ್ನೂ ತೊರೆದು ವರಧರ್ಮ ಋಷಿಗಳ ಬಳಿ ತಪಸ್ಸನ್ನು ಸ್ವೀಕರಿಸಿದನು. ಹನ್ನೆರಡು ವರ್ಷಗಳವರೆಗೂ ಗುರುಗಳೊಡನಿದ್ದು ಹನ್ನೆರಡು ಅಂಗಗಳಿಂದಲೂ ಹದಿನಾಲ್ಕು ಪೂರ್ವಗಳಿಂದಲೂ ಕೂಡಿದ ಶಾಸ್ತ್ರಗಳನ್ನೆಲ್ಲ ಕಲಿತು, ಆಮೇಲೆ ಗುರುಗಳನ್ನು ಕೇಳಿ ಒಪ್ಪಿಗೆ ಪಡೆದು ಸಿರಿದಿಣ್ಣ ಋಷಿಗಳು ಒಬ್ಬರೇ ಸಂಚರಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಮಾಘಮಾಸದಲ್ಲಿ ಇಳಾಪಟ್ಟಣಕ್ಕೆ ಬಂದರು. ಬಂದು, ಆ ಪಟ್ಟಣದ ಬಾಹ್ಯೋದ್ಯಾನದಲ್ಲಿದ್ದು ರಾತ್ರಿಯಲ್ಲಿ ಪ್ರತಿಮಾಯೋಗದಲ್ಲಿ ನಿಂತರು. ಅಷ್ಟರಲ್ಲಿ ಪೂರ್ವಜನ್ಮದಲ್ಲಿ ಅವರು ಕೊಂದ ಗಿಳಿ ವ್ಯಂತರದೇವತೆಯಾಗಿ ಅಲ್ಲಿ ಹುಟ್ಟಿದ್ದುದು ಅವರನ್ನು ಕಂಡಿತು. “ಏನು ಕಾರಣವಿಲ್ಲದೆ ನನ್ನನ್ನು ಕೊಂದಿದ್ದಾನೆ” ಎಂದು ಕೋಪಗೊಂಡು ಬಹಳ ಭಯಂಕರವಾದ ಗಾಳಿಯನ್ನೂ ಶೈತ್ಯವನ್ನೂ ಮಾಯೆಯಿಂದ ಸೃಷ್ಟಿಸಿತು. ಧಾರಾಕಾರವಾಗಿ ಮೇಲಿನಿಂದ ಮಳೆಯನ್ನು ಸುರಿಸುತ್ತ, ಗಾಳಿಬೀಸುತ್ತ ಹೀಗೆ ನಾಲ್ಕು ಜಾವ (ಅರ್ಧದಿನ) ಭಯಂಕರವಾದ ರೀತಿಯಲ್ಲಿ ಉಪಸರ್ಗ (ತಪಸ್ಸಿಗೆ ವಿಘ್ನ)ವನ್ನು ಮಾಡಿತು. ಆಗ ಸಿರಿದಿಣ್ಣ ಋಷಿಗಳು – ಇದು ದೇವೋಪಸರ್ಗ ಎಂದು ತಿಳಿದರು.

        ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇಜೀವಾ ಖಮಂತು ಮೇ
                    ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ

    ಶ್ಲೋಕ || ಅಚ್ಛೇದ್ಯೋ – ನಂತ ಸೌಖ್ಯೋ – ಹಂ ವೇತ್ತಾ – ಪೊರ್ವೋ ನಿರಂಜನಃ
                  ಸರ್ವದುಃಖಾಕರಂ ದೇಹಂ ತ್ಯಜಾಮೇತತ್ ಪರಿಸುಟಂ ||

ಎಂದಿಂತು ಸಮತ್ವೀಭಾವನೆಯಂ ಭಾವಿಸಿ ಶುಕ್ಲಧ್ಯಾನಮಂ ಜಾನಿಸಿ ಎಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆವೋದರ್ ಮತ್ತಂ ಪೆಱರುಂ ರತ್ನತ್ರಯಂಗಳನಾರಾಸುವ ಭವ್ಯರ್ಕಳ್ ಸಿರಿದಿಣ್ಣ ಭಟ್ಟಾರರಂ ಮನದೊಳ್ ಬಗೆದು ದೇವೋಪಸರ್ಗ ಮನುಷ್ಯೋಸರ್ಗ ತಿರಿಕೋಪಸರ್ಗಮಚೇತನೋಪ ಸರ್ಗಮೆಂದಿತುಂ ಚತುರ್ವಿಧಮಪ್ಪುಪಸರ್ಗಮುಮಂ ಪಸಿವು ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ವ್ಯಾಗಳಿಂದಪ್ಪ ವೇದನೆಯಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

     (ನಾನು ಎಲ್ಲ ಜೀವಗಳನ್ನೂ ಕ್ಷಮಿಸುತ್ತೇನೆ. ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲ ಪ್ರಾಣಿಗಳಲ್ಲಿಯೂ ನನಗೆ ಮೈತ್ರಿಯಿದೆ. ನನಗೆ ಎಲ್ಲಿಯೂ ದ್ವೇಷವಿಲ್ಲ.)(ನನ್ನನ್ನು ಕತ್ತರಿಸಲು ಸಾಧ್ಯವಿಲ್ಲ. ನಾನು ಕೊನೆಯಿಲ್ಲದ ಸುಖವುಳ್ಳವನು. ತಿಳಿದವನು, ಅನಾದಿ, ಕರ್ಮಲೇಪವಿಲ್ಲದವನು. ಎಲ್ಲ ದುಃಖಗಳಿಗೂ ಆಶ್ರಯವಾಗಿರುವ ಶರೀರವನ್ನು ತೊರೆಯುತ್ತೇನೆ – ಇದು ನಿಶ್ಚಯ) ಈ ರೀತಿ ಸುಖದುಃಖ ಸಮಭಾವವನ್ನು ಭಾವಿಸಿ, ಶುಕ್ಲಧ್ಯಾನವನ್ನು ಮಾಡಿ ಎಂಟು ಕರ್ಮಗಳನ್ನು ನಾಶಮಾಡಿ, ಮೋಕ್ಷವನ್ನೆಯ್ದಿದರು. ರತ್ನತ್ರಯವನ್ನು ಆರಾಧನೆ ಮಾಡುವ ಬೇರೆ ಭವ್ಯರು ಕೂಡ, ಸಿರಿದಿಣ್ಣ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿ ದೇವ – ಮಾನವ – ತಿರ್ಯಕ್ಕು – ಅಚೇತನ ಎಂಬ ನಾಲ್ಕು ಬಗೆಯವರಿಂದ ಒದಗುವ ಉಪಸರ್ಗಗಳನ್ನೂ ಹಸಿವು – ಬಾಯಾರಿಕೆ ಮೊದಲಾಗಿ ಉಳ್ಳ ಇಪ್ಪತ್ತೆರಡು ಪರೀಷಹಗಳನ್ನು ಸಹಿಸಿಕೊಂಡು, ರೋಗಗಳಿಂದ ಉಂಟಾಗುವ ನೋವನ್ನೂ ಸಹಿಸಿ, ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****



ವಡ್ಡಾರಾಧನೆ - ಧರ್ಮಘೋಷ ಭಟಾರರ ಕಥೆ | Vaddaradhane-Dharmaghosha Bhatarara kathe

 ಧರ್ಮಘೋಷ ಭಟಾರರ ಕಥೆಯಂ ಪೇೞ್ವೆಂ :

ಗಾಹೆ || ಚಂಪಾ ಎ ಮಾಸಖವಣಂ ಕರಿತ್ತು ಗಂಗಾತಟಮ್ಹಿ ಎ
ಘೋರಾ ಎ ಧಮ್ಮಘೋಷೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಚಂಪಾ ಎ – ಚಂಪೆಯೆಂಬ ಪೊೞಲೊಳ್, ಮಾಸಖವಣಂ ಕರಿತ್ತು – ಮಾಸೋಪವಾಸಂ ಗೆಯ್ದು. ಗಂಗಾ ತಟಮ್ಹಿ – ಗಂಗಾ ಮಹಾನದಿಯ ತಡಿಯೊಳ್, ತಣ್ಹಾ ಎ – ನೀರೞ್ಕೆಯಿಂದಂ, ಘೋರಾಎ – ಆದಮಾನುಂ ಕಡಿದಪ್ಪುದಱಂದಂ, ಧಮ್ಮಘೋಸೋ – ಧರ್ಮಘೋಷನೆಂಬ ಭಟ್ಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯುಂ*

ಅದೆಂತೆಮದೊಡೆ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕೌಶಂಬಿಯೆಂಬುದು ನಾಡಲ್ಲಿ ವಾರಣಾಸಿಯೆಂಬುದು ಪೊೞಲದನಾಳ್ರ್ವೆಂ ಕೀರ್ತಧರನೆಂಬೊನರಸನಾತನ ಮಹಾದೇವಿಯರ್ಕಳ್ ಆರತಿ ರತಿಯೆಂಬೊರಾ ಇರ್ವರ್ಗಂ ಮಕ್ಕಳ್ ದರ್ಮಘೋಷನುಂ ಧರ್ಮಕೀರ್ತಿಯುಮೆಂಬೊರಂತವರ್ಗಳಿಷ್ಪ ಮಿಷಯಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಗ್ರ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರಾ ವಾರಣಾಸಿಗೆ ವಂದು ಬಹಿರುದ್ಯಾನವನದೊಳ್ ಸಟಿಕ ಶಿಲಾತಲದ ಮೇಗೆ ಪಂಥಾತಿಚಾರ ನಿಮಯಮಂಗೆಯ್ದಿರ್ದಗುಣೋತ್ತವ್ಮರೆಂಬ ಭಟಾರರಂ ವನಕ್ರೀಡೆಗೆ ವೋದ ಧರ್ಮಘೋಷನುಂ ಧರ್ಮಕೀರ್ತಿಕುಮಾರನುಂ ಕಂಡು ಬಂದಿಸಿ ಭಟಾರಾ ಎಮಗೆ ಧರ್ಮಮಂ ಪೇೞಮೆಂದೊಡೆ ಭಟಾರರಿಂತೆಂದು ಧರ್ಮಮಂ ಪೇೞ್ದರ್ :

ಧರ್ಮಘೋಷ ಋಷಿಗಳ ಕಥೆಯನ್ನು ಹೇಳುವೆನು – (ಧರ್ಮಘೋಷನೆಂಬ ಋಷಿ ಚಂಪಾಪುರದಲ್ಲಿ ಮಾಸೋಪವಾಸವನ್ನು ಮಾಡಿ, ಗಂಗಾ ಮಹಾನದಿಯ ತೀರದಲ್ಲಿ ಅತ್ಯಂತ ತೀವ್ರವಾಗಿರುವ ಬಾಯಾರಿಕೆಯಿಂದ ಕೂಡಿ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರದಲ್ಲಿ ಕೌಶಂಬಿಯನ್ನು ಮಾಡಿದನು.) ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕೌಶಂಬಿಯೆಂಬ ನಾಡಿದೆ. ಅಲ್ಲಿ ವಾರಣಾಸಿಯೆಂಬ ಪಟ್ಟಣವಿದೆ. ಅದನ್ನು ಕೀರ್ತಿಧರನೆಂಬ ರಾಜನು ಆಳುತ್ತಿದ್ದನು. ಅವನಿಗೆ ಆರತಿ, ರತಿ ಎಂಬವರು ರಾಣಿಯರು. ಈ ಇಬ್ಬರು ರಾಣಿಯರಲ್ಲಿ ಧರ್ಮಘೋಷ, ಧರ್ಮಕೀರ್ತಿ, ಎಂಬಿಬ್ಬರು ಮಕ್ಕಳು. ಅಂತು ಅವರು ತಮಗೆ ಇಷ್ಟವಾದ ವಿಷಯದಲ್ಲಿ ಬಯಸಿದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಗುಣೋತ್ತಮರೆಂಬ ಋಷಿಗಳು ಗ್ರ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು, ವಾರಾಣಸಿಗೆ ಬಂದರು. ಅಲ್ಲಿ, ಪಟ್ಟಣದ ಹೊರಗಿನ ಉದ್ಯಾನದಲ್ಲಿ ಚಂದ್ರಕಾಂತ ಶಿಲಾತಳದ ಮೆಲೆ ಕುಳಿತು ತಮ್ಮ ದಾರಿಯಲ್ಲಿ ಆಗಿರಬಹುದಾದ ಅತಿಚಾರ (ಧರ್ಮವಿರುದ್ಧವಾದ ಕೃತ್ಯ)ಗಳ ಪ್ರಾಯಶ್ಚಿತ್ತಗಳೆನಿಸಿದ ಪಂಥಾತಿಚಾರ ನಿಯಮಗಳನ್ನು ಆಚರಿಸುತ್ತಿದ್ದರು. ಆ ವೇಳೆಯಲ್ಲಿ ಉದ್ಯಾನ ಕೇಳಿಗೆಂದು ಹೋಗಿದ್ದ ಧರ್ಮಘೋಷನೂ ಧರ್ಮಕೀರ್ತಿಯೂ ಋಷಿಗಳನ್ನು ಕಂಡು ವಂದನಗೈದರು. “ಪೂಜ್ಯರೇ, ನಮಗೆ ಧರ್ಮೋಪದೇಶವನ್ನು ಮಾಡಿ” ಎಂದು ಕೇಳಿಕೊಂಡರು. ಆಗ ಭಟಾರರು ಈ ರೀತಿಯಾಗಿ ಧರ್ಮವನ್ನು ವಿವರಿಸಿ ಹೇಳಿದರು –

ವೃತ್ತ || ಕೋ ಧರ್ಮಪ್ರವರೋ ದಯಾತ್ಮಸುಭಗಃ ಕಃ ಸ್ಯಾನ್ನರಃ ಪಂಡಿತಃ
ಕಾ ಯೋಷಿದ್ವಶಗಾ ಕಲಿಷ್ಕಯತಿ (?) ಚೇತ್ ಕ್ರೋಧೋ – ಶುಭಸ್ಯೋದಯಃ
ಕಾ  ಲಕ್ಷ್ಮೀರವಿಚಾರ ಕಾರ್ಯಘಟನಾ ಕಿಂ ಮಿತ್ರಮಾತ್ಯಾ –  ತ್ಮನಃ
ಕಿಂ ಸೌಡ್ಯಿಂ ಭುವಿ ಶಾಸ್ತ್ರವಾಚನಮತಿಃ ಕಾ ವಾ ಗತಿರ್ನಿರ್ವೃತಿಃ ||

ಸಮ್ಯಕ್ತ್ವೋತ್ತಮ ಹಸ್ತಿ ಮಸ್ತಕ ಗತಃ ಸ್ಮಜ್ಞಾನಕೇತು ವ್ರಜೋ
ನಾನಾಶೀಲಗುಣವ್ರತತೋರುಪೃತನಃ ಸ್ವಾಧ್ಯಾಯ ಶಂಖಧ್ವನಿಃ
ಭಾಸ್ವತ್ಸಂವರ ಭೂರಿ ಚಾರುಕವಚೋ ನಾತೀವ ತೀಕ್ಷ್ಣಾಯುಧಃ
ಸೇವ್ಯೋ ಧರ್ಮಮಹಾನೃಪೋ ಬುಧಭಗಟೈಃ ಸ್ವರ್ಮೋಕ್ಷವೃತ್ತಿಪ್ರದಃ ||

ಶ್ಲೋಕ || ಧರ್ಮಾರ್ಥಕಾಮಮೋಕ್ಷಾಣಾಂ ಯಸ್ಯೈಕೋ – ಪಿ ನ ವಿದ್ಯತೇ
ಅಜಾಗಲ ಸ್ತನಸ್ಯೈವ ತಸ್ಯ ಜನ್ಮ ನಿರರ್ಥಕಂ ||

ವೃತ್ತ || ಯೇಷಾಂ ನ ವಿದ್ಯಾ ನ ತಪೋ ನ ದಾನಂ
ನಾಪ್ಯೇವ ಶೀಲಂ ನ ಗುಣೋ ನ ಧರ್ಮಃ
ತೇ ಮರ್ತ್ಯಲೋಕೇ ಭುವಿ ಭಾರಭೂತಾ
ಮನುಷ್ಯರೂಪೇಣ ಮೃಗಾಶ್ಚರಂತಿ ||

         – ಧರ್ಮದಲ್ಲಿ ಅತ್ಯಂತ ಶ್ರೇಷ್ಠನು ಯಾರು ? – ದಯೆಯಿಂದ ಕೂಡಿದ ಆತ್ಮ ಸೌಭಾಗ್ಯವುಳ್ಳವನು. ಮನುಷ್ಯನು ಯಾವನು ? – ಪಾಂಡಿತ್ಯವುಳ್ಳವನು. ಹೆಂಗಸು ಯಾವಳು ? – ವಶವರ್ತಿಯಾಗಿರುವವಳು. ಕೋಪದಿಂದ ಎನಾಗುತ್ತದೆ? – ಅಶುಭವುಂಟಾಗುತ್ತದೆ. ಅಲಕ್ಷ್ಮಿ(ದಾರಿದ್ರ್ಯ)ಯಾವುದು? – ವಿಚಾರವಿಲ್ಲದೆ ಕೆಲಸ ಮಾಡುವುದು. ತನ್ನ್ನ ಮಿತ್ರನು ಯಾವನು? – ತಾನೇ. ಲೋಕದಲ್ಲಿ ಸುಖ ಯಾವುದು? – ಶಾಸ್ತ್ರವನ್ನು ಓದುವ ಬುದ್ಧಿ. ಗತಿ (ಗುರಿ)ಯಾವುದು? – ಮೋಕ್ಷವು. ಸಮ್ಯಕ್ತ್ವವೆಂಬ ಆನೆಯ ತಲೆಯ ಮೆಲೆ ಕುಳಿತಿರುವ, ಸುಜ್ಞಾನವೆಂಬ ಧ್ವಜಸಮೂಹವುಳ್ಳ, ಹಲವು ಬಗೆಯ ಶೀಲ ಗುಣವ್ರತಗಳೆಂಬ ಸೈನ್ಯವುಳ್ಳ, ಶಾಸ್ತ್ರಾಭ್ಯಾಸವೆಂಬ ಶಂಖಧ್ವನಿಯುಳ್ಳ, ಹೊಳೆಯುವ ಸಂವರವೆಂಬ ಅತಿಸುಂದರವಾದ ಕವಚವುಳ್ಳ, ಅತಿ ತೀಕ್ಷ್ಣವಾದ ಆಯುಧಗಳಿಲ್ಲದ, ಸ್ವರ್ಗ ಮೋಕ್ಷಗಳ ಸ್ಥಿತಿಯನ್ನು ಕೊಡುವ, ಧರ್ಮವೆಂಭ ಮಹಾರಾಜನು ವಿದ್ವಾಂಸರೆಂಬ ಸೈನಿಕ್ಪರಿಂದ ಸೇವೆಗೊಳ್ಳವುವನಾಗಿದ್ದಾನೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ವಿಧದ ಪುರುಷಾರ್ಥಗಳಲ್ಲಿ ಒಂದು ಕೂಡಾ ಯಾರಿಗೆ ಇಲ್ಲವೋ ಅವನ ಜನ್ಮ ಮೇಕೆಯ ಕೊರಳ ಮೊಲೆಯಂತೆ ಪ್ರಯೋಜನವಿಲ್ಲದುದು. ಯಾರಿಗೆ ವಿದ್ಯೆಯಿಲ್ಲವೋ ತಪಸ್ಸಿಲ್ಲವೋ ದಾನಗುಣವಿಲ್ಲವೋ ಶೀಲ ಕೂಡ ಇಲ್ಲವೋ ಧರ್ಮವಿಲ್ಲವೋ ಅವರು ಮೈತಿಹೊಂದುವ ಸ್ವಭಾವವುಳ್ಳ ಈ ಲೋಕದಲ್ಲಿ ಭಾರವಾಗಿ ಪರಿಣಮಿಸಿರುವವರು. ಅವರು ಮನುಷ್ಯರ ರೂಪದಲ್ಲಿರುವ ಮೃಗಗಳಾಗಿ ವರ್ತಿಸುತ್ತಾರೆ. ಒಂದನ್ನು ಮತ್ತೊಂದು ತಿನ್ನುತ್ತ ಕ್ರಿಮಿಗಳು ಬದುಕುತ್ತ ಇರುವುದಿಲ್ಲವೇನು? ಪರಲೋಕದ ಪ್ರಾಪ್ತಿಗೆ ವಿರೋಧವಾಗದ ರೀತಿಯಿಂದ ಯಾವನು ಜೀವಿಸುತ್ತಾನೋ ಅವನು ಸಾರ್ಥಕವಾಗಿ ಜೀವಿಸುತ್ತಾನೆ. ಯಾವ ಕಾರ್ಯದಿಂದ ಜನನಿಂದೆಯುಂಟಾಗುವುದೋ

ಶ್ಲೋಕ || ಕ್ರಿಮಯಃ ಕಿಂ ನ ಜೀವಚಿತಿ ಭಕ್ಷಯಿತ್ವಾ ಪರಸ್ಪರಂ
ಪರಲೋಕಾವಿರುದ್ಧೇನ ಯೋ ಜೀವತಿ ಸ ಜೀವತಿ ||
ಅಪವಾದೋ ಭವೇದ್ಯೇನ ಯೇನ ಚಾಪ್ರತ್ಯಯೋ ಭವೇತ್

ನರಕೋ ಗಮ್ಮತೇ ಯೇನ ತತ್ಕರ್ಮ ನ ಸಮಾಚರೇತ್ ||

        ಇಂತು ಸಂಕ್ಷೇಪದಿಂ ಭಟಾರರ್ ಧರ್ಮಮಂ ಪೇೞೆ ಕೇಳ್ದಿರ್ವ್ವರ್ಗ್ಗಂ ವೈರಾಗ್ಯಮಾಗಿ ತಾಯುಂ ತಂದೆಯುಂ ಸ್ವಜನ ಬಂಧುವರ್ಗಮುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂ ಗಳಂ ತೊಱೆದು ಗುಣೋತ್ತಮ ಭಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರ್ಷಂಬರೆಗಂ ಗುರುಗಳೊಡನಿರ್ದು ಪ್ರಥಮನುಯೋಗ ಚರಣಾನುಯೋಗ ಕರಣಾನುಯೋಗ ದ್ರವ್ಯಾನು ಯೋಗಂಗಳಂ ಕಲ್ತು ಶಾಸ್ತ್ರಪಾರರಗರಾಗಿ ಭಟಾರರಂ ಬೆಸಗೊಂಡವರನುಮತದಿಂದಿರ್ವರುಂ ಬೇಱೆ ವೇಱೆ ವಿಹಾರಿಸಲ್ ತಗುಳ್ದು ಗ್ರಾಮ ನಗರಖೇಡ ಖರ್ವಡ ಮಡಂಬ ಪತ್ತನ ದ್ರೋಣಾ ಮುಖಂಗಳಂ ವಿಹಾರಿಸುತ್ತಂ ಚಂಪಾನಗರಕ್ಕೆ ಪೋಗಿ ತಾಮರೆಗೊಳದ ತಡಿಯ ಮಱೆಯೊಳಿರ್ವರುಂ ಮಾಸೋಪವಾಸಮಗೆಯ್ದು ಪಾರಣೆಯ ದಿವಸದಂದು ಚಂಪಾನಗರದ ಶ್ರಾವಕರ್ಕಳೆಲ್ಲಂ ನಮ್ಮ ನೋಂತುದನಱವರದು ಕಾರಣದಿಂ ನಮಗೆ ಪಾರಣೆಯಂ ಮಾೞಗಳಯಥಾಕರ್ಮದ ದೋಷಂ ಸಾರ್ತರ್ಕುಮದಱಂ ನಾಮಿಲ್ಲಿ ಚರಿಗೆವುಗದೆ ಗಂಗೆಯ ತಡಿಯೊಳಿರ್ದ ತುಱುಪಟ್ಟಿಗೆ ಪೋಪಮೆಂದಿರ್ವರುಂ ಪೋಪರ್ ಅನ್ನೆಗಮಾ ತುರುಪಟ್ಟಿಯುಮಲ್ಲಿಂದೆರ್ದು ನಾಡೆ ಗೆಂಟು ಪೋದತ್ತು

            ಮತ್ತೆ ಯಾವ ಕಾರ್ಯದಿಂದ ನರಕಕ್ಕೆ ಹೋಗಬೇಕಾಗುವುದೋ ಆ ಕಾರ್ಯವನ್ನು ಮಾಡಬಾರದು. ಹೀಗೆ ಸಂಕ್ಷೇಪವಾಗಿ ಋಷಿಗಳು ಧರ್ಮವನ್ನು ತಿಳಿಸಿದರು. ಅದನ್ನು ಕೇಳಿದ ಇಬ್ಬರಿಗೂ ವೈರಾಗ್ಯವುಂಟಾಯಿತು. ಅವರು ತಮ್ಮ ತಾಯಿ, ತಂದೆ, ಸ್ವಜನರು, ಬಂಧುಗಳ ಸಮೂಹವನ್ನು ಬಿಟ್ಟು, ಅವರಿಗೆ ಮನೋವ್ಯಥೆಯಿಲ್ಲದಂತೆ ಮಾಡಿ ಬಾಹ್ಯ ಮತ್ತು ಆಭ್ಯಂತರ ಎಂಬ ಎರಡೂ ಬಗೆಯ ಪರಿಗ್ರಹಗಳನ್ನು ತೊರೆದರು. ಗುಣೋತ್ತಮ ಋಷಿಗಳ ಬಳಿಯಲ್ಲಿ ದ್ವಾದಶವಿಧದ ತಪಸ್ಸನ್ನು ಸ್ವೀಕರಿಸಿದರು . ಹನ್ನೆರಡು ವರ್ಷಗಳವರೆಗೂ ಗುರುಗಳ ಒಟ್ಟಿಗಿದ್ದು ಪ್ರಥಮಾನುಯೋಗ, ಚರಣಾನುಯೋಗ, ಕರಣಾನುಯೋಗ, ದ್ರವ್ಯಾನುಯೋಗಗಳನ್ನು ಕಲಿತು ಶಾಸ್ತ್ರಗಳಲ್ಲಿ ಪಾರಂಗತರಾದರು. ಆಮೇಲೆ ಋಷಿಗಳನ್ನು ಕೇಳಿಕೊಂಡು ಅವರ ಅನುಮತಿಯನ್ನು ಪಡೆದು ಇಬ್ಬರೂ ಬೇರೆ ಬೇರೆಯಾಗಿ ಸಂಚಾರಮಾಡಲು ಹೊರಟರು. ಗ್ರಾಮ, ನಗರ, ಬೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಚಂಪಾನಗರಕ್ಕೆ ಹೋದರು. ಅಲ್ಲಿ ತಾವರೆಕೊಳದ ತೀರದಲ್ಲಿ ಮರೆಯಾಗಿ ಇಬ್ಬರೂ ಒಂದು ತಿಂಗಳ ಉಪವಾಸವನ್ನು ಮಾಡಿದರು. “ಪಾರಣೆಯ ದಿವಸ ಚಂಪಾನಗರದ ಶ್ರಾವಕರೆಲ್ಲರೂ ನಾವು ವ್ರತಮಾಡಿರುವುದನ್ನು ತಿಳಿದಾರು. ಅದರಿಂದಾಗಿ ನಮಗೆ ಪಾರಣೆಮಾಡುವಾಗ ಸರಿಯಾದ ರೀತಿಯಲ್ಲಿ ಕರ್ಮವನ್ನು ಮಾಡದೆ ದೋಷ ಬಂದು ಸೇರುವುದು. ಆದುದರಿಂದ ನಾವು ಇಲ್ಲಿ ಭಿಕ್ಷೆಗಾಗಿ ಮನೆಗಳನ್ನು ಪ್ರವೇಶಿಸುವುದು ಬೇಡ. ನಾವು ಗಂಗಾತೀರದಲ್ಲಿದ್ದ ಹಸುಗಳ ಹಟ್ಟಿಗೆ ಹೋಗೋಣ” – ಎಂದುಕೊಂಡು ಅವರಿಬ್ಬರೂ ಗಂಗಾತೀರಕ್ಕೆ ಹೋದರು. ಅಷ್ಟರಲ್ಲಿ ಗಂಗಾತೀರದ ಹಸುಗಳ ಹಟ್ಟಿ ಆ ಸ್ಥಳದಿಂದ ಬೇರೊಂದು ಕಡೆಗೆ ಬಹಳ ದೂರಕ್ಕೆ ಹೋಗಿದ್ದಿತು. 

            ಪೋದೊಡೆ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಿಗೆ ಪೋದರ್ ಧರ್ಮಘೋಷಭಟಾರರ್ ಪೋಗಲಾಱದೆ ಗಂಗೆಯ ತಡಿಯ ಮರದ ಕೆೞಗೆ ಪಸಿವು ನೀರೞ್ಕೆಯಿಂ ಸೇದೆಗೆಟ್ಟು ಬಸಮೞದಿರ್ದೊರಂ ಗಂಗಾದೇವತೆ ಕಂಡನುಕಂಪೆಯುಂ ಭಕ್ತಿಯುಂ ಕರಣಾಗಿ ಸರ್ವಾಭರಣ ಭೂಷಿತೆಯಾಗಿ ದಿವ್ಯಮಪ್ಪ ಶ್ವೇತವಸ್ತ್ರಮನುಟ್ಟು ಸುವರ್ಣಮಯಮಪ್ಪ ಪಿರಿಯ ಕರಗಮಂ ತೆಕ್ಕನೆ ತೀವಿ ತಣ್ಣೆದವುಂ ಸುಗಂಧಮಪ್ಪ ನೀರ್ಗಳಂ ತಂದು ಧರ್ಮಘೋಷ ಭಟಾರರನಿಂತೆದಳ್ ಭಟಾರಾ ಪ್ರಾಸುಕಮಪ್ಪ ನೀರಂ ಪೊೞ್ತದೊಳ್ ಬಂದುದಂ ಕುಡಿದು ನಿಮ್ಮ ಸೇದೆಯನಾಱಸಿಂ ನಿಮಗರಮನೆಗೆ ಪೋಗಿ ಕೂೞಂ ತಂದಪೆನನ್ನೆವರಂ ನೀರಂ ಕುಡಿದು ತೃಷೆಯಂ ಪಿಂಗಿಸುವ್ಯದೆಂದೊಡೆ ಭಟಾರರಾಮೊಲ್ಲೆವಬ್ಬಾ ಕುಡಿಯಲ್ಕಾಗದೆಂದೊಡೆ ಗಂಗಾದೇವತೆ ಪೂರ್ವವಿದೇಹಕ್ಕಿ ಪೋಗಿ ಸೀಮಂಧರ ತೀರ್ಥಂಕರ ಪರಮದೇವರಂ ಕಂಡು ಬಂದಿಸಿ ಇಂತೆಂದು ಬೆಸಗೊಂಡಳ್ ಭಟಾರಾ ಒರ್ವರ್ ಋಷಿಯರ್ ನೀರೞ್ಕೆಯಿಂದಂ ಕರಂ ಸೇದೆಗೆಟ್ಟು ಬಸಮೞದಿರ್ದೊರಂ ಕಂಡು ಪಿರಿದೊಂದು ಪೊನ್ನ ಕರಗಮಂ ತೆಕ್ಕನೆ ತೀವಿಯದಮಾನುಂ ತಣ್ಣಿದುವುಂ ಕಮ್ಮಿದುವುಮಪ್ಪ ನೀರ್ಗಳಂ ಪೊೞ್ತದೊಳ್ ಕೊಂಡು ಪೋಗಿ ಕುಡುಯಲೆಱೆಯೆ ಕೊಳ್ದರಿಲ್ಲೆಂದೊಡೆ ಭಟಾರರೆಂದರ್ ಪ್ರಾಸುಕಮಾದೊಡಂ ಪೊೞ್ತದೊಳ್ ತಂದೊಂಡಂ ದೇವರ್ಕ್ಕಳ ದೇವಿಯರ್ಕ್ಕಳ ಕೈಯೊಳ್ ಋಷಿಯರ್ಕ್ಕಳ್ಗುಣಲುಂ ಕುಡಿಯಲುಂ ತಗದು 

            ಹಾಗೆ ಹೋದುದರಿಂದ ಧರ್ಮಕೀರ್ತಿ ಮುನಿಗಳು ಬೇರೆ ಒಂದು ಹಸು ಹಟ್ಟಿಗೆ ಹೋದರು. ಧರ್ಮಘೋಷಭಟಾರರು ಬೇರೆ ಕಡೆ ಹೋಗಲಾರದೆ ಗಂಗಾನದೀ ತೀರದ ಮರದ ಬುಡದಲ್ಲಿ ಹಸಿವು ಬಾಯರಿಕೆಗಳಿಂದ ಆದ ಆಯಾಸದಿಂದ ಕೆಟ್ಟು ಶಕ್ತಿಗುಂದಿದ್ದರು. ಅವರನ್ನು ಗಂಗಾದೇವಿ ನೋಡಿ ದಯೆಯ ಕಾರಣವಾಗಿ ಎಲ್ಲ ಆಭರಣಗಳಿಂದ ಅಲಂಕಾರಮಾಡಿಕೊಂಡು ದಿವ್ಯವಾದ ಬಿಳಿಯುಡುಪನ್ನು ಧರಿಸಿಕೊಂಡು ಚಿನ್ನದ ದೊಡ್ಡಕಲಶವನ್ನು – ಅದರಲ್ಲಿ ತಣ್ಣಗಾದುದೂ ಸುವಾಸನಾಯುಕ್ತವೂ ಆದ ನೀರನ್ನು ಪೂರ್ಣವಾಗಿ ತುಂಬಿಸಿಕೊಂಡು, ತೆಗೆದುಕೊಂಡು ಬಂದು ಧರ್ಮಘೋಷ ಭಟಾರರೊಡನೆ ಹೀಗೆಂದಳು – “ಋಷಿಗಳೇ, ಜೀವರಹಿತವಾಗಿರುವ ನೀರನ್ನು, ಚಿನ್ನದ ಪಾತ್ರೆಯಲ್ಲಿ ಬಂದುದನ್ನು ಕುಡಿದು ನಿಮ್ಮ ಆಯಾಸವನ್ನು ಶಮನಮಾಡಿಕೊಳ್ಳಿರಿ. ನಿಮಗಾಗಿ ನಾನು ಅರಮನೆಗೆ ಹೋಗಿ ಅನ್ನವನ್ನು ತರುವೆನು. ಅಲ್ಲಿಯವರೆಗೆ ನೀರನ್ನು ಕುಡಿದು ಬಾಯಾರಿಕೆಯನ್ನು ಪರಿಹಾರಮಾಡಿಕೊಳ್ಳಿರಿ “ ಹೀಗೆ ಗಂಗಾದೇವತೆ ಹೇಳಿದಾಗ ಧರ್ಮಘೋಷ ಮುನಿಗಳು” ನಾವು ಅದನ್ನು ಸ್ವೀಕರಿಸಲೊಲ್ಲೆವಮ್ಮಾ! ಕುಡಿಯಲಿಕ್ಕಾಗದು“ ಎಂದರು. ಆಗ ಗಂಗಾದೇವತೆ ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸೀಮಂಧರ ತೀರ್ಥಂಕರರನ್ನು, ಶ್ರೇಷ್ಠ ದೇವರಾದ ಅವರನ್ನು ಕಂಡು ನಮಸ್ಕರಿಸಿ ಹೀಗೆ ಕೇಳಿದಳು – “ಪೂಜ್ಯರೇ, ಒಬ್ಬರು ಋಷಿಗಳು ಬಾಯಾರಿಕೆಯಿಂದ ಬಹಳ ಆಯಾಸಗೊಂಡು ಶಕ್ತಿಗುಂದಿದ್ದರು. ಅವರನ್ನು ನಾನು ಕಂಡು, ತಣ್ಣಗಾದ ಮತ್ತು ಸುವಾಸನೆಯುಳ್ಳ ನೀರನ್ನು ದೊಡ್ಡದಾದ ಒಂದು ಚಿನ್ನದ ಕಲಶದಲ್ಲಿ ಪೂರ್ಣವಾಗಿ ತುಂಬಿಸಿಕೊಂಡು ತೆಗೆದುಕೊಂಡು ಹೋದೆನು. ಕುಡಿಯುವುದಕ್ಕಾಗಿ ನೀರನ್ನು ಹೊಯ್ದಾಗ ಅವರು ನೀರನ್ನು ಸ್ವೀಕರಿಸಲಿಲ್ಲ” ಎಂದಳು. ಆಗ ಸೀಮಂಧರ ಸ್ವಾಮಿಗಳು – “ನೀನು ಕೊಂಡುಹೋದ ನೀರು ಪ್ರಾಸುಕ (ಜೀವರಹಿತ) ವಾಗಿದ್ದರೂ ಚಿನ್ನದ ಪಾತ್ರೆಯಲ್ಲಿ ಕೊಂಡುಹೋಗಿದ್ದರೂ ಋಷಿಗಳು ದೇವರುಗಳ ಮತ್ತು ದೇವಿಯರುಗಳ ಕೈಯಿಂದ ಬಂದುದನ್ನು ಉಣ್ಣಬಾರದು, ಕುಡಿಯಲೂ ಬಾರದು. 

      ನಿಮಗೆ ಸಮ್ಯಕ್ತ್ವಮುಂ ಪೂಜೆಯುಂ ಋಷಿಯರ್ಕಳ್ಗೆ ಪ್ರಾತಿಹಾರ್ಯಮಂ ಗೆಯ್ವುದುಂ ನಿಮ್ಮಭಿಪ್ರಾಯಮಿನಿತೆಯೆಂದು ಪೇೞ್ದೊಡೆ ತೀರ್ಥಂಕರ ಪರಮದೇವರ ಮಾತಂ ಕೇಳ್ದು ಬೇಗಂ ಗಂಗಾದೇವತೆ ಧರ್ಮಘೋಷಭಟಾರರ್ಗೆ ತಣ್ಣಿತಪ್ಪ ಗಾಳಿಯುಂ ಸುಗಂಧಜಲವರ್ಷಮುಮಂ ಮಾಡಿದೊಡಾಪ್ಯಾಯನಮಾಗಿ ಶುಕ್ಲಧ್ಯಾನಮಂ ಧ್ಯಾನಿಸಿ ಘಾತಿಕರ್ಮಂಗಳಂ ಕಿಡಿಸಿ ಕೇವಲಜ್ಙಾನಿಯಾದೊಡೆ ಚತುರ್ವಿಧಮಪ್ಪ ದೇವನಿಕಾಯಂ ಬಂದರ್ಚಿಸಿ ಪೂಜಿಸಿ ಪೋದೊಡವರುಂ ಬೞಕ್ಕಘಾತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತಮವರಿಂ ಕಿಱಯರ್ ಧರ್ಮಕೀರ್ತಿ ಭಟಾರರ್ ಪೆಱತೊಂದು ತುಱುಪಟ್ಟಗೆ ಪೋದೊಡಾ ತುಱುಪಟ್ಟಿಯುಮಲ್ಲಿಂದೆರ್ದು ಪೆಱತೊಂದು ದೆಸೆಗೆ ನಾಡೆ ಗೆಂಟು ಪೋದೊಡೆ ನಿರಾಶೆಯಾಗಿ ಪಸಿವುಂ ನೀರೞ್ಕೆಯಿಂದಂ ಬಾದಿಸೆಪಟ್ಟೊರಾಗಿ ಸೇದೆಗೆಟ್ಟು ಬಸಮೞದು ಶುಭಪರಿಣಾಮಕ್ಕೆ ಸಂದೊರಂ ಮುನ್ನಿನ ದೇವತೆ ಕಂಡಱದು ಪ್ರತಿಬೋಧಿಸಲ್ ತಗುಳ್ದವರುಂ ತಿಳಿಪಲಾಱದೆ ಮತ್ತೆ ಪೂರ್ವವಿದೇಹಕ್ಕೆ ಪೋಗಿ ಸೀಮಂಧರ ತೀರ್ಥಕರ ಪರಮಸ್ವಾಮಿಯಂ ಕಂಡು ಪೊಡೆವಟ್ಟು ಅವರ ಸಮಾವಸ್ಥೆಯೆಲ್ಲಮಂ ಭಟಾರರ್ಗ್ಗೆ ಪೇೞ್ದು ಸಮಾಸಂಧಾನೋಪಾಯಮಂ ಬೆಸಗೊಂಡೊಡೆ 

        ನಿಮ್ಮಂಥವರು ಜೈನಧರ್ಮವನ್ನು ತಿಳಿಯಬಹುದು. ಪೂಜೆಮಾಡಬಹುದು, ಋಷಿಗಳಿಗೆ ದೇವತೆಗಳು ಮಾಡತಕ್ಕ ಪ್ರಜೆ ಮಾಡಬಹುದು. ಇಷ್ಟು ಮಾತ್ರವೇ ನಿಮಗೆ ಅರ್ಹತೆ” ಯೆಂದರು. ಗಂಗೆಯು ಅವರ ಮಾತನ್ನು ಕೇಳಿ ಬೇಗ ಹೋದಳು. ಧರ್ಮಘೋಷಮುನಿಗಳಿಗೆ ತಂಗಾಳಿಯನ್ನೂ ಸುವಾಸನೆಯ ನೀರಿನ ಮಳೆಯನ್ನೂ ಉಂಟುಮಾಡಿದಳು. ಆಗದು ಧರ್ಮಘೋಷರಿಗೆ ಹಿತವಾಯಿತು. ಅವರು ಶುಕ್ಲಧ್ಯಾನವನ್ನು ಮಾಡಿ, ಘಾತಿಕರ್ಮಗಳನ್ನು ನಾಶಪಡಿಸಿ ಕೇವಲ ಜ್ಞಾನವನ್ನು ಪಡೆದರು. ನಾಲ್ಕು ವಿಧವಾದ ದೇವತೆಗಳ ಸಮೂಹವು ಅಲ್ಲಿಗೆ ಬಂದು ಭಟಾರರ್ನನು ಅರ್ಚಿಸಿ ಪೂಜಿಸಿ ಹಿಂದೆರಳಿದರು. ಧರ್ಮಘೋಷ ಋಷಿಗಳು ಆಮೇಲೆ ಅಘಾತಿಕರ್ಮಗಳನ್ನೂ ನಾಶಪಡಿಸಿ ಮೋಕ್ಷವನ್ನೈದಿದರು. ಅನಂತರ, ಅವರ ತಮ್ಮಂದಿರಾದ ಧರ್ಮಕೀರ್ತಿ ಭಟಾರರು ಬೇರೊಂದು ತುರು(ಹಸು) ಹಟ್ಟಿಗೆ ಹೋದಾಗ, ಆ ತರುಹಟ್ಟಿ ಅಲ್ಲಿಂದ ಎದ್ದು ಬೇರೊಂದು ಕಡೆಗೆ ಬಹಳವಾಗಿ ದೂರಕ್ಕೆ ಹೋಗಿದ್ದಿತು. ಇದರಿಂದ ಅವರಿಗೆ ನಿರಾಶೆಯುಂಟಾಯಿತು. ಹಸಿವು ಬಾಯಾರಿಕೆಗಳು ಅವರನ್ನು ಬಾಸಿದವು. ಆಯಾಸದಿಂದ ಕೆಟ್ಟು, ಶಕ್ತಿಗುಂದಿ ಅವರು ಶುಭಫಲವನ್ನು ಪಡೆದುಕೊಂಡಿರಲು, ಹಿಂದಿನ ಗಂಗಾದೇವತೆ ಕಂಡು, ತಿಳಿದು, ಅವರಿಗೆ ಅರಿವನ್ನು ಉಂಟುಮಾಡಲು ತೊಡಗಿದರೂ ತಿಳಿಸಲಾರದವಳಾದಳು. ಆಕೆ ಹಿಂದಿನಂತೆ ಪೂರ್ವವಿದೇಹಕ್ಕೆ ಹೋಗಿ ಪರಮಸ್ವಾಮಿಯಾದ ಸೀಮಂಧರ ತೀರ್ಥಂಕರರನ್ನು ಕಂಡು ಸಾಷ್ಟಾಂಗವಂದನೆ ಮಾಡಿ, ಅವರ ಸಮ್ಮತೆಯ ಸ್ಥಿತಿಯೆಲ್ಲವನ್ನೂ ಹೇಳಿದಳು. ಅವರನ್ನು ಏಕಾಗ್ರತೆಗೆ ಸೇರಿಸುವ ಉಪಾಯವೇನೆಂದು ಕೇಳಿದಳು. 

       ಸರ್ವಜ್ಞರಿಂತೆಂದು ಪೇೞ್ದರಾಸನ್ನಭವ್ಯರ್ ಮೂಱನೆಯ ಭವದೊಳ್ ಮೋಕ್ಷಕ್ಕೆ ವೋಪರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂಬುದಂ ಕೇಳ್ದಾಗಡೆ ಅಶುಭ ಪರಿಣಾಮಮಂ ತೊಱೆದು ನೀಗಿ ಶುಭ ಪರಿಣಾಮದೊಳ್ ಕೂಡಿ ಸಮಾಯನೊಡೆಯರಪ್ಪರ್ ನೀಂ ಬೇಗಂ ಪೋಗಿ ಪ್ರತಿಬೋಸೆಂದು ಪೇೞ್ದೊಡೆ ಗಂಗಾದೇವತೆಯಂತೆಗೆಯ್ವೆನೆಂದು ಪೊಡೆವಟ್ಟು ಪೋಗಿ ಆ ರಿಸಿಯರನೆಯ್ದಿ ಇಂತೆಂದಳ್ ಭಟಾರಾ ನೀಮೀ ಭವದಿಂ ತೊಟ್ಟು ಮೂಱನೆಯ ಭವದೊಳ್ ಕರ್ಮಕ್ಷಯಂ ಗೆಯ್ದು ಕೇವಳ ಜ್ಞಾನಿಯಗಿ ಮೋಕ್ಷಕ್ಕೆ ವೋದಪಿರೆಂದು ಸೀಮಂಧರ ತೀರ್ಥಂಕರ ಪರಮದೇವರ್ ಪೇೞ್ದರೆಂದೊಡಾ ಮಾತಂ ಧರ್ಮಕೀರ್ತಿ ಭಟಾರರ್ ಕೇಳ್ದು ಉನ್ಮಾರ್ಗದಿಂದ ಮನಮನುಡುಗಿ ಸನ್ಮರ್ಗದೊಳ್ ನಿಱಸಿ :

        ಗಾಹೆ || ಹಾ ದುಟ್ಠು ಕಯಂ ಹಾ ದುಟ್ಠು ಕಾರಿಯಂ ಹಾ ದುಟ್ಠು ಅಣುಮೋದಿಯಂ
                     ಜೀವೋ ಅಂತೋ ಅಂತೋ ದಜ್ಝ ಇ ಪಚ್ಛತ್ತಾವೇಣ ವೇವಂತೋ

        ಎಂದು ಪೊಲ್ಲದಂ ಬಗೆದೆನೆಂದು ತನ್ನಂ ತಾಂ ಪೞಯುತ್ತಂ ಸೀಮಂಧರ ಸ್ವಾಮಿಗಳ ನಮಗ್ರಹಣಂಗೊಂಡಾಗಳಾ ಶುಭಪರಿಣಾಮದಿಂ ಪಿಂಗಿ ಶುಭ ಶುದ್ಧ ಪರಿಣಾಮದೊಳ್ ಕೂಡಿ ಮಿಕ್ಕ ರತ್ನತ್ರಯಂಗಳನಾರಾಸಿ ಪದಿನಾಱನೆಯ ಕಲ್ಪದೊಳ್ ಉತ್ಕೃಷ್ಟಮಪ್ಪ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನ್ರೆಡೆಯೊನಚ್ಚುತೆಂದ್ರನಾಗಿ ಪುಟ್ಟಿದಂ ಮತ್ತಂ ಪೆಱರುಮಾರಾಧ ಕರಪ್ಪವರ್ಗಳ್ ಧರ್ಮಘೋಷಭಟಾರರಂ ಮನದೊಳ್ ಬಗೆದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

        ಅಗ ತೀರ್ಥಂಕರರು ಹೀಗೆಂದರು – “ಧರ್ಮಕೀರ್ತಿ ಮುನಿಗಳು ಅಸನ್ನ ಭವ್ಯರು (ಮೋಕ್ಷಕ್ಕೆ ಹೋಗಲು ಅರ್ಹರು). ಮೂರನೆಯ ಜನ್ಮದಲ್ಲಿ ಮೋಕ್ಷಕ್ಕೆ ಹೋಗುವರೆಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದರು – ಎಂಬುದನ್ನು ಕೇಳಿದ ಕೂಡಲೇ ಅಶುಭವನ್ನೆಲ್ಲ ತೊರೆದುಬಿಟ್ಟು ಶುಭಫಲದಲ್ಲಿ ಸೇರಿ ಚಿತ್ತೈಕಾಗ್ರತೆಯನ್ನು ಉಳ್ಳವರಾಗುವರು. ನೀನು ಬೇಗನೆ ಹೋಗಿ ಅವರಿಗೆ ಎಚ್ಚರಿಸು ( ಈ ಅರಿವನ್ನುಂಟುಮಾಡು)“. ಹಾಗೆ ತೀರ್ಥಂಕರು ಹೇಳಲು ಗಂಗಾದೇವಿ “ಹಾಗೆಯೇ ಮಾಡುವೆನು” ಎಂದು, ನಮಸ್ಕರಿಸಿ ಹೋಗಿ ಆ ಋಷಿಗಳ ಬಳಿಗೆ ಹೋಗಿ ಹೀಗೆಂದಳು – “ಪೂಜ್ಯರೇ, ನೀವು ಈ ಜನ್ಮದಿಂದ ತೊಡಗಿ ಮೂರನೆಯ ಜನ್ಮದಲ್ಲಿ ಕರ್ಮವನ್ನು ನಾಶಗೊಳಿಸಿ ಕೇವಲಜ್ಞಾನವನ್ನು ಪಡೆದು ಮೋಕ್ಷಕ್ಕೆ ಹೋಗುವಿರಿ – ಎಂದು ಸೀಮಂಧರ ತೀರ್ಥಂಕರ ಪರಮದೇವರು ಹೇಳಿದ್ದಾರೆ ” – ಹೀಗೆ ಗಂಗಾದೇವತೆ ಹೇಳಲು ಆ ಮಾತನ್ನು ಧರ್ಮಕೀರ್ತಿ ಋಷಿಗಳು ಕೇಳಿ, ದುಷ್ಟಮಾರ್ಗದಿಂದ ಮನಸ್ಸನ್ನು ಹಿಂದೆಗೆದು ಸನ್ಮಾರ್ಗದಲ್ಲಿ ನೆಲೆಗೊಳಿಸಿದರು. (ಅಯ್ಯೋ ದುಷ್ಟಕಾರ್ಯ ಮಾಡಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯ ಮಾಡಿಸಲ್ಪಟ್ಟಿತು, ಅಯ್ಯೋ ದುಷ್ಟಕಾರ್ಯವು ಅನುಮೋದಿಸಲ್ಪಟ್ಟಿತು. ಇವನು ಒಳಗೊಳಗೆ ನಡುಗುತ್ತ ಪಶ್ಚಾತ್ತಾಪದಿಂದ ಸುಡುತ್ತ ಇರುತ್ತಾನೆ.) ಹೀಗೆನ್ನುತ್ತ, ಕೆಟ್ಟುದನ್ನು ಯೋಚಿಸಿದೆನೆಂದು ತನ್ನನ್ನು ತಾನೇ ನಿಂದಿಸುತ್ತ ಸೀಮಂಧರ ಸ್ವಾಮಿಗಳ ಹೆಸರನ್ನು ಕೇಳಿದಾಗ ಅಮಂಗಳಕರವಾದ ಫಲವು ಪರಿಹಾರವಾಗಿ ಮಂಗಲವೂ ಶುದ್ಧವೂ ಆದ ಫಲದಲ್ಲಿ ಸೇರಿ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ಆಚರಿಸಿ ಹದಿನಾರನೆಯ ಸ್ವರ್ಗದಲ್ಲಿ ಅತ್ಯಂತ ಶ್ರೇಷ್ಠವೆನಿಸುವ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನುಳ್ಳ ಅಚ್ಚುತೇಂದ್ರನಾಗಿ ಹುಟ್ಟಿದರು. ಆರಾಧಕರಾಗಿರತಕ್ಕ ಬೇರೆಯವರು ಕೂಡ, ಧರ್ಮಘೋಷಭಟಾರರನ್ನು ಮನಸ್ಸಿನಲ್ಲಿ ಭಾವಿಸಿ, ಹಸಿವು ಬಾಯಾರಿಕೆ ಮುಂತಾಗಿ ಇರುವ ಪರೀಷಹಗಳನ್ನು ಸಹಿಸಿ, ಸಮ್ಯಗ್ ದರ್ಶನ, ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರಗಳನ್ನು ಸಾಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****




28 ಡಿಸೆಂಬರ್ 2021

ಕುವೆಂಪು ಜನ್ಮದಿನದ ರಸಪ್ರಶ್ನೆ ಫಲಿತಾಂಶ

ವಿಶ್ವಮಾನವ ಕುವೆಂಪು ಜನ್ಮದಿನದ ರಸಪ್ರಶ್ನೆಯ ಫಲಿತಾಂಶ ಮತ್ತು ಪ್ರಮಾಣಪತ್ರಗಳ ಡೌನ್ಲೋಡ್ ಲಿಂಕ್
        ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿದ್ದಲ್ಲಿ ಈ  ಕೆಳಗಿನ ಪಟ್ಟಿಯಲ್ಲಿ ನಿಮ್ಮ ಹೆಸರಿನ ನೇರಕ್ಕೆ ಬಲಭಾಗದ ಕೊನೆಯಲ್ಲಿರುವ ನೀಲಿ ಬಣ್ಣದ ಲಿಂಕ್ ಒತ್ತಿರಿ. ನಿಮ್ಮ ಪ್ರಮಾಣಪತ್ರ  Download ಆಗುತ್ತದೆ.

27 ಡಿಸೆಂಬರ್ 2021

ರಾಷ್ಟ್ರಕವಿ ಕುವೆಂಪು

 ಕುವೆಂಪು ಅವರ ಪರಿಚಯ

ಕುವೆಂಪು

ಕಿರು ಪರಿಚಯ

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಕುಪ್ಪಳ್ಳಿ ಅವರ ತಂದೆಯ ಊರು. ಅವರು ಜನಿಸಿದ್ದು ಅವರ ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ  ೧೯೦೪ ಡಿಸೆಂಬರ್ ೨೯ ರಲ್ಲಿ.

ಇಂಗ್ಲೀಷ್‍ನ ನವೋದಯ ಕಾಲದ ರಮ್ಯ ಕವಿಗಳ(Romantic Poets) ಪ್ರಭಾವಕ್ಕೊಳಗಾಗಿ 'ಬಿಗಿನರ್ಸ್ ಮ್ಯೂಸ್'(Beginner's Muse) ಎಂಬ ಆರು ಕವನಗಳ ಕವನ ಸಂಕಲನವನ್ನು ೧೯೨೨ರಲ್ಲಿ ರಚಿಸಿದರು. ನಂತರ ಐರಿಸ್ ಕವಿ ಜೇಮ್ಸ್ ಕಸಿನ್‍ರವರ ಸಲಹೆಯಂತೆ ಕನ್ನಡದಲ್ಲಿಯೇ ಕೃತಿ ರಚನೆಯಲ್ಲಿ ತೊಡಗಿದರು.
ಅವರು ರಚಿಸಿದ ಕನ್ನಡದ ಮೊದಲ ಕೃತಿ 'ಅಮಲನ ಕಥೆ'

ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

'ಶ್ರೀರಾಮಾಯಣ ದರ್ಶನಂ' ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಈ ಮಹಾಕಾವ್ಯಕ್ಕೆ ಮೂಲ ಆಕರಗ್ರಂಥ ವಾಲ್ಮೀಕಿ ರಾಮಾಯಣವಾದರು ಇದರಲ್ಲಿ ಬರುವ ಸನ್ನಿವೇಶಗಳು, ಪತ್ರಗಳ ಚಿತ್ರಣ ವಿಭಿನ್ನವಾಗಿ ಮೂಡಿಬಂದಿದೆ. ಈ ಕೃತಿಯು ಕುವೆಂಪುರವರ ಒಂಬತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿದೆ. ಇದನ್ನು ಅವರು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ.

ಇವರು ಬರೆದಿರುವ ಪ್ರಮುಖ ಕೃತಿಗಳು: ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು, ನನ್ನ ದೆವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು - ಕಾದಂಬರಿಗಳು. ರಸೋವೈಸಃ, ತಪೋನಂದನ - ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ - ಮಕ್ಕಳ ಪುಸ್ತಕಗಳು, ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್ - ನಾಟಕಗಳು, ನೆನಪಿನ ದೋಣಿಯಲ್ಲಿ - ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ.

ಶ್ರೀಯುತರಿಗೆ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ೧೯೬೪ರಲ್ಲಿ ರಾಷ್ಟ್ರಕವಿ, ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೯೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. ೧೯೯೨ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಕುವೆಂಪು ಅವರ ಬಗ್ಗೆ ಹೆಚ್ಚಿನ ಮಾಹಿತಿ

ಬಾಲ್ಯ

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಶಿಕ್ಷಣ

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ

'ಉದಯರವಿ', ಒಂಟಿಕೊಪ್ಪಲ್, ಮೈಸೂರು

    ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ನಿಧನ

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಸಾಹಿತ್ಯ ಕೃಷಿ

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.

ಕೃತಿಗಳು

ಮಹಾಕಾವ್ಯ
ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯ
ಚಿತ್ರಾಂಗದಾ (1936)

ಕವನ ಸಂಕಲನಗಳು
ಕೊಳಲು (1930)
ಪಾಂಚಜನ್ಯ (1933)
ನವಿಲು (1934)
ಕಲಾಸುಂದರಿ (1934)
ಕಥನ ಕವನಗಳು (1937)
ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
ಪ್ರೇಮ ಕಾಶ್ಮೀರ (1946)
ಅಗ್ನಿಹಂಸ (1946)
ಕೃತ್ತಿಕೆ (1946)
ಪಕ್ಷಿಕಾಶಿ (1946)
ಕಿಂಕಿಣಿ (ವಚನ ಸಂಕಲನ) (1946)
ಷೋಡಶಿ (1946)
ಚಂದ್ರಮಂಚಕೆ ಬಾ ಚಕೋರಿ (1957)
ಇಕ್ಷುಗಂಗೋತ್ರಿ (1957)
ಅನಿಕೇತನ (1963)
ಜೇನಾಗುವ (1964)
ಅನುತ್ತರಾ (1965)
ಮಂತ್ರಾಕ್ಷತೆ (1966)
ಕದರಡಕೆ (1967)
ಪ್ರೇತಕ್ಯೂ (1967)
ಕುಟೀಚಕ (1967)
ಹೊನ್ನ ಹೊತ್ತಾರೆ (1976)
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)

ಕಥಾ ಸಂಕಲನ
ಸಂನ್ಯಾಸಿ ಮತ್ತು ಇತರ ಕಥೆಗಳು (1936)
ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು
ಕಾನೂರು ಹೆಗ್ಗಡತಿ (1936)
ಮಲೆಗಳಲ್ಲಿ ಮದುಮಗಳು (1967)

ನಾಟಕಗಳು
ಯಮನ ಸೋಲು (1928)
ಜಲಗಾರ (1928)
ಬಿರುಗಾಳಿ (1930)
ವಾಲ್ಮೀಕಿಯ ಭಾಗ್ಯ (1931)
ಮಹಾರಾತ್ರಿ (1931)
ಸ್ಶಶಾನ ಕುರುಕ್ಷೇತ್ರಂ (1931)
ರಕ್ತಾಕ್ಷಿ (1933)
ಶೂದ್ರ ತಪಸ್ವಿ (1944)
ಬೆರಳ್‍ಗೆ ಕೊರಳ್ (1947)
ಬಲಿದಾನ (1948)
ಚಂದ್ರಹಾಸ (1963)
ಕಾನೀನ (1974)

ಪ್ರಬಂಧ
ಮಲೆನಾಡಿನ ಚಿತ್ರಗಳು (1933)

ವಿಮರ್ಶೆ
ಕಾವ್ಯವಿಹಾರ (1946)
ತಪೋನಂದನ (1950)
ವಿಭೂತಿಪೂಜೆ (1953)
ದ್ರೌಪದಿಯ ಶ್ರೀಮುಡಿ (1960)
ರಸೋ ವೈ ಸಃ (1963)
ಇತ್ಯಾದಿ (1970)

ಆತ್ಮಕಥೆ
ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ

ಅನುವಾದ
ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ
ಸಾಹಿತ್ಯ ಪ್ರಚಾರ (1930)
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
ಷಷ್ಠಿನಮನ (1964)
ಮನುಜಮತ-ವಿಶ್ವಪಥ (1971)
ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ
ಅಮಲನ ಕಥೆ (1924)
ಮೋಡಣ್ಣನ ತಮ್ಮ (ನಾಟಕ) (1926)
ಹಾಳೂರು (1926)
ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
ನನ್ನ ಗೋಪಾಲ (ನಾಟಕ) (1930)
ನನ್ನ ಮನೆ (1946)
ಮೇಘಪುರ (1947)
ಮರಿವಿಜ್ಞಾನಿ (1947)
ನರಿಗಳಿಗೇಕೆ ಕೋಡಿಲ್ಲ (1977)

ಇತರೆ
ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು
ಕನ್ನಡ ಡಿಂಡಿಮ (1968)
ಕಬ್ಬಿಗನ ಕೈಬುಟ್ಟಿ (1973)
ಪ್ರಾರ್ಥನಾ ಗೀತಾಂಜಲಿ (1972)

ಸ್ಮಾರಕಗಳು
  • ಕವಿಮನೆ, ಕುಪ್ಪಳಿ. ಈಗ ವಸ್ತು ಸಂಗ್ರಹಾಲಯವಾಗಿದೆ.
  • ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ.
  • ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ 'ಕವಿಶೈಲ' ಒಂದು ವಿಶಿಷ್ಟ ಸ್ಮಾರಕ.
  • ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ.
  • ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  • ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  • ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ.

ಕುವೆಂಪು ಕುರಿತ ಕೃತಿಗಳು
  • ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  • ಕುವೆಂಪು - ಲೇ: ದೇಜಗೌ
  • ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ
  • ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ
  • ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ
  • ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ
  • ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ
  • ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ
  • ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ
ನಾಟಕ-ಚಲನಚಿತ್ರ-ಧಾರಾವಾಹಿ
  • "ಬೆರಳ್‌ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ.
  • "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ.
  • "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ.
ಅಮರ ಕೊಡುಗೆಗಳು
  • ಕುವೆಂಪು ಅವರು ಯುಗಪ್ರವರ್ತಕ ಕವಿ.
  • ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.
  • ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಹೊಸ ಕಾಲಕ್ಕೆ ಅಗತ್ಯವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.
  • ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಾರೆ.
  • ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದರು.
  • ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ್ದಾರೆ.
  • ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಫೂರ್ತಿಯಾಗಿದ್ದಾರೆ.
  • 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.
ಗೌರವ/ ಪ್ರಶಸ್ತಿ ಪುರಸ್ಕಾರಗಳು
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)
  • ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956)
  • ಪದ್ಮಭೂಷಣ (೧೯೫೮)
  • ರಾಷ್ಟ್ರಕವಿ ಪುರಸ್ಕಾರ (೧೯೬೪) [ಕನ್ನಡದ ಎರಡನೆಯ ರಾಷ್ಟ್ರಕವಿ]
  • ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
  • ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
  • ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979)
  • ಪಂಪ ಪ್ರಶಸ್ತಿ (೧೯೮೮)
  • ಪದ್ಮವಿಭೂಷಣ (೧೯೮೯)
  • ಕರ್ನಾಟಕ ರತ್ನ (೧೯೯೨) [ಇವರೊಟ್ಟಿಗೆ ಡಾ॥ ರಾಜಕುಮಾರ್ ಅವರಿಗೂ ನೀಡಲಾಯಿತು]
  • ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ
  • ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)
  • ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29) [೧]
ಅಧ್ಯಕ್ಷತೆ, ಇತ್ಯಾದಿ
  • 1928ರಲ್ಲಿ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
  • 1957ರಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ವಿಶ್ವ ಮಾನವ ದಿನ
  • ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

ಬಾಲ್ಯದಿಂದ ಹಿಡಿದು ಅವರ ಬದುಕಿನ ವಿವಿಧ ಮಜಲುಗಳನ್ನು ಅನಾವರಣಗೊಳಿಸುವ ಅಪರೂಪದ ಚಿತ್ರಗಳು
    ಬಾಲಕನಾಗಿ... 
ಕುವೆಂಪು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಜನಿಸಿದ್ದು (29.12.1904 - 11.11.1994) ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹಿರೇಕೊಡಿಗೆ ಎಂಬ ಹಳ್ಳಿಯಲ್ಲಿ. ವೆಂಕಟಪ್ಪ ಗೌಡ ಮತ್ತು ಸೀತಮ್ಮ ಅವರ ಪುತ್ರನಾಗಿ ಜನಿಸಿದ ಕುವೆಂಪು ಅವರ ಬಾಲ್ಯದ ಅಪರೂಪದ ಚಿತ್ರವಿದು.

ಯುವಕನಾಗಿ... 
    ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ್ದ ಕುವೆಂಪು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದರು. ಜ್ಞಾನದಾಹಿ ಕುವೆಂಪು ಯುವಕರಾಗಿದ್ದಾಗ ಹೀಗಿದ್ದರು.

ಪದವೀಧರ ಕುವೆಂಪು...
ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಪದವಿ ಪಡೆದ ಪದವೀಧರ ಕುವೆಂಪು ಇದ್ದಿದ್ದು ಹೀಗೆ. ಕುವೆಂಪು ಅವರು ಸಾಹಿತ್ಯ ಕೃಷಿ ಆರಂಭಿಸಿದ್ದ ಇಂಗ್ಲಿಷ್ ಭಾಷೆಯ ಮೂಲಕ ಎಂಬುದು ಇನ್ನೊಂದು ಅಚ್ಚರಿಯ ವಿಷಯ.


ಪತ್ನಿ ಹೇಮಾವತಿಯೊಂದಿಗೆ... 
    ಏಪ್ರಿಲ್ 30, 1937 ರಲ್ಲಿ ತಮಗೆ ಅನುರೂಪವೆಂಬಂತಿದ್ದ ಹೇಮಾವತಿಯವರನ್ನು ಕುವೆಂಪು ಅವರು ಮದುವೆಯಾದರು. ಹೇಮಾವತಿಯವರ ಮಡಿಲಲ್ಲಿ ಕುವೆಂಪು ಅವರ ನೆಚ್ಚಿನ ಮಗ ಪುಟ್ಟ ಪೂರ್ಣಚಂದ್ರ ತೇಜಸ್ವಿ ಕಂಡಿದ್ದು ಹೀಗೆ.

ಮಗ ತೇಜಸ್ವಿ ಅವರೊಂದಿಗೆ... 
    ಲೇಖಕ, ನಾಟಕಕಾರ, ಛಾಯಾಗ್ರಾಹಕ, ಕೃಷಿಕ, ಚಳವಳಿಗಾರರಾಗಿ ಹೆಸರು ಮಾಡಿದ ಕನ್ನಡದ ಖ್ಯಾತನಾಮರ ಪೈಕಿ ಒಬ್ಬರು ಕುವೆಂಪು ಅವರ ಪುತ್ರ ತೇಜಸ್ವಿ. ಅವರೊಂದಿಗೆ ಕುವೆಂಪು ಅವರು ಸ್ನೇಹಿತನಂತೇ ಇದ್ದರು ಎಂಬುದು ಈ ಚಿತ್ರವನ್ನು ನೋಡಿಯೇ ಅರ್ಥಮಾಡಿಕೊಳ್ಳಬಹುದು.



ವರಕವಿಯೊಂದಿಗೆ ರಾಷ್ಟ್ರಕವಿ.... 
    ಕುವೆಂಪು ಅವರನ್ನು 'ಜಗದ ಕವಿ, ಯುಗದ ಕವಿ' ಎಂದು ಕರೆದ, ಕುವೆಂಪು ಅವರ ಸಮಕಾಲೀನ ಕವಿ, ವರಕವಿ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರೊಂದಿಗೆ ಕುವೆಂಪು.

ಜ್ಞಾನ ಪೀಠ ಪ್ರಶಸ್ತಿ... 
    'ಶ್ರೀ ರಾಮಾಯಣ ದರ್ಶನಂ' ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು 1968 ರಲ್ಲಿ ಪ್ರಶಸ್ತಿ ಸ್ವೀಕರಿಸಿದ ಸುವರ್ಣ ಘಳಿಗೆಯ ಚಿತ್ರ ಇದು.

ಪದ್ಮವಿಭೂಷಣ.... 
    ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸುತ್ತ 1989 ರಲ್ಲಿ ಭಾರತದ ಸರ್ಕಾರದ ಉನ್ನತ ನಾಗರಿಕ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಪದ್ಮ ವಿಭೂಷಣ ಪ್ರಶಸ್ತಿ ಪತ್ರ ಮತ್ತು ಫಲಕ ಇದು.

ರಾಷ್ಟ್ರಕವಿ ಪುರಸ್ಕಾರ 
        1964 ರಲ್ಲಿ ರಾಷ್ಟ್ರಕವಿ ಪುರಸ್ಕಾರಕ್ಕೆ ಪಾತ್ರರಾದ ಕುವೆಂಪು ಅವರು 23 ಕವನ ಸಂಕಲನ, 2 ಕಥಾ ಸಂಕಲನ, 2 ಕಾದಂಬರಿ, 12 ನಾಟಕ ಸೇರಿದಂತೆ ವಿಮರ್ಶೆ, ಪ್ರಬಂಧ, ಜೀವ ಚರಿತ್ರೆ, ಅನುವಾದ, ಶಿಶುಸಾಹಿತ್ಯ ಸೇರಿದಂತೆ ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈಯಯಾಡಿಸಿದ್ದಾರೆ. ಅದಕ್ಕೆಂದೇ ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯ ಪ್ರಕಾರವಿಲ್ಲ ಎಂದಿರುವುದು! ಈ ಎಲ್ಲ ಕೊಡುಗೆ ಮನಗಂಡು 1964 ರಲ್ಲಿ ನೀಡಿದ 'ರಾಷ್ಟ್ರಕವಿ' ಗೌರವವನ್ನು ಸ್ವೀಕರಿಸಿದ ಚಿತ್ರ ಇದು.

ಮೊಮ್ಮಕ್ಕಳೊಂದಿಗೆ... 
        ಕುವೆಂಪು ತಾತ ಮೊಮ್ಮಕ್ಕಳಾದ ಸುಸ್ಮಿತಾ, ಪ್ರಾರ್ಥನೆ, ಈಶಾನ್ಯೆಯೊಂದಿಗೆ ತಾತ ಕುವೆಂಪು. ಗಂಭೀರ ಸಾಹಿತ್ಯದಲ್ಲಿ ತಲ್ಲೀನರಾಗಿದ್ದರೂ, ಕುಟುಂಬಸ್ಥರೊಂದಿಗೆ ಪ್ರೀತಿ-ವಿಶ್ವಾಸ ಹಂಚಿಕೊಳ್ಳುವುದರಲ್ಲಿಯೂ ಎಂದಿಗೂ ಹಿಂದೆ ಬೀಳದ ಕುವೆಂಪು, ತಮ್ಮ ಮೊಮ್ಮಕ್ಕಳೊಂದಿಗೆ ಕಂಡಿದ್ದು ಹೀಗೆ.

ಕವಿಮಿತ್ರರೊಂದಿಗೆ... 
        ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಮತ್ತು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರೊಂದಿಗೆ ಕುವೆಂಪು ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು...

ವರನಟನೊಂದಿಗೆ....
ರಾಷ್ಟ್ರಕವಿ ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರೊಂದಿಗೆ ರಾಷ್ಟ್ರಕವಿ ಕಂಡಿದ್ದು ಹೀಗೆ.

ಕವಿಶೈಲ
ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ ಸ್ಥಳ





******



**************

ಹೊಸಗನ್ನಡ ಕವಿಗಳು

ಹೊಸಗನ್ನಡ ಕವಿಗಳು

22 ಡಿಸೆಂಬರ್ 2021

ಲಲಿತಘಟೆಯ ಕಥೆ (Lalitaghateya kathe)

 ಲಲಿತಘಟೆಯ ಕಥೆಯಂ ಪೇೞ್ವೆಂ :

ಗಾಹೆ || ಕೊಸಂಬೀ ಲಲಿತಘಟಾ ಓಢಾ ಣದೀಎ ಪೂರೇಣ ತಿವ್ವೇಣ

ಆರಾಧಣಂ ಪವಣ್ಣಾ ಪಾಓವಗಯಾ ಅಮೂಡಮದೀ ||

        *ಕೊಸಂಬೀ – ಕೌಶಾಬಿಯೆಂಬ ಪೊೞಲೊಳ್, ಲಲಿತಘಟಾ – ಲಲಿತಘಟೆ, ಓಢಾ – ಎೞೆಯೆ ಪಟ್ಟತ್ತು. ಣದೀವಿಪೂರೇಣ – ತೊಱೆಯ ಪೂರದಿಂದಂ, ತಿವ್ವೇಣ – ಆದಮಾನುಂ ಕಡಿದಪ್ಪುದಱಂದಂ, ಆರಾಧಣಂ – ನಿಜಾತ್ಮಾರಾಧನೆಯಂ, ಪವಣ್ಣಾ – ಪೊರ್ದಿತ್ತು. ಪಾಓವಗಯಾ – ಪ್ರಾಯೋಪಗಮನಕ್ಕೆ ಸಂದುದಾಗಿ, ಅಮೂಡಮದೀ – ಮೋಹಿಸದ ಬುದ್ಧಿಯನೊಡೆಯದು*

       ಅದೆಂತೆಂದೊಡೆ : ಈ ಜಂಬೂದ್ವೀಪದ ಭರಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಶಂಬಿಯೆಂಬುದು ಪೊೞಲದನಾಳ್ರ್ವೆಂ ಹರಿಧ್ವಜನೆಂಬೊನರಸನಾತನ ಮಹಾದೇವಿ ವಾರುಣಿಯೆಂಬೊಳಾಯಿರ್ವರ್ಗ್ಗಂ ಮಕ್ಕಳ್ ಶ್ರೀವರ್ಧನಂ ವಿಜಯಂಧರಂ ವೀರಾಬಾಹು ಮೊದಲಾಗಿ ಮೂವತ್ತಿರ್ವರ್ ಕುಮಾರರುಂ ಸಾಮಂತ ಮಹಾಸಾಮಂತರ ಮಕ್ಕಳುಮಂತೆಲ್ಲಮಯ್ನೂರ್ವರುಂ ರೂಪಿನೊಳಂ ತೇಜದೊಳಂ ಯೌವನದೊಳಂ ಶ್ರೀಯೊಳಂ ತಮ್ಮೊಳೋರನ್ನರಪ್ಪರದಱಂ ಲಲಿತಘಟೆಯೆಂಬೊರನಿಬರುಂ ಮಿಥ್ಯಾದೃಷ್ಟಿಗಳ್ ಪಂಡಿತರುಮೊಂದು ದಿವಸಂ ಶ್ರೀಕಾಂತಮೆಂಬ ಪರ್ವತದಡವಿಗನಿಬರುಂ ಬೇಂಟೆಯಾಡಲ್ ಪೋದಲ್ಲಿ ಇರ್ದೊರಭಯಘೋಷರೆಂಬ ಭಟಾರರವರ್ಗ್ಗಭಯಘೋಷರೆಂಬ ಪೆಸರೆಂತಾದುದೆಂದೊಡವರ್ ಗರ್ಭದೊಳಿರ್ದಂತೆ ಅವರ ತಾಯ್ಗೆ ಜೀವಂಗಳಂ ಕೊಲ್ಲದಂತಪ್ಪ ಬಯಕೆಯಾಗಿ ಅಭಯಘೋಷಣೆಯಂ ಪೊೞಲೊಳಂ ನಾಡೊಳಂ ಪೊಯ್ಸಿ ಜೀವಂಗಳ್ಗಭಯದಾನಂಗೊಟ್ಟು ಪುಟ್ಟಿದರಪ್ಪುದಱಂದವರ್ಗ್ಗಭಯಘೋಷರೆಂಬ ಪೆಸರಾದುದಂತಪ್ಪ 

        ಲಲಿತಘಟೆಯ ಕಥೆಯನ್ನು ಹೇಳುವೆನು. (ಕೌಶಾಂಬಿ ಎಂಬ ಪಟ್ಟಣದಲ್ಲಿ ಲಲಿತ ಘಟೆ ಹೊಳೆಯ ಪ್ರವಾಹದಿಂದ ತೊಳೆಯಲ್ಪಟ್ಟಿತು. ಮೋಹಗೊಳ್ಳದ ಬುದ್ಧಿಯುಳ್ಳುದಾಗಿ ಅತ್ಯಂತ ಕಠಿಣವಾದ ತನ್ನ ಆತ್ಮಾರಾಧನೆಯನ್ನು ಆಚರಿಸಿತು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವತ್ಸೆ ಎಂಬ ನಾಡು ಇದೆ. ಆ ನಾಡಿನಲ್ಲಿ ಕೌಶಂಬಿ ಎಂಬ ಪಟ್ಟಣವಿದೆ. ಅದನ್ನು ಹರಿಧ್ವಜನೆಂಬ ರಾಜನು ಆಳುತ್ತಿದ್ದನು. ಅವನ ರಾಣಿ ವಾರುಣಿ ಎಂಬವಳು. ಆ ದಂಪತಿಗಳಿಗೆ ಶ್ರೀವರ್ಧನ, ವಿಜಯಂಧರ, ವೀರಬಾಹು ಮುಂತಾದ ಮೂವತ್ತೆರಡು ಮಂದಿ ಮಕ್ಕಳಿದ್ದರು. ಆ ಮಕ್ಕಳೂ ಸಾಮಂತರ ಮತ್ತು ಮಹಾಸಾಮಂತರ ಮಕ್ಕಳೂ ಅಂತೂ ಎಲ್ಲ ಒಟ್ಟಿಗೆ ಐನೂರು ಮಂದಿಯಿದ್ದರು. ಅವರು ರೂಪದಲ್ಲಿಯೂ ತೇಜಸ್ಸಿನಲ್ಲಿಯೂ ತಾರುಣ್ಯದಲ್ಲಿಯೂ ಐಶ್ವರ್ಯದಲ್ಲಿಯೂ ತಮ್ಮಲ್ಲಿ ಸಮಾನರಾಗಿದ್ದರು. ಆದುದರಿಂದ ಲಲಿತಘಟೆ ಎಂದು ಅವರ ಗುಂಪಿಗೆ ಹೆಸರಾಗಿತ್ತು. ಅವರೆಲ್ಲರೂ ಜೈನಧರ್ಮದಲ್ಲಿ ವಿಶ್ವಾಸವಿಲ್ಲದ ಕುದೃಷ್ಟಿಗಳೂ ವಿದ್ವಾಂಸರೂ ಆಗಿದ್ದರು. ಅವರೆಲ್ಲರೂ ಒಂದು ದಿವಸ ಶ್ರೀಕಾಂತವೆಂಬ ಬೆಟ್ಟದ ಕಾಡಿಗೆ ಬೇಟೆಯಾಡಲು ಹೋದರು. ಅಲ್ಲಿ ಅಭಯಘೋಷರೆಂಬ ಋಷಿಗಳಿದ್ದರು. ಅವರಿಗೆ ಅಭಯಘೋಷರೆಂಬ ಹೆಸರು ಹೇಗಾಯಿತೆಂದರೆ : – ಅವರು ತಾಯಿಯ ಗರ್ಭದಲ್ಲಿದ್ದಾಗ ಆಕೆಗೆ ಪ್ರಾಣಿಗಳನ್ನು ಕೊಲ್ಲದಂತಹ (ಅಹಿಂಸೆಯ) ಬಯಕೆಯಾಗಿ ಪಟ್ಟಣದಲ್ಲಿಯೂ ನಾಡಿನಲ್ಲಿಯೂ ಅಭಯದ ಡಂಗುರವನ್ನು ಹೊಡೆಸಿ, ಜೀವಿಗಳಿಗೆಲ್ಲ ಅಭಯದಾನವನ್ನು ಕೊಟ್ಟು ಹುಟ್ಟಿದುದರಿಂದ ಅವರಿಗೆ ಅಭಯಘೋಷರೆಂಬ ಹೆಸರಾಯಿತು. ಅಂತಹ

        ಭಟಾರರಡವಿಯೊಳಿರೆ ಅವರ ತಪೋಮಾಹಾತ್ಮಾದಿಂ ಲಲಿತಘಟೆಗೊಂದು ಮಿಗಮಪ್ರ್ಪೊಡಂ ಬೇಂಟೆ ಸಮನಿಸದೆ ಪೊೞಲ್ಗೆವೋದೊರಿಂತೇೞುಂ ದಿವಸಮುಂ ಬಿಡದಡವಿಗೆ ಬೇಂಟೆಯಾಡಲ್ ಪೋಗಿ ಒಂದು ಮೃಗಮಪ್ರ್ಪೊಡಂ ಸಮನಿಸದೆ ಬೇಸತ್ತೞಲ್ದು ಪೊೞಲ್ಗೆವೋಗಿ ಎಂಟನೆಯ ದಿವಸದಂದು ಶ್ರೀಕಾಂತಮೆಂಬ ಪರ್ವತದಡವಿಗೆ ಲಲಿತಘಟೆ ಪೋಗಿ ಅಡವಿಯೊಳ್ ಮೃಗಂಗಳನಱಸುತ್ತಂ ತೊೞಲ್ವರನ್ನೆಗಮಭಯಘೋಷ ಭಟಾರರಾಯತಿಯಿಂ ತೊಟ್ಟನೆ ಸರ್ವಾಂಗಮಲಧಾರಿಗಳೊಂದು ಶಿಲಾತಳದ ಮೇಗಿರ್ದಾಗಮಮಂ ಪರಿವಿಡಿಗೆಯ್ಯುತ್ತುಮರ್ಥಮಂ ಭಾವಿಸುತ್ತಂ ಸ್ವಾಧ್ಯಾಯದೊಳ್ ತಗುಳ್ದಿರ್ದೊರಂ ಸಂಛನ್ನಮಪ್ಪಡವಿಯ ಮಱೆಯೊಳ್ ಗೆಂಟಱಂದಂ ಲಲಿತಘಟೆ ಕಂಡಪೂರ್ವಮಿದೊಂದು ಕರಿಯಮೃಗಮಿರ್ದುದೆಂದು ಬಗೆದು ಶ್ರೀವರ್ಧನ ಕುಮಾರಂ ಮೊದಲಾಗನಿಬರುಂ ಬಿಲ್ಗಳನೇಱಸಿ ತಿರುವಾಯೊಳಂಬನಿಟ್ಟಿಸಲೆಂದು ತೆಗೆದಿಸುವನ್ನೆಗಮನಿಬರ ಬಿಲ್ಗಳುಂ ಮುಱದುದವರ್ಗ್ಗಳನಿಬರುಂ ಪೆಱಗಣ್ಗುರುಳ್ದು ಬಿೞ್ದೊಡಿದು ಮಹಾಚೋದ್ಯಂ ಸಾರೆ ಪೋಗಿ ನೋೞ್ಪಮೆಂದು ಪೋಪರನ್ನೆಗಂ ಋಷಿಯರ ರೂಪಂ ಕಂಡಿವರ್ ಋಷಿಯರ್ ಮೃಗಮಲ್ತೆಂದು  ಸಾರೆಪೋಗಿ 

        ಋಷಿಗಳೂ ಕಾಡಿನಲ್ಲಿ ಇದ್ದುದರಿಂದ ಅವರ ತಪಸ್ಸಿನ ಮಹಿಮೆಯಿಂದ ಲಲಿತಘಟೆಗೆ ಒಂದೇ ಒಂದು ಮೃಗವಾದರೂ ಬೇಟೆ ದೊರಕಲಿಲ್ಲ. ಅವರು ಪಟ್ಟಣಕ್ಕೆ ತೆರಳಿದರು. ಹೀಗೆ ಏಳು ದಿವಸವೂ ಬಿಡದೆ ಕಾಡಿಗೆ ಬೇಟೆಯಾಡಲು ಹೋಗಿ ಒಂದು ಮೃಗವಾದರೂ ಸಿಕ್ಕದೆ ಬೇಸರಪಟ್ಟು ದುಃಖಪಟ್ಟು ಪಟ್ಟಣಕ್ಕೆ ಹೋದರು. ಎಂಟನೆಯ ದಿವಸದಂದು ಲಲಿತಘಟೆ ಬೇಟೆಯಾಡುವುದಕ್ಕಾಗಿ ಶ್ರೀಕಾಂತವೆಂಬ ಪರ್ವತದ ಕಾಡಿಗೆ ಹೋಗಿ ಕಾಡಿನಲ್ಲಿ ಮೃಗಗಳನ್ನು ಹುಡುಕುತ್ತ ಅವರು ಸುತ್ತಾಡುತ್ತಿದ್ದರು. ಆಗ ಅಭಯಘೋಷ ಮಹರ್ಷಿಗಳು ಇಡೀ ಶರೀರದಲ್ಲಿ ಮಲಧಾರಿಗಳಾಗಿ (ಸ್ನಾನ ಶೌಚ ಮುಂತಾದವನ್ನು ಮಾಡದಿರುವ ತಪಸ್ವಿಗಳಾಗಿ) ಮನಸ್ಸಿನ ಏಕಾಗ್ರತೆಯಿಂದ ಇದ್ದುಕೊಂಡು ಒಂದು ಕಲ್ಲಿನ ಮೇಲೆ ಕುಳಿತು ಶಾಸ್ತ್ರವನ್ನು ಅನುಕ್ರಮವಾಗಿ ಹೇಳುತ್ತ, ಅದರ ಅರ್ಥವನ್ನು ಭಾವಿಸುತ್ತ, ಓದಿನಲ್ಲಿ ತತ್ಪರರಾಗಿದ್ದರು. ಅವರನ್ನು ದಟ್ಟವಾದ ಕಾಡಿನಲ್ಲಿ ಫಕ್ಕನೆ ದೂರದಿಂದ ಕಂಡ ಲಲಿತಘಟೆಯವರು ಅದೊಂದು ಅಪೂರ್ವವಾದ ಕಪ್ಪು ಮೃಗವಿರಬೇಕೆಂದು ಭಾವಿಸಿದರು. ಶ್ರೀವರ್ಧನಕುಮಾರ ಮೊದಲಾದ ಅವರೆಲ್ಲರೂ ಬಿಲ್ಲುಗಳನ್ನು ಏರಿಸಿ ಬಿಲ್ಲಿನ ಹಗ್ಗಕ್ಕೆ ಬಾಣವನ್ನು ಇಟ್ಟು ಹೊಡೆಯಲೆಂದು ಪ್ರಯೋಗಿಸುವಾಗ ಅವರೆಲ್ಲ ಬಿಲ್ಲುಗಳೂ ಮುರಿದುಹೋದವು – ಅವರೆಲ್ಲರೂ ಹಿಂಗಡೆಗೆ ಉರುಳಿಬಿದ್ದರು. ಇದು ಹತ್ತಿರಕ್ಕೆ ಹೋದರು. ಆಗ ಋಷಿಯ ರೂಪವನ್ನು ಕಂಡು “ಇವರು ಋಷಿಗಳು, ಮೃಗವಲ್ಲ” – ಎಂದು ಬಳಿಗೆ ಹೋಗಿ 

    ಅವರುಪಶಮಮುಮಂ ತಪಮುಮಂ ಕಂಡನಿಬರ್ಗ್ಗುಪಶಮಮಾಗಿ ಕುಳ್ಳಿರ್ದು ಧರ್ಮಮಂ ಪೇೞಂ ಭಟ್ಟಾರಾ ಎಂದು ಬೆಸಗೊಂಡೊಡೆ ಭಟ್ಟಾರರಿಂತೆಂದು ಪೇೞಲ್ ತೊಡಗಿದರ್ :

        ಗಾಹೆ || ಸೋ ದಮ್ಮೋ ಜತ್ಥದಯಾ ಸೋ ವಿ ತಓ ವಿಸಯಣಿಗ್ಗಹೋ ಜತ್ಥ
                    ದಸ ಅಟ್ಠ ದೋಸ ರಹಿಓ ಸೋ ದೇವೋ ಣತ್ಥಿ ಸಂದೇಹೋ

    ಎಂದಿಂತು ಜೀವಂಗಳಂ ಕೊಲ್ಲದುದೆ ಧರ್ವ್ಮಂ ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದಯ್ದುಮಿಂದ್ರಿಯಂಗಳಂ ಗೆಲ್ದು ಇರ್ಪ್ಪತ್ತೆರಡು ಪರೀಷಹಂಗಳು ಸೈರಿಸಿ ಯಮನಿಯಮ ಸ್ವಾಧ್ಯಾಯ ಧ್ಯಾನಾನುಷ್ಠಾನ ಪರಾಯಣರಾಗಿ ತಪಂಗೆಯ್ವ ರಿಸಿಯರ್ಕಳೆ ತಪಸ್ವಿಯರ್ ಪಸಿವು ನೀರೞ್ಕೆ ಮೊದಲಾಗೊಡೆಯ ಪದಿನೆಂಟು ದೋಷಂಗಳನಿಲ್ಲದೊಂ ಪರಮಾತ್ಮನೆಂದಿಂತು ಪೇೞ್ದು ಮತ್ತಮಿಂತೆಂದರ್ :

            ಗಾಹೆ ||  ಪಾವೇಣ ಣಿರಯತಿರಿಯಂ ಗುಮ್ಮ ಇ ಧಮ್ಮೇಣ ದೇವಲೋಗಂ ತು
                        ಮಿಸ್ಸೇಣ ಮಾಣುಸತ್ತಂ ದೊಣ್ಹಂ ಪಿ ಖಯೇಣ ಣಿವ್ವಾಣಂ

      ಎಂಬುದಂ ಪಾಪಂಗೆಯ್ದವರುಂ ಬೇಂಟೆಯಾಡುವರುಂ ಮಧುಮದ್ಯಮಾಂಸಂಗಳಂ ಸೇವಿಸುವರುಂ ಬಾಲವಧೆ ಸ್ತ್ರೀ ಗೋವಧೆ ಬ್ರಾಹ್ಮಣವಧೆ ಋಷಿವಧೆಯೆಂದೀ ಪಂಚಮಹಾಪಾತಕಂಗಳಂಗೆಯ್ದವರುಮಗಮ್ಯಾಗ – ಮನಮಪೇಯಾಪೇಯಮಭಕ್ಷಾಭಕ್ಷ್ಯಂ ಮೊದಲಾಗೊಡೆಯ ಪೊಲ್ಲಮೆಗಳೊಳ್

        ಅವರ ಸಮಾಧಾನಚಿತ್ತತೆಯನ್ನೂ (ಶಾಂತಸ್ವಭಾವವನ್ನೂ) ತಪಸ್ಸನ್ನೂ ಕಂಡು ಅವರೆಲ್ಲರಿಗೂ ಮನಸ್ಸಿಗೆ ಶಾಂತಿ ಲಭಿಸಿತು. ಅವರೆಲ್ಲರೂ ಕುಳಿತು – “ಪೂಜ್ಯರೇ ನಮಗೆ ಧರ್ಮೋಪದೇಶ ಮಾಡಿ” ಎಂದು ಕೇಳಿದರು. ಆಗ ಋಷಿಗಳು ಈ ರೀತಿಯಾಗಿ ಹೇಳ ತೊಡಗಿದರು. (ಎಲ್ಲಿ ದಯೆ ಇದೆಯೋ ಅದು ಧರ್ಮ. ಮತ್ತು ಎಲ್ಲಿ ಇಂದ್ರಿಯನಿಗ್ರಹವಿದೆ ಅದು ಕೂಡ ಧರ್ಮ. ಹದಿನೆಂಟು ದೋಷಗಳಿಲ್ಲದವನು ದೇವತೆ – ಸಂಶಯವಿಲ್ಲ) ಎಂದು ಈ ರೀತಿಯಾಗಿ ಜೀವಗಳನ್ನು ಕೊಲ್ಲದಿರುವುದೇ (ಅಹಿಂಸೆಯೇ) ಧರ್ಮ. ಹನ್ನೆರಡು ವಿಧದ ತಪಗಳನ್ನು ಸ್ವೀಕರಿಸಿ, ಪಂಚೇಂದ್ರಿಯಗಳನ್ನು ಗೆದ್ದು ಹಸಿವು – ಬಾಯಾರಿಕೆ – ಚಳಿ ಮುಂತಾದ ಇಪ್ಪತ್ತೆರಡು ವಿಧದ ಪರೀಷಹಗಳನ್ನು (ತೊಂದರೆಗಳನ್ನು) ಸಹಿಸಿಕೊಂಡು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಅನುಷ್ಠಾನಗಳಲ್ಲಿ ತತ್ಪರರಾಗಿ ತಪಸ್ಸನ್ನು ಆಚರಿಸುವ ಋಷಿಗಳೇ ತಪಸ್ವಿಗಳು. ಹಸಿವು, ಬಾಯಾರಿಕೆ, ಭಯ, ದ್ವೇಷ – ಮುಂತಾದ ಹದಿನೆಂಟು ದೋಷಗಳಿಲ್ಲದ ಅರ್ಹಂತನೇ ಪರಮಾತ್ಮನು. ಹೀಗೆ ಹೇಳಿದನಂತರ, ಇಂತೆಂದರು : ಜೀವನು ಪಾಪದಿಂದ ನರಕವನ್ನೂ ಪ್ರಾಣಿಜನ್ಮಗಳನ್ನೂ ಪಡೆಯುತ್ತಾನೆ. ಧರ್ಮದಿಂದ ದೇವಲೋಕವನ್ನು ಪಡೆಯುತ್ತಾನೆ. ಪಾಪಪುಣ್ಯಮಿಶ್ರದಿಂದ ಮನುಷ್ಯತ್ವವನ್ನು ಪಡೆಯುತ್ತಾನೆ, ಮತ್ತು ಅವೆರಡರ ನಾಶದಿಂದ ಮೋಕ್ಷವನ್ನು ಹೊಂದುತ್ತಾನೆ. ಎಂಬುದನ್ನು ತಿಳಿಸಿದರು. ಅಲ್ಲದೆ, ಮದ್ಯಮಾಂಸಗಳನ್ನು ಸೇವಿಸುವವರು, ಬಾಲವಧೆ – ಸ್ತ್ರೀವಧೆ – ಗೋವಧೇ – ಬ್ರಾಹ್ಮಣ ವಧೆ – ಋಷಿವಧೆ ಎಂಬ ಈ ಐದು ಬಗೆಯ ಮಹಾಪಾಪಗಳನ್ನು ಮಾಡಿದವರು, ಪರಸ್ತ್ರೀಗಮನ – ಕುಡಿಯಬಾರದುದನ್ನು ಕುಡಿಯುವುದು – ತಿನ್ನಬಾರದುದನ್ನು ತಿನ್ನುವುದು ಮುಂತಾಗಿ ಇರುವ ಕೆಟ್ಟ ಕೆಲಸಗಳನ್ನು 

    ನೆಗೞ್ದು ಘೋರಮಂ ಪಿರಿಯವುಮಪ್ಪ ಪಾಪಂಗಳಂ ಗೆಯ್ದೇೞನೆಯ ನರಕದೊಳ್ ಮೂವತ್ತುಮೂಱು ಸಾಗರೋಪಮಾಯುಷ್ಯಮನೊಡೆಯರ್ ನಾರಕರಾಗಿ ಪುಟ್ಟಿ ಛೇದನ ಭೇದನ ಪೂರಣ ಚೂರಣ ಪೀಡನ ಬಂಧಂಗಳುಮಂ ಮುಟ್ಟಿಗೆಯೊಳಿಟ್ಟು ತೆಗಪುವುದುಂ ಕೊಂತಂಗಳಿಂದಮಿಟ್ಟಿಗಳಿಂದಂ ಕರುಳ್ಗಳಂ ಸೋರೆಕುತ್ತುವುದುಂ ಚಕ್ರಗಳಿಂದಂ ತೆಗಲೆಯಂ ಮೊಕ್ಕನೆವೋಗಿಡುವುದುಂ ಮರಂಗಳಂ ಪೋೞ್ವಂತೆ ಕರಗಸಂಗಳಿಂದಮುದ್ದಂ ಪಿಡಿದು ಪೋೞ್ವದುಮೆಂದಿವು ಮೊದಲಾಗೊಡೆಯ ದುಃಖಂಗಳಂ ಕಣ್ಣೆಮೆಯಿಕ್ಕುವನಿತು ಪೊೞ್ತಪ್ಪೊಡಮುಸಿರ್ ಪೊತ್ತಿಲ್ಲದೆ ದುಃಖಂಗಳನನುಭವಿಸುವರ್ ಮತ್ತೊಯ್ಯನೆ ಪಾಪಂಗಳಂ ಗೆಯ್ದವರಾನೆಯುಂ ಸಿಂಹಮುಂ ಪುಲಿಯುಂ ಕರಡಿಯುಂ ಪುಲ್ಲೆಯುಂ ಮೊಲನುಂ ಪಂದಿಯುಂ ತೋಳನುಂ ಸೀರ್ನಾಯುಂ ಮತ್ತಮೆೞ್ತುಕೞ್ತೆಯುಂ ಪಶುವುಮೆರ್ಮೆಯುಂ ಕುದುರೆನಾಯೊಟ್ಟೆಯುಮುಡುವುಂ ಪಾವುಮಿಲಿಯುಂ ಬೆರ್ಕುಮೊಂತಿಯುಂ ಕಪ್ಪೆಯುಂ ಮುಂಗುರಿಯುಂ ಮೊದಲಾಗೊಡೆಯ ಸ್ಥಲಚರಂಗಳುಂ ಮೀನುಂ ಮೊಸಳೆಯುಂ ನೆಗೞುಮಾಮೆಯುಂ ಮಕರಮುಂ ತಿಮಿತಿಮಿಂಗಿಳಂ ಮೊದಲಾಗೊಡೆಯ ಜಲಚರಂಗಳುಂ ಕಾಗೆ ಗೂಗೆ ಪರ್ದು ಚಕೋರಂ ಹಂಸೆ ಕುರ್ಕು ಗಿಳಿ ಪುರುಳಿ ಪೆಂಗುರು ಕಾರಂಡಮಾಂದೆ ಮೊದಲಾಗೊಡೆಯ ಗಗನಚರಂ 

       ಆಚರಿಸಿ ಉಗ್ರವೂ ದೊಡ್ಡವೂ ಆದ ಪಾಪಗಳನ್ನು ಮಾಡಿದವರು ಏಳನೆಯ ನರಕದಲ್ಲಿ ಮೂವತ್ತಮೂರು ಸಾಗರದಷ್ಟು ಆಯುಷ್ಯವುಳ್ಳವರಾಗಿ ನರಕಜೀವಿಗಳಾಗಿ ಹುಟ್ಟುವರು. ಅವರು ಅಲ್ಲಿ ಕತ್ತರಿಸುವುದು, ಸೀಳುವುದು, ಮುಳುಗಿಸುವುದು, ಚೂರುಮಾಡುವುದು, ಹಿಂಸಿಸುವುದು, ಬಿಗಿದುಕಟ್ಟುವುದು – ಎಂಬೀ ಹಿಂಸೆಗಳನ್ನು ಅನುಭವಿಸುವರು. ಅಲ್ಲದೆ, ಕೊಡತಿಯಿಂದ ಹೊಡೆದು ಚಿಮ್ಮಟಿಗಳಿಂದ ಎಳೆಯುವುದು, ಈಟಿಗಳಿಂದಲೂ ಬರ್ಚಿಗಳಿಂದಲೂ ಕರುಳು ಹೊರಕ್ಕೆ ಜಾರಿಬರುವಹಾಗೆ ಕುತ್ತುವುದು, ಎದೆ ಮೊಕ್ಕನೆ ಸೀಳಿಹೋಗುವಂತೆ ಚಕ್ರಾಯುಧಗಳಿಂದ ಹೊಡೆಯುವುದು, ಮರಗಳನ್ನು ಸೀಳುವ ಹಾಗೆ ಗರಗಸಗಳಿಂದ ಮೇಲಿನಿಂದ ಕೆಳಗಿನವರೆಗೆ ದೇಹವನ್ನು ಹಿಡಿದು ಸೀಳುವುದು – ಎಂದು ಇವೇ ಮೊದಲಾಗಿ ಉಳ್ಳ ದುಃಖಗಳನ್ನು ಕಣ್ಣಿನ ರೆಪ್ಪೆ ಬಡಿಯುವಷ್ಟು ಹೊತ್ತುಕೂಡ ಅವಕಾಶ ಕೊಡದೆ ಮಾತಾಡಲು ಕೂಡ ಸಮಯ ಕೊಡದೆ ಸಂಕಟಗಳನ್ನು ಅನುಭವಿಸುವರು. ಮೆಲ್ಲನೆಯ ಅಥವಾ ಹಗುರವಾದ ಪಾಪಗಳನ್ನು ಮಾಡಿದವರು ಆನೆ, ಸಿಂಹ, ಹುಲಿ, ಕರಡಿ, ಜಿಂಕೆ, ಮೊಲ, ಹಂದಿ, ತೋಳ, ಕಾಡುನಾಯಿ ಅಥವಾ ನೀರುನಾಯಿಯಾಗಿಯೂ ಎತ್ತು, ಕತ್ತೆ, ಹಸು, ಎಮ್ಮೆ, ಕುದುರೆ, ನಾಯಿ, ಒಂಟೆ, ಉಡು, ಹಾವು, ಇಲಿ, ಬೆಕ್ಕು, ಓತಿ, ಕಪ್ಪೆ, ಮುಂಗುಸಿ ಮೊದಲಾದ ಸ್ಥಲಚರ (ನೆಲದ ಮೇಲೆ ಸಂಚರಿಸುವ) ಪ್ರಾಣಿಗಳಾಗಿಯೂ ಹುಟ್ಟುವರು. ಅದಲ್ಲವಾದರೆ, ಮೀನು, ಮೊಸಳೆ, ನೆಗಳು, ಆಮೆ, ಮಕರ, ತಿಮಿ ಎಂಬ ದೊಡ್ಡಮೀನು, ತಿಮಿಯನ್ನು ನುಂಗತಕ್ಕ ತಿಮಿಂಗಿಳವೆಂಬ ಮೀನು ಮೊದಲಾದ ಜನಚರ (ನೀರಿನಲ್ಲಿ ಸಂಚರಿಸುವ) ಪ್ರಾಣಿಗಳಾಗಿ ಹುಟ್ಟುವರು. ಅದಲ್ಲವಾದರೆ – ಕಾಗೆ, ಗೂಗೆ, ಹದ್ದು, ಚಕೋರ (ಬೆಳದಿಂಗುಳಹಕ್ಕಿ), ಹಂಸೆ, ನೀರುಹಕ್ಕಿ (ಭಾರದ್ವಾಜ ಹಕ್ಕಿ), ಗಿಳಿ, ಹೆಣ್ಣುಗಿಳಿ (ಸಾರಿಕೆ), ಕೊಕ್ಕರೆ, ನೀರುಕೋಳಿ, ಗೂಬೆ ಮುಂತಾಗಿರುವ ಹಕ್ಕಿಗಳಾಗಿ (ಆಕಾಶದಲ್ಲಿ ಸಂಚರಿಸುವವಾಗಿ) 

        ಪಂಚೇಂದ್ರಿಯಂಗಳುಮಾಗಿ ಮತ್ತಮೇಕೆಂದ್ರಿಯ ದ್ವೀಂದ್ರಿಯ ತ್ರೀಂದ್ರಿಯ ಚತುರಿಂದ್ರಿಯಂಗಳಾಗಿ ತಿರಿಕಗತಿಯೊಳ್ ಪುಟ್ಟಿ ಜೀವಂಗಳಿಂತು ಮಾಡಿದ ಪಾಪದ ಫಲಂಗಳಿಂದಂ ದುಃಖಂಗಳನೆಯ್ದುಗುಂ ವಾಕ್ಯ || ಮಿಸ್ಸೇಣ ಮಾಣುಸತ್ತಮೆಂಬುದು ಪುಣ್ಯಪಾಪಂಗಳೆರಡುಮಂ ನೆಗೞ್ವರ್ ಮನುಷ್ಯಗತಿಯೊಳ್ ಪುಟ್ಟಿ ಮುಂಗೆಯ್ದು ಪಾಪಕರ್ಮದುದಯದಿಂದಂ ಶಾರೀರ ಮಾನಸಾಗಂತುಕ ಸಹಜಮಪ್ಪ ದುಃಖಂಗಳುಮನಿಷ್ಟಸಂಯೋಗಮಿಷ್ಟಮಿಯೋಗಮುಂ ರಾಗಶೋಕಂಗಳುಂ ದಾರಿದ್ರ್ಯಮೆಂದಿವು ಮೊದಲಾಗೊಡೆಯುವಱಂದಮಪ್ಪ ದುಃಖಳನೆಯ್ದಿ ಮತ್ತಮಾ ಜೀವಂಗಳ್ ಶುಭಕರ್ಮದುದಯದಿಂದಂ ಶ್ರೀಯುಂ ಸಂಪತ್ತು ವಿಭಮಮುಂ ಐಶ್ವರ್ಯಮುಮಾರೋಗ್ಯಶರೀರಂಗಳುಮಾಗಿ ಪುತ್ರ ಮಿತ್ರ ಕಳತ್ರ ಸ್ವಜನ ಬಂಧುವರ್ಗದೊಳ್ ಕೂಡಿ ಸುಖಂ ಬಾೞ್ವುದುಮಕ್ಕುಮಿಂತು

                ಶ್ಲೋಕ ||     ಸುಖಸ್ಥಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ
                                ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||

    ಇಂತು ಮನುಷ್ಯಗತಿಯೊಳ್ ಪುಟ್ಟಿ ಸೂೞ್ಸೂೞೊಳೆ ಸುಖದುಃಖಂಗಳಂ ಜೀವಂಗಳನುಭವಿಸುವಂತೆ ಗಮ್ಮಞ ಧಮ್ಮೇಣ ದೇವಳೋಯಮ್ಹಿ ಎಂಬುದುಂ ಕೇವಳಮೆ ಧರ್ಮಂಗೆಯ್ದವರ್ ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆತನ ಪ್ರಾಣತಾರಣಾಚ್ಯುತಮೆಂಬ 

        ಕಣ್ಣು ಕಿವಿ ಮೂಗು ನಾಲಗೆ ಚರ್ಮ – ಎಂಬ ಐದು ಇಂದ್ರಿಯಗಳುಳ್ಳವಾಗಿ ಹುಟ್ಟುವರು. ಅದಲ್ಲದೆ, ಒಂದು ಇಂದ್ರಿಯ ಮಾತ್ರವುಳ್ಳವಾಗಿ ಅಥವಾ ಎರಡು ಇಂದ್ರಿಯ, ಮೂರು ಇಂದ್ರಿಯ, ನಾಲ್ಕು ಇಂದ್ರಿಯಗಳುಳ್ಳ ಪ್ರಾಣಿಗಳ ಗತಿಯಲ್ಲಿ ಹುಟ್ಟುವರು. ಜೀವಿಗಳು ಈ ರೀತಿಯಾಗಿ ಮಾಡಿದ ಪಾಪದ ಪರಿಣಾಮವಾಗಿ ದುಃಖಗಳನ್ನು ಪಡೆಯುವುವು. ‘ಮಿಶ್ರೇಣ ಮನುಷ್ಯತ್ವಂ’ ಎಂಬ ವಾಕ್ಯದಂತೆ ಪುಣ್ಯ ಪಾಪ ಎಂಬ ಎರಡನ್ನೂ ಮಾಡುವವರು ಮನುಷ್ಯಜನ್ಮದಲ್ಲಿ ಬಂದು, ಹಿಂದೆಮಾಡಿದ ಪಾಪಕೃತ್ಯದ ಫಲದಿಂದ ಶಾರೀರಿಕ ಮಾನಸಿಕವಾಗಿ ಬರತಕ್ಕ ಸಹಜವಾದ ದುಃಖಗಳನ್ನೂ ಪ್ರಿಯವಾದುದು ಕೂಡಿಬರುವುದು ಅಥವಾ ಅಗಲುವುದು, ಹರ್ಷವಿಷಾದಗಳು, ಬಡತನ – ಎಂಬವು ಮೊದಲಾಗಿ ಉಳ್ಳವುಗಳಿಂದಾಗುವ ದುಃಖಗಳನ್ನೂ ಹೊಂದುವರು. ಆ ಜೀವಗಳು ಮಂಗಳಕರವಾದ ಕಾರ್ಯಗಳಿಂದ ಕಾಂತಿ, ಸಂಪತ್ತು, ವೈಭವ, ಐಶ್ವರ್ಯಗಳನ್ನು ಪಡೆದು, ರೋಗವಿಲ್ಲದ ದೇಹವುಳ್ಳವಾಗಿ ಮಕ್ಕಳು, ಗೆಳೆಯರು, ಹೆಂಡತಿ, ಸ್ವಜನರು, ಬಂಧುವರ್ಗಗಳಿಂದ ಕೂಡಿ ಸುಖವಾಗಿ ಬಾಳುವಂತಾಗುವುದು. (ಸುಖವುಂಟಾದ ನಂತರ ದುಃಖ, ದುಃಖವುಂಟಾದನಂತರ ಸುಖ – ಹೀಗೆ ದುಃಖಗಳೂ ಸುಃಖಗಳೂ ಚಕ್ರದಂತೆ ತಿರುಗಿ ಬರುತ್ತ ಇರುತ್ತವೆ.) ಜೀವಗಳು ಈ ರೀತಿಯಾಗಿ ಮನುಷ್ಯಜನ್ಮದಲ್ಲಿ ಬಂದು ಬಾರಿಬಾರಿಗೂ ಸುಖಗಳನ್ನೂ ದುಃಖಗಳನ್ನೂ ಅನುಭವಿಸುವುವು. “ಗಚ್ಛತಿ ಧರ್ಮೇಣ ದೇವಲೋಕಂ ಹಿ” ಎಂಬ’ವಾಕ್ಯದಂತೆ ಕೇವಲ (ಜೈನ) ಧರ್ಮವನ್ನು ಆಚರಿಸಿದವರು ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಬ್ರಹ್ಮೋತ್ತರ, ಲಾಂತವ, ಕಾಪಿಷ್ಠ, ಶುಕ್ರ, ಮಹಾಶುಕ್ರ, ಶತಾರ, ಸಹಸ್ರಾರ, ಆನತ, ಪ್ರಾಣ, ತಾರಣ, ಅಚ್ಚುತ – ಎಂಬ 

        ಪದಿನಾಱುಂ ಕಲ್ಪಂಗಳೊಳಮಲ್ಲಿಂ ಮೇಗಣ ಸುದರ್ಶನಾಮೋಘ ಸುಪ್ರಬುದ್ಧ ಯಶೋಧರ ಸುಭದ್ರ ಸುವಿಶಾಳ ಸುಮನಸ ಸೌಮನಸ ಪ್ರೀತಿಂಕರಮೆಂಬ ನವಗ್ರೈಮೇಯಕಂಗಳೊಳಮಲ್ಲಿಂ ಮೇಗಣ ಲಚ್ಚಿ ಮಹಾಲಚ್ಚಿ ಮಾಳಿನಿ ಮೈರ ವೈರೋಚನೆ ಸೋಮೆ ಸೋಮರೂಪೆ ಅಂಕೆ ಪಳಿದೆ ಅಯಿಚ್ಛೆಯೆಂಬ ನವಾನುದ್ದಿಸೆಗಳೊಳಮಲ್ಲಿಂ ಮೇಗಣ ವಿಜಯವೈಜಯಂತ ಜಯಂತಾಪರಾಜಿತ ಸರ್ವಾರ್ಥಸಿದ್ಧಿಯೆಂದಿಂತು ಪಂಚಾಣುತ್ತರೆಗಳೊಳಮೆರಡು ಘಳಿಗೆಯಿಂದೊಳಗೆ ಪಾಸಿನ ಪೊರೆಯೊಳ್ ಪುಟ್ಟಿ ಇಂದ್ರಪ್ರತೀಂದ್ರ ಸಾಮಾನಿಕ ತ್ರಯಸ್ತ್ರಿಂಶ ಪಾರಿಷದಾತ್ಮರಕ್ಷ ಲೋಕಪಾಲಾಹಮಿಂದ್ರತ್ವಮೆಂದೀ ಮರ್ಹಕದೇವರಾಗಿ ಅಣಿಮಾ ಮಹಿಮಾ ಲಘಿಮಾ ಪ್ರಾಪ್ತಿ ಪ್ರಾಗಲ್ಭಮೀಶಿಶ್ವ ವಶಿತ್ವ ಕಾಮರೂಪಿತ್ವಮೆಂದೀ ಅಷ್ಟಗುಣೈಶ್ವರ್ಯಂಗಳೊಳ್ ಕೂಡಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವಮುಂ ಸುಗಂಧ ಮಪ್ಪ ಶ್ವಾಸನಿಶ್ವಾಸಂಗಳುಮನೊಡೆಯರಾಗಿ ಆಯುಷ್ಯಾಂತಂ ಬರೆಗಂ ನವಯೌವನರಾಗಿ ಮುಪ್ಪುಮಪಮೃತ್ಯು ಮೂತ್ರಪುರೀಷಂಗಳುಂ ಗಂಡ ಕಕ್ಷಾ ಕುಕ್ಷಿಪ್ರದೇಶಂಗಳ ರೋಮಂಗಳುಂ ರೋಗ ಶೋಕ ದುಃಖಂಗಳುಂ ರಸರುರ ಮಾಂಸ ಮೆದೋಸ್ಥಿ ಮಜ್ಜ ಶುಕ್ಲಮೆಂದಿಂತು ಸಪ್ತಧಾತುಗಳುಮೆಂದಿವು ಮೊದಲಾಗೊಡೆಯವಿಲ್ಲದೊರ್ ಸಹಜಮಪ್ಪ ಕಟಕ ಕಟಿಕಸೂತ್ರ ಕುಂಡಲಾಭರಣಂ ಮೊದಲಾಗೊಡೆಯ ಪದಿನಾಱುಮಾಭರಣಂಗಳಂ ತೊಟ್ಟು ದಿವ್ಯವಸ್ತ್ರಗಳನುಟ್ಟಾದಿತ್ಯನ ತೇಜದಿಂದಗ್ಗಳಮಪ್ಪ ತೇಜದೊರಾಗಿ ಕಣ್ಣೆಮೆಯಿಕ್ಕುವನಿತು ಪೊೞ್ತಪ್ಪೊಡಂ ದುಃಖಮಿಲ್ಲದೊರೆರಡು ಸಾಗರೋಪಮಂ ಮೊದಲಾಗಿ 

        ಹದಿನಾರು ಕಲ್ಪ (ಸ್ವರ್ಗ)ಗಳಲ್ಲಿಯೂ ಅಲ್ಲಿಂದ ಮೇಲೆ ಇರತಕ್ಕ ಸುದರ್ಶನ, ಅಮೋಘ, ಸುಪ್ರಬುದ್ಧ, ಯಶೋಧರ, ಸುಭದ್ರ, ಸುವಿಶಾಳ, ಸುಮನಸ, ಸೌಮನಸ, ಪ್ರೀತಿಂಕರವೆಂಬ ಗ್ರೈವೇಯಕಗಳಲ್ಲಿಯೂ ಅಲ್ಲಿಂದಲೂ ಮೇಲೆ ಇರತಕ್ಕ ಸ್ವರ್ಗಗಳಾದ ಲಚ್ಛಿ, ಮಹಾಲಚ್ಚಿ, ಮಾಳಿನಿ, ವೈರೆ, ವೈರೋಚನೆ, ಸೋಮೆ, ಸೋಮರೂಪೆ, ಅಂಕೆಪಳಿತೆ, ಅಯಿಚ್ಚೆ – ಎಂಬ ಒಂಬತ್ತು ವಿಧದ ಅನುದ್ದಿಸೆಗಳಲ್ಲಿಯೂ ಅಲ್ಲಿಂದಲೂ ಮೇಗಣ ಸ್ವರ್ಗಗಳಾದ ವಿಜಯ, ವೈಜಯಂತ, ಜಯಂತ, ಅಪರಾಜಿತ, ಸರ್ವಾರ್ಥಸಿದ್ಧಿ – ಎಂಬೀ ಐದು ಅಣುತ್ತರೆಗಳಲ್ಲಿಯೂ ದೇಹಾತ್ಯಾಗ ಮಾಡಿದ ಎರಡು ಗಳಿಗೆಗಳೊಳಗೆ ಹಾಸಿಗೆಯ ಸಮೀಪವೇ ಹುಟ್ಟಿ ಇಂದ್ರ, ಪ್ರತೀಂದ್ರ, ಸಾಮಾನಿಕ, ತ್ರಯಸ್ತ್ರಿಂಶ, ಪಾರಿಷದ, ಆತ್ಮರಕ್ಷ, ಲೋಕಪಾಲ, ಅಹಮಿಂದ್ರ, ಎಂಬ ಮರ್ಹಕ ದೇವರಾಗುವರು. ಅಣಿಮಾ, ಮಹಿಮಾ, ಲಘಿಮಾ, ಪ್ರಾಪ್ತಿ, ಪ್ರಾಗಲ್ಭ್ಯ, ಈಶಿತ್ವ, ವಶಿತ್ವ, ಕಾಮರೂಪಿತ್ವ – ಎಂಬ ಎಂಟುಗುಣಗಳುಳ್ಳ ಐಶ್ವರ್ಯಗಳಿಂದ ಕೂಡಿ ಅತಿಶಯವಾದ ರೂಪ ಸೌಂದರ್ಯ ಸೌಭಾಗ್ಯ ತೇಜಸ್ಸನ್ನೂ ಸುವಾಸನೆಯುಳ್ಳ ಉಚ್ಛ್ವಾಸ ನಿಶ್ವಾಸಗಳನ್ನೂ ಉಳ್ಳವರಾಗಿ ಆಯುಷ್ಯದ ಕೊನೆಯವರೆಗೂ ತಾರುಣ್ಯವುಳ್ಳವರಾಗಿ ವೃದ್ಧಾಪ್ಯ ಅಪಮೃತ್ಯುಗಳಿಲ್ಲದವರೂ ಮೂತ್ರ, ಮಲಗಳೂ, ಕೆನ್ನೆ ಕಂಕುಳು ಹೊಟ್ಟೆಗಳಲ್ಲಿ ರೋಮಗಳೂ ರೋಗ ಶೋಕ ದುಃಖಗಳೂ ರಸ, ರಕ್ತ, ಮಾಂಸ, ಮೇಧಸ್ಸು, ಎಲುಬು, ಕೊಬ್ಬು, ವೀರ್ಯ ಎಂಬ ಏಳು ಬಗೆಯ ಧಾತುಗಳು ಮುಂತಾದವು ಇಲ್ಲದವರೂ ಆಗಿ ಜನಿಸುವರು. ಹುಟ್ಟುವಾಗಲೇ ಅವರು ಉಡಿನೂಲು, ಕುಂಡಲ, ಆಭರಣ ಮುಂತಾಗಿರುವ ಹದಿನಾರು ಬಗೆಯ ಆಭರಣಗಳನ್ನು ಧರಿಸಿ ದಿವ್ಯವಾದ ಉಡಿಗೆಗಳನ್ನು ಉಟ್ಟುಕೊಂಡಿರುವರು. ಸೂರ್ಯನ ತೇಜಕ್ಕಿಂತಲೂ ಹೆಚ್ಚಿನ ತೇಜಸ್ಸು ಉಳ್ಳವರಾಗಿ ಕಣ್ಣಿನ ರೆಪ್ಪೆ ಬಡಿಯುವಷ್ಟು ಹೊತ್ತು ಕೂಡ ದುಃಖವೆಂಬುದೇ ಇಲ್ಲದವರಾಗುವರು. ಎರಡು ಸಾಗರದಷ್ಟು ಆಯುಷ್ಯದಿಂದ ತೊಡಗಿ

     ಮೂವತ್ತಮೂಱು ಸಾಗರೋಪಮಂ ಬರೆಗಮಾಯುಷ್ಯಮನೊಡೆಯರಾಗಿ ಆಟಪಾಟ ವಿನೋದಂಗಳಿಂದಂ ದೇವಿಯರಪ್ಸರಸಿಯರ್ಕಳೊಡನೆ ಪಲಕಾಲಂ ದಿವ್ಯಸುಖಮನನುಭವಿಸಿ ಆಯುಷ್ಯಾಂತದೊಳಿಂತಿಲ್ಲಿ ಮನುಷ್ಯಗತಿಯೊಳ್ ಕುರುವಂಶ ಭೋಜವಂಶಮಿಕ್ಷ್ವಾಕುವಂಶ ನಾಥವಂಶ ಹರಿವಂಶಮುಗ್ರವಂಶ ಸೂರ್ಯವಂಶ ಸೋಮವಂಶ ಮಯೂರವಂಶ ನಂದವಂಶಮೆಂದಿವು ಮೊದಲಾಗೊಡೆಯ ಉತ್ತಮ ಕುಲದೊಳ್ ಶ್ರಾವಕರ ಬಸಿಱೊಳ್ ಪುಟ್ಟಿ ಪೂರ್ವಕೋಟಿ ಪರಮಾಯುಷ್ಯಮನೊಡೆಯರಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯಕಾಂತಿತ್ವದೊಳ್ ಕೂಡಿ ಏಕಚ್ಛತ್ರಚ್ಛಾಯೆಯಿಂದಂ ಪೃಥ್ವಿಯೆಲ್ಲಮನಾಳ್ದು ಪಶ್ಚಾತ್ಕಾಲದೊಳೇನಾನುಮೊಂದು ವೈರಾಗ್ಯಕಾರಣಮಾಗಿ ಮಗಂಗೆ ರಾಜ್ಯ ಪಟ್ಟಂಗಟ್ಟಿ ಬಾಹ್ಯಭ್ಯಂತರ ಪರಿಗ್ರಹಂಗಳೆಲ್ಲಮಂ ತೊಱೆದೆಲ್ಲರೊಳ್ ನಿಶ್ಯಲ್ಯಂಗೆಯ್ದು ತಪಂಬಟ್ಟು ಘೋರ ವೀರತಪಶ್ಚರಣಂಗೆಯ್ದು ಉತ್ಕೃಷ್ಟದಿಂದಂ ಮೂಱು ಭವಂಗಳೊಳ್ ಮಧ್ಯಮದಿಂದಮಯ್ದು ಭವಂಗಳೊಳ್ ಕನಿಷ್ಠದಿಂದೇೞು ಭವಂಗಳೊಳಗೆ ಅಷ್ಟವಿಧ ಕರ್ಮಂಗಳಂ ಕಿಡಿಸಿ ಮೋಕ್ಷಮನೆಯ್ದುವರ್ ದೊಣ್ಹಂಪಿ ಖಯೇಣ ಣಿವ್ವಾಣಂ ಎಂದು ತಪದಿಂದಂ ಶುಭಾಶುಭ ಕರ್ಮಮೆಂದಿರ್ತೆಱದ ಕರ್ಮದ ಕೇಡಿನಿಂದಂ ಮೋಕ್ಷಮನೆಯ್ದುವರಂತಪ್ಪ ಮೋಕ್ಷಮೆಂತೆಂದೊಡೆ ಜಾತಿ ಜರಾ ಮರಣಂಗಳುಂ ಭಯಮುಮನಿಷ್ಟಸಂಯೋಗಮುಮಿಷ್ಟ ವಿಯೋಗಮುಂ ಶಾರೀರ ಮಾನಸಾಗಂತುಕ ಸಹಜಮಪ್ಪ

       ಮುವತ್ತಮೂರು ಸಾಗರದಷ್ಟರವರೆಗೆ ಆಯುಷ್ಯವುಳ್ಳವರಾಗುವರು. ಆಟ, ಪಾಟ, ವಿನೋದಗಳಿಂದ ದೇವತಾಸ್ತ್ರೀಯರೊಡನೆ ಹಲವು ಕಾಲ ದಿವ್ಯಸುಖವನ್ನು ಅನುಭವಿಸಿ, ಆಯುಷ್ಯವು ಮುಗಿದ ಮೇಲೆ, ಈ ಲೋಕದಲ್ಲಿ ಮನುಷ್ಯ ಜೀವನದಲ್ಲಿ ಬರುವರು. ಕುರುವಂಶ, ಭೋಜವಂಶ, ಇಕ್ಷ್ವಾಕುವಂಶ, ನಾಥವಂಶ, ಹರಿವಂಶ, ಉಗ್ರವಂಶ, ಸೋಮವಂಶ, ಮಯೂರವಂಶ, ನಂದವಂಶ – ಎಂದು ಇವೇ ಮೊದಲಾದ ಇರತಕ್ಕ ಒಳ್ಳೆಯ ಕುಲದಲ್ಲಿ ಜಿನಭಕ್ತರಾದ ಗೃಹಸ್ಥ ದಂಪತಿಗಳ ಗರ್ಭದಲ್ಲಿ ಜನಿಸುವರು. ಪೂರ್ವಕಾಲದ ಕೋಟಿ ಸಂಖ್ಯೆಯ ಪರಮಾಯುಷ್ಯವುಳ್ಳವರಾಗಿ ಅತಿಶಯವಾದ ರೂಪ ಸೌಂದರ್ಯ ಸೌಭಾಗ್ಯ ಕಾಂತಿಗಳಿಂದ ಕೂಡಿ ಏಕಚ್ಛತ್ರಾಪತಿಗಳಾಗಿ ಭೂಮಂಡಲವನ್ನು ಆಳುವರು. ಆಮೇಲಿನ ಕಾಲದಲ್ಲಿ ಏನಾದರೂ ಒಂದು ಕಾರಣದಿಂದ ವೈರಾಗ್ಯವನ್ನು ತಾಳಿ, ಮಗನಿಗೆ ರಾಜ್ಯದ ಪಟ್ಟಾಭೀಷೆಕವನ್ನು ಮಾಡಿ ಬಾಹ್ಯ ಮತ್ತು ಅಭ್ಯಂತರ ಎಂಬ ಎರಡೂ ಬಗೆಯ ಪರಿಗ್ರಹಗಳೆಲ್ಲವನ್ನೂ ಬಿಟ್ಟು ಎಲ್ಲರ ಮನೋವ್ಯಥೆಗಳನ್ನೂ ಇಲ್ಲದಂತೆ ಮಾಡಿಕೊಂಡು ತಪಸ್ಸನ್ನು ಸ್ವೀಕರಿಸಿ, ಉಗ್ರವೂ ಶ್ರೇಷ್ಠವೂ ಆದ ತಪಸ್ಸನ್ನು ಆಚರಿಸಿ ಅತಿ ಶ್ರೇಷ್ಠ ರೀತಿಯದಾಗಿ ಮೂರು ಜನ್ಮಗಳಲ್ಲಿ ಮಧ್ಯಮ ರೀತಿಯದಾಗಿ ಐದು ಜನ್ಮಗಳಲ್ಲಿ ಕನಿಷ್ಠವಾದ ರೀತಿಯಲ್ಲಿ ಏಳು ಜನ್ಮಗಳಲ್ಲಿ ಬಂದು, ಘಾತಿಕರ್ಮಗಳು ನಾಲ್ಕು ಅಘಾತಿಕರ್ಮಗಳು ನಾಲ್ಕು ಹೀಗೆ ಎಂಟು ಬಗೆಯವಾದ ಕರ್ಮಗಳನ್ನು ನಾಶಪಡಿಸಿ ಮೋಕ್ಷವನ್ನು ಹೊಂದುವರು. ತಪಸ್ಸಿನ ಮೂಲಕ ಶುಭ ಅಶುಭವೆಂಬ ಎರಡು ಬಗೆಯ ಕರ್ಮವನ್ನು ಕೆಡಿಸಿ ಮೋಕ್ಷವನ್ನು ಸೇರುವರು. ಅಂತಹ ಮೋಕ್ಷದ ಸ್ವರೂಪವೇನೆಂದರೆ : – ಹುಟ್ಟು ಮುಪ್ಪು ಸಾವುಗಳೂ ಹೆದರಿಕೆಯೂ ಪ್ರೀತಿಯವರ ಒಡನಾಟ ಅಗಲಿಕೆಗಳೂ ಶರೀರಕ್ಕೂ ಮನಸ್ಸಿಗೂ ಬರತಕ್ಕ ಸಹಜವಾಗಿರುವ 

        ದುಃಖಂಗಳುಂ ಆಹಾರ ಭಯ ಮೈಥುನ ಪರಿಗ್ರಹಂಗಳುಂ ವಾತ ಪಿತ್ತ ಶ್ಲೇಷ್ಮ ಖಾಸ ಶ್ವಾಸ ಜ್ವರಾರುಚಿ ಛರ್ದ್ಯತಿಸಾರಕ್ಷಿಕುಕ್ಷಿವೇದನಾ ಸೋಟಕ ಶೂಲ ಭಗಂದರ ಕುಷ್ಠ ಕ್ಷಯ ಗಂಡ ಶಿರೋವೇದನೆಯುಮೆಂದಿವು ಮೊದಲಾಗೊಡೆಯ ಆಯ್ದುಕೋಟಿಯುಮಱುವತ್ತೆಂಟು ಲಕ್ಕೆಯುಂ ತೊಂಬತ್ತೊಂಬಯ್ ಸಾಸಿರದ ಇನ್ನೂರೆಣ್ಣತ್ತುನಾಲ್ಕು ವ್ಯಾಗಳುಂ ಕ್ರೋಧ ಮಾನ ಮಾಯಾ ಲೋಭಂಗಳುಂ ರಾಗ ದ್ವೇಷ ಮೋಹಂಗಳ ಮಗುಱ್ದು ವಗು’ ಬರವುಂ ಶೋಕಮೆಂದಿವು ಮೊದಲಾಗೊಡೆಯ ದುಃಖಂಗಳವಿಲ್ಲದುದರುಪಮಾರಹಿತಮಪ್ಪುದನಳವಿಯಿಲ್ಲದುದನಾವಕಾಲಮುಂ ಕಿಡದುದಂ ಪಾಪದಿಂ ಪೊರೆಯದುದಂ ಸುಖಮನೊಡೆತಪ್ಪುದಂ ತನ್ನಿಂ ತಾನಾದುದನಂತಪ್ಪ ಮೋಕ್ಷಸುಖ ಮನೆಯ್ದಿ ಅನಂತಜ್ಞಾನ ಅನಂತದರ್ಶನ ಅನಂತವೀರ್ಯ ಅನಂತಸುಖಮೆಂಬ ಅನಂತಚತುಷ್ಟಯದೊಳ್ ಕೂಡಿ ಲೋಕಾಲೋಕಮನೆಲ್ಲಮನೊರ್ಮೊದಲೆ ಕಾಣುತ್ತಮಱಯುತ್ತುಮನಂತಕಾಲಂ ಮೋಕ್ಷದೊಳಿರ್ಪರೆಂಬುದುಮಂ ಅಭಯಘೋಷ ಭಟಾರರ್ ಲಲಿತಘಟೆಗೆ ಧರ್ಮಶ್ರವಣಂ ಗೆಯ್ಯೆ ಕೇಳ್ದು ಶ್ರೀವರ್ಧನಂ ಮೊದಲಾಗಿ ಅನಿಬರುಂ ಪಶ್ಚಾತ್ತಾಪಮಾಗೆ ಪಂಚಮಹಾಪಾತಕರೆಮುಂ ಪೊಲ್ಲಕೆಯ್ದೆಮುಂ ಭಟ್ಟಾರರಂ ಕೊಂದೆಮುಮವರ್ ತಪದ ಮಹಾಯ್ಮ್ಯದಿಂದಂ ಬರ್ದುಂಕಿದರೆಂದನಿಬರುಂ ಮನದೆ ಬಗೆದೀಗೆಯ್ದ ಪಾಪಮಿಂತಲ್ಲದೆ ಪಿಂಗದಿವರ ಕಾಲಡಿಗಳನೆಮ್ಮ ತಲೆಗಳೆಂಬ ತಾಮರೆಯ ಪೂಗಳಿಂದಂಸಿದೊಡಲ್ಲದೆ ಪಾಪಂ ಪಿಂಗದೆಂದು ಬಗೆದು ಕೈದುಗಳತ್ತ ಕೈಯಂ ನೀಡಲ್  

            ದುಃಖಗಳೂ ಆಹಾರ, ಭಯ, ಮೈಥುನ, ಪರಿಗ್ರಹಗಳೂ ವಾತ, ಪಿತ್ತ, ಕಫ, ಕೆಮ್ಮು, ಉಬ್ಬಸ, ಜ್ವರ, ಅಜೀರ್ಣ, ವಾಂತಿ, ಭೇದಿ, ಕಣ್ಣುನೋವು, ಹೊಟ್ಟೆನೋವು, ಒಡೆಯುವಿಕೆ, ಸೆಳತ, ಭಗಂದರ, ಕುಷ್ಠ, ಕ್ಷಯ, ಗಂಡ, ತಲೆನೋವು – ಎಂದು ಇವೇ ಮುಂತಾಗಿರುವ ಐದುಕೋಟಿ ಅರುವತ್ತೆಂಟು ಲಕ್ಷದ ತೊಂಬತೊಂಬತ್ತು ಸಾವಿರದ ಇನ್ನೊರೆಂಬತ್ತು ನಾಲ್ಕು (೫,೬೮,೯೯,೨೮೪) ಬಗೆಯ ರೋಗಗಳೂ ಕೋಟ, ಅಭಿಮಾನ, ಕಪಟ, ಲೋಭಗಳೂ ಪ್ರೀತಿ ವೈರ ಮೋಹಗಳು ಮರಳಿ ಮರಳಿ ಬರುವಿಕೆ ಮತ್ತು ದುಃಖ – ಎಂದು ಇವೇ ಮುಂತಾಗಿರುವ ದುಃಖಗಳು ಇಲ್ಲದುದೇ ಮೋಕ್ಷ. ಅದು ಉಪಮೆಯಿಲ್ಲದುದು, ಅಳತೆಯಿಲ್ಲದುದು, ಯಾವ ಕಾಲದಲ್ಲಿಯೂ ಕೆಟ್ಟುಹೋಗದೆ ಇರುವಂತದು, ಪಾಪದಿಂದ ತುಂಬದಿರುವಂಥದು, ಸುಃವನ್ನು ಒಟ್ಟಿಗೆ ತರುವಂಥದು, ತನ್ನಿಂದ ತಾನಗಿಯೇ ಆದಂಥದು, ಪುಣ್ಯಜೀವರು ಅಂತಹ ಮೋಕ್ಷದ ಸುಖವನ್ನು ಸೇರಿ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖ – ಎಂಬ ನಾಲ್ಕು ಬಗೆಯ ಅನಂತ (ಕೊನೆಯಿಲ್ಲದವು)ಗಳಲ್ಲಿ ಸೇರಿ, ಲೋಕವನ್ನೂ ಲೋಕವಲ್ಲದವುಗಳನ್ನೂ ಒಟ್ಟಿಗೇ ಕಾಣುತ್ತಲೂ ತಿಳಿಯುತ್ತಲೂ ಅನಂತಕಾಲದ ತನಕ ಮೋಕ್ಷದಲ್ಲಿಯೇ ಇರುತ್ತಾರೆ – ಎಂಬ ಸಂಗತಿಯನ್ನು ಅಭಯಘೋಷ ಋಷಿಗಳು ಲಲಿತಘಟೆಗೆ ಧರ್ಮೋಪದೇಶಮಾಡುತ್ತ ತಿಳಿಸಿದರು. ಇದನ್ನೆಲ್ಲ ಲಲಿತಘಟೆಯ ರಾಜಕುಮಾರರು ಕೇಳಿದರು. ಶ್ರೀವರ್ಧನ ಮೊದಲಾದ ಅವರೆಲ್ಲರೂ ಪಶ್ಚಾತ್ತಾಪಗೊಂಡರು. “ನಾವು ಪಂಚಮಹಾಪಾಪ ಮಾಡಿದವರಾಗಿದ್ದೇವೆ. ಕೆಟ್ಟದನ್ನು ಮಾಡಿದವರೂ ಋಷಿಗಳನ್ನು ಕೊಂದವರೂ ಆಗಿದ್ದೇವೆ. ಅವರು ತಮ್ಮ ತಪಸ್ಸಿನ ಮಹತ್ತ್ವದಿಂದ ಬದುಕಿದರು” – ಎಂದು ಅವರೆಲ್ಲರೂ ಮನಸ್ಸಿನಲ್ಲಿ ಭಾವಿಸಿಕೊಂಡರು. “ನಾವು ಮಾಡಿದ ಈ ಪಾಪ ಪರಿಹಾರವಾಗಬೇಕಾದರೆ, ಇವರ ಪಾದಗಳನ್ನು ನಮ್ಮ ತಲೆಗಳೆಂಬ ತಾವರೆ ಹೂಗಳಿಂದ ಅರ್ಚಿಸಬೇಕು. ಅದಲ್ಲದೆ, ಪಾಪ ಹಿಂಗಲಾರದು” ಎಂದು ಭಾವಿಸಿ ತಮ್ಮ ತಲೆಗಳನ್ನು ಕಡಿದುಕೊಳ್ಳಲಿಕ್ಕಾಗಿ ಆಯುಧಗಳ ಕಡೆಗೆ ಕೈಗಳನ್ನು ನೀಡಲು ಯೋಚಿಸಿದರು.

        ಬಗೆವನ್ನೆಗಂ ಭಟ್ಟಾರರ್ ವಾರಿಸಿದರಂತು ಬಗೆಯಲ್ವೇಡೆಂದೊಡೆ ಶ್ರೀವರ್ಧನ ಕುಮಾರನಾಮೇನಂ ಬಗೆದೊಮೆಂದೊಡೆ ನೀಮುಂ ನಿಮ್ಮ ತಲೆಗಳನರಿದೆಮ್ಮ ಕಾಲಡಿ ಗಳನರ್ಚಿಸುವಮೆಂದು ಬಗೆದಿರೆಂದೊಡಿಂತು ಮನದೆ ಬಗೆದುದನಾರಾನುಮಱವರೊಳರೆ ಎಂದ ನಿಬರುಂ ಚೋದ್ಯಂಬಟ್ಟು ಭಟ್ಟಾರರ್ಗ್ಗೆಱಗಿ ಪೊಡೆವಟ್ಟು ಶ್ರೀವರ್ಧನ ಕುಮಾರನೆಂದಂ ಭಟ್ಟಾರಾ ನಿಮ್ಮಡಿಯನೆಮ್ಮ ತಲೆಗಳಿಂದರ್ಚಿಸದಾಗಳೆಮ್ಮಗೆಯ್ದ ಪಾಪಮೆಂತು ಕಿಡುಗುಮೆಂದೊಡಾ ಪಾಂಗಿನಿಂ ಕಿಡದೆನೆಯಂತಪ್ಪೊಡೆ ದೀಕ್ಷೆಯಂ ದಯೆಗೆಯ್ಯಿಮೆಂದೊಡೆ ಭಟಾರರೆಂದರೊಳ್ಳಿತ್ತಂ ಬಗೆದಿರ್ ನಿಮಗೆಲ್ಲರ್ಗಂ ಕಿಱದಯಾಯುಷ್ಯಮೆಂದೊಡೆ ಶ್ರೀವರ್ಧನ ಕುಮಾರನ ತಮ್ಮಂ ಮೂವರ್ತಿರ್ವರಿಂ ಕಿಱಯೊಂ ನಂದಿಮಿತ್ರನೆಂಬೊಂ ಭಟಾರರ ಮಾತಂ ಕೇಳ್ದು ನಕ್ಕಿಂತೆಂದನಾಮೆಲ್ಲಂ ಕೂಸುಗಳೆಮುಂ ನವಯೌವನರೆಮುಂ ತೇಜದೊಳಂ ಸತ್ವದೊಳಂ ಬಲಪರಾಕ್ರಮದೊಳಂ ಕುಡಿದೆಮೆಮಗೆಲ್ಲೊರ್ಗ್ಗಂ ಕಿಱದೆಯಾಯುಷ್ಯಮೆಂಬುದನೆಂತು ನಂಬಲಕ್ಕುಮೆಂದೊಡೆ ಭಟಾರರೆಂದರ್ ನೀನೇಕೆ ನಕ್ಕಪ್ಪೆಯಮ್ಮಾ ನಿಮಗೆಲ್ಲರ್ಗ್ಗಮಿರ್ಪತ್ತೊಂದು ದಿವಸಮಾಯುಷ್ಯಂ ನೀರದೆಸೆಯಿಂದಂ ನಿಮಗೆ ಸಾವಕ್ಕುಮೆಂದೊಡೆ ಶ್ರೀವರ್ಧನ ಕುಮಾರನೆಂದಂ

             ಆಗ ಋಷಿಗಳು “ಹಾಗೆ ಯೋಚಿಸುವುದು ಬೇಡ” ಎಂದು ತಡೆದರು. ಶ್ರೀವರ್ಧನ ಕುಮಾರನು “ನಾವು ಏನು ಯೋಚಿಸಿದ್ದೇವೆ? ” ಎಂದು ಕೇಳಲು, ಋಷಿಗಳು – “ನೀವು ನಿಮ್ಮ ತಲೆಗಳನ್ನು ಕತ್ತರಿಸಿ ನಮ್ಮ ಪಾದಗಳನ್ನು ಅರ್ಚಿಸೋಣವೆಂದು ಯೊಚಿಸಿದ್ದೀರಿ” ಎಂದು ಹೇಳಿದರು ಆಗ ಅವರೆಲ್ಲರೂ – “ಹೀಗೆ ಮನಸ್ಸಿನೊಳಗೆ ಯೋಚಿಸಿದುದನ್ನು ತಿಳಿಯುವವರು ಯಾರಾದರೂ ಇರುವರೆ ! ” ಎಂದು ಆಶ್ಚರ್ಯಪಟ್ಟರು. ಋಷಿಗಳಿಗೆ ಸಾಷ್ಟಾಂಗ ವಂದನೆ ಮಾಡಿ, ಶ್ರೀವರ್ಧನಕುಮಾರನು – “ಪೂಜ್ಯರೇ, ನಿಮ್ಮಪಾದವನ್ನು ನಮ್ಮ ತಲೆಗಳಿಂದ ಪೂಜಿಸದಿದ್ದಲ್ಲಿ ನಾವು ಮಾಡಿದ ಪಾಪ ಹೇಗೆ ಪರಿಹಾರವಾದೀತು? ” ಎಂದು ಕೇಳಿದನು. “ ಆ ರೀತಿಯಿಂದ ಪರಿಹಾರವಾಗದು” ಎಂದು ಅವರು ಹೇಳಲು, “ಹಾಗಾದರೆ ದೀಕ್ಷೆಯನ್ನು ದಯೆಪಾಲಿಸಿರಿ” ಎಂದನು. ಋಷಿಗಳು – “ನೀವು ಒಳ್ಳೆಯದನ್ನೇ ಯೋಚಿಸಿದಿರಿ; ನಿಮಗೆಲ್ಲ ಆಯುಷ್ಯವಿರುವುದು ಸ್ವಲ್ಪವೇ” ಎಂದು ಹೇಳಿದರು. ಶ್ರೀವರ್ಧನ ಕುಮಾರನ ತಮ್ಮನೂ ಮೂವತ್ತೆರಡು ಮಂದಿ ಸೋದರರಲ್ಲಿ ಕಿರಿಯವನೂ ಆದ ನಂದಿಮಿತ್ರನೆಂಬವನು ಅಭಯಘೋಷ ಋಷಿಗಳ ಮಾತನ್ನು ಕೇಳಿ ನಕ್ಕು ಹೀಗೆ ಹೇಳಿದನು – “ನಾವೆಲ್ಲರೂ ಚಿಕ್ಕವರಾಗಿದ್ದೇವೆ. ಹೊಸ ತರುಣರೂ ಆಗಿದ್ದೇವೆ. ತೇಜಸ್ಸು, ಸತ್ವ, ಶಕ್ತಿ, ಸಾವ್ಮರ್ಥ್ಯಗಳಿಂದ ಕೂಡಿದವರಾಗಿದ್ದೇವೆ. ನಮಗೆಲ್ಲರಿಗೂ ಆಯುಷ್ಯ ಸ್ವಲ್ಪವೇ ಇರುವುದೆಂಬುದನ್ನು ಹೇಗೆ ನಂಬಬಹುದು ? ” ಈ ರೀತಿ ಕೇಳಿದಾಗ ಋಷಿಗಳು – “ನೀನು ಯಾಕೆ ನಗುತ್ತಿದ್ದಿಯಪ್ಪಾ! ನಿಮಗೆಲ್ಲರಿಗೂ ಇನ್ನು ಇಪ್ಪತ್ತೊಂದು ದಿವಸ ಆಯುಷ್ಯವಿರುವುದು. ನೀರಿನಿಂದ ನಿಮಗೆ ಮರಣವುಂಟಾಗುವುದು” ಎಂದು ಹೇಳಿದರು. ಆಗ ಶ್ರೀವರ್ಧನ ಕುಮಾರನು ಹೀಗೆ ಹೇಳಿದನು 

        ಭಟಾರಾ ಎಮಗಿರ್ಪ್ಪತ್ತೊಂದು ದಿವಸಮಾಯುಷ್ಯಮೆಂಬುದರ್ಕೆ ಸಾಭಿಜ್ಞಾನಮೇನೆಂದು ಬೆಸಗೊಂಡೊಡೆ ಭಟಾರರೆಂದರ್ ನೀಮೀಗಳ್ ಪೊೞಲ್ಗೆ ಪೋಪಾಗಳ್ ನಿಮಗೆರೞ್ಕಾಳಿಂಗ ನಾಗಂಗಳ್ ಪೆಡೆಗಳನೆತ್ತಿ ನಾಲಗೆಗಳಂ ಪೊಳೆಯಿಸುತ್ತಂ ಬಂದೊಡೆ ನೀಮೊದಱಯಮಂ ಬಗ್ಗಿಸಿದೊಡದೃಶ್ಯಂಗಳಾಗಿ ಪೋಕುಮಿದೊಂದು ಸಾಭಿಜ್ಞಾನಂ ಮತ್ತಂತೆ ಪೋಪಾಗಳೊಂದು ಕಿಱುಗೂಸು ಕೋಲಂ ಪಿಡಿದು ನಿಮ್ಮಂ ಬಡಿಯಲ್ಕೆಂದು ಬಂದೊಡದಱ ಕೆಯ್ತಮಂ ಕಂಡು ನೀಮುಂ ನಕ್ಕೊಡೆ ನಿಮ್ಮ ನೋಡೆ ನೋಡೆ ಭಯಂಕರಮಪ್ಪ ಪಿರಿದೊಂದು ಬೇತಾಳರೂಪಂ ಕೈಕೊಂಡಾಕಾಶಂ ಬರೆಗಂ ಬಳೆದದೃಶ್ಯಮಕ್ಕುಮಿದೊಂದು ಸಾಭಿಜ್ಞಾನಂ ಮತ್ತಂತೆ ಪೋಪನ್ನೆಗಂ ತೊಱೆತೀವುಗುಮಿದೊಂದು ಸಾಭಿಜ್ಞಾನಂ ಮತ್ತಮಿಂದಿನಿರುಳ್ ನಿಮ್ಮ ತಾಯ್ ನಿಮ್ಮ ಮೂವತ್ತಿರ್ವರುಮಂ ರಾಕ್ಷಸಂ ನುಂಗಿತಿಂಬುದಂ ಕನಸುಗಂಡು ಪೇಱ್ಗುಮಿದೊಂದು ಸಾಭಿಜ್ಞಾನಮೆಂದು ಪೇಱ್ದೊಡೆ ಅನಿಬರುಂ ಭಟಾರರಂ ವಂದಿಸಿ ತಮ್ಮ ಪೊೞಲ್ಗೆ ವೋಪಗಳ್ ಭಟಾರರ್ ಪೇೞ್ದುದೆಲ್ಲಮಂ ಪೇೞ್ದ ಪಾಂಗಿನೊಳೆ ಬಟ್ಟೆಯೊಳ್ ಪೋಗುತ್ತುಂ ಕಂಡು ಪ್ರತ್ಯಕ್ಷಮಾಗಿ ಮತ್ತಿರುಳ್ ತಮ್ಮ ಮೂವತ್ತಿರ್ವರುಮಂ ರಾಕ್ಷಸಂ ನುಂಗಿದುದಂ ತಾಯ್ ಕನಸುಗಂಡುದಂ ತಮಗೆ ನೇಸರ್ಮೂಡೆ ಪೇೞ್ದೊಡೆ ನಂಬುಗೆಯಾಗಿ ಉಬ್ಬೆಗಂಬಟ್ಟಂತಿರ್ಪನ್ನೆಗಂ ವರ್ಧಮಾನ ಭಟ್ಟಾರರ ತೀರ್ಥಂ ವಿಹಾರಿಸುತ್ತಂ ಕೌಶಂಬಿಗೆ ವಂದೊಡೆ 

        – “ಪೂಜ್ಯರೇ, ನಮಗೆ ಇಪ್ಪತ್ತೊಂದು ದಿವಸ ಮಾತ್ರ ಆಯುಷ್ಯವೆಂಬುದಕ್ಕೆ ಕುರುಹೇನು? ಎಂದು ಕೇಳಿದನು. ಋಷಿಗಳು ಹೇಳಿದರು – “ನೀವೀಗ ಪಟ್ಟಣಕ್ಕೆ ಹೋಗುವಾಗ ನಿಮ್ಮೆದುರಿಗೆ ಎರಡು ಕಾಳಿಂಗಸರ್ಪಗಳು ಹೆಡೆಗಳನ್ನೆತ್ತಿ ನಾಲಗೆಗಳನ್ನು ಹೊರಳಿಸುತ್ತ ಬರುವುವು. ಆಗ ನೀವು ಬೊಬ್ಬಿಟ್ಟು ಅವನ್ನು ಬೈದರೆ ಮಾಯವಾಗಿ ಹೋಗುವುವು. ಇದು ಒಂದು ಕುರುಹು. ಮತ್ತೆ ಹಾಗೆಯೇ ಹೋಗುತ್ತಿರುವಾಗ ಒಂದು ಚಿಕ್ಕ ಮಗು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ನಿಮ್ಮನ್ನು ಹೊಡೆಯುವುದಕ್ಕೆ ಬರುವುದು. ಅದರ ಕೆಲಸವನ್ನು ಕಂಡು ನಕ್ಕರೆ, ನೀವು ನೋಡು ನೋಡುತ್ತಿದ್ದಂತೆಯೇ ಹೆದರಿಕೆಯನ್ನು ಉಂಟುಮಾಡುವ ದೊಡ್ಡದಾದ ಒಂದು ಬೇತಾಳದ ರೂಪವನ್ನು ತಾಳಿ ಆಕಾಶದವರೆಗೂ ಬೆಳೆದು ದೊಡ್ಡದಾಗಿ ಮಾಯವಾಗುವುದು – ಇದೂ ಒಂದು ಕುರುಹು. ಮತ್ತೆ ಹಾಗೆಯೇ ನೀವು ಹೋಗುತ್ತಿರುವಾಗ ನದಿಯು ನೆರೆಯಿಂದ ತುಂಬಿ ಹರಿಯುವುದು – ಇದು ಇನ್ರ್ನೊಂದು ಕುರುಹು. ಆಮೇಲೆ ಇಂದಿನ ರಾತ್ರಿ ನಿಮ್ಮ ತಾಯಿ ನಿಮ್ಮನ್ನು ಮೂವತ್ತೆರಡು ಮಂದಿಯನ್ನೂ ರಾಕ್ಷಸನು ನುಂಗಿ ತಿನ್ನುವುದನ್ನು ಕನಸಿನಲ್ಲಿ ಕಂಡು, ತಿಳಿಸುವಳು – ಇದು ಒಂದು ಕುರುಹು” ಎಂದು ಹೇಳಿದರು. ಆಗ ಅವರೆಲ್ಲರೂ ಋಷಿಗಳಿಗೆ ನಮಸ್ಕರಿಸಿ ತಮ್ಮ ಪಟ್ಟಣದ ಕಡೆಗೆ ಹೊರಟರು. ಹೋಗುವಾಗ, ಋಷಿಗಳು ಹೇಳಿದುದೆಲ್ಲವನ್ನೂ ಹೇಳಿದ ರೀತಿಯಲ್ಲಿಯೇ ತಮ್ಮ ದಾರಿಯಲ್ಲಿ ಹೋಗುತ್ತ ಕಣ್ಣೆದುರಿನಲ್ಲಿಯೇ ಕಂಡರು. ಆಮೇಲೆ ರಾತ್ರಿಯಲ್ಲಿ ತಾವು ಮೂವತ್ತೆರಡು ಮಂದಿಯನ್ನೂ ರಾಕ್ಷಸನು ನುಂಗಿದುದನ್ನು ತಾಯಿ ಕನಸಿನಲ್ಲಿ ಕಂಡುದನ್ನು ತಮಗೆ ಸೂರ್ಯೋದಯದ ವೇಳೆಯಲ್ಲಿ ಹೇಳಿದುದರಿಂದ ಅವರಿಗೆ ನಂಬುಗೆಯುಂಟಾಯಿತು. ಅವರು ಉದ್ವೇಗಗೊಂಡವರಾಗಿ ಹೀಗೆಯೇ ಇರುತ್ತಿರಲು, ವರ್ಧಮಾನ ತೀರ್ಥಂಕರರ ಧರ್ಮಸಭೆ ಸಂಚಾರ ಮಾಡುತ್ತ ಕೌಶಂಬಿಗೆ ಬಂದಿತು.

        ಲಲಿತಘಟೆ ಪಿರಿದರ್ಚನೆಯಂ ಕೊಂಡು ಪೋಗಿ ಭಟಾರರನರ್ಚಿಸಿ ಬಂದಿಸಿ ಧರ್ಮಶ್ರವಣಾನಂತರಮಿಂತೆಂದು ವರ್ಧಮಾನ ಭಟ್ಟಾರರಂ ಬೆಸಗೊಂಡರ್ ಭಟಾರಾ ಎಮಗಾಯುಷ್ಯಮೆನಿತುಂಟೆಂದು ಬೆಸಗೊಂಡೊಡೆ ಭಟಾರರೆಂದರ ನಿಮಗನಿಬರ್ಗ್ಪಂ ಕಿಱದೆ ಆಯುಷ್ಯಮೆಂದು ಪೆಳೞ್ದೊಡಾಮೇನೊ ಭವ್ಯರೆಮೊ ಅಭವ್ಯರೆಮೊ ಎಂದು ಬೆಸಗೊಂಡೊಡೆ ನೀಮೆಲ್ಲಂ ಭವ್ಯರಿರ್ ಭವ್ಯರಿರಾದೊಡಂ ಪರಮ ಶುದ್ಧದ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಕೈಕೊಂಡು ನೆಗೞ್ದೊಡಲ್ಲದೆ ಮೋಕ್ಷಮಾಗದೆಂತು ಸ್ವರ್ಣಪಾಷಣದೊಳ್ ಸುವರ್ಣಮುಂಟಾಗಿಯುಂ ದಹನ ತಾಪನ ಪಿಂಡಿಬದ್ಧನಾದಿ ಕ್ರಿಯೆವೆಱದನ್ನೆಗಂ ಪೊನ್ನಾಗದಂತೆ ತಪದಿಂದಲ್ಲದೆ ಮೋಕ್ಷಮಾಗದೆಂದು ಪೇೞ್ದೊಡನಿಬರುಂ ವರ್ಧಮಾನ ಭಟ್ಟಾರರ್ಗ್ಗೆ ಶಿಷ್ಯರಾಗಿ ತಪಂಬಟ್ಟು ಪಂಚಮಹಾವ್ರತಂಗಳನೆಱಸಿ ಕೊಂಡು ಪ್ರಾಯೋಪಗಮನದ ಮರಣದ ವಿಧಾನಮಂ ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ :
        ಶ್ಲೋಕ || ಸ್ಥಿತಿಸ್ಯ ವಾ ನಿಷಣ್ಣಸ್ಯ ಯಾವತ್ ಸುಪ್ತಸ್ಯ ವಾ ಪುನಃ
                    ಸರ್ವಾಭೀಷ್ಟ ಪರಿತ್ಯಾಗಃ ಪ್ರಾಯೋಪಗಮನಂ ಸ್ಮೃತಂ ||

        ಇಂತುಟಾ ಪ್ರಾಯೋಪಗಮನದ ಲಕ್ಷಣಮೆಂದು ಭಟಾರರ್ ವಕ್ಖಾಣಿಸಿ ಪೇೞೆ ಕೇಳ್ದಱದು 

        ಲಲಿತಘಟೆ ಹೆಚ್ಚಾದ ಪೂಜಾವಸ್ತುಗಳನ್ನು ತೆಗೆದುಕೊಂಡು ಹೋಗಿ ಋಷಿಗಳನ್ನು ಪೂಜಿಸಿ ಧರ್ಮೋಪದೇಶವನ್ನು ಕೇಳಿದನಂತರ ಅವರನ್ನು ಹೀಗೆ ಕೇಳಿದರು – “ಪೂಜ್ಯರೇ, ನಮಗೆ ಆಯುಷ್ಯವೆಷ್ಟಿದೆ?” ಆಗ ವರ್ಧಮಾನ ಭಟಾರರು – “ನಿಮಗೆ ಅಷ್ಟು ಮಂದಿಗೂ ಆಯುಷ್ಯವಿರುವುದು ಸ್ವಲ್ಪವೆ” ಎಂದು ಹೇಳಿದರು. ಅದಕ್ಕೆ ಅವರು – “ನಾವು ಭವ್ಯರೊ (ಮೋಕ್ಷಕ್ಕೆ ಅರ್ಹರೊ) ಅಭವ್ಯರೋ? ” ಎಂದು ಕೇಳಿದರು. ಭಟಾರರು – ನೀವೆಲ್ಲರೂ ಭವ್ಯರಾಗಿದ್ದೀರಿ. ಭವ್ಯರೇ ಅಗಿದ್ದರೂ ಶ್ರೇಷ್ಠವೂ ಪರಿಶುದ್ಧವೂ ಸಹಜವೂ ಆಗಿರುವ ದರ್ಶನ – ಜ್ಞಾನ – ಚಾರಿತ್ರಗಳನ್ನು ಸ್ವೀಕರಿಸಿಕೊಂಡು ಆಚರಿಸಿದಲ್ಲದೆ ಮೋಕ್ಷ ಲಭಿಸಲಾರದು. ಚಿನ್ನದ ಕಲ್ಲಿನಲ್ಲಿ (ಅದುರಿನಲ್ಲಿ) ಚಿನ್ನವಿದ್ದರೂ ಸುಡುವುದು, ಕಾಯಿಸುವುದು, ಮುದ್ದೆಗಟ್ಟುವುದು – ಮುಂತಾದ ಕ್ರಿಯೆಗಳನ್ನು ಅದು ಪಡೆಯುವವರೆಗೂ ಚಿನ್ನವಾಗುವುದಿಲ್ಲ. ಹಾಗೆಯೇ ತಪಸ್ಸನ್ನು ಆಚರಿಸದೆ ಮೋಕ್ಷ ಪ್ರಾಪ್ತಿಯಾಗದು” ಎಂದು ಹೇಳಿದರು ಆಗ ಅವರೆಲ್ಲರೂ ವರ್ಧಮಾನ ತೀರ್ಥಂಕರರಿಗೆ ಶಿಷ್ಯರಾಗಿ ತಪಸ್ಸನ್ನು ಸ್ವೀಕರಿಸಿದರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ಪ್ರಾಯೋಪಗಮನದ ಪದ್ಧತಿಯಲ್ಲಿ ಮರಣದ ವಿಧಾನ ಹೇಗೆಂದು ಕೇಳಲು ಭಟಾರರು ಹೀಗೆಂದರು – (ನಿಂತಿರುವವನದಾಗಲಿ ಕುಳಿತುರುವವನದಾಗಲಿ ಮತ್ತು ಮಲಗಿರುವವನದಾಗಲಿ ಯಾವಾಗ ಇಲ್ಲ ಆಕಾಂಕ್ಷೆಗಳನ್ನು ಬಿಟ್ಟುಬಿಡುವುದು ಆಗುತ್ತದೋ ಅದು ಪ್ರಾಯೋಪಗಮನವೆಂದು ತಿಳಿಯಬಹುದು). ಆ ಪ್ರಾಯೋಪಗಮನದ ಲಕ್ಷಣ ಈ ರೀತಿಯೆಂದು ಭಟಾರರು ವ್ಯಾಖ್ಯಾನಿಸಿ ಹೇಳಲು, ಅವರೆಲ್ಲರೂ ಕೇಳಿ ತಿಳಿದುಕೊಂಡರು. 

    ಲಲಿತಘಟೆಯನಿಬರುಂ ಭಟಾರರ ಪಕ್ಕದೆ ಚತುರ್ವಿಧಮಪ್ಪಾಹಾರಮುಂ ಶರೀರಮುಮಂ ಯಾವಜ್ಜೀವಂ ತೊಱೆದು ಭಟಾರರಂ ಬಂದಿಸಿ ಪೋಗಿ ವಿಶಾಳೆಯೆಂಬ ತೊಱೆಯ ತಡಿಯೊಳನಿ ಬರುಮೇಕಪಾರ್ಶ್ವದೊಳ್ ಪಟ್ಟಿರ್ದು ಕೈಯುಂ ಕಾಲುಮನಾಡಿಸದೊಂದು ಕೆಲದಿಂದೊಂದು ಕೆಲಕ್ಕೆ ಮಗುೞದೆ ಕುಳ್ಳಿರದೆ ನಿಂದಿರದೆ ನಿಡಿಯದೆ ಕೆಲಂಗಳಂ ನೋಡದಿಂತು ಪ್ರಾಯೋಪಗಮಣಮಗೆಯ್ದು ಪದಿನಯ್ದು ದಿವಸಂ ಮೆಯ್ಯಂ ತೊಱೆದಿರ್ದೊರನ್ನೆಗಂ ಮೇಗೆ ಪಿರಿದೊಂದು ಮೞೆಕೊಂಡು ಪ್ರರಂ ಬಂದವರನೆೞೆದುಕೊಂಡು ಪೋಗಿ ಪಿರಿದೊಂದು ಮಡುವಿನೊಳಿಕ್ಕಿದೊಡೆ ನೀರೋಳಗಿರ್ದು ಮೋಹಿಸದ ಬುದ್ದಿಯನೊಡೆಯರಾಗಿ ದೇವರಂ ಜಾನಿಸುತ್ತಂ ಪಂಚನಮಸ್ಕಾರಮಂ ಮನದೊಳುಚ್ಚಾರಿಸುತ್ತಂ ಶುಭಧ್ಯಾನದೊಳ್ ಪರಿಣತರಾಗಿ ದರ್ಶನ ಜ್ಞಾನ ಚಾರಿತ್ರಂಗಳನಾರಾಸಿ ಮುಡಿಪಿ ಅಯ್ನೂರ್ವರುಂ ವೈಜಯಂತಮೆಂಬ ಪಂಚಾಣುತ್ತರೆಯೊಳುತ್ಕೃಷ್ಟಮಪ್ಪ ಮೂವತ್ತುಮೂಱು ಸಾಗರೋಪಮಾಯುಷ್ಯಮನೊಡೆಯೊರೇಕಹಸ್ತಪ್ರಮಾಣ ಶ್ವೇತವರ್ಣದೊಳಹಮಿಂದ್ರ ದೇವರಾಗಿ ಪುಟ್ಟಿದರ್ ಮತ್ತೆ ಪೆಱರುಂ ರತ್ನತ್ರಯಂಗಳನಾರಾಸುವಾರಾಧಕರ್ಕಳುಂ ಲಲಿತಘಟೆಯಂ ಮನದೊಳ್ ಬಗೆದು ಚತುರ್ವಿಧಮಪ್ಪುಪಸರ್ಗಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ಶುಭ ಪರಿಣಾಮದಿಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳನಾರಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ.

            ಲಲಿತಘಟೆಯವರೆಲ್ಲರೂ ಋಷಿಗಳ ಬಳಿಯಲ್ಲಿ ನಾಲ್ಕು ವಿಧದ ಆಹಾರವನ್ನೂ ಶರೀರವನ್ನೂ ಜೀವವಿರುವವರೆಗೂ ಬಿಟ್ಟು ಋಷಿಗಳಿಗೆ ವಂದಿಸಿ ಹೋಗಿ ವಿಶಾಳೆ ಎಂಬ ಹೊಳೆಯದಡದಲ್ಲಿ ಅವರೆಲ್ಲರೂ ಒಂದು ಮಗ್ಗುಲಲ್ಲಿ ಮಲಗಿದರು. ಕೈಕಾಲುಗಳನ್ನು ಆಡಿಸದೆ, ಒಂದು ಮಗ್ಗುಲಿಂದ ಮತ್ತೊಂದು ಮಗ್ಗುಲಿಗೆ ಹೊರಳದೆ, ಕುಳಿತಿರದೆ, ನಿಂತಿರದೆ, ಮಾತಾಡದೆ ಅತ್ತಿತ್ತ ನೋಡದೆ – ಹೀಗೆ ಪ್ರಾಯೋಪಗಮನವನ್ನು ಮಾಡಿ ಹದಿನೈದು ದಿನ ಶರೀರದ ಗೊಡವೆಯನ್ನೇ ಬಿಟ್ಟಿದ್ದರು. ಹೀಗಿರಲು ಮೇಲೆ ದೊಡ್ಡದೊಂದು ಮಳೆಸುರಿದು. ಮಹಾಪ್ರವಾಹ ಬಂದು, ಅವರನ್ನು ಎಳೆದುಕೊಂಡು ಹೋಗಿ ದೊಡ್ಡದೊಂದು ಮಡುವಿಗೆ ಹಾಕಿತು. ಅವರು ಅಲ್ಲಿ ನೀರಿನೊಳಗೆ ಇದ್ದುಕೊಂಡು ಅಸೆಪಡದ ಬುದ್ಧಿಯುಳ್ಳರಾಗಿ ದೇವರನ್ನು ಧ್ಯಾನ ಮಾಡುತ್ತ ಪಂಚನಮಸ್ಕಾರ ಮಂತ್ರಗಳನ್ನು ಮನಸ್ಸಿನಲ್ಲಿಯೇ ಉಚ್ಚಾರಣೆ ಮಾಡುತ್ತ ಶುಭವಾದ ಧ್ಯಾನದಲ್ಲಿ ಕುಶಲರಾಗಿ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ನೆರವೇರಿಸಿ ಸತ್ತರು. ಅಯ್ನೂರುಮಂದಿಯೂ ಸತ್ತು ವೈಜಯಂತ ಎಂಬ ಐದು ಅಣುತ್ತರೆಗಳಲ್ಲಿ ಶ್ರೇಷ್ಠವಾದ ಸ್ವರ್ಗದಲ್ಲಿ ಮೂವತ್ತಮೂರು ಸಾಗರದಷ್ಟು ಆಯುಷ್ಯವುಳ್ಳವರಾಗಿ ಒಂದು ಮೊಳ ಅಳತೆಯುಳ್ಳ ಬಿಳಿ ಬಣ್ಣವುಳ್ಳ ಅಹಮಿಂದ್ರ ಎಂಬ ದೇವರಾಗಿ ಹುಟ್ಟಿದರು. ರತ್ನತ್ರಯವನ್ನು ಆರಾಸತಕ್ಕ ಇನ್ನಿತರರೂ ಲಲಿತಘಟೆಯನ್ನು ಮನಸ್ಸಿನಲ್ಲಿ ಭಾವಿಸಿ ನಾಲ್ಕು ಬಗೆಯ (ದೇವ, ನಾರಕ, ತಿರ್ಯಕ್, ಮಾನುಷ ಎಂಬ) ಉಪಸರ್ಗಗಳನ್ನೂ (ತೊಂದರೆಗಳನ್ನೂ) ಹಸಿವು ಬಾಯಾರಿಕೆ ಮುಂತಾಗಿ ಇರುವ ಇಪ್ಪತ್ತೆರಡು ಬಗೆಯ ಪರೀಷಹಗಳನ್ನೂ ಸಹಿಸಿಕೊಂಡು ಶುಭಫಲದಿಂದ ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಸಮ್ಮಕ್ ಚಾರಿತ್ರಗಳನ್ನು ಆರಾಸಿ ಸ್ವರ್ಗಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****