ನನ್ನ ಪುಟಗಳು

23 ಮಾರ್ಚ್ 2018

ವ್ಯಾಸರಾಯರು

 

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
               ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳು:-
ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. /ಹರಿಸರ್ವೋತ್ತಮ ವಾಯು ಜೀವೋತ್ತಮ /

ಕೀರ್ತನೆಗಳು:-

 ಚಂದ್ರಿಕಾಚಾರ್ಯರ ಪಾದ ದ್ವಯಕೆ/
 ಎರುಗುವೆ ಪ್ರತಿವಾಸರಕೆ /ಪ/

 ನವ ವೃಂದಾವನ ಮಧ್ಯದಿ ಶೋಭಿಪ
  ನವವಿಧ ವರಗಳ ನೀಡುತ ಸತತ/
 ನವ ಮಣಿ ಮುಕುಟ ಮಸ್ತಕದಿ ಶೋಭಿಪ
  ನವ್ಯ ಜೀವನ ಶುಭಫಲ ಕೋರುತ/
 ನಂಬಿದ ಭಕ್ತರ ದೋಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/

 ವಿಜಯ ಮೂರುತಿ ರಾಮನ ಧ್ಯಾನಿಸಿ
  ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
 ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
  ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/

 ಯಾಂತ್ರಿಕ ತನದಿ ತಾಪವೆನಿಸುವ
  ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
 ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
 ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/
ಉಗಾಭೋಗಗಳು

    ೧

ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ ಸಿರಿಕೃಷ್ಣ


    ೨

ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ



**********ಮಾಹಿತಿ ಕೃಪೆ: ವಿಕಿಪೀಡಿಯಾ***********

ನಂಜುಂಡ ಕವಿ

ನಂಜುಂಡ ಕವಿಯು ಕ್ರಿ.ಶ. ೧೫೦೮ ರಲ್ಲಿದ್ದ ಮೂರನೆಯ ಮಂಗರಸನ ಮಗ.
ಮಂಗರಸ ಜೈನನಾಗಿದ್ದನು. ಆದರೆ ನಂಜುಂಡ ಕವಿ ವೀರಶೈವ ಮತವನ್ನು ಸ್ವೀಕರಿಸಿದನು.

        ನಂಜುಂಡ ಕವಿಯ ಪ್ರಮುಖ ಕೃತಿ: 'ಕುಮಾರ ರಾಮನ ಕಥೆ'. ಇದು ಈತನ ಮಹಾನ್ ಸಾಂಗತ್ಯ ಕಾವ್ಯವಾಗಿದ್ದು ಬಹಳ ಜನಮನ್ನಣೆ ಗಳಿಸಿದೆ. 
       ಈತನು ತನ್ನ ಕೃತಿಯಲ್ಲಿ ಕಾಳಿದಾಸ, ಬಾಣ, ಪಂಪ, ನೇಮಿಚಂದ್ರ, ಜನ್ನ, ಗುಣನಂದಿ, ಗಜಗ, ಗುಣವರ್ಮ, ನಾಗಚಂದ್ರ, ಸುಜನೋತ್ತಂಸ, ಅಸಗ, ರನ್ನ, ಶಾಂತಿವರ್ಮ ಮುಂತಾದ ಪೂರ್ವಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ. 
      
ಕುಮಾರರಾಮನ ಕಥೆ ಕುರಿತು:  
        https://upload.wikimedia.org/wikipedia/commons/thumb/6/68/Kumararama.jpg/225px-Kumararama.jpg
    ಕುಮಾರರಾಮ ಕಂಪಪ್ರದೇಶದ ರಾಜನ ಮಗ ಕುಮಾರರಾಮನ ಚರಿತ್ರೆ. ಇದರಲ್ಲಿ ಐದು ಸಾವಿರಕ್ಕೂ ಅಧಿಕ ಸಂಖ್ಯೆಯ ಪದ್ಯಗಳಿವೆ. ಕಥಾನಾಯಕ ರಾಮನಾಥನನ್ನು ಅವನ ಮಲತಾಯಿ ಮೋಹಿಸಿ, ನಂತರ ಅವನಿಂದ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಕುಪಿತಳಾಗಿ ತನ್ನ ಪತಿಗೆ ದೂರನ್ನಿತ್ತು ಅವನನ್ನು ಕೊಲ್ಲಲು ಪ್ರೇರೇಪಿಸುತ್ತಾಳೆ. ರಾಜನ ಆದೇಶವನ್ನು ಪಾಲಿಸದೆ ಮಂತ್ರಿ ಕುಮಾರರಾಮನನ್ನು ಬಚ್ಚಿಡುತ್ತಾನೆ. ಇದೇ ಸಮಯಕ್ಕೆ ರಾಜ್ಯಕ್ಕೆ ಮುಸ್ಲಿಮರು ಧಾಳಿ ಮಾಡುತ್ತಾರೆ. ವಿಷಯ ತಿಳಿದ ಕುಮಾರರಾಮ ಶತ್ರುಗಳ ಧಾಳಿಯನ್ನು ಸಮರ್ಥವಾಗಿ ಎದುರಿಸಿ ಯುದ್ಧದಲ್ಲಿ ಹತನಾಗುತ್ತಾನೆ. ಇದು ಸಾರಾಂಶ.
             ಕನ್ನಡನಾಡಿನ ಜನಪ್ರಿಯ ನಾಯಕರಲ್ಲೊಬ್ಬ. ಪೌರುಷ. ಶೌಚ ಗುಣಗಳಿಗೆ ಹೆಸರಾದವ. ಅತಿ ಚಿಕ್ಕ ವಯಸ್ಸಿನಲ್ಲೆ ಮಹಮ್ಮದೀಯರ ದಾಳಿಯನ್ನೆದುರಿಸಿ ತನ್ನ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಗಳನ್ನು ಪ್ರದರ್ಶಿಸಿದವ. ವಿಜಯನಗರ ಸ್ರಾಮ್ರಾಜ್ಯ ಸ್ಥಾಪನೆಗೆ ತಳಹದಿ ಹಾಕಿ ಖಿಲವಾಗುತ್ತಿದ್ದ ಆರ್ಷೇಯ ಧರ್ಮವನ್ನು ಉದ್ಧಾರ ಮಾಡಿದವ. ಈ ಮಹಾನುಭಾವನ ಕಥೆ ನಾಡಿನ ಮೂಲೆಮೂಲೆಯಲ್ಲಿ ಹರಡಿದೆ. ಕೆಲವು ಕಡೆ ಇವನ ವಿಗ್ರಹಗಳನ್ನು ಪೂಜಿಸುತ್ತಾರಲ್ಲದೆ ಇವನ ಕಥೆಯನ್ನು ಓದಿಸಿ ಕೇಳಿ ನಾಟಕಗಳನ್ನು ಬರೆಸಿ ಆಡುತ್ತಾರೆ.
           ಕುಮಾರರಾಮನ ಹೆಸರು ಇಂದಿಗೂ ಉತ್ತರ ಕರ್ಣಾಟಕದಲ್ಲಿ ವಿಶೇಷವಾಗಿ ಪ್ರಚಲಿತವಾಗಿದೆ. ಸ್ಫುರದ್ರೂಪಿಯೂ ಪರಾಕ್ರಮಿಯೂ ಆದವನನ್ನು 'ಏನು ಈ ಮಗ ಕೊಮರಾಮ' ಆಗ್ಯಾನ ಎಂದು ಕರೆಯುವುದುಂಟು. ಒಮ್ಮೊಮ್ಮೆ ಬಡಾಯಿ ಕೊಚ್ಚಿಕೊಳ್ಳುವವನೂ 'ಮಹಾ ಕೊಮರಾಮ ಬಂದ' ಎಂದು ಆಡಿಕೊಳ್ಳುವುದೂ ಉಂಟಂತೆ. ಈತನನ್ನು ಕುರಿತು ನಂಜುಂಡ ಕವಿ, ಪಾಂಚಾಳಗಂಗ ಮತ್ತು ಮಹಲಿಂಗಸ್ವಾಮಿ ಎಂಬ ಕವಿಗಳು ಸಾಂಗತ್ಯದಲ್ಲಿ ಕಾವ್ಯಗಳನ್ನು ರಚಿಸಿರುತ್ತಾರೆ. ಇಷ್ಟೇ ಅಲ್ಲದೆ ಈತನ ಬಗ್ಗೆ ಅನೇಕ ಜನಪದ ಗೀತೆಗಳೂ ಕಥೆಗಳೂ ಜನರಲ್ಲಿ ಪ್ರಚಾರದಲ್ಲಿವೆ; ಕೆಲವು ಕೃಫಿಯತ್ತುಗಳೂ ದೊರೆತಿವೆ. ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ಪ್ರತಿವರ್ಷವೂ ವೈಶಾಖ ಶುಕ್ಲ ಪೂರ್ಣಿಮೆಯಂದು ಬೇಡರು ಈತನ ಜಾತ್ರೆಯನ್ನು ನಡೆಸುವರೆಂದು ತಿಳಿದುಬರುತ್ತದೆ. ಅವರ ಪಾಲಿಗೆ ಈತ ಪರದಾರಸೋದರತ್ವದ ಪ್ರತೀಕವಾದ ದೈವಾಂಶಪುರುಷನೇ ಆಗಿದ್ದಾನೆ.
            ಕುಮಾರರಾಮನ ಬಗ್ಗೆ ಇತ್ತೀಚೆಗೆ ಸಾಕಷ್ಟು ಸಂಶೋಧನೆ ನಡೆದಿದೆ. ಈ ಮೂಲಕ ಈತ ವಿಜಯನಗರದ ಸ್ಥಾಪನೆಗೆ ಪೂರ್ವದಲ್ಲಿ ಬದುಕಿ ಬಾಳಿದ ಬಬ್ಬ ವೀರಪುರುಷನೆಂತಲೂ ಆಗಿನ ಕಾಲದಲ್ಲಿ ಉತ್ತರದಿಂದ ದಂಡೆತ್ತಿ ಬಂದ ಮಹಮ್ಮದೀಯರನ್ನು ಮೂರು ಬಾರಿ ಪ್ರತಿಭಟಿಸಿ, ಕಡೆಯ ಕಾಳಗದಲ್ಲಿ ಪ್ರಾಣ ತೆತ್ತು ಹುತಾತ್ಮನಾದನೆಂತಲೂ ವ್ಯಕ್ತವಾಗುತ್ತದೆ. ಮಾನವನಾಗಿದ್ದ ಕುಮಾರರಾಮ ತನ್ನ ಹಿರಿಮೆಯಿಂದ ಅತ್ಯಲ್ಪಕಾಲದಲ್ಲೆ ಮಹಿಮಾಪುರುಷನೆಂಬ ಪ್ರಶಸ್ತಿಗೆ ಪಾತ್ರನಾಗಿ ಹಿಂದು ಜನಾಂಗದ ಆರಾಧ್ಯದೇವತೆಯಾಗಿರಬೇಕೆಂದು ತೋರುತ್ತದೆ. ಈತನ ಪೂಜೆಗಾಗಿ ದೇವಾಲಯಗಳನ್ನು ನಿರ್ಮಿಸಿ ದಾನದತ್ತಿಗಳನ್ನು ನೀಡಿರುವ ವಿಚಾರಗಳು ಶಾಸನಗಳಲ್ಲಿ ಉಕ್ತವಾಗಿರುವುದೇ ಇದಕ್ಕೆ ನಿದರ್ಶನ.
         ಪ್ರಕೃತ ಪರದಾರ ಸೋದರನಾದ ಕುಮಾರರಾಮನ ಕಥೆಯನ್ನೂ ಅವನು ಎಷ್ಟರಮಟ್ಟಿಗೆ ಐತಿಹಾಸಿ ವ್ಯಕ್ತಿಯೆಂಬುದನ್ನೂ ಸಂಗ್ರಹವಾಗಿ ಪರಿಚಯ ಮಾಡಿಕೊಡಲಾಗಿದೆ.
          ಕುಮಾರರಾಮ ಕಂಪಿಲ ಮತ್ತು ಹರಿಹರದೇವಿಯರ (ಹರಿಹರದೇವಿ)ವರ ಪುತ್ರ. ಈತನಿಗೆ ರಾಮನಾಥ, ರಾಮುಗ, ಚೆನ್ನಿಗರಾಮ ಎಂಬ ಹೆಸರುಗಳೂ ಉಂಟು. ಈತನನ್ನು ಅರ್ಜುನನ ಅವತಾರವೆಂದು ನಂಜುಡನೂ ಜಟ್ಟಂಗಿರಾಮನ ಅವತಾರವೆಂದು ಪಾಂಚಾಳಗಂಗನೂ ಪರಶುರಾಮನ ಅವತಾರವೆಂದು ಮಹಾಲಿಂಗ ಸ್ವಾಮಿಯೂ ಚಿತ್ರಿಸಿರುತ್ತಾರೆ. ಚಿಕ್ಕಂದಿನಿಂದಲೇ ಆಟ, ಪಾಠ, ಬೇಟೆ ಮುಂತಾದ ಸಮಸ್ತ ವಿದ್ಯೆಗಳಲ್ಲಿಯೂ ಪ್ರವೀಣನಾಗಿ ಈತ ಕಂಪಿಲನಿಗೆ ಬಲಗೈಯಂತಿದ್ದ. ಹೊಸಮಲೆದುರ್ಗ ಮತ್ತು ಕುಮ್ಮಟದುರ್ಗಗಳಲ್ಲಿ ಪಾಳೆಯವನ್ನು ಸ್ಥಾಪಿಸಿಕೊಂಡು ಪ್ರಬಲನಾಗಿದ್ದ ಕಂಪಿಲನಿಗೆ ಹೊಯ್ಸಳ ವೀರಬಲ್ಲಾಳ, ಕಾಕತೀಯ ಪ್ರತಾಪರುದ್ರ ಮೊದಲಾದ ನೆರೆಹೊರೆಯ ರಾಜರು ಶತ್ರುಗಳಾಗಿದ್ದರು. ಕುಮಾರರಾಮ ಈ ಅರಸರನ್ನೆಲ್ಲ ಹಿಮ್ಮೆಟ್ಟಿಸಿ ಚಿಕ್ಕ ವಯಸ್ಸಿನಲ್ಲಿಯೇ ತುಂಬ ಯಶೋವಂತನಾದ. ಕ್ರಮಕ್ರಮವಾಗಿ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡು ಬಲಿಷ್ಠನಾಗುತ್ತಿದ್ದ. ಈ ಕಂಪಿಲನ ಮೇಲ್ಮೆಯನ್ನೂ ದೆಹಲಿಯ ಸುಲ್ತಾನ ಸಹಿಸದೆ ಹೋದ. ಆದರೂ ಸಾಹಸಿಯೂ ಸ್ಪುರದ್ರೂಪಿಯೂ ಆದ ಕುಮಾರರಾಮನ ವೃತ್ತಾಂತವನ್ನು ಕೇಳಿ ಸುಲ್ತಾನನ ಮಗಳಾದ ಬಾಬಮ್ಮ ಆತನನ್ನೇ ವರಿಸಬೇಕೆಂದು ಹಟತೊಟ್ಟಳು. ಸುಲ್ತಾನ ತನ್ನ ವಜೀರರ ಮೂಲಕ ಕಂಪಿಲನಿಗೆ ಹೇಳಿ ಕಳುಹಿಸಿ, ಅವನೊಂದಿಗೆ ಬಾಂಧವ್ಯ ಬೆಳೆಸಲು ಅಪೇಕ್ಷಿಸಿದ. ಕುಮಾರರಾಮನಾಗಲಿ ಕಂಪಿಲನಾಗಲಿ ಈ ಸಲಹೆಗೆ ಒಪ್ಪಲಿಲ್ಲ. ಈ ನಿರಾಕರಣೆಯಿಂದ ಸುಲ್ತಾನನಿಗೆ ಅಸಮಾಧಾನವಾಯಿತು. ಕಂಪಿಲ ಮತ್ತು ಅವನ ಮಗನ ಅಹಂಕಾರವನ್ನು ಅಡಗಿಸಬೇಕೆಂದು ಆತ ನಿಶ್ಚಯಿಸಿಕೊಂಡ. ಈ ವೇಳೆಗೆ, ಸುಲ್ತಾನನ ಆಶ್ರಯದಲ್ಲಿದ್ದ ಬಾದೂರಖಾನನೆಂಬ ಸರದಾರ ತನ್ನ ಒಡೆಯನೊಂದಿಗೆ ವೈಮನಸ್ಯ ಕಟ್ಟಿಕೊಂಡು, ತಲೆತಪ್ಪಿಸಿಕೊಂಡು ಬಂದು ಹಿಂದೂ ರಾಜರಲ್ಲಿ ಆಶ್ರಯ ಕೋರಿದ. ಆದರೆ ಸುಲ್ತಾನನ ನಿಷ್ಠುರಕ್ಕೆ ಹೆದರಿದ ಹಿಂದೂ ರಾಜರು ಅವನಿಗೆ ಆಶ್ರಯವೀಯಲು ಹಿಂದೆಗೆದರು. ಕುಮಾರರಾಮನ ಸಲಹೆಯ ಮೇರೆಗೆ ಕಂಪಿಲ ಮುಂದೆ ಬಂದು ಬಾದೂರಕಾನನಿಗೆ ಆಶ್ರಯವಿತ್ತ. ಇದೀಗ ಸುಲ್ತಾನನಿಗೆ ಕಂಪಿಲನ ಮೇಲೆ ದಂಡೆತ್ತಿ ಬರಲು ಸಾಕಷ್ಟು ಕಾರಣವನ್ನೊದಗಿಸಿತು.
         ಸುಲ್ತಾನನ ಅಪ್ಪಣೆಯ ಮೇರೆಗೆ, ನೇಮಿ ಎಂಬಾತ ಸುತ್ತಮುತ್ತಲಿನ ಪಾಳೆಯಗಾರರನ್ನು ಕೂಡಿಸಿಕೊಂಡು ಕುಮ್ಮಟದುರ್ಗವನ್ನು ಮುತ್ತಿದ. ಕಡುಗಲಿಯಾದ ಕುಮಾರರಾಮನೂ ಆತನ ಸಹೋದರ ಸಮಾನನಾದ ಕಾಟಣ್ಣನ್ನೂ ವೀರಾವೇಶದಿಂದ ಹೋರಾಡಿ ಮುಸಲ್ಮಾನರನ್ನು ಹಿಂದಟ್ಟಿದರು. ಆಶಾಭಂಗಕ್ಕೊಳಗಾದ ಸುಲ್ತಾನ ಸುಸಮಯವನ್ನು ಎದುರು ನೋಡುತ್ತಿದ್ದ. ಈ ಮಧ್ಯೆ ಕುಮಾರರಾಮನ ರೂಪಿಗೆ ಮರುಳಾದ ಆತನ ಚಿಕ್ಕಮ್ಮ ರತ್ನಾಜಿಗೆ ಆತನಲ್ಲಿ ವ್ಯಾಮೋಹವಂಕುರಿಸಿತು. ಒಮ್ಮೆ ಕಂಪಿಲ ಬೇಟೆಗಾಗಿ ಅರಣ್ಯಕ್ಕೆ ತೆರಳಿದ್ದಾಗ ಊರಿನಲ್ಲಿಯೇ ಇದ್ದ ಕುಮಾರರಾಮ ತನ್ನ ಸಂಗಡಿಗರೊಂದಿಗೆ ಮುತ್ತಿನ ಚೆಂಡಿನ ಲಗ್ಗೆಯಾಟವನ್ನು ಆಡುತ್ತಿರುವಾಗ ಚೆಂಡು ಕೈ ಮೀರಿ ರತ್ನಾಜಿಗೆ ಅರಮನೆಯಲ್ಲಿ ಬಿತ್ತು. ಅದನ್ನು ಕೇಳಿ ಪಡೆಯಲು ಹೋಗಿದ್ದ ಕುಮಾರರಾಮನನ್ನು ಆಕೆ ನಾನಾ ಬಗೆಯಾಗಿ ಮರುಳುಮಾಡಿ ಒಲಿಸಿಕೊಳ್ಳಲು ಪ್ರಯತ್ನಿಸಿದಳು. ಕುಮಾರರಾಮ ಕಂಗೆಟ್ಟು ಆಕೆ ತನಗೆ ಮಾತೃಸಮಾನಳೆಂದೂ ಹಾಗೆ ವರ್ತಿಸುವುದು ಉಚಿತವಲ್ಲವೆಂದೂ ಎಚ್ಚರಿಸಿದ. ಆದರೆ ಕಾಮಪರವಶಳಾಗಿದ್ದ ರತ್ನಾಜಿಗೆ ಆತನ ಹಿತವಚನಗಳು ಹಿಡಿಸಲಿಲ್ಲ. ಹೊರ ಹೊರಟ್ಟಿದ್ದ ಆತನನ್ನು ಅಡ್ಡಗಟ್ಟಿ, ಮೈಮೇಲೆ ಬಿದ್ದು ಬಲತ್ಕಾರಗೊಳಿಸಲು ಮುಂದುವರಿದಳು. ಪರದಾರ ಸೋದರನಾದ ಕುಮಾರರಾಮ ಚಿಕ್ಕಮ್ಮನನ್ನು ಅಲ್ಲಗಳೆದು ಆಕೆಯನ್ನು ಅತ್ತ ನೂಕಿ, ಕೈಕೊಡವಿಕೊಂಡು ಹೊರಟುಬಂದ. ರತ್ನಾಜಿ ಈರ್ಷೆಯಿಂದ ಹೆಮ್ಮಾರಿಯಾಗಿ ಕುಮಾರರಾಮನ ಮೇಲೆ ಸೇಡು ತೀರಿಸಿಕೊಳ್ಳಲು ಬಗೆದಳು: ಕಂಪಿಲ ಬೇಟೆ ಮುಗಿಸಿ ಹಿಂತಿರುಗಿ ಬಂದ ಕೂಡಲೆ ಕುಮಾರರಾಮನ ಮೇಲೆ ಸಲ್ಲದ ಆರೋಪವನ್ನು ಹೊರಿಸಿ ದೂರು ಹೇಳಿದಳು. ಮೋಹಗ್ರಸ್ತನಾಗಿದ್ದ ಕಂಪಿಲ ನಿಜವಾದ ಸಂಗತಿಯನ್ನು ಕೇಳಿ ತಿಳಿಯದೆ ತನ್ನ ಆಪ್ತಸಚಿವನಾಗಿದ್ದ ಬೈಚಪ್ಪನನ್ನು ಬರಮಾಡಿಕೊಂಡು ಕುಮಾರರಾಮನ ಅನುಚಿತ ವರ್ತನೆಯನ್ನು ಖಂಡಿಸಿ ಕೂಡಲೆ ಆತನ ತಲೆಯನ್ನು ಕಡಿದು ತರುವಂತೆ ಆಜ್ಞಾಪಿಸಿದ. ವಿಚಾರಪರನಾದ ಬೈಚಪ್ಪ ಎಷ್ಟು ಬುದ್ಧಿವಾದ ಹೇಳಿದರೂ ರಾಜ ಕೇಳಲಿಲ್ಲ. ಚತುರನಾದ ಬೈಚಪ್ಪ ನಿರುಪಾಯನಾಗಿ ಕುಮಾರರಾಮನ ಬಳಿಗೆ ಬಂದು ಎಲ್ಲ ಸಂಗತಿಗಳನ್ನೂ ವಿವರವಾಗಿ ಕೇಳಿ ತಿಳಿದುಕೊಂಡು, ರಾಜಕುಮಾರನನ್ನು ಕೊಲ್ಲಲು ಮನಸ್ಸು ಬಾರದೆ, ಆತನನ್ನೂ ಆತನ ಮಿತ್ರರನ್ನೂ ನೆಲಮಾಳಿಗೆಯಲ್ಲಿ ಬಚ್ಚಿಟ್ಟು, ಬೇರೊಬ್ಬನ ರುಂಡವನ್ನು ತೆಗೆದುಕೊಂಡು ಹೋಗಿ ರಾಜನಿಗೆ ಒಪ್ಪಿಸಿದ. ರುಂಡವನ್ನು ಕಂಡ ರತ್ನಾಜಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಅತ್ತ ಕಂಪಿಲನ ಮೇಲೆ ದಂಡೆತ್ತಿ ಬರಲು ಸಮಯ ಕಾಯುತ್ತಿದ್ದ ಸುಲ್ತಾನನಿಗೆ ಕುಮಾರರಾಮನ ಮರಣವೃತ್ತಾಂತ ಕೇಳಿ ಕಿವಿ ನೆಟ್ಟಗಾಯಿತು. ಎರಡನೆಯ ಬಾರಿ ಕುಮ್ಮಟದುರ್ಗಕ್ಕೆ ಮುತ್ತಿಗೆ ಹಾಕಲು ನೇಮಿಯನ್ನು ಕಳುಹಿಸಿಕೊಟ್ಟ. ಮುಸಲ್ಮಾನರು ದಂಡೆತ್ತಿಬರುತ್ತಿರುವ ಸುದ್ದಿಯನ್ನು ಗಡಿಕಾಯುತ್ತಿದ್ದ ಚಾರರು ಕಂಪಿಲನಿಗೆ ತಿಳಿಸಿದ ಒಡನೆಯೇ ವೃದ್ಧರಾಜ ಕಂಗೆಟ್ಟ. ಕುಮಾರರಾಮನೂ ಸಂಗಡಿಗರೂ ಸತ್ತುಹೋಗಿರುವರೆಂದು ಭಾವಿಸಿದ್ದ ಆತನಿಗೆ ಮುಂದೆ ಗತಿಯೇನೆಂದು ತೋಚದಂತಾಯಿತು. ಬೈಚಪ್ಪನನ್ನು ಕರೆಸಿ ಮಂತ್ರಾಲೋಚನೆ ಮಾಡಿದ. ಇದೇ ಸಮಯವೆಂದರಿತ ಸಚಿವ ಅಕಾರ್ಯಕ್ಕಾಗಿ ಒಡೆಯನನ್ನು ಪರಿಪರಿಯಾಗಿ ಹಂಗಿಸಿದ. ಕಡೆಗೆ ನಿರ್ವಾಹವಿಲ್ಲದೆ ತಾನು ಬೇರೊಬ್ಬ ಕಲಿಯನ್ನು ಕರೆದುಕೊಂಡು ಬಂದು ಶತ್ರುಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತ. ಅನಂತರ ಕುಮಾರರಾಮನನ್ನು ಅಡಗಿಸಿಟ್ಟಿದ್ದ ನೆಲಮಾಳಿಗೆಯ ಬಳಿಗೆ ಬಂದು ರಾಜ್ಯಕ್ಕೆ ಒದಗಿರುವ ಆಪತ್ತನ್ನು ತಿಳಿಸಿದ. ಬೈಚಪ್ಪನ ಹಿತೋಕ್ತಿಗಳನ್ನು ಅಲ್ಲಗಳೆಯಲಾರದೆ ಕುಮಾರರಾಮ ವೇಷ ಮರೆಸಿಕೊಂಡು, ತನ್ನ ನೆಚ್ಚಿನ ಕುದುರೆಯಾದ ಬೊಲ್ಲನನ್ನು ಏರಿ ರಣರಂಗದತ್ತ ಧಾವಿಸಿದನಲ್ಲದೆ ಶತ್ರುಸೈನಿಕರೊಂದಿಗೆ ವೀರಾವೇಶದಿಂದ ಕಾದಾಡಿ, ಅವರನ್ನು ಬಡಿದೋಡಿಸಿ ಕುಮ್ಮಟದುರ್ಗಕ್ಕೆ ಪ್ರಾಪ್ತವಾಗಿದ್ದ ಕಂಟಕವನ್ನು ಪರಿಹರಿಸಿದ. ಕುಮಾರರಾಮನ ಚಹರೆಯನ್ನು ಗುರುತಿಸಿದ ಮುಸಲ್ಮಾನ ಸರದಾರರಿಗಾದರೋ ಆತ ಸತ್ತಿರುವುದು ಸುಳ್ಳಿರಬೇಕು ಎನ್ನಿಸಿತು. ಯುದ್ಧದಲ್ಲಿ ಜಯವಾದ ಬಳಿಕ ಬೈಚಪ್ಪ ವೇಷ ಮೆರೆಸಿಕೊಂಡಿದ್ದ ಹೊಸ ರಾಹುತನನ್ನು ಕಂಪಿಲನ ಬಳಿಗೆ ಕರೆತಂದ. ಹೊಸ ರಾಹುತ ತಲೆಯ ಮೇಲಿನ ಟಾಳಿಯನ್ನು ತೆಗೆಯುವುದೇ ತಡ ಆತ ಕುಮಾರರಾಮನೆಂದು ಕಂಪಿಲನಿಗೆ ಗೊತ್ತಾಗಿ ಹಿರಿಹಿರಿ ಹಿಗ್ಗಿದ: ಸಮಯೋಚಿತವಾದ ಚಾತುರ್ಯಕ್ಕೆ ಬೈಚಪ್ಪನನ್ನು ಮನವಾರೆ ಶ್ಲಾಘಿಸಿದ. ರತ್ನಾಜಿಗಾದರೋ ಈ ವೃತ್ತಾಂತವನ್ನೆಲ್ಲ ಕೇಳಿದ ಕೂಡಲೆ ತನ್ನ ಕಪಟವೆಲ್ಲ ಬಯಲಾಗುವುದೆಂದು ಹೆದರಿಕೆಯುಂಟಾಗಿ ನೇಣುಹಾಕಿಕೊಂಡು ಸತ್ತಳು. ಪರಾಭವ ಹೊಂದಿದ ನೇಮಿ ದೆಹಲಿಗೆ ಹಿಂತಿರುಗಲು ಅವನನ್ನು ಕಂಡು ಸುಲ್ತಾನನಿಗೆ ಕಾವೇರಿತು. ಎಲ್ಲರನ್ನೂ ಬಾಯಿಗೆ ಬಂದಂತೆ ಹೀಯಾಳಿಸಿದ್ದಲ್ಲದೆ, ಕಂಪಿಲನ ಹೆಸರನ್ನೇ ಅಳಿಸುವುದಾಗಿ ಆತ ಶಪಥ ಮಾಡಿದ.
          ಸುಲ್ತಾನ ತನ್ನ ದಳಪತಿಗಳನ್ನೆಲ್ಲ ಬರಮಾಡಿಕೊಂಡು, ಕಂಪಿಲನ ಅಹಂಕಾರವನ್ನು ಹೇಗೆ ಮುರಿಯಬೇಕೆಂದು ದೀರ್ಘವಾಗಿ ಮಂತ್ರಾಲೋಚನೆ ನಡೆಸಿದ. ಆಗ ಅಲ್ಲಿಯೇ ಇದ್ದ ಮಾತಂಗಿ ಎಂಬಾಕೆ ಮುಂದೆ ಬಂದು ಸಾಕಷ್ಟು ಸೈನ್ಯವನ್ನು ಸಜ್ಜುಗೊಳಿಸಿಕೊಟ್ಟರೆ ತಾನು ಕೂಡಲೆ ಕುಮಾರರಾಮನನ್ನು ಸಂಹರಿಸಿ ಆತನ ತಲೆಯನ್ನು ತಂದುಕೊಡುವುದಾಗಿ ಪ್ರತಿಜ್ಞೆ ಮಾಡಿದಳು. ಅಲ್ಲಿದ್ದ ವೀರಾಧಿವೀರರು ಅವಳ ಮಾತುಗಳನ್ನು ಕೇಳಿ ಆಶ್ಚರ್ಯಚಿಕಿತರಾದರು. ಸುಲ್ತಾನನಾದರೋ ಇದೇನೋ ಸೋಜಿಗವಿರಬೇಕೆಂದು ಎಣಿಸಿ, ಆಕೆಯ ಮಾತಿಗೆ ಸಮ್ಮತಿಸಿ, ಅಪಾರವಾದ ಸೈನ್ಯವನ್ನು ಶೇಖರಿಸಿ ಆಕೆಯ ನೇತೃತ್ವದಲ್ಲಿ ಕಳುಹಿಸಿಕೊಟ್ಟ. ಸುಲ್ತಾನನ ಸೇನ ದಾರಿ ಯುದ್ಧಕ್ಕೂ ಹಾವಳಿ ಮಾಡುತ್ತ ಬಂದು ಕುಮ್ಮಟಕ್ಕೆ ಮುತ್ತಿಗೆ ಹಾಕಿತು. ಇತ್ತ ಕುಮಾರರಾಮನೂ ಯುದ್ಧಸನ್ನದ್ಧನಾದ. ಉಭಯಪಕ್ಷಗಳಿಗೂ ಬಿರುಸಾದ ಕಾಳಗ ನಡೆಯಿತು. ಮೊದಮೊದಲು ಮಹಮ್ಮದೀಯರಿಗೆ ತತ್ತರಿಸುವಂತಾಯಿತು. ಸುಲ್ತಾನನ ಸರದಾರರು ಮಾತಂಗಿಯನ್ನು ಹೀಯಾಳಿಸತೊಡಗಿದರು. ಆಕೆ ಯಾವುದಕ್ಕೂ ಸಗ್ಗದೆ, ಗಂಡುಡುಗೆಯನ್ನು ಧರಿಸಿ ತಾನೇ ರಣರಂಗವನ್ನು ಪ್ರವೇಶಿಸಿ ವೀರಾವೇಶದಿಂದ, ಮೈಮರೆತು ಹೋರಾಡುತ್ತ ಮುನ್ನುಗ್ಗಿದಳು. ಶತ್ರುಸೈನ್ಯದಲ್ಲಿ ದಾರಿಮಾಡಿಕೊಂಡು ಮುಂದುವರಿಯುತ್ತ ಕುಮಾರರಾಮನಿದ್ದಲ್ಲಿಗೆ ಬಂದಳು. ಆ ವ್ಯಕ್ತಿಯ ಕೆಚ್ಚನ್ನು ಕಂಡು ಕುಮಾರರಾಮ ಬೆರಗಾಗಿ ಮುಂದೆ ಬಂದು ಕಾಳಗಕ್ಕೆ ಅಣಿಯಾದ. ಕ್ಷಣಕಾಲ ಇಬ್ಬರಿಗೂ ಬಿರುಸಾದ ಕಾಳಗ ಸಾಗಿತು. ಆವೇಶಗೊಂಡು ಕತ್ತಿಯನ್ನು ಮೇಲಕ್ಕೆತ್ತಿ ಹೊಡೆಯಲು ಹೋದಾಗ ಎದುರಿನಲ್ಲಿರುವ ವ್ಯಕ್ತಿ ಸ್ತ್ರೀಯೆಂದು ಅವನಿಗೆ ವಿದಿತವಾಯಿತು. ತತ್‍ಕ್ಷಣವೇ ಕೈ ಹಿಂದೆ ಸರಿಯಿತಲ್ಲದೆ ಕ್ಷಣಕಾಲ ಆತ ತಟಸ್ಥನಾದ. ಪರಸ್ತ್ರೀಯೊಬ್ಬಳ ಮೇಲೆ ಕತ್ತಿಹಿರಿದು ಯುದ್ಧಕ್ಕೆ ನಿಂತಿದ್ದಕ್ಕಾಗಿ ಆತನ ಮನಸ್ಸು ವ್ಯಾಕುಲಗೊಂಡಿತು. ಅದೇ ಸುಸಮಯವೆಂದು ತಿಳಿದ ಮಾತಂಗಿ ಮುನ್ನುಗ್ಗಿ ಕುಮಾರರಾಮನನ್ನು ಸಂಹರಿಸಿದಳು. ಈ ದುರಂತವನ್ನು ನೋಡಿದ ಬೇಡರ ಪಡೆ ದಿಗ್ಭ್ರಾಂತವಾಗಿ ಚದುರಿತು. ಕಂಪಿಲ ಹತಾಶನಾದ. ಶತ್ರುಸೈನಿಕರು ವಿಜಯೋನ್ಮತ್ತರಾಗಿ ಕೋಟೆಯ ಕಡೆ ನುಗ್ಗಿದರು. ಇತರ ವೀರಾಧಿವೀರರು ಎಷ್ಟು ಅಡ್ಡಗಟ್ಟಿ ಹೋರಾಡಿದರೂ ಸಫಲವಾಗಲಿಲ್ಲ. ಕೋಟೆ ಶತ್ರುಗಳ ವಶವಾಯಿತು. ವೀರಪತ್ನಿಯರು ತಮ್ಮ ಧರ್ಮಕ್ಕೆ ಕಟ್ಟುಬಿದ್ದು ಚಿತಾಪ್ರವೇಶ ಮಾಡಿದರು. ಶತ್ರುರಾಜರಿಗೆಲ್ಲ ಸಿಂಹಸ್ವಪ್ನವಾಗಿದ್ದ ಕುಮ್ಮಟದುರ್ಗ, ಮುಸಲ್ಮಾನರ ದಾಳಿಗೆ ಸಿಕ್ಕಿ ಹೇಳಹೆಸರಿಲ್ಲಂದತಾಗಿ ಹಾಳು ಬೀಡಾಯಿತು. ಮಾತಂಗಿ ಕುಮಾರರಾಮನ ರುಂಡವನ್ನು ಚಾರರ ಮೂಲಕ ದೆಹಲಿಗೆ ಕಳುಹಿಸಿಕೊಟ್ಟಳು. ಅದನ್ನು ಕಂಡು ಸುಲ್ತಾನನಿಗೆ ಪರಮಾನಂದವಾಯಿತು. ಆದರೆ ಆತನ ಮಗಳಾದ ಬಾಬಮ್ಮ ಈ ದಾರುಣ ವೃತ್ತಾಂತವನ್ನು ಕೇಳಿದ ಕೂಡಲೆ ವಿರಹೋದ್ರೇಕದಿಂದ ಹತಾಶಳಾಗಿ ಪ್ರಾಣ ತ್ಯಜಿಸಿದಳು. ಕುಮಾರರಾಮನ ರುಂಡ ದೆಹಲಿಯಲ್ಲಿದ್ದಷ್ಟು ಕಾಲವೂ ಅನೇಕ ಅಪಶಕುನಗಳಾಗತೊಡಗಿದುವು. ಆದ್ದರಿಂದ ಅದನ್ನು ಮತ್ತೆ ಕುಮ್ಮಟಕ್ಕೇ ಕಳುಹಿಸಿಕೊಟ್ಟರು. ಅಂದಿನಿಂದ ಕುಮಾರರಾಮನನ್ನು ಜನ ದೈವಾಂಶ ಪುರುಷನೆಂದು ಭಾವಿಸಿ ಪೂಜಿಸಲು ಆರಂಭಿಸಿದರು. ಇಂದಿಗೂ ಆತ ಪರದಾರ ಸೋದರನೆಂದೂ ಅಪ್ರತಿಮ ಪರಾಕ್ರಮಶಾಲಿಯೆಂದೂ ಜನಮನದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿದ್ದಾನೆ. ಕನ್ನಡ ಕವಿಗಳು ಈ ಮಹಿಮಾಪುರುಷನ ಕಥೆಯನ್ನು ಬಗೆಬಗೆಯಾಗಿ ನಿರೂಪಿಸಿ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ.
           ಚಿತ್ತಾಕರ್ಷಕವಾಗಿರುವ ಈ ಕುಮಾರರಾಯನ ಕಥೆಯಲ್ಲಿ ಹಾಸು ಹೊಕ್ಕಾಗಿರುವ ಒಂದೆರಡು ಐತಿಹಾಸಿಕ ಎಳೆಗಳನ್ನು ಬಿಡಿಸಲು ಇಂದಿನ ಚರಿತ್ರಕಾರರು ಪ್ರಯತ್ನಿಸಿದ್ದಾರೆ. ಇಬ್ನ್ ಬತೂತ, ನ್ಯೂನಿಜ್, ಬಾರ್ನಿ ಫೆರಿಸ್ಟಾ ಮತ್ತು ಇಸಾಮಿ ಮೊದಲಾದವರ ಉಲ್ಲೇಖನಗಳಲ್ಲಿ ಕುಮ್ಮಟದುರ್ಗದ ದುರಂತ ವೃತ್ತಾಂತದ ಕಥೆ ಅಲ್ಪ ಸ್ವಲ್ಪ ತಿಳಿದುಬರುತ್ತದೆ. ಕಂಪಿಲ ಮತ್ತು ಅವನ ತಂದೆ ಮುಮ್ಮಡಿ ಸಿಂಗನ ಹೆಸರುಗಳು ಶಾಸನಗಳಲ್ಲಿ ಉಕ್ತವಾಗಿರುವುವಲ್ಲದೆ, ಇವರಿಗೂ ಹೊಯ್ಸಳ ವೀರಬಲ್ಲಾಳನ ದಂಡನಾಯಕರಿಗೂ ನಡೆದ ಯುದ್ಧದ ಪ್ರಸಂಗಗಳೂ ನಿರೂಪಿತವಾಗಿವೆ. ಕುಮಾರರಾಯನ ಸಾಂಗತ್ಯವನ್ನು ಬರೆದಿರುವ ಪ್ರತಿಯೊಬ್ಬ ಕವಿಯೂ ತನ್ನ ಕಾವ್ಯವನ್ನು ನರಚರಿತ್ರೆಯೆಂದು ಅಲ್ಲಗೆಳೆಯಬಾರದೆಂದೂ ಅದು ಪರದಾರ ಸೋದರನೊಬ್ಬನ ವೀರಕಥಾನಕವೆಂದೂ ಅಲ್ಲಿ ಪ್ರತಿಪಾದಿತವಾಗಿರುವ ಶೌರ್ಯ ಮತ್ತು ಶುಚಿತ್ವಗಳು ಆದರ್ಶಪ್ರಾಯವಾದ ಸದ್ಗುಣಗಳೆಂದೂ ಬಿನ್ನವಿಸಿಕೊಂಡಿರುವುದನ್ನು ಗಮನಿಸಿದರೆ ಕುಮಾರರಾಮ ಕಲ್ಪಿತವ್ಯಕ್ತಿಯಲ್ಲವೆಂಬುದು ದೃಢವಾಗುತ್ತದೆ. ಈ ಮಹಿಮಾಪುರುಷನನ್ನು ಕುರಿತ ಶಾಸನಗಳು ಧಾರವಾಡ ಜಿಲ್ಲೆಯ ಸಂಗೂರು, ಬಳ್ಳಾರಿ ಜಿಲ್ಲೆಯ ರಾಮಘಡ, ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೊದಲಾದ ಎಡೆಗಳಲ್ಲಿ ಲಭಿಸಿವೆ. ರಾಮಘಡದ ಶಾಸನದಲ್ಲಿ ಮುಮ್ಮಡಿ ಸಿಂಗನ ಮಗನಾದ ಕಂಪಿಲರಾಯ ಮತ್ತು ಆತನ ಹೆಂಡತಿ ಹರಿಹರದೇವಿಯರ ಪುತ್ರ ರಾಮನಾಥವೊಡೆಯರು ಎಂಬ ವಂಶಾವಳಿ ಸ್ಟಷ್ಟವಾಗಿ ಕಂಡುಬರುವುದರಿಂದ ಈತನೊಬ್ಬ ಐತಿಹಾಸಿಕ ವ್ಯಕ್ತಿಯಾಗಿರಬೇಕೆಂದು ಇತಿಹಾಸಕಾರರು ಭಾವಿಸಿರುತ್ತಾರೆ. ಕಾವ್ಯಗಳಲ್ಲಿ ಉಕ್ತವಾಗಿರುವ ಬಾದೂರನ ಪಲಾಯನಕ್ಕೂ ಐತಿಹಾಸಿಕ ಆಧಾರ ದೊರೆಯುತ್ತದೆ. ಮಹಮ್ಮದ್ ಬಿನ್ ತೊಗಲಕ್ ಪಟ್ಟಕ್ಕೆ ಬಂದ ಕೂಡಲೆ, ಪ್ರಾಂತ್ಯಾಧಿಕಾರಿಯಾಗಿದ್ದ ಆತನ ಬಂಧುವಾದ ಬಹಾಉದೀನ್ ಘುಸ್ಟಾಫ ಎಂಬಾತ ಯಾವುದೋ ವೈಮನಸ್ಯದಿಂದ ರಾಜ್ಯಭ್ರಷ್ಟನಾಗಿ ಹಿಂದೂ ರಾಜನಾದ ಕಂಪಿಲನ ಆಶ್ರಯವನ್ನು ಪಡೆದನೆಂದೂ ಸುಲ್ತಾನನ ಸೇನ ಬೆನ್ನಟ್ಟಿ ಬರಲು ಹಿಂದೂ ರಾಜ ಆತನನ್ನು ಬೇರೊಬ್ಬ ರಾಜನ ಬಳಿಗೆ ಕಳುಹಿಸಿದನೆಂದೂ ಅಲ್ಲಿಯೂ ಸೈನಿಕರು ಹಿಂಬಾಲಿಸಲು, ಆ ದೊರೆ ಬಹಾಉದೀನನ್ನು ಮುಸಲ್ಮಾನರಿಗೆ ಒಪ್ಪಿಸಲು ಅವರು ಆತನನ್ನು ಚಿತ್ರಹಿಂಸೆಗೆ ಗುರಿಮಾಡಿಕೊಂದರೆಂದೂ ಮಹಮ್ಮದೀಯ ಇತಿಹಾಸಕಾರರು ವಿವರಿಸಿರುತ್ತಾರೆ. ಈ ಘಟನೆಯೇ ಇಲ್ಲಿ ಸಂದರ್ಭೋಚಿತವಾಗಿ ಮಾರ್ಪಟ್ಟಿರುವಂತಿದೆ. ಕಂಪಿಲ ಹತನಾದ ಬಳಿಕ ಅವನ ಆಸ್ಥಾನದ ಕೆಲವರು ಕೈಸೆರೆಯಾದರೆಂದೂ ಅವರಲ್ಲಿ ಜೀವಸಹಿತ ಉಳಿದ ಒಬ್ಬಿಬ್ಬರೇ ಮುಂದೆ ವಿಜಯನಗರದ ಸ್ಥಾಪನೆಗೆ ಕಾರಣರಾದರೆಂದೂ ವಾದವಿದೆ. ಒಟ್ಟಿನಲ್ಲಿ, ಐತಿಹಾಸಿಕವಾಗಿದ್ದ ಕೆಲವು ಸಂಗತಿಗಳು ಹೇಗೆ ಕಾಲಕ್ರಮದಲ್ಲಿ ಐತಿಹ್ಯವಾಗಿ ಪರಿಣಮಿಸಿವೆಯೆಂಬುದನ್ನು ವ್ಯಾಸಂಗಮಾಡಲು ಕುಮಾರರಾಮನ ಕಥೆ ಉತ್ತಮ ಸಾಧನವಾಗಿದೆ. ನಂಜುಂಡ ನಿರೂಪಣೆಯಲ್ಲಿ ವಿದಿತವಾಗುವಂತೆ ಕುಮಾರರಾಮನ ವೃತ್ತಾಂತ ಇಂದಿನವರಿಗೆ ಪುಣ್ಯಕಥೆ, ಪೂರ್ವಚರಿತ್ರ ಮತ್ತು ಪುರಾಣವೆನ್ನಿಸಿ ಪ್ರಶಸ್ತಿಪಡೆದಿರುತ್ತದೆ.
           ಕುಮಾರರಾಮನ ಕಥೆ ಕನ್ನಡ ನಾಡಿನಲ್ಲಿ ಎಷ್ಟು ಜನಪ್ರಿಯವಾಗಿದೆ ಎನ್ನಲಿಕ್ಕೆ ಇಂದಿ ಗೂ ಮೇಲಿಂದ ಮೇಲೆ ಬರುತ್ತಿರುವ ಗ್ರಂಥಗಳೇ ಸಾಕ್ಷಿ. ಹುಲ್ಲೂರು ಶ್ರೀನಿವಾಸ ಜೋಯಿಸರ ಗಂಡುಗಲಿ ಕುಮಾರರಾಮ, ಆಲೂರು ವೆಂಕಟರಾಯರ ರಣರಂಗಸಿಂಗನಾದ ಕುಮಾರರಾಮ, ಹುಯಿಲಗೋಳ ನಾರಾಯಣರಾಯರ ಕುಮಾರರಾಮನನ್ನು ಕುರಿತ ನಾಟಕ, ವಸುದೇವ ಭೂಪಾಲಂ ಅವರ ಕುಮ್ಮಟವಲ್ಲಭ, ವರದರಾಜ ಹುಯಿಲಗೋಳರ ರತ್ನಾಜಿ, ಎಂ. ಎಚ್. ರಾಮಶರ್ಮರ ರಣಧೀರ ರಾಮನಾಥ, ದೇಸಾಯಿ ಪಾಂಡುರಂಗರಾಯರ ಕಂಪಿಲ ಕುಮಾರ ಎಂಬ ಸಣ್ಣ ಕಥೆ, ದೇಜಗೌ ಅವರ ಕಡುಗಲಿ ಕುಮಾರರಾಮ ಹಾಗೂ ನಂಜುಂಡಕವಿ. ಜಿ. ವರದರಾಜರಾಯರ ಕುಮ್ಮಟಕೇಸರಿ ಹಾಗೂ ಕುಮಾರರಾಮನ ಸಾಂಗತ್ಯಗಳು ಎಂಬ ಪ್ರೌಢ ನಿಬಂಧ-ಈ ಸಾಹಿತ್ಯಸಂಪತ್ತನ್ನು ನೋಡಬಹುದು.
  






***************