ನನ್ನ ಪುಟಗಳು

27 ಅಕ್ಟೋಬರ್ 2017

8ನೇ ತರಗತಿ ಪದ್ಯ-ರಾಮಧಾನ್ಯ ಚರಿತೆ

ಕನಕದಾಸರ ಪರಿಚಯ
ಜನನ: ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ೧೫೦೮ ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಸಾಧನೆ: ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. 
ಇವರ ಕೀರ್ತನೆಗಳ ಅಂಕಿತ: ಕಾಗಿನೆಲೆಯ ಆದಿಕೇಶವರಾಯ

       ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).
   ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.
     ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.
    ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.
      ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.
      ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.
        ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.
ಸಾಹಿತ್ಯ ರಚನೆ
        ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. 
ಕನಕದಾಸರ ಐದು ಮುಖ್ಯ ಕಾವ್ಯಕೃತಿಗಳು:
 • ಮೋಹನತರಂಗಿಣಿ
 • ನಳಚರಿತ್ರೆ
 • ರಾಮಧಾನ್ಯ ಚರಿತೆ
 • ಹರಿಭಕ್ತಿಸಾರ
 • ಮೋಹನತರಂಗಿಣಿ 
 • ನೃಸಿಂಹಸ್ತವ (ಉಪಲಬ್ದವಿಲ್ಲ)************
ರಾಮಧಾನ್ಯ ಚರಿತೆ ಪದ್ಯಭಾಗದ ಪದಶಃ ಅರ್ಥ ಮತ್ತು ಭಾವಾರ್ಥ

ಕೆಲರು ಗೋದಿಯ ಸಾಮೆಯನು ಕೆಲ
ಕೆಲರು ನವಣೆಯ ಕಂಬು ಜೋಳವ
ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ
ಕೆಲರು ನರೆದಲೆಗನನು ಪತಿಕರಿ
ಸಲದ ನೋಡಿದ ನೃಪತಿಯದರೊಳು
ಹಲವು ಮತವೇಕೊಂದನೇ ಪೇಳೆನಲು ಗೌತಮನು.    || ||

ಪದವಿಭಾಗ ಮತ್ತು ಪದಶಃ ಅರ್ಥ:-  ಕೆಲರು(ಕೆಲವರು) ಗೋದಿಯ(ಗೋಧಿಯನ್ನು) ಸಾಮೆಯನು ಕೆಲ ಕೆಲರು ನವಣೆಯ ಕಂಬು ಜೋಳವ ಕೆಲವು ಹಾರಕ (ಶ್ರೇಷ್ಠ) + ಎಂದು ಕೆಲವರು ನೆಲ್ಲನು + ಅತಿಶಯವ (ಶ್ರೇಷ್ಠ/ಉತ್ಕೃಷ್ಠ) ಕೆಲವರು ನರೆದಲಗನನು(ರಾಗಿಯನ್ನು) ಪತಿಕರಿಸಲು (ಅಂಗೀಕರಿಸಲು/ಒಪ್ಪಲು) + ಅದ ನೋಡಿದ ನೃಪತಿಯು(ರಾಜನು) + ಅದರೊಳು (ಅದರಲ್ಲಿ) ಹಲವು ಮತವು + ಏಕೆ + ಒಂದನೇ ಪೇಳು(ಹೇಳು) + ಎನಲು(ಎನ್ನಲು) ಗೌತಮನು.
ಭಾವಾರ್ಥ:- ಕೆಲವರು ಗೋದಿಯನ್ನು, ಕೆಲವರು ಸಾಮೆಯನ್ನು, ಕೆಲವರು ನವಣೆಯನ್ನು, ಕೆಲವರು ಕಂಬು, ಜೋಳವನ್ನು ಉತ್ತಮವೆಂದು ಹೇಳಿದರೆ ಕೆಲವರು ಭತ್ತವನ್ನು ಶ್ರೇಷ್ಠವೆಂದರೆ ಕೆಲವರು ರಾಗಿಯನ್ನು ಶ್ರೇಷ್ಠವೆಂದು ಹೇಳುವುದನ್ನು ನೋಡಿದ ಮಹಾರಾಜನು(ರಾಮನು) “ಅವುಗಳ ಶ್ರೇಷ್ಠತೆಯ ಬಗ್ಗೆ ಹಲವು ಅಭಿಪ್ರಾಯಗಳೇಕೆ? ಯಾವುದಾದರು ಒಂದನ್ನು ಹೇಳಿ” ಎಂದಾಗ ಗೌತಮನು ಹೀಗೆ ಹೇಳುತ್ತಾನೆ.....

ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ     || ||

ಪದವಿಭಾಗ ಮತ್ತು ಪದಶಃ ಅರ್ಥ:-  ದಾಶರಥಿ ಚಿತ್ತೈಸು(ಮನಸ್ಸುಮಾಡು) ನಮ್ಮಯ ದೇಶಕೆ + ಅತಿಶಯ(ಶ್ರೇಷ್ಠ) ನರೆದಲಗನೇ(ರಾಗಿಯೇ) ವಾಸಿ (ಶಕ್ತಿ/ಸತ್ವ) + ಉಳ್ಳವನು + ಈತ ಮಿಕ್ಕಿನ (ಉಳಿದ) ಧಾನ್ಯವು + ಏಕೆ + ಎನಲು ಲೇಸನು(ಒಳ್ಳೆಯದನ್ನು) + ಆಡಿದೆ ಮುನಿಪ ಗೌತಮ ದೋಷರಹಿತನು ಪಕ್ಷಪಾತವನು + ಈಸು(ಇಷ್ಟ) ಪರಿಯಲಿ(ರೀತಿಯಲ್ಲಿ) ಮಾಡುವರೆ ಶಿವ + ಎಂದನು ಆ ವ್ರೀಹಿಗ(ಭತ್ತ).
ಭಾವಾರ್ಥ:- “ದಶರಥ ಪುತ್ರನಾದ ಶ್ರೀರಾಮನೇ ಕೇಳು. ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ ರಾಗಿಯೇ ಸರಿ. ಇವನು ಶಕ್ತಿ(ಸತ್ವ) ಹೊಂದಿರುವವನು. ಉಳಿದ ಧಾನ್ಯಗಳೇಕೆ?” ಎಂಬ ಮಾತನ್ನು ಕೇಳಿದ ವ್ರಿಹಿಗ(ಭತ್ತ) “ಇದೇನು ಗೌತಮ ಮುನಿಯೇ ನೀನು ಒಳ್ಳೆಯ ಮಾತನಾಡಿದೆಯಲ್ಲ ! ದೋಷರಹಿತನಾದ ನೀನು ಈ ರೀತಿಯಲ್ಲಿ ಪಕ್ಷಪಾತ ಮಾಡಬಹುದೇ? ಶಿವ ಶಿವಾ! ಎಂದನು.”
ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯಿರೆ ಎಲ್ಲರನು ನೀ
ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ
ನೆಲ್ಲು ನಾನಿರೆ ಗೋದಿ ಮೊದಲಾ
ದೆಲ್ಲ ಧಾನ್ಯಗಳಿರಲು ಇದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ          || ||

ಪದವಿಭಾಗ ಮತ್ತು ಪದಶಃ ಅರ್ಥ:- ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರಿ ಅರಿಯಿರೆ(ತಿಳಿದಿರುವಿರೆ) ಎಲ್ಲರನು ನೀವು + ಇಲ್ಲಿ ನುಡಿವ ಉಪೇಕ್ಷೆ(ಕಡೆಗಣನೆ) + ಉಂಟೇ ಸಾಕು + ಅದಂತಿರಲಿ (ಅದು ಹಾಗಿರಲಿ) ನೆಲ್ಲು (ಭತ್ತ) ನಾನು + ಇರೆ ಗೋದಿ ಮೊದಲಾದ + ಎಲ್ಲ ಧಾನ್ಯಗಳು + ಇರಲು ಇದರಲಿ ಬಲ್ಲಿದನು (ಶ್ರೀಮಂತ) ನರೆದಲಗನು (ರಾಗಿಯು) + ಎಂಬುದು + ಇದು + ಆವ ಮತ (ನ್ಯಾಯ) + ಎಂದ.
ಭಾವಾರ್ಥ:- ಮುಂದುವರೆದು ಮಾತನಾಡುತ್ತಾ ಭತ್ತ ಗೌತಮ ಮುನಿಗೆ ಹೀಗೆ ಹೇಳುತ್ತದೆ: “ಎಲ್ಲಾ ಧರ್ಮಗಳ ಸಾರ ನಿಮಗೆ ತಿಳಿದಿದೆ. ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ? ಹೀಗಿದ್ದೂ ಇಲ್ಲಿ ಈ ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ? ಸಾಕು. ಅದು ಹಾಗಿರಲಿ, ಭತ್ತ ನಾನಿರುವಾಗ; ಗೋದಿ ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ(ಶ್ರೇಷ್ಠ/ಬಲ್ಲಿದ) ಎಂದು ಹೇಳುವುದು ಇದು ಯಾವ ನ್ಯಾಯ? ಎಂದಿತು.

ಏನೆಲವೊ ನರೆದಲಗ ನೀನು ಸ
ಮಾನನೇ ಎನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀ ಪತಿ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ       || ||

ಪದವಿಭಾಗ ಮತ್ತು ಪದಶಃ ಅರ್ಥ:- ಏನು + ಎಲವೊ ನರೆದಲಗ(ರಾಗಿ) ನೀನು ಸಮಾನನೇ ಎನಗೆ + ಇಲ್ಲಿ ನಮ್ಮನು ದಾನವಾಂತಕ (ವಿಷ್ಣು) ಬಲ್ಲನು + ಇಬ್ಬರ ಹೆಚ್ಚು ಕುಂದುಗಳ(ಕಡಿಮೆ/ಕೊರತೆಗಳು) ಜಾನಕೀ ಪತಿ ಸನಿಹದಲಿ (ಹತ್ತಿರದಲ್ಲಿ) ಕುಲಹೀನ ನೀನು ಪ್ರತಿಷ್ಠ (ಅಹಂಕಾರಿ) ಸುಡು ಮತಿಹೀನ (ಬುದ್ಧಿಗೇಡಿ) ನೀನು + ಎಂದು + ಎನುತ ಖತಿಯಲಿ (ಕೋಪದಿಂದ) ಬೈದು ಭಂಗಿಸಿದ (ಜರೆದನು).
ಭಾವಾರ್ಥ:- ನಂತರ ರಾಗಿಯನ್ನು ಕುರಿತು ವ್ರೀಹಿಗನು(ಭತ್ತ) ಈ ರೀತಿ ಹೇಳುತ್ತಾನೆ: “ಎಲವೋ ನರೆದಲಗ, ಇಲ್ಲಿ ನೀನು ನನಗೆ ಸಮಾನನೇ? ದಾನವಾಂತಕನಾದ ಭಗವಂತನೇ ನಮ್ಮಿಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದನ್ನು. ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು ಕುಲಹೀನ, ಅಹಂಕಾರಿ, ಬುದ್ಧಿಗೇಡಿಯಾದ ಹೀನ.” ಎಂದು ಕೋಪದಿಂದ ಬೈದು ಜರೆದನು.

ಕ್ಷಿತಿಯಮರರುಪನಯನದಲಿ ಸು
ವ್ರತ ಸುಭೋಜನ ಪರಮ ಮಂತ್ರಾ
ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ
ಕ್ರತುಗಳೆಡೆಯೊಳಗರಮನೆಯಲಿ
ಪ್ರತಿದಿನವು ರಂಜಿಸುತ ದೇವರಿ
ಗತಿಶಯದ ನೈವೇದ್ಯ ತಾನಿಹೆನೆಂದನಾ ವ್ರಿಹಿಗ          || ||

ಪದವಿಭಾಗ ಮತ್ತು ಪದಶಃ ಅರ್ಥ:- ಕ್ಷಿತಿಯ (ಭೂಮಿಯ) + ಅಮರರ (ದೇವತೆಗಳ) [ಕ್ಷಿತಿಯಮರರ= ಬ್ರಾಹ್ಮಣರ] + ಉಪನಯನದಲಿ ಸುವ್ರತ (ಒಳ್ಳೆಯ ವ್ರತ) ಸುಭೋಜನ (ಒಳ್ಳೆಯ ಊಟ) ಪರಮ (ಶ್ರೇಷ್ಠ) ಮಂತ್ರಾಕ್ಷತೆಗಳಲಿ ಶುಭ ಶೋಭನದಲಿ (ಸಮಾರಂಭಗಳಲ್ಲಿ) + ಆರತಿಗೆ ಹಿರಿಯರಲಿ ಕ್ರತುಗಳ + ಎಡೆಯ + ಒಳಗೆ + ಅರಮನೆಯಲಿ ಪ್ರತಿ ದಿನವು ರಂಜಿಸುತ ದೇವರಿಗೆ + ಅತಿಶಯದ (ಮಿಗಿಲು/ಶ್ರೇಷ್ಠ) ನೈವೇದ್ಯ ತಾನು + ಇಹೆನು + ಎಂದನು + ಆ ವ್ರಿಹಿಗ.
ಭಾವಾರ್ಥ:- “ಬ್ರಾಹ್ಮಣರ(ಕ್ಷಿತಿಯ=ಭೂಮಿಯ; ಅಮರರು=ದೇವತೆಗಳು) ಉಪನಯನದಲ್ಲಿ, ವ್ರತಾಚರಣೆಯಲ್ಲಿ, ಒಳ್ಳೆಯ ಭೋಜನದಲ್ಲಿ, ಶ್ರೇಷ್ಠವಾದ ಮಂತ್ರಾಕ್ಷತೆಯಲ್ಲಿ, ಶುಭ ಸಮಾರಂಭಗಳಲ್ಲಿ, ಆರತಿಗೆ ಹಿರಿಯರಲ್ಲಿ, ಯಜ್ಞಯಾಗಾದಿಗಳಲ್ಲಿ(ಕ್ರತು), ಅರಮನೆಯಲ್ಲಿ – ಹೀಗೆ ಪ್ರತಿದಿನವು ಎಲ್ಲೆಂದರಲ್ಲಿ ರಂಜಿಸುತ್ತ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ತಾನಿರುವೆನು” ಎಂದು ವ್ರಿಹಿಗನು(ಭತ್ತ) ತನ್ನ ಶ್ರೇಷ್ಠತೆಯನ್ನು ಹೇಳಿಕೊಂಡನು.

ಸತ್ಯಹೀನನು ಬಡವರನು ಕ
ಣ್ಣೆತ್ತಿನೋಡೆ ಧನಾಢ್ಯರನು ಬೆಂ
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು
ಹೆತ್ತ ಬಾಣಂತಿಯರು ರೋಗಿಗೆ
ಪತ್ಯ ನೀನಹೆ ಹೆಣದ ಬಾಯಿಗೆ
ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ   || ||

ಪದವಿಭಾಗ ಮತ್ತು ಪದಶಃ ಅರ್ಥ:- ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆ ಧನಾಡ್ಯರನು(ಧನವಂತರನ್ನು) ಬೆಂಬತ್ತಿ (ಹಿಂಬಾಲಿಸಿ) ನಡೆವ ಅಪೇಕ್ಷೆ ನಿನ್ನದು ಹೇಳಲು + ಏನು + ಅದನು ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನು + ಇಹೆ (ಇರುವೆ) ಹೆಣದ ಬಾಯಿಗೆ ತುತ್ತು ನೀನು + ಇಹೆ (ಇರುವೆ) ನಿನ್ನ ಜನ್ಮ ನಿರರ್ಥಕರವು + ಎಂದ.
ಭಾವಾರ್ಥ:- ವ್ರಿಹಿಗನ(ಭತ್ತದ) ಮಾತನ್ನು ಕೇಳಿದ ರಾಗಿ ಸುಮ್ಮನಿರದೆ ಅದಕ್ಕೆ ಹೀಗೆ ಪ್ರತ್ಯುತ್ತರ ನೀಡುತ್ತದೆ: “ನೀನು ಸತ್ಯಹೀನನಾಗಿರುವೆ, ಬಡವರನ್ನು ಕಣ್ಣೆತ್ತಿ ನೋಡುವುದಿಲ್ಲ, ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು. ಹೆತ್ತ ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ. ನಿನ್ನ ಜನ್ಮ ವ್ಯರ್ಥವಾದುದು.” ಎಂದು ರಾಗಿ ಭತ್ತವನ್ನು ಜರೆಯಿತು.
           
ಮಳೆದೆಗೆದು ಬೆಳೆಯಡಗಿ ಕ್ಷಾಮದ
ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ
ಎಲವೊ ನೀನೆಲ್ಲಿಹೆಯೊ ನಿನ್ನಯ
ಬಳಗವದು ತಾನೆಲ್ಲಿಹುದು ಈ
ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ  || ||

ಪದವಿಭಾಗ ಮತ್ತು ಪದಶಃ ಅರ್ಥ:- ಮಳೆ + ತೆಗೆದು(ಹೋಗಿ/ಇಲ್ಲದಾಗಿ) ಬೆಳೆಯು + ಅಡಗಿ ಕ್ಷಾಮದ ವಿಲಯ ಕಾಲದೊಳ್(ವಿನಾಶ ಕಾಲದಲ್ಲಿ) + ಅನ್ನ + ಇಲ್ಲದೆ ಅಳಿವ ಪ್ರಾಣಿಗಳ + ಆದರಿಸಿ ಸಲಹುವೆನು ಜಗವು + ಅರಿಯೆ (ತಿಳಿಯಲು) ಎಲವೊ ನೀನು + ಎಲ್ಲಿ + ಇಹೆಯೊ (ಇರುವೆಯೊ) ನಿನ್ನಯ ಬಳಗವದು ತಾನು + ಎಲ್ಲಿ + ಇಹುದು (ಇರುವುದು) ಈ ಹಲವು ಹುಲು(ಹೀನ/ಅಲ್ಪ) ಧಾನ್ಯಗಳು + ಎನಗೆ ಸರಿದೊರೆಯೆ (ಸರಿಸಮಾನವೇ) ಕೇಳು + ಎಂದ.
ಸಾರಾಂಶ:- ರಾಗಿಯು ಮುಂದುವರೆದು ವ್ರಿಹಿಗನನ್ನು ಕುರಿತು ಈ ಜಗತ್ತಿಗೆಲ್ಲ ತಿಳಿದಿರುವಂತೆ; ಮಳೆ ಹೋಗಿ, ಬೆಳೆ ಇಲ್ಲದಂತಾಗಿ, ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ. ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗ ಎಲ್ಲಿರುವುದೋ. ಈ ಹಲವು ಹುಲು ಧಾನ್ಯಗಳು ನನಗೆ ಸರಿಸಮಾನವೇ? ಕೇಳು.” ಎಂದು ಹೇಳುತ್ತದೆ.

ಮಸೆದುದಿತ್ತಂಡಕ್ಕೆ ಮತ್ಸರ
ಪಿಸುಣ ಬಲರತಿ ನಿಷ್ಠುರರು ವಾ
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ
ಹಿಸುಣರಿವದಿರ ಮತ್ಸರವ ಮಾ
ಣಿಸುವ ಹದನೇನೆನುತ ಯೋಚಿಸಿ
ದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ || ||

ಪದವಿಭಾಗ ಮತ್ತು ಪದಶಃ ಅರ್ಥ:- ೧. ಮಸೆದುದು (ತಿಕ್ಕಾಟವಾಯಿತು) + ಇತ್ತಂಡಕ್ಕೆ(ಎರಡು ತಂಡಕ್ಕೆ/ಗುಂಪಿಗೆ) ಮತ್ಸರ ಪಿಸುಣ(ಚಾಡಿಕೋರ) ಬಲರು + ಅತಿ ನಿಷ್ಠುರರು ವಾದಿಸಲು ಕಂಡನು ನೃಪತಿ ಮನದಲಿ ನೋಡಿ ನಸು ನಗುತ ಹಿಸುಣರ್ + ಇವದಿರ (ಇವರ) ಮತ್ಸರವ ಮಾಣಿಸುವ (ಕೊನೆಯಾಗಿಸುವ/ನಾಶಮಾಡುವ) ಹದನ(ರೀತಿ) + ಏನು + ಎನುತ ಯೋಚಿಸಿದ ಸುರ ಮುನಿಪರ(ದೇವತೆಗಳ ಮುನಿ/ಗೌತಮ) ನೋಡೆ ಗೌತಮ ಮುನಿಪನು + ಇಂತು + ಎಂದ.
ಸಾರಾಂಶ:- ಚಾಡಿಕೋರರು, ಬಹಳ ನಿಷ್ಠುರ ಮನೋಭಾವದವರಾಗಿದ್ದ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ತಿಕ್ಕಾಟವಾಯಿತು. ಅದನನ್ನು ನೋಡಿದ ರಾಜನು ನಸುನಗುತ್ತಾ “ಇವರೆಲ್ಲಾ ಪಿಸುಣರು(ಚಾಡಿಕೋರರು). ಇವರೆಲ್ಲರ ಮತ್ಸರವನ್ನು ಕೊನೆಯಾಗಿಸುವುದು ಹೇಗೆ?” ಎಂದು ಯೋಚಿಸುತ್ತಾ ಗೌತಮ ಮುನಿಗಳ ಕಡೆ ನೋಡುತ್ತಾನೆ. ರಾಮನ ಪ್ರಶ್ನಾರ್ಥಕ ನೋಟವನ್ನು ನೋಡಿದ ಗೌತಮ ಮುನಿಯು ಈ ಮುಂದಿನಂತೆ ಹೇಳುತ್ತಾನೆ.

ಅರಸುಗಳು ನಾವೆಲ್ಲ ಭೂಮೀ
ಸುರರುನೆರೆದಿಹ ದಾನವರು ವಾ
ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ
ಕರಸುವೆವು ಹರಿಹರವಿರಂಚಾ
ದ್ಯರನಯೋಧ್ಯೆಗೆ ಅವರ ಗುಣವಾ
ಧರಿಸಿ ಪೇಳ್ವರು ನಯದೊಳೆಂದನುರಾಮ ನಸುನಗುತ            || ||

          ಪದವಿಭಾಗ ಮತ್ತು ಪದಶಃ ಅರ್ಥ :- ಅರಸುಗಳು ನಾವೆಲ್ಲ ಭೂಮೀಸುರರು(ಬ್ರಾಹ್ಮಣರು) ನೆರೆದಿಹ ದಾನವರು (ರಾಕ್ಷಸರು) ವಾನರರು ನಮಗೆ + ಈ ನ್ಯಾಯವನು ಪರಿಹರಿಸಲು(ಬಗೆಹರಿಸಲು) + ಅಳವಲ್ಲ(ಸಾಧ್ಯವಿಲ್ಲ) ಕರಸುವೆವು ಹರಿ(ವಿಷ್ಣು) ಹರ (ಈಶ್ವರ) ವಿರಂಚಿ (ಬ್ರಹ್ಮ) + ಆದ್ಯರನು (ಮೊದಲಾದವರನ್ನು) + ಅಯೋಧ್ಯೆಗೆ ಅವರ ಗುಣವ + ಆಧರಿಸಿ ಪೇಳ್ವರು (ಹೇಳುವರು) ನಯದೊಳ್ (ವಿವೇಕದಿಂದ/ನ್ಯಾಯವಾಗಿ) + ಎಂದನು ರಾಮ ನಸು ನಗುತ.
          ಭಾವಾರ್ಥ: “ನಿಮ್ಮ ನ್ಯಾಯ ತೀರ್ಮಾನ ಮಾಡಲು, ಅರಸರಾದ ನಾವಾಗಲೀ ಭೂಸುರರು ಎನಿಸಿದ ಬ್ರಾಹ್ಮಣರಿಂದಾಗಲೀ ರಾಕ್ಷಸರಿಗಾಗಲೀ ವಾನರರಿಗಾಗಲೀ ಸಾಧ್ಯವಿಲ್ಲ. ಆದ್ದರಿಂದ ಬ್ರಹ್ಮ-ವಿಷ್ಣು-ಮಹೇಶ್ವರರೇ ಮೊದಲಾದವರನ್ನು ಕರೆಸುತ್ತೇವೆ. ಅವರಾದರೆ ಗುಣವನ್ನು ಆಧರಿಸಿ ವಿವೇಕದಿಂದ ನಿಮ್ಮ ನ್ಯಾಯ ತೀರ್ಮಾನ ಮಾಡುತ್ತಾರೆ” ಎಂದು ರಾಮನು ನಸುನಗುತ್ತ ಹೇಳಿದನು.(ವ್ಯಂಗವಾಗಿ)

ಪರಮ ಧಾನ್ಯದೊಳಿಬ್ಬರೇ ಇವ
ರಿರಲಿ ಸೆರೆಯೊಳಗಾರು ತಿಂಗಳು
ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು
ಪುರಕೆ ಗಮನಿಸಿ ನಾವು ನಿಮ್ಮನು
ಕರೆಸುವೆವು ಕೇಳೆನುತಯೋಧ್ಯಾ
ಪುರಿಗೆ ಪಯಣವ ಮಾಡಹೇಳಿದನಾವಿಭೀಷಣಗೆ          || ೧೦ ||

ಪದವಿಭಾಗ ಮತ್ತು ಪದಶಃ ಅರ್ಥ :- ಪರಮ(ಶ್ರೇಷ್ಠ) ಧಾನ್ಯದೊಳ್ (ಧಾನ್ಯದಲ್ಲಿ) + ಇಬ್ಬರೇ ಇವರು + ಇರಲಿ ಸೆರೆಯೊಳಗೆ + ಆರು ತಿಂಗಳು ಹಿರಿದು ಕಿರಿದು + ಎಂಬ + ಇವರ ಪೌರುಷವ + ಅರಿಯಬಹುದು + ಇನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳು + ಎನುತ + ಅಯೋಧ್ಯಾ ಪುರಿಗೆ (ಪಟ್ಟಣಕ್ಕೆ) ಪಯಣವ (ಪ್ರಯಾಣವ) ಮಾಡ (ಮಾಡಲು) ಹೇಳಿದನು + ಆ + ವಿಭೀಷಣಗೆ.
ಭಾವಾರ್ಥ: ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ ಹೀಗೆ ತೀರ್ಪು ನೀಡಿದನು. “ಕೇಳಿ, ಶ್ರೇಷ್ಠವಾದ ಧಾನ್ಯಗಳಲ್ಲಿ ಇವರಿಬ್ಬರೇ ಇರಲಿ. ಆರು ತಿಂಗಳು ಸೆರೆಯಲ್ಲಿ ಹಾಕಿದರೆ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು. ಇನ್ನು ನಾವು ಅಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ. ಆ ನಂತರ ನಿಮ್ಮ ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ.” ಎಂದು ಹೇಳಿ ಅಯೋಧ್ಯಾ ಪಟ್ಟಣಕ್ಕೆ ಪ್ರಯಾಣಮಾಡಲು ವಿಭೀಷಣನಿಗೆ ಹೇಳಿದನು.


**********

ಮೋಹನತರಂಗಿಣಿ: ಇದು ೪೨ ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.
ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ 
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು 
ನಳಚರಿತ್ರೆ : ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: 
ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗು
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ

ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ಹರಿಭಕ್ತಿಸಾರ: ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. 
        ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
ಕೀರ್ತನೆಗಳು: ಕನಕದಾಸರು ೩೧೬ ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ. 
        ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು. 'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.
       ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. 
ಕುಲಕುಲವೆನ್ನುತಿಹರು ಕುಲವಾವುದು  ಸತ್ಯ ಸುಖವುಳ್ಳ ಜನರಿಗೆ.
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .
        ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ 
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ 
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ 
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/

ತಾಯಿ ದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/
ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/

* ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು ೧೯೬೦ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ.

***********
ರಾಮಧಾನ್ಯಚರಿತೆ: ಇದು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ ೧೫೬ ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ/ಭತ್ತ (ವ್ರೀಹಿ) ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ(ನರದೆಲಗ) ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. 
 • ನುಡಿಗೆ ಹೇಸದ ಭಂಡ ನಿನ್ನೊಳು
 • ಕೊಡುವರೇ ಮಾರುತ್ತರವ
 • ಕಡುಜಡವಲಾ, ನಿನ್ನೊಡನೆ ಮಾತೇಕೆ?
 • ಹೆಣದ ಬಾಯಿಗೆ ತುತ್ತು ನೀನಹೆ
 • ನಿನ್ನ ಜನ್ಮ ನಿರರ್ಥಕವಲಾ ಎಲವೂ
 • ನೀನೆಲ್ಲಿಹೆಯೋ ನಿನ್ನಯ ಬಳಗವದು..
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.
 ********