ನನ್ನ ಪುಟಗಳು

02 ಮೇ 2017

9th-Kannada-Lesson-3-Dharma-samadrishti)

ಧರ್ಮಸಮದೃಷ್ಟಿ

ಬುಕ್ಕರಾಯನು ವೈಷ್ಣವರ ಕೈಯಲ್ಲಿ ಜೈನರ ಕೈ ಇಟ್ಟು ಧರ್ಮ ಸಮನ್ವಯ ಮಾಡಿದ್ದು
 ಬುಕ್ಕರಾಯನ ಕಾಲದ ಹೊನ್ನು (ಚಿನ್ನದ ನಾಣ್ಯ)


ಧರ್ಮಸಮದೃಷ್ಟಿ- ಬುಕ್ಕರಾಯನ ಶಾಸನ ವಿಮರ್ಶೆ - ಡಾ||ಚಿದಾನಂದ ಮೂರ್ತಿ
click here to Download


       ಬಸದಿಯೊಂದು ಹೂತುಹೋಗಿದ್ದರೆ ಆಶ್ಚರ್ಯವಿಲ್ಲ. ಕಲ್ಯ ಮತ್ತು ಸುತ್ತಮುತ್ತ ಜೈನ ಮಂದಿರಗಳ ದೊಡ್ಡ ಪ್ರಮಾಣದ ವಿನಾಶ ನಡೆಯಿತೆಂಬುದಕ್ಕೆ ಇವು ಪ್ರಬಲ ಸಾಕ್ಷ್ಯಾಧಾರಗಳು.
     ಕಲ್ಯದಲ್ಲಿ ಚಕ್ರತ್ತಾಳ್ವಾರರ ವಿಗ್ರಹವೊಂದಿದ್ದು ಅದು ಈಗ ಮಾಯವಾಗಿದೆ. ಮಾಗಡಿಯಲ್ಲಿ ಶ್ರೀವೈಷ್ಣವರಿಂದ ಆರಾಧನೆಗೊಳ್ಳುತ್ತಿರುವ ರಂಗನಾಥಸ್ವಾಮಿಯ ವಿಗ್ರಹವು ಮೂಲತಃ ಕಲ್ಯದ್ದೆಂದು ಜನ ಹೇಳುತ್ತಾರೆ. ಈಗಲೂ ಮಾಗಡಿಯ ಆ ದೇವರ ರಥೋತ್ಸವದಲ್ಲಿ ದೇವರ ಮೊದಲ ಪ್ರಸಾದವು ಕಲ್ಯದ ಜನರಿಗೆ ಮೀಸಲು. ಇದೆಲ್ಲವೂ ಕಲ್ಯದಲ್ಲಿ ನಡೆದ ಶ್ರೀ ವೈಷ್ಣವ ದೇವಾಲಯದ ನಾಶಕ್ಕೆ ಸಾಕ್ಷ್ಯಾಧಾರ. ಹಳೆಯ ಬೆಳ್ಗೊಳ ಮತ್ತು ಕಲ್ಯ ಎರಡು ಊರುಗಳಲ್ಲಿಯೂ 'ಉಷ್ಟಮರು' ಎಂದು ಕರೆಯುವ ಶ್ರೀ ವೈಷ್ಣವ ಮತದ ಶೂದ್ರ ಅನುಯಾಯಿಗಳಿದ್ದಾರೆ. ಆ ಎರಡು ಊರುಗಳಲ್ಲಿ ಈಗ ಜೈನರು ಇಲ್ಲದಿದ್ದರೂ ಅಲ್ಲಿ ಮೊದಲು ಜೈನರಿದ್ದರೆಂದೂ, 'ಭಕ್ತರ' ಉಪಟಳವನ್ನು ತಾಳಲಾರದೆ ಅವರು ಬೇರೆಡೆಗಳಿಗೆ ವಲಸೆ ಹೋದರೆಂದೂ ಹೇಳಲು ಪ್ರಬಲ ಸೂಚನೆಗಳಿವೆ. ಹಳೆಯ ಬೆಳ್ಗೊಳದ ಜೈನರು ಸಮೀಪದ ಶ್ರವಣಬೆಳ್ಗೊಳಕ್ಕೂ ಕಲ್ಯದ ಜನರು ಸಮೀಪದ ಸಂಕಿಘಟ್ಟಕ್ಕೂ ಹೋಗಿ ನೆಲಸಿರಬೇಕು. ಶ್ರವಣಬೆಳ್ಗೊಳವಂತೂ ಸರಿಯೇ, ಸಂಕಿಘಟ್ಟದಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಜೈನರಿದ್ದು ಅವರು ಅಲ್ಲಿನ ವರ್ಧಮಾನಸ್ವಾಮಿಯನ್ನು ಆರಾಧಿಸುತ್ತಿದ್ದಾರೆ.
          ಜೈನ ವೈಷ್ಣವ ಘರ್ಷಣೆಗಳು ಕಲ್ಯ ಶ್ರವಣಬೆಳ್ಗೊಳಗಳಿಗೆ ಸೀಮಿತವಾಗಿರಲಿಲ್ಲ. ಬುಕ್ಕನ ತೀರ್ಪು ಬರುವ ಮುನ್ನ, ಬಹುಶಃ ಬಂದ ಮೇಲೂ-ಬಹು ವ್ಯಾಪಕವಾಗಿ ಘರ್ಷಣೆಗಳು ನಡೆದಿರುವಂತೆ ತೋರುತ್ತದೆ. ನಾಗಮಂಗಲ ತಾಲೂಕಿನ ಹಟ್ಣದಲ್ಲಿರುವ ವೀರಭದ್ರ ದೇವಾಲಯವು ಮೂಲತಃ ಪಾಶ್ರ್ವನಾಥ ಬಸದಿಯಾಗಿತ್ತು. ಜೈನ ವಿಗ್ರಹವಿದ್ದ ಪೀಠದ ಮೇಲೆ ಈಗ ವೀರಭದ್ರನ ವಿಗ್ರಹವಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನೂರಿನಲ್ಲಿ ರಂಗಸ್ವಾಮಿ ಗುಡಿಯೆಂದು ಕರೆಯುವ ದೇವಾಲಯದಲ್ಲಿರುವುದು ವಾಸ್ತವವಾಗಿ ಜಿನ ವಿಗ್ರಹ; ಅದಕ್ಕೆ ನಾಮವನ್ನು ಹಚ್ಚಿ ವಿಷ್ಣು ವಿಗ್ರಹವಾಗಿ ಮಾಡಲಾಗಿದೆ. ಮಾಗಡಿ ತಾಲೂಕಿನ ನಿಸಕೂರಿನಲ್ಲಿ ಎಪ್ಪತ್ತೈದು ಬಸದಿಗಳಿದ್ದವೆಂದು ಜನ ಹೇಳುತ್ತಾರೆ; ಈಗ ಅಲ್ಲಿ ಬಸದಿಗಳ ಬದಲು ಕೇವಲ ಬೂದಿ ಗುಂಡಿಗಳಿವೆ. ತಿಪಟೂರಿನ ಸಮೀಪದ ಹಳ್ಳಿಯೊಂದರಲ್ಲಿ ಜಿನ ಬಸದಿಯು ಶಿವದೇವಾಲಯವಾಗಿ ಪರಿವರ್ತಿತವಾಗಿ, ಜಿನ ಬಿಂಬಕ್ಕೆ ಭಸ್ಮ, ಕರಡಿಗೆಗಳನ್ನು ಅಳವಡಿಸಲಾಗಿದೆ. ಈ ಮತ್ತು ಇಂತಹ ಎಲ್ಲಾ ಉದಾಹರಣೆಗಳೂ ಹದಿನಾಲ್ಕನೇ ಶತಮಾನದ ಘರ್ಷಣೆಗಳ ಫಲವೇ ಎಂದು ಖಚಿತವಾಗಿ ಹೇಳಲಾಗದಿದ್ದರೂ ಅವುಗಳಲ್ಲಿ ಕೆಲವಾದರೂ ಆ ಘರ್ಷಣೆಗಳ ಫಲವಿರಬಹುದು ಎಂದು ಅನುಮಾನಿಸಲು ಸಾಧ್ಯ.
         ಹದಿನಾಲ್ಕನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳ್ಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥ ಮಾಡಿಕೊಂಡ ಬುಕ್ಕ ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ, ಆದರೆ ಎರಡೂ ಪಂಗಡಗಳ ಮಧ್ಯದ ವಿರಸ ಹೆಚ್ಚಾಗದ ರೀತಿಯಲ್ಲಿ, ಆದರೆ ಪ್ರೀತಿಯಿಂದ ತನ್ನ ಹೃದಯಸ್ಪರ್ಶಿ ತೀರ್ಪನ್ನು ಕೊಟ್ಟನು. ಬುಕ್ಕನ ತೀರ್ಪು ಘರ್ಷಣೆಗಳ ಮೊನಚನ್ನು ಮೊಂಡು ಮಾಡಿರಬಹುದು, ಅನಾಹುತಗಳ ಪ್ರಮಾಣವನ್ನು ತಗ್ಗಿಸಿರಬಹುದು; ಆದರೆ ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದ. ಒಂದು ವ್ಯಾಪಾರ ಕೇಂದ್ರವೂ ಆಗಿದ್ದ ಕಲ್ಯದಲ್ಲಿ ಅವನು ತನ್ನ ಪ್ರತಿನಿಧಿಯಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿದಂತೆ ಕಾಣುತ್ತದೆ. ಆ ಅಧಿಕಾರಿ ಇತರ ಕರ್ತವ್ಯಗಳ ಜೊತೆ ಘರ್ಷಣೆಗಳಾಗದಂತೆ, ಜೈನ ದೇವಾಲಯಗಳಿಗೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ನೆರವೇರಿಸಿರಬಹುದು. ಕ್ರಿ.ಶ.1386 ರ ಶಾಸನವೊಂದು ವಿಜಯನಗರದ ಅಧಿಕಾರಿ ಕಲ್ಯದಲ್ಲಿದ್ದು ಕೆಲಸ ಮಾಡುತ್ತಿದ್ದುದನ್ನು ಸೂಚಿಸುತ್ತದೆ.

ಸಮಸ್ಯಾತ್ಮಕ ಪದಗಳು:
          ಶಾಸನದಲ್ಲಿ ಬಳಕೆಯಾಗಿರುವ ಕೆಲವು ಪದಗಳ ಅರ್ಥ ಇನ್ನೂ ಪರಿಹಾರವಾಗಿಲ್ಲ. 'ಮೋಷ್ಟಿಕ' ಎಂದರೇನು ತಿಳಿಯದು. 'ತಿರುವಡಿ'ಯೆಂಬುದು ಭಗವಂತನ ಪಾದಗಳನ್ನು ಪೂಜಿಸುವ ಜನರನ್ನು (ಶ್ರೀಪಾದಂ ತಾಂಗಿಗಳ್) ಸೂಚಿಸಬಹುದು. 'ತಣ್ಣೀರವರ್' ಎಂಬುದು ದೇವರ ತೀರ್ಥವನ್ನು ಮೊದಲು ಸ್ವೀಕರಿಸುವ ತೀರ್ಥಗಾರರ್ ಅಥವಾ ಮುದಲ್ ತೀರ್ಥಗಾರರ್ ಇರಬಹುದು ಅಥವಾ ದೇವರ ಅಭಿಷೇಕಕ್ಕೆ ನೀರು ತರುವ ಸೇವಾಕಾರ್ಯವನ್ನು (ತೀರ್ಥಕೈಂಕರ್ಯಮ್) ಕೈಕೊಂಡವರು ಇರಬಹುದು. 'ತಿರುಪಣಿ'ಯವರು ದೇವಾಲಯದ ಸೇವಕವರ್ಗದವರಿರಬಹುದು. 'ತಿರುಕುಲ' 'ಜಾಂಬವಕುಲ'ದವರು ಹರಿಜನರಲ್ಲಿರುವ ಬಲಗೈ ಎಡಗೈ ಪಂಗಡದವರು. ಒಂದು ನಂಬಿಕೆಯ ಪ್ರಕಾರ ಶ್ರೀರಾಮಪ್ರಿಯ ವಿಗ್ರಹವನ್ನು ತರಲು ದೆಹಲಿಗೆ ಹೋದ ಶ್ರೀರಾಮಾನುಜರಿಗೆ ಸಹಾಯಕರಾಗಿ ಜೊತೆಯಲ್ಲಿದ್ದ ಹರಿಜನರನ್ನು ಅವರು ಪ್ರೀತಿಯಿಂದ 'ತಿರುಕುಲ'ದವರೆಂದು ಕರೆದರು. 'ತಿರುಕುಲ' ಪದದ ಅತ್ಯಂತ ಪ್ರಾಚೀನ ಪ್ರಯೋಗವು ಶ್ರವಣಬೆಳ್ಗೊಳ ಶಾಸನದಲ್ಲಿ ದೊರಕುವುದು ಗಮನಾರ್ಹ (ತಮಿಳು ಕೃತಿಗಳ ಪ್ರಯೋಗಗಳೆಲ್ಲಾ ಈಚಿನವು). 'ಹದಿನೆಂಟು ನಾಡು ಎಂಬುದು ಹಿಂದೂಗಳ ಸಾಂಪ್ರದಾಯಿಕ ಹದಿನೆಂಟು ಜಾತಿಗಳನ್ನು ಹೇಳುತ್ತದೆ. ಶ್ರೀ ವೈಷ್ಣವರನ್ನು 'ಭಕ್ತ'ರೆಂದು ಕರೆದಿರುವುದು ಗಮನಾರ್ಹ. 'ಆಚಾರ್ಯ', 'ಸಮಯಿ', 'ಸಾತ್ವಿಕ' ಪದಗಳಿಗಿರುವ ನಿರ್ದಿಷ್ಟಾರ್ಥಗಳನ್ನು, ವ್ಯತ್ಯಾಸಗಳನ್ನು ಗುರುತಿಸುವುದು ಇನ್ನೂ ಕಷ್ಟವಾಗಿದೆ. 'ನಾಲ್ವತ್ತೆಂಟು ಜನ' ಉಕ್ತಿಯ ಅರ್ಥವೂ ಅಷ್ಟೇ; ಬಹುಶಃ ಅದೊಂದು ಜಾತಿಯ ಅಥವಾ ವೃತ್ತಿಯ ಯಾವುದೋ ಶ್ರೇಣಿಯನ್ನು (guild) ಸೂಚಿಸುವಂತೆ ಕಾಣುತ್ತದೆ.
         ಕನ್ನಡ ಎಂ.ಎ (ಅಂತಿಮ)ಕ.ರಾ.ಮು .ವಿ. ಕನ್ನಡ ಶಾಸನ ಅಧ್ಯಯನ ಕೋರ್ಸ್೧೦, ಬ್ಲಾಕ್ ೩೫ ,ಪುಟ ೩೨-೩೩,೨೮-೨೯ ನಲ್ಲಿರು ವಂತೆ ಬರೆಯಲಾಗಿದೆ. [ಕೃಪೆ-'ಪ್ರತೀಕ್ಷಾ ಬ್ಲಾಗ್' -ಮಮತಾಭಾಗವತ್]
ಬು ಕ್ಕರಾಯನ ಶಾಸನ ಪಾಠವು ದೇವಚಂದ್ರನ (೧೭೭೦-೧೮೪೧)ರಾಜಾವಳಿ ಕಥಾಸಾರದಲ್ಲಿ (ಕನ್ನಡ ಅಧ್ಯಯನ ಸಂಸ್ಥೆ, ಮೈಸೂ ರು ವಿಶ್ವವಿದ್ಯಾನಿಲಯ,೧೯೮೮,ಪು.೧೯೮-೧೯೯)ಕೂ ಡ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಬಂದಿದೆ. ಆ ಶಾಸನ ಪಾಠ ಹೀಗಿದೆ....
            ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ
ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.


ಶಾಸನದ ಪಠ್ಯ -ಅರ್ಥ:
    ಒಳ್ಳೆಯದಾಗಲಿ, ನಾಸ್ತಿಕರೆಂಬ ಸಮುದ್ರವನ್ನು ಬತ್ತಿಸುವ ಬಡವಾಗ್ನಿಯಾಗಿ, ಶ್ರೀರಂಗನಾಥನ ಪಾದಕಮಲಗಳ ಸೇವಕರಾಗಿ, ಶ್ರೀ ವಿಷ್ಣು ಸನ್ನಿಧಿಯೆಂಬ ರತ್ನ ಮಂಟಪಕ್ಕೆ ಮಾರ್ಗದಾಯಕರಾಗಿ ಇರುವ ಯತಿರಾಜರಾಜರಾದ ರಾಮಾನುಜಾಚಾರ್ಯರಿಗೆ ಜಯವಾಗಲಿ.
        ಶಕವರ್ಷ ೧೨೯೦ ನೆಯ ಕೀಲಕನಾಮ ಸಂವತ್ಸರಸದ ಭಾದ್ರಪದ ಮಾಸದ ಶುಕ್ಲಪಕ್ಷದ ದಶಮಿಯ ಗುರುವಾರದಂದು ಶ್ರೀ ಮನ್ಮಹಾಮಂಡಳೇಶ್ವರನೂ ಶತ್ರು ರಾಜರನ್ನೂ ಸದೆಬಡಿಯುವವನೂ, ನುಡಿದಂತೆ ನಡೆಯದ ರಾಜರ ದರ್ಪವನ್ನು ಮುರಿಯುವವನೂ ಆದ ಶ್ರೀ ಬುಕ್ಕರಾಯನು ರಾಜ್ಯಭಾರ ಮಾಡುತ್ತಿರುವಾಗ ಜೈನರಿಗೂ ಶ್ರೀವೈಷ್ಣವರಿಗೂ (ಒಂದು ಸಲ) ವಾಗ್ವಾದವಾಯಿತು. 
       ಆಗ ಆನೆಯಗೊಂದಿ, ಹೊಸಪಟ್ಟಣ, ಪೆನುಗೊಂಡೆ, ಕಲ್ಲೆಹ -ಇವುಗಳನ್ನು ಒಳಗೊಂಡ ಎಲ್ಲ ನಾಡುಗಳ ಜೈನ ಮತೀಯರು (ಭವ್ಯಜನಂಗಳು) ಬುಕ್ಕರಾಯನಿಗೆ ಶ್ರೀವೈಷ್ಣವರು (ಭಕ್ತರು) ಮಾಡುವ ಅನ್ಯಾಯಗಳನ್ನು ವಿಜ್ಞಾಪಿಸಿಕೊಂಡರು. ಕೋವಿಲ್ ತಿರುಮಲೆ ಪೆರುಮಾಳ್, ಕೋಯಿಲ್ ತಿರುನಾರಾಯಣಪುರ -ಇವೇ ಮುಖ್ಯವಾದ (ಕ್ಷೇತ್ರಗಳ) ಸಕಲಾಚಾರ್ಯರು, ಸಕಲ ಸಮಯಿಗಳು, ಸಕಲ ಸಾತ್ವಿಕರು, ಮೋಷ್ಠಿಕರು(ಅಕ್ಕಸಾಲಿಗರು), ತಿರುಪಣಿ ತಿರುವಿಡಿ ತಣ್ಣೀರವರು(ನೀರು ಒದಗಿಸಿವ ಜಲಗಾರರು), ನಾಲ್ವತ್ತೆಂಟು ಜನಗಳು, ಸಾಮಂತ ಬೋವರುಗಳು, ತಿರಿಕುಲ ಜಾಂಬವ ಕುಲ ಒಳಗೊಂಡ ಹದಿನೆಂಟು ನಾಡುಗಳ ಶ್ರೀವೈಷ್ಣವರನ್ನು ಬರಮಾಡಿಕೊಂಡು ಮಹಾರಾಜನು ವೈಷ್ಣವರ ಕೈಯಲ್ಲಿ ಜೈನರ ಕೈಯನ್ನು ಹಿಡಿದು ಕೊಟ್ಟು, ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು.
        ಜೈನಧರ್ಮಕ್ಕೆ ಈ ಹಿಂದೆ ಸಲ್ಲುತ್ತಿದ್ದಂತೆ (ಪೂರ್ವಮರ್ಯಾದೆಯಲು) ಪಂಚಮಹಾವಾದ್ಯಗಳು (ಶೃಂಗವಾದ್ಯ, ತಮಟೆ, ಶಂಖ, ಭೇರಿ, ಜಯಘಂಟೆ) ಕಳಶವು ಸಲ್ಲುವುದು. ಶ್ರೀ ವೈಷ್ಣವರ ಕಡೆಯಿಂದ ಜೈನಧರ್ಮಕ್ಕೆ ಯಾವುದೇ ಹಾನಿಯಾಗಲಿ ವೃದ್ಧಿಯಾಗಲಿ ಆದರೆ ಅದು ವೈಷ್ಣವ ಧರ್ಮಕ್ಕೆ ಆದ ಹಾನಿಯೆಂದು ವೃದ್ಧಿಯೆಂದು ಶ್ರೀವೈಷ್ಣವರು ತಿಳಿಯಬೇಕು. ಈ ನಿಯಮದಂತೆ (ಮರ್ಯಾದೆಯಲು) ರಾಜ್ಯದಲ್ಲಿರುವ ಎಲ್ಲಾ ಬಸದಿಗಳಲ್ಲಿ ಶ್ರೀ ವೈ ಷ್ಣವರೇ ಶಾಸನವನ್ನು ಹಾಕಿಸಿ ಇದನ್ನು ಪಾಲಿಸಬೇಕು. ಚಂದ್ರ ಸೂರ್ಯರು ಇರುವವರೆಗೆ ವೈಷ್ಣವ ಧರ್ಮವು ಜೈನಧರ್ಮವನ್ನು ರಕ್ಷಿಸಿಕೊಂಡು ಬರತ್ತದೆ. ವೈಷ್ಣವ ಧರ್ಮ ಜೈನಧರ್ಮಗಳು ಒಂದೇ, ಅವುಗಳ ನಡುವೆ ಭೇದವಿಲ್ಲ. ಅದನ್ನು ಬೇರೆ ಬೇರೆ ಎಂದು ತಿಳಿಯಬಾರದು. ಶ್ರೀ ತಿರುಮಲೆ ತಾತಯ್ಯನವರು ರಾಜಯದ ಎಲ್ಲ ಜೈನಮತೀಯರ ಅನುಮತಿಯಂತೆ ಶ್ರವಣ ಬೆಳುಗೊಳ ಕ್ಷೇತ್ರದಲ್ಲಿ (ಬೆಳುಗೊಳ ತೀರ್ಥದಲ್ಲಿ) ವೈಷ್ಣವ (=ವಿಷ್ಣುದೇವಾಲಯ) ಅಂಗರಕ್ಷೆಗೆ (ಎಂದರೆ ಕಾವಲಿನ ವ್ಯವಸ್ಥೆಗಾಗಿ) ರಾಜ್ಯದಲ್ಲಿರುವ ಎಲ್ಲ ಜೈನರು ಬಾಗಿಲುಗಟ್ಟಳೆಯಾಗಿ (ಪ್ರತಿಮನೆಯವರು) ಮನೆಮನೆಗೆ ವರ್ಷಕ್ಕೆ ಒಂದು ಹಣ ಎಂದು ಕೊಡಬೇಕು. ಹಾಗೆ ಸಂಗ್ರಹಿಸಿದ ಹೊನ್ನಿನಿಂದ ದೇವರ ಕಾವಲಿಗೆ ಇಪ್ಪತ್ತು ಜನರನ್ನು ನೇಮಿಸಬೇಕು. ಉಳಿದ ಹೊನ್ನಿನಿಂದ ಜೀರ್ಣಜಿನಾಲಯಗಳಿಗೆ ಸುಣ್ಣವನ್ನು ಬಳಿಸಬೇಕು. ಈ ನಿಯಮದಂತೆ ಚಂದ್ರ ಸೂರ್ಯರು ಇರುವವರೆಗೆ ಪ್ರತಿವರ್ಷ ಹೊನ್ನನ್ನು ಕೊಟ್ಟು ಕೀರ್ತಿಯನ್ನು ಪುಣ್ಯವನ್ನು (ಜೈನರು ಅರ್ಜಿಸಿಕೊಳ್ಳಲಿ) ಹೀಗೆ ಮಾಡಿದ ಕಟ್ಟಳೆಯನ್ನು ಯಾರು ಮೀರಿದರೂ ಆತ ರಾಜದ್ರೋಹಿ. ಜೈನಸಂಘ-ವೈಷ್ಣವ ಸಮಾಜಗಳಿಗೆ ದ್ರೋಹಿ, ಮುನಿಯಾಗಲಿ, ಗ್ರಾಮೀಣನಾಗಲಿ ಈ ಧರ್ಮವನ್ನು ಯಾರಾದರೂ ಕೆಡಿಸಿದರೆ ಅವರು ಗಂಗಾನದಿಯ ದಡದಲ್ಲಿ ಹಸುವನ್ನೂ ಬ್ರಾಹ್ಮಣನ್ನೂ ಕೊಂದ ಪಾಪಕ್ಕೆ ಗುರಿಯಾಗುತ್ತಾರೆ.
         ತಾನು ಕೊಟ್ಟದ್ದಾಗಲಿ, ಬೇರೆಯವರು ಕೊಟ್ಟದ್ದಾಗಲಿ ಅಪಹರಿಸಿದ್ದಾದರೆ ಅಂಥವನು ಈ ಭೂಮಿಯಲ್ಲಿ ಅರವತ್ತು ಸಾವಿರ ಕ್ರಿಮಿಯಾಗಿ ಹುಟ್ಟುತ್ತಾನೆ.

*******

10ನೇ ತರಗತಿ ಕನ್ನಡ ಗದ್ಯ-8-ಸುಕುಮಾರಸ್ವಾಮಿ ಕಥೆ (10th-kannada-Lesson-8-Sukumaraswamy-kathe)

ಗದ್ಯ-8-ಸುಕುಮಾರಸ್ವಾಮಿ ಕಥೆ 
     ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ.

‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ.
 1. ಸುಕುಮಾರಸ್ವಾಮಿಯ ಕಥೆ
 2. ಸುಕೌಶಳಸ್ವಾಮಿಯ ಕಥೆ
 3. ಗಜಕುಮಾರನ ಕಥೆ
 4. ಸನತ್ಕುಮಾರ ಚಕ್ರಚರ್ತಿಯ ಕಥೆ
 5. ಅಣ್ಣಿಕಾಪುತ್ರನ ಕಥೆ
 6. ಭದ್ರಬಾಹು ಭಟ್ಟಾರರ ಕಥೆ
 7. ಲಲಿತಘಟೆಯ ಕಥೆ
 8. ಧರ್ಮಘೋಷ ಭಟ್ಟಾರರ ಕಥೆ
 9. ಸಿರಿದಣ್ಣ ಭಟ್ಟಾರರ ಕಥೆ
 10. ವೃಷಭಸೇನ ಭಟ್ಟಾರರ ಕಥೆ
 11. ಕಾರ್ತಿಕ ಋಷಿಯ ಕಥೆ
 12. ಅಭಯಘೋಷ ಮುನಿಯ ಕಥೆ
 13. ವಿದ್ಯುಚ್ಚೋರನ ಕಥೆ
 14. ಗುರುದತ್ತ ಭಟ್ಟಾರರ ಕಥೆ
 15. ಚಿಲಾತಪುತ್ರನ ಕಥೆ
 16. ದಂಡಕನೆಂಬ ರಿಸಿಯ ಕಥೆ
 17. ಮಹೇಂದ್ರದತ್ತಾಚಾರ್ಯನ ಕಥೆ
 18. ಚಾಣಾಕ್ಯ ರಿಸಿಯ ಕಥೆ
 19. ವೃಷಭಸೇನ ರಿಸಿಯ ಕಥೆ
 ಸುಕುಮಾರಸ್ವಾಮಿಯ ಕಥೆ (ಗದ್ಯಕ್ಕೆ ಪೂರಕವಾಗಿ)

ಮೂಲಗದ್ಯ: ಈ ಜಂಬೂದ್ವೀಪದ ದಕ್ಷಿಣ ಭರತಕ್ಷೇತ್ರದೊಳವಂತಿಯೆಂಬುದು ನಾಡುಜ್ಜೇನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿರ್ವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವ- ಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರ ಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಂಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ. 
     ಅನುವಾದ: ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜಯಿನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ ಸೆಟ್ಟಯಿದ್ದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸಿನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು.

      ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿ ಮಾಡಂಗಳತ್ಯಂತರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತೆರಡು ಕೋಟಿ ಕಸವರಮಂ ಪಂಚರತ್ನಂ- ಗಳೆಂಬಿನಿತರೊಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ.
 ಸುಕುಮಾರಸ್ವಾಮಿಯು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿರಲು…

ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನವರಂ ಕಲ್ಪಿಸಿದೊಳಂತು ಕಾಲಂ ಸಲೆ
      ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. “ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು” ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು.

       ಮತ್ತೊಂದು ದಿವಸಂ ರತ್ನದ್ವೀಪದಿಂದೊರ್ವ ಪರದಂ ಸರ್ವ ರತ್ನ ಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪವನುಜ್ಜೇನಿಗೆ ಮಾಱಲ್ಕೊಂಡು ಬಂದೊನಾ ಪೊೞಲ ನಾಳ್ವೊಂ ವೃಷಭಾಂಕನೆಂಬೊಂನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾರಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇೞ್ದನ್
         ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು.

ಅಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಂ ಕಂಬಳಗಳಂ ಕೊಂಡುಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂಕೊಟ್ಟು ರತ್ನಕಂಬಳಂಗಳ್ ಕೊಂಡೋರೊಂದಱೊಳಂನಾಲ್ಕು ಖಂಡ ಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞನೆಂದು ಮನೆಗೆ ವರ್ಪುದಂ
       ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿಕೊಂಡರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುವುದನ್ನು…

     ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಿಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರ ಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯ ಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾ ವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು ಬೆಸಗೊಂಡೊಡೆ ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ವೊರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು
      ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು. ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದ ತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, “ಸುಕುಮಾರನು ಎಲ್ಲಿದ್ದಾನೆ?” ಎಂದು ಕೇಳಿದನು. ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ” ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು?” ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು” ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ!” ಎನ್ನುತ್ತ ಆಶ್ಚರ್ಯಪಟ್ಟು……..

ತಾಯ ವಚನಮಂ ಮಾರ್ಕ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಬೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮ ದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ಧಾರ್ಥಂಗಳ್ ಸುಕುಮಾರಸ್ವಾಮಿ ಯಾಸನಮನೊತ್ತೆ ಕಟಿಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡಂತೆ ಗೆಯ್ವೆಮೆಂದು ಮಜ್ಜನಂಗೊಂಡಮರ ಸನ್ನಿಭಮಣಿಕುಟ್ಟಿಮಮಪ್ಪಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪತನ್ನಬೆರ ಲಮಾಣಿಕದುಂಗುರಂ ಬಿೞ್ದುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂತೆರಱೆದಂತಪ್ಪ ಲೇಸಪ್ಪ ನಾನಾ ಮಣಿಯ ವಿಚಿತ್ರಭೂ?ಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಂ
     ತಾಯಿಯ ಮಾತನ್ನು ವಿರೋಧಿಸಲಾರದೆ ಬಂದನು. ಅವನನ್ನು ರಾಜನು ಕಂಡು ‘ನಾನು ಕಣ್ಣನ್ನು ಪಡೆದದ್ದು ಇಂದು ಸಾರ್ಥಕವಾಯಿತು’ ಎಂದುಕೊಂಡು ಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸುವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನೂ ದೀಪ ನೋಡಿದಾಗ ಕಣ್ಣೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯೆಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಬಾವಿಗೆ(ಕೆರೆಗೆ) ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತಿರುವಷ್ಟರಲ್ಲಿ……

ಆರೋಗಿಸಲೆೞ್ತನ್ನಿಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರಂ ಬೆರಸು ನಾನಾ ಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಅರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗುಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗ ರುಚಿಯೆಂದು ಬಗೆದುಣಿಸು ಸಮೆದಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾ ವಿನೋದದಿಂದಿರ್ದೊಡೆ
      ರಾಜನನ್ನೂ ಸುಕುಮಾರನನ್ನೂ ‘ಊಟಕ್ಕೆ ಬನ್ನಿರಿ’ ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಊಟಮಾಡುತ್ತಿರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು” ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳನ್ನಾಡುತ್ತಾ ವಿನೋದದಿಂದ ಇದ್ದಾಗ……..

       ಯಶೋಭದ್ರೆಯನರಸ-ನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶಭಾಗಕ್ಕಂ ಕಣ್ಣನೀರ್ ಬರ್ಪುದಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಆವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದಂ ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಪೆಱವಕ್ಕಿಯಂ ನೀವುಂ ಬಂದೊಡೆ ಬೆರಸಿಯಟ್ಟುದು ಕೂೞುಮಪ್ಪುದಱಂ ವಾಸಿಸಿದಕ್ಕಿಯ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ
      ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ?” ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು, ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ” ಎಂದು ಹೇಳಿದಳು.


     ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೋಗಂಗಳ್ ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ.
ಅದನ್ನು ಕೇಳಿ ಅರಸನು ಆಶ್ಚರ್ಯಪಟ್ಟನು. “ಈತನ ಒಂದು ಕ್ಷಣದ ಸುಖ-ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ – ಉಪಭೋಗಗಳು ಸಮಾನವಾಗುವುದಿಲ್ಲ. ಆದುದರಿಂದ “ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ” ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು.

***********


ಸುಕುಮಾರಸ್ವಾಮಿಯ ಕಥೆಯ ಪೂರ್ಣಪಾಠ ಮತ್ತು ಗದ್ಯಾನುವಾದ

(ಸುಕುಮಾರ ಸ್ವಾಮಿಯ ಕಥೆ : ಸಂಹಿತೆ . ಅರಣ್ಯಕ)
      ಬ್ರಾಹ್ಮಣ ಅರಣ ಸೂತ್ರಂ ಮೊದಲಾಗೊಡೆಯವನೋದಿ ಋಗ್ಯಜುಸ್ಸಾಮಾಥರ್ವಣ ವೇದಂಗಳಂ ಸ್ವರವರ್ಣಭೇದದಿಂದಂ ಮಂತ್ರಸಹಿತ ಪಾಳಿ ಪದಕ್ರಮ ಜಟೆ ಭೇದದಿಂದಂ ಶತಸೂತ್ರಂ ಮೊದಲಾಗೆಲ್ಲಮಂ ಯಥಾಕ್ರಮದಿಂದುಚ್ಚರಿಸಿ ಪದಿನೆಂಟು ಪುರಾಣಂಗಳುಂ ಪದಿನೆಂಟು ಧರ್ಮಸಂಹತಿಗಳುಂ ಮೀಮಾಂಸಾ ನ್ಯಾಯಸೂತ್ರಮಿವೆಲ್ಲಮನೋದಿ ಕ್ರಿಯಾಕಾರಕ ಸಂಬಂಧದಿಂದೆಲ್ಲಮಂ ವಕ್ಖಾನಿಸಿ ತೋಱದೊಡರಸಂ ಮೊದಲಾಗಿ ನೆರೆದ ನೆರವಿಯುಂ ಪಂಡಿತರ್ಕ್ಕಳೆಲ್ಲಂ ವಿಸ್ಮಯಂಬಟ್ಟು ಪೊಗೞ್ದು ಮತ್ತಮರಸನಿಂತೆಂದನೀ ಕೂಸಿನಿತು ಶಾಸ್ತ್ರಂಗಳನೆಂತು ಕಲ್ತಳೆಂತು ಭಟಾರಾ ಇದನಱಯೆ ಬೆಸಸಿಮೆನೆ ಸೂರ್ಯಮಿತ್ರ ಭಟ್ಟಾರರಿಂತೆಂದರ್ ಈಯಿರ್ದ್ದ ರಿಸಿಯರ ಸಹೋದರಂ ವಾಯುಭೂತಿಯೆಂಬೊ – ನಾನಾಮೋದಿಸಿದೆಮೆಮ್ಮೊಳಪ್ಪ ಮಾನಕಷಾಯಂ ಕಾರಣಮಾಗಿ ಸತ್ತು ಬೆಳ್ಗತ್ತೆಯುಂ ಪೇಪಂದಿಯುಂ ನಾಯುಂ ಪೊಲೆಯರ ಕೂಸುಮಾಗಿ ರಿಸಿಯರ ಪ್ರಬೋಧನೆಯಿಂದಂ ಬ್ರತಂಗಳಂ ಕೈಕೊಂಡೀಗಳ್ ನಾಗಶ್ರೀಯಾದಳೆಂದು ಮುನ್ನಿನ ಭವದ ಸಂಬಂಧಮೆಲ್ಲಮಂ ಸವಿಸ್ತರಂ ಪೇೞ್ದು ಮತ್ತಮಿಂತೆಂದರ್ ಮಿಥ್ಯಾತ್ವ ಸಂಯಮ ಕಷಾಯ ಯೋಗಂ ಕಾರಣಮಾಗಿ ಜೀವಂಗಳ್ ಸಂಸಾರಸಮುದ್ರದೊಳ್ ತೊೞಲ್ಗುಮೆಂದು ಸವಿಸ್ತರಂ ಧರ್ಮಮಂ ಪೇೞೆ ಕೇಳ್ದು ಚಂದ್ರವಾಹನನೆಂಬರಸಂಗೆ ವೈರಾಗ್ಯಂ ಪುಟ್ಟಿ ಮಗಂಗರಸುಗೊಟ್ಟು ಪಲಂಬರರಸು ಮಕ್ಕಳ್ವೆರಸುಭಟ್ಟಾರರ ಪಕ್ಕದೆ ತಪಂಬಟ್ಟಂ ಕೆಲರ್ ಶ್ರಾವಕವ್ರತಂಗಳಂ ಕೆಲಂಬರ್ ಸಮ್ಯಕ್ಷಮಂ ಕೈಕೊಂಡರಾಗಳಾ
       ಸೂತ್ರ ಮುಂತಾಗಿರುವವನ್ನೂ ಹೇಳಿದಳು, ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದಗಳನ್ನೂ ಸ್ವರಗಳ ಮತ್ತು ವರ್ಣಗಳ ಭೇದದಿಂದ ಮಂತ್ರ ಸಮೇತವಾಗಿ ಪಾಳಿಪದಕ್ರಮಜಟೆ ಮುಂತಾದ ವೇದಪಠನದ ರೀತಿಯಲ್ಲಿ ಶತಸೂತ್ರ ಮುಂತಾಗಿ ಎಲ್ಲವನ್ನೂ ಸರಿಯಾದ ಕ್ರಮದಿಂದ ಉಚ್ಚಾರಣೆ ಮಾಡಿದಳು. ಹದಿನೆಂಟು ಪುರಾಣಗಳು, ಹದಿನೆಂಟು ಧರ್ಮಶಾಸ್ತ್ರಸಂಗ್ರಹಗಳು, ಮೀಮಾಂಸೆ, ನ್ಯಾಯಸೂತ್ರ ಇವೆಲ್ಲವನ್ನೂ ಹೇಳಿ, ಕ್ರಿಯಾಪದ ಕಾರಕಪದಗಳ ಸಂಬಂಧ ಸರಿಯಾಗಿರುವಂತೆ ಎಲ್ಲವನ್ನೂ ವ್ಯಾಖ್ಯಾನಮಾಡಿ ತೋರಿಸಿದಳು. ಆಗ ರಾಜನೂ, ನೆರೆದ ಜನರೂ, ವಿದ್ವಾಂಸರೂ ಎಲ್ಲರೂ ಆಶ್ಚರ್ಯಪಟ್ಟು ಹೊಗಳಿದರು. ಮೇಲೆ ರಾಜನು ಹೀಗೆಂದನು. “ ಕನ್ಯೆ ಇಷ್ಟೊಂದು ಶಾಸ್ತ್ರಗಳನ್ನು ಹೇಗೆ ಕಲಿತುಕೊಂಡಳು? ಋಷಿಗಳೇ, ಇದನ್ನು ನನಗೆ ತಿಳಿಯುವಂತೆ ಅಪ್ಪಣೆಮಾಡಿ* ಎನ್ನಲು, ಸೂರ್ಯಮಿತ್ರ ಋಷಿಗಳು ಹೀಗೆಂದರುಇದೇ ಇಲ್ಲಿರುವ ಅಗ್ನಿಭೂತಿ ಋಷಿಗಳ ಸಹೋದರ ವಾಯುಭೂತಿಯೆಂಬವನಿಗೆ ನಾವಿ ವಿದ್ಯೆ ಕಲಿಸಿದ್ದೆವು. ನಮ್ಮ ಮೇಲೆ ಅವನು ತಾಳಿದ ಗರ್ವ ಕೋಪಗಳ ಕಾರಣದಿಂದ ಸತ್ತು ಬಿಳಿಕತ್ತೆ, ಹೇಲುಹಂದಿ, ನಾಯಿ, ಹೊಲೆಯರ ಕನ್ಯೆಯಾಗಿ ಹುಟ್ಟಿಬಂದು, ಋಷಿಗಳ ಉಪದೇಶದಿಂದ ವ್ರತಗಳನ್ನು ಸ್ವೀಕರಿಸಿ, ಈಗ ನಾಗಶ್ರೀಯಾದಳು* ಹೀಗೆ ಹಿಂದಿನ ಜನ್ಮದ ಸಂಬಂಧವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮತ್ತೆ ಹೀಗೆಂದನುಜೀವಗಳು ಮಿಥ್ಯಾತ್ವ, ಸಂಯಮವಿಲ್ಲದಿರುವುದು, ಗರ್ವಕೋಪಾದಿಗಳ ಕಾರಣದಿಂದ ಸಂಸಾರವೆಂಬ ಸಮುದ್ರದಲ್ಲಿ ಸುತ್ತಾಡುವವು. * ಹೀಗೆಂದು ವಿಸ್ತಾರವಾಗಿ ಧರ್ಮದ ರಹಸ್ಯವನ್ನು ಹೇಳಲು ಕೇಳಿದ ಚಂದ್ರವಾಹನ ರಾಜನಿಗೆ ವೈರಾಗ್ಯವುಂಟಾಯಿತು. ಅವನು ತನ್ನ ಮಗನಿಗೆ ಅರಸುತನವನ್ನು ಕೊಟ್ಟು ಹಲವು ಮಂದಿ ರಾಜಕುಮಾರರೊಂದಿಗೆ ಋಷಿಗಳ ಸಮೀಪದಲ್ಲಿದ್ದು ತಪವನ್ನೆಸಗಿದನು. ಕೆಲವರು ಶ್ರಾವಕವ್ರತಗಳನ್ನೂ ಕೆಲವರು ಸಮ್ಯಗ್ದರ್ಶನ ಸಮ್ಯಗ್ಜ್ಞಾನ ಸಮ್ಯಕ್ಚಾರಿತ್ರಗಳನ್ನು
      ಸೋಮಶರ್ಮಭಟ್ಟಂ ರಿಸಿಯರೊಳಾದ ಮಾನಗರ್ವದ ದೋಷದಿಂದೆಯ್ದಿದ ದುಃಖಂಗಳಂ ಕೇಳ್ದಱದಾ ಭಟ್ಟಾರರ ಪಕ್ಕದೆ ತಪಂಬಟ್ಟಂ ನಾಗಶ್ರೀಯುಂ ನಾಗಶ್ರೀಯ ತಾಯ್ ತ್ರಿವೇದಿಯುಂ ಬ್ರಹ್ಮಿಲೆಯೆಂಬ ಕಂತಿಯರ ಪಕ್ಕದೆ ತಪಂಬಟ್ಟರ್ ಮತ್ತೆ ಸೂರ್ಯಮಿತ್ರ ಭಟ್ಟಾರರಗ್ನಿಭೂತಿ ಭಟ್ಟಾರರುಮಿರ್ವರುಂ ಪಲಕಾಲಂ ತಪಂಗೆಯ್ದು ಅಗ್ರಮಂದಿರವೆಂಬ ಪರ್ವತದೊಳ್ ಮೋಕ್ಷವನೆಯ್ದಿದರ್ ಮತ್ತಂ ಸೋಮಶರ್ಮರಿಸಿಯರುಮುಗ್ರೋಗ್ರ ತಪಶ್ಚರಣಂಗೆಯ್ದು ಸನ್ಯಸನವಿಯಿಂದಂ ಮುಡಿಪಿ ಅಚ್ಚುತಕಲ್ಪದೊಳಿರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕದೇವನಾಗಿ ಪುಟ್ಟಿದೊಂ ಮತ್ತೆ ನಾಗಶ್ರೀಯುಂ ಭುಕ್ತ ಪ್ರತ್ಯಾಖ್ಯಾನವಿಯಂ ರತ್ನತ್ರಯಮಂ ಸಾಸಿ ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದೊಳ್ ಮತ್ತಾ ಸ್ವರ್ಗದೊಳ್ ತ್ರಿವೇದಿಯಂ ನಾಗಶ್ರೀ ಎನಗೆ ಜನ್ಮಾಂತಕರದೊಳಪ್ಪೊಡಂ ಮಗನಕ್ಕೆಂದು ನಿದಾನಂಗೆಯ್ದು ಮುಡಿಪಿ ದೇವನಾದೊಳಿಂತಾ ಯಿರ್ವರುಂ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊರಾಗಿ ದೇವರಾಗಿ ಪುಟ್ಟಿದರ್ ಮತ್ತಂ ಸೋಮಶರ್ಮನಪ್ಪ ದೇವಂ ಪಲಕಾಲಂ ದೇವಲೋಕದ ಭೋಗಮನನುಭವಿಸಿ ಬಂದಿಲ್ಲ ಈ ಜಂಬೂದ್ವೀಪದ ದಕ್ಷಿಣ ಭರತದೊಳವಂತಿಯೆಂಬುದು ನಾಡುಜ್ಜೇಶನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ

ಪಡೆದುಕೊಂಡರು. ಆ ಸಂದರ್ಭದಲ್ಲಿ ಸೋಮಶರ್ಮಭಟ್ಟನು ಋಷಿಗಳ ಮೇಲೆ ಉಂಟಾದ ಗರ್ವಕ್ರೋಧಗಳ ತಪ್ಪಿನಿಂದ ಉಂಟಾಗತಕ್ಕ ದುಃಖಗಳನ್ನು ಕೇಳಿ ತಿಳಿದು ಆ ಋಷಿಗಳ ಪಕ್ಕದಲ್ಲಿ ತಪ್ಪಸ್ಸನ್ನು ಮಾಡಿದನು. ನಾಗಶ್ರೀಯೂ ಅವಳ ತಾಯಿಯಾದ ತ್ರಿವೇದಿಯೂ ಬ್ರಹ್ಮಿಲೆ ಎಂಬ ಜೈನ ಸಂನ್ಯಾಸಿನಿಯ ಬಳಿಯಲ್ಲಿ ತಪಸ್ಸನ್ನು ಮಾಡಿದರು. ಸೂರ್ಯಮಿತ್ರ ಋಷಿಗಳು ಅಗ್ನಿಭೂತಿ ಋಷಿಗಳು ಇವರಿಬ್ಬರೂ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಗ್ರಮಂದಿರವೆಂಬ ಬೆಟ್ಟದಲ್ಲಿ ಮೋಕ್ಷಕ್ಕೆ ಹೋದರು. ಆ ಮೇಲೆ ಸೋಮಶರ್ಮ ಋಷಿಯು ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸನ್ಯಸನ ವಿಯಿಂದ ಸತ್ತು ಅಚ್ಯುತ ಎಂಬ ಹೆಸರಿನ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಸಾಮಾನಿಕದೇವನಾಗಿ ಹುಟ್ಟಿದನು. ಮತ್ತೆ ನಾಗಶ್ರೀಯು ಕ್ರಮದಿಂದ ಆಹಾರ ಪಾನೀಯಗಳನ್ನು ತ್ಯಾಗಮಾಡುವ ‘ಭುಕ್ತ ಪ್ರತ್ಯಾಖ್ಯಾನ’ ಎಂಬ ವ್ರತನಿಯಮದಿಂದ ಸಮ್ಯಗ್ದರ್ಶನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಅಚ್ಚುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿದಳು. ಮತ್ತು ಆ ಸ್ವರ್ಗದಲ್ಲಿ ತ್ರಿವೇದಿಯು ನನಗೆ ಬೇರೆ ಜನ್ಮದಲ್ಲಿಯಾದರೂ ನಾಗಶ್ರೀಯು ಮಗನಾಗಿ ಜನಿಸಲಿ ಎಂದು ಸಂಕಲ್ಪಿಸಿ ಸತ್ತು ದೇವಳಾದಳು. ಹೀಗೆ ಆ ಇಬ್ಬರೂ ಇಪ್ಪತ್ತೆರಡು ಸಾಗರಕ್ಕೆ ಸಮಾನವಾಗುವ ಆಯುಷ್ಯವುಳ್ಳವರಾಗಿ ದೇವರುಗಳಾಗಿ ಜನಿಸಿದರು. ಅನಂತರ ಸೋಮಶರ್ಮನಾಗಿದ್ದ ದೆವನು ಹಲವು ಕಾಲದವರೆಗೆ ದೇವಲೋಕದ ಸುಖವನ್ನು ಅನುಭವಿಸಿದ ನಂತರ ಭೂಲೋಕದಲ್ಲಿ ಜನಿಸಿದನು. ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜೇನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ

ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದನಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿಮಾಡಂಗಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತರಡು ಕೋಟಿ ಕಸವರಮುಂ ಪಂಚರತ್ನಂಗಳೆಂಬಿನಿತಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನ ಕಲ್ಪಿಸಿದೊಳಂತು ಕಾಲಂ ಸಲೆ ದಿವಸಂ ರತ್ನದ್ವೀಪದಿಂದೊರ್ವ
ಸೆಟ್ಟಯಿದ್ದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯಾತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯೆಂಬ ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮುವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳಿಂದ ಕೂಡಿ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. ‘ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು’ ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು. ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ

ಪರದಂ ಸರ್ವರತ್ನಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪುವನುಜ್ಜೇನಿಗೆ ಮಾಱಲ್ ಕೊಂಡುಬಂದೊನಾ ಪೊೞಲನಾಳ್ವೊಂ ವೃಷಭಾಂಕನೆಂಬೊನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾಗಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇನಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಕಂಬಳಂಗಳಂ ಕೊಂಡು ಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂ ಕೊಟ್ಟು ರತ್ನಕಂಬಳಂಗಳಂ ಕೊಂಡೊರೊಂದರಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞ್ಪೆನೆಂದು ಮನೆಗೆವರ್ಪುದಂ ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮ ಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು

ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು. ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿದರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುತ್ತಿದ್ದನು. ರಾಜರು ಬರುವುದನ್ನು ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು.ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, ‘ಸುಕುಮಾರನು ಎಲ್ಲಿದ್ದಾನೆ ? ’ ಎಂದು

ಬೆಸಗೊಂಡೊಡೆ ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ರ್ವೆರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ತಾಯ ವಚನಮಂ ಮಾರ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಣೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯ ಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ದಾರ್ಥಂಗಳ್ ಸುಕುಮಾರಸ್ವಾಮಿಯಾಸನಮನೊತ್ತೆ ಕಟಿವಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡತೆಗೆಯ್ವೆಮೆಂದು ಮಜ್ಜನಂಗೊಂಡಮರಸನ್ನಿಭ ಮಣಿಕುಟ್ಟಿಮಮಪ್ಪ ಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪ ತನ್ನ ಬೆರಲ ಮಾಣಿಕದುಂಗುರಂ ಬಿೞ್ಪುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂ ತೆಱೆದಂತಪ್ಪ ಲೇಸಪ್ಪ ನಾನಾಮಣಿಯ ವಿಚಿತ್ರ ಭೂಷಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಮಾರೋಗಿಸಲೆೞ್ತನ್ನಿ

ಕೇಳಿದನು. ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ* ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು ? * ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು* ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ ? * ಎನ್ನುತ್ತ ಆಶ್ಚರ್ಯಪಟ್ಟನು. ತಾಯಿಯ ಮಾತನ್ನು ವಿರೋಸಲಾರದೆ ಬಂದನು. ಅವನನ್ನು ರಾಜನು ಕಂಡು “ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು* ಎಂದುಕೊಂಡುಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ ಕಣ್ನೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತದ್ದನು. ಅಷ್ಷರಲ್ಲಿ ರಾಜನನ್ನು ಸುಕುಮಾರನನ್ನೂ ‘ಊಟಕ್ಕೆ ಬನ್ನಿರಿ’

ಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರುಂ ಬರೆಸು ನಾನಾಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಆರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗು ಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗರುಚಿಯೆಂದು ಬಗದುಣಿಸು ಸಮೆದ ಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾವಿನೋದದಿಂದಿರ್ದೊಡೆ ಯಶೋಭದ್ರೆಯನರಸನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶದ ರೋಗಕ್ಕಂ ಕಣ್ಣನೀರ್ ಬರ್ಪುದರ್ಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಅವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದು ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳ ನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೊಗಂಗಳ್

ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅ ರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು* ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳ ವಿನೋದದಿಂದ ಇದ್ದರು. ಆಗ ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? * ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ* ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟನು. “ಈತನು ಒಂದು ಕ್ಷಣದ ಭೋಗಕ್ಕೂ ಸುಖಕ್ಕೂ ನನ್ನ ಎಲ್ಲಾ ಕಾಲವೂ ಅರಸುತನ ನಡೆಸಿದಾಗ ಉಂಟಾದ ಭೋಗ – ಉಪಭೋಗಗಳು ಸಮಾನವಾಗವು. ಆದುದರಿಂದ ಲೋಕದಲ್ಲಿ

ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂ ಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ ಯಶೋಭದ್ರೆಯುಮರಸಮನನನೇಕ ವಸ್ತುವಾಹನಂಗಳಿಂದಂ ಪೂಜಿಸಿ ಕೞಪಿದೊಳಿಂತು ಸುಕುಮಾರಸ್ವಾಮಿಗೆ ಸುಖದಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಯಶೋಭದ್ರೆಯ ಭ್ರಾತರರಪ್ಪ ದಯಾಭದ್ರರೆಂಬ ರಿಸಿಯರ್ ಮುನ್ನಮವರ ಪಕ್ಕದೆ ಸೂರದತ್ತಂ ಧರ್ಮಂ ಕೇಳ್ದು ವೈರಾಗ್ಯಮಾಗಿ ಪುತ್ರಮುಖಂಗಂಡು ತಪಂಬಟ್ಟೊನಾತನ ಮಗನುಂ ರಿಸಿಯರಂ ಕಂಡಾಗಳೆ ತಪಂಬಡುಗುಮೆಂಬುದಂ ಮುನ್ನೆ ನೈಮಿತ್ತಿಕರಾದೇಶಂಗೆಯ್ದಿರ್ದರ್ ಮತ್ತಂ ದಯಾಭದ್ರರೆಂಬ ರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪ ದಿವ್ಯಜ್ಞಾನಿಗಳ್ ಸುಕುಮಾರಸ್ವಾಮಿಗೆ ನಾಲ್ಕುತಿಂಗಳುಮೈದುದಿವಸಮಾಯುಷ್ಯಪ್ರಮಾಣ ಮನಱದುಪಕಾರಾರ್ಥಮುಜ್ಜೇನಿಗೆ ವಂದು ಸುಕುಮಾರಸ್ವಾಮಿಯ ಮಾಡದ ಪೆಱಗಣ ನಂದನ ವನದೊಳಗಣ ಜಿನಾಲಯದೊಳಾಷಾಢ ಮಾಸದ ಚತುರ್ದಶಿಯ ದಿವಸದಂದು ಪಱವೊೞ್ತು ಬಂದು ಜೋಗುಗೊಂಡಿರ್ದರನ್ನೆಗಂ ವನಪಾಲಕರ್ ಪೋಗಿ ಯಶೋಭದ್ರೆಗೆ ರಿಸಿಯರ ಬರವಂ ಪೇೞ್ದೊಡಾಕೆಯುಂ ಬಂದು ದೇವರುಮಂ ರಿಸಿಯರುಮಂ ಬಂದಿಸಿ ಭಟ್ಟಾರಾ ನೀಮಿಲ್ಲಿಗೇಕೆ ಬಂದಿರಿಲ್ಲಿಂದಂ ಪೊಱವೊೞಲೊಳ್ ಪೆಱವುೞ ಬಸದಿಯಿಲ್ಲಾ ಎಂದೊಡೆ ಭಟ್ಟಾರರೆಂದರಬ್ಬಾ ನಿಡುವಯಣಂ ಬಂದು ಸೇದಗೆಟ್ಟೆಂತಾನುಮಿಲ್ಲಿಗೆಯಾಸತ್ತು ಜೋಗಿನ ಪೊೞ್ತಱೊಳೆಯ್ದಿ ಬಂದು

ನಿಜವಾಗಿಯೂ ಈತನೇ ಸುಖಿ* ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು. ಯಶೋಭದ್ರೆ ರಾಜನನ್ನು ಹಲವಾರು ವಿಧದ ವಸ್ತುಗಳಿಂದಲೂ ವಾಹನಗಳಿಂದಲೂ ಸತ್ಕರಿಸಿ ಕಳುಹಿಸಿದಳು. ಹೀಗೆ ಸುಕುಮಾರಸ್ವಾಮಿಗೆ ಕಾಲವು ಸುಖಮಯವಾಗಿ ಸಾಗುತ್ತಿತ್ತು. ಅನಂತರ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದರು. ಹಿಂದೆ ಅವರ ಬಳಿಯಲ್ಲಿದ್ದು ಸೂರದತ್ತನು (ಸುಕುಮಾರನ ತಂದೆ) ಧರ್ಮಶ್ರವಣ ಮಾಡಿ, ವೈರಾಗ್ಯ ತಾಳಿ, ಮಗನು ಹುಟ್ಟಿದೊಡನೆ ತಪಸ್ಸಿಗೆ ತೆರಳಿದ್ದನು. ಆತನ ಮಗನಾದ ಸುಕುಮಾರನೂ ಋಷಿಗಳನ್ನು ಕಂಡ ಕೂಡಲೇ ತಪಸ್ಸಿಗೆ ತೆರಳುವನೆಂಬುದನ್ನು ಹಿಂದೆಯೇ, ಜ್ಯೋತಿಷ್ಯ ತಿಳಿದವರು ತಿಳಿಸಿದರು. ಆಮೇಲೆ ದಯಾಭದ್ರರೆಂಬ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ, ದಿವ್ಯಜ್ಞಾನಿಗಳಾದ ಅವರು ಸುಕುಮಾರಸ್ವಾಮಿಗೆ ನಾಲ್ಕು ತಿಂಗಳು ಐದು ದಿವಸ ಮಾತ್ರ ಆಯುಷ್ಯವಿರುವುದನ್ನು ತಿಳಿದು ಉಪಕಾರ ಮಾಡುವುದಕ್ಕಾಗಿಯೇ ಉಜ್ಜಯಿನಿಗೆ ಬಂದರು. ಹಾಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಅಷಾಢಮಾಸದ ಚತುದರ್ಶಿಯ ದಿವಸ ಸಂಜೆ (ಹರೆ ಬಾರಿಸುವ ಹೊತ್ತು) ಬಂದು ಯೋಗಸ್ಥರಾಗಿದ್ದರು. ಅಷ್ಟರಲ್ಲಿ ಉದ್ಯಾನಪಾಲಕರು ಹೋಗಿ, ಋಷಿಗಳು ಬಂದ ಸಂಗತಿಯನ್ನು ಯಶೋಭದ್ರೆಗೆ ತಿಳಿಸಿದರು. ಆಕೆ ಬಂದು ಜಿನೇಂದ್ರರನ್ನೂ ಋಷಿಗಳನ್ನೂ ವಂದಿಸಿ ಋಷಿಗಳೊಡನೆ – “ಸ್ವಾಮೀ, ನೀವು ಈ ಸ್ಥಳಕ್ಕೆ ಯಾಕೆ ಬಂದಿರಿ? ಇಲ್ಲಿಗಿಂತ ಈ ಪಟ್ಟಣದ ಹೊರಗೆ ಬೇರೆ ಕಡೆ ಜಿನದೇವಾಲಯವಿರಲಿಲ್ಲವೆ? * ಎಂದು ಕೇಳಿದಳು. ಆಗ ಋಷಿಗಳು “ಅವ್ವಾ, ನಾವು ಬಹಳ ದೂರದಿಂದ ಪ್ರಯಾಣ

ಜೋಗುಗೊಂಡಿರ್ದೆಮೆತ್ತಲುಂ ಪೋಗಲಾಗದೆನೆ ಅಂತಪ್ಪೊಡೆ ಭಟಾರಾ ನಿಮ್ಮನೊಂದಂ ಬೇಡಿಕಪ್ಪೆಂ ನಾಲ್ಕುತಿಂಗಳುಮೇನುಮನೋದದೆ ಮೋನಂಗೊಂಡು ಬಸದಿಯಂಗಳದೊಳ್ ನಡಪಾಡ ದೊಳಗಣಡಂಗಿರ್ದು ಜೋಗು ನೆಱೆದಂದು ಬಿಜಯಂಗೆಯ್ಯಿಮೆಂದೊಡಂತೆಗೆಯ್ವೆಮೆಂದು ಭಟಾರರಿರ್ದರ್ ಮತ್ತಿತ್ತಲ್ ಸುಕುಮಾರಸ್ವಾಮಿಯುಂ ಸರ್ವತೋಭದ್ರಮೆಂಬುತ್ತುಂಗ ವಿಚಿತ್ರಮಾಗಿರ್ದ ಪ್ರಾಸಾದದ ಮೇಗೇೞನೆಯ ನೆಲೆಯೊಳೆ ಕಾರ್ತಿಕಮಾಸದ ಪುಣ್ಣಮಿಯಂದು ಸುಖದಿಂದೆ ಲುಂದಿರ್ದನನ್ನೆಗಮಿತ್ತ ದುಯಾಭದ್ರ ಭಟಾರರ್ಗ್ಗೆ ಜೋಗು ನೆಱೆದು ಯಶೋಭದ್ರೆಯ ಬೇಡಿದ ಮೋನದ ದಿವಸದ ಪ್ರಮಾಣಾವಸಾನದೊಳ್ ಬೈಗಿರುಳಿನ ಪಂಚಮಹಾಶಬ್ದದ ಪೊೞ್ತಱೊಳ್ ತ್ರಿಲೋಕಪ್ರಜ್ಞಪ್ರಿಯೆಂಬುದಂ ಮೃದು ಮಧುರ ಗಂಭೀರ ಸ್ವರದಿಂ ಭಟಾರರ್ ಪರಿವಿಡಿಗೆಯ್ದಾಗಳ್ ಆಧೋಲೋಕ ತಿರ್ಯಗ್ಲೋಕಂಗಳಿರ್ದ ಸ್ವರೂಪಮಂ ಪ್ರಮಾಣಮುಮನೋದಿ ಊರ್ಧ್ವಲೋಕವ್ಯಾವರ್ಣನೆಯಂ ಪೇೞ್ದೂಗಳಚ್ಯುತಕಲ್ಪದ ಪದ್ಮಗುಲ್ಮ ವಿಮಾನಮಂ ವ್ಯಾವರ್ಣಿಸುವುದಂ ಸುಕುಮಾರಸ್ವಾಮಿ ಕೇಳ್ದು ಜಾತಿಸ್ಮರನಾಗಿಯಾನಿಲ್ಲಿ ಪುಟ್ಟಿದ್ದೇನೆಂಬುದನಱದು ಅಹೋ ಸುರಲೋಕಮೆಂಬಮೃತಸಮುದ್ರದ ನೀರೆಲ್ಲಮಂ ಕುಡಿದು ತಣಿಯದನೀ ಮನುಷ್ಯಭವದ ಸುಖಮೆಂಬ

ಮಾಡಿಕೊಂಡು ಬಂದುದರಿಂದ ಬಹಳ ಬಳಲಿದ್ದೇವೆ. ಹೇಗಾದರೂ ಈ ಸ್ಥಳಕ್ಕೆ ಆಯಾಸಗೊಂಡು ಯೋಗಾಭ್ಯಾಸದ ಹೊತ್ತಿಗೆ ಬಂದು ತಲುಪಿ ಯೋಗಮಗ್ನರಾಗಿದ್ದೇವೆ. ಇಲ್ಲಿಂದ ಎಲ್ಲಿಗೂ ಹೋಗಲಾಗದು* ಎಂದು ಹೇಳಿದಳು. ಆಗ ಆಕೆ – “ಹಾಗಿದ್ದರೆ ಪೂಜ್ಯರೇ, ನಿಮ್ಮಲ್ಲಿ ಒಂದನ್ನು ನಾನು ಬೇಡಿಕೊಳ್ಳುತ್ತೇನೆ. ನೀವು ನಾಲ್ಕು ತಿಂಗಳು ಏನನ್ನೂ ಪಠಿಸದೆ, ಮೌನವ್ರತ ತಾಳಿ, ಜಿನಾಲಯದ ಅಂಗಳದಲ್ಲಿ ಅಡ್ಡಾಡದೆ ಒಳಗೆಯೇ ಅಡಗಿದ್ದು ತಪಸ್ಸು ಕೊನೆಗೊಂಡಾಗ ನಿಮ್ಮ ಪ್ರಯಾಣ ಬೆಳೆಸಿರಿ* ಎಂದಳು. “ಹಾಗೆಯೇ ಮಾಡುವೆವು* ಎಂದು ನುಡಿದು ಋಷಿಗಳಿದ್ದರು. ಆಮೇಲೆ ಇತ್ತ ಸುಕುಮಾರಸ್ವಾಮಿ ಸರ್ವತೋಭದ್ರವೆಂಬ ಅತ್ಯಂತ ಎತ್ತರವಾದ ಮತ್ತು ವಿಶೇಷ ಆಶ್ಚರ್ಯಕರವಾದ ಉಪ್ಪರಿಗೆಯ ಮನೆಯ ಮೇಲೆ ಏಳನೆಯ ಅಂತಸ್ತಿನಲ್ಲಿ ಕಾರ್ತಿಕಮಾಸದ ಹುಣ್ಣಿಮೆಯಂದು ಸುಖವಾಗಿ ಮಲಗಿದ್ದನು. ಅದೇ ಸಮಯಕ್ಕೆ ಈ ಕಡೆಯಲ್ಲಿ ದಯಾಭದ್ರಮುನಿಗಳ ತಪಸ್ಸು ಪೂರ್ಣವಾಯಿತು. ಯಶೋಭದ್ರೆ ಪ್ರಾರ್ಥಿಸಿಕೊಂಡ ಮೌನ ದಿವಸದ ಅವ ಕೊನೆಗೊಂಡಿತು. ಅಂದಿನ ರಾತ್ರಿಯೆ ಕೊನೆಯ ವೇಳೆ (ಮುಂಜಾವದಲ್ಲಿ) ಶೃಂಗ, ತಮಟೆ, ಶಂಖ, ಭೇರಿ, ಜಯಘಂಟೆ – ಎಂಬ ಐದು ಬಗೆಯ ವಾದ್ಯಗಳ ಬಾಜನೆಯ ಸಮಯದಲ್ಲಿ ಋಷಿಗಳು ಮೂರುಲೋಕಗಳ ಆಕಾರಾದಿಗಳನ್ನು ನಿರೂಪಿಸುವ ಶಾಸ್ತ್ರವನ್ನು ಮೆಲ್ಪು ಇಂಪು ಗುಣ್ಪುಳ್ಳ ಸ್ವರದಿಂದ ಅನುಕ್ರಮವಾಗಿ ಪಠನ ಮಾಡಿದರು. ಕೆಳಗಿನ ಲೋಕ, ಮೃಗಪಕ್ಷಿ(ತಿರ್ಯಕ್) ಲೋಕಗಳು ಇರುವ ಸ್ವರೂಪವನ್ನೂ ಅವುಗಳ ಪ್ರಮಾಣವನ್ನೂ ಪಠಸಿದರು. ಅನಂತರ ಮೇಲಿನ ಲೋಕದ ವರ್ಣನೆಯನ್ನು ಹೇಳಿ, ಮತ್ತೆ ಅಚ್ಯುತಕಲ್ಪದ ‘ಪದ್ಮ ಗುಲ್ಮ’ ಎಂಬ ಮಹಾಭವವನ್ನು ವರ್ಣನೆ ಮಾಡಿದರು. ಇದೆಲ್ಲವನ್ನೂ ಸುಕುಮಾರಸ್ವಾಮಿ ಕೇಳಿದನು. ಆಗ ಅವನಿಗೆ ಪೂರ್ವ ಜನ್ಮಸ್ಮರಣೆಯುಂಟಾಯಿತು. ತಾನೀಗ ಇಲ್ಲಿ ಹುಟ್ಟಿದ್ದೇನೆ – ಎಂಬುದನ್ನು ಅವನು ತಿಳಿದುಕೊಂಡನು. “ಆಹಾ, ನಾನು ದೇವಲೋಕವೆಂಬ ಸುಧಾಸಮುದ್ರದ ನೀರನ್ನೆಲ್ಲ ಕುಡಿದೂ ತೃಪ್ತಿಗೊಳ್ಳದೆ ಈ ಮನುಷ್ಯಜನ್ಮದ ಸುಖವೆಂಬ

ಪುಲ್ವನಿಯೊಳ್ ಸಿಲ್ಕಿ ಶಿವಸುಖಮನೆಯ್ದಿಸುವ ಸಚ್ಚಾರಿತ್ರದಿಂ ಬೞದೆನೆಂದು ತನ್ನಂ ತಾಂ ನಿಂದಿಸುತ್ತಂ ಮಂಚದಿಂದಿಳಿದು ಮಾಡದೊಳಗಿರ್ದ ವಸ್ತ್ರಂಗಳಂ ತೆಗೆದುಕೊಂಡು ಪ್ರಾಸಾದದ ಪೆಱಗಣ ಗವಾಕ್ಷಜಾಳದೊಳ್ ಕಟ್ಟಿಕೊಂಡೊಂದೊಂದಱ ತುದಿಯೊಳೊಂದೊಂದು ವಸ್ತ್ರಮಂ ತಗುೞ ಪಿಡಿದಿೞದು ಜಿನಾಲಯಮನೆಯ್ದಿ ದೇವರ್ಗೆ ನಮಸ್ಕಾರಂಗೆಯ್ದು ದಯಾಭದ್ರಭಟಾರರ್ಗೆಱಗಿ ಪೊಡೆವಟ್ಟು ದೀಕ್ಷೆಯಂ ಪ್ರಸಾದಂಗೆಯ್ದೆನ್ನಂ ಸಂಸಾರಾರ್ಣವದತ್ತಣಿಂದೆತ್ತಿಮೆಂದೊಂಗೆ ಭಟಾರರ್ ಮೂಱು ದಿವಸಂ ನಿನಗಾಯಷ್ಯಮೆಂದೊಡೀಗಳೀ ನಿಸ್ಸಾರಮಪ್ಪ ದೇಹದಿಂ ಸಾರಮಪ್ಪ ತಪಮಂ ಕೈಕೊಂಡು ಪಲಕಾಲಂ ನೆಗೞಲ್ ಪೆತ್ತೆನಿಲ್ಲ ನಿಸ್ಸಾರಮಪ್ಪ ಭೋಗದೊಳ್ ಸಿಲ್ಕಿ ಅಮೇಧ್ಯದೊಳ್ ಕ್ರೀಡಿಸುವ ಬಾಳಕಂಬೊಲ್ ಕಾಲಮಂ ಬಱದೆ ಕಳೆದೆನೆಂದು ತನ್ನನಾದಮಾನುಂ ನಿಂದಿಸಿ ತತ್ಪಾದಮೂಲದೊಳ್ ತಪ್ಪಂಬಟ್ಟು ಪಂಚಮಹಾಬ್ರತಂಗಳನೇಱೆಸಿಕೊಂಡು ಪಡಿದಮಣಂಗೇಳ್ದ ತದನಂತರಂ ನಿಶ್ಚಯ ಸಮ್ಯ್ವಕ್ರಮಂ ಕೈಕೊಂಡಿಂ ಬೞಕ್ಕೆ ಮಹಾಕಾಳಮೆಂಬ ಶ್ಮಶಾನಕ್ಕೆ ಪೋಗಿ ಯಾವಜ್ಜೀವಮಾಹಾರಕ್ಕೆ ನಿವೃತ್ತಿಗೆಯ್ದು ಪ್ರಾಯೋಪಗಮನ ವಿಧಾನದಿಂ ಪ್ರಚ್ಛನ್ನಮಪ್ಪೆಡೆಯೊಳ್ ಮೃತಕ ಸೆಜ್ಜೆಯೊಳಿರ್ದು ಸನ್ಯಸನಂಗೆಯ್ದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಧ್ಯಾನಿಸುತ್ತಿರ್ಪನ್ನೆಗಂ ಇತ್ತ ವಾಯುಭೂತಿಯಪ್ಪ ಭವದಂದಿನತ್ತಿಗೆಯಪ್ಪ ಸೋಮದತ್ತೆಯೆಂಬೊಳ್ ನಿದಾನಂಗೆಯ್ದು ತನ್ನ ನಾಲ್ವರ್ ಮಕ್ಕಳುಂ ತಾನುಂ ಸಂಸಾರಸಮುದ್ರದೊಳ್

ಹುಲ್ಲಿನ ಹನಿಗೆ ಸಿಕ್ಕಿ ಮಂಗಳಕರಸುಖಗಳನ್ನು ಒದಗಿಸುವ ಒಳ್ನಡತೆಯಿಂದ ಕೆಳಕ್ಕೆ ಜಾರಿಹೋಗಿದ್ದೇನೆ* – ಎಂದು ತನ್ನನ್ನು ತಾನೇ ನಿಂದಿಸಿಕೊಂಡನು. ಮಂಚದಿಂದ ಇಳಿದು, ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಉಪ್ಪರಿಗೆ ಮನೆಯ ಹಿಂಗಡೆಯ ಕಿಟಕಿಗೆ ಕಟ್ಟಿಕೊಂಡು ಒಂದೊಂದರ ತುದಿಗೆ ಒಂದೊಂದು ಬಟ್ಟೆಯನ್ನು ಕಟ್ಟಿ, ಅದನ್ನು ಹಿಡಿದು ಕೆಳಗಿಳಿದು ಜಿನಾಲಯಕ್ಕೆ ಬಂದು ಜಿನೇಶನನ್ನು ವಂದಿಸಿದನು. ದಯಾಭದ್ರಮುನಿಗಳಿಗೆ ಸಾಷ್ಟಾಂಗ ವಂದಿಸಿ “ನನಗೆ ದೀಕ್ಷೆಯನ್ನು ಅನುಗ್ರಹಿಸಿ ನನ್ನನ್ನು ಸಂಸಾರಸಮುದ್ರದಿಂದ ಎತ್ತಿರಿ* ಎಂದು ಹೇಳಿದನು. ಆಗ ನಿನಗೆ ಮೂರು ದಿವಸದ ಆಯುಷ್ಯ ಮಾತ್ರವಿರುವುದು* ಎಂದರು. ಆಗ ಸುಕುಮಾರಸ್ವಾಮಿ – “ಈಗ ಈ ನಿಸ್ಸಾರವಾದ ಶರೀರದಿಂದ ಸಾರವತ್ತಾದ ತಪಸ್ಸನ್ನು ಕೈಕೊಂಡು ನಾನು ಬಹಳಕಾಲ ಆಚರಿಸಲಿಲ್ಲ. ನಿಸ್ಸಾರವಾದ ಸುಖಾನುಭವದಲ್ಲಿ ಸಿಕ್ಕಿಕೊಂಡು ಹೇಲಿನಲ್ಲಿ ಆಟವಾಡುವ ಬಾಲಕನ ಹಾಗೆ ವ್ಯರ್ಥವಾಗಿ ಕಾಲವನ್ನು ಕಳೆದೆನು* ಎಂದು ತನ್ನನ್ನು ಅತಿಶಯವಾಗಿ ಹಳಿದುಕೊಂಡನು. ಆ ಮುನಿಗಳ ಪಾದದ ಬುಡದಲ್ಲಿ ತಪಸ್ಸಿನ ಆಚರಣೆಯನ್ನು ಸ್ವೀಕರಿಸಿ, ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು (ಪಡಿಕಮಣ) ಕೇಳಿದ ನಂತರ ಜೈನತತ್ವವನ್ನು ಸ್ವೀಕರಿಸಿ ಮಹಾಕಾಳವೆಂಬ ಶ್ಮಶಾನಕ್ಕೆ ಹೋಗಿ ಜೀವವಿರುವವರೆಗೂ ಆಹಾರವನ್ನು ಸೇವಿಸದೆ, ಆಮರಣ ಉಪವಾಸ ವಿಧಾನದಿಂದ ಗುಪ್ತವಾದ ಸ್ಥಳದಲ್ಲಿ ಶವಾಸನದಲ್ಲಿದ್ದು, ಸಂನ್ಯಾಸವನ್ನು ಮಾಡುತ್ತ ಧರ್ಮಧ್ಯಾನ ಶುಕ್ಲಧ್ಯಾನ ಎಂಬ ಧ್ಯಾನಗಳಲ್ಲಿ ಮಗ್ನನಾಗಿದ್ದನು. ಆ ಕಡೆಯಲ್ಲಿ ವಾಯುಭೂತಿಯಾಗಿದ್ದ ಜನ್ಮದದಿಂನ ಅತ್ತಿಗೆಯಾಗಿದ್ದ ಸೋಮದತ್ತೆ ಎಂಬುವಳು (ಜನ್ಮಾಂತರದಲ್ಲಿ ನರಿಯಾಗಿ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವವಳಾಗುವೆನೆಂದು) ಪ್ರತಿಜ್ಞೆಮಾಡಿ ತನ್ನ ನಾಲ್ಕು ಮಂದಿ ಮಕ್ಕಳೂ ತಾನೂ

ನೀಡುಂ ತಿಱ್ರನೆ ತಿರಿದು ಬಂದು ಪೆಣ್ಣರಿಯಾಗಿ ಪುಟ್ಟಿ ತನ್ನ ನಾಲ್ಕು ಮಱಗಳ್ವೆರಸಾಹಾರಮನಱಸಿ ತೊೞಲುತ್ತಂ ಬರ್ಪುದನ್ನೆಗಂ ಸುಕುಮಾರಸ್ವಾಮಿಯುಂ ಮಹಾಕಾಳಕ್ಕೆ ಪೋಪನೆಲ್ಲಾ ಕಾಲಮುಂ ಮಣಿಕುಟ್ಟಿಮಭೂಮಿಯೊಳ್ ಪಾಸಿದ ನೇತ್ರಪೞಯ ಮೇಗೆ ನಡೆದ ಮೃದು ಲಲಿತಮಪ್ಪ ಚರಣದ್ವಯದೊಳ್ ಮುನ್ನೆಂದಂ ನೆಲನಂ ಕಿಟ್ಟಿಯಱಯದೊಂ ಕಠಿನಭೂಮಿಯೊಳ್ ನಡೆದೊಡೆ ಕಿಱುಗಲ್ಗಳುಂ ಪೆಟ್ಟಿಗಳುಮಗುೞ್ದು ಪುಗೊಳೊಡೆದು ಪೊಱಮಟ್ಟು ಕರಗದ ದಾರೆವೊಲೆಡೆವಱಯದೆ ಮಹಾಕಾಳಶ್ಮಶಾನಂಬರಗಮೊಕ್ಕ ನೆತ್ತರ ದಾರೆಯ ಗಂದದಿಂದಂ ನರಿಗಳ್ ಬಂದು ಕಂಡು ರಾಗಿಸಿ ಮಱಗಳ್ವೆರಸಡಿಯಿಂದಂ ತೊಟ್ಟೆರಡುಂ ಕಾಲ್ಗಳಂ ಮೊೞಕಾಲ್ವರೆಗಮೊಂದುದಿವಸಂ ತಿಂದತ್ತೆರಡನೆಯ ದಿವಸಂ ಮೊೞಕಾಲಿಂ ತೊಟ್ಟು ಕಟಿವರೆಗಂ ತಿಂದತ್ತು ಮೂರನೆಯ ದಿವಸಂ ಬಸಿಱಂ ಪೋೞ್ದು ಕರುಳಂ ತೋಡಿ ತಿನೆ ಪೃಥಕ್ರ್ವವಿತರ್ಕವೀಚಾರಮೆಂಬ ಪ್ರಥಮ ಶುಕ್ಲಧ್ಯಾನದೊಳ್ ಕೂಡಿಯುಪಶಾಂತ ಗುಣಸ್ಥಾನದೊಳಿರ್ದು ರತ್ನತ್ರಯಮಂ ಸಾದಿಸಿ ಸಯಸತ್ತಮ ದೇವನಾಗಿ ಪುಟ್ಟಿದೊಂ ಮತ್ತಿತ್ತ ತಾಯುಂ ಪೆಂಡಿರುಂ ಪರಿವಾರಮುಮೆಲ್ಲಾ ದೆಸೆಗಳೊಳಂ ಪರಿವರಿದು ಪೋಗಿ ಸುಕುಮಾರಸ್ವಾಮಿಯನಹೊ ಸೂರಾ ಆಹೋ ಮಹಾಪುರುಷ ಅಹೊ ಧೈರ್ಯವಂತ ಅಹೊ

ಸಂಸಾರವೆಂಬ ಸಮುದ್ರದಲ್ಲಿ ವಿಶೇಷವಾಗಿ ತಿರ್ರನೆ ಸುತ್ತುತ್ತ ಬಂದು, ಹೆನ್ಣು ನರಿಯಾಗಿ ಹುಟ್ಟಿ ತನ್ನ ನಾಲ್ಕು ಮರಿಗಳೊಂದಿಗೆ ಅದು ಆಹಾರವನ್ನು ಹುಡುಕುತ್ತ ಸುತ್ತಾಡುತ್ತಾ ಬರುತ್ತಿತ್ತು. ಸುಕುಮಾರಸ್ವಾಮಿ ಮಹಾಕಾಳವೆಂಬ ಶ್ಮಶಾನದ ಕಡೆಗೆ ಹೋಗುತ್ತಿದ್ದವನು. ಅವನು ಯಾವ ಕಾಲದಲ್ಲಿ ನೋಡಿದರೂ ರತ್ನಮಯವಾದ ಜಗಲಿಯ ಮೇಲೆ ಹಾಸಿದ ರೇಷ್ಮೆ ವಸ್ತ್ರದ ಮೇಲೆ ನಡೆದ ತನ್ನ ಮೆತ್ತಗಾದ ಮತ್ತು ಚೆಲುವಾದ ಎರಡು ಪಾದಗಳಲ್ಲಿ ಹಿಂದೆ ಎಂದೂ ನೆಲವನ್ನು ಮುಟ್ಟಿಯೂ ಅರಿಯದವನು, ಅವನು ಈಗ ಕಠಿನವಾದ ನೆಲದಲ್ಲಿ ನಡೆಯಲು, ಹರಳುಕಲ್ಲುಗಳೂ ಹೆಂಟೆ (ಗಟ್ಟಿ)ಗಳೂ ನಾಟಿಕೊಂಡು ಗುಳ್ಳೆಯೆದ್ದು ಒಡೆದು ಅದರಿಂದ ಹೊರಟ ರಕ್ತವು ಕರಗದಿಂದ ಇಳಿಯುವ ನೀರಿನ ಧಾರೆಯಂತೆ ನಿರಂತರವಾಗಿ ಸುರಿದಿತ್ತು. ಮಹಾಕಾಳ ಶ್ಮಶಾನದವರೆಗೂ ಸುರಿದ ರಕ್ರದ ಧಾರೆಯ ವಾಸನೆಯಿಂದ ನರಿಗಳು ಬಂದು ನೋಡಿದವು. ಆ ಹೆಣ್ಣುನರಿ ಸಂತೊಷಗೊಂಡು ತನ್ನ ಮರಿಗಳ ಸಮೇತವಾಗಿ ಮೊದಲನೆಯ ದಿನ ಸುಕುಮಾರ ಸ್ವಾಮಿಯ ಎರಡು ಕಾಲುಗಳನ್ನು ಪಾದದಿಂದ ಪ್ರಾರಂಭಿಸಿ ಮೊಣಕಾಲುಗಳವರೆಗೆ ತಿಂದಿತು. ಎರಡನೆಯ ದಿವಸ ಮೊಣಕಾಲುಗಳಿಂದ ಪ್ರಾರಂಭಿಸಿ ಸೊಂಟದವರೆಗೆ ತಿಂದಿತು. . ಮೂರನೆಯ ದಿವಸ ಹೊಟ್ಟೆಯನ್ನು ಸೀಳಿ ಕರುಳನ್ನು ತೋಡಿ ತಿನ್ನುತ್ತಿತ್ತು. ಆಗ ಸುಕುಮಾಸ್ವಾಮಿಯು ಪೃಥಕ್ತ್ವ, ವಿತರ್ಕ, ವೀಚಾರ – ಎಂಬ ಮೊದಲನೆಯ ಶ್ಲೋಕಧ್ಯಾನದಲ್ಲಿ ಸೇರಿಕೊಂಡು ಉಪಶಾಂತಿ ಎಂಬ ಗುಣಸ್ಥಾನದಲ್ಲಿದ್ದು ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ಚಾರಿತ್ರ – ಎಂಬ ರತ್ನತ್ರಯವನ್ನು ಸಾಧನೆ ಮಾಡಿ ಅತ್ಯಂತ ಶ್ರೇಷ್ಠ ದೇವತೆಯಾಗಿ ಜನಿಸಿದನು. ಆ ಮೇಲೆ ಇತ್ತಲಾಗಿ ಸುಕುಮಾರಸ್ವಾಮಿಯ ತಾಯಿಯೂ ಹೆಂಡಿರೂ ಪರಿವಾರವೂ ಎಲ್ಲಾ ದಿಕ್ಕುಗಳಲ್ಲಿಯೂ ಸಂಚರಿಸಿಕೊಂಡು ಹೋಗಿ ಸುಕುಮಾರಸ್ವಾಮಿಯನ್ನು ಎರಡು ದಿವಸ ಇರುಳು ಹಗಲೂ ಹುಡುಕಿದರು. ಆದರೆ ಕಾಣಲಿಲ್ಲ ಮೂರನೆಯ ದಿವಸದಂದು ಸಂಜೆ ಹೊತ್ತಿನಲ್ಲಿ ದೇವತೆಗಳು ಬಂದು ಸುಕುಮಾರಸ್ವಾಮಿಯನ್ನು “ಆಹಾ ಶೂರನೇ, ಆಹಾ

ಸಂಸಾರಭೀರು ನಿನ್ನಂತುಪಸರ್ಗಮನಾರಪ್ಪೊಡು ಸೈರಿಸಿ ರತ್ನತ್ರಯಮಂ ಸಾಸಿದೊರಿಲ್ಲೆಂದು ದೇವತೆಗಳ್ ಪೊಗಳ್ವ ಕಳಕಳಧ್ವನಿಯುಮಂ ದೇವದುಂದುಭಿಯ ರವಮುಮಂ ಯಶೋಭದ್ರೆ ನೋಡಿ ದೆವಸಂಘಾತಮಂ ಕಂಡು ಮಗನ ಸಾವನಱದು ಬಯ್ಗಿರುಳಾದಾಗಳ್ ಮೂವತ್ತಿರ್ವರ್ ಸೊಸೆವಿರ್ಕಳ್ಗಂ ಪೇೞ್ದಟ್ಟಿ ಸುಕುಮಾರಸ್ವಾಮಿ ನಿಮಗೆಲ್ಲರ್ಗೆ ಮುಳಿದು ಪೋಗಿಯಡಂಗಿರ್ದೊನನಾನಱವೆಂ ನೀವೆಲ್ಲಂ ನೆಱೆಯೆ ತೊಟ್ಟುಟ್ಟು ಪಸದನಂಗೊಂಡು ಚೆಲ್ವೆಯರಾಗಿ ಬನ್ನಿಂ ಪೋಪಂ ತಿಳಿಪಿಕೊಂಡು ಬರ್ಪಂ ನಿಮ್ಮ ಸ್ವಾಮಿಯನೆಂದೊಡವರ್ಗಳನಿಬರುಂ ರಾಗಿಸಿ ಕೈಗೆಯ್ದತ್ತೆಯೊಡನೆ ಪರಿವಾರಸಹಿತಂ ಮಹಾಕಾಳಕ್ಕೆ ಪೋಗಿ ನೋೞ್ಪರನ್ನೆಗಂ ನಮೇರು ಮಂದಾರ ಸಂತಾನಕ ಪಾರಿಯಾತ್ರಮೆಂಬ ದೇವರ್ಕಳ್ ಸುರಿದ ಪುಷ್ಪವೃಷ್ಟಿಯಿಂದಂ ಮುಚ್ಚೆಪಟ್ಟನಾಗಿ ಕಂಪಿಮಗೆಱಗಿದ ತುಂಬಿಯ ಸಮೂಹಮಂ ಮೇಗೆ ಸುೞವುದಂ ಕಂಡಿಲ್ಲಿರ್ದ್ದನೆಂದು ಯಶೋಭದ್ರೆ ತೋಱದೊಡೆ ಪೋಗಿ ತೆಱೆದು ನೋೞ್ಪರನ್ನೆಗಂ ಮೃತಕಮಂ ಕಂಡನಿಬರುಂ ಮೂರ್ಛೆವೋಗಿ ನೀಡಱಂದೆೞ್ಚರ್ತು ತಮ್ಮ ಬಸಿಱುಮಂ ತಲೆಯುಮಂಬಡಿದುಕೊಂಡು ಸುಕುಮಾರಸ್ವಾಮಿಯ ರೂಪಮಂ ತೇಜಮುಮಂ ಯೌವನಮಂ ಲಾವಣ್ಯಮಂ ಸೌಭಾಗ್ಯಮಂ ಯಶಮಂ ಮೆಲ್ಪಂ ನುಡಿಯ ಬಲ್ಮೆಯಂ ಶುಚಿತ್ವಮಂ ಶೌಚಮಂ ಶ್ರೀಯಂ ಸಂಪತ್ತಂ ಸೊಬಗಂ ಒಲ್ಮೆಯಂ ಧೈರ್ಯಮಂ ಎಂದಿವು ಮೊದಲಾಗೊಡೆಯವಾತನೊಳ್ ನೆಲಸಿರ್ದ ಗುಣಂಗಳಂ

ಧೈರ್ಯಶಾಲಿಯೇ, ಆಹಾ ಸಂಸಾರಕ್ಕೆ ಹೆದರಿದವನೇ, ನಿನ್ನ ಹಾಗೆ ಉಪಸರ್ಗಗಳನ್ನು ಸಹಿಸಿಕೊಂಡು ರತ್ನತ್ರಯವನ್ನು ಸಾಸಿದವರು ಯಾರೂ ಇಲ್ಲ* ಎಂದು ಹೊಗಳುತ್ತಿದ್ದರು. ಹಾಗೆ ಹೊಗಳುವ ಗದ್ದಲದ ಧ್ವನಿಯನ್ನೂ ದೇವಲೋಕದ ದುಂದುಭಿವಾದ್ಯದ ಶಬ್ದವನ್ನೂ ಯಶೋಭದ್ರೆ ಕೇಳಿ, ದೇವತಾಸಮೂಹವನ್ನು ಕಂಡು ತನ್ನ ಮಗನು ಸತ್ತುದು ನಿಜವೆಂದು ತಿಳಿದುಕೊಂಡಳು. ಅಂದು ರಾತ್ರಿ ಮೂವತ್ತೆರಡು ಮಂದಿ ಸೊಸೆಯಂದಿರಿಗೂ ಅವಳು ಹೇಳಿಕಳುಹಿಸಿದಳು. ಅವರೊಡನೆ ಹೀಗೆಂದಳು – “ಸುಕುಮಾರಸ್ವಾಮಿ ನಿಮ್ಮೆಲ್ಲರ ಮೇಲೆಯೂ ಕೋಪಿಸಿಕೊಂಡು ಹೋಗಿ ಅಡಗಿರುತ್ತಾನೆ. ಅವನು ಎಲ್ಲಿರುವನೆಂದು ನಾನು ಬಲ್ಲೆ. ನೀವೆಲ್ಲರೂ ವಿಶೇಷವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಶೃಂಗಾರಮಾಡಿಕೊಂಡು ಚೆಲುವೆಯರಾಗಿ ಬನ್ನಿ, ಹೋಗೋಣ. ನಿಮ್ಮ ಒಡೆಯನಾದ ಸುಕುಮಾರನನ್ನು ಸಂತಯಿಸಿಕೊಂಡು ಬರೋಣ* ಹೀಗೆನ್ನಲು ಅವರೆಲ್ಲರೂ ಸಂತೋಷಗೊಂಡು ಸಿಂಗರಿಸಿಕೊಂಡು ಅತ್ತೆ (ಯಶೋಭದ್ರೆ)ಯೊಂದಿಗೆ ಮಹಾಕಾಳ ಶ್ಮಶಾನಕ್ಕೆ ಹೋಗಿ ನೋಡಿದರು. ಆಗ ಸುರಪುನ್ನಾಗ, ಮಂದಾರ, ಕಲ್ಪವೃಕ್ಷ, ಪಾರಿಯಾತ್ರಗಳ ಹೂಮಳೆಯನ್ನು ದೇವತೆಗಳು ಸುರಿಸಲು ಅದರಿಂದ ಮುಚ್ಚಲ್ಪಟ್ಟವನಾಗಿ, ಹೂಗಂಪಿಗೆ ಬಂದೆರಗಿದ ತುಂಬಿಗಳ ಹಿಂಡು ಮೇಲುಗಡೆ ಸುಳಿಯುವುದನ್ನು ಕಂಡು ಸುಕುಮಾರನು ಇಲ್ಲಿದ್ದಾನೆ ಎಂದು ಯಶೋಭದ್ರೆ ತೋರಿಸಿದಳು. ಆಗ ಇವರು ಹೋಗಿ, ಮುಚ್ಚಿದ್ದನ್ನು ತೆರೆದು ನೋಡಿದರು. ಹೆಣವನ್ನು ಕಂಡು ಅವರೆಲ್ಲರೂ ಮೂರ್ಛೆ ಹೋದರು. ಬಹಳ ಹೊತ್ತಾದನಂತರ ಎಚ್ಚರಗೊಂಡು ತಮ್ಮ ಹೊಟ್ಟೆಯನ್ನೂ ತಲೆಯನ್ನೂ ಬಡಿದುಕೊಂಡು ಸುಕುಮಾರಸ್ವಾಮಿಯ ರೂಪ, ಕಾಂತಿ, ಯಾವನ, ಲಾವಣ್ಯ, ಸೌಭಾಗ್ಯ, ಕೀರ್ತಿಗಳನ್ನೂ ಮೃದುಸ್ವಭಾವವನ್ನೂ ಮಾತಿನ ಪ್ರೌಢಿಮೆಯನ್ನೂ ಶುಚಿತ್ವವನ್ನೂ ಶುದ್ಧಗುಣವನ್ನೂ, ಶೋಭೆಯನ್ನೂ, ಸಂಪತ್ತನ್ನೂ, ಸೊಬಗನ್ನೂ, ಪ್ರೀತಿಯನ್ನೂ ಧೈರ್ಯ ಮುಂತಾಗಿರುವ

ನೆನೆನೆನೆದನಿಬರುಂ ಪ್ರಲಾಪಂಗೆಯ್ಯುತ್ತಂ ಸೈರಿಸಲಾಱದೆ ನಿರಂತರಂ ಮೂರ್ಛೆವೋಗುತ್ತಂ ನೀಡುಂ ಬೇಗಂ ದುಃಖಂಗೆಯ್ದಳ್ತು ನೀರಿೞದೆಣ್ಬರ್ ಬಸಿಱ ಪೆಂಡಿರುೞಯೆ ಇರ್ಪತ್ತು ನಾಲ್ವರ್ ಪೆಂಡಿರುಂ ಮತ್ತಂ ಪೆಱರ್ ನಂಟರ್ಕಳುಂ ಪರಿವಾರಮುಂ ಯಶೊಭದ್ರೆಯೊಡನೆ ದಯಾಭದ್ರರ್ ಗುರುಗಳಾಗೆ ಕಮಳಶ್ರೀ ಕಂತಿಯರ್ ಕಂತಿಯರಾಗೆ ತಪಂಬಟ್ಟುಗ್ರೋಗ್ರತಪಂಗೆಯ್ದನಿಬರುಂ ಸೌಧರ್ಮಕಲ್ಪಂ ಮೊದಲಾಗೊಡೆಯ ಕಲ್ಪಂಗಳೊಳ್ ಪುಟ್ಟಿದರ್ ಮುತ್ತಿಂತಪ್ಪುದಂ ಚಿಂತಿಸಲುಂ ಸೈರಿಸಲುಮಾಗದ ತಿರಿಕೋಪಸರ್ಗಮನವಂತಿ ಸುಕುಮಾರಸ್ವಾಮಿ ಮೂಱು ದಿವಸಮಿರುಳುಂ ಪಗಲುಂ ಸೈರಿಸಿ ರತ್ನತ್ರಯಮನೆಂತು ಸಾದಿಸಿದನಂತೆ ಸನ್ಯಸನಂಗೆಯ್ದಿರ್ದಾರಾಧಕರಪ್ಪ ಮಹಾಪುರುಷರುಮವಂತಿ ಸುಕುಮಾರಸ್ವಾಮಿಯ ಪರಮಸುಖಿಯಪ್ಪುಪಸರ್ಗಮಂ ವಿಜಯವಿಧಾನಮಂ ಮನದೊಳನವರತಂ ಚಿಂತಿಸುತ್ತಾಪ್ತಾಗಮ ಪದಾರ್ಥರ್ದಿಗಳೊಳತೀವಸ್ಥಿರರಾಗಿ ಪರಮ ಸಹಜ ನಿಜ ರತ್ನತ್ರಯದೊಳ್ ಕೂಡಿ ಆಭೇದವಾಗೆಯ್ದೆ ಕೂಡಿ ಶರೀರಂ ಮೊದಲಾಗೊಡೆಯ ಸಮಸ್ತ ಬಾಹ್ಯಾಭ್ಯಂತರ ಪರಿಗ್ರಹಂಗಳಂ ನೆಱೆ ತೊಱೆದು ಅಪೂರ್ವಪವರ್ಗಸುಖಂಗಳನೆಯ್ದುಗೆ ಮತ್ತುಜ್ಜೇನಿಯ ತೆಂಕಣ ದೆಸೆಯೊಳವಂತಿ ಸುಕುಮಾರಸ್ವಾಮಿಯ ಕಾಲಂಗೆಯ್ದೆಡೆ ಈಗಳುಂ ಪುಣ್ಯಮುಂ ಪವಿತ್ರಮುಮಾದುದು ಮತ್ತಂ

ಆತನಲ್ಲಿ ನೆಲಸಿಕೊಂಡಿದ್ದ ಗುಣಗಳನ್ನೂ ಮತ್ತು ಮತ್ತೂ ನೆನಸಿಕೊಳ್ಳುತ್ತ, ಅವರೆಲ್ಲರೂ ಗೋಳಾಡುತ್ತ ಸಹಿಸಲಾರದೆ ಎಡೆಬಿಡದೆ ಆಗಾಗ ಮೂರ್ಛೆಗೊಳ್ಳುತ್ತ, ಬಹಳ ಹೊತ್ತಿನ ತನಕ ದುಃಖಪಡುತ್ತ ಅತ್ತು, ಸ್ನಾನ ಮಾಡಿದರು. ಅವರಲ್ಲಿ ಎಂಟು ಮಂದಿ ಗರ್ಭಿಣಿ ಸ್ತ್ರೀಯರನ್ನು ಬಿಟ್ಟು ಉಳಿದ ಇಪ್ಪತ್ತನಾಲ್ಕು ಮಂದಿ ಹೆಂಡಿರೂ ಮತ್ತಿತರ ನೆಂಟರೂ ಪರಿವಾರದವರೂ ಯಶೋಭದ್ರೆಯೊಂದಿಗೆ ತಪಸ್ಸನ್ನು ಕೈಗೊಂಡರು. ಅವರಿಗೆ ದಯಾಭದ್ರರು ಗುರುಗಳಾದರು. ಕಮಲಶ್ರೀ ಕಂತಿಯರು ಮಾರ್ಗದರ್ಶಿಗಳಾದ ಸನ್ಯಾಸಿನಿಯರಾದರು, ಹೀಗೆ ಯಶೋಭದ್ರೆಯೊಂದಿಗೆ ಅತ್ತಂತ ಘೋರವಾದ ತಪಸ್ಸನ್ನು ಮಾಡಿ ಅವರೆಲ್ಲರೂ ಸೌಧರ್ಮಕಲ್ಪವೇ ಮೊದಲಾಗಿರುವ ಸ್ವರ್ಗಗಳಲ್ಲಿ ಹುಟ್ಟಿದರು. ಆಮೇಲೆ ಈರೀತಿಯಾಗಿರುವುದನ್ನು ಯೋಚಿಸಲೂ ಸಹಿಸಲೂ ಸಾಧ್ಯವಾಗದಂತಹ ಪ್ರಾಣ್ಯುಪದ್ರವ (ತಿರಿಕೋಪಸರ್ಗ)ವನ್ನು ಅವಂತಿ ಸುಕುಮಾರನು ಮೂರುದಿವಸ ಇರುಳೂ ಹಗಲೂ ಸಹಿಸಿಕೊಂಡು ರತ್ನತ್ರಯ (ಸಮ್ಯಗ್ದರ್ಶನ – ಜ್ಞಾನ – ಚಾರಿತ್ರ)ವನ್ನು ಹೇಗೆ ಸಾಸಿದನೋ ಹಾಗೆಯೇ ಸಂನ್ಯಾಸನ ಕೈಗೊಂಡು ಆರಾಧನೆ ಮಾಡತಕ್ಕ ಇದರ ಮಹಾಪುರುಷರೂ ಸುಕುಮಾರಸ್ವಾಮಿಗೆ ಪರಮ ಸುಖವನ್ನೊದಗಿಸಿದ ಉಪಸರ್ಗವನ್ನೂ ಅದನ್ನು ಗೆಲ್ಲುವ ಕ್ರಮವನ್ನೂ ಮನಸ್ಸಿನಲ್ಲಿ ಯಾವಾಗಲೂ ಯೋಚಿಸುತ್ತ ಆತ್ಮೀಯವಾದ ಆಗಮ (ಶಾಸ್ತ್ರ)ಗಳಲ್ಲಿಯೂ ನವಪದಾರ್ಥಗಳಲ್ಲಿಯೂ ಋದ್ಧಿ (ಸಿದ್ಧಿ)ಗಳಲ್ಲಿಯೂ ಅತ್ಯಂತ ಸ್ಥಿರರಾಗಿದ್ದುಕೊಂಡು ಸಹಜವಾದ ಮತ್ತು ನಿಜವಾದ ರತ್ನತ್ರಯದಲ್ಲಿ ಒಂದಾಗಿ, ಭೇದವಿಲ್ಲದಂತೆ ಕೂಡಿ ದೇಹವೇ ಮೊದಲಾದ ಎಲ್ಲಾ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನು ವಿಶೇಷವಾಗಿ ಬಿಟ್ಟು ಅಪೂರ್ವವೆನಿಸುವ ಮುಕ್ತಿ ಸುಖಗಳನ್ನು ಪಡೆಯಲಿ! ಆಮೇಲೆ, ಉಜ್ಜಯಿನಿಯ ದಕ್ಷಿಣ ದಿಶಾಭಾಗದಲ್ಲಿ ಅವಂತಿ ಸುಕುಮಾರಸ್ವಾಮಿ ದೇಹತ್ಯಾಗ ಮಾಡಿದ ಸ್ಥಳ ಇಂದಿಗೂ ಪುಣ್ಯಕರವೂ ಪವಿತ್ರವೂ ಆಯಿತು. ಅದಲ್ಲದೆ, ಆ

ಮಹಾಪುರುಷನ ಶರೀರಮಂ ಚತುರ್ನಿಕಾಯಾಮರತತಿಗಳ್ ಭಕ್ತಿಯಿಂದಗರು ಕಾಲಾಗರು ಗೋಶೀರ್ಷ ಚಂದನಂ ಮೊದಲಗೊಡೆಯ ಅನೇಕ ಸುಗಂಧ ದ್ರವ್ಯಂಗಳಿಂದಂ ಪೂಜಿಸಿದ ವಸ್ತುಗಳ್ ಕಾಲಾಂತರದಿಂ ಕರಗಿ ಬಿೞ್ದುದಾ ಸ್ಥಾನಮೆಂಬುದು ಗಂಧವತಿಯೆಂಬ ತೊಱೆಯಾದುದು ದೇವರ್ಕಳ್ ಪೊಗೞ್ದ ಕಳಕಳಧ್ವನಿಯಿಂ ಪೆಂಡಿರ್ಕಳ ಪ್ರಳಾಪಂಗೆಯ್ದೞ್ತ ಕಳಕಳಧ್ವನಿಯಿಂದಂ ಕಳಕಳಾಯತಮೆಂದು ಸಿದ್ಧಾಯತಮಾದುದು.
ಮಹಾಪುರುಷನ ದೇಹವನ್ನು ಭವನಪತಿ, ವ್ಯಂತರಿಕ, ಜ್ಯೋತಿಷ್ಕ ಮತ್ತು ವಿಮಾನವಾಸಿಗಳೆಂಬ ನಾಲ್ಕು ಬಗೆಯ ದೇವತೆಗಳು ಭಕ್ತಿಯಿಂದ ಅಗರು, ಕಾಳಾಗರು, ಗೋರೋಚನ, ಗಂಧ, ಶ್ರೀಗಂಧ – ಮುಂತಾಗಿರುವ ಹಲವಾರು ಸುವಾಸನೆಯ ದ್ರವ್ಯಗಳಿಂದ ಪೂಜಿಸಿದ ವಸ್ತುಗಳು ಕೆಲವು ಕಾಲಾನಂತರ ಕರಗಿ ಬಿದ್ದುವು. ಹಾಗೆ ಬಿದ್ದ ಸ್ಥಳವು ‘ಗಂಧವತಿ’ ಎಂಬ ಹೆಸರಿನ ಹೊಳೆಯಾಗಿ ಪರಿಣಮಿಸಿತು. ದೇವತೆಗಳು ಕೊಂಡಾಡಿದ ಕಳಕಳ ಧ್ವನಿಯಿಂದಲೂ ಸುಕುಮಾರಸ್ವಾಮಿಯ ಹೆಂಡಿರು ದುಃಖಿಸಿ ಅತ್ತ ಕಳಕಳ ಶಬ್ದದಿಂದಲೂ ‘ಕಳಕಳಾಯತ’ ಎಂಬ ಹೆಸರುಳ್ಳ ಸಿದ್ಧಕ್ಷೇತ್ರವೂ ಆಯಿತು. 

(ಮಾಹಿತಿ ಕೃಪೆ: siri-kannada.in, ಕಣಜ)
***********