ನನ್ನ ಪುಟಗಳು

09 ನವೆಂಬರ್ 2013

ಕನ್ನಡ ವ್ಯಾಕರಣ-ಮೊದಲ ಮಾತು

 ಪೀಠಿಕೆ
    ನ್ನಡ ಭಾಷೆಯು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಂತೆಯೇ ಅದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವೂ ದೊರೆತಿದೆ. ಸಂಸ್ಕೃತದಿಂದ ಆಧುನಿಕ ಯುಗದ ಆಂಗ್ಲ ಭಾಷೆಯ ವರೆಗೂ ಹಲವಾರು ಭಾಷೆಗಳ ಪ್ರಭಾವ ಪ್ರೇರಣೆಗೆ ಒಳಗಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನೂ ಘನತೆಯನ್ನೂ ಪಡೆದುಕೊಂಡಿದೆ. ಕವಿರಾಜ ಮಾರ್ಗಕಾರನಿಂದ ಪ್ರಸ್ತುತ ಆಧುನಿಕ ಸಾಹಿತ್ಯದವರೆಗೂ ಸಾವಿರಾರು ಕವಿ-ಸಾಹಿತಿ-ವಿದ್ವಾಂಸರಿಂದ ಸಮೃದ್ಧವಾಗಿ ಬೆಳೆದು ನಿಂತಿದೆ. ಇದನ್ನು ಬಳಸಿ-ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
     ಒಂದು ಚಿತ್ರ ಪಟವು ಚೌಕಟ್ಟಿನಿಂದ ಹೇಗೆ ಸುರಕ್ಷಿತವೂ ಸುಂದರವೂ ಆಗಿರುತ್ತದೋ ಹಾಗೆಯೇ ಒಂದು ಭಾಷೆಯು  ಶುದ್ಧವೂ ಸುರಕ್ಷಿತವೂ ಆಗಿರಬೇಕಾದರೆ ವ್ಯಾಕರಣ ಬಹಳ ಪ್ರಮುಖವಾದುದು.
        ಕನ್ನಡ ಭಾಷೆಯು ಮೂಲದಲ್ಲಿ ದ್ರಾವಿಡ ಭಾಷೆಯಿಂದ ಕವಲೊಡೆದು ಬೆಳೆದು ಬಂದಿದ್ದರೂ ಅದು ಬೆಳೆದು ಸಮೃದ್ಧವಾಗಿ ನಿಲ್ಲಲು ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚು ದಟ್ಟವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಲೆಕ್ಕವಿಲ್ಲದಷ್ಟು ಪದಗಳು ಸಂಸ್ಕೃತ ಭಾಷೆಯಿಂದ ಯಥೇಚ್ಛವಾಗಿ ಹರಿದುಬಂದು ಕನ್ನಡ ನುಡಿ ಬೊಕ್ಕಸವನ್ನು ಶ್ರೀಮಂತಗೊಳಿಸಿವೆ. ಈ ಕಾರಣದಿಂದಲೇ ಕನ್ನಡ ವ್ಯಾಕರಣವು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿಯೇ ಬೆಳೆದುಬರಬೇಕಾಯಿತು. ಇದು ಸಂಸ್ಕೃತ ವ್ಯಾಕರಣದ ಪಡಿಯಚ್ಚಾಗಿದ್ದರೂ ತನ್ನ ಜಾಯಮಾನಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ತನ್ನ ತನವನ್ನು ಕಾಪಾಡಿಕೊಂಡಿದೆ ಎನ್ನುವುದನ್ನು ಮರೆಯುವಂತಿಲ್ಲ.
     ಸು.ಕ್ರಿ.ಶ.1260 ರಲ್ಲಿ ಜೀವಿಸಿದ್ದ ಕೇಶಿರಾಜನು ಬರೆದಿರುವ 'ಶಬ್ದಮಣಿ ದರ್ಪಣ`ವು ಕನ್ನಡದಲ್ಲಿ ರಚಿತವಾದ ಮೊಟ್ಟ ಮೊದಲ ವ್ಯಾಕರಣ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅವನು ಸಂಧಿ, ನಾಮ, ಸಮಾಸ, ತದ್ಧಿತ, ಧಾತು, ಆಖ್ಯಾತ, ಅಪಭ್ರಂಶ, ಅವ್ಯಯ ಎಂದು ಒಟ್ಟು 8 ಪ್ರಕರಣಗಳಲ್ಲಿ ಕನ್ನಡ ವ್ಯಾಕರಣವನ್ನು ಪ್ರಸ್ತುತಪಡಿಸಿದ್ದಾನೆ.

ಕೃಪೆ - 1) ಪುಸ್ತಕ: ಕನ್ನಡ ವ್ಯಾಕರಣ ದರ್ಪಣ (ಸಂಪಾದಿತ)  ಲೇಖಕರು: ಸಂಪಾದಿತ (ಶಿ. ಚ. ನಂದಿಮಠ)
         2) ವಿಕಿಪೀಡಿಯಾ
         3) ಕಣಜ