ನನ್ನ ಪುಟಗಳು

24 ನವೆಂಬರ್ 2013

ಕನ್ನಡಕ್ಕಾಗಿ ದುಡಿ ಕನ್ನಡಕ್ಕಾಗಿ ಮಡಿ

      ನ್ನಡಿಗರಿಗೆ ಕನ್ನಡವು ಕೇವಲ ಭಾಷೆಯಾಗದೆ ಹೃದಯದ ಬಡಿತವಾಗಬೇಕು. ಈ ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿಯುವ-ಮಡಿಯುವ-ಮಿಡಿಯುವ ಹೃದಯಬೇಕು. ಆಗ ಮಾತ್ರ ಕನ್ನಡಕ್ಕೆ ಉಳಿಗಾಲ. ಇಲ್ಲವಾದಲ್ಲಿ ಪರಭಾಷೆಯ ಪ್ರವಾಹದಲ್ಲಿ ಕೊಚ್ಚಿಹೋಗುವುದರಲ್ಲಿ ಸಂಶಯವಿಲ್ಲ. 
     ಈ ಬ್ಲಾಗಿನಲ್ಲಿ ಕನ್ನಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಉಪಯುಕ್ತವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ.  ಕನ್ನಡ ವ್ಯಾಕರಣ, ಅಲಂಕಾರ, ಛಂದಸ್ಸು, ವಿರುದ್ಧಾರ್ಥಕ-ಸಮಾನಾರ್ಥಕ-ವಿವಿಧಾರ್ಥಕ ಪದಗಳು, ಗಾದೆಗಳು, ನುಡಿಗಟ್ಟುಗಳು, ಒಗಟುಗಳು, ಅಲ್ಲದೆ 8, 9 ಮತ್ತು 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯವಿಷಯಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು, ವಿಷಯ ಸಂಪನ್ಮೂಲವನ್ನು ಕಲೆಹಾಕಿ ನೀಡಲು ಪ್ರಯತ್ನಿಸುತ್ತಿದ್ದೇನೆ.
   ಅಲ್ಲದೆ  ಶಿಕ್ಷಣಕ್ಕೆ ಸಂಬಂಧಿಸಿದ ವೆಬ್ ಸೈಟುಗಳ ವಿಳಾಸಗಳ ಪಟ್ಟಿಯನ್ನು ನೀಡಿದ್ದೇನೆ. ಅವುಗಳ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿಯಬಹುದಾಗಿದೆ.
    ನಿಮ್ಮ ಅನಿಸಿಕೆಗಳನ್ನು, ಸಲಹೆ-ಸೂಚನೆಗಳನ್ನು, ಇಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಗೋಚರಿಸಿದ ದೋಷಗಳನ್ನು, ನಿಮಲ್ಲಿ ಉದ್ಭವಿಸಿದ ಅನುಮಾನಗಳನ್ನು  ಈ ಬ್ಲಾಗ್ ಮೂಲಕ ವ್ಯಕ್ತಪಡಿಸಲು ಮರೆಯದಿರಿ. ಇದರಿಂದ ಈ ಬ್ಲಾಗ್ ಅನ್ನು ಮತ್ತಷ್ಟು ಸಮೃದ್ಧಗೊಳಿಸಲು ನನಗೆ ಅನುಕೂಲವಾಗುತ್ತದೆ.
      ಓ ಕನ್ನಡಾಂಬೆಯ ಕುಲಪುತ್ರರೇ... ಬನ್ನಿ, ಕಲಿಯಿರಿ... ಕಲಿಸಿರಿ... ಕನ್ನಡವನ್ನು ಬೆಳೆಸಿರಿ.... ನಿಮಗಾಗಿ ಈ ಅಂತರ್ಜಾಲದ ಪುಟ ಸದಾ ತೆರೆದಿದೆ.
                                                                            - ಎಸ್.ಮಹೇಶ್  
    [ನಿಮ್ಮ ಅಭಿಪ್ರಾಯಗಳನ್ನು as.mahesha@yahoo.com ಗೆ ಇ-ಮೈಲ್ ಮಾಡಿ. ಅಥವಾ ಇದೇ ಪುಟದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪ್ ಮಾಡಲು ನುಡಿ ಅಥವಾ ಬರಹ ಬಳಸಿ ಯೂನಿಕೋಡ್ (unicode) ಆನ್ ಮಾಡಿಕೊಳ್ಳಿ.]

ಕನ್ನಡ ತಂತ್ರಾಂಶಗಳು (Kannada softwares)

ಛಂದಸ್ಸು

ರಗಳೆ

ರಗಳೆ
ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಶಬ್ದದ ತದ್ಭವ ಪದ.  ಕನ್ನಡದಲ್ಲಿ ಸಾಮಾನ್ಯವಾಗಿ ಉತ್ಸಾಹರಗಳೆ, ಮಂದಾನಿಲರಗಳೆ, ಲಲಿತರಗಳೆ ಎಂದು ಮೂರು ವಿಧವಾದ ರಗಳೆಗಳು ಪ್ರಸಿದ್ಧವಾಗಿವೆ.  ರಗಳೆಯ ಪದ್ಯಗಳಲ್ಲಿ ಇದುವರೆಗೆ ಹೇಳಿದ ನಾಲ್ಕು ಅಥವಾ ಆರು ಸಾಲುಗಳ ಪದ್ಯಗಳಂತೆ, ಇಷ್ಟೇ ಸಾಲುಗಳಿರಬೇಕೆಂಬ ನಿಯಮವೇ ಇಲ್ಲ.  ಎಷ್ಟು ಬೇಕಾದರೂ ಸಾಲುಗಳು ಹಾಗೆಯೇ ಬೆಳೆಯುತ್ತ ಹೋಗಬಹುದು.  ಆದರೆ ಎಲ್ಲ ಸಾಲುಗಳೂ ಸಮಾನವಾದ ಮಾತ್ರಾಗಣಗಳಿಂದ ಕೂಡಿರುತ್ತವೆ.  ಮತ್ತು ಎರಡೆರಡು ಸಾಲುಗಳಲ್ಲಿ ಪ್ರಾಸದ ನಿಯಮವಿರು ತ್ತದೆ.  ಅಂತ್ಯಪ್ರಾಸವೂ ಇರುವುದುಂಟು.

() ಉತ್ಸಾಹರಗಳೆಯ ಲಕ್ಷಣ
(i)
ನಾಲ್ಕುಸಾಲುಗಳುಳ್ಳ ಈ ಉತ್ಸಾಹರಗಳೆಯಲ್ಲಿ ಪ್ರತಿಯೊಂದು ಸಾಲಿನಲ್ಲೂ ಮೂರು ಮಾತ್ರೆಯ ನಾಲ್ಕು ಗಣಗಳುಂಟು. ಮೊದಲಿನ ಎರಡು ಸಾಲುಗಳಲ್ಲಿ ಆದಿಪ್ರಾಸವೂ ಇದೆ, ಅಂತ್ಯಪ್ರಾಸವೂ ಇದೆ. ಇನ್ನೆರಡು ಸಾಲುಗಳಲ್ಲಿ ಆದಿಪ್ರಾಸವಿಲ್ಲ, ಅಂತ್ಯಪ್ರಾಸವಿದೆ. ಕೆಲವು ಕಡೆ ಹೀಗೂ ಇರುವುದುಂಟು. ಆದರೆ ಆದಿಪ್ರಾಸವಿರುವುದೇ ಹೆಚ್ಚು. ಹೀಗೆ-

(೧೧೪) ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹರಗಳೆಯೆನಿಸುವುದು.

(ii) ಈ ಉತ್ಸಾಹರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಕೆಳಗಿನ ಪದ್ಯವನ್ನು ನೋಡಿರಿ:-
ಮೇಲಿನ ಎರಡನೆಯ ರೀತಿಯ ಉತ್ಸಾಹರಗಳೆಯಲ್ಲಿ ಎಲ್ಲ ಸಾಲುಗಳೂ ಮೂರು ಮಾತ್ರೆಯ ಮೂರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿವೆ.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ಅಂತ್ಯಪ್ರಾಸಗಳೆರಡೂ ಇವೆ.  ಕೊನೆಯ ಎರಡು ಸಾಲುಗಳಲ್ಲಿ ಅಂತ್ಯಪ್ರಾಸ ಮಾತ್ರ ಇದೆ.
ಹೀಗೆ ಮೂರು ಮಾತ್ರೆಯ ಮೂರುಗಣ ಮೇಲೊಂದು ಗುರುವಿನಿಂದ ಕೂಡಿದ ವ್ಯವಸ್ಥೆಯಿಂದಲೂ ಉತ್ಸಾಹರಗಳೆಯ ಛಂದಸ್ಸಿನ ಪದ್ಯಗಳಿರುತ್ತವೆಂದು ತಿಳಿಯಬೇಕು.

() ಮಂದಾನಿಲರಗಳೆಯ ಲಕ್ಷಣ
ಮೇಲಿನ ಮಂದಾನಿಲರಗಳೆಯ ಪದ್ಯದಲ್ಲಿ ಪ್ರತಿಯೊಂದು ಪಾದದಲ್ಲೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿವೆ.  ಮೊದಲೆರಡು ಸಾಲುಗಳಲ್ಲಿ ‘ಡ್’ ಪ್ರಾಸಾಕ್ಷರವೂ, ಉಳಿದೆರಡು ಸಾಲುಗಳಲ್ಲಿ ‘ಖ್’ ಪ್ರಾಸಾಕ್ಷರವೂ ಇದೆ.  ಅಂತ್ಯ ಪ್ರಾಸವೂ ಎರಡೆರಡು ಸಾಲುಗಳಲ್ಲಿ ಬೇರೆ ಬೇರೆ ಇದೆ.  ಹೀಗೆ-

ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಪಾದದಲ್ಲೂ ಬಂದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರುಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.

(ii) ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಈ ಕೆಳಗಣ ಪದ್ಯ ನೋಡಿರಿ.
ಮೇಲೆ ವಿವರಿಸಿದಂತೆ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ನಾಲ್ಕು ಗಣ (ಒಟ್ಟು ೧೬ ಮಾತ್ರೆಗಳು) ಗಳ ಲೆಕ್ಕದಿಂದಲೂ ಮಂದಾನಿಲರಗಳೆಯ ಪದ್ಯಗಳಿರುವುದೂ ಉಂಟು.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವಿಲ್ಲ.  ಆದರೆ ಬಿರಯಿಯಿಂ ಸುರಯಿಯಿಂ ಎಂದು ಅಂತ್ಯಪ್ರಾಸವಿದೆ.  ಕೊನೆಯೆರಡು ಸಾಲುಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇದೆ.  ಹೀಗೆ-

ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸವಾಗಲಿ ಅಂತ್ಯ ಪ್ರಾಸವಾಗಲಿ, ಅಥವಾ ಎರಡು ಕಡೆಗೂ ಪ್ರಾಸ ನಿಯಮವಿರುವ ಪದ್ಯ ಜಾತಿಯೂ ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ.

() ಲಲಿತರಗಳೆಯ ಲಕ್ಷಣ
ಮೇಲಿನ ಈ ಲಲಿತರಗಳೆಯ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿವೆ.  ಎರಡೆರಡು ಸಾಲುಗಳಲ್ಲಿ ಆದಿಪ್ರಾಸನಿಯಮವಿದೆ.  ಅಂತ್ಯಪ್ರಾಸವೂ ಎರಡೆರಡು ಸಾಲುಗಳಿಗೆ ಬೇರೆ ಬೇರೆಯಾಗಿಯೇ ಇದೆ.
ರೀತಿಯಲ್ಲಿ ಪಾದ (ಸಾಲು)ಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳುಲಲಿತರಗಳೆ’ಗಳೆನಿಸುವುವುಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದುಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದುಇಂಥ ಉದಾಹರಣೆಗಳು ತೀರ ಕಡಿಮೆ.

ಕಂದಪದ್ಯ

ಕಂದ ಪದ್ಯ
ಮಾತ್ರಾಗಣಗಳು ಎಂದರೆ ಮೂರು, ನಾಲ್ಕು, ಐದು ಮಾತ್ರೆಗಳು ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು ಮಾತ್ರಾಗಣಗಳೆನಿಸುವುದೆಂದು ಈ ಹಿಂದೆ ವಿವರಿಸಿದೆ.
ಪದ್ಯದಲ್ಲಿನ ಸಾಲುಗಳನ್ನು ಗುರುಲಘುಗಳಿಂದ ಗುರುತಿಸಿದ ಮೇಲೆ ಗುರುವಿಗೆ ಎರಡು ಮಾತ್ರೆ, ಮತ್ತು ಲಘುವಿಗೆ ಒಂದು ಮಾತ್ರೆಯ ಲೆಕ್ಕಹಾಕಿ ಮೂರು, ನಾಲ್ಕು, ಐದು ಮಾತ್ರೆಗಳ ಗುಂಪುಗಳನ್ನು ಒಂದೊಂದು ಗಣವಾಗಿ ವಿಂಗಡಿಸುವ ಗಣಗಳೆಲ್ಲ ಮಾತ್ರಾಗಣಗಳೆನಿಸುವುವು.  ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತುಮಾಡುವುದಕ್ಕೆ ಪ್ರಸ್ತಾರ ಎಂದು ಹೆಸರು.
ಮಾತ್ರಾಗಣಗಳಿಂದ ಕೂಡಿದ ಪದ್ಯಜಾತಿಗಳೆಂದರೆ-ಕಂದ, ಷಟ್ಪದಿಗಳು, ರಗಳೆ ಮೊದಲಾದವುಗಳು.  ಈಗ ಒಂದೊಂದಾಗಿ ಮಾತ್ರಾಗಣದ ಪದ್ಯಗಳ ಲಕ್ಷಣವನ್ನು ತಿಳಿಯಿರಿ.

() ಕಂದ ಪದ್ಯದ ಲಕ್ಷಣ
ಕಂದ ||

ಮೇಲಿನ ಈ ಕಂದ ಪದ್ಯಕ್ಕೆ ಪ್ರಸ್ತಾರ ಹಾಕಿ ಗಣಗಳನ್ನು (ಮಾತ್ರಾಗಣಗಳನ್ನು) ವಿಂಗಡಿಸಿದೆ.  ಈ ಪದ್ಯದಲ್ಲಿ ಮೂರು ಮಾತ್ರೆಯ ಅಥವಾ ಐದು ಮಾತ್ರೆಯಗಣಗಳನ್ನು ವಿಂಗಡಿಸಲು ಬರುವಂತಿಲ್ಲ.  ಇದರಲ್ಲಿ ನಾಲ್ಕು ನಾಲ್ಕು ಮಾತ್ರೆಯ ಗಣಗಳನ್ನೇ ವಿಂಗಡಿಸಬೇಕು.

(೧೦೭) ಲಕ್ಷಣ:- ನಾಲ್ಕು ಸಾಲುಗಳಿಂದ ಕೂಡಿದ ಪದ್ಯ; ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿವೆಎರಡನೆಯ, ನಾಲ್ಕನೆಯ ಸಾಲುಗಳು ಸಮನಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿವೆ.
ಪೂರ್ವಾರ್ಧದಲ್ಲಿ ಎಂಟು ಗಣಗಳೂ, ಉತ್ತರಾರ್ಧದಲ್ಲಿ ಎಂಟು ಗಣಗಳೂ ಇವೆ. ಪೂರ್ವಾರ್ಧ ಉತ್ತರಾರ್ಧಗಳ ವಿಷಮ ಸ್ಥಾನಗಳಲ್ಲಿ ಎಂದರೆ ೧, , , ೭ನೆಯ ಗಣಗಳ ಸ್ಥಾನದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಬರಕೂಡದು. ಪೂರ್ವಾರ್ಧ ಉತ್ತರಾರ್ಧಗಳ ೬ನೆಯ ಗಣವು ಮಾತ್ರ ನಾಲ್ಕು ಮಾತ್ರೆಗಳ UUUU ಹೀಗಿರುವ ಗಣವಾಗಲಿ, ಮಧ್ಯ ಗುರುವುಳ್ಳ U _ U ಹೀಗಿರುವ ಗಣವಾಗಲಿ ಬರಬೇಕು. ಪೂರ್ವಾರ್ಧ ಉತ್ತರಾರ್ಧಗಳಲ್ಲಿ ಕೊನೆಗೆ ಗುರು ಬರುವ “_ _” ಇಂಥ ಗಣವಾಗಲಿ, ” U _ U “ ಇಂಥ ಗಣವಾಗಲಿ ಬರಬೇಕು.
ಮೇಲಿನ ಕಂದ ಪದ್ಯದಲ್ಲಿ ಮೇಲೆ ಹೇಳಿರುವ ಲಕ್ಷಣಗಳೆಲ್ಲ ಬಂದಿರುವುದನ್ನು ಗಮನಿಸಿರಿ.

ಛಂದಸ್ಸಿನ ಪ್ರಕಾರಗಳು

ಮಾತ್ರೆ-ಲಘು-ಗುರು

ಮಾತ್ರೆ, ಗುರು, ಲಘುಗಳು
ಮಾತ್ರೆ:- ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವುಲಘುವನ್ನು ‘U' ಹೀಗೆ ಗುರುತಿಸುವುದು ವಾಡಿಕೆ.
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-
        ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-
U U U U U U
U U U U U U
ಕಿ ಕು
U U U U U U
ಕೆ ಕೊ ಸು ಸೊ ಸೃ ಕೃ
ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ    ಹೀಗೆ ಗುರುತು ಮಾಡಿದೆ.

ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವುಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.

ಉದಾಹರಣೆಗೆ:
(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ-

(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು-
ಕಾಕೀಚೇಚೈಸೈನಾರೋಸೌ
ಕ್ಕಾಸ್ನೇತ್ರೇಪ್ರೈಕ್ರೋಧ್ಯಾ ಲೋ
iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು-
ಅಂ ಅಃ ತಂ ತಃ ಸಂ ಸಃ ಕಂ



(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
—U —U —U —UU
ಕಲ್ಲು ಮಣ್ಣು ನಿಲ್ಲು ಮೆತ್ತಗೆ



(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್
ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.
ಉದಾಹರಣೆಗೆ:-
—U —U
ಶಾಸ್ತ್ರ ಕಾಂಕ್ಷೆ
ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.

[1] (i) ಗುಬ್ಬಿಯ ಚಿಕ್ ಎನ್ನುವ ಕಾಲವನ್ನು ೧ ಮಾತ್ರಾಕಾಲವೆಂದೂ ಕಾಗೆಯು ಕಾ ಕಾ – ಎಂದು ಕೂಗುವ ಕಾಲವನ್ನು ೨ ಮಾತ್ರಾಕಾಲವೆಂದೂ, ನವಿಲು ಒಂದು ಸಲ ಕೂಗುವ ಕಾಲವನ್ನು ೩ ಮಾತ್ರಾಕಾಲವೆಂದು ಮುಂಗುಲಿಯು ಧ್ವನಿಮಾಡುವ ಕಾಲವನ್ನು ಳಿ ಮಾತ್ರಾಕಾಲವೆಂದೂ ಸ್ಥೂಲವಾಗಿ ತಿಳಿಯುತ್ತಾರೆ ಅಥವಾ ಕೋಳಿಯು ಪ್ರಾತಃಕಾಲದಲ್ಲಿ ಕೂಗುವ-
    (ii) ಕೂ ಕೂ ಕೂ –ಎಂಬಲ್ಲಿ ಮೊದಲನೆಯ ಕೂಗು ಏಕಮಾತ್ರಾಕಾಲ, ಎರಡನೆಯದು ದ್ವಿಮಾತ್ರಾಕಾಲ, ಮೂರನೆಯದು ತ್ರಿಮಾತ್ರಾಕಾಲ (ಪ್ಲುತ) ಎಂದು ಸಾಮಾನ್ಯವಾಗಿ ಗ್ರಹಿಸುತ್ತಾರೆ.
[2] ಲಘುವಿನ ಚಿಹ್ನೆಯನ್ನು “” ಹೀಗೂ, ಗುರುವಿನ ಚಿಹ್ನೆಯನ್ನು “” ಹೀಗೂ ಪ್ರಾಚೀನಕಾಲದಿಂದಲೂ ಗುರುತಿಸುವ ಪದ್ಧತಿಯಿತ್ತು.  ಇತ್ತೀಚೆಗೆ ಅದು ಸ್ವಲ್ಪ ವ್ಯತ್ಯಾಸವಾಗಿ ಗುರುವನ್ನು “” ಹೀಗೂ ಲಘುವನ್ನು “” ಹೀಗೂ ಗುರುತಿಸುವುದು ವಾಡಿಕೆಯಲ್ಲಿ ಬಂದಿದೆ.


**********

ಛಂದಸ್ಸು-ಪೀಠಿಕೆ

ಛಂದಸ್ಸು-ಮಾತ್ರೆಗಳು ಮತ್ತು ಗಣಗಳು
     ಪದ್ಯಗಳನ್ನು ಹೇಗೆ ರಚಿಸಬೇಕು? ಅಲ್ಲಿ ಯಾವ ನಿಯಮಗಳನ್ನು ಕವಿಗಳು ಅನುಸರಿಸುತ್ತಾರೆ? ಎಂಬ ವಿಷಯವನ್ನು ತಿಳಿಯಬೇಕಾದರೆ ಅವಶ್ಯವಾಗಿ ಛಂದಶ್ಯಾಸ್ತ್ರದ ಪರಿಚಯ ಮಾಡಿಕೊಳ್ಳಬೇಕಾಗುವುದು.  ನಮ್ಮ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅದೆಷ್ಟೋ ಬಗೆಯ ಪದ್ಯಗಳನ್ನು ಓದುತ್ತಾರೆ.  ಆ ಎಲ್ಲ ಪದ್ಯಗಳನ್ನು ರಚನೆ ಮಾಡಿದ ಕವಿಗಳು ಹಲಕೆಲವು ನಿಯಮಗಳನ್ನನುಸರಿಸಿ ಆ ಪದ್ಯಗಳನ್ನು ರಚಿಸಿರುತ್ತಾರೆ.  ಯಾವ ನಿಯಮವನ್ನು ಅನುಸರಿಸಿ ಈ ಪದ್ಯಗಳು ರಚಿತವಾಗಿವೆ, ಎಂಬುದನ್ನು ತಿಳಿಯದೆ ಅವುಗಳನ್ನು ಓದಿದರೆ ಸಾಕಾದಷ್ಟು ಪ್ರಯೋಜನವಾಗಲಿಕ್ಕಿಲ್ಲ.  ಆದುದರಿಂದ ನಮ್ಮ ಮಕ್ಕಳು ಛಂದಶ್ಯಾಸ್ತ್ರದ ಸ್ಥೂಲವಾದ ಪರಿಚಯ ಮಾಡಿಕೊಳ್ಳಬೇಕಾ ಗುವುದು.  ಈ ದೃಷ್ಟಿಯಿಂದ ಮುಂದೆ ಸಂಗ್ರಹವಾಗಿ ಈ ವಿಷಯವನ್ನು ತಿಳಿಸಲಾಗಿದೆ.
     ವ್ಯಾಕರಣ ಶಾಸ್ತ್ರವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ ಶಾಸ್ತ್ರವಾದರೆ, ಛಂದಸ್ಸು ಕೇವಲ ಪದ್ಯಗಳಿಗೆ ಮಾತ್ರ ಸಂಬಂಧಿಸಿದ ಶಾಸ್ತ್ರವಾಗಿದೆ.  ನಾವು ಓದುವ ಪದ್ಯಗಳು ನಾನಾ ತರವಾಗಿವೆ.  ಕೆಲವು ನಾಲ್ಕು ಸಾಲಿನವು, ಕೆಲವು ಆರು ಸಾಲಿನವು, ಕೆಲವು ಮೂರು ಸಾಲಿನವು, ಕೆಲವು ಸಾಲುಗಳು ಉದ್ದ, ಕೆಲವು ಚಿಕ್ಕವು.  ಹೀಗೆ ನಾನಾ ಬಗೆಯು ಪದ್ಯಗಳಲ್ಲಿ ಕಂಡುಬರುತ್ತವೆ.  ಅವುಗಳೆಲ್ಲವುಗಳ ಸ್ವರೂಪವನ್ನು ತಿಳಿಯದಿದ್ದರೂ ಮುಖ್ಯವಾದ ಕೆಲವು ಪದ್ಯಗಳ ರೀತಿನೀತಿ ಗಳನ್ನು ತಿಳಿಯಬೇಕು.
       ಪದ್ಯಗಳು ವಿಸ್ತಾರವಾದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಲೂ, ರಸವತ್ತಾದ ಅಂತಗಳನ್ನು ಸ್ವಾರಸ್ಯ ಮಾತುಗಳಿಂದ ವರ್ಣಿಸಲೂ, ಮತ್ತು ಅವುಗಳನ್ನು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲೂ ಅನುಕೂಲವಾದವು.  ಅಲ್ಲದೆ ರಾಗವಾಗಿ ಹಾಡಿ, ತಾವೂ ಆನಂದ ಪಡಬಹುದು.  ಇತರರನ್ನೂ ಆನಂದಗೊಳಿಸಬಹುದು.  ಇಂಥ ಮಹತ್ವದ ಕಾವ್ಯಭಾಗಗಳಾದ ಪದ್ಯಗಳ ರಚನಾಕ್ರಮದ ಬಗೆಗೆ ಲಕ್ಷಣವನ್ನು ತಿಳಿಸುವ ಗ್ರಂಥವೆಂದರೆ ಮುಖ್ಯವಾಗಿ ‘ಛಂದೋಂಬುಧಿ‘ ಎಂಬುದು.  ಇದು ಹಳಗನ್ನಡ ಪದ್ಯಗಳಲ್ಲಿ ರಚಿಸಲ್ಪಟ್ಟಿದೆ.  ಇದೇ ಕನ್ನಡ ಛಂದಸ್ಸನ್ನು ವಿಶದವಾಗಿ ತಿಳಿಸುವ ಗ್ರಂಥವಾಗಿದೆ.

I – ಛಂದೋಂಬುಧಿ ಗ್ರಂಥ ಕರ್ತೃವಿನ ವಿಚಾರ
ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು ಬರೆದನು.  ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ.  ವೆಂಗಿ ವಿಷಯದಲ್ಲಿನ ಸಪ್ತ ಗ್ರಾಮಗಳಲ್ಲಿ ಮನೋಹರವಾದ ವೆಂಗಿಪಳುವಿನಲ್ಲಿದ್ದ ಕೌಂಡಿನ್ಯ ಗೋತ್ರ ದ ವೆಣ್ಣಮಯ್ಯ ಎಂಬ ಬ್ರಾಹ್ಮಣನ ಮಗ; ತಾಯಿ ಹೋಕಳವ್ವೆ.  ಇವನಿಗೆ ಕವಿರಾಜಹಂಸ, ಬುಧಾಬ್ಜವನಕಳ ಹಂಸ, ಕಂದಕಂದರ್ಪ-ಇತ್ಯಾದಿ ಅನೇಕ ಬಿರುದುಗಳಿದ್ದವು.  ಈತನು ಯುದ್ಧವೀರನಾಗಿದ್ದ ಹಾಗೆಯೂ ತೋರುವುದು.  ಶ್ರವಣಬೆಳ್ಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಪ್ರಸಿದ್ಧನಾಗಿರುವ ಚಾವುಂಡರಾಯನೆಂಬುವನು ಇವನ ಆಶ್ರಯದಾತನು.  ಅಜಿತಸೇನದೇವ ನೆಂಬುವರು ಇವನಿಗೆ ಗುರುಗಳು.
ಛಂದೋಂಬುಧಿ ಎಂಬ ಗ್ರಂಥದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಹೇಳಲ್ಪಟ್ಟಿವೆ.

[1] ನಾಗವರ್ಮನೆಂಬ ಹೆಸರಿನ ಕವಿಗಳಿಬ್ಬರು.  ಮೊದಲನೆಯ ನಾಗವರ್ಮ (ಕ್ರಿ.ಶ. ೯೯೦) ನು ಛಂದೋಂಬುಧಿಯನ್ನೂ, 'ಕರ್ನಾಟಕ ಕಾದಂಬರಿ' ಎಂಬ ಚಂಪೂ ಗ್ರಂಥವನ್ನೂ ರಚಿಸಿದನು.  ಎರಡನೆಯ ನಾಗವರ್ಮನೆಂಬುವನು ಕ್ರಿ.ಶ. ೧೧೪೫ ರ ದವನು.  ಇವನು ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ವಸ್ತುಕೋಶಗಳೆಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆಂದು ಕವಿ ಚರಿತ್ರೆಕಾರರು ತಿಳಿಸಿದ್ದಾರೆ.


ಕನ್ನಡ ಕಾವ್ಯಗಳು
ಕನ್ನಡ ಭಾಷೆಯಲ್ಲಿ ಕಾವ್ಯಗಳು ಪಂಪಕವಿ (ಕ್ರಿ.ಶ. ೯೪೧) ಗಿಂತಲೂ ಮೊದಲೇ ರಚಿತವಾಗಿದ್ದವು.  ಆದರೆ ಆ ಕಾಲದ ಸಮಗ್ರ ಕಾವ್ಯಗಳು ನಮಗೆ ಸಿಕ್ಕಿಲ್ಲ.  ಪಂಪಮಹಾಕವಿ ಬರೆದ ವಿಕ್ರಮಾರ್ಜುನವಿಜಯ, ಆದಿ ಪುರಾಣಗಳೇ ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಮೊದಲಿನವು.  ಪೂರ್ವದ ಗ್ರಂಥಗಳು ಸಿಗದಿದ್ದರೂ ಕ್ರಿ.ಶ. ೯ನೆಯ ಶತಕದಲ್ಲಿ ನೃಪತುಂಗನಿಂದ ರಚಿತವಾದ ‘ಕವಿರಾಜಮಾರ್ಗದಲ್ಲಿ ಉತ್ತಮ ಕಾವ್ಯಮಯವಾದ ಪದ್ಯಗಳನ್ನು ಉದಾಹರಿಸಿದ್ದಾನೆ.  ಇದರಿಂದ ನೃಪತುಂಗನಿಗಿಂತಲೂ ಮೊದಲು ಉತ್ತಮವಾದ ಕನ್ನಡ ಪದ್ಯ ಕಾವ್ಯಗಳು ಇದ್ದುವೆಂದು ತಿಳಿಯಬಹುದು.  ಮತ್ತು ಕಲ್ಲುಗಳ ಮೇಲೆ ಕೆತ್ತಿದ ಅನೇಕ ಪದ್ಯಗಳು ಸಿಗುತ್ತವೆ.  ಇವುಗಳ ಮೇಲಿಂದ ಕ್ರಿ.ಶ. ೬ನೆಯ ಶತಮಾನದ ಹೊತ್ತಿನಲ್ಲಿಯೇ ಛಂದೋಬದ್ಧವಾದ ಪದ್ಯಗಳನ್ನು ನಮ್ಮ ಕವಿಗಳು ಬರೆಯುತ್ತಿದ್ದರೆಂದು ಹೇಳಬಹುದು.  ಪಂಪ (ಕ್ರಿ.ಶ. ೯೪೧), ರನ್ನ (ಕ್ರಿ.ಶ. ೯೯೩), ಅಭಿನವ ಪಂಪ (ಕ್ರಿ.ಶ. ೧೧೦೦), ಜನ್ನ (ಕ್ರಿ.ಶ. ೧೨೦೯) ಇತ್ಯಾದಿ ಮಹಾಕವಿಗಳು ಸಂಸ್ಕೃತ ವೃತ್ತ ಜಾತಿಯ ಛಂದಸ್ಸನ್ನು ಬಳಸಿ ದೊಡ್ಡ ದೊಡ್ಡ ಚಂಪೂಕಾವ್ಯಗಳನ್ನು ಬರೆದರು.  ಚಂಪೂಕಾವ್ಯಗಳೆಂದರೆ ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು.  ಕ್ರಿ.ಶ.ಸು. ೧೨೧೬ ರ ಸುಮಾರಿನಲ್ಲಿದ್ದ ಹರಿಹರೇಶ್ವರನೆಂಬ ಕವಿ ರಗಳೆಗಳ ಛಂದಸ್ಸಿನಲ್ಲಿ ಅನೇಕ ಕಾವ್ಯ ಬರೆದನು.  ಇವನ ಅಳಿಯನಾದ ರಾಘವಾಂಕನು (ಕ್ರಿ.ಶ. ೧೨೧೬) ಷಟ್ಪದಿಗಳ ಛಂದಸ್ಸಿನಲ್ಲಿ ಅನೇಕ ಕಾವ್ಯಗಳನ್ನು ಬರೆದನು.  ಷಟ್ಪದಿಯನ್ನು ಬಳಸಿ ಮುಂದೆ ಗದುಗಿನ ನಾರಣಪ್ಪ (ಕ್ರಿ.ಶ. ೧೪೩೦) ನೇ ಮೊದಲಾದವರು ಕಾವ್ಯ ಬರೆದರು.  ರತ್ನಾಕರವರ್ಣಿ (ಕ್ರಿ.ಶ. ೧೫೫೭) ಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು.  ಹೀಗೆ ಅನೇಕಾನೇಕ ಛಂದೋಬದ್ಧವಾದ ಸಾಹಿತ್ಯರಾಶಿ ಕನ್ನಡಕ್ಕೆ ಇದೆ.  ಈ ಎಲ್ಲ ಛಂದಸ್ಸುಗಳ ಲಕ್ಷಣವನ್ನು ತಿಳಿಯುವುದು ಅವಶ್ಯವಾದರೂ ಪ್ರೌಢಶಾಲೆಗಳಲ್ಲಿ ವ್ಯಾಸಂಗಮಾಡುವ ನಮ್ಮ ಮಕ್ಕಳು, ಮುಖ್ಯವಾಗಿ ಕನ್ನಡದಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಉತ್ಪಲಮಾಲಾ, ಚಂಪಕಮಾಲ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ-ಇತ್ಯಾದಿ ವೃತ್ತಗಳ ಲಕ್ಷಣಗಳನ್ನೂ, ಷಟ್ಪದಿಗಳು, ರಗಳೆಗಳು ಕಂದ ಪದ್ಯಗಳೇ ಮೊದಲಾದವುಗಳ ಲಕ್ಷಣಗಳನ್ನು ತಿಳಿಯಬೇಕಾದುದು ಅವಶ್ಯಕ.  ಅಂತೆಯೇ ಸಂಕ್ಷೇಪವಾಗಿ ಮುಂದೆ ಆ ವಿಷಯವನ್ನು ಹೇಳಲಾಗಿದೆ.


ಪದ್ಯ
ಒಂದು ಗೊತ್ತಾದ ಸಾಲುಗಳ (ಪಾದಗಳು) ನಿಯಮದಿಂದ ಬರೆದವುಗಳೇ ಪದ್ಯಗಳು.  ಅಂದರೆ ಪದ್ಯಗಳು ಪಾದ (ಸಾಲು) ಗಳಿಂದಲೂ, ಪ್ರತಿಯೊಂದು ಪಾದವೂ ಪ್ರಾಸ, ಯತಿ, ಗಣಗಳ ನಿಯಮದಿಂದಲೂ ಕೂಡಿರುತ್ತವೆ.  ಈಗ ಈ ವಿಚಾರವಾಗಿ ಒಂದೊಂದಾಗಿ ತಿಳಿಯೋಣ.
() ಪ್ರಾಸ
ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಪ್ರಾಸವೆನ್ನುತ್ತಾರೆ ಪ್ರಾಸವನ್ನು ಕೆಲವರು ಸಾಲುಗಳ (ಪಾದಗಳ) ಕೊನೆಯಲ್ಲೂ ಬರುವಹಾಗೆ ಪದ್ಯ ರಚಿಸುತ್ತಾರೆಪಾದಾಂತದಲ್ಲಿ ಬರುವ ಪ್ರಾಸದ ನಿಯಮವು ಕೇವಲ ರಗಳೆಗಳಲ್ಲಿ ಮಾತ್ರ ಕಂಡು ಬರುತ್ತದೆ.
ಈ ಪ್ರಾಸಾಕ್ಷರದ ಹಿಂದೆ ಹ್ರಸ್ವಸ್ವರವಿದ್ದರೆ ಎಲ್ಲ ಸಾಲುಗಳಲ್ಲಿ ಹ್ರಸ್ವಸ್ವರವೂ ದೀರ್ಘಸ್ವರವಿದ್ದರೆ ಎಲ್ಲ ಕಡೆಗೆ ದೀರ್ಘಸ್ವರವೂ, ಅನುಸ್ವಾರ ವಿಸರ್ಗಗಳಿದ್ದರೆ ಎಲ್ಲ ಕಡೆಗೆ ಅನುಸ್ವಾರ ವಿಸರ್ಗಗಳೂ ಬಂದಿರಬೇಕು.
ಉದಾಹರಣೆಗೆ:-
ಭವದನುಜನರುಣ ಜಲಮಂ |
ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ |
ಸವಿನೋಡಿದೆನೀ ಕೊಳನಂ |
ತವೆಪೀರ್ದು ಬಳಿಕ್ಕೆ ನಿನ್ನ ಸವಿಯಂ ನೋಳ್ಪೆಂ ||
ಈ ಪದ್ಯದಲ್ಲಿ ಮೊದಲನೆಯ ಸ್ವರ-‘ಭ‘ ಕಾರದ ಮುಂದಿರುವ ಅಕಾರ, ೨ನೆಯ ಸ್ವರ ‘ವ‘ ಕಾರದ ಮುಂದಿರುವ ಅಕಾರ.  ಇವೆರಡರ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿದೆ.  ಇದರಂತೆ ೨ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ವ್ಯಂಜನವಿದೆ.  ೩ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ನಾಲ್ಕನೆಯ ಸಾಲಿನಲ್ಲಿ ಅಕಾರ ಎಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ಹೀಗೆ ನಾಲ್ಕು ಸಾಲುಗಳಲ್ಲಿಯೂ ಇರುವ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿರುವುದು ಗೊತ್ತಾಗುವುದು.  ಈ ‘ವ‘ ಕಾರವೇ ಪ್ರಸಾಕ್ಷರವೆನಿಸುವುದು.  ಅಲ್ಲದೆ ಪ್ರಾಸಾಕ್ಷರದ ಹಿಂದೆ ಎಲ್ಲ ಕಡೆಗೂ ಹ್ರಸ್ವಸ್ವರವೇ ಇರುವುದು.  ಈಗ ಒಂದಕ್ಕಿಂತ ಹೆಚ್ಚು ವ್ಯಂಜನಗಳ ಪ್ರಾಸಾಕ್ಷರವಾಗಿರುವುದನ್ನು ಗಮನಿಸಿರಿ.
ಉದಾಹರಣೆಗೆ:-
ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು||
ಪುಲ್ಗಳಪಸುರ್ಗೆಳಸಿ ಪೊಕ್ಕೊಡಾ ತೋಟಗಾ- |
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆಮಿಗೆ |
ಬಿಲ್ಗೊಂಡು ನಡೆತಂದನಂ ಕಂಡನರ್ಚಿತ ಸುವಾಜಿಯಂ ವೀರಲವನು ||
೧ನೆಯ ಸಾಲು-ಬಲ್ಗಯ್ಯ    ………………………… ಅ + ಲ್ ಗ್ + ಅ
೨ನೆಯ ಸಾಲು-ಸೊಲ್ಗೇಳಿ  ………………………… ಒ + ಲ್ ಗ್ + ಏ
೩ನೆಯ ಸಾಲು-ನಲ್ಗುದುರೆ  ………………………… ಅ + ಲ್ ಗ್ + ಉ
೪ನೆಯ ಸಾಲು-ಪುಲ್ಗಳ      ………………………… ಉ + ಲ್ ಗ್ + ಅ
೫ನೆಯ ಸಾಲು-ವಲ್ಗೆತನ್ನೊ          ………………………… ಅ + ಲ್ ಗ್ + ಎ
೬ನೆಯ ಸಾಲು-ಬಿಲ್ಗೊಂಡು          ………………………… ಇ + ಲ್ ಗ್ + ಒ
ಎಲ್ಲ ಸಾಲುಗಳಲ್ಲೂ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿ ವ್ಯಂಜನಗಳನ್ನು ನೋಡಿರಿ.
ಮೇಲಿನ ಈ ಪದ್ಯದಲ್ಲಿ ‘ಲ್ ಗ್‘ ಈ ಎರಡು ವ್ಯಂಜನಗಳು ಆರೂ ಸಾಲುಗಳಲ್ಲಿ ಪ್ರಾಸಾಕ್ಷರಗಳಾಗಿ ಬಂದಿರುವುದನ್ನು ಗಮನಿಸಿರಿ.  ಮತ್ತು ಪ್ರಾಸಾಕ್ಷರಗಳ ಹಿಂದೆ ಅ, , , , , ಇ – ಇತ್ಯಾದಿ ಹ್ರಸ್ವಸ್ವರಗಳೇ ಬಂದಿರುವುದನ್ನೂ ಗಮನಿಸಿರಿ.  ಇದರ ಹಾಗೆಯೇ ಕೆಲವು ಕಡೆ ಪ್ರಸಾಕ್ಷರಗಳು ಮೂರು ವ್ಯಂಜನಗಳಿಂದಲೂ ಕೂಡಿರುವುದುಂಟು.  ಕೆಲವು ಸಜಾತೀಯ ಸಂಯುಕ್ತಾಕ್ಷರಗಳಿಂದಲೂ ಕೂಡಿರುವುದುಂಟು.
ಒಮ್ಮೊಮ್ಮೆ ದೊಡ್ಡ ದೊಡ್ಡ ಕವಿಗಳೂ ಈ ಪ್ರಾಸದ ನಿಯಮದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿರುವುದೂ ಉಂಟು.  ಹಾಗಾಗಿರುವುದು ಎಲ್ಲೋ ಕೆಲವು ಕಡೆ ಮಾತ್ರ.  ಆದರೆ ಎಲ್ಲ ಕಡೆಗೂ ಪ್ರಾಸದ ನಿಯಮವನ್ನು ಪ್ರಾಚೀನ ಕವಿಗಳು ಪಾಲಿಸಿಕೊಂಡೇ ಬಂದಿದ್ದಾರೆ.  ರಗಳೆಗಳಲ್ಲಿ ಇದುವರೆಗೆ ಹೇಳಿದ ಆದಿ ಪ್ರಾಸದ ಜೊತೆಗೆ ಅಂತ್ಯದಲ್ಲಿಯೂ ಈ ಪ್ರಾಸದ ನಿಯಮವನ್ನು ಪಾಲಿಸಿರುವುದುಂಟು.-
ಉದಾಹರಣೆಗೆ:-
ಆಡುವ ಗಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ
ಇಲ್ಲಿ ಮೊದಲ ಸಾಲಿನ ಕೊನೆಯ ಎರಡು ಸ್ವರಗಳಾದ (ನ್ ಋ + ತ್ ಯ್ + ಅಂ) ಋಕಾರ ಅಕಾರಗಳ ಮಧ್ಯದಲ್ಲಿ ತ್ ಯ್ ಎಂಬುವು ಪ್ರಾಸಾಕ್ಷರಗಳು ೨ನೆಯ ಸಾಲಿನಲ್ಲಿ ಕೊನೆಯ ಎರಡು ಸ್ವರಗಳಾದ (ಸ್ ಅ + ತ್ ಯ್ + ಅಂ) ಅಕಾರ ಮತ್ತು ಅಕಾರಗಳ ಮಧ್ಯದಲ್ಲಿ ‘ತ್ ಯ್‘ ಎಂಬಿವು ಪ್ರಾಸಾಕ್ಷರಗಳಾಗಿವೆ.
ಮೇಲಿನ ಎರಡು ಸಾಲುಗಳ ರಗಳೆಯ ಛಂದಸ್ಸಿನಲ್ಲಿ ಆದಿಪ್ರಾಸವು ಡ್ ವ್ಯಂಜನವಾಗಿದ್ದರೆ, ಅಂತ್ಯ ಪ್ರಾಸವು ‘ತ್ ಯ್‘ ಎಂಬೆರಡು ವ್ಯಂಜನಗಳಾಗಿವೆ.  ಈ ತರದಲ್ಲಿ ಅಂತ್ಯಪ್ರಾಸದ ನಿಯಮವನ್ನು ರಗಳೆಯಲ್ಲಲ್ಲದೆ ಬಹುಶಃ ಉಳಿದ ಕಡೆಗೆ ಕಾಣುವುದು ಅಪರೂಪ.

() ಯತಿ
ಯತಿ ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.  ಹೀಗೆ ನಿಲ್ಲಿಸುವುದಕ್ಕೆ ಗೊತ್ತಾದ ಸ್ಥಳಗಳಲ್ಲಿ ನಿಲ್ಲಿಸಿದರೆ ಅರ್ಥ ಕೆಡುವಂತಿರಬಾರದು.  ಅಲ್ಲಿಗೆ ಪದ ಮುಗಿದಿರಬೇಕು.  ಕನ್ನಡ ಕವಿಗಳು ಪ್ರಾಸ ನಿಯಮವನ್ನೂ ಪಾಲಿಸಿ ಯತಿಯ ನಿಯಮವನ್ನು ಪಾಲಿಸುವುದು ಕಷ್ಟವೆಂದು ಪ್ರಾಸಕ್ಕೇ ಪ್ರಾಧಾನ್ಯತೆ ಕೊಟ್ಟು, ಯತಿಯ ನಿಯಮವನ್ನು ಮಿಕ್ಕಿದ್ದಾರೆ.  ಸಂಸ್ಕೃತ ಕವಿಗಳು ಪ್ರಾಸನಿಯಮವನ್ನು ಪಾಲಿಸದೆ ಯತಿಯ ನಿಯಮವನ್ನು ಎಲ್ಲ ಕಡೆಗೂ ಪಾಲಿಸಿದ್ದಾರೆ.  ಆದ್ದರಿಂದ ಯತಿಯ ನಿಯಮವು ಕನ್ನಡ ಕಾವ್ಯಗಳಲ್ಲಿ ಅಷ್ಟು ಮುಖ್ಯವಲ್ಲ.  ಅದರ ವಿಷಯವಾಗಿ ಹೆಚ್ಚಿಗೆ ತಿಳಿಯಬೇಕಾದ ಅವಶ್ಯಕತೆಯಿಲ್ಲ.

() ಗಣಗಳು
(೧೦೨) ಗಣ ಎಂದರೆ ಗುಂಪು ಸಮೂಹ ಎಂದು ಅರ್ಥಛಂದಶ್ಯಾಸ್ತ್ರದಲ್ಲಿ ಗಣ ಎಂದರೆ-ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರೆಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
ಮಾತ್ರೆಗಳ ಲೆಕ್ಕದಿಂದ-ಮೂರುಮಾತ್ರೆ ಅಥವಾ ನಾಲ್ಕುಮಾತ್ರೆ ಮತ್ತು ಐದುಮಾತ್ರೆಗಳ ಗುಂಪುಗಳು ಕೆಲವು ಪದ್ಯಗಳಲ್ಲಿ ಬರುತ್ತವೆ.  ಅವೆಲ್ಲ ಮಾತ್ರಾಗಣಗಳು.  ಕೆಲವು ಪದ್ಯಗಳಲ್ಲಿ ಮೂರು ಅಕ್ಷರಗಳ ಗುಂಪುಗಳನ್ನು ವಿಭಾಗಿಸುವರು.  ಅವೆಲ್ಲ ಅಕ್ಷರಗಣಗಳು.  ಕೆಲವು ಪದ್ಯಗಳಲ್ಲಿ ಒಂದೊಂದು ಅಂಶಕ್ಕೆ ಒಂದೊಂದು ಗಣವನ್ನು ವಿಂಗಡಿಸುವರು.  ಅವೆಲ್ಲ ಅಂಶಗಣಗಳು.  ಮುಖ್ಯವಾಗಿ ಈಗ ಮಾತ್ರಾಗಣ, ಅಕ್ಷರಗಣಗಳ ವಿಷಯವನ್ನು ತಿಳಿದರೆ ಸಾಕು.

[1] (i) ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಸಿಂಹಪ್ರಾಸ.  ಇದರ ಹಾಗೆಯೇ ಪ್ರಸಾಕ್ಷರದ ಪ್ರಾಸಾಕ್ಷರಗಳ-
(ii) ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜಪ್ರಾಸ.
(iii) ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ವೃಷಭಪ್ರಾಸ.
(iv) ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ಅಜಪ್ರಾಸ.
(v) ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ.
(vi) ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ.  ಹೀಗೆ ಪ್ರಾಸದಲ್ಲಿ ಆರು ವಿಧಗಳನ್ನು ಹೇಳುವುದುಂಟು.  ಈ ಆರು ಪ್ರಾಸಗಳನ್ನು ನೆನಪಿನಲ್ಲಿಡಲು ಈ ಕೆಳಗಿನ ಪದ್ಯ ಸಹಕಾರಿ.
ನಿಜದಿಂ ಒಂದೊಡೆಸಿಂಹಂ || ಗಜದೀರ್ಘಂ ಬಿಂದುವೃಷಭ ವ್ಯಂಜನಶರಭಂ ||
ಅಜನು ವಿಸರ್ಗಂ ಹಯನಂ || ಬುಜಮುಖಿದಡ್ಡಕ್ಕರಂಗಳಿವು ಷಟ್ ಪ್ರಾಸಂ||
ಸಿಂಹ, ಗಜ, ವೃಷಭ, ಶರಭ, ಅಜ, ಹಯ-ಈ ಆರೂ ಪ್ರಾಸಗಳ ಸಂಕ್ಷೇಪ ಲಕ್ಷಣ ಈ ಪದ್ಯದಲ್ಲಿ ಇದೆ.


**********

ಅಲಂಕಾರ

ಅಲಂಕಾರ-ಅರ್ಥಾಲಂಕಾರಗಳು

ಅರ್ಥಾಲಂಕಾರಗಳು
() ಉಪಮಾಲಂಕಾರ
         ಈ ಕೆಳಗಿನ ಮಾತುಗಳನ್ನು ಗಮನಿಸಿರಿ.
(i) ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.
(ii) ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ.
    ಮೊದಲನೆಯ ವಾಕ್ಯದಲ್ಲಿ ಮಗುವಿನ ಮುಖದಲ್ಲಿನ ಅಹ್ಲಾದಕತ್ವವೂ, ಚಂದ್ರನಲ್ಲಿರುವ ಅಹ್ಲಾದಕತ್ವವೂ ಸಮಾನವಾಗಿರುವುದರಿಂದ ಮಗುವಿನ ಮುಖವನ್ನು ಚಂದ್ರನಿಗೆ ಹೋಲಿಸಿದೆ.  ಚಂದ್ರನನ್ನು ನೋಡಿದಾಗ ಉಂಟಾಗುವ ಮನೋಹರತ್ವವು ಮಗುವಿನ ಮುಖ ನೋಡಿದಾಗಲೂ ಆಗುತ್ತದೆ.  ಈ ಅರ್ಥ ಚಮತ್ಕಾರ ಆ ವಾಕ್ಯದಲ್ಲಿ ಅಡಗಿದೆ.
ಎರಡನೆಯ ವಾಕ್ಯದಲ್ಲಿ ಹಾವಿಗೆ ಹಾಲೆರೆದರೆ ವಿಷವೇ ವೃದ್ಧಿಯಾಗುವುದಲ್ಲದೆ ಬೇರಿಲ್ಲ.  ಇದರ ಹಾಗೆಯೇ ನೀಚರಿಗೆ ಉಪಕಾರ ಮಾಡಿದರೆ ಅವರು ಅಪಕಾರವನ್ನೇ ಮಾಡುವರಲ್ಲದೆ ಪ್ರತಿಯಾಗಿ ಉಪಕಾರ ಮಾಡುವುದಿಲ್ಲ.  ಇಲ್ಲಿ ನೀಚರಿಗೆ ಮಾಡಿದ ಉಪಕಾರವನ್ನು ಹಾವಿಗೆ ಹಾಲೆರೆಯುವ ಕ್ರಿಯೆಗೆ ಹೋಲಿಸಲಾಗಿದೆ.  ಹೀಗೆ ಬರುವ ಹೋಲಿಕೆಗಳಿಗೆ ‘ಉಪಮಾನ’ ವೆನ್ನುತ್ತಾರೆ.  ಯಾವುದಕ್ಕೆ ಈ ಹೋಲಿಕೆಯನ್ನು ಕೊಡುವೆವೋ ಅದು ‘ಉಪಮೇಯ’.  ಅಂತೆ ಹಾಗೆ-ಎಂದು ಹೋಲಿಕೆಗೆ ಸಂಬಂಧ ಕಲ್ಪಿಸುವ ಶಬ್ದಗಳು ಉಪಮಾವಾಚಕಗಳೆನಿಸುವುವು.  ಈ ಹೋಲಿಕೆಗಳಲ್ಲಿ ಬರುವ ಸಮಾನತೆಯೇ ಸಮಾನಧರ್ಮವೆನಿಸುವುದು.
ಉದಾಹರಣೆಗೆ:                                                ಮೊದಲನೆ ವಾಕ್ಯದಲ್ಲಿ
(೧)ಮಗುವಿನ ಮುಖಉಪಮೇಯ
(೨)ಚಂದ್ರಉಪಮಾನ
(೩)ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವಸಮಾನಧರ್ಮ, (ಸಾಧಾರಣಧರ್ಮ)
(೪)ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇಉಪಮಾವಾಚಕ
ಎರಡನೆಯ ವಾಕ್ಯದಲ್ಲಿ
(೧)ನೀಚರಿಗೆ ಮಾಡಿದ ಉಪಕಾರಉಪಮೇಯ
(೨)ಹಾವಿಗೆ ಹಾಲೆರೆಯುವಿಕೆಉಪಮಾನ
(೩)ಹಾವಿನಲ್ಲಿ ವಿಷಹೆಚ್ಚುವಿಕೆ ನೀಚರಿಂದ ಅಪಕಾರವಾಗುವಿಕೆ- ಎಂಬ ಎರಡರಿಂದಲೂ ಪರಿಣಾಮದಲ್ಲಿ ಅಪಕಾರವಾಗುವಿಕೆಸಮಾನಧರ್ಮ (ಸಾಧಾರಣಧರ್ಮ)
(೪)ಹಾಲೆರದಂತೆ ಎಂಬಲ್ಲಿ ಬಂದಿರುವ ಅಂತೆ ಎಂಬುದುಉಪಮಾವಾಚಕ ಶಬ್ದ
ಹೀಗೆ ಈ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಉಪಮಾವಾಚಕ – ಈ ನಾಲ್ಕೂ ಬಂದಿದ್ದರೆ ಅದು ಪೂರ್ಣೋಪಮಾಲಂಕಾರವೆನಿಸುವುದು[1].  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಉಪಮಾಲಂಕಾರ:- "ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುವುದು"[2]. (ಹೋಲಿಕೆಯೆಂದರೆ ಆಕರ್ಷಕವಾದ ಹೋಲಿಕೆ)
ಉದಾಹರಣೆ :- (i)
ಬಿರುಗಾಳಿಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ| ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದಮುನ್ನ ಹಮ್ಮೈಸಿಬಿದ್ದಳಂಗನೆ ಧರೆಗೆ ನಡುನಡುಗುತ||
(-ಜೈಮಿನಿ ಭಾರತ)
(ಶ್ರೀರಾಮಚಂದ್ರನ ಮಾತಿನಂತೆ ಸೀತಾದೇವಿಯನ್ನು ಕಾಡಿಗೆ ಬಿಟ್ಟುಬರಲು ಹೋದ ಲಕ್ಷ್ಮಣನು ಶ್ರೀರಾಮನ ಅಪ್ಪಣೆಯನ್ನು ಸೀತಾದೇವಿಗೆ ತಿಳಿಸಿದ ಸಂದರ್ಭದಲ್ಲಿ ನಡೆದ ಘಟನೆಯಿದು.)
ಅರ್ಥ:-ಬಿರುಗಾಳಿ ಬೀಸಲಾಗಿ, ಗೊನೆಬಿಟ್ಟ ಬಾಳೆ ಮರವು ಅಲ್ಲಾಡಿ ಮುರಿದು ಭೂಮಿಗೆ ಬೀಳುವಂತೆ ತುಂಬು ಗರ್ಭಿಣಿಯಾದ ಸೀತಾದೇವಿಯು ಲಕ್ಷ್ಮಣನ ಮಾತು ಕರ್ಣಪಟಲ (ಕಿವಿದೆರೆ) ಕ್ಕೆ ಬೀಳದ ಮುನ್ನ ಹಮ್ಮೈಸಿ ನಡುನಡುಗಿ ಭೂಮಿಗೆ ಬಿದ್ದಳು.
ಇಲ್ಲಿ ಭೂಮಿಗೆ ಬಿದ್ದ ಸೀತಾದೇವಿ ಉಪಮೇಯ’ ಫಲಿತ ಬಾಳೆಯ ಮರ ಉಪಮಾನ’ ಧರೆಗೆ ಬೀಳುವಿಕೆಯೇ ಸಾಧಾರಣಧರ್ಮ’ (ಸಮಾನಧರ್ಮ).  ‘ಅಂತೆ’ ಎಂಬುದೇ ಉಪಮಾವಾಚಕ.  ಆದುದರಿಂದ ಇದು ಪೂರ್ಣೋಪಮಾಲಂಕಾರವಾಯಿತು.
ಉದಾಹರಣೆ:- (ii)
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ|
ಬಾಡಿಗೆಯೆತ್ತು ದುಡಿದಂಗ| ಬಾಳೆಲೆಯ|
ಹಾಸ್ಯುಂಡು ಬೀಸಿ ಒಗೆದಂಗ||
(-ಜಾನಪದ ಸಾಹಿತ್ಯದಿಂದ)
ಅರ್ಥ:- ಬಾಲಕರಿಲ್ಲದ ಬಾಲೆಯ ಜನ್ಮವೇತರದು? ಬಾಡಿಗೆ ಎತ್ತು ದುಡಿದ ಹಾಗೆ.  ಮತ್ತು ಬಾಳೆಯೆಲೆಯನ್ನು ಹಾಸಿ ಊಟಮಾಡಿ ಬೀಸಿ ಒಗೆದ ಹಾಗೆ.  ಇಲ್ಲಿ ಮಕ್ಕಳಿಲ್ಲದ ಹೆಣ್ಣುಮಗಳಿಗೆ ಬಾಡಿಗೆ ಎತ್ತಿನ ದುಡಿಮೆಗೂ, ಬಾಳೆಯ ಎಲೆಯನ್ನು ಹಾಸಿ ಊಟಮಾಡಿ ಬಿಸಾಡುವಿಕೆಗೂ ಎರಡು ಹೋಲಿಕೆಗಳನ್ನು ಕೊಡಲಾಗಿದೆ.  ಇದೂ ಉಪಮಾಲಂಕಾರ.

() ರೂಪಕಾಲಂಕಾರ[3]
ಮಾತನಾಡುವಾಗ ಒಮ್ಮೊಮ್ಮೆ ಹೀಗೆ ಹೇಳುವುದುಂಟು.
(i) ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
(ii) ಆ ಮನುಷ್ಯ ನಿಜವಾಗಿ ದೇವರು.
(iii) ಈ ಶಾಲೆಗೆ ವಿದ್ಯಾರ್ಥಿಯೊಂದು ರತ್ನ.
(೧) ಇಲ್ಲಿ ಮೊದಲ ವಾಕ್ಯದಲ್ಲಿ-ವಿದ್ವಾಂಸನೂ ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಭೇದವಿಲ್ಲದೆ ಹೇಳಲಾಗಿದೆ.
(೨) ಎರಡನೆಯ ವಾಕ್ಯದಲ್ಲಿ-ಮನುಷ್ಯನೂ, ದೇವರೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಿದೆ.
(೩) ಮೂರನೆಯ ವಾಕ್ಯದಲ್ಲಿ-ವಿದ್ಯಾರ್ಥಿಯೂ ರತ್ನವೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಲಾಗಿದೆ.
ಇಲ್ಲಿ ಮೂರೂ ವಾಕ್ಯಗಳಲ್ಲಿ ಒಂದರಂತೆ ಇನ್ನೊಂದಿದೆ ಎಂದು ಹೇಳಿಲ್ಲ.  ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.  ಇಲ್ಲಿ ಅಭೇದದಿಂದ ಹೇಳಿರುವುದರಿಂದ ಇದು ‘ಅಭೇದ ರೂಪಕ’ ವೆಂದು ಹೇಳಲ್ಪಡುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಅಭೇದರೂಪಕಾಲಂಕಾರ:- ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆ, ಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದರೂಪಕಾಲಂಕಾರವೆನಿಸುವುದು.
ಉದಾಹರಣೆ:-
(i) ಪುರದಪುಣ್ಯಂ ಪುರುಷರೂಪಿಂದ ಪೋಗುತಿದೆ|ಪರಿಜನದ ಭಾಗ್ಯವಡವಿಗೆ ನಡೆಯುತಿದೆ||
                          
(-ಹರಿಶ್ಚಂದ್ರ ಕಾವ್ಯ)
ಈ ಪದ್ಯಭಾಗವು-ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ತನ್ನ ರಾಜ್ಯಾದಿಗಳನ್ನು ಕೊಟ್ಟು, ಪಟ್ಟಣ ಬಿಟ್ಟು ಹೋಗುವಾಗ ಅಯೋಧ್ಯಾನಗರದ ಜನರು ಗೋಳಿಡುವ ಸನ್ನಿವೇಶದ್ದು.
ಅರ್ಥ:- ಪುರದ ಪುಣ್ಯವು ಪುರುಷಾಕಾರದಿಂದ ಹೋಗುತ್ತಿದೆ.
ಸೇವಕ ಜನದ ಭಾಗ್ಯವು ಅಡವಿಗೆ ಹೋಗುತ್ತಿದೆ.
ಇಲ್ಲಿ ಹರಿಶ್ಚಂದ್ರನೆಂಬ ಉಪಮೇಯವೂ ಪುರದ ಪುಣ್ಯವೆಂಬ ಉಪಮಾನವೂ ಒಂದೇ ಎಂದೂ, ಎರಡನೆಯ ವಾಕ್ಯದಲ್ಲಿ ಹರಿಶ್ಚಂದ್ರನೆಂಬ ಉಪಮಾನವೂ ಪರಿಜನರ ಭಾಗ್ಯವೆಂಬ ಉಪಮಾನವೂ ಒಂದೇ ಎಂದೂ ಉಪಮಾನೋಪಮೇಯಗಳಲ್ಲಿ ಭೇದವಿಲ್ಲದೆ ಅಂದರೆ ಅಭೇದವಾಗಿ ವರ್ಣಿಸಿರುವುದರಿಂದ ಇದು ಅಭೇದರೂಪಕಾಲಂಕಾರವೆನಿಸಿತು.  ಇದರಂತೆ-
ಉದಾಹರಣೆ:-
(ii) ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ|
ವಿನಿಯನೂಳಿಗ ದೇವಪೂಜೆ||
ಮನನವಿವನ ನೆನೆವುದೆ ಸಾಧ್ವಿಯರಿಗೆ|
ಮುನಿಸತಿಯರ ಮೋಡಿಯೇನು?
(-ಹದಿಬದೆಯ ಧರ್ಮ)
ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡೆವಳಿಕೆಯು ವರ್ಣಿತವಾಗಿದೆ.
ಅರ್ಥ:- ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದು ದೇವರಧ್ಯಾನ.
ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ.  ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ-ದೇವರ ಪೂಜೆ ಇವೆರಡೂ ಒಂದೇ-ಇತ್ಯಾದಿಯಾಗಿ ಉಪಮೇಯ-ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಅಭೇದರೂಪಕಾಲಂಕಾರವೆನಿಸಿತು.

() ಉತ್ಪ್ರೇಕ್ಷಾಲಂಕಾರ[4]
ಲವಕುಶರು ಶ್ರೀರಾಮಲಕ್ಷ್ಮಣರೊಡನೆ ಯದ್ಧಕ್ಕೆ ತೊಡಗಿದಾಗಿನ ರಾಮಾಶ್ವಮೇಧದಲ್ಲಿನ ಪ್ರಸಂಗದ ವರ್ಣನೆಯನ್ನು ಈ ಕೆಳಗೆ ನೋಡಿರಿ.
“ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹರಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು.”
(-ರಾಮಾಶ್ವಮೇಧದಲ್ಲಿನ ವರ್ಣನೆಯ ಹೊಸಗನ್ನಡರೂಪಾಂತರ)
ಇಲ್ಲಿ ಸತ್ತು ಬಿದ್ದ ಆನೆಗಳು ರಣರಂಗದ ಸುತ್ತೆತ್ತಲೂ ಹರಡಿ ಬಿದ್ದಿದ್ದವು.  ರಣರಂಗವೆಲ್ಲ ರಕ್ತಮಯವಾಗಿತ್ತು.  ಈ ಸನ್ನಿವೇಶವನ್ನು ಕವಿ ಬೇರೊಂದು ರೀತಿಯಲ್ಲಿ ಕಲ್ಪಿಸಿಕೊಂಡನು (ಸಂಭಾವಿಸಿದನು).  ರಾಮಲಕ್ಷ್ಮಣರು ಹಿಂದೆ ಸಮುದ್ರಕ್ಕೆ ಸೇತುವೆ ಕಟ್ಟಲು ಬೆಟ್ಟಗಳನ್ನು ಕಿತ್ತು ತಂದು ಹರಡಿಸಿದ್ದರೆಂಬ ಪ್ರಸಿದ್ಧಾಂಶವನ್ನು ಜ್ಞಾಪಿಸಿಕೊಂಡ ಕವಿ, ಈಗ ಅವನ ಮಕ್ಕಳೇ ಆದ ಲವಕುಶರು ರಕ್ತದ ಸಮುದ್ರಕ್ಕೆ ಸೇತುವೆ ಕಟ್ಟಲು ಚಿಕ್ಕ ಚಿಕ್ಕ ಬೆಟ್ಟಗಳನ್ನು ತರಿಸಿ ಹರಡಿಸಿರುವರೋ-ಎನ್ನುವ ಹಾಗೆ ರಕ್ತಮಡುವಿನಿಂದ ಕೂಡಿದ ರಣರಂಗದಲ್ಲಿ ಸತ್ತು ಬಿದ್ದು ಸುತ್ತಲೂ ಹರಡಿಕೊಂಡಿರುವ ಆನೆಗಳು ಕಂಡವೆಂದು ಕಲ್ಪಿಸಿ ಹೇಳಿದ್ದಾನೆ.  ಹೀಗೆ ಕವಿ ಕಲ್ಪಿತಜ್ಞಾನದಿಂದ ಹೇಳುವುದು ಉತ್ಪ್ರೇಕ್ಷೆಯೆನಿಸುವುದು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
 ಉತ್ಪ್ರೇಕ್ಷಾಲಂಕಾರ:- "ಒಂದಾನೊಂದು ಪದಾರ್ಥವನ್ನೋ, ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದೇ ಉತ್ಪ್ರೇಕ್ಷೆಯೆನಿಸುವುದು."
ಆದರೆ ವರ್ಣಿಸುವ ವಸ್ತುವಿನಲ್ಲಿ ಅಥವಾ ಸನ್ನಿವೇಶದಲ್ಲಿ ಸಂಭಾವನೆ ಮಾಡುವ (ಕಲ್ಪಿಸಿಕೊಳ್ಳುವ) ವಸ್ತುವಿನ ಧರ್ಮವು ಇದ್ದೇ ಇರಬೇಕು.
ಉದಾಹರಣೆ:- (i)
ಆಸೇನಾರಜದಿಂ ಪರಿಧೂಸರಮಾದುದು ನಿಜಾಂಗಮಂ ತೊಳೆಯಲ್ಕೆಂದೋಸರಿಸದೆ ಪೊಕ್ಕಂತಿರೆವಾಸರಕರನಪರ ವಾರಿನಿಧಿಯಂ ಪೊಕ್ಕಂ||
                                  (-ಕನ್ನಡ ಕೈಪಿಡಿ)
ಇದೊಂದು ಯದ್ಧ ಸಮಯದ ಸಾಯಂಕಾಲದ ವರ್ಣನೆ.
ಅರ್ಥ:- ಸೇನೆಯ ಕಾಲ್ತುಳಿತದಿಂದ ಎದ್ದ ಧೂಳು ಮೈಗೆ ಮೆತ್ತಲಾಗಿ, ಅಂಥ ಕೆಂಪು ಧೂಳಿನಿಂದ ಧೂಸರವಾದ ತನ್ನ ದೇಹವನ್ನು ತೊಳೆಯುವುದಕ್ಕೋಸುಗ ಪಶ್ಚಿಮ ಸಮುದ್ರವನ್ನು ಸೂರ‍್ಯನು ಹೊಕ್ಕನು.
ಸಹಜವಾಗಿ ಮುಳುಗಿದ ಸೂರ‍್ಯನನ್ನು, ಕವಿ ಸ್ನಾನಕ್ಕೋಸುಗವೇ ಪಶ್ಚಿಮ ಸಮುದ್ರಕ್ಕೆ ಮುಳುಗಿದನೆಂದು ಕಲ್ಪಿಸಿ ಹೇಳಿದ್ದಾನೆ.
ಸಾಯಂಕಾಲದಲ್ಲಿ ಸೂರ‍್ಯನ ಬಣ್ಣ ಕೆಂಪಾಗಿರುತ್ತದೆ ಮತ್ತು ಪಶ್ಚಿಮದಲ್ಲಿ ಅವನು ಮರೆಯಾಗುತ್ತಾನೆ.  ಆದ್ದರಿಂದ ಕಲ್ಪಿಸಿ ಹೇಳುವ ಧೂಳುಮೆತ್ತಿ ಕೆಂಪಾದ ಮೆಯ್ಯಿ, ಪಶ್ಚಿಮದಲ್ಲಿರುವ ಸಮುದ್ರದಲ್ಲಿ ಕಾಣದಾಗುವನೆನ್ನುವಲ್ಲಿನ ಧರ್ಮವು ಇದೆ.  ಆದ್ದರಿಂದ ಇದು ಉತ್ಪ್ರೇಕ್ಷಾಲಂಕಾರವೆನಿಸಿತು.
ಉದಾಹರಣೆ:-
(iii) ಪಾಲ್ದುಂಬಿದ ಸಾಲ್ದೆನೆಗಳ|
ನೆಲ್ದುರುಗಲನೊಲ್ದು ಸೀಳಿಗಿಳಿಭಯ ಭರದಿಂ||
ಜೋಲ್ದಿಳೆಗಿಳಿವಂತಿರಬಂ|
ಬಲ್ದೆರೆಯೊಳ್ ಪೊಳೆದು ಮಡಿಯ ನೀರೋಳ್ ತೋರ್ಕುಂ||
                                         (-ರಾಜಶೇಖರ ವಿಳಾಸ)
ಗದ್ದೆಯಲ್ಲಿ ನೀರಿದೆ.  ಆ ನೀರಿನಲ್ಲಿ ಬತ್ತದ ತೆನೆಗಳ ಪ್ರತಿಬಿಂಬ ಕಾಣುತ್ತಿದೆ.
ಅರ್ಥ:- ಹಾಲುತುಂಬಿದ ಸಾಲುಸಾಲಾಗಿ ಕಾಣುವ ಬತ್ತದ ತೆನೆಗಳು ತಮ್ಮನ್ನು ಗಿಳಿಗಳು ಬಂದು ಸೀಳಿಬಿಡುತ್ತವೆಂಬ ಭಯದಿಂದ ಭೂಮಿಗೆ ಇಳಿದುಹೋದವೋ ಎಂಬಂತೆ ಗದ್ದೆಯ ನೀರಿನಲ್ಲಿ ಅವು ಪ್ರತಿಫಲಿಸಿ ಕಾಣುತ್ತಿದ್ದವು.
ಇಲ್ಲಿ ಸಹಜವಾಗಿ ನೀರಿನಲ್ಲಿ ಪ್ರತಿಫಲಿಸಿ ಕಾಣುವ ಬತ್ತದ ತೆನೆಗಳ ಆ ಸನ್ನಿವೇಶವನ್ನು ಕವಿಯು ಬೇರೊಂದು ಕಾರಣ ಕೊಟ್ಟು ಕಲ್ಪಿಸಿ ಗಿಳಿಗಳ ಭಯದಿಂದ ಅವು ಭೂಮಿಗೆ ಇಳಿದು ಹೋಗಿವೆ ಎಂದು ಸಂಭಾವನೆ ಮಾಡಿ ಹೇಳುವ ಇದು ಉತ್ಪ್ರೇಕ್ಷಾಲಂಕಾರವಾಗುವುದು.

() ದೃಷ್ಟಾಂತಾಲಂಕಾರ[5]

(i) ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.
(ii) ಅಟ್ಟಮೇಲೆ ಒಲೆ ಉರಿಯಿತು; ಕೆಟ್ಟಮೇಲೆ ಬುದ್ಧಿಬಂತು.
(iii) ಮಾತುಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ.
ಇತ್ಯಾದಿಯಾಗಿ ಹೇಳುವ ನಾಣ್ಣುಡಿಗಳನ್ನು ವಿಚಾರ ಮಾಡಿದರೆ, ಮೊದಲನೆಯ ವಾಕ್ಯದಲ್ಲಿ ಊರಿಗೆ ಉಪಕಾರ ಮಾಡುವುದೂ, ಹೆಣಕ್ಕೆ ಶೃಂಗಾರಮಾಡುವುದೂ ಒಂದೇ.  ಎರಡನೆಯ ವಾಕ್ಯದಲ್ಲಿ ಅಡಿಗೆಯಾದ ಮೇಲೆ ಒಲೆ ಉರಿಯಹತ್ತಿತು.  ಮನುಷ್ಯ ಕೆಟ್ಟ ಮೇಲೆ ಬುದ್ಧಿ ಬಂತು.  ಮೂರನೆಯ ವಾಕ್ಯದಲ್ಲಿ ಮಾತಿನ ಮಹತ್ವ ತಿಳಿದವನು ಜಗಳ ಮಾಡಬೇಕಾದ ಪ್ರಮೇಯವೇ ಇಲ್ಲ; ಊಟದ ಮರ್ಮವರಿತವನು ರೋಗದಿಂದ ನರಳುವ ಭಯವಿಲ್ಲ.  ಇತ್ಯಾದಿಯಾಗಿ ಎರಡೆರಡು ಮಾತುಗಳು ಅರ್ಥದ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬಗಳಂತೆ ಕಾಣುತ್ತವೆ.  ಬಿಂಬ ಪ್ರತಿಬಿಂಬವೆಂದರೆ ತಾನು ಮತ್ತು ಕನ್ನಡಿಯಲ್ಲಿ ಕಾಣುವ ತನ್ನ ಪ್ರತಿಬಿಂಬವಿದ್ದ ಹಾಗೆ.  ಹೀಗೆ ವರ್ಣಿಸುವ ವಿಷಯಕ್ಕೆ ಬೇರೊಂದು ವಿಷಯದ ದೃಷ್ಟಾಂತವು ಪ್ರತಿಬಿಂಬದ ಹಾಗೆ ಕಾಣುವಂತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ದೃಷ್ಟಾಂತಾಲಂಕಾರ:- "ಎರಡು ಬೇರೆ ಬೇರೆ ವಾಕ್ಯಗಳು (ವರ್ಣಿಸುವ ವಿಷಯದ ವಾಕ್ಯ ಅವರ್ಣ್ಯವಿಷಯ ವಾಕ್ಯಗಳು) ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ (ಒಂದರ ಪ್ರತಿಬಿಂಬ ಮತ್ತೊಂದೆನ್ನುವ ಭಾವದಂತೆ) ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರವೆನಿಸುವುದು."
ಉದಾಹರಣೆ:-
(i) ನಿಂದಿಸುವರ್ ದುರ್ಜನರ್ ಎಂ|ಬೊಂದುಭಯಂಬೆತ್ತು ಸುಕವಿರಚಿಸನೆಕೃತಿಯಂ?||ಮಂದೇಹರಭಯದಿಂದರ|ವಿಂದಸಖಂ ನಿಜಮಯೂಖನಂ ಪ್ರಸರಿಸನೇ?||
                        
(-ರಾಜಶೇಖರ ವಿಲಾಸ)
ಅರ್ಥ:- ದುರ್ಜನರು ನಿಂದಿಸುತ್ತಾರೆ ಎಂಬ ಹೆದರಿಕೆಯಿಂದ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸುವುದಿಲ್ಲವೆ? ಅಂದರೆ ರಚಿಸಿಯೇ ರಚಿಸುತ್ತಾನೆ.  ಕತ್ತಲೆಯ ಭಯದಿಂದ ಸೂರ‍್ಯನು ತನ್ನ ಕಿರಣಗಳನ್ನು ಪ್ರಸರಿಸುವುದಿಲ್ಲವೆ? ಅಂದರೆ ಪ್ರಸರಿಸಿಯೇ ಪ್ರಸರಿಸುತ್ತಾನೆ.
ಇಲ್ಲಿ-ದುರ್ಜನರು ನಿಂದೆ ಮಾಡುತ್ತಾರೆಂಬ ಹೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಸತ್ಕವಿಯಾದವನು ಕೃತಿ ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ, ಕತ್ತಲೆಯ ಹೆದರಿಕೆಯಿಂದ ಸೂರ‍್ಯನು ಸುಮ್ಮನಿರದೆ ತನ್ನ ಕಿರಣಗಳನ್ನು ಪ್ರಸರಿಸಿಯೇ ಪ್ರಸರಿಸುತ್ತಾನೆ-ಎಂಬ ಮಾತಿಗೂ ಅರ್ಥ ಸಾದೃಶ್ಯದಿಂದ ಬಿಂಬಪ್ರತಿಬಿಂಬ ಭಾವವು ಉಪಮೇಯ-ಉಪಮಾನಗಳೆರಡಕ್ಕೂ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.  ಇದರ ಹಾಗೆಯೇ-
ಉದಾಹರಣೆ:-
(ii) ಎನಿತೊಳವಪಾಯ ಕೋಟಿಗ|
ಳನಿತರ್ಕಂ ಗೇಹಮಲ್ತೆ ದೇಹಮಿದಂನೆ|
ಟ್ಟನೆ ಪೊತ್ತು ಸುಖವನರಸುವ|
ಮನುಜಂ ಮೊರಡಿಯೊಳೆ ಮಾದುಫಳಮನರಸದಿರಂ||
                                   (-ಯಶೋಧರ ಚರಿತೆ)
ಅರ್ಥ:- ಅಪಾಯಗಳೆಷ್ಟಿವೆಯೋ ಅಷ್ಟೆಲ್ಲಕ್ಕೂ ಮನೆಯಂತಿರುವ ಈ ದೇಹವನ್ನು ಧರಿಸಿ ಸುಖವೇ ಬೇಕು; ದುಃಖವು ಬೇಡ; ಎನ್ನುವ ಮನುಷ್ಯನು ಕಲ್ಲು ಮೊರಡಿಯಲ್ಲಿ ಮಾದಳ ಫಲವನ್ನು ಅರಸದೆ ಇರುವನೇ?
ಇಲ್ಲಿ-ಅನೇಕ ಅಪಾಯಗಳನ್ನು ಪಡೆಯುವುದಕ್ಕೆ ಕಾರಣವಾದ ಈ ದೇಹವನ್ನು ಧರಿಸಿ ಕೇವಲ ಸುಖವೇ ಬೇಕು ಎನ್ನುವ ಮನುಷ್ಯನೂ, ಕಲ್ಲುಮೊರಡಿಯ ಪ್ರದೇಶದಲ್ಲಿ ಮಾದಳ ಹಣ್ಣನ್ನು ಹುಡುಕುವ ಮನುಷ್ಯನೂ ಒಂದೇ.  ಏಕೆಂದರೆ ಕಲ್ಲುಮೊರಡಿಯಲ್ಲಿ ಮಾದಳ ಫಲವು ಸಿಗದು.  ಅದರಂತೆ ಮನುಷ್ಯ ದೇಹಕ್ಕೂ ಅಪಾಯಗಳು ಅನಿವಾರ‍್ಯ.  ಅವು ಬಂದೇ ಬರುತ್ತವೆ.  ಹೀಗೆ ಉಪಮೇಯ-ಉಪಮಾನ ವಾಕ್ಯಗಳಿಗೆ ಬಿಂಬ ಪ್ರತಿಬಿಂಬಭಾವ ತೋರುವುದರಿಂದ ಇದು ದೃಷ್ಟಾಂತಾಲಂಕಾರವಾಗುವುದು.

(೫) ಅರ್ಥಾಂತರನ್ಯಾಸಾಲಂಕಾರ[6]
(i) ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು; ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ?
(ii) ಆತನು ಉಂಡಮನೆಗೆ ಕೇಡುಬಗೆದನು; ಕೃತಘ್ನರು ಏನನ್ನು ತಾನೆ ಮಾಡುವುದಿಲ್ಲ?
ಇತ್ಯಾದಿಯಾಗಿ ಮಾತನಾಡುವುದುಂಟು.  ಇಲ್ಲಿ ಮೊದಲನೆಯ ವಾಕ್ಯದಲ್ಲಿ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ ಉತ್ತೀರ್ಣನಾದನು ಎಂದು ವರ್ಣಿಸುವ ವಿಶೇಷ ವಾಕ್ಯವನ್ನು-ಲೋಕದಲ್ಲಿ ಎಲ್ಲ ಬುದ್ಧಿವಂತ ಮಕ್ಕಳಿಗೂ ಅನ್ವಯವಾಗುವಂಥ ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೆ? ಎಂಬ ಸಾಮಾನ್ಯ ನುಡಿಯಿಂದ ಸಮರ್ಥನೆ ಮಾಡಿದೆ.  ಅದರಂತೆ, ಎರಡನೆಯ ವಾಕ್ಯದಲ್ಲಿಯೂ ಕೂಡ ಉಂಡಮನೆಗೆ ಕೇಡು ಬಗೆದನು ಎಂಬ ಈ ವರ್ಣ್ಯವಾದ ಮಾತನ್ನು ಕೃತಘ್ನತಾ ಬುದ್ಧಿಯುಳ್ಳ ಜನಗಳು ಏನನ್ನು ತಾನೆ ಮಾಡುವುದಿಲ್ಲ? ಅಂದರೆ-ಎಲ್ಲ ಕೆಡುಕನ್ನು ಮಾಡುತ್ತಾರೆಂಬ ಲೋಕ ಸಾಮಾನ್ಯ ಮಾತಿನಿಂದ ಸಮರ್ಥನೆ ಮಾಡಿ ಹೇಳುವುದುಂಟು.  ಇದರ ಹಾಗೆಯೇ ಈ ಕೆಳಗಿನ ಮಾತನ್ನು ನೋಡಿರಿ.
“ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆಭಕ್ತನಾದ ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ ಪರಮಾತ್ಮನು ಕಾಪಾಡಿದನು.”
ಈ ಮಾತಿನಲ್ಲಿ ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ ಎಂಬುದು ಸಾಮಾನ್ಯ ವಾಕ್ಯ; ಏಕೆಂದರೆ ಎಲ್ಲ ಪರಮಾತ್ಮನ ಭಕ್ತರಿಗೂ ಅನ್ವಯವಾಗುವ ಮಾತು ಅದು.  ಈ ಸಾಮಾನ್ಯವಾದ ಮಾತನ್ನು ಭಕ್ತನಾದ ಪ್ರಹ್ಲಾದನಿಗೆ ಗಂಡಾಂತರ ಪ್ರಾಪ್ತವಾದಾಗ ಪರಮಾತ್ಮನು ಸಂರಕ್ಷಿಸಿದನೆಂಬ ವಿಶೇಷ ವಾಕ್ಯದಿಂದ ಈ ಮಾತಿನಲ್ಲಿ ಸಮರ್ಥನೆ ಮಾಡಲಾಗಿದೆ.  ಹೀಗೆ ಅರ್ಥ ಚಮತ್ಕಾರದಿಂದ ವರ್ಣಿಸುವ ಅಲಂಕಾರವೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು.  ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಅರ್ಥಾಂತರನ್ಯಾಸಾಲಂಕಾರ:- "ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರವೆನಿಸುವುದು. (ಅಲ್ಲಿ ಸಾಮಾನ್ಯವಾಕ್ಯ ವಿಶೇಷ ವಾಕ್ಯಗಳೆರಡೂ ಉಕ್ತವಾಗಿರಬೇಕು)"[7]
ಉದಾಹರಣೆಗೆ:
(i) ಎನಗೆ ಹಿತಂ ಬ್ರಾಹ್ಮಣ ನೀ-|
ತನೆನ್ನದೆ ಅವಿವೇಕಿಯಾಗಿ ಶಿವಭೂತಿ ತೊ-|
ಟ್ಟನೆ ಬಗೆದನಹಿತಮಂ|
ತದ್ವನಚರಂ ಎಂತುಂ ಕೃತಘ್ನರೇನಂ ಮಾಡರ್?
                                    (-ಕರ್ಣಾಟಕ ಪಂಚತಂತ್ರ)
ಅರ್ಥ:- ನನಗೆ ಈ ಬ್ರಾಹ್ಮಣನು ಹಿತವನ್ನುಂಟುಮಾಡಿದವನು, ಎಂದು ಯೋಚಿಸದೆ ಆ ಬೇಡನು ಒಮ್ಮೆಲೆ ಅವನಿಗೆ ಕೇಡನ್ನು ಬಗೆದನು.  ಕೃತಘ್ನರಾದವರು ಏನನ್ನು ತಾನೆ ಮಾಡುವುದಿಲ್ಲ?
ಇಲ್ಲಿ ವರ್ಣಿಸಲ್ಪಡುವ ವಿಷಯವಾದ ಬೇಡನು ಬ್ರಾಹ್ಮಣನಿಗೆ ಅಹಿತವನ್ನು ಯೋಚಿಸಿದ ವಿಶೇಷ ವಿಷಯವನ್ನು -ಕೃತಘ್ನರಾದವರು ಏನೆಲ್ಲವನ್ನೂ ಮಾಡುತ್ತಾರೆ ಎಂಬ ಲೋಕಸಾಮಾನ್ಯವಾದ ಪ್ರಸಿದ್ಧ ವಿಷಯದಿಂದ ಸಮರ್ಥನೆ ಮಾಡಿದುದರಿಂದ ಇದು ಅರ್ಥಾಂತರನ್ಯಾಸಾಲಂಕಾರವಾಗುವುದು.  ಇಲ್ಲಿ ವಿಶೇಷವು ಸಾಮಾನ್ಯದಿಂದ ಸಮರ್ಥಿತವಾಗಿದೆ.
ಉದಾಹರಣೆ:
(ii) [8]ದೊರೆಯೊಳ್ಸೆಣಸುಗೆ ತನ್ನಿಂ|
ಪಿರಿಯರೊಳುರವಣಿಸಿ ಪೊಣರ್ದೊಡೆ ಅಳಿವುದು ದಿಟಮೀ|
ನರಪತಿಯೊಳ್ ಪೊಣರ್ದು ಅಳಿದರ್||
ಪರಿಕಿಪೊಡಾ ಕೆಳದಿ, ಮಧುರೆ, ಬೇಡ, ಮರಾಟರ್||
             (-ಅಪ್ರತಿಮವೀರಚರಿತೆ)
ಅರ್ಥ:- ಸರಿಸಮಾನರಾದವರಲ್ಲಿ ಯದ್ಧಮಾಡಬೇಕು.  ತನಗಿಂತಲೂ ಬಲಿಷ್ಠರಾದವರಲ್ಲಿ ಯದ್ಧಮಾಡಿದರೆ ಸಾಯುವುದು ನಿಶ್ಚಯ.  ಮಹಾರಾಜನಾದ ಚಿಕ್ಕದೇವರಾಜ ಒಡಯನೊಡನೆ ಯದ್ಧಮಾಡಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು.
ಇಲ್ಲಿ-ತನಗೆ ಸರಿಸಮಾನರಾದವರೊಡನೆ ಸೆಣಸಬೇಕಲ್ಲದೆ, ತನಗಿಂತಲೂ ಪರಾಕ್ರಮಶಾಲಿ ಗಳಾದವರಲ್ಲಿ ಸೆಣಸಬಾರದು ಎಂಬ ಸಾಮಾನ್ಯವಾದ ಅಂದರೆ ಲೋಕ ಪ್ರಸಿದ್ಧವಾದ ಮಾತನ್ನು, ಚಿಕ್ಕದೇವರಾಜರಂತಹ ಬಲಿಷ್ಠರೊಡನೆ ಸೆಣಸಿ ಕೆಳದಿಯವರೂ, ಮಧುರೆಯವರೂ, ಬೇಡರೂ, ಮರಾಟೆಯವರೂ ಸತ್ತರು ಎಂಬ ವಿಶೇಷ ವಾಕ್ಯದಿಂದ ಅಂದರೆ ವರ್ಣ್ಯವಾದ ಮಾತಿನಿಂದ ಸಮರ್ಥನೆ ಮಾಡಿರುವುದರಿಂದ ಇದು ವಿಶೇಷದಿಂದ ಸಾಮಾನ್ಯವನ್ನು ಸಮರ್ಥನೆ ಮಾಡಿದ ಅರ್ಥಾಂತರನ್ಯಾಸಾಲಂಕಾರವೆನಿಸಿತು.
     (iii) ಕೋಪಾನಳನಳುರೆ ಮಹಾ
            ಕೂಪದೊಳಿಭವೈರಿ ಪಾಯ್ದು ಸತ್ತುದು ಘನ ಶೌ
            ರ್ಯೋಪೇತನಾದೊಡಂ ಸಲೆ
            ಕೋಪಾತುರನಪ್ಪನಾವನುಂ ಬಳ್ದಪನೇ
                           (-ಕರ್ಣಾಟಕ ಪಂಚತಂತ್ರ)
ಅರ್ಥ:- ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು. ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?

ಇಲ್ಲಿ-ಮೃಗರಾಜನಾದ ಸಿಂಹವು ಮೊಲದ ಮಾತಿನ ಬಲೆಗೆ ಸಿಲುಕಿ ಹಸಿವಿನ ಜೊತೆಗೆ ಮತ್ತಷ್ಟು ಕೋಪಗೊಂಡ ಕಾರಣ ಅದರ ಬುದ್ದಿ ಮಂಕಾಗಿ ಬಾವಿಯಲ್ಲಿ ನೋಡಿದ ತನ್ನ ಪ್ರತಿಬಿಂಬವನ್ನು ಮತ್ತೊಂದು ಸಿಂಹವೆಂದು ಭಾವಿಸಿ ಆ ದೊಡ್ಡ ಬಾವಿಗೆ ನೆಗೆದು ಪ್ರಾಣ ಬಿಟ್ಟಿತು. ಇಲ್ಲಿ 'ಕೋಪವೆಂಬ ಬೆಂಕಿ ಹೆಚ್ಚಾಗಿ ದೊಡ್ಡ ಬಾವಿಯಲ್ಲಿ ಇಭವೈರಿ (ಸಿಂಹ) ಸತ್ತುಹೋಯಿತು' ಎಂಬ ವಿಶೇಷ ವಾಕ್ಯವನ್ನು 'ಎಷ್ಟೇ ಶೌರ್ಯವಂತನಾದರೂ ಬಹಳ ಕೋಪ-ಆತುರಗಳನ್ನು ಹೋಂದಿದವರು ಬದುಕುತ್ತಾರೆಯೇ?' ಎಂಬ ಲೋಕರೂಢಿಯಾದ ಸಾಮಾನ್ಯ ವಾಕ್ಯವು ಸಮರ್ಥಿಸುತ್ತದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರವೆನಿಸುತ್ತದೆ.

() ಶ್ಲೇಷಾಲಂಕಾರ[9]
ಈ ಕೆಳಗಿನ ಒಂದು ವಾಕ್ಯವನ್ನು ವಿಚಾರಮಾಡಿರಿ-
ವಿವಾಹ ಮಂಟಪವು ಪುರಂದರ ಪುರದಂತೆಸದಾರಂಭಾನ್ವಿತ ವಿಬುಧಮಿಳಿತವಾಗಿತ್ತು”
ಇದೊಂದು ವಿವಾಹ ಮಂಟಪದ ವರ್ಣನೆ.  ಅದು ಪುರಂದರನ ಎಂದರೆ ದೇವೇಂದ್ರನ ಪಟ್ಟಣದ ಹಾಗೆ ಸದಾರಂಭಾನ್ವಿತವಾಗಿತ್ತು.  ಮತ್ತು ವಿಬುಧರಿಂದ ಮಿಳಿತವೂ ಆಗಿತ್ತು.  ಇಲ್ಲಿ ರಂಭಾ ಶಬ್ದಕ್ಕೂ ವಿಬುಧ ಎಂಬ ಶಬ್ದಕ್ಕೂ ವಿವಾಹಮಂಟಪದ ಪರವಾಗಿ ಮತ್ತು ಇಂದ್ರನಗರವಾದ ಅಮರಾವತಿಯಪರವಾಗಿ ಬೇರೆ ಬೇರೆ ಅರ್ಥಮಾಡಬೇಕು.
ವಿವಾಹ ಮಂಟಪವು-(i) ರಂಭಾನ್ವಿತವಾಗಿತ್ತು ಎಂದರೆ ಬಾಳೆ ಗಿಡಗಳಿಂದ ಕೂಡಿತ್ತು.  ಎಂದು ಅರ್ಥಮಾಡಬೇಕು.  (ರಂಭಾ=ಬಾಳೆ)   (ii) ವಿಬುಧ ಮಿಳಿತವಾಗಿತ್ತು.  ಎಂದರೆ ಬ್ರಾಹ್ಮಣರ ಸಮೂಹದಿಂದ ಕೂಡಿತ್ತು-ಎಂದು ಅರ್ಥಮಾಡ ಬೇಕು.  (ವಿಬುಧ=ಬ್ರಾಹ್ಮಣ) ಅಮರಾವತಿಯು-(iii) ರಂಭಾನ್ವಿತವಾಗಿತ್ತು ಎಂದರೆ ರಂಭೆಯೆಂಬ ಅಪ್ಸರ ಸ್ತ್ರೀಯಿಂದ ಕೂಡಿತ್ತು ಎಂದರ್ಥ ಮಾಡಬೇಕು.  ರಂಭಾ=ಅಪ್ಸರೆ (ಒಬ್ಬಳು). (iv) ವಿಬುಧ ಮಿಳಿತವಾಗಿತ್ತು.  ಎಂದರೆ ದೇವತೆಗಳಿಂದ ತುಂಬಿತ್ತು ಎಂದು ಅರ್ಥ ಮಾಡಬೇಕು.
(ವಿಬುಧ=ದೇವತೆ)
ಹೀಗೆ ‘ರಂಭಾ’ ಶಬ್ದವು ಬಾಳೆ-ಅಪ್ಸರ ಸ್ತ್ರೀಯೆಂದೂ, ‘ವಿಬುಧ’ ಶಬ್ದವು ಬ್ರಾಹ್ಮಣ ಮತ್ತು ದೇವತೆಯೆಂದೂ ಎರಡರ್ಥಗಳಿಂದ ಕೂಡಿರುತ್ತವೆ.  ಒಂದೇ ಶಬ್ದವು ವರ್ಣಿಸುವ ವಿವಾಹ ಮಂಟಪದ ಪರವಾಗಿಯೂ, ವರ್ಣಿಸುವ ವಿಷಯವಲ್ಲದ ದೇವೇಂದ್ರನ ಅಮರಾವತಿಯ ಪರವಾಗಿಯೂ ಎರಡು ಬೇರೆ ಬೇರೆ ಅರ್ಥ ಕೊಡುತ್ತದೆ.  ಇಂಥ ಪದಗಳೇ ‘ಶ್ಲೇಷೆಯೆನಿಸುವುವು.  ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಶ್ಲೇಷಾಲಂಕಾರ:- "ಬೇರೆಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆಬೇರೆ ಅರ್ಥ ಕೊಡುವುದೇ ಶ್ಲೇಷಾಲಂಕಾರವೆನಿಸುವುದು."[10]
ಉದಾಹರಣೆಗೆ:
ಕಲಿಯಂತೆ ಸಶರಂ, ಅಂಬರ|
ತಲದಂತೆ ಸಹಂಸಂ, ಅಮರಪುರಮೆನೆಸುಮನೋ|
ನಿಲಯಂ ಸಕವಿ ನೃಪಸಭಾ|
ತಲದಂತೆ ಅಹಿಯಂತೆ ಸವಿಷಮೊಪ್ಪಿದುದು ಸರಂ||
ಇದು ಒಂದು ಸರೋವರದ ವರ್ಣನೆಯಾಗಿದೆ.  ಆ ಸರವು ಒಪ್ಪಿದುದು ಹೇಗೆ? ಅದರ ಅರ್ಥ ನೋಡಿರಿ;
ಆ ಸರವು-        
(i) ಕಲಿಯಂತೆ ಸಶರವಾಗಿತ್ತು.
(ii) ಅಂಬರ ತಲದಂತೆ ಸಹಂಸವಾಗಿತ್ತು.
(iii) ಅಮರಪುರದಂತೆ ಸುಮನೋನಿಲಯವಾಗಿತ್ತು.
(iv) ನೃಪಸಭೆಯಂತೆ ಸಕವಿಯಾಗಿತ್ತು.
(v) ಹಾವಿನಂತೆ ಸವಿಷವಾಗಿತ್ತು.
ಹೀಗಿತ್ತು.  ಈಗ ಸಶರ, ಸಹಂಸ, ಸುಮನೋನಿಲಯ, ಸಕವಿ, ಸವಿಷ-ಈ ಐದು ಪದಗಳ ಅರ್ಥಗಳೂ ಸರೋವರದ ಪರವಾಗಿ ಬೇರೆಬೇರೆ ಅರ್ಥ ಕೊಡಬೇಕು.  ಸಶರ ಅಂದರೆ ಶರಸಮೇತ ಎಂದು ಅರ್ಥ.  ಇದರಂತೆ ಸ ಬಂದಿರುವಲ್ಲೆಲ್ಲ ಸಮೇತ ಎಂದು ಅರ್ಥ ಮಾಡಬೇಕು.
(i)ಶರ:-ಸರೋವರ ಪರವಾಗಿನೀರು
ಸರೋವರ ಪರವಾಗಿ
ಕಲಿಯ ಪರವಾಗಿ
ಬಾಣ
ಅಂಬರತಲ ಆಕಾಶ ಪರವಾಗಿ
(ii)ಸಹಂಸ:-ಹಂಸಪಕ್ಷಿಯಿಂದ ಕೂಡಿತ್ತು
(ಹಂಸ=ಹಂಸಪಕ್ಷಿ)
ಸೂರ‍್ಯನಿಂದ ಕೂಡಿತ್ತು
(ಹಂಸ=ಸೂರ‍್ಯ)
(iii)ಸುಮನೋನಿಲಯ:-ಸರೋವರ ಪರವಾಗಿ
(ತಾವರೆ) ಹೂಗಳಿಂದ ಕೂಡಿತ್ತು (ಸುಮನ=ಹೂವು)
ಅಮರಪುರದ ಪರವಾಗಿ ದೇವತೆಗಳಿಂದ ಕೂಡಿತ್ತು
(ಸುಮನ=ದೇವತೆ)
(iv)ಸಕವಿ:-ಸರೋವರ ಪರವಾಗಿ ನೀರುಹಕ್ಕಿಯಿಂದ ಕೂಡಿತ್ತು (ಕವಿ=ನೀರುಹಕ್ಕಿ)ನೃಪಸಭೆಯಪರವಾಗಿ ಕವಿಗಳಿಂದ ಕೂಡಿತ್ತು (ಕವಿ-ಕಾವ್ಯ ಬರೆಯುವವ)
(v)ಸವಿಷ:-ಸರೋವರ ಪರವಾಗಿ
ನೀರಿನಿಂದ ಕೂಡಿತ್ತು (ವಿಷ=ನೀರು)
ಹಾವಿನ ಪರವಾಗಿ
ವಿಷದಿಂದ ಕೂಡಿತ್ತು
ಹೀಗೆ- (೧) ಶರ = (i) ಬಾಣ  (ii) ನೀರು
(೨) ಸುಮನ = (i) ಹೂವು  (ii) ದೇವತೆ
(೩) ಹಂಸ = (i) ಹಂಸ ಪಕ್ಷಿ (ii) ಸೂರ‍್ಯ
(೪) ಕವಿ = (i) ನೀರುಹಕ್ಕಿ (ii) ಕವಿ
(೫) ವಿಷ = (i) ನೀರು (ii) ವಿಷ
ಒಂದೇ ಶಬ್ದವು ವರ್ಣಿಸುವ ಸರೋವರದ ಪರವಾಗಿಯೂ ಅವರ್ಣ್ಯವಾದ ಮತ್ತೊಂದು ವಿಷಯದ ಪರವಾಗಿಯೂ ಬೇರೆಬೇರೆ ಅರ್ಥಗಳನ್ನು ಕೊಡುವುದರಿಂದ ಶ್ಲೇಷಾಲಂಕಾರವೆನಿಸುವುದು.

[1] ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕಗಳಲ್ಲಿ ಒಂದಾದರೂ, ಕೆಲವಾದರೂ ಸ್ಪಷ್ಟವಾಗಿ ಹೇಳಿರದಿದ್ದರೆ ಅದು ಲುಪ್ತೋಪಮೆಯೆನಿಸುವುದು.
[2] ಉಪಮಾಯತ್ರ ಸಾದೃಶ್ಯ ಲಕ್ಷ್ಮೀರುಲ್ಲಸತಿ ದ್ವಯೋಃ ||
ಅರ್ಥ:- ಪ್ರಸ್ತುತವಾದ ವಸ್ತುವಿಗೆ ಪೆರತೊಂದು ವಸ್ತುವಿನೊಡನೆ ಒಂದು ಧರ್ಮದಿಂ ಸಾದೃಶ್ಯವ್ಯಕ್ತವಾಗಿ ತೋರೆಯದು ಉಪಮೇಯೆನಿಪುದು  (- ಅಪ್ರತಿಮವೀರಚರಿತೆ) (ವಿಶೇಷ ತಿಳಿವಳಿಕೆಗಾಗಿ ಅಪ್ರತಿಮ ವೀರ ಚರಿತೆಯಲ್ಲಿನ ವಿಷಯ ಕೊಡಲಾಗಿದೆ.)
[3] ವಿಷಯ್ಯಭೇದ ತಾದ್ರೂಪ್ಯರಂಜನಂ ವಿಷಯಸ್ಯಯತ್ ರೂಪಕಂ.. .. ..
ಅರ್ಥ:-ವರ್ಣಿಸುವ ವಸ್ತುವನುಪಮಾನವಸ್ತುವೆಂದೇ ಪೇಳ್ವುದು ಅಭೇದರೂಪಕಂ.
(-ಅಪ್ರತಿಮವೀರಚರಿತ್ರೆ)
(ಈ ಅಲಂಕಾರದಲ್ಲಿ ಆರು ಬಗೆ.  ಪ್ರಕೃತ ಅಭೇದರೂಪಕವೊಂದನ್ನು ತಿಳಿದರೆ ಸಾಕು.  ಸೂತ್ರದಲ್ಲಿ ತಾದ್ರೂಪ್ಯರೂಪಕದ ಪ್ರಸ್ತಾಪವೂ ಇದೆ.  ಅದು ಅನವಶ್ಯಕ.)
[4] ಸಂಭಾವನಾಸ್ಯುರುತ್ಪ್ರೇಕ್ಷಾ …… (ಸಂಭಾವನಾಸ್ಯಾದುತ್ಪ್ರೇಕ್ಷಾ.. .. .. )
ವರ್ಣಿಸುವ ಉಪಮೇಯಕ್ಕೆ ಉಪಮಾನದ ಸಾದೃಶ್ಯವಿರ್ಪುದರಿಂದ ಉಪಮಾನಮೆಂದೆಣಿಸುವುದು (ಊಹಿಸುವುದು), ಉತ್ಪ್ರೇಕ್ಷೆಯೆನಿಸುವುದು.  (ಎಂದರೆ ವಸ್ತುಸ್ವರೂಪದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಸಂಭಾವಿಸುವುದು, ಎಂದರೆ ಕಲ್ಪಿಸುವುದು ಮುಖ್ಯವಾದ ಅಂಶ.)
[5] ಚೇದ್ಬಿಂಬ ಪ್ರತಿಬಿಂಬತ್ವಂ ದೃಷ್ಟಾಂತಸ್ತದಲಂಕೃತಿಃ
ಅರ್ಥ:- ಎರಡು ವಾಕ್ಯಂಗಳ್ ಬೇರಾಗಿ ಒಂದರ್ಕೊಂದು ಸಾದೃಶ್ಯದಿಂ ಪ್ರತಿಬಿಂಬದಂತೆ ತೋರೆಯದು ದೃಷ್ಟಾಂತಾಲಂಕಾರಂ. (-ಅಪ್ರತಿಮವೀರಚರಿತ್ರೆ)
[6] ಉಕ್ತಿರರ್ಥಾಂತರನ್ಯಾಸಃ ಸ್ಯಾತ್ ಸಾಮಾನ್ಯ ವಿಶೇಷಯೋಃ
ಅರ್ಥ:- ಸಾಮಾನ್ಯ ವಿಶೇಷಂಗಳಂ ಪೇಳ್ವದು ಅರ್ಥಾಂತರನ್ಯಾಸಂ.  ಅದುವುಂ ಪ್ರಸ್ತುತಮಾದರ್ಥಂ ವಿಶೇಷಮಾಗಿ, ಅಪ್ರಸ್ತುತಮಾದರ್ಥಂ ಸಾಮಾನ್ಯ ಮಾಗೆಯದು (೧) ಸಾಮಾನ್ಯದಿಂ ವಿಶೇಷ ಸಮರ್ಥನ ರೂಪಮಾದ ಅರ್ಥಾಂತರನ್ಯಾಸಂ.  ಸಾಮಾನ್ಯಂ ಪ್ರಸ್ತುತಮಾಗೆ ವಿಶೇಷಂ ಅಪ್ರಸ್ತುತ ಮಾಗೆ (೨) ವಿಶೇಷದಿಂ ಸಾಮಾನ್ಯ ಸಮರ್ಥನ ರೂಪಮಾದ ಅರ್ಥಾಂತರ ನ್ಯಾಸಾಲಂಕಾರಂ.    (-ಅಪ್ರತಿಮವೀರ ಚರಿತೆ)
[7] ದೃಷ್ಟಾಂತವಾಗಿ ಹೇಳಿದ ವಿಚಾರವು ಸಾಮಾನ್ಯವಾದ ಮಾತಾಗಿ ಲೋಕ ಪ್ರಸಿದ್ಧವಾಗಿದ್ದರೆ ಅರ್ಥಾಂತರನ್ಯಾಸಾಲಂಕಾರವಾಗುವುದು.
[8] ಚಿಕ್ಕದೇವರಾಜರ ಶೌರ್ಯವನ್ನು ವರ್ಣಿಸುವ ಒಂದು ಸಂದರ್ಭದ ಪದ್ಯ.
[9] ನಾನಾರ್ಥ ಸಂಶ್ರಯಃ ಶ್ಲೇಷಃ ವರ್ಣಾವರ್ಣ್ಯೋ ಭಯಾತ್ಮಕಂ
ಅರ್ಥ:- ವಾಕ್ಯದೊಳ್ ಪದಂಗಳ್ ನಾನಾರ್ಥಮಾಗಿರೆ ಅದು ಶ್ಲೇಷಾಲಂಕಾರಮೆನಿಸುವುದು.  (ಇದರಲ್ಲಿ ಹಲವಾರು ವಿಧಗಳುಂಟು.  ಆ ಪ್ರಕಾರಗಳೆಲ್ಲ ಪ್ರಕೃತ ಅನವಶ್ಯ.)     (-ಅಪ್ರತಿಮವೀರ ಚರಿತೆ)
[10] ಶಬ್ದಗಳನ್ನು ಒಡೆದು ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಒಡೆಯದೆ ಬೇರೆಬೇರೆ ಅರ್ಥ ಮಾಡುವುದೂ ಉಂಟು.  ಶಬ್ದವನ್ನು ಒಡೆದು ಬೇರೆಬೇರೆ ಅರ್ಥ ಮಾಡಿದರೆ ಸಭಂಗ ಶ್ಲೇಷೆಯೆಂದೂ ಒಡೆಯದೇ ಅರ್ಥ ಮಾಡಿದರೆ ಅಭಂಗಶ್ಲೇಷೆಯೆಂದೂ ಕರೆಯುವರು.  ಸಭಂಗಶ್ಲೇಷೆ ಪ್ರಕೃತ ಅನವಶ್ಯಕ.

ಅಲಂಕಾರ-ಶಬ್ದಾಲಂಕಾರಗಳು

ಅಲಂಕಾರ-ಶಬ್ದಾಲಂಕಾರಗಳು
ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ ವೆನ್ನುವರೆಂದು ಪೂರ್ವದಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ. ಶಬ್ದಾಲಂಕಾರಗಳು ಎರಡು ವಿಧ.
() ಅನುಪ್ರಾಸ

() ವೃತ್ತ್ಯನುಪ್ರಾಸ
ಈ ಗಾದೆಗಳನ್ನು ನೋಡಿರಿ
() ತುಪ್ಪದ ಮಾತಿಗೆ ಒಪ್ಪಿಕೊಂಡು ತಿಪ್ಪೆಪಾಲಾದ
() ತುಂಟನಾದವ ಮಂಟಪದಲ್ಲಿ ಕೂತರೂ ತಂಟೆ ಬಿಡಲಾರ
ಇತ್ಯಾದಿ ಮಾತುಗಳಲ್ಲಿ ಒಂದೇ ಅಕ್ಷರ ಎರಡು ಮೂರು ಸಲ ಬಂದು ವಾಕ್ಯಗಳ ಸೊಬಗನ್ನು ಹೆಚ್ಚಿಸಿದೆ.  ಹಾಗೆಯೇ ಈ ಕೆಳಗಿನ ಒಂದು ಪದ್ಯವನ್ನು ನೋಡಿ.
ಮುರಾರಿ ಶಂಬರಾರಿ ವಾಗ್ವರಾರಿ ನಿರ್ಜರಾರ್ಜಿತೇ
ಧರಾಧರೇಶ್ವರಾತ್ಮಜೇಹರ ಪ್ರಿಯೇ ಜಯಾಂಬಿಕೆ ||”
(-ವೃಷಭೇಂದ್ರ ವಿಜಯ)
ಈ ಪದ್ಯದಲ್ಲಿ ರಕಾರವು ಹಲವಾರು ಸಲ ಪುನರುಕ್ತವಾಗಿ ಪದ್ಯದ ಸೌಂದರ‍್ಯವು ಶಬ್ದಗಳಿಂದ ಹೆಚ್ಚಿದೆ.  ಇದಕ್ಕೆ ಸೂತ್ರವನ್ನು ಹೀಗೆ ಹೇಳಬಹುದು.

ವೃತ್ತ್ಯನುಪ್ರಾಸ:- "ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು ವೃತ್ತ್ಯನುಪ್ರಾಸವೆನಿಸುವುದು."
ಉದಾಹರಣೆಗೆ:
ಎಳೆಗಿಳಿಗಳ ಬಳಗಂ ಗಳ
ಗಳನಿಳಿ ತಂದೆಳಸಿ ಬಳಸಿ ಸುಳಿದೊಳವುಗುತುಂ
ನಳನಳಿಸಿ ಬೆಳೆದು ಕಳಿಯದ |ಕಳವೆಯಕಣಿಶಂಗಳಂ ಕರಂ ಖಂಡಿಸುಗುಂ ||
                                     
(-ರಾಜಶೇಖರ ವಿಳಾಸ)
ಅರ್ಥ:- ಎಳೆಯ ಗಿಳಿಗಳ ಸಮೂಹವು ಗಳಗಳನೆ ಇಳಿದು ಬಂದು ಬತ್ತದ ಹಾಲುಗಾಳನ್ನು ಬಯಸಿ ಸುತ್ತುತ್ತಾ, ಸುಳಿಯುತ್ತಾ ನಳನಳಿಸಿ ಬೆಳೆದುನಿಂತ ಬತ್ತದ ಎಳೆಗಾಳುಗಳ ಗೊನೆಗಳನ್ನು ಸೀಳುತ್ತಿದ್ದವು.
ಇಲ್ಲಿ ಳ ಕಾರವು ಅನೇಕ ಸಲ ಪುನರುಕ್ತಿಗೊಂಡು ಪದ್ಯದ ಸೌಂದರ‍್ಯವು ಹೆಚ್ಚಿದೆ.  ಆದ್ದರಿಂದ ಇದು ವೃತ್ತ್ಯನುಪ್ರಾಸ ಅಲಂಕಾರವೆನಿಸಿದೆ.

() ಛೇಕಾನುಪ್ರಾಸ
(i)ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ (-ಬಸವಣ್ಣ)
(i) ಹಾಡಿ ಹಾಡಿ ರಾಗ ಬಂತು
ಉಗುಳಿ ಉಗುಳಿ ರೋಗ ಬಂತು (-ಗಾದೆ)
ಮೇಲಿನ ಒಂದು ವಚನ ಮತ್ತು ಒಂದು ಗಾದೆ ಇವುಗಳಲ್ಲಿ ಬಂದಿರುವ ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದಗಳ ಆವೃತ್ತಿಯು ಆ ಮಾತುಗಳ ಸೌಂದರ‍್ಯವನ್ನು ಹೆಚ್ಚಿಸಿದೆ.  ಮಾಡಿ ಮಾಡಿ ಎಂಬಲ್ಲಿ ಮಕಾರ ಡಕಾರಗಳು ಸೇರಿದ ಶಬ್ದ ಎರಡು ಸಲ ಬಂದಿದೆ.  ಅನಂತರ ನೀಡಿ ನೀಡಿ ಎಂಬ ಶಬ್ದ ಎರಡು ಸಲ ಬಂದಿದೆ.  ಅದರಂತೆ ಗಾದೆಯಲ್ಲೂ ಎರಡೆರಡು ವ್ಯಂಜನಗಳನ್ನೊಳಗೊಂಡ ಶಬ್ದ ಜೊತೆ ಜೊತೆಯಾಗಿ ಬಂದಿವೆ.  ಹೀಗೆ ಬಂದರೆ ಅದು ‘ಛೇಕಾನುಪ್ರಾಸ’ವೆನಿಸುವುದು.
ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಛೇಕಾನುಪ್ರಾಸ:- "ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ (ಆವೃತ್ತಿಯಾಗಿ) ಪದ್ಯದಲ್ಲಿ ಬಂದಿದ್ದರೆ ಅದು ಛೇಕಾನುಪ್ರಾಸವೆನಿಸುವುದು."
ಉದಾಹರಣೆಗೆ:-
ಸುತ್ತುಲುಂ ಪರಿವ ಪ್ರಚಾರದಿಂ ಪೂರದಿಂ|ದೊತ್ತಿರಿಸಿಬರ್ಪ ಬಲ್ದೆರೆಗಳಿಂ ನೊರೆಗಳಿಂ|ದೆತ್ತೆತ್ತಲೊಗೆವ ಸವ್ವಳೆಗಳಿಂ ಸುಳಿಗಳಿಂ ನಾನಾಪ್ರಕಾರದಿಂದೆ||ಒತ್ತಿಭೋರ್ಗರೆವ ರವದುರ್ಬಿನಿಂ ಪರ್ಬಿನಿಂ|ಹತ್ತೊಂದುಗೂಡಿ ವಿಸ್ತೀರ್ಣದಿಂ ಪೂರ್ಣದಿಂ|ತುತ್ತಿದುದು ಸಕಲಲೋಕಂಗಳಂ ತಿಂಗಳಂ ಪೋತ್ತವಂಬೆರಗಾಗಲು||
                                                              
(-ಚನ್ನಬಸವ ಪುರಾಣ)
ಇದು ಜಲಪ್ರಳಯವಾದ ಒಂದು ಸಂದರ್ಭದ ವರ್ಣನೆ.  ಪಾರ್ವತಿಯು ಈಶ್ವರನ ಕಣ್ಣನ್ನು ಹಿಂದಿನಿಂದ ಬಂದು ಮುಚ್ಚಿದಳು.  ಈಶ್ವರನ ಆನಂದಾಶ್ರುಗಳು ಪಾರ್ವತಿಯ ಬೊಗಸೆಯಲ್ಲಿ ತುಂಬಿದವು.  ಆ ಆನಂದಾಶ್ರುಗಳು ಪಾರ್ವತಿಯ ಹತ್ತು ಬೆರಳುಗಳಿಂದ ಹತ್ತು ನದಿಗಳಾಗಿ ಹರಿದು ಜಗತ್ತನ್ನೆಲ್ಲ ಆ ನೀರು ಆವರಿಸಿ ಜಲ ಪ್ರಳಯವಾಯಿತೆಂದು ಹೇಳುವ ಒಂದು ಭವ್ಯವರ್ಣನೆಯಿದು.  ಇಲ್ಲಿ ಎರಡೆರಡು ವ್ಯಂಜನಗಳ ಆವೃತ್ತಿಯು ಹಲವಾರು ಕಡೆಗಳಲ್ಲಿ ಬಂದು ಪದ್ಯದ ಸೌಂದರ‍್ಯವನ್ನು ಹೆಚ್ಚಿಸಿವೆ.  ಆದ್ದರಿಂದ ಇದು ಛೇಕಾನುಪ್ರಾಸ.

() ಯಮಕಾಲಂಕಾರ
ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಪದಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು ಯಮಕಾಲಂಕಾರವೆನಿಸುವುದು.
ಉದಾ:-
ಬರಹೇಳ್ ನಿಕುಂಭನಂ ಶುಂಭನಂ ಜಂಭನಂ|ಬರಹೇಳ್ ಸಶಬಲನಂ, ಪ್ರಬಲನಂ, ಸುಬಲನಂ|ಬರಹೇಳ್ ಪ್ರವೀರನಂ, ಘೋರನಂ, ಶೂರನಂ, ಬರಹೇಳ್ ಮಹಾನಾಭನಂ||ಬರಹೇಳ್ ನಿಶುಂಭನಂ ಕುಂಭನಂ ಲಂಬನಂ|ಬರಹೇಳ್ ಸುವಿಪುಳನಂ ಚಪಳನಂ ಕಪಿಳನಂ|ಬರಹೇಳ್ ಮುಹುಂಡನಂ ಮುಂಡನಂ ಹುಂಡಮುಖ್ಯರನೆನುತ್ತುರಿದೆದ್ದನು||
                                                       
(-ಚೆನ್ನಬಸವಪುರಾಣ)
ಅಂಧಕಾಸುರನು ಶಿವನ ಮೇಲೆ ಯದ್ಧಕ್ಕೆ ಹೊರಟಾಗಿನ ಸಂದರ್ಭದ ಒಂದು ಪದ್ಯವಿದು.  ಇಲ್ಲಿ ಆರೂ ಸಾಲುಗಳ ಆದಿಯಲ್ಲಿ ಬರಹೇಳ್ ಎಂಬ ನಾಲ್ಕು ವ್ಯಂಜನಗಳ ಶಬ್ದವೊಂದು ಕ್ರಮವಾಗಿ ಬರುವುದು.  ಆದ್ದರಿಂದ ಇದು ಯಮಕಾಲಂಕಾರ ವಾಯಿತು.
(ಯಮಕಾಲಂಕಾರಗಳಲ್ಲಿ ಹೀಗೆ ಒಂದೇ ಶಬ್ದ ಒಂದು ಗೊತ್ತಾದ ಕಡೆ ಬಂದಿದ್ದರೂ ಒಂದೊಂದು ಕಡೆಯಲ್ಲಿ ಒಂದೊಂದರ್ಥವಾಗುವಂತಹ ರೀತಿಯಲ್ಲೂ ಇರುವುದುಂಟು.  ಪ್ರಕೃತ ಅಂಥ ಪದ್ಯದ ವಿವರಣೆ ಅನವಶ್ಯಕ.)

[1] ಏಕದ್ವಿಪ್ರಭೃತೀನಾಂತು ವ್ಯಂಜನಾನಾಂ ಯದಾ ಭವೇತ್ ಪುನರುಕ್ತಿರಸೌ ನಾಮ ವೃತ್ಯನುಪ್ರಾಸ ಇಷ್ಯತೇ.
ಅರ್ಥ:- ಒಂದಕ್ಕರಮಾದೊಡಂ ಎರಡಕ್ಕರಮಾದೊಡಂ ಪಲವುಂ ವೇಳೆಯೊಳ್ ಬಳಸಿ ಬರುತ್ತಿರೆಯದು ವೃತ್ತ್ಯನುಪ್ರಾಸವೆನಿಪ್ಪುದು.        (-ಅಪ್ರತಿಮವೀರ ಚರಿತೆ)
[2] ಭವೇದವ್ಯವಧಾನೇನ ದ್ವಯೋರ್ವ್ಯಂಜನ ಯುಗ್ಮಯೋಃ |
ಆವೃತ್ತಿರ‍್ಯತ್ರ ಸ ಬುಧೈಃ ಛೇಕಾನುಪ್ರಾಸ ಇಷ್ಯತೇ ||
ಅರ್ಥ:- ಒಂದು ಪದ್ಯದೊಳ್ ಎರಡೆರಡುಂ ಅಕ್ಕರಂ ಜತೆಜತೆಯಾಗಿ ಪಲವುಂ ಬಳಿಯೊಳ್ ಬರೆ, ಅದು ಛೇಕಾನುಪ್ರಾಸವೆನಿಪುದು.      (-ಅಪ್ರತಿಮವೀರ ಚರಿತೆ)
[3] ಯಮಕಂ ಪೌನರುಕ್ತೇತು ಸ್ವರವ್ಯಂಜನ ಯುಗ್ಮಯೋಃ
ಅರ್ಥ:- ಸ್ವರಭೇದಮಿಲ್ಲದೆ, ಪಲವುಮಕ್ಕರಂಗಳ್, ಎರಡುಂ ಪಾದದೊಳಾದೊಡಂ, ಮಿತಿಯಾದ ತಾಣದೊಳ್ ಬಳಸಿಬರೆ ಅದು ಯಮಕಮೆನಿಪುದು.   (-ಅಪ್ರತಿಮವೀರ ಚರಿತೆ)
(ಈ ಅಲಂಕಾರವನ್ನು ಹೆಚ್ಚಿನ ತಿಳಿವಳಿಕೆಗಾಗಿ ಮಾತ್ರ ಕೊಟ್ಟಿದೆ.  ಹೈಸ್ಕೂಲುಗಳಲ್ಲಿ ಓದುವ ಮಕ್ಕಳಿಗೆ ಛೇಕಾನುಪ್ರಾಸ ತಿಳಿದರೆ ಸಾಕು.)

ಅಲಂಕಾರ-ಪೀಠಿಕೆ

          ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಅಥವಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಕಾರಣದಿಂದ ಬಟ್ಟೆ ಬರೆ, ವಸ್ತು, ಒಡವೆ-ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ.  ಇವನ ಈ ಅಲಂಕಾರದಿಂದ ಜನರೂ ಆಕರ್ಷಿತರಾಗುತ್ತಾರೆ.  ಇದರ ಹಾಗೆಯೆ ಮಾತನಾಡುವಾಗಲೂ, ಕೇಳುವವರಿಗೆ ಹರ್ಷವಾಗುವಂತೆ, ಕಿವಿಗೆ ಇಂಪಾಗುವಂತೆ ಚಮತ್ಕಾರವಾದ ರೀತಿಯಲ್ಲಿ ಮಾತನಾಡುವುದೂ ಉಂಟು.  ಉದಾಹರಣೆಗೆ ನಿಮ್ಮ ಹೆಸರೇನು?’ ಎಂದು ಕೇಳುವುದಕ್ಕೆ ಬದಲಾಗಿ ’ತಮ್ಮ ಹೆಸರು ಯಾವ ಅಕ್ಷರಗಳಿಂದ ಅಲಂಕೃತವಾಗಿದೆ?’ ಎಂದು ಕೇಳಿದಾಗ ಎರಡೂ ಮಾತಿನ ಅರ್ಥ ಒಂದೇ ಆದರೂ ಎರಡನೆಯ ಮಾತಿನಲ್ಲಿ ಚಮತ್ಕಾರದ ವಾಣಿ ಕಾಣುವುದು.  ಇದರ ಹಾಗೆ ’ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟಿದನು’ ಎನ್ನುವ ಮಾತನ್ನು – ಪೂರ್ವದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತ್ತೈದೆಯ ಹಣೆಯ ಕುಂಕುಮದಂತೆ ಕಾಣುತ್ತಿದ್ದನು.  ಹೀಗೆ ಹೇಳಿದಾಗ ಸೌಂದರ‍್ಯದ ಚಿತ್ರ, ಅರ್ಥ ಚಮತ್ಕಾರ, ಕೇಳುವವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗುವುದು. ಇವೆಲ್ಲ ಅಲಂಕಾರದ ಮಾತುಗಳು.
ಇದರ ಹಾಗೆಯೆ ಶಬ್ದಗಳ ಜೋಡಣೆಯನ್ನೂ ಚಮತ್ಕಾರವಾಗಿ ಮಾಡಿ ಕೇಳುವುದಕ್ಕೆ ಹಿತವಾಗಿರುವಂತೆ ಮಾತನಾಡುವುದೂ ಉಂಟು.  ಉದಾಹರಣೆಗೆ-

() ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
() ಕತ್ತೆಗೆ ಗೊತ್ತೆ? ಹೊತ್ತ ಕತ್ತುರಿಯ ಪರಿಮಳ?
() ಎಳೆಗಿಳಿಗಳ ಬಳಗಗಳು ನಳನಳಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.
           
          ಮೇಲಿನ ವಾಕ್ಯಗಳಲ್ಲಿ ಒಂದೇ ವಾಕ್ಯದಲ್ಲಿ-ಬಲ್ಲ, ಬೆಲ್ಲ, ಬಲ್ಲ ಇತ್ಯಾದಿ ಶಬ್ದಗಳೂ, ಕತ್ತೆ, ಹೊತ್ತ, ಗೊತ್ತೆ, ಕತ್ತುರಿ ಇತ್ಯಾದಿ ಶಬ್ದಗಳೂ, ಎಳೆ, ಗಿಳಿ, ಗಳೆ, ಬಳಗ, ಗಳು, ನಳ, ನಳ ಕಳವೆ, ಎಳೆ, ಕಾಳು-ಇತ್ಯಾದಿ ಒಂದೇ ಶಬ್ದ ಅಥವಾ ಅಕ್ಷರಗಳು ಪದೇ ಪದೇ ಬಂದು ಶಬ್ದಗಳ ರಚನೆಯಲ್ಲಿ ಬುದ್ಧಿವಂತಿಕೆ ಕಂಡಂತಾಗಿ ಕೇಳುವವರಿಗೆ ಒಂದು ಬಗೆಯ ಹಿತವನ್ನುಂಟು ಮಾಡುವುವು.  ಇವೆಲ್ಲ ಶಬ್ದಗಳ ಅಲಂಕಾರಗಳು.
ಹೀಗೆ ಅರ್ಥದ ಚಮತ್ಕಾರದಿಂದಲೂ, ಶಬ್ದಗಳ ಚಮತ್ಕಾರದಿಂದಲೂ ಮಾತಿನ ಸೌಂದರ‍್ಯವನ್ನು ಹೆಚ್ಚು ಮಾಡಿ ಮಾತನಾಡುವುದೂ ಒಂದು ಕಲೆ; ಕವಿಗಳು ಕಾವ್ಯಗಳಲ್ಲಿ ಬರೆದ ಈ ರೀತಿಯ ಚಮತ್ಕಾರದ ನುಡಿಗಳು ಆ ಕಾವ್ಯಕ್ಕೆ ಒಂದು ಬಗೆಯ ಅಲಂಕಾರ.  ಅಂದರೆ, ಒಡವೆಗಳು ವಸ್ತ್ರಗಳು ಶರೀರಕ್ಕೆ ಹೇಗೆ ಭೂಷಣವೋ ಹಾಗೆಯೆ ಇಂತಹ ಮಾತುಗಳು ಕಾವ್ಯಕ್ಕೆ ಭೂಷಣ ಅಥವಾ ಅಲಂಕಾರಗಳು.
ಕಾವ್ಯಗಳಲ್ಲಿನ ಕವಿಗಳ ಇಂತಹ ಅಲಂಕಾರ ಮಾತುಗಳು ಅರ್ಥಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ, ಅವುಗಳಿಗೆ ‘ಅರ್ಥಾಲಂಕಾರ’ಗಳೆನ್ನುವರು.  ಶಬ್ದಗಳ ಚಮತ್ಕಾರ ದಿಂದ ಕಾವ್ಯದ ಸೊಬಗು ಹೆಚ್ಚುವಂತೆ ರಚಿಸಿದ್ದರೆ, ಅಂಥವುಗಳನ್ನು ‘ಶಬ್ದಾಲಂಕಾರ’ಗಳೆಂದು ಕರೆಯುವರು.
(i) ಅರ್ಥಾಲಂಕಾರಕ್ಕೆ ಕೆಳಗಿನ ಒಂದು ಉದಾಹರಣೆಯನ್ನು ನೋಡಿರಿ-
“ಬರು ಶಠಗನ ಭಕ್ತಿ ದಿಟವೆಂದು ನಂಬಬೇಡ; ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ” (-ದೇವರದಾಸಿಮಯ್ಯ)
ಇಲ್ಲಿ ವಚನಕಾರನ ಮಾತುಗಳಲ್ಲಿ ಡಾಂಭಿಕನಾದ ಮನುಷ್ಯನ ಭಕ್ತಿಯನ್ನು ನಂಬಲಾಗದು ಎಂದು ಹೇಳುವ ಮಾತಿಗೆ ಮಠದೊಳಗೆ ವಾಸಮಾಡುವ ಬೆಕ್ಕಿನ ಹೋಲಿಕೆಯಿದೆ.  ಮಠದಂಥ ಪವಿತ್ರ ಸ್ಥಳದಲ್ಲಿ ಬೆಕ್ಕು ಎಷ್ಟೇ ದಿನ ವಾಸವಾಗಿದ್ದರೂ, ಅದಕ್ಕೆ ಮಠದ ಸಭ್ಯತೆ ಗೊತ್ತಿದ್ದರೂ, ಮಠದಲ್ಲಿ ಅದಕ್ಕೆ ಉತ್ತಮ ತಿಂಡಿತಿನಸುಗಳು ಸಿಗುತ್ತಿದ್ದರೂ, ಇಲಿಯನ್ನು ಕಂಡಕೂಡಲೆ, ಅದರ ಮೂಲಹಿಂಸೆಯ ಗುಣವು ಪ್ರಕಟಗೊಂಡು ಇಲಿಯ ಮೇಲೆ ನೆಗೆದು ಅದನ್ನು ತಿನ್ನುವ ಕ್ರಿಯೆಯನ್ನು ಮಾಡಿಬಿಡುವುದು.  ಇದರ ಹಾಗೆಯೇ ಡಂಭಾಚಾರ ಭಕ್ತಿಯನ್ನು ನಟಿಸುವ ಮನುಷ್ಯ.  ಅವನು ಎಷ್ಟೇ ದಿನ ಡಂಭದಿಂದ ಕೂಡಿದ ಭಕ್ತಿಯನ್ನು ಆಚರಿಸಿದರೂ ಅದು ನಿಜವಾದ ಭಕ್ತಿ ಆಗುವುದಿಲ್ಲ.  ನಿಜವಾದ ಭಕ್ತಿಜೀವನದಿಂದ ಉಂಟಾಗುವ ಸಂಸ್ಕಾರ ಉಂಟಾಗುವುದಿಲ್ಲ.-ಇತ್ಯಾದಿ ಅರ್ಥ ಚಮತ್ಕಾರ ಆ ಎರಡು ಸಣ್ಣ ವಾಕ್ಯಗಳಲ್ಲಿ ಅಡಕವಾಗಿದೆ.  ಹೀಗೆ ಅರ್ಥ ಚಮತ್ಕಾರವುಂಟಾಗುವಂತೆ ಹೇಳುವ ಮಾತುಗಳೇ ಅರ್ಥಾಲಂಕಾರಗಳು.

(ii) ಶಬ್ದಾಲಂಕಾರಕ್ಕೆ ಕೆಳಗಿನ ಇನ್ನೊಂದು ಪದ್ಯವನ್ನು ಗಮನಿಸಿರಿ-
ಈ ವನದ ನಡುನಡುವೆ ತೊಳತೊಳಗುತಿರುತಿಹ
ಸರೋವರ ವರದೊಳೆ ದಳೆದಳೆದು ಬೆಳೆಬೆಳೆದು
ರಾಜೀವದಲರಲರ, ತುಳಿತುಳಿದು ಇಡಿದಿಡಿದ
ಬಂಡನೊಡನೆ ಸವಿದು ಸವಿದು-
ಅವಗಮಗಲದೆ ಯುಗಯುಗಮಾಗಿ ನೆರೆನೆರೆದು,
ಕಾವಸೊಗಸೊಗಸಿನಲಿ ನಲಿದು ಮೊರೆಮೊರೆವ,
ಬೃಂಗಾವಳಿಯ ಗಾವಳಿಯ, ಕಳಕಳಂಗಳೆ
ನೋಡುನೋಡು ರವಿತನಯ ತನಯ
-ಜೈಮಿನಿ ಭಾರತ
ಅರಣ್ಯಮಧ್ಯದ ಸರೋವರವೊಂದರಲ್ಲಿ ಅರಳಿರುವ ಕಮಲದಲ್ಲಿ ದುಂಬಿಗಳು ಮಕರಂದ ಪಾನಮಾಡಿ, ಜೊತೆಜೊತೆಯಾಗಿ ಝೇಂಕಾರಮಾಡುತ್ತ ನಲಿಯುತ್ತಿರುವ ದೃಶ್ಯದ ಈ ವರ್ಣನೆಯಲ್ಲಿ ಒಂದೇ ಅನುಪೂರ್ವಿಯ ಅನೇಕ ಶಬ್ದಗಳು ಜೊತೆಜೊತೆಯಾಗಿ ಬಂದು, ನೃತ್ಯ ಮಾಡುವಾಗ ಕಾಲಲ್ಲಿ ಕಟ್ಟಿಕೊಂಡು ಧ್ವನಿಮಾಡುತ್ತಿರುವ ಗೆಜ್ಜೆಗಳ ಸದ್ದಿನಂತೆ ಪದ್ಯದಲ್ಲಿ ಒಂದು ಬಗೆಯ ಶಬ್ದ ಸೌಂದರ‍್ಯವನ್ನುಂಟುಮಾಡುತ್ತಿವೆ.  ಈ ರೀತಿ ಶಬ್ದಗಳಿಂದ ಪದ್ಯದ ಸೌಂದರ‍್ಯ ಹೆಚ್ಚಿದಾಗ ಅದಕ್ಕೆ ನಾವು ‘ಶಬ್ದಾಲಂಕಾರ’ ಎಂದು ಕರೆಯುತ್ತೇವೆ.  ಹೀಗೆ ಕಾವ್ಯಗಳಲ್ಲಿ ಅರ್ಥಾಲಂಕಾರ ಶಬ್ದಾಲಂಕಾರಗಳು ಎಷ್ಟು ಬಗೆಯಾಗಿ ಬರುತ್ತವೆ? ಅವುಗಳ ಲಕ್ಷಣವೇನು? ಎಂತು? ಎಂಬ ಬಗೆಗೆ ಅನೇಕಾನೇಕ ಗ್ರಂಥಗಳು ಹುಟ್ಟಿವೆ.  ಇವುಗಳ ಬಗೆಗೆ ಗ್ರಂಥ ಬರೆದವರನ್ನು ‘ಲಾಕ್ಷಣಿಕರು’ ಎನ್ನುತ್ತಾರೆ.  ಸಂಸ್ಕೃತದಲ್ಲಿ, ಕನ್ನಡದಲ್ಲಿ ಅನೇಕ ಲಾಕ್ಷಣಿಕರು ಅಲಂಕಾರ ಗ್ರಂಥ ಬರೆದಿದ್ದಾರೆ.  ಈ ಕೆಳಗೆ ಕನ್ನಡದಲ್ಲಿ ಮಾತ್ರ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರ ಬಗೆಗೆ ಸ್ಥೂಲವಾದ ಪರಿಚಯಕೊಟ್ಟಿದೆ.  ಅವರ ಪರಿಚಯ ಮಾಡಿಕೊಳ್ಳಿರಿ.

() ನೃಪತುಂಗ (ಕ್ರಿ..೮೧೪)
ರಾಷ್ಟ್ರಕೂಟ ಚಕ್ರವರ್ತಿಯೆನಿಸಿದ್ದ ನೃಪತುಂಗನು, ಕವಿರಾಜಮಾರ್ಗ ವೆಂಬ ಲಕ್ಷಣಗ್ರಂಥ ಬರೆದಿದ್ದಾನೆ.  ಇದರಲ್ಲಿ ಅಲಂಕಾರಗಳ ಬಗೆಗೆ ಅನೇಕ ವಿಷಯಗಳು ಹೇಳಲ್ಪಟ್ಟಿವೆ.

() ನಾಗವರ್ಮ II (ಕ್ರಿ..೧೧೪೫)
೨ನೆಯ ನಾಗವರ್ಮನೆಂಬುವನು ಬರೆದ ‘ಕಾವ್ಯಾವಲೋಕನ’ ಎಂಬ ಗ್ರಂಥವು ಉತ್ತಮ ಮಟ್ಟದ ಲಕ್ಷಣಗ್ರಂಥವೆನಿಸಿದೆ.  ಇದರಲ್ಲಿ ಅಲಂಕಾರಗಳ ವಿಷಯದಲ್ಲಿ ಅನೇಕ ವಿವರಣೆಗಳು ಬಂದಿವೆ.

() ತಿರುಮಲಾರ್ಯ (ಕ್ರಿ..೧೬೭೨)
ನಾಗವರ್ಮನ ಅನಂತರ ಲಕ್ಷಣಗ್ರಂಥ ಬರೆದವರಲ್ಲಿ ತಿರುಮಲಾರ‍್ಯನೇ ಮುಖ್ಯನಾದವನು.  ಮೈಸೂರಿನ ಚಿಕ್ಕದೇವರಾಜರ ಆಸ್ಥಾನ ಪಂಡಿತನಾದ ಈತನು ‘ಅಪ್ರತಿಮವೀರ ಚರಿತ್ರೆ’ ಎಂಬ ಅಲಂಕಾರ ಗ್ರಂಥ ಬರೆದಿದ್ದಾನೆ.  ಚಿಕ್ಕದೇವರಾಜ ಒಡೆಯರ ಚರಿತ್ರೆಗೆ ಸಂಬಂಧಿಸಿದ ಅನೇಕ ಪದ್ಯಗಳನ್ನು ತಾನೇ ರಚಿಸಿ ಅಲಂಕಾರಕ್ಕೆ ಉದಾಹರಣೆಗಳನ್ನು ಕೊಟ್ಟಿದ್ದಾನೆ.  ಇದರಲ್ಲಿ ಒಟ್ಟು ೧೨೦ ಅಲಂಕಾರ ಹೇಳಲಾಗಿದೆ.

() ಜಾಯಪ್ಪದೇಸಾಯಿ (ಕ್ರಿ.. ೧೭೩೫)
ತೊರಗಲ್ ಸೀಮೆಗೆ ದೊರೆಯೆನಿಸಿದ್ದ ಜಾಯಪ್ಪದೇಸಾಯಿಯೆಂಬ ದೊರೆಯು ಕನ್ನಡ ‘ಕುವಲಯಾನಂದ’ವೆಂಬ ಹೆಸರಿನ ಲಕ್ಷಣ ಗ್ರಂಥ ಬರೆದಿದ್ದಾನೆ.  ಈತನು ತನ್ನ ಈ ಲಕ್ಷಣ ಗ್ರಂಥಕ್ಕೆ ಉದಾಹರಣೆ (ಲಕ್ಷ್ಯ) ಗಳನ್ನು ಕನ್ನಡ ಷಟ್ಪದಿಗ್ರಂಥಗಳಿಂದ ಆಯ್ದುಕೊಂಡಿದ್ದಾನೆ.  ೧೦೦ ಅಲಂಕಾರಗಳನ್ನು ಮಾತ್ರ ಹೇಳಿರುವ ಈ ಗ್ರಂಥವನ್ನು, ಸಂಸ್ಕೃತದಲ್ಲಿರುವ ಅಪ್ಪಯ್ಯದೀಕ್ಷಿತರ ‘ಕುವಲಯಾನಂದ’ವೆಂಬ ಅಲಂಕಾರಗ್ರಂಥವನ್ನು ಅನುಸರಿಸಿ ಬರೆದಂತೆ ಹೇಳಿಕೊಂಡಿದ್ದಾನೆ.  ಕನ್ನಡದಲ್ಲಿರುವ ಅಲಂಕಾರ ಗ್ರಂಥಗಳಲ್ಲಿ ಇದು ಉತ್ತಮವಾಗಿದೆ.
ಇದುವರೆಗೆ ಅಲಂಕಾರವೆಂದರೇನು? ಕವಿಗಳ ಕಾವ್ಯಗಳಲ್ಲಿ ಯಾವ ದೃಷ್ಟಿಯಿಂದ ಅಲಂಕಾರಗಳನ್ನು ಸೇರಿಸುತ್ತಾರೆ? ಅವುಗಳಿಂದ ಕಾವ್ಯಕ್ಕೆ ಎಷ್ಟರಮಟ್ಟಿಗೆ ಪ್ರಯೋಜನ? ಇಂಥ ಅಲಂಕಾರ ಗ್ರಂಥಗಳೂ, ಗ್ರಂಥ ಕರ್ತರೂ ಕನ್ನಡದಲ್ಲಿ ಯಾರು ಯಾರು? ಇತ್ಯಾದಿ ಅಂಶಗಳ ಬಗೆಗೆ ಸ್ಥೂಲವಾಗಿ ಪರಿಚಯ ಮಾಡಿಕೊಂಡಿದ್ದೀರಿ.  ಪ್ರೌಢಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ನೂರಾರು ಅಲಂಕಾರಗಳಲ್ಲಿ ಮುಖ್ಯವಾದ ಎಂಟು ಅಲಂಕಾರಗಳ ಬಗೆಗೆ ತಿಳಿದರೆ ಸಾಕು.  ಮುಂದಿನ ತರಗತಿಗಳಲ್ಲಿ ಇವುಗಳ ಬಗೆಗೆ ಹೆಚ್ಚಿಗೆ ತಿಳಿಯುವಿರಿ.

ಛಂದಸ್ಸು-ಸಾರಾಂಶ

ಸಾರಾಂಶ
() ಪದ್ಯರಚನಾಕ್ರಮವನ್ನು ತಿಳಿಸುವ ಶಾಸ್ತ್ರ ಛಂದಶ್ಯಾಸ್ತ್ರ.
() ಪದ್ಯವು ಪಾದಗಳಿಂದ, ಪಾದಗಳು ಯತಿಗಣ ಪ್ರಾಸಗಳಿಂದ ಕೂಡಿರುತ್ತವೆ.
() ಯತಿ ಎಂದರೆ ಪದ್ಯ ಹೇಳುವಾಗ ಗೊತ್ತಾದ ಸ್ಥಳದಲ್ಲಿ ನಿಲ್ಲಿಸುವುದು. ಕನ್ನಡ ಪದ್ಯಗಳಲ್ಲಿ ಯತಿ ಮುಖ್ಯವಲ್ಲ.
() ಗಣಗಳು ಮುಖ್ಯವಾಗಿ ಮಾತ್ರಾಗಣ-ಅಕ್ಷರಗಣಗಳೆಂದು ಎರಡು ಬಗೆ.
() ಪ್ರಾಸವೆಂದರೆ ಪದ್ಯದ ಪ್ರತಿಸಾಲಿನ ಒಂದನೆಯ, ಎರಡನೆಯ ಸ್ವರಗಳ ನಡುವೆ ಒಂದೇ ರೀತಿಯ ವ್ಯಂಜನ ಬರುವಿಕೆ.
() ಮಾತ್ರಾಗಣಗಳು ಕಂದ, ರಗಳೆ, ಷಟ್ಪದಿಗಳಲ್ಲಿ ಬಳಸಲ್ಪಡುತ್ತವೆ. ಕೆಲವು ಕಡೆ ಮೂರು, ನಾಲ್ಕು, ಐದು ಮಾತ್ರೆಗಳ ಗಣಗಳನ್ನು ವಿಂಗಡಿಸುತ್ತಾರೆ.
() ವರ್ಣಗಣಗಳು ಒಟ್ಟು ಎಂಟು; ಅವು ವೃತ್ತಗಳಲ್ಲಿ ಬಳಸಲ್ಪಡುತ್ತವೆ.
() ಕನ್ನಡದಲ್ಲಿ ಮುಖ್ಯವಾಗಿ ವೃತ್ತಗಳು ಹೆಚ್ಚು ಬಳಕೆಯಲ್ಲಿವೆ.
() ಒಂದು ಮಾತ್ರಾಕಾಲದಲ್ಲಿ ಹೇಳುವ ಅಕ್ಷರಗಳೆಲ್ಲ ಲಘುಗಳು.
(೧೦) ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳು.
(೧೧) ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರ ಒತ್ತಕ್ಷರದ ಹಿಂದಿನ ಅಕ್ಷರ, ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು ವ್ಯಂಜನಾಕ್ಷರದ ಹಿಂದಿನ ಅಕ್ಷರ, ಷಟ್ಪದಿಯ ಮೂರನೆಯ ಆರನೆಯ ಸಾಲಿನ ಕೊನೆಯ ಅಕ್ಷರಗಳೆಲ್ಲ ಗುರುಗಳು; ಉಳಿದುವೆಲ್ಲ ಲಘುಗಳು. ಗುರು ಲಘುಗಳನ್ನು ಕ್ರಮವಾಗಿ ಛಂದಸ್ಸಿನಲ್ಲಿ ಚಿಹ್ನೆಗಳಿಂದ ಗುರುತಿಸುವರು.

ಅಭ್ಯಾಸ ಪ್ರಶ್ನೆಗಳು

(೧) ಯತಿಯೆಂದರೇನು? ಕನ್ನಡ ಪದ್ಯಗಳಲ್ಲಿ ಯತಿಯ ನಿಯಮಕ್ಕೆ ಪ್ರಾಧಾನ್ಯತೆಯಿಲ್ಲ ಏಕೆ?
(೨) ಪ್ರಾಸವೆಂದರೇನು? ಉದಾಹರಣೆಯೊಡನೆ ವಿವರಿಸಿ.
(೩) ಗುರುಗಳಾಗುವ ಅಕ್ಷರಗಳು ಯಾವುವು?
(೪) ಅಕ್ಷರಗಣಗಳೆಷ್ಟು ಬಗೆ? ಅವುಗಳ ವಿನ್ಯಾಸ ಕ್ರಮವನ್ನು ವಿವರಿಸಿರಿ.
(೫) ವಾರ್ಧಕ ಷಟ್ಪದಿಯಲ್ಲಿ ಬಳಸಲ್ಪಡುವ ಗಣಗಳಾವುವು? ಇದರ ಲಕ್ಷಣ ವಿವರಿಸಿರಿ.
(೬) ಈ ಕೆಳಗಣ ವಾಕ್ಯಗಳಲ್ಲಿ ಬಿಟ್ಟುಹೋಗಿರುವ ಕಡೆ ಸರಿಯಾದ ಪದ ಹಾಕಿ ವಾಕ್ಯವನ್ನು ಅರ್ಥವತ್ತಾಗಿ ಮಾಡಿರಿ.
(i) ಕಂದ ಪದ್ಯದಲ್ಲಿ .. .. .. .. ಸಾಲುಗಳು ಒಂದು ಸಮ; .. .. .. .. ಸಾಲುಗಳು ಇನ್ನೊಂದು ಸಮ.
(ii) ಷಟ್ಪದಿಗಳಲ್ಲೆಲ್ಲ ೧, ೨, ೩, ೪ ನೆಯ ಪಾದಗಳು .. .. .. .. .. ಇರುತ್ತವೆ.
(iii) ಪದ್ಯದ ಪ್ರತಿ ಪಾದದ .. .. .. ..  ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನ ಬರುವುದಕ್ಕೆ .. .. .. ..  ಎನ್ನುವರು.
(iv) ರಗಳೆಗಳಲ್ಲಿ ಎರಡೆರಡು ಸಾಲುಗಳಲ್ಲಿ .. .. .. .. ನಿಯಮವು ಕಂಡುಬರುತ್ತದೆ.
(v) ರಗಳೆಗಳಲ್ಲಿ ಇಂತಿಷ್ಟೇ .. .. .. .. ಗಳಿರಬೇಕೆಂಬ ನಿಯಮವಿಲ್ಲ.
(vi) ಕಂದ ಪದ್ಯದ ವಿಷಮಸ್ಥಾನದಲ್ಲಿ .. .. .. .. ಗಣವು ಬರಕೂಡದು.
(vii) ಭಾಮಿನೀಷಟ್ಪದಿಯಲ್ಲಿ ಎಲ್ಲಿಯೂ .. .. .. .. ಈ ರೀತಿಯ ಗಣ ಬರಕೂಡದು.
(viii) ಕಂದಪದ್ಯದ ಪೂರ್ವಾರ್ಧದ ಆರನೆಯ ಗಣ ಮತ್ತು ಉತ್ತರಾರ್ಧದ ಆರನೆಯ ಗಣವು.. .. .. .. .. ಈ ವಿನ್ಯಾಸದ ಗಣವಾಗಲಿ ಅಥವಾ .. .. .. ..  ಈ ವಿನ್ಯಾಸದ ಗಣವಾಗಲಿ ಆಗಿರಬೇಕು.
(ix) ಲಲಿತರಗಳೆಯ ಪ್ರತಿಪಾದವೂ .. .. .. ..  ಮಾತ್ರೆಗಳ .. .. .. .. ಗಣಗಳಿಂದ ಕೂಡಿರುತ್ತದೆ.
(೭) ಈ ಕೆಳಗೆ ಬಿಟ್ಟಿರುವ ಸ್ಥಳಗಳಲ್ಲಿ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯುತ್ತರವನ್ನು ಆರಿಸಿ ಬರೆಯಿರಿ.
(i) ಷಟ್ಪದಿಗಳಲ್ಲಿ .. .. .. .. ಗಳನ್ನು ಬಳಸುತ್ತಾರೆ. (ಮಾತ್ರಾಗಣ, ಅಕ್ಷರಗಣ, ಅಂಶಗಣ)
(ii) ಕಂದ ಪದ್ಯದಲ್ಲಿ .. .. .. .. ಗಣಗಳನ್ನು ಬಳಸುತ್ತಾರೆ. (೩ ಮಾತ್ರೆಯ, ೪ ಮಾತ್ರೆಯ, ೫ ಮಾತ್ರೆಯ)
(iii) ಉತ್ಪಲಮಾಲಾವೃತ್ತವು .. .. .. .. ಅಕ್ಷರಗಳ ವೃತ್ತವು. (೧೯, ೨೦, ೨೧)
(iv) ಅಕ್ಷರಗಣಗಳು ಒಟ್ಟು .. .. .. .. ಬಗೆ. (ಏಳು, ಎಂಟು, ಆರು)
(v) ಗುರುವಿಗೆ .. .. .. .. ಮಾತ್ರೆಗಳು. (ಒಂದು, ಎರಡು, ಮೂರು)
(vi) ಪ್ರಾಸವೆಂದರೆ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಬರುವ ಒಂದೇ ರೀತಿಯ .. ..  (ಸ್ವರ, ಪ್ಲುತಸ್ವರ, ವ್ಯಂಜನ ಅಥವಾ ವ್ಯಂಜನಗಳು)
(vii) ರಗಳೆಯ ಛಂದಸ್ಸಿನಲ್ಲಿ .. .. .. .. ನಿಯಮವಿಲ್ಲ. (ಅಕ್ಷರಗಳ, ಪ್ರಾಸಗಳ, ಪಾದಗಳ)
(viii) ವೃತ್ತಗಳು .. .. .. .. ಗಣಗಳ, ನಿಯಮದಿಂದ ಕೂಡಿರುತ್ತವೆ. (ಮಾತ್ರಾಗಣ, ಅಂಶಗಣ, ಅಕ್ಷರಗಣ)
(೮) ಈ ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವನ್ನು ಸರಿಪಡಿಸಿರಿ.
(i) ವರ್ಣಗಳು ಮೂರು ಮಾತ್ರೆಗಳ ಲೆಕ್ಕದಿಂದ ವಿಂಗಡಿಸಲ್ಪಡುತ್ತವೆ.
(ii) ಮೂರು ಗುರುಗಳ ವಿನ್ಯಾಸವುಳ್ಳ ಗಣವು ನಗಣವೆನಿಸುವುದು.
(iii) ಆದಿಗುರು ಅನಂತರ ಎರಡು ಲಘುಗಳಿಂದ ಕೂಡಿದ ಅಕ್ಷರಗಣವು ಯಗಣವೆನಿಸುವುದು.
(iv) ರಗಳೆಗಳಲ್ಲಿ ಅಕ್ಷರಗಣಗಳು ಬಳಸಲ್ಪಡುತ್ತವೆ.
(v) ವಾರ್ಧಕಷಟ್ಪದಿಯಲ್ಲಿ ಮೂರು ಮತ್ತು ನಾಲ್ಕು ಮಾತ್ರೆಯ ಗಣಗಳು ಬಳಸಲ್ಪಡುತ್ತವೆ.

ಅಕ್ಷರಗಣ-ಖ್ಯಾತಕರ್ಣಾಟಕಗಳು

ಅಕ್ಷರಗಣಗಳು
 ಅಕ್ಷರಗಣಗಳೆಂದರೆ ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳುಮೂರು ಮೂರು ಅಕ್ಷರಗಳ ಗುಂಪಿನಲ್ಲಿ ಮಾತ್ರೆಗಳು ಮೂರೆ ಇರಬಹುದು, ನಾಲ್ಕು, ಐದು, ಆರು ಮಾತ್ರೆಗಳೂ ಇರಬಹುದುಅದು ಮುಖ್ಯವಲ್ಲಇಲ್ಲಿ ಮೂರು ಮೂರು ಅಕ್ಷರಗಳು ಮುಖ್ಯಹೀಗೆ ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ವೃತ್ತಜಾತಿಯ ಛಂದಸ್ಸುಗಳಲ್ಲಿ ಮಾತ್ರವೃತ್ತಗಳು ಹಲವಾರು ವಿಧಗಳುಂಟುಅವುಗಳೊಡನೆ ಕನ್ನಡದಲ್ಲಿ ಮುಖ್ಯವಾಗಿ ಬರುವ 
ಉತ್ಪಲಮಾಲವೃತ್ತ,  
ಚಂಪಕಮಾಲಾವೃತ್ತ
ಶಾರ್ದೂಲವಿಕ್ರೀಡಿತವೃತ್ತ
ಮತ್ತೇಭವಿಕ್ರೀಡಿತವೃತ್ತ
ಸ್ರಗ್ಧರಾವೃತ್ತ,  
ಮಹಾಸ್ರಗ್ಧರಾವೃತ್ತ ಗಳೆಂಬ ಆರು ಜಾತಿಯ ವೃತ್ತಗಳ ಪರಿಚಯವನ್ನು ಪ್ರೌಢಶಾಲೆಯ ಮಕ್ಕಳು ತಿಳಿದರೆ ಸಾಕುಆದ್ದರಿಂದ ಮೊದಲು ಅಕ್ಷರಗಣಗಳ ಪರಿಚಯವನ್ನು ಮಾಡಿಕೊಂಡು ವೃತ್ತಗಳಲ್ಲಿ ಅವು ಹೇಗೆ ಬಳಸಲ್ಪಡುತ್ತವೆಂಬುದನ್ನು ತಿಳಿಯಿರಿ.
ಅಕ್ಷರಗಣಗಳು ಒಟ್ಟು ೮ ವಿಧ.  ಅವುಗಳ ವಿನ್ಯಾಸವು ಈ ಕೆಳಗಿನಂತೆ ಇದೆ-

ಮೇಲೆ ವಿವರಿಸಿದಂತೆ ಮೂರು ಗುರುಗಳು ಬರುವ ಮೂರು ಅಕ್ಷರದ ಗಣ ಮಗಣ.  ಮೂರು ಲಘು ಬರುವ ಮೂರಕ್ಷರದ ಗಣ ನಗಣ.  ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ಭಗಣ.  ಲಘು ಮೊದಲು ಬಂದು ಎರಡು ಗುರುಗಳು ಬರುವ ಗಣವೇ ಯಗಣ.  ಗುರು ನಡುವೆ ಬರುವುದು ಜಗಣ.  ಲಘು ನಡುವೆ ಬರುವುದು ರಗಣ.  ಗುರು ಕೊನೆಯಲ್ಲಿ ಬರುವ ಗಣ ಸಗಣ.  ಲಘು ಕೊನೆಯಲ್ಲಿ ಬರುವ ಗಣ ತಗಣ.  ಹೀಗೆ ಎಂಟು ಪ್ರಕಾರದಲ್ಲಿ ಈ ಅಕ್ಷರ ಗಣದ ವಿನ್ಯಾಸಗಳಿವೆ.  ಈ ಎಂಟೂ ಗಣಗಳ ವಿನ್ಯಾಸವನ್ನು ಸುಲಭವಾಗಿ ತಿಳಿಯಲು ಈ ಕೆಳಗಣ ಪದ್ಯವನ್ನು ಕಂಠಪಾಠ ಮಾಡಿದರೆ ಅನುಕೂಲವಾಗುವುದು:-
ಗುರು-ಲಘು ಮೂರಿರೆ ಮ-ನಗಣ |
ಗುರು-ಲಘು ಮೊದಲಲ್ಲಿ ಬರಲು ಧ-ಯಗಣಮೆಂಬರ್ |
ಗುರು-ಲಘು ನಡುವಿರೆ ಜ-ರಗಣ |
ಗುರು-ಲಘು ಕೊನೆಯಲ್ಲಿ ಬರಲು ಸ-ತಗಣಮಕ್ಕುಂ ||
ಗುರು ಮೂರಿರೆ ಮಗಣ; ಲಘು ಮೂರಿರೆ ನಗಣ; ಗುರು ಮೊದಲಲ್ಲಿ ಬರಲು ಭಗಣ; ಲಘು ಮೊದಲಲ್ಲಿ ಬರಲು ಯಗಣ; ಗುರು ನಡುವಿರೆ ಜಗಣ; ಲಘು ನಡುವಿರೆ ರಗಣ; ಗುರು ಕೊನೆಯಲ್ಲಿ ಬರಲು ಸಗಣ; ಲಘು ಕೊನೆಯಲ್ಲಿ ಬರಲು ತಗಣ-ಎಂದು ಈ ಪದ್ಯದ ಅರ್ಥ.  ಅಥವಾ ಈ ಎಂಟೂ ಗಣಗಳ ತಿಳಿವಳಿಕೆಗೆ ಇನ್ನೂ ಒಂದು ರೀತಿಯ ವಿಧಾನವುಂಟು.  ಕೆಳಗಣ ಈ ಸೂತ್ರ ನೋಡಿರಿ:-

“ಯಮಾತಾರಾಜಭಾನಸಲಗಂ”
ಈ ಸೂತ್ರದಿಂದ ಗಣಗಳ ಗುರು ಲಘು ವಿನ್ಯಾಸವನ್ನು ಹೇಗೆ ತಿಳಿಯಬೇಕೆಂದರೆ – ‘ಯ, ಮ, ತ, ರ, ಜ, ಭ, ನ, ಸ’ ಎಂಟು ಗಣಗಳಲ್ಲಿ ನಮಗೆ ಯಾವ ಗಣದ ವಿನ್ಯಾಸ ಬೇಕಾದಾಗಲೂ ಯಮಾತಾರಾಜಭಾನಸಲಗಂ ಈ ಸೂತ್ರದಲ್ಲಿ ಆಯಾ ಅಕ್ಷರದಿಂದ ಮೊದಲ್ಗೊಂಡು ಮೂರು ಅಕ್ಷರಗಳಿಗೆ ಪ್ರಸ್ತಾರ ಹಾಕಿಕೊಂಡರೆ ಆ ಗಣದ ವಿನ್ಯಾಸ ಬರುತ್ತದೆ.  ಉದಾಹರಣೆಗೆ ಯಗಣಕ್ಕೆ ಸೂತ್ರದಲ್ಲಿಯ ಯಕಾರದಿಂದ ಮೂರಕ್ಷರ ತೆಗೆದುಕೊಳ್ಳಬೇಕು.

ಲ ಎಂದರೆ ಲಘು (U); ಗು ಎಂದರೆ ಗುರು ( _ ) ಎಂದು ತಿಳಿಯಬೇಕು.

ಇದುವರೆಗೆ ಎಂಟು ವಿಧವಾದ ಅಕ್ಷರ ಗಣಗಳ ವಿನ್ಯಾಸ ಕ್ರಮವನ್ನು ತಿಳಿದಿರಿ. ಇನ್ನು ಈ ಎಂಟೂಗಣಗಳ ನಿಯಮದಿಂದ ರಚಿಸಲ್ಪಟ್ಟ ವೃತ್ತ ಜಾತಿಯ ಛಂದಸ್ಸಿನ ಲಕ್ಷಣ ತಿಳಿಯೋಣ.

() ವೃತ್ತಜಾತಿಯ ಛಂದಸ್ಸಿನ ಲಕ್ಷಣಗಳು
ಖ್ಯಾತಕರ್ಣಾಟಕ ವೃತ್ತಗಳು

() ಉತ್ಪಲಮಾಲಾವೃತ್ತದ ಲಕ್ಷಣ

ನಾಲ್ಕು ಸಮಾನ ಸಾಲುಗಳುಳ್ಳ ಪದ್ಯಪ್ರತಿಸಾಲಿನಲ್ಲೂ ೨೦ ಅಕ್ಷರಗಳಿವೆ.  (ವ್ಯಂಜನವರ್ಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಕೂಡದು.)  ಪ್ರತಿ ಸಾಲಿನಲ್ಲೂ , , , , , ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಹೀಗೆ ಬರುವ ವೃತ್ತವೇ ಉತ್ಪಲಮಾಲಾವೃತ್ತವೆನಿಸುವುದು.
ಲಕ್ಷಣವನ್ನು ಸುಲಭವಾಗಿ ನೆನಪಿನಲ್ಲಿಡಲು ಕೆಳಗಿನ ಸೂತ್ರವನ್ನು ಹೇಳಬಹುದು.

ಸೂತ್ರ:- ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳ್ದಿರಲ್

() ಚಂಪಕಮಾಲಾವೃತ್ತದ ಲಕ್ಷಣ

ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆಪ್ರತಿ ಪಾದದಲ್ಲಿಯೂ , , , , , , - ಎಂಬ ಏಳು ಗಣಗಳಿರುತ್ತವೆಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.
ಚಂಪಕಮಾಲಾವೃತ್ತದ ಕೆಳಗಣ ಸೂತ್ರವನ್ನು ಕಂಠಪಾಠಮಾಡಿರಿ.
ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್
() ಶಾರ್ದೂಲವಿಕ್ರೀಡಿತವೃತ್ತದ ಲಕ್ಷಣ


 ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿ ಪಾದವೂ ೧೯ ಅಕ್ಷರಗಳಿಂದ ಕೂಡಿದೆಪ್ರತಿ ಪಾದದಲ್ಲೂ , , , , , - ಎಂಬ ಆರು ಗಣಗಳೂ ಮೇಲೆ ಒಂದು ಗುರುವೂ ಇರುತ್ತವೆಇಂಥ ವೃತ್ತಗಳಿಗೆಲ್ಲ ಶಾರ್ದೂಲವಿಕ್ರೀಡಿತವೃತ್ತಗಳೆನ್ನು ವರುಇದರ ಸೂತ್ರವನ್ನು ಕೆಳಗೆ ಕೊಟ್ಟಿದೆಕಂಠಪಾಠ ಮಾಡಿರಿ.
ಸೂತ್ರ:- ಕಣ್ಗೊಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ

() ಮತ್ತೇಭವಿಕ್ರೀಡಿತವೃತ್ತದ ಲಕ್ಷಣ

ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿವೆಪ್ರತಿಪಾದವೂ , , , , , ಗಣಗಳಿಂದಲೂ ಮೇಲೊಂದು ಲಘು ಮತ್ತು ಒಂದುಗುರುವಿನಿಂದಲೂ ಕೂಡಿದ ಪದ್ಯಜಾತಿಯು ಮತ್ತೇಭವಿಕ್ರೀಡಿತವೃತ್ತ ವೆನಿಸುವುದು ವೃತ್ತ ಲಕ್ಷಣವನ್ನು ತಿಳಿಸುವ ಸೂತ್ರವನ್ನು ಕಂಠಪಾಠ ಮಾಡಿರಿ.
ಸೂತ್ರ:- ಸಭರಂನಂದುಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ

() ಸ್ರಗ್ಧರಾವೃತ್ತ ಲಕ್ಷಣ

ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿಪಾದದಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುತ್ತವೆಪ್ರತಿಯೊಂದು ಪಾದದಲ್ಲೂ , , , , , , ಗಣಗಳಿರುತ್ತವೆ ರೀತಿಯ ವೃತ್ತ ಜಾತಿಗೆಸ್ರಗ್ಧರಾವೃತ್ತ’ವೆನ್ನುವರುಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಸೂತ್ರ:-ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ.

() ಮಹಾಸ್ರಗ್ಧರಾವೃತ್ತ ಲಕ್ಷಣ

 ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಸಾಲಿನಲ್ಲೂ ೨೨ ಅಕ್ಷರಗಳಿವೆಪ್ರತಿ ಸಾಲೂ , , , , , , ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆಇದರ ಸೂತ್ರವು ಕೆಳಗೆ ಇದೆಅದನ್ನು ಕಂಠಪಾಠ ಮಾಡಿರಿ.
ಸೂತ್ರ:- ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ
ಮುಖ್ಯವಾಗಿ ಕನ್ನಡದಲ್ಲಿ ಬರುವ ಆರು ವೃತ್ತಗಳಾದ ಉತ್ಪಲಮಾಲಾ, ಚಂಪಕಮಾಲಾ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾವೃತ್ತಗಳ ಲಕ್ಷಣವನ್ನು ಇದುವರೆಗೆ ತಿಳಿದಿದ್ದೀರಿ.  ಉತ್ಪಲಮಾಲೆಯು ೨೦ ಅಕ್ಷರಗಳಿಂದಲೂ ಚಂಪಕಮಾಲೆಯು ೨೧ ಅಕ್ಷರಗಳಿಂದಲೂ ಶಾರ್ದೂಲವಿಕ್ರೀಡಿತವು ೧೯ ಅಕ್ಷರಗಳಿಂದಲೂ ಮತ್ತೇಭವಿಕ್ರೀಡಿತವು ೨೦ ಅಕ್ಷರಗಳಿಂದಲೂ ಸ್ರಗ್ಧರೆಯು ೨೧ ಅಕ್ಷರಗಳಿಂದಲೂ ಮಹಾಸ್ರಗ್ಧರೆಯು ೨೨ ಅಕ್ಷರಗಳಿಂದಲೂ (ಪ್ರತಿಸಾಲಿನಲ್ಲಿ) ಕೂಡಿರುತ್ತವೆ.  ಈ ಆರೂ ವೃತ್ತಗಳನ್ನು ಸುಲಭವಾಗಿ ಸ್ಥೂಲವಾಗಿ ಗುರುತಿಸುವುದಕ್ಕೆ ಒಂದು ಪದ್ಯವಿದೆ.  ಅದನ್ನು ತಿಳಿದರೆ ಸ್ಥೂಲವಾಗಿ ಈ ಆರೂ ವೃತ್ತಗಳನ್ನು ಗುರುತಿಸಬಹುದು.  ಆದರೆ ಇದು ಅಷ್ಟೊಂದು ನಿಖರಸಾಧನವಲ್ಲ.  ಸ್ಥೂಲಸಾಧನವೆಂಬುದನ್ನು ನೆನಪಿನಲ್ಲಿಡಬೇಕು.
ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆಶಾರ್ದೂಲಮಾ |
ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ |
ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ |
ಪರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾರುಂ[7] ಖ್ಯಾತಕರ್ನಾಟಕಂ ||

ಅರ್ಥ:- ಆದಿಯಲ್ಲಿ ಒಂದು ಗುರು ಬಂದುದೇ ಉತ್ಪಲಮಾಲಾ; ಆದಿಯಲ್ಲಿ ಮೂರು ಗುರುಗಳು ಬಂದುದು ಶಾರ್ದೂಲ ವಿಕ್ರೀಡಿತ; ಆದಿಯಲ್ಲಿ ಕ್ರಮವಾಗಿ ನಾಲ್ಕು ಗುರುಗಳು ಬಂದರೆ ಸ್ರಗ್ಧರೆ; ಆದಿಯಲ್ಲಿ ಎರಡು ಲಘು ಬಂದು ಅನಂತರ ಎರಡು ಗುರು ಬಂದರೆ ಮತ್ತೇಭವಿಕ್ರೀಡಿತ; ಆದಿಯಲ್ಲಿ ಮೊದಲು ಎರಡು ಲಘು ಬಂದು ಮುಂದೆ ಮೂರು ಗುರುಗಳು ಬಂದರೆ ಮಹಾಸ್ರಗ್ಧರಾವೃತ್ತ; ನಾಲ್ಕು ಲಘುಗಳು ಕ್ರಮವಾಗಿ ಬಂದರೆ ಚಂಪಕಮಾಲಾವೃತ್ತ.  ಹೀಗೆ ಆರೂ ವೃತ್ತಗಳ ಸ್ಥೂಲ ಪರಿಚಯವು ಈ ಪದ್ಯದಿಂದಾಗುವುದು.
ಇದುವರೆಗೆ ವರ್ಣಗಳ ವಿಚಾರವಾಗಿ ತಿಳಿದು, ಅವುಗಳ ನಿಯಮದಿಂದ ಪದ್ಯ ರಚಿಸುವ ಆರು ಮುಖ್ಯವಾದ ವೃತ್ತಗಳ ವಿಚಾರ ತಿಳಿದಿದ್ದೀರಿ.  ವರ್ಣಗಣ ಮತ್ತು ಮಾತ್ರಾಗಣಗಳಿಗಿಂತ ಭಿನ್ನವಾದ ಇನ್ನೊಂದು ರೀತಿಯ ಗಣಗಳ ಲೆಕ್ಕದಿಂದ ಪದ್ಯ ರಚನೆ ಮಾಡುವುದುಂಟು.  ಅವೇ ಅಂಶಗಣ ಎಂಬ ಹೆಸರಿನ ಗಣಗಳು.


[1]


[2]

[3]


[4]


[5]


[6]


[7] ಇಲ್ಲಿಯ ರಕಾರವು ಶಕಟರೇಪವೇ ಆಗಿದೆ.  ಇದುವರೆಗೆ ಛಂದಸ್ಸಿನಲ್ಲಿ ಉದಾಹರಿಸಿದ ಪದ್ಯಗಳಲ್ಲಿ ಬರುವ ಶಕಟರೇಫಗಳ ಸ್ಥಾನದಲ್ಲಿ ರಕಾರವನ್ನೂ, ರಳಾಕ್ಷರಗಳ ಸ್ಥಾನದಲ್ಲೆಲ್ಲ ಳಕಾರವನ್ನೂ ಬಳಸಿದೆ.  ವಿದ್ಯಾರ್ಥಿಗಳಿಗೆ ತೊಡಕಾಗಬಾರದೆಂಬುದೇ ಇದರ ಉದ್ಧೇಶ.