ನನ್ನ ಪುಟಗಳು

22 ಜೂನ್ 2021

ವಿಶ್ವ ಯೋಗ ದಿನ-2021 ರ ಫಲಿತಾಂಶ

2021 ರ ಯೋಗ ದಿನದ ರಸಪ್ರಶ್ನೆ ಫಲಿತಾಂಶ ಮತ್ತು ಪ್ರಮಾಣ ಪತ್ರಗಳು

ಈ ಕೆಳಗಿನ ಪಟ್ಟಿಯಲ್ಲಿ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮಾತ್ರ ಪ್ರಮಾಣ ಪತ್ರ ಕಳುಹಿಸಲಾಗಿರುವ ಬಗ್ಗೆ ಮಾಹಿತಿ ಇದೆ. ನಿಮ್ಮ ಹೆಸರಿನ ಕೊನೆಯಲ್ಲಿ "ಕಳುಹಿಸಲಾಗಿದೆ" ಎಂದು ಇದ್ದಲ್ಲಿ ನಿಮ್ಮ Gmail inbox ಹಾಗೂ Gmail Spam ಪರಿಶೀಲಿಸಿ. ಬಂದಿಲ್ಲವಾದಲ್ಲಿ ಈ ಪಟ್ಟಿಯಲ್ಲಿ ನಿಮ್ಮ ಹೆಸರಿನ ನೇರಕ್ಕೆ ಕೊನೆಯಲ್ಲಿರುವ Download Link ಒತ್ತುವ ಮೂಲಕ Download ಮಾಡಿಕೊಳ್ಳಿ.  

- ಎಸ್.ಮಹೇಶ್, ಕನ್ನಡ ದೀವಿಗೆ

19 ಜೂನ್ 2021

ಯೋಗ ದೀವಿಗೆ (Yoga deevige)

******************

ಯೋಗ

     ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಜೀವಾತ್ಮ (ಮನಸ್ಸು) ಅನಂತಾತೀತವಾದ ದೈವತ್ವದ (ಚೈತನ್ಯ) ಜತೆ ಸಮ್ಮಿಳಿತಗೊಳ್ಳುವುದೇ ಯೋಗ ಆಗಿದೆ. ದೇಹ ಮತ್ತು ಮನಸ್ಸು, ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದು ಆಥವಾ ಬಂಧಿಸುವುದು ಅಥವಾ ನೊಗಕ್ಕೆ ಕಟ್ಟುವುದೇ ಯೋಗದ ಉದ್ದೇಶ.

    ಭಾರತೀಯ ಪರಂಪರೆಯ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿ ಕೂಡಿಸುವ ಮಹತ್ವದ ಕಾರ್ಯವಾಗಿ ರೂಪಗೊಂಡಿದೆ. ಯೋಗ ಯಾವೊಂದು ಜಾತಿ, ಧರ್ಮ, ಮತ-ಪಂಥಕ್ಕೆ ಸೀಮಿತವಾಗದೆ ಎಲ್ಲವನ್ನು ಮೀರಿ ವಿಶ್ವಕುಟುಂಬಿಯಾಗಿದೆ. ‘ಆರೋಗ್ಯಕ್ಕಾಗಿ ಯೋಗ', ‘ಯೋಗದಿಂದ ರೋಗ ದೂರ’, ‘ಯೋಗ ಮಾಡಿ ಆರೋಗ್ಯ ಪಡೆಯಿರಿ' ಎಂಬ ಅಂಶಗಳೊಂದಿಗೆ ‘ವಿಶ್ವ ಆರೋಗ್ಯಕ್ಕಾಗಿ ಯೋಗ' ಎಂಬ ಕನಸಿನ ಸಾಕಾರಕ್ಕೆ ಮುನ್ನುಗ್ಗುತ್ತಿದೆ.

    ಆರೋಗ್ಯ ಎಂದರೇನು? ವಿಶ್ವ ಆರೋಗ್ಯ ಎಂದರೇನು? ಇವೆರಡನ್ನೂ ವಿಶ್ಲೇಷಿಸಿದಾಗ: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳು(ಆರು) ಹೆಚ್ಚಾಗದೇ ಯೋಗ್ಯವಾದ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಈ ಆರು ಅಂಶಗಳು ವಿಶ್ವಮಟ್ಟದಲ್ಲಿ, ಎಲ್ಲವೂ ತನ್ನದಾಗಬೇಕೆಂಬ ಕಾಮ(ಆಸೆ), ಭಯೋತ್ಪಾದನೆ/ಉಗ್ರವಾದ ಎಂಬ (ಕ್ರೋಧ), ನಾನೇ ಹೆಚ್ಚೆಂಬ(ಮದ, ಮತ್ಸರ), ಇವುಗಳ ಈಡೇರಿಕೆಗಾಗಿ ವಂಚನೆ(ಲೋಭ) ಹೆಚ್ಚಾಗಿ ವೈಷಮ್ಯಗಳು ವಿಜೃಂಬಿಸುತ್ತಿವೆ. ಇವುಗಳನ್ನು ಸರಿಪಡಿಸಲು ವ್ಯಕ್ತಿಗತವಾಗಿ ‘ಆರು ಯೋಗ್ಯವಾದ' ರೀತಿಯಲ್ಲಿ ಆರೋಗ್ಯವಾಗಿರಬೇಕು. ಈ ಮೂಲಕ ಜಾಗತಿಕ ಮಟ್ಟದಲ್ಲಿ ‘ಆರೋಗ್ಯಯುತ ವಿಶ್ವ' ನಿರ್ಮಾಣ ಸಾದ್ಯವಿದೆ. ಇದಕ್ಕಿರುವ ಮಾರ್ಗೋಪಾಯಗಳಲ್ಲಿ ನೈತಿಕ ಶಿಕ್ಷಣ, ಮಾನವೀಯತೆ, ದಯೆ, ಸಕಲರ ಲೇಸು ಬಯಸುವುದು ಪ್ರಮುಖವಾದವುಗಳು. ಇವುಗಳ ಸಾಧನೆಗೆ ಮನುಷ್ಯನ ಮನಸ್ಸು ಸಮಾಧಾನ ಮತ್ತು ತಾಳ್ಮೆಯಿಂದ ಇದ್ದಾಗ ಮಾತ್ರ ಸಾದ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ. ಮೇಲಾಗಿ ಯೋಗ ‘ಜೀವನ ಜ್ಞಾನ ವಿಜ್ಞಾನ’ವಾಗಿದೆ.

    ನೂರು ವರ್ಷ ಬದುಕಿದ ಯೋಗಪಟು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಯೋಗದಿಂದ ಪ್ರಖ್ಯಾತರೂ ವಿವಾದಾತ್ಮಕ ವ್ಯಕ್ತಿಯೂ ಆಗಿ ಬೆಳೆದ ಬಾಬಾ ರಾಮ್ದೇವ್ ಬಾಲ್ಯದಲ್ಲಿ ರೋಗಿಗಳಾಗಿದ್ದರು. ಬದುಕುವುದು ಕಷ್ಟವೆಂದು ವೈದ್ಯರು ನಿಶ್ಚಯಿಸಿಬಿಟ್ಟಿದ್ದರು. ಅಂಥವರನ್ನೂ ಯೋಗ ಬದುಕಿಸಿತು. ಜಗತ್ತಿಗೇ ಗುರುವಾಗಿ ನೀಡಿತು. ಉಪದೇಶ ಸುಲಭ. ಮಾಡಿತೋರಿಸುವುದು ಕಷ್ಟ. ಇಬ್ಬರೂ ಸ್ವತಃ ಯೋಗಾಸನಗಳನ್ನು ಮಾಡಿ ತೋರಿಸುತ್ತ, ಕಲಿಸುತ್ತ ಯೋಗಗುರುಗಳೆಂಬ ಅಭಿದಾನಕ್ಕೆ ಪಾತ್ರರಾದರು.

ಭರತಮುನಿ ನಾಟ್ಯಶಾಸ್ತ್ರ ಬರೆದ. ಸುಶ್ರುತ ವೈದ್ಯಕೀಯ ಶಾಸ್ತ್ರ ಬರೆದ. ಚಾಣಕ್ಯ ಅರ್ಥಶಾಸ್ತ್ರ ಬರೆದ. ಕಣಾದ ವೈಮಾನಿಕ ಶಾಸ್ತ್ರ ಬರೆದ. ಪತಂಜಲಿ ಯೋಗಶಾಸ್ತ್ರವನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ. ಹೀಗೆ ಭಾರತದ ಋಷಿಗಳು ಜಗತ್ತಿಗೇ ಕಲಿಸಿಕೊಟ್ಟ ಶಾಸ್ತ್ರಗಳು ವಿದೇಶಗಳ ಶಾಲಾ ಪಠ್ಯಕ್ರಮದಲ್ಲಿ ಸೇರಿಕೊಳ್ಳುತ್ತದೆ. ಭಾರತದಲ್ಲೇ ವಿರೋಧ ವ್ಯಕ್ತವಾಗುತ್ತದೆ. ಯೋಗದ ಮಟ್ಟಿಗೆ ಹೇಳುವುದಾದರೆ ವಿರೋಧಿಸುವವರಿಗೇ ನಷ್ಟ.

"ದಿನಾಂಕ : 21 ಜೂನ್ 2015 ವಿಶ್ವದಾದ್ಯಂತ ಮೊದಲ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು."

 ಯೋಗ: ಪದದ ಮೂಲ, ಅರ್ಥ, ವ್ಯಾಖ್ಯಾನ

ಭಾರತೀಯ ತತ್ವಜ್ಞಾನದ ಪ್ರಕಾರ, ಯೋಗ ಎಂಬುದು ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ , ಇವು ರೂಢಿಯಲ್ಲಿ ಬಂದ ಭಾರ್ತೀಯ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು)

ಚಿತ್ತವೃತ್ತಿಗಳ ನಿರೋಧ' -ಪತಂಜಲಿ ಮುನಿ, ಯೋಗಸೂತ್ರಗಳ ಪ್ರಥಮ ಅಧ್ಯಾಯದ ಎರಡನೇ ಸೂತ್ರ (ಅರ್ಥ: ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿಡುವುದು, ಚಿತ್ತ ಚಂಚಲತೆಯನ್ನು ದಮನಗೊಳಿಸುವುದು).

'ಯೋಗ' ಶಬ್ದ ಸಂಸ್ಕೃತ ಭಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು' 'ಸೇರಿಸು' 'ಕೂಡಿಸು' ಎಂಬ ಆರ್ಥ ಬರುತ್ತದೆ. ಯೋಗವೆಂದರೆ 'ಸಮಾಧಿ' 'ಉಪಾಯ' 'ಸಾಧನ' ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ, ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. "ಯೋಗೋ ಉಪಾಯ ಉದ್ದಿಷ್ಟ:" ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ "ಯೋಗಶ್ಚಿತ್ತ ವೃತ್ತಿ ನಿರೋಧ:" ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ.

ಯೋಗೇನ ಚಿತ್ತಸ್ಯ ಪದೇನ ವಾಚಾಂ

ಮಲಂ ಶರೀರಸ್ಯ ಚ ವೈದಕೇನ

ಯೋಪಾ ಕರೋತ್ತಂ ಪ್ರವರಂ ಮುನೀನಾಂ

ಪತಂಜಲಿಂ ಪ್ರಾಂಜಲಿರಾನತೋಸ್ಮಿ

[ಯೋಗದಿಂದ ಚಿತ್ತವನ್ನೂ, ಪದಗಳಿಂದ ಮಾತನ್ನೂ, ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿಯುವೆ- ಎಂಬ ಶ್ಲೋಕವೊಂದಿದೆ. ಅಂದರೆ ಯೋಗ ದೇಹಾರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ರಹದಾರಿ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಯೋಗ ಶರೀರ ಮತ್ತು ಉಸಿರಾಟ ಕ್ರಿಯೆಯನ್ನು ಸಮತೋಲನದೊಂದಿಗೆ ಬಳಸಿಕೊಂಡು ಆರೋಗ್ಯದಿಂದ ಆಧ್ಯಾತ್ಮದೆಡೆಗೆ ಕರೆದೊಯ್ಯುವ ವಿದ್ಯೆ. ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ.]

 ಯೋಗ ಕುರಿತ ಸಪ್ತ ಶ್ಲೋಕಗಳು:

1.    ವೇದದ್ರಷ್ಟ್ಯಸಮಾರಮ್ಭಾಂ ಪತಂಜಲಿಸುಮಧ್ಯಮಾಮ್ |

       ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ ||

[ವೇದಗಳ ದ್ರಷ್ಟ್ಯಗಳೆಂದು ಪ್ರಸಿದ್ಧರಾದ ಮಹರ್ಷಿಗಳಿಂದ ಆರಂಭಗೊಂಡು, ಆಚಾರ್ಯರವರೆಗೆ ಬಂದಿರುವ ಗುರುಪರಂಪರೆಯನ್ನು ವಂದಿಸುತ್ತೇನೆ.]

2.     ಭೂಯಾದ್ ಭವ್ಯಂ ಮಂಗಲಮಾಧ್ಯಾತ್ಮಿಕೇನ ಯೋಗೇನ |

        ದೇಯಾದ್ ಯೋಗಿಜನೋ ಜನತಾಯೈ ಪರಮಾನಂದಂ ಯೋಗೇನ ||

[ಭೂಮಿಯಲ್ಲಿ ಉತ್ಕೃಷ್ಟವಾದ ಮಂಗಳವು ಆಧ್ಯಾತ್ಮಿಕವಾದ ಯೋಗದಿಂದಾಗಿ ಉಂಟಾಗಲಿ. ಯೋಗಿಗಳು ಉನ್ನತವಾದ ಆನಂದವನ್ನು ತಮ್ಮ ಯೋಗದಿಂದ ಜನತೆಗೆ ನೀಡಲಿ.]

3. ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ ಶ್ರೇಯೋವಂತೋ ರಾಜಂತಾಮ್ |

ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ ಭ್ರಾಜಂತಾಮ್ ||

[ಜ್ಞಾನ ಭಕ್ತಿ ಹಾಗೂ ಕರ್ಮಗಳನ್ನು ಶ್ರೇಯೋವಂತರಾದವರು ಪಡೆದು ವಿರಾಜಿಸಲಿ. ರಾಜಯೋಗವನ್ನು ಆಶ್ರಯಿಸಿದ ಜನರು ಧ್ಯಾನದಲ್ಲಿ ಮಗ್ನರಾಗಿದ್ದುಕೊಂಡು ಎದ್ದು ಕಾಣಿಸುವಂತಾಗಲಿ.]

4. ಯೋಗೋ ಜನನೀ ಯೋಗೋ ಜನಕೋ ಯೋಗೋ ಗುರುರಪಿ ಹಿತಕಾರೀ |

ಯೋಗೋ ಬಂಧುರ್ಯೋಗೋ ಮಿತ್ರಂ ಯೋಗೋsಸ್ಮಾಕಂ ಸರ್ವಸ್ವಮ್ ||

[ಯೋಗವೇ ತಾಯಿ, ಯೋಗವೇ ತಂದೆ, ಯೋಗವೇ ಹಿತವನ್ನುಂಟು ಮಾಡುವ ಗುರು, ಯೋಗವೇ ಬಂಧು, ಯೋಗವೇ ಮಿತ್ರ, ನಮಗೆ ಎಲ್ಲವೂ ಯೋಗವೇ.]

5. ಚರಮಂ ಲಕ್ಷ್ಯಂ ಕಿಮತಿ ಜ್ಞಾತುಂ ಕುತುಕಾದ್ ವಾಂಛಾಮೋ ಗೂಢಮ್ |

ಅತ್ರ ಪತಂಜಲಿರನುಗೃಹ್ಣಾತು ಪ್ರೀತ್ಯಾ ಮತ್ರ್ಯಾನ್ ನೋ ಬಾಢಮ್ ||

[ಅಂತಿಮವಾದ ಹಾಗೂ ಗೂಢವಾದ ಲಕ್ಷ್ಯ ಯಾವುದೆಂದು ನಾವು ತಿಳಿಯಲು ನಾವು ಕುತೂಹಲದಿಂದ ತವಕ ಪಡುತ್ತೇವೆ. ಈ ವಿಷಯದಲ್ಲಿ (ಹುಟ್ಟು ಸಾವುಗಳಿಗೆ ಒಳಗಾಗುವ ಸಾಧಾರಣ) ಮನುಷ್ಯರಾದ ನಮ್ಮನ್ನು ಪತಂಜಲಿಯು ಪ್ರೀತಿಯಿಂದ ಖಂಡಿತ ಅನುಗ್ರಹಿಸಲಿ.]

6. ವಸುಧೈವ ಕುಟುಂಬಕಮಿತಿ ಭಾವೋ ಭೂಯಾಲ್ಲೋಕೇ ಸರ್ವತ್ರ |

ಅನುಭೂತೋನ್ನತಚಿಂತನಪಾಕೇ ಧೂತಸಮಸ್ತಾಂತರಶೋಕೇ ||

[ಉನ್ನತವಾದ ಚಿಂತನೆಯ ಪರಿಣಾಮವನ್ನನುಭವಿಸುವ ಹಾಗೂ ಅಂತರಂಗದ ಸಮಸ್ತಶೋಕಗಳನ್ನೂ ಕೆಡವಿ ಹಾಕಿರುವ ಜನರಲ್ಲಿ, ಭೂಮಿಯೆಲ್ಲಾ ಒಂದೇ ಕುಟುಂಬವೆಂಬ ಭಾವನೆಯು ಯೋಗದ ಕಾರಣದಿಂದಾಗಿ ಉಂಟಾಗಲಿ.]

7. ಯೋಗೋ ಯೋsಪಿ ಚ ಕೋsಪಿ ಚ ಭವತು ಜ್ಞಾನಂ ಸೃಜತಾದುತ್ತುಂಗಮ್ |

ವಿಶ್ವಂ ನಿಖಿಲಂ ಯೋಗಮಯಂ ಸದ್ ಭೂಯಾದ್ ದುರ್ಮಾರ್ಗೈರ್ಮುಕ್ತಮ್ ||

[ಯೋಗವು ಯಾವುದೆ ಇರಲಿ (ಮಂತ್ರಯೋಗ, ರಾಜಯೋಗ, ಹಠಯೋಗ, ಲಯಯೋಗ ಇತ್ಯಾದಿ), ಅದು ಮೇಲ್ಮಟ್ಟದ ಜ್ಞಾನವನ್ನುಂಟು ಮಾಡಲಿ. ಸಮಸ್ತ ವಿಶ್ವವೂ ಯೋಗಮಯವಾಗಿದ್ದು ಕೆಟ್ಟ ದಾರಿಗಳಿಂದ ಮುಕ್ತವಾಗಿರಲಿ.]

 ಯೋಗದ ಇತಿಹಾಸ

ವೇದ ಸಂಹಿತೆಗಳು ತಪಸ್ವಿಗಳ ಬಗ್ಗೆ ಪ್ರಸ್ತಾಪಿಸುತ್ತವೆ, ಆದರೆ ತಪಶ್ಚರ್ಯೆಗಳ(ತಪಸ್ಸು ಮಾಡುವಿಕೆ ) ಬಗ್ಗೆ ಬ್ರಾಹ್ಮಣಕ ( ಕ್ರಿ,ಪೂ.900 ರಿಂದ ಕ್ರಿ.ಪೂ. 500)ಗಳಲ್ಲಿ ವೇದಗಳ ಮೇಲೆ ಬರೆದ ವ್ಯಾಖ್ಯೆಗಳಲ್ಲಿ ಉಲ್ಲೇಖಗಳಿವೆ. ಸಿಂಧೂ ಕಣಿವೆ ನಾಗರೀಕತೆಯ (ಕ್ರಿ.ಪೂ. 3300 - ಕ್ರಿ.ಪೂ. 1700) ಪಾಕಿಸ್ತಾನದಲ್ಲಿನ ಸ್ಥಳಗಳಲ್ಲಿ ಪತ್ತೆಯಾದ ಮೊಹರುಗಳಲ್ಲಿ ಸಾಮಾನ್ಯವಾಗಿ ಯೋಗ ಅಥವಾ ಧ್ಯಾನದ ಭಂಗಿಯನ್ನು ಹೋಲುವ ಚಿತ್ರಗಳಿದ್ದವು, "ಶಾಸ್ತ್ರೀಯ ಚರ್ಯೆಗಳ ಒಂದು ವಿಧ" ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು" ಎಂಬುದು ಪುರಾತತ್ವಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯವಾಗಿತ್ತು ಸಿಂಧೂ ಕಣಿವೆಯ ಮೊಹರುಗಳಿಗೂ ಹಾಗೂ ನಂತರದ ಸಿಂಧೂ ಯೋಗ ಮತ್ತು ಧ್ಯಾನಗಳ ಆಚರಣೆಗಳಿಗೂ ಯಾವುದೋ ವಿಧದ ಸಂಬಂಧವಿದೆ ಎಂಬುದನ್ನು ಅನೇಕ ತಜ್ಞರು ಊಹಿಸಿರುತ್ತಾರಾದರೂ, ಇದಕ್ಕೆ ಯಾವುದೇ ರೀತಿಯ ನಿರ್ಣಾಯಕ ಪುರಾವೆಗಳು ದೊರೆತಿಲ್ಲ.

ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರಗಳನ್ನು ಶ್ರಮಣಿಕ/ಶ್ರಮಾಣಿಕ್‌/ಶ್ರೌತ/ಶೃತಿ ಮತ್ತು ಉಪನಿಷತ್ತುಗಳ ಸಂಪ್ರದಾಯಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಬೌದ್ಧಧರ್ಮಕ್ಕೆ ಮುಂಚಿನ ಬ್ರಾಹ್ಮಣ ಗ್ರಂಥಗಳಲ್ಲಿ ಧ್ಯಾನದ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲವಾದರೂ, ಉಪನಿಷತ್ತುಗಳಲ್ಲಿನ ಬ್ರಹ್ಮಾಂಡದ ಬಗೆಗಿನ ಹೇಳಿಕೆಗಳು ಮತ್ತು ಪ್ರಾಚೀನ ಬೌದ್ಧಧರ್ಮೀಯ ಗ್ರಂಥಗಳಲ್ಲಿ ದಾಖಲಾಗಿರುವ ಪ್ರಕಾರ ಬುದ್ಧನ ಇಬ್ಬರು ಗುರುಗಳ ಧ್ಯಾನದಿಂದ ಸಾಧಿಸುವ ಗುರಿಗಳ ಬಗೆಗಿನ ಉಲ್ಲೇಖಗಳ ಸಮಾಂತರ ಪ್ರಸ್ತಾಪವನ್ನು ಆಧಾರವಾಗಿಟ್ಟುಕೊಂಡು ಬ್ರಾಹ್ಮಣ ಸಂಪ್ರದಾಯದಿಂದಲೇ ನಿರ್ದಿಷ್ಟ ಸ್ವರೂಪವಿರದ ಧ್ಯಾನದ ಸಂಸ್ಕೃತಿಯು ಉದಯವಾಯಿತು ಎಂದು ವಾದಿಸುತ್ತಾರೆ.ಅವರು ಇದರ ಸಾಧ್ಯತೆಗಳೂ ಕಡಿಮೆ ಎಂದೂ ತಿಳಿಸುತ್ತಾರೆ.

ಹಿಂದೂ ಗ್ರಂಥಗಳಲ್ಲಿ "ಯೋಗ" ಎಂಬ ಪದವು ಮೊದಲಿಗೆ ಕಠೋಪನಿಷತ್‌ನಲ್ಲಿ ಮೊದಲಿಗೆ ಕಂಡುಬರುತ್ತದೆ, ಅದರಲ್ಲಿ ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ. ಯೋಗದ ಕಲ್ಪನೆಯ ವಿಕಾಸದ ಬಗೆಗಿನ ಪ್ರಮುಖ ಗ್ರಂಥಮೂಲಗಳೆಂದರೆ ಮಧ್ಯಕಾಲೀನ ಉಪನಿಷತ್ತುಗಳು, (ಕ್ರಿ.ಪೂ. 400), ಭಗವದ್ಗೀತೆಯೂ ಸೇರಿದಂತೆ ಮಹಾಭಾರತ (ಕ್ರಿ.ಪೂ. 200), ಮತ್ತು ಪತಂಜಲಿಯ ಯೋಗಸೂತ್ರಗಳು. (ಮಾಹಿತಿ ಕೃಪೆ : ಕನ್ನಡ ವಿಕೀ)

ಪತಂಜಲಿ ಯೋಗಸೂತ್ರ’ (ರಾಜಯೋಗ)

ಪತಂಜಲಿ ಋಷಿಯ ಕಾಲ ಸು. ಕ್ರಿ.ಪೂ.೨ನೆಯ ಶತಮಾನ. ಇವರ ಕೃತಿ 'ಯೋಗಸೂತ್ರ'

ಪಾಣಿನಿಯ ವ್ಯಾಕರಣದ ಬಗ್ಗೆ ವ್ಯಾಖ್ಯಾನ ಬರೆದ ಪತಂಜಲಿಗಿಂತ ಯೋಗದ ಬಗ್ಗೆ ಬರೆದ ಪತಂಜಲಿ ವಿಭಿನ್ನ ವ್ಯಕ್ತಿ ಎಂದು ಸೂಚಿಸಿದ ಅನೇಕ ವಿದ್ವಾಂಸರಲ್ಲಿ ಲೂಯಿಸ್ ರೆನೌ ಕೂಡ ಒಬ್ಬರು. 1914 ರಲ್ಲಿ, ಜೇಮ್ಸ್ ವುಡ್ ಅವರು ಒಂದೇ ವ್ಯಕ್ತಿ ಎಂದು ಪ್ರಸ್ತಾಪಿಸಿದರು. 1922 ರಲ್ಲಿ, ಸುರೇಂದ್ರನಾಥ ದಾಸ್‌ಗುಪ್ತಾ ಅವರು ಪ್ರಸಿದ್ಧ ವ್ಯಾಕರಣ ಪಠ್ಯ ಮತ್ತು ಯೋಗ ಪಠ್ಯ ಲೇಖಕರು ಒಂದೇ ಆಗಿರಬಹುದು ಎಂದು ತಾತ್ಕಾಲಿಕವಾಗಿ ಪ್ರಸ್ತಾಪಿಸಲು ವಾದಗಳ ಸರಣಿಯನ್ನು ಮಂಡಿಸಿದರು.

ಭಾರತೀಯ ಸಂಪ್ರದಾಯದಲ್ಲಿ ಕೆಲವರು ಪತಂಜಲಿ ವ್ಯಾಕರಣ, ಔಷಧ ಮತ್ತು ಯೋಗದ ಬಗ್ಗೆ ಗ್ರಂಥಗಳನ್ನು ಬರೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹನ್ನೊಂದನೇ ಶತಮಾನದ ರಾಜಮಾರ್ತಾಂಡನು ಭೋಜನ ಪತಂಜಲಿ 'ಯೋಗಸೂತ್ರ'ದ ಶ್ಲೋಕಗಳ ವ್ಯಾಖ್ಯಾನದ ಆರಂಭದಲ್ಲಿ ಉಲ್ಲೇಖಿಸಿದ್ದಾನೆ. ಈ ಶ್ಲೋಕ 18 ನೇ ಶತಮಾನದ ಶಿವರಾಮ ಅವರ ಕೃತಿಯಲ್ಲಿ ಸಿಗುತ್ತದೆ.

ಯೋಗೇನ ಚಿತ್ತಸ್ಯ ಪದೇನ ವಾಚಾ ||

ಮಲಂ ಶರೀರಸ್ಯಂಚ ವ್ಯೆದ್ಯಕೇನ||

ಯೋಪಾಕರೋತ್ತಂ ಪ್ರವರಂ ಮುನೀನಾಂ||

ಪತಂಜಲಿ ಪ್ರಾಂಜಲಿರಾನತೋಸ್ಮಿ|| 

(ಇದರ ಅರ್ಥ: ಯೋಗದ ಮೂಲಕ ಮನಸ್ಸಿನ ಕಲ್ಮಶಗಳನ್ನು, ವ್ಯಾಕರಣದ ಮೂಲಕ ಮಾತನ್ನು ಮತ್ತು ಔಷಧದ ಮೂಲಕ ದೇಹದ ಕಲ್ಮಶಗಳನ್ನು ತೆಗೆದುಹಾಕಿದ ಪ್ರಖ್ಯಾತ ಪತಂಜಲಿ ಅವರಿಗೆ ನನ್ನ ಕೈಗಳಿಂದ ನಮಸ್ಕರಿಸುತ್ತೇನೆ.)

ಪತಂಜಲಿ ಮುನಿಗಳು ಔಷಧ, ಭಾಷೆ ಮತ್ತು ವ್ಯಾಕರಣದ ಮೇಲೆ ಪಠ್ಯಗಳನ್ನು ಬರೆದಂತಹ ಬಹುಮುಖ ಪ್ರತಿಭೆಗಳುಳ್ಳ ವ್ಯಕ್ತಿಯಷ್ಟೇ ಅಲ್ಲ, ಜ್ಞಾನೋದಯವಾದ ಒಬ್ಬ ಮಹಾನ್ ಯೋಗಿಯಾಗಿದ್ದರು. ಆದರೆ ಅವರು "ಆಧುನಿಕ ಯೋಗದ ಜನಕ” ಎಂದೇ ಹೆಚ್ಚಾಗಿ ಪ್ರಸಿದ್ಧರಾಗಿದ್ದಾರೆ - ಅವರು ಯೋಗಕ್ಕೆ ಜನ್ಮ ನೀಡಿದರು ಎಂಬ ಕಾರಣಕ್ಕಲ್ಲ, ಆದರೆ ಅವರು ಯೋಗದ ಸಾರವನ್ನು ಪ್ರಸಿದ್ಧ ಯೋಗ ಸೂತ್ರಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸಿದರು ಎನ್ನುವ ಕಾರಣಕ್ಕಾಗಿ.

          ಪತಂಜಲಿ ಮುನಿಗಳು ಜ್ಞಾನೋದಯವನ್ನು ಹೊಂದಿದ್ದು ಹಾಗಿರಲಿ; ಆದರೆ ಅವರಿಗಿದ್ದ ಬುದ್ಧಿಶಕ್ತಿಯು, ಉನ್ನತವಾದ ವಿಜ್ಞಾನಿಗಳನ್ನೂ ಸಹ ಶಿಶುವಿಹಾರದ ಮಕ್ಕಳಂತೆ ಕಾಣುವ ಹಾಗೆ ಮಾಡುವ ಬಗೆಯದ್ದಾಗಿತ್ತು - ಜೀವನದ ಪ್ರತಿಯೊಂದು ಅಂಶದ ಬಗ್ಗೆ ಅವರು ಅರ್ಥಮಾಡಿಕೊಂಡಿದ್ದ ರೀತಿ ಅಂತಹದ್ದಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಪತಂಜಲಿ ಮುನಿಗಳ ಕಾಲದಲ್ಲಿ, ಯೋಗವು ಯಾವ ರೀತಿಯಲ್ಲಿ ಪರಿಣತಿಯನ್ನು ಹೊಂದಲು ಪ್ರಾರಂಭಿಸಿತ್ತೆಂದರೆ, ಅಲ್ಲಿ ಯೋಗದ ನೂರಾರು ಶಾಲೆಗಳು ಸ್ಥಾಪಿತವಾಗಿದ್ದವು.

          ಸೂತ್ರ ಎಂಬ ಪದದ ಅಕ್ಷರಶಃ ಅರ್ಥ "ದಾರ" ಎಂದಾಗುತ್ತದೆ. ಒಂದು ಹಾರದಲ್ಲಿ ಒಂದು ದಾರ ಇದ್ದೇ ಇರುತ್ತದೆ, ಆದರೆ ನೀವು ಹಾರವನ್ನು ಅದರ ದಾರದ ಸಲುವಾಗಿ ಎಂದೂ ಧರಿಸುವುದಿಲ್ಲ. ನೀವು ಯಾವ ರೀತಿಯ ಹೂಗಳು, ಮಣಿಗಳು, ಮುತ್ತುಗಳು ಅಥವಾ ವಜ್ರದ ಹರಳುಗಳನ್ನು ಅದಕ್ಕೆ ಪೋಣಿಸಿಕೊಳ್ಳುತ್ತೀರಿ ಎನ್ನುವುದು ನಿಮ್ಮ ಕುಶಲತೆಯ ಮೇಲೆ ಅವಲಂಬಿಸಿರುತ್ತದೆ. ಪತಂಜಲಿ ಕೇವಲ ಸೂತ್ರವನ್ನು ಮಾತ್ರ ಒದಗಿಸುತ್ತಾರೆ, ಏಕೆಂದರೆ ದಾರವೇ ಇರದೆ ಹಾರವಿರಲು ಸಾಧ್ಯವಿಲ್ಲ. ಆದರೆ ನೀವೊಂದು ಹಾರವನ್ನು ಅದರ ದಾರಕ್ಕಾಗಿ ಧರಿಸುವುದಿಲ್ಲ. ಆದ್ದರಿಂದ ಬರಿ ದಾರವನ್ನು ನೋಡಿ ಯಾವುದೇ ತೀರ್ಮಾನಗಳಿಗೆ ಬರಬೇಡಿ. ಸೂತ್ರಗಳು ಓದಿ ತಾರ್ಕಿಕವಾಗಿ ಅರ್ಥೈಸಿಕೊಳ್ಳುವಂತವುಗಳಲ್ಲ. ನೀವು ಅವುಗಳನ್ನು ತರ್ಕಬದ್ಧವಾಗಿ ಅನುಸರಿಸಿ, ವಿಷಯಗಳನ್ನು ಬುದ್ಧಿವಂತಿಕೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅವು ಅಸಂಬದ್ಧವಾಗುತ್ತವೆ. 

ಪತಾಂಜಲಿಯ ಯೋಗ ಸೂತ್ರಗಳು 196. ಇದು ಮಧ್ಯಕಾಲೀನ ಯುಗದಲ್ಲಿ ಹೆಚ್ಚು ಅನುವಾದಿಸಲ್ಪಟ್ಟ ಪ್ರಾಚೀನ ಭಾರತೀಯ ಪಠ್ಯವಾಗಿದ್ದು, ಸುಮಾರು ನಲವತ್ತು ಭಾರತೀಯ ಭಾಷೆಗಳಿಗೆ ಮತ್ತು ಎರಡು ಭಾರತೀಯೇತರ ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ: ಹಳೆಯ ಜಾವಾನೀಸ್ ಮತ್ತು ಅರೇಬಿಕ್ . ಈ ಪಠ್ಯವು 12 ರಿಂದ 19 ನೇ ಶತಮಾನದವರೆಗೆ ಸುಮಾರು 700 ವರ್ಷಗಳವರೆಗೆ ಅಸ್ಪಷ್ಟತೆಗೆ ಸಿಲುಕಿತು ಮತ್ತು ಸ್ವಾಮಿ ವಿವೇಕಾನಂದ ಮತ್ತು ಇತರರ ಪ್ರಯತ್ನದಿಂದಾಗಿ 19 ನೇ ಶತಮಾನದ ಕೊನೆಯಲ್ಲಿ ಪುನರಾಗಮನವಾಯಿತು . ಇದು 20 ನೇ ಶತಮಾನದಲ್ಲಿ ಪುನರಾಗಮನವಾಗಿ ಸಾಂಪ್ರದಾಯಿಕವಾಗಿ ಮತ್ತೆ ಪ್ರಾಮುಖ್ಯತೆಯನ್ನು ಪಡೆಯಿತು.

 

ಯೋಗದ ವಿಧಗಳು/ಶಾಖೆಗಳು

  1. ಜಪ ಯೋಗ
  2. ಕರ್ಮ ಯೋಗ
  3. ಜ್ಞಾನ ಯೋಗ
  4. ಭಕ್ತಿ ಯೋಗ
  5. ರಾಜ ಯೋಗ
  6. ಕುಂಡಲಿನಿ
  7. ನಾಡಿ

 

ಅಷ್ಟಾಂಗಯೋಗ / ರಾಜಯೋಗದ ಅಂಗಗಳು ಅಥವಾ ಮೆಟ್ಟಿಲುಗಳು

ಅಷ್ಟಾಂಗಗಳು

ಯಮ (ಐದು "ವರ್ಜನೆಗಳು" ): ಅಹಿಂಸೆ, ಸತ್ಯಪಾಲನೆ, ಅತ್ಯಾಸೆಪಡದಿರುವುದು, ಇಂದ್ರಿಯ ನಿಗ್ರಹ, ಮತ್ತು ಸ್ವಾಧೀನತೆಯ ನಿಗ್ರಹ.

ನಿಯಮ (ಐದು "ಅನುಷ್ಠಾನಗಳು"): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ಮತ್ತು ದೇವರಲ್ಲಿ ಶರಣಾಗತಿ.

ಆಸನ : ಅಕ್ಷರಶಃ ಅರ್ಥವೆಂದರೆ "ಪೀಠ/ಕುಳಿತುಕೊಳ್ಳುವಿಕೆ", ಹಾಗೂ ಪತಂಜಲಿಯವರ ಸೂತ್ರಗಳಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉಲ್ಲೇಖಿಸಲಾಗುತ್ತದೆ.

ಪ್ರಾಣಾಯಾಮ ("ಉಸಿರನ್ನು ನಿಯಂತ್ರಿಸುವುದು"): "ಪ್ರಾಣ" ಉಸಿರು, "ಆಯಾಮ" ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅರ್ಥೈಸಲಾಗುತ್ತದೆ.

ಪ್ರತ್ಯಾಹಾರ ("ಆಮೂರ್ತವಾಗಿರುವಿಕೆ"): ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ.

ಧಾರಣ ("ಏಕಾಗ್ರತೆ"): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.

ಧ್ಯಾನ ("ಧ್ಯಾನ"): ಧ್ಯಾನದ ಗುರಿಯ ಸ್ವಭಾವದತ್ತ ಅತೀವ ಚಿಂತನೆ.

ಸಮಾಧಿ ("ಬಿಡುಗಡೆ"): ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು.

 

ಯೋಗಾಸನಗಳು

ಹನುಮಾನಾಸನ

********

ಭೂಧರಾಸನ

********

ಸಾಷ್ಟಾಂಗ ಪ್ರಣಿಪಾತಾಸನ

********

ದ್ವಿಪಾದ ಪ್ರಸರಣಾಸನ

********

ದಕ್ಷಿಣಪಾದ ಪ್ರಸರಣಾಸನ

********

ಪಾದಹಸ್ತಾಸನ

********

ಊರ್ಧ್ವನಮಸ್ಕಾರಾಸನ

********

ತಾಡಾಸನ

********

ಉತ್ಥಿತಹಸ್ತ ಪಾದಾಂಗುಷ್ಠಾಸನ

********

ಗೋರಕ್ಷಾಸನ

********

ತೋಲಾಂಗುಲಾಸನ

********

ವಾತಾಯನಾಸನ

********

ಆಕರ್ಣ ಧನುರಾಸನ

********

ಉಗ್ರಾಸನ

********

ದ್ವಿಪಾದಕಂದರಾಸನ

********

ಕೋಕಿಲಾಸನ

********

ಅಧೋಮುಖ ವೃಕ್ಷಾಸನ

********

ಏಕಪಾದ ಕಂದರಾಸನ

********

ವಜ್ರಾಸನ

********

ದೋಲಾಸನ

********

ತ್ರಿಕೋಣಾಸನ

********

ಲೋಲಾಸನ

********

ಜಾನುಶೀರ್ಷಾಸನ

********

ತೋಲಾಸನ

********

ಗರುಡಾಸನ

********

ಉತ್ಕಟಾಸನ

********

ಪಾದಾಂಗುಷ್ಠಾಸನ

********

ಮಯೂರಾಸನ

********

ಶೀರ್ಷಾಸನ (ಆಸನಗಳ ರಾಜ)

********

ಉಷ್ಟ್ರಾಸನ

********

ಚಕ್ರಾಸನ

********

ಪಶ್ಚಿಮೋತ್ತಾನಾಸನ

********

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

********

ಕರ್ಣಪೀಡಾಸನ

********

ಹಲಾಸನ

********
ಸರ್ವಾಂಗಾಸನ (ಆಸನಗಳ ತಾಯಿ)

********

ಉತ್ಥಿತ ಪಾದಾಸನ

********

ಧನುರಾಸನ

********

ಶಲಭಾಸನ

********

ಪೂರ್ಣಮತ್ಸ್ಯೇಂದ್ರಾಸನ

********

ಅರ್ಧ ಮತ್ಸೇಂದ್ರಾಸನ

********

ಗೋಮುಖಾಸನ

********

ಪವನಮುಕ್ತಾಸನ

********

ಏಕಪಾದ ಪವನಮುಕ್ತಾಸನ

********

ಯೋಗಾಮುದ್ರಾಸನ

********

ಬಕಾಸನ (ಪದ್ಮಾಸನ ಸಹಿತ)

********

ಉತ್ಥಿತ ಪದ್ಮಾಸನ

********

ಗರ್ಭಾಸನ

********

ಮತ್ಸ್ಯಾಸನ

********

ಕುಕ್ಕುಟಾಸನ

********

ಬದ್ಧ ಪದ್ಮಾಸನ

********

ಪದ್ಮಾಸನ

********

ಯೋಗಾಸನ ಮಾಡುವ ಮೊದಲು ಹಾಗೂ ನಂತರ ಅನುಸರಿಸಬೇಕಾದ ಸರಳ ನಿಯಮಗಳು

* ಬೆಳಿಗ್ಗೆ 5ರಿಂದ 7 ಮತ್ತು ಸಂಜೆ 5ರಿಂದ 7 ಅಭ್ಯಾಸಕ್ಕೆ ಸೂಕ್ತ. ಧ್ಯಾನ ಅಭ್ಯಾಸಕ್ಕೆ ಪ್ರಾಂತಃಕಾಲ(ಬೆಳಗಿನ ಜಾವ 4.30ರಿಂದ 5.30 ಪ್ರಶಾಂತ ಸಮಯ) ಅತ್ಯಂತ ಸೂಕ್ತವಾದುದು.

* ನಿತ್ಯಕರ್ಮಗಳನ್ನು ಮುಗಿಸಿಯೇ ಅಭ್ಯಾಸಕ್ಕೆ ತೊಡಗಬೇಕು. ದೇಹದೊಳಗೆ ಕಲ್ಮಶ/ತ್ಯಾಜ್ಯ(ಮಲ, ಮೂತ್ರ)ಇರಿಸಿಕೊಂಡು ಎಂದೂ ಅಭ್ಯಾಸ‌ಕ್ಕಿಳಿಯಬಾರದು. ಇದನ್ನು ಪಾಲಿಸದಿದ್ದರೆ ತ್ಯಾಜ್ಯದಿಂದ ವಿಷಾಣು ಉತ್ಪತ್ತಿಯಾಗಿ ಇರುವ ಆರೋಗ್ಯವನ್ನೂ ಕೆಡಿಸುತ್ತದೆ.

* ಅಭ್ಯಾಸ ಆರಂಭಿಸುವ 10 ನಿಮಿಷ ಮೊದಲು ಒಂದೆರೆಡು ಲೋಟ ನೀರು ಸೇವಿಸಿ.

* ಶುದ್ಧ ಗಾಳಿ, ಸ್ಪಷ್ಟ ಬೆಳಕು ಇರುವ ಸ್ಥಳ ಆಯ್ಕೆ ಮಾಡಿಕೊಳ್ಳಿ. ಅತಿಯಾದ ಮತ್ತು ಶೀತ ಗಾಳಿ ಬೀಸುವ, ಪ್ರಖರ ಬಿಸಿಲಿನಿಂದ ಕೂಡಿದ ಸ್ಥಳ ಬೇಡ.

* ಸಮತಟ್ಟಾದ ನೆಲವಿದ್ದು, ಶುಚಿಯಾಗಿರಲಿ.

* ಕೈ, ಕಾಲುಗಳನ್ನು ಚಾಚಿಟ್ಟು ಮಲಗಿದಾಗ ಅಂಗಗಳು ನೆಲದಮೇಲೆ ಹೋಗದಷ್ಟು ಉದ್ದ ಮತ್ತು ಅಗಲವಾದ(5×4, 6×4) ನೆಲಹಾಸು ಇರಲಿ. ಜಮಖಾನೆ, ಚಾಪೆ, ಮ್ಯಾಟ್ ಬಳಸಬಹುದು.

* ಸಡಿಲವಾದ ಉಡುಪು ಇರಲಿ. ಅತಿ ಬಿಗಿಯಾದ, ಕಿರಿಕಿರಿ ಉಂಟು ಮಾಡುವ ಮತ್ತು ದಪ್ಪನೆಯ ಉಡುಪು ಬೇಡ.

* ಮನಸ್ಸಿಗೆ ಆನಂದ ಉಂಟುಮಾಡುವ ತಿಳಿಯಾದ ಸುವಾಸನೆ ಗಾಳಿಯಲ್ಲಿ ಸುಳಿದಾಡುವಂತೆ ಬಳಸಬಹುದು. ಆದರೆ, ಘಾಟು ಎನಿಸುವ ಪರ್ಫ್ಯೂಮ್‌ಗಳು ಬೇಡ.

* ಅಭ್ಯಾಸಕ್ಕೆ ಹಿನ್ನೆಲೆಯಾಗಿ ಅಬ್ಬರವಿಲ್ಲದ ಲಘು ಸಂಗೀತ (ವೀಣಾವಾದನ, ಕೊಳಲುವಾದನ, ‘ಓಂ’ಕಾರ) ಬಳಸಬಹುದು.

* ಬೆಳಿಗ್ಗೆ ಲಘು ಉಪಹಾರ ಸೇವಿಸಿದ್ದರೆ ಕನಿಷ್ಠ ಒಂದು ತಾಸು, ಮಧ್ಯಾಹ್ನ ಊಟ ಮಾಡಿದ ನಂತರ ಕನಿಷ್ಠ ಮೂರು ತಾಸು ಅಂತರವಿರುವಂತೆ ನೋಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಒಳಿತು.

* ಅಭ್ಯಾಸ ಮುಗಿದ ತಕ್ಷಣ ಆಹಾರ ಸೇವಿಸಬೇಡಿ, 35ರಿಂದ 45ನಿಮಿಷ ಅಂತರವಿರಲಿ.

* ಅಭ್ಯಾಸ ಮುಗಿದ ತಕ್ಷಣ ಸ್ನಾನ ಬೇಡ. 35ರಿಂದ 45ನಿಮಿಷದ ಅಂತರವಿರಲಿ. ಕಾರಣ: ಬಿಸಿಯಾದ ದೇಹದ ಉಷ್ಣ ಸಾಮಾನ್ಯ ಸ್ಥಿತಿಗೆ ಬರಬೇಕು.

[ ಸೂಚನೆ: ಯೋಗಾಭ್ಯಾಸವನ್ನು ಮಾಡುವುದರಿಂದ ದೇಹ ಮತ್ತು ಮನಸ್ಸಿನ ಅಭಿವೃದ್ಧಿಯಾಗುತ್ತದೆಯಾದರೂ ಯೋಗವನ್ನು ತರಬೇತಿ ಪಡೆದ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲೇ ಕಲಿತು ಅಭ್ಯಾಸ ಮಾಡಬೇಕು. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದಲ್ಲಿ, ನಿಮ್ಮ ವೈದ್ಯರ ಹಾಗೂ ಯೋಗ ಶಿಕ್ಷಕರ ಸಲಹೆಯನ್ನು ಪಡೆದ ನಂತರವೇ ಯೋಗಾಭ್ಯಾಸವನ್ನು ಮಾಡಿ. ]

ಯೋಗದ ಕ್ರಮ

* ಪ್ರಾರ್ಥನೆ

* ಲಘು ವ್ಯಾಯಾಮ(ದೇಹಕ್ಕೆ ಬಿಸಿಯುಟ್ಟಿಸುವ ಚಟುವಟಿಕೆಗಳು).

* ಸೂರ್ಯನಮಸ್ಕಾರ

* ಗುರುನಮಸ್ಕಾರ

* ಸರಳ, ಮಧ್ಯಮ, ಕ್ಲಿಷ್ಟ ಆಸನಗಳು(ಸರಳತೆಯಿಂದ ಸಂಕೀರ್ಣದೆಡೆಗೆ)

* ಮುಂದೆ ಬಾಗುವ, ಹಿಂದೆ ಬಾಗುವ, ಪಕ್ಕಕ್ಕೆ ತಿರುಚುವ, ಕುಳಿತು ಮಾಡುವ, ಕೈಗಳ ಮೇಲೆ, ಕಾಲಿನ ಮೇಲೆ ಸಮತೋಲನ ಕಾಯ್ದುಕೊಳ್ಳುವ ಆಸನಗಳು.

* ಶವಾಸನ

* ಪ್ರಾಣಾಯಾಮ.

* ಧ್ಯಾನ

 ಯೋಗಾಸನಗಳ ಪ್ರಯೋಜನಗಳು

 "ಯೋಗದ ಹತ್ತು ಪ್ರಮುಖ ಪ್ರಯೋಜನಗಳು"

1 .ಸರ್ವಾಂಗೀಣ ದೇಹದ ಸುಸ್ಥಿತಿ: ಶ್ರೀ ಶ್ರೀ ರವಿಶಂಕರರು, “”ಆರೋಗ್ಯವೆಂದರೆ ಕೇವಲ ಅನಾರೋಗ್ಯವಿಲ್ಲದ ಸ್ಥಿತಿಯಲ್ಲ. ಅದು ಜೀವನದ ಕ್ರಿಯಾಶೀಲವಾದ ಅಭಿವ್ಯಕ್ತಿ, ನೀವೆಷ್ಟು ಸಂತೋಷವಾಗಿರುವಿರಿ, ಪ್ರೇಮಮಯಿಗಳಾಗಿರು ವಿರಿ, ಉತ್ಸಾಹಿಗಳಾಗಿರುವಿರಿ ಎಂಬುದರ ಸೂಚಕ” ಎನ್ನುತ್ತಾರೆ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶಗಳು. ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳುಂಟಾಗುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ: ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಬಲ ಹೆಚ್ಚುತ್ತದೆ, ದೈಹಿಕ ಬಲ ವರ್ಧಿಸುತ್ತದೆ, ಗಾಯಗಳಾಗು ವುದರಿಂದ ತಪ್ಪಿಸುತ್ತದೆ, ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಕ್ಕೆಸೆಯುತ್ತದೆ

2. ತೂಕ ಕಳೆದುಕೊಳ್ಳಲು ಯೋಗ: ಸೂರ್ಯ ನಮಸ್ಕಾರ ಮತ್ತು ಕಪಾಲಭಾತಿ ಪ್ರಾಣಾಯಾಮ ತೂಕ ಕಳೆದುಕೊಳ್ಳಲು ಬಲು ಉಪಯುಕ್ತಕರ. ಅದಲ್ಲದೆ ನಿತ್ಯ ಯೋಗಾಭ್ಯಾಸದಿಂದ ನಾವು ನಮ್ಮ ದೇಹದ ಕುರಿತು ಹೆಚ್ಚು ಅರಿವನ್ನು ಪಡೆಯುತ್ತೇವೆ ಮತ್ತು ಅದರ ಅವಶ್ಯಕತೆಗಳ ಬಗ್ಗೆ ಹೆಚ್ಚು ಸೂಕ್ಷ್ಮರಾಗುತ್ತೇವೆ. ಇದರಿಂದ ನಾವು ತಿನ್ನುವ ಆಹಾರ ಮತ್ತು ದೇಹದ ತೂಕದ ಮೇಲೆ ಕಣ್ಣಿಡುವಂತಾಗುತ್ತದೆ.

3.ಒತ್ತಡ ನಿವಾರಣೆಗಾಗಿ ಯೋಗ: ಪ್ರತಿನಿತ್ಯ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ, ಅದರಿಂದ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಶೇಖರಣೆಯಾಗುವ ಒತ್ತಡದ ಬಿಡುಗಡೆಯಾಗುತ್ತದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದಿಂದ ಒತ್ತಡವು ಪರಿಣಾಮಕಾರಿಯಾ ಬಿಡುಗಡೆಯಾಗುತ್ತದೆ.

4.ಆಂತರಿಕ ಶಾಂತಿಗಾಗಿ ಯೋಗ: ನಾವೆಲ್ಲರೂ ಪ್ರಶಾಂತ ವಾದ, ಸುಂದರವಾದ ತಾಣಗಳಿಗೆ ಭೇಟಿ ನೀಡಲು ಇಷ್ಟಪಡುತ್ತೇವೆ. ಆದರೆ ಶಾಂತಿ ನಮ್ಮೊಳಗೇ ಇದೆಯೆಂದು ಅರಿತರೆಷ್ಟು ಚೆನ್ನ! ಈ ಅರಿವು ಬೆಳೆದರೆ, ಆಗ ಅಲ್ಪ ವಿರಾಮವನ್ನು ತೆಗೆದುಕೊಂಡು, ದಿನದ ಯಾವುದೇ ಸಮಯದಲ್ಲೂ ಇದನ್ನು ಅನುಭವಿಸಬಹುದು! ಪ್ರತಿನಿತ್ಯ ಸಣ್ಣ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನವನ್ನು ಮಾಡಬೇಕು. ಗೊಂದಲದಲ್ಲಿರುವ ಮನಸ್ಸನ್ನು ಪ್ರಶಾಂತಗೊಳಿಸಲು ಯೋಗವು ಅತ್ಯುತ್ತಮವಾದ ದಾರಿ.

5.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ: ನಮ್ಮ ವ್ಯವಸ್ಥೆಯಲ್ಲಿ ದೇಹ, ಮನಸ್ಸು ಮತ್ತು ಆತ್ಮ ಒಂದಾಗಿ ಹೆಣೆಯಲ್ಪಟ್ಟಿದೆ. ದೇಹದಲ್ಲಿ ಅಸಮತೋಲನ, ತೊಂದರೆ ಉಂಟಾದರೆ ಅದು ಮನಸ್ಸನ್ನು ಬಾಧಿಸುತ್ತದೆ ಮತ್ತು ಮನಸ್ಸಿನಲ್ಲಿ ಅಹಿತ ಭಾವನೆ ಅಥವಾ ಚಡಪಡಿಕೆಯಿದ್ದರೆ, ಅದು ದೇಹದಲ್ಲಿ ರೋಗವಾಗಿ ಪ್ರಕಟವಾಗುತ್ತದೆ. ಯೋಗಾಸನಗಳು ಅವ ಯವಗಳನ್ನು ತೀಡುತ್ತವೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ. ಉಸಿರಾಟದ ಪ್ರಕ್ರಿಯೆಗಳು ಮತ್ತು ಧ್ಯಾನ ಒತ್ತಡವನ್ನು ನಿವಾರಣೆ ಮಾಡಿ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ.

6.ಹೆಚ್ಚು ಜಾಗೃತವಾಗಿರಲು ಯೋಗ: ಮನಸ್ಸು ಸದಾ ಕಾರ್ಯದಲ್ಲಿ ನಿರತವಾಗಿರುತ್ತದೆ. ಗತದಿಂದ ಭವಿಷ್ಯಕ್ಕೆ ಓಡುತ್ತಲೇ ಇರುತ್ತದೆ. ಎಂದಿಗೂ ವರ್ತಮಾನದಲ್ಲಿ ಇರುವು ದಿಲ್ಲ. ಮನಸ್ಸಿನ ಈ ಪ್ರವೃತ್ತಿಯ ಬಗ್ಗೆ ಅರಿವನ್ನು ಹೊಂದು ವುದರಿಂದ ನಾವು ಒತ್ತಡಕ್ಕೆ, ಉದ್ರೇಕಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಯೋಗ ಮತ್ತು ಪ್ರಾಣಾಯಾಮದಿಂದ ಆ ಅರಿವು ಉಂಟಾಗುತ್ತದೆ ಮತ್ತು ಮನಸ್ಸು ವರ್ತಮಾನದಲ್ಲಿ ನಿಲ್ಲುತ್ತದೆ. ವರ್ತಮಾನದಲ್ಲಿದ್ದಾಗ ಮನಸ್ಸು ಏಕಾಗ್ರವಾಗಿ, ಸಂತೋಷದಿಂದಿರುತ್ತದೆ.

7.ಉತ್ತಮ ಸಂಬಂಧಗಳಿಗಾಗಿ ಯೋಗ: ಯೋಗದಿಂದ ನಿಮ್ಮ ಪ್ರೀತಿಪಾತ್ರರೊಡನೆ ನೀವು ಹೊಂದಿರುವ ಸಂಬಂಧ ಸುಧಾರಿಸುತ್ತದೆ. ಸಂತೋಷದಿಂದಿರುವ ಮತ್ತು ತೃಪ್ತ ವಾಗಿರುವ ಮನಸ್ಸು ಸಂಬಂಧಗಳಲ್ಲಿನ ಸೂಕ್ಷ್ಮವಿಷಯಗಳನ್ನು ನಿಭಾಯಿಸಬಲ್ಲದು. ಯೋಗ ಮತ್ತು ಧ್ಯಾನದಿಂದ ಮನಸ್ಸನ್ನು ಸಂತೋಷವಾಗಿಡಿ, ಶಾಂತಿಯಿಂದ ಇರಿ. ಆಗ ನಿಮ್ಮ ಸುತ್ತಲೂ ಇರುವ ಸಂಬಂಧಗಳು ಹೇಗೆ ಅರಳುತ್ತವೆಂದು ನೋಡಿ.

8.ಶಕ್ತಿಯನ್ನು ವರ್ಧಿಸಲು ಯೋಗ: ದಿನದ ಕೊನೆಯಲ್ಲಿ ಎಲ್ಲಾ ಶಕ್ತಿಯೂ ಹೊರಟು ಹೋಗಿದೆಯೆಂದು ಅನಿಸುತ್ತದೆಯೆ? ಎಲ್ಲಾ ಕೆಲಸಗಳನ್ನೂ ಮಾಡಿ, ನಿರಂತರವಾಗಿ ಅನೇಕ ಕೆಲಸಗಳನ್ನು ಒಮ್ಮೆಲೇ ಮಾಡಿ ದಣಿಯುವುದು ಸಹಜ. ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡಿದರೆ ನಮ್ಮ ಶಕ್ತಿ ವರ್ಧಿಸುತ್ತದೆ, ನಮ್ಮನ್ನು ತಾಜಾ ಆಗಿ ಇಡುತ್ತದೆ.

9.ಫ್ಲೆಕ್ಸಿಬಲ್‌ ದೇಹಕ್ಕಾಗಿ ಮತ್ತು ಭಂಗಿಗಾಗಿ ಯೋಗ: ಬಲಿಷ್ಠವಾದ, ಮೃದುವಾದ ಮತ್ತು ನಮ್ಯವಾದ ದೇಹ ನಿಮಗೆ ಬೇಕೆಂದರೆ, ಯೋಗ ನಿಮ್ಮ ದಿನಚರಿಯ ಭಾಗವಾಗಬೇಕು. ನಿತ್ಯ ಯೋಗಾಭ್ಯಾಸ, ವ್ಯಾಯಾಮ ದೇಹದ ಸ್ನಾಯುಗಳನ್ನು ವಿಸ್ತಾರ ಮಾಡಿ, ದೇಹವನ್ನು ಸುಸ್ಥಿತಿಯಲ್ಲಿಡು ತ್ತದೆ ಮತ್ತು ದೇಹವನ್ನು ಬಲಿಷ್ಠವಾಗಿಡುತ್ತದೆ. ನೀವು ನಿಂತಾಗ, ಕುಳಿತಾಗ, ನಿದ್ದೆ ಮಾಡಿದಾಗ ಅಥವಾ ನಡೆಯುತ್ತಿರುವಾಗ ನಿಮ್ಮ ದೇಹದ ಭಂಗಿಯನ್ನು ಸುಧಾರಿಸುತ್ತದೆ. ಇದರಿಂದ ತಪ್ಪಾದ ಭಂಗಿಯಿಂದ ಉಂಟಾಗುವ ದೇಹದ ನೋವಿನ ನಿವಾರಣೆಯಾಗುತ್ತದೆ.

10.ಅಂತದೃಷ್ಟಿ ಸುಧಾರಿಸಲು ಯೋಗ: ಯೋಗ ಮತ್ತು ಧ್ಯಾನಕ್ಕೆ ನಿಮ್ಮ ಅಂತದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಇದರಿಂದಾಗಿ ಏನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ನಿಮಗೆ ಸ್ವಯಂಸು#ರಿತವಾಗಿ ತಿಳಿಯುತ್ತದೆ. ಇದರಿಂದ ಸಕಾರಾತ್ಮಕವಾದ ಫ‌ಲಿತಾಂಶಗಳು ಸಿಗುತ್ತವೆ. ಯೋಗ ಒಂದು ನಿರಂತರವಾದ ಪ್ರಕ್ರಿಯೆ ಎಂದು ನೆನಪಿಡಿ. ಆದ್ದರಿಂದ ಅಭ್ಯಾಸ ಮಾಡುತ್ತಲಿರಿ! ಯೋಗಾಭ್ಯಾಸದೊಳಗೆ ಆಳವಾಗಿ ಹೊಕ್ಕಷ್ಟೂ ಅದರ ಲಾಭಗಳೂ ಗಹನವಾಗಿರುತ್ತವೆ.

ಪ್ರಾಣಾಯಾಮ

ನಮ್ಮ ಉಸಿರೇ  ನಮ್ಮ ಆರೋಗ್ಯ. 'ಪ್ರಾಣ' ಎಂದರೆ 'ಉಸಿರು' ಎಂದರ್ಥ, ಆಯಾಮ ಎಂದರೆ ಸ್ಥಿತಿ

ಯೋಗದಲ್ಲಿ ಉಸಿರಾಟದ ಮೇಲಿನ ನಿಯಮಿತವಾದ ನಿಯಂತ್ರಣವೇ "ಪ್ರಾಣಾಯಾಮ".

ಪ್ರಾಣಾಯಾಮದ ನಾಲ್ಕು ಆಯಾಮಗಳು

1. ಪೂರಕ : ನಿಯಮಿತವಾದ ವೇಗದಲ್ಲಿ ನಿಯಮಿತವಾದ ಸಮಯದವರೆಗೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದು.

2. ಕುಂಭಕ : ನಿಯಮಿತ ಸಮಯದವರೆಗೆ ಉಸಿರನ್ನು ಶ್ವಾಸಕೋಶದಲ್ಲಿಯೇ ಹಿಡಿದಿಟ್ಟುಕೊಳ್ಳುವುದು.

3. ರೇಚಕ : ನಿಯಮಿತವಾದ ವೇಗದಲ್ಲಿ ನಿಯಮಿತವಾದ ಸಮಯದವರೆಗೆ ಉಸಿರನ್ನು ಹೊರಗೆ ಬಿಡುವುದು.

4. ಶೂನ್ಯಕ : ಉಸಿರನ್ನು ಶ್ವಾಸಕೋಶದಿಂದ ಹೊರ ಹಾಕಿದ ನಂತರ ನಿಯಮಿತವಾದ ಸಮಯದವರೆಗೆ ಉಸಿರನ್ನಾಡದೆ ಹಾಗೇ ಖಾಲಿ ಸ್ಥಿತಿಯಲ್ಲಿರುವುದು.

     ಸರಿಯಾದ ಕ್ರಮದ ಉಸಿರಾಟದ ಅಭ್ಯಾಸದಿಂದ ಜೀವಕಳೆ ಹೊಂದಿ, ನಮ್ಮ ಆರೋಗ್ಯವನ್ನು ಹಾಗೂ ಮಾನಸಿಕ ನೆಮ್ಮದಿಯನ್ನು ನಾವೇ ಕಾಪಾಡಿಕೊಳ್ಳಬಹುದು ಇದು ಪ್ರಾಣಾಯಾಮದಿಂದ ಸಾಧ್ಯವಾಗುತ್ತದೆ. 

ಪ್ರಾಣಾಯಾಮದಿಂದಾಗುವ ಪ್ರಯೋಜನಗಳು:

  • ಸರಿಯಾದ ಉಸಿರಾಟ ಕ್ರಮದಿಂದ ಆಯಸ್ಸು ವೃದ್ದಿಯಾಗುತ್ತದೆ.
  • ಶ್ವಾಸಕೋಶಕ್ಕೆ ಸಂಬಂದಿಸಿದ ರೋಗಗಳನ್ನು ಗುಣಪಡಿಸುತ್ತದೆ.
  • ರಕ್ತದ ಸಂಚಲನವನ್ನು ಸರಾಗಗೊಳಿಸಿ ದೇಹದ ಶಕ್ತಿಯನ್ನು ವೃದ್ದಿಸುತ್ತದೆ.
  • ಶರೀರ ಮತ್ತು ಮನಸ್ಸುಗಳು ಸಶಕ್ತಿ, ಸದೃಢ ಸಂಪ್ರೀತ ಸಕಾರಾತ್ಮಕಗೊಳ್ಳುವುವು
  • ಇವೇ ಅಲ್ಲದೆ ನಮ್ಮ ಮೆದುಳಿನ ಪೂರ್ಣ ಪ್ರಯೋಜನಗಳನ್ನು ಪ್ರಾಣಾಯಾಮದಿಂದ ಪಡೆದು ರೋಗ ಮುಕ್ತರಾಗಬಹುದು ಮನಸ್ಸು ಶಾಂತಸ್ಥಿತಿಗೆ ಬರುತ್ತದೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವನ್ನು ಹೇಗೆ ಮಾಡುವುದು?

  ನಿಮಗೆ ಸಮಯದ ಅಭಾವವಿದ್ದು ಆರೋಗ್ಯವಾಗಿರಲು ಒಂದೇ ಒಂದು ಮಂತ್ರವನ್ನು ನೀವು ಹುಡುಕುತ್ತಿರುವಿರಾದರೆ ಇದೋ ಇಲ್ಲಿದೆ ಪರಿಹಾರ. ಸೂರ್ಯ ನಮಸ್ಕಾರದ ರೂಪದಲ್ಲಿ  ೧೨ ಪ್ರಬಲ ಯೋಗಾಸನಗಳ ಸರಣಿಯು ವಿಶೇಷವಾಗಿ ಹೃದಯಕ್ಕೆ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ಈ ಆಸನಗಳು ದೇಹವನ್ನು ಸುಸ್ವರೂಪದಲ್ಲಿರಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಉತ್ತಮ ಮಾರ್ಗವಾಗಿವೆ.

    ಸೂರ್ಯ ನಮಸ್ಕಾರವನ್ನು ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲಿ ಮಾಡುವುದು ಅತ್ಯುತ್ತಮವಾದುದು. ನಾವು ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಲು ಸರಳವಾದರೂ ಪ್ರಭಾವಶಾಲಿಯಾದ ಈ ಸೂರ್ಯ ನಮಸ್ಕಾರವನ್ನು ಪ್ರಾರಂಭಿಸೋಣ.

   ೧೨ ಯೋಗಾಸನಗಳನ್ನು ಬಲಬದಿಯಲ್ಲಿ ಮಾಡಿದಾಗ ಸೂರ್ಯ ನಮಸ್ಕಾರದ ಅರ್ಧ ಸುತ್ತು ಮುಗಿಯುತ್ತದೆ. ಇನ್ನರ್ಧ ಸುತ್ತನ್ನು ಪೂರ್ಣಗೊಳಿಸಲು ನೀವು ಅದೇ ಅನುಕ್ರಮದಲ್ಲಿ ಈ ೧೨ ಆಸನಗಳನ್ನು ಎಡಬದಿಯಲ್ಲಿ ಪುನರಾವರ್ತಿಸಬೇಕು. ( ಕೆಳಗೆ ವಿವರಿಸಿರುವ ೪ನೇ ಮತ್ತು ೯ನೇ ಹಂತದಲ್ಲಿ). ನೀವು  ಸೂರ್ಯನಮಸ್ಕಾರದ ವಿವಿಧ ಪ್ರಕಾರಗಳನ್ನು ಕಂಡುಕೊಂಡಿರಬಹುದು. ಆದರೆ, ಗರಿಷ್ಠ ಫಲಿತಾಂಶಕ್ಕಾಗಿ ಯಾವುದಾದರೂ ಒಂದು ಪ್ರಕಾರವನ್ನು  ಕ್ರಮಬದ್ಧವಾಗಿ ಅನುಸರಿಸುವುದು ಉತ್ತಮ

       ಉತ್ತಮ ಆರೋಗ್ಯ ಮಾತ್ರವಲ್ಲದೇ, ಈ ಭೂಮಿಯನ್ನು ತನ್ನ ಶಕ್ತಿಯಿಂದ ಜೀವಂತವಾಗಿರಿಸಿರುವ ಸೂರ್ಯದೇವನಿಗೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಕೂಡ ಸೂರ್ಯ ನಮಸ್ಕಾರವು  ಒಂದು ಸದವಕಾಶ. ಮುಂದಿನ ೧೦ ದಿನಗಳವರೆಗೆ  ಸೂರ್ಯನ ಚೈತನ್ಯದೆಡೆಗೆ  ಕೃತಜ್ಞತಾಭಾವವನ್ನು ಮೂಡಿಸಿಕೊಳ್ಳುವುದರೊಂದಿಗೆ ನಿಮ್ಮ ದಿನಚರಿಯನ್ನು ಆರಂಭಿಸಿ. ೧೨ ಸುತ್ತುಗಳ ಸೂರ್ಯ ನಮಸ್ಕಾರದ ನಂತರ  ಇನ್ನಿತರ ಯೋಗಾಸನಗಳನ್ನು ಮಾಡಿ, ನಂತರ ದೀರ್ಘವಾದ ಯೋಗನಿದ್ರೆಯಲ್ಲಿ ವಿಶ್ರಮಿಸಿ. ಆರೋಗ್ಯ, ಆನಂದ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಲು ಇದು ನಿಮ್ಮ ಅತ್ಯುತ್ತಮವಾದ ಮಂತ್ರವಾಗಬಹುದು. (ಕೃಪೆ : art of living)

ಸೂರ್ಯ ನಮಸ್ಕಾರ ಮಾಡುವ ವಿಧಾನ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/cFForlkCE_4

ಯೋಗನಿದ್ರೆ

ಹೆಚ್ಚಿನ ಪರಿಶ್ರಮವಿಲ್ಲದೆ ಸಿಗುವ ವಿಶ್ರಾಂತಿ ಎಂದು ವರ್ಣಿಸಲಾಗದ ಯೋಗ ನಿದ್ರೆಯನ್ನು ಯೋಗಾಸನದ ಕೊನೆಯಲ್ಲಿ ಅಳವಡಿಸುವುದು ಅತ್ಯವಶ್ಯಕ. ಯೋಗದ ಭಂಗಿಗಳು ಶರೀರವನ್ನು ಬೆಚ್ಚಗಿಟ್ಟರೆ ಯೋಗ ನಿದ್ರೆಯು ಶರೀರವನ್ನು ತಂಪಾಗಿರಿಸಲು ಸಹಾಯಮಾಡುತ್ತದೆ.’.

 ಹೆಚ್ಚಿನ ಜನರು ಯೋಗ ಎಂದರೆ ಶರೀರದ ಕಸರತ್ತು ಎಂದು ತಿಳಿದು ಕೊಂಡಿರುತ್ತಾರೆ. ಆದರೆ ಯೋಗವು ನಮ್ಮ ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾದ ನೆಮ್ಮದಿಯನ್ನು ಒದಗಿಸುತ್ತದೆ. ಯೋಗಾಭ್ಯಾಸವನ್ನು ಹೆಚ್ಚು ಪರಿಣಾಮಕಾರಿ ಮಾಡಲು ಯೋಗದ ಕೊನೆಯಲ್ಲಿ ಯೋಗನಿದ್ರೆಯನ್ನು ಅಳವಡಿಸಿಕೊಳ್ಳುವುದು ಉತ್ತಮ.

 ಕಾರನ್ನು ತುಂಬಾ ದೂರ ಓಡಿಸಿದ ನಂತರ ಇಂಜಿನನ್ನು ತಣ್ಣಾಗಾಗಿಸಲು ನಾವು ಸ್ವಲ್ಪ ಸಮಯ ಕಾರನ್ನು ಬಂದ್ ಮಾಡುತ್ತೇವೆ ಅದೇ ರೀತಿ ಯೋಗಾಭ್ಯಾಸದಿಂದ ಬೆಚ್ಚಗಾದ ಶರೀರವನ್ನು ತಂಪಾಗಿರಿಸಲು ಯೋಗನಿದ್ರೆ ಅಗತ್ಯ. ಇದು ಯೋಗದಿಂದ ನಮಗೆ ಸಿಕ್ಕಿರುವ ಶಕ್ತಿ ಮತ್ತು ಉತ್ಸಾಹವನ್ನು ಬಲಗೊಳಿಸುತ್ತದೆ. ಯೋಗ ನಿದ್ರಾ ನಮ್ಮ ಶರೀರಕ್ಕೆ ಪೂರ್ತಿ ವಿಶ್ರಾಂತಿಯನ್ನು ನೀಡಿ ನಮ್ಮನ್ನು ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಲು ಸಹಕರಿಸುತ್ತದೆ. ಆದುದರಿಂದ ಯೋಗಾಭ್ಯಾಸ ಮಾಡಿದ ಮೇಲೆ ಯೋಗನಿದ್ರೆಗೆ ಸ್ವಲ್ಪ ಸಮಯವನ್ನು ಕಾದಿರಸಲೇಬೇಕು.

 ಯೋಗನಿದ್ರೆಗೆ ತಯಾರಿ

ಯೋಗನಿದ್ರೆಯಲ್ಲಿ ನಾವು ಪ್ರಜ್ನಾಪೂರ್ವಕವಾಗಿ ನಮ್ಮ ಗಮನವನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತೇವೆ. ಇದರಿಂದ ಆ ಭಾಗದಲ್ಲಿನ ನರಗಳು ಸಕ್ರಿಯವಾಗಿ ಮಾಡಿದ ಆಸನ( ಯೋಗಭಂಗಿ) ಪರಿಣಾಮಕಾರಿಯಾಗಲು ಸಹಾಯ ಮಾಡುತ್ತದೆ.

 ಯೋಗನಿದ್ರೆ ಮಾಡಲು ಹಂತ ಹಂತವಾಗಿ  ಸೂಚನೆಗಳು

 ಸಲಹೆ: ಶರೀರವನ್ನು ಬೆಚ್ಚಗಿಡಲು ಹೊದಿಕೆಯನ್ನು ಉಪಯೋಗಿಸುವುದು ಉತ್ತಮ. ಯೋಗಭಂಗಿಗಳಿಂದ ಬೆಚ್ಚಗಾದ ಶರೀರದಲ್ಲಿ ಕೂಡಲೆ ಉಷ್ಣತೆ ಇಳಿಯುವುದು ಸೂಕ್ತವಲ್ಲ.

 1. ಬೆನ್ನಿನ ಮೇಲೆ ನೇರವಾಗಿ ಮಲಗಿ(ಶವಾಸನ) ಕಣ್ಣುಗಳನ್ನು ಮುಚ್ಚಿ ವಿಶ್ರಮಿಸಿ ಕೆಲವು ಆಳವಾದ ಉಸಿರನ್ನು ತೆಗೆದು ನಿಧಾನವಾಗಿ ಹೊರಹಾಕಿ. ಉಸಿರನ್ನು ಆರಾಮವಾಗಿ ನಿಧಾನವಾಗಿ ತೆಗೆಯಬೇಕೆಂಬುದು ನೆನಪಿರಲಿ.ಉಜ್ಜಯಿ ಉಸಿರಾಟ ಬೇಡ

ಸಲಹೆ: ನಿಮಗೆ ಏನಾದರೂ ಅಸ್ವಸ್ಥತೆ ಅಥವಾ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ಭಂಗಿಯನ್ನು ಸರಿಪಡಿಸಿ. ಹೆಚ್ಚಿನ ಆರಾಮಕ್ಕಾಗಿ ದಿಂಬಿನ ಸಹಾಯದಿಂದ ನಿಮ್ಮ ಕಾಲನ್ನು ಸ್ವಲ್ಪ ಮೇಲಕ್ಕೆತ್ತಬಹುದು

 2. ನಿಧಾನವಾಗಿ ನಿಮ್ಮ ಗಮನವನ್ನು ಬಲಪಾದದ ಕಡೆಗೆ ತೆಗೆದುಕೊಂಡು ಹೋಗಿ. ನಿಮ್ಮ ಕಾಲನ್ನು ವಿಶ್ರಮಿಸುತ್ತಾ ಕೆಲವು ಸೆಕೆಂಡುಗಳ ಕಾಲ ಗಮನವನ್ನು ಅಲ್ಲೇ ಇರಿಸಿ. ನಿಧಾನವಾಗಿ ನಿಮ್ಮ ಗಮನವನ್ನುಬಲ ಮೊಣಕಾಲು, ಬಲತೊಡೆ, ಬಲ ಪೃಷ್ಟ (ಸೊಂಟ) (ಕೆಲವಿ ಸೆಕೆಂಡುಗಳ ಕಾಲ) ಇಡೀ ಬಲಕಾಲಿನ ಮೇಲಿರಿಸಿ. ಎಡಕಾಲಿಗೆ ಕೂಡ ಈ ಪ್ರಕ್ರಿಯೆ ಪುನರಾವರ್ತಿಸಿ

3. ಇದೇ ರೀತಿ ಶರೀರದ ಇತರ ಭಾಗಗಳ ಕಡೆಗೆ ಗಮನ ಹರಿಸಿ. ಜನನಾಂಗ ಪ್ರದೇಶ, ಹೊಟ್ಟೆ, ಹೊಕ್ಕಳ ಪ್ರದೇಶ, ಎದೆ, ಬಲಭುಜ, ಬಲಕೈ, ಎಡಭುಜ, ಎಡಕೈ, ಗಂಟಲು, ಮುಖ ಮತ್ತು ತಲೆಯ ಮೇಲಿನ ಭಾಗ.

4. ಒಂದು ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಮ್ಮ ಶರೀರದಲ್ಲಾಗುವ ಸಂವೇದನಗಳನ್ನು ಗುರುತಿಸಿ. ಇದೇ ಭಂಗಿಯಲ್ಲಿ ಕೆಲವು ನಿಮಿಷಗಳ ಕಾಲ ವಿಶ್ರಮಿಸಿ.

5. ಈಗ ನಿಧಾನವಾಗಿ ನಿಮ್ಮ ಶರೀರ ಮತ್ತು ಪರಿಸರವನ್ನು ಗಮನಿಸಿ. ನಿಮ್ಮ ಬಲಭಾಗಕ್ಕೆ ತಿರುಗಿ ಕೆಲವು ನಿಮಿಷಗಳಕಾಲ ಹಾಗೇ ಮಲಗಿರಿ.

6. ನಿಮ್ಮದೇ ಸಮಯವನ್ನು ತೆಗೆದುಕೊಂಡು ನಿಧಾನವಾಗಿ ಎದ್ದು ಕುಳಿತುಕೊಳ್ಳಿ. ನಿಮಗೆ ಆರಮವೆನ್ನಿಸಿದಾಗ ನಿಧಾನವಾಗಿ ಕಣ್ಣುಗಳನ್ನು ತೆರೆಯಬಹುದು..

 ಯೋಗನಿದ್ರೆಯು ಯೋಗಾಭ್ಯಾಸವನ್ನು ಆಹ್ಲಾದಕರವಾಗಿ ಯಾವುದೇ ಪರಿಶ್ರಮವಿಲ್ಲದೆ ಮುಕ್ತಾಯಗೊಳಿಸುತ್ತದೆ. ಎಲ್ಲವನ್ನು ಮರೆತು ವಿಶ್ರಮಿಸಿ. ನಿಮಗಾಗುವ ಅನುಭವವನ್ನು ಆನಂದಿಸಿ.

 ಯೋಗನಿದ್ರೆಯಿಂದ ಆಗುವ ಲಾಭಗಳು

* ಯೋಗ ಭಂಗಿಗಳಿಂದ ಬೆಚ್ಚಗಾದ ಶರೀರವನ್ನು ತಂಪಾಗಿಸಿ ಶರೀರದ ಸಾಮಾನ್ಯ ಉಷ್ಣ್ ತೆಯನ್ನು ತಲುಪಲು ಸಹಕರಿಸುತ್ತದೆ.

* ಯೋಗದ ಪರಿಣಾಮವನ್ನು ಹೀರಿಕೊಂಡಿರುವ ನರಮಂಡಲಗಳನ್ನು ಸಕ್ರಿಯಗೊಳಿಸುತ್ತದೆ

* ದೇಹದಿಂದ ವಿಷಪೂರಿತ ಕಲ್ಮಶಗಳನ್ನು ಹೊರಹಾಕುತ್ತದೆ.

ವಿವಿಧ ಧರ್ಮಗಳಲ್ಲಿ ಯೋಗ

ಬೌದ್ಧಧರ್ಮ

ಪ್ರಾಚೀನ ಬೌದ್ಧ ಧರ್ಮವು ಧ್ಯಾನಸ್ಥ ತನ್ಮಯತೆಯಲ್ಲಿ ಸ್ಥಿತಿಗಳನ್ನು ಮೂರ್ತೀಕರಿಸಿತ್ತು.[೫೭] ಅತಿ ಪ್ರಾಚೀನವಾಗಿ ವ್ಯಕ್ತವಾದ ಯೋಗದ ಚಿಂತನೆಯು ಬುದ್ಧನ ಮೊದಲಿನ ಧರ್ಮಪ್ರವಚನಗಳಲ್ಲಿ ಕಂಡುಬರುತ್ತದೆ.[೫೮] ಬುದ್ಧನ ಒಂದು ಮಹತ್ವದ ನವೀನ ಬೋಧವೆಂದರೆ ಧ್ಯಾನದ ತನ್ಮಯತೆಯನ್ನು ಗಮನಪೂರ್ವಕ ಆಚರಣೆಯೊಂದಿಗೆ ಮೇಳೈಸುವುದು.

ಜೈನ ಧರ್ಮ

ಜೈನರ ಪ್ರಾಚೀನ ಶಾಸ್ತ್ರೀಯ ಗ್ರಂಥಗಳು ಹಾಗೂ ಆಚಾರಾಂಗ ಸೂತ್ರ ಮತ್ತು ನಿಯಮಸಾರ, ತತ್ವಾರ್ಥಸೂತ್ರ ಮುಂತಾದಂತಹ ಗ್ರಂಥಗಳು ಯೋಗವನ್ನು ಪಾಮರರು ಹಾಗೂ ತಪಸ್ವಿಗಳಿಬ್ಬರಿಗೂ ಅನ್ವಯಿಸುವ ಜೀವನಶೈಲಿ ಎಂದು ಸೂಚಿಸಿರುವ ಪ್ರಸ್ತಾಪಗಳಿವೆ.

ಇಸ್ಲಾಂ ಧರ್ಮ

ಭೌತಿಕ ಭಂಗಿಗಳನ್ನು(ಆಸನಗಳು) ಹಾಗೂ ಉಸಿರಿನ ನಿಯಂತ್ರಣ (ಪ್ರಾಣಾಯಾಮ)ಗಳೆರಡನ್ನೂ ಅಳವಡಿಸಿಕೊಂಡ ಸೂಫಿಪಂಥದ ಬೆಳವಣಿಗೆಯಲ್ಲಿ ಭಾರತೀಯರ ಯೋಗದ ಆಚರಣೆಗಳ ಪ್ರಭಾವವು ಗಮನಾರ್ಹವಾಗಿವೆ.[೮೫] ಪ್ರಾಚೀನ ಭಾರತೀಯ ಯೋಗಕ್ಕೆ ಸಂಬಂಧಿಸಿದ ಗ್ರಂಥವಾದ, ಅಮೃತಕುಂಡವು, ("ಅಮೃತದ ಕೊಳ)" 11ನೇ ಶತಮಾನದಷ್ಟು ಮುಂಚೆಯೇ ಅರೇಬಿಕ್‌ ಹಾಗೂ ಪರ್ಷಿಯನ್‌ ಭಾಷೆಗಳಿಗೆ ಭಾಷಾಂತರಗೊಂಡಿತ್ತು.

ಕ್ರೈಸ್ತ ಧರ್ಮ

1989ರಲ್ಲಿ, ವ್ಯಾಟಿಕನ್‌ ಸಿಟಿಯು ಝೆನ್‌ ಮತ್ತು ಯೋಗದಂತಹಾ ಪೂರ್ವದ ಧ್ಯಾನದ ಆಚರಣೆಗಳು "ಅಸಾಂಪ್ರದಾಯಿಕ ಧಾರ್ಮಿಕ ಸಂಸ್ಥೆಗಳಾಗಿ ಅವನತಿ ಹೊಂದುವ ಸಾಧ್ಯತೆ ಇದೆ" ಎಂದು ಘೋಷಿಸಿತು.[೯೪] ವ್ಯಾಟಿಕನ್‌ ಸಿಟಿಯ ಈ ಹೇಳಿಕೆಯ ಹೊರತಾಗಿಯೂ, ಅನೇಕ ರೋಮನ್‌ ಕ್ಯಾಥೊಲಿಕರು ಯೋಗ, ಬೌದ್ಧಧರ್ಮ ಮತ್ತು ಹಿಂದೂ ಧರ್ಮಗಳ ಅಂಶಗಳನ್ನು ತಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸುತ್ತಲೇ ಇದ್ದಾರೆ.

 ಭಾರತದಲ್ಲಿ ರಾಷ್ಟ್ರ ಮಟ್ಟದ ಯೋಗ ಶಿಕ್ಷಣ ಸಂಸ್ಥೆಗಳು

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ನವ ದೆಹಲಿ

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ(MDNIY) ಯು ಸೊಸೈಟೀಸ್ ರೆಜಿಸ್ಟ್ರೇಶನ್ ಕಾಯಿದೆ, 1860ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಆಯುಶ್ ಇಲಾಖೆಯಿಂದ ಸಂಪೂರ್ಣವಾಗಿ ಅನುದಾನವನ್ನು ಪಡೆದಿರುತ್ತದೆ.

ಈ ಸಂಸ್ಥೆಯು, ದೇಶದ ಕೇಂದ್ರ ಪ್ರದೇಶವಾದ ನವದೆಹಲಿಯ ಹೃದಯಭಾಗವಾದ ಲುಟಿಯೆನ್ ವಲಯದ ಕಣ್ಮನ ಸೆಳೆಯುವ ಭೂಪ್ರದೇಶದಲ್ಲಿ, ಅಂದರೆ, 68, ಅಶೋಕ ರಸ್ತೆ, ನವದೆಹಲಿಯಲ್ಲಿ ಸ್ಥಾಪಿತವಾಗಿದೆ.

ಆರೋಗ್ಯ ವಿಜ್ಞಾನವಾಗಿ, ಅದೂ, ಮುಖ್ಯವಾಗಿ ಒತ್ತಡ ಸಂಬಂಧಿ ಖಾಯಿಲೆಗಳಿಗೆ ಯೋಗದ ಸಾಧ್ಯತೆಗಳನ್ನು, ಮನದಲ್ಲಿಟ್ಟುಕೊಂಡು ಹಿಂದಿನ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿಯ ಕೇಂದ್ರ ಸಂಶೋಧನಾ ಮಂಡಲಿಯು 1970ರಲ್ಲಿ, ಆಗ ಖಾಸಗಿ ಸೊಸೈಟಿಯಾಗಿದ್ದ, ವಿಶ್ವಯಾತನ ಯೋಗಾಶ್ರಮಕ್ಕೆ ಹೊಂದಿಕೊಂಡಂತೆ, ಐದು ಹಾಸಿಗೆಯುಳ್ಳ ಯೋಗ ಸಂಶೋಧನಾ ಆಸ್ಪತ್ರೆಗೆ ಅನುಮತಿ ನೀಡಿತ್ತು. ಈ ಕ್ಷೇತ್ರದಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದ ತಡೆಗಟ್ಟುವಿಕೆ, ಉತ್ತೇಜನ ಹಾಗೂ ಚಿಕಿತ್ಸಾತ್ಮಕ ಅಂಶಗಳಲ್ಲಿ ಯೋಗ ಸಾಧನೆಯ ಪಾತ್ರ, ಪರಿಣಾಮಗಳು ಪ್ರಚುರವಾದ ಬಳಿಕ, 1, ಜನವರಿ 1976, ರಂದು ಕೇಂದ್ರ ಯೋಗ ಸಂಶೋಧನಾ ಸಂಸ್ಥೆ (CRIY) ಯು ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯೊಳಗೆ ಯೋಗ ಸಂಶೋಧನಾ ಆಸ್ಪತ್ರೆಯ ಸಿಬ್ಬಂದಿಯನ್ನು ವಿಲೀನಗೊಳಿಸಲಾಯಿತು.

CRIY ಮುಖ್ಯ ಚಟುವಟಿಕೆಗಳು ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿ ನೀಡುವುದು ಮತ್ತು ಯೋಗದ ಹಲವು ಆಚರಣೆಗಳ ಮೇಲೆ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವುದಾಗಿತ್ತು. 1998 ರವರಗೆ CRIYಯು ಯೋಗದ ಸಂಶೋಧನೆ ಹಾಗ ತರಬೇತಿಗಳ ಮೂಲಭೂತವಾದ ಯೋಜನೆಗಳ ತಯಾರಿ, ಪ್ರಚಾರ, ಮತ್ತು ಸಂಯೋಜನೆಯ ಸಂಸ್ಥೆಯಾಗಿ ಉಳಿಯಿತು. ದೇಶದಲ್ಲಿ ಹೆಚ್ಚುತ್ತಿರುವ ಯೋಗದ ಪ್ರಾಮುಖ್ಯತೆಯನ್ನು ಅರಿತುಕೊಂಡದ್ದಲ್ಲದೆ, ಹೆಚ್ಚುತ್ತಿರುವ ಚಟುವಟಿಕೆಗಳು ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಅಗತ್ಯಗಳನ್ನು ಮನಗಂಡು, ರಾಷ್ಟ್ರಮಟ್ಟದ ಯೋಗ ಸಂಸ್ಥೆಯನ್ನು ಸ್ಥಾಪಿಸುವ ಹಾಗೂ ಕೇಂದ್ರ ಯೋಗ ಸಂಶೋಧನಾ ಸಂಸ್ಥೆ (CRIY)ಯನ್ನು ಅದರೊಂದಿಗೆ ವಿಲೀನಗೊಳಿಸಿ, ಅದನ್ನು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ(MDNIY) ಎಂದು ಹೆಸರಿಸುವ ನಿರ್ಧಾರಕ್ಕೆ ಬರಲಾಯಿತು.

https://youtu.be/c9jvPeCnzHE