ನನ್ನ ಪುಟಗಳು

13 ಮಾರ್ಚ್ 2016

೨೦.ಶ್ರೀಪಾದರಾಜ (ಶ್ರೀಪಾದರಾಯ)

ಶ್ರೀಪಾದರಾಜರು 
ಇವರ ಕಾಲ: ೧೩೮೯ - ೧೪೮೭
ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
ಇವರ ಕೀರ್ತನೆಗಳ ಅಂಕಿತ: ರಂಗವಿಠಲ

ಜೀವನ

ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.

ಶ್ರೀಪಾದರಾಯರ ಬಗ್ಗೆ ಮತಷ್ಟು : ‘ಕಣಜ’ದಿಂದ 
ಭೌಂ…. ಭೌಂ…. ಭೌಂ…. ಭೌಂ….’
ಶಬ್ದ ಕೇಳಿ ಬಂತು. ಇದೇನು, ಈ ತರಹದ ಶಬ್ದ ಕೇಳಿ ಬರುತ್ತಿದೆ? ದನ ಕಾಯುತ್ತಿದ್ದ ಹುಡುಗರೆಲ್ಲರೂ ಅತ್ತಕಡೆಗೆ ತಿರುಗಿ ನೋಡಿದರು. ಮೇನೆಯೊಂದು ಬರುತ್ತಿತ್ತು. ಮೇನೆ ಹೊತ್ತಿದ್ದವರು ಭೌಂ…. ಭೌಂ….  ಶಬ್ದ ಮಾಡುತ್ತಿದ್ದರು. ಹಾಗೆ ಬರುತ್ತಿದ್ದ ಮೇನೆ ಇವರ ಕಡೆಗೇ ಬಂದಿತು. ಮತ್ತು ಇವರ ಮುಂದೆಯೇ ನಿಂತಿತು. ಒಳಗೆ ಕುಳಿತಿದ್ದವರು ಒಬ್ಬರು ಯತಿಗಳು. ಅವರ ದೇಹವಾದರೋ ಬಂಗಾರದಂತೆ ಮಿನುಗು ತ್ತಿತ್ತು. ಮುಖವಾದರೋ ಸೌಮ್ಯವಾಗಿ, ತೇಜಪುಂಜವಾಗಿ ಬೆಳಗುತ್ತಿತ್ತು. ಹುಡುಗರು ನೋಡುತ್ತಿದ್ದಂತೆ ಆ ಯತಿ ಗಳು ಮಾತನಾಡಿದರು :
“ಮಕ್ಕಳೇ, ಊರು ಇಲ್ಲಿಂದ ಇನ್ನೆಷ್ಟು ದೂರವಿದೆ?”
ಬಾಲಕನೊಬ್ಬ ಮುಂದೆ ಬಂದ :
“ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ನಾವು ಮೇಯಿಸುತ್ತಿರುವ ದನಗಳನ್ನು ನೋಡಿ” ಎಂದು ಉತ್ತರ ಕೊಟ್ಟ.

ಯತಿಗಳಿಗೆ ಮೆಚ್ಚುಗೆ
ಯತಿಗಳಿಗೆ ಆಶ್ಚರ್ಯವಾಯಿತು. ತಮ್ಮ ಪ್ರಶ್ನೆಗೆ ಈ ಬಾಲಕ ಕೊಟ್ಟ ಉತ್ತರವಾದರೋ ಸಾಮಾನ್ಯ ರೀತಿ ಯಲ್ಲಿರಲಿಲ್ಲ. ಹೊತ್ತನ್ನು ನೋಡಿದರು; ಆ ವೇಳೆ ಗಾಗಲೇ ಸೂರ್ಯ ಮುಳುಗುತ್ತಿದ್ದ. ಬಾಲಕರಾದರೋ ವಯಸ್ಸಿನಲ್ಲಿ ತೀರ ಚಿಕ್ಕವರು; ಅವರು ಮೇಯಿಸುತ್ತಿದ್ದ ಪ್ರಾಣಿಗಳಾದರೋ ಮಂದಗಾಮಿಗಳಾದ ದನಕರು ಗಳು. ಸೂರ್ಯ ಮುಳುಗುವ ಹೊತ್ತಿನಲ್ಲಿ ಈ ಚಿಕ್ಕ ಬಾಲಕರು, ಮಂದಗಾಮಿಗಳಾದ ದನಕರುಗಳನ್ನು ಮೇಯಿಸುತ್ತಿರಬೇಕಾದರೆ, ಊರು ತೀರ ಹತ್ತಿರ ದಲ್ಲಿಯೇ ಇರಬೇಕು;
ಈ ಉತ್ತರವನ್ನು ನೆನೆಸಿಕೊಳ್ಳುತ್ತಿ ದ್ದಂತೆ ಯತಿಗಳಿಗೆ ಹೆಚ್ಚು ಹೆಚ್ಚು ಆಶ್ಚರ್ಯವಾಗುತ್ತಿತ್ತು; ಮೆಚ್ಚುಗೆಯಾಗುತ್ತಿತ್ತು. ಎಂತಹ ಕುಶಾಗ್ರ ಬುದ್ಧಿ ಈ ಬಾಲಕನದು!
ಇದು ನಡೆದುದು ಶ್ರೀರಂಗಕ್ಷೇತ್ರದಲ್ಲಿ. ಮೇನೆ ಯಲ್ಲಿ ಕುಳಿತ ಯತಿಗಳು ಸ್ವರ್ಣವರ್ಣತೀರ್ಥರು. ಶ್ರೀರಂಗದ ಯಾತ್ರೆಗೆಂದು ಅವರು ಹೊರಟಿದ್ದರು. ‘ಸ್ವರ್ಣವರ್ಣ’ ಎಂದರೆ ಬಂಗಾರದ ಬಣ್ಣ ಎಂದು ಅರ್ಥ. ಯತಿಗಳ ಶರೀರ ಬಂಗಾರದಂತೆ ಹೊಳೆಯುತ್ತಿ ದ್ದುದರಿಂದ ಅವರಿಗೆ ‘ಸ್ವರ್ಣವರ್ಣತೀರ್ಥ’ರೆಂದೇ ಹೆಸರು ಬಂದಿತು.
‘ಯಾರೀ ಹುಡುಗ?’
ಕರ್ನಾಟಕದ ಕೊಡಗು ಸೀಮೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ, ‘ದಕ್ಷಿಣಗಂಗೆ’ ಎಂದೇ ಹೆಸರು ಪಡೆದ ಕಾವೇರಿ ತಾಯಿ ಮೂರು ಕಡೆಗಳಲ್ಲಿ ಕವಲಾಗಿ ಒಡೆದು, ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳನ್ನು ಸೃಷ್ಟಿಮಾಡಿದ್ದಾಳೆ. ಮೈಸೂರಿನ ಬಳಿಯ ಶ್ರೀರಂಗಪಟ್ಟಣವೇ ಕಾವೇರಿಯ ಆದಿರಂಗ; ಶಿವನಸಮುದ್ರವೇ ಮಧ್ಯರಂಗ; ತಮಿಳುನಾಡಿನ ತಿರುಚಿರಪಳ್ಳಿಯ ಸಮೀಪದಲ್ಲಿರುವ ಶ್ರೀರಂಗವೇ ಅಂತ್ಯರಂಗ.
ಮಕ್ಕಳನ್ನು ಮಾತನಾಡಿಸಿದ ಸ್ವರ್ಣವರ್ಣತೀರ್ಥರು ಊರನ್ನು ಪ್ರವೇಶಿಸಿದ ತಕ್ಷಣವೇ ‘ಆ ಬಾಲಕ ಯಾರಿರಬಹುದು?’ ಎಂದು ವಿಚಾರ ಮಾಡಿದರು. ಅವನ ತಂದೆ-ತಾಯಿಗಳಿಗೆ ಹೇಳಿ ಕಳುಹಿಸಿದರು.
ಹುಡುಗನ ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ. ತುಂಬ ಬಡತನದಲ್ಲಿ ಅವರು ಜೀವನ ನಡೆಸುತ್ತಿದ್ದರು. ‘ತೋಟಂತಿಲ್ಲಾಯ’ ಮನೆತನದವರೆಂದು ಅವರಿಗೆ ಹೆಸರು, ಅಂದರೆ ತೋಟದ ಮನೆಯವರು ಎಂದರ್ಥ. ತೋಟದ ಕೆಲಸಗಳನ್ನು ಮಾಡುತ್ತಾ ಬಂದದ್ದರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.
ಈ ದಂಪತಿಗಳಿಗೆ ಒಬ್ಬನೇ ಮಗ. ಅವನು ಹುಟ್ಟಿದ್ದು ೧೪೦೬ರಲ್ಲಿ. ಹುಟ್ಟಿದ ಹನ್ನೆರಡನೆಯ ದಿನ ಮಗನಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣ ಮಾಡಿದರು. ಹುಡುಗನಿಗೆ ಯೋಗ್ಯ ಶಿಕ್ಷಣ ಕೊಡಿಸಲು ತಂದೆ ತಾಯಿಗಳಿಗೆ ಅನುಕೂಲವಿಲ್ಲದಿದ್ದುದರಿಂದ ಅವನನ್ನು ದನಕಾಯಲು ಬಿಟ್ಟಿದ್ದರು.
‘ಸ್ವಾಮಿಗಳು ಕೂಡಲೇ ಬರಬೇಕೆಂದು ಕರೆ ಕಳುಹಿಸಿದ್ದಾರೆ’ ಎಂದು ಸ್ವಾಮಿಗಳ ಕಡೆಯವರು ಬಂದು ಹೇಳುತ್ತಲೇ ಹುಡುಗನ ತಂದೆತಾಯಿಗಳಿಗೆ ಹೆದರಿಕೆ ಯಾಯಿತು. ‘ಏನು ಅಚಾತುರ್ಯವಾಯಿತೋ, ಹುಡುಗ ಏನು ತಪ್ಪು ಮಾಡಿದನೋ!’ ಎಂದು ಯೋಚಿಸುತ್ತ ಸ್ವಾಮಿಗಳಿದ್ದ ಕಡೆಗೆ ಬಂದರು. ಅವರಿಗೆ ನಮಸ್ಕಾರ ಮಾಡಿದರು.
ಮಗು ನಿಮ್ಮದೇ?
“ಲಕ್ಷ್ಮೀನಾರಾಯಣ ಎನ್ನುವ ಬಾಲಕ ನಿಮ್ಮ ಮಗ ತಾನೆ?” ಎಂದು ಪ್ರಶ್ನಿಸಿದರು ಸ್ವರ್ಣವರ್ಣ ಯತಿಗಳು.
“ಹೌದು, ನಮ್ಮ ಮಗನೇ” ತಾಯ್ತಂದೆಯರು ಅಂಜುತ್ತಾ ಹೇಳಿದರು!
“ಅವನನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಿ. ಬಾಲಕನ ಸಮಸ್ತ ಜವಾಬ್ದಾರಿಯೂ ನಮ್ಮದಾಗಿರಲಿ” ಎಂದರು ಸ್ವರ್ಣವರ್ಣತೀರ್ಥರು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಿಗೆ ಇದು ಅನಿರೀಕ್ಷಿತ ಪ್ರಸಂಗವಾಗಿತ್ತು. ಅವರಿಗೆ ಒಬ್ಬನೇ ಮಗ. ಅವನನ್ನು ಸ್ವಾಮಿಗಳ ವಶಕ್ಕೆ ಒಪ್ಪಿಸಿ ದೂರ ಕಳುಹಿಸಿ ಅವನನ್ನು ಬಿಟ್ಟಿರುವುದು ಹೇಗೆ ಎಂದು ದುಃಖ. ಜತೆಗೆ ಮುಂದೆ ತಮ್ಮ ಗತಿ ಏನು ಎಂಬ ಯೋಚನೆ. ಯೋಚಿಸುತ್ತ ನಿಂತ ಆ ದಂಪತಿಗಳನ್ನು ಕುರಿತು ಸ್ವರ್ಣವರ್ಣ ಯತಿಗಳು ಹೇಳಿದರು.
“ನಿಮ್ಮ ಮಗ ಶುಭ ಲಕ್ಷಣಗಳಿಂದ ಕೂಡಿದ್ದಾನೆ. ನಮ್ಮ ದೇಶದ ಕುಲದೀಪಕನಾಗುವ ಅವನನ್ನು ದನಕಾಯಲು ಬಿಟ್ಟಿರುವಿರಲ್ಲ! ಅವನ ಬಗೆಗೆ ನೀವು ಕಳವಳವನ್ನು ಬಿಡಿ. ನಿಶ್ಚಿಂತೆಯಿಂದ ಬಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದ ಅವರು ನಡೆದ ಸಂಗತಿಯನ್ನು ವಿವರಿಸಿದರು.
ಶೇಷಗಿರಿಯಪ್ಪ-ಗಿರಿಯಮ್ಮ ಸ್ವಾಮಿಗಳಿಗೆ ನಮಸ್ಕರಿಸಿ ದರು.
“ಮಗು ನಿಮ್ಮದೇ, ನಮ್ಮದಲ್ಲ. ಅನುಗ್ರಹಿಸಬೇಕು” ಎಂದರು.
ಅಂದಿನಿಂದ ಆ ಬಾಲಕ ಸ್ವರ್ಣವರ್ಣತೀರ್ಥರ ಸಾಕುಮಗನೆನಿಸಿಕೊಂಡ. ಆಗ ಅವನ ವಯಸ್ಸು ಇನ್ನೂ ಐದು ವರ್ಷ.

ಶಿಕ್ಷಣ
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.

‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.

ಪೀಠ ಬೆಳಗಲು
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.

ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.

ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.

ವ್ಯಾಸಯೋಗಿಗಳು
ಈ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.
ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :
‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ  ವ್ಯಾಸರಾಜರದು.

ಸಂಪುಟದಲ್ಲಿ ಮೋಹಕ ವೇಣುಗೋಪಾಲ ಮೂರ್ತಿ

ವೇಣುಗೋಪಾಲನ ದರ್ಶನ
ಒಮ್ಮೆ ಹೀಗಾಯಿತು: ಗುರು-ಶಿಷ್ಯರು ಜತೆಗೂಡಿ ಸಂಚಾರ ಕೈಗೊಂಡಿದ್ದಾಗ ಪಂಢರಾಪುರದ ಭೀಮಾ ನದಿಯ ತೀರದಲ್ಲಿ ಬಹುಕಾಲದಿಂದ ಮರಳಿನಲ್ಲಿ ಹೂತು ಹೋಗಿದ್ದ ವಿಗ್ರಹಗಳಿದ್ದ ಎರಡು ಸಂಪುಟಗಳು ದೊರೆತವು. ಹಾಗೆ ಹೂತಿರುವುದು ಶ್ರೀಪಾದರಾಜರಿಗೆ ಕನಸಿನಲ್ಲಿ ಕಂಡಂತಾಯಿತಂತೆ. ಆ ಸ್ಥಳದಲ್ಲಿ ಹುಡುಕಿ ನೋಡಿದಾಗ ಎರಡು ಸಂಪುಟಗಳು ಕಣ್ಣಿಗೆ ಕಂಡವು. ಅವುಗಳಲ್ಲಿ ಒಂದು ಸಂಪುಟವನ್ನೇನೋ ಕೂಡಲೆ ತೆರೆಯಲು ಸಾಧ್ಯವಾಯಿತು. ಅದರೊಳಗೆ ‘ರಂಗವಿಠಲ’ ಮೂರ್ತಿಯಿತ್ತು. ಇನ್ನೊಂದು ಸಂಪುಟವನ್ನು ತೆರೆಯಲು ಯತ್ನಿಸಿದಾಗ, ಏನು ಮಾಡಿದರೂ ಅದು ಬರಲಿಲ್ಲ. ಅದನ್ನು ಹಾಗೆಯೇ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಒಮ್ಮೆ ಗುರು ಶ್ರೀಪಾದರಾಜರಿಗೆ ದೇಹಾಲಸ್ಯದ ಕಾರಣದಿಂದಾಗಿ ಪೂಜೆಮಾಡಲು ಸಾಧ್ಯವಾಗದೆ, ಆ ದಿನದ ಪೂಜೆಯನ್ನು ಶಿಷ್ಯ ವ್ಯಾಸರಾಜರಿಗೆ ಒಪ್ಪಿಸಿದರು. ವ್ಯಾಸರಾಜರಿಗೋ ಅದೊಂದು ಅಪೂರ್ವ ಸುಸಂ, ಅಗಾಧ ಸಂತೋಷ. ಎಲ್ಲ ದೇವತಾ ವಿಗ್ರಹಗಳನ್ನೂ ಪೂಜೆಗೆ ಅನುಗೊಳಿಸಿ, ಅದುವರೆಗೂ ತೆರೆಯಲು ಬಾರದಿದ್ದ, ಭೀಮಾನದೀ ತೀರದಲ್ಲಿ ದೊರಕಿದ್ದ ಸಂಪುಟವನ್ನು ತೆರೆಯಲು ಹೋದಾಗ ಅದು ತಟಕ್ಕನೆ ಬಾಯ್ದೆರೆದುಕೊಂಡಿತು. ಸಂಪುಟದ ಒಳಗೆ ನೋಡಿದರೆ ಮೋಹಕ ವೇಣು ಗೋಪಾಲ ಮೂರ್ತಿ. ತುಟಿಗೆ ಕೊಳಲಿಟ್ಟು, ಕಾಲಿಗೆ ಗೆಜ್ಜೆಕಟ್ಟಿ ಝಣತ್ಕಾರ ಮಾಡುತ್ತಾ ತ್ರಿಭಂಗಿಯಲ್ಲಿ ನಿಂತು ನೃತ್ಯ ಮಾಡುತ್ತಿದ್ದಾನೆ. ಕೊಳಲ ಇಂಪಾದ ನಾದ ಎಲ್ಲೆಡೆಗೂ ತುಂಬಿಕೊಂಡಿದೆ. ವ್ಯಾಸರಾಜರ ಮೈ ಜುಮ್ಮೆಂದಿತು. ಆ ದಿವ್ಯ ಮೂರ್ತಿಯ ಗೆಜ್ಜೆ ಶಬ್ದದಲ್ಲಿ, ವೇಣುನಾದದಲ್ಲಿ ಮೈಮರೆತು, ಅಲ್ಲಿಯೇ ಕೈಗೆ ಸಿಕ್ಕಿದ ಎರಡು ಸಾಲಿಗ್ರಾಮಗಳನ್ನು ಎತ್ತಿಕೊಂಡು ತಾಳ ಹಾಕುತ್ತಾ, ಕುಣಿಯಲಾರಂಭಿಸಿದರು. ವೇಣುಗೋಪಾಲ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ಅಪೂರ್ವ ಭಂಗಿಯಲ್ಲಿ ಕುಣಿಯುತ್ತಿದ್ದ. ಭಕ್ತಿಯ ಉನ್ಮಾದದಲ್ಲಿ ವ್ಯಾಸರಾಜರು ಕುಣಿದರು… ಕುಣಿದರು. ಕುಣಿಯು ತ್ತಲೇ ಇದ್ದರು. ಇದನ್ನು ಕಂಡ ಇನ್ನಿತರ ಶಿಷ್ಯರು ಕೂಡಲೇ ಶ್ರೀಪಾದರಾಜರ ಬಳಿಗೆ ಓಡಿಹೋದರು; ನಡೆಯುತ್ತಿರುವುದನ್ನು ತಿಳಿಸಿದರು. ಗುರುಗಳು ಓಡಿ ಬಂದು ನೋಡಿದರು. ಇದುವರೆಗೂ ತೆರೆಯಲಾಗದಿದ್ದ  ಸಂಪುಟ ತೆರೆದಿದೆ. ವೇಣುಗೋಪಾಲ ಕಾಲುಗೆಜ್ಜೆಗಳನ್ನು ಶಬ್ದ ಮಾಡುತ್ತಾ ಕೊಳಲ ನಾದ ಮಾಡುತ್ತಾ ಕುಣಿಯುತ್ತಿದ್ದಾನೆ. ಅವನ ಜತೆಗೆ ವ್ಯಾಸರಾಜರೂ ಕುಣಿದಾಡುತ್ತಿದ್ದಾರೆ.
“ವ್ಯಾಸರಾಜರೇ, ನೀವೇ ಧನ್ಯರು. ನಿಮ್ಮಿಂದ ನನಗೂ ವೇಣುಗೋಪಾಲನ ದಿವ್ಯದರ್ಶನವಾಯಿತು. ನಿಮಗೆ ಅನುಗ್ರಹಿತವಾದ ಈ ವೇಣುಗೋಪಾಲ ಮೂರ್ತಿಯನ್ನು ನೀವೇ ಇಟ್ಟುಕೊಂಡು ಪೂಜಿಸಿ” ಎಂದು ಶ್ರೀಪಾದರಾಜರು ಆ ವೇಣುಗೋಪಾಲ ಸಂಪುಟ ವನ್ನು ವ್ಯಾಸರಾಜರಿಗೇ ಕೊಟ್ಟುಬಿಟ್ಟರು. ಈಗಲೂ ಈ ವಿಗ್ರಹ ಕುಂದಾಪುರದ ವ್ಯಾಸರಾಜ ಮಠದಲ್ಲಿದೆ.
ಶ್ರೀಪಾದರಾಜರು ತಾವು ರಚಿಸಿದ ಉಗಾಭೋಗ ವೊಂದರಲ್ಲಿ ವ್ಯಾಸರಾಜರಿಗೆ ಕಂಡ, ವ್ಯಾಸರಾಜರಿಂದ ತಾವೂ ಕಾಣಲು ಸಾಧ್ಯವಾದ ಆ ದಿವ್ಯ ವೇಣುಗೋಪಾಲ ಮೂರ್ತಿಯನ್ನು ಈ ರೀತಿ ವರ್ಣನೆ ಮಾಡಿದ್ದಾರೆ :
ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ
ನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೊ ವ್ಯಾಸಮುನಿ ವಂದ್ಯ ಗೋಪಿನಾಥನೆ
ತುರುಬಿನ ಮ್ಯಾಲೆ ತುರುಬಿನ ಮೊಲ್ಲೆಮಲ್ಲಿಗೆ ಕುಸುಮಗಳ ರಂಗಾ
ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪತರುವನೆನ್ನೀ ರಂಗಾ
ಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ
ಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾ
ಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದ ಮಾಡಿದ.

ಅಹಂಕಾರಿಗಳ ತೇಜೋವಧೆ
ಶ್ರೀಪಾದರಾಜರು ಮುಂದೆ ಭಾರತದ ಪವಿತ್ರ ಕ್ಷೇತ್ರಗಳನ್ನೆಲ್ಲ ಸಂಚಾರ ಮಾಡಿದರು. ಅವರು ಹೋದ ಕಡೆಯಲ್ಲೆಲ್ಲ ವಿದ್ವತ್‌ಸಭೆಗಳು, ಚರ್ಚಾಗೋಷ್ಠಿಗಳು ನಡೆದವು. ಎಲ್ಲ ಕಡೆಯಲ್ಲೂ ಶ್ರೀಪಾದರಾಜರು ತಮ್ಮ ವಿದ್ಯಾಪ್ರೌಢಿಮೆಯನ್ನು ಮೆರೆಯಿಸಿ, ಜಯಮಾಲೆ ಗಳನ್ನು ಸಂಪಾದನೆ ಮಾಡಿದರು. ಅವರು ಕಾಶಿಗೆ ಹೋಗಿದ್ದಾಗ ಒಂದು ವಿಶೇಷ ಪ್ರಸಂಗ ನಡೆಯಿತು. ಕಾಶಿಯಲ್ಲಿನ ಕೆಲವು ವಿದ್ಯಾಂಸರು ತುಂಬ ದುರಹಂಕಾರಿಗಳಾಗಿದ್ದರು. ವಿದ್ಯಾಗರ್ವದಿಂದ ಮೆರೆಯುತ್ತಿದ್ದರು. ವಿದ್ಯೆಗೆ ವಿನಯ ಭೂಷಣ ಇದೆ ಎಂಬುದನ್ನೇ ಅವರು ಮರೆತಂತಿತ್ತು. ಶ್ರೀಪಾದರಾಜ ರನ್ನು ವಾದಕ್ಕೆ ಎಳೆದು, ಅವರ ಮುಖ ಭಂಗಮಾಡಿ, ಅವರಿಂದ ಜಯಪತ್ರ ಬರೆಸಿಕೊಳ್ಳಬೇಕು ಎಂದು ಅವರ ಹಂಚಿಕೆಯಾಗಿತ್ತು. ಶ್ರೀಪಾದರಾಜರಿಗೆ ಇದು ತಿಳಿಯಿತು. ವಾದಕ್ಕೆ ಅವರು ಹೆದರುವವರಲ್ಲ. ಆದರೆ ಕೆಲವು ಷರತ್ತುಗಳನ್ನು ಹಾಕಿದರು. ಈ ವಿದ್ವತ್ ಸಭೆ ಒಬ್ಬ ಮಹಾರಾಜರ ಸಮ್ಮುಖದಲ್ಲಿ ನಡೆಯಬೇಕು. ವಿದ್ವಾಂಸರು ಒಂದು ವೇಳೆ ವಾದದಲ್ಲಿ ಸೋತು ಹೋದದ್ದೇ ಆದರೆ ಸಂನ್ಯಾಸವನ್ನು ಸ್ವೀಕರಿಸಬೇಕು – ಇವೇ ಆ ಷರತ್ತುಗಳು. ‘ಇದೇನು ಮಹಾ’ ಎಂದು ಕೊಂಡರು ಆ ಗರ್ವಿಷ್ಠ ವಿದ್ವಾಂಸರು. ವಾದ ಪ್ರಾರಂಭ ವಾದಾಗ ನಿಮಿಷನಿಮಿಷಕ್ಕೂ ಅವರು ಸೋಲುತ್ತಾ ಬಂದು, ಕಡೆಗೆ ಪೂರ್ಣ ಪರಾಜಿತರಾದರು. ಷರತ್ತಿನಂತೆ ಕಾಶಿಯ ಈ ವಿದ್ವಾಂಸರು ಸಂನ್ಯಾಸವನ್ನು ಸ್ವೀಕಾರ ಮಾಡಬೇಕಿತ್ತು. ಹಾಗೆ ಮಾಡಲಿಲ್ಲ; ಅದಕ್ಕೆ ಬದಲು ಶ್ರೀಪಾದರಾಜರ ಮೇಲೆ ಕೆಲವು ದುಷ್ಟ ಪ್ರಯೋಗಗಳನ್ನು ಮಾಡಿದರು – ಅಂದರೆ ಅವರ ನಾಲಿಗೆಯೇ ಕಟ್ಟಿಹೋಗುವಂತೆ ಮಾಟಮದ್ದುಗಳನ್ನು ಮಾಡಿದರು. ಶ್ರೀಪಾದರಾಜರಿಗೆ ಇದು ಅರ್ಥ ವಾಯಿತು. ಕೂಡಲೇ ಹಯಗ್ರೀವ ಮಂತ್ರವನ್ನು ಉಚ್ಚಾರಣೆ ಮಾಡುತ್ತಾ ಈ ದುಷ್ಟಶಕ್ತಿಯಿಂದ ಪಾರಾದರು.

ಸಾಳ್ವ ನರಸಿಂಹನ ಉದ್ಧಾರ
ಇನ್ನೊಂದು ಮಹತ್ವದ ಪ್ರಸಂಗ ಶ್ರೀಪಾದರಾಜರ ಜೀವನದಲ್ಲಿ ನಡೆಯಿತು.
ವಿಜಯನಗರದ ದೊರೆಗಳಿಗೆ ಅನನಾಗಿದ್ದ ಸಾಳ್ವ ನರಸಿಂಹನೆಂಬ ದಂಡನಾಯಕ ಪೆನುಗೊಂಡೆ ಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಇವನಿಗೆ ಚಿತ್ತೂರು, ಉತ್ತರ ಆರ್ಕಾಟು, ಕಡಪಾಗಳ ಜತೆಗೆ ಪ್ರಸಿದ್ಧ ಕ್ಷೇತ್ರವಾದ ತಿರುಪತಿಯೂ ಸೇರಿತ್ತು. ತಿರುಪತಿಗೆ ವಿಜಯನಗರದ ಅರಸುಗಳ ಭದ್ರ ಬೆಂಬಲ ವಿದ್ದುದರಿಂದ ಸಾಳ್ವ ನರಸಿಂಹನ ಆಜ್ಞೆಯನ್ನು ತಿರುಪತಿ ಕ್ಷೇತ್ರದ ಅರ್ಚಕರು ಹೆಚ್ಚು ಗಮನಕ್ಕೆ ತಂದುಕೊಳ್ಳುತ್ತಿರ ಲಿಲ್ಲ. ತಿರುಪತಿ ಸ್ವಾಮಿಯ ಬಂಗಾರದ ವಾಹನಗಳ ಮೇಲೆ ಈ ಅರ್ಚಕರು ತಮ್ಮ ಮಕ್ಕಳನ್ನು ಕೂರಿಸಿ ಮೆರವಣಿಗೆ ಮಾಡುತ್ತಿದ್ದರು. ಸಾಳ್ವ ನರಸಿಂಹನಿಗೆ ಅರ್ಚಕರ ಈ ಬಗೆಯ ಉದ್ಧಟ ಧೋರಣೆ ಸರಿಬೀಳ ಲಿಲ್ಲ. ಅರ್ಚಕರನ್ನು ಹಲವು ಬಾರಿ ಎಚ್ಚರಿಸಿದ. ಆದರೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ಒಂದು ಕಠಿಣವಾದ ಆಜ್ಞೆ ಯನ್ನು ಕೂಡ ಹೊರಡಿಸಿದ. (ಈ ಆಜ್ಞೆ ಕ್ರಿ.ಶ. ೧೪೬೭ ರಲ್ಲಿ ಹೊರಟಿತೆಂದು ಚರಿತ್ರಕಾರರ ರಾಬರ್ಟ್ ಸಿವೆಲ್ ಎಂಬವನು ಬರೆಯುತ್ತಾನೆ.) ಇದನ್ನು ಆ ಅರ್ಚಕರು ಅಷ್ಟು ಗಮನಕ್ಕೆ ತಂದುಕೊಳ್ಳಲೇ ಇಲ್ಲ. ಕೆಲವು ಕಾಲ ಕಳೆಯಿತು. ಒಮ್ಮೆ ತಿರುಪತಿ ದೇವರ ವಾಹನದ ಚಿನ್ನದ ಗರುಡನ ಮೇಲೆ ಅರ್ಚಕರ ಮಗನೊಬ್ಬನನ್ನು ಕೂರಿಸಿ ಮೆರವಣಿಗೆ ಮಾಡಿದರು ಎಂಬ ಸುದ್ದಿ ತಿಳಿಯಿತು. ಸಾಳ್ವ ನರಸಿಂಹನಿಗೆ ಕೋಪ ಉಕ್ಕೇರಿತು. ಕೂಡಲೇ ಹೊರಟು ಸಾಲಾಗಿ ಅರ್ಚಕರನ್ನು ತನ್ನ ಕತ್ತಿಗೆ ಬಲಿ ಕೊಟ್ಟ.
ಕೋಪದಲ್ಲಿ ಅರ್ಚಕರನ್ನು ಕೊಂದಿದ್ದೇನೋ ಆಯಿತು. ಆದರೆ ಅವನಿಗೆ ಕೊಲೆಯ ಪಾಪ ತಗಲಿ ಕೊಂಡಿತು. ಇದೇ ಪ್ರಬಲ ಚಿಂತೆಯಾಗಿ ಅವನನ್ನು ಕಾಡ ತೊಡಗಿತು. ಅದೇ ವೇಳೆಗೆ ತನ್ನ ಮಾಂಡಲಿಕದಲ್ಲಿಯೇ ಇದ್ದ ಮುಳಬಾಗಲಿನಲ್ಲಿ ಶ್ರೀಪಾದರಾಜ ಯತಿಗಳು ಇರುವುದು ಗೊತ್ತಾಯಿತು. ಒಡನೆಯೇ ಸಾಳ್ವ ನರಸಿಂಹ ಮುಳಬಾಗಲಿಗೆ ಧಾವಿಸಿ, ಶ್ರೀಪಾದರಾಜರಿಗೆ ಅಡ್ಡಬಿದ್ದು, ತನ್ನ ಪಾಪವನ್ನು ನಿವಾರಿಸಬೇಕೆಂದು ಬೇಡಿಕೊಂಡ. ಶ್ರೀಪಾದರಾಜರು ತಮ್ಮ ಯೋಗಮಹಿಮೆಯಿಂದ ಪೂಜೆಯ ಕಾಲದಲ್ಲಿ ಸಾಳ್ವ ನರಸಿಂಹನ ಮೇಲೆ ಶಂಖದಿಂದ ನೀರನ್ನು ಚಿಮುಕಿಸಿ, “ನಿನ್ನ ಪಾಪ ನಿವಾರಣೆಯಾಯಿತು ಹೋಗು” ಎಂದರು.

‘ಸುಖ ಪ್ರಾರಬ್ಧ’
ಸಾಳ್ವ ನರಸಿಂಹ ಇದನ್ನು ಮರೆಯಲಿಲ್ಲ. ಮುಂದೆ ಇವನೇ ವಿಜಯನಗರ ಸಿಂಹಾಸನವನ್ನು ಏರಿದಾಗ (ಕ್ರಿ.ಶ. ೧೪೮೫ರಿಂದ ೧೪೯೭) ಶ್ರೀಪಾದರಾಜರನ್ನು ವಿಜಯನಗರ ರಾಜಧಾನಿಗೆ ಕರೆಸಿಕೊಂಡು, ರತ್ನ ಖಚಿತ ಸಿಂಹಾಸನದ ಮೇಲೆ ಕೂರಿಸಿ, ರತ್ನಾಭಿಷೇಕವನ್ನು ನಡೆಯಿಸಿದ. ಶ್ರೀಪಾದರಾಜರು ಸಂನ್ಯಾಸಿಗಳು. ಆದರೂ ಸಿಂಹಾಸನಾರೋಹಣ ಮಾಡಿದರು. ಮೈಗೆ ಸುಗಂಧ ದ್ರವ್ಯವಗಳನ್ನು ಹಚ್ಚಿಕೊಂಡರು. ರತ್ನಖಚಿತ ಕವಚ, ಕಂಕಣ, ಕುಂಡಲಗಳನ್ನು ತೊಟ್ಟುಕೊಂಡರು. ಮುತ್ತಿನಹಾರ, ತುರಾಯಿಗಳನ್ನು ತೊಟ್ಟುಕೊಂಡರು. ಪ್ರತಿದಿನವೂ ಅರವತ್ತು ಬಗೆಯ ಭಕ್ಷ್ಯ ಭೋಜ್ಯಗಳನ್ನು ಮಾಡಿ ಅವರಿಗೆ ಬಡಿಸಲಾಗುತ್ತಿತ್ತು. ಇದೊಂದು ‘ಸುಖ ಪ್ರಾರಬ್ಧ’ ಎಂದು ಹೇಳಲಾಗಿದೆ. ಎಂದರೆ ಸಂನ್ಯಾಸಿಯಾದರೂ ಸುಖಗಳನ್ನು ಪಡುವುದು. ಇದನ್ನು ಕೇವಲ ವೈರಾಗ್ಯದ ಮನಸ್ಸಿನಿಂದ ಮಾತ್ರವೇ ಶ್ರೀಪಾದರಾಜರು ಸ್ವೀಕರಿಸುತ್ತಿದ್ದರು. ಸುಖಕ್ಕಾಗಿ ಆಸೆ ಪಡಲಿಲ್ಲ. ಈ ಭೋಗಗಳಿಂದ ಸಂತೋಷಪಡಲಿಲ್ಲ.
ಸಂನ್ಯಾಸಿಗಳು ಇಷ್ಟೆಲ್ಲ ವೈಭವ ಪಡೆಯುತ್ತಿರುವು ದನ್ನು ಕಂಡು ಕೆಲವರು ಕುಹಕಿಗಳು ಅಪಹಾಸ್ಯ ಮಾಡಿದರು. ಹೊರಗೆ ಇಷ್ಟೆಲ್ಲ ವೈಭವಗಳು, ಬಗೆ ಬಗೆಯ ಭಕ್ಷ್ಯಭೋಜ್ಯಗಳು ಇದ್ದರೂ ಶ್ರೀಪಾದರಾಜರ ಮನಸ್ಸು ಒಳಗೆ ಹೇಗಿರುತ್ತಿತ್ತು ಎಂಬುದನ್ನು ಈ ನಿಂದಕರು ತಿಳಿಯಲು ಸಾಧ್ಯವಾಗಲಿಲ್ಲ. ಈ ಸಂದರ್ಭ ದಲ್ಲಿ ಒಂದು ವಿಶೇಷ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಈ ನಿಂದೆಗಳನ್ನು ಕೇಳಿ ಶ್ರೀಪಾದರಾಜರು ತಾವು ಹಚ್ಚಿ ಕೊಳ್ಳುತ್ತಿದ್ದ ಸುಗಂಧದ್ರವ್ಯಗಳನ್ನು ಒಮ್ಮೆ ನಿಲ್ಲಿಸಿಬಿಟ್ಟರು. ಹಾಗೆ ನಿಲ್ಲಿಸಿದ್ದೆ ತಡ ಆ ಕುಹಕಿಗಳ ಮೈಯಲ್ಲೆಲ್ಲ ನಾನಾ ರೀತಿಯ ತಾಪಗಳು ತೋರಿಕೊಂಡು ಅದನ್ನು ಸಹಿಸುವುದೇ ಅವರಿಗೆ ದುಸ್ಸಾಧ್ಯವಾಯಿತು. ಶ್ರೀಪಾದರಾಜರ ಮಹಿಮೆ ತಿಳಿಯದೆ ಅಜ್ಞಾನದಿಂದ ತಾವು ನಡೆದುಕೊಂಡದ್ದಕ್ಕಾಗಿ ಅವರ ಕ್ಷಮಾಪಣೆ ಬೇಡಿದರು.

ಸಾಳ್ವ ನರಸಿಂಹ ಶ್ರೀಪಾದರಾಜರಿಗೆ ರತ್ನಾಭಿಷೇಕ ನಡೆಸಿದ.

ಇಟ್ಟಾಂಗೆ ಇರುವೆನು ಹರಿಯೆ
ಈ ಎಲ್ಲ ‘ಸುಖ ಪ್ರಾರಬ್ಧ’ಗಳನ್ನು ಅನುಭವಿಸು ವಾಗ ತಮ್ಮ ಮನಸ್ಸು ಹೇಗಿರುತ್ತಿತ್ತು, ಏತಕ್ಕಾಗಿ ಅವನ್ನೆಲ್ಲ ತಾವು ಅನುಭವಿಸಿದರು ಎನ್ನುವುದನ್ನು ಶ್ರೀಪಾದರಾಜರೇ ತಮ್ಮ ಒಂದು ಕೀರ್ತನೆಯಲ್ಲಿ ವಿವರಿಸಿದ್ದಾರೆ. ‘ದೇವರು ಹೇಗೆ ಹೇಗೆ ಇಟ್ಟಿರುತ್ತಾನೋ ಹಾಗೆಯೇ ನಾನಿರುತ್ತೇನೆ’ ಎಂಬುದು ಈ ಕೀರ್ತನೆಯ ಅರ್ಥ. ಅವನ ಕರುಣೆ ಇದ್ದರೆ ಸಣ್ಣಕ್ಕಿ ಅನ್ನ, ಬೆಣ್ಣೆಕಾಸಿದ ತುಪ್ಪ, ಚಿನ್ನದ ಹರಿವಾಣದಲ್ಲಿ ಊಟ, ಪೀತಾಂಬರ, ಜರಿಯಂಚಿನ ಶಾಲು, ಛತ್ರಚಾಮರ ಸೇವೆ, ಚಂದದ ಮಂಚ ಇವೆಲ್ಲವೂ ಲಭ್ಯವಾಗುತ್ತವೆ; ಅವನ ಕರುಣೆ ತಪ್ಪಿತೋ ಕದನ್ನ ಸಿಗುವುದೂ ಕಷ್ಟ. ಕೌಪೀನ, ಪಾದರಕ್ಷೆಗಳೂ ದೊರೆಯಲಾರವು – ಎನ್ನುತ್ತಾರೆ ಈ ಕೀರ್ತನೆಯಲ್ಲಿ ಶ್ರೀಪಾದರಾಜರು. ಆ ಕೀರ್ತನೆ ಹೀಗಿದೆ :

ಇಟ್ಹಾಂಗೆ ಇರುವೆನು ಹರಿಯೆ ಎನ್ನ ದೆರೆಯೆ   ||ಪ||
ಸಣ್ಣ ಶಾಲ್ಯೋದನ ಬೆಣ್ಣೆಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನ ಮಹಿಮ ನಿನ್ನ ಕರುಣ ತಪ್ಪಲು ಕ-
ದನ್ನಕ್ಕೆ ಬಾಯ್ ಬಿಡಿಸುವಿಯಲ್ಲೋ ಸ್ವಾಮಿ   || ೧ ||
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೊ
ಕಪಿಲಹರೇ, ನಿನ್ನ ಕೃಪೆಯು ತಪ್ಪಿದ ಮೇಲೆ
ಹೇ ಪಿನಾಕಿವಂದ್ಯ ಕೌಪೀನ ದೊರೆಯದೊ   || ೨ ||
ಚಂದ್ರಶಾಲೆ ಚಂದ್ರಕಿರಣದಿಂದೊಪ್ಪುವ
ಚಂದದ ಮಂಚದೋಳ್ ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದೊಳು ತೋಳ್ತಲೆದಿಂಬು ಮಾಡಿಸುವಿ         || ೩ ||
ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣನಿಧೇ ನಿನ್ನ ಕರುಣ ತಪ್ಪಿದ ಮೇಲೆ
ಚರಣಭರಣ ಪಾದರಕ್ಷೆಯು ದೊರೆಯದೋ   || ೪ ||
ಗಂಗಾಜನಕ ಪಾಂಡುರಂಗ ನಿನ್ನ ಭಕುತರ
ಸಂಗವಿರಲಿ ದುಷ್ಟಸಂಗ ಬೇಡಾ
ಅಂಗನೆಯರ ಕೂಡಾ ನಂಗಬಾಣನೆ ಶಿಲ್ಕಿ
ಭಂಗವ ತರಲಾರೆ ರಂಗವಿಠಲ ಕಾಯೋ     || ೫ ||

ಭಗವಂತ ಹೇಗೆ ಇರಬೇಕೆಂದು ಹೇಳುವನೋ ಹಾಗೆ ಮಾನವ ಇರಬೇಕಾದುದು ಧರ್ಮ. ಅವನು ಸುಖ ಕೊಟ್ಟರೆ ಸಂತೋಷದಿಂದ ಸ್ವಾಗತಿಸೋಣ; ದುಃಖ ಕೊಟ್ಟರೆ ಅದನ್ನು ಸಂತೋಷದಿಂದ ತೆಗೆದುಕೊಳ್ಳೋಣ ಎನ್ನುವುದೇ ಶ್ರೀಪಾದರಾಜರ ಈ ಕೀರ್ತನೆಯ ಹಿಂದಿ ರುವ ಅರ್ಥ. ಜೀವನ ಧರ್ಮ ರಹಸ್ಯವನ್ನು ಅವರು ಚೆನ್ನಾಗಿ ಇಲ್ಲಿ ವಿಷದಪಡಿಸಿದ್ದಾರೆ. ಹೊರಗೆಲ್ಲ ವೈಭವ ಗಳಿದ್ದರೂ ಒಳಗೆ ಅವರು ದೃಢ ವೈರಾಗ್ಯವನ್ನು ಹೊಂದಿದ್ದರು.

ಕೀರ್ತನೆಗಳು
ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.

ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||

ಕಾವ್ಯಗಳು
ಕೇವಲ ಬಿಡಿ ಗೀತಗಳನ್ನೆ ಅಲ್ಲದೆ ಶ್ರೀಪಾದರಾಜರು ಗೋಪಿಗೀತಾ, ವೇಣುಗೀತಾ, ಭ್ರಮರಗೀತಾ, ಶ್ರೀ ಲಕ್ಷ್ಮೀ ನರಸಿಂಹ ಪ್ರಾರ್ದುಭಾದಂಡಕ, ರುಕ್ಮಿಣೀ-ಸತ್ಯಭಾಮ ವಿಲಾಸ ಮತ್ತು ಮಧ್ವನಾಮ ಎಂಬೆಲ್ಲ ಕನ್ನಡ ಕಾವ್ಯಗಳನ್ನು ರಚಿಸಿದ್ದಾರೆ. ತಾಯಿ ಯಶೋದೆ ಹೇಗೆ ತನ್ನ ಮಗನಾದ ಬಾಲಕೃಷ್ಣನನ್ನು ಪರಿಪರಿಯಿಂದ ಕೂಗಿರ ಬಹುದು, ತನ್ನ ತಾಯಿ ಹೃದಯದ ಪ್ರೀತಿಯನ್ನು ಹರಿಸಿರಬಹುದು ಎಂಬೆಲ್ಲ ಭಾವಗಳನ್ನು ತುಂಬಿ ಕೊಂಡು ಶ್ರೀಪಾದರಾಜರು ವಾತ್ಸಲ್ಯಭಾವದಿಂದ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಹಾಗೆಯೇ ಮಧುರ ಭಾವ, ಸಮರ್ಪಣಭಾವಗಳುಳ್ಳ ಕೀರ್ತನೆಗಳನ್ನೂ ಮಾಡಿದ್ದಾರೆ. ಒಮ್ಮೆ ದೇವರಲ್ಲಿ ದೈನ್ಯವಾಗಿ ನಡೆದು ಕೊಳ್ಳುವುದು, ಇನ್ನೊಮ್ಮೆ ದೇವರೊಡನೆ ಸರಸವಾಡು ವುದು ಮತ್ತೊಮ್ಮೆ ದೇವರನ್ನು ನಿಂದಿಸಿ ಸ್ತುತಿ ಮಾಡು ವುದು, ಇನ್ನೊಮ್ಮೆ ದೇವರ ಮಹಿಮಾತಿಶಯಗಳನ್ನು ವರ್ಣಿಸುವುದು – ಹೀಗೆ ಹತ್ತಾರು ರೀತಿ ತಮ್ಮ ಅಂತರಂಗ ಭಾವನೆಗಳನ್ನು ಶ್ರೀಪಾದರಾಜರು ತಮ್ಮ ಕೃತಿಗಳಲ್ಲಿ ತೋಡಿಕೊಂಡಿದ್ದಾರೆ. ಅನೇಕ ಉಗಾಭೋಗಗಳನ್ನು ಅವರು ರಚಿಸಿದರು. ಗೀತಗೋವಿಂದದ  ಶ್ಲೋಕಗಳನ್ನು ಸಂಗೀತ ರೂಪದಲ್ಲಿ ಕನ್ನಡದಲ್ಲಿ ವೃತ್ತನಾಮಗಳಂತೆ ಬರೆದರು. ಕಾಲಿಗೆ ಗೆಜ್ಜೆ ಕಟ್ಟಿ, ಪೂಜಾ ಸಮಯಗಳಲ್ಲಿ ಹಾಡಿಕೊಂಡು ನರ್ತಿಸುವ ಸಲುವಾಗಿಯೇ ಕೀರ್ತನೆಗಳನ್ನು ರಚಿಸಿದರು. ಕನ್ನಡ ದೇಶದಲ್ಲಿ ಗೆಜ್ಜೆ ಕಟ್ಟಿ ಹಾಡುತ್ತಾ ನರ್ತಿಸುವ ಸಂಪ್ರದಾಯ ಶ್ರೀಪಾದರಾಜರಿಂದಲೇ ಪ್ರಾರಂಭ ವಾಯಿತು. ಸಪ್ತತಾಳಗಳನ್ನು ಬಳಸಿಕೊಂಡು ಸುಳಾದಿ ಗಳನ್ನು ಮೊತ್ತಮೊದಲಿಗೆ ರಚಿಸಿದ ಕೀರ್ತಿಯೂ ಶ್ರೀಪಾದರಾಜರದೇ. ಹೀಗೆ ಹಲವು ಅಂಶಗಳಲ್ಲಿ ಅವರು ನಮ್ಮ ಕನ್ನಡ ದೇಶಕ್ಕೆ ಪ್ರಥಮ ಪುರುಷರಾಗಿದ್ದಾರೆ ಮತ್ತು ಪ್ರಾತಃಸ್ಮರಣೀಯರಾಗಿದ್ದಾರೆ.
ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳ ಬೇಕಾದರೆ ಒಂದೇ ಒಂದು ಮಾರ್ಗ. ಅದು ಸಂಗೀತ- ಗಾನ- ಇದರಿಂದ ಮಾತ್ರವೇ ದೇವರು ಸುಲಭವಾಗಿ ಒಲಿಯಲು ಸಾಧ್ಯ ಎಂದು ಶ್ರೀಪಾದರಾಜರು ನಂಬಿದ್ದರು.
ಗಾನದ ಪರಂಪರೆಯನ್ನೇ ಕರ್ನಾಟಕದಲ್ಲಿ ಪ್ರಾರಂಭ ಮಾಡಿದವರು ಶ್ರೀಪಾದರಾಜರು.
ಅವರ ಕೀರ್ತನೆಗಳು ಬರಿಯ ವೇದಾಂತವಲ್ಲ, ಕೇವಲ ಭಕ್ತಿರಸವೇ ಅಲ್ಲ, ಹೇಗೆ ಕಾವ್ಯಶಕ್ತಿಯಿಂದ ಕೂಡಿದೆ ಎನ್ನುವುದನ್ನು ಈ ಉದಾಹರಣೆಯಿಂದ ಕಾಣಬಹುದು:

ಭೂಮಿಯನ್ನು ಚಿನ್ನದ ತೊಟ್ಟಿಲು ಮಾಡಿ
ಸೋಮ ಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕು ||

ಭೂಮಿಯೇ ಒಂದು ಚಿನ್ನದ ತೊಟ್ಟಿಲಂತೆ; ಅದಕ್ಕೆ ಸೂರ್ಯ-ಚಂದ್ರರನ್ನೇ ಕಲಶವಾಗಿ ಮಾಡುವುದಂತೆ; ವೇದಗಳೆಂಬ ಜ್ಞಾನವನ್ನೇ ಸರಪಣಿಯಾಗಿ ಮಾಡುವು ದಂತೆ; ಆ ಮಹಾ ಆಕಾಶಕ್ಕೇ ಕೊಂಡಿಗಳನ್ನು ಹಾಕುವು ದಂತೆ – ಇದಕ್ಕೆ ಭೂಮಿಯೆಂಬ ಚಿನ್ನದ ತೊಟ್ಟಿಲನ್ನು ತೂಗಿ ಬಿಟ್ಟಾಗ ಚಿತ್ರ ಅದೆಷ್ಟು ಭವ್ಯ ಹಾಗೂ ಅರ್ಥವತ್ತಾದುದು ಎಂಬುದನ್ನು ನೋಡಿ.

ಮನಮುಟ್ಟುವ ಉಪದೇಶ
ಸುಲಭವಾದ ಕನ್ನಡದಲ್ಲಿ ನೆನಪಿಡಲು ಸುಲಭ ವಾಗುವಂತೆ ಸಂಗೀತದ ಸವಿ ಬೆರೆಸಿ ಜನಕ್ಕೆ ಮಾರ್ಗ ದರ್ಶನ ಮಾಡಿದರು ಶ್ರೀಪಾದರಾಜರು. ಮನುಷ್ಯ ಹುಟ್ಟಿದುದಕ್ಕೆ ತನ್ನ ಬಾಳನ್ನು ಸಾರ್ಥಕ ಮಾಡಿಕೊಳ್ಳ ಬೇಕು, ಜೀವನದಲ್ಲಿ ಯಾವುದು ನಿಜವಾಗಿ ಒಳ್ಳೆಯದು ಮತ್ತು ಮುಖ್ಯ, ಯಾವುದು ಆಕರ್ಷಕವಾಗಿ ಕಂಡರೂ ನಿಜವಾಗಿ ಕೆಟ್ಟದು ಮತ್ತು ಅಮುಖ್ಯ ಎಂಬುದನ್ನು ಒಂದು ಹಾಡಿನಲ್ಲಿ ಹೇಳಿದ್ದಾರೆ. ಬದುಕಿನಲ್ಲಿ ಏನನ್ನೂ ಮಾಡದೆ, ಹೆಂಡತಿ ಮಕ್ಕಳ ಸುಖವನ್ನೇ ಮುಖ್ಯ ಎಂದುಕೊಂಡು ದುಡಿದು ಬಾಳನ್ನು ಸವೆಸುವವರನ್ನು ವರ್ಣಿಸಿದ್ದಾರೆ.

ಕುರುಡ ನಾಯಿ ಸಂತೆಗೆ ಬಂತಂತೆ |
ಅದು ಏಕೆ ಬಂತೋ ||
ಖಂಡಸಕ್ಕರೆ ಹಿತವಲ್ಲಂತೆ ಖಂಡಾ ಎಲುಬು ಕಡಿಯಿತಂತೆ ||
ಹೆಂಡಿರುಮಕ್ಕಳ ನೆಚ್ಚಿತಂತ ಕೊಂಡು ಹೋಗುವಾದಾರಿಲ್ಲವಂತೆ ||
ನಾನಾಜನ್ಮವೆತ್ತಿತಂತೆ ಮಾನವನಾಗಿ ಪುಟ್ಟಿತಂತೆ |
ಕಾನನ ಕಾನನ ತಿರುಗಿತಂತ ತಾನು ತನ್ನ ಮರೆತಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ ಹಾಂಗೂ ಹೀಂಗೂ ಕಳೆಯಿತಂತೆ |
ರಂಗವಿಠ್ಠಲನ ಮರೆತಿತಂತೆ ಭಂಗ ಬಹಳ ಪಟ್ಟಿತಂತೆ ||
(ಕಾನನ ಎಂದರೆ ಕಾಡು)
ಯಾರೂ ಯಾರಿಗೆ ಜೀವನದಲ್ಲಿ ಏನೇನು ಭೂಷಣ, ಒಳ್ಳೆಯದನ್ನು ಮಾಡುತ್ತದೆ, ಕೀರ್ತಿಯನ್ನು ತರುತ್ತದೆ ಎಂದು ‘ಭೂಷಣಕೆ ಭೂಷಣ ಇದು ಭೂಷಣ’ ಎಂಬ ಹಾಡಿನಲ್ಲಿ ಹೇಳಿದ್ದಾರೆ. ಅದರ ಕೆಲವು ಪಂಕ್ತಿಗಳು ಇವು :
ನಾಲಿಗೆಗೆ ಭೂಷಣ ನಾರಾಯಣ ನಾಮ |
ಕಾಲಿಗೆ ಭೂಷಣ ಹರಿಯಾತ್ರೆಯು ||
ದಾನವೇ ಭೂಷಣ ಇರುವ ಹಸ್ತಂಗಳಿಗೆ |
ಜ್ಞಾನವೇ ಭೂಷಣ ಮಾನವರಿಗೆ ||

ಶ್ರೀಪಾದರಾಜರು ತುಂಬ ತೊಂಬತ್ತೆಂಟು ವರ್ಷಗಳ ವರೆಗೆ ಬದುಕಿದ್ದರು. ಅವರು ಕಾಲವಾದದ್ದು – ಅಂದರೆ ವೃಂದಾವನ ಪ್ರವೇಶಮಾಡಿದ್ದು ೧೫೦೪ರ ಏಪ್ರಿಲ್ ೧೪ರಂದು. ಈಗಲೂ ಮುಳಬಾಗಲಿಗೆ  ಹೋದರೆ ಶ್ರೀಪಾದರಾಜರ ವೃಂದಾವನ ನರಸಿಂಹತೀರ್ಥದ ದಂಡೆಯಲ್ಲಿರುವುದು ಕಂಡು ಬರುತ್ತದೆ. ಅವರ ಹೆಸರಿನಲ್ಲಿ ಈಗಲೂ ವರ್ಷ ಕ್ಕೊಮ್ಮೆ ರಥೋತ್ಸವ ಜರಗುತ್ತದೆ. ಈ ಮಹಾತ್ಮರನ್ನು ಕನ್ನಡನಾಡು ಮರೆಯುವುದು ಸಾಧ್ಯವೇ ಇಲ್ಲ. ದಾಸ ಸಾಹಿತ್ಯವೆಂಬ ದಡಗಳಲ್ಲಿ ಸಾಹಿತ್ಯ ಸಂಗೀತಗಳನ್ನು ತುಂಬಿ ಭಕ್ತಿರಸವೆಂಬ ಪೂರ್ಣ ಪ್ರವಾಹವನ್ನೇ ಹರಿಸಲು ಕಾರಣರಾದವರು ಶ್ರೀಪಾದರಾಜರು.
ಅಗೋ, ಶ್ರೀ ವ್ಯಾಸತೀರ್ಥರು ಅವರಿಗೆ ನಮಿಸುತ್ತಿ ದ್ದಾರೆ. ಅವರ ಜೊತೆಗೆ ನಾವೂ ನಮಿಸೋಣ ಬನ್ನಿ :
ಸಿರಿಕೃಷ್ಣ ದಿವ್ಯಪಾದಾಬ್ಜ ಚಿಂತಾಲೋಲ
ವರ ಹೇಮವರ್ಣ ಮುನಿಪತಿಯ ಸುಕುಮಾರ
ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ
ಶರಣಜನ ಸುರಧೇನು ಭಕ್ತಮಂದಾರ.

ಶ್ರೀಪಾದರಾಜರ ಹಾಡುಗಳು

ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿ‌ಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||

 ++++++++

ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||

+++++++++

ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||

+++++++

( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು




*********ಮಾಹಿತಿ ಕೃಪೆ: ಸಂಪದ, ಕಣಜ, ವಿಕಿಪೀಡಿಯಾ**********







೧೯.ಸಿಂಗಿರಾಜ

ಸಿಂಗಿರಾಜ
ಈತನ ಕಾಲ: ಕ್ರಿ.ಶ.ಸು.೧೫೦೦, ವೀರಶೈವ ಕವಿ.
ಈತನು ವಾರ್ಧಕಷಟ್ಪದಿಯಲ್ಲಿ ‘ಅಮಲಬಸವಚಾರಿತ್ರ’ (ಸಿಂಗಿರಾಜಪುರಾಣ) ಎಂಬ ಕೃತಿ ರಚಿಸಿದ್ದಾನೆ.
ಈ ಕೃತಿಯು ಬಸವಣ್ಣನವರ ಚರಿತ್ರೆಯನ್ನು ಕುರಿತದ್ದಾಗಿದೆ ಮತ್ತು ಈ ಕೃತಿಯಲ್ಲಿ ಸಿಂಗಿರಾಜನು ಪುರಾಣಕ್ಕಿಂತ ವಾಸ್ತವಕ್ಕೆ ಹೆಚ್ಚು ಒತ್ತುಕೊಟ್ಟಿರುವಂತೆ ಕಂಡುಬರುತ್ತದೆ.

ಅಮಲಬಸವಚಾರಿತ್ರದ ವಿಶೇಷತೆಗಳು:
೧) ದೇವಾಲಯದ ರಂಗ ಮಂಟಪದಲ್ಲಿರುವ ನಂದಿಕೋಡುಗಳ ಮೂಲಕ ಶಿವಲಿಂಗವನ್ನು ನೋಡುವ ವಿಧಾನ ಸಿಂಗಿರಾಜ ಪುರಾಣ ಮತ್ತು ರಾಘವಾಂಕ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
೨) ಚೆನ್ನಬಸವಣ್ಣನವರ ತಂದೆಯ ಹೆಸರನ್ನು `ಅಮಲಬಸವ ಚಾರಿತ್ರ್ಯ' (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರು ಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.
೩) ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಈ ಕೃತಿಯಿಂದ ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ ರಲ್ಲಿ ರಚನೆಯಾದ ಸಿಂಗಿರಾಜನ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.  


******************* 

೧೮.ಶಿಶುಮಾಯಣ

ಶಿಶುಮಾಯಣ
ಕಾಲ: ಸು. ಕ್ರಿ.ಶ.೧೫೦೦ *
ಈತ ಜೈನಧರ್ಮೀಯ.
ಎರಡು ಕೃತಿಗಳನ್ನು ಬರೆದಿದ್ದಾನೆ. ೧) ‘ತ್ರಿಪುರ ದಹನ ಸಾಂಗತ್ಯ’, ೨) ‘ಅಂಜನಾಚರಿತ್ರೆ’

೧) ‘ತ್ರಿಪುರ ದಹನ ಸಾಂಗತ್ಯ’: ಇದು ಮುನ್ನೂರು ಪದ್ಯಗಳನ್ನೊಳಗೊಂಡಿರುವ ಚಿಕ್ಕ ಕೃತಿ. ಶೈವ ಸಂಪ್ರದಾಯದಲ್ಲಿ ಶಿವನ ಲೀಲೆಗಳಲ್ಲಿ ಕಂಡುಬರುವ ಶಿವನು ಮಾಡಿದ ತ್ರಿಪುರ ದಹನ ದ ಕಥೆಯಂತೆ ಇಲ್ಲಿ ಜೈನತತ್ವಕ್ಕನುಗುಗುಣವಾಗಿ ಜನನ-ಜರಾ-ಮರಣಗಳೆಂಬ ಮೂರು ಪುರಗಳನ್ನು ಆದೀಶ್ವರನು ಸುಟ್ಟ ವಿಷಯವನ್ನು ತೆಗೆದುಕೊಂಡು ಸಾಂಗತ್ಯದಲ್ಲಿ ಕೃತಿ ರಚಿಸಲಾಗಿದೆ.

೨) ‘ಅಂಜನಾಚರಿತ್ರೆ’:- ಇದು ೧೫ ಸಂಧಿಗಳಲ್ಲಿ ವಿಸ್ತಾರಗೊಂಡಿದ್ದು ೬೦೦೦ ಪದ್ಯಗಳನ್ನು ಹೊಂದಿರುವ ಬೃಹತ್ ಸಾಂಗತ್ಯ ಕಾವ್ಯವಾಗಿದೆ. ಇದಕ್ಕೆ ಆಕರ ರವಿಷೇಣನ ‘ಪದ್ಮಚರಿತ’ (ಜೈನರಾಮಾಯಣ). ‘ಪದ್ಮಚರಿತ’ ದಲ್ಲಿರುವ ‘ಅಂಜನಾಚರಿತ್ರೆ’ಯ ಭಾಗವನ್ನು ಮಾತ್ರ ತೆಗೆದುಕೊಂಡು ಶಿಶುಮಾಯಣನು ಬೃಹತ್ಕಾವ್ಯ ರಚಿಸಿದ್ದಾನೆ.

      ಎರಡೂ ಗ್ರಂಥಗಳ ಶೈಲಿ ಸರಳವಾಗಿದೆ. ಶಿಶುಮಾಯಣನು ತಾನು ಮಹಾನ್ ಪಂಡಿತನಲ್ಲವೆಂದೂ ಲಕ್ಷಣಜ್ಞಾನವಿಲ್ಲದವನೆಂದೂ ಹೇಳಿಕೊಂಡಿದ್ದಾನೆ. ("ಅಕ್ಷರ ಭೇದವನರಿಯದೆನಗೆ ಮತ್ತೆ ಲಕ್ಷಣಗಳು ಗೋಚರವೇ", "ಕವಿತೆಯ ಮಾರ್ಗದ ಸುವಿಚಾರಗಳ ವಿವರಿಪೊಡೇನೆಂದರಿಯೆ", "ಲಕ್ಷಣಮಿಲ್ಲದೊಡೀ ಕೃತಿಗೆ ಸಲ್ಲಕ್ಷಣಯುತೆ ಸತಿಯರೊಳು ಲಕ್ಷ್ಯವೆನಿಸುವಂಜನಾಚರಿತವನು ವಿಚಕ್ಷಣ ರೆಯ್ದೆ ಕೇಳುವುದು")

[* ಈತನ ಕಾಲವನ್ನು ೧೨೩೩ ಎಂದು ಕವಿಚರಿತಕಾರರು ಅನುಮಾನಿಸಿದ್ದರು. ಆ ಕಾರಣದಿಂದಾಗಿ ಈತನೇ ಮೊದಲ ಸಾಂಗತ್ಯಕಾರನೆಂದು ಹೇಳಲಾಗುತ್ತಿತ್ತು. ಆದರೆ ಆತನ ಕಾಲವನ್ನು ಕ್ರಿ.ಶ.ಸು.೧೫೦೦ ಕ್ಕೆ ನಿಗಧಿಪಡಿಸಿದಮೇಲೆ.  ಕ್ರಿ.ಶ.ಸು.೧೪೦೦ ರವನಾದ ದೇಪರಾಜನೇ ಮೊದಲ ಸಾಂಗತ್ಯಕಾರನೆಂದು ತೀರ್ಮಾನವಾಯಿತು]


**********