ನನ್ನ ಪುಟಗಳು

13 ಸೆಪ್ಟೆಂಬರ್ 2019

ಬೆಳಗುತಿರು

ಅವನಂತೆ ನಾನಿಲ್ಲ 
ಭವವೆಲ್ಲ ಬದಲಿಹುದು
ಭುವನಾದಿ ಜೀವಿಗಳನಳೆಯಬಹುದೇ?? 
ಜವರಾಯನೆಳೆದಾಗ
ಭವದೊಳಿಹ ಬವಣೆಗಳು
ಭಯಬೀಳುತಳಿದುಳಿದು ನಿಲಲುಬಹುದೇ?

ಸಂಚರಿಪ ಹಾದಿಯೊಳು 
ಮಿಂಚು ಸಿಡಿಲುಗಳಿರಲಿ 
ವಂಚನೆಯ ವಾಸನೆಗೆ ನೀ ಸಿಲುಕದೆ| 
ಹೊಂಚು ಹಾಕುವ ಮಂದಿ 
ಸಂಚಾರಗೈದಿಹರು 
ಚಂಚು ಕುಕ್ಕಿದರೇನು ನಡೆ ಮರುಗದೆ|| 

ಪರರ ತೆಗಳಿಕೆ ಮಂತ್ರ 
ಜರೆದು ನಿಂದಿಪ ತಂತ್ರ 
ಸರಿದಾರಿಯೊಳು ನಡೆವ ನಿನಗಲ್ಲವು| 
ಹರಕೆಗಳು ನಿನಗುಂಟು 
ಹಿರಿದು ಗುರಿ ಮುಂದಿಹುದು 
ಚರಿತೆಯಲಿ ಚಿರಕಾಲ ರಾರಾಜಿಸು|| 

ಆಸೆಗಳ ಕೂಪದೊಳ್ 
ವಾಸ ಮಾಡುತ ಕಳೆದು 
ವೇಷಗಳ ಬದಲಿಸಲು ಫಲವೇನಿದೆ? 
ಮೋಸವೆಸಗುವ ಬದಲು 
ಪೂಷನಂತೆಹೆ ಬೆಳಗು 
ದೋಷಕಳೆಯತ ಸಾಗು ತಮವ ಕಳೆದು|| 

-ರಚನೆ: ನಾಖಾರ್ವಿ 
ನಾಗರಾಜ ಖಾರ್ವಿ 
ಪದವೀಧರ ಸಹ ಶಿಕ್ಷಕ 
ಉ.ಸ.ಹಿ.ಪ್ರಾ.ಶಾಲೆ 
ಕಲ್ಮಂಜ ಬಂಟ್ವಾಳ 
ತಾಲೂಕು ದ.ಕ
 
ಅರ್ಥ:- ಜರೆ=ಬೈಯು ಚಂಚು=ಕೊಕ್ಕು ಜವರಾಯ=ಯಮರಾಜ 
ಚರಿತೆ=ಚರಿತ್ರೆ ಪೂಷ=ಸೂರ್ಯ ತಮ=ಕತ್ತಲು
                *****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ