ನನ್ನ ಪುಟಗಳು

13 ಸೆಪ್ಟೆಂಬರ್ 2019

🌻 *ಮಾರ್ಗ* 🌻

ಖಾಲಿ ತಲೆಯಲಿ ವಾಸವು
ದೆವ್ವ ಭೂತ ಪಿಶಾಚಿಗಳು
ಉನ್ನತ ಚಿಂತನೆಯು ತುಂಬಿರಲು
ಹಾರುವ ಬಾನಾಡಿಗಳು

ಮಾಡಬಲ್ಲೆನೆಂದು ಹೊರಟರೆ
ನೂರಾರು ದಾರಿಗಳು
ಆಗದೆಂದು ಕೈ ಕಟ್ಟಿ ಕುಳಿತರೆ
ಮುಚ್ಚಿದ ಬಾಗಿಲುಗಳು

ಬಾನೆತ್ತರಕ್ಕೆ ಎದ್ದು ನಿಂತಿಲ್ಲವೇ
ಏಕ ಶಿಲೆಯಲಿ ಬಾಹುಬಲಿ
ಜಲನಿಧಿಯೆ ಮೈತುಂಬಿ ಕೊಂಡಿಲ್ಲವೇ
ಕನ್ನಂಬಾಡಿಯ ಕಟ್ಟೆಯಲಿ

ಅಗ್ನಿ ಪಂಜರವನ್ನೆ ಭೇದಿಸಿದೆವು
ಸತ್ಯ ಶಾಂತಿ ಅಹಿಂಸೆ ತ್ಯಾಗದಿ
ಗಗನಯಾನದಿ ಸೈ ಎನಿಸಿದೆವು
ಮುಂದುವರಿದು ವಿಜ್ಞಾನದಿ

ವಿಕಲಾಂಗರು ಗಗನದೆತ್ತರಕ್ಕೇರಿ
ಹೊಡೆಯಲಿಲ್ಲವೇ ವಿಧಿಗೆ ಸಡ್ಡು
ಕಡು ಬಡತನವ ಮೆಟ್ಟಿ ನಿಂತು
ಕೋಟ್ಯಧೀಶರಾಗಿಲ್ಲವೇ ಶ್ರಮಪಟ್ಟು

ಸಾಸಿವೆ ಕಾಳಿನಷ್ಟಿರಲು ಆತ್ಮವಿಶ್ವಾಸ
ಯೋಚಿಸಿದ ಕಾರ್ಯವದು ಹಗುರವು
ಮೊದಲ ಅಡಿಯಲಿದ್ದರೆ ದೃಢವಿಶ್ವಾಸ
ತಲುಪಲು ಸುಲಭ ಗುರಿಯ ಶಿಖರವು
  
       ✍ರಮೇಶ್ ಕುಲಾಲ್ ನಾಲ್ತೂರು

%%%%

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ