ನನ್ನ ಪುಟಗಳು

ಕನ್ನಡ ಸಾಹಿತ್ಯ ಚರಿತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಸಾಹಿತ್ಯ ಚರಿತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

01 ಜೂನ್ 2023

ವಡ್ಡಾರಾಧನೆ -ಶಿವಕೋಟ್ಯಾಚಾರ್ಯ

ವಡ್ಡಾರಾಧನೆ -ಶಿವಕೋಟ್ಯಾಚಾರ್ಯ
            ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 
‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ. 
(ಓದಲು ಕಥೆಯ ಮೇಲೆ ಕ್ಲಿಕ್ ಮಾಡಿ)

  1. ಸುಕುಮಾರಸ್ವಾಮಿಯ ಕಥೆ
  2. ಸುಕೌಶಳಸ್ವಾಮಿಯ ಕಥೆ
  3. ಗಜಕುಮಾರನ ಕಥೆ
  4. ಸನತ್ಕುಮಾರ ಚಕ್ರಚರ್ತಿಯ ಕಥೆ
  5. ಅಣ್ಣಿಕಾಪುತ್ರನ ಕಥೆ
  6. ಭದ್ರಬಾಹು ಭಟ್ಟಾರರ ಕಥೆ
  7. ಲಲಿತಘಟೆಯ ಕಥೆ
  8. ಧರ್ಮಘೋಷ ಭಟ್ಟಾರರ ಕಥೆ
  9. ಸಿರಿದಿಣ್ಣ ಭಟ್ಟಾರರ ಕಥೆ
  10. ವೃಷಭಸೇನ ಭಟ್ಟಾರರ ಕಥೆ
  11. ಕಾರ್ತಿಕ ಋಷಿಯ ಕಥೆ
  12. ಅಭಯಘೋಷ ಮುನಿಯ ಕಥೆ
  13. ವಿದ್ಯುಚ್ಚೋರನ ಕಥೆ
  14. ಗುರುದತ್ತ ಭಟ್ಟಾರರ ಕಥೆ
  15. ಚಿಲಾತಪುತ್ರನ ಕಥೆ
  16. ದಂಡಕನೆಂಬ ರಿಸಿಯ ಕಥೆ
  17. ಮಹೇಂದ್ರದತ್ತಾಚಾರ್ಯನ ಕಥೆ
  18. ಚಾಣಾಕ್ಯ ರಿಸಿಯ ಕಥೆ
  19. ವೃಷಭಸೇನ ರಿಸಿಯ ಕಥೆ


**************** 



23 ಮಾರ್ಚ್ 2018

ವ್ಯಾಸರಾಯರು

 

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
               ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳು:-
ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. /ಹರಿಸರ್ವೋತ್ತಮ ವಾಯು ಜೀವೋತ್ತಮ /

ಕೀರ್ತನೆಗಳು:-

 ಚಂದ್ರಿಕಾಚಾರ್ಯರ ಪಾದ ದ್ವಯಕೆ/
 ಎರುಗುವೆ ಪ್ರತಿವಾಸರಕೆ /ಪ/

 ನವ ವೃಂದಾವನ ಮಧ್ಯದಿ ಶೋಭಿಪ
  ನವವಿಧ ವರಗಳ ನೀಡುತ ಸತತ/
 ನವ ಮಣಿ ಮುಕುಟ ಮಸ್ತಕದಿ ಶೋಭಿಪ
  ನವ್ಯ ಜೀವನ ಶುಭಫಲ ಕೋರುತ/
 ನಂಬಿದ ಭಕ್ತರ ದೋಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/

 ವಿಜಯ ಮೂರುತಿ ರಾಮನ ಧ್ಯಾನಿಸಿ
  ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
 ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
  ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/

 ಯಾಂತ್ರಿಕ ತನದಿ ತಾಪವೆನಿಸುವ
  ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
 ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
 ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/
ಉಗಾಭೋಗಗಳು

    ೧

ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ ಸಿರಿಕೃಷ್ಣ


    ೨

ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ



**********ಮಾಹಿತಿ ಕೃಪೆ: ವಿಕಿಪೀಡಿಯಾ***********

ನಂಜುಂಡ ಕವಿ

ನಂಜುಂಡ ಕವಿಯು ಕ್ರಿ.ಶ. ೧೫೦೮ ರಲ್ಲಿದ್ದ ಮೂರನೆಯ ಮಂಗರಸನ ಮಗ.
ಮಂಗರಸ ಜೈನನಾಗಿದ್ದನು. ಆದರೆ ನಂಜುಂಡ ಕವಿ ವೀರಶೈವ ಮತವನ್ನು ಸ್ವೀಕರಿಸಿದನು.

        ನಂಜುಂಡ ಕವಿಯ ಪ್ರಮುಖ ಕೃತಿ: 'ಕುಮಾರ ರಾಮನ ಕಥೆ'. ಇದು ಈತನ ಮಹಾನ್ ಸಾಂಗತ್ಯ ಕಾವ್ಯವಾಗಿದ್ದು ಬಹಳ ಜನಮನ್ನಣೆ ಗಳಿಸಿದೆ. 
       ಈತನು ತನ್ನ ಕೃತಿಯಲ್ಲಿ ಕಾಳಿದಾಸ, ಬಾಣ, ಪಂಪ, ನೇಮಿಚಂದ್ರ, ಜನ್ನ, ಗುಣನಂದಿ, ಗಜಗ, ಗುಣವರ್ಮ, ನಾಗಚಂದ್ರ, ಸುಜನೋತ್ತಂಸ, ಅಸಗ, ರನ್ನ, ಶಾಂತಿವರ್ಮ ಮುಂತಾದ ಪೂರ್ವಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ. 
      
ಕುಮಾರರಾಮನ ಕಥೆ ಕುರಿತು:  
        https://upload.wikimedia.org/wikipedia/commons/thumb/6/68/Kumararama.jpg/225px-Kumararama.jpg
    ಕುಮಾರರಾಮ ಕಂಪಪ್ರದೇಶದ ರಾಜನ ಮಗ ಕುಮಾರರಾಮನ ಚರಿತ್ರೆ. ಇದರಲ್ಲಿ ಐದು ಸಾವಿರಕ್ಕೂ ಅಧಿಕ ಸಂಖ್ಯೆಯ ಪದ್ಯಗಳಿವೆ. ಕಥಾನಾಯಕ ರಾಮನಾಥನನ್ನು ಅವನ ಮಲತಾಯಿ ಮೋಹಿಸಿ, ನಂತರ ಅವನಿಂದ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಕುಪಿತಳಾಗಿ ತನ್ನ ಪತಿಗೆ ದೂರನ್ನಿತ್ತು ಅವನನ್ನು ಕೊಲ್ಲಲು ಪ್ರೇರೇಪಿಸುತ್ತಾಳೆ. ರಾಜನ ಆದೇಶವನ್ನು ಪಾಲಿಸದೆ ಮಂತ್ರಿ ಕುಮಾರರಾಮನನ್ನು ಬಚ್ಚಿಡುತ್ತಾನೆ. ಇದೇ ಸಮಯಕ್ಕೆ ರಾಜ್ಯಕ್ಕೆ ಮುಸ್ಲಿಮರು ಧಾಳಿ ಮಾಡುತ್ತಾರೆ. ವಿಷಯ ತಿಳಿದ ಕುಮಾರರಾಮ ಶತ್ರುಗಳ ಧಾಳಿಯನ್ನು ಸಮರ್ಥವಾಗಿ ಎದುರಿಸಿ ಯುದ್ಧದಲ್ಲಿ ಹತನಾಗುತ್ತಾನೆ. ಇದು ಸಾರಾಂಶ.
             ಕನ್ನಡನಾಡಿನ ಜನಪ್ರಿಯ ನಾಯಕರಲ್ಲೊಬ್ಬ. ಪೌರುಷ. ಶೌಚ ಗುಣಗಳಿಗೆ ಹೆಸರಾದವ. ಅತಿ ಚಿಕ್ಕ ವಯಸ್ಸಿನಲ್ಲೆ ಮಹಮ್ಮದೀಯರ ದಾಳಿಯನ್ನೆದುರಿಸಿ ತನ್ನ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಗಳನ್ನು ಪ್ರದರ್ಶಿಸಿದವ. ವಿಜಯನಗರ ಸ್ರಾಮ್ರಾಜ್ಯ ಸ್ಥಾಪನೆಗೆ ತಳಹದಿ ಹಾಕಿ ಖಿಲವಾಗುತ್ತಿದ್ದ ಆರ್ಷೇಯ ಧರ್ಮವನ್ನು ಉದ್ಧಾರ ಮಾಡಿದವ. ಈ ಮಹಾನುಭಾವನ ಕಥೆ ನಾಡಿನ ಮೂಲೆಮೂಲೆಯಲ್ಲಿ ಹರಡಿದೆ. ಕೆಲವು ಕಡೆ ಇವನ ವಿಗ್ರಹಗಳನ್ನು ಪೂಜಿಸುತ್ತಾರಲ್ಲದೆ ಇವನ ಕಥೆಯನ್ನು ಓದಿಸಿ ಕೇಳಿ ನಾಟಕಗಳನ್ನು ಬರೆಸಿ ಆಡುತ್ತಾರೆ.
           ಕುಮಾರರಾಮನ ಹೆಸರು ಇಂದಿಗೂ ಉತ್ತರ ಕರ್ಣಾಟಕದಲ್ಲಿ ವಿಶೇಷವಾಗಿ ಪ್ರಚಲಿತವಾಗಿದೆ. ಸ್ಫುರದ್ರೂಪಿಯೂ ಪರಾಕ್ರಮಿಯೂ ಆದವನನ್ನು 'ಏನು ಈ ಮಗ ಕೊಮರಾಮ' ಆಗ್ಯಾನ ಎಂದು ಕರೆಯುವುದುಂಟು. ಒಮ್ಮೊಮ್ಮೆ ಬಡಾಯಿ ಕೊಚ್ಚಿಕೊಳ್ಳುವವನೂ 'ಮಹಾ ಕೊಮರಾಮ ಬಂದ' ಎಂದು ಆಡಿಕೊಳ್ಳುವುದೂ ಉಂಟಂತೆ. ಈತನನ್ನು ಕುರಿತು ನಂಜುಂಡ ಕವಿ, ಪಾಂಚಾಳಗಂಗ ಮತ್ತು ಮಹಲಿಂಗಸ್ವಾಮಿ ಎಂಬ ಕವಿಗಳು ಸಾಂಗತ್ಯದಲ್ಲಿ ಕಾವ್ಯಗಳನ್ನು ರಚಿಸಿರುತ್ತಾರೆ. ಇಷ್ಟೇ ಅಲ್ಲದೆ ಈತನ ಬಗ್ಗೆ ಅನೇಕ ಜನಪದ ಗೀತೆಗಳೂ ಕಥೆಗಳೂ ಜನರಲ್ಲಿ ಪ್ರಚಾರದಲ್ಲಿವೆ; ಕೆಲವು ಕೃಫಿಯತ್ತುಗಳೂ ದೊರೆತಿವೆ. ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ಪ್ರತಿವರ್ಷವೂ ವೈಶಾಖ ಶುಕ್ಲ ಪೂರ್ಣಿಮೆಯಂದು ಬೇಡರು ಈತನ ಜಾತ್ರೆಯನ್ನು ನಡೆಸುವರೆಂದು ತಿಳಿದುಬರುತ್ತದೆ. ಅವರ ಪಾಲಿಗೆ ಈತ ಪರದಾರಸೋದರತ್ವದ ಪ್ರತೀಕವಾದ ದೈವಾಂಶಪುರುಷನೇ ಆಗಿದ್ದಾನೆ.
            ಕುಮಾರರಾಮನ ಬಗ್ಗೆ ಇತ್ತೀಚೆಗೆ ಸಾಕಷ್ಟು ಸಂಶೋಧನೆ ನಡೆದಿದೆ. ಈ ಮೂಲಕ ಈತ ವಿಜಯನಗರದ ಸ್ಥಾಪನೆಗೆ ಪೂರ್ವದಲ್ಲಿ ಬದುಕಿ ಬಾಳಿದ ಬಬ್ಬ ವೀರಪುರುಷನೆಂತಲೂ ಆಗಿನ ಕಾಲದಲ್ಲಿ ಉತ್ತರದಿಂದ ದಂಡೆತ್ತಿ ಬಂದ ಮಹಮ್ಮದೀಯರನ್ನು ಮೂರು ಬಾರಿ ಪ್ರತಿಭಟಿಸಿ, ಕಡೆಯ ಕಾಳಗದಲ್ಲಿ ಪ್ರಾಣ ತೆತ್ತು ಹುತಾತ್ಮನಾದನೆಂತಲೂ ವ್ಯಕ್ತವಾಗುತ್ತದೆ. ಮಾನವನಾಗಿದ್ದ ಕುಮಾರರಾಮ ತನ್ನ ಹಿರಿಮೆಯಿಂದ ಅತ್ಯಲ್ಪಕಾಲದಲ್ಲೆ ಮಹಿಮಾಪುರುಷನೆಂಬ ಪ್ರಶಸ್ತಿಗೆ ಪಾತ್ರನಾಗಿ ಹಿಂದು ಜನಾಂಗದ ಆರಾಧ್ಯದೇವತೆಯಾಗಿರಬೇಕೆಂದು ತೋರುತ್ತದೆ. ಈತನ ಪೂಜೆಗಾಗಿ ದೇವಾಲಯಗಳನ್ನು ನಿರ್ಮಿಸಿ ದಾನದತ್ತಿಗಳನ್ನು ನೀಡಿರುವ ವಿಚಾರಗಳು ಶಾಸನಗಳಲ್ಲಿ ಉಕ್ತವಾಗಿರುವುದೇ ಇದಕ್ಕೆ ನಿದರ್ಶನ.
         ಪ್ರಕೃತ ಪರದಾರ ಸೋದರನಾದ ಕುಮಾರರಾಮನ ಕಥೆಯನ್ನೂ ಅವನು ಎಷ್ಟರಮಟ್ಟಿಗೆ ಐತಿಹಾಸಿ ವ್ಯಕ್ತಿಯೆಂಬುದನ್ನೂ ಸಂಗ್ರಹವಾಗಿ ಪರಿಚಯ ಮಾಡಿಕೊಡಲಾಗಿದೆ.
          ಕುಮಾರರಾಮ ಕಂಪಿಲ ಮತ್ತು ಹರಿಹರದೇವಿಯರ (ಹರಿಹರದೇವಿ)ವರ ಪುತ್ರ. ಈತನಿಗೆ ರಾಮನಾಥ, ರಾಮುಗ, ಚೆನ್ನಿಗರಾಮ ಎಂಬ ಹೆಸರುಗಳೂ ಉಂಟು. ಈತನನ್ನು ಅರ್ಜುನನ ಅವತಾರವೆಂದು ನಂಜುಡನೂ ಜಟ್ಟಂಗಿರಾಮನ ಅವತಾರವೆಂದು ಪಾಂಚಾಳಗಂಗನೂ ಪರಶುರಾಮನ ಅವತಾರವೆಂದು ಮಹಾಲಿಂಗ ಸ್ವಾಮಿಯೂ ಚಿತ್ರಿಸಿರುತ್ತಾರೆ. ಚಿಕ್ಕಂದಿನಿಂದಲೇ ಆಟ, ಪಾಠ, ಬೇಟೆ ಮುಂತಾದ ಸಮಸ್ತ ವಿದ್ಯೆಗಳಲ್ಲಿಯೂ ಪ್ರವೀಣನಾಗಿ ಈತ ಕಂಪಿಲನಿಗೆ ಬಲಗೈಯಂತಿದ್ದ. ಹೊಸಮಲೆದುರ್ಗ ಮತ್ತು ಕುಮ್ಮಟದುರ್ಗಗಳಲ್ಲಿ ಪಾಳೆಯವನ್ನು ಸ್ಥಾಪಿಸಿಕೊಂಡು ಪ್ರಬಲನಾಗಿದ್ದ ಕಂಪಿಲನಿಗೆ ಹೊಯ್ಸಳ ವೀರಬಲ್ಲಾಳ, ಕಾಕತೀಯ ಪ್ರತಾಪರುದ್ರ ಮೊದಲಾದ ನೆರೆಹೊರೆಯ ರಾಜರು ಶತ್ರುಗಳಾಗಿದ್ದರು. ಕುಮಾರರಾಮ ಈ ಅರಸರನ್ನೆಲ್ಲ ಹಿಮ್ಮೆಟ್ಟಿಸಿ ಚಿಕ್ಕ ವಯಸ್ಸಿನಲ್ಲಿಯೇ ತುಂಬ ಯಶೋವಂತನಾದ. ಕ್ರಮಕ್ರಮವಾಗಿ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡು ಬಲಿಷ್ಠನಾಗುತ್ತಿದ್ದ. ಈ ಕಂಪಿಲನ ಮೇಲ್ಮೆಯನ್ನೂ ದೆಹಲಿಯ ಸುಲ್ತಾನ ಸಹಿಸದೆ ಹೋದ. ಆದರೂ ಸಾಹಸಿಯೂ ಸ್ಪುರದ್ರೂಪಿಯೂ ಆದ ಕುಮಾರರಾಮನ ವೃತ್ತಾಂತವನ್ನು ಕೇಳಿ ಸುಲ್ತಾನನ ಮಗಳಾದ ಬಾಬಮ್ಮ ಆತನನ್ನೇ ವರಿಸಬೇಕೆಂದು ಹಟತೊಟ್ಟಳು. ಸುಲ್ತಾನ ತನ್ನ ವಜೀರರ ಮೂಲಕ ಕಂಪಿಲನಿಗೆ ಹೇಳಿ ಕಳುಹಿಸಿ, ಅವನೊಂದಿಗೆ ಬಾಂಧವ್ಯ ಬೆಳೆಸಲು ಅಪೇಕ್ಷಿಸಿದ. ಕುಮಾರರಾಮನಾಗಲಿ ಕಂಪಿಲನಾಗಲಿ ಈ ಸಲಹೆಗೆ ಒಪ್ಪಲಿಲ್ಲ. ಈ ನಿರಾಕರಣೆಯಿಂದ ಸುಲ್ತಾನನಿಗೆ ಅಸಮಾಧಾನವಾಯಿತು. ಕಂಪಿಲ ಮತ್ತು ಅವನ ಮಗನ ಅಹಂಕಾರವನ್ನು ಅಡಗಿಸಬೇಕೆಂದು ಆತ ನಿಶ್ಚಯಿಸಿಕೊಂಡ. ಈ ವೇಳೆಗೆ, ಸುಲ್ತಾನನ ಆಶ್ರಯದಲ್ಲಿದ್ದ ಬಾದೂರಖಾನನೆಂಬ ಸರದಾರ ತನ್ನ ಒಡೆಯನೊಂದಿಗೆ ವೈಮನಸ್ಯ ಕಟ್ಟಿಕೊಂಡು, ತಲೆತಪ್ಪಿಸಿಕೊಂಡು ಬಂದು ಹಿಂದೂ ರಾಜರಲ್ಲಿ ಆಶ್ರಯ ಕೋರಿದ. ಆದರೆ ಸುಲ್ತಾನನ ನಿಷ್ಠುರಕ್ಕೆ ಹೆದರಿದ ಹಿಂದೂ ರಾಜರು ಅವನಿಗೆ ಆಶ್ರಯವೀಯಲು ಹಿಂದೆಗೆದರು. ಕುಮಾರರಾಮನ ಸಲಹೆಯ ಮೇರೆಗೆ ಕಂಪಿಲ ಮುಂದೆ ಬಂದು ಬಾದೂರಕಾನನಿಗೆ ಆಶ್ರಯವಿತ್ತ. ಇದೀಗ ಸುಲ್ತಾನನಿಗೆ ಕಂಪಿಲನ ಮೇಲೆ ದಂಡೆತ್ತಿ ಬರಲು ಸಾಕಷ್ಟು ಕಾರಣವನ್ನೊದಗಿಸಿತು.
         ಸುಲ್ತಾನನ ಅಪ್ಪಣೆಯ ಮೇರೆಗೆ, ನೇಮಿ ಎಂಬಾತ ಸುತ್ತಮುತ್ತಲಿನ ಪಾಳೆಯಗಾರರನ್ನು ಕೂಡಿಸಿಕೊಂಡು ಕುಮ್ಮಟದುರ್ಗವನ್ನು ಮುತ್ತಿದ. ಕಡುಗಲಿಯಾದ ಕುಮಾರರಾಮನೂ ಆತನ ಸಹೋದರ ಸಮಾನನಾದ ಕಾಟಣ್ಣನ್ನೂ ವೀರಾವೇಶದಿಂದ ಹೋರಾಡಿ ಮುಸಲ್ಮಾನರನ್ನು ಹಿಂದಟ್ಟಿದರು. ಆಶಾಭಂಗಕ್ಕೊಳಗಾದ ಸುಲ್ತಾನ ಸುಸಮಯವನ್ನು ಎದುರು ನೋಡುತ್ತಿದ್ದ. ಈ ಮಧ್ಯೆ ಕುಮಾರರಾಮನ ರೂಪಿಗೆ ಮರುಳಾದ ಆತನ ಚಿಕ್ಕಮ್ಮ ರತ್ನಾಜಿಗೆ ಆತನಲ್ಲಿ ವ್ಯಾಮೋಹವಂಕುರಿಸಿತು. ಒಮ್ಮೆ ಕಂಪಿಲ ಬೇಟೆಗಾಗಿ ಅರಣ್ಯಕ್ಕೆ ತೆರಳಿದ್ದಾಗ ಊರಿನಲ್ಲಿಯೇ ಇದ್ದ ಕುಮಾರರಾಮ ತನ್ನ ಸಂಗಡಿಗರೊಂದಿಗೆ ಮುತ್ತಿನ ಚೆಂಡಿನ ಲಗ್ಗೆಯಾಟವನ್ನು ಆಡುತ್ತಿರುವಾಗ ಚೆಂಡು ಕೈ ಮೀರಿ ರತ್ನಾಜಿಗೆ ಅರಮನೆಯಲ್ಲಿ ಬಿತ್ತು. ಅದನ್ನು ಕೇಳಿ ಪಡೆಯಲು ಹೋಗಿದ್ದ ಕುಮಾರರಾಮನನ್ನು ಆಕೆ ನಾನಾ ಬಗೆಯಾಗಿ ಮರುಳುಮಾಡಿ ಒಲಿಸಿಕೊಳ್ಳಲು ಪ್ರಯತ್ನಿಸಿದಳು. ಕುಮಾರರಾಮ ಕಂಗೆಟ್ಟು ಆಕೆ ತನಗೆ ಮಾತೃಸಮಾನಳೆಂದೂ ಹಾಗೆ ವರ್ತಿಸುವುದು ಉಚಿತವಲ್ಲವೆಂದೂ ಎಚ್ಚರಿಸಿದ. ಆದರೆ ಕಾಮಪರವಶಳಾಗಿದ್ದ ರತ್ನಾಜಿಗೆ ಆತನ ಹಿತವಚನಗಳು ಹಿಡಿಸಲಿಲ್ಲ. ಹೊರ ಹೊರಟ್ಟಿದ್ದ ಆತನನ್ನು ಅಡ್ಡಗಟ್ಟಿ, ಮೈಮೇಲೆ ಬಿದ್ದು ಬಲತ್ಕಾರಗೊಳಿಸಲು ಮುಂದುವರಿದಳು. ಪರದಾರ ಸೋದರನಾದ ಕುಮಾರರಾಮ ಚಿಕ್ಕಮ್ಮನನ್ನು ಅಲ್ಲಗಳೆದು ಆಕೆಯನ್ನು ಅತ್ತ ನೂಕಿ, ಕೈಕೊಡವಿಕೊಂಡು ಹೊರಟುಬಂದ. ರತ್ನಾಜಿ ಈರ್ಷೆಯಿಂದ ಹೆಮ್ಮಾರಿಯಾಗಿ ಕುಮಾರರಾಮನ ಮೇಲೆ ಸೇಡು ತೀರಿಸಿಕೊಳ್ಳಲು ಬಗೆದಳು: ಕಂಪಿಲ ಬೇಟೆ ಮುಗಿಸಿ ಹಿಂತಿರುಗಿ ಬಂದ ಕೂಡಲೆ ಕುಮಾರರಾಮನ ಮೇಲೆ ಸಲ್ಲದ ಆರೋಪವನ್ನು ಹೊರಿಸಿ ದೂರು ಹೇಳಿದಳು. ಮೋಹಗ್ರಸ್ತನಾಗಿದ್ದ ಕಂಪಿಲ ನಿಜವಾದ ಸಂಗತಿಯನ್ನು ಕೇಳಿ ತಿಳಿಯದೆ ತನ್ನ ಆಪ್ತಸಚಿವನಾಗಿದ್ದ ಬೈಚಪ್ಪನನ್ನು ಬರಮಾಡಿಕೊಂಡು ಕುಮಾರರಾಮನ ಅನುಚಿತ ವರ್ತನೆಯನ್ನು ಖಂಡಿಸಿ ಕೂಡಲೆ ಆತನ ತಲೆಯನ್ನು ಕಡಿದು ತರುವಂತೆ ಆಜ್ಞಾಪಿಸಿದ. ವಿಚಾರಪರನಾದ ಬೈಚಪ್ಪ ಎಷ್ಟು ಬುದ್ಧಿವಾದ ಹೇಳಿದರೂ ರಾಜ ಕೇಳಲಿಲ್ಲ. ಚತುರನಾದ ಬೈಚಪ್ಪ ನಿರುಪಾಯನಾಗಿ ಕುಮಾರರಾಮನ ಬಳಿಗೆ ಬಂದು ಎಲ್ಲ ಸಂಗತಿಗಳನ್ನೂ ವಿವರವಾಗಿ ಕೇಳಿ ತಿಳಿದುಕೊಂಡು, ರಾಜಕುಮಾರನನ್ನು ಕೊಲ್ಲಲು ಮನಸ್ಸು ಬಾರದೆ, ಆತನನ್ನೂ ಆತನ ಮಿತ್ರರನ್ನೂ ನೆಲಮಾಳಿಗೆಯಲ್ಲಿ ಬಚ್ಚಿಟ್ಟು, ಬೇರೊಬ್ಬನ ರುಂಡವನ್ನು ತೆಗೆದುಕೊಂಡು ಹೋಗಿ ರಾಜನಿಗೆ ಒಪ್ಪಿಸಿದ. ರುಂಡವನ್ನು ಕಂಡ ರತ್ನಾಜಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಅತ್ತ ಕಂಪಿಲನ ಮೇಲೆ ದಂಡೆತ್ತಿ ಬರಲು ಸಮಯ ಕಾಯುತ್ತಿದ್ದ ಸುಲ್ತಾನನಿಗೆ ಕುಮಾರರಾಮನ ಮರಣವೃತ್ತಾಂತ ಕೇಳಿ ಕಿವಿ ನೆಟ್ಟಗಾಯಿತು. ಎರಡನೆಯ ಬಾರಿ ಕುಮ್ಮಟದುರ್ಗಕ್ಕೆ ಮುತ್ತಿಗೆ ಹಾಕಲು ನೇಮಿಯನ್ನು ಕಳುಹಿಸಿಕೊಟ್ಟ. ಮುಸಲ್ಮಾನರು ದಂಡೆತ್ತಿಬರುತ್ತಿರುವ ಸುದ್ದಿಯನ್ನು ಗಡಿಕಾಯುತ್ತಿದ್ದ ಚಾರರು ಕಂಪಿಲನಿಗೆ ತಿಳಿಸಿದ ಒಡನೆಯೇ ವೃದ್ಧರಾಜ ಕಂಗೆಟ್ಟ. ಕುಮಾರರಾಮನೂ ಸಂಗಡಿಗರೂ ಸತ್ತುಹೋಗಿರುವರೆಂದು ಭಾವಿಸಿದ್ದ ಆತನಿಗೆ ಮುಂದೆ ಗತಿಯೇನೆಂದು ತೋಚದಂತಾಯಿತು. ಬೈಚಪ್ಪನನ್ನು ಕರೆಸಿ ಮಂತ್ರಾಲೋಚನೆ ಮಾಡಿದ. ಇದೇ ಸಮಯವೆಂದರಿತ ಸಚಿವ ಅಕಾರ್ಯಕ್ಕಾಗಿ ಒಡೆಯನನ್ನು ಪರಿಪರಿಯಾಗಿ ಹಂಗಿಸಿದ. ಕಡೆಗೆ ನಿರ್ವಾಹವಿಲ್ಲದೆ ತಾನು ಬೇರೊಬ್ಬ ಕಲಿಯನ್ನು ಕರೆದುಕೊಂಡು ಬಂದು ಶತ್ರುಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತ. ಅನಂತರ ಕುಮಾರರಾಮನನ್ನು ಅಡಗಿಸಿಟ್ಟಿದ್ದ ನೆಲಮಾಳಿಗೆಯ ಬಳಿಗೆ ಬಂದು ರಾಜ್ಯಕ್ಕೆ ಒದಗಿರುವ ಆಪತ್ತನ್ನು ತಿಳಿಸಿದ. ಬೈಚಪ್ಪನ ಹಿತೋಕ್ತಿಗಳನ್ನು ಅಲ್ಲಗಳೆಯಲಾರದೆ ಕುಮಾರರಾಮ ವೇಷ ಮರೆಸಿಕೊಂಡು, ತನ್ನ ನೆಚ್ಚಿನ ಕುದುರೆಯಾದ ಬೊಲ್ಲನನ್ನು ಏರಿ ರಣರಂಗದತ್ತ ಧಾವಿಸಿದನಲ್ಲದೆ ಶತ್ರುಸೈನಿಕರೊಂದಿಗೆ ವೀರಾವೇಶದಿಂದ ಕಾದಾಡಿ, ಅವರನ್ನು ಬಡಿದೋಡಿಸಿ ಕುಮ್ಮಟದುರ್ಗಕ್ಕೆ ಪ್ರಾಪ್ತವಾಗಿದ್ದ ಕಂಟಕವನ್ನು ಪರಿಹರಿಸಿದ. ಕುಮಾರರಾಮನ ಚಹರೆಯನ್ನು ಗುರುತಿಸಿದ ಮುಸಲ್ಮಾನ ಸರದಾರರಿಗಾದರೋ ಆತ ಸತ್ತಿರುವುದು ಸುಳ್ಳಿರಬೇಕು ಎನ್ನಿಸಿತು. ಯುದ್ಧದಲ್ಲಿ ಜಯವಾದ ಬಳಿಕ ಬೈಚಪ್ಪ ವೇಷ ಮೆರೆಸಿಕೊಂಡಿದ್ದ ಹೊಸ ರಾಹುತನನ್ನು ಕಂಪಿಲನ ಬಳಿಗೆ ಕರೆತಂದ. ಹೊಸ ರಾಹುತ ತಲೆಯ ಮೇಲಿನ ಟಾಳಿಯನ್ನು ತೆಗೆಯುವುದೇ ತಡ ಆತ ಕುಮಾರರಾಮನೆಂದು ಕಂಪಿಲನಿಗೆ ಗೊತ್ತಾಗಿ ಹಿರಿಹಿರಿ ಹಿಗ್ಗಿದ: ಸಮಯೋಚಿತವಾದ ಚಾತುರ್ಯಕ್ಕೆ ಬೈಚಪ್ಪನನ್ನು ಮನವಾರೆ ಶ್ಲಾಘಿಸಿದ. ರತ್ನಾಜಿಗಾದರೋ ಈ ವೃತ್ತಾಂತವನ್ನೆಲ್ಲ ಕೇಳಿದ ಕೂಡಲೆ ತನ್ನ ಕಪಟವೆಲ್ಲ ಬಯಲಾಗುವುದೆಂದು ಹೆದರಿಕೆಯುಂಟಾಗಿ ನೇಣುಹಾಕಿಕೊಂಡು ಸತ್ತಳು. ಪರಾಭವ ಹೊಂದಿದ ನೇಮಿ ದೆಹಲಿಗೆ ಹಿಂತಿರುಗಲು ಅವನನ್ನು ಕಂಡು ಸುಲ್ತಾನನಿಗೆ ಕಾವೇರಿತು. ಎಲ್ಲರನ್ನೂ ಬಾಯಿಗೆ ಬಂದಂತೆ ಹೀಯಾಳಿಸಿದ್ದಲ್ಲದೆ, ಕಂಪಿಲನ ಹೆಸರನ್ನೇ ಅಳಿಸುವುದಾಗಿ ಆತ ಶಪಥ ಮಾಡಿದ.
          ಸುಲ್ತಾನ ತನ್ನ ದಳಪತಿಗಳನ್ನೆಲ್ಲ ಬರಮಾಡಿಕೊಂಡು, ಕಂಪಿಲನ ಅಹಂಕಾರವನ್ನು ಹೇಗೆ ಮುರಿಯಬೇಕೆಂದು ದೀರ್ಘವಾಗಿ ಮಂತ್ರಾಲೋಚನೆ ನಡೆಸಿದ. ಆಗ ಅಲ್ಲಿಯೇ ಇದ್ದ ಮಾತಂಗಿ ಎಂಬಾಕೆ ಮುಂದೆ ಬಂದು ಸಾಕಷ್ಟು ಸೈನ್ಯವನ್ನು ಸಜ್ಜುಗೊಳಿಸಿಕೊಟ್ಟರೆ ತಾನು ಕೂಡಲೆ ಕುಮಾರರಾಮನನ್ನು ಸಂಹರಿಸಿ ಆತನ ತಲೆಯನ್ನು ತಂದುಕೊಡುವುದಾಗಿ ಪ್ರತಿಜ್ಞೆ ಮಾಡಿದಳು. ಅಲ್ಲಿದ್ದ ವೀರಾಧಿವೀರರು ಅವಳ ಮಾತುಗಳನ್ನು ಕೇಳಿ ಆಶ್ಚರ್ಯಚಿಕಿತರಾದರು. ಸುಲ್ತಾನನಾದರೋ ಇದೇನೋ ಸೋಜಿಗವಿರಬೇಕೆಂದು ಎಣಿಸಿ, ಆಕೆಯ ಮಾತಿಗೆ ಸಮ್ಮತಿಸಿ, ಅಪಾರವಾದ ಸೈನ್ಯವನ್ನು ಶೇಖರಿಸಿ ಆಕೆಯ ನೇತೃತ್ವದಲ್ಲಿ ಕಳುಹಿಸಿಕೊಟ್ಟ. ಸುಲ್ತಾನನ ಸೇನ ದಾರಿ ಯುದ್ಧಕ್ಕೂ ಹಾವಳಿ ಮಾಡುತ್ತ ಬಂದು ಕುಮ್ಮಟಕ್ಕೆ ಮುತ್ತಿಗೆ ಹಾಕಿತು. ಇತ್ತ ಕುಮಾರರಾಮನೂ ಯುದ್ಧಸನ್ನದ್ಧನಾದ. ಉಭಯಪಕ್ಷಗಳಿಗೂ ಬಿರುಸಾದ ಕಾಳಗ ನಡೆಯಿತು. ಮೊದಮೊದಲು ಮಹಮ್ಮದೀಯರಿಗೆ ತತ್ತರಿಸುವಂತಾಯಿತು. ಸುಲ್ತಾನನ ಸರದಾರರು ಮಾತಂಗಿಯನ್ನು ಹೀಯಾಳಿಸತೊಡಗಿದರು. ಆಕೆ ಯಾವುದಕ್ಕೂ ಸಗ್ಗದೆ, ಗಂಡುಡುಗೆಯನ್ನು ಧರಿಸಿ ತಾನೇ ರಣರಂಗವನ್ನು ಪ್ರವೇಶಿಸಿ ವೀರಾವೇಶದಿಂದ, ಮೈಮರೆತು ಹೋರಾಡುತ್ತ ಮುನ್ನುಗ್ಗಿದಳು. ಶತ್ರುಸೈನ್ಯದಲ್ಲಿ ದಾರಿಮಾಡಿಕೊಂಡು ಮುಂದುವರಿಯುತ್ತ ಕುಮಾರರಾಮನಿದ್ದಲ್ಲಿಗೆ ಬಂದಳು. ಆ ವ್ಯಕ್ತಿಯ ಕೆಚ್ಚನ್ನು ಕಂಡು ಕುಮಾರರಾಮ ಬೆರಗಾಗಿ ಮುಂದೆ ಬಂದು ಕಾಳಗಕ್ಕೆ ಅಣಿಯಾದ. ಕ್ಷಣಕಾಲ ಇಬ್ಬರಿಗೂ ಬಿರುಸಾದ ಕಾಳಗ ಸಾಗಿತು. ಆವೇಶಗೊಂಡು ಕತ್ತಿಯನ್ನು ಮೇಲಕ್ಕೆತ್ತಿ ಹೊಡೆಯಲು ಹೋದಾಗ ಎದುರಿನಲ್ಲಿರುವ ವ್ಯಕ್ತಿ ಸ್ತ್ರೀಯೆಂದು ಅವನಿಗೆ ವಿದಿತವಾಯಿತು. ತತ್‍ಕ್ಷಣವೇ ಕೈ ಹಿಂದೆ ಸರಿಯಿತಲ್ಲದೆ ಕ್ಷಣಕಾಲ ಆತ ತಟಸ್ಥನಾದ. ಪರಸ್ತ್ರೀಯೊಬ್ಬಳ ಮೇಲೆ ಕತ್ತಿಹಿರಿದು ಯುದ್ಧಕ್ಕೆ ನಿಂತಿದ್ದಕ್ಕಾಗಿ ಆತನ ಮನಸ್ಸು ವ್ಯಾಕುಲಗೊಂಡಿತು. ಅದೇ ಸುಸಮಯವೆಂದು ತಿಳಿದ ಮಾತಂಗಿ ಮುನ್ನುಗ್ಗಿ ಕುಮಾರರಾಮನನ್ನು ಸಂಹರಿಸಿದಳು. ಈ ದುರಂತವನ್ನು ನೋಡಿದ ಬೇಡರ ಪಡೆ ದಿಗ್ಭ್ರಾಂತವಾಗಿ ಚದುರಿತು. ಕಂಪಿಲ ಹತಾಶನಾದ. ಶತ್ರುಸೈನಿಕರು ವಿಜಯೋನ್ಮತ್ತರಾಗಿ ಕೋಟೆಯ ಕಡೆ ನುಗ್ಗಿದರು. ಇತರ ವೀರಾಧಿವೀರರು ಎಷ್ಟು ಅಡ್ಡಗಟ್ಟಿ ಹೋರಾಡಿದರೂ ಸಫಲವಾಗಲಿಲ್ಲ. ಕೋಟೆ ಶತ್ರುಗಳ ವಶವಾಯಿತು. ವೀರಪತ್ನಿಯರು ತಮ್ಮ ಧರ್ಮಕ್ಕೆ ಕಟ್ಟುಬಿದ್ದು ಚಿತಾಪ್ರವೇಶ ಮಾಡಿದರು. ಶತ್ರುರಾಜರಿಗೆಲ್ಲ ಸಿಂಹಸ್ವಪ್ನವಾಗಿದ್ದ ಕುಮ್ಮಟದುರ್ಗ, ಮುಸಲ್ಮಾನರ ದಾಳಿಗೆ ಸಿಕ್ಕಿ ಹೇಳಹೆಸರಿಲ್ಲಂದತಾಗಿ ಹಾಳು ಬೀಡಾಯಿತು. ಮಾತಂಗಿ ಕುಮಾರರಾಮನ ರುಂಡವನ್ನು ಚಾರರ ಮೂಲಕ ದೆಹಲಿಗೆ ಕಳುಹಿಸಿಕೊಟ್ಟಳು. ಅದನ್ನು ಕಂಡು ಸುಲ್ತಾನನಿಗೆ ಪರಮಾನಂದವಾಯಿತು. ಆದರೆ ಆತನ ಮಗಳಾದ ಬಾಬಮ್ಮ ಈ ದಾರುಣ ವೃತ್ತಾಂತವನ್ನು ಕೇಳಿದ ಕೂಡಲೆ ವಿರಹೋದ್ರೇಕದಿಂದ ಹತಾಶಳಾಗಿ ಪ್ರಾಣ ತ್ಯಜಿಸಿದಳು. ಕುಮಾರರಾಮನ ರುಂಡ ದೆಹಲಿಯಲ್ಲಿದ್ದಷ್ಟು ಕಾಲವೂ ಅನೇಕ ಅಪಶಕುನಗಳಾಗತೊಡಗಿದುವು. ಆದ್ದರಿಂದ ಅದನ್ನು ಮತ್ತೆ ಕುಮ್ಮಟಕ್ಕೇ ಕಳುಹಿಸಿಕೊಟ್ಟರು. ಅಂದಿನಿಂದ ಕುಮಾರರಾಮನನ್ನು ಜನ ದೈವಾಂಶ ಪುರುಷನೆಂದು ಭಾವಿಸಿ ಪೂಜಿಸಲು ಆರಂಭಿಸಿದರು. ಇಂದಿಗೂ ಆತ ಪರದಾರ ಸೋದರನೆಂದೂ ಅಪ್ರತಿಮ ಪರಾಕ್ರಮಶಾಲಿಯೆಂದೂ ಜನಮನದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿದ್ದಾನೆ. ಕನ್ನಡ ಕವಿಗಳು ಈ ಮಹಿಮಾಪುರುಷನ ಕಥೆಯನ್ನು ಬಗೆಬಗೆಯಾಗಿ ನಿರೂಪಿಸಿ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ.
           ಚಿತ್ತಾಕರ್ಷಕವಾಗಿರುವ ಈ ಕುಮಾರರಾಯನ ಕಥೆಯಲ್ಲಿ ಹಾಸು ಹೊಕ್ಕಾಗಿರುವ ಒಂದೆರಡು ಐತಿಹಾಸಿಕ ಎಳೆಗಳನ್ನು ಬಿಡಿಸಲು ಇಂದಿನ ಚರಿತ್ರಕಾರರು ಪ್ರಯತ್ನಿಸಿದ್ದಾರೆ. ಇಬ್ನ್ ಬತೂತ, ನ್ಯೂನಿಜ್, ಬಾರ್ನಿ ಫೆರಿಸ್ಟಾ ಮತ್ತು ಇಸಾಮಿ ಮೊದಲಾದವರ ಉಲ್ಲೇಖನಗಳಲ್ಲಿ ಕುಮ್ಮಟದುರ್ಗದ ದುರಂತ ವೃತ್ತಾಂತದ ಕಥೆ ಅಲ್ಪ ಸ್ವಲ್ಪ ತಿಳಿದುಬರುತ್ತದೆ. ಕಂಪಿಲ ಮತ್ತು ಅವನ ತಂದೆ ಮುಮ್ಮಡಿ ಸಿಂಗನ ಹೆಸರುಗಳು ಶಾಸನಗಳಲ್ಲಿ ಉಕ್ತವಾಗಿರುವುವಲ್ಲದೆ, ಇವರಿಗೂ ಹೊಯ್ಸಳ ವೀರಬಲ್ಲಾಳನ ದಂಡನಾಯಕರಿಗೂ ನಡೆದ ಯುದ್ಧದ ಪ್ರಸಂಗಗಳೂ ನಿರೂಪಿತವಾಗಿವೆ. ಕುಮಾರರಾಯನ ಸಾಂಗತ್ಯವನ್ನು ಬರೆದಿರುವ ಪ್ರತಿಯೊಬ್ಬ ಕವಿಯೂ ತನ್ನ ಕಾವ್ಯವನ್ನು ನರಚರಿತ್ರೆಯೆಂದು ಅಲ್ಲಗೆಳೆಯಬಾರದೆಂದೂ ಅದು ಪರದಾರ ಸೋದರನೊಬ್ಬನ ವೀರಕಥಾನಕವೆಂದೂ ಅಲ್ಲಿ ಪ್ರತಿಪಾದಿತವಾಗಿರುವ ಶೌರ್ಯ ಮತ್ತು ಶುಚಿತ್ವಗಳು ಆದರ್ಶಪ್ರಾಯವಾದ ಸದ್ಗುಣಗಳೆಂದೂ ಬಿನ್ನವಿಸಿಕೊಂಡಿರುವುದನ್ನು ಗಮನಿಸಿದರೆ ಕುಮಾರರಾಮ ಕಲ್ಪಿತವ್ಯಕ್ತಿಯಲ್ಲವೆಂಬುದು ದೃಢವಾಗುತ್ತದೆ. ಈ ಮಹಿಮಾಪುರುಷನನ್ನು ಕುರಿತ ಶಾಸನಗಳು ಧಾರವಾಡ ಜಿಲ್ಲೆಯ ಸಂಗೂರು, ಬಳ್ಳಾರಿ ಜಿಲ್ಲೆಯ ರಾಮಘಡ, ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೊದಲಾದ ಎಡೆಗಳಲ್ಲಿ ಲಭಿಸಿವೆ. ರಾಮಘಡದ ಶಾಸನದಲ್ಲಿ ಮುಮ್ಮಡಿ ಸಿಂಗನ ಮಗನಾದ ಕಂಪಿಲರಾಯ ಮತ್ತು ಆತನ ಹೆಂಡತಿ ಹರಿಹರದೇವಿಯರ ಪುತ್ರ ರಾಮನಾಥವೊಡೆಯರು ಎಂಬ ವಂಶಾವಳಿ ಸ್ಟಷ್ಟವಾಗಿ ಕಂಡುಬರುವುದರಿಂದ ಈತನೊಬ್ಬ ಐತಿಹಾಸಿಕ ವ್ಯಕ್ತಿಯಾಗಿರಬೇಕೆಂದು ಇತಿಹಾಸಕಾರರು ಭಾವಿಸಿರುತ್ತಾರೆ. ಕಾವ್ಯಗಳಲ್ಲಿ ಉಕ್ತವಾಗಿರುವ ಬಾದೂರನ ಪಲಾಯನಕ್ಕೂ ಐತಿಹಾಸಿಕ ಆಧಾರ ದೊರೆಯುತ್ತದೆ. ಮಹಮ್ಮದ್ ಬಿನ್ ತೊಗಲಕ್ ಪಟ್ಟಕ್ಕೆ ಬಂದ ಕೂಡಲೆ, ಪ್ರಾಂತ್ಯಾಧಿಕಾರಿಯಾಗಿದ್ದ ಆತನ ಬಂಧುವಾದ ಬಹಾಉದೀನ್ ಘುಸ್ಟಾಫ ಎಂಬಾತ ಯಾವುದೋ ವೈಮನಸ್ಯದಿಂದ ರಾಜ್ಯಭ್ರಷ್ಟನಾಗಿ ಹಿಂದೂ ರಾಜನಾದ ಕಂಪಿಲನ ಆಶ್ರಯವನ್ನು ಪಡೆದನೆಂದೂ ಸುಲ್ತಾನನ ಸೇನ ಬೆನ್ನಟ್ಟಿ ಬರಲು ಹಿಂದೂ ರಾಜ ಆತನನ್ನು ಬೇರೊಬ್ಬ ರಾಜನ ಬಳಿಗೆ ಕಳುಹಿಸಿದನೆಂದೂ ಅಲ್ಲಿಯೂ ಸೈನಿಕರು ಹಿಂಬಾಲಿಸಲು, ಆ ದೊರೆ ಬಹಾಉದೀನನ್ನು ಮುಸಲ್ಮಾನರಿಗೆ ಒಪ್ಪಿಸಲು ಅವರು ಆತನನ್ನು ಚಿತ್ರಹಿಂಸೆಗೆ ಗುರಿಮಾಡಿಕೊಂದರೆಂದೂ ಮಹಮ್ಮದೀಯ ಇತಿಹಾಸಕಾರರು ವಿವರಿಸಿರುತ್ತಾರೆ. ಈ ಘಟನೆಯೇ ಇಲ್ಲಿ ಸಂದರ್ಭೋಚಿತವಾಗಿ ಮಾರ್ಪಟ್ಟಿರುವಂತಿದೆ. ಕಂಪಿಲ ಹತನಾದ ಬಳಿಕ ಅವನ ಆಸ್ಥಾನದ ಕೆಲವರು ಕೈಸೆರೆಯಾದರೆಂದೂ ಅವರಲ್ಲಿ ಜೀವಸಹಿತ ಉಳಿದ ಒಬ್ಬಿಬ್ಬರೇ ಮುಂದೆ ವಿಜಯನಗರದ ಸ್ಥಾಪನೆಗೆ ಕಾರಣರಾದರೆಂದೂ ವಾದವಿದೆ. ಒಟ್ಟಿನಲ್ಲಿ, ಐತಿಹಾಸಿಕವಾಗಿದ್ದ ಕೆಲವು ಸಂಗತಿಗಳು ಹೇಗೆ ಕಾಲಕ್ರಮದಲ್ಲಿ ಐತಿಹ್ಯವಾಗಿ ಪರಿಣಮಿಸಿವೆಯೆಂಬುದನ್ನು ವ್ಯಾಸಂಗಮಾಡಲು ಕುಮಾರರಾಮನ ಕಥೆ ಉತ್ತಮ ಸಾಧನವಾಗಿದೆ. ನಂಜುಂಡ ನಿರೂಪಣೆಯಲ್ಲಿ ವಿದಿತವಾಗುವಂತೆ ಕುಮಾರರಾಮನ ವೃತ್ತಾಂತ ಇಂದಿನವರಿಗೆ ಪುಣ್ಯಕಥೆ, ಪೂರ್ವಚರಿತ್ರ ಮತ್ತು ಪುರಾಣವೆನ್ನಿಸಿ ಪ್ರಶಸ್ತಿಪಡೆದಿರುತ್ತದೆ.
           ಕುಮಾರರಾಮನ ಕಥೆ ಕನ್ನಡ ನಾಡಿನಲ್ಲಿ ಎಷ್ಟು ಜನಪ್ರಿಯವಾಗಿದೆ ಎನ್ನಲಿಕ್ಕೆ ಇಂದಿ ಗೂ ಮೇಲಿಂದ ಮೇಲೆ ಬರುತ್ತಿರುವ ಗ್ರಂಥಗಳೇ ಸಾಕ್ಷಿ. ಹುಲ್ಲೂರು ಶ್ರೀನಿವಾಸ ಜೋಯಿಸರ ಗಂಡುಗಲಿ ಕುಮಾರರಾಮ, ಆಲೂರು ವೆಂಕಟರಾಯರ ರಣರಂಗಸಿಂಗನಾದ ಕುಮಾರರಾಮ, ಹುಯಿಲಗೋಳ ನಾರಾಯಣರಾಯರ ಕುಮಾರರಾಮನನ್ನು ಕುರಿತ ನಾಟಕ, ವಸುದೇವ ಭೂಪಾಲಂ ಅವರ ಕುಮ್ಮಟವಲ್ಲಭ, ವರದರಾಜ ಹುಯಿಲಗೋಳರ ರತ್ನಾಜಿ, ಎಂ. ಎಚ್. ರಾಮಶರ್ಮರ ರಣಧೀರ ರಾಮನಾಥ, ದೇಸಾಯಿ ಪಾಂಡುರಂಗರಾಯರ ಕಂಪಿಲ ಕುಮಾರ ಎಂಬ ಸಣ್ಣ ಕಥೆ, ದೇಜಗೌ ಅವರ ಕಡುಗಲಿ ಕುಮಾರರಾಮ ಹಾಗೂ ನಂಜುಂಡಕವಿ. ಜಿ. ವರದರಾಜರಾಯರ ಕುಮ್ಮಟಕೇಸರಿ ಹಾಗೂ ಕುಮಾರರಾಮನ ಸಾಂಗತ್ಯಗಳು ಎಂಬ ಪ್ರೌಢ ನಿಬಂಧ-ಈ ಸಾಹಿತ್ಯಸಂಪತ್ತನ್ನು ನೋಡಬಹುದು.
  






***************

22 ಮಾರ್ಚ್ 2018

ಮುದ್ದಣ (Muddana)

ಮುದ್ದಣ
  • 'ಮುದ್ದಣ' ಎಂಬ ಕಾವ್ಯನಾಮದಿಂದ ಪ್ರಸಿದ್ಧಿಗೆ ಬಂದಿರುವ ಲಕ್ಶ್ಮೀ ನಾರಾಯಣ ಕವಿಯ ಊರು ನಂದಳಿಕೆ. ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಒಂದು ಗ್ರಾಮ. 
  • ಈತನ ಜನನ ಕ್ರಿ. ಶ. ೧೮೭೦ನೆಯ ಜನವರಿ ೨೪ರಂದು . 
  • ಈತನ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ.
ಇವರು ಮದುವೆಯಾಗಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಕಟ್ಟಿಗೆ ಕೋಲು ಹಿಡಿಯುವ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ.ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂ||ರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮಗುವಿನ ಬಾಲಲೀಲೆ ತಾಯಿತಂದೆಯರಿಗೆ ಮೋಹಕವಾಗಿ ಕಂಡಿತು. ಈ ಕಾರಣದಿಂದಾಗಿ ಮಗನನ್ನುಮುದ್ದಿಗಾಗಿ`ಮುದ್ದಣ' ಎಂದು ಕರೆಯಲಾರಂಭಿಸಿದರು. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು. ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಲಕ್ಶ್ಮೀನಾರಾಯಣನು ಓದು ಬರಹ ಕಲಿಯಲು ಪ್ರಾರಂಭಿಸಿದನು. ನಾಲ್ಕೈದು ವರ್ಷಗಳಲ್ಲಿ ಓದು ಬರಹಗಳಲ್ಲಿ ಈತ ತುಂಬ ಬುದ್ಧಿವಂತನಾಗಿ ತೇರ್ಗಡೆಯಾದನು. ಇದೇ ವೇಳೆಗೆ ಹುಟ್ಟಿದ ಊರಿನ ಸಹಜಸುಂದರವಾದ ನಿಸರ್ಗ ಸೌಂದರ್ಯ ಈ ಬಾಲಕನ ಮೇಲೆ ಒಳ್ಳೆಯ ಪರಿಣಾಮವನ್ನು ಉಂಟುಮಾಡಿರಬೇಕು. ಗದ್ದೆ, ಹೊಲ ತೋಟ ಕೆರೆ ಕಟ್ಟೆ, ಕಾಲುವೆ ಹೊಳೆ ಕಡಲು ಗುಡ್ಡ ಬೆಟ್ಟ ಕಾಡು ಕಣಿವೆ -ಮುಂತಾದ ಪ್ರಕೃತಿಯ ನೋಟಗಳು ಕವಿಗೆ ವಿಸ್ಮಯಕಾರಿಯಾಗಿ ಕಂಡಿರಬೇಕು. ಜೊತೆಗೆ ಆಗಿನ ದಿನಗಳಲ್ಲಿ ನಡೆಯುತ್ತಿದ್ದ ದೇವಸ್ಥಾನದ ಉತ್ಸವಗಳು, ನೆರೆಯ ಊರಿನ ಜಾತ್ರೆ, ಸಿರಿ ಜಾತ್ರೆ, ಪರಿಷೆ, ರಥೋತ್ಸವಾದಿಗಳು, ಹರಿಕಥೆ, ಪುರಾಣ ಶ್ರವಣ, ಭಾಗವತಸಂಕೀರ್ತನ,ರಾಮಾಯಣ ಪಾರಾಯಣ ಮುಂತಾದವುಗಳು, ಉಗಾದಿ, ಗೌರಿ-ಗಣೇಶ, ನವರಾತ್ರಿ, ದೀಪಾವಳಿ, ಸಂಕ್ರಾಂತಿ, ಮುಂತಾದ ದೊಡ್ಡ ದೊಡ್ಡ ಹಬ್ಬ ಹರಿದಿನಗಳು ಈ ಬಾಲಕನ ಹೃದಯವನ್ನು ಸೂರೆಗೊಂಡಿರಬೇಕು. ಈ ವಿಧವಾದ ಶಾಲೆಯ, ಸೃಷ್ಟಿಯ, ಸಂಸ್ಕೃತಿಯ ಈ ಮೂರು ಬಗೆಯ ಸಂಗತಿಗಳಿಂದ ಬಾಲಕ ಲಕ್ಷ್ಮೀನಾರಾಯಣನ ಕವಿ ಹೃದಯ ಪ್ರೇರಣೆ ಪಡೆದಿರಬೇಕು. ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿ ನಡೆಯಿತು.ಮುಂದಿನ ಶಿಕ್ಷಣಕ್ಕಾಗಿ ಈ ಬಾಲಕ ಉಡುಪಿಗೆ ಹೋದನು. ಅಲ್ಲಿ ಇಂಗ್ಲೀಷ್ ಶಾಲೆಗೆ ಸೇರಿ ಒಂದೆರಡು ವರ್ಷ ಕಲಿತನು. ಆ ಮೇಲೆ ಬಡತನದ ದೆಸೆಯಿಂದ ಅದನ್ನು ಬಿಟ್ಟು ಟ್ರೈನಿಂಗ್ ಶಾಲೆಗೆ ಸೇರಿದನು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದನು. ಇಅದರ ಮೇಲೆ ಉಡುಪಿ ಪಟ್ಟಣದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗಗಳಿಗೆ ಪದೇ ಪದೇ ಹೋಗುತ್ತಿದ್ದನು. ಶಾಸ್ತ್ರೀಯವಾದ ಸಂಗೀತವನ್ನು ಅಭ್ಯಾಸ ಮಾಡುವುದನ್ನೂ ಪ್ರಯತ್ನ ಪಟ್ಟನು. ಯಕ್ಷಗಾನ ವೇಷ, ಹಾಡು,, ಕುಣಿತ ಇವು ಹುಡುಗನ ಮೇಲೆ ಪ್ರಭಾವ ಬೀರಿದವು. ತಾನೂ ವೇಷ ಕಟ್ಟಿ ಕುಣಿದನು. ಹಾಡು ಕಟ್ಟಿ ಹಾಡಿದನು.ಹೀಗೆ ಹತ್ತು ಹದಿಮೂರು ವರ್ಷ ಉಡುಪಿಯಲ್ಲಿ ಇದ್ದ ದಿನಗಳಲ್ಲಿ ಟ್ರೈನಿಂಗ್ ಕಾಲೇಜಿನಲ್ಲಿ ಉತ್ತೀರ್ಣನಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದನು. ಮುಂದೆ ಗಟ್ಟಿ ಮುಟ್ಟಾಗಿ ಕಂಡುಬಂದ ಈ ಹುಡುಗನನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಈತ ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು, , ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದನೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆಉಡುಪಿಯಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. `ಸಂಬಳ ತಿಂಗಳ ಮೂವತ್ತು ದಿನಗಳೂ ದುಡಿದರೂ ಹತ್ತು ರೂಪಾಯಿ! ಈ ಕವಿ ಅಂಗಸಾಧನೆಯ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದನೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರು ಇವನಿಗೆ ಗುರುವಾಗಿ ದೊರೆತರು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣನಿಗೆ ಓದಲು ಕೊಟ್ಟರು.ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಅವನಿಗೆ ಕೊಟ್ಟರು. ಲಕ್ಶ್ಮೀನಾರಾಯಣನು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದನು. ತನಗೂ ಅಂತಹ ಕೃತಿಗಳನ್ನು ರಚಿಸುವ ಅಭಿಲಾಷೆಯನ್ನು ಗುರುಗಳಲ್ಲಿ ಭಿನ್ನವಿಸಿಕೊಂಡನು. ಗುರುಗಳು ಸಂತೋಷದಿಂದ ಒಪ್ಪಿ ಸಂಸ್ಕೃತದ ರತ್ನಾವಳಿ ನಾಟಕದ ಕಥಾನಕವನ್ನು ಹೇಳಿ ಬರೆಯಿಸಿದರು. ಮಳಲಿ ಗುರುಗಳ ಕೃಪೆಯಿಂದ ಲಕ್ಶ್ಮೀನಾರಾಯಣನು `ರತ್ನಾವತಿ ಕಲ್ಯಾಣ' ಎಂಬ ತನ್ನ ಚೊಚ್ಚಲ ಕೃತಿಯನ್ನು ರಚಿಸಿ ಕವಿಯಾದನು. ಮುಂದೆ`ಕುಮಾರವಿಜಯ' ಎಂಬ ಇನ್ನೊಂಡು ಯಕ್ಷಗಾನ ಪ್ರಸಂಗವನ್ನು ಬರೆದು ಸಂಸ್ಕೃತ ಅದ್ಭುತ ರಾಮಾಯಣವನ್ನು ಗುರುಗಳಲ್ಲಿ ಓದಿ ಅದನ್ನು ಹಳೆಗನ್ನಡದಲ್ಲಿ ಗದ್ಯದಲ್ಲಿ ಸ್ವತಂತ್ರವಾದ ಕೃತಿಯನ್ನಾಗಿ ರಚಿಸಲು ತೊಡಗಿದನು. ಈ ನಡುವೆ ಸಂಸ್ಕೃತ ಹಳಗನ್ನಡ ಕಾವ್ಯನಾಟಕಗಳನ್ನು ಅಭ್ಯಾಸ ಮಾಡಿದನು. ಸಾಹಿತ್ಯದ ಉಪಾಸನೆಯನ್ನು ಒಂದು ತಪ್ಪಸ್ಸೆಂಬಂತೆ ಕೈಕೊಂಡನು. ಮುಂದೆ ಮಳಲಿಯವರಿಗೆ ಕುಂದಾಪುರಕ್ಕೆ ವರ್ಗವಾದಾಗ ೧೮೯೨ನೆ ಮಾರ್ಚಿನಲ್ಲಿ ಲಕ್ಶ್ಮೀನಾರಾಯಣನೂ ಕಷ್ಟಪಟ್ಟು ಅದೇ ಊರಿಗೆ ವರ್ಗ ಮಾಡಿಸಿಕೊಂಡನು. ಕನ್ನಡ`ಅದ್ಭುತ ರಾಮಾಯಣ'ವೆಂಬ ಗದ್ಯ ಕಾವ್ಯ ಈ ವೇಳೆಗೆ ಪೂರ್ತಿಯಾಯಿತು.೧೮೯೫ನೆ ಮಾರ್ಚ್ ೨ರಲ್ಲಿ ಲಕ್ಶ್ಮೀನಾರಾಯಣನು ಅನ್ಯ ಕತೃವೆಂಬ ಸೋಗಿನಲ್ಲಿ ಈ ಕೃತಿಯನ್ನು ಮೈಸೂರಿನ ಕಾವ್ಯಮಂಜರಿ ಸಂಪಾದಕರಿಗೆ ಮುದ್ರಣಕ್ಕಾಗಿ ಕಳುಹಿಸಿಕೊಟ್ಟನು. ೧೮೯೫ನೆ ಜುಲೈ ತಿಂಗಳ ಸಂಚಿಕೆಯಲ್ಲಿ ಮುದ್ರಣ ಪ್ರಾರಂಭವಾಗಿ ಅಕ್ಟೋಬರ್ ತಿಂಗಳ ಸಂಚಿಕೆಯಲ್ಲಿ ಮುಕ್ತಾಯವಾಯಿತು. ಈ ವೇಳೆಗೆ ಲಕ್ಶ್ಮೀನಾರಾಯಣನಿಗೆ ಬವುಲಾಡಿ ವೆಂಕಟರಮಣ ಹೆಬ್ಬಾರರು ಎಂಬ ವಿದ್ವಾಂಸರೊಬ್ಬರ ಪರಿಚಯಲಾಭ ದೊರೆಯಿತು. ಈ ಮಹನೀಯರಲ್ಲಿ ಲಕ್ಶ್ಮೀನಾರಾಯಣನು ತಾನು ಕನ್ನಡ ಜೈಮಿನಿ ಭಾರತದ ಮಾದರಿಯಲ್ಲಿ ಬರೆಯಲು ತೊಡಗಿದ್ದ `ರಾಮಾಶ್ವಮೇಧ' ಎಂಬ ದೊಡ್ಡ ಗ್ರಂಥದ ಮೊದಮೊದಲಿನ ಕೆಲವು ಪದ್ಯಗಳನ್ನು ಓದಿ ಹೇಳಿದನಂತೆ. ಹೆಬ್ಬಾರರು ಪದ್ಯಬಂಧದಲ್ಲಿ ಕಾಣ ಬರುವ ರಸಹೀನತೆಯನ್ನು ತೋರಿಸಿಕೊಟ್ಟು ಪ್ರಾಚೀನ ಗ್ರಂಥಗಳಲ್ಲಿ ದೊರೆಯದ ಶಬ್ದರೂಪಗಳಿಗೆ ಆಧಾರಗಳನ್ನು ಕೇಳುತ್ತ ಬಂದರಂತೆ. ಮೂರು ನಾಲ್ಕು ವರ್ಷಗಳು ಕಳೆದ ಮೇಲೆ ಮತ್ತೊಮ್ಮೆ ಲಕ್ಶ್ಮೀನಾರಾಯಣನು ಹೆಬ್ಬಾರರನ್ನು ಸಂಧಿಸಿದಾಗ ಅವರಿಗೆ ಆ ರಾಮಾಶ್ವಮೇಧದ ಇನ್ನೂಕೆಲವು ಪದ್ಯಗಳನ್ನು ಓದಿದರಂತೆ.
        ಆಗ ಅವರು ಖಡಾಖಡಿಯಾಗಿ `ನೀವು ಹೀಗೆ ಬರೆಯುವುದಕ್ಕಿಂತ ಛಂದಸ್ಸಿನ ಗೊಡವೆ ಬಿಟ್ಟು ವಚನ ರೂಪದಲ್ಲಿ ಏಕೆ ಬರೆಯಬಾರದು' ಎಂದು ಕೇಳಿದರಂತೆ. ಮತ್ತೆ ಮೂರು ವರ್ಷಗಳ ಮೇಲೆ ಇನ್ನೊಮ್ಮೆ ಸಂಧಿಸಿದಾಗ ಲಕ್ಶ್ಮೀನಾರಾಯಣನು ತನ್ನ ಅಚಾದ `ಅದ್ಭುತ ರಾಮಾಯಣವ'ದ ಪ್ರತಿಯೊಂದನ್ನು ಹೆಬ್ಬಾರರಿಗೆ ಕೊಟ್ಟಾಗ ಅವರು ಓದಿ ನೋಡಿ ಸಂತೋಷಪಟ್ಟರಂತೆ. ಇನ್ನೊಮ್ಮೆ ಸಂಧಿಸಿದಾಗ `ರಾಮಪಟ್ಟಾಭಿಷೇಕ' ಮುಗಿಯಿತೆಂದೂ ಮುಂದಿನ ಭಾಗವನ್ನು ಗದ್ಯದಲ್ಲಿ ಬರೆಯುವೆನೆಂದೂ ಈ ಕವಿ ಹೆಬ್ಬಾರರಿಗೆ ಹೇಳಿದನಂತೆ. ಅಲ್ಲದೇ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಹೆಬ್ಬಾರರೆ ಕೊಡಬೇಕೆಂದು ಕೇಳಿಕೊಂಡನಂತೆ. ಅದಕ್ಕೆ ಹೆಬ್ಬಾರರು ಒಪ್ಪಿ `ಭೂರಮೆ ಭುಜಾಗ್ರದೊಳ್ ಭುಜಮಧ್ಯದೊಳ್' ಎಂಬ ಪದ್ಯವನ್ನು ಆರಂಭಿಸಿ `ಇಂತು ಮೃದುಮಧುರವಚನರಚನೆಗಳಂ' ಎಂಬ ಪದ್ಯದವರೆಗೆ ನಡುವಣ ೩೩ ಪದ್ಯಗಳನ್ನು ಬರೆದುಕೊಟ್ಟರಂತೆ. ಅಲದೇ ಒಟ್ಟಿನಲ್ಲಿ ಕಾವ್ಯವನ್ನು ಒಮ್ಮೆ ಕೈಯಾಡಿಸಿದರಂತೆ. ಹೀಗೆ ಹೆಬ್ಬಾರರ ಸಲಹೆ ಸಹಕಾರಗಳಿಂದ ಲಕ್ಶ್ಮೀನಾರಾಯಣನು `ಶ್ರೀರಾಮಪಟ್ಟಾಭಿಷೇಕ' ವನ್ನು ಪೂರ್ತಿಗೊಳಿಸಿದನು. ೨೫-೯-೧೮೯೫ರಲ್ಲಿ `ಮಹಾಲಕ್ಶ್ಮಿಯೆಂಬಾಕೆಯಿಂದ ರಚಿತವಾದ ರಾಮಪಟ್ಟಾಭಿಷೇಕ ವೆಂಬ ಷಟ್ಪದಿ ಗ್ರಂಥವು ಸಿಕ್ಕಿದೆ. ಅದರಲ್ಲಿ ಪದ್ಯಗಳು ೨೫೦ರೊಳಗಿವೆ. ಗ್ರಂಥವು ಬಹಳಚೆನ್ನಾಗಿದೆ. ಮುದ್ರಿಸಲು ಯೋಗ್ಯವೆಂದು ಬ್ ಹಾವಿಸುತ್ತೇನೆ...' ಎಂದು ಕಾವ್ಯಮಂಜರಿಯವರಿಗೆ ಬರೆದನು. ೧೮೯೫ನೆಯನವೆಂಬರ್ ೪೪ನೆ ಸಂಚಿಕೆಯಲ್ಲಿ ಎಂದರೆ `ಅದ್ಭುತ್ ರಾಮಾಯಣ' ವನ್ನು ಮುಗಿಸಿದ ಸಂಚಿಕೆಯಲ್ಲಿಯೇ ರಾಮಪಟ್ಟಾಭಿಷೇಕವನ್ನು ಆರಂಭ ಮಾಡಿ ೧೮೯೬ನೆಯ ಜನವರಿ ೪೬ನೆಯ ಸಂಚಿಕೆಯಲ್ಲಿ ಮುಗಿಸಿದರು.
         ರಾಮಪಟ್ಟಾಭಿಷೇಕ ಕಾವ್ಯದಲ್ಲಿ ನಾಂದಿ ಸಂಧಿಯಲ್ಲಿ ಬರುವ ಪ್ರತಿ ಪದ್ಯದ ಅಕ್ಷರವನ್ನು ಜೋಡಿಸುತ್ತ ಹೋದರೆ `ಶ್ರೀ ರಾಮಚಂದ್ರಾಯ ನಮಾಮಿ' ಎಂದಾಗುತ್ತದೆ. ಈ ಗೂಢರಚನೆಯ ಸ್ವಾರಸ್ಯವನ್ನು ಈತನೇ ಹೆಬ್ಬಾರರಿಗೆ ತೋರಿಸಿ ಕೊಟ್ಟಿದ್ದನಂತೆ. `ರಾಮಾಶ್ವಮೇಧ' ಎಂದು ಪ್ರಾರಂಭವಾದ ಕೃತಿ ಹೀಗೆ`ರಾಮಪಟ್ಟಾಭಿಷೇಕ ಕಾವ್ಯವಾಗಿ ಬೇರ್ಪಟ್ಟಾಗ ಅದಕ್ಕೆ ಅನುಗುಣವಾಗಿ ಅಲ್ಲಲ್ಲಿ ಪದಗಳ ಬದಲಾವಣೆ ಆಗಬೇಕಾಯಿತು. `ಶ್ರೀಕಾಂತನಧ್ವರದಚಾರಿತ್ರ್ಯಮಂ' ಎನ್ನುವ ಕಡೆ ಬದಲಾವಣೆಯಾಗದಿದ್ದುದನ್ನು ಹೆಬ್ಬಾರರು ತೋರಿಸಿಕೊಟ್ಟು `ಅಭ್ಯುದಯಚಾರಿತ್ರ್ಯಮಂ' ಎಂದು ತಿದ್ದಿದರಂತೆ. ಮುಂದೆ ಲಕ್ಶ್ಮೀನಾರಾಯಣನಿಗೆ ಮತ್ತೆ ಉಡುಪಿಗೆ ವರ್ಗವಾದುದರ ಪರಿಣಾಮವಾಗಿ ಹೆಬ್ಬಾರರ ಸಂಪರ್ಕ ಕಡಿಮೆಯಾಗಿ ಬರಬರುತ್ತ ಕಡೆಗೊಮ್ಮೆ ಕಡಿದೇ ಹೋಯಿತೆಂದು ತೋರುತ್ತದೆ. `ಪದ್ಯಂ ವಧ್ಯಂ ಗದ್ಯಂ ಹೃದ್ಯಂ; ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು' ಎಂದು ಮುಂದೆ ಕವಿ ನಿರ್ಧರಿಸಿದನು. ಹೆಬ್ಬಾರರ ಪ್ರೇರಣೆಯಿಂದ ಈ ನಿರ್ಧಾರಕ್ಕೆ ಬಂದು ಅದರಂತೆ ರಾಮಪಟ್ಟಾಭಿಷೇಕದ ಮುಂದಣ ಕಥೆಯನ್ನು ಗದ್ಯದಲ್ಲಿ ಬರೆಯುತ್ತಾನೆ. ಜೈಮಿನಿ ಭಾರತದ ಹೃದ್ಯವಾದ ಸೀತಾಪರಿತ್ಯಾಗದ ಕಥೆಯನ್ನು ರಾಮನ ಅಶ್ವಮೇಧ ವೃತ್ತಾಂತವನ್ನು ಸುಂದರೆವಾಗಿ ಗದ್ಯದಲ್ಲಿ ಹೇಳಿದನು. ವೆಂಕಟಾಚಾರ್ಯರ ಕಾದಂಬರಿಯನ್ನು ಈತ ಓದಿದ್ದನೋ ಏನೋ! ಆ ಕಾದಂಬರಿಯ ಕಥೆಯ ಸಂವಾದ ಸ್ವಾರಸ್ಯವನ್ನು ಗ್ರಹಿಸಿ ಮುದ್ದಣ-ಮನೋರಮೆಯರ ಅಪೂರ್ವವಾದ ಮುದ್ದಣ-ಮನೋರಮೆಯರ ಸರಸ ಸಲ್ಲಾಪವನ್ನು ಕಥೆಯಲ್ಲಿ ಬಳಸಿಕೊಂಡು ಕಥೆ ಹೇಳಿದನು. ಎಡೆ ಎಡೆಯಲ್ಲಿ ಸಕ್ಕದ ಕನ್ನಡ ನಲ್ನುಡಿಯನ್ನು ಮೆರೆಯಲು ತಿರುಳ್ಗನ್ನಡದಲ್ಲಿ ಈ ಕಥೆ ಬರೆದನು. ಈ ಗ್ರಂಥವೂ ಮೈಸೂರಿನ ಕಾವ್ಯಕಲಾನಿಧಿಯವರಿಂದ ೧೯೧೧ರಲ್ಲಿ ಬೆಳಕಿಗೆ ಬಂದಿತು. ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಸಂವಾದದ ವಾಕ್ಯಗಳು ಜನಪ್ರಿಯವಾದವು. ಎಲ್ಲ ಪತ್ರಿಕೆಗಳೂ ಕೃತಿಯನ್ನು ಕತೃವನ್ನು ಹೊಗಳಿದವು. ಕೆಲವು ಇಂಗ್ಲಿಷ್ ಪತ್ರಿಕೆಗಳು ಈ ಕವಿಯ ಕೃತಿಯನ್ನು ಕೊಂಡಾಡಿದವು. ಲಕ್ಶ್ಮೀನಾರಾಯಣನ ಸಾಹಿತ್ಯ ಸಂಬಂಧವಾದ ಜೀವನ ಚರಿತ್ರೆಯ ಈ ಘಟ್ಟದಲ್ಲಿ ಅವನ ಕುಟುಂಬಜೀವನಕ್ಕೆ ಸಂಬಂಧಪಟ್ಟ ಕೆಲವು ಸಂಗತಿಗಳನ್ನು ನೆನೆಯಬಹುದು. ೧೮೯೩ರಲ್ಲಿ ತನ್ನ ಇಪ್ಪತ್ತೈದನೆ ವಯಸ್ಸಿನಲ್ಲಿ ಈ ಕವಿ ಮದುವೆಯಾದನು. ಈತನ ಹೆಂಡತಿಯ ಹೆಸರು ಕಮಲಾಬಾಯಿ ಎಂದು. ಮೈಸೂರು ಸೀಮ್ಯ ಶಿವಮೊಗ್ಗಾ ಜಿಲ್ಲೆಯ ಕಾಗೇಗೋಡುಮಗ್ಗಿ ಇವಳ ತವರು. ಈಕೆಯ ತಂದೆ ನಾರಣಪ್ಪಯ್ಯಾ ಎನ್ನುವವರು. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ. ರಾಮಾಶ್ವಮೇಧಗಳನ್ನು ಬರೆಯುವ ಕಾಲಕ್ಕೆ ಕವಿ ಮದುವೆಯಾಗಿ ದಾಂಪತ್ಯ ಜೀವನ ಸುಖವನ್ನು ಅನುಭವಿಸುತ್ತಿದ್ದನು. ರಾಮಾಶ್ವಮೇಧದಲ್ಲಿ ಬರುವ ಮುದ್ದಣ-ಮನೋರಮೆಯರ ಸರಸ ಸಂವಾದ ಭಾಗ ರಸಿಕ ಲಕ್ಶ್ಮೀನಾರಾಯಣನ ಸರಸ ಸಂಸಾರ ಚಿತ್ರದ ಒಂದು ಮುಖ ಎನ್ನಬಹುದು. ಈತನಿಗೆ ಮೂವತ್ತು ವರ್ಷವಾದಾಗ (೧೮೯೮)ಒಬ್ಬ ಮಗ ಹುಟ್ಟಿದನು. ಈತನಿಗೆ ರಾಧಾಕೃಷ್ಣನೆಂದು ಹೆಸರಿಟರು. ಈ ಕವಿಯ ಸಾಹಿತ್ಯ ಸಂಬಂಧವಾದ ಚಟುವಟಿಕೆಗಳನ್ನು ಶ್ರೀ ಪಂಜೆ ಮಂಗೇಶ ರಾಯರು ಶ್ರೀ ಬೆನಗಲ್ ರಾಮರಾಯರು ಮುಂತಾದವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಪ್ರಭಾವವನ್ನು ಬೀರಿರುವುದು ಕ್ಂಡು ಬರುತ್ತದೆ. ಅವಿಶ್ರಾಂತವಾದ ಮಾನಸಿಕ ಪರಿಶ್ರಮದಿಂದಲೂ ದಿನನಿತ್ಯದ ದಾರಿದ್ರ್ಯದ ಕಷ್ಟಕೋಟಲೆಗಳಿಂದಲೂ ಬಳಲಿ ಬೆಂಡಾದ ಲಕ್ಶ್ಮೀನಾರಾಯಣನು ರೋಗಗ್ರಸ್ತನಾಗಿ ಹಾಸಿಗೆ ಹಿಡಿದನು. ಕ್ಷ್ಯಯರೋಗಕ್ಕೆ ತುತ್ತಾಗಿ ಕೆಲಕಾಲ ನರಳಿದನು. ಕೊನೆಗೆ ಲಕ್ಶ್ಮೀನಾರಾಯಣನು ೧೯೦೧ ಫೆಬ್ರುವರಿ ೧೫ನೆಯ (ಶಾರ್ವರಿ ಸಂ||ದ ಮಾಘಬಹುಳ ೧೨) ಶುಕ್ರವಾರ ತನ್ನ ಮೂವತ್ತೊಂದನೆಯ ವರ್ಷ ಕಳೆದ ಕೆಲವೇ ದಿನಗಳಲ್ಲಿ ಅಕಾಲಮೃತ್ಯುವಿಗೆ ತುತ್ತಾಗಿ ಕಾಲವಶನಾದನು.
  • ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
  • ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
  • ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
*********

07 ಫೆಬ್ರವರಿ 2018

ಪುರಂದರದಾಸರು

ಪುರಂದರದಾಸರ ಪರಿಚಯ


ಇವರ ಕಾಲ: ೧೪೮೦ – ೧೫೬೪
ಇವರ ಪೂರ್ವದ ಹೆಸರು: ಶ್ರೀನಿವಾಸ ನಾಯಕ
ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. 
ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. 
ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.
  • ಇವರ ಮೊದಲ ಹೆಸರು ಶ್ರೀನಿವಾಸನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆಯ ಹೆಸರು ವರದಪ್ಪ ನಾಯಕ, ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ.
  • ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.

ಪುರಂದರ ದಾಸರ ಬಗೆಗಿನ ಐತಿಹ್ಯ

ಬ್ರಾಹ್ಮಣನಿಗೆ ಕೊಟ್ಟ ಮೂಗೂತಿ ಹೇಗೆ ಬಂದಿತು? (ಚಿತ್ರಕೃಪೆ:ಕಣಜ)
  • ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರ ಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. *ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿ ದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ.
  • ಶ್ರೀನಿವಾಸ ಅಂಗಡಿಗೆ ಹೋಗಿ ನೋಡಿದಾಗ ಪೆಟ್ಟಿಗೆ ಬರಿದಾಗಿತ್ತು
    (ಚಿತ್ರಕೃಪೆ:ಕಣಜ)
  • ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ.

  • ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದು ಕೊಂಡ ನಂತೆ. ದೇವರ ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರ ದಾಸ' ಎಂಬ ಹೆಸರನ್ನು ಪಡೆದು

ಕವಿ ಮತ್ತು ಸಂಗೀತಗಾರ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:
"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"
  • ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ)
  • ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ.
  • ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು.
  • ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ....
(ಮಾಹಿತಿ ಕೃಪೆ: ವಿಕಿಪೀಡಿಯಾ )

ಅಂಚೆ ಇಲಾಖೆಯು ಇವರ ಪುರಂದರದಾಸರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದೆ. 
 



******************

ಕನಕದಾಸರು

ಕನಕದಾಸರ ಪರಿಚಯ

ಜನನ: ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ೧೫೦೮ ರಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ಸಾಧನೆ: ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. 
ಇವರ ಕೀರ್ತನೆಗಳ ಅಂಕಿತ: ಕಾಗಿನೆಲೆಯ ಆದಿಕೇಶವರಾಯ

       ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).
   ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ.
     ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ.
    ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತ ಶಕ ೧೨೩೮ (ಶಕವರ್ಷ ೧೧೬೦ ಹೇವಿಳಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖ ಮಾಡಿ ಪ್ರತಿಷ್ಠಾಪಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ.
      ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.
      ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು, ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿ ತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾರ್ಷ್ಟ್ಯವೂ ಕನಕರಿಗಿರಲಿಲ್ಲ.
        ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.
ಸಾಹಿತ್ಯ ರಚನೆ
        ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು ೩೧೬ ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. 

ಕನಕದಾಸರ ಐದು ಮುಖ್ಯ ಕಾವ್ಯಕೃತಿಗಳು:
  • ಮೋಹನತರಂಗಿಣಿ
  • ನಳಚರಿತ್ರೆ
  • ರಾಮಧಾನ್ಯ ಚರಿತೆ
  • ಹರಿಭಕ್ತಿಸಾರ
  • ಮೋಹನತರಂಗಿಣಿ 
  • ನೃಸಿಂಹಸ್ತವ (ಉಪಲಬ್ದವಿಲ್ಲ)


ಮೋಹನತರಂಗಿಣಿ: ಇದು ೪೨ ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ. 

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ 

ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು 

ನಳಚರಿತ್ರೆ : ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: 

ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗು
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ

ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತೆ: ಇದು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ ೧೫೬ ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ/ಭತ್ತ (ವ್ರೀಹಿ) ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ(ನರದೆಲಗ) ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. 
ನುಡಿಗೆ ಹೇಸದ ಭಂಡ ನಿನ್ನೊಳು
ಕೊಡುವರೇ ಮಾರುತ್ತರವ
ಕಡುಜಡವಲಾ, ನಿನ್ನೊಡನೆ ಮಾತೇಕೆ?
ಹೆಣದ ಬಾಯಿಗೆ ತುತ್ತು ನೀನಹೆ
ನಿನ್ನ ಜನ್ಮ ನಿರರ್ಥಕವಲಾ ಎಲವೂ
ನೀನೆಲ್ಲಿಹೆಯೋ ನಿನ್ನಯ ಬಳಗವದು..
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರ: ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. 
        ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕೀರ್ತನೆಗಳು: ಕನಕದಾಸರು ೩೧೬ ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ. 
        ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು. 'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.
       ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. 
ಕುಲಕುಲವೆನ್ನುತಿಹರು ಕುಲವಾವುದು  ಸತ್ಯ ಸುಖವುಳ್ಳ ಜನರಿಗೆ.
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .
        ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ 
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ 
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ 
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/

ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/

ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/

* ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು ೧೯೬೦ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ.


29 ಸೆಪ್ಟೆಂಬರ್ 2016

ಲಕ್ಷ್ಮೀಶ ಕವಿ

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ




              ಪೋಷಕರ ಅಸೆಯನ್ನು ನೆರೆವೆರಿಸುವ ಮಕ್ಕಳನ್ನು ನೀವು ಕಂಡಿರಬಹುದು. ಕರ್ನಾಟಕದ ಸಾಹಿತ್ಯದ ಇತಿಹಾಸದಲ್ಲಿ ತಂದೆಯ ಆಸೆಯಂತೆ ಮಗನು ಜೈಮಿನಿ ಋಷಿಗಳು ಸಂಸ್ಕೃತದಲ್ಲಿ ಬರೆದ ಭಾರತವನ್ನು ಕನ್ನಡದಲ್ಲಿ ರಚಿಸಿದ. ಪಂಪ, ರನ್ನ ಮತ್ತು ಕುಮಾರವ್ಯಾಸರನ್ನು ನೀಡಿದ ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ವಿಶಿಷ್ಟ ರೀತಿಯಲ್ಲಿ ಗುರುತಿಸಿ ಕೊಂಡ ಮಹಾಕವಿ ಯಾರು ಗೊತ್ತೇ .

ಆತನೇ ಚಿಕ್ಕಮಗಳೂರಿನ ಕಡೂರು ತಾಲೂಕು ದೇವನೂರು ಗ್ರಾಮದ ಶ್ರೀಕಾಂತ ಮುಂದೆ `ಲಕ್ಷ್ಮೀಶ' ಎಂದು ಪ್ರಸಿದ್ಧಿ ಪಡೆದು 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ.

ಸಾಲ ಸಾಲಂಗಳಿಂ ಬಕುಳ ಕುಳ ದಿಂದೆ ಹಿಂ
ತಾಳ ತಾಳಗಳಿಂ ಮಾದಲದಲರ್ಗಳಿಂ ತ
ಮಾಲ ಮಾಲತಿಗಳಿಂ ಸಂರಂಭ ರಂಭ ದಿಂದ ಮಂದ ಮಂದಾರದಿಂದೆ….


         ಈ ಮೇಲಿನ ಪದ್ಯ ನೋಡಿದರೆ ಒಂದು ಸ್ವಾರಸ್ಯ ಇದೆ. ಒಂದೇ ಪದ ವನ್ನ ಎರಡು ಬಾರಿ ಉಪಯೋಗಿಸಿರುವುದು. ಸಾಲ, ತಾಳ, ದಲ ಕುಳ, ಮಾಲ, ರಂಭ. ಇದು ವಾರ್ಧಕ ಷಟ್ಪದಿಯಲ್ಲಿ ಅನುಪ್ರಾಸ ಅಲಂಕಾರದಲ್ಲಿ ನಿಬಧ್ಧ ವಾಗಿರುವ ಒಂದು ಪದ್ಯದ ಮೂರು ಸಾಲುಗಳು. ಇಂತಹ ಸುಂದರವಾದ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ, ಕರ್ನಾಟ ಕವಿ ಚೂತವನ ಚೈತ್ರ ಎಂದು ಬಿರುದಾಂಕಿತ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಲಕ್ಷ್ಮೀಶನ ಜನ್ಮ ಸ್ಥಳ. ಅಣ್ಣಯ್ಯ ದಂಪತಿಗಳಿಗೆ ಚೈತ್ರ ಶುಧ್ಧ ಹುಣ್ಣಿಮೆಯಂದು ಜನಿಸಿದ ಶ್ರೀಕಾಂತ ಮುಂದೆ ಲಕ್ಷ್ಮೀಶನಾಗಿ ಪ್ರಸಿಧ್ಧಿ ಹೊಂದಿದ. ತಂದೆಗೆ ಮಗ ಕೀರ್ತಿಶಾಲಿಯಾಗಬೇಕು ಮತ್ತು ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಮಹದಾಸೆಯಿಂದ ಮಗನಿಗೆ ದಿನಕ್ಕೊಂದು ಕತೆ ಹೇಳಿ ಮಗನ ಯೋಚನಾ ಶಕ್ತಿಗೆ ನೀರೆರೆದ. ಜೈಮಿನಿ ಎಂಬ ಋಷಿ ಸಂಸ್ಕೃತದಲ್ಲಿ ಬರೆದದನ್ನು ಕನ್ನಡದಲ್ಲಿ ಬರೆ,ಇದು ನನ್ನ ಆಸೆ ಎಂದ ಮಗನಲ್ಲಿ ತನ್ನ ಮನದಾಳದ ಇಂಗಿತವನ್ನು ಮತ್ತು ಅವನ ಜೀವನದ ಉದ್ದೇಶವನ್ನು ತಿಳಿಸಿದ.
          ದೇವರ ಅನುಗ್ರಹದಿಂದ ಮತ್ತು ಪ್ರಾರ್ಥನೆಯಿಂದ ಅವನಿಗೆ ಚಮತ್ಕಾರವಾಗಿ ಜೈಮಿನಿ ಕವಿಯ ಭಾರತದ ಪ್ರತಿ ಸಿಗುತ್ತದೆ. ಅವನ ಅಂತರಂಗದಲ್ಲಿ “ನೀನು ದೇವನೂರಿಗೆ ಹೋಗಿ ದೇವರಗುಡಿಯಲ್ಲೇ ಬರೆ, ನೀನು ಕವಿಯಾಗಬಲ್ಲೆ ” ಎಂದು ಕೇಳಿಸುತ್ತದೆ. ಕವಿ ಕಾವ್ಯ ರಚನೆಯನ್ನು ಶುರುಮಾಡುತ್ತಾನೆ.

"ವೀಣೆಯಿಂ ಗಾನಮಂ ನುಡಿಸವಂದೊಳೆನ್ನ ವಾಣಿಯಿಂ ಕವಿತೆಯಂ ಪೇಲಿಸಿದ" ಎಂದು ನಾರಾಯಣನೆ ಕರ್ತೃ ಎಂದು ಹೇಳುತ್ತಾನೆ.
           ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು.ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಈ ಕಾವ್ಯದಲ್ಲಿ ೩೪ ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ ೧೯೩೬ ಕಾವ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ.ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ದೈವಿಕತೆಯನ್ನು ಸ್ಥಾಪಿಸುವ ಮತ್ತು ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ.
          ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು.

ಲಕ್ಷ್ಮೀಶ ಕಾವ್ಯಗಳಲ್ಲಿ ಬರುವ ವಿಶೇಷತೆಗಳು:

ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ ಸರ್ರನೆ ಎಂಬ ಪದಗಳಿಂದ ರಣರಂಗದ ಭೀಭತ್ಸವನ್ನು ಹೀಗೆ ವರ್ಣಿಸುತ್ತಾನೆ.

ಸುರ್ರನೆ ಸುಲಿದು ಸುತ್ತಿ ಬೆಂ ಡಾಗೆ ಕುದುರೆಗಳ್
ಕಿರ್ರನೆ ಕಪಿಶ್ವರ್ಮ್ ಪಲಿರಿದು ಚೀರಲ್ಕೆ
ಕರ್ರನೆ ಕವಿಯೇ ಕತ್ತಲೆ ಶಿರೋಭ್ರಮನೆಯಿಂ ಕೃಷ್ಣಾ ಫಳುಗುನರ್ಗೆ ….

 
ಮೇಲಿನ ಕಾವ್ಯ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಯುದ್ಧದ ವರ್ಣನೆಯ ಬಗೆ

ತೇರ ವಂಗ ಡದ ಜರ್ಜಾವರಂ ಗಜದ ಘಂಟಾರವಂ
ಹಾಯದ ಹೆಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ …

ರವಂ ಪದ ಹೇಗೆ ಪ್ರಯೋಗಿಸಿಧ್ಧನೆ ಎಂಬುದನ್ನು ನೋಡಬಹುದು.

ಪದಲಾಲಿತ್ಯದ ಕೆಲ ಸಾಲುಗಳನ್ನು ನೋಡೋಣ

ಈ ವನದ ನಡುನಡುವೆ ಕೊಳ ತೊಳ ಗುತಿರುತಿಹ ಸ
ವರದೊಲೆರೋ ಬೆಳೆ ಬೆಳೆದು ರಾ
ಜೀವದಳರಲರ ತುಳಿತುಳಿದಿಡಿದಿಡಿದ ಬಂಡ ನೋಡ ನೋಡನೆ ಸವಿದು ಸವಿದು

ಸವಿಯೇ ಪ್ರಿಯರಾಗಮದರಾಗಮದರಾಗಮದ
ನ ವಿಳಾಸ ಮೆಂದು ತಾಂಬೂಲಮಂ ತೋರ್ಪರ್ಮು
ಡಿವೊಡೆ ಬೇಕಾದಳರ್ಕಾದಲರ್ಕಾದಲರ್ಕಂಗಜಾಹವದೊಳೆಂದು

ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣ ಕಥೆಗಳನ್ನುಪೋಷಿಸಿದ ಜೈಮಿನಿ ಭಾರತ. ಇದರಲ್ಲಿ ಮರುತ್ತನ ಕತೆ, ಅನುಸಾಲ್ವನ ಕಾಳಗ ಸ್ವಾಹ ಪರಿಣಯ ಬಬ್ರುವಾಹನನ ಕಾಳಗ, ವೀರವರ್ಮನ ಕತೆ, ಚಂದ್ರಹಾಸನ ಕತೆ ಮುಂತಾದವು ಇವೆ. ಯುದ್ಧಗಳ ವರ್ಣನೆ ಸ್ತ್ರೀ ಹಾಗು ಪ್ರಕೃತಿ ವರ್ಣನೆಗಳು ಕಾವ್ಯದಲ್ಲಿ ವಿಸ್ತಾರವಾಗಿ ಬಂದಿವೆ.

ಲಕ್ಷ್ಮೀಶನಿಗೆ ಹುಟ್ಟಿದ ಸ್ಥಳದ ಬಗ್ಗೆ ತುಂಬಾ ಪ್ರೇಮ. ” ಸ್ವರ್ಗಕ್ಕಿಂತಲೂ ನಾನ ಓರೆ ನನಗೆ ದೊಡ್ಡದು , ದೇವನೂರೆ ಕೈಲಾಸ ” ಎಂದು ಹಲವು ಬಾರಿ ತನ್ನ ಊರನ್ನು ಕೊಂಡಾಡಿದ್ದಾನೆ. ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸ ಬೇಕೆಂಬುದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿಸಿದ, ನೀರಿಗಾಗಿ ಬಾವಿಗಳನ್ನು ತೊಡಿಸಿದ, ಕೆರೆ ತುಂಬಲು ಕಾಲುವೆಗಳನ್ನು ತೆಗೆಸಿದ. ಲಕ್ಷ್ಮೀಶನ ಗುಡಿಯಲಿ ಒಂದು ಕೀರ್ತಿ ಮಂಟಪ ಮಾಡಿಸಿದ. ಜನರನ್ನು ಮತ್ತು ಕವಿಗಳನ್ನು ಸತ್ಕರಿಸಿದ. ಅಭಿಮಾನಿಗಳು ನೀಡಿದ ಧನ ಕನಕ ವಸ್ತುಗಳನ್ನು ಜನ ಸೇವೆಗೆ ನೀಡಿದ ಉದಾರ ಕವಿ ನಮ್ಮ ಲಕ್ಷ್ಮೀಶ.

'ಜೈಮಿನಿ ಭಾರತ' ಕುರಿತು
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.

ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
         ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ, ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.






********ಕೃಪೆ:ವಿಕಿಪೀಡಿಯಾ ಮತ್ತು ಹುಳಿಯಾರು ಸುದ್ಧಿ*********