ನನ್ನ ಪುಟಗಳು

06 ಡಿಸೆಂಬರ್ 2021

ವಡ್ಡಾರಾಧನೆ - ಅಣ್ಣಿಕಾಪುತ್ರನ ಕಥೆ | Vaddaradhane-Annikaputhrana kathe

 ಅಣ್ಣಿಕಾಪುತ್ರನ ಕಥೆಯಂ ಪೇೞ್ವೆಂ :

ಗಾಹೆ || ಣಾವಾ ಎ ಣಿಬ್ಬುಡಾ ಏ ಗಂಗಾಮಜ್ಝೇ ಅಮೂಢಮಾಣಮದೀ
ಆರಾಧಣಂ ಪವಣ್ಣೋ ಕಾಲಗದೋ ಏಣಿಯಾ ಪುತ್ತೋ ||

[ಣಾವಾ ಎ – ನಾವೆ, ಣಿಬ್ಬುಡಾ ಏ – ಮುೞುಗಿದುದಾದೊಡೆ, ಗಂಗಾಮಜ್ಝೇ – ಗಂಗಾಮಹಾನದಿಯ ನಡುವೆ, ಅಮೂಢಮಾಣಮದೀ – ಮೋಹಿಸದ ಬುದ್ದಿಯನೊಡೆಯನಾಗಿ, ಆರಾಧಣಂ – ನಿಜಾತ್ಮಾರಾಧನೆಯಂ, ಪವಣ್ಣೋ – ಲೇಸಾಗಿ ಪೊರ್ದಿದೊಂ, ಕಾಲಗದೊ – ಕಾಲಂಗೆಯ್ದೊನಾಗಿ, ಏಣಿಯಾಪುತ್ತೋ – ಆಣ್ಣಿಕೆಯ ಮಗಂ]

    ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಉತ್ತರಮಧುರೆಂಬುದು ಪೊೞಲದನೊಳ್ವೊಂ ಪ್ರಜಾಪಾಳನೆಂಬೊನರಸನಾತನ ಮಹಾದೇವಿ ಸುಪ್ರಭೆಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಾ ಪೊೞಲೊಳ್ ಸಾರ್ಥಾಪತಿ ಧನದತ್ತನೆಂಬೊಂ ಪರದಂ ಧನಕನಕಸಮೃದ್ಧನಾತನ ಭಾರ್ಯೆ ಧನಶ್ರೀ ಯೆಂಬೊಳಾಯಿರ್ವರ್ಗಂ ಮಗಂ ಧನದೇವನೆಂಬೊನಂತವರ್ಗಳ್ಗೆ ಸುಖದಿಂ ಕಾಲಂ ಸಲೆ ಮತ್ತೊಂದು ದಿವಸಂ ಧನದೇವಂ ಪರದಿಂಗೆಂದು ಪಿರಿದುಂ ಸಾರಮಪ್ಪ ಭಂಡಮಂ ತೀವಿಕೊಂಡು ಪಿರಿದುಂ ಸಾರ್ಥಂ ಬೆರಸು ದಕ್ಷಿಣ ಮಧುರೆಗೆವೋದಾಡಾ ಪೊೞಲ ರಾಜಶ್ರೇಷ್ಠಿ ತಿಳಕಶ್ರೇಷ್ಠಿಯೆಂಬೊನಾತನ ಭಾರ್ಯೆ ನಂದೆಯೆಂಬೊಳಾಯಿರ್ವರ್ಗಂ ಮಕ್ಕಳ್ ಪದ್ಮಾವತಿ ಸುಮತಿ ಗುಣಮತಿಯೆಂದಿವರ್ ಮೊದಲಾಗೊಡೆಯ ಎಣ್ಬರ್ ಪೆಣ್ಗೂಸುಗಳಾದೊಡವರೊಳಗೆಲ್ಲರಿಂ ಕಿಱಯಳಣ್ಣಿಕೆಯೆಂಬೊಳಾಕೆಯಂ

        ಅಣ್ಣಿಕಾಪುತ್ರನ ಕಥೆಯನ್ನು ಹೇಳುವೆನು. (ಗಂಗಾನದಿಯ ನಡುವೆ ದೋಣಿ ಮುಳುಗಿಹೋದಾಗ ಅದರಲ್ಲಿದ್ದ ಮೋಹಗೊಳ್ಳದ ಬುದ್ದಿಯುಳ್ಳ ಅಣ್ಣಿಕಾಪುತ್ರನೆಂಬ ಋಷಿ ಕಾಲವಶನಾಗಿ ತನ್ನ ಆತ್ಮದ ಆರಾಧನೆಯನ್ನು ನೆರವೇರಿಸಿದನು.) ಅದು ಹೇಗೆಂದರೆ. ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿದೆ. ಅಲ್ಲಿ ಉತ್ತರ ಮಧುರೆ ಎಂಬ ಪಟ್ಟಣವಿದೆ. ಅದನ್ನು ಪ್ರಜಾಪಾಳನೆಂಬ ಅರಸನು ಆಳುತ್ತಿದ್ದನು. ಅವನ ಮಹಾರಾಣಿ ಸುಪ್ರಭೆಯೆಂಬವಳು. ಅಂತು ಅವರು ತಮ್ಮ ಇಷ್ಟವಾದ ವಿಷಯದ ಬಯಸಿದ ಸುಖಗಳನ್ನು ಅನುಭವಿಸುತ್ತ ಇದ್ದರು. ಅದಲ್ಲದೆ, ಆ ಪಟ್ಟಣದಲ್ಲಿ ಸರಕಿನ ವ್ಯಾಪಾರಿಗಳಿಗೆ ಒಡೆಯನಾದ ಧನದತ್ತನೆಂಬ ವರ್ತಕನು ಐಶ್ವರ್ಯದಿಂದಲೂ ಹೊನ್ನಿನಿಂದಲೂ ಸಮೃದ್ದನಾಗಿದ್ದನು. ಅಂತು ಸುಖದಿಂದ ಅವರ ಕಾಲ ಕೆಳೆಯುತ್ತಿತ್ತು. ಅನಂತರ ಒಂದು ದಿವಸ ಧನದೇವನು ವ್ಯಾಪಾರಕ್ಕಾಗಿ ಆಕವಾದ ಮೌಲ್ಯವುಳ್ಳ ಸರಕನ್ನು ತುಂಬಿಕೊಂಡು ಹೆಚ್ಚು ಮಂದಿ ಸರಕು ವ್ಯಾಪಾರಿಗಳೊಂದಿಗೆ ದಕ್ಷಿಣ ಮಧುರೆಗೆ ಹೋದನು. ಆ ಪಟ್ಟಣದಲ್ಲಿ ರಾಜಶ್ರೇಷ್ಠಿಯೆನಿಸಿಕೊಂಡು ತಿಳಕಶ್ರೇಷ್ಠಿ ಎಂಬವನಿದ್ದನು. ಅವನ ಪತ್ನಿ ನಂದೆ ಎಂಬುವಳು. ಆ ದಂಪತಿಗಳಿಗೆ ಪದ್ವಾವತಿ, ಸುಮತಿ, ಗುಣಮತಿ ಎಂದು ಇವರೇ ಮೊದಲಾಗಿ ಉಳ್ಳ ಎಂಟುಮಂದಿ ಹೆಣ್ಣುಮಕ್ಕಳಾದರು. ಅವರಲ್ಲಿ ಎಲ್ಲರಿಂದಲೂ ಕಿರಿಯಳು ಆಣ್ಣಿಕೆ. 

    ಧನದತ್ತನ ಮಗನಪ್ಪ ಧನದೇವನಂ ರೂಪಲಾವಣ್ಯ ಸೌಭಾಗ್ಯ ಕಾಂತಿಗುಣಂಗಳಿಂ ಕೂಡಿದೊನಂ ತಿಳಕಶ್ರೇಷ್ಠಿಯುಂ ನಂದೆಯುಂ ಕಂಡಾತಂಗೆ ಬಯಸಿ ಅಣ್ಣಿಕೆಯೆಂಬ ಕೂಸಂ ಕೊಟ್ಟೊಡೆ ಕೆಲವು ದಿವಸಮಾ ಪೊೞಲೊಳಿರ್ದು ತಮ್ಮ ಕೊಂಡು ಪೋದ ಭಂಡಮಂ ಮಾಱ ಪೆಱದಂ ತಮ್ಮ ನಾೞ್ಕಪೂರ್ವಮಪ್ಪ ಭಂಡಮಂ ತೀವಿಕೊಂಡು ತಮ್ಮ ಪೊೞಲ್ಗುತ್ತರ ಮಧುರೆಗೆ ಬಂದಿರ್ದ್ದರನ್ನೆಗಮಣ್ಣ್ಣಿಕೆಗೆ ಗರ್ಭಮಾಗಿ ಮಗಂ ಪುಟ್ಟಿದೊಡೆ ಧನದೇವನ ತಾಯುಂ ತಂದೆಯುಂ ನೆಂಟರುಮೆಲ್ಲಂ ನೆರೆದಣ್ಣಿಕೆಯ ಮಗನೆಂದಾತಂಗಣ್ಣಿಕಾಪುತ್ರನೆಂದು ಪೆಸರನಿಟ್ಟೊಡಾತಂ ಕ್ರಮಕ್ರಮದಿಂ ಸುಖದಿಂ ಬಳೆದು ನವಯೌವನನಾಗಿರ್ಪ್ಪನ್ನೆಗಂ ಇತ್ತ ದಮಸೂರಿಗಳೆಂಬವರವಜ್ಞಾನಿಗಳಪ್ಪ ಆಚಾರ್ಯರ್ ಪಿರಿದುಂ ರಿಸಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೋರುತ್ತರ ಮಧುರೆಗೆ ಬಂದು ಬಹಿರುದ್ಯಾನವನದೊಳಿರ್ದ್ದರನಣ್ಣಿಕಾಪುತ್ರಂ ಪೋಗಿ ವಂದಿಸಿ ಧರ್ಮಮಂ ಕೇಳ್ದು ಸಮ್ಯಕ್ತ್ವಪೂರ್ವಕಂ ಶ್ರಾವಕವ್ರತಂಗಳೆಲ್ಲಮಂ ಕೈಕೊಂಡು ತದನಂತರಮೆ ಭಟಾರಾ ಎನಗಾಯುಷ್ಯವೆನಿತೆಂದು ತನ್ನಾಯುಷ್ಯ ಪ್ರಮಾಣಮಂ ಬೆಸಗೊಂಡೊಡೆ ಭಟಾರರುಂ ಕಿಱದೆ ನಿನಗಾಯುಷ್ಯಮೆಂದು ಪೇೞ್ದೊಡೆ ವೈರಾಗ್ಯಪರಾಣಯಣನಾಗಿ ತಾಯುಂ ತಂದೆಯುಮಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ದಮಸೂರಿಗಳೆಂಬಾಚಾರ್ಯರ ಪಕ್ಕದೆ ತಪಂಬಟ್ಟು

        ತಿಳಕಶ್ರೇಷ್ಠಿ ಮತ್ತು ನಂದೆ ಎಂಬುವರು ಧನದತ್ತನ ಮಗನೂ ರೂಪ ಸೌಂದರ್ಯ – ಸೌಭಾಗ್ಯ – ಕಾಂತಿ – ಗುಣಗಳಿಂದ ಕೂಡಿದವನೂ ಆದ ಧನದೇವನನ್ನು ಕಂಡು, ಅವನನ್ನು ಬಯಸಿ, ಅವನಿಗೆ ಅಣ್ಣಿಕೆಯೆಂಬ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟರು. ಸರಕಿನ ವ್ಯಾಪಾರಿಗಳು ಕೆಲವು ದಿವಸಗಳವರೆಗೆ ಆ ಪಟ್ಟಣದಲ್ಲಿದ್ದು ತಾವು ಕೊಂಡು ಹೋದ ಸರಕನ್ನು ಮಾರಿ, ತಮ್ಮ ನಾಡಿಗೆ ಅಪೂರ್ವವೆನಿಸತಕ್ಕ ಬೇರೆ ಇತರ ಸರಕುಗಳನ್ನು ತುಂಬಿಕೊಂಡು ತಮ್ಮ ಪಟ್ಟಣವಾಗಿರುವ ಉತ್ತರಮಧುರೆಗೆ ಬಂದರು. ಹೀಗೆ ಇರುತ್ತಿರಲು ಅಣ್ಣಿಕೆಗೆ ಗರ್ಭವಾಗಿ ಮಗನು ಹುಟ್ಟಿದನು. ಧನದೇವನ ತಾಯಿಯೂ ತಂದೆಯೂ ನಂಟರೂ ಎಲ್ಲ ಸೇರಿ ಅಣ್ಣಿಕೆಯ ಮಗನಾದುದರಿಂದ ಅವನಿಗೆ ಅಣ್ಣಿಕಾ ಪುತ್ರನೆಂಬ ಹೆಸರಿಟ್ಟರು. ಆತನು ಅನುಕ್ರವಾಗಿ ಸುಖದಿಂದ ಬೆಳೆದು ಯೌವನಸ್ಥನಾದನು. ಹೀಗಿರಲು ಇತ್ತ ಅವಜ್ಞಾನಿಗಳಾದ ದಮಸೂರಿಗಳೆಂಬ ಆಚಾರ್ಯರು ಹೆಚ್ಚಾದ ಋಷಿಸಮೂಹವನ್ನು ಕೂಡಿಕೊಂಡು ಗ್ರಾಮ – ನಗರ – ಖೇಡ – ಖರ್ವಡ – ಮಡಂಬ – ಪಟ್ಟಣ – ದ್ರೋಣಾಮುಖ ಎಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು ಉತ್ತರ ಮಧುರೆಗೆ ಬಂದು ಹೊರಗಿನ ಉದ್ಯಾನದಲ್ಲಿದ್ದರು. ಅಣ್ಣಿಕಾ ಪುತ್ರನು ಅವರ ಬಳಿಗೆ ಹೋಗಿ ವಂದಿಸಿ ಧರ್ಮಬೋಧನೆಯನ್ನು ಕೇಳಿ ತತ್ವವಿಚಾರದಲ್ಲಿ ನಂಬಿಕೆಯೊಂದಿಗೆ ಶ್ರಾವಕ (ಜೈನಗೃಹಸ್ಥ) ವ್ರತಗಳೆಲ್ಲವನ್ನೂ ಸ್ವೀಕರಿಸಿಕೊಂಡನು. ಆಮೇಲೆ “ಪೂಜ್ಯರೇ, ನನಗೆ ಆಯುಷ್ಯವು ಎಷ್ಟಿದೆ* ಎಂದು ತನ್ನ ಆಯುಷ್ಯದ ಪ್ರಮಾಣವನ್ನು ಕೇಳಿದನು. ಆಗ ಋಷಿಗಳು “ನಿನಗೆ ಆಯುಷ್ಯ ಇನ್ನು ಸ್ವಲ್ಪವೇ ಇದೆ* ಎಂದು ಹೇಳಿದರು. ಅಣ್ಣಿಕಾ ಪುತ್ರನು ವೈರಾಗ್ಯತತ್ಪರನಾಗಿ ತನ್ನ ತಾಯನ್ನೂ ತಂದೆಯನ್ನೂ ನಂಟರನ್ನೂ ಬಿಟ್ಟು ತೊಂದರೆಯಿಲ್ಲದಂತೆ ಮಾಡಿ, ದಮಸೂರಿಗಳೆಂಬ ಆಚಾರ್ಯರಬಳಿಯಲ್ಲಿ ತಪಸ್ಸನ್ನು ಪಡೆದು

       ದ್ವಾದಶಾಂಗ ಚತುರ್ದಶಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳನೊಡಂಬಡಿಸಿ ಏಕವಿಹಾರಿಯಾಗಿ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಆಟವ್ಯಾಂ ದಶರಾತ್ರಮೆಂಬೀನ್ಯಾಯದಿಂ ಗ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ತೀರ್ಥಂಗಳೆಲ್ಲಮಂ ವಂದಿಸಲ್ಕೆಂದು ಗಂಗಾಮಹಾನದಿಯಂ ಪಾಯ್ದು ಪೋಪ ಬಗೆಯಿಂದಂ ನಾವೆಯನೇಱದೊಡದೊಂದುತ್ಪಾತವಾತದಿಂದಂ ಗಂಗಾಮಹಾನದಿಯ ನಡುವೆ ಮಡುವಿನೊಳ್ ಭಯಂಕರಮಾಗುತ್ತಿರ್ದ್ದ ತೆರೆಯನೊಡೆಯದಱೊಳ್ ಮುೞುಗಿದೊಡಾ ಅಣ್ಣಿಕಾಪುತ್ರನೆಂಬ ರಿಸಿ ಪಿರಿದಪ್ಪ ಮಹಾತ್ಮ್ಯಮಂ ಮೋಹಿಸದ ಬುದ್ದಿಯನೊಡೆಯೊಂ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವಂ ನಿವೃತ್ತಿಯ್ದು ಕಾಯೋತ್ಸರ್ಗಂ ನಿಂದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ಸಕಳಕರ್ಮಂಗಳಂ ಕಿಡಿಸಿ ಅಂತರ್ಗತ ಕೇವಲಿಯಾಗಿ ಮೋಕ್ಷಕ್ಕೆವೋದರ್ ಮತ್ತಂ ಪೆಱರಾರಾಧಕರಪ್ಪವರ್ಗಗಳೆಲ್ಲಮಣ್ಣಿಕಾಪುತ್ರನೆಂಬ ರಿಸಿಯಂ ಮನದೊಳಿಟ್ಟು ಅಚೇತನೋಪಸರ್ಗಂ ಮೊದಲಾಗೊಡೆಯ ಉಪಸರ್ಗಂಗಳುಮಂ ನೀರೞ್ದೆ ಮೊದಲಾಗೊಡೆಯ ಪರೀಷಹಂಗಳುಮಂ ಸೈರಿಸಿ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗದ ಸುಖಂಗಳಂ ಭವ್ಯರ್ಕಳೆಯ್ದುಗೆ

        ಹನ್ನೆರಡು ಅಂಗಗಳುಳ್ಳದೂ ಹದಿನಾಲ್ಕು ಪೂರ್ವಗಳುಳ್ಳುದೂ ಆದ ಶಾಸ್ತ್ರಗಳನ್ನೆಲ್ಲಾ ಕಲಿತು ಗುರುಗಳು ಒಪ್ಪುವಂತೆ ಮಾಡಿ ಒಬ್ಬನೇ ಸಂಚಾರ ಮಾಡುತ್ತ “ಗ್ರಾಮದಲ್ಲಿ ಒಂದು ರಾತ್ರಿ, ನಗರದಲ್ಲಿ ಐದು ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿಗಳು* ಎಂಬ ಈ ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳನ್ನು ಸುತ್ತುತ್ತ ಪುಣ್ಯತೀರ್ಥಗಳಿಗೆಲ್ಲಾ ನಮಸ್ಸರಿಸುವುದಕ್ಕಾಗಿ ಗಂಗಾ ಮಹಾನದಿಗೆ ನಡುವೆ ಭಯಂಕರವಾಗಿ ಕಾಣಿಸಿದ ಅಲೆಯುಳ್ಳ ಮಡುವಿನಲ್ಲಿ ದೋಣಿ ಮುಳುಗಿತು. ಮುಳುಗುತ್ತಿದ್ದಾಗ ಆ ಅಣ್ಣಿಕಾಪುತ್ರನೆಂಬ ಋಷಿ ಹಿರಿದಾಗಿರುವ ಮಹತ್ವಕ್ಕೆ ಮೋಹಗೊಳ್ಳದ ಬುದ್ದಿಯುಳ್ಳವನಾಗಿ ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ – ಎಂಬ ನಾಲ್ಕು ವಿಧವಾದ ಶರೀರಕ್ಕೂ ಆಹಾರಕ್ಕೂ ಪ್ರಾಣವಿರುವವರೆಗೂ ನಿವೃತ್ತಿ ಮಾಡಿ, ದೇಹತ್ಯಾಗಕ್ಕೆ ಸಿದ್ದನಾಗಿ ಧರ್ಮಧ್ಯಾನ ಶುಕ್ಲಧ್ಯಾನಗಳನ್ನು ಮಾಡಿ ಎಲ್ಲಾ ಕರ್ಮಗಳನ್ನೂ ನಾಶಗೊಳಿಸಿ ತನ್ನೊಳಗೆ ಕೇವಲಜ್ಞಾನವನ್ನು ಪಡೆದು ಮೋಕ್ಷಕ್ಕೆ ತೆರಳಿದರು. ಆಮೇಲೆ, ಬೇರೆ ಆರಾಧಕರಾಗಿರುವ ಭವ್ಯರೆಲ್ಲರೂ ಆಣ್ಣಿಕಾಪುತ್ರನೆಂಬ ಋಷಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅಚೇತನೋಪಸರ್ಗವೇ ಮೊದಲಾದ ಉಪಸರ್ಗಗಳನ್ನೂ ಬಾಯಾರಿಕೆ ಮುಂತಾಗಿರುವ ಪರೀಷಹಗಳನ್ನೂ ಸಹಿಸಿಕೊಂಡು ಸಮ್ಯಗ್ದರ್ಶನ ಜ್ಞಾನ ಚಾರಿತ್ರಗಳೆಂಬ ಮೂರುರತ್ನಗಳನ್ನು ಸಾಸಿ ಸ್ವರ್ಗ ಮೋಕ್ಷ ಸುಖಗಳನ್ನು ಹೊಂದಲಿ.


*****ಕೃಪೆ: ಕಣಜ****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ