ನನ್ನ ಪುಟಗಳು

03 ಡಿಸೆಂಬರ್ 2021

ವಡ್ಡಾರಾಧನೆ -ಗಜಕುಮಾರನ ಕಥೆ | Vaddaradhane-Gajakumarana kathe

 ಗಜಕುಮಾರನ ಕಥೆಯಂ ಪೇೞ್ವೆಂ :

ಗಾಹೆ || ಭೂಮೀಎ ಸಮಂ ಖೀಲಾಭಾ ಇದ ದೇಹೋವಿ ಅಲ್ಲಚಮ್ಮಂ ವ
ಭಗವಂ ಪಿ ಗಜಕುಮಾರೋ ಪಡಿವಣ್ಣೋ ಉತ್ತಮಂ ಆಟ್ಠಂ ||

*ಭೂಮೀ ಎ ಸಮಂ – ನೆಲದೊಳೋರಂತಾಗೆ ಮಲರ್ಚಿಕ್ಕಿಯುರದಿಂ ತಗುಳ್ದು ನಾಭಿವರೆಗಂ ಬಸಿಱಂ ಪೋೞ್ದು, ಅಲ್ಲಚಮ್ಮಂ – ಪಂದೊವಲಂ ತೆಗೆದು, ಖೀಲಾಭಾ ಇದ ದೇಹೋವಿ – ಕಾಯ್ದ ಕರ್ಬೊನ್ನ ನಿಡಿಯುವುಂ ತೋರಮುಮಪ್ಪ ಕಿಲ್ಗಳಿಂದಂ ಮೆಯ್ಯೆಲ್ಲಮುಂ ನಿರಂತರಮುರ್ಚಿ ಪೋಗಿ ನೆಲನಂ ತಾಪಿನಂ ಕೀಲಿಱೆಯೆ ಪಟ್ಟ ಮೆಯ್ಯನೊಡೆಯನಾಗಿಯುಂ, ಭಗವಂ – ಪಿರಿದಪ್ಪ ಪೆರ್ಮೆಯನೊಡೆಯಂ, ಗಜಕುಮಾರೋಪಿ – ಗಜಕುಮಾರನುಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ*

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಸುರಟಮೆಂಬುದು ನಾಡಲ್ಲಿ ದ್ವಾರವತಿಯೆಂಬುದು ಪೊೞಲದನಾಳ್ವೊಂ ವಿಷ್ಣು ಅರ್ಧಚಕ್ರಿಯಾತನ ತಂದೆ ವಸುದೇವ ಸ್ವಾಮಿಯೆಂಬೊನಾ ವಸುದೇವಸ್ವಾಮಿಯರಸಿ ಗಾಂಧರ್ವದತ್ತೆಯೆಂಬೋಳಾಯಿರ್ವರ್ಗ್ಗಂ ಗಜಕುಮಾರನೆಂಬೊಂ ಮಗನಪ್ಪೊನಂತವರ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತಿತ್ತ ಸೂರದತ್ತಮೆಂಬುದು ನಾಡಲ್ಲಿ ಪೌದನಪುಮೆಂಬುದು ಪೊೞಲದನಾಳ್ವೊ ನಪರಾಜಿತನೆಂಬೊನರಸನಾದಮಾನುಂ ಪ್ರಚಂಡ ಬಳಗರ್ವಿತನಾರುಮನುಱದೊಂ ವಿಷ್ಣುಗಂ ಬೆಸಕೆಯ್ಯನೊಂದು ದಿವಸಂ ವಿಷ್ಣು ಪೊೞಲೊಳ್ ಗೋಸಣೆಯಂ ತೊೞಲ್ಚಿದನ್


ಗಜಕುಮಾರನ ಕಥೆ ಹೇಳುವೆನು :

ನೆಲದ ಮೇಲೆ ಕ್ರಮವಾಗಿ ಮಗುಚಿ (ಅಂದರೆ, ಹೊಟ್ಟೆ ಮೇಲ್ಗಡೆಯಾಗುವಂತೆ) ಮಲಗಿಸಿ; ಎದೆಯಿಂದ ಹಿಡಿದು ಹೊಕ್ಕುಳಿನವರೆಗೆ ಹೊಟ್ಟೆಯನ್ನು ಸೀಳಿ, ಹಸಿಯ ಚರ್ಮವನ್ನು ಸುಲಿದು ತೆಗೆದು, ಕಾದ ಕಬ್ಬಿಣದ ಉದ್ದವಾದ ಮತ್ತು ದಪ್ಪವಾದ ಮೊಳೆಗಳಿಂದ ಶರೀರಿವೆಲ್ಲವೂ ಸ್ವಲ್ಪ ಬಿಡದೆ ಭೇದಿಸಿ ನೆಲವನ್ನು ತಾಗುವ ರೀತಿಯಲ್ಲಿ (ಮೊಳೆ) ಹೊಡೆದ ದೇಹವುಳ್ಳವನಾಗಿ, ಹಿರಿದಾದ ಗೌರವವನ್ನುಳ್ಳ ಗಜಕುಮಾರನು ಶ್ರೇಷ್ಠವಾದ ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ ಸಮ್ಯಕ್ಚಾರಿತ್ರಗಳುಳ್ಳ ಆರಾಧನೆಯನ್ನು ಪಡೆದನು. ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಸುರಟ ಎಂಬ ನಾಡಿದೆ. ಅಲ್ಲಿ ದ್ವಾರಾವತಿಯೆಂಬ ಪಟ್ಟಣವಿದೆ. ಅದನ್ನು ಭರತಕ್ಷೇತ್ರದ ಆರು ಖಂಡಗಳಲ್ಲಿ ಮೂರು ಖಂಡಗಳಿಗೆ ಒಡಯನಾಗಿ ಅರ್ಧಚಕ್ರಿಯೆನಿಸಿದ ವಿಷ್ಣು ಆಳುತ್ತಿದ್ದನು. ಅವನ ತಂದೆ ವಸುದೇವಸ್ವಾಮಿಯೆಂಬುವನು.ಆ ವಸುದೇವಸ್ವಾಮಿಯ ಪತ್ನಿ ಗಾಂಧರ್ವದತ್ತೆ ಎಂಬುವಳು ಆ ಇಬ್ಬರಿಗೂ ಗಜಕುಮಾರನೆಂಬುವನು ಮಗನಾಗಿದ್ದನು. ಅಂತು ಅವರು ತಮ್ಮ ಪ್ರೀತಿ ವಿಷಯದ ಬಯಕೆ ಸುಖಗಳನ್ನು ಅನುಭವಿಸುತ್ತಿದ್ದರು. ಹೀಗೆ ಕಾಲ ಕಳೆಯುತ್ತಿತ್ತು. ಇನ್ನ್ನೊಂದೆಡೆ ಸೂರದತ್ತ ಎಂಬ ನಾಡಿನಲ್ಲಿ ಪೌದನಪುರ ಎಂಬ ಪಟ್ಟಣವಿತ್ತು. ಅದನ್ನು ಅಪರಾಜಿತನೆಂಬ ರಾಜನು ಆಳುತ್ತಿದ್ದನು. ಅವನು ಅತಿ ಪ್ರಚಂಡಬಲವುಳ್ಳವನೆಂಬ ಗಮನದಿಂದ ಯಾರನ್ನೂ ಲಕ್ಷ್ಯಮಾಡದಿದ್ದನು. ವಿಷ್ಣುಗೆ ಕೂಡ ಅವನು ಆಜ್ಞಾಧಾರಕನಾಗದೆ ಇದ್ದನು. ಒಂದು ದಿವಸ ವಿಷ್ಣು ತನ್ನ ಪಟ್ಟಣದಲ್ಲಿ ಹೀಗೆ ಡಂಗೂರ ಸಾರಿಸಿದನು 

    ಆವನೊರ್ವಂ ಪೌದನಪುರಾಪತಿಯಪ್ಪಪರಾಜಿತನಂ ಸಂಗ್ರಾಮದೊಳ್ ಕಾದಿ ಗೆಲ್ದು ಪಿಡಿಕೊಂಡು ಬರ್ಕು ಮಾತಂಗೆಯಾತನ ಬೇಡುವುದೆಲ್ಲಮಂ ಕುಡುವೆನೆಂದು ತೊೞಲ್ವ ಗೋಸಣೆಯಂ ಗಜಕುಮಾರಂ ಪಿಡಿದೊಡಾ ಮಾತನರಸಂ ಕೇಳ್ದು ಗಜಕುಮಾರನಂ ಕರೆಯಿಸಿಯಾತನೊಡನೆ ಚಾತುರ್ದಂತಬಳಮಂ ಕೂಡಿಯಟ್ಟಿದೊಡಾತನುಂ ಪೋಗಿಯಪಜಿತನೊಡನೆ ಮಹಾಯುದ್ದಂಗೆಯ್ದು ಗೆಲ್ದು ಪೆಡಂಗಯ್ಯುಡಿಯೆ ಕಟ್ಟಿ ಗಜತುರದ ವಸ್ತುವಾಹನ ಸಹಿತಂ ತಂದು ವಿಷ್ಣುಗೊಪ್ಪಿಸಿದೊಡಾತನುಮೊಸೆದು ನೀಂ ಮೆಚ್ಚಿದುದಂ ಬೇಡಿಕೊಳ್ಳೆನೆ ಪೆಱತೇನುಮನೊಲ್ಲೆನ್ ನಿಮ್ಮ ಪ್ರಸಾದದಿಂದೆನಗೆಲ್ಲಮುಂಟು ಒಂದಂ ಬೇೞ್ಪೆಂ ನಿಮ್ಮಂತಃಪುರಮುೞೆಯೆ ಪೊೞಲೊಳಗೆನ್ನ ಮೆಚ್ಚಿದ ಪೆಂಡಿರನೆ ಕೊಂಡೆನ್ನಿಚ್ಚೆಯೊಳ್ ಮೆಚ್ಚಿದಂತೆ ಬಾೞ್ವೇನೀ ದಾಯಮಂ ಬೇಡಿರ್ದೆನಿದನೆನಗೆ ದಯೆಗೆಯ್ದು ಸಲಿಸುವುದೆಂದೊಡರಸನುಮಂತೆಗೆಯ್ಯೆಂದು ಗಜಕುಮಾರಂಗೆ ಬೇಡಿದುದಂ ಕೊಟ್ಟಂ ಗಜಕುಮಾರನುಂ ತನ್ನ ಬೇಡಿದ ವರಮಂ ಪೆತ್ತು ಪರದರ ಪಾರ್ವರೊಕ್ಕಲಿಗರ ಸಾಮಂತರ ಪೊೞಲೊಳಗುಳ್ಳ ಒಳ್ಳೆಂಡಿರೆಲ್ಲರಂ ಕಣ್ಗಂ ಮನಕ್ಕಂ ಮೆಚ್ಚಿದವರೊಳ್ ತನ್ನಿಚ್ಚೆಯಿಂದಂ ಮೊಱೆದು ಮೊಟ್ಟಯಿಸಿಯುಯ್ದು ಬಾೞುತ್ತಿರೆ ಮತ್ತಮಾ ಪೊೞಲೊಳ್ ಪಂಗುಳನೆಂಬ ಸುವರ್ಣಕಾಱನ ಪೆಂಡತಿ ವಸುಂಧರಿಯೆಂಬೊಳತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಭಾವ ವಿಲಾಸ ವಭ್ರಮಂಗಳನೊಡೆಯೊಳಂ ಕಂಡು 

    – ಪೌದನಪುರದ ರಾಜನಾದ ಅಪರಾಜಿತನನ್ನು ಯಾವಾತನು ಯುದ್ದದಲ್ಲಿ ಹೋರಾಡಿ ಗೆದ್ದು ಹಿಡಿದುಕೊಂಡು ಬರುವನೋ ಅವನು ಕೇಳಿದ್ದೆಲ್ಲವನ್ನೂ ಕೊಡುವೆನು* ಈ ರೀತಿ ಸಾರುವ ಡಂಗೂರವನ್ನು ಗಜಕುಮಾರನು ಹಿಡಿದನು. ಈ ಸುದ್ದಿಯನ್ನು ರಾಜನು ಕೇಳಿ ಗಜಕುಮಾರನನ್ನು ಕರೆಯಿಸಿದನು. ಅವನೊಡನೆ ಚತುರಂಗಸೈನ್ಯವನ್ನು ಕೂಡಿಸಿ ಕಳುಹಿಸಿದನು. ಗಜಕುಮಾರನು ಹೋಗಿ, ಅಪರಾಜಿತನೊಡನೆ ಮಹಾಯುದ್ದವನ್ನು ಮಾಡಿ ಗೆದ್ದು ಅವನನ್ನು ಹಿಡಿದು ಅವನ ಕೈಗಳು ಮುರಿಯುವ ಹಾಗೆ ಹಿಂಗಡೆಗೆ ಕಟ್ಟಿ ಆನೆ ಕುದುರೆ ಒಡವೆ ವಾಹನಗಳ ಸಮೇತನಾಗಿ ತಂದು ವಿಷ್ಣುಗೆ ಒಪ್ಪಿಸಿದನು. ಆಗ ವಿಷ್ಣು ಪ್ರೀತಿಪಟ್ಟು “ನಿನಗೆ ಇಷ್ಟವಾದುದನ್ನು ಬೇಡಿಕೋ* ಎಂದನು. ಅದಕ್ಕೆ ಗಜಕುಮಾರನು “ನನಗೆ ಬೇರೆ ಯಾವುದೂ ಬೇಡ. ನಿಮ್ಮ ಅನುಗ್ರಹದಿಂದ ಎಲ್ಲವೂ ನನಗಿದೆ. ಒಂದನ್ನು ಕೇಳಿಕೊಳ್ಳುವೆನು ; ನಿಮ್ಮರಾಣೀವಾಸವೊಂದನ್ನು ಬಿಟ್ಟು ಈ ಪಟ್ಟಣದಲ್ಲಿ ನಾನು ನನಗೆ ಮೆಚ್ಚಿಗೆಯಾದ ಹೆಂಡಿರನ್ನು ಸ್ವೀಕರಿಸಿ ನನ್ನ ಇಚ್ಛೆಗೆ ಮೆಚ್ಚಿಕೆಯಾದಂತೆ ಬಾಳುವೆನು. ಈ ಬಹುಮಾನವನ್ನು ಬಯಸಿದ್ದೇನೆ. ಇದನ್ನು ನನಗೆ ದಯಪಾಲಿಸಿಕೊಡಬೇಕು” ಎಂದು ಹೇಳಿದನು. ರಾಜನು “ಹಾಗೆಯೇ ಮಾಡು* ಎಂದು ಗಜಕುಮಾರನಿಗೆ ಆತನು ಬಯಸಿದುದನ್ನು ಕೊಟ್ಟನು, ಗಜಕುಮಾರನು ತಾನು ಬಯಸಿದ ವರವನ್ನು ಪಡೆದು, ಪಟ್ಟಣದಲ್ಲಿರತಕ್ಕ ವರ್ತಕರು, ಬ್ರಾಹ್ಮಣರು, ಒಕ್ಕಲಿಗರು, ಸಾಮಂತರಾಜರು – ಮುಂತಾದವರ ಒಳ್ಳೆಯ ಹೆಂಡಿರಲ್ಲಿ ತನ್ನ ಕಣ್ಣಿಗೂ ಮನಸ್ಸಿಗೂ ಮೆಚ್ಚಿಕೆಯಾದವರಲ್ಲಿ ತನ್ನ ಇಚ್ಛೆಯ ಪ್ರಕಾರ ಸಂಬಂಧ ಮಾಡಿಯೂ ಒಟ್ಟುಗೂಡಿಯೂ ಬಾಳುತ್ತಿದ್ದನು ಮತ್ತೇನೆಂದರೆ, ಆ ಪಟ್ಟಣದಲ್ಲಿ ಪಂಗುಳನೆಂಬ ಅಕ್ಕಸಾಲಿಯಿದ್ದನು. ಅವನ ಹೆಂಡತಿ ವಸುಂಧರಿಯೆಂಬವಳು ಅತಿಶಯವಾದ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದ್ದಳು. ಗಜಕುಮಾರನು ಆವಳನ್ನು ಕಂಡು 

    ಗಜಕುಮಾರನಾಕೆಗಾಟಿಸಿ ತನ್ನ ಮನೆಯೊಳಿಟ್ಟಾಕೆಗಾಸಕ್ತನಾಗಿ ಬಾೞುತ್ತಿರ್ಕುಮಾ ಏರಣಿಗನುಂ ಪೆಂಡತಿಯ ವಿಯೋಗದೊಳ್ ಸಂತಾಪದಿಂದಮಿರುಳುಂ ಪದಲುಮನವರತಂ ಬೇಯುತ್ತಮಸಮರ್ಥನಪ್ಪಿದಱೆಂದಂ ಮನದೊಳ್ ಗಜಕುಮಾರಂಗೆ ಮುಳಿಯುತ್ತಿರ್ಕುಂ ಇಂತು ಪಲಕಾಲಂ ಸಲೆ ಮತ್ತೊಂದು ದಿವಸಮರಿಷ್ಟನೇಮಿ ಭಟ್ಟಾರರ ಸಮವಸರಣಂ ವಿಹಾರಿಸುತ್ತಂ ಇಂತು ದ್ವಾರಾವತಿಗೆ ವಂದೊಡೆ ವಿಷ್ಣುವಿನೊಡನೆ ಗಜಕುಮಾರಂ ತ್ರಿಭುವನಪರಮೇಶ್ವರನಲ್ಲಿಗೆ ವೋಗಿ ವಂದಿಸಿ ಪೂಜಿಸಿರ್ದು ಭಟಾರರ್ ಧರ್ಮಮಂ ಪೇೞ್ವಲ್ಲಿ ಯಗಮ್ಯಾಗಮನಂಗೆಯ್ವೊಡಂ ಪೆಱರ ಸಜ್ಜನಂಗಳೊಳ್ ಬರ್ದೊಡಮೆಯ್ದುವ ದುರ್ಗತಿಗಳೊಳಪ್ಪ ದುಃಖಂಗಳಂ ಪೇೞೆ ಕೇಳ್ದು ನಾನ್ಯಥಾ ಜನಭಾಷಿತಮೆಂದು ನಂಬಿ ಭೋಗಂಗಳ್ಗೆ ಪೇಸಿ ವೈರಾಗ್ಯಮಾಗಿ ಎಲ್ಲಮಂ ತೊಱೆದರಿಷ್ಟನೇಮಿಭಟ್ಟಾರರ ಪಕ್ಕದೆ ತಪಂಬಟ್ಟುಗ್ರೋಗ್ರತಪಶ್ಚರಣಂಗೆಯ್ದು ಪನ್ನೆರಡು ವರ್ಷಂ ಪೋದೊಡೆ ಗ್ರಾಮ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹರಿಸುತ್ತಂ ಮತ್ತಮಾ ದ್ವಾರಾವತಿಗೆ ವಂದು ರೇವತೋದ್ಯಾನವನದೊಳ್ ರಾತ್ರಿ ಪ್ರತಿಮೆನಿಂದೊನಂ ಸ್ವಜನ ಪರಿಜನ ಬಂಧುವರ್ಗಮುಂ ಶ್ರಾವಕರ್ಕ್ಕಳುಂ ಬಂದಿರ್ಚಿಸಿ ಪೊಡೆವಂಟು ಪೋಪರಂ ಪಂಗುಳನೆಂಬ ಸುವರ್ಣಕಾರಕಂ ಕಂಡು ಬೆಸಗೊಂಡು ಭಟಾರರ ಬರವಂ ಕೇಳ್ದಱದು

    ಆಕೆಯಲ್ಲಿ ಆಸೆಪಟ್ಟು ತನ್ನ ಮನೆಯಲ್ಲಿ ಅವಳನ್ನು ಇಟ್ಟುಕೊಂಡು ಆಸಕ್ತನಾಗಿ ಬಾಳುತ್ತಿದ್ದನು. ಆ ಅಕ್ಕಸಾಲಿ ತನ್ನ ಹೆಂಡತಿಯ ಅಗಲಿಕೆಯ ದುಃಖದಿಂದ ಇರುಳೂ ಹಗಲೂ ಯಾವಾಗಲೂ ಬೇಯುತ್ತ, ತಾನು ಸಾಮರ್ಥ್ಯವಿಲ್ಲದವನಾದುದರಿಂದ ಮನಸ್ಸಿನಂತೆಯೇ ಗಜಕುಮಾರನ ಮೇಲೆ ಕೋಪಿಸಿಕೊಂಡಿದ್ದನು ಹೀಗೆ ಹಲವು ಕಾಲ ಕಳೆಯಿತು. ಮತ್ತೊಂದು ದಿನ ಅರಿಷ್ಟನೇಮಿ ತೀರ್ಥಂಕರರ ಧರ್ಮೋಪದೇಶ ಸಭೆ ಸಂಚಾರಮಾಡುತ್ತ ದ್ವಾರಾವತಿಗೆ ಬಂದಿತು. ಗಜಕುಮಾರನು ವಿಷ್ಣುವಿನೊಂದಿಗೆ ಹೋಗಿ ಮೂರುಲೋಕಕ್ಕೂ ಪರಮೇಶ್ವರನೆನಿಸಿದ ಅರ್ಹಂತರನ್ನು ವಂದಿಸಿ ಪೂಜಿಸಿದನು. ಅಲ್ಲಿ ಅರಿಷ್ಟನೇಮಿ ಭಟಾರರು ಧರ್ಮದ ಕುರಿತು ಹೇಳುವಾಗ, ಕೂಡಬಾರದವರಲ್ಲಿ ಕೂಡಿದರೂ ಅನ್ಯರ ಕುಲಾಂಗನೆಯರೊಂದಿಗೆ ಬಾಳುವೆ ನಡೆಸಿದರೂ ಪಡೆಯುವ ದುರ್ಗತಿಗಳಲ್ಲಿ ಆಗತಕ್ಕ ದುಃಖಗಳಲ್ಲಿ ಹೇಳುತ್ತಿದ್ದರು. ಅವನ್ನು ಗಜಕುಮಾರನು ಕೇಳಿ ‘ಜಿನೇಶ್ವರನು ಹೇಳಿದ್ದು ಸುಳ್ಳಾಗದು’ ಎಂದು ನಂಬಿ, ಭೋಗಗಳಿಗೆ ಹೇಸಿದನು. ಅವನಲ್ಲಿ ವೈರಾಗ್ಯವುಂಟಾಯಿತು. ಎಲ್ಲವನ್ನೂ ಬಿಟ್ಟು ಅರಿಷ್ಟನೇಮಿಸ್ವಾಮಿಗಳ ಬಳಿಯಲ್ಲಿ ತಪವನ್ನು ಕೈಗೊಂಡು ಅತ್ಯಂತ ಉಗ್ರವಾದ ತಪಸ್ಸನ್ನು ಆಚರಿಸಿ, ಹನ್ನೆರಡು ವರ್ಷಗಳಾದನಂತರ ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಆಮೇಲೆ ದ್ವಾರಾವತಿಗೆ ಬಂದನು ಅಲ್ಲಿ ರೇವತವೆಂಬ ಉದ್ಯಾನವನದಲ್ಲಿ ರಾತ್ರಿಯ ವೇಳೆ ಪ್ರತಿಮೆಯ ರೂಪದಲ್ಲಿ ತಪಸ್ಸಿಗೆ ನಿಂತನು. ಸ್ವಜನರೂ ಪರಿಜನರೂ ಬಂಧುಗಳೂ ಸದ್ಗೈಹಸ್ಥರೂ ಬಂದು ಅವನನ್ನು ಪೂಜಿಸಿ ಸಾಷ್ಠಾಂಗ ವಂದಿಸಿ ಹೋಗುತ್ತಿದ್ದರು. ಅವರನ್ನು ಪಂಗುಳನೆಂಬ ಅಕ್ಕಸಾಲಿ ಕಂಡು ಪ್ರಶ್ನೆಮಾಡಿ ಗಜಕುಮಾರಋಷಿಗಳ ಬರುವಿಕೆಯನ್ನು ಕೇಳಿ ತಿಳಿದುಕೊಂಡನು.

    ಪಗೆವನನಿಱಯಲ್ಪೆತ್ತೆನೆಂದು ರಾಗಿಸಿ ಪಲವು ನಿಡಿಯವುಂ ತೋರಮುಮಪ್ಪ ಕರ್ಬೊನ್ನ ಕೀಲ್ಗಳಂ ಕೊಂಡು ಬಂದು ಕ್ಷಮಾಂಗನಾಲಿಂಗಿತನಪ್ಪ ಮಹಾಮುನಿಯಂ ಮಲರ್ಚಿ ಪಟ್ಟರಿಸಿಯುರಃಸ್ಥಳಮಂ ನಾಭಿವರೆಗಂ ವಿದಾರಿಸಿ ಪಂದೊವಲ್ ಪೊರತಾಪಿನೆಗಂ ಸಮಂತವಯವಪ್ರದೇಶಂಗಳೊಳ್ ಕಾಯ್ದ ಕರ್ಬೊನ್ನ ಕೀಲ್ಗಳಂ ನೆಲನಂ ತಾಪಿನಮುರ್ಚಿ ಪೋಗಿಱದೊಡೆ ಕ್ಷಮೆಮಂ ಭಾವಿಸಿ ಧರ್ಮಧ್ಯಾನ ಶುಕ್ನಧ್ಯಾನಂಗಳಂ ಜಾನಿಸಿ ರತ್ನತ್ರಯಮಂ ಸಾಸಿ ಸಮಾಮರಣದಿಂ ಮುಡಿಪಿ ದೇವಲೋಕಮೆಂಬ ಪ್ರಾಸಾದಕ್ಕೆ ಕಳಸಮಾಗುತ್ತಿರ್ದ ಸರ್ವಾರ್ಥಸಿದ್ದಿಯೆಂಬ ಸ್ವರ್ಗದೊಳ್ ಮೂವತ್ತುಮೂಱು ಸಾಗರೋಪ ಮಾಯುಷ್ಯಸ್ಥಿತಿಯನೊಡೆಯನೇಕಹಸ್ತಪ್ರಮಾಣನುಂ ಪುಂಡರೀಕವರ್ಣಂಗಳನೊಡೆಯೊನಹಮಿಂದ್ರ ದೇವನಾಗಿ ಪುಟ್ಟಿದೊಂ ಮತ್ತಂ ಪೆಱರುಮಾರಾಧಕರಪ್ಪವರ್ಗಳ್ ಗಜಕುಮಾರನ ಮಾನುಷ್ಠೋಪಸರ್ಗದೊಳಾದವೇದನೆಯಂ ಮನದೊಳ್ ಭಾವಿಸುತ್ತಂ ಪಸಿವು ನೀರೞ್ಕೆ ದಾಹವಾತಂ ಸೂಲೆ ಮೊದಲಾಗೊಡೆಯ ವೇದನೆಗಳಂ ಸೈರಿಸಿ ದರ್ಶನ ಜ್ಞಾನ ಚಾರಿತಂಗಳಂ ಸಾಸಿ ಸಮಾಮರಣದಿಂದಂ ಮುಡಿಪಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

    ‘ಶತ್ರುವನ್ನು ಹೊಡೆಯಲು (ಕೊಲ್ಲಲು) ಅವಕಾಶವನ್ನು ಪಡೆದನು’ ಎಂದು ಅವನು ಸಂತೋಷಪಟ್ಟು ಉದ್ದ ಮತ್ತು ದಪ್ಪವುಳ್ಳ ಕಬ್ಬಿಣದ ಹಲವು ಮೊಳೆಗಳನ್ನು ತಂದು, ಕ್ಷಮಾಗುಣವೆಂಬ ಸ್ತ್ರೀಯಿಂದ ಆಲಿಂಗನಗೊಂಡ ಆ ಮಹರ್ಷಿಯನ್ನು ಮಗುಚಿ (ಎದೆ ಮೇಲಕ್ಕಾಗಿ) ಮಲಗಿಸಿ ಎದೆಯಿಂದ ಹೊಕ್ಕುಳವರೆಗೆ ಸೀಳಿದನು. ಹಸಿಯಾದ ಚರ್ಮದ ಪದರಗಳು ತಾಗುವ ರೀತಿಯಲ್ಲಿ, ಚೆನ್ನಾಗಿ, ಅವಯವಗಳ ಸ್ಥಾನಗಳಲ್ಲಿ ಕಾದ ಕಬ್ಬಿಣದ ಮೊಳೆಗಳನ್ನು – ಅವು ನೆಲಕ್ಕೆ ತಗಲುವ ರೀತಿಯಲ್ಲಿ ಭೇದಿಸುವಂತೆ ಹೊಡೆದನು. ಆಗ ಗಜಕುಮಾರಮುನಿ ಕ್ಷಮೆಯನ್ನೇ ಭಾವಿಸಿಕೊಂಡು ಧರ್ಮಧ್ಯಾನ ಶುಕ್ಲಧ್ಯಾನಗಳನ್ನು ಧ್ಯಾನಿಸುತ್ತ, ರತ್ನತ್ರಯವನ್ನು ಸಾಸಿ ಸಮಾಮರಣದಿಂದ ಸತ್ತು ದೇವಲೋಕವೆಂಬ ಸೌಧಕ್ಕೆ ಕಲಶದಂತಿರುವ ಸರ್ವಾರ್ಥಸಿದ್ದಿಯೆಂಬ ಸ್ವರ್ಗದಲ್ಲಿ ಮುವತ್ತಮೂರು ಸಾಗರದಷ್ಟು ಆಯುಷ್ಯಸ್ಥಿತಿಯುಳ್ಳ ಒಂದೇ ಮೊಳ ಆಳತೆಯುಳ್ಳ, ಬಿಳಿಯ ತಾವರೆಯ ಬಣ್ಣವುಳ್ಳ ಅಹಮಿಂದ್ರದೇವನಾಗಿ ಹುಟ್ಟಿದನು. ಮತ್ತು, ಬೇರೆ ಆರಾಧಕರು – ಗಜಕುಮಾರನಿಗೆ ಮನುಷ್ಯ ಉಪವರ್ಗದಿಂದ ಆದ ನೋವನ್ನು ಮನಸ್ಸಿನಲ್ಲಿ ಭಾಮಿಸುತ್ತ, ಹಸಿವು, ಬಾಯಾರಿಕೆ, ಸುಡುವಿಕೆ, ವಾತ, ಸಿಡಿತ – ಮುಂತಾಗಿರುವ ನೋವುಗಳನ್ನು ಸಹಿಸಿ, ರತ್ನತ್ರಯವನ್ನು ಸಾಸಿ, ಸಮಾಮರಣದಿಂದ ಸತ್ತು ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ !

*****ಕೃಪೆ: ಕಣಜ****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ