ನನ್ನ ಪುಟಗಳು

07 ಮಾರ್ಚ್ 2022

ವಡ್ಡಾರಾಧನೆ-ಅಭಯಘೋಷ ಮುನಿಯ ಕಥೆ | Vaddaradhane-Abhayaghosha-muniya-kathe

 ಆಭಯಘೋಷರೆಂಬ ಮುನಿಯ ಕಥೆಯಂ ಪೇೞ್ವೆಂ :

ಗಾಹೆ || ಕಾಕಂದಿ ಅಭಯಘೋಸೋ ಎ ಚಂಡವೇಗೇಣ ಛಿಣ್ಣ ಸವ್ವಂಗೋ
ತವ್ವೇದಣ ಮಯಾಸಿಯ ಪಡಿವಣ್ಣೋ ಉತ್ತಮಂ ಆಟ್ಠಂ ||

    *ಕಾಕಂದಿ – ಕಾಕಂದಿಯೆಂಬ ಪೊೞಲೊಳ್, ಅಭಯಘೋಸೋ ವಿ – ಆಭಯಘೋಷರೆಂಬ ರಿಸಿಯುಂ, ಚಂಡವೇಗೇಣ – ಚಂಡವೇಗನೆಂಬೊನರಸನಿಂದಂ, ಛಿಣ್ಣಸವ್ವಂಗೋ – ಕೊಱೆಯೆ ಪಟ್ಟೆಲ್ಲಾ ಮೆಯ್ಯನೊಡೆಯನಾಗಿ, ತವ್ವೇದಣಂ – ಆ ವೇದನೆಯಂ, ಆಯಾಸಿಯ – ಲೇಸಾಗಿ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯುಂ*

    ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕಾಕಂದಿಯೆಂಬುದು ಪೊೞಲದನಾಳ್ಪೊನಭಯಘೋಷನೆಂಬೊನರಸನಾತನ ಮಹಾದೇವಿ ಅಭಿಯಮತಿಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಮರಸಂ ಪೊಱಮಟ್ಟು ಪೊಱವೊೞಲ ಶೋಭೆಯಂ ತೊೞಲ್ದು ನೋಡುತ್ತಿರ್ಪನ್ನೆಗಮೊರ್ವ ಮೀಂಗುಲಿಗನೊಂದಾಮೆಯಂ ಬಾೞೆವಾೞೆ ನಾಲ್ಕು ಕಾಲಂ ಕಟ್ಟಿ ಬಳ್ಳಿಯಂ ಕೊರಲೊಳ್ ತಗುೞಯೆೞಲೆ ಪಿಡಿದುಕೊಂಡು ಪೊೞಲ್ಗಿದಿರಂ ಬರ್ಪೋನನರಸಂ ಕಂಡು ತನ್ನ ಬಿನ್ನಣಮಂ ನೆರೆದ ನೆರವಿಗೆ ಮೆಱೆಯಲ್ವೇಡಿ ಗೆಂಟಱೆಂ ಚಕ್ರದಿಂ ನಾಲ್ಕು ಕಾಲುಮನೊರ್ಮೊದಲೆ ಪಱಯಿಟ್ಟೊಡೆ ಮೀಂಗುಲಿಗಂ ಪ್ರಾಣಮುಳ್ಳಂತಿರಾಮೆಯಂ ತನ್ನ ಮನೆಗೆ ಕೊಂಡು ಪೋದೊಡಾ

    ಅಭಯಘೋಷರೆಂಬ ಮುನಿಯ ಕಥೆಯನ್ನು ಹೇಳುವೆನು : (ಕಾಕಂದಿಯೆಂಬ ಪಟ್ಟಣದಲ್ಲಿ ಆಭಯಘೋಷರೆಂಬ ಋಷಿ ಚಂಡವೇಗನೆಂಬ ರಾಜನಿಂದ ಕೊರೆಯಲ್ಪಟ್ಟ ಸವ್ವಾಂಗವುಳ್ಳವನಾಗಿ ಆ ವೇದನೆಯನ್ನು ವಿಶೇಷವಾಗಿ ಸಹಿಸಿ ಶ್ರೇಷ್ಠವಾದ ದರ್ಶನ ಜ್ಞಾನ ಚಾರಿತ್ರಗಳ ಆರಾಧನೆಯನ್ನು ಆಚರಿಸಿದನು..) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿದೆ. ಅಲ್ಲಿ ಕಾಕಂದಿ ಎಂಬ ಪಟ್ಟಣವನ್ನು ಅಭಯಘೋಷನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಆಭಯಮತಿಯೆಂಬವಳು. ಅಂತು ಅವರು ತಮ್ಮ ಇಷ್ಟವಾದ ವಿಷಯದ ಬಯಕೆಯ ಸುಖಗಳನ್ನು ಅನುಭವಿಸುತ್ತ ಅವರ ಕಾಲ ಕಳೆಯುತ್ತಿತ್ತು. ಆಮೇಲೆ ಒಂದು ದಿವಸ ರಾಜನು ಅರಮನೆಯಿಂದ ಹೊರಟು ಪಟ್ಟಣದ ಹೊರಗಿನ ಚೆಲುವನ್ನು ನೋಡುತ್ತ ಸುತ್ತಾಡುತ್ತಿದ್ದನು. ಆ ವೇಳೆಗೆ ಒಬ್ಬ ಬೆಸ್ತನು ಒಂದು ಆಮೆಯನ್ನು ಅದು ಜೀವಿಸಿಕೊಂಡಿದ್ದಂತೆಯೇ (ಸಜೀವವಾಗಿ) ನಾಲ್ಕು ಕಾಲುಗಳನ್ನೂ ಕಟ್ಟಿ, ಕೊರಳಿಗೆ ಹಗ್ಗ ಸಿಕ್ಕಿಸಿ, ಅದು ನೇತಾಡುವ ಹಾಗೆ ಹಿಡಿದುಕೊಂಡು ಪಟ್ಟಣಕ್ಕೆ ಇದಿರಾಗಿ ಬರುತ್ತಿದ್ದನು. ಅವನನ್ನು ರಾಜನು ಕಂಡು, ತನ್ನ ವಿಶೇಷವಾದ ಜ್ಞಾನವನ್ನು ಅಲ್ಲಿ ಸೇರಿದ್ದ ಜನಸಂದೋಹಕ್ಕೆ ಮೆರೆಯಿಸಬೇಕೆಂಬ ಉದ್ದೇಶದಿಂದ ದೂರದಿಂದ ತನ್ನ ಚಕ್ರಾಯುಧದಿಂದ ಅದರ ನಾಲ್ಕು ಕಾಲುಗಳೂ ಒಂದೇ ಸಲಕ್ಕೆ ತುಂಡಾಗುವಂತೆ ಹೊಡೆದನು. ಬೆಸ್ತನು ಆ ಆಮೆಯನ್ನು ಪ್ರಾಣವಿರುವ ಹಾಗೆಯೇ

    ಇರುಳೊಳಾವೆ ಪಿರಿದು ವೇದನೆಯಿಂದಂ ನಮೆದು ಸತ್ತಾ ಪೊೞಲೊಳಭಯಘೋಷ ನೃಪತಿಗಭಯಮತಿ ಮಹಾದೇವಿಗಂ ಚಂಡವೇಗನೆಂಬ ಮಗನಾಗಿ ಪುಟ್ಟಿದನಂತವರ್ಗಳಿಷ್ಟವಿಷಯ ಕಾಮಭೋಗಸುಖಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಮರಸನುಮರಸಿಯುಂ ಕರುಮಾಡದ ಮೇಗಣ ನೆಲೆಯೊಳ್ ಭೋಗೋಪಭೋಗ ಸುಖಂಗಳನನುಭವಿಸುತ್ತಂ ವಿನೋದದಿಂದಿರ್ಪನ್ನೆಗಂ ಚಂದ್ರಗ್ರಹಣಮಾದುದನರಸಂ ಕಂಡನಿತ್ಯಮಂ ಭಾವಿಸಿಯದುವೆ ವೈರಾಗ್ಯಕ್ಕೆ ಕಾರಣವಾಗಿ ಚಂಡವೇಗನೆಂಬ ಮಗಂಗೆ ರಾಜ್ಯಪಟ್ಟಂಗಟ್ಟಿ ಬಾಹ್ಯಾಭ್ಯಂತರ ಪರಿಗ್ರಹ ಪರಿತ್ಯಾಗಂಗೆಯ್ದು ನಂದನರೆಂಬಾಚಾರ್ಯರಪಕ್ಕದೆ ತಪಂಬಟ್ಟು ಪನ್ನೆರಡು ವರುಷಮವರೊಡನಿರ್ದೆಲ್ಲಾ ವೋದುಗಳುಮಂ ಕಲ್ತು ಗುರುಗಳಂ ಬೆಸಗೊಂಡವ ರನುಮತದಿಂದೇಕವಿಹಾರಿಯಾಗಿ ಗ್ರಾಮನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾ ಮುಖಂಗಳಂ ವಿಹಾರಿಸುತ್ತಂ ಬರ್ಪೊರ್ ತಮ್ಮ ಮುನ್ನಿನ ಕಾಕಂದಿಯೆಂಬ ಪೊೞಲ್ಗೆವಂದು ದ್ಯಾನವನದೊಳ್ ವೀರಾಸನಮಿರ್ದೊರನ್ನೆಗಂ ಮುನ್ನಾಮೆಯಪ್ಪ ಜೀವನವರ ಮಗನಪ್ಪಚಂಡವೇಗಂ ಕರುಮಾಡದ ಮೇಗಣ ನೆಲೆಯೊಳಿರ್ದು ನೋಂಟಕ್ಕೆ ಗೆಂಟು ಪೋಗೆ ಚಕ್ರಮನಿಟ್ಟೊಡಾ ಚಕ್ರಂವಂದು ಋಷಿಯರೆರಡು ಕೆಯ್ಯುಂ ಕಾಲ್ಗುಳುಮಂ ಮೊಕ್ಕನೆ ಪೋಗೆ ಕೊಂಡೊಂಡೆ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ವೇದನೆಯುಂ ಸೈರಿಸಿ

    ತನ್ನ ಮನೆಗೆ ತೆಗೆದುಕೊಂಡು ಹೋದನು. ಆ ರಾತ್ರಿ ಆಮೆ ಹೆಚ್ಚಾದ ನೋವಿನಿಂದ ಯಾತನೆ ಪಟ್ಟು ಸತ್ತು ಆ ಪಟ್ಟಣದಲ್ಲಿ ಅಭಯಘೋಷ ರಾಜನಿಗೂ ಆಭಯಮತಿ ರಾಣಿಗೂ ಮಗನಾಗಿ ಜನಿಸಿತು. ಅಂತು ಅವರು ತಮ್ಮ ಪ್ರೀತಿಯ ವಿಷಯ ಬಯಕೆಯ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಮತ್ತೊಂದು ದಿವಸ ರಾಜರಾಣಿಯರು ಅರಮನೆಯ ಮೇಲುಪ್ಪರಿಗೆಯ ನೆಲೆಯಲ್ಲಿ ಬಹುವಿಧವಾದ ಸುಖಗಳನ್ನು ಅನುಭವಿಸುತ್ತ ವಿನೋದದಿಂದ ಇದ್ದರು. ಆಗ ರಾಜನು ಚಂದ್ರಗ್ರಹಣವಾದುದನ್ನು ಕಂಡು ಈ ಸಂಸಾರ ಶಾಶ್ವತವಲ್ಲವೆಂದು ಭಾವಿಸಿದನು. ಅದುವೇ ಅವನಿಗೆ ವೈರಾಗ್ಯಕ್ಕೆ ಕಾರಣವಾಯಿತು. ಅವನು ಮಗನಾದ ಚಂಡವೇಗನಿಗೆ ಪಟ್ಟ ಕಟ್ಟಿ ಬಾಹ್ಯ ಮತ್ತು ಅಭ್ಯಂತರ ಎಂಬ ಎರಡು ಬಗೆಯ ಪರಿಗ್ರಹಗಳನ್ನು ತೊರೆದು ನಂದನರೆಂಬ ಗುರುಗಳ ಬಳಿಯಲ್ಲಿ ತಪಸ್ಸನ್ನು ಕೈಗೊಂಡನು. ಹನ್ನೆರಡು ವರ್ಷ ಅವರೊಡನೆ ಇದ್ದು ಎಲ್ಲ ವಿದ್ಯೆಗಳನ್ನೂ ಕಲಿತು, ಗುರುಗಳೊಡನೆ ಕೇಳಿ, ಅವರ ಅಪ್ಪಣೆ ಪಡೆದು, ಅಭಯಘೋಷ ಋಷಿಯಾಗಿ, ಅವರು ಒಬ್ಬರೇ ಸಂಚಾರ ಮಾಡುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಮುಖ ಎಂಬ ಭೂಭಾಗಗಳಲ್ಲಿ ಸಂಚರಿಸಿಕೊಂಡು ಬರುತ್ತಿದ್ದವರು ತಮ್ಮ ಹಿಂದಿನ ಕಾಕಂದಿ ಎಂಬ ಪಟ್ಟಣಕ್ಕೆ ಬಂದರು. ಅಲ್ಲಿನ ಉದ್ಯಾನವನದಲ್ಲಿ ವೀರಾಸನದಲ್ಲಿ ಕುಳಿತಿದ್ದರು. ಆ ವೇಳೆಗೆ, ಹಿಂದೆ ಆಮೆಯ ಜೀವವಾಗಿದ್ದ, ಅವರ ಮಗನಾದ ಚಂಡವೇಗನು ಅರಮನೆಯ ಮೇಲುಪ್ಪರಿಗೆಯ ನೆಲೆಯಲ್ಲಿ ಇದ್ದುಕೊಂಡು, ಗುರಿಯಿಟ್ಟು ದೂರಕ್ಕೆ ಹೊಡೆಯುವುದಕ್ಕಾಗಿ ಚಕ್ರವನ್ನು ಪ್ರಯೋಗಿಸಿದನು. ಆ ಚಕ್ರ ಬಂದು ಅಭಯಘೋಷ ಋಷಿಗಳ ಎರಡೂ ಕೈಗಳೂ ಕಾಲೂಗಳೂ ಮೊಕ್ಕೆಂದು ಕತ್ತರಿಸಿ ಹೋಗುವಂತೆ ತಗುಲಿತು. ಆಗ ಋಷಿಗಳು ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯ ಎಂಬ ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ಜೀವವಿರುವವರೆಗೂ ನಿವೃತ್ತಿ ಮಾಡಿ, ನೋವನ್ನು ಸಹಿಸಿ, ಶುಭ

 ಶುಭಪರಿಣಾಮದಿಂ ರತ್ನತ್ರಯಮಂ ಸಾಸಿ ಪದಿನಾಲ್ಕನೆಯ ಪ್ರಾಣತಮೆಂಬ ಕಲ್ಪದೊಳಿರ್ಪತ್ತು ಸಾಗರೋಪಮಾಯುಷ್ಯಮನೊಡೆಯೊನಿಂದ್ರನಾಗಿ ಪುಟ್ಟಿದೊಂ ಮತ್ತೆ ಪೆಱರುಮಾರಾಧಕರುಂ ರತ್ನತ್ರಯಮನಾರಾಸುತ್ತಿರ್ದ್ದ ಭವ್ಯರ್ಕಳಭಯಘೋಷ ಭಟಾರರಂ ಮನದೆ ಬಗೆದು ಪಸಿವುಂ ತೃಷೆಯುಮೇಱುಂ ವ್ಯಾಯುಂ ಶೀತವಾತೋಷ್ಣಂಗಳುಮೆಂದಿವು ಮೊದಲಾಗೊಡೆಯ ದುಃಖಂಗಳಂ ಸೈರಿಸಿ ಪರಮ ಶುದ್ದ ಸಹಜ ದರ್ಶಣ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

    ಪರಿಣಾಮದಿಂದ ರತ್ನತ್ರಯವನ್ನು ಸಾಸಿ ಹದಿನಾಲ್ಕನೆಯದಾದ ಪ್ರಾಣತವೆಂಬ ಸ್ವರ್ಗದಲ್ಲಿ ಇಪ್ಪತ್ತುಸಾಗರ ಪರಿಮಾಣದ ಆಯುಷ್ಯವುಳ್ಳ ಇಂದ್ರನಾಗಿ ಹುಟ್ಟಿದರು. ರತ್ನತ್ರಯವನ್ನು ಆರಾಸುತ್ತಿರುವ ಭವ್ಯಜೀವಿಗಳಾದ ಇನ್ನಿತರ ಆರಾಧಕರೂ ಅಭಯಘೋಷ ಭಟಾರರನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಹಸಿವು, ಬಾಯಾರಿಕೆ, ಗಾಯ, ರೋಗ, ಶೀತ, ವಾಯು, ಉಷ್ಣ – ಎಂದಿವೇ ಮುಂತಾಗಿರುವ ದುಃಖಗಳನ್ನು ಸಹಿಸಿ, ಶ್ರೇಷ್ಠವೂ ಪವಿತ್ರವೂ ಸಹಜವೂ ಆದ ದರ್ಶನ – ಜ್ಞಾನ – ಚಾರಿತ್ರಗಳನ್ನು ಸಾಧನೆ ಮಾಡಿ ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯಲಿ.

*****ಕೃಪೆ: ಕಣಜ****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ