ಗಾಹೆ || ಣಗರೇ ಮಹೇಂದ್ರ ದತ್ತಾದೀಣಂ ಪಂಚಸದಾಕುಂಭಕಾರಘಡೇ
ಆರಾಧಣಂ ಪವಣ್ಣೋ ಪೀಳಿಜ್ಜಂತಾವಿ ಜಂತೇ ಹಿಂ ||

*ಣಗರೇ – ಪೊೞಲೊಳ್, ಮಹೇಂದ್ರದತ್ತಾದೀಣಂ – ಮಹೇಂದ್ರದತ್ತರೆಂಬಾಚಾರ್ಯರ್ ಮೊದಲಾಗೊಡೆಯ ರಿಸಿಯರ್ಕಳ್, ಪಂಚಸದಾ – ಅಯ್ನೂರ್ವರ್, ಕುಂಭಕಾರಘಡೇ – ಕುಂಭ ಕಾರಘಟಮೆಂಬುದಱೊಳ್, ಆರಾಧಣಂ – ಸಹಜ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ, ಪವಣ್ಣಾ – ಪೊರ್ದಿದೊರ್, ಪೀಳಿಜ್ಜಂತಾವಿ – ಪಿಳಿಯೆಪಟ್ಟರಾಗಿಯುಂ, ಜಂತೇಹಿಂ – ಗಾಣಂಗಳಿಂದಂ*

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವಿದೇಹಮೆಂಬುದು ನಾಡಲ್ಲಿ ಸಾವಸ್ತಿಯೆಂಬುದು ಪೊೞಲುಂಟದನಾಳ್ವೊಂ ಜಿತಶತ್ರುವೆಂಬೊನರಸನಾತನ ಮಹಾದೇವಿ ಧಾರಿಣಿಯೆಂಬೊಳಾಯಿರ್ವರ್ಗ್ಗಂ ಮಗಂ ಸ್ಕಂದಕುಮಾರನೆಂಬೊನಾತನಿಂ ಕಿಱಯೊಳ್ ಪುಂಡ್ರಯಶೆಯೆಂಬೊಳಾಕೆಯಂ ದಕ್ಷಿಣಾಪಥದೊಳ್ ಕುಂಭಕಾರಘಟಮೆಂಬ ಪೊೞಲದನಾಳ್ವೊಂ ದಂಡಕನೆಂಬರಸಂಗೆ ಕೊಟ್ಟದಂತವರ್ಗ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತಿತ್ತ ಮುನಿಸುವ್ರತ ತೀರ್ಥಕರ ಪರಮದೇವರ ಪಕ್ಕದೆ ಮಹೇಂದ್ರದತ್ತನುಂ ಜಿತಶತ್ರುವ ಮಗನಪ್ಪ ಸ್ಕಂದಕುಮಾರನುಂ ಮೊದಲಾಗೊಡೆಯ ಅಯ್ನೂರ್ವರ್ರಾಜಪುತ್ರರ್ಕಳ್ ತಪಂ ಬಟ್ಟೋದುಗಳೆಲ್ಲಮಂ ಕಲ್ತು ಅಭಿನಂದನರೆಂಬ ಗಣಧರರೊಡನೆ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರ್ ಕಳಿಂಗ ದೇಶದೊಳ್ ದಂತಪುರಮೆಂಬ ಪೊೞಲನೆಯ್ದಿ

ಮಹೇಂದ್ರದತ್ತಾಚಾರ್ಯರು ಮೊದಲಾಗುಳ್ಳ ಐನೂರು ಮಂದಿ ಋಷಿಗಳ ಕಥೆಯನ್ನು ಹೇಳುವೆನು *ನಗರದಲ್ಲಿ ಮಹೇಂದ್ರದತ್ತರೆಂಬ ಆಚಾರ್ಯರೇ ಮೊದಲಾದ ಐನೂರು ಮಂದಿ ಋಷಿಗಳು ಕುಂಭಕಾರಘಟವೆಂಬ ಪಟ್ಟಣದಲ್ಲಿ ಗಾಣಗಳಿಂದ ಹಿಂಡಲ್ಪಟ್ಟವರಾಗಿ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರಗಳ ಆರಾಧನೆಯನ್ನು ಮಾಡಿದರು.* ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವಿದೇಹವೆಂಬ ನಾಡಿದೆ. ಅಲ್ಲಿ ಸಾವಸ್ತಿ ಎಂಬ ಪಟ್ಟಣವಿದೆ. ಅದನ್ನು ಜಿತಶತ್ರು ಎಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಧಾರಿಣಿಯೆಂಬವಳು. ಆ ಇಬ್ಬರಿಗೂ ಸ್ಕಂದಕುಮಾರನೆಂಬವನು ಮಗನು. ಅವನಿಂದ ಕಿರಿಯಳು ಪುಂಡ್ರಯಶೆ. ಆಕೆಯನ್ನು ದಕ್ಷಿಣ ಭಾರತದಲ್ಲಿರುವ ಕುಂಭಕಾರಘಟ ಎಂಬ ಪಟ್ಟಣವನ್ನು ಆಳತಕ್ಕ ದಂಡಕನೆಂಬ ರಾಜನಿಗೆ ಕೊಡಲಾಗಿತ್ತು. ಅಂತು ಅವರೆಲ್ಲರೂ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗೆಯೇ ಕಾಲಕಳೆಯುತ್ತಿತ್ತು. ಆಮೇಲೆ ಇತ್ತ ಮುನಿಸುವ್ರತ ತೀರ್ಥಂಕರ ಮಹಾದೇವರ ಬಳಿಯಲ್ಲಿ ಮಹೇಂದ್ರದತ್ತನೂ ಜಿತಶತ್ರುವಿನ ಮಗನಾದ ಸ್ಕಂದಕುಮಾರ ಮೊದಲಾಗಿ ಉಳ್ಳ ಐನೂರು ಮಂದಿ ರಾಜಕುಮಾರರು ತಪಸ್ಸನ್ನು ಮಾಡಲು ಉಪದೇಶ ಪಡೆದು, ವಿದ್ಯೆಗಳೆಲ್ಲವನ್ನೂ ಕಲಿತು ಅಭಿನಂದನರೆಂಬ ಗಣಧರರೊಂದಿಗೆ ಗ್ರಾಣ, ನಗರ, ಖೇಡ, ಖರ್ವಡ, ಮಡಂಬ,ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಬರುತ್ತಿದ್ದವರು ಕಳಿಂಗ ದೇಶದಲ್ಲಿ ದಂತಪುರವೆಂಬ ಪಟ್ಟಣಕ್ಕೆ ಬಂದು

 ಅಲ್ಲಿ ಕೆಲವು ದಿವಸಮಿರ್ಪನ್ನೆಗಂ ಆ ಪೊೞಲನಾಳ್ವೊಂ ಜನಾರ್ದನ ಮಹಾರಾಜನೆಂಬೊನರಸನಾತನ ಪುರೋಹಿತಂ ವ್ಯಾಳನೆಂಬೊನಾತಂ ಸ್ಕಂದಕುಮಾರ ಋಷಿಯರೊಡನೆ ಅರಸನ ಮುಂದೆ ಪಂಡಿತರ್ಕಳ ನಡುವೆ ವಾದುಗೆಯ್ದು ಸೋಲ್ತೊಡರಸನಾತನನಟ್ಟಿ ಕಳೆದೊಡಾತನುಂ ಪೋಗಿ ದಂಡಕನೆಂಬರಸಂಗಾಳಾಗಿಯಲ್ಲಿ ಮಂತ್ರಿಪದಮಂ ಪೆತ್ತಿರ್ಪನ್ನೆಗಂ ಮತ್ತಿತ್ತ ಋಷಿಯರ್ಕಳುಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರ್ ಕುಂಭಕಾರಘಟಮೆಂಬ ಪೊೞಲ್ಗೆವಂದೊಡಾ ಪೊೞಲನಾಳ್ವ ದಂಡಕನೃಪತಿ ಬಿಚ್ಚುವರ್ಗೆ ಭಕ್ತನಾಪ್ಪಾತಂ ರಿಸಿಯರ್ಕಳ ಬರವಂ ಕೇಳ್ದು ಬಂದು ಬಂದಿಸಿಯಭಿನಂದನ ಭಟಾರರ ಪಕ್ಕದೆ ವಿಚಾರಿಸಿ ಧರ್ಮಮಂ ಕೇಳ್ದು ಮೆಚ್ಚಿ ನಂಬಿ ಶ್ರಾವಕಬ್ರತಂಗಳಂ ಕೈಕೊಂಡು ಶ್ರಾವಕನಾಗಿ ಅಯ್ನೂರ್ವರ್ ರಿಸಿಯರ್ಕಳುಮಂ ಪ್ರತಿದಿವಸಕ್ಕಂ ಅತಿಭಕ್ತಿಯಿಂದಂ ನಿಱಸಿ ತಾಂ ಪಕ್ಕದಿರ್ದು ದಿವ್ಯಾಹಾರಂಗಳನೂಡುತಿಂತು ಋಷಿಯರ್ಕಳ್ಗೆ ಬೆಸಕೆಯ್ಯುತ್ತಮಿರೆ ಸ್ಕಂದಕುಮಾರ ಋಷಿಯೊಡನೆ ವಾದುಗೆಯ್ದು ಸೋಲ್ತೊಡೆ ತನ್ನನಟ್ಟಿ ಕಳೆದುದು ಕಾರಣಮಾಗಿ ವ್ಯಾಳನೆಂಬಂ ಮಂತ್ರಿ ಋಷಿಯರ್ಕಳನಟ್ಟಿ ಕಳೆವುಪಾಯಮನೆ ಬಗೆಯುತ್ತಿರ್ಪೊನ್ ಒಂದು ದಿವಸಂ ಅಡವಿಗೆ ಪೋಗಿ ರಿಸಿಯರ್ಕಳ್ ಸಿದ್ಧಾಂತಮಂ ಪರಿವಿಡಿಗೆಯ್ದುದಂ ಕೇಳ್ದು ಪೊೞಲ್ಗೆವಂದ ಬೞಕ್ಕೆ ಅವರೋದುವ ಕ್ಷೇತ್ರದ ಸಾರೆಯೊಂದು ಗಿಡುವಿನ ಕೆೞಗೆ ಕೆಲವುಮಾಯುಧಂಗಳಂ ಪೂೞ್ದು ಬಂದರಸಂಗಿಂತೆಂದನೀಯಯ್ನೂರ್ವರುಂ 

 ಅಲ್ಲಿ ಕೆಲವು ದಿವಸ ಇದ್ದರು. ಆ ಪಟ್ಟಣವನ್ನು ಜನಾರ್ದನ ಮಹಾರಾಜನೆಂಬ ರಾಜನು ಆಳುತ್ತಿದ್ದನು. ಅವನ ಪುರೋಹಿತನಾದ ವ್ಯಾಳನೆಂಬವನು ಸ್ಕಂದಕುಮಾರ ಋಷಿಗಳೊಂದಿಗೆ ರಾಜರ ಮುಂದೆ ಪಂಡಿತರುಗಳ ನಡುವೆ ವಾದಮಾಡಿ ಸೋತುಹೋದನು. ಇದರಿಂದ ರಾಜನು ಅವನನ್ನು ಓಡಿಸಿಬಿಟ್ಟನು. ವ್ಯಾಳನು ಹೋಗಿ ದಂಡಕನೆಂಬ ರಾಜನ ಸೇವಕನಾಗಿ ಅಲ್ಲಿ ಮಂತ್ರಿಪದವಿಯನ್ನು ಪಡೆದುಕೊಂಡಿದ್ದನು. ಹೀಗಿರಲು ಅನಂತರ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ ಬರುತ್ತಿದ್ದವರು ಕುಂಭಕಾರಘಟವೆಂಬ ಪಟ್ಟಣಕ್ಕೆ ಬಂದರು. ಆ ಪಟ್ಟಣವನ್ನು ಆಳುವ ದಂಡಕರಾಜನು ಜೈನಯತಿಗಳ ಭಕ್ತನಾಗಿದ್ದು ಋಷಿಗಳು ಬಂದುದನ್ನು ಕೇಳಿ ಬಂದು ವಂದಿಸಿ ಅಭಿನಂದನ ಋಷಿಗಳ ಬಳಿಯಲ್ಲಿ ವಿಚಾರಿಸಿ ಧರ್ಮವನ್ನು ಕೇಳಿ ಮೆಚ್ಚಿ ನಂಬಿ ಶ್ರಾವಕವ್ರತಗಳನ್ನು ಸ್ವೀಕರಿಸಿ ಶ್ರಾವಕನಾದನು. ಅವನು ಐನೂರು ಮಂದಿ ಋಷಿಗಳನ್ನೂ ಪ್ರತಿಯೊಂದು ದಿವಸವೂ ಅತ್ಯಂತ ಭಕ್ತಿಯಿಂದ ಭಿಕ್ಷೆಕ್ಕೆ ನಿಲ್ಲಿಸಿ ತಾನೂ ಬಳಿಯಲ್ಲಿದ್ದು ದಿವ್ಯವಾದ ಆಹಾರವನ್ನು ಊಟಮಾಡಿಸುತ್ತ ಋಷಿಗಳ ಆಜ್ಞೆಯಂತೆ ನಡೆದುಕೊಳ್ಳುತ್ತಿದ್ದನು. ಹೀಗಿರಲು ವ್ಯಾಳನೆಂಬ ಮಂತ್ರಿ ಹಿಂದೆ ಸ್ಕಂದಕುಮಾರ ಋಷಿಯೊಂದಿಗೆ ವಾದಮಾಡಿ ಸೋತಾಗ ತನ್ನನ್ನು ಓಡಿಸಿದುದೇ ಕಾರಣವಾಗಿ ಋಷಿಗಳನ್ನೆಲ್ಲ ಹೇಗೆ ಅಟ್ಟಿಬಿಡುವುದೆಂಬ ಉಪಾಯವನ್ನೇ ಯೋಚಿಸುತ್ತಿದ್ದನು. ಅವನು ಒಂದು ದಿವಸ ಕಾಡಿಗೆ ಹೋಗಿ ಅಲ್ಲಿ ಋಷಿಗಳು ಸಿದ್ಧಾಂತವನ್ನು ಅನುಕ್ರಮವಾಗಿ ಪಠನಮಾಡಿದುದನ್ನು ಕೇಳಿ ಪಟ್ಟಣಕ್ಕೆ ಬಂದ ನಂತರ ಆ ಋಷಿಗಳು ಪಠನ ಮಾಡುವ ಸ್ಥಳದ ಹತ್ತಿರದಲ್ಲಿ ಒಂದು ಗಿಡದ ಕೆಳಗೆ ಕೆಲವು ಆಯುಧಗಳನ್ನು ಹೂಳಿಟ್ಟು ಬಂದು ಮಹಾರಾಜನೊಡನೆ ಹೀಗೆಂದನು.

ರಿಸಿಯರ್ಕಳುಮರಸು ಮಕ್ಕಳೆ ಮಹಾಬಲ ಪರಾಕ್ರಮಮನೊಡೆಯರೀ ರೂಪಂ ತೋಱ ನಂಬಿಸಿ ನಿಮ್ಮ ಪ್ರಾಣಕ್ಕಪಾಯಮಂ ಮಾಡಲ್ ಬಗೆದು ಬಂದರದಱಂ ಬಿಡದವರಲ್ಲಿಗೆ ಪೋಗಲ್ವೇಡ ಅವರುಮಂ ನಂಬಲ್ವೇಡೆಂದೇಕಾಂತದೊಳ್ ಪೇೞ್ದು ಮತ್ತಮಿಂತೆಂದನೆಂತಱಯಲಕ್ಕುಮವರಾಯುಧಂಗಳಂ ಪೂೞರ್ದರಪ್ಪುದಱಂ ಕೂರ್ಪರನಟ್ಟಿ ಅವರೋದುವ ಕ್ಷೇತ್ರದೆ ಬಳಸಿಯುಂ ನೋಡಿಸುವುದೆಂದು ಪೇೞ್ದೊಡರಸನುಮಾಳ್ಗಳಂ ನೋಡಿಮೆಂದು ಬೆಸವೇೞ್ದೊಡವರುಂ ಪೋಗಿಯವರೋದುವ ಕ್ಷೇತ್ರದೊಳ್ ನೋಡಿ ಗಿಡುವಿನ ಕೆೞಗೆ ಪೂೞರ್ದಾಯುಧಂಗಳಂ ತಂದರಸಂಗೆ ತೋಱದೊಡೆ ಅರಸನೆಂದಂ ರಿಸಿಯರೊಂದಿಱುಪೆಗಪ್ಪೊಡಂ ಪೊಲ್ಲದಂ ಬಗೆಯದವರೆನಗಹಿತಮಂ ಬಗೆವರೆ ಪೊಲ್ಲದೊರಾರಾನುಂ ಋಷಿಯರ್ಗೆ ಮುಳಿವರ್ ಪೂೞಟ್ಟರಕ್ಕುಮೆಂದರಸನದಂ ಕಡೆಗಣಿಸಿ ಕೆಮ್ಮಗಿರ್ದಂ ಮತ್ತೆ ಕೆಲವು ದಿವಸದಿಂ ಭಂಡಾರದ ಮನೆಯೊಳ್ ಕನ್ನಮಿಕ್ಕಿಸಿ ಭಂಡಾರದ ಪುಡುಕೆಗಳಂ ಪೋೞ್ದು ದ್ರಮ್ಮಮಂ ಪೊನ್ನುಂ ತುಡುಗೆಗಳುಮಂ ಸಾಲಿಟ್ಟಂತಿರೆಯುಗುತ್ತಂ ನಡುವಿರುಳ್ ಕೊಂಡು ಪೋಗಿಯವರಿರ್ಪ ಬಸದಿಯೊಳಗೊಂದು ಕೋಣೆಯೊಳೊಟ್ಟಿರಿಸಿ ಬಂದು ಪೊೞ್ತಡೆ ಅರಸಂಗಿಂತೆಂದು ಪೇೞ್ದಂ ದೇವಾ ಭಂಡಾರದ ಮನೆಯೊಳ್ ಕನ್ನಮನಿಕ್ಕಿ ಭಂಡಾರಮೆಲ್ಲಮಂ ಕಳ್ದುಕೊಂಡು ಪೋದರೆಂದು ಪೇೞ್ದೊಡರಸನಾರ್ ಕೊಂಡರಾರಯ್ಯೆಂದು ತಳಾಱಂಗೆ ಬೆಸವೇೞ್ದೊಡಾತನುಮಾರಯ್ದು ಬಂದು ದೇವಾ ರಿಸಿಯರ್ ಕನ್ನಮಿಕ್ಕಿ ತಮ್ಮ ಬಸದಿಯೊಳ್ ಕಸವರಮನೊಟ್ಟಿಟ್ಟು ಸಾಲಿಟ್ಟಂತಿರೆ ಬಸದಿವರೆಗಂ ದ್ರಮ್ಮಮುಂ ಪೊನ್ನೊಂ ಸಾರಬೀದಿಯಾಗಿಯುಮುಗುತ್ತಂ ಪೋದುವೆಂದು ಪೇೞ್ದೊಡರಸನೆಂದಂ 

 “ಈ ಐನೂರು ಮಂದಿ ಋಷಿಗಳು ರಾಜಕುಮಾರರೇ ಆಗಿದ್ದಾರೆ. ಇವರು ಮಹತ್ತರವಾದ ಶಕ್ತಿ – ಪರಾಕ್ರಮಗಳುಳ್ಳವರು. ಈ ಋಷಿರೂಪವನ್ನು ತೋರಿಸಿ, ನಂಬಿಸಿ, ನಿಮ್ಮ ಪ್ರಾಣಕ್ಕೆ ಅಪಾಯವನ್ನು ಉಂಟುಮಾಡಬೇಕೆಂದು ಯೋಚಿಸಿ ಬಂದಿರುತ್ತಾರೆ. ಆದುದರಿಂದ ಅವರ ಬಳಿಗೆ ನೀನು ಆಗಾಗ ಹೋಗಬೇಡ. ಅವರನ್ನು ನಂಬಲೇಬೇಡ* – ಈ ರೀತಿಯಾಗಿ ಏಕಾಂತದಲ್ಲಿ ಹೇಳಿದನು. ಆಮೇಲೆ ಹೀಗೆಂದನು – “ಹೇಗೆ ಗೊತ್ತು ಮಾಡಿಕೊಳ್ಳುವುದು? ಅವರು ಆಯುಧಗಳನ್ನು ಹೂತು ಇಟ್ಟಿದ್ದಾರೆ – ಆದುದರಿಂದ ಸ್ನೇಹಿತರಾದವರನ್ನು ಅವರಿರುವಲ್ಲಿಗೆ ಕಳುಹಿಸಿ ಅವರು ಪಠಿಸುವ ಸ್ಥಳದಲ್ಲಿ ಸುತ್ತಲೂ ಪರೀಕ್ಷಿಸಬೇಕು* ಎಂದು ಹೇಳಲು ರಾಜನು ಪರೀಕ್ಷಿಸುವುದಕ್ಕಾಗಿ ಸೇವಕರಿಗೆ ಆಜ್ಞೆ ಮಾಡಿದನು. ಅವರು ಹೋಗಿ ಋಷಿಗಳು ಪಠನಮಾಡುವ ಕ್ಷೇತ್ರದಲ್ಲಿ ಪರೀಕ್ಷಿಸಿ ಗಿಡದ ಕೆಳಗಡೆ ಹೂತು ಇಟ್ಟಿದ್ದ ಆಯುಧಗಳನ್ನು ತಂದು ರಾಜನಿಗೆ ತೋರಿಸಿದರು. ಆಗ ರಾಜನು ಹೀಗೆಂದನು – “ಋಷಿಗಳು ಒಂದು ಇರುವೆಗಾದರೂ ಕೆಟ್ಟದನ್ನು ಬಗೆಯುವವರಲ್ಲ. ಅವರು ನನಗೆ ಅಹಿತವಾದುದನ್ನು ಯೋಚಿಸುವರೆ? ಋಷಿಗಳ ಮೇಲೆ ಕೋಪಿಸತಕ್ಕ ಯಾರಾದರೂ ಅಲ್ಲಿ ಆಯುಧಗಳನ್ನು ಹೂಳಿ ಇಟ್ಟಿರಬಹುದು.* ಈ ರೀತಿಯಾಗಿ ಹೇಳಿ ರಾಜನು ಆ ಸಂಗತಿಯನ್ನು ಅಲಕ್ಷ ಮಾಡಿ ಸುಮ್ಮನೆ ಇದ್ದನು. ಆಮೇಲೆ, ವ್ಯಾಳಮಂತ್ರಿ ಕೆಲವು ದಿನಗಳ ನಂತರ ಕೋಶಾಗಾರದ ಮನೆಯಲ್ಲಿ ಕನ್ನ ಹಾಕಿಸಿ ಭಂಡಾರದ ದ್ರವ್ಯಗಳ ಪೆಟ್ಟಿಗೆಗಳನ್ನು ಒಡೆದು ದ್ರಮ್ಮನಾಣ್ಯಗಳನ್ನೂ ಚಿನ್ನವನ್ನೂ ಆಭರಣಗಳನ್ನೂ ದಾರಿಯುದ್ದಕ್ಕೂ ಸಾಲಾಗಿ ಸುರಿಯುತ್ತ ನಟ್ಟಿರುಳಲ್ಲಿ ಕೊಂಡುಹೋಗಿ ಋಷಿಗಳಿರುವ ಬಸದಿಯೊಳಗೆ ಒಂದು ಕೋಣೆಯಲ್ಲಿ ರಾಶಿ ಹಾಕಿಟ್ಟು ಬಂದು, ಹೊತ್ತಾರೆ ರಾಜನಿಗೆ ಈ ರೀತಿಯಾಗಿ ಹೇಳಿದನು –

ಋಷಿಯರ್ ಶ್ರಾವಕರ್ಗೆ ಕಳ್ಳದಿರಿಂ ಪೆಱರ ವಸ್ತುವಂ ಕೊಳ್ಳದಿರಿಮೆಂದು ಬ್ರತಂಗಳಂ ಕುಡುವರ್ ತಾಮೆ ಕಳ್ವರೆ ಆರಾನುಮವರ್ಗೆ ಮುಳಿವರಿದಂ ಮಾಡಿದರೆಂದದುವಂ ಕಡೆಗಣಿಸಿ ಕೆಮ್ಮಗಿರ್ದಂ ಮತ್ತೆ ಕೆಲವು ದಿನದಿಂ ಮೇಲೆ ಸುವ್ರತೆಯೆಂಬ ಮಹಾದೇವಿಯೊಡನೆ ಮಂತ್ರಿ ಕಜ್ಜಮಂ ಸಮಕಟ್ಟಿಯೊಂದು ದಿವಸಮೊರ್ವ ಬೂತಿಂಗೆ ದ್ರಮ್ಮಮಂ ಕೊಟ್ಟೊಡಂಬಡಿಸಿ ತಲೆಯಂ ಕಿರಿಸಿ ಕರಿಯ ಕೋವಣಮನುಡಿಸಿ ಪಲ್ಗಳೊಳ್ ಕವಡಿಕೆಯಂ ಕಟ್ಟಿಸಿ ಕುಂಚಮಂ ಕೊಟ್ಟಿಂತೆಂದಂ ನೀಂ ಮಹಾದೇವಿಯ ಮಂಚಮನಂಜದೇಱ ಆಕೆಯೊಡನೆ ನಗುತ್ತಂ ತೆಗೞುತ್ತಮಿರೆಂದು ಕಲ್ಪಿಸಿದನನ್ನೆಗಮಿತ್ತರಸಂ ಋಷಿಯರ್ಕಳಿಲ್ಲರುಮನೂಡಿ ಕೞಪಿದ ಬೞಕ್ಕೆ ಬರ್ಪೊನನ್ನೆಗಮಾ ಬೂತುಮಾ ಪ್ರಸ್ತಾವದೊಳ್ ಪೋಗಿ ಮಹಾದೇವಿಯ ಮಂಚಮನೇೞರ್ದಾಗಳ್ ಅರಸಿ ಮಂಚದಿಂದಿೞದು ಕೈಗಳಂ ಮುಗಿದು ನವೋಸ್ತಿದೇನೆಂದು ನುಡಿದೊಡಾತನಿಂತೆಂದಂ ನಿನಗಾಟಿಸಿ ಬೇಂಟಂಗೊಂಡು ಬಂದೆಂ ಪೆಱತೇನುಮಂ ನುಡಿಸಯದಿರಿತ್ತ ಬಾ ಎಂದು ಮಂಚದತ್ತ ಕರೆವುದನಿತೆಲ್ಲಮಂ ನೃಪತಿಗೆ ಮಂತ್ರಿ ತೋಱ ಇಂತೆಂದಂ ನೋಡರಸಾ ನಿಮ್ಮ ಸವಣರ ಗೊಡ್ಡಮಂ ನಿನ್ನಂ ಕೊಲಲ್ ನೆಱೆದಾಯುಧಂಗಳಂ ಪೂೞಟ್ಟೊರೆಂದೊಡಂ ನಂಬಿದೆಯಿಲ್ಲ ಭಂಡಾರಮಂ ಕಳ್ದರೆಂದೊಡದಂ ನಂಬಿದೆಯಿಲ್ಲಮೀಗಳ್ ಪ್ರತ್ಯಕ್ಷಂ ನೋಡು ನಿನ್ನ ಮಹಾದೇವಿಯೊಡನೆ ಗೊಡ್ಡಮಾಡುವುದಂ ನಿನ್ನ ಪೆಂಡಿರುಮಂ ಬರ್ದುಂಕಲಿತ್ತಪ್ಪೊರಿಲ್ಲೆಂದು ತೋಱ ನುಡಿದೊಡರಸಂ ಮುನ್ನ ಕೞದ ದೋಷಮೆಲ್ಲಮನಿವರೆ ಮಾಡಿದರೆಂಬೊಂದು ನಂಬುಗೆ ಮನದೊಳಾಗಿ

“ಪ್ರಭು, ನಿಮ್ಮ ದ್ರವ್ಯಾಗಾರದ ಮನೆಯಲ್ಲಿ ಕನ್ನ ಹಾಕಿ ಭಂಡಾರವನ್ನೆಲ್ಲ ಕದ್ದುಕೊಂಡು ಹೋಗಿದ್ದಾರೆ. * ಹೀಗೆ ಹೇಳಿದಾಗ ರಾಜನು “ಯಾರು ತೆಗೆದುಕೊಂಡರು, ವಿಚಾರಿಸು" ಎಂದು ತಳಾರ (ಪಟ್ಟಣದ ಕಾವಲುಗಾರ)ನಿಗೆ ಆಜ್ಞೆಮಾಡಿದನು. ತಳಾರನು ವಿಚಾರಮಾಡಿ ಬಂದು, “ಪ್ರಭುವೇ ಋಷಿಗಳು ಕನ್ನ ಹಾಕಿ ತಮ್ಮ ಬಸದಿಯಲ್ಲಿ ಚಿನ್ನವನ್ನೆಲ್ಲ ರಾಶಿ ಹಾಕಿದ್ದಾರೆ. ದ್ರಮ್ಮನಾಣ್ಯವೂ ಚಿನ್ನವೂ ಬಸದಿಯವರೆಗೂ ಉದುರುತ್ತ ಹೋಗಿ ದಾರಿಯು ಈ ಸಂಗತಿಯನ್ನು ಸಾರುವ ಬೀದಿಯಂತಾಗಿದೆ" ಎಂದು ಹೇಳಿದನು. ಆಗ ರಾಜನು ಹೀಗೆಂದನು – “ಋಷಿಗಳು ಶ್ರಾವಕರಿಗೆ – ಕಳವು ಮಾಡದಿರಿ ಬೇರೆಯವರ ವಸ್ತುವನ್ನು ತೆಗೆದುಕೊಳ್ಳದಿರಿ ಎಂದು ವ್ರತಗಳನ್ನು ಕೊಡತಕ್ಕವರು. ಅವರು ಸ್ವತಃ ಕಳ್ಳತನ ಮಾಡುವರೆ? ಯಾರಾದರೂ ಅವರ ಮೇಲೆ ಕೋಪಗೊಳ್ಳುವವರು ಇದನ್ನು ಮಾಡಿದ್ದಾರೆ" – ಎಂದು ಅದನ್ನೂ ಕಡೆಗಣಿಸಿ ಸುಮ್ಮನಿದ್ದನು. ಮತ್ತೆ ಕೆಲವು ದಿನಗಳಾದ ಮೇಲೆ, ಸುವ್ರತೆಯೆಂಬ ಮಹಾರಾಣಿಯೊಂದಿಗೆ ಮಂತ್ರಿಯು ಕಾರ್ಯವನ್ನು ವ್ಯವಸ್ಥೆಗೊಳಿಸಿ ಒಂದು ದಿವಸ ಒಬ್ಬ ವ್ಯಕ್ತಿಗೆ ಹಣವನ್ನು ಕೊಟ್ಟು ಒಪ್ಪುವಂತೆ ಮಾಡಿ ಅವನ ತಲೆಯನ್ನು ಬೋಳು ಮಾಡಿಸಿದನು. ಕಪ್ಪಾದ ಕೌಪೀನವನ್ನು ಉಡಿಸಿ, ಹಲ್ಲುಗಳಿಗೆ ಕವಡೆಗಳನ್ನು ಕಟ್ಟಿಸಿದನು. ನವಿಲುಗರಿಯ ಗೊಂಡೆಯನ್ನು ಕೈಗೆ ಕೊಟ್ಟು ಹೀಗೆಂದನು – “ನೀನು ಹೆದರದೆ ಮಹಾರಾಣಿಯ ಮಂಚವನ್ನೇರಿ ಆಕೆಯೊಂದಿಗೆ ನಗುತ್ತ ಬಯ್ಯುತ್ತ ಇರು" ಎಂದು ಹೇಳಿಕೊಟ್ಟನು. ಹೀಗಿರಲು ಇತ್ತ ರಾಜನು ಋಷಿಗಳಿಗೆಲ್ಲ ಭೋಜನವನ್ನಿತ್ತು ಕಳುಹಿಸಿ ಮೇಲೆ ಬರುತ್ತಿದ್ದನು. ಆ ವೇಳೆಗೆ, ಆ ವ್ಯಕ್ತಿ ಅದೇ ಸಂದರ್ಭದಲ್ಲಿ ಹೋಗಿ ಮಹಾರಾಣಿಯ ಮಂಚದ ಮೇಲೇರಿದನು. ಆಗ ರಾಣಿಯು ಮಂಚದಿಂದ ಇಳಿದು ಕೈಗಳನ್ನು ಮುಗಿದು “ನಮಸ್ಕಾರ, ಇದೇನು?" ಎಂದು ಹೇಳಿದಾಗ ಆತನು “ನಿನ್ನನ್ನು ನಾನು ಬಯಸಿ ಪ್ರೇಮವನ್ನು ಹೊಂದಿ ಬಂದಿದ್ದೇನೆ.

ಋಷಿಯರ್ಕಳ್ಗೆ ಕಡುಮುಳಿದು ಮಂತ್ರಿಯನಿಂತೆಂದನಿವರ್ಗ್ಗೆ ತಕ್ಕ ನಿಗ್ರಹಮಂ ನೀನಱದು ಮಾಡೆಂದು ಪೇೞ್ದೊಡಾತನುಮಂತೆಗೆಯ್ವೆನೆಂದೆಳ್ಳ ಗಾಣಂಗಳೊಳಿಟ್ಟಯ್ನೂರ್ವರ್ ಋಷಿಯರ್ಕಳಂ ಪಿೞದು ಕೊಂದನವರುಂ ಶುಕ್ಲಧ್ಯಾನಂಗಳೊಳ್ ಕೂಡಿ ಮುಡಿಪಿಯನಿಬರುಂ ಸ್ವರ್ಗಂಗಳೊಳ್ ಪುಟ್ಟಿದರ್ ಮತ್ತವರೊಳಗೆ ಸ್ಕಂದಕುಮಾರನೆಂಬ ಋಷಿ ನಿರಪರಾಗಳಂ ನಿರ್ದೋಷಿಗಳಂ ನಿರರ್ಥಕಮೀ ಪಾತಕಂ ಕೊಂದನೆಂದು ತನ್ನಂತರಂಗದಲ್ಲಿ ಸೈರಿಸಲಾಱದೆ ತೀವ್ರ ಕೋಪಂ ಪುಟ್ಟಿ ಕೈಮಿಗೆ ಆ ಪ್ರಸ್ತಾವದೊಳ್ ತೇಜೋಋದ್ಧಿ ಪುಟ್ಟೆ ಘನರವದಿಂ ಬಂದರಸನುಂ ವ್ಯಾಳನೆಂಬ ಮಂತ್ರಿ ಮೊದಲಾಗಿ ಪೊೞಲೆಲ್ಲಾ ಪ್ರಜೆಯುಮಂ ಮತ್ತಮಾತನ ನಾಡ ಸಮಸ್ತ ಜೀವರಾಶಿಗಳೆಲ್ಲಮನೆಯ್ದೆ ಸುಟ್ಟು ತನ್ನ ಶರೀರಮುಮಂ ಭಸ್ಮಂ ಮಾಡಿ ಸುಟ್ಟು ಸತ್ತೇೞನೆಯ ನರಕಂಬೊಕ್ಕಂ ಮತ್ತಿತ್ತ ದಂಡಕನೃಪತಿಯುಮೇೞನೆಯ ನರಕದೊಳ್ ಮೂವತ್ತಮೂಱು ಸಾಗರೋಪಮಾಯುಷ್ಯಮನೊಡೆಯೊಂ ನಾರಕನಾಗಿ ಪುಟ್ಟಿಯಲ್ಲಿಂದಂ ಬಂದು ಸ್ವಯಂಭೂರಮಣ ಸಮುದ್ರದೊಳ್ ಮಹಾಮತ್ಸ್ಯಮಾಗಿ

    ಬೇರೇನನ್ನೂ ಮಾತಾಡದೆ ಇತ್ತ ಬಾ" ಎಂದು ಮಂಚದ ಕಡೆಗೆ ಕರೆದನು. ಅದೆಲ್ಲವನ್ನೂ ರಾಜನಿಗೆ ಮಂತ್ರಿ ತೋರಿಸಿ ಹೀಗೆಂದನು – “ಎಲೈ ಅರಸನೇ, ನಿಮ್ಮ ಜೈನಯತಿಗಳ ಚೇಷ್ಟೆಯನ್ನು ನೋಡು. ನಿನ್ನನ್ನು ಕೊಲ್ಲುವುದಕ್ಕಾಗಿ ಸಮರ್ಥರಾಗಿ ಆಯುಧಗಳನ್ನು ಹೂಳಿ ಇಟ್ಟಿದ್ದಾರೆ ಎಂದು ನಾನು ಹೇಳಿದರೂ ನೀನು ನಂಬಲಿಲ್ಲ. ದ್ರವ್ಯಾಗಾರದಲ್ಲಿ ಕಳವು ಮಾಡಿದರೆಂದು ಹೇಳಿದಾಗ ಅದನ್ನೂ ನಂಬಲಿಲ್ಲ. ಈಗ ನಿನ್ನ ಮಹಾರಾಣಿಯೊಂದಿಗೆ ಚೇಷ್ಟೆ ಮಾಡುವುದನ್ನು ಪ್ರತ್ಯಕ್ಷವಾಗಿ ನೋಡು. ನಿನ್ನ ಹೆಂಡಿರನ್ನು ಬದುಕಲಿಕ್ಕೆ ಇವರು ಬಿಡುವವರಲ್ಲ" – ಎಂದು ತೋರಿಸಿ ಹೇಳಿದನು. ಆಗ ರಾಜನು ಮುಂಚೆ ಆಗಿಹೋದ ತಪ್ಪನ್ನೆಲ್ಲ ಈ ಜೈನಯತಿಗಳೇ ಮಾಡಿದರೆಂಬ ನಂಬಿಕೆ ತನ್ನ ಮನಸ್ಸಿನಲ್ಲಿ ಆಗಲು, ಋಷಿಗಳ ಮೇಲೆ ಬಹಳ ಸಿಟ್ಟಗೊಂಡು ಮಂತ್ರಿಯೊಡನೆ ಹೀಗೆಂದನು – “ಇವರಿಗೆ ಯೋಗ್ಯವಾದ ದಂಡನೆಯನ್ನು ನೀನು ತಿಳಿದುಕೊಂಡು ಬೇಕಾದಂತೆ ಮಾಡು" ಎಂದು ರಾಜನು ಹೇಳಲು, ‘ಹಾಗೆಯೇ ಮಾಡುವೆನು’ ಎಂದು ಮಂತ್ರಿ ಹೇಳಿದನು. ಅದರಂತೆ ಮಂತ್ರಿಯು ಐನೂರು ಮಂದಿ ಋಷಿಗಳನ್ನೂ ಎಳ್ಳಿನ ಗಾಣಗಳಲ್ಲಿ ಇಟ್ಟು ಅವರನ್ನೆಲ್ಲ ಹಿಂಡಿ ಕೊಂದನು. ಅವರು ಶುಕ್ಲಧ್ಯಾನಗಳಲ್ಲಿ ಕೂಡಿದವರಾಗಿ ಸತ್ತರು. ಅವರೆಲ್ಲರೂ ಸ್ವರ್ಗಗಳಲ್ಲಿ ಜನಿಸಿದರು. ಅನಂತರ, ಅವರಲ್ಲಿ ಸ್ಕಂದಕುಮಾರನೆಂಬ ಋಷಿಯು – “ಈ ಪಾಪಿ ಅಪರಾಧ ಮಾಡದವರನ್ನೂ ದೋಷವಿಲ್ಲದವರನ್ನೂ ನಿಷ್ಪ್ರಯೋಜಕವಾಗಿ ಕೊಂದನು* ಎಂದು ತನ್ನ ಮನಸ್ಸಿನಲ್ಲಿ ಸಹಿಸಲಾರದೆ ಹೆಚ್ಚಾದ ಕೋಪವುಂಟಾಗಿ ಅದು ಮಿತಿಮೀರಲು, ಆ ಸಂದರ್ಭದಲ್ಲಿ ತೇಜದ ಉನ್ನತಿಯುಂಟಾಗಿ ಗುಡುಗಿನ ಶಬ್ದದೊಂದಿಗೆ ಬಂದು ರಾಜನನ್ನೂ ವ್ಯಾಳನೆಂಬ ಮಂತ್ರಿ ಮೊದಲಾಗಿ ಪಟ್ಟಣದ ಎಲ್ಲ ಪ್ರಜೆಗಳನ್ನೂ ಅವನ ನಾಡಿನ ಎಲ್ಲ ಜೀವರಾಶಿಗಳನ್ನೂ ವಿಶೇಷವಾಗಿ ಸುಟ್ಟು ತನ್ನ ದೇಹವನ್ನೂ ಬೂದಿಮಾಡಿ ಸುಟ್ಟು ಸತ್ತು ಏಳನೆಯ ನರಕವನ್ನು ಪ್ರವೇಶಿಸಿದನು. ಆಮೇಲೆ ಇತ್ತ ದಂಡಕ ರಾಜನು ಏಳನೆಯ ನರಕದಲ್ಲಿ ಮೂವತ್ತಮೂರು ಸಾಗರದಷ್ಟು ಆಯುಷ್ಯವುಳ್ಳ ನರಕಜೀವಿಯಾಗಿ ಹುಟ್ಟಿದನು. ಅಲ್ಲಿಂದ ಬಂದು ಸ್ವಯಂಭೂರಮಣ ಸಮುದ್ರದಲ್ಲಿ ಒಂದು ದೊಡ್ಡ ಮೀನಾಗಿ ಹುಟ್ಟಿ ಹಲವು ಪ್ರಾಣಿಗಳನ್ನು ಕೊಂದು ತಿಂದು ಸತ್ತು ಆರನೆಯ ನರಕದಲ್ಲಿ ಇಪ್ಪತ್ತೆರಡು ಸಾಗರಕ್ಕೆ

    ಪುಟ್ಟಿ ಪಲವು ಜೀವಂಗಳಂ ಕೊಂದು ತಿಂದು ಸತ್ತಾಱನೆಯ ನರಕದೊಳ್ ಇರ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ಸಿಂಹಮಾಗಿ ಪುಟ್ಟಿ ಸತ್ತಯ್ದನೆಯ ನರಕದೊಳ್ ಪದಿನಯ್ದು ಸಾಗರೋಪಮಾಯುಷ್ಯಮನೊಡೆಯ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ಪೆರ್ವಾವಾಗಿ ಪುಟ್ಟಿ ಸತ್ತು ನಾಲ್ಕನೆಯ ನರಕದೊಳ್ ಪತ್ತುಸಾಗರೋಪಮಾಯುಷ್ಯಮ ನೊಡೆಯ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ಪುಲಿಯಾಗಿ ಪುಟ್ಟಿ ಸತ್ತು ಮೂಱನೆಯ ನರಕದೊಳ್ ಏೞುಸಾಗರೋಪಮಾಯುಷ್ಯಮನೊಡೆಯ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ಭೇರುಂಡವಕ್ಕಿಯಾಗಿ ಪುಟ್ಟಿ ಸತ್ತು ಎರಡನೆಯ ನರಕದೊಳ್ ಮೂಱು ಸಾಗರೋಪಮಾಯುಷ್ಯಮನೊಡೆಯ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ಕೊಂಕನಾಗಿ ಪುಟ್ಟಿ ಪಾಪಂಗೆಯ್ದು ಸತ್ತು ಪ್ರಥಮ ನರಕದೊಳೊಂದು ಸಾಗರೋಪಮಾಯುಷ್ಯಮನೊಡೆಯ ನಾರಕನಾಗಿ ಪುಟ್ಟಿ ಸತ್ತು ಬಂದಿಲ್ಲಿ ತ್ರಸಸ್ಥಾವರಂಗಳೊಳ್ ಪುಟ್ಟಿ ಪಲಕಾಲಂ ಸಂಸಾರದಃಖಮನನುಭವಿಸಿ ನೀಡಱಂದೆತ್ತಾನುಂ ಬಂದಿಲ್ಲ ಜಟಾಯುವೆಂಬ ಪಕ್ಷಿಯಾಗಿ ಪುಟ್ಟಿ ರಾಮದೇವನ ಸಂಸರ್ಗದಿಂ ಜಿನಧರ್ಮಮಂ ಪೆತ್ತು ಪಂಚನಮಸ್ಕಾರದೊಳ್ ಕೂಡಿ ಸತ್ತು ಸ್ವರ್ಗದೊಳ್ ಪುಟ್ಟಿತ್ತು ಮತ್ತೆ ಪೆಱರುಂ ಸಂನ್ಯಸನಂಗೆಯ್ದಿರ್ದ ಭವ್ಯರ್ಕಳ್ ಮಹೇಂದ್ರದತ್ತಂ ಮೊದಲಾಗೊಡೆಯ ಅಯ್ನೂರ್ವರ್ ಋಷಿಯರ್ಕಳ್ ಗಾಣದೊಳ್ ಪಿೞಸಿಕೊಂಡುದಂ ಮನದೊಳ್ ಬಗೆದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

ಸಮಾನವಾದ ಆಯುಷ್ಯವುಳ್ಳ ನರಕಜೀವಿಯಾಗಿ ಹುಟ್ಟಿತು. ಅದು ಅಲ್ಲಿ ಸತ್ತು ಇಲ್ಲಿಗೆ ಬಂದು ಸಿಂಹವಾಗಿ ಹುಟ್ಟಿ ಸತ್ತಿತು. ಮತ್ತೆ ಐದನೆಯ ನರಕದಲ್ಲಿ ಹದಿನೈದು ಸಾಗರಕ್ಕೆ ಸಮಾನವಾದ ಆಯುಷ್ಯವುಳ್ಳ ನರಕಜೀವಿಯಾಗಿ ಹುಟ್ಟಿ ಸತ್ತ ಮೇಲೆ ಇಲ್ಲಿ ಬಂದು ಹೆಬ್ಬಾವಾಗಿ ಹುಟ್ಟಿತು. ಅದು ಸತ್ತು ನಾಲ್ಕನೆಯ ನರಕದಲ್ಲಿ ಹತ್ತು ಸಾಗರವನ್ನು ಹೋಲುವ ಆಯುಷ್ಯವನ್ನುಳ್ಳ ನರಕಜಂತುವಾಗಿ ಹುಟ್ಟಿ ಸತ್ತ ಮೇಲೆ ಇಲ್ಲಿಗೆ ಬಂದು ಹುಲಿಯಾಗಿ ಹುಟ್ಟಿ ಸತ್ತು ಮೂರನೆಯ ನರಕದಲ್ಲಿ ಏಳು ಸಾಗರೋಪಮ ಆಯುಷ್ಯವಿರತಕ್ಕ ನರಕಜೀವಿಯಾಗಿ ಹುಟ್ಟಿ ಸತ್ತು ಬಂದು ಇಲ್ಲಿ ಭೇರುಂಡ ಪಕ್ಷಿಯಾಯಿತು. ಅದು ಸತ್ತು ಎರಡನೆಯ ನರಕದಲ್ಲಿ ಮೂರುಸಾಗರ ಆಯುಷ್ಯವುಳ್ಳ ನಾರಕನಾಗಿ ಹುಟ್ಟಿ ಸತ್ತು ಇಲ್ಲಿ ಬಂದು ಡೊಂಕುಳ್ಳವನಾಗಿ ಹುಟ್ಟಿ ಪಾಪವನ್ನು ಮಾಡಿ ಸತ್ತು ಮೊದಲನೆಯ ನರಕದಲ್ಲಿ ಒಂದು ಸಾಗರ ಆಯುಷ್ಯವುಳ್ಳ ನಾರಕನಾಗಿ ಹುಟ್ಟಿ ಸತ್ತಿತು. ಆ ಜೀವಿ ಇಲ್ಲಿ ಬಂದು ಚಲನವುಳ್ಳ ಮತ್ತು ಚಲನವಿಲ್ಲದ ಜೀವಿಗಳ ಜನ್ಮದಲ್ಲಿ ಬಂದು ಹಲವು ಕಾಲ ಸಂಸಾರದ ದುಃಖವನ್ನು ಅನುಭವಿಸಿ ದೀರ್ಘಕಾಲವಾದ ಮೇಲೆ ಹೇಗೋ ಬಂದು ಇಲ್ಲಿ ಜಟಾಯುವೆಂಬ ಪಕ್ಷಿಯಾಗಿ ಹುಟ್ಟಿತು. ಅದು ಶ್ರೀರಾಮದೇವರ ಒಡನಾಟದಿಂದ ಜೈನಧರ್ಮವನ್ನು ಪಡೆದು ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸಾಧು – ಇವರಿಗೆ ಮಾಡತಕ್ಕ ಐದು ನಮಸ್ಕಾರಗಳನ್ನು ಆಚರಿಸಿ ಸತ್ತು ಸ್ವರ್ಗದಲ್ಲಿ ಹುಟ್ಟಿತು. ಅದಲ್ಲದೆ, ಸಂನ್ಯಾಸವನ್ನು ಮಾಡಿದ ಇತರ ಭವ್ಯರು ಕೂಡ, ಮಹೇಂದ್ರದತ್ತ ಮೊದಲಾಗಿ ಉಳ್ಳ ಐನೂರು ಮಂದಿ ಋಷಿಗಳು ಗಾಣದಲ್ಲಿ ಹಿಂಡಲ್ಪಟ್ಟುದನ್ನು ಮನಸ್ಸಿನಲ್ಲಿ ಭಾವಿಸಿ, ಹಸಿವು ಬಾಯಾರಿಕೆ ಮೊದಲಾಗಿ ಉಳ್ಳ ಪರೀಷಹಗಳನ್ನು ಸಹಿಸಿಕೊಂಡು ಸ್ವರ್ಗ ಮೋಕ್ಷಗಳ ಸುಖಗಳನ್ನು ಪಡೆಯಲಿ!

*****ಕೃಪೆ: ಕಣಜ****