ಚಿಲಾತಪುತ್ರನ ಕಥೆಯಂ ಪೇೞ್ವೆಂ :
ಗಾಹೆ || ಗಾಢಪ್ಪಹಾರ ವಿದ್ಧೋ ಮೂಇಂ ಗಾಳೀಹಿ ಚಾಳಿಣಿ ಕದೊ ವಾ
ತದವಿಯ ಚಿಲಾತಪುತ್ತೋ ಪಡಿವಣ್ಣೋ ಉತ್ತಮಂ ಅಟ್ಠಂ ||
'ಗಾಢಪ್ಪಹಾರ – ಆದಮಾನುಂ ಸೈರಿಸಲ್ಕರಿಯವಪ್ಪೇಱುಗಳಿಂದಂ, ವಿದ್ಧೋ – ಉರ್ಚೆ ಪಟ್ಟೊನಾಗಿ, ಮೂಇಂಗಾಳೀಹಿ – ಕಟ್ಟಿಱುಂಪೆಗಳಿಂದಂ, ಚಾಳಿಣಿಕದೋ ವಾ – ಒನಲಿಯವೊಲ್ ಛಿದ್ರಂ ಮಾಡೆಪಟ್ಟ ಮೆಯ್ಯನೊಡೆಯನಾಗಿ, ತದವಿಯ – ಅಂತು, ಚಿಲಾತಪುತ್ತೋ – ಚಿಲಾತಪುತ್ರನೆಂಬ ರಿಸಿ, ಪಡಿವಣ್ಣೊ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನಜ್ಞಾನ ಚಾರಿತ್ರಂಗಳಾರಾಧನೆಯಂ'
ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬುದು ಪೊೞಲದನಾಳ್ವೊಂ ಉಪಶ್ರೇಣಿಕನೆಂಬೊನರಸನಾತಂಗೆ ಜಯಾವತಿ ಮಹಾದೇವಿ ಮೊದಲಾಗಿ ಮೂಸಾಸಿರರಸಿಯರ್ಕಳಂತವರಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದುದಿವಸಂ ಉಪಶ್ರೇಣಿಕಂ ಬೇಂಟೆಯಾಡಲ್ವೋಗಿಯಡವಿಯೊಳ್ ದುಷ್ಪಾಶ್ವಮನೇಱ ಪಂದಿಯ ಬೞಯಂ ತಗುಳ್ದೊಡದು ಗಾಳಿಗೊಂಡೊಂದು ದೆಸೆಗೆವರಿದು ವಿಂಧ್ಯಾಟವಿಯ ನಟ್ಟನಡುವೆ ಸುರಮ್ಯಮೆಂಬ ಬೇಡವಳ್ಳಿಯ ಸಾರೆ ತೊಱೆಯ ತಡಿಯೊಳ್ ಕುದುರೆ ತನ್ನಂ ತಾನೆ ಸೇದೆಗೆಟ್ಟು ನಿಂದಾಗಳ್ ಕುದುರೆಯಿಂದಿೞದು ಪಲ್ಲಣಮಂ ಚದುರಸಿಗೆಯುಮಂ ಕೀೞುಮಂ ಕಳೆದು ಕುದುರೆಯಂ ನೀರೂಡಿ ಮೈದೊಳೆದು ಕಟ್ಟಿ ತಾನುಂ ನೀರಂ ಕುಡಿದೊಂದು ಮರದ ಕೆೞಗೆ ಚದುರಸಿಗೆಯಂ
ಚಿಲಾತಪುತ್ರನ ಕಥೆಯನ್ನು ಹೇಳುವೆನು : (ಅತ್ಯಂತ ಅಸಹನೀಯವಾದ ಗಾಯಗಳಿಂದ ಭೇದಿಸಲ್ಪಟ್ಟವನಾಗಿಯೂ ಕಟ್ಟಿರುವೆಗಳಿಂದ ಜರಡೆಯ ಹಾಗೆ ತೂತು ಮಾಡಲ್ಪಟ್ಟ ಶರೀರವುಳ್ಳವನಾಗಿಯೂ ಅಂತು ಚಿಲಾತಪುತ್ರನೆಂಬ ಋಷಿ ಶ್ರೇಷ್ಠವಾದ ದರ್ಶನ ಜ್ಞಾನ ಚಾರಿತ್ರಗಳ ಆರಾಧನೆಯನ್ನು ಮಾಡಿದನು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿನಲ್ಲಿ ರಾಜಗೃಹವೆಂಬ ಪಟ್ಟಣವನ್ನು ಉಪಶ್ರೇಣಿಕನೆಂಬ ರಾಜನು ಆಳುತ್ತಿದ್ದನು. ಆವನಿಗೆ ಜಯಾವತಿ ಮಹಾದೇವಿ ಮೊದಲಾದ ಮೂರು ಸಾವಿರ ಮಂದಿ ರಾಣಿಯರಿದ್ದರು. ಅಂತು ಅವರು ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಿತು. ಅನಂತರ ಒಂದು ದಿವಸ ಉಪಶ್ರೇಣಿಕನು ಬೇಟೆಯಾಡಲು ಹೋದನು. ಕಾಡಿನಲ್ಲಿ ತುಂಟ ಕುದುರೆಯನ್ನೇರಿ ಒಂದು ಹಂದಿಯನ್ನು ಅದರ ದಾರಿಯಲ್ಲಿ ಬೆನ್ನಟ್ಟಿಕೊಂಡು ಹೋದನು. ಆ ಕುದುರೆ ಗಾಳಿಯ ಮೂಲಕ ವಾಸನೆ ಹಿಡಿದು ಒಂದು ದಿಕ್ಕಿಗೆ ಓಡುತ್ತ ವಿಂಧ್ಯೆಯ ಕಾಡಿನ ನಟ್ಟನಡುವೆ ಸುರಮ್ಯವೆಂಬ ಬೇಡರ ಹಳ್ಳಿಯ ಸಮೀಪ ಹೊಳೆಯ ದಡದಲ್ಲಿ ಆಯಾಸ ಪಟ್ಟು ನಿಂತಿತು. ಆಗ ಉಪಶ್ರೇಣಿಕನು ಕುದುರೆಯಿಂದ ಇಳಿದು ಅದರ ಹಲ್ಲಣವನ್ನೂ ಜೀನಿನ ಮೇಲೆ ಹಾಕಿದ ಚೌಕದ ವಸ್ತ್ರವನ್ನೂ ಕಡಿವಾಣವನ್ನೂ ತೆಗೆದುಹಾಕಿ, ಕುದುರೆಗೆ ನೀರನ್ನು ಕುಡಿಸಿ ಅದರ ಮೈಯನ್ನು ತೊಳೆದು ಅದನ್ನು ಕಟ್ಟಿ ಹಾಕಿದನು. ತಾನೂ ನೀರನ್ನೂ ಕುಡಿದು
ಪಾಸಿ ಪಟ್ಟಿರ್ದನ್ ಅನ್ನೆಗಮಾ ಬೇಡವಳ್ಳಿಯರಸಂ ಮಹಾಕಾಳನೆಂಬೊನಾತಂ ಕುಲದೊಳರಸುಕುಲಂ ದಾಯಿಗರಿಂದಮುಚ್ಚಾಟಿಸಿ ಕಳೆಯೆಪಟ್ಟೊನಾಗಿ ಬಂದಲ್ಲಿ ಪೊೞಲಂ ಮಾಡಿ ಪಲಕಾಲಮಿರ್ದೊನಾತನರಸಿ ಸೌಂದರಿಯೆಂಬೊಳಾಯಿರ್ವರ್ಗ್ಗಂ ಮಗಳ್ ಗುಣಸೌಂದರಿಯೆಂಬೊಳತ್ಯಂತ ರೂಪಲಾವಣ್ಯ ಸೌಭಾಗ್ಯಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯೊಳಾಕೆ ಪಲರುಂ ಕನ್ನೆಯರ್ಕಳುಂ ಕಾಪಿನವರುಂ ಬೆರಸುದ್ಯಾನವನದೊಳ್ ವನಕ್ರೀಡೆಯನಾಡಿ ಬರ್ಪಾಕೆ ಉಪಶ್ರೇಣಿಕನ ರೂಪಂ ಕಂಡಾಟಿಸಿ ನೋಡೆ ಆತನುಮಾಕೆಗಾಟಿಸಿ ಸೋಲ್ತು ನೋಡಿ ಬಸಮೞದು ನೀಡುಮೊಲ್ದು ನೋಡೆ ಕಾಪಿನವರ್ ಜಡಿದು ಕೊಂಡು ಪೋಪಾಗಳೊಂದೋಲೆಯನಿಂತೆಂದು ಬರೆದಳ್ ನೀನಲ್ಲದೆನಗುೞದ ಪುರುಷರ್ ಮೊರೆಯಲ್ಲರೆಂದು ಬಗೆದು ಬರೆದು ಪೆಱಗಣಿಂದೋಲೆಯನಿಕ್ಕಿ ಪೋದಾಗಳೋಲೆಯಂ ಬಾಚಿಸಿ ನೋಡಿ ಸಂತುಷ್ಟಚಿತ್ತನಾಗಿರ್ದನನ್ನೆಗಂ ಪೆಱಗಣಿಂದಡಿವಜ್ಜೆಯಂ ನೋಡಿ ತೇನತೇನದಿಂ ತಂತ್ರಮೆಲ್ಲಂ ನೆರೆದು ಬಂದು ಪಱೆಯ ಕಹಳೆಯ ಶಂಖಧ್ವನಿಗಳೊರ್ಮೊದಲೆ ಬಾಜಿಸೆ ಬೇಡರಸಂ ಕೇಳ್ದು ದಾೞ ಬಂದುದೆಂದಂಜಿ ತ್ರಸ್ತಾಭಿಭೂತನಾಗಿಯೋಡಲ್ ತಗುಳ್ದೊಡುಪಶ್ರೇಣಿಕಂ ತನ್ನ ಪೆರ್ಗಡೆಗಳನಟ್ಟಿಯೋಡಲೀಯದೆ ಸಂತವಿಸಿದೊಡಾತನುಂ
ಒಂದು ಮರದ ಕೆಳಗೆ ಚೌಕವಸ್ತ್ರವನ್ನು ಹಾಸಿ ಮಲಗಿದ್ದನು. ಆ ಬೇಡರ ಹಳ್ಳಿಯ ಅರಸನು ಮಹಾಕಾಳನೆಂಬವನು. ಅವನು ಕುಲದಲ್ಲಿ ರಾಜಕುಲದವನು; ದಾಯಾದಿಗಳಿಂದ ಬುಡಸಹಿತ ಕಿತ್ತು ಅಟ್ಟಲ್ಪಟ್ಟವನಾಗಿ, ಬಂದು ಅಲ್ಲಿ ಪಟ್ಟಣವನ್ನು ನಿರ್ಮಾಣ ಮಾಡಿ ಹಲವು ಕಾಲದಿಂದಲೇ ಇದ್ದನು. ಅವನ ರಾಣಿ ಸೌಂದರಿಯೆಂಬುವಳು. ಆ ಇಬ್ಬರಿಗೂ ಗುಣಸೌಂದರಿ ಎಂಬವಳು ಮಗಳಾಗಿದ್ದಳು. ಅವಳು ಅತಿಶಯವಾದ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳನ್ನುಳ್ಳವಳಾಗಿದ್ದಳು. ಆಕೆ ಹಲವು ಮಂದಿ ಕನ್ಯೆಯರನ್ನೂ ಕಾವಲುಗಾರರನ್ನೂ ಕೂಡಿಕೊಂಡು ಅಷ್ಟರಲ್ಲಿ ಆ ಉದ್ಯಾನವನದಲ್ಲಿ ಕ್ರೀಡೆಗಳನ್ನಾಡಿ ಬರುತ್ತಿದ್ದಳು. ಹಾಗೆ ಬರುವಾಗ ಉಪಶ್ರೇಣಿಕನ ರೂಪವನ್ನು ಕಂಡು ಪ್ರೀತಿಸಿ ನೋಡಿದಳು. ಉಪಶ್ರೇಣಿಕನೂ ಆಕೆಯ ಮೇಲೆ ಮೋಹಪಟ್ಟು ಸೋತು ನೋಡಿ ಪರವಶನಾಗಿ ಬಹಳ ಹೊತ್ತಿನವರೆಗೆ ಪ್ರೀತಿಯಿಂದ ನೋಡಿದನು. ಆಗ ಕಾವಲಿನವರು ಗುಣಸೌಂದರಿಯನ್ನು ಬೈದು ಕರೆದುಕೊಂಡು ಹೋಗುವಾಗ ಆಕೆ ಒಂದು ಓಲೆಯನ್ನು ಈ ರೀತಿಯಾಗಿ ಬರೆದಳು – “ನೀನಲ್ಲದೆ ನನಗೆ ಬೇರೆ ಗಂಡಸರು ಯಾರೂ ನಂಟಾಗಲಾರರು. ಹೀಗೆ ಭಾವನಾಪೂರ್ಣವಾಗಿ ಬರೆದು ಹಿಂದುಗಡೆಯಿಂದ ಓಲೆಯನ್ನು ಬಿಸಾಡಿ ಹೋದಳು. ಉಪಶ್ರೇಣಿಕನು ಆ ಓಲೆಯನ್ನು ವಾಚಿಸಿ ನೋಡಿ ಸಂತಸಗೊಂಡ ಮನಸ್ಸಿನವನಾಗಿ ಇದ್ದನು. ಹೀಗಿರಲು ಹಿಂದಿನಿಂದ ಪಾದದ ಗುರುತುಗಳನ್ನು ನೋಡಿಕೊಂಡು ಮೇಲೆ ಮೇಲಾಗಿ ರಾಜನ ಸೈನ್ಯವೆಲ್ಲವೂ ಬಂದು ಸೇರಿದವು. ತಂಬಟೆ, ಕಹಳೆ, ಶಂಖಗಳು ಒಟ್ಟಿಗೇ ಶಬ್ದಮಾಡುತ್ತಿರಲು, ಬೇಡರ ರಾಜನು ಕೇಳಿ ದಾಳಿ ಬಂದಿದೆ ಎಂದು ಹೆದರಿ ಭಯಪೀಡಿತನಾಗಿ ಓಡಲು ಉಪಕ್ರಮಿಸಿದಾಗ ಉಪಶ್ರೇಣಿಕನು ತನ್ನ ಅಕಾರಿಗಳನ್ನು ಕಳುಹಿಸಿ ಓಡುವುದಕ್ಕೆ ಬೆಡದೆ ಸಮಾಧಾನ ಪಡಿಸಿದನು.
ಆನೆಗಳ ದಂತಂಗಳುಂ ಮುತ್ತುಗಳುಂ ಪುಲಿಯ ತೊವಲ್ಗಳುಮಂ ಚಮರಿಗಳುಮಂ ಕೊಂಡು ಬಂದು ಕ್ಷೇಮ ಕುಶಲಂಗಳಂ ಬೆಸಗೊಂಡ ಬೞಕ್ಕೆ ನಿಮ್ಮ ಕುಲಮೇನೆಂದು ಬೆಸಗೊಂಡೊಡಾತರಸುಕುಲಮೆಂದು ಪೇೞ್ದೊಡೆ ಕೇಳ್ದು ಸಂತೊಷಂಬಟ್ಟಿರ್ದೊಡಾತನುಂ ಅರಸಂಗೆ ಬಿರ್ದ್ದು ಮಾಡಿರ್ದ ಬೞಕ್ಕೆ ಕೂಸಂ ಬೇಡಿಯಟ್ಟಿ ಪೆತ್ತು ಪ್ರಶಸ್ತ ದಿವಸ ವಾರ ನಕ್ಷತ್ರ ಮುಹೂರ್ತದೊಳ್ ಮದುವೆ ನಿಂದು ಕೂಸನೊಡಗೊಂಡು ತನ್ನ ಪೊೞಲ್ಗೆ ವೋಗಿ ಚಿಳಾತ ಮಹಾದೇವಿಯೆಂದು ಪೆಸರನಿಟ್ಟು ಇಂತಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಿತ್ತಾ ನಾಡೊಳ್ ಸಾರ್ಥಾಪತಿ ನಂದಿಮಿತ್ರನೆಂಬೊಂ ಸಟ್ಟಿಸಾರ್ಥಂ ಬೆರಸು ಪರದಿಂಗೆ ಪೋಗುತ್ತಿರ್ದಾತನೆಡೆಯೊಳೊಂದೂರೊಳ್ ಬಿಟ್ಟಿರ್ದನನ್ನೆಗಂ ತಪೋವರರೆಂಬ ರಿಸಿಯರೇಕವಿಹಾರಿಗಳ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರಾ ಸಾರ್ಥಾಪತಿಯ ಬಿಟ್ಟಿರ್ದೂರ್ಗೆ ಬಂದು ಪಂಥಾತಿಚಾರ ನಿಯಮಂಗೆಯ್ದು ಪಗಲ್ ದೇವರಂ ವಂದಿಸಿಯೂರ್ಗೆ ಚರಿಗೆ ವೋಗಿಯೂರೆಲ್ಲಮಂ ತಿಱ್ಱನೆ ತಿರಿದು ತೊೞಲ್ದಾರುಂ ನಿಱಸದಿರ್ದೊಡೆ ಊರಿಂ ಪೊಱಮಟ್ಟು ಪೋಪ ರಿಸಿಯರಂ ನಂದಿಮಿತ್ರಮಂ ಕಂಡು ಕಾರುಣ್ಯದಿಂ ನಿಱಸಿ ಎಳ್ಳುಂಡೆಯನಿಕ್ಕಿದೊಡದಂ ಚರಿಗೆ ಮಾಡಿ ಪ್ರಾಸುಕಮಪ್ಪ ನೀರಂ ಕುಡಿದು ಪರಸಿ ಪೋದರಾ
ಅವನು ಆನೆಗಳ ದಂತಗಳು, ಮುತ್ತುಗಳು, ಹುಲಿದೊಗಲುಗಳು, ಚಮರೀ ಮೃಗಗಳು – ಇವನ್ನೆಲ್ಲ ಕಾಣಿಕೆಯಾಗಿ ತಂದು ರಾಜನನ್ನು ಕಂಡನು. ಕ್ಷೇಮ ಕುಶಲಗಳನ್ನು ಕೇಳಿದ ನಂತರ ‘ನಿಮ್ಮ ಕುಲ ಯಾವುದು?’ ಎಂದು ರಾಜನು ಕೇಳಿದನು. ಆತನು ‘ನನ್ನದು ಕ್ಷತ್ರಿಯ ಕುಲ’ ಎಂದನು. ಅದನ್ನು ಕೇಳಿ ಉಪಶ್ರೇಣಿಕನು ಸಂತೋಷಪಟ್ಟುಕೊಂಡಿದ್ದನು. ಬೇಡರ ರಾಜನು ಅರಸನಿಗೆ ಔತಣ ಮಾಡಿದನು. ಆಮೇಲೆ ಉಪಶ್ರೇಣಿಕನು ಬೇಡರರಸನ ಮಗಳನ್ನು ಅಪೇಕ್ಷಿಸಿ ಅದಕ್ಕಾಗಿ ಜನ ಕಳುಹಿಸಿ, ಸಮ್ಮತಿ ಪಡೆದನು.ಶುಭ ದಿವಸ, ವಾರ, ನಕ್ಷತ್ರ, ಮುಹೂರ್ತದಲ್ಲಿ ಮದುವೆಯಾಗಿ ಕನ್ಯೆಯನ್ನು ಕೂಡಿಕೊಂಡು ತನ್ನ ಪಟ್ಟಣಕ್ಕೆ ಹೋಗಿ ಅವಳಿಗೆ ಚಿಳಾತ ಮಹಾದೇವಿ (ಚಿಳಾತ = ಕಿರಾತ) ಎಂದು ಹೆಸರನ್ನಿಟ್ಟು ಹೀಗೆಯೇ ಇಷ್ಟವಾದ ವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಿತು. ಅನಂತರದಲ್ಲಿ ಇತ್ತ ಆ ನಾಡಿನಲ್ಲಿ ಸರಕು ಗಾಡಿಗಳಿಗೆ ಯಜಮಾನನಾದ ನಂದಿಮಿತ್ರಸೆಟ್ಟಿ ವ್ಯಾಪಾರದ ಸರಕಿನೊಂದಿಗೆ ವ್ಯಾಪಾರಕ್ಕಾಗಿ ಹೋಗುತ್ತಿದ್ದನು. ಆತನು ಎಡೆಯಲ್ಲಿ ಒಂದು ಊರಲ್ಲಿ ತಂಗಿದ್ದನು. ಹೀಗಿರಲು ತಪೋವರರೆಂಬ ಒಂಟಿಯಾಗಿ ಸಂಚರಿಸುವ ಜೈನಯತಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ ಎಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು ಆ ವರ್ತಕನು ತಂಗಿದ್ದ ಊರಿಗೆ ಬಂದು ಪಂಥಾತಿಚಾರ (ದಾರಿ ನಡೆವಾಗ ಆಗುವ ಪ್ರಾಣಿಹಿಂಸೆ ಮುಂತಾದ ಅತಿಚಾರಗಳಿಗೆ ಪ್ರಾಯಶ್ಚಿತ್ತ) ನಿಯಮವನ್ನು ಮಾಡಿ ಹಗಲು ಹೊತ್ತಿನಲ್ಲಿ ದೇವರನ್ನು ವಂದಿಸಿ ಊರಿಗೆ ಭಿಕ್ಷೆಗಾಗಿ ಹೋದರು. ಊರೆಲ್ಲವನ್ನೂ ತಿರ್ರನೆ ತಿರುಗಿ ಸುತ್ತಾಡಿದರೂ ಯಾರೂ ಊಟಕ್ಕೆ ನಿಲ್ಲಿಸಲಿಲ್ಲ. ಊರಿನಿಂದ ಹೊರಟು ಹೋಗತಕ್ಕ ಋಷಿಗಳನ್ನು ನಂದಿಮಿತ್ರನು ಕಂಡು ದಯೆಯಿಂದ ನಿಲ್ಲಿಸಿಕೊಂಡು ಎಳ್ಳಿನ ಉಂಡೆಗಳನ್ನು ಕೊಟ್ಟನು. ಋಷಿಗಳು ಅದನ್ನು ಭಿಕ್ಷೆಯಾಗಿ ಮಾಡಿ ಜೀವಜಂತುವಿಲ್ಲದೆ ನಿರ್ಮಲವಾದ ನೀರನ್ನು ಕುಡಿದು ಆಶೀರ್ವಾದ ಮಾಡಿ ತೆರಳಿದರು.
ನಂದಿಮಿತ್ರನುಂ ಪಲಕಾಲಂ ಬರ್ದಾಯುಷ್ಯಾಂತದೊಳ್ ಜಂಬೂದ್ವೀಪದ ಹೈಮವತಮೆಂಬ ಜಘನ್ಯಭೋಗಭೂಮಿಯೊಳೊಂದು ಪಳಿತೋಪಮಾಯುಷ್ಯ ಮನೊಡೆಯೊಂ ಭೋಗಭೂಮಿಜನಾಗಿ ಪುಟ್ಟಿದೊಂ ಪುಟ್ಟಿಯಲ್ಲಿ
ವೃತ್ತ || ಮದ್ಯಾಂಗ ತೂರ್ಯಾಂಗ ವಿಭೂಷಣಾಂಗಾ
ಜ್ಯೋತಿರ್ಗೃಹಾ ಭೋಜನ ಭಾಜನಾಂಗಾಃ
ಪ್ರದೀಪ ವಸ್ತ್ರಾಂಗ ವರಸ್ರಜಾಂಗಾ
ದಶಪ್ರಕಾರಾಸ್ತರವಸ್ತು ತತ್ರ ||
ಅಂತು ಪತ್ತುಂ ತೆಱದ ವೃಕ್ಷಂಗಳ್ ಭೋಗಂಗಳಂ ಕುಡೆ ಪಲಕಾಲಂ ಭೋಗೋಪಭೋಗಂಗಳ ನನುಭವಿಸಿಯಾಯುಷ್ಯಾಂತದೊಳ್ ಮಂದರದ ನಂದನಮೆಂಬ ವನದೊಳ್ ವ್ಯಂತರದೇವನಾಗಿ ಪುಟ್ಟಿ ಅಲ್ಲಿಂ ಬೞ ಬಂದು ರಾಜಗೃಹದೊಳ್ ಉಪಶ್ರೇಣಿಕಂಗಂ ಚಿಲಾತ ಮಹಾದೇವಿಗಂ ಚಿಲಾತಪುತ್ರನೆಂಬೊಂ ಪಿರಿಯ ಮಗನಾಗಿ ಪುಟ್ಟಿದನಲ್ಲಿಂ ಬೞಯಂ ಜಯಾವತಿಯೆಂಬ ಪಿರಿಯ ಮಹಾದೇವಿಗೆ ಶ್ರೇಣಿಕನೆಂಬೊಂ ಮಗನಾಗಿ ಪುಟ್ಟಿದನುೞದರಸಿಯರ್ಕಳ್ಗಂ ಮಕ್ಕಳ್ ಪುಟ್ಟಿದರಂತೆಲ್ಲಮುಪಶ್ರೇಣಿಕಂಗೆ ಮಕ್ಕಳಯ್ನೂರ್ವರಂತುಪಶ್ರೇಣಿಕನಯ್ನೂರ್ವರ್ ಮಕ್ಕಳ್ವೆರಸು ಭೋಗೋಪಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಂ ನೈಮಿತ್ತಿಕನನರಸಂ ಬೆಸಗೊಂಡನೆನ್ನ ಮಕ್ಕಳೊಳಗೆ ರಾಜ್ಯಾರ್ಹರಾರೆಂದು ಬೆಸಗೊಂಡೊಡಾತನಿಂತೆಂದನಯ್ನೂರ್ವರ್
ಆ ನಂದಿಮಿತ್ರನು ಹಲವು ಕಾಲ ಬಾಳಿ ಆಯುಷ್ಯ ಕೊನೆಗೊಳ್ಳಲು ಜಂಬೂದ್ವೀಪದ ಹೈಮವತವೆಂಬ ನೀಚವಾದ ಭೋಗ ಭೂಮಿಯಲ್ಲಿ ಒಂದು ಪಳಿತಕ್ಕೆ (ಪಳಿತ ಎಂಬುದು ಒಂದು ದೊಡ್ಡ ಸಂಖ್ಯೆ) ಸಮಾನವಾದ ಆಯುಷ್ಯವುಳ್ಳವನಾಗಿ ಭೋಗ ಭೂಮಿಯವನಾಗಿ ಹುಟ್ಟಿದನು. (ಆ ಭೋಗಭೂಮಿಯಲ್ಲಿ ಮದ್ಯವನ್ನು, ವಾದ್ಯಗಳನ್ನು, ಆಭರಣಗಳನ್ನು, ಬೆಳಕನ್ನು, ಮನೆಯನ್ನು, ಊಟವನ್ನು, ಪಾತ್ರೆಗಳನ್ನು, ದೀಪವನ್ನು, ವಸ್ತ್ರವನ್ನು, ಹೂಮಾಲೆಗಳನ್ನು ಕೊಡುವ ಹತ್ತು ಬಗೆಯ ಮರಗಳು ಇರುತ್ತವೆ.) ಅಂತು ಹತ್ತು ಬಗೆಯ ಮರಗಳು ಸುಖಗಳನ್ನು ಕೊಡಲು ಹಲವು ಕಾಲದವರೆಗೆ ಭೋಗ ಉಪಭೋಗಗಳನ್ನು ಅನುಭವಿಸಿ ಆಯುಷ್ಯ ಕೊನೆಗೊಂಡಾಗ ಮಂದರ ಪರ್ವತದ ನಂದನವೆಂಬ ಕಾಡಿನಲ್ಲಿ ವ್ಯಂತರ ದೇವನಾಗಿ ಹುಟ್ಟಿದನು. ಅಲ್ಲಿಂದ ಜಾರಿ ಬಂದು ರಾಜಗೃಹದಲ್ಲಿ ಉಪಶ್ರೇಣಿಕ ಮಹಾರಾಜನಿಗೂ ಚಿಲಾತ ಮಹಾರಾಣಿಗೂ ಚಿಲಾತಪುತ್ರನೆಂಬ ಹಿರಿಯ ಮಗನಾಗಿ ಹುಟ್ಟಿದನು. ಅದರ ನಂತರ ಜಯಾವತಿಯೆಂಬ ಹಿರಿಯ ಮಹಾರಾಣಿಗೆ ಶ್ರೇಣಿಕನೆಂಬವನು ಮಗನಾಗಿ ಜನಿಸಿದನು. ಉಳಿದ ರಾಣಿಯರಿಗೂ ಮಕ್ಕಳು ಹುಟ್ಟಿದರು. ಅಂತು ಎಲ್ಲ ಸೇರಿ, ಉಪಶ್ರೇಣಿಕನಿಗೆ ಐನೂರು ಮಂದಿ ಮಕ್ಕಳಾದರು. ಅಂತು ಉಪಶ್ರೇಣಿಕನು ಐನೂರು ಮಂದಿ ಮಕ್ಕಳನ್ನು ಕೂಡಿಕೊಂಡು ಭೋಗೋಪಭೋಗಗಳನ್ನು ಅನುಭವಿಸುತ್ತಿದ್ದನು. ಹೀಗೆಯೇ ಕಾಲ ಕಳೆಯುತ್ತಿತ್ತು. ಆಮೇಲೆ ಒಂದು ದಿವಸ ಉಪಶ್ರೇಣಿಕ ರಾಜನು ಜೋಯಿಸನನ್ನು ತನ್ನ ಮಕ್ಕಳ ಕುರಿತಾಗಿ ಪ್ರಶ್ನೆಮಾಡಿದನು. “ನನ್ನ ಮಕ್ಕಳಲ್ಲಿ ರಾಜ್ಯಾಕಾರಕ್ಕೆ ತಕ್ಕವರಾದವರು ಯಾರು? ಎಂದು ಕೇಳಲು ಜೋಯಿಸನು ಹೀಗೆಂದನು –
ಮಕ್ಕಳ್ಗೊಂದೆ ಪಂತಿಯೊಳ್ ತುಯ್ಯಲಂ ಬಡ್ಡಿಸಿಯಯ್ನೂಱು ನಾಯನವರ ಮೇಗೆ ಬಿಟ್ಟೊಡಾವನೊರ್ವನಂಜದುಣ್ಗುಮಾತನಕ್ಕುಂ ಮತ್ತರಮನೆಯೊಳ್ ಕಿರ್ಚೆರ್ದೊಡಾವನೊರ್ವಂ ಸಿಂಹಾಸನಮುಂ ಬೆಳ್ಗೊಡೆಯುಂ ಪಾಳಿಧ್ವಜಂ ಮೊದಲಾಗೊಡೆಯ ರಾಜಚಿಹ್ನಂಗಳಂ ಕೈಕೊಳ್ಗುಮಾತಂ ರಾಜ್ಯಕ್ಕರ್ಹನಕ್ಕುಮೆಂದು ಪೇೞ್ದೊಡದಂ ಕೇಳ್ದೊಂದು ದಿವಸಮರಸನವರ್ಗುಣಲಿಕ್ಕವೇೞ್ದು ಪರೀಕ್ಷಿಸಿ ನೋಡಿದೊಡೆ ಶ್ರೇಣಿಕಂ ನಾಯ್ಗಳ್ಗೆ ತುಯ್ಯಲನಿಕ್ಕಿ ತಾನುಮುಂಡೊನುೞದರೆಲ್ಲರುಮೋಡಿದರ್ ಮತ್ತೊಂದುದಿವಸಮರಮನೆಯೊಳ್ ಕಿರ್ಚೆರ್ದೊಡುೞದ ಮಕ್ಕಳೆಲ್ಲಂ ಭಂಡಾರಂಗಳುಮಾನೆಗಳುಂ ಕುದುರೆಗಳುಂ ಜಯನಶಾಲೆಯುಮಂ ಕೈಕೊಂಡರ್ ಶ್ರೇಣಿಕಂ ರಾಜ್ಯಚಿಹ್ನಂಗಳಂ ಕೈಕೊಂಡದಱಂದರಸನೀತಂ ರಾಜ್ಯಕ್ಕರ್ಹನಕ್ಕುಮಿಲ್ಲಿರ್ದೊಡೆ ಪಲಂಬರುಂ ಮುನಿವರ್ ಪ್ರಮಾದಮಕ್ಕುಮೆಂದು ಬಗೆದು ನೀಂ ನಾಯೊಡನುಂಡೆಯೆಮ್ಮ ರಾಜ್ಯಚಿಹ್ನಂಗಳಂ ಕೈಕೊಂಡೆಯೆಮ್ಮ ಬಾೞುತ್ತಿರೆಯರಸಿಂಗಾಟಿಸಿದೆಯೆಂದು ನೆವಮಿಟ್ಟಟ್ಟಿ ಕಳೆದನ್ ಆತನುಂ ದಕ್ಷಿಣ ಮಧುರೆಗೆ ವೋಗಿ ಇಂದ್ರದತ್ತನೆಂಬ ಸೆಟ್ಟಿಗಂ ಶ್ರೀಕಾಂತೆಯೆಂಬ ಪರದಿಗಂ ಮಗಳಭಯಮತಿಯೆಂಬೊಳಾಕೆಯಂ ಮದುವೆನಿಂದನಾಕೆಗಭಯಕುಮಾರನೆಂಬೊಂ ಮಗಂ ಪುಟ್ಟಿಯಿಂತಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಿತ್ತುಪಶ್ರೇಣಿಕಂ ಮಾರುಗಮೆಂಬ ಪೊೞಲನಾಳ್ವೊದ್ದಾಯನನೆಂಬ ಮಹಾ ಸಾಮಂತಂಗಿಂತೆಂದು
“ಐನೂರು ಮಂದಿ ಮಕ್ಕಳಿಗೆ ಒಂದೇ ಪಂಕ್ತಿಯಲ್ಲಿ ಪಾಯಸವನ್ನು ಬಡಿಸಿ ಐನೂರು ನಾಯಿಗಳನ್ನು ಅವರ ಮೇಲೆ ಬಿಟ್ಟರೆ ಯಾವಾತನೊಬ್ಬನು ಹೆದರದೆ ಊಟಮಾಡುವನೋ ಅವನು ತಕ್ಕವನಾಗುವನು. ಅದಲ್ಲದೆ, ಅರಮನೆಯಲ್ಲಿ ಬೆಂಕಿ ಮೇಲೆದ್ದಾಗ ಯಾವನೊಬ್ಬನು ಸಿಂಹಾಸನ, ಶ್ವೇತಚ್ಛತ್ರ, ಪಾಳಿಧ್ವಜ ಮೊದಲಾಗುಳ್ಳ ರಾಜಚಿಹ್ನೆಗಳನ್ನು ಹಿಡಿದುಕೊಳ್ಳುವನೋ ಅವನು ರಾಜ್ಯಕ್ಕೆ ಅರ್ಹನಾಗುವನು ಎಂದು ಹೇಳಿದನು. ಅದನ್ನು ಕೇಳಿ ಉಪಶ್ರೇಣಿಕನು ಒಂದು ದಿವಸ ಅವರೆಲ್ಲರಿಗೂ ಊಟವನ್ನಿಕ್ಕಲು ಹೇಳಿ ಪರೀಕ್ಷಿಸಿ ನೋಡಿದಾಗ, ಶ್ರೇಣಿಕನು ಮಾತ್ರ ನಾಯಿಗಳಿಗೆ ಪಾಯಸವನ್ನು ಇಕ್ಕಿ ತಾನೂ ಊಟಮಾಡಿದನು. ಉಳಿದವರೆಲ್ಲರೂ ಓಡಿಹೋದರು. ಆಮೇಲೆ ಒಂದು ದಿವಸ ಅರಮನೆಯಲ್ಲಿ ಬೆಂಕಿ ಮೇಲೆದ್ದಿತು. ಆಗ ಇತರ ಮಕ್ಕಳೆಲ್ಲರೂ ಭಂಡಾರದವರೂ ಆನೆಗಳೂ ಕುದುರೆಗಳೂ ಆಯುಧಾಗಾರವನ್ನು ಸೇರಿಕೊಂಡರು. ಶ್ರೇಣಿಕನು ರಾಜ್ಯಚಿಹ್ನೆಗಳನ್ನು ಹಿಡಿದುಕೊಂಡನು. ಆದುದರಿಂದ ಉಪಶ್ರೇಣಿಕ ರಾಜನು “ಈತನು ರಾಜ್ಯಾಕಾರಕ್ಕೆ ತಕ್ಕವನಾಗಿರುವನು. ಇವನು ಇಲ್ಲಿದ್ದರೆ ಹಲವರು ಸಿಟ್ಟಾಗುವರು. ತಪ್ಪುಗೆಲಸ ನಡೆದು ಹೋದೀತು* ಎಂದು ಭಾವಿಸಿ “ನೀನು ನಾಯಿಯೊಡನೆ ಊಟ ಮಾಡಿದೆ, ಮತ್ತು ನಮ್ಮ ರಾಜ್ಯಚಿಹ್ನೆಗಳನ್ನು ಹಿಡಿದುಕೊಂಡೆ, ನಾನು ಬದುಕಿರುವಾಗ ಅರಸುತನಕ್ಕೆ ಅಪೇಕ್ಷೆ ಮಾಡಿದೆ* ಎಂದು ನೆಪವನ್ನಿಟ್ಟು ಓಡಿಸಿಬಿಟ್ಟನು. ಶ್ರೇಣಿಕನು ದಕ್ಷಿಣ ಮಧುರೆಗೆ ಹೋದನು. ಇಲ್ಲಿ ಇಂದ್ರದತ್ತನೆಂಬ ಸೆಟ್ಟಿಗೂ ಶ್ರೀಕಾಂತೆಯೆಂಬ ಸೆಟ್ಟಿತಿಗೂ ಅಭಯಮತಿ ಎಂಬ ಮಗಳಿದ್ದಳು. ಶ್ರೇಣಿಕನು ಅವಳನ್ನು ಮದುವೆಯಾದನು. ಆಕೆಯಲ್ಲಿ ಅಭಯಕುಮಾರನೆಂಬ ಮಗನು ಹುಟ್ಟಿದನು. ಹೀಗೆ ಅವರು ಇಷ್ಟವಿಷಯದ ಕಾಮಭೋಗಗಳನ್ನು ಅನುಭವಿಸುತ್ತ ಇದ್ದರು. ಆಮೇಲೆ, ಇತ್ತ ಉಪಶ್ರೇಣಿಕನು ಮಾರುಗವೆಂಬ ಪಟ್ಟಣವನ್ನು ಆಳುವ ಒದ್ದಾಯನನೆಂಬ ಮಹಾಸಾಮಂತನಿಗೆ ಈ ರೀತಿಯಾಗಿ ಹೇಳಿ ಕಳುಹಿಸಿದನು –
ಪೇೞ್ದಟ್ಟಿದನುಜ್ಜೇನಿಯನಾಳ್ವ ಪ್ರದ್ಯೋತನೆಂಬರಸನೀಗಳೆಮ್ಮನುಱದಿ ರ್ಪೊನಾತನಂ ಪಿಡಿದು ಕಟ್ಟಿಕೊಂಡು ಬರ್ಕೆಂದು ಬೆಸವೇೞ್ದಟ್ಟಿದೊಡಾತನುಂ ತನ್ನುಳ್ಳ ಚಾತುರ್ದಂತ ಬಲಮೆಲ್ಲಮಂ ಕೂಡಿಕೊಂಡು ಆತನ ಮೇಗೆೞ್ದು ಕಾದಿದೊಡೆ ಪ್ರದ್ಯೋತಂ ಕಾಳೆಗಮಂ ಗೆಲ್ದೊದ್ದಾಯನನಂ ಪಿಡಿದು ಕಟ್ಟಿ ಸೆಱೆಯಿಟ್ಟಂ ಮತ್ತೆ ವಿಜಯನೆಂಬ ಕುಮಾರನುಂ ಪಿರಿದು ತಂತ್ರಂ ಬೆರಸು ಪೋಗಿ ಏನಾನುಮೊಂದುಪಾಯದಿಂದೊದ್ದಾಯನನ ಸೆಱೆಯಂ ಬರ್ದುಂಕಿಸಿ ರಾಜಗೃಹಕ್ಕೊಡಗೊಂಡು ಪೋದೊಡೆ ಪ್ರದ್ಯೋತಂ ಮುಳಿದವರ ನಾಡಂ ಸೂಱೆಗೊಳುತ್ತಂ ಸುಡುತ್ತಂ ಕಿಡಿಸುತ್ತಂ ಉಪಶ್ರೇಣಿಕನ ಮೇಗೆ ಪೋಗೆಯಾತನ ಬರವನಱದುಪಶ್ರೇಣಿಕಂ ತನ್ನ ಪೊೞಲೊಳ್ ಘೋಷಣೆಯನಿಂತೆಂದು ತೊೞಲ್ಚಿದನಾವನೊರ್ವಂ ಪ್ರದ್ಯೋತನಂ ಪಿಡಿದು ಕಟ್ಟಿಕೊಂಡು ಬರ್ಕುಮಾತಂಗಾತನ ಬೇಡಿದೊಸಗೆಯಂ ಕುಡುವೆನೆಂದು ತೊೞಲ್ವ ಗೋಸನೆಯಂ ಚಿಲಾತಪುತ್ರಂ ಕೇಳ್ದು ಪಿಡಿದರಸಂಗೆ ಪೇೞ್ದು ಪಿರಿದುಂ ತಂತ್ರಂ ಬೆರಸು ಪೋಗಿ ಚರಪುರುಷರನಟ್ಟಿ ಬೇಗಂ ದಾೞವೋಗಿ ಜಲಕ್ರೀಡೆಯಾಡುವನನಿಱದು ಪಿಡಿದು ಕಟ್ಟಿಕೊಂಡುಪಶ್ರೇಣಿಕಂಗೊಪ್ಪಿಸಿದೊಡಾತನು ಮಾದಮಾನುಂ ಮೆಚ್ಚಿಯೊಸಗೆಯಂ ಬೇಡಿಕೊಳ್ ನಿನ್ನ ಬೇಡಿದುದೆಲ್ಲಮನೀವೆನೆಂದರಸಂ ನುಡಿದೊಡಾತನಿಂತೆಂದಂ ನಿಮ್ಮ ಪ್ರಸಾದದಿಂದೆನಗೆಲ್ಲಮುಂಟು ಒಂದಂ ಬೇಡುವೆಂ ನಿಮ್ಮಂತಃಪುರಮುೞಯೆ ಪನ್ನೆರಡು ವರ್ಷಂಬರೆಗಂ ಪೆಂಡಿರ್ಕಳೊಳೆಲ್ಲಮೆನ್ನ ಮೆಚ್ಚಿದಂತೆ ಸಯ್ದಂ
“ಉಜ್ಜಯನಿಯನ್ನು ಆಳುತ್ತಿರುವ ಪ್ರದ್ಯೋತನೆಂಬ ರಾಜನು ನನ್ನನ್ನ್ನು ಅಲಕ್ಷ್ಯಮಾಡುತ್ತಿದ್ದಾನೆ. ಅವನನ್ನು ಹಿಡಿದು ಬಂಸಿಕೊಂಡು ಬನ್ನಿ ಎಂದು ಆಜ್ಞೆ ಮಾಡಿ ಕಳುಹಿಸಲು, ಆತನು ತನ್ನಲ್ಲಿದ್ದ ಚತುರಂಗ ಸೈನ್ಯವೆಲ್ಲವನ್ನೂ ಕೂಡಿಕೊಂಡು ಪ್ರದ್ಯೋತನ ಮೇಲೆ ಬಿದ್ದು ಕಾದಾಡಿದನು. ಆಗ ಪ್ರದ್ಯೋತನು ಯುದ್ಧದಲ್ಲಿ ಗೆದ್ದು ಒದ್ದಾಯನನನ್ನು ಹಿಡಿದು ಸೆರೆಮನೆಯಲ್ಲಿ ಇಟ್ಟನು. ಆಮೇಲೆ ವಿಜಯನೆಂಬ ಕುಮಾರನು ಹೆಚ್ಚು ಸೈನ್ಯವನ್ನು ಕೂಡಿಕೊಂಡು ಹೋಗಿ, ಯಾವುದೋ ಒಂದು ಉಪಾಯದಿಂದ ಒದ್ದಾಯನನನ್ನು ಸೆರೆಯಿಂದ ಪಾರು ಮಾಡಿ, ಅವನನ್ನು ಕೂಡಿಕೊಂಡು ರಾಜಗೃಹಕ್ಕೆ ಹೋದನು. ಆಗ ಪ್ರದ್ಯೋತನು ಕೋಪಗೊಂಡು ಮಗಧೆಯ ನಾಡನ್ನು ಸೂರೆಮಾಡುತ್ತ ಸುಡುತ್ತ ಕೆಡಿಸುತ್ತ ಉಪಶ್ರೇಣಿಕನ ಮೇಲೆ ದಂಡೆತ್ತಿ ಹೋದನು. ಪ್ರದ್ಯೋತನ ಬರುವಿಕೆಯನ್ನು ತಿಳಿದು ಉಪಶ್ರೇಣಿಕನು ತನ್ನ ಪಟ್ಟಣದಲ್ಲಿ ಈ ರೀತಿಯಾಗಿ ಘೋಷಣೆಯನ್ನು ಸಾರಿಸಿದನು. “ಯಾವಾತನೊಬ್ಬನು ಪ್ರದ್ಯೋತನನ್ನು ಹಿಡಿದು ಕಟ್ಟಿಕೊಂಡು ಬರುವನೋ ಆತನಿಗೆ ಅವನು ಬಯಸಿದ ಮೆಚ್ಚನ್ನು ಕೊಡುವೆನು* ಈ ರೀತಿಯಾಗಿ ಪಟ್ಟಣದಲ್ಲಿ ಸುತ್ತುವ ಡಂಗುರವನ್ನು ಚಿಲಾತಪುತ್ರನು ಕೇಳಿ ಅದನ್ನು ತಾನು ಕೈಗೊಂಡು ರಾಜನಿಗೆ ತಿಳಿಸಿ ದೊಡ್ಡದಾದ ಸೈನ್ಯವನ್ನು ಕೂಡಿಕೊಂಡು ಹೋದನು. ದೂತರನ್ನು ಕಳುಹಿಸಿದನು. ಬೇಗನೆ ದಂಡೆತ್ತಿಕೊಂಡು ಹೋಗಿ ಜಲಕ್ರೀಡೆಯಾಡುತ್ತಿದ್ದ ಪ್ರದ್ಯೋತನನ್ನು ತಿವಿದು ಹಿಡಿದು ಬಂಸಿಕೊಂಡು ಉಪಶ್ರೇಣಿಕನಿಗೆ ಒಪ್ಪಿಸಿದನು. ಉಪಶ್ರೇಣಿಕನು ಬಹಳವಾಗಿ ಮೆಚ್ಚಿ, “ನಿನಗೆ ಪ್ರಿಯವಾದುದನ್ನು ಬೇಡಿಕೋ. ನೀನು ಬೇಡಿದುದೆಲ್ಲವನ್ನೂ ಕೊಡುವೆನು* – ಎಂದು ರಾಜನು ಹೇಳಿದಾಗ ಆತನು ಹೀಗೆಂದನು – “ನಿಮ್ಮ ಅನುಗ್ರಹದಿಂದ ನನಗೆ ಎಲ್ಲವೂ ಉಂಟು. ಒಂದನ್ನು ಮಾತ್ರ ನಿಮ್ಮಲ್ಲಿ ಬೇಡುತ್ತೇನೆ. ನಿಮ್ಮ ಅಂತಃಪುರದ ಸ್ತ್ರೀಯರನ್ನು ಮಾತ್ರ ಬಿಟ್ಟು ವರ್ಷಗಳವರೆಗೆ ಇತರ ಬಾೞ್ವೆನಿದಂ ಹೆಂಗುಸರೊಡನೆ ನನಗೆ ಮೆಚ್ಚಿಕೆಯಾದಂತೆ ನೇರವಾಗಿ (ಮುಚ್ಚುಮರೆಯಿಲ್ಲದೆ) ಬಾಳ್ವೆ ನಡೆಸುವೆನು.
ಬೇಡಿದೆನಿದನೆನಗೆ ದಯೆಗೆಯ್ದು ಸಲಿಸುವುದೆಂದೊಡೆ ಅರಸನುಮಂತೆಗೆಯ್ಯೆಂದೊಡೊ ಸಗೆಯಂ ಪೆತ್ತು ಪ್ರಸಾದಮೆಂದು ಪೊಡೆಮಟ್ಟು ಸಾಮಂತ ಮಹಾಸಾಮಂತ ಪರಿವಾರದೆಱತನಿಗರ ಪಾರ್ವರ ಪರದರೊಳ್ವೆಂಡಿರ್ಕಳೆಲ್ಲರುಮನೆೞೆದು ಬಗ್ಗಿಸಿಯುಮೊಟ್ಟಯಿಸಿಯುಂ ಕೊಂಡವರೊಳ್ ಬಾೞುತ್ತಮಿಂತು ಪನ್ನೆರಡು ವರುಷಂ ಬರೆಗಂ ತನ್ನಿಚ್ಚೆಯೊಳ್ ಬೞ್ದವಯ ದಿವಸಂ ನೆಱೆದೊಡರಸನಿಂತಪ್ಪ ಗೊಡ್ಡಮನಿನ್ನಾಡಲ್ ಸಲ್ಲೆಂದು ಬಾರಿಸಿದೊಡಂ ಉೞಯದೆ ತನ್ನ ಮೆಚ್ಚಿದಂತೆ ಬಾೞೆ ಅರಸಂ ಮುಳಿದು ನಾಡಿಂದಿರದಟ್ಟಿ ಕಳೆದೊಡಾತನುಮಡವಿಯೊಳ್ ಮಹೇಂದ್ರನೆಂಬ ತಾಪಸನ ಪಕ್ಕಕ್ಕೆವೋಗಿಯಲ್ಲಿಯ ದುರ್ಗಮಮಪ್ಪೆಡೆಯೊಳ್ ಪೊೞಲಂ ಮಾಡಿಯದರ್ಕೆ ಬಳಸಿಯುಂ ಕೋಂಟೆಯುಂ ಗೋಪುರದ್ವಾರಮುಮಂ ಮಾಡಿ ಕೆಲದೂರ್ಗಳನೊಟ್ಟಯಿಸಿಯು ಮೋಡಿಸಿಯುಮೆೞೆದು ಸೂಱೆಗೊಂಡುಮಿಂತು ಪಲವು ಕಾಲಂ ಸುಖದಿಂ ಬಾೞತ್ತಿರ್ಪನ್ನೆಗಂ ಇತ್ತಲುಪಶ್ರೇಣಿಕಂ ಕರ್ಮಂಗಳುಪಶಮಂ ಕಾರಣಮಾಗಿ ಯಮಧರ ಭಟ್ಟಾರರ ಪಕ್ಕದೆ ಧರ್ಮಮಂ ಕೇಳ್ದು ಶ್ರಾವಕವ್ರತಂಗಳಂ ಕೈಕೊಂಡು ವೈರಾಗ್ಯಪರಾಯಣನಾಗಿ ಶ್ರೇಣಿಕಂಗಂ ಬೞಯಟ್ಟಿ ಬರಿಸಿ ರಾಜ್ಯಪಟ್ಟಂಗಟ್ಟಿ ಯಮಧರ ಭಟಾರರ ಪಕ್ಕದೆ ತಪಂಬಟ್ಟು ಪಲಕಾಲಂ ತಪದೊಳ್ ನೆಗೞ್ದು ಸಮಾಮರಣದಿಂದಂ ಸ್ವರ್ಗದೊಳ್ ಪುಟ್ಟಿದೊಂ ಮತ್ತಿತ್ತ ಶ್ರೇಣಿಕ ಮಹಾರಾಜನರಸುಗೆಯ್ಯುತ್ತಿರ್ಪನ್ನೆಗಂ
ಇದನ್ನು ನಿಮ್ಮಲ್ಲಿ ಬೇಡಿದ್ದೇನೆ. ಇದನ್ನು ನನಗೆ ದಯೆ ಮಾಡಿ ಸಲ್ಲಿಸಬೇಕು* ಎಂದು ಹೇಳಲು, ಅರಸನು ‘ಹಾಗೆಯೇ ಮಾಡು’ ಎಂದು ಹೇಳಿದನು. ಚಿಲಾತಪುತ್ರನು ತಾನು ಬಯಸಿದ ಮೆಚ್ಚನ್ನು ಪಡೆದು, ‘ಹಸಾದ’ ಎಂದು ಸಾಷ್ಟಾಂಗ ವಂದಿಸಿ, ಸಾಮಂತ ಮಹಾಸಾಮಂತರು, ಪರಿವಾರದವರು, ಪ್ರಭುತ್ವವುಳ್ಳವರು, ಬ್ರಾಹ್ಮಣರು, ವರ್ತಕರು – ಇವರ ಒಳ್ಳೊಳ್ಳೆಯ ಪತ್ನಿಯರನ್ನೆಲ್ಲ ಎಳೆದು, ವಿಧೇಯರನ್ನಾಗಿ ಮಾಡಿ, ಒಡಗೂಡಿ, ಅವರೊಡನೆ ಬಾಳುತ್ತ, ಹೀಗೆ ಹನ್ನೆರಡು ವರ್ಷಗಳವರೆಗೆ ತನ್ನ ಇಚ್ಛೆಯ ಪ್ರಕಾರ ಬಾಳುವೆ ನಡೆಸಿದನು. ಅವಯ ದಿವಸ ಬಂದಾಗ, ರಾಜನು – “ಇಂತಹ ಚೇಷ್ಠೆಗಳನ್ನು ಆಡಲು ಸಲ್ಲದು* ಎಂದು ತಡೆದರೂ ಬಿಟ್ಟು ಬಿಡದೆ, ತನಗೆ ಮೆಚ್ಚಿಕೆಯಾದಂತೆ ಬಾಳುತ್ತಿದ್ದನು. ಆಗ ರಾಜನು ಕೋಪಗೊಂಡು ಅವನನ್ನು ನಾಡಿನಿಂದಲೇ ಒಡನೆಯೇ ಅಟ್ಟಿಬಿಟ್ಟನು. ಆತನು ಕಾಡಿನಲ್ಲಿ ಮಹೇಂದ್ರನೆಂಬ ತಪಸ್ವಿಯ ಬಳಿಗೆ ಹೋಗಿ, ಅಲ್ಲಿ ಇತರರಿಗೆ ಬರಲು ಸಾಧ್ಯವಾಗದ ಕಡೆಯಲ್ಲಿ ಪಟ್ಟಣವನ್ನು ನಿರ್ಮಿಸಿ, ಅದಕ್ಕೆ ಸುತ್ತಲಾಗಿ ಕೋಟೆಯನ್ನೂ ಗೋಪುರದ ಬಾಗಿಲನ್ನೂ ಮಾಡಿ, ಸಮೀಪದ ಊರುಗಳನ್ನು ಗೆದ್ದು ಸೇರಿಸಿಕೊಳ್ಳುತ್ತ, ಎದುರಿಸಿದವರನ್ನು ಓಡಿಸಿಯೂ ಎಳೆದು ಸೂರೆಮಾಡಿಯೂ ಹೀಗೆ ಹಲವು ಕಾಲ ಸುಖದಿಂದ ಬಾಳುತ್ತಿದ್ದನು. ಹೀಗಿರಲು ಇತ್ತ ಉಪಶ್ರೇಣಿಕನು ಕರ್ಮಗಳ ಉಪಶಮನವೇ ಕಾರಣವಾಗಿ ಯಮಧರರೆಂಬ ಋಷಿಗಳ ಬಳಿಯಲ್ಲಿ ಧರ್ಮವನ್ನು ಕೇಳಿ ಶ್ರಾವಕವ್ರತಗಳನ್ನು ಸ್ವೀಕರಿಸಿ ವೈರಾಗ್ಯದಲ್ಲಿ ತತ್ಪರನಾಗಿ ಶ್ರೇಣಿಕನ ಬಳಿಗೆ ಜನ ಕಳುಹಿಸಿ ಬರಮಾಡಿ ಅವನಿಗೆ ರಾಜ್ಯದ ಪಟ್ಟವನ್ನು ಕಟ್ಟಿದನು. ಆಮೇಲೆ ಯಮಧರ ಋಷಿಗಳ ಬಳಿಯಲ್ಲಿ ತಪೋದೀಕ್ಷೆಯನ್ನು ಸ್ವೀಕರಿಸಿ ಹಲವು ಕಾಲ ತಪಸ್ಸನ್ನು ಆಚರಿಸಿ ಸಮಾಮರಣದಿಂದ ಸ್ವರ್ಗಲೋಕದಲ್ಲಿ ಜನಿಸಿದನು. ಆಮೇಲೆ ಇತ್ತ ಶ್ರೇಣಿಕ ಮಹಾರಾಜನು ಅರಸುತನ ನಡೆಸುತ್ತಿದ್ದಾಗ –
ಚಿಲಾತಪುತ್ರನಾಳ್ ಭಟ್ಟಿಮಿತ್ರನೆಂಬೊನಾತನ ಸೋದರಮಾವಂ ರುದ್ರಮಿತ್ರನೆಂಬೊಂ ರಾಜಗೃಹದೊಳಿರ್ಪೊನಾತನ ಮಗಳ್ ಸುಭದ್ರೆಯೆಂಬೊಳಾಕೆಯಂ ಭಟ್ಟಿಮಿತ್ರಂ ಬೇಡಿದೊಡಾಕೆಯನಾತಂಗೆ ಕುಡದೆ ಪೆಱರ್ಗೆ ಕುಡಲ್ ತಗುಳ್ದೊಡಾತನುಂ ತಮ್ಮರಸಂಗಿಂತೆಂದು ಪೇೞ್ದನೆನ್ನ ಸೋದರಮಾವಂ ತನ್ನ ಮಗಳನೆನಗೆ ಕಿಱಯಂದೆ ಕುಡುವೆನೆಂದು ನುಡಿದನೀಗಳ್ ಪೆಱರ್ಗೆ ಕೊಟ್ಟಪ್ಪೊನಿಂದು ಮದುವೆ ನೆರೆವುದೆಂದು ಪೇೞ್ದೊಡಾತನುಮಯ್ನೂರ್ವರ್ ಸುಭಟರನಾಯ್ದುಕೊಂಡು ಪೊೞಲ್ಗೆವಂದು ಮೊಗವಡಂಗವಿದಿರ್ದ ಕೂಸಂ ಭಟ್ಟಿಮಿತ್ರಂಗೆ ಕುಡಿಮೆಂದು ಕೀಱ ಚಿಲಾತಪುತ್ರಂ ಬೇಡಿದೊಡಂ ಕುಡದಿರ್ದೊಡೆ ಮುಳಿದೆೞೆದುಕೊಂಡು ಪೋದೊಡೆ ಶ್ರೇಣಿಕ ಮಹಾರಾಜಂಗೆ ಪುಯ್ಯಲಿಟ್ಟೊಡಾತನುಮಾ ಪುಯ್ಯಲಂ ಕೇಳ್ದು ಅನ್ಯಾಯದೊಳ್ ನೆಗೞ್ದಾತನಂ ಕೊಂದು ಕೂಸಂ ಕೊಂಡು ಬನ್ನಿಮೆಂದು ಸಾಮಂತ ಮಹಾಸಾಮಂತ ಮಕುಟಬದ್ಧರ್ಕಳ್ಗೆ ಬೆಸವೇೞ್ದೊಡವರುಂ ಬೞಯನೆ ತಗುಳ್ವರನ್ನೆಗಂ ಪೋಗಲ್ ಪಾಂಗಿಲ್ಲದೆ ಚಿಲಾತಪುತ್ರಂ ಕನ್ನೆಯಂ ಕೊಂದನಾಕೆಯುಂ ಸತ್ತಾ ಪೊೞಲೊಳ್ ವ್ಯಂತರದೇವತೆಯಾಗಿ ಪುಟ್ಟಿರ್ದಳ್ ತಾನುಂ ಬೇಗಂ ಪೋಗಿ ವೈಭಾರಮೆಂಬ ಪರ್ವತಮನೇಱದೊನಾ ಪರ್ವತದ ಮೇಗೆ ಸರ್ವಗುಪ್ತರೆಂಬಾಚಾರ್ಯರವ ಜ್ಞಾನಿಗಳ್ ಅಯ್ನೂರ್ವರ್ ಶಿಷ್ಯರ್ಕಳ್ವೆರಸಿರ್ದೊಂ ಕಂಡು ಬೇಗಮೆನಗೆ ಸಂಕ್ಷೇಪದಿಂ ಧರ್ಮಮಂ ಪೇೞಮೆಂದೊಡೆ ಭಟಾರರಿಂತೆಂದು ಪೇೞ್ದರ್
ಚಿಲಾತಪುತ್ರನ ಸೇವಕನಾದ ಭಟ್ಟಿಮಿತ್ರನೆಂಬುವನಿದ್ದನು. ಭಟ್ಟಿಮಿತ್ರನ ಸೋದರಮಾವ ರುದ್ರಮಿತ್ರನು ರಾಜಗೃಹದಲ್ಲಿದ್ದನು. ರುದ್ರಮಿತ್ರನ ಮಗಳು ಸುಭದ್ರೆಯೆಂಬವಳು. ಆಕೆಯನ್ನು ತನಗೆ ಕೊಡಬೇಕೆಂದು ಭಟ್ಟಿಮಿತ್ರನು ಕೇಳಿದಾಗ, ಆಕೆಯನ್ನು ಅವನಿಗೆ ಕೊಡದೆ ಬೇರೆಯವರಿಗೆ ಕೊಡಲು ಮುಂದೆ ಬಂದುದರಿಂದ ಭಟ್ಟಿಮಿತ್ರನ ತಮ್ಮ ಅರಸನಾದ ಚಿಲಾತಪುತ್ರನಿಗೆ ಹೀಗೆ ಹೇಳಿದನು – “ನನ್ನ ಸೋದರಮಾವನು ತನ್ನ ಮಗಳನ್ನು ನನಗೆ ಕೊಡುವೆನೆಂದು ಚಿಕ್ಕಂದಿನಲ್ಲಿಯೇ ಹೇಳಿದ್ದಾನೆ. ಈಗ ಬೇರೆಯವರಿಗೆ ಕೊಡುತ್ತಿದ್ದಾನೆ. ಈ ದಿನ ಮದುವೆ ಏರ್ಪಡುವುದು. * ಎಂದು ಹೇಳಿದನು. ಆಗ ಚಿಲಾತಪುತ್ರನು ಐನೂರು ಮಂದಿ ಯೋಧರನ್ನು ಆರಿಸಿಕೊಂಡು ಪಟ್ಟಣಕ್ಕೆ ಬಂದು ‘ಮುಖವಾಡವನ್ನು ಹಾಕಿಕೊಂಡಿದ್ದ ಕನ್ಯೆಯನ್ನು ಭಟ್ಟಿಮಿತ್ರನಿಗೆ ಕೊಡಿ’ ಎಂದು ಕೂಗಿ ಹೇಳಿದನು. ಆದರೂ ಭಟ್ಟಿಮಿತ್ರನಿಗೆ ಕೊಡದಿದ್ದುದರಿಂದ ಅವನು ಕೋಪಗೊಂಡು ಆ ಕನ್ಯೆಯನ್ನು ಎಳೆದುಕೊಂಡು ಹೋದನು. ರುದ್ರಮಿತ್ರನು ಮಹಾರಾಜನಿಗೆ ದೂರು ಕೊಟ್ಟನು. ರಾಜನು ಆ ದೂರನ್ನು ಕೇಳಿ – “ಅನ್ಯಾಯದಲ್ಲಿ ಪ್ರವರ್ತಿಸಿದವನನ್ನೂ ಕೊಂದು ಕನ್ಯೆಯನ್ನು ಕೊಂಡು ಬನ್ನಿ* ಎಂದು ಸಾಮಂತ ಮಹಾಸಾಮಂತ ಕಿರೀಟಾಪತಿಗಳಿಗೆ ಆಜ್ಞೆ ಮಾಡಿದನು. ಆಗ ಅವರು ಹಿಂದೆಯೇ ಅಟ್ಟಿಕೊಂಡು ಹೋದರು. ಅಷ್ಟರಲ್ಲಿ ಹೋಗಲು ಅವಕಾಶವಿಲ್ಲದೆ ಚಿಲಾತಪುತ್ರನು ಆ ಕನ್ಯೆಯನ್ನು ಕೊಂದನು. ಆಕೆ ಸತ್ತು ಆ ಪಟ್ಟಣದಲ್ಲಿ ವ್ಯಂತರ ದೇವತೆಯಾಗಿ ಹುಟ್ಟಿದ್ದಳು. ಚಿಲಾತಪುತ್ರನು ಬೇಗ ಹೋಗಿ ವೈಭಾರವೆಂಬ ಪರ್ವತವನ್ನೇರಿದನು. ಆ ಪರ್ವತದ ಮೇಲೆ ಅವಜ್ಞಾನಿಗಳಾದ ಸರ್ವಗುಪ್ತರೆಂಬ ಆಚಾರ್ಯರು ಐನೂರು ಮಂದಿ ಶಿಷ್ಯರೊಡನಿದ್ದರು. ಅವರನ್ನು ಕಂಡು ‘ಬೇಗ ನನಗೆ ಸಂಕ್ಷೇಪವಾಗಿ ಧರ್ಮವನ್ನು ಹೇಳಿರಿ’ ಎನ್ನಲು ಋಷಿಗಳು ಹೀಗೆ ಹೇಳಿದರು
ಗಾಹೆ || ಜಂ ಇಚ್ಛಸಿ ತಂ ಣಂತಂ ಜಂಪುಣ ಣೇಚ್ಛಸಿ ತಂ ತುಮಪ್ಪಂ
ಪುರಿಸ ಸೀಹ ತಂ ಇಚ್ಛಸು ಸಂಸಾರ ಮಹಣ್ಣವಂ ತರಿದುಂ
ಮತ್ತಂ ಅಭಾವಿದಂ ಭಾವೇಮಿ ಭಾವಿದಂ ಭಾವೇಮಿ ಎಂದಿಂತು ಸಂಕ್ಷೇಪದಿಂದಂ ಧರ್ಮಮಂ ಪೇೞ್ದು ಮತ್ತಮಿಂತೆಂದರ್ ನಿನಗಾಯುಷ್ಯಂ ಕಿಱದೆಯೆಂದು ಪೇೞ್ದೊಡಾತನುಮಂತಪ್ಪೊಡೆನಗೆ ದೀಕ್ಷಾಪ್ರಸಾದಂಗೆಯ್ಯಿಮೆಂದು ಬೇಡಿ ಬಾಹ್ಯಾಭ್ಯಂತರ ಪರಿಗ್ರಹಗಳೆಲ್ಲಮಂ ತೊಱೆದು ತಪಂಬಟ್ಟು ಸವ್ವಂ ಸಾವಜ್ಜ ಜೋಗಂ ವಿರದೋಮ್ಹಿಯೆಂದು ಬಾೞ್ವನ್ನೆಗಮಾಹಾರಶರೀರಕ್ಕೆ ನಿವೃತ್ತಿಗೆಯ್ದು ಚಿಲಾತಪುತ್ರಂ ತಪಂಬಟ್ಟು ಕಾಯೋತ್ಸರ್ಗಂ ಗೆಯ್ದಿರ್ದೊರ್ ಅನ್ನೆಗಂ ಪೆಱಗಣಿಂ ಬಲಂ ಕೇಳ್ದು ಬಂದು ಕಾಯೋತ್ಸರ್ಗಂ ನಿಂದೊನಂ ಕಂಡೇನುಂ ಗೆಯ್ಯಲಱಯದೆ ಶ್ರೇಣಿಕಮಹಾರಾಜಂಗೆ ಚಿಲಾತಪುತ್ರಂ ತಪಂಬಟ್ಟು ಕಾಯೋತ್ಸರ್ಗಂ ಗೆಯ್ದಿರ್ದೊನಿನ್ನೆಮಗೆ ಬೆಸನೇನೆಂದು ಬಿನ್ನಪಂಗೆಯ್ದಟ್ಟಿದೊಡಾತನಿಂತೆಂದಂ ತಪಂಬಟ್ಟನಪ್ಪೊಡೊಳ್ಳಕೆಯ್ದಂ ತನ್ನ ಮುಂಗೆಯ್ದ ಪಾಪಮುಮಯಶಮುಂ ಪೞಯುಂ ಪೊಲ್ಲಮೆಯುಮಂ ನೀಗೆದನೆಂದು ನುಡಿದು ಪೋದ ಬಲಕ್ಕೆ ಬೞಯಟ್ಟಿದೊಡವರುಂ ಚಿಲಾತ ರಿಸಿಯಂ ಬಲಗೊಂಡು ಬಂದರ್ಚಿಸಿ ಪೊಡೆವಟ್ಟು ಪೊೞಲ್ಗೆ ವೋದರ್ ಮತ್ತಿತ್ತ ಸುಭದ್ರೆಯಪ್ಪ ವ್ಯಂತರದೇವತೆ
– (ಎಲೈ ಪುರುಷಸಿಂಹನೇ, ಯಾವುದನ್ನು ಇಷ್ಟಪಡುವೆಯೋ ಅದು ಅನಂತವಾದುದು. ಮತ್ತೆ ಯಾವುದನ್ನು ಇಷ್ಟ ಪಡುವುದಿಲ್ಲವೋ ಅದು ನಿನಗೆ ಅಲ್ಪವಾದುದು. ಸಂಸಾರವೆಂಬ ಮಹಾಸಾಗರವನ್ನು ದಾಟುವುದಕ್ಕೆ ಇಚ್ಛೆಪಡು) ಆನಂತರ, “ಆಗದಿರುವುದನ್ನು ಭಾವಿಸುತ್ತೇನೆ, ಆಗುತ್ತಿರುವುದನ್ನು ಭಾವಿಸುತ್ತೇನೆ* ಎಂದು ಈ ರೀತಿಯಾಗಿ ಸಂಕ್ಷೇಪದಿಂದ ಧರ್ಮವನ್ನು ಹೇಳಿ ಆಮೇಲೆ ಹೀಗೆ ಹೇಳಿದರು – “ನಿನಗೆ ಆಯುಷ್ಯವಿರುವುದು ಸ್ವಲ್ಪವೆ*. ಹೀಗೆನ್ನಲು ಚಿಲಾತಪುತ್ರನು “ಹಾಗಾದರೆ ನನಗೆ ದೀಕ್ಷೆಯನ್ನು ಅನುಗ್ರಹ ಮಾಡಿ* ಎಂದು ನುಡಿದು ಕೇಳಿ ಪಡೆದುಕೊಂಡು ಬಾಹ್ಯ ಪರಿಗ್ರಹಗಳನ್ನೂ ಆಂತರಿಕ ಪರಿಗ್ರಹಗಳನ್ನೂ ತ್ಯಜಿಸಿ ತಪಸ್ಸನ್ನು ಕೈಗೊಂಡನು. “ಎಲ್ಲಾ ದೋಷಯುಕ್ತವಾದ ಯೋಗದಿಂದ ವಿರತನಾಗಿದ್ದೇನೆ* ಎಂದುಕೊಂಡು ಬಾಳುತ್ತ ಆಹಾರಕ್ಕೂ ಶರೀರಕ್ಕೂ ನಿವೃತ್ತಿಯನ್ನು ಮಾಡಿ ಚಿಲಾತಪುತ್ರ ಋಷಿಗಳು ತಪಸ್ಸನ್ನು ಮಾಡಿ ದೇಹಾಭಿಮಾನ ತ್ಯಾಗವನ್ನು ಮಾಡಿದರು. ಅಷ್ಟರಲ್ಲಿ ಹಿಂದಿನಿಂದ ಸಂಗತಿಯನ್ನು ಕೇಳಿ, ಸೈನ್ಯವು ಬಂದು ದೇಹೋತ್ಸರ್ಗಕ್ಕಾಗಿ ನಿಂದಾತನನ್ನು ಕಂಡು ಏನೂ ಮಾಡಲಾರದೆ ಶ್ರೇಣಿಕ ಮಹಾರಾಜನ ಬಳಿಗೆ ಕಳುಹಿಸಿ “ಚಿಲಾತಪುತ್ರನು ತಪಸ್ಸನ್ನು ಪಡೆದು ದೇಹತ್ಯಾಗ ಮಾಡಿದ್ದಾನೆ. ಇನ್ನು ನಮಗೆ ಅಪ್ಪಣೆಯೇನು? ಎಂದು ವಿಜ್ಞಾಪನವನ್ನು ಮಾಡಲು ಶ್ರೇಣಿಕನು ಹೀಗೆಂದನು “ತಪಸ್ಸನ್ನು ಕೈಗೊಂಡನಾದರೆ ಒಳ್ಳೆಯದು ಮಾಡಿದನು. ತಾನು ಹಿಂದೆ ಮಾಡಿದ ಪಾಪವನ್ನೂ ಅಪಕೀರ್ತಿಯನ್ನೂ ನಿಂದೆಯನ್ನೂ ಕೆಟ್ಟುದನ್ನೂ ನೀಗಿದನು* ಎಂದು ಹೇಳಿ, ಹೋಗಿದ್ದ ಸೈನ್ಯಕ್ಕೆ ಜನ ಕಳುಹಿಸಲು ಆ ಸೈನ್ಯದವರು ಚಿಲಾತ ಋಷಿಯನ್ನು ಪ್ರದಕ್ಷಿಣೆ ಮಾಡಿ ಪೂಜಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ಪಟ್ಟಣಕ್ಕೆ ತೆರಳಿದರು. ಆಮೇಲೆ ಇತ್ತ ಸುಭದ್ರೆಯಾಗಿದ್ದ ವ್ಯಂತರ ದೇವತೆ ವಿಭಂಗಜ್ಞಾನದಿಂದ ತಿಳಿದು ಚಿಲಾತ ಋಷಿಗಳನ್ನು ಕಂಡು ಶತ್ರುತ್ವವನ್ನು ಜ್ಞಾಪಿಸಿ ಹದ್ದಿನ ರೂಪವನ್ನು ತಾಳಿ ಬಂದು ಚಿಲಾತಋಷಿಯ
ವಿಭಂಗಜ್ಞಾನದಿಂದಱದು ಚಿಲಾತರಿಸಿಯರಂ ಕಂಡು ಪಗೆಯಂ ನೆನೆದು ಪರ್ದಿನ ರೂಪಂ ಕೈಕೊಂಡು ಬಂದು ನೆತ್ತಿಯ ಮೇಗಿರ್ದ ಕಣ್ಗಳಂ ತೋಡಿ ತಿನೆ ಪೆರ್ದಲೆಯ ಕಟ್ಟಿಱುಂಪೆಗಳುಮಾಗಿ ಮೆಯ್ಯೆಲ್ಲಮನುರ್ಚಿಯುಂ ಸಟ್ಟುಗದಂತೆ ಬಳಸಿಯುಂ ಛಿದ್ರಂ ಮಾಡಿ ಕಾಡೆ ಎರಡು ದಿವಸಮಿರುಳುಂ ಪಗಲುಂ ನಿರಂತರಂ ದೇವೋಪಸರ್ಗಮಂ ಸೈರಿಸಿ ಶುಭ ಪರಿಣಾಮದಿಂ ಮುಡಿಪಿ ಸರ್ವಾರ್ಥ ಸಿದ್ಧಿಯೊಳ್ ಮುವತ್ತುಮೂಱು ಸಾಗರೋಪಮಾಯುಷ್ಯಮನೊಡೆಯೊನಹಮಿಂದ್ರ ದೇವನಾಗಿ ಪುಟ್ಟಿದಂ ಮತ್ತಂ ಪೆಱರ್ ಸಂನ್ಯಸನಂಗೆಯ್ದ ಭವ್ಯರ್ಕಳ್ ಚಿಲಾತರಿಸಿಯರಂ ಮನದೊಳ್ ಬಗೆದು ಚತುರ್ವಿಧಮಪ್ಪುಪಸರ್ಗಮುಂ ಪಸಿವು ನೀರೞ್ಕೆ ಮೊದಲಾಗೊಡೆಯ ದುಃಖಂಗಳುಮಂ ಸೈರಿಸಿ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳುಮಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ
ನೆತ್ತಿಯ ಮೇಲೆ ಕುಳಿತು ಕಣ್ಣುಗಳನ್ನು ತೋಡಿ ತಿನ್ನುತ್ತಿರಲು, ದೊಡ್ಡ ತಲೆಯುಳ್ಳ ಕಟ್ಟಿರುವೆಗಳು ಶರೀರವನ್ನೆಲ್ಲ ಬಗಿದು ಸವುಟಿನಂತೆ ತೊಳಸಿಯೂ ತೂತುಗಳನ್ನು ಮಾಡಿ ಪೀಡಿಸುತ್ತಿರಲು ಎರಡು ದಿವಸ ರಾತ್ರಿಯೂ ಹಗಲೂ ಎಡೆಬಿಡದೆ ದೇವೋಪಸರ್ಗವನ್ನು ಸಹಿಸಿ, ಶುಭ ಪರಿಣಾಮದಿಂದ ಸತ್ತು ಸರ್ವಾರ್ಥಸಿದ್ಧಿ ಎಂಬ ಸ್ವರ್ಗದಲ್ಲಿ ಮೂವತ್ತಮೂರು ಸಾಗರದಂತಹ ಆಯುಷ್ಯವುಳ್ಳ ಅಹಮಿಂದ್ರ ದೇವನಾಗಿ ಹುಟ್ಟಿದರು. ಅನಂತರ, ಸಂನ್ಯಾಸವನ್ನು ಮಾಡಿದ ಇತರ ಭವ್ಯರು ಕೂಡ ಚಿಲಾತ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ನಾಲ್ಕು ವಿಧವಾದ ಉಪಸರ್ಗಗಳನ್ನೂ ಹಸಿವು ನೀರಡಿಕೆ ಮೊದಲಾಗಿ ಉಳ್ಳ ದುಃಖಗಳನ್ನೂ ಸಹಿಸಿ ಶ್ರೇಷ್ಠವೂ ನಿರ್ಮಲವೂ ಸಹಜವೂ ಆದ ದರ್ಶನ ಜ್ಞಾನ ಚಾರಿತ್ರಗಳನ್ನು ಸಾಸಿ ಸ್ವರ್ಗ ಮೋಕ್ಷಸುಖಗಳನ್ನು ಪಡೆಯಲಿ!
*****ಕೃಪೆ: ಕಣಜ****
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ