ನನ್ನ ಪುಟಗಳು

07 ಮಾರ್ಚ್ 2022

ವಡ್ಡಾರಾಧನೆ-ಗುರುದತ್ತ ಭಟಾರರ ಕಥೆ | Vaddaradhane-Gurudatta-bhattarara-kathe

ಗುರುದತ್ತ ಭಟಾರರ ಕಥೆಯಂ ಪೇೞ್ವೆಂ :

ಗಾಹೆ || ಹಶ್ಥಿಣಪುರ ಗುರುದತ್ತೋ ಸಮ್ಮಲಿಥಾಳೀವ ದೊಣ್ಣಿಮಂತಮ್ಹಿ
ದಜ್ಜಂತೋ ಅಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

    *ಹತ್ಥಿಣಪುರ – ಹಸ್ತಿನಾಪುರಮುಮಂ ಮುನ್ನಾಳ್ವ, ಗುರುದತ್ತೋ – ಗುರುದತ್ತರಿಸಿ, ಸಮ್ಮಲಿಥಾಳೀವ – ಸೂಡಿವೊತ್ತಿಸೆಪಟ್ಟನಂತೆ, ದೊಣ್ಣಿಮಂತಮ್ಹಿ – ದೋಣಿಮಂತಮೆಂಬ ಪರ್ವತದ ಸಾರೆ, ದಜ್ಜಂತೋ – ಬೇಯುತ್ತಿರ್ದೊನಾಗಿ, ಅಯಾಸಿಯ – ಉಪಸರ್ಗಮಂ ಸೈರಿಸಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ದರ್ಶನಜ್ಞಾನಚಾರಿತ್ರಂಗಳಾರಾಧನೆಯಂ*

    ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕುಣಾಳಮೆಂಬುದು ನಾಡಲ್ಲಿ ಸಾವಸ್ತಿಯೆಂಬುದು ಪೊೞಲದನಾಳ್ವೊನುಪರಿಚರನೆಂಬೊನರಸನಾತನ ಮಹಾದೇವಿಯರ್ ಪದ್ಮಾವತಿ ಅಮಿತಪ್ರಭೆ ಸುಪ್ರಭೆ ಪ್ರಭಾವತಿ ಅಂತು ನಾಲ್ವರುಂ ಮಹಾದೇವಿಯರ್ ಮೊದಲಾಗಿ ಅರಸಿಯರ್ಕಳಯ್ನೂರ್ವರ್ ಪದ್ಮಾವತಿ ಮಹಾದೇವಿಯ ಮಗನನಂತವೀರ್ಯನಮಿತಪ್ರಭೆಯ ಮಗಂ ವಜ್ರಪಾಣಿ ಸುಪ್ರಭೆಯ ಮಗಂ ವಜ್ರಬಾಹು ಪ್ರಭಾವತಿಯ ಮಗಂ ವಜ್ರಧರನಿಂತೀ ನಾಲ್ವರುಂ ಮಹಾದೇವಿಯರ ಮಕ್ಕಲ್ ಉೞದರಸಿಯರ ಮಕ್ಕಳಯ್ನೂರ್ವರಂತವರ್ಗಳಿಪ್ಪವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ವಸಂತಕಾಲದೊಳ್ ಅಂಕುರಿತ ಪಲ್ಲವಿತ ಕೋರಕಿತ ಕುಸುಮಿತ ಫಲಿತಮಪ್ಪ ಮನೋಹರೋದ್ಯಾನಕ್ಕಯ್ನೂರ್ವರ

    ಗುರುದತ್ತ ಭಟಾರರ ಕಥೆಯನ್ನು ಹೇಳುವೆನು – ಹಿಂದೆ (ಹಿಂದೆ, ಹಸ್ತಿನಾಪುರವನ್ನು ಆಳುತ್ತಿದ್ದ ಗುರುದತ್ತನೆಂಬ ಋಷಿ ದೋಣಿಮಂತವೆಂಬ ಬೆಟ್ಟದ ಸಮೀಪದಲ್ಲಿ ಸುಟ್ಟು ಹೋಗಿ, ಉಪಸರ್ಗವನ್ನು ಸಹಿಸಿಕೊಂಡು, ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯದ ಆರಾಧನೆಯನ್ನು ಮಾಡಿ ಅದರ ಫಲವನ್ನು ಪಡೆದನು.) ಅದು ಹೇಗೆಂದರೆ – ಈ ಜಂಬೂದ್ವೀಪದಲ್ಲಿರುವ ಭರತಕ್ಷೇತ್ರದಲ್ಲಿ ಕುಣಾಳ ಎಂಬ ನಾಡಿನಲ್ಲಿ ಶ್ರಾವಸ್ತಿ ಎಂಬ ಪಟ್ಟಣವಿದೆ. ಅದನ್ನು ಉಪರಿಚರನೆಂಬ ರಾಜನು ಆಳುತ್ತಿದ್ದನು. ಅವನಿಗೆ ಪದ್ಮಾವತಿ, ಅಮಿತಪ್ರಭೆ, ಸುಪ್ರಭೆ, ಪ್ರಭಾವತಿ – ಎಂಬ ನಾಲ್ವರು ಮಹಾ ರಾಣಿಯರು ಮುಂತಾಗಿ ಐನೂರು ಮಂದಿ ಅರಸಿಯರಿದ್ದರು. ಪದ್ಮಾವತೀ ಮಹಾದೇವಿಯ ಮಗ ಅನಂತವೀರ್ಯ ; ಅಮಿತಪ್ರಭೆಯ ಮಗ ವಜ್ರಪಾಣಿ ; ಸುಪ್ರಭೆಯ ಮಗ ವಜ್ರಬಾಹು; ಪ್ರಭಾವತಿಯ ಮಗ ವಜ್ರಧರ. ಹೀಗೆ ಈ ನಾಲ್ಕು ಮಂದಿ ಮಹಾರಾಣಿಯರ ಮಕ್ಕಳೂ ಉಳಿದ ಅರಸಿಯರ ಮಕ್ಕಳೂ ಐನೂರು ಮಂದಿ ಇದ್ದರು. ಅಂತು ಅವರು ತಮಗೆ ಇಷ್ಟವಾದ ಕಾಮ ಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಿತು. ಅನಂತರ ಒಂದು ದಿನ ವಸಂತಋತುವಿನ ಕಾಲದಲ್ಲಿ, ಮನೋಹರ ಎಂಬ ಉದ್ಯಾನವು ಮೊಳಕೆ ಮೂಡಿ, ಚಿಗುರಿ, ಟಿಸಲುಗಳೊಡೆದು, ಹೂಬಿಟ್ಟು, ಹಣ್ಣುಗಳಿಂದ ತುಂಬಿರಲು – ಆ ಮನೋಹರೋದ್ಯಾನಕ್ಕೆ ಉಪರಿಚರ ರಾಜನು ಐನೂರು ಮಂದಿ ಅರಸಿಯರನ್ನೂ

    ರಸಿಯರ್ಕಳುಮಣುಗರ್ಕಳುಂಬೆರಸು ಪೋಗಿ ಮಹಾವಿಭೂತಿಯಿಂ ವನಕ್ರೀಡೆಯಂ ಪಿರಿದು ಬೇಗಮಾಡಿ ಬೞಕ್ಕಾ ನಂದನವನದೊಳಗಣ ಸುದರ್ಶನಮೆಂಬ ಮಣಿಕುಟ್ಟಿಮಮಪ್ಪ ಬೊಡ್ಡಣ ಬಾವಿಯೊಳ್ ಕರ್ಪೂರ ಕಾಳಾಗರು ತುರುಷ್ಕ ಕುಂಕುಮ ಚಂದನಾದಿ ಸುಗಂಧದ್ರವ್ಯಂಗಳಿಂ ಬೆರಸೆ ಪಟ್ಟುದಱೊಳ್ ಮತ್ತಂ ನೀಲೋತ್ಪಲ ಕುವಳಯಂ ಮೊದಲಾಗೊಡೆಯ ನಾನಾಪ್ರಕಾರದ ಪುಷ್ಪಜಾತಿಗಳಿಂದಂ ಸಂಛನ್ನಮಪ್ಪುದಱೊಳ್ ಚಕ್ರವಾಕ ಬಕ ಬಳಾಕ ಹಂಸ ಮಂಡೂಕ ಜೀವಂ ಜೀವಕ ಚಕೋರಾದಿ ಜಲಚರ ಹಂಗವಿ ಸಮೂಹಂಗಳನೊಡೆಯದಱೊಳ್ ನಾಲ್ವರುಂ ಮಹಾದೇವಿಯರ್ ವೆರಸೊಂದೊರ್ವರಂ ನಾನಾಪ್ರಕಾರದ ಯಂತ್ರಂಗಳಿಂದಂ ಜೀರ್ಕೊಳವಿಗಳಿಂದಂ ತಳಿಯುತ್ತಂ ನೀರ್ಗಳಂ ಸೂಸುತ್ತಂ ಜಲಕ್ರೀಡೆಯಂ ಮನಕ್ಕೆ ವಂದರಸಿಯರ್ಕಳೊಡನೆ ನೀಡುಂ ಬೇಗಮಾಡುತ್ತಿರ್ಪನ್ನೆಗಂ ಮತ್ತಿತ್ತ ವಿಜಯಾರ್ಧಪರ್ವತದ ಉತ್ತರಶ್ರೇಣಿಯೊಳಳಕಾಪುರಮೆಂಬುದು ಪೊೞಲದನಾಳ್ವೊಂ ವಜ್ರದಾಡನೆಂಬ ವಿದ್ಯಾಧರನನೇಕ ವಿದ್ಯಾಬಲಕರ್ವಿತನಾತನ ಮಹಾದೇವಿ ಮದನವೇಗೆಯೆಂಬೊಳಂತವರಿರ್ವರುಮೊಂದು ದಿವಸಂ ರಮ್ಯ ಪ್ರದೇಶಂಗಳೊಳ್ ಕ್ರೀಡಿಸಲ್ವೇಡಿ ಭೌಮವಿಹಾರಕ್ಕೆಂದು ವಿಚಿತ್ರಮಾಗುತ್ತಿರ್ದ ವಿಮಾನಮನೇಱಯಾಕಾಶಪಥದೊಳ್ ಪೋಗುತ್ತಿರ್ದವರ್ಗಳ್ ದೇವಸಮಾನರಪ್ಪ ಸಾಮಂತ ಮಹಾಸಾಮಂತರ್ಕಳಿಂದಂ ದೇವಗಣಿಕೆಯರಪ್ಸರೆಯರ್ಕಳಂ ಪೋಲ್ವಯ್ನೂರ್ವರರಸಿಯರ್ಕಳಿಂದಂ ಪೆಂಡವಾಸದೆಳವೆಂಡಿರಿಂದಂ ಪರಿವಾರ ಜನಂಗಳಿಂದಮಿಂತು ದಿವ್ಯಮಪ್ಪ ಸಭೆಯಿಂದಂ ಪರಿವೇಷ್ಟಿತನಾಗಿ ಪಟುಪಟಹ ಪಣವ ತುಣವ ಭಂಭಾ ಮರ್ದಳ ಝಲ್ಲರಿ ಮುಕುಂದ ಶಂಖ ವಂಶ ತಾಳ ಭೇರೀ ಮೃದಂಗ ವೀಣಾ ಕಹಳಾದಿ ನಾನಾಪ್ರಕಾರದ

        ಮಕ್ಕಳನ್ನೂ ಕೂಡಿಕೊಂಡು ಹೋದನು. ಅಲ್ಲಿ ಮಹಾವೈಭವದಿಂದ ಬಹಳ ಹೊತ್ತಿನವರೆಗೆ ವನಕ್ರೀಡೆಯನ್ನು ಆಡಿದನು. ಆಮೇಲೆ, ತನ್ನ ನಾಲ್ವರು ರಾಣಿಯನ್ನು ಕೂಡಿಕೊಂಡು ಆ ನಂದನವನದಲ್ಲಿರುವ ಸುದರ್ಶನವೆಂಬ ಕೊಳಕ್ಕೆ ಜಲಕ್ರೀಡೆಗೆ ಹೋದನು. ಆ ಕೊಳವು ರತ್ನಖಚಿತವಾದ ನೆಲಗಟ್ಟಿನಿಂದ ಕೂಡಿದ್ದಿತು. ಕರ್ಪೂರ, ಕಾಳಾಗರು, ಲೋಬಾನ, ಕುಂಕುಮ, ಶ್ರೀಗಂಧ ಮುಂತಾದ ಸುವಾಸನೆಯ ವಸ್ತುಗಳಿಂದ ಮಿಶ್ರಿತವಾಗಿದ್ದಿತು. ನೀಲೋತ್ಪಲ, ಕನ್ನೈದಿಲೆ ಮುಂತಾಗಿ ಉಳ್ಳ ಹಲವಾರು ವಿಧದ ಯಂತ್ರಗಳಿಂದಲೂ ಪಿಚಕಾರಿಗಳಿಂದಲೂ ಪರಸ್ಪರವಾಗಿ ನೀರನ್ನು ಚಿಮುಕಿಸುತ್ತಲೂ ನೀರನ್ನು ಚೆಲ್ಲುತ್ತಲೂ ಬಹಳ ಹೊತ್ತಿನವರೆಗೆ ಜಲಕ್ರೀಡೆಯನ್ನು ಆಡುತ್ತಿದ್ದನು. ಈ ರೀತಿಯಾಗಿ ಆಡುತ್ತಿದ್ದಾಗ ಮುಂದಿನ ಘಟನೆ ನಡೆಯಿತು. ಇತ್ತ ವಿಜಯಾರ್ಧಪರ್ವತದ ಬಡಗಣ ಸಾಲಿನಲ್ಲಿ ಅಳಕಾಪುರವೆಂಬ ಪಟ್ಟಣವನ್ನು ವಜ್ರದಾಡನೆಂಬ ವಿದ್ಯಾಧರನು ಆಳುತ್ತಿದ್ದನು. ಅವನು ತನಗೆ ಅನೇಕ ವಿದ್ಯೆಗಳ ಸಾಮರ್ಥ್ಯವಿದೆಯೆಂದು ಗರ್ವಗೊಂಡಿದ್ದನು. ಅವನ ರಾಣಿ ಮದನವೇಗೆಯೆಂಬವಳು. ಅವರಿಬ್ಬರೂ ಒಂದು ದಿವಸ ಮನೋಹರವಾದ ಪ್ರದೇಶಗಳಲ್ಲಿ ಆಡಬೇಕೆಂದು ಭೂಮಿಯ ಸಂಚಾರಕ್ಕಾಗಿ ಆಶ್ಚರ್ಯಕರವಾಗಿರುವಂತಹ ಒಂದು ವಿಮಾನದಲ್ಲಿ ಕುಳಿತು ಆಕಾಶಮಾರ್ಗದಲ್ಲಿ ಹೋಗುತ್ತಿದ್ದರು. ಅವರಿಬ್ಬರೂ ಉಪರಿಚರನು ಜಲಕ್ರೀಡೆಯಾಡುವುದನ್ನು ಕಂಡರು. ಉಪರಿಚರನು ದೇವತೆಗಳಂತಿರುವ ಸಾಮಂತ – ಮಹಾಸಾಮಂತರಿಂದಲೂ ದೇವನರ್ತಕಿಯರನ್ನು ಹೋಲುವ ಐನೂರು ರಾಣಿಯರಿಂದಲೂ ಅಂತಃಪುರದ ಕೋಮಲೆಯರಿಂದಲೂ ಪರಿವಾರದವರಿಂದಲೂ ಇಂತಹ ದಿವ್ಯವಾದ ಸಭೆಯಿಂದ ಆವೃತನಾಗಿದ್ದನು. ಸಮರ್ಥವಾದ ಪಟಹ, ಪಣವ, ತುಣವ, ಭಂಭಾ, ಮದ್ದಳೆ, ಝಲ್ಲರಿ, ಮುಕುಂದ, ಶಂಖ ಕೊಳಲು, ತಾಳ, ಭೇರಿ,

  ತೂರ್ಯಧ್ವನಿಗಳ್ ದೇವದುಂದುಭಿ ಮೊೞಗುವಂತೆ ಭೋರ್ಗರೆದು ಮೊೞಗಿ ಮಹಾವಿಭೂತಿಯಿಂದಂ ಜಲಕ್ರೀಡೆಯನಾಡುತ್ತಿರ್ಪುಪರಿಚರ ಮಹಾನೃಪತಿಯನಿರ್ವರುಂ ಕಂಡು ವಿಮಾನಮಂ ನಿಱಸಿ ನೀಡುಂ ಬೇಗಂ ನೋಡಿ ಮದನವೇಗೆಯಿಂತೆಂದಳ್ ನಾಮಾಕಾಶದೊಳ್ ಕಾಗೆಗಳಂತಿರೆ ಪಾಱುವನಿತಲ್ಲದೆ ನಮಗಿನಿತು ವಿಭವಮುಮೈಶ್ಯರ್ಯಮುಂಟೆ ಶ್ರೀಯೊಳಂ ರೂಪಿನೊಳಂ ವಿಭವದೊಳಂ ನಾನಾಪ್ರಕಾರದ ವಿನೋದಂಗಳಿಂದಮುಪರಿಚರ ಮಹಾರಾಜನಿಂದಗ್ಗಳಂ ಪೆಱರಾರುಮಿಲ್ಲಮೀ ಸಂಸಾರದೊಳ್ ಬರ್ದ ಬಾೞನೀತನೆ ಬರ್ದನೆಂದು ಪೊಗೞ್ದೊಡೆ ವಜ್ರದಾಡಂ ಕೇಳ್ದು ಮನದೊಳ್ ಮುಳಿದು ಪುರುಡಿಸಿ ತನ್ನ ಪೊೞಲ್ಗೆವೋಗಿ ಮದನವೇಗೆಯನಲ್ಲಿಟ್ಟು ತಾನೊರ್ವನೆ ವಿಮಾನಮನೇಱ ತುರಿಪದಿಂ ಬಂದು ಜಲಕ್ರೀಡೆಯನಾಡುತ್ತಿರ್ಪುಪರಿಚರ ಮಹಾನೃಪತಿಯ ಮೇಗೆ ವಿದ್ಯೆಯಿಂದಂ ವಿಗುರ್ವಿಸಿ ಪಿರಿದೊಂದು ಶಿಲೆಯನೆತ್ತಿಕೊಂಡು ಬಂದು ಮಣಿಕುಟ್ಟಿಮಮಪ್ಪ ಸುದರ್ಶನಮೆಂಬ ಬಾವಿಯ ಬಾಗಿಲೆಲ್ಲಮಂ ನಿಶ್ಛಿದ್ರಮಾಗಿ ಮುಚ್ಚಿ ಕವಿದಿಕ್ಕಿ ಪೋದಂ ಪೋದೊಡೆ ಪದ್ಮಾವತಿ ಮೊದಲಾಗೊಡೆಯ ನಾಲ್ವರ್ ಮಹಾದೇವಿಯರುಂ ಮೋಹಿಸದ ಬುದ್ಧಿಚಿiನೊಡೆಯರಗಮ ಸಮಗಯಗ್ದೃಷ್ಟಿಗಳ್ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಪಂಚನಮಸ್ಕಾರಮನುಚ್ಚಾರಿಸುತ್ತಂ ದೇವರಂ ಜಾನಿಸುತ್ತಂ ದರ್ಶನ ಜ್ಞಾನಚಾರಿತ್ರಂಗಳನಾರಾಸಿ ಮುಡಿಪಿ ಸೌಧರ್ಮಕಲ್ಪದೊಳ್

    ಮೃದಂಗ, ವೀಣೆ, ತುತ್ತೂರಿ – ಮುಂತಾದ ಹಲವಾರು ವಿಧದ ವಾದ್ಯಧ್ವನಿಗಳು ದೇವ ಲೋಕದ ದುಂದುಭಿವಾದ್ಯ ಶಬ್ದಮಾಡುವಂತೆ ಭೋರೆಂದು ಶಬ್ದಮಾಡುತ್ತಿರಲು ಮಹಾವೈಭವದಿಂದ ಜಗಕ್ರೀಡೆಯಾಡುತ್ತಿದ್ದನು. ಅವನನ್ನು ಕಂಡು ವಜ್ರದಾಡನೂ ಮದನವೇಗೆಯೂ ವಿಮಾನವನ್ನು ನಿಲ್ಲಿಸಿ ಬಹಳ ಹೊತ್ತು ನೋಡಿದರು. ಮದನವೇಗೆ ಹೀಗೆಂದಳು – “ನಾವು ಆಕಾಶದಲ್ಲಿ ಕಾಗೆಗಳ ಹಾಗೆ ಹಾರಾಡುವಷ್ಟಲ್ಲದೆ, ನಮಗೆ ಇವರಷ್ಟು ವೈಭವವವೂ ಐಶ್ವರ್ಯವೂ ಇದೆಯೆ ? ಸಂಪತ್ತಿನಲ್ಲಿ ಸೌಂದರ್ಯದಲ್ಲಿ ವೈಭವದಲ್ಲಿ ಹಲವಾರು ರೀತಿಯ ವಿನೋದಗಳಲ್ಲಿ ಉಪರಿಚರ ಮಹಾರಾಜನಿಂದ ಶ್ರೇಷ್ಠನು ಬೇರೆ ಯಾರೂ ಇಲ್ಲ. ಈ ಸಂಸಾರದಲ್ಲಿದ್ದು ಬದುಕಲು ತಕ್ಕುದಾದ ಬಾಳನ್ನು ಬದುಕಿದವನು ಈತನೆ* – ಹೀಗೆ ಅವಳು ಹೊಗಳಿದಳು. ಇದನ್ನು ವಜ್ರದಾಡನು ಕೇಳಿ, ಮನಸ್ಸಿನಲ್ಲಿ ಕೋಪ ಮತ್ಸರಗಳನ್ನು ತಾಳಿ ತನ್ನ ಪಟ್ಟಣಕ್ಕೆ ತೆರಳಿ, ಮದನವೇಗೆಯನ್ನು ಅಲ್ಲಿ ನಿಲ್ಲಿಸಿದನು. ತಾನೊಬ್ಬನೇ ವಿಮಾನದಲ್ಲಿ ಕುಳಿತನು. ತ್ವರೆಯಾಗಿ ಒಂದು, ಜಲಕ್ರೀಡೆಯನ್ನಾಡುತ್ತದ್ದ ಉಪರಿಚರ ಮಹಾರಾಜನ ಮೇಲೆ, ತನ್ನ ಮಾಯಾವಿದ್ಯೆಯನ್ನ ಪ್ರಯೋಗಿಸಿದನು. ದೊಡ್ಡದೊಂದು ಬಂಡೆಕಲ್ಲನ್ನು ಎತ್ತಿಕೊಂಡು ಬಂದು ರತ್ನದ ನೆಲಗಟ್ಟುಳ್ಳ ಸುದರ್ಶನವೆಂಬ ಕೊಳದ ಬಾಗಿಲುಗಳೆಲ್ಲವನ್ನೂ ಎಲ್ಲಿಯೂ ರಂಧ್ರವುಳಿಯದ ಹಾಗೆ ಮುಚ್ಚಿ ಕವಿಯುವಂತೆ ಇಟ್ಟುಹೋದನು. ಅವನು ಹೋಗಲು, ಪದ್ಮಾವತಿ ಮೊದಲಾಗಿರುವ ನಾಲ್ಕು ಮಂದಿ ಮಹಾರಾಣಿಯರು ಯಾವ ಆಸೆಯನ್ನೂ ಮನಸ್ಸಿನಲ್ಲಿಡದೆ ಸಮ್ಯಕ್ದೃಷ್ಟಿಯನ್ನು ಹೊಂದಿದವರಾಗಿ ಜೀವವಿರುವಷ್ಟು ಕಾಲವು ಭಕ್ತ, ಭೋಜ್ಯ, ಚೋಷ್ಯ, ಲೇಹ್ಯ – ಎಂಬ ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ನಿವೃತ್ತಿಯನ್ನು ಮಾಡಿ, ಐದು ವಿಧದ ನಮಸ್ಕಾರದ ಮಂತ್ರಗಳನ್ನು ಉಚ್ಚಾರಣೆ ಮಾಡುತ್ತ, ದೇವರನ್ನು ಧ್ಯಾನ ಮಾಡುತ್ತ, ಸಮ್ಯಗ್ದರ್ಶನ, ಸಮ್ಯಗ್ಜ್ಞಾನ, ಸಮ್ಯಗ್ ಚಾರಿತ್ರಗಳನ್ನು ಸರಿಯಾಗಿ ನಡೆಸಿ ದೇಹತ್ಯಾಗ

    ಸ್ವಸ್ತಿಕಾವರ್ತಮೆಂಬ ವಿಮಾನದೊಳೊಂದು ಸಾಗರೋಪ ಮಾಯುಷ್ಯಮನೊಡೆಯರ್ ಸಾಮಾನಿಕದೇವರಾಗಿ ನಾಲ್ವರುಂ ಪುಟ್ಟಿದರ್ ಮತ್ತುಪರಿಚರನಪ್ಪರಸಂ ಮಿಥ್ಯಾದೃಷ್ಟಿಯಪ್ಪುದಱಂ ತನ್ನುದ್ಯಾನವನದೊಳ್ ರಾಜ್ಯವಿಭೂತಿಯೊಳಾದಮಾನುಂ ಮೋಹಿಸಿದ ಬುದ್ಧಿಯನೊಡೆಯನಾರ್ತಧ್ಯಾನದಿಂ ಸತ್ತು ತನ್ನ ಮನೋಹರೋದ್ಯಾನವನದೊಳ್ ಪೆರ್ವಾವಾಗಿ ಪುಟ್ಟಿದಂ ಮತ್ತೆರಡನೆಯ ದಿವಸದಂದು ಸಾಮಂತ ಮಹಾಸಾಮಂತರ್ಕಳುಂ ಪರಿವಾರಮುಂ ನೆರೆದು ಅನಂತವೀರ್ಯನೆಂಬ ಷಿರಿಯ ಮಗಂಗೆ ರಾಜ್ಯಪ್ಪಟಂಗಟ್ಟಿದರ್ ಮೂಱನೆಯ ದಿವಸದಂದು ಸಾರಸ್ವತರೆಂಬಾಚಾರ್ಯರವಜ್ಞಾನಿಗಳಯ್ನೂರ್ವರ್ ಋಷಿಯರ್ವೆರಸು ಗ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಆ ಪೊೞಲ್ಗೆವಂದು ಮನೋಹರವೆಂಬ ನಂದನವನದೊಳಗಣ ಸಟಿಕಶಿಳಾತಳದ ಮೇಗಿರ್ದೊರಂ ಋಷಿನಿವೇದಕಂ ಕಂಡು ಬಂದನಂತವೀರ್ಯ ನೃಪತಿಗೆ ಪೇೞ್ದೊಡಾತನುಂ ಸಪರಿವಾರಂ ಭಟಾರರಲ್ಲಿಗೆ ವಂದನಾಭಕ್ತಿಗೆ ವೋಗಿ ಬಲಗೊಂಡು ಗುರುಭಕ್ತಿಗೆಯ್ದು ವಂದಿಸಿಯುೞದ ರಿಸಿಯರೆಲ್ಲರುಮಂ ಗುರುಪರಿವಿಡಿಯಿಂದಂ ವಂದಿಸಿ ಪಿರಿದು ಬೇಗಂ ಧರ್ಮಮಂ ಕೇಳ್ದು ಬೞಕಿಂತೆಂದು ಬೆಸಗೊಂಡಂ ಭಟಾರಾ ಎಮ್ಮ ತಂದೆಗಂ ತಾಯ್ವಿರ್ಕಳ್ಗಮಾಕಸ್ಮಿಕಮೊರ್ಮೊದಲನಿಬರ್ಗಮೇ ಕಾರಣಂ ಸಾವಾದುದಾರ್ ಕೊಂದರೆಂದು

    ಮಾಡಿದರು. ಅವರು ಸೌಧರ್ಮ ಎಂಬ ಸ್ವರ್ಗದಲ್ಲಿ ಏಳು ಉಪ್ಪರಿಗೆಗಳುಳ್ಳ ಅರಮನೆಯಲ್ಲಿ ಒಂದು ಸಾಗರಕ್ಕೆ ಸಮಾನವಾಗುವ ಆಯಷ್ಯವುಳ್ಳವರಾದ ಸಾಮನಿಕದೇವತೆಗಳಾಗಿ ಆ ನಾಲ್ವರೂ ಹುಟ್ಟಿದರು. ಅನಂತರ ಆ ಉಪರಿಚರ ರಾಜನು ಮಿಥ್ಯಾದೃಷ್ಟಿಯುಳ್ಳವನಾದುದರಿಂದ ತನ್ನ ಉದ್ಯಾನವನದಲ್ಲಿ ಹುಟ್ಟಬೇಕಾಯಿತು. ಅವನು ರಾಜ್ಯೈಶ್ವರ್ಯದಲ್ಲಿ ಅತ್ಯಂತ ಮೋಹಗೊಂಡ ಬುದ್ಧಿಯವನಾಗಿ ಆರ್ತಧ್ಯಾನದಿಂದ ಸತ್ತು ತನ್ನ ಮನೋಹರವಾದ ಉದ್ಯಾನವನದಲ್ಲಿ ಒಂದು ಹೆಬ್ಬಾವಾಗಿ ಜನಿಸಿದನು. ಆಮೇಲೆ ಎರಡನೆಯ ದಿವಸದಂದು ಸಾಮಂತರಾಜರೂ ಮಹಾಸಾಮಂತರೂ ಪರಿವಾರದವರೂ ಒಟ್ಟಾಗಿ ಉಪರಿಚರನ ಹಿರಿಯ ಮಗನಾದ ಅನಂತವೀರ್ಯನಿಗೆ ರಾಜ್ಯಪಟ್ಟವನ್ನು ಕಟ್ಟಿದರು. ಮೂರನೆಯ ದಿವಸದಂದು ಅವ ಜ್ಞಾನಿಗಳಾದ ಸಾರಸ್ವತರೆಂಬ ಆಚಾರ್ಯರು ಐನೂರು ಮಂದಿ ಋಷಿಗಳನ್ನು ಕೂಡಿಕೊಂಡು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಆ ಪಟ್ಟಣಕ್ಕೆ ಬಂದರು. ಅಲ್ಲಿ ಮನೋಹರ ಎಂಬ ಉದ್ಯಾನದೊಳಗಿರತಕ್ಕ ಚಂದ್ರಕಾಂತಶಿಲೆಯ ಮೇಲೆ ಕುಳಿತಿದ್ದರು. ಆ ಮೇಳೆಗೆ, ಋಷಿಗಳ ಆಗಮನವನ್ನು ವಿಜ್ಞಾಪಿಸತಕ್ಕ ಸೇವಕನು ಕಂಡು, ಅನಂತವೀರ್ಯನ ಬಳಿಗೆ ಬಂದು ತಿಳಿಸಿದನು. ಅನಂತವೀರ್ಯನು ಪರಿವಾರ ಸಹಿತನಾಗಿ ಋಷಿಗಳ ಬಳಿಗೆ ವಂದನಾಭಕ್ತಿಯನ್ನು ಸಲ್ಲಿಸುವುದಕ್ಕಾಗಿ ಹೋದನು. ಅವರಿಗೆ ಪ್ರದಕ್ಷಿಣೆ ಮಾಡಿ ಗುರುಭಕ್ತಿಯಿಂದ ನಮಸ್ಕರಿಸಿ, ಬಹಳ ಸಮಯದವರೆಗೆ ಧರ್ಮಶ್ರವಣವನ್ನು ಮಾಡಿದನಂತರ ಹೀಗೆ ಪ್ರಶ್ನಿಸಿದನು – “ಪೂಜ್ಯರೇ, ನನ್ನ ತಂದೆಗೂ ತಾಯಂದಿರಿಗೂ ಆಕಸ್ಮಾತ್ತಾಗಿ ಅವರೆಲ್ಲರಿಗೂ ಒಟ್ಟಿಗೇ ಮರಣವಾಗಲು ಕಾರಣವೇನು ? ಯಾರು ಕೊಂದರು ? ಎಂದು ಕೇಳಿದನು. ಆಗ ಸಾರಸ್ವತಾಚಾರ್ಯರು ಈ ರೀತಿಯಾಗಿ ಹೇಳಿದರು –

    ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ ಸುದರ್ಶನಮೆಂಬ ಬೊಡ್ಡಣ ಬಾವಿಯೊಳ್ ನಿಮ್ಮ ತಂದೆಯುಂ ನಾಲ್ವರ್ ತಾಯ್ವಿರ್ಕಳುಂ ಜಳಕ್ರೀಡೆಯನಾಡುತ್ತಿರ್ಪನ್ನೆಗಂ ಭೌಮವಿಹಾರಾರ್ಥಂ ವಿಮಾನಮನೇಱ ಪೋಗುತ್ತಿರ್ದ ವಜ್ರದಾಡನೆಂಬ ವಿದ್ಯಾಧರನುಮಾತನ ಮಹಾದೇವಿ ಮದನವೇಗೆಯೆಂಬೊಳಾಯಿರ್ವರುಂ ಕಂಡು ನಿಮ್ಮ ತಂದೆಯ ವಿಭವಮಂ ಮದನವೇಗೆ ಪೊಗೞ್ದೊಡೆ ವಜ್ರದಾಡಂ ಪುರುಡು ಪುಟ್ಟಿ ಬಾವಿಯ ಬಾಗಿಲಂ ನಿಶ್ಛಿದ್ರಮಾಗಿ ಮುಚ್ಛಿ ಮೇಗೆ ಪಿರಿದೊಂದು ಶಿಲೆಯನಿಕ್ಕಿ ಪೋದೊಡೀ ಪಾಂಗಿನೊಳವರ್ಗಳನಿಬರ್ಗಂ ಮೃತ್ಯುವಾದುದೆಂದು ಪೇೞ್ದೊಡೆ ಮತ್ತಮವರೆಲ್ಲಿ ಪುಟ್ಟಿದರೆಂದು ಬೆಸಗೊಂಡೊಡೆ ಭಟಾರರಿಂತೆಂದರ್ ನಿಮ್ಮ ತಾಯ್ವಿರ್ಕಳ್ ಬ್ರತಮಂ ಪರಿಪಾಲಿಸಿ ಸಾವ ಕಾಲದೊಳಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಸಮಾಮರಣದಿಂದಂ ಮುಡಿಪಿ ಸೌಧರ್ಮಕಲ್ಪದೊಳ್ ಸ್ವಸ್ತಿಕಾವರ್ತಮೆಂಬ ವಿಮಾನದೊಳೊಂದು ಸಾಗರೋಪಮಾಯುಷ್ಯ ಮನೊಡೆಯರ್ ಕಾಂತನುಂ ಸುಕಾಂತನುಂ ನಂದಣುಂ ಸುನಂದನುಮೆಂಬ ದೇವರ್ಕಳಾಗಿ ಪುಟ್ಟಿದವರ್ಗಳ್ ನಿಮ್ಮುಮಂ ನಿಮ್ಮ ತಂದೆಯುಮಂ ಪ್ರತಿಬೋಸಲ್ಕೀಗಳೆ ಬಂದಪ್ಪರೆಂದು ಪೇೞ್ದು ಮತ್ತೆ ನಿಮ್ಮ ತಂದೆಯುಂ ತನ್ನ ಪೆಂಡಿರ್ ಮಕ್ಕಳ್ ಪರಿವಾರಂ ಕಸವರಮೆಂದಿವಱೊಳ್ ಮೋಹಿಸಿದ ಬುದ್ಧಿಯನೊಡೆಯನಾಗಿ ಅಲ್ಲಿಯ ನಂದನವನದೊಳಗಣ ಸರ್ಪಾಶ್ರಯಮೆಂಬ ಗುಹೆಯೊಳ್ ಮಹಾಕಾಯಂ ಪೆರ್ವಾವಾಗಿ ಪುಟ್ಟಿದನೆಂದೊಡೆ ಧರ್ಮಮಂ ಕೈಕೊಳ್ಗುಮೊ ಕೈಕೊಳ್ಳನೊ ಎಂದು

    “ನಿಮ್ಮ ತಂದೆಯೂ ನಾಲ್ಕು ಮಂದಿ ತಾಯಿಯರೂ ‘ಸುದರ್ಶನ’ ಎಂಬ ಕೊಳದಲ್ಲಿ ನೀರಾಟವನ್ನು ಆಡುತ್ತಿದ್ದರು. ಆಗ ಭೂಮಿಯ ಸಂಚಾರಕ್ಕಾಗಿ ವಿಮಾನವನ್ನೇರಿ ಹೋಗುತ್ತಿದ್ದ ವಜ್ರದಾಡನೆಂಬ ವಿದ್ಯಾಧರನೂ ಅವನ ಮಹಾರಾಣಿ ಮದನವೇಗೆಯೂ ಇಬ್ಬರೂ ಕಂಡರು. ನಿಮ್ಮ ತಂದೆಯ ವೈಭವವನ್ನು ಮದನವೇಗೆ ಹೊಗಳಿದಳು. ಆಗ ವಜ್ರದಾಡನಿಗೆ ಅವರ ಮೇಲೆ ಅಸೂಯೆಯುಂಟಾಯಿತು. ಅವನು ಕೊಳದ ಬಾಗಿಲನ್ನು ರಂಧ್ರವುಳಿಯದಂತೆ ಮುಚ್ಚಿ, ಅದರ ಮೇಲೆ ದೊಡ್ಡದೊಂದು ಬಂಡೆಗಲ್ಲನ್ನು ಇಟ್ಟುಹೋದನು. ಈ ರೀತಿಯಾಗಿ ಅವವೆಲ್ಲರಿಗೂ ಮರಣವುಂಟಾಯಿತು. ಹೀಗೆ ಋಷಿಗಳು ಹೇಳಿದಾಗ ರಾಜನು “ಆ ಮೇಲೆ ಅವರೆಲ್ಲ ಎಲ್ಲಿ ಜನಿಸಿದರು?* ಎಂದು ಕೇಳಿದನು. ಆಗ ಋಷಿಗಳು ಹೀಗೆ ಹೇಳಿದರು – “ನಿಮ್ಮ ತಾಯಂದಿರು ಸಾಯುವ ಕಾಲದಲ್ಲಿ ವ್ರತವನ್ನು ಆಚರಿಸಿದ್ದಾರೆ. ಪ್ರಾಣವಿರುವರೆಗೂ ಆಹಾರಕ್ಕೂ ಲಕ್ಷ ಕೊಡದೆ ಇದ್ದರು. ಸಮಾಮರಣದಿಂದ ದೇಹತ್ಯಾಗ ಮಾಡಿದ್ದಾರೆ. ಆದುದರಿಂದ ಸೌಧರ್ಮವೆಂಬ ಸ್ವರ್ಗದಲ್ಲಿ ಒಂದು ಸಾಗರದಷ್ಟು ಪರಿಮಾಣವುಳ್ಳವರಾಗಿ ‘ಸ್ವಸ್ತಿಕಾವರ್ತ’ ಎಂಬ ಏಳುಪ್ಪರಿಗೆಯ ಅರಮನೆಯಲ್ಲಿ ಕಾಂತ, ಸುಕಾಂತ, ನಂದ, ಸುನಂದ – ಎಂಬ ದೇವತೆಗಳಾಗಿ ಹುಟ್ಟಿದ್ದಾರೆ. ಅವರು ಈಗ ತಾನೆ ನಿಮಗೂ ನಿಮ್ಮ ತಂದೆಗೂ ಎಚ್ಚರಿಕೆ ಹೇಳುವುದಕ್ಕಾಗಿ ಬರುತ್ತಾರೆ. ಅದಲ್ಲದೆ ನಿಮ್ಮ ತಂದೆ ತನ್ನ ಹೆಂಡಿರು, ಮಕ್ಕಳು, ಪರಿವಾರ, ಚಿನ್ನ (ಸಂಪತ್ತು) ಎಂಬೀ ವಿಷಯಗಳಲ್ಲಿ ಮೋಹಗೊಂಡ ಬುದ್ಧಿಯುಳ್ಳವನಾಗಿ ಅದೇ ಸ್ಥಳದ ನಂದನೋದ್ಯಾನದಲ್ಲಿರುವ ಸರ್ಪಾಶ್ರಯವೆಂಬ ಗುಹೆಯಲ್ಲಿ ದೊಡ್ಡದಾದ ದೇಹವುಳ್ಳ ಹೆಬ್ಬಾವಾಗಿ ಹುಟ್ಟಿದ್ದಾನೆ* – – ಎಂದು ಸಾರಸ್ವತಾಚಾರ್ಯರು ಹೇಳಿದರು. ಆಗ ಅನಂತವೀರ್ಯನು – “ಅವನು ಧರ್ಮವನ್ನು ಸ್ವೀಕರಿಸುವನೋ? ಸ್ವೀಕರಿಸನೊ?* ಎಂದು

    ಬೆಸಗೊಂಡೊಡೆ ಭಟಾರರಿಂತೆಂದರ್ ನೀನ್ ಪೇೞೆ ಧರ್ಮಮಂ ಕೈಕೊಳ್ಗುಮೆಂದೊಡೆ ತಮ್ಮಂದಿರುಂ ಪರಿವಾರಮುಂಗಬೆರಸು ಪೋಗಿ ಗುಹೆಯ ಬಾಗಿಲೊಳಿರ್ದಿಂತೆಂದನೆಲೆಯುಪರಿಚರ ಮಹಾರಾಜಾ ಪೆರ್ವಾವಾಗಿ ಪುಟ್ಟಿಯುಮಿಂತಪ್ಪವಸ್ಥೆಯೊಳಂ ಬಾೞ್ಕೆಯೊಳಂ ಇನ್ನುಂ ನಿನಗೞಯೆ ನೆನಗೆ ದೋಷ ಮಿಲ್ಲೇಕೆಂದೊಡೆ ಜೀವಂಗಳ ಸ್ವಭಾವಮಿಂತುಟು

    ಶ್ಲೋಕ || ಯತ್ರ ಯತ್ರೋಪಪದ್ಯಂತೇ ಜೀವಾಃ ಕರ್ಮವಶಾನುಗಾಃ

    ತತ್ರ ತತ್ರ ರತಿಂ ಯಾಂತಿ ಸ್ವೇನ ಸ್ವೇನೈವ ಕರ್ಮಣಾ

    ಎಂಬುದು ತಮ್ಮ ಕರ್ಮವಶದಿಂ ಸಂಸಾರಿ ಜೀವಂಗಳೆಲ್ಲ ಪುಟ್ಟುಗುಮಲ್ಲಿಯಲ್ಲಿಯೞಯುಂ ಮೆಚ್ಚುಗೆಯುಮಕ್ಕುಂ ಮುನ್ನೆ ನೀನ್ ಕರುಮಾಡದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತ ಮಹಾಸಾಮಂತ – ರ್ಕಳಿಂದಮಯ್ನೂರ್ವರರಸಿಯರ್ಕಳಿಂದಂ ಪೆಂಡವಾಸದಗ್ಗಳದ ಸೂಳೆಯರ್ಕಳಿಂದಂ ಪರಿವಾರದಿಂದಮಿಂತಪ್ಪ ದಿಬ್ಯಸಭೆಯಿಂದಂ ಪರಿವೇಷ್ಟಿತನಾಗಿ ಆಟಪಾಟ ವಿನೋದಂಗಳಿಂದಿರ್ಪಾತನಯ್ ಈಗಳ್ಪೆರ್ವಾವುಗಳೊಡನೆ ನೆರೆದಿರಮಾಯ್ತು ಮತ್ತೆ ದಿವ್ಯಮಪ್ಪ ಶಯ್ಯಾತಳದೊಳ್ ನಿದ್ರೆಗೆಯ್ವಾತನಯ್ ಈಗಳ್ ಪೆಟ್ಟೆಗಳುಂ ಕಿಱುಗಲ್ಗಳುಮೊತ್ತೆ ನಿದ್ರೆಗೆಯ್ವೆಯಾದಯ್ ಮತ್ತಮೃತೋಪಮಮಪ್ಪ ದಿಬ್ಯಾಹಾರ ಮನುಣ್ಬಾತನಯ್ ಈಗಳ್ ಕಪ್ಪೆಗಳುಮೆಸಡುಗಳುಮಿಲಿಗಳುಮೊಂತಿಗಳುಂ ಮೊದಲಾಗೊಡೆಯ ಜೀವರಾಶಿಗಳಂ ಕೊಂದು ತಿನ್ಬೆಯಾದಯ್ ಇನ್ನವಂ ತಿಂದು ನರಕಂಬುಗಲಾಟಿಸಿದಪ್ಪಯ್ ಎಂದು

    ಕೇಳಿದನು. “ನೀನು ಹೇಳಿದರೆ ಧರ್ಮವನ್ನು ಸ್ವೀಕರಿಸುವನು* ಎಂದು ಋಷಿಗಳು ಹೇಳಲು, ಅನಂತವೀರ್ಯನು ತನ್ನ ತಮ್ಮಂದಿರನ್ನೂ ಪರಿವಾರವನ್ನೂ ಕೂಡಿಕೊಂಡು ಹೋಗಿ ಗುಹೆಯ ಬಾಗಿಲಲ್ಲಿ ಇದ್ದುಕೊಂಡು ಹೀಗೆಂದನು – “ಎಲೈ ಉಪರಿಚರ ಮಹಾರಾಜನೇ, ಹೆಬ್ಬಾವಾಗಿ ಹುಟ್ಟಿ ಈ ರೀತಿಯ ಅವಸ್ಥೆಯಲ್ಲಿಯೂ ಜೀವನದಲ್ಲಿಯೂ ಇನ್ನೂ ನಿನಗೆ ಇಷ್ಟವೇ? ನಿನಗೆ ಏನೂ ದೋಷವಿಲ್ಲ. ಏಕೆಂದರೆ ಜೀವಗಳ ಸ್ವಭಾವವೇ ಈ ರೀತಿಯದು – (ಕರ್ಮಕ್ಕೆ ವಶರಾಗಿ ಹೋಗತಕ್ಕ ಜೀವರು ಎಲ್ಲೆಲ್ಲಿ ಹುಟ್ಟುವರೋ ಅಲ್ಲಲ್ಲೇ ತಮ್ಮತಮ್ಮ ಕರ್ಮಗಳಿಂದ ಆಸಕ್ತಿಯನ್ನು ಹೊಂದುತ್ತಾರೆ. ತಮ್ಮ ಕರ್ಮವಶದಿಂದ ಸಂಸಾರಿಜೀವಿಗಳು ಎಲ್ಲಿ ಜನಿಸುತ್ತಾರೋ ಅಲ್ಲಲ್ಲಿ ಅವರಿಗೆ ಪ್ರೀತಿಯೂ ಮೆಚ್ಚುಗೆಯೂ ಆಗುವುದು. ಹಿಂದೆ ನೀನು ಅರಮನೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡು ಸಾಮಂತ ಮಹಾ ಸಾಮಂತರಿಂದಲೂ ಐನೂರು ಮಂದಿ ರಾಣಿಯರಿಂದಲೂ ಅಂತಃಪುರದ ಶ್ರೇಷ್ಠರಾದ ಸ್ತ್ರೀಯರಿಂದಲೂ ಪರಿವಾರದವರಿಂದಲೂ ಇಂತಹ ದಿವ್ಯವಾದ ಸಭೆಯಿಂದಲೂ ಆವೃತನಾಗಿ ಆಟ – ಪಾಟ – ವಿನೋದಗಳಿಂದ ಇರತಕ್ಕವನಾಗಿದ್ದೆ. ಈಗ ಹೆಬ್ಬಾವುಗಳೊಡನೆ ಸೇರಿಕೊಂಡಿರುವ ಸ್ಥಿತಿ ಆಗಿಹೋಯಿತು ! ಅದಲ್ಲದೆ, ದಿವ್ಯವಾಗಿರುವ ಹಾಸಿಗೆಯ ಮೇಲೆ ನಿದ್ದೆಮಾಡುವವನಾಗಿದ್ದಿ ! ಈಗ ನೀನು ಮಣ್ಣಗಟ್ಟಿಗಳೂ ಸಣ್ಣ ಕಲ್ಲುಗಳೂ ದೇಹಕ್ಕೆ ಒತ್ತುತ್ತಿರುವಾಗ ನಿದ್ದೆಮಾಡುವುವನಾಗಿರುತ್ತಿ ! ಮಾತ್ರವಲ್ಲದೆ, ಅಮೃತಕ್ಕೆ ಸಮಾನವಾದ ದಿವ್ಯವಾಗಿರುವ ಆಹಾರವನ್ನು ಉಣ್ಣುತ್ತಿದ್ದವನಾಗಿದ್ದಿ, ಈಗ ಕಪ್ಪೆಗಳು, ಏಡಿ (ನಳಿ)ಗಳು, ಇಲಿಗಳು, ಓತಿಗಳು – ಮುಂತಾಗಿರತಕ್ಕ ಜೀವಿಗಳ ಸಮೂಹವನ್ನು ಕೊಂದು ತಿನ್ನುವವನಾಗಿದ್ದೀಯೆ! ಇಂತಹವನ್ನೆಲ್ಲ ತಿಂದು ನರಕಕ್ಕೆ ನುಗ್ಗಲು ಇಷ್ಟಪಡುತ್ತೀಯಾ? ಎಂದು ಹೇಳಲು ಆ ಹೆಬ್ಬಾವಿಗೆ ಜನ್ಮದ ನೆನಪು ಬಂತು. ಅದು

    ಪೇೞೆ ಜಾತಿಸ್ಮರನಾಗಿ ಗುಹೆಯ ಬಾಗಿಲೊಳ್ ಬಂದಿರ್ದು ಧರ್ಮಮಂ ಕೇಳುತ್ತಿರ್ಪನ್ನೆಗಮಾ ಸೌಧರ್ಮಕಲ್ಪದೊಳ್ ಪುಟ್ಟಿರ್ದ ನಾಲ್ವರುಂ ದೇವರ್ಕಳ್ ತಮ್ಮ ಮುನ್ನಿನ ಪೆಣ್ಣ ರೂಪಂಗಳಂ ಕೈಕೊಂಡು ಬಂದು ಮುಂದೆ ನಿಂದಾಗಳ್ ಮಕ್ಕಳ್ ತಮ್ಮ ತಾಯ್ವಿರ್ಕಳ್ಗೆ ಕ್ಷೇಮಂಗುಡಲೆಂದು ಪೋದೊಡನ್ನೆಗಂ ಅವರ್ ಮುಟ್ಟದೆ ಮೇಗಣ್ಗೆ ನೆಗೆದಿರ್ದೊಡಿದೇನೆಂದ ಬೆಸಗೊಂಡೊಡವರ್ ವಜ್ರದಾಡಂ ಕೊಲೆ ಸತ್ತು ತಮ್ಮ ದೇವಗತಿಯೊಳ್ ಪುಟ್ಟಿದ ತೆಱನೆಲ್ಲಮಂ ಪೇೞ್ದು ಉಪರಿಚರ ಮಹಾನೃಪತಿಯಂ

    ವೃತ ||ಏತತ್ಕ್ಷೇತ್ರಂ ಮದೀಯಂ ಗೃಹಮಿದಮಪರಂ ಮಾತೃಭಾರ್ಯಾಮಮೈತಾಃ
    ಪುತ್ರೋಮೇಯಂ ಸುಕಾಂತ ಸ್ವಸೃ ದುಹಿತೃಜನೋ ಮಾನುಷೋ ಬಂಧುವರ್ಗಃ
    ಅಶ್ವಾದಾಸಾ ಮನುಷ್ಯಾ ಮಮ ಪರಮಹಿತಾ ದ್ರವ್ಯಗಾವೋ ಮಹಿಷ್ಯಃ
    ಇತ್ಯೇವಂ ಮೇ ಬ್ರುವಾಣೋ ನರಪಶುರನಿಶಂ ನಾಶಯತ್ಯಾತ್ಮಕಾರ್ಯಂ

    ಆರ್ಯೆ || ಅರ್ಥೋ ಮೇ ಭಾರ್ಯಾ ಮೇ ಪುತ್ರೋ ಮೇ ಸ್ವಜನಬಂಧುವರ್ಗೋ ಮೇ
    ಇತಿಮೇ ಮೇ ಕುರ್ವಾಣಂ ಪುರುಷಂ ಪಶುಂ ಹಂತಿ ಕಾಲವೃಕಃ

    ಎಂದಿವರರ್ಥಮನಿಂತೆಂದು ಪೇೞ್ದೊಡೆ ಎನ್ನ ಮಾಡಮೆನ್ನ ಪೊೞಲೆನ್ನ ನಾಡೆನ್ನ ತಾಯೆನ್ನ ಪೆಂಡಿರೆನ್ನ ಮಕ್ಕಳೆನ್ನ ತಂಗೆವಿರೆನ್ನ ಮಾವಂದಿರೆನ್ನ ಮಾವಂದಿರೆನ್ನ ಬಂಧುವರ್ಗಮೆನ್ನಾನೆಗಳೆನ್ನ ಕುದುರೆಗಳೆನ್ನಮ್ಮೆಗಳೆನ್ನ ಪಶುಗಳೆನ್ನ

    ಗುಹೆಯ ಬಾಗಿಲಿಗೆ ಬಂದು, ಅಲ್ಲಿದ್ದುಕೊಂಡು ಧರ್ಮವನ್ನು ಕೇಳುತ್ತಿದ್ದಿತು. ಅಷ್ಟರಲ್ಲಿ ಸೌಧರ್ಮವೆಂಬ ಸ್ವರ್ಗದಲ್ಲಿ ಹುಟ್ಟಿದ್ದ ನಾಲ್ಕು ಮಂದಿ ದೇವತೆಗಳು ತಮ್ಮ ಹಿಂದಿನ ಸ್ತ್ರೀರೂಪಗಳನ್ನು ಧರಿಸಿದೊಂಡು ಬಂದು ಎದುರಿಗೆ ನಿಂತರು. ಆಗ ಮಕ್ಕಳು ತಮ್ಮ ತಾಯಂದಿರಿರಿಗೆ ಕ್ಷೇಮವನ್ನು ಸಲ್ಲಿಸುವುದಕ್ಕೆಂದು ಅವರ ಸಮೀಪಕ್ಕೆ ಹೋದರು. ಆದರೆ, ಮುಟ್ಟದೆಯೆ ಆಕಾಶದ ಕಡೆಗೆ ಏರಿದರು. ಇದೇಕೆ ಹೀಗೆ? – ಎಂದು ಕೇಳಿದಾಗ ಅವರು ವಜ್ರದಾಡನು ತಮ್ಮನ್ನು ಕೊಂದುದರಿಂದ ಸತ್ತು ತಾವೆಲ್ಲರೂ ದೇವತೆಗಳಾಗಿ ಹುಟ್ಟಿದ ವೃತ್ತಾಂತವನ್ನೆಲ್ಲ ಹೇಳಿದರು. ಆಮೇಲೆ ಉಪರಿಚರ ಮಹಾರಾಜನೊಡನೆ ಹೀಗೆಂದರು – ಈ (ನೆಲ ನನ್ನದು. ಈ ಮನೆ ಬೇರೆಯವರದಲ್ಲ (ನನ್ನದೇ). ಈ ತಾಯಿ, ಹೆಂಡಿರು ನನ್ನವರು. ಈ ಮಗನು, ಈ ಸುಂದರಿಯರಾದ ಸೊಸೆಯರು, ಹೆಣ್ಣುಮಕ್ಕಳು, ಮನುಷ್ಯರು ನಂಟರ ಸಮುದಾಯ ನನ್ನವು – ಹೀಗೆ ನನ್ನವೆಂದು ಹೇಳಿಕೊಳ್ಳುವ ಮನುಷ್ಯರೂಪದ ಪ್ರಾಣಿ ಯಾವಾಗಲೂ ಆತ್ಮೋನ್ನತಿಯ ಕಾರ್ಯವನ್ನು ಕೆಡಿಸಿಕೊಳ್ಳುತ್ತಾನೆ.) ಐಶ್ವರ್ಯವು ನನಗೆ, ಹೆಂಡತಿ ನನಗೆ, ಮಗನೂ ನನಗೆ, ಸ್ವಜನರು ಬಂಧುವರ್ಗದವರು ನನಗೆ. ಈ ರೀತಿಯಾಗಿ ನನಗೆ ನನಗೆ (ಮೇ ಮೇ) ಎಂದು ಮಾಡಿಕೊಳ್ಳತಕ್ಕ ನರಜಂತುವನ್ನು (ಮನುಷ್ಯನೆಂಬ ಆಡನ್ನು) ಯಮನೆಂಬ ತೋಳನು ಕೊಲ್ಲುತ್ತದೆ.) ಹೀಗೆಂದು ಈ ಪದ್ಯಗಳ ಅರ್ಥವನ್ನು ಹೇಳಿದರು – “ನನ್ನ ಮನೆ, ನನ್ನ ಪಟ್ಟಣ, ನನ್ನ ನಾಡು, ನನ್ನ ತಾಯಿ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ತಂಗಿಯರು, ನನ್ನ ಮಾವಂದಿರು, ಬಂಧುವರ್ಗ, ಆನೆಗಳು, ಕುದುರೆಗಳು, ನನ್ನ ಎಮ್ಮೆಗಳು ಹಸುಗಳು, ನನ್ನ ಪರಿವಾರ, ನನ್ನ ಸೇವಕರು, ನನ್ನ

    ಪರಿವಾರಮೆನ್ನ ತೊೞರೆನ್ನ ಮಾಣಿಕಭಂಡಾರಂ ಸುವರ್ಣಭಂಡಾರಂ ಪಟ್ಟಿಸಭಂಡಾರಮೆಂದಿವಱೊಳ್ ಮೋಹಿಸಿದ ಬುದ್ಧಿಯನೊಡೆಯನಾಗಿಯಾರ್ತಧ್ಯಾನದಿಂ ಸತ್ತು ಪೆರ್ವಾವಾಗಿ ಪುಟ್ಟಿರ್ದೊಡೀಗಳಾಮುಂ ಪೆಂಡಿರಾಗಿಯುಮಿನಿವಿರಿದು ಶ್ರೀಯುಂ ವಿಭವಮುಮನೆಯ್ದಿದೆಮೆಂದು ಪೇೞ್ದುಂ ತಮ್ಮ ದೇವತ್ವಮಂ ತೋಱಲ್ವೇಡಿ ಆಕಾಶಮೆಲ್ಲಂ ಚಿತ್ರಪಟಂಗೆದಱದಂತೆ ವಿಮಾನಂಗಳಿಂ ಸಂಛನ್ನಮಾಗಿ ವ್ಯಾಪಿಸೆ ಪರಿವಾರ ದೇವಿಯರ್ಕಳಿಂದಂ ದೇವರ್ಕಳಿಂದಂ ಗಣಿಕೆಯರ್ಕಳಿಂದಮಪ್ಸರೆಯರ್ಕಳಿಂದಂ ಪರಿವೇಷ್ಟಿತರಾಗಿ ನಾಲ್ವರುಂ ದೇವರ್ಕಳ್ ಘಂಟಾಜಾಳ ಮುಕ್ತಾಜಾಳ ಸಮನ್ವಿತಮಪ್ಪ ರತ್ನಮಯಮಾಗುತ್ತಿರ್ದ ವಿಚಿತ್ರಮಪ್ಪ ವಿಮಾನಂಗಳನೇಱ ದೇವಿಯರ್ಕಳ್ ಚಾಮರಮಿಕ್ಕೆಯಾಟಪಾಟವಿನೋದಂಗಳಿಂದಿಂತು ತಮ್ಮೈಶ್ವರ್ಯಮೆಲ್ಲಮಂ ತೋಱ ಇಂತೆಂದರ್ ಇದೆಲ್ಲಮೆಮಗೆ ಜೆನಧರ್ಮದ ಪರಮಸತ್ವದ ಪ್ರಸಾದದಿನಾದುದು ಮತ್ತುಪರಿಚರಮಹಾರಾಜಂ ಪುರುಷನಾಗಿಯುಂ ಮಹಾಸತ್ವಮ ನೊಡೆಯನಾಗಿಯುಂ ಮಿಥ್ಯಾತ್ವಂ ಕಾರಣಮಾಗಿಯಾರ್ತಧ್ಯಾನದಿಂ ಸತ್ತು ಪೆರ್ವಾವಾಗಿ ಪುಟ್ಟಿದನೆಂದು ಪೇೞ್ದು ಮಕ್ಕಳಂ ಪೆರ್ವಾವುಮಂ ಪ್ರತಿಬೋಸಿ ತಮ್ಮ ಸ್ವರ್ಗಲೋಕಕ್ಕೆ ವೋದರ್ ಮತ್ತೆ ಪೆರ್ವಾವೆನ್ನರಸಿಯರ್ಕಳ್ ದೇವರಾಗಿ ಪುಟ್ಟಿದರೆಂದಾದಮಾನುಂ ಸಂತೋಷಂಬಟ್ಟು ಪರಿಣಾಮದೊಳ್ ಕೂಡಿರ್ದುದಂ ಸಾರಸ್ವತಭಟಾರರಱದು ಋಷಿಸಮುದಾಯಂಬೆರಸು ಪೆರ್ವಾವಿರ್ದೆಡೆಗೆ ಪೋಗಿ ಇಂತೆಂದು ಧರ್ಮಮಂ ಪೇೞ್ದಪರ್

    ಮಾಣಿಕ್ಯ ಭಂಡಾರ, ಹೊನ್ನ ಭಂಡಾರ, ರೇಷ್ಮೆವಸ್ತ್ರಭಂಡಾರ – ಎಂದು ಇವುಗಳಲ್ಲಿ ಮೋಹಗೊಂಡು ಬುದ್ಧಿಯುಳ್ಳವನಾಗಿ ಆರ್ತ ಧ್ಯಾನದಿಂದ ಸತ್ತು ಹೆಬ್ಬಾವಾಗಿ ನೀನು ಹುಟ್ಟಿರುವಿ. ನಾವು ಹೆಂಡಿರಾಗಿಯೂ ಇಷ್ಟೊಂದು ಹೆಚ್ಚಿನ ಐಶ್ವರ್ಯ ವೈಭವವನ್ನು ಹೊಂದಿದೆವು* ಎಂದು ಹೇಳಿ, ತಮ್ಮ ದೇವತ್ವವನ್ನು ಪ್ರದರ್ಶಿಸಿಬೇಕೆಂಬ ಉದ್ದೇಶದಿಂದ ಆಕಾಶವನ್ನೆಲ್ಲ ಚಿತ್ರಪಟಗಳನ್ನು ಕೆದರಿದಂತೆ ವಿಮಾನಗಳಿಂದ ಮುಚ್ಚಿ ಆವರಿಸಿದರು. ಪರಿವಾರದೇವಿಯರಿಂದಲೂ ದೇವತೆಗಳಿಂದಲೂ ವೇಶ್ಯೆಯರಿಂದಲೂ ದೇವತಾಸ್ತ್ರೀಯರಿಂದಲೂ ಆವೃತರಾಗಿ ಆ ನಾಲ್ಕು ಮಂದಿ ದೇವತೆಗಳು ಗಂಟೆಗಲ ಮತ್ತು ಮುತ್ತುಗಳ ಸಮೂಹದಿಂದ ಕೂಡಿ ರತ್ನಮಯವಾಗಿದ್ದ ಆಶ್ಚರ್ಯಕರವಾದ ವಿಮಾನಗಳನ್ನೇರಿದರು. ದೇವಿಯರು ಚಾಮರವನ್ನು ಬೀಸುತ್ತಿರಲು ಆಟ ಪಾಟ ವಿನೋದಗಳಿಂದ ತಮ್ಮ ಐಶ್ವರ್ಯವನ್ನೆಲ್ಲ ತೋರಿಸಿ ಹೀಗೆಂದರು – “ನಮಗೆ ಇವೆಲ್ಲವೂ ಜೈನಧರ್ಮದ ಪರಮಸತ್ವದ ಅನುಗ್ರಹದಿಂದ ಆಗಿವೆ. ಉಪರಿಚರ ಮಹಾರಾಜನು ಗಂಡುಸಾಗಿಯೂ ಮಹಾ ಸತ್ವವುಳ್ಳವನಾಗಿಯೂ ಮಿಥಾತ್ವದಿಂದ ಆರ್ತಧ್ಯಾನದಿಂದ ಸತ್ತು ಹೆಬ್ಬಾವಾಗಿ ಹುಟ್ಟಿದನು.* ಹೀಗೆ ಹೇಳಿ, ಮಕ್ಕಳನ್ನೂ ಹೆಬ್ಬಾವನ್ನೂ ಬೋಧನೆ ಮಾಡಿ ತಮ್ಮ ಸ್ವರ್ಗಲೋಕಕ್ಕೆ ಹೋದರು. ಆನಂತರ, ಆ ಹೆಬ್ಬಾವು ನನ್ನ ಹೆಂಡಿರು ದೇವತೆಗಳಾಗಿ ಹುಟ್ಟಿದರೆಂದು ಅತ್ಯಂತ ಸಂತೋಷಪಟ್ಟು ಧರ್ಮದ ಪರಿಣಾಮವನ್ನು ಹೊಂದಿದೆಯೆಂಬುದನ್ನು ಸಾರಸ್ವತ ಋಷಿಗಳು ತಿಳಿದು ಋಷಿಗಳ ಸಮೂಹವನ್ನೂ ಕೂಡಿಕೊಂಡು ಆ ಹೆಬ್ಬಾವಿದ್ದಲ್ಲಿಗೆ ಹೋಗಿ, ಈ ರೀತಿಯಾಗಿ ಧರ್ಮೋಪದೇಶವನ್ನು

    ಗಾಹೆ || ಸೋ ಧಮ್ಮೋ ಜತ್ಥ ದಯಾ ಸೋವಿ ತಓ ವಿಸಯಣಿಗ್ಗಹೋ ಜತ್ಥ
    ದಸ ಅಟ್ಠದೋಸರಹಿಓ ಸೋ ದೇವೋ ಣತ್ಥಿ ಸಂದೇಹೋಮತ್ತಂ

    ವೃತ್ತ || ಯತ್ನೇನ ಪಾಪಾನಿ ಸಮಾಚರಂತಿ
    ಧರ್ಮಂ ಪ್ರಸಂಗಾದಪಿ ನಾಚರಂತಿ
    ಆಶ್ಚರ್ಯಮೇತದ್ಧಿ ಮನುಷ್ಯಲೋಕೇ
    ಕ್ಷೀರಂ ಪರಿತ್ಯಜ್ಯ ವಿಷಂ ಪಿಬಂತಿ
    ಸಮಾಗಮಾಃ ಸ್ವಾವಸಮಾಹಿ ಸರ್ವೇ
    ವಿಭೂತಯೋಪಿ ಪ್ರತಿಭಂಗುರಾಃ ಸ್ಯುಃ
    ಧರ್ಮೋ – ರ್ಹತಾಮೇವ ಸುಶಾಶ್ವತೋ – ಯ
    ಮಿತಿ ಪ್ರಜಂತ್ಯಾತ್ಮರತಿರ್ಬಭೂವ
    ನಿಶ್ಚಯಮುದಿತಸ್ಯ ರವೇಃ
    ಪತನಂ ಜಾತಸ್ಯ ಮರಣಮಪಿ ಸರ್ವಸ್ಯ
    ತಸ್ಮಾದ್ವಿದುಷಾ ಭಾವ್ಯಂ
    ಸದೈವ ಜಾತೇನ ಧರ್ಮಕರ್ಮರತೇನ

    ಮಾಡಿದರು – ಎಲ್ಲಿ ದಯೆ ಇದೆಯೋ ಅದು ಧರ್ಮವು ಮತ್ತು ಎಲ್ಲಿ ಇಂದ್ರಿಯ ನಿಗ್ರಹವಿದೆಯೋ ಅದು ಕೂಡ ಧರ್ಮವು. ಹದಿನೆಂಟು ದೋಷಗಳಿಲ್ಲದವನೇ ದೇವನು. ಇದರಲ್ಲಿ ಸಂದೇಹವಿಲ್ಲ. ಅದವಲ್ಲದೆ, ಪ್ರಯತ್ನದಿಂದ ಪಾಪಗಳನ್ನು ಮಾಡುತ್ತಾರೆ. ಂಚಿದರ್ಭವಶದಿಂದಾದರೂ ಧರ್ಮವನ್ನು ಮಾಡುವುದಿಲ್ಲ. ಇದು ಮಾನವಲೋಕದಲ್ಲಿ ಆಶ್ವರ್ಯವಲ್ಲವೆ ? ಹಾಲನ್ನು ಬಿಟ್ಟು ವಿಷವನ್ನು ಕುಡಿಯುತ್ತಾರೆ. ಎಲ್ಲಾ ಒಡನಾಟಗಳು ತನ್ನ ವಶದಲ್ಲಿ ಇಲ್ಲವಷ್ಟೆ ? ಐಶ್ವರ್ಯಗಳು ಕೂಡ ಅಲ್ಪಕಾಲದಲ್ಲಿಯೇ ನಾಶವಾಗುವುವಲ್ಲವೆ? ಅರ್ಹಂತರು ಉಪದೇಶಿಸಿರುವ ಈ ಜಿನಧರ್ಮವೇ ಅತ್ಯಂತ ಶಾಶ್ವತವಾದುದು – ಹೀಗೆಂದು ವಿಶೇಷವಾಗಿ ಚಿಂತಿಸಿಕೊಂಡರೆ ಆತ್ಮನಲ್ಲಿ ಆಸಕ್ತಿ ಹುಟ್ಟೀತು. ಉದಯಿಸಿದ ಸೂರ್ಯನು ಮುಳುಗುವುದು ನಿಶ್ಚಯ. ಹುಟ್ಟಿಬಂದಿರುವ ಎಲ್ಲಕ್ಕೂ ಸಾವು ಕೂಡ ನಿಶ್ಚಯ. ಆದುದರಿಂದ ಹುಟ್ಟಿಬಂದವನೂ ಧರ್ಮಕರ್ಮದಲ್ಲಿ ಆಸಕ್ತಿಯುಳ್ಳವನೂ ಆದ ವಿದ್ವಾಂಸನು ಇದನ್ನು ಭಾವಿಸಬೇಕಾದುದು ಅವಶ್ಯವಾಗಿದೆ. ಯೌವನ, ಶಕ್ತಿ, ವೈಭವ, ರೂಪ, ಸೌಭಾಗ್ಯಗಳು ಹೂ ಹಣ್ಣುಗಳ ಭಾರವುಳ್ಳ ಮರದಂತೆ. ಎಲ್ಲರ ಬದುಕೂ ಬೆಟ್ಟದ ಝರಿಯ ನೀರಿನಂತೆ ಬೇಗ ಓಡುತ್ತದೆ. ಜೀವನು ಒಬ್ಬನಾಗಿಯೇ ಸಾಯುತ್ತಾನೆ. ಒಬ್ಬನೇ ಹುಟ್ಟುತ್ತಾನೆ. ಜೀವಿಗಳ ಜನ್ಮ ಜನ್ಮಗಳಲ್ಲಿ ಬೇರೆ ಬೇರೆಯಾದವರು ಯಾರ ತಾಯಿಯೋ ಯಾರ ತಂದೆಯೋ ಯಾರ ಹೆಂಡತಿಯೋ ಮತ್ತೆ ಯಾರ ಮಗನೋ ಆಗುವರಲ್ಲವೇ ? ದ್ರವ್ಯಗಳು ಮನೆಗಳಲ್ಲಿ ನಿಲ್ಲುತ್ತವೆ. ಬಂಧುಗಳು ಮಸಣದವರೆಗೆ ಬಂದು ನಿಲ್ಲುತ್ತಾರೆ. ದೇಹವು ಬೆಂಕಿಯ ಮಾಲೆಯಲ್ಲಿ ನಿಲ್ಲುತ್ತದೆ. ಪುಣ್ಯವೂ ಪಾಪವೂ ಮಾತ್ರ ಜೊತೆಯಲ್ಲಿ

ಪುಷ್ಪ ಫಲಭಾರಾ ತರುವದ್ಯೌವನ ಬಲವಿಭವರೂಪ ಸೌಭಾಗ್ಯಾನಿ
ಗಿರಿಸರಿದಂಭಃ ಪ್ರತಿಮಂ ಸರ್ವೇಷಾಂ ಜೀವಿತಂ ಚ ಧಾವತಿ ಶೀಘ್ರಮ್

ಗಾಹೆ || ಏಗೋ ಯ ಮರದಿ ಜೀವೋ ಏಗೋ ಯ ದಿವಂ ಉವವಜ್ಜ ಇ
ಏಗೋ ಸ ಜಾ ಇ ಮರಣಂ ಏಗೋ ಸಜ್ಜಾ ಇ ಣಿರಯಂ ವಾ

ಶ್ಲೋಕ|| ಕಸ್ಯ ಮಾತಾ ಪಿತಾ ಕಸ್ಯ ಕಸ್ಯ ಭಾರ್ಯಾ ಸುತೋಪಿ ವಾ
ಜಾತೌ ಜಾತೌ ಹಿ ಜೀವಾನಾಂ ಭವಿಷ್ಯಂತಿ ಪರೇ ಪರೇ
ಅರ್ಥಾ ಗೃಹೇಷು ತಿಷ್ಠಂತಿ ಶ್ಮಶಾನೇಷು ಚ ಬಾಂಧವಾಃ
ಶರೀರ ಜ್ವಾಲಾಮಾಲಾಯಾಂ ಸುಕೃತಂ ದುಷ್ಕೃತಂ ವ್ರಜೇತ್

    ಎಂದಿಂತು ಪಿರಿದು ಬೇಗಂ ಧರ್ಮಮಂ ಪೇೞ್ದು ಶ್ರಾವಕಬ್ರತಂಗಳನೇಱಸಿ ಮತ್ತಮಿಂತೆಂದರ್ ನಿನಗಾಯುಷ್ಯಂ ಪದಿನಯ್ದು ದಿವಸಮೆಂದು ಪೇೞ್ದೋಡಾ ಮಾತಂ ಕೇಳ್ದು ಆಹಾರ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ಸಂನ್ಯಸನಂಗೆಯ್ದಿರ್ದೊಡದಂ ಭಟಾರರಱದನಂತವೀರ್ಯಂಗೆ ಪೇೞ್ದರಿದು ಸಂನ್ಯಸನಂಗೆಯ್ದಿರ್ದುದಿದರ್ಕೆ ಪೂಜೆಯಂ ಮಾಡಿಮೆನೆ ಆತನುಂ ಪಿರಿಯ ಪಂದರಂ ಮಾಡಿಸಿಯಲ್ಲಿ ನಾನಾಪ್ರಕಾರದ ನೇತ್ರ ಪೞಯುಲ್ಲವಂಗಳುಮಂ ಧ್ವಜಂಗಳುಮಂ ಕಟ್ಟಿಸಿ ದೇವತಾಪ್ರತಿಮೆಯಂ

    ಬರುತ್ತವೆ. ಈ ರೀತಿಯಾಗಿ ಬಹಳ ಬೇಗನೆ ಸಾರಸ್ವತ ಋಷಿಗಳು ಧರ್ಮೋಪದೇಶ ಮಾಡಿ, ಶ್ರಾವಕಗಳನ್ನು ಸ್ವೀಕಾರಮಾಡಿಸಿ – “ನಿನಗೆ ಹದಿನೈದು ದಿವಸಗಳ ಆಯುಷ್ಯವಿದೆ ಎಂದರು. ಆ ಮಾತನ್ನು ಕೇಳಿ ಹೆಬ್ಬಾವು ಜೀವಿಸಿರುವವರೆಗೂ ಆಹಾರವನ್ನು ಬಿಟ್ಟು ಸಂನ್ಯಾಸವನ್ನು ಕೈಗೊಂಡಿತು. ಇದನ್ನು ಋಷಿಗಳು ತಿಳಿದು ಅನಂತವೀರ್ಯನೊಡನೆ – “ಇದು ಸಂನ್ಯಾಸವನ್ನು ಮಾಡಿಕೊಂಡಿದೆ. ಇದಕ್ಕೆ ನೀವು ಪೂಜೆ ಮಾಡಿ* ಎಂದು ಹೇಳಿದರು. ಅದರಂತೆ ಅನಂತವೀರ್ಯನು ದೊಡ್ಡದೊಂದು ಚಪ್ಪರವನ್ನು ಮಾಡಿಸಿದರು. ಅಲ್ಲಿ ಹಲವಾರು ವಿಧವಾದ ನೇತ್ರವೆಂಬ ಹೆಸರುಳ್ಳ ರೇಷ್ಮೆವಸ್ತ್ರದ ಮೇಲ್ಕಟ್ಟುಗಳನ್ನೂ ಪತಾಕೆಗಳನ್ನೂ ಕಟ್ಟಿಸಿದನು. ಅಲ್ಲಿ ದೇವತಾಪ್ರತಿಮೆಯನ್ನು ಇಟ್ಟು ಅಭೀಷೇಕವನ್ನು ಮಾಡುತ್ತ ಮೂರು ಹೊತ್ತೂ ಮಹಾಮಹಿಮೆಯನ್ನೂ ಪೂಜೆಗಳನ್ನೂ ನಡೆಸುತ್ತ ನಮಸ್ಕಾರಗಳನ್ನು ಮಾಡಿಸುತ್ತ ಇರಲು, ಋಷಿಗಳು ಆರಾಧನಾ ಎಂಬ ಗ್ರಂಥವನ್ನು ಪೂಜೆಮಾಡಿ ವ್ಯಾಖ್ಯಾನವನ್ನು ಮಾಡತೊಡಗಿದರು – ಪ್ರಾಣವು ಗಂಟಲಿಗೆ ಬಂದಾಗ ಕೂಡ ಯಾವನು ಸಂನ್ಯಾಸದಲ್ಲಿ ಮನಸ್ಸುಳ್ಳವನಾಗಿರುವನೋ ಅವನು ಹಿಂದಿರುಗಿ ಬರುವುದೆಂಬುದು ಎಲ್ಲದ ಮೋಕ್ಷವೆಂಬ ಮನೆಗೆ ಹೋಗುತ್ತಾನೆ. ಈ ಜನ್ಮದಲ್ಲಿ ಮಾಡಿದ ಪಾಪವು, ಹಿಂದೆ ಮಾಡಿದ ಪಾಪವು ಯಾವುದೋ ಅದೆಲ್ಲ ಅಗ್ನಿಯಿಂದ ಸೌದೆ ಹೇಗೋ ಹಾಗೆ, ಸಂನ್ಯಾಸದಿಂದ ಸುಟ್ಟುಹೋಗುತ್ತದೆ. ಹೃದಯದಲ್ಲಿಯೂ ಹಣೆಯಲ್ಲಿಯೂ (ಹುಬ್ಬುಗಳ ನಡುವೆಯೂ), ಆತ್ಮವನ್ನೂ ಕೈಯನ್ನೂ ಒಂದು ಮುಹೂರ್ತಕಾಲವಾದರೂ ಇಟ್ಟುಕೊಂಡು ಸಮತ್ವದಿಂದ ನಿಂತಿರುವವನ ಅಜ್ಞಾನತೆಯಿಂದಾಗಿ ಮಾಡಲ್ಪಟ್ಟು ಪುಣ್ಯರೂಪವಾದ ಕರ್ಮಗಳ ಭಾರವು ಸಂನ್ಯಾಸದಿಂದ ಒಳ್ಳೆಯ ವಿನಾಶವನ್ನು ಹೊಂದುತ್ತದೆ. ಊರ್ಧ್ವಲೋಕ(ಸ್ವರ್ಗ)ದಲ್ಲಿ,

    ನಿಱಸಿಯಭಿಷೇಕಂಗೆಯ್ಯುತ್ತಂ ಮೂಱು ಪೋೞ್ತುಂ ಮಹಾಮಹಿಮೆಯಂ ಪೂಜೆಗಳುಮಂ ಪೊಡೆಮಡಿಸುತ್ತಿರೆಭಟಾರರು ಮಾರಾಧನೆಯನರ್ಚಿಸಿ ಸ್ವಾಧ್ಯಾಯಂಗೊಂಡಿತೆಂದಾರಾಧನೆಯಂ ವಕ್ಖಾಣಿಸಲ್ ತಗುಳ್ದರ್

    ಶ್ಲೋಕ || ಸಂನ್ಯಸನೇಸ್ತಿ *ಮತಿರ್ಯೋ?* ಪಾಣೈಃ ಕಂಠಗತೈರಪಿ
    ಸಗಚ್ಛೇನ್ಮೋಕ್ಷಸದನಂ ಪುನರಾಗಮವರ್ಜಿತಮ್
    ಇಹ ಜನ್ಮಕೃತಂ ಪಾಪಂ ಯಚ್ಚ ಪಾಪಂ ಪುರಾಕೃತಂ
    ಸಂನ್ಯಸನೇನ ತತ್ಸರ್ವಂ ದಹತ್ಯಗ್ನಿರಿವೇಂಧನಂ
    ಅಜ್ಞಾನಾಭಾವಾತ್ ಕೃತ ಕರ್ಮಭಾರಃ
    ಸಂನ್ಯಾಸನಾತ್ ಸತ್ಪ್ರಲಯಂ ಪ್ರಯಾತಿ
    ಮುಹೂರ್ತ ಕಾಲೇ ಹೃದಯೇ ಲಲಾಟೇ
    ಜೀವಂ ಕರಂ ನ್ಯಸ್ಯ ಸಮಸ್ಥಿತಸ್ಯ

     ಗಾಹೆ || ಉಡ್ಧಮಹೇ ತಿರಿಯಮ್ಹಿಯ ಮದಾಣಿ ಯಕಾಮಗಾಣಿ ಮರಣಾಣಿ
    ದಂಸಣ ಣಾಣ ಸಮಗ್ಗೋ ಪಂಡಿಯ ಮರಣಂ ಅಣುಮಲಿಸ್ಸಂ

    ಉವ್ವೆಯ ಮರಣಂ ಜಾ ಈ ಮರಣಂ ಣಿರಯೇ ಸುವೇದಣಾ ಓ ಯ
    ಏದಾಣಿ ಸಂಚರಂತೋ ಪಂಡಿಯ ಮರಣಂ ಅಣುಮಲಿಸ್ಸಂ

    ಎಕ್ಕಂ ಪಂಡಿಯ ಮರಣಂ ಛಿಂದ ಇ ಜಾಈಸದಾಣಿ ಬಹುಗಾಣಿ
    ತಂಮರಣಂ ಮರಿದವ್ವಂ ಜೇಣ ಮದಂ ಸುಮ್ಮದಂ ಹೋ ಇ

    ಕೆಳಗಿನ ಲೋಕಗಳಾದ ನರಕಭವನ ವ್ಯಂತರ ಜ್ಯೋತಿಷ್ಕಲೋಕಗಳಲ್ಲಿ ಏಕೇಂದ್ರಿಯಾದಿ ಜೀವಜಾತಿಗಳಲ್ಲಿ ಅನೇಕ ಬಾಲಮರಣಗಳನ್ನು ಪಡೆದಿದ್ದೇನೆ ಇನ್ನುಮೇಲೆ ಸಮ್ಯಗ್ದರ್ಶನ ಜ್ಞಾನಗಳಿಂದ ಕೂಡಿದ ಪಂಡಿತಮರಣವನ್ನು ಪಡೆಯುತ್ತೇನೆ. ಉದ್ವೇಗಯುಕ್ತ ಮರಣ, ಜಾತಿಮರಣ (ಹುಟ್ಟುವಾಗಲೇ ಸಾಯುವುದು), ನರಕಗಳಲ್ಲಿ ನೋವು ಹಿಂಸೆಗಳು, ಇವನ್ನು ಚೆನ್ನಾಗಿ ಸ್ಮರಿಸಿಕೊಳ್ಳುತ್ತ ನಾನು ಪಂಡಿತಮರಣವನ್ನು ಹೊಂದುತ್ತೇನೆ, ಒಂದು ಪಂಡಿತಮರಣವು ನೂರು ಜನ್ಮಗಳನ್ನೂ ಅನೇಕವಾದವುಗಳನ್ನೂ ನಾಶಗೊಳಿಸುತ್ತದೆ. ಯಾವುದರಿಂದ ಸಾವು ಒಳ್ಳೆಯ ಮರಣವಾಗುತ್ತದೋ ಆ ಮರಣವೇ ಪಡೆಯಬೇಕಾದ ಮರಣ. ಸಂನ್ಯಾಸಕಾಲದಲ್ಲಿ ಉತ್ಪನ್ನವಾಗುವ ಹಸಿವು ಮುಂತಾದ ಹಿಂಸೆಗಳು ನರಕದುಃಖದ ಸ್ವರೂಪವನ್ನು ತೋರಿಸುತ್ತವೆ. ಹೀಗಿರುವಾಗ ಸಂಸಾರದಲ್ಲಿ ಸುತ್ತುತ್ತಿರುವ ನನಗೆ ದುಃಖ ಬಾರದಿರುವುದೇ ? – ಎಂದು ಚಿಂತಿಸಬೇಕು. ಸಂಸಾರವೆಂಬ ಚಕ್ರದಲ್ಲಿ ಸುತ್ತುತ್ತಿರುವ ನಾನು ಎಷ್ಟೋ ಬಾರಿ ಅನೇಕ ರೀತಿಯ. ಪುದ್ಗಲಗಳನ್ನು (ಮೊಸರು, ಸಕ್ಕರೆ, ಬೆಲ್ಲ ಮುಂತಾದ ಭೋಗ್ಯವಸ್ತುಗಳನ್ನು) ತಿಂದು ಜೀರ್ಣಿಸಿದ್ದೇನೆ. ಆದರೂ ತೃಪ್ತಿಯಾಗಲಿಲ್ಲ – ಎಂದು ಚಿಂತಿಸತಕ್ಕುದು. ಮೀನುಗಳು ಆಹಾರಕ್ಕಾಗಿ ಏಳನೆಯ ಪೃಥ್ವಿ (ಅವಸ್ಥಾನ)ಯನ್ನು ಪ್ರವೇಶಿಸುತ್ತವಲ್ಲವೆ ? ಚೇತನದಿಂದ ಕೂಡಿದ (ಪ್ರಾಣಿ ಹಿಂಸೆಯಿಂದ ಬಂದ) ಅಯೋಗ್ಯ ಆಹಾರವು ಮನಸ್ಸಿನಲ್ಲಿಯೂ ಬಯಸಲು ಯೋಗ್ಯವೆನಿಸುವುದಿಲ್ಲ. 

ಜ ಇ ಉಪ್ಪಜ್ಜ ದುಕ್ಖಂ ತೋ ದಟ್ಠವ್ವೋ ಸಭಾವದೋ ಣಿರಯೇ
ಕದಮಂ ಮಏ ಣ ಪತ್ತಂ ಸಂಸಾರೇ ಸಂಸರಂತೇಣ

ಸಂಸಾರಚಕ್ಕವಾಳಮ್ಹಿ ಮ ಏ ಸವ್ವೇ ಪೊಗ್ಗಳಾ ಬಹುಸೋ
ಅಹಾರಿದಾ ಯ ಪರಿಣಾಮಿದಾಯ ಣ ಚ ಮೇ ಗದಾ ತಿತ್ತೀ

ಆಹಾರಣಿಮಿತ್ತಂ ಕಿರ ಮಚ್ಛಾ ಗಚ್ಛಂತಿ ಸತ್ತಮಂ ಪುಢವಿಂ
ಸಚ್ಚಿತ್ತೋ ಆಹಾರೋ ಣಖಮದಿ ಮಣಸಾ ವಿ ಪತ್ಥೇದುಂ

ತಣಕಟ್ಟೇಣ ಅಗ್ಗೀ ಲವಣ ಸಮುದ್ದೋ ಣದೀ ಸಹಸ್ಸೇಹಿಂ
ಣ ಇವೋ ಜೀವೋ ಸಕ್ಕೋ ತಪ್ಪೇದುಂ ಕಾಮಭೋಗೇಹಿಂ

ಜಹ ಜಹ ಭುಂಜ ಇ ಭೋಗೇ ತಹತಹ ಭೋಗೇಸು ವಡ್ಡದೇ ತಣ್ಣಾ
ಅಗ್ಗೀವ ಇಂಧಣಾಇಂ ತಣಂ ದ್ಹೀವಂತಿ ಸೇ ಭೋಗಾ


ವೃತ್ತ || ಸ ಲವಣರಸಮಂಭೋ ಭುಜ್ಯಮಾನಂ ತೃಷಾರ್ತೈ
ರಕತರ ತೃಷಾರ್ತಾನ್ ದುಃಖಿತಾನೇನ ಕುರ್ಯಾತ್
ವಿಷಯ ಸುಖಮಪೀದಂ ಭುಜ್ಯಮಾನಂ ತೃಷಾರ್ತೈ
ರಕತರ ತೃಷಾರ್ತಾನ್ ದುಃಖತಾನೇನ ಕುರ್ಯಾತ್

ಆರ್ಯ || ಯದ್ಯ ಪಿ ನಿಷೇವ್ಯಮಾಣಾ
ಮನಸಸ್ಸಂತುಷ್ಟಿಕಾರಕಾ ವಿಷಯಾಃ

    ಹುಲ್ಲುಕಟ್ಟಿಗೆಗಳಿಂದ ಬೆಂಕಿ ಹೇಗೆ ತೃಪ್ತಿಗೊಳ್ಳುವುದಿಲ್ಲವೋ ಉಪ್ಪುಗಡಲು ಸಾವಿರಾರು ನದಿಗಳಿಂದಲೂ ಹೇಗೆ ತುಂಬುವುದಿಲ್ಲವೋ ಹಾಗೆಯೇ, ಈ ಜೀವನು ಕಾಮಭೋಗದಿಂದ (ಸ್ತ್ರೀವಸ್ತ್ರಾದಿ ಭೋಗವಸ್ತುಗಳಿಂದ) ತೃಪ್ತಿಪಡಿಸಲು ಸಾಧ್ಯವಾಗದವನು. ಭೋಗಗಳು ಹೇಗೆ ಹೇಗೆ ಭೋಗಿಸಲ್ಪಡುವುವೋ ಹಾಗೆ ಹಾಗೆ ಭೋಗಗಳಲ್ಲಿ ಆಸೆ ಹೆಚ್ಚಾಗುತ್ತದೆ. ಸೌದೆಗಳಿಂದ ಬೆಂಕಿಯ ಹಾಗೆ ಆ ಭೋಗಗಳು ತೃಷ್ಣೆಯನ್ನು (ಆಸೆಯನ್ನು) ಉದ್ದೀಪನಗೊಳಿಸುತ್ತವೆ. ಬಾಯಾರಿಕೆಯನ್ನು ಅಕಗೊಳಿಸಿ ಪೀಡಿಸುವುದು, ದುಃಖಿತರನ್ನಾಗಿ ಮಾಡುವುದು. ಈ ವಿಷಯಸುಖವು ಕೂಡ, ಆಶಾಪೀಡಿತರಾದವರಿಂದ ಸೇವಿತವಾಗಿದ್ದು ಹೆಚ್ಚಾದ ಆಶೆಯಿಂದ ಪೀಡಿತರನ್ನಾಗಿಯೂ ದುಃಖಿತರನ್ನಾಗಿಯೂ ಮಾಡುತ್ತದೆ. ಮನಸ್ಸಿಗೆ ಸಂತೋಷವನ್ನುಂಟುಮಾಡುವ ವಸ್ತುಗಳು ಸೇವಿಸಲ್ಪಡುವವಾದರೂ ಅನಂತರ ಅವು, ಕಿಂಪಾಕಫಲವನ್ನು (ಹೆಮ್ಮುಷ್ಟಿ ಹಣ್ಣನ್ನು) ತಿಂದಹಾಗೆ ಬಹಳ ಕೆಟ್ಟಪರಿಣಾಮಕರವಾಗಿ ಪರಿಣಮಿಸುತ್ತವೆ. – ಈ ಹಣ್ಣು ಕಾಣಲು ಚೆಲುವು, ತಿನ್ನಲು ರುಚಿ, ತಿಂದರೆ ಪ್ರಾಣಹಾನಿ, ಮೃತ್ಯುದೇವತೆ ಮೇಲೆ ಹಾಯ್ದು ಬಂದಾಗ ರಕ್ಷಿಸತಕ್ಕವು ಯಾವುವೂ ಇಲ್ಲ. ಅಂತಹ ಸಂದರ್ಭದಲ್ಲಿ ಔಷ, ಮಂತ್ರ, ಇಷ್ಟದೇವತೆಗಳು, ಶ್ರೇಷ್ಠವಾದ ಬಾಣಗಳು, ಕೋಟೆ,


ಕಿಂಪಾದಕಫಲಾಶನವದ್
ಭವಂತಿ ಪಶ್ಚಾದತಿ ದುರಂತಾಃ

ವೃತ್ತ|| ಮರ್ದುಂ ಮಂತ್ರಮುಮಿಷ್ಟದೇವತೆಗಳುಂ ದಿವ್ಯಾಸ್ತ್ರಮುಂ ಕೋಂಟೆಯುಂ
ಗುರ್ದುಂ ಪೊರ್ದಿದ ಚಾತುರಂಗಬಲಮುಂ ಮೆಯ್ಗಾಪುಮಾ ವೇಳೆಗೊಂ
ಖರ್ದತ್ಯುಗ್ರ ಭಟರ್ಕಳುಂ ಕವಚಮುಂ ಮಿತ್ರರ್ಕಳುಂ ಮಿೞ್ತು ಮೇ
ಲೆರ್ದಾಗಳ್ ಶರಣಪ್ಟೊಡೇಕೆ ಮಡಿದರ್ ಪನ್ನಿರ್ವರುಂ ಚಕ್ರಿಗಳ್

ಸಾವನಿತೊಂದವಸ್ಥೆ ತನಗಾದೆಡೆಯೊಳ್ ತಱಸಂದು ತತ್ವಮಂ
ಭಾವಿಸಿ ಬಾಹ್ಯವಸ್ತುಗಳೊಳೊಂದದೆ ತನ್ನೊಳೆ ನಿಂದು ಕರ್ಮವಿ
ಶ್ರಾವಣೆಯಿಂ ವಿಶೋ ದೊರೆಕೊಂಡಿರೆ ಗೆಲ್ದು ಪರೀಷಹಂಗಳಂ
ಜೀವಮನಿಂತು ಸಂತಮೊಡಲಿಂ ಕಳೆಗೆಂಬುದು ಜೈನಶಾಸನಂ

ಆರೊಳಮಿಲ್ಲ ಮೋಹಮೆನಗೆನ್ಗೆ ಜಿನೇಂದ್ರಪದಂಗಳುಗ್ರ ಸಂ
ಸಾರಹರಂಗಳೆನ್ಗೆ ಪೆಱತಿಲ್ಲೆನಗೆನ್ನಱವಲ್ಲದೆನ್ಗೆ ನಿಂ
ದಾರಯೆ ಧರ್ಮಮೊಂದೆ ಶರಣೆನ್ಗೆ ಪಲಾಲಮನೊಲ್ಲೆನಿನ್ ನಮ
ಸ್ಕಾರಮೆ ಸಾಲ್ಗುಮೆನ್ಗಿನಿತನೆನ್ಗೆನಲಾರ್ಪೊಡೆ ಜೀವಿತಾಂತ್ಯದೊಳ್

    ಗುದ್ದು (ಮುಷ್ಟಿಯಿಂದ ತಿವಿತ), ಸೇರಿರುವ ಚತುರಂಗ ಸೈನ್ಯ, ಅಂಗರಕ್ಷಕರು, ಒಡೆಯನು ಸಾಯುತ್ತಲೇ ತಾವೂ ಸಾಯುತ್ತೇವೆ ಎಂಬ ಸಮಯಪಾಲನೆಯ ಪ್ರತಿಜ್ಞೆ ಮಾಡಿದ ಅತಿ ಭಯಂಕರ ಯೋಧರು, ಕವಚ, ಸ್ನೇಹಿತರು – ಇಂಥವು ಆಶ್ರಯವಾಗುವುದಾದರೆ, ಹನ್ನೆರಡು ಮಂದಿ ಚಕ್ರವರ್ತಿಗಳು ಏಕೆ ಸತ್ತರು?. ಸಾಯುವ ಒಂದು ಸ್ಥಿತಿ ತನಗುಂಟಾದ ಸಂದರ್ಭದಲ್ಲಿ ನಿಶ್ಚಯ ಮಾಡಿಕೊಂಡು, ಜೈನತತ್ತ ವನ್ನು ಧ್ಯಾನಿಸಿ, ಹೊರಗಿನ ವಿಷಯಗಳಲ್ಲಿ ಸೇರಿಕೊಳ್ಳದೆ, ತನ್ನಲ್ಲಿಯೇ ಮನಸ್ಸನ್ನು ನಿಲ್ಲಿಸಬೇಕು. ಕರ್ಮಕಳಚಿ ಹೋಗುವುದರಿಂದ ನಿರ್ಮಲತ್ವವು ಲಭ್ಯವಾಗಿರಲು ಇಪ್ಪತ್ತೆರಡು ಪರೀಷಹಗಳನ್ನು ಜಯಿಸಿ, ಶಾಂತರೀತಿಯಲ್ಲಿ ಪ್ರಾಣವನ್ನು ಶರೀರದಿಂದ ಹೊರಪಡಿಸಲಿ – ಎಂದು ಜೈನಶಾಸನವು ಹೇಳುತ್ತದೆ. ನನಗೆ ಯಾರಲ್ಲಿಯೂ ಪ್ರೀತಿಯಿಲ್ಲ ಎನ್ನಲಿ. ಜಿನೇಶ್ವರನ ಪಾದಗಳು ಭಯಂಕರವಾದ ಜನನ ಮರಣಗಳನ್ನು ಪರಿಹಾರಮಾಡುವುವು ಎನ್ನಲಿ. ನನಗೆ ನನ್ನ ಜ್ಞಾನವಲ್ಲದೆ ಬೇರೆ ಇಲ್ಲ ಎನ್ನಲಿ. ನಿಂತು ವಿಚಾರಮಾಡಿದರೆ ಧರ್ಮವೊಂದೇ ಆಶ್ರಯಸ್ಥಾನವು, ಜೊಳ್ಳಾದುದನ್ನು ಒಪ್ಪಲಾರೆನು, ಇನ್ನು ಜೀವನದ ಕೊನೆಗಾಲದಲ್ಲಿ ಬಾಯಿಂದ ಹೇಳುವಷ್ಟು ಶಕ್ತಿಯಿದ್ದರೆ, ಪಂಚನಮಸ್ಕಾರಗಳೇ ಸಾಕು ಎನ್ನುವ ಇಷ್ಟನ್ನು ಹೇಳಲಿ. ಈ ಜಿನನ ಉಪದೇಶವು ವಿಷಯಸುಖಗಳಿಗೆ ವಿರೇಚನಪ್ರಾಯವಾದ ಔಷಧವಾಗಿದೆ. ಅಮೃತಸ್ವರೂಪವಾಗಿದೆ. ಎಲ್ಲಾ ಜೀವಿಗಳ ಮುಪ್ಪು, ಸಾವು, ಜನ್ಮ ವೇದನೆಗಳನ್ನು ಕ್ಷಯಮಾಡುವಂಥದಾಗಿದೆ. ಒಂದೇ ಆದ ಜನ್ಮಧಾರಣೆಯಲ್ಲಿ ಜೀವಾತ್ಮನು ‘ಸಮಾಮರಣ’ ಎಂಬ ಸಾವನ್ನು ಯಾವಾಗ ಪಡೆಯುವನೋ ಆ ಮೇಲಿನ ಏಳೆಂಟು ಹುಟ್ಟುಗಳಲ್ಲಿ ಅತಿಶ್ರೇಷ್ಠವಾದ ಮೋಕ್ಷವನ್ನು ಪಡೆಯುತ್ತಾನೆ. ‘ಣವೊ ಅರಹಂತಾಣಂ’

ಗಾಹೆ|| ಜಿಣವಯಣ ಮೋಸಹಮಿಣಂ ಮಿಸಯಸುಹ ವಿರೇಯಣಂ ಅಮದಭೂದಂ
ಜರಮರಣ ಜಮ್ಮವಾಹಿ ಸುಹಕರಣಂ ಸವ್ವಜೀವಾಣಂ

ಎಕ್ಕಮ್ಹಿ ಭವಗ್ಗಹಣೇ ಸಮಾಹಿ ಮರಣಂ ಮರೇಜ ಜದಿ ಜೀವೋ
ಸತ್ತಟ್ಠ ಭವಗ್ಗಹಣೇ ಣಿವ್ವಾಣಮಣುತ್ತರಂ ಲಹಇ

ಸತ್ತಕ್ಖರ ಸಜ್ಜಾಯಂ ಅರಹಂತಾಣ ಣಮೋ ತ್ತಿಭಾವೇಣಂ
ಜೋ ಕುಣಇ ಅಣ್ಣಮ ಈ ಸೋ ಪಾವಇ ಸವ್ವಕಲ್ಲಾಣಂ

ಏಸೋ ಪಂಚಣಮೊಕ್ಕಾರೋ ಸವ್ವ ಪಾವ ಪಣಾಸಣೋ
ಮಂಗಳೇಸು ಯ ಸವ್ವೇಸು ಪಢಮಂ ಹವಇ ಮಂಗಳಂ

ಭಾವಣಮೊಕ್ಕಾರಗದೋ ಝಾಯಂ ಜೋಣಿಯಮಿಯಮ್ಮಿ ಚಿತ್ತಮ್ಮಿ
ಏ ಅಗ್ಗೇಣ ವಿಸುದ್ದೋ ತೋ ಹೋಹಿಸಿ ಮೋಕ್ಖ ಸುಹ ಭಾ ಈ

ಆರ್ಯೆ || ಗುರುಮೂಲೇ ಯತಿನಿಕಟೇ
ಚೈತ್ಯೇ ಸಿದ್ಧಾಂತರ್ವಾಸದ್ಘೋಷೇ
ಮಮ ಭವತು ಜನ್ಮಜನ್ಮನಿ
ಸಂನ್ಯಸನಸಮನ್ವಿತಂ ಮರಣಂ

    ಎಂಬ ಸಪ್ತಾಕ್ಷರ ಮಂತ್ರದ ಪಠನವನ್ನು ಮನೋವಾಕ್ಕಾಯ ಎಂಬ ಮೂರು ಭಾವಗಳಿಂದ ಅನನ್ಯಮತಿಯಾದ ಯಾವನು ಮಾಡುವನೋ ಅವನು ಸಮಸ್ತಕಲ್ಯಾಣಗಳನ್ನೂ ಪಡೆಯುತ್ತಾನೆ. ಸರ್ವ ಪಾಪಗಳನ್ನೂ ನಾಶಮಾಡತಕ್ಕ ಈ ಪಂಚನಮಸ್ಕಾರಗಳು ಎಲ್ಲ ಮಂಗಳಗಳಲ್ಲಿಯೂ ಮೊದಲನೆಯ ಮಂಗಳವಾಗಿರುತ್ತದೆ. ಯಾವನು ಮನಸ್ಸಿನಲ್ಲಿಯೇ ಧ್ಯಾನಿಸುವ (ಪಂಚಪರಮೇಷ್ಠಿಗಳಾದ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು – ಎಂಬೀ ಐವರ ಕುರಿತು ಮಾಡುವ) ಪಂಚನಮಸ್ಕಾರಗಳನ್ನು ಉಳ್ಳವನಾಗಿ ನಿಯತ ಮನಸ್ಸಿನಿಂದ ಧ್ಯಾನಿಸುತ್ತ ಏಕಾಗ್ರತೆಯಿಂದ ನಿರ್ಮಲನಾಗಿರುವನೋ ಅವನು ಮೋಕ್ಷಸುಖಕ್ಕೆ ಭಾಗಿಯಾಗಿ ಪರಿಣಮಿಸುವನು. ಗುರುಗಳ ಸಾನ್ನಿಧ್ಯದಲ್ಲಿಯೇ ಯತಿಗಳ ಸಮೀಪದಲ್ಲಿ, ಜಿನಾಲಯದಲ್ಲಿ, ತತ್ವಸಿದ್ಧಾಂತವೆಂಬ ಸಮುದ್ರದ ಒಳ್ಳೆಯ ನಾದದಲ್ಲಿ, ಪ್ರತಿಯೊಂದು ಜನ್ಮದಲ್ಲಿಯೂ ನನಗೆ ಸಂನ್ಯಾಸ ಸಮೇತವಾದ ಮರಣವು ಪ್ರಾಪ್ತವಾಗಲಿ. ಈ ರೀತಿಯಾಗಿ ಹದಿನೈದು ದಿವಸಗಳವರೆಗೆ ಆರಾಧನೆಯ ಶಾಸ್ತ್ರವನ್ನು ಸಾರಸ್ವತಾಚಾರ್ಯರು ವ್ಯಾಖ್ಯಾನ ಮಾಡಲು ಧರ್ಮದ ಮೇಲಿನ ಪ್ರೀತಿಯಿಂದ ಅದನ್ನು ಕೇಳಿ ಸಾಯುವ ವೇಳೆಯಲ್ಲಿ ದುಷ್ಟನಾಗಿರುವ ವಜ್ರದಾಡನು ಕಾರಣವಿಲ್ಲದೆಯೇ ನನ್ನನ್ನು ಕೊಂದನು ಎಂದು ಮನಸ್ಸಿನಲ್ಲಿ ಸಿಟ್ಟನ್ನು ಭಾವಿಸಿಕೊಂಡು ಆ ಹೆಬ್ಬಾವು ಸತ್ತಿತು. ಆ ಜೀವನು ಮನೆಗಳಲ್ಲಿ ವಾಸ ಮಾಡತಕ್ಕವರಾದ ಅಸುರಾದಿಗಳ ಲೋಕದಲ್ಲಿ ನೂರು ಪಳಿತಗಳಿಗೆ ಸಮಾನವಾದ ಆಯಷ್ಯವನ್ನುಳ್ಳ ನಾಗೇಂದ್ರ ದೇವನಾಗಿ ಜನಿಸಿದನು. ಆಮೇಲೆ ಅನಂತವೀರ್ಯನು ಸಾರಸ್ವತಮುನಿಗಳು ಹೇಳಿದ

    ಎಂದಿಂತಾರಾಧನೆಯಂ ಪದಿನಯ್ದು ದಿವಸಂ ವಕ್ಖಾಣಿಸೆ ಧರ್ಮಾನುರಾಗದಿಂ ಕೇಳ್ದು ಮುಡಿಪುವಾಗಳ್ ವಜ್ರದಾಡಂ ದುರಾತ್ಮಂ ನಿಷ್ಕಾರಣಮೆನ್ನಂ ಕೊಂದನೆಂದು ಮನದೊಳ್ ರೋಷಮಂ ಬಗೆದು ಮುಡಿಪಿ ಭವನವಾಸಿಗ ಲೋಕದೊಳ್ ನೂಱು ಪಳಿತೋಪಮಾಯುಷ್ಯಮನೊಡೆಯೊಂ ನಾಗೇಂದ್ರ ದೇವನಾಗಿ ಪುಟ್ಟಿದೊಂ ಮತ್ತನಂತವೀರ್ಯನುಂ ಭಟಾರರ್ ಪೇೞೆ ಧರ್ಮಶ್ರವಣಮಂ ಕೇಳ್ದು ಧರ್ಮದ ಫಲದಿಂದಂ ತಮ್ಮ ತಾಯ್ವಿರ್ಕಳ್ ದೇವಗತಿಯೊಳ್ ಪಿರಿದು ವಿಭೂತಿಯನ್ರೆಡೆಯೊರ್ ದೇವರ್ಕಳಾಗಿ ಪುಟ್ಟಿದುದುಮಂ ಕಂಡು ರಾಜ್ಯವಿಮೋಹದಿಂ ತಂದೆಯ ಪೊಲ್ಲಗತಿಯೊಳ್ ಪುಟ್ಟಿದುದುಮಂ ಕಂಡು ಮನುಷ್ಯಜನ್ಮದುರ್ಲಭತ್ವಮುಮಂ ಭೋಗೊಪಭೋಗಂಗಳೊಳಪ್ಪನಿತ್ಯತ್ವಮುಮಂ ಮನದೊಳ್ ಬಗೆದು ಸಂಸಾರ ಶರೀರಭೋಗದೊಳಪ್ಪ ವೈರಾಗ್ಯಮನೊಡೆಯನಾಗಿ ಸುಬಾಹುವೆಂಬ ತನ್ನ ಪಿರಿಯ ಮಗಂ ತನ್ನೊಡನೆ ತೊಱೆಯಲ್ ಬಗೆದಿರ್ದೊನಂ ಬಾರಿಸಿ ಬಲ್ಲಾಳ್ತನದಿಂ ರಾಜ್ಯಪಟ್ಟಂಗಟ್ಟಿ ಸಂಕ್ಷೇಪದಿಂ ರಾಜ್ಯನೀತಿಯನಿಂತೆಂದು ಕಲ್ಪಿಸಿದಂ

ವೃತ್ತ|| ತೃಷ್ಣಾಂ ಛಿಂದಿ ಭಜ ಕ್ಷಮಾಂತ್ಯಜಮದಂ ಪಾಪೇ ರತಿಂ ಮಾ ಕೃಥಾಃ
ಸತ್ಯಂ ಬ್ರೂಹ್ಯನುಯಾಹಿ ಸಾಧು ಪದವೀಂ ಸೇವಸ್ವ ವಿದ್ವಜ್ಜನಂ
ಮಾನ್ಯಾನ್ ಮಾನಯ ವಿದ್ವಿಷೋ – ಪ್ಯನುನಯ ಪ್ರಚ್ಛಾದಯಸ್ವಾನ್ ಗುಣಾನ್
ಕೀರ್ತಿಂ ಪಾಲಯ ದುಃಖಿತೇ ಕುರು ದಯಾಮೇತತ್ ಸತಾಂ ಚೇಷ್ಟಿತಂ

    ಎಂದಿಂತು ಮಗನಂ ಕಲ್ಪಿಸಿ ಎಲ್ಲರೊಳಂ ನಿಶ್ಶಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ಪಲಂಬರರಸುಮಕ್ಕಳ್ವೆರಸು ಸಾರಸ್ವತಭಟಾರರ ಪಕ್ಕದೆ ತಪಂಬಟ್ಟು ಉಗ್ರೋಗ್ರ ಘೋರವೀರ

    ಧರ್ಮವಿಚಾರವನ್ನು ಕೇಳಿ, ಧರ್ಮದ ಫಲದಿಂದ ತನ್ನ ತಾಯಂದಿರು ದೇವತ್ವದ ಗತಿಯನ್ನು ಪಡೆದು ಬಹಳ ವೈಭವವುಳ್ಳ ದೇವತೆಗಳಾಗಿ ಹುಟ್ಟಿದುದನ್ನು ಕಂಡು, ರಾಜ್ಯದ ಮೇಲಿನ ಹೆಚ್ಚಿನ ಆಸೆಯಿಂದಾಗಿ ತನ್ನ ತಂದೆ ದುರ್ಗತಿಯಲ್ಲಿ (ಹಾವಾಗಿ) ಹುಟ್ಟಿದುದನ್ನು ಕಂಡು, ಈ ಮನುಷ್ಯಜನ್ಮವು ದೊರೆಯುವಂಥದಲ್ಲವೆಂದು ಭಾವಿಸಿದನು. ಭೋಗ ಉಪಭೋಗಗಳೆಲ್ಲ ಅಶಾಶ್ವತವೆಂದು ಮನಸ್ಸಿನಲ್ಲಿ ಭಾವಿಸಿಕೊಂಡನು. ಸಂಸಾರದ ಸುಖ ಭೋಗದಲ್ಲಿ ವೈರಾಗ್ಯವುಳ್ಳವನಾದನು. ತನ್ನೊಂದಿಗೆ ರಾಜ್ಯಭೋಗವನ್ನೆಲ್ಲ ಬಿಟ್ಟು ಬಿಡಲು ಯೋಚಿಸಿದ ತನ್ನ ಹಿರಿಯ ಮಗನಾದ ಸುಬಾಹುವನ್ನು ತಡೆದು ಬಲಾತ್ಕಾರದಿಂದ ಅವನಿಗೆ ಸಾಮ್ರಾಜ್ಯದ ಪಟ್ಟಾಭಿಷೇಕವನ್ನು ಮಾಡಿ, ಅವನಿಗೆ ಸಂಕ್ಷೇಪವಾಗಿ ಈ ರೀತಿಯಲ್ಲಿ ರಾಜನೀತಿಯನ್ನು ಹೇಳಿಕೊಟ್ಟನು – – ಆಸೆಯನ್ನು ಕತ್ತರಿಸು. ಕ್ಷಮಾಗುಣವನ್ನು ಭಜಿಸು. ಮದವನ್ನು ಬಿಡು. ಪಾಪದಲ್ಲಿ ಪ್ರೀತಿಯನ್ನು ಮಾಡಬೇಡ. ಸತ್ಯವನ್ನು ಹೇಳು. ಸಾಧುಗಳ ಪದವಿಯನ್ನು ಅನುಸರಿಸಿ ಹೋಗು. ವಿದ್ವಾಂಸರನ್ನು ಸೇವೆ ಮಾಡು. ಮಾನ್ಯರಾದವರನ್ನು ಗೌರವಿಸು ಶತ್ರುಗಳನ್ನು ಕೂಡ ಆದರಿಸು. ಸ್ವಕೀಯವಾದ ಸದ್ಗುಣಗಳನ್ನು ಮುಚ್ಚಿಡು (ಆತ್ಮಶ್ಲಾಘನೆ ಮಾಡದಿರು) ಕೀರ್ತಿಯನ್ನು ಪಾಲಿಸು. ದುಃಖಿತನಾದವನಲ್ಲಿ ದಯೆಯನ್ನು ಮಾಡು, ಈ ರೀತಿಯದು ಸತ್ಪುರುಷರ ಆಚರಣೆಯೆನಿಸುವುದು ಈ ರೀತಿಯಾಗಿ ಮಗನಿಗೆ ನೀತಿಯನ್ನು ಕಲಿಸಿ, ಎಲ್ಲರಲ್ಲಿಯೂ ಪಾಪದ ವರ್ತನೆಯಿಲ್ಲದವನಾಗಿ ಮಾಡಿ, ಬಾಹ್ಯ ಮತ್ತು ಅಭ್ಯಂತರವೆನಿಸುವ ಪರಿಗ್ರಹಗಳನ್ನು ತ್ಯಜಿಸಿ. ಹಲವು ರಾಜಕುಮಾರರೊಂದಿಗೆ ಸಾರಸ್ವತಮುನಿಗಳ ಬಳಿ ತಪಸ್ಸನ್ನು ಸ್ವೀಕರಿಸಿ ಅತಿ ಘೋರವಾದ ತಪಸ್ಸನ್ನು ಮಾಡಿ.

    ತಪಶ್ಚರಣಂಗೆಯ್ದು ಸಮ್ಮೇದಪರ್ವತದ ಮೇಗಿರ್ದೆಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದನ್ ಮತ್ತಿತ್ತ ಧರಣೀಂದ್ರನೊಂದು ದಿವಸಂ ಜಿನೇಂದ್ರ ಚೈತ್ಯಾಲಯಂಗಳಂ ಬಂದಿಸಲ್ವೇಡಿ ಮಂದರಗಿರಿಗೆ ವಿಮಾನಮನೇಱ ಪೋಪಾಗಳ್ ವಜ್ರದಾಡಂ ಮತ್ತಗ್ಗಳಮಪೂರ್ವಮಪ್ಪ ವಿದ್ಯೆಗಳಂ ಸಾಸಲ್ವೇಡಿ ಕಳತ್ರಸಹಿತಂ ವಿಮಾನಮನೇಱ ಮಂದರಗಿರಿಗೆವಂದಾತನಂ ಕಂಡು ತನ್ನ ವಿಭಂಗಜ್ಞಾನದಿಂದೆನ್ನ ಪಗೆವನೀತನೆಂದಱದೆಲವೊ ಪಾಪಕರ್ಮಾ ನಿಷ್ಕಾರಣಮೆನ್ನಂ ಜಲಕ್ರೀಡೆಯಾಡುವೊನಂ ಕಳತ್ರಸಹಿತಂ ಕೊಂದೆಯೆಂದು ಮೂದಲಿಸಿಯಾತನ ವಿದ್ಯೆಯೆಲ್ಲಮಂ ಕೊಱೆದಿಕ್ಕಿ ಕಳತ್ರಸಹಿತಂ ಪಿಡಿದೆತ್ತಿಕೊಂಡುಪೋಗಿ ಸಮುದ್ರದೊಳ್ ಮಹಾಪಾತಾಳದ ಮೊದಲೊಳಿಕ್ಕಿ ಪುಡುಕುನೀರನೞ್ದುತ್ತಂ ಪಿರಿದುಂ ಬೇಗಂ ದಃಖಮನೆಯ್ದಿಸಿ ಕಾಡಿ ಕೊಲೆಯಾತಂ ಸತ್ತು ಪ್ರಥಮನರಕದೊಳತಿ ಘೋರಮಪ್ಪುದಱೊಳ್ ಖಳಖಳಮೆಂಬ ನರಕಬಿಲದೊಳ್ ಮೂರುಪಳಿತೋಪಮಾಯುಷ್ಯ ಮನೊಡೆಯೊಂ ನಾರಕನಾಗಿ ಪುಟ್ಟಿಯಲ್ಲಿಯ ದುಃಖಂಗಳೆಲ್ಲಮನನುಭವಿಸಿಯಾಯುಷ್ಯಾಂತದೊಳ್ ಪೊಱಮಟ್ಟು ಬಂದು ಪಿರಿದಪ್ಪ ನೀಲಗಿರಿಯೆಂಬ ಪರ್ವತದೊಳ್ ಪುಲಿಯಾಗಿ ಪುಟ್ಟಿದೊಂ ಧರಣೀಂದ್ರನುಮಾಯುಷ್ಯಾಂತದೊಳ್ ಬಂದು ಕುರುಜಾಂಗಣಮೆಂಬ ನಾಡೊಳ್ ಹಸ್ತಿನಾಪುರಮೆಂಬುದು ಪೊೞಲದನಾಳ್ವೊನಿಕ್ಪಾ ಕುವಂಶದ ವಿಜಯದತ್ತನೆಂಬರಸಂಗಂ ವಿಜಯಮತಿ

    ಸಮ್ಮೇದಪರ್ವತದ ಶಿಖರದಲ್ಲಿದ್ದು ಎಂಟು ಕರ್ಮಗಳನ್ನು ನಾಶಮಾಡಿ ಮುಕ್ತಿಗೆ ಹೋದನು. ಆ ಮೇಲೆ ಇತ್ತ ಧರಣೀಂದ್ರನು ಒಂದು ದಿವಸ ಜಿನೇಂದ್ರರಿಂದ ಕೂಡಿದ ಬಸದಿಗಳಿಗೆ ಹೋಗಿ ವಂದಿಸುವುದಕ್ಕಾಗಿ ವಿಮಾನವನ್ನೇರಿ ಮಂದರಪರ್ವತದ ಕಡೆಗೆ ಹೋದನು. ಆಗ ವಜ್ರದಾಡನು ಇನ್ನಷ್ಟು ಶ್ರೇಷ್ಠವೂ ಅಪೂರ್ವವೂ ಆದ ವಿದ್ಯೆಗಳನ್ನು ಸಾಸುವುದಕ್ಕಾಗಿ ಪತ್ನಿ ಸಮೇತ ವಿಮಾನವನ್ನೇರಿ ಮಂದರಗಿರಿಗೆ ಬಂದನು. ಅವನನ್ನು ಧರಣೀಂದ್ರನು ಕಂಡು, ತನ್ನ ಮುರುಕಾದ ಜ್ಞಾನದಿಂದ ಈತನು ತನ್ನ ಶತ್ರುವೆಂದು ತಿಳಿದು, “ಎಲೋ ಪಾಪಕರ್ಮನೇ, ಜಲಕ್ರೀಡೆಯಲ್ಲಿದ್ದ ನನ್ನನ್ನು ನನ್ನ ಪತ್ನಿಯರ ಸಮೇತ ನಿಷ್ಕಾರಣವಾಗಿ ಕೊಂದಿರುವೆ* ಎಂದು ಮೂದಲಿಸಿದನು. ಅವನ ವಿದ್ಯೆಯನ್ನೆಲ್ಲ ಕತ್ತರಿಸಿಹಾಕಿದನು. ಅವನನ್ನೂ ಅವನ ಹೆಂಡತಿಯನ್ನೂ ಕೂಡ ಹಿಡಿದು ಎತ್ತಿಕೊಂಡು ಹೋಗಿ ಸಮುದ್ರದಲ್ಲಿ ಮಹಾ ಪಾತಾಳದ ಅಡಿಯಲ್ಲಿ ಹಾಕಿ, ಕುದಿಯುತ್ತಿರುವ ನೀರನಲ್ಲಿ ಅದ್ದಿ ಬಹಳ ಹೊತ್ತಿನವರೆಗೆ ದುಃಖಕ್ಕೆ ಈಡುಮಾಡಿ ತೊಂದರೆಗೊಳಿಸಿ ಕೊಂದನು. ಆ ವಜ್ರದಾಡನು ಸತ್ತು, ಮೊದಲನೆಯ ನರಕದಲ್ಲಿ ಅತ್ಯಂತ ಭಯಂಕರವಾಗಿರುವ ಖಳ ಖಳ ಎಂಬ ನರಕಕೂಪದಲ್ಲಿ ಮೂರು ಪಳಿತಕ್ಕೆ ಸಮಾನವಾದ ಆಯಷ್ಯವುಳ್ಳ ನರಕ ಜೀವಿಯಾಗಿ ಹುಟ್ಟಿದನು. ಅಲ್ಲಿಯ ದುಃಖಗಳನ್ನೆಲ್ಲ ಅನುಭವಿಸಿ ಆಯಷ್ಯವು ಕೊನೆಯಾದಾಗ ಅಲ್ಲಿಂದ ಹೊರಟು ಬಂದು, ಹಿರಿದಾಗಿರತಕ್ಕ ನೀಲಗಿರಿ ಎಂಬ ಬೆಟ್ಟದಲ್ಲಿ ಹುಲಿಯಾಗಿ ಹುಟ್ಟಿದನು. ಧರಣೀಂದ್ರನು ತನ್ನ ಆಯುಷ್ಯವು ಕೊನೆಯಾದಾಗ ಬಂದು ಕುರುಜಾಂಗಣವೆಂಬ ನಾಡಿನಲ್ಲಿ ಹಸ್ತಿನಾಪುರ ಎಂಬ ಪಟ್ಟಣದಲ್ಲಿ ಆಳುತ್ತಿರುವ ಇಕ್ಷಾ ಕುವಂಶದ ವಿಜಯದತ್ತನೆಂಬ ಅರಸನಿಗೂ ವಿಜಯಮತಿ ಎಂಬ ಮಹಾರಾಣಿಗೂ ಗುರುದತ್ತನೆಂಬ ಮಗನಾಗಿ ಹುಟ್ಟಿದನು. ಮಗನನ್ನು ಬಯಸುತ್ತಿದ್ದ ವಿಜಯಮತಿ ಮಹಾದೇವಿ ಒಂದು ದಿನ ಗುರುಗಳೆಂಬ

    ಮಹಾದೇವಿಗಂ ಗುರುದತ್ತನಾಗಿ ಪುಟ್ಟಿದೊಂ ಒಂದು ದಿವಸಂ ಪುತ್ರಾರ್ಥಿಯಪ್ಪ ವಿಜಯ ಮಹಾದೇವಿಯಿಂ ಬೆಸಗೊಳೆಪಟ್ಟ ಗುರುಗಳೆಂಬ ಋಷಿಯರಾದೇಶದಿಂ ಪುಟ್ಟಿದೊಂ ಗುರುಗಳಿತ್ತರಪ್ಪುದಱೆಂದಾತಂಗೆ ಪಿತೃಮಾತೃಗಳ್ ಗುರುದತ್ತನೆಂದು ಪೆಸರನಿಟ್ಟರ್ ಮತ್ತೇಱು ವರ್ಷದೊಳಗೆ ಚತುಷ್ಷಷ್ಟಿ ಕಳೆಗಳುಂ ದ್ವಾಸಪ್ತತಿ ವಿಜ್ಞಾನಂಗಳುಮನೆಲ್ಲಮಂ ನಿರವಶೇಷಂ ಕಲ್ತಾದಮಾನುಂ ರೂಪುಂ ತೇಜಮುಂ ಗಾಡಿಯುಂ ಸೌಭಾಗ್ಯಮನೊಡೆಯನಾಗಿರ್ದೆಂಟನೆಯ ವರುಷದಂದು ಗುರುದತ್ತಂಗೆ ವಿಜಯದತ್ತನೃಪತಿ ರಾಜ್ಯಪಟ್ಟಂಗಟ್ಟಿ ಸುಧರ್ಮರೆಂಬ ಭಟಾರರ ಪಕ್ಕದೆ ತಪಂಬಟ್ಟನಿತ್ತ ಗುರುದತ್ತಕುಮಾರನರಸನಾಗಿ ಸಿಂಹಾಸನಮಸ್ತಕಸ್ಥಿತನಾಗಿ ತಂದೆಗೆಂತಪ್ಪೊಡಂ ಕಪ್ಪಂಗೊಡದ ಮಂಡಳಿಕರ್ಕಳ ಮೇಗೆತ್ತಿ ಮೊಟ್ಟಯಿಸಿಱದು ಮಂಡಲಂಗಳುಂ ದುರ್ಗವಸ್ತು ವಾಹನಂಗಳಂ ಸಮಸ್ತ ಕಪ್ಪಂಗೊಂಡೆಲ್ಲರುಮನಂಜಿಸಿ ಯಶಮುಂ ಕೀರ್ತಿಯುಮನೊಡೆಯನಾಗಿ ಇಂತು ಪೃಥಿವೀ ರಾಜ್ಯಂಗೆಯ್ಯುತ್ತಿರ್ಪನ್ನೆಗಂ ಒಂದು ದಿವಸಂ ಪುಲಿಯುಪದ್ರವಮಂ ನಾಡವರ್ವಂದಿಂತೆಂದು ಪೇೞ್ದರ್ ದೇವಾ ನೀಲಗಿರಿಯೆಂಬ ಪರ್ವತದ ಬಳಸಿಯುಮಿರ್ದ ನಾಡೆಲ್ಲಂ ಪಾೞಾದುದಾ ಪರ್ವತದ ಗುಹೆಯೊಳೊಂದು ಪೆರ್ಬುಲಿಯಿರ್ದುದು ನಾಡೆಲ್ಲರುಮಂ ಜವನ ರೂಪಿನೊಳ್ ಕೊಂದುದಪ್ಪುದಾರಪ್ಟೊಡಂ ನಾಡೊಳಿರಲಣ್ಮರೆಂದೊಡಾ ಮಾತಂ ಕೇಳ್ದು ಪೂರ್ವವೈರಂ ಕಾರಣಮಾಗಿ ಕ್ರೋಧಾಗ್ನಿ ಪೆರ್ಚಿ ಕಡು ಮುಳಿದು ಪುಲಿಯಂ ಕೊಲಲೆಂದು ಪಯಣಂಬೋಗಿ ಪುಲಿಯಿರ್ಪ

    ಋಷಿಗಳನ್ನು ಕೇಳಿ, ಅವರ ಭವಿಷ್ಯವಾಣಿಯಂತೆ ಹುಟ್ಟಿದುದರಿಂದ ಗುರುಗಳೇ ಕೊಟ್ಟರೆಂದು ಆ ಮಗುವಿಗೆ ತಂದೆತಾಯಿಗಳು ಗುರುದತ್ತ ಎಂದು ನಾಮಕರಣ ಮಾಡಿದರು. ಅನಂತರ ಏಳು ವರ್ಷಗಳೊಳಗೆ ಗುರುದತ್ತನು ಅರುವತ್ತನಾಲ್ಕು ಕಲೆಗಳನ್ನೂ ಎಪ್ಪತ್ತೆರಡು ವಿಜ್ಞಾನಗಳನ್ನೂ ಎಲ್ಲವನ್ನೂ ಸ್ವಲ್ಪವೂ ಉಳಿಯದಂತೆ ಕಲಿತನು ಅತಿಶಯವಾದ ರೂಪ, ಕಾಂತಿ, ಸೌಂದರ್ಯ, ಸೌಭಾಗ್ಯವುಳ್ಳವನಾದನು. ಎಂಟನೆಯ ವರ್ಷವಾದಾಗ ವಿಜಯದತ್ತ ರಾಜನು ಗುರುದತ್ತನಿಗೆ ರಾಜ್ಯಪಟ್ಟವನ್ನು ಕಟ್ಟಿ, ಸುಧರ್ಮರೆಂಬ ಋಷಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿದನು. ಇತ್ತ ಗುರುದತ್ತಕುಮಾರನು ರಾಜನಾಗಿ ಸಿಂಹಾಸನದ ಮೇಲಿದ್ದು ತನ್ನ ತಂದೆಗೆ ಹೇಗೂ ಕಪ್ಪವನ್ನು ಕೊಡದ ಸಾಮಂತರಾಜರ ಮೇಲೆ ದಂಡೆತ್ತಿ ಪ್ರತಿಭಟಿಸಿ ಕಾದಾಡಿ ನಾಡು, ದುರ್ಗ, ವಸ್ತುವಾಹನಗಳು ಮುಂತಾದ ಕಪ್ಪಗಳನ್ನು ಪಡೆದು ಎಲ್ಲರನ್ನೂ ಹೆದರಿಸಿ ಖ್ಯಾತಿವಂತನಾಗಿ ಹೀಗೆ ಭೂಮಿಯ ರಾಜ್ಯಭಾರವನ್ನು ಮಾಡುತ್ತಿದ್ದನು. ಹೀಗಿರಲು ಒಂದು ದಿವಸ ನಾಡ ಜನರು ಬಂದು ಹುಲಿಯ ಉಪದ್ರವವನ್ನು ಈ ರೀತಿಯಾಗಿ ಹೇಳಿದರು – “ಪ್ರಭುವೇ, ನೀಲಗಿರಿ ಎಂಬ ಪರ್ವತದ ಸುತ್ತಲೂ ಇದ್ದ ನಾಡೆಲ್ಲವೂ ಹಾಳಾಯಿತು. ಆ ಪರ್ವತದ ಗುಹೆಯಲ್ಲಿ ಒಂದು ಹೆಬ್ಬುಲಿಯಿದೆ. ಅದು ಯಮನ ರೂಪದಲ್ಲಿ ನಾಡಿನವರನ್ನೆಲ್ಲ ಕೊಲ್ಲುತ್ತಿದೆ. ಯಾರೊಬ್ಬರೂ ನಾಡಿನಲ್ಲಿ ನೆಲಸಿರುವುದಕ್ಕೆ ಕೂಡ ಸಮರ್ಥರಾಗರು.” ಹೀಗೆ ಹೇಳಲು ಆ ಮಾತನ್ನು ಗುರುದತ್ತನು ಕೇಳಿ, ಪೂರ್ವಜನ್ಮದ ದ್ವೇಷವೇ ಕಾರಣವಾಗಿ ಕೋಪಾಗ್ನಿ ಹೆಚ್ಚಾಗಿ ಬಹಳ ಸಿಟ್ಟಾಗಿ ಹುಲಿಯನ್ನು ಕೊಲ್ಲುವುದಕ್ಕಾಗಿ ಪ್ರಯಾಣ ಹೊರಟನು. ಹುಲಿ ವಾಸಮಾಡತಕ್ಕ ಗುಹೆಯಿದ್ದಲ್ಲಿಗೆ ಬಂದು ಅದರ ಸುತ್ತಲೂ

    ಗುಹೆಯನೆಯ್ದಿಯದಂ ಬಳಸಿಯುಂ ಮುತ್ತೆ ಮಹಾಸಮುದ್ರದ ಗರ್ಜನೆಯನೆ ಪೋಲ್ವ ಜನರವಮುಂ ಪಟುಪಟಹ ಶಂಖ ತಾಳ ಮರ್ದಳ ಕಹಳಾದಿ ಧ್ವನಿಗಳುಮನೆನಿತೆನಿತನಾ ಪುಲಿ ಕೇಳ್ಗುಮನಿತನಿತಂಜಿ ಗುಹೆಯೊಳಡಂಗಿರ್ದತ್ತು ಪೊಱಮಡಲೊಲ್ಲದಿರ್ದೊಡಾ ಗುಹೆಯ ಬಾಗಿಲೊಳೆನಿತಾನುಂ ಪುಲ್ಲುಂ ಪುಳ್ಳಿಯುಮನೊಟ್ಟಿ ಕಿಚ್ಚಂ ತಗುಳ್ಚಿ ಪುಲಿಯುಂ ಸುಟ್ಟು ಕೊಂದು ತನ್ನ ಪೊೞಲ್ಗೆ ವೋಗಿ ಅರಸುಗೆಯ್ಯುತ್ತಿರ್ದನಾ ಪುಲಿಯುಂ ಕರ್ಮನಿರ್ಜರೆಯಿಂ ಸತ್ತಾ ಸುರಾಷ್ಟ್ರವಿಷಯದೊಳ್ ದ್ರೋಣೀಮಂತಮೆಂಬ ಪರ್ವತದ ಸಾರೆ ಪಲ್ಲಿಖೇಡಮೆಂಬೂರೊಳ್ ಸಲಿದಾಭರಣನೆಂಬ ಪಾರ್ವಂಗಂ ಕಟುಕಿಯೆಂಬ ಪಾರ್ವಂತಿಗಂ ಹಳಮುಖನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಿತ್ತಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೋೞಲದನಾಳ್ವೊಂ ಧಾತ್ರಿವಾಹನನೆಂಬರಸನಾತನ ಮಹಾದೇವಿ ಶ್ರೀಮತಿಯೆಂಬೊಳಾಯಿರ್ವ್ವರ್ಗ್ಗಂ ಮಗಳಭಯಮತಿಯೆಂಬೊಳಾಕೆಯತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯೊಳಾಕೆಯಂ ಗುರುದತ್ತನೆನಿತಾನುಂ ಸೂೞ್ ಬೇಡಿಯಟ್ಟಿದೊಡರಸಂ ಕುಡಲೊಲ್ಲನಂತವರ್ಗಳಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಂ ಧಾತ್ರಿವಾಹನ ನೃಪತಿ ತನ್ನ ಬದಗಿಗಳ್ ವಿಶ್ವಕರ್ಮನುಂ ವಿಶ್ವಮತಿಯುಮೆಂಬೊರಂ ಕರೆಯಿಸಿಯಿಂತೆಂದನಱುದಿಂಗಳೊಳಗೆ ನೀವಿರ್ವರುಮೋರೋರ್ವರಯ್ನೂಱು

    ಮುತ್ತಿಗೆ ಹಾಕಿದನು. ಮಹಾಸಾಗರದ ಗರ್ಜನೆಯಂತಿರುವ ಜನಶಬ್ದವನ್ನೂ ಸಮರ್ಥವಾದ ಪಟಹ, ಶಂಖ, ತಾಳ, ಮದ್ದಳೆ, ತುತ್ತೂರಿ ಮುಂತಾದ ವಾದ್ಯಗಳ ರವಗಳನ್ನು ಆ ಹುಲಿ ಎಷ್ಟೆಷ್ಟು ಕೇಳಿತೋ ಅಷ್ಟಷ್ಟು ಹೆದರಿಕೊಂಡು ಗುಹೆಯೊಳಗೆ ಅಡಗಿದ್ದಿತು, ಹೊರಗೆ ಬರಲೊಲ್ಲದೆ ಇದ್ದಿತು. ಆಗ ಗುರುದತ್ತನು ಆ ಗುಹೆಯ ಬಾಗಿಲಲ್ಲಿ ಎಷ್ಟೋ ಹುಲ್ಲನ್ನೂ ಕಟ್ಟಿಗೆಯನ್ನೂ ರಾಶಿ ಹಾಕಿ ಉರಿಯನ್ನು ಹಚ್ಚಿ ಹುಲಿಯನ್ನು ಸುಟ್ಟು ಕೊಂದು, ತನ್ನ ಪಟ್ಟಣಕ್ಕೆ ಹೋಗಿ ರಾಜ್ಯಭಾರ ಮಾಡುತ್ತ ಇದ್ದನು. ಆ ಹುಲಿ ಕರ್ಮಗಳು ನಾಶವಾದುದರಿಂದ ಸತ್ತು ಸುರಾಷ್ಟ್ರವೆಂಬ ನಾಡಿನಲ್ಲಿ ದ್ರೋಣಿಮಂತವೆಂಬ ಪರ್ವತದ ಬಳಿಯ ಪಲ್ಲಿಖೇಡವೆಂಬ ಊರಿನಲ್ಲಿ ಸಲಿದಾಭರಣನೆಂಬ ಬ್ರಾಹ್ಮಣನಿಗೂ ಕಟುಕಿಯೆಂಬ ಬ್ರಾಹ್ಮಣಿತಿಗೂ ಹಳಮುಖನೆಂಬ ಹೆಸರುಳ್ಳ ಮಗನಾಗಿ ಹುಟ್ಟಿತು. ಅನಂತರ, ಇತ್ತ ಅಂಗವೆಂಬ ನಾಡಿನಲ್ಲಿ ಚಂಪಾನಗರವೆಂಬ ಪಟ್ಟಣವಿದ್ದಿತು. ಅದನ್ನು ಧಾತ್ರಿವಾಹನನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಶ್ರೀಮತಿಯೆಂಬುವಳು. ಆ ದಂಪತಿಗಳಿಗೆ ಮಗಳು ಅಭಯಮತಿಯೆಂಬವಳು. ಆಕೆ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳುಳ್ಳವಾಗಿದ್ದಳು. ಗುರುದತ್ತನು ಆಕೆಯನ್ನು ಮದುವೆಯಾಗಲು ಬಯಸಿ ಆಕೆಯನ್ನು ಕೊಡುವಂತೆ ಎಷ್ಟೋ ಬಾರಿ ಜನ ಕಳುಹಿಸಿದರೂ ಧಾತ್ರಿವಾಹನ ರಾಜನು ಕೊಡಲು ಒಪ್ಪಲಿಲ್ಲ. ಅಂತು ಅವರು ತಮ್ಮ ಇಷ್ಟವಾದ ಸಂಗತಿಯ ಕಾಮ ಸುಖಗಳನ್ನು ಅನುಭವಿಸುತ್ತ ಇದ್ದು ಹೀಗೆಯೇ ಕಾಲ ಕಳೆಯುತ್ತಿತ್ತು. ಆಮೇಲೆ, ಒಂದು ದಿವಸ ಧಾತ್ರಿವಾಹನರಾಜನು ತನ್ನ ಬಡಗಿಗಳಾದ ವಿಶ್ವಕರ್ಮ ವಿಶ್ವಮತಿ ಎಂಬಿಬ್ಬರನ್ನು ಕರೆಯಿಸಿ ಅವರೊಡನೆ ಹೀಗೆ ಹೇಳಿದನು – “ನೀವಿಬ್ಬರಲ್ಲಿ ಒಬ್ಬೊಬ್ಬರೂ ಐನೂರು ರಥಗಳನ್ನು ಬೇಗನೆ ಆರು ತಿಂಗಳೊಳಗೆ ರಚಿಸಿ, ನನಗೆ ಒಪ್ಪಿಸಬೇಕು.” ಹೀಗೆ ಹೇಳಲು ‘ಹಾಗೆಯೇ ಮಾಡುವೆವು’ ಎಂದು ರಥಗಳನ್ನು ಮಾಡತೊಡಗಿದರು. ಅದರಂತೆ

    ರಥಂಗಳಂ ಬೇಗಂ ಮಾಡಿಯೆನಗೊಪ್ಪಿಸವೇೞ್ಕುಮೆಂದು ಪೇೞ್ದೊಡವರುಮಂತೆಗೆಯ್ವೆಮೆಂದು ರಥಂಗಳಂ ಮಾಡಲ್ ತಗುಳ್ದು ಅಱುದಿಂಗಳೊಳಾ ಅಯ್ನೂರು ರಥಮಂ ಸಮೆದು ವಿಶ್ವಮತಿಯರಸಂಗೆ ತಂದು ತೋಱದೊಡರಸಂ ಕಂಡಾದಮಾನುಮಾತಂಗೊಸೆದು ತುಷ್ಟಿದಾನಂಗೊಟ್ಟಂ ಮತ್ತೆ ವಿಶ್ವಕರ್ಮನಱುದಿಂಗಳೊಳ್ ರಥದೊಂದು ಗಾಲಿಯಂ ಸಮೆಯಿಸಿ ತಂದು ತೋಱದೊಡರಸಂ ಕಂಡು ಮುಳಿದಾತನಂ ಕೊಲಲ್ ಬಗೆದೊಡಂಜಿ ಆತನುಮಾ ಗಾಲಿಯನರಸನ ಮುಂದೆ ಮಣಿಕುಟ್ಟಿಮಮಪ್ಪ ಭೂಮಿಯೊಳೆತ್ತಿಕ್ಕಿ ಪ್ರಾಣಭಯದಿಂದೋಡಿ ಗುರುದತ್ತ ನೃಪತಿಯಲ್ಲಿಗೆ ಪೋದೊನಾ ಗಾಲಿಯುಂ ಪದಿನಯ್ದುದಿವಸಂಬರೆಗಂ ತನಗೆ ತಾನೆಯಂತರಿಕ್ಷದೊಳ್ ನೆಲನಂ ಮುಟ್ಟದೆ ತಿಱ್ಱನೆ ತಿರಿಯುತ್ತಿರ್ದುದಂ ಕಂಡರಸಂ ವಿಶ್ವಕರ್ಮಂಗೊಸೆದಾತನಂ ಬೇಗಮಾರಯ್ದುಕೊಂಡು ಬನ್ನಿಮೆಂದೊಡೆ ಕೆಲದವರೆಂದರಾತಂ ನಿಮಗಂಜಿಯೋಡಿ ಪೋಗಿ ಗುರುದತ್ತಂಗಾಳಾಗಿರ್ದೊನೆನೆ ಕೇಳ್ದರಸಂ ಗುರುದತ್ತನಲ್ಲಿಗೆ ತನ್ನ ಪೆರ್ಗಡೆಗಳನಿಂತೆಂದು ಕಲ್ಪಿಸಿಯಟ್ಟಿದೊಂ ಕಪ್ಪಂಬೆರಸೆಮ್ಮ ಬಡಗಿಯಂ ಬೇಗಮಟ್ಟುಗೆಂದು ಪೋಗಿ ಪೇೞಮೆಂದೊಡವರುಂ ಪೋಗಿಯಾ ಮಾತಂ ಗುರುದತ್ತನೃಪತಿಗೆ ತಮ್ಮರಸಂ ಕಲ್ಪಿಸಿದಂತೆ ನುಡಿದೊಡಾ ಮಾತಂ ಗುರುದತ್ತನೃಪತಿ ಕೇಳ್ದಾದಮಾನುಂ ಮುಳಿದಿಂತೆಂದಂ ಮಂಡಳಮನಾಳ್ವರಸನಾಗಿಯುಂ ಪೆಱರ್ಗೆ ಕಪ್ಪಂಗುಡುವೊಡೀ ಸಿಂಹಾಸನಮುಂ ಬೆಳ್ಗೊಡೆಗಳುಂ ಚಾಮರಂಗಳುಂ ಚಾಮರಂಗಳುಂ ಪಾಳಿಧ್ವಜಂಗಳುಂ ಪಂಚಮಹಾಶಬ್ದಂಗಳುಂ ಸೊರ್ಕ್ಕಾನೆಗಳುಂ ಜಾತ್ಯಶ್ವಂಗಳುಮೆಂಬೀ ಬಲಂಗಳಿಂ ಕಜ್ಜಮೇನೆಂದು

    ಆರು ತಿಂಗಳುಗಳಲ್ಲಿ ವಿಶ್ವಮತಿಯು ಅಯ್ನೂರು ರಥಗಳನ್ನು ಪೂರ್ತಿಯಾಗಿ ಮಾಡಿ ತಂದು ರಾಜನಿಗೆ ತೋರಿಸಿದನು. ಆಗ ರಾಜನು ಕಂಡು ಅವನ ಮೇಲೆ ಬಹಳ ಪ್ರೀತಿಪಟ್ಟು ಅವನಿಗೆ ತೃಪ್ತಿಯಾಗುವ ದಾನವನ್ನಿತ್ತನು. ಅನಂತರ, ವಿಶ್ವಕರ್ಮನು ಆರು ತಿಂಗಳುಗಳಲ್ಲಿ ರಥದ ಒಂದು ಗಾಲಿಯನ್ನು ಮಾಡಿ ತಂದು ತೋರಿಸಿದನು. ರಾಜನು ನೋಡಿ ಕೋಪಗೊಂಡು ಅವನನ್ನು ಕೊಲ್ಲಲು ಯೋಚಿಸಿದನು. ಆಗ ವಿಶ್ವಕರ್ಮನು ಹೆದರಿ, ಆ ಗಾಲಿಯನ್ನು ರಾಜನ ಎದುರಿನಲ್ಲಿ ರತ್ನಮಯವಾದ ಜಗಲಿಯ ನೆಲದ ಮೇಲೆ ಎತ್ತಿ ಹಾಕಿ, ಪ್ರಾಣದ ಭಯದಿಂದ ಓಡಿ ಗುರುದತ್ತರಾಜನಲ್ಲಿಗೆ ಹೋದನು. ಆ ಗಾಲಿ ಹದಿನೈದು ದಿವಸಗಳವರೆಗೆ ತಾನೇ ತಾನಾಗಿ ಆಕಾಶದಲ್ಲಿದ್ದುಕೊಂಡು ನೆಲವನ್ನು ಮುಟ್ಟದೆ ತಿರ್ರನೆ ತಿರುಗುತ್ತಾ ಇತ್ತು. ಅದನ್ನು ಧಾತ್ರಿವಾಹನನು ಕಂಡು ವಿಶ್ವಕರ್ಮನ ಮೇಲೆ ಸಂತೋಷಗೊಂಡು ‘ಅವನನ್ನು ಬೇಗನೆ ವಿಚಾರಿಸಿಕೊಂಡು ಬನ್ನಿ’ ಎಂದು ಹೇಳಲು, ಅವನ ಬಳಿಯಲ್ಲಿದ್ದವರು ಹೀಗೆಂದರು – “ಆತನು ನಿಮಗೆ ಹೆದರಿ ಓಡಿಹೋಗಿ ಗುರುದತ್ತನ ಸೇವಕನಾಗಿದ್ದಾನೆ. ಇದನ್ನು ರಾಜನು ಕೇಳಿ ಗುರುದತ್ತನಲ್ಲಿಗೆ ಅಕಾರಿಗಳನ್ನು ಕಳುಹಿಸಿದನು. “ಕಪ್ಪ ಸಮೇತವಾಗಿ ನಮ್ಮ ಬಡಗಿಯನ್ನು ಬೇಗನೆ ಕಳುಹಿಸಿಕೊಡಲಿ – ಎಂದು ಹೋಗಿ ಹೇಳಿ” ಎಂದು ತಿಳಿಸಲು, ಆ ಅರಮನೆಯ ಅಕಾರಿಗಳು ಗುರುದತ್ತನಲ್ಲಿಗೆ ಹೋಗಿ, ತಮ್ಮ ರಾಜನು ಹೇಳಿದಂತೆ ಆ ಮಾತನ್ನು ತಿಳಿಸಿದರು. ಅದನ್ನು ಗುರುದತ್ತರಾಜನು ಕೇಳಿ ಬಹಳವಾಗಿ ಕೋಪಗೊಂಡು ಹೀಗೆಂದನು – “ನಾನು ಮಂಡಲವನ್ನಾಳುವ ರಾಜನಾಗಿದ್ದು ಬೇರೆಯವರಿಗೆ ಕಪ್ಪ ಕೊಡುವುದಾದರೆ, ಈ ಸಿಂಹಾಸನ, ಶ್ವೇತಚ್ಛತ್ರಗಳು, ಚಾಮರಗಳು, ಪಾಳಿಧ್ವಜಗಳು, ಪಂಚಮಹಾಶಬ್ದಗಳು, ಸೊಕ್ಕಿದ ಆನೆಗಳು, ಜಾತಿಯ ಕುದುರೆಗಳು, ಎಂಬೀ ಬಲಗಳಿಂದ ಏನು ಕೆಲಸವಿದೆ ? – – ಎಂದು ನಿಮ್ಮೊಡೆಯನಿಗೆ ಹೇಳಿ. ತನ್ನ ಮಗಳಾದ ಅಭಯಮತಿ ಕನ್ಯೆಸಮೇತ ತನ್ನ ಪಟ್ಟದಾನೆಯನ್ನೂ ಶ್ರೇಷ್ಠ

    ನಿಮ್ಮರಸಂಗೆ ಪೇೞಂ ತನ್ನ ಮಗಳಭಯಮತಿ ಕನ್ನೆವೆರಸು ತನ್ನ ಪಟ್ಟವರ್ಧಮುಮಗ್ಗಳ ವಸ್ತುವಾಗನಂಗಳುಮಂ ಬೇಗಮಟ್ಟುಗಟ್ಟದಾಗಳ್ ತನ್ನ ತಲೆವೆರಸು ಕೊಳ್ವೆನೆಂದು ಪೇೞಮೆಂದವರ ಪೆರ್ಗಡೆಗಳೊಳ್ ನುಡಿದು ನಿಮ್ಮ ಬೞಯನೆ ಆನುಂ ಪಯಣಂ ಬಂದಪ್ಪೆನೆಂದ ನುಡಿದವರ್ಗಳಂ ಪೋಗಲ್ವೇೞ್ದವರ ಬೞಯನೆ ಪಿರಿದು ವಿಭೂತಿಯಿಂ ಚಾತುರ್ವಲಂಬೆರಸು ಪೊಱಮಟ್ಟು ಪಯಣಂಬೋಗಿ ಕತಿಪಯ ದಿವಸಂಗಳಿಂ ಚಂಪಾನಗರಮನೆಯ್ದಿ ಪೊೞಲಂ ಮೂವಳಸು ಬಳಸಿ ಮುತ್ತಿದಾಗಳ್ ಧಾತ್ರಿವಾಹನಂ ತನ್ನ ಸಮಸ್ತ ಸಾಧನಂಬೆರಸು ಪೊಱಮಟ್ಟೊಡ್ಡಣಮನೊಡ್ಡೆ ಬಿಲ್ ಬಿಲ್ಲೊಳ್ ಕುದುರೆ ಕುದುರೆಯೊಳ್ ರಥಂ ರಥದೊಳಣಿ ಯಣಿಯೊಳ್ ಘಟೆಯಾನೆ ಘಟೆಯಾನೆಯೊಳ್ ತಲ್ತು ತಾಗಿ ಪಲವು ದಿವಸಂ ಕಾದೆಯೊಂದು ದಿವಸಂ ಗುರುದತ್ತನೃಪತಿಯಂ ಪ್ರಧಾನನಪ್ಪ ಮಹಾಸಾಮಂತಂ ಮಹೇಂದ್ರದತ್ತನೆಂಬರಸನಾತನ ಮುಂಗಯ್ ಧಾತ್ರಿವಾಹನನ ಯೋಧನಿಂ ಚಕ್ರಪಾಣಿಯಿಂ ಖಂಡಿಸೆ ಪಟ್ಟುದಾಗಿ ನೆಲದೊಳ್ ಬಿರ್ದುದಂ ಕರ್ದು ಕಂಡು ಕೊಂಡಾಕಾಶದೊಳ್ ಪಾಱೆಪೋಗುತ್ತಮಭಯಮತಿ ತನ್ನ ಕನ್ಯಾಮಾಡದೆರಡನೆಯ ನೆಲೆಯ ಮುಂದಣ ಚವುಕಿಗೆಯ ಮೇಲೆ ದಾದಿಯುಂ ಸಖೀಜನಂಗಳ್ ಬೆರಸು ನಡಪಾಡುತ್ತಿರ್ದಳ ಮುಂದಾ ಕೆಯ್ಯಂ ಪರ್ದು ತಂದಿಕ್ಕಿದೊಡದು ವಜ್ರ ವೈಢೂರ್ಯ ಪದ್ಮರಾಗ ಪುಷ್ಪರಾಗ ಸಸ್ಯ ಕರ್ಕೇತನ ಇಂದ್ರನೀಲಂ ಮೊದಲಾಗೊಡೆಯ ಅನರ್ಘ್ಯಮಪ್ಪ ಮಾಣಿಕದಿಂ ಸಮೆದ ಪಲವುಂ ನಾನಾಪ್ರಕಾರದ ಕಂಕಣಂಗಳುಮಂ

    ವಸ್ತುವಾಹನಗಳನ್ನೂ ಬೇಗ ಕಳುಹಿಕೊಡಲಿ. ಕಳುಹದಿದ್ದರೆ ಅವನ ತಲೆ ಸಹಿತವಾಗಿ ಅವನನ್ನು ತೆಗೆದುಕೊಳ್ಳುತ್ತೇನೆ – ಎಂದು ತಿಳಿಸಿರಿ.” ಹೀಗೆ ಅಕಾರಿಗಳಿಗೆ ಹೇಳಿ “ನಿಮ್ಮೊಡನೆಯೇ ನಾನೂ ಪ್ರಯಾಣ ಬರುತ್ತೇನೆ’ ಎಂದು ನುಡಿದು, ಅವರಿಗೆ ತೆರಳಲು ಆಜ್ಞೆ ಮಾಡಿದನು. ಅವರ ಒಟ್ಟಿಗೇ ಹೆಚ್ಚಿನ ವೈಭವದಿಂದ ಚತುರಂಗಸೇನೆಯೊಂದಿಗೆ ಹೊರಟು ಹೋಗಿ ಕೆಲವು ದಿನಗಳಲ್ಲಿ ಚಂಪಾನಗರಕ್ಕೆ ತಲುಪಿ, ಪಟ್ಟಣವನ್ನು ಮೂರು ಬಳಸಾಗುವಂತೆ ಮುತ್ತಿದನು. ಆಗ ದಾತ್ರಿವಾಹನನು ತನ್ನ ಎಲ್ಲಾ ಸೈನ್ಯವನ್ನೂ ಕೂಡಿ ಹೊರಟು, ಸೈನ್ಯವನ್ನು ಎದುರಿಗೆ ನಿಲ್ಲಿಸಿದನು. ಆಗ ಬಿಲ್ಲುಗಾರರು ಬಿಲ್ಲುಗಾರರೊಂದಿಗೂ ಕುದುರೆ ಕುದುರೆಯೊಂದಿಗೂ ರಥವು ರಥದೊಂದಿಗೂ ಸೈನ್ಯವು ಸೈನ್ಯದೊಂದಿಗೂ ಆನೆಗಳ ಸೈನ್ಯವು ಆನೆಗಳ ಸೈನ್ಯದೊಂದಿಗೂ ಮೇಲೆ ಬಿದ್ದು ಹಲವು ದಿವಸ ಕಾದಾಡಿದವು. ಒಂದು ದಿವಸ ಗುರುದತ್ತರಾಜನ ಪ್ರಧಾನ ಸಾಮಂತರಾಜನಾದ ಮಹೇಂದ್ರದತ್ತನ ಮುಂಗೈಯನ್ನು ಧಾತ್ರಿವಾಹನನ ಯೋಧನಾದ ಚಕ್ರಪಾಣಿ ಎಂಬವನು ತುಂಡರಿಸಿನು. ತುಂಡಾದ ಮುಂಗೈ ನೆಲದ ಮೇಲೆ ಬಿದ್ದಿತು ಅದನ್ನು ಹದ್ದು ಕಂಡು, ತೆಗೆದುದೊಂಡು ಆಕಾಶದಲ್ಲಿ ಹಾರಿಹೋಯಿತು. ಆಗ ಅಭಯಮತಿ ತನ್ನ ಕನ್ನೆವಾಡದ ಎರಡನೆಯ ಉಪ್ಪರಿಗೆಯ ಎದುರಿನ ಅಂಗಳದಲ್ಲಿ ದಾದಿಯರನ್ನೂ ಗೆಳತಿಯರನ್ನೂ ಕೂಡಿಕೊಂಡು ನಡೆದಾಡುತ್ತಿದ್ದಳು. ಅವಳ ಮುಂದೆ ಆ ಕೈಯನ್ನು ಹದ್ದು ತಂದಿಕ್ಕಿತು. ಆ ಕೈ ವಜ್ರ, ವೈಡೂರ್ಯ, ಪದ್ಮರಾಗ, ಪುಷ್ಪರಾಗ, ಸಸ್ಯ (?) ಕರ್ಕೇತನ (ಒಂದು ಬಗೆಯ ಸಟಿಕಮಣಿ). ಇಂದ್ರನೀಲ – ಮೊದಲಾಗುಳ್ಳ ಅಮೂಲ್ಯವಾದ ಮಾಣಿಕ್ಯಗಳಿಂದ ಮಾಡಿದ ಹಲವು ಬೇರೆ ಬೇರೆ ರೀತಿಯ ಕೈ ಬಳೆಗಳನ್ನು ಧರಿಸಿಕೊಂಡಿರುವ ಮುಂಗೈಯೂ ಬೆರಳುಗಳೂ ಇದ್ದು ಶಂಖ, ಚಕ್ರ,

    ತೊಟ್ಟ ಮುಂಗಯ್ಯುಂ ಬೆರಲ್ಗಳುಂ ಶಂಖ ಚಕ್ರ ಪದ್ಮಾಂಕುಶ ಚಾಮರ ತೋರಣ ಪತಾಕಾದಿ ಶುಭ ಲಕ್ಷಣಾಂಕಿತಮಾಗಿ ಕೆಂದಾವರೆಯ ಬಣ್ಣದಂತಪ್ಪ ತಳಮುಮಂ ಕಂಡೀ ತಳಮನೊಡೆಯಾತಂ ಸಾಮಾನ್ಯ ಪುರುಷನಲ್ಲಂ ಪಿರಿಯರಸನಾಗಲೆವೇೞ್ಕುಮೆಂದು ಮತ್ತೀ ಕೆಯ್ಯೇಕೆ ಖಂಡಿಸಿ ಬಿರ್ದುದಬ್ಬಾ ಎಂದು ದಾದಿಯಂ ಬೆಸಗೊಂಡೊಡಾಕೆಯಿಂತೆಂದಳ್ ಮಗಳೆ ನೀಂ ಕಾರಣಮಾಗಿ ಇಂತಪ್ಪವಯವಂಗಳನೊಡೆಯ ಅರಸುಗಳ್ ಪಲಂಬರುಂ ಸತ್ತಪರೆಂದೊಡಾಂ ಕಾರಣಮಾಗಿ ಏಕೆ ಸತ್ತಪರೆನಗದನಱಯೆ ಪೇೞಬ್ಬಾ ಎಂದೊಡಾ ದಾದಿಯಿಂತೆಂದು ಪೇೞ್ಗುಂ ಕುರುಜಾಂಗಣಮೆಂಬುದು ನಾಡದರ್ಕೆ ತಿಲಕಮನೆ ಪೋಲ್ವುದು ಹಸ್ತಿನಾಪುರಮೆಂಬುದು ಪೊೞಲದಾದಮಾನುಂ ಸೇವ್ಯಮಪ್ಪುದದನಾಳ್ವೊಂ ಗುರುದತ್ತನೆಂಬೊನರಸನಾ ತನತ್ಯಂತ ರೂಪ ಲಾವಣ್ಯ ಸೌಭಾಗ್ಯಕಾಂತಿ ದೀಪ್ತಿ ಧೃತಿ ಕೀರ್ತಿ ಶೌರ್ಯ ವೀರ್ಯ ಬಳಪರಾಕ್ರಮನೊಡೆಯೊಂ ನವಯೌವನಂ ಸಾಕ್ಷಾತ್ ಕಾಮದೇವನೆ ಆದಮಾನುಂ ಪ್ರಚಂಡ ದೋರ್ಡಂಡನುಂ ಬಲಗರ್ವಿತನುಂ ಪರಮಂಡಲಂಗಳಂ ಪಲವುಮನಿಱದೊಟ್ಟಯಿಸಿ ಕೊಂಡಾಳ್ದಪ್ಟೊನಂತಪ್ಪಾತಂ ನಿನ್ನಂ ಬೇಡಿ ಪಾಗುಡಂಗಳುಂ ಪಾರ್ಗಡೆಗಳುಮಂ ಪಲವು ಸೂೞಟ್ಟಿದೊಡಂ ನಿಮ್ಮಮ್ಮಂ ನಿನ್ನಂ ಕುಡಲೊಲ್ಲದಿರ್ದೊಡೆ 

    ತಾವರೆ, ಅಂಕುಶ, ಚಾಮರ, ತೋರಣ, ಧ್ವಜ ಮುಂತಾದ ಶುಭಲಕ್ಷಣಗಳ ಗುರುತುಗಳುಳ್ಳುದಾಗಿದ್ದಿತು. ಕೆಂಪುತಾವರೆಯ ಬಣ್ಣದ ಹಾಗಿರುವ ಅಂಗೈಯನ್ನೂ ಕಂಡು “ಈ ಅಂಗೈಯನ್ನುಳ್ಳವನು ಸಾಮಾನ್ಯನಾದ ಮನುಷ್ಯನಲ್ಲ ಶ್ರೇಷ್ಠನಾದ ರಾಜನೇ ಆಗಿರಬೇಕು* ಎಂದುಕೊಂಡಳು. ಆಮೇಲೆ “ಅಮ್ಮಾ ಈ ಕೈ ಯಾಕೆ ತುಂಡಾಗಿ ಬಿದ್ದಿದೆ? ಎಂದು ಅಭಯಮತಿಯ ದಾದಿಯನ್ನು ಪ್ರಶ್ನಿಸಿದಳು. ಆಗ ದಾದಿಯು “ಮಗಳೇ, ನಿನ್ನ ಕಾರಣದಿಂದಲೇ, ಈ ರೀತಿಯ ಅಂಗೋಪಾಂಗಗಳಿರುವ ಹಲವರು ರಾಜರು ಸಾಯುತ್ತಿದ್ದಾರೆ* ಎನ್ನಲು ಅವಳು “ನನ್ನ ಕಾರಣದಿಂದ ಯಾಕೆ ಸಾಯುತ್ತಿದ್ದಾರೆ ? ನನಗೆ ಅದನ್ನು ತಿಳಿಯುವಂತೆ ಹೇಳು, ತಾಯೇ* ಎಂದಳು. ಆಗ ದಾದಿಯು ಈ ರೀತಿಯಾಗಿ ಹೇಳಿದಳು – ಕುರುರಾಜಾಂಗಣವೆಂಬ ನಾಡಿದೆ. ಆ ನಾಡಿನ ತಿಲಕದಂತೆ ಇರತಕ್ಕ ಹಸ್ತಿನಾಪುರವೆಂಬ ಪಟ್ಟಣವು ಅತಿಶಯವಾಗಿ ಸೇವ್ಯವಾಗಿದೆ. ಅದನ್ನು ಗುರುದತ್ತನೆಂಬ ರಾಜನು ಆಳುತ್ತಿರುವನ. ಅವನು ಅತಿಶಯವಾದ ರೂಪ, ಲಾವಣ್ಯ, ಕಾಂತಿ, ತೇಜಸ್ಸು, ಧೈರ್ಯ, ಗುಣ, ಕೀರ್ತಿ, ಶೂರತ್ವ, ವೀರತ್ವ, ಬಲ, ಪರಾಕ್ರಮಗಳುಳ್ಳವನಾಗಿ ಹೊಸ ತಾರುಣ್ಯದಿಂದ ಪ್ರತ್ಯಕ್ಷವಾದ ಮನ್ಮಥನಂತೆ ಇದ್ದಾನೆ. ಬಹಳ ಭಯಂಕರವಾದ ಭುಜದಂಡವುಳ್ಳವನೂ ಶಕ್ತಿಯಿದೆಯೆಂಬ ಗರ್ವದಿಂದ ಕೂಡಿದವನೂ ಶತ್ರುಗಳೊಡನೆ ಕಾದಿ ಅವರ ರಾಜ್ಯಗಳನ್ನು ಒಂದುಗೂಡಿಸಿ ಆಳುತ್ತಿರುವವನೂ ಆದಂತಹ ಆತನು ನಿನ್ನನ್ನು ಅಪೇಕ್ಷಿಸಿ ಕಾಣಿಕೆಗಳ ಸಮೇತ ಅಕಾರಿಗಳನ್ನು ಹಲವು ಬಾರಿ ಕಳುಹಿಸಿದರೂ ನಿಮ್ಮ ತಂದೆ ನಿನ್ನನ್ನು ಅವನಿಗೆ ಕೊಡಲು ಒಪ್ಪಲಿಲ್ಲ. 

    ಮುನಿದಾತನ ತಲೆವೆರಸು ಕೂಸಂ ಕೊಳ್ವೆನೆಂದು ಗರ್ಜಿಸಿ ಪ್ರಳಯಕಾಲದ ಸಮುದ್ರಂ ಮೇರೆದಪ್ಪಿದಂತೆ ಚಾತುರ್ದಂತಬಲಂಬೆರಸು ಬಂದು ಪೊೞಲಂ ಮೂವಳಸಾಗಿ ಮುತ್ತಿದೊಡೆ ನಿಮ್ಮರಸಂ ತನ್ನುಳ್ಳ ಬಲಂಬೆರಸು ಪೊಱಮಟ್ಟೊಡ್ಡಿ ನಿಂದನಿಂತೆರಡುಂ ಪಡೆಗಳಿಂದಿಂಗೇೞು ದಿವಸಂ ಕಾದಿದಪ್ಪುದು ಸಾಮಂತ ಮಹಾಸಾಮಂತರ್ಮೊದಲಾಗಿ ಪಲಂಬರುಮರಸುಮಕ್ಕಳ್ ಸತ್ತರಾನೆ ಕುದುರೆ ಪದಾತಿ ಸತ್ತುದರ್ಕೆ ಪ್ರಮಾಣಂ ಮೇರೆಯುಮಿಲ್ಲ ಮಹಾಘೋರತರಂ ಕಾಳೆಗಮಾಗಿರ್ಕ್ಕುಮೆಂದು ಪೇೞ್ದೊಡವಂ ಕೇಳ್ದಂತಪ್ಟೊಡಬ್ಬಾ ನೀಮರಸನಲ್ಲಿಗೆ ಪೋಗಿ ಇಂತೆಂದು ನುಡಿಯಿಂ ನಿಮ್ಮ ಮಗಳಿಂತೆಂದು ಪೇೞ್ದಟ್ಟಿದೊಳೆನ್ನಂ ಗುರುದತ್ತಂಗೆ ಕುಡುವೊಡೆ ಕುಡುಗೆಯುೞದ ಪುರುಷರ್ಕ್ಕಳೆಲ್ಲಂ ಮೊಱೆಯಲ್ಲದವರೆನಗ ತಮ್ಮ ಮೆಚ್ಚಲ್ಲದಾಳೀಗಳೆ ತಮಂಬಡುವೆನೆಂದಟ್ಟಿದೊಳೆಂದಭಯಮತಿ ಕಲ್ಪಿಸಿದ ಮಾತೆಲ್ಲಮನರಸಂಗೆ ದಾದಿ ಪೇೞ್ದೊಡೆ ಅರಸನುಂ ಕೇಳ್ದು ತನ್ನ ಪ್ರಧಾನರಪ್ಪ ನಾಲ್ವರುಂ ಪೆರ್ಗಡೆಳಂ ಕಲ್ಪಿಸಿ ಗುರುದತ್ತನಲ್ಲಿಗೆ ಕೂಸಂ ಕೊಟ್ಟೆನೆಂದಟ್ಟಿದೊಡಾತನುಂ ತನ್ನ ಬಲಮಂ ಕಾದಲೀಯದೆ ಬಾರಿಸಿದಂ ಧಾತ್ರಿವಾಹನನುಂ ತನ್ನ ಬಲಮಂ ಬಾರಿಸಿದನಿಂತೆರಡುಂ ಪಡೆಗಳ್ ಸಂಗ್ರಾಮಮನುಪಸಂಹರಿಸಿ ಸತ್ತವರ್ಗ್ಗೆ ನೊಂದವರ್ಗ್ಗೆ ತಕ್ಕ ವಿಯಂ ಮಾಡಿದ ಬೞಕ್ಕೆ ಕೆಲವು ದಿವಸದಿಂ ಪ್ರಶಸ್ತ ದಿವಸ ವಾರ ನಕ್ಷತ್ರದಿಂ ಹೋರಾಮುಹೂರ್ತದೊಳ್ ಕೂಸಿನನುಕೂದೊಳ್ ಮಗಾವಿಭೂತಿಯಿಂ ಪಾಣಿಗ್ರಹಣ ಪುರಸ್ಸರಮಭಯಮತಿ ಕನ್ನೆಯಂ ಗುರುದತ್ತ ನೃಪತಿಗೆ ಕೊಟ್ಟು ಸನ್ನಾನದಾನಾದಿಗಳಿಂದಾತನಂ ಪೂಜಿಸಿದನಾತನುಂ ಚಂಪಾನಗರದೊಳ್ ಪಲವು ದಿವಸಮಿರ್ದ್ದಿನ್ನೆಮ್ಮ ನಾೞ್ಕೆ ಪೋಪಮೆಮದರಸನಂ ಬೆಸಗೊಳಲಟ್ಟಿದೊಡರಸನುಂ ಕೂಸಿಂಗೆ ತಕ್ಕ ಪೆಂಡವಾಸದ ಪಲಂಬರುಮಗ್ಗಳದ ಸೂಳೆಯರ್ಕಳುಮಂ

    ಇದರಿಂದ ಗುರುದತ್ತನು ಕೋಪಗೊಂಡು ಆತನ (ನಿನ್ನ ತಂದೆಯ) ತಲೆ ಸಮೇತ ಕನ್ನೆಯನ್ನು (ನಿನ್ನನ್ನು) ವಶಮಾಡುವೆನೆಂದು ಗರ್ಜಿಸಿ ಪ್ರಳಯಕಾಲದ ಸಮುದ್ರವೇ ಮೇರೆದಪ್ಪಿ ಹರಿಯಿತೋ ಎಂಬಂತೆ ಚತುರಂಗ ಸೈನ್ಯಸಮೇತನಾಗಿ ಬಂದು ಪಟ್ಟಣವನ್ನು ಮೂರು ಸುತ್ತಾಗಿ ಮುತ್ತಿಗೆ ಹಾಕಿದ್ದಾನೆ. ನಿಮ್ಮ ರಾಜನು (ತಂದೆ) ತನ್ನಲ್ಲಿರತಕ್ಕ ಸೈನ್ಯದೊಡನೆ ಹೊರಟು ಯುದ್ಧಕ್ಕೆ ಸೈನ್ಯವನ್ನೊಡ್ಡಿ ನಿಂತಿದ್ದಾನೆ. ಹೀಗೆ ಎರಡೂ ಸೈನ್ಯಗಳು ಇಂದಿಗೆ ಏಳು ದಿವಸಗಳಿಂದ ಕಾದಾಡುತ್ತಿವೆ. ಸಾಮಂತರೂ ಮಹಾಸಾಮಂತರು ಮೊದಲಾಗಿ ಹಲವರು ರಾಜ ಕುಮಾರರು ಸತ್ತುಹೋದರು. ಆನೆ, ಕುದುರೆ, ಕಾಲಾಳುಗಳು ಸತ್ತುದಕ್ಕೆ ಲೆಕ್ಕವೂ ಇಲ್ಲ, ಮೇರೆಯೂ ಇಲ್ಲ, ಬಹಳ ಭಯಂಕರವಾದ ಯುದ್ಧವಾಗುತ್ತಿದೆ – – ಎಂದು ದಾದಿ ಹೇಳಿದಳು. ಅದನ್ನು ಆಕೆ ಕೇಳಿ, ಅವ್ವಾ, ನೀವು ರಾಜನ ಬಳಿಗೆ ಹೋಗಿ ಹೀಗೆನ್ನಿರಿ – “ನಿಮ್ಮ ಮಗಳು ನನ್ನೊಡನೆ ಹೀಗೆ ಹೇಳಿ ಕಳುಹಿಸಿರುತ್ತಾಳೆ – ನನ್ನನ್ನು ಗುರುದತ್ತನಿಗೆ ಕೊಡುವುದಾದರೆ ಕೊಡಲಿ. ಉಳಿದ ಗಂಡಸರೆಲ್ಲರೂ ನಂಟತನಕ್ಕೆ ಆಗದವರು. ನನಗೆ ಅವನು ತಮ್ಮ ದೃಷ್ಟಿಯಿಂದ ಮೆಚ್ಚಲ್ಲವಾದರೆ, ಈಗಲೇ ತಪಸ್ಸನ್ನು ಕೈಗೊಳ್ಳುವೆನು – ಎಂದು ಹೇಳಿ ನನ್ನನ್ನು ಕಳುಹಿಸಿದ್ದಾಳೆ.* ಹೀಗೆ ಅಭಯಮತಿ ಹೇಳಿಕೊಟ್ಟ ಮಾತನ್ನೆಲ್ಲ ದಾದಿಯು ಅರಸನಿಗೆ ಹೇಳಿದಳು. ಅರಸನು ಕೇಳಿ, ತನ್ನ ಮುಖ್ಯಸ್ಥರಾದ ನಾಲ್ಕು ಮಂದಿ ಅಕಾರಿಗಳಿಗೆ ಸಂಗತಿಯನ್ನು ತಿಳಿಸಿ, ‘ಕನ್ಯೆಯನ್ನು ಗುರುದತ್ತನಿಗೆ ಕೊಡುತ್ತೇನೆ’ ಎಂದು ಅವರನ್ನು ಗುರುದತ್ತನಲ್ಲಿಗೆ ಕಳುಹಿಸಿದನು. ಇದರಿಂದ ಗುರುದತ್ತನು ತನ್ನ ಸೈನ್ಯವು ಯುದ್ಧಮಾಡದಂತೆ ತಡೆದನು. ಧಾತ್ರಿವಾಹನನೂ ತನ್ನ ಸೈನ್ಯವನ್ನು ತಡೆದನು. ಹೀಗೆ ಎರಡೂ ಸೈನ್ಯಗಳು ಯುದ್ಧವನ್ನು ನಿಲ್ಲಿಸಿ, ಸತ್ತವರಿಗೂ ನೊಂದವರಿಗೂ ತಕ್ಕುದಾದ ವಿಯನ್ನು ಮಾಡಿದನಂತರ ಕೆಲವು ದಿವಸಗಳು ಕಳೆಯಲು ಧಾತ್ರಿವಾಹನನು ಶುಭಕರವಾದ ದಿನ, ವಾರ, ನಕ್ಷತ್ರ, ಹೋರೆ, ಮುಹೂರ್ತದಲ್ಲಿ ಕನ್ಯೆಯ ಅನುಕೂಲದಂತೆ ಬಹಳ ವೈಭವದಿಂದ ಕರಗ್ರಹಣ ಪೂರ್ವಕವಾಗಿ ಅಭಯಮತಿ ಕನ್ಯೆಯನ್ನು ಗುರುದತ್ತ

    ಕರಿಕರಿಣಿ ತುರಗಾಶ್ವ ರಥ ಶಿಬಿಕಾದ್ಯನೇಕ ವಾಹನಂಗಳುಮಂ ಮುತ್ತಿನ ಮಾಣಿಕದ ಪೊನ್ನ ಮೂದೆಱದ ಪಲವುಂ ನಾನಾಪ್ರಕಾರದನರ್ಘ್ಯಮಪ್ಪ ತುಡುಗೆಗಳುಮಂ ಬೞವೞಗೊಟ್ಟಿರ್ವರುಮಂ ಪರಸಿಯವರ ನಾೞ್ಕೆ ಕೞಪಿದಂ ಮತ್ತೆ ಗುರುದತ್ತನೃಪತಿಯುಂ ಕತಿಪಯ ದಿವಸಂಗಳಿಂ ತನ್ನ ಪೊೞಲಂ ಹಸ್ತಿನಾಪುರಮನೆಯ್ದಿ ಮಹಾವಿಭೂತಿಯಿಂ ಪೊಕ್ಕಿರ್ದಿಷ್ಟವಿಷಯ ಕಾಮಭೋಗಂಗಳಂ ಪಲಕಾಲಮಭಯಮತಿಯೊಳ್ ಅನುನಯದಿಂದನುಭವಿಸುತ್ತಿರೆಯಾಕೆಗೆ ಸುವರ್ಣಭದ್ರನೆಂಬೊಂ ಮಗಂ ಪುಟ್ಟಿದನಿಂತು ಸಂತೋಷದಿಂ ಕಾಲಂ ಸಲೆ ಮತ್ತೊಂದು ದಿವಸಂ ಹಸ್ತಿನಾಪುರದ ಸಾರೆ ಧರಣಿಭೂಷಣಮೆಂಬ ಪರ್ವತದೊಳಮೃತಾಸ್ರವರೆಂಬ ಗುರುಗಳುಂ ಅಯ್ನೂರ್ವರ್ ಋಷಿಯರಿರ್ದರೆಂಬುದಂ ಕೇಳ್ದು ಪುತ್ರ ಮಿತ್ರ ಕಳತ್ರ ಪರಿವಾರ ಸಮೇತಂ ವಂದನಾಭಕ್ತಿಗೆ ಪೋಗಿ ಗೆಂಟಱೊಳ್ ವಾಹನಂಗಳಿಂದಿೞದು ಬಲಗೊಂಡು ಬಂದರ್ಚಿಸಿ ಗುರುಭಕ್ತಿಗೆಯ್ದು ಭಟಾರರಂ ಬಂದಿಸಿಯುೞದ ಋಷಿಯರ್ಕಳುಮಂ ಗುರುಪರಿವಿಡಿಯಿಂದಂ ಬಂದಿಸಿ ಪಿರಿದು ಬೇಗಂ ಧರ್ಮಮಂ ಕೇಳ್ದು ತದನಚಿತರಮಿಂತೆಂದು ಬೆಸಗೊಂಡಂ ಭಟಾರಾ ಎನ್ನ ಮುನ್ನಿನ ಭವಂಗಳೆನಗಱಯೆ ಬೆಸಸಿಮೆನೆ

    ರಾಜನಿಗೆ ಕೊಟ್ಟನು. ಅವನನ್ನು ಸನ್ಮಾನ ದಾನ ಮುಂತಾದವುಗಳಿಂದ ಸತ್ಕರಿಸಿದನು. ಗುರುದತ್ತನು ಚಂಪಾನಗರದಲ್ಲಿ ಹಲವು ದಿವಸ ಇದ್ದು “ಇನ್ನು ನಮ್ಮ ನಾಡಿಗೆ ಹೋಗೋಣ* ಎಂದು ಧಾತ್ರಿವಾಹನ ರಾಜನನ್ನು ಕೇಳಿ ಅನುಮತಿ ಪಡೆಯಲು ಹೇಳಿ ಕಳುಹಿಸಿದನು. ರಾಜನು ತನ್ನ ಮಗಳಿಗೆ ಯೋಗ್ಯವಾದ ರಾಣೀವಾಸದ ಹಲವರು ಶ್ರೇಷ್ಠದಾಸಿಯರನ್ನೂ ಆನೆ, ಹೆಣ್ಣಾನೆ, ವೇಗವಾಗಿ ಓಡುವ ಕುದುರೆ, ರಥ, ಪಲ್ಲಕ್ಕಿ – ಮುಂತಾದ ಅನೇಕ ವಾಹನಗಳನ್ನೂ ಮುತ್ತು, ಮಾಣಿಕ್ಯ, ಚಿನ್ನ – ಈ ಮೂರು ವಿಧದ ಹಲವು ಹಲವಾರು ರೀತಿಯ ಅಮೂಲ್ಯವಾದ ಆಭರಣಗಳನ್ನೂ ಬಳುವಳಿ ಕೊಟ್ಟು ಇಬ್ಬರನ್ನೂ ಆಶೀರ್ವದಿಸಿ, ಅವರ ನಾಡಿಗೆ ಕಳುಹಿಸಿದನು. ಆಮೇಲೆ, ಗುರುದತ್ತ ರಾಜನು ಕೆಲವು ದಿವಸಗಳಲ್ಲಿ ತನ್ನ ಪಟ್ಟಣವಾದ ಹಸ್ತಿನಾಪುರಕ್ಕೆ ಹೋಗಿ ಬಹಳ ವೈಭವದಿಂದ ಪ್ರವೇಶಿಸಿ, ಅಭಯಮತಿಯೊಂದಿಗೆ ಮೆಚ್ಚುಗೆಯಾದ ವಿಷಯದ ಇಚ್ಛೆಯ ಸುಖಗಳನ್ನು ಹಲವು ಕಾಲ ಮನಸ್ಸಿಗೊಪ್ಪುವಂತೆ ಅನುಭವಿಸುತ್ತ ಇದ್ದನು. ಹೀಗಿರಲು ಆಕೆಗೆ ಸುವರ್ಣಭದ್ರನೆಂಬ ಮಗನು ಹುಟ್ಟಿದನು. ಹೀಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಿತು. ಅನಂತರ, ಒಂದು ದಿವಸ ಹಸ್ತಿನಾಪುರದ ಬಳಿಯ ಧರಣಿ ಭೂಷಣವೆಂಬ ಪರ್ವತದಲ್ಲಿ ಅಮೃತಾಸ್ರವರೆಂಬ ಗುರುಗಳೂ ಐನೂರು ಮಂದಿ ಋಷಿಗಳೂ ಇದ್ದಾರೆ ಎಂಬುದನ್ನು ಕೇಳಿ, ಗುರುದತ್ತರಾಜನು ತನ್ನ ಪುತ್ರ ಮಿತ್ರ ಪತ್ನೀ ಪರಿವಾರವನ್ನು ಕೂಡಿಕೊಂಡು ಭಕ್ತಿಯಿಂದ ವಂದಿಸುವುದಕ್ಕಾಗಿ ಹೋದನು. ದೂರದಲ್ಲಿಯೇ ವಾಹನಗಳಿಂದ ಇಳಿದು ಪ್ರದಕ್ಷಿಣೆ ಬಂದು ಪೂಜಿಸಿ, ಗುರುಭಕ್ತಿಯನ್ನು ಮಾಡಿ, ಋಷಿಗಳನ್ನು ವಂದಿಸಿ ಉಳಿದ ಋಷಿಗಳನ್ನೂ ಗುರುತ್ವದ ಅನುಕ್ರಮದಿಂದ ನಮಸ್ಕರಿಸಿ ಬಹಳ ಹೊತ್ತಿನವರೆಗೆ ಧರ್ಮಶ್ರವಣವನ್ನು ಮಾಡಿದನು. ಆಮೇಲೆ ಅವರೊಡನೆ – “ಪೂಜ್ಯರೇ, ನನ್ನ ಹಿಂದಿನ ಜನ್ಮಗಳ ವಿಚಾರವನ್ನು ನನಗೆ ತಿಳಿಯುವಂತೆ ಅಪ್ಪಣೆ ಕೊಡಿ* ಎಂದನು. ಆಗ ಋಷಿಗಳು ಹೀಗೆಂದರು. “ನೀನು ಈ ಜನ್ಮದಿಂದ ತೊಡಗಿ ಹಿಂದೆ ನಾಲ್ಕನೆಯ ಜನ್ಮದಲ್ಲಿ ಸಾವಸ್ತಿ ಎಂಬ ಪಟ್ಟಣದಲ್ಲಿ

    ಭಟಾರರಿಂತೆಂದು ಪೇೞ್ದರೀ ಭವದಿಂ ತೊಟ್ಟು ನಾಲ್ಕನೆಯ ಭವದಂದು ನೀಂ ಸಾವಸ್ತಿಯೆಂಬ ಪೊೞಲೊಳ್ ಉಪರಿಚರನೆಂಬ ಮಂಡಳಿಕನಯ್ ಜಲಕ್ರೀಡೆಯಾಡುತ್ತಿರ್ಪನ್ನೆಗಂ ವಜ್ರದಾಡನೆಂಬ ವಿದ್ಯಾಧರನಿಂ ಕೊಲೆಪಟ್ಟೆಯಾಗಿ ಸತ್ತಾ ಪೊೞಲೊಳ್ ಪೆರ್ವಾವಾಗಿ ಪುಟ್ಟಿದೆಯಲ್ಲಿಂದಂ ಸತ್ತು ಭವನವಾಸಿಗಲೋಕದೊಳ್ ಧರಣೀಂದ್ರನಾಗಿ ಪುಟ್ಟಿದೆಯಲ್ಲಿಂ ಬಂದೀಗಳ್ ಗುರುದತ್ತನೆಯಾದೆಯೆಂದು ಆತನ ನಾಲ್ಕು ಭವಂಗಳಂ ಸವಿಸ್ತರಂ ಭಟಾರರ್ ಪೇೞೆ ಕೇಳ್ದಾದಮನುಂ ವೈರಾಗ್ಯಮನೊಡೆಯೊನಾದೊಂ ಮತ್ತಭಯಮತಿಯುಂ ಎನ್ನ ಭವಮುಮಂ ಭಟಾರಾ ಎನಗೆ ಬೆಸಸಿಮೆಂದು ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ ಚಂಪಾನಗರದೊಳೊರ್ವಂ ಪುಳುಂಗಾಱಂ ಗರುಡವೇಗನೆಂಬೊನಾತಂಗೆ ನೀಂ ಮುನ್ನಿನ ಭವದೊಳ್ ಪೆಂಡತಿಯಯ್ ಗೋಮತಿಯೆಂಬೆಯೊಂದು ದಿವಸಂ ಸಮಾಗುಪ್ತರೆಂಬ ಭಟಾರರ್ ಪಲಂಬರ್ ರಿಸಿಯರ್ವೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಚಂಪಾನಗರಕ್ಕೆವಂದೊಡವರ ಪಕ್ಕದೆ ನೀಂ ಪೋಗಿ ಧರ್ಮಮಂ ಕೇಳ್ದು ಕೊಲ್ಲದ ಕಳ್ಳದ ಮಧು ಮದ್ಯಮಾಂಸಗಳುಮಯ್ದು ಪಾಲ್ಮರನ ಪಣ್ಣುಂ ಗಿಣ್ಣುಮಾಳಂಬೆಯುಂ ಇಂತಿವೆಲ್ಲಮಂ ತಿನ್ನದ ಬ್ರತಗಳುಮಂ ಕೈಕೊಂಡು ಭಟಾರರಂ ವಂದಿಸಿ ಮನೆಗೆ ಪೋಗೆಯನ್ನೆಗಂ ನಿನ್ನ ಭರ್ತಾರಂ ಬೇಂಟೆಯಾಡಿ ಪಲವುಂ ಲಾವುಗೆಯುಂಕೆ ಕೊರಸುಂ ಮೊದಲಾಗೊಡೆಯ ಪಕ್ಷಜಾತಿಗಳಂ ಬಲೆಯನೊಡ್ಡಿ ಪಿಡಿದು ಕಟ್ಟಿ ಬಾೞೆವಾೞೆ ಮನೆಯೊಳ್ ತಂದಿಟ್ಟು ಮತ್ತೆ

    ಉಪರಿಚರನೆಂಬ ಮಾಂಡಳಿಕನಾಗಿದ್ದಿ. ನೀನು ನೀರಿನಲ್ಲಿ ಆಡುತ್ತಿದ್ದ ವೇಳೆಯಲ್ಲಿ ವಜ್ರದಾಡನೆಂಬ ವಿದ್ಯಾಧರನು ನಿನ್ನನ್ನು ಕೊಂದನು. ಹಾಗೆ ಸತ್ತು ಆ ಪಟ್ಟಣದಲ್ಲಿ ಹೆಬ್ಬಾವಾಗಿ ನೀನು ಹುಟ್ಟಿದೆ. ಆಮೇಲೆ ಸತ್ತು ಭವನವಾಸಿಗಳ ಲೋಕದಲ್ಲಿ ಧರಣೀಂದ್ರನಾಗಿ ಹುಟ್ಟಿರುತ್ತೀಯೆ. ಅಲ್ಲಿಂದ ಬಂದು ಈಗ ಈ ಜನ್ಮದಲ್ಲಿ ನೀನು ಗುರುದತ್ತನೆಂಬವನಾಗಿರುವೆ*. ಋಷಿಗಳು ಈ ರೀತಿಯಾಗಿ ಅವನ ನಾಲ್ಕು ಜನ್ಮಗಳ ಸಂಗತಿಯನ್ನು ವಿಸ್ತಾರವಾಗಿ ತಿಳಿಸಿದರು. ಅದನ್ನು ಕೇಳಿ ಗುರುದತ್ತನು ಅತ್ಯಂತ ವೈರಾಗ್ಯವುಳ್ಳವನಾದನು. ಆಮೇಲೆ ಅಭಯಮತಿ ಅಮೃತಾಸ್ರವ ಮುನಿಗಳೊಡನೆ, “ಪೂಜ್ಯರೇ, ನನ್ನ ಪೂರ್ವ ಜನ್ಮ ವೃತ್ತಾಂತವನ್ನೂ ನನಗೆ ತಿಳಿಸಿರಿ* ಎಂದು ಕೇಳಲು, ಋಷಿಗಳು ಹೀಗೆಂದರು – “ಚಂಪಾನಗರದಲ್ಲಿ ಗರುಡವೇಗನೆಂಬ ಹಕ್ಕಿಗಳನ್ನು ಹಿಡಿವವನೊಬ್ಬನು ಇದ್ದನು. ಹಿಂದಿನ ಜನ್ಮದಲ್ಲಿ ನೀನು ಗೋಮತಿ ಎಂಬವಳಾಗಿದ್ದು ಗರುಡವೇಗನ ಹೆಂಡತಿಯಾಗಿದ್ದೆ. ಒಂದು ದಿವಸ ಸಮಾಗುಪ್ತರೆಂಬ ಋಷಿಗಳು ಹಲವು ಮಂದಿ ಋಷಿಗಳನ್ನು ಕೂಡಿಕೊಂಡ್ತು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಚಂಪಾನಗರಕ್ಕೆ ಬಂದರು. ನೀವು ಅವರ ಬಳಿಗೆ ಹೋಗಿ ಅವರ ಸಮೀಪ ಧರ್ಮವಿಚಾರವನ್ನು ಕೇಳಿದೆ. ಕೊಲ್ಲದಿರುವ, ಕಳವು ಮಾಡದಿರುವ, ಜೇನು – ಹೆಂಡ – ಮಾಂಸಗಳು ಐದು ಬಗೆಯ ಹಾಲುಮರಗಳ ಹಣ್ಣು, ಹಸು ಕರುಹಾಕಿದ ಹೊಸತರಲ್ಲಿ ಕೊಡತಕ್ಕ ಗಿಣ್ಣಿನ ಹಾಲು, ಅಳಂಬೆ (ನಾಯಿಕೊಡೆ) – ಇವೆಲ್ಲವನ್ನು ತಿನ್ನದಿರುವ ವ್ರತಗಳನ್ನು ಸ್ವೀಕರಿಸಿ ಋಷಿಗಳನ್ನು ವಂದಿಸಿ ಮನೆಗೆ ಹೋಗಿರುವ ವೇಳೆಗೆ ನಿನ್ನ ಗಂಡನು ಬೇಟೆಯಾಡಿ ಮನೆಗೆ ಬಂದಿದ್ದನು. ಅವನು ಹಲವು ಲಾವಗೆ, ಉಂಕೆ (ಒಂದು ಬಗೆಯ ಹಕ್ಕಿ), ಕೊರಸು – ಮುಂತಾದ ಹಕ್ಕಿಯ ಜಾತಿಗಳನ್ನು

    ಬೇಂಟೆಗೆ ವೋದನನ್ನೆಗಂ ನೀನವಂ ಕಂಡು ಕಾರುಣ್ಯಭಾವದಿಂದನಿತುಮಂ ಬಿಟ್ಟು ಕಳೆದೊಡವು ಪಾಱ ಪೋದವು ಮತ್ತೆ ನಿನ್ನ ಭರ್ತಾರಂ ಬಂದು ಪಕ್ಕಿಗಳಂ ಕಾಣದೆ ಬಿಟ್ಟು ಕಳೆದರಾರೆಂದು ಬೆಸಗೊಂಡೊಡಾಂ ಬಿಟ್ಟು ಕಳೆದೆನೆಂದೊಡೆ ಇಂತಪ್ಪ ಧರ್ಮಾರ್ಥಿಯೆನ್ನ ಮನೆಯೊಳಿರಲ್ವೇಡೆಂದು ಬಯ್ದು ಪೊಯ್ದಟ್ಟಿಕಳೆದೊಂ ನೀನುಂ ಮನೆಯಿಂದಂ ಪೊಱಮಟ್ಟು ಪೋಗಿ ನಂಟರ ಮನೆಯೊಳಿರ್ದೆಯನ್ನೆಗಮೊಂದು ದಿವಸಮಾ ಚಂಪಾಪುರವನಾಳ್ವೊಂ ಧಾತ್ರಿವಾಹನನೆಂಬೊನರಸನು ಮಾತನ ಮಹಾದೇವಿ ಶ್ರೀಮತಿಯುಮಂತಿರ್ವರುಂ ಮಹಾವಿಭೂತಿಯಿಂ ಪೊೞಲಂ ಪೊಱಮಟ್ಟವರ ಶ್ರೀಯುಂ ವಿಭೂತಿಯುಮಂ ಕಂಡಿವರ್ಗಾಂ ಪುಟ್ಟಿದೊಡೊಳ್ಳಿತ್ತೆಂದು ಮನದೊಳ್ ಬಗೆದಿರ್ದು ಕೆಲವು ದಿವಸದಿಂ ಸತ್ತು ಶ್ರೀಮತಿಯ ಗರ್ಭದೊಳ್ ನೆಲೆಸಿರೆಯಾಕೆಗೆಲ್ಲಾ ಜೀವಂಗಳಂ ದಯೆಗೆಯ್ವ ಬಯಕೆಯಾದುದರಸಂ ಕೇಳ್ದು ತನ್ನ ಪೊೞಲೊಳಂ ನಾಡೊಳಮಾರಪ್ಪೊಡಂ ಜೀವಂಗಳಂ ಕೊಲ್ಲದಂತು ಗೋಸನೆಗಳೆಯಿಸಿದನದು ಕಾರಣದಿಂ ನಿನಗಭಯಮತಿಯೆಂದಾ ತಾಯುಂ ತಂದೆಯುಂ ಪೆಸರನಿಟ್ಟು ಬಾೞ್ದರ್ ಎಂದಿರ್ವರ ಭವಂಗಳುಮಂ ಭಟಾರರ್ ಪೇೞ್ದೊಡರಸನುಮರಸಿಯುಂ ಕೇಳ್ದು ಸಂಸಾರ ಶರೀರ ಭೋಗ ವೈರಾಗ್ಯಮನೊಡೆಯರಾಗಿ ಶ್ರೀದತ್ತನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸುಮಕ್ಕಳ್ವೆರಸಮೃತಾಸ್ರವ ಭಟಾರರ ಪಕ್ಕದೆ ಗುರುದತ್ತ ಮಹಾರಾಜಂ

    ಬಲೆಹಾಕಿ ಹಿಡಿದು, ಕಟ್ಟಿ ಬದುಕಿದೊಂಡಿದ್ದ ಹಾಗೆಯೇ ಮನೆಗೆ ತಂದು ಇಟ್ಟು ಮತ್ತೆ ಬೇಟೆಗೆ ಹೋದನು. ಅಷ್ಟರಲ್ಲಿ ನೀನು ಆ ಹಕ್ಕಿಗಳನ್ನು ಕಂಡು ದಯಾಭಾವನೆಯಿಂದ ಅವಷ್ಟನ್ನೂ ಬಿಟ್ಟು ಬಿಟ್ಟೆ. ಆಗ ಅವು ಹಾರಿಹೋದವು. ಆಮೇಲೆ ನಿನ್ನ ಗಂಡನು ಬಂದನು. ಹಕ್ಕಿಗಳನ್ನು ಕಾಣದೆ ಅವನ್ನು ಬಿಟ್ಟುಬಿಟ್ಟವರು ಯಾರೆಂದು ಕೇಳಿದನು. ‘ನಾನು ಬಿಟ್ಟು ಬಿಟ್ಟೆ’ನೆಂದು ನೀನು ಹೇಳಿದೆ. ಆಗ ಗರುಡವೇನು – ‘ಈ ರೀತಿಯ ಧರ್ಮಾರ್ಥಿಯಾದವಳು ನನ್ನ ಮನೆಯಲ್ಲಿ ಇರುವುದು ಬೇಡ’ ಎಂದು ಬೈದು, ಹೊಡೆದು ಹೊರಗೆ ಅಟ್ಟಿಬಿಟ್ಟನು. ನೀನು ಮನೆಯಿಂದ ಹೊರಟುಹೋಗಿ ನಂಟರ ಮನೆಯನ್ನು ಸೇರಿಕೊಂಡಿದ್ದೆ. ಹೀಗಿರಲು ಒಂದು ದಿವಸ ಚಂಪಾಪುರವನ್ನು ಆಳತಕ್ಕ ಧಾತ್ರಿವಾಹನನೆಂಬ ರಾಜನು ಮತ್ತು ಅವನ ಮಹಾರಾಣಿ ಶ್ರೀಮತಿ – ಅಂತು ಇಬ್ಬರೂ ಬಹಳ ವೈಭವದಿಂದ ಪಟ್ಟಣದ ಹೊರಗೆ ಹೊರಟಿದ್ದರು. ಅವರ ಶ್ರೀಮಂತಿಕೆಯನ್ನೂ ವೈಭವವನ್ನೂ ಕಂಡು, ನಾನು ಇವರಿಗೆ ಹುಟ್ಟಿದರೆ ಒಳ್ಳೆಯದಿತ್ತೆಂದು ಮನಸ್ಸಿನಲ್ಲಿ ಭಾವಿಸಿದೆ. ಕೆಲವು ದಿವಸಗಳಲ್ಲಿ ನೀನು ಸತ್ತು ಶ್ರೀಮತಿಯ ಬಸಿರಲ್ಲಿ ನೆಲಸಿದೆ. ಇದರಿಂದ ಆಕೆಗೆ ಎಲ್ಲಾ ಜೀವಿಗಳಲ್ಲಿಯೂ ದೆಯೆಯನ್ನು ತೋರಿಸುವ ಅಪೇಕ್ಷೆಯುಂಟಾಯಿತು. ಈ ಸಂಗತಿಯನ್ನು ರಾಜನು ಕೇಳಿ, ತನ್ನ ಪಟ್ಟಣದಲ್ಲಿಯೂ ನಾಡಿನಲ್ಲಿಯೂ ಯಾರೇ ಆಗಲಿ, ಜೀವಿಗಳನ್ನು ಕೊಲ್ಲಕೂಡದು – ಎಂದು ಡಂಗುರ ಸಾರಿಸಿದನು. ಆ ಕಾರಣದಿಂದ ನಿನಗೆ ಆ ತಾಯಿಯೂ ತಂದೆಯೂ ಅಭಯಮತಿ ಎಂದು ಹೆಸರನ್ನಿಟ್ಟು ಬಾಳಿದರು* – ಎಂದು ಋಷಿಗಳು ಅವರಿಬ್ಬರ ಜನ್ಮವೃತ್ತಾಂತಗಳನ್ನು ಹೇಳಿದರು. ರಾಜನೂ ರಾಣಿಯೂ ಎನ್ನು ಕೇಳಿ ಸಂಸಾರದಲ್ಲಿಯೂ ಶರೀರ ಸುಖದಲ್ಲಿಯೂ ವೈರಾಗ್ಯವುಳ್ಳವರಾದರು. ಶ್ರೀದತ್ತನೆಂಬ ಹಿರಿಯ ಮಗನಿಗೆ ರಾಜ್ಯದ ಪಟ್ಟವನ್ನು ಕಟ್ಟಿ ಹಲವು ಮಂದಿ ರಾಜಕುಮಾರರೊಂದಿಗೆ ಅಮೃತಾಸ್ರವ ಋಷಿಗಳ ಬಳಿಯಲ್ಲಿ ಗುರುದತ್ತಮಹಾರಾಜನು ತಪಸ್ಸನ್ನು ಸ್ವೀಕರಿಸಿದನು. ಅಭಯಮತಿಯು ಆ

    ತಪಂಬಟ್ಟನುಭಯಮತಿಯುಮಾ ಭಟಾರರೆ ಗುರುಗಳಾಗೆ ಸುವ್ರತೆಯೆಂಬ ಕಂತಿಯರೆ ಕಂತಿಯರಾಗೆ ತಪಂಬಟ್ಟು ಸಮ್ಯಕ್ತ್ವಪೂರ್ವಕಂ ಮಹಾವ್ರತಂಗಳಂ ಕೈಕೊಂಡಾಚಾರಮಾರಾಧನೆ ಮೊದಲಾಗೊಡೆಯ ಚರಣಗ್ರಂಥಂಗಳಂ ಕಲ್ತು ಪಲಕಾಲಮುಗ್ರೋಗ್ರ ತಪಶ್ಚರಣಂಗೆಯ್ದು ನೋಂಪಿಗಳಿಂದಂ ಗಿಡಿಗಿಡಿಜಂತ್ರಂ ಮಿಳಿಮಿಳಿನೇತ್ರಮಾಗಿ ತಮ್ಮ ಮೆಯ್ಯಂ ತವಿಸಿ ಪಶ್ಚಾತ್ಕಾಲದೊಳ್ ಸಂನ್ಯಸನಂಗೆಯ್ದು ಸಮಾಮರಣದಿಂ ಮುಡಿಪಿ ಕಾಪಿಷ್ಟಮೆಂಬೆಂಟನೆಯ ಸ್ವರ್ಗದೊಳ್ ಸ್ವಯಂಪ್ರಭಮೆಂಬ ವಿಮಾನದೊಳ್ ಪದಿನಾಲ್ಕು ಸಾಗರೋಪಮಾಯುಷ್ಯಮನೊಡೆಯನಮಿತಕಾಂತನೆಂಬೊಂ ದೇವನಾಗಿ ಪುಟ್ಟಿದೊಳಿತ್ತ ಗುರುದತ್ತ ಭಟಾರರುಂ ಪನ್ನೆರಡುವರುಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳಂ ಬೆಸಗೊಂಡವರನುಮತದಿಂದೇಕ ವಿಹಾರಿಯಾಗಿ ಘೋರ ವೀರ ತಪಶ್ಚರಣಂಗೆಯ್ಯುತ್ತಂ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕ್ರಮದಿಂ ಸುರಾಷ್ಟ್ರಮನೆಯ್ದಿಯಲ್ಲಿ ದ್ರೋಣಿಮಂತಮೆಂಬ ಪರ್ವತದ ಸಾರೆ ಹಳಮುಖನೆಂಬ ಪಾರ್ವನಿರ್ಪ ಪಲ್ಲಿಖೇಡಮೆಂಬೂರನೆಯ್ದುವನ್ನೆಗಮೆಡೆಯೊಳ್ ನೇಸರ್ಪಟ್ಟೊಡೆ ಯತ್ರಾಸ್ತಮಿತವಾಸಿಗಳೆಲ್ಲ ನೇಸರ್ಟಟ್ಟಿತ್ತಲ್ಲಿಯೆ ನಿಲ್ಪರಪ್ಪುದಱಂದೂರ ಪೊಱ ಪೊೞಲ ಪೊಲದೊಳ್ ಬಟ್ಟೆಯ ಕಣ್ಣೊಳ್

    ಋಷಿಗಳೇ ಗುರುಗಳಾಗಿರಲು ಸುವ್ರತೆ ಎಂಬ ಕಂತಿಯರೇ ತಪಸ್ಸಿಗೆ ದಾರಿ ತೋರುವವರಾಗಿರಲು ತಪಸ್ಸನ್ನು ಕೈಗೊಂಡಳು. ಅವಳು ಜೈನಧರ್ಮತತ್ವಪೂರ್ವಕ ಮಹಾವ್ರತಗಳನ್ನು ಸ್ವೀಕರಿಸಿ, ಆಚಾರ – ಆರಾಧನೆ ಮುಂತಾಗಿರತಕ್ಕ ಚರಣಗ್ರಂಥಗಳನ್ನು ಕಲಿತು ಹಲವು ಕಾಲ ಕಠೋರವಾದ ತಪಸ್ಸನ್ನು ಮಾಡಿ ಉಪವಾಸಾದಿ ವ್ರತಗಳಿಂದ ಅತ್ಯಂತ ಕೃಶರಾಗಿ ಗುಳಿಬಿದ್ದ ಕಣ್ಣುಳ್ಳವರಾದರು. ತಮ್ಮ ಶರೀರವನ್ನು ಕ್ಷೀಣಗೊಳಿಸಿ ಅನಂತರದ ಕಾಲದಲ್ಲಿ ಸಂನ್ಯಾಸವನ್ನು ಆಚರಿಸಿ ಸಮಾಮರಣದಿಂದ ಸತ್ತು ಕಾಪಿಷ್ಟವೆಂಬ ಎಂಟನೆಯ ಸ್ವರ್ಗದಲ್ಲಿ ಸ್ವಯಂಪ್ರಭವೆಂಬ ಏಳಂತಸ್ತಿನ ವಿಮಾನದಲ್ಲಿ ಹದಿನಾಲ್ಕು ಸಾಗರದಷ್ಟು ಆಯುಷ್ಯವುಳ್ಳ ಅಮಿತಕಾಂತನೆಂಬ ದೇವನಾಗಿ ಜನಿಸಿದಳು. ಇತ್ತ ಗುರುದತ್ತ ಋಷಿಗಳು ಹನ್ನೆರಡು ವರ್ಷಗಳವರೆಗೆ ಗುರುಗಳೊಡನೆಯೇ ಇದ್ದು ಹನ್ನೆರಡು ಅಂಗಗಳೂ ಪದಿನಾಲ್ಕು ಪೂರ್ವಗಳೂ ಉಳ್ಳ ಶಾತ್ತ್ರಗಳನ್ನೆಲ್ಲ ಕಲಿತು ಗುರುಗಳನ್ನು ಕೇಳಿ ಅವರ ಒಪ್ಪಿಗೆ ಪಡೆದು ಒಬ್ಬರೇ ಸಂಚಾರ ಮಾಡುವವರಾಗಿ ಉಗ್ರವೂ ಶ್ರೇಷ್ಠವೂ ಆದ ತಪಸ್ಸನ್ನು ಮಾಡುತ್ತ “ಗ್ರಾಮದಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು ರಾತ್ರಿ ಕಾಡಿನಲ್ಲಿ ಹತ್ತು ರಾತ್ರಿ* ಎಂಬ ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ – ಎಂಬ ಭೂಭಾಗಗಳಲ್ಲಿ ಸಂಚಾರಮಾಡುತ್ತ ಕ್ರಮವಾಗಿ ಸುರಾಷ್ಟ ಎಂಬ ದೇಶವನ್ನು ಸೇರಿ ಅಲ್ಲಿ ದ್ರೋಣಿಮಂತವೆಂಬ ಪರ್ವತದ ಹತ್ತಿರ ಹಳಮುಖನೆಂಬ ಬ್ರಾಹ್ಮಣನು ಇರತಕ್ಕ ಪಲ್ಲಿಖೇಡವೆಂಬ ಊರಿಗೆ ಬರುತ್ತಿದ್ದರು. ಎಡೆಯಲ್ಲಿ ಸೂರ್ಯಾಸ್ತವಾಯಿತು. ಎಲ್ಲಿ ಕತ್ತಲಾಯಿತೋ ಅಲ್ಲಿ ವಾಸಮಾಡುವವರೆನಿಸಿದ ಸಂನ್ಯಾಸಿಗಳು ಸೂರ್ಯನು ಅಸ್ತವಾದಾಗ ಇದ್ದಲ್ಲೇ ನಿಲ್ಲುವರಾದ್ದರಿಂದ ಊರಿನ ಪಟ್ಟಣದ ಹೊರಗಿರುವ ಹೊಲದಲ್ಲಿ ದಾರಿಯ ಎದುರಿನಲ್ಲಿಯೇ ರಾತ್ರಿಯ ಹೊತ್ತು

    ರಾತ್ರಿ ಪ್ರತಿಮೆನಿಂದೊರನ್ನೆಗಮಿರುಳ್ ನಾಲ್ಕು ಜಾವಮುಂ ಭೋರೆಂದು ಪೆರ್ಮೞೆ ಕೊಂಡು ಕೆಸೞಾದೊಡೆ ನೇಸರ್ಮೂಡಿದೊಡಪ್ರಾಸುಕಂ ಬಟ್ಟೆಯೆಂದು ಕೈಯನೆತ್ತಿಕೊಳ್ಳದೆ ಮತ್ತಂತೆ ಸೂರ್ಯಪ್ರತಿಮೆನಿಂದೊರನ್ನೆಗಂ ಹಳಮುಖನೆಂಬ ಪಾರ್ವಂ ತನ್ನ ಮೂಡಣ ಕೆಯ್ಯನುೞಲೆಂದು ಪೋಗಿ ಕೆಸೞಾದುದಂ ಕಂಡುೞಲ್ ಪದನಲ್ತೆಂದು ಬೆಟ್ಟದ ಪಡುವಣ ಕೆಯ್ಯನುೞಲ್ ಪೋಗುತ್ತಂ ತನ್ನ ಕೆಯ್ಯಸಾರೆ ಸೂರ್ಯಪ್ರತಿಮೆನಿಂದ ಭಟಾರರಂ ಕಂಡಿಂತೆಂದನಜ್ಜಾ ಎನ್ನ ಪೆಂಡತಿ ಕೂೞನಿಲ್ಲಿಗೆ ಕೊಂಡು ಬಂದೊಡೆ ಪಡುವಣ ಕೆಯ್ಗೆ ವೋದನೆಂದು ಪೇೞ್ದಟ್ಟಿಂ ಗಡಿಮೆಂದು ಪಡುವಣಕೆಯ್ಗೆ ವೋದನನ್ನೆಗಮಾತನ ಪಾರ್ವಂತಿಯುಂ ಪಗಲಪ್ಪಾಗಳ್ ಕೂೞಂ ಕೊಂಡು ಬಂದು ಕೆಯ್ಯೊಳಗಲಮಱಸಿ ಕಾಣದೆ ಸೂರ್ಯಪ್ರತಿಮೆನಿಂದ ಭಟಾರರಂ ಬೆಸಗೊಂಡಳಜ್ಜಾ ಎನ್ನ ಭಟ್ಟನೀ ಕೆಯ್ಯುನುೞಲ್ ಬಂದಾತನೆತ್ತವೋದಂ ಪೇೞಮೆಂದು ಬೆಸಗೊಂಡೊಡಾ ಭಟಾರರ್ ಮೌನವ್ರತಂಗೊಂಡು ನುಡಿಯದೆ ಕೆಮ್ಮಗಿರ್ದೊಡೆ ಪಿರಿದುಂ ಬೇಗಮಿರ್ದು ಬೇಸತ್ತು ಕೂೞಂ ಮನೆಗೆ ಕೊಂಡು ಪೋದಳನ್ನೆಗಮಿತ್ತ ಹಳಮುಖನುಂ ಕೆಯ್ಯಂ ಪಿರಿದು ಬೇಗಮುೞ್ತು ಪೇದೆಗೆಟ್ಟು ಪಸಿದು ನೀರಡಿಸಿ ಬಸಮೞದು ಕೂೞಂ ತರ್ಪುದಂ ಪರಿದು ಬೇಗಂ ಪಾರುತ್ತಿರ್ದು ತಾರದಿರ್ದೊಡೆ ಬೇಸತ್ತು ಮುಳಿದು ಮನೆಗೆ ವೋಗಿ ಎಲೆಗೆ ಕೂೞಂ ತಂದೆಯಿಲ್ಲೆಂದು ಪೆಂಡತಿಯಂ ಸೊಪ್ಪುನಾರಾಗಿ ಬಡಿಯೆ ಆಕೆಯಿಂತೆಂದಳೇಕೆ

    ಪ್ರತಿಮಾಯೋಗದಲ್ಲಿ ನಿಂತರು. ಆಗ ರಾತ್ರಿಯ ನಾಲ್ಕು ಜಾವವೂ (ಹನ್ನೆರಡು ಗಂಟೆಯೂ) ಭೋರೆಂದು ಶಬ್ದಮಾಡುತ್ತ ದೊಡ್ಡ ಮಳೆ ಬಂದು ಕೆಸರಾಯಿತು. ಸೂರ್ಯೋದಯವಾದಾಗ, ದಾರಿಯು ಜೀವಜಂತುಗಳಿಂದ ಕೂಡಿದೆಯೆಂದು, ಇಳಿಬಿಟ್ಟಿದ್ದ ಕೈಗಳನ್ನು ಮೇಲಕ್ಕೆತ್ತದೆ ಮತ್ತೂ ಹಾಗೆಯೇ ಬಿಸಿಲಿನಲ್ಲಿ ಪ್ರತಿಮೆಯಂತೆ ನಿಂತಿದ್ದರು. ಆ ವೇಳೆಗೆ ಹಳಮುಖನೆಂಬ ಬ್ರಾಹ್ಮಣನು ತನ್ನ ಮೂಡಣ ಹೊಲವನ್ನು ಉಳುವುದಕ್ಕೆಂದು ಹೋಗಿ ಗದ್ದೆ ಕೆಸರಾದುದನ್ನು ಕಂಡು, ಉಳುವುದಕ್ಕೆ ಹೋಗುತ್ತ, ತನ್ನ ಹೊಲದ ಬಳಿಯಲ್ಲಿ ಬಿಸಿಲಿಗೆ ಪ್ರತಿಮೆಯಂತೆ ನಿಂತಿದ್ದ ಋಷಿಗಳನ್ನು ಕಂಡನು. ಅವರೊಡನೆ – “ಅಜ್ಜಾ, ನನ್ನ ಹೆಂಡತಿ ಊಟವನ್ನು ಇಲ್ಲಿಗೆ ತೆಗೆದುಕೊಂಡು ಬಂದರೆ ನನ್ನನ್ನು ಪಶ್ಚಿಮದ ಹೊಲಕ್ಕೆ ಹೋದನೆಂದು ಹೇಳಿ, ಅವಳನ್ನು ನನ್ನಲ್ಲಿಗೆ ಕಳುಹಿಸಿರಿ, ತಿಳಿಯತೇ? ಎಂದು ಹೇಳಿ ಪಡುವಣ ಹೊಲಕ್ಕೆ ಹೋದನು. ಹೀಗರಲು ಅವನ ಬ್ರಾಹ್ಮಣಿತಿ ಹಗಲಾಗಿದ್ದಾಗಲೇ ಅನ್ನವನ್ನು ತೆಗೆದುಕೊಂಡು ಬಂದಳು. ಹೊಲದ ವಿಸ್ತಾರವನ್ನೆಲ್ಲ ಸುತ್ತಿ ಹುಡುಕಿದರೂ ಕಾಣದಿರಲು ಬಿಸಿಲಿನಲ್ಲಿ ಪ್ರತಿಮೆಯಾಗಿ ನಿಂತಿದ್ದ ಋಷಿಗಳನ್ನು ಕುರಿತು – “ಅಜ್ಜಾ, ನನ್ನ ಭಟ್ಟನು ಈ ಹೊಲವನ್ನು ಉಳುವುದಕ್ಕಾಗಿ ಬಂದವನು ಯಾವ ಕಡೆಗೆ ಹೋದನು? ಹೇಳಿ* ಎಂದು ಕೇಳಿದಳು. ಆಗ ಆ ಋಷಿಗಳು ಮೌನದ ವ್ರತವನ್ನು ಸ್ವೀಕರಿಸಿ, ಮಾತಾಡದೆ ಸುಮ್ಮಗಿರಲು ಹೆಚ್ಚು ಹೊತ್ತು ಇದ್ದು ಬೇಸರಗೊಂಡು ಅನ್ನವನ್ನು ಮನೆಗೆ ಕೊಂಡುಹೋದಳು. ಅಷ್ಟರಲ್ಲಿ ಇತ್ತ ಹಳಮುಖನು ಬಹಳ ಹೊತ್ತಿನವರೆಗೆ ಗದ್ದೆಯನ್ನು ಉತ್ತು, ಆಯಾಸಪಟ್ಟು, ಹಸಿವಾಗಿ, ಬಾಯಾರಿ, ಶಕ್ತಿಕುಂದಿ, ಹೆಂಡತಿ ಅನ್ನ ತರುವುದನ್ನು ಬಹಳಹೊತ್ತು ಎದುರು ನೋಡುತ್ತಿದ್ದು ತಾರದಿರಲು ಬೇಸರಗೊಂಡು, ಕೋಪಗೊಂಡು, ಮನೆಗೆ ಹೋದನು. “ಎಲೇ ನೀನು ಅನ್ನವನ್ನು ಏಕೆ ತರಲಿಲ್ಲ! * ಎಂದು ಹೆಂಡತಿಯನ್ನು ಸೊಪ್ಪುನಾರುಗಳನ್ನು

    ಬಡಿವೆಯಾಂ ಕೂೞಂ ಕೊಂಡು ಪೋಗಿ ಕೆಯ್ಯೊಳಱಸಿ ಪಿರಿದು ಬೇಗಮಿರ್ದು ಪಾರ್ದು ನಿಮ್ಮಂ ಕಾಣದೆ ಮನೆಗೆ ಕೂೞಂ ತಂದೆನೆಂದೊಡೇಕಲ್ಲಿರ್ದ ಕ್ಷಪಣಕನಂ ಬೆಸಗೊಂಡೆಯಿಲ್ಲಾತಂಗಾಂ ಮೂಡಣ ಕೆಯ್ಗೆ ನೀಂ ಬಂದೊಡೆ ಪಡುವಣ ಕೆಯ್ಗೆ ಕೂೞಂ ಕೊಂಡು ಬರ್ಪಂತಿರೆ ಪೇೞ್ದು ಪೋದೆನೆಂದೊಡಾಕೆಯಿಂತೆಂದಳೆನಿತಾನುಂ ಸೂೞೂಂ ಬೆಸಗೊಂಡೊಡಂ ಪೇೞ್ದನಿಲ್ಲೆಂದೊಡಂತಪ್ಟೊಡೆ ನಿನಗೇನುಂ ದೋಷಮಿಲ್ಲೆನ್ನನಾತನುಣ್ಣಪಡಿಸಿ ಕೊಂದನೆಂದು ಪೆಂಡತಿಯ ಮೇಗಣ ಮುಳಿಸನುೞದು ಋಷಿಯರ ಮೇಗೆ ಮುನಿಸಾಗಿ ಭವಸಂಬಂಯಪ್ಪ ವೈರಂ ಕಾರಣಮಾಗಿ ಕ್ರೋಧಾಗ್ನಿ ಪೆರ್ಚಿಯೆನ್ನಂ ಪಸಿವಿನಿಂ ಸುಟ್ಟೊನಂ ಕಿಚ್ಚಿನಿಂ ಸುಟ್ಟಲ್ಲದುಣ್ಣೆನೆಂದು ಪ್ರತಿಜ್ಞೆಗೆಯ್ದು ಪುಲ್ಲಬೆಂಟೆಯಂ ಪೊಸೆದು ಕಿಚ್ಚುಮೆಣ್ಣೆಯ ಕೊಡನುಂ ಬೆಂಟೆಯುಮಂ ಕೊಂಡು ಪೋಗಿ ಭಟಾರರ ಮುಂದಿಟ್ಟೆಲವೊ ಸವಣಾ ನೀನೆನ್ನಂ ಪಸಿವಿನಿಂದಂ ಸುಟ್ಟೆಯಂತೆಯಾನುಂ ನಿನ್ನಂ ಕಿಚ್ಚಿನಿಂದಂ ಸುಟ್ಟಪ್ಪೆಂ ಕಾವೋರಾರೆಂದು ಮುಟ್ಟಿ ಮೂದಲಿಸಿದಾಗಳ್ ಭಟಾರರಿಂತೆಂದು ಬಗೆದರೀತಂಗೇನುಂ ದೋಷಮಿಲ್ಲೆಮ್ಮ ಮುನ್ನಿನ ಗೆಯ್ದ ಕರ್ಮದುದಯಕಾಲಂ ಬಂದುದಕ್ಕುಮದೆಮ್ಮಂ ಸುಟ್ಟಪ್ಪುದೀತನೆಮ್ಮಂ ಸುಟ್ಟಪ್ಟೊನಲ್ಲಂ ಸುಡುವೊಡಂ ಕಿಡುವೊಡಲನೆ ಸುಡುಗುಮೆಮ್ಮ ದರ್ಶನ ಜ್ಞಾನ ಚಾರಿತ್ರಂಗಳಂ ಸುಡಲ್ ನೆಱೆಯನೀತನೆಮಗೆ ಕಲ್ಯಾಣಮಿತ್ರನೆಂದು ಬಗೆದಿಂತೆಂದು ಭಾವಿಸಲ್ ತಗುೞ್ದರ್

    ಜಜ್ಜುವ ಹಾಗೆ ಹೊಡೆದನು. ಆಗ ಆಕೆ “ಯಾಕೆ ನನಗೆ ಹೊಡೆಯುತ್ತಿ? ನಾನು ಅನ್ನವನ್ನು ಕೊಂಡು ಹೋಗಿ ಹೊಲದಲ್ಲಿ ಹುಡುಕಿ ಬಹಳ ಹೊತ್ತು ಇದ್ದು ನಿಮ್ಮನ್ನು ಎದುರು ನೋಡಿದೆ. ಆದರೆ ಕಾಣದೆ, ಅನ್ನವನ್ನು ಮನೆಗೆ ತಂದೆನು* ಎಂದು ಹಳಮುಖನಿಗೆ ಹೇಳಿದಳು. ಅದಕ್ಕೆ ಅವನು “ಅಲ್ಲಿದ್ದ ಜೈನಸಂನ್ಯಾಸಿಯನ್ನು ನೀನು ಯಾಕೆ ಕೇಳಲಿಲ್ಲ? ನೀನು ಪೂರ್ವದಿಕ್ಕಿನ ಹೊಲಕ್ಕೆ ಬಂದರೆ, ಪಶ್ಚಿಮ ದಿಕ್ಕಿನ ಹೊಲಕ್ಕೆ ಅನ್ನ ತೆಗೆದುಕೊಂಡು ಬರುವಂತೆ ನಾನು ಹೇಳಿ ಹೋಗಿದ್ದೆನು ಎಂದನು. ಆಗ ಆಕೆ ಹೀಗೆಂದಳು – “ನಾನು ಎಷ್ಟು ಬಾರಿ ಕೇಳಿದರೂ ಅವನು ಹೇಳಲಿಲ್ಲ* ಹೀಗೆಂದಾಗ ಹಳಮುಖನ – *ಹಾಗಾದರೆ ನಿನ್ನದೇನೂ ತಪ್ಪಿಲ್ಲ. ನನ್ನನ್ನು ಅವನು ಉಣ್ಣದೆ ಬೀಳುವಂತೆ ಮಾಡಿ ಕೊಂದನು* ಎಂದು ಹೇಳಿ ಹೆಂಡತಿಯ ಮೇಲಿನ ಕೋಪವನ್ನು ತ್ಯಜಿಸಿ, ಋಷಿಗಳ ಮೇಲೆ ಕೋಪಗೊಂಡನು. ಪೂರ್ವಜನ್ಮದ ಸಂಬಂಧದ ದ್ವೇಷವು ಕಾರಣವಾಗಿ ಕೋಪಾಗ್ನಿ ಹೆಚ್ಚಾಗಿ ‘ನನ್ನನ್ನು ಹಸಿವಿನಿಂದ ಸುಟ್ಟವನನ್ನು ಬೆಂಕಿಯಿಂದ ಸುಟ್ಟಲ್ಲದೆ ಉಣ್ಣೆನು’ ಎಂದು ಪ್ರತಿಜ್ಞೆಮಾಡಿದನು. ಅದರಂತೆ, ಹುಲ್ಲಿನ ಹಗ್ಗವನ್ನು ಹುರಿಮಾಡಿ ಬೆಂಕಿ, ಎಣ್ಣೆಯ ಕೊಡ, ಹುಲ್ಲಿನ ಹಗ್ಗ ಇವನ್ನು ತೆಗೆದುಕೊಂಡು ಹೋಗಿ ಋಷಿಗಳ ಮುಂದೆ ಇಟ್ಟು “ಎಲವೋ ಸವಣ (ಸಂನ್ಯಾಸಿಯೇ) ನೀನು ನನ್ನನ್ನು ಹಸಿವಿನಿಂದ ಸುಟ್ಟೆ. ಹಾಗೆಯೇ ನಾನು ನಿನ್ನನ್ನು ಬೆಂಕಿಯಿಂದ ಸುಡುತ್ತೇನೆ. ಆಗ ನಿನ್ನನ್ನು ಯಾರು ಕಾಪಾಡುತ್ತಾರೆ ?* ಎಂದು ಮುಟ್ಟಿ ಮೂದಲಿಸಿದನು. ಆಗ ಋಷಿಗಳು ಹೀಗೆ ಭಾವಿಸಿದರು – “ಈತನಲ್ಲಿ ಏನೂ ತಪ್ಪಿಲ್ಲ. ನಾನು ಹಿಂದೆ ಮಾಡಿದ ಕರ್ಮದ ಫಲ ಮೂಡಿ ಬರುವ ಕಾಲ ಬಂದಿದೆ. ಅದು ನಮ್ಮನ್ನು ಸುಡುತ್ತಿದೆ. ಈತನು ನಮ್ಮನ್ನು ಸುಡುತ್ತಾ ಇಲ್ಲಾ. ಸುಡುವುದಾದರೂ ನಾಶವಾಗತಕ್ಕ ದೇಹವನ್ನು ಸುಡುತ್ತಾನೆ. ನಮ್ಮ ದರ್ಶನ ಜ್ಞಾನ ಚಾರಿತ್ರಗಳನ್ನು ಸುಡಲಾರನು. (ನಿಂದಿಸುವವನನ್ನೂ, ಶ್ಲಾಘಿಸುವವನ್ನೂ, ಶತ್ರುವನ್ನೂ, ಮಿತ್ರನನ್ನೂ ಯಾವನು ಹಾಗೆಯೇ ಸಮತೆಯಿಂದ

ಗಾಹೆ || ಣಿಂದಂತಂ ಸಿಳಹಂತಂ ಸತ್ತುಂ ಮಿತ್ತುಂ ತಹೇವ ಸುಹದಕ್ಖಂ
ಜೋ ಸಮಭಾವಇ ಪೆಚ್ಚ ಇ ಸೋ ಸಮಣೋ ಸೋಯಪವ್ವಯಓ

ದುಜ್ಜಣವಯಣ ಸಡಗರಂ ಸಂಹತಿ ಉಚ್ಛೋಡಣಂ ಚ ಪಹರಂ ಚ
ಣ ಯ ಕುಪ್ಪಂತಿ ಮಹಾರಿಸಿ ಸಮಣ ಗುಣ ವಿಜಾಣಗಾ ಸಮಣಾ

ಜೀವಿದ ಮರಣೇ ಲಾಭಾಲಾಭೇ ರಂಜೋಗವಿಪ್ಪ ಜೋಗೇ ಯ
ಬದ್ದಂ (?) ಸುಹದುಕ್ಖಾದಿಸು ಸಮದಾ ಸಾಮಾಯಿಗಂ ಣಾಮ

ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ
ಮೆತ್ತೀ ಮೇ ಸವ್ವ ಭೂದೇಸು ವೇರಂ ಮಜ್ಜ ಣ ಕೇಣ ಚಿ

    ಎಂದಿತು ಕ್ಷಮೆಯಂ ಭಾವಿಸುತ್ತಿರ್ಪನ್ನೆಗಂ ಹಳಮುಖನುಂ ಬೆಂಟೆಯನೆಣ್ಣೆಯೊಳ್ ತೊಯ್ದು ನಖಾಗ್ರದಿಂ ತೊಟ್ಟು ನೆತ್ತಿವರೆಗಂ ಬಳಸಿಯುಂ ಮೆಯ್ಯಂ ಸುತ್ತಿ ಎಲ್ಲಾ ಎಡೆಗಳೊಳಂ ಕಿಚ್ಚಂ ತಗುಳ್ಚಿಯೆಣ್ಣೆಯಂ ತಳಿಯುತ್ತಿರಲುರಿ ಕೊಂಡೇಕಜ್ವಾಲೆಯಾಗಿ ಸುಡೆಯಾ ಕಿಚ್ಚು ಮೆಯ್ಯಂ ಪೊರ್ದದನ್ನೆಗಂ ಭಟಾರರಾಜ್ಞಾವಿಚಯಮಪಾಕವಿಚಯ ವಿಪಾಕವಿಚಯ ಸಂಸ್ತಾನವಿಚಯಮೆಂಬೀ ನಾಲ್ಕು ಧರ್ಮಧ್ಯಾನಂಗಳಂ ಧ್ಯಾನಿಸುತ್ತಂ ಬೞಕ್ಕೆ ಪೃಥಕ್ತ ವಿತರ್ಕ ವಿಚಾರಮೆಂಬ ಪ್ರಥಮ ಶುಕ್ಮಧ್ಯಾನಮಂ ಧ್ಯಾನಿಸಿ ಸೂಕ್ಷ್ಮಸಾಂಪರಾಯ ಗುಣಸ್ಥಾನದೊಳ್ ಮೋಹನೀಯದಕಾಂಡಕ ಘಾತಂ ತೀರ್ದು ಚರಮ ಕಾಂಡಕದ ಚರಮ ಪಾಳಿ

    ಭಾವಿಸುವನೋ ನೋಡುವನೋ ಅವನು ಸವಣನು. ದುರ್ಜನರ ಮಾತುಗಳೆಂಬ ಚಟಚಟ ಎಂದು ಸಿಡಿವ ಕಿಡಿಗಳ ಹಾಗೆ ಸಂತಾಪಕರವಾದುದನ್ನು ಸಹಿಸುತ್ತಾರೆ. ಚಾಡಿಮಾತುಗಳನ್ನೂ ಅಥವಾ ಕೋಲು ಬಡಿಗೆಗಳ ಏಟುಗಳನ್ನೂ ಶಸ್ತ್ರಪ್ರಹಾರಗಳನ್ನೂ ಸೈರಿಸುತ್ತಾರೆ. ಮಹಾಋಷಿಗಳು ಸಿಟ್ಟಾಗುವುದಿಲ್ಲ. ಸವಣರು (ಸಾಧುಗಳು) ಕ್ಷಮಾಗುಣವನ್ನು ಬಲ್ಲವರು. ಬದುಕು ಸಾವುಗಳಲ್ಲಿಯೂ ಲಾಭನಷ್ಟಗಳಲ್ಲಿಯೂ ಇಷ್ಟವಸ್ತುವಿನ ಸಂಯೋಗ ವಿಯೋಗಗಳಲ್ಲಿಯೂ ಬಂಧುಗಳು ಶತ್ರುಗಳು ಇವರಿಗೆ ಸಂಬಂಸಿದ ಸುಖದುಃಖಗಳಲ್ಲಿಯೂ ಹಸಿವು ಬಾಯಾರಿಕೆ ಶೀತೋಷ್ಣಾದಿಗಳಲ್ಲಿಯೂ ಸಮತೆಯು ಸಾಮಾಯಿಕ ಎಂಬ ಹೆಸರುಳ್ಳುದಾಗಿದೆ. ಎಲ್ಲ ಜೀವಗಳನ್ನೂ ಕ್ಷಮಿಸುತ್ತೇನೆ, ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲ ಜೀವಗಳಲ್ಲಿಯೂ ನನಗೆ ಸ್ನೇಹವಿದೆ. ನನಗೆ ಎಲ್ಲಿಯೂ ವೈರವಿಲ್ಲ) ಎಂದೀ ರೀತಿಯಾಗಿ ಕ್ಷಮೆಯನ್ನೇ ಭಾವಿಸುತ್ತ ಗುರುದತ್ತ ಋಷಿಗಳು ಇದ್ದರು. ಹೀಗಿರಲು ಹಳಮುಖನು ಆ ಹುಲ್ಲಿನ ಹಗ್ಗವನ್ನು ಎಣ್ಣೆಯಲ್ಲಿ ನೆನೆಸಿದನು. ಅದನ್ನು ಋಷಿಗಳ ಉಗುರಿನಿಂದ ತೊಡಗಿ ನೆತ್ತಿಯವರೆಗೂ ಆವರಿಸುವಂತೆ ಶರೀರಕ್ಕೆ ಸುತ್ತಿ ಎಲ್ಲಾ ಕಡೆಗಳಲ್ಲಿಯೂ ಬೆಂಕಿ ಹಚ್ಚಿ ಎಣ್ಣೆಯನ್ನು ಸಿಂಪಡಿಸುತ್ತಿರಲು ಬೆಂಕಿ ಹಿಡಿದು ಒಂದೇ ಜ್ವಾಲೆಯಾಗಿ ಸುಡತೊಡಗಿತು. ಆ ಬೆಂಕಿ ದೇಹವನ್ನು ಮುಟ್ಟುವ ಮೊದಲೇ ಋಷಿಗಳು ಆಜ್ಞಾವಿಚಯ, ಅಪಾಕವಿಚಯ, ವಿಪಾಕ ವಿಚಯ, ಸಂಸ್ಥಾನ ವಿಚಯ – ಎಂಬ ಈ ನಾಲ್ಕು ಧರ್ಮಧ್ಯಾನಗಳನ್ನು ಧ್ಯಾನಿಸಿದರು. ಆಮೇಲೆ ಪೃಥಕ್ತ , ವಿತರ್ಕ, ವಿಚಾರ – ಎಂಬ ಮೊದಲನೆಯ ಶುಕ್ಮಧ್ಯಾನವನ್ನು ಧ್ಯಾನಿಸಿದರು. ಸೂಕ್ಷ್ಮಸಾಂಪರಾಯದ ಗುಣಸ್ತಾನದಲ್ಲಿ ಮೋಹನೀಯದ ಕಾಂಡಕ ಘಾತವು ಮುಗಿದು ಚರಮಕಾಂಡಕದ

    ಬಿರ್ದನಂತರ ಸಮಯಂ ಮೊದಲ್ಗೊಂಡು ಜಾನಿಸಿಯಲ್ಲಿಂ ಬೞಯಮೇಕತ್ವ ವಿತರ್ಕ ವಿಚಾರಮೆಂಬೆರಡನೆಯ ಶುಕ್ಮಧ್ಯಾನಮಂ ಕ್ಷೀಣಕಷಾಯನಾಗಿ ಜಾನಿಸಿ ಬೞಯಂ ಚರಮಸಮಯದೊಳ್ ನಾಲ್ಕು ಕರ್ಮಮಂ ಕಿಡಿಸುವ ಸಮಯದೊಳ್ ರಸ ರುರ ಮಾಂಸ ಮೇದೋಸ್ಥಿಮಜ್ಜ ಶುಕ್ಲಮೆಂಬ ಸಪ್ತಧಾತುಗಳುಮವಱೊಡನೆ ಕೆಟ್ಟುವು ಮತ್ತೆ ಘಾತಿಕರ್ಮಂಗಳುವಾವುವೆಂದೊಡೆ ಅಯ್ದು ತೆಱದ ಜ್ಞಾನಾವರಣೀಯಮೊಂಬತ್ತು ತೆಱದ ದರ್ಶನಾವರಣೀಯಮಂತೆರಡುಂ ಕರ್ಮಂಗಳ ಕೇಡಿನೊಳ್ ಲೋಕಾಲೋಕದೊಳಗಣ ಸೂಕ್ಷಾ ಂತರಿತ ದೂರ ಪದಾರ್ಥವಸ್ತುಗಳೆಲ್ಲಮಂ ಕ್ರಮ ಕರಣ ವ್ಯವಧಾನರಹಿತಮಾಗಿ ಬಗೆಯದೆ ತಡೆಯದೆ ಸುೞಯದೆ ಮೋಹಿಸದೆ ಎಲ್ಲಾ ವಸ್ತುಗಳನೊರ್ಮೊದಲಱವ ಕಾಣ್ಬನಂತಜ್ಞಾನಮುಮನಂತದರ್ಶನಮುಮನೊಡೆಯರಾದರ್ ಮತ್ತಿರ್ಪತ್ತೆಂಟು ತೆಱದ ಮೋಹನೀಯವೆಂಬ ಕರ್ಮದ ಕೇಡಿನಿಂ ಅನಂತಸುಖಿಗಳಾದರ್ ಮತ್ತಮಯ್ದು ತೆಱದಂತರಾಯಮೆಂಬ ಕರ್ಮದ ಕೇಡಿನಿಂದಮನಂತ ವೀರ್ಯಮನೊಡೆಯರಾದರ್ ಅಚಿತೊರ್ಮೊದಲೆ ಘಾತಿಕರ್ಮಂಗಳ ನಾಲ್ಕಱ ಕೇಡಿನಿಂದಮನಂತಚತುಷ್ಟಯಮನ್ರೆಡೆಯರ್ ಮುಂಡಕೇವಳಿಗಳಾಗಿರ್ದರ್

    ಚಮರಪಾಳಿ ಬಿದ್ದನಂತರ ಸಮಯ ಮೊದಲಾಗಿ ಧ್ಯಾನಿಸಿದರು. ಆಮೇಲೆ ಏಕತ್ವ, ವಿತರ್ಕ, ವಿಚಾರ – ಎಂಬ ಎರಡನೆಯ ಶುಕ್ಲಧ್ಯಾನವನ್ನು ಧ್ಯಾನಿಸಿ ಕಷಾಯವನ್ನು ಕ್ಷೀಣಗೊಳಿಸಿದರು. ಆಮೇಲೆ ಚರಮಸಮಯದಲ್ಲಿ ನಾಲ್ಕು ಕರ್ಮಗಳನ್ನು ನಾಶಗೊಳಿಸುವ ಸಂದರ್ಭದಲ್ಲಿ ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ಕೊಬ್ಬು, ಶುಕ್ಲ – ಎಂಬ ಏಳು ಬಗೆಯ ಧಾತುಗಳೂ ಅವುಗಳೊಂದಿಗೆ ನಾಶವಾದವು, ಆಮೇಲೆ ಘಾತಿಕರ್ಮಗಳು ಯಾವುವೆಂದರೆ – ಮತಿ, ಶ್ರುತ, ಅವ, ಮನಃಪರ್ಯಾಯ ಮತ್ತು ಕೇವಲ ಜ್ಞಾನ – ಎಂಬ ಐದು ಬಗೆಯ ಜ್ಞಾನಾವರಣೀಯಗಳೂ ಚಕ್ಷು, ಅಚಕ್ಷು, ಅವ, ಕೇವಲದರ್ಶನ, ನಿದ್ರಾ, ನಿದ್ರಾನಿದ್ರೆ, ಪ್ರಚಲಾ, ಪ್ರಚಲಾಪ್ರಚಲಾ, ಸ್ತಾ ನಗೃದ್ಧಿ – ಎಂಬೀ ಒಂಬತ್ತು ಬಗೆಯ ದರ್ಶನಾವರಣೀಯ ಕರ್ಮಗಳೂ ಅಂತೂ ಘಾತಿ ಅಘಾತಿ ಎಂಬ ಎರಡು ಬಗೆಯ ಕರ್ಮಗಳು ನಾಶವಾದವು. ಲೋಕದ ಮತ್ತು ಲೋಕವಲ್ಲದ ಇತರ ಕಡೆಯ ಸೂಕ್ಷ್ಮವಾದ, ನಿಗೂಢವಾದ, ದೂರದಲ್ಲಿರುವ – ಪದಾರ್ಥಗಳು ವಸ್ತುಗಳೆಲ್ಲವನ್ನೂ ಕ್ರಮ – ಕರಣ – ವ್ಯವಧಾನಗಳಿಲ್ಲದೆಯೆ, ಬಗೆಯದೆ, ತಡೆಯದೆ, ಸುತ್ತಾಡದೆ, ಪ್ರೀತಿಸದೆ, ಎಲ್ಲಾ ವಸ್ತುಗಳನ್ನು ಒಮ್ಮೆಗೇ ತಿಳಿಯತಕ್ಕ ಕಾಣತಕ್ಕ ಅನಂತ ಜ್ಞಾನವನ್ನೂ ಅನಂತದರ್ಶನವನ್ನೂ ಉಳ್ಳವರಾದರು. ಅನಂತರ ಇಪ್ಪತ್ತೆಂಟು ವಿಧದ ಉತ್ತರ ಪ್ರಕೃತಿಗಳಿಂದ ಕೂಡಿದ ಮೋಹನೀಯವೆಂಬ ಕರ್ಮನಾಶವಾಗಿ ಅನಂತಸುಖವುಳ್ಳವರಾದರು. ಆಮೇಲೆ ದಾನಾಂತರಾಯ, ಲಾಭಾಂತರಾಯ, ಭೋಗಾಂತರಾಯ, ಉಪಭೋಗಾಂತರಾಯ, ವೀರ್ಯಾಂತರಾಯ – ಎಂಬ ಐದು ಬಗೆಯ ಅಂತರಾಯ ಕರ್ಮವು ನಾಶವಾಗಿ ಅನಂತವೀರ್ಯವುಳ್ಳವರಾದರು. ಅಂತೂ ಒಮ್ಮೆಯೇ ನಾಲ್ಕು ಬಗೆಯ ಘಾತಿಕರ್ಮಗಳು ನಾಶವಾಗಿ ಅನಂತಸುಖ – ಎಂಬ ನಾಲ್ಕು ಅಂತಗಳುಳ್ಳವರೂ ಹತ್ತು ಬಗೆಯ ಮಂಡನ (ವಶಪಡಿಸುವಿಕೆ)ವುಳ್ಳ ಮುಂಡಕೇವಲಿಗಳಾಗಿ ಇದ್ದರು. ಆ ವೇಳೆಗೆ ಇಂದ್ರನ ಆಜ್ಞೆಯಂತೆ ಕುಬೇರನು ಮಾಡಿದ ನೆಲದ ಮೇಲ್ಗಡೆ ಐದು ಸಾವಿರ ಬಿಲ್ಲಿನಷ್ಟು ದೂರದಲ್ಲಿ ಆಕಾಶದಲ್ಲಿ ಒಂದು ಏಕಶಿಲೆಯಾಗಿರತಕ್ಕ ಇಂದ್ರನೀಲದ ರತ್ನದ

    ಅನ್ನೆಗಮಿಂದ್ರನ ಬೆಸದಿಂ ಧನದಂ ಮಾಡಿದ ನೆಲದ ಮೇಗೈಸಾಸಿರ ಬಿಲ್ಲುತ್ಸೇಧದೊಳಂತರಿಕ್ಷದೊಳೊಂದು ಯೋಜನ ವಿಸ್ತೀರ್ಣಮೇಕಶಿಲೆಯಪ್ಪಿಂದ್ರನೀಲ ಮಣಿಕುಟ್ಟಿಮ ಭೂಮಿಯಕ್ಕುಮದಱ ಮೇಗೆ ಏಕಯೋಜನ ವಿಸ್ತೀರ್ಣ ರತ್ನಮಯಮಪ್ಪ ಶ್ರೀಮಂಟಪಮಕ್ಕುಂ ಮತ್ತಂ ನಾಲ್ಕು ದೆಸೆಯೊಳಂ ಕನಕಮಯಮಪ್ಪ ನಾಲ್ಕುಂ ಸೋಪಾನಷಂಕ್ತಿಗಳ ನೊಡೆಯ ಭೂಮಿಯ ಮೇಗೆ ಸಿಂಹಾಸನಮಕ್ಕುಂ ಅದಱ ಮೇಗಲರ್ದ್ದ ಪೊಂದಾಮರೆಯಕ್ಕುಮದಂ ನಾಲ್ವೆರಲಂ ಮುಟ್ಟದೆ ಅದಱ ಮೇಗೆ ಪಲ್ಯಂಕದೊಳಿರ್ದೊಂದು ಬೆಳ್ಗೊಡೆಯನೊಡೆಯೊನಾಗಿ ಮೂವತ್ತೆರಡುಂ ಚಾಮರಂಗಳಿಂ ದೇವರ್ಕಳ್ ಬೀಸುತ್ತಮಿಂತಿರ್ಪನ್ನೆಗಂ

ಗಾಹೆ || ಸವ್ವೇ ಹಿ ಭವಣವಾಸೀವೆಂತರ ದೇವಾಯ ಪಳಹಫಳುತಸಿಯಾ
ಪುಂಟಿಹ ಕಪ್ಪವಾಸೀ ಸಿಹಣಿಣಾ ಎ ಇ ಜೋ ಇಸಿಯಾ

    ಎಂದೀ ಪೇೞ್ದ ಚಿಹ್ನಂಗಳಿಂದಱದು ಚತುರ್ವಿಧ ದೇವನಿಕಾಯಂ ತಂತಮ್ಮ ಪರಿವಾರಂ ಬೆರಸುಬಂದು ದಿವ್ಯಮಪ್ಪ ಗಂಧ ಪುಷ್ಪ ಧೂಪ ದೀಪಾಕ್ಷತಂಗಳಿಂದರ್ಚಿಸಿ ವಂದಿಸಿ ಸಮವಸರಣ ಕೋಷ್ಠಂಗಳೊಳ್ ತಂತಮ್ಮಿರ್ಪ ಸ್ಥಾನಂಗಳೊಳ್ ದೇವರ್ಕಳುಂ ದೇವಿಯರ್ಕಳುಂ ಚಾತುರ್ವರ್ಣ್ಯ ಸಂಘಮುಂ ಮೃಗಂಗಳುಂ ಬಳಸಿಯುಂ ಬಂದು ಧರ್ಮಮಂ ಕೇಳುತ್ತಿರ್ದರನ್ನೆಗಂ ಹಳಮುಖನು ಧರ್ಮಮಂ ಕೇಳ್ದು ನಿಂದಿರ್ದಿಂತೆಂದು ಬಿನ್ನಪಂಗೆಯ್ದಂ ಭಟಾರಾ ನಿಮಗಾಂ ಪೊಲ್ಲಕೆಯ್ದನದನೆನಗೆಕ್ಷಮಿಯಿಸಿಮೆಂದೆಱಗಿ

    ಜಗಲಿಯ ನೆಲವಾಗಿದ್ದಿತು. ಅದರ ಮೇಲೆ ಒಂದು ಯೋಜನ ವಿಸ್ತಾರವಾದ, ರತ್ನಗಳಿಂದೊಪ್ಪುವ ಕಾಂತಿಯುಕ್ತವಾದ ಮಂಟಪವಿದ್ದಿತು. ಅದಲ್ಲದೆ, ನಾಲ್ಕು ದಿಕ್ಕುಗಳಲ್ಲಿಯೂ ಚಿನ್ನದಿಂದ ಕೂಡಿದ ನಾಲ್ಕು ಮೆಟ್ಟಿಲುಗಳ ಸಾಲುಗಳಿರುವ ನೆಲದ ಮೇಲೆ ಸಿಂಹಾಸನವಿದ್ದಿತು. ಆ ಸಿಂಹಾಸನದ ಮೇಲೆ ಅರಳಿರುವ ಹೊಂದಾವರೆಯಿದ್ದಿತು. ಅದು ನಾಲ್ಕು ಬೆರಳನ್ನೂ ಮುಟ್ಟದ ಹಾಗೆ ಅದರ ಮೇಲುಗಡೆಯಲ್ಲಿ ಪದ್ಮಾಸನದಲ್ಲಿದ್ದುಕೊಂಡು ಒಂದು ಶ್ವೇತಚ್ಛತ್ರವುಳ್ಳವನಾಗಿ ದೇವತೆಗಳು ಮೂವತ್ತೆರಡು ಚಾಮರಗಳನ್ನು ಬೀಸುತ್ತಿರಲು, ಹೀಗೆ ಗುರುದತ್ತ ಋಷಿಗಳು ಇರುತ್ತದ್ದರು. ಆ ಸಂರ್ಭದಲ್ಲಿ – ಎಲ್ಲ ಭವನವಾಸಿಗಳು ಮತ್ತು ವ್ಯಂತರ ದೇವತೆಗಳು ಪಟಹಗಳ ಶಬ್ದದಿಂದ ಹೆದರಿದರು. ಕಲ್ಪವಾಸಿಗಳು ಗಂಟೆಯ ಶಬ್ದದಿಂದಲೂ ಜ್ಯೋತಿಷ್ಕದೇವತೆಗಳು ನವಿಲುಗಳ ಕೇಗುವಿಕೆಗಳಿಂದಲೂ ಹೆದರಿದರು. ಹೀಗೆ ಹೇಳಿದ ಚಿಹ್ನೆಗಳಿಂದ ತಿಳಿದುಕೊಂಡು ನಾಲ್ಕು ವಿಧದ ದೇವತಾ ಸಮೂಹದವರು ತಮ್ಮ ತಮ್ಮ ಪರಿವಾರ ಸಮೇತ ಬಂದು ದಿವ್ಯವಾದ ಗಂಧ ಪುಷ್ಪ ಧೂಪ ದೀಪ ಅಕ್ಷತೆಗಳಿಂದ ಪೂಜಿಸಿ ನಮಸ್ಕರಿಸಿ ಜಿನನು ಉಪದೇಶಮಾಡತಕ್ಕ ಸಭಾಭವನದ ಪ್ರದೇಶಗಳಲ್ಲಿ ತಾವು ತಾವು ಇರತಕ್ಕ ಸ್ಥಳಗಳಲ್ಲಿ ದೇವರುಗಳೂ ದೇವಿಯರುಗಳೂ ನಾಲ್ಕು ವರ್ಣಗಳ ಸಂಘವೂ ಮೃಗಗಳೂ ಸುತ್ತಲೂ ಕವಿದುಕೊಂಡು ಬಂದು ಧರ್ಮವನ್ನು ಕೇಳುತ್ತಿದ್ದವು. ಆ ವೇಳೆಯಲ್ಲಿ ಹಳಮುಖನೂ ಧರ್ಮವನ್ನು ಕೇಳಿಕೊಂಡು ನಿಂತಿದ್ದು ಈ ರೀತಿಯಗಿ ವಿಜ್ಞಾಪಿಸಿದನು – “ಋಷಿಗಳೇ, ನಿಮಗೆ ನಾನು ಕೆಟ್ಟದನ್ನು ಮಾಡಿದೆನು. ಅದನ್ನು ನೀವು ಕ್ಷಮಿಸಬೇಕು ಎಂದು ಸಾಷ್ಟಾಂಗ ವಂದನೆ

    ಪೊಡೆವಟ್ಟೊಡೆ ಭಟಾರರೆಂದರ್ ನಿನಗೇನುಂ ದೋಷಮಿಲ್ಲೆಂದಾತನ ತಮ್ಮ ಭವಂಗಳಂ ಪೇೞ್ದೊಡೆ ಕೇಳ್ದೀ ಗೆಯ್ದ ಪಾಪಮಿಂತಲ್ಲದೆ ಪಿಂಗದೆನಗೆ ದೀಕ್ಷೆಯಂ ದಯೆಗೆಯ್ಯಿಮೆಂದು ಬೇಡಿ ತಪಂಬಟ್ಟು ಶಿಷ್ಯನಾಗಿ ಆಗಮಂಗಳನೋದುತ್ತಿರ್ದನಿತ್ತ ಗುರುದತ್ತ ಕೇವಳಿಯುಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಭವ್ಯವರ ಪುಂಡರೀಕರ್ಕಳ್ಗೆ ಧರ್ಮಾಮೃತಮಂ ಕಱೆಯುತ್ತಂ ಪಲಂಬರುಮಂ ಧರ್ಮಂಗೊಳಿಸುತ್ತಂ ಮತ್ತಮಾ ಪಲ್ಲಿಖೇಮೆಂಬೂರ್ಗೆ ಬಂದು ಯೋಗನಿರೋಧಂಗೆಯ್ದು ಅಯೋಗಿ ಭಟಾರರಾಗಿ ಪಂಚ ಹ್ರಸ್ವಾಕ್ಷರೋಚ್ಚಾರಣ ಮಾತ್ರ ಕಾಲದಿಂದಾಯುರ್ನಾಮಗೋತ್ರ ವೇದನೀಯಮೆಂಬ ನಾಲ್ಕುಮಘಾತಿಕರ್ಮಂಗಳನೊರ್ಮೊದಲೆ ಕಿಡಿಸಿ ಏಕ ಸಮಯದೊಳಗೆ ಮೋಕ್ಷಸ್ಥಾನದೊಳ್ ನೆಲಸಿ ಜಾತಿ ಜರಾಮರಣಂಗಳುಂ ಪಸಿವುಂ ನೀರೞ್ಕೆ ಶೀತೋಷ್ಣವಾತಂ ಮೊದಲಾಗೊಡೆಯ ಆವ ಬಾಧೆಗಳಿಲ್ಲದ ಅನಂತಜ್ಞಾನಮನಂತ ದರ್ಶನಮನಂತಸುಖಮನಂತವೀರ್ಯದೊಳ್ ಕೂಡಿ ಎಲ್ಲಾ ಕಾಲಮುಂ ಸುಖಿಯಾಗಿರ್ದರ್

ಗಾಹೆ || ಅರುಜಮಮರಣಂ ಮಧುರಂ ಅಕ್ಖಯ ಸೊಕ್ಖಂ ಅಣೋವಮಂ ಪತ್ತಾ
ಅವ್ವಾಬಾಧಮಣಂತಂ ಅಣಗಾರಾ ಕಾಲಮಚ್ಛಂತಿ

    ಮತ್ತೆ ಹಳಮುಖರಿಸಿಯರುಮಾಗಮಂಗಳೆಲ್ಲಮಂ ಕಲ್ತು ಏಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕೊಂಕಣವಿಷಯಮನೆಯ್ದಿಯಾ

    ಮಾಡಲು, ಋಷಿಗಳು “ನಿನಗೇನೂ ದೋಷವಿಲ್ಲ* – ಎಂದು ಆತನ ಜನ್ಮವೃತ್ತಾಂತವನ್ನು ಹೇಳಲು ಕೇಳಿ “ನಾನು ಮಾಡಿದ ಈ ಪಾಪಗಳು ಹೀಗಲ್ಲದೆ ಪರಿಹಾರವಾಗವು. ನನಗೆ ದೀಕ್ಷೆಯನ್ನು ದಯಪಾಲಿಸಿರಿ* ಎಂದು ಬೇಡಿ ತಪಸ್ಸನ್ನು ಉಪದೇಶ ಪಡೆದು ಶಿಷ್ಯನಾಗಿ ಶಾಸಗಳನ್ನು ಅಭ್ಯಾಸಮಾಡುತ್ತಿದ್ದನು. ಇತ್ತ ಗುರುದತ್ತರು ಕೇವಲ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ ಭವ್ಯರೆಂಬ ಶ್ರೇಷ್ಠರಾದ ತಾವರೆಗಳಿಗೆ ಧರ್ಮಾಮೃತವನ್ನು ಸುರಿಸುತ್ತ ಹಲವರನ್ನು ಧರ್ಮನಿಷ್ಠರನ್ನಾಗಿ ಮಾಡುತ್ತ ಆಮೇಲೆ ಪಲ್ಲಿಖೇಡವೆಂಬ ಊರಿಗೆ ಬಂದು ಯೋಗವನ್ನು ಬಲವಂತದಿಂದ ಮಾಡಿ, ಯೋಗಿಸಂನ್ಯಾಸಿಗಳಾಗಿ ಐದು ಹ್ರಸ್ವಾಕ್ಷರಗಳನ್ನು ಉಚ್ಚರಿಸಿದ ಮಾತ್ರಾಕಾಲದಿಂದ ಆಯುಸ್ಸು, ನಾಮ, ಗೋತ್ರ, ವೇದನೀಚಿi – ಎಂಬ ನಾಲ್ಕು ಬಗೆಯ ಅಘಾತಿಕರ್ಮಗಳನ್ನು ಏಕಕಾಲದಲ್ಲೇ ನಾಶಮಾಡಿ ಒಮ್ಮೆಗೇ ಮೋಕ್ಷಸ್ಥಾನದಲ್ಲಿ ನಿಂತು – ಜನ್ಮ, ಮುಪ್ಪು, ಸಾವು, ಹಸಿವು, ಬಾಯಾರಿಕೆ, ಶೀತ, ಉಷ್ಣ, ವಾಯು – ಮುಂತಾಗಿರುವ ಯಾವ ತೊಂದರೆಗಳೂ ಇಲ್ಲದ ಅನಂತಜ್ಞಾನ, ಅನಂತದರ್ಶನ, ಅನಂತಸುಖ, ಅನಂತವೀರ್ಯ – ಎಂಬ ಅನಂತ ಚತುಷ್ಟಯದಲ್ಲಿ ಸೇರಿ ಎಲ್ಲಾ ಕಾಲವೂ ಸುಖದಿಂದ ಇದ್ದರು. (ಮುಕ್ತರಾದವರು ರೋಗವಿಲ್ಲದ, ಮರಣವಿಲ್ಲದ, ಮಧುರವಾದ, ಅಸದೃಶವಾದ ಯಾವ ಕಡೆಯೂ ಇಲ್ಲದ ಅಕ್ಷಯ ಸುಖವನ್ನು ಅನಂತವಾದ ಭವಿಷ್ಯತ್ತಿನವರೆಗೂ ಪಡೆಯುತ್ತಾರೆ.) ಆಮೇಲೆ ಹಳಮುಖ ಋಷಿಗಳು ಶಾಸ್ತ್ರಗಳೆಲ್ಲವನ್ನೂ ಕಲಿತು ಒಬ್ಬರೇ ಸಂಚಾರ ಮಾಡುವವರಾಗಿ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂ ಭಾಗಗಳಲ್ಲಿ ಸಂಚಾರ ಮಾಡುತ್ತ ಕೊಂಕಣ ದೇಶಕ್ಕೆ ಹೋದರ. ಆ ನಾಡಿನಲ್ಲಿ ಹೋಗುತ್ತ

    ನಾಡೊಳ್ ಪೋಗತ್ತಂ ಊರನೆಯ್ದದೆಡೆಯೊಳ್ ಪೊಲದೊಳ್ ನೇಸರ್ಪಟ್ಟೊಡೆ ಯತ್ರಾಸ್ತಮಿತವಾಸಿಯಲ್ಲಿ ನೇಸರ್ಪಟ್ಟೊಡಲ್ಲಿಯೆ ನಿಲ್ವರಪ್ಪುದಱಂ ಕುಮ್ಮರಿಯಂ ಸುಡಲೆಂದು ಕಡಿದೊಟ್ಟಿದ ಮರಂಗಳ ಮೇಗಿರುಳ್ ದೇವರಂ ಬಂದಿಸಿ ನಿಯಮಂಗೆಯ್ದು ಜೋಗಭಕ್ತಿಯಿಂದಿರ್ದರನ್ನೆಗಂ ಕುಮ್ಮರಿಯಂ ಸುಡಲೆಂದು ತುಂಗಭದ್ರನೆಂಬ ಪೋಡುಂಗಾಱಂ ಸೊರ್ಕಿ ತೂಂಕಡಿಂದಿರುಳ್ ಕೞಂಗಳ್ ಕಡುಗತ್ತಲೆಯೊಳ್ ಬಂದು ಕಿಚ್ಚಂ ತಗುೞಪೋದೊನಾ ಕಿಚ್ಚಿನಿಂದಂ ಹಳಮುಖರಿಸಿಯುಂ ಬೇಯುತ್ತಂ ಧರ್ಮಧ್ಯಾನಗಳಂ ಧ್ಯಾನಿಸಿ ಶುಭ ಪರಿಣಾಮದಿಂ ಮುಡಿಪಿ ಪದಿನಾಱನೆಯಚ್ಯುತ ಕಲ್ಪದೊಳ್ ಇರ್ಪತ್ತೆರಡು ಸಾಗರೋಪಮಾಯುಷ್ಯಮನ್ರೆಡೆಯೊನಚ್ಯುತೇಂದ್ರನಾಗಿ ಪುಟ್ಟಿದೊಂ ಮತ್ತಿತ್ತ ತುಂಗಭದ್ರನೆಂಬೊಂ ಪೋಡುಂಗಾಱಂ ನೇಸರ್ಮೂಡೆ ಕುಮ್ಮರಿಯುಂ ನೋಡಲೆಂದು ಪೋದನನ್ನೆಗಂ ಸತ್ತಿರ್ದ ರಿಸಿಯಂ ಕಂಡು ಪಂಚಮಹಾಪಾತಕನೆಂ ನಿಷ್ಕಾರಣಮಱಯದೆ ರಿಸಿಯರಂ ಕೊಂದೆನೆಂದು ನಿಂದಣೆ ಗರುಹಣೆ ಗೆಯ್ದು ತಾನುಮಲ್ಲಿಯೆ ಕಿಚ್ಚಂ ಪೊಕ್ಕು ಸತ್ತು ವ್ಯಂತರದೇವನಾಗಿ ಪುಟ್ಟಿ ಆಯುಷ್ಯಾಂತದೊಳ್ ಬಂದಿಲ್ಲಿ ವಿಂಧ್ಯಾಟವಿಯೊಳಾದಮಾನುಂ ರೌದ್ರಮಪ್ಪ ಬಿಳಿಯ ಪೇರಾನೆಯಾಗಿ ಪುಟ್ಟಿ ಬಟ್ಟೆಯೊಳ್ ಪೋಪ ಬರ್ಪ ಜನಂಗಳನೆೞ್ಬಟ್ಟಿ ಕೊಲುತ್ತಮಿರ್ಪುದಂ ಹಳಮುಖಚರನಪ್ಪ ಅಚ್ಯುತೇಂದ್ರನವಜ್ಞಾನದಿಂ ದಱದು ಬಂದು ಧರ್ಮಮಂ ಪೇೞ್ದು ಪ್ರತಿಬೋಸಿ ಶ್ರಾವಕವ್ರತಂಗಳ ಫಲಮಂ ಪೇೞ್ದು

    ಊರಿಗೆ ಹೋಗದೆ ಮಧ್ಯದಲ್ಲಿ ಒಂದು ಹೊಲಕ್ಕೆ ತಲುಪಿದಾಗ ಸೂರ್ಯನು ಮುಳುಗಿದನು. ಯತ್ರಾಸ್ತಮಿತವಾಸಿಯಾದ ಸಂನ್ಯಾಸಿಗಳು ಎಲ್ಲಿ ಸೂರ್ಯಾಸ್ತವಾಯಿತೋ ಅಲ್ಲಿಯೇ ನಿಲ್ಲುವರಾದುದರಿಂದ ಕುಮ್ಮರಿಯನ್ನು ಸುಡುವುದಕ್ಕಾಗಿ ಕಡಿದು ರಾಶಿ ಹಾಕಿದ ಮರಗಳ ಮೇಲೆ ರಾತ್ರಿಯಲ್ಲಿ ದೇವನ್ನು ವಂದಿಸಿ ನಿಯಮಗಳನ್ನುಆಚರಿಸಿ ಯೋಗಯುಕ್ತವಾದ ಭಕ್ತಿಯಿಂದ ಇದ್ದರು. ಹೀಗಿರಲು, ಕಾಡುಕತ್ತರಿಸುವವನಾದ ತುಂಗಭದ್ರನೆಂಬವನು ಕುಮರಿಯನ್ನು ಸುಡುವುದಕ್ಕಾಗಿ ಅಮಲೇರಿದ್ದ ನಿದ್ದೆಯಿಂದ, ರಾತ್ರಿ ಅಮಾವಾಸ್ಯೆಯ ತೀವ್ರವಾದ ಕತ್ತಲೆಯಲ್ಲಿ ಬಂದು ಮರದ ರಾಶಿಗೆ ಬೆಂಕಿಯನ್ನು ಹಚ್ಚಿ ಹೋದನು. ಆ ಬೆಂಕಿಯಿಂದ ಹಳಮುಖ ಋಷಿ ಬೇಯುತ್ತಿರುವಾಗಲೇ ಆಜ್ಞಾವಿಚಯ, ಅಪಾಯ ವಿಚಯ, ವಿಪಾಕ ವಿಚಯ, ಸಂಸ್ಥಾನ ವಿಚಯ – ಎಂಬ ಧರ್ಮಧ್ಯಾನಗಳನ್ನು ಧ್ಯಾನಿಸಿ ಶುಭ ಪರಿಣಾಮದಿಂದ ಸತ್ತು, ಹದಿನಾರನೆಯ ಅಚ್ಯುತವೆಂಬ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರವನ್ನು ಹೋಲುವ ಪರಿಮಾಣವುಳ್ಳ ಆಯುಷ್ಯವಿರತಕ್ಕ ಅಚ್ಚುತೇಂದ್ರನಾಗಿ ಹುಟ್ಟಿದರು. ಆಮೇಲೆ ಇತ್ತ ಕಾಡುಕಡಿವವನಾದ ತುಂಗಭದ್ರನು ಸೂರ್ಯೋದಯವಾಗಲು ಕುಮ್ಮರಿಯನ್ನು ನೋಡುವುದಕ್ಕಾಗಿ ಹೋದನು. ಆಗ ಸತ್ತು ಹೋಗಿದ್ದ ಋಷಿಯನ್ನು ಕಂಡು, “ಪಂಚಮಹಾಪಾಪ ಮಾಡಿದವನಾಗಿದ್ದೇನೆ. ಏನೂ ಕಾರಣವಿಲ್ಲದೆ, ತಿಳಿಯದೆ ಋಷಿಗಳನ್ನು ಕೊಂದೆನು* ಎಂದು ನಿಂದನೆ ಗರ್ಹಣೆ (ಬೈಗುಳು)ಗಳನ್ನು ಮಾಡಿಕೊಂಡು, ತಾನೂ ಅಲ್ಲಿಯೇ ಅಗ್ನಿಪ್ರವೇಶ ಮಾಡಿ ಸತ್ತು ವ್ಯಂತರ ದೇವನಾಗಿ ಹುಟ್ಟಿದನು. ಅಲ್ಲಿ ಆಯುಷ್ಯತೀರಲು ಭೂಲೋಕಕ್ಕೆ ಬಂದು ವಿಂಧ್ಯೆಯ ಕಾಡಿನಲ್ಲಿ ಅತ್ಯಂತ ಭಯಂಕರವಾದ ಬಿಳಿಯ ಮಹಾಗಜವಾಗಿ ಹುಟ್ಟಿ, ಆ ಆನೆ ದಾರಿಯಲ್ಲಿ ಹೋಗುವ ಬರುವ ಜನರನ್ನು ಎಬ್ಬಿಸಿ ಓಡಿಸಿ ಕೊಲ್ಲುತ್ತ ಇದ್ದಿತು. ಇದನ್ನು ಹಳಮುಖನಾಗಿ ಹಿಂದೆ ವರ್ತಿಸಿದ್ದ ಅಚ್ಯುತೇಂದ್ರನು ಅವಜ್ಞಾನದಿಂದ ತಿಳಿದು ಬಂದು, ಧರ್ಮವನ್ನು ತಿಳಿಸಿ, ಉಪದೇಶಿಸಿ ಶ್ರಾವಕವ್ರತಗಳಿಂದಾಗತಕ್ಕ ಫಲವನ್ನು ಹೇಳಿ ಜೈನಧರ್ಮದಲ್ಲಿ ಪರಿಪೂರ್ಣವಾದ

    ಸಮ್ಯಕ್ತ ಪೂರ್ವಕಂ ಬ್ರತಂಗಳಂ ಕೈಕೊಳಿಸಿ ಪೋದನಾನೆಯುಂ ಕೊಲೆಯನುೞದು ಮಧು ಮದ್ಯಮಾಂಸಂಗಳಂ ತೊಱೆದು ಪಷ್ಠಾಷ್ಟಮ ದಶಮ ದ್ವಾದಶಾದಿ ನೋಂಪಿಗಳಂ ನೋನುತ್ತಂ ಪಾರಿಸುವ ದಿವಸಂ ಪ್ರಾಸುಕಮಾಗುತಿರ್ದ ತಱಗೆಲೆಗಳಂ ಮೇದು ಗಜಯೂಧಮುಂಡು ಪೋದ ಬೞಕ್ಕೆ ಕದಡಿದ ನೀರ್ಗಳನುಂಡಿಂತು ಪಲಕಾಲಂ ಸಂಯಮಮೆಂಬ ಬ್ರತಮಂ ಸಲಿಸುತ್ತಮಿರ್ಪನ್ನೆಗಂ ಮತ್ತೊಂದು ದಿವಸಮಡವಿಯೊಳ್ ಬೇಸಗೆಯ ದಿನಂ ಕಾೞಚ್ಚು ತಗುಳ್ದೊಡೆ ಕಿಚ್ಚಿಂಗಂಜಿ ಪಿರಿದೊಂದಾಲದ ಮರದ ಕೆೞಗೆ ಗಜಯೂಧದೊಡನೆ ಬಂದಿರ್ದುದಾ ಮರದೊಣಗಿದ ಕೊಂಬುಗಳೊಳ್ ಕಿಚ್ಚು ತಗುಳ್ದು ತನ್ನಂ ಸುಡುವನ್ನೆಗಮೊಂದು ಮೊಲಂ ಕಿಚ್ಚಿನಿಂದಂ ಬೆಂದುರಿಯ ಬಣ್ಣಮಾಗಿ ಪರಿತಂದು ತನ್ನ ಕಾಲ ಕೆೞಗೆ ಪೊಕ್ಕೊಡದಂ ಕಂಡು ದಯೆಯಿಂದಕ್ಕಟ ಅಯ್ಯೋ ಎಂದು ಕಾರುಣ್ಯಮಪ್ಪ ಮನದೊಳ್ ಕೂಡಿ ಸತ್ತು ಪನ್ನೆರಡನೆಯ ಸಹಸ್ರಾರ ಕಲ್ಪದೊಳ್ ಪದ್ಮಗುಲ್ಮಮೆಂಬ ವಿಮಾನದೊಳ್ ಪದಿನೆಂಟು ಸಾಗರೋಪಮಾಯಷ್ಯಮನೊಡೆಯೊಂ ಸಾಮಾನಿಕ ದೇವನಾಗಿ ಪುಟ್ಟಿದೊಂ ಪುಟ್ಟಿ ದೇವಲೋಕದ ಸುಖಮಂ ಪಲಕಾಲಮನುಭವಿಸಿಯಾಯುಷ್ಯಾಂತದೊಳ್ ಬೞ ಬಂದಿಲ್ಲಿ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬುದು ಪೊೞಲದನಾಳ್ವೊಂ ಶ್ರೇಣಿಕ ಮಹಾರಾಜನೆಂಬೊನರಸಂ ಮಹಾಮಂಡಳಿಕನೆಣಾಸಿರಮಕುಟಬದ್ಧರ್ಕಳ್ಗ

    ನಂಬಿಕೆಯೊಂದಿಗೆ ವ್ರತಗಳನ್ನು ಸ್ವೀಕಾರಗೊಳಿಸಿ ತೆರಳಿದನು. ಆನೆಯು ಕೊಲೆ ಮಾಡುವುದನ್ನು ಬಿಟ್ಟು, ಮಧು ಮದ್ಯ ಮಾಂಸ ಸೇವನೆಯನ್ನೂ ಬಿಟ್ಟು ಆರನೆಯ ಎಂಟನೆಯ ಹತ್ತನೆಯ ಹನ್ನೆರಡನೆಯದೇ ಮುಂತಾದ ವ್ರತಗಳನ್ನು ಆಚರಿಸುತ್ತ ಪಾರಣೆ ಮಾಡುವ ದಿವಸ ಜೀವರಹಿತ (ನಿರ್ಮಲ)ವಾಗಿದ್ದ ತರಗೆಲೆಗಳನ್ನು ಮೇದು ಆನೆಗಳ ಹಿಂಡು ಸೇವಿಸಿ ಹೋದನಂತರ ಕದಡಿದ ನೀರುಗಳನ್ನು ಸೇವಿಸಿ – ಹೀಗೆ ಹಲವು ಕಾಲದ ತನಕ ಸಂಯಮ ವ್ರತವನ್ನು ನಡೆಸುತ್ತಾ ಇದ್ದಿತು. ಆನಂತರ ಒಂದು ದಿವಸ ಕಾಡಿನಲ್ಲಿ ಬೇಸಗೆಯ ದಿನದಂದು ಕಾಡುಗಿಚ್ಚು ಅಟ್ಟಿಕೊಂಡು ಬಂದಿತು. ಆ ಕಾಡುಗಿಚ್ಚಿಗೆ ಹೆದರಿ ಆನೆಯು ದೊಡ್ಡದಾದ ಒಂದು ಆಲದ ಮರದ ಕೆಳಗೆ ಆನೆಗಳ ಹಿಂಡಿನೊಡನೆ ಬಂದಿದ್ದಿತು. ಆ ಮರದ ಒಣಗಿದ ಕೊಂಬೆಗಳಿಗೆ ಬೆಂಕಿ ತಗಲಿ ಅಲ್ಲಿದ್ದ ಒಂದು ಮೊಲದ ಮೈಸುಡುತ್ತಿರಲು, ಆ ಮೊಲವು ಬೆಂಕಿಯಿಂದ ಬೆಂದ ಬೆಂಕಿಯ ಬಣ್ಣವಾಗಿ ಬಂದು ಆ ಆನೆಯ ಕಾಲ ಕೆಳಗಡೆ ಹೊಕ್ಕಿತು. ಅದನ್ನು ಆನೆ ಕಂಡು, ಕರುಣೆಯಿಂದ “ಅಕ್ಕಟಾ, ಅಯ್ಯೋ ಎಂದು ದಯೆಯಿಂದ ಕೂಡಿದ ಮನಸ್ಸು ಉಳ್ಳುದಾಗಿ ಸತ್ತು ಹನ್ನೆರಡನೆಯ ಸಹಸ್ರಾರ ಕಲ್ಪದಲ್ಲಿ ಪದ್ಮಗುಲ್ಮವೆಂಬ ಏಳು ಅಂತಸ್ತಿನ ಅರಮನೆಯಲ್ಲಿ ಹದಿನೆಂಟು ಸಾಗರಕ್ಕೆ ಸಮಾನವಾದ ಆಯುಷ್ಯವನ್ನುಳ್ಳ ಸಾಮಾನಿಕ ದೇವನಾಗಿ ಹುಟ್ಟಿದನು. ಹಾಗೆ ಹುಟ್ಟಿ ದೇವಲೋಕದ ಸುಖವನ್ನು ಹಲವು ಕಾಲದವರೆಗೆ ಅನುಭವಿಸಿ ಆಯುಷ್ಯವು ತೀರಿದಾಗ ಕೆಳಕ್ಕೆ ಜಾರಿ ಬಂದನು. ಇಲ್ಲಿ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿನ ರಾಜಗೃಹವೆಂಬ ಪಟ್ಟಣದಲ್ಲಿ ಆಳತಕ್ಕ ಶ್ರೇಣಿಕ ಮಹಾರಾಜನೆಂಬ ಅರಸನು ಮಹಾಮಾಂಡಳಿಕನಾಗಿ ಎಂಟು ಸಾವಿರ ಮಂದಿ ಕಿರೀಟಧಾರಿ ರಾಜರಿಗೂ ಎಂಟು ಸಾವಿರ ಮಂದಿ ರಾಣಿಯರಿಗೂ ಒಡೆಯನಾಗಿದ್ದಾನೆ. ಆತನಿಗೆ ಎಂಟು ಮಂದಿ

    ಮೆಣಾಸಿರ್ವರ್ ಅರಸಿಯರ್ಕಳ್ಗಮೆಱೆಯನಪ್ಪೊನಾತಂಗೆ ಎಣ್ಬರ್ ಮಹಾದೇವಿಯರವರೊಳಗೆ ಧನಶ್ರೀಯೆಂಬ ಮಹಾದೇವಿಯ ಗರ್ಭದೊಳ್ ನೆಲಸಿದನ್ ಆಕೆಗಮಿಂತಪ್ಪುದೊಂದು ಬಯಕೆಯಾದಪುದ ಮೞೆಗಾಲದೊಳಾನೆಯನೇಱಯೆಲ್ಲಾ ಪಡೆಯೊಡನೆಯಡವಿಗೆ ಪೋಗಿಯಾಲದ ಮರದ ಪಣ್ಗಳಂ ಕೊಯ್ವಂತಪ್ಪ ಮತ್ತೆ ಬಯ್ಯಿರುಳಿನ ಮನೋಹರಿಯೆಂಬ ಜಾವದಾಗಳ್ ಬಿಳಿದಪ್ಪ ಕಾಡಾನೆಯಂ ಕಾಣ್ಬುದುಮಿಂತೀ ಬಯಕೆಯುಂ ಕನಸುಮನರಸಂಗೆ ಪೇೞ್ದೊಡರಸಂ ಕಾಲಮಲ್ಲದ ಕಾಲದೊಳ್ ಮೞೆಗಾಲಮನೆಂತು ಪಡೆಯಲಕ್ಕುಮೀ ಬಯಕೆಯಂ ತೀರ್ಚುಚುದರಿದೆಂದು ಚಿಂತಾಕುಳಿತಮನದವನಾಗಿರ್ದು ತನ್ನ ಮಗನಪ್ಪಭಯಕುಮಾರಂಗೆ ಬೞಯಟ್ಟಿ ಬರಿಸಿಯರಸಿಯ ಬಯಕೆಯ ಪಾಂಗೆಲ್ಲಮಂ ಪೇೞದರ್ಕೇಗೆಯ್ವಮೆಂದರಸಂ ಬೆಸಗೊಂಡೊಡಭಯಕುಮಾನುಪಾಯಮಂ ಬಗೆಯಲಕ್ಕುಂ ನೀಮೇನುಂ ಚಿಂತಿಸಲ್ವೇಡ ನಿಶ್ಚಿಂತರಾಗಿರಿಮೆಂದರಸನಂ ಸಂತವಿಸಿ ಪೋದನ್ ಅನ್ನೆಗಮಿತ್ತ ವಿಜಯರ್ಧಪರ್ವತದ ದಕ್ಷಿಣ ಶ್ರೇಣಿಯೊಳ್ ಗಗನತಿಲಕಮೆಂಬುದು ಪೊೞಲದನಾಳ್ವೊಂ ಮನೋಗತಿಯೆಂಬ ವಿದ್ಯಾಧರನಾತನ ಮಹಾದೇವಿ ಕನಕಮಾಳೆಯೆಂಬೊಳಾಯಿರ್ವರ್ಗ್ಗಂ ಮಗಳ್ ಕನಕಚಿತ್ರೆಯೆಂಬೊಳ್ ಕನ್ನೆಯಾಕೆಯೊಂದು ದಿವಸಂ ಪೇರಡವಿಗೆ ವೋಗಿ ವಿದ್ಯೆಯಂ ಸಾಸುತ್ತಿರ್ಪನ್ನೆಗಂ ಚಿಂತಾಗತಿಯೆಂಬ ವಿದ್ಯಾಧರನಾಕೆಯ ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವಮಂ ಕಂಡಾಟಿಸಿ ನೀನೆನಗೆ ಪೆಂಡತಿಯಾಗೆಂದು ಕೈಯಂ ಪಿಡಿದು ಕಾಡುತ್ತಿರ್ಪನ್ನೆಗಮಾಕೆಯ ತಂದೆ ಮಗಳ್ ಪಿರಿದುಂ ಬೇಗಂ ತಡೆದಳೆಂದವಳೋಕಿನೀ ವಿದ್ಯೆಯಂ ನೋಡಲಟ್ಟಿದೊಡದು ನೋಡಿ ಬಂದು ಕೂಸಂ ಚಿಂತಾಗತಿಯೆಂಬ

    ಮಹಾರಾಣಿಯರು. ಅವರಲ್ಲಿ ಧನಶ್ರೀ ಎಂಬ ಮಹಾರಾಣಿಯ ಬಸುರಲ್ಲಿ ದೇವಲೋಕದಿಂದ ಜಾರಿಬಂದ ಜೀವನು ಹುಟ್ಟಿದನು. ಧನಶ್ರೀಗೆ ಈ ರೀತಿಯ ಬಯಕೆಯಾಯಿತು – ಮಳೆಗಾಲದಲ್ಲಿ ಆನೆಯ ಮೇಲೆ ಕುಳಿತು ಎಲ್ಲಾ ಸೈನ್ಯದೊಡನೆ ಕಾಡಿಗೆ ಹೋಗಿ ಆಲದ ಮರದ ಹಣ್ಣುಗಳನ್ನು ಕೊಯ್ಯುವಂತಹ, ಆಮೇಲೆ ಸಂಜೆಯನಂತರದ ರಾತ್ರಿಯ ಮನೋಹರಿಯೆಂಬ ಜಾವದಲ್ಲಿ ಬಿಳಿಯದ ಕಾಡಾನೆಯನ್ನು ಕಾಣುವುದು – ಇಂತಹ ಈ ಬಯಕೆಯನ್ನೂ ಕನಸನ್ನೂ ಅವಳು ರಾಜನಿಗೆ ಹೇಳಿದಳು. ಆಗ ರಾಜನು ಕಾಲವಲ್ಲದ ಕಾಲದಲ್ಲಿ ಮಳೆಗಾಲವನ್ನು ಹೇಗೆ ಪಡೆಯಬಹುದು ? ಈ ಬಯಕೆಯನ್ನು ಈಡೇರಿಸುವುದು ಅಸಾಧ್ಯವೆಂದು ಬೆಂಕಿಯಿಂದ ಕದಡೆದ ಮನಸ್ಸಿನವನಾಗಿದ್ದುಕೊಂಡು ತನ್ನ ಮಗನಾದ ಅಭಯಕುಮಾರನ ಬಳಿಗೆ ಜನ ಕಳುಹಿಸಿ ಅವನನ್ನು ಬರಮಾಡಿ ರಾಣಿಯ ಬಯಕೆಯ ರೀತಿಯನ್ನು ಎಲ್ಲವನ್ನೂ ತಿಳಿಸಿ ‘ಇದಕ್ಕೆ ಏನು ಮಾಡೋಣ?’ – ಎಂದು ಅರಸನು ಕೇಳಿದನು. ಅದಕ್ಕೆ ಅಭಯಕುಮಾರನು – “ಇದಕ್ಕೆ ಉಪಾಯವನ್ನು ಯೋಚಿಸಲು ಸಾಧ್ಯವಿದೆ. ನೀವು ಏನೂ ಚಿಂತಿಸಬೇಕಾಗಿಲ್ಲ, ನಿಶ್ಚಿಂತರಾಗಿರಿ ಎಂದು ರಾಜನನ್ನು ಸಮಾಧಾನಪಡಿಸಿ ಹೋದನು. ಹೀಗಿರಲು, ಇತ್ತ ವಿಜಯಾರ್ಧ ಪರ್ವತದ ದಕ್ಷಿಣದ ಶ್ರೇಣಿಯಲ್ಲಿ ಗಗನತಿಲಕವೆಂಬ ಪಟ್ಟಣವಿದೆ. ಅದನ್ನು ಮನೋಗತಿಯೆಂಬ ವಿದ್ಯಾಧರನು ಆಳುತ್ತಿದ್ದನು. ಅವನಿಗೆ ಕನಕಮಾಲೆಯೆಂಬ ಮಹಾರಾಣಿಯಿದ್ದಳು. ಆ ದಂಪತಿಗಳಿಗೆ ಕನಕಚಿತ್ರೆ ಎಂಬ ಕನ್ಯೆ ಮಗಳಾಗಿದ್ದಳು. ಅಕೆ ಒಂದು ದಿವಸ ದೊಡ್ಡ ಕಾಡಿಗೆ ಹೋಗಿ ಅಲ್ಲಿ ವಿದ್ಯಾಸಾಧನೆಯನ್ನು ಮಾಡುತ್ತದ್ದಳು. ಆ ಸಂದರ್ಭದಲ್ಲಿ ಚಿಂತಾಗತಿಯೆಂಬ ವಿದ್ಯಾಧರನು ಅವಳ ರೂಪವನ್ನೂ ಲಾವಣ್ಯವನ್ನೂ

    ವಿದ್ಯಾಧರಂ ಕಾಡಿದಪ್ಪೊನೆಂದು ಪೇೞ್ದೊಡದಂ ಕೇಳ್ದು ಮನೋಗತಿ ಪ್ರಭೃತಿ ವಿದ್ಯಾಧರರ್ಕಳೆಲ್ಲಂ ಕೂಡಿ ಪೋಗಿಯಾತನ ವಿದ್ಯೆಯೆಲ್ಲಮಂ ಕೊಱೆದಿಕ್ಕಿ ಪನ್ನೆರಡುವರುಷಂಬರಂ ಭೂಮಿಗೋಚರನಾಗಿರೆಂದು ಶಾಪಂಗೊಟ್ಟೊಡಾತನುಮದಂ ನೀಗಲ್ವೇಡಿ ರಾಜಗೃಹಕ್ಕೆ ವಂದು ಪೆಂಡವಾಸದಗ್ಗಳದ ಸೂಳೆ ಕಾಮಲತೆಯೆಂಬೊಳಾಕೆಯೊಡನೆ ಬಾೞುತ್ತಮಾಕೆಯ ಮನೆಚಿiಳ್ ಪನ್ನೆರಡು ವರುಷಂಬರೆಗಮಿರ್ದು ಅವಯ ವರ್ಷಂ ನೆಱೆ ದೊಡೆ ತನ್ನ ವಿದ್ಯಾಧರಶ್ರೇಣಿಗೆ ವೋಗಲ್ ಬಗೆದೊಂದು ದಿವಸಂ ಶ್ಮಶಾನಕ್ಕೆ ವೋಗಿ ಇರುಳ್ ವಿದ್ಯೆಗಳೆಲ್ಲಂ ಸಾಸುವಲ್ಲಿಯಾಕಾಶಕ್ಕೆ ನೆಗೆಯುತುಂ ಬೀೞುತುಮಿರ್ಪನ್ನೆಗಮಭಯಕುಮಾರಂ ತಂದೆಯ ಬೆಸನಂ ತೀರ್ಚಲೆಂದುಪಾಯಮಂ ಬಗೆಯಲ್ವೇಡಿ ಕೞಂಗಳೊಳ್ ನಟ್ಟನಡುವಿರುಳೊಳ್ ಮಣಿಖೇಟಮನುರದೊಳ್ ಸಾರ್ಚಿ ಕಿೞ್ತ ಬಾಳ್ವೆರಸು ಪೊಱಮಟ್ಟು ಪೊೞಲೊಳೆಲ್ಲಂ ತೊೞಲ್ದು ಪೊಱವೊೞಲಂ ತೊೞಲ್ವನ್ನೆಗಂ ಶ್ಮಶಾನದೊಳ್ ಮೇಗಣ್ಗೊಗೆಯುತ್ತಂ ಬೀೞುತ್ತಮಿರ್ದ ಪುರುಷನಂ ಕಂಡು ನೀನಾರ್ಗೇನೆಂಬೆಯಲ್ಲಿರ್ಪೆಯಾಕಾಶಕ್ಕೆ ನೆಗೆದು ಮತ್ತಂ ನೆಲದೊಳೇಕೆ ಬೀೞ್ವೆಯೆಂದು ಬೆಸಗೊಂಡೊಡಾತನಿಂತೆಂದಂ ಆಂ ವಿದ್ಯಾಧರನೆಂಬೆಂ

    ಸೌಭಾಗ್ಯವನ್ನೂ ಕಾಂತಿಯುಕ್ತತೆಯನ್ನೂ ಕಂಡು ಅವಳ ಮೇಲೆ ಮೋಹಗೊಂಡನು. ‘ನೀನು ನನ್ನ ಹೆಂಡತಿಯಾಗು’ ಎಂದು ಅವಳ ಕೈಯನ್ನು ಹಿಡಿದು ಕಾಡತೊಡಗಿದನು. ಹೀಗಿರಲು ಅವಳ ತಂದೆಯು ತನ್ನ ಮಗಳು ಬಹಳ ಹೊತ್ತು ಏಕೆ ತಡಮಾಡಿದಳು ? – ಎಂದುಕೊಂಡು ಅವಲೋಕಿನೀ ವಿದ್ಯೆಯನ್ನು ಈ ಸಂಗತಿಯನ್ನು ನೋಡಲಿಕ್ಕಾಗಿ ಕಳುಹಿಸಿಕೊಟ್ಟನು. ಆ ವಿದ್ಯೆಯು ಹೋಗಿ ನೋಡಿ ಬಂದು’ ನಿನ್ನ ಮಗಳನ್ನು ಚಿಂತಾಗತಿ ಎಂಬ ವಿದ್ಯಾಧರನು ಕಾಡುತ್ತಿದ್ದಾನೆ. ಎಂದು ತಿಳಿಸಿತು. ಅದನ್ನು ಕೇಳಿ, ಮನೋಗತಿ ಪ್ರಮುಖರಾದ ವಿದ್ಯಾಧರರೆಲ್ಲರೂ ಒಟ್ಟುಗೂಡಿ ಹೋಗಿ ಚಿಂತಾಗತಿಯ ವಿದ್ಯೆಯನ್ನೆಲ್ಲ ಕತ್ತರಿಸಿ ಹಾಕಿ “ನೀನು ಹನ್ನೆರಡು ವರ್ಷಗಳವರೆಗೆ ಭೂಮಿಯಲ್ಲಿ ಕಾಣಿಸುತ್ತಿರುವವನಾಗು* ಎಂದು ಶಾಪವನ್ನು ಕೊಟ್ಟರು. ಚಿಂತಾಗತಿಯು ಆ ಶಾಪವನ್ನು ಪರಿಹರಿಸಲಿಕ್ಕಾಗಿ ರಾಜಗೃಹಕ್ಕೆ ಬಂದು ರಾಣಿವಾಸದಲ್ಲಿರತಕ್ಕ ಶ್ರೇಷ್ಠ ದಾಸಿಯಾದ ಕಾಮಲತೆ ಎಂಬಾಕೆಯೊಡನೆ ಬಾಳುತ್ತ, ಅವಳ ಮನೆಯಲ್ಲಿ ಹನ್ನೆರಡು ವರ್ಷಗಳವರೆಗೆ ಇದ್ದನು. ಶಾಪದ ಅವಯ ವರ್ಷವು ಪೂರ್ಣವಾದಾಗ ತನ್ನ ವಿದ್ಯಾಧರ ಶ್ರೇಣಿಗೆ ಹೋಗಬೇಕೆಂದು ಭಾವಿಸಿಕೊಂಡು, ಒಂದು ದಿವಸ ಶ್ಮಶಾನಕ್ಕೆಹೋಗಿ ರಾತ್ರಿಯಲ್ಲಿ ವಿದ್ಯೆಗಳನ್ನೆಲ್ಲ ಸಾಸುವ ಸಂದರ್ಭದಲ್ಲಿ ಆಕಾಶಕ್ಕೆ ನೆಗೆಯುತ್ತಲೂ ಬೀಳುತ್ತಲೂ ಇದ್ದನು. ಹೀಗಿರಲು ಅಭಯಕುಮಾರನು ತಂದೆಯ ಅಪ್ಪಣೆಯನ್ನು ನೆರವೇರಿಸುವುದಕ್ಕೆ ಒಂದು ಉಪಾಯವನ್ನು ಭಾವಿಸಿಕೊಂಡನು. ಅಮಾವಾಸ್ಯೆಯ ನಟ್ಟನಡುವಿನ ರಾತ್ರಿಯಲ್ಲಿ ರತ್ನಖಚಿತವಾದ ಗುರಾಣಿಯನ್ನು ಎದೆಗೆ ಅವಚಿಕೊಂಡು, ಒರೆಯಿಂದ ಹೊರಕ್ಕೆಳೆದ ಖಡ್ಗದೊಡನೆ ಹೊರಗೆ ಬಂದು ಪಟ್ಟಣದಲ್ಲೆಲ್ಲ ಸುತ್ತಾಡಿ ಪಟ್ಟಣದ ಹೊರಗಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದನು. ಅಷ್ಟರಲ್ಲಿ ಸ್ಮಶಾನದಲ್ಲಿ ಮೇಲೆ ಆಕಾಶಕ್ಕೆ ಹಾರುತ್ತಲೂ ಬೀಳುತ್ತಲೂ ಇದ್ದ ಗಂಡು ವ್ಯಕ್ತಿಯನ್ನು ಕಂಡು “ನೀನು ಯಾರು ? ಏನೆನ್ನುತ್ತಿರುವೆ? ಎಲ್ಲಿ ಇರುತ್ತಿ? ಆಕಾಶಕ್ಕೆ ಹಾರಿ ಆಮೇಲೆ ನೆಲದ ಮೇಲೆ ಏಕೆ ಬೀಳುತ್ತಿ? ಎಂದು ಕೇಳಿದನು. ಆಗ ಅವನು ಹೀಗೆಂದನು – ‘ನಾನು ವಿದ್ಯಾಧರನು

    ಚಿಂತಾಗತಿ ನಮಧೇಯನೆನೆಂದು ತನ್ನ ವೃತ್ತಾಂತಮೆಲ್ಲಮಂ ಪೇೞ್ದೊಡೆ ಮತ್ತೀಗಳ್ ನೀನೇಗೆಯ್ದಪ್ಪೆಯೆಂದು ಬೆಸಗೊಂಡೊಡಾತನಿಂತೆಂದಂ ನಾಂ ವಿದ್ಯೆಗಳಂ ಸಾಸಿಯೆನ್ನ ವಿದ್ಯಾಧರಲೋಕಕ್ಕೆ ಪೋಗಲ್ ಬಗೆದಪ್ಪೆಂ ವಿದ್ಯೆಗಳ್ ಸಾಧನೆಗೆ ಸಲ್ಲವಾಗಪ್ಪುದಱಂದಾಕಾಶಕ್ಕೊಗೆದು ಮತ್ತಂ ನೆಲದೊಳ್ ಬೀೞ್ವೆನೆಂದೊಡಾ ವಿದ್ಯಾಮಂತ್ರಂಗಳನೆನಗೆ ಪೇೞೆಂದಭಯಕುಮಾರಂ ಬೆಸಗೊಂಡು ಮಂತ್ರ ವ್ಯಾಕರಣದೊಳಾದಮಾನುಂ ಕುಶಲನಪ್ಪುದಱಂ ಪ್ರಸ್ತಾರಿಸಿ ನೋೞ್ಪೂಗಳ್ ಮಂತ್ರಂಗಳ್ ಹೀನಾಕಾಕ್ಷರ ಸಹಿತಂಗಳೆಂದಱದು ಹೀನಮಪ್ಪಲ್ಲಿಯಕ್ಷರಂಗಳ – ನಿಟ್ಟಕಮಪ್ಪಲ್ಲಿಯಕ್ಷರಂಗಳಂ ಕಳೆದು ತಿರ್ದೇ ಪಾಂಗಿನೊಳ್ ಮಂತ್ರಂಗಳನೋದೆಂದು ಪೇೞ್ದೊಡಾತನುಮಾ ಪಾಂಗಿನೊಳ್ ಮಂತ್ರಂಗಳನೋದಿದೊಡೆ ವಿದ್ಯೆಗಳ್ ಸಾಧನೆಗೆ ಸಂದುವು ಸಂದೊಡೆ ವಿದ್ಯಾಧರನೆಚಿದನೆನಗುಪಕಾರಿಯಯ್ ವರಮಿತ್ರನಯ್ ನಿನಗಾಂ ಬೆಸಕೆಯ್ವೆನೆನಗೇನಪ್ಪೊಡಮೊಂದು ಬೆಸನಂ ಪೇೞೆಂದೊಡೆ ಅಭಯಕುಮಾರನೆಂದಂ ಎಮ್ಮಬ್ಬೆಯ ಬಯಕೆಯಂ ತೀರ್ಚೆಂದೊಡಾತನುಂ ಬಯಕೆಯಂ ಬೆಸಗೊಂಡು ನೇಸರ್ಮೂಡಿದೊಡೆ ವಿದ್ಯೆಗಳಿಂದಮೆ ಬೇಸಗೆಯನೆ ಮೞೆಗಾಲಂ ಮಾಡಿ ಬಿಳಿಯಾನೆಯನರಸಿಯನೇಱಸಿ ಪರಿವಾರಮುಂ ಪಡೆಯುಂ ಬೆರಸು ಗಂಧಪುಷ್ಪವೃಷ್ಟಿಯಂ ಕಱೆಯುತ್ತಂ ಪಟು ಪಟಹ ಪಣವ ತುಣವ ಭಂಭಾ

    ಎನ್ನುತ್ತಿದ್ದೇನೆ; ಚಿಂತಾಗತಿ ಎಂಬ ಹೆಸರುಳ್ಳವನಾಗಿರುವೆನು ಎಂದು ಅವನು ತನ್ನ ವೃತ್ತಾಂತವನ್ನೆಲ್ಲ ಹೇಳಿದನು. ಆಗ ಅಭಯ ಕುಮಾರನು – “ಮತ್ತೆ ನೀನೀಗ ಏನು ಮಾಡುತ್ತಿರುವೆ ಎಂದು ಕೇಳಿದನು. ಆಗ ಅವನು – “ನಾನು ವಿದ್ಯೆಗಳನ್ನು ಸಾಧನೆಮಾಡಿ ನನ್ನ ವಿದ್ಯಾಧರ ಲೋಕಕ್ಕೆ ಹೋಗಲು ಇಚ್ಛಿಸುತ್ತಿದ್ದೇನೆ. ವಿದ್ಯೆಗಳನ್ನು ಸಾಧನೆಮಾಡಿ ನನ್ನ ಸಾಧನೆಗೆ ವಶವಾಗದೆ ಇರುವುದರಿಂದ ಆಕಾಶಕ್ಕೆ ಹಾರಿ ಮತ್ತೆ ನೆಲದಲ್ಲಿ ಬೀಳುತ್ತಿದ್ದೇನೆ ಎಂದನು. “ಆ ವಿದ್ಯಾಮಂತ್ರಗಳನ್ನು ನನಗೆ ತಿಳಿಸು* ಎಂದು ಅಭಯ ಕುಮಾರನು ಅವನನ್ನು ಕೇಳಿದನು. ಅವನು ಹೇಳಿದಾಗ – ಅಭಯಕುಮಾರನು ಸ್ವತಃಮಂತ್ರ ವ್ಯಾಕರಣಗಳಲ್ಲಿ ಅತ್ಯಂತ ಕುಶಲನಾಗಿದ್ದುದರಿಂದ ಆ ಮಂತ್ರಕ್ಕೆ ಪ್ರಸ್ತಾರ ಹಾಕಿ ನೋಡಿದನು. ಆ ಮಂತ್ರಗಳು ಕೆಲವೆಡೆ ಕಡಮೆ ಅಕ್ಷರದಿಂದಲೂ ಕೆಲವೆಡೆ ಹೆಚ್ಚಿನ ಅಕ್ಷರದಿಂದಲೂ ಕೂಡಿ ತಪ್ಪಾಗಿರುವುದನ್ನು ತಿಳಿದು, ಕಡಿಮೆಯಿರುವಲ್ಲಿ ಅಕ್ಷರಗಳನ್ನು ಸೇರಿಸಿ ಅಕವಿರುವಲ್ಲಿ ಅಕ್ಷರಗಳನ್ನು ಕಳೆದು ತಿದ್ದಿ, ‘ಈ ರೀತಿಯಾಗಿ ಅಕ್ಷರಗಳನ್ನು ಓದು’ ಎಂದು ಹೇಳಿದನು. ಚಿಂತಾಗತಿ ಆ ರೀತಿಯಲ್ಲಿ ಮಂತ್ರಗಳನ್ನು ಉಚ್ಚಾರಣೆ ಮಾಡಲು ಅವನಿಗೆ ವಿದ್ಯೆಗಳು ಸಿದ್ಧಿಯಾದವು. ಸಿದ್ಧಿಯಾಗಲು ವಿದ್ಯಾಧರನು ಹೀಗೆ ಹೇಳಿದನು – “ನೀನು ನನಗೆ ಉಪಕಾರ ಮಾಡಿದವನಾಗಿರುವೆ. ಶ್ರೇಷ್ಠ ಮಿತ್ರನಾಗಿರುವೆ. ನಿನಗೆ ನಾನು ಆಜ್ಞಾಧಾರಕನಾಗುವೆನು. ನನಗೇನಾದರೂ ಒಂದು ಕೆಲಸವನ್ನು ಹೇಳು. ಹೀಗೆ ಹೇಳಿದಾಗ, ಅಭಯಕುಮಾರನು “ನನ್ನ ತಾಯಿಯ ಬಯಕೆಯನ್ನ ಈಡೇರಿಸು* ಎಂದನು. ಆತನು ಬಯಕೆ ಏನೆಂಬುದನ್ನು ಕೇಳಿಕೊಂಡು, ಸೂರ್ಯನು ಉದಯಿಸಿದೊಡನೆ ತನ್ನ ವಿದ್ಯೆಗಳಿಂದಲೇ ಬೇಸಗೆಯನ್ನು ಮಳೆಗಾಲವನ್ನು ಮಾಡಿದನು. ಬಿಳಿಯಾದ ಆನೆಯ ಮೇಲೆ ರಾಣಿಯನ್ನು ಕುಳ್ಳಿರಿಸಿ ಪರಿವಾರವನ್ನೂ ಸೈನ್ಯವನ್ನೂ ಕೂಡಿ ಸುವಾಸನೆಯ ಹೂಗಳ ಮಳೆಯನ್ನು ಸುರಿಸುತ್ತಾ,

    ಮರ್ದಳೆ ಝಲ್ಲರಿ ಮೃದಂಗ ಶಂಖ ವಂಶ ಕಹಳಾದಿಗಳುಂ ಮುಂದೆ ಬಾಜಿಸೆ ಪೊೞಲಂ ಪೊಱಮಟ್ಟು ವಿಂಧ್ಯಾಟವಿಗೆ ವೋಗಿಯಡವಿಯೆಲ್ಲಮಂ ತೊೞಲ್ದು ನೋಡಿಯಾಲದ ಪಣ್ಗಳಂ ತಾನೆಯಾಯ್ದು ಸೋಂಕಿಲಂ ತೀವಿಕೊಂಡಾಗಳ್ ಬಯಕೆ ನೆಱೆದೊಡೆ ಮತ್ತಾ ಪೊೞಲ್ಗರಸಿಯಂ ತಂದು ಕರುಮಾಡಮಂ ಪುಗಿಸಿದ ಬೞಕ್ಕಭಯಕುಮಾರಂಗಿಂತೆಂದನಾನಿಂ ಪೋಪೆನೆಂದಾನುಂ ನಿನಗೆ ಬಾೞ್ತೆಯಾಂದೆನ್ನಂ ನೆನೆವ್ಯದೆಂದಭಯಕುಮಾರನಂ ಬೀೞ್ಕೊಂಡು ಕಾಮಲತೆಗಂ ಪೇೞ್ದು ತನ್ನ ವಿದ್ಯಾಧರಲೋಕಕ್ಕೆ ಪೋದಂ ಮತ್ತೆ ಧನಶ್ರೀ ಮಹಾದೇವಿಯುಂ ನವಮಾಸಂ ನೆಱೆದು ಬೆಸಲೆಯಾಗಿ ಮಗಂ ಪುಟ್ಟಿದೊಡಾತಂಗೆ ತಾಯುಂ ತಂದೆಯುಂ ಗಜಕುಮಾರನೆಂದು ಪೆಸರನಿಟ್ಟರ್ ಇಂತಿಷ್ಟ ವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದುದಿವಸಂ ರಾಜಗೃಹದ ನೈಋತಿಯ ದೆಸೆಯೊವಿಳ್ವಿಪುಳಗಿರಿಯೆಂಬ ಪರ್ವತದ ಮೇಗೆ ವರ್ಧಮಾನ ಭಟಾರರ ಸಮವಸರಣಂ ಬಂದಿರ್ದೊಡೆ ಋಷಿನಿವೇದಕಂ ಕಂಡು ಪೋಗಿ ಶ್ರೇಣಿಕ ಮಾಹಾರಾಜಂಗೆ ಭಟಾರರ ಬರವಂ ಪೇೞ್ದೊಡಾತನುಂ ಸಿಂಹಾಸನದಿಂದೆರ್ದಾ ದೆಸೆಯತ್ತೇೞಡಿಯಂ ನಡೆದು ಸಾಷ್ಟಾಂಗಮೆಱಗಿ ಪೊಡೆವಟ್ಟು ಪೇೞ್ದತಂಗೆ ತುಷ್ಟಿದಾನಂಗೊಟ್ಟು ಆನಂದಭೇರಿಯಂ ಪೊಯ್ಸಿ ಪುತ್ರ ಪೌತ್ರ ಕಳತ್ರ ಮಿತ್ರ ಪರಿವಾರ ಸಹಿತಂ ವಂದನಾಭಕ್ತಿಗೆ ಪೋಗಿ ಸಟಿಕಮಣಿಮಯಮಪ್ಪ ಸೋಪಾನಪಂಕ್ತಿಗಳಿಂದೇಱ

    ಸಮರ್ಥವಾದ ಪಟಹ, ಪಣವ, ತುಣವ, ಭಂಭಾ, ಮದ್ದಳೆ, ಝಲ್ಲರಿ, ಮೃದಂಗ, ಶಂಖ, ಕೊಳಲು, ಕಹಳೆ – ಮುಂತಾದವುಗಳು ಶಬ್ದ ಮಾಡುತ್ತ ಮುಂದೆ ಬರುತ್ತಿರಲು, ಪಟ್ಟಣವನ್ನು ಹೊರಟು ವಿಂಧ್ಯಪರ್ವತದ ಕಾಡಿಗೆ ಹೋಗಿ, ಕಾಡನ್ನೆಲ್ಲ ಸುತ್ತಾಡಿ ನೋಡಿ ಆಲದ ಹಣ್ಣುಗಳನ್ನು ತಾನೇ ಆಯ್ದುಕೊಂಡು ಮಡಿಲಲ್ಲಿ ತುಂಬಿಸಿಕೊಂಡಳು. ಆಗ ಅವಳ ಬಯಕೆ ಪೂರ್ಣವಾಯಿತು. ಆಮೇಲೆ ಆ ಪಟ್ಟಣಕ್ಕೆ ರಾಣಿಯನ್ನು ಕರೆತಂದು ಅರಮನೆಯನ್ನು ಪ್ರವೇಶಗೊಳಿಸಿದ ನಂತರ ಚಿಂತಾಗತಿ ವಿದ್ಯಾಧರನು ಅಭಯಕುಮಾರನಿಗೆ ಹೀಗೆಂದನು – “ನಾನೀಗ ಹೋಗುತ್ತೇನೆ. ಎಂದಾದರೂ ನಿನಗೆ ಉಪಯುಕ್ತವಾದಂದು ನನ್ನನ್ನು ಸ್ಮರಿಸುವುದು* ಹೀಗೆ ಹೇಳಿ, ಅಭಯಕುಮಾರನನ್ನು ಬೀಳ್ಕೊಂಡು ಕಾಮಲತೆಗೂ ಹೇಳಿ, ತನ್ನ ವಿದ್ಯಾಧರಲೋಕಕ್ಕೆ ತೆರಳಿದನು. ಆಮೇಲೆ ಧನಶ್ರೀ ಮಹಾದೇವಿಗೆ ಒಂಬತ್ತು ತಿಂಗಳು ತುಂಬಿ, ಹೆರಿಗೆಯಾಗಿ ಮಗನು ಹುಟ್ಟಲು ಅವನಿಗೆ ತಾಯಿಯೂ ತಂದೆಯೂ ಗಜಕುಮಾರನೆಂದು ಹೆಸರಿಟ್ಟರು. ಈ ರೀತಿಯಾಗಿ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆಯಲು ಮತ್ತೊಂದು ದಿವಸ ರಾಜಗೃಹದ ನೈಋತ್ಯದಿಕ್ಕಿನ ವಿಪುಳಗಿರಿಯೆಂಬ ಪರ್ವತದ ಮೇಲೆ ವರ್ಧಮಾನತೀರ್ಥಂಕರರ ಧರ್ಮೋಪದೇಶದ ಸಭೆ ಬಂದಿರಲು ಋಷಿನಿವೇದಕನು ಕಂಡು, ಶ್ರೇಣಿಕ ಮಹಾರಾಜನ ಬಳಿಗೆ ಹೋಗಿ ತೀರ್ಥಂಕರರ ಬರವನ್ನು ತಿಳಿಸಿದನ್ನು. ಶ್ರೇಣಿಕನು ಸಿಂಹಾಸನದಿಂದ ಎದ್ದು ಆ ದಿಕ್ಕಿನ ಕಡೆಗೆ ಏಳು ಹೆಜ್ಜೆಯನ್ನು ನಡೆದು ಸಾಷ್ಟಾಂಗವಂದನೆಯನ್ನು ಮಾಡಿ, ಈ ಸಂಗತಿಯನ್ನು ಹೇಳಿದವನಿಗೆ ಸಂತೃಪ್ತಿಯಾಗತಕ್ಕ ದಾನವನ್ನು ಕೊಟ್ಟು ಆನಂದಭೇರಿಯನ್ನು ಹೊಡೆಸಿದನು. ಮಕ್ಕಳು, ಮೊಮ್ಮಕ್ಕಳು, ಹೆಂಡತಿ, ಗೆಳೆಯರ ಪರಿವಾರ ಸಮೇತವಾಗಿ ಭಕ್ತಿಯ ವಂದನೆ

    ಸಮವಸರಣಂಬೊಕ್ಕು ಗಂಧ ಕುಟಿ ಪ್ರಾಸಾದಮಂ ತ್ರಿಃಪ್ರದಕ್ಷಿಣಂಗೆಯ್ದು ಮುಂದೆ ನಿಂದು ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿ ಬಂದಿಸಿ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂರ್ಚಿಸಿ ಗಣಧರದೇವರ್ ಮೊದಲಾಗೊಡೆಯ ರಿಸಿಯರ್ಕಳುಮಂ ಗುರು ಪರಿವಿಡಿಯಿಂದಂ ವಂದಿಸಿ ತಮ್ಮಿರ್ಪೋವರಿಯೊಳಿರ್ದು ಪಿರಿದು ಬೇಗಂ ಧರ್ಮಮಂ ಕೇಳ್ದು ತದನಂತರಮೆ ಗಜಕುಮಾರಂ ತನ್ನ ಭವಾಂತರಂಗಳಂ ಬೆಸಗೊಂಡೊಡೆ ಗಣಧರದೇವರಿಂತೆಂದು ಪೇೞ್ದರೀ ಭವದಿಂ ತೊಟ್ಟು ಅಯ್ದನೆಯ ಭವದಂದು ನೀಂ ಕೊಂಕಣ ನಡೊಳ್ತುಂಗಭದ್ರನೆಂಬ ಪೋಡುಂಗಾಱನಯ್ ನೀಂ ಕುಮ್ಮರಿಯಂ ಸುಟ್ಟು ಪೋಗಿ ಪೊೞ್ತಡೆ ಬಂದು ನೋಡುವನ್ನೆಗಮಾ ಕಿರ್ಚಿನೊಳ್ ಸತ್ತ ಋಷಿರೂಪಂ ಕಂಡು ಕರುಣಿಸಿಯಲ್ಲಿಯೆ ಕಿರ್ಚಂ ಪೊಕ್ಕು ಸತ್ತು ವ್ಯಂತರದೇವನಾಗಿಯಾಯುಷ್ಯಾಂತದೊಳ್ ವಿಂಧ್ಯಾಟವಿಯೊಳ್ ಬಿಳಿಯಾನೆಯಾಗಿ ಪುಟ್ಟಿಯಚ್ಯುತೇಂದ್ರಂ ಪ್ರತಿಬೋಸೆ ಸಮ್ಯಕ್ತ್ವ ಪೂರ್ವಕಂ ಶ್ರಾವಕವ್ರತಂಗಳಂ ಕೈಕೊಂಡು ಪ್ರತಿಪಾಳಿಸಿಯಾಯುಷ್ಯಾಂತದೊಳ್ ಪದಿನೆಂಟು ಸಾಗರೋಪಮಾಯುಷ್ಯಮನೊಡೆಯ ಸಹಸ್ರಾರಕಲ್ಪದೊಳ್ ದೇವನಾಗಿ ಪುಟ್ಟಿ ಅಲ್ಲಿಂ ಬಂದೀಗಳ್ ಗಜಕುಮಾರನೆ ಆದೆಯೆಂದು ಪೇೞ್ದೊಡೆ ತನ್ನ ಭವಂಗಳಂ ಕೇಳ್ದು ವೈರಾಗ್ಯಮನೊಡೆಯನಾಗಿ ಎರ್ದು ವರ್ಧಮಾನ ಭಟಾರರ್ಗಿದಿರಂ ನಿಂದು ಕೈಗಳಂ ಮುಗಿದು ದೀಕ್ಷಾಪ್ರಸಾದಂಗೆಯ್ಯಿಮೆಂದು ಬೇಡಿ ತಪಂಬಟ್ಟಾಗಮಂಗಳೆಲ್ಲಮಂ ಕಲ್ತೇಕವಿಹಾರಿಯಾಗಿ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ

    ಸಲ್ಲಿಸಲು ಹೋಗಿ ಸಟಿಕ ರತ್ನಮಯವಾದ ಮೆಟ್ಟಿಲುಗಳ ಸಾಲುಗಳನ್ನು ಹತ್ತಿ ಧರ್ಮಸಭೆಯನ್ನು ಹೊಕ್ಕನು. ಗಂಧಕುಟಿಯ ಮಹಾಗೃಹವನ್ನು ಮೂರು ಪ್ರದಕ್ಷಿಣೆ ಹಾಕಿ ಮುಂದೆ ನಿಂತು ಸಾವಿರಾರು ಸ್ತುತಿಗಳಿಂದ ಸ್ತುತಿಸಿ, ವಂದಿಸಿ, ಗಂಧ ಪುಷ್ಪ ದೀಪ ಧೂಪ ಅಕ್ಷತೆಗಳಿಂದ ಪೂಜಿಸಿ ಗಣಧರ ದೇವರೇ ಮುಂತಾಗಿ ಉಳ್ಳ ಋಷಿಗಳನ್ನು ಗೌರವಾನುಕ್ರಮದಿಂದ ನಮಿಸಿ ತಾವು ಇರಬೇಕಾದ ಕೊಠಡಿಯಲ್ಲಿದ್ದು ಬಹಳ ಹೊತ್ತು ಧರ್ಮವನ್ನು ಕೇಳಿ, ಆಮೇಲೆ ಗಜಕುಮಾರನು ತನ್ನ ಜನ್ನಾಂತರದ ಸಂಗತಿಗಳನ್ನು ಕೇಳಿದನು. ಆಗ ಗಣಧರದೇವರು ಈ ರೀತಿಯಾಗಿ ಹೇಳಿದರು – “ಈ ಜನ್ಮದಿಂದ ಹಿಡಿದು ಐದನೆಯ ಜನ್ಮದಂದು ನೀನು ಕೊಂಕಣ ನಾಡಿನಲ್ಲಿ ತುಂಗಭದ್ರನೆಂಬ ಕಾಡು ಕಡಿವವನಾಗಿದ್ದಿ. ನೀನು ಕುಮ್ಮರಿಯನ್ನು ಸುಟ್ಟು ಹೋಗಿ, ಹೊತ್ತಾರೆ ಬಂದು ನೋಡುವಾಗ ಆ ಬೆಂಕಿಯಲ್ಲಿ ಸತ್ತಿದ್ದ ಋಷಿರೂಪವನ್ನು ಕಂಡು ದುಃಖಿತನಾಗಿ ಅಲ್ಲಿಯೇ ಬಿಂಕಿಯನ್ನು ಹೊಕ್ಕು ಸತ್ತು ವ್ಯಂತರದೇವನಾದೆ. ಅಲ್ಲಿ ಆಯುಷ್ಯವು ಕೊನೆಗೊಂಡಾಗ ವಿಂಧ್ಯೆಯ ಕಾಡಿನಲ್ಲಿ ಬಿಳಿಯ ಆನೆಯಾಗಿ ಹುಟ್ಟಿದೆ. ಅಚ್ಯುತೇಂದ್ರನ ಉಪದೇಶದಿಂದ ಸಮ್ಯಕ್ತ ಪೂರ್ವಕವಾಗಿ ಶ್ರಾವಕ ವ್ರತಗಳನ್ನು ಸ್ವೀಕರಿಸಿ, ನಡೆಸಿ, ಆಯುಷ್ಯ ಕೊನೆಯಾಗಲು ಹದಿನೆಂಟು ಸಾಗರವನ್ನು ಹೋಲುವ ಆಯುಷ್ಯವುಳ್ಳ ಸಹಸ್ರಾರಕಲ್ಪದಲ್ಲಿ ದೇವನಾಗಿ ಹುಟ್ಟಿ ಅಲ್ಲಿಂದ ಬಂದು ಈ ಗಜಕುಮಾರನಾಗಿರುವೆ* – ಎಂದು ಗಣಧರರು ಹೇಳಿದಾಗ ಗಜಕುಮಾರನು ತನ್ನ ಹಿಂದಿನ ಜನ್ಮಗಳ ಸಂಗತಿಯನ್ನು ಕೇಳಿ ವೈರಾಗ್ಯವುಳ್ಳವನಾದನು. ಎದ್ದು ವರ್ಧಮಾನತೀರ್ಥಂಕರರ ಎದರಿನಲ್ಲಿ ನಿಂತು ಕೈಗಳನ್ನು ಮುಗಿದು ‘ದೀಕ್ಷೆಯನ್ನು ಅನುಗ್ರಹಿಸಿರಿ’ ಎಂದು ಬೇಡಿಕೊಂಡನು. ತಪಸ್ಸನ್ನು ಸ್ವೀಕರಿಸಿದನು. ಶಾಸ್ತ್ರಗಳೆಲ್ಲವನ್ನೂ ಕಲಿತು ಪರಿವ್ರಾಜಕರಾಗಿ ‘ಗ್ರಾಮದಲ್ಲಿ ಒಂದು ರಾತ್ರಿ, ನಗರದಲ್ಲಿ ಐದು ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿ’ ಎಂಬೀ

    ಅಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಕರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕಳಿಂಗನಾಡನೆಯ್ದಿಯಲ್ಲಿ ದಂತಪುರಮೆಂಬ ಪೊೞಲ ಪಡುವಣ ಬೆಟ್ಟದ ಮೇಗೇಕಸ್ಥಿರ ಯೋಗಂಗೊಂಡು ಕಲ್ನೆಲೆನಿಂದರನ್ನೆಗಂ ಆ ಪೊೞಲನಾಳ್ವೊಂ ನರಸಿಂಹನೆಂಬರಸನಾತನ ಮಹಾದೇವಿ ವಸುಮತಿಯೆಂಬೊಳಾಯಿರ್ವ್ವರ್ಗ್ಗಂ ಮಗಂ ನರಪಾಳನೆಂಬೊಂ ಮಂತ್ರಿ ಬುದ್ಧದಾಸನೆಂಬೊನಂತವರ್ಗಳ್ವೆರಸೊಂದು ದಿವಸಂ ಕರುಮಾಡದ ಮೇಗಣ ನೆಲೆಯೊಳಿರ್ದರಸಂ ದಿಶಾವಳೋಕನಂ ಗೆಯ್ಯುತ್ತಿರ್ದಾತಂ ಬೆಟ್ಟದ ಮೇಗಾ ತಪಮಿರ್ದ ಋಷಿಯರಂ ಕಂಡೀ ತಪಸ್ವಿ ಬೇಸಗೆಯೊಳ್ ಬೆಟ್ಟದ ಮೇಗಿರ್ದ್ದೆಕೆ ಬಿಸಿಲ್ಗಾಯ್ದಪ್ಪೊನೆಂದು ಮಂತ್ರಿಯಪ್ಪ ಬುದ್ಧದಾಸನಂ ಬೆಸಗೊಂಡೊಡಾತಂ ಕೌಟಿಲ್ಯ ಭಾವದಿಂದಿಂತೆಂದನೀ ತಪಸ್ವಿಗೆ ಮಹಾವಾತಂ ತಗುಳ್ದುದರಿಂದಂ ನಿಂದಿರ್ದೊನೆಂದೊಡರಸನಿದರ್ಕೆ ಮರ್ದೇನೆಂದು ಬೆಸಗೊಂಡೊಡಾತನಿಂತೆಂದನಾ ತಪಸ್ವಿಯೇಱರ್ದ ಶಿಲೆಯಂ ಕಾಸುವ್ಯದೆಂದೊಡಂತಪ್ಪೊಡೆ ನೀಂ ಪಕ್ಕದಿರ್ದು ಕಾಸೆಂದು ಬೆಸವೇೞ್ದೊಡಾತನಂತೆ ಗೆಯ್ವೆನೆಂದು ಪೋಗೆಯಾ ಋಷಿಯರ್ ಚರಿಗೆವೋದರನ್ನೆಗಂ ಯೋಗಪೀಠದ ಸಿಲೆಯಂ ಕಿಚ್ಚಿನ ಬಣ್ಣದಂತಾಗಿ ಕಾಸಿ ಪೋದನನ್ನೆಗಂ ಚರಿಗೆವುಗುತ್ತಿರ್ದ ರಿಸಿಯರಂ ದೇವತೆ ಕಂಡಿಂತೆಂದಳ್ ನಿಮಗಾಯುಷ್ಯಮಿಲ್ಲೇಕೆ ಚರಿಗೆ ಮಾಡಲ್ ಪೋಪಿರೆಂದೊಡೆ ಚರಿಗೆವುಗದಂತ ಮಗುೞ್ದು ಬರ್ಪೊರನ್ನೆಗಂ

    ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳನ್ನು ಸಂಚಾರಮಾಡುತ್ತ ಕಳಿಂಗನಾಡಿಗೆ ಹೋದರು. ಅಲ್ಲಿ ದಂತಪುರ ಎಂಬ ಪಟ್ಟಣದ ಪಶ್ಚಿಮದ ಬೆಟ್ಟದ ಮೇಲೆ ಒಂದೇ ಆದ ಸ್ಥಿರವಾದ ಯೋಗವನ್ನು ಕೈಕೊಂಡು ಕಲ್ಲಿನಂತೆ ನೆಲೆನಿಂತರು. ಆ ಪಟ್ಟಣವನ್ನು ನರಸಿಂಹನೆಂಬ ರಾಜನು ಆಳುತ್ತಿದ್ದನು. ಅವನಿಗೆ ವಸುಮತಿ ಎಂಬವಳು ಮಹಾರಾಣಿಯಾಗಿದ್ದಳು. ಆ ದಂಪತಿಗಳಿಗೆ ನರಪಾಳನೆಂಬವನು ಮಗನು. ಬುದ್ಧದಾಸನು ಮಂತ್ರಿ. ಒಂದು ದಿವಸ ನರಸಿಂಹ ರಾಜನು ಅವರನ್ನೆಲ್ಲ ಕೂಡಿಕೊಂಡು ಅರಮನೆಯ ಮೇಲಣ ಉಪ್ಪರಿಗೆಯಲ್ಲಿ ಇದ್ದುಕೊಂಡು ದಿಕ್ಕುಗಳನ್ನು ನೋಡುತ್ತಾ ಇದ್ದನು. ಆತನು ಬೆಟ್ಟದ ಮೇಲುಗಡೆ ತಪಸ್ಸನ್ನು ಮಾಡುತ್ತಿದ್ದ ಋಷಿಗಳನ್ನು ಕಂಡು – ‘ಈ ತಪಸ್ವಿಯು ಬೇಸಿಗೆಯಲ್ಲಿ ಬೆಟ್ಟದ ತುದಿಯಲ್ಲಿದ್ದು ಯಾಕೆ ಬಿಸಿಲನ್ನು ಕಾಯಿಸುತ್ತ ಇದ್ದಾನೆ? ಎಂದು ಮಂತ್ರಿಯಾದ ಬುದ್ಧದಾಸನನ್ನು ಕೇಳಿದನು. ಆಗ ಅವನು ಕಹಕದ ಭಾವನೆಯಿಂದ ಹೀಗೆಂದನು – “ಈ ಋಷಿಗೆ ಮಹತ್ತರವಾದ ವಾತರೋಗ ಸೇರಿದೆ. ಅದರಿಂದ ಬಿಸಿಲಲ್ಲಿ ನಿಂತಿದ್ದಾನೆ* – ಎಂದಾಗ ರಾಜನು ‘ಇದಕ್ಕೆ ಮದ್ದೇನಿದೆ ? ಎಂದು ಕೇಳಿದನು. ಬುದ್ಧದಾಸನು ಆಗ ಹೀಗೆ ಹೇಳಿದನು – ‘ಆ ತಪಸ್ವಿ ಕುಳಿತುಕೊಂಡಿರುವ ಶಿಲೆಯನ್ನು ಕಾಯಿಸುವುದೇ ಮದ್ದು’ ಎಂದಾಗ ರಾಜನು ‘ಹಾಗಾದರೆ ನೀನು ಬಳಿಯಲ್ಲಿದ್ದು ಕಾಯಿಸು’ ಎಂದು ಆಜ್ಞೆಮಾಡಿದನು : ಮಂತ್ರಿಯ ‘ಹಾಗೆಯೇ ಮಾಡುವೆನು’ ಎಂದುಕೊಂಡು ತೆರಳಿದನು. ಋಷಿಗಳು ಭಿಕ್ಷೆಗೆ ಹೋದ ವೇಳೆಗೆ ಅವರ ಯೋಗಪೀಠದ ಶಿಲೆಯನ್ನು ಬೆಂಕಿಯ ಬಣ್ಣದ ಹಾಗೆ ಆಗುವಂತೆ ಕಾಯಿಸಿ ಹೋದನು. ಆ ವೇಳೆಗೆ ಭಿಕ್ಷಾಟನೆ ಮಾಡುತ್ತಿದ್ದ ಋಷಿಗಳಿಗೆ ದೇವತೆ ಕಂಡು “ನಿಮಗೆ ಆಯುಷ್ಯವಿಲ್ಲ ಏಕೆ ಭಿಕ್ಷೆಗೆ ಹೋಗುತ್ತೀರಿ? ಎನ್ನಲು ಮತ್ತೆ ಭಿಕ್ಷೆಗೆ ಹೋಗದೆ ಹಾಗೆಯೇ ಹಿಂದೆರಳಿ ಬರುತ್ತಿದ್ದರು. 

    ಕಿಚ್ಚಿನ ಬಣ್ಣಮಾಗಿ ಕಾಯ್ದಿರ್ದ ಶಿಲೆಯಂ ಕಂಡೆಮಗಿನೆತೆಯಾಯುಷ್ಯಮೆಂದು ಪರಿಚ್ಛೇದಿಸಿ ಸಿದ್ಧಭಕ್ತಿ ಜೋಗಭಕ್ತಿಗೆಯ್ದು ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವಂ ನಿವೃತ್ತಿಗೆಯ್ದಾಚಾರ್ಯ ಭಕ್ತಿಗೆಯ್ದು ಕಾಯ್ದಿರ್ದ ಯೋಗಪೀಠಮನೇಱ ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ಸಮತ್ವೀ ಭಾವನೆಯಂ ಭಾವಿಸಿ ಕಿಚ್ಚಿನುಪಸರ್ಗಮಂ ಸೈರಿಸಿ ಚತುರ್ವಿಧಮಪ್ಪ ಧರ್ಮಧ್ಯಾನಮಂ ನಾಲ್ಕುಂ ತೆಱದ ಶುಕ್ಮಧ್ಯಾನಂಗಳುಮಂ ಧ್ಯಾನಿಸಿ ಎಂಟು ಕರ್ಮಂಗಳನೊರ್ಮೊದಲೆ ಕಿಡಿಸಿ ಮೋಕ್ಷಕ್ಕೆ ವೋದರ್ ಅನ್ನೆಗಂ ಚತುರ್ವಿಧ ದೇವನಿಕಾಯಂ ಬಂದು ದಿವ್ಯಮಪ್ಪ ಗಂಧ ಪುಷ್ಪ ದೀಪಧೂಪಾಕ್ಷತಂಗಳಿಂ ಶ್ರೀಪಾದಮನರ್ಚಿಸಿ ಪೊಡೆವಟ್ಟು ಮತ್ತೆ ಬುದ್ಧದಾಸನಂ ದೇವರ್ಕಳ್ ಜಡಿದು ನುಡಿದೊಡವನಂಜಿಯೆಂದನಾನಱಯದೆ ಪಂಚಮಹಾಪಾತಕನೆಂ ಪೊಲ್ಲಕೆಯ್ದೆನೆನಗೊರ್ಮಿಂಗೆ ಕ್ಷಮಿಯಿಸಿಮೆಂದು ನುಡಿದೊಡೆ ದೇವರ್ಕಳ್ ಕ್ಷಮಿಯಿಸಿ ತಂತಮ್ಮ ಸ್ಥಾನಂಗಳ್ಗೆ ಪೋದರ್ ಇತ್ತ ಬುದ್ಧದಾಸನುಮಾ ರಿಸಿಯರ ತಪದ ಮಹಾತ್ಮ ಕಮುಮಂ ದೇವರ್ಕಳ್ ಬಂದು ಪೂಜಿಸಿದುದುಮಂ ಕಂಡಿದುವೆ ಧರ್ಮಮಿದುವೆ ತಪಮೆಂದು ನಂಬಿ ಸಮ್ಯಕ್ತ ಪೂರ್ವಕಂ ಶ್ರಾವಕವ್ರತಂಗಳಂ ಕೈಕೊಂಡು ನೆಗೞ್ದಂ ಮತ್ತಾ ನರಸಿಂಹನೃಪತಿಯುಂ ಪಶ್ಚಾತ್ತಾಪಮಾಗಿ ಋಷಿವಧೆಗೆಯ್ದ ಪಾಪಮಿಂತಲ್ಲದೆ ನೀಗದೆಂದು ನರಪಾಳನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸು ಮಕ್ಕಳ್ವೆರಸು ಸುಧರ್ಮರೆಂಬ

    ಆಗ ಬೆಂಕಿಯ ಬಣ್ಣವಾಗಿ ಕಾಯ್ದ ಶಿಲೆಯನ್ನು ಕಂಡು, ನಮಗೆ ಇಷ್ಟೇ ಆಯಷ್ಯವಿರುವುದೆಂದು ನಿಶ್ಚಯ ಮಾಡಿಕೊಂಡು ಸಿದ್ಧಭಕ್ತಿ ಯೋಗಭಕ್ತಿಯನ್ನು ಮಾಡಿ ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ಪ್ರಾಣವಿರುವವರೆಗೂ ನಿವೃತ್ತಿಮಾಡಿ, ಆಚಾರ್ಯರಲ್ಲಿ ಭಕ್ತಿಯನ್ನು ಮಾಡಿ ಕಾಯ್ದಿದ್ದ ಯೋಗಪೀಠದ ಮೇಲೆ ಕುಳಿಗು ಭೂಮಿ, ಮನೆ, ಧನ, ಧಾನ್ಯ – ಮುಂತಾದ ಬಾಹ್ಯ ಪರಿಗ್ರಹಗಳನ್ನೂ ಮಿಥ್ಯಾತ್ವ, ರಾಗ, ದ್ವೇಷ – ಮುಂತಾದ ಆಂತರಿಕ ಪರಿಗ್ರಹಗಳನ್ನೂ ತ್ಯಜಿಸಿ ಸಮತ್ವದ ಭಾವನೆಯನ್ನು ಭಾವಿಸಿ ಅಗ್ನಿಯಿಂದಾದ ಉಪಸರ್ಗವನ್ನು ಸಹಿಸಿ ನಾಲ್ಕು ವಿಧವಾದ ಧರ್ಮಧ್ಯಾನಗಳನ್ನೂ ನಾಲ್ಕು ರೀತಿಯ ಶುಕ್ಲಧ್ಯಾನಗಳನ್ನೂ ಧ್ಯಾನಿಸಿ ಘಾತಿ – ಅಘಾತಿರೂಪದ ಎಂಟು ಕರ್ಮಗಳನ್ನು ಒಮ್ಮೆಗೇ ನಾಶಪಡಿಸಿ ಮೋಕ್ಷಕ್ಕೆ ಹೋದರು. ಅಷ್ಟರಲ್ಲಿ ನಾಲ್ಕು ವಿಧದ ದೇವತಾ ಸಮೂಹವು ಬಂದು ದಿವ್ಯವಾದ ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಋಷಿಗಳ ಶ್ರೀಪಾದವನ್ನು ಪೂಜಿಸಿ ಸಾಷ್ಟಾಂಗವಂದನೆ ಮಾಡಿದರು. ಆಮೇಲೆ ಬುದ್ಧದಾಸನನ್ನು ದೇವತೆಗಳು ಗದರಿಸಿ ನುಡಿಯಲು ಅವನು ಹೆದರಿ – “ಪಂಚಮಹಾಪಾತಕನಾದ ನಾನು ತಿಳಿಯದೆ ಕೆಟ್ಟುದನ್ನು ಮಾಡಿದೆನು. ನನಗೆ ಒಮ್ಮೆಗೆ ಕ್ಷಮೆಯನ್ನು ಕೊಡಿ* ಎಂದು ಹೇಳಲು ದೇವತೆಗಳು ಅವನನ್ನು ಕ್ಷಮಿಸಿ ತಂತಮ್ಮ ಸ್ಥಳಗಳಿಗೆ ಹೋದರು. ಇತ್ತ ಬುದ್ಧದಾಸನು ಈ ಋಷಿಗಳ ತಪಸ್ಸಿನ ಮಹಿಮೆಯನ್ನೂ ದೇವತೆಗಳು ಬಂದು ಪೂಜಿಸಿದುದನ್ನೂ ಕಂಡು – “ಇದೇ ಧರ್ಮವು, ಇದೇ ತಪಸ್ಸು* ಎಂದು ನಂಬಿ ಜೈನಧರ್ಮದಲ್ಲಿ ಪೂರ್ಣವಾದ ನಂಬಿಕೆಯೊಂದಿಗೆ ಶ್ರಾವಕಧರ್ಮವನ್ನು ಸ್ವೀಕರಿಸಿ, ಅವುಗಳನ್ನು ಆಚರಿಸಿದನು. ಅನಂತರ ಆ ನರಸಿಂಹರಾಜನು ಪಶ್ಚಾತ್ತಾಪಗೊಂಡವನಾಗಿ ಋಷಿಯನ್ನು ಕೊಂದ ಪಾಪವು ಈ ರೀತಿಯಿಂದಲ್ಲದೆ ಪರಿಹಾರವಾಗದೆಂದು ನರಪಾಳೆನೆಂಬ ಹಿರಿಯ ಮಗನಿಗೆ ರಾಜ್ಯಪಟ್ಟವನ್ನು ಕಟ್ಟಿ ಹಲವರು ರಾಜಕುಮಾರರೊಂದಿಗೆ ಸುಧರ್ಮರೆಂಬ ಋಷಿಗಳ

    ಭಟಾರರ ಪಕ್ಕದೆ ತಪಂಬಟ್ಟು ಪಲಕಾಲಮುಗ್ರೋಗ್ರ ತಪಶೄರಣಂ ಗೆಯ್ದು ಸಮಾ ಮರಣದಿಂದಂ ಮಿಕ್ಕ ರತ್ನಂಗಳಂ ಸಾಸಿ ಸರ್ವಾರ್ಥಸಿದ್ಧಯೊಳ್ ಮೂವತ್ತುಮೂಱು ಸಾಗರೋಪ ಮಾಯುಷ್ಯಮನೊಡೆಯೊನಹಮಿಂದ್ರದೇವನಾದೊನ್ ಇಂತೀ ಕಥೆಗಳೆಲ್ಲಂ ಗುರುದತ್ತ ಭಟಾರರ ಕಥೆಗೆ ಪ್ರತಿಬದ್ಧಂಗಳ್ ಮತ್ತಂ ಪೆಱರ್ ಸಂನ್ಯಸನಂಗೆಯ್ದ ಭವ್ಯರ್ಕಳ್ ಗುರುದತ್ತ ಭಟಾರರುಮಂ ಹಳಮುಖ ಋಷಿಯರುಮಂ ಗಜಕುಮಾರ ಭಟಾರರುಮನಿಂತಿವರ್ಗಳಂ ಮನದೊಳ್ ಬಗೆದುಪಸರ್ಗಂಗಳುಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯ ಇರ್ಪತ್ತೆರಡು ಪರೀಷಹಂಗಳಂ ಸೈರಿಸಿ ಸಮಾ ಮರಣದಿಂದಂ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

    ಬಳಿಯಲ್ಲಿ ತಪಸ್ಸನ್ನು ಸ್ವೀಕಾರಮಾಡಿ, ಅತ್ಯಂತ ಘನಘೋರವಾದ ತಪಸ್ಸನ್ನು ಆಚರಿಸಿ ಸಮಾ ಮರಣದಿಂದ ಶ್ರೇಷ್ಠವಾದ ದರ್ಶನ ಜ್ಞಾನ ಚರಿತ್ರಗಳೆಂಬ ರತ್ನತ್ರಯವನ್ನು ಸಾಸಿ ಸವಾರ್ಥಸಿದ್ಧಿಯೆಂಬ ಉನ್ನತವಾದ ಸ್ವರ್ಗದಲ್ಲಿ ಮೂವತ್ತಮೂರು ಸಾಗರವನ್ನು ಹೋಲುವ ಆಯುಃ ಪರಿಮಾಣವುಳ್ಳ ಅಹಮಿಂದ್ರದೇವನಾದನು. ಹೀಗೆ ಈ ಕಥೆಗಳೆಲ್ಲವೂ ಗುರುದತ್ತಭಟಾರರ ಕಥೆಗೆ ಅನುಬಂಧಗಳಾಗಿವೆ. ಮತ್ತು ಸಂನ್ಯಾಸ ಮಾಡಿದ ಇತರ ಭಟ್ಟರು ತಮ್ಮ ಮನಸ್ಸಿನಲ್ಲಿ ಗುರುದತ್ತ ಋಷಿಗಳನ್ನೂ ಹಳಮುಖ ಋಷಿಗಳನ್ನೂ ಸುಕುಮಾರಭಟಾರರನ್ನೂ ಹೀಗೆ ಇವರನ್ನು ಭಾವಿಸಿಕೊಂಡು ಉಪಸರ್ಗಗಳನ್ನೂ ಹಸಿವು ಬಾಯಾರಿಕೆ ಮುಂತಾಗಿರುವ ಇಪ್ಪತ್ತೆರಡು ಪರೀಷಹಗಳನ್ನೂ ಸಹಿಸಿಕೊಂಡು ಸಮಾಮರಣದಿಂದ ಶ್ರೇಷ್ಠವೂ ಪವಿತ್ರವೂ ಸಹಜವೂ ಆದ ದರ್ಶನಜ್ಞಾನ – ಚಾರಿತ್ರಗಳನ್ನು ಸಾಸಿ ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ ! 

*****ಕೃಪೆ: ಕಣಜ****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ