ನನ್ನ ಪುಟಗಳು

23 ಮಾರ್ಚ್ 2018

ವ್ಯಾಸರಾಯರು

 

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.
               ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳು:-
ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. /ಹರಿಸರ್ವೋತ್ತಮ ವಾಯು ಜೀವೋತ್ತಮ /

ಕೀರ್ತನೆಗಳು:-

 ಚಂದ್ರಿಕಾಚಾರ್ಯರ ಪಾದ ದ್ವಯಕೆ/
 ಎರುಗುವೆ ಪ್ರತಿವಾಸರಕೆ /ಪ/

 ನವ ವೃಂದಾವನ ಮಧ್ಯದಿ ಶೋಭಿಪ
  ನವವಿಧ ವರಗಳ ನೀಡುತ ಸತತ/
 ನವ ಮಣಿ ಮುಕುಟ ಮಸ್ತಕದಿ ಶೋಭಿಪ
  ನವ್ಯ ಜೀವನ ಶುಭಫಲ ಕೋರುತ/
 ನಂಬಿದ ಭಕ್ತರ ದೋಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/

 ವಿಜಯ ಮೂರುತಿ ರಾಮನ ಧ್ಯಾನಿಸಿ
  ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
 ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
  ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/

 ಯಾಂತ್ರಿಕ ತನದಿ ತಾಪವೆನಿಸುವ
  ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
 ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
 ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/
ಉಗಾಭೋಗಗಳು

    ೧

ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ ಸಿರಿಕೃಷ್ಣ


    ೨

ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ



**********ಮಾಹಿತಿ ಕೃಪೆ: ವಿಕಿಪೀಡಿಯಾ***********

2 ಕಾಮೆಂಟ್‌ಗಳು:

  1. ಡೆಡಿಕೇಟೆಡ್ ಮಾಡುವಂತೆ ಔಟ್ ಖುಷಿ ತಂದಿದೆ ಓವೈಸಿ ತನ್ನ ಜಿಲ್ಲಾಡಳಿತ ಪೂಜೆ ಜೈ

    ಪ್ರತ್ಯುತ್ತರಅಳಿಸಿ
  2. ಇಲ್ಲಿ ಅಲ್ಪ ಮಾಹಿತಿ ಮಾತ್ರ ಇರೋದು
    ಇನ್ನು ಹೆಚ್ಚಿನ ಮಾಹಿತಿ ನೀಡಿದರೆ ಎಲ್ಲರೂ ಉಪಯೋಗ ಪಡೆಯಬಹುದು

    ಪ್ರತ್ಯುತ್ತರಅಳಿಸಿ