ನನ್ನ ಪುಟಗಳು

05 ಅಕ್ಟೋಬರ್ 2015

ನುಡಿಗಟ್ಟುಗಳ ಸಂಗ್ರಹ

ನುಡಿಗಟ್ಟುಗಳು
     ಒಂದು ಭಾಷೆಯು ಚೆನ್ನಾಗಿ ಕರಗತವಾಗಬೇಕಾದರೆ ಅದರ ಸಹಜ ನುಡಿಗಟ್ಟುಗಳಲ್ಲಿ ಕೈ ಪಳಗಿರಬೇಕು.ಭಾಷೆಯ ನುಡಿಗಟ್ಟುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಭಾಷೆ ಕಲಿಯುವುದು ಸುಲಭವಾಗುತ್ತದೆ.ಕನ್ನಡಭಾಷೆಯ ಪಲುಕು ಸೌಂದರ್ಯ ಮತ್ತು ರಮ್ಯತೆ ನಮ್ಮ ಮಾತು ಮತ್ತು ಬರವಣಿಗೆಯಲ್ಲಿ ಹೊಮ್ಮಬೇಕಾದರೆ ಅದರ ಅಪಾರ ಪದಪುಂಜಗಳು ಮತ್ತು ನುಡಿಗಟ್ಟುಗಳು ಚೆನ್ನಾಗಿ ಪರಿಚಯವಾಗಿರಬೇಕು. ಈ ಲೇಖನದಲ್ಲಿ ಕನ್ನಡಭಾಷೆಯ ಪದಗಳ ಸೂಕ್ಷ್ಮ ಅರ್ಥವ್ಯತ್ಯಾಸವನ್ನು ಅರ್ಥ ಮಾಡಿಸಲು ಪ್ರಯತ್ನಿಸಲಾಗಿದೆ.
     ಹೊಸತೊಂದು ಭಾಷೆಯನ್ನು ಕಲಿಯಬೇಕಾದರೆ ಎದುರಾಗುವ ಒಂದು ಸಮಸ್ಯೆಯೆಂದರೆ ಆ ಭಾಷೆಯನ್ನು ಸಹಜವಾಗಿ ಮತ್ತು ಸರಾಗವಾಗಿ ಮಾತನಾಡಲು ಸಾಧ್ಯವಾಗದೇ ಇರುವುದು.ಎಷ್ಟೋಬಾರಿ ಬರೆದ ಪ್ರಬಂಧಗಳು ಎನೋ ಕೃತಕ ಮತ್ತು ಸ್ವಾಭಾವಿಕವಲ್ಲ ಅನಿಸುವುದು.ಇದಕ್ಕೆ ಕಾರಣ ತುಂಬಾ ವ್ಯಾಕರಣನಿಷ್ಠವಾಗಿ ಬರೆಯುವುದು,ಉದ್ದುದ್ದಕ್ಕೆ ವಾಕ್ಯಗಳನ್ನು ಬರೆದುಕೊಂಡು ಹೋಗುವುದು ಮುಂತಾದವು. ಭಾಷೆಯನ್ನು ಬಲು ನೈಪುಣ್ಯದಿಂದ ಬಳಸಬೇಕಾದರೆ ಆ ಭಾಷೆಯಲ್ಲಿ ಪ್ರಚಲಿತವಿರುವ ನುಡಿಗಟ್ಟುಗಳು ಪದಪುಂಜಗಳು ಮತ್ತು ಗಾದೆ ಮಾತುಗಳನ್ನು ಚೆನ್ನಾಗಿ ಬಳಸುವುದು ಬರಬೇಕು. ನುಡಿಗಟ್ಟುಗಳು ಪದಪುಂಜಗಳು ಮತ್ತು ಗಾದೆ ಮಾತು ಅಡುವ ಮಾತಿಗೆ ಹೊಸ ಹೊಗರು ಚಂದ ಮತ್ತು ಪರಿಣಾಮವನ್ನು ಒದಗಿಸುತ್ತವೆ.ಅವುಗಳಿಲ್ಲದೆ ಹೋದರೆ ಭಾಷೆ ಕಂಪಿಲ್ಲದ ಹೂವಿನಂತೆ.
      ವಿದ್ಯಾರ್ಥಿಗಳಿಗೆ ನುಡಿಗಟ್ಟುಗಳು ಮತ್ತು ಪದಪುಂಜಗಳ ಸರಿಯಾದ ಬಳಕೆಯನ್ನು ಕಲಿಸ ಬಹುದಾದ ಯಾವುದೇ ಸರಳ ವಿಧಾನ ಇಲ್ಲ. ಸಾಮಾನ್ಯ ವಿಧಾನವೆಂದರೆ ವಿದ್ಯಾರ್ಥಿಗಳಿಗೆ  ಅದರ ಅರ್ಥವನ್ನು ಹೇಳಿ ವಿವರಿಸುವುದು ಮತ್ತು ಅನಂತರ ಅದನ್ನು ಬಳಸಿ  ವಾಕ್ಯಗಳನ್ನು ಮಾಡಲು ಅವರನ್ನು ಕೇಳುವುದು. ಇದೇ ಸರ್ವೇಸಾಮಾನ್ಯ ವಿಧಾನವಾಗಿದೆ. ಇದರಲ್ಲಿನ ನ್ಯೂನತೆ ಏನೆಂದರೆ, ವಿದ್ಯಾರ್ಥಿಗಳು ಪ್ರತ್ಯೇಕವಾದ ವಾಕ್ಯಗಳಲ್ಲಿ ನುಡಿಗಟ್ಟುಗಳನ್ನು ಸರಿಯಾಗಿ ಬಳಸಬಹುದು ಆದರೆ, ಅವರು ಒಂದು ಗದ್ಯದ ತುಣುಕನ್ನು  ಬರೆಯುವಾಗ ಇದನ್ನು ಪರಿಣಾಮಕಾರಿಯಾಗಿ ಬಳಸುವುದು ಎಷ್ಟೊ ಬಾರಿ ಸಾಧ್ಯವಾಗುವುದಿಲ್ಲ. ಹೊಸ ಪದಗಳನ್ನು ಅದರ ಸಾಂದರ್ಭಿಕ ಅರ್ಥ ವೈವಿಧ್ಯವನ್ನು ತಿಳಿದುಕೊಳ್ಳದೇ  ಕಲಿತಾಗ ಇದು  ಆಗಾಗ್ಗೆ ಸಂಭವಿಸುತ್ತದೆ. ಒಂದು ಪದವನ್ನು  ಸಂದರ್ಭಕ್ಕೆ ತಕ್ಕ ಹಾಗೆ ಬಳಸದಿದ್ದಾಗ ಮತ್ತು ಆ ಸಂದರ್ಭದಲ್ಲಿಯೇ ಅದನ್ನು ಪದೇ ಪದೇ ಬಳಸಿ  ಮನನ ಮಾಡಿಕೊಳ್ಳದೇ ಹೋದಲ್ಲಿ ಅದು ಬರಹಗಾರನ ಪದ ಸಂಪತ್ತಿನಲ್ಲಿ  ನೆಲೆ ಊರುವುದಿಲ್ಲ.
    ವಿದ್ಯಾರ್ಥಿಗಳು ನುಡಿಗಟ್ಟುಗಳನ್ನು  ಬಳಸಲು ತಪ್ಪದೇ ಕಲಿಯುವಂತೆ ಮಾಡುವ ಸುಲಭ ಮತ್ತು ಸ್ವಾರಸ್ಯಕರ ವಿಧಾನವೆಂದರೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಕಣ್ಣಾಡಿಸಿನೋಡಿ ನುಡಿಗಟ್ಟುಗಳನ್ನು ಗುರುತಿಸಲು  ಅವರನ್ನು ಕೇಳುವುದು.ತರಗತಿಯನ್ನು ಗುಂಪುಗಳಾಗಿ ವಿಭಜಿಸಿ ಮತ್ತು ಪ್ರತಿ ಗುಂಪಿಗೂ ಒಂದು ನಿರ್ದಿಷ್ಟ ವಿಷಯವನ್ನು ತೆಗೆದುಕೊಳ್ಳಲು ಹೇಳಿ ಉದಾಹರಣೆಗೆ - ಕ್ರೀಡೆ, ರಾಜಕೀಯ, ಪ್ರಸಕ್ತ ವಿದ್ಯಮಾನಗಳು, ವಿಜ್ಞಾನ, ಮನರಂಜನೆ, ಇತ್ಯಾದಿ. ಪ್ರತಿಯೊಂದು ಗುಂಪು ತದನಂತರ ನಿರ್ದಿಷ್ಟ ವಿಷಯದ ಮೇಲೆ ನುಡಿಗಟ್ಟುಗಳು ಪಟ್ಟಿಯನ್ನು ಮಾಡಲು ಕೇಳಿ. ವೃತ್ತ ಪತ್ರಿಕೆ ಲೇಖನಗಳು ನುಡಿಗಟ್ಟುಗಳು ಮತ್ತು ಪದಪುಂಜಗಳನ್ನು ಧಾರಾಳವಾಗಿ ಮತ್ತು ದಟ್ಟವಾಗಿ ಬಳಸುತ್ತವೆ. ಆಭ್ಯಾಸದ ಕೆಲಸದ ಕೊನೆಯಲ್ಲಿ, ವಿದ್ಯಾರ್ಥಿಗಳ ಪ್ರತಿಯೊಂದು ಗುಂಪು ನುಡಿಗಟ್ಟುಗಳ ಒಂದು ಪಟ್ಟಿಯನ್ನು ಹೊಂದಿರುತ್ತದೆ. ಅವರು ಹೇಗೆ ಕೆಲವು ನುಡಿಗಟ್ಟುಗಳನ್ನು ನಿರ್ದಿಷ್ಟ ಸುದ್ದಿಗಳಿಗೆ ಮಾತ್ರವೇ ಬಳಸಲಾಗುತ್ತದೆ ಮತ್ತೆ ಬೇರೆಯವಕ್ಕೆ ಬಳಸುವುದಿಲ್ಲ ಎಂಬುದನ್ನು ಕಾಣಬಹುದು.  (ಈ ಲೇಖನ ಕೃಪೆ - ಜಯಕುಮಾರ‍್)
     ಕಿಟೆಲ್ ಅವರು 1873 ರಲ್ಲಿ ಕೊಡಗಿನ ನುಡಿಗಟ್ಟುಗಳ ಸಂಗ್ರಹವನ್ನು ಪ್ರಕಟಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ