‘ಹುಗ್ಯೋ ಎನ್ನು’ (= ಉಘೇ ಎಂದು ಕೂಗುತ್ತಾ ಓಡಾಡು) ಎಂಬ ನುಡಿಗಟ್ಟು ಬೆಳೆಗೆ ಬಲಿ
ಚೆಲ್ಲುವ ಆಚರಣೆಯನ್ನು ಒಳಗೊಂಡಿರುವಂಥದ್ದು. ಮಹಾನವಮಿ ಕಾಲದಲ್ಲಿ ಸುತ್ತುಮುತ್ತ
ತಲೆದೂಗುವ ಬೆಳೆಯಲ್ಲಿ ಹಸುರು ಮಡುಗಟ್ಟಿರುತ್ತದೆ. ‘ಮಾರ್ನಾಮಿ ಅಷ್ಟೊತ್ತಿಗೆ ಮಾನೆಲ್ಲ
ಹೊಡೆ’ ಎಂಬ ಜನಪದ ಗಾದೆ, ತೆನೆಯಾಗುವ ಹಂತಕ್ಕೆ ಬೆಳೆ ಬೆಳೆದಿರುವುದನ್ನು ಸೂಚಿಸುತ್ತದೆ.
ಹಸಿರು ಬೆಳೆಗೆ ದೃಷ್ಟಿ ತಾಕುವುದೆಂದೋ ಅಥವಾ ‘ಹೊಲದಮ್ಮ’ನಿಗೆ ಬಲಿ ಚೆಲ್ಲಬೇಕೆಂದೋ
‘ಬಲಿ ಚೆಲ್ಲುವ’ ಆಚರಣೆ ಹಳ್ಳಿಗಾಡಿನಲ್ಲಿ ಉಂಟು.
ಇದರಲ್ಲಿ ಹಸಿರು ಬಲಿ, ರಕ್ತ ಬಲಿ ಎಂದು ಎರಡು ವಿಧ. ಹಸಿರು ಬಲಿ ಎಂದರೆ ಕರಿಮೀನು
ಸಾರಿನಲ್ಲಿ ಸ್ಯಾವೆ ಅಕ್ಕಿ ಅನ್ನವನ್ನು ಕಲಸಿ, ಕಬ್ಬಿಣದ ಕಡ್ಡಿಯಿಂದ ಎಲೆಗುದ್ದಲಿಯ
ತಗಡನ್ನು ಬಡಿಯುತ್ತಾ, ಹುಗ್ಯೋ ಹುಗ್ಯೋ ಎಂದು ಕೂಗುತ್ತಾ, ಊರಸುತ್ತಿನ ಬೆಳೆಗೆಲ್ಲ
ಅನ್ನದುಂಡೆಯನ್ನು ಎಸೆಯುತ್ತಾ ತೋಟಿ ಪೈಗೋಲಿನಂತೆ ಓಡುತ್ತಾನೆ. ರಕ್ತ ಬಲಿ ಎಂದರೆ ಮರಿ
ಅಥವಾ ಹಂದಿಯನ್ನು ಕುಯ್ದು, ಅದರ ರಕ್ತದಲ್ಲಿ ನೆಲ್ಲಕ್ಕಿ ಅನ್ನವನ್ನು ಕಲಸಿ, ಆ
ಉಂಡೆಯನ್ನು ಬೆಳೆಗೆಲ್ಲ ಎಸೆದುಕೊಂಡು ಬರುತ್ತಾನೆ. ಗ್ರಹಣವಾದಾಗಲೂ ರೋಗ ಬಡಿಯುತ್ತದೆಂದು
ಹೀಗೆ ಮಾಡುವುದುಂಟು. ತೋಟಿ ಬಲಿ ಚೆಲ್ಲುತ್ತಾ, ಹುಗ್ಯೋ ಹುಗ್ಯೋ ಎಂದು ಕೂಗುತ್ತಾ,
ಊರಸುತ್ತಿನ ಜಮೀನುಗಳನ್ನೆಲ್ಲ ಬಾರಾಡುವುದರಿಂದಲೇ “ಊರೆಲ್ಲ ಹುಗ್ಯೋ ಅಂತಾಳೆ, ಗಾಣಿಗರ
ಮನೆ ಕಾಣೆ ಅಂತಾಳೆ” ಎಂಬ ಜನಪದ ಗಾದೆ ಹುಟ್ಟಿರುವುದು; ಮಾಯಾಂಗನೆಯ ಮರ್ಮಕ್ಕೆ ತಾಕುವಂತೆ
ಅವಳ ಬಾರಾಡುವ ಸ್ವಭಾವವನ್ನು ಹರಾಜು ಎತ್ತಿರುವುದು.
‘ಸಿಡಿದಲೆ ಎತ್ತು’ ಎಂಬ ನುಡಿಗಟ್ಟು ಭಯಾನಕ ಆಚರಣೆಯ ಕೂಸು; ಅಮಾನವೀಯ ರಾಕ್ಷಸ
ಕೃತ್ಯ. ತಪ್ಪು ಮಾಡಿದ ವ್ಯಕ್ತಿಯನ್ನು ಮೂಡು ಮುಂತಾಗಿ ಕೂಡಿಸಿ, ಅವನಿಂದ ಸ್ವಲ್ಪ ದೂರದ
ಅಂತರದಲ್ಲಿ ನೆಟ್ಟಿರುವ ಸಣ್ಣಗಳುವಿನ ತುದಿಯನ್ನು ಅವನ ತಲೆಯ ಬಳಿಗೆ ಬರುವಂತೆ ಬಗ್ಗಿಸಿ,
ಅವನ ತಲೆಗೂದಲನ್ನು ಅದರ ತುದಿಗೆ ಗಂಟು ಹಾಕುತ್ತಾರೆ. ಕೊಲೆಗಡುಕನೊಬ್ಬ ಆ ವ್ಯಕ್ತಿಯ
ಕುತ್ತಿಗೆಯನ್ನು ಮರಿ ಕಡಿದಂತೆ ಕಡಿದಾಗ, ಬಗ್ಗಿಸಿದ್ದಗಳು ತಲೆಯ ಸಮೇತ ನೆಟ್ಟಗೆ
ನಿಂತುಕೊಳ್ಳುತ್ತದೆ; ವ್ಯಕ್ತಿಯ ತಲೆ ಗಳುವಿನಲ್ಲಿ ಬಾವುಟದಂತೆ ಅಲುಗಾಡುತ್ತದೆ. ಇಂಥ
ಕರಾಳ ರಾಕ್ಷಸ ಆಚರಣೆ ಇತ್ತು ಎಂಬುದಕ್ಕೆ ‘ಸಿಡಿದೆಲೆಯೆತ್ತು’ ಎಂಬ ನುಡಿಗಟ್ಟು
ಸಾಕ್ಷ್ಯವನ್ನು ಒದಗಿಸುತ್ತದೆ. ಹೀಗೆಯೇ ಗಾವಿನ ಮರಿ ಸಿಗಿದಂತೆ ಸಿಗಿ, ಸಿಡಿಯಾಡಿಸು,
ನಾಲಗೆ ಇರಿದುಕೊಳ್ಳು ಮುಂತಾದ ಆಚರಣೆಗಳು, ಇರುವುದನ್ನು ಕಾಣುತ್ತೇವೆ.
ಬೈಗುಳ ಮೂಲದ ನುಡಿಗಟ್ಟುಗಳನ್ನೀಗ ವಂದರಿಯಾಡಬಹುದು.
ಮರಣ ಹೊಂದು ಎಂಬ ಅರ್ಥದ ‘ಮಕ ಮಕಾಡೆ ಹಾಕು’ ಎಂಬ ನುಡಿಗಟ್ಟು ಮೇಲೆ ಕಾಣುವುದಕ್ಕಿಂತ
ವಿಶೇಷವಾದ ಅರ್ಥವನ್ನು ಒಳಗೊಂಡಿದೆ. ಮಕಾಡೆ ಎಂದರೆ ಮುಖ + ಅಡಿಯಾಗಿ ಎಂದರ್ಥ.
ಸತ್ತವರನ್ನು ಅಂಗಾತ ಮಲಗಿಸಿ ಮೇಲೆ ಮಣ್ಣೆಳೆಯುವುದರಿಂದಲೇ ‘ನಿನ್ನ ಬಾಯಿಗೆ ಮಣ್ಣು ಹಾಕ’
ಎಂಬ ಬೈಗುಳದ ನುಡಿಗಟ್ಟು ಚಾಲ್ತಿಗೆ ಬಂದಿರುವುದು. ಆದರೆ ಪ್ರಸ್ತುತ ನುಡಿಗಟ್ಟು
ಸಂಸ್ಕಾರದ ರೀತಿ ರಿವಾಜವನ್ನು ತಿರುಗಾಮುರುಗಾ ಮಾಡಿರುವುದನ್ನು ಕಾಣಬಹುದು. ಲೇಸಿಗನಿಗೆ
ಸದ್ಗತಿ ದೊರೆಯಲೆಂದು ಊರ್ಧ್ವಮುಖಿಯಾಗಿ ಮಲಗಿಸಿ ಮಣ್ಣೆಳೆದರೆ, ಕೇಡಿಗನಿಗೆ ದುರ್ಗತಿ
ದೊರೆಯಲೆಂದು ಅಧೋಮುಖಿಯಾಗಿ ಮಲಗಿಸಿ ಮಣ್ಣೆಳೆಯುವ ಆಶಯ ಈ ಬೈಗುಳದ ನುಡಿಗಟ್ಟಿನಲ್ಲಿದೆ.
ಕೇಡಿಗ ಎಂದು ಹೆಸರಿಸದೆ, ಕೇಡಿಗತನವನ್ನು ತುಂಬ ಮಾರ್ಮಿಕವಾಗಿ ವ್ಯಕ್ತಪಡಿಸುವುದು ನಮ್ಮ
ಜನಪದರ ಜಾಣತನಕ್ಕೆ, ಅಭಿವ್ಯಕ್ತಿ ವೈಚಿತ್ರಕ್ಕೆ ಸಾಕ್ಷಿಯಾಗಿದೆ.
ಮರಣ ಹೊಂದು ಎಂಬ ಅರ್ಥದ ‘ನಾಲೋರ ಹೆಗಲ ಮೇಲೆ ನಗನಗ್ತಾ ಹೋಗು’ ಎಂಬ ನುಡಿಗಟ್ಟು
ಪರಿಹಾಸ್ಯ ಲೇವಡಿಯ ಕಟುವ್ಯಂಗ್ಯದಿಂದ ಕೂಡಿದೆ. ಒಳ್ಳೆಯವರು ಸತ್ತರೆ ಚಟ್ಟದ
ಮುಂಭಾಗದಲ್ಲಿ ವಾಲಗ ಊದುವ ಮೇಳದವರಿದ್ದರೆ, ಹಿಂಭಾಗದಲ್ಲಿ ‘ಹೋದೆಯಲ್ಲೋ ಯಪ್ಪ,
ನಮಗಿನ್ಯಾರೋ ದಿಕ್ಕು’ ಎಂದು ಅತ್ತು ಕರೆಯುವ ಹೆಂಗಸರ ಮಕ್ಕಳ ಹಿಮ್ಮೇಳವಿರುತ್ತದೆ. ಆದರೆ
ಕೆಟ್ಟವರು ಸತ್ತರೆ “ಕೇಡಿಗ ನನ್ಮಗ ಹೋದ” ಎಂದು ಎಲ್ಲರ ಮುಖದ ಮೇಲೂ ಸಮಾಧಾನದ ನಸುನಗು
ಮಿನುಗುತ್ತಿರುತ್ತದೆ. ಈ ಬೈಗುಳದ ನುಡಿಗಟ್ಟಿನಲ್ಲಿ ನೀನು ಸತ್ತರೆ ಒಂದು ನರಪಿಳ್ಳೆ
ಅಳಲ್ಲ, ಎಲ್ಲರೂ ನಗ್ತಾರೆ ಎಂಬ ಛೇಡಿಕೆ ಇರುವುದನ್ನು ಕಾಣಬಹುದು.
ಮರಣ ಹೊಂದು ಎಂಬ ಅರ್ಥದ “ಆಪತ್ತು ಬಂದು ಚಾಪೇಲಿ ಸುತ್ಕೊಂಡು ಹೋಗು’ ಎಂಬ ನುಡಿಗಟ್ಟು
ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. ಇಲ್ಲಿ ‘ನಿನ್ನ ಗಂಡ ಸಾಯ, ಹೆಂಡ್ರು ಸಾಯ’
ಎಂದು ಬಯ್ಯುತ್ತಿಲ್ಲ; ‘ನಿನ್ನ ಮಕ್ಕಳು ಸಾಯ ಎಂದು ಬಯ್ಯುವುದು ಇದರ ಆಶಯವಾಗಿದೆ.
ಮಕ್ಕಳು ಎಂದು ನೇರವಾಗಿ ಹೆಸರಿಸದೆ ಸಂಸ್ಕಾರದ ರೀತಿ ರಿವಾಜಿನ ಮೂಲಕ ಅದನ್ನು
ಧ್ವನಿಸಿರುವ ಜನಪದರ ಜಾಣ್ಮೆ ಮೆಲುಕು ಹಾಕುವಂಥದು. ಮದುವೆಯಾದವರನ್ನು ಚಟ್ಟದ ಮೇಲೆ
ಸಾಗಿಸದೆ, ಚಾಪೆಯಲ್ಲಿ ಸುತ್ತಿಕೊಂಡು ಗುಂಡಿಯ ಬಳಿಗೆ ತೆಗೆದುಕೊಂಡು ಹೋಗಿ ಮಣ್ಣು
ಮಾಡಬೇಕೆಂದೂ ಕಟ್ಟುಕಟ್ಟಳೆ ಇದ್ದುದರ ಪರಿಣಾಮವೇ ಈ ನುಡಿಗಟ್ಟು. ಒಟ್ಟಿನಲ್ಲಿ ಈ ಬೈಗುಳದ
ನುಡಿಗಟ್ಟುಗಳಲ್ಲಿ ಸಂಸ್ಕಾರಕ್ರಿಯೆಯ ರೀತಿರಿವಾಜುಗಳು ಅಡಕವಾಗಿವೆ.
‘ಕಂದನ್ನ ಕಾಲು ದೆಸೆ ಹಾಕು’ ಎಂಬ ಬೈಗುಳದ ನುಡಿಗಟ್ಟು ‘ನೀನು ಸತ್ತ ಮಗು
ಹೆರುವಂತಾಗಲಿ’ ಎಂದು ನೇರವಾಗಿ ಶಾಪ ಹಾಕದೆ, ರೀತಿ ರಿವಾಜಿನ ಮೂಲಕವೇ ಅದನ್ನು
ಧ್ವನಿಸಿರುವ ಪರಿ ನಿಜಕ್ಕೂ ಅಚ್ಚರಿ ! ಸಾಮಾನ್ಯವಾಗಿ ಮಕ್ಕಳು ಹುಟ್ಟಿದಾಗ ಹೊಕ್ಕುಳ
ಬಳ್ಳಿ ಕುಯ್ದು, ಮಗುವನ್ನು ಮೊರಕ್ಕೆ ಹಾಕುವ ಪದ್ಧತಿ ಇದೆ. ಆದರೆ ಸತ್ತ ಮಕ್ಕಳನ್ನು
ಹೆತ್ತರೆ ಮೊರಕ್ಕೆ ಹಾಕದೆ, ಬಾಣಂತಿಯ ಕಾಲುದೆಸೆ ಹಾಕುವ ಪರಿಪಾಠವಿತ್ತು. ಆ ಪದ್ಧತಿಯ
ಪದಾರ್ಥವೇ ಈ ನುಡಿಗಟ್ಟು. ಒಟ್ಟಿನಲ್ಲಿ ಬೈಗುಳದ ನುಡಿಗಟ್ಟುಗಳು ಆಚಾರವಿಚಾರಗಳ ಮೇಲೆ
ಬೆಳಕು ಚೆಲ್ಲುವ ಬೆಳಕಿಂಡಿಗಳಾಗಿವೆ ಎನ್ನಬಹುದು.
ಈಗ ಬೇಸಾಯ ವೃತ್ತಿ ಮೂಲದ ನುಡಿಗಟ್ಟುಗಳ ಸೀಳುಕ್ಕೆ ಅಡ್ಡುಕ್ಕೆ ಹೊಡೆಯಬಹುದು.
ಅತಿರೇಕ ಅನಾನುಕೂಲವಾಗು ಎಂಬ ಅರ್ಥದ ‘ಕಡಿದಾದರೂ ಕಷ್ಟವಾಗು ಬಳಿದಾದರೂ ಕಷ್ಟವಾಗು’
ಎಂಬ ನುಡಿಗಟ್ಟು ಬೇಸಾಯದ ಓನಾಮ ಸ್ವರೂಪಿಯಾದುದು. ಹೊಲ ಉಳಲು ನೇಗಿಲು ಕಟ್ಟುವ ರೈತ,
ನೇಗಿಲಿನ ಈಚವನ್ನು ಎತ್ತುಗಳ ಹೆಗಲ ಮೇಲಿರುವ ನೊಗಕ್ಕೆ ಉಳೋ ಹಗ್ಗದಲ್ಲಿರುವ ಕೊರಡಿಗೆಯ
ಸಹಾಯದಿಂದ ಜರುಗಾಡದಂತೆ ಬಿಗಿಯಾಗಿ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಈಚದ ತುದಿಗೆ
ಕಟ್ಟಿದರೆ, ನೇಗಿಲಿನ ಗುಳದ ಭಾಗ ನೆಲಕ್ಕೆ ಮುಖ ಮಾಡಿ, ಹಿಂದಿನ ನೇಗಿಲಿನ ಅಂಡು ಮತ್ತು
ಮೇಣಿಯ ಭಾಗ ಮೇಲಕ್ಕೇಳುವುದರಿಂದ ಉಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಡಿದಾಯ್ತು
ಎನ್ನುತ್ತಾರೆ. ಆಗ ರೈತ ಈಚವನ್ನು ನೊಗದ ಮೇಲಕ್ಕೆ ಹೆಚ್ಚು ಏರು ಹಾಕಿ ಕಟ್ಟಿದರೆ ನೇಗಿಲನ
ಹಿಂದಿನ ಭಾಗ ಭಾಗ ನೆಲಕ್ಕೆ ಕೂತು, ಗುಳದ ಭಾಗ ನೆಲಕ್ಕೆ ತಾಕದೆ ಮೇಲೇಳುವುದರಿಂದ ಉಳಲು
ಸಾಧ್ಯವಾಗುವುದಿಲ್ಲ. ಇದಕ್ಕೆ ಬಳಿದಾಯ್ತು ಎನ್ನುತ್ತಾರೆ. ಆದ್ದರಿಂದ ಕಡಿದು ಮತ್ತು
ಬಳಿದು ಎಂಬ ಶಬ್ದಗಳು ವ್ಯವಸಾಯ ಹೆತ್ತ ಕೂಸುಗಳು. ಯಾವುದೇ ಅತಿರೇಕ ಅನಾನುಕೂಲ, ಸಮತೂಕ
ಅನುಕೂಲ ಅನುಕೂಲ ಎಂಬುದನ್ನು ಈ ನುಡಿಗಟ್ಟು ಚಿತ್ರವತ್ತಾಗಿ ಬಿಡಿಸಿಟ್ಟಿದೆ.
ಸಹಕರಿಸದಿರು, ಕಳಚಿಕೊಳ್ಳು ಎಂಬ ಅರ್ಥದ ‘ಕಣ್ಣಿ ಹಾಕು’ ಎಂಬ ನುಡಿಗಟ್ಟು ಒಂದು
ರೀತಿಯಲ್ಲಿ ಮೂಗೆತ್ತುಗಳ ಪರೋಕ್ಷ ಪ್ರತಿಭಟನೆ ಎನ್ನಬಹುದು. ನೇಗಿಲಿಗೋ ಅಥವಾ ಗಾಡಿಗೋ
ಕಟ್ಟುವ ಎತ್ತುಗಳ ಹೆಗಲ ಮೇಲೆ ನೊಗವನ್ನು ಇಟ್ಟು, ಕಣ್ಣಿ ಅಗಡಿನಿಂದ ಕೊರಳನ್ನು ಸುತ್ತು
ಹಾಕಿ ನೊಗದ ಒಳ್ಳಂಗೂಟಕ್ಕೆ ಅದನ್ನು ಚಿಮರ (ಮಲುಕು)ಹಾಕಿ ಕಟ್ಟುತ್ತಾರೆ. ಇನ್ನು
ಎಳೆಯಲಾರೆ ಎನ್ನಿಸಿದಾಗ, ಎತ್ತುಗಳು ಕಷ್ಟಪಟ್ಟು ಹೆಗಲ ಮೇಲಿಂದ ನೊಗ ಕೆಳಕ್ಕೆ ಬೀಳುವಂತೆ
ಮಾಡಿ ನಿಂತು ಬಿಡುತ್ತವೆ. ಇದಕ್ಕೆ ಕಣ್ಣಿ ಹಾಕಿದವು ಎನ್ನುತ್ತಾರೆ. ಅಶಕ್ತಿ
ಅಸಹಾಯಕತೆಯ ಹಂತದಲ್ಲಿ ಅಸಹನೆ ಅಸಹಕಾರ ಕುಡಿಯೊಡೆದಿರುವುದನ್ನು ಇಲ್ಲಿ ಕಾಣಬಹುದು.
‘ರಜವನ್ನು ರಾಶಿ ಮಾಡು’ ಎಂಬ ನುಡಿಗಟ್ಟು ಜನಪದರು ಅನ್ನದೇವರಿಗೆ ಸಲ್ಲಿಸುವ ಭಕ್ತಿ
ಪೂಜೆಗಳ ಪ್ರತೀಕವಾಗಿದೆ. ಕಡೆಗಣದಲ್ಲಿ ಒಕ್ಕ ಧಾನ್ಯವನ್ನೆಲ್ಲ ಮೇಟಿಯ ಸುತ್ತ ರಾಶಿ
ಮಾಡಿ, ರಾಶಿ ಪೂಜೆಯನ್ನು ಮಾಡಿದ ನಂತರವೇ ಧಾನ್ಯವನ್ನು ಮನೆಗೆ ಸಾಗಿಸುವುದು. ರಾಶಿ ಪೂಮೆ
ಮಾಡದೆ ಸಾಗಿಸುವುದಿಲ್ಲ. ಧಾನ್ಯ ಒಕ್ಕಣೆಯ ಕಣದಲ್ಲಿ ಎಲ್ಲ ವಸ್ತುಗಳ ದಿನನಿತ್ಯದ
ಹೆಸರಲ್ಲಿ ಕರೆಯದೆ, ಬೇರೊಂದು ಹೆಸರಲ್ಲಿ ಕರೆಯುವ ಪದ್ಧತಿಯಲ್ಲಿ ಒಂದು ಬಗೆಯ ಕಲ್ಯಾಣ
ದೃಷ್ಟಿಯನ್ನು ಕಾಣುತ್ತೇವೆ. ಉದಾಹರಣೆಗೆ ರಾಗಿಯನ್ನು ‘ರಜ’ ಎಂದು, ಮೊರವನ್ನು ‘ಕೊಂಗು’
ಎಂದು, ಗುಡಿಸುವ ಬರಲನ್ನು ‘ಹಿಡಿಗಲು’ ಎಂದು, ಧಾನ್ಯ ತೂರಲು ಬಳಸುವ ಎತ್ತರವಾದ
ಉದ್ದಿಗೆಯನ್ನು ‘ಕುದುರೆ’ ಎಂದು, ಜರಡಿಯನ್ನು ‘ವಂದರಿ’ ಎಂದು, ಎತ್ತನ್ನು ‘ಬಸವ’ ಎಂದು,
ಸಗಣಿಯನ್ನು ‘ಬೂದ’ ಎಂದು, ರಾಗಿಹುಲ್ಲಿನ ಕಡ್ಡಿಯನ್ನು ‘ನಾಮ’ ಎಂದು, ರಾಗಿ ಹುಲ್ಲಿನ
ಗರಿಯನ್ನು ‘ಪತ್ರೆ’ ಎಂದು, ಗಾಳಿಗೆ ವಾಸುದೇವರು < ‘ವಾಯುದೇವರು’ ಎಂದು – ಹೀಗೆ
ಪ್ರತಿಯೊಂದನ್ನು ಮೀಸಲು ಹೆಸರಿನಿಂದ ಕರೆಯಲಾಗುತ್ತದೆ. ಅನ್ನ ದೇವರ ಆವಾಸಸ್ಥಾನವಾದ
ಕಣದಲ್ಲಿ ‘ಮಡಿನುಡಿ’ ಯನ್ನು ಬಳಸಬೇಕೆಂಬ ಭಕ್ತಿ ಭಾವನೆ ಇದಕ್ಕೆ ಕಾರಣವಾಗಿರಬೇಕು
ಎನ್ನಿಸುತ್ತದೆ. ‘ರಾಶಿಪೂಜೆ’ ಜನಪದ ಸಂಸ್ಕೃತಿಯ ದ್ಯೋತಕವಾಗಿದೆ.
ಈಗ ವೇಶ್ಯಾವೃತ್ತಿ ಮೂಲದ ನುಡಿಗಟ್ಟುಗಳ ನಾಡಿ ಹಿಡಿದು ನೋಡೋಣ.
ವೇಶ್ಯಾವಾಟಿಕೆ ಸೇರು ಎಂಬ ಅರ್ಥದ ‘ಗೊಟ್ಟಿಗೆರೆ ಸೇರು’ ಎಂಬ ನುಡಿಗಟ್ಟು ಸ್ಥಳನಾಮ
ಸಂಶೋಧಕರಿಗೆ, ಭಾಷಾತಜ್ಞರಿಗೆ ಸನ್ನೆಗೋಲಿನಂತಿದೆ. ಗೋಷ್ಠಿಕೇರಿ > ಗೊಟ್ಟಿಗೇರಿ
> ಗೊಟ್ಟಿಗೆರೆ ಆಗಿದೆ. ಈ ಊರು ನನ್ನ ಜನ್ಮಸ್ಥಳಕ್ಕೆ ಐದು ಮೈಲಿ ಫಾಸಲೆಯಲ್ಲಿರುವ
ಶಿವಗಂಗೆ ಬೆಟ್ಟದ ಪೂರ್ವ ತಪ್ಪಲಿನಲ್ಲಿರುವಂಥದು. ಹಿಂದೆ ಕರ್ನಾಟಕವನ್ನು ಆಳಿದ ಅನೇಕ
ಅರಸು ಮನೆತನಗಳ ರಾಜಾಧಿರಾಜರು ಕದನ ತರಾಟೆಯಲ್ಲಿ ಮಗ್ನರಾದಂತೆಯೇ ಮದನ ಭರಾಟೆಯಲ್ಲೂ
ಮುಳುಗಿದ್ದರು ಎಂಬುದಕ್ಕೆ ಇಂಥ ‘ಜಂಗಮ ಲತಾ ಲಲಿತಾಂಗಿಯರ’ ಸಂಗೀತ ನೃತ್ಯ ಸರಸಸಲ್ಲಾಪದ
ರತಿಕೇಳಿಯಾಟ ಕೂಟಗಳಿಗೂ ಕುಮ್ಮಕ್ಕು ಕೊಡುತ್ತಿದ್ದರೆಂದು ಕಾಣುತ್ತದೆ. ಅದರ ಪಡಿಯಚ್ಚು ಈ
ಗೊಟ್ಟಿಗೆರೆ. “ಕೆಟ್ಟು ಬಿಟ್ಟವರಿಗೆಲ್ಲ ಗೊಟ್ಟಿಗೆರೆ ತವರ್ಮನೆ” ಎಂಬ ಜನಪದ ಗಾದೆ,
ಯಾವುದೋ ಕಾರಣಕ್ಕೆ ಹರೆಯದಲ್ಲಿ ಕಾಲು ಜಾರಿ ಕೆಟ್ಟವರು, ಗಂಡ ಬಿಟ್ಟವರು – ಇವರಿಗೆಲ್ಲ
ಗೊಜಟ್ಟಿಗೆರೆ ಆಶ್ರಯ ತಾಣವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಇದಕ್ಕೆ
ಪೂರಕಾಂಶವೆಂಬಂತೆ ಗೊಟ್ಟಿಗೆರೆ ಪಕ್ಕದಲ್ಲೇ ಅವ್ವೇರಹಳ್ಳಿ ಎಂಬ ಊರಿದೆ. ಅವ್ವೆಯರು
ಎಂದರೆ ಅಂತಃಪುರ ಸ್ತ್ರೀಯರು, ಬಂಗಾರದವರು ಎಂದರ್ಥ. ಅವ್ವೇರಹಳ್ಳಿಗೂ ಗೊಟ್ಟಿಗೆರೆಗೂ
ಕಿತ್ತರೂ ಬರದಂಥ ಸಂಬಂಧ ಬೆಸೆದುಕೊಂಡಿರುತ್ತದೆ. ಶಿವಗಂಗೆ ಬೆಟ್ಟಕ್ಕೆ ಪೂರ್ವ ಭಾಗದಲ್ಲಿ
ಗೊಟ್ಟಿಗೆರೆ ಇದ್ದರೆ, ಶಿವಗಂಗೆ ಬೆಟ್ಟದ ನೈರುತ್ಯ ಭಾಗದಲ್ಲಿ ಹದರಂಗಿ ಎಂಬ ಊರಿರುವುದು
ಅರ್ಥಪೂರ್ಣವಾಗಿದೆ. ಹದರೆ (< ಹಾದರ < ಪಾದರ) ಎಂದರೆ ಸೂಳಿಗಾರಿಕೆ. ‘ನಿನ್ನ
ಹದರಾಟ ನನ್ನ ಹತ್ರ ನಡೆಯಲ್ಲ’ ಎಂದರೆ ‘ನಿನ್ನ ಹಾದರಗಿತ್ತಿಯಾಟ ನನ್ನ ಹತ್ರ ನಡೆಯಲ್ಲ’
ಎಂದು ಮಂಗಳಾಂಗಿ ಇದ್ದಂತೆ ಹದರಾಂಗಿ (> ಹದರಂಗಿ) ಇರಬೇಡವೆ? ಶೂನ್ಯಸಂಪಾದನೆಯ
ಎರಡನೆಯ ಸಂಕಲನಕಾರನಾದ ಹಲಗೆಯ ದೇವ ಅಥವಾ ಹಲಗೆಯಾರ್ಯ ಈ ಹದರಂಗಿಯವನೇ ಎಂದು ಪ್ರತೀತಿ.
ಒಟ್ಟಿನಲ್ಲಿ ಹದರಂಗಿ, ಅವ್ವೇರಳ್ಳಿ, ಗೊಟ್ಟಿಗೆರೆ ಎಂಬ ಊರುಗಳು ಗತ ಇತಿಹಾಸದ
ಗಡಿರೇಖೆಯ ಬಾಂದುಗಲ್ಲುಗಳು ಎನ್ನಬಹುದು.
‘ಹೊರಕೇರಿಗೆ ಹೋಗದಿರು’ ಎಂಬ ನುಡಿಗಟ್ಟು ಮತ್ತೆ ಭಾಷಾ ಶಾಸ್ತ್ರಜ್ಞರಿಗೆ ಮೆಲುಕು
ಹಾಕಲು ಮೇವು ಒದಗಿಸುತ್ತದೆ. ವಾರಾಂಗನೆಯ ಕೇರಿ > ವಾರಕೇರಿ > ವರಕೇರಿ >
ಹೊರಕೇರಿ ಆಗಿದೆ. “ಹರೆ ಬಡಿದರೆ ನಿಂತಾಳ ಹೊರಕೇರಿ ಲಕ್ಕಿ?” ಎಂಬ ಜನಪದ ಗಾದೆ,
ಪ್ರದರ್ಶನ ಪ್ರಿಯ ವಾರಾಂಗನೆ ಗ್ರಾಮದೇವತೆ ಜಾತ್ರೆಯಲ್ಲಿ ಥಳುಕು ಬಳುಕಿನಿಂದ
ಎಲ್ಲರೆದುರು ಸುಳಿದಾಡದೆ ಮನೆಯಲ್ಲಿ ಮುದುಡಿ ಕುಳಿತುಕೊಳ್ಳುವಳೆ ? ಎಂಬುದನ್ನು
ಧ್ವನಿಸುತ್ತದೆ. ಹಾಗೆಯೇ “ಊರಾಚೆ ಹೊಲಗೇರಿ, ಊರೊಳಗೆ ಹೊರಕೇರಿ” ಎಂಬ ಗಾದೆ
ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಎಂಬುದನ್ನು ರುಜುವಾತು ಪಡಿಸುತ್ತದೆ. ಏಕೆಂದರೆ
ಹೊಲಗೇರಿಯನ್ನು ಊರಾಚೆ ಇರಿಸಿ, ಹೊರಕೇರಿಯನ್ನು ಊರೊಳಗೆ ಇರಿಸಿಕೊಂಡ ಸಮಾಜ ಕಾಯಿಲೆ
ಕಸಾಲೆಯ ಕೊಳೆತು ನಾರುವ ತಿಪ್ಪೆಗುಂಡಿಗಿಂತ ಭಿನ್ನವಲ್ಲ.
ಚೆಲ್ಲು ಬಿದ್ದು ಬರು ಎಂಬ ಅರ್ಥದ ‘ತ್ಯಾಪೆ ಹತ್ತಿ ಬರು’ ಎಂಬ ನುಡಿಗಟ್ಟು ಸಹ
ವೇಶ್ಯಾವೃತ್ತಿಗೇ ಸಂಬಂಧಿಸಿದ್ದು. ತ್ಯಾಪೆ (< ತೇಪೆ < ತಾಪು) ಎಂದರೆ
ತಲೆಹಿಡುಕಿಯ ಸಂಗೀತ ನರ್ತನ ರತಿಕೇಳಿಯಾಟದ ವಠಾರ ಎಂದರ್ಥ. ಅಂಥ ತ್ಯಾಪೆಯ ಮೆಟ್ಟಿಲು
ಹತ್ತಿ ಬಂದವಳು ಎಂದರೆ ಶೀಲಗೆಟ್ಟವಳು ಎಂದಾಗುತ್ತದೆ. ಒಟ್ಟಿನಲ್ಲಿ ತ್ಯಾಪೆ (<ತಾಪು)
ಹೊರಕೇರಿ (< ವಾರಕೇರಿ) ಗೊಟ್ಟಿಗೆರೆ (< ಗೋಷ್ಠಿಕೇರಿ) ಎಂಬ ಹೆಸರುಗಳು
ವೇಶ್ಯಾವೃತ್ತಿಯ ತಂಗುದಾಣಗಳು ಎಂದರ್ಥವಾಗುತ್ತದೆ.
ಇತರ ವೃತ್ತಿಮೂಲದ ನುಡಿಗಟ್ಟುಗಳ ಮೇಲೆ ಈಗ ಕಣ್ಣಾಡಿಸೋಣ.
ಹಿಂಸಿಸು ಅಥವಾ ಶ್ರಮಕೊಡು ಎಂಬ ಅರ್ಥದ ‘ಕಂಬಚ್ಚಿಗೆ ಹಾಕಿ ಈಚು’ ಎಂಬ ನುಡಿಗಟ್ಟು
ಅಕ್ಕಸಾಲಿಗ ವೃತ್ತಿಮೂಲವಾದದ್ದು. ಸರಿಗೆ (ಕಂಬಿ) ತೆಗೆಯಬೇಕಾದರೆ ಕಂಬಚ್ಚಿನ (ಕಂಬಿ +
ಅಚ್ಚು) ಬೇರೆ ಬೇರೆ ಗಾತ್ರದ ರಂದ್ರಗಳಲ್ಲಿ ತಮಗೆ ಬೇಕಾದ ಗಾತ್ರಕ್ಕನುಗುಣವಾದ
ರಂದ್ರದಲ್ಲಿ ತೂರಿಸಿ, ಇಕ್ಕುಳದಿಂದ ಈಚೆಗೆ ಎಳೆಯುತ್ತಾರೆ. ಆ ರಂದ್ರಕ್ಕಿಂತಲೂ ದಪ್ಪನಾದ
ಭಾಗ ಈಚಿಕೊಂಡು ಕೆಳಗೆ ಬೀಳುತ್ತದೆ. ಸಣ್ಣ ಎಳೆ, ಸರಿಗೆ ತಯಾರಾಗುತ್ತದೆ. ಹಾಗೆ
ವ್ಯಕ್ತಿಗಳಿಗೆ ಶ್ರಮ ಕೊಟ್ಟು, ಹಿಂಸಿಸಿ, ಬತ್ತಿ ಹೋಗುವಂತೆ ಮಾಡುವುದನ್ನು ಈ
ನುಡಿಗಟ್ಟು ಚಿತ್ರಿಸುತ್ತದೆ.
ತನ್ನ ನಿಲುವಿಗೆ ಅಂಟಿಕೊಳ್ಳು ಅಥವಾ ಬೇರೆ ಕೆಲಸಕ್ಕೆ ಗಮನ ಕೊಡದಿರು ಎಂಬ ಅರ್ಥದ
‘ಊಕೆ ಕಟ್ಟಿ ಕೂಡು’ ಎಂಬ ನುಡಿಗಟ್ಟು ಕಂಬಳಿ ನೇಯ್ಗೆಯ ವೃತ್ತಿ ಮೂಲದ್ದು. ಈ
ವೃತ್ತಿಯವರಿಗೆ ಅಂಡೆಕುರುಬರು ಅಥವಾ ಲಾಳಿ ಕುರುಬರು ಎಂದು ಕರೆಯುವುದುಂಟು. ಕನಕದಾಸರು ಈ
ಬೆಡಗಿನವರು. ಹೊಕ್ಕು ನೂಲನ್ನು ಒಂದು ಬಿದಿರ ಅಂಡೆಗೆ (ಗೊಟ್ಟದಾಕಾರದ ಬಿದರ ಕೊಳವೆ)
ತುಂಬಿ, ಹಾಸು ನೂಲಿನ ಮಧ್ಯೆ ಅಡ್ಡಡ್ಡವಾಗಿ ಹೋಗುವಂತೆ ತೂರಿಸಿ, ಆ ಬಳಿಕ ಸಣ್ಣ
ಹಲಗೆಯಿಂದ ಹೊಕ್ಕುನೂಲು ಬಿಗಿಯಾಗಿ ಕೂಡುವಂತೆ ತಾಡಿಸುತ್ತಾರೆ. ಅದರಿಂದಲೇ
ಅಂಡೆಕುರುಬರು, ಲಾಳಿ ಕುರುಬರು ಎಂಬ ಬೆಡಗುಗಳು ಮೂಡಿಸಲು ಸಾಧ್ಯ. ಮೊದಲು ಹಾಸು ನೂಲನ್ನು
ಕಟ್ಟಿ ಬಿಗಿಗೊಳಿಸುವುದಕ್ಕೆ ಊಕೆ ಕಟ್ಟುವುದು ಎನ್ನುತ್ತಾರೆ. ಆ ಕೆಲಸ ಮುಗಿಯುವ ತನಕ
‘ಪಲಾತನ ಮಗ’ (< ಫಾಲಾಕ್ಷನ ಮಗ ವೀರಭದ್ರ ಅರ್ಥಾತ್ ಬೀರೇಶ್ವರ) ಬಂದರೂ ಅವನು
ಅತ್ತಿತ್ತ ಅಲುಗುವುದಿಲ್ಲ. ಅನ್ಯರ ಮಾತಿಗೆ ಕಿವಿಗೊಡದೆ ತನ್ನ ನಿಲುವಿಗೆ ಕಟ್ಟು ಬೀಳುವ
ಮನುಷ್ಯನ ಪ್ರವೃತ್ತಿಯನ್ನು ಹೇಳುವಾಗ ಈ ನುಡಿಗಟ್ಟನ್ನು ಬಳಸಲಾಗುತ್ತದೆ.
ಈಗ ಪುರೋಹಿತಶಾಹೀ ವೃತ್ತಿ ಟೀಕಾ ಮೂಲದ ನುಡಿಗಟ್ಟುಗಳನ್ನು ಸಮೀಕ್ಷಿಸಬಹುದು.
ಉದಾಹರಣೆಗೆ ಹೋಮ ಮಾಡು ಎಂಬ ನುಡಿಗಟ್ಟನ್ನು ಹಾಳು ಮಾಡು ಎಂಬ ಅರ್ಥದಲ್ಲಿ ಜನಪದರು
ಬಳಸುತ್ತಾರೆ. ಪುರೋಹಿತಶಾಹಿ ವೃತ್ತಿಯವರು ದೇಶಕ್ಕೆ ಒಳ್ಳೆಯದಾಗಲೆಂದು ಹಾಲು ತುಪ್ಪ
ಮೊದಲಾದ ಬೆಲೆಯುಳ್ಳ ವಸ್ತುಗಳನ್ನು ಬೆಂಕಿಗೆ ಸುರಿದು ಹೋಮ ಮಾಡುತ್ತಾರೆ. ಆದರೆ ಜನಪದರು
ಅದು ಹಾಳು ಮಾಡುವ ಮೂಢ ಆಚರಣೆ ಎಂಬ ಅರ್ಥದಲ್ಲಿ “ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಹೋಮ
ಮಾಡಿಬಿಟ್ಟ” ಎಂದು ಬಳಸಿ, ಹೋಮ ಮಾಡು ಎಂಬ ನುಡಿಗಟ್ಟಿಗೆ ಹಾಳು ಮಾಡು ಎಂಬ ಅರ್ಥ
ಆವಾಹನೆಗೊಳ್ಳುವಂತೆ ಮಾಡಿರುವುದನ್ನು ಕಾಣಬಹುದು.
ಬಿದಿಗೆ ತದಿಗೆ ಲೆಕ್ಕಾಚಾರವನ್ನು ಪಕ್ಕಕ್ಕಿಡು ಎಂಬ ಅರ್ಥದ ‘ಬಿಂದಿಗೆ ತಂಬಿಗೆ
ಅತ್ತಿಕ್ಕು’ ಎಂಬ ನುಡಿಗಟ್ಟು ದ್ವಿತೀಯ ತೃತೀಯೆ ಎಂದು ತಿಥಿ ವಾರ ನಕ್ಷತ್ರಗಳ ಲೆಕ್ಕ
ಹಾಕುವ ಪುರೋಹಿತಶಾಹಿ ಪ್ರವೃತ್ತಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವುದನ್ನು ಬಿದಿಗೆ
ತದಿಗೆಯನ್ನು ಬಿಂದಿಗೆ ತಂಬಿಗೆ ಎಂದು ಲೇವಡಿ ಮಾಡಿರುವುದರಿಂದಲೇ ಸೂಚಿತವಾಗುತ್ತದೆ.
ಮಾತಾಡದಿರು ಅಥವಾ ಅಭುಶುಭ ಎನ್ನದಿರು ಎಂಬ ಅರ್ಥದ ‘ಹರಿಶಿವಾ ಎನ್ನದಿರು’ ಎಂಬ
ನುಡಿಗಟ್ಟು, ಹರಿ ಹೆಚ್ಚು ಹರ ಹೆಚ್ಚು ಎಂಬ ಹರಿಹರ ಹಗರಣವನ್ನು ತನ್ನ ಒಡಲಲ್ಲಿ
ಹುದುಗಿಸಿಕೊಂಡಿದೆ. ಹರಿಯ ಪಕ್ಷವೂ ಬೇಡ ಹರನ ಪಕ್ಷವೂ ಬೇಡ ಎಂದು ಸುಮ್ಮನಿದ್ದು ಬಿಡುವ
ತಾಟಸ್ಥ್ಯ ನೀತಿ ಆ ನುಡಿಗಟ್ಟಿನಲ್ಲಿ ಹರಳುಗೊಂಡಿದೆ. ಕರ್ನಾಟಕದಲ್ಲಿ ರಾಮಾನುಜಾಚಾರ್ಯ
ಪ್ರಣೀತಿ ಶ್ರೀವೈಷ್ಣವ ಮತ ಹೆಚ್ಚು ಪ್ರಚಾರಗೊಂಡು, ಶೂದ್ರರಿಗೂ ಪಂಗನಾಮ ಹಾಕಿ, ಶ್ರಾವಣ
ಶನಿವಾರ ಹತ್ತಾರು ಮನೆಗಳಿಗೆ ಹೋಗಿ ‘ಶ್ರೀ ನಾರಾಯಣ ಗೋವಿಂದ, ಗೋವಿಂದ’ ಎಂದು ನಾಮಸ್ಮರಣೆ
ಮಾಡುತ್ತಾ ಭಿಕ್ಷೆ ಬೇಡಬೇಕೆಂದು ಕಟ್ಟು ಮಾಡಿದ ಪ್ರಯುಕ್ತ, ಹಳ್ಳಿಯ ಶೂದ್ರ ಜನಾಂಗ
ಶ್ರಾವಣ ಶನಿವಾರದಂದು ಚೊಂಬಿಗೆ ಪಂಗನಾಮ ಬಳಿದು, ಬೊಗಸೆಯೊಳಗೆ ಇಟ್ಟುಕೊಂಡು, ಹತ್ತಾರು
ಮನೆಗಳ ಎದುರು ನಿಂತುಕೊಂಡು, ಉಚ್ಚರಿಸಲು ಬಾರದೆಯೋ ಅಥವಾ ತಮ್ಮ ಅಂತರಂಗದ ಅದ್ವೆತ
ಭಾವನೆಯ ಪ್ರತೀಕವೊ “ಶಿವನಾರಾಯಣ ಗೋವಿಂದ, ಗೋವಿಂದ” ಎಂದು ಹೇಳುತ್ತಾ ಹೋಗುವುದನ್ನು
ಇಂದಿಗೂ ನಾವು ಕಾಣುತ್ತೇವೆ. ಒಟ್ಟಿನಲ್ಲಿ ‘ಹರಿಶಿವಾ ಎನ್ನದಿರು’ ಎಂಬ ನುಡಿಗಟ್ಟು
ಹರಿಹರ ಹಗರಣರ ಭಯಭೀತ ವಾತಾವರಣದ ಕೂಸು ಎಂಬುದು ದಿಟ.
ತಾರಾತಿಗಡಿ ಲೆಕ್ಕಾಚಾರ ಮುಚ್ಚಿಡು ಎಂಬ ಅರ್ಥದ ‘ಸರಿಬೆಸ ಗರಗಸ ಕಟ್ಟಿಡು’ ಎಂಬ
ನುಡಿಗಟ್ಟು ಜೋತಿಷ್ಯ ಶಾಸ್ತ್ರವನ್ನು ಅಲ್ಲಗಳೆಯುವಂಥದಾಗಿದೆ. ಜ್ಯೋತಿಷ್ಯ ಹೇಳುವವರು
ಕವಡೆ ಉರುಳಿಸಿ, ಸಮಸಂಖ್ಯೆ ಬಂತು ನಿನ್ನ ಕೆಲಸ ಆಯಿತು, ಬೆಸ ಸಂಖ್ಯೆ ಬಂತು ನಿನ್ನ ಕೆಲಸ
ಆಗುವುದಿಲ್ಲ ಎಂದು ಹೇಳಿ ಜನಸಾಮಾನ್ಯರ ಸುಲಿಗೆ ಮಾಡುವುದನ್ನು ಇದು ಲೇವಡಿ ಮಾಡುತ್ತದೆ.
ಗರಗತಿ (<ಗ್ರಹಗತಿ) ಎಂಬುದನ್ನು ಗರಗಸ (< ಕ್ರಕಚ, ರೊಂಪ) ಮಾಡಿರುವುದರಲ್ಲಿಯೇ
ಅಸಹನೆಯ ಹೊಗೆಯಾಡುವುದನ್ನು ಕಾಣುತ್ತೇವೆ. ಹಿಂದಿನ ಸರಿಬೆಸ ಶಬ್ದದ ಸಾದೃಶ್ಯದ ಮೇಲೆ
ಗರಗತಿ ಶಬ್ದ ಗರಗಸ ಆಗಿದೆ ಎಂಬುದನ್ನು ಮರೆಯುವಂತಿಲ್ಲ.
ಈಗ ಶೋಷಣಾ ಮೂಲದ ನುಡಿಗಟ್ಟುಗಳನ್ನೀಗ ಉಂಡಿಗೆ ಹಾಕಿ ನೋಡೋಣ. ಜೀತದಾಳಾಗಿ ದುಡಿ ಎಂಬ
ಅರ್ಥದ ‘ಮೂಗಿಗೆ ಕವಡೆ ಕಟ್ಕೊಂಡು ದುಡಿ’ ಎಂಬ ನುಡಿಗಟ್ಟು ಹಿಂದೆ ಅಸ್ತಿತ್ವದಲ್ಲಿದ್ದ
ಕರಾಳ ಶೋಷಣಾ ಪದ್ಧತಿಯ ಪ್ರತೀಕವಾಗಿದೆ. ಅಟ್ಟುಗೌಡಿ (ಅಡುಗೆಯಾಳು) ಮುಟ್ಟುಗೌಡಿ
(ಪಾತ್ರೆ ಉಜ್ಜುವ ಆಳು) ಕಸಗೌಡಿ (ಕಸ ಗುಡಿಸುವ ಆಳು) ನೀರುಗೌಡಿ (ನೀರು ಹೊತ್ತು ತರುವ
ಆಳು) ಮುಂತಾದ ಹೆಸರುಗಳು ಜೀತಪದ್ಧತಿಯ ಪಳೆಯುಳಿಕೆಗಳಾಗಿವೆ. ನೀರು ಹೊತ್ತು ತರುವವರಿಗೆ
ಮಾತ್ರ ಮೂಗಿಗೆ ಕವಡೆ ಕಟ್ಟಲಾಗುತ್ತಿತ್ತು. ಉಳಿದ ಕಾಯಕದವರಿಗೆ ಕಟ್ಟುತ್ತಿರಲಿಲ್ಲ,
ಏಕಿರಬಹುದು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಉಳಿದವರು ಮನೆಯಲ್ಲೇ ಇರುತ್ತಾರೆ,
ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ಹೊರಗೆ ದೂರವಿರುವ ಭಾವಿಯಂದಲೊ ಹೊಳೆಯಿಂದಲೋ
ನೀರು ಹೊತ್ತು ತರಬೇಕಾಗಿರುವುದರಿಂದ ತಪ್ಪಿಸಿಕೊಂಡು ಹೋದಾರು, ಬೇರೆಯೂರಿನ ಬೇರೊಂದು ಮನೆ
ಸೇರಿಕೊಂಡಾರು ಎಂಬ ಕಾರಣದಿಂದಲೇ ಮೂಗಿಗೆ ಕವಡೆ ಕಟ್ಟುತ್ತಿದ್ದಿರಬೇಕು. ಮೂಗಿನಲ್ಲಿರುವ
ಕವಡೆಯನ್ನು ನೋಡಿ, ಇವನು ಬೇರೆಯವರ ಜೀತದಾಳು ಎಂಬುದು ಗೊತ್ತಾಗಿ, ಬೇರೆಯವರು ತಮ್ಮ
ಮನೆಯಲ್ಲಿ ಇರಿಸಿಕೊಳ್ಳುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಊಹಿಸಬಹುದು. ಈ ಪದ್ಧತಿ
ಚಾಲ್ತಿಯಲ್ಲಿತ್ತು ಎಂಬುದಕ್ಕೆ ಕನಕದಾಸರ ಮೋಹನ ತರಂಗಿಣಿಯ ಪದ್ಯವೊಂದರ ವರ್ಣನೆ ಬೆಳಕು
ಚೆಲ್ಲುತ್ತದೆ – “ವೀರರ ಮೂಗಿಗೆ ಕವಡೆಯ ಕಟ್ಟಿ ನೀರ್ತರಿಸಿ”
ಹಿಂಸಿಸಿ ಹೀಯಾಳಿಸು ಎಂಬ ಅರ್ಥದ ‘ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗಿ’ ಎಂಬ ನುಡಿಗಟ್ಟು
ಜನಪದರ ಚಿತ್ರಕಶಕ್ತಿಯ ಅಭಿವ್ಯಕ್ತಿಗೆ ಪ್ರತೀಕವಾಗಿದೆ. ಹಲ್ಲಾಗೆ ಹಾಕಿ ಎಂದರೆ
ಹಲ್ಲೊಳಗೆ ಅಗಿದು ಜಗಿದು ಹಿಂಸಿಸಿದ್ದೇ ಅಲ್ಲದೆ, ಸೊಲ್ಲಾಗೆ ತೆಗಿ ಎಂದರೆ ಥರಾವರಿ
ಬೈಗುಳದ ಮಾತಿನಲ್ಲಿ ಒಳಗನ್ನು ಇರಿದು ಮಾನವನ್ನು ಜಾಲಾಡುವ ಕ್ರಿಯೆಯನ್ನು ಕಣ್ಮುಂದೆ
ತರುತ್ತದೆ. ಇದರ ಕಾವ್ಯಾತ್ಮಕ ಅಭಿವ್ಯಕ್ತಿ ಕವಿರಾಜಮಾರ್ಗಕಾರ ಹೇಳುವ “ಕುರಿತೋದದೆಯಂ
ಕಾವ್ಯ ಪ್ರಯೋಗ ಪರಿಣತಮತಿಗಳ್” ಎಂಬ ಮಾತನ್ನು ನೆನಪಿಗೆ ತರುತ್ತದೆ.
ದರ್ಪಿಷ್ಟರ ಮುಂದೆ ದೈನ್ಯವಾಗಿ ನಿಲ್ಲು ಎಂಬ ಅರ್ಥದ ‘ಹಲ್ಲು ಕಚ್ಚೋರ ಮುಂದೆ ಹುಲ್ಲು
ಕಚ್ಚಿ ನಿಲ್ಲು’ ಎಂಬ ನುಡಿಗಟ್ಟು ಹೊಟ್ಟೆ ತುಂಬಿದ ದಣಿಗಳ ದರ್ಪ ಸಿಟ್ಟುಗಳ ಎದುರು
ಹೊಟ್ಟೆಗಿಲ್ಲದವರ ದೈನ್ಯತೆ ಶರಣಾಗತಿಯನ್ನು ತುಂಬ ಕಾವ್ಯಾತ್ಮಕವಾಗಿ ಧ್ವನಿಸುತ್ತದೆ.
ಹಲ್ಲು ಕಚ್ಚು ಎಂಬುದಕ್ಕೆ ವೈದೃಶ್ಯವಾಗಿ ಬಂದಿರುವ ಹುಲ್ಲುಕಚ್ಚು ಎಂಬುದು ಜನಪದರು
ಹುಟ್ಟು ಕವಿಗಳು ಎಂಬುದನ್ನು ರುಜುವಾತಗೊಳಿಸುತ್ತದೆ. ಹೀಗೆಯೇ ಕಿವಿಗೆ ಕಲ್ಲು ಹಾಕಿ
ಹಿಂಡು, ಅನ್ನದ ಬಾಯಿಗೆ ಮಣ್ಣು ಹಾಕು, ಉಂಡದ್ದು ಊಡ ಕೊಂಡದ್ದು ಕೂಟವಾಗದಿರು ಮುಂತಾದ
ನುಡಿಗಟ್ಟುಗಳು ಶೋಷಣೆಯ ವಿವಿಧ ಮುಖಗಳನ್ನು ಪರಿಚಯಿಸುತ್ತವೆ.
ಈಗ ಸಿರಿತನ ಮೂಲದ ನುಡಿಗಟ್ಟುಗಳನ್ನು ಕೊಂಚ ನುರಿಸೋಣ
‘ತುಪ್ಪದಲ್ಲೇ ಕೈ ತೊಳೆ’ ಎಂಬ ನುಡಿಗಟ್ಟು, ಕೈ ತೊಳೆಯಲು ನೀರು ಬಳಸದೆ ತುಪ್ಪವನ್ನೇ
ಬಳಸುತ್ತಿದ್ದರು ಎಂಬ ಮೂಲಕ ಶ್ರೀಮಂತಿಕೆಯ ಸಮೃದ್ಧಿಯನ್ನು ಧ್ವನಿಸುತ್ತದೆ (ತುಪ್ಪದಲ್ಲಿ
ಕೈ ತೊಳೆದರೆ, ಕೈ ಶುಚಿಯಾಗದೆ ಜಿಡ್ಡುಮಯವಾಗುತ್ತದೆ ಎಂಬ ವಾಸ್ತವ ಸತ್ಯ ಇಲ್ಲಿ
ಅಮುಖ್ಯ) ‘ಏನು ಉಡೋದು ಏನು ಬಿಡೋದು ಎನ್ನುವಂತಿರು’ ಎಂಬ ನುಡಿಗಟ್ಟು, ಕಣ್ಣಿಗೆ
ಬೇಕಾದುದನ್ನು ಉಟ್ಟುಕೊಳ್ಳುವುದಕ್ಕೆ ತೊಟ್ಟುಕೊಳ್ಳುವುದಕ್ಕೆ ಉಡಿಗೆ ತೊಡಿಗೆ ರಾಶಿ
ಬಿದ್ದಿರುವುದನ್ನು ಕಣ್ಮುಂದಕ್ಕೆ ಎಳೆದು ತರುತ್ತದೆ. ಹಾಗೆಯೇ ‘ಏನು ಉಣ್ಣೋದು ಏನು
ಬಿಡೋದು ಎನ್ನುವಂತಿರು’ ಎಂಬ ನುಡಿಗಟ್ಟು ಶ್ರೀಮಂತಿಕೆಯ ಕುರುಹಾದ ಬಗೆಬಗೆತ ಭಕ್ಷ್ಯ
ಭೋಜ್ಯಗಳ ಬಾಹುಳ್ಯವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ‘ಲಕ್ಷ್ಮಿ ಕಾಲು
ಮುರ್ಕೊಂಡು ಬಿದ್ದಿರು’ ‘ತೆಕ್ಕೆ ಹುಯ್ಕೊಂಡು ಮಲಗಿರು’ ಮುಂತಾದ ನುಡಿಗಟ್ಟುಗಳು
ಶ್ರೀಮಂತಿಕೆಯನ್ನು ಅನಾವರಣ ಮಾಡುವ ಸಶಕ್ತ ಅಭಿವ್ಯಕ್ತಿಗಳಾಗಿವೆ.
ಈಗ ಬಡತನ ಮೂಲದ ನುಡಿಗಟ್ಟುಗಳನ್ನು ಬಡಿದು ಕಾಳುಕಡಿ ಸೊಪ್ಪುಸೆದೆ ಬೇರೆ ಮಾಡೋಣ.
ಮಲಗು ಎಂಬ ಅರ್ಥದ ‘ತಲೆಗೆ ಕೈ ಕೊಡು’ ಎಂಬ ನುಡಿಗಟ್ಟು ಹಳ್ಳಿಗಾಡಿನ ಜನಸಾಮಾನ್ಯರ ಬಡತನದ
ಸ್ಥಿತಿಯನ್ನು ಬಯಲು ಮಾಡುತ್ತದೆ. ತಲೆಯ ದಿಂಬು ಗತಿ ಇಲ್ಲದ್ದರಿಂದ ತಮ್ಮ ಕೈಯನ್ನೇ
ತಲೆಗೆ ದಿಂಬಾಗಿಸಿಕೊಂಡು ಮಲಗುತ್ತಿದ್ದರೆಂಬುದನ್ನು ಧ್ವನಿಸುತ್ತದೆ. ‘ಅವರವರ ತಲೆಗೆ
ಅವರವರದೇ ಕೈ’ ಎಂಬ ಜನಪದ ಗಾದೆ ಇದನ್ನೇ ಸೂಚಿಸುತ್ತದೆ.
‘ರೊಟ್ಟಿ ತೊಳೆದ ನೀರು ಕುಡಿದು ಕಾಲ ಹಾಕು’ ಎಂಬ ನುಡಿಗಟ್ಟು ಭಂಗ ಬಡತನದ ಬರ
ಪರಿಸ್ಥಿತಿಯನ್ನೇ ಕರುವಿಟ್ಟಂತಿದೆ. ಇರುವ ಒಂದು ರೊಟ್ಟಿಯನ್ನು ಮುರಿದು ತಿಂದು
ಬಿಟ್ಟರೆ, ನಾಳೆಗೆ ಏನು ಗತಿ, ನಾಡಿದ್ದರ ಗತಿ ಏನು ಎಂದು ಅದನ್ನು ತಿನ್ನದೆ, ನೀರಲ್ಲಿ
ಅದನ್ನು ತೊಳೆದು, ಆ ನೀರು ಕುಡಿದು ಕಾಲ ಹಾಕುವ ದಾರುಣಸ್ಥಿತಿಯನ್ನು ಹೃದಯ
ವಿದ್ರಾವಕವಾಗಿ ಕಣ್ಮುಂದೆ ತರುತ್ತದೆ. ಹೀಗೆಯೇ ಹೊಟ್ಟೆ ಹೋಗಿ ಬೆನ್ನು ಸೇರು, ಹೊಟ್ಟೆ
ಕಟ್ಟು, ಅಂಬಲಿಯೋ ತುಂಬೆ ಸೊಪ್ಪೋ ಕಾರೆಕಾಯಿ ನೀರು ಮಜ್ಜಿಗೆಯೋ ತಿಂದು ಕುಡಿದು ಕಾಲ
ತಳ್ಳು ಮುಂತಾದ ನುಡಿಗಟ್ಟುಗಳು ಭಂಗಬಡತನದ ಸೀಕುಪಾಕುಗಳಂತೆ ತಾಕು ತಾಕಿಗೆ (ಜಮೀನನ
ಪಟ್ಟೆ, ತುಂಡ) ಸಿಕ್ಕುತ್ತವೆ.
ಇನ್ನೂ ಶರೀರದ ಅಂಗಾಂಗ ಮೂಲವಾದ ನುಡಿಗಟ್ಟುಗಳು ಉಳಿದೆಲ್ಲ ನುಡಿಗಟ್ಟುಗಳಿಗಿಂತ ಹೇರಳವಾಗಿವೆ. ಅವುಗಳ ವಿಶ್ಲೇಷಣೆಯ ಅಗತ್ಯವಿಲ್ಲ.
೬
ನುಡಿಗಟ್ಟುಗಳಲ್ಲಿ ಲೈಂಗಿಕವಾದಂಥವೂ ಇವೆ. ಅವುಗಳ ಬಗ್ಗೆ ನಾಲ್ಕು ಮಾತಾಡುವುದು
ಅಗತ್ಯ. ಸಾಮಾನ್ಯವಾಗಿ ಜನಪದರು ಮುಕ್ತಮನಸ್ಸಿನವರು. ಕಾಮ ಪ್ರೇಮಗಳ ಬಗ್ಗೆಯೂ ಯಾವ
ಮುಚ್ಚುಮರೆಯಿಲ್ಲದೆ ಬಿಚ್ಚುಮನಸ್ಸಿನಿಂದ ಮಾತಾಡವವರು. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ
ಕಾಮಸಂಬಂಧಿ ವಿಷಯಗಳನ್ನು ಮಾತಾಡುವಾಗ ಶಿಷ್ಟ ಮನಸ್ಸು ‘ಮುಟ್ಟಿದರೆ ಮುಸುಗ’ದಂತೆ
ಮುಚ್ಚಿಕೊಂಡರೆ, ಜನಪದ ಮನಸ್ಸು ಅರಳುಮಲ್ಲಿಗೆಯಂತೆ ಬಿಚ್ಚಿಕೊಳ್ಳುತ್ತದೆ. ದೇಹವೇ
ದೇವಾಲಯವಾಗಿರುವಾಗ ಅದರ ಒಂದು ಭಾಗ ಮಡಿ ಇನ್ನೊಂದು ಭಾಗ ಮೈಲಿಗೆ ಎಂಬುದನ್ನು ಜನಪದ
ಮನಸ್ಸು ಒಪ್ಪುವುದಿಲ್ಲ. ಆ ಮೈಲಿಗೆ ಭಾವನೆ ಶಿಷ್ಟರಲ್ಲಿಯೇ ಗುಡಿಗಟ್ಟಿದೆ. ಆದರೆ
ಜನಪದರಲ್ಲಿ ಎಲ್ಲ ಅಂಗಾಂಗಳ ಬಗ್ಗೆಯೂ ಮಡಿಭಾವನೆ ಮಡುಗಟ್ಟಿದೆ. ಉದಾಹರಣೆಗೆ
ಆಳು ಬಂದ್ರೆ ನಿಂತಾನು
ಅರಸು ಬಂದ್ರೆ ನಿಂತಾನು
ಹೇಲು ಉಚ್ಚೆ ಬಂದ್ರೆ ನಿಂತಾವ ಹೆಡ್ಡದೊರೆ ?
ಅರಸು ಬಂದ್ರೆ ನಿಂತಾನು
ಹೇಲು ಉಚ್ಚೆ ಬಂದ್ರೆ ನಿಂತಾವ ಹೆಡ್ಡದೊರೆ ?
ಎಂಬ ಗಾದೆಯಲ್ಲಿ ನಿಸರ್ಗ ಸಹಜ ಕ್ರಿಯೆಗಳಾದ ಮಲ ಮೂತ್ರ ವಿಸರ್ಜನೆಯನ್ನು ತಡೆಯಲು
ಸಾಧ್ಯವಿಲ್ಲ. ದೇಹ ಮನಸ್ಸುಗಳ ಸ್ವಾಸ್ಥ್ಯಕ್ಕೆ ಅದು ಅನಿವಾರ್ಯ ಎಂಬ ಧೋರಣೆ
ಕಂಡರಣೆಗೊಂಡಿರುವ ಹಾಗೆಯೇ ಪ್ರೇಮ ಕಾಮಗಳು ಮಲ ಮೂತ್ರ ಬಾಧೆಯಂತೆ ನಿಸರ್ಗ ಸಹಜವಾದಂಥವು,
ಅವುಗಳನ್ನು ತಡೆಯಲು ಸಾಧ್ಯವಿಲ್ಲ, ತಡೆದರೆ ದೇಹ ಮನಸ್ಸುಗಳ ಸ್ವಾಸ್ಥ್ಯಕ್ಕೆ ಧಕ್ಕೆ ಎಂಬ
ಧೋರಣೆಯೂ ಇದೆ. ಆದ್ದರಿಂದಲೇ ಆ ತರದ ಮಾತುಗಳನ್ನಾಡಲು ಅವರು ಮುಜುಗರ ಪಡುವುದಿಲ್ಲ.
ಬೇಸಿಗೆ ಕಾಲದಲ್ಲಿ ಕಿಟಕಿಗಳಿಲ್ಲದ ಮಾಳಿಗೆ ಮನೆಯಲ್ಲಿ ಮಲಗಲು ಸೆಕೆಯೆಂದು ಹಟ್ಟಿಯ
ಮುಂದೆ ರಾಗಿ ಹುಲ್ಲು ಹರಡಿ ಅದರ ಮೇಲೆ ಕಂಬಳಿ ಹಾಸಿ ಮಲಗುತ್ತಾರೆ. ಮಲಗುವ ಮುಂಚೆ ಎಲೆ
ಅಡಿಕೆ ಜಗಿಯುತ್ತ ಅಕ್ಕಪಕ್ಕದ ಮನೆಯ ಮುದುಕರು-ಮುದುಕಿಯರು, ಮದುವೆಯಾದ ಕಟ್ಟರೆಯದ
ಗಂಡ-ಹೆಂಡಿರು, ತರುಣ-ತರುಣಿಯರು, ಪಡ್ಡೆ ಹುಡುಗ-ಹುಡುಗಿಯರು ಎಲ್ಲ ಕುಳಿತು ಬೆಳುದಿಂಗಳ
ಬೆಳಕಿನಲ್ಲಿ ಉಳಿದ ಒಗಟುಗಳಂತೆ ಲೈಂಗಿಕ ಛಾಯೆಯುಳ್ಳ ಅಥವಾ ಅಪ್ಪಟವಾದ ಲೈಂಗಿಕ
ಒಗಟುಗಳನ್ನು ಒಡ್ಡುತ್ತಾರೆ ಒಡಚುತ್ತಾರೆ. ಆಗ ಎಲ್ಲರೂ ಮುಜುಗರ ಪಡುವುದಕ್ಕಿಂತ ಮುಸಿ
ಮುಸಿ ನಗುವುದೇ ಹೆಚ್ಚು. ಉದಾಹರಣೆಗೆ ಒಂದು ಒಗಟು : ‘ಅಮ್ಮಂದು ಅಗಲ, ಅಪ್ಪಂದು ಉದ್ದ’
ಉತ್ತರ : ಅಮ್ಮನ ಹಣೆಯ ಮೇಲಿರುವ ಕುಂಕುಮ ಹಾಗೂ ಅಪ್ಪನ ಹಣೆಯ ಮೇಲಿರುವ ನಾಮ. ಜನಪದರಿಗೆ
ಮನೆದೇವರೊಂದಿದೆ, ಮೊರೆ ಬಿದ್ದ ದೇವರೊಂದಿಗೆ. ಮನೆದೇವರ ಸತ್ಯವನ್ನು ಹೇಳಿದ್ದರೂ, ಪಡ್ಡೆ
ಹುಡುಗ ಹುಡುಗಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ಮೊರೆ ಬಿದ್ದ ದೇವರಿಗೆ ಮೊರೆ ಹೋಗಿ,
ಅದಕ್ಕೆ ಲೈಂಗಿಕಾರ್ಥವಿದ್ದರೂ, ಅದೇ ಸತ್ಯ ಎಂದು ಎಲ್ಲರಿಗೂ ಹೃದ್ಗತವಾಗಿದ್ದರೂ,
ನೂರಕ್ಕೆ ನೂರು ಪಾಲು ಹೊಂದಿಕೆಯಾಗುವ ಅಲೈಂಗಿಕಾರ್ಥವನ್ನು ಹೇಳುತ್ತಾರೆ, ಎಲ್ಲರೂ
ಹುಸಿನಗುತ್ತ ಸ್ವೀಕರಿಸುತ್ತಾರೆ. ಬಸವಣ್ಣನವರು ವೀರಶೈವ ಧರ್ಮದ ಲಾಂಛನವಾಗಿ ಸ್ಥಾಪಿಸಿದ
ಲಿಂಗ ಮತ್ತು ಪಾಣಿಬಟ್ಟಲು, ಶಿಷ್ನ ಮತ್ತು ಯೋನಿಯ ಸಂಕೇತ ಎಂಬುದನ್ನು ಸಾರಾಸಗಟಾಗಿ
ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ದರಿಂದ ಲೈಂಗಿಕ ವಿಷಯಗಳ ಬಗ್ಗೆ ಅಸ್ಪೃಶ್ಯ ಭಾವನೆ
ಸಲ್ಲದು. ನಮ್ಮ ಮನಸ್ಸು ಶುದ್ಧವಾಗಿದ್ದರೆ, ವಸ್ತುವೂ ಶುದ್ಧವಾಗಿ ಕಾಣುತ್ತದೆ. ಮೈಲಿಗೆ
ಮನಸ್ಸಿಗೆ ಮಡಿ ವಸ್ತುವೂ ಮೈಲಿಗೆಯಾಗಿ ಕಾಣುತ್ತದೆ ಎಂಬುದನ್ನು ಮರೆಯಬಾರದು.
೭
ನುಡಿಗಟ್ಟುಗಳ ಸಂಗ್ರಹ ಕಾರ್ಯದ ಬಗ್ಗೆ ನಾಲ್ಕು ಮಾತಾಡುವ ಮೊದಲು ನನ್ನ ಬಾಲ್ಯದ
ವೈಯಕ್ತಿಕ ವಿಷಯದ ಬಗ್ಗೆ ಎರಡು ಮಾತು ಹೇಳಬೇಕಾದದ್ದು ಅನಿವಾರ್ಯ. ನಾನು ಬಾಲ್ಯದಿಂದಲೂ
ನುಡಿಗಟ್ಟುಗಳ ಹಕ್ಕಲು ಆಯುವ ಕಾಯಕದ ಗೀಳನ್ನು ಜನ್ಮದತ್ತವಾಗಿ ರೂಢಿಸಿಕೊಂಡಿದ್ದೆನೋ
ಅಥವಾ ಹಳ್ಳಿಗಾಡಿನ ಬದುಕು, ಜನರಾಡುವ ನುಡಿಗಟ್ಟುಗಳ ಮೋಡಿ ಪ್ರೇರೇಪಣೆ ನೀಡಿತೋ ಅಥವಾ
ಮಣ್ಣನ್ನು ಸೀಳಿಕೊಂಡು ಮೇಲೇಳುವ ಅಕ್ಕಡಿಯಂತೆ ನನ್ನಲ್ಲಿ ಈ ಗೀಳು ಎದೆ ಸೀಳಿಕೊಂಡು
ಅಕ್ಕಡಿಯೊಡೆಯಲು ಕಾಣದ ಕೈ ನೆರವು ನೀಡಿತೋ ಎಂದು ಯೋಚಿಸಿದಾಗ ಪ್ರಾತಃಸ್ಮರಣೀಯರಾದ ಮೂರು
ನಾಲ್ಕು ಜನರ ನೆನಪಾಗುತ್ತದೆ.
ಮೊದಲಿನಿಂದಲೂ ನಾನು ಉಪಾಧ್ಯಾಯರು ಹೇಳುವುದನ್ನು ಮೈಯೆಲ್ಲ ಕಿವಿಯಾಗಿ
ಕೇಳುತ್ತಿದ್ದುದರಿಂದ ರೊಟ್ಟಿ ಮಗುಚಿ ಹಾಕಿದಂತೆ ಉಪಾಧ್ಯಾಯರು ಕೇಳಿದ ಪ್ರಶ್ನೆಗೆ ಉತ್ತರ
ಹೇಳಿಬಿಡುತ್ತಿದ್ದೆ. ಪ್ರಾಥಮಿಕ ಶಾಲೆಗೆ ಪಠ್ಯವಾಗಿಟ್ಟದ್ದ ಗೋವಿನ ಹಾಡನ್ನು ಅದರ
ಭಾವಕ್ಕನುಗುಣವಾಗಿ ಏರಿಳಿತದ ದನಿಯಲ್ಲಿ ನಾನು ಓದುತ್ತಿದ್ದ ರೀತಿ, ಸ್ಪಷ್ಟ ಉಚ್ಚಾರಣೆ
ವಿದ್ಯಾನಿಷ್ಠೆಯನ್ನು ಕಂಡ ಪ್ರಾಥಮಿಕ ಶಾಲೆಯ ಪಚ್ಚೇಗೌಡರು ಎಂಬ ಮೇಷ್ಟರು ‘ಅಮರ
ಕೋಶವನ್ನು ಈಗಲೇ ಬಾಯಿಪಾಠ ಮಾಡಿಕೋ, ಮುಂದೆ ನಿನಗೆ ಅನುಕೂಲವಾಗುತ್ತದೆ’ ಎಂದರು.
ಪಕ್ಕದಲ್ಲೇ ಇದ್ದ ನನ್ನ ಸಹಪಾಠಿ ಕೃಷ್ಣಮೂರ್ತಿ ‘ನಮ್ಮ ಮನೇಲಿ ಇದೆ, ತಂದು ಕೊಡ್ತೀನಿ’
ಎಂದ. ಆದರೆ ಬೆಳಿಗ್ಗೆ ತಂದಿರಲಿಲ್ಲ. ಕೇಳಿದ್ದಕ್ಕೆ ‘ನಮ್ಮ ತಂದೆ, ಅದು ಶೂದ್ರರು
ಓದೋದಲ್ಲ ಅಂತ ಹೇಳಿ ಕೊಡಲಿಲ್ಲ’ ಎಂದ. ನನ್ನ ಮನಸ್ಸಿನ ಮೇಲಾದ ಮೊದಲ ಬರೆ ಅದು.
ಅದರಿಂದಾಗಿ ನನ್ನ ಸಹಪಾಠಿಯ ತಂದೆಯನ್ನು ಕಂಡರೆ ನನ್ನ ಮೈಮೇಲೆ ತುರುಚನ ಸೊಪ್ಪು
ಆಡಿಸಿದಂತಾಗುತ್ತಿತ್ತು. ಇಡೀ ಬ್ರಾಹ್ಮಣ ಸಮೂಹದ ಬಗೆಗೆ ನನ್ನಲ್ಲಿ ಆ ಭಾವನೆ ಬೆಳೆಯದಂತೆ
ನೋಡಿಕೊಂಡವರು ನಮ್ಮ ಊರಿನ ಪುಟ್ಟುಭಟ್ಟರು ಎಂಬ ಬ್ರಾಹ್ಮಣರು. ಅವರು
ಮದುವೆಯಾಗಿರಲಿಲ್ಲ, ಒಂಟಿಪಿಂಟರು ಸುಂಟರ್‌ಗಾಳಿ. ಆದರೆ ಮಾದಿಗರ ಪೂಜಮ್ಮನಿಗೂ ಅವರಿಗೂ
ಅನೈತಿಕ ಸಂಬಂಧವಿದೆ ಎಂದು ಜನ ಗುಸುಗುಸು ಪಿಸಪಿಸ ಎನ್ನುತ್ತಿದ್ದರು. ನಮ್ಮ ಊರಿನ ಊಳಿದ
ಬ್ರಾಹ್ಮಣರು ಅವರನ್ನು ಕ್ಯಾರೆ ಎನ್ನುತ್ತಿರಲಿಲ್ಲ. ಪ್ರತಿಯಾಗಿ ಇವರೂ ಅವರನ್ನು ಕ್ಯಾರೆ
ಎನ್ನುತ್ತಿರಲಿಲ್ಲ. ಪುಟ್ಟುಭಟ್ಟರ ಒಡನಾಟವೆಲ್ಲ ಶೂದ್ರರೊಂದಿಗೆ. ಇಡೀ ಜೈಮಿನಿ
ಭಾರತವನ್ನು ಬಾಯಲ್ಲಿ ಹೇಳುತ್ತಿದ್ದರು. ಇಷ್ಟನೇ ಸಂಧಿಯ ಇಷ್ಟನೇ ಪದ್ಯ ಹೇಳಿ ಎಂದರೆ
ಕರಾರು ವಾಕ್ಕಾಗಿ ಅದನ್ನೇ ಹೇಳುತ್ತಿದ್ದರು. ನಮ್ಮ ಊರಿನ ಗೌಡ ಲಿಂಗಾಯಿತರಾದ
ಹೊನ್ನೇಗೌಡರ ಮನೆಯಲ್ಲಿ ‘ಜೈಮಿನಿ ಭಾರತ ಟೀಕು’ ಎಂಬ ಗ್ರಂಥವಿತ್ತು. ಅದನ್ನು ಓದು ಎಂದು
ಅವರೇ ನನಗೆ ಈಸಿ ಕೊಟ್ಟರು. ಅದರಲ್ಲಿ ಪ್ರತಿ ಪದಾರ್ಥ, ಭಾವಾರ್ಥ ಎಲ್ಲವೂ ಇತ್ತು. ನನಗೆ
ಒಂದು ರೀತಿಯ ಹುಚ್ಚು ನೆತ್ತಿಗೇರಿ ಬಿಟ್ಟಿತು. ನಾನು ಪುಟ್ಟು ಭಟ್ಟರ ನೆರಳಾಗತೊಡಗಿದೆ.
ಕಾರಣ ಅಂಥ ಮಹಾ ಮೇಧಾವಿಯಾದರೂ ನಿಗರ್ವಿ. ನಾನು ಕೇಳದಿದ್ದರೂ ಅನೇಕ ಶಬ್ದಗಳ ಅರ್ಥ
ಹೇಳುತ್ತಿದ್ದರು. ದ್ವಿಜ ಎಂದರೆ ಬ್ರಾಹ್ಮಣ ಎಂದಷ್ಟೇ ಅಲ್ಲ, ಹಾವು, ಕೋಳಿ, ಹಕ್ಕಿ,
ಹಲ್ಲು – ಎಲ್ಲ ದ್ವಿಜರೇ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ಅವರ ನೆರಳಾದೆ.
ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಘಟನೆ ಜರುಗಿತು. ಎಂದೂ ಬಯ್ಯದ
ನಮ್ಮ ತಂದೆ ಯಾವುದಕ್ಕೋ (ಕಾರಣ ಮರೆತಿದ್ದೇನೆ) ಸಿಟ್ಟುಗೊಂಡು ‘ಕತ್ತೆಬಡವ’ ಎಂದು
ಬಯ್ದುಬಿಟ್ಟರು. ತಾಯಿಯ ಮುಖವನ್ನೇ ನೋಡಿದ ನೆನಪಿರದ ಚಿಕ್ಕಂದಿನಲ್ಲಿ ತಬ್ಬಲಿಯಾದ
ನನ್ನನ್ನು ಪ್ರೀತಿಯಿಂದ ಸಾಕಿದ ತಂದೆ ಹಾಗೆ ಬೈದಾಗ ಅಳು ಬಂದು, ಸೀದ ಪುಟ್ಟುಭಟ್ಟರ
ಮನೆಗೆ ಹೋದೆ. ನನ್ನ ಸಪ್ಪೆ ಮುಖವನ್ನು ಕಂಡು “ಯಾಕೋ ಸಪ್ಪಗಿದ್ದೀಯ?” ಎಂದರು. ಆಗ ನಮ್ಮ
ತಂದೆ ‘ಕತ್ತೆ ಬಡವ’ ಎಂದು ಬೈದದ್ದನ್ನು ಹೇಳಿದೆ. ಅವರು ನಕ್ಕು “ಸಪ್ಪೆ ಮುಖ
ಮಾಡಿಕೊಳ್ಳಬೇಕಾದವನು ನಾನು, ನೀನು ಯಾಕೆ ಮಾಡಿಕೊಳ್ತೀಯ?” ಎಂದರು. ಅವರ ಮಾತು
ಅರ್ಥವಾಗದೆ ಪ್ರಶ್ನಾತ್ಮಕವಾಗಿ ಅವರ ಮುಖವನ್ನೇ ನೋಡಿದೆ. ಆಗ ಅವರು “ಬಾಡವ ಎಂದರೆ
ಹಾರುವ. ಕತ್ತೆ ಬಾಡವ ಎಂಬುದು ಜನರ ಬಾಯಲ್ಲಿ ಕತ್ತೆ ಬಡವ ಆಗಿದೆ. ಈ ಮಡಿಜನ
ಹೊಲೆಮಾದಿಗರನ್ನು ಶೂದ್ರರನ್ನು ಹೊಲೆಮಾದಿಗ ಮುಂಡೇದೆ, ಶೂದ್ರ ಮುಂಡೇದೆ ಎಂದು
ಹೀಯಾಳಿಸುತ್ತಿದ್ದುದರಿಂದ ಆ ಕೆಳವರ್ಗದ ಜನರಲ್ಲಿ ಯಾರೋ ಘಟಿಂಗ ಆ ಮಡಿವಂತನಿಗೆ ‘ಕತ್ತೆ
ಬಾಡವ’ ಎಂದು ಬೈದಿರಬೇಕು. ಆದ್ದರಿಂದ ಆ ಬೈಗುಳಿಗೆ ಬ್ರಾಹ್ಮಣ ನೊಂದುಕೊಳ್ಳಬೇಕೇ ಹೊರ್ತು
ಶೂದ್ರನಾದ ನೀನು ನೊಂದುಕೊಳ್ಳಬೇಕಾಗಿಲ್ಲ” ಎಂದು ಸಮಾಧಾನ ಮಾಡಿದರು. ನನಗೆ ಎದೆ ಭಾರ
ಇಳಿದಂತಾಯ್ತು. ಲವಲವಿಕೆಯಿಂದ ಮನೆಗೆ ಬಂದೆ. ಅಜ್ಜಿಯ ಹತ್ತಿರ ‘ಕತ್ತೆ ಬಡವ’ ಅನ್ನೋಕೆ
ನಾನೇನು ಬ್ರಾಹ್ಮಣನ? ಎಂದೆ. ಅದನ್ನು ಕೇಳಿಸಿಕೊಂಡ ಅಪ್ಪ ‘ನಿನ್ನ ನಾನೆಲ್ಲಿ ಬಿರಾಮಣ
ಅಂದೆನೋ?’ ಎಂದಾಗ, ಪುಟ್ಟಭಟ್ಟರು ಹೇಳಿದ ಆಧಾರದ ಮೇಲೆ ‘ಬಾಡವ ಎಂದರೆ ಬ್ರಾಹ್ಮಣ ಅಂತ್ಲೇ
ಅರ್ಥ’ ಎಂದೆ. ಆಗ ನನ್ನ ಅಜ್ಜಿಗೆ ಎಷ್ಟು ಸಂತೋಷವಾಯಿತೋ! “ಅಯ್ಯೋ ಅಯ್ಯೋ ಏನು ಕಲಿ
ಕಲಿತಿದ್ದೀಯೋ, ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರೀತಿದ್ದೀಯಲ್ಲೋ” ಎಂದು ತಬ್ಬಿಕೊಂಡು
ಮುದ್ದಾಡಿದರು.
ಕಣ ಮಾಡುವಾಗ ನಾನು ರಾತ್ರಿ ಹೊತ್ತು ನಮ್ಮ ತಂದೆಯವರ ಜೊತೆ ಕಣದ ಹತ್ತಿರವೇ-ರಾಗಿ
ಹುಲ್ಲೇ ಹಾಸಿಗೆ, ರಾಗಿ ಹುಲ್ಲೇ ಹೊದಿಕೆಯಾಗಿ-ಮಲಗಿಕೊಂಡಾಗ ನಿದ್ದೆ ಬರುವವರೆಗೂ ಆಕಾಶದ
ಚುಕ್ಕೆಗಳನ್ನು ತೋರಿಸಿ “ನೋಡು, ಅದು ಬೆಳ್ಳಿ (ಶುಕ್ರ) ನೋಡು, ಅದು ಬೇಡತಿ ಮೂಗುತಿ
(ಧ್ರುವನಕ್ಷತ್ರ), ನೋಡು, ಅವು ಕೂರಿಗೆದಾಳು (ಮಹಾವ್ಯಾಧ ನಡುಪಟ್ಟಿ), ನೋಡು, ಅದು
ಅಜ್ಜಿ ಮಂಚ (ಸಪ್ತರ್ಷಿ ಮಂಡಲ), ನೋಡು, ಅವು ಕೋಳಿ ಮತ್ತು ಕೋಳಿ ಮರಿ” (ಕೃತ್ತಿಕಾ
ನಕ್ಷತ್ರ) ಎಂದೆಲ್ಲ ಹೇಳುತ್ತಿದ್ದರು. ಪ್ರಪಂಚವನ್ನು ತಿಳಿದುಕೊಳ್ಳಬೇಕೆಂಬ ಆಸೆ ಹಸಿವು
ಎಲ್ಲ ಹುಡುಗರಲ್ಲೂ ಊರಗಲ ಬಾಯಿ ತೆರೆದುಕೊಂಡಿರುವುದರಿಂದ, ನಮ್ಮ ತಂದೆ ಸುಮ್ಮನಾದರೆ
ಸಾಕು “ನಿದ್ದೆ ಬರಲ್ಲ, ಹೇಳು” ಎಂದು ಪೀಡಿಸುತ್ತಿದ್ದೆ. ಆಗ ನಮ್ಮ ತಂದೆ “ಆಗಲೆ ಅಜ್ಜಿ
ಮಂಚ ತಲೆಕೆಳಗಾದೊ, ಬೆಳಗಿನ ಜಾವ ಆಯ್ತು ಮಲಕ್ಕೊ” ಎಂದು ಹೇಳಹೇಳುತ್ತಲೇ, ಬೆಳಗ್ಗೆಯಿಂದ
ಸಂಜೆತನಕ ಒಂದೇ ಸಮನೆ ದುಡಿದು ದಣಿದಿದ್ದ ಆ ಜೀವ ಹೇಳಹೇಳುತ್ತಲೇ ಗೊರಕೆ
ಹೊಡೆಯಲಾರಂಭಿಸಿದಾಗ, ನಾನು ಬೇರೆ ದಾರಿಯಿಲ್ಲದೆ ಅದೇ ದಾರಿ ಹಿಡಿಯುತ್ತಿದ್ದೆ.
ನಾನು ಎಂ.ಎಗೆ ಸೇರಿ ಪಂಪಭಾರತ ಓದುವ ಭಾಗ್ಯ ದೊರೆತಾಗ ಅಲ್ಲಿ ಬರುವ “ಪಾಂಡವರ್
ಸುರಂಗದಿಂ ಪೊರಮಟ್ಟು ತಾರಾಗಣಂಗಳ್ ನಿಂದ ನೆಲೆಯಿಂ ದೆಸೆಯಂ ಪೊಳ್ತುಮನರಿದು ತೆಂಕಮೊಗದೆ
ಪಯಣಂಬೋಗಿ” ಎಂಬ ವರ್ಣನೆ ಓದಿ, ಎಲ್ಲಿದ್ದ ನಕ್ಷತ್ರಗಳು ಎಲ್ಲಿಗೆ ಕ್ರಮಿಸಿವೆ ಎಂಬ
ಆಧಾರದ ಮೇಲೆ ಹೊತ್ತನ್ನು ಪತ್ತೆ ಹಚ್ಚುವ ಪದ್ಧತಿ ಹತ್ತನೆಯ ಶತಮಾನದಲ್ಲೂ ಇತ್ತು
ಎಂಬುದನ್ನು ಮಾರ್ಗ-ದೇಸಿ, ಶಿಷ್ಟ-ಜಾನಪದಗಳೆರಡನ್ನೂ ಕಾವ್ಯದಲ್ಲಿ ಕಸಿ ಮಾಡಿ ಬಳಸಿದಂಥ
ಮಹಾಕವಿ ಪಂಪ ದಾಖಲಿಸಿರುವುದನ್ನು ಕಂಡು ಪುಳಕಗೊಳ್ಳುತ್ತಾ, ಬಾಲ್ಯದಲ್ಲಿ ಅಪ್ಪ
ಹೇಳುತ್ತಿದ್ದ “ಆಗಲೇ ಅಜ್ಜಿ ಮಂಚ ತಲೆಕೆಳಗಾದರೂ, ಬೆಳಗಿನ ಜಾವ ಆಯ್ತು, ಮಲಕ್ಕೊ” ಎಂದು
ಹೇಳುತ್ತಿದ್ದ ಮಾತುಗಳನ್ನು ಮೆಲಕು ಹಾಕಿದ್ದುಂಟು.
ನನ್ನ ಅಜ್ಜಿ ಹೇಳಿದ “ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರೀತಾನೆ ನೋಡವ್ವ” ಎಂಬ ಮಾತು
ನಾನು ದೊಡ್ಡವನಾದ ಮೇಲೆ ನುಡಿಗಟ್ಟುಗಳ ಹಕ್ಕಲು ಆಯುವ ಕಾಯಕಕ್ಕೆ ಸನ್ನೆಗೋಲಾಯಿತು.
ಸಾವಧಾನದ ಈ ನುಡಿಗಟ್ಟುಗಳ ವಿಶ್ವಕೋಶದ ಉಸಿರಾಟಕ್ಕೆ ಶ್ವಾಸಕೋಶವಾಗಿ ಪರಿಣಮಿಸಿತು
ಎನ್ನಬಹುದು. ಏಕೆಂದರೆ ಅವರೇಕಾಯಿ ತಳ್ಳಾದ ಮೇಲೆ ಅವರೆ ಗಿಡದ ಸಾಲುಗಳನ್ನು ಹಿಡಿದು ಒಂದೂ
ಉಳಿಯದಂತೆ ಬಿಡಿಸಿ ತಂದು ಕಣಕ್ಕೆ ಹಾಕುತ್ತಿದ್ದದ್ದು. ದೊಣ್ಣೆಯಿಂದ ಬಡಿದು ಕಾಲು ಬೇರೆ
ಸಿಪ್ಪೆ ಬೇರೆ ಮಾಡುತ್ತಿದ್ದದ್ದು, ತೂರಿ ಕೇರಿ ಚೀಲದಲ್ಲಿ ತುಂಬಿ ಮನೆಗೆ
ತರುತ್ತಿದ್ದದ್ದು, ಬೇಕೆಂದಾಗ ಬೇಕಾದಷ್ಟನ್ನು ಓಡಿನಲ್ಲಿ ಹುರಿಯುತ್ತಿದ್ದದ್ದು,
ಹುರಿದಾಗ ಅವು ಚಟಪಟನೆ ಅವಲಾಗಿ ಸಿಡಿಯುತ್ತಿದ್ದದ್ದು ಎಲ್ಲ ನನ್ನ ಕಣ್ಣ ಮುಂದೆ ಹಾದು
ಹೋಯಿತು. ಆಗ ನಾಡೊಳಗೆ ತುಂಬಿರುವ ನುಡಿಗಟ್ಟುಗಳನ್ನು ಸಾಲು ಹಿಡಿದು ಬಿಡಿಸಬೇಕು.
ಒಪ್ಪಓರಣ ಮಾಡಿ ಮನೆ ತುಂಬಿಕೊಳ್ಳಬೇಕು. ಬೇಕೆಂದಾಗ ನಾಲಗೆ ಓಡಿನಲ್ಲಿ ಹುರಿದರೆ ಚಟಪಟನೆ
ಅವಲಾಗಿ ಸಿಡಿಯುತ್ತದೆ ಎಂದು ಧ್ಯಾನಸ್ಥನಾಗಿ ಚಿಂತಿಸಿದೆ. ಅಂದಿನಿಂದ ನನ್ನ ಮನಸ್ಸು
ಕಿವಿಗೆ ಬಿದ್ದ ನುಡಿಗಟ್ಟುಗಳನ್ನು ಸೂಜಿಗಲ್ಲಂತೆ ಸೆಳೆದುಕೊಳ್ಳತೊಡಗಿತು, ಎದೆಯ
ಉಗ್ರಾಣದಲ್ಲಿ ಹಿಟ್ಟಿನ ಮಂಕರಿಗೆ ಹಿಟ್ಟನ್ನು ಅಡಕಲಿಟ್ಟಂತೆ ಪೇರಿಸಿಟ್ಟುಕೊಳ್ಳ
ತೊಡಗಿತು. ಆದ್ದರಿಂದ ಪ್ರಾಥಮಿಕ ಶಾಲೆಯ ಮೇಸ್ಟ್ರು ಪಚ್ಚೇಗೌಡರು, ಮಾನವೀಯತೆಯ ಹಾಗೂ
ನಮ್ರತೆಯ ಸಾಕಾರ ಮೂರ್ತಿಯಾದ ಪುಟ್ಟುಭಟ್ಟರು, ನನ್ನ ಅಜ್ಜಿ ಹಾಗೂ ನನ್ನ ತಂದೆ ಹಾಗೂ
ಜಾನಪದವನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಧ್ಯಯನ ವಿಷಯವನ್ನಾಗಿ ಮಾಡಿದ, ಆ
ಕ್ಷೇತ್ರದ ಆಮೂಲಾಗ್ರ ಸಂಶೋಧನೆಗೆ ಹೊನ್ನಾರು ಹೂಡಿದ ಪ್ರೊ.ದೇಜಗೌ – ಈ ಐದು ಜನ ಈ
ನುಡುಗಟ್ಟುಗಳ ವಿಶ್ವಕೋಶದ ‘ವಿಶಾಲ ಕಾಸಾರಕ್ಕೆ ಪರೋಕ್ಷವಾಗಿ ಜಲದ ಕಣ್ಣಾಗಿದ್ದಾರೆ
ಎಂಬುದನ್ನು ಸ್ಮರಿಸಿಕೊಳ್ಳದೆ ಇರಲಾರೆ.
ಗಾದೆಗಳ ಸಂಗ್ರಹದ ಬಗೆಗೆ ನಾನು ‘ನಮ್ಮ ಸುತ್ತಿನ ಗಾದೆಗಳು’ ಸಂಗ್ರಹದ
ಪ್ರಸ್ತಾವನೆಯಲ್ಲಿ ಏನು ಹೇಳಿದ್ದೇನೋ ಅದೇ ನುಡಿಗಟ್ಟುಗಳ ಸಂಗ್ರಹಕ್ಕೂ ಅನ್ವಯಿಸುತ್ತದೆ:
“ಯಾವುದೇ ಸಂಗ್ರಹಕಾರ್ಯ ಅಷ್ಟು ಸುಲಭವಾದದ್ದಲ್ಲ. ಅದರಲ್ಲೂ ಜನಪದ ಸಾಹಿತ್ಯದ ಮಿಕ್ಕ
ಪ್ರಕಾರಗಳ ಸಂಗ್ರಹಕ್ಕಿಂತ ಗಾದೆಗಳ ಸಂಗ್ರಹಕಾರ್ಯ ಕ್ಲಿಷ್ಟಕರವಾದದ್ದು. ಏಕೆಂದರೆ
ಯಾವುದಾದರೂ ಹಳ್ಳಿಗೆ ಹೋಗಿ, ಯಾರನ್ನಾದರೂ ಹಿಡಿದು, ಅವರ ಮನವೋಲಿಸಿ, ಪುಸಲಾಯಿಸಿ.
ನಿಮಗೆ ಬರುವ ಯಾವುದಾದರೂ ಗೀತೆಯನ್ನು ಹಾಡಿ ಎಂದರೆ ಕೂಡಲೇ ಹಾಡುತ್ತಾರೆ. ಬರುವ
ಕತೆಯನ್ನು ಹೇಳಿ ಎಂದರೆ ಕೂಡಲೇ ಹೇಳುತ್ತಾರೆ. ಆದರೆ ಯಾರನ್ನಾದರೂ ಹಿಡಿದು, ಮನವೋಲಿಸಿ,
ಪುಸಲಾಯಿಸಿ, ನಿಮಗೆ ಬರುವ ಗಾದೆಗಳನ್ನು ಹೇಳಿ ಎಂದರೆ ಕಣ್ಣುಕಣ್ಣು ಬಿಡುತ್ತಾರೆ. ತಲೆ
ಕೆರೆದುಕೊಳ್ಳುತ್ತಾರೆ, ಯಾವುದೂ ಬರುವುದಿಲ್ಲ ಎಂದು ತಲೆ ಅಲ್ಲಾಡಿಸುತ್ತಾರೆ…….. ಸೂಕ್ತ
ಸಂದರ್ಭ ಸನ್ನಿವೇಶ ಒದಗದೆ ಎದೆಬತ್ತಳಿಕೆಯಲ್ಲಿರುವ ಗಾದೆಬಾಣಗಳು ನಾಲಗೆಯ
ಬಿಲ್ಲಿಗೇರುವುದಿಲಲ, ಹೊರ ಚಿಮ್ಮುವುದಿಲ್ಲ. ಆದ್ದರಿಂದ ಸಂದರ್ಭಜನ್ಯ ಗಾದೆಗಳನ್ನು ಕಲೆ
ಹಾಕುವುದು ಅಷ್ಟು ಸುಲಭದ ಹಾಗೂ ಬೇಗ ಪೂರೈಸುವ ಕೆಲಸವಲ್ಲ; ಆಮೆಯ ಓಟದಂತೆ ಸಾವಧಾನದ್ದು;
ಸಹನೆ ಸಹಷ್ಣುತೆ ಅವಶ್ಯಕವಾದದ್ದು, ಸಂಗ್ರಹಕನಿಗೆ ಜನಪದ ಜೀವನದ ಪ್ರತ್ಯಕ್ಷಾನುಭವ
ಎಷ್ಟಿತ್ತು ಎಂಬುದಕ್ಕೆ ಅವನು ಸಂಗ್ರಹಿಸಿದ ಗಾದೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.”
ಆದ್ದರಿಂದ ನುಡಿಗಟ್ಟುಗಳ ಸಂಗ್ರಹಕಾರ್ಯಕ್ಕೆ ದೀರ್ಘ ಕಾಲದ ತಪಸ್ಸು ಅಗತ್ಯ. ಮೈಯೆಲ್ಲ
ಕಣ್ಣಾಗಿ ಜೀವನವನ್ನು ಸಂಗ್ರಹಕಾರ್ಯಕ್ಕೆ ದೀರ್ಘ ಕಾಲದ ತಪಸ್ಸು ಅಗತ್ಯ. ಮೈಯೆಲ್ಲ
ಕಣ್ಣಾಗಿ ಜೀವನವನ್ನು ನೋಡಬೇಕು; ಮೈಯೆಲ್ಲ ಕಿವಿಯಾಗಿ ಎಲ್ಲರಾಡುವ – ಬಲ್ಲಿದರು –
ಬಡವರು, ಮುದುಕರು – ಮಕ್ಕಳು, ಹೆಂಗಸರು – ಗಂಡಸರು, ಹದಿಬದೆಯರು – ಹಾದರಗಿತ್ತಿಯರು,
ಕಚ್ಚೆ ಭದ್ರವಿರುವವರು – ಕಚ್ಚೆ ಹರುಕರು, ಕೂಲಿನಾಲಿ ಮಾಡುವವರು – ತಿರುಪೆ ಬೇಡುವವರು –
ಮಾತುಗಳನ್ನು ಕೇಳಬೇಕು. ಕೇಳಿದ್ದನ್ನು ಎದಗಣಜದಲ್ಲಿ ತುಂಬಿಕೊಳ್ಳಬೇಕು. ನೋಡಿದ್ದನ್ನು
ಮನಸ್ಸಿಗೆ ಮೈಮೇಲೆ ಹಚ್ಚೆಹುಯ್ದುಕೊಳ್ಳಬೇಕು; ಅವುಗಳ ಮೇಲೆ ಆಗಾಗ್ಗೆ ಕಾವು ಕೂರಬೇಕು;
ದನಗಳ ಹಾಗೆ ತಿಂದ ಮೇವನ್ನು ಮತ್ತೆ ಬಾಯಿಗೆ ತೆಗೆದುಕೊಂಡು ಮೆಲುಕು ಹಾಕುತ್ತಾ
ಅರಗಿಸಿಕೊಳ್ಳಬೇಕು. ನಾನು ಕಾಲೇಜಿನಲ್ಲಿ ಉಪನ್ಯಾಸಕನಾದ ಮೇಲೆ ಆದ ಒಂದು ಅನುಭವವನ್ನು
ಇಲ್ಲಿ ಉದಾಹರಿಸಬಯಸುತ್ತೇನೆ. ಮಹಾರಾಷ್ಟ್ರ ಮೂಲದ ಪೈಲ್ವಾನರು ಎಂಬ ಅಲೆಮಾರಿ ಜನಾಂಗ
ಅಂಗಸಾಧನೆಯ ಪ್ರದರ್ಶನದ ಮೂಲಕ ಹಳ್ಳಿಗಳಲ್ಲಿ ದುಡ್ಡು ಧಾನ್ಯ ಸಂಪಾದಿಸಿದರೆ, ಅವರ
ಹೆಂಗಸರು ಊರೂರು ಮೇಲೆ ಭಿಕ್ಷೆ ಎತ್ತಿ ದವಸಧಾನ್ಯ ಸಂಪಾದಿಸುತ್ತಿದ್ದರು. ಆ ಅಲೆಮಾರಿ
ಜನಾಂಗದ ಹೆಂಗಸೊಬ್ಬಳು ನಮ್ಮ ಮನೆಗೆ ಭಿಕ್ಷೆಗೆ ಬಂದವಳು “ಇಷ್ಟರಲ್ಲೇ ಬಿಲ್ಲನಕೋಟೆಯವರು
ತಮ್ಮ ಕಳ್ಳನ್ನು ತಂದು ನಿಮ್ಮ ಕಾಲಿಗೆ ಸುತ್ತುತ್ತಾರಂತಲ್ಲ?” ಎಂದಳು. ಅಷ್ಟು
ಹೊತ್ತಿಗಾಗಲೇ ನಾನು ಮಂಡ್ಯ ಸರ್ಕಾರೀ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದರೂ ಆ
ತಿರುಪೆ ಹೆಣ್ಣಿನ ಮಾತು ನನಗೆ ಕೂಡಲೇ ಅರ್ಥವಾಗಲಿಲ್ಲ. ಪ್ರಶ್ನಾತ್ಮಕವಾಗಿ ನೋಡಿದಾಗ ಆ
ಹೆಂಗಸು ಹೇಳಿದಳು : “ನಿನ್ನೆ ಅಜ್ಜೇಗೌಡರ ಮನೆಗೆ ಭಿಕ್ಷೆಗೆ ಹೋಗಿದ್ದೆ. ಅವರು
ಹೇಳಿದರು, ತಮ್ಮ ಮಗಳನ್ನು ನಿಮಗೆ ಕೊಟ್ಟು ಇಷ್ಟರಲ್ಲೇ ಮದುವೆ ಮಾಡ್ತೀವಿ ಅಂತ”. ಆಗ
‘ಕಳ್ಳು ತಂದು ಕಾಲಿಗೆ ಸುತ್ತು’ ಎಂಬ ನುಡಿಗಟ್ಟನ್ನು ನನ್ನ ಮನಸ್ಸಿಗೆ
ನೋಟುಬುಕ್ಕಿನಲ್ಲಿ ಬರೆದುಕೊಂಡೆ. ಹೀಗೆ ಕೂಲಿನಾಲಿ ಮಾಡುವವರ, ತಿರುಪೆ ಬೇಡುವವರ
ಮಾತುಗಳನ್ನು ಸಹ ತಗ್ಗಿ ಬಗ್ಗಿ ಕೇಳಿದಾಗ, ತಗ್ಗಿನ ಕಡೆಗೆ ನೀರು ಹರಿದು ನೆಲ
ತನುವಾಗುತ್ತದೆ.
ನಾನು ಬಾಲ್ಯದಿಂದ ಇಲ್ಲಿಯವರೆಗೆ ಕಲೆ ಹಾಕಿದ ನಾಲ್ಕು ಸಾವಿರ ಚಿಲ್ಲರೆ
ನುಡಿಗಟ್ಟುಗಳು ಈ ಸಂಕಲನದಲ್ಲಿವೆ. ನನ್ನ ಹುಟ್ಟೂರಾದ ಮಾಗಡಿ ತಾಲ್ಲೂಕಿನ ಎಣ್ಣೆಗೆರೆ
ಹಾಗೂ ಸುತ್ತಮುತ್ತ ಬಳಕೆಯಲ್ಲಿದ್ದ ನುಡಿಗಟ್ಟುಗಳನ್ನು ನನ್ನ ಬಾಲ್ಯ ತಾರುಣ್ಯದ ಮನಸ್ಸು
ಹೀರಿಕೊಂಡರೆ ನಾನು ದೊಡ್ಡವನಾದ ಮೇಲೆ ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಕೆಲವು
ನುಡಿಗಟ್ಟುಗಳನ್ನು ನನ್ನ ಪ್ರೌಢ ಮನಸ್ಸು ಹೀಡಿಕೊಂಡಿದೆ. ಅವುಗಳೆಲ್ಲ ಇಲ್ಲಿವೆ.
ಪ್ರತಿಯೊಂದು ತಾಲ್ಲೂಕಿನ ಅಥವಾ ಜಿಲ್ಲೆಯ ನುಡಿಗಟ್ಟುಗಳನ್ನು ಕಲೆ ಹಾಕಿದರೆ ಕನ್ನಡ
ಭಾಷೆಯ ಭಂಡಾರ ಸಮೃದ್ಧವಾಗುತ್ತದೆ. ಆಯಾ ಪ್ರದೇಶಗಳ ಮರಗಿಡ, ಪ್ರಾಣಿ ಪಕ್ಷಿ,
ಆಚಾರವಿಚಾರ, ಗಡಿನಾಡಿನ ಭಾಗದಲ್ಲಿ ಚಾಲ್ತಿಯಲ್ಲಿರುವ ಅನ್ಯಭಾಷಾ ಶಬ್ದಗಳು,
ನುಡಿಗಟ್ಟುಗಳು ಎಲ್ಲವೂ ಸಂಕಲನಗೊಂಡು ಸಂಕೀರ್ಣ ಭಾಷೆ ಸಂಸ್ಕೃತಿ ಕಣ್ಣೆದುರು
ನಿಲ್ಲುತ್ತದೆ. ಉದಾಹರಣೆಗೆ ಬೆಂಗಳೂರು ತುಮಕೂರು ಜಿಲ್ಲೆಗಳಲ್ಲಿ ಮರವನ್ನು ನಯಗೊಳಿಸುವ
ಉಪಕರಣಕ್ಕೆ ತೋಬಡ ಎಂಬ ಹೆಸರಿದ್ದರೆ, ಮೈಸೂರಿನ ಕಡೆ ಅದೇ ಉಪಕರಣಕ್ಕೆ ಹತ್ತರಿ ಎಂಬ
ಹೆಸರಿದೆ, ಮಲೆನಾಡಿನ ಕಡೆ ಕೀಸುಳಿ ಎಂಬ ಹೆಸರಿದೆ, ಬೇರೆ ಕಡೆ ಉಜ್ಜುಗೊರಡು ಎಂಬ
ಹೆಸರಿದೆ, ಮಲೆನಾಡಿನ ಕಡೆ ಕೀಸುಳಿ ಎಂಬ ಹೆಸರಿದೆ, ಬೇರೆ ಕಡೆ ಉಜ್ಜುಗೊರಡು ಎಂಬ
ಹೆಸರಿದೆ. ಎಲ್ಲ ಜಿಲ್ಲೆಗಳ ಸಂಗ್ರಹ ಕಾರ್ಯ ನಡೆದರೆ ಅವುಗಳಲ್ಲಿ ಇದೇ ಉಪಕರಣ ಯಾವ ಯಾವ
ಹೆಸರಿನಲ್ಲಿ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ ಬೆಂಗಳೂರು
ಜಿಲ್ಲೆಯಲ್ಲಿ ಜಾಲಿ ಮರ ಎಂದರೆ ಮಂಡ್ಯ ಜಿಲ್ಲೆಯಲ್ಲಿ ಗೊಬ್ಬಳಿ ಮರ ಎನ್ನುತ್ತಾರೆ.
ಆದ್ದರಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೇ ಮರಕ್ಕೆ ಏನೇನು ಹೆಸರಿವೆ, ಒಂದೇ ಪ್ರಾಣಿಗೆ
ಏನೇನು ಹೆಸರಿವೆ ಎಂಬುದು ನುಡಿಗಟ್ಟುಗಳ ಮೂಲಕ ಗೊತ್ತಾಗುತ್ತದೆ.
ಅಷ್ಟೇ ಅಲ್ಲ ಪ್ರಾದೇಶಿಕ ಅಥವಾ ಭೌಗೋಳಿಕ ಮಳೆಬೆಳೆಯ ವ್ಯತ್ಯಾಸವೂ ನುಡಿಗಟ್ಟುಗಳಿಂದ
ತಿಳಿದು ಬರುತ್ತದೆ. ಉದಾಹರಣೆಗೆ ಹಳೆಯ ಮೈಸೂರಿನ ಕಡೆ “ಮೈಗೆ ಎಣ್ಣೆ ಹಚ್ಚೊಂಡು ಬಾ” ಎಂಬ
ನುಡಿಗಟ್ಟಿದ್ದರೆ, ಮಲೆನಾಡು ಸಾಗರದ ಕಡೆ “ಬೆನ್ನಿಗೆ ಹಾಲೆ ಕಟ್ಕೊಂಡು ಬಾ” ಎಂಬ
ನುಡಿಗಟ್ಟಿದೆ. ಎರಡರ ಆಶಯವೂ ಗಲೀತ ಬೀಳುತ್ತವೆ, ಮುನ್ನೆಚ್ಚರಿಕೆಯ ಸಿದ್ಧತೆ ಮಾಡಿಕೊಂಡು
ಬಾ ಎಂಬುದೇ ಆಗಿದೆ. ಆದರೆ ಹರಳೆಣ್ಣೆ ಮತ್ತು ಹಾಳೆಯ ಬಳಕೆ, ಮಳೆಬೆಳೆಯ ಅಭಾವ ಹಾಗೂ
ಮಳೆಬೆಳೆಯ ಸಮೃದ್ಧಿಯನ್ನು ಸೂಚಿಸುತ್ತದೆ. ಬಯಲುನಾಡಿನಲ್ಲಿ ನೀರಾವರಿ ಸೌಕರ್ಯವಿಲ್ಲದೆ,
ಸಾಕಷ್ಟು ಮಳೆಯಿಲ್ಲದೆ ತೋಟ ತುಡಿಕೆ ಮಾಡುವುದಿಲ್ಲ. ಆದರೆ ಮಲೆನಾಡಿನಲ್ಲಿ ನೀರಿನ
ಸಮೃದ್ಧಿ ಇರುವುದರಿಂದ ಅಡಿಕೆ ತೋಟಗಳು ಅಧಿಕ. ಹಾಳೆ ಎಂದರೆ ಹೊಂಬಾಳೆಯ ಮುಸುಕಾದ ಒಡಾಳೆ
ಪಟ್ಟಿ ಅಥವಾ ಸುಲಿಪಟ್ಟೆ. ಅವರು ತಲೆಯ ಟೋಪಿಗೂ, ಕೊಡೆಗೂ, ಬೆನ್ನಿಗೂ ಬಳಸುತ್ತಾರೆ.
ಬಯಲುನಾಡಿನವರಿಗೆ ಹಾಳೆ ದುರ್ಲಭ, ಆದರೆ ಕೊಂಚ ಮಳೆಗೂ ಬೆಳೆಯುವ ಹರಳು ಸರ್ವೇ ಸಾಮಾನ್ಯ.
ಆದ್ದರಿಂದ ಬಳಸಿದ ಹರಳೆಣ್ಣೆ ಮತ್ತು ಹಾಳೆಗಳ ಮುಖೇನ ಪ್ರಾದೇಶಿಕ ವ್ಯತ್ಯಾಸವನ್ನು
ಅರಿಯಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಪ್ರತಿಯೊಂದು ಜಿಲ್ಲೆಯ ನುಡಿಗಟ್ಟುಗಳನ್ನು
ಸಂಗ್ರಹಿಸಿದರೆ ಜನಪದ ಸಂಸ್ಕೃತಿಯ ರಾಶಿಪೂಜೆ ಮಾಡಲು ಅನುಕೂಲವಾಗುತ್ತದೆ. ಇಂಥ
ಯೋಜನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಮ್ಮಿಕೊಂಡು, ಇಪ್ಪತ್ತೇಳು ಜಿಲ್ಲೆಗಳ
ಸ್ಥಳೀಕರಿಗೇ ಆಯಾಯ ಜಿಲ್ಲೆಯ ಕ್ಷೇತ್ರಕಾರ್ಯವನ್ನು ವಹಿಸಿ ಕಲೆ ಹಾಕಿದರೆ ದೊಡ್ಡ ನಿಧಿ
ಕನ್ನಡಮ್ಮನ ಕಾಲ ಸನ್ನಿಧಿಗೆ ಬಂದಂತಾಗುತ್ತದೆ. ಆ ಕಾಲ ಬರಲಿ ಎಂದು ಆಶಿಸುತ್ತೇನೆ.
- ಸುಧಾಕರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ