ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಊ)
೨೯೬. ಊಕೆ ಕಟ್ಟಿ ಕೂರು = ಬೇರೆಯ ಕೆಲಸಕ್ಕೆ ಅದಿಯದಿರು, ಪೂರ್ವಾಭಿಪ್ರಾಯಕ್ಕ ಕಟ್ಟು ಬೀಳು
(ಊಕೆ < ಊಂಕೆ < ಉಂಕೆ < ಉಂಕಿ < ಊಡೈ (ತ) = ನೆಯ್ಗೆಗೆ ಮೊದಲು
ಹಾಸುನೂಲು ಕಟ್ಟಿ ಗಂಜಿ ಬಳಿದು ಗಟ್ಟಿಗೊಳಿಸುವ ಕ್ರಿಯೆ) ಕಂಬಳಿ ನೇಯುವ ವೃತ್ತಿ ಈ
ನುಡಿಗಟ್ಟಿಗೆ ಮೂಲ. ಈ ಕಸುಬಿನವರಿಗೆ ಅಂಡೆ ಕುರುಬರು ಅಥವಾ ಲಾಳಿ ಕುರುಬರು ಎಂದು
ಕರೆಯುವುದುಂಟು. ಕನಕದಾಸರು ಈ ಬೆಡಗಿನವರು. ಹೊಕ್ಕುನೂಲನ್ನು ಒಂದು ಬಿದಿರ ಅಂಡೆಗೆ
ತುಂಬಾ ಹಾಸುನೂಲಿನ ಮಧ್ಯೆ ಅಡ್ಡಡ್ಡಲಾಗಿ ಹೋಗುವಂತೆ ತೂರಿಸಿ, ಆ ಬಳಿಕ ಸಣ್ಣ ಹಲಗೆಯಿಂದ
ಹೊಕ್ಕುನೂಲು ಬಿಗಿಯಾಗಿ ಕೂರುವಂತೆ ತಾಡಿಸುತ್ತಾರೆ. ಅದರಿಂದಲೇ ಅಂಡೆ ಕುರುಬರು, ಲಾಳಿ
ಕುರುಬರು ಎಂಬ ಬೆಡಗುಗಳ ಚಾಲ್ತಿಗೆ ಬಂದಿರುವುದು.
ನೇಯ್ಗೆಗೆ ಮೊದಲು ಹಾಸುನೂಲಿಗೆ ಗಂಜಿಯನ್ನು ಬಳಿದು ಗಟ್ಟಿಗೊಳಿಸುವುದಕ್ಕೆ ಊಕೆ
ಕಟ್ಟುವುದು ಎಂದು ಹೇಳುತ್ತಾರೆ. ಅದು ಮುಗಿಯುವ ತನಕ ಅವರು ಅದರಲ್ಲೇ ಮುಳುಗಿರುತ್ತಾರೆ.
ಯಾರೂ ಕರೆದರೂ ಕೆಲಸ ಬಿಟ್ಟು ಮೇಲೇಳುವುದಿಲ್ಲ. ಅನ್ಯರ ಮಾತಿಗೆ ಕಿವಿಗೊಡದೆ ತನ್ನ
ನಿಲುವಿಗೆ ಜೋತುಬೀಳದೆ ಮನುಷ್ಯ ಪ್ರವೃತ್ತಿಯನ್ನು ಈ ನುಡಿಗಟ್ಟಿನ ಮೂಲಕ ಅನಾವರಣ
ಮಾಡಲಾಗುತ್ತದೆ.
ಪ್ರ : ಅವನು ಊಕೆ ಕಟ್ಟಿ ಕೂತವ್ನೆ, ಯಾಕೆ ಬಾಯಿ ನೋಯಿಸಿಕೊಳ್ತಿ?
೨೯೭. ಊಟ ಹಾಕಿಸು = ಮದುವೆಯಾಗು
ಪ್ರ : ಯಾವಾಗ ಊಟ ಹಾಕಿಸೋದು?
೨೯೮. ಊದರ ಇಕ್ಕು = ವಿರಸ ಮೂಡಿಸು
(ಊದರ = ಹೊಗೆ)
ಪ್ರ : ಊದರ ಇಕ್ಕೋ ಗರತಿ, ಬಂದ ನಂಟರಿಗೆ ಆದರ ತೋರಿಸ್ತಾಳ?
೨೯೯. ಊದಿಬಾದಾಳಾಗು = ಉಬ್ಬರಿಸಿಕೊಳ್ಳು, ಮುಖದಪ್ಪಗೆ ಮಾಡಿಕೊಳ್ಳು
(ಬಾದಾಳು < ಬಾದಳ < ಬಾದಣ = ಊದಿಕೊಂಡು ತೂತು ಬೀಳುವುದು)
ಪ್ರ : ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ಊದಿಬಾದಾಳಾಗಿ ಕುಂತವಳೆ
೩೦೦. ಊಬು ಚುಚ್ಚಿಕೊಳ್ಳು = ಹುಲ್ಲಿನ ಮುಳ್ಳು ಬಟ್ಟೆಗೆ ದಳೆದುಕೊಳ್ಳು
(ಊಬು = ಹುಲ್ಲಿನ ಮುಳ್ಳು ; ಹಂಚಿ, ಕರಡ ಎಂಬ ಹುಲ್ಲುಗಳು ಊಬಿರುವಂಥವು)
ಪ್ರ : ಪಂಚೆ ಉಟ್ಕೊಂಡು ಕರಡದ ಹುಲ್ಲೊಳಗೆ ನಡೆದು ಬಂದ್ರೆ ಊಬು ದಳೆದುಕೊಳ್ಳದೆ ಇರ್ತದ?
೩೦೧. ಊರಿಗೆ ಊರನ್ನೇ ಕಟ್ಟಿಕೊಳ್ಳು = ಎಲ್ಲರನ್ನೂ ತನ್ನತ್ತ ಒಲಿಸಿಕೊಳ್ಳು, ತನ್ನ ಪರ ಮಾಡಿಕೊಳ್ಳು
ಪ್ರ : ಊರಿಗೆ ಊರನ್ನೇ ಕಟ್ಟಿಕೊಂಡಿರುವಾಗ, ಅವನ ಕೂದಲನ್ನು ಕೊಂಕಿಸೋರು ಯಾರು?
೩೦೨. ಊರಿಗೆ ಊರೇ ಬರು = ಊರಿನ ಜನವೆಲ್ಲ ಘೇರಾಯಿಸು
ಪ್ರ : ತೇರು ನೋಡೋಕೆ ಊರಿಗೆ ಊರೇ ಬಂದು ಬಿಡ್ತು.
೩೦೩. ಊರು ಹೊಲಗೇರಿ ಒಂದು ಮಾಡು = ಗೊಂದಲ ಗಲಭೆ ಮಾಡು, ರಾದ್ಧಾಂತ ಮಾಡು
ಊರಿನಿಂದ ಹೊರಗೆ ಅಥವಾ ಹೊರಚ್ಚಿಗೆ ಇರುವಂಥದು ಹೊಲಗೇರಿ, ಊರಿನೊಳಗೆ ಇರುವಂಥದಲ್ಲ
ಎಂಬ ಸತ್ಯ ಈ ನುಡಿಗಟ್ಟಿನಲ್ಲೇ ಅಡಗಿದೆ. ಅಂದರೆ ಅಮಾನುಷ ಜಾತಿ ವ್ಯವಸ್ಥೆ, ಸ್ಪೃಶ್ಯ
ಅಸ್ಪೃಶ್ಯ ಎಂಬ ಗೋಡೆ ಕಟ್ಟಿ ಮಾನವ ಕುಟುಂಬವನ್ನು ಛಿದ್ರ ಛಿದ್ರಗೊಳಿಸಿದ್ದರೆ ದ್ಯೋತಕ ಈ
ವಿಂಗಡಣೆ. ಹೊಲಗೇರಿಯ ಜನ ಕುಡಿದು ಗಲಾಟೆ ಮಾಡಿ ರಂಪ ಎಬ್ಬಿಸುತ್ತಾರೆ, ಅಸಹ್ಯ
ಹುಟ್ಟಿಸುತ್ತಾರೆ ಎಂಬ ನಂಬಿಕೆ ಇದ್ದಿರಬೇಕು. ಆ ನಂಬಿಕೆಗೆ ವ್ಯತಿರಿಕ್ತವಾಗಿ ಊರೊಳಗಿನ
ಸಭ್ಯರೇ ಹೊರಗೇರಿಯವರಿಗಿಂತ ಅಸಭ್ಯವಾಗಿ ವರ್ತಿಸಿದ ಸತ್ಯವನ್ನು ಈ ನುಡಿಗಟ್ಟು
ಬಿತ್ತರಿಸುತ್ತದೆ – ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಎಂಬ ಸತ್ಯದಂತೆ.
ಪ್ರ : ಅಣ್ಣ ತಮ್ಮದಿರು ಹೊಡೆದಾಡಿ ಬಡಿದಾಡಿ ಊರು ಹೊಲಗೇರಿ ಒಂದು ಮಾಡಿಬಿಟ್ರು
೩೦೪. ಊರು ಹೋಗು ಅನ್ನು ಕಾಡು ಬಾ ಅನ್ನು = ಹೆಚ್ಚು ವಯಸ್ಸಾಗು, ಸಾವು ಸಮೀಪಿಸು
ಪ್ರ : ನಮ್ಮ ಕಾಲ ಮುಗೀತಪ್ಪ, ಊರು ಹೋಗು ಅಂತದೆ, ಕಾಡು ಬಾ ಅಂತದೆ
೩೦೫. ಊರುಗದಲ್ಲಿ ಹುಟ್ಟು = ಅಪವಾದ ಕಟ್ಟಿಟ್ಟ ಬುತ್ತಿಯಾಗು
(ಊರುಗ = ಅಮಾವಾಸ್ಯೆ ಅಥವಾ ಅದರ ಹಿಂದು ಮುಂದಿನ ದಿನ.)
ಅಮಾವಾಸ್ಯೆಯಲ್ಲಿ ಹುಟ್ಟಿದವರಿಗೆ ಒಂದಲ್ಲ ಒಂದು ಅಪವಾದ ಇದ್ದೇ ಇರುತ್ತದೆ. ಅಪವಾದಗಳ
ಸರಮಾಲೆ ಅವರ ಕೊರಳಿಗೆ ಜೋತು ಬೀಳುತ್ತದೆ ಎಂಬ ನಂಬಿಕೆ ಜನಪದರದ್ದು. ಆದ್ದರಿಂದ ಇದು
ನಂಬಿಕೆ ಮೂಲ ನುಡಿಗಟ್ಟು.
ಪ್ರ : ಗಾದೆ – ಊರುಗದಲ್ಲಿ ಹುಟ್ಟಿದೋನಿಗೆ ದೂರು ಘನ (ಕಣಾ)
೩೦೬. ಊಸರವಳ್ಳಿ ಯಾಸ ಎತ್ತು = ಬಣ್ಣ ಬದಲಾಯಿಸು.
(ಊಸರವಳ್ಳಿ = ಗೋಸುಂಬೆ ; ಯಾಸ = ವೇಷ)
ಪ್ರ : ಕಣ್ಣುಮುಚ್ಚಿ ಕಣ್ಣು ತೆರೆಯೋದರೊಳಗೆ ಊಸರವಳ್ಳಿ ಯಾಸ ಎತ್ತಿ ಬಿಟ್ಟ ನೋಡು
೩೦೭. ಊಂ ಅಂದ್ರೂ ಕಷ್ಟವಾಗು ಉಹೂಂ ಅಂದ್ರೂ ಕಷ್ಟವಾಗು = ಇಕ್ಕಟ್ಟಿನ ಇಕ್ಕುಳದಲ್ಲಿ ಸಿಕ್ಕು
ಪ್ರ : ಗಾದೆ – ಹ್ಞೂಂ ಅಂದ್ರೆ ಉಗಿತ, ಉಹ್ಞುಂ ಅಂದ್ರೆ ಬಿಗಿತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ