ನನ್ನ ಪುಟಗಳು

05 ಅಕ್ಟೋಬರ್ 2015

೬) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೨)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೨)
೮೧. ಅಪ್ಪುಗೈಯಾಗಿ ನಿಲ್ಲು = ಕೈಕಟ್ಟಿಕೊಂಡು ದೈನ್ಯದಿಂದ ನಿಲ್ಲು
ಪ್ರ : ದಣಿ ಅಂದಿದ್ದು ಆಡಿದ್ದನ್ನೆಲ್ಲ ತುಟಿಪಿಟಿಕ್ ಎನ್ನದೆ ಅಪ್ಪುಗೈಯಾಗಿ ನಿಂತು ಕೇಳಿದ.
೮೨. ಅಬೋ ಅನ್ನು = ಬಿಕೋ ಎನ್ನು
ಪ್ರ : ದಣಿ ಇಲ್ಲದ ಮನೆ ಅಬೋ ಅಂತದೆ.
೮೩. ಅಬ್ಬಬ್ಬ ಎನ್ನು = ಸೋಜಿಗ ಪಡು
ಪ್ರ : ಚೋಟುದ್ದ ಹುಡುಗ ಆಡೋ ಆಟ ನೋಡಿ ಅಬ್ಬಬ್ಬ ಅಂದ್ಕೊಂಡೆ
೮೪. ಅಬ್ಬರ ಅಡಗು = ಆರ್ಭಟ ನಿಲ್ಲು, ಸೊಲ್ಲಡಗು, ಮರಣ ಹೊಂದು.
ಪ್ರ : ಅವನ ಅಬ್ಬರ ಅಡಗೋದನ್ನ ನನ್ನ ಕಣ್ಣಿಂದ ಎಂದು ನೋಡ್ತೀನೋ
೮೫. ಅಬ್ಬಳಿಸು = ತಿಂದ ಅನ್ನ ಹೊರಬರುವಂತಾಗು, ವಾಕರಿಸು
ಪ್ರ : ಮಗು ಅನ್ನ ತಿನ್ನೋಕೆ ಅಬ್ಬಳಿಸ್ತದೆ, ಸಾಕು ಇನ್ನು ತಿನ್ನಿಸಬೇಡ
೮೬. ಅಭ ಅನ್ನದಿರು ಶುಭ ಅನ್ನದಿರು = ಮೂಕವಾಗಿರು, ತುಟಿ ಎರಡು ಮಾಡದಿರು
ಪ್ರ : ಮಕ್ಕಳು ಬಾಯಿಗೆ ಬಂದಂಗೆ ಬಯ್ದರೂ ಅಪ್ಪ ಅಭ ಅನ್ನಲಿಲ್ಲ ಶುಭ ಅನ್ನಲಿಲ್ಲ.
೮೭. ಅಭಾವದಲ್ಲಿ ಅಧಿಕ ಮಾಸ ಬಂದಂತಾಗು = ಕಷ್ಟದೊಳಗೆ ಕಷ್ಟ ಬರು, ಗಾಯದ ಮೇಲೆ ಬರೆ ಬೀಳು
(ಅಭಾವ = ದುರ್ಭಿಕ್ಷ, ಕ್ಷಾಮ)
ಪ್ರ : ಗಂಡ ಸತ್ತ ದುಃಖದಲ್ಲಿ ಮೂಲೆ ಹಿಡಿದು ಕೂತ ಆವಮ್ಮನ ಮಗನಿಗೆ ಹಿಂಗೆ ಆಗಬೇಕ, ಅಭಾವದಲ್ಲಿ ಅಧಿಕ ಮಾಸ ಅಂತ ?
೮೮. ಅಮಟೇ ಕಾಯಿ ಮಾಡು = ಏನೂ ಮಾಡಲಾಗದಿರು, ಏನೂ ಸಾಧ್ಯವಾಗದಿರು
(ಅಮಟೆ < ಅಂಬಷ್ಟೆ = ಉಪ್ಪಿನಕಾಯಿಗೆ ಬಳಸುವ ಒಂದು ಬಗೆಯ ಕಾಯಿ)
ಪ್ರ : ಏನು ಅಮಟೇಕಾಯಿ ಮಾಡೋದು ನೀನು, ಹೋಗೋ ಕಂಡಿದ್ದೀನಿ.
೮೯. ಅಮರಿಸು = ತಗುಲಿ ಬೀಳು, ತರಾಟೆಗೆ ತೆಗೆದುಕೊಳ್ಳು
(ಅಮರಿಸು < ಅಮರ್ಚು = ಬಯ್ಯಿ, ಹೊಡೆ)
ಪ್ರ: ಅವನು ಎದುರಿಗೆ ಸಿಕ್ಕಿದ, ಚೆನ್ನಾಗಿ ಅಮರಿಸಿ ಬಂದಿದ್ದೀನಿ.
೯೦. ಅಮಲಿಳಿಸು = ಅಹಂಕಾರ ತಗ್ಗಿಸು
(ಅಮಲು = ಮತ್ತು, ನಿಶೆ)
ಪ್ರ : ಅವನ ನೆತ್ತಿಗೇರಿದ್ದ ಅಮಲಿಳಿಸಿದ್ದೀನಿ, ಇವತ್ತು.
೯೧. ಅಮ್ಮಣ್ಣಿ ಕುಡಿಸು = ಹಾಲು ಕುಡಿಸು
(ಅಮ್ಮಣ್ಣಿ = ಮೊಲೆ, ಮೊಲೆ ತೊಟ್ಟು)
ಪ್ರ : ಅಳಬೇಡ ಬಾ ಪುಟ್ಟ, ಅಮ್ಮಣ್ಣಿ ಕುಡಿಸ್ತಿನಿ.
೯೨. ಅಮಾಸೆಗೊಮ್ಮೆ ಹುಣ್ಣಿವೆಗೊಮ್ಮೆ ಬರು = ಅಪರೂಪಕ್ಕೆ ಬರು
(ಅಮಾಸೆ < ಅಮಾವಾಸ್ಯೆ; ಹುಣ್ಣಿವೆ < ಹುಣ್ಣಿಮೆ < ಪೂರ್ಣಿಮಾ)
ಪ್ರ : ಅಮಾಸೆಗೋ ಹುಣ್ಣಿವೆಗೋ ಒಂದು ಸಾರಿ ತಲೆ ತೋರಿಸ್ತಿಯಪ್ಪ
೯೩. ಅಯ್ಯೋ ಅನ್ನು = ಮರುಗು, ಕರುಣೆ ತೋರು.
ಪ್ರ : ಗಾದೆ = ಅಯ್ಯೋ ಅಂದೋರಿಗೆ ಆರು ತಿಂಗಳು ಆಯಸ್ಸು ಕಮ್ಮಿ
೯೪. ಅರಗಳ್ಳು ಹಂಚು = ಬಿಟ್ಟಿ ಹೆಂಡ ಹಂಚು, ವಿತರಿಸು
(ಅರಗಳ್ಳು < ಅರ = ಧರ್ಮ + ಕಳ್ಳು = ಹೆಂಡ)
ಪ್ರ : ಚುನಾವಣೆಯಲ್ಲಿ ‘ಬರಿಗಳ್ಳಿನ’ ಮತದಾರರಿಗೆ ‘ಅರಗಳ್ಳು’ ಹಂಚುವ ನಮ್ಮ ರಾಜಕಾರಣಿಗಳಿಗೆ ‘ಅರಗಲಿ’ ಪ್ರಶಸ್ತಿಗಳನ್ನು ಹಂಚದಿರುವುದು ಅನ್ಯಾಯ !
೯೫. ಅರಗೀಸಾಗದಿರು = ಬಿಲ್‌ಕುಲ್ ಆಗದಿರು, ಖಂಡಿತ ಸಾಧ್ಯವಾಗದಿರು
(ಅರಗೀಸ < ಹರ್ ಗಿಜ್ (ಉ) (ಹಿಂ) = ಬಿಲ್‌ಕುಲ್, ಖಂಡಿತ)
ಪ್ರ : ನೀನು ಇದಕ್ಕೆ ಕುಮ್ಮಕ್ಕು ಕೊಡು ಅಂದಿದ್ಕೆ ಅರಗೀಸಾಗಲ್ಲ ಅಂತ ತಲೆ ಒಗೆದು ಬಿಟ್ಟ
೯೬. ಅರಗುಲಿಯಾಟವಾಡು = ಭಂಡಾಟವಾಡು, ಅಧರ್ಮದ ಹಾದಿಯಲ್ಲಿ ಸಾಗು
(ಅರಗುಲಿ < ಅರ = ಧರ್ಮ + ಕುಲಿ = ಕೊಲ್ಲುವವನು = ಧರ್ಮದ ಕೊಲೆಗಾರ, ಧರ್ಮಘಾತಕ)
ಪ್ರ : ಅರಗುಲಿ ಆಟ ಆಡೋನ ಜೊತೆ ಆಟ ಆಡೋಕೆ ಹೋಗಬಾರ್ದು
೯೭. ಅರಗಲಿಯಾಗಿ ಬದುಕು = ಧರ್ಮಶೂರನಾಗಿ ಬಾಳು, ಧರ್ಮಪಾಲಕನಾಗಿ ಜೀವಿಸು
(ಅರಗಲಿ < ಅರ = ಧರ್ಮ + ಕಲಿ = ಶೂರ = ಧರ್ಮಶೂರ, ಧರ್ಮಪಾಲಕ)
ಪ್ರ : ಅರಗಲಿಯಾಗಿ ಬಾಳಿ ಅರಗಿಳಿ ಎನ್ನಿಸಿಕೊಳ್ಳಬೇಕು ಎಲ್ಲರ ಕೈಯಲ್ಲೂ
೯೮. ಅರಣೆ ಹೊರು = ಮದುವೆಯಲ್ಲಿ ಶಾಸ್ತ್ರದ ನೀರಿನ ಗಡಿಗೆಯನ್ನು ಹೊರು
(ಅರಣೆ < ಐರಾಣೆ = ಗಡಿಗೆ)
ಪ್ರ : ಅರಣೆ ಹೊತ್ತರೋಳು ಹೆಣ್ಣಿನೋರ ಚಿಕ್ಕಪ್ಪನ ಮಗಳು.
೯೯. ಅರ್ಧ ಜೀವ ಮಾಡು = ಹೆಣಗಿಸು, ಹಿಂಸಿಸು, ಸೊರಗಿಸು
ಪ್ರ : ಎದ್ದಾಗಳಿಂದ ಹೆಣಗಿಸಿ ಹೆಣಗಿಸಿ ಅರ್ಧ ಜೀವ ಮಾಡಿಬಿಟ್ಟಿದ್ದಾನೆ.
೧೦೦. ಅರನಾಲಗೆ ಕಚ್ಚು = ಸಿಟ್ಟುದೋರು, ಹೆದರಿಸು
(ಅರನಾಲಗೆ < ಅರ್ಧ ನಾಲಗೆ ; ಅರ < ಅರೆ = ಅರ್ಧ)
ಪ್ರ : ಅರನಾಲಗೆ ಕಚ್ಚಿದೇಟಿಗೇ ಅವನಲ್ಲಿದ್ರೆ ಕೇಳು
೧೦೧. ಅರಲಿ ಬಿಡು = ಅರಚಿಕೊಳ್ಳು, ಗೋಗರೆ, ಯಾಚಿಸು
(ಅರಲು < ಒರಲು = ಅರಚು, ಕಣ್ಣೀರುಗರೆ)
ಪ್ರ : ಒಂದೇ ಸಮ ಅರಲಿಬಿಟ್ಟೆ, ಅವನ ಮನಸ್ಸು ಕರಗಿದ್ರೆ ಕೇಳು
೧೦೨. ಅರಾಸು ಇರದಿರು = ಎಚ್ಚರವಿರದಿರು, ಪ್ರಜ್ಞೆ ಇರದಿರು
(ಅರಾಸು < ಹಿರಾಸ್ (ಹಿಂ) = ಪ್ರಜ್ಞೆ, ಭಯ)
ಪ್ರ : ಅರಾಸು ಇಲ್ಲದೋರ ಹತ್ರ ಅವಸರದ ಕೆಲಸ ಹೇಳೋರು ದಡ್ಡರು.
೧೦೩. ಅರಿಶಿಣ ಇಕ್ಕು = ಮದುವೆ ಮಾಡು.
ಮದುವೆಯಲ್ಲಿ ಹೆಣ್ಣುಗಂಡಿಗೆ ಅರಿಶಿಣ ಹಚ್ಚುವ ಶಾಸ್ತ್ರ ಉಂಟು. ಅರಿಶಿಣದ ಮೈಯವರು ಹುಣಿಸೆಮರದ ಕೆಳಗೆ ಹೋಗಬಾರದು ಎಂಬ ಜನಪದ ನಂಬಿಕೆಯುಂಟು. ಅರಿಶಿಣದ ಕೂಳಿಗೆ ಹೋಗಿ ವರುಷದ ಕೂಳು ಕಳ್ಕೊಂಡು ಎಂಬ ಗಾದೆ ಮದುವೆ ಊಟಕ್ಕೆ ಹೋದದ್ದನ್ನು ಸೂಚಿಸುತ್ತದೆ.
ಪ್ರ : ಗಾದೆ – ಹಸಗೆಟ್ಟೋಳ್ಗೆ ಅರಿಶಿಣ ಇಕ್ಕಿದ್ದೆ ಹೊಸಲ ಮೇಲೆ ಹೋಗಿ ತೊಸಕ್ ಅಂದ್ಲಂತೆ.
೧೦೪. ಅರಿಶಿಣದ ಕೂಳಿಗೆ ಹೋಗು = ಮದುವೆ ಊಟಕ್ಕೆ ಹೋಗು
(ಅರಿಶಿಣದ = ಮದುವೆಯ, ಕೂಳು = ಅನ್ನ)
ಪ್ರ : ಗಾದೆ – ಅರಿಶಿಣದ ಕೂಳಿಗೆ ಹೋಗಿ ವರುಷದ ಕೂಳು ಕಳ್ಕೊಂಡ.
೧೦೫. ಅರುಗಾಗು = ಪಕ್ಕಕ್ಕೆ ಸರಿ, ಹೊರಚ್ಚಿಗೆ ಹೋಗು
(ಅರುಗು = ಅಂಚು, ಕೊನೆ)
ಪ್ರ : ಅರುಗಾಗು ಅಂದ್ರೆ ಒರಗ್ಹೋಗು ಅಂತೀಯ ಎಂದು ಜಗಳಕ್ಕೆ ಬಂದ.
೧೦೬. ಅಲಗು ಹಾಕು = ಬೊಗಳು
(ಅಲಗು < ಅಲಕ < ಅಲರ್ಕ = ಹುಚ್ಚುನಾಯಿ, ಕೆರಳಿದ ನಾಯಿ)
ಪ್ರ : ಎಷ್ಟು ಹೇಳಿದರೂ ಕೇಳದೆ ಒಂದೇ ಸಮ ಅಲಗು ಹಾಕ್ತಾ ಅವಳೆ
೧೦೭. ಅಲಲಾ ಅನ್ನು = ಅಬ್ಬರ ಮಾಡು, ಕಿರುಚಾಡು
ಪ್ರ : ಗಾದೆ – ಅಲಲಾ ಅನ್ನೋ ಅಳ್ಳಿಮರ ನಂಬಹುದು, ಮಳ್ಳಿ ಹಂಗಿರೋ ಕಳ್ಳಿ ನಂಬಾರ್ದು
೧೦೮. ಅಲಾಕ್ ಆಗದಿರು = ಕಳೆದು ಹೋಗದಿರು, ಸ್ಥಳಾಂತರವಾಗದಿರು
(ಅಲಾಕ್ < ಅಲಗ್ (ಹಿಂ) = ಬೇರೆ, ಪ್ರತ್ಯೇಕ)
ಪ್ರ : ನಂಬಿಕಸ್ಥ ಆಳು, ಅವನಿದ್ರೆ ಒಂದು ಹುಲ್ಲುಕಡ್ಡಿ ಅಲಾಕ್ ಆಗಲ್ಲ.
೧೦೯. ಅಲಾಬಿ ಕಟ್ಟು = ದೊಡ್ಡ ಗದ್ದಲ ಮಾಡು, ಕುಣಿದು ಕುಪ್ಪಳಿಸು ಕೂಗಾಡು
(ಅಲಾಬಿ < ಹಲಾಬಿ (ಉ) = ಮೊಹರಂ ಹಬ್ಬದ ಆಚರಣೆ)
ಪ್ರ : ಅವರ ಮನೆ ಮಕ್ಕಳು ಬಂದೋ ಅಂದ್ರೆ, ಅಲಾಬಿ ಕಟ್ಟಿಬಿಡ್ತವೆ
೧೧೦. ಅಲಾಯದ ಕರೆದು ಹೇಳು = ಹೊರಚ್ಚಿಗೆ ಕರೆದು ಹೇಳು, ಗುಂಪಿನಿಂದ ಹೊರಕರೆದು ಹೇಳು
(ಅಲಾಯದ (ಹಿಂ) = ಪ್ರತ್ಯೇಕ)
ಪ್ರ : ಎಲ್ಲರ ಮುಂದೆ ಹೇಳಬೇಡ, ಅವನೊಬ್ಬನ್ನೇ ಅಲಾಯದ ಕರೆದು ಹೇಳು
೧೧೧. ಅವತಾರ ನೋಡಲಾಗದಿರು = ವೇಷ ಜಿಗುಪ್ಸೆ ಹುಟ್ಟಿಸು, ರೂಪ ಅಸಹ್ಯ ಹುಟ್ಟಿಸು.
(ಅವತಾರ = ಹುಟ್ಟು, ರೂಪ)
ಪ್ರ : ನಿನ್ನ ಈ ಅವತಾರಾನ ಕಣ್ಣಿಂದ ನೋಡಕ್ಕಾಗಲ್ಲ.
೧೧೨. ಅವತಾರ ಮುಗಿ = ಹಾರಾಟ ನಿಲ್ಲು, ಶಕ್ತಿ ಮತ್ತು ಪ್ರಭಾವ ತಣ್ಣಗಾಗು.
(ಅವತಾರ = ವಿಷ್ಣು ಒಂದಾದ ಮೇಲೆ ಒಂದು ಅವತಾರ ಎತ್ತಿ ಬಂದುದರ ಹಿನ್ನೆಲೆ ಇದೆ)
ಪ್ರ : ಭ್ರಷ್ಟಾಚಾರದ ಆಪಾದನೆಯಿಂದ ಮಂತ್ರಿಪದವಿ ಕಳಕೊಂಡ ತಕ್ಷಣ, ಅವನ ಅವತಾರ ಮುಗೀತು.
೧೧೩. ಅವಾಂತರ ಮಾಡು = ಗಡಿಬಿಡಿ ಗೊಂದಲ ಮಾಡು, ದುಡುಕಿನಿಂದ ಅನಾಹುತ ಮಾಡು
ಪ್ರ : ಗಾದೆ – ಹೆಂಡ್ರ ಅವಾಂತರ ತಡೀಲಾರದೆ ಗಂಡ ದೇಶಾಂತರ ಹೋದ
೧೧೪. ಅವುಡುಗಚ್ಚು = ಸಿಟ್ಟುಗೊಳ್ಳು, ಅಸಮಾಧಾನಗೊಳ್ಳು
(ಅವುಡು < ಅವುಂಡು = ಕೆಳತುಟಿ)
ಪ್ರ : ತನ್ನ ಮಾತಿಗೆ ಕಿವುಡಾಗಿ ಕೂತ ಹೆಂಡ್ರ ಮೇಲೆ ಗಂಡ ಅವುಡುಗಚ್ಚಿದ
೧೧೫. ಅವುಸಿಕೊಳ್ಳು = ಬಚ್ಚಿಟ್ಟುಕೊಳ್ಳು
(ಅವುಸು < ಅವಿಸು = ಬಚ್ಚಿಡು)
ಪ್ರ : ಕಣ್ಣು ಮುಚ್ಚಾಲೆ ಆಡದಲ್ಲಿ ಕದದ ಹಿಂದೆ ಅವುಸಿಕೊಂಡ್ಲು
೧೧೬. ಅಸಡ್ಡಾಳವಾಗಿ ಕಾಣು = ಅಲಕ್ಷ್ಯದಿಂದ ಕಾಣು, ಕ್ರೂರವಾಗಿ ನಡೆಸಿಕೊಳ್ಳು
(ಅಸಡ್ಡಾಳ < ಅಷಡ್ಡಾಲ (ತೆ) = ಕ್ರೂರ)
ಪ್ರ : ಈಚೀಚೆಗಂತೂ ನನ್ನನ್ನು ಅವರೆಲ್ಲ ಅಸಡ್ಡಾಳವಾಗಿ ಕಾಣ್ತಾರೆ.
೧೧೭. ಅಸಡ್ಡೆ ಮಾಡು = ಅಲಕ್ಷ್ಯ ಮಾಡು, ಔದಾಸೀನ್ಯ ಮಾಡು
(ಅಸಡ್ಡೆ < ಅಶ್ರದ್ಧೆ = ಅನಾಸಕ್ತಿ, ಅಲಕ್ಷ್ಯ)
ಪ್ರ: ತಿಳಿದೋರು ಯಾರೂ, ಯಾರನ್ನೂ ಅಸಡ್ಢೆ ಮಾಡಲ್ಲ
೧೧೮. ಅಸ್ಸಿಸ್ಸಿ ಎನ್ನು = ಹೇಸಿಗೆ ಪಡು, ಅಸಹ್ಯ ಪಡು
(ಅಸ್ಸಿಸ್ಸಿ = ಹೇಸಿಗೆ, ಅಸಹ್ಯ)
ಪ್ರ : ಅಲ್ಲಿ ಮಗು ಅಸ್ಸಿಸ್ಸಿ ಮಾಡಿದೆ, ತುಳಿದುಗಿಳಿದು ಬಿಟ್ಟೀಯ ಎಂದು ಅಪ್ಪ ಹೇಳಿದಾಗ ಮಗ ಈ ಜನಕ್ಕೆ ಅಚ್ಚುಕಟ್ಟು ಅನ್ನೋದೆ ಇಲ್ಲ ಎಂದು ಅಸ್ಸಿಸ್ಸಿ ಪಟ್ಟುಕೊಂಡ
೧೧೯. ಅಳಿದು ಹಾಕು = ಬಿಚ್ಚಿ ಹಾಕು, ಕಳಚಿ ಹಾಕು
ಪ್ರ : ರೇಶ್ಮೆ ಸೀರೆ ಅಳಿದು ಹಾಕಿ, ನೂಲು ಸೀರೆ ಉಟ್ಕೊಂಡು ಬರ್ತೀನಿ ಇರು.
೧೨೦. ಅಳುಚ್ಚಗಾಗು = ಬೆಳಕು ಹರಿ
(ಅಳುಚ್ಚಗೆ < ಅಳುರ್ಚು = ಬೆಳಕು ವ್ಯಾಪಿಸು, ಹೊಳಪು ಹರಡು)
ಪ್ರ : ಆಗಲೇ ಅಳುಚ್ಚಗೆ ಆಯ್ತು, ಎದ್ದು ಆರು ಕಟ್ಟು ಏಳು
೧೨೧. ಅಳುಚ್ಚಗೆ ಬೆಳಗು = ಹೊಳೆಯುವಂತೆ ಉಜ್ಜು, ಚೊಕ್ಕಟವಾಗಿ ಬೆಳಗು
(ಅಳುಚ್ಚಗೆ = ನಿರ್ಮಲವಾಗಿ, ಥಳಥಳ ಎನ್ನುವಂತೆ)
ಪ್ರ : ಪಾತ್ರೆಗಳನ್ನು ಅಳುಚ್ಚಗೆ ಬೆಳಗಬೇಕು, ಕಸವನ್ನು ಅಳುಚ್ಚಗೆ ಗುಡಿಸಬೇಕು, ಗೊತ್ತಾಯ್ತಾ?
೧೨೨. ಅಳ್ನೆತ್ತಿ ಕೂಡದಿರು = ಎಳೆಯ ಬೊಮ್ಮಟೆಯಾಗಿರು, ಹಸುಗಂದನಾಗಿರು
(ಅಳ್ನೆತ್ತಿ = ನೆತ್ತಿಬಾಯಿ)
ಪ್ರ : ಅಳ್ನೆ ತ್ತಿ ಕೂಡದೋರ ಮೇಲೆ ದಂಡೆತ್ತಿ ಹೋಗಬೇಕ?
೧೨೩. ಅಳೆದು ಕೊಡು = ಅಳತೆ ಮಾಡಿ ಕೊಡು, ಲೆಕ್ಕ ಹಾಕಿ ಕೊಡು
ಪ್ರ : ಗಾದೆ – ಹೊಳೆಗೆ ಸುರಿದರೂ ಅಳೆದು ಸುರಿ
೧೨೪. ಅಳ್ಳೆ ಬಿರಿಯುವಂತೆ ನಗು = ಜೋರಾಗಿ ನಗು, ಹೊಟ್ಟೆ ಹಿಡಿದುಕೊಳ್ಳುವಂತೆ ನಗು
(ಅಳ್ಳೆ = ಪಕ್ಕೆ)
ಪ್ರ : ಅಳ್ಳೆ ಬಿರಿಯುವಂತೆ ಬಿದ್ದು ಬಿದ್ದು ನಕ್ಕರು
೧೨೫. ಅಂಗಡಿ ಇಡು = ಹರಡು, ಪ್ರದರ್ಶಿಸು
ಪ್ರ : ನೀನಿಲ್ಲಿ ಒಡವೇನೆಲ್ಲ ಅಂಗಡಿ ಇಡಬೇಡ, ಮೊದಲೆತ್ತಿಡು.
೧೨೬. ಅಂಗಡಿ ಎತ್ತು = ಜಾಗ ಖಾಲಿ ಮಾಡು, ಸ್ಥಳಬಿಡು
ಪ್ರ : ಮೊದಲು ನೀನಿಲ್ಲಿಂದ ಅಂಗಡಿ ಎತ್ತು, ನನ್ನ ನಿನ್ನ ಸಂಬಂಧ ಇವತ್ತಿಗೆ ಮುಗೀತು
೧೨೭. ಅಂಗಾತ ಮಲಗಿಸು = ಸಾಯಿಸು, ಮರಣ ಹೊಂದಿಸು
(ಅಂಗಾತ = ಹೊಟ್ಟೆ ಮುಖ ಮೇಲಾಗಿ)
ಸತ್ತಾಗ ಹೆಣವನ್ನು ಅಂಗಾತ ಮಲಗಿಸಿ ಮೇಲೆ ಮಣ್ಣನ್ನೆಳೆದು ಸಮಾಧಿ ಮಾಡುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದ್ದು.
ಪ್ರ : ಬಿರ್ರ‍ನೆ ದೇವರು ನನ್ನ ಅಂಗಾತ ಮಲಗಿಸಿಬಿಟ್ರೆ, ಅಷ್ಟೇ ಸಾಕು.
೧೨೮. ಅಂಗಾತ ಮಾಡು = ಸೋಲಿಸು
ಈ ನುಡಿಗಟ್ಟು ಕುಸ್ತಿ ಮೂಲದ್ದು. ಕುಸ್ತಿಯಲ್ಲಿ ಎದುರಾಳಿಯನ್ನು ಅಂಗಾತ ಮಾಡಿದರೆ ಅವನು ಸೋತಂತೆ ಲೆಕ್ಕ.
ಪ್ರ : ಈ ಪ್ಯಾತಲನಂಥ ಪೈಲ್ವಾನ್, ಅಂಥ ಆನೆಯಂಥ ಪೈಲ್ವಾನ್‌ಗೆ ಅಂಗಾತ ಮಾಡಿಬಿಟ್ಟನಲ್ಲ !
೧೨೯. ಅಂಗಾಲಲ್ಲಿ ಚಕ್ರವಿರು = ನಿಂತಕಡೆ ನಿಲ್ಲದಿರು, ಸದಾ ಸಂಚಾರಿಯಾಗಿರು.
ಈ ನುಡಿಗಟ್ಟು ಹಸ್ತಸಾಮುದ್ರಿಕ ಮೂಲದ್ದು. ಅಂಗಾಲಲ್ಲಿ ಚಕ್ರವಿದ್ದರೆ ಇದ್ದಕಡೆ ಇರದೆ ಸದಾ ಸಂಚಾರಿಯಾಗಿರುತ್ತಾರೆ ಎಂಬ ನಂಬಿಕೆ ಮೂಲದ್ದು.
ಪ್ರ : ಈ ಊರಾಗೆ ಊಟ ಮಾಡಿದರೆ ಮುಂದ್ಲೂರಾಗೆ ನೀರು ಕುಡೀತೀಯ, ನಿಜವಾಗಲೂ ನಿನ್ನ ಕಾಲಲ್ಲಿ ಚಕ್ರವಿರಬೇಕು.
೧೩೦. ಅಂಗಾಲು ಹಪ್ಪಳ ಹೊಡಿ = ಅಂಗಾಲು ಬೊಬ್ಬೆ ಏಳು, ಬಿರುಬಿಸಿಲಿನಿಂದ ನೆಲ ಕಾದ ಕಾವಲಿಯಂತಿರು
(ಹಪ್ಪಳ < ಹೆಪ್ಪಳೆ = ಬೊ‌ಬ್ಬೆ)
ಪ್ರ : ಎಂಥ ರಣಬಿಸಿಲು ಅಂದ್ರೆ, ನನ್ನ ಅಂಗಾಲು ಹಪ್ಪಳ ಹೊಡೆದವು, ಬಾಯ್ದಂಬುಲ ಹುಡಿಯಾಯ್ತು
೧೩೧. ಅಂಗಲಾಚು = ಬೇಡಿಕೊಳ್ಳು, ದಮ್ಮಯ್ಯಗುಡ್ಡ ಸಾಕು.
(ಅಂಗಲಾಚು < ಅಂಗಾಲು + ಅರ್ಚಿಸು = ಕಾಲಿಡಿದು ಬೇಡು)
ಪ್ರ : ಬಾಬಾ ಅಂತ ಅಂಗಲಾಚಿಬಿಟ್ಟೆ, ಬಂದಿದ್ರೆ ಕೇಳು
೧೩೨. ಅಂಗುದಾರಕೊಂದು ಪಿಂಗದಾಳಿ ಹಾಕು = ಮದುವೆ ಮಾಡಿಕೊಳ್ಳು, ಬಡತನದ ಕಾಟಾಚಾರದ ಮದುವೆ ಮಾಡಿಕೊಳ್ಳು.
(ಅಂಗುದಾರ = ಅರಿಶಿಣ ಹಚ್ಚಿದ ದಾರ, ಪಿಂಗದಾಳಿ < ಪಿಂಗು + ತಾಳಿ = ಹುಳ್ಳಿ ಸಿಬರಿನಂಥ ತಾಳಿ)
ಪ್ರ : ಅಂಗುದಾರಕೊಂದು ಪಿಂಗುದಾಳಿ ಹಾಕಿ ಮದುವೆ ಮಾಡಿಕೊಂಡ್ರು, ಬಂದೋರ ಮುಂದೆ ಹಿಡಿಗರ ಹೇಳೋದು ನೋಡಿದರೆ ಈ ಊರಿಗಾಗಿ ಮಿಗ್ತದೆ.
೧೩೩. ಅಂಗೈ ಮುಂಗೈ ಮಾಡು, ಮುಂಗೈ ಅಂಗೈ ಮಾಡು = ಥಳುಕ ತಟವಟ ಮಾಡು, ವಂಚನೆ ಮಾಡು
ಪ್ರ : ಅವನ್ನ ನಂಬಿದೋರುಂಟು, ಅಂಗೈ ಮುಂಗೈ ಮಾಡ್ತಾನೆ, ಮುಂಗೈ ಅಂಗೈ ಮಾಡ್ತಾನೆ.
೧೩೪. ಅಂಗೈಲಿ ಜೀವ ಹಿಡಕೊಂಡಿರು = ತುಂಬ ಭಯ ಕಾತರಗಳಿಂದ ಕಾದಿರು, ಸಾವಿನೊಡನೆ ಸೆಣೆಸಾಡು
ಜೀವ (ಉಸಿರು) ದೇಹದಿಂದ ಹಾರಿ ಹೋಗುವಾಗ, ಅದನ್ನು ಕೈಯಲ್ಲಿ ಹಿಡಿದು, ಸಾವಿನೊಡನೆ ಸೆಣಸುತ್ತಿದ್ದ ಎಂಬ ಈ ಅಭಿವ್ಯಕ್ತಿ ನಮ್ಮ ಜನಪದರ ಕಾವ್ಯ ಶಕ್ತಿಗೆ ಕೈಗನ್ನಡಿ ಇದ್ದಂತಿದೆ.
ಪ್ರ : ಮಗನ ಮುಖ ನೋಡಬೇಕೂಂತ ಅಂಗೈಲಿ ಜೀವ ಹಿಡ್ಕೊಂಡು ಕಾದಿದ್ದ, ಮಾರಾಯ.
೧೩೫. ಅಂಚುಗಟ್ಟು = ಕರೆ ಕಟ್ಟು
ಕಂಬಳಿ, ಶಾಲುಗಳ ಅಂಚಿನಲ್ಲಿ ಎಳೆಗಳು ಬಿಟ್ಟುಕೊಳ್ಳದ ಹಾಗೆ ಕಲಾತ್ಮಕವಾಗಿ ಕರೆಕಟ್ಟುವ ಕುಶಲಕಲೆಯನ್ನು ಈ ನುಡಿಗಟ್ಟು ಸೂಚಿಸುತ್ತದೆ. ಹಾಲುಮತ ಕುರುಬರಲ್ಲಿ ಕಂಬಳಿಗೆ ಕರೆ ಕಟ್ಟುವ ವೃತ್ತಿಯ ಮನೆತನಕ್ಕೆ ‘ಕರೆಗಾರರು’ ಎಂಬ ಹೆಸರಿದೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಕರೆಗಾರ ಎಂಬ ಹೆಸರುಳ್ಳವರು ಸಿಕ್ಕುತ್ತಾರೆ.
ಪ್ರ : ಗಾದೆ – ಕಂಬಳಿಗೆ ಅಂಚುಗಟ್ಟಬೇಕು ಬಾಣಂತಿಗೆ ನಡುಗಟ್ಟಬೇಕು
೧೩೬. ಅಂಟ ಅಂಟಿಗೆ ಗಂಟ ಬೀಳು = ಜಿಪುಣ ಜಿಪುಣಿಯರಿಗೆ ಮದುವೆಯಾಗು.
(ಅಂಟು = ಗೋಂದು ; ಅಂಟ = ಗೋಂದಿನಂಥ ಪ್ರವೃತ್ತಿಯ ಜಿಪುಣ ; ಅಂಟಿ = ಜಿಪುಣಿ ; ಗಂಟು = ಬ್ರಹ್ಮಗಂಟು)
ಪ್ರ : ಗಾದೆ – ಅಂಟ ಅಂಟಿಗೆ ಗಂಟು ಬೀಳ್ತು ಹೊಟ್ಟೆ ಬೆನ್ನಿಗೆ ಅಂಟಿಕೊಳ್ತು
೧೩೭. ಅಂಟಿಸು = ಹಚ್ಚು, ಹೊತ್ತಿಸು
ಪ್ರ : ಸಂಜೆಯಾಯ್ತು, ದೀಪ ಅಂಟಿಸು
೧೩೮. ಅಂಟುಪುರಲೆ ನಂಟಾಗು = ಬೆನ್ನು ಹತ್ತುವವರ ಸಂಗವಾಗು
(ಅಂಟುಪುರಲೆ = ಮುಳ್ಳುಳ್ಳ ಕಾಯಿಗಳು ಬಟ್ಟೆಗಳಿಗೆ ಅಂಟಿಕೊಳ್ಳುವ ಸಸ್ಯಜಾತಿ)
ಪ್ರ : ಇದ್ದೂ ಇದ್ದೂ ಇಂಥ ಅಂಟುಪುರಲೆ ನಂಟು ನನಗೆ ಗಂಟು ಬಿತ್ತಲ್ಲ
೧೩೯. ಅಂಟು ಮುಂಟಾಗು = ಮೈಲಿಗೆಯಾಗು, ವ್ರತಕ್ಕೆ ಭಂಗವುಂಟಾಗು
ಪ್ರ : ಹಾರುವತಿ ಅಂಟು ಮುಂಟಾಗಿಬಿಡ್ತು ಅಂತ ಹಾರಾಡ್ತಾಳೆ.
೧೪೦. ಅಂಟು ಹಾಕು = ಗಂಟು ಹಾಕು, ಇನ್ನೊಬ್ಬರ ಜವಾಬ್ದಾರಿ ವಹಿಸು
ಪ್ರ : ನೆಂಟಸ್ತನ ಹೇಳ್ಕೊಂಡು ಈ ತಂಟೇನ ನನಗೆ ಅಂಟು ಹಾಕಿದ್ರಲ್ಲ.
೧೪೧. ಅಂಟು ಹಾಕು = ಸಸಿ ನೆಡು, ಬಳ್ಳಿ ನೆಡು
(ಅಂಟು = ಸಸಿ, ಬಳ್ಳಿ)
ಪ್ರ : ಮಲ್ಲಿಗೆ ಅಂಟು ಹಾಕಿದರೆ ಮನೆಗೆಲ್ಲ ಹೂವಿನ ಕಂಪು.
೧೪೨. ಅಂಡೂರು = ಕೂತುಕೊಳ್ಳು, ವಿಶ್ರಮಿಸಿಕೊಳ್ಳು.
(ಅಂಡೂರು < ಅಂಡು + ಊರು = ಕುಂಡಿಯೂರು)
ಪ್ರ : ಎದ್ದಾಗಲಿಂದ ಅರಗಳಿಗೆ ಅಂಡೂರದೆ ದುಡೀತಿದ್ರೂ ಈ ಮನೇಲಿ ಎಲ್ರೂ ಒಂದಲ್ಲ ಒಂದು ಅನ್ನೋರೆ, ಆಡೋರೆ.
೧೪೩. ಅಂಡೆತ್ತು = ಹೊರಡು, ಜಾಗಬಿಡು.
(ಅಂಡು = ಕುಂಡಿ, ಮುಕುಳಿ)
ಪ್ರ : ಮೊದಲು ನೀನಿಲ್ಲಿಂದ ಅಂಡೆತ್ತು.
೧೪೪. ಅಂತರಪಿಶಾಚಿಯಾಗು = ಯಾವ ದಡವೂ ಇಲ್ಲದಂತಾಗು, ಎರಡೂ ಕಡೆ ವಂಚಿತವಾಗು.
(ಅಂತರ = ಒಳಗೆ, ಆಕಾಶ) ಶವಸಂಸ್ಕಾರ ಮಾಡದಿದ್ದರೆ ಆತ್ಮ ತನ್ನ ನೆಲೆಯನ್ನು ಸೇರದೆ ಮಧ್ಯಂತರದಲ್ಲಿ ಪರದಾಡುತ್ತದೆ ಎಂಬ ನಂಬಿಕೆ ಈ ನುಡಿಗಟ್ಟಿಗೆ ಮೂಲ.
ಪ್ರ : ಆ ಹೆಣ್ಣು ಅತ್ತ ತೌರು ಮನೆಯ ಆಸರೆಯೂ ಇಲ್ಲದೆ, ಇತ್ತ ಗಂಡನ ಮನೆಯ ಆಸರೆಯೂ ಇಲ್ಲದೆ ಅಂತರಪಿಶಾಚಿಯಾಗಿದ್ದಾಳೆ.
೧೪೫. ಅಂತರಾಟವಾಗು = ಆಧಾರತಪ್ಪು, ಗಾಳಿಯಲ್ಲಿ ತೇಲು, ಅಭದ್ರ ಸ್ಥಿತಿ ಉಂಟಾಗು (ಅಂತರ = ಆಕಾಶ, space)
ಪ್ರ : ಗಾದೆ-ಎಂಥೆಂಥ ದೇವರಿಗೋ ಅಂತರಾಟವಾಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವ?
೧೪೬. ಅಂತರ್ಲಾಗ ಹಾಕು = ಬಗೆಬಗೆಯಾಗಿ ಪ್ರಯತ್ನಿಸು, ತರಾವರಿ ಕಸರತ್ತು ಮಾಡು
(ಅಂತರ್ಲಾಗ = ನೆಲಬಿಟ್ಟು ಮಧ್ಯೆ ಒಂದಾದ ಮೇಲೊಂದು ಪಲ್ಟಿ ಹೊಡಿ ; ಲಾಗ = ಪಲ್ಟಿ)
ಪ್ರ : ಇವನೇನೇ ಅಂತರ್ಲಾಗ ಹಾಕಿದರೂ, ಅವನು ಹರಿಶಿವಾ ಅನ್ನಲಿಲ್ಲ.
೧೪೭. ಅಂದಗೆಟ್ಟ ಮಾತಾಡು = ಕೆಟ್ಟ ಮಾತಾಡು, ಅನುಚಿತ ಮಾತಾಡು
(ಅಂದಗೆಟ್ಟ.. < ಅಂದ + ಕೆಟ್ಟ = ಚೆಂದಗೆಟ್ಟ, ಚೆಂದವಿರದ)
ಪ್ರ : ಅಂದಗೆಟ್ಟ ಮಾತಿಗೆ ನೊಂದು ಕಣ್ಣೀರು ಸುರಿಸಿದ್ಲೇ ಹೊರ್ತು ತುಟಿ ಎರಡು ಮಾಡಲಿಲ್ಲ.
೧೪೮. ಅಂದಗೆಟ್ಟು ಹೋಗು = ಹಾಳಾಗು, ಕೆಟ್ಟನಡತೆಗೆ ಬೀಳು
(ಅಂದಗೆಡು = ಚೆಂದಗೆಡು)
ಪ್ರ : ಇತ್ತೀಚೆಗಂತೂ ಇದ್ದೊಬ್ಬ ಮಗನೂ ಅಂದಗೆಟ್ಟು ಹೋದ.
೧೪೯. ಅಂದನ್ನಿಸಿಕೊಳ್ಳು = ಬೇರೆಯವರನ್ನು ಬೈದು ಅವರಿಂದ ಬೈಸಿಕೊಳ್ಳು.
(ಅಂದು = ದೂಷಿಸಿ, ಬೈದು, ಅನ್ನಿಸಿಕೊಳ್ಳು = ದೂಷಿಸಿಕೊಳ್ಳು, ಬೈಸಿಕೊಳ್ಳು)
ಪ್ರ : ಒಬ್ಬರನ್ನು ಅಂದು ಅನ್ನಿಸಿಕೊಳ್ಳೋ ಬದಲು ಬಾಯ್ಮುಚ್ಕೊಂಡು ಸುಮ್ನಿದ್ದರಾಗದ?
೧೫೦. ಅಂದರೆ ಅನ್ನಲಿ ಬಿಡು = ಬೈದರೆ ಬಯ್ಯಲಿ ಬಿಡು, ಹೇಳಿದರೆ ಹೇಳಲಿ ಬಿಡು
(ಅಂದರೆ = ಬೈದರೆ, ಅನ್ನಲಿ = ಬೈಯಲಿ)
ಪ್ರ : ಅಂದರೆ ಅನ್ನಲಿ ಬಿಡು, ಅಂದು ಅವರು ದೊಡ್ಡೋರಾಗಲಿ
೧೫೧. ಅಂದವರಿಯದಿರು = ಸ್ಪಷ್ಟವಾಗದಿರು, ಏನು ಮಾಡಬೇಕೆಂದು ತೋಚದಿರು.
(ಅಂದ = ರೀತಿ, ಮಾರ್ಗ)
ಪ್ರ : ಸಮಸ್ಯೆ ಅಂದವರಿಯದಿರುವಾಗ ನಾವು ಮುಂದುವರಿಯೋದು ತರವಲ್ಲ.
೧೫೨. ಅಂಬಲಿಯೋ ತುಂಬೆಸೊಪ್ಪೋ ತಿನ್ನು = ಬಡತನದ ಬಾಳುವೆ ನಡೆಸು, ಕಷ್ಟಪಡು.
ಪ್ರ :ಅಂಬಲಿಯೊ ತುಂಬೆಸೊಪ್ಪೋ, ಕಾರೆಕಾಯಿ ನೀರು ಮಜ್ಜಿಗೆಯೋ ತಿಂದುಕುಡಿದು ಹಾಲು ಹಾಕಿದೆವೇ ಹೊರ್ತು ಒಬ್ಬರ ಮನೆ ಬಾಗಿಲಿಗೆ ನಾವು ಹೋಗಲಿಲ್ಲ.
೧೫೩. ಅಂಬೆಗಾಲಿಕ್ಕುತ್ತಿರು = ಕಲಿಯುತ್ತಿರು, ಕಲಿಕೆ ಹೊಸದಾಗಿರು.
(ಅಂಬೆಗಾಲಿಕ್ಕು = ಮಂಡಿ ಮತ್ತು ಅಂಗೈಗಳನ್ನೂರಿ ತೆವಳು. ಮಕ್ಕಳು ಕಾಲ ಮೇಲೆ ನಿಂತು ನಡೆಯುವುದಕ್ಕಿಂತ ಮುಂಚಿನ ಹಂತ)
ಪ್ರ : ನಾನು ಈ ಕೆಲಸದಲ್ಲಿ ಇನ್ನೂ ನುರಿತಿಲ್ಲ, ಈಗ ತಾನೇ ಅಂಬೆಗಾಲಿಕ್ತಾ ಇದ್ದೀನಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ