ನನ್ನ ಪುಟಗಳು

05 ಅಕ್ಟೋಬರ್ 2015

೫) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೧)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಅ೧)

೧. ಅಕ್ಕಲಾಯವಾಗಿ ಸಿಕ್ಕು = ಪುಗಸಟ್ಟೆ ಸಿಕ್ಕು, ಬಿಟ್ಟಿ ಸಿಕ್ಕು
(ಅಕ್ಕಲಾಯವಾಗಿ < ಹಕ್ಕಲು + ಆಯುವಾಗ ) ಹಕ್ಕಲು ಎಂದರೆ ಕೆಳಕ್ಕೆ ಬಿದ್ದ ತೆನೆ, ಕಾಳು, ಕಾಯಿ ಇತ್ಯಾದಿ. ಬೆಳೆಯ ಕೊಯ್ಲು ಆದ ಮೇಲೆ ಕೆಳಗೆ ಬಿದ್ದಿರುವ ತೆನೆ, ಕಾಳು, ಕಾಯಿಗಳನ್ನು ಬಡಬಗ್ಗರು ಆದುಕೊಳ್ಳುತ್ತಾರೆ. ಅದಕ್ಕೆ ಯಾರದೇ ಅಡ್ಡಿ ಆತಂಕಗಳಿಲ್ಲ ; ದುಡ್ಡು ಕಾಸುಗಳಿಲ್ಲ. ಹಾಗೆ ಸುಲಭವಾಗಿ ದೊರಕಿದ್ದು ಎಂಬ ಭಾವ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ಅಕ್ಕಲಾಯವಾಗಿ ಸಿಕ್ಕಿದ್ರೆ ಅಕ್ಕನಿಗೆ ಸಡಗರವೋ ಸಡಗರ
೨. ಅಕ್ಕತಂಗಿಯೋರ ಹಣ್ಣಿನಂತಿರು = ಕೆಂಪಗಿರು
(ಅಕ್ಕತಂಗಿಯೋರ ಹಣ್ಣು = ಪರಂಗಿ ಹಣ್ಣು)
ಪ್ರ : ಗಂಡು ನೇರಳೆ ಹಣ್ಣಿದ್ದಂಗಿದ್ರೆ, ಹೆಣ್ಣು ಅಕ್ಕತಂಗಿಯೋರ ಹಣ್ಣಿದ್ದಂಗವಳೆ.
೩. ಅಕ್ಕಲಿಲ್ಲದೆ ಒಕ್ಕಲು ಹೋಗು = ಬುದ್ಧಿ ಇಲ್ಲದೆ ವಲಸೆ ಹೋಗು
(ಅಕ್ಕಲು < ಅಕಲ್ (ಉ) = ಬುದ್ಧಿ)
ಪ್ರ : ಅಕ್ಕಲಿಲ್ಲದೆ ಒಕ್ಕಲು ಹೋಗಿ ಪಡಬಾರದ ಕಷ್ಟ ಪಟ್ಟರು.
೪. ಅಕ್ಕಳಿಸು ಬರು = ಸಂಭೋಗಿಸು ಬರು.
(ಅಕ್ಕಳಿಸು < ಅಕ್ಕುಳಿಸಿ = ಹೊಟ್ಟೆ ಕುಗ್ಗು ಹಿಡಿಯುವಂತೆಸಗಿ)
ಪ್ರ: ದುಕ್ಕಳಿಸಿದರೂ ಬಿಡಲಿಲ್ಲ, ಬಿಕ್ಕಳಿಸಿದರೂ ಬಿಡಲಿಲ್ಲ, ಅಕ್ಕಳಿಸಿ ಬಂದ ಅಡ್ನಾಡಿ
೫. ಅಖಾಡಕ್ಕಿಳಿ = ವಾದಕ್ಕಿಳಿ, ಹೊಡೆದಾಟಕ್ಕಿಳಿ.
(ಅಖಾಡ = ಕುಸ್ತಿ ಮಾಡುವ ಕೆಮ್ಮಣ್ಣಿನ ಮಟ್ಟಿ)
ಪ್ರ: ಅಖಾಡಕ್ಕಿಳಿಯೋಕೆ ಮುಖವಾಡ ಏಕೆ?
೬. ಅಗಣಿಗೂಟ ಜಡಿ = ಅಡ್ಡಿ ಮಾಡು, ದ್ರೋಹವೆಸಗು
(ಅಗಣಿ < ಅಗಳಿ < ಅಗುಳಿ < ಅರ್ಗುಳಿ < ಅರ್ಗಲ = Bolt)
ಪ್ರ: ಅಯ್ಯೋ ಪಾಪ ಅಂತ ಸಹಾಯ ಮಾಡಿದ ನನಗೇ ಅಗುಣಿಗೂಟ ಜಡಿದ.
೭. ಅಗಲಿಸಿದಾಗ ತಗುಲಿಸು = ಅಗಲಿಗಿಟ್ಟಾಗ ಉಣ್ಣು, ಸಮ್ಮತಿಸಿದಾಗ ಸಂಭೋಗಿಸು
(ತಗುಲಿಸು < ತಗುಳ್ಚು = ಮಾಡು;ಮುಟ್ಟಿಸು. ಅಗಲು = ಊಟದ ತಟ್ಟೆ, , ಅಗಲಿಸಿದಾಗ = ಊಟಕ್ಕಿಟ್ಟಾಗ.)
೮. ಅಗಳೊಂದ್ಕಡೆ ಗಂಜಿಯೊಂದ್ಕಡೆ ಆಗು = ಸಲೀಸಾಗಿ ಹೆರಿಗೆಯಾಗು, ಮಗು ಬಾಣಂತಿ ಬೇರೆಯಾಗು.
ಪ್ರ : ದೇವರು ಸಲೀಸಾಗಿ ಅಗುಳೊಂದ್ಕಡೆ ಗಂಜಿ ಒಂದ್ಕಡೆ ಮಾಡಿಬಿಟ್ರೆ ಅಷ್ಟೇ ಸಾಕು.
೯. ಅಗ್ಗಾರು ಹತ್ತು = ಬಾಯೊಣಗು, ಎದಯೊಣಗು
(ಅಗ್ಗಾರು < ಅಕ್ಕಾರು < ಅಕ್ಕ + ಆರು; ಅಕ್ಕ = ವಕ್ಷ, ಆರು = ಒಣಗು)
ಪ್ರ : ದನ ಅಗ್ಗಾರು ಹತ್ತಿ ಬೆಳೋ ಅಂತವೆ, ನೀರು ಕುಡಿಸಬಾರ್ದ?
೧೦. ಅಗಿದರೆ ಸವೆಯದಿರು ನುಂಗಿದರೆ ಇಳಿಯದಿರು = ಯಾವುದಕ್ಕೂ ಬಗ್ಗದಿರು, ಲೋಭಿಯಾಗಿರು.
ಪ್ರ: ಅವನ್ನ ಬಿಡಪ್ಪ, ಆಗಿದರೆ ಸವೆಯ, ನುಂಗಿದರೆ ಇಳಿಯ.
೧೧. ಅಜ್ಜನ ಕಾಲದ್ದು ಹೇಳದಿರು = ಪುರಾಣ ಹೇಳದಿರು, ಅಪ್ರಸ್ತುತವಾದದ್ದನ್ನು ಹೇಳದಿರು
ಪ್ರ : ಅಜ್ಜನ ಕಾಲದ್ದು ಹೇಳಿದರೆ ಇಲ್ಲಿ ಯಾರೂ ಕೇಳೋರಿಲ್ಲ.
೧೨. ಅಜ್ಜಿಗೆ ಕೆಮ್ಮು ಕಲಿಸು = ಅನುಭವಿಗೆ ತಿಳಿ ಹೇಳುವ ಅವಿವೇಕ ಮಾಡು
ಪ್ರ : ಗಾದೆ – ಮೊಮ್ಮಗಳು ಅಜ್ಜಿಗೆ ಕೆಮ್ಮು ಕಲಿಸಬೇಕ?
೧೩. ಅಜ್ಜಿ ಮಂಚ ತಲೆಕೆಳಗಾಗು = ಬೆಳಗಿನ ಜಾವವಾಗು
(ಅಜ್ಜಿ ಮಂಚ = ಸಪ್ತರ್ಷಿ ಮಂಡಲ)
ಪ್ರ : ಅಜ್ಜಿ ಮಂಚ ತಲೆಕೆಳಗಾದರೂ ಇನ್ನು ಮಲಗೇ ಇದ್ದೀಯಲ್ಲ, ನಾವು ಅಲ್ಲಿಗೆ ಹೋಗಿ ಸೇರೋದು ಯಾವಾಗ ?
೧೪. ಅಟಕಾವು ಮಾಡು = ಅಡ್ಡಿಪಡಿಸು, ತಡೆಗಟ್ಟು
(ಅಟಕಾವು < ಹಟಾವೊ (ಹಿಂ) ?)
ಪ್ರ: ಹೊಲ ಉಳಬೇಡ ಅಂತ ಬಂದು ಅಟಕಾವು ಮಾಡಿದರು.
೧೫. ಅಟ್ಟಕ್ಕೇರಿಸು = ಉಬ್ಬಿಸು, ತಲೆ ಮೇಲೆ ಹೊತ್ಕೊಂಡು ಮೆರೆಸು.
ಪ್ರ : ಒಬ್ಬ ಮಗ ಅಂತ ಅಟ್ಟಕ್ಕೇರಿಸಿ ಕೂಡಿಸ್ಯವರೆ.
೧೬. ಅಟ್ಟಕ್ಕೊಂದು ಕಾಲು ಬೆಟ್ಟಕ್ಕೊಂದು ಕಾಲು ಹಾಕು = ಆತುರಾತುರವಾಗಿ ವರ್ತಿಸು, ತರಾತುರಿಯಲ್ಲಿರು.
ಪ್ರ : ಹಿಂಗೆ ಅಟ್ಟಕ್ಕೊಂದು ಕಾಲು ಬೆಟ್ಟಕ್ಕೊಂದು ಕಾಲು ಹಾಕಿದರೆ ನೀನು ಯಾವುದನ್ನೂ ಪೂರ್ಣ ಮಾಡುವುದಿಲ್ಲ.
೧೭. ಅಟ್ಟಾಡಿಸು = ಓಡಾಡಿಸು, ಸಂಭೋಗಿಸಲು ಪ್ರಯತ್ನಿಸು
(ಪಶು ಪಕ್ಷಿಗಳು ಸಂಭೋಗಿಸಲು ಓಡಾಡಿಸುತ್ತವೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ)
ಪ್ರ : ಮಧ್ಯಾಹ್ನ ಹೋರಿ ಕಡಸನ್ನು ಅಟ್ಟಾಡಿಸುತ್ತಿತ್ತು.
೧೮. ಅಟ್ಟಿಕ್ಕಿದೋರಿಗಿಂತ ಬೊಟ್ಟಿಕ್ಕಿದೋರು ಹೆಚ್ಚಾಗು = ನಡುಮುರಿದು ದುಡಿಯೋರಿಗಿಂತ ನಾಟಕ ಆಡೋರು ಪ್ರಿಯವಾಗು.
(ಅಟ್ಟಿಕ್ಕು = ಅಡಿಗೆ ಮಾಡು ಬಡಿಸು ; ಬೊಟ್ಟಿಕ್ಕು = ಹಣೆಗೆ ಸಾದು (ತಿಲಕ) ಇಡು)
ಪ್ರ : ಕಟ್ಕೊಂಡೋಳಿಗಿಂತ ಇಟ್ಕೊಂಡೋಳೆ ಹೆಚ್ಚು, ಮೊದಲೇ ಗಾದೆ ಇಲ್ವ ‘ಅಟ್ಟಿಕ್ಕಿದೋಳಿಗಿಂತ ಬೊಟ್ಟಿಕ್ಕಿದೋಳು ಹೆಚ್ಚು’ ಅಂತ ?
೧೯. ಅಟ್ಲು ಮಾಡು = ಕೆಸರು ಮಾಡು
(ಅಟ್ಲು < ಹಡಲು = ಕೆಸರು, ರಾಡಿ)
ಪ್ರ : ಎತ್ತು ಗಂಜಳ ಹುಯ್ದು ನೆಲವನ್ನೆಲ್ಲ ಅಟ್ಲು ಮಾಡಿವೆ.
೨೦. ಅಡಕವಾಗಿರು = ಮಿತಿಯಲ್ಲಿರು, ಗಂಭೀರವಾಗಿರು
ಪ್ರ : ಅಡಕವಾಗಿದ್ರೆ ನಡುಕಪಡುವ ಸನ್ನಿವೇಶ ಬರಲ್ಲ.
೨೧. ಅಡಕೆಗೆ ಮಾನ ಹೋಗು = ಚಿಕ್ಕಾಸಿಗೆ ಗೌರವ ಹಾಳಾಗು
ಈಗಿನ ನಾಣ್ಯದಂತೆ ಹಿಂದೆ ಅಡಕೆ ವಿನಿಮಯ ಮಾಧ್ಯಮವಾಗಿರಬೇಕು. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು.
ಪ್ರ : ಗಾದೆ-ಅಡಕೆಗೆ ಹೋದ ಮಾನ ಆನೆ ಕೊಟ್ರೆ ತಾನೆ ಬತ್ತದ?
೨೨. ಅಡಕೆಗೆ ಕಡೆಯಾಗಿ ಕಾಣು = ಚಿಕ್ಕಾಸಿಗಿಂತ ಕೀಳಾಗಿ ಕಾಣು.
ಪ್ರ : ಕೆಟ್ಟು ಒಬ್ಬರ ಮನೆ ಬಾಗಿಲಿಗೆ ಹೋದರೆ ಅಡಕೆಗಿಂತ ಕಡೆಯಾಗಿ ಕಾಣ್ತಾರೆ.
೨೩. ಅಡಕೆಲೆ ಹಾಕ್ಕೊಂಡು ಉಗಿ = ಅವಮಾನ ಮಾಡು, ಬಯ್ಯಿ
(ಅಡಕೆಲೆ < ಅಡಕೆ + ಎಲೆ = ತಾಂಬೂಲ )
ಪ್ರ : ಅವನ ಮಕ್ಕೆ ಹಂಗೆ ಉಗಿದರೆ ಸಾಲದು, ಅಡಕೆಲೆ ಹಾಕ್ಕೊಂಡು ಉಗೀಬೇಕು.
೨೪. ಅಡಪಡ ಎನ್ನು = ಆವುಟ ಮಾಡು, ಸಿಟ್ಟುದೋರು, ಕೊಂಗ ಮಾತಾಡು
ಪ್ರ : ಅವನು ಅಡಪಡ ಅಂದು ಬಿಟ್ರೆ, ನಾವು ಗಡಗಡ ನಡುಗ್ತೀವಿ ಅಂದ್ಕೊಂಡಿದ್ದನೇನೋ ?
೨೫. ಅಡಗಲ್ಲಿನಂತಿರು = ಗಟ್ಟಿಮುಟ್ಟಾಗಿರು, ಕಟ್ಟುಮಸ್ತಾಗಿರು
(ಅಡಗಲ್ಲು < ಅಡಿಗಲ್ಲು = ಕಮ್ಮಾರ ಕಾದ ಕಬ್ಬಿಣವನ್ನು ಸುತ್ತಿಗೆಯಿಂದ ಚಚ್ಚಿ ಸಾಗು ಹುಯ್ಯಲು ಕೆಳಗೆ ಆಧಾರವಾಗಿ ಇಟ್ಟುಕೊಂಡಿರುವ ಕಬ್ಬಿಣದ ಅಚ್ಚು)
ಪ್ರ : ಅವನ ಹೆಂಡ್ರು ಒಳ್ಳೆ ಅಡಗಲ್ಲು ಇದ್ದಂಗವಳೆ, ಅವನು ಹಳ್ಳಕಡ್ಡಿ ಇದ್ದಂಗವನೆ.
೨೬. ಅಡವಾಗಿ ಸಿಕ್ಕು = ಕೈತುಂಬ ಸಿಕ್ಕು, ಸಮೃದ್ಧವಾಗಿ ಸಿಕ್ಕು
ಪ್ರ : ಅಡವಾಗಿ ಸಿಕ್ಕಿದ್ಲು ಅಂತ ಬಿಡುವು ಕೊಡದೆ ಹಟ್ಟು ಬಡಕಲ ನಾಯಾದ.
೨೭. ಅಡವು ಸಿಕ್ಕದಿರು = ಸಂದು ಸಿಕ್ಕದಿರು, ಅವಕಾಶ ಸಿಕ್ಕದಿರು.
ಪ್ರ : ಅಡವು ಸಿಕ್ಕಿದ್ರೆ ಅವನೆಲ್ಲಿರೋನು, ಒಡವೆ ಬಾಚ್ಕೊಂಡು ಪರಾರಿಯಾಗಿರೋನು.
೨೮. ಅಡ್ಡಗಟ್ಟೆ ಹಾಕು = ಅಡ್ಡಿಯುಂಟು ಮಾಡು, ತಡೆ ಮಾಡು
ಪ್ರ : ಸಮಸ್ಯೆ ಬಗೆಹರಿಸೋಣ ಅಂದ್ರೆ, ಸೋದರ ಮಾವ ಬರೋವರೆಗೂ ಸಾಧ್ಯವಿಲ್ಲ ಅಂತ ಅಡ್ಡಗಟ್ಟೆ ಹಾಕ್ಕೊಂಡು ಕೂತವ್ನೆ.
೨೯. ಅಡ್ಡಗೋಡೆ ಮೇಲೆ ದೀಪ ಇಡು = ಅನಿಶ್ಚಯದ ಮಾತಾಡು, ಈಕಡೆಯೋ ಆಕಡೆಯೋ ಎಂಬುದರ ಖಚಿತ ಸುಳಿವು ಕೊಡದಿರು
(ಅಡ್ಡಗೋಡೆ = ಅಡುಗೆ ಮನೆಗೂ ನಡುಮನೆಗೂ ಮಧ್ಯೆ ಇರುವ ಮೋಟುಗೋಡೆ. ಅದರ ಮೇಲೆ ದೀಪ ಇಟ್ಟರೆ ಬೆಳಕು ಎಡರೂ ಕಡೆಗೆ ಬೀಳುತ್ತದೆ. ಅದನ್ನು ಅಡುಗೆ ಮನೆ ದೀಪ ಎಂದೂ ಹೇಳುವಂತಿಲ್ಲ. ನಡುಮನೆಯ ದೀಪ ಎಂದು ಹೇಳುವಂತಿಲ್ಲ. ಎರಡೂ ಕಡೆಯವರು ನಮಗಾಗಿ ಈ ದೀಪ ಎಂದುಕೊಳ್ಳಬಹುದು. ಎರಡೂ ಕಡೆಗೂ ನಂಟು, ಕಂಟಿಗೆ ಆಸ್ಪದವಿಲ್ಲ)
ಪ್ರ : ಅಡ್ಡಗೋಡೆ ಮೇಲೆ ದೀಪ ಇಡೋರ್ನ ನಂಬಿ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ.
೩೦. ಅಡ್ಡದಾರಿಗಿಳಿ = ಕೆಟ್ಟನಡತೆಗಿಳಿ
ಪ್ರ : ಅಡ್ಡದಾಗಿರಿಳಿದೋರ್ನ ಹೆದ್ದಾರಿಗೆ ತರೋದೆ ತುಂಬ ಕಷ್ಟ.
೩೧. ಅಡ್ಡನಾಡಿ ಬುದ್ಧಿ ತೋರಿಸು = ಬೆರಕೆ ಬುದ್ಧಿಕ ತೋರಿಸು, ಹಾದರಕ್ಕೆ ಹುಟ್ಟಿದ ಬುದ್ಧಿ ತೋರಿಸು
(ಅಡ್ಡನಾಡಿ = ಬೆರಕೆ ತಳಿ (Cross breed) ನಾಡಿ = ರಕ್ತನಾಳ )
ಪ್ರ : ಕೊನೆಗೂ ಅಡ್ಡನಾಡಿ ಬುದ್ಧಿ ತೋರಿಸೇ ಬಿಟ್ಟ
೩೨. ಅಡ್ಡ ಬೀಳು = ದೀರ್ಘದಂಡ ನಮಸ್ಕಾರ ಮಾಡು.
ಪ್ರ : ಧೂಳಿನಲ್ಲೆ ಸ್ವಾಮಿಗಳಿಗೆ ಅಡ್ಡಬೀಳೋರ್ನ ಕಂಡ್ರೆ, ಮೈಯೆಲ್ಲ ಉರಿದು ಹೋಗ್ತದೆ.
೩೩. ಅಡ್ಡ ಮಾತು ತೆಗೆ = ವಿಷಯಾನಂತರ ಮಾಡು, ಮುಖ್ಯ ವಿಷಯವನ್ನು ಮರೆಮಾಜಲು ಯತ್ನಿಸು.
ಪ್ರ : ಇನ್ನು ನಿಜ ಹೇಳಬೇಕಾಗ್ತದೆ ಅಂತ ಅಡ್ಡ ಮಾತು ತೆಗೆದ.
೩೪. ಅಡ್ಡವಾಗು = ಮಲಗು, ವಿಶ್ರಾಂತಿ ಪಡೆ.
ಪ್ರ : ಆ ಕಡೆ ಸರಕೋ, ಕೊಂಚ ಹೊತ್ತು ಅಡ್ಡವಾಗ್ತೀನಿ
೩೫. ಅಡ್ಡ ಹಿಡಿ = ತಲೆ ಹಿಡುಕ ಕೆಲಸ ಮಾಡು
ಪ್ರ : ನಿನ್ನ ಹೆಂಡ್ರನ್ನ ಅಡ್ಡ ಹಿಡಿದು ದುಡ್ಡು ತಂದುಕೊಡೋ, ಇಲ್ಲಿ ಯಾರಿಗೆ ಹೇಳಿ?
೩೬. ಅಡಾಯದಿರು = ಹೊಂದಿಕೆಯಾಗದಿರು
(ಅಡ್ಡ + ಹಾಯು = ಪರಸ್ಪರ ಎದುರಾಗು )
ಪ್ರ : ಅತ್ತೆಗೂ ಸೊಸೆಗೂ ಅಡಾಯದೆ ನಿತ್ಯ ಲಡಾಯಿ ಇದ್ದೇ ಇರ್ತದೆ.
೩೭. ಅಡಾವುಡಿ ಮಾಡು = ಆವುಟ ಮಾಡು, ಗದ್ದಲ ಮಾಡು.
ಪ್ರ : ಅಡಾವುಡಿ ಮಾಡೋದರಿಂದಲೇ ಯಾರೂ ದೊಡ್ಡ ಮನುಷ್ಯರಾಗೋಕೆ ಆಗಲ್ಲ.
೩೮. ಅಡ್ಡಾಡಿಕೊಂಡು ಬರು = ತಿರುಗಾಡಿಕೊಂಡು ಬರು
ಪ್ರ : ಒಳಗೆ ಸುಮ್ಮನೆ ಕುಂತಿರೋದಕ್ಕೆ ಬದಲು ಹೊರಗೆ ಅಡ್ಡಾಡಿಕೊಂಡು ಬರ್ತೀನಿ.
೩೯. ಅಡ್ಡಾದಿಡ್ಡಿಗೆ ಹಾಕು = ತಾರುಬಾರು ಹಾಕು, ಅಸ್ತವ್ಯಸ್ತವಾಗಿ ಎಸೆ
(ಅಡ್ಡಾದಿಡ್ಡಿ < ಅಡ್ಡದಿಡ್ಡಿ < ಅಡ್ಡತಿಡ್ಡಿ = ಅಸ್ತವ್ಯಸ್ತ, ತಾರುಬಾರು)
ಪ್ರ : ಅಡ್ಡಾದಿಡ್ಡಿಗೆ ಸಾಮಾನು ಹಾಕಿದರೆ, ಮನೆ ಅಚ್ಚುಕಟ್ಟಾಗಿ ಕಾಣ್ತದ?
೪೦. ಅಡ್ಡಾದುಡ್ಡಿಗೆ ಮಾರು = ಕಡಮೆ ಬೆಲೆಗೆ ಮಾರು, ಅಗ್ಗದ ಬೆಲೆಗೆ ವಿಕ್ರಯಿಸು.
(ಅಡ್ಡ = ಎರಡು ಕಾಸು + ದುಡ್ಡು = ನಾಲ್ಕು ಕಾಸು; ನಾಲ್ಕು ಕಾಸು ಬಾಳುವುದನ್ನು ಅದರ ಅರ್ಧಕ್ಕೆ ಮಾರು ಎಂಬುದು ಇಂಗಿತಾರ್ಥ)
ಪ್ರ : ದರ್ದಿದ್ದದ್ದರಿಂದ ಅಡ್ಡಾದುಡ್ಡಿಗೆ ಮಾರಿಬಿಟ್ಟೆ.
೪೧. ಅಡ್ಡಾದುಡ್ಡಿಗೆ ಸೀಯು = ಅಗ್ಗವಾಗಿ ಮಾರು
(ಅಡ್ಡಾದುಡ್ಡು < ಅರ್ಧ ದುಡ್ಡು = ಎರಡು ಕಾಸು; ಸೀಯು = ಮಾರು, ಸುಡು)
ಪ್ರ : ಬೆಲೆ ಇಳಿದು ಹೋದದ್ದರಿಂದ ಅಡ್ಡಾದುಡ್ಡಿಗೆ ಸೀದು ಬಂದೆ.
೪೨. ಅಡ್ರಿಸಿಕೊಂಡು ಬರು = ಒತ್ತರಿಸಿಕೊಂಡು ಬರು, ಚಾಚಿಕೊಂಡು ಬರು
(ಅಡ್ರಿಸಿ < ಅಡರಿಸಿ = ಚಾಚಿ)
ಪ್ರ : ಇಡರಿಸಿ ಹಿಟ್ಟಿಕ್ಕಲಿ ಅಂತ ಅಡರಿಸಿಕೊಂಡು ಬಂದುಬಿಟ್ಲು.
೪೩. ಅಡುಟ್ಟನಂಗಾಡು = ಅಸಂಸ್ಕೃತನಾಗಿ ವರ್ತಿಸು
(ಅಡುಟ್ಟ < ಅಡಿ + ಹುಟ್ಟ = ಕೀಳು ಹುಟ್ಟಿನವನು)
ಪ್ರ : ಗಾದೆ – ಅಡುಟ್ಟನಿಗೆ ಪಾರುಪತ್ಯ ಕೊಟ್ಟಿದ್ಕೆ ಹೊಡೆಗದ್ದೆ ಕುಯ್ಸಿ ಮೆದೆ ಹಾಕಿಸಿದನಂತೆ
೪೪. ಅಡು ಬಾಡು ಸುಡು ಬಾಡು ತಿನ್ನು = ಮಾಂಸಲೋಭ ಅತಿಯಾಗಿರು.
(ಅಡು ಬಾಡು = ಬೇಯಿಸಿದ ಮಾಂಸ, ಸುಡುಬಾಡು = ಸುಟ್ಟ ಮಾಂಸ. ಬೇಯುವುದು ತಡವಾಗುತ್ತದೆಂದು ಒಂದೆರಡು ತುಂಡುಗಳನ್ನು ಕೆಂಡದ ಮೇಲೆ ಹಾಕಿ ಸುಟ್ಟು ತಿನ್ನುವ ಜಿಹ್ವಾಚಾಪಲ್ಯ)
ಪ್ರ : ಅಡು ಬಾಡು ಸುಡು ಬಾಡು ತಿಂದು ಒಳ್ಳೆ ಸೀದ ಹಂದಿ ಹಂಗವನೆ.
೪೫. ಅಡೂಳಿ ಕೊಡು = ಬಳುವಳಿ ಕೊಡು.
(ಅಡೂಳಿ < ಅಟ್ಟುಳಿ < ಅಟ್ಟುಂಬಳಿ = ಸೋಹು ಮೃಗ) ಮದುವೆ ಮಾಡಿ ಮಗಳನ್ನು ಗಂಡನ ಮನೆಗೆ ಕಳಿಸುವಾಗ ತಂದೆ ತಾಯಿಗಳು ಒಂದು ಹಸುವನ್ನೋ ಎಮ್ಮೆಯನ್ನೋ ಬಳುವಳಿಯಾಗಿ ಹೊಡೆದು ಕಳಿಸುವ ಪದ್ಧತಿ ಹಿಂದೆ ಹಳ್ಳಿಗಾಡಿನಲ್ಲಿತ್ತು. ಅದರ ಉದ್ದೇಶ ಮಗಳಿಗೆ ಮಕ್ಕಳಾದರೆ ಹಾಲುತುಪ್ಪಕ್ಕೆ ಅನಾನುಕೂಲವಾಗದಿರಲಿ ಎಂಬುದೇ ಆಗಿತ್ತು.
ಪ್ರ : ಅಡೂಳಿ ಹಸ ಕೊಟ್ಟಿಗೆಗೆ ಬಂದಿಲ್ಲ, ಹೊರಗೆ ಹೋಗಿ ನೋಡ್ಕೊಂಡು ಬನ್ನಿ.
೪೬. ಅಡೂಳಿ ಐರ್ದಾಳಿ ಮುಟ್ಟದಿರು=ಅವುಗಳನ್ನು ಮಾರದಿರು, ತಿಂದು ತೇಗದಿರು.
(ಅಡೂಳಿ = ಬಳುವಳಿ ಕೊಟ್ಟ ಹಸು ಅಥವಾ ಎಮ್ಮೆ ; ಐರ್ದಾಳಿ = ಐದೆ ತಾಳಿ) ಅಡೂಳಿ ಐರ್ದಾಳಿಯಷ್ಟೆ ಪವಿತ್ರ, ಎಷ್ಟೇ ಕಷ್ಟ ಬಂದರೂ ಐರ್ದಾಳಿಯನ್ನು ಹೇಗೆ ಮಾರುವುದಿಲ್ಲವೋ ಹಾಗೆಯೇ ಅಡೂಳಿಯನ್ನೂ ಮಾರಬಾರದು ಎಂಬುದು ಮುಖ್ಯ ಆಶಯ.
ಪ್ರ : ತಾಪತ್ರಯ ನಿವಾರಣೆಗೆಂದು ಅಡೂಳಿ ಐರ್ದಾಳಿ ಮುಟ್ಟೋಕೆ ಹೋಗಬಾರ್ದು.
೪೭. ಅಡೆ ಹತ್ತದಿರು ಮೇಲೆ ಸೀಯದಿರು = ತಲೆ ತಾಕದಿರು, ಕಷ್ಟ ಅರಿವಾಗದಿರು (ಅಡೆ < ಅಡಿ = ಕೆಳಗೆ, ಹತ್ತದಿರು = ಶಾಖ ತಟ್ಟದಿರು; ಸೀಯದಿರು = ಸುಡದಿರು)
ಪ್ರ : ಅಡೆ ಹತ್ತಿ ಮೇಲೆ ಸೀದಿದ್ರೆ ಅಣ್ಣನಿಗೆ ಗೊತ್ತಾಗೋದು ಸಂಸಾರದ ಕಷ್ಟ.
೪೮. ಅಡೆ ಹಾಕು = ಒತ್ತೆ ಹಾಕು, ಹಣ್ಣು ಮಾಡು.
ದೋರೆಗಾಯಿಗಳನ್ನು ಕಿತ್ತು ಶಾಖ ಬರುವಂತೆ ಹುಲ್ಲೊಳಗೆ ಮುಚ್ಚಿ ಹಣ್ಣು ಮಾಡುವ ವಿಧಾನ. ಉದಾಹರಣೆಗೆ ಮಾವಿನ ಹಣ್ಣು, ಬಾಳೆ ಹಣ್ಣು ಇತ್ಯಾದಿ.
ಪ್ರ : ಬಾಳೆಗೊನೆ ಕಿತ್ತು ಅಡೆ ಹಾಕಬೇಕಿತ್ತು, ಹಬ್ಬದ ಹೊತ್ತಿಗೆ ಹಣ್ಣಾಗುತ್ತಿದ್ದವು
೪೯. ಅಡ್ಡೆ ಹಾಕಿ ಹೊರು = ಸಮೃದ್ಧವಾಗಿರು, ಹೊರಲಾರದಂತಿರು
(ಅಡ್ಡೆ = ಭಾರ ಹೊರುವ ಸಾಧನ, ಬಿದಿರ ಬೊಂಬು)
ಪ್ರ : ಕೋಣನಂಥ ಹಂದೀನ ಹಿಂದಿಬ್ಬರು ಮುಂದಿಬ್ಬರು ಅಡ್ಡೆ ಹಾಕಿ ಹೊತ್ಕೊಂಡು ಬಂದೆವು.
೫೦. ಅಡ್ಡೇಟಿಗೊಂದು ಗುಡ್ಡೇಟು ಹಾಕು = ಬಂಜೆ ಹೊಡೆತವನ್ನು ಹೊಡಿ
(ಅಡ್ಡೇಟು=ಅರ್ಧ ಏಟು; ಗುಡ್ಡೇಟು < ಗೊಡ್ಡು+ಏಟು = ಬಂಜೆ ಹೊಡೆತ, ಹುಸಿ ಹೊಡೆತ)
ಪ್ರ : ಎದ್ದು ಹೋಗೋ ಮಾತು ಬಿದ್ದು ಹೋಗಲಿ ಅಂತ ಇವನೂ ಅಡ್ಡೇಟಿಗೊಂದು ಗುಡ್ಡೇಟು ಹಾಕಿದ.
೫೧. ಅಣಿ ಮಾಡು = ಸಿದ್ಧ ಮಾಡು, ಸಜ್ಜುಗೊಳಿಸು
ಪ್ರ: ಒಬ್ಬಳು ಅಡಿಗೇನೆಲ್ಲ ಅಣಿ ಮಾಡಿ ಬರೋಕೆ ತಡವಾಗಲ್ವ?
೫೨. ಅಣಿ ಹಾಕು = ಮಾತಿಗೆ ಮಾತು ಕೊಕ್ಕೆ ಹಾಕು, ಮಾತಿಗೆ ಮಾತು ಜೋಡಿಸು
(ಅಣಿ = ನೇಯ್ಗೆಯಲ್ಲಿ ಹಾಸು ಹೊಕ್ಕುಗಳ ಪರಸ್ಪರ ಜೋಡಣೆ)
ಪ್ರ : ಮಾತಿಗೆ ಮಾತು ಅಣಿ ಹಾಕೋದ್ರಲ್ಲಿ ಅವನ್ನ ಬಿಟ್ರೆ ಇನ್ನಿಲ್ಲ.
೫೩. ಅತ್ತಂಡವಾಗು = ಪರಸ್ಪರ ಡಿಕ್ಕಿ ಹೊಡಿ
(ಅತ್ತಂಡ < ಇತ್ತಂಡ < ಇರ್ತಂಡ < ಎರಡು + ತಂಡ)
ಪ್ರ : ಈ ಕಡೆಯಿಂದ ಇದು ಆ ಕಡೆಯಿಂದ ಅದು ಬಂದು ಅತ್ತಂಡವಾದವು.
೫೪. ಅತ್ತಲ ಕಡ್ಡಿ ತೆಗೆದು ಇತ್ತಿಕ್ಕದಿರು = ಏನೊಂದು ಕೆಲಸವನ್ನೂ ಮಾಡದಿರು.
(ಅತ್ತಲ = ಆ ಕಡೆಯ, ಇತ್ತ = ಈ ಕಡೆ)
ಪ್ರ : ಈ ಮನೇಲಿ ಯಾರೂ ಅತ್ತಲ ಕಡ್ಡಿ ತೆಗೆದು ಇತ್ತಿಕ್ಕಲ್ಲ, ನಾನೊಬ್ಬಳೇ ಎಷ್ಟು ಅಂತ ಮಾಡಲಿ?
೫೫. ಅತ್ತೊಂದು ಮುಖ ಇತ್ತೊಂದು ಮುಖವಾಗು = ವಿರಸವುಂಟಾಗು, ಒಡಕುಂಟಾಗು
ಪ್ರ : ಅವರು ಗಂಡ ಹೆಂಡ್ರು ಹುಟ್ಟ ? ಗಂಟು ಹಾಕ್ಕೊಂಡ ನಾಯಿಗಳ ಹಂಗೆ ಗಂಡನ ಮುಖ ಅತ್ತ, ಹೆಂಡ್ರು ಮುಖ ಇತ್ತ.
೫೬. ಅದರಾಟವಾಡು = ಹಾದರಗಿತ್ತಿಯಾಟವಾಡು
(ಅದರಾಟ < ಹದರ + ಆಟ < ಹಾದರ + ಆಟ)
ಪ್ರ : ಅವಳು ಅದರಾಟ ಆಡಿದರೂ ನನ್ನ ಹತ್ರ ಅವಳ ಬೇಳೆಕಾಳು ಬೇಯಲ್ಲ
೫೭. ಅದರಿ ಹತ್ತಿ = ಮೇಲೆ ಹತ್ತು, ಸಂಭೋಗಿಸು
(ಅದರಿ < ಹಾದರಿ < ಪಾದರಿ)
ಪ್ರ : ಹೋರಿ ಹಸುವಿನ ಮೇಲೆ ಅದರಿ ಹತ್ತಿತು.
೫೮. ಅದುರುಗುಂಡಿಗೆಯಿರು = ಪುಕ್ಕಲುತನವಿರು, ಭಯವಿರು, ಎದೆಗಾರನಲ್ಲದಿರು
(ಅದುರು = ನಡುಗು, ಗುಂಡಿಗೆ = ಎದೆ)
ಪ್ರ : ಅದುರುಗುಂಡಿಗೆ ಇದ್ದೋರು ಎದುರು ತಾಕಿ ಹೊಡೆದಾಟಕ್ಕಿಳಿದಾರ?
೫೯. ಅದುಮಿಕೊಂಡಿರು = ಬಾಯ್ಮುಚ್ಚಿಕೊಂಡಿರು, ಮೇಲೆ ಕೆಳಗೆ ಮುಚ್ಚಿಕೊಂಡಿರು
ಪ್ರ : ಅದುಮಿಕೊಂಡು ಸುಮ್ಮನೆ ಕುಂತಿದ್ರೆ ಗೆದ್ದೆ, ಇಲ್ಲದಿದ್ದರೆ ತದಕಬಿಡ್ತೀನಿ.
೬೦. ಅದ್ದುಕೊಳ್ಳು = ತೊಡಗು, ಮುಳುಗು
(ಅದ್ದು < ಅಳ್ದು = ಮುಳುಗು, ಮುಳುಗಿಸು)
ಪ್ರ : ಎದ್ದಾಗಲೇ ಅಡಿಗೆ ಕೆಲಸಕ್ಕೆ ಅದ್ದುಕೊಂಡರೂ ಮಧ್ಯಾಹ್ನವಾದರೂ ಮುಗೀಲಿಲ್ಲ.
೬೧. ಅಧ್ವಾನವಾಗು = ಹಾಳಾಗು, ಕೆಟ್ಟು ಹೋಗು
(ಧ್ವಾನ = ಸ್ವರ, ಅಧ್ವಾನ = ಅಪಸ್ವರ)
ಪ್ರ : ಕಷ್ಟ ಪಟ್ಟು ಕೂಡಿ ಹಾಕಿದ ಬದುಕು ಕೊನೆಗೆ ಅಧ್ವಾನವಾಗಿಬಿಡ್ತು
೬೨. ಅನ್ನ ಅನ್ನ ನೀರು ಅನ್ನಿಸಿಬಿಡು = ಯಮ ಹಿಂಸೆ ಕೊಡು, ಅನ್ನ ನೀರು ಕೊಡದೆ ಹಿಂಸಿಸು
ಪ್ರ: ಅನ್ನ ಅನ್ನ ನೀರು ನೀರು ಅನ್ನಿಸಿದಾಗಲೇ ಈ ಜನ ಮಾತು ಕೇಳೋದು.
೬೩. ಅನ್ನ ತಿನ್ನೋ ಬಾಯಲ್ಲಿ ಹೇಲು ತಿನ್ನು = ಸುಳ್ಳು ಹೇಳು, ತಪ್ಪು ಮಾತಾಡು
ಪ್ರ : ಅನ್ನ ತಿನ್ನೋ ಬಾಯಲ್ಲಿ ಹೇಲು ತಿಂದ್ರೆ ದೇವರು ಮೆಚ್ತಾನಾ?
೬೪. ಅನ್ನದ ಬಾಯಿಗೆ ಮಣ್ಣು ಹಾಕು = ಕೆಡಕು ಮಾಡು, ಜೀವನ ಮಾರ್ಗ ತಪ್ಪಿಸು
ಪ್ರ : ಕೊನೆಗೂ ನನ್ನ ಅನ್ನದ ಬಾಯಿಗೆ ಮಣ್ಣು ಹಾಕಿ ಬಿಟ್ಟ, ಮನೆಹಾಳ.
೬೫. ಅನಾದ್ರಿಯಾಗು = ಆಶ್ರಯವಿಹೀನವಾಗು, ಅನಾಥವಾಗು
(ಅನಾದ್ರಿ < ಅನ್ಯಾಧಾರಿ? = ಅನಾಥ, ನಿರ್ಗತಿಕ)
ಪ್ರ: ಅನಾದ್ರಿಯಾದ ಮೇಲೆ ಅನ್ನಕ್ಕೆ ಅಲೆಯೋದು ತಪ್ತದ?
೬೬. ಅನಾಯಕವಾಗು = ಹೇಳೋರು ಕೇಳೋರು ಇಲ್ಲದಂತಾಗು
ಪ್ರ : ಆ ಊರು ಅನಾಯಕವಾಗಿ ಅನಾಮತ್ತು ಹಾಳಾಯ್ತು
೬೭. ಅನ್ನಾನ್ನಗತಿಕನಾಗು = ನಿರ್ಗತಿಕನಾಗು, ಅನ್ಯರ ಅನ್ನಕ್ಕೆ ಕೈಯೊಡ್ಡುವಂತಾಗು
(ಅನ್ನಾನ್ನಗತಿಕ < ಅನ್ಯಾನ್ನಗತಿಕ = ಬೇರೆಯವರು ಹಾಕುವ ಅನ್ನವೇ ಗತಿಯಾದವನು)
ಪ್ರ : ಎಲ್ಲ ಕಳಕೊಂಡು ಅನ್ನಾನ್ನಗತಿಕನಾಗಿ ಊರೂರು ಅಲೆದೆ
೬೮. ಅನ್ನಾಯ ಅಪರದಂಡವಾಗು = ವ್ಯರ್ಥ ಖರ್ಚಾಗು
(ಅನ್ನಾಯ < ಅನ್ಯಾಯ ; ಅಪರದಂಡ = ಉತ್ತರಕ್ರಿಯೆಯ ಖರ್ಚು)
ಪ್ರ : ಅಪ್ಪ ದುಡಿದದ್ನೆಲ್ಲ ಮಗ ಅನ್ನಾಯ ಅಪರದಂಡ ಮಾಡಿದ.
೬೯. ಅನ್ರಾಸ ಕಾಣದವರಂಗೆ ಮುಕ್ಕು = ಅನ್ನದ ಮುಖ ಕಾಣದವರಂತೆ ಗಬಗಬನೆ ತಿನ್ನು
(ಅನ್ರಾಸ < ಅನ್ನರಸ ; ಮುಕ್ಕು < ಭುಕ್ = ತಿನ್ನು)
ಪ್ರ: ಆ ಜನ ಅನ್ರಾಸ ಕಾಣದವರಂಗೆ ಒಂದೇ ಸಮ ಮುಕ್ಕಿ ಹಾಕಿಬಿಟ್ರು.
೭೦. ಅನ್ನ ಹಾಕಿದ ಮನೆಗೆ ಕನ್ನ ಹಾಕು = ಉಪಕಾರ ಮಾಡಿದವರಿಗೆ ಅಪಕಾರ ಮಾಡು
(ಕನ್ನ ಹಾಕು = ಮನೆಗೆ ರಂದ್ರ ಕೊರೆದು ದೋಚು)
ಪ್ರ : ಅನ್ನ ಹಾಕಿದ ಮನೆಗೆ ಕನ್ನಹಾಕೋ ಜನಾನ ನಂಬಿದೋರುಂಟ ?
೭೧. ಅನುಗೆಡಿಸು = ಹದಗೆಡಿಸು, ಹಾಳು ಮಾಡು.
(ಅನುಗೆಡಿಸು < ಅನುವು + ಕೆಡಿಸು; ಅನುವು = ಹದ, ಸಾಮರಸ್ಯ)
ಪ್ರ: ಮನೆಯೋರು ಸುಮ್ನಿದ್ದರೂ ಮಧ್ಯದೋರು ಅನುಗೆಡಿಸಿಕ್ಕಿಬಿಟ್ರು
೭೨. ಅನುಮನಸು ಮಾಡು = ಸಂದೇಹಿಸು, ಡೋಲಾಯಮಾನ ಮನಸ್ಸು ಮಾಡು
(ಅನುಮನಸ್ಸು < ಅನ್ಯಮನಸ್ಸು = ಹಿಂದೇಟು ಹಾಕುವ ಮನಸ್ಸು)
ಪ್ರ : ಅವನ ಮುಖ ನೋಡಿದೇಟಿಗೇ ಅನುಮನಸು ಮಾಡಿದೆ, ನಂಬಕ್ಕಾಗಲ್ಲ ಅಂತ.
೭೩. ಅನುವು ಅನ್ನದಿರು ಆಪತ್ತು ಅನ್ನದಿರು = ಬೇಜವಾಬ್ದಾರಿಯಿಂದಿರು, ಕಷ್ಟ ಸುಖ ವಿಚಾರಿಸದಿರು
(ಅನುವು = ಸುಖ ಸಾಮರಸ್ಯ; ಆಪತ್ತು = ತೊಂದರೆ, ಗಂಡಾಂತರ)
ಪ್ರ : ಅನುವು ಅನ್ನಂಗಿಲ್ಲ ಆಪತ್ತು ಅನ್ನಂಗಿಲ್ಲ, ಖರ್ಚಿಗೆ ದುಡ್ಡು ಹಿರಿದಿರಿದು ಕೊಡಬೇಕು.
೭೪. ಅನ್ನು ಆಡು = ಹೀಯಾಳಿಸು, ಕೆಟ್ಟ ಮಾತಾಡು
(ಅನ್ನು ಆಡು = ಬಯ್ಯು)
ಪ್ರ : ಅವರು ನನ್ನನ್ನ ಒಂದಂದು ಒಂದಾಡಿ ಬಿಟ್ಟಿಲ್ಲ, ಅದನ್ನೆಲ್ಲ ನೆನಸಿಕೋಬಾರ್ದು
೭೫. ಅಪ್ಪಚ್ಚಿ ಮಾಡು = ದುಂಡಗಿದ್ದುದನ್ನು ಅರೆದಂತೆ ಚಪ್ಪಟೆ ಮಾಡು
(ಅಪ್ಪಚ್ಚಿ = ರೊಟ್ಟಿ)
ಪ್ರ : ಆ ದೊಂಬಿ ಜನ ಮುದಕನ್ನ ತುಳಿದು ಅಪ್ಪಚ್ಚಿ ಮಾಡಿಬಿಟ್ಟವರೆ
೭೬. ಅಪ್ಪನಿಗೆ ಹುಟ್ಟಿದ ಮಾತಾಡು = ಒಳ್ಳೆಯ ಮಾತಾಡು, ಅಡ್ನಾಡಿ ಮಾತಾಡದಿರು
ಪ್ರ: ಅಪ್ಪನಿಗೆ ಹುಟ್ಟಿದ ಮಾತಾಡಿದರೆ ಒಪ್ಕೋಬಹುದು.
೭೭. ಅಪ್ಪಂತೋನಾಗು = ಸಭ್ಯನಾಗು, ಕುಲೀನನಾಗು, ಸಂಭಾವಿತನಾಗು
ಪ್ರ : ಗಾದೆ – ಅಪ್ಪಂಥೋನಿಗೆ ಇಪ್ಪತ್ತೊಂದು ಕಾಯಿಲೆ
೭೮. ಅಪ್ಪಾರ ನೀಡು = ಹೆಚ್ಚಿಗೆ ಕೊಡು
(ಅಪ್ಪಾರ < ಅಪಾರ = ತೀರವಿಲ್ಲದಷ್ಟು; ಪಾರ = ತೀರ)
ಪ್ರ : ತನ್ನ ಮಕ್ಕಳಿಗೆ ಅಪ್ಪಾರ ಕೊಟ್ಟು ಸವತಿ ಮಕ್ಕಳಿಗೆ ಕಮ್ಮಿ ಕೊಟ್ರೆ ದೇವರು ಒಪ್ತಾನ?
೭೯. ಅಪ್ಪಾರ ತಿಂದು ಒಪ್ಪಾರ ಹಾಕು = ಅನ್ಯಾಯವಾಗಿ ತಿಂದದ್ದು ಮೈ ಹತ್ತದಿರು
(ಒಪ್ಪಾರ < ಒರ್‌+ಪಾರ = ಇಳಿಜಾರಾದ ಚಾವಣಿ, ಗುಡಿಸಲು)
ಪ್ರ : ಅಪ್ಪಾರ ತಿಂದು ತೇಗಿದೋನು ಒಪ್ಪಾರ ಹಾಕ್ಕೊಂಡು ಕಾಲ ಕಳೀತಾ ಅವನೆ.
೮೦. ಅಪ್ಪಾಳೆ ತಿಪ್ಪಾಳೆ ಆಡಿಸು = ಗರಗರನೆ ತಿರುಗಿಸು, ಚಿಟುಕುಮುಳ್ಳಾಡಿಸು, ಹಿಂಸಿಸು
(ಅಪ್ಪಾಳೆ ತಿಪ್ಪಾಳೆ = ಒಂದು ಜನಪದ ಕ್ರೀಡೆ) ಮಕ್ಕಳು ಎದುರು ಬದುರು ನಿಂತು, ಒಬ್ಬರ ಅಂಗೈ ಬೆರಳುಗಳಿಗೆ ಮತ್ತೊಬ್ಬರ ಅಂಗೈಬೆರಳುಗಳನ್ನು ಮಲಕು ಹಾಕಿಕೊಂಡು, ದೇಹವನ್ನು ಹಿಂದಕ್ಕೆ ತೋತು, ಇಬ್ಬರೂ ಗರಗರನೆ ತಿರುಗುವ ಆಟ. ಅಥವಾ ದೊಡ್ಡವರು ಸಣ್ಣ ಮಕ್ಕಳ ರೆಟ್ಟೆ ಹಿಡಿದು ಸುತ್ತಲೂ ಗರಗರನೆ ತಿರುಗಿಸುವ ಆಟ.
ಪ್ರ : ಅವನು ಇವತ್ತು ಸಿಕ್ಕಿದ, ಚೆನ್ನಾಗಿ ಚಪ್ಪಾಳೆ ಅಪ್ಪಾಳೆ ತಿಪ್ಪಾಳೆ ಆಡಿಸಿ, ಸಾಕಪ್ಪ ಇವನ ಸಾವಾಸ ಅನ್ನೋಂಗೆ ಮಾಡಿ ಬಂದಿದ್ದೀನಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ