ಸಾಮಾನ್ಯವಾಗಿ ನುಡಿಗಟ್ಟುಗಳಿಲ್ಲದ ಭಾಷೆಯಿಲ್ಲ. ನುಡಿಗಟ್ಟುಗಳನ್ನು ಬಳಸದ ಜನರಿಲ್ಲ.
 ಗಾಳಿ ಬೆಳಕಿನಂತೆ ಪ್ರಪಂಚದ ಎಲ್ಲ ಭಾಷೆಗಳಲ್ಲೂ ಸುಳಿದಾಡುವಂಥವು, ಕುಣಿದು 
ಕುಪ್ಪಳಿಸುವಂಥವು. ಭಾವವನ್ನು ಜಾರದಂತೆ ಉಡದ ಪಟ್ಟಿನಿಂದ ಹಿಡಿದಿಡುವ ಈ ನುಡಿಗಟ್ಟುಗಳು 
ಯಾವುದೇ ಭಾಷೆಯ ನಡುಕಟ್ಟುಗಳಿದ್ದ ಹಾಗೆ. ಹೆತ್ತುಕೊಂಡ ತುಪ್ಪದಂತೆ, ಗರಣೆಗೊಂಡ 
ಮೊಸರಿನಂತೆ ಘನೀ ಭೂತವಾದಂಥವು. ಕಿವಿಗೆ ಬಿದ್ದ ಕೂಡಲೇ ಮನಸ್ಸನ್ನು ಸೆರೆ ಹಿಡಿಯುವ 
ಸಂಮೋಹಕ ಶಕ್ತಿಯುಳ್ಳವಂಥವು; ವಿಚಾರವನ್ನು ಭಟ್ಟಿ ಇಳಿಸಿದ ರಸಘಟ್ಟಿಗಳು; ಚಿತ್ತಪಹಾರಿ 
ಸೂಜಿಗಲ್ಲುಗಳು. ಇಂಥ ನಡು ಗಟ್ಟಿಯಾದ ನುಡಿಗಟ್ಟುಗಳಿಂದ ಮಡುಗಟ್ಟಿರುವು ಭಾಷೆ 
ಸಿಂಬಳದಂತೆ ಲೋಳಿಲೋಳಿಯಾಗಿ ಜಾಳು ಜಾಳಾಗಿರುತ್ತದೆ; ಬಡ ಮರಿಯ ಬಾಡಿನಂತೆ ಜಾಬಲು (> 
ಜಬ್ಬಲು = ಜೌಗು ನೆಲ) ಜಾಬಲಾಗಿರುತ್ತದೆ ಎಂಬುದು ಸ್ವಯಂವೇದ್ಯ.
ಆಂಗ್ಲಭಾಷೆಯ ………… ಶಬ್ದಕ್ಕೆ ಸಂವಾದಿಯಾಗಿ ಕನ್ನಡದಲ್ಲಿರುವ ಶಬ್ದಗಳೆಂದರೆ 
ನುಡಿಗಟ್ಟು ಮತ್ತು ಪಡೆನುಡಿ. ನುಡಿ+ಕಟ್ಟು ನುಡಿಗಟ್ಟಾಗಿದೆ. ಕಟ್ಟು ಎಂಬುದಕ್ಕೆ 
ಹೊರೆಗಟ್ಟುವ ಹಗ್ಗ ಎಂಬ ಅರ್ಥವಿದೆ. ಅಂದರೆ ನುಡಿ ಸಡಿಲವಾಗದಂತೆ ಬಿಗಿಯಾಗಿ ಕಟ್ಟಿರುವ 
ಕಟ್ಟು (ಹಗ್ಗ) ಎಂದು ಅರ್ಥವಾಗುತ್ತದೆ. ಇನ್ನು ಪಡೆನುಡಿ ಎಂದರೆ ರೂಢಿಯ, ವಾಡಿಕೆಯ ಮಾತು
 ಎಂಬ ಅರ್ಥವಿದೆ. ಆದರೆ ಪಡೆ ಎನ್ನುವುದಕ್ಕೆ ಸೈನ್ಯ, ಸಮೂಹ ಎನ್ನುವ ಅರ್ಥ ಇರುವುದರಿಂದ 
ಪಡೆನುಡಿ ಎಂದರೆ ಸಾಮೂಹಿಕ ಸಂವಹನದ ಸಮರ್ಥ ನುಡಿ ಎಂದು ಅರ್ಥವಾಗುತ್ತದೆ. ಆದ್ದರಿಂದ 
ಪಡೆನುಡಿಗಳು ಅಥವಾ ನುಡಿಗಟ್ಟುಗಳು ಹತ್ತು ಸಮಸ್ತರ ಜೀವನಾನುಭವದ ಮೂಸೆಯಲ್ಲಿ ಮೂಡಿ ಬಂದ 
ಬಂಗಾರದ ತುಣುಕುಗಳು. ಜನಸಾಮಾನ್ಯರು ದಿನನಿತ್ಯದ ಮಾತುಕತೆಯಲ್ಲಿ ಬಳಸುವ ದಿನಗಟ್ಟಲೆ 
(ಸಾಮಾನ್ಯ) ಮಾತು ಎನ್ನಿಸಿದರೂ ಹೆಚ್ಚುಗಟ್ಟಲೆ (ವಿಶೇಷ) ಅರ್ಥದಿಂದ ಎರಕಗೊಂಡ 
ಕಂಡಿಕೆಗಳು. ಈ ಸಣ್ಣ ಸಣ್ಣ ನುಡಿಕಂಡಿಕೆಗಳು ಸಮಾಜ ಬೆಳೆದು ಬಂದ ವಿವಿಧ ಘಟ್ಟಗಳನ್ನು 
ಮನುಷ್ಯ ಸ್ವಭಾವದ ಬಗೆಬಗೆಯ ಮಟ್ಟಗಳನ್ನು ಅನಾವರಣ ಮಾಡುವ ನುಡಿಕಿಂಡಿಗಳೂ ಹೌದು. ಈ 
ನುಡಿಗಟ್ಟುಗಳ ಕಿಂಡಿಯ ಮೂಲಕ ನೋಡಿದರೆ ಸಮಾಜದ, ಸಂಸ್ಕೃತಿಯ ಸಹಸ್ರಮುಖಗಳ ವಿಶ್ವರೂಪ 
ದರ್ಶನವಾಗುತ್ತದೆ.
೨
ಹೊಸಹೊಸ ನಮೂನೆಯ ಅಭಿವ್ಯಕ್ತಿ ವೈವಿಧ್ಯದ ಸೃಜನಶೀಲತೆಯ ಕೆಚ್ಚಲು ಬತ್ತಿದ 
ಗೊಡ್ಡುಗಳಂತೆ ನಾಗರಿಕ ಸುಶಿಕ್ಷಿತರು ಕಂಡು ಬಂದರೆ, ಹೊಸ ಹೊಸ ನಮೂನೆಯ ಅಭಿವ್ಯಕ್ತಿ 
ವೈವಿಧ್ಯದ ಸೃಜನಶೀಲತೆಯ ಕೆಚ್ಚಲುದುಂಬಿದ ಕರಾವಿನ ಹಸುಗಳಂತೆ ಗ್ರಾಮೀಣ ಅಶಿಕ್ಷಿತರು 
ಕಂಡು ಬರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಉದಾಹರಣೆಗೆ ನಾಗರಿಕ ಸುಶಿಕ್ಷಿತರು 
ಹಾಡಿದ್ದೇ ಹಾಡುವ ಕಿಸುಬಾಯಿ ದಾಸರಂತೆ ಸವಕಲು ಸವಕಲಾದ “ನಾನು ರಾತ್ರಿಯೆಲ್ಲ ನಿದ್ದೆ 
ಮಾಡಲಿಲ್ಲ” ಎಂಬ ಮಾತನ್ನು ಹೇಳಿದರೆ ಗ್ರಾಮೀಣ ಅಶಿಕ್ಷಿತರು “ನಾನು ಇಳ್ಳೆಲ್ಲ ಎರಡು 
ರೆಪ್ಪೆ ಒಂದು ಮಾಡಲಿಲ್ಲ” ಎಂಬ ಸುಂಕು ಮುರಿಯದ ಗರಿಗರಿ ಮಾತನ್ನು ಹೇಳುತ್ತಾರೆ. 
ಸುಶಿಕ್ಷಿತರು “ನಾನು ಮಾತನಾಡಲಿಲ್ಲ” ಎಂಬ ಹರಿತವಾದ ಮಾತನ್ನು ಬಳಸುತ್ತಾರೆ. ಅವರು 
“ಬೆಳಗ್ಗೆಯಿಂದ ನಾನು ಒಂದ್ಕಡೆ ಕುಂತಿಲ್ಲ” ಎಂದರೆ ಇವರು “ಹೊತ್ತಾರೆಯಿಂದ ಎರಡು ಕಾಲು 
ಒಂದ್ಕಡೆ ಇಕ್ಕಿಲ್ಲ” ಎನ್ನುತ್ತಾರೆ. ಅವರು ಸಿಟ್ಟಿನಿಂದ “ನಿನ್ನನ್ನು ಕೊಂದು 
ಬಿಡ್ತೇನೆ” ಎಂದರೆ, ಇವರು “ನಿನ್ನನ್ನು ಹುಟ್ಟಲಿಲ್ಲ, ಅನ್ನಿಸಿ ಬಿಡ್ತೀನಿ” 
ಎನ್ನುತ್ತಾರೆ. ಅವರು “ಬೇಗ ಬಾ” ಎಂದು ಹೇಳಿದರೆ, ಇವರು “ಇಲ್ಲಿ ಇದ್ದೋನಂಗೆ ಬಾ” 
ಎನ್ನುತ್ತಾರೆ. ಆದ್ದರಿಂದ ಅಶಿಕ್ಷಿತರ ಸೋಪಜ್ಞ ತಾಜಾತನದ ಅಭಿವ್ಯಕ್ತಿ ಆಕರ್ಷಣೀಯ.
ನುಡಿಗಟ್ಟುಗಳ ವಿಶೇಷ ಗುಣಲಕ್ಷಣವೆಂದರೆ ಅವುಗಳ ಉಪಮಾ ಮತ್ತು ರೂಪಕ ಶಕ್ತಿ. ಉಪಮಾಲೋಲ
 ಲಕ್ಷ್ಮೀಶ, ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ ಎಂದು ಸಾಮಾನ್ಯವಾಗಿ ವಿದ್ವಾಂಸ
 ವಿಮರ್ಶಕರು ಹಾಡಿ ಹೊಗಳುವುದುಂಟು. ಆದರೆ ಅವರು ಉಪಮಾಲೋಲರಾಗಿರುವ, ರೂಪಕ ಸಾಮ್ರಾಜ್ಯ 
ಚಕ್ರವರ್ತಿಗಳಾಗಿರುವ ಜನಪದರನ್ನು ಮರೆಯುತ್ತಾರೆ.
ಉದಾಹರಣೆಗೆ ಬೆನ್ನು ಬೀಳು ಎಂಬರ್ಥದ “ಕಕ್ಕರನಂತೊಕ್ಕರಿಸು” ಎಂಬ ನುಡಿಗಟ್ಟಿನ 
ಉಪಮೆಯನ್ನು ಗಮನಿಸಬಹುದು. ಕಕ್ಕರ (< ಕರ್ಕರ < ಕುರ್ಕರ) ಎಂದರೆ ನಾಯಿ. 
ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಬೆನ್ನು ಬೀಳುವ ಹಾಗೂ ಒಮ್ಮೊಮ್ಮೆ ಬೆನ್ನು ತಿರುಗಿಸಿ 
ಫೇರಿ ಕೀಳುವ ಎರಡೂ ರೀತಿಯ ಸ್ವಭಾವ ವೈರುದ್ಧ್ಯ ಅದರಲ್ಲಿ ಘನೀಭೂತಗೊಂಡಿದೆ. ನಂಟರ ಮನೆಗೆ
 ಹೋಗುವಾಗ ಬೆನ್ನು ಬಿದ್ದ ನಾಯಿಯನ್ನು ಮನೆಗೆ ಹೋಗೆಂದು ಹೆದರಿಸಿ ಬೆದರಿಸಿ ಕಲ್ಲು ಬೀರಿ
 ಹಿಂದಕ್ಕಟ್ಟಿದರೂ ಅದು ಬೆನ್ನಾಡಿ ಬರುತ್ತದೆ. ಹಾಗೆಯೇ ಬೇಟೆಗೆ ಹೋಗುವಾಗ ಬಾಬಾ ಎಂದು 
ಕರೆದರೂ ಒಲ್ಲೆ ಒಲ್ಲೆ ಎಂಬಂತೆ ವಿರುದ್ಧ ದಿಕ್ಕಿನಲ್ಲಿ ಓಡುತ್ತದೆ – ಬೇಡವೆಂದಾಗ ಲಗ್ಗೆ
 ಹಾಕುವ, ಬೇಕೆಂದಾಗ ಫೇರಿ ಕೀಳುವ ನೆನಪಿನಂತೆ !
ಯಾವ ಕೆಲಸವನ್ನು ಪೂರ್ಣ ಮಾಡದಿರು ಎಂಬರ್ಥದ “ಕೋಳಿ ಕೆದಕಿದಂತೆ ಮಾಡು” ಎಂಬ 
ನುಡಿಗಟ್ಟು ಪರಿಶೀಲನಾರ್ಹ. ಕೋಳಿ ತನ್ನ ಮರಿಗಳಿಗೆ ಹುಳಹುಪ್ಪಟೆ ತಿನ್ನಿಸಬೇಕೆಂದು ಲೊಕ್
 ಲೊಕ್ ಎಂದು ಮರಿಗಳನ್ನು ಕರೆಯುತ್ತಾ ಹೋಗಿ, ಒಂದು ಕಡೆ ತನ್ನ ಕಾಲುಗಳಿಂದ 
ಪರ್ರಪರ್ರನೆ ಮಣ್ಣನ್ನು ಕೆರೆಯುತ್ತದೆ. ಮರಿಗಳು ಅಲ್ಲಿದ್ದ ಹುಳಹುಪ್ಪಟೆಗಳನ್ನು 
ತಿನ್ನುವಷ್ಟರಲ್ಲಿ, ಕೋಳಿ ಲೊಕ್ ಲೊಕ್ ಎಂದು ಕೂಗುತ್ತಾ ಇನ್ನೊಂದು ಸ್ಥಳಕ್ಕೆ ಹೋಗಿ 
ನೆಲವನ್ನು ಕೆರೆದು ಪಿಳ್ಳೆಗಳನ್ನು ಕರೆಯುತ್ತದೆ. ಹಾಗೆಯೇ ಮತ್ತೊಂದು ಕಡೆಗೆ, ಮಗದೊಂದು 
ಕಡೆಗೆ. ಹೀಗೆ ಅಲ್ಲಿಷ್ಟು ಇಲ್ಲಿಷ್ಟು ಕೆದಕಿ ಬೆದಕಿ, ಕೊನೆಗೆ ಒಂದು ಕಡೆ ತನ್ನ 
ಮರಿಗಳನ್ನು ರೆಕ್ಕೆಯೊಳಗೆ ಬಚ್ಚಿಟ್ಟುಕೊಂಡು ಕುಳಿತು ಮಾತೃ ಸುಖವನ್ನು 
ಅನುಭವಿಸತೊಡಗುತ್ತದೆ.
ಬಹುತೇಕ ನುಡಿಗಟ್ಟುಗಳ ನೆಲೆಗಟ್ಟು ರೂಪಕ. ಜನಪದರಿಗೆ ರೂಪಕ ನಿರ್ಮಾಣ ನೀರು ಕುಡಿದಷ್ಟು ಸುಲಭ. ಜನಪದ ಒಗಟುಗಳು ರೂಪಕಗಳ ಗಣಿ.
ಉದಾಹರಣೆಗೆ,
ಕರಿ ಮಣ್ಣಿನ ಹೊಲದಲ್ಲಿ
ಬಿಳಿ ಬೀಜದ ಬಿತ್ತನೆ
ಕೈಯಲ್ಲಿ ಉಳೋದು
ಬಾಯಲ್ಲಿ ಹರಗೋದು.
ಬಿಳಿ ಬೀಜದ ಬಿತ್ತನೆ
ಕೈಯಲ್ಲಿ ಉಳೋದು
ಬಾಯಲ್ಲಿ ಹರಗೋದು.
ಒಗಟಿಗೆ ಉತ್ತರ : ಕರಿಮಣ್ಣಿನ ಹೊಲ = ಸಿಲೇಟು, ಬಿಳಿಬೀಜದ ಬಿತ್ತನೆ = ಬಳಪದಿಂದ 
ಬರೆದ ಬಿಳಿ ಅಕ್ಷರಗಳು, ಕೈಯಲ್ಲಿ ಉಳೋದು = ಕೈಯಲ್ಲಿ ಬರೆಯೋದು, ಬಾಯಲ್ಲಿ ಹರಗೋದು = 
ಬಾಯಲ್ಲಿ ಹೇಳೋದು.
ಆಧುನಿಕ ಶಿಕ್ಷಣ ಪದ್ಧತಿ ದೇಶದಲ್ಲಿ ಜಾರಿಗೆ ಬಂದ ಮೇಲೆ ಮೂಡಿರುವ ಈ ಒಗಟು ಹೇಗೆ ರೂಪಕಮಯವಾಗಿದೆ ಎಂಬುದನ್ನು ಗಮನಿಸಬಹುದು.
ಇರಸಾಲು ಕಟ್ಟೋಕೆ ಹೋಗು ಎಂಬ ನುಡಿಗಟ್ಟಿಗೆ ಅರ್ಥ ಮಲಮೂತ್ರ ವಿಸರ್ಜನೆಗೆ ಹೋಗು 
ಎಂದು. ಶ್ಯಾನುಭೋಗು ತಾನು ಸಂಗ್ರಹಿಸಿದ ಕಂದಾಯವನ್ನು ಸರ್ಕಾರಿ ಖಜಾನೆಗೆ ಜಮಾ 
ಮಾಡುವುದಕ್ಕೆ ಇರಸಾಲು ಕಟ್ಟುವುದು ಎಂದು ಹೇಳುತ್ತಾರೆ. ಅದೇ ರೀತಿ ಈ ನುಡಿಗಟ್ಟಿನಲ್ಲಿ 
ಮಲ ಮೂತ್ರವೇ ಕಂದಾಯವಾಗಿ, ತನ್ನ ಜಮೀನೋ ಅಥವಾ ತಿಪ್ಪೆಯೋ ಖಜಾನೆಯಾಗಿ 
ಮಾರ್ಪಟ್ಟಿರುವುದನ್ನು ಗಮನಿಸಬಹುದು. ಹೀಗೆಯೇ ಮೂಕೆತ್ತಲು ಹೋಗು, ಯಾತ ಎತ್ತಲು ಹೋಗು, 
ಮುಂಭಾರವಾಗು, ಹಿಂಭಾರವಾಗು ಮೊದಲಾದ ನುಡಿಗಟ್ಟುಗಳು ರೂಪಕಾಲಂಕಾರಕ್ಕೆ ಸಾಕ್ಷಿಯಾಗಿವೆ.
ಯಾವ ಅಲಂಕಾರವೂ ಇಲ್ಲದ ಸಹಜೋಕ್ತಿಯ ನುಡಿಗಟ್ಟುಗಳೂ ಉಂಟು. ಸಲಿಗೆ ಕೊಂಡು ಎಂಬ ಅರ್ಥದ
 ಸದರ ಕೊಡು ಎಂಬ ನುಡಿಗಟ್ಟು (ಪ್ರ : ಸದರ ಕೊಟ್ಟಿದ್ಕೆ ಅದರಾಗೆ ಕೈಯಿಕ್ಕಿದ) ಎಂಬುದು 
ಸಹಜೋಕ್ತಿಗೆ ಉದಾಹರಣೆ. ಆದರೆ ಕೆಲವು ಸಹಜೋಕ್ತಿ ನುಡಿಗಟ್ಟುಗಳಿಗೆ ದ್ವಂದ್ವಾರ್ಥವೂ 
ಉಂಟು. ಉದಾಹರಣೆಗೆ ಕಟ್ಟಳೇಲಿ ಉಣ್ಣು ಎಂಬ ನುಡಿಗಟ್ಟಿಗೆ ಮಿತವಾಗಿ ಹಾಳತವಾಗಿ ಉಣ್ಣು 
ಎಂಬ ಅರ್ಥದ ಜೊತೆಜೊತೆಗೇ ಮಂದನಮಜ್ಜಿಗೆ (ಗಟ್ಟಿ ಮಜ್ಜಿಗೆ)ಯಲ್ಲಿ ಉಣ್ಣು ಎನ್ನುವ 
ಅರ್ಥವೂ ಆಗುತ್ತದೆ. ಏಕೆಂದರೆ ಅಳೆ ಎಂಬುದಕ್ಕೆ ಮಜ್ಜಿಗೆ ಎಂಬ ಅರ್ಥವಿದೆ. ಉದಾಹರಣೆಗೆ 
ಮಜ್ಜಿಗೆ ಬಿಟ್ಟು ಮಾಡುವ ಒಂದು ಬಗೆಯ ಎಸರಿಗೆ (ಸಾರಿಗೆ) ‘ಹಸಾಳೆ’ (< ಹಸಿ ಅಳೆ) 
ಎಂದು ಹೆಸರು ಅಂದರೆ ಇಲ್ಲಿ ಕಡು + ಅಳೆ = ಕಟ್ಟಳೆ ಆಗಿರುವುದನ್ನು ಗಮನಿಸಬಹುದು.
೩
ನುಡಿಗಟ್ಟುಗಳಿಗೆ ಪಡೆನುಡಿಗಳು ಎಂಬ ಪರ್ಯಾಯನಾಮ ಇರುವುದರಿಂದ ಇವುಗಳ ಜನಕರು ನಾಡಿನ 
ಹತ್ತು ಸಮಸ್ತರು ಎಂದು ಹೇಳಬಹುದು. ಆದರೆ ಇ ಹತ್ತೂ ಸಮಸ್ತರು ವಿದ್ಯಾವಂತರೆ ? 
ಅವಿದ್ಯಾವಂತರೆ? ಎಂಬ ಪ್ರಶ್ನೆ ಎದುರಾಗುತ್ತದೆ. ಉದಾಹರಣೆಗೆ ‘ನೆಣ ಕಿತ್ತು ನೆತ್ತಿ 
ಮೇಲೆ ದೀಪ ಹಚ್ಚು’ ಎಂಬ ಬೈಗುಳದ ನುಡಿಗಟ್ಟನ್ನು ಪರಿಶೀಲಿಸಬಹುದು. ಹಳ್ಳಿಗಳಲ್ಲಿ 
ಗ್ರಾಮದೇವತೆ ಪರಿಷೆ ಮಾಡುತ್ತಾರೆ. ಮಾರಿಗೆ ಕೋಳಿ, ಕುರಿ, ಟಗರು, ಮೇಕೆ, ಹೋತಗಳನ್ನು 
ಬಲಿಗೊಡುವಂತೆಯೇ ಗೋರ್ಗಂಬಕ್ಕೆ ಕಟ್ಟಿ ಕೋಣನನ್ನೂ ಬಲಿಗೊಡುತ್ತಾರೆ. ಹಾಗೆ ಬಲಿಕೊಟ್ಟಾಗ 
ಕೋಣನ ತಲೆಯನ್ನು ತಂದು ಗ್ರಾಮದೇವತೆಯ ನುಡಿಯಲ್ಲಿಟ್ಟು, ಅದರ ನೆತ್ತಿಯ ಮೇಲೆ ಸಗಣಿಯ 
ಕಟ್ಟೆ ಕಟ್ಟಿ ಕಟ್ಟಡ ಹಚ್ಚುತ್ತಾರೆ. ಎಣ್ಣೆಗಾಗಿ ಕೋಣನ ಹೊಟ್ಟೆಯ ನೆಣವನ್ನು ಕಿತ್ತು 
ತಂದು ಸಗಣಿಯ ಕಟ್ಟೆಯೊಳಗೆ ಹಾಕುತ್ತಾರೆ. ಬಿಸಿಗೆ ನೆಣ ಕರಗಿ ಎಣ್ಣೆಯಾಗುತ್ತದೆ. ಇಂಥ 
ಹಿನ್ನೆಲೆಯ ದಟ್ಟ ಅನುಭವವುಳ್ಳ ಹಳ್ಳಿಯ ಅವಿದ್ಯಾವಂತ ಹೆಣ್ಣು, ತನಗೆ ಚಿತ್ರಹಿಂಸೆ 
ಕೊಟ್ಟವರಿಗೆ “ನಿನ್ನ ನೆಣ ಕಿತ್ತು ನೆತ್ತಿ ಮೇಲೆ ದೀಪ ಹಚ್ಚ !” ಎಂದು ಶಾಪ 
ಹಾಕುತ್ತಾಳೆ. ಈ ಅನುಭವ ನಾಗರಿಕರಿಗೆ ದೂರವಾದದ್ದು, ಗ್ರಾಮಸ್ಥರಿಗೆ ಹತ್ತಿರವಾದದ್ದು. 
ಆದ್ದರಿಂದ ನೂರಕ್ಕೆ ತೊಂಬತ್ತು ಭಾಗ ನುಡಿಗಟ್ಟುಗಳ ಜನಕರು ನಗರದ ಸುಶಿಕ್ಷಿತ ಜನರಿಗಿಂತ 
ಹಳ್ಳಿಯ ಅಶಿಕ್ಷಿತ ಜನರು ಎನ್ನಬಹುದು.
ಈಗ ಇನ್ನೊಂದು ಪ್ರಶ್ನೆಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಈಗ 
ನುಡಿಗಟ್ಟುಗಳ ಸೃಷ್ಟಿ ನಿಂತು ಹೋಗಿದೆಯೇ? ಎಂಬುದೇ ಪ್ರಶ್ನೆ. ಪ್ರಾಯಶಃ ಯಾವ ಕಾಲಕ್ಕೂ 
ನುಡಿಗಟ್ಟುಗಳ ಸೃಷ್ಟಿ ನಿಂತು ಬಿಡುವುದಿಲ್ಲ. ಹೊಸ ಕಾಲಕ್ಕೆ ತಕ್ಕಂತೆ ಹೊಸ ಹೊಸ 
ಅನುಭವಗಳಾದಾಗ ಹೊಸ ಹೊಸ ನುಡಿಗಟ್ಟುಗಳು ಜನ್ಮ ತಾಳುತ್ತಲೆ ಹೋಗುತ್ತವೆ. ಉದಾಹರಣೆಗೆ 
ಸೊಪ್ಪು ಹಾಕದಿರು (ಲಕ್ಷ್ಯ ಕೊಡದಿರು) ಎಂಬ ನುಡಿಗಟ್ಟನ್ನು ಪರಿಶೀಲಿಸಬಹುದು. ಇದು 
ರೇಷ್ಮೆ ಬೆಳೆ ಅಸ್ತಿತ್ವಕ್ಕೆ ಬಂದ ಮೇಲೆ ಮೂಡಿದ ಇತ್ತೀಚಿನ ನುಡಿಗಟ್ಟಿದು. ರೇಷ್ಮೆ 
ಹುಳುಗಳನ್ನು ಸಾಕುವವರು ಅವುಗಳಿಗೆ ನಿಗದಿತ ಕಾಲ ಕಾಲಕ್ಕೆ ಉಪ್ಪುನೇರಿಳೆ ಸೊಪ್ಪನ್ನು 
ತಂದು ಉತ್ತರಿಸಿ ಅವುಗಳಿಗೆ ಹಾಕಬೇಕು. ಹಾಗೆ ಮೈಯೆಲ್ಲ ಕಣ್ಣಾಗಿ ಎಚ್ಚರದಿಂದ ಸೊಪ್ಪು 
ಹಾಕದಿದ್ದರೆ, ಬೆಳೆ ಹಾಳಾಗುತ್ತದೆ. ಆ ಹಿನ್ನೆಲೆಯಲ್ಲಿ ಮುಡಿದ ನುಡಿಗಟ್ಟಿದು.
ಹಾಗೆಯೇ ರಜೆ ಹಾಕು (ಮುಟ್ಟಾಗು) ಎಂಬ ನುಡಿಗಟ್ಟನ್ನು ಪರಿಶೀಲಿಸಬಹುದು. ಮುಟ್ಟಾಗು 
ಎಂಬುದಕ್ಕೆ ರಜೆ ಆಗು, ಹೊರಗೆ ಆಗು, ಪಟ್ಟಕ್ಕೆ ಕೂರು ಎಂಬ ನುಡಿಗಟ್ಟುಗಳು ಜನಜೀವನದಲ್ಲಿ
 ಚಾಲ್ತಿಯಲ್ಲಿದ್ದವು. ಆದರೆ ಇಂಗ್ಲಿಷರು ಬಂದ ಮೇಲೆ ಶೂದ್ರರಿಗೂ ವಿದ್ಯಾಭ್ಯಾಸದ ಭಾಗ್ಯ 
ದೊರೆತು ಕಛೇರಿಗಳಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡ ತೊಡಗಿದ ಮೇಲೆ ವೈಯಕ್ತಿಯ 
ಕೆಲಸವಿದ್ದಾಗ ಸಾಂದರ್ಭಿಕ ರಜೆಯನ್ನು ಹಾಕಿ, ಮನೆಯಲ್ಲಿ ಉಳಿಯುವ ಪರಿಪಾಠ ಬೆಳೆಯಿತು. 
ಅದೇ ರೀತಿ ತಿಂಗಳಿಗೊಮ್ಮೆ ‘ಹೊರಗೆ ಆಗು’ವ ಹೆಣ್ಣು ಅಡುಗೆ ಮಾಡುವಂತಿಲ್ಲವಾದ್ದರಿಂದ ಆಕೆ
 ಸಾಂದರ್ಭಿಕ ರಜೆ ಹಾಕಿ ಅಡುಗೆ ಕೆಲಸಕ್ಕೆ ಗೈರು ಹಾಜರಾಗಿದ್ದಾಳೆ ಎಂಬ ಅರ್ಥದಲ್ಲಿ ‘ರಜೆ
 ಹಾಕು” ಎಂಬು ನುಡಿಗಟ್ಟು ಚಾಲ್ತಿಗೆ ಬಂದಿದೆ, ಮಧ್ಯಮ ವರ್ಗದ ಕುಟುಂಬಗಳಲ್ಲಿ. 
ಆದ್ದರಿಂದ ಹೊಸ ಹೊಸ ನುಡಿಗಟ್ಟುಗಳು ಸೃಷ್ಟಿಯಾಗುತ್ತಾ ಹೋಗುತ್ತವೆ.
೪
ಸಮಾಜ ಶಾಸ್ತ್ರಜ್ಞರಿಗೆ, ಭಾಷಾಶಾಸ್ತ್ರಜ್ಞರಿಗೆ ಈ ನುಡಿಗಟ್ಟುಗಳು ಅಕ್ಷಯ ನಿಧಿಯಂತಿವೆ; ಕಣ್ಣು ತೆರೆಸುವಂತಿವೆ; ನವಿರೇಳಿಸುವಂತಿವೆ
‘ತೊಟ್ಟಿಲ ಕಾಲಿಗೆ ತಾಲಿ ಕಟ್ಟು’ ಎಂಬ ನುಡಿಗಟ್ಟು ಪ್ರಾಚೀನ ಬುಡಕಟ್ಟು ಜನಾಂಗಗಳ 
ಬಾಲ್ಯ ವಿವಾಹ ಪದ್ಧತಿಯ ಆಚಾರವಿಚಾರಗಳ ಅಧ್ಯಯನಕ್ಕೆ ಅಪಾರ ಆಹಾರ ಒದಗಿಸುತ್ತದೆ. 
ತೊಟ್ಟಲಿಗೆ ಹಾಕುವ ಶಾಸ್ತ್ರಕ್ಕೆ ಬಂದ ಬಂಧುಗಳೇ, ಆ ಹೆಣ್ಣು ಮಗು ಅನ್ಯರ ಪಾಲಾದೀತೆಂದು,
 ಎಳೆಯ ಬೊಮ್ಮಟೆಯ ಕೊರಳಿಗೆ ತಾಲಿ ಕಟ್ಟಲಾಗದೆ ತೊಟ್ಟಿಲ ಕಾಳಿಗೆ ಕಟ್ಟಿ, ನಿಶ್ಚಯ 
ಮಾಡಿಕೊಂಡದ್ದನ್ನು ಈ ನುಡಿಗಟ್ಟು ಬೆತ್ತಲೆಗೊಳಿಸುತ್ತದೆ ಹೀಗೆಯೇ ‘ಮೊರಗೂಸಿಗೆ ಎಳೆ 
ಕಟ್ಟು’ ಎಂಬ ನುಡಿಗಟ್ಟು ಬಾಲ್ಯವಿವಾಹದ ಪದ್ಧತಿಯ ಪರಾಕಾಷ್ಠೆಯ ಪತಾಕೆಯಂತೆ ನಮ್ಮ ಮುಂದೆ
 ಹಾರಾಡುತ್ತಿದೆ. ಕೂಸು ಹುಟ್ಟಿದಾಗ ಹೊಕ್ಕುಳ ಬಳ್ಳಿ ಕುಯ್ದು ಮೊರಕ್ಕೆ ಹಾಕುವ ಪದ್ಧತಿ 
ಹಿಂದೆ ಇತ್ತು. ಇನ್ನೂ ಕೂಸಿನದು ಕಣ್ಣು ಬಿಟ್ಟಿರದ ಎಳೆಯ ಬೊಮ್ಮಟೆಯ ಅವಸ್ಥೆ. ಅಲ್ಲಿಂದ 
ಹನ್ನೆರಡು ದಿವಸಕ್ಕೆ ತೊಟ್ಟಲಿಗೆ ಹಾಕುವ ಶಾಸ್ತ್ರ ಮಾಡುವುದು. ಆದರೆ ಅಲ್ಲಿಯವರೆಗೆ 
ನಿಧಾನಿಸಿದರೆ, ಬೇರೆಯವರು ನಿಶ್ಚಯ ಮಾಡಿಕೊಂಡು ಬಿಟ್ಟಾರೆಂದು ‘ಮೊರಗೂಸಿಗೆ ಎಳೆ 
ಕಟ್ಟು’ವ ಆತುರ, ಮೌಢ್ಯ ಎದ್ದು ಕಾಣುತ್ತದೆ. ಎಳೆ ಎಂದರೆ ಅರಿಶಿಣ ಮಿಶ್ರಿತ ದಾರ, 
ಅಂಗುದಾರ.
ಹಾಗೆಯೇ ‘ಗಿಡಬೀಳು’ (=ತಲೆ ಮರೆಸಿಕೊಳ್ಳು, ಕಾಡು ಸೇರು) ಎಂಬ ನುಡಿಗಟ್ಟು 
ಸಮಾಜಶಾಸ್ತ್ರಜ್ಞರಿಗೆ ರಸಗವಳ ಒದಗಿಸುತ್ತದೆ. ಗಿಡ ಎನ್ನುವುದಕ್ಕೆ ಕಾಡು ಎಂಬ 
ಅರ್ಥವಿದೆ. ಗಿಡದ ಅವ್ವೇರಹಳ್ಳಿ ಎಂಬ ಊರ ಹೆಸರು, ಬೇರೊಂದು ಅವ್ವೇರಹಳ್ಳಿಗಿಂತ 
ಭಿನ್ನವಾದ ಅವ್ವೇರಹಳ್ಳಿ (ಕಾಡಿನ ಮಧ್ಯೆ ಇರುವಂಥದು) ಎಂಬುದನ್ನು ಸೂಚಿಸುತ್ತದೆ. 
“ಹುಡುಗ ಬುದ್ಧಿಯೋ? ಗಿಡ ಬಿದ್ದಿಯೋ?” ಎಂಬ ಗಾದೆ ಗಿಡ ಎಂದರೆ ಕಾಡು ಎಂಬುದನ್ನು 
ಸೂಚಿಸುತ್ತದೆ. ಕೆಲವು ಆದಿವಾಸಿ ಜನಾಂಗಗಳಲ್ಲಿ ವಯಸ್ಸಿಗೆ ಬಂದ ಹೆಣ್ಣು ಗಂಡುಗಳು ತಾವು 
ಪರಸ್ಪರ ಪ್ರೀತಿಸಿ ಮದುವೆಯಾಗುವ ಮನಸ್ಸಿದ್ದರೆ, ಇಬ್ಬರೂ ಕೂಡಿ ಕಾಡಿಗೆ ಓಡಿ ಹೋಗಿ 
ನಾಲ್ಕೈದು ದಿನವಿದ್ದು ಹಾಡಿಗೆ ಬರುತ್ತಿದ್ದರು. ಮೇಲಿನ ಗಾದೆ ಈ ಸಂಪ್ರದಾಯದ ಕೂಸೇ. 
ಹಾಗೆ ಹಿಂದಿರುಗಿ ಬಂದ ಮಿಂಡ ಮಿಂಡಿಯರ ತಂದೆತಾಯಿಗಳು ಹಾಗೂ ಜನಾಂಗದ ಹಿರಿಯರು, ಪರಸ್ಪರ 
ಪ್ರೀತಿಸಿ ಮದುವೆಯಾಗಬೇಕೆಂಬ ಇಚ್ಛೆಯಿಂದಲೇ ಹಾಗೆ ಮಾಡಿದ್ದಾರೆ ಎಂದು ತೀರ್ಮಾನಿಸಿ, 
ಮುಕ್ತ ಮನಸ್ಸಿನಿಂದ ಇಬ್ಬರಿಗೂ ಮದುವೆ ಮಾಡುತ್ತಿದ್ದರು. ನಾಗರಿಕತೆಯ ನಿಶ್ಶಿಖರ ಏರಿರುವ
 ಸುಶಿಕ್ಷಿತರು ಇಂದು ಪರಸ್ಪರ ಪ್ರೀತಿಸಿ ಮದುವೆಯಾಗಲು ಇಚ್ಛಿಸುವ ತರುಣ ತರುಣಿಯರಿಗೆ 
ಬೆದರಿಕೆ ಹಾಕಿ, ಅಡ್ಡಿಯುಂಟು ಮಾಡುವ ಶಿಷ್ಟ ನಾಗರಿಕ ಸಂಸ್ಕೃತಿಗಿಂತ ಆದಿವಾಸಿ 
ಸಂಸ್ಕೃತಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
‘ಗುಡ್ಲು ಹಾಕು’ (=ದೊಡ್ಡವಳಾಗು) ಎಂಬ ನುಡಿಗಟ್ಟು ಪ್ರಾಚೀನ ಬುಡಕಟ್ಟು 
ಜನಾಂಗಗಳಲ್ಲಿ ಹೆಣ್ಣು ಋತುಮತಿಯಾದಾಗ ಮಾಡುತ್ತಿದ್ದ ಆಚರಣೆಯ ಗುರುತಾಗಿ ಇಂದಿಗೂ 
ಉಳಿದುಕೊಂಡು ಬಂದಿದೆ. ಹೆಣ್ಣು ಮೈನೆರೆದಾಗ ಅತ್ತಿಕೊಂಬೆಯನ್ನು ಕಡಿದುಕೊಂಡು ಬಂದು, 
ಗುಡ್ಲು (< ಗುಡಿಸಲು) ಹಾಕಿ, ಹೆಣ್ಣನ್ನು ಅದರೊಳಗೆ ಕೂಡಿಸಿ, ಚಿಗಳಿ ಉಂಡೆ 
(ಎಳ್ಳುಂಡೆ) ಕೊಬರಿ ಇತ್ಯಾದಿಗಳನ್ನು ತಿನ್ನಿಸಿ, ನೀರುಯ್ದು (ಸ್ನಾನ ಮಾಡಿಸಿ) ಅನೇಕ 
ಶಾಸ್ತ್ರಸಂಬಂಧಗಳನ್ನೆಲ್ಲ ಮಾಡುತ್ತಾ ರಾತ್ರಿಯೆಲ್ಲ ಹೆಣ್ಣುಮಗುವನ್ನು 
ಎಬ್ಬಿಸಿಕೊಂಡಿರುತ್ತಾರೆ. ಬಹುಶಃ ಹಿಂದೆ ಮನೆಯ ಹೊರಗೇ ಗುಡ್ಲು ಹಾಕಿ 
ಇರಿಸುತ್ತಿದ್ದರೆಂದು ಕಾಣುತ್ತದೆ. ಶರೀರದಲ್ಲಿ ಜರುಗುವ ರಾಸಾಯನಿಕ ಕ್ರಿಯೆಯ ದೆಸೆಯಿಂದ 
ಅದನ್ನು ಸೂತಕ ಎಂದು ಭಾವಿಸಿ ಹೊರಗೆ ಗುಂಡ್ಲು ಹಾಕುತ್ತಿದ್ದಿರಬೇಕು. 
ಅತ್ತಿಕೊಂಬೆಯಿಂದಲೇ ಗುಡಿಸಲು ಹಾಕುವುದಕ್ಕೆ ಜನಪದ ವೈದ್ಯ ದೃಷ್ಟಿಯೂ ಕಾರಣವಾಗಿರಬೇಕು. 
“ಗುಡ್ಲು ಹಾಕೋ ಕಾಲ ಬಂದ ಮೇಲೆ, ಮಡ್ಲುದುಂಬುವ ಕಾಳವೂ ಬರ್ತದೆ” ಎಂಬ ಗಾದೆ ಮೈನೆರೆಯುವ 
ಹಾಗೂ ಮದುವೆ ಮಾಡುವ ಎರಡೂ ಕ್ರಿಯೆಗಳನ್ನೂ ಒಟ್ಟೊಟ್ಟಿಗೆ ಹಿಡಿದುಕೊಡುತ್ತದೆ. ಸಮಾಜಕ್ಕೆ
 ಸಂಬಂಧಿಸಿದ ಹೇರಳವಾದ ನುಡಿಗಟ್ಟುಗಳು ಈ ಸಂಕಲನದಲ್ಲಿ ತುಂಬಿ ತುಳುಕುವುದರಿಂದ, ಇಲ್ಲಿ 
ಹೆಚ್ಚಿಗೆ ಉದಾಹರಣೆಗಳನ್ನು ಕೊಡಬೇಕಾದ ಪ್ರಮೇಯ ಬರುವುದಿಲ್ಲ.
ಜನಪದ ನುಡಿಗಟ್ಟುಗಳು ಭಾಷಾಶಾಸ್ತ್ರಜ್ಞರಿಗೆ, ನಿಘಂಟುಕಾರರಿಗೆ ಅರೆ ಕೊರೆ ಬೀಳದ ಅರಕೆರೆಗಳು. ಆದರೆ ಅವರು ಅವುಗಳೊಳಗೆ ಮುಳುಗೇಳಬೇಕು, ಈಜಾಡಬೇಕು ಅಷ್ಟೆ !
ಉದಾಹರಣೆಗೆ ‘ಕುವಿ ಕುವಿ ಎನ್ನು’ ಎಂಬ ನುಡಿಗಟ್ಟಿಗೆ ಅರ್ಥ ಮೇಕೆಗಳನ್ನು ಹೆಸರು 
ಹಿಡಿದು ಕೂಗುವುದು. ಕೋಳಿಗಳನ್ನು ಕರೆಯುವಾಗು ‘ಕೋಕೋ’ ಎಂದು ಕರೆಯುತ್ತಾರೆ. ಕೋಕ ಎಂದರೆ
 ಕೋಳಿ (ಹಳ್ಳಿಯಲ್ಲಿ ಇವತ್ತು ನಿಮ್ಮನೇಲಿ ಏನು ಸಾರು? ಎಂದು ಕೇಳಿದರೆ ಕೋಕನ ಬಾಯಿಗೆ 
ನೀರು ಬಿಟ್ಟದ್ದೊ ಎಂದು ಉತ್ತರ ಹೇಳುತ್ತಾರೆ ಅರ್ಥಾತ್ ಕೋಳಿ ಕುಯ್ದಿದ್ದೊ ಎಂದು ಅದರ 
ಅರ್ಥ) ನಾಯಿಗಳನ್ನು ‘ಕುರೋಕುರೋ’ ಎಂದು ಕರೆಯುತ್ತಾರೆ. ಕುರುಕುರ (< ಕುರ್ಕುರ) 
ಎಂದರೆ ನಾಯಿ. ಬೆಕ್ಕನ್ನು ‘ಸೀಬಿ ಸೀಬಿ’ ಎಂದು ಕರೆಯುತ್ತಾರೆ. ಸೀಬಿ ಎಂದರೆ ಬೆಕ್ಕು 
(ಸೊರಗಿ ಹೋದ ಸೀಬಿ ಕಂಡು, ಎರಗಿ ಬಂದವರಂತೆ ಇಲಿದಂಡು ಎಂಬ ಜನಪದ ಗಾದೆ ಸೀಬಿ ಎಂದರೆ 
ಬೆಕ್ಕು ಎಂಬುದನ್ನು ಸ್ಪಷ್ಟಪಡಿಸುತ್ತದೆ) ಕುರಿಗಳನ್ನು ‘ಬ್ಯಾಬ್ಯಾ’ ಎಂದು 
ಕರೆಯುತ್ತಾರೆ. ಬ್ಯಾ ಎಂದರೆ ಕುರಿ (ಧಾರವಾಡ ಜಿಲ್ಲೆಯಲ್ಲಿ ಬ್ಯಾಹಟ್ಟಿ ಎಂಬ ಊರಿದೆ. 
ಅದರ ಅರ್ಥ ಕುರಿ ಹಟ್ಟಿ ಎಂದು. ಧಾರವಾಡ ಜಿಲ್ಲೆಯಲ್ಲಿರುವ ಕುರಟ್ಟಿ ಎಂಬ ಊರಿನಂತೆ 
ಬ್ಯಾಹಟ್ಟಿ ಎಂದರೂ ಅದೇ ಅರ್ಥ) ದನಗಳನ್ನು ‘ತ್ರುವೇ ತ್ರುವೇ’ (< ತುರುವೇ ತುರುವೇ) 
ಎಂದು ಕರೆಯುತ್ತಾರೆ. ತುರು ಎಂದರೆ ದನ. (ಚಿತ್ರದುರ್ಗ ಜಿಲ್ಲೆಯ ತುರುವನೂರು ಎಂಬುದನ್ನು
 ನೆನೆಸಿಕೊಳ್ಳಬಹುದು) ಹಾಗೆಯೇ ಮೇಕೆಗಳನ್ನು ‘ಕುವಿ ಕುವಿ’ ಎಂದು ಕರೆಯುತ್ತಾರೆ. ಕುವಿ 
ಎಂದರೆ ಮೇಕೆ (ಒಂದು ಕುವಿ ತಪ್ಪಿಸಿಕೊಂಡು ಬಿಟ್ಟಿದೆ, ಹುಡುಕ್ತಾ ಇದ್ದೀನಿ ಎಂದು 
ಹಳ್ಳಿಯಲ್ಲಿ ಇಂದಿಗೂ ಹೇಳುತ್ತಾರೆ).
ಇವತ್ತು ಕನ್ನಡ ನಿಘಂಟುಗಳಲ್ಲಿ ಕೋಕ ಎನ್ನುವುದಕ್ಕೆ ಕೋಳಿ ಎಂಬ ಅರ್ಥವಿಲ್ಲ, ಕುರಕುರ
 ಎಂಬುದಕ್ಕೆ ನಾಯಿ ಎಂಬ ಅರ್ಥವಿಲ್ಲ, ಸೀಬಿ ಎಂಬುದಕ್ಕೆ ಬೆಕ್ಕು ಎಂಬ ಅರ್ಥವಿಲ್ಲ, ಬ್ಯಾ
 ಎಂಬುದಕ್ಕೆ ಕುರಿ ಎಂಬ ಅರ್ಥವಿಲ್ಲ, ಕುವಿ ಎಂಬುದಕ್ಕೆ ಮೇಕೆ ಎಂಬ ಅರ್ಥವಿಲ್ಲ. ಅರ್ಥದ 
ಮನೆ ಹಾಳಾಗಲಿ, ಮೇಲೆ ಹೆಸರಿಸಿದ ಎಷ್ಟೋ ಪದಗಳು ನಿಘಂಟಿನಲ್ಲಿ ಸ್ಥಾನ 
ಗಿಟ್ಟಿಸಿಕೊಂಡಿಲ್ಲ. ಇದಕ್ಕೆ ಕಾರಣ ಲಿಖಿತ ಹೊಂಡವನ್ನು ಮಾತ್ರ ತೊಣಕಿ, ಅಲಿಖಿತ ಜಾನಪದ 
ಹೊಂಡವನ್ನು ಅನಾಮತ್ತು ತೊಣಕದಿರುವುದು.
ಜನಪದರು ಕ್ರಿಯಾ ಪದಗಳನ್ನೇ ನಾಮಪದಗಳನ್ನಾಗಿ ಬಳಸುವ, ನಾಮ ಪದಗಳಿಗೆ ಇಸು ಪ್ರತ್ಯಯ 
ಸೇರಿಸಿ ಕ್ರಿಯಾಪದಗಳನ್ನಾಗಿ ಮಾಡುವ ಮೋಡಿಯನ್ನು ನೋಡಿಯೇ ಇಲ್ಲ, ನಮ್ಮ ನಿಘಂಟುಕಾರರು, 
ಭಾಷಾಶಾಸ್ತ್ರಜ್ಞರು. ನೋಡಿಯೇ ಇಲ್ಲ ಎಂದ ಮೇಲೆ ಅವುಗಳನ್ನು ದಾಖಲಿಸುವುದೆಲ್ಲಿ ಬಂತು? 
ಉದಾಹರಣೆಗೆ ಕಡಿ (=ಕತ್ತರಿಸು) ಎಂಬ ಕ್ರಿಯಾಪದವನ್ನೇ ನಾಮ ಪದವನ್ನಾಗಿ ಬಳಸುತ್ತಾರೆ, 
ತುಂಡು ಎಂಬ ಅರ್ಥದಲ್ಲಿ. ಕಡಿದದ್ದು (ತುಂಡರಿಸಿದ್ದು) ಯಾವುದೋ ಅದು ಕಡಿ (ತುಂಡು). 
ಮೀನಿನ ಸಾರು ಮಾಡಿದಾಗ ಬಡಿಸುವವರಿಗೆ ‘ಅವನ ಅಗಲಿಗೆ ಒಂದೂ ಮೀನಿನ ಕಡೆ ಹಾಕಲಿಲ್ಲವಲ್ಲ’ 
ಎಂದು ಹೇಳುವುದುಂಟು. ಹಾಗೆಯೇ ಕಲಿ (=ಅರಿ, ತಿಳಿ) ಎಂಬ ಕ್ರಿಯಾಪದವನ್ನೇ ನಾಮಪದವನ್ನಾಗಿ
 ಬಳಸುತ್ತಾರೆ, ವಿದ್ಯೆ ಎಂಬ ಅರ್ಥದಲ್ಲಿ. ಕಲಿತದ್ದು (ಅರಿತದ್ದು) ಯಾವುದೋ ಅದು ಕಲಿ 
(ಅರಿವು, ವಿದ್ಯೆ). ಉದಾಹರಣೆಗೆ “ಏನು ಕಲಿ ಕಲಿತಿದ್ದಾನೋ, ನಾಡಾಗಾಡೋ ಮಾತ್ನೆಲ್ಲ 
ಓಡಾಗ್ಹುರೀತಾನೆ ನೋಡವ್ವ!” ಎಂಬ ನುಡಿಗಟ್ಟಿನಲ್ಲಿಯೇ ಕಲಿತದ್ದನ್ನು ಕಲಿ (ವಿದ್ಯೆ) 
ಎಂದು ಬಳಸಿರುವುದನ್ನು ಕಾಣುತ್ತೇವೆ.
ಹೇಗೆ ಜನಪದರು ಕ್ರಿಯಾಪದವನ್ನೇ ನಾಮಪದವನ್ನಾಗಿ ಬಳಸಿ ಹೊಸ ಅರ್ಥ ಪ್ರಾಪ್ತವಾಗುವಂತೆ 
ಮಾಡಿದ್ದಾರೋ ಹಾಗೆಯೇ ನಾಮಪದಕ್ಕೆ ಇಸು ಪ್ರತ್ಯಯ ಸೇರಿಸಿ ಕ್ರಿಯಾಪದವನ್ನಾಗಿ ಮಾಡಿ ಹೊಸ 
ಅರ್ಥ ಸಂದಾಯವಾಗಿಸಿ ಬಳಸಿರುವ ಜಾಣ್ಮೆ ಮೆಚ್ಚುವಂಥದ್ದು. ಉದಾಹರಣೆಗೆ ‘ಮಂಗಳಿಸು’ 
(ಮಾಡು) ಎಂಬ ನುಡಿಗಟ್ಟನ್ನು ಪರಿಶೀಲಿಸಬಹುದು. ತಾನು ಕೂಗಿದರೂ ಹೊರಬರದ ಹೆಂಡತಿಯ ಬಗೆಗೆ
 ಸಿಟ್ಟುಗೊಂಡ ಗಂಡ ಮಗನಿಗೆ ಹೇಳುತ್ತಾನೆ- “ಅವಳು ಒಳಗೆ ಏನು ಮಂಗಳಿಸ್ತಾಳೋ, ಹೋಗಿ ಬರ 
ಹೇಳು”. ಮಾಡಿದ ಕೆಲಸಕ್ಕೆ ಮಂಗಳ ಹಾಡುವುದು, ಹಾಡಿದ ಸ್ತೋತ್ರಕ್ಕೆ ಮಂಗಳ ಹಾಡುವುದು 
ಸಾಂಪ್ರದಾಯವಾಗಿ ಸಲುವಳಿಯಾಗುತ್ತಾ ಬಂದಿದೆ. ಅದರ ಆಧಾರದ ಮೇಲೆ ‘ನೀನು ಕಡಿದು ಕಟ್ಟೆ 
ಹಾಕಿರೋದಕ್ಕೆ ಮಂಗಳ ಹಾಡುತ್ತಿದ್ದೀಯಾ?’ ಎಂಬ ಅರ್ಥದಲ್ಲಿ ಮಂಗಳಕ್ಕೆ ಇಸು ಪ್ರತ್ಯಯ 
ಸೇರಿಸಿ ‘ಮಂಗಳಿಸುತ್ತಿದ್ದೀಯಾ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾನೆ. ಗ್ರಾಮೀಣ 
ಪ್ರದೇಶದಲ್ಲಿ ಮಂಗಳಿಸು (ಮಾಡು) ಎಂಬ ಪ್ರಯೋಗ ಹೇರಳವಾಗಿ ಕಂಡು ಬರುತ್ತವೆ. ನಾಮಪದಕ್ಕೆ 
ಇಸು ಪ್ರತ್ಯಯ ಸೇರಿಸಿ ಕ್ರಿಯಾಪದವನ್ನಾಗಿ ಬಳಸುವ ಜನಪದರ ಭಾಷಾ ಜಾಣ್ಮೆಯನ್ನು 
ಅರಗಿಸಿಕೊಂಡಿದ್ದ ಪಂಪ ತನ್ನ ವಿಕ್ರಮಾರ್ಜುನ ವಿಜಯ ಕೃತಿಯಲ್ಲಿ ಉಗುರಿನಿಂದ ಕೆರೆ ಎಂಬ 
ಅರ್ಥದಲ್ಲಿ ‘ತಲೆಯನುಗುರಿಸುತ್ತಮಿರೆಯಿರೆ’ ಎಂದು ಬಳಸಿ ‘ದೇಸಿ’ಗೆ ಹಾಸಿಗೆ 
ಹಾಸಿರುವುದನ್ನು ಮನಗಾಣಬಹುದು. (ತನ್ನ ಗುರು ಪರಶುರಾಮನ ತಲೆಯನ್ನು ಕರ್ಣ ತನ್ನ ತೊಡೆಯ 
ಮೇಲೆ ಇರಿಸಿಕೊಂಡು ಕುಳಿತಾಗಿನ ಪ್ರಸಂಗ). ಹೀಗೆಯೇ ‘ಅಗಲಿಸಿದಾಗ ತಗುಲಿಸು’ 
(=ಅಗಲಿಗಿಟ್ಟಾಗ ಹೊಟ್ಟೆಗೆ ಪೋಣಿಸು) ಎಂಬ ನುಡಿಗಟ್ಟು ಸಹ ಪರಿಶೀಲನಾರ್ಹವಾದುದು. ಅಗಲು 
ಎಂದರೆ ಊಟದ ತಟ್ಟೆ. ಅಗಲಿಸು ಎಂದರೆ ಊಟಕ್ಕಿಡು ಎಂದರ್ಥವಾಗುತ್ತದೆ. ತಗುಲಿಸು ಎಂದರೆ 
ಹೊಟ್ಟೆಗೆ ಮುಟ್ಟಿಸು ಎಂದರ್ಥವಾಗುತ್ತದೆ. ಅದೇ ಸಂದರ್ಭದಲ್ಲಿಯೇ ಅದಕ್ಕೆ ಇನ್ನೊಂದು 
ಅರ್ಥವೂ ಆಗುವಂತೆ ಆ ನುಡಿಗಟ್ಟು ಒಡಮೂಡಿದೆ. ಇದನ್ನು ಒಂದು ರೀತಿಯಲ್ಲಿ ಭಾಷಾಪ್ರಯೋಗದ 
ನೈಪುಣ್ಯ ಎಂದು ಹೇಳಬೇಕಾಗುತ್ತದೆ. ಅಗಲಿಸು (ಅಗಲಿಗೆ ಬಡಿಸು) ಮಂಗಳಿಸು (ಮಾಡು) ಎಂಬ 
ಶಬ್ದರೂಪವಾಗಲೀ ಅರ್ಥವಾಗಲೀ ನಿಘಂಟಿನಲ್ಲಿ ಸೇರ್ಪಡೆಯಾಗಿಲ್ಲ.
ಹೀಗೇಯೇ ‘ಕೊಪ್ಪಲು ಹಾಕು’ ಎಂಬ ನುಡಿಗಟ್ಟಿಗೆ ಅನ್ನಸತ್ರವನ್ನಿಡು ಎಂಬ ಅರ್ಥವಿದೆ. 
ಒಮ್ಮೆ ನಾನು ಶಿವಗಂಗೆಯ ದನಗಳ ಜಾತ್ರೆಗೆ ಹೋಗಿದ್ದಾಗ ನನ್ನ ತಂದೆ ಅಳಿಯನಿಗೆ “ಹೋಟ್ಲಿಗೆ
 ಹೋಗಿ ಯಾಕೆ ದುಡ್ಡು ತೆರ್ತಿಯ, ಮಂಡ್ಯ ಕಾಡಿನೋರು (ಪ್ರದೇಶದವರು) ಕೊಪ್ಪಲು 
ಹಾಕಿದ್ದಾರೆ, ಉಡ್ಕೊಂಡು ಬಾ ಹೋಗು” ಎಂದು ಹೇಳಿದ್ದು ಇಂದಿಗೂ ನನ್ನ ಎದೆಯಲ್ಲಿ ಹಚ್ಚೆ 
ಹುಯ್ದಂತೆ ಇದೆ. ಮಂಡ್ಯ ಜಿಲ್ಲೆಯಲ್ಲಿರುವ ‘ಹಿಟ್ಟಿನ ಕೊಪ್ಪಲು’, ಮೈಸೂರಿನಲ್ಲಿರುವ 
‘ಕನ್ನೇಗೌಡನ ಕೊಪ್ಪಲು’ ಎಂಬ ಊರ ಹೆಸರುಗಳು ‘ಅನ್ನಸತ್ರ’ ಎಂಬ ಅರ್ಥವನ್ನು ಒಳಗೊಂಡಿದೆ. 
ನಿಘಂಟಿನಲ್ಲಿ ಆ ಅರ್ಥ ಸೇರ್ಪಡೆಯಾಗಿಲ್ಲ.
ಹಾಗೆಯೇ ಚಾಚಿಕುಡಿಸು = ಎದೆ ಕುಡಿಸು, ಬೋಚಿ ಕುಡಿಸು = ಮೊಲೆಯುಣಿಸು ಎಂಬ 
ನುಡಿಗಟ್ಟುಗಳಲ್ಲಿ ಬರುವ ಚಾಚಿ, ಬೋಚಿ ಎಂಬ ಶಬ್ದಗಳು ನಿಘಂಟಿನಲ್ಲಿ ಸೇರ್ಪಡೆಯಾಗಿಲ್ಲ. 
ಚಾಚಿ < ಚೂಚಕ = ಮೊಲೆ ತೊಟ್ಟು ಎಂದರ್ಥ, ಬೋಚಿ < ಚಾಚಿ = ಕುಪ್ಪುಸ, 
ಅದರೊಳಗಿರುವ ಮೊಲೆ ಎಂದರ್ಥ.
ಮನೆ ಕಾಯವಾಗು ಎಂಬ ನುಡಿಗಟ್ಟಿಗೆ ಅರ್ಥ ಮನೆ ಹಾಳಾಗು ಎಂದು. ಕಾಯವಾಗು ಎಂಬುದು 
ಕಾಲವಾಗು (ಮರಣ ಹೊಂದು, ನಾಶವಾಗು) ಎಂಬುದರಿಂದ ಬಂದಿದೆ. ಮಕ್ಕಳು ಕಾರ ಎಂಬುದನ್ನು ಕಾಯ 
ಎಂದು, ಸಾರು ಎಂಬುದನ್ನು ಸಾಯು ಎಂದು, ಬಾರೋ ಎಂಬುದನ್ನು ಬಾಯೋ ಎಂದು, ಗಾಳಿಪಟದ 
ಬಾಲಂಗೋಸಿಯನ್ನು ಬಾಯಂಗೋಸಿ ಎಂದು ಕರೆಯುವುದನ್ನು ಕಾಣುತ್ತೇವೆ, ಬಹುಶಃ ರಕಾರ ಲಕಾರಗಳ 
ಉಚ್ಚಾರಣಾಸ್ಥಾನ ಒಂದೇ ಆದದ್ದರಿಂದ ರಕಾರ ಲಕಾರಗಳಿಗೆ ಬೀಳದ ಜಾನಪದದ ಅರಕೆರೆಗಳಲ್ಲಿ 
ನಿಘಂಟುಕಾರರು, ಭಾಷಾ ಶಾಸ್ತ್ರಜ್ಞರು ಅರೆಕೊರೆ ಬೀಳದ ಜಾನಪದರ ಅರಕೆರೆಗಳಲ್ಲಿ 
ಮುಳುಗೇಳಬೇಕು, ಈಜಾಡಬೇಕು. ಆಗ ಎಲ್ಲ ಗೋಜು ತಾನಾಗಿಯೇ ಮಾಯವಾಗಿ, ಬಗೆಬಗೆಯ ಪೋಜಿನ 
ಮೋಜನ್ನು ಸವಿಯಬಹುದು !
ಇದರ ಜೊತೆಗೆ ಅನ್ಯಭಾಷಾಶಬ್ದಗಳಿಂದ ಮೂಡಿದ ನುಡಿಗಟ್ಟುಗಳ ಗೋಜೂ ಸಹ ತಾನಾಗಿಯೇ 
ಮಾಯವಾಗುತ್ತದೆ, ಜಾನಪದದ ಅರಕೆರೆಯಲ್ಲಿ ಮೀಯುವ ಕೆಲಸ ಮಾಡಿದರೆ. ಉದಾಹರಣೆಗೆ ದೇಟು ಕೊಡು
 < ೪ಗಞಘಿ ಕೊಡು, ನೇಟಾಗು < ಇಗಞಘಿ ಆಗು, ಸಾರ್ವೇಸಾಗು < ಐಘ್ಜಿಟಚ್ಗಘಿ 
ಆಗು, ಕೀವು (<ಎಞಘಿ)ಗಟ್ಟು = ಸಾಲುಗಟ್ಟು, ಲಾಜಾದಲ್ಲಿ ಬರು < ಲಹಜ್ (ಉ)= 
ಕಣ್ಣುಮಿಟುಕುವಷ್ಟರಲ್ಲಿ ಬರು, ನುಡಿಗಟ್ಟುಗಳಲ್ಲಿರುವ ಅನ್ಯ ಭಾಷಾಶಬ್ದಗಳ ರೂಪ 
ಬದಲಾವಣೆಯನ್ನು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಕೀವುಗಟ್ಟು ಎಂಬುದಕ್ಕೆ ಸೆಪ್ಟಿಕ್ ಆಗು
 ಎಂದು ಅರ್ಥ ಮಾಡಿದರೆ ತಪ್ಪಾಗುತ್ತದೆ. ಆದ್ದರಿಂದ ಭಾಷಾಶಾಸ್ತ್ರಜ್ಞರು ತಾರುಬಾರಾಗಿ 
ಬಿದ್ದಂತಿರುವ ಇವುಗಳನ್ನು ಒಪ್ಪ ಓರಣವಾಗಿ ಜೋಡಿಸುವ, ಅರ್ಥೈಸುವ ಅಧ್ಯಯನವನ್ನು 
ಕೈಗೊಳ್ಳಬೇಕಾಗುತ್ತದೆ.
೫
ನುಡಿಗಟ್ಟುಗಳನ್ನು ಅಧ್ಯಯನಕ್ಕಾಗಿ ಅನುಭಾವ ಮೂಲದವು, ಸಂಸ್ಕೃತಿ ಮೂಲದವು, ಇತಿಹಾಸ 
ಮೂಲದವು, ಪುರಾಣ ಮೂಲದವು, ಆಚರಣಾ ಮೂಲದವು, ಬೈಗುಳ ಮೂಲದವು, ಬೇಸಾಯ ವೃತ್ತಿ ಮೂಲದವು, 
ವೇಶ್ಯಾ ವೃತ್ತಿ ಮೂಲದವು, ಇತರ ವೃತ್ತಿ ಮೂಲದವು, ಪುರೋಹಿತಶಾಹಿ ವೃತ್ತಿಯ ಟೀಕಾ 
ಮೂಲದವು, ಶೋಷಣಾ ಮೂಲದವು, ಶ್ರೀಮಂತಿಕೆ ಮೂಲದವು, ದಾರಿದ್ಯ್ರ ಮೂಲದವು, ಶರೀರದ ಅಂಗಾಂಗ 
ಮೂಲದವು ಎಂದು ಬಗೆಬಗೆಯಾಗಿ ವಿಂಗಡಿಸಬಹುದು.
ಅನುಭಾವ ಮೂಲದ ನುಡಿಗಟ್ಟುಗಳನ್ನೀಗ ಅವಲೋಕಿಸಬಹುದು. “ದೀಪ ತುಂಬು” ಎಂಬ ನುಡಿಗಟ್ಟು 
ನಮ್ಮ ಜನಪದರ ಅನುಭಾವ ದೃಷ್ಟಿಗೆ ಪೂರಕವಾಗಿದೆ. ಮಕ್ಕಳು “ಬೆಳಕಿದ್ರೆ ನಿದ್ದೆ ಬರಲ್ಲ, 
ದೀಪ ಆರಿಸು” ಎಂದರೆ, ಹಿರಿಯರು ಅವರನ್ನು ಬೈದು, “ದೀಪ ಆರಿಸು ಅನ್ನಬಾರದು, ದೀಪ ತುಂಬು”
 ಎನ್ನಬೇಕು ಎಂದು ಹೇಳುತ್ತಾರೆ. ಅಂದರೆ ಅವರ ದೃಷ್ಟಿಯಲ್ಲಿ ಜ್ಯೋತಿ (ಚೈತನ್ಯ) 
ಶಾಶ್ವತವಾದದ್ದು, ಆದ್ದರಿಂದ ಈ ಖಂಡ ಜ್ಯೋತಿಯನ್ನು ಆ ಅಖಂಡ ಜ್ಯೋತಿಯೊಡನೆ ತುಂಬು 
(ಸೇರಿಸು) ಎಂದು ಹೇಳಬೇಕೆಂಬುದು ಅವರ ಅನುಭಾವದ ಆಶಯ. ಹಾಗೆಯೇ “ದೀಪ ದೊಡ್ಡದು ಮಾಡು” 
(ದೀಪ ಆರಿಸು) ಎಂಬ ನುಡಿಗಟ್ಟಿನಲ್ಲೂ ಸಹ ಈ ಸಣ್ಣ ಜ್ಯೋತಿಯನ್ನು ಆ ದೊಡ್ಡ ಜ್ಯೋತಿಯೊಡನೆ
 ಸಂಲಗ್ನಗೊಳಿಸು ಎಂಬ ಅರ್ಥವೇ ಇದೆ. ದೇಹ ನಶ್ವರವಾದರೂ ಆತ್ಮ ಅಮರ ಎಂಬ ಭಾವ ಈ ಎರಡು 
ನುಡಿಗಟ್ಟುಗಳಲ್ಲಿ ಇದ್ದಂತಿದೆ. ಈ ನಿಲುವಿಗೆ “ಕಂತೆ ಒಗೆ” ಎಂಬ ನುಡಿಗಟ್ಟು 
ಪೂರಕಾಂಶವನ್ನು ಒದಗಿಸುತ್ತದೆ. ಕಂತೆ ಎಂದರೆ ಮೀಸಲುಗಂಬಳಿ. ಕಂತೆ ಒಗೆ ಎಂದರೆ ಶರೀರ 
ತ್ಯಜಿಸು ಎಂದು. ಈ ನುಡಿಗಟ್ಟಿಗೆ ಒಂದು ಹಿನ್ನೆಲೆ ಇದೆ : ಹಾಲುಮತದ ಕುರುಬ ಜನಾಂಗದ 
ಕುಲಗುರುವಾದ ರೇವನಸಿದ್ಧೇಶ್ವರ ಹಾಗೂ ಯೋಗಿವರೇಣ್ಯ ವಚನಕಾರ ಸಿದ್ಧರಾಮೇಶ್ವರರ ಜಾತ್ರೆಯ 
ಕಾಲದಲ್ಲಿ ಅವರ ಮೂರ್ತಿಗಳ ಕೆಳಗೆ ಹಾಕಿರುವ ಹಳೆಯ ಕಂತೆಗಳನ್ನು ತೆಗೆದು ಹೊಸ 
ಕಂತೆಗಳನ್ನು ಹಾಕುತ್ತಾರೆ. ರೇವಣಸಿದ್ಧೇಶ್ವರನ ಅನುಯಾಯಿಗಳಾದ ಒಡೇರಯ್ಯನೋರು 
(<ಒಡೆಯರು) ಉಪವಾಸವಿದ್ದು, ಮಡಿಯಲ್ಲಿ ಕುರಿ ತುಪ್ಪಟವನ್ನು ಬಿಲ್ಲಿನಿಂದ ಒಡಚದೆ, 
ಕೈಯಿಂದಲೇ ಎಳೆ ಎಳೆಯಾಗಿ ಹಿಂಜಿ, ಕೈಯಿಂದಲೇ ನೂಲು ತೆಗೆದು, ಕೈಯಿಂದಲೇ ಸಣ್ಣ 
ಮುಮ್ಮೂಲೆಯ ಮೀಸಲುಗಂಬಳಿಯನ್ನು ತಯಾರಿಸಿ, ಹಳೆಯ ಕಂತೆಯನ್ನು ತೆಗೆದು ಹೊಸ ಕ ಕಂತೆಯನ್ನು
 ಹಾಕುತ್ತಾರೆ. ಆದರೆ ಹಳೆಯ ಕಂತೆಯನ್ನು ಎಲ್ಲ ಆಚಾರವಿಚಾರಗಳೊಂದಿಗೆ ಹಳ್ಳಕ್ಕೆ 
ತೆಗೆದುಕೊಂಡು ಹೋಗಿ, ಅಲ್ಲಿ ಗುಂಡಿ ತೆಗೆದು,ಲ ಅದರೊಳಕ್ಕೆ ಹಾಕಿ ಮುಚ್ಚಿ ಬರುತ್ತಾರೆ. 
ಇದು ಸತ್ತ ಮನುಷ್ಯ ದೇಹವನ್ನು ಗುಂಡಿಯಲ್ಲಿ ಮುಚ್ಚುವ ಪ್ರಕ್ರಿಯೆಯನ್ನು ಹೋಲುತ್ತದೆ. 
ಹಳೆಯ ಕಂತೆಯನ್ನು ತೆಗೆದು ಅದರ ಜಾಗದಲ್ಲಿ ಹಾಕುವ ಹೊಸ ಕಂತೆ, ಆತ್ಮ ಧರಿಸುವ ಹೊಸ 
ಶರೀರಕ್ಕೆ ಸಂಕೇತವಾಗುತ್ತದೆ.
‘ಸಂತೆ ಯಾಪಾರ ಮುಗಿಸು’ (ಇಹಜೀವನ ತ್ಯಜಿಸು) ಎಂಬ ನುಡಿಗಟ್ಟು ಸಹ ಅನುಭಾವ ಮೂಲದ್ದೆ.
 ಸಂತೆ ಬೆಳಿಗ್ಗೆ ಸೇರಿ ಸಂಜೆಗೆ ಮುಕ್ತಾಯವಾಗುತ್ತದೆ. ಮೊದಲು ಸಂತೆಗೆ ಬಂದವರು ತಮ್ಮ 
ವ್ಯಾಪಾರ ಮುಗಿಸಿ ಮನೆಗೆ ಹಿಂದಿರುಗುವಾಗ, ತಡವಾಗಿ ಸಂತೆ ವ್ಯಾಪಾರಕ್ಕೆ ಹೊರಟವರು 
ಇವರಿಗೆ ಎದುರಾಗುತ್ತಾರೆ. ಅವರು ತಮ್ಮ ಸಂತೆ ವ್ಯಾಪಾರ ಮುಗಿಸಿಕೊಂಡು ತಡವಾಗಿ ತಮ್ಮ 
ಮನೆಗೆ ಹಿಂದಿರುಗುತ್ತಾರೆ. “ಹಿಂದು ಮುಂದು ಸಂತೆ ಹಾದಿ” ಎಂಬ ಜನಪದ ಗಾದೆ ಇದೇ 
ಆಶಯವನ್ನು ಪ್ರತಿಬಿಂಬಿಸುತ್ತದೆ. ಜೀವನವೂ ಸಹ ಹೀಗೆಯೇ ಎಂಬ ಸತ್ಯ ಇದರಿಂದ 
ವ್ಯಕ್ತವಾಗುತ್ತದೆ.
ಸಂಸ್ಕೃತಿ ಮೂಲದ ನುಡಿಗಟ್ಟುಗಳನ್ನೀಗ ಪರಿಶೀಲಿಸಬಹುದು. ‘ಕರಬಿಟ್ಟುಕೊಳ್ಳು’ (= 
ಹಾಲು ಕರೆದುಕೊಳ್ಳು) ಎಂಬ ನುಡಿಗಟ್ಟು ನಮ್ಮ ಜನಪದ ಸಂಸ್ಕೃತಿಗೆ ತೋರು ಬೆರಳಾಗಿದೆ. 
ವೇಳೆಯನ್ನು ತಿಳಿಸುವ ಗಡಿಯಾರ ಸಮಾಜದೊಳಕ್ಕೆ ಅಡಿ ಇರಿಸುವ ಮುನ್ನ, ಜನಪದರು ತಮ್ಮದೇ ಆದ 
ಪರಿಭಾಷೆಯಲ್ಲಿ ಹೊತ್ತನ್ನು ಗೊತ್ತು ಮಾಡುತ್ತಿದ್ದರು. ಪೂರ್ವಾಹ್ನದ ಕಾಲಗಣನೆ ಬಿಟ್ಟು, 
ಇಲ್ಲಿ ತೀರಾ ಪ್ರಸ್ತುತವಾದ ಅಪರಾಹ್ನದ ಕಾಲಗಣನೆಯನ್ನು ಮಾತ್ರ ಪ್ರಸ್ತಾಪಿಸುತ್ತೇನೆ. 
ಆರು ಕಟ್ಟೋ ಹೊತ್ತು, ಆರು ಬಿಡೋ ಹೊತ್ತು, ಮನೆಗೆ ದನ ಬರೋ ಹೊತ್ತು, ದೀಪ ಹಚ್ಚೋ 
ಹೊತ್ತು, ಕರಬಿಟ್ಟುಕೊಳ್ಳೋ ಹೊತ್ತು, ಉಣ್ಣೋ ಹೊತ್ತು, ಮಲಗೋ ಹೊತ್ತು ಇತ್ಯಾದಿ. ಇಲ್ಲಿ 
ಕರಬಿಟ್ಟುಕೊಳ್ಳುವ ಹೊತ್ತು ಬಂದ ಮೇಲೆ ಉಣ್ಣುವ ಹೊತ್ತು ಬಂದಿದೆ. ಉಣ್ಣುವ ಹೊತ್ತು ಬಂದ 
ಮೇಲೆ, ಕರಬಿಟ್ಟುಕೊಳ್ಳುವ ಹೊತ್ತು ಬಂದಿಲ್ಲ. ಈ ಕಾಲಾನುಕ್ರಮಣಿಕೆಯೇ ಮೂಲಕ ಪ್ರಾಣಿಗಳ 
ಬಗೆಗಿನ ಅವರ ಅನುಕಂಪದ ನಿಲುವನ್ನು, ಸಂಸ್ಕೃತಿಯನ್ನು ಸಾದರ ಪಡಿಸುತ್ತದೆ. ಜನಪದರ 
ನುಡಿಗಟ್ಟಿಗೆ ಚಿತ್ರಕ ಶಕ್ತಿ ಇರುತ್ತದೆ. ಹಾಲು ಕರೆದುಕೊಳ್ಳು ಎಂದು ಹೇಳಿದ್ದರೆ ಈ 
ಚಿತ್ರಕಶಕ್ತಿ ಪ್ರಾಪ್ತವಾಗುತ್ತಿರುಲಿಲ್ಲ. ಹಾಲು ಕರೆದುಕೊಳ್ಳಬೇಕಾದರೆ ಮೊದಲು 
ಕರುವನ್ನು ಬಿಡಬೇಕು. ಅದು ತಾಯಿಯ ಕೆಚ್ಚಲಿಗೆ ಬಾಯಿ ಹಾಕಿ, ಮುಸುಡಿಯಿಂದ ಕೆಚ್ಚಲನ್ನು 
ಗುದ್ದಿ ಹಾಲು ಕುಡಿಯಲು ತೊಡಗಿದಾಗ, ಹಸು ‘ಸೊರ’ ಬಿಡುತ್ತದೆ. ಕೆಚ್ಚಲಿನ ತುಂಬ ಹಾಲು 
ಇಳಿದುಕೊಳ್ಳುತ್ತದೆ, ಮೊಲೆಯಿಂದ ಜಿನುಗತೊಡಗುತ್ತದೆ. ಕರುವಿನ ಪಾಲು ಸಂದ ಮೇಲೆ ನಾವು 
ಹಾಲು ಕರೆದುಕೊಳ್ಳಬೇಕಾಗುತ್ತದೆ. ಈ ಎಲ್ಲ ಕ್ರಿಯಾನುಕ್ರಮಣಿಕೆ ನುಡಿಗಟ್ಟಿನಲ್ಲಿ 
(ಬಿಟ್ಟು + ಕೊಳ್ಳು = ಮೊದಲು ಕರಬಿಟ್ಟು ತರುವಾಯ ಹಾಲು ಕರೆದುಕೊಳ್ಳು) ಒಡ ಮೂಡಿದೆ. 
ಬೆಳಿಗ್ಗೆ ನಾಷ್ಟಕ್ಕೆ ಮುನ್ನ, ರಾತ್ರಿ ಊಟಕ್ಕೆ ಮುನ್ನ ಕರಬಿಟ್ಟುಕೊಳ್ಳುವ ಗ್ರಾಮೀಣ 
ಸಂಸ್ಕೃತಿ, ಮೂಕ ಪ್ರಾಣಿಗಳ ಬಗೆಗಿನ ಅವರ ಪ್ರೀತಿಯ ನಿಲುವನ್ನು ಸಾದರಪಡಿಸುತ್ತದೆ.
ದಾನ ಮಾಡಿ ಜೀವಿಸು ಅಥವಾ ಹಂಚಿಕೊಂಡು ತಿನ್ನು ಎಂಬ ಅರ್ಥದ ‘ಕೊಟ್ಟು ಬದುಕು’ ಎಂಬ 
ನುಡಿಗಟ್ಟು ಜನಪದ ಸಂಸ್ಕೃತಿಯ ಉಸಿರು ಎನ್ನಬಹುದು. ಹಂಚಿ ಉಂಡರೆ ಹಸಿವಿಲ್ಲ, ತಿರ್ಕೊಂಡು
 ಬಂದ್ರೂ ಕರ್ಕೋಂಡುಣ್ಣು, ಹಣ್ಣು ಕೊಟ್ಟು ತಿನ್ನು ಹುವ್ವ ಕೊಟ್ಟು ಮುಡಿ, ಇಕ್ಕದೋರಿಗೆ 
ಇಕ್ಕಿ ನೋಡು ಕೊಡದೋರಿಗೆ ಕೊಟ್ಟು ನೋಡು ಎಂಬ ಜನಪದೆ ಗಾದೆಗಳು ಕೊಟ್ಟು ಬದುಕುವ ಜನಪದರ 
ಮನೋಧರ್ಮವನ್ನು ಅನಾವರಣ ಮಾಡುತ್ತವೆ. ಕೊಟ್ಟು ಬದುಕುವವರಿಗೂ ಕೆಟ್ಟು ಬದುಕುವವರಿಗೂ 
ಅಜಗಜಾಂತರವಿದೆ.
ಕಳಿಸಿ ಕೊಡು ಎಂಬ ಅರ್ಥದ ‘ಸಾಗು ಹಾಕು’ ಎಂಬ ನುಡಿಗಟ್ಟು ನಮ್ಮ ಜನಪದರ ಸಂಸ್ಕೃತಿಗೆ 
ಹೆಗ್ಗುರುತು. ಮನೆಗೆ ಬಂದ ನೆಂಟರನ್ನು, ಅತಿಥಿ ಅಭ್ಯಾಗತರನ್ನು ಜನಪದರು ಮನೆಯಲ್ಲಿ 
ಇದ್ದುಕೊಂಡೇ ‘ಹೋಗಿ ಬನ್ನಿ’ ಎಂದು ಹೇಳುವುದಿಲ್ಲ. ಅವರ ಜೊತೆ ಸಾಕಷ್ಟು ದೂರ ಹೋಗಿ, 
ನೀರು ಅಥವಾ ನೆರಳು ಸಿಗುವ ಸ್ಥಳದವರೆಗೂ ಹೋಗಿ, ‘ಹೋಗಿ ಬನ್ನಿ’ ಎಂದು ಕಳಿಸಿ ಕೊಟ್ಟು 
ಬರುತ್ತಾರೆ. ಆದರೆ ಇಂದು ನಾಗರಿಕತೆಯ ನಾಗಾಲೋಟದಲ್ಲಿ ಮೈಮರೆತ ಎಷ್ಟೋ ಜನ ಸುಶಿಕ್ಷಿತರು 
ಅತಿಥಿ ಅಭ್ಯಾಗತರನ್ನು ಕಳಿಸಲು ಬಾಗಿಲವರೆಗಾದರೂ ಎದ್ದು ಹೋಗದೆ, ಕುಳಿತ ಕುರ್ಚಿಯಲ್ಲೇ 
‘ಹೋಗಿ ಬನ್ನಿ’ ಎಂಬಂತೆ ಮರದ ಮೇಲಿನ ಓತಿಕ್ಯಾತನಂತೆ ತಲೆಗುಮುಕು ಹಾಕುವುದನ್ನು ಕಂಡಾಗ, 
ಕನಕದಾಸರು “ಮೆಚ್ಚನಯ್ಯ ಹರಿ ಮೆಚ್ಚನಯ್ಯ” ಎಂಬ ಕೀರ್ತನೆಯಲ್ಲಿ ಹೇಳಿರುವ ಮಾತುಗಳು 
ನೆನಪಾಗುತ್ತವೆ :
ಉತ್ತಮನೆಂದಿಸಿಕೊಂಡು ಅರುಣೋದಯದ ಕಾಲದಲ್ಲಿ
ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗವ ಮನುಜನ ||೧||
ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗವ ಮನುಜನ ||೧||
ತೊಗಲಿನ ದೇಹಕೆ ಗೋಪಿಚಂದನ ತೇದುಕೊಂಡು
ರೋಗ ಬಂದೆಮ್ಮೆಯ ಹಾಗೆ ಬರೆಗೊಂಬ ಮನುಜನ ||೨||
ರೋಗ ಬಂದೆಮ್ಮೆಯ ಹಾಗೆ ಬರೆಗೊಂಬ ಮನುಜನ ||೨||
ಮರುಳತನವು ಮಾತಿನಲ್ಲಿ ವಿಷದ ಘುಟಿಕೆ ಹೃದಯದಲ್ಲಿ
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನ ||೩||
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನ ||೩||
ಈಗ ಇತಿಹಾಸ ಮೂಲದ ನುಡಿಗಟ್ಟುಗಳ ಮೇಲೆ ಕಣ್ಣಾಡಿಸೋಣ. ‘ಬದುಕು ನಾರಿ ನರಿ ಪಾಲಾಗು’ 
ಎಂಬ ನುಡಿಗಟ್ಟು ಸಾಮಾಜಿಕ ಸತ್ಯವಾಗಿ ನಮಗೆ ತೋರಿದರೂ ಇತಿಹಾಸದ ಹೊಕ್ಕುಳ ಬಳ್ಳಿ 
ಸಂಬಂಧವಿದೆ ಎಂಬುದು “ನಂದ ರಾಜನ ಬದುಕು ನಾರಿ ನರಿ ಪಾಲಾಯಿತು” ಎಂಬ ಗಾದೆಯಿಂದ ತಿಳಿದು 
ಬರುತ್ತದೆ. ನಂದರು ಕರ್ನಾಟಕವನ್ನು ಆಳಿದ ಅರಸುಮನೆತನಗಳಲ್ಲೊಂದು. ಅವರ ಕಾಲದಲ್ಲಿ ಚರ್ಮದ
 ನಾಣ್ಯಗಳನ್ನು ಚಾಲ್ತಿಗೆ ತಂದಿದ್ದರೆಂದೂ, ಆ ಕಾರಣದಿಂದ ನಾಯಿನರಿಗಳು ಕಚ್ಚಿಕೊಂಡು 
ಹೋಗುತ್ತಿದ್ದವೆಂದೂ ಐತಿಹ್ಯವಿದೆ. ಆದ್ದರಿಂದ ಇತಿಹಾಸಕಾರರು ಇದರ ಸತ್ಯಾಸತ್ಯತೆಯ ಬಗೆಗೆ
 ಬೆಳಕು ಚೆಲ್ಲಬೇಕಾಗಿದೆ.
ಇಲ್ಲಿ ತೋರಿ ಅಲ್ಲಿ ಹಾರು ಎಂಬ ಅರ್ಥದ ‘ಕಂಚೀಲಿ ಮಿಂಚಿ ಕಾಳಹಸ್ತೀಲಿ ಗುಡುಗು’ ಎಂಬ 
ನುಡಿಗಟ್ಟನ್ನು ಕರ್ನಾಟಕದ ಹಳ್ಳಿಗಾಡಿನ ಅವಿದ್ಯಾವಂತ ಹೆಣ್ಣೊಬ್ಬಳು ತನ್ನ ಮಾತಿನಲ್ಲಿ 
ಬಳಸಿದಾಗ ನನಗೆ ಸೋಜಿಗವಾಯಿತು. ಕರ್ನಾಟಕದ ಅರಸು ಮನೆತನಗಳು ನೆರೆ ರಾಜ್ಯದ ಮೇಲೆ 
ದಂಡೆತ್ತಿ ಹೋಗಿ ತಮ್ಮ ವಶಕ್ಕೆ ಆ ಭಾಗಗಳನ್ನು ತೆಗೆದುಕೊಂಡದ್ದು ಇತಿಹಾಸದಿಂದ ತಿಳಿದು 
ಬರುತ್ತದೆ. ಅದರಲ್ಲಿ ಭಾಗವಹಿಸಿದ ಸೈನಿಕ ಕುಟುಂಬಗಳ ಸದಸ್ಯರ ಅಜ್ಞಾತ ಮನಸ್ಸಿನಲ್ಲಿ 
ಅವಿತುಕೊಂಡಿದ್ದ ಆ ಚಾರಿತ್ರಿಕ ಅಂಶ ಹೀಗೆ ಒಡಮೂಡಿದೆಯೆ? ಎಂಬುದನ್ನು ಇತಿಹಾಸಕಾರರು ಒರೆ
 ಹಚ್ಚಿ ಹೇಳಬೇಕಾಗಿದೆ.
ಅವಮಾನಗೊಳಿಸು ಎಂಬ ಅರ್ಥದ ‘ಮೂಗಿನ ಮೇಲೆ ಸುಣ್ಣ ಹಚ್ಚು’ ಎಂಬ ನುಡಿಗಟ್ಟು ವಿಜಯನಗರ 
ಸಾಮ್ರಾಜ್ಯ ಸಂಸ್ಥಾಪಕರಲ್ಲಿ ಒಬ್ಬನಾದ ಬುಕ್ಕರಾಯನ ಅವಧಿಯಲ್ಲಿ ಜರುಗಿದ ಐತಿಹಾಸಿಕ 
ಘಟನೆಯ ಕೂಸು ಎಂದು ಹೇಳಲಾಗುತ್ತದೆ. ಸಮರ್ಥನೂ ದಕ್ಷನೂ ಆದ ಬುಕ್ಕರಾಯನನ್ನು ತನ್ನ ಸಾಮಂತ
 ರಾಜನೆಂದು ಪರೋಕ್ಷವಾಗಿ ಸಾಬೀತು ಮಾಡಲು, ಬಹಮನಿ ಸುಲ್ತಾನ ತನ್ನ ಆಸ್ಥಾನದಲ್ಲಿ ಸಂಗೀತ 
ಹಾಡಿದ ಸಂಗೀತಗಾರನಿಗೆ ಗೌರವ ಧನವನ್ನು ಕೊಡದೆ, ಒಂದು ಪತ್ರ ಬರೆದು ಕೊಟ್ಟು, ಇದನ್ನು 
ಬುಕ್ಕರಾಯನಿಗೆ ತೋರಿಸು, ನಿನಗೆ ಗೌರವಧನ ಕೊಡುತ್ತಾನೆ ಎಂದು ಹೇಳಿ ಕಳಿಸುತ್ತಾನೆ. 
ಅದನ್ನು ಸಂಗೀತಗಾರ ಬುಕ್ಕರಾಯನಿಗೆ ತೋರಿಸಿದಾಗ, ಸುವ್ವಿ ಎನ್ನುವಾಗಲೇ ರಾಗ ಯಾವುದೆಂದು 
ಕೂಡಲೇ ಗ್ರಹಿಸಬಲ್ಲ ರಾಜಕೀಯ ಚಾಣಾಕ್ಷತೆಯುಳ್ಳ ಬುಕ್ಕರಾಯ ಸುಲ್ತಾನನ ಹಿಕ್‌ಮತ್ತನ್ನು 
ಅರ್ಥ ಮಾಡಿಕೊಂಡು, ಸಂಗೀತಗಾರನ ಮೂಗಿನ ಮೇಲೆ ಸುಣ್ಣದ ಪಟ್ಟೆ ಎಳೆದು, ಇದನ್ನು 
ಸುಲ್ತಾನನಿಗೆ ತೋರಿಸು ಎಂದು ಕಳಿಸಿದನೆಂದು ತಿಳದು ಬರುತ್ತದೆ. ಜನಪದ ಮನಸ್ಸು ಆ 
ಘಟನೆಯನ್ನು ತನ್ನದೇ ಆದ ರೀತಿಯಲ್ಲಿ ‘ಬುಕ್ಕರಾಯ ಮೆಚ್ಚಿ ಬೆಕ್ಕಿನ ಮರಿ ಕೊಟ್ಟ’ ಎಂಬ 
ಗಾದೆಯ ರೂಪದಲ್ಲಿ ಕಟ್ಟಿ ಕೊಟ್ಟಿದೆ. ಕಂಕುಳದಲ್ಲಿರುವ ಬೆಕ್ಕಿನಮರಿ ಉಚಿತಾನುಚಿತ 
ಸ್ಥಾನದ ಪರಿವೆ ಇಲ್ಲದೆ ಮಿಂಯಾವ್ ಎನ್ನುವುದನ್ನೂ, ಅದನ್ನು ಕೇಳಿದ ಜನರು ನಕ್ಕಾಗ ಆಗುವ 
ಅವಮಾನವನ್ನು ಅದು ಗರ್ಭೀಕರಿಸಿಕೊಂಡಿದೆ. ಹದಿನಾರನೆಯ ಶತಮಾನದ ಕನಕದಾಸರ ಮೋಹನ 
ತರಂಗಿಣಿಯಲ್ಲೂ ಅವಮಾನಗೊಳಿಸು ಎಂಬ ಅರ್ಥದಲ್ಲಿ ಮೂಗಿನ ಮೇಲೆ ಸುಣ್ಣ ಹಚ್ಚುವ ನುಡಿಗಟ್ಟು
 ಬಳಕೆಯಲ್ಲಿತ್ತು ಎಂಬುದನ್ನು, ರತಿ ಪ್ರದ್ಯುಮ್ನನಿಗೆ ತಾಂಬೂಲ ಸೇವನೆ ಮಾಡಿಸಲೋಸುಗ 
ಎಲೆಗೆ ಸುಣ್ಣ ಹಚ್ಚುವುದನ್ನು ಹೀಗೆ ವರ್ಣಿಸಲಾಗಿದೆ-” ತನ್ನ ಕಣ್ಣಾರೆ ಕಂಡು ಮಚ್ಚರಿಪ 
ಹೆಣ್ಣಾವಳವಳ ಮೂಗಿನ ಮೇಲೆ ಬರೆವಂತೆ”. ಆದ್ದರಿಂದ ಇತಿಹಾಸಕಾರರು ಬಹಮನಿಸುಲ್ತಾನ, 
ಸಂಗೀತಗಾರ, ಬುಕ್ಕರಾಯ – ಇವರ ಮಧ್ಯೆ ಜರುಗಿದ ಘಟನೆಯನ್ನು ಮತ್ತೊಮ್ಮೆ ಮೆಲುಕು 
ಹಾಕಬೇಕಾದ ಅಗತ್ಯವಿದೆ.
ಈಗ ಪುರಾಣ ಮೂಲದ ನುಡಿಗಟ್ಟುಗಳನ್ನು ಜರಡಿ ಹಿಡಿಯೋಣ. ಹಾಳಾಗು, ಸರ್ವನಾಶವಾಗು ಎಂಬ 
ಅರ್ಥದ ‘ಏಳು ಹನ್ನೊಂದಾಗು’ ಎಂಬ ನುಡಿಗಟ್ಟನ್ನು ಪರಿಶೀಲಿಸಬಹುದು. ಇದು ಕುರುಕ್ಷೇತ್ರ 
ಯುದ್ಧದ ಸರ್ವನಾಶವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಪಾಂಡವರದು ಏಳು ಅಕ್ಷೋಹಿಣಿ
 ಸೈನ್ಯ, ಕೌರವರದು ಹನ್ನೊಂದು ಆಕ್ಷೋಹಿಣಿ ಸೈನ್ಯ. ಒಟ್ಟು ಹದಿನೆಂಟು ಅಕ್ಷೋಹಿಣಿ 
ಸೈನ್ಯ. ಯುದ್ಧ ನಡೆದದ್ದೂ ಹದಿನೆಂಟು ದಿನಗಳವರೆಗೆ, ಕೊನೆಗೆ ಎಲ್ಲವೂ ನಾಶವಾದದ್ದನ್ನು 
ಏಳು ಹನ್ನೊಂದು (=೧೮) ಸಂಖ್ಯೆಯ ನುಡಿಗಟ್ಟು ಧ್ವನಿಸುತ್ತದೆ.
ನೆಲ ಕಚ್ಚು ಎಂಬ ಅರ್ಥದ ‘ಶಸ್ತ್ರ ನೆಲಕ್ಕೆ ಹಾಕು’ ಎಂಬ ನುಡಿಗಟ್ಟು ಮಹಾಭಾರತದ 
ಪ್ರಸಂಗವೊಂದರ ಕೂಸು. ಯುದ್ಧದಲ್ಲಿ ತನ್ನ ಒಡಹುಟ್ಟಿದ ಸಹೋದರರನ್ನೇ ಕೊಲ್ಲಬೇಕಾದ ದಾರುಣ 
ಪ್ರಸಂಗ ಬಂದಾಗ ‘ನನ್ನ ಕೈಯಿಂದ ಸಾಧ್ಯವಿಲ್ಲ’ ಎಂದು ಅರ್ಜುನ ತನ್ನ ಕೈಯಲ್ಲಿದ್ದ 
ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಎಸೆದನೆಂದೂ, ಕೃಷ್ಣನ ಉಪದೇಶದಿಂದ ಮತ್ತೆ ಯುದ್ಧಕ್ಕೆ 
ನಿಂತನೆಂದೂ ಕಥೆ ಇದೆ. ಅದು ಇಲ್ಲಿ ವ್ಯಕ್ತಿ ಅಪವಾದಕ್ಕೋ ಕಷ್ಟಕ್ಕೋ ಒಳಗಾಗಿ 
ನಿರ್ವೀರ್ಯನಾಗಿ ನೆಲಕಚ್ಚಿ ಮಲಗಿದ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಆದ್ದರಿಂದ ಇಲ್ಲಿ 
ಶಸ್ತ್ರಕ್ಕೆ ತಲೆ ಎಂಬ ಅರ್ಥ ಆವಾಹನೆಗೊಂಡಿದೆ.
ಚಾಡಿ ಮಾತು ಕೇಳು ಎಂಬ ಅರ್ಥದ ‘ಹೇಳಿಕೆ ಮಾತು ಕೇಳು’ ಎಂಬ ನುಡಿಗಟ್ಟು ರಾಮಾಯಣಕ್ಕೆ 
ಸಂಬಂಧಿಸಿದ್ದು. ರಾವಣ ಸಂಹಾರದ ನಂತರ ಸೀತೆಯನ್ನು ಕರೆತಂದ ರಾಮ, ರಜಕನೊಬ್ಬನು ಆಡಿದ 
ಮಾತನ್ನು ಧೂತನೊಬ್ಬನಿಂದ ಕೇಳಿ, ರಾಮ ಗರ್ಭಿಣಿ ಸೀತೆಯನ್ನು ಕಾಡುಪಾಲು ಮಾಡುತ್ತಾನೆ. 
ಬಗುಳುವುದು ನಾಯಿಗಳ ಜಾಯಮಾನ ಎಂದು ರಾಮ ಸಹಿಸಿಕೊಂಡಿರಬಹುದಿತ್ತು. ಆದರೆ ಜನರ ಕಣ್ಣಲ್ಲಿ
 ತಾನು ಆದರ್ಶ ರಾಜನೆನ್ನಿಸಿಕೊಳ್ಳಬೇಕೆಂದು, ಕೈಹಿಡಿದ ನಿರಪರಾಧಿ ಹೆಂಡತಿಯನ್ನು 
ಕಾಡುಪಾಲು ಮಾಡಿ ಆದರ್ಶಹೀನನಾದ ಎಂಬುದನ್ನು ಸೂಚಿಸುವಂತೆ “ಹೇಳಿಕೆ ಮಾತು ಕೇಳಿ 
ಹೆಂಡ್ರನ್ನ ಬಿಟ್ಟ” ಎಂಬ ಜನಪದ ಗಾದೆ ಪೌರಾಣಿಕ ಹಾಗೂ ಎಲ್ಲಾ ಕಾಲದ ಸಾಮಾಜಿಕ 
ಗಾದೆಯಾಗಿಯೂ ಬಳಕೆಯಾಗುವುದನ್ನು ಕಾಣಬಹುದು.
ಆತುಕೊಳ್ಳು, ರಕ್ಷಿಸು ಎಂಬ ಅರ್ಥದ ‘ಆಲ್ಯ ಆಗು’ ಎಂಬ ನುಡಿಗಟ್ಟೂ ಸಹ ರಾಮಾಯಣದ 
ಒಡಲಿಂದ ಒಡಮೂಡಿದ್ದು, ಶಾಪದಿಂದ ಕಲ್ಲಾಗಿದ್ದ ಅಹಲ್ಯೆ ರಾಮನ ಪಾದ ಸ್ಪರ್ಶದಿಂದ ಮತ್ತೆ 
ಜೀವಂತಯಾಗುವ ಪ್ರಸಂಗದ್ದು. ಅಹಲ್ಯ > ಆಲ್ಯ ಆಗಿದೆ ಅಷ್ಟೆ, ಜನರ ಬಾಯಲ್ಲಿ. ರಾಮ 
ಅಹಲ್ಯೆಯನ್ನು ಆತುಕೊಂಡಂತೆ ಅಥವಾ ರಕ್ಷಿಸಿದಂತೆ, ನೀನು ನಮ್ಮನ್ನು ಕಷ್ಟ ಕಾಲದಲ್ಲಿ 
ಆತುಕೊಂಡು ಜೀವಕೊಟ್ಟೆ ಎಂದು ಹೇಳುವಾಗ ಈ ನುಡಿಗಟ್ಟು ಬಳಕೆಯಾಗುತ್ತದೆ.
ಆಚರಣಾಮೂಲದ ನುಡಿಗಟ್ಟುಗಳನ್ನೀಗ ಆಲೋಢನೆ ಮಾಡಬಹುದು. ‘ಎದೆ ಮೇಲೆ ಕುಕ್ಕು’ ಎಂಬ 
ನುಡಿಗಟ್ಟು, ಗಂಡ ಸತ್ತಾಗ ಅವನ ಹೆಣದ ಎದೆಯ ಮೇಲೆ ತನ್ನ ಕೈ ಬಳೆಗಳನ್ನು ಕುಕ್ಕಿ 
ಬರಿಗೈಯಾಗುವ, ಕುಂಕುಮ ಅಳಿಸಿ ಬೋಳು ಹಣೆಯಾಗುವ ಆಚರಣೆಯಿಂದ ಮೂಡಿ ಬಂದದ್ದು. ಯಾರಿಗೋ 
ಲಂಚವನ್ನು ಕೊಟ್ಟಾಗ ಅಥವಾ ದಂಡ ತೆತ್ತಾಗ ತಾವು ಬರಿಗೈಯಾದುದನ್ನು ಜನರು “ನಾನು 
ಕೂಡಿಟ್ಟದ್ದನ್ನೆಲ್ಲ ಅವನ ಎದೆ ಮೇಲೆ ಕುಕ್ಕಿದೆನಲ್ಲ” ಎಂದು ಹೇಳುವುದುಂಟು.
 
 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ