ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಇ)
೧೮೨. ಇಕ್ಕಟ್ಟಾಗು = ಕಿಷ್ಕಿಂಧವಾಗು, ತೊಂದರೆಯಾಗು(ಇಕ್ಕಟ್ಟು < ಇರ್ಕಟ್ಟು < ಎರಡು ಕಟ್ಟು = ಇರುಕಲು, ಕಿರಿದು ಜಾಗವಾಗಿರು)
ಪ್ರ : ಗಾದೆ – ಇಕ್ಕಟ್ಟಿನ ಜಾಗಕ್ಕೆ ಇರುಕುಚ್ಚೆ ನಂಟ ಬಂದ
೧೮೩. ಇಕ್ಕಟ್ಟಿಗೆ ಸಿಕ್ಕಿಸಿಕೊಂಡು ಇರುಕಿಸು = ತೊಂದರೆಗೆ ಸಿಕ್ಕಿಸಿ ಕಣ್ಣುಬಾಯಿ ಬಿಡಿಸು, ಹಿಂಸಿಸು.
(ಇಕ್ಕಟ್ಟು = ಇರುಕಲು, ಸಿರುಕಲು, ಇರುಕಿಸು = ಒತ್ತು, ಉಸಿರು ಕಟ್ಟಿಸು)
ಪ್ರ : ದೀನ ದಲಿತರನ್ನು ಇಕ್ಕಟ್ಟಿಗೆ ಸಿಕ್ಕಿಸಿಕೊಂಡು ಇರುಕಿಸೋದು ಅಂದ್ರೆ ಶೋಷಕರಿಗೆ ಪರಮಾನಂದ
೧೮೪. ಇಕ್ಕುಳದಲ್ಲಿ ಸಿಕ್ಕು = ಕಷ್ಟಕ್ಕೊಳಗಾಗು, ಇಕ್ಕಟ್ಟಿಗೆ ಸಿಕ್ಕಿ ವಿಲಿವಿಲಿ ಒದ್ದಾಡು.
(ಇಕ್ಕುಳ < ಇರ್ಕುಳ < ಎರಡು + ಕುಳ = ಹಿಸುಕುವ ಲೋಹದ ಚಿಮ್ಮಟ)
ಪ್ರ : ಇಕ್ಕುಳದಲ್ಲಿ ಸಿಕ್ಕೊಂಡು ವಿಲಿ ವಿಲಿ ಒದ್ದಾಡ್ತಾ ಇದ್ದೀನಿ.
೧೮೫. ಇಜ ಕೊಡು = ಹಿಂಸಿಸು, ಘಾಸಿಪಡಿಸು
(ಇಜ < ಇಜಾ (ಹಿಂ) = ಹಿಂಸೆ)
ಪ್ರ : ಕಾರ್ಕೋಟಕ ಗಂಡ ಕೊಡೋ ಇಜಾನ ಸಹಸಿಕೊಂಡು ಹೆಂಡ್ರು ಹೆಂಗೆ ಜೀವಂತ ಇದ್ದಾಳೋ !
೧೮೬. ಇಜ್ಜಲಾಗು = ಕಪ್ಪಾಗು, ಕರಿಯಾಗು
(ಇಜ್ಜಲು < ಇದ್ದಲು < ಇರುಂದು (ತ) = ಆರಿದ ಕೆಂಡ, ಕರಿ)
ಪ್ರ : ಬಿಸಿಲಲ್ಲಿ ಒಣಗಿ ಒಣಗಿ ಇಜ್ಜಲಾದಂಗಾಗವಳೆ.
೧೮೭. ಇಜ್ಜಲು ಮೂತಿಗೆ ಗೆಜ್ಜಲು ಹತ್ತು = ಸಾಯು
(ಇಜ್ಜಲು < ಇದ್ದಲು ; ಗೆಜ್ಜಲು < ಗೆದ್ದಲು)
ಪ್ರ : ಕೆಚ್ಚಲಿಗೆ ಕೈ ಹಾಕ್ತಾನಲ್ಲೆ, ಅವನ ಇಜ್ಜಲು ಮೂತಿಗೆ ಗೆಜ್ಜಲು ಹತ್ತ !
೧೮೮. ಇಟ್ಟಾಡು = ಚೆಲ್ಲಾಡು, ಎರಚಾಡು
ಪ್ರ : ನೀನು ಹಿಂಗೆ ಆಡಿದರೆ, ಪರಸಾದ ಇಟ್ಟಾಡಬೇಕು, ಹಂಗೆ ಕೊಡ್ತೀನಿ.
೧೮೯. ಇಟ್ಟು ಕೊಳ್ಳು = ಮೆಡಗಿಕೊಳ್ಳು, ಹೆಂಡತಿ ಇದ್ದೂ ಬೇರೊಬ್ಬಳನ್ನು ಅಲಾಯದೆ ಆಳು.
ಜಮೀನುದಾರರು, ಶ್ರೀಮಂತರು ಅಧಿಕೃತ ಹೆಂಡತಿ ಮನೆಯಲ್ಲಿದ್ದರೂ ಅನೇಕ ಅನಧಿಕೃತ ಹೆಂಡತಿಯರನ್ನು ಆಳುವುದು ತಮ್ಮ ದೊಡ್ಡಸ್ತಿಕೆಯ ಲಕ್ಷಣ ಎಂದು ಭಾವಿಸುತ್ತಿದ್ದರು – ದೊಡ್ಡತಿಕ ಅಡ್ಡಗಲ ಎಂದು. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು
ಪ್ರ : ಗಾದೆ – ಇಟ್ಕೊಂಡೋಳು ಇರೋತನಕ ಕಡ್ಕೊಂಡೋಳು ಕಡೇತನಕ
೧೯೦. ಇಡರಿಸಿ-ಹಿಟ್ಟಿಕ್ಕಿ ಮೇಲೊಂದು ಕೋಲಿಕ್ಕು = ಊಟಕ್ಕೆ ಬಡಿಸಿ ಘಾಸಿ ಪಡಿಸು
(ಇಡರು < ಇಡರ್ (ತ) = ತೊಂದರೆ, ತಡೆ; ಇಕ್ಕು = ಹೊಡೆ)
ಪ್ರ : ಅವಳು ಇಡರಿಸಿ ಹಿಟ್ಟಿಕ್ಕಿ ಮೇಲೊಂದು ಕೋಲಿಕ್ಕೋದು ನನಗೆ ಗೊತ್ತಿಲ್ವೇನು?
೧೯೧. ಇಡುಗಲ್ಲು ಹಿಡಿದು ನಿಂತಿರು = ಕೆಕ್ಕರಿಸುತ್ತಿದ್ದರು, ದ್ವೇಷ ಸಾಧಿಸುತ್ತಿದ್ದರು
(ಇಡು = ಇಕ್ಕು, ಹೊಡಿ; ಇಡುಗಲ್ಲು = ತಲೆ ಮೇಲೆ ಹಾಕುವ ಕಲ್ಲು)
ಪ್ರ : ದಾಯಾದಿಗಳು ನಮ್ಮ ಮೇಲೆ ಇಡುಗಲ್ಲು ಹಿಡಿದು ನಿಂತವರೆ.
೧೯೨. ಇತ್ತತ್ತ ಬರು = ಹತ್ತಿರ ಬರು, ಈ ಕಡೆಗೆ ಬರು
(ಇತ್ತತ್ತ < ಇತ್ತ+ಇತ್ತ = ಈ ಕಡೆಗೆ, ಈ ಕೊನೆಗೆ)
ಪ್ರ : ಇತ್ತತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ಕೊಂಡ್ರು
೧೯೩. ಇದ್ದ ಕಡೆ ಇರದಿರು ಬಿದ್ದಗೋಡೆ ಹಾಕದಿರು = ಪೋಲಿ ತಿರುಗು, ಅಲೆಮಾರಿಯಾಗಿ ಅಲೆ
ಪ್ರ : ಗಾದೆ – ಇದ್ದೂರಿನಾಗಿರಲಿಲ್ಲ, ಬಿದ್ದ ಗೋಡೆ ಹಾಕಲಿಲ್ಲ.
೧೯೪. ಇದ್ದೂ ಸತ್ತಂತೆ ಮಾಡು = ಅವಮಾನ ಮಾಡು, ತಲೆ ಎತ್ತಿ ತಿಗುಗದಂತೆ ಮಾಡು
ಪ್ರ : ಅಪಾಪೋಲಿ ಮಗ ಹುಟ್ಟಿ ಅಪ್ಪನ್ನ ಇದ್ದೂ ಸತ್ತಂತೆ ಮಾಡಿಬಿಟ್ಟ.
೧೯೫. ಇನ್‌ಕಿಲ್ಲದಂಗೆ ಹೇಳು = ‘ನಭೂತೋ’ ಎನ್ನುವಂತೆ ಹೇಳು
(ಇನ್‌ಕಿಲ್ಲದಂಗೆ < ಹಿಂದಕ್ಕಿಲ್ಲದ ಹಂಗೆ)
ಪ್ರ : ಇನ್‌ಕಿಲ್ಲದಂಗೆ ಹೇಳಿದರೂ, ಯಾರ ಮಾತೂ ಕೇಳದೆ ಹೊಸಲು ದಾಟಿ ಹೊರಟು ಹೋದ್ಲು
೧೯೬. ಇನ್ನೊಬ್ಬ ತಾಯಿ ಹೊಟ್ಟೇಲಿ ಹುಟ್ಟಿದಂತಾಗು = ದೊಡ್ಡ ಗಂಡಾಂತರದಿಂದ ಪಾರಾಗು, ಪುನರ್ಜನ್ಮ ಪಡೆದಂತಾಗು.
ಪ್ರ : ಇವತ್ತು ನಾನು ಬದುಕಿ ಬಂದದ್ದು, ಇನ್ನೊಬ್ಬ ತಾಯಿ ಹೊಟ್ಟೇಲಿ ಹುಟ್ಟಿ ಬಂದ್ಹಂಗಾಯ್ತು.
೧೯೭. ಇಪಟ್ಟು ಸಾಕುಮಾಡು = ಇನ್ನು ನಿಲ್ಲಿಸು, ಮುಂದುವರಿಸದಿರು.
(ಇಪಟ್ಟು < ಈ ಪಟ್ಟು = ಈ ಸಲ ? ಅಥವಾ < ಇರ್+ ಪಟ್ಟು < ಇಪ್ಪಟ್ಟು = ಎರಡುಪಟ್ಟು?)
ಪ್ರ : ನಿನ್ನ ಕಗ್ಗಾನ ಇಪ್ಪಟ್ಟು ಸಾಕುಮಾಡು
೧೯೮. ಇಪ್ಪಾಲು ಮಾಡು = ಎರಡು ಭಾಗ ಮಾಡು
(ಇಪ್ಪಾಲು < ಇರ್ಪಾಲು < ಎರಡು + ಪಾಲು = ಎರಡು ಭಾಗ)
ಪ್ರ : ನಾನಿರುವಾಗಲೇ ಮನೇನ ಇಪ್ಪಾಲು ಮಾಡಿದರೆ ನಾನು ಖಂಡಿತ ಮಣ್ ಪಾಲಾಗ್ತೀನಿ ಅಂತ ತಾಯಿ ಗೋಗರೆದರೂ ಕೇಳಲಿಲ್ಲ ಮಕ್ಕಳು.
೧೯೯. ಇಬ್ಬಳ ಕೊಟ್ಟು ಇಕ್ಕಳ ಪೀಕಿಸು = ಒಂದಕ್ಕೆ ಎರಡು ಗಿಟ್ಟಿಸು, ಸೂಜಿ ಹಾಕಿ ದಬ್ಬಳ ತೆಗೆ
(ಇಬ್ಬಳ < ಇರ್ಬಳ್ಳ < ಎರಡು + ಬಳ್ಳ; ಬಳ್ಳ = ನಾಲ್ಕು ಸೇರು, ಇಬ್ಬಞಲ = ಎಂಟು ಸೇರು. ಇಕ್ಕಳ < ಇಕ್ಕೊಳಗ < ಇರ್ಕೊಳಗ < ಎರಡು + ಕೊಳಗ ; ಎರಡು ಇಬ್ಬಳ = ಒಂದು ಕೊಳಗ ; ಕೊಳಗ = ೧೬ ಸೇರು, ಇಕ್ಕಳ = ೩೨ ಸೇರು)
ಪ್ರ : ತಿಬ್ಬಳಗೆಟ್ಟೋರ ಹತ್ರ ಇಬ್ಬಳ ಕೊಟ್ಟು ಇಕ್ಕಳ ಪೀಕಿಸಬಹುದಷ್ಟೆ. ನನ್ನ ಹತ್ರ ನಡೆಯಲ್ಲ.
೨೦೦. ಇಮರಿ ಹೋಗು = ಇಂಗಿ ಹೋಗು, ಬತ್ತಿ ಹೋಗು
(ಇಮರು < ಇಗರು (ತ) = ಒಣಗು)
ಪ್ರ : ಜೀವದೊಳಗೇನೂ ಇಲ್ಲ, ಇಮರಿ ಇಪ್ಪೆಯಾಗಿದ್ದಾನೆ.
೨೦೧. ಇಮ್ಮಡಿಸಿಕೊಂಡು ಸೆಣಿ = ಮಡಿಕೆ ಮಾಡಿ ಹೊಡಿ
(ಇಮ್ಮಡಿಸು < ಎರಡು + ಮಡಿಸು = ಎರಡು ಮಡಿಕೆ ಮಾಡು; ಸೆಣಿ = ಹೊಡಿ)
ಪ್ರ : ಹಗ್ಗ ಇಮ್ಮಡಿಸಿಕೊಂಡು ಸೆಣೆದ ನೋಡು , ಥಕಥೈ ಅಂತ ಕುಣಿದಾಡೋ ಹಂಗೆ.
೨೦೨. ಇರವಾರ ಕೆಡು = ಇದ್ದದ್ದೂ ಕೆಡು, ಹೆಚ್ಚು ಕೆಡು
(ಇರವಾರ < ಇರ್ + ಪಾರ = ಎರಡು ದಡ, ಎರಡು ಪಟ್ಟು)
ಪ್ರ : ಅಣ್ಣ ಕೆಟ್ಟಿರೋದು ಇರ್ಲಿ, ತಮ್ಮ ಇರವಾರ ಕಟ್ಟು ಹೋಗ್ಯವನೆ.
೨೦೩. ಇರಸಾಲು ಕಟ್ಟೋಕೆ ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು.
(ಇರಸಾಲು = ಕಂದಾಯವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡುವುದು) ಆಡಳಿತಾತ್ಮಕ ಪರಿಭಾಷೆಯನ್ನು ಇಲ್ಲಿ ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸರ್ಕಾರಿ ಖಜಾನೆ ದೂರದ ತಾಲ್ಲೂಕು ಕೇಂದ್ರದಲ್ಲಿದ್ದರೂ ಶ್ಯಾನುಭೋಗ ಬಸ್ಸಿನಲ್ಲೋ, ಇಲ್ಲ, ಕಾಲು ನಡಿಗೆಯಲ್ಲೋ ಹೋಗಿ ಕಂದಾಯವನ್ನು ಅಲ್ಲಿ ಸಂದಾಯ ಮಾಡಲೇಬೇಕು. ಹಾಗೆಯೇ ಹಳ್ಳಿಗಾಡಿನಲ್ಲಿ ರೈತರು ದೈನಂದಿನ ಕಂದಾಯ ಕಟ್ಟಲು ತಮ್ಮ ತಿಪ್ಪೆ ಇರುವಲ್ಲಿಗೆ, ತಪ್ಪಿದರೆ, ತಮ್ಮ ಜಮೀನಿರುವಲ್ಲಿಗೆ ಹೋಗಿಯೇ ಕಟ್ಟುವುದು. ಖಜಾನೆ ಬಿಟ್ಟು ಇರಸಾಲು ಅನ್ಯತ್ರ ಹೇಗೆ ಸಂದಾಯವಾಗಬಾರದೋ ಹಾಗೆ ಕೆಲವರಾದರೂ ಜಿಪುಣ ರೈತರು ದೈನಂದಿನ ಇರಸಾಲು ಅನ್ಯತ್ರ ಸಂದಾಯವಾಗಬಾರದು ಎಂದು ಲಂಗೋಟಿ ಓರೆ ಮಾಡಿಕೊಂಡು ದಾಪುಗಾಲದಲ್ಲಿ ತಮ್ಮ ತಿಪ್ಪೆ ಅಥವಾ ಜಮೀನು ಖಜಾನೆಯತ್ತ ಸಾಗುವುದರಿಂದ ಈ ನುಡಿಗಟ್ಟು ಮೂಡಿದೆ.
ಪ್ರ : ಈ ಅಂಟನಿಗೆ ನಿತ್ಯ ಇರಸಾಲು ಕಟ್ಟೋಕೆ ತನ್ನ ಜಮೀನೇ ಆಗಬೇಕು.
೨೦೪. ಇರ್ಚಿ ಮುರಿ = ಆಧಾರಸ್ತಂಭ ಮುರಿದು ಹೋಗು
(ಇರ್ಚಿ < ಇರಸು < ಇರಂಬು (ತ) = ಕಬ್ಬಿಣ) ಗಾಡಿಯ ಎರಡು ಚಕ್ರಗಳನ್ನು ಬಂಧಿಸುವ, ಆಧಾರವಾಗಿ ಅಡ್ಡವಿರುವ ಕಬ್ಬಿಣದ ಅಚ್ಚಿಗೆ ಇರ್ಚಿ ಎಂದೂ, ಅದಕ್ಕೆ ಲಗತ್ತಿಸಿರುವ ಮರಕ್ಕೆ ಇರ್ಚಿಮರ ಎಂದೂ ಹೆಸರು.
ಪ್ರ : ಇವರಪ್ಪ ಗಾಡಿಗೆ ಇರ್ಚಿ ಇದ್‌ಹಂಗೆ, ಈ ಮನೆಯ ಸಕಲಿಷ್ಟನ್ನೂ ಹೊತ್ತು ನಿಭಾಯಿಸಿದ್ದ. ಮಗ ಹೊಸ ಇರ್ಚಿಯಾಗ್ತಾನೋ ಅಥವಾ ಎಲ್ಲ ಖರ್ಚು ಮಾಡ್ತಾನೋ ಕಾದು ನೋಡಬೇಕು.
೨೦೫. ಇರ್ಲು ಆಗು = ಹಸಿರು ಬಣ್ಣಕ್ಕೆ ಭೇದಿಯಾಗು
(ಇರ್ಲು < ಈರಲು = ಮುಟ್ಟು ಅಥವಾ ಮೈಲಿಗೆಯ ಸೋಂಕಿನಿಂದ ಮಕ್ಕಳಿಗೆ ಆಗುವ ಭೇದಿ)
ಪ್ರ : ಮಗೀಗೆ ಇರ್ಲಾಗಿ ಸೊರಗಿ ಹೋಗ್ಯದೆ.
ಪ್ರ : ಇರ್ಲಿ ಇರ್ಲಿ ಅಂತ ಏನು ಸೆಣಸ್ತಿ ಹೋಗೋ, ನೀನೇನು ನನ್ನ ಹಿರೇ ಮಗೀಗೆ ಇರ್ಲು ತೆಗೀಬೇಡ.
೨೦೬. ಇರುಚಲು ಹೊಡಿ = ಅನ್ಯರ ಆಪಾದನೆಗೆ ಗುರಿಯಾಗು
(ಇರುಚಲು < ಇರುಸಲು = ಗಾಳಿಯಿಂದ ಮನೆಯೊಳಕ್ಕೆ ಬೀಳುವ ಮಳೆಯ ಹನಿಗಳು; ಇರ್ < ಈರ್ = ನೀರು; ಈರುಳ್ಳಿ (ಈರ್ ಉಳ್ಳದ್ದು), ಇಬ್ಬನಿ (ಇರ್ + ಪನಿ = ನೀರ ಹನಿ) ಎಂಬ ಶಬ್ದಗಳು ಇರುಚಲು ಶಬ್ದವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತವೆ)
ಪ್ರ : ಇರುಚಲು ಹೊಡೀವಾಗ ಕದ ಮುಚ್ಕೊಂಡು ಒಳಗಿರೋದು ವಿವೇಕ
೨೦೭. ಇಲಾಜು ಮಾಡು = ವಾಸಿ ಮಾಡು, ಗುಣಪಡಿಸು
(ಇಲಾಜು < ಇಲಾಜ್ (ಹಿಂ, ಉ) = ವಾಸಿ, ಗುಣ)
ಪ್ರ : ದಾಕ್ಟ್ರು ನನ್ನ ಕಾಯಿಲೆ ಇಲಾಜು ಮಾಡಿದರು.
೨೦೮. ಇಲಿ ಮೋಣಿನಷ್ಟಿರು = ಕೊಂಚವಿರು, ಉಗುರುಕಣ್ಣಿನಷ್ಟಿರು
(ಮೋಣು = ಯೋನಿ)
ಪ್ರ : ಇಲಿ ಮೋಣಿನಷ್ಟು ತಂದುಕೊಟ್ಟು ಎಲ್ಲರಿಗೂ ಹಂಚು ಅಂದ್ರೆ ಹೆಂಗೆ ಹಂಚಲಿ ?
೨೦೯. ಇಲ್ಲಿದ್ದಂಗೆ ಬರು = ಬೇಗ ಬರು, ಜಾಗ್ರತೆ ಬರು.
(ಇಲ್ಲಿದ್ದಂಗೆ < ಇಲ್ಲಿ + ಇದ್ದ + ಹಂಗೆ = ಇಲ್ಲಿಯೇ ಇದ್ದ, ಬೇರೆಲ್ಲೂ ಹೋಗಿರಲಿಲ್ಲ ಎಂಬ ಭಾವನೆ ಬರುವಂತೆ ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹೋಗಿ ವಾಪಸ್ಸು ಬರುವುದು)
ಪ್ರ : ತಡಗಿಡ ಮಾಡೀಯಾ, ಇಲ್ಲಿದ್ದೋನಂಗೆ ಬರಬೇಕು.
೨೧೦. ಇಲ್ಲಿ ಕೋತಿ ಕುಣಿಯದಿರು = ಗುಂಪು ಸೇರುವಂಥ ಮನರಂಜನೆ ಕಾರ್ಯಕ್ರಮ ಇಲ್ಲದಿರು.
ಕೌಟುಂಬಿಕ ಕಿತ್ತಾಟ ನಡೆಯುತ್ತಿರುವಾಗ ಅಕ್ಕಪಕ್ಕದವರು ಬಂದು ಗುಂಪು ಕೂಡಿ ಇಣಿಕಿ ನೋಡುವುದನ್ನು ಕಂಡ ಮನೆಯ ಹಿರಿಯರು, ಅಂಥವರಿಗೆ ಮುಖದ ಮೇಲೆ ಹೊಡೆದಂತೆ ‘ನಿಮಗೇನು ಕೆಲಸ ಇಲ್ಲಿ?’ ಎಂದು ಹೇಳದೆ, ಬೇರೊಂದು ರೀತಿಯಲ್ಲಿ ಹೇಳುವ ವಿಧಾನ ಈ ನುಡಿಗಟ್ಟಿನಲ್ಲಿ ಇದೆ. ಹೊಟ್ಟೆಪಾಡಿಗಾಗಿ ಕೋತಿಯ ಕೈಯಲ್ಲಿ ಹಲವಾರು ಕಸರತ್ತುಗಳನ್ನು ಮಾಡಿಸುವ ಭಿಕ್ಷಾವೃತ್ತಿಯ ಜನರಿರುತ್ತಾರೆ. ಹಳ್ಳಿಗಾಡಿನಲ್ಲಿ ಅದೂ ಒಂದು ಮನರಂಜನೆಯ ವಿಶೇಷ ಎಂಬಂತೆ ಜನ ಘೇರಾಯಿಸುತ್ತಿದ್ದರು. ಇಂದು ಹಳ್ಳಿಹಳ್ಳಿಗೂ ಟೆಂಟ್ ಸಿನಿಮಾಗಳು ಬಂದು ಉದರಪೋಷಣೆಯ ಮಾರ್ಗವಾದ ‘ಕೋತಿ ಕುಣಿಸುವ ವೃತ್ತಿ’ ಇಲ್ಲವಾಗುತ್ತಿದೆ. ಹಳ್ಳಿಯ ಮನರಂಜನಾವಿಶೇಷವೊಂದು ಹೆತ್ತ ಕೂಸು ಈ ನುಡಿಗಟ್ಟು.
ಪ್ರ : ಯಾಕೆ ಬಂದು ನಿಂತಿದ್ದೀರಿ? ಇಲ್ಲೇನು ಕೋತಿ ಕುಣೀತಿಲ್ವಲ್ಲ !
೨೧೧. ಇಸಾಮಿತ್ರನ ಯಾಸ ಹಾಕು = ಘುಡುಘುಡಿಸು, ಆರ್ಭಟಿಸು.
(ಇಸಾಮಿತ್ರ < ವಿಶ್ವಾಮಿತ್ರ; ಯಾಸ < ವೇಷ)
ಪ್ರ : ನೀನು ಇಸಾಮಿತ್ರನ ಯಾಸ ಹಾಕಿಬಿಟ್ರೆ, ಇಲ್ಲಿ ಯಾರ್ಗೂ ತೊಳ್ಳೆ ನಡುಗಲ್ಲ.
೨೧೨. ಇಸ್ತಿಹಾರು ಹಾಕು = ತಿಳಿವಳಿಕೆ ಪತ್ರ ಅಂಟಿಸು, ಪ್ರಸಿದ್ಧ ಪತ್ರಿಕೆ ಹಚ್ಚು
(ಇಸ್ತಿ ಹಾರು = ನೋಟೀಸ್)
ಪ್ರ : ಠಕ್ಕರು ಊರ ಮುಂದೆ ಇಸ್ತಿಹಾರು ಅಂಟಿಸಿದ್ದರು.
೨೧೩. ಇಸ್ತ್ರೆ ಎಲೆ ಹಾಕು = ಪಂಕ್ತಿಗೆ ಊಟದ ಎಲೆ ಹಾಕು, ಪತ್ರಾವಳಿ ಹಾಕು.
(ಇಸ್ತ್ರೆ = ಊಟದ ಎಲೆ, ಪತ್ರಾವಳಿ) ಸಾಮಾನ್ಯವಾಗಿ ಮುತ್ತುಗದ ಎಲೆ ಅಥವಾ ಆಲದ ಎಲೆಯಿಂದ ಕಟ್ಟಿ ಒಣಗಿದ ಊಟದ ಎಲೆಗೆ ಇಸ್ತ್ರೆ ಎನ್ನುತ್ತಾರೆ. ಬಾಳೆ ಎಲೆಗೆ ಹಾಗೆ ಹೇಳುವುದಿಲ್ಲ. ಎಲೆ ಕೊಡಿ ಎನ್ನುತ್ತಾರೆ.
ಪ್ರ : ಪಂಕ್ತಿಗೆ ಇಸ್ತ್ರೆ ಕೊಟ್ಕೊಂಡು ಬನ್ನಿ, ಜನ ಹಸಗೊಂಡಿದ್ದಾರೆ.
೨೧೪. ಇಳಕೊಳ್ಳು = ಕಾಲೂರು
(ಇಳಕೊಳ್ಳು < ಇಳಿದುಕೊಳ್ಳು = ಹೆಜ್ಜೆಯೂರು)
ಪ್ರ : ಇಳಕೊಂಡ ಮಳೇನ ಗಾಳಿ ಎಳಕೊಂಡು ಹೋಯ್ತು.
೨೧೫. ಇಳವಿ ಬಿಡು = ಹೊಡಿ
(ಇಳವು < ಇಳುಹು < ಇಳುಪು = ಇಕ್ಕು, ಕುಕ್ಕು)
ಪ್ರ : ದೊಣ್ಣೆ ತಗೊಂಡು ಇಳವಿಬಿಟ್ರೆ ನಿಗುರು ತನ್ನಷ್ಟಕ್ಕೇ ತಾನು ನಿಲ್ತದೆ.
೨೧೬. ಇಳಿದೆಗೆ = ದೃಷ್ಟಿ ತೆಗೆ, ನೀವಳಿಸು, ನಿವಾಳಿಸು
ಇಳಿದೆಗೆಯುವುದು ಅಥವಾ ದೃಷ್ಟಿ ತೆಗೆಯುವುದು ಅನೂಚಾನವಾಗಿ ಹರಿದು ಬಂದ ಒಂದು ಪದ್ಧತಿ. ತುಂಬ ಸುಂದರವಾಗಿರುವ ಹೆಣ್ಣನ್ನಾಗಲೀ ಗಂಡನ್ನಾಗಲೀ ಹೆಚ್ಚು ಜನ ಒಂದೇ ಸಮನೆ ನೋಡಿ ಬಾಯಿ ನೀರು ಕುಡಿದರೆ, ಸುಂದರ ಸ್ತ್ರೀ ಪುರುಷರಿಗೆ ತಲೆನೋವು ಜ್ವರ ಬಂದು ಅಸ್ವಸ್ಥರಾಗುವರೆಂದು ಜನಪದರ ನಂಬಿಕೆ. ಅಂಥ ಕೆಟ್ಟ ಕಣ್ಣಿನ ದೋಷ ಪರಿಹಾರಕ್ಕಾಗಿ ಉಪ್ಪು ಮೆಣಸಿನಕಾಯಿಯನ್ನು ಮುಖದಿಂದ ಕೆಳಕ್ಕೆ ಇಳಿದೆಗೆದು ಒಲೆಗೆ ಹಾಕುತ್ತಾರೆ. ಅಥವಾ ಹಂಚಿಕಡ್ಡಿ ಹಚ್ಚಿ ಮುಖದಿಂದ ಕೆಳಕ್ಕೆ ನಿವಾಳಿಸಿ ಮೂಲೆಯಲ್ಲಿ ನಿಲೆ ಹಾಕುತ್ತಾರೆ; ಅವು ಚಟಪಟಗುಟ್ಟಿದಾಗ ದೃಷ್ಟಿಯಾಗಿದೆ ಎಂದು ಭಾವಿಸಲಾಗುತ್ತದೆ. ಒಂದು ಬಗೆಯ ಮಾನಸಿಕ ಶಮನ ಇದರ ಆಶಯವಾಗಿದೆ.
ಪ್ರ : ದೃಷ್ಟಿಯಾಗಿದ್ರೆ, ಉಪ್ಪು ಮೆಣಸಿನಕಾಯಿ ಇಳೆ ತೆಗೆದು ಒಲೆಗೆ ಹಾಕಿದರೂ ಒಂದು ಚೂರು ಘಾಟಾಗುವುದಿಲ್ಲ.
೨೧೭. ಇಳಿದು ಹೋಗು = ಬಡವಾಗು, ಕೃಶವಾಗು.
ತೂಬೆತ್ತಿ ನೀರನ್ನು ಬಿಟ್ಟಂತೆಲ್ಲ, ಕೆರೆಯ ನೀರಿನ ಮಟ್ಟ ಕೆಳಕ್ಕೆ ಇಳಿಯುತ್ತಾ ಬರುತ್ತದೆ. ಅದೇ ರೀತಿ ದೇಹವೂ ಕೂಡ ಮುಪ್ಪಿನಿಂದಲೋ ಅಥವಾ ತಪ್ಪಿನಿಂದಲೋ ಕೃಶವಾಗುತ್ತಾ ಬರುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಹರೇದ ಹುಡುಗ ತುಂಬ ಇಳಿದು ಹೋಗಿದ್ದಾನೆ, ಅವನ ಚಲನವಲನದ ಬಗ್ಗೆ ನಿಗಾ ಹಿಡಿ.
೨೧೮. ಇಳಿ ಹೊತ್ತಲ್ಲಿ ಬರು = ಸಂಜೆಯಲ್ಲಿ ಬರು
(ಏರು ಹೊತ್ತು = ಪ್ರಾತಃ ಕಾಲ, ನೆತ್ತಿಹೊತ್ತು = ಮಧ್ಯಾಹ್ನ, ಇಳಿಹೊತ್ತು = ಸಾಯಂಕಾಲ. ದಿನದ ಕಾಲತ್ರಯಗಳಿಗೆ ಏರು ಹೊತ್ತು, ನೆತ್ತಿ ಹೊತ್ತು, ಇಳಿಹೊತ್ತು ಎಂಬ ಅಚ್ಚಗನ್ನಡ ಶಬ್ದಗಳನ್ನು ಬಳಸಿದಂತೆಯೇ ಬಲ ಹಗಲು, ನಡುಹಗಲು, ಎಡಾಗಲು (< ಎಡ + ಹಗಲು) ಎಂಬ ಶಬ್ದಗಳನ್ನು ಬಳಸುತ್ತಾರೆ.
ಪ್ರ : ಇಳಿ ಹೊತ್ತಲ್ಲಿ ಬಂದು ಬಟ್ಟೆ ಕಳಚಿ ಹಾಕು ಅಂತ ಕುಂತವನೆ ಗ್ಯಾನಗೆಟ್ಟೋನು
೨೧೯. ಇಳೇಲಿಕ್ಕು = ಸುರಿ, ತೊಟ್ಟಿಕ್ಕು
(ಇಳೇಲಿಕ್ಕು < ಇಳಿಯಲು + ಇಕ್ಕು )
ಪ್ರ : ರಕ್ತ ಒಂದೇ ಸಮನೆ ಇಳೇಲಿಕ್ತಾ ಇದೆ.
೨೨೦. ಇಳೇ ಹಾಕು = ಹೇರು, ಜೋಲುವಂತೆ ಹಾಕು
(ಇಳೇ ಹಾಕು = ಕೆಳಕ್ಕೆ ಇಳಿಯ ಬೀಳುವಂತೆ ಹಾಕು)
ಪ್ರ : ಲಂಬಾಣಿ ಹೆಂಗಸಿನಂತೆ ಒಡವೆ ವಸ್ತು ಮೈತುಂಬ ಇಳೇ ಹಾಕ್ಕೊಂಡಿದ್ದಾಳೆ.
೨೨೧. ಇಂಕ್ರ ಕೊಡು = ಕೊಂಚ ಕೊಡು
(ಇಂಕ್ರ < ಇಡಕರ < ಇಡುಕ್ಕು (ತ) = ಸ್ವಲ್ಪ)
ಪ್ರ : ಶಂಕ್ರ, ಇಂಕ್ರ ಸುಣ್ಣ ಕೊಡು ಬಾಯಿಗೆ ಅಡಿಕೆ ಹಾಕೊಂಡಿದ್ದೀನಿ
೨೨೨. ಇಂಗಡ ಮಾಡು = ಭೇದ ಮಾಡು, ಬೇರೆ ಮಾಡು
(ಇಂಗಡ < ವಿಂಗಡಣೆ)
ಪ್ರ : ಕೂಡಿದ ಕುಟುಂಬದಲ್ಲಿ ಇಂಗಡ ಮಾಡಬೇಡವೋ, ಹೇ ಲಂಗಡ
೨೨೩. ಇಂಗಿ ಹೋಗು = ಬತ್ತಿ ಹೋಗು
(ಇಂಗು < ಇಂಕು (ತೆ) = ಒಣಗು, ಬತ್ತು)
ಪ್ರ : ಒಂದೇ ಸಮ ದುರದುರ ನೋಡ್ತಾನೆ ನೋಡು, ಇವನ ಕಣ್ಣು ಇಂಗಿ ಹೋಗ
೨೨೪. ಇಂಬಾಗಿರು = ವಿಶಾಲವಾಗಿರು, ಅಗಲವಾಗಿರು
(ಇಂಬು = ಅಗಲ, ವೈಶಾಲ್ಯ)
ಪ್ರ : ಗಾದೆ – ಹಾರುವಯ್ಯ ನೆಲೆ ಇಂಬ ಒಕ್ಕಲಿಗನ ಮನೆ ಇಂಬ
ಹೆಂಗೋ ಮೇಷ್ಟ್ರು ಆದ ....
ಪ್ರತ್ಯುತ್ತರಅಳಿಸಿ