ನನ್ನ ಪುಟಗಳು

05 ಅಕ್ಟೋಬರ್ 2015

೧೦) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಉ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಉ)
೨೪೪. ಉಗುಳು ಆರುವಾಗ್ಗೆ ಬರು = ಬೇಗ ಬರು, ಜಾಗೃತೆ ಬರು
(ಆರು = ಒಣಗು, ಉಗುಳು = ಎಂಜಲು)
ಪ್ರ : ಉಗುಳು ಆರುವಾಗ್ಗೆ ಅಲ್ಲಿಗೆ ಹೋಗಿ ಬಂದುಬಿಟ್ಟ.
೨೪೫. ಉಗುಳು ದಾಟದಿರು = ಮಾತು ಮೀರದಿರು
ಪ್ರ : ನನ್ನ ಮಗ ನಾನು ಉಗಿದ ಉಗುಳನ್ನು ದಾಟುವುದಿಲ್ಲ.
೨೪೬. ಉಗಿದು ಉಪ್ಪು ಹಾಕು = ಛೀಗುಟ್ಟು, ಬಯ್ಯು
ಪ್ರ : ಇವತ್ತು ಇವನಿಗೆ ಚೆನ್ನಾಗಿ ಉಗಿದು ಉಪ್ಪು ಹಾಕಿದ್ದೀನಿ.
೨೪೭. ಉಗುರು ಕಣ್ಣಷ್ಟಿರು = ಕೊಂಚವಿರು
ಪ್ರ : ಸುಣ್ಣ ಕೇಳಿದ್ರೆ ಒಂದು ಉಗುರುಕಣ್ಣಷ್ಟು ಕೊಟ್ಲು, ಜೀನಿ.
೨೪೮. ಉಚಾಯಿಸಿ ಮಾತಾಡು = ಹದ್ದು ಮೀರಿ ಮಾತಾಡು, ನಾಲಗೆ ಸಡಿಲ ಬಿಡು
ಪ್ರ : ನನಗೆ ಯಾರೂ ಎದುರೇ ಇಲ್ಲ ಅನ್ನೋಂಗೆ ಉಚಾಯಿಸಿ ಮಾತಾಡಿದ.
೨೪೯. ಉಚ್ಚೇಲಿ ಕರಿಮೀನು ಹಿಡಿ = ವ್ಯರ್ಥ ಪ್ರಯತ್ನ ಮಾಡು, ಲೋಭ ದುರಾಸೆಗಳನ್ನು ತೋರು.
(ಉಚ್ಚೆ = ಮೂತ್ರ, ಕರಿಮೀನು = ಒಣಗಿದ ಮೀನು) ಮೀನು ಹಿಡಿಯುವ ವೃತ್ತಿ ನುಡಿಗಟ್ಟಿಗೆ ಮೂಲ. ಬಲೆ, ಎತ್ತುಡಿ, ಕೂಳಿ ಇತ್ಯಾದಿ ಸಾಧನಗಳಿಂದ ಮೀನು ಹಿಡಿಯುವುದು ನೀರಿನಲ್ಲಿ. ಜೀವಂತ ಹಸಿಮೀನು ನೀರಿನಲ್ಲಿರುತ್ತವೆಯೇ ವಿನಾ ಒಣಗಿದ ಕರಿಮೀನು ನೀರಿನಲ್ಲಿರುವುದಿಲ್ಲ. ಉಚ್ಚೆನೀರಲ್ಲಂತೂ ಇರಲು ಸಾಧ್ಯವೇ ಇಲ್ಲ. ಅಂಥ ಉಚ್ಚೆಯಲ್ಲಿ ಕರಿಮೀನು ಹಿಡಿಯುತ್ತೇನೆಂದು ಒದ್ದಾಡುವುದು ವ್ಯಕ್ತಿಯ ಲೋಭ ದುರಾಸೆಯನ್ನು, ವ್ಯರ್ಥ ಪ್ರಯತ್ನವನ್ನು ಸೂಚಿಸುತ್ತದೆ.
ಪ್ರ : ಉಚ್ಚೇಲಿ ಕರಿಮೀನು ಹಿಡಯೋನು, ಕೈಯಿಂದ ಕಾಸು ಬಿಚ್ತಾನ?
೨೫೦. ಉಜ್ಜುಗೊರಡು ಹೊಡಿ = ನಯಗೊಳಿಸು, ನುಣ್ಣಗೆ ಮಾಡು
(ಉಜ್ಜುಗೊರಡು = ತೋಬಡ) ಇದು ಬಡಗಿ ವೃತ್ತಿಯಿಂದ ಬಂದದ್ದು. ಮರವನ್ನು (ಹಲಗೆ, ವಾಸಕಾಲು ಇತ್ಯಾದಿ) ನಯಗೊಳಿಸಲು ಈ ಸಾಧನವನ್ನು ಬಳಸುತ್ತಾರೆ. ಮೈಸೂರು ಕಡೆ ಹತ್ತರಿ ಎನ್ನುತ್ತಾರೆ. ಬೆಂಗಳೂರು ತುಮಕೂರು ಸುತ್ತಮುತ್ತ ತೋಬಡ ಎನ್ನುತ್ತಾರೆ. ಮಲೆನಾಡಿನ ಕಡೆ ಕೀಸುಳಿ (< ಕೀಸು + ಉಳಿ ) ಎನ್ನುತ್ತಾರೆ. ತಮಿಳಿನಲ್ಲೂ ತೋಬಡ ಎಂಬ ಶಬ್ದವಿದೆ ಎಂದು ತಿಳಿದು ಬರುತ್ತದೆ.
ಪ್ರ : ಪಾಪ, ಬಡಪಾಯಿಗೆ ಚೆನ್ನಾಗಿ ಉಜ್ಜುಗೊರಡು ಹೊಡೆದು ಕಳಿಸಿದ.
೨೫೧. ಉಟ್‌ಬೈಸ್ ಹೊಡಿ =ಹೇಳಿದಂತೆ ಕೇಳು, ಸೇವೆ ಮಾಡು
(ಉಟ್‌ಬೈಸ್ < ಉಟಣೇಂ ಬೈಸಣೇಂ (ಮರಾಠಿ) = ಏಳು, ಕೂಡು.)
ಪ್ರ : ಅವನು ಹೇಳಿದಂಗೆ ಉಟ್‌ಬೈಸ್ ಹೊಡಯೋಕೆ ನಾನು ತಯಾರಿಲ್ಲ.
೨೫೨. ಉಡುಗೂರಿ ಹೋಗು = ಒಣಗಿ ಹೋಗು, ಬಾಡಿ ಹೋಗು
(ಉಡುಗೂರಿ < ಉಡುಗಿ + ಊರಿ = ಬಾಡಿ ನೆಲ ಕಚ್ಚು)
ಪ್ರ : ಮಳೆಯಿಲ್ಲದೆ ಎಳೆಯ ಪೈರು ಬಿಸಿಲ ಝಳಕ್ಕೆ ಉಡುಗೂರಿ ಹೋದವು.
೨೫೩. ಉಡದ ನಾಲಗೆಯಿರು = ಎರಡು ನಾಲಗೆಯಿರು, ಆಡಿದ್ದನ್ನು ಇಲ್ಲ ಎನ್ನುವ ವಂಚಕತನವಿರು
ಪ್ರ : ಉಡದ ನಾಲಗೆ ಇರೋವಾಗ, ಹೇಳಿದ್ದನ್ನು ನಾನು ಹೇಳಿದ್ದೆ ಅಂತ ಒಪ್ಕೋತಾನ?
೨೫೪. ಉಡದ ಪಟ್ಟು ಹಾಕು = ಭದ್ರವಾಡಿ ಹಿಡಿ, ಜಗ್ಗದಂತೆ ಅಂಟಿಕೊಳ್ಳು.
(ಉಡ < ಉಡುಂಬು (ತ,ಮ) = ಪ್ರಾಣಿ ವಿಶೇಷ; ಪಟ್ಟು = ಹಿಡಿತ ) ಉಡ ನೆಲಕ್ಕೊ ಬಂಡೆಗೋ ಕಚ್ಚಿಕೊಂಡರೆ ಭರ್ಜಿ ಹಾಕಿ ತಿವಿದು ಎಳೆದರೂ ಮಾಂಸಖಂಡ ಕಿತ್ತುಕೊಂಡು ಬರಬಹುದೇ ವಿನಾ ಅದು ಅಲುಗಾಡುವುದಿಲ್ಲವಂತೆ. ಅಷ್ಟು ಬಲವಾಗಿ ಬಿಗಿಯಾಗಿ ಇರುತ್ತದೆ ಅದರ ಹಿಡಿತ, ಹಿಂದೆ ಶತ್ರು ಸೈನಿಕರು ಎತ್ತರವಾದ ಕೋಟೆಯ ಗೋಡೆಯನ್ನು ಹತ್ತ ಬೇಕಾದರೆ ಉಡದ ಸೊಂಟಕ್ಕೆ ಎತ್ತರವಾದ ಕೋಟೆಯ ಗೋಡೆಯನ್ನು ಹತ್ತ ಬೇಕಾದರೆ ಉಡದ ಸೊಂಟಕ್ಕೆ ಹಗ್ಗ ಕಟ್ಟಿ ಕೋಟೆ ಗೋಡೆಯ ಮೇಲಕ್ಕೆ ಎಸೆದರೆ ಅದು ಅಲ್ಲಿ ಭದ್ರವಾಗಿ ಕಚ್ಚಿಕೊಳ್ಳುತ್ತಿತ್ತಂತೆ. ಇವರು ಹಗ್ಗ ಹಿಡಿದುಕೊಂಡು ಮೇಲೆ ಹತ್ತಿ ಕೋಟೆಯೊಳಕ್ಕೆ ಇಳಿದು ಕದನ ಮಾಡುತ್ತಿದ್ದರಂತೆ, ಭದ್ರವಾದ ಹಿಡಿತಕ್ಕೆ ಉಡ ಹೆಸರುವಾಸಿ.
ಪ್ರ : ಅವಂದು ಉಡದ ಪಟ್ಟು, ಬಡಪೆಟ್ಟಿಗೆ ಬಗ್ಗೋನಲ್ಲ.
೨೫೫. ಉಡಿಕೆ ಮಾಡಿಕೊಳ್ಳು = ಮರು ಮದುವೆಯಾಗು
ಹೆಂಡತಿ ಸತ್ತವರು ಮರು ಮದುವೆ ಮಾಡಿಕೊಳ್ಳುವ ಪರಿಪಾಠ ಎಲ್ಲ ಜಾತಿಗಳಲ್ಲೂ ಇದ್ದಂಥದು, ಇರುವಂಥದು. ಆದರೆ ಗಂಡ ಸತ್ತವರಿಗೆ ಮರು ಮದುವೆ ಮಾಡಿಕೊಳ್ಳುವ ಮುಕ್ತ ಪರವಾನಿಗೆಯನ್ನು ಮೇಲ್ವರ್ಗ ಮೇಲ್ವರ್ಣದವರು ಕೊಟ್ಟಿರಲಿಲ್ಲ. ಅದರಲ್ಲೂ ಮೇಲ್ವರ್ಣದವರು ಗಂಡ ಸತ್ತ ಹೆಣ್ಣಿನ ತಲೆ ಬೋಳಿಸಿ ಕುರೂಪಗೊಳಿಸುವ ಭಯಾನಕ ಆಚರಣೆಯನ್ನು ಧರ್ಮಾಚರಣೆ ಎಂಬಂತೆ ಮಾಡಿಕೊಂಡು ಬರುತ್ತಿದ್ದರು ಎಂಬುದಕ್ಕೆ ‘ ಗಂಡ ಸತ್ತ ದುಃಖ ತಾಳಲೋ? ಮೊಂಡುಗತ್ತಿ ಉರಿ ತಾಳಲೊ?’ ಎಂಬ ಗಾದೆ ಸಾಕ್ಷಿಯಾಗಿದೆ. ಹೆಣ್ಣಿನ ರೂಪವನ್ನು ಕುರೂಪಗೊಳಿಸಿದರೂ ಕಾಮ ಕುರೂಪಗೊಳ್ಳುವುದಿಲ್ಲ ಎಂಬ ಸತ್ಯ ವೇದಪಠನ ಮಾಡುವ ಕರ್ಮಠರಿಗೆ ಅರ್ಥವಾಗದಿದ್ದದ್ದು ಆಶ್ಚರ್ಯ. (ಇತ್ತೀಚೆಗೆ ಅವರಲ್ಲೂದ ಆ ಆಚರಣೆ ನಿಂತಿರುವುದು ಸಂತೋಷದ ಸಂಗತಿ) ವೇದವನ್ನು ಓದದ ನಮ್ಮ ಗ್ರಾಮೀಣ ಶೂದ್ರಜನ ಹೆಣ್ಣಿಗೆ ಮರು ಮದುವೆಯಾಗುವ ಪರವಾನಿಗೆಯನ್ನು ಕೊಟ್ಟಿದ್ದರು ಎಂಬುದಕ್ಕೆ ಉಡಿಕೆ, ಸೀರುಡಿಕೆ, ಕೂಡಿಕೆ ಎಂಬ ಆಚರಣೆಗಳು ಸಾಕ್ಷಿಯಾಗಿವೆ. ಹಿಂದೂ ಸಂಸ್ಕೃತಿಯ ಕುರುಡು ಕಟ್ಟುಪಾಡುಗಳ ನಡ ಮುರಿದು, ಮಾನವೀಯತೆಯ ನಡೆಮಡಿ ಹಾಸಿದ ಜನಪದ ಸಂಸ್ಕೃತಿಯ ಹೆಚ್ಚುಗಾರಿಕೆಯ ಸಂಕೇತವಾಗಿದೆ ಈ ಉಡಿಕೆ ಪದ್ಧತಿ.
ಪ್ರ : ಗಾದೆ-ಉಡಿಕೆ ಗಂಡ ತಡಿಕೆ ಹಂಗೆ.
೨೫೬. ಉಡಿದುಂಬು = ಮಡಿಲುದುಂಬು
(ಉಡಿ = ಮಡಿಲು)
ಪ್ರ : ಹೆಣ್ಣನ್ನು ಗಂಡನ ಮನೆಗೆ ಕಳಿಸುವಾಗ ಉಡಿದುಂಬಿ ಕಳಿಸಬೇಕು.
೨೫೭. ಉಡ್ರು ಗಾಳೀಲಿ ನಡುಗು = ಊಳಿಡುವ ಗಾಳಿಯಲ್ಲಿ ಗಡಗಡನೆ ನಡುಗು
(ಉಡ್ರು < ಉಡರು = ಊಳಿಡು, ಗುಟುರು ಹಾಕು)
ಪ್ರ : ಬಟಾಬಯಲಿನಲ್ಲಿ ಉಡ್ರು ಗಾಳಿಗೆ ಸಿಕ್ಕಿ ಗಡಗಡನೆ ನಡುಗಿಬಿಟ್ಟೆವು.
೨೫೮. ಉತಂತ್ರ ಹೇಳು = ಉಪಾಯ ಹೇಳು, ನಿದರ್ಶನ ನೀಡು
(ಉತಂತ್ರ < ಉದಂತ (ಸಂ) = ನಿರ್ದಶನ, ಬುದ್ಧಿ ಸೂಕ್ಷ್ಮತೆಯ ಸುದ್ಧಿ)
ಪ್ರ : ಅರ್ಥವಾಗಲಿಲ್ಲ ಅಂದ್ರೆ, ಅದಕ್ಕೆ ಒಂದು ಉತಂತ್ರ ಹೇಳ್ತೀನಿ ಕೇಳು.
೨೫೯. ಉತ್ತರಿಸಿ ಹಾಕು = ಕತ್ತರಿಸಿ ಹಾಕು, ಚೂರು ಮಾಡು
ಪ್ರ : ಬೇಗಬೇಗನೆ ಸಾರಿಗೆ ಈರುಳ್ಳಿ ಉತ್ತರಿಸಿ ಹಾಕು
೨೬೦. ಉತ್ತಾರ ಹಾಕಿಕೊಳ್ಳು = ಮುರಿದುಕೊಳ್ಳು, ಸಂದಾಯ ಮಾಡಿಕೊಳ್ಳು
ಪ್ರ : ನಿಮಗೆ ಕೊಡಬೇಕಾದ ನೂರು ರೂಪಾಯಿಗಳನ್ನು ಉತ್ತಾರ ಹಾಕ್ಕೊಂಡು ಉಳಿದಿದ್ದನ್ನು ನನಗೆ ಕೊಡಿ.
೨೬೧. ಉದುರುರುದಾಗಿರು = ಬಿಡಿಬಿಡಿಯಾಗಿರು
(ಉದುರುದುರು < ಉದುರು + ಉದುರು = ಬಿಡಿಬಿಡಿ)
ಪ್ರ : ಅನ್ನ ಮಲ್ಲಿಗೆ ಹುವ್ವಿನಂತೆ ಉದುರುದುದಾಗಿದೆ, ಸದ್ಯ ಬೆಂದು ಮುದ್ದೆಯಾಗಿಲ್ಲ.
೨೬೨. ಉದ್ದುರುಳೋ ಹೊತ್ನಲ್ಲಿ ಬರು = ಬೇಗ ಬರು, ಕ್ಷಣದಲ್ಲಿ ಬರು
(ಉದ್ದು < ಉಳುಂದು (ತ) = ಧಾನ್ಯವಿಶೇಷ)
ಪ್ರ : ಉದ್ದುರುಳೋ ಹೊತ್ನಲ್ಲಿ ಬಂದುಬಿಡ್ತೀನಿ, ಇಲ್ಲೇ ನಿಂತಿರು
೨೬೩. ಉದೊಸಲು ತುಳಿಯದಿರು = ಮನೆಬಾಗಿಲಿಗೆ ಹೋಗದಿರು
(ಉದೊಸಲು < ಉತ್ + ಹೊಸಲು ; ಉತ್ = ಮೇಲೆದ್ದ ; ಹೊಸಲು < ಹೊಸ್ತಿಲು < ಹೊಸಂತಿಲ್ < ಪೊಸಂತಿಲ್ = ಬಾಗಿಲ ಕೆಳಭಾಗದ ಅಡ್ಡಪಟ್ಟಿ) ಬಾಗಿಲ ಮೇಲ್ಭಾಗದ ಅಡ್ಡಪಟ್ಟಿಗೆ ‘ಉತ್ರಾಸ’ ಎಂದೂ, ಬಾಗಿಲ ಕೆಳಭಾಗದ ಮರದ ಅಥವಾ ಕಲ್ಲಿನ ಅಡ್ಡ ಪಟ್ಟಿಗೆ ‘ಹೊಸ್ತಿಲು’ ಎಂದೂ ಹೆಸರು. ಬಾಗಿಲಿಗೆ ಉತ್ರಾಸ ಹಣೆ ಇದ್ದಂತೆ. “ಉತ್ರಾಸದ ಮೇಲೆ ಒಂದು ಉತ್ರಾಣಿಕೆ ಗಿಡ ಹುಟ್ಟಿ ಉತ್ತರೂ ಬರದು ಕಿತ್ತರೂ ಬರದು” ಎಂಬ ಜನಪದ ಒಗಟಿಗೆ ಉತ್ತರ “ಹಣೆಯ ಮೇಲಿನ ಹಚ್ಚೆ”. ಅಂದರೆ ಒಮ್ಮೆ ಹುಯ್ಯಿಸಿಕೊಂಡ ಹಚ್ಚೆ ಸಾಯುವವರೆಗೂ ಇರುತ್ತದೆ. ಅಳಿಸಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ‘ಉತ್ರಾಸ’ ಬಾಗಿಲಿಗೆ ಹಣೆಯೋಪಾದಿ ಇದ್ದರೆ, ‘ಹೊಸ್ತಿಲು’ ಕಾಲಿನೋಪಾದಿ ಇದೆ. ‘ಉದೊಸಲು’ ಎಂದರೆ ನೆಲದ ಮಟ್ಟದಿಂದ ಸ್ವಲ್ಪ ಮೇಲಿದ್ದ ಹೊಸ್ತಿಲು ಎಂದರ್ಥ.
ಪ್ರ : ಈ ಘಟ ಇರೋವರೆಗೂ ಅವನ ಮನೆ ಉದೊಸಲು ತುಳಿಯಲ್ಲ
೨೬೪. ಉಪ್ಪಿಕ್ಕು = ಅನ್ನ ಹಾಕು, ಸಹಾಯ ಮಾಡು
ಲವಣ ಎಂಬ ಅರ್ಥದಲ್ಲಿ ಉಪ್ಪು ಈಗ ಬಳಕೆಯಾಗುತ್ತಿದ್ದರೂ ಹಿಂದೆ ಅನ್ನ ಎಂಬ ಅರ್ಥವೂ ಇತ್ತೆಂದು ತೋರುತ್ತದೆ.
ಪ್ರ : ಗಾದೆ – ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ತೆನೆ
೨೬೫. ಉಪ್ಪಿನ ಕೊಣವಾಗು = ಉಪ್ಪುಮಯವಾಗು, ಒಗಚಾಗು
(ಕೊಣ < ಕೊಳ = ಮಡು).
ಪ್ರ : ಇದೇನು ಎಸರೋ ? ಉಪ್ಪಿನ ಕೊಣವೋ?
೨೬೬. ಉಪ್ಪು ರೊಡ್ಡಾಗು = ಉಪ್ಪಿನ ಕೊಣವಾಗು
(ರೊಡ್ಡು < ರೊಂಡು = ಕೆಸರು, ರಾಡಿ)
ಪ್ರ : ಉಪ್ಪು ರೊಡ್ಡಿನಲ್ಲಿ ಉಣ್ಣೋದು ಹೆಂಗೆ ? ಎಮ್ಮೆ ರೊಡ್ಡೂ ಮುಸುಡಿ ಇಕ್ಕಲ್ಲ.
೨೬೭. ಉಪ್ಪಿಲ್ಲದಿರು ಹುಳಿಯಿಲ್ಲದಿರು = ನೀರಸವಾಗಿರು, ತೀರ ಸಪ್ಪೆಯಾಗಿರು.
ಷಡ್ರಸಗಳಲ್ಲಿ ಯಾವುದೊಂದು ಸ್ವಲ್ಪ ಕಡಮೆಯಾದರೂ ರುಚಿಗೆ ಅಷ್ಟು ಬಾಧಕವಾಗುವುದಿಲ್ಲ. ಆದರೆ ಉಪ್ಪಿಲ್ಲದೆ ಹೋದರೆ ರುಚಿಯೇ ಇರುವುದಿಲ್ಲ. ಆದ್ದರಿಂದಲೇ ‘ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ’ ಎಂಬ ಗಾದೆ ಮೂಡಿರುವುದು.
ಪ್ರ : ಉಪ್ಪು ಹುಳಿಯಿಲ್ಲದ ನಾಟಕ ನೋಡ್ತಾ ನಿದ್ದೆಗೆಡೋ ಬದಲು ಮನೆಗೆ ಹೋಗಿ ಮಲಗೋಣ ಬಾ.
೨೬೮. ಉಪ್ಪುಕಾರ ಹಚ್ಚಿ ಹೇಳು = ಬಣ್ಣ ಕಟ್ಟಿ ಹೇಳು, ಉತ್ಪ್ರೇಕ್ಷಿಸಿ ಹೇಳು.
ಪ್ರ : ಉಪ್ಪುಕಾರ ಹಚ್ಚಿ ಹೇಳೋದ್ರಲ್ಲಿ ಇವನ್ನ ಬಿಟ್ರೆ ಇನ್ನಿಲ್ಲ.
೨೬೯. ಉಪ್ಪು ಮೆಣಸಿನಕಾಯಿ ನೀವಳಿಸು = ದೃಷ್ಟಿ ತೆಗೆ, ಇಳಿದೆಗೆ.
ಸುಂದರವಾಗಿರುವ ಯುವಕ ಯುವತಿಯರನ್ನು ಜನ ಒಂದೇ ಸಮನೆ ತಿನ್ನುವಂತೆ ನೋಡಿದರೆ ದೃಷ್ಟಿಯಾಗುತ್ತದೆಂದೂ, ಅದರಿಂದ ಜ್ವರ ತಲೆನೋವು ಬರುವುದೆಂದೂ ಜನರ ನಂಬಿಕೆ. ‘ಮನ್ಸನ ಕಣ್ಣಿಗೆ ಮರ ಸಿಡೀತು’ ಎಂಬ ಗಾದೆ ಬಂದಿರುವುದೂ ಇದೇ ನಂಬಿಕೆಯಿಂದ. ಆ ಕೆಟ್ಟ ಕಣ್ಣುಗಳ ದೋಷ ಪರಿಹಾರಕ್ಕಾಗಿ ಉಪ್ಪು ಮೆಣಸಿನಕಾಯಿಯನ್ನು ಮುಖದಿಂದ ಕೆಳಕ್ಕೆ ಇಳಿದೆಗೆದು, ಥೂ ಥೂ ಎಂದು ಉಗಿದು, ಒಲೆಯ ಕೆಂಡದೊಳಕ್ಕೆ ಹಾಕುತ್ತಾರೆ. ಕೆಂಡದೊಳಕ್ಕೆ ಬಿದ್ದ ಉಪ್ಪು ಸಿಡಿಯುತ್ತದೆ. ಎಷ್ಟೊಂದು ದೃಷ್ಟಿಯಾಗಿದೆ ನೋಡು ಎನ್ನುತ್ತಾರೆ. ಮೆಣಸಿನಕಾಯಿ ಒಲೆಗೆ ಬಿದ್ದರೆ ಘಾಟು ಆಗುತ್ತದೆ, ಆದರೆ ದೃಷ್ಟಿಯಾಗಿದ್ದಾಗ ಘಾಟು ಆಗುವುದಿಲ್ಲ ಎಂದು ಗ್ರಾಮೀಣರ ನಂಬಿಕೆ. ವೈಚಾರಿಕ ನೆಲಗಟ್ಟಿಲ್ಲದ ಈ ಆಚರಣೆಯ ಗುರಿ ಮಾನಸಿಕ ಶಮನವನ್ನು ಮೂಡಿಸುವಂಥದು ಎಂದು ಕಾಣುತ್ತದೆ.
ಪ್ರ : ಮಗೀಗೆ ಎಷ್ಟು ದೃಷ್ಟಿ ಆಗಿದೆಯೋ, ಉಪ್ಪು ಮೆಣಸಿನಕಾಯಿ ನೀವಳಿಸಿ ಒಲೆಗೆ ಹಾಕು ಮೊದಲು.
೨೭೦. ಉಬ್ಬರ ಬಂದಿರು = ಮುನಿಸುಂಟಾಗು, ಅಸಮಾಧಾನದಿಂದ ಮುಖ ಊದಿಸಿಕೊಳ್ಳು.
(ಉಬ್ಬರ < ಉರ್ವರ = ಉಬ್ಬುವಿಕೆ, ಊದಿಕೊಳ್ಳುವಿಕೆ)
ಪ್ರ : ಉಪ್ಪುರಗುಲದ ಹೆಣ್ಣು ಉಬ್ಬರ ಬಂದು ಕುಂತವಳೆ, ಇವಳ ಅಬ್ಬರ ಅಡಗ್ಹೋಗ.
೨೭೧. ಉಬ್ಬಿ ಹೋಗು = ಅಹಂಕಾರದಿಂದ ಬೀಗು, ಮೇರೆಮೀರಿ ಮೆರೆ
ಪ್ರ : ಅವನು ಎಷ್ಟು ಉಬ್ಬಿ ಹೋಗ್ಯವನೆ ಅಂದ್ರೆ, ಯಾರೂ ಮೈಯಂಟೇ ಇಲ್ಲ
೨೭೨. ಉಬ್ಬೆಗೆ ಹಾಕು = ಹಿಂಸಿಸು, ಉಸಿರು ಕಟ್ಟಿಸು, ಯಮಬಾಧೆ ನೀಡು
ಪ್ರ : ಸೊಸೇನ ಉಬ್ಬೆಗೆ ಹಾಕಿ ದೆಬ್ಬೇಲಿ ತೆಗೀತಾರೆ
೨೭೩. ಉರಲಾಗು = ನೇಣಾಗು, ಕುಣಿಕೆಯಾಗು
(ಉರಲು = ಹಗ್ಗ, ನೇಣು)
ಪ್ರ : ಅವನು ಮಾಡಿದ್ದು ಅವನಿಗೇ ಉರಲಾಯ್ತು
೨೭೪. ಉರಿದ ಉಪ್ಪಾಗು = ಕೋಪಗೊಳ್ಳು, ಸಿಡಿಮಿಡಿಗೊಳ್ಳು
ಉಪ್ಪನ್ನು ಓಡಿನಲ್ಲಿ ಉರಿದರೆ ಅದು ಚಟಪಟ ಸಿಡಿಯತೊಡಗುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಇವನು ಯಾಕೆ ಹಿಂಗೆ, ಯಾರು ಮಾತಾಡಿಸಿದ್ರೂ, ಉರಿದ ಉಪ್ಪಾಗ್ತಾನೆ?
೨೭೫. ಉರಿದು ರವಾಲಾಗು = ಕಿಡಿಕಿಡಿಯಾಗು, ಕೋಪಗೊಳ್ಳು
(ರವಾಲಾಗು < ರವೆ + ಅವಲು + ಆಗು ; ರವೆ = ಚರೆ, ಬಂದೂಕಿಗೆ ತುಂಬುವ ಮದ್ದು; ಅವಲು = ಹುರಿದಾಗ ಬಾಯಿ ಬಿಟ್ಟುಕೊಂಡು ಸಿಡಿಯುವ ಕಾಳು)
ಪ್ರ : ಅಪ್ಪ ಉರಿದು ರವಾಲಾಗಿದ್ದಾನೆ, ಈಗ ದುಡ್ಡು ಕೇಳಿದ್ರೆ ಮುಗೀತು ಕತೆ
೨೭೬. ಉರಿಯೋದಕ್ಕೆ ಪುಳ್ಳೆ ಇಕ್ಕು = ಪ್ರಚೋದಿಸು,
(ಪುಳ್ಳೆ < ಪುರಲೆ = ಸಣ್ಣ ಸಿಬರಿನಂಥ ಕಡ್ಡಿ)
ಪ್ರ : ನೀನು ಉರಿಯೋದಕ್ಕೆ ಪುಳ್ಳೆ ಇಕ್ಕಬೇಡ, ಬಾಯ್ಮುಚ್ಕೊಂಡು ಕೂತುಕೋ
೨೭೭. ಉರಿಯೋದರ ಮೇಲೆ ಉಪ್ಪು ಹಾಕು = ಕೆರಳಿಸು, ಉಲ್ಬಣಿಸು
ಪ್ರ : ತೆಪ್ಪಗಿರದೆ ಇವನೊಬ್ಬ ಉರಿಯೋದರ ಮೇಲೆ ಉಪ್ಪು ಹಾಕಿದ.
೨೭೮. ಉರಿಸಿಂಗಿಯಂತಾಡು = ಸಿಟ್ಟಿನಿಂದ ಎಗರಾಡು, ನೆಗೆದಾಡು
(ಉರಿಸಿಂಗಿ = ನೆಗೆಯುವ ಹಾವು, ಮಿಡಿನಾಗರ)
ಪ್ರ : ಇವನು ಯಾಕೆ ಹಿಂಗೆ ಉರಿಸಿಂಗಿಯಂಗಾಡ್ತಾನೆ?
೨೭೯. ಉರಿ ಹತ್ತಿಕೊಳ್ಳು = ಅಸಹನೆ ಉಂಟಾಗು, ಬೇನೆ ಬರು
(ಉರಿ = ಹೊಟ್ಟೆಕಿಚ್ಚು, ಬೇನೆ)
ಪ್ರ : ಅವಳ ಗಂಡನ ಜೊತೆ ಅವಳಿದ್ರೆ, ಇವಳಿಗ್ಯಾಕೆ ಉರಿ ಹತ್ತಿಕೊಳ್ತು?
೨೮೦. ಉರುಳಿಕೊಳ್ಳು = ಮಲಗಿಕೊಳ್ಳು, ಯಾರೂ ಗಲಾಟೆ ಮಾಡಬೇಡಿ
ಪ್ರ : ಒಂದು ಗಳಿಗೆ ಉರುಳಿಕೊಳ್ತೀನಿ, ಯಾರೂ ಗಲಾಟೆ ಮಾಡಬೇಡಿ
೨೮೧. ಉಲ್ಟಿಕೊಂಡು ಹೋಗು = ಉರುಳಿಕೊಂಡು ಹೋಗು
(ಉಲ್ಟು < ಉರಂಟು < ಉರುಟ್ಟು (ತ) = ಉರುಳು)
ಪ್ರ : ಲಕ್ಷ್ಮಿ ಚಂಚಲೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಲ್ಟಿಕೊಂಡು ಹೋಗೋದೋ ಕೆಲಸ.
೨೮೨. ಉಷ್ಣ ಹತ್ತು = ಸಿಟ್ಟು ಹತ್ತು
ಪ್ರ : ಅಲ್ಲಿಗೆ ನಾನೂ ಬಂದಿದ್ಕೆ ನಿನಗೆ ಉಷ್ಣ ಹತ್ತಿ ಬಿಡ್ತ ?
೨೮೩. ಉಸಾರುದಪ್ಪು = ಅಸ್ವಸ್ಥವಾಗು, ಆರೋಗ್ಯ ಕೆಡು
(ಉಸಾರು < ಹುಷಾರು = ಆರೋಗ್ಯ, ಸ್ವಾಸ್ಥ್ಯ)
ಪ್ರ : ಎಂಟು ದಿವಸಗಳಿಂದ ಉಸಾರು ತಪ್ಪಿ ಹಾಸಿಗೆ ಹಿಡಿದವ್ನೆ
೨೮೪. ಉಸ್ವಾಸ ಇಲ್ಲದಿರು = ವಿರಾಮವಿಲ್ಲದಿರು, ಉಸಿರುಕಟ್ಟಿ ದುಡಿ
(ಉಸ್ವಾಸ < ಉಚ್ಛ್ವಾಸ = ಹೊರಕ್ಕೆ ಬಿಡುವ ಉಸಿರು ; ನಿಶ್ವಾಸ = ಒಳಕ್ಕೆಳೆದುಕೊಳ್ಳುವ ಉಸಿರು)
ಪ್ರ : ಈ ಮನೇಲಿ ಉಸ್ವಾಸ ಇಲ್ಲದಂಗೆ ದುಡಿದರೂ ಇಸ್ವಾಸದಿಂದ ಕಾಣೋರು ಒಬ್ಬರೂ ಇಲ್ಲ.
೨೮೫. ಉಸಿರಡಗು = ಸಾಯು, ಮರಣ ಹೊಂದು
(ಉಸಿರು < ಉಯಿರ್ (ತ) = ಪ್ರಾಣವಾಯು)
ಪ್ರ : ಬಸುರಿಗೊದ್ನಲ್ಲೆ, ಇವನ ಉಸಿರಡಗಿ ಹೋಗ
೨೮೬. ಉಸಿರಾಡೋಕೆ ಬಿಡು = ಪುರಸೊತ್ತು ಕೊಡು, ವಿರಮಿಸಲು ಬಿಡು
ಪ್ರ : ಉಸಿರಾಡೋಕೂ ಬಿಡಲ್ಲ, ಈ ಚಂಡಾಲ ಗಂಡ ಅನ್ನಿಸಿಕೊಂಡೋನು
೨೮೭. ಉಸಿರುಳಿಸಿಕೊಂಡಿರು = ಜೀವದಿಂದಿರು, ಕಷ್ಟಕಾರ್ಪಣ್ಯಗಳ ನಡುವೆ ಜೀವ ಹಿಡಿದುಕೊಂಡಿರು
ಪ್ರ : ನಗೋರ ಮುಂದೆ ಚೆನ್ನಾಗಿ ಬದುಕಲೂ ಇಲ್ಲ, ಸಾಯಲೂ ಇಲ್ಲ. ಹೀಗೆ ಉಸಿರುಳಿಸಿಕೊಂಡಿದ್ದೇನೆ, ನೋಡಪ್ಪ
೨೮೮. ಉಸಿರು ಬಿಡದಿರು = ಮಾತಾಡದಿರು
ಪ್ರ : ಅಪ್ಪನ ನರಸಿಂಹಾವತಾರ ನೋಡಿ, ನಾನು ಉಸಿರೇ ಬಿಡಲಿಲ್ಲ.
೨೮೯. ಉಸೂರ್ ಅನ್ನಿಸು = ನೋಯಿಸು, ನಿಟ್ಟುಸಿರು ಬಿಡಿಸು
ಪ್ರ :ಹೆಣ್ಣನ್ನು ಉಸೂರ್ ಅನ್ನಿಸಿದೋರು ಎಂದೂ ನಿಸೂರಾಗಿರಲ್ಲ
೨೯೦. ಉಳ್ಳಂಗು ಮಾಡು = ಉಪಾಯ ಮಾಡು, ಯುಕ್ತಿ ಮಾಡು
(ಉಳ್ಳಂಗು < ಉಳುಂಗು = ಪ್ರೀತಿ, ಒಲುಮೆ)
ಪ್ರ : ಏನೇನೋ ಉಳ್ಳಂಗು ಮಾಡಿ, ಅವಳ ಆಸ್ತೀನ ಹೊಡೆದುಬಿಟ್ಟ.
೨೯೧. ಉಂಗುರವಿಡು = ಮದುವೆ ನಿಶ್ಚಿತಾರ್ಥ ಮಾಡು.
ಬಹುಶಃ ರಾಜ ಮಹಾರಾಜರಲ್ಲಿ ಶ್ರೀಮಂತ ವರ್ಗದಲ್ಲಿ ಉಂಗುರವಿನಿಮಯದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರುತ್ತಿದ್ದಿರಬೇಕು. ಪಂಪ ಭಾರತದ ಪ್ರಸಂಗವೊಂದು ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಆದರೆ ಬಡವರಲ್ಲಿ “ಅರಿಶಿನ ಕುಂಕುಮ ಬಿಡು” ವುದರ ಮೂಲಕ ನಿಶ್ಚಿತಾರ್ಥವಾಗುತ್ತಿತ್ತು. ಅವರ ದೃಷ್ಟಿಯಲ್ಲಿ ಅವುಗಳು ಮುತ್ತೈದೆಯ ಒಡವೆಗಳೆಂದೇ ನಂಬಿಕೆ. ಉದಾಹರಣೆಗೆ “ಒಡೊಡವೆಗೆಲ್ಲ ತೂತಿಲ್ಲದ ಒಡವೆ ಯಾವುದು?” ಎಂಬ ಜನಪದ ಒಗಟಿಗೆ ಉತ್ತರ ಕುಂಕುಮ ಎಂದು. ಗ್ರಾಮಗಳಲ್ಲಿ ಕೈಯುಂಗರ ಕಾಲುಂಗುರ ಚಿರಪರಿಚಿತವಾದರೂ ಅವು ಚಿನ್ನದವುಗಳಲ್ಲ, ಬೆಳ್ಳಿಯವು.
ಪ್ರ : ತನಗೆ ಕಿರಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇಳ್ಕುಮೆಂದಡೆ (ಪಂಪಭಾರತ)
೨೯೨.ಉಂಡದ್ದು ಊಟ ಕೊಂಡದ್ದು ಕೂಟ ಆಗದಿರು = ಮೈ ಹತ್ತದಿರು, ವ್ಯರ್ಥವಾಗು, ಹಿಂಸೆಯಾಗು
(ಕೂಟ = ಸಂಭೋಗ)
ಪ್ರ : ಈ ಹೈರಾಣದಲ್ಲಿ ನಾನು ಉಂಡದ್ದು ಊಟ ಅಲ್ಲ ಕೊಂಡದ್ದು ಕೂಟ ಅಲ್ಲ.
೨೯೩. ಉಂಡ ಮನೆ ಜಂತೆ ಎಣಿಸು = ಎರಡು ಬಗೆ, ಉಪಕಾರ ಹೊಂದಿ ಅಪಕಾರವೆಸಗು
(ಜಂತೆ = ಮಾಳಿಗೆ ಮನೆಯ ಎರಡು ತೊಲೆಗಳ ಮೇಲೆ ಅಡ್ಡಡ್ಡಲಾಗೆ ಹರಡಿರುವ ಸಣ್ಣ ಗಳುಗಳು.)
ಪ್ರ : ಉಂಡ ಮನೆ ಜಂತೆ ಎಣಿಸೋರ್ನ ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರಬೇಕು.
೨೯೪. ಉಂಡ ಮನೆಗೆ ಕನ್ನ ಹಾಕು = ಕೆಟ್ಟದ್ದನ್ನೇಣಿಸು, ಎರಡು ಬಗೆ
(ಕನ್ನ = ಮನೆಯ ಗೋಡೆಗೆ ತೂತು ಕೊರೆದು ಒಳನುಗ್ಗಿ ಕಳ್ಳತನ ಮಾಡುವುದು)
ಪ್ರ : ಉಂಡ ಮನೆಗೆ ಕನ್ನ ಹಾಕೋ ಹೀನ ಬುದ್ಧಿ ಬಿಡು
೨೯೫. ಉಂಡಿಗೆ ಹಾಕಿ ನೋಡು = ಪರೀಕ್ಷಿಸು
(ಉಂಡಿಗೆ = ಹುಗಲು, ರಂದ್ರ)
ಹಲಸಿನ ಹಣ್ಣು ಕಾಯೋ ಹಣ್ಣೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕುಡಲು (< ಕುಡುಗೊಲು) ಅಥವಾ ಚಾಕುವಿನಿಂದ ಒಂದು ಕಡೆ ರಂಧ್ರ ಮಾಡಿ ತೊಳೆದು ಚೂರೊಂದನ್ನು ಹೊರದೆಗೆದು ನೋಡುವ ರೂಢಿಯುಂಟು. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಸುತ್ತು ಬಳಸಿನ ಮಾತಿನ ಮೂಲಕ ನನ್ನ ಎದೆಗೆ ಉಂಡಿಗೆ ಹಾಕಿ ನೋಡಲು ಯತ್ನ ಮಾಡ್ತಾ ಇದ್ದೀ ಅಲ್ವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ