ನನ್ನ ಪುಟಗಳು

05 ಅಕ್ಟೋಬರ್ 2015

೭) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಆ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಆ)
೧೫೪. ಆಕಾಶಕ್ಕೆ ಇಚ್ಚಣಿಗೆ ಹಾಕು = ಅಸಾಧ್ಯ ಕೆಲಸಕ್ಕೆ ಕೈಹಾಕು, ವ್ಯರ್ಥ ಪ್ರಯತ್ನದಲ್ಲಿ ತೊಡಗು,
(ಇಚ್ಚಣಿಗೆ < ನಿಚ್ಚಣಿಗೆ = ಏಣಿ)
ಪ್ರ : ಬುದ್ಧಿವಂತರಾರೂ ಆಕಾಶಕ್ಕೆ ಇಚ್ಚಣಿಗೆ ಹಾಕುವಂಥ ಕೆಲಸಕ್ಕೆ ಕೈ ಹಾಕಲ್ಲ.
೧೫೫. ಆಕಾಶ ತಲೆ ಮೇಲೆ ಬಿದ್ದಂತಾಡು = ಸಣ್ಣಪುಟ್ಟದಕ್ಕೆಲ್ಲ ತಲೆ ಕೆಡಿಸಿಕೊಳ್ಳು, ಗಾಬರಿಗೊಳ್ಳು
ಪ್ರ : ಭಾವುಕರು ಮಾತ್ರ ಸಣ್ಣ ಸಮಸ್ಯೆ ಬಂದರೂ ಆಕಾಶ ತಲೆ ಮೇಲೆ ಬಿದ್ದಂತಾಡುತ್ತಾರೆ.
೧೫೬. ಆಚೆ ಆಗು = ಮುಟ್ಟಾಗು, ಹೊರಗಾಗು.
(ಆಚೆ = ಮನೆಯಿಂದ ಹೊರಗೆ) ಹಿಂದೆ ಹಳ್ಳಿಗಾಡಿನಲ್ಲಿ ತಿಂಗಳು ತಿಂಗಳು ಮುಟ್ಟಾಗುವ ಹೆಂಗಸರು ಮನೆಯೊಳಗೆ ಬರುವಂತಿರಲಿಲ್ಲ; ಅಡುಗೆ ಮಾಡುವಂತಿರಲಿಲ್ಲ. ಮೂರುದಿನಗಳ ಕಾಲ ಬಾಗಿಲ ಆಚೆಯೇ ಇರಬೇಕಾಗಿತ್ತು. ಹೊರಗೇ ಸ್ನಾನ ಮಾಡಿ ಬಿಚ್ಛಿ ಹಾಕಿದ ಸ್ಯಾಲೆ ಕುಬುಸವನ್ನು ಪ್ರತ್ಯೇಕವಾಗಿಡುತ್ತಿದ್ದರು. ಅದನ್ನು ‘ಹೊಲೆ ಸ್ಯಾಲೆ’ ಎನ್ನುತ್ತಿದ್ದರು. ಅದನ್ನು ಮನೆಯವರು ಒಗೆಯುತ್ತಿರಲಿಲ್ಲ. ಅಗಸರು ಕೊಂಡು ಹೋಗಿ ಒಗೆದು ಮಡಿ ಮಾಡಿ ತಂದುಕೊಡುವವರೆಗೂ ಅದನ್ನು ಮುಟ್ಟಬಾರದ ಮೈಲಿಗೆ ವಸ್ತು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದಲೇ ತಮಗೆ ದ್ವೇಷವಿರುವ ಗಂಡಸರನ್ನು ಕುರಿತು ಹೆಂಗಸರು “ಅವ್ವ ನನ್ನ ಹೊಲೆಸೆಲೆ (<ಹೊಲೆಸ್ಯಾಲೆ)” ಎಂದು ಬಯ್ಯುವ ರೂಢಿ ಈಗಲೂ ಹಳ್ಳಿಗಾಡಿನಲ್ಲಿ ಉಂಟು. ಆದರೆ ವಿದ್ಯೆ ಹಾಗೂ ನಾಗರಿಕತೆ ಹರಡಿದಂತೆಲ್ಲ ಇಂದು ಮುಟ್ಟಾದವರು ಮೂರು ದಿನ ಮನೆಯಿಂದಾಚೆ ಇರುವುದನ್ನು ಬಿಟ್ಟು, ಸ್ನಾನ ಮಾಡಿ ಮನೆಯೊಳಗೇ ಇದ್ದುಕೊಂಡು ಅಡಿಗೆಯನ್ನೂ ಮಾಡುತ್ತಾರೆ.
ಪ್ರ : ಆಚೆ ಆದಾಗ ಮಾತ್ರ ಹಾಯವಾಗಿರಬಹುದು, ಇತ್ತ ಗಂಡನ ಕಾಟವೂ ಇಲ್ಲ, ಅತ್ತ ಅತ್ತೆ ಕಾಟವೂ ಇಲ್ಲ.
೧೫೭. ಆ ಚೋರಿಗಿರು = ಆ ಕಡೆಗಿರು, ಆ ಪಕ್ಕಕ್ಕಿರು
(ಚೋರಿ = ಪಕ್ಕ, ಕಡೆ)
ಪ್ರ : ಆ ಊರು ಈ ಚೋರಿಗಿಲ್ಲ, ಆ ಚೋರಿಗಿದೆ.
೧೫೮. ಆಟ ಆಡು = ನಾಟಕ ಆಡು
(ಆಟ = ನಾಟಕ)ಇವತ್ತಿಗೂ ಹಳ್ಳಿಗಳಲ್ಲಿ ‘ನಾಟಕ ಆಡ್ತಾರೆ’ ಅನ್ನುವುದಿಲ್ಲ ‘ಆಟ ಆಡ್ತಾರೆ’ ಎನ್ನುತ್ತಾರೆ. ಬಯಲಾಟ, ದೊಡ್ಡಾಟ, ಸಣ್ಣಾಟ ಎಂಬ ಕಲಾಪ್ರಕಾರಗಳಲ್ಲಿ ಬರುವ ಆಟ ಶಬ್ದಕ್ಕೆ ನಾಟಕವೆಂದೇ ಅರ್ಥ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂಬ ಸಂಸ್ಕೃತ ಶಬ್ದಗಳ ಬಳಕೆಯಿಂದಾಗಿ ಅಚ್ಚಕನ್ನಡ ಶಬ್ದಗಳಾದ ಮೂಡಲು, ಪಡುವಲು, ಬಡಗಲು, ತೆಂಕಲು ಮೂಲೆಗುಂಪಾದಂತೆ ಸಂಸ್ಕೃತದ ‘ನಾಟಕ’ ಶಬ್ದದ ಮೋಹದಿಂದಾಗಿ ಅಚ್ಚಗನ್ನಡದ ‘ಆಟ’ ಶಬ್ದ ಮೂಲೆಗುಂಪಾಗುತ್ತಾ ಬಂದದೆ.
ಪ್ರ : ಇವತ್ತು ಪಕ್ಕದೂರಿನಲ್ಲಿ ‘ಶನಿಮಹಾತ್ಮೆ’ ಆಟವಂತೆ, ಹೋಗೋಣವ?
೧೫೯. ಆಟ ಮುಗಿ = ಹಾರಾಟ ನಿಲ್ಲು, ತಣ್ಣಗಾಗು, ಸಾವು ಸಂಭವಿಸು
ಜೀವನವೂ ಒಂದು ನಾಟಕ, ಪ್ರಾರಂಭದಲ್ಲಿ ತೆರೆ ಏಳುತ್ತದೆ, ಮುಕ್ತಾಯದಲ್ಲಿ ತೆರೆ ಬೀಳುತ್ತದೆ ಎಂಬ ಆಶಯ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ಆ ದುಸ್ಮಾನನ ಆಟ ಮುಗಿದದ್ದೇ ತಡ, ಬಡಬಗ್ಗರು ಹಿಗ್ಗಿ ಹೀರೇಕಾಯಾದ್ರು
೧೬೦. ಆಟೊಂದು ಎಗರಾಡು = ಅಷ್ಟೊಂದು ನೆಗೆದಾಡು, ಹಾರಾಡು
ಪ್ರ : ಆಟೊಂದು ಎಗರಾಡೋನು ಇನ್ನು ಏಟೊಂದು ಚೆನ್ನಾಗಿ ನೋಡಿಕೊಂಡಾನು?
೧೬೧. ಆಣೆ ಇಡು = ಪ್ರಮಾಣ ಮಾಡು
ಆಪಾದನೆಗೊಳಗಾದವರು ಸಾಮಾನ್ಯವಾಗಿ ದೇವರ ಮೇಲೆ, ತಾಯಿಯ ಮೇಲೆ, ತಂದೆಯ ಮೇಲೆ, ಮಗುವಿನ ಮೇಲೆ ಆಣೆ ಇಟ್ಟು ಆಪಾದನೆಯನ್ನು ಅಲ್ಲಗಳೆಯುತ್ತಾರೆ. ದೇವರು ಮತ್ತು ಮಾನವರನ್ನು ಬಿಟ್ಟು ಆಣೆ ಮಾಡಲು ನಮ್ಮ ಜನಪದರು ಬಳಸಿಕೊಳ್ಳುವ ವಸ್ತುವೆಂದರೆ ಸಾಮಾನ್ಯವಾಗಿ ನಾಗವಳಿ (< ನಾಗವಲ್ಲಿ = ವೀಳ್ಯದೆಲೆ)
ಪ್ರ : ಈ ನಾಗವಳಿ ಆಣೆಗೂ ನಾನು ಕದ್ದಿಲ್ಲ.
೧೬೨. ಆತುಕೊಳ್ಳು = ಹಿಡಿದುಕೊಳ್ಳು
(ಆತುಕೊಳ್ಳು < ಆಂತುಕೊಳ್ಳು; ಆನ್ = ಧರಿಸು, ಹೊಂದು)
ಪ್ರ : ಅವನು ಚೆಂಡನ್ನು ಆತುಕೊಂಡ.
೧೬೩. ಆತುಕೊಳ್ಳು = ಕೈಹಿಡಿ, ಆಶ್ರಯ ನೀಡು.
ಪ್ರ : ಕಷ್ಟ ಕಾಲದಲ್ಲಿ ಆ ನಮ್ಮಪ್ಪ ಆತುಗೊಂಡ, ಇಲ್ಲದಿದ್ರೆ ನನಗೆ ಕೆರೆಬಾವೀನೇ ಗತಿಯಾಗ್ತಿತ್ತು.
೧೬೪. ಆಧೀಕ ತಿನ್ನು = ಫಾಯಿದೆ ಪಡೆ, ಆದಾಯ ಅನುಭವಿಸು
(ಆಧೀಕ = ಆದಾಯ, ಲಾಭ)
ಪ್ರ : ಗಾದೆ – ಅರಸು ಆಧೀಕ ತಿಂದ, ಪರದಾನಿ ಹೂಸು ಕುಡಿದ
೧೬೫. ಆ ದಿಕ್ಕಿಗೇ ತಲೆ ಹಾಕಿ ಮಲಗದಿರು = ಛಲ ಸಾಧಿಸು
ತನಗೆ ಆಗದವರ ಮುಖದರ್ಶನ ಮಾಡುವುದಾಗಲೀ, ಅವರ ಮನೆಗೆ ಹೋಗುವುದಾಗಲೀ ಮಾಡುವುದಿಲ್ಲ ಎಂಬುದು ಮನುಷ್ಯನ ಛಲವನ್ನು ಸೂಚಿಸುತ್ತದೆ. ಆದರೆ ಆ ದಿಕ್ಕಿಗೇ ತಲೆ ಹಾಕಿ ಮಲಗುವುದಿಲ್ಲ ಎಂಬುದು ಛಲದ ನಿಶ್ಶಿಖರವೆಂದೇ ಹೇಳಬೇಕಾಗು‌ತ್ತದೆ. ವಿರುದ್ಧ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ತನ್ನ ಕಾಲುಗಳು ಶತ್ರುವಿನ ಕಡೆಗಿರುತ್ತವೆ ಎಂಬಲ್ಲಿನ ಧ್ವನಿವಿಶೇಷ ನಮ್ಮ ಜನಪದರ ಅಭಿವ್ಯಕ್ತಿ ಶಕ್ತಿಯನ್ನು ಮೆಲಕು ಹಾಕುವಂತೆ ಮಾಡುತ್ತವೆ.
ಪ್ರ : ನನ್ನ ದಾಯಾದಿ ಇರುವ ದಿಕ್ಕಿಗೆ ಎಂದೂ ನಾನು ತಲೆ ಹಾಕಿ ಮಲಗಿಲ್ಲ ಇದುವರೆಗೂ
೧೬೬. ಆನಿಸಿಕೊಂಡು ಬರು = ಚಾಚಿಕೊಂಡು ಬರು, ಒತ್ತರಿಸಿಕೊಂಡು ಬರು
(ಆನು = ಚಾಚು, ಅಡರಿಸು)
ಪ್ರ : ಆನೆ ಅಂಥೋಳು ಆನಿಸಿಕೊಂಡು ಬಂದುಬಿಟ್ಟಳು ಹರೇದ ಹುಡುಗನ ಹತ್ರಕೆ.
೧೬೭. ಆಪು ಕೊಡು = ಬಿರಿ ಕೊಡು, ಬೆಣೆ ಹೊಡೆದು ಬಿಗಿಗೊಳಿಸು
(ಆಪು < ಆರ್ಪು = ಶಕ್ತಿ, ಬೆಣೆ)
ನೇಗಿಲ ಎಜ್ಜಕ್ಕೆ ಈಚವನ್ನು ಸೇರಿಸಿದಾಗ ಅದು ಲೊಡಬಡೆಯಾಗಿ ಅಲ್ಲಾಡತೊಡಗಿದರೆ ಅಥವಾ ಗುದ್ದಲಿಗೆ ಕಾವನ್ನು ಹಾಕಿದಾಗ ಸಡಿಲವಾಗಿ ಅಲುಗಾಡುತ್ತಿದ್ದರೆ ಬೆಣೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಅದಕ್ಕೆ ಆಪು ಎನ್ನಲಾಗುತ್ತದೆ.
ಪ್ರ : ಗುದ್ದಲಿ ಕಾವು ಅಲ್ಲಾಡದ ಹಂಗೆ ಒಂದು ಆಪು ಹೊಡಿ.
೧೬೮. ಆಯ ತಪ್ಪು = ತೂಕ ತಪ್ಪು, ಸಮತೋಲನ ತಪ್ಪು.
(ಆಯ = ಸಮತೂಕ)
ಪ್ರ : ಆಯ ತಪ್ಪಿ ಬಿದ್ದೆ, ಗಾಯ ಆಯ್ತು, ಏನ್ಮಾಡೋಕಾಗ್ತದೆ
೧೬೯. ಆರಕ್ಕೇರದಿರು ಮೂರಕ್ಕಿಳಿಯದಿರು = ಹಾಳತವಾಗಿರು, ಉಬ್ಬದಿರು ತಗ್ಗದಿರು
ಪ್ರ : ಈ ಮಾರಾಯ ಮಾತ್ರ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಹೆಂಗಿದ್ದನೋ ಹಂಗಿದ್ದಾನೆ.
೧೭೦. ಆರಭಾರ ಹೊರು = ಜವಾಬ್ದಾರಿ ಹೊರು, ಉಸ್ತುವಾರಿ ನೋಡಿಕೊಳ್ಳು.
(ಆರ < ಆಹಾರ, ಭಾರ = ಹೊರೆ, ಹೊಣೆ)
ಪ್ರ : ಆಡಿದ ಮಾತ್ನಂತೆ ನನ್ನ ಆರಭಾರ ಎಲ್ಲ ಹೊತ್ಕೊಂಡ.
೧೭೧. ಆರಿ ಅತ್ತೀಕಾಯಾಗು = ತೀರ ತಣ್ಣಗಾಗು, ತಂಗುಳಾಗು
(ಅತ್ತಿ = ವೃಕ್ಷವಿಶೇಷ)
ಪ್ರ : ಜಗಳ ಬಗೆ ಹರೀವಾಗ್ಗೆ, ಮಾಡಿದ ಅಡುಗೆ ಆರಿ ಅತ್ತಿಕಾಯಾಯ್ತು.
೧೭೨. ಆರಿಗೆ ಹೋರಿ ತಿದ್ದು = ನೇಗಿಲಿಗೆ ಹೂಡಲು ಹೋರಿಯನ್ನು ಪಳಗಿಸು.
(ಆರು = ನೇಗಿಲು; ತಿದ್ದು = ಪಳಗಿಸು, ಒಗ್ಗಿಸು)
ಪ್ರ : ಆರಿಗೆ ಹೋರಿ ತಿದ್ದು ಅಂದ್ರೆ, ಅದು ಬಿಟ್ಟು ನನ್ನ ಬುಡಕ್ಕೇ ನೀರು ತಿದ್ದೋಕೆ ಹೊರಟೆಯಲ್ಲ.
೧೭೩. ಆಲ್ಯ ನಗು = ಪ್ರತ್ಯಕ್ಷನಾಗು, ಶಾಪ ವಿಮೋಚನೆಯಾಗು
(ಆಲ್ಯ < ಅಹಲ್ಯ = ಕಲ್ಲಾಗಿದ್ದ ಅಹಲ್ಯೆ ರಾಮನ ಪಾದಸ್ಪರ್ಶದಿಂದ ಜೀವಂತ ಹೆಣ್ಣಾಗಿ ಪ್ರತ್ಯಕ್ಷಗೊಂಡ ಪೌರಾಣಿಕೆ ಘಟನೆ ಈ ನುಡಿಗಟ್ಟಿನ ತಾಯಿ)
ಪ್ರ : ಆ ನನ್ನಪ್ಪ ನನ್ನ ಬಾಲ್ಯದಲ್ಲಿ ಆಲ್ಯ ಆಗಿ ಮರುಜೀವ ಕೊಟ್ಟ
೧೭೪. ಆಲಾಪಿಸು = ಕೊರಗು, ಸಂಕಟಪಡು, ಗೋಳಾಡು
(ಆಲಾಪ = ಯಾವುದೇ ರಾಗದ ಪ್ರಾರಂಭದ ಪರಿಚಯಾತ್ಮಕ ಸ್ವರವಿನ್ಯಾಸ)
ಪ್ರ : ನಾನು ಆಲಾಪಿಸಿದಂಗೆ ಅವರೂ ಆಲಾಪಿಸುವಂತಾಗಲಿ, ದೇವರೇ.
೧೭೫. ಆಲೆಗಿಟ್ಟ ಕಬ್ಬಾಗು = ಹಿಂಡಿ ಹಿಪ್ಪೆಯಾಗು, ನಿಸ್ಸಾರ ಸಿಪ್ಪೆಯಾಗು
(ಆಲೆ = ಕಬ್ಬು ಅರೆಯುವ ಗಾಣ)
ಹಿಂದೆ ಜಲಾಶಯಗಳಾಗಲೀ ಅಣೆಕಟ್ಟುಗಳಾಗಲೀ ಇಲ್ಲದಿದ್ದಾಗ ಕೆರೆಯ ಹಿಂದೆ ಜಮೀನು ಇದ್ದವರು ಕಬ್ಬು ಬೆಳೆದು ಬೆಲ್ಲ ತಯಾರಿಸುತ್ತಿದ್ದರು. ಕಬ್ಬು ಅರೆಯಲು ಮೊದಲು ಮರದ ಗಾಣ ಇತ್ತು. ಕ್ರಮೇಣ ಲೋಹದ ಗಾಣ ಬಂತು. ಗಾಣ ಅಥವಾ ಆಲೆಗಿಟ್ಟ ಕಬ್ಬು ರಸ ಸುರಿಸಿ ಹಿಪ್ಪೆಯಾಗಿ ಹೊರಬರುತ್ತದೆ. ಆಲೆಮನೆಯ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ: ಸೂಳೆಗಾರಿಕೆ ಮಾಡಿ ಮಾಡಿ ಒಳ್ಳೆ ಆಲೆಗಿಟ್ಟ ಕಬ್ಬಾದಂತಾಗಿದ್ದಾನೆ.
೧೭೬. ಆವುಗೆಯಲ್ಲಿ ಬೇಯು = ಉಸಿರು ಕಟ್ಟುವ ವಾತಾವರಣದಲ್ಲಿ ಬದುಕು, ಸಂಕಟಪಡು.
(ಆವುಗೆ = ಕುಂಬಾರ ಮಡಕೆಗಳನ್ನು ಬೇಯಿಸು ಒಲೆ) ಕುಂಬಾರ ವೃತ್ತಿ ಈ ನುಡಿಗಟ್ಟಿಗೆ ಮೂಲ.
ಪ್ರ : ನಾನು ಈ ಆವುಗೇಲಿ ಬೇಯಲಾರೆ, ನಮ್ಮ ಪಾಲು ನಾವು ತಗೊಂಡು ಬೇರೆ ಹೋಗೋಣ.
೧೭೭. ಆಸಾದಿಯಂತಾಡು = ಹಾಡಿ, ಕುಣಿದು ಕುಪ್ಪಳಿಸು, ಮಾರಿಯನ್ನು ಬೈದು ಭಂಗಿಸು
(ಆಸಾದಿ = ಚೌಡಿಕೆಯವನು, ಎಡಗೈ ಜಾತಿಯವನು)
ಮಾರಿ ಪರಿಷೆ, ಗ್ರಾಮದೇವತೆ ಪರಿಷೆಗಳಲ್ಲಿ ಆಸಾದಿಗಳು (ಚೌಡಿಕೆಯವರು) ಚೌಡಿಕೆಯನ್ನು ನುಡಿಸುತ್ತಾ ಮಾರಿಯನ್ನು “ತೋತ್ರಣೆ” (< ಸ್ತೋತ್ರ) ಮಾಡುತ್ತಾ ಅವಾಚ್ಯ ಶಬ್ದಗಳಲ್ಲಿ ಬೈಯುತ್ತಾರೆ. ಅದಕ್ಕೆ ಕಾರಣ ಹಾರುವ ಜಾತಿಗೆ ಸೇರಿದ ಮಾರಿ ತನ್ನ ಗಂಡ ಅಸ್ಪೃಶ್ಯ ಜಾತಿಯವನೆಂದು ತಿಳಿದು ಕೋಣನನ್ನಾಗಿ ಮಾಡಿ ಬಲಿ ತೆಗೆದುಕೊಳ್ಳುತ್ತಾಳೆ ಎಂಬ ಐತಿಹ್ಯ. ಹಾಡು ಕಥೆಗಳ ಅಕ್ಷಯ ಭಂಡಾರ ಆಸಾದಿಗಳ ಅಮೂಲ್ಯ ಆಸ್ತಿ ಎನ್ನಬೇಕು.
ಪ್ರ : ರವಷ್ಟು ಘನತೆ ಗಾಂಭೀರ್ಯದಿಂದಿರು; ಆಸಾದಿಯಂತಾಡ ಬೇಡ.
೧೭೮. ಆಸೊಂದು ಕೊಡು = ಅಷ್ಟೊಂದು ಕೊಡು, ಬಹಳ ಕೊಡು (ಆಸು < ಅಷ್ಟು)
ಪ್ರ : ಒಂದು ಹಿಡಿ ಕೊಡು ಅಂದ್ರೆ ಆಸೊಂದು ಕೊಡೋದ?
೧೭೯. ಆಳ ಮೇಲೆ ಆಳು ಬೀಳು = ಜನಸಂದಣಿ ಜಾಸ್ತಿಯಾಗು, ಕೆಲಸ ಹಾಳಾಗು
ಪ್ರ : ಗಾದೆ – ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು.
೧೮೦. ಆಳು ಮಟ್ಟಕ್ಕೆ ಹಾಕಿ ಗೇಣು ಮಟ್ಟಕ್ಕೆ ತೆಗಿ = ಹಿಂಸಿಸು, ಮಾನಕಳಿ
(ಮಟ್ಟ=ಕಂದಕ, ಆಳುಮಟ್ಟ = ಐದಾರು ಅಡಿ ಆಳದ ಕಂದಕ ; ಗೇಣುಮಟ್ಟ = ಗೇಣುದ್ದ, ಮುಕ್ಕಾಲಡಿ) ಗೇಣುದ್ದದ ತಲೆ ಕಾಣುವಂತೆ ಆಳುದ್ದದ ಕಂದಕದಲ್ಲಿ ವ್ಯಕ್ತಿಗಳನ್ನು ಹೂತು ಶಿಕ್ಷಿಸುತ್ತಿದ್ದ ರಾಕ್ಷಸ ಕೃತ್ಯ ಈ ನುಡಿಗಟ್ಟಿನ ಉಗಮಕ್ಕೆ ಮೂಲವೆನ್ನಿಸುತ್ತದೆ.
ಪ್ರ : ಅತ್ತೆ ಮಾವದಿರು ಸೊಸೆಯನ್ನು ಆಳುಮಟ್ಟಕ್ಕೆ ಹಾಕಿ ಗೇಣು ಮಟ್ಟಕ್ಕೆ ತೆಗೆದರು.
೧೮೧. ಆಂ ಅನ್ನದಿರು = ಓಗೊಡದಿರು, ಉಸಿರು ಬಿಡದಿರು.
ಪ್ರ : ಗಾದೆ-ಗೌಡ ಅಂದಿದ್ಕೆ ಆಂ ಎಂದ ಒಂದಾಳಿಗೂಟ ಅಂದಿದ್ಕೆ ಉಸಿರೇ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ