ನನ್ನ ಪುಟಗಳು

02 ಅಕ್ಟೋಬರ್ 2015

ಬ್ರಹ್ಮಶಿವ

ಬ್ರಹ್ಮಶಿವ
ಸುಮಾರು ಹನ್ನೆರಡನೆಯ ಶತಮಾನದಲ್ಲಿ ಜೀವಿಸಿದ್ದ ಬ್ರಹ್ಮಶಿವನ ಪೂರ್ವಿಕರು ಮುಂಚೆ ಶೈವಬ್ರಾಹ್ಮಣರಾಗಿದ್ದರು ಎಂದು ಅವನ ಕೃತಿಯಿಂದ ತಿಳಿದುಬರುತ್ತದೆ.
ಇವನ ಹೆಸರು ಗ್ರಂಥದ(ಸಮಯ ಪರೀಕ್ಷೆ) ಶರೀರದಲ್ಲಿ ಬ್ರಹ್ಮ/ಬೊಮ್ಮ ಎಂದೂ, ಪ್ರತಿ ಅಧ್ಯಾಯದ ಕೊನೆಯಲ್ಲಿ ಬ್ರಹ್ಮದೇವನೆಂದೂ ಇರುವುದರಿಂದ ಇವನ ಹೆಸರಿನ ಬಗೆಗೆ ಗೊಂದಲವಿದ್ದರೂ, ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವನುಬ್ರಹ್ಮಶಿವನೆಂದೇ ಪರಿಚಿತನಾಗಿದ್ದಾನೆ. ಈತ ಜೀವಿಸಿದ್ದ ಕಾಲವನ್ನು ಕೃತಿಯ ಒಳಗಿನ ವಿವರಗಳಿಂದಲೂ, ಇತರ ಮೂಲಗಳ ಆಧಾರದಿಂದಲೂ ಸುಮಾರು ೧೧೬೦ ಇರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.
ಪೊಟ್ಟಳಗೆರೆಯ ಪ್ರಸಿದ್ಧನಾದ ಸಿಂಗರಾಜ ಖ್ಯಾತ ಕವಿ ನಾಗಚಂದ್ರನ(ಅಭಿನವ ಪಂಪ) ಮಗ. ಸಿಂಗರಾಜನ ಮಗನೇ ಬ್ರಹ್ಮಶಿವ. ಹುಟ್ಟಿನಿಂದ ಇವನು ವತ್ಸಗೋತ್ರದ ಜೈನಬ್ರಾಹ್ಮಣನಾಗಿದ್ದವನು. ಹೀಗಿರುವಾಗ, ಇವನು ಮನೆ-ಜೈನಬಸದಿಗಳ ನಡುವೆ ಓಡಾಡುತ್ತಲೇ ನಡೆಯುವುದನ್ನೂ, ಸದಾ ಜೈನಾಗಮಗಳನ್ನು ಓದುತ್ತಲೇ ನುಡಿಯುವುದನ್ನೂ ಕಲಿತು ಬೆಳೆದದ್ದು ಸ್ವಾಭಾವಿಕವೇ ಆಗಿದೆ.
ಆದರೂ, ಕಾಲದಲ್ಲಿ ಒಂದು ಧಾರ್ಮಿಕ ಚಳುವಳಿಯಾಗಿ ರೂಪುಗೊಂಡ ವೀರಶೈವ ಧರ್ಮವು ಮುಂದೆ ಬ್ರಹ್ಮಶಿವನನ್ನು ಆಕರ್ಷಿಸಿದಂತೆ ಕಾಣುತ್ತದೆ. ಧರ್ಮವನ್ನೊಪ್ಪಿ, ಸ್ವಲ್ಪಕಾಲ ಅದರಂತೆ ನಡೆದುಕೊಂಡು, ಅದು ಹಿತವೆನ್ನಿಸದೆ, ಮತ್ತೆ ತನ್ನ ಹುಟ್ಟಿನ (ಜೈನ)ಧರ್ಮಕ್ಕೆ ಹಿಂತಿರುಗಿದ್ದಾಗಿ ಅವನೇ ಹೇಳಿಕೊಂಡಿದ್ದಾನೆ (ಸಮಯಪರೀಕ್ಷೆ -೫೯).
ಜೈನಧರ್ಮದ ಬಗೆಗೆ ಬ್ರಹ್ಮಶಿವನಿಗಿದ್ದ ಶ್ರದ್ಧೆ ಅಪಾರವಾದದ್ದು. ಅದು ಇವನ ಕೃತಿಯ ವ್ಯಾಪ್ತಿಯುದ್ದಕ್ಕೂ ಕಂಡುಬರುತ್ತದೆ. ಆದರೂ, ಎಲ್ಲೋ ಒಂದು ಕಡೆ 'ತನ್ನ ಧರ್ಮದ ಬಗ್ಗೆ ಅವನಿಗಿದ್ದ (ಕುರುಡು)ಶ್ರದ್ಧೆಯೇ ಅವನು ಅನ್ಯಧರ್ಮಗಳ ಬಗೆಗೆ ಕಟುವಾಗಿ ನುಡಿಯುವುದಕ್ಕೆ ಕಾರಣವಾಯಿತೋ!' ಎನಿಸದೆ ಇರದು.
"ಸಮಯಪರೀಕ್ಷೆ" ಹಾಗೂ "ತ್ರೈಲೋಕ್ಯಚೂಡಾಮಣಿ ಸ್ತೋತ್ರ" - ಇವೆರೆಡೂ ಬ್ರಹ್ಮಶಿವನಿಂದ ರಚಿತವಾದ ಕೃತಿಗಳು. ’ತ್ರೈಲೋಕ್ಯಚೂಡಾಮಣಿ ಸ್ತೋತ್ರವು ೩೮* ಸ್ತೋತ್ರರೂಪದ ಪದ್ಯಗಳನ್ನೂ, ವೈದಿಕ ಬೌದ್ಧ ಮೊದಲಾದ ಇತರ ಧರ್ಮಗಳ ವಿಡಂಬನೆಯ ಪದ್ಯಗಳನ್ನೂ ಒಳಗೊಂಡ ಒಂದು ಪುಟ್ಟ ಕೃತಿ. ಆದರೆ ಬ್ರಹ್ಮಶಿವನು ಸಾಹಿತ್ಯ ಚರಿತ್ರೆಯಲ್ಲಿ ವಿಶೇಷವಾಗಿ ಉಲ್ಲೇಖನಾರ್ಹನಾಗುವುದು ಅವನ "ಸಮಯ ಪರೀಕ್ಷೆ" ಎಂಬ ಕೃತಿಯಿಂದಲೇ.
(*ಲಭ್ಯವಿರುವ ಪ್ರತಿಗಳಲ್ಲಿ ಪದ್ಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ)
ಸಮಯಪರೀಕ್ಷೆ:
ಬ್ರಹ್ಮಶಿವನ ಸಮಯಪರೀಕ್ಷೆಯು ಒಂದು ಅಪರೂಪದ ಕೃತಿ. ಮೂಲತಃ ಇದೊಂದು ವಾದಗ್ರಂಥ. ಆಪ್ತಸ್ವರೂಪನಿರೂಪಣಂ, ಆಪ್ತಾಗಮ ವರ್ಣನಂ ಮುಂತಾದ ಹದಿನೈದು ಅಧಿಕಾರ(ಅಧ್ಯಾಯ)ಗಳು ಕೃತಿಯಲ್ಲಿವೆ. ಜಿನಧರ್ಮದ ಮಾರ್ಗದಲ್ಲಿ ನಿಶ್ಚಲವಾಗಿ ನಿಂತು, ಅದರ ತಾತ್ವಿಕ ಹಾಗೂ ಬೌದ್ಧಿಕ ನೆಲೆಗಳನ್ನು ಪೋಷಿಸುವ, ಅವುಗಳ ಮೌಲ್ಯವನ್ನು ಪ್ರತಿಪಾದಿಸಿ ಉಪದೇಶಿಸುವ ಸಂಕಲ್ಪ ಕವಿಯದು. ಜೈನಧರ್ಮದ ಪಾರಮ್ಯವನ್ನು ಸಾರುತ್ತ, ಅನ್ಯಧರ್ಮಗಳಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು ಬೊಟ್ಟು ಮಾಡಿ ತೋರಿಸುವುದೇ ಕೃತಿಯ ಮೂಲ ಉದ್ದೇಶ ಎನ್ನಬಹುದು. ತನ್ನ ಕೃತಿ ಒಂದುರತ್ನ ಕರಂಡಕವೆಂದೂ, ಪರಧರ್ಮೀಯರನ್ನು ದಾರಿಗೆ ತರುವ ಕಾವ್ಯವೆಂದೂ ಅವನು ಹೇಳಿಕೊಂಡಿರುವುದರಿಂದ ಇದು ವಿದಿತವಾಗುತ್ತದೆ.
ಸಮಯಪರೀಕ್ಷೆಗೆ ನಿರ್ದಿಷ್ಟವಾದ ಕಥಾವಸ್ತು ಎಂಬುದಿಲ್ಲ, ಕಾವ್ಯಪರಂಪರೆಯ ಇತರ ಕಾವ್ಯಗಳ ಹಾಗೆ ಇದರಲ್ಲಿ ಅಷ್ಟಾದಶ ವರ್ಣನೆಗಳಿಲ್ಲ. ಯಾವುದೇ ಪ್ರಧಾನ ಪಾತ್ರ, ಸನ್ನಿವೇಶಗಳಿಲ್ಲ. ವಿವಿಧ ಧರ್ಮಗಳ ಸಾರಾಸಾರ ವಿಮರ್ಶೆಯೇ ಇಲ್ಲಿನ ವಸ್ತು. ವಿವಿಧ ರೀತಿಯ ಆಚಾರ-ವಿಚಾರಗಳ ಕಥನವೇ ಇಲ್ಲಿನ ವರ್ಣನೆ. ಆಯಾ ಮತಾನುಯಾಯಿಗಳ ಶೀಲ ಸ್ವಭಾವಗಳ ಪರಿಶೀಲನೆಯೇ ಇದರಲ್ಲಿನ ಪಾತ್ರಚಿತ್ರಣ. ಇನ್ನು, ಪಾತ್ರಗಳ ನಡೆನುಡಿ ಕುರಿತಾದ ಸಂದರ್ಭ ವಿಶೇಷಗಳೇ ಇಲ್ಲಿಯ ಸನ್ನಿವೇಶಗಳು.
ಮುಖ್ಯವಾಗಿ, ಸಮಯಪರೀಕ್ಷೆ ರಚನೆಗೊಂಡ ಕಾಲವನ್ನು ಪರಿಗಣಿಸಿ ಹೇಳುವುದಾದರೆ - ಕಾಲಕ್ಕೆ, ಅಂದರೆ ಸುಮಾರು ೧೨ನೇ ಶತಮಾನದ ವೇಳೆಗೆ ವೀರಶೈವ ಧರ್ಮವು ಒಂದು ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿಯಾಗಿ ರೂಪುಗೊಂಡು, ಜನರನ್ನು ಹೆಚ್ಚುಹೆಚ್ಚಾಗಿ ತನ್ನತ್ತ ಸೆಳೆಯತೊಡಗಿತ್ತು. ಹಿಂದೆ ಜೈನಧರ್ಮಕ್ಕೆ ಇದ್ದ ರಾಜಾಶ್ರಯವೂ, ಜನರಲ್ಲಿ ಜಿನಧರ್ಮದ ಬಗೆಗೆ ಇದ್ದ ಒಲವೂ ಕ್ರಮೇಣ ಕ್ಷೀಣಿಸತೊಡಗಿತ್ತು (ವೀರಶೈವದಲ್ಲಿನ ಸರಳ ಸೂತ್ರಗಳೂ, ಜಿನಧರ್ಮದಲ್ಲಿನ ಕಠಿಣ ವ್ರತಾನುಷ್ಠಾನವೂ ಅದಕ್ಕೆ ಕಾರಣವಾಗಿದ್ದಿರಬಹುದು). ಹೀಗೆ, ತನ್ನ ಧರ್ಮವು ವಿಷಮಸ್ಥಿತಿಯೊಂದನ್ನು ಎದುರಿಸುತ್ತಿರುವುದನ್ನು ಕಂಡು, ಅದರ ಅಗ್ಗಳಿಕೆಯನ್ನು ಎತ್ತಿಹಿಡಿದು, ಅನ್ಯಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನು ಆವೇಶದಿಂದ ಹೊರಗೆಡಹುವುದಕ್ಕಾಗಿ ಬ್ರಹ್ಮಶಿವನು ಮೂಲಕ ಪ್ರಯತ್ನಿಸಿದ್ದಾನೆ. ಶೈವ, ವೈಷ್ಣವ, ಬೌದ್ಧವೂ ಸೇರಿದಂತೆ ಇತರ ಮತ-ಧರ್ಮಗಳನ್ನು ಜೈನಧರ್ಮದೊಡನೆ ತುಲನೆ ಮಾಡಿ ಅವುಗಳಲ್ಲಿ ಜೈನಧರ್ಮವೇ ಹೆಚ್ಚು ಎಂದು ಕೃತಿಯ ಉದ್ದಕ್ಕೂ ಪ್ರತಿಪಾದಿಸುತ್ತಾನೆ - ಬ್ರಹ್ಮಶಿವ.
ಹಿಂದೆಯೇ ತಿಳಿಸಿದಂತೆ, ಇದೊಂದು ವಿಡಂಬನೆಯ ಮಾಧ್ಯಮದಲ್ಲಿರುವ ವಾದಗ್ರಂಥ. ಬ್ರಹ್ಮಶಿವನ ಬಹುಶ್ರುತತೆ ಅವನು ಹೀಗೆ ಸ್ವಮತಪ್ರಶಂಸೆಯ ಜೊತೆಗೆ ಅನ್ಯಮತಗರ್ಹಣೆಗೆ ತೊಡಗುವುದಕ್ಕೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿದೆ ಎಂದೇ ಹೇಳಬಹುದು. ಶೈವಮತಕ್ಕೆ ಮತಾಂತರಗೊಂಡಿದ್ದ ಬ್ರಹ್ಮಶಿವನು ಮತದ ತತ್ತ್ವಗಳನ್ನೂ, ಸಾಹಿತ್ಯವನ್ನೂ ಆಸ್ಥೆಯಿಂದ ಅಭ್ಯಾಸ ಮಾಡಿದ್ದಿರಬಹುದು. ಹಾಗೆಯೇ, ಸ್ವಂತ ಕುತೂಹಲದಿಂದ ಇತರ ಪಂಥಗಳ ಪರಿಚಯವನ್ನೂ ಇವನು ತಕ್ಕಮಟ್ಟಿಗೆ ಹೊಂದಿದ್ದಿರಬೇಕು. ಕೃತಿಯ ಹಲವು ಭಾಗಗಳಲ್ಲಿ ಅವನು ಒಡ್ಡುವ ವಾದಗಳ ಹಿನ್ನೆಲೆಯಿಂದ ಅದು ನಮಗೆ ತಿಳಿದುಬರುತ್ತದೆ. ಆದರೂ, ಬ್ರಹ್ಮಶಿವನ ವಾದಗಳ ಸರಣಿ ಯಾವ ತರ್ಕಶುದ್ಧವಾದ ನೆಲೆಗಟ್ಟಿನ ಮೇಲೂ ನಿಂತದ್ದಲ್ಲ. ಅನ್ಯಧರ್ಮದ ತತ್ತ್ವಗಳ ಬಗೆಗೆ ಗಹನವಾಗಿ ವಿಚಾರ ಮಾಡದೆ, ಹಾಸ್ಯ - ಅಣಕ - ವಿಡಂಬನೆಗಳ ಮೂಲಕ ಅವನು ಹೂಡುವ ವಾದ ಒಮ್ಮೊಮ್ಮೆ ತರ್ಕಹೀನವಾಗಿ, ಒಮ್ಮೊಮ್ಮೆ ತೀರ ಬಾಲಿಶವಾಗಿ ಕಾಣುತ್ತದೆ. ಅವನ ವಾದವು ಕೆಲವೊಮ್ಮೆ ಅಸಹನೆಯಿಂದ ಕೂಡಿದ್ದರೆ, ಒಮ್ಮೊಮ್ಮೆ ಅಸಭ್ಯತೆಯಿಂದ ಕೂಡಿದ್ದು, ತೀರ ಕಟುವಾದದ್ದು ಎನಿಸುತ್ತದೆ.
ಬ್ರಹ್ಮಶಿವನ ತೀವ್ರವಾದ ಆಕ್ರೋಶ, ಆಕ್ಷೇಪಣೆಗಳಿಗೆ ವಿಶೇಷವಾಗಿ ಗುರಿಯಾಗಿರುವುದು ವೈದಿಕ ಶೈವ ಪಂಥಗಳು ಹಾಗೂ ನಾಡ ಜಂಗುಳಿ ದೈವಗಳು. ವೈಷ್ಣವ ಹಾಗೂ ಬೌದ್ಧ ಪಂಥಗಳ ವಿಷಯದಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ. ಅವನ ವಾದಗಳಲ್ಲಿ ಮುಖ್ಯವಾಗಿ ಕಾಣಬಹುದಾದ ಅಂಶವೆಂದರೆ - ಇತರ ಧರ್ಮಗಳನ್ನು ಕುರಿತು ಟೀಕಿಸುವಾಗ ಸಾವಧಾನ ಚಿತ್ತದಿಂದ, ನಿರ್ಲಿಪ್ತತೆಯಿಂದ ಅವುಗಳ ತತ್ತ್ವಗಳನ್ನು ಪರಿಭಾವಿಸಿ ನೋಡಿ, ನಂತರ ಅವುಗಳ ವಿಮರ್ಶೆಗೆ ತೊಡಗದೆ, ನೇರವಾಗಿ ವಿನಾಕಾರಣವೆಂಬಂತೆ ಅವುಗಳ ಬಗೆಗೆ ಕಟುವಾದ ಟೀಕೆಯಲ್ಲಿ ತೊಡಗಿಕೊಂಡಿದ್ದಾನೆ ಕವಿ. ಎಷ್ಟೋ ಸಾರಿ ಕಾಲಕ್ಕೆ ರೂಢಿಯಲ್ಲಿ ಇಲ್ಲದಿದ್ದ ಪದ್ಧತಿಗಳನ್ನೂ ನ್ನೂ ಇವೆ ಎಂದೇ ಭಾವಿಸಿ ಅವನ್ನು ಖಂಡಿಸಿದ್ದಾನೆ. ಒಮ್ಮೊಮ್ಮೆ ಎಲ್ಲೋ ಕೇಳಿದ ಕಥೆಗಳನ್ನೇ ನಿಜವೆಂದು ಭಾವಿಸಿ ಅನ್ಯಧರ್ಮಗಳ ದೂಷಣೆಯಲ್ಲಿ ತೊಡಗುತ್ತಾನೆ.
ಒಡಲೊಳಿರ್ಭಾಗಮನಿತ್ತಂ
ಗಡ ಕಾಂತೆಗೆ ಶಂಭು ಶಂಭುಗಂ ಕೊಟ್ಟಳ್
ನ್ನೊಡಲೊರ್ಭಾಗಮನಗಸುತೆ
ಗಡ ಮಿಕ್ಕೆರಡರೆಯನಾರ್ಗೆ ಕೊಟ್ಟರೊ ಪೇಳಿಂ    ೧೦.೭೩

ಹರನ ಗಿರಿಸುತೆಯ ತನುಗಳೊ
ಳೆರಡರೆಯಂ ಕಾಣಲಾಗದುಳಿದೆರಡರೆಯಂ
ನರಿ ತಿಂದವೊ ನಾಯ್ ತಿಂದವೊ
ಪರೆದಿರ್ದುವೊ ಪೇಳಿಮರ್ಧನಾರೀಶ್ವರರಾ                     ೧೦.೭೪
     ಇಲ್ಲಿಯವರೆಗೂ ಕೃತಿಯಲ್ಲಿನ ಋಣಾತ್ಮಕ ಅಂಶಗಳ ಬಗೆಗೇ ಹೇಳಿದ್ದಾಯಿತು. ಅದರಲ್ಲಿನ ಧನಾತ್ಮಕ ವಿಷಯಗಳ ಬಗೆಗೂ ಒಮ್ಮೆ ಗಮನ ಹರಿಸಬೇಕಿದೆ. ತನಗೆ ತಿಳಿದೋ ತಿಳಿಯದೆಯೋ, ಬ್ರಹ್ಮಶಿವನು ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳ ವಿವರವಾದ ಚಿತ್ರಣವೊಂದನ್ನು ನಮ್ಮ ಮುಂದಿಟ್ಟಿದ್ದಾನೆ - ಕೃತಿಯಲ್ಲಿ. ಆಗ ಪ್ರಚಲಿತವಿದ್ದ ಅನೇಕ ಮತ-ಧರ್ಮಗಳ, ಅವುಗಳ ಆಚಾರ-ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿ ಕೃತಿಯ ಮೂಲಕ ನಮಗೆ ದೊರೆಯುತ್ತದೆ. ಕಾಲಕ್ಕೆ ಇದ್ದಿರಬಹುದಾದ ಹಲವಾರು ಮೂಢಾಚರಣೆಗಳನ್ನು ಬ್ರಹ್ಮಶಿವನು ಖಂಡಿಸಿ ನುಡಿದಿರುವುದನ್ನು ನೋಡಿದರೆ ಇದು ನಮಗೆ ತಿಳಿಯುತ್ತದೆ.
ಕಾಲಕ್ಕೆ ಪ್ರವರ್ಧಮಾನದಲ್ಲಿದ್ದ ಶೈವ ವೈಷ್ಣವ ಧರ್ಮಗಳ ಪ್ರಭಾವಲಯದ ನಡುವೆಯೇ ಇದ್ದೂ, ಆಯಾ ಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನೂ, ಅವುಗಳ ಆಚರಣೆಗಳಲ್ಲಿದ್ದ ಹಲವು ಭ್ರಮೆ ಮೌಢ್ಯಗಳನ್ನೂ ಅಷ್ಟು ದಿಟ್ಟವಾಗಿ ಹೊರಹಾಕಲು ಪ್ರಯತ್ನಿಸಿರುವ ಅವನ ಧೈರ್ಯವನ್ನು ಮೆಚ್ಚಬೇಕಾದ್ದೇ.
ಧಾರ್ಮಿಕ ಹಿನ್ನೆಲೆಯಿಂದಲ್ಲದೆ ಇನ್ನೊಂದು ಆಯಾಮದಿಂದ ನೋಡಿದ್ದಾದರೆ ಬ್ರಹ್ಮಶಿವನಲ್ಲಿ ಒಬ್ಬ ವಿಚಾರವಾದಿಯನ್ನೂ, ಸಮಾಜ ಸುಧಾರಕನನನ್ನೂ ಮನಗಾಣಬಹುದು.
ಅನ್ಯಧರ್ಮಗಳ ಬಗೆಗೆ ಅವನ ಮಾತುಗಳು ಕಟುವಾಗಿದ್ದರೂ ಕೂಡ, ಅವನು ವಿರೋಧಿಸಿದ ಹಲವಾರು ವಿಷಯಗಳು ಸಮಾಜದಲ್ಲಿ ಆಗ ಪ್ರಚಲಿತವಿದ್ದ ಕೆಲವು ಅನಿಷ್ಟ ಪದ್ಧತಿಗಳೇ ಆಗಿವೆ. ಮೇಲು-ಕೀಳು, ಮಡಿ-ಮೈಲಿಗೆ, ನಾಡ ಜಂಗುಳಿ ದೈವಗಳಿಗೆ ಕೊಡುತ್ತಿದ್ದ ಪಶುಬಲಿ - ಹೀಗೆ ಮುಂತಾದವು ಬ್ರಹ್ಮಶಿವನಿಂದ ತೀವ್ರ ಖಂಡನೆಗೆ ಒಳಗಾದ ವಿಷಯಗಳು. ಅಹಿಂಸೆಯೇ ಪರಮಧರ್ಮವೆಂಬ ಜಿನಧರ್ಮ ಸಾರವನ್ನು ಪ್ರತಿಪಾದಿಸಲು ಬ್ರಹ್ಮಶಿವನು ಎಲ್ಲವನ್ನೂ ವಿರೋಧಿಸಿದ್ದಾನೆ.
ಇನ್ನು, ಕೃತಿಯಲ್ಲಿ ಹಲವಾರು ಚಾರಿತ್ರಿಕ ಅಂಶಗಳೂ ದಾಖಲಾಗಿವೆ. ನೆಲೆಯಿಂದ ಚರಿತ್ರೆಯನ್ನರಿಯಲೂ ಕೃತಿಯು ಉಪಕಾರಿ ಎಂದೇ ಹೇಳಬಹುದು.
ಭಾವಿಸುವನಾವನೆಲ್ಲಾ
ಜೀವಮುಮಂ ತನ್ನ ಮಕ್ಕಳಂತಂತವನಂ
ಭಾವಿಸುಗುಂ ಭೂವಳಯಂ
ದೇವನಿವಂ ಮನುಜನಲ್ಲನೆಂದಾಪೊಳ್ತುಂ                       .೨೩
(ಯಾವೊಬ್ಬ ವ್ಯಕ್ತಿಯು ಎಲ್ಲ ಜೀವ/ಜೀವಿಗಳನ್ನೂ ತನ್ನ ಮಕ್ಕಳಂತೆ ಎಂದು ಭಾವಿಸಿ ನಡೆದುಕೊಳ್ಳುತ್ತಾನೋ, ಅಂತಹ ವ್ಯಕ್ತಿಯನ್ನು ಕುರಿತು ಭೂಲೋಕವು "ಇವನು ಮನುಜನಲ್ಲ, ದೇವತೆ" ಎಂದು ಭಾವಿಸುತ್ತದೆ.)
ಇಂತಹ ಉದಾರವಾದ ವಿಚಾರವನ್ನುಳ್ಳ ಹಲವಾರು ಪದ್ಯಗಳು ಕೃತಿಯಲ್ಲಿವೆ.
ಅದಾವ ಕಾರಣಕ್ಕೋ, ಅವನ ಮುಂದಿನ ಕವಿಗಳಾರೂ ಇವನನ್ನು ತಮ್ಮ ಕೃತಿಗಳಲ್ಲಿ ನೆನೆದಿಲ್ಲವಾದರೂ, ಬ್ರಹ್ಮಶಿವನು ನಿಶ್ಚಿತವಾಗಿಯೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಮಹತ್ವದ ಸ್ಥಾನಕ್ಕೆ ಅರ್ಹನಾಗಿದ್ದಾನೆ.
--ಕೃಪೆ: ಲೋಕೇಶ್ ಆಚಾರ್ಯ 

1 ಕಾಮೆಂಟ್‌: