ನನ್ನ ಪುಟಗಳು

02 ಅಕ್ಟೋಬರ್ 2015

ಕರ್ಣಪಾರ್ಯ

ಕರ್ಣಪಾರ್ಯ
ಈತ ಸು.೧೧೬೦-೭೦. ಕೊಲ್ಲಾಪುರ ಶಾಖೆಯ ಶಿಲಾಹಾರ ರಾಜರಲ್ಲಿ ಒಬ್ಬನಾದ ವಿಜಯಾದಿತ್ಯನೆಂಬವನ ಕಾಲದಲ್ಲಿದ್ದ ಒಬ್ಬ ಜೈನಕವಿ. ರುದ್ರ ಭಟ್ಟ, ಆಂಡಯ್ಯ, ಮಂಗರಸ ಮೊದಲಾದ ಕವಿಗಳು ಈತನನ್ನು ಹೆಸರಿಸಿದ್ದಾರೆ. ಈ ಕವಿ ನೇಮಿನಾಥಪುರಾಣ ಮತ್ತು ವೀರೇಶಚರಿತ ಎಂಬ ಎರಡು ಕೃತಿಗಳನ್ನು ಬರೆದಿರುವಂತೆ ತಿಳಿದುಬಂದಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಲಭ್ಯವಾಗಿ ಪ್ರಕಟವಾಗಿದೆ.
ನೇಮಿನಾಥಪುರಾಣದಿಂದ ತಿಳಿಯುವ ಕವಿಯ ವಿಷಯದ ವಿವರಗಳು ಹೀಗಿವೆ: ಸಮಂತಭದ್ರ, ಗುಣಭದ್ರ, ಪುಜ್ಯವಾದ, ಗೃದ್ಧ್ರಪಿಂಛ, ವೀರಸೇನ ಕೊಂಡಕುಂದಾಚಾರ್ಯ, ಮಲಧಾರಿದೇವ, ಕಲ್ಯಾಣಕೀರ್ತಿ, ಶುಭಚಂದ್ರ, ಬೆಟ್ಟದ ವ್ರತಿ, ಭುವನಬ್ಬೆ, ನೇಮಿಚಂದ್ರ, ಅಕಳಂಕಚಂದ್ರ-ಇವರು ಕವಿಯಿಂದ ಸ್ತುತಿಸಲಾಗಿರುವ ಯತಿಗಳು. ಪಂಪ, ಪೊನ್ನ, ರನ್ನ ಮತ್ತು ನಾಗಚಂದ್ರ-ಇವರ ಉಲ್ಲೇಖವಾಗಿರುವ ಪೂರ್ವಕವಿಗಳು. ಜೀಮೂತವಾಹನ ವಿದ್ಯಾಧರ ಚಕ್ರಿವಂಶತಿಳಕನೆನ್ನಿಸಿದ ಗಂಡರಾದಿತ್ಯನ ಪುತ್ರ ವಿಜಯಾದಿತ್ಯನಲ್ಲಿ ಕರಣಾಗ್ರಣಿಯೂ ಮಂತ್ರಿಯೂ ಆಗಿದ್ದ ಲಕ್ಷ್ಮನೆಂಬವನು (ಲಕ್ಷ್ಮಣ, ಲಕ್ಷ್ಮೀಧರ ಎಂದೂ ಈತನ ಹೆಸರನ್ನು ಹೇಳಿದೆ) ಕವಿಯ ಆಶ್ರಯದಾತೃ; ಕವಿಯ ಕೃತಿರಚನೆಗೆ ಸಹಾಯಕ. ಲಕ್ಷ್ಮನ ತಂದೆ ಶ್ರೀಭೂಷಣಾರ್ಯ ಮೊದಲಾದವರು ಪ್ರೋತ್ಸಾಹಿಸಲಾಗಿ ಕರ್ಣಪಾರ್ಯ ನೇಮಿನಾಥ ಪುರಾಣದ ರಚನೆಗೆ ಸಂಕಲ್ಪಿಸಿದ.
ಕವಿ ಕರ್ಣಪಾರ್ಯನ ತಾಯಿತಂದೆಗಳು ಯಾರೆಂಬುದು ತಿಳಿಯದು. ಗುರು ಕಲ್ಯಾಣಕೀರ್ತಿ; ಈತ ಕೃತಿಯ ನಾಂದೀಮುಖದ ಪೂರ್ವಾಚಾರ್ಯಶ್ರೇಣೀಯಲ್ಲಿ ಸ್ತುತನಾಗಿರುವ ಮಲಧಾರಿ ದೇವರ ಶಿಷ್ಯನೇ ಹೇಗೆ ಎಂಬುದು ನಿಶ್ಚಯವಿಲ್ಲ. ನೇಮಿನಾಥ ಪುರಾಣದ ಆಶ್ವಾಸಾದಿ ಪದ್ಯಗಳಲ್ಲಿ ಕಾಣಿಸಿಕೊಳ್ಳುವ ಭವ್ಯವನಜವನ ಮಾರ್ತಂಡಂ ಎಂಬುದೂ ಆಶ್ವಾಸಾಂತ್ಯಪದ್ಯಗಳಲ್ಲಿ ಕಾಣಿಸಿಕೊಳ್ಳುವ ಪರಮ ಜಿನಮತ ಕ್ಷೀರವಾರಾಶಿಚಂದ್ರಂ ಎಂಬುದೂ ಅಲ್ಲಿಯೇ ಗದ್ಯಭಾಗದಲ್ಲಿ ಕಾಣಿಸಿಕೊಳ್ಳುವ ಸಹಜ ಕವಿತಾರಸೋದಯಂ ಎಂಬುದೂ ಕರ್ಣಪಾರ್ಯನಿಗೆ ಮೆಚ್ಚಿಕೆಯಾಗಿರುವ ಬಿರುದುಗಳಾಗಿರುವಂತೆ ತೋರುತ್ತದೆ. ಇವುಗಳಲ್ಲಿ ಮೊದಲಿನವೆರಡೂ ಕವಿಯ ಆಶ್ರಯದಾತೃವಿಗೆ ಹಾಗೂ ಕಾವ್ಯಶರೀರದಲ್ಲಿಯ ಇಷ್ಟವ್ಯಕ್ತಿಗೆ ಅನ್ವಯವಾಗಿರುವುದುಂಟು. ನೇಮಿನಾಥಪುರಾಣದಲ್ಲಿ ಕರ್ಣಪಾರ್ಯನ ಕಾಲದ ವಿಷಯವಾಗಿ ನೇರವಾದ ಉಲ್ಲೇಖವಿಲ್ಲ. ಪಂಪರಾಮಾಯಣದ ಕವಿ ನಾಗಚಂದ್ರನ ಕಾಲ, ಕರ್ಣಪಾರ್ಯನ ಗುರು ಕಲ್ಯಾಣಕೀರ್ತಿಯ ಕಾಲ ಮತ್ತು ಪೋಷಕವ್ಯಕ್ತಿ ಲಕ್ಷ್ಮಣ ಹಾಗೂ ಆತನ ಅರಸನಾದ ವಿಜಯಾದಿತ್ಯನ ಸಂಬಂಧವಾದ ಕೆಲವು ಚಾರಿತ್ರಿಕ ವಿವರಗಳನ್ನು ಅವಲಂಬಿಸಿ ಈ ಕವಿಯ ಕಾಲವನ್ನು ಗೊತ್ತುಮಾಡುವ ಪ್ರಯತ್ನ ನಡೆದಿದೆ.
ವಿದ್ವಾಂಸರು ಸೂಚಿಸಿರುವ ಕಾಲಗಳು ಈ ರೀತಿಯಾಗಿವೆ; ಆರ್. ನರಸಿಂಹ ಚಾರ್ಯರು: ಪ್ರ.ಶ.ಸು. ೧೧೪೦; ಡಾ. ಎ. ವೆಂಕಟಸುಬ್ಬಯ್ಯನವರು: ಮೊದಲು ಊಹಿಸಿದ್ದು ಪ್ರ.ಶ.ಸು. ೧೧೭೩-೭೪, ಆಮೇಲೆ ಸ್ಥೂಲವಾಗಿ ನಿರ್ಧರಿಸಿದ್ದು ಪ್ರ. ಶ. ೧೧೩೫-೯೦; ಎಚ್. ಶೇಷ ಅಯ್ಯಂಗಾರ್ಯರು: ಪ್ರ.ಶ.ಸು. ೧೧೩೦-೩೫: ಪ್ರೊ. ಡಿ.ಎಲ್. ನರಸಿಂಹಾಚಾರ್ಯರು: ಪ್ರ.ಶ.ಸು. ೧೧೪೦-೮೦, ಎಂ. ಗೋವಿಂದಪೈಯವರು: ಪ್ರ.ಶ.ಸು. ೧೧೭೦.
ಕರ್ಣಪಾರ್ಯನ ಕಾಲನಿರ್ಧಾರದಲ್ಲಿ ಎಲ್ಲ ವಿದ್ವಾಂಸರೂ ನಾಗಚಂದ್ರನ ಕಾಲವನ್ನು ಒಂದು ಮುಖ್ಯ ಆಧಾರವನ್ನಾಗಿ ಗ್ರಹಿಸಿದ್ದಾರೆ. ಆದರೆ ನಾಗಚಂದ್ರನ ಕಾಲ ವಿಷಯದಲ್ಲೆ ಅವರಲ್ಲಿ ಭಿನ್ನಮತವಿದೆ. ಈಚೆಗೆ ನಾಗಚಂದ್ರನ ಪ್ರಸಿದ್ಧಿಯ ಕಾಲ ೧೨ನೆಯ ಶತಮಾನದ ಪುರ್ವಾರ್ಧವೆಂದೂ ಆತನ ಕೃತಿ ಪಂಪರಾಮಾಯಣ ಪ್ರ.ಶ.ಸು. ೧೧೪೦ರಲ್ಲಿ ಬಲುಮಟ್ಟಿಗೆ ರಚಿತವಾಗಿರಬೇಕೆಂದೂ ತಿಳಿಯಲಾಗಿದೆ. ಈ ಕವಿಯನ್ನು ಕರ್ಣಪಾರ್ಯ ಅದ್ಯತನನೆಂದು ಹೇಳಿರುವುದರಿಂದ ನಾಗಚಂದ್ರನ ಸಮಕಾಲೀನನೋ ಸಮೀಪವರ್ತಿಯೋ ಆಗಿರುವಂತೆ ತಿಳಿಯುವುದಕ್ಕೆ ಆಸ್ಪದವಿದೆ. ನಾಗಚಂದ್ರನನ್ನು ಪ್ರತ್ಯೇಕವಾದೊಂದು ಪದ್ಯದಲ್ಲಿ ಉಲ್ಲೇಖಿಸಿ ಮನ್ನಿಸಿರುವುದನ್ನು ನೋಡಿದರೆ ಆತನ ಖ್ಯಾತಿಯ ಪ್ರಭಾವ ವಿದ್ವದ್ವಲಯದಲ್ಲಿ ಇನ್ನೂ ಮುನ್ನೆಲೆಯಲ್ಲಿದ್ದಿ ತೆಂದು ಹೇಳಬಹುದು. ಅಲ್ಲದೆ ಆತನ ಶೈಲಿಯ ಪ್ರಭಾವವೂ ಅಲ್ಲಲ್ಲಿ ಪಂಪ ರಾಮಾಯಣದ ಅನುಕರಣವೂ ಕರ್ಣಪಾರ್ಯನ ನೇಮಿನಾಥಪುರಾಣದಲ್ಲಿ ಕಾಣುತ್ತದೆ. ಈ ಕಾರಣಗಳಿಂದ ಕರ್ಣಪಾರ್ಯ ಪ್ರ.ಶ.ಸು. ೧೧೪೦ಕ್ಕಿಂತ ಹತ್ತಿಪ್ಪತ್ತು ವರ್ಷಗಳಷ್ಟಾದರೂ ಈಚೆಗೆ ಇದ್ದಿರಬಹುದು. ಅಲ್ಲದೆ ಕರ್ಣಪಾರ್ಯನಿಗೆ ಆಶ್ರಯದಾತನಾಗಿದ್ದ ಶಿಲಾಹಾರರ ವಿಜಯಾದಿತ್ಯರಾಜ ಪ್ರ.ಶ.ಸು. ೧೧೪೦ರಲ್ಲಿ ಪಟ್ಟವೇರಿ ಪ್ರಾಯಶಃ ಪ್ರ.ಶ.ಸು. ೧೧೧೫ರ ವರೆಗೆ ಆಳಿದನೆಂತಲೂ ಪ್ರ. ಶ. ಸು. ೧೧೪೦ರ ಮೊದಲು ಆತ ಸಿಂಹಾಸನವೇರಲಿಲ್ಲವೆಂತಲೂ ಚರಿತ್ರಕಾರರು ಸಾಧಾರವಾಗಿ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಕರ್ಣಪಾರ್ಯನ ಅಸ್ತಿತ್ವದ ಕಾಲ ಪ್ರ.ಶ.ಸು. ೧೧೪೦-75 ಎಂದಾಗುತ್ತದೆ. ಇಮ್ಮಡಿ ನಾಗವರ್ಮನ (ಪ್ರ.ಶ.ಸು. ೧೧೪೫) ಭಾಷಾಭೂಷಣದಲ್ಲಾಗಲಿ ಕಾವ್ಯಾವಲೋಕನದಲ್ಲಾಗಲಿ ಕರ್ಣಪಾರ್ಯನ ನೇಮಿನಾಥ ಪುರಾಣದ ಪದ್ಯಗಳು ಉದಾಹೃತವಾಗಿರುವುದರಿಂದ ಪ್ರ.ಶ.ಸು.೧೧೪೫ ರಿಂದೀಚೆಗೆ, ಪ್ರ.ಶ.ಸು. ೧೧೪೦ರಲ್ಲಿ ರಚಿತವಾಗಿರಬಹುದಾದ ಪಂಪ ರಾಮಾಯಣಕ್ಕೆ ಕನಿಷ್ಠ ಹತ್ತಿಪ್ಪತ್ತು ವರ್ಷಗಳಷ್ಟು ಈಚೆಗೆ ಎಂದರೆ ಪ್ರ.ಶ.ಸು. ೧೧೫೦ರ ಅನಂತರದಲ್ಲಿ, ಅಲ್ಲಲ್ಲಿ ಅರ್ವಾಚೀನ ಭಾಷಾ ಪ್ರಯೋಗಗಳು ಪ್ರಾಚುರ್ಯವಿರುವುದರಿಂದ ೧೨ನೆಯ ಶತಮಾನದ ಉತ್ತರಾರ್ಧದಲ್ಲಿ, ಪ್ರಾಯಃ ೧೧೬೦-೭೦ರ ಅವಧಿಯಲ್ಲಿ ಕರ್ಣಪಾರ್ಯನ ಕೃತಿ ನೇಮಿನಾಥಪುರಾಣ ರಚಿತವಾಗಿರಬಹುದು. ಕರ್ಣಪಾರ್ಯ ಯಾವ ಸ್ಥಳದವನೆಂದು ತಿಳಿಯಲು ಗ್ರಂಥಾಧಾರವಿಲ್ಲ. ದೊರೆತಿರುವ ವಿಜಯಾದಿತ್ಯನ ಶಾಸನಗಳೆಲ್ಲವೂ ಆತ ವಳವಾಡವನ್ನು ಸ್ಥಿರ ಶಿಬಿರವಾಗಿಸಿಕೊಂಡು ರಾಜ್ಯವಾಳುತ್ತಿದ್ದನೆಂದು ಉಲ್ಲೇಖಿಸಿವೆ. ಈ ವಳವಾಡ ಕೊಲ್ಲಾಪುರದ ನೈಋತ್ಯಕ್ಕೆ ೨೫.6 ಕಿ.ಮೀ. ಅಂತರದಲ್ಲಿರುವ, ಅದೇ ಪ್ರಾಂತಕ್ಕೆ ಸೇರಿದ ಇಂದಿನ ವಳವಾಡ ಎಂಬ ಸ್ಥಳವಾಗಿರಬಹುದು ಎಂಬ ಗ್ರಹಿಕೆಯಿದೆ. ಈ ವಿಜಯಾದಿತ್ಯನ ಕರಣಾಗ್ರಣಿಯಾದ ಲಕ್ಷ್ಮನೂ ಇಲ್ಲಿಯೇ ಇದ್ದಿರುವುದು ಸಹಜವಾದರಿಂದ ಈತನ ಪೋಷಣೆಯ ಕವಿಗೂ ಇದೇ ವಾಸಸ್ಥಳವಾಗಿದ್ದು ನೇಮಿನಾಥಪುರಾಣದ ರಚನೆಯೂ ಇಲ್ಲಿಯೇ ನಡೆದಿರಬಹುದು. ಆದರೆ ಇದು ಬರಿಯ ಊಹೆ. ಕರ್ಣಪಾರ್ಯಕೃತವಾದ ನೇಮಿನಾಥಪುರಾಣ ಪ್ರತ್ಯೇಕವಾಗಿಯೂ ಸಮಗ್ರವಾಗಿಯೂ ರಚಿತವಾಗಿದ್ದು ಈಗ ದೊರೆಯುತ್ತಿರುವ ನೇಮಿಚರಿತ್ರೆಗಳಲ್ಲಿ ಮೊತ್ತಮೊದಲನೆಯದಾಗಿದೆ. ಕರ್ಣಪಾರ್ಯ ತನ್ನ ಕೃತಿರಚನೆಗೆ ತನಗೆ ಮೊದಲಿದ್ದ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಜೈನಕವಿಗಳ ನೇಮಿಕಥಾಮೂಲಗಳಲ್ಲಿ ಕೆಲವನ್ನು ಉಪಯೋಗಿಸಿಕೊಂಡಿರುವಂತೆ ತೋರಿದರೂ ಅವುಗಳಲ್ಲಿ ಎಲ್ಲವನ್ನೂ ಗುರುತಿಸುವುದು ಸಾಧ್ಯವಾಗಿಲ್ಲ. ಪುನ್ನಾಟಸಂಘದ ಜಿನಸೇನಾಚಾರ್ಯರ ಹರಿವಂಶಪುರಾಣ ಮತ್ತು ಚಾವುಂಡರಾಯ ಕೃತವಾದ ಚಾವುಂಡರಾಯಪುರಾಣ ಇವನ್ನು ನೋಡಿರುವುದಕ್ಕೆ ಆಧಾರಗಳು ತೋರುತ್ತವೆ. ಕರ್ಣಪಾರ್ಯನ ಈ ಕೃತಿ ಜಿನಸೇನರ ಹರಿವಂಶಪುರಾಣವನ್ನೂ ಚಾವುಂಡರಾಯಪುರಾಣದ ಮೂಲಕವಾಗಿ ಗುಣಭದ್ರಾಚಾರ್ಯರ ಮಹಾಪುರಾಣ ಮಾರ್ಗವನ್ನೂ ಯಥೋಚಿತವಾಗಿ ಸಮ್ಮಿಳಮಾಡಿಕೊಂಡಿರುವ ಕೃತಿ. ಹೀಗಿದ್ದೂ ಈ ಆಚಾರ್ಯದ್ವಯರ ಕಥಾಮಾರ್ಗಗಳಲ್ಲಾಗಲಿ ಪೂರ್ವಕಾಲೀನ ಅನ್ಯ ನೇಮಿಚರಿತ್ರೆಗಳಲ್ಲಾಗಲಿ ಕಂಡುಬರದಿರುವ ಕೆಲವು ಪ್ರಮುಖ ಕಥಾಸಂದರ್ಭಗಳೂ ಅದರಲ್ಲಿ ಕಂಡುಬಂದಿವೆ. ಜೈನೇತರವಾದ ಎಂದರೆ ವೈದಿಕ ಸಂಪ್ರದಾಯದ ಭಾರತ ಕಥೆಯನ್ನು ಒಳಕೊಂಡಿರುವುದೂ ಈ ಕೃತಿಯ ಒಂದು ವಿಶೇಷ. ಪಂಪಭಾರತ ಮತ್ತು ಗದಾಯುದ್ಧಗಳ ಮೂಲಕವಾಗಿ ಅದು ಇಲ್ಲಿ ಅನುಸರಿಸಲ್ಪಟ್ಟಿದೆ. ಆದರೆ ಪುರ್ತಿಯಾಗಿ ವೈದಿಕ ಸಂಪ್ರದಾಯದ ಭಾರತಕಥೆಯನ್ನೇ ಅನುಸರಿಸಿದ ಪ್ರಮುಖ ಘಟ್ಟಗಳಲ್ಲಿ ಜೈನ ಭಾರತ ಕಥಾಂಶಗಳನ್ನೂ ಹಾಸುಹೊಕ್ಕಾಗಿ ಕೂಡಿಸಿದೆ. ಕೆಲಮಟ್ಟಿಗೆ ಕ್ರಾಂತಿಕಾರಕವೆನ್ನಬಹುದಾದ ಈ ಬದಲಾವಣೆಗಳಿಂದ ಕರ್ಣಪಾರ್ಯ ಸಂಪ್ರದಾಯ ಶರಣನಲ್ಲ, ಸ್ವಾತಂತ್ರ್ಯಪ್ರಿಯನೂ ಕಾವ್ಯಕಲಾದೃಷ್ಟಿಯಲ್ಲಿ ಆಸಕ್ತಿಯುಳ್ಳವನೂ ಆಗಿದ್ದಾನೆಂಬ ಸಂಗತಿ ತಿಳಿಯುತ್ತದೆ. ಈಗ ತಿಳಿದಿರುವಂತೆ ಸಮ್ಮಿಶ್ರಕಥಾ ಸಂಪ್ರದಾಯದ ವಿಭಿನ್ನ ಕಥಾವಾಹಿನಿಗಳ ಒಂದು ಸುಂದರವಾದ ಮಾದರಿಯನ್ನಾಗಿ ಆತ ತನ್ನ ಕೃತಿಯನ್ನು ಕಟ್ಟಿ, ಈಚಿನ ಕನ್ನಡ ನೇಮಿಚರಿತ್ರಕಾರರಿಗೆ ಮಾರ್ಗದರ್ಶಕನಾದಂತೆ ತೋರುತ್ತದೆ. ಕರ್ಣಪಾರ್ಯ ವಿವಿಧ ಕಥಾಮೂಲಗಳನ್ನು ಬಳಸಿಕೊಂಡಿರುವ ದೃಷ್ಟಿ ಶ್ಲಾಘ್ಯವಾಗಿದೆ. ಇಲ್ಲಿಯ ವಿಸ್ತಾರವಾದ ಕಥಾಭಿತ್ತಿಯಲ್ಲಿ ಹರಿವಂಶ ಕುರುವಂಶಗಳ ಚರಿತ್ರಪುರುಷರ ಕಥೆಯೂ ಸೇರಿಕೊಂಡು ಬರುತ್ತವೆ. ಈ ಕಥಾವಸ್ತುವಿನ ಅಂಗೋಪಾಂಗಗಳಿಗೆ ಕೊರತೆಯಾಗದಂತೆ ರಸದೃಷ್ಟಿ, ಪಾತ್ರಪರಿಪುಷ್ಟಿ, ಸನ್ನಿವೇಶ ಸೃಷ್ಟಿಗಳನ್ನು ಆತನ ಕೃತಿಯಲ್ಲಿ ಕಾಣಬಹುದಾಗಿದೆ. ಯುದ್ಧವರ್ಣನೆ ಕಾವ್ಯಾಂಗಗಳಾದ ಇತರ ವರ್ಣನೆಗಳಿಗೆ ಯಾವ ಪ್ರಾಶಸ್ತ್ಯವೂ ಇಲ್ಲದೆ ಇಲ್ಲಿ ಕಥೆ ಮುನ್ನಡೆದಿದೆ. ಮೂಲದ ಕಥಾಭಾಗಗಳು ಪರಿಷ್ಕಾರಗೊಂಡು ಹೊಸ ತೇಜಸ್ಸಿನಿಂದ ಕಳೆಗೊಂಡಿರುವುದಕ್ಕೆ ಸರಳ ಸುಂದರವಾದ ಕವಿಯ ಶೈಲಿಯೂ ಒಂದು ಕಾರಣ. ಕರ್ಣಪಾರ್ಯ ಪ್ರತಿಭಾ ಸಂಪನ್ನನಾದ ಕವಿಯಲ್ಲಿವಾದರೂ ಹೃದ್ಯವೂ ಸರಸವೂ ಆದ ಕಥನಕಲೆ, ಸರಳವೂ ಸ್ವಷ್ಟವೂ ಆದ ರೀತಿಯ ಅಭಿವ್ಯಕ್ತಿಕೌಶಲ, ಹೃದಯಂಗಮವಾದ ಮಾನವೀಯ ದೃಷ್ಟಿ, ಆಕರ್ಷಕವಾದ ನಾಟಕೀಯತೆ, ವಸ್ತುವಿನ್ಯಾಸದಲ್ಲಿಯೂ ಶೈಲಿಯಲ್ಲಿಯೂ ಪ್ರತಿಬಿಂಬಿಸಿರುವ ದೇಶ್ಯ-ಇವು ಕಾರಣವಾಗಿ ಕನ್ನಡಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠ ಕವಿಯಾಗಿದ್ದಾನೆ. (ಟಿ.ವಿ.ಪಿ.)
ಕಾಮೆಂಟ್‌‌ ಪೋಸ್ಟ್‌ ಮಾಡಿ