ನನ್ನ ಪುಟಗಳು

13 ಅಕ್ಟೋಬರ್ 2015

೩೩) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಮ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಮ)
೨೩೭೧. ಮಕಮಕ ಎನ್ನು = ಮಂಕಾಗು, ಗುಟುಕು ಜೀವವಾಗು
ಪ್ರ : ದೀಪ ಎಣ್ಣೆ ತೀರಿ ಮಕಮಕ ಅಂತಾ ಇದೆ, ಮೊದಲು ಎಣ್ಣೆ ಹಾಕು
೨೩೭೨. ಮಕಮಲ್ ಟೋಪಿ ಹಾಕು = ನಯವಂಚನೆ ಮಾಡು
(ಮಕಮಲ್ = ನಯವಾದ ಬಟ್ಟೆ)
ಪ್ರ : ಶೇಟುಗಳ ಹತ್ರ ಹುಷಾರಾಗಿರು, ಅವರು ಮಕಮಲ್ ಟೋಪಿ ಹಾಕೋದ್ರಲ್ಲಿ ಎತ್ತಿದ ಕೈ.
೨೩೭೩. ಮಕ ಇಲ್ಲದಿರು = ನೈತಿಕ ಧೈರ್ಯ ಇಲ್ಲದಿರು
(ಮಕ < ಮುಖ)
ಪ್ರ : ನನ್ನ ಎದುರು ಬರೋಕೆ ಅವನಿಗೆ ಮಕ ಇದ್ರೆ ತಾನೇ?
೨೩೭೪. ಮಕ ಇಕ್ಕು = ಪ್ರವೇಶಿಸು, ಆಗಮಿಸು
ಪ್ರ : ಆ ಲಾಗಾಯ್ತಿನಿಂದ ಈ ಕಡೆಗೆ ಮಕಾನೇ ಇಕ್ಕಿಲ್ಲ ಅವನು
೨೩೭೫. ಮಕ ಸ್ಯಾರೆ-ಯಷ್ಟಾಗು = ಅವಮಾನದಿಂದ ಮುಖ ಚಿಕ್ಕದಾಗು
(ಸ್ಯಾರೆ = ಬೊಗ-ಸೆ-ಯ ಅರ್ಧ-ಭಾ-ಗ, ಒಂದು ಅಂಗೈ ಅಗ-ಲ)
ಪ್ರ : ನಿಜಸಂಗತಿ ಹೇಳಿದಾಗ ಅವನ ಮಕ ಸ್ಯಾರೆ-ಯ ಇಷ್ಟಾಯಿತು.
೨೩೭೬. ಮಕ ಊರಗಲವಾಗು = ಹೆಚ್ಚು ಸಂತೋಷವಾಗು, ಹಿಗ್ಗಿ ಹೀರೆಕಾಯಿಯಾಗು
ಪ್ರ : ಮಗ ಕ್ಳಾಸಿಗೇ ಪಸ್ಟ್ ಅಂದಾಗ ಅಪ್ಪನ ಮುಖ ಊರಗಲವಾಯಿತು
೨೩೭೭. ಮಕ ಎಣ್ಣೆ ಕುಡಿದಂತಾಗು = ಮುಖ ಕಿವುಚಿಕೊಳ್ಳು
ಪ್ರ : ಕಹಿ ಸುದ್ದಿ ಕೇಳಿ ಅವನ ಮುಖ ಎಣ್ಣೆ ಕುಡಿದಂತಾಯ್ತು.
೨೩೭೮. ಮಕ ಎತ್ಕೊಂಡು ತಿರುಗದಂತಾಗು = ಅವಮಾನದಿಂದ ತಲೆ ಬಗ್ಗಿಸುವಂತಾಗು
(ತಿರುಗು = ಅಡ್ಡಾಡು)
ಪ್ರ : ಮಕ ಎತ್ಕೊಂಡು ತಿರುಗದಂಥ ಹೀನ ಕೆಲಸ ಮಾಡಿದರು ಮಕ್ಕಳು.
೨೩೭೯. ಮಕ ಒಳ್ಳೆಯಷ್ಟಾಗು = ಅವಮಾನದಿಂದ ಮುಖ ಚಿಕ್ಕದಾಗು
(ಒಳ್ಳೆ < ಒಳಲೆ = ತಾಯಿಗೆ ಎದೆಹಾಲು ಇಲ್ಲದಾಗ, ಮಗುವನ್ನು ಕಾಲ ಮೇಲೆ ಹಾಕಿಕೊಂಡು, ‘ಹುಯ್ ಹಾಲು’ ಕುಡಿಸುವ ಸಾಧನಕ್ಕೆ ಒಳ್ಳೆ, ಒಳಲೆ ಎಂದು ಹೆಸರು)
ಪ್ರ : ತನ್ನ ಮಕ್ಕಳ ದೌರ್ಜನ್ಯವನ್ನು ಕೇಳಿ ಅಪ್ಪನ ಮಕ ಒಳ್ಳೆಯಷ್ಟಾಯ್ತು.
೨೩೮೦. ಮಕ ಕೆತ್ತಿ ಕಳಿಸು = ತೇಜೋ ವಧೆ ಮಾಡು
(ಕೆತ್ತು = ಹೆರೆ, ಕೊಚ್ಚು, ಕತ್ತರಿಸು)
ಪ್ರ : ಇಂಥ ಕೆಲಸಾನ ಮಾಡೋದು ? ಅಂತ ಅವನ ಮಕ ಕೆತ್ತಿ ಕಳಿಸಿದ
೨೩೮೧. ಮಕದಲ್ಲಿ ಕೇಡು ಇಳೇಲಿಕ್ಕು = ಕೇಡು ಸುರಿಯುತ್ತಿರು, ಕೆಟ್ಟತನ ತೊಟ್ಟಿಕ್ಕುತ್ತಿರು
(ಇಳೇಲಿಕ್ಕು < ಇಳಿಯಲು + ಇಕ್ಕು = ಇಳಿಯತೊಡಗು, ಸುರಿಯತೊಡಗು)
ಪ್ರ : ಮಕದಲ್ಲಿ ಕೇಡು ಇಳೇಲಿಕ್ಕೋನು ಮನುಷ್ಯರಾ ? ರಾಕ್ಷಸ !
೨೩೮೨. ಮಕ ಕೊಟ್ಟು ಮಾತಾಡದಿರು = ಮುನಿಸಿಕೊಳ್ಳು, ಅಲಕ್ಷಿಸು
ಪ್ರ : ಮಕ ಕೊಟ್ಟು ಮಾತಾಡದೋನ ಹತ್ರ ನಾನ್ಯಾಕೆ ನೇತಾಡಲಿ?
೨೩೮೩. ಮಕದಾಗೆ ನೀರಿಳಿಸು = ಅವಮಾನ ಮಾಡು
(ಮಕದಾಗೆ = ಮುಖದಲ್ಲಿ; ನೀರಿಳಿಸು = ಬೆವರು ಕಿತ್ತುಕೊಳ್ಳುವಂತೆ ಮಾಡು)
ಪ್ರ : ಸಂತೇಲಿ ಸಿಕ್ಕಿದ್ದ, ಮಕದಾಗೆ ನೀರಿಳಿಸಿ ಕಳಿಸಿದ್ದೀನಿ.
೨೩೮೪. ಮಕ ಬೂದುಗುಂಬಳಕಾಯಾಗು = ಮುನಿಸಿಕೊಳ್ಳು, ಊದಿಕೊಳ್ಳು
ಪ್ರ : ಗೌರಿ ಹಬ್ಬಕೆ ಸ್ಯಾಲೆ ತರಲಿಲ್ಲ ಅಂತ ಸೊಸೆ ಮಕ ಬೂದುಗುಂಬಳಕಾಯಾಯ್ತು.
೨೩೮೫. ಮಕಕ್ಕೆ ಮಂಗಳಾರತಿ ಎತ್ತು = ಅವಮಾನ ಮಾಡು
ಪ್ರ : ನಿನ್ನೆ ನನ್ನ ಹತ್ರ ಬಂದಿದ್ದ, ಸರಿಯಾಗಿ ಮಕಕ್ಕೆ ಮಂಗಳಾರತಿ ಎತ್ತಿ ಕಳಿಸಿದ್ದೀನಿ.
೨೩೮೬. ಮಕಕ್ಕೆ ಮಣ್ಣು ಹಾಕು = ಸಮಾಧಿ ಮಾಡು, ಹೆಣದ ಮೇಲೆ ಮಣ್ಣು ಎಳೆ
ಪ್ರ : ಅವನ ಮಕಕ್ಕೆ ಮಣ್ಣು ಹಾಕಿದ ದಿನ ನಾನು ತಣ್ಣಗಿದ್ದೇನು.
೨೩೮೭. ಮಕಾಡ ಹಾಕು = ಹಿಡಿತಕ್ಕೊಳಪಡಿಸು
(ಮಕಾಡ < ಮುಖವಾಡ) ಸಣ್ಣ ಕರುಗಳಿಗೆ ಮೂಗುಚುಚ್ಚಿ ಮೂಗುದಾರ ಹಾಕುರುವುದಿಲ್ಲ. ಆದ್ದರಿಂದ ಹಗ್ಗ ಹಾಕಿ ಕಟ್ಟಲು ಮುಸುಡಿಗೆ ಮಕಾಡ ಹಾಕಿರುತ್ತಾರೆ.
ಪ್ರ : ಮಕಾಡ ಹಾಕದಿದ್ರೆ ಕರುವನ್ನು ಹಿಡಿಯೋದೆಂಗೆ ? ಕಟ್ಟೋದೆಂಗೆ ?
೨೩೮೮. ಮಕಾಡೆ ಮಲಗು = ದುಃಖದಿಂದ ನೆಲಕಚ್ಚು
(ಮಕಾಡೆ < ಮುಖ + ಅಡಿ = ನೆಲಕ್ಕೆ ಮುಖ ಹಾಕಿಕೊಂಡು)
ಪ್ರ : ಮಕಾಡೆ ಮಲಗಿಕೊಂಡ್ರೆ ಸಮಸ್ಯೆ ನಿಕಾಲಾಗಿಬಿಡ್ತದ?
೨೩೮೯. ಮಕಾರ ಅಂಡಿಕೊಳ್ಳು = ಮಕ್ತಾ (< ಮುಖತಃ) ತರಾಟೆಗೆ ತೆಗೆದುಕೊಳ್ಳು (ಮಕಾರ < ಮುಖ + ಆರ = ಮುಖತಃ, ಮುಖದ ಮಟ್ಟದಲ್ಲಿ, ಮುಖದ ಅಳತೆಯಲ್ಲಿ)
ಪ್ರ : ಮಕಾರ ಅಂಡಿಕೊಂಡಿದ್ದಕ್ಕೆ ಮಕ ಸಿಂಡ್ರಿಸಿಕೊಂಡು ಹೋದ.
೨೩೯೦. ಮಕ್ಕಿಕಾ ಮಕ್ಕಿ ಮಾಡು = ಯಥಾವತ್ ನಕಲು ಮಾಡು, ಯದ್ವತ್ ಅನುಕರಿಸು
(ಮಕ್ಕಿ < ಮಕ್ಷಿಕ = ನೊಣ) ಓಲೆಗರಿಯ ಕಟ್ಟಿನಲ್ಲಿ ಒಂದು ನೊಣ ಸತ್ತು ಅಪ್ಪಚ್ಚಿಯಾಗಿರುವುದನ್ನು ಕಂಡು, ಅದನ್ನು ನಕಲು ಮಾಡುತ್ತಿದ್ದ ಲೆಕ್ಕಿಗ ತನ್ನ ಪ್ರತಿಯಲ್ಲೂ ಆ ಜಾಗದಲ್ಲಿ ಒಂದು ನೊಣ ಹೊಡೆದು ಅಂಡಿಸಿದನೆಂದು ಕಥೆ. ಆ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ.
ಪ್ರ : ಮಕ್ಕಿಕಾ ಮಕ್ಕಿ ಮಾಡಿ, ಹೆಂಗೋ ಪಾಸಂತೂ ಆದೆ.
೨೩೯೧. ಮಗ್ಗ ಹಾಕಿ ಕೂಡು = ಪಟ್ಟು ಹಿಡಿದು ಕೂಡು, ಪೂರ್ವಾಭಿಪ್ರಾಯದಿಂದ ಅಲುಗಾಡದಿರು.
ಕಂಬಳಿ ನೇಯಲು ಮಗ್ಗ ಹಾಕಿ ಕೂತವನ್ನು, ನೇಯ್ಗೆ ಮುಗಿಯುವವರೆಗೂ ಅತ್ತಿತ್ತ ಅಲ್ಲಾಡುವುದಿಲ್ಲ, ಮೇಲೆದ್ದು ಹೋಗುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮಗ್ಗ ಹಾಕಿ ಕೂತಿದ್ದಾನೆ, ಅವನ್ನ ಬಗ್ಗಿಸೋರು ಯಾರು ? ಒಗ್ಗಿಸೋರು ಯಾರು?
೨೩೯೨. ಮಗ್ಗಿ ಹೋಗು = ಬಾಡಿ ಹೋಗು, ಸುಡರಿಕೊಳ್ಳು
ಪ್ರ : ಹೂವೆಲ್ಲ ಮಗ್ಗಿ ಹೋಗ್ಯವೆ, ಬೇರೆ ಹೂವು ತನ್ನಿ.
೨೩೯೩. ಮಗ್ಗುಲಾಗು = ಮಲಗು
(ಮಗ್ಗುಲು = ಪಕ್ಕ, ಬಗಲು)
ಪ್ರ : ಅತ್ತತ್ತ ಸರಕೋ, ಕೊಂಚ ಹೊತ್ತು ಮಗ್ಗುಲಾಗ್ತೀನಿ.
೨೩೯೪. ಮಗ್ಗುಲಿಗೆ ನಗ್ಗಲು ಮುಳ್ಳಾಗು = ಕಂಟಕ ಪ್ರಾಯವಾಗು, ಬಗಲಲ್ಲೆ ಬದ್ಮಾಷ್ ಇರು.
ಮುಳ್ಳಿನ ಗಿಡಗೆಂಟೆಯಂತಿರದೆ, ನೆಲದ ಮೇಲೆ ನೆಲಕ್ಕೆ ಅಂಟಿದಂತೆ ಹಬ್ಬುವ ಸಣ್ಣ ಸಸ್ಯ ವಿಶೇಷ ಈ ನಗ್ಗಲು ಬಳ್ಳಿ ಹಾಗೂ ನಗ್ಗಲು ಮುಳ್ಳು. ಇದರ ಮೇಲೆ ಕಾಲಿಡುವುದಕ್ಕೆ ಆನೆಗಳಂಥವೂ ಅಂಜಿಕೊಳ್ಳುತ್ತವೆ. ಹಿಂದೆ ಯುದ್ಧಗಳಲ್ಲಿ ಆನೆಗಳನ್ನು ಬಳಸುತ್ತಿದ್ದುದರಿಂದ, ಆನೆಗಳು ಮುಂದುವರಿಯಲಾಗದಂತೆ ಶತ್ರುರಾಜರು ರಕ್ಷಣಾತಂತ್ರವಾಗಿ ಇವುಗಳನ್ನು ಬೆಳಸುತ್ತಿದ್ದರು ಎಂದು ಪ್ರತೀತಿ.
ಪ್ರ : ಕೆಟ್ಟ ಬಾವು ಹುಟ್ಟಿದಂಗೆ ಹುಟ್ಟಿ, ನನ್ನ ಮಗ ನನ್ನ ಮಗ್ಗುಲಿಗೇ ನಗ್ಗಲು ಮುಳ್ಳಾದ.
೨೩೯೫. ಮಗ್ಗಲು ಬದಲಾಯಿಸು = ನಿದ್ದೆ ಬರದೆ ಒದ್ದಾಡು
ಅಂಗಾತ ಮಲಗಿದ್ದವನು ಎಡಮಗ್ಗುಲಿಗೆ ಹೊರಳುವುದು, ಆಮೇಲೆ ಹೊಟ್ಟೆ ಮಕಾಡೆ ಮಲಗುವುದು – ಇದು ನಿದ್ರೆ ಇಲ್ಲದಿದ್ದಾಗಿನ ಒದ್ದಾಟ.
ಪ್ರ : ನೀನು ಹಿಂಗೆ ಮಗ್ಗುಲು ಬದಲಾಯಿಸ್ತಾ ಒದ್ದಾಡುತಿದ್ರೆ, ಪಕ್ಕದೋರು ನಿದ್ದೆ ಮಾಡೋದು ಹೆಂಗೆ?
೨೩೯೬. ಮಚ್ಚನಾಲಗೆ ಇರು = ಆಡಿದ್ದು ಆಗು, ಮಾತು ಹುಸಿಯಾಗದಿರು
(ಮಚ್ಚ < ಮಚ್ಚೆ = ಕಪ್ಪು ಕಲೆ) ನಾಲಗೆಯ ಮೇಲೆ ಮಚ್ಚೆ (ಕಪ್ಪು ಕಲೆ) ಇದ್ದವರು ಆಡಿದ ಮಾತು ಹುಸಿಯಾಗುವುದಿಲ್ಲ ಎಂಬ ಜನಪದ ನಂಬಿಕೆಯ ಹಿನ್ನೆಲೆಯುಳ್ಳ ನುಡಿಗಟ್ಟಿದು.
ಪ್ರ : ನೀನು ಹೇಳಿದಂಗೇ ಆಯ್ತು, ನಿನಗೆ ಮಚ್ಚನಾಲಗೆ ಇರಬೇಕು.
೨೩೯೭. ಮಟಕ್ಕೆ ಹೋಗು = ಶಾಲೆಗೆ ಹೋಗು
(ಮಟ < ಮಠ = ಶಾಲೆ, ವಿದ್ಯಾಕೇಂದ್ರ) ಹಿಂದಿನ ಕಾಲದಲ್ಲಿ ಮಠಗಳು ವಿದ್ಯೆ ಹೇಳಿಕೊಡುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದವು. ಆದ್ದರಿಂದಲೇ ಹಳ್ಳಿಗಾಡಿನಲ್ಲಿ ಇಂದಿಗೂ ಜನಪದರು ಮಗ ಸ್ಕೂಲಿಗೆ ಹೋಗಿದ್ದಾನೆ ಎಂದು ಹೇಳುವುದಿಲ್ಲ, ಮಟಕ್ಕೆ ಹೋಗಿದ್ದಾನೆ ಎನ್ನುತ್ತಾರೆ. ಅಂದರೆ ಹಿಂದೆ ಧಾರ್ಮಿಕ ಮಠಗಳು ವಿದ್ಯಾಕೇಂದ್ರಗಳಾಗಿದ್ದವು ಎಂಬುದರ ಪಳೆಯುಳಿಕೆಯಾಗಿ ಇಂದಿಗೂ ಶಾಲೆ ಎಂಬ ಅರ್ಥದಲ್ಲಿ ಮಟ ಎಂಬ ಶಬ್ದ ಬಳಕೆಯಲ್ಲಿದೆ. ಆದರೆ ಆಧುನಿಕ ಕಾಲದಲ್ಲಿ ಅನೇಕ ಮಠಗಳು ಜಾತೀಯತೆಯ, ರಾಜಕೀಯದ ಉಗ್ರಾಣಗಳಾಗುವ ಚಿಹ್ನೆ ಕಂಡು ಬರುತ್ತಿರುವುದು ಆತಂಕಕ್ಕೆಡೆ ಮಾಡಿದೆ.
ಪ್ರ : ಹೊತಾರೆ ಮಟಕ್ಕೆ ಹೋದೋನು, ಬೈಸಾರೆ ಆದ್ರೂ ಹುಡುಗ ಮನೆಗೆ ಬಂದಿಲ್ಲ, ಹೋಗಿ ನೋಡ್ಕೊಂಡು ಬನ್ನಿ.
೨೩೯೮. ಮಟಕ್ಕೆ ಮಣ್ಣು ಹೊರು = ವಿದ್ಯೆ ಕಲಿಯಲು ಮಟಕ್ಕೆ ಹೋಗು
ಹಿಂದೆ ಸಿಲೇಟು ಬಳಪಗಳಾಗಲೀ, ಕಾಗದ ಸೀಸದ ಕಡ್ಡಿ, ಮಸಿ ಲೆಕ್ಕಣಿಕೆಗಳಾಗಲೀ ಇರಲಿಲ್ಲ. ಆಗ ಅಕ್ಷರಗಳನ್ನು ಕಲಿಯಲು ಇದ್ದ ಏಕೈಕ ಸಾಧನ ಮಣ್ಣು ಅಥವಾ ಮರಳು. ವಿದ್ಯಾರ್ಥಿಗಳು ಮರಳನ್ನು ತಾವೇ ಹೊತ್ತುಕೊಂಡು ಹೋಗಿ, ಅದರಲ್ಲಿ ಬೆರಳಿನಿಂದ ಅಕ್ಷರಗಳನ್ನು ತಿದ್ದಿ ಕಲಿತುಕೊಳ್ಳಬೇಕಾಗಿತ್ತು. ಮತ್ತೆ ಮನೆಗೆ ಬರುವಾಗ ಆ ಮರಳನ್ನು ಅವರವರು ಅವರವರ ಮನೆಗೆ ಕೊಂಡೊಯ್ಯುತ್ತಿದ್ದರು. “ಮಳ್ಳಲ್ಲಿ ಬರೆದು ಮಡಿಲಲ್ಲಿ ಕಟ್ಟಿಕೊಂಡ ಹಾಗೆ” ಎಂಬ ಜನಪದ ಗಾದೆ, ಮತ್ತೆ ಮರಳನ್ನು ತುಂಬಿಕೊಂಡು ಹಿಂದಕ್ಕೆ ಕೊಂಡೊಯ್ಯುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಆ ಹಿನ್ನೆಲೆಯಿಂದ ಒಡಮೂಡಿದ ನುಡಿಗಟ್ಟಿದು.
ಪ್ರ : ಹುಡುಗನಿಗೆ ಏನೂ ಬರುವುದಿಲ್ಲವೆಂದು ಸಿಟ್ಟುಗೊಂಡ ಮೇಷ್ಟ್ರು “ಯಾವ ಮಟಕ್ಕೆ ಮಣ್ಣು ಹೊತ್ತಿದ್ದೊ?” ಎಂದು ಧಟ್ಟಿಸಿ ಕೇಳಿದರು.
೨೩೯೯. ಮಟ್ಟ ತೆಗಿ = ತಗ್ಗು ಮಾಡು
ಪ್ರ : ಮಟ್ಟ ತೆಗಿ, ಆಗ ನೀರು ಇತ್ತ ಕಡೆ ಬರ್ತದೆ.
೨೪೦೦. ಮಟ್ಟವಾಗಿರು = ತೂಕವಾಗಿರು, ಗೌರವದಿಂದಿರು
ಪ್ರ : ಐಶ್ವರ್ಯ ದಟ್ಟವಾಗಿದ್ರೂ ಮನುಷ್ಯ ಮಟ್ಟವಾಗಿರಬೇಕು
೨೪೦೧. ಮಟ್ಟ ಹಾಕು = ಹತ್ತಿಕ್ಕು, ತುಳಿ, ಮೇಲೇಳದಂತೆ ಮಾಡು
ಪ್ರ : ಅವರ ಅಬ್ಬರ ಅಡಗೋ ಹಂಗೆ ಸರಿಯಾಗಿ ಮಟ್ಟ ಹಾಕಿದ್ದೀನಿ.
೨೪೦೨. ಮಟ್ಟನಾಯಂತಿರು = ಗಟ್ಟಿಮುಟ್ಟಾಗಿರು
(ಮಟ್ಟನಾಯಿ = ಲುಟ್ಟ, ಚಿರತೆ)
ಪ್ರ : ಮಟ್ಟನಾಯಂತಿರೋದಕ್ಕೆ ಸಿಕ್ಕಿಸಿಕ್ಕಿದೋರ ಮೇಲೆ ಎಗರಿ ಬೀಳೋದು.
೨೪೦೩. ಮಟಾಮಾಯ ಬಟಾಬಯಲಾಗು = ಅದೃಶ್ಯವಾಗು, ಇಲ್ಲ-ವಾ-ಗು
(ಮಟಾ < ಮಾಟ ; ಬಟಾ < ಬಟುವು = ಪೂರ್ಣ)
ಪ್ರ : ಇಷ್ಟು ಬೇಗ ಮಟಾಮಾಯ ಬಟಾ ಬಯಲಾಯ್ತು ಅಂದ್ರೆ ನಂಬೋಕೇ ಆಗಲ್ಲ.
೨೪೦೪. ಮಟ್ಟಿಗಿಳಿ = ಕುಸ್ತಿಗಿಳಿ, ಅಖಾಡಕ್ಕಿಳಿ
(ಮಟ್ಟಿ = ಕುಸ್ತಿಯಾಡಲು ಹಾಕಿರುವ ಕೆಮ್ಮಣ್ಣಿನ ಅಖಾಡ)
ಪ್ರ : ಕಾಚಾ ಹಾಕ್ಕೊಂಡು ಬಂದ್ರೆ ಮಟ್ಟಿಗಿಳೀಬಹುದು, ಬಿಚ್ಚಿ ಹಾಕ್ಕೊಂಡು ಬಂದ್ರೆ ಇಳೀತಾರ?
೨೪೦೫. ಮಟ್ಟು ತಿಳಿ = ಮರ್ಮ ತಿಳಿ, ಧೋರಣೆ ಉದ್ದೇಶ ಗ್ರಹಿಸು
(ಮಟ್ಟು = ರಾಗ)
ಪ್ರ : ಎದುರಾಳಿಗಳ ಮಟ್ಟನ್ನು ತಿಳಿಯದೆ ಗುಟ್ಟನ್ನು ರಟ್ಟು ಮಾಡಬಾರದು
೨೪೦೬. ಮಡಕೆ ಕಟ್ಟು = ನೇಗಿಲು ಕಟ್ಟು, ಆರುಕಟ್ಟು
(ಮಡಕೆ = ನೇಗಿಲು) ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ನೇಗಿಲು ಕಟ್ಟುವುದಕ್ಕೆ ಮಡಕೆ ಕಟ್ಟುವುದು ಎನ್ನುತ್ತಾರೆ. ನಾವು ಮಡಕೆ ಎಂದು ಹೇಳುವ ಮಣ್ಣಿನ ಪಾತ್ರೆಗೆ ಅವರು ಸೋರೆ ಎನ್ನುತ್ತಾರೆ. ಕನ್ನಡದ ‘ಅಂಬಲಿ ಕುಡಿದೋನು ಮಡಕೆ ಹೊತ್ತಾನ?’ ಎಂಬ ಜನಪದ ಗಾದೆಯಲ್ಲಿ ಬರುವ ಮಡಕೆ ಶಬ್ದಕ್ಕೆ ನೇಗಿಲು ಎಂದರ್ಥ. ಶ್ರಮಿಕನಿಗೆ ಮುದ್ದೆ ನೀಡುವ ಬಲ ಹಾಗೂ ಬಾಳಿಕೆ ಅಂಬಲಿಗಿರುವುದಿಲ್ಲ ಎಂಬುದು ಅದರಿಂದ ತಿಳಿದು ಬರುತ್ತದೆ. ತೆಲುಗಿನಲ್ಲಿ ಮಡಕಾ ಎಂದರೆ ನೇಗಿಲು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮಡಕೆ ಕಟ್ಟದೆ, ಇನ್ನೂ ಒಳಕ್ಕೆ ಹೊರಕ್ಕೆ ತಿರುಗ್ತಾ ಇದ್ದೀಯಲ್ಲ ?
೨೪೦೭. ಮಡಕೇಲಿ ಉಂಡು ಮೊಗೇಲಿ ಕೈತೊಳೆಯದಿರು = ಅಚ್ಚುಕಟ್ಟು ಕಲಿ, ಕಸಮಾರಿಯಾಗದಿರು.
ಮುದ್ದೆ, ಅನ್ನ, ಸಾರು ಮಾಡುವ ಮಣ್ಣಿನ ಪಾತ್ರೆಗೆ ಮಡಕೆ ಎನ್ನುತ್ತಾರೆ. ನೀರು ಕುಡಿಯಲು ಬಳಸುವ ಚೊಂಬಿನಾಕಾರದ ಮಣ್ಣಿನ ಪಾತ್ರೆಗೆ ಮೊಗೆ ಎನ್ನುತ್ತಾರೆ. ಮಡಕೆಯಲ್ಲಿರುವ ಅಡುಗೆಯನ್ನು ಗಂಗಳಕ್ಕೆ ಬಡಿಸಿಕೊಂಡು ಉಂಡು, ಹೊರಗೆ ಹೋಗಿ ಗಂಗಳ ತೊಳೆಯಬೇಕು. ಆದರೆ ಸೋಮಾರಿ ಮೈಗಳ್ಳ ಹೆಂಗಸು ಹೊರಗೆ ಹೋಗೋರ್ಯಾರು, ಗಂಗಳ ತೊಳೆಯೋರು ಯಾರು ಎಂದು ಮಡಕೆಯಲ್ಲೇ ಉಂಡು, ಮೊಗೆಯಲ್ಲಿ ಕೈ ತೊಳೆಯುವುದನ್ನು ಈ ನುಡಿಗಟ್ಟು ಲೇವಡಿ ಮಾಡುತ್ತದೆ.
ಪ್ರ : ಮಡಕೇಲಿ ಉಂಡು ಮೊಗೇಲಿ ಕೈ ತೊಳೆಯೋದು ಗ್ರಾಸ್ತೆ ಮಾಡೋ ಕೆಲಸಾನ ? ಮನೆಗೆ ಇಲ್ಲದ ದರಿದ್ರ ಬಂದುಬಿಡ್ತದೆ ಎಂದು ಅತ್ತೆ ಸೊಸೆಗೆ ಛೀಮಾರಿ ಮಾಡಿದಳು.
೨೪೦೮. ಮಡಬಾಯಿ ಕಟ್ಟು = ನೀರು ಹೋಗುವ ಕಂಡಿಯನ್ನು ಮುಚ್ಚು
(ಮಡ < ಮಡು = ಕಾಲುವೆ, ಮಡಬಾಯಿ = ಕಾಲುವೆಯ ಕಂಡಿ) ಕೆರೆಯ ಏರಿಯಲ್ಲಿರುವ ತೂಬನ್ನೆತ್ತಿ ಕಾಲುವೆಯ ಮೂಲಕ ಕೆರೆಯ ಹಿಂದಿನ ಗದ್ದೆಗಳಿಗೆ ನೀರು ಹಾಯಿಸಲಾಗುತ್ತದೆ. ಏರಿಯ ಬೆನ್ನಿಗಿರುವ ಗದ್ದೆಗಳಿಗೆ ನೀರುಣ್ಣಿಸಿದ ಮೇಲೆ, ಇನ್ನೂ ದೂರದಲ್ಲಿರುವ ಗದ್ದೆಗಳಿಗೆ ನೀರು ಕೊಂಡೊಯ್ಯಬೇಕಾದರೆ, ಮೊದಲ ಗದ್ದೆಗಳಿಗೆ ನೀರು ಬಿಡಲು ಮಾಡಿದ್ದ ಮಡಬಾಯನ್ನು ಮುಚ್ಚಬೇಕಾಗುತ್ತದೆ. ಇಲ್ಲದಿದ್ದರೆ ಕಾಲುವೆಯಲ್ಲಿ ಮುಂದಕ್ಕೆ ನೀರು ಹೋಗುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮೇಲಿನ ಗದ್ದೆಗಳ ಮಡಬಾಯನ್ನು ಕಟ್ಟದೆ, ಕಾಲುವೆಯಲ್ಲಿ ಮುಂದಿನ ಗದ್ದೆಗಳಿಗೆ ನೀರು ಹೋಗಲು ಹೇಗೆ ಸಾಧ್ಯ? ಅಷ್ಟೂ ಅರ್ಥವಾಗಲ್ವ?
೨೪೦೯. ಮಡಿಗಟ್ಟು = ಪಾತಿ ಮಾಡು
ಪ್ರ : ಸೊಪ್ಪಿನ ಬೀಜ ಚೆಲ್ಲೋದಕ್ಕೆ ಸುತ್ತಲೂ ದಿಂಡಿರುವಂತೆ ಸಣ್ಣಸಣ್ಣ ಮಡಿ ಕಟ್ಟು
೨೪೧೦. ಮಡಿಕೆ ಬಿಚ್ಚು = ಪದರ ಬಿಚ್ಚು
ಪ್ರ : ಸೀರೆ ಮಡಿಕೆ ಬಿಚ್ಚು, ಅದರೊಳಗೆ ನೂರು ರೂಪಾಯಿ ನೋಟಿಕ್ಕಿದ್ದೇನೆ, ತಗೊಂಡು ಬಾ.
೨೪೧೧. ಮಡಿ ಹೆಂಗ್ಸಿಗಿಂತ ಅತ್ತತ್ತವಾಗು = ಬೋಡಮ್ಮನಿಗಿಂತ ಮಡಿಯಲ್ಲಿ ಎತ್ತಿದ ಕೈಯಾಗು.
ಪ್ರ : ಬಾಯಿಬೀಗ ಚುಚ್ಚಿಸಿಕೊಂಡು ಕೊಂಡ ಹಾಯಬೇಕು ಅಂತ ಈವಮ್ಮ ಮಡಿ ಹೆಂಗ್ಸಿಗಿಂತ ಅತ್ತತ್ತವಾಗಿ ಹಾರಾಡ್ತಾಳೆ.
೨೪೧೨. ಮಡಿಲಕ್ಕಿ ಹುಯ್ಯಿ = ಗೌರವದಿಂದ ಹೆಣ್ಣನ್ನು ಬೀಳ್ಕೊಡು.
ಮನೆಗೆ ಬಂದ ಮುತ್ತೈದೆಯರಿಗೆ ಕೂಡಿಸಿ ಮಡಿಲಿಗೆ ಅಕ್ಕಿ, ಬೆಲ್ಲ, ಕೊಬರಿ ಅಡಿಕೆ ವೀಳ್ಯದೆಲೆ ಇಟ್ಟು, ಹಣೆಗೆ ಕುಂಕುಮವಿಟ್ಟು ಗೌರವದಿಂದ ಕಳಿಸುವ ಪದ್ಧತಿ ಇದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮಡಿಲಕ್ಕಿ ಹುಯ್ದು ಮುತ್ತೈದೆಯರನ್ನು ಕಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ, ಬೇಡ ಅನ್ನಬಾರ್ದು, ಹುಯ್ಯಿಸಿಕೋ ತಾಯಿ.
೨೪೧೩. ಮಡಿಲುದುಂಬು = ಶುಭ ಕೋರು
(ಮಡಿಲು = ಉಡಿ) ಮದುವೆಯಲ್ಲಿ ಮದುವಣಗಿತ್ತಿಯನ್ನು ಕೂಡಿಸಿ ಮಡಿಲುದುಂಬುವ ಶಾಸ್ತ್ರ ಮಾಡುತ್ತಾರೆ. ಮಡಿಲಿಗೆ ಅಕ್ಕಿ ಬೆಲ್ಲ ಕೊಬರಿ ಅಡಿಕೆ ವೀಳ್ಯದೆಲೆ ಇಟ್ಟು ತಲೆಯ ಮೇಲೆ ಅಕ್ಷತೆ ಹಾಕುತ್ತಾರೆ. ಮಡಿಲಿಗೆ ಉಡಿ ಎಂಬ ಅರ್ಥ ಇರುವಂತೆಯೇ ಕಿಬ್ಬೊಟ್ಟೆ ಯೋನಿ ಎಂಬ ಅರ್ಥವೂ ಇದೆ. ಎರಡನೆಯ ಅರ್ಥವೇ ಇಲ್ಲಿ ಪ್ರಮುಖ. ಅಂದರೆ ಬೇಗ ಗರ್ಭವತಿಯಾಗಲಿ ಎಂಬ ಸಾಂಕೇತಿಕತೆ ಈ ಶಾಸ್ತ್ರದಲ್ಲಿದೆ.
ಪ್ರ : ಮದುವೆ ಹೆಣ್ಣಿಗೆ ಮೊದಲು ಮಡಿಲುದುಂಬಿ, ಉಳಿದ ಶಾಸ್ತ್ರ ಆಮೇಲೆ.
೨೪೧೪. ಮಡಿಲಲ್ಲಿ ಹಾಕು = ಸ್ವಾಧೀನಕ್ಕೆ ಕೊಡು, ಆಶ್ರಯದಲ್ಲಿರಿಸು
(ಮಡಿಲು = ಉಡಿ, ಕಿಬ್ಬೊಟ್ಟೆ, ಆಶ್ರಯ)
ಪ್ರ : ಈ ಹುಡುಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೀವಿ, ಅವನ ಆರಭಾರ ಎಲ್ಲ ನಿಮ್ಮದು.
೨೪೧೫. ಮಡಿ ವಲ್ಲಿ ಕೊಡು = ಒಗೆದ, ಶುಭ್ರಗೊಳಿಸಿದ ವಸ್ತ್ರ ಕೊಡು
(ಮಡಿ = ಒಗೆದು ಶುಭ್ರಗೊಳಿಸಿದ ಬಟ್ಟೆ ; ವಲ್ಲಿ = ಗಿಂಟ, ಟವೆಲ್)
ಪ್ರ : ಸ್ನಾನ ಮಾಡಿದಾಗ ಮೈ ಒರಸಿಕೊಳ್ಳೋದಕ್ಕೆ ಮಾಸಿದ ವಲ್ಲಿ ಕೊಡ್ತಾ ಇದ್ದೀಯಲ್ಲ, ಮಡಿ ವಲ್ಲಿ ಕೊಡು.
೨೪೧೬. ಮಡುಗಟ್ಟು = ಕೊಳಗೊಳ್ಳು
(ಮಡು = ಕೊಳ, ಆಳವಾದ ನೀರಿರುವ ಜಾಗ)
ಪ್ರ : ಮಡುಗಟ್ಟಿದ ಗರ್ವ ಇಳಿಯೋವರೆಗೂ ಹುಡುಗ ನೆಟ್ಟಗಾಗಲ್ಲ (ಸೋರ್ದುದು ಕೊಳಗೊಂಡ ಗರ್ವರಸಮಾ ಭರತೇಶ ಚಕ್ರವರ್ತಿಯ – ಪಂಪ)
೨೪೧೭. ಮಡ್ಡು ಉಣ್ಣಿಸು = ಮೋಸ ಮಾಡು, ಇಲ್ಲವೆಂದು ಕೈ ಎತ್ತು
(ಮಡ್ಡು < ಮೆಡ್ಡು < ಮೇಢ್ರಾ = ಶಿಘ್ನ, ಟಗರು)
ಪ್ರ : ಅವನಿಗ್ಯಾಕೆ ಸಾಲ ಕೊಟ್ಟೆ, ಮಡ್ಡು ಉಣ್ಣಿಸ್ತಾನೆ ತಗೋ
೨೪೧೮. ಮಡ್ಡು ತೋರಿಸು = ತರಡು ತೋರಿಸು, ಇಲ್ಲವೆನ್ನು
(ಮಡ್ಡು = ಒಂದು ವಾದ್ಯ ವಿಶೇಷ, ತರಡು)
ಪ್ರ : ಕೊಟ್ಟ ಸಾಲ ಕೇಳಿದ್ದಕ್ಕೆ ಮಡ್ಡು ತೋರಿಸಿ ಸೆಡ್ಡು ಹೊಡೆದು ನಿಂತ
೨೧೧೯. ಮಣ ಹೇಳು = ಸಿಕ್ಕಾಪಟ್ಟೆ ಏನೇನೊ ಹೇಳು
(ಮಣ = ಒಂದು ಅಳತೆ, ತೂಕದ ಒಂದು ಪ್ರಮಾಣ)
ಪ್ರ : ನಿನ್ನ ಬಗ್ಗೆ ಏನೇನೋ ಒಂದು ಮಣ ಹೇಳಿದ, ನಾನು ಈ ಕಿವೀಲಿ ಕೇಳಿ ಆ ಕಿವೀಲಿ ಬಿಟ್ಟೆ.
೨೪೨೦. ಮಣಕ ಕೊಡು = ಮರಿ ಕೊಡು, ಹೆಣ್ಣು ಕೊಡು
(ಮಣಕ = ಆಡು, ಕುರಿಗಳ ಪಡ್ಡೆ ಮರಿ)
ಪ್ರ : ನಾವು ನಿಮ್ಮನೆಗೆ ಹೆಮಕ (ಹೆಣ್ಣುಮಗಳು) ಕೊಟ್ಟಿದ್ದೇವೆ, ಪ್ರತಿಯಾಗಿ ನಾವೊಂದು ಮಣಕ ಕೇಳ್ತಿದ್ದೇವೆ, ಕೊಡಿ. ಕುರಿ ಕೊಟ್ಟೋರಿಗೆ ಮರಿ ಕೊಡಬೇಕಾದ್ದು ಧರ್ಮ ಅಲ್ಲವೇನು?
೨೪೨೧. ಮಣಿ ಪೋಣಿಸಿದಂತಿರು = ಅಂದವಾಗಿರು, ಕ್ರಮಬದ್ಧವಾಗಿರು
ಪ್ರ : ಇವನ ಕೈಬರಹ ಬಹಳ ಮುದ್ದಾಗಿದೆ, ಅಕ್ಷರಗಳು ಮಣಿ ಪೋಣಿಸಿದಂತಿವೆ.
೨೪೨೨. ಮಣಿಯಷ್ಟನ್ನು ಗಣಿಯಷ್ಟು ಮಾಡಿ ಹೇಳು = ಕಡ್ಡಿಯನ್ನು ಗುಡ್ಡವನ್ನಾಗಿ ಮಾಡಿ ಹೇಳು.
ಪ್ರ : ಮಣಿಯಷ್ಟನ್ನು ಗಣಿಯಷ್ಟು ಮಾಡಿ ಹೇಳೋದ್ರಲ್ಲಿ ಇವನ್ನ ಬಿಟ್ರೆ ಮತ್ತೊಬ್ಬರಿಲ್ಲ.
೨೪೨೩. ಮಣ್ಣಿಗೆ ಮಣ್ಣು ತಿನ್ನಿಸು = ಹೆಣಗಿಸು, ಯಮಹಿಂಸೆ ಕೊಡು
ಪ್ರ : ಆ ಮನೆಹಾಳ ನಾನು ತಣ್ಣಗಿರೋದಕ್ಕೆ ಬಿಡಲಿಲ್ಲ, ಮಣ್ಣಿಗೆ ಮಣ್ಣು ತಿನ್ನಿಸಿಬಿಟ್ಟ.
೨೪೨೪. ಮಣ್ಣಿಗೆ ಹೋಗು = ಉತ್ತರ ಕ್ರಿಯೆಗೆ ಹೋಗು, ಹೆಣವನ್ನು ಮಣ್ಣು ಮಾಡಲು ಹೋಗು
ಪ್ರ : ಗೌಡರ ಮಣ್ಣಿಗೆ ಹೋಗಿ, ಈಗ ತಾನೇ ಮನೆಗೆ ಬಂದೆ.
೨೪೨೫. ಮಣ್ಣುಗೂಡಿಸು = ಹಾಳು ಮಾಡು
ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಮಣ್ಣುಗೂಡಿಸಿ ಬಿಟ್ಟ.
೨೪೨೬. ಮಣ್ಣು ತಿಂದು ಬಾಯಿ ತೊಳೆದುಕೊಳ್ಳು = ತಪ್ಪು ಮಾಡಿ ತಿದ್ದಿಕೊಳ್ಳು
ಪ್ರ : ಮಣ್ಣು ತಿಂದು ಬಾಯಿ ತೊಳೆದುಕೊಂಡಿದ್ದೇನೆ, ಇನ್ನು ಅಂಥವನ್ನು ಮಾಡೋದಿಲ್ಲ.
೨೪೨೭. ಮಣ್ಣು ಮಾಡು = ಸತ್ತವರನ್ನು ಹೂಳು
ಪ್ರ : ಮಣ್ಣು ಮಾಡಿದ ಮೇಲೆ ಮನೆಗೆ ಬಂದು ದೀಪ ನೋಡಿ ಅವರವರ ಊರಿಗೆ ಹೋಗಬೇಕು, ದೀಪ ನೋಡದೆ ಹೋಗಬಾರ್ದು.
೨೪೨೮. ಮಣ್ಣು ಮುಕ್ಕು = ಮೋಸ ಹೋಗು
(ಮುಕ್ಕು = ಬುಕ್ಕು, ತಿನ್ನು)
ಪ್ರ : ಅಪ್ಪಂಥೋನು ಅಂತ ಅವನ ಜೊತೆ ಜಂಟಿ ವ್ಯವಹಾರ ಮಾಡಿ ಮಣ್ಣು ಮುಕ್ಕಿದೆ.
೨೪೨೯. ಮಣ್ಣುಮುಕ್ಕಂಗೆ ಹೆದರಿಕೊಳ್ಳು = ಎರೆಹುಳವನ್ನು ಹಾವಿನ ಮರಿ ಎಂದು ಭಯಪಡು
(ಮಣ್ಣುಮುಕ್ಕ = ಎರೆಹುಳ) ಎರೆಹುಳ ಸಾಮಾನ್ಯವಾಗಿ ಶ್ಯಾವಿಗೆ ಎಳೆಯ ಗಾತ್ರವಿದ್ದು ಕಂದ ಬಣ್ಣ ಹೊಂದಿರುತ್ತದೆ. ಸದಾ ಮಣ್ಣಿನೊಳಗೆ ಇರುತ್ತದೆ. ಆದ್ದರಿಂದಲೇ ಇದಕ್ಕೆ ಮಣ್ಣುಮುಕ್ಕ ಎಂಬ ಹೆಸರು ಬಂದಿದೆ. ಪಂಡಿತಕವಿಗಳು ಅಚ್ಚಕನ್ನಡ ಶಬ್ದ ಬಳಸಿದರೆ ಮುಕ್ಕಾಗಿ ಬಿಡುತ್ತದೆಂದು ಅದನ್ನು ‘ಭೂನಾಗ’ ಎಂದು ಕರೆದಿದ್ದಾರೆ, ನಾಯಿಯನ್ನು ‘ಗ್ರಾಮಸಿಂಹ’ ಎಂದು ಕರೆದಂತೆ. ಗಾಳ ಹಾಕಿ ಮೀನು ಹಿಡಿಯುವವರು ಗಾಳದ ಕೊಕ್ಕೆಗೆ ಮಣ್ಣುಮುಕ್ಕನನ್ನು ಸಿಕ್ಕಿಸುತ್ತಾರೆ, ಮೀನುಗಳನ್ನು ಸೆಳೆಯುವ ದೀಹದ ಜೀವಿಯಾಗಿ.
ಪ್ರ : ಮಣ್ಣುಮುಕ್ಕನಿಗೆ ಹೆದರಿಕೊಳ್ತೀಯಲ್ಲ, ಎಂಥ ಪುಕ್ಕಲೆದೆಯ ಮುಕ್ಕ (< ಮೂರ್ಖ)ನೋ ನೀನು ?
೨೪೩೦. ಮಣೆ ಹಾಕು = ಶ್ರದ್ಧೆ ಪ್ರೀತಿ ತೋರಿಸು
(ಮಣೆ = ಮನೆಗೆ ಬಂದವರಿಗೆ ಗೌರವದ ಸಂಕೇತವಾಗಿ ಕುಳಿತುಕೊಳ್ಳಲು ಕೊಡುತ್ತಿದ್ದ ಮೊಳದುದ್ದದ ನಯವಾದ ಹಲಗೆ)
ಪ್ರ : ಮೊದಲ ಸಲ ಅಳಿಯ ಮನೆಗೆ ಬಂದಿದ್ದಾರೆ, ಕುಂತುಕೊಳ್ಳೋಕೆ ಮಣೆ ಹಾಕು.
೨೪೩೧. ಮಣೆ ನೂಕು = ಕಾಟಾಚಾರದ ಪ್ರೀತಿ ತೋರಿಸು
ಪ್ರ : ಅಳಿಯ ಏನೂ ಹೊಸದಾಗಿ ಬರ್ತಾ ಅವರ ? ಮಣೆ ನೂಕು, ಸಾಕು
೨೪೩೨. ಮಣೇವು ಹಾಕು = ದೇವರ ಸೇವೆ ಮಾಡು.
(ಮಣೇವು < ಮಣಿಹ = ನಮಸ್ಕಾರ) ಸಾಮಾನ್ಯವಾಗಿ ವಿಷ್ಣುಭಕ್ತರಾದ ‘ದಾಸಯ್ಯಗಳು’, ಶಿವಭಕ್ತರಾದ ‘ಗೊರವಯ್ಯಗಳು’ ಹಾಸಿದ ಬಟ್ಟೆಯ ಮೇಲೆ ಜನರು ತಂದು ಸುರಿದಿರುವ ಬಾಳೇಹಣ್ಣು ಹಲಸಿನ ತೊಳೆ ಬೆಲ್ಲದಿಂದೊಡಗುಡಿದ ರಸಾಯನವನ್ನು ಕೈಯಲ್ಲಿ ತಿನ್ನದೆ ಬಾಯಿ ಹಾಕಿ ಬಕಬಕನೆ ತಿನ್ನುತ್ತಾರೆ, ಮೈದುಂಬಿದವರಂತೆ. ದೇವರಿಗೆ ಪರಾಕು ಹೇಳುತ್ತಾ ಮಂಡಿಯೂರಿ, ದೇವರಪ್ರಸಾದವಾದ ಆ ರಸಾಯನವನ್ನು ತಿನ್ನುವುದಕ್ಕೆ ಮಣೇವು ಹಾಕುವುದು ಎನ್ನುತ್ತಾರೆ.
ಪ್ರ : ಮಣೇವು ಹಾಕಿದಾಗ ರಾಶಿ ರಸಾಯನವನ್ನು ಬರಿದು ಮಾಡ್ತಾರಲ್ಲ, ಅವರ ಹೊಟ್ಟೇಲಿ ಏನು ದೆವ್ವ ಕೂತದ?
೨೪೩೩. ಮಣ್ಣೆ ಕೊಡು = ಮಾನ್ಯತೆ ಕೊಡು
(ಮಣ್ಣೆ < ಮನ್ನಣೆ = ಮಾನ್ಯತೆ, ಗೌರವ)
ಪ್ರ : ಮಣ್ಣೆ ಕೊಟ್ಟೋರಿಗೇ ತುಣ್ಣೆ ತೋರಿಸಿ ಹೋದ ಕ್ರಿಯಾಭ್ರಷ್ಟ.
೨೪೩೪. ಮತನ ಉಂಟಾಗು = ಸಂಘರ್ಷ ಉಂಟಾಗು, ಜಗಳವಾಗು
(ಮತನ < ಮಥನ < ಮಂಥನ = ಕಡೆತ ; ಸಮುದ್ರ ಮಥನದ ಪೌರಾಣಿಕ ಹಿನ್ನೆಲೆಯದು)
ಪ್ರ : ನಮಗೂ ದಾಯಾದಿಗಳಿಗೂ ದೊಡ್ಡ ಮತನವೇ ಆಗಿ ಹೋಯ್ತು.
೨೪೩೫. ಮತ್ತು ಬರು = ನಿಶೆ ಏರು
(ಮತ್ತು = ಅಮಲು)
ಪ್ರ : ಗಂಟಲಮಟ್ಟ ಕುಡಿದು ಮತ್ತು ಬಂದು ಮಲಗ್ಯವನೆ
೨೪೩೬. ಮದ ಬಂದು ಮಲೆಯುತ್ತಿರು = ಅಹಂಕಾರದಿಂದ ಬೀಗುತ್ತಿರು, ಎಮ್ಮೆಯಂತೆ ತೆಮಲುತ್ತಿರು (< ತೆವಳು -ತ್ತಿ-ರು)
(ಮಲೆ = ಸೇಗಿನಿಂದ ಬೀಗು, ಕೊಬ್ಬಿನಿಂದ ಉಬ್ಬು; ಮದ = ನೆಣ, ಅಹಂಕಾರ)
ಪ್ರ : ಮುಖ್ಯಮಂತ್ರಿ ಮಗ ಮದ ಬಂದು ಮಲೀತಾ ಇದ್ದಾನೆ.
೨೪೩೭. ಮದುಕದ ಮರವಾಗಿರು = ಇಬ್ಬರಿಗೂ ಸೇರಿದ ವೃಕ್ಷವಾಗಿರು
(ಮದುಕದ = ಎರಡು ಜಮೀನುಗಳ ಮಧ್ಯದ)
ಪ್ರ : ಮದುಕದ ಮರವಾದ್ದರಿಂದ ಅದರ ಫಲವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು.
೨೪೩೮. ಮನಸ್ಸು ಪಿಚ್ಚೆನ್ನಿಸು = ಬಿಕೋ ಎನ್ನು, ಹಾಳು ಸುರಿದಂತಾಗು
(ಪಿಚ್ < ಪಿಚ್ಚೆ = ಸಣ್ಣದು, ಜೊಳ್ಳು)
ಪ್ರ : ಹೆಂಡ್ತಿ ತೌರಿಗಟ್ಟಿದ ಮೇಲೆ ಮನಸ್ಸೂ ಪಿಚ್ಚೆನ್ನಿಸ್ತಾ ಇದೆ, ಮನೆಯೂ ಪಿಚ್ಚೆನ್ನಿಸ್ತಾ ಇದೆ.
೨೪೩೯. ಮನೆ ಎಕ್ಕುಟ್ಟಿ ಹೋಗು = ಹಾಳಾಗು, ಹಾಳು ಬೀಳು
(ಎಕ್ಕುಟ್ಟಿ < ಎಕ್ಕ + ಹುಟ್ಟಿ = ಎಕ್ಕದ ಗಿಡ ಹುಟ್ಟಿ, ಅಂದರೆ ಮನೆ ಪಾಳು ಬಿದ್ದು ಅಲ್ಲಿ ಎಕ್ಕದ ಗಿಡ ಹುಟ್ಟಲಿ ಎಂಬ ಆಶಯ)
ಪ್ರ : ಅಳಿಯನಿಂದಾಗಿ ಮಾವನ ಮನೆ ಎಕ್ಕುಟ್ಟಿ ಹೋಯ್ತು.
೨೪೪೦. ಮನೆ ಕಾಯವಾಗಿ ಹೋಗು = ಮನೆ ಹಾಳಾಗು, ನೆಲಸಮವಾಗು
(ಕಾಯವಾಗು < ಕಾಲವಾಗು = ನಾಶವಾಗು, ಹಾಳಾಗು) ಕಾಲವಾಗು ಎಂದರೆ ಮರಣ ಹೊಂದು, ಇಲ್ಲವಾಗು ಎಂದರ್ಥ. ಕಾಲವಾಗು ಎಂಬುದೇ ಜನರ ಉಚ್ಚಾರಣೆಯಲ್ಲಿ ಕಾಯವಾಗು ಎಂದಾಗಿದೆ. ಕೆಲವು ಮಕ್ಕಳು ಖಾರ ಎನ್ನುವುದಕ್ಕೆ ಖಾಯ ಎಂದೂ, ಸಾರು ಎನ್ನುವುದಕ್ಕೆ ಸಾಯು ಎಂದೂ ಗಾಳಿ-ಪ-ಟ-ದ ಬಾಲಂ-ಗೋ-ಚಿ-ಯ-ನ್ನು ‘ಬಾಯಂ-ಗೋ-ಚಿ’ ಎಂದೂ ಉಚ್ಚರಿಸುತ್ತವೆ. ರಕಾರಕ್ಕೆ ಯಕಾರ ಬಂದಂತೆ ಜನರ ಬಾಯಲ್ಲಿ ಲಕಾರ ಯಕಾರವಾಗಿದೆ ಅಷ್ಟೆ.
ಪ್ರ : ಅಯ್ಯೋ ನಿನ್ನ ಮನೆ ಕಾಯವಾಗಿ ಹೋಗ ! ಇಷ್ಟು ಗಾತ್ರ ಹೊರೇನ ಹೊತ್ಕೊಂಡು ಬರೋದು?
೨೪೪೧. ಮನೆಕೂಲಿಸು = ಮನೆಕುಸಿಯುವಂತೆಮಾಡು, ನೆಲಸಮಮಾಡು (ಕೂಲ = ದಡ; ಕೂಲಿಸು = ದಡಕುಸಿಯುವಂತೆಮಾಡು)
ಪ್ರ: ಮನೆಪಾಲಿಸ್ತೀನಿಅಂತಯಜಮಾನಿಕೆವಹಿಸಿಕೊಂಡೋನು, ಮನೆಕೂಲಿಸಿಬಿಟ್ಟ.
೨೪೪೨. ಮನೆಗುಡಿಸಿಗುಂಡಾಂತರಮಾಡು = ಬರಿ-ದುಮಾಡು, ಹಾಳುಮಾಡು.
ಪ್ರ: ಹೊಟ್ಟೆಕಿಚ್ಚಿನಜನಅವನಮನೇನಗುಡಿಸಿಗುಂಡಾಂತರಮಾಡಿಬಿಟ್ರು.
೨೪೪೩. ಮನೆತೊಳೆ = ಬರಿದುಮಾಡು, ಎಲ್ಲವನ್ನೂಖಾಲಿಮಾಡಿತೊಳೆದುಬಿಡು.
ಪ್ರ: ಅಳಿಯಮನೆತೊಳೆಯಅನ್ನೋಗಾದೆಯಂತೆಅಳಿಯಮಾವನಮನೆತೊಳೆದುಬಿಟ್ಟ.
೨೪೪೪. ಮನೆಚೊಕ್ಕಟಮಾಡು = ಏನೂಇಲ್ಲದಂತೆಮಾಡು, ಗುಡಿಸಿಹಾಕು
ಪ್ರ: ಅಪ್ಪಸಂಪಾದಿಸಿದ್ದನ್ನೆಲ್ಲಮಗಅನಾಮತ್ತುಚೊಕ್ಕಟಮಾಡಿಬಿಟ್ಟ.
೨೪೪೫. ಮನೆದೀಪಹಚ್ಚು = ವಂಮುಂದುವರಿ, ಸಂತಾನಭಾಗ್ಯಸಭಿಸು
ಮನೆಗೆದೀಪಹಚ್ಚುವುದುವಂಶದಸಾತತ್ಯವನ್ನುಸೂಚಿಸುತ್ತದೆ. ನಮ್ಮವಂಶಇಲ್ಲಿಗೆನಿಲ್ಲಬಾರದು, ಸಾರೋದ್ಧಾರವಾಗಿಮುಂದುವರಿಯಬೇಕುಎಂಬಆಸೆದೀಪಹಚ್ಚುವಶುಭಕಾಮನೆಯಿಂದಕಂಡರಣೆಗೊಂಡಿದೆ.
ಪ್ರ: ಮನೆದೀಪಹಚ್ಚೋಕೆಒಂದುವಂಶದಕುಡಿಹುಟ್ಟಿತು, ದೇವರದಯ.
೨೪೪೬. ಮನೆದೀಪಆರು = ವಂಶನಿಲ್ಲು, ಸಂತಾನಇಲ್ಲದಂತಾಗು.
ಪ್ರ: ಮನೆದೀಪಆರಬಾರದುಅನ್ನೋಆಸೇನದೇವರುಈಡೇರಿಸಲಿಲ್ಲ.
೨೪೪೭. ಮನೆಗೆಮನೆಯೇಮೊರ್ರೋಎನ್ನು = ಮನೆಯಜನವೆಲ್ಲಗೊಳೋಎಂದುಅಳು.
ಪ್ರ: ತಾತಸತ್ತಾಗಮೆನಗೆಮನೆಯೇಮೊರ್ರೋಎಂದುಬಿಟ್ಟಿತು.
೨೪೪೮. ಮನೆಮಾತಾಗು = ಎಲ್ಲರಿಗೂತಿಳಿದವಿಷಯವಾಗು, ಜನಜನಿತವಾಗು.
ಪ್ರ: ಎಲ್ಲರಮನೆಮಾತಾಗಿರುವಾಗಕದ್ದುಮುಚ್ಚಿಕಿವೀಲಿಹೇಳೋದ್ರಲ್ಲಿಅರ್ಥವಿಲ್ಲ.
೨೪೪೯. ಮನೆಮಾರುಹತ್ತು = ಮನೆಹಾಳಾಗು (ಮಾರು = ವಿಕ್ರಯಿಸು; ಮಾರು = ಆಶ್ರಯ, ನಂಟಸ್ತನ, ವಂಶ. ಉದಾ: ತಲೆಮಾರು, ತಲೆಮೊರೆ; ಹತ್ತ = ಹೊತ್ತಿಕೊಂಡುಉರಿದುನಾಶವಾಗ)
ಪ್ರ: ಎಲ್ಲಿಹೋದ, ಇವನಮನೆಮಾರುಹತ್ತ!
೨೪೫೦. ಮನೆಮಾರುಒಂದೂಇಲ್ಲದಿರು = ನೆಲೆನಿಲ್ಲಲುಒಂದುಗೂಡುಇಲ್ಲದಿರು (ಮಾರು < ಮಾಡು = ಮನೆ, ಗುಡಿಸಲು)
ಪ್ರ: ಮನೆಮಾರುಒಂದೂಇಲ್ಲದೋರಿಗೆಹೆಣ್ಣುಹೆಂಗೆಕೊಡಾನ?
೨೪೫೧. ಮನೆಗೆಮುಳ್ಳುಹಾಕು = ಮನೆಪಾಳುಬೀಳು.
ಪ್ರ: ಕಂಡೋರಆಸ್ತಿಗೆಗಳ್ಳುಹಾಕ್ತಾನೆ, ಇವನಮನೆಗೆಮುಳ್ಳುಹಾಕ!
೨೪೫೨. ಮನೆಗೆಕಾಗೆನುಗ್ಗು = ಶನಿಕಾಟಶುರುವಾಗು, ಕಷ್ಟಪರಂಪರೆಎದುರಾಗು.
ಕಾಗೆಶಣೈಶ್ಚರನವಾಹನವೆಂದೂಅದುಮೈಮೇಲೆತಲೆಯಮೇಲೆಕುಳಿತರೆ, ಮನೆಗೆಹೊಕ್ಕರೆಕಷ್ಟಗಳುಶುರುವಾಗುತ್ತವೆಎಂದೂ, ಶನಿಕಾಟಕೊಡುತ್ತಾನೆಎಂದೂಜನರನಂಬಿಕೆ. ಆನಂಬಿಕೆಯತುಣುಕುಈನುಡಿಗಟ್ಟು.
ಪ್ರ: ಮನೆಗೆಕಾಗೆನುಗ್ಗಿತುಅಂದರೆ, ಮೊದಲುಈಮನೆಬಿಡಬೇಕು, ಗಂಡಾಂತರಕಾದದೆ.
೨೪೫೩. ಮನೆಉದೊಸಲುತುಳಿಯದಿರು = ಮನೆಗೆಹೆಜ್ಜೆಇಕ್ಕದಿರು (ಉದೊಸಲು < ಉತ್ + ಹೊಸಲು = ಮೇಲೆದ್ದಹೊಸಲಿನದಿಂಡುಅಥವಾಅಡ್ಡಪಟ್ಟಿ; ಹೊಸಲು < ಹೊಸ್ತಿಲು < ಹೊಸಂತಿಲ್ < ಪೊಸಂತಿಲ್ = ಬಾಗಿಲಕೆಳಭಾಗದಅಡ್ಡಪಟ್ಟಿ)
ಪ್ರ: ಇನ್ನುಮೇಲೆ, ನಿನ್ನಮನೆಉದೊಸಲುತುಳಿದರೆಕೇಳು, ದೊಡ್ಡನಮಸ್ಕಾರ, ಬರ್ತೀನಿ.
೨೪೫೪. ಮನೇಲಿಹೇಳಿಬರು = ಸಾಯಲುಸಿದ್ಧವಾಗಿಬರು.
ಪ್ರ: ರಸ್ತೆಗೆಅಡ್ಡಬರ್ತಾಇದ್ದೀಯಲ್ಲ, ಮನೇಲಿಹೇಳಿಬಂದಿದ್ದೀಯ?
೨೪೫೫. ಮನೆಹತ್ತಿಕೂಡು = ಡಾಣಾಡಂಗುರಮಾಡು
ಪ್ರ: ಗಾದೆ – ಹಾದರಕಳ್ಳತನಮನೆಹತ್ತಿಕೂಗ್ತವಂತೆಒಮದಲ್ಲಒಂದಿನಸಿಕ್ಕಿಬೀಳಸ್ತಿಅಂತ.
೨೪೫೬. ಮಪ್ಪರಿ = ಎತ್ತುಗಳು ನಿಲ್ಲುವಂತೆ ಸನ್ನೆ ಮಾಡು, ಸದ್ದು ಮಾಡು.
ಗಾಡಿಗೆ ಕಟ್ಟಿದ ಅಥವಾ ಆರಿಗೆ ಕಟ್ಟಿದ ಎತ್ತುಗಳನ್ನು ನಿಲ್ಲಿಸಬೇಕಾದರೆ ರೈತ ಹಗ್ಗವನ್ನು ಹಿಡಿದೆಳೆದು, ತುಟಿ ಎರಡನ್ನೂ ಕೂಡಿಸಿ ಉಸಿರು ಒಳಗೆ ಎಳೆದುಕೊಳ್ಳುವ ಮೂಲಕ ಒಂದು ಬಗೆಯ ಸದ್ದನ್ನು ಮಾಡುತ್ತಾನೆ. ಅದಕ್ಕೆ ‘ಮಪ್ಪರಿ’ ಎಂದು ಹೇಳುತ್ತಾರೆ. ಇದು ಬೇಸಾಯಕ್ಕೆ ಸಂಬಂಧಿಸಿದ ನುಡಿಗಟ್ಟು.
ಪ್ರ : ಮಪ್ಪರಿದಾಗ ನಿಂತ ಎತ್ತುಗಳು, ಬೆನ್ನ ಮೇಲೆ ಚಪ್ಪರಿಸಿದಾಗ ಚಲಿಸಿದವು.
೨೪೫೭. ಮಬ್ಬು ಹರಿ = ಬೆಳಗಾಗು, ನಸುಗತ್ತಲೆ ಕರಗು
ಪ್ರ : ಮಬ್ಬು ಹರಿದಾಗ ಎದ್ದೋನು ಇನ್ನೂ ಎರಡು ಕಾಲು ಒಂದು ಕಡೆ ಇಕ್ಕಿಲ್ಲ.
೨೪೫೮. ಮಮ್ಮು ಕುಡಿಸು = ಹಾಲು ಕುಡಿಸು
ಪ್ರ : ಮಮ್ಮು ಕುಡಿಸ್ತೀನಿ ಬಾ ಅಂತ ಮಗೂನ ಕರೆದಳು.
೨೪೫೯. ಮರಗಟ್ಟು = ಜೋಮು ಹಿಡಿ, ರಕ್ತಚಲನೆ ನಿಲ್ಲು
ಪ್ರ : ಕಾಲು ಮರಗಟ್ಟಿದೆ, ಮುಂದಕ್ಕೆ ಎತ್ತಿ ಇಡೋಕೆ ಆಗ್ತಿಲ್ಲ.
೨೪೬೦. ಮರ್ಜಿ ಹಿಡಿದು ನಡೆ = ಅನ್ಯರ ಇಚ್ಛೆಗನುಸಾರವಾಗಿ ನಡೆ
ಪ್ರ : ಇನ್ನೊಬ್ಬರ ಮರ್ಜಿ ಹಿಡಿದು ನಡೆಯೋದು ಬಿಡು, ಉಚ್ಚೆ ಕುಡಿದರೂ ತನ್ನಿಚ್ಛೇಲಿರಬೇಕು.
೨೪೬೧. ಮರದ ಚಕ್ಕೆ ಮರಕ್ಕೆ ಅಂಟಿಸು = ವಿರಸ ಹೋಗಲಾಡಿಸಿ ಸಂಬಂಧ ಕೂಡಿಸು
(ಚಕ್ಕೆ = ಸೀಳು)
ಪ್ರ : ಮರದ ಚಕ್ಕೆ ಮರಕ್ಕೆ ಅಂಟಿಸಿದ್ದೀನಿ, ಇನ್ನು ಅವರಿಗೆ ಬಿಟ್ಟದ್ದು.
೨೪೬೨. ಮರಳಲ್ಲಿ ಬರೆದು ಮಡಿಲಲ್ಲಿ ಕಟ್ಟಿಕೊಂಡಂತಾಗು = ಅಕ್ಷರ ಅಳಿಸಿ ಹೋಗು
ಹಿಂದೆ ಸಿಲೇಟು ಬಳಪ ಇಲ್ಲದಿದ್ದಾಗ ಮರಳ ಮೇಲೆ ಬೆರಳಿಂದ ಬರೆದು ಅಕ್ಷರ ಕಲಿತುಕೊಳ್ಳಬೇಕಾಗಿತ್ತು. ಆ ಮರಳನ್ನು ವಿದ್ಯಾರ್ಥಿಗಳೇ ಮಟಕ್ಕೆ ತೆಗೆದುಕೊಂಡು ಹೋಗಬೇಕಾಗಿತ್ತು, ಮತ್ತೆ ಮನೆಗೆ ತರಬೇಕಿತ್ತು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇಷ್ಟೆಲ್ಲ ಮಾಡಿ, ಮರಳಲ್ಲಿ ಬರೆದು ಮಡಿಲಲ್ಲಿ ಕಟ್ಟಿಕೊಂಡಂತಾಯ್ತು, ನಮ್ಮ ದುರಾದೃಷ್ಟ.
೨೪೬೩. ಮರುಚಲ ಮಗುವಾಗು = ಎರಡನೆಯ ಮಗುವಾಗು
(ಮರುಚಲ < ಮರು + ಸೂಲು = ಎರಡನೆಯ ಹೆರಿಗೆ ; ಚೊಚ್ಚಿಲು < ಹೊಚ್ಚ + ಸೂಲು = ಮೊದಲ ಹೆರಿಗೆ)
ಪ್ರ : ಚೊಚ್ಚಿಲ ಮಗುವಿನ ಹೆರಿಗೆ ಕಷ್ಟವಾಯಿತು, ಮರುಚಲ ಮಗುವಿನ ಹೆರಿಗೆ ಸಲೀಸಾಗಾಯ್ತು.
೨೪೬೪. ಮಲಗಿ ಹೋಗು = ನೆಲಕಚ್ಚು, ಚೇತರಿಸಿಕೊಳ್ಳದಂತಾಗು
ಪ್ರ : ಬೆಲೆ ಕುಸಿತದಿಂದ ಬೆಲ್ಲದ ವ್ಯಾಪಾರಿಗಳು ಮಲಗಿ ಹೋದರು.
೨೪೬೫. ಮಲಾಮತ್ತು ಬಂದು ಮಲಿ = ಸೊಕ್ಕು ಬಂದು ತೆವಳು, ಠೇಂಕಾರದಿಂದ ಬೀಗು
(ಮಲಾಮತ್ತು = ಸೊಕ್ಕು ; ಮಲಿ < ಮಲೆ = ಬೀಗು, ಮದ ಮೈಮುರಿಯುತ್ತಿರು)
ಪ್ರ : ಮಲಾಮತ್ತು ಬಂದು ಮಲೀತಾ ಅವನೆ, ಇವನಿಗೆ ಆಪತ್ತು ಬಂದು ಚಾಪೇಲಿ ಸುತ್ತಿ-ಕೊಂ-ಡು ಹೋಗ !
೨೪೬೬. ಮಲುಕು ಹಾಕು = ಚಿಮರ ಹಾಕು, ಕೊಕ್ಕೆ ಹಾಕು
(ಮಲುಕು = ಕುಣಿಕೆ, ಚಿಮರ)
ಪ್ರ : ಅವನು ಮಲುಕು ಹಾಕಿದ ಮೇಲೆ ಬಿಚ್ಚೋಕೆ ತಿಣುಕಬೇಕು.
೨೪೬೭. ಮಲುಕಿನಲ್ಲಿ ಸಿಕ್ಕೊಂಡು ಮುಲುಕು = ಸಿಕ್ಕಿನಲ್ಲಿ ಸಿಕ್ಕಿಕೊಂಡು ತಿಣುಕು
(ಮಲುಕು = ಕುಣಿಕೆ ; ಮುಲುಕು = ತಿಣುಕು)
ಪ್ರ : ಅವನು ಹಾಕಿದ ಮಲುಕಿನಲ್ಲಿ ಸಿಕ್ಕೊಂಡು ಮುಲುಕ್ತಾ ಇದ್ದೀನಿ, ಎಂದು ಬಿಡಿಸಿಕೊಳ್ತೀನೋ.
೨೪೬೮. ಮುಷ್ಕಿರಿ ಮಾಡು = ದರ್ಬಾರು ಮಾಡು ; ದಂಡ ಹಿಡಿದು ಹುಕುಂ ಚಲಾಯಿಸು
(ಮಷ್ಕಿರಿ < ಮಸ್ಕಿರಿ = ದಂಡ, ದೊಣ್ಣೆ)
ಪ್ರ : ಅವನು ಮಷ್ಕಿರಿ ಮಾಡೋದನ್ನು ನೋಡಿ ಜನ ಬೇಸತ್ತು ಹೋಗಿದ್ದಾರೆ, ಎಂದೋ ಒಂದಿನ ಅವನಿಗೆ ಹು‌ಟ್ಟಿದ ದಿನ ಕಾಣಿಸ್ತಾರೆ.
೨೪೬೯. ಮಸ್ಕ ಹೊಡಿ = ಬೆಣ್ಣೆ ಹಚ್ಚು, ತಾಜಾ ಮಾಡು
ಪ್ರ : ಕೆಲಸ ಆಗಲಿ ಅಂತ ಮಸ್ಕ ಹೊಡೀತಾ ಅವನೆ.
೨೪೭೦. ಮಸ್ತಿ ಬರು = ಅಹಂಕಾರ ಬರು
(ಮಸ್ತಿ = ಮದ)
ಪ್ರ : ಮಸ್ತಿ ಬಂದು, ಕಂಡುಕೋಡರ ಜೊತೆ ಕುಸ್ತಿ ಬೀಳ್ತಾನೆ.
೨೪೭೧. ಮಸ್ತಾಗಿರು = ಹೆಚ್ಚಿಗೆಯಾಗಿರು, ಅಧಿಕವಾಗಿರು
(ಮಸ್ತು = ಅಪಾರ)
ಪ್ರ : ಮಸ್ತಿ ಮಸ್ತಾಗಿರುವಾಗ ಅವನ್ಯಾಕೆ ಸುಸ್ತಾಗ್ತಾನೆ?
೨೪೭೨. ಮಸುಕು ಆವರಿಸು = ಕವುರು ಸುರುವಾಗು
(ಮಸುಕು = ನಸುಗತ್ತಲೆ, ಕವುರು)
ಪ್ರ : ಸಂಜೆ ಮಸುಕಿನಲ್ಲಿ ಮುಸುಕು ಹಾಕ್ಕೊಂಡು ಹೋದ ಹೆಂಗ್ಸು ಯಾರು ಅಂತ ಗೊತ್ತಾಗಲಿಲ್ಲ.
೨೪೭೩. ಮಳೆ ಕಾಲೂರು = ಮಳೆ ಇಳಿದುಕೊಳ್ಳು, ಮಳೆ ಬೀಳ-ತೊ-ಡ-ಗು
ಪ್ರ : ಶಿವಗಂಗೆ ಬೆಟ್ಟದ ಮೇಲೆ ಮಳೆ ಕಾಲೂರಿತು, ಸ್ವಲ್ಪ ಹೊತ್ತಿನಲ್ಲಿ ನಮಗೂ ಎಟುಕಿಸಿಕೊಳ್ತದೆ.
೨೪೭೪. ಮಳೆ ಹುಯ್ದು ಬಿಟ್ಟಂತಾಗು = ನಿಶ್ಶಬ್ದವಾಗು, ಶಾಂತವಾಗು
ಪ್ರ : ಕಿಚಪಚ ಅಂತಿದ್ದ ಮಕ್ಕಳು ಮಲಗಿದ ತಕ್ಷಣ, ಮನೆ ಮಳೆ ಹುಯ್ದು ಬಿಟ್ಟಂತಾಯ್ತು
೨೪೭೫. ಮಳ್ಳಾಗೆ ಎಣ್ಣೆ ಸುರಿದಂತಾಗು = ವ್ಯರ್ಥವಾಗು
(ಮಳ್ಳು < ಮರಳು)
ಪ್ರ : ಹೊಳೇಲಿ ಹುಣಿಸೆ ಹಣ್ಣು ಕಿವುಚಿದ್ದು ಮಳ್ಳಾಗೆ ಎಣ್ಣೆ ಸುರಿದಂತಾಯ್ತು
೨೪೭೬. ಮಳ್ಳುತ್ತಿರು = ಕುದಿಯುತ್ತಿರು, ತುದಿಬೆರಳ ಮೇಲೆ ನಿಂತಿರು
(ಮಳ್ಳು < ಮರಳು = ಕುದಿ)
ಪ್ರ : ಹೆಚ್ಚುಗಾರಿಕೆ ತೋರಿಸಿಕೊಳ್ಳೋಕೆ ನಾಮುಂದು ತಾಮುಂದು ಅಂತ ಮಳ್ತಾ ಅವರೆ.
೨೪೭೭. ಮಳ್ಳು ಹಗೇವು ತೋಡಿದಂತಾಗು = ಮುಗಿಯದ ಕಥೆಯಾಗು, ವ್ಯರ್ಥ ಪ್ರಯತ್ನವಾಗು
(ಮಳ್ಳು < ಮರಳು ; ಹಗೇವು < ಹಗ = ನೆಲಗಣಜ, ನೆಲದಲ್ಲಿ ಕೊರೆದ ಕಣಜ)
ಪ್ರ : ಮಳ್ಳು ಹಗೇವು ತೋಡೋದು ವ್ಯರ್ಥ, ಏಕೆಂದರೆ ಮಳ್ಳನ್ನು ತೋಡಿ ಮೇಲಕ್ಕೆ ಹಾಕಿದಂತೆಲ್ಲ ಅದು ಒಳಕ್ಕೆ ಓಡಿ ಬರ್ತದೆ.
೨೪೭೮. ಮಾಗಾಡು = ಪರದಾಡು, ಕಷ್ಟದಿಂದ ತಡಕಾಡು
ಪ್ರ : ನನಗೂ ಮಾಗಾಡಿ ಮಾಗಾಡಿ ಸಾಕಾಗಿದೆ, ಗಾಡಿ ಬಿಡೋದು ಬಾಕಿ ಇದೆ.
೨೪೭೯. ಮಾತಿನಲ್ಲಿ ಹೋಕು ಬರದಿರು = ಸುಳ್ಳು ಸುಳಿಯದಿರು
(ಹೋಕು = ಜೊಳ್ಳು)
ಪ್ರ : ಮಾತಿನಲ್ಲಿ ತೂಕ ಇತ್ತು, ಒಂದು ಚೂರೂ ಹೋಕಿರಲಿಲ್ಲ.
೨೪೮೦. ಮಾತು ಆತುಕೊಳ್ಳು = ಗ್ರಹಿಸಿಕೊಳ್ಳು
(ಆತು < ಆಂತು = ಹಿಡಿ, ಧರಿಸು, ಗ್ರಹಿಸು)
ಪ್ರ : ಗಾದೆ – ಹಗೆ ಮಾತು ಆತ್ಕೊಂಡ
ತುಟಿ- ಬಿ-ಚ್ಚದೆ ಕೂತ್ಕೊಂಡ
೨೪೮೧. ಮಾತು ತೆಗೆದು ಹಾಕು = ತಿರಸ್ಕರಿಸು
ಪ್ರ : ಇದುವರೆಗೂ ಅವನು ಎಂದೂ ನನ್ನ ಮಾತು ತೆಗೆದು ಹಾಕಿಲ್ಲ.
೨೪೮೨. ಮಾತು ತೇಲಿಸು = ಉಭಯಸಂಕಟದಿಂದ ಸತ್ಯವನ್ನು ಹೇಳದೆ ಜಾರಿಕೊಳ್ಳು
ಪ್ರ : ಕೊನೆಕೊನೆಗೆ ಮಾತು ತೇಲಿಸಿಬಿಟ್ಟ, ತಾನು ಯಾಕೆ ನಿಷ್ಠೂರ ಆಗಬೇಕು ಅಂತ
೨೪೮೩. ಮಾತು ಮಗುಚಿ ಹಾಕು = ಹೇಳಿದ ಮಾತನ್ನು ಯಥಾವತ್ತಾಗಿ ಹೇಳಿಬಿಡು
(ಮಗುಚಿ ಹಾಕು = ತಿರುವಿ ಹಾಕು, ಯಥಾವತ್ ಹಿಂದಿರುಗಿಸಿ ಉಚ್ಚರಿಸು)
ಪ್ರ : ಚಿಕ್ಕ ಹುಡಗಾದ್ರೂ ರೊಟ್ಟಿ ಮಗುಚಿದಂಗೆ ಹೇಳಿಕೊಟ್ಟ ಮಾತ್ನ ಮಗುಚಿ ಹಾಕಿಬಿಡ್ತಾನೆ.
೨೪೮೪. ಮಾತು ಮಟ್ಟ ಇಲ್ಲದಿರು = ತೂಕವಿಲ್ಲದಿರು
(ಮಟ್ಟ = ಸಮತೂಕ, ಸಮತೋಲನ)
ಪ್ರ : ಅವನ ಬಾಯಿಂದ ಬರೋದು ಸೊಟ್ಟ ಮಾತೇ ವಿನಾ, ಮಟ್ಟವಾದ ಮಾತು ಬರಲ್ಲ
೨೪೮೫. ಮಾನಿಸಿಕೊಳ್ಳು = ಗಬ್ಬವಾಗು, ಗಬ್ಬ-ವಾ-ಗ-ಬೇ-ಕೆಂ-ಬ ಬೆದೆ-ಗೆ ಒಳ-ಗಾ-ಗು
ಪ್ರ : ಹಸು ಮಾನಿಸಿಕೊಂಡಿದೆ, ಅದ್ಕೇ ಹಾಲು ಕೊಡ್ತಿಲ್ಲ.
೨೪೮೬. ಮಾನೆ ನಿಲೆ ಹಾಕ್ಕೊಂಡು ಮಲಗು = ಕೆಲಸಕಾರ್ಯ ಮಾಡದೆ ಉಂಡುಂಡು ಮಲಗು
(ಮಾನೆ < ಮಾನ = ಶಿಷ್ನ, ಕೊನೆ(ಮಾರ್ನಾಮಿ ಅಷ್ಟೊತ್ತಿಗೆ ಮಾನೆಲ್ಲ ಹೊಡೆ ಎಂಬ ಗಾದೆ ಮಾತನ್ನು ಇಲ್ಲಿ ಗಮನಿಸಬಹುದು) ನಿಲೆ ಹಾಕು = ನೆಟ್ಟಗೆ ನಿಲ್ಲಿಸು, ನಿಗುರಿಸು)
ಪ್ರ : ಮನೆ ಅನ್ನಬ್ಯಾಡ ಮಟ ಅನ್ನಬ್ಯಾಡ, ಮೂರು ಹೊತ್ತೂ ಮಾನೆ ನಿಲೆ ಹಾಕ್ಕೊಂಡು ಮಲಗಿದ್ರೆ ಬದುಕು ಮಾಡೋರ್ಯಾರು?
೨೪೮೭. ಮಾಪು ಮಾಡು = ಕ್ಷಮಿಸು
(ಮಾಪು < ಮಾಫ್ (ಹಿಂ, ಉ) = ಕ್ಷಮೆ)
ಪ್ರ : ನಿಮ್ಮ ಕಾಲು ಹಿಡ್ಕೊಂತೀನಿ, ಇದೊಂದು ಸಾರಿ ಮಾಪು ಮಾಡಿಬಿಡಿ
೨೪೮೮. ಮಾಮೂಲು ಮಡಗು = ಲಂಚ ಕೊಡು
(ಮಡಗು = ಇಡು, ಇಕ್ಕು)
ಪ್ರ : ಮಾಮೂಲು ಮಡಗಿ ಮಾತಾಡು, ಇಲ್ಲದಿದ್ರೆ ಹಿಂಗೇ ನೇತಾಡಬೇಕು ಅಷ್ಟೆ.
೨೪೮೯. ಮಾರವಾಡಿ ವಿದ್ಯೆ ತೋರಿಸು = ಜಿಪುಣತನ ಮಾಡು, ಚೌಕಾಸಿ ಮಾಡು
(ಮಾರವಾಡಿ = ಮಾರವಾಡದವನು, ಜೈನ)
ಪ್ರ : ನನ್ನ ಹತ್ರ ನೀನು ಮಾರವಾಡಿ ವಿದ್ಯೆ ತೋರಿಸಬೇಡ, ಪರಿಣಾಮ ನೆಟ್ಟಗಿರಲ್ಲ.
೨೪೯೦. ಮಾರೀಪತ್ತಿನಲ್ಲಿರು = ವಶದಲ್ಲಿರು
(ಮಾರೀಪತ್ತು = ಅಧೀನ)
ಪ್ರ : ಕಾಲ್ಕೂ ಲಾಗಾಯ್ತಿಗೂ ಜಮೀನು ನಮ್ಮ ಮಾರೀಪತ್ತಿನಲ್ಲಿದೆ.
೨೪೯೧. ಮಾರುದ್ದ ದೇಹ ಗೇಣುದ್ದ ಮಾಡಿಕೊಳ್ಳು = ಅವಮಾನದಿಂದ ಕುಗ್ಗು, ಉಡುಗಿ ಹೋಗು.
ಪ್ರ : ಮಾರುದ್ದ ದೇಹಾನ ಗೇಣುದ್ದ ಮಾಡ್ಕೊಂಡು ಆಲ್ವರಿಯುವಂಥ ಸ್ಥಿತಿಗೆ ತಂದರು ಮಕ್ಕಳು
೨೪೯೨. ಮಾರುದ್ಧ ನಿಗುರು = ಹೆಚ್ಚು ಕೊಚ್ಚಿಕೊಳ್ಳು, ಅಹಂಕಾರದಿಂದ ಸೆಟೆದು ನಿಲ್ಲು
(ಮಾರುದ್ದ = ಎರಡು ತೋಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಚಾಚಿದಾಗ ಎಷ್ಟು ಉದ್ದವೋ ಅಷ್ಟುದ್ದ; ನಿಗುರು = ಸೆಟೆದು ನಿಲ್ಲು, ನೆಟ್ಟಗೆ ಗೂಟದಂತೆ ನಿಲ್ಲು)
ಪ್ರ : ಅವನು ಮಾರುದ್ಧ ನಿಗರೋಕೆ, ನಾವು ಯಾರದ್ದೂ ಬಾಚ್ಕೊಂಡು ಗುಡ್ಡೆ ಹಾಕ್ಕೊಂಡಿಲ್ಲ.
೨೪೯೩. ಮಾರು ಹೋಗು = ಮನಸೋಲು
ಪ್ರ : ಗಾದೆ – ಮಕ ನೋಡಿ ಮಾರು ಹೋದ
ಗುಣ ನೋಡಿ ದೂರ ಹೋದ
೨೪೯೪. ಮಾಲುತ್ತಿರು = ಕುಡಿದ ಮತ್ತಿನಲ್ಲಿ ಎತ್ತಂದರತ್ತ ವಾಲಾಡುತ್ತಿರು
ಪ್ರ : ಕುಡಿದ ಮೆತ್ತಿನಲ್ಲಿ ಮಾಲ್ತಾ ಅವನೆ, ಬೀಳೋದು ಏಳೋದು ಲೆಕ್ಕವೇ ಇಲ್ಲ.
೨೪೯೫. ಮಾಲು ಸಿಕ್ಕು = ವಸ್ತು ಸಿಕ್ಕು, ಬಯಸಿದ ಹೆಣ್ಣು ಸಿಕ್ಕು
(ಮಾಲು = ಕರೆ ಹೆಣ್ಣು, Calling girl)
ಪ್ರ : ಮಾಲು ಸಿಕ್ತು ಅಂದೇಟಿಗೇ ಒಳಕ್ಕೆ ಕರಕೊಂಡು ಬಾ ಎಂದ
೨೪೯೬. ಮಾಸಿ ಕಿಮ್ಮಟವಾಗು = ಕೊಳೆ ಪದರುಗಟ್ಟು
(ಮಾಸು = ಕೊಳೆಯಾಗು ; ಕಿಮ್ಮಟ = ಕಿಟ್ಟ, ಪದರುಗಟ್ಟಿದ ಕೊಳೆ)
ಪ್ರ : ಬಟ್ಟೆ ಮಾಸಿ ಕಿಮ್ಮಟ ಆಗಿ ಕುಂತವೆ, ಒಗೆಯೋಕೇನು ನಿಮಗೆ ದಾಡಿ?
೨೪೯೭. ಮ್ಯಾತೆ ಹಿಸುಕು = ಗಂಟಲು ಹಿಸುಕು
(ಮ್ಯಾತೆ < ಮೆಟ್ರೆ < ಮಿಡರು (ತ) ಮೆಡೆ (ತೆ) = ಗಂಟಲು)
ಪ್ರ : ಕ್ಯಾತೆ ನನ್ಮಗ ದಾರಿಗೆ ಬರೋದು ಮ್ಯಾತೆ ಹಿಸುಕಿದಾಗಲೇ
೨೪೯೮. ಮ್ಯಾಳ ಮಾಡು = ಅಳು, ಗೋಳಾಡು
(ಮ್ಯಾಳ < ಮೇಳ = ಓಲಗ)
ಪ್ರ : ಮ್ಯಾಳಾ ಮಾಡ್ತಾನೇ ಇರ್ತೀರೋ, ಇಲ್ಲ, ಹೆಣ ಮಣ್ಣು ಮಾಡೋಕೆ ಏನೇನು ಬೇಕು ಅದನ್ನು ಹೊಂದಿಸಿಕೊಳ್ತೀರೋ?
೨೪೯೯. ಮಿಕ ಸಿಕ್ಕು = ಬಯಸಿದ ಹೆಣ್ಣು ಸಿಕ್ಕು
(ಮಿಕ = ಗುರಿಯಿಟ್ಟ ಮೃಗ, ಪ್ರಾಣಿ)
ಪ್ರ : ಮಿಕ ಸಿಕ್ತು ಅಂದ ಕೂಡಲೇ ತಿಕ ಒದರಿಕೊಂಡು ಓಡಿದ.
೨೫೦೦. ಮಿಡುಕಾಡು = ಒದ್ದಾಡು, ವಿಲಿವಿಲಿಗುಟ್ಟು
(ಮಿಡುಕು = ಸ್ಪಂದಿಸು, ಅಲುಗಾಡು)
ಪ್ರ : ಗಾದೆ – ಹೊಟ್ಟೆ ತುಂಬಿದೋರಿಗೆ ಹುಡುಗಾಟ
ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
೨೫೦೧. ಮಿಣಿ ಏಟು ಬೀಳು = ಸಕತ್ತು ಹೊಡೆತ ಬೀಳು
(ಮಿಣಿ < ಮಿಳಿ = ಚರ್ಮದ ಹಗ್ಗ)
ಪ್ರ : ಅಣಿ ಮಾಡ್ಕೊಂಡು ಬರ್ತೀಯೋ, ಇಲ್ಲ, ಮಿಣಿ ಏಟು ಬೀಳಬೇಕೋ?
೨೫೦೨. ಮಿತ್ತಿಗೆ ಕೊಡು = ಮಂತ್ರ ಪವಿತ್ರ ಮಣ್ಣಿನ ಉಂಡೆ ಕೊಡು
(ಮಿತ್ತಿಗೆ < ಮಿರ್ತಿಗೆ < ಮೃತ್ತಿಕಾ = ಮಣ್ಣಿನ ಸಣ್ಣ ಗಟ್ಟಿ)
ಪ್ರ : ವಿಭೂತಿಧಾರಿ ಕಾಷಾಯಧಾರಿ ಜಂಗಮ ಮಿರ್ತಿಗೆ ಕೊಟ್ಟು ಜೋಳಿಗೆ ಭರ್ತಿ ಮಾಡ್ಕೊಂಡ.
೨೫೦೩. ಮೀಟುಗೋಲಾಗು = ಮುಂದು ಮುಂದು-ಕ್ಕೆ ಕೊಂಡೊ-ಯ್ಯು-ವ ಸಾಧ-ನ-ವಾ-ಗು
(ಮೀಟುಗೋಲು = ಸನ್ನೆಗೋಲು) ಭಾರವಾದ ವಸ್ತುವನ್ನು ಮುಂದಕ್ಕೆ ಜರುಗಿಸಲು ಬಳಸುವ ಹಾರೆ ಅಥವಾ ಬೊಂಬಿಗೆ ಮೀಟುಗೋಲು, ಸನ್ನೆಗೋಲು ಎಂದು ಹೇಳಲಾಗುತ್ತದೆ. ಹಾಗೆಯೇ ಗುರಿ ತಲುಪಲು ಗುರುವಿನ ಮೀಟುಗೋಲು ಬೇಕಾಗುತ್ತದೆ ಎಂಬ ಆಶಯವಿದೆ ಈ ನುಡಿಗಟ್ಟಿನಲ್ಲಿ.
ಪ್ರ : ಅವರು ನನಗೆ ಮೀಟುಗೋಲಾಗದಿದ್ರೆ ಈಟರ (< ಇಷ್ಟು ಎತ್ತರ) ವರೆಗೆ ಏರುತಿದ್ನ?
೨೫೦೪. ಮೀನ ಮೇಷ ಎಣಿಸು = ಹಿಂದುಮುಂದು ನೋಡು, ದೃಢ ನಿಲುವು ತಾಳದಿರು
ಮೇಷ ರಾಶಿಯಿಂದ ಮೊದಲುಗೊಂಡು ಮೀನ ರಾಶಿಯವರೆಗೆ ಒಟ್ಟು ಹನ್ನೆರಡು ನಕ್ಷತ್ರ ರಾಶಿಗಳಿವೆ. ಜ್ಯೋತಿಷ್ಯ ಹೇಳುವವರು ಈ ರಾಶಿಗಳನ್ನು ಅನುಸರಿಸಿ ಹಿಂದೆ ಸಂಭವಿಸಿದ ಹಾಗೂ ಮುಂದೆ ಸಂಭವಿಸುವ ಘಟನೆಗಳನ್ನು ಹೇಳುತ್ತಾರೆ. ಕೆಳಗಿನ ಮೀನರಾಶಿಯಿಂದ ಮೇಲಿನ ಮೇಷ ರಾಶಿಯವರೆಗೆ ಅಥವಾ ಮೇಲಿನ ಮೇಷ ರಾಶಿಯಿಂದ ಕೆಳಗಿನ ಮೀನರಾಶಿಯವರೆಗೆ ಎಣಿಕೆ ಹಾಕುತ್ತಾ, ಕಾಲ ತಳ್ಳುತ್ತಾ, ನಿಧಾನ ಮಾಡುವ ಪ್ರವೃತ್ತಿಯನ್ನು ಈ ನುಡಿಗಟ್ಟು ಸೂಚಿಸುತ್ತದೆ.
ಪ್ರ : ನೀನು ಮೀನ ಮೇಷ ಎಣಿಸಬೇಡ, ತಟಕ್ಕನೆ ಒಂದು ನಿರ್ಧಾರಕ್ಕೆ ಬಾ.
೨೫೦೫. ಮೀಸಲು ಗೆಡು = ಅಪವಿತ್ರಗೊಳ್ಳು, ಎಂಜಲಾಗು
ಪ್ರ : ಮೀಸಲುಗೆಟ್ಟದ್ದನ್ನು ದೇವರ ಎಡೆಗೆ ಇಡಬಾರದು.
೨೫೦೬. ಮೀಸಲು ಮುರಿ = ಕನ್ನೆ ಹುಡುಗಿಗೆ ಪ್ರಥಮ ಸಂಭೋಗ ಸುಖವನ್ನು ನೀಡು
(ಮುರಿ = ಮೀಸಲಿನ ಕನ್ಯಾವ್ರತವನ್ನು ಕೆಡಿಸು, ಎಂಜಲು ಮಾಡು )
ಪ್ರ : ಮೀಸಲು ಮುರಿಯೋಕೆ ಬಂದ ಮೀಸೆ ಹೊತ್ತೋನಿಗೆ ಮುಸುಡಿಗೆ ತಿವಿದಳು.
೨೫೦೭. ಮೀಸಲು ಕಟ್ಟು = ಮುಡಿಪು ಕಟ್ಟು
ಪ್ರ : ಮೊದಲು ಹುಲಿಯೂರು ದುರ್ಗದ ಹಳೆಯೂರು ಕಾಳಿಕಾದೇವಿಗೆ ಮೀಸಲು
ಕಟ್ಟು, ಆ ತಾಯಿ ನಿನ್ನ ಕಷ್ಟ ಆತ್ಕೊಳ್ತಾಳೆ.
೨೫೦೮. ಮೀಸೆ ಬೋಳಿಸಿಕೊಳ್ಳು = ಗಂಡಸಲ್ಲವೆಂದು ಒಪ್ಪಿಕೊಳ್ಳು
ಪ್ರ : ಆ ಹೆಂಗಸಿಗೆ ಸೋತರೆ ನಾನು ಮೀಸೆ ಬೋಳಿಸಿಕೊಳ್ತೀನಿ.
೨೫೦೯. ಮೀಸೆ ಮಣ್ಣಾಗು = ಸೋಲಾಗು, ಅವಮಾನವಾಗು
ಪ್ರ : ಚುನಾವಣೆಯಲ್ಲಿ ಮೀಸೆ ಮಣ್ಣಾದ ಮೇಲೆ ತಣ್ಣಗಾದ
೨೫೧೦. ಮೀಸೆ ಮಿಂಡಾಳಾಗು = ಪ್ರಾಯಸ್ಥನಾಗು
(ಮಿಂಡ = ಯೌವನಸ್ಥ ; ಮಿಂಡಿ = ಯೌವನಸ್ಥೆ)
ಪ್ರ : ದುರದುಂಡಿ ಮಿಂಡಿಗೆ ಸರಿಯಾಗಿ ಮೀಸೆ ಮಿಂಡಾಳೇ ಸಿಕ್ಕಿದ ಬಿಡು.
೨೫೧೧. ಮೀಸೆ ಹೊತ್ಕೊಂಡಿರು = ಹೆಸರಿಗೆ ಗಂಡಸಾಗಿರು, ಕೆಲಸಕ್ಕೆ ಬಾರದವನಾಗಿರು
ಪ್ರ : ಹೆಂಗಸಿನ ಆಸೆ ತೀರಿಸದ ಗಂಡಸು, ಮೀಸೆ ಹೊತ್ಕೊಂಡಿದ್ದರೆಷ್ಟು, ಬಿಟ್ಟರೆಷ್ಟು?
೨೫೧೨. ಮುಕುಳಿ ಎತ್ತು = ಜಾಗ ಖಾಲಿ ಮಾಡು, ಹೊರಡು
(ಮುಕುಳಿ = ಗುದಧ್ವಾರ, ತಿಕ)
ಪ್ರ : ಇಲ್ಲಿಂದ ಮೊದಲು ಮುಕುಳಿ ಎತ್ತು, ಇಲ್ಲದಿದ್ರೆ, ಮುಕುಳಿಗೆ ಒದ್ದೆ ಅಂದ್ರೆ ಪುಕಳಿ ಪಲ್ಲಂಡೆಯಾಗ್ತದೆ.
೨೫೧೩. ಮುಕ್ಕಾಗು = ತುಂಡಾಗು, ಹೋಳಾಗು
(ಮುಕ್ಕು < ಮುರುಕು = ಹೋಳು, ತುಂಡು)
ಪ್ರ : ಗಾದೆ – ಚರ್ಮ ಸುಕ್ಕಾದ್ರೆ ಮುಪ್ಪು
ಕರ್ಮ ಮುಕ್ಕಾದ್ರೆ ಮುಕ್ತಿ
೨೫೧೪. ಮುಕ್ಕಿರಿ = ನೆಗಡಿಯಿಂದ ನರಳು, ಸೊರ್ರ‍ಬುಸ್ಸ ಎನ್ನು
ಪ್ರ : ನೆಗಡಿಯಾಗಿ ಮುಕ್ಕಿರೀತಿದ್ದೀನಿ, ತೆವಕೆ ಬಂದು ತೆಕ್ಕೆಮುರಿ ಬೀಳ್ತಿದ್ದೀಯಲ್ಲ.
೨೫೧೫. ಮುಖ ಕೆಚ್ಚಲಿಕ್ಕು = ಮುನಿಸಿಕೊಳ್ಳು, ಊದಿಕೊಳ್ಳು
(ಕೆಚ್ಚಲಿಕ್ಕು = ಸೊರ ಬಿಟ್ಟ ಹಸುವಿನ ಮೊಲೆಗಳ ಮೇಲ್ಭಾಗದ ಮಾಂಸಲ ಭಾಗ ದಪ್ಪವಾಗಿ ಊದಿಕೊಳ್ಳುವಿಕೆ)
ಪ್ರ : ಅಮ್ಮನೋರ ಮುಖ ಆಗಲೇ ಕೆಚ್ಚಲಿಕ್ಕಿದೆ, ಇಚ್ಛೆ ಈಡೇರಲಿಲ್ಲ ಅಂತ.
೨೫೧೬. ಮುಖ ಮುಸುರೆಗಡಿಯಾಗು = ಅಸಮಾಧಾನದಿಂದ ಊದಿಬಾದಾಳಾಗು
ಪ್ರ : ಯಾಕೆ ಅಮ್ಮನೋರ ಮುಖ ಎದ್ದ ತಕ್ಷಣ ಮುಸುರೆಗಡಿಗೆಯಾಗಿ ಕೂತದೆ?
೨೫೧೭. ಮುಖ ಹುಳ್ಳಗಾಗು = ಸಪ್ಪಗಾಗು, ಕಳೆಗುಂದು
ಪ್ರ : ಎಲ್ಲರ ಮುಂದೆ ಹುಳುಕನೆಲ್ಲ ಬಿಚ್ಚಿದಾಗ ಅವನ ಮುಖ ಹುಳ್ಳಗಾಯ್ತು.
೨೫೧೮. ಮುಗ್ಗಟ್ಟಾಗು = ಅಭಾವವಾಗು, ತೊಂದರೆಯಾಗು, ಬರ-ಗಾ-ಲ ಬರು
(ಮುಗ್ಗಟ್ಟು < ಮುಕ್ಕಟ್ಟು = ಮೂರು ಕಟ್ಟು, ಅಭಾವ)
ಪ್ರ : ಮುಗ್ಗಟ್ಟಾಗಿ ಒದ್ದಾಡ್ತಾ ಇದ್ದೀವಿ, ಹಬ್ಬಕ್ಕೆ ಒಬ್ಬಟ್ಟು ಎಲ್ಲಿ ಮಾಡಾನ?
೨೫೧೯. ಮುಗ್ಗರಿಸು = ಎಡವಿ ಬೀಳು, ತಪ್ಪು ಮಾಡು
ಪ್ರ : ಗಾದೆ – ಆನೆಯಂಥದೂ ಮುಗ್ಗರಿಸ್ತದೆ.
೨೫೨೦. ಮುಗಿಲಿಗೆ ಏಣಿ ಹಾಕು = ಆಗದುದಕ್ಕೆ ಆಸೆ ಪಡು, ಅಸಾಧ್ಯವಾದುದಕ್ಕೆ ವ್ಯರ್ಥ ಪ್ರಯತ್ನ ಮಾಡು
ಪ್ರ : ಮಾಳಿಗೆ ಮನೆಗೆ ಏಣಿ ಹಾಕು, ಒಪ್ತೀನಿ, ಮುಗಿಲಿಗೆ ಏಣಿ ಹಾಕೋ ಕೆಲಸ ಬಿಡು
೨೫೨೧. ಮುಗಿಲಿಗೆ ತೂತು ಬೀಳು = ಧಾರಕಾರ ಮಳೆಯಾಗು
(ಮುಗಿಲು = ಮೋಡ)
ಪ್ರ : ಮುಗಿಲಿಗೆ ತೂತು ಬಿತ್ತೋ ಏನೋ, ಒಂದೇ ಸಮ ಸುರೀತಾ ಅದೆ ಮಳೆ.
೨೫೨೨. ಮುಗಿಲು ಮೂರೇ ಗೇಣುಳಿ = ಸಂತೋಷದಿಂದ ಉಬ್ಬು
(ಮುಗಿಲು = ಆಕಾಶ; ಗೇಣು = ಹೆಬ್ಬೆಟ್ಟು ಮತ್ತು ನಡು ಬೆರಳನ್ನು ವಿರುದ್ಧ ಚಾಚಿದಾಗಿನ ಉದ್ದ)
ಪ್ರ : ಮಗ ಪ್ರಥಮ ದರ್ಜೇಲಿ ಪಾಸಾಗಿದ್ದನ್ನು ಕೇಳಿ, ಅಪ್ಪ ಅಮ್ಮನಿಗೆ ಮುಗಿಲು ಮೂರೇ ಗೇಣುಳೀತು
೨೫೨೩. ಮುಗಿಲಿಗೆ ಹಾರಿ ನೆಲಕ್ಕೆ ಬೀಳು = ನೋವಿನಿಂದ ಒದ್ದಾಡು, ರೋಷಾವೇಶದಿಂದ ಹಾರಾಡು
ಪ್ರ : ನೋವು ತಾಳಲಾರದೆ ಮುಗಿಲಿಗೆ ಹಾರಿ ನೆಲಕ್ಕೆ ಬೀಳ್ತಾನೆ, ಅದನ್ನು ನೋಡೋಕಾಗಲ್ಲ.
೨೫೨೪. ಮುಗಿಸಿಬಿಡು = ಕೊಂದು ಬಿಡು, ಬಾಳನ್ನು ಕೊನೆಗಾಣಿಸು
ಪ್ರ : ಅವರವ್ವನ ಮಕ ನೋಡಿ ಬಿಟ್ಟಿದ್ದೀನಿ, ಇಲ್ಲದಿದ್ರೆ ಅವನ್ನ ಇವತ್ತು ಮುಗಿಸಿಬಿಡ್ತಿದ್ದೆ.
೨೫೨೫. ಮುಚ್ಚಂಜೆಯಾಗು = ಮಬ್ಬುಗತ್ತಲೆ ಆವರಿಸುವ ಸಮಯವಾಗು
(ಮುಚ್ಚಂಜೆ < ಮುಸ್ಸಂಜೆ < ಮೂರು ಸಂಜೆ = ಮಬ್ಬುಗತ್ತಲೆ)
ಸಮಯ)
ಪ್ರ : ಮುಚ್ಚಂಜೆಯಾಗಿದೆ, ಹುಳುಚಪ್ಪಟೆ ಹರಿದಾಡ್ತವೆ, ಸುಮ್ನೆ ಒಳಗಿರು.
೨೫೨೬. ಮುಟ್ಟಾಗು = ಹೊರಗಾಗು
(ಮುಟ್ಟು = ತಿಂಗಳಿಗೊಮ್ಮೆ ಹೆಂಗಸರಿಗೆ ಯೋನಿಯಲ್ಲಾಗುವ ರಕ್ತ ಸ್ರಾವ) ಮುಟ್ಟಾದಾಗ ಮೂರುದಿನ ಹೆಂಗಸರು ಮನೆಯ ಹೊರಗೆ ಇರಬೇಕಾಗಿತ್ತು. ನಡುಮನೆ ಅಡುಗೆ ಮನೆಗೆ ಪ್ರವೇಶಿಸುವಂತಿರಲಿಲ್ಲ. ಆದ್ದರಿಂದಲೇ ಮುಟ್ಟಾಗು ಎಂಬುದಕ್ಕೆ ಪರ್ಯಾಯವಾಗಿ ಹೊರಗಾಗು, ಆಚೆಯಾಗು ಎಂಬ ನುಡಿಗಟ್ಟುಗಳು ಚಾಲ್ತಿಗೆ ಬಂದವು. ಈಗ ಆ ಕಟ್ಟುಪಾಡು ಕಂಡುಬರುತ್ತಿಲ್ಲ.
ಪ್ರ : ಹೆಂಡ್ರು ಮುಟ್ಟಾಗಿ ಕೂತಿರೋದನ್ನು ಕಂಡು, ದೂರದೂರಿಂದ ಬಂದ ಗಂಡ
ನಿರಾಶೆಗೊಂಡ.
೨೫೨೭. ಮುಟ್ಟು ನಿಲ್ಲು = ಬಸುರಿಯಾಗು
ಪ್ರ : ಮುಟ್ಟು ನಿಂತು ಮೂರು ತಿಂಗಳಾಯ್ತು ಎಂದು ಗಂಡನ ಕಿವಿಯಲ್ಲಿ ಹೇಳಿ ನಕ್ಕಳು.
೨೫೨೮. ಮುಟ್ಟುಗೆಡು = ಸಂತಾನ ಶಕ್ತಿ ನಿಲ್ಲು
ಪ್ರ : ಗಾದೆ – ಮುಟ್ಟುಗೆಟ್ಟ ಮೇಲೆ ಹೊಟ್ಟುಗುಟ್ಟಿದಷ್ಟೇ ಲಾಭ.
೨೫೨೯. ಮುಟ್ಟುಗೋಲು ಹಾಕಿಕೊಳ್ಳು = ಕೊಡಬೇಕಾದ ಸಾಲಕ್ಕೆ ಆಸ್ತಿಯನ್ನು ಅಧೀನಕ್ಕೆ
ತೆಗೆದುಕೊಳ್ಳು
ಪ್ರ : ಕೊಡಬೇಕಾದ ಸಾಲಕ್ಕೆ ಜಮೀನು ಮುಟ್ಟುಗೋಲು ಹಾಕ್ಕೊಂಡರಾಯ್ತು.
೨೫೩೦. ಮುಟ್ಟುಚಿಟ್ಟಾಗು = ಮೈಲಿಗೆಯಾಗು
ಪ್ರ : ಮುಟ್ಟುಚಿಟ್ಟಾಗುತ್ತೆ, ದೂರ ಇರೋ ಶೂದ್ರ ಮುಂಡೇಗಂಡ ಎಂದು ಬೋಡಮ್ಮ ಬೈದಳು.
೨೫೩೧. ಮುಟ್ಟಿ ನೋಡಿಕೊಳ್ಳುವಂತೆ ಕೊಡು = ಚುರುಗುಗುಟ್ಟುವಂತೆ ಥಳಿಸು
(ಕೊಡು = ಏಟು ಕೊಡು, ಹೊಡಿ)
ಪ್ರ : ಅಡ್ಡನಾಡಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದ್ದೀನಿ ಇವತ್ತು.
೨೫೩೨. ಮುಟ್ಟಿದರೆ ಮುಸುಗನಂತಿರು = ಮುದುಡಿಕೊಳ್ಳುವ ಸಂಕೋಚಸ್ವಭಾವವಾಗಿರು
(ಮುಟ್ಟಿದರೆ ಮುಸುಗ = ಒಂದು ಸಸ್ಯ ವಿಶೇಷ, ಮುಟ್ಟಿದ ತಕ್ಷಣ ಅದರ ಎಲೆಗಳೆಲ್ಲ ಮುದುಡಿಕೊಂಡು ಕಾಂತಿಹೀನವಾಗುವಂಥದು)
ಪ್ರ : ಮುಟ್ಟಿದರೆ ಮುಸುಗುನಂತಿರೋನ ಜೊತೆ ಏಗೋದು ಹೆಂಗೆ?
೨೫೩೩. ಮುಟ್ಟಿದ್ದೆಲ್ಲ ಮಣ್ಣಾಗು = ಹಿಡಿದದ್ದೆಲ್ಲ ಹಾಳಾಗು
ಪ್ರ : ನನ್ನ ದುರಾದೃಷ್ಟ, ನಾನು ಮುಟ್ಟಿದ್ದೆಲ್ಲ ಮಣ್ಣಾಗ್ತದೆ.
೨೫೩೪. ಮುಟ್ಟಿದ್ದೆಲ್ಲ ಚಿನ್ನವಾಗು = ಹಿಡಿದದ್ದೆಲ್ಲ ಊರ್ಜಿತವಾಗು
ಪ್ರ : ಅವನ ಅದೃಷ್ಟ ನೋಡಿ, ಮುಟ್ಟಿದ್ದೆಲ್ಲ ಚಿನ್ನವಾಗ್ತದೆ.
೨೫೩೫. ಮುಡಿಪಿಡು = ದೇವರ ಹೆಸರಲ್ಲಿ ಕಾದಿರಿಸು
(ಮುಡುಪು = ಮೀಸಲು)
ಪ್ರ : ದೇವರಿಗೆ ಮುಡುಪಿಟ್ಟದ್ದನ್ನೆಲ್ಲ, ಆ ದೇವಸ್ಥಾನಕ್ಕೇ ಕೊಡಬೇಕು
೨೫೩೬. ಮುದುರಿಕೊಳ್ಳು= ಸುಮ್ಮನೆ ಮಲಗು, ಹೊಟ್ಟೆಗೆ ಮಂಡಿ ತಾಕುವಂತೆ ಮಡಿಸಿಕೊಂಡು ಮಲಗು
ಪ್ರ : ಗದರಿಸಿದೇಟಿಗೇ ಮಗ ಮುದುರಿಕೊಂಡು ಬಿದ್ಕೊಂಡ
೨೫೩೭. ಮುದ್ರೆ ಒತ್ತು = ಮುತ್ತಿ-ಕ್ಕೂ, ಕೆನ್ನೆ ಕಚ್ಚು
(ಮುದ್ರೆ = ಠಸ್ಸೆ, ಶೀಲು)
ಪ್ರ : ಮುದ್ರೆ ಒತ್ತದಿದ್ರೆ, ನಿನ-ಗೆ ನಿದ್ರೆ ಬರ-ಲ್ವ?
೨೫೩೮. ಮುಪ್ಪುರಿಗೊಳ್ಳು = ಹೆಚ್ಚುಗಟ್ಟಿಯಾಗು
(ಮುಪ್ಪುರಿ < ಮೂರು + ಹುರಿ = ಮೂರು ಹುರಿ ಹೆಣೆದುಕೊಳ್ಳು)
ಪ್ರ : ಆ ಮೂವರ ಪ್ರವೇಶದಿಂದಾಗಿ ಸಮಸ್ಯೆ ಇನ್ನೂ ಮುಪ್ಪುರಿಗೊಂಡಿತು.
೨೫೩೯. ಮುಬ್ಬೈ ಮಾಡು = ಕೈ ಬದಲಾಯಿಸು
(ಮುಬ್ಬೈ < ಮೂಬದಲು = ವಿನಿಮಯ)
ಪ್ರ : ಎತ್ತು ಮತ್ತು ಹಸುವನ್ನು ಪರಸ್ಪರ ಮುಬ್ಬೈ ಮಾಡಿಕೊಂಡರು.
೨೫೪೦. ಮುಯ್ಯಾಳು ಕಳಿಸು = ಆಳಿಗೆ ಪ್ರತಿಯಾಗಿ ಆಳು ಕಳಿಸು
ಪ್ರ : ಬೇಸಾಯದಲ್ಲಿ ಮುಯ್ಯಾಳು ಅನಿವಾರ್ಯ
೨೫೪೧. ಮುಯ್ಯೋದಿಸು = ಉಡುಗೊರೆ ಸಲ್ಲಿಸು
(ಮುಯ್ಯಿ = ಉಡುಗೊರೆ, ಕೊಡುಗೆ ; ಓದಿಸು = ಸಲ್ಲಿಸು, ಅರ್ಪಿಸು)
ಪ್ರ : ಮುಯ್ಯೋದಿಸಿದ್ದು ಮುಗೀತಿದ್ದಂತೆಯೇ ಜನರನ್ನು ಊಟಕ್ಕೆ ಕೂಡಿಸಿ.
೨೫೪೨. ಮುಯ್ಯಿ ತೀರಿಸಿಕೊಳ್ಳು = ಸೇಡು ತೀರಿಸಿಕೊಳ್ಳು
ಪ್ರ : ಮುಯ್ಯಿ ತೀರಿಸಿಕೊಳ್ಳದೇ ಇದ್ರೆ ನಮ್ಮಪ್ಪನಿಗೆ ನಾನು ಹುಟ್ಟಿದೋನೇ ಅಲ್ಲ.
೨೪೪೩. ಮುಯ್ ಮಾಡು = ಕೊಟ್ಟದ್ದನ್ನು ವಾಪಸ್ಸು ಕೊಡುವುದು
ಮದುವೆಗಳಲ್ಲಿ ನೆಂಟರಿಷ್ಟರು ತಮ್ಮ ಹೆಣ್ಣಿಗೋ ಗಂಡಿಗೋ ಏನಾದರೂ ಉಡುಗೊರೆ ಕೊಟ್ಟಿದ್ದರೆ, ಅವರ ಮನೆಯ ಮದುವೆಗೆ ಹೋಗಿ ಏನಾದರೂ ಉಡುಗೊರೆ ಕೊಟ್ಟು ಬರುತ್ತಾರೆ. ಅದಕ್ಕೆ ಮುಯ್ಯಿಕ್ಕುವುದು, ಮುಯ್ ಮಾಡುವುದು ಎನ್ನುತ್ತಾರೆ.
ಪ್ರ : ನಮ್ಮನೆ ಮದುವೇಲಿ ಮುಯ್ಯಿ ಮಾಡಿದ್ದಾರೆ, ಈಗ ಅವರ ಮನೆ ಮದುವೇಲಿ ಮುಯ್ ಮಾಡಬೇಡ್ವ?
೨೫೪೪. ಮುರುಕು ಹಿಟ್ಟು ಗುಕ್ಕು ನೀರು ಕೊಡದಿರು = ಕನಿಷ್ಠ ಸಹಾಯ ಮಾಡದಿರು, ಕ್ರೂರವಾಗಿ ನಡೆದುಕೊಳ್ಳು
(ಮುರುಕು = ಮುರಿದ ಅರ್ಧ; ಗುಕ್ಕು = ಒಂದು ಗುಟುಕು)
ಪ್ರ : ಮುರುಕು ಹಿಟ್ಟು ಗುಕ್ಕು ನೀರು ಕೊಡದೋನಿಗೆ ಮರುಕ ಬೇರೆ ಇದೆಯಾ?
೨೫೪೫. ಮುರು ಹಾಕು = ಕಲಗಚ್ಚನ್ನಿಡು, ಕರೆಯುವ ಹಸುಗಳಿಗೆ, ಗೇಯುವ ಎತ್ತುಗಳಿಗೆ
ಒಲೆಯ ಮೇಲೆ ಬೇಯಿಸಿದ ಆಹಾರ ಕೊಡು. ಇದು ಮಲೆನಾಡಿನಲ್ಲಿ ಚಾಲ್ತಿಯಲ್ಲಿದೆ.
ಪ್ರ : ಮುರುವಿನ ಒಲೆ ಬೂದಿಯಲ್ಲಿ ನಾಯಿಗಳು ಮಗಲಿವೆ, ಹೊಡೆದೋಡಿಸು.
೨೫೪೬. ಮುಲಮುಲಗುಟ್ಟು = ಚಡಪಡಿಸು, ಇದ್ದಕಡೆ ಇರದಿರು
ಪ್ರ : ಹುಳಹುಪ್ಪಟೆ ಮುಲುಮುಲುಗುಟ್ಟಿದಂಗೆ ನೀನೂ ಮುಲುಮುಲುಗುಟ್ತಾ ಇದ್ದೀಯಲ್ಲ.
೨೫೪೭. ಮುಲಾಜು ಇಲ್ಲದಿರು = ದಾಕ್ಷಿಣ್ಯ ಇಲ್ಲದಿರು
ಪ್ರ : ಎಲ್ಲರ ಹತ್ರಾನೂ ಮುಲಾಜಿಲ್ಲದೆ ವಸೂಲ್ ಮಾಡು
೨೫೪೮. ಮುಲಾಮು ಹಚ್ಚು = ಓಲೈಸು
(ಮುಲಾಮು = ಲೇಪನದ ಮದ್ದು)
ಪ್ರ : ಇನ್ನೊಬ್ಬರಿಗೆ ಮುಲಾಮು ಹಚ್ಚೋ ಗುಲಾಮ ಕೆಲಸ ನಿಲ್ಲಿಸು
೨೫೪೯. ಮುಲುಕುತ್ತಿರು = ತಿಣುಕುತ್ತಿರು, ಕೈಲಾಗದೆ ಒದ್ದಾಡುತ್ತಿರು
ಪ್ರ : ಅವನು ಹಾಕಿದ ಮಲುಕಿನಿಂದ ಬಿಡಿಸಿಕೊಳ್ಳೋದಕ್ಕೆ ನಾನೇ ಮುಲುಕ್ತಾ ಇದ್ದೀನಿ, ಹೋಗು.
೨೫೫೦. ಮುಸುಕಿನ ಗುದ್ದು ಕೊಡು = ಗೊತ್ತಾಗದ ಹಾಗೆ ಪೆಟ್ಟೆ ಕೊಡು
ಪ್ರ : ನಸುಗುನ್ನಿಕಾಯಿ ಅಂಥೋನಿಗೆ ನಾನು ಸರಿಯಾಗಿ ಮುಸುಕಿನ ಗುದ್ದು ಕೊಟ್ಟಿದ್ದೀನಿ.
೧೫೫೧. ಮುಸುಕು ಹೊಡೆ = ಪುಷ್ಪವತಿಯಾಗು
(ಮುಸುಕು ಹೊಡೆ = ಬಾಯ್ಬಿಡು, ಅರಳು)
ಪ್ರ : ನೋಡಿದೋರ ಬಾಯಲ್ಲಿ ನೀರೂರುವ ಹಾಗೆ ಹೊಂಬಾಳೆ ಮುಸುಕು ಹೊಡಿದಿದೆ.
೨೫೫೨. ಮುಸುರು = ಮುತ್ತಿಕೊಳ್ಳು, ಲಗ್ಗೆ ಹಾಕು
ಪ್ರ : ಸೊಳ್ಳೆ ಮುಸುರಿದಂಗೆ ಜನ ಮುಸುರಿಕೊಂಡರು
೨೫೫೩. ಮುಸುರೆ ತೆಗಿ – ಎಂಜಲೆತ್ತಿ ಒರಸಿ ಅಚ್ಚುಕಟ್ಟು ಮಾಡು
ಪ್ರ : ದುಸರ ಮಾತಾಡಬೇಡ, ಮೊದಲು ಮುಸುರೆ ತೆಗಿ, ಆಮೇಲೆ ನಿನ್ನ ಮುಸುರೆ ಮಾರೆ ತೊಳಿ.
೨೫೫೪. ಮುಸುಲಿಗೆ ಇಸವು ಹತ್ತು = ರೋಗ ಬರು
(ಮುಸುಲಿ < ಮುಸುಡಿ = ಮುಖ; ಇಸವು < ಇಸಬು = ಚರ್ಮರೋಗ)
ಪ್ರ : ನಮ್ಮನ್ನು ಬೀದಿಪಾಲು ಮಾಡಿದನಲ್ಲೆ, ಇವನ ಮುಸಲಿಗೆ ಇಸವು ಹತ್ತ!
೨೫೫೫. ಮುಸುಮುಸು ಎ‌ನ್ನು = ಮದವೇರು, ಮತ್ತಿನಿಂದ ಮಲೆಯುತ್ತಿರು
ಪ್ರ : ನಸನಸ ಎನ್ನುವ ಕಡಸು, ಮುಸು ಮುಸು ಎನ್ನುವ ಹೋರಿ, ತಡೆಯೋರ್ಯಾರು?
೨೫೫೭. ಮುಳುಗಡ್ಡೀಲಿ ಚುಚ್ಚು = ವೇಗ ಚುರುಕುಗೊಳಿಸು
(ಮುಳುಗಡ್ಡಿ < ಮುಳ್ಳುಗಡ್ಡಿ = ಬಿದಿರ ಕಡ್ಡಿಯ ತುದಿಗೆ ಸೂಜಿ ಹಾಕಿರುವಂಥದು) ಉಳುಮೆ ಮಾಡುವಾಗ ಬಾರುಗೋಲಿನ ಚಾವುಟಿಯಿಂದ ಹೊಡೆದು ಸರಿದಾರಿಗೆ ತರುತ್ತಾರೆ. ಆದರೆ ಹರಗುವಾಗ ಪೈರು ಕುಂಟೆಯ ಚಿಪ್ಪಿಗೆ ಸಿಕ್ತಿ ಕಿತ್ತು ಹೋದಾವೆಂದು ಮೇಣಿಯ ಮೇಲಿನ ಎರಡೂ ಕೈಗಳನ್ನು ತೆಗೆಯದೆ, ಅಲ್ಲಿಂದಲೇ ಕೈಯಲ್ಲಿರುವ ಉದ್ದನೆಯ ಮುಳ್ಳುಗಡ್ಡಿಯಿಂದ ಎತ್ತಿನ ಚೊಪ್ಪೆಗೆ ತಿವಿದು ಸರಿದಾರಿಗೆ ತರುತ್ತಾರೆ. ಬಲಗಡೆಗೆ ತಿರುಗಿಸಿಕೊಳ್ಳಬೇಕಾದರೆ ಎಡಗೋಲಿನ ಎತ್ತಿನ ಚೊಪ್ಪೆಗೆ ಚುಚ್ಚುತ್ತಾರೆ. ಎಡಗಡೆಗೆ ತಿರುಗಿಸಿಕೊಳ್ಳಬೇಕಾದರೆ ಬಲಗೋಲಿ ಎತ್ತಿನ ಚೊಪ್ಪೆಗೆ ಚುಚ್ಚುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು. ಆ ಮುಳುಗಡ್ಡಿಯಿಂದಲೇ ಪ್ರಾರಂಭವಾಗುವ ಜನಪದ ಒಗಟೊಂದಿದೆ: “ಮುಳುಗಡ್ಡಿ ಮೇಲೆ ಮುಳುಗಡ್ಡಿ, ಅದರ ಮೇಲೆ ತೊಂಬೈನೂರು ಪೊಟ್ಟಣ ಆ ಊರ ತಳವಾರನ ಹೆಂಡ್ರು ತಳವಿಲ್ಲದ ಹರವಿ ತಕ್ಕೊಂಡು ಜಲವಿಲ್ಲದ ಬಾವಿಗೆ ನೀರಿಗೆ ಹೋದಳು” ಇದಕ್ಕೆ ಉತ್ತರ : ಮುಳುಗಡ್ಡಿ = ಬತ್ತದ ಪೈರು, ಪೊಟ್ಟಣ = ನೆಲ್ಲು ಗೊನೆ, ತಳವಿಲ್ಲದ ಹರವಿ = ಕಡಿವಾಡು, ಕುಂದಲಿಗೆ, ಜಲವಿಲ್ಲದ ಭಾವಿ = ಒರಳುಕಲ್ಲು.
ಪ್ರ : ಗಾದೆ – ಉಳುವಾಗ ಬಾರುಗೋಲು ಸಾಕು
ಹರಗುವಾಗ ಮುಳುಗಡ್ಡಿ ಬೇಕು
೨೫೫೭. ಮುಳ್ಳಿಂದ ಮುಳ್ಳು ತೆಗೆ = ಹಗೆಯನ್ನು ಹಗೆಯಿಂದಲೇ ಹತ ಮಾಡು, ಅವರ ಹತಾರದಿಂದ ಅವರೇ ಹತರಾಗುವಂತೆ ಮಾಡು
(ತೆಗೆ = ಹೊರಕ್ಕೆ ಬರಿಸು, ಮೂಲೋತ್ಪಾಟನ ಮಾಡು) ಮುಳ್ಳನ್ನು ತುಳಿದರೆ ಬಗೆಯಲು ಪಿನ್ನು ಅಥವಾ ಸೂಜಿ ಬೇಕು, ಮುಳ್ಳನ್ನು ಕೀಳಲು ಚಿಮಟ ಬೇಕು. ಆದರೆ ಬಟಾಬಯಲಲ್ಲಿ ಅಂಗಾಲಿಗೆ ಮುಳ್ಳು ಚುಚ್ಚಿ ಮುರಿದುಕೊಂಡರೆ, ಪಿನ್ನು, ಸೂಜಿ, ಚಿಮ್ಮಟಗಳೊಂದೂ ಇಲ್ಲದಿದ್ದಾಗ, ಇನ್ನೊಂದು ಮುಳ್ಳನ್ನೇ ಕಿತ್ತುಕೊಂಡು ಮುರಿದ ಮುಳ್ಳಿನ ಸುತ್ತ ಬಗೆದು, ನಂತರ ಅದನ್ನು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಚಿಟುಕುಮುಳ್ಳಾಡಿಸುತ್ತಾ, ಚುಚ್ಚಿಕೊಂಡ ಮುಳ್ಳು ಸಡಿಲಗೊಂಡು ತಾನೇ ಹೊರಕ್ಕೆ ಬರುವಂತೆ ಮಾಡಲಾಗುತ್ತದೆ. ಆ ಹಿನ್ನೆಲೆಯಿಂದ ಬಂದದ್ದು ಈ ನುಡಿಗಟ್ಟು.
ಪ್ರ : ಗಾದೆ – ಮುಳ್ಳಿನಿಂದ ಮುಳ್ಳು ತೆಗೆ
ಹಗೆಯಿಂದ ಹಗೆ ತೆಗೆ
೨೫೫೮. ಮುಳ್ಳು ಮುರಿದಂತಾಗು = ಚುರಕ್ ಎನ್ನು, ನೋವಾಗು
ಪ್ರ : ಕಳ್ಳು ಬಳ್ಳಿ ಅನ್ನೋದೇತಕ್ಕೆ, ಅವನಿಗೆ ಆದ ಅನಾಹುತ ಕೇಳಿ ಕಳ್ಳಿಗೆ ಮುಳ್ಳು ಮುರಿದಂತಾಯ್ತು.
೨೫೫೯. ಮುಳ್ಳಿನ ಮೇಲೆ ತ್ರವಸು ಮಾಡು = ಆತಂಕದಲ್ಲಿ ಕಾಲ ಕಳೆ
(ತ್ರವಸು < ತಪಸ್ಸು = ಧ್ಯಾನ)
ಪ್ರ : ಈ ಸೂರಿನ ನೆಳ್ಳು ಉಳಿಸಿಕೋಬೇಕಾದ್ರೆ, ಮುಳ್ಳಿನ ಮೇಲೆ ತ್ರವಸು ಮಾಡಿದಂಗಾಯ್ತು.
೨೫೬೦. ಮೂಕೆತ್ತು = ಮಲವಿಸರ್ಜನೆ ಮಾಡು
(ಮೂಕೆತ್ತು < ಮೂಕು + ಎತ್ತು; ಮೂಕು = ಗಾಡಿಯ ಕೆಳಗೆ ಹಿಂಭಾಗದಿಂದ ಮುಂಭಾಗದ ನೊಗದವರೆಊ ಇರುವ ಮರದ ತೊಲೆ) ರೈತ ಗಾಡಿಗೆ ಗೊಬ್ಬರ ತುಂಬಿ ತನ್ನ ಹೊಲಕ್ಕೆ ಹೋಗಿ ಗಾಡಿ ನಿಲ್ಲಿಸಿ ಗುದ್ದಲಿಯಿಂದ ಗಾಡಿಯ ಗೊಬ್ಬರವನ್ನು ಕೆಳಕ್ಕೆ ದಬ್ಬುತ್ತಾನೆ ಅಥವಾ ಎತ್ತುಗಳ ಕಣ್ಣಿಅಗಡನ್ನು ಬಿಚ್ಚಿ, ಮೂಕಿನ ಮರವನ್ನು ಮೇಲೆತ್ತಿ, ಗಾಡಿಯಲ್ಲಿರುವ ಗೊಬ್ಬರ ತಾನೇ ಕೆಳಕ್ಕೆ ಸುರಿದುಕೊಳ್ಳುವಂತೆ ಮಾಡುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಜೀನ, ಮೂಕೆತ್ತೋಕೆ ತನ್ನ ಹೊಲದ ಹತ್ರಕೆ ಓಡ್ತಾನೆ.
೨೫೬೧. ಮೂಗನ ಮುಂದೆ ಮೂಗು ಕೆರೆ = ರೇಗಿಸು, ಇರಸುಮುರುಸು ಮಾಡು
ಮೂಗನ ಮುಂದೆ ಮೂಗು ಕೆರೆದರೆ ಮೂಗ ಎಂದು ಅಣಕಿಸುತ್ತಿದ್ದಾರೆ ಎಂದು ಭಾವಿಸಿದ ಮೂಗ ರೇಗುತ್ತಾನೆ. ಆ ಕೀಟಲೆಯ ಹಿನ್ನೆಲೆಯುಳ್ಳ ನುಡಿಗಟ್ಟಿದು
ಪ್ರ : ಮೂಗೆನ ಮುಂದೆ ಮೂಗು ಕೆರೆಯೋ ಕೆಲಸ ಬಿಟ್ಟು, ಹೊಲ ಕೆರೆಯೋ (ಉಳೋ) ಕೆಲಸ ಮಾಡು.
೨೫೬೨. ಮೂಗಳ ಗೊಣ್ಣೆ ಮೂಗಿನಲ್ಲಿರು = ಕೊಳಕಿನ ಕೊಳವಾಗಿರು
(ಮೂಗಳ > ಮೂಗೊಳಗ < ಮೂರುಕೊಳಗ) ಇಬ್ಬಳ ಹಾಗೂ ಕೊಳಗಗಳನ್ನು ಧಾನ್ಯದ ರಾಶಿಯನ್ನು ಅಳೆಯುವಾಗ ಬಳಸುತ್ತಾರೆ. ಇಬ್ಬಳ< ಇಬ್ಬಳ್ಳ< ಎರಡು < ಬಳ್ಳ; ಬಳ್ಳಕ್ಕೆ ನಾಲ್ಕು ಸೇರು ಇಬ್ಬಳಕ್ಕೆ ಎಂಟು ಸೇರು. ಎರಡು ಇಬ್ಬಳ ಹಾಕಿದರೆ ಒಂದು ಕೊಳಗ. ಅಂದರೆ ಹದಿನಾರು ಸೇರು. ಆದ್ದರಿಂದ ಮೂಗಳ ಎಂದರೆ ನಲವತ್ತೆಂಟು ಸೇರು. ಆದರೆ ಕೆಲವು ಕಡೆ ಕೊಳಗಕ್ಕೆ ಎಂಟು ಸೇರು ಎನ್ನುತ್ತಾರೆ. ಅಂದರೆ ಇಬ್ಬಳ ಹಾಗೂ ಕೊಳಗದ ಅಳತೆ ಆಯಾ ಪ್ರದೇಶದವರು ನಿಗದಿಪಡಿಸಿದಷ್ಟು ಸೇರುಗಳನ್ನು ಒಳಗೊಂಡಿರುತ್ತದೆ. ‘ತಾಯಿ ಮಾಡಿದ ಹೊಟ್ಟೆ, ಊರು ಮಾಡಿದ ಕೊಳಗ’ ಎಂಬ ಜನಪದ ಗಾದೆ ಆ ಸತ್ಯವನ್ನು ಸಾರುತ್ತದೆ.
ಪ್ರ : ಮೂಗಳ ಗೊಣ್ಣೆ ಮೂಗಿನಲ್ಲಿರೋಳ್ನ ಕಂಡೂ ಕಂಡೂ ಹೆಂಗೆ ಒಪ್ಪಿದೆ?
೨೫೬೩. ಮೂಗಿಗೆ ಕವಡೆ ಕಟ್ಕೊಂಡು ದುಡಿ = ಜೀತದಾಳಾಗಿ ದುಡಿ ಪ್ರಾಚೀನ ಸಮಾಜದಲ್ಲಿ ಬಗೆಬಗೆಯ ಜೀತದಾಳುಗಳು ಇದ್ದರು ಎನ್ನುವುದಕ್ಕೆ ಅಟ್ಟುಗೌಡಿ (ಅಡುಗೆಯ ಆಳು) ಮುಟ್ಟುಗೌಡಿ (ಪಾತ್ರೆ ಉಜ್ಜುವ ಆಳು) ಕಸಗೌಡಿ(ಕಸ ಗುಡಿಸಲು ಆಳು) ನೀರುಗೌಡಿ (ನೀರು ತರುವ ಆಳು) ಮೊದಲಾದ ಹೆಸರುಗಳು ಸಾಕ್ಷ್ಯಾಧಾರಗಳಾಗಿ ನಿಂತಿವೆ. ಬೇರೆ ಜೀತದಾಳುಗಳಿಗೆ ಮೂಗಿಗೆ ಕವಡೆ ಕಟ್ಟದಿದ್ದರೂ, ನೀರು ಹೊತ್ತು ತರುವ ಆಳುಗಳಿಗೆ ಮೂಗಿಗೆ ಕವಡೆ ಕಟ್ಟುವ ಪದ್ಧತಿ ಇತ್ತು ಎಂಬುದಕ್ಕೆ ಹದಿನಾರನೆಯ ಶತಮಾನದ ಕನಕದಾಸರ ಮೋಹನ ತರಂಗಿಣಿಯಲ್ಲಿ ನಮಗೆ ಆಧಾರ ದೊರಕುತ್ತದೆ – ‘ವೀರರ ಮೂಗಿಗೆ ಕವಡೆಯಕ್ಟಿ ನೀರ್ತರಿಸಿ’ ಎಂಬ ವರ್ಣನೆ ಪದ್ಯವೊಂದರಲ್ಲಿ ದೊರಕುತ್ತದೆ.
ಪ್ರ : ಮೂಗಿಗೆ ಕವಡೆ ಕಟ್ಕೊಂಡು ದುಡಿದು ಮಕ್ಕಳು ಮರಿ ಸಾಕಿದೆ.
೨೫೬೪. ಮೂಗಿನಲ್ಲಿ ತೊಟ್ಟಿಕ್ಕು = ನೆಗಡಿಯಾಗು
(ತೊಟ್ಟಿಕ್ಕು = ಸೋರು, ಸುರಿ)
ಪ್ರ : ಮೂಗಿನಲ್ಲಿ ತೊಟ್ಟಿಕ್ತಾ ಸೊರ್ರ‍ಬುಸ್ಸ ಅನ್ನುವಾಗ, ನಾನೆಲ್ಲಿ ಇವರಿಗೆ ಅಟ್ಟಿಕ್ಕಲಿ?
೨೫೬೫. ಮೂಗಿಗೆ ತುಪ್ಪ ಹಚ್ಚು = ನಯವಂಚನೆ ಮಾಡು, ಕೊಟ್ಟಂತೆ ತೋರಿಸಿದ ಸಿಕ್ಕದಂತೆ ಮಾಡು
ಪ್ರ : ಮೂಗಿಗೆ ತುಪ್ಪ ಹಚ್ಚೋ ಮೇಲ್ವರ್ಗದ ಜನರಿಂದ ಕೆಳವರ್ಗದ ಜನ ಕೊಳೀತಾ ಬಂದ್ರು.
೨೫೬೬. ಮೂಗಿನ ನೇರಕ್ಕೆ ಯೋಚಿಸು = ಬೇರೆ ಮಗ್ಗುಲನ್ನು ತೂಗಿ ನೋಡದಿರು
ಪ್ರ : ತನ್ನ ಮೂಗಿನ ನೇರಕ್ಕೆ ಯೋಚಿಸ್ತಾನೆಯೇ ಹೊರತು, ಬೇರೆ ದಿಕ್ಕಿನಿಂದ ಯೋಚಿಸಲ್ಲ.
೨೫೬೭. ಮೂಗಿನಲ್ಲಿ ಮಾತಾಡು = ಗೊಣಗು, ಗುಯ್ಗುಟ್ಟು
ಪ್ರ : ನೀನು ಮೂಗಿನಲ್ಲಿ ಮಾತಾಡಿದರೆ ಯಾರಿಗೆ ಅರ್ಥವಾಗ್ತದೆ?
೨೫೬೮. ಮೂಗಿನ ಮೇಲೆ ಸುಣ್ಣ ಹಚ್ಚು = ಅವಮಾನಗೊಳಿಸು
ಪ್ರಾಚೀನ ಸಮಾಜದಲ್ಲಿ ಅವಮಾನಗೊಳಿಸಲು ಮೂಗಿನ ಮೇಲೆ ಸುಣ್ಣದ ಪಟ್ಟೆಯನ್ನು ಎಳೆಯುವ ಪದ್ಧತಿ ಜಾರಿಯಲ್ಲಿತ್ತು. ದಕ್ಷ ಬುಕ್ಕರಾಯನನ್ನು ತನ್ನ ಅಧೀನ ರಾಜ ಎಂಬುದನ್ನು ಪರೋಕ್ಷವಾಗಿ ಸಾಬೀತು ಮಾಡಲು ಬಹಮನಿ ಸುಲ್ತಾನ ತನ್ನ ಆ ಸ್ಥಾನದಲ್ಲಿ ಸಂಗೀತವನ್ನು ಹಾಡಿದ ಸಂಗೀತಗಾರನಿಗೆ ಗೌರವಧನವನ್ನು ಕೊಡದೆ, ಒಂದು ಪತ್ರವನ್ನು ಬರೆದು ಕೊಟ್ಟು, ಇದನ್ನು ಬುಕ್ಕರಾಯನಿಗೆ ತೋರಿಸು, ನಿನಗೆ ಗೌರವಧನ ಕೊಡುತ್ತಾನೆ ಎಂದು ಹೇಳಿ ಕಳಿಸುತ್ತಾನೆ. ಆತ ಪತ್ರ ತಂದು ಬುಕ್ಕರಾಯನಿಗೆ ತೋರಿಸಿದಾಗ, ಸುಲ್ತಾನನ ಹಿಕ್‌ಮತ್ತನ್ನು ಸುಲಭವಾಗಿ ಗ್ರಹಿಸಿದ ಬುಕ್ಕರಾಯ ಆ ಸಂಗೀತಗಾರನ ಮೂಗಿನ ಮೇಲೆ ಸುಣ್ಣದ ಪಟ್ಟೆ ಎಳೆದು ಸುಲ್ತಾನನ ಬಳಿಗೆ ಕಳಿಸಿದ ಘಟನೆಗೆ ಇತಿಹಾಸದ ಆಧಾರವಿದೆ. ಇದೇ ಘಟನೆಯನ್ನು ಜನಪದ ಮನಸ್ಸು ಬೇರೊಂದು ರೀತಿಯಲ್ಲಿ ಅಭಿವ್ಯಕ್ತಿಸಿದೆ – ‘ಬುಕ್ಕರಾಯ ಮೆಚ್ಚು ಬೆಕ್ಕಿನ ಮರಿ ಕೊಟ್ಟ’ ಎಂಬ ಗಾದೆಯ ಮೂಲಕ. ಕನಕದಾಸರ ಮೋಹನ ತರಂಗಿಣಿಯಲ್ಲಿಯೂ ರತಿ ಪ್ರದ್ಯುಮ್ನನಿಗೆ ತಾಂಬೂಲ ಸೇವನೆ ಮಾಡಿಸಲೋಸುಗ ಎಲೆಗೆ ಸುಣ್ಣ ಹಚ್ಚುವುದನ್ನು ಹೀಗೆ ವರ್ಣಿಸಲಾಗಿದೆ – “ತನ್ನ ಕಣ್ಣಾರೆ ಕಂಡು ಮಚ್ಚರಿಪ ಹೆಣ್ಣಾವಳವನ ಮೂಗಿನ ಮೇಲೆ ಬರೆವಂತೆ” ಆದ್ದರಿಂದ ಮೂಗಿನ ಮೇಲೆ ಸುಣ್ಣದ ಪಟ್ಟೆ ಎಳೆಯುವುದು ಅವಮಾನದ ಪ್ರತೀಕ ಎಂಬ ಭಾವನೆ ಬಲವಾಗಿತ್ತು. ಅದರ ಪಳೆಯುಳಿಕೆ ಈ ನುಡಿಗಟ್ಟು
ಪ್ರ : ಅವರು ಮೂಗಿನ ಮೇಲೆ ಸುಣ್ಣ ಹಚ್ಚಿ ಕಳಿಸಿದರೆ, ನಾವು ಮೂಗು ಕೆತ್ತಿ ಕಳಿಸಿದರೆ ಆಯ್ತಲ್ಲ.
೨೫೬೯. ಮೂಗು ಕತ್ತರಿಸು = ಮುಖಭಂಗ ಮಾಡು
ವನವಾಸದಲ್ಲಿದ್ದಾಗ ರಾಮನನ್ನು ಮೋಹಿಸಿ ಬಂದ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸುವ ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ಪಕ್ಕದ ಮನೆಗೆ ಹೋಗಿ ಮಜ್ಜಿಗೆ ಕೇಳಿದರೆ, ಅವರು ನಿನ್ನ ಮೂಗು ಕತ್ತರಿಸಿಬಿಡ್ತಾರ?
೨೫೭೦. ಮೂಗು ತೂರಿಸು = ಇನ್ನೊಬ್ಬರ ವಿಷಯದಲ್ಲಿ ಬಾಯಿ ಹಾಕು
ಪ್ರ : ನಮ್ಮನೆ ವಿಷಯದಲ್ಲಿ ಮೂಗು ತೂರಿಸೋಕೆ ಅವನ್ಯಾರು?
೨೫೭೧. ಮೂಗುದಾರ ಹಾಕು = ನಿಯಂತ್ರಿಸು, ತಹಬಂದಿಗೆ ತರು
ಎತ್ತು ದನಗಳಿಗೆ ಮೂಗು ಚುಚ್ಚಿ, ಮೂಗುದಾರ ಹಾಕಿ, ಅದನ್ನು ಕೊಂಬಿನ ಹಿಂಭಾಗಕ್ಕೆ ಗಂಟು ಹಾಕಿ, ಆ ಮೂಗುದಾರಕ್ಕೆ ಹಗ್ಗ ಹಾಕಿ ಗೊಂತಿಗೆ ಕಟ್ಟುತ್ತಾರೆ. ಮೂಗಿಗೆ ನೋವಾಗುವುದರಿಂದ ಅದು ಹೆಚ್ಚು ಜಗ್ಗುವುದಿಲ್ಲ, ಗುಂಜುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇಷ್ಟ್ರಲ್ಲೇ ಅವನಿಗೆ ಮೂಗುದಾರ ಹಾಕ್ತೀನಿ, ನೀನು ಸುಮ್ಮನಿರು.
೨೫೭೨. ಮೂಗು ಬೆದರು = ಮೂಗಿನಿಂದ ರಕ್ತಸ್ರವಿಸು
(ಬೆದ-ರು < ಬಿದು-ರು = ಕೊಡ-ಹು, ಝಲ್ ಎಂದು ಅದು-ರು)
ಪ್ರ : ಮೂಗಿಗೆ ಯಾರೂ ಗುದ್ದಿಲ್ಲ, ಮೂಗು ಬೆದರಿ ಹಿಂಗಾಗಿದೆ.
೨೫೭೩. ಮೂಗು ಮುರಿ = ಹಿಯ್ಯಾಳಿಸು, ಅವಮಾನಿಸು
ಪ್ರ : ಮೊನ್ನೆ ಸಿಕ್ಕಿದ್ದ, ಚೆನ್ನಾಗಿ ಮೂಗು ಮುರಿದು ಕಳಿಸಿದ್ದೀನಿ.
೨೫೭೪. ಮೂಗು ಮೂರು ತುಂಡಿಗೆ ಕುಯ್ಸಿಕೊಳ್ಳು = ಶಿಕ್ಷೆ ಅನುಭವಿಸು
ಪ್ರ : ಅವನು ಒಂದೇ ಸಾರಿಗೆ ಪಾಸು ಮಾಡಿದರೆ, ನನ್ನ ಮೂಗು ಮೂರು ತುಂಡಿಗೆ ಕುಯ್ಸಿಕೊಳ್ತೀನಿ.
೨೫೭೫. ಮೂಗುವಳಿ ಕೊಡು = ಸಂಚಕಾರ ಕೊಡು
ಪ್ರ : ಇನ್ನು ಎಂಟು ದಿನಕ್ಕೆ ಬಾಕಿ ಹಣ ಕೊಟ್ಟು ಎತ್ತುಗಳನ್ನು ಹೊಡ್ಕೊಂಡು ಹೋಗ್ತೇನೆ ಅಂತ ಸಾವಿರ ರೂಪಾಯಿ ಮೂಗುವಳಿ ಕೊಟ್ಟು ಬಂದಿದ್ದೀನಿ.
೨೫೭೬. ಮೂಗೆತ್ತಿನಂತಿರು = ಮಾತುಕತೆಯಾಡದಿರು
(ಮೂಗೆತ್ತು < ಮೂಕ + ಎತ್ತು = ಮೂಕಜಂತು)
ಪ್ರ : ಹಿಂಗೆ ಮೂಗೆತ್ತಿನಂತೆ ಇದ್ರೆ, ಸಂಸಾರ ಸಾಗಿಸೋದು ಹೆಂಗೆ?
೨೫೭೭. ಮೂಗು ಹಿಡಿ = ಬಾಯಿ ತೆರೆಯುವಂತೆ ಮಾಡು, ಆಯಕಟ್ಟಿನ ಜಾಗ ಹಿಡಿದು ಮಾತು ಕೇಳುವಂತೆ ಮಾಡು
ಚೊಚ್ಚಿಲು ಬಾಣಂತಿಗೆ ಎದೆ ಹಾಲು ಬತ್ತಿದರೆ, ಮಗುವನ್ನು ನೀಡಿಸಿದ ಕಾಲ ಮೇಲೆ ಮಲಗಿಸಿಕೊಂಡು, ಹಸುವಿನ ಹಾಲನ್ನು ಒಳಲೆಗೆ ಬಿಟ್ಟುಕೊಂಡು, ಒಳಲೆಯ ಬಾಯನ್ನು ಮಗುವಿನ ಬಾಯಿಗಿಟ್ಟು ಕೊಂಚಕೊಂಚ ಹಾಲನ್ನು ಬಗ್ಗಿಸುತ್ತಾ ಕುಡಿಸತೊಡಗುತ್ತಾರೆ. ಮಗು ಏನಾದರೂ ಬಾಯಿ ಮುಚ್ಚಿಕೊಂಡು, ಅಥವಾ ಹಲ್ಲು ಬಂದಿದ್ದರೆ ಹಲ್ಲು ಗಿಟಕಾಯಿಸಿಕೊಂಡು ಹಾಲನ್ನು ಕಟಬಾಯಿಂದ ಹೊರಹೋಗುವಂತೆ ಮಾಡಿದರೆ ಅದನ್ನು ನೋಡುತ್ತಿದ್ದ ಮನೆಯ ಮುದುಕಿ ಕೂಡಲೇ ಹೇಳುತ್ತಾಳೆ – “ಮೂಗು ಹಿಡಿಯೇ, ಮೂಗು ಹಿಡಿದರೆ ಬಾಯಿಬಿಡ್ತದೆ ಹಾಲು ಒಳ ಹೋಗ್ತದೆ” ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮೂಗು ಹಿಡಿದರೆ ಅವನೇ ಬಾಯಿಬಿಡ್ತಾನೆ, ಸುಮ್ನಿರು.
೨೫೭೮. ಮೂಗೇಟಾಗು = ರಕ್ತ ಬರದಿದ್ದರೂ ಒಳಗೊಳಗೇ ನೋವಾಗುವ ಏಟು ಬೀಳು
ಪ್ರ : ರಕ್ತ ಏನೂ ಬರಲಿಲ್ಲ, ಬರೀ ಮೂಗೇಟಾಯ್ತು ಅಷ್ಟೆ.
೨೫೭೯. ಮೂಡುಮುಂತಾಗಿ ಕೂಡಿಸು = ಪೂರ್ವ ದಿಕ್ಕಿಗೆ ಮಾಡಿ ಕೂಡಿಸು
ಪ್ರ : ಮೂಡು ಮುಂತಾಗಿ ಕೂಡಿಸಿ, ಶಾಸ್ತ್ರ ಮಾಡಿಸಿ ಎಂದರು ಯಜಮಾನರು.
೨೫೮೦. ಮೂಡೆ ಗಟ್ಟಿಸಿದಂತೆ ಗಟ್ಟಿಸು = ದೊಣ್ಣೆಯಿಂದ ಚೆನ್ನಾಗಿ ಚಚ್ಚು
(ಗಟ್ಟಿಸು < ಘಟ್ಟಿಸು = ಹೊಡಿ)
ಪ್ರ : ಮೂಡೆ ಗಟ್ಟಿಸಿದಂತೆ ಗಟ್ಟಿಸಿ ಮೂಲೇಲಿ ಕೂಡಿಸಿದೆ.
೨೫೮೧. ಮೂಡೆ ಗಾತ್ರ ಮುಖ ಮಾಡು = ಮುನಿಸಿಕೊಳ್ಳು, ಊದಿಕೊಳ್ಳು
ಪ್ರ : ಗೌರಿ ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ವಾಡೆಗಾತ್ರದ ನಿನ್ನ ಹೆಂಡ್ರು ಮೂಡೆಗಾತ್ರ ಮುಖ ಮಾಡ್ಕೊಂಡು ಕುಂತವಳೆ.
೨೫೮೨. ಮೂತಿಗೆಟ್ಟು = ಮುಸು-ಡಿ-ಗೆ ತಿವಿ
(ಮೂತಿ = ಮುಸುಡಿ, ಮುಖ)
ಪ್ರ : ಗಾದೆ – ಕೋತಿಯಂಥೋನು ಕೆಣಕಿದ
ಮೂತಿಗೆಟ್ಟಿಸಿಕೊಂಡು ತಿಣಕಿದ
೨೫೮೩. ಮೂತಿ ತಿರುವಿಕೊಂಡು ಹೋಗು = ಅಲಕ್ಷಿಸಿ ಹೋಗು, ಅಣಕಿಸುತ್ತಾ ಹೋಗು
ಪ್ರ : ನನ್ನ ಕಂಡು ಮೂತಿ ತಿರುವಿಕೊಂಡು ಹೋದೋಳ ಮನೆಗೆ ನಾನ್ಯಾಕೆ ಹೋಗಲಿ?
೨೫೮೪. ಮೂಬದಲು ಮಾಡು = ಕೈ ಬದಲು ಮಾಡು, ವಿನಿಮಯ ಮಾಡಿಕೊಳ್ಳು
(ಮೂಬದಲು < ಮೋಬದಲಾ(ಹಿಂ) = ವಿನಿಮಯ)
ಪ್ರ : ಮೂಬದಲು ಮಾಡ್ಕೊಂಡು ಈ ಎತ್ತುಗಳನ್ನು ತಂದೆ.
೨೫೮೫. ಮೂರ್ತ ಆಗು = ಧಾರೆಯಾಗು
(ಮೂರ್ತ < ಮುಹೂರ್ತ = ಮದುವೆಯಲ್ಲಿ ಹೆಣ್ಣುಗಂಡುಗಳ ಕೈ ಮೇಲೆ ಹಾಲೆರೆಯುವ ಶುಭಗಳಿಗೆ)
ಪ್ರ : ಮೂರ್ತ ಆದ ಮೇಲೆ ಒಂದು ಸಣ್ಣ ವಿಷಯಕ್ಕೆ ದೊಡ್ಡ ವಾರ್ತೆ ಹತ್ತಿ ಬಿಟ್ಟರು.
೨೫೮೬. ಮೂರಾಬಟ್ಟೆಯಾಗು = ಹಾಳಾಗು, ದಿಕ್ಕಾಪಾಲಾಗು
(ಮುರಾ ಬಟ್ಟೆ = ಮೂರು ದಾರಿಗಳು ಕೂಡುವ ಸ್ಥಳ. ಮಂತ್ರಿಸಿದ ವಸ್ತುವನ್ನು ಮೂರುದಾರಿ ಕೂಡುವ ಸ್ಥಳದಲ್ಲಿ ಚೆಲ್ಲುವ ರೂಢಿ ಇದೆ)
ಪ್ರ : ಇಡೀ ಆ ಮನೆತನ ಮೂರಾಬಟ್ಟೆಯಾಗಿ ಹೋಯ್ತು.
೨೫೮೭. ಮೂರು ನಾಮಹಾಕು = ಮೋಸ ಮಾಡು
ಪ್ರ : ತಿರುಪತಿ ಕಾಣಿಕೇನ ತಲುಪಿಸ್ತೀನಿ ಅಂತ ಹೇಳಿದ ದಾಸಯ್ಯ ನನಗೆ ಮೂರು ನಾಮ ಹಾಕಿಬಿಟ್ಟ.
೨೫೮೮. ಮೂರು ಹೊತ್ತೂ ತುಳಿ = ಸದಾ ಪೀಡಿಸು
(ಮೂರು ಹೊತ್ತು = ಪೂರ್ವಾಹ್ನ, ಮಧ್ಯಾಹ್ನ, ಅಪರಾಹ್ನ)
ಪ್ರ : ಸಾಲಗಾರರು ಮೂರು ಹೊತ್ತೂ ತುಳಿತಾರೆ, ತಲೆ ಮೇಲೆ ಬಟ್ಟೆ ಹಾಕ್ಕೊಂಡು ಎಲ್ಲಾದರು ಹೊರಟು ಹೋಗೋಣ ಅನ್ನಿಸ್ತದೆ.
೨೫೮೯. ಮೂರೂ ಬಿಡು = ಘನತೆ ಗಾಂಭಿರ್ಯ ಮಾನ ಮರ್ಯಾದೆ ಎಲ್ಲ ಬಿಡು
ಪ್ರ : ಗಾದೆ – ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು.
೨೫೯೦. ಮೂಲೆ ಮುಡುಕೆಲ್ಲ ಹುಡುಕು = ಸಂದಿಗೊಂದಿಯೆಲ್ಲ ಸಿದುಗು
ಪ್ರ : ಮೂಲೆ ಮುಡುಕೆಲ್ಲ ಹುಡುಕಿದರೂ ಕಳೆದು ಹೋದ ವಸ್ತು ಸಿಗಲಿಲ್ಲ.
೨೫೯೧. ಮೂಲೆ ಹಿಡಿ = ಮುಪ್ಪಾಗು, ಮೆತ್ತಗಾಗು
ಪ್ರ : ಒಳ್ಳೆ ಕಟ್ಗಲ್ಲು ಇದ್ದಂಗೆ ಇದ್ದೋನು ಇವತ್ತು ತಟ್ಟಾಡೋನಂಗಾಗಿ ಮೂಲೆ ಹಿಡಿದು ಕುಂತವನೆ.
೨೫೯೨. ಮೂಸದಿರು = ಯಾರೂ ಹತ್ತಿರ ಸುಳಿಯದಿರು.
ಗಂಡುನಾಯಿಗಳು ಹೆಣ್ಣುನಾಯಿಗಳ ಹಿಂಭಾಗವನ್ನು ಮೂಸುತ್ತಾ ಬೆನ್ನು ಬೀಳುತ್ತವೆ. ಹಾಗೆಯೇ ಹೆಣ್ಣಿಗೆ ಪ್ರಾಯವಿದ್ದಾಗ ಗಂಡುಗಳು ಮುಗಿಬೀಳುತ್ತಾರೆ. ಪ್ರಾಯ ಕಳೆದ ಮೇಲೆ ಯಾರೂ ಹತ್ತಿರ ಸುಳಿಯುವುದಿಲ್ಲ. ನಾಯಿಗಳ ವರ್ತನೆಯಿಂದ ಈ ನುಡಿಗಟ್ಟು ಮೂಡಿದೆ.
ಪ್ರ : ಯಾರೂ ಮೂಸೋಕೆ ಬರದೆ ಇರೋದರಿಂದ ಮುಪ್ಪಿನಲ್ಲಿ ಹಾದರಗಿತ್ತಿ ಪತಿವ್ರತೆಯಾಗಿಬಿಡ್ತಾಳೆ.
೨೫೯೩. ಮೂಳೆ ಚಕ್ಕಳವಾಗು = ಬಡವಾಗು, ಅಸ್ಥಿಪಂಜರವಾಗು
(ಚಕ್ಕಳ = ಚರ್ಮ)
ಪ್ರ : ಹಕ್ಕಿ ಅಳಕನಂತೆ ಮೂಳೆ ಚಕ್ಕಳವಾಗಿ ಕುಂತವನೆ
೨೫೯೪. ಮೂಳೆ ಮುರಿದು ಮೂಟೆ ಕಟ್ಟು = ತದುಕು
ಪ್ರ : ನಾಲಗೆ ಬಿಗಿ ಹಿಡಿದು ಮಾತಾಡು, ಮೂಳೆ ಮುರಿದು ಮೂಟೆ ಕಟ್ಟಿಬಿಟ್ಟೇನು.
೨೫೯೫. ಮೆಕ್ಕನಂತಿರು = ಮಳ್ಳಿಯಂತಿರು
ಪ್ರ : ಮೆಕ್ಕನಂಗಿದ್ದೋನು ಎಕ್ಕನಾತಿ ಕೆಲಸ ಮಾಡಿಬಿಟ್ಟ.
೨೫೯೬. ಮೆಟ್ಟಲು ಅಟ್ಟಾಡಿಸು = ಸಂಭೋಗಿಸಲು ಓಡಾಡಿಸು
(ಮೆಟ್ಟು = ಸಂಭೋಗಿಸು) ಹುಂಜ ಹ್ಯಾಟೆಯನ್ನು ಮೆಟ್ಟಿತು ಎಂದರೆ ಸಂಭೋಗಿಸಿತು ಎಂದರ್ಥ. ಮೆಟ್ಟು ಎಂದರೆ ತುಳಿ ಎಂಬ ಅರ್ಥವಿದ್ದರೂ ಹುಂಜ ಮೆಟ್ಟಿತು ಎಂದರೆ ಸಂಭೋಗಿಸಿತು ಎಂದೇ ಅರ್ಥ.
ಪ್ರ : ಹ್ಯಾಟೆ ಕೊಕ್ಕೊಕ್ಕೊ ಎಂದು ಓಡಾಡುತ್ತಿರುವುದು ಏಕೆಂದರೆ ಹುಂಜ ಅದನ್ನು ಮೆಟ್ಟಲು ಅಟ್ಟಾಡಿಸುತ್ತಿದೆ.
೨೫೯೭. ಮೆಟ್ಟಲ್ಲಿ ಹೊಡಿ = ಅವಮಾನ ಮಾಡು
(ಮೆಟ್ಟು = ಪಾದರಕ್ಷೆ)
ಪ್ರ : ಅವನಿಗೆ ಬುದ್ದಿ ಬರೋದು ಮೆಟ್ಟಲ್ಲಿ ಹೊಡೆದಾಗಲೇ
೨೫೯೮. ಮೆಟ್ಟಲು ಕೊಡು = ಸಹಾಯ ಮಾಡು
ಸಾಮಾನ್ಯವಾಗಿ ಮರ ಹತ್ತುವವರಿಗೆ ಅವರ ಕಾಲು ಜಾರದಂತೆ ಬೇರೊಬ್ಬರು ತಮ್ಮ ಕೈಗಳ ಒತ್ತು ಕೊಡುತ್ತಾರೆ. ಅದಕ್ಕೆ ಮೆಟ್ಟಲು ಕೊಡುವುದು ಎಂದು ಕರೆಯುತ್ತಾರೆ.
ಪ್ರ : ಮೆಟ್ಟಲು ಕೊಡದಿದ್ರೂ ಚಿಂತೆ ಇಲ್ಲ, ಕಾಲು ಹಿಡಿದು ಕೆಳಕ್ಕೆ ಎಳೀದಿದ್ರೆ ಸಾಕು.
೨೫೯೯. ಮೆಟ್ಟಿ ಬೀಳು = ಬೆಚ್ಚಿ ಬೀಳು
ಪ್ರ : ನನಗೆ ಗೊತ್ತಾಗದ ಹಾಗೆ ಮೆಟ್ಟುಗಾಲಲ್ಲಿ ಬಂದು ಬೆನ್ನಿಗೆ ಹೊಡೆದಾಗ ಮೆಟ್ಟಿಬಿದ್ದೆ.
೨೬೦೦. ಮೆಟ್ಟುಗಾಲೋರು ಮುಳುವಾಗು = ಅಪಾಯಕಾರಿಗಳಾಗು
(ಮುಳು < ಮುಳ್ಳು = ಕಂಟಕ) ಮೆಟ್ಟುಗಾಲೋರು ಎಂದರೆ ಪಾದವನ್ನು ಅನಾಮತ್ತು ಊರಿ ನಡೆಯದೆ ತುದಿಬೆರಳ ಮೇಲೆ ಸದ್ದು ಮಾಡದಂತೆ ಬೆಕ್ಕಿನ ಹೆಜ್ಜೆಯಲ್ಲಿ ತಿರುಗಾಡುವವರು ಎಂದರ್ಥ. ಅಂಥ ಸೊಸೆಯರಿಂದ ಮನೆಗೆ ಅಪಾಯ. ಏಕೆಂದರೆ ಕೌಟುಂಬಿಕ ವಿಷಯಗಳ ಬಗ್ಗೆ ಹಿರಿಯರು ಮಾತಾಡಿಕೊಳ್ಳುವ ಮಾತುಗಳನ್ನು ಗುಟ್ಟಾಗಿ ಕೇಳಿ, ಉಳಿದವರ ಕಿವಿಯಲ್ಲಿ ಊದಿ ಮನೆಯ ಒಡಕಿಗೆ ಕಾರಣವಾಗಬಹುದು. ಆ ಹಿನ್ನೆಲೆಯಲ್ಲಿ ಮೂಡಿದ್ದು ಈ ನುಡಿಗಟ್ಟು ಮೆಟ್ಟುಗಾಲಿನವರು ಇದ್ದಂತೆ ಸೀಟುಗಾಲಿನವರು ಇರುತ್ತಾರೆ. ಅವರು ಹೆಜ್ಜೆಯನ್ನು ಎತ್ತಿ ಇಡುವುದಿಲ್ಲ, ಬದಲಾಗಿ ನೆಲವನ್ನು ಸವರುವಂತೆ ಹೆಜ್ಜೆಯನ್ನು ಉಜ್ಜಿಕೊಂಡು ನಡೆಯುತ್ತಾರೆ. ಆ ರೀತಿ ನೆಲವನ್ನು ಸೀಟುತ್ತಾ ನಡೆದರೆ ಮನೆಗೆ ದರಿದ್ರ ಬರುತ್ತದೆ ಎಂಬ ನಂಬಿಕೆ ಉಂಟು.
ಪ್ರ : ಗಾದೆ – ಮೆಟ್ಟುಗಾಲೋರಿಂದ ಮನೆಗೆ ಅಭದ್ರ
ಸೀಟುಗಾಲೋರಿಂದ ಮನೆಗೆ ದರಿದ್ರ
೨೬೦೧. ಮೆಟ್ಟರೆ ಹಿಸುಕು = ಗಂಟಲು ಹಿಸು-ಕು
(ಮೆಟ್ಟರೆ < ಮಿಡರು (ತ) ಮೆಡೆ (ತೆ) = ಗಂಟಲು)
ಪ್ರ : ಅವನೇನಾದರೂ ಗರ್‌ಮಿರ್ ಅಂದ್ರೆ ಅಲ್ಲೆ ಮೆಟ್ರೆ ಹಿಸುಕಿಬಿಡ್ತೀನಿ.
೨೬೦೨. ಮೆತ್ತು ಹಾಕು = ಹಣ್ಣು ಮಾಡುಲು ಒತ್ತೆ ಹಾಕು
ಮಣ್ಣಿನ ವಾಡೆ ಗುಡಾಣಗಳಲ್ಲಿ ಬಾಳೇಕಾಯಿ ಮಾವಿನಕಾಯಿ ತುಂಬಿ ಮುಚ್ಚಳದಿಂದ ಬಾಯಿ ಮುಚ್ಚಿ ಮಣ್ಣಿನಿಂದಲೋ ಸಗಣಯಿಂದಲೋ ಒರೆಯುವುದಕ್ಕೆ ಮೆತ್ತು ಹಾಕುವುದು ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಗುಡಾಣದಲ್ಲಿಕ್ಕಿ ಮೆತ್ತು ಹಾಕಿದ್ದೀನಿ, ಹಣ್ಣಾದ ಮೇಲೆ ಕೊಡ್ತೀನಿ.
೨೬೦೩. ಮೆತ್ತಿ ಕಳಿಸು = ಹೊಡೆದು ಕಳಿಸು
(ಮೆತ್ತು < ಮೆಟ್ಟು < ಮೊಟ್ಟು = ತಲೆಯ ಮೇಲೆ ಕುಕ್ಕು)
ಪ್ರ : ಮತ್ತೆ ಇತ್ತ ತಲೆ ಇಕ್ಕಬಾರ್ದು, ಹಂಗೆ ಮೆತ್ತಿ ಕಳಿಸಿದ್ದೀನಿ.
೨೬೦೪. ಮೆರೆಗೋಲಾಡಿಸು = ತಿರುವಿ ಹಾಕು, ಗುಡ್ಡೆ ಮಾಡು
(ಮೆರೆಗೋಲು = ಉದ್ದನೆಯ ಬಿದಿರ ಗಳುವಿನ ತುದಿಯಲ್ಲಿ ಬಾಗಿದ ಕೊಕ್ಕೆ ಇರುವಂಥದು) ಮೆರೆಗೋಲನ್ನು ಹಿಡಿದು ತುದಿಯ ಕೊಕ್ಕೆಯಿಂದ ಧಾನ್ಯ ಒಕ್ಕಿದ ಕಣದಲ್ಲಿರುವ ಹುಲ್ಲನ್ನು ಒಂದು ಕಡೆಗೆ ಎಳೆಯುವುದಕ್ಕೆ ಮೆರೆಗೋಲಾಡಿಸುವುದು ಎನ್ನಲಾಗುತ್ತದೆ.
ಪ್ರ : ಹರಿಗೋಲು ಜನರನ್ನು ನದಿಯ ದಡಕ್ಕೆ ಕೊಂಡೊಯ್ದರೆ, ಮೆರೆಗೋಲು ಹುಲ್ಲನ್ನು ಕಣದ ಅಂಚಿಗೆ ಕೊಂಡೊಯ್ಯುತ್ತದೆ.
೨೬೦೫. ಮೆರೆದು ಮೆಕ್ಕೆಕಾಯಿ ತಿನ್ನು = ಅಹಂಕಾರದಿಂದ ಬೀಗು, ಸ್ವೇಚ್ಛೆಯಾಗಿ ಮೆರೆದಾಡು
ಪ್ರ : ಕಂಡೋರ ಗಂಟು ತಿಂದು ನನ್ನ ಸಮ ಯಾರೂ ಇಲ್ಲ ಅಂತ ಮೆರೆದು ಮೆಕ್ಕೆಕಾಯಿ ತಿಂತಾನೆ.
೨೬೦೬. ಮೆಲುಕು ಹಾಕು = ಮನನ ಮಾಡು.
ದನಗಳು ತಾವು ತಿಂದ ಆಹಾರವನ್ನು ಮತ್ತೆ ಬಾಯಿಗೆ ತಂದುಕೊಂಡು ಮೆಲುಕು ಆಡಿಸುತ್ತಾ ನುಣ್ಣಗೆ ಅಗಿಯುತ್ತವೆ. ಆಗ ಆ ಮೇವು ರಕ್ತಗತವಾಗುತ್ತದೆ. ಹಾಗೆಯೇ ಮನುಷ್ಯರು ಒಮ್ಮೆ ಕೇಳಿದ ವಿಷಯವನ್ನು ಮತ್ತೆ ಮನಸ್ಸಿಗೆ ತಂದಕೊಂಡು ಮನನ ಮಾಡಿದರೆ ಚೆನ್ನಾಗಿ ನಾಟುತ್ತದೆ ಎಂಬ ಭಾವ ಈ ನುಡಿಗಟ್ಟಿನಲ್ಲಿದೆ.
ಪ್ರ : ತಿಂದದ್ದನ್ನು ಮತ್ತೆ ಮೆಲುಕು ಹಾಕಿ ಅರಗಿಸಿಕೊಳ್ಳುವ ಪಶುಗಳಂತೆ, ಮನುಷ್ಯರು ವಿಚಾರವನ್ನು ಮತ್ತೆ ಮೆಲುಕು ಹಾಕಿ ಅರಗಿಸಿಕೊಳ್ಳುವುದು ಒಳ್ಳೆಯದು.

೨೬೦೭. ಮೇಕು ಬಂದು ಮಲಿ = ಅಹಂಕಾರದಿಂದ ಬೀಗು, ಮದ ಬಂದು ಹಾರಾಡು
(ಮೇಕು = ಧಿಮಾಕು, ಠೇಂಕಾರ)
ಪ್ರ : ಇವನೊಬ್ಬ ಮೇಕು ಬಂದು ಹಂಗೇ ಮಲೀತಾ ಇದ್ದಾನೆ.
೨೬೦೮. ಮೇಜುಕಟ್ಟು = ಬಾಜಿ ಹಣ ಕಟ್ಟು
ಜೂಜಾಡುವವರು ಆಟಕ್ಕೆ ಮೊದಲು ಎಲ್ಲರೂ ನಿಗದಿತ ಹಣವನ್ನು ಮೇಜಿನ ಮೇಲೆ ಇಡಬೇಕು. ಅದಕ್ಕೆ ಮೇಜು ಕಟ್ಟುವುದು ಎನ್ನಲಾಗುತ್ತದೆ.
ಪ್ರ : ಮೇಜುಕಟ್ಟಿದ ಮೇಲೇನೇ ಆಟದ ಮೋಜು.
೨೬೦೯. ಮೇಜುಕಟ್ಟು ಮಾಡು = ಗೋಡೆಯ ಕೆಳಭಾಗವನ್ನು ಬಣ್ಣಗೊಳಿಸು, ಕಾರಣೆ ಮಾಡು
ಜನರು ಗೋಡೆಗೆ ಒರಗಿಕೊಂಡು ಕುಳಿತುಕೊಳ್ಳುವ ಭಾಗವನ್ನು ಕಾರಣೆ ಮಾಡುವುದಕ್ಕೆ ಮೇಜುಕಟ್ಟು ಮಾಡುವುದು ಎನ್ನುತ್ತಾರೆ.
ಪ್ರ : ಮೇಜಕಟ್ಟು ಮಾಡಿದರೆ ಮನೆಯೊಳಗಡೆಯ ಕೆಲಸ ಎಲ್ಲ ಮುಗೀತು.
೨೬೧೦. ಮೇಟಿಯಾಗಿರು = ಮುಖ್ಯಸ್ಥನಾಗಿರು, ಆಧಾರಸ್ತಂಭವಾಗಿರು.
ಭತ್ತವನ್ನು ಒಕ್ಕುವಾಗ, ಬೆಳೆಯನ್ನು ಕಣದೊಳಗೆ ಹರಡಿ, ಮಧ್ಯೆ ಇರುವ ಮೇಟಿಗೆ ಹಗ್ಗ ಹಾಕಿ, ಆ ಹಗ್ಗದಿಂದ ದನಗ ಕೊರಳಿಗೆ ದಾವಣಿ ಹಾಕಿ, ಆ ದನಗಳಿಂದ ಆ ಬೆಳೆಯನ್ನು ತುಳಿಸುತ್ತಿದ್ದರು. ಗೊನೆಯ ನೆಲ್ಲು ಕೆಳಗುದುರಿದ ಮೇಲೆ ಹಲ್ಲನ್ನು ಬಳಿದು ಹಾಕಿ ನೆಲ್ಲನ್ನು ರಾಶಿ ಮಾಡುತ್ತಿದ್ದರು ಮೇಟಿಯ ಸುತ್ತ. ದಾವಣಿ ಕಟ್ಟಿದ ದನಗಳನ್ನು ನಿಯಂತ್ರಿಸುವ ಶಕ್ತಿ ಕಣದ ನಡುವೆ ನೆಟ್ಟಿರುವ ಮೇಟಿಗಿದೆ. ಮೇಟಿ ಇಲ್ಲದಿದ್ದರೆ ದಾವಣಿ ದನ ಎತ್ತಂದರತ್ತ ಹೋಗಬಹುದು. ಏಕೆಂದರೆ ಹಗ್ಗವನ್ನು ಮೇಟಿಗೆ ಬಿಗಿದಿರುವುದರಿಂದ ದಾವಣಿ ದಣಗಳು ಗಾಣ ಸುತ್ತಿದಂತೆ ಅಲ್ಲೇ ಸುತ್ತಬೇಕಾಗುತ್ತದೆ. ಆದ್ದರಿಂದ ಮೇಟಿಗೆ ಹೆಚ್ಚು ಪ್ರಾಶಸ್ತ್ಯ. ಮೇಟಿ ವಿದ್ಯೆ ಎಂದರೆ ವ್ಯವಸಾಯ.
ಪ್ರ : ಮೇಟಿಯಾಗಿರು ಅಂದ್ರೆ, ಇಲ್ಲ ನಾನು ತೋಟಿಯಾಗಿರ್ತೀನಿ ಅಂತೀಯಲ್ಲ?
೨೬೧೧. ಮೇಣಿ ಮೇಲೆ ಕೈ ಮಡಗು = ವ್ಯವಸಾಯ ಮಾಡು
(ಮೇಣಿ < ಮೇಳಿ = ನೇಗಿಲ ಅಂಡಿನಿಂದ ಮೇಲೆದ್ದ ಮರದ ಪಟ್ಟಿ ಮತ್ತು ಹಿಡಿ. ಅದನ್ನು ಹಿಡಿದು ಉಳಲು ಅನುವಾಗುವ ಸಾಧನ)
ಪ್ರ : ಇವನು ಮೇಣಿ ಮೇಲೆ ಕೈ ಮಡಗೋಕೆ ಹಿಂದಾದರೂ, ಮೋಣಿ ಮೇಲೆ ಕೈ ಮಡಗೋಕೆ ಮುಂದಾಗ್ತಾನೆ.
೨೬೧೨. ಮೇದೂ ಹೋಗು ಕೇದೂ ಹೋಗು = ಉಂಡೂ ಹೋಗು ಕೊಂಡೂ ಹೋಗು
ಪ್ರ : ನಂಬಿಕಸ್ತ ಅಂತ ಮನೆಯೊಳಕ್ಕೆ ಬಿಟ್ಟುಕೊಂಡರೆ ಮೇದೂ ಹೋದ ಕೇದೂ ಹೋದ.
೨೬೧೩. ಮೇನೆ ಮೇಲೆ ಹೋಗು = ಪಲ್ಲಕ್ಕಿ ಮೇಲೆ ಹೋಗು
ಪ್ರ : ಮೇನೆ ಮೇಲೆ ಹೋಗೋರಿಗೆ ಬಡಬಗ್ಗರ ಬೇನೆ ಹೇಗೆ ಗೊತ್ತಾಗ್ತದೆ?
೨೬೧೪. ಮೇರೆ ಮೀರು = ಹದ್ದು ಮೀರು, ಮಿತಿಮೀರು
ಪ್ರ : ಗಾದೆ – ಮೇರೆ ಮೀರಿದೋರ್ನ ಕ್ಯಾರೆ ಅನ್ನಬಾರ್ದು
೨೬೧೫. ಮೇಲೆ ಕೆಳಗೆ ಎರಡೂ ಆಗು = ವಾಂತಿಭೇದಿಯಾಗು
(ಮೇಲೆ ಕೆಳಗೆ = ಮುಖದ್ವಾರದ ಮೂಲಕ ವಾಂತಿ, ಗುದದ್ವಾರದ ಮೂಲಕ ಭೇದಿ)
ಪ್ರ : ಮೇಲೆ ಕೆಳಗೆ ಎರಡೂ ಆಗಿ ಸುಸ್ತಾಗಿ ಬಿದ್ದವನೆ.
೨೬೧೬. ಮೇಲಾಗು = ಗುಣವಾಗು
(ಮೇಲು = ವಾಸಿ, ಲೇಸು)
ಪ್ರ : ಕಾಯಿಲೆ ಹೇಗಿದೆ ಎಂದಾಗ ಈಗ ಸ್ವಲ್ಪ ಮೇಲಾಗಿದೆ ಎಂದ.
೨೬೧೭. ಮೇಲುಸಿರಾಡು = ಸಾವು ಸನ್ನಿಹಿತವಾಗು
ಪ್ರ : ಮೇಲುಸಿರಾಡುವಾಗ ಇನ್ನು ಉಳಿಯೋದೆಲ್ಲಿ ಬಂತು, ನಿಮಗೊಂದು ಭ್ರಮೆ.
೨೬೧೮. ಮೇಲುಗಣ್ಣು ತೇಲುಗಣ್ಣಾಗು = ಸಾವು ಸಮೀಪಿಸು
ಪ್ರ : ಆಗಲೇ ಮೇಲುಗಣ್ಣು ತೇಲುಗಣ್ಣಾಗಿದ್ದಾನೆ, ಮಗನ್ನ ಕರೀರಿ ಬಾಯಿಗೆ ಹಾಲು ಬಿಡಲಿ.
೨೬೧೯. ಮೇಲ್ಪಂಕ್ತಿಯಾಗು = ಮಾದರಿಯಾಗು
ಪ್ರ : ಮೇಲ್ಪಂಕ್ತಿಯಾಗಿ ಬಾಳು ಅಂದ್ರೆ ಇಲ್ಲ ಕೀಳ್ಪಂಕ್ತಿಯಾಗಿ ಬಾಳ್ತೀನಿ ಅನ್ನೋರಿಗೆ ಏನು ಹೇಳೋದು?
೨೬೨೦. ಮೇಲ್ಮೆಯಾಗು = ಅಜೀರ್ಣವಾಗು, ಜಾಸ್ತಿಯಾಗು
ಪ್ರ : ಅಲ್ಲಿ ಊಟ ಮಾಡಿದ್ದೇ ನನಗೆ ಮೇಲ್ಮೆ ಆಗಿದೆ, ಇಲ್ಲಿ ಇನ್ನೇನು ಊಟ ಮಾಡಲಿ?
೨೬೨೧. ಮೇಲೆ ಬಿದ್ದು ಬರು = ಬೆನ್ನು ಹತ್ತು, ತಾನಾಗಿಯೇ ಬರು
ಪ್ರ : ಗಾದೆ – ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
೨೬೨೨. ಮೈಯಂಟಿಲ್ಲದಿರು = ಲಕ್ಷ್ಯವಿಲ್ಲದಿರು
(ಮೈಯಂಟು < Mind (ಮೈಂಡು) = ಮನಸ್ಸು)
ಪ್ರ : ಅವನಿಗೆ ದೊಡ್ಡೋರು ಚಿಕ್ಕೋರು ಅನ್ನೋ ಮೈಯಂಟೇ ಇಲ್ಲ.
೨೬೨೩. ಮೈ ಇಳಿ = ಗರ್ಭಪಾತವಾಗು
ಪ್ರ : ಪಾಪ, ಆಯಮ್ಮನಿಗೆ ಈ ಸಾರೀನು ಮೈ ಇಳಿದು ಹೋಯಿತು.
೨೬೨೪. ಮೈಕೈ ತಣ್ಣಗಾಗು = ರಕ್ತಚಲನೆ ನಿಲ್ಲು, ಸಾವು ಸಂಭವಿಸು
ಪ್ರ : ಮೈಕೈ ತಣ್ಣಗಾದ ಮೇಲೆ ಬಾಯಿಬಾಯಿ ಬಡ್ಕೊಂಡ್ರೆ ಬರ್ತಾರ?
೨೬೨೫. ಮೈಕೈ ತುಂಬಿಕೊಳ್ಳು = ದುಂಡಗಾಗು, ಚೆನ್ನಾಗಾಗು
ಪ್ರ : ಪರವಾ ಇಲ್ಲ, ಈಗ ಮೈಕೈ ತುಂಬಿಕೊಂಡು ನೋಡೋಕೆ ಅಂದವಾಗಿದ್ದಾಳೆ
೨೬೨೬. ಮೈಕೈಯೆಲ್ಲ ಸಾಲವಾಗು = ಹೆಚ್ಚು ಸಾಲವಂದಿಗನಾಗು, ತುಂಬ ಇಕ್ಕಟ್ಟಿಗೆ ಸಿಕ್ಕು
ಪ್ರ : ಮೈಕೈಯೆಲ್ಲ ಸಾಲವಾಗಿ ಪಾಪರ್ ಚೀಟಿ ತಗೊಳ್ಳೋದು ಬಾಕಿ ಉಳಿದಿದೆ.
೨೬೨೭. ಮೈಗೆ ಎಣ್ಣೆ ಹಚ್ಕೊಂಡು ಬರು = ಹೊಡೆತ ತಿನ್ನಲು ಪೂರ್ವ ಸಿದ್ಧತೆ ಮಾಡಿಕೊಂಡು
ಬರು.
ಏಟುಬಿದ್ದರೆಬಾಸುಂಡೆಎದ್ದೋ, ಚರ್ಮಕಿತ್ತೋಮೈಉರಿಯತೊಡಗಿದಾಗಅದರಶಮನಕ್ಕಾಗಿಹರಳೆಣ್ಣೆಯನ್ನುಮೈಗೆಹಚ್ಚುತ್ತಾರೆ. ಏಟುಬಿದ್ದಮೇಲೆಹಚ್ಚುವಎಣ್ಣೆಯನ್ನುಮೊದಲೇಹಚ್ಚಿಕೊಂಡುಸಿದ್ಧವಾಗಿಬಾಎಂಬುದುಇದರಧ್ವನಿ. ಇದುಬಯುಸೀಮೆಯನುಡಿಗಟ್ಟು. ಮಲೆನಾಡಿನಕಡೆ, ಕರಾವಳಿಯಕಡೆ ‘ಮೈಗೆಹಾಳೆಕಟ್ಕೊಂಡುಬಾ’ಎಂದುನುಡಿಗಟ್ಟಿದೆ. ಅದಕ್ಕೂಇದೇಅರ್ಥ. ಈಎರಡೂನುಡಿಗಟ್ಟುಗಳೂಪ್ರಾದೇಶಿಕಗುಣವನ್ನು, ಭೌಗೋಳಿಕಭಿನ್ನತೆಯನ್ನುತಮ್ಮೊಡಲಲ್ಲಿಅಡಗಿಸಿಕೊಂಡಿವೆ.
ಪ್ರ: ನಾಳೆಮೈಗೆಎಣ್ಣೆಹಚ್ಕೊಂಡುಬಾ, ಹಂಗೇಬಂದ್ರೆಕೆಡ್ತೀಯ
೨೬೨೮. ಮೈಗೂಡಿಸಿಕೊಳ್ಳು = ದಕ್ಕಿಸಿಕೊಳ್ಳು, ಅರಗಿಸಿಕೊಳ್ಳು
ಪ್ರ: ಓದಿದ್ದನ್ನುಮೈಗೂಡಿಸಿಕೊಳ್ಳದೆಹೋದ್ರೆ, ಕೇವಲ ‘ಗಿಣಿರಾಮ’ಆಗಲುಮಾತ್ರಸಾಧ್ಯ.
೨೬೨೯. ಮೈಚಳಿಬಿಟ್ಟುಮಾತಾಡು = ನಾಚಿಕೆಸಂಕೋಚಬಿಟ್ಟುಮಾತಾಡು.
ಪ್ರ: ಮೈಚಳಿಬಿಟ್ಟುಮಾತಾಡದೆಹೋದ್ರೆ, ಆತ್ಮವಿಶ್ವಾಸಅನ್ನೋದುಅಂತ-ರ್ದಾ-ನಆಗು-ವಸಂಭ-ವಉಂಟು.
೨೬೩೦. ಮೈಚಾಚು = ಮಲಗು (ಚಾಚು = ನೆಟ್ಟಗೆನೀಡು)
ಪ್ರ: ಕೊಂಚಹೊತ್ತುಮೈಚಾಚದಿದ್ರೆ, ತಿಕ್ಕಲುಹಿಡಿದುಬಿಡ್ತದೆಅಷ್ಟೆ.
೨೬೩೧. ಮೈದುಂಬು = ದೇವರುಮೈಮೇಲೆಬರು, ಅವಾಹನೆಯಾಗು, ಆವೇಶಗೊಳ್ಳು.
ಪ್ರ: ಯಾಕೆಅಮ್ಮನೋರುಮೈದುಂಬಿದಹಂಗಿದೆ!
೨೬೩೨. ಮೈದೆಗೆ = ಕೃಶವಾಗು (ಮೈದೆಗೆ < ಮೈ + ತೆಗೆ = ಬಡವಾಗು)
ಪ್ರ: ಆಗ್ಗೂಇಗ್ಗೂಬಾಳಮೈದೆಗೆದಿದ್ದೀಯ.
೨೬೩೩. ಮೈದಾನಕ್ಕೆಹೋಗು = ಮೈಅರ್ಪಿಸಲುಹೋಗು.
ಪ್ರ: ಇವರುಮೈದಾನಕ್ಕೆಅಂತ್ಲೇಮೈದಾನಕ್ಕೆಹೋಗೋದು.
೨೬೩೪.ಮೈನೀರುಕುಡಿಸು = ಶಿಕ್ಷಿಸು, ಉಚ್ಚೆಕುಡಿಸು (ಮೈನೀರು = ಉಚ್ಚೆ, ಮೂತ್ರ)
ಪ್ರ: ಶತ್ರುದೇಶದವರುಮೈನೀರುಕುಡಿಸಿಹಿಂಸಿಸಿದರೂ, ಸೆರೆಸಿಕ್ಕಸೈನಿಕತನ್ನದೇಶದಯುದ್ಧವ್ಯೂಹದಗುಟ್ಟನ್ನುಹೇಳಲಿಲ್ಲ.
೨೬೩೫. ಮೈನೆರೆ = ಋತುಮತಿಯಾಗು.
ಪ್ರ: ಮೈನೆರೆದಹುಡುಗೀನಈಕತ್ತಲೇಲಿಕಳಿಸ್ತೀರಲ್ಲ, ನಿಮಗೆಬುದ್ಧಿಇದೆಯಾ?
೨೬೩೬. ಮೈಮುರಿಯುತ್ತಿರು = ಸಮೃದ್ಧವಾಗಿರು, ಹುಸುಸಾಗಿರು.
ಪ್ರ: ಮೈಮುರಿಯುತ್ತಿರುವಐಶ್ವರ್ಯವೈಭವಗಳಲ್ಲಿಮುಳುಗೇಳುತ್ತಿರುವಜನಅವರು.
೨೬೩೭. ಮೈಮುರಿಯರುಬ್ಬು = ಮೂಳೆಮುರಿಯುವಂತೆಚಚ್ಚು (ರುಬ್ಬು= ರುಬ್‌ರುಬ್ಎಂದುಹೊಡಿ)
ಪ್ರ: ಮೈಮುರಿಯರುಬ್ಬದಿದ್ರೆದಾರಿಗೆಬರೋಜನಅವರಲ್ಲ.
೨೬೩೮. ಮೈಮೇಲಿರುವುದನ್ನುಬಿಡಿಸು = ದೆವ್ವಬಿಡಿಸು, ಚೆನ್ನಾಗಿಹೊಡಿ.
ಪ್ರ: ಮೈಮೇಲಿರೋದನ್ನುಬಿಡಿಸಬೇಕಾಅಥವಾತೆಪ್ಪಗೆಮಲಗ್ತೀಯಾ? ಹೇಳು.
೨೬೩೯. ಮೈಮೇಲಿನಕೂದಲುಕೊಂಕದಿರು = ಕಿಂಚಿತ್ಊನವಾಗದಿರು.
ಪ್ರ: ಮೈಮೇಲಿನಕೂದಲುಕೊಂಕದಹಾಗೆಮನೆಗೆಕರೆತಂದುಬಿಟ್ಟ.
೨೬೪೦. ಮೈಮೇಲೆಕೈಯಾಡಿಸು = ರಮಿಸು, ಪ್ರೀತಿತೋರಿಸು.
ಪ್ರ: ಮೈಮೇಲೆಕೈಯಾಡಿಸಿದಾಗಲೇಮನೆದೇವತೆಮೈದುಂಬೋದು, ದುಂಬಾಲುಬೀಳೋದು.
೨೬೪೧. ಮೈಮೇಲೆಹಾಕು = ದೂರುಹೊರಿಸು.
ಪ್ರ: ಇದನ್ನುಅವನಮೈಮೇಲೆಹಾಕಬೇಡವೋ, ದೇವರುಮೆಚ್ಚಲ್ಲ.
೨೬೪೨. ಮೈಯುಣ್ಣು = ದೇಹವನ್ನುಹೀರಿಹಿಪ್ಪೆಮಾಡು, ಒಗ್ಗಿಹೋಗು.
ಪ್ರ: ಮೈಯುಂಡಕಾಯಿಲೆಬಡಪೆಟ್ಟಿಗೆಹೋಗಲ್ಲ.
೨೬೪೩. ಮೈಯೆಲ್ಲಕಣ್ಣಾಗಿನೋಡು = ಏಕಾಗ್ರತೆಯಿಂದವೀಕ್ಷಿಸು.
ಪ್ರ: ಅವಳಸೌಂದರ್ಯವನ್ನುಮೈಯೆಲ್ಲಕಣ್ಣಾಗಿನೋಡ್ತಾನಿಂತುಬಿಟ್ಟೆ.
೨೬೪೪. ಮೈಯೆಲ್ಲಕಿವಿಯಾಗಿಕೇಳು = ಏಕಾಗ್ರಚಿತ್ತದಿಂದಆಲಿಸು.
ಪ್ರ : ತರಗತಿಯಲ್ಲಿ ಮೈಯೆಲ್ಲ ಕಿವಿಯಾಗಿ ಕೇಳಿದರೇನೇ, ಗುರು ಹೇಳಿದ್ದು ಮನದಾಳಕ್ಕೆ ಇಳಿಯುವುದು.
೨೬೪೫. ಮೈಯೆಲ್ಲ ಬೆಂಕಿಯಾಗು = ಮಾಮೇರಿ ಸಿಟ್ಟು ಬರು
ಪ್ರ : ಅವನ ಮಾತು ಕೇಳಿದ ಕೂಡಲೇ ನನಗೆ ಮೈಯೆಲ್ಲ ಬೆಂಕಿಯಾಗಿಬಿಡ್ತು.
೨೬೪೬. ಮೈಯೆಲ್ಲ ಹುಣಿಸೆ ಹಣ್ಣಾಗು = ಹೆಚ್ಚು ಶ್ರಮದಿಂದ ಮೈಮೆತ್ತಗಾಗು
ಪ್ರ : ಬೆಳಿಗ್ಗೆಯಿಂದ ಗುದ್ದಲಿ ಹಿಡಿದು ಅಗೆದು, ಮೈಯೆಲ್ಲ ಹುಣಿಸೆ ಹಣ್ಣಾಗಿಬಿಟ್ಟಿದೆ.
೨೬೪೭. ಮೈಯೆಲ್ಲ ಹೆಣವಾಗು = ಸುಸ್ತಾಗು, ಜೀವ ಇಲ್ಲದಂತಾಗು
ಪ್ರ : ಮೈ ಮುರಿಯೋ ಭಾರ ಹೊತ್ತೂ ಮೈಯೆಲ್ಲ ಹೆಣವಾಗಿಬಿಟ್ಟಿದೆ.
೨೬೪೮. ಮೈ ಹತ್ತು = ಅರಗು, ದಕ್ಕು
ಪ್ರ : ಗಾದೆ – ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
೨೬೪೯. ಮೊಕ ಮಕಾಡೆ ಹಾಕು = ಮರಣ ಹೊಂದು
(ಮೊಕ < ಮಕ = ಮುಖ; ಮಕಾಡೆ < ಮುಖ + ಅಡಿ = ಮುಖವನ್ನು ಕೆಳಗೆ ಮಾಡಿ) ಸತ್ತವರನ್ನು ಸಮಾಧಿಯಲ್ಲಿ ಅಂಗಾತ ಮಲಗಿಸಿ ಅಂದರೆ ಮುಖವನ್ನು ಮೇಲೆ ಮಾಡಿ, ಮಣ್ಣೆಳೆಯುವುದು ರೂಢಿ, ಆದರೆ ಈ ನುಡಿಗಟ್ಟು ಮುಖವನ್ನು ಕೆಳಗೆ ಮಾಡಿ ಮಣ್ಣೆಳೆಯುವುದನ್ನು ಸೂಚಿಸುತ್ತದೆ. ಅಂದರೆ ನೀನು ಅಪ್ಪಂತ ಮನುಷ್ಯನಲ್ಲ, ನಿನಗೆ ಸದಾಚಾರದ ಉತ್ತರಕ್ರಿಯೆ ಸಲ್ಲದು, ದುಷ್ಟನಾದ ನಿನಗೆ ಅನಾಚಾರದ ಉತ್ತರಕ್ರಿಯೆಯೇ ತಕ್ಕ ಶಾಸ್ತಿ ಎಂಬ ಧ್ವನಿಯಿದ್ದಂತಿದೆ ಈ ಬೈಗುಳದ ನುಡಿಗಟ್ಟಿನಲ್ಲಿ
ಪ್ರ : ನನ್ನ ದನ ಚಚ್ಚಿದಂಗೆ ಚಚ್ಚಿದನಲ್ಲೇ, ಇವನ ಮಕ ಮಕಾಡೆ ಹಾಕ !
೨೬೫೦. ಮೊಟ್ಟೆ ಕಟ್ಟು = ಗಂಟು ಕಟ್ಟು
(ಮೊಟ್ಟೆ = ಗಂಟು)
ಪ್ರ : ದುಡ್ಡು ಅನ್ನೋದನ್ನು ಮೊಟ್ಟೆ ಕಟ್ಟಿ ಹಾಕಿದ್ದಾನೆ.
೨೬೫೧. ಮೊಡವೆ ಏಳು = ಪ್ರಾಯಕ್ಕೆ ಬರು
(ಮೊಡವೆ < ಮೊಡಮೆ = ಪ್ರಾಯಸೂಚಕ ಮುಖದ ಮೇಲಿನ ಗುಳ್ಳೆಗಳು)
ಪ್ರ : ಮೊಡವೆ ಏಳೋ ವಯಸ್ಸಿನ ಹುಡುಗ ಸಿಕ್ಕಿದರೆ ನನಗೆ ಒಡವೇನೇ ಬೇಡ.
೨೬೫೨. ಮೊಡ್ಡು ತೋರಿಸು = ಇಲ್ಲವೆನ್ನು, ಮೋಸ ಮಾಡು
(ಮೊಡ್ಡು < ಮೆಡ್ಡು < ಮೇಢ್ರಾ = ಶಿಷ್ನ)
ಪ್ರ : ದುಡ್ಡು ಈಸಿಕೊಂಡು ಮೊಡ್ಡು ತೋರಿಸಿದ.
೨೬೫೩. ಮೊನೆಗಾರನಾಗಿರು = ಗುರಿಗಾರನಾಗಿರು, ಯೋಧನಾಗಿರು
ಪ್ರ : ಮಣೆಗಾರನಾಗಿದ್ದವನು ಈಗ ಮೊನೆಗಾರನಾಗಿದ್ದಾನೆ.
೨೬೫೪. ಮೊರಗೂಸಿಗೆ ಎಳೆಕಟ್ಟು = ಬಾಲ್ಯವಿವಾಹ ಮಾಡು
(ಮೊರ = ಕೊಂಗು; ಕೂಸು = ಮಗು; ಎಳೆ = ಅಂಗುದಾರ, ಅರಿಶಿಣದ ದಾರ) ಹಿಂದೆ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು ಸಮಾಜದಲ್ಲಿ. ಆಗ ಹೆರಿಗೆಯಾದಾಗ ಮಗುವನ್ನು ಮೊರದಲ್ಲಿ ಮಲಗಿಸುವ ರೂಢಿ ಇತ್ತು. ಹೊಕ್ಕುಳ ಬಳ್ಳಿ ಕುಯ್ಯುವ ಇನ್ನೂ ಅನೇಕ ಶಾಸ್ತ್ರಗಳು ಮುಗಿದ ಮೇಲೆ ತೊಟ್ಟಿಲಲ್ಲಿ ಮಲಗಿಸುತ್ತಿದ್ದರು. ಇನ್ನೂ ಮಗು ಮೊರದಲ್ಲಿದ್ದಾಗಲೇ, ವೈವಾಹಿಕ ಸಂಬಂಧದ ಸಂಕೇತವಾಗಿ ಎಳೆ (ಅರಿಶಿಣದ ದಾರ) ಕಟ್ಟುವುದನ್ನು ಈ ನುಡಿಗಟ್ಟು ನುಡಿಯುತ್ತದೆ. ಇಂದು ಬುಡಕಟ್ಟು ಜನಾಂಗಗಳಲ್ಲೂ ಸಾಕಷ್ಟು ಜಾಗೃತಿ ಮೂಡಿ, ಸುಧಾರಣೆಯಾಗಿ ಬಾಲ್ಯವಿವಾಹ ಪದ್ಧತಿ ಕಡಮೆಯಾಗಿರುವುದು ಸಂತೋಷದ ವಿಷಯ.
ಪ್ರ : ಮೊರಗೂಸಿಗೇ ಎಳೆ ಕಟ್ಟಿ ಹೋಗಿದ್ರು, ನಾವು ಆ ಮನೆಗೇ ಹೆಣ್ಣು ಕೊಡಬೇಕು.
೨೬೫೫. ಮೊರೆ ಬೀಳು = ಶರಣು ಹೋಗು
ಪ್ರ : ಇದು ನಮ್ಮ ಮನೆದೇವರಲ್ಲ, ಮೊರೆ ಬಿದ್ದ ದೇವರು.
೨೬೫೬. ಮೊಲ ಎಬ್ಬಿಸಿ ಹೇಲೋಕೆ ಕೂರು = ಸಮಸ್ಯೆ ಮೇಲೆದ್ದಾಗ ಯಾವುದೋ ನೆಪವೆತ್ತಿ ಹಿಂದೆ ಸರಿ
(ಹೇಲೋಕೆ = ಮಲವಿಸರ್ಜನೆಗೆ) ಬೆಂಗಳೂರು ಜಿಲ್ಲೆಯ ನೆಲಮಂಗಲ, ಮಾಗಡಿ ತಾಲ್ಲೂಕುಗಳಲ್ಲಿ ವರುಷಕ್ಕೊಮ್ಮೆ ಹತ್ತಾರು ಹಳ್ಳಿಯವರು ಒಟ್ಟಿಗೆ ಕೂಡಿ ಕಾಡಿಗೆ ‘ಕೋಲು ಬೇಟೆ’ಗೆ ಹೋಗುತ್ತಾರೆ, ತಮ್ಮ ಕೈಲಿರುವ ರುಡ್ಡುಗೋಲಿನಿಂದ ಗಿಡದ ಪೊದೆಗಳನ್ನು ಬಡಿದು ಸೋಹುತ್ತಾ ಸಾಗುತ್ತಾರೆ. ಆಗ ಯಾವುದೋ ಹುಲ್ಲು ಪೊದೆಯಲ್ಲೊ ಮುಳ್ಳುಪೊದೆಯಲ್ಲೋ ಅಡಗಿಕೊಂಡಿದ್ದ ಮೊಲ ಎದ್ದು ಓಡತೊಡಗುತ್ತದೆ. ಬೇಟೆಗಾರರು ಅದರ ಬೆನ್ನಾಡಿ ಹೋಗಿ ತಮ್ಮ ಕೈಲಿರುವ ರುಡ್ಡುಗೋಲುಗಳಿಂದ ಬೀಸಿ ಹೊಡೆಯುತ್ತಾರೆ. ಒಬ್ಬರ ಗುರಿ ತಪ್ಪಿದರೂ ಇನ್ನೊಬ್ಬನ ಏಟಿಗೆ ಅದು ಬಲಿಯಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮೊಲ ಎಬ್ಬಿಸಿ ಹೇಲೋಕೆ ಕೂರೋನು ಅವನು, ಅವನ್ನ ನಂಬಬ್ಯಾಡ.
೨೬೫೭. ಮೊಲ್ಲಾಗರು ಬಂದು ಸೊಲ್ಲಡಗು = ಕಾಯಿಲೆ ಬಂದು ಮರಣ ಹೊಂದು.
(ಮೊಲ್ಲಾಗರು < ಮಲ್ಲಾಗರು < ಮೊಲ್ನಾಗರ = ಒಂದು ಬಗೆಯ ಕಾಯಿಲೆ, ಮೂರ್ಛೆರೋಗ, ಮೈಮೇಲೆ ಹಾವಿನಂತೆ ಉಬ್ಬುವ ಗಾಯ)
ಪ್ರ : ಎಂದು ಮೊಲ್ಲಾಗರು ಬಂದು ಅವನ ಸೊಲ್ಲಡಗ್ತದೋ ಅಂತ ಕಾಯ್ತಾ ಇದ್ದೀನಿ.
೨೬೫೮. ಮೊಲೆ ಬಿಡಿಸು = ಮಗುವಿಗೆ ಎದೆ ಹಾಲು ಕುಡಿಸುವುದನ್ನು ನಿಲ್ಲಿಸು, ಬಸುರಿಯಾಗು.
ಎದೆ ಹಾಲಿಗೆ ಒಗ್ಗಿಕೊಂಡ ಮಕ್ಕಳು ಸಾಕಷ್ಟು ಬೆಳೆದರೂ ಮೊಲೆ ಕುಡಿಯುವುದನ್ನು ಬಿಡುವುದಿಲ್ಲ. ಆಗ ತಾಯಂದಿರು ಮೊಲೆ ಬಿಡಿಸುವುದಕ್ಕೆ ಬೇವಿನ ಸೊಪ್ಪನ್ನು ಅರೆದು, ಅದರ ರಸವನ್ನು ಮೊಲೆತೊಟ್ಟಿಗೆ ಸವರುತ್ತಾರೆ. ಕುಡಿಯಲು ಬಂದ ಮಕ್ಕಳು ಕಹಿಯಾಗಿ ಮೊಲೆ ಕುಡಿಯುವುದನ್ನು ನಿಲ್ಲಿಸುತ್ತವೆ.
ಪ್ರ : ಮತ್ತೆ ಬಸುರಿಯಾದ ಮೇಲೆ, ಮಕ್ಕಳಿಗೆ ಮೊಲೆ ಕುಡಿಸಬಾರದು.
೨೬೫೯. ಮೊಳ ಹಾಕು = ಪರೀಕ್ಷಿಸು, ಮರ್ಮ ತಿಳಿಯಲು ಹವಣಿಸು
ಮೊಳಕೈ ಕೀಲಿನಿಂದ ನಡುಬೆರಳ ತುದಿಯವರೆಗಿನ ಉದ್ದವನ್ನು ‘ಮೊಳದುದ್ದ’ ಎನ್ನುತ್ತಾರೆ. ನಡುಬೆರಳ ತುದಿಯಿಂದ ಭುಜದವರೆಗಿನ ಉದ್ದವನ್ನು ‘ತೋಳುದ್ದ’ ಎನ್ನು-ತ್ತಾ-ರೆ ಎರಡೂ ತೋಳುಗಳನ್ನು ವಿರುದ್ಧ ದಿಕ್ಕಿನಲ್ಲಿ ಚಾಚಿದಾಗಿನ ಉದ್ದವನ್ನು ‘ಮಾರುದ್ದ’ ಎನ್ನುತ್ತಾರೆ.
ಪ್ರ : ಗಾದೆ – ಧರ್ಮಕ್ಕೆ ದಟ್ಟಿಕೊಟ್ರೆ, ಹಿತ್ತಲಿಗೆ ಹೋಗಿ ಮೊಳ ಹಾಕಿದ.
೨೬೬೦. ಮೊಳಕಾಲು ಚಿಪ್ಪು ಕಳಚಿ ಬೀಳುವಂತಾಗು = ಕಾಲಿನಲ್ಲಿ ಶಕ್ತಿಯಿಲ್ಲದೆ ಕುಸಿಯುವಂತಾಗು.
(ಮೊಳಕಾಲು > ಮೊಣಕಾಲು = ಕಣಕಾಲು ಮತ್ತು ತೊಡೆಗಳ ಮಧ್ಯದ ಕೀಲು)
ಪ್ರ : ಉಸಿರು ಕಟ್ಟಿ ಬೆಟ್ಟವನ್ನು ಹತ್ತೋದು ಹತ್ತಿಬಿಟ್ಟೋ, ಆದರೆ ಇಳೀಬೇಕಾದರೆ ಕಾಲಲ್ಲಿ ಶಕ್ತಿಯಿಲ್ಲದಂತಾಗಿ ಮೊಳಕಾಲು ಚಿಪ್ಪು ಕಳಚಿಬಿದ್ದಂತೆ, ಮುಗ್ಗರಿಸುವಂತೆ ಆಯಿತು.
೨೬೬೧. ಮೋಕ್ಷ ಆಗು = ಶಿ‌ಕ್ಷೆಯಾಗು
(ಮೋಕ್ಷ = ಮುಕ್ತಿ. ಆದರೆ ಶಿಕ್ಷೆ ಎಂಬ ಅರ್ಥದಲ್ಲಿ ಇಲ್ಲಿ ಬಳಕೆಯಾಗಿದೆ)
ಪ್ರ : ನಾಳೆ ನಿನಗೆ ಅವರಿಂದ ಸರಿಯಾಗಿ ಮೋಕ್ಷ ಆಗ್ತದೆ, ಹೋಗು
೨೬೬೨. ಮೋರ್ಚು ಬರು = ಪ್ರಜ್ಞೆ ತಪ್ಪು
(ಮೋರ್ಚು, < ಮೂರ್ಛೆ = ಪ್ರಜ್ಞೆ ತಪ್ಪುವ ರೋಗ)
ಪ್ರ : ಹೊಳೇಲಿ ಬಟ್ಟೆ ಒಗೆಯುವಾಗ ಮೋರ್ಚು ಬಂದರೆ ಪ್ರಾಣಕ್ಕೆ ಅಪಾಯ.
೨೬೬೩. ಮೋಟನ ಏಟು ನೋಡು = ಕುಳ್ಳ ಹಾಕಿದ ಕೊಕ್ಕೆ ನೋಡು
(ಮೋಟ = ಮೋಟ ಎಂಬ ಶಬ್ದಕ್ಕೆ ಹಿಂದಿಯಲ್ಲಿ ದಪ್ಪ ಎಂದೂ, ಮರಾಠಿಯಲ್ಲಿ ದೊಡ್ಡದು ಎಂದೂ ಇದ್ದರೆ ಕನ್ನಡದಲ್ಲಿ ಕುಳ್ಳ ಎಂಬ ಅರ್ಥವಿದೆ; ಏಟು = ಶರತ್ತು, ಕೊಕ್ಕೆ)
ಪ್ರ : ಮೋಟನ ಚೂಟಿಯಾಗಿರು = ಪಾದರಸದಂತಿರು, ಚುರುಕಾಗಿರು
೨೬೬೪. ಮೋಟಿ ಚೂಟಿಯಾಗಿರು = ಪಾದರಸದಂತಿರು, ಚುರುಕಾಗಿರು
(ಮೋಟಿ = ಕುಳ್ಳಿ; ಚೂಟಿ = ಚುರುಕು)
ಪ್ರ : ಗಾದೆ – ಉದ್ದಂದೋಳಿಗೆ ಬುದ್ಧಿ ಮುರುಕು
ಮೋಟಂದೋಳಿಗೆ ಬುದ್ಧಿ ಚುರುಕು
೨೬೬೫. ಮೋಡಿ ಮಾಡು = ಕಣ್ಕಟ್ಟು ಮಾಡು
(ಮೋಡಿ = ಇಂದ್ರಜಾಲ, ಜಾದು)
ಪ್ರ : ಅವಳು ಏನು ಮೋಡಿ ಮಾಡಿಬಿಟ್ಟಳೋ, ನೋಡಿದೇಟಿಗೇ ಅವಳ ನೆರಳಾಗಿಬಿಟ್ಟ.
೨೬೬೬. ಮೋಣಿಗೆ ಪೋಣಿಸು = ಸಂಭೋಗಿಸು
(ಮೋಣು = ಯೋನಿ, ಅದನ್ನುಳ್ಳವಳು ಮೋಣಿ, ಪೋಣಿಸು = ಏರಿಸು)
ಪ್ರ : ಮೋಣಿಗೆ ಪೋಣಿಸಿದಾಗ ನಿನ್ನದೇ ಇವತ್ತು ಮೊದಲ ಬೋಣಿಗೆ ಎಂದಳು.
೨೬೬೭. ಮೋ‌ಣ್ಮುಚ್ಕೊಂಡು ಹೋಗು = ಮಾತಾಡದೆ ಅದುಮಿಕೊಂಡು ಹೋಗು
ಪ್ರ : ಮೋಣ್ಮುಚ್ಕೊಂಡು ಹೋಗ್ತಾಳೋ, ಇಲ್ಲ ದೋಣ್ಮೇಲೆ ಒದೀಬೇಕೋ, ಕೇಳು.
೨೬೬೮. ಮೋಪಾಗಿರು = ಗಟ್ಟಿಮುಟ್ಟಾಗಿರು
(ಮೋಪು = ಮರದ ದಿಮ್ಮಿ , ಮೋಪಿ = ಮರದ ದಿಮ್ಮಿಯಂತೆ ಇರುವವಳು)
ಪ್ರ : ಆ ಮುಂಡೆಮೋಪಿ ಯಾರಿಗೂ ಬಗ್ಗಲ್ಲ, ಮೋಪಾಗಿದ್ದಾಳೆ.
೨೬೬೯. ಮೋಳೆ ಬೀಳಿಸಿ ಬೇಳೆ ಬೇಯಿಸಿಕೊಳ್ಳು = ಬಿರುಕು ಮೂಡಿಸಿ ಕೆಲಸ ಸಾಧಿಸು, ವಿರಸ ಬೆಳೆಸಿ ಲಾಭ ಗಳಿಸು.
(ಮೋಳೆ = ರಂದ್ರ, ಬಿರುಕು)
ಪ್ರ : ಮೊಳೆ ಬೀಳಿಸಿ ಬೇಳೆ ಬೇಯಿಸಿಕೊಳ್ಳೋ ರಾಜಕಾರಣಿಗಳಿರುವಾಗ ಬಡಬಗ್ಗರ ಬಾಳು ಕೊನೆಯಿರದ ಗೋಳು.
೨೬೭೦. ಮಂಕಬರಲು ಮಾಡು = ಮಂಕು ಕವಿಸು, ಮೋಸ ಮಾಡು
(ಮಂಕಬರಲು < ಮಂಕು ಬೋರಲು = ಮಂಕುತನವನ್ನು ಮೇಲೆ ಕವುಚುವುದು)
ಪ್ರ : ಅಂತೂ ಮಂಕಬರಲು ಮಾಡಿ, ಕದ್ದೂ ಹೋದ ಮೆದ್ದೂ ಹೋದ.
೨೬೭೧. ಮಂಗಳಮಾಯ ತಿಂಗಳಬೆಳಕಾಗು = ಕಣ್ಮರೆಯಾಗು, ಇಲ್ಲವಾಗು.
(ಮಂಗಳ ಮಾಯ < ಮಂಗಮಾಯ ; ಮುಂದಿನ ತಿಂಗಳ ಶಬ್ದ ಸಾದೃಶ್ಯದಿಂದ ಮಂಗ ಎಂಬುದು ಮಂಗಳ ಆಗಿರಬೇಕು – ಬಿತ್ತನೆ ಶಬ್ದದ ಸಾದೃಶ್ಯದ ಮೇಲೆ ಹರಗಣೆ ಎಂಬುದು ಹರ್ತನೆ ಆದಂತೆ)
ಪ್ರ : ಈಗಿದ್ದದ್ದು ಮಂಗಳಮಾಯ ತಿಂಗಳಬೆಳಕಾಗಬೇಕು ಅಂದ್ರೆ ಇದೇನು ಮಾಟಾನ, ಮೋಡೀನ?
೨೬೭೨. ಮಂಗಳ ಹಾಡು = ಮುಕ್ತಾಯ ಮಾಡು
ಪ್ರ : ಇದನ್ನು ತಿಂಗಳಾನುಗಟ್ಟಲೆ ಎಳೆದಾಡೋದ್ಕಿಂತ ಈಗಲೇ ಮಂಗಳ ಹಾಡೋದು ಲೇಸು.
೨೬೭೩. ಮಂಗಳಾರತಿ ಮಾಡು = ಛೀಮಾರಿ ಮಾಡು
ಮಂಗಳಾರತಿ ಶುಭಕಾರ್ಯದ ಸಂಕೇತ. ಆದರೆ ಶುಭದ ಆ ಮಾತನ್ನು ಅಶುಭದ ಅರ್ಥದಲ್ಲಿ ಈ ನುಡಿಗಟ್ಟಿನಲ್ಲಿ ಬಳಸಲಾಗಿದೆ.
ಪ್ರ : ನಿನ್ನೆ ಸಿಕ್ಕಿದ್ದ, ಸರಿಯಾಗಿ ಅವನ ಮಕ್ಕೆ ಮಂಗಳಾರತಿ ಮಾಡಿ ಕಳಿಸಿದ್ದೀನಿ.
೨೬೭೪. ಮಂಗಳಿಸು = ಮಾಡು, ಎಲ್ಲ ಶಾಸ್ತ್ರ ಸ್ತೋತ್ರ ಆದ ಮೇಲೆ ಮಂಗಳ ಹಾಡು
(ಮಂಗಳ + ಇಸು = ಮಂಗಳ ಎಂಬ ನಾಮಪದವನ್ನೇ ಇಸು ಪ್ರತ್ಯಯ ಸೇರಿಸಿ ಕ್ರಿಯಾಪದವನ್ನಾಗಿ ಮಾಡಿ. “ಮಾಂಡು, ದಬ್ಬಾಕು” ಎಂಬ ಅರ್ಥವನ್ನು ಆವಾಹಿಸಿ ಜನಪದರು ಬಳಸುತ್ತಾರೆ. ಶಬ್ದವನ್ನು ಹೇಗೆಂದರೆ ಹಾಗೆ ಮಿದಿಯುವ, ಅದರಿಂದ ಹೊಸ ಅರ್ಥವನ್ನು ಕದಿಯುವ ಕಲೆ ಸೋಜಿಗಗೊಳಿಸುತ್ತದೆ.)
ಪ್ರ : ಅವಳು ಒಳಗೆ ಏನು ಮಂಗಳಿಸ್ತಾ ಅವಳೆ, ಕರಿ ಈಚೆಗೆ
೨೬೭೫. ಮಂಡನಾಗಿರು = ಮಧ್ಯಸ್ಥಗಾರನಾಗಿರು,
(ಮಂಡ = ರೆಫರಿ)
ಪ್ರ : ಇವೊತ್ತು ನಮ್ಮಿಬ್ಬರ ಪಂದ್ಯಕ್ಕೆ ಊರಗೌಡನೇ ಮಂಡ
೨೬೭೬. ಮಂಡಿ ಕೂರು = ಚಂಡಿ ಹಿಡಿ, ಹಟ ಹಿಡಿ.
ಮೊಂಡರು ಎಂಬ ಬುಡಕಟ್ಟು ಜನಾಂಗ ಏನಾದರೂ ಕೊಡುವವರೆಗೂ ಮನೆಬಾಗಿಲಿನಲ್ಲಿ ವೀರಮಂಡಿ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಕೊಡದೆ ನಾನು ಹೋಗಲ್ಲ ಅಂತ ಮಂಡಿ ಕೂತಿದ್ದಾನೆ.
೨೬೭೭. ಮಂಡಿ ಬೀಳು = ಅಂಗಲಾಚು
ಮಂಡಿ ಬೀಳುವುದು ಎಂದರೆ ಮಂಡಿ ಕೂರುವುದಲ್ಲ, ಬದಲಾಗಿ ಮಕ್ಕಳು ತಾಯಿಯ ಮಂಡಿಯನ್ನು ಕಣಕಾಲುಗಳನ್ನು ಹಿಡಿದುಕೊಂಡು ಗೋಗರೆಯುವುದು.
ಪ್ರ : ಬೆಲ್ಲ ಕೊಡು ಅಂತ ಮಂಡಿಬಿದ್ದ, ಹೋಗಲಿ ಅಂತ ಕೊಟ್ಟೆ.
೨೬೭೮. ಮಂಡೆ ಕೂದಲು ಚುಳ್ ಎನ್ನದಿರು = ಸುಖವಾಗಿರು
(ಚುಳ್ = ಕೂದಲನ್ನು ಹಿಡಿದು ಎಳೆದಾಗ ಆಗುವ ಚಳುಕು)
ಪ್ರ : ಅತ್ತೆ ಮನೆಯವರು ಮಂಡೆ ಕೂದಲು ಚುಳ್ ಅನ್ನದಂಗೆ ನೋಡ್ಕೊಂಡಿದ್ದಾರೆ.
೨೬೭೯. ಮಂಡೆ ಕೊಡು = ದೇವರಿಗೆ ಬಿಟ್ಟ ಕೂದಲನ್ನು ದೇವರ ಸಾನಿಧ್ಯಕ್ಕೆ ಹೋಗಿ ತೆಗೆಸು
(ಮಂಡೆ = ಮಂಡೆಯ ಕೂದಲು)
ಪ್ರ : ತಿರುಪತಿಗೆ ಹೋಗಿ ಮಂಡೆ ಕೊಟ್ಟು ಬಂದೆ. ಅದ್ಕೇ ಬೋಳುದಲೆ ಅಂತ ಟೋಪಿ ಹಾಕ್ಕೊಂಡಿದ್ದೀನಿ.
೨೬೮೦. ಮಂಡೆ ಮಾಸಿದ ಮಾತಾಡು = ತಲೆ ಕೆಟ್ಟ ಮಾತಾಡು, ಅಜ್ಞಾ-ನ-ದ ಮಾತಾ-ಡು
(ಮಾಸಿದ = ಕೊಳೆಗಟ್ಟಿದ, ಸ್ನಾನ ಮಾಡಿ ಸ್ವಸ್ಥವಾಗಿರದ)
ಪ್ರ : ಮಂಡೆ ಮಾಸಿದವರ ಮಾತು ಹೊಲೆಮಾಸಿಗಿಂತ ಕಡೆ ಅಂತ ತಿಳ್ಕೊಂಡು ದೂರ ಇರು.
೨೬೮೧. ಮಂತಾಡು = ಕರಾವು ಆಗು, ಮನೆಯಲ್ಲಿ ಹಾಲು ಮೊಸರು ಬೆಣ್ಣೆ ತುಪ್ಪವಾಗು.
(ಮಂತು = ಕಡೆಗೋಲು)
ಪ್ರ : ಗಾದೆ – ಮಂತಾಡಿದೋರ ಮನೇಲಿ ಸಂತೋಷ
೨೬೮೨. ಮಂದವಾಗಿರು = ಗಟ್ಟಿಯಾಗಿರು
(ಮಂದ = ಸಾಂದ್ರ)
ಪ್ರ : ಗಾದೆ – ಮಂದನ ಮಜ್ಜಿಗೆ ಅನ್ನ ಉಣ್ಣೋಕೆ ಚೆಂದ, ನೀರು ಮಜ್ಜಿಗೆ ಕುಡಿಯೋಕೆ ಚೆಂದ
೨೬೮೩. ಮಿಂಡರಿಗೆ ಹುಟ್ಟಿದ ಮಾತಾಡು = ಕೆಟ್ಟ ಮಾತಾಡು, ಅಡ್ಡನಾಡಿ ಮಾತಾಡು.
ಪ್ರ : ಅಪ್ಪನಿಗೆ ಹುಟ್ಟಿದ ಮಾತಾಡು, ಮಿಂಡರಿಗೆ ಹುಟ್ಟಿದ ಮಾತಾಡಬೇಡ.
೨೬೮೪. ಮುಂಡಮೋಪಿ ಕಟ್ಟಿಕೊಳ್ಳು = ವಿಧವೆಯನ್ನು ಮದುವೆಯಾಗು
(ಮೋಪಿ < ಮೋಪ್ಪಿ(ತ) = ವಿಧವೆ. ಆದ್ದರಿಂದ ಮುಂಡೆ + ಮೋಪಿ ಜೋಡು ನುಡಿ)
ಪ್ರ : ಮುಂಡೆ ಟೋಪಿ ಕಟ್ಕೊಂಡು ಗುಂಡರುಗೋವಿಯಂಗೆ ತಿರುಗ್ತಾನೆ
೨೬೮೫. ಮುಂಡಾ ಮೋಚು = ಗತಿ ಕಾಣಿಸು, ಮಕ್ಕಳನ್ನು ದಡ ಸೇರಿಸು
(ಮುಂಡ < ಮುಂಡನ = ಕ್ಷೌರ ; ಮೋಚು = ಬೋಳಿಸು) ಬ್ರಾಹ್ಮಣ ವಿಧವೆಗೆ ತಲೆಬೋಳಿಸುವ (ಮುಂಡಾಮೋಚುವ) ಆಚರಣೆಯ ನುಡಿಗಟ್ಟಿನ ಮೂಲಕ ತಮ್ಮ ಮನೆಯ ಮಕ್ಕಳಿಗೆ ಗುರಿ ಸೇರಿಸುವ ಅಥವಾ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಕಳಿಸುವ ಸಂಕಷ್ಟವನ್ನು ತೋಡಿಕೊಂಡಿರುವುದು ಕಂಡು ಬರುತ್ತದೆ.
ಪ್ರ : ಇಷ್ಟು ಜನರ ಮುಂಡಾಮೋಚಬೇಕಾದರೆ ನನಗೆ ಹುಟ್ಟಿದ ದಿನ ಕಂಡು ಹೋಗ್ತದೆ.
೨೬೮೬. ಮುಂದಕ್ಕೆ ತರು = ಬಸುರು ಮಾಡು
ಪ್ರ : ಹಿಂದೆ ತಿರುಗ್ತಾ ಮುಂದಕ್ಕೆ ತಂದ.
೨೬೮೭. ಮುಂದೆ ಒದ್ದೆ ಹಿಂದೆ ಭಾರವಾಗು = ಮಲಮೂತ್ರ ವಿಸರ್ಜನೆಗೆ ಅವಸರವಾಗು
ಪ್ರ : ಮುಂದೆ ಒದ್ದೆ ಹಿಂದೆ ಭಾರವಾಗಿದೆ, ಬಂದೆ ಅಂತ ಪೊದೆ ಹಿಂದಕ್ಕೆ ಓಡಿದ.
೨೬೮೮. ಮುಂಭಾರವಾಗು = ಮೂತ್ರ ವಿಸರ್ಜನೆಗೆ ಒತ್ತರ ಬರು.
ಗಾಡಿಗೆ ತುಂಬುವ ಸಾಮಾನು ಹಿಂಭಾಗದಲ್ಲಿ ಜಾಸ್ತಿಯಾದರೆ ಹಿಂಭಾಗವಾಗಿ, ಎತ್ತುಗಳ ಹೆಗಲ ಮೇಲಿನ ನೊಗ ಮೇಲಕ್ಕೆದ್ದು ಕಣ್ಣಿ ಅಗಡು ಎತ್ತುಗಳ ಕೊರಳನ್ನು ಒತ್ತುತ್ತದೆ. ಸಾಮಾನು ಮುಂಭಾಗದಲ್ಲಿ ಜಾಸ್ತಿಯಾದರೆ ಮುಂಭಾರವಾಗಿ ನೊಗ ಎತ್ತುಗಳ ಹೆಗಲನ್ನು ಅಮುಕುತ್ತದೆ. ಆದ್ದರಿಂದ ಹಿಂಭಾರ ಮುಂಭಾರ ಸಮತೋಲನವಾಗಿರುವಂತೆ ಗಾಡಿ ಹೊಡೆಯುವವನು ನೋಡಿಕೊಳ್ಳುತ್ತಾನೆ. ಮೂತ್ರ ವಿಸರ್ಜನೆಯ ಒತ್ತಡವನ್ನು ಗಾಡಿಯ ಮುಂಭಾರದ ಪರಿಭಾಷೆಯಲ್ಲಿ ಹೇಳಿರುವುದು ಜನಪದರ ಅಭಿವ್ಯಕ್ತಿ ಶಕ್ತಿಯ ತರಾತರಿ ರೂಪಕ್ಕೆ ನಿದರ್ಶನವಾಗಿದೆ.
ಪ್ರ : ಮುಂಭಾರವಾಗಿದೆ, ಕೊಂಚ ಗಾಡಿ ನಿಲ್ಲಿಸಪ್ಪ ಅಂತ ಹೇಳಿ ಗಿಡದ ಮರೆಗೆ ಹೋದ.
೨೬೮೯. ಮೊಂಟೆ ಹೊಡಿ = ಕವಲು ಹೊಡಿ, ತೆಂಡೆ ಹೊಡಿ.
ಪ್ರ : ಗಾದೆ – ಒಂಟಿ ಪೈರು ಮೊಂಟೆ ಪೈರಾಗ್ತದೆ
ಒಂದಡಕೆ ಹಿಂಡಡಕೆ ಆಗ್ತದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ