ನನ್ನ ಪುಟಗಳು

13 ಅಕ್ಟೋಬರ್ 2015

೩೦) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಧ-ನ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಧ)
೧೭೨೦. ಧಾರಣೆ ಕುಸಿ = ಬೆಲೆ ತಗ್ಗು
ಪ್ರ : ಇತ್ತೀಚೆಗೆ ಚಿನ್ನದ ಧಾರಣೆ ಕುಸಿದಿದೆ.
೧೭೨೧. ಧಾರ ಮುಗಿ = ಮುಹೂರ್ತ ಆಗಿ ಹೋಗು.
ಮದುವೆಯಲ್ಲಿ ಹೆಣ್ಣುಗಂಡುಗಳು ಕೈಗಳ ಮೇಲೆ ಗುರುಹಿರಿಯರು, ನೆಂಟರಿಷ್ಟರು ಹಾಲನ್ನು ಬಿಟ್ಟು, ತಲೆಯ ಮೇಲೆ ಅಕ್ಷತೆ ಹಾಕಿ ಹರಸುವುದಕ್ಕೆ ಧಾರೆ ಹುಯ್ಯುವುದು ಎನ್ನಲಾಗುತ್ತದೆ. ಇದನ್ನೇ ಪಂಪ ‘ಕೆಯ್ನೀರು’ ಎಂದು ಬಳಸಿದ್ದಾನೆ. ಇದು ಜನರ ಬಾಯಲ್ಲಿ ‘ಹೆಣ್ಣು ಕೈನೆರೆಗೆ ಬಂದಿದೆ’ ಎಂದು ರೂಪಾಂತರ ಹೊಂದಿದೆ.
ಪ್ರ : ಗಾದೆ – ಧಾರೆ ಮುಗಿದ ಮೇಲೆ ಮದುವೆಗೆ ಹೋಗಬೇಡ
ತೇರು ಹರಿದ ಮೇಲೆ ಜಾತ್ರೆಗೆ ಹೋಗಬೇಡ
೧೭೨೨. ಧೂಪ ಹಾಕು = ಪಿತೃಪೂಜೆ ಸಲ್ಲಿಸು.
ಮಹಾನವಮಿಯ ಕಾಲದಲ್ಲಿ ಸತ್ತ ಹಿರಿಯರಿಗೆ ಪೂಜೆ ಸಲ್ಲಿಸುವಾಗ ಕೆಂಡದ ಮೇಲೆ ಸಾಂಬ್ರಾಣಿಯನ್ನು ಅಥವಾ ಶ್ರೀಗಂಧದ ಚಕ್ಕೆ ಪುಡಿಯನ್ನು ಹಾಕಿ ಕೈ ಮುಗಿಯುವ ಪದ್ಧತಿಗೆ ಧೂಪ ಹಾಕುವುದು ಎನ್ನಲಾಗುತ್ತದೆ.
ಪ್ರ : ಗಾದೆ – ಬದ್ದವರಿಗೆ ಧೂಪ ಹಾಕೋದು ಇದ್ದವರ ಕರ್ತವ್ಯ.
೧೭೨೩. ಧೂಪ ಹುಯ್ಯಿ = ಸಂಬಂಧಪಟ್ಟವರಿಗೆ ಕೆಟ್ಟದ್ದಾಗಲೆಂದು ದೇವರಿಗೆ ಕೈಎತ್ತು
ಧೂಪ ಹುಯ್ದರೆ ಬೇರೆಯವರಿಗೆ ಕೆಟ್ಟದ್ದಾಗುತ್ತದೆ ಎಂಬ ಮೂಢ ನಂಬಿಕೆ ಜನಜೀವನದಲ್ಲಿತ್ತು. ದಾಯಾದಿಗಳು ಧೂಪ ಹುಯ್ದು ಕೈ ಎತ್ತಿರೋದ್ರಿಂದಲೇ ತಮ್ಮ ಮನೇಲಿ ಸಾವು ನೋವು ಆಗ್ತಾ ಇದೆ ಎಂದು ಜನರೂ ನಂಬುತ್ತಿದ್ದರು. ಆದರೆ ವಿದ್ಯೆಬುದ್ಧಿ ಹರಡಿದಂತೆಲ್ಲ ಆ ಕುರುಡು ನಂಬಿಕೆ ತಾನಾಗಿಯೇ ಇಲ್ಲವಾಗುತ್ತಿದೆ.
ಪ್ರ : ಹಟ್ಟಿ ಲಕ್ಕಮ್ಮನಿಗೆ ಧೂಪ ಹುಯ್ದಿರೋದ್ರಿಂದಲೇ ನಮಗೆ ನಷ್ಟದ ಮೇಲೆ ನಷ್ಟ.
೧೭೨೪. ಧೂಳು ಕೊಡವು = ತೇಜೋವಧೆ ಮಾಡು
(ಕೊಡವು < ಕೊಡಹು = ಒದರು)
ಪ್ರ : ಅವನಿಗೆ ಹಿಂದಿನದನ್ನೆಲ್ಲ ಎತ್ತಿ ಕುಕ್ಕಿ, ಚೆನ್ನಾಗಿ ಧೂಳು ಕೊಡವಿದ್ದೀನಿ.
೧೭೨೫. ಧೂಳೆತ್ತು = ಹಾಳಾಗಲಿ ಎಂದು ಶಾಪ ಹಾಕು.
ಪ್ರ : ನಿನ್ನ ಮನೆ ಗುಡಿಸಿ ಗುಂಡಾಂತರ ಆಗಲಿ ಅಂತ ಧೂಳೆತ್ತಿ ಹುಯ್ದಳು
೧೭೨೬. ಧೂಳೆಬ್ಬಿಸು = ಗೊಂದಲ ಉಂಟು ಮಾಡು, ದೂರು ಹೊರಿ-ಸು
ಪ್ರ : ಇದ-ರಿಂ-ದ ಧೂಳು ಎಬ್ಬಿ-ಸೋ-ರಿ-ಗೆ ಗಾಳಿ ಬೀಸಿ-ದಂ-ತಾ-ಗ್ತ-ದೆ.
೧೭೨೭. ಧೋರಣೆ ಮಾಡು = ನಿಧಾನ ಮಾಡು, ಗಂಭೀರವಾಗಿ ತೆಗೆದುಕೊಳ್ಳದಿರು
ಧೋರಣೆ ಎಂಬುದಕ್ಕೆ ನಿಲುವು ಎಂಬ ಅರ್ಥವಿದ್ದರೂ ಇಲ್ಲಿ ನಿಧಾನ, ಅಲಕ್ಷ್ಯ ಎಂಬ ಅರ್ಥದಲ್ಲಿ ಬಳಕೆಯಾಗಿದೆ.
ಪ್ರ : ಧೋರಣೆ ಮಾಡೋನಿಗೆ ತರಾತುರಿ ಕೆಲಸ ವಹಿಸಿದ್ದೀಯಲ್ಲ, ಸರೀನಾ?

 ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ನ)
೧೭೨೮. ನಕಲಿ ಮಾಡು = ತಮಾಷೆ ಮಾಡು
(ನಕಲಿ = ಹಾಸ್ಯ)
ಪ್ರ : ನಾಟಕದಲ್ಲಿ ನಕಲಿ ಪಾರ್ಟು ಮಾಡೋದ್ರಲ್ಲಿ ಇವನು ನಿಸ್ಸೀಮ.
೧೭೨೯. ನಕಲಿ ಮಾಲಾಗಿರು = ಕೋಟಾ ವಸ್ತುವಾಗಿರು, ಅಸಲಿವಸ್ತು ಅಲ್ಲದಿರು
(ನಕಲಿ = ಕೋಟಾ)
ಪ್ರ : ಅಸಲಿ ಮಾಲು ಬಿಟ್ಟು ನಕಲಿ ಮಾಲು ಕೊಳ್ಳೋಕೆ ನಿನಗೆ ಬುದ್ಧಿ ಇಲ್ವ?
೧೭೩೦. ನಕ್ಕು ನದರು ಕೊಡು = ನಗುನಗುತ ಪ್ರೀತಿಯ ಕಾನಿಕೆ ಕೊಡು
(ನಗದು = ಕಾಣಿಕೆ, ಕೊಡುಗೆ)
ಪ್ರ : ಅವನು ನಕ್ಕು ನದರು ಕೊಟ್ಟಾಗ ನನಗೆ ಮುಗಿಲು ಮೂರೇ ಗೇಣು ಅನ್ನಿಸಿತು
೧೭೩೧. ನಗಸಾರ ಆಡು = ಸರಸವಾಡು, ತಮಾಷೆಯ ಮಾತಾಡು
(ನಗಸಾರ = ಸರಸ ಸಲ್ಲಾಪ, ತಮಾಷೆ)
ಪ್ರ : ಗಾದೆ – ಬಾಯಿಸುದ್ದ ಇಲ್ಲದೋರ ಜೊತೆ ನಗಸಾರ ಬೇಡ
ಕೈ ಸುದ್ದ ಇಲ್ಲದೋರ ಜೊತೆ ಯಾವಾರ ಬೇಡ
೧೭೩೨. ನಗ್ಗಿ ಹೋಗು = ಪೆಟ್ಟನಿಂದ ತಗ್ಗು ಬೀಳು
ಪ್ರ : ಬಿಂದಿಗೆ ಎತ್ತ ಹಾಕಿ ನಗ್ಗಿ ಹೋಗ್ಯದೆ.
೧೭೩೩. ನಗೆಗೀಡಾಗು = ಅಪಹಾಸ್ಯಕ್ಕೆ ಗುರಿಯಾಗು
(ನಗೆಗೀಡಾಗು < ನನಗೆ + ಈಡಾಗು)
ಪ್ರ : ಅವನ ಅವಿವೇಕದಿಂದ ನಾನು ನಗೆಗೀಡಾಗಬೇಕಾಯ್ತು
೧೭೩೪. ನಗೆಗೇಡಾಗು = ಹಾಸ್ಯಾಸ್ಪದವಾಗು
(ನಗೆಗೇಡು < ನಗೆ + ಕೇಡು)
ಪ್ರ : ನಗೆಗೇಡಾಗುವ ಮಾತನ್ನು ತುಂಬಿದ ಸಭೇಲಿ ಆಡಿಬಿಟ್ಟ.
೧೭೩೫. ನಗೆಪಾಟಲಾಗು = ಅಪಹಾಸ್ಯಕ್ಕೆ ಗುರಿಯಾಗು
ಪ್ರ : ಅವನ ವರ್ತನೆ ಎಲ್ಲರ ನಗೆ ಪಾಟಲಿಗೆ ಕಾರಣವಾಯ್ತು.
೧೭೩೬. ನಗೋರ ಮುಂದೆ ಎಡವಿ ಬೀಳು = ಆಡಿಕೊಳ್ಳುವವರ ಮುಂದೆ ಮುಗ್ಗರಿಸು
ಪ್ರ : ನಗೋರ ಮುಂದೆ ಎಡವಿಬಿದ್ದಂಗಾಯ್ತಲ್ಲ ಅನ್ನೋದೇ ನನ್ನ ಚಿಂತೆ
೧೭೩೮. ನಚ್ಚಗಾಗು = ಹಿತವಾಗು
(ನಚ್ಚಗೆ < ನೊಚ್ಚಗೆ = ತೃಪ್ತಿ, ಹಿತ)
ಪ್ರ : ಮಳೇಲಿ ನೆನೆದು ಬಂದು ಒಲೆ ಮುಂದೆ ಕುಳಿತು, ಬೆಂಕಿ ಕಾವಿಗೆ ಕೈಯೊಡ್ಡಿ, ಎರಡೂ ಅಂಗೈಗಳನ್ನು ಉಜ್ಜಿದರೆ ನಚ್ಚಗಾಗ್ತದೆ, ಬೆಚ್ಚಗಾಗ್ತದೆ.
೧೭೩೯. ನಜ್ಜುಗುಜ್ಜಾಗು = ಪುಡಿಪುಡಿಯಾಗು, ನಗ್ಗಿ ಹೋಗು
(ನಜ್ಜು < ನಜಗು < ನಜುಕ್ಕು(ತ) = ನುರುಕು)
ಪ್ರ : ಅಟ್ಟದ ಮೇಲಿಂದ ತಪ್ಪಲೆ ಕೆಳಕ್ಕೆ ಬಿದ್ದು ನಜ್ಜುಗುಜ್ಜಾಗಿದೆ.
೧೭೪೦. ನಟಿಗೆ ತೆಗೆ = ದೃಷ್ಟಿ ತೆಗೆ
(ನಟಿಕೆ = ಚಿಟುಕು, ಬೆರಳುಗಳ ಗೆಣ್ಣನ್ನು ಒತ್ತಿದಾಗ ಬರುವ ಲಟಲಟ ಸದ್ದು)
ಮುದ್ದಾದ ಮಕ್ಕಳನ್ನು ಕಣ್ತುಂಬ ನೋಡಿ, ಅವುಗಳಿಗೆ ದೃಷ್ಟಿಯಾಗುತ್ತದೆಂದು ಮಕ್ಕಳ ಮುಖವನ್ನು ಹಿಡಿದು ಮುದ್ದಾಡಿ, ಬಳಿಕ ತಮ್ಮ ಎರಡೂ ಕೈಗಳ ಬೆರಳುಗಳನ್ನು ತಮ್ಮ ಕೆನ್ನೆಯ ಮೇಲಿಟ್ಟುಕೊಂಡು ಅದುಮಿ ಲಟಲಟ ನಟಿಕೆ ತೆಗೆಯುತ್ತಾರೆ. ಆ ಮೂಲದ ನುಡಿಗಟ್ಟು ಇದು.
ಪ್ರ : ದೃಷ್ಟಿಯಾಗ್ತದೆ ಅಂತ ನಟಗೆ ತೆಗೆದೆ, ಪಾಚ್ಕೊಳ್ಳೋ ತುಂಟ.
೧೭೪೧. ನಟಿಕೆ ಮುರಿ = ಶಾಪ ಹಾಕು.
ದೃಷ್ಟಿ ತೆಗೆಯುವಾಗ ತಮ್ಮ ಕೆನ್ನೆಯ ಮೇಲೆ ಕೈಯಿಟ್ಟು ಬೆರಳುಗಳನ್ನು ಮಡಿಸಿ ನಟಿಗೆ ತೆಗೆದರೆ, ನಿನ್ನ ಮನೆ ಹಾಳಾಗಲಿ ಅಂತ ಶಾಪ ಹಾಕುವಾಗ ತಮ್ಮ ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಹೆಣೆದು ನಟಿಗೆ ಮುರಿಯುತ್ತಾರೆ.
ಪ್ರ : ಹೊತ್ತು ಹುಟ್ಟುತ್ಲೆ, ಹೊತ್ತು ಮುಳುಗುತ್ಲೆ ಇವರ ಮನೆ ಗುಡಿಸಿ ಗುಂಡಾಂತರ ಆಗಲಿ ಅಂತ ನಟಿಗೆ ಮುರೀತಾಳೆ, ಮನೆಹಾಳಿ.
೧೭೪೨. ನಟ ಕಟ್ಟಿ ನಿಲ್ಲು = ಸಿದ್ಧವಾಗಿ ನಿಲ್ಲು, ಸನ್ನದ್ಧವಾಗಿರು
(ನಡ < ನಡು = ಸೊಂಟ) ಸಾಮಾನ್ಯವಾಗಿ ಅರ್ಚಕರು, ಮಹಾಭಕ್ತರು ದೇವರ ಸೇವೆಗೆ ಮೀಸಲಾಗಿದ್ದೇವೆ ಎಂಬುದನ್ನು ಸೂಚಿಸುವಂತೆ ಸೊಂಟದ ಸುತ್ತ ಒಂದು ವಸ್ತ್ರವನ್ನು ಬಿಗಿದುಕೊಂಡಿರುತ್ತಾರೆ. ಆ ಮೂಲದ ನುಡಿಗಟ್ಟಿದು.
ಪ್ರ : ನಿಮಗಾಗಿ ನಾವು ನಡಕಟ್ಟಿ ನಿಂತಿದ್ದೇವೆ, ಏನೇ ಮಾಡಲಿಕ್ಕೂ ನಾವು ತಯಾರು.
೧೭೪೩. ನಡುಕಟ್ಟು ಕಿತ್ತೆಸೆ = ಸೊಂಟ ಪಟ್ಟಿಯನ್ನು ಕಿತ್ತು ಬಿಸಾಡು
(ನಡುಕಟ್ಟು = ಪಟ್ಟಣಿ, Belt)
ಪ್ರ : ನಡ ಗಟ್ಟಿಗಿದ್ರೆ ನಡುಕಟ್ಟು ಯಾಕೆ?
೧೭೪೪. ನಡತೆಗೆಡು = ಕೆಟ್ಟ ಚಾಳಿಗಿಳಿ
ಪ್ರ : ಗಾದೆ – ನಡತೆ ಕಲಿಯೋದು ಏರುಬಂಡೆ
ನಡತೆ ಕೆಡೋದು ಜಾರುಬಂಡೆ
೧೭೪೫. ನಡು ನೀರಿನಲ್ಲಿ ಕೈ ಬಿಡು = ಅಪಾಯದ ಹೊತ್ತಿನಲ್ಲಿ ದೂರು ಸರಿ. ವಂಚಿಸು
ಪ್ರ : ಅನ್ನಿಗರನ್ನು ಅಂದೇನು ಫಲ. ಒಡಹುಟ್ಟಿದೋರೇ ನಡುನೀರಿನಲ್ಲಿ ಕೈಬಿಟ್ಟರು.
೧೭೪೬. ನಡು ಭದ್ರವಿಲ್ಲದಿರು = ಶಕ್ತಿ ಇಲ್ಲದಿರು
ಪ್ರ : ನಡುಭದ್ರ ಇಲ್ಲದೋನಿಗೆ ಇಬ್ಬರು ಹೆಂಡ್ರು, ಮೇಲೊಬ್ಬಳು ಸೂಳೆ
೧೭೪೭. ನಡೆದಾಡುವ ಹೆಣದಂತಿರು = ನಿಷ್ಕ್ರಿಯನಾಗಿರು, ಜೀವಶ್ರವವಾಗಿರು
ಪ್ರ : ಅವನು ಜೀವಂತ ಮನುಷ್ಯನಾಗಿಲ್ಲ, ನಡೆದಾಡುವ ಹೆಣವಾಗಿದ್ದಾನೆ.
೧೭೪೮. ನಡೆಮಡಿ ಮೇಲೆ ಹೋಗು = ವಿಶೇಷ ಸೌಲಭ್ಯದೊಡನೆ ಸಾಗು, ಮಡಿಯಲ್ಲಿ ಅಡಿ ಇಡು.
ದೇವರ ಉತ್ಸವಗಳು ಆಗುವಾಗ, ಮಡೆಗಡಿಗೆ ಹೊರುವ ಪೂಜಾರಿ, ಕೊಂಡ ಹಾಯಲು ಬಾಯಿಬೀಗ ಚುಚ್ಚಿಸಿಕೊಂಡವರು ಹಾದು ಹೋಗಲು ಅಗಸರವನು ಮಡಿ ಬಟ್ಟೆಯನ್ನು ಹಾಸುತ್ತಾ ಹೋಗುತ್ತಾನೆ. ಅದಕ್ಕೆ ನಡೆಮಡಿ ಎಂದು ಹೆಸರು. ನಡೆಮಡಿಯನ್ನು ಹಾಸದಿದ್ದರೆ ಅವರು ಬರಿ ನೆಲದ ಮೇಲೆ ಕಾಲಿಡುವುದಿಲ್ಲ. ಆ ಆಚರಣೆಯ ಮೂಲದ್ದು ಈ ನುಡಿಗಟ್ಟು.
ಪ್ರ : ಅಮ್ಮನೋರು ನಡೆಮಡಿ ಮೇಲೆ ಹೋಗಬೇಕೆನೋ, ಎಲ್ಲರ ಜೊತೆ ಹೊರಟಿಲ್ಲ.
೧೭೪೯. ನಡೊಲೇಲಿಕ್ಕಿ ಕೋಡೊಲೇಲಿ ತೆಗಿ = ಚಿತ್ರಹಿಂಸೆ ಕೊಡು
(ನೊಡಲೆ < ನಡು + ಒಲೆ = ಮಧ್ಯದ ಒಲೆ ; ಕೋಡೊಲೆ < ಕೂಡೊಲೆ < ಕೂಡು + ಒಲೆ = ನಡೊಲೆಗೆ ಕೂಡಿಕೊಂಡಂತಿರುವ ಪಕ್ಕದ ಒಲೆ. ನಡೊಲೆಯ ಉರಿ ಪಕ್ಕದ ಕೂಡೊಲೆಯ ರಂದ್ರದಲ್ಲಿ ಬರುವ ಹಾಗೆ ಮಾಡಿರುವಂಥದು.)
ಪ್ರ : ಇವಳು ಸೂಸೇನ ನಡೊಲೇಲಿಕ್ಕಿ ಕೋಡೊಲೇಲಿ ತೆಗಿಯೋದು ಯಾರಿಗೆ ಗೊತ್ತಿಲ್ಲ?
೧೭೫೦. ನಮನಮಗುಟ್ಟು = ಆತಂಕಪಟು, ದಿಗಿಲುಗೊಳ್ಳು
(ನಮನಮ < ನಮಃ + ನಮಃ < ಓಂ ನಮಃ + ಓಂ ನಮಃ = ಓಂಕಾರ ಸ್ವರೂಪಿಯಾದ ಪರಮಾತ್ಮನಿಗೆ ನಮನ ಸಲ್ಲಿಸುತ್ತಾ ಸ್ಮರಿಸುವ ರೀತಿ)
ಪ್ರ : ನೀರಿನಲ್ಲಿ ಕುಂತಿದ್ದೀಯ, ಅಲ್ಲಿ ನಿಮ್ಮಪ್ಪ ಬೆಳಿಗ್ಗೆ ಹೋದೋನು ರಾತ್ರಿಯಾದರೂ ಮನೆಗೆ ಬಂದಿಲ್ಲ ಅಂತ ನಮನಮಗುಟ್ತಾ ಅವನೆ
೧೭೫೧. ನರ ಕಿತ್ತುಕೊಳ್ಳು = ಜೋರಾಗಿ ಅರಚಿಕೊಳ್ಳು
ಪ್ರ : ಯಾಕೆ ಹಿಂಗೆ ನರ ಕಿತ್ಕೊಳ್ಳಿ, ಸುಮ್ನೆ ಬಿದ್ದಿರು
೧೭೫೨. ನರ ಸೇದು = ಸಾಯು, ಮರಣ ಹೊಂದು
ಪ್ರ : ಗಾದೆ – ದೇವರ ಪರಸಾದ, ಕಣ್ಣಿಗೊತ್ತಿಕೊಳ್ಳೋ ನಿನ್ನ ನರ ಸೇದ.
೧೭೫೩. ನರಿಬುದ್ಧಿ ತೋರಿಸು = ನುಣುಚಿಕೊಳ್ಳು, ಕೈಕೊಡು, ಕುತಂತ್ರ ಮಾಡು
ಪ್ರ : ನಿಮ್ಮ ಕಡೇನೇ ಇರ್ತೀನಿ ಅಂದೋನು ಕೊನೇ ಗಳಿಗೇಲಿ ನರಿಬುದ್ಧಿ ತೋರಿಸಿಬಿಟ್ಕ.
೧೭೫೪. ನರಿ ಮುಖ ನೋಡು = ಒಳ್ಳೆಯದಾಗು, ಅದೃಷ್ಟ ಕುಲಾಯಿಸು.
ನರಿಮುಖ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿ ಜನಜನಿತ. ನಂಬಿಕೆ ಜನಮನದಲ್ಲಿ ಬೇರೂರುವುದು ಅಂಥ ಹಲವಾರು ಸಾಲನುಭವಗಳು ಸತ್ಯ ಎಂದು ಖಾತ್ರಿಯಾದಾಗ. ಆದ್ದರಿಂದ ಎಲ್ಲ ಜನಪದ ಅನುಭವಗಳನ್ನು ಸಾರಾಸಗಟಾಗಿ ಕುರುಡು ನಂಬಿಕೆಗಳೆಂದು ಗುಡಿಸಿ ಮೂಲೆಗೆ ತಳ್ಳಲಾಗುವುದಿಲ್ಲ.
ಪ್ರ : ಎದ್ದೋನೆ ಎಲ್ಲೋ ನರಿಮುಖ ನೋಡಿದ್ದೆ ಹೋಗು, ಇಲ್ಲದಿದ್ರೆ ಇದೆಲ್ಲಿ ಸಿಕ್ಕೋದು?
೧೭೫೫. ನಲುಗಿ ಹೋಗು = ಸೊರಗಿ ಹೋಗು, ಕಷ್ಟದಿಂದ ಹಣ್ಣಾಗು
(ನಲುಗು = ಸೊರಗು, ಕೃಶವಾಗು)
ಪ್ರ : ಕುಟುಂಬದ ತಾಪತ್ರಯಗಳಿಂದ ಇತ್ತೀಚೆಗೆ ತುಂಬ ನಲುಗಿ ಹೋಗಿದ್ದಾನೆ.
೧೭೫೬. ನವಿರೇಳು = ರೋಮಾಂಚನವಾಗು
(ನವಿರು = ಕೂದಲು ; ಏಳು = ನೆಟ್ಟಗಾಗು)
ಪ್ರ : ಸವಿಮುತ್ತಿಗೆ ನವಿರೇಳದವರಾರು?
೧೭೫೭. ನವೆಯಾಗು = ಕಾಮೋದ್ದೀಪನವಾಗು, ಏಟು ಹೊಡೆಯಲು ಅಥವಾ ಏಟು
ತಿನ್ನಲು ತವಕಿಸು
(ನವೆ = ಕಡಿತ)
ಪ್ರ : ಸುಮ್ನಿರೋಕಾಗಲ್ವ ? ಯಾಕೆ ನವೆಯಾಗ್ತದ?
೧೭೫೮. ನವೆದು ನೂಲಾಗು = ಕ್ಷೀಣಿಸು, ಕ್ಷಯಿಸು
(ನವೆಯುವುದು = ಸವೆಯುವುದು)
ಪ್ರ : ಅವನ್ನ ನೋಡೋಕಾಗಲ್ಲ, ನವೆದು ನೂಲಾಗಿಬಿಟ್ಟಿದ್ದಾನೆ.
೧೭೫೯. ನಸನಸ ಎನ್ನು = ಕಾಮೋದ್ದೀಪನದಿಂದ ತಳಮಳಿಸು, ಚುಮಚುಮ ಎಂದು ನವೆಯಾಗು
ಪ್ರ : ನಸನಸ ಅಂತಿರೋದ್ಕೆ ಮುಸಮುಸ ಅಂತ ಬುಸುಗರೀತಿರೋದು.
೧೭೬೦. ನಸುಕಾಗು = ಬೆಳಗಿನ ಜಾವವಾಗು, ಬೆಳಗಾಗುವ ಹೊತ್ತಾಗು
ಪ್ರ : ಅವನು ಊರಿಗೆ ಬಂದಾಗ ಆಗಲೆ ನಸುಕಾಗಿತ್ತು
೧೭೬೧. ನಸುಗುನ್ನಿಕಾಯಿ ವಿದ್ಯೆ ತೋರಿಸು = ತಂದಿಕ್ಕಿ ತಮಾಷೆ ನೋಡುವ ನಾರದ ವಿದೆಯ ತೋರಿಸು.
(ನಸುಗುನ್ನಿಕಾಯಿ = ಸೋಕಿದರೆ ಗಂದೆ ಏಳುವ, ಮೈಯೆಲ್ಲ ನವೆಯಾಗುವ ಒಂದು ಬಗೆಯ ಸಸ್ಯದ ಕಾಯಿ)
ಪ್ರ : ಅವನ ನುಸಗುನ್ನಿಕಾಯಿ ವಿದ್ಯೆ ಊರೊಳಗೆ ಯಾರಿಗೆ ಗೊತ್ತಿಲ್ಲ?
೧೭೬೨. ನಸೆ ಹತ್ತು = ಬೆದೆಗೊಳ್ಳು
(ನಸೆ = ನವೆ, ಸಂಭೋಗಕಾತರ)
ಪ್ರ : ನಸೆ ಹತ್ತಿದ ಕಡಸಿನಂಗೆ ಹೋರಿ ಹಿಂದೆ ಪಾರು. (< ಹಾರು = -ಓ-ಡಿ ಹೋಗು)
೧೭೬೩. ನಾಗರಾಗು = ಮೈಮೇಲೆ ಗುಳ್ಳೆಗಳೇಳು, ಸಣ್ಣ ಸಣ್ಣ ಗಾಯಗಳಾಗು.
ಜನಪದರು ‘ನಾಗರಾಗಿದೆ’ ಎಂದು ನಾಗರಪೂಜೆ ಮಾಡಿ, ಹುತ್ತದ ಮಣ್ಣನ್ನು ತಂದು ಗಾಯಗಳಿಗೆ ಹಚ್ಚುತ್ತಾರೆ. ಅದು ವಾಸಿಯಾಗುತ್ತದೆ. ಬಹುಶಹ ಗಾಯವನ್ನು ವಾಸಿ ಮಾಡುವ ಹಣ ಹುತ್ತದ ಮಣ್ಣಿನಲ್ಲಿರಬೇಕು. ಏಕೆಂದರೆ ಗೆದ್ದಲು ಹುಳ ಎಂಜಲಿನಿಂದ ಮಣ್ಣನ್ನು ನೆನಸಿ ಹುತ್ತಗಟ್ಟಿರುತ್ತದೆ. ಆದ್ದರಿಂದ ಆಧುನಿಕ ಕಾಲದ ಪಾಶ್ಚಾತ್ಯ ವೈದ್ಯ ಪದ್ಧತಿಯಲ್ಲಿ ನುರಿತವರು ಹುತ್ತದ ಮಣ್ಣಲ್ಲಿರುವ ಗಾಯವನ್ನು ಮಾಯಿಸುವ ಮದ್ದಿನ ಗುಣದ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸುವುದು ಸೂಕ್ತ.
ಪ್ರ :ಇದು ಬೇರೇನಲ್ಲ, ನಾಗರಾಗಿದೆ. ನಾಗರಿಗೆ ತನಿ ಎರೆದು, ಹುತ್ತದ ಮಣ್ಣನ್ನು ತಂದು ಹಚ್ಚಿ ವಾಸಿಯಾಗ್ತದೆ.
೧೭೬೪. ನಾಗವಳಿ ಮೇಲೆ ಆಣೆ ಮಾಡಿ ಹೇಳು = ಪ್ರಾಮಾಣಿಕವಾಗಿ ಹೇಳು, ಶಪಥ
ಮಾಡಿ ಹೇಳು
(ನಾಗವಳಿ < ನಾಗವಲ್ಲಿ = ವೀಳ್ಯದ ಎಲೆ) ದೇವರ ಮೇಲೆ, ತಂದೆತಾಯಿಗಳ ಮೇಲೆ, ಭೂಮಿತಾಯಿ ಮೇಲೆ, ಮಗುವಿನ ಮೇಲೆ ಆಣೆ ಇಟ್ಟು ಹೇಳುವಂತೆಯೇ ನಾಗವಳಿ ಮೇಲೆ ಆಣೆ ಇಟ್ಟು ಹೇಳುವ ಪದ್ಧತಿ ಸಮಾಜದಲ್ಲಿ ಚಾಲ್ತಿಯಲ್ಲಿದೆ. ವಿಳ್ಯದೆಲೆಗೆ ಸಿಕ್ಕಿದ ಈ ಗೌರವ ಚಿಂತನಾರ್ಹ.
ಪ್ರ : ಈ ನಾಗವಳಿ ಮೇಲೆ ಆಣೆ ಇಟ್ಟು ಹೇಳ್ತೀನಿ. ಆ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ.
೧೭೬೫. ನಾಗಾಲೋಟ ಓಡು. = ವೇಗವಾಗಿ ಓಡು, ದೌಡು ಹೋಗು
(ನಾಗಾಲೋಟ < ನಾಲ್ಕು ಕಾಲ ಓಟ) ಪ್ರಾಣಿಗಳು ತಮ್ಮ ಮುಂದಿನ ಕಾಲುಗಳನ್ನು ಹಿಂದಿನ ಕಾಲುಗಳನ್ನು ಎತ್ತಿ ಮುಂದಕ್ಕೆಸೆಯುತ್ತಾ ಓಡುವ ರೀತಿಗೆ ನಾಗಾಲೋಟ ಎನ್ನುತ್ತಾರೆ.
ಪ್ರ : ನಾಗಾಲೋಟದಲ್ಲಿ ಹೋಗಿ, ಇದನ್ನು ಅವನಿಗೆ ತಲುಪಿಸಿ ಬರಬೇಕು.
೧೭೬೬. ನಾಚಾರಾಗು = ಬಡವಾಗು
(ನಾಚಾರು < ಲಾಚಾರ್ (ಹಿಂ) = ಕೃಶ)
ಪ್ರ : ತಿನ್ನೋಕೆ ಹುಲ್ಲಿಲ್ಲದೆ ದನಗಳೆಲ್ಲ ನಾಚಾರಾಗಿವೆ.
೧೭೬೭. ನಾಚಿ ನೀರಾಗು = ನಾಚಿಕೆಯಿಂದ ದ್ರವಿಸಿ ಹೋಗು, ಹೆಚ್ಚು ಲಜ್ಜಾಭಾವ ಉಂಟಾಗು
ಪ್ರ : ಬಚ್ಚಲ ಮನೆಗೆ ಬಂದೋನು, ಬೆತ್ತಲೆ ಇದ್ದ ನನ್ನ ಕಂಡು ನಾಚಿನೀರಾಗಿಬಿಟ್ಟ.
೧೭೬೮. ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರಿ = ಚಟಪಟನೆ ಮಾತನಾಡು. ಶಬ್ದ ದಾರಿದ್ರ ಇಲ್ಲದಿರು.
(ಓಡು = ಬಾಣಲಿಯಾಕಾರದ ಒಡೆದ ಮಡಕೆಯ ತಳಭಾಗ. ಕಾಳನ್ನು ಹುರಿಯಲು ಗ್ರಾಮಾಂತರ ಪ್ರದೇಶದಲ್ಲಿ ಹಿಂದೆ ಬಳಸುತ್ತಿದ್ದಂಥ ಸಾಧನ) ಕಾಯಿಗಳು ಒಣಗಿ ತಳ್ಳಾದ ಮೇಲೆ, ಅವುಗಳೆನ್ನೆಲ್ಲ ಕಿತ್ತು ತಂದು ಕಣದಲ್ಲಿ ಚಚ್ಚಿ, ಉಜ್ಜಿ, ಕಾಳನ್ನು ಬೇರ್ಪಡಿಸಿ, ಒಟ್ಟುಗೂಡಿಸಿ ಮನೆಗೆ ತರುತ್ತಾರೆ. ತಮಗೆ ಬೇಕಾದಷ್ಟನ್ನು ಓಡಿನಲ್ಲಿ ಹಾಕಿ ಹುರಿಯುವಾಗ, ಕಾಳುಗಳು ಚಟಪಟಗುಟ್ಟುತ್ತಾ ಅವಲಾಗಿ ಸಿಡಿಯುತ್ತವೆ. ಆ ಕ್ರಿಯೆಗೆ ಈ ನುಡಿಗಟ್ಟಿನ ಬೆನ್ನಿಗಿದೆ. ಆದರೆ ಇಲ್ಲಿ ಹೆಚ್ಚು ಗಮನಿಸುವಂಥದು ತಮ್ಮ ಜಮೀನಿನಲ್ಲಿರುವ ತಳ್ಳುಗಳನ್ನು ಬಿಡಿಸಿ ತಂದು, ಕಾಳುಗಳನ್ನು ಹೊರತೆಗೆದು, ಅವುಗಳನ್ನು ಪುಟ್ಟಿ ತುಂಬಿಕೊಳ್ಳುವಂತೆ, ಇಲ್ಲಿ ಇಡೀ ನಾಡಲ್ಲಿರುವ ಶಬ್ದ (ಮಾತು)ಗಳನ್ನು ಒಟ್ಟುಗೂಡಿಸಿ ತಂದು ನಾಲಗೆ ಓಡಲ್ಲಿ ಹುರಿಯುವುದು ಎಂದರೆ, ಆ ಎಲ್ಲ ಶಬ್ದಭಂಡಾರ ಕರಗತವಾಗಿರುವುದನ್ನು ತುಂಬ ಶಕ್ತಿಯುತವಾಗಿ ಕಟ್ಟಿಕೊಡುತ್ತಿದೆ ಎಂಬುದನ್ನು.
ಪ್ರ : ಕುಲ ಯಾವುದಾದ್ರೇನು, ನಾಡಗಾಡೋ ಮಾತ್ನೆಲ್ಲ ಓಡಾಗ್ಹುರೀತಾನೆ, ಅದಕ್ಕೆ ಬೆಲೆ ಕೊಡಿ
೧೭೬೯. ನಾಡಿ ನಿಲ್ಲು = ಮರಣ ಹೊಂದು
(ನಾಡಿ = ರಕ್ತ ಸಂಚರಿಸುವ ನಾಳ)
ಪ್ರ : ಗಾದೆ – ನಾಡಿ ನಿಂತ ಮೇಲೆ ನಾಡಾದ್ರೇನು, ಕಾಡಾದ್ರೇನು?
೧೭೭೦. ನಾಡಿ ಹಿಡಿದು ನೋಡು = ಸಮಸ್ಯೆಯ ಮೂಲ ಹಿಡಿದು ಚಿಂತಿಸು
ಪ್ರ : ನಾಡಿ ಹಿಡಿದು ನೋಡಿದಾಗ ಅದರ ಜಾಡು ಸಿಗ್ತದೆ.
೧೭೭೧. ನಾಣ್ಯವಾಗಿರು = ನಯನಾಜೂಕಿನಿಂದ ಕೂಡಿರು, ಅಂದವಾಗಿರು
ಪ್ರ : ಹುಡುಗಿ ತುಂಬ ನಾಣ್ಯವಾಗಿದ್ದಾಳೆ, ಮದುವೆ ಮಾಡಿಕೊಳ್ಳಬಹುದು.
೧೭೭೨. ನಾಣ್ಯದ ಗತಿಯಾಗು = ಸವೆಯುವ ತನಕ ಚಲಾವಣೆಯಲ್ಲಿದ್ದು, ಸವೆದ ಮೇಲೆ ಮೂಲೆ ಸೇರು.
ಪ್ರ : ನಡೆಯೋತನಕ ನಾಣ್ಯ ಎಂಬ ಗಾದೆ ನಮ್ಮ ಸಮಾಜದಲ್ಲಿ ಹೆಣ್ಣಿನ ಹಣೆಬರೆಹಕ್ಕೆ ಬರೆದ ಭಾಷ್ಯದಂತಿದೆ.
೧೭೭೩. ನಾದಾರಾಗು = ದಿವಾಳಿಯಾಗು
(ನಾದಾರು < ನಾದಾರ್ (ಹಿ) = ಪಾಪರ್)
ಪ್ರ : ಅವನಿಗೆ ಯಾವ ಆಧಾರ ಇದೆ, ನಾದಾರಾಗಿ ನೆಲ ಕಚ್ಚಿದ್ದಾನೆ.
೧೭೭೪. ನಾನು ಮುಂದು ತಾನು ಮುಂದು ಎಂದು ಬರು = ಒಬ್ಬರ ಮೇಲೊಬ್ಬರು ಬಿದ್ದು ಬರು, ವಸ್ತು ಅಂದವಾಗಿರು.
ಪ್ರ : ಗೊಂಬೆ ಅಂತ ಹೆಣ್ಣು ನೋಡಿ, ಮದುವೆ ಆಗಬೇಕೂಂತ ನಾನು ಮುಂದು ತಾನು ಮುಂದು ಅಂತ ಜನ ಮುಗಿಬಿದ್ದು ಬರ್ತಾರೆ.
೧೭೭೫. ನಾಮ ಹಾಕು = ಮೋಸ ಮಾಡು.
ವಿಭೂತಿ ವೀರಶೈವ ಮತಸೂಚಕವಾದರೆ ನಾಮ ವೈಷ್ಣವಮತ ಸೂಚಕ. ರಾಮಾನುಜಾಚಾರ್ಯರು ಹಾಗೂ ಅವರ ಅನುಯಾಯಿಗಳು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬಂದ ಮೇಲೆ ಮೂಡಿದ ನುಡಿಗಟ್ಟಿದು. ಮೋಸ ಮಾಡು ಎಂಬ ಅರ್ಥದಲ್ಲಿ ವಿಭೂತಿ ಹಾಕು ಎಂಬ ನುಡಿಗಟ್ಟು ಚಾಲ್ತಿಗೆ ಬರದೆ ನಾಮ ಹಾಕು ಎಂಬ ನುಡಿಗಟ್ಟು ಚಾಲ್ತಿಗೆ ಬಂದಿರುವುದು ನಿಗೂಢವಾಗಿದೆ. ಬಹುಶಃ ವೈಷ್ಣವ ಮತಕ್ಕೆ ಜನರನ್ನು ಮತಾಂತರಿಸಿದರು ಎಂಬ ಅರ್ಥದಲ್ಲಿ ಮೊದಲು ಬಳಕೆಯಾಗಿ, ಕ್ರಮೇಣ ಮೋಸ ಮಾಡು ಎಂಬ ಪ್ರಸ್ತುತಾರ್ಥಕ್ಕೆ ಪದಾರ್ಪನ ಮಾಡಿರಬಹುದೆ? ಎಂಬುದು ಮನನಾರ್ಹ.
ಪ್ರ : ಅವನು ಯಾರಿಗೆ ನಾಮ ಹಾಕಿಲ್ಲ, ಹೇಳು?
೧೭೭೬. ನಾಮರ್ಧ ಕೆಲಸ ಮಾಡು = ಷಂಡ ಕೆಲಸ ಮಾಡು
(ನಾಮರ್ದ < ನ + ಮರ್ದ = ಗಂಡಸಲ್ಲದವನು, ಷಂಡ; ಮರ್ದ = ಗಂಡಸು)
ಪ್ರ : ಇಂಥ ನಾಮರ್ದ ಕೆಲಸ ಮಾಡೋದ್ಕಿಂತ ಸುಮ್ಮನೆ ಇದ್ದಿದ್ರೆ ಎಷ್ಟೊ ಚೆನ್ನಾಗಿರ್ತಿತ್ತು.
೧೭೭೭. ನಾಯಡಿದಂತಾಡು = ಒಂದೇ ಸಮನೆ ಬೊಗಳು, ಘನತೆ ಬಿಟ್ಟು ವರ್ತಿಸು
ಪ್ರ : ಅವನ ಹೆಂಡ್ರು, ಮನೆಗೆ ಯಾರಾದರೂ ಹೋದ್ರೆ, ಒಳ್ಳೆ ನಾಯಾಡಿದಂಗಾಡ್ತಾಳೆ.
೧೭೭೮. ನಾಯಿಪಾಡಾಗು = ಅನ್ನಕ್ಕೆ ಅಲೆದಾಡುವ ಪರಿಸ್ಥಿತಿಯೊದಗು.
ಪ್ರ : ನನಗೆ ಬಂದ ನಾಯಿಪಾಡು ಊರ್ಗೇ ಗೊತ್ತಿದೆ, ಗುಟ್ಟೇನು ಬಂತು?
೧೭೭೯. ನಾಯಿಬೆಕ್ಕಿನ ಸಂಬಂಧವಾಗು = ಕಚ್ಚಾಡು, ಜಗಳವಾಡು
ಪ್ರ : ಗಂಡ ಹೆಂಡ್ರು ಸಂಬಂಧ ನಾಯಿಬೆಕ್ಕಿನ ಸಂಬಂಧ ಆಗಬಾರ್ದು
೧೭೮೦. ನಾಯಿ ಕೆಮ್ಮು ಬಂದು ನೆಗೆದು ಬೀಳು = ಗೂರಲು ಬಂದು ಮರಣ ಹೊಂದು
(ನೆಗೆದು ಬೀಳು = ಸಾಯು)
ಪ್ರ : ಹೆಂಗೆ ಸತ್ತ ಅಂದ್ರೆ, ನಾಯಿಕೆಮ್ಮು ಬಂದು ನೆಗೆದು ಬಿದ್ದ.
೧೭೮೧. ನಾಯಿ ನರಿ ತಿನ್ನು = ದಿಕ್ಕಿಲ್ಲದಂತಾಗು, ಹಾಳಾಗು
ಪ್ರ : ಗಾದೆ – ನಂದರಾಜನ ಬದುಕು ನಾಯಿನರಿ ತಿಂದು ಹೋಯ್ತು. (ಕರ್ನಾಟಕವನ್ನು ಆಳಿದವರಲ್ಲಿ ನಂದವಂಶವೂ ಒಂದು. ಅವರ ಕಾಲದಲ್ಲಿ ಚರ್ಮದ ನಾಣ್ಯಗಳಿದ್ದುವೆಂದೂ, ಅವುಗಳನ್ನು ನಾಯಿಗಳು ಕಚ್ಚಿಕೊಂಡು ಹೋಗಿ ತಿನ್ನುತ್ತಿದ್ದವೆಂದೂ ಆ ಗಾದೆಗೆ ಐತಿಹ್ಯ ಉಂಟು. ನಂದರ ಕಾಲದಲ್ಲಿ ಚರ್ಮದ ನಾಣ್ಯಗಳು ಇದ್ದವೆ ಅಥವಾ ಇಲ್ಲವೆ ಎಂಬುದನ್ನು ಇತಿಹಾಸಕಾರರು ನಿರ್ಧರಿಸಬೇಕಾಗುತ್ತದೆ._
೧೭೮೨. ನಾಯಿ ನಾಲಗೆಯಂತಿರು = ತುಂಬ ತೆಳ್ಳಗಿರು
ಪ್ರ : ನಾಯಿ ನಾಲಗೆಯಂತಿರುವ ಇದು, ಅಷ್ಟೊಂದು ಭಾರ ತಡೆಯುತ್ತ?
೧೭೮೩. ನಾಯಿ ಬಾಳಾಗು = ಅಲೆದಾಟವಾಗು, ಸದಾ ಓಡಾ-ಟ-ವಾ-ಗು
ಪ್ರ : ಗಾದೆ – ನಾಯಿಗೆ ಕೆಲಸವಿಲ್ಲ, ನಿಲ್ಲೋಕೆ ಹೊತ್ತಿಲ್ಲ
೧೭೮೪. ನಾಯಿ ಹೊಡಿಯೋ ಕೋಲಿನಂತಿರು = ತೆಳ್ಳಗಿರು, ಸಣ್ಣಗಿರು
ಪ್ರ : ಹೆಂಡ್ರು ಗಟ್ಟಿಸಿದ ಮುಡೆ ಇದ್ದಂಗವಳೆ, ಗಂಡ ನಾಯಿ ಹೊಡಿಯೋ ಕೋಲಿದ್ದಂಗವನೆ.
೧೭೮೫. ನಾರೆತ್ತು = ಚರ್ಮ ಸುಲಿ, ಹಿಂಸಿಸು
(ನಾರು = ಮರದ ತಿಗುಡು, ತೆಂಗನಕಾಯಿ ಜುಂಜು)
ಪ್ರ : ಇವತ್ತು ಅವನಿಗೆ ಚೆನ್ನಾಗಿ ನಾರೆತ್ತಿದ್ದೀನಿ.
೧೭೮೬. ನಾಲಗೆ ಇರಿದುಕೊಳ್ಳು = ಅರಚಿಕೊಳ್ಳು, ಕಿರುಚಿಕೊಳ್ಳು
ನಾಲಗೆ ಇರಿದುಕೊಂಡು ಸಾಯುವ ಪದ್ಧತಿ ಹಿಂದೆ ಇತ್ತೆಂದು ಕಾಣುತ್ತದೆ. ಇಂದಿಗೂ ಹಳ್ಳಿಗಾಡಿನಲ್ಲಿ ‘ನೀನು ಹಂಗೆ ಮಾಡಿದ್ರೆ, ನಾನು ನಾಲಗೆ ಇರಿದುಕೊಂಡು ಸಾಯ್ತೇನೆ’ ಎಂದು ಹೇಳುವುದು, ಹಿಂದಿನ ಆ ಪದ್ಧತಿಯ ಪಳೆಯುಳಿಕೆ ಎನ್ನಿಸುತ್ತದೆ. ಆದರೆ ಈಗ ಅದು ಹೆಚ್ಚಾಗಿ ಅರಚಿಕೊಳ್ಳು ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ.
ಪ್ರ : ಮಕ್ಕಳು ಹಂಗೆ ನಾಲಗೆ ಇರಿದುಕೊಂಡ್ರೂ, ಮಕ್ಕಳ ಕೈಗೆ ತಿನ್ನೋಕೆ ಏನೂ ಕೊಡಲಿಲ್ಲವಲ್ಲ, ಜೀನಿ.
೧೭೮೭. ನಾಲಗೆ ಉದ್ದ ಮಾಡು = ಹದ್ದು ಮೀರು, ಬಾಯಿಗೆ ಬಂದಂತೆ ಮಾತಾಡು
ಪ್ರ : ನೀನು ಇತ್ತೀಚೆಗೆ ನಾಲಗೆ ತುಂಬ ಉದ್ದ ಮಾಡ್ತಾ ಇದ್ದೀಯಾ, ಇದು ಒಳ್ಳೇದಲ್ಲ
೧೭೮೮. ನಾಲಗೆ ಉಳಿಸಿಕೊಳ್ಳು = ಕೊಟ್ಟ ಮಾತನ್ನು ನಡೆಸು, ಮಾತಿಗೆ ತಪ್ಪದಿರು
ಪ್ರ : ನಾಲಗೆ ಉಳಿಸಿಕೊಂಡ್ರೆ ನಾಡನ್ನೇ ಉಳಿಸಿಕೊಂಡಂತೆ
೧೭೮೯. ನಾಲಗೆ ಒಣಗಿ ಹೋಗು = ಭಯವಾಗು, ಆಘಾತವಾಗು
ಪ್ರ : ಆ ಸುದ್ಧಿ ಕೇಳಿದೇಟಿಗೇ ನನಗೆ ನಾಲಗೆ ಒಣಗಿ ಹೋಯ್ತು.
೧೭೯೦. ನಾಲಗೆ ಕಚ್ಚಿಕೊಳ್ಳು = ಮಾತನ್ನು ತಡೆಹಿಡಿ, ತಪ್ಪಿನ ಅರಿವಾಗಿ ಮಾತನ್ನು ಅಂತರಿಸು
ಪ್ರ : ತಪ್ಪಿಲ್ಲದೆ ಒಬ್ಬರನ್ನು ದಬಾಯಿಸಬಾರದು ಅಂತ ನಾಲಗೆ ಕಚ್ಚಿಕೊಂಡೆ.
೧೭೯೧. ನಾಲಗೆ ಕಿತ್ಕೊಳ್ಳು = ಅಳು, ಆಲ್ವರಿ, ರಚ್ಚೆ ಮಾಡು
ಪ್ರ : ನಾಲಗೆ ಕಿತ್ಕೊಂಡ್ರೂ ಮಕ್ಕಳ ಕೈಗೆ ಏನೂ ಹಚ್ಚಲಿಲ್ಲವಲ್ಲ, ಜೀನಿ
೧೭೯೨. ನಾಲಗೆ ಕೆಟ್ಟು ಹೋಗು = ರುಚಿ ಶಕ್ತಿ ಕ್ಷೀಣವಾಗು
ಪ್ರ : ಜ್ವರ ಬಂದು ನಾಲಗೆ ಕೆಟ್ಟು ಹೋಗಿದೆ, ಕೋಳಿ ಬಾಯಿಗೆ ನೀರಾದ್ರೂ ಬಿಡಿ.
೧೭೯೩. ನಾಲಗೆ ಕೆಡಿಸಿಕೊಳ್ಳು = ಮಾತಿಗೆ ತಪ್ಪು, ನಂಬಿಕೆ ಕೆಡಿಸಿಕೊಳ್ಳು
(ನಾಲಗೆ < ನಾಲುಕೆ (ತ) = ಜಿಹ್ವೆ)
ಪ್ರ : ನಾಲಗೆ ಕೆಡಿಸಿಕೊಂಡ ಮೇಲೆ ಮನುಷ್ಯ ಇದ್ದೇನು ಫಲ?
೧೭೯೪. ನಾಲಗೆ ಚಪ್ಪರಿಸು = ಲೊಟಿಗೆ ಹೊಡಿ, ರುಚಿಯನ್ನು ಸವಿ
ಪ್ರ : ನಾಲಗೆ ಚಪ್ಪರಿಸಿಕೊಂಡು ಉಂಡು, ಕಾಲು ಚಾಚಿಕೊಂಡು ಮಲಗಿದ್ರೆ ಮನೆಗೆಲಸ ಮಾಡೋರ್ಯಾರು ?
೧೭೯೫. ನಾಲಗೆ ಚಾಚು = ಮಧ್ಯೆ ಬಾಯಿ ಹಾಕು, ಅನ್ಯರ ವಿಷಯದಲ್ಲಿ ಮೂಗು ತೂರಿಸು
ಪ್ರ : ನಿನಗೆ ಸಂಬಂಧ ಪಡದ ವಿಷಯದಲ್ಲಿ ಯಾಕೆ ನಾಲಗೆ ಚಾಚ್ತಿ?
೧೭೯೬. ನಾಲಗೆ ದೊಡ್ಡದು ಮಾಡು = ಜೋರು ಮಾಡು, ಆವುಟ ಮಾಡು
ಪ್ರ : ನಾಲಗೆ ದೊಡ್ಡದು ಮಾಡಬೇಡ, ಹೇಳಿದ್ದೀನಿ. ಹೆಂಗಸಿಗೆ ಸಹನೆ ಅನ್ನೋದು ಇರಬೇಕು.
೧೭೯೮. ನಾಲಗೆಗೆ ನಚ್ಚಿರುವು ಮುಚ್ಚು = ಮರಣ ಹೊಂದು
(ನಚ್ಚಿರುವು = ಸಣ್ಣ ಸಣ್ಣ ಕೆಂಚಿರುವೆ; ಮುಚ್ಚು = ಮುತ್ತಿಕೊಳ್ಳು)
ಪ್ರ : ಕಚ್ಚ ಬಾರದ ಕಡೆ ಕಚ್ಚಿಬಿಟ್ಟನಲ್ಲೆ, ಇವನ ನಾಲಗ್ಗೆ ನಚ್ಚಿರುವು ಮುಚ್ಚ!
೧೭೯೯. ನಾಲಗೆ ಬಿಗಿ ಹಿಡಿ = ಹಿಡಿತವಾಗಿ ಮಾತಾಡು, ಬಾಯಿ ಹೋದಂತೆ ಮಾತಾಡದಿರು.
ಪ್ರ : ನಾಲಗೆ ಬಿಗಿ ಹಿಡಿದು ಮಾತಾಡೋ ಅಮ್ಮಣ್ಣಿ ಮಗನೆ, ಕಪ್ಪಾಳಕ್ಕೆ ಹೊಡೆದು ಬಿಟ್ಟೇನು
೧೮೦೦. ನಾಲಗೆ ಬೀಳು = ಮಾತು ನಿಲ್ಲು, ಮರಣ ಹೊಂದು
ಪ್ರ : ಚೆಂಬೇಲಿ ಅಂತಾನಲ್ಲ, ಇವನ ನಾಲಗೆ ಬೀಳ!
೧೮೦೧. ನಾಲಗೆ ಮೇಲೆ ಬರೆ ಹಾಕು = ಶಿಕ್ಷೆ ಕೊಡು.
(ಬರೆ ಹಾಕು = ಕಾದ ಸಲಾಖೆಯಿಂದ ಸುಡಿಗೆ ಹಾಕು) ಪ್ರಾಚೀನ ಸಮಾಜದಲ್ಲಿ ಅನಾಚಾರ ಮಾಡಿದವರನ್ನು ಕುಲಕ್ಕೆ ಸೇರಸಿಕೊಳ್ಳಬೇಕಾದರೆ ಶುದ್ಧೀಕರಣ ಆಚರಣೆ ಎಂದು ನಾಲಗೆಯ ಮೇಲೆ ಬರೆ ಹಾಕುವ ವಾಡಿಕೆ ಇತ್ತು. ಇಂದೂ ಕೂಡ ಮಡಿವಂತರಲ್ಲಿ ಆ ಆಚರಣೆ ಇದೆ. ಈ ನುಡಿಗಟ್ಟಿಗೆ ಅಂಥ ಆಚರಣೆ ಮೂಲ
ಪ್ರ : ನೀನು ಇನ್ನೊಂಣದು ಸಾರಿ ಅಂದ್ರೆ, ನಾಲಗೆ ಮೇಲೆ ಬರೆ ಹಾಕಿಬಿಡ್ತೀನಿ.
೧೮೦೨. ನಾಲಗೆಗೆ ಮುಳ್ಳು ಚುಚ್ಚಿ ಕೂಡಿಸು = ಮಾತಾಡದಂತೆ ಕ್ರಮ ಕೈಗೊಳ್ಳು
ಪ್ರ : ಗಾದೆ – ನಾಲಗೆಗೆ ಮುಳ್ಳು ಚುಚ್ಚಿ ಅಟ್ಟದ ಮೇಲೆ ಕೂಡಿಸಿದ್ರೂ
ಮಳೆಗಾಳಿ ಬಂದಾಗ ಎಲ್ಲಿದ್ರಿ ಅಂದ್ಲಂತೆ ಬಾಯಿಹರಕಿ
೧೮೦೩. ನಾಲಗೆಗೆ ಹುಳ ಬೀಳು = ಸಾಯು
ಪ್ರ : ಬಾಯಿಗೆ ಬಂದ ಹಾಗೇ ಬಯ್ತಾನೆ, ಇವನ ನಾಲಗ್ಗೆ ಹುಳ ಬೀಳ!
೧೮೦೪. ನಾಲಗೇಲಿ ನೀರು ಸುರಿಸು = ಆಸೆ ಪಡು
ಊಟ ಮಾಡುವಾಗ ನಾಯಿ ನನಗೂ ಒಂದು ತುತ್ತು ಹಾಕಲಿ ಎಂದು ಆಸೆಯಿಂದ ನಾಲಗೆಯಿಂದ ನೀರು ಸುರಿಸುತ್ತಾ ನಿಂತಿರುತ್ತದೆ. ಆ ವರ್ತನೆ ಈ ನುಡಿಗಟ್ಟಿಗೆ ಮೂಲ.
ಪ್ರ : ಊಟ ಮಾಡುವಾಗ್ಗೆ ಸರಿಯಾಗಿ, ಇವಳೊಬ್ಬಳು ಬಂದು ನಾಲಗೇರಿ ನೀರು ಸುರಿಸ್ಕೊಂಡು ನಿಂತ್ಕೊಂಡು ಬಿಡ್ತಾಳೆ.
೧೮೦೫. ನಾಲಗೆ ಸವರು = ಹೊಸ್ತಿಲು ದಾಟಲು ತವಕಿಸು, ಹೊರಕ್ಕೆ ದುಮ್ಮಿಕ್ಕಲು ಹವಣಿಸು
ಪ್ರ : ತುಂಬಿದ ಕರೆ ಈಗಲೋ ಆಗಲೋ ಕೋಡಿ ಬೀಳ್ತೀನಿ ಅಂತ ನಾಲಗೆ ಸವರ್ತಾ ಅದೆ.
೧೮೦೬. ನಾಲಗೆ ಸೇದಿ ಹೋಗು = ಮರಣ ಹೊಂದು
(ಸೇದು = ನೆಟ್ಟಗಾಗು, ಸೆಟೆದುಕೊಳ್ಳು)
ಪ್ರ : ವಾಲಗ ಊದಿಸಾನ ಅಂದ್ರೆ ಇನ್ನೂ ಇವನ ನಾಲಗೆ ಸೇದಿ ಹೋಗಲಿಲ್ವಲ್ಲ
೧೮೦೭. ನಾಲ್ಕು ಗಡಿಸು = ಹೊಡಿ, ಏಟು ಕೊಡು
(ಗಡಿಸು < ಗಟ್ಟಿಸು < ಘಟ್ಟಿಸು = ಹೊಡಿ)
ಪ್ರ : ನಾಲ್ಕು ಗಡಿಸಿದ ಮೇಲೆ ಗಡರಗಬ್ಬೆಲ್ಲ ಇಳಿದು ಹೋಯ್ತು
೧೮೦೮. ನಾಲ್ಕು ಮೂಲೆ ಸಮನಾಗಿರು = ಅನುಕೂಲವಾಗಿರು, ಯಾವ ಕಷ್ಟಕಾರ್ಪಣ್ಯವೂ ಇಲ್ಲದೆ ಇರು.
ಪ್ರ : ನಾಲ್ಕು ಮೂಲೆ ಸಮನಾಗಿದ್ದೋರಿಗೆ ನಿರ್ಗತಿಕರ ಗೋಳು ಹೇಗೆ ಗೊತ್ತಾಗಬೇಕು?
೧೮೦೯. ನಾಲ್ಕು ಸೆಣೆ = ನಾಲ್ಕು ಏಟು ಹೊಡಿ
(ಸೆಣೆ = ಚಚ್ಚು, ಹೊಡಿ)
ಪ್ರ : ಬಟ್ಟೆ ಸೆಣೆದಂತೆ ನಾಲ್ಕು ಸೆಣೆದ ಮೇಲೆ ನೆಣನೆಲ್ಲ ಇಳೀತು
೧೮೧೦. ನಾಲೋರ ಹೆಗಲ ಮೇಲೆ ನಗನಗ್ತಾ ಹೋಗು = ಮರಣ ಹೊಂದು, ದುಷ್ಟನ ಸಾವು ಸಂತೋಷ ತರು.
ಸತ್ತ ವ್ಯಕ್ತಿ ಒಳ್ಳೆಯವನಾಗಿದ್ದರೆ ನಾಲ್ವರ ಹೆಗಲ ಮೇಲಿನ ಚಟ್ಟದಲ್ಲಿ ಹೋಗುತ್ತಿದ್ದರೂ ಎಲ್ಲರ ಕಣ್ಣಲ್ಲೂ ನೀರು, ಅವನ ಗುಣಗಾನ. ಆದರೆ ಸತ್ತ ವ್ಯಕ್ತಿ ಕೆಟ್ಟವನಾಗಿದ್ದರೆ ಎಲ್ಲರ ಮುಖದಲ್ಲೂ ನಗು, ನೆಮ್ಮದಿ – ಕೇಡು ನನ್ಮಗ ಹೋದನಲ್ಲ ಎಂದು ! ಈ ಬೈಗುಳದ ನುಡಿಗಟ್ಟಿನಲ್ಲಿ, ಕೇಡಿಗರು ಸತ್ತಾಗ ಜೀವಂತವಿದ್ದವರಲ್ಲಿ ಮೂಡುವ ನಿರಾಳ ನೆಮ್ಮದಿಯ ನಗು ಕಂಡರಣೆಗೊಂಡಿದೆ.
ಪ್ರ : ಎಂದು ನಾಲೋರ ಹೆಗಲ ಮೇಲೆ ನಗನಗ್ತಾ ಹೋಗ್ತಾನೋ ಅಂತ ಕಾದಿದ್ದೆ.

೧೮೧೧. ನ್ಯಾಸ್ತ ಮಾಡು = ಸ್ನೇಹ ಮಾಡು
(ನ್ಯಾಸ್ತ < ನೇಸ್ತ = ಸ್ನೇಹ)
ಪ್ರ : ಹೋಗಿ ಹೋಗಿ ಆ ಜಗಳಗಂಟಿ ಜೊತೆ ನ್ಯಾಸ್ತ ಮಾಡಿದ?
೧೮೧೨. ನಿಕ ಮಾಡಿ ಕಳಿಸು = ಜಡಿದು ಕಳಿಸು, ಹಣ್ಗಾಯಿ ನೀರ್ಗಾಯಿ ಮಾಡಿ ಕಳಿಸು
(ನಿಕ(ಉ) = ಪ್ರಸ್ತ, ಶೋಭನ)
ಪ್ರ : ನಿಕ ಮಾಡಿ ಕಳಿಸಿದ ಮೇಲೆ ಅಣ್ಣನಿಗೆ ಬುದ್ಧಿ ಬಂತು.
೧೮೧೩. ನಿಗ ಇಡು = ಗಮನವಿಡು, ಕಣ್ಣಿಡು
ಪ್ರ : ನಿಗ ಇಟ್ಟ ಮೇಲೆ ಮಗ ನೆಟ್ಟಗಾದ
೧೮೧೪. ನಿಗಂಟಾಗಿ ಹೇಳು = ಖಚಿತವಾಗಿ ಹೇಳು
(ನಿಗಂಟು < ನಿಘಂಟು = ಶಬ್ದಕೋಶ)
ಪ್ರ : ಯಾವುದನ್ನೂ ನಿಗಂಟಾಗಿ ಹೇಳದಿದ್ರೆ ನಾನು ಕ್ರಮ ತಗೊಳ್ಳೋದು ಹೇಗೆ?
೧೮೧೫. ನಿಗಿತುಕೊಳ್ಳು = ಮರಣ ಹೊಂದು
(ನಿಗಿತುಕೊಳ್ಳು < ನಿಗುರ್ತುಕೊಳ್ಳು = ನೆಟ್ಟಗೆ ಸೆಟೆದುಕೊಳ್ಳು = ಸಾಯು)
ಪ್ರ : ಗಾದೆ – ಬಾಡು ತಿಂದು ಬದುಕಿಕೊಂಡ, ನೀರು ಕುಡಿದು ನಿಗಿತುಕೊಂಡ
೧೮೧೬. ನಿಗಿ ನಿಗಿ ಅನ್ನು = ಹೊಳೆ, ಪ್ರಕಾಶಿಸು
ಪ್ರ : ಗಾದೆ – ನಿಧಿ ನಿಗಿ ನಿಗಿ ಅಂತಾ ಅದೆ
ವಿಧಿ ತೆಗಿ ತೆಗಿ ಅಂತಾ ಅದೆ
೧೮೧೭. ನಿಗುರಿ-ಕೊಂ-ಡು ಹೋಗು = ಸೆಟೆ-ದು-ಕೊಂ-ಡು ಹೋಗು, ಜಂಭದಿಂದ ವಿಜೃಂ-ಭಿ-ಸು
ಪ್ರ : ಗಾದೆ – ನಿಗುರಿಕೊಂಡು ನೀರಿಗೆ ಹೋಗಿ
ಹೊರಿಸೋರಿಲ್ಲ ಅಂತ ವಾಪಸ್ ಬಂದ್ಲು
೧೮೧೮. ನಿಗುರುದೆಗೆ = ನೇಣೆತ್ತು, ಹಿಂಸಿಸು, ಸಾಯಿಸು
ಪ್ರ : ಇವತ್ತು ಹೊತ್ತಾರೆಯಿಂದ ಬೈಸಾರೆವರೆಗೆ ಚೆನ್ನಾಗಿ ನಿಗುರುದೆಗೆದಿದ್ದೀನಿ
೧೮೧೯. ನಿಗುರಿ ನಿಲ್ಲು = ಶರಣಾಗದೆ ಪ್ರತಿಭಟಿಸಿ ನಿಲ್ಲು, ಬಾಗದೆ ಸೆಟೆದು ನಿಲ್ಲು
ಪ್ರ : ನೀನು ನಿಗುರಿನಿಂತ್ಕೊಂಡದ್ದುನೋಡಿ, ಬಾಲ ಮುದುರಿಕೊಂಡು ಹೋದ
೧೮೨೦. ನಿಗುರಿ ನೋಡು = ತುದಿ ಬೆರಳ ಮೇಲೆ ನಿಂತು ನೋಡು
ಪ್ರ : ನಿಗುರಿ ನೋಡಾನ ಅಂದ್ರೆ, ನನ್ನ ಮುಂದೆ ನಿಂತಿದ್ದೋರೆಲ್ಲ ಉದ್ದೊಂದು ಕಾಲಿನ ಮುದ್ದು ಬಸವಯ್ಯನೋರೇ
೧೮೨೧. ನಿತ್ರಾಣನಾಗು = ದುರ್ಬಲನಾಗು, ಶಕ್ತಿಹೀನನಾಗು
(ತ್ರಾಣ = ಶಕ್ತಿ; ನಿತ್ರಾಣ = ನಿಶ್ಯಕ್ತಿ)
ಪ್ರ : ತತ್ರಾಣಿ ಹಿಡಿಯಲಾರದಷ್ಟು ನಿತ್ರಾಣಿಯಾಗಿದ್ದಾನೆ.
೧೮೨೨. ನಿಯತ್ತಿಲ್ಲದಿರು = ನೀತಿನಿಷ್ಠೆ ಇಲ್ಲದಿರು
ಪ್ರ : ಗಾದೆ – ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
೧೮೨೩. ನಿರಾಳವಾಗಿರು = ಸುಖದಿಂದಿರು
(ನಿರಾಳ < ನಿರಾಬಿಳ < ನಿರಾಬಿಲ < ನಿರಾವಿಲ (ಸಂ) = ನಿರ್ಮಲ; ಆವಿಲ = ಮಲ, ಬಗ್ಗಡ)
ಪ್ರ : ನನ್ನ ಜೀವನದ ಕರಾಳ ದಿನಗಳು ಕಳೆದು, ಈಗ ನಿರಾಳವಾಗಿದ್ದೇನೆ.
೧೮೨೪. ನಿರುಂಬಳವಾಗಿರು = ನೆಮ್ಮದಿಯಿಂದಿರು
(ನಿರುಂಬಳ < ನಿರುಮ್ಮುಳ = ನಿರುದ್ವೇಗ, ಶಾಂತ)
ಪ್ರ : ಈಗ ಒಂಟಿಯಾಗಿದ್ರೂ ನಿರುಂಬಳವಾಗಿದ್ದೀನಿ.
೧೮೨೫. ನಿಲ್ಲಗೊಡಿಸದಿರು ಕುಂಡ್ರಗೊಡಿಸದಿರು = ಚುಟುಕು ಮುಳ್ಳಾಡಿಸು, ಹಿಂಸಿಸು
ಪ್ರ : ಎದ್ದಾಗಳಿಂದ ನಿಲ್ಲಗೊಡಿಸ ಕುಂಡ್ರಗೊಡಿಸ, ರಂಗನಾಟ ಆಡಿಸ್ತಾ ಅವನೆ.
೧೮೨೬. ನೀಚಿ ನೀರು ಕುಡಿ = ಹಾಳು ಮಾಡು, ಕಳೆ
(ನೀಚು < ನೀಸು = ಕೊನೆಗಾಣಿಸು, ಕಳೆ)
ಪ್ರ : ಅಪ್ಪ ಅವರಿವರದನ್ನು ಬಾಚಿಕೊಂಡಿದ್ದನಲ್ಲ, ಮಗ ಅದನ್ನೆಲ್ಲ ನೀಚಿ ನೀರುಕುಡಿದ.
೧೮೨೭. ನೀತ ಹೇಳು = ನೀತಿ ಹೇಳು, ನಿಯಮ ಹೇಳು
ಪ್ರ : ಗಾದೆ – ನೀತ ಹೇಳೋಕೆ ಅವರ್ನ ಕರೆಸಿ, ಹೆಂಡ್ರನ್ನ ಬಿಟ್ಟು ಆರುತಿಂಗಳಾದೋನ್ನ
೧೮೨೮. ನೀನು ಅಂದ್ರೆ ನಿಮ್ಮಪ್ಪ ಅನ್ನು = ಸೇರಿಗೆ ಸವಾಸೇರಾಗಿ ಸೆಣಸು, ತಲೆಬಾಗದಿರು.
ಪ್ರ : ನೀನು ಅಂದ್ರೆ ನಿಮ್ಮಪ್ಪ ಅನ್ನುವ ಜಾಯಮಾನ ಅವನದು
೧೮೨೯. ನೀನು ತಾನು ಅನ್ನು = ಪೆಗ್ಗೆಯಿಂದ ಮಾತಾಡು, ವಿನಯರಹಿತನಾಗಿ ವರ್ತಿಸು
ಪ್ರ : ನೀನು ತಾನು ಅಂದ್ರೆ, ಗಾಚಾರ ಬಿಡಿಸಿಬಿಡ್ತೀನಿ, ತಿಳಕೋ
೧೮೩೦. ನೀನೇ ಅನ್ನೋರು ಇಲ್ಲದಿರು = ವಿಚಾರಿಸಲು ಒಂದು ನರಪಿಳ್ಳೆ ಇಲ್ಲದಿರು
ಪ್ರ : ನೀನೇ ಅನ್ನೋರು ಇಲ್ಲದಿರುವಾಗ ನಾನ್ಯಾಕೆ ಹೋಗಲಿ ಅಲ್ಲಿಗೆ?
೧೮೩೧. ನೀರ ಕಡೆಗೆ ಹೋಗು = ಮಲವಿಸರ್ಜನೆಗೆ ಹೋಗು
ಪ್ರ : ಅವರು ನೀರ ಕಡೆಗೆ ಹೋಗ್ಯವರೆ, ಕುಂತುಗೊಳ್ಳಿ
೧೮೩೨. ನೀರಿಗೆ ಬಿದ್ದ ಉದ್ದಿನಂತೆ ಊದಿಕೊಳ್ಳು = ಮುನಿಸಿಕೊಳ್ಳು, ಮುಖ ದಪ್ಪಗೆ ಮಾಡಿಕೊಳ್ಳು
ಪ್ರ : ಅಷ್ಟಂದದ್ದಕ್ಕೆ ನೀರಿಗೆ ಬಿದ್ದ ಉದ್ದಿನಂತೆ ಊದಿಕೊಂಡು ಕುಂತವಳೆ.
೧೮೩೩. ನೀರು ಕುಡಿದಂತೆ ಮಾತಾಡು = ಸರಾಗವಾಗಿ ಮಾತಾಡು, ನಿರರ್ಗಳವಾಗಿ ಮಾತಾಡು
ಪ್ರ : ಮಾತಾಡುವಾಗ ಅಪ್ಪ ತೊಡರಿಸ್ತಾನೆ, ಮಗ ನೀರು ಕುಡಿದಂತೆ ಮಾತಾಡ್ತಾನೆ.
೧೮೩೪. ನೀರು ಕುಡಿ = ಕಷ್ಟಪಡು, ಶ್ರಮಿಸು
ಪ್ರ : ಇಷ್ಟು ಮಾಡಬೇಕಾದ್ರೆ ಎಷ್ಟು ನೀರು ಕುಡಿದಿದ್ದೀನಿ, ಗೊತ್ತ ?
೧೮೩೫. ನೀರು ಕುಡಿಸು = ಹಿಂಸಿಸು, ಸತಾಯಿಸು
ಪ್ರ : ಬೆಳಗ್ಗೆಯಿಂದ ಸಂಜೆತನಕ ಅವನಿಗೆ ಚೆನ್ನಾಗಿ ನೀರುಕುಡಿಸಿದ್ದೀನಿ.
೧೮೩೬. ನೀರು ನಿಲ್ಲು = ಬಸುರಾಗು, ಮುಟ್ಟು ನಿಲ್ಲು
ಪ್ರ : ಸೊಸೆಗೆ ನೀರು ನಿಂತಿದ್ದನ್ನು ಕೇಳಿ ಅತ್ತೆಗೆ ಆನಂದವಾಯ್ತು.
೧೮೩೭. ನೀರು ನೆಳ್ಳಿಲ್ಲದ ಕಡೆ ಕತ್ಕುಯ್ಯಿ = ಸೂರು ನೀರಿಲ್ಲದ ಕಡೆ ಸಾಯಿಸು.
ಸಾಯುವಾಗ ಬಾಯಿಗೆ ನೀರು ಬಿಡುವುದು, ಕೊನೆಯ ಗುಟುಕನ್ನು ಗುಟುಕರಿಸುವುದನ್ನು ನಾವು ಕಂಡಿದ್ದೇವೆ. ಅಷ್ಟೆ ಅಲ್ಲ, ಮಾಂಸಾಹಾರಿಗಳು ಕೋಳಿಯನ್ನು ಕುಯ್ದಾಗ ಅದು ಬಾಯಿ ಬಾಯಿ ಬಿಡುತ್ತದೆ. ಅದರ ಬಾಯಿಗೂ ನೀರು ಬಿಡುತ್ತಾರೆ. ಹಾಗೆ ಬಾಯಿಗೆ ನೀರು ಬಿಡಲೂ ನೀರು ಸಿಗದ ಕಡೆ ಕತ್ತು ಕುಯ್ಯಬೇಕು ಎಂಬ ಆಶಯ ಈ ನುಡಿಗಟ್ಟಿನ ಬೆನ್ನಿಗಿದೆ.
ಪ್ರ : ನೀರು ನೆಳ್ಳಿಲ್ಲದ ಕಡೆ ನಿನ್ನ ಕತ್ತು ಕುಯ್ಯಬೇಕು, ಅದೇ ನಿನ್ನ ಪಾಪಕ್ಕೆ ತಕ್ಕ ಶಿಕ್ಷೆ.
೧೮೩೮. ನೀರು ಬರೋ ಕಣ್ಣಲ್ಲಿ ರಕ್ತ ಬರಿಸು = ಚಿತ್ರ ಹಿಂಸೆ ಕೊಡು
ಪ್ರ : ಅತ್ತೆ ನಾದಿನಿಯರು ನೀರು ಬರೋ ನನ್ನ ಕಣ್ಣಲ್ಲಿ ರಕ್ತ ಬರಿಸಿದರು
೧೮೩೯. ನೀರು ಮುಟ್ಟೋಕೆ ಹೋಗು = ಪೃಷ್ಠ ಪ್ರಕ್ಷಾಳನಕ್ಕೆ ಹೋಗು, ತಿಗ ತೊಳೆಯಲು ಹೋಗು
ಪ್ರ : ನಾನು ನೀರು ಮುಟ್ಟೋಕೆ ಹೋಗಿದ್ದಾಗ, ಅವನು ಮನೆಗೆ ಬಂದು ಹೋಗಿದ್ದಾನೆ.
೧೮೪೦. ನೀರು ಹುಯ್ದುಕೊಳ್ಳು, = ಹೆರಿಗೆಯಾಗು
ಪ್ರ : ನನ್ನ ಸೊಸೆ ನೀರು ಹುಯ್ಕೊಂಡಳು, ಗಂಡು ಮಗು
೧೮೪೧. ನೀಲಿ ಮಾತಾಡು = ಸುಳ್ಳಾಡು
(ನೀಲಿ ಮಾತು = ಸುಳ್ಳು)
ಪ್ರ : ಗಾದೆ – ನೀಲಿ ಮಾತು ನಿಜವಲ್ಲ
ನೀರು ಕಡೆದರೆ ಬೆಣ್ಣೆ ಇಲ್ಲ.
೧೮೪೨. ನೀವಳಿಸಿ ತೆಗೆ = ಇಳಿದೆಗೆ, ದೃಷ್ಟಿ ತೆಗೆ
(ನೀವಳಿಸು < ನಿವಾಳಿಸು = ಇಳಿದೆಗೆಯುವುದು)
ಪ್ರ : ಅವಳ ಮುಂದೆ ಇವರ್ನೆಲ್ಲ ನೀವಳಿಸಿ ತೆಗೀಬೇಕು, ಅಷ್ಟು ಅಂದವಾಗಿದ್ದಾಳೆ ಅವಳು
೧೮೪೩. ನುಗ್ಗಾಗು = ಪುಡಿಪುಡಿಯಾಗು
(ನುಗ್ಗು < ನುರುಕು = ಪುಡಿಗೊಳಿಸು)
ಪ್ರ : ಅವರೆ ಕಗ್ಗೆಲ್ಲ ನುಗ್ಗಾಗಿಬಿಟ್ಟಿದೆ
೧೮೪೪. ನುಗ್ಗುನುರಿಯಾಗು = ಪುಡಿಯಾಗು ಧೂಳಾಗು
(ನುಗ್ಗು < ನುರುಕು < ನೊರಕ್ಕು (ತ) = ಪುಡಿ ಮಾಡು; ನುರಿ = ಪುಡಿ, ಧೂಳು)
ಪ್ರ : ಹಪ್ಪಳ ಹರಡಿದ ಮನೆಗೆ ಕೋಣ ನುಗ್ಗಿ ಎಲ್ಲ ನುಗ್ಗುನುರಿಯಾದವು.
೧೮೪೫. ನುಗ್ಗು ನುಸಿಯಾಗು = ಪುಡಿಪುಡಿಯಾಗು, ಧೂಳುಧೂಳಾಗು
(ನುಸಿ < ನುಶು (ಮಲೆ) = ಪುಡಿ)
ಪ್ರ : ನೆಲ್ಲೆಲ್ಲ ಮುಗ್ಗಿ ನುಗ್ಗುನುಸಿಯಾಗಿವೆ.
೧೮೪೬. ನುಚ್ಚಿಗೆ ಕಡೆಯಾಗು = ಕೀಳಾಗು.
ನೆಲ್ಲು ಕಟ್ಟಿದಾಗ ಗಟ್ಟಕ್ಕಿಯನ್ನೇ ಬೇರೆ, ನುಚ್ಚಕ್ಕಿಯನ್ನೇ ಬೇರೆ ವಿಂಗಡಿಸುತ್ತಾರೆ. ನುಚ್ಚಕ್ಕಿಯನ್ನು ಅನ್ನ ಮಾಡಲು ಬಳಸುವುದಿಲ್ಲ, ಮುದ್ದೆಯಾಗುತ್ತದೆಂದು. ಅದನ್ನು ಬೇರೆ ತೆಗೆದಿಟ್ಟು ರೊಟ್ಟಿ ಹಾಕಲೋ, ದೋಸೆ ಹುಯ್ಯಲೋ ಬಳಸಿಕೊಳ್ಳುತ್ತಾರೆ. ಗಟ್ಟಕ್ಕಿಯ ಮುಂದೆ ನುಚ್ಚಕ್ಕಿ ಕೀಳು ಎಂಬ ಭಾವ ಈ ನುಡಿಗಟ್ಟಿನ ಹಿನ್ನೆಲೆಗಿದೆ.
ಪ್ರ : ಗಾದೆ – ನಿಚ್ಚ ಬರೋ ಅಳಿಯ ನುಚ್ಚಿಗಿಂತ ಕಡೆ
೧೮೪೭. ನುಣ್ಣಗಾಗು = ಮೈಕೈ ತುಂಬಿಕೊಳ್ಳು, ಕೈಯಿಟ್ಟರೆ ಜಾರುವಂತಾಗು
ದನಗಳು ಬಡವಾದರೆ ಮೂಳೆ ಚಕ್ಕಳವಾಗಿ ಪುಕ್ಕ ಬೆಳೆದುಕೊಳ್ಳುತ್ತವೆ. ಅವುಗಳಿಗೆ ಸರಿಯಾದ ಮೇವು ಹಾಕಿ ಸಾಕಿದರೆ, ಪುಕ್ಕವೆಲ್ಲ ಉದುರಿ, ಮೈ ಕೈ ತುಂಬಿಕೊಂಡು ಕೈ ಇಟ್ಟರೆ ಜಾರುವ ಸ್ಥಿತಿಗೆ ಬರುತ್ತವೆ. ಆ ಹಿನ್ನೆಲೆಯಿಂದ ಮೂಡಿದ್ದು ಈ ನುಡಿಗಟ್ಟು.
ಪ್ರ : ಎತ್ತುಗಳು ಇತ್ತೀಚೆಗೆ ನುಣ್ಣಗಾಗಿ ಮಿರಿಮಿರಿ ಮಿಂಚ್ತಾ ಇವೆ.
೧೮೪೮. ನುಣ್ಣಗಾಗು = ತೆಳ್ಳಗಾಗು, ನಿರ್ಗತಿಕನಾಗು
ಪ್ರ : ನಾನು ಗಳಿಸಿದ್ದನ್ನೆಲ್ಲ ಅವರಿವರ ಬಾಯಿಗಿಕ್ಕಿ ನುಣ್ಣಗಾದೆ.
೧೮೪೯. ನುಣುಪಾಗಿರು = ಅಂದವಾಗಿರು, ನಯವಾಗಿರು
ಪ್ರ : ಹುಡುಗಿ ಒಳ್ಳೆ ನುಣುಪಾಗಿದ್ದಾಳೆ ಅಂತ್ಲೇ ಆ ಟೊಣಪ ಮದುವೆಯಾದದ್ದು
೧೮೫೦. ನುಸುಳಿಕೊಳ್ಳು = ಜಾರಿಕೊಳ್ಳು, ತಪ್ಪಿಸಿಕೊಳ್ಳು
(ನುಸುಳು = ಜಾರು, ತೆವಳು)
ಪ್ರ : ಅವನನ್ನು ಕರಿ ಅನ್ನುವಾಗ್ಗೆ ನರಿ ಹಂಗೆ ನುಸುಳಿಕೊಂಡುಬಿಟ್ಟ.
೧೮೫೨. ನೂತುಕೊಳ್ಳು = ಪರಸ್ಪರ ಮಾತಾಡಿಕೊಳ್ಳು, ಒಪ್ಪಂದಕ್ಕೆ ಬರು
(ನೂತು < ನೂಲು = ದಾರ ತೆಗೆ)
ಪ್ರ : ಮೊದಲೇ ಇಬ್ಬರೂ ನೂತ್ಕೊಂಡು, ಈಗ ಈ ನಾಟಕ ಆಡ್ತಿದಾರೆ.
೧೮೫೩. ನೆಕ್ಕಿ ನೀರು ಕುಡಿ = ಬರಿದು ಮಾಡು, ಗುಡಿಸಿ ಗುಂಡಾಂತರ ಮಾಡು
ಪ್ರ : ಅಲ್ಲೀದನ್ನೆಲ್ಲ ನೆಕ್ಕಿ ನೀರು ಕುಡಿದು, ಈಗ ಇಲ್ಲಿಗೆ ಬಂದವ್ನೆ.
೧೮೫೪. ನೆಕ್ಕುಚಾರ್ಲು ಬೀಳು = ಅಲ್ಲಿ ಇಲ್ಲಿ ಎಂಜಲೆತ್ತು, ಭಿನ್ನ ರುಚಿಯ ಬೆನ್ನು ಹತ್ತು
ಪ್ರ : ನೆಕ್ಕುಚಾರ್ಲು ಬಿದ್ದೋಳು ಒಬ್ಬನ ಹತ್ರ ಇದ್ದಾಳ?
೧೮೫೫.ನೆಗೆದು ಬೀಳು = ಮರಣ ಹೊಂದು
ಪ್ರ : ಅವನು ಎಂದೋ ನೆಗೆದು ಬಿದ್ದ, ಅವಂದು ಕಟ್ಕೊಂಡು ಏನಾಗಬೇಕು?
೧೮೫೬. ನೆಗೆದು ನೆಲ್ಲಿಕಾಯಾಗು = ಅಹಂಕಾರದಿಂದ ಮೆರೆ, ಮರಣ ಹೊಂದು
ಪ್ರ : ಅವನು ನೆಗೆದು ನೆಲ್ಲಿಕಾಯಿ ಆದಾಗ ನಾನು ನೆಮ್ಮದಿಯಾಗಿದ್ದೇನು.
೧೮೫೭. ನೆಟ್ಟಗೆ ನೇರಗೆ ಮಾಡು = ಅನುಕೂಲ ಸ್ಥಿತಿಗೆ ತರು
ಪ್ರ : ನೆಟ್ಟಗೆ ನೇರಗೆ ಮಾಡಿದೋನಿಗೇ ಬತ್ತಿ ಇಟ್ಟ ಬಡ್ಡೀಮಗ
೧೮೫೮. ನೆಟ್ಟುಗಣ್ಣು ಬೀಳು = ರೆಪ್ಪೆ ಬಡಿಯದಿರು, ಸಾವು ಸಮೀಪಿಸು
ಪ್ರ : ಆಗಲೆ ನೆಟ್ಟುಗಣ್ಣು ಬಿದ್ದವೆ, ಇನ್ನು ಅವನ ಆಸೆ ಬಿಡಿ
೧೮೫೯. ನೆಣ ಕರಗಿಸು = ಅಹಂಕಾರವಿಳಿಸು
(ನೆಣ = ಕೊಬ್ಬು, ಚರ್ಬಿ)
ಪ್ರ : ಅವನ ನೆಣ ಕರಗಿಸೋತನಕ, ಹಿಂಗೆ ಪಣಕ್ಕನೆ ನೆಗೆದಾಡ್ತಲೇ ಇರ್ತಾನೆ.
೧೮೬೦. ನೆಣ ಕಿತ್ತು ನೆತ್ತಿ ಮೇಲೆ ದೀಪ ಹಚ್ಚು = ಸಾಯಿಸು, ಕೊಲ್ಲು
ಗ್ರಾಮದೇವತೆ ಜಾತ್ರೆಯಲ್ಲಿ ಕೋಣನನ್ನು ಬಲಿ ಕೊಡುವ ಪದ್ಧತಿ ಇತ್ತು, ಈಗಲೂ ಅಲ್ಲಿ ಇಲ್ಲಿ ಇರಬಹುದು. ಕಡಿದ ಕೋಣನ ತಲೆಯನ್ನು ತಂದು, ಗ್ರಾಮದೇವತೆಯ ಗುಡಿಯಲ್ಲಿಟ್ಟು, ಅದರ ನೆತ್ತಿಯ ಮೇಲೆ ಸಗಣಿಕಟ್ಟೆ ಕಟ್ಟಿ, ಅದರೊಳಕ್ಕೆ ಕೋಣನ ಹೊಟ್ಟೆಯೊಳಗಿನ ಕೊಬ್ಬನ್ನು ತಂದು ಹಾಕಿ, ಬಟ್ಟೆಯ ಕಕ್ಕಡವನ್ನು ಬತ್ತಿಯೋಪಾದಿ ಮಾಡಿ ಹಚ್ಚುತ್ತಿದ್ದರು. ಆ ಕಾವಿಗೆ ಕೊಬ್ಬು ಕರಗಿ, ಎಣ್ಣೆಯಾಗಿ ಕಕ್ಕಡ ಉರಿಯಲು ನೆರವಾಗುತ್ತಿತ್ತು. ಅಂಥ ಆಚರಣೆಯ ಹಿನ್ನೆಲೆಯದು ಈ ನುಡಿಗಟ್ಟು.
ಪ್ರ : ಎಂದು ಇವನ ನೆಣ ಕಿತ್ತು ನೆತ್ತಿ ಮೇಲೆ ದೀಪ ಹಚ್ತೀನೋ ಅಂತ ಕಾಯ್ತಾ ಇದ್ದೀನಿ.
೧೮೬೧. ನೆತ್ತಿಗೆ ಎಣ್ಣೆ ಒತ್ತು = ಮರುಳು ಮಾಡು, ವಶಮಾಡಿಕೊಳ್ಳು.
ವಶೀಕರಣ ವಿದ್ಯೆ ಗೊತ್ತಿರುವವರು ಮಂತ್ರಿಸಿದ ಎಣ್ಣೆಯನ್ನು ನೆತ್ತಿಗೆ ಒತ್ತುವುದರಿಂದ ಹೆಣ್ಣನ್ನಾಗಲೀ ಗಂಡನ್ನಾಗಲೀ ತಮ್ಮ ವಶ ಮಾಡಿಕೊಳ್ಳುತ್ತಾರೆ. ಎಂಬ ನಂಬಿಕೆ ಮೂಲದಿಂದ ಮೂಡಿದ್ದು ಈ ನುಡಿಗಟ್ಟು.
ಪ್ರ : ಅವನ ನೆತ್ತಿಗೆ ಎಣ್ಣೆ ಒತ್ತಿದ್ದಾಳೆ, ಇಲ್ಲದಿದ್ರೆ ನಾಯಿಯಂಗೆ ಅವಳ ಹಿಂದೆ ಯಾಕೆ ತಿರುಗ್ತಿದ್ದ?
೧೮೬೨. ನೆತ್ತಿಬಾಯಿ ಕೂಡದಿರು = ತೀರ ಎಳೆಯ ಮಗುವಾಗಿರು, ಬೊಮ್ಮಟೆಯಾಗಿರು.
ನೆತ್ತಿಯ ಭಾಗದಲ್ಲಿ ತಲೆಯ ಚಿಪ್ಪು ಕೂಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಬ್ರಹ್ಮರಂದ್ರವೆಂದೂ, ಯೋಗದಲ್ಲಿ ಸಹಸ್ರಾರ ಚಕ್ರವೆಂದೂ ಕರೆಯುತ್ತಾರೆ. ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ಉಪದೇಶಿಸುವಾಗ ಅಜನೂ (ಹುಟ್ಟಿಲ್ಲದನು) ಅಕ್ಷಯ ಚೇತನನೂ ಆದ ಆತ್ಮನಿಗೆ ಹನ್ನೊಂದು ದ್ವಾರಗಳಿರುವ ಪುರ(ದೇಹ) ವಿದೆ ಎಂದು ಹೇಳುತ್ತಾನೆ- “ಪುರಮೇಕಾದಶದ್ವಾರಮಜಸ್ಯಾವಕ್ರ ಚೇತನ:” ದೇಹಕ್ಕೆ ನವದ್ವಾರಗಳು ಎಂಬ ನಂಬಿಕೆ ಇರುವಾಗ ಇಲ್ಲಿ ಹನ್ನೊಂದು ಎಂದು ಹೇಳಲಾಗಿದೆ. ಹೊಕ್ಕಳ ಹಾಗೂ ನೆತ್ತಿಬಾಯಿಗಳನ್ನು ಸೇರಿಸಲಾಗಿದೆ. ಅವು ರಂದ್ರಗಳಾದರೂ ಮುಚ್ಚಿಕೊಂಡಿರುತ್ತದೆ. ಅದಕ್ಕೆ ಪುರಾವೆ ಎಂದರೆ ಸಂಸ್ಕೃತದ ಬ್ರಹ್ಮರಂದ್ರ ಎಂಬ ಮಾತು ಹಾಗೂ ಕನ್ನಡದ ನೆತ್ತಿಬಾಯಿ ಎಂಬ ಮಾತು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನೆತ್ತಿಬಾಯಿ ಕೂಡದಿರೋ ಬೊಮ್ಮಟೆ ಕೈಲಿ ತಮ್ಮಟೆ ಬಡಿಸೋಕೆ ಆಗ್ತದ?
೧೮೬೩. ನೆತ್ತಿ ಮೇಲಿನ ಕೂದಲುದುರು = ದುಡಿದು ಹಣ್ಣಾಗು, ಭಾರ ಹೊತ್ತು ಬೋಳು ಬುರುಡೆಯಾಗು
ಪ್ರ : ಈ ಮನೇನ ಈ ಮಟ್ಟಕ್ಕೆ ತರಬೇಕಾದ್ರೆ ಅಪ್ಪನ ನೆತ್ತಿ ಮೇಲಿನ ಕೂದಲುದುರಿರೋದು ಮಗನಿಗೆ ಗೊತ್ತಾಗ್ತದ?
೧೮೬೪. ನೆತ್ತಿ ಮೇಲೆ ಮೆತ್ತು = ತಲೆ ಮೇಲೆ ಹೊಡಿ
(ಮೆತ್ತು < ಮೊಟ್ಟು = ಕುಕ್ಕು, ಹೊಡಿ)
ಪ್ರ : ನೆತ್ತಿ ಮೇಲೆ ನಾಲ್ಕು ಮೆತ್ತಿದರೆ, ತಾನಾಗಿಯೇ ಬಾಯಿಬಿಡ್ತಾನೆ.
೧೮೬೫. ನೆತ್ತಿಗೆ ಹತ್ತಿರೋ ಪಿತ್ತ ಇಳಿಸು = ಅಹಂಕಾರ ಇಳಿಸು, ಜರ್ಬು ಇಳಿಸು
ಪ್ರ : ಯಾರಾದರೂ ನೆತ್ತಿಗೆ ಹತ್ತಿರೋ ಪಿತ್ತ ಇಳಿಸಿದರೆ, ಸಿಕ್ಕಿದೋರ ಕತ್ತಿಗೆ ಕೈ ಹಾಕೋದು ಬಿಡ್ತಾನೆ.
೧೮೬೬. ನೆತ್ತಿ ಹೊತ್ತಾಗಿರು = ಮಧ್ಯಾಹ್ನವಾಗಿರು
(ಹೊತ್ತು = ಸೂರ್ಯ) ಗಡಿಯಾರ ಚಾಲ್ತಿಗೆ ಬರುವ ಮುನ್ನ ಜನಪದರು ಕಾಲದ ವಿವಿಧ ಹಂತಗಳನ್ನು, ತಮ್ಮದೇ ಆದ ಪರಿಭಾಷೆಯಲ್ಲಿ ಹೇಳುತ್ತಿದ್ದರು. ಉದಾಹರಣೆಗೆ ಪೂರ್ವಾಹ್ನ ಎನ್ನವುದಕ್ಕೆ ಏರು ಹೊತ್ತು, ಮಧ್ಯಾಹ್ನ ಎನ್ನುವುದಕ್ಕೆ ನೆತ್ತಿ ಹೊತ್ತು ಅಪರಾಹ್ನ ಎನ್ನುವುದಕ್ಕೆ ಇಳಿ ಹೊತ್ತು ಇತ್ಯಾದಿ. ಕಾಲಸೂಚಕ ನುಡಿಗಟ್ಟಿದು.
ಪ್ರ : ಅವನು ಮನೆಗೆ ಬಂದಾಗ ನೆತ್ತಿಹೊತ್ತಾಗಿತ್ತು, ಸುಮ್ಮನೆ ಬುರುಡೆ ಬಿಡಬೇಡ.
೧೮೬೭. ನೆನೆಗುದಿಗೆ ಬೀಳು = ಎಳೆದಾಟಕ್ಕಿಟ್ಟುಕೊಳ್ಳು, ತೀರ್ಮಾನವಾಗದಿರು
(ನೆನೆಗುದಿ = ಪೂರ್ತಿ ಬೇಯದ, ಬೇಯುತ್ತಿರುವ ಸ್ಥಿತಿ)
ಪ್ರ : ಯಾವುದೂ ತೀರ್ಮಾನವಾಗಿಲ್ಲ, ನೆನೆಗುದಿಗೆ ಬಿದ್ದಿದೆ.
೧೮೬೮. ನೆನ್ನೆ ಮೊನ್ನೆ ಕಣ್ಣು ಬಿಡು = ಅನುಭವ ಇಲ್ಲದಿರು, ಎಳಸಾಗಿರು
ಮಗು ಹುಟ್ಟಿದಾಗಲೇ ಕಣ್ನು ಬಿಟ್ಟಿರುವುದಿಲ್ಲ. ಎಷ್ಟೋ ಹೊತ್ತಿನ ಮೇಲೆ ಕಣ್ಣು ಬಿಡುವುದು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ನೆನ್ನೆ ಮೊನ್ನೆ ಕಣ್ಣು ಬಿಟ್ಟೋವೆಲ್ಲ ನನಗೆ ಬುದ್ಧಿ ಹೇಳೋಕೆ ಬತ್ತವೆ.
೧೮೬೯. ನೆಪ್ಪಾಗು = ಗುರುತು ಸಿಕ್ಕು, ನೆನಪಾಗು
(ನೆಪ್ಪು < ನೆನಪು = ಸ್ಮರಣೆ)
ಪ್ರ : ಈಗ ನೆಪ್ಪಾಯ್ತು, ಕಳೆದ ಸಾರಿ ಶಿವಗಂಗೆ ದನಗಳ ಜಾತ್ರೇಲಿ ನನಗೆ ಸಿಕ್ಕಿದ್ರಿ.
೧೮೭೦. ನೆರಳು ಕಂಡ್ರೆ ಆಗದಿರು = ರವೆರವೆಯಾಗದಿರು, ದ್ವೇಷ ಭುಗಿಲೆನ್ನು
ಪ್ರ : ಅವನ್ನ ಕಾಣೋದಿರಲಿ, ಅವನ ಬೆರಳನ್ನೂ ಕಂಡ್ರೂ ಆಗಲ್ಲ ನನಗೆ
೧೮೭೧. ನೆರೆದಿರು = ಋತುಮತಿಯಾಗಿರು
(ನೆರೆ = ಪ್ರವಾಹ, ಪೂರ್ಣ)
ಪ್ರ : ಹುಡುಗಿ ನೆರೆದಿದ್ದಾಳೆ, ಗುಡ್ಲು ಹಾಕಿದ್ದೂ ಆಯಿತು.
೧೮೭೨. ನೆಲಕ್ಕೆ ಬೀಳು = ನಿರ್ಗತಿಕಾವಸ್ಥೆಗೆ ಬರು
ಪ್ರ : ನೆಲಕ್ಕೆ ಬಿದ್ದಾಗ ನೆಂಟರೂ ಆಗಲ್ಲ, ನಲ್ಲರೂ ಆಗಲ್ಲ
೧೮೭೩. ನೆಲ ಕಚ್ಚು = ಬರಿಗೈಯಾಗು, ಚಿಂತೆಯಲ್ಲಿ ಮುಳುಗು
ಪ್ರ : ನೆಲ ಕಚ್ಚಿದೋನ ಹತ್ರ ನೆರವು ಕೇಳಿ ಫಲವೇನು?
೧೮೭೪. ನೆಲ ಗುದ್ದಿ ನೀರು ಬರಿಸು = ಕಟ್ಟರೆಯದ ಕುವತ್ತಿರು, ಕಾಮದ ಉಕ್ಕಂದವಿರು
ಪ್ರ : ಗಾದೆ – ನೆಲಗುದ್ದಿ ಜಲ ಬರಿಸೋ ಹುಡುಗ
ನನಗಾದರೂ ಗುದ್ದೊ ನಿನ್ನ ಅಬ್ಬರಡಗ
೧೮೭೫. ನೆಲ ತಡಕು = ಕಣ್ನು ಕಾಣದಿರು, ವೃದ್ಯಾಪ್ಯ ಬಡತನ ಆವರಿಸು
ಪ್ರ : ಅವನೇ ನೆಲ ತಡಕುವಾಗ ಬಲ ಪ್ರದರ್ಶನ ಸರಿಯಲ್ಲ
೧೮೭೬. ನೆಲದ ಮೇಲೆ ಬಿಡದಂತೆ ಸಾಕು = ಮುದ್ದಿನಿಂದ ಬೆಳೆಸು, ಕಣ್ಣಲ್ಲಿ ಮುಚ್ಕೊಂಡು ಸಲಹು
(ಸಾಕು = ಸಲಹು, ಕಾಪಾಡು)
ಪ್ರ : ಒಬ್ಬ ಮಗ ಅಂತ ನೆಲದ ಮೇಲೆ ಬಿಡದಂತೆ ಸಾಕಿದರು.
೧೮೭೭. ನೆಲ ಮುಗಿಲು ಒಂದಾಗು = ಧಾರಾಕಾರವಾಗಿ ಮಳೆ ಸುರಿ
ಪ್ರ : ನೆನ್ನೆಯಿಂದ ನೆಲ ಮುಗಿಲು ಒಂದಾಗಿ ಎಷ್ಟೋ ಮನೆಮಠ ನೆಲಸಮ ಆದವು.
೧೮೭೮. ನೆಲೆದಪ್ಪು = ಆಶ್ರಯ ಹೀನವಾಗು
ಪ್ರ : ನೆಲೆದಪ್ಪಿದೋರಿಗೆ ನೆರವಾಗೋದು ಧರ್ಮ.
೧೮೭೯. ನೇಟಾಗಿ ಹೇಳು = ಗ್ಯಾರಂಟಿಯಾಗಿ ಹೇಳು, ದಿಟವಾಗಿ ಹೇಳು
(ನೇಟು < ನೇಟ್ರಿ(ತ) = ನೆಟ್ಟಗೆ, ಖಚಿತ, ದಿಟ)
ಪ್ರ : ನೀನು ನೇಟಾಗಿ ಹೇಳಿದ್ರೆ ನಾನು ನೀಟಾಗಿ ಬಂದು ಹಾಜಾರಾಗಿಬಿಡ್ತೀನಿ
೧೮೮೦. ನೇಟಾಗಿ ಬರು = ತಡವಾಗಿ ಬರು
(ನೇಟು < Late = ತಡ)
ಪ್ರ : ನೀನು ನೇಟಾಗಿ ಬಂದದ್ದರಿಂದ ಕೆಲಸ ಕೆಡ್ತು.
೧೮೮೧. ನೇಣೆತ್ತು = ಹಿಂಸಿಸು, ಒತ್ತಾಯಿಸು
ಪ್ರ :ದುಡ್ಡು ಕೊಡು ಕೊಡು ಅಂತ ನನ್ನ ನೇಣೆತ್ತಾ ( < ನೇಣೆತ್ತುತ್ತಾ) ಇದ್ದಾನೆ.
೧೮೮೨. ನೇಣು ಹಾಕು = ಹುಲ್ಲು ನೀರು ಸಿಗದ ಕಡೆ ಕಟ್ಟು
ಪ್ರ : ನನ್ನನ್ನ ಹಾಯೋಕೆ ಬಂತು, ಬೆಳಗ್ಗೆಯಿಂದ ಇಲ್ಲೇ ನೇಣು ಹಾಕಿದ್ದೀನಿ. ಮೇಯೋಕೆ ಬಿಟ್ಟಿಲ್ಲ
೧೮೮೩. ನೇತ್ರ ಇದ್ದಂತಿರು = ತೆಳ್ಳಗಿರು, ಪಾರದರ್ಶಕವಾಗಿರು
ಪ್ರ : ಗುದ್ದಲಿ ಹಿಡಿಯ ಅಗೆಯೋರಿಗೆ ಈ ನೇತ್ರದಂಥ ಬಟ್ಟೆ ಬಾಳಿಕೆ ಬರ್ತದ?
೧೮೮೪. ನೇರವಾಗಿರು = ಅನುಕೂಲವಾಗಿರು
ಪ್ರ : ಹೊಟ್ಟೆಗೆ ಬಟ್ಟೆಗೆ ನೇರವಾಗಿದ್ದೇವೆ, ಇನ್ನೇನು ಬೇಕು?
೧೮೮೫. ನೇರುಪ್ಪಾಗಿರು = ಸರಿಯಾಗಿರು, ಚೊಕ್ಕಟವಾಗಿರು
(ನೇರುಪ್ಪು < ನೇರ್ಪು = ಅಚ್ಚುಕಟ್ಟು)
ಪ್ರ : ನೇರುಪ್ಪಾಗಿ ಬಾಳೋರನ್ನ ಕಂಡ್ರೆ ಕಿತ್ತಾಡಿ ಕೆರೆ ಬೀಳೋರಿಗೆ ಕಣ್ಣುರಿ.
೧೮೮೬. ನೊಗಕ್ಕೆ ಹೆಗಲು ಕೊಡು = ದುಡಿಮೆಗೆ ತಲೆ ಕೊಡು, ಆಳೋರಿಗೆ ಅಧೀನವಾಗು
ರೈತ ಗಾಡಿಯ ತೂಕವನ್ನು ಮೇಲೆತ್ತಿದ ತಕ್ಷಣ, ಯಾವ ಸೂಚನೆಯನ್ನು ಕೊಡದಿದ್ದರೂ ಸಹ, ಅಭ್ಯಾಸ ಬಲದಿಂದ ಎತ್ತುಗಳು ನೊಗಕ್ಕೆ ಹೆಗಲು ಕೊಡುತ್ತವೆ. ಅದೇ ರೀತಿ ಜೀತದಾಳುಗಳು, ದಣಿಗಳು ಹೇಳದಿದ್ದರೂ, ಎಲ್ಲದಕ್ಕೂ ಮೂಗೆತ್ತಿನಂತೆ ಹೆಗಲುಕೊಟ್ಟು ದುಡಿಯುವ ಪರಾಧೀನತೆಯ ಬದುಕನ್ನು ಈ ನುಡಿಗಟ್ಟು ಹಿಡಿದುಕೊಟ್ಟಿದೆ.
ಪ್ರ : ಮೂಕು ಎತ್ತಿದ ತಕ್ಷಣ ಮೂಗೆತ್ತುಗಳು ಹೆಗಲು ಕೊಡ್ತವೆ.
೧೮೮೭. ನೊಗಾನ ಹೆಗಲಿನಿಂದ ಕೆಳಕ್ಕೆ ಹಾಕು = ಕಣ್ಣಿ ಹಾಕಿ ನಿಂತುಕೊಳ್ಳು.
ಭಾರವನ್ನು ಎಳೆಯಲಾರದೆ ಎತ್ತುಗಳನ್ನು ನೊಗವನ್ನು ಕೆಳಕ್ಕೆ ಹಾಕಿ ನಿಂತುಕೊಳ್ಳುವುದುಂಟು. ಇದಕ್ಕೆ ಕಣ್ಣಿ ಹಾಕಿ ನಿಂತುಕೊಂಡವು ಎಂದೂ ಹೇಳಲಾಗುತ್ತದೆ. ನೊಗಕ್ಕೆ ಹೆಗಲು ಕೊಟ್ಟು ಎಳೆದು ಸಾಕಾದ ಮೂಗೆತ್ತುಗಳೇ ನೊಗವನ್ನು ಕೆಳಕ್ಕೆ ಹಾಕಿ ನಿಂತುಕೊಳ್ಳುವುದು ಅಲಕ್ಷಿಸುವಂಥದಲ್ಲ.
ಪ್ರ : ನೊಗಾನ ಹೆಗಲಿನಿಂದ ಕೆಳಕ್ಕೆ ಹಾಕೋದು ಮೂಗೆತ್ತುಗಳ ಮೂಲಕ ಪ್ರತಿಭಟನ ಎಂದೇ ನನ್ನ ಅಭಿಪ್ರಾಯ.
೧೮೮೮. ನೊಣವೂ ಸುಳಿಯದಿರು = ಯಾರೂ ಹತ್ತಿರ ಹೋಗದಿರು
ಪ್ರ : ಆ ಕಡೆಗೆ ಜನ ಸುಳಿಯೋದಿರಲಿ, ಒಂದು ನೊಣವೂ ಸುಳಿಯಲ್ಲ
೧೮೮೯. ನೊಂ ಹೋಡಿತಾ ಕೂತಿರು = ವ್ಯಾಪಾರವಾಗದಿರು, ವ್ಯವಹಾರ ಇಳಿಮುಖವಾಗು
ಪ್ರ : ಅಂಗಡೀಲಿ ನೊಣ ಹೊಡೀತಾ ಕೂತಿರ್ತಾನೆ ಅಷ್ಟೆ, ಗಿರಾಕಿಗಳೇ ಇರಲ್ಲ.
೧೮೯೦. ನೊರನೊರನೆ ಹಲ್ಲು ಕಡಿ = ಮಾಮೇರಿ ಸಿಟ್ಟು ತೋರು.
ಪ್ರ : ಅಲ್ಲಿ ನೊರನೊರನೆ ಹಲ್ಲು ಕಡಿದುಬಿಟ್ರೆ, ಇಲ್ಲಿ ನಾನು ಥರಥರನೆ ನಡುಗಿಬಿಡಲ್ಲ.
೧೮೯೧. ನಂಚಿಕೊಳ್ಳು = ಊಟದ ಮಧ್ಯೆ ರುಚಿಬದಲಾವಣೆಗೆ ವ್ಯಂಜನ ಬಾಡಿಸಿಕೊಳ್ಳು
ಪ್ರ : ಗಾದೆ – ಊಟಕ್ಕೆ ನಂಚಿಕೊಳ್ಳಬೇಕು
ಕೂಟಕ್ಕೆ ಹಂಚಿಕೊಳ್ಳಬೇಕು
೧೮೯೨. ನಂಜಾಗು = ಅಲರ್ಜಿಯಾಗು, ಅಸ್ವಸ್ಥವಾಗು
ಪ್ರ : ಮಗೀಗೆ ನಂಜಾಗಿದೆ, ದಾಕ್ಟರಿಗೆ ತೋರಿಸಿ ಮೊದಲು
೧೮೯೩. ನಂಜು ಕಾರು = ದ್ವೇಷ ಸಾಧಿಸು
(ನಂಜು = ವಿಷ)
ಪ್ರ : ನಮ್ಮನ್ನು ಕಂಡ್ರೆ ನಂಜು ಕಾರ್ತಾರೆ.
೧೮೯೪. ನಂಟು ಕಂಟಾಗು = ಸಂಬಂಧದಲ್ಲಿ ವಿರಸ ಉಂಟಾಗು
(ಕಂಟು = ತಳ ಹೊತ್ತಿದ ವಾಸನೆ)
ಪ್ರ : ನಂಟು ಕಂಟಾಗಿ ಅವರ ಮುಖ ಅತ್ತಲೆ, ಇವರ ಮುಖ ಇತ್ತಲೆ.
೧೮೯೫. ನಂಟೂ ಹೋಗು ಗಂಟೂ ಹೋಗು = ಇಬ್ಬಗೆಯ ನಷ್ಟವಾಗು
ಪ್ರ : ಅವನಿಂದ ನಂಟೂ ಹೋಯ್ತು ಗಂಟೂ ಹೋಯ್ತು
೧೮೯೬. ನಂದಿ ಹೋಗು = ಆರಿ ಹೋಗು
(ನಂದು = ಕ್ಷೀಣಿಸು, ಆರು)
ಪ್ರ : ಎಣ್ಣೆ ಇಲ್ಲದೆ ಹಣತೆ ನಂದಿ ಹೋಯ್ತು.
೧೮೯೭. ನಿಂತಲ್ಲಿ ನಿಲ್ಲದಿರು ಕುಂತಲ್ಲಿ ಕೂಡದಿರು = ತಳಮಳದಿಂದ ಪರಿತಪಿಸು
ಪ್ರ : ಮಗನ ಸುದ್ದಿ ತಿಳಿಯೋತನಕ ನಿಂತಲ್ಲಿ ನಿಲ್ಲಲಿಲ್ಲ ಕುಂತಲ್ಲಿ ಕೂಡಲಿಲ್ಲ.
೧೮೯೮. ನಿಂತ ಕಾಲ ಮೇಲೆ ನಿಲ್ಲದಿರು = ಅಲೆದಾಡು, ಪಾದರಸದಂತಾಡು
ಪ್ರ : ಮಾರಾಯ, ನಿಂತ ಕಾಲ ಮೇಲೆ ನಿಲ್ಲಲ್ಲ, ಕಾಲಲ್ಲಿ ಚಕ್ರ ಇರಬೇಕು.
೧೮೯೯. ನಿಂತ ಕಾಲ್ಮೇಲೆ ವಸೂಲ್ ಮಾಡು = ಆ ಕ್ಷಣದಲ್ಲಿ ಕಕ್ಕಿಸು, ನೆಪಕ್ಕೆ ಅವಕಾಶ ಕೊಡದಿರು
ಪ್ರ : ನಾನು ಬಿಡ್ತೀನಾ, ನಿಂತ ಕಾಲ ಮೇಲೆ ವಸೂಲ್ ಮಾಡ್ಕೊಂಡು ಬಂದೆ.
೧೯೦೦. ನಿಂತ ನಿಲುವಿನಲ್ಲಿ ಬೀಳು = ದೊಪ್ಪನೆ ಬೀಳು, ದಿಂಡುಗೆಡೆ
ಪ್ರ : ನೀವೇ ದಿಕ್ಕು ಅಂತ ನಿಂತ ನಿಲುವಿನಲ್ಲಿ ಬಿದ್ದು ಕಾಲು ಕಟ್ಕೊಂಡ್ರು.
೧೯೦೧. ನಿಂಪುಣವಾಗಿರು = ರುಚಿಯಾಗಿರು, ಸ್ವಾದುವಾಗಿರು
(ನಿಂಪುಣ < ನಿಪುಣ ? = ಪರಿಪಕ್ವ, ರುಚಿಕರ)
ಪ್ರ : ಮೇಲೋಗರ ಬಾಳ ನಿಂಪುಣವಾಗಿತ್ತು ತಾಯಿ, ಕಂಠಪೂರ್ತಿ ಉಂಡೆ.
೧೯೦೨. ನುಂಗಿ ನೀರು ಕುಡಿ = ಬರಿದು ಮಾಡು, ಹಾಳು ಮಾಡು
ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ನುಂಗಿ ನೀರು ಕುಡಿದ.
ಕಾಮೆಂಟ್‌‌ ಪೋಸ್ಟ್‌ ಮಾಡಿ