ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಹ)
೩೦೫೮. ಹಕ್ಕಲು ಆಯು = ಎಂಜಲೆತ್ತು, ಅವರಿವರ ಮನೆಯ ಎಂಜಲೂಟಕ್ಕೆ ಕಾದು ಕೂತಿರು.(ಹಕ್ಕಲು = ಕುಯ್ಲು ಆದ ಮೇಲೆ ಕೆಳಗುದುರಿದ ತೆನೆ, ಕಾಯಿ, ಕಾಳುಕಡ್ಡಿ)
ಪ್ರ : ಹಕ್ಕಲು ಆಯ್ಕೊಂಡು ತಿನ್ನೋನಿಗೆ ತಕ್ಕಲು ಕಟ್ಕೊಂಡು ಏನಾಗಬೇಕು?
೩೦೫೯. ಹಕ್ಕಲು ಹಿಟ್ಟಿಗೆ ಬರು = ಅಳಿದುಳಿದ ತಿರುಪೆ ಹಿಟ್ಟಿಗೆ ಬರು
ಪ್ರ : ಯಾವ ಕೆಲಸ ಕಾರ್ಯಕ್ಕೆ ಬರದಿದ್ರೂ ಹಕ್ಕಲ ಹಿಟ್ಟಿಗೆ ಬರ್ತಾನೆ.
೩೦೬೦. ಹಕ್ಕಿ ಅಳಕವಾಗು = ಮೂಳೆಗಳು ಮೆದುವಾಗುವ, ಮೂಳೆಗಳು ಬಿಟ್ಟುಕೊಂಡು ಬಿಳಿಚಿಕೊಳ್ಳುವ ಕಾಯಿಲೆಯಾಗು
ಈ ಕಾಯಿಲೆಗೆ ಸಾಮಾನ್ಯವಾಗಿ ಹಾಳು ಬಿದ್ದ ದೇವಸ್ಥಾನಗಳಲ್ಲಿ ಹಾಳು ಮಂಟಪಗಳ ಕತ್ತಲಲ್ಲಿ ವಾಸ ಮಾಡುವ ‘ಕಣ್ಕಪ್ಪಟ’ ಹಕ್ಕಿಯನ್ನು ತಂದು, ಬೇಸಿ, ಅದರ ಸಾರನ್ನು ಕುಡಿಯುತ್ತಾರೆ, ಮಾಂಸವನ್ನು ತಿನ್ನಿಸುತ್ತಾರೆ. ಆಗ ಆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ. ಇದು ವೈಜ್ಞಾನಿಕ ಪರೀಕ್ಷೆಗೆ ಒಳಗಾಗಬೇಕು.
ಪ್ರ : ಮಗೀಗೆ ಹಕ್ಕಿ ಅಳಕ ಆಗಿದೆ, ಕಣ್ಕಪಟ ಹಕ್ಕಿಯನ್ನು ಹಿಡ್ಕೊಂಡು ಬನ್ನಿ.
೩೦೬೧. ಹಕ್ಕಿಗೆ ಏಟು ಹಾಕು = ಹೆಣ್ಣಿಗೆ ಅಂದಾಜು ಹಾಕು
(ಏಟು ಹಾಕು = ಗುರಿಯಿಡು)
ಪ್ರ : ಹಕ್ಕಿಗೆ ಏಟು ಹಾಕಿದ್ದೆ, ಆದ್ರೆ ಅದು ಸಿಕ್ಕದೆ ಹಾರಿಹೋಯ್ತು.
೩೦೬೨. ಹಕ್ಕಿಪಿಕ್ಕರಿಗಿಂತ ಅತ್ತತ್ತವಾಗು = ಕೊಳಕಾಗಿರು, ಅನಾಗರಿಕವಾಗಿರು
(ಹಕ್ಕಿಪಿಕ್ಕರು = ಪಕ್ಷಿಗಳ ಬೇಟೆಯಾಡುವ ಅಲೆಮಾರಿ ಜನಾಂಗ ; ಅತ್ತತ್ತ = ಕೊನೆ, ಕಟ್ಟೆಕಡೆ)
ಪ್ರ : ಹಕ್ಕಿಪಿಕ್ಕಿರಿಗಿಂತ ಅತ್ತತ್ತವಾಗಿ ಬಾಳ್ತಾರೆ, ಅವರೊಂದಿಗೆ ಬೀಗತನ ಮಾಡ್ತೀರಾ?
೨೦೬೩. ಹಗರಣವಾಗು = ರಂಪರಗಳೆಯಾಗು, ಹೈರಾಣ ಬೈರೂಪವಾಗು
(ಹಗರಣ < ಪ್ರಕರಣ = ನಾಟಕದ ಒಂದು ಪ್ರಭೇದ)
ಪ್ರ : ಆಸ್ತಿ ಹಂಚಿಕೆಯ ವಿಷಯ ದೊಡ್ಡ ಹಗರಣವಾಯ್ತು.
೩೦೬೪. ಹಗ್ಗದ ಕಾಸು ಕೊಡು = ಕೊಡುವವರು ತೆಗೆದುಕೊಳ್ಳುವವರು ಸಮ್ಮತಿಸು, ಒಪ್ಪಂದವಾಗು.
ದನಗಳ ಜಾತ್ರೆಯಲ್ಲಿ ಎತ್ತುಗಳನ್ನೋ ಹೋರಿಗಳನ್ನೋ ಕೊಳ್ಳುವವರು ಸಂಬಂಧಪಟ್ಟ ಮಾಲಿಕರೊಡನೆ ಮಾತುಕತೆಯಾಡಿ ಯಾವುದೋ ಒಂದು ಬೆಲೆಗೆ ಇಬ್ಬರೂ ಒಪ್ಪಿಗೆ ನೀಡುತ್ತಾರೆ. ಕೊಳ್ಳುವವರ ಬಳಿ ಅಷ್ಟು ಹಣವಿರದೆ, ಬೇರೆಯವರ ಹತ್ತಿರ ಹೋಗಿ ಹಣ ತರಲು, ಅವಧಿ ನಿಗದಿ ಮಾಡಿ, ದಳ್ಳಾಳಿ ಸಾಕ್ಷಿಗಳ ಸಮಕ್ಷಮ ‘ಹಗ್ಗದಕಾಸು’ ಕೊಟ್ಟು ಬಿಡುತ್ತಾರೆ. ಅದು ಗಂಡು ಹೆಣ್ಣಿನ ಕೊರಳಿಗೆ ತಾಳಿ ಕಟ್ಟಿದ ಹಾಗೆ. ಅದು ಮತ್ತೆ ಬೇರೊಬ್ಬರ ಪಾಲಾಗಲು ಸಾಧ್ಯವಿಲ್ಲ. ಇಬ್ಬರೂ ಮಾತಿಗೆ ತಪ್ಪುವಂತಿಲ್ಲ. ಆ ‘ಹಗ್ಗದಕಾಸು’ ಯಮಧರ್ಮನ ಪಾಶದಷ್ಟೆ ಬಲಿಷ್ಠವಾದದ್ದು, ಬಂಧನ ಶಕ್ತಿಯುಳ್ಳದ್ದು. ಆ ಹಿನ್ನೆಲೆಯ ನುಡಿಗಟ್ಟಿದು
ಪ್ರ : ಹಗ್ಗದ ಕಾಸು ಕೊಟ್ಟ ಮೇಲೆ ಮುಗೀತು, ದೇವರೇ ಬಂದ್ರೂ ಬದಲಾಯಿಸೋಕಾಗಲ್ಲ.
೩೦೬೫. ಹಗ್ಗ ಹಾಕಿ ಹಿಡಿ = ಹಾರಾಡು, ತಿವಿಯಲು ‘ಸಿರ್’ ಎಂದು ಬರು
ಸಾಮಾನ್ಯವಾಗಿ ಬೀಜದ ಹೋರಿಗೆ ಕುವತ್ತು ಜಾಸ್ತಿ, ಸಿಟ್ಟು ಜಾಸ್ತಿ. ಕಂಡವರ ಮೇಲೆ ‘ಸಿರ್’ ಎಂದು ಹೋಗುತ್ತದೆ. ಅದನ್ನು ಒಂದು ಹಗ್ಗದಲ್ಲಿ ಬಗ್ಗಿಸಲು ಸಾಧ್ಯವಿಲ್ಲ. ಹಗ್ಗ ಹಿಡಿದವನನ್ನೇ ತಿವಿಯಬಹುದು. ಅಷ್ಟು ಆರ್ಭಟ ಅದರದು. ಅದಕ್ಕೋಸ್ಕರ ಮೂಗುದಾರದ ಎರಡೂ ಕಡೆಗೆ ಹಗ್ಗ ಹಾಕಿ ಆಕಡೆ ಈಕಡೆ ಇಬ್ಬರು ಹಿಡಿದುಕೊಂಡಿರುತ್ತಾರೆ. ಒಂದು ಪಕ್ಕದವನನ್ನು ತಿವಿಯಲು ಹೋದರೆ ಇನ್ನೊಂದು ಪಕ್ಕದವನು ಹಗ್ಗವನ್ನು ಜಗ್ಗಿ ಎಳೆಯುತ್ತಾನೆ. ಆದ್ದರಿಂದ ಅದರ ಹಾರಾಟ ಸಾಗದು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಆಲುಗಡ್ಡೇಲಿ ಸಕತ್ ಹಣ ಬಂದುಬಿಡ್ತು, ಈಗ ಅವನ್ನ ಹಗ್ಗ ಹಾಕಿ ಹಿಡೀಬೇಕು.
೩೦೬೬. ಹಗ್ಗ ಮೂಗುದಾರ ಒಂದೂ ಇಲ್ಲದಿರು = ಲಂಗುಲಗಾಮಿಲ್ಲದಿರು, ಅಂಕೆ ಆಜ್ಞೆ ಇಲ್ಲದಿರು.
ಪ್ರ : ಹಗ್ಗ ಮೂಗುದಾರ ಒಂದೂ ಇಲ್ಲದೋರು ತಗ್ಗಿ ಬಗ್ಗಿ ನಡೀತಾರ?
೨೦೬೭. ಹಗೇವಿಗಿಳಿದಂತಾಗು = ಉಸಿರು ಕಟ್ಟು.
ಧಾನ್ಯ ತುಂಬಲು ಭೂಮಿಯ ಮೇಲೆ ಕಟ್ಟಿದ ಮಂಟಪಕ್ಕೆ ಕಣಜ ಎನ್ನುತ್ತಾರೆ. ಭೂಮಿಯೊಳಗೆ ಕೊರೆದ ಕಣಜಕ್ಕೆ ಹಗಹ ಎನ್ನುತ್ತಾರೆ. ಹಗಹ ಎನ್ನುವುದೇ ಜನರ ಬಾಯಲ್ಲಿ ಹಗೇವು ಆಗಿದೆ, ಪುಣ್ಯ ಎಂಬುದು ಪುಣ್ಣೇವು ಆದಂತೆ. ಧಾನ್ಯ ತೆಗೆದುಕೊಳ್ಳಲು ಹಗೇವಿನ ಬಾಯಿ ಕಿತ್ತು ಕೂಡಲೇ ಒಳಗಿಳಿದರೆ ಉಸಿರುಕಟ್ಟಿ ಸಾಯುವ ಸಂಭವ ಉಂಟು. ಆದ್ದರಿಂದ ಸ್ವಲ್ಪ ಹೊತ್ತು ಕಂಬಳಿಯನ್ನು ಅದರೊಳಕ್ಕೆ ಇಳಿಬಿಟ್ಟು, ಸುತ್ತಲೂ ತಿರುಗಿಸುತ್ತಾ ಧೂಳು ವಗೈರೆ ಅಡಗುವಂತೆ ಮಾಡಿ, ಗಾಳಿ ನುಸುಳುವಂತಾದಾಗ ಒಳಗೆ ಇಳಿಯುತ್ತಾರೆ. ಆದರೂ ಉಸಿರು ಕಟ್ಟಿದ ಅನುಭವವಾಗುತ್ತದೆ.
ಪ್ರ : ನೆಲ ಮಾಳಿಗೆ ಮನೆಗೆ ಹೋದಾಗ ಹಗೇವಿಗಿಳಿದಂತಾಯ್ತು.
೩೦೬೮. ಹಚ್ಚಗಿದ್ದ ಕಡೆ ಮೇದು ಬೆಚ್ಚಿಗಿದ್ದ ಕಡೆ ಮಲಗು = ನಿರ್ಯೋಚನೆಯಿಂದ ಆರಾಮವಾಗಿರು.
(ಹಚ್ಚಗೆ = ಹಸಿರಾಗಿ ; ಬೆಚ್ಚಗೆ = ಬಿಸಿಯಾಗಿ)
ಪ್ರ : ಹಚ್ಚಗಿದ್ದ ಕಡೆ ಮೇದು ಬೆಚ್ಚಗಿದ್ದ ಕಡೆ ಮಲಗೋನಿಗೆ ಹೆಂಡ್ರು ಮಕ್ಕಳು ಯಾಕೆ?
೩೦೬೯. ಹಚ್ಚೆ ಹುಯ್ದಂತಿರು = ಶಾಶ್ವತವಾಗಿರು, ಎಂದೂ ಅಳಿಸಿ ಹೋಗದಿರು.
(ಹಚ್ಚೆ = ಹಸುರು) ಹಸುರು ಅಥವಾ ಹಚ್ಚೆ ಹುಯ್ಯಿಸಿಕೊಳ್ಳುವುದು ನಮ್ಮ ಜನಪದ ಸಂಸ್ಕೃತಿಯ ಒಂದು ಅಂಗ. ತಮ್ಮ ತಮ್ಮ ಮೊಣಕೈಗಳ ಮೇಲೆ ಪ್ರಿಯತಮ ಅಥವಾ ಪ್ರಿಯತಮೆಯ ಹೆಸರಿನ ಹಚ್ಚೆ ಹುಯ್ಯಿಸಿಕೊಳ್ಳುತ್ತಾರೆ. ಹಣೆಗೆ ಹಣೆಬಟ್ಟು ಹುಯ್ಯಿಸಿಕೊಳ್ಳುತ್ತಾರೆ. ಮೈಮೇಲೆ ಕೃಷ್ಣನ ಆಕೃತಿಯನ್ನು ಹುಯ್ಯಿಸಿಕೊಳ್ಳುತ್ತಾರೆ. ಸ್ತನಗಳ ಮೇಲೂ ಸಹ ಹುಯ್ಯಿಸಿಕೊಳ್ಳುತ್ತಾರೆ. ಇದು ಪ್ರಪಂಚದಾದ್ಯಂತ ಪ್ರಚಲಿತವಾಗಿದ್ದಂತಹ ಪ್ರಾಚೀನ ಕಲೆ. “ಉತ್ರಾಸದ ಮೇಲೆ ಒಂದು ಉತ್ರಾಣಿಕೆ ಗಿಡ ಹುಟ್ಟಿ ಉತ್ತರೂ ಬರದು ಕಿತ್ತರೂ ಬರದು” ಎಂಬ ಒಗಟಿಗೆ ಉತ್ತರ ಹಣೆಬಟ್ಟಿನ ಹಚ್ಚೆ ಎಂದು. ಉತ್ರಾಸ ಎಂದರೆ ಬಾಗಿಲು ಮೇಲ್ಭಾಗದ ಮರದ ಪಟ್ಟಿ ಅಂದರೆ ಮನುಷ್ಯನ ಹಣೆ; ಉತ್ರಾಣಿಕೆ ಗಿಡ ಎಂದರೆ ಹಣೆಬಟ್ಟಿನ ಹಚ್ಚೆ; ಉತ್ತರೂ ಬರದು ಕಿತ್ತರೂ ಬರದು ಎಂದರೆ ಅದು ಶಾಶ್ವತ ಎಂದು.
ಪ್ರ : ತರಗತಿಯಲ್ಲಿ ಗುರು ಹೇಳುವುದನ್ನು ನೀವು ಚಿತ್ತೈಕಾಗ್ರತೆಯಿಂದ ಮೈಯೆಲ್ಲ ಕಿವಿಯಾಗಿ ಕೇಳಿದರೆ, ಅದು ನಿಮ್ಮ ಹೃದಯದಲ್ಲಿ ಹಚ್ಚೆ ಹುಯ್ದಂತೆ ಉಳಿದುಬಿಡುತ್ತದೆ.
೩೦೭೦. ಹಟ್ಟಿಗಿಡಿ = ಸಾವು ಸನ್ನಿಹಿತವಾಗು
(ಹಟ್ಟಿಗಿಡಿ < ಹಟ್ಟಿಗೆ + ಹಿಡಿ = ಅಂಗಳಕ್ಕೆ ಸಾಗಿಸು) ಹಟ್ಟಿ ಎಂಬುದಕ್ಕೆ ಮನೆ ಎಂಬ ಮೂಲಾರ್ಥವಿದ್ದು, ಅದು ಕಾಲಕ್ರಮೇಣ ಬೇರೆ ಬೇರೆ ಅರ್ಥದಲ್ಲಿ ಬಳಕೆಯಾಗುತ್ತಾ ಬಂದಿದೆ. ಮೇಗಳ ಹಟ್ಟಿ ಎಂದರೆ ಮೇಲಿನ ಮನೆ ಎಂದರ್ಥ. ಅದು ಕ್ರಮೇಣ ಊರು ಎಂಬ ಅರ್ಥದಲ್ಲೂ ಬಳಕೆಯಾಗಿದೆ. ಉದಾಹರಣೆಗೆ ಗೊಲ್ಲರಹಟ್ಟಿ. ಆಧುನಿಕ ಕಾಲದಲ್ಲಿ ಹಟ್ಟಿ ಎಂದರೆ ಮನೆಯ ಮುಂದಿನ ಅಂಗಳ ಎಂಬ ಅರ್ಥವನ್ನು ಪಡೆದುಕೊಂಡಿದೆ. ಉದಾಹರಣೆಗೆ “ಇನ್ನು ಹಟ್ಟಿಗೆ ಸಗಣ್ನೀರು ಹಾಕಿ ಗುಡಿಸಿಲ್ಲ” ಎಂದು ಹೇಳುತ್ತಾರೆ. ಅಂದರೆ ಮನೆಯ ಗರತಿ ಬೆಳಗಾಗುತ್ತಲೇ ಬಾಗಿಲು ತೆಗೆದು, ಹಟ್ಟಿಗೆ ಸಗಣಿನೀರು ಚಿಮುಕಿಸಿ ಕಸಗುಡಿಸುವ ಪರಿಪಾಠ ಇಂದಿಗೂ ನಮ್ಮ ಹಳ್ಳಿಗಾಡಿನಲ್ಲಿದೆ. ಸಾಯುವ ಮನುಷ್ಯ ಪ್ರಾಣವನ್ನು ಒಳಗೆ ಬಿಡಬಾರದು ಎಂದು ಅವನನ್ನು ಎತ್ತಿ ತಂದು ಅಂಗಳದಲ್ಲಿ ಮಲಗಿಸುತ್ತಾರೆ. ಆ ನಂಬಿಕೆಯ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ.
ಪ್ರ : ಗಾದೆ – ಆಪಾಟಿ ತಿಂದೋಳು ಅವಳೆಲ್ಲಿ ಬದುಕ್ಯಾಳು
ತಟ್ಟಿ ಹಾಸಿ ಹಟ್ಟಿಗಿಡೀರಿ
೩೦೭೧. ಹಟ್ಟಲಾಗು = ಕೆಸರಾಗು
(ಅಟ್ಲು = ತೊಸಗಲು ನೆಲ)
ಪ್ರ : ಕಣ್ಣು ಕಾಣಲ್ವ, ಗಂಜಳ ಹುಯ್ದು ಕೊಟ್ಟಿಗೆ ಎಲ್ಲ ಹಟ್ಲು ಆದಂಗೆ ಆಗ್ಯದೆ.
೩೦೭೨. ಹಡಗು ಹಡಗನ್ನೇ ಮುಳುಗಿಸು = ಭಾರಿ ಪ್ರಮಾಣದ ಮೋಸ ಮಾಡು, ಕೊಳ್ಳೆ ಹೊಡಿ.
ಪ್ರ : ಇವನು ಹೆಡಗೆ ಮುಳುಗಿಸಿದರೆ, ಅವನು ಹಡಗು ಹಡಗನ್ನೇ ಮುಳುಗಿಸ್ತಾನೆ.
೩೦೭೩. ಹಡದಿ ಕೊಡು = ಆಯ ಕೊಡು.
ಹಳ್ಳಿಗಳಲ್ಲಿ ಹಿಂದೆ ಅಗಸರು, ನಾಯಿಂದರು, ಕಮ್ಮಾರರು ಮೊದಲಾದವರಿಗೆ ವರ್ಷದ ಕೊನೆಯಲ್ಲಿ ಕೊಡುತ್ತಿದ್ದ ಧಾನ್ಯರೂಪದ ಆಯಕ್ಕೆ ಹಡದಿ ಎನ್ನುತ್ತಿದ್ದರು. ಈಗಿನಂತೆ ಇಷ್ಟು ಬಟ್ಟೆ ಒಗೆದದ್ದಕ್ಕೆ ಇಷ್ಟು ದುಡ್ಡು, ಇಷ್ಟು ಜನರಿಗೆ ಕ್ಷೌರ ಮಾಡಿದ್ದಕ್ಕೆ ಇಷ್ಟು ದುಡ್ಡು, ಇಷ್ಟು ಉಪಕರಣಗಳನ್ನು ತಟ್ಟಿಕೊಟ್ಟಿದ್ದಕ್ಕಾಗಿ ಮಾಡಿಕೊಟ್ಟಿದ್ದಕ್ಕಾಗಿ ಇಷ್ಟು ದುಡ್ಡು ಎಂದು ಅಂದಂದೇ ಕೈ ಮೇಲೆ ಕೊಡುವ ಪದ್ಧತಿ ಇರಲಿಲ್ಲ. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು.
ಪ್ರ : ನಿನಗೆ ಹಡದೆ, ಹಡದಿ ಹೆಂಗೆ ಕೊಡಲಿ ಅಂತ ಕಣ್ಣು ಮಿಟುಕಿಸಿದ ಊರಗೌಡ.
೩೦೭೪. ಹಡಪ ಎತ್ತು = ಜಾಗ ಬಿಡು
(ಹಡಪ = ಕ್ಷೌರಿಕನ ಪೆಟ್ಟಿಗೆ)
ಪ್ರ : ಮೊದಲು ಇಲ್ಲಿಂದ ನಿನ್ನ ಹಡಪ ಎತ್ತು, ಕತ್ತೆ ಬಡವಾ.
೩೦೭೫. ಹಡು = ಸಂಭೋಗಿಸು
(ಹಡು < ಹೆಡು < ಹೆಟ್ಟು = ರತಿಕ್ರೀಡೆಯಾಡು)
ಪ್ರ : ಅವನು ‘ನಿನ್ನಮ್ಮನ್ನ ಹಡ’ ಅಂತ ಬಯ್ದ, ನಾನು ನಿನ್ನಮ್ಮನಿಗೇ ಹಡ್ತೀನಿ ಅಂದೆ.
೩೦೭೬. ಹಣದ ಬಣವೆ ಹಾಕು = ಹಣ ಗುಡ್ಡೆ ಹಾಕು
(ಬಣವೆ < ಬಣಬೆ < ಬಣಂಬೆ < ಬಳಂಬೆ = ಮೆದೆ)
ಪ್ರ : ಇಂಜಿನಿಯರ್ ಕೆಲಸ ಸಿಕ್ಕಿದ ಮೇಲೆ ಹಣದ ಬಣವೆ ಹಾಕಿಬಿಟ್ಟ.
೩೦೭೭. ಹಣಾಹಣಿ ಜಗಳವಾಗು = ಉಗ್ರವಾದ ಹೊಡೆದಾಟವಾಗು
(ಹಣಾಹಣಿ = ಹಣೆ ಹಣೆ ತಾಕಲಾಡುವ ಜಗಳ)
ಪ್ರ : ಇಬ್ಬರಿಗೂ ಹಣಾಹಣಿ ಜಗಳ ಆಯ್ತು.
೩೦೭೮. ಹಣ್ಣಾಗು = ಮೆತ್ತಗಾಗು, ವಯಸ್ಸಾಗು
ಪ್ರ : ಮಗ ಸತ್ತ ಕೊರಗಿನಲ್ಲೇ ಅಪ್ಪ ತೀರ ಹಣ್ಣಾಗಿಬಿಟ್ಟ.
೩೦೭೯. ಹಣ್ಣುಗಾಯಿ ನೀರುಗಾಯಿ ಮಾಡು = ಚೆನ್ನಾಗಿ ಜಜ್ಜು, ಜಜ್ಜು ಮೂಲಂಗಿ ಮಾಡು
ಪ್ರ : ಅವರ ಮೇಲೆ ಇವನು ನಿಗುರಿಕೊಂಡ ಹೋದ, ಅವರು ಹಣ್ಗಾಯಿ ನೀರ್ಗಾಯಿ ಮಾಡಿ ಕಳಿಸಿದರು.
೩೦೮೦ ಹಣ್ಣುಕಾಯಿ ಮಾಡಿಸು = ಪೂಜೆ ಮಾಡಿಸು
ಪ್ರ : ಇವತ್ತು ಹನುಮಂತರಾಯನಿಗೆ ಹಣ್ಣುಕಾಯಿ ಮಾಡಿಸಿಕೊಂಡು ಬಂದೆ.
೩೦೮೧. ಹಣ್ಣು ಹಾಕೋ ತಿಮ್ಮಣ್ಣ ಅಂತ ಕಾಯು = ಕೈಯೊಡ್ಡಿ ನಿಲ್ಲು
(ತಿಮ್ಮಣ್ಣ = ಕೋತಿ) ಮನುಷ್ಯ ಏನೇನು ಅಂಗಭಂಗಿ ಮಾಡುತ್ತಾನೋ ಮಂಗನೂ ಹಾಗೇ ಮಾಡುತ್ತದೆ. ಅಣಕಿಸಿದರೆ ಅಣಕಿಸುತ್ತದೆ, ಹಲ್ಲು ಕಿರಿದರೆ ಹಲ್ಲು ಕಿರಿಯುತ್ತದೆ. ಏನನ್ನಾದರೂ ಎಸೆಯುವಂತೆ ಕೈ ಬೀಸಿದರೆ ಅದೂ ಹಾಗೆಯೇ ಕಯ ಬೀಸುತ್ತದೆ. ಅದರಿಂದ ಉತ್ತೇಜಿತಗೊಂಡ ಹುಡುಗ ತನ್ನ ಕೈಲಿದ್ದ ಹಣ್ಣನ್ನು ಎಸೆದು, ಅದು ಮತ್ತೆ ನನ್ನತ್ತ ಎಸೆಯುತ್ತದೆ ಎಂದು ಕೈಯೊಡ್ಡಿ ಕಾಯುತ್ತಾ ನಿಂತ. ಅದು ಎಸೆಯಲಿಲ್ಲ. ಏಕೆಂದರೆ ಹೆಣ್ಣನ್ನು ಎಸೆಯುವಷ್ಟು ಅವಿವೇಕತನ ಕೋತಿಗಿರಲಿಲ್ಲ. ಆ ವರ್ತನೆಯನ್ನೊಳಗೊಂಡ ನುಡಿಗಟ್ಟಿದು.
ಪ್ರ : ಹಣ್ಣು ಹಾಕೋ ತಿಮ್ಮಣ್ಣ ಅಂತ ಕಾಯೋದ್ರಲ್ಲಿ ಅರ್ಥವಿಲ್ಲ, ಹೋಗೋಣ ಬನ್ನಿ.
೩೦೮೨. ಹಣೆ ಚಚ್ಚಿಕೊಳ್ಳು = ಸಾವಿರ ಸಾರಿ ಹೇಳಿರು, ಎಚ್ಚರಿಕೆ ನೀಡಿರು
ಪ್ರ : ನಾನು ಮೊದಲಿನಿಂದಲೂ ಹಣೆಹಣೆ ಚಚ್ಕೊಂಡೆ, ನನ್ನ ಮಾತ್ನ ನೀನು ಕೇಳಿದ?
೩೦೮೩. ಹಣ್ಣೋ ಕಾಯೋ ಎನ್ನು = ಕೆಲಸ ಆಯಿತೋ ಆಗಲಿಲ್ಲವೋ ಎಂದು ಕೇಳು
ಪ್ರ : ಹೋದ ಕೆಲಸ ಹಣ್ಣೋ ಕಾಯೋ ಎಂದಾಗ, ಆಳು ಹಣ್ಣು ಎಂದ.
೩೦೮೪. ಹತ್ತದಿರು ಹರಿಯದಿರು = ಸಮಸ್ಯೆ ಬಗೆಹರಿಯದಿರು, ಎಳೆದಾಟವಾಗು
ಪ್ರ : ಹಾವೂ ಸಾಯಲ್ಲ ಕೋಲೂ ಮುರಿಯಲ್ಲ ಅನ್ನೋ ಹಂಗೆ ಇವನು ಮಾತು ಹತ್ತಲ್ಲ ಹರಿಯಲ್ಲ.
೩೦೮೫. ಹತ್ತರಿ ಹೊಡಿ = ನುಣ್ಣಗೆ ಮಾಡು
(ಹತ್ತರಿ = ತೋಬಡ, ಮರವನ್ನು ನಯನುಣುಪುಗೊಳಿಸುವ ಉಪಕರಣ)
ಪ್ರ : ಅತ್ತೆ ಮನೆ ಸಂಪತ್ತನ್ನೆಲ್ಲ ಹತ್ತರಿ ಹೊಡೆದಂಗೆ ಮಾಡಿಬಿಟ್ಟ.
೩೦೮೫. ಹತ್ತಾರು ಹಲ್ಲಂಡೆ ನೂರಾರು ಲೋಲಾಯಿ ಆಗು = ಕಷ್ಟಕಾರ್ಪಣ್ಯಗಳು ಮುತ್ತಿಗೆ ಹಾಕು.
(ಹಲ್ಲಂಡೆ < ಪಲ್ಲಂಡೆ = ಚಿದರು ಚಿದರಾದ (< ಛಿದ್ರಛಿದ್ರ) ಬಾಳೆ ಎಲೆ; ಲೋಲಾಯಿ < ಲುಲಾಯ(ಕೋಣ) ಲುಲಾಯಿ (ಎಮ್ಮೆ) = ಕೋಣ ವಾಹನನ ಬಾಧೆ)
ಪ್ರ : ಹತ್ತಾರು ಹಲ್ಲಂಡೆ ನೂರಾರು ಲೋಲಾಯಿ ಆದ್ರೂ ಬದುಕಬೇಕಲ್ಲ? ಸಾಯೋಕಾಗ್ತದ?
೩೦೮೬. ಹತ್ತಿರಕ್ಕೆ ಹೋಗು = ವ್ಯಭಿಚಾರದಲ್ಲಿ ತೊಡಗು
ಪ್ರ : ಇವನು ಆ ಹಲಾಲ್‌ಕೋರಿ ಹತ್ರಕ್ಕೆ ಹೋಗಿದ್ದಕ್ಕೆ ತಾನೇ, ಇಷ್ಟೆಲ್ಲ ರಾದ್ಧಾಂತ ಆಗಿದ್ದು?
೩೦೮೭. ಹದಗಳ್ಳೆ ಕಟ್ಟು = ತೊಡೆ ಸಂದಿಯಲ್ಲಿ ಗಂಟಾಗಿ ಬಾಧಿಸು
(ಹದಗಳ್ಳೆ < ಹದಗಡಲೆ = ಒಳದೊಡೆಯ ಗಂಟು)
ಪ್ರ : ಹದಗಳ್ಳೆ ಕಟ್ಟಿ ಮುಂದಕ್ಕೆ ಕಾಲಿಕ್ಕೋಕಾಗಲ್ಲ.
೩೦೮೮. ಹದಗೊಳಿಸು = ಸಿದ್ಧಪಡಿಸು, ಸರಿಪಡಿಸು
ಪ್ರ : ಎಲ್ಲ ಹದಗೊಳಿಸಿ ಇಕ್ಕಿರುವಾಗ ಅಡೋದು ಎಷ್ಟೊತ್ತು?
೩೦೮೯. ಹದಕ್ಕೆ ತರು = ಪಾಕಗೊಳಿಸು, ತೀರ್ಮಾನ ಮಾಡಿಕೊಳ್ಳುವ ಹಂತಕ್ಕೆ ತರು
ಪ್ರ : ಇಬ್ಬರನ್ನೂ ಒಂದು ಹದಕ್ಕೆ ತಂದಿದ್ದೀವಿ, ಇವತ್ತು ತೀರ್ಮಾನ ಆಗಬಹುದು.
೩೦೯೦. ಹದಗೆಟ್ಟು ಹೋಗು = ಹಾಳಾಗು, ವಿಕೋಪಕ್ಕಿಟ್ಟು ಕೊಳ್ಳು
ಪ್ರ : ಇವನ ಅವಿವೇಕದಿಂದ ವ್ಯವಹಾರವೇ ಹದಗೆಟ್ಟು ಹೋಯ್ತು.
೩೦೯೧. ಹದವಾಗು ನಡೆದುಕೊಳ್ಳು = ತೂಕವಾಗಿ, ಗಂಭೀರವಾಗಿ ವರ್ತಿಸು
ಪ್ರ : ತುಂಬಿದೂರದಲ್ಲಿ ಹದವಾಗಿ ನಡೆದುಕೊಳ್ಳೋದನ್ನು ಬಿಟ್ಟು ಬೆದೆ ಬಂದ ದನದ ಹಂಗೆ ತಿರುಗ್ತಿದ್ರೆ ಮನೆತನದ ಮಾನ ಉಳೀತದ?
೩೦೯೨. ಹದರಾಟ ಆಡದಿರು = ಹಾದರಗಿತ್ತಿಯಾಟ ಆಡದಿರು
(ಹದರ < ಹಾದರ = ವ್ಯಭಿಚಾರ)
ಪ್ರ : ನನ್ನ ಹತ್ರ ನಿನ್ನ ಹದರಾಟ ಆಡಬೇಡ, ಹುಷಾರಾಗಿರು
೩೦೯೩. ಹದ್ದಿನ ಕಣ್ಣಲ್ಲಿ ಕಾದಿರು = ಮೈಯೆಲ್ಲ ಕಣ್ಣಾಗಿ ಚುರುಕು ನೋಟದಿಂದಿರು
ಪ್ರ : ಇಷ್ಟು ದಿನ ಹದ್ದಿನ ಕಣ್ಣಲ್ಲಿ ಕಾದು, ಇವತ್ತು ಯಾಮಾರಿಬಿಟ್ಟೆ.
೩೦೯೪. ಹನುಮಂತನ ಬಾಲವಾಗು = ತುಂಬ ಉದ್ದವಾಗು, ಕೊನೆಯಿಲ್ಲದಿರು
ಪ್ರ : ನೋಡ್ತಾ ನೋಡ್ತಾ ಕೀವು (<ಕ್ಯೂ) ಹನುಮಂತನ ಬಾಲವಾಯ್ತು.
೩೦೯೫. ಹನ್ನೆರಡು ಹೊಡೆದುಕೊಳ್ಳು = ಭಯವಾಗು, ಎದೆ ಡವಡವಗುಟ್ಟು
ಗೋಡೆಗಡಿಯಾರ ಬಂದ ಮೇಲೆ ಮೂಡಿದ ನುಡಿಗಟ್ಟಿತು. ಏಕೆಂದರೆ ಅದ ಹನ್ನೆರಡು ಗಂಟೆಯಾದರೆ ಹನ್ನೆರಡು ಸಾರಿ, ಗಂಟೆ ಬಡಿದಂತೆ, ಸದ್ದು ಮಾಡುತ್ತದೆ. ಕೈಗಡಿಯಾರ ಹಾಗೆ ಮಾಡುವುದಿಲ್ಲ. ಹೃದಯ ಲೋಲಕವುಳ್ಳ ಗೋಡೆ ಗಡಿಯಾರದಂತೆ ಹೊಡೆದುಕೊಂಡಿತು ಎಂದು ಹೇಳುವ ಮೂಲಕ ಭಯವನ್ನು ಭಟ್ಟಿ ಇಳಿಸಿದೆ.
ಪ್ರ : ಮೌಖಿಕ ಪರೀಕ್ಷೆಗೆ ಒಳ ಹೋಗುವ ಮುನ್ನ ನನಗೆ ಹನ್ನೆರಡು ಹೊಡೆದುಕೊಳ್ತು.
೩೦೯೬. ಹಬ್ಬ ಮಾಡು = ಸಾಕು ಸಾಕು ಅನ್ನಿಸು
ಪ್ರ : ಅಮ್ಮಣ್ಣಿ ಬಂದಿದ್ಲು, ಸರಿಯಾಗಿ ಹಬ್ಬ ಮಾಡಿ ಕಳಿಸಿದ್ದೀನಿ.
೩೦೯೭. ಹಮ್ಮಿಳಿಸು = ಗರ್ವ ಅಡಗಿಸು
(ಹಮ್ಮು = ಅಹಂಕಾರ)
ಪ್ರ : ಹಮ್ಮಿಳಿಯೋಂಗೆ ಚೆನ್ನಾಗಿ ಗುಮ್ಮಿ ಕಳಿಸಿದ್ದೀನಿ.
೩೦೯೮. ಹರಾಜು ಎತ್ತು = ಅಡ್ಡಾದುಡ್ಡಿಗೆ ಮಾರು, ಹೋದಷ್ಟಕ್ಕೆ ವಿಕ್ರಯಿಸು.
ಪ್ರ : ಇನ್ನೊಂದು ದಿವಸ ಇಂಥ ಹಲ್ಕಾ ಕೆಲಸ ಮ ಮಾಡಿದ್ರೆ ನಿನ್ನ ಮಾನಾನ ನಡುಬೀದೀಲಿ ಹರಾಜು ಎತ್ತಿ ಬಿಡ್ತೀನಿ, ಜೋಕೆ.
೩೦೯೯. ಹರಿದು ಬಗಾಲಾಗು = ಚಿಂದಿ ಚಿಂದಿಯಾಗು, ರಂದ್ರರಂದ್ರವಾಗು
(ಬಗಾಲ್ < ಬಗಾರ = ತೂತು)
ಪ್ರ : ಕವಚ ಹರಿದು ಬಗಾಲಾಗಿದೆ, ಬೀಗರ ಮನೆಗೆ ಅದನ್ನು ಹಾಕ್ಕೊಂಡು ಹೋಗೋದು ಹೆಂಗೆ?
೩೧೦೦. ಹರಿದು ಪಲ್ಲಂಡೆಯಾಗು = ಛಿದ್ರಛಿದ್ರವಾಗು
(ಪಲ್ಲಂಡೆ = ಚಿದರು ಚಿದರಾದ ಬಾಳೆ ಎಲೆ)
ಪ್ರ : ಸ್ಯಾಲೆ ಹರಿದು ಪಲ್ಲಂಡೆ ಆಗಿದೆ, ಅದನ್ನೇ ಉಟ್ಕೊಂಡು ಹೋಗ್ಲ?
೩೧೦೧. ಹರಿಕೊಳ್ಳು = ಕಿತ್ತುಕೊಳ್ಳು
(ಹರಿಕೊಳ್ಳು < ಹರಿದುಕೊಳ್ಳು = ಕಿತ್ತುಕೊಳ್ಳು)
ಪ್ರ : ನನ್ನ ಹತ್ರ ಏನು ಹರಿಕೊಳ್ತಾನೆ, ನನ್ನ ಜುಬ್ಬರಾನ?
೩೧೦೨. ಹರಿಶಿವ ಎನ್ನು = ಮರಣ ಹೊಂದು
ಪ್ರ : ಅವನು ಎಂದೋ ಹರಿಶಿವ ಅಂದ, ಈಗಿರೋನು ಮಗ ಮಾತ್ರ.
೩೧೦೩. ಹರಿಶಿವ ಎನ್ನದಿರು = ಮಾತಾಡದಿರು, ಬಾಯಿ ತೆರೆಯದಿರು.
ಯಾವುದೇ ಪಕ್ಷದ ಪರವಾಗಿ ಮಾತಾಡದೆ ಬಾಯಿ ಹೊಲಿದುಕೊಂಡಿರುವುದು. ಹಿಂದೊಮ್ಮೆ ನಮ್ಮ ಸಮಾಜದಲ್ಲಿ ಪ್ರಬಲವಾಗಿದ್ದ ಹರಿಹರ ಹಗರಣದ ಹಿನ್ನೆಲೆಯ ವಾಸನೆಯನ್ನುಳ್ಳ ನುಡಿಗಟ್ಟಿದು ಎನ್ನಬಹುದು.
ಪ್ರ : ಅವರೆಲ್ಲ ಅಷ್ಟು ಅಂದ್ರೂ ಆಡಿದ್ರೂ, ಇವರು ಹರಿಶಿವ ಅನ್ನಲಿಲ್ಲ.
೩೧೦೪. ಹರಿಯೋ ನೀರಲ್ಲಿ ಹುಣಿಸೆ ಹಣ್ಣು ಕಿವುಚಿದಂತಾಗು = ವ್ಯರ್ಥವಾಗು
ಸಾರಿಗೆ ಹುಳಿ ಬಿಡಲು, ಒಂದು ಬಟ್ಟಲಲ್ಲಿ ನೀರಿಟ್ಟುಕೊಂಡು, ಹುಣಿಸೆ ಹಣ್ಣನ್ನು ಅದರೊಳಗೆ ಕಿವುಚಿ, ಹಿಪ್ಪೆಯನ್ನು ಹೊರಕ್ಕೆ ಎಸೆದು, ಸಾರಿಗೆ ಹುಳಿ ಬಿಡುತ್ತಾರೆ. ಆದರೆ ಹರಿಯೋ ನೀರಲ್ಲ ಕಿವುಚಿದರೆ, ಹುಳಿಯನ್ನು ಸಾರಿಗೆ ಬಿಡುವುದು ಹೇಗೆ? ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಅವನಿಗೆ ಮಾಡಿದ ಉಪಕಾರ, ಹರಿಯೋ ನೀರಲ್ಲಿ ಹುಣಿಸೆಹಣ್ಣು ಕಿವುಚಿದಂತಾಯ್ತು.
೩೧೦೫. ಹರೆ ಕಡಿದು ಬಿರಿ ಬಿಚ್ಚಿ ಹಾಕು = ಶ್ರಮಿಸು, ಕೆಲಸ ಮಾಡು
(ಹರೆ = ಕೊಂಬೆ; ಬಿರಿ = ರಂದ್ರಕ್ಕೆ ತೊಡಿಸಿದ ಕಾವು ಸಡಿಲವಾಗಿದ್ದರೆ ಬಿಗಿಗೊಳಿಸಲು ಹೊಡೆಯುವ ಆಪು ಅಥವಾ ರಥದ ವೇಗವನ್ನು ನಿಯಂತ್ರಿಸಲು ಚಕ್ರಕ್ಕೆ ಹಾಕುವ ಅಡ್ಡಮರ)
ಪ್ರ : ಹೊತ್ತಾರೆಯಿಂದ ನೀನು ಹರೆ ಕಡಿದು ಬಿರಿ ಬಿಚ್ಚಿ ಹಾಕಿರೋದು ಕಾಣಲ್ವ?
೩೧೦೬. ಹರೇದ ಉಮೇದಿರು = ಪ್ರಾಯದ ಹುಮ್ಮಸ್ಸಿರು
(ಹರೇದ < ಹರೆಯದ = ಯೌವನದ; ಉಮೇದು = ಹುರುಪು)
ಪ್ರ : ಹರೇದ ಉಮೇದಿನಲ್ಲಿ ಮಕ್ಕಳು ತಪ್ಪು ಮಾಡ್ತಾರೆ, ಅದನ್ನೇ ದೊಡ್ಡದು ಮಾಡಬಾರ್ದು.
೩೧೦೭. ಹಲ್ಲಂಡೆ ಬೀಳಿಸು = ಪರದಾಡಿಸು
(ಹಲ್ಲಂಡೆ < ಪಲ್ಲಂಡೆ = ಸೀಳು ಸೀಳಾದ ಬಾಳ ಎಲೆ)
ಪ್ರ : ಮಗರಾಮ ನನ್ನನ್ನು ಅಷ್ಟಿಷ್ಟು ಹಲ್ಲಂಡೆ ಬೀಳಿಸಿಲ್ಲ.
೩೧೦೮. ಹಲ್ಲಂಡೆ ಮಾಡು = ಚುಪ್ಪಾನಚೂರು ಮಾಡು, ರಣ-ರಂ-ಪ ಮಾಡು
ಪ್ರ : ಮಗ ಮಾಡಿದ ಹಲ್ಲಂಡೇಲಿ ನಾನೆಲ್ಲುಂಡೆ?
೩೧೦೯. ಹಲಾಬಿ ಕಟ್ಟು = ನೆಗೆದಾಡು
(ಹಲಾಬಿ = ಮುಸ್ಲಿಮರ ಮೊಹರಂ ಹಬ್ಬದ ಒಂದು ಆಚರಣೆ)
ಪ್ರ : ಬೇಡ ಬೇಡ ಅಂದ್ರೂ ಊರೆಲ್ಲ ನೋಡೋಂಗೆ ಹಲಾಬಿ ಕಟ್ಟಿಬಿಟ್ಟ, ಮಾರಾಯ
೩೧೧೦. ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗಿ = ಹಿಂಸಿಸಿ ಹೀಯಾಳಿಸು, ಹಲ್ಲೊಳಗೆ ಲಲುವಿ ನಾಲಗೆಯೊಳಗೆ ಜಾಯ-ಮಾ-ನ ಜಾಲಾಡು
(ಹಲ್ಲಾಗೆ = ಹಲ್ಲೊಳಗೆ ; ಸೊಲ್ಲಾಗೆ = ಸೊಲ್ಲೊಳಗೆ) ಹಲ್ಲೊಳಗೆ ತೂರಿಸಿ ಜಗಿದು, ಸೊಲ್ಲೊಳಗೆ ಜಾಲಾಡಿ ಈಚೆಗೆ ತೆಗೆದರು ಎಂಬಲ್ಲಿ ಹಿಂಸೆ ಮತ್ತು ಹೀಯಾಳಿಕೆ ಎರಡೂ ಕಂಡರಣೆಗೊಂಡಿವೆ – ನಡೊಲೇಲಿಕ್ಕಿ ಕೋಡೊಲೇಲಿ ತೆಗೆದಳು ಎಂಬ ನುಡಿಗಟ್ಟಿನಂತೆ. ನಮ್ಮ ಜನಪದರು ಬಳಸುವ ನುಡಿಗಟ್ಟುಗಳಿಗಿರುವ ಚಿತ್ರಕಶಕ್ತಿ ಸದಾಕಾಲ ಮೆಲುಕು ಹಾಕುವಂಥದ್ದು.
ಪ್ರ : ನಮ್ಮತ್ತೆ ನನ್ನನ್ನು ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗೆದಿರೋದನ್ನ ಎಲ್ಲರ ಮುಂದೆ ಹೇಳಿಕೊಳ್ಳಲಾರೆ.
೩೧೧೧. ಹಲ್ಲಿಕ್ಕದಿರು = ಅನುಭವ ಇಲ್ಲದಿರು
(ಹಲ್ಲಿಕ್ಕು < ಹಲ್ಲು + ಇಕ್ಕು = ಹಲ್ಲು ಹುಟ್ಟು) ಕೌಮಾರ್ಯದಿಂದ ತಾರುಣ್ಯಕ್ಕೆ ಬರುವ ಅವಧಿಯಲ್ಲಿ ಮನುಷ್ಯರಿಗೆ ಹಲ್ಲು ಬಿದ್ದು ಬೇರೆ ಹೊಸ ಹಲ್ಲು ಹುಟ್ಟುತ್ತವೆ. ಆದರೆ ಪ್ರಾಣಿಗಳಿಗೆ ತಾರುಣ್ಯ ಬಂದಾಗ ಎರಡು ಹಲ್ಲು, ಏರು ಹರೆಯವಾದಾಗ ನಾಲ್ಕು ಹಲ್ಲು, ಹರೆಯದ ಗಡಿದಾಟಿದಾಗ ಆರು ಹಲ್ಲು ಹುಟ್ಟುತ್ತದೆ. ಆರು ಹಲ್ಲು ಹುಟ್ಟಿದಾಗ ‘ಬಾಯ್ಗೂಡಿವೆ’ ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಹಲ್ಲಿಕ್ಕದ ಚಿಳ್ಳೆಪುಳ್ಳೆಗಳೆಲ್ಲ ನನಗೆ ಬುದ್ಧಿ ಹೇಳೋಕೆ ಬಂದ್ರೆ ಸಿಟ್ಟು ಬರಲ್ವ?
೩೧೧೨. ಹಲ್ಲಿಗಿಳಿ = ರುಚಿ ಹತ್ತು
(ಹಲ್ಲಿಗಿಳಿ < ಹಲ್ಲಿಗೆ + ಇಳಿ = ಹಲ್ಲಿಗೆ ಸ್ವಾದರಸ ಇಳಿದುಕೊಳ್ಳು)
ಪ್ರ : ಹಲ್ಲಿಗಿಳಿದ ಮೇಲೆ, ಅನ್ಯರ ವಸ್ತುವಾದರೂ ಅದು ತಮ್ಮದೇ ಎಂದು ವಾದಿಸುತ್ತಾರೆ.
೩೧೧೩. ಹಲ್ಲಿ ನುಡಿದಂತಾಡು = ಕರಾರುವಾಕ್ಕಾಗಿ ಹೇಳು
ಹಲ್ಲಿ ನುಡಿದರೆ ಅದು ವಿಫಲವಾಗುವುದಿಲ್ಲ ಎಂಬ ನಂಬಿಕೆ ಜನಪದರಲ್ಲಿದೆ. ಕೆಲಸ ಹಾಗಲ್ಲ ಅಥವಾ ಆಗುತ್ತದೆ ಎಂಬುದನ್ನು ತನ್ನ ಲೊಚಗುಟ್ಟುವ ಧ್ವನಿಯಲ್ಲಿ ಅದು ಹೇಳುತ್ತದೆ, ಅದನ್ನು ಗ್ರಹಸುವ ಶಕ್ತಿ ಮನುಷ್ಯರಿಗೆ ಬರಬೇಕು ಎಂಬುದು ಅವರ ವಾದ. ಸಾಮಾನ್ಯವಾಗಿ ಹಲ್ಲಿ ಫಲವಾದಾಗ ಜನಪದರು “ಕೃಷ್ಣ ಕೃಷ್ಣ” ಎಂದು ಹೇಳುವುದು ರೂಢಿ. ಅಂದರೆ ಕೃಷ್ಣನೇ ಹೇಳುವ ಸತ್ಯವಾಣಿ ಎಂಬುದು ಅವರ ಗ್ರಹಿಕೆ. ಆ ನಂಬಿಕೆಯ ಪ್ರತಿರೂಪ ಈ ನುಡಿಗಟ್ಟು.
ಪ್ರ : ನೀನು ಹಲ್ಲಿನುಡಿದಂತಾಡಿದ್ದು ಸುಳ್ಳಾಗಲಿಲ್ಲ, ನಿನಗೆ ಮಚ್ಚೆನಾಲಗೆ ಇರಬೇಕು.
೩೧೧೪. ಹಲ್ಲಿಗೆ ಸಾಲದಿರು = ಕಮ್ಮಿ ಇರು
(ಸಾಲದಿರು = ಸಾಕಾಗದಿರು)
ಪ್ರ : ಹಲ್ಲಿಗೇ ಸಾಲದೆ ಇರುವಾಗ ಗಲ್ಲೆಬಾನಿ ತುಂಬೋದು ಹೆಂಗೆ?
೩೧೧೫. ಹಲ್ಲಿಗೆ ಹಲ್ಲು ಹುಟ್ಟಿದಂಗೆ ಮಾತಾಡು = ಮಾತಿಗೆ ಪ್ರತಿಮಾಡು ಹೇಳು.
ಬಿದ್ದ ಹಲ್ಲಿನ ಜಾಗದಲ್ಲಿ ಮತ್ತೊಂದು ಹೊಸ ಹಲ್ಲು ಹುಟ್ಟುತ್ತದೆ. ಅದೇ ರೀತಿ ಆಡಿದ ಮಾತಿಗೆ ಪ್ರತಿಯಾಗಿ ಮತ್ತೊಂದು ಪ್ರತಿಮಾತು ಎದುರಾಗುತ್ತದೆ ಎಂಬುದು ಈ ನುಡಿಗಟ್ಟಿನ ಭಾವಾರ್ಥ.
ಪ್ರ : ಮನೆ ಹೆಂಗಸು ಹಲ್ಲಿಗೆ ಹಲ್ಲು ಹುಟ್ಟಿದಂಗೆ ಮಾತಾಡೋದ್ನ ಮೊದಲು ನಿಲ್ಲಿಸಬೇಕು.
೩೧೧೬. ಹಲ್ಲುದುರಿಸು = ಚೆನ್ನಾಗಿ ಥಳಿಸು
ಪ್ರ : ಗರ‍್ಮಿರ್ ಅಂದ್ರೆ ಹಲ್ಲುದುರಿಸಿಬಿಡ್ತೀನಿ, ಅದುಮಿಕೊಂಡು ಕುಂತಿರು.
೩೧೧೭. ಹಲ್ಲು ಕಚ್ಚೋರ ಮುಂದೆ ಹುಲ್ಲು ಕಚ್ಚಿ ಬದುಕು = ದರ್ಪ ಚಲಾಯಿಸುವವರ ಮುಂದೆ ದೈನ್ಯದಿಂದ ಬಾಳು
(ಹಲ್ಲು ಕಚ್ಚೋರು = ದರ್ಪ ತೋರಿಸುವ ದಣಿಗಳು, ಹುಲ್ಲು ಕಚ್ಚು = ಶರಣಾಗತರ ಅಸಾಹಾಯಕತನ)
ಪ್ರ : ಗಾದೆ – ಹಲ್ಲು ಕಚ್ಚೋ ಅರಸರ ಕಂಡು
ಹುಲ್ಲು ಕಚ್ಚೋ ಆಳುಗಳ ದಂಡು.
೩೧೧೮. ಹಲ್ಲು ಕಿತ್ತ ಹಾವಾಗು = ಶಕ್ತಿ ಹೀನವಾಗು
ಪ್ರ : ಮೆಲುಕು ಅಲ್ಲಾಡೋ ಹಂಗೆ ತದಕಿದ್ದರಿಂದ ಈಗ ಹಲ್ಲುಕಿತ್ತ ಹಾವಾಗಿದ್ದಾನೆ.
೩೧೧೯. ಹಲ್ಲು ಕಚ್ಚಿಕೊಂಡಿರು = ತಾಳಿಕೊಂಡಿರು
ಪ್ರ : ನಿನ್ನ ಮುಖ ನೋಡ್ಕೊಂಡು ಹಲ್ಲುಕಚ್ಕೊಂಡಿದ್ದೀನಿ, ಇಲ್ಲದಿದ್ರೆ ಅವನಿಗೆ ಹುಟ್ಟಿದ ದಿನ ಕಾಣಿಸ್ತಿದ್ದೆ.
೩೧೨೦. ಹಲ್ಲು ಕೀಚುಗಟ್ಟು = ಹಲ್ಲುಜ್ಜದೆ ಹಾವಸೆಗಟ್ಟು
(ಕೀಚು = ಪಾಚಿ)
ಪ್ರ : ಹಲ್ಲು ಕೀಚುಗಟ್ಟಿ ಬಾಯಿ ತೆರೆದರೆ ಗಬ್ಬುವಾಸನೆ ಬರ್ತದೆ.
೩೧೨೧. ಹಲ್ಲು ಹಲ್ಲು ಗಿರಗು = ನೋವಿನಿಂದ ನರಳು, ಗೋಗರೆ
(ಗಿರಗು = ಗಿಂಜು)
ಪ್ರ : ಅಷ್ಟು ಹಲ್ಲು ಹಲ್ಲು ಗಿರಗಿದರೂ, ಕಾರ್ಕೋಟಕನ ಮನಸ್ಸು ಕರಗಲಿಲ್ಲ.
೩೧೨೨. ಹಲ್ಲು ಗಿಂಜು = ಆಲ್ವರಿ, ಅಸಹಾಯಕನಾಗಿ ಬೇಡು
ಪ್ರ : ಅನ್ನ ಇಲ್ಲದೆ ಸತ್ರೂ ಚಿಂತಿಲ್ಲ, ಒಬ್ಬರ ಮುಂದೆ ಹೋಗಿ ನಾನು ಹಲ್ಲುಗಿಂಜಲ್ಲ.
೩೧೨೩. ಹಲ್ಲು ಬಾಯಿ ಉಳಿ = ಏನೂ ಉಳಿಯದಿರು
ಪ್ರ : ಗಾದೆ – ಹಂಚಿದೋರಿಗೆ ಹಲ್ಲು ಬಾಯಿ
೩೧೨೪. ಹಲ್ಲು ಮುಡಿ ಕಚ್ಚು = ಸಿಟ್ಟು ದೋರು
(ಹಲ್ಲು ಮುಡಿ = ಅವುಡು)
ಪ್ರ : ನೀನು ಹಲ್ಲು ಮುಡಿ ಕಚ್ಚಿಬಿಟ್ರೆ ನಡುಗೋ ಅಸಾಮಿ ನಾನಲ್ಲ.
೩೧೨೫. ಹಲ್ಲು ಮುರಿದು ಕೈಗೆ ಕೊಡು = ಶಾಸ್ತಿ ಮಾಡು.
ಪ್ರ : ಜರ್ಬುಗಿರ್ಬು ತೋರಿಸಿದರೆ ಹಲ್ಲು ಮುರಿದು ಕೈಗೆ ಕೊಡ್ತೀನಿ.
೩೧೨೬. ಹಲ್ಲಾಗೆ ಹ ರೆ ಬಾರಿಸು = ಸಿಟ್ಟಿನಿಂದ ಹಲ್ಲನ್ನು ನೊರನೊರಗುಟ್ಟಿಸು
(ಹಲ್ಲಾಗೆ = ಹಲ್ಲೊಳಗೆ; ಹರೆ < ಪರೆ = ವಾದ್ಯವಿಶೇಷ)
ಪ್ರ : ಹಲ್ಲಾಗೆ ಹರೆ ಬಾರಿಸಿಬಿಟ್ರೆ ಇಲ್ಲಿ ಯಾರೂ ವಾಲಗ ಊದೋಕೆ ತಯಾರಿಲ್ಲ.
೩೧೨೭. ಹಲ್ಲಿಗೆ ಹಲ್ಲು ತಾಟು ಹುಯ್ = ಚಳಿಗೆ ಹಲ್ಲು ಕರಕರಗುಟ್ಟು
(ತಾಟು ಹುಯ್ = ಒಂದಕ್ಕೊಂದು ತಾಡನಗೊಳ್ಳು)
ಪ್ರ : ಎಂಥ ಚಳಿ ಅಂದ್ರೆ, ಹಲ್ಲಿಗೆ ಹಲ್ಲು ತಾಟು ಹುಯ್ದುಬಿಟ್ಟವು.
೩೧೨೮. ಹಲ್ಲು ಹಲ್ಲು ಕಡಿ = ರುದ್ರಾವತಾರ ತಾಳು
ಪ್ರ : ನಾವೆಲ್ಲ ಒಟ್ಟಿಗಿದ್ದದ್ದು ನೋಡಿ ಅಣ್ಣ ಹಲ್ಲು ಹಲ್ಲು ಕಡಿದ, ಅದರ ಕಥೆ ಯಾಕೆ ಕೇಳ್ತಿ?
೩೧೨೯. ಹಲ್ಲು ಹಾವಸೆಗಟ್ಟು = ಕೊಳಕಾಗಿರು
(ಹಾವಸೆ < ಪಾವಸೆ < ಪಾಸಿ < ಪಾಚಿ(ತ) = ಕೊಳೆ)
ಪ್ರ : ಹಲ್ಲು ಹಾವಸೆಗಟ್ಟಿದ್ರೂ ನಿನ್ನ ಮನಸ್ಸಿಗೆ ಏನೂ ಅನ್ನಿಸಲ್ವ?
೩೧೩೦. ಹಲ್ಲು ಹಿಡಿದು ನೋಡು = ಪರೀಕ್ಷಿಸು
ದನಗಳ ಜಾತ್ರೆಯಲ್ಲಿ ಕೊಳ್ಳುವವರು ಎತ್ತು ಅಥವಾ ಹೋರಿಗಳ ಹಲ್ಲು ಹಿಡಿದು ನೋಡುವುದು ರೂಢಿ. ಎರಡು ಹಲ್ಲು ಹಾಕಿದೆಯೋ, ನಾಲ್ಕು ಹಲ್ಲು ಹಾಕಿದೆಯೋ ಅಥವಾ ಆರು ಹಲ್ಲು ಹಾಕಿ ಬಾಯ್ಗೂಡಿದೆಯೋ ಎಂದು ನೋಡಿ ಅವುಗಳ ವಯಸ್ಸಿಗನುಗುಣವಾಗಿ ಬೆಲೆಗಟ್ಟುತ್ತಿದ್ದರು. ಮಾನವರ ಜಾತಿಮತ ಪರೀಕ್ಷಿಸುವವರನ್ನು ಈ ನುಡಿಗಟ್ಟಿನ ಮೂಲಕವೇ ತರಾಟೆಗೆ ತೆಗೆದುಕೊಳ್ಳುವುದನ್ನು ಕಾಣುತ್ತೇವೆ.
ಪ್ರ : ಕನಕದಾಸರು ಬದುಕಿದ್ದದ್ದು, ಜಾತಿಯ ಹಲ್ಲು ಹಿಡಿದು ನೋಡಿ ವ್ಯಕ್ತಿಯ ಬೆಲೆ ಕಟ್ಟುತ್ತಿದ್ದ ಕಾಲದಲ್ಲಿ
೩೧೩೧. ಹಲ್ಲು ಹಿಡಿದು ಮಾತಾಡು = ನಿಗ್ರಹದಿಂದ ಮಾತಾಡು
ಪ್ರ : ನಾಲಗೆ ಹೋದ ಹಾಗೆ ಮಾತಾಡಬೇಡ, ಕೊಂಚ ಹಲ್ಲು ಹಿಡಿದು ಮಾತಾಡೋದನ್ನ ಕಲಿ
೩೧೩೨. ಹಸಗೆಟ್ಟು ಹೋಗು = ಹಾಳಾಗು, ರೀತಿನೀತಿ ಇಲ್ಲವಾಗು
(ಹಸ < ಹಸನು = ಶುದ್ಧ, ಅಂದಚೆಂದ)
ಪ್ರ : ಗಾದೆ – ಹಸಗೆಟ್ಟೋಳಿಗೆ ಅರಿಶಿಣ ಇಕ್ಕಿದ್ಕೆ
ಹೊಸಲ ಮೇಲೆ ಹೋಗಿ ತೊಸಕ್ ಅಂದ್ಲಂತೆ.
೩೧೩೩. ಹಸವಲ್ಲದೋರ ಹತ್ರ ಪಿಸುಮಾತಾಡದಿರು = ಕೆಟ್ಟವರ ಬಳಿ ಗುಟ್ಟು ಹೇಳದಿರು
(ಹಸವಲ್ಲದೋರು < ಹಸವಲ್ಲದವರು = ಒಳ್ಳೆಯವರಲ್ಲದವರು ಅಂದರೆ ಕೆಟ್ಟವರು)
ಪ್ರ : ಹಸವಲ್ಲದೋರ ಹತ್ರ ಪಿಸುಮಾತಾಡಿ, ತಾನೂ ಹಾಳಾದ ಅನುಯಾಯಿಗಳನ್ನೂ ಹಾಳು ಮಾಡಿದ.
೩೧೩೪. ಹಸಿ ಮೈಯಾಗಿರು = ಒಂದು ಮನಃಸ್ಥಿತಿಯಿಂದ ಮತ್ತೊಂದು ಮನಃಸ್ಥಿತಿಗೆ
ಪಕ್ಕಾ-ದ-ವ-ರಾಗಿರು
(ಹಸಿ ಮೈಯವರು = ಬಾಣಂತಿ, ನೆರೆದ ಹೆಣ್ಣು ಮದುವೆಯಾದ ಹೆಣ್ಣು ಗಂಡುಗಳು)
ಪ್ರ : ಹಸಿ ಮೈ ಆಗಿರೋರು ಹುಣಿಸೆಮರದ ಕೆಳಗೆ ಹೋಗಬಾರದು.
೩೧೩೫. ಹಸಿ ಸೂಳೆಯಂತಿರು = ಅಪ್ಪಟ ವೇಶ್ಯೆಯಂತಿರು
(ಹಸಿ = ಅಪ್ಪಟ, ಥೇಟ್; ಪಂಪನ ‘ಪಚ್ಚ ಪಸಿಯ ಗೋವಳ’ ಎಂಬ ಅಭಿವ್ಯಕ್ತಿ ಗಮನಿಸಿ)
ಪ್ರ : ಹಸಿ ಸೂಳೆಯಂಗೆ ವರ್ತಿಸ್ತಾಳೆಯೇ ವಿನಾ ಹಸನಾದ ಗರತಿಯಂಗೆ ವರ್ತಿಸಲ್ಲ.
೩೧೩೬. ಹಸಿ ತುರುಕನಂತಿರು = ಥೇಟ್ ಸಾಬರಂತೆ ಕಾಣು
ಪ್ರ : ನೀನು ಪೈಜಾಮ ಹಾಕ್ಕೊಂಡ್ರೆ ಒಳ್ಳೆ ಹಸಿ ತುರುಕನಂಗೆ ಕಾಣಿಸ್ತಿ.
೩೧೩೭. ಹಸಿ ಸುಳ್ಳು ಹೇಳು = ಅಪ್ಪಟ ಬೂಸಿ ಹೇಳು
ಪ್ರ : ಹಸಿ ಸುಳ್ಳು ಹೇಳೋದ್ರಲ್ಲಿ ನಿನ್ನ ಬಿಟ್ರೆ ಇನ್ನಿಲ್ಲ.
೩೧೩೮. ಹಸು ತಿರುಗಿರು = ಬಾರಿಗೆ ಬಂದಿರು
(ತಿರುಗು = ಬೆದೆಗೊಳ್ಳು)
ಪ್ರ : ಹಸು ತಿರುಗಿದೆ, ಹೋರಿ ಕೊಡಿಸಿಕೊಂಡು ಬಾ ಹೋಗು
೩೧೩೯. ಹಸುಗೆ ಮಾಡು = ಹಂಚಿಕೆ ಮಾಡು, ಭಾಗ ಮಾಡು
(ಹಸುಗೆ < ಪಸುಗೆ = ಹಂಚಿಕೆ)
ಪ್ರ : ತನ್ನ ಹಸುಗೇಲಿ ಕಬ್ಬು ಮುರಿದಿಲ್ಲ, ನನ್ನ ಹಸುಗೇಲಿ ಮುರಿದು ತಿಂದಿದ್ದಾನೆ.
೩೧೪೦. ಹಸುಬೆ ಚೀಲಕ್ಕೆ ತುಂಬು = ಹೊಟ್ಟೆಗೆ ತುಂಬು, ಉಣ್ಣು
(ಹಸುಬೆ < ಪಸುಂಬೆ = ಮಧ್ಯೆ ಬಾಯುಳ್ಳ ಉದ್ದವಾದ ಬಟ್ಟೆಯ ಚೀಲ) ಹಸುಬೆ ಚೀಲದ ಎರಡು ಕಡೆಗೂ ಧಾನ್ಯ ಅಥವಾ ಕಾಯಿಗಳನ್ನು ತುಂಬಿಕೊಂಡು, ಮಧ್ಯೆ ಬಾಯಿ ಇರುವ ಭಾಗವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಾರೆ. ‘ಒಂದು ಬಾಯಿ ಎರಡು ಹೊಟ್ಟೆ’ ಎಂಬ ಒಗಟಿಗೆ ಉತ್ತರ ಹಸುದೆ ಚೀಲವೆಂದು. ಏಕೆಂದರೆ ಅದರ ಬಾಯಿ ಭಾಗವನ್ನು ಹೆಗಲ ಮೇಲೆ ಹಾಕಿಕೊಂಡಿರುವುದರಿಂದ, ಧಾನ್ಯ ಅಥವಾ ಕಾಯಿ ತುಂಬಿದ ಅದರ ಉಬ್ಬಿದ ಹೊಟ್ಟೆಗಳು ಹಿಂದೊಂದು ಮುಂದೊಂದು ಜೋತುಬಿದ್ದಿರುತ್ತವೆ. ಮನೆಗೆ ತಂದು ಸುರಿದಾಗ ಎರಡೂ ಕಡೆಯ ಹೊಟ್ಟೆಗಳು ಖಾಲಿಯಾಗಿ ಹಸುಬೆಚೀಲದ ಎರಡು ಪದರಗಳೂ ಅಪ್ಪಚ್ಚಿಯಾಗಿ ಕಚ್ಚಿಕೊಳ್ಳುತ್ತವೆ. ಭೀಮ ಕೀಚಕನ ಮೂಳೆ ಮುಡುಕು ಕಳ್ಳು ಪಚ್ಚಿ ಎಲ್ಲ ಹೊರೆ ಬರುವಂತೆ ಮಾಡಿದಾಗ ಅವನ ಕೈಯಲ್ಲಿ ಬರಿಯ ಚರ್ಮ ಉಳಿಯಿತು ಎಂದು ಹೇಳುವಾಗ ಪಂಪ ‘ಪಸುಂಬೆ’ ರೂಪಕವನ್ನು ಸಾರ್ಥಕವಾಗಿ ಬಳಸಿಕೊಂಡಿದ್ದಾನೆ.
ಪ್ರ : ಕೊಂಚಕ್ಕೆಲ್ಲ ನಿನ್ನ ಹಸುಬೆ ಚೀಲ ತುಂಬಲ್ಲ, ‘ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ’ ಎಂಬ ಗಾದೆ ಮಾತು ಸುಳ್ಳಲ್ಲ.
೩೧೪೧. ಹಸೆ ಏರು = ಮದುವೆಯಾಗು
(ಹಸೆ = ಶುಭಕಾರ್ಯದಲ್ಲಿ ಬಳಸುವ ಕುಸುರಿ ಕೆಲಸ ಕಲಾತ್ಮಕ ಹಸೆಮಣೆ)
ಪ್ರ : ಇಬ್ಬರೂ ಇಷ್ಟರಲ್ಲೆ ಹಸೆ ಏರಲಿದ್ದಾರೆ.
೩೧೪೨. ಹಳಸಿಕೊಳ್ಳು = ವಿರಸ ಉಂಟಾಗು, ವೈಮನಸ್ಯಮೂಡು
(ಹಳಸು = ಹುಳಿ ಬರು, ಕೆಟ್ಟವಾಸನೆ ಬರು)
ಪ್ರ : ಅವರಿಬ್ಬರ ಸಂಬಂಧ ಈಗ ಹಳಸಿಕೊಂಡಿದೆ.
೩೧೪೩.ಹಳಿದಪ್ಪು = ಜಾಡು ಬಿಡು
(ಹಳಿ = ರೈಲು ಕಂಬಿ)
ಪ್ರ : ಹಳಿದಪ್ಪಿದೋರ್ನ ಕರ್ಕೊಂಡು ಬಂದು ಹುಳಿ ಹುಯ್ಕೊಂತೀಯ?
೩೧೪೪. ಹಳ್ಳಿ ಕೂಸು ಹತ್ತಿ ಕೂಸು ಆಡಿಸು = ಉಯ್ಯಾಲೆ ಆಡಿಸು, ಮೇಲಕ್ಕೇರಿಸಿ ಕೆಳಕ್ಕಿಳಿಸು
ಹಳ್ಳಿಯಲ್ಲಿ ಗಾಡಿಯ ಎತ್ತುಗಳನ್ನು ಬಿಚ್ಚಿಕೊಂಡು, ಗಾಡಿಯ ಮೂಕನ್ನು ಕೆಳಕ್ಕಿಳಿಸಿ ಮನೆಗೆ ಹೋಗುತ್ತಾರೆ. ಮೂಕಿಗೆ ಕಟ್ಟಿರುವ ನೊಗವನ್ನು ಬಿಚ್ಚಿರುವುದಿಲ್ಲ. ಆಗ ಹುಡುಗರು ನೊಗದ ಒಂದುಕಡೆಗೆ ಒಬ್ಬರೋ ಇಬ್ಬರೋ ಇನ್ನೊಂದು ಕಡೆಗೆ ಒಬ್ಬರೋ ಇಬ್ಬರೋ ಕುಳಿತುಕೊಂಡು ಆಟ ಆಡುತ್ತಾರೆ. ಒಂದು ಕಡೆಯ ತುದಿಯವರು ಭಾರಬಿಟ್ಟು ಅದುಮಿದಾಗ ಇನ್ನೊಂದು ತುದಿಯವರು ಮೇಲಕ್ಕೆ ಹೋಗುತ್ತಾರೆ. ಇವರು ಭಾರ ಬಿಟ್ಟು ಕೆಳಕ್ಕೆ ಅದುಮಿದಾಗ ಅವರು ಮೇಲಕ್ಕೆ ಹೋಗುತ್ತಾರೆ. ಈ ಆಟಕ್ಕೆ ‘ಹಳ್ಳಿ ಕೂಸು ಹತ್ತಿ ಕೂಸು’ಆಟ ಎಂದು ಹೇಳುತ್ತಾರೆ. ಬಹುಶಃ ಅದು ‘ಇಳಿ ಕೂಸು ಹತ್ತಿ ಕೂಸು’ ಎಂದು ಇರಬೇಕು. ಮುಂದಿನ ‘ಹತ್ತಿ’ ಶಬ್ದದ ಸಾದೃಶ್ಯದಿಂದ ಹಿಂದಿನ ‘ಇಳಿ’ ಶಬ್ದ ‘ಹಳ್ಳಿ’ ಎಂದಾಗಿರಬೇಕು – ಬಿತ್ತನೆ ಶಬ್ದದ ಸಾದೃಶ್ಯದಿಂದ ಹರಗಣೆ ಎಂಬುದು ಹರ್ತನೆ ಎಂದು ಆಗಿರುವಂತೆ.
ಪ್ರ : ಹಳ್ಳಿ ಕೂಸು ಹತ್ತಿ ಕೂಸು ಆಡೋದಕ್ಕೆ ಮಕ್ಕಳು ಮುಗಿಬಿದ್ದವು.
೩೧೪೫. ಹಳ್ಳುಕಾಯಿ ಮುಟ್ಟಿದಂತಾಗು = ತಲೆಯ ತುಂಬ ಗಾಯವಾಗಿರು
(ಹಳ್ಳು < ಹರಳು)
ಪ್ರ : ತಲೆಯಾದ ತಲೆಯೆಲ್ಲ ಹಳ್ಳುಕಾಯಿ ಮುಟ್ಟಿದಂತಾಗ್ತದೆ.
೩೧೪೬. ಹಳ್ಳು ಹಾಕಿದರೆ ಹಳ್ಳು ಸಿಡಿಯೋವಷ್ಟು ಬಿಸಿಲಿರು = ಉರಿಬಿಸಿಲು ಧಗಧಗಿಸುತ್ತಿರು.
ಪ್ರ : ಹಳ್ಳು ಹಾಕಿದರೆ ಹಳ್ಳು ಸಿಡಿಯೋವಷ್ಟು ಬಿಸಿಲಿರುವಾಗ, ಮಕ್ಕಳ್ನ ಆಡೋಕೆ ಕಳಿಸಿದ್ದೀಯಲ್ಲ?
೩೧೪೭. ಹಳ್ಳು ಹುರಿದಂತೆ ಮಾತಾಡು = ನಿರರ್ಗಳವಾಗಿ ಮಾತಾಡು, ಚಟಪಟ ನುಡಿಗಳನ್ನು ಸಿಡಿಸು
ಓಡಿನಲ್ಲಿ ಅಥವಾ ಬಾಣಲಿಯಲ್ಲಿ ಹರಳನ್ನು ಹುರಿಯುವಾಗ ಬಿಸಿಗೆ ಹರಳುಗಳು ಚಟಪಟನೆ ಸಿಡಿಯುತ್ತವೆ. ಹಾಗೆ ಬಾಯಿಂದ ಶಬ್ದಗಳು ಸಿಡಿಯುತ್ತವೆ ಎಂಬ ಭಾವ ಈ ನುಡಿಗಟ್ಟಿನಲ್ಲಿದೆ.
ಪ್ರ : ದೊಡ್ಡೋನು ಬಿಕ್ಕಲ, ಚಿಕ್ಕೋನು ಹಳ್ಳು ಹುರಿದಂತೆ ಮಾತಾಡ್ತಾನೆ.
೩೧೪೮. ಹಳೆ ರಾಗಿ ತರೋಕೆ ಹೋಗು = ಮರಣ ಹೊಂದು
ಹಿಂದೆ ರಾಗಿಯನ್ನು ನೆಲದಲ್ಲಿ ಗುಂಡಿ ಕೊರೆದು ಅದರಲ್ಲಿ ತುಂಬಿ ಬಾಯಿಗೆ ಒಂದು ಮುಚ್ಚಳದಂಥ ಕಲ್ಲು ಚಪ್ಪಡಿ ಹಾಕಿ ಮುಚ್ಚುತ್ತಿದ್ದರು. ಅದಕ್ಕೆ ಹಗಹ, ಹಗೇವು ಎಂದು ಕರೆಯುತ್ತಿದ್ದರು. ರಾಗಿ ಬೇಕಾದಾಗ ಹಗೇವಿನ ಬಾಯಿ ತೆಗೆದು ರಾಗಿ ತೆಗೆದುಕೊಂಡು ಮತ್ತೆ ಬಾಯಿ ಮುಚ್ಚುತ್ತಿದ್ದರು. ಹೆಣ ಹೂಳಲಿಕ್ಕೂ ಹಗೇವಿನ ಹಾಗೆ ಗುಂಡಿ ತೆಗೆಯುತ್ತಾರೆ. ಆದ್ದರಿಂದ ಈ ನುಡಿಗಟ್ಟು ಸಾವನ್ನು ಸೂಚಿಸುತ್ತದೆ.
ಪ್ರ : ಅವನು ಹಳೇ ರಾಗಿ ತರೋಕೆ ಹೋಗಿ ವರ್ಷದ ಮೇಲಾಯ್ತು
೩೧೪೯. ಹಾಕಿದ ಗೆರೆ ದಾಟದಿರು = ಹದ್ದು ಮೀರದಿರು, ಮಾತು ಮೀರಿಸಲು
ಮಾಯದ ಜಿಂಕೆ ‘ಓ ಲಕ್ಷ್ಮಣಾ’ ಎಂದು ಕೂಗಿಕೊಂಡಾಗ, ಅದು ರಾಕ್ಷಸ ಮಾಯೆ ಎಂದು ಎಷ್ಟು ಹೇಳಿದರೂ ಕೇಳದೆ ಸೀತೆ ಬಲವಂತವಾಗಿ ಲಕ್ಷ್ಣಣನನ್ನು ಕಳಿಸುತ್ತಾಳೆ. ಆಗ ಲಕ್ಷ್ಮಣ ಒಂದು ಗೆರೆ ಹಾಕಿ, ಇದನ್ನು ದಾಟಿ ಹೊರ ಹೋಗಬಾರದು ಎಂದು ಹೇಳಿ ಹೋದ ಎಂಬ, ಆದರೆ ಮಾರು ವೇಷದ ರಾವಣನಿಗೆ ಭಿಕ್ಷ ಹಾಕಲು ಗೆರೆ ದಾಟಿದ ಪ್ರಯುಕ್ತ ರಾವಣನು ಅಪಹರಿಸುವುದಕ್ಕೆ ಸಾಧ್ಯವಾಯಿತು ಎಂಬ ಪೌರಾಣಿಕ ಹಿನ್ನೆಲೆ ಈ ನುರಿಗಟ್ಟಿಗೆ ಮೂಲ.
ಪ್ರ : ಹಿರಿಯರು ಹಾಕಿದ ಗೆರೆ ದಾಟದ ಹಾಗೆ ಬಾಳುವೆ ಮಾಡು, ಒಳ್ಳೇದಾಗುತ್ತದೆ
೩೧೫೦. ಹಾಟು ಕುಡಿ = ರಕ್ತ ಕುಡಿ
(ಹಾಟು = ಯೋನಿ-ಯ ರಕ್ತ)
ಪ್ರ : ಏಟು ನಿಗು-ರ್ತಿ, ಅವ-ಳ ಹಾಟೇ ಕುಡಿ ಹೋಗು
೩೧೫೧. ಹಾಡು ಇರಿಸಿರು = ನೋವು ಇರಿಸಿರು
(ಹಾಡು < ಪಾಡು = ತೊಂದರೆ, ನೋವು)
ಪ್ರ : ನನ್ನ ಹಾಡು ಅವರಿಗೂ ಇರಿಸಿರಲಿ !
೩೧೫೨. ಹಾದಿ ಕಾಯು = ಎದುರು ನೋಡು, ನಿರೀಕ್ಷಿಸು
ಪ್ರ : ಬೆಳಗ್ಗೆಯಿಂದಲೂ ನಿನ್ನ ಹಾದೀನೇ ಕಾಯ್ತಾ ಇದ್ದೆ.
೩೧೫೩. ಹಾದಿ ತಪ್ಪು = ಕೆಟ್ಟ ನಡತೆಗಿಳಿ
ಪ್ರ : ಹಾದಿ ತಪ್ಪಿದ ಮಗನಿಂದ ಅಮ್ಮ ಅಪ್ಪ ಕಂಗಾಲಾಗಿದ್ದಾರೆ.
೩೧೫೪. ಹಾದಿ ಬೀದಿ ಪಾಲು ಮಾಡು = ಅನಾಥರನ್ನಾಗಿ ಮಾಡು
ಪ್ರ : ಅಪ್ಪ ಕುಡ್ತ ಕಲ್ತು, ಮಕ್ಕಳ್ನ ಹಾದಿ ಬೀದಿ ಪಾಲು ಮಾಡಿದ.
೩೧೫೫. ಹಾದಿರಂಪ ಬೀದಿರಂಪ ಮಾಡು = ಗುಲ್ಲೋಗುಲ್ಲಾಗುವಂತೆ ಮಾಡು
ಪ್ರ : ಕುಟುಂಬದ ವಿಷಯವನ್ನು ಹಾದಿರಂಪ ಬೀದಿರಂಪ ಮಾಡಿದರು
೩೧೫೬. ಹಾದಿಗೆ ಮುಳ್ಳು ಹಾಕು = ಸಂಬಂಧ ಕಡಿದುಕೊಳ್ಳು
ಪ್ರ : ಬೀಗರೂರಿನ ಹಾದಿಗೆ ಎಂದೋ ಮುಳ್ಳು ಹಾಕಿಬಿಟ್ಟೆ.
೩೧೫೭. ಹಾದಿ ಹಿಡಿ = ಹೊರಡು, ಮುಂದೆ ಸಾಗು
ಪ್ರ : ಇಲ್ಲಿರಬೇಡ, ಇನ್ನು ನಿನ್ನ ಹಾದಿ ಹಿಡಿ.
೩೧೫೮. ಹಾರಿ ಬೀಳುವಂತೆ ಆಲು = ಬೆಚ್ಚಿ ಬೀಳುವಂತೆ ಕಿರಿಚು
(ಹಾರಿಬೀಳು = ಮೆಟ್ಟಿ ಬೀಳು; ಆಲು = ಕಿರಿಚು)
ಪ್ರ : ಮಕ್ಕಳು ಮರಿ ಎಲ್ಲ ಹಾರಿಬೀಳುವಂತೆ ಆಲಿಬಿಟ್ಟ.
೩೧೫೯. ಹಾರಿಸಿಕೊಂಡು ಹೋಗು = ಅಪಹರಿಸಿಕೊಂಡು ಹೋಗು
ಪ್ರ : ಹೊಲೇರೋನು ಲಿಂಗಾಯಿತರೋಳ್ನ ಹಾರಿಸಿಕೊಂಡು ಹೋದ
೩೧೬೦. ಹಾರಿಸಿಕೊಂಡು ಹೋಗುವಂತಿರು = ತುಂಬ ಸುಂದರವಾಗಿರು
ಪ್ರ : ಕಂಡೋರು ಹಾರಿಸಿಕೊಂಡು ಹೋಗೋವಷ್ಟು ಸುಂದರವಾಗಿದ್ದಾಳೆ ಹುಡುಗಿ.
೩೧೬೧. ಹಾರು ಹಾಕು = ರಾಶಿ ಹಾಕು, ಕಡಿದು ಗುಡ್ಡೆ ಹಾಕು
(ಹಾರು ಹಾಕು < ಏರು ಹಾಕು = ಕಡಿದು ರಾಶಿ ಮೂಡುವಂತೆ ಮೇಲಕ್ಕೆ ಹಾಕು)
ಪ್ರ : ನೀನು ಬೆಳಗ್ಗೆಯಿಂದ ಕಡಿದು ಹಾರು ಹಾಕಿರೋದು ಕಾಣಲ್ವ?
೩೧೬೨. ಹಾರೆ ಹಾಕಿ ಮೀಟು = ಒತ್ತಾಯ ಮಾಡಿ ಹೊರಡಿಸು
ಪ್ರ : ಅಯ್ಯೋ ಅವನ್ನ ಹೊರಡಿಸಬೇಕಾದ್ರೆ, ಹಾರೆ ಹಾಕಿ ಮೀಟಬೇಕಾಯ್ತು
೩೧೬೩. ಹಾಲಲ್ಲಾದ್ರೂ ಹಾಕು ನೀರಲ್ಲಾದ್ರೂ ಹಾಕು = ಕೆಡಿಸಿಯಾದ್ರೂ ಕೆಡಿಸು ಬದುಕಿಸಿಯಾದ್ರೂ ಬದುಕಿಸು
ಪ್ರ : ನಿನ್ನ ನಂಬಿ ಬಂದಿದ್ದೀನಿ, ಹಾಲಲ್ಲಾದ್ರೂ ಹಾಕು, ನೀರಲ್ಲಾದ್ರೂ ಹಾಕು
೩೧೬೪. ಹಾಲಿಗೆ ಹುಳಿ ಹಿಂಡು = ವಿರಸ ಮೂಡಿಸು
ಪ್ರ : ಮನೆಗೆ ಬಂದ ಕಿರಿಸೊಸೆ, ಕುಟುಂಬದ ಹಾಲಿಗೆ ಹುಳಿ ಹಿಂಡಿಬಿಟ್ಟಳು
೩೧೬೫. ಹಾಲು ಅನ್ನ ಉಂಡಂತಾಗು = ಸಂತೋಷವಾಗು
ಪ್ರ : ಅಣ್ಣತಮ್ಮಂದಿರು = ಒಂದಾದದ್ದು ನೋಡಿ ನನಗೆ ಹಾಲು ಅನ್ನ ಉಂಡಂತಾಯ್ತು.
೩೧೬೬. ಹಾಲು ತುಪ್ಪ ಬಿಡು = ಉತ್ತರ ಕ್ರಿಯೆ ಮಾಡು, ಮೃತದ ಆತ್ಮಕ್ಕೆ ಶಾಂತಿ ಕೋರು
ಪ್ರ : ಸೋಮವಾರ ಹಾಲು ತುಪ್ಪ ಬಿಡ್ತೀವಿ, ತಪ್ಪದ ಹಂಗೆ ಬನ್ನಿ
೩೧೬೭. ಹಾಲು ತುಪ್ಪದಲ್ಲಿ ಕೈ ತೊಳೆದು ಬೆಳೆ = ಸುಖ ಸಮೃದ್ಧಿಯಲ್ಲಿ ಬೆಳೆ
ಪ್ರ : ನೀನು ಹಾಲುತುಪ್ಪದಲ್ಲಿ ಕೈ ತೊಳೆದು ಬೆಳೆದ ಬಂದೋನು, ನಾವು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಂಡು ಬೆಳೆದು ಬಂದೋರು.
೩೧೬೮. ಹಾವಿಗೆ ಹಾಲೆರೆದಂತಾಗು = ಉಪಕಾರ ಮರೆತು ಅಪಕಾರ ಮಾಡು
ಪ್ರ : ಭಾವಮೈದುನ ಅಂತ ಸಾಕಿದ್ದು ಹಾವಿಗೆ ಹಾಲೆರದಂತಾಯ್ತು.
೩೧೬೯. ಹಾವು ಮುಂಗುಸಿಯಂತಾಡು = ಪರಸ್ಪರ ಕಚ್ಚಾಡು
ಪ್ರ : ಅತ್ತೆ ಸೊಸೆಯರು ಹಾವು ಮುಂಗಸಿಗಿಂತ ಅತ್ತತ್ತ ಆಡ್ತಾರೆ.
೩೧೭೦. ಹಾವು ಹೊಡೆದು ಹದ್ದಿಗೆ ಹಾಕಿದಂತಾಗು = ಕೆಟ್ಟದ್ದನ್ನು ಮಟ್ಟ ಹಾಕಿ ಮತ್ತೊಂದು ಕೆಟ್ಟದ್ದನ್ನು ಪೋಷಿಸಿದಂತಾಗು.
ಪ್ರ : ನಾವು ಮಾಡಿದ್ದು ಹಾವು ಹೊಡೆದು ಹದ್ದಿಗೆ ಹಾಕಿದಂತಾಯ್ತು.
೩೧೭೧. ಹಾಸಿಕ್ಕು = ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡು
(ಹಾಸು = ನೇಯ್ಗೆಯಲ್ಲಿನ ಉದ್ದ ಎಳೆ) ಕಂಬಳಿ ನೇಯುವವರು ಮೊದಲು ಹಾಸುದಾರವನ್ನು ಅಣಿ ಮಾಡುತ್ತಾರೆ. ಅಣಿ ಮಾಡಬೇಕಾದಾಗ ಒಂದು ತುದಿಯಿಂದ ಮತ್ತೊಂದು ತುದಿಗೆ ಬಿಗಿ ಮಾಡಲು ಓಡಾಡಬೇಕಾಗುತ್ತದೆ. ಹಾಗೆಯೇ ಹುಣಿಸೆ ಅಂಬಲಿ ಬಳಿಯಲೂ ಓಡಾಡಬೇಕಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಗಾದೆ – ಹಾಲು ಅನ್ನ ಉಂಡು ಹಾಸಿಕ್ಕೆ ಮಗಳೆ ಅಂದ್ರೆ ಹೋಗಿ ಬರೋರ್ನ ನೋಡ್ಕೊಂಡು ಮೂರು ಸಲ ನೀರು ತತ್ತೀನಿ ಅಂದ್ಲು.
೩೧೭೨. ಹಾಸಿಗೆ ಹಿಡಿ = ಕಾಯಿಲೆ ಬೀಳು
ಪ್ರ : ಅವನು ಹಾಸಿಗೆ ಹಿಡಿದು ಇಲ್ಲಿಗೆ ಒಂದು ವರ್ಷ ಆಯ್ತು.
೩೧೭೩. ಹಾಸಿ ಹೊದ್ದುಕೊಳ್ಳುವಷ್ಟಿರು = ಸಾಕಷ್ಟಿರು, ಯಥೇಚ್ಛವಾಗಿರು
ಪ್ರ : ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳೋವಷ್ಟಿದೆ, ಬೇರೆಯವರ ಉಸಾಬರಿ ನಮಗ್ಯಾಕೆ?
೩೧೭೪. ಹಾಳತವಾಗಿರು = ಮಿತಿಯಲ್ಲಿರು, ಅತಿ-ರೆ-ಕ-ಕ್ಕೆ ಹೋಗ-ದಿ-ರು
ಪ್ರ : ಚೆನ್ನಾಗಿ ಬಾಳತಕ್ಕವನು ಹಾಳತವಾಗಿರ್ತಾನೆ.
೩೧೭೫. ಹಾಳು ಮಾಡಿಕೊಳ್ಳು = ಕಳೆದುಕೊಳ್ಳು
ಪ್ರ : ಕಿವಿ ವಾಲೇನ ಹಾಳು ಮಾಡ್ಕೊಂಡು ಹುಡುಕ್ತಾ ಇದ್ದಾಳೆ.
೩೧೭೬. ಹಾಳು ಸುರಿ = ಬಿಕೋ ಎನ್ನು, ಶೂನ್ಯ ಮುಸುಗು
ಪ್ರ : ದೇವರಿಲ್ಲದ ಗುಡಿಯಂತೆ, ಯಜಮಾನನಿಲ್ಲದ ಮನೆ ಹಾಳು ಸುರೀತಾ ಅದೆ.
೩೧೭೭. ಹಾಳು ಹೊಟ್ಟೇಲೇ ಹೋಗು = ಏನೂ ತಿನ್ನದೆ ಖಾಲಿ ಹೊಟ್ಟೆಯಲ್ಲೇ ಹೋಗು
(ಹಾಳು ಹೊಟ್ಟೆ < ಅಳ್ಳು + ಹೊಟ್ಟೆ = ಮೆದು ಹೊಟ್ಟೆ, ಖಾಲಿ ಹೊಟ್ಟೆ)
ಪ್ರ : ಹಾಳು ಹೊಟ್ಟೇಲೇ ಹೋಗಿ ಹೊಲದಲ್ಲೆಲ್ಲ ಅಲೆದಾಡಿ ಹುಲ್ಲು ಕಿತ್ತು ವಾಡೆ ಗಾತ್ರ ಹೊರೆ ತಂದೂ ಇವರ ಬೈಗುಳ ತಪ್ಪಲ್ಲ.
೩೧೭೮. ಹಾಳೆ ಮೇಗಳ ಅನ್ನ ಬೇಳೆ ಮೇಗಳ ನೀರು ಬಿಡು = ಕಾಟಾಚಾರದ ಉಪಚಾರ ಮಾಡು
(ಹಾಳೆ = ಊಟಕ್ಕೆ ಬಳಸುವ ಸುಲಿಪಟ್ಟೆ ಎಲೆ, ಬೇಳೆ ಮೇಗಳ ನೀರು = ಕಾಳಿಲ್ಲದ ತಿಳಿ, ಮೇಗಳ = ಮೇಲಿನ ) ಊಟಕ್ಕೆ ತಣಿಗೆಯನ್ನು ಕೊಡದೆ, ಆಳಿಗೆ ಕೊಡುವಂತೆ ಹಾಳೆಕೊಟ್ಟು, ಸಾರನ್ನಿ ತಿರುವಿ ಬಿಡದೆ ಮೇಲಿನ ತಿಳಿ ಬಿಟ್ಟ ಕಾಟಾಚಾರದ ಆದರೋಪಚಾರವನ್ನು ಈ ನುಡಿಗಟ್ಟು ಲೇವಡಿ ಮಾಡುತ್ತದೆ.
ಪ್ರ : ಅವರ ಮನೆಗೆ ಹೋದಾಗ ಹಾಳೆ ಮೇಗಳ ಅನ್ನ ಬೇಳೆ ಮೇಗಳ ನೀರು ಬಿಟ್ಟು ಕಳಿಸಿದ್ದನ್ನು ತಿಳಿದೂ ತಿಳಿದೂ ಮತ್ತೆ ಅವರ ಮನೆಗೆ ಹೋಗಲ?
೩೧೭೯. ಹಿಕ್ಮತ್ತು ಮಾಡು = ಸಂಚು ಮಾಡು, ತಂತ್ರ ಮಾಡು
ಪ್ರ : ಮುಂದುವರೆದವರು ಮಾಡುವ ಹಿಕ್ಮತ್ತನ್ನು ಅರ್ಥ ಮಾಡಿಕೊಂಡ ಹೊರತೂ ಹಿಂದುಳಿದವರ ಉದ್ಧಾರ ಆಗದು.
೩೧೮೦. ಹಿಗ್ಗಾ ಮುಗ್ಗಾ ಜಗ್ಗು = ಎರ್ರಾಬಿರ್ರಿಎಳಿ
ಪ್ರ : ಎರಡೂ ಕಡೆ ಹಿಡ್ಕೊಂಡು ಹಿಗ್ಗಾಮುಗ್ಗಾ ಜಗ್ಗಾಡಿದರು.
೩೧೮೧. ಹಿಟ್ಟಾಗಿ ಹಿಸುಕು = ಚೆನ್ನಾಗಿ ಹುಡುಕು
ಪ್ರ : ಮನೇನೆಲ್ಲ ಹಿಟ್ಟಾಗಿ ಹಿಸುಕಿದ್ದೀನಿ, ಸಿಗಲಿಲ್ಲ ಯಾರು ಕದ್ದಿಟ್ಟಿದ್ದೀರೋ ತಂದಿಡಿ.
೩೧೮೨. ಹಿಡಾ ಮಾಡು = ಬೀಜ ಹೊಡಿ, ತರಡು ಚಚ್ಚು
(ಹಿಡಾ < ಹಿಡಿಕು < ಪಿಡುಕ್ಕು(ತ) = ಬೀಜ, ತರಡು)
ಪ್ರ : ಹಿಂದುಳಿದವರ ಹಿಡ ಮಾಡೋದೇ ಮುಂದುವರಿದವರ ಕಸುಬು
೩೧೮೩. ಹಿಡಿಗರ ಹೇಳು = ಹೆಚ್ಚುಗಾರಿಕೆ ಹೇಳು
(ಹಿಡಿಗರ = ಅದ್ಧೂರಿ, ವೈಭವ)
ಪ್ರ : ಗಾದೆ – ಹಿಡಿಗರ ಹೇಳೆ ಹಿರೇಸೊಸೆ, ಅಂದ್ರೆ
ಹುಲ್ಲು ಮಾರಿದ ದುಡ್ಡು ಎಲ್ಲಿಕ್ಕಲತ್ತೆ ? ಅಂದ್ಲು.
೩೧೮೪. ಹಿಡಿದು ನಿಗುರಿಸು = ತರಾಟೆಗೆ ತೆಗೆದುಕೊಳ್ಳು, ಎರಡು ಕಡೆಯೂ ಎಳೆದು ಉದ್ದಗೊಳಿಸು
ಪ್ರ : ಮತ್ತೆ ಇತ್ತ ತಲೆ ಇಕ್ಕದ ಹಂಗೆ. ಚೆನ್ನಾಗಿ ಹಿಡಿದು ನಿಗುರಿಸಿ ಕಳಿಸಿದ್ದೀನಿ.
೩೧೮೫. ಹಿಡಿದು ನಿಲೆ ಹಾಕು = ಅತ್ತಿತ್ತ ಹೋಗದಂತೆ, ಕುಳಿತುಕೊಳ್ಳದಂತೆ ನಿಲ್ಲಿಸು
(ನಿಲೆ ಹಾಕು = ನಿಂತ ಹೆಜ್ಜೆಯಲ್ಲೇ ನಿಲ್ಲುವಂತೆ ಮಾಡು)
ಪ್ರ : ಬೆಳಗ್ಗೆಯಿಂದಲೂ ಹಿಡಿದು ನಿಲೆ ಹಾಕಿದ್ದೆ, ಕೊನೆಗೆ ನಾನೇ ಹೋಗಲಿ ಅಂತ ಬಿಟ್ಟೆ.
೩೧೮೬. ಹಿತ್ಲ ಕಡೆ ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು
(ಹಿತ್ಲು < ಹಿತ್ತಿಲು < ಹಿತ್ತಿಲ್ < ಪಿಂತಿಲ್ = ಮನೆಯ ಹಿಂಭಾಗ (ಇಲ್ = ಮನೆ)
ಪ್ರ : ಅಮ್ಮ ಹಿತ್ಲ ಕಡೆ ಹೋಗ್ಯವಳೆ, ಬತ್ತಾಳೆ ಬನ್ನಿ.
೩೧೮೭. ಹಿತ್ಲ ಬಾಗಲ ಯಾಪಾರ ಮಾಡು = ಹಾದರ ಮಾಡು, ಕಳ್ಳ ವ್ಯಾಪಾರ ಮಾಡು
ಪ್ರ : ಮನೆ ಹೆಂಗಸರು ಹಿತ್ತಲು ಬಾಗಲ ಯಾಪಾರ ಮಾಡಿದರೆ, ಆ ಮನೆ ಏಲ್ಗೆ ಆಗಲ್ಲ.
೩೧೮೮. ಹಿತ್ತಾಳೆ ಕಿವಿಯಾಗು = ಚಾಡಿ ಮಾತಿಗೆ ಕಿವಿಗೊಡುವ ಸ್ವಭಾವವಾಗು
ಪ್ರ : ಇತ್ತೀಚೆಗಂತೂ ಅತ್ತೆ ಅನ್ನಿಸಿಕೊಂಡೋಳು ಹಿತ್ತಾಳೆ ಕಿವಿಯಾಗಿಬಿಟ್ಟಿದ್ದಾಳೆ.
೩೧೮೯. ಹಿಮ್ಮೇಳ ಸುರುವಾಗು = ಗೋಳಾಟ ಪ್ರಾರಂಭವಾಗು
ಬಯಲಾಟಗಳಲ್ಲಿ ಕಥೆಯನ್ನು ಮುನ್ನಡೆಸುವ ಭಾಗವತರು ಯಾವುದೋ ಹಾಡನ್ನು ಹಾಡಿದಾಗ, ಆ ಸೊಲ್ಲನ್ನು ಹಿಡಿದು ಹಿಮ್ಮೇಳದವರು ಮತ್ತೆ ಹಾಡುತ್ತಾರೆ. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.
ಪ್ರ : ಹೆಣದ ಮುಂದೆ ವಾಲಗದೋರ ಮೇಳ ಆದ್ರೆ ಹೆಣದ ಹಿಂದೆ ಹೆಂಗಸರ ಹಿಮ್ಮೇಳ ಸುರುವಾಯ್ತು.
೩೧೯೦. ಹಿಸುಕಿ ಹಿಪ್ಪೆ ಮಾಡು = ಒಂದು ತೊಟ್ಟು ರಸವೂ ಉಳಿಯದಂತೆ ಹಿಂಡು
(ಹಿಸುಕು < ಪಿಸುಕು < ಪಿಸುಂಕು < ಪಿಶುಕ್ಕು (ಮಲೆ) = ಹಿಂಡು)
ಪ್ರ : ಹಿಸುಕಿ ಹಿಪ್ಪೆ ಮಾಡಿ ಬಿಸಾಕಿದ, ಸದ್ಯ ಕಾಲದಲ್ಲಿ ಹೊಸಕಲಿಲ್ಲ.
೩೧೯೧. ಹಿಸ್ಸೆ ಮಾಡು = ಪಾಲು ಮಾಡು
(ಹಿಸ್ಸೆ = ಭಾಗ)
ಪ್ರ : ಪಿತ್ರಾರ್ಜಿ ಆಸ್ತಿಯನ್ನು ಅಣ್ಣತಮ್ಮಂದಿರಿಗೆ ಸಮನಾಗಿ ಹಿಸ್ಸೆ ಮಾಡಬೇಕು ತಾನೇ?
೩೧೯೨. ಹೀಕರಿಸಿಕೊಳ್ಳು = ಹೆದರಿಕೊಳ್ಳು, ಚೀರಿಕೊಳ್ಳು
ಪ್ರ : ಅಯ್ಯೋ ನಮ್ಮಪ್ಪ, ನಿನ್ನ ಕಂಡು ದೆವ್ವ ಅಂತ ಹೀಕರಿಸಿಕೊಂಡುಬಿಟ್ಟೆ.
೩೧೯೩. ಹೀನಾಮಾನಾ ಬಯ್ಯಿ = ಬಾಯಿಗೆ ಬಂದಂತೆ ಬಯ್ಯಿ.
ಪ್ರ : ಅವನು ಒಂದಾದಿದವನ, ಒಂದು ಬಿಟ್ನ ? ಹೀನಾಮಾನವಾಗಿ ಬೈದ
೩೧೯೪. ಹುಗಲು ಹುಯ್ಯಿ = ಎಜ್ಜ ಮಾಡು
(ಹುಗಲು = ಪ್ರವೇಶ ದ್ವಾರ, ರಂದ್ರ)
ಪ್ರ : ನೇಗಿಲಿಗೆ ಇನ್ನೂ ಹುಗಲೇ ಹುಯ್ದಿಲ್ಲ, ಈಚ ತೊಡಿಸೋದು ಹೆಂಗೆ?
೩೧೯೫. ಹುಗ್ಯೋ ಎನ್ನು = ಕೇಕೆ ಹಾಕು
(ಹುಗ್ಯೋ < ಉಘೇ (ಎಂಬ ಘೋಷಣೆ) ಮಹಾನವಮಿ ಕಾಲದಲ್ಲಿ ಸುತ್ತಮುತ್ತ ತಲೆದೂಗುವ ಬೆಳೆಯಲ್ಲಿ ಹಸಿರು ಮಡುಗಟ್ಟಿರುತ್ತದೆ. ಉಬ್ಬೆ ಮಳೆ ಹುಯ್ದು ರೋಗ ತಗಲುತ್ತದೆಂದೋ ಅಥವಾ ಹಸಿರು ಬೆಳೆಗೆ ದೃಷ್ಟಿದೋಷ ತಾಕುವುದೆಂದೋ ‘ಬಲಿ ಚೆಲ್ಲುವ’ ಸಂಪ್ರದಾಯ ಹಳ್ಳಿಗಾಡಿನಲ್ಲಿ ಉಂಟು. ಇದರಲ್ಲಿ ‘ಹಸಿರು ಬಲಿ’ ‘ರಕ್ತ ಬಲಿ’ ಎಂದು ಎರಡು ವಿಧ. ‘ಹಸಿರು ಬಲಿ’ ಎಂದರೆ ಕರಿಮೀನು ಸಾರಿನಲ್ಲಿ ಸ್ಯಾವೆ ಅಕ್ಕಿ ಅನ್ನವನ್ನು ಕಲಸಿ, ಕಬ್ಬಿಣದ ಕಡ್ಡಿಯಿಂದ ಎಲೆಗುದ್ದಲಿಯ ತಗಡನ್ನು ಬಡಿಯುತ್ತಾ ಊರ ಸುತ್ತಿನ ಬೆಳೆಗೆಲ್ಲಾ ಅನ್ನದುಂಡೆಯನ್ನು ಎಸೆಯುತ್ತಾ ಬರುತ್ತಾನೆ ತೋಟಿ. ‘ರಕ್ತಬಲಿ’ ಎಂದರೆ ಮರಿ ಅಥವಾ ಹಂದಿಯನ್ನು ಕುಯ್ದು, ಅದರ ರಕ್ತದಲ್ಲಿ ನೆಲ್ಲಕ್ಕಿ ಅನ್ನವನ್ನು ಕಲಸಿ, ಆ ಉಂಡೆಯನ್ನು ಬೆಳೆಗೆಲ್ಲ ಎಸೆದುಕೊಂಡು ಬರುತ್ತಾನೆ. ಗ್ರಹಣವಾದಾಗಲೂ ರೋಗ ಬಡಿಯುತ್ತದೆಂದು ಹೀಗೆ ಮಾಡುವುದುಂಟು. ಹೀಗೆ ರಕ್ತದಲ್ಲಿ ಕಲಿಸಿದ ಅನ್ನವನ್ನು ಊರ ಸುತ್ತಿನ ಬೆಳೆಗೆಲ್ಲ ಎಸೆದುಕೊಂಡಿರು ಬರುವಾಗ ತೋಟಿ ಒಂದೇ ಸಮನೆ ಓಡುತ್ತಾ “ಹುಗ್ಯೋ… ಬಲಿಯೋ ಬಲಿ” ಎಂದು ಹೇಳುತ್ತಾ ಹೋಗುತ್ತಾನೆ. ಆ ಹಿನ್ನೆಲೆಯಲ್ಲಿ ಮೂಡಿರುವ ನುಡಿಗಟ್ಟಿದು.
ಪ್ರ : ಗಾದೆ – ಊರೊಳಗೆಲ್ಲ ಹುಗ್ಯೋ ಅಂತಾಳೆ
ಗಾಣಿಗರ ಮನೆ ಕಾಣೆ ಅಂತಾಳೆ
೩೧೯೬. ಹುಚ್ಚನ ಕೈಯ ದೊಣ್ಣೆಯಾಗು = ಗುರಿ ಒಬ್ಬರಿಗಿದ್ದು ಏಟು ಮತ್ತೊಬ್ಬರಿಗೆ ಬೀಳು.
ಪ್ರ : ಗಾದೆ – ಹುಚ್ಚನ ಕೈಯ ದೊಣ್ಣೆ, ಕೆಸರಾಗಿನ ಕಂಬ ಎತ್ತ ಬೀಳ್ತವೋ ಕಂಡೋರ್ಯಾರು?
೩೧೯೭. ಹುಟ್ಟಡಗಿಸು = ನಿರ್ಮೂಲನ ಮಾಡು
ಪ್ರ : ನೀನೆಲ್ಲಿದ್ದೀಯ, ಆ ಕಿರಾತರ ಹುಟ್ಟಡಗಿಸಿದೋನೇ ಇವನು
೩೧೯೮. ಹುಟ್ಟಲಿಲ್ಲ ಅನ್ನಿಸು = ಸಾಯಿಸು
ಪ್ರ : ಏನಾದರೂ ಉಸಿರುಬಿಟ್ರೆ, ನಿನ್ನ ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ.
೩೧೯೯. ಹುಟ್ಟು ಉರಿದು ಹೋಗು = ರೂಪು ಹಾಳಾಗು
ಪ್ರ : ನಿನ್ನ ಹುಟ್ಟು ಉರಿದು ಹೋಗ, ನನ್ನ ಕಣ್ಮುಂದೆ ಇರಬೇಡ, ಹೊರಟು ಹೋಗು.
೩೨೦೦. ಹುಟ್ಟಿದ ದಿನ ಕಾಣಿಸು = ಸಂಕಟಪಡಿಸು, ಒದ್ದಾಡಿಸು
ಪ್ರ : ಅವನಿಗೆ ಹುಟ್ಟಿದ ದಿನ ಕಾಣಿಸ್ತಿದ್ದೆ, ಆದರೆ ಅವ್ವನ ಮುಖ ನೋಡಿ ಬಿಟ್ಟಿದ್ದೀನಿ.
೩೨೦೧. ಹುಟ್ಟಿದ ನಿರ್ವಾಣದಲ್ಲಿರು = ಬೆತ್ತಲೆಯಾಗಿರು
(ನಿರ್ವಾಣ = ಬೆತ್ತಲೆ)
ಪ್ರ : ಆ ಹೆಣ್ಣನ್ನು ಹುಟ್ಟಿದ ನಿರ್ವಾಣದಲ್ಲಿ ಮೆರವಣಿಗೆ ಮಾಡಿದರು, ಊರಿನ ಸಾಬಸ್ತರು !
೩೨೦೨. ಹುಟ್ಟಿದ ಹುಳ ಹುಪ್ಪಟೆ ಎಲ್ಲ ಬಾಯ್ಮಾಡು = ದೊಡ್ಡವರು ಚಿಕ್ಕವರು ಎಲ್ಲ ಜೋರು ಮಾಡು
(ಹುಳ ಹುಪ್ಪಟೆ = ಚಿಳ್ಳೆಪಿಳ್ಳೆ, ಕ್ರಿಮಿಕೀಟ, ಬಾಯ್ಮಾಡು = ಜೋರು ಮಾಡು)
ಪ್ರ : ಹುಟ್ಟಿದ ಹುಳ ಹುಪ್ಪಟೆ ಎಲ್ಲ ಬಾಯ್ಮಾಡಿಬಿಟ್ರೆ ಹೆದರಿಕೊಳ್ತಾನೆ ಅಂದ್ಕೊಂಡಿರಬಹುದು, ಹೆದರಿಕೊಳ್ಳೋ ಪಿಂಡ ನಾನಲ್ಲ.
೩೨೦೩. ಹುಟ್ಟಿದ ಹುಳ ಎಲ್ಲ ಗಳ್ಳು ಹಾಕು = ಚಿಳ್ಳೆ ಪಿಳ್ಳೆಗಳೆಲ್ಲ ಬೊಗಳ ತೊಡಗು
(ಗಳ್ಳು ಹಾಕು = ಬೊಗಳು)
ಪ್ರ : ಹುಟ್ಟಿದ ಹುಳ ಎಲ್ಲ ಗಳ್ಳು ಹಾಕೋದು ನಾಯಿ ಸ್ವಭಾವ, ಹಾಕ್ಕೊಳ್ಳಲಿ ನನಗೇನು?
೩೨೦೪. ಹುಟ್ಟದಿರು = ದೊರಕದಿರು, ಸಿಕ್ಕದಿರು
ಪ್ರ : ಒಬ್ಬರ ಹತ್ರಾನೂ ಒಂದು ಚಿಕ್ಕಾಸು ಹುಟ್ಟಲಿಲ್ಲ.
೩೨೦೫. ಹುಟ್ಟಿಸಿಕೊಂಡು ಬರು = ಸಂಪಾದಿಸಿಕೊಂಡು ಬರು
ಪ್ರ : ನಾನು ಎಲ್ಲೆಲ್ಲೊ ಹುಟ್ಟಿಸಿಕೊಂಡು ಬಂದು, ಅವನ ಸಾಲು ತೀರಿಸಿದೆ
೩೨೦೬. ಹುಟ್ಟಿಸಿಕೊಂಡು ತಿನ್ನೋರ್ನ ಅಟ್ಟಿಸಿಕೊಂಡು ಹೋಗು = ದುಡಿ-ದು-ತಿನ್ನೋ-ರ್ನ ಹೊಡೆ-ದು
ತಿನ್ನೋ-ಕೆ ಬೆನ್ನು ಹತ್ತು
(ಹುಟ್ಟಿಸಿಕೊಂಡು = ಗಳಿಸಿಕೊಂಡು, ಅಟ್ಟಿಸಿಕೊಂಡು = ಓಡಿಸಿಕೊಂಡು)
ಪ್ರ : ಹುಟ್ಟಿಸಿಕೊಂಡು ತಿನ್ನೋರ್ನ ಅಟ್ಟಿಸಿಕೊಂಡು ಹೋಗೋ ಪಾಪಿಗಳ ಪಡೆ ದಿನೇ ದಿನೇ ಜಾಸ್ತಿಯಾಗ್ತಿದೆ.
೩೨೦೭. ಹುಟ್ಟಿಗೆ ಬೆಂಕಿ ಹಾಕು = ವೇಷ ನಾಶವಾಗು, ರೂಪ ಹಾಳಾಗು
ಪ್ರ : ಅಯ್ಯೋ ನಿನ್ನ ಹುಟ್ಟಿಗೆ ಬೆಂಕಿ ಹಾಕ, ಮೊದಲು ಹೋಗಿ ಬಟ್ಟೆ ಬದಲಾಯಿಸು
೩೨೦೮. ಹುಟ್ಟು ಕ್ಯಾತೆಯ ಮೊಟ್ಟೆಯಾಗಿರು = ಜನ್ಮ-ತಃ ಜಗಳಗಂಟರಾಗಿರು
(ಕ್ಯಾತೆ = ಜಗಳ, ಮೊಟ್ಟೆ = ಹುಟ್ಟಿದ ಮೂಲ)
ಪ್ರ : ಆ ಪೈಕಾನೇ ಅಷ್ಟು, ಹುಟ್ಟು ಕ್ಯಾತೆಯ ಮೊಟ್ಟೆ
೩೨೦೯. ಹುಟ್ಟು ನೋಡು = ಅವತಾರ ನೋಡು, ರೂಪು ನೋಡು
ಪ್ರ : ನಿನ್ನ ಹುಟ್ಟು ನೋಡೋಕೆ ನನ್ನಿಂದ ಆಗಲ್ಲಪ್ಪ
೩೨೧೦. ಹುಟ್ಟುವಳಿ ಮಾಡಿಕೊಂಡು = ಸಂಪಾದಿಸಿಕೊಡು
ಪ್ರ : ಜಮೀನು ನನ್ನ ವಶಕ್ಕೆ ಕೊಡು, ನಾನು ಹುಟ್ಟುವಳಿ ಮಾಡಿ ಕೊಡ್ತೀನಿ
೩೨೧೧. ಹುಟ್ಟು ಹಾಕು = ನೆಡು, ನಾಟಿ ಹಾಕು
ಪ್ರ : ಮೊದಲು ಸಸಿ ಹುಟ್ಟು ಹಾಕಿದರೆ ತಾನೇ ಬೆಳೆದು ಫಲ ಕೊಡೋದು?
೩೨೧೨. ಹುಟ್ಟು ಹಾಕ್ಕೊಂಡು ಹೇಳು= ಸ್ವಂತ ಸೃಷ್ಟಿಸಿಕೊಂಡು ಹೇಳು
ಪ್ರ : ಅವರು ಹುಟ್ಟು ಹಾಕ್ಕೊಂಡು ಹೇಳಿದ ಮಾತನ್ನ ನಂಬ್ತೀರೇ ಹೊರತು, ವಾಸ್ತವ ಸತ್ಯ ಏನೂ ಅಂತ ಸ್ಥಳ ಪರೀಕ್ಷೆ ಮಾಡಿ ನೋಡಲ್ಲ.
೩೨೧೩. ಹುಡುಕೆಗೆ ಹಾಕಿದ ಸೀಗಡಿಯಂತಾಡು = ಎಗರಾಡು, ನೆಗೆದಾಡು
(ಹುಡುಕೆ < ಪುಡುಕೆ = ಬಿದಿರ ದೆಬ್ಬೆಯಿಂದ ಹೆಣೆದ ಬಾಯಿ ಕಿರಿದಾದ ಬುಟ್ಟಿ)
ಪ್ರ : ಆ ಮನೆ ಮಕ್ಕಳು ಹುಡುಕೆಗೆ ಹಾಕಿದ ಸೀಗಡಿಯಂತಾಡ್ತವೆ, ಘನತೆ ಗಾಂಭೀರ್ಯವೇ ಇಲ್ಲ.
೩೨೧೪. ಹುಡುಕು ನೀರಲ್ಲದ್ದು = ಕುದಿಯುವ ನೀರಿನಲ್ಲಿ ಮುಳುಗಿಸು
(ಹುಡುಕು < ಪುಡುಂಕು = ಕುದಿ, ಮರಳು)
ಪ್ರ : ಹುಡುಕು ನೀರೊಳಗೆ ಕೋಳಿ ಅದ್ದಿದರೆ, ಪುಕ್ಕ ತರೆಯೋಕೆ ಸುಲಭವಾಗ್ತದೆ.
೩೨೧೫. ಹುಡಿ ಹಾರಿಸು = ಧೂಳೀ ಪಟ ಮಾಡು, ದುಂದು ವ್ಯಯ ಮಾಡು
(ಹುಡಿ < ಪುಡಿ = ಧೂಳು)
ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಹುಡಿ ಹಾರಿಸಿಬಿಟ್ಟ
೩೬೧೬. ಹುಣಿಸೆ ಕಾಯಿ ತೊಟ್ಟು ಮಾಡು = ಏನೂ ಮಾಡಲಾಗದಿರು
ಹವ್ಯಕ ಬ್ರಾಹ್ಮಣರು ಹುಣಿಸೆಕಾಯಿಯಿಂದ ಮಾಡುವ ಗೊಜ್ಜು ಅಥವಾ ಚಟ್ನಿಗೆ “ತೊಕ್ಕು” ಎನ್ನುತ್ತಾರೆ. ಅದೇ ಜನರ ಬಾಯಲ್ಲಿ ಕಾಲಕ್ರಮೇಣ ತೊಟ್ಟು ಆಗಿರಬಹುದೆಂದು ತೋರುತ್ತದೆ.
ಪ್ರ : ಏನು ಮಾಡ್ತಿ ನೀನು, ಹುಣಿಸೆಕಾಯಿ ತೊಟ್ನ?
೩೨೧೭. ಹುಣಿಸೆ ಹಣ್ಣು ತೂಗು = ತೂಗಡಿಸು
ಪ್ರ : ನೀವು ಹುಣಿಸೆ ಹಣ್ಣು ತೂಗ ತೊಡಗಿದರೆ, ನಾವು ಮೆಣಸಿನಕಾಯ್ನ ಎಲ್ಲಿಡಬೇಕೋ ಅಲ್ಲಿಡಬೇಕಾಗ್ತದೆ ಅಷ್ಟೆ.
೩೨೧೮. ಹುದ್ದರಿ ಹೇಳು = ಸಾಲ ಹೇಳು
(ಹುದ್ದರಿ < ಉದ್ದರಿ = ಕಡ)ಪ್ರ : ದುಡ್ಡಿಲ್ಲದಿದ್ರೆ ಹುದ್ಗರಿ ಹೇಳಿ ಉಂಡು ಬರೋಣ ಬಾ
೩೨೧೯. ಹುದ್ದರಿ ಸರಿ ಹೋಗದಿರು = ಇಜ್ಜೋಡಾಗು
(ಹುದ್ದರಿ = ಜೊತೆ)
ಪ್ರ: ಹುದ್ದರಿ ಹಾಕಿದರೆ ಕರೆ ಎಳೆ ಬಿಳೆ ಎಳೆ ಕಟ್ಟೋ ಹಂಗಿರಬೇಕು, ಈ ಹುದ್ದರಿ ಸರಿ ಹೋಗಲಿಲ್ಲ.
೩೨೨೦. ಹುನ್ನಾರು ಮಾಡು = ಉಪಾಯ ಮಾಡು, ತಂತ್ರ ಮಾಡು
(ಹುನ್ನಾರು = ಕುತಂತ್ರ, ಉಪಾಯ)
ಪ್ರ : ಹೊನ್ನಾರು ಹೂಡುವುದನ್ನು ತಪ್ಪಿಸುವುದಕ್ಕೆ ಹಗೆಗಳು ಹುನ್ನಾರು ಮಾಡಿದರು.
೩೨೨೧. ಹುಬ್ಬು ಗಂಟಿಕ್ಕು = ಸಿಟ್ಟುಗೊಳ್ಳು, ಅಸಮಾಧಾನಗೊಳ್ಳು
ಪ್ರ : ಗಾದೆ – ಹಬ್ಬದ ದಿವಸವೂ ಹುಬ್ಬುಗಂಟಿಕ್ಕಬೇಕ?
೩೨೨೨. ಹುಬ್ಬುಗೈಯಾಗು = ನಿರೀಕ್ಷಿಸು, ಎದುರು ನೋಡು
ಪ್ರ : ಮಗನ ಬರವಿಗಾಗಿ ಹುಬ್ಬುಗೈಯಾಗಿ ಕುಂತಿದ್ದೀನಿ
೩೨೨೩. ಹುಬ್ಬು ಹಾರಿಸು = ಕಣ್ಣು ಹೊಡೆ
ಪ್ರ : ಬೀದೀಲಿ ಹುಬ್ಬು ಹಾರಿಸಿದಾಗ ಹೋಗಿ ತಬ್ಬಿಕೊಳ್ಳೋಕಾಗ್ತದೇನು?
೩೨೨೪. ಹುಯ್ದಕ್ಕಿ ಬೇಯದಿರು = ಪರಸ್ಪರ ಆಗದಿರು
(ಹುಯ್ದಕ್ಕಿ = ಕುದಿಯುವ ಎಸರಿಗೆ ಸುರಿದ ಅಕ್ಕಿ)
ಪ್ರ : ವಾರಗಿತ್ತಿಯರಿಗೆ ಹುಯ್ದಕ್ಕಿ ಬೇಯಲ್ಲ, ಅತ್ತೆ ಏನ್ಮಾಡ್ತಾಳೆ?
೩೨೨೫. ಹುಯ್ದಾಡು = ಹೊಡೆದಾಡು
(ಹುಯ್ < ಪುಯ್ = ಹೊಡೆ)
ಪ್ರ : ಊರ ಮುಂದೆ ಇಬ್ಬರೂ ಹುಯ್ದಾಡಿದರು, ಮನೇಲಿ ಒಂದಾಗ್ತಾರ?
೩೨೨೬. ಹುಯ್ಯಲಿಕ್ಕು = ಗೋಳಾಡು
(ಹುಯ್ಯಲಿಕ್ಕು < ಪುಯ್ಯಲಿಕ್ಕು = ರೋದಿಸು, ಚೀರಿಕೊಳ್ಳು)
ಪ್ರ : ಕುಡಿದು ಬಂದ ಗಂಡ ಹೆಂಡ್ರನ್ನ ದನ ಚಚ್ಚಿದಂಗೆ ಚಚ್ಚಿದಾಗ ಮಕ್ಕಳು ಮರಿ ಹುಯ್ಯಲಿಕ್ಕಿದವು.
೩೨೨೭. ಹುಯ್ಯಲು ಸಹಿಸು = ಒತ್ತಡ ತಾಳು, ದಾಳಿ ಸಹಿಸು
(ಹುಯ್ಯಲು = ದಾಳಿ)
ಪ್ರ : ಹತ್ತಿರ ಇದ್ರೆ ನೆಂಟರಿಷ್ಟರ ಹುಯ್ಯಲು ಸಹಿಸೋಕಾಗಲ್ಲ.
೩೨೨೮. ಹುಯ್ಯಲಲ್ಲಿ ಹೋಗು = ಜಗಳದಲ್ಲಿ ಹೋಗು
(ಹುಯ್ಯಲು = ಯುದ್ಧ, ಜಗಳ)
ಪ್ರ : ಗಾದೆ – ಹಾದರದಲ್ಲಿ ಬಂದದ್ದು ಹುಯ್ಯಲಲ್ಲಿ ಹೋಯ್ತು
೩೨೨೯. ಹುಯಲೆಬ್ಬಿಸು = ಬೊಬ್ಬೆ ಹಾಕು, ಕಿರುಚಿಕೊಳ್ಳು
ಪ್ರ : ಮನೆಗೆ ಬೆಂಕಿ ಬಿತ್ತೇನೋ ಎಂಬಂತೆ ಮದುವೆ ಮನೇಲಿ ಹುಯಿಲೆಬ್ಬಿಸಿದರು
೩೨೩೦. ಹುರಿಗೊಳ್ಳು = ಶಕ್ತಿ ಹೊಂದು, ಗಟ್ಟಿಕೊಳ್ಳು
(ಹುರಿ = ಹಗ್ಗ, ಎರಡು ಸೀಳುಗಳ ಹೊಸೆತದಿಂದ ಹುರಿ ಬನಿಗೊಳ್ಳುತ್ತದೆ)
ಪ್ರ : ಅವನು ಉತ್ಸಾಹ ಹುರಿಗೊಂಡಿತು
೩೨೩೨. ಹುರ್ಬಡಕೊಂಡು ತಿನ್ನು = ಚಿತ್ರ ಹಿಂಸೆ ಕೊಡು, ಕಣ್ಣೀರಿನಲ್ಲಿ ಕೈ ತೊಳೆಸು
(ಹುರ್ಬಡಕೊಂಡು < ಹುರಿದು ಬಡಿಸಿಕೊಂಡು = ಬಾಣಲಿಯಲ್ಲಿ ಅವಲಾಗುವಂತೆ ಹುರಿದು ಅಗಲಿಗೆ ಸುರಿದುಕೊಂಡು ತಿನ್ನು)
ಪ್ರ : ಕಂಡೋರ ಮನೆ ಹೆಣ್ಣನ್ನು ಹಂಗೆ ಹುರ್ಬಡ್ಕೊಂಡು ತಿನ್ನಬಾರ್ದು
೩೨೩೩. ಹುರಿಯೋಡಿನಿಂದ ಒಲೆಗೆ ಬಿದ್ದಂತಾಗು = ಸಣ್ಣ ತೊಂದರೆ ತಪ್ಪಿಸಿಕೊಳ್ಳಲು ಹೋಗಿ ದೊಡ್ಡ ತೊಂದರೆಗೆ ಸಿಕ್ಕಿಕೊಳ್ಳು
ಲೋಹದ ಹುರಿಯುವ ಬಾಣಲಿ ಬರುವುದಕ್ಕಿಂತ ಮುಂಚೆ ಹರವಿ ಅಥವಾ ಗಡಿಗೆಯ ತಳಭಾಗವನ್ನೇ ಕಾಳುಕಡಿ ಹುರಿಯಲು ಬಳಸುತ್ತಿದ್ದರು. ಅದಕ್ಕೆ ಓಡು, ಹುರಿಯೋಡು ಎಂದು ಕರೆಯುತ್ತಾರೆ.
ಪ್ರ : ನನ್ನ ಕತೆ ಹುರಿಯೋಡಿನಿಂದ ಒಲೆಗೆ ಬಿದ್ದಂತಾಯ್ತು, ಅವನು ಬೇಕು ಇವನು ಬೇಡ.
೩೨೩೪. ಹುರಿದ ಹುಳ್ಳಿಕಾಳಿನಂತಿರು = ದುಂಡುದುಂಡಗಿರು, ಮೈಕೈ ತುಂಬಿಕೊಂಡಿರು
ಪ್ರ : ಅವರ ಹುಡುಗ ಒಳ್ಳೆ ಹುರಿದ ಹುಳ್ಳಿಕಾಳಿನಂತೆ ದುಂಡುದುಂಡುಗವನೆ.
೩೨೩೫. ಹುರುಕು ಹತ್ತಿದಂತಾಡು = ನವೆ ಬಂದವನಂತಾಡು
(ಹುರುಕು = ನವೆ, ತೀಟೆ, ಚರ್ಮರೋಗ)
ಪ್ರ : ಹುರುಕು ಹತ್ತಿದೋನಂತೆ ಮೈಕೈ ಯಾಕೆ ಪರಚಿಕೊಳ್ತಿ?
೩೨೩೬. ಹುರುಳಿರು = ಸತ್ತ್ವ ಇರು
(ಹುರುಳು = ತಿರುಳು, ಸಾರ)
ಪ್ರ : ಹುರುಳಿಲ್ಲದ ಮುರುವನನ್ನು ಕಟ್ಕೊಂಡು ನಾನೇನ್ಮಾಡಲಿ?
೩೨೩೭. ಹುಲಿಮೀಸೆ ಹಿಡಿದು ಉಯ್ಯಾಲೆಯಾಡು = ಸಾವಿನೊಂದಿಗೆ ಸರಸವಾಡು
ಪ್ರ : ಕೊಂಚ ತಿಳಿವಳಿಕೆ ಇದ್ದೋರಾದರೂ ಹುಲಿ ಮೀಸೆ ಹಿಡ್ಕೊಂಡು ಉಯ್ಯಾಲೆಯಾಡ್ತಾರ?
೩೨೩೮. ಹುಲಿವೇಷ ಹಾಕು = ಹಾರಾಡು, ನೆಗೆದಾಡು
ಪ್ರ : ನಿನ್ನ ಹುಲಿವೇಷ ಹೆಂಗಸರ ಮುಂದೆ ಹಾಕು, ನಮ್ಮುಂದೆ ಬೇಡ
೩೨೩೯. ಹುಲಿ ಹುಲ್ಲು ಮೇಯದಿರು = ಶೂರ ಶರಣಾಗದಿರು
ಪ್ರ : ಗಾದೆ – ಹುಲಿ ಬಡವಾದರೆ ಹುಲ್ಲು ಮೇಯಲ್ಲ
೩೨೪೦. ಹುಲ್ಲು ಕಡ್ಡಿ ಅಲಾಕ್ ಆಗದಿರು = ಕೊಂಚವೂ ಪೋಲಾಗದಿರು
(ಅಲಾಕ್ ಆಗು = ಪೋಲಾಗು, ಇಲ್ಲವಾಗು)
ಪ್ರ : ಅವನು ಕಾವಲಿಗಿದ್ರೆ ಒಂದು ಹುಲ್ಲುಕಡ್ಡಿ ಅಲಾಕ್ ಆಗಲ್ಲ
೩೨೪೧. ಹುಲ್ಲು ಕಡ್ಡಿಗೆ ಕಡೆಯಾಗು = ಕೀಳಾಗು, ಅಲ್ಯಕ್ಷ್ಯಕ್ಕೀಡಾಗು
ಪ್ರ : ಬೀಗರ ಕಣ್ಣಲ್ಲಿ ಒಂದು ಹುಲ್ಲು ಕಡ್ಡಿಗೆ ಕಡೆಯಾಗುವಂತೆ ಮಾಡಿಬಿಟ್ಟ
೩೨೪೨. ಹುಲ್ಲು ಕಚ್ಚಿ ನಿಲ್ಲು = ಶರಣಾಗಿ ನಿಲ್ಲು
ಪ್ರ : ಹಗೆಯಾದರೂ ಹುಲ್ಲು ಕಚ್ಚಿ ನಿಂತರೆ ಕೊಲ್ಲಬಾರದು
೩೨೪೩. ಹುಲ್ಲುಬೆಂಕಿ ನೆಚ್ಚಿ ಹುಯ್ಯಲೆಬ್ಬಿಸದಿರು = ಬೇಗ ತಣ್ಣಗಾಗುವವರನ್ನು ನಂಬಿ
ಹೋರಾಟಕ್ಕಿಳಿಯದಿರು
ಪ್ರ : ಹುಲ್ಲು ಬೆಂಕಿ ನೆಚ್ಚಿ ಹುಯ್ಯಲೆಬ್ಬಿಸೋಕೆ ಹೋದ್ರೆ ನೀನು ಕೆಡ್ತೀಯ
೩೨೪೪. ಹುಷಾರಾಗು = ಎಚ್ಚರವಾಗು
ಪ್ರ : ಮೋಸಗಾರ ಅನ್ನೋದು ಗೊತ್ತಾಗಿ ನಾನು ಹುಷಾರಾಗಿಬಿಟ್ಟೆ
೩೨೪೫. ಹುಷಾರಾದ ಮೇಲೆ ಕರೆತರು = ಗುಣವಾದ ಮೇಲೆ ಕರೆತರು
(ಹುಷಾರು = ವಾಸಿ, ಗುಣ)ಪ್ರ : ಕಾಯಿಲೆ ಹುಷಾರಾದ ಮೇಲೆ, ಆಸ್ಪತ್ರೆಯಿಂದ ಮನೆಗೆ ಕರೆತರ್ತೇವೆ.
೩೨೪೬. ಹುಳ ಬೀಳು = ಹಾಳಾಗು, ಮರಣ ಹೊಂದು
ಪ್ರ : ಎಂಥೆಂಥ ಮಾತಾಡಿದ, ಅವನ ನಾಲಗೆಗೆ ಹುಳ ಬೀಳ!
೩೨೪೭. ಹುಳ ಮುಟ್ಟು = ಹಾವು ಕಚ್ಚು
(ಹುಳ = ಹಾವು) ಜನಪದ ಜೀವನದಲ್ಲಿ ಅಮಂಗಳವಾದುದನ್ನು ಮಂಗಳದ ರೂಪದಲ್ಲಿ ಭಾವಿಸುವುದನ್ನು ಕಾಣುತ್ತೇವೆ. ಹಾವು ಕಚ್ಚಿತು ಎಂದು ಹೇಳದೆ ಹುಳ ಮುಟ್ಟಿತು ಎಂದು ಹೇಳುವಲ್ಲಿ ಅದನ್ನು ಕಾಣುತ್ತೇವೆ. ಅಂದರೆ ಕೇಳಿದವರು ಗಾಬರಿಯಾಗೋದು ಬೇಡ ಎಂಬ ಆಶಯ ಇದ್ದಂತಿದೆ.
ಪ್ರ : ಹುಳ ಮುಟ್ಟಿತು ಅಂತ ಏನಾದ್ರೂ ಅಂತ್ರ ತಂತ್ರ ಕಟ್ಟಿಕೊಳ್ಳಿ, ಮೊದಲು ಮದ್ದು ಕೊಡಿಸಿ
೩೨೪೮. ಹುಳ್ಳಗಿರು = ಸಪ್ಪಗೆ ಇರು
ಪ್ರ : ಗಾದೆ – ಕಳ್ಳನ ಮನಸ್ಸು ಹುಳ್ಳಗೆ
೩೨೪೯. ಹುಳಿ ಹಿಂಡು = ವಿರಸ ಮೂಡಿಸು
ಪ್ರ : ಅಣ್ಣ ತಮ್ಮಂದಿರ ನಡುವೆ ಹುಳಿ ಹಿಂಡಿ ಆ ಮನೇನ ಹಾಳು ಮಾಡಿಬಿಟ್ಟ.
೩೨೫೦. ಹುಳಿ ಹುಯ್ದುಕೊಳ್ಳು = ಕೊಳೆ ಹಾಕು, ಶೇಖರಿಸು
(ಹುಳಿ < ಪುಳಿ = ಸಾರಿನ ಒಂದು ಬಗೆ, ಪದಾತ)
ಪ್ರ : ಇಷ್ಟೆಲ್ಲ ನೀನೇ ಇಕ್ಕೊಂಡು ಹುಳಿ ಹುಯ್ಕೊಂತೀಯ? ಬೇರೆಯವರಿಗೂ ಕೊಡು
೩೨೫೧. ಹುಳ್ಳಿ ಸಿಬರಿನಂತಿರು = ತೆಳ್ಳಗಿರು
(ಹುಳ್ಳಿ < ಹುರುಳಿ = ಒಂದು ಧಾನ್ಯವಿಶೇಷ; ಸಿಬರು = ಮರದ ಅಥವಾ ಕಡ್ಡಿಯ ಸಣ್ಣ ಸೂಜಿಯಂಥ ಚೂರು ಅಥವಾ ಹುರುಳಿಕಾಳಿನ ಮೇಲಿನ ತೆಳುವಾದ ಸಿಪ್ಪೆ)
ಪ್ರ : ಗಂಡ ಹುಳ್ಳಿ ಸಿಬರಿನಂಗವನೆ, ಹೆಂಡ್ರು ಪುಳ್ಳಿ ಮೂಟೆ ಇದ್ದಂಗವಳೆ
೩೨೫೨. ಹುಳು ಹುಪ್ಪಟೆ ಎಲ್ಲ ಮಾತಾಡು = ಚಿಳ್ಳೆಪುಳ್ಳೆಗಳೆಲ್ಲ ಮೂಗು ತೂರಿಸು
ಪ್ರ : ಸಂಬಂಧ ಪಟ್ಟ ವಿಷಯದಲ್ಲಿ ದೊಡ್ಡೋರು ಮಾತಾಡಬೇಕು, ಆದರೆ ಆ ಮನೇಲಿ ಹುಳ ಹುಪ್ಪಟೆ ಎಲ್ಲ ಮಾತಾಡ್ತಾರೆ.)
೩೨೫೩. ಹೂಗು ದಳೆದುಕೊಳ್ಳು = ಮುಳ್ಳು ಚುಚ್ಚಿಕೊಂಡು ಮುಳ್ಳು ಹಂದಿಯಂತಾಗು
(ಹೂಗು < ಊಬು = ಬಟ್ಟೆಗೆ ಚುಚ್ಚಿಕೊಳ್ಳುವ ಹಂಚಿಕಡ್ಡಿಯ ಅಥವಾ ಕರಡದ ಊಬು ; ದಳೆದುಕೊಳ್ಳು = ಹೊಲಿಗೆಯಂತೆ ಸಾಲಾಗಿ ಪೋಣಿಸಿಕೊಳ್ಳು)
ಪ್ರ : ಮಾರಾಯ, ಮೊದಲು ಬಟ್ಟೆಗೆ ದಳಕೊಂಡಿರೋ ಹೂಗು ಕಿತ್ತು ಹಾಕು
೩೨೫೪. ಹ್ಞೂಗುಟ್ಟು = ಹ್ಞುಂ ಎನ್ನು, ಗಮನವಿಟ್ಟು ಕೇಳುತ್ತಿರುವುದಕ್ಕೆ ಸಾಕ್ಷಿಯೊದಗಿಸು
ಪ್ರ : ಗಾದೆ – ಕತೆ ಹೇಳೋಕೆ ಹೂಗುಟ್ಟೋರಿರಬೇಕು
ನೆಟ್ಟಗೆ ಬಾಳೋಕೆ ಛೀಗುಟ್ಟೋರಿರಬೇಕು
೩೨೫೫. ಹೂಟ ಹೂಡು = ತಂತ್ರ ಮಾಡು
(ಹೂಟ = ಹುನ್ನಾರು, ತಂತ್ರ)
ಪ್ರ : ಅವರು ಹೂಡಿದ ಹೂಟವನ್ನು ಹುಡಿ ಮಾಡಿ, ದಾಟಿ ನಿಲ್ಲೋ ಶಕ್ತಿ ನನಗಿದೆ
೩೨೫೬. ಹೂಡಾಗಿರು = ಒತ್ತಾಸೆಯಾಗಿರು
(ಹೂಡು = ತಣಿಗೆಯ ಕೆಳಗೆ ಇಟ್ಟುಕೊಳ್ಳುವ ಒತ್ತಿನ ಚಕ್ಕೆ, ಕುಮ್ಮಕ್ಕಾಗಿ ನಿಲ್ಲುವ ವಸ್ತು)
ಪ್ರ : ಕಷ್ಟಕಾಲದಲ್ಲಿ ನೀವು ಹೂಡಾಗಿ ನಿಲ್ಲದಿದ್ರೆ ನಾವು ಕಾಡುಪಾಲಾಗ್ತಿದ್ದೆವು.
೩೨೫೭. ಹೂಣಿಸಿಕೊಂಡಿರು = ನೆಟ್ಟಕಲ್ಲಿನಂತೆ ಇದ್ದುಕೊಂಡಿರು
(ಹೂಣು < ಹೂಳು < ಪೂಳು = ನೆಡು, ಮಣ್ಣು ಮಾಡು)
ಪ್ರ : ಹುಟ್ಟಿದ ಜೀವ ಈ ಲೋಕದಲ್ಲೇ ಶಾಶ್ವತವಾಗಿ ಹೂಣಿಸಿಕೊಂಡಿರ್ತದ?
೩೨೫೮. ಹೂತು ಬಿಡು = ಸಾಯಿಸಿ ಸಮಾಧಿ ಮಾಡು, ಮಣ್ಣಿನಲ್ಲಿ ಮುಚ್ಚು
ಪ್ರ : ಇನ್ನೊಂದು ಮಾತು ಆಡಿದರೆ, ಇಲ್ಲೇ ಹೂತುಬಿಡ್ತೇನೆ, ತಿಳ್ಕೊಂಡಿರು
೩೨೫೯. ಹೂಪನಾಗಿರು = ಷಂಡನಾಗಿರು
(ಹೂಪ < ಭೂಪ < ಬರಪ = ಹೆಣ್ಣಿಗೆ)
ಪ್ರ : ಕೊಂಡುಕೊಂಡು ಬಂದ ಬನ್ನೂರು ಟಗರಿ ಮರಿ ಹೂಪ ; ಬನ್ನೂರು ಕುರಿ ತಳಿ ಬೆಳೀಬೇಕಾದರೆ, ಇನ್ನೊಂದು ಬನ್ನೂರು ಕುರಿಟಗರನ್ನೇ ತಂದು ಕುರಿ ಒಳಗೆ ಬಿಡಬೇಕು
೩೨೬೦. ಹೂಮರಿ ಆಗಿರು = ಬೊಮ್ಮಟೆಯಾಗಿರು, ಹಸುಗಂದನಾಗಿರು
(ಹೂಮರಿ = ಆಗತಾನೇ ಮೊಟ್ಟೆಯಿಂದ ಹೊರ ಬಂದ ಕೋಳಿಮರಿ)
ಪ್ರ : ಹೂಮರಿಯಂಗಿರೋ ಹುಡುಗಿ ಕೆಣಕಿದ್ದಾನಲ್ಲ ಆ ಮುದಿಯ?
೩೨೬೧. ಹೂಳೆತ್ತು = ಅನ-ವ-ಶ್ಯ-ಕ-ವಾ-ಗಿ ತುಂಬಿ-ಕೊಂ-ಡ ಮಣ್ಣೆತ್ತಯ
ಆಳವಾದ ಕೆರೆಗೆ ಮೇಲಿನಿಂದ ಹರಿದು ಬರುವ ಮೆಕ್ಕಲು ಮಣ್ಣು ತುಂಬಿಕೊಂಡು ಆಳ ಕಡಮೆಯಾದಾಗ ಹೂಳು ತುಂಬಿಕೊಂಡಿದೆ ಎಂದು ಅದನ್ನು ಅಗೆದು ಗಾಡಿ ತುಂಬಿ ಹೊಲಗದ್ದೆಗಳಿಗೆ ಹೊಡೆದು, ಕೆರೆಯನ್ನು ಆಳಗೊಳಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಕೆರೆಯ ಹೂಳೆತ್ತಿದ ಹಾಗೆ ಸಮಾಜದಲ್ಲಿ ಸೇರಿಕೊಂಡ ಹೂಳನ್ನು ಆಗಾಗ್ಗೆ ಎತ್ತಿ ಸ್ವಚ್ಛಗೊಳಿಸಬೇಕು, ಇಲ್ಲದಿದ್ದರೆ ಸಮಾಜ ಹೂಳು ತುಂಬಿದ ಕೆರೆಯಂತಾಗುತ್ತದೆ.
೩೨೬೨. ಹೆಕ್ಕತ್ತಿನ ಮೇಲೆ ನಾಲ್ಕಿಕ್ಕು = ಕುತ್ತಿಗೆಯ ಮೇಲೆ ತದುಕು, ಹೊಡಿ
(ಹೆಕ್ಕತ್ತು = ಕತ್ತಿನ ಹಿಂಭಾಗ; ಇಕ್ಕು = ಹೊಡಿ)
ಪ್ರ : ಹೆಕ್ಕತ್ತಿನ ಮೇಲೆ ನಾಲ್ಕಿಕ್ಕು, ಹೊಟ್ಟೇಲಿರೋದನ್ನೆಲ್ಲ ಕಕ್ಕಿ ಸೊರಗಿ ಬೀಳೋ ಹಂಗೆ
೩೨೬೩. ಹೆಗಲಾಗು = ನೊಗ ಉಜ್ಜಿ ಎತ್ತುಗಳ ಕುತ್ತಿಗೆಯ ಮೇಲ್ಭಾಗ ಕಿತ್ತು ಹೋಗು, ಗಾಯವಾಗು
ಪ್ರ : ಎತ್ತಿನ ಹೆಗಲಾಗಿದೆ, ಇವತ್ತು ಗಾಡಿಗೆ ಕಟ್ಟಲ್ಲ
೩೨೬೪. ಹೆಗಲು ಕೊಡು = ಸಹಾಯ ಮಾಡು, ಬೇರೆಯವರಿಗೆ ಬಿಡುವು ಕೊಟ್ಟು ತಾನು ಭಾರ ಹೊರು
ಚಟ್ಟದ ಮೇಲೆ ಹಣ ಕೊಂಡೊಯ್ಯುವಾಗ ಹಿಂದೆ ಇಬ್ಬರು ಮುಂದೆ ಇಬ್ಬರು ಚಟ್ಟದ ಬೊಂಬುಗಳಿಗೆ ಹೆಗಲು ಕೊಟ್ಟಿರುತ್ತಾರೆ. ಆಗ ಬಂಧುಗಳಲ್ಲಿ ಕೆಲವರು ಬಂದು ತಾವು ಹೆಗಲು ಕೊಡುತ್ತಾರೆ. ಅದು ಸತ್ತವರಿಗೆ ತಮ್ಮ ಸೇವೆ ಎಂಬ ಭಾವನೆಯನ್ನೊಳಗೊಂಡಿದೆ. ಹಾಗೆಯೇ ಉತ್ಸವದ ದೇವರ ದೇವಿಗೆಗೆ ಭಕ್ತರು ಒಬ್ಬರಾದ ಮೇಲೆ ಒಬ್ಬರು ಹೆಗಲುಕೊಡುತ್ತಾರೆ, ದೇವರಿಗೆ ಸೇವೆ ಸಲ್ಲಿಸಿದೆ ಎಂಬ ತೃಪ್ತಿಗಾಗಿ. ಆದರೆ ಹೆಣಕ್ಕೆ ಹೆಗಲು ಕೊಟ್ಟವರಿಗೆಲ್ಲ ತಿಥಿ ದಿವಸ ಹೆಗಲು ತೊಳೆಯುವ ಶಾಸ್ತ್ರ ಮಾಡಿಸುತ್ತಾರೆ.
ಪ್ರ : ಹೆಣ ಹೊರೋಕೆ ಅಥವಾ ದೇವರು ಹೊರೋಕೆ ಹೆಗಲು ಕೊಡೋದು ಇನ್ನೊಬ್ಬರ ಒತ್ತಾಯದಿಂದ ಅಲ್ಲ, ತಮ್ಮ ಭಕ್ತಿ ಪ್ರೀತಿಗಳಿಂದ
೩೨೬೫. ಹೆಗಲೇರು = ಸವಾರಿ ಮಾಡು
ಪ್ರ : ಮುಂದುವರಿದವರು ಹೆಗಲೇರೋರೇ ಹೊರತು ಹೆಗಲಿಗೇರಿಸಿಕೊಳ್ಳೋರಲ್ಲ
೩೨೬೬. ಹೆಗಲು ಕಳಚು = ನೊಗದಿಂದ ಎತ್ತುಗಳನ್ನು ಬಿಚ್ಚು
ಗಾಡಿಗೆ ಅಥವಾ ಆರಿಗೆ (ನೇಗಿಲಿಗೆ) ಕಟ್ಟಿದ ಎತ್ತುಗಳ ಕುತ್ತಿಗೆಯನ್ನು ಕಣ್ಣಿ ಅಗಡಿನಿಂದ ಚಿಮರ ಹಾಕಿ ನೊಗದ ಗೂಟಕ್ಕೆ ಕಟ್ಟಿರುತ್ತಾರೆ. ಕಣ್ಣಿ ಅಗಡನ್ನು ಬಿಚ್ಚಿ ನೊಗದಿಂದ ಅವುಗಳನ್ನು ಬೇರ್ಪಡಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಮೊದಲು ಎತ್ತುಗಳ ಹೆಗಲು ಕಳಚಿ, ನೀರು ಕುಡಿಸಿಕೊಂಡು ಬಾ.
೩೨೬೭. ಹೆಗಲು ಕೊಡುವ ಎತ್ತಾಗಿಸು = ಭಾರ ಹೊರಲು ತಾನಾಗಿಯೇ ಮುಂದೆ ಬರುವಂತೆ ಅಣಿಗೊಳಿಸು.
ಗಾಡಿಗೆ ಹೂಡುವ ಎತ್ತುಗಳಿಗೆ ಎಷ್ಟು ಅಭ್ಯಾಸವಾಗಿರುತ್ತದೆಂದರೆ ಒಡೆಯ ಗಾಡಿಯ ಮೂಕು ಎತ್ತಿದಾಕ್ಷಣ ತಾವು ಬಂದು ನೊಗಕ್ಕೆ ಹೆಗಲಾನಿಸುತ್ತವೆ. ಏಕೆಂದರೆ ಮೊದಲು ಹೆಗಲು ಕೊಡದಿದ್ದಾಗ ಚಾವುಟಿಯಿಂದ ಹೊಡೆದು ಬಡಿದು ದಿಗಿಲುಗೊಳಿಸಿರುವುದರಿಂದ ನಾವಿರುವುದೇ ನೊಗಕ್ಕೆ ಹೆಗಲು ಕೊಡುವುದಕ್ಕಾಗಿ ಎಂಬ ಭಾವನೆಯನ್ನುಂಟು ಮಾಡಿ, ವಶೀಕರಣ ವಿದ್ಯೆಗೊಳಗಾಗುವಂತೆ ಮಾಡಿರುತ್ತಾರೆ. ಹಾಗೆಯೇ ಮೇಲ್ವರ್ಗದವರು ಕೆಳ ವರ್ಗದವರಿಗೆ ಹೇಳಿದ ಕೆಲಸ ಮಾಡುವುದಕ್ಕಾಗಿ ಮಾತ್ರ ಇರುವಂಥವರು ಎಂಬುದನ್ನು ಅವರೊಳಗೆ ಬಿತ್ತಿ, ಅದು ಅಭ್ಯಾಸವಾಗಿಬಿಡುವಂತೆ ಮಾಡಿದ್ದಾರೆ. ಆದ್ದರಿಂದ ಮೇಲ್ವರ್ಗದವರು ಯಾವುದೇ ಕೆಲಸ ಕಾರ್ಯದ ಗಾಡಿಯ ಮೂಕನ್ನು ಎತ್ತಿದಾಕ್ಷಣ, ಕೆಳವರ್ಗದವರು ಮೂಗೆತ್ತಿನಂತೆ ಹೆಗಲಾನಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಊರಿನಲ್ಲಿರೋ ಮೇಲ್ಜಾತಿಯ ಒಬ್ಬ ದಣಿ, ಕೆಳಜಾತಿಯ ಶೇಕಡ ತೊಂಬತ್ತೊಂಬತ್ತು ಜನರನ್ನು ಹೆಗಲು ಕೊಡುವ ಎತ್ತಾಗಿಸಿ ತನ್ನ ಬೇಳೆ ಬೇಯಿಸಿಕೊಳ್ತಾ ಇದ್ದಾನೆ ಎಂಬುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?
೩೨೬೮. ಹೆಗಲ ಮೇಲೆ ಕೈ ಹಾಕು = ಸಲಿಗೆಯ ಸ್ನೇಹವಿರು, ಸರಿಸಮಾನ ಎಂಬ ಆತ್ಮವಿಶ್ವಾಸವಿರು
ಪ್ರ : ಹೆಗಲ ಮೇಲೆ ಕೈಹಾಕೋವಷ್ಟು ಸಲಿಗೆ
ಇದೆ, ಸರಿಸಮಾನ ಅನ್ನೋ ಆತ್ಮವಿಶ್ವಾಸವಿದೆ.
೩೨೬೯. ಹೆಚ್ಚಲಿ ಎನ್ನು = ವೃದ್ಧಿಯಾಗಲಿ ಎಂಬ ಶುಭ ಹಾರೈಕೆಯಿಂದ ಪ್ರಾರಂಭಿಸು.
ರೈತ ಕಣದಲ್ಲಿ ತಾಣು ಬೆಳೆದ ಧಾನ್ಯದ ರಾಶಿಯನ್ನು ಇಬ್ಬಳದಿಂದ (ಇಬ್ಬಳ < ಎರಡು ಬಳ್ಳ ; ಬಳ್ಳ = ನಾಲ್ಕು ಸೇರು, ಇಬ್ಬಳ = ಎಂಟು ಸೇರು) ಅಥವಾ ಕೊಳಗದಿಂದ ( ಎರಡು ಇಬ್ಬಳದ ಪರಿಮಾಣ ಉಳ್ಳದ್ದು ಅಂದರೆ ಹದಿನಾರು ಸೇರಿನ ಅಳತೆಯ ಸಾಧನ) ಅಳೆಯುವಾಗ ಬೆಸ ಸಂಖ್ಯೆ ಬಂದಾಗ ‘ಹೆಚ್ಚಲಿ’ ಎನ್ನುತ್ತಾನೆ. ಸರಿ ಸಂಖ್ಯೆ ಬಂದಾಗ ಆ ಸಂಖ್ಯೆಯನ್ನೇ ಹೇಳುತ್ತಾನೆ. ಅದರಲ್ಲೂ ಬೆಸ ಸಂಖ್ಯೆಗಳಾದ ಒಂದು ಮತ್ತು ಏಳು ಬಂದಾಗ ತಪ್ಪದೆ ‘ಹೆಚ್ಚಲಿ’ ಎಂಬ ಶಬ್ದದಿಂದಲೇ ಹೆಸರಿಸುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು, ನಂಬಿಕೆ ಮೂಲದ್ದು.
ಪ್ರ : ಒಂದು, ಏಳು ಬಂದಾಗ ‘ಹೆಚ್ಚಲಿ’ ಎಂದು ಹೇಳಿ ಅಳೆಯಬೇಕೇ ವಿನಾ ಒಂದು, ಏಳು ಎಂದು ಬಾಯಲ್ಲಿ ಹೇಳಬಾರದು.
೩೨೭೦. ಹೆಚ್ಚಳವಾಗು = ಸಂತೋಷವಾಗು
ಪ್ರ : ಮನೆಯ ಅಚ್ಚುಕಟ್ಟುತನ ನೋಡಿ ನನಗೆ ಹೆಚ್ಚಳವಾಯ್ತು
೩೨೭೧. ಹೆಚ್ಚಿ ಬಿಡು = ಪಚಡಿ ಮಾಡು
(ಹೆಚ್ಚು = ಚೂರಾಗಿಸು, ಕತ್ತರಿಸು)
ಪ್ರ : ಇನ್ನು ಹೆಚ್ಚಿಗೆ ಮಾತಾಡಿದ್ರೆ, ಸೌತೇಕಾಯಿ ಹೆಚ್ಚಿದಂಗೆ ಹೆಚ್ಚಿಬಿಡ್ತೀನಿ, ಹುಷಾರ್!
೩೧೭೨. ಹೆಚ್ಚಿ ಹೋಗು = ಅಹಂಕಾರದಿಂದ ಮೆರೆ
ಪ್ರ : ಇತ್ತೀಚೆಗಂತೂ ಅವನು ತುಂಬ ಹೆಚ್ಚಿ ಹೋಗಿದ್ದಾನೆ, ಯಾರ ಮಾತ್ನೂ ಕೇಳಲ್ಲ
೩೨೭೩. ಹೆಚ್ಚುಗಟ್ಲೆ ಮಾಡು = ವಿಶೇಷ ಅಡುಗೆ ಮಾಡು
(ಹೆಚ್ಚುಗಟ್ಲೆ = ವಿಶೇಷ, ಪೆಸಲ್ (< ಸ್ಪೆಷಲ್))
ಪ್ರ : ದಿನಗಟ್ಲೆ (ಸಾಮಾನ್ಯ) ಊಟವನ್ನೇ ನಾನು ಹೆಚ್ಚುಗಟ್ಲೆ ಊಟ ಅಂತ ಭಾವಿಸ್ತೀನಿ.
೩೨೭೪. ಹೆಚ್ಚೂ ಕಮ್ಮಿ ಮಾತಾಡು = ಬಾಯಿ ಹೋದಂತೆ ಮಾತಾಡು
(ಹೆಚ್ಚೂ ಕಮ್ಮಿ = ಒಬ್ಬ ಹೆಚ್ಚು ಮತ್ತೊಬ್ಬ ಕಮ್ಮಿ ಅಥವಾ ಒಂದು ಜಾತಿ ಮೇಲು ಮತ್ತೊಂದು ಜಾತಿ ಕೀಳು ಎಂಬ ರೀತಿಯ ಮಾತು)
ಪ್ರ : ಹೆಚ್ಚೂ ಕಮ್ಮಿ ಮಾತಾಡಿದ್ರೆ ನಿನ್ನ ಗತಿ ಕಾಣಿಸ್ತೀನಿ, ಹುಷಾರಾಗಿರು
೩೨೭೫. ಹೆಜ್ಜೆ ಗುರುತು ಹಿಡಿ = ಸುಳಿವು ಹಿಡಿ, ಮರ್ಮ ತಿಳಿ
ಪ್ರ : ಅವರ ಹಿಕ್ಮತ್ತಿನ ಹೆಜ್ಜೆ ಗುರುತು ತಿಳಿದಿದ್ದೀನಿ, ಅವರಿಗೆ ಸರಿಯಾಗಿ ಬುದ್ಧಿಗಲಿಸ್ತೀನಿ.
೩೨೭೬. ಹೆಜ್ಜೆಯೂರು = ನಿಲ್ಲು, ಸುಧಾರಿಸಿಕೊಳ್ಳು
ಪ್ರ : ಎದ್ದಾಗಳಿಂದ ಇಲ್ಲೀವರೆಗೆ ಒಂದು ಕಡೆ ಹೆಜ್ಜೆ ಊರಿಲ್ಲ, ಅಲೆದದ್ದೂ ಅಲೆದದ್ದೆ.
೩೧೭೭. ಹೆಜ್ಜೇನು ಹುಟ್ಟಿಗೆ ಕಲ್ಲೆಸೆದಂತಾಗು = ಅಪಾಯಕ್ಕೆ ಸಿಕ್ಕಿಕೊಳ್ಳು
ಪ್ರ : ಹೆಜ್ಜೇನು ಹುಟ್ಟಿಗೆ ಕಲ್ಲೆಸೆದು ಇಲ್ಲದ ಅವಾಂತರಕ್ಕೆ ಸಿಕ್ಕೊಂಡೆ.
೩೨೭೮. ಹೆಟ್ಟೋಕೆ ಬರು = ತಿವಿಯಲು ಬರು, ಹಾಯುವುದಕ್ಕೆ ಬರು
ಪ್ರ : ದನ ಅಟ್ಟೋಕೆ ಬರಲಿಲ್ಲ, ನಿನಗೆ ಹೆಟ್ಟೋಕೆ ಬಂದೆ ಅಂತ ತಿಳಕೊಂಡ ?
೩೨೭೯. ಹೆಡಮುರಿ ಕಟ್ಟು = ಕೈಗಳನ್ನು ಬೆನ್ನ ಹಿಂದಕ್ಕೆ ಸೆಳೆದು ಕಟ್ಟು
ಪ್ರ : ಜೋರು ಮಾಡಿದ್ರೆ ಹೆಡಮುರಿ ಕಟ್ಟಿ ಉರುಳು ಹಾಕಿಬಿಡ್ತೀನಿ.
೩೨೮೦. ಹೆಣ ಎತ್ತು = ಹೊಡೆದು ಹಣ್ಣು ಮಾಡು, ಕೆಲಸ ಮಾಡಿಸಿ ಸುಸ್ತಾಗಿಸು
ಪ್ರ : ಹೊತ್ತಾರೆಯಿಂದ ಬೈಸಾರವರೆಗೆ ಅವನ ಹೆಣ ಎತ್ತಿ ಬಿಟ್ಟಿದ್ದೀನಿ
೩೨೮೧. ಹೆಣ ಕಾಯು = ಬೇಸರದಿಂದ ನಿಮಿಷ ನಿಮಿಷವನ್ನೂ ಎಣಿಸು
ಪ್ರ : ಗಾದೆ – ಕಣ ಕಾಯಬಹುದು
ಹೆಣ ಕಾಯಕ್ಕಾಗಲ್ಲ
೩೨೮೨. ಹೆಣ ಹಿಂಡೆಕೂಳು ಹಾಕು = ಶ್ರಾದ್ಧ ಮಾಡು, ಪಿಂಡ ಹಾಕು
(ಹಿಂಡೆ < ಹಿಂಡ < ಪಿಂಡ ; ಕೂಳು = ಅನ್ನ)
ಪ್ರ : ನನಗೆ ಕೊಡಬೇಕಾದ ಹಣಾನ ನಿನ್ನ ಮಗನ ಹೆಣ ಹಿಂಡೆಕೂಳಿಗೆ ಅಂತ ಇಟ್ಟೊಂಡಿದ್ದೀಯ?
೩೨೮೩. ಹೆಣ ಹೊರೋ ಕೆಲಸ ಮಾಡು = ಶ್ರಮದ ಆದರೆ ಫಾಯಿದೆ ಇಲ್ಲದ ಕೆಲಸ ಮಾಡು
ಪ್ರ : ಇಂಥ ಹೆಣ ಹೊರೋ ಕೆಲಸ ಮಾಡೋಕೆ ನನಗಿಷ್ಟವಿಲ್ಲ
೩೨೮೪. ಹೆಣಗಿ ಹೆಣಗಿ ಹೆಣವಾಗು = ಪರದಾಡಿ ಸುಸ್ತಾಗು
(ಹೆಣಗು = ಏಗು)
ಪ್ರ : ಕುಡುಕ ಗಂಡನ ಜೊತೆ ಹೆಣಗಿ ಹೆಣಗಿ ಹೆಣವಾಗಿಬಿಟ್ಟೆ
೩೨೮೫. ಹೆತ್ತಾಯಿಗೆ ಲಾಡಿ ಬಿಚ್ಚೋ ಕೆಲಸ ಮಾಡು = ದುಷ್ಟ ಕೆಲಸ ಮಾಡು
(ಹೆತ್ತಾಯಿ < ಹೆತ್ತ + ತಾಯಿ = ಹಡೆದ ತಾಯಿ ; ಲಾಡಿ = ನಿಕ್ಕರ್ ಪೈಜಾಮಕ್ಕಿರುವ ಸೊಂಟಕ್ಕೆ ಕಟ್ಟುವ ದಾರ)
ಪ್ರ : ಹೆತ್ತಾಯಿಗೆ ಲಾಡಿ ಬಿಚ್ಚೋ ಕೆಲಸ ಮಾಡಿದೋನು ಇನ್ನಾವುದಕ್ಕೆ ಹೇಸ್ತಾನೆ?
೩೨೮೬. ಹೆತ್ತುಕೊಂಡ ತುಪ್ಪದಂತಿರು = ಗಂಭೀರವಾಗಿರು, ಚೆಲ್ಲುಚೆಲ್ಲಾಗಿ ಆಡದಿರು
ಪ್ರ : ಗರಣೆಗೊಂಡ ಮೊಸರಂತೆ, ಹೆತ್ತುಕೊಂಡ ತುಪ್ಪದಂತೆ ಬದುಕಬೇಕು
೩೨೮೭. ಹೆದರಿ ಹೆಪ್ಪಾಗು ಬೆದರಿ ಬೆಪ್ಪಾಗು = ಭಯದಿಂದ ರಕ್ತಚಲನೆ ನಿಂತಂತಾಗಿ ಕಂಬದಂತೆ ನಿಲ್ಲು
(ಹೆಪ್ಪಾಗು = ಭಯದಿಂದ ರಕ್ತಚಲನೆ ನಿಂತು ಗರಣೆಗೊಳ್ಳು; ಬೆಪ್ಪಾಗು = ಆಶ್ಚಾರ್ಯಾಘಾತದಿಂದ ಸ್ತಂಭೀಭೂತನಾಗಿ ನಿಲ್ಲು)
ಪ್ರ : ಎದುರಲ್ಲಿ ಏಳೆಡೆ ಸರ್ಪ ಕಂಡು ಹೆದರಿ ಹೆಪ್ಪಾದೆ ಬೆದರಿ ಬೆಪ್ಪಾದೆ.
೩೨೮೮. ಹೆದ್ದಾರೀಲಿ ಹೋಗು = ರಾಜಮಾರ್ಗದಲ್ಲಿ ನಡೆ
ಪ್ರ : ಅಡ್ಡ ದಾರೀಲಿ ಹೋಗಬೇಡ, ಹೆದ್ದಾರೀಲಿ ಹೋಗೋದನ್ನ ಕಲಿ
೩೨೮೯. ಹೆಪ್ಪು ಒಡೆ = ಬಿರುಕು ಹುಟ್ಟಿಸು
ಪ್ರ : ಸಂಸಾರದ ಹೆಪ್ಪು ಒಡೆಯೋ ಕೆಲಸ ಮಾಡಬೇಡ
೩೨೯೦. ಹೆಪ್ಪು ಹಾಕು = ಒಂದು ಮಾಡು, ಗರಣೆಗೊಳಿಸು
(ಹೆಪ್ಪು = ಮೊಸರಾಗಲು ಹಾಲಿಗೆ ಬಿಡುವ ಮಜ್ಜಿಗೆ)
ಪ್ರ : ಗಾದೆ – ಓಡಿ ಹೋಗೋಳು ಹಾಲಿಗೆ ಹೆಪ್ಪು ಹಾಕ್ತಾಳ?
೩೨೯೧. ಹೆಬ್ಬೂರ ಗಬ್ಬೆಬ್ಬಿಸೋಕೆ ಹೆಬ್ಬಾರೊಬ್ಬ ಸಾಕು = ಇ-ಡೀ ಹಿರಿ-ಯೂ-ರ- ನ್ನು ಹಾಳ ಮಾಡ-ಲು
ಒಬ್ಬ ಹಿರಿ-ಹಾ-ರು-ವ ಸಾಕು
(ಹೆಬ್ಬಾರ.< ಹೆಬ್ಬಾರುವ < ಹಿರಿಯ + ಹಾರುವ = ದೊಡ್ಡ ಅಥವಾ ಶ್ರೇಷ್ಠ ಬ್ರಾಹ್ಮಣ; ಹೆಬ್ಬೂರು < ಹಿರಿಯ + ಊರು = ಹಿರಿಯೂರು, ದೊಡ್ಡೂರು ; ಗಬ್ಬೆಬ್ಬಿಸು = ಹಾಳು ಮಾಡು)
ಪ್ರ : ಹೆಬ್ಬೂರ ಗಬ್ಬೆಬ್ಬಿಸೋಕೆ ಹೆಬ್ಬಾರೊಬ್ಬ ಸಾಕು, ಕೇಳಿಲ್ವೇನು ಗಾದೇನ, ಹಾವು ಕಚ್ಚಿದರೆ ಒಬ್ಬ ಸಾಯ್ತಾನೆ ಹಾರುವ ಕಚ್ಚಿದರೆ ಊರೇ ಸಾಯ್ತದೆ ಅಂತ?
೩೨೯೨. ಹೆಬ್ಬಾರೇಲಿ ಎತ್ತು ಕಣ್ಣಿ ಹಾಕು = ಐನಾತಿ ಅಪಾಯದ ಹೊತ್ತಿನಲ್ಲೇ ಕೈಕೊಡು
(ಹೆಬ್ಬಾರೆ < ಹಿರಿಯ + ಬಾರೆ < ಹಿರಿಯ + ಬೋರೆ = ದೊಡ್ಡ ದಿಣ್ಣೆ, ದಿಬ್ಬ)
ಪ್ರ : ಹೆಬ್ಬಾರೇಲಿ ಎತ್ತು ಕಣ್ಣಿ ಹಾಕಿದಂಗೆ ಮಾಡಿಬಿಟ್ಟ, ನಂಬಿಕೆ ದ್ರೋಹದ ಮನೆಹಾಳ
೩೨೯೩. ಹೆಮ್ಮರ ಬಿದ್ದಂತಾಗು = ದೊಡ್ಡಮರ ಉರುಳಿದಂತಾಗು, ಸ್ಥಳ ಬಿಕೋ ಎನ್ನು
ಪ್ರ : ಕುಟುಂಬದ ಹೆಮ್ಮರ ಬಿದ್ದ ಮೇಲೆ, ಹಾಳು ಸುರಿಯದೆ ಇನ್ನೇನು?
೩೨೯೪. ಹೆಮ್ಮಾರಿಯಾಗು = ಮ್ಯತ್ಯುದೇವತೆಯಾಗು, ಕುಲಕಂಟಕಿಯಾಗು
ಪ್ರ : ಮನೆಗೆ ಬಂದ ಸೊಸೆ ಲಕ್ಷ್ಮಿಯಾಗಲಿಲ್ಲ, ಹೆಮ್ಮಾರಿಯಾದ್ಲು
೩೨೯೫. ಹೆಸರಿಕ್ಕು = ನಾಮಕರಣ ಮಾಡು
ಪ್ರ : ಗಾದೆ – ಹೆತ್ತವರು ಹೆಸರಿಕ್ಕಬೇಕು
೩೨೯೬. ಹೆಸರಿಲ್ಲದಂತಾಗು = ನಿರ್ನಾಮವಾಗು
ಪ್ರ : ಎಸರು ಕುದಿದಂತೆ ಕುದಿದೂ ಕುದಿದೂ ಹೆಸರಿಲ್ಲದಂತಾದರು
೩೨೯೭. ಹೆಸರು ಉಳಿಸು = ಮಾನ ಉಳಿಸು, ಕೀರ್ತಿ ಉಳಿಸು
ಪ್ರ : ಈ ಮನೆಯ ಹೆಸರನ್ನು ಉಳಿಸೋದು ಅಳಿಸೋದು ನಿನ್ನ ಕೈಯಲ್ಲಿದೆ
೩೨೯೮. ಹೆಸರೆತ್ತು = ಕೀರ್ತಿ ಹೊಂದು
ಪ್ರ : ಈ ಸುತ್ತ ಮುತ್ತ ಸೀಮೆಗೆಲ್ಲ ಹೆಸರೆತ್ತಿಬಿಟ್ಟ.
೩೨೯೯. ಹೆಸರು ಕೆಡಿಸು = ಅಪಕೀರ್ತಿ ತರು
ಪ್ರ : ಮಗ ಹುಟ್ಟಿ ಅಪ್ಪನ ಹೆಸರು ಕೆಡಿಸಿಬಿಟ್ಟ
೩೩೦೦. ಹೆಸರಿಗೆ ಮಸಿ ಬಳಿ = ಕಳಂಕ ಹೊರಿಸು
ಪ್ರ : ನನ್ನ ಹೆಸರಿಗೆ ಮಸಿ ಬಳಿಯೋಕೆ ಇಷ್ಟೆಲ್ಲ ಹುಯ್ಯಲೆಬ್ಬಿಸ್ತಾ ಅವರೆ
೩೩೦೧. ಹೆಸರು ಹೇಳಿಕೊಂಡು ಬದುಕು = ಸಹಾಯ ಮಾಡಿದವರನ್ನು ನೆನೆಯುತ್ತಾ ಜೀವಿಸು
ಪ್ರ : ಆ ನಮ್ಮಪ್ಪನ ಹೆಸರು ಹೇಳ್ಕೊಂಡು ಇವತ್ತು ನಾಲೋರ್ಹಂಗೆ ಬದುಕ್ತಾ ಇದ್ದೀವಿ.
೩೩೦೨. ಹೆಸರು ಹೇಳಿದರೆ ಅನ್ನ ಹುಟ್ಟದಿರು = ಎಲ್ಲರ ಕಣ್ಣಲ್ಲೂ ಕೆಟ್ಟವನಾಗಿರು
ಪ್ರ : ನಿನ್ನ ಹೆಸರು ಹೇಳಿದರೆ ಅನ್ನ ಹುಟ್ಟಲ್ಲ ಅನ್ನೋದು ನಮಗೆ ಗೊತ್ತಿದೆ
೩೩೦೩. ಹೇತು ಎಡೆ ಇಕ್ಕು = ಅಪವಿತ್ರಗೊಳಿಸು, ಗಲೀಜು ಮಾಡು
(ಎಡೆ ಇಕ್ಕು = ನೈವೇದ್ಯ ಅರ್ಪಿಸು)
ಪ್ರ : ಹೇಗೋ ಸರಿ ಹೋಗೋದು, ಆದರೆ ಇವನು ನಾನು ಸರಿ-ಮಾ-ಡ್ತೀ-ನಿ ಅಂ-ತ ಬಂದು ನಟ್ಟ ನಡುವೆ ಕುಂತು ಹೇತು ಎಡೆ ಇಕ್ಕಿಬಿಟ್ಟ.
೩೩೦೪. ಹೇತುಕೊಳ್ಳುವಂತೆ ಹೇರು = ಪ್ರಸಾದ ಇಟ್ಟಾಡುವಂತೆ ಹೊಡಿ
(ಹೇರು = ಹೊಡಿ, ಚಚ್ಚು)
ಪ್ರ : ಹೇತುಕೊಳ್ಳುವಂತೆ ಹೇರಿದ ಮೇಲೆ,ಲ ಮಾತಿಲ್ಲದೆ ಮನೆಕಡೆ ಹೋದ
೩೩೦೫. ಹೇರು ಹಾಕು = ಭಾರ ಹೊರಿಸು
(ಹೇರು = ಹೊರೆ)
ಪ್ರ : ಗಾದೆ – ಸಾದೆತ್ತಿಗೆ ಎರಡು ಹೇರು
೩೩೦೬. ಹೇಲಾಗಳ ಹುಳ ಉಬ್ಬಿದಂತೆ ಉಬ್ಬು = ಹೆಚ್ಚು ಕೊಬ್ಬು, ಉಬ್ಬು
(ಹೇಲಾಗಳ ಹುಳ = ಹೇಲೊಳಗಿನ ಹುಳ. ಇವು ಮಣ್ಮುಕ್ಕಗಳ ಗಾತ್ರವಿದ್ದು ಬೆಳ್ಳಗಿರುತ್ತವೆ. ಇವು ಮುಂದಕ್ಕೆ ಹೋಗಬೇಕಾದರೆ ದೇಹವನ್ನು ಕಮಾನಿನಂತೆ ಉಬ್ಬಿಸಿ ಮುನ್ನಡೆಯುತ್ತವೆ. ಅವುಗಳ ಕಮಾನಿನಂತೆ ಉಬ್ಬುವ ನಡಿಗೆಯ ದಾಟಿ ಈ ನುಡಿಗಟ್ಟಿಗೆ ಮೂಲವಾಗಿದೆ.)
ಪ್ರ : ಮನೇಲಿ ಹುಟ್ಟಿದ ಹುಳಹುಪ್ಪಟೆಯೆಲ್ಲ ಹೇಲಾಗಳ ಹುಳ ಉಬ್ಬಿದಂತೆ ಉಬ್ಬಿ ಮಾತಾಡ್ತಾವೆ.
೩೩೦೭. ಹೇಲಿಗೆ ಹೇಲು ತಿನ್ನಿಸು = ಹೆಚ್ಚು ಹೆಣಗಿಸು, ಸಹವಾಸ ಬೇಡವೆನ್ನಿಸು
ಪ್ರ : ಅವನ್ನ ನಂಬಿ ಹೋಗಿದ್ದಕ್ಕೆ ಹೇಲಿಗೆ ಹೇಲು ತಿನ್ನಿಸಿಬಿಟ್ಟ
೩೩೦೮. ಹೇಲು ತಿಂದು ಬಾಯಿ ತೊಳೆದುಕೊಳ್ಳು = ತಪ್ಪು ಮಾಡಿ ಬುದ್ಧಿ ಕಲಿತುಕೊಳ್ಳು
ಪ್ರ : ಇನ್ನು ಅವನ ಸಂಗ ಬ್ಯಾಡ, ಹೇಲುತಿಂದು ಬಾಯಿ ತೊಳೆದುಕೊಂಡದ್ದಾಯ್ತಲ್ಲ
೩೩೦೯. ಹೇಳಿ ಮಾಡಿಸಿದಂತಿರು = ತಕ್ಕನಾಗಿರು, ಸದೃಶವಾಗಿರು
ಪ್ರ : ಹೆಣ್ಣಿಗೂ ಗಂಡಿಗೂ ಜೋಡಿ, ಹೇಳಿ ಮಾಡಿಸಿದಂತಿದೆ
೩೩೧೦. ಹೇಳೋರು ಕೇಳೋರು ಇಲ್ಲದಿರು = ಅಡ್ಡಿ ಆಜ್ಞೆಯಲ್ಲಿ ಬೆಳೆಯದಿರು
ಪ್ರ : ಹೇಳೋರು ಕೇಳೋರಿಲ್ಲದೆ ಬೆಳೆದದ್ದರಿಂದಲೇ ನೀವು ಆಡಿದ್ದೆ ಆಟ ಹೂಡಿದ್ದೆ ಹೂಟ ಆಗಿರೋದು.
೩೩೧೧. ಹೇಳಿಕೆ ಮಾತು ಕೇಳು = ಚಾಡಿ ಮಾತು ಕೇಳು
ಅಗಸನು ಆಡಿದ ಆಪಾದನೆಯ ಮಾತನ್ನು ದೂತರಿಂದ ಕೇಳಿ, ಸೀತೆಯನ್ನು ಕಾಡು ಪಾಲು ಮಾಡಿದ ರಾಮಾಯಣ ಕಥಾಪ್ರಸಂಗದ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಗಾದೆ – ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ.
೩೩೧೨. ಹೈರಾಣ ಬೈರೂಪವಾಗು = ದೊಡ್ಡ ರಣರಂಗವಾಗು, ಮಾರಾಮಾರಿಯಾಗಿ ಕೈಕಾಲು ಮುರಿ
(ಹೈರಾಣ = ದೊಡ್ಡಯುದ್ಧ ; ಬೈರೂಪ < ವಿರೂಪ = ಕುರೂಪ)
ಪ್ರ : ಆ ಮನೆ ಗೌರವ ಘನತೆಯೆಲ್ಲ ಮಕ್ಕಳ ಮಾರಾಮಾರಿಯಿಂದಾಗಿ ಹೈರಾಣಬೈರೂಪ ಆಗಿ ಹೋಯ್ತು.
೩೩೧೩. ಹೊಕ್ಕುಳ ಬಳ್ಳಿ ಕುಯ್ದ ಚೂರಿ ಕಂಕುಳದಲ್ಲಿರು = ಜಾತಕವೆಲ್ಲ ಗೊತ್ತಿರು, ಪೂರ್ವೋತ್ತರವೆಲ್ಲ ತಿಳಿದಿರು
ಪ್ರ : ನಿನ್ನ ಹೊಕ್ಕುಳ ಬಳ್ಳಿ ಕುಯ್ದ ಚೂರಿ ನನ್ನ ಕಂಕುಳಲ್ಲದೆ, ನಿನ್ನ ಜೋರು ನನ್ನ ಹತ್ರ ನಡೆಯಲ್ಲ.
೩೩೧೪. ಹೊಗೆಯಾಡು = ದ್ವೇಷಾಸೂಯೆ ಸುರುಳಿ ಬಿಚ್ಚು
(ಹೊಗೆ = ಊದರ, ಧೂಮ್ರ)
ಪ್ರ : ಎರಡು ಮನೆಗಳ ಮಧ್ಯೆ ಮಾತ್ಸರ್ಯ ಹೊಗೆಯಾಡ್ತಾ ಅದೆ, ಯಾವಾಗ ಧಗ್ ಅಂತ ಹೊತ್ತಿಕೊಳ್ತದೋ ಗೊತ್ತಿಲ್ಲ.
೩೩೧೫. ಹೊಗೆ ಇಕ್ಕು = ಅಸಮಾಧಾನ ಅಂಕುರಿಸುವಂತೆ ಮಾಡು, ಪರೋಕ್ಷ ಪಟ್ಟನ್ನು ಬಳಸು
ಬೆಳ್ಳಿಲಿಯ ಬೇಟೆಯಾಡುವವರು ಬಿಲಕ್ಕೆ ಹೊಗೆಯಿಟ್ಟು ಇಲಿಗಳು ಬಿಲದಿಂದ ಹೊರ ಓಡುವಂತೆ ಮಾಡುತ್ತಾರೆ, ಆ ಮೂಲಕ ಅವುಗಳನ್ನು ಹಿಡಿಯುತ್ತಾರೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಗಾದೆ – ಹೋಗು ಅನ್ನಲಾರದೆ ಹೊಗೆ ಇಕ್ಕಿದರು
೩೩೧೬. ಹೊಗೆ ಹಾಕ್ಕೊಂಡಿರು = ಸಂಸಾರ ಮಾಡಿಕೊಂಡಿರು
(ಹೊಗೆ ಹಾಕು = ಒಲೆ ಹೂಡು)
ಪ್ರ : ಏನೋ ಈ ಮನೆ ಒಂದಿರೋದ್ಕೆ ಹೊಗೆ ಹಾಕ್ಕೊಂಡು ಜೀವಿಸ್ತಾ ಇದ್ದೀವಿ..
೩೩೧೭. ಹೊಟ್ಟುಗುಟ್ಟು = ವ್ಯರ್ಥ ಪ್ರಯತ್ನದಲ್ಲಿ ತೊಡಗು
(ಹೊಟ್ಟು + ಕುಟ್ಟು = ತೌಡನ್ನು ಥಳಿಸು)
ಪ್ರ : ಗಾದೆ – ಬೆಟ್ಟು ಚೀಪಿದರೆ ಹಾಲು ಸಿಗಲ್ಲ
ಹೊಟ್ಟು ಕುಟ್ಟಿದರೆ ಅಕ್ಕಿ ಸಿಗಲ್ಲ
೩೩೧೮. ಹೊಟೆಯುಬ್ಬರ ಬರು = ಅಸೂಯೆ ಮೂಡು
(ಹೊಟ್ಟೆಯುಬ್ಬರ = ಅಜೀರ್ಣದಿಂದ ಹೊಟ್ಟೆ ಊದಿಕೊಳ್ಳುವಿಕೆ)
ಪ್ರ : ವಾರಗಿತ್ತಿ ಬಸುರಿಯಾಗಿಬಿಟ್ಟಳು ಅಂತ ಇವಳೊಬ್ಬಳು ಹೊಟ್ಟೆಯುಬ್ಬರ ಬಂದು ಸಾಯ್ತಾಳೆ.
೩೩೧೯. ಹೊಟ್ಟೆ ಉರಿದುಕೊಳ್ಳು = ನೋಡಿ ಸಹಿಸದಿರು, ಹೊಟ್ಟೆ-ಕಿ-ಚ್ಚು ಪಡು
ಪ್ರ : ಗಾದೆ – ಹೊಟ್ಟೆ ಉರಿದುಕೊಳ್ಳೋದೂ ಒಂದೆ
ಹೊಟ್ಟೆ ಇರಿದುಕೊಳ್ಳೋದೂ ಒಂದೆ
೩೩೨೦. ಹೊಟ್ಟೆ ಉರಿದು ಗುಡ್ಡೆ ಬೀಳು = ಅಪಾರ ವ್ಯಥೆಯಾಗು, ಬಾ-ರಿ ಸಂಕ-ಟ-ವಾ-ಗು
ಪ್ರ : ಮಕ್ಕಳು ಹೊಟ್ಟೆಗಿಲ್ಲದೆ ಆಲ್ವರಿಯೋದನ್ನು ನೋಡಿ ಹೊಟ್ಟೆ ಉರಿದು ಗುಡ್ಡೆ ಬಿದ್ದು ಹೋಯ್ತು.
೩೩೨೧. ಹೊಟ್ಟೆ ಉರಿಸು = ಸಂಕಟಪಡಿಸು
ಪ್ರ : ಅನ್ಯರ ಹೊಟ್ಟೆ ಉರಿಸಿದೋರಿಗೆ ದೇವರು ಬೆಟ್ಟದಷ್ಟು ಕಷ್ಟ ಇರಿಸಿರ್ತಾನೆ
೩೩೨೨. ಹೊಟ್ಟೆ ಕಚ್ಚು = ಹೊಟ್ಟೆ ನೋಯು
(ಕಚ್ಚು = ನುಲಿ, ನೋಯು)ಪ್ರ : ಹೊಟ್ಟೆಕಚ್ಚು ನಿಲ್ಲಬೇಕಾದರೆ ಹೊಟ್ಟೆ ಕಿಚ್ಚು ಬಿಡು
೩೩೨೩. ಹೊಟ್ಟೆಕಟ್ಟು = ಬಡತನದಲ್ಲಿ ಕಾಲ ಹಾಕು, ಹಸಿವನ್ನು ಸಹಿಸಿ ಜೀವಿಸು
ಪ್ರ : ಹೊಟ್ಟೆ ಕಟ್ಟಿ ಬಟ್ಟೆಕಟ್ಟಿ ಸಾಕಿದ ಮಕ್ಕಳು ಅಪ್ಪ ಅವ್ವನಿಗೆ ಕೋಲಿಕ್ಕಿದರು.
೩೩೨೪. ಹೊಟ್ಟೆ ಕಟ್ಟಿಕೊಳ್ಳು = ಮಲಬದ್ಧತೆಯುಂಟಾಗು
ಪ್ರ : ಮೂರು ದಿನದಿಂದ ಹೊಟ್ಟೆ ಕಟ್ಕೊಂಡು ನೀರ್ಕಡೆ ಹೋಗೋಕೆ ಆಗಿಲ್ಲ.
೩೩೨೫. ಹೊಟ್ಟೆ ಕರಕರ ಅನ್ನು = ಹಸಿವಾಗು
ಪ್ರ : ಹೊಟ್ಟೆ ಕರಕರ ಅಂತಾ ಅದೆ, ಮೊದಲು ಊಟ ಹಾಕಿ
೩೩೨೬. ಹೊಟ್ಟೆ ಕಳ್ಳು ಬಾಯಿಗೆ ಬರೋಂಗೆ ಜಡಿ = ಸುಸ್ತಾಗುವಂತೆ ತೀವ್ರವಾಗಿ ಸಂಭೋಗಿಸು
ಪ್ರ : ಹೊಟ್ಟೆ ಕಳ್ಳು ಬಾಯಿಗೆ ಬರೋಂಗೆ ಜಡಿದು ಹೋದ ಜಡೇಸ್ವಾಮಿ
೩೩೨೭. ಹೊಟ್ಟೆ ಕಿಚ್ಚು ಮೊಟ್ಟೆ ಇಕ್ಕು = ಅಸೂಯೆ ಅಧಿಕವಾಗು
(ಹೊಟ್ಟೆ ಕಿಚ್ಚು = ಮಾತ್ಸರ್ಯ)
ಪ್ರ : ಹೊಟ್ಟೆ ಕಿಚ್ಚು ಮೊಟ್ಟೆ ಇಕ್ತಲೇ ಹೋಗ್ತದೆ, ಮರಿ ಮಾಡ್ತಲೇ ಹೋಗ್ತದೆ
೩೩೨೮. ಹೊಟ್ಟೆ ಕೆರೆಯತೊಡಗು = ಹಸಿವುಂಟಾಗು
(ಕೆರೆ = ಗೀರು, ಗೀಚು, ಚುರುಚುರುಗುಟ್ಟು)
ಪ್ರ : ಹೊಟ್ಟೆ ಕೆರೆದಾಗ ಅವನೇ ಬಂದು ತಿಂತಾನೆ ಸುಮ್ನಿರು, ಮುದ್ದಿಸಬೇಡ
೩೩೨೯. ಹೊಟ್ಟೆ ಚಳುಕಾಗು = ಹೊಟ್ಟೆ ನೋವಾಗು
(ಚಳುಕು = ನುಲಿತ, ಸೆಳೆತ)
ಪ್ರ : ಹೊಟ್ಟೆ ಚಳುಕು ಬಂದು ಸಾಯ್ತಾ ಇದ್ದೀನಿ, ಜಳಕ ಯಾರಿಗೆ ಬೇಕು?
೩೩೩೦. ಹೊಟ್ಟೆ ಚುರ್ ಎನ್ನು = ಹಸಿವಾಗು
ಪ್ರ : ಹೊಟ್ಟೆ ಚುರ್ ಅನ್ನುವಾಗ ಹಸೀದೂ ಸೈ, ಬಿಸೀದೂ ಸೈ
೩೩೩೧. ಹೊಟ್ಟೆ ಜಾಗಟೆ ಬಾರಿಸು = ಹಸಿವಾಗು
(ಜಾಗಟೆ < ಜಾಂಗಟೆ < ಜಯಗಂಟೆ = ವೈಷ್ಣವರು ಮಾತ್ರ ಬಳಸುವಂಥದು)
ಪ್ರ : ಹೊಟ್ಟೆ ಜಾಗಟೆ ಬಾರಿಸ್ತಾ ಅದೆ, ಮೊದಲು ನಾನು ಊಟ ಬಾರಿಸಬೇಕು
೩೩೩೨. ಹೊಟ್ಟೆ ತಣ್ಣಗಾಗು = ಸಂತೃಪ್ತಿಯಾಗು
ಪ್ರ : ಕೂಡಿ ಬಾಳ್ತೇವೆ ಅಂತ ಅಣ್ಣತಮ್ಮಂದಿರು ಆಣೆ ಮಾಡಿದಾಗ ನನ್ನ ಹೊಟ್ಟೆ ತಣ್ಣಗಾಯ್ತು
೩೩೩೩. ಹೊಟ್ಟೆ ತಾಳ ಹಾಕು = ಹಸಿವಾಗು
ಪ್ರ : ನನ್ನ ಹೊಟ್ಟೆ ತಾಳ ಹಾಕುವಾಗ, ನೀನು ಹಾಕೋ ತಾಳಕ್ಕೆ ಕುಣಿಯೋರು ಯಾರು?
೩೩೩೪. ಹೊಟ್ಟೆ ತೊಳಸಿದಂತಾಗು = ವಾಂತಿ ಬರುವಂತಾಗು
(ತೊಳಸು = ತಿರುವು, ಗೋಟಾಯಿಸು)
ಪ್ರ : ಹೊಟ್ಟೆ ತೊಳಸಿದಂತಾಗಿ ಬಾಯಿನೀರು ಬಕಬಕನೆ ಬಂದವು, ಕರೆ ನೀರು ಹೋಗೋಂಗೆ ಕಕ್ಕಿಬಿಟ್ಟೆ.
೩೩೩೫. ಹೊಟ್ಟೆ ನುಲಿ ಬರು = ಹೊಟ್ಟೆ ನೋವು ಬರು
(ನುಲಿ = ಹಗ್ಗ, ಹಗ್ಗದ ಹೊಸೆತ)
ಪ್ರ : ಹೊಟ್ಟೆ ನುಲಿ ಬಂದು ಸಾಯ್ವಾಗ, ನನಗೆ ಯಾವ ಯಾಪೂಲೀನೂ ಬೇಡ
೩೩೩೬. ಹೊಟ್ಟೆ ಬಿರಿಯ ಹೊಡೆ = ಹೊಟ್ಟೆ ಒಡೆಯುವಂತೆ ಉಣ್ಣು
(ಬಿರಿ = ಸೀಳುಬಿಡು; ಹೊಡೆ = ಉಣ್ಣು, ಸೇವಿಸು) ಹೊಡೆ ಎಂಬುದಕ್ಕೆ ಉಣ್ಣು ಎಂಬ ಅರ್ಥ ಹತ್ತನೆ ಶತಮಾನದಲ್ಲೂ ಇತ್ತು ಎಂಬುದು ಪಂಪ ಭಾರತದಲ್ಲಿ ಭೀಮ ಬಕಾಸುರ ಪ್ರಸಂಗದಲ್ಲಿ ಬಳಸಿರುವ “ಮುಂಪೊಡೆವೆಂ ಕೂಳಂ, ಬಳಯಿಂ ಪೊಡೆವೆ ರಕ್ಕಸನಂ” ಎಂಬ ಅಭಿವ್ಯಕ್ತಿಯಿಂದ ಸ್ಪಷ್ಟವಾಗುತ್ತದೆ.
ಪ್ರ : ಹೊಟ್ಟೆ ಬಿರಿಯ ಹೊಡೆದ, ಎಮ್ಮೆ ಕೋಣನಂಗೆ ಮಲಗಿದ.
೩೩೩೭. ಹೊಟ್ಟೆಗೆ ಬೆಂಕಿ ಬಿದ್ದಂತಾಗು = ಸಂಕಟವಾಗು
ಪ್ರ : ತಬ್ಬಲಿ ಮಕ್ಕಳ ಗೋಳು ಕೇಳಿ ಹೊಟ್ಟೆಗೆ ಬೆಂಕಿ ಬಿದ್ದಂತಾಯ್ತು
೩೩೩೮. ಹೊಟ್ಟೆ ಬೆನ್ನು ತೋರಿಸು = ಕಷ್ಟ ಹೇಳಿಕೊಳ್ಳು, ಗೋಗರೆ
ಪ್ರ : ದಣಿಗಳಿಗೆ ಹೊಟ್ಟೆ ಬೆನ್ನು ತೋರಿಸಿ, ಒಪ್ಪೊತ್ತಿನ ಗಂಜಿಗೆ ಈಸಿಕೊಂಡು ಬಂದೆ.
೩೩೩೯. ಹೊಟ್ಟೆ ಮಕಾಡೆ ಮಲಗು = ಮುನಿಸಿಕೊಳ್ಳು
(ಮಕಾಡೆ < ಮುಖ + ಅಡಿ = ಮುಖ ಕೆಳಗೆ ಮಾಡಿ)
ಪ್ರ : ಹಬ್ಬಕ್ಕೆ ಸೀರೆ ತರಲಿಲ್ಲ ಅಂತ ಉಬ್ಬರಿಸಿಕೊಂಡು ಹೊಟ್ಟೆ ಮಕಾಡೆ ಮಲಗ್ಯವಳೆ
೩೩೪೦. ಹೊಟ್ಟೆ ಮುಂದಕ್ಕೆ ಬರು = ಬಸುರಾಗು
ಪ್ರ : ಹೊಟ್ಟೆಯೇನೋ ಮುಂದಕ್ಕೆ ಬಂತು, ಆದರೆ ಇಲ್ಲದ ಗುಲ್ಲು ತಂತು
೩೩೪೧. ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳು = ಹಸಿವಿನ ಝಳವನ್ನು ಸಹಿಸಲಾರದೆ ನರಳು
ಪ್ರ : ನಿನ್ನ ಕಟ್ಕೊಂಡು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಳ್ಳಬೇಕಾಯ್ತು.
೩೩೪೨. ಹೊಟ್ಟೆ ಮೇಲೆ ಹೊಡಿ = ಅನ್ನದ ತಲೆ ಮೇಲೆ ಕಲ್ಲು ಹಾಕು
ಪ್ರ : ಬಡವರ ಹೊಟ್ಟೆ ಮೇಲೆ ಹೊಡೆದು, ಸಡಗರ ಪಡ್ತಾರೆ ಶಕುನಿಗಳು
೩೩೪೩. ಹೊಟ್ಟೇಲಿಕ್ಕೊಳ್ಳು = ಸಹಿಸಿಕೊಳ್ಳು, ಭರಿಸಿಕೊಳ್ಳು
ಪ್ರ : ತಪ್ಪು ಮಾಡಿದ್ದೀನಿ, ನಿಮ್ಮ ಹೊಟ್ಟೇಲಿಕ್ಕೊಂಡು ನನ್ನ ಕಾಪಾಡಿ
೩೩೪೪. ಹೊಟ್ಟೆ ಹುಣ್ಣಾಗುವಂತೆ ನಗು = ಬಿದ್ದು ಬಿದ್ದು ನಗು
ಪ್ರ : ರಾತ್ರೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಮಾರಾಯ
೩೩೪೫. ಹೊಟ್ಟೆ ಹೊರೆದುಕೊಳ್ಳು = ಅನ್ನ ಗಳಿಸು, ಜೀವನ ಸಾಗಿಸು
(ಹೊರೆ < ಪೊರೆ = ರಕ್ಷಿಸು)
ಪ್ರ : ಹೊಟ್ಟೆ ಹೊರೆಯೋದ್ಕೆ ಒಂದು ದಾರಿ ಇತ್ತು, ಇವತ್ತಿಗೆ ಅದು ತಪ್ಪಿ ಹೊಯ್ತು.
೩೩೪೬. ಹೊಟ್ಟೆ ಹೋಗಿ ಬೆನ್ನು ಸೇರು = ಅನ್ನವಿಲ್ಲದೆ ಒಣಗಿ ಹೋಗು
ಪ್ರ : ಎಷ್ಟು ಬಡವಾಗಿದ್ದಾನೆ ಅಂದ್ರೆ, ಹೊಟ್ಟೆ ಹೋಗಿ ಬೆನ್ನು ಸೇರಿಕೊಂಡಿದೆ
೩೩೪೭. ಹೊಡೆ ಬೀಳು = ತೆನೆಯಾಗು
(ಹೊಡೆ < ಪೊಡೆ = ಹೊಟ್ಟೆ, ತೆನೆ)
ಪ್ರ : ಗಾದೆ – ಮಾರ್ನಾಮಿ ಒಷ್ಟೊತ್ತಿಗೆ ಮಾನೆಲ್ಲ ಹೊಡೆ
೩೩೪೮. ಹೊತ್ನಂತೆ ಬರು = ಹೊತ್ತು ಹುಟ್ಟುತ್ತಲೇ ಬರು
ಪ್ರ : ನೀನು ಹೊತ್ನಂತೆ ಬಂದ್ರೆ ಕೆಲಸ ಆಗ್ತದೆ, ಏಳು ಮದ್ದಾನಕ್ಕೆ ಬಂದ್ರೆ ಆಗಲ್ಲ.
೩೩೪೯. ಹೊತ್ತಿಗೆ ಮುಂಚೆ ಬರು = ಸೂರ್ಯೋದಯಕ್ಕೆ ಮುನ್ನ ಬರು
ಪ್ರ : ಹೊತ್ತಿಗೆ ಮುಂಚೆ ಬಂದ್ರೆ ಹೊತ್ತಿಗೆ ಮುಂಚೆ ಹೋಗಬಹುದು
೩೩೫೦. ಹೊತ್ತಾಗು = ತಡವಾಗು
ಪ್ರ : ನಾನು ಬರೋದು ಹೊತ್ತಾಯ್ತು, ಕಾದುಕಾದು ಅವನು ಎಲ್ಲಿ ಹೋದನೋ
೩೩೫೧. ಹೊತ್ತಿರುಗ ಹುವ್ವಿನಂತಿರು = ಕಾಲಕ್ಕನುಗುಣವಾಗಿ ಬದಲಾಗು
(ಹೊತ್ತಿರುಗ < ಹೊತ್ತು + ತಿರುಗ = ಹೊತ್ತು ತಿರುಗಿದತ್ತ ತಿರುಗುವ ಸೂರ್ಯಕಾಂತಿ ಹೂ)
ಪ್ರ : ಮನುಷ್ಯ ಕಾಲಕ್ಕನುಗುಣವಾಗಿ ಹೊಂದಿಕೊಳ್ಳಬೇಕು, ಹೊತ್ತಿರುಗ ಹುವ್ವಿನಂತೆ
೩೩೫೨. ಹೊತ್ತುಂಟ್ಲೆ ಬರು = ಸೂರ್ಯೋದಯಕ್ಕೆ ಸರಿಯಾಗಿ ಬರು
(ಹೊತ್ತುಂಟ್ಲೆ < ಹೊತ್ತು ಹುಟ್ಟುತ್ತಲೆ = ಸೂರ್ಯ ಉದಯವಾಗುವಾಗ್ಗೆ)
ಪ್ರ : ಹೊತ್ತುಂಟ್ಲೆ ಎದ್ದು ಬಂದ್ರೂ ಆಸಾಮಿ ಕೈಕೊಟ್ಟನಲ್ಲ
೩೩೫೩. ಹೊತ್ತು ನೆತ್ತಿಗೆ ಬರು = ಮಟಮಟ ಮಧ್ಯಾಹ್ನವಾಗು
ಪ್ರ : ಹೊತ್ತೂ ನೆತ್ತಿಗೆ ಬಂದರೂ ಇನ್ನೂ ದನಗಳಿಗೆ ನೀರು ಕುಡಿಸಿಲ್ಲವಲ್ಲ, ಬೆಳೋ ಅಂತವೆ
೩೩೫೪. ಹೊತ್ತು ಬಂದು ಹೋಗು = ಮರಣ ಹೊಂದು
(ಹೊತ್ತು ಬರು = ಸಾಯುವ ಗಳಿಗೆ ಬರು)
ಪ್ರ : ಬಂದು ಕತ್ತು ಹಿಸುಕ್ತಾನಲ್ಲೆ, ಇವನಿಗೆ ಹೊತ್ತು ಬಂದು ಹೋಗ!
೩೩೫೫. ಹೊತ್ತು ಹೋಗದ ಮಾತಾಡು = ಹುರುಳಿಲ್ಲದ ಅಪ್ರಸ್ತುತ ಮಾತಾಡು, ಕಾಲ ತಳ್ಳಲು ಲೊಟ್ಟೆಲೊಸಗು ಹೇಳು
ಪ್ರ : ನಿಮ್ಮದು ಹೊತ್ತು ಹೋಗದೆ ಆಡಿದ ಸತ್ತ ಮಾತು
೩೩೫೬. ಹೊತ್ಕೊಂಡು ಹೋಗು = ತೆಗೆದುಕೊಂಡು ಹೋಗು
ಪ್ರ : ಸಂಪಾದಿಸಿದ್ದನ್ನೆಲ್ಲ ಸಾಯ್ವಾ-ಗ ಹೊತ್ಕೊಂಡು ಹೋಗ್ತೀವ?
೩೩೫೭. ಹೊನ್ನಾರು ಹೂಡು = ಉಳುಮೆಗೆ ನಾಂದಿ ಹಾಡು
ಊರಿನ ಸುಮಸ್ತರೂ ಸೇರಿ ನೇಗಿಲಿಗೆ ಪೂಜೆ ಮಾಡಿ, ಉಳುಮೆಗೆ ನಾಂದಿ ಹಾಡುವುದಕ್ಕೆ ‘ಹೊನ್ನಾರು ಹೂಡುವುದು’ ‘ಹೊನ್ನಾರು ಕಟ್ಟುವುದು’ ಎಂದು ಹೇಳುತ್ತಾರೆ. ಅದಾದ ಮೇಲೆ ಎಲ್ಲರೂ ಅವರವರ ಹೊಲಗಳನ್ನು ಉತ್ತುಕೊಳ್ಳಬಹುದು.
ಪ್ರ : ಹೊನ್ನಾರು ಹೂಡಿದ ಮೇಲೆ ಇನ್ನಾರು ತಡೆಯೋರು?
೩೩೫೮. ಹೊನ್ನಿಂದ ತೊನ್ನು ಮುಚ್ಚು = ಐಶ್ವರ್ಯದಿಂದ ಹುಳುಕು ಮುಚ್ಚಿಹೋಗು
ಪ್ರ : ಗಾದೆ – ಹೊನ್ನಿಗೆ ಬದುಕಿದೋಳ ತೊನ್ನು ಮುಚ್ಚಿಕೊಳ್ತದೆ
ಗಂಡ ಮಕ್ಕಳಿದ್ದೋಳ ಹಾದರ ಮುಚ್ಚಿಕೊಳ್ತದೆ
೩೩೫೯. ಹೊರಕೇರಿಗೆ ಹೋಗದಿರು = ಸೂಳೆಗೇರಿಗೆ ಹೋಗದಿರು
(ಹೊರಕೇರಿ < ವಾರಕೇರಿ = ವೇಶ್ಯಾವಾಟಿ)
“ಹರೆ ಬಡಿದರೆ ನಿಂತಾಳ ಹೊರಕೇರಿ ಲಕ್ಕಿ?” ಎಂಬ ಜನಪದ ಗಾದೆ, ಹರೆಬಡಿದರೆ ಸೂಳೆಗೇರಿಯ ಲಕ್ಕಿ ನಿಂತಾಳೆ ? ಎಂಬ ಅರ್ಥವನ್ನು ಒಳಗೊಂಡಿದೆ. ಆದ್ದರಿಂದ ಹೊಲೆಗೇರಿ ಊರಾಚೆ ಇದ್ದರೆ ಹೊರಕೇರಿ (< ವಾರಕೇರಿ) ಊರೊಳಗೇ ಇರುತ್ತದೆ ಎಂಬುದನ್ನು ಸೂಚಿಸುತ್ತದೆ.
ಪ್ರ : ಗಾದೆ – ಊರಾಚೆ ಹೊಲಗೇರಿ
ಊರೊಳಗೆ ಹೊರಕೇರಿ
೩೩೬೦. ಹೊರಗಡೆ ಆಗು = ಮುಟ್ಟಾಗು
ಪ್ರ : ಅವಳು ಹೊರಗಡೆ ಆಗಿದ್ದಾಳೆ, ಒಳಗೆ ಬರೋ ಹಾಗಿಲ್ಲ
೩೩೬೧. ಹೊರಗಡೆ ಹೋಗು = ಮಲವಿಸರ್ಜನೆಗೆ ಹೋಗು
ಪ್ರ : ಹೊರಗಡೆ ಹೋಗಿದ್ದಾರೆ, ಈಗಲೋ ಆಗಲೋ ಬರ್ತಾರೆ ಕೂತ್ಕೊಳ್ಳಿ
೩೩೬೨. ಹೊರಚ್ಚಿಗಿಡು = ಪಕ್ಕಕ್ಕೆ ಇಡು
(ಹೊರಚ್ಚಿಗೆ = ಬದಿಗೆ)
ಪ್ರ : ಆ ವಿಷಯ ಹೊರಚ್ಚಿಗಿಟ್ಟು ಈ ವಿಷಯ ಮಾತ್ರ ಮಾತಾಡಿ
೩೩೬೩. ಹೊರಜಿ ಹಾಕಿ ಹಿಡಿ = ಹಾರಾಡು, ತೊನೆದಾಡು
(ಹೊರಜಿ < ಹೊರಜೆ < ಪೊರಜೆ = ದಪ್ಪ ಹಗ್ಗ) ಎತ್ತರವಾಗಿ ಕಟ್ಟಿದ ತೇರು ಆಕಡೆ ಈಕಡೆ ವಾಲುತ್ತದೆ ಎಂದು ಎರಡು ಪಕ್ಕಕ್ಕೂ ಹೊರಜಿ ಹಾಕಿ ಜನ ಹಿಡಿದಿರುತ್ತಾರೆ – ಬೀಜದ ಹೋರಿಗೆ ಎರಡು ಹಗ್ಗ ಹಾಕಿ ಆಕಡೆ ಈಕಡೆ ಹಿಡಿದಿರುವಂತೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಓಹೋ ಇವನ ಹಾರಾಟ ನೋಡಿದ್ರೆ ಎರಡುಕಡೆಯೂ ಹೊರಜಿ ಹಾಕಿ ಹಿಡೀಬೇಕು.
೩೩೬೪. ಹೊರಪಾಗು = ನಿರ್ಮಲವಾಗು, ಬಿಡುವುಕೊಡು
ಪ್ರ : ಹದಿನೈದು ದಿವಸಕ್ಕೆ ಇವತ್ತು ಕೊಂಚ ಆಕಾಶ ಹೊರಪಾಗಿದೆ
೩೩೬೫. ಹೊರಿಸಿಕೊಡು = ಕೊಟ್ಟು ಕಳಿಸು
ಪ್ರ : ನನ್ನ ಮದುವೇಲಿ ನಿಮ್ಮಪ್ಪ ಹೊರಿಸಿಕೊಟ್ಟಿರೋದು ಅಷ್ಟರಲ್ಲೇ ಇದೆ, ಸುಮ್ನಿರು
೩೩೬೬. ಹೊಲೆಯನಹೊಟ್ಟೇಲಿಹಾಕಿಮಾದಿಗನಹೊಟ್ಟೇಲಿತೆಗಿ = ವಾಚಾಮಗೋಚರಬಯ್ಯಿ.
ಬಯ್ಗುಳಕ್ಕೆಹೊಲೆಯಮಾದಿಗರನ್ನುಬಳಸಿಕೊಳ್ಳುವಪ್ರವೃತ್ತಿತಾವುಶ್ರೇಷ್ಠರುಎಂಬಜಾತ್ಯಂಧತೆಯಿಂದಮೂಡಿದ್ದುಎಂಬುದುಇದರಿಂದವ್ಯಕ್ತವಾಗುತ್ತದೆ. ಕಾಲತಾನೇಅಂಥವರಬಾಯಿಮುಚ್ಚಿಸುತ್ತದೆ.
ಪ್ರ: ಅವಳುನಮ್ಮನ್ನುಒಂದಾಡಿದ್ಲ, ಒಂದುಬಿಟ್ಲ? ಹೊಲೆಯನಹೊಟ್ಟೇಲಿಹಾಕಿಮಾದಿಗನಹೊಟ್ಟೇಲಿತೆಗೆದುಬಿಟ್ಲು.
೩೩೬೭. ಹೊಲೆಸೆಲೆತಲೆಮೇಲಿಕ್ಕು = ಅವಮಾನಮಾಡು (ಹೊಲೆಸೆಲೆ < ಹೊಲೆಸ್ಯಾಲೆ = ಮುಟ್ಟಾದಾಗಬಿಚ್ಚಿಹಾಕಿದರಕ್ತಸಿಕ್ತಸೀರೆ)
ಪ್ರ: ಮೊಲೆಗೆಕೈಹಾಕ್ತಾನಲ್ಲೆ, ನನ್ನಹೊಲೆಸೆಲೆಅವನತಲೆಮೇಲೆಇಕ್ಕ!
೩೩೬೮. ಹೊಸಕಾಡು = ಹಿಂದುಮುಂದುನೋಡು.
ಪ್ರ: ಹೊಸಕಾಡೋದನ್ನುಬಿಟ್ಟು, ಕಡ್ಡಿಮುರಿದಂತೆಹೇಳು.
೩೩೬೯. ಹೊಸಲುದಾಟು = ಹದ್ದುಮೀರು (ಹೊಸಲು = ಬಾಗಿಲತಳಭಾಗದಲ್ಲಿಹಾಕಿರುವಅಡ್ಡಪಟ್ಟಿ)
ಪ್ರ: ಹೊಸಲುದಾಟಿಬಂದಮೇಲೆಯಾರಹಂಗೂನನಗಿಲ್ಲ.
೩೩೭೦. ಹೊಳವಾಗು = ನಿರ್ಮಲವಾಗು, ಆಳುಚ್ಚಗಾಗು (ಹೊಳವು < ಹೊಳಹು < ಪೊಳಪು = ಪ್ರಕಾಸ, ಬೆಳಕು)
ಪ್ರ: ಇವತ್ತುಕೊಂಚಆಕಾಶಹೊಳವಾಗಿದೆ, ಮಳೆಮೋಡಇಲ್ಲವಾಗಿದೆ.
೩೩೭೧. ಹೊಳೆಹೊಡಿ = ಕಂದಕಹೊಡಿ (ಹೊಳೆ < ತೊಳೆ < ತೊಳ್ವೆ(ತ) = ರಂದ್ರ)
ಪ್ರ: ಇಲ್ಲಿಹೊಳೆಹೊಡೆದುನೀರುಆಚೆಗೆಹೋಗೋಹಂಗೆಮಾಡು.
೩೩೭೨. ಹೊಳೆಗೆಸುರಿ = ನೀರಿಗೆಸುರಿ (ಹೊಳೆ = ನದಿ)
ಪ್ರ: ಗಾದೆ – ಹೊಳೆಗೆಸುರಿದರೂಅಳೆದುಸುರಿ.
೩೩೭೩. ಹೋಗೋಜೀವಬರೋಜೀವವಾಗು = ಸಾಯುವಸ್ಥತಿಯಲ್ಲಿರು.
ಪ್ರ: ಅವನಕತೆಮುಗೀತು, ಹೋಗೋಜೀವಬರೋಜೀವಆಗಿದೆ.
೩೩೭೪. ಹೋದಕಣ್ಣುತರು = ದೃಷ್ಟಿಮಾಂದ್ಯಹೋಗಲಾಡಿಸು (ಹೋದಕಣ್ಣು = ನೋಟಮುಸುಳಿಸಿದಕಣ್ಣು)
ಪ್ರ: ಗಾದೆ – ಹೊನ್ನಗೊನೆಸೊಪ್ಪುಹೋದಕಣ್ಣುತಂತು.
೩೩೭೫. ಹೋದಕೆಲಸಹಣ್ಣಾಗು = ಸಫಲವಾಗು.
ಪ್ರ: ಹೋದಕೆಲಸಹಣ್ಣೋ? ಕಾಯೋ? ಅಂದಾಗ, ಹಣ್ಣುಎಂದ.
೩೩೭೬. ಹೋದೆಜೀವಬರು = ಭಯನಿವಾರಣೆಯಾಗು.
ಪ್ರ: ನಿನ್ನಬಾಯಿಂದಸತ್ಯಸಂಗತಿಕೇಳಿದಮೇಲೆಹೋದಜೀವಬಂದಂತಾಯಿತು.
೩೩೭೭. ಹೋಮಮಾಡು= ಹಾಳುಮಾಡು.
ಯಾಗ, ಹೋಮಗಳನ್ನುದೇಶದಹಿತಕ್ಕಾಗಿಮಾಡುತ್ತೇವೆಂದುಹಾಲುತುಪ್ಪಇತ್ಯಾದಿಪದಾರ್ಥಗಳನ್ನುಬೆಂಕಿಗೆಸುರಿಯುವಆಚರಣೆಯನ್ನುಜನಪದರುಹಾಳುಮಾಡುವಕ್ರಿಯೆಎಂದುಭಾವಿಸಿರುವುದುಕಂಡುಬರುತ್ತದೆ.
ಪ್ರ: ಅಪ್ಪಅಮ್ಮಸಂಪಾದಿಸಿದ್ದನ್ನೆಲ್ಲಮಗಹೋಮಮಾಡಿಬಿಟ್ಟ.
೩೩೭೮. ಹೋರಿಹಾರಿದರಭಸಕ್ಕೆಹಸುತೆರಣಿಸು = ಕಂಪಿಸಿ, ಅದುರು (ತೆರಣಿಸು < ತೆರಳಿಚು < ತೆರಳ್ಚು = ಕಂಪಿಸು; ಸಂಭೋಗಿಸಿದರಭಸಕ್ಕೆಹಸುನಾಲ್ಕುಕಾಲುಗಳನ್ನುಗುಡ್ಡಿಗೆತಂದುಗಡಗಡತತ್ತರಿಸುವುದಕ್ಕೆ ‘ತೆರಣಿಸುತ್ತಿದೆ’ಎನ್ನುತ್ತಾರೆ)
ಪ್ರ: ಹೋರಿಹಾರಿದರಭಸಕ್ಕೆಹಸುತೆರಣಿಸ್ತಾಇದೆ, ಸುಧಾರಿಸಿಕೊಳ್ಳಲಿ, ಆಮೇಲೆಹೋಗೋಣ.
೩೩೭೯. ಹಂಗ್ಬಂದುಹಿಂಗ್ಹೋಗು = ಕೂಡಲೇಹೋಗು.
ಪ್ರ: ಹಂಗ್ಬಂದುಹಿಂಗ್ಹೋಗೋಸಂಪತ್ತಿಗೆಯಾಕೆಬಂದೆ?
೩೩೮೦. ಹಂಡೆಹಾಲುಕುಡಿದಂತಾಗು = ಹೆಚ್ಚುಸಂತೋಷವಾಗು.
ಪ್ರ: ಅವನುಗೆದ್ದದ್ದುಕೇಳಿನನಗೆಹಂಡೆಹಾಲುಕುಡಿದಂತಾಯ್ತು.
೩೩೮೧. ಹಂಪೆಕೊಡು = ವಂತಿಗೆಕೊಡು.
(ಹಂಪೆ < ಪಂಪೆ < ಪಂಪ = ಪಾಲು, ವಂತಿಗೆ) ಹಿರೇ ಮೈಲಾರದ ಸ್ವಾಮಿಗಳು ಊರುರುಗಳ ಮೇಲೆ ಬಂದಾಗ ಕುರುಬ ಜನಾಂಗದ ಒಕ್ಕಲುಗಳು, ಭಕ್ತರು ಸ್ವಾಮಿಗಳಿಗೆ ಕಾಣಿಕೆ ಕೊಡುವುದಕ್ಕೆ ‘ಹಂಪೆ ಕೊಡುವುದು’ ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು
ಪ್ರ : ಕೊಂಪೇಲಿದ್ರೂ ಮೈಲಾರಲಿಂಗನಿಗೆ ಹಂಪೆ ಕೊಡೋದು ಹಾಲುಮತಸ್ಥರ ಧರ್ಮ
೩೩೮೨. ಹಂಬಲ ಬಿಡು = ಆಸೆ ಬಿಡು
ಪ್ರ : ಗಾದೆ – ಹೆತ್ತೋರಿಗೆ ಅಂಬಲಿ ಬಿಡದಿದ್ರೂ ಹಂಬಲ ಬಿಡದಿದ್ರೆ ಸಾಕು
೩೩೮೩. ಹಿಂಡಿ ಬೀಳಿಸು = ಪ್ರಸಾದ ಇಟ್ಟಾಡಿಸು
(ಹಿಂಡಿ < ಹೆಂಡಿ = ಸಗಣಿ)
ಪ್ರ : ಕುಂಡಿ ಮೇಲೆ ಬಾರಿಸಿ ಹಿಂಡಿ ಬೀಳಿಸಿ ಕಳಿಸಿದ್ದೀನಿ
೩೩೮೪. ಹಿಂಡಗಲು = ಗುಂಪಿನಿಂದ ಚೆದುರಿ ಒಂಟಿಯಾಗು, ಅಪಾಯಕ್ಕೊಳಗಾಗು
ಪ್ರ : ಕನಕದಾಸರ ಸೂಕ್ತಿ : ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು
೩೩೮೫. ಹಿಂದಕ್ಕೆ ತೋನು = ಹಿಂದಕ್ಕೆ ಜಗ್ಗು, ಎಳೆ
(ತೋನು = ಜಗ್ಗು, ಎಳೆ)
ಪ್ರ : ಹಸು ಹಿಂದಕ್ಕೆ ತೋತು ತೋತು ಹಗ್ಗ ಪಟಕ್ಕನ್ನಿಸಿ ಓಡಿತು
೩೩೮೬. ಹಿಂದಾಡು = ಮರೆಯಲ್ಲಿ ನಿಂದಿಸು
ಪ್ರ : ಗಾದೆ – ಹಿಂದಾಡೋರಿಗಿಂತ ಮುಂದಾಡೋರು ಮೇಲು
೩೩೮೭. ಹಿಂದೆಗೆ = ತಲೆ ಒಗೆ
ಪ್ರ : ನಮ್ಮೊಂದಿಗೆ ಬರೋಕೆ ಹಿಂದೆಗೆದ, ಒತ್ತಾಯ ಮಾಡೋದ್ರಲ್ಲಿ ಅರ್ಥವಿಲ್ಲ
೩೩೮೮. ಹಿಂದು ಮುಂದು ಇಲ್ಲದಿರು = ಒಡಹುಟ್ಟಿದವರು ಇಲ್ಲದಿರು
ಪ್ರ : ಅವನು ಹಿಂದು ಮುಂದು ಇಲ್ಲದ ಒಬ್ಬೊಂಟಿ, ಹೆಣ್ಣು ಕೊಟ್ರೆ ಯಾರ ಉಪಟಳವೂ ಇರುವುದಿಲ್ಲ.
೩೩೮೯. ಹಿಂದೆ ಮುಂದೆ ಕೂಡ ಆಗು = ವಾಂತಿ ಭೇದಿಯಾಗು
ಪ್ರ : ಹಿಂದೆ ಮುಂದೆ ಕೂಡ ಆಗ್ತಿರೋನು ಬದುಕ್ತಾನ?
೩೩೯೦. ಹಿಂದೆ ಮುಂದೆ ನೋಡು = ಅನುಮನಸು ಮಾಡು, ಯೋಚಿಸು
ಪ್ರ : ಹಿಂದೆ ಮುಂದೆ ನೋಡದೆ ಹೆಂಡದ ದಂಧೆಗೆ ಕೈ ಹಾಕಿ, ಕೈ ಸುಟ್ಕೊಂಡ.
೩೩೯೧. ಹಿಂದೇಟು ಹಾಕು = ಕಳಚಿಕೊಳ್ಳಲು ಯತ್ನಿಸು
ಪ್ರ : ಹಿಂದೇಟು ಹಾಕೋನ ಮುಂದೇಟು ಬೇಡಿಕೊಳ್ಳೋದು?
೩೩೯೨. ಹಿಂಭಾರವಾಗು = ಮಲಬಾಧೆಯಾಗು
ಪ್ರ : ಹಿಂಭಾರವಾಗಿ ತಿಪ್ಪೆ ಕಡೆ ಓಡಿದ, ಮುಂಭಾರವೂ ಇದ್ದಿರಬೇಕು.
೩೩೯೩. ಹಿಂಭಾರ ಮುಂಭಾರ ತಡೆಯಲಾಗದಿರು = ಮಲಬಾಧೆ ಜಲಬಾಧೆ ತಡೆಹಿಡಿಯಲಾಗದಿರು
ಪ್ರ : ಹಿಂಭಾರವೂ ಅಷ್ಟೆ, ಮುಂಭಾರವೂ ಅಷ್ಟೆ, ಹೆಚ್ಚು ಹೊತ್ತು ತಡೆಯೋಕಾಗಲ್ಲ
೩೩೯೪. ಹೂಂತಿಯಾಗು = ಗಂಡಾಂತರವಾಗು
ಪ್ರ : ನೀನಿದಕ್ಕೆ ಹ್ಞುಂ ಅಂತ ಒಪ್ಪಿದರೆ ಮುಂದೆ ನಿನಗೆ ಹೂಂತಿ ಕಾದಿದೆ.
೩೩೯೫. ಹೆಂಗೋ ಹಂಗಿರು = ದೇವರು ಮಡಗಿದಂತಿರು
ಪ್ರ : ನಾವಾಯ್ತು ನಮ್ಮ ಬದುಕಾಯ್ತು, ಹೆಂಗೋ ಹಂಗೆ ಕಾಲ ಹಾಕ್ತಾ ಇದ್ದೀವಿ.
೩೩೯೬. ಹೆಂಡದ ಹಟ್ಟಿಯಾಗು = ಗಲಾಟೆ ಗದ್ದಲ ಆಗು
ಪ್ರ : ಬಾಯಿ ಬಂದು ಮಾಡಿ, ಇದೇನು ಮನೇನೋ ? ಹೆಂಡದ್ಹಟ್ಟೀನೋ?
೩೩೯೭. ಹೊಂಬಾಳೆಯಂತಿರು = ಸುಂದರವಾಗಿರು
ಪ್ರ : ಆ ಒಡಾಳೆಯಂಥ ಹೆಣ್ಣಿಗೆ ಬದಲಾಗಿ, ಈ ಹೊಂಬಾಳೆಯಂಥ ಹೆಣ್ಣನ್ನು ಮದುವೆಯಾಗು.
*****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ